(ಜಲಪಾತಗಳ ದಾರಿಯಲ್ಲಿ ಭಾಗ ಎರಡು)

‘ರೊಕ್ಕಿದ್ದವಗೆ ಗೋಕರ್ಣ, ಸೊಕ್ಕಿದ್ದವಗೆ ಯಾಣ’ ಎಂಬ ಜಾಣ್ಣುಡಿ ನಾನು ಕೇಳಿದ್ದೆ. ೧೯೭೭, ನನ್ನಲ್ಲದು ರೊಕ್ಕವಿಲ್ಲದ ಕಾಲವೇ ಆಗಿದ್ದರೂ ಸೊಕ್ಕಿಗೇನೂ ಕಡಿಮೆಯಿರಲಿಲ್ಲ. ಉದ್ದೇಶಪಡದೆ ಅಂಕಿಯಲ್ಲಿ ಅಧ್ಯಾತ್ಮ ಕಾಣುವವರನ್ನು ಸೋಲಿಸಲೆಂಬಂತೆ ಮೂರು ಜನರ ತಂಡ ಕಟ್ಟಿ ಒಂದು ಶನಿವಾರ (೧೯೭೭) ಕಾರವಾರದ ರಾತ್ರಿ ಬಸ್ಸು ಹಿಡಿದೆ. (ಕೊಣಾಜೆಯ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ ಮಿತ್ರ ಪ್ರಕಾಶ್ ಮತ್ತು ಮಾವನ ಮಗ ಚಂದ್ರಶೇಖರ). ರಾತ್ರಿ ಎರಡು ಗಂಟೆಯ ಸುಮಾರಿಗೆ ಕುಮಟಾ ನಿಲ್ದಾಣದಲ್ಲಿಳಿದು ಸರದಿಯ ಮೇಲೆ ಒಬ್ಬನ ಪಹರೆಯಲ್ಲಿ ಇಬ್ಬರು ಚೂರುಪಾರು ನಿದ್ದೆ ಹೆಕ್ಕಿದೆವು. ಬೆಳಿಗ್ಗೆ ನಮ್ಮ ಮೇಲೆ ಕೃಪೆಯಿಟ್ಟು ಸ್ವಲ್ಪ ಬೇಗ ಬಾಗಿಲು ತೆರೆದ ಕ್ಯಾಂಟೀನಿನವ ಕೊಟ್ಟದ್ದಷ್ಟನ್ನು ಹೊಟ್ಟೆಗೆ ಸೇರಿಸಿ ಮೊದಲ ಶಿರಸಿ ಬಸ್ಸು ಹಿಡಿದೆವು. ಸುಮಾರು ಹದಿನೆಂಟು ಕಿಮೀ ದೂರದ ಮಾಸ್ತಿಕಟ್ಟೆ ಎಂಬಲ್ಲಿಳಿದು ಕಾಡು ದಾರಿ ತುಳಿದೆವು. (ಕುಮಟ ಬಸ್ ನಿಲ್ದಾಣ ಒದಗಿಸದ ಶೌಚ ವ್ಯವಸ್ಥೆಯನ್ನು ಇಲ್ಲಿ ಕಾಡ ತೊರೆಗಳು ಪರಿಹರಿಸಿದವು) ದಾರಿಯೇನೋ ತೀರಾ ಕಚ್ಚಾವಿತ್ತು. ಆದರೆ ನಮ್ಮ ನಿರೀಕ್ಷೆ ಮೀರಿ ಪೂರ್ಣ ಮಟ್ಟಸ ಭೂಮಿ. ಸರಕಾರೀ ನೆಡುತೋಪು ಸಾಕಷ್ಟಿದ್ದರೂ ಖಾಸಗಿ ಕೃಷಿಕ್ಷೇತ್ರ ಮತ್ತು ವಿಚಾರಿಸಲು ಜನ ಸಿಕ್ಕುತ್ತಿದ್ದುದರಿಂದ ನಮಗೆ ದಾರಿ ತಪ್ಪಿದ, ಅನಾವಶ್ಯ ವಿಳಂಬಿಸಿದ ತೊಂದರೆಗಳೇನೂ ಆಗಲಿಲ್ಲ. ಸುಮಾರು ನಾಲ್ಕು ಗಂಟೆಯ ತರಾತುರಿಯ ನಡಿಗೆಯಲ್ಲಿ ಹಗಲನ್ನು ರಾತ್ರಿ ಮಾಡುವ ಕಾಡು ಕಾಣಿಸಲಿಲ್ಲ. ಚಾರಣ ಶಿಲಾರೋಹಣದ ಮುನ್ನೆಲೆಯಲ್ಲಿ ದಾಪುಗಾಲಿಕ್ಕಿದರೂ ಒಂದೇ ಒಂದು ಬಂಡೆ, ಕಟ್ಟೇರೂ ಕಾಣಿಸದೆ ಇನ್ನೇನು ಯಾಣ ಎಂದರೆ ಮರೀಚಿಕೆಗೆ ಇನ್ನೊಂದು ಹೆಸರೋ ಎನ್ನುವಂತಾಗಿತ್ತು.

೧೯೭೭ರ ಪ್ರಥಮ ಭೇಟಿಯಂದೂ ಪ್ರಸ್ತುತ (೧೯೯೧) ಉಕ ಜಲಪಾತದೋಟದಂದೂ ಮತ್ತೆ ಮುಂದೂ ಒಂದು ಬಾರಿ ನಾನು ಯಾಣಕ್ಕೆ ಭೇಟಿ ಕೊಟ್ಟದ್ದುಂಟು. ಈ ಉದ್ದಕ್ಕೂ ದಾರಿ ಮತ್ತು ಸಾರ್ವಜನಿಕ ಸವಲತ್ತುಗಳ ಹೇರಿಕೆಯಲ್ಲಿ ಯಾಣ ಸಾಕಷ್ಟು ‘ಅಭಿವೃದ್ಧಿ’ ಕಂಡಿದೆ. ಅದೃಷ್ಟಕ್ಕೆ ಕೂಪಿನ ಲಾರಿ ಸಿಗಬೇಕು. ಇಲ್ಲವೇ ಬಾಡಿಗೆ ಜೀಪು ಮಾಡಿದರೂ ಒಂದೆರಡು ತೊರೆಗಳಿಗಿಳಿದು, ಕೆಲವು ಖಾಸಗಿ ಗದ್ದೆಗಳ ಕೃಪಾ ತಡಿಕೆ ತೆರೆಸಿಕೊಂಡು ಮಣ್ಣ ದಾರಿ ಬಳಸಿದಲ್ಲಿಂದ ನಿಯಮಿತ ಸರಕಾರಿ ಬಸ್ಸು ಸೇವೆಯವರೆಗೆ ಮುಟ್ಟಿತ್ತು. (ಈಗ ಹೇಗಿದೆಯೋ ಶಿವನೇ ಬಲ್ಲ!) ಆದರೂ ಪ್ರಥಮ ಭೇಟಿಯಂದು ಕಾಣಿಸಿದ ಕೊನೆಯ ಸುಮಾರು ಒಂದು ಕಿಮೀ ಅಂತರದ ಯಾಣದ ಪರಿಸರ ದೈವಿಕವಾಗಿಯೇ (ಅರ್ಥಾತ್ ಪ್ರಾಕೃತಿಕ ಅನುಸಂಧಾನದ ಸಮತೋಲನ ತಪ್ಪದ ಸ್ಥಿತಿಯಲ್ಲಿ) ಇದ್ದದ್ದನ್ನು ನೆನೆಸುವಾಗ ಇಂದೂ ರೋಮಾಂಚನವಾಗುತ್ತದೆ.

ಕಾಡು ಕೀಸಿ ಬೆಂಗಾಡಾದ ದಿಬ್ಬವೊಂದನ್ನು ಏರುತ್ತಿದ್ದಂತೆ ಅನತಿ ದೂರದ ಮರಗಳ ತಲೆ ಮೀರಿ ಆಕಾಶ ತಿವಿಯುವ ಕಲ್ಲಿನ ಚೂಪೊಂದು ದರ್ಶನ ಕೊಟ್ಟಿತು. ಮುಂದುವರಿದಂತೆ ಬೆವರು ಸುರಿಸುತ್ತಾ ದೂಳು ಮೆತ್ತಿಕೊಳ್ಳುತ್ತಾ ಅವಿರತ ಬಂದ ನಮಗೆ ಸಾಂತ್ವನ ಹೇಳುವಂತೆ ಅಪ್ಪಟ ಗೊಂಡಾರಣ್ಯ ತನ್ನೆಲ್ಲಾ ತಂಪು, ತೊರೆ, ಹಕ್ಕಿ ಗಾನ ವೈವಿಧ್ಯದಿಂದ ಅವರಿಸಿಕೊಂಡಿತು. ತತ್ಕಾಲಕ್ಕೆ ದೂರನೋಟಕ್ಕೆ ಸಿಕ್ಕ ಕಲ್ಲ ಚೂಪು ಮರೆಯಾದರೂ ಮರಗಿಡಬಳ್ಳಿಗಳ ಹೊದಿಕೆ ಹೊದ್ದ ಬೃಹತ್ ಬಂಡೆಯೊಂದು ಸಮರ್ಥ ಸ್ವಾಗತಕಾರನಂತೇ ಕಾಲ್ದಾರಿಯ ಪಕ್ಕದಲ್ಲೇ ನಿಂತಿತ್ತು. ಮತ್ತೆ ಕೆಲವು ನೂರು ಹೆಜ್ಜೆಯಲ್ಲಿ ಬಲಕ್ಕೊಂದು ಅಪ್ಪಟ ಕಾಡ ತೊರೆ – ಚಂಡಿಕಾತೀರ್ಥ. ಅದರಲ್ಲಿ ಕೈಕಾಲು ಮುಖ ತೊಳೆಯುವುದೇ ಒಂದು ಸಂಭ್ರಮ. ತೊರೆಗೇ ಬಾಯಿ ಹಚ್ಚಿ ಹೊಟ್ಟೆಗೂ ಹರಿಸಿಕೊಳ್ಳುವಾಗ ಹಿಂದೆ ಕಾವೇರಿಯನ್ನು ಆಪೋಷಣೆ ತೆಗೆದುಕೊಂಡ ಅಗಸ್ತ್ಯನಿಗೆ ನಾವು ಕಡಿಮೆಯವರಲ್ಲ! ಮುಂದೆ ಕಾಡು, ಪೊದರು ಆವರಿಸಿದ್ದಂತೆ ಒರಟು ಏರು ಮೆಟ್ಟಿಲ ಜಾಡು ಅನುಸರಿಸಿದೆವು. ಕೆಲವೇ ಅಂತರದಲ್ಲಿ ಬಲಕ್ಕೆ ಗಣಪತಿಯ ಗುಡಿ; ಬಾಗಿಲು ಹಾಕಿತ್ತು. ಮತ್ತೆ ಕೆಲವೇ ಮೆಟ್ಟಿಲುಗಳನ್ನೇರುತ್ತಿದ್ದಂತೇ ಯಾಣದ ನಿಜವೈಭವ ತೆರೆದುಕೊಳ್ಳುತ್ತದೆ. ಅದನ್ನು ‘ಬಗೆಗಣ್ಣಾರೆ ನೋಡುವ’ ಉತ್ಸಾಹದಲ್ಲೇ ಹೊರಟ ಓದುಗರಾದ ನಿಮ್ಮನ್ನು ಗೋಕರ್ಣದ ಹೊರವಲಯ ದಾರಿಯಲ್ಲಿ ಬಿಟ್ಟು ನಾನು ಮುಂದುವರಿಯುವುದು ಸರಿಯಲ್ಲ. ಬನ್ನಿ ಸ್ವಲ್ಪ ಹಿಂದೆ ಹೋಗಿ, ಮುಂದುವರಿಯೋಣ.

ಗೋಕರ್ಣದ ಕಂತು ನೋಡಿ ಭಕ್ತವರೇಣ್ಯರೊಬ್ಬರು ಕೇಳಿದರು, “ಊರಿನ ಕೊಳಕೆಲ್ಲಾ ಸರಿಯಪ್ಪಾ. ಅಷ್ಟೆಲ್ಲಾ ನೋಡಿದವರು ದೇವಸ್ಥಾನದ, ದೇವರದರ್ಶನ ಮರೆತದ್ದಾ?” ಗೋಕರ್ಣ ದೇವಾಲಯ ಆ ಕಾಲದಲ್ಲಿ ಪುರೋಹಿತ, ಅಲ್ಲಲ್ಲ ಅರ್ಚಕ ವರ್ಗದ ಕೌಟುಂಬಿಕ ವ್ಯಾಜ್ಯಗಳಿಂದ ಪತ್ರಿಕೆಗಳಲ್ಲಿ ರಸಮಯ ಸುದ್ದಿಮೂಲವಾಗಿತ್ತು. [‘ಪುರೋಹಿತ’ ಶಬ್ದಕ್ಕೆ ಇಂದು ಅರ್ಥವೇ ಇಲ್ಲ. ದೇವ+ಲಯಗಳು ಮತ್ತೆ ಅರ್ಚಕ ಹುದ್ದೆಯ ವ್ಯಾಜ್ಯಗಳ ಮಾತ್ತೆತ್ತಿದರೆ ಇಡಗುಂಜಿ, ಕಟೀಲುಗಳೇನು ರಾಷ್ಟ್ರಮಟ್ಟದ ಶಬರಿಮಲೆ, ರಾಮಜನ್ಮಭೂಮಿಗಳ ಮಹಾತ್ಮೆಯೂ ಕಡಿಮೆ ಇಲ್ಲ ಬಿಡಿ. ಇಂದು ಗೋಕರ್ಣ ರಾಮಚಂದ್ರಾಪುರ ಮಠಕ್ಕೆ ಸೇರಿದ್ದಂತೂ ಆರಾಧನಾ-ಉದ್ಯಮದಲ್ಲಿ (Bhakthi industry) ಬೇರೊಂದೇ ಆಯಾಮ ಪಡೆದಿರುವುದನ್ನು ನಾನು ಹೊಸದಾಗಿ ಹೇಳಬೇಕೇ?] ಅದವರ ವೈಯಕ್ತಿಕ ವಿಚಾರವೆಂದು ಉಪೇಕ್ಷಿಸಿ ಆಲಯ ದರ್ಶನಕ್ಕೆ ಹೋದರೂ ಮೊದಲು ಗೋಕರ್ಣದ ಭಟ್ಟರುಗಳು ಉತ್ತರ ಭಾರತದ ಪಂಡರಿಗೆ ಕಡಿಮೆಯವರಲ್ಲ ಎಂಬ ಖ್ಯಾತಿ ಕಾಡುತ್ತದೆ. ಮತ್ತೆ ಇಲ್ಲಿ ಮಳೆಗಾಲದ ಸಣ್ಣಪುಟ್ಟ ನೆರೆಗಾಲದಲ್ಲೂ ಊರಿನ ನೀರು ದೇವಳದೊಳಗೆ ಉಕ್ಕುವ ಕಥೆ ಪ್ರತಿ ವರ್ಷ ಕೇಳುತ್ತಲೇ ಇದ್ದೇವೆ. ಅಂಥಾ ಊರನ್ನು ನೋಡುತ್ತಾ ಕಣ್ಣಿನಲ್ಲಿ ಕಸದ ರಾಶಿ ತುಂಬಿಕೊಳ್ಳುತ್ತಾ ಕೊಳೆತ ಚರಂಡಿಗಳ ವಾಸನೆಯಲ್ಲಿ ಮೂಗುಬಿಡಲಾಗದೇ “ಊರು ನಿನ್ನೊಳಗೋ ನೀನು ಊರೊಳಗೋ, ಗೋಕರ್ಣನಾಥಾ” ಎಂದೇ ಊರು ಬಿಟ್ಟೋಡಿದ್ದೆವು!

ನಮ್ಮ ಲಕ್ಷ್ಯ ಯಾಣ. ಹೆದ್ದಾರಿಯಲ್ಲಿ ಸ್ವಲ್ಪ ಮಾತ್ರ ಕುಮಟೆಯತ್ತ ಓಡಿ ಒಳದಾರಿಯೊಂದರನ್ನು ಅನುಸರಿಸಿ ಶಿರಸಿ ದಾರಿ ಸೇರುವ ಅಂದಾಜು ಹಾಕಿದ್ದೆವು. ಆದರೆ ನಮ್ಮ ನಿರೀಕ್ಷೆಯಲ್ಲಿ ಮತ್ತೆ ಗೋಕರ್ಣ ಕೈಕೊಟ್ಟಿತ್ತು. ಗೋಕರ್ಣದಲ್ಲಿ ಡೀಸೆಲ್ ಬಂಕ್ ಮಾತ್ರ ಇತ್ತು. ಮುಂದೆ ಎರಡು ದಿನದುದ್ದದ ಬಳಕೆಗೆ ಬೈಕುಗಳ ಹೊಟ್ಟೆ ತುಂಬಿರುವುದು ಅವಶ್ಯವಿತ್ತು. ಜೊತೆಗೆ ಪ್ರಸನ್ನನದು ವೈಯಕ್ತಿಕ ಸಮಸ್ಯೆ. ಆತ ಈ ಪ್ರವಾಸಕ್ಕಾಗಿ ಐದು ವರ್ಷ ಗ್ಯಾರಂಟಿಯ ಬೂಟು ಕೊಂಡಿದ್ದ. ಅದರೆ ಅದು ಅದರ ಅಟ್ಟೆಗೆ ಅರ್ಥಾತ್ sole > soul = ಬೂಟಿನ ಆತ್ಮಕ್ಕೆ ತಿಳಿದಿರಲಿಲ್ಲ! ಒಂದೇ ದಿನದ ಓಡಾಟದಲ್ಲಿ ಪೂರ್ತಿ ಕಳಚಿ ಬಂದಿತ್ತು. ಬೀಚ್ ಪ್ರವಾಸೋದ್ದಿಮೆಯ ಜೊತೆಗೆ ಗೋಕರ್ಣಕ್ಕೆ ಚರ್ಮದ ವ್ಯಾಪಾರವೂ ಬಂದಿತ್ತಾದರೂ ಪ್ರಸನ್ನನ ಬೂಟಿನ ರಿಪೇರಿಗದು ಒದಗುವಂತದ್ದಲ್ಲ! ಹಾಗಾಗಿ ಮತ್ತೆ ಕುಮಟಾ ದಾರಿ ಹಿಡಿದೆವು.

