ಏಪ್ರಿಲ್ ಎರಡನೇ ವಾರದಲ್ಲಿ ನಮ್ಮ ಆರು ಜನರ, ಮೂರು ಬೈಕ್‌ಗಳ ‘ಮಧ್ಯ ಭಾರತ ಸೀಳು ಓಟ’ ನಡೆಯುವುದಿತ್ತು. ಸುಮಾರು ಮೂರು ತಿಂಗಳ ಮೊದಲೇ ಅಂಗಡಿ ನಡೆಸಲು ಬದಲಿ ವ್ಯವಸ್ಥೆಯಿಂದ ತೊಡಗಿ, ಸುಮಾರು ಮೂವತ್ತೈದು ದಿನದ ಪ್ರವಾಸದುದ್ದಕ್ಕೆ ಉಳಿಯುವುದೆಲ್ಲಿ, ನೋಡುವುದೇನು, ಓಡುವುದೆಷ್ಟು, ಭಾಗಿಗಳ್ಯಾರು, ಖರ್ಚು ಹೇಗೆ ಎಂಬಿತ್ಯಾದಿ ದೊಡ್ಡ ಚಿತ್ರದ ಹರಕು ತುಂಡುಗಳನ್ನು (ಜಿಗ್ ಸಾ ಪಜ಼ಲ್) ಜೋಡಿಸತೊಡಗಿದ್ದೆ. ಪುಸ್ತಕ, ಪರಿಚಿತರು ಮತ್ತು ಪತ್ರವ್ಯವಹಾರಗಳಿಂದ ಮಾಹಿತಿ ಸಂಗ್ರಹಿಸಿ, ಮಥಿಸಿ, ನಿಷ್ಕರ್ಷಿಸಿ, ಸಚಿತ್ರ ಒಂದೇ ಹಾಳೆಗೆ ಅಡಕಗೊಳಿಸಿದೆ. ಮತ್ತೆ ಹಾಗೇ ಅನುಭವಿಸಿದ್ದೂ ಆಯ್ತು! ಗಡಿಬಿಡಿಯಾಯ್ತಾ? ನಾನು ಹೇಳುತ್ತಿರುವುದು ಸುಮಾರು ಎರಡು ದಶಕಗಳ ಹಿಂದಿನ ಏಪ್ರಿಲ್! ಅಂದಿನ ರಾಶಿ ಫೋಟೋಗಳು, ದೈನಂದಿನ ಟಿಪ್ಪಣಿಗಳು, ಸ್ವಲ್ಪ ಹೆಚ್ಚಿನ ವಿವರಗಳಿರುವಂತೆ ವಿವಿಧೆಡೆಗಳಿಂದ ಮನೆಗೆ ಬರೆದು ಅಂಚಿಸಿದ ಅಸಂಖ್ಯ ಪತ್ರಗಳೆಲ್ಲ ಏಕಕಥನ ಭಾಂಡದಲ್ಲಿ ಕರಗಲು, ಸವಿವರ ಕಥನಕ್ಕೆ ‘ಮುಹೂರ್ತ’ ಕಾದೇ ಇದ್ದವು. ಆದರೆ ಇನ್ನೊಂದೇ ಭಾರತಯಾತ್ರೆ ಸೇರಿದಂತೆ ಅಸಂಖ್ಯ, ವೈವಿಧ್ಯಮಯ ಕಲಾಪಗಳು ಅದರ ಮೇಲೆ ಪೇರುತ್ತಾ ಹೋಗಿ, ನನ್ನ ಅನುಭವ ಕಥನವಿಲ್ಲದೆ ಲೋಕ ಬಡವಾಗದು ಎಂದು ನನ್ನನ್ನೇ ಸಂತೈಸಿಕೊಂಡೆ. ಆದರೆ ಈಗ, ವೃತ್ತಿ ಜಂಜಾಟದಿಂದ ಹೊರಗೆ ನಿಂತಾಗ ಮತ್ತೆ ‘ಹೇಳಿಕೊಳ್ಳುವ’ ಸಂತೋಷ ಚಿಗುರಿದೆ. ಹಳತು, ಹೊಸತರ ಪಾಕಕ್ಕೆ ನಾನು ಸಜ್ಜುಗೊಳ್ಳುತ್ತಿದ್ದಂತೆ, ಅನಿರೀಕ್ಷಿತವಾಗಿ ಪೀಠಿಕಾ ಪ್ರಸಂಗದಂತೇ ಒದಗಿ ಬಂತು…

ದಾಂಡೇಲೀ ದಂಡಯಾತ್ರೆ
ಮೊದಲ ಭಾಗ- ಮಾರ್ಗ ಕ್ರಮಣ

ನನ್ನ ಖಾಸಾ ಅಂಚೆಪೆಟ್ಟಿಗೆಯೊಳಗೆ (e-mail) ಹಳೇ ಪತ್ರವೊಂದಕ್ಕೆ ತಡಕುತ್ತಿದ್ದಂತೆ ಎಡ ಪಕ್ಕದಲ್ಲಿ ಶಿವಮೊಗ್ಗದ ಗೆಳೆಯ ಡಾ| ರತ್ನಾಕರ ಉಪಾಧ್ಯ ಹಸಿರು ಕಂದೀಲು ಹಚ್ಚಿದರು. ಸಂವಾದ ಅಂಕಣದಲ್ಲಿ (Chat) ಲೋಕಾಭಿರಾಮಕ್ಕೆಳೆದೆ. “ನಮ್ಮ ಮಿತ್ರಮಂಡಳಿ ಮುಂದಿನ ಮೊಕ್ಕಾಂ ದಾಂಡೇಲಿ-ಅಣಶಿ ಹುಲಿ ರಕ್ಷಿತಾರಣ್ಯಕ್ಕೆ ಸಜ್ಜಾಗುತ್ತಿದೆ” ಎಂದರು. ಮೊದಲೆಲ್ಲಾ ವಾರದ ದಿನಗಳಲ್ಲಿ ಕೋಣ ಏರಿದ ಭೀಕರಾಕೃತಿಯವನು ಬಂದರೂ ನಿಶ್ಚಿಂತೆಯಿಂದ ಹೇಳುತ್ತಿದ್ದೆ “ಹೋಗಯ್ಯಾ. ಅಂಗಡಿ ಉಂಟು, ರಜಾದಿನ ಕೇಳು.” ಆದರೆ ಈಗ ಒಮ್ಮೆಗೇ “ನಾ ಬರ್ಲಾ” ಎಂದಾಗ ರತ್ನಾಕರರೊಳಗಿನ ಅನುಭವ “ಸುಳ್ಳು” ಎಂದರೂ ಉದಾರ ಆತಿಥೇಯ “ಧಾರಾಳಾ” ಎಂದುಬಿಟ್ಟ.

