“ಏನ್ಸಾಮೀ ಜಲಪಾತಗಳ ಎರೆ ಇಟ್ಟು ರೀಲು ಬಿಚ್ತೀರಿ! ಯಾಣದ ತೊರೆ, ಚಂಡಿಕಾ ತೀರ್ಥನ್ನೇ ಜಲಪಾತ ಅಂದ್ಕೋಬೇಕಾ” ಎನ್ನಬೇಡಿ. ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಯ ಉತ್ತರೋತ್ತರದಲ್ಲಿ, ಅದರ ದಕ ವಲಯದ ನಾಯಕರಾದ ಶಂಪಾ ದೈತೋಟ, ಸೋಮನಾಥ ನಾಯಕ್, ರಂಜನ ರಾವ್ ಎರಡೂರ್ ಮುಂತಾದವರಿಗೆ ಅದ್ಯಾರೋ (ಅಗರ್ವಾಲ್?) ತಲೆಗೊಂದು ಕೀಟ ಹೊಕ್ಕಿಸಿದ್ದರು. ‘ನೂರು, ಸಾವಿರ ಹೆಕ್ಟೇರ್ ನೆಲ-ಕಾಡು ಮುಳುಗಿಸಿ, ಜೀವ ವೈವಿಧ್ಯವನ್ನು ಇನ್ನಿಲ್ಲವಾಗಿಸಿ, ವಿರಳವಾಗಿಯೇ ಆದರೂ ಅಲ್ಲೂ ಜೀವನ ರೂಢಿಸಿಕೊಂಡ ಗಣನೀಯ ಆದಿವಾಸಿಗಳನ್ನು, ಕೃಷಿಕರನ್ನು ಅತಂತ್ರಗೊಳಿಸುವ ಭಾರೀ ಜಲವಿದ್ಯುತ್ ಯೋಜನೆಗಳು ಪರಿಸರ ದ್ರೋಹಿಗಳು. ಏಕೈಕ ಪರಿಹಾರ ಕಿರು ವಿದ್ಯುತ್ ಯೋಜನೆ (mini hydel projects).’ ಸಹಜವಾಗಿ ಅವರು ನನ್ನಲ್ಲಿ ಜಲಪಾತಗಳ ಪಟ್ಟಿಯನ್ನೇ ಕೇಳಿದ್ದರು. ನನಗೋ ಪ್ರಾಕೃತಿಕ ಶೋಧಗಳನ್ನು ಮಾಡಿ, ಇತರರಲ್ಲಿ ಸಾಹಸ ಪ್ರೇಮ ಮತ್ತು ಪರಿಸರ ಪ್ರೇಮವನ್ನು ಏಕಕಾಲಕ್ಕೆ ಜಾಗೃತಗೊಳಿಸಲು ಸಾರ್ವಜನಿಕಕ್ಕೆ ತೆರೆದಿಡುವ ಉಮೇದಿನ ಪ್ರಾಯ! ಇಲ್ಲಿ ಇಲ್ಲದ್ದು ಇಲ್ಲ ಎಂದು ತೋರುವ ಉತ್ಸಾಹದ ಕಾಲ. ಅವರಿಗೆ ಹಲವು ಹೆಸರುಗಳನ್ನು ಪಟ್ಟಿ ಮಾಡಿ ಕೊಟ್ಟದ್ದೂ ನೆನಪು. ಸರ್ವೇಕ್ಷಣ ಇಲಾಖೆಯ ನಕ್ಷೆ ನೋಡುನೋಡುತ್ತಾ ಪಶ್ಚಿಮ ಘಟ್ಟದ ಕರಾವಳಿಯ ಮೈಯಲ್ಲಿ ಹೆಜ್ಜೆಗೊಂದು ಸಮೃದ್ಧ* ಜಲಪಾತ ಎಂದೇ ನಂಬಿದ್ದೆ. ಮತ್ತವುಗಳ ಪ್ರತ್ಯಕ್ಷ ದರ್ಶನದ ಹುಚ್ಚಿನಲ್ಲಿ ನಾಲ್ಕೆಂಟು ಮಂದಿಯ ಬೈಕ್ ತಂಡ ಕಟ್ಟಿ ಕಾಡ ಮೂಲೆಗಳಿಗೆ ನುಗ್ಗಿ, ಅಸಾಧ್ಯವಾದಲ್ಲಿ ಬೈಕ್ ಬಿಟ್ಟು ಮೈ ನುಗ್ಗು ನುರಿ ಮಾಡಿ, ಹಲವು ಚಿಕ್ಕಪುಟ್ಟ ನೀರ ಬೀಳುಗಳನ್ನೂ ಅಬ್ಬಾ ಎನ್ನಬಹುದಾದ ಅಬ್ಬಿಗಳನ್ನು ಕಂಡುಕೊಂಡದ್ದೂ ಇತ್ತು. ಅವುಗಳ ಮುಂದುವರಿಕೆಯೇ ಈ ಉಕ ಜಲಪಾತಗಳತ್ತಣ ಓಟ. ನನಗೆ ಲಕ್ಷ್ಯಛೇದನದಷ್ಟೇ ಮಾರ್ಗಕ್ರಮಣವೂ ಮುಖ್ಯ ಎನ್ನುವುದಕ್ಕೆ ಗೋಕರ್ಣ, ಯಾಣಗಳಾದವು. ಈಗ ಬನ್ನಿ. . .