ಅನಾವಶ್ಯಕ ದೂರವೆಂದೊಡನೆ ಸಮಯ ಸಾಲದೇ ಹೋದರೆ ಎಂಬ ಮಾನಸಿಕ ಒತ್ತಡ ಸೇರಿ ನಮ್ಮ ತಂಡದ ವೇಗಮಿತಿ ತುಸು ಜಾಸ್ತಿಯೇ ಇತ್ತು. ರಣಗುಡುವ ಬಿಸಿಲಿನಲ್ಲಿ, ಬೈಕೋಟದಿಂದ ತೀಡುವ ಗಾಳಿಯಲ್ಲಿ, ಬಲು ದೂರಕ್ಕೂ ನಿಡಿದಾಗಿ ಬಿದ್ದ ಹೆಚ್ಚುಕಡಿಮೆ ನಿರ್ವಾಹನ, ನಿರ್ಜನ ಹೆದ್ದಾರಿ ಬಲು ಅಪಾಯಕಾರಿ. ಇದನ್ನು ನಿದರ್ಶಿಸುವಂತೆ ದಾರಿಯ ಸುದೂರ ಕೊನೆಯಲ್ಲಿ ಮಿನಿಲಾರಿಯೊಂದು ಕೆಲವೇ ಮಿನಿಟುಗಳ ಹಿಂದೆ ಮಗುಚಿದ್ದು ಕಾಣಿಸಿತು. ಸಣ್ಣ ಎಡ ತಿರುವಿನಲ್ಲಿ ಲಾರಿ ತನ್ನ ಅತಿವೇಗದಿಂದ (ಚಾಲಕನ ತೂಕಡಿಕೆಯೂ ಇರಬಹುದು) ಎಡಕ್ಕೆ ಜೋಲಿ ಹೊಡೆದಿರಬೇಕು. ಬಲಚಕ್ರ ಸಾಲು ಎತ್ತಿ ಹತ್ತಿಪ್ಪತ್ತಡಿ ಸಾಗುವುದರೊಳಗೆ ಕ್ಲೀನರ್ ಬಾಗಿಲು ತೆರೆದು ಹೊರಗೆ ಹಾರಿ ಬಚಾವಾಗಲು ಪ್ರಯತ್ನಪಟ್ಟಿದ್ದನೆಂದು ತೋರುತ್ತದೆ. ದುರದೃಷ್ಟಕ್ಕೆ ಲಾರಿ ಅವನ ಮೇಲೇ ಬಿದ್ದಿತ್ತು. ಲಾರಿಯ ಅಪ್ಪಳಿಕೆಗೆ ಕ್ಲೀನರಿನ ಮುಂಡ ಪೂರ್ಣ ಹೊಸಕಿಹೋಗಿತ್ತು. ಕ್ಷಣಮಾತ್ರದಲ್ಲಿ ಅಸುನೀಗಿರಬಹುದಾದ ಆತನ ನಿಷ್ಪಾಪಿ (ಒಂದು ಗಾಯವೂ ಇಲ್ಲದ ರುಂಡ) ಮುಖ ಮಾತ್ರ ಲಾರಿಯಂಚಿನಿಂದೀಚೆಗೆ ಕಾಣುತ್ತಿದ್ದದ್ದು ಭೀಭತ್ಸವಾಗಿತ್ತು. ಇನ್ನೂ ಸ್ಟೇರಿಂಗ್ ಹಿಡಿದು ಗರಬಡಿದವನಂತೆ ಕೂತಿದ್ದ ಚಾಲಕನನ್ನು ಯಾರೋ ದಾರಿಹೋಕರು ಇಳಿಸಿ ದಾರಿ ಬದಿಯಲ್ಲಿ ಕೂರಿಸಿದರು. ನಮ್ಮ ತಂಡದಲ್ಲಿದ್ದ ವೈದ್ಯ ಮಿತ್ರ ಕೃಷ್ಣಮೋಹನ್ ಚಾಲಕನನ್ನು ಹಗುರಕ್ಕೆ ತಟ್ಟಿ ತಡವಿ “ದೈಹಿಕ ತೊಂದರೆ ಏನೂ ಇಲ್ಲ. ಮಾನಸಿಕ ಆಘಾತವಷ್ಟೆ” ಎಂದರು. ಉಳಿದಂತೆ ಸೇರುತ್ತಿದ್ದ ಹಳ್ಳಿಗರು ಹೆದ್ದಾರಿ ಅಪಘಾತ ನಿರ್ವಹಣೆಯಲ್ಲಿ ಅನುಭವಿಗಳಂತೇ ಕಾಣುತ್ತಿದ್ದುದರಿಂದ ನಾವು ಮುಂದುವರಿದೆವು. ಯಾರದೋ ದುಃಖದಲ್ಲಿ ನಾವೀಗ ಅನುಭವಿಗಳು. ಗುರಿ ತಲಪುವಲ್ಲಿ ತಡವಾದರೇನು – ಬೈಕಿಗೆ ಹೆದ್ದೀಪ ಉಂಟು. ದಾರಿ ಮಣ್ಣಾದರೇನು ಬೈಕ್ ಚಲಾವಣೆ ನಮಗೆ ಹೊಸತೇನೂ ಅಲ್ಲವಲ್ಲ. ಆಕಾಶದಲ್ಲಿ ಹೊಂಚುತ್ತಿದ್ದ ಮೋಡ ಒಂದೊಮ್ಮೆ ಸುರಿದರೂ ಬರಿಯ ನೀರಲ್ಲವೇ! ಹಿತವಾದ ಓಟದಲ್ಲಿ ಕುಮಟ ತಲಪಿ, ವಿರಾಮದಲ್ಲಿ ಕೆಲಸಗಳನ್ನು ಪೂರೈಸಿ, ಶಿರಸಿ ದಾರಿಗಿಳಿದೆವು.

ಕತಗಾಲ ಮಾಸ್ತಿಕಟ್ಟೆಯಲ್ಲಿ ಎಡಕ್ಕೆ ಕವಲಾದೆವು. ದಾರಿ ಬದಿಯಲ್ಲಿ ಅರಣ್ಯ ಇಲಾಖೆಯ ರಚನೆಗಳು (ಸಾಗುವಾನಿ ನೆಡುತೋಪು ನಿರ್ವಹಣೆಗಾಗಿ), ಬೀಡಾಬೀಡೀ ಚಾ ಜೋಪಡಿಗಳೂ ಸೇರಿದಂತೆ ಒಂದು ಹಳ್ಳಿಯೇ ವಿಕಸಿಸಿ ಹದಿನಾಲ್ಕು ವರ್ಷಗಳ ಹಿಂದಿನ ನನ್ನ ಪ್ರಥಮ ಭೇಟಿಯಿಂದೀಚೆಗೆ ತುಂಬಾ ಅಭಿವೃದ್ಧಿ ಕಂಡಿತ್ತು. ಕೂಪು ದಾರಿಗೀಗ ಬಿಗಿ ಜಲ್ಲಿ ಹಾಸು, ಮಳೆಗಾಲ ಮುಗಿಯಿತೆಂಬಂತೆ ಕೊರಕಲುಗಳಿಗೆ ಹೊಸದಾಗಿ ಮಣ್ಣೂ ಕೊಟ್ಟಿದ್ದರು. ಅಪರೂಪಕ್ಕೆ ಬಂದ ಕಿರುಮಳೆಯಲ್ಲಿ ಒದ್ದೆಯಾದ ಮಣ್ಣನ್ನು ಕೂಪಿನ ಲಾರಿಗಳು ಚೆನ್ನಾಗಿ ಅರೆದಿಟ್ಟಿದ್ದವು. ನಮ್ಮ ಬೈಕುಗಳು ಮೊದಲು ತುಸುವೇ ಜಾರಾಟ. ಅನಂತರ ಎಷ್ಟು ಎಚ್ಚರದಲ್ಲಿ ಉದ್ದಕ್ಕೆ ಓಡಿಸುತ್ತಿದ್ದರೂ ದಾರಿಯ ಅಗಲವನ್ನೂ ಅಳೆಯುವವರಂತೆ “ಹಾಯ್, ಹೋಯ್” ಉದ್ಗಾರಗಳೊಂದಿಗೆ ಸಣ್ಣಪುಟ್ಟ ಹಾವಾಟ. ಎಲ್ಲೂ ವಿಪರೀತ ಏರು ಅಥವಾ ಇಳಿಜಾರು ಇಲ್ಲದ್ದಕ್ಕೆ ನಾವು ಬಚಾವ್. ಆದರೆ ಬರಬರುತ್ತಾ ಬೈಕುಗಳು ಶಕ್ತಿ ಕಳೆದುಕೊಂಡಂತೆ ಒಂದೊಂದೇ ಮುಲುಗಾಡಲು ತೊಡಗಿದವು. ವಾಸ್ತವವಾಗಿ ಒಂದೆರಡು ಬೈಕ್ ಪೂರ್ಣ ನಿಲುಗಡೆಗೆ ಬಂದು ಸವಾರರು ಸಣ್ಣದಾಗಿ (ನಿರಪಾಯಕರವಾಗಿ) ಅಡ್ದ ಬಿದ್ದದ್ದೂ ಆಯ್ತು. “ಇದೇನಪ್ಪಾ ಹೊಸ ಸೀಕು” ಎಂದು ಒಬ್ಬೊಬ್ಬರೇ ಇಳಿದು ನೋಡುವಂತಾಯ್ತು. ಗೋಂದಿನಂತೆ ಕೆಸರು ಒಣ ಎಲೆ, ಕಡ್ಡಿ, ಸಣ್ಣಪುಟ್ಟ ಕಲ್ಲುಗಳನ್ನೆಲ್ಲ ಚಕ್ರದೊಂದಿಗೆ ಏರೇರಿಸುತ್ತಾ ಮಡ್ಗಾರ್ಡಿನ ಒಳಮೈಯಲ್ಲಿ ನಿಗಿದುಕೊಂಡಿತ್ತು. ಬೈಕಿನ ಬ್ರೇಕ್ ಶೂಸ್ ಗುಂಭದೊಳಗೆ (ಬ್ರೇಕ್ ಡ್ರಮ್ಮ್) ಚಕ್ರವನ್ನು ಅದುಮಿದರೆ ಈ ವಿಶಿಷ್ಟ ಪಾಕ ಹಳೆಗಾಲದ ಚಕ್ಕಡಿಗಳಿಗೆ ಹಿಂದೆ ಬಿಗಿದ ಬಿರಿಯಂತೇ ಚಕ್ರವನ್ನು ಹೊರಗಿನಿಂದಲೇ ಒತ್ತಿ ಹಿಡಿಯುತ್ತಿದ್ದವು. ಕಾಡು ಕೋಲು ಹಿಡಿದು ಮಣ್ಣ ಪಟ್ಟಿಗಳನ್ನು ಒಕ್ಕಿ ತೆಗೆದು ಮುಂದುವರಿಯಬೇಕಾಯ್ತು. ತೀರಾ ಬಿಗಿದುಕೊಂಡಲ್ಲಿ ನಮ್ಮ ವಾಟರ್ ಬಾಟಲಿನದ್ದೋ ಚರಂಡಿಯದ್ದೋ ಕಡೆಗೆ ಹೊಂಡಗಳಲ್ಲಿ ತಂಗಿದ್ದ ಕೆಸರ ನೀರನ್ನೇ ಚೇಪಿ ಸಡಿಲಿಸಿದ್ದು, ಮಡ್ಗಾರ್ಡನ್ನೇ ಕಳಚಿ ಮುಂದುವರಿದದ್ದೂ ಆಯ್ತು! (ಹೊಂಡದ ಮಹತ್ವಮಂ ಏಂ ಬಣ್ಣಿಸಲಿ!) ಸೇತುವೆ, ಮೋರಿಗಳೇನೂ ಇಲ್ಲದೆ ಅಡ್ಡ ಸಿಕ್ಕ ಮೊದಲ ತೊರೆಯಂತೂ ನಾವು ಅಕ್ಷರಶಃ ನೀರಾಟವಾಡಿದ್ದೂ ಚಕ್ರದ ಕೆಸರು ಕಳೆಯಲೆಂದೇ ಆಗಿತ್ತು. ನಮ್ಮ ಅದೃಷ್ಟಕ್ಕೆ ಅಲ್ಲಿಂದ ಮುಂದಿನ ದಾರಿಗೆ ಅನುದಾನದ ಕೊರತೆ ಕಾಡಿತ್ತೋ ಒಟ್ಟು ಕಾಮಗಾರಿಯ ಬಿಲ್ ಪಾಸಾಗಿ ಕಂತ್ರಾಟುದಾರ ‘ಹಾಕಿದ ಮಣ್ಣು ಮಳೆಯಲ್ಲಿ ತೊಳೆದುಹೋಯ್ತು’ ಎಂಬ ಷರಾ ಬರೆಸಿ ‘ಮಕ್ಕರ್ಧ ತುಕ್ಕರ್ಧ’ (ನೀ ನನಗಿದ್ದರೆ ನಾ ನಿನಗೆ?) ಮಾಡಿ ಜಾಗ ಖಾಲಿ ಮಾಡಿದ್ದನೋ (ಸಿನಿಕತನ ಬಿಟ್ಟು ನೋಡಿದ್ದೇ ಆದರೆ) work under progreಸ್ಸೋ ಮಣ್ಣು ಬಿದ್ದಿರಲಿಲ್ಲ. ನಮ್ಮ ಓಟ ಹಗುರವಾಯ್ತು.

ನೈಜ ಕಾಡು ಕಳೆದು ನೆಡುತೋಪು ಬಂತು. ಆಕಾಶರಾಯ ಒಮ್ಮಿಂದೊಮ್ಮೆಗೆ ಗುಡುಗಿ, ಹೂಬಿಸಿಲ ಬೆಳಕನ್ನಷ್ಟೇ ಇಟ್ಟು, ಮಳೆಹನಿಗಳ ಲಾಸ್ಯ ಸುರುಮಾಡಿದ. ಗಮನಿಸಿ, ಅದು ವೀರಾವೇಶದ ಧಿಂಗಣ ಅಲ್ಲ; ಲೆಕ್ಕ ಹಾಕಿ ನಾಲ್ಕೋ ಎಂಟೋ ಹನಿ ಮಾತ್ರ. ನಮ್ಮ ಗಂಟುಮೂಟೆ ಮತ್ತೆ ನಮ್ಮ ದಿರುಸೂ ಮಳೆಗೆ ಸಜ್ಜಾಗಿರದ್ದಕ್ಕೆ ಒಮ್ಮೆ ಎಲ್ಲರೂ ಸಿಕ್ಕ ಸಿಕ್ಕ ಮರದ ನೆರಳಿನಲ್ಲಿ ನಿಂತದ್ದೂ ಆಯ್ತು. ಹೀಗೇ ತಂದಿದ್ದ ಒಂದೆರಡು ಪ್ಲ್ಯಾಸ್ಟಿಕ್ ಹಾಳೆಗಳನ್ನು ಕಟ್ಟುಗಳಿಗೆ ಹೊದಿಸಿ ಕಾದದ್ದೂ ಆಯ್ತು. ಹತ್ತು ಹದಿನೈದು ಮಿನಿಟಿನಲ್ಲಿ ಆತಂಕ ದೂರ ಮಾಡಿ ಮೋಡ ಚದುರಿತು. ತಿಳಿ ವಾತಾವರಣದಲ್ಲಿ ಮುಂದುವರಿದು ದಾರಿಯ ಕೊನೆ ಸೇರುತ್ತಿದ್ದಂತೆ ದಿನದ ಕೊನೆಯೂ ಬಂದಿತ್ತು. ಸ್ಪಷ್ಟವಾಗಿ ಒಂದಷ್ಟು ಜಾಗ ಮಟ್ಟ ಮಾಡಿ ಬಸ್ಸು ಖಾಸಗಿ ವಾಹನಗಳು ತಿರುಗಲು, ತಂಗಲು ವ್ಯವಸ್ಥೆಯಾಗಿತ್ತು. ಬಲ ಕೊನೆಯಲ್ಲಿ ಒಂದೆರಡು ಸಿಮೆಂಟು, ಕಾಂಕ್ರೀಟಿನ ಸಣ್ಣ ಅಂಗಡಿ, ಕಟ್ಟೆಗಳೂ (ಆ ಹೊತ್ತಿಗೆ ಮುಚ್ಚಿದ್ದರೂ) ಬರಲಿರುವ ಪ್ರವಾಸೀ ಸೌಲಭ್ಯದ ಮೊಳಕೆಯನ್ನೇನೋ ಕಾಣಿಸಿತು. (ಮತ್ತೆ ಸೊಕ್ಕಿಲ್ಲದ ರೊಕ್ಕಿನವರೂ ಯಾಣಕ್ಕ ಹೊಕ್ಕು ಸೊಕ್ಕಲಡ್ಡಿಯಿಲ್ಲ!) ಆದರೆ ಅಂದಿನ ನಮ್ಮ ರಾತ್ರಿ ವಾಸಕ್ಕೆ ದೇವಾಲಯದ ಜಗುಲಿಯೇ? ಕ್ಷೇತ್ರದ ಕಟ್ಟಳೆಗಳೇನಾದರೂ ಅದಕ್ಕೆ ಅವಕಾಶ ಕೊಡುವಂತಿಲ್ಲವಾದರೆ ಕಾಡಿನೊಳಗೆ ಶಿಬಿರವಾಸವೇ? ಮೂರನೆಯದೇನಾದರೂ ಇದೆಯೇ ಎಂದು ವಿಚಾರಿಸುವಾಗ ಅಲ್ಲಿದ್ದ ಒಬ್ಬ ಸ್ಥಳೀಯ, ಅಲ್ಲೇ ಎಡದ ಗುಡ್ಡದಾಚೆಯಿದ್ದ ಅರ್ಚಕರ ತೋಟದ ಮನೆ ಸೂಚಿಸಿದ. ನಮ್ಮ ಮನವಿಯನ್ನು ಅರ್ಚಕ ನಾರಾಯಣ ನರಸಿಂಹ ಹೆಗಡೆಯವರು ಸಹಜವಾಗಿ ಪುರಸ್ಕರಿಸಿದರು.

ಹೆಗಡೆಯವರದು ಹಳಗಾಲದ ತೋಟದ ಮನೆ. ಅಲ್ಲಿ ಅಡಿಕೆ ಬೆಳೆಗಾರರಿಗೆ ಅನಿವಾರ್ಯವಾದ ವಿಸ್ತಾರ ಅಂಗಳ ನಮ್ಮ ಬೈಕುಗಳ ತಂಗುದಾಣ. ಅಷ್ಟೇ ಧಾರಾಳವಾಗಿ ಮನೆಯ ಎದುರಿಗೆ ಮಾಡಿಳಿಸಿ (ಕಲ್ನಾರು ಶೀಟು ಹಾಕಿದ್ದರೋ ಸೋಗೆ ಹೊದೆಸಿದ್ದರೋ ಇಂದು ನೆನಪಾಗುತ್ತಿಲ್ಲ) ತಡಿಕೆಯ ಮರೆ ಕಟ್ಟಿ, ಮಣ್ಣಿನ ನೆಲವನ್ನು ಬಿಗಿಯಾಗಿ ಪೆಟ್ಟಿಸಿ, ಚೊಕ್ಕ ಸೆಗಣಿ ಸಾರಿಸಿಟ್ಟಿದ್ದರು. ವಾಸ್ತವದಲ್ಲಿ ಅಡಿಕೆ ಸುಲಿಯುವ, ಅಕಾಲಿಕ ಮಳೆ ಅಥವಾ ರಾತ್ರಿಯ ಇಬ್ಬನಿಗೆ ಒದ್ದೆಯಾಗಬಹುದಾದ ಕೃಷ್ಯುತ್ಪನ್ನಗಳ ತಾತ್ಕಾಲಿಕ ದಾಸ್ತಾನಿಗೆಲ್ಲಾ ಮಾಡಿಕೊಂಡ ಆ ವ್ಯವಸ್ಥೆ ನಮ್ಮನ್ನೇನು ಮತ್ತೆ ಐವತ್ತು ಮಂದಿ ಬಂದರೂ ಸುಲಭವಾಗಿ ಸುಧಾರಿಸುವಂತಿತ್ತು. ನಾವು ಸಂತೋಷದಿಂದ ಅದರ ಒಂದಂಶದಲ್ಲಿ ಹರಡಿಕೊಂಡೆವು. ನಮ್ಮದೇ ದಿನದೋಟದ ಬಗ್ಗೆ ಮೆಲುಕಾಡಿಸುವುದರೊಡನೆ, ಮನೆಯವರೊಡನೆ ಚೂರುಪಾರು ಪರಸ್ಪರ ಪರಿಚಯಾತ್ಮಕ ಮಾತುಕತೆ ನಡೆಸುತ್ತಿದ್ದಂತೆ, ಸರಳ ಬಿಸಿಯೂಟ ಕೊಟ್ಟರು. ನಾವೆಲ್ಲಾ ವೈಯಕ್ತಿಕ ಅನುಕೂಲಕ್ಕೆ ತಕ್ಕಂತೆ ಮಲಗುವ ಚೀಲ, ಜಮಖಾನ ಹೊದಿಕೆಗಳನ್ನೆಲ್ಲ ಸಜ್ಜುಗೊಳಿಸಿಕೊಂಡೇ ಹೋಗಿದ್ದರೂ ನೆಲದ ಶೀತ ತಟ್ಟದಂತೆ ಅಡಿಗೆ ಹಾಸಿಕೊಳ್ಳಲು ಒಳ್ಳೆಯ ಗೋಣಿಗಳನ್ನೂ ಮಲೆನಾಡಿನ ಚಳಿಗೆ ಸೂಕ್ತವಾದ ಕಂಬಳಿಯನ್ನೂ ಒದಗಿಸಿದ್ದರು. ನಮಗೆ ಸುಖ ನಿದ್ರೆ ಬಂತೆಂದು ಪ್ರತ್ಯೇಕ ಹೇಳಬೇಕೇ?

ಹೊಸ ದಿನವನ್ನು ಯಾಣ ಸ್ಥಳ ಪುರಾಣದೊಡನೆ ವಿಸ್ತರಿಸುವುದು ಸೂಕ್ತ. ಶಿವನ ಮಾನಸ ವಿಕಲ್ಪವಾಗಿ ಭಸ್ಮಾಸುರ ಹುಟ್ಟುತ್ತಾನೆ. ಈತ ಶಿವನಿಂದ ವರವಾಗಿ ಉರಿಹಸ್ತವನ್ನು ಪಡೆಯುತ್ತಾನೆ. ಅಂದರೆ ಇವನ ಉರಿಹಸ್ತ ಯಾವುದರ ಮೇಲಾಡಿದರೂ ಅದು ಬೂದಿಯಾಗುತ್ತದೆ. ಭಸ್ಮಾಸುರ ಮರುಕ್ಷಣದಲ್ಲಿ ತನ್ನ ಅಮರತ್ವವನ್ನು ಸಾರಿಕೊಳ್ಳಲು ಶಿವನ ತಲೆಗೇ ಕೈ ಇಡಲು ಮುಂದಾಗುತ್ತಾನೆ. ಭೋಳೇ ಶಂಕರ ಊರು ಬಿಟ್ಟೋಡುತ್ತಾನೆ. ಮತ್ತೆ ಎಂದಿನಂತೆ ಸ್ಥಿತಿಕಾರಕ ವಿಷ್ಣು ಪ್ರವೇಶಿಸಿ, ಮೋಹಿನಿ ರೂಪ ತಳೆದು, ಭಸ್ಮಾಸುರ ತನ್ನ ಕೈಯನ್ನು ತನ್ನದೇ ತಲೆಯ ಮೇಲೆ ತಂದುಕೊಳ್ಳುವಂತೆ ಮಾಡುವಲ್ಲಿಗೆ ಲೋಕ ಕಲ್ಯಾಣವಾಗುತ್ತದೆ. ಈ ಅಂತಿಮ ದೃಶ್ಯದ ನೆಲವೇ ಯಾಣ.

‘ಹಕ್ಕಿ ರಾಜರು ಬಂದು ಚಿಲಿಪಿಲಿಗೈಯುವ’ ಹೊತ್ತಿಗೇ ನಾವು ಸಜ್ಜಾಗಿ ಕಾಲು ದಾರಿಯಲ್ಲಿದ್ದೆವು. ನನ್ನ ಮೊದಲ ಭೇಟಿಯಲ್ಲಿ ಕಂಡ ಸುಮಾರು ಎಂಟು ಹತ್ತು ಅಡಿಯಷ್ಟೇ ಕಾಡು ಬಿಡಿಸಿಟ್ಟ ಜಾಡು ಈ ಬಾರಿ ಭರ್ಜರಿ ಅಗಲೀಕರಣಕ್ಕೊಳಗಾಗಿತ್ತು! ನನ್ನ ಮೊದಲ ಭೇಟಿಯಂದು ಕಾಡ ಮರೆಯಲ್ಲಿದ್ದ ಸ್ವಾಗತಕಾರನಂತೆ ಕಂಡಿದ್ದ ಬಂಡೆ ಒಂದಲ್ಲ, ಎರಡು ಮತ್ತು ಹೆಚ್ಚು ಎಂದು ಸ್ಪಷ್ಟವಾಗಿ ತೋರುತ್ತಿತ್ತು. ಐವತ್ತರವತ್ತಡಿ ಮೀರಿದ ಎತ್ತರದ ಈ ಬಂಡೆಗಳು ಅಸಂಖ್ಯ ಸೀಳೂ ಹೋಳೂ ಆಗಿವೆ. ಅವನ್ನು ನಖಶಿಖಾಂತ ವ್ಯಾಪಿಸಿರುವ ತೋರ ಬಳ್ಳಿ, ಸ್ಪರ್ಧೆಯಲ್ಲಿ ಮೀರುವಂತೆ ಬೆಳೆದು ನಿಂತ ಮಹಾಮರಗಳು ಯಾರಿಗೂ ಶಿಲಾರೋಹಣದ ಕಿಂಚಿತ್ ಪ್ರೇರಣೆ ಹುಟ್ಟಿಸುತ್ತವೆ. ಆದರೆ ಸ್ಪಷ್ಟ ಶಿಲಾರೋಹಣದ ಪರಿಚಯವಿರುವ ನಮಗೆ ಈ ಪ್ರವಾಸದ ಸಿದ್ಧತೆ ಮತ್ತು ಸಮಯಮಿತಿಯ ಪೂರ್ಣ ಅರಿವಿದ್ದುದರಿಂದ ಆಸೆಗಣ್ಣುಗಳನ್ನಷ್ಟೇ ತಣಿಸಿಕೊಂಡು ಮುಂದುವರಿದೆವು. ಈ ಬಂಡೆಗಳನ್ನು ಜನಪದರು ಸುಣ್ಣದ ಕಲ್ಲೆಂದೇ ಹೇಳಿದರೂ ಪುರಾಣಿಕರು ಭಸ್ಮಾಸುರನ ಕರಟಲು ಮೂಳೆ ತುಣುಕುಗಳೆಂದೇ ಗುರುತಿಸುತ್ತಾರೆ. ಮುಂದುವರಿದು ಈ ಪರಿಸರದ ನೆಲವೆಲ್ಲಾ ಕರಿಕಾಗಿರುವುದೂ ಆ ಮಹಾಕಾಯನದೇ ಬೂದಿಯಂತೆ.

[ಶಿವ ಕೊಟ್ಟ ವರಬಲದಲ್ಲಿ ಭಸ್ಮಾಸುರನ ಹಸ್ತ ಯಾವುದರ ಮೇಲಾಡಿದರೂ ಅದು ಅನ್ಯ-ಶೇಷರಹಿತವಾಗಿ (ಶಿವನ ಭಸ್ಮಧಾರಣೆಗೆ ಒದಗುವಂತೆ) ಬೂದಿಯಾಗಬೇಕು. ಹಾಗಾದರೆ ಈ ಮೂಳೆಗಳು ಉಳಿದದ್ದು ಹೇಗೆ? ಮೋಹಿನಿಯ ಲಾಸ್ಯದ ಅನುಕರಣೆಯ ಭ್ರಮೆಯಲ್ಲಿ ಭಸ್ಮಾಸುರ ತನ್ನ ತಲೆಯ ಮೇಲೇ ತನ್ನ ಉರಿಹಸ್ತ ತಂದುಕೊಂಡ ಎಂದು ಕಥೆ ಹೇಳುತ್ತದೆ. ಆದರೆ ಉದ್ದಿಷ್ಟ ಲಕ್ಷ್ಯ ಸಾಧನೆಯಾಗುವ ಮೊದಲು ಭಸ್ಮಾಸುರ ಎಂಬ ವ್ಯಕ್ತಿಯೇ ಮೃತನಾದ್ದರಿಂದ ಮೂಳೆ ಬೂದಿಯಾಗಲಿಲ್ಲ ಎಂದು ಅದನ್ನು ಪರಿಷ್ಕರಿಸಿಕೊಳ್ಳಬೇಕೋ ಏನೋ. ಅಥವಾ ಚರ್ಮ ಮಾಂಸಾದಿಗಳನ್ನು ಸುಟ್ಟು ಚೂರ್ಣವಾಗಿಸಬಲ್ಲ ಶಾಖಕ್ಕಿಂತ ಹೆಚ್ಚಿನ ತೀವ್ರತೆಯನ್ನು ತನ್ನ ಹಣೆಗಣ್ಣಿಗೇ ಮೀಸಲಿಟ್ಟುಕೊಂಡಿರಬಹುದೇ ಶಿವಪ್ಪಾ? ಉರಿಮೂಲವಾದ ಹಸ್ತ ಏನಾಯ್ತು?]
ಏನೇ ಇರಲಿ, ಮೋಹಿನಿ ಭಸ್ಮಾಸುರರ ಪುರಾಣ ಕಥಾನ್ವಯಕ್ಕೆ ಧಾರಾಳ ಒದಗುವಂತೆ ವನ್ಯ ಪರಿಸರ ಮೋಹಕವಾಗಿತ್ತು. ಭಸ್ಮಾಸುರನ ಅಸ್ಥಿ (ಮೊದಲ ಬಂಡೆಗಳು), ಕಾಡತೊರೆಯಂತೆ ವೇಷಪಲ್ಲಟಿಸಿ ಮರಣ-ರಿಂಗಣಕ್ಕೆ ಸಾಕ್ಷಿ ಹಾಕಿದ ಚಂಡಿ, ಅಲ್ಲೇ ಅಂಚಿನಲ್ಲಿ ಅಪ್ಪನ ಬಿಡುಗಡೆ ಕಾದು ಕುಳಿತ ಗಣೇಶ ಎಂದಿತ್ಯಾದಿ ‘ಸಾಕ್ಷಿ’ ಪಟ್ಟಿಗೆ ಇನ್ನಷ್ಟು ಸೇರಿಸುವುದರೊಡನೆ ವಾಸ್ತವದ ಚಂದವೂ ಏರುತ್ತ ಬಂತು. ಗಣಪತಿ ಗುಡಿ ಭೈರವ ಶಿಖರದ ಬುಡ. (‘ಶಿಖರ’ ಎನ್ನುವಾಗ ಭಾರೀ ಕಲ್ಪನೆ ಏನೂ ಕಟ್ಟಿಕೊಳ್ಳಬೇಡಿ. ಒಟ್ಟಾರೆ ನೂರಿನ್ನೂರು ಕಚ್ಚಾ ಮೆಟ್ಟಿಲುಗಳಲ್ಲೇ ಮುಗಿಯುವ ಗುಡ್ಡೆ) ಮೆಟ್ಟಿಲೇರುತ್ತಿದ್ದಂತೆ ಎಡ ಭಾಗದಲ್ಲಿ, ಸುಮಾರು ಐವತ್ತು ನೂರಡಿಗಳ ಅಂತರದಲ್ಲಿ, ಆಕಾಶವನ್ನೇ ತಿವಿಯುವ ಭರ್ಚಿಯಂತೆ, ಮರಗಿಡಗಳ ಮರೆಯಿಂದ ನಿಧಾನಕ್ಕೆ ಅನಾವರಣಗೊಳ್ಳುತ್ತದೆ ಮೋಹಿನಿ ಕಲ್ಲು. ನಮ್ಮ ಪ್ರತಿ ಹೆಜ್ಜೆಗೂ ಅದು ಬೆಳೆದಂತೆ, ಅದಕ್ಕೆ ಮತ್ತಷ್ಟು ಚೂಪುಗಳು ಮೊಳೆತಂತೆ ಭಾಸವಾಗುತ್ತಿತ್ತು. ಅಸಂಖ್ಯ ಮಿನಾರುಗಳ ಇಸ್ಲಾಂ ವಾಸ್ತುಗೆ ಪ್ರಾಕೃತಿಕ ಪ್ರೇರಣೆ ಇಂಥಲ್ಲಿಂದಲೇ ಬಂದಿರಬೇಕು.