ಪೂರ್ತಿ ರತ್ನಾಕರರನ್ನೇ ಒಪ್ಪಿಕೊಳ್ಳುವುದಾದರೆ ಕರಾವಳಿಯ ದಕ್ಷಿಣ ಕೊನೆಯಲ್ಲಿರುವ ನಾವು (ನಾನು ಮತ್ತು ಹೆಂಡತಿ ದೇವಕಿ) ಬಸ್ಸೇರಿ, ಸುಮಾರು ಇನ್ನೂರ ಮೂವತ್ತು ಕಿಮೀ (ಆಗುಂಬೆ ಘಟ್ಟದಲ್ಲಿ ವಂಕಿಯಾಡಿ) ಪಯಣಿಸಿ, ಶುಕ್ರವಾರ ಸಂಜೆ ನಾಲ್ಕು ಗಂಟೆಯೊಳಗೆ ಶಿವಮೊಗ್ಗ ತಲಪಬೇಕು. ಮತ್ತಲ್ಲಿಂದ ಒಂದೇ ಗಂಟೆ ಅಂತರದಲ್ಲಿ ಹೊರಡಲಿದ್ದ ‘ಮಿತ್ರಮಂಡಳಿ’ ಟೆಂಪೋ ಏರಿ ಬಳಸಂಬಟ್ಟೆಯಲ್ಲಿ ಸುಮಾರು ಇನ್ನೂರೈವತ್ತು ಕಿಮೀ ದೂರದ ‘ಕುಳಗಿ ಕ್ಯಾಂಪ್’ ಸೇರುವಲ್ಲಿಗೆ ಒಂದು ದಿಕ್ಕಿನ ಪಯಣ ಪೂರ್ತಿಯಾಗುತ್ತಿತ್ತು. (ಎರಡು ದಿನ ಕಳೆದು ಹಾಗೇ ವಾಪಾಸಾಗುವುದು ಇನ್ನೊಂದು) ಅಂದರೆ ಸುಮಾರು ನಾನೂರೆಂಬತ್ತು ಕಿಮೀ ಪ್ರಯಾಣ. ಅದು ಬಿಟ್ಟು ಸಾಂಪ್ರದಾಯಿಕ ಮಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಹೋಗುವುದಿದ್ದರೆ ಎರಡೇ ನೇರ ಗೆರೆಗಳು. ಮಂಗಳೂರು ಅಂಕೋಲ ಮತ್ತೆ ಅಂಕೋಲಾ ಯಲ್ಲಾಪುರ. ಪೂರ್ತಿ ರಾಷ್ಟ್ರೀಯ ಹೆದ್ದಾರಿ. ಮತ್ತೆ ಕವಲಾಗಿ ಸ್ವಲ್ಪ ಒಳದಾರಿಗಳಲ್ಲಿ ಸುತ್ತಿದರೂ ಒಟ್ಟಾರೆ ಸುಮಾರು ಮುನ್ನೂರ್ಮೂವತ್ತೇ ಕಿಮೀ ಪ್ರಯಾಣ. ಯಲ್ಲಾಪುರದವರೆಗೆ ಎಷ್ಟೂ ಸಾರ್ವಜನಿಕ ಸಾರಿಗೆ ಸೌಕರ್ಯಗಳಿವೆ. ಮುಂದಿನದೇ ಸಮಸ್ಯೆ, ಒಳ ಮಾರ್ಗಗಳೇನೋ ಸುಮಾರಾಗಿ ಡಾಮರು ಕಂಡವೇ ಆದರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ತೀರಾ ಕನಿಷ್ಠ ಮತ್ತು ಅನಿಶ್ಚಿತ. ಅಳೆದೂ ಸುರಿದೂ ನಾವಿಬ್ಬರು ನಮ್ಮಷ್ಟಕ್ಕೇ ಬೈಕ್ ಹೊರಡಿಸುವುದೆಂದು ನಿಶ್ಚಯಿಸಿಕೊಂಡೆವು.