*[ಆದರೆ ಬಲುಬೇಗನೆ ಈ ನೀರು ಬಲುದೊಡ್ಡ ಪ್ರಾಕೃತಿಕ ವ್ಯವಸ್ಥೆಯ ಸಣ್ಣ ಮುಖ. ಅವನ್ನು ಸ್ವತಂತ್ರವಾಗಿ ಅಳೆದು ನಮ್ಮ ಸೀಮಿತ ಜ್ಞಾನಬಲದಲ್ಲಿ ಯಾವುದೇ ಯೋಜನೆಗಳನ್ನು ಹೊಸೆಯುವುದು ಪರಿಸರ ಅಪರಾಧವೇ ಸರಿ ಎಂದೂ ಅರಿತುಕೊಂಡೆ. ಇಂದು ಕಿರು ಜಲವಿದ್ಯುತ್ ಯೋಜನೆಗಳು ಮಾಡುತ್ತಿರುವ ಮಹಾ ಪರಿಸರ ದ್ರೋಹವನ್ನು ಎಷ್ಟು ಹೇಳಿದರೂ ಮುಗಿಯದು. ಘಟ್ಟದ ಬಹುತೇಕ ಝರಿ, ಕಿರುತೊರೆಗಳೆಲ್ಲ ಮಳೆಯೊಡನೆ ಅಬ್ಬರಿಸಿದರೂ ಅದು ಬಿಟ್ಟು ಒಂದೆರಡೇ ವಾರದಲ್ಲಿ ಕಲ್ಲುಕೊರಕಲುಗಳ ಸಂದಿನಲ್ಲಿ ಕಲಕಲಿಸುವಷ್ಟೇ ಇರುತ್ತವೆ. ಘಟ್ಟದ ಪ್ರತಿ ಸಂದಿನಲ್ಲಿ ಇವನ್ನು ಸಾರ್ವಕಾಲಿಕ ಉಪಯೋಗಕ್ಕೆ ಒದಗುವಂತೆ (ಅಣೆಕಟ್ಟು ಕಟ್ಟಿ) ಹಿಡಿದಿಟ್ಟು ವಿದ್ಯುಚ್ಛಕ್ತಿ ಬಸಿಯಲು ಹೊರಟ ಯೋಜನೆಗಳು ಚಿನ್ನದ ಮೊಟ್ಟೆಯಿಡುವ ಬಾತಿನ ಹೊಟ್ಟೆಗೆ ಚೂರಿ ಹಾಕಿದಷ್ಟೇ ಯಶಸ್ವಿಯಾಗುತ್ತಿವೆ! ಒಂದೇ ಒಂದು ಉದಾಹರಣೆ: ಕೆಂಪೊಳೆಯಲ್ಲಿ ಕಿರುಜಲವಿದ್ಯುತ್ ಚಾಲನೆಗೆ ಬಂತು. ಮಕ್ಕಳ ವಿಜ್ಞಾನ ಪ್ರಾತ್ಯಕ್ಷಿಕೆಗಳಲ್ಲಿ ಮೇಲಿಟ್ಟ ಬಕೆಟ್ ನೀರಿನಿಂದ ಕಿರುಬಲ್ಬ್ ಬೆಳಗಿದಂತೆ ಮಳೆಗಾಲದಲ್ಲಿ ಕೆಂಪೊಳೆ ಯೋಜನೆ ಯಶಸ್ವಿ. ಆದರೆ ಇದಕ್ಕೆ ಅಕ್ಟೋಬರದಲ್ಲೇ ನೀರ ಬರ. ಪರಿಸರ ಪ್ರಿಯರು ಜಾಗೃತರಾಗುವ ಮೊದಲೇ ಹೊಳೆಯ ಬಲ ಪಾರ್ಶ್ವದ ಬೆಟ್ಟ ಸಾಲಿನಾಚೆಯಿಂದ ಇನ್ನೊಂದೇ ತೊರೆಗಿವರು ಪೂರಕ ಕಾಮಗಾರಿ ಹೆಸರಿನಲ್ಲಿ ಕೊಳಕು ಕೈ ಹಾಕಿದರು. ಕಡಿದಾದ ಮೈಯಲ್ಲಿ ಮಾರಿಹಲಗೆಗಳು (ಬುಲ್ಡೋಜರ್ ಅಥವಾ ಅರ್ತ್ ಮೂವರ್ಸ್) ದೀರ್ಘ ದಾರಿ ಕಡಿದು, ಅಲ್ಲಿ ಅಣೆಕಟ್ಟು ಕಟ್ಟಿ, ನೇರ ಕೊಳವೆಸಾಲು ಹುಗಿದು, ಕೆಂಪೊಳೆಗೆ ಕುಡಿಕೆ ನೀರು ಕೊಟ್ಟರು. ಸಾಲಲಿಲ್ಲ. ಕೆಂಪೊಳೆ ಪಾತ್ರೆಯನ್ನೇ ಕಿಮೀಯುದ್ದಕ್ಕೆ ಸಿಗಿದು ಇನ್ನೊಂದೇ ತಾಂತ್ರಿಕ ಅದ್ಭುತದ ಗರಿ ತಮ್ಮ ಪರಿಸರ ಪ್ರೀತಿಯ ಕಿರೀಟಕ್ಕೆ ಏರಿಸಿಕೊಂಡರು. ಮತ್ತೂ ಸಾಲಲಿಲ್ಲ. ಈಗ ಮೇಲೆ ಹೊಂಗಡಳ್ಳದಲ್ಲೇ ‘ಗುಂಡ್ಯ ಜಲವಿದ್ಯುತ್’ ಹೆಸರಿನಲ್ಲಿ ಅಸಂಖ್ಯ ಅಣೆಕಟ್ಟುಗಳು, ಪರಸ್ಪರ ಸಂಪರ್ಕಕ್ಕೆ ಗುಹಾಜಾಲಗಳು ಹೊಸೆದು ‘ಇಪ್ಪತ್ತು ಕೋಟಿಯ ಭುವನೇಶ್ವರಿ’ಗೆ ಒಪ್ಪೊತ್ತಿಗೆ ದೀಪಮಾಲೆ ತೊಡಿಸಲು ಹೆಣಗುತ್ತಿದ್ದಾರೆ. ಇನ್ನು ನೇತ್ರಾವತಿ ತಿರುಗಿಸುವ ಕಾಗದ ಮೇಯುತ್ತಿದ್ದವರ ಮೂಗಿನ ಮುಂದೆ ಕೃಷಿಕರ ಬಜೆಟ್ಟಿನಲ್ಲಿ ‘ಎತ್ತಿನಹೊಳೆ ಎತ್ತು ನೀರಾವರಿ’ಯ ಹೆಸರಿನಲ್ಲಿ ಇನ್ನೂರು ಕೋಟಿಯ ಮೂಲಂಗಿಯನ್ನೂ ಕಟ್ಟಿದ್ದಾರೆ. ಗೊತ್ತಿಲ್ಲದವರ ತಿಳುವಳಿಕೆಗಷ್ಟೇ ಹೇಳುತ್ತೇನೆ, ನೇತ್ರಾವತಿಯ ಉಪನದಿಯಾದ ಕುಮಾರಧಾರಾದ ಉಪನದಿಯಾದ ಗುಂಡ್ಯಹೊಳೆಯ ಮೇಲಿನ ಹೆಸರು ಕೆಂಪೊಳೆ. ಮತ್ತೂ ಮೇಲಿನ ಹೆಸರೇ ಎತ್ತಿನಹೊಳೆ! ಭಾವ ಅಲ್ಲ, ಅಕ್ಕನ ಗಂಡ!!

ಯಾಣದ ಅರ್ಚಕ ನರಸಿಂಹ ಹೆಗಡೆಯವರ ಮನೆ ಬಿಡುವಾಗ ಇನ್ನೂ ಎಳೆಬಿಸಿಲು. ಹಿಂದಿನ ಸಂಜೆಯ ಅನುಭವದಲ್ಲಿ ಚುರುಕಾಗಿಯೇ ಮಣ್ಣ ದಾರಿ ಕಳೆದು ಡಾಮರು ದಾರಿ ಸೇರಿದ್ದಲ್ಲದೆ ಶಿರಸಿಯತ್ತ ಓಟ ಮುಂದುವರಿಸಿದೆವು. ದಕ ವಲಯದಲ್ಲಿ ಸಂಪಾಜೆ, ಬಿಸಿಲೆ, ಶಿರಾಡಿ, ಚಾರ್ಮಾಡಿ, ಆಗುಂಬೆ ಇತ್ಯಾದಿ ಘಾಟಿ ಹೆಸರುಗಳು ವಾಸ್ತವದಲ್ಲಿ ಅವುಗಳ ಒಂದು ಕೊನೆಯ ಹಳ್ಳಿಯ ಹೆಸರುಗಳು ಮಾತ್ರ. ಅವಕ್ಕೇನಿದ್ದರೂ ಆಡು ಮಾತಿನ ಮರ್ಯಾದೆ ಮಾತ್ರ. ಆದರಿಲ್ಲಿ ಘಾಟಿಗೇ ಅಂಕಿತ ನಾಮದ ಬೋರ್ಡ್ ಹಚ್ಚಿದ್ದು ವಿಶೇಷ. ಮೊದಲು ಸಿಗುವ ದೇವಿಮನೆ ಘಾಟಿಯಲ್ಲಾದರೋ ಅದರ ಉನ್ನತಿಯಲ್ಲಿ ಒಂದು ದೇವೀ ಗುಡಿಯೇನೋ ಇದೆ. ಆದರೆ ಅದರ ಮುಂದುವರಿಕೆಯೇ ಆದ ಮುಂದಿನದಕ್ಕೂ ಬೋರ್ಡ್ ಹಚ್ಚಿ ಘೋಷಿಸಿದ್ದಾರೆ – ಬಂಡಲ್ ಘಾಟಿ! ಹೆಸರು ಕೇಳಿ ಪುಸ್ಕ ಮಾಡಬೇಡಿ, ಇದೂ ಒಳ್ಳೆಯ ಏರುದಾರಿಯೇ. ಹಾಗಾದರೆ ಹೆಸರಿನ ಹಿಂದಿನ ಕಥೆಯೇನಿದ್ದೀತು ಎಂದು ಶೋಧಿಸುವ ಕೆಲಸವನ್ನು ನಿಮಗೆ ಬಿಟ್ಟು ನಾನು ಹೊಟ್ಟೆಪಾಡಿಗಿಳಿಯುತ್ತೇನೆ.

ದಟ್ಟ ಕಾಡು, ಕಟ್ಟೇರುಗಳ ಪರಿಸರದಲ್ಲಿ ಝರಿ ಜಲಪಾತಗಳ ದರ್ಶನದಷ್ಟೇ ತಿನಿಸು ಪಾನೀಯಗಳ ಸಾನ್ನಿಧ್ಯವೂ ಪ್ರವಾಸಿಗಳಿಗೆ ಅಪ್ಯಾಯಮಾನವಾಗಿರುತ್ತದೆ. ಭಗವತೀ ಘಾಟಿಯಲ್ಲಿ ಹೋಗುವವರಿಗೆ ಎಸ್ಕೆ ಬಾರ್ಡರ್ ಬಳಿ ಸಿಗುವ ಸೀಬೇ ಹಣ್ಣಿನ ಮಕ್ಕಳಿಗೆ ಬಲಿಬೀಳದವರಿದ್ದಾರೆಯೇ! ಗುಂಡ್ಯ ಸುಬ್ರಹ್ಮಣ್ಯ ದಾರಿಯಲ್ಲಿ ಹೋಗುವವರಿಗೆ ಕಾಲಕಾಲಕ್ಕೆ ಮಕ್ಕಳು ಕೈಚಾಚಿ ಒಡ್ಡುವ ಹಲಸಿನ ಸೋಳೆ, ಅನಾನಸು ಹೋಳು, ಗೇರು ಹಣ್ಣು ಚಪ್ಪರಿಸದ ನಾಲಿಗೆ ಇದ್ದೇನು ಫಲ. ಆಗುಂಬೆಯ ಸೂರ್ಯಾಸ್ತ ಕಟ್ಟೆಯಲ್ಲಂತೂ ಕಡ್ಲೆ, ಸೌತೆಗಳನ್ನು ಮೀರಿ ಚರುಮುರಿ ಚಾಟುಗಳೆಲ್ಲಾ ಬೀಡೇ ಬಿಟ್ಟಿರುತ್ತವೆ. ಡಾರ್ಜಿಲಿಂಗಿನಲ್ಲಿ ಅಪರಾತ್ರಿ ಮೂರು ಗಂಟೆಗೇ ಪ್ರವಾಸಿಗಳನ್ನು ಜೀಪುಗಳ ಸೈನ್ಯ ಬಿಡಾರಗಳಿಂದ ಒಕ್ಕಿ ಹೆಕ್ಕಿ ಟೈಗರ್ ಹಿಲ್ ಕೊಡಿಗೆ ಒಯ್ಯುತ್ತಾರೆ. ಬಿಸುಸುಯ್ಯುತ್ತಾ ಸುದೂರದ ಕಾಂಚನಗಂಗಾದ ನೆತ್ತಿಯಲ್ಲಿ ಅರುಣನ ಸ್ವಾಗತ ಮಾಡದವರಿಲ್ಲ. ಆದರೆ ಅದೇ ನಮ್ಮ ಜೀಪುಗಳಲ್ಲಿ ದಪ್ಪದಪ್ಪದ ಥರ್ಮಾಸ್ ಫ್ಲಾಸ್ಕ್ ಹಿಡಿದುಕೊಂಡು ಇರುಕಿಕೊಂಡು ಬರುವ ಪಿಳ್ಳಂಗಣ್ಣಿನ ತರಳ ತರಳೆಯರು ವಿತರಿಸುವ (ಉಚಿತವೇನೂ ಅಲ್ಲ) ಕಾಫಿಯನ್ನು ಧಿಕ್ಕರಿಸಿದವರಿಲ್ಲ. (ದಾಸಯ್ಯಾ ಕಥೆಗೆ ಬಾರೋ ಎನ್ನುವ ಮೊದಲು. . . ) ಹಾಗೆಲ್ಲಾ ಇರುವಾಗ ಹೋಟೆಲ್ಲೇ ಹಳ್ಳಿಯೋ ಎಂಬಂತಿರುವ ರಾಗಿಹೊಸಳ್ಳಿಯಲ್ಲಿ ನಾವು ನಿಂತದ್ದು ಏನೂ ಆಶ್ಚರ್ಯವಲ್ಲ. ಯಾಣದಿಂದ ಖಾಲೀ ಹೊಟ್ಟೆಯಲ್ಲೇ ಹೊರಟವರು ಬಾಕಿ ತೀರಿಸುವುದರೊಡನೆ ಮುಂದಿನ ದಾರಿಯ ಅನಿಶ್ಚಿತತೆಯ ಅರಿವಿನೊಡನೆ ಮಧ್ಯಾಹ್ನದ ಊಟವನ್ನು ಮುಂಗಡ ಕೊಂಡದ್ದೂ ಆಯ್ತು. ಕೈಯೊಳಗೇತಕೆ ಬಾಯೊಳಗಿದ್ದರೆ ಆಗದೇ ಎಂದವರೂ ನಮ್ಮಲ್ಲಿದ್ದರು! ನನ್ನ ಸಹವಾರಿಣಿ (ಸಹ-ಸವಾರಿಣಿ), ದೇವಕಿ “ಎರಡರಷ್ಟು ತಿಂದರು ಎನ್ನುವುದೆಲ್ಲ ನಿಮ್ಮ ಭ್ರಮೆ” ಎಂದು ವಾದ ಹೂಡಿದ್ದಂತೆಯೇ ನಮ್ಮ ಸವಾರಿ ಮುಂದುವರಿಯಿತು.

ಜಾನ್ಮನೆಯಲ್ಲಿ ಬಲ ಕವಲು ಹಿಡಿದು, ನಿಲ್ಗುಂದದ ದಾರಿಯನ್ನು ನಿರಾಕರಿಸಿ ಎಡ ಕವಲು ಅನುಸರಿಸಿ, ಹೆಗ್ಗರಣೆಯಲ್ಲಿ ಸಿದ್ಧಾಪುರಕ್ಕೆ ‘ಇನ್ನೇನು ಮೂವತ್ತೇ ಕಿಮೀ’ ಎನ್ನುವ ಸೂಚನಾ ಫಲಕ ಹಾಗೂ ಡಾಮರು ದಾರಿಗಳನ್ನು ಬಿಟ್ಟು ಬಲದ ಮಣ್ಣದಾರಿಯ ಕೊನೆಯಲ್ಲಿ ಮುಟ್ಟಿದ ಹಳ್ಳಿ ಉಂಚಳ್ಳಿ (ಯಾರೋ ಒರಟು ಹಲಿಗೆಯ ಮೇಲೆ ಗೀಚಕ್ಷರದಲ್ಲಿ ಬರೆದು, ಬೋರ್ಡು ನಿಲ್ಲಿಸಿದ್ದರು). ವಾಕ್ಯ ಒಂದರಲ್ಲಿ ಹೊಸೆದಷ್ಟು ಸುಲಭವಾಗೇನೂ ಆ ಇಪ್ಪತ್ಮೂರು ಕಿಮೀ ಓಟವಿರಲಿಲ್ಲ. ಕಾಡು, ನಿರ್ಜನ ದಾರಿಗಳು, ಸೂಚನಾಫಲಕಗಳಿಲ್ಲದ ಕವಲುಗಳು ನಮ್ಮನ್ನು ಹಿಂದೆ ಮುಂದೆ ಕುಣಿಸಿದ್ದಿದೆ. ಮತ್ತೆ ಯಾರೋ ಹಳ್ಳಿಗರು ಯಾವುದೋ ಜೂಗರಿಸುವ ಮನೆಯ ಸಹಾಯ ಪಡೆದು ಉಂಚಳ್ಳಿ ಹೆಸರಿನ ಅಬ್ಬಿ ಕಾಣುವ ಉತ್ಸಾಹಕ್ಕೆ ಎಲ್ಲೂ ಅಲ್ಲದ ತಾಣದಲ್ಲಿ ನಿಂತಿದ್ದೆವು! ಜೀರುಂಡೆಗಳ ಶ್ರುತಿಗೆ ವಿರಳ ಹಕ್ಕಿಯುಲಿಗಳಷ್ಟೇ ಕೇಳುತ್ತಿದ್ದ ನಿರ್ಜನ ಗುಡ್ಡೆಹಿತ್ತಿಲು. ನೀರಪಸೆ, ತೊರೆ ಕಾಣುವುದು ಬಿಟ್ಟು ದೂರದ ಮೊರೆತವೂ ಕೇಳಲಿಲ್ಲ. ಅನಿವಾರ್ಯವಾಗಿ ಮತ್ತಷ್ಟು ಹರಕಾಗಿ ಮುಂದಿನ ಸಣ್ಣ ಗುಡ್ಡೆಯನ್ನು ಏರುತ್ತಿದ್ದ ದಾರಿಯನ್ನೇ ಅನುಸರಿಸಿದೆವು. ಸ್ವಲ್ಪದರಲ್ಲೇ ಅದು ಆಚಿನ ಕಣಿವೆಗೆ ಅಂಕುಡೊಂಕಿನ, ತೀವ್ರ ಇಳುಕಲಿನ ಜಾಡು ತೋರಿತು. ಉದುರಿದ ಕಡ್ಡಿ, ಎಲೆಗಳ ದಪ್ಪ ಹಾಸು ಅಂಚಿನಿಂದ ಒತ್ತರಿಸುತ್ತಿದ್ದ ಕುರುಚಲುಗಳ ನಡುವೆ ನಾವು ಮಾಡಿದ್ದು ಬೈಕ್ ಸವಾರಿ ಅಲ್ಲ; ಪರದಾಟ. ಅನುಭವಿಗಳೇನೋ ಒಮ್ಮೊಮ್ಮೆ ಆಚೀಚೆ ನೆಲ ಒದ್ದು, ಬ್ರೇಕ್ ಎರಡನ್ನೂ ಹೆಚ್ಚು ಬಳಸಿ, ಕೆಳಗೇರುಗಳಲ್ಲಿ ಮುಂದುವರಿದರು. ನಮ್ಮಲ್ಲೇ ಒಂದೆರಡು ಬೈಕ್ ಸವಾರರು, ಅಂಥಾ ಪರಿಸರದಲ್ಲಿ ಬೈಕ್ ಓಡಿಸುವುದಿರಲಿ, ನಡೆದೂ ಅನುಭವವಿಲ್ಲದವರ ಪಾಡು ನೋಡುವಂತದ್ದೇ! ಆಧಾರಕ್ಕೆಂದು ಎರಡೂ ಬದಿಗೆ ಕಾಲು ಚಾಚಿ ಕೋಲು ಸೊಪ್ಪು ಎಳೆದುಕೊಳ್ಳುತ್ತಿದ್ದರು. ಸಂಭಾಳನೆ ಕಷ್ಟವಾದಾಗ ಕ್ಲಚ್ ಬಿಗಿಹಿಡಿದು ಮುಂದಿನ ಬ್ರೇಕ್ ಅಷ್ಟೇ ಕಾಯಿಸಿಬಿಡುತ್ತಿದ್ದರು. ತರಗೆಲೆ ರಾಶಿಯಲ್ಲಿ ಎದುರು ಚಕ್ರ ಅಡ್ಡಕ್ಕೆ ಜಾರಿ ‘ದೊರೆ ಧರೆಗೆ’ ಬೀಳುವಾಗ ಹಾಹಾಕಾರದೊಡನೆ ದೂಳೆದ್ದು, ತಿರುಚಿಹೋಗುವ ಆಕ್ಸಿಲರೇಟರಿನಿಂದ ಇಂಜಿನ್ ಸದ್ದು ತಾರಕ್ಕೇರಿ ಗದ್ದಲವೋ ಗದ್ದಲ! ಇಲ್ಲೆಲ್ಲ ನಮ್ಮೊಳಗಿನ ಸ್ವಾಭಾವಿಕ ಅಳುಕು ಜಾಗೃತವಾಗಿರುವುದರಿಂದ ಯಾವ ಓಟವೂ ತೀವ್ರವಿರುವುದಿಲ್ಲ. ಸಹಜವಾಗಿ ದೇಹಕ್ಕೆ ಗಾಯ, ಗಾಡಿಗೆ ಆಘಾತಗಳು ಆಗುವುದು ತೀರಾ ಕಡಿಮೆ. ಇಳಿಯುವುದು ಸರಿ ಮತ್ತೆ ವಾಪಾಸ್ ಬರುವುದು? ಒಬ್ಬೊಬ್ಬರೇ ಅವರವರ ತಾಕತ್ತಿನ ಮಿತಿಯಲ್ಲಿ ಗಾಡಿಯಿಳಿದು ನಡಿಗೆಗೆ ಶರಣಾದರು.