ಗುಡ್ಡೆ ಏರಿ ಮುಗಿಯುತ್ತಿದ್ದಂತೆ ಎಡ ಕೀಲಿಸಿದ ನಮ್ಮ ದೃಷ್ಟಿಯನ್ನು ಪೂರ್ಣ ತುಂಬುವ ಇನ್ನೊಂದೇ ಅದ್ಭುತ ಎದುರು ಅನಾವರಣಗೊಳ್ಳುತ್ತದೆ – ಭೈರವೇಶ್ವರ ಬಂಡೆ. ಇದರ ಶಿಖರವಾದರೋ ಮಿನಾರುಗಳ ಸಂದಣಿಯಂತೆ ಚೂಪಲ್ಲ, ಬುಡದ ಹರಹಿಗೆ ಸಮಾನವಾಗಿ ಅಷ್ಟು ಅಗಲಕ್ಕೆ ಹರಡಿ ನಿಂತಿದೆ. ಕೋಟೆಯ ಬುರುಜಿನಂತೆ, ಯಾವುದೋ ರೋಮನ್ ಶಿಲ್ಪದ ಕಿರು ಬಾಲ್ಕನಿಗಳ ಸಂದಣಿಯಂತೆ ಆ ಬಂಡೆಯ ಬೃಹತ್ ತಲೆ ನಾವು ನಿಂತ ಅಂಗಣಕ್ಕೇ ಚಾಚಿಕೊಂಡಿದೆ. ಬೃಹತ್+ತಲೆ+ಈಶ್ವರ = ಬತ್ತಲೇಶ್ವರ ಸ್ಥಳದ ದೇವ; ಎಂಥಾ ಅನ್ವರ್ಥನಾಮ! ಮಳೆ, ಗಾಳಿ, ಬಿಸಿಲು, ಚಳಿಯ ಚಾಣದೇಟಿಗೆ ಮೇಲಿನಿಂದ ಕೆಳಕ್ಕೆ ಉದ್ದುದ್ದಕ್ಕೆ ಕಾಣುವ ಸೀಳು, ನಿರಿಗೆ ಶಿವ ಜಟಾಜೂಟವನ್ನೇ ನೆನಪಿಸುತ್ತದೆ. ಮುಂಚಾಚಿಕೆಯಡಿಯ ಮರೆಗೆ ಗುಹೆಯ ರೂಪಕೊಟ್ಟು ಗರ್ಭಗುಡಿಯನ್ನೇ ಮಾಡಿದ್ದಾರೆ. ಅದರೊಳಗೆ ಹಿಂದಿನ ಮುಖ್ಯ ಕಲ್ಲ ಗೋಡೆಯಲ್ಲೇ ಮೂಡಿದ ಪ್ರಾಕೃತಿಕ ಉಬ್ಬು ಸೀಳುಗಳಲ್ಲೇ ಭಾವುಕ ಮನಸ್ಸು ಶಿವನನ್ನು ಕಂಡಿದೆ. ಬೆನ್ನು ಹಿಡಿದ ಅಸುರನಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಇಲ್ಲಿ ಈಶ್ವರ ಬಂಡೆಗೆ ಢಿಕ್ಕಿ ಹೊಡೆದು ಒಳ ಸೇರಿದ್ದಂತೆ. ಜಟೆಯನ್ನು ಪ್ರತಿನಿಧಿಸುವ ಸೀಳುಗಳಲ್ಲಿ ನೀರು ನಿರಂತರ ಜಿನುಗಿ ಗಂಗೆಯನ್ನು ಪ್ರತ್ಯಕ್ಷೀಕರಿಸಿರುವುದಂತೂ ಭಕ್ತ ಮನಸ್ಸಿಗೆ ಪರಮಾನಂದವನ್ನೇ ಕೊಟ್ಟರೆ ತಪ್ಪಿಲ್ಲ. ಗುಡಿಯೆದುರು ಹರಕುಮುರುಕಾಗಿ ಮಾಡಿಳಿಸಿ ಕಟ್ಟಿದ ಜಗುಲಿಗಳು, ಕಾಡಕೋಲು ಹರಕು ಸೊಪ್ಪಿನ ಚಪ್ಪರ, ದಂಬೆ ನೀರಿನ ಬಳಕೆಯ ಅವ್ಯವಸ್ಥೆಗಳೇನಿದ್ದರೂ ಭೇಟಿಕೊಡುವ ಜನರ ವಿರಳತೆಯಿಂದ ಪ್ರಾಕೃತಿಕ ಅಸಮತೋಲನ ಉಂಟುಮಾಡುವ ಮಟ್ಟಕ್ಕೆ ಬೆಳೆದಿಲ್ಲ. ಹಸುರಿನ ಪರಿಮಳ ಹೊತ್ತು ನಯವಾಗಿ ತೀಡುವ ತಂಗಾಳಿಗೆ ಮೈ ಕೊಟ್ಟು, ವನಝರಿಗಳ ಶ್ರುತಿಯಲ್ಲಿನ ಹಕ್ಕಿ ಪಲುಕುಗಳಿಗೆ ಕಿವಿಕೊಟ್ಟು, ಬತ್ತಲೇಶ್ವರ ಮತ್ತು ಮೋಹಿನಿ ಬಂಡೆಗಳನ್ನು ಕಣ್ತುಂಬಿಕೊಳ್ಳುತ್ತಾ ಕುಳಿತರೆ ಕುಪ್ಪಳ್ಳಿಯ ಉದ್ಗಾರ ಮರುಧ್ವನಿಸುತ್ತದೆ – “ನಾ ಧನ್ಯ, ನಾ ಧನ್ಯ.”

ಬಂಡೆಯ ಮುಂಚಾಚಿಕೆಯ ಅಡಿಯಲ್ಲಿ ನೇಲುತ್ತಿದ್ದ ಅಸಂಖ್ಯ ಹೆಜ್ಜೇನ ಹಿಂಡು, ಅಲ್ಲೇ ಅತ್ತಿತ್ತ ಸುಳಿದಾಡಿ ಅವನ್ನು ಕುಟ್ಟಿ ಕಾಡುವ ಮತ್ತು ಹೊಟ್ಟೆಹೊರೆಯುವ ನೊಣಬಾಕ ಹಕ್ಕಿಗಳ ಜಾಣ್ಮೆ ಕೆಲವೊಮ್ಮೆ ಮುಗ್ಧ ಭಕ್ತರನ್ನೂ ಕಾಡುವುದುಂಟು. ನೊಣಗಳ ಪ್ರಭಾವದಲ್ಲಿ ಇಲ್ಲಿನ ಆರಾಧನೆಯಲ್ಲಿ ಸಣ್ಣ ನಂದಾದೀಪ ಅಥವಾ ಆರತಿ ದೀಪ ಬಿಟ್ಟರೆ, ಪ್ರಸಾದವೂ ಸೇರಿದಂತೆ ಎಲ್ಲವೂ ನಿರಗ್ನಿ ರೂಪದವೇ. ಹಾಗೂ ಒಮ್ಮೊಮ್ಮೆ ಬತ್ತಲೇಶ್ವರನ ನಿಜ ಒಕ್ಕಲು – ಜೇನ್ನೊಣಗಳು, ಕೆರಳಿ ಅಸಂಖ್ಯರಿಗೆ ಒಮ್ಮೆಲೇ ಕುಟುಕು ಸೇವೆ ನೀಡುವುದುಂಟಂತೆ. ಆಗೆಲ್ಲಾ (ಇದುವರೆಗೆ) ಭಕ್ತರ ಸಮೃದ್ಧ ಮನಸ್ಸು ತಮ್ಮ ಅಶುದ್ಧವನ್ನು ಶೋಧಿಸಿಕೊಳ್ಳುತ್ತಿತ್ತು. ಕನ್ನಡ ಸಿನಿಮಾವೊಂದು ಇದಕ್ಕೆ ವಿಪರೀತ ಜನಪ್ರಿಯತೆಯನ್ನು ತಂದುಕೊಟ್ಟಿತು. ಸುಣ್ಣದ ಕಲ್ಲು ಯಥೇಚ್ಛ ಇದೆಯೆಂದು ಸಿಮೆಂಟ್ ಕಾರ್ಖಾನೆಯ ಯೋಜನೆ ಬಹುಕಾಲ ಗಾಳಿಯಲ್ಲಿತ್ತು. ಎಲ್ಲವನ್ನೂ ಮೀರಿದ ಕ್ಷೇತ್ರಾಭಿವೃದ್ಧಿ ಯೋಜನೆಗಳು ಏನೇನು ಇವೆಯೋ ಶಿವನೇ ಬಲ್ಲ. ನಾಗಬನಗಳಿಂದ ಹಾವುಗಳನ್ನೇ ಹೊರಹಾಕಿದ, ಅಕ್ಷರಧಾಮಗಳನ್ನು ಊಟ ಸೈಕಲ್ ಬಟವಾಡೆಯ ಕೇಂದ್ರ ಮಾಡಿದ, ವನಧಾಮಗಳನ್ನು ಪ್ರವಾಸೋದ್ಯಮಕ್ಕೆ ಬಲಿಕೊಟ್ಟ (ಇತ್ಯಾದಿ) ಅಭಿವೃದ್ಧಿಯ ಹುಚ್ಚು ಯಾಣದಿಂದ ದೂರವಿರಲಾರದು. ನೊಣ ನಿವಾರಕ ಯಂತ್ರಗಳನ್ನೋ (ಹೋಟೆಲಿನಲ್ಲಿ ನೀಲಿ ಬೆಳಕು ಬಿಟ್ಟುಕೊಂಡು ಚಿಟಿಪಿಟಿ ಮಾಡುತ್ತಿರುತ್ತದಲ್ಲ – ಬೃಹತ್ ತಲೇಶ್ವರನಿಗೆ ಅದರ ಬೃಹತ್ ರೂಪ!) ವಾತಾಯನದ ವ್ಯವಸ್ಥೆಯೊಂದಿಗೆ ಗಾಜಿನರಮನೆಯನ್ನೋ ತಂದರೆ ಅಳುವವರು ಇರಲಾರರು.