‘ಅತ್ರಿಯಿಂದ ನಿವೃತ್ತಿ’ ಎಂದ ಕೂಡಲೇ ಪ್ರಾಯ ವಿಚಾರಿಸಿದವರೇ ಹೆಚ್ಚು. ಹಾಗೇ ‘ವಾನಪ್ರಸ್ಥ’ ಎಂದಾಗಲೂ “ಹೋ ಬಿಸಿಲೆಯಲ್ಲಿ ಮನೆ ಕಟ್ಟಿಸಿ, ರೆಸ್ಟ್ ತಗೋತೀರಿ” ಎಂದು ತೀರ್ಮಾನಿಸಿದವರು ಇನ್ನೂ ಹೆಚ್ಚು! ಇಂಥವರ ನಡುವೆ ನಾವು ಬೈಕೇರಿ, ಉರಿಬಿಸಿಲಿನಲ್ಲಿ, ಒಂದೇ ದಿನದಲ್ಲಿ ಮೂನ್ನೂರು ಕಿಮಿಗೂ ಮಿಕ್ಕು ಹೋಗುತ್ತೇವೆ ಎಂದರೆ ಇನ್ನೆಂತೆಂಥಾ ಹೃದಯವಿದ್ರಾವಕ ದೃಶ್ಯಗಳನ್ನು ಎದುರಿಸಬೇಕಾದೀತೋ ಎಂದು ಹೆದರಿ, ಸಣ್ಣ ನಾಟಕ ಕಟ್ಟಿದೆವು. (ಆದರೆ ಪರ್ವತಾರೋಹಣದ ಶಿಸ್ತಿನಂತೆ ಸಾಹಸಯಾತ್ರೆಯ ಖಚಿತ ವಿವರಗಳು ಹಿಂದೆ ನಿಲ್ಲುವವರಲ್ಲಿ ಒಬ್ಬರಲ್ಲಾದರೂ ಇರಲೇಬೇಕು. ಹಾಗೇ) ಬೆಂಗಳೂರಿನಲ್ಲಿದ್ದ ಮಗ ಸೊಸೆಯರಿಗೂ ಅತ್ತ ನಮ್ಮನ್ನು ಎದುರು ನೋಡುವ ಮಿತ್ರಮಂಡಳಿಗೂ (ಗೋಪ್ಯ ಪಾಲನೆಯ ವಚನ ಪಡೆದು!) ಮುಂದಾಗಿ ತಿಳಿಸಿದ್ದೆವು. ಉಳಿದವರ ಲೆಕ್ಕಕ್ಕೆ, ನಮ್ಮ ಸವಾರಿ ಬಸ್ ನಿಲ್ದಾಣದವರೆಗೆ ಮಾತ್ರ ಬೈಕ್. ಮತ್ತೆ ಯಲ್ಲಾಪುರದವರೆಗೆ ಬಸ್. ಮುಂದೆ ಅನುಕೂಲ ನೋಡಿಕೊಂಡು ಬಸ್ಸೋ ಬಾಡಿಗೆ ಕಾರೋ ಹಿಡಿದು ಕುಳಗಿ. ಮತ್ತೆ ಹೇಗೂ ಮಿತ್ರಮಂಡಳಿಯ ಟೆಂಪೋ ಇದ್ದೇ ಇದೆ.

ಶುಕ್ರವಾರ ಬೆಳಿಗ್ಗೆ ಆರು ಗಂಟೆಗೇ ಮನೆ ಬಿಟ್ಟೆವು. ಭಾರತ ಸೀಳು ಓಟದ ಮೊದಲ ದಿನದ ನೆನಪುಗಳು ಈ ದಿಕ್ಕಿನಲ್ಲೇ ಚಾಚಿಕೊಂಡಿದ್ದರೂ ಹೋಲಿಕೆಗೆ ಒಂದೂ ಕುರುಹುಳಿಸದ ದಾರಿ! ಚತುಷ್ಪಥದ ಕಾಮಗಾರಿ ನಮ್ಮನ್ನು ಬಲು ದೂರವರೆಗೂ ಕಾಡಿತು. ಒಮ್ಮೆ ನಮ್ಮದು ಏಕಮುಖ ಸಂಚಾರ. ತೋರಿಕೆಗೆ ನಿಶ್ಚಿಂತೆ ಅನ್ನಿಸಿದರೂ ಬಹು ಅಪಾಯಕಾರಿ. ಬಲ ಅಂಚಿಗೇ ತಗುಲಿಕೊಂಡು ಬಸ್ಸೊಂದು ಗಾನಾ ಬಜಾಯಿಸುತ್ತಿತ್ತು. ನಾನು ನಿಧಾನಕ್ಕೆ ಎಡ ಅಂಚಿಗೆ ಹೊರಳಿಕೊಂಡು ಆತನನ್ನು ಹಿಂದಿಕ್ಕ ಹೊರಡುವಾಗ “ಫಿರ್ರ್ರ್, ಜಪ್ಯರುಂಡೂ” (ಬಿಗಿಲಿನ ಸದ್ದಿನೊಡನೆ ಇಳಿಯಕ್ಕಿದ್ದಾರೆ ಎಂಬ ಕಂಡಕ್ಟರನ ಅರಚು) ಎಚ್ಚರಿಸುತ್ತದೆ. ಸಾರ್ವಜನಿಕ ರಸ್ತೆಯ ಅಥವಾ ಹಿತದ ನಿಯಮಗಳೆಲ್ಲವನ್ನೂ ‘ಮುಂದಿನೆಲ್ಲವನ್ನೂ ಹಿಂದಿಕ್ಕು, ಹಿಂದಿನ್ಯಾರನ್ನೂ ಮೀರಲು ಬಿಡಬೇಡ’ ಎಂಬ ದಿವ್ಯಸಿದ್ಧಿಯ ಎಕ್ಸ್ಪ್ರೆಸ್ ಬಸ್ಸು ಕೂಡಲೇ ರಸ್ತೆಯ ಎಡ ಅಂಚಿಗೆ ಧಾವಿಸುತ್ತದೆ. ಹೇಗೋ ಬಚಾವಾಗಿ, ಇನ್ನೊಮ್ಮೆಗೆ ನಡು ರಸ್ತೆಯನ್ನೇ ಆಶ್ರಯಿಸಿದ್ದೆ. ಈಗ ಫಕ್ಕನೆ (ಯಾವುದೇ ಹಾರ್ನ್, ಗದ್ದಲವಿಲ್ಲದೇ) ಬಲದಿಂದ ಹಿಂದಿಕ್ಕುವ ಲಾರಿ, ಎಡದಿಂದ ನುಸುಳುವ ಕಾರು; ಗಾಬರಿಯಲ್ಲಿ ತುಸುವೇ ವಾಲಾಡಿದರೂ ನಾವು ಸತತ ಕಾರು-ಲಾರಿಗಳ ನಡುವೆ volleyಯಾಡುವ badಮಿಂಟನ್ ಬಾಲು.

ಹಿಂಗನ್ನಡಿ ಮೇಲೆ ಒಂದು ಕಣ್ಣಿಟ್ಟರೆ ಸಾಲದು. ಏಕಮುಖ ದಾರಿಯ ಬಲ ಅಂಚೇ ಸರಿ ಎಂದುಕೊಳ್ಳುವಾಗ ಸೊಂಯ್ಕೆಂದು ಎಡದಿಂದ ಬಂದ ಮಿಂಚಿನಮರಿಯಂಥಾ ಕಾರು ನಡುಗಟ್ಟೆ ಅವಕಾಶ ಕಲ್ಪಿಸಿದಲ್ಲಿ ದೀಪ, ಕೈsಸನ್ನೆ ಏನೂ ಮಾಡದೆ, ನಾನು ಮೂಗು ಜಜ್ಜಿಕೊಳ್ಳುವಂತೆ ಬಲದ ದಾರಿಗೆ ತಿರುಗಿಬಿಟ್ಟ. ನಾನವನಿಗೆ ಕೊಟ್ಟ ಶಾಪ ಫಲಿಸುವುದೇ ಆಗಿದ್ದಲ್ಲಿ ಅವನೀಗಾಗಲೇ ‘ಪುನರಪಿ ಜನನೀ ಜಠರೇ ಶಯನ’ಕ್ಕೆ ಹೋಗಿರಲೇಬೇಕು, “ಸೈತ್ ಪೋಯಾರ (ಧರ್ಮರಾಯನಂತೆ ಕೆಳ ಧ್ವನಿಯಲ್ಲಿ) ನಾಯ್ತ ಮಗೆ.” ಎಲ್ಲೆಲ್ಲೋ `take deviation’ಗಳು ನಮ್ಮನ್ನು ಬಲ ಓಣಿಗೆ ನುಗ್ಗಿಸುತ್ತವೆ, ಸರಿ ದಾರಿಗೂ ತರುತ್ತವೆ. ಹಾಗೇ ಅನಿರೀಕ್ಷಿತವಾಗಿ ಎದುರಿನಿಂದ (ದೀಪ) ಕಣ್ಣು ಕೆಕ್ಕರಿಸಿಕೊಂಡು ಆರೋ ಎಂಟೋ ಜೋಡಿ ಟಯರುಗಳ ಟ್ಯಾಂಕರಾಸುರ ಬರುವಾಗಲೇ ಗೊತ್ತು ಈಗ ನಮ್ಮದು ದ್ವಿಪಥ. ಎಚ್ಚರ ತಪ್ಪಿದರೆ ರಸ್ತೆ ನಿರ್ಮಾಣದ ಅತ್ಯಾಧುನಿಕ ಪ್ರಯೋಗಕ್ಕೆ (ರಬ್ಬರ್, ಪ್ಲ್ಯಾಸ್ಟಿಕ್ ಬೆರೆಸುವುದಲ್ಲರೀ) – ಮನುಷ್ಯ ದೇಹಸೇರಿಸುವುದು, ನಮ್ಮಿಬ್ಬರದು ಕಿರುಕಾಣಿಕೆಯಾಗುವುದಿತ್ತು. ಬಿಡಿ, ಬದಲಾಗುವ ಕಾಲದ ಕಷ್ಟಗಳೊಡನೆ ರೂಢಿಗತ ಸಂಚಾರ ಅಶಿಸ್ತುಗಳ ಪಟ್ಟಿ ಮಾಡುತ್ತಾ ಹೋದರೆ ಅದು ಬೇರೆಯೇ ಮೆಗಾ ಸೀರಿಯಲ್ಲಾದೀತು – ನಿಮಗ್ಯಾಕೆ ಬೋರು!

ಮನೆಯಲ್ಲಿ ಕೇವಲ ಕಾಫಿ ಕುಡಿದು ಹೊರಟವರು ಸಾಲಿಗ್ರಾಮದ ಮಂಟಪ ಹೋಟೆಲನ್ನು ತಿಂಡಿಯ ಗುರಿಯಾಗಿಟ್ಟಿದ್ದೆವು. ಆ ಹೋಟೆಲ್ ಶುಚಿ, ರುಚಿಗೆ ಗಮನ ಕೊಡುವುದರೊಡನೆ ನಮ್ಮ ಬಹುಮಿತ್ರರ (ಮಂಜುನಾಥ, ವೆಂಕಟ್ರಮಣ, ಪ್ರಭಾಕರ, ರತ್ನಾಕರ, ಮನೋಹರಾದಿ ಉಪಾಧ್ಯರುಗಳ) ಕುಟುಂಬದ್ದೇ ಎನ್ನುವುದೂ ಸೇರುತ್ತಿತ್ತು. ಅಲ್ಲೇ ಪಕ್ಕದಲ್ಲಿದ್ದ ಉಪಾಧ್ಯ ಬ್ರದರ್ಸ್ (ಸಾಲಿಗ್ರಾಮದ ಸರ್ವ ಸರಕಿನ ಮಳಿಗೆ) ಐದು ಮಿನಿಟಿಗೆ ಹೊಕ್ಕು ವೆಂಕಟ್ರಮಣರಿಗೆ ದಾಂಡೇಲಿ ಯಾತ್ರೆಯ ಹುಸಿವೀಳ್ಯ ಕೊಟ್ಟೆವು. ನಮ್ಮೊಡನೆ ಎರಡು ಭಾರತ ಯಾತ್ರೆ ಸೇರಿದಂತೆ ಎಷ್ಟೋ ಮತ್ತೆ ಸ್ವತಂತ್ರವಾಗಿಯೂ ಹಲವು ಸಾಹಸ ಯಾನಗಳನ್ನು