ಐದೇ ಮಿನಿಟಿನಲ್ಲಿ ದಾರಿ ಮುಗಿದಿತ್ತು. ಅಲ್ಲಿ ಹತ್ತಿಪ್ಪತ್ತಡಿ ತ್ರಿಜ್ಯದ ವೃತ್ತಾಕಾರದಲ್ಲಿ ನೆಲ ತಟ್ಟು ಮಾಡಿ, ಅಂಚಿಗೆ ಮರದ ರಕ್ಷಣಾ ಬೇಲಿ ಕಟ್ಟಿದ ಕ್ರಮ ನೋಡಿದಾಗ ಇದು ಅರಣ್ಯ ಇಲಾಖೆಯ ‘ಜನಪ್ರಿಯ’ ಕಾರ್ಯಕ್ರಮದಲ್ಲಿ ಒಂದಿರಬೇಕು ಎಂದನ್ನಿಸಿತು. ವಾಸ್ತವದಲ್ಲಿ ಯಾವುದೇ ಪ್ರಾಕೃತಿಕ ಕೇಂದ್ರ ನಾಗರಿಕ ಸವಲತ್ತುಗಳ ಹೇರಿಕೆಯಲ್ಲಿ ಸಾರ್ವಜನಿಕರಿಗೆ ತೆರೆದುಕೊಳ್ಳುವುದೇ ದೊಡ್ಡ ಪರಿಸರ ದ್ರೋಹ. [ಪುರಾಣಗಳಲ್ಲಿ ಯಾವುದೇ ಸಿದ್ಧಿಯ ಹಿಂದಿರುವ ‘ತಪಸ್ಸು’ ಇದೇ ಇರಬೇಕಲ್ಲವೇ! ಯೋಗ್ಯತೆ, ಶ್ರಮಕ್ಕಷ್ಟೇ ಇವು ದಕ್ಕಿದರೆ ಅದರ ಬಗ್ಗೆ ಪ್ರೀತಿ, ಅದನ್ನು ಕಾಪಾಡುವ ಬಗ್ಗೆ ಕಾಳಜಿ ತನ್ನಿಂದ ತಾನೇ ಮೂಡೀತು. ಇಲ್ಲವಾದರೆ ನಾಳೆ ಬನ್ನೇರುಘಟ್ಟಾ ಸಫಾರಿ ವ್ಯಾನಿನೊಳಗೆ ಕುಳಿತು ಹುಲಿ, ಸಿಂಹವನ್ನು ಕೆಣಕುವವರ ತಂಡ ಇಲ್ಲಿಗೂ ಭೇಟಿ ಕೊಡುವುದು ಗ್ಯಾರಂಟಿ] ಕೆಳ ಕಣಿವೆಯಿಂದ ನೀರ ಮೊರೆತ ಸ್ಪಷ್ಟವಾಗಿ ಕೇಳಿ ಜಲಪಾತದ ಇರವನ್ನೇನೋ ಸಾರುತ್ತಿತ್ತು. ಆದರೆ ಬೇಲಿಯನ್ನೊತ್ತಿ ಬೆಳೆದಿದ್ದ ಮರ ಪೊದರು ನಮ್ಮ ದೃಷ್ಟಿಗೆ ಏನೂ ಕೊಡಲಿಲ್ಲ. ಬೇಲಿಂದಾಚೆ ಮತ್ತಷ್ಟು ತೀವ್ರ ಇಳುಕಲಿನಲ್ಲಿ ಪೊದರನ್ನು ಸೀಳಿ ಸಣ್ಣ ಸವಕಲು ಜಾಡು ಸಾಗಿದ್ದನ್ನು ಕಂಡು, ಜಾಗ್ರತೆಯಿಂದ ಅನುಸರಿಸಿದೆವು. ಹತ್ತಿಪ್ಪತ್ತೇ ಅಡಿ ಅಂತರದಲ್ಲಿ ಒಮ್ಮೆಗೇ ಕಾಡು ಹರಿದು ಬೆಳಕು ಮೂಡಿತು. ಕರಡ ಹುಲ್ಲಿನ ಒಂದೆರಡು ಗುಪ್ಪೆಗಳಷ್ಟೇ ಉಳಿದಂತಿದ್ದ, ಕನಿಷ್ಠ ಮುನ್ನೂರಡಿ ಆಳದ ಪ್ರಪಾತದ ಅಂಚಿನಲ್ಲಿದ್ದೆವು.

ಕೊಳ್ಳದ ಎಡಕ್ಕೆ ಅನತಿದೂರದಲ್ಲಿ ಹಾಲಿನ(ಂಥ) ಹೊಳೆಯೊಂದು ಪ್ರಾಕೃತಿಕ ಕಲ್ಲ ಹಾಸ ಮೇಲೆ ಮಥನಗೊಳ್ಳುತ್ತ ಬಂದು ಒಮ್ಮೆಗೆ ಬಳುಕುತ್ತ ಕೊಳ್ಳಕ್ಕೆ ಹಾರಿಕೊಳ್ಳುವುದು ಕಾಣಿಸಿತು. ಕೆಳಗಿನ ಮಡುವಿಗೆ ಬಿದ್ದಾಗ ಅದರ ಉತ್ಸಾಹದ ಬೊಬ್ಬೆ ಕಣಿವೆಯೆಲ್ಲಾ ತುಂಬುತ್ತಿತ್ತು, ನಾವು ನಿಂತ ನೆಲವನ್ನೂ ನಡುಗಿಸುತ್ತಿತ್ತು. ಸಮೀಪದ ಹಳ್ಳಿಯ ಬಲದಲ್ಲಿ ಇದೇ ಉಂಚಳ್ಳಿ ಅಬ್ಬಿ. ಗುಲಾಮೀ ರಾಜ್ಯದಲ್ಲಿ ಇದನ್ನು ಗುರುತಿಸಿದವನೊಬ್ಬ ಬ್ರಿಟಿಷ್ ಅಧಿಕಾರಿಯಾದ್ದರಿಂದ ಇಂದಿಗೂ ಆತನ ಹೆಸರು – ಲ್ಯುಸಿಂಗ್ ಟನ್ ಇದಕ್ಕೆ ಅನ್ವಯವಾಗುತ್ತದೆ. ಮತ್ತಾ ಕಿವಿಗಡಚಿಕ್ಕುವ ಶಬ್ದ ಯಾರನ್ನೂ ಕಿವುಡರನ್ನಾಗಿಸೀತು ಎಂಬರ್ಥದಲ್ಲಿ ಕೆಪ್ಪಜೋಗವೆಂದೂ (ಜೋಗ, ಅಬ್ಬಿ, ದಬದಬೆ, ತಡಸಲು ಎಲ್ಲಾ ಜಲಪಾತದ ಪರ್ಯಾಯ ನಾಮಗಳು ಎಂದು ನಿಮಗ್ಗೊತ್ತಿದೆ ಎಂದು ಭಾವಿಸಿದ್ದೇನೆ) ತಲೆಹಾಳು ಮಾಡೀತು ಎಂಬರ್ಥದಲ್ಲಿ ಬುರುಡೆಜೋಗ ಎಂದೂ ಅತಿಶಯೋಕ್ತಿಗಳು ಹಾಡಿಹೊಗಳುವುದೂ ಇದನ್ನೇ.