[ಯಾಣದ ಮುಖ್ಯ ಕಲ್ಲುಗಳೆರಡರ ಎತ್ತರ ಬಿತ್ತರದ ನಿಖರ ಅಳತೆಗಳು ನನಗೆ ಸಿಕ್ಕಿಲ್ಲ. ಭೈರವನಿಂದ ಸವಕಲು ಜಾಡು ಹಿಡಿದು ಮೋಹಿನಿಯ ಬುಡ ಮುಟ್ಟುವುದಷ್ಟೇ ಮಾಡಿದ್ದೇನೆ. ಕತ್ತು ನೋಯುವಷ್ಟು ಮೇಲೆ ನೋಡಿ ಅದು ಅತ್ಯುನ್ನತಿಯಲ್ಲಿ ನಾನೂರಡಿಯವರೆಗೂ ಇರಬಹುದು ಎಂದು ಅಂದಾಜಿಸಿದ್ದೆ. ಅದನ್ನು ವಿವಿಧ ಕೋನಗಳಿಂದ ನೋಡುವಾಸೆಗೆ ಪ್ರದಕ್ಷಿಣೆ ಹಾಕೋಣವೆಂದರೆ ಸುಲಭಸಾಧ್ಯವಾಗದಂತೆ ಕೊರಕಲು, ಸಂದ ಶತಮಾನಗಳಲ್ಲಿ ಕಳಚಿಬಿದ್ದ ಭಾರೀ ಕಲ್ಲ ಹಳಕುಗಳು, ದಟ್ಟ ಮುಳ್ಳು, ಪೊದರು ಹಬ್ಬಿವೆ.]
ಭೈರವ ಬಂಡೆ ಎತ್ತರದಲ್ಲಿ ಮೋಹಿನಿಗೆ ಕಡಿಮೆಯಿರಲಾರದು. ಆದರೆ ವಿಸ್ತಾರದಲ್ಲಿ ನಿಜಕ್ಕೂ ಬೃಹತ್ತೇ ಆಗಿ ಯಾವುದೇ ಸಾಮಾನ್ಯ ಅಂದಾಜುಗಳಿಗೆ ಒಡ್ಡಿಕೊಳ್ಳದಂತಿದೆ. ನಮ್ಮ ಮೊದಲ ಭೇಟಿಯಲ್ಲಿ ಅದರ ಬಲ ಅಂಚಿನಲ್ಲಿ ತೊಡಗುವ ಸಪುರ ಕೊರಕಲು ಕುತೂಹಲ ಕೆರಳಿಸಿತ್ತು. ಅರೆಗತ್ತಲಿನ, ಉದ್ದುದ್ದಕ್ಕೆ ಸೀಳಿ, ಕೊರೆದುಹೋಗಿ ನಿಂತ ಬಂಡೆಗೋಡೆಯ ಆ ಸಂದಿನಿಂದ ಬರುತ್ತಿದ್ದ ಬಾವಲಿ ಮೂರಿ ಮತ್ತು ಅವುಗಳ ಚೀತ್ಕಾರ ಒಮ್ಮೆಗೆ ಭಯ ಹುಟ್ಟಿಸುವಂತಿತ್ತು. ಆದರೆ ನಡುವಿನ ಎರಡು ಮೂರಡಿ ಅಗಲದ ಸ್ಪಷ್ಟ ಮಣ್ಣಿನ ನೆಲ ಕ್ವಚಿತ್ತಾಗಿಯಾದರೂ ಮನುಷ್ಯ ಬಳಕೆಗೆ ಬಂದದ್ದರ ಕುರುಹು ಕಾಣಿಸಿದ್ದರಿಂದ ನಾವು ನುಗ್ಗಿದ್ದೆವು. ಗುಡಿಯ ಪರಿಸರಕ್ಕೆ ಮನ್ನಣೆ ಕೊಟ್ಟು ಬರಿಗಾಲಿನಲ್ಲಿದ್ದ ನಮ್ಮಂಥವರನ್ನು ನಿರುತ್ತೇಜನಗೊಳಿಸುವಂತೆ ಅದರುದ್ದಕ್ಕೆ ಹೊಂಗಾರೆ ಮುಳ್ಳು ಚೆಲ್ಲಿಕೊಂಡಿತ್ತು. ತುಸು ಏರಿನಲ್ಲಿ, ಬಲು ಎಚ್ಚರದ ನೂರೆಂಟು ಹೆಜ್ಜೆ ಹಾಕಿಯಾಗುವಾಗ ಬಲಬದಿಗೆ ಬಂಡೆ ಹೋಗಿ ಪೊದರು ಮರಗಳ ಗುಡ್ಡೆ ತೆರೆದುಕೊಳ್ಳುತ್ತದೆ. ಮುಖ್ಯ ಬಂಡೆ ಎಡಕ್ಕೆ ಮತ್ತಷ್ಟು ನಿಗೂಢವಾಗಿ ಇನ್ನೊಂದು ಕೊರಕಲು ತೋರಿಸುತ್ತದೆ. ಆದರೆ ಆಶ್ಚರ್ಯಕರವಾಗಿ ಬಲಬದಿಯ ಗುಡ್ಡೆಯ ಮೇಲೆಲ್ಲೋ ತೊರೆಗೆ ಒಡ್ದಿಕೊಂಡ ಅಡಿಕೆಮರದ ದಂಬೆ ಸಾಲೊಂದು, ಕಬರು ಕೋಲುಗಳ ಬಲದಲ್ಲಿ ಆ ಸಂದಿನಲ್ಲೇ ಮುಂದುವರಿದದ್ದು ಮತ್ತದರಲ್ಲಿ ನೀರೂ ಹರಿಯುತ್ತಿದ್ದದ್ದು ನಮ್ಮ ಕುತೂಹಲವನ್ನು ಇಮ್ಮಡಿಸಿತು. ಆ ಜಲ ಮೂಲದ ಬಗ್ಗೆ ಯೋಚನೆ ಮಾಡದೆ ದಂಬೆ ಸಾಲನ್ನು ಅನುಸರಿಸಿ ಹೊಸದೇ ಕೊರಕಲಿನಲ್ಲಿ ನಡೆದವರು ಮತ್ತೆ ನೂರೇ ಹೆಜ್ಜೆಯಲ್ಲಿ ಭೈರವ ಬಂಡೆಯ ಇನ್ನೊಂದೇ ಮಗ್ಗುಲಿನಲ್ಲಿ ಬಯಲಾದೆವು. ಈ ನೀರು ಪ್ರಕಟವಾಗಿ ಭೈರವೇಶ್ವರನ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಗುಹಾಪ್ರವೇಶಕ್ಕೆ ಮೊದಲ ಕಡ್ಡಾಯದ ಸ್ನಾನಕ್ಕೆ ಒದಗುತ್ತದೆ. ಆದರೆ ಕೊರಕಲಿನೊಳಗೆ ಅದು ಗುಡಿಯ ಭೈರವೇಶ್ವರನ ಬಿಂಬದ ಹಿಂದೆಯೇ ಹಾದು ಹೋಗುವುದನ್ನೂ ಗಮನಿಸಿದ್ದೆವು. (ಕಥೆಯೊಳಗೊಂದು ಉಪಕಥೆ: ಅಂದು (೩೦-೧-೧೯೭೭) ಪ್ರಾಯ ಸಹಜವಾದ ಪತ್ತೇದಾರಿ ಉತ್ಸಾಹದಲ್ಲಿ ನಾನು ‘ಭೈರವೇಶ್ವರ ಗಂಗೆ ಅಡಿಕೆ ದಂಬೆಯಲ್ಲಿದ್ದಾಳೆ ನೋಡಿ’ ಎಂಬರ್ಥದ ಚೀಟಿ ಬರೆದು, ನನ್ನ ವಿಳಾಸ ಸಹಿತ ಅಲ್ಲೇ ಬಂಡೆಯ ಸಂದಿಗೆ ಸಿಕ್ಕಿಸಿ ಬಂದಿದ್ದೆ. ನನ್ನ ಆಶ್ಚರ್ಯಕ್ಕೆ ೧೧-೨-೭೭ರಂದು ವಿ.ಎಂ ಹಾಸ್ಯಗಾರ್ ಎನ್ನುವವರು ಆ ಚೀಟಿ ಪತ್ತೆ ಮಾಡಿ, ನನಗೆ ಉತ್ತರಿಸಿದ್ದು, ನಾನವರಿಗೆ ಗುಹೆಯ ಚಿತ್ರ ಕಳಿಸಿದ್ದು ಎಲ್ಲಾ ಚಂದ್ರನ ಮೇಲಿಳಿದ ಮಾನವನಿಗಾದಷ್ಟೇ ರೋಮಾಂಚನವನ್ನು ನಮಗೆ ಉಂಟು ಮಾಡಿತ್ತು!)

ಅರ್ಚಕ ಹೆಗಡೆಯವರ ಮನೆಗೆ ಧಾವಿಸಿ, ಆತಿಥ್ಯಕ್ಕೆ ಪ್ರಾಮಾಣಿಕ ಕೃತಜ್ಞತೆಗಳೊಂದಿಗೆ (ಥ್ಯಾಂಕ್ಸ್ ಎಸೆದು ಅಲ್ಲ) ಒತ್ತಾಯದ ಕಿರುಕಾಣಿಕೆ ಕೊಟ್ಟು ಬೈಕ್ ಯಾನಿಗಳೇನೋ ಮುಂದುವರಿದೆವು. ಆದರೆ ಯಾಣದ ನನ್ನ ಮೊದಲ ಯಾನ ಇಷ್ಟು ಸುಲಭದಲ್ಲಿ ಮುಗಿಯಲಿಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಹೇಳದಿರಲಾರೆ.

ಹಾಂ, ಚಂದ್ರ, ಪ್ರಕಾಶರ ನಮ್ಮ ತಂಡವನ್ನೂ ನಿಮ್ಮನ್ನೂ ಗಣಪತಿಗುಡಿಯ ಬಳಿ ಬಿಟ್ಟಿದ್ದೆ. ಮೇಲೇರಿದರೆ ಬತ್ತಲೇಶ್ವರನ ಗುಡಿಯೂ ಬಾಗಿಲಿಕ್ಕಿತ್ತು. ಅಲ್ಲಿ ನಮ್ಮಷ್ಟಕ್ಕೆ ಸುತ್ತಾಡಿ, ಚಂಡಿಕಾ ತೀರ್ಥಕ್ಕೆ ಮರಳಿದೆವು. ದೂಳು, ಬೆವರು, ಬಳಲಿಕೆಗಳನ್ನು ಆ ಕಾಡ ತೊರೆಗೆ ಕೊಟ್ಟು ಗಣಪತಿ ಗುಡಿಯ ಕಟ್ಟೆಯಲ್ಲಿ ಬುತ್ತಿ ಬಿಚ್ಚಿದೆವು; ತೆಂಗಿನಕಾಯಿ ಚೂರು, ಒಣ ಅವಲಕ್ಕಿ, ಬೆಲ್ಲ ಬಾಳೇಹಣ್ಣು. ಪಾನಕ್ಕೆ, ಸ್ನಾನಕ್ಕೊದಗಿದ ಚಂಡಿಕೆ ಧಾರಾಳಿ. ಹಿಂತೆರಳುವ ದಾರಿಯಲ್ಲಿ ಎಷ್ಟು ಉದ್ದಕ್ಕೆ ಕಾಲು ಹಾಕಿದರೂ (ಚಂದ್ರನೇ ಹೇಳಿದಂತೆ ಭೀಮ ಬಕ್ಕರ್. ನಮ್ಮ ಲೆಕ್ಕಕ್ಕೆ ಅದು ಬೀಸು ನಡಿಗೆ, ಸಣ್ಣಾಳು ಚಂದ್ರನ ಲೆಕ್ಕಕ್ಕದು ಕುಕ್ಕುಟೋಟ!) ಮುಸ್ಸಂಜೆಗೆ ಮುನ್ನ ಡಾಮರು ದಾರಿ ಸೇರುವುದಾಗಲಿಲ್ಲ. ಅಲ್ಲಿಂದ ಕುಮಟೆಗೆ ಬಸ್ ಸಿಕ್ಕರೂ ಮಂಗಳೂರಿನತ್ತದ ದಿನದ ಬಸ್ಸುಗಳೆಲ್ಲಾ ಹೋಗಿಯಾಗಿದ್ದವು. ಹೆದ್ದಾರಿಯಲ್ಲಿ ಅದೃಷ್ಟದ ಬೆನ್ನು ಹಿಡಿದು ಭರ್ತಿ ಹೊರೆಹೊತ್ತ ಮಂಗಳೂರು ಲಾರಿಯೊಂದನ್ನು ಹಿಡಿದೆವು. ಚಾಲಕ ಮಹಾಶಯ ಸಹಾಯಕನನ್ನು ಹಿಂದಿನ ಹೊರೆ ಸಂದಿನಲ್ಲಿ ಮಲಗುವಂತೆ ಮಾಡಿ ಕ್ಯಾಬಿನ್ನಿನ ಕಿಷ್ಕಿಂದೆಯಲ್ಲಿ ನಮ್ಮನ್ನು ಸೇರಿಸಿಕೊಂಡ. ಜೊತೆಗೊಂದು ಸಣ್ಣ ಎಚ್ಚರಿಕೆಯ ಮನವಿ ಮಾಡಿದ. “ನಿಮ್ಮಲ್ಲೊಬ್ಬರಾದರೂ ನನ್ನೊಡನೆ ಮಾತಾಡಿಕೊಂದಿದ್ದರೆ ನಾನು ಸೀದಾ ಮಂಗಳೂರಿಗೆ ಹೋಗಬಲ್ಲೆ. ಇಲ್ಲವಾದರೆ ದಾರಿಯಲ್ಲೆಲ್ಲಾದರೂ ಸ್ವಲ್ಪ ಮಲಗಿ ಮುಂದುವರಿಯಬೇಕಾದೀತು.” ಇನ್ನೂ ಏಳು ಗಂಟೆಯ ಆಸುಪಾಸು. ಅಬ್ಬಬ್ಬಾ ಅಂದರೂ ಮಧ್ಯರಾತ್ರಿಯ ಆಸುಪಾಸು ಮಂಗಳೂರು ತಲಪಿದರೆ, ಮತ್ತೊಂದು ಮೂರು ನಾಲ್ಕು ಗಂಟೆ ಮನೆಯಲ್ಲಿ ಮಲಗಿ ನಾಳೆಯನ್ನು ಸಮರ್ಥವಾಗಿ ಎದುರಿಸುವ ಹುಂಬತನ ನಮ್ಮದು. “ಆಯ್ತು, ಸೀದಾ ಪೋಯಿ” ಎಂದೇ ಹೊರಟೆವು. ಚಾಲಕನ ಪಕ್ಕಕ್ಕೆ ಪ್ರಕಾಶ, ಚಂದ್ರರನ್ನು ಹಾಕಿ, ಎಡದ ಬಡಕಲು ಬಾಗಿಲನ್ನು ಬಡಿದು ಹಾಕಿ, ನಾನು ಬಾಯ ಬಡಿವಾರಕ್ಕಿಳಿದೆ. ಹೆದ್ದಾರಿಗೆ ಇಂದಿನ ದೆಸೆಗೇಡಿತನವಿರಲಿಲ್ಲ. ಗಣಿಲಾರಿಗಳ ಇಡಿಕಿರಿತನ, ದೂರದೋಟದ ನಿಶಾಚರಿ ಬಸ್ಸುಗಳ ವಿಪುಲತೆಯ ಕಾಟವೂ ಇರಲಿಲ್ಲ. ಆದರೆ ಲಾರಿಯ ಲೋಡು ಅದರ ಮಿತಿಗೆ ಮೀರಿದ್ದು. ಸಹಜವಾಗಿ ಅದರ ಏರುಶ್ರುತಿ ಮತ್ತು ನಿಧಾನಗತಿಯಲ್ಲಿ ನಮ್ಮ ಮಾತುಗಳು ಏಕಮುಖ ಸಂಚಾರ ಮಾಡಿದ್ದೇ ಹೆಚ್ಚು. ಹಿಂದಿನ ರಾತ್ರಿಯ ನಿದ್ರೆ, ಹಗಲಿನ ಶ್ರಮ ನನ್ನ ಕಣ್ಣೆವೆಯ ಮೇಲೆ ಆ ಲಾರಿಲೋಡಿನಷ್ಟೇ ತೂಕವಾಗಿ ಕುಳಿತಿತ್ತು. ಸಾಲದ್ದಕ್ಕೆ ಪ್ರತಿ ಸಣ್ಣ ಎಡಬಲ ತುಯ್ತಕ್ಕೂ ಕೇಜಿಗಟ್ಟಳೆ ನಿದ್ರೆ ತೂಗುತ್ತಿದ್ದ ಚಂದ್ರನ ಮಂಡೆ ನನ್ನ ಭುಜ ತಟ್ಟಿ “ನಂಗುಂಟು, ನಿಂಗಿಲ್ಲ” ಎಂದು ಹಂಗಿಸಿದ ಅನುಭವ. ಕುಂದಾಪುರದ ಬಳೆಯಲ್ಲೆಲ್ಲೋ ಮಿಣುಕು ದೀಪದ ಜೋಪಡಿಯೊಂದರಲ್ಲಿ ಚಾ ವಿರಾಮ ಅನುಭವಿಸಿದೆವು. ಚಾ ಅಲ್ಲ ಚಾಟಿಯಲ್ಲಿ ಕೊಟ್ಟರೂ ಬಿಡದೆಳೆಯಿತು ನನ್ನನ್ನು ನಿದ್ರೆ! ಅದೆಷ್ಟು ಹೊತ್ತಿಗೋ ಅಪರಾಧಿ ಪ್ರಜ್ಞೆ ಜಾಗೃತವಾಗಿ ಕಣ್ಣು ಪಿಳುಕಿಸಿದೆ. ಲಾರಿ ದಾರಿಬದಿಯಲ್ಲೆಲ್ಲೋ ನಿಂತಿತ್ತು, ನಿರ್ಜನ ಬಸ್ ಸ್ಟಾಪೊಂದರ ಬೆಂಚಿನಲ್ಲಿ ಚಾಲಕ ಗೊರ್ ಗೊರ್ ಗೊರ್. ನನಗೆ ಮತ್ತೆ ಎಚ್ಚರವಾದದ್ದು ಬಿಸಿಕಾಯಿಸಿದ ಸೂರ್ಯ ಕಿರಣದಿಂದಲೇ. ಕುಮಟ ಬಸ್ ನಿಲ್ದಾಣದಲ್ಲಿ ಕಾದು ನಿಂತು ನಾವು ಹಿಡಿಯಬಹುದಾಗಿದ್ದ ಬಸ್ಸುಗಳೆಲ್ಲಾ ಮಂಗಳೂರು ತಲಪಿ ಕನಿಷ್ಠ ಎರಡು ಗಂಟೆಯನಂತರ ನಾವೂ ಮನೆ ಸೇರಿದೆವು!

(ಮುಂದುವರಿಯಲಿದೆ…)