ವೀಕ್ಷಣಾ ಕಾಲ ಮತ್ತು ದಿಕ್ಕುಗಳು ಬದಲಿದಂತೆಲ್ಲಾ ಜಲಪಾತದ ದೃಶ್ಯವೈಭವ ಹೆಚ್ಚುತ್ತದೆ ಎಂಬ ಅರಿವು ನಮಗಿತ್ತು. ಅಲ್ಲೇ ಒತ್ತಿನಲ್ಲೆಲ್ಲಾದರೂ ಹುಡುಕಾಡಿದರೆ ಕಣಿವೆಗಿಳಿವ ಜಾಡು ಸಿಗುವ ಸಾಧ್ಯತೆಯ ಬಗ್ಗೆಯೂ ನನಗೆ ಭರವಸೆಯಿತ್ತು. ಮತ್ತೆ ಹಾಲಿನಹೊಳೆಯ ಅಂಚಿನಲ್ಲಾದರೂ ಮೀಯುವ ಆಸೆ ಉತ್ಸಾಹ ಯಾರಲ್ಲೂಕಡಿಮೆಯಿರಲಿಲ್ಲ. ಆದರೆ ಒಟ್ಟು ಕಾರ್ಯಕ್ರಮದ ಸಮಯ ಮಿತಿಯ ಅರಿವು ಕಾಡಿದ್ದರಿಂದ ಎಲ್ಲ ಮನಸ್ಸಿಲ್ಲದ ಮನಸ್ಸಿನಿಂದ ಮತ್ತೆ ಬೈಕಿನತ್ತ ಭಾರವಾದ ಹೆಜ್ಜೆ ಹಾಕಿದೆವು. ಕರಕಷ್ಟ, ಹೆಚ್ಚು ಕಷ್ಟ, ಕಷ್ಟ ಎಂಬ ಮೂರು ಹಂತದಲ್ಲಿ ಹಂಚಿಹೋಗಿದ್ದ ಬೈಕುಗಳನ್ನು ಅವರವರು ಸಹವಾರಿಗಳ ನೂಕುಬಲದಲ್ಲಿ ಒದ್ದಾಡಿಕೊಂದು ಮೇಲಕ್ಕೆ ತಂದೆವು. ಮತ್ತೆ ಬಂದಷ್ಟೂ ದಾರಿಯನ್ನು ಯಥಾವತ್ತು ಮರುಸವೆಸಿ ಬೆಳಿಗ್ಗೆ ಬಿಟ್ಟ ಶಿರಸಿ ದಾರಿಗಿಳಿದೆವು. ಬಾಕಿಯುಳಿದ ಬಂಡಲ್ ಘಾಟಿಯನ್ನೂ ಮುಗಿಸಿ ಶಿರಸಿ ತಲಪುವಾಗ ಹೋಟೆಲುಗಳಲ್ಲಿ ಮಧ್ಯಾಹ್ನದ ಊಟ ಹಳಸುವ ಹೊತ್ತು. ಗಾದೆಯನ್ನೆ ಮುಂದುವರಿಸುವುದಾದರೆ, ನಾವು ಹಸಿದ ನಾಯಿಗಳಂತೆ ಊಟ ಮುಗಿಸುವಾಗ ಗಂಟೆ ಮೂರು. ರಾಗಿಹೊಸಳ್ಳಿಯಲ್ಲಿ ಮುಂಗಡವಾಗಿ ಗಿಡಿದ ತಿನಿಸುಗಳ ನೆನಪು ಮಾಡಿದವನು ಪಾಪಿ!

(ಮುಂದುವರಿಯಲಿದೆ)