ಮಾಡಿದವರಿವರು. ದಾಂಡೇಲಿ ತಂಡಕ್ಕೇ ಕಡೇ ಮಿನಿಟಿಗೆ ಸೇರಿದ ನಮಗೆ, ಉಪಾಧ್ಯರಿಗೆ ಗಟ್ಟಿ ಹೇಳಿಕೆ ಹೊರಡಿಸಲು ಸ್ವಲ್ಪ ಹಿಂಜರಿಕೆಯೇ ಇತ್ತು. ಎರಡು ಕಿಮೀ ಮುಂದೆ ಕೋಟದಲ್ಲಿ ಗೆಳೆಯ ಡಾ| ರಾಘವೇಂದ್ರ ಉರಾಳರ (ಇಲ್ಲೇ ಹಿಂದಿನ ಲೇಖನದಲ್ಲಿ ಬಂದಂತೆ ‘ಜಿಗಣೆ ಸುಬ್ಬ’ನ ಅಪ್ಪ) ಮನೆ ಹೊಕ್ಕು ಹೊರಟೆವು. ನಾನು ಅತ್ರಿ ತೆರೆದ ಮೊದಲ ದಿನಗಳಲ್ಲಿ (ಮದುವೆಯಿನ್ನೂ ಆಗಿರಲಿಲ್ಲವಾದ್ದರಿಂದ) ಸಂತ ಅಲೋಶಿಯಸ್ ಕಾಲೇಜಿನ ಹಾಸ್ಟೆಲಿನಲ್ಲಿ ವಸತಿ ಸೌಕರ್ಯ ಪಡೆದಿದ್ದೆ. ಅಲ್ಲಿದ್ದ ಇನ್ನೂ ಕೆಲವು ಮಂದಿ ದುಡಿಯುವ ವರ್ಗದವರಲ್ಲಿ ಉರಾಳರೂ ಒಬ್ಬರು. ಕೋಟ ಮೂಲದ ಈ ಸರಕಾರೀ ಪಶುವೈದ್ಯ ಹೆಂಡತಿ, ಮಕ್ಕಳನ್ನು ಊರಲ್ಲೇ ನಿಲ್ಲಿಸಿದ್ದರು. ಓದು ಇವರ ನಿತ್ಯ ಸಂಗಾತಿ. ಒಳ್ಳೆಯ ಸಿನಿಮಾ, ನಾಟಕ, ಯಕ್ಷಗಾನ, ಸಂಗೀತ ಎಲ್ಲ ಅನುಭವಿಸುವ ರಸಿಕ. ಏರಿಕಲ್ಲು, ಜಮಾಲಾಬಾದ್, ಇನ್ನೂ ಪ್ರಾರಂಭಿಕ ಕೆಲಸಗಳಲ್ಲೇ ಇದ್ದ ಕುದುರೆಮುಖ ಗಣಿಗಾರಿಕೆಯೇ ಮೊದಲಾದ ಸ್ಥಳಗಳಿಗೆ ನನಗಿವರು ಜೊತೆಗೊಟ್ಟದ್ದು ಅವಿಸ್ಮರಣೀಯ. ಈ ಹಿರಿಯ ಗೆಳೆಯರ ಮನಸ್ಸು ಯಾವುದೇ ವೈಚಾರಿಕ ಚಟುವಟಿಕೆಗೆ ಪುಟಿಯುತ್ತದೆ (ದೀರ್ಘ ಕಾಲೀನ ಅಸ್ತಮಾ ಮಾತ್ರ ದೇಹವನ್ನು ಜಗ್ಗುತ್ತದೆ). ಬಹಳ ಕಾಲ ಕಂಡಿರಲಿಲ್ಲವೆಂಬ ಏಕೈಕ ಕಾರಣಕ್ಕೆ ಉರಾಳರೊಡನೆ ಐದೇ ಮಿನಿಟಿನ ಉಕುಸಾಂ ನಡೆಸಿ ಮುಂದುವರಿದೆವು.

ಮುಂಜಾವಿನ ತಂಪು ಕಳಚಿ, ಕಾವೇರತೊಡಗಿತ್ತು. ಕುಂದಾಪುರದಿಂದ ಮುಂದೆ ಚತುಷ್ಪಥದ ಕಾರ್ಯಗಳು ನಡೆಯುತ್ತಿಲ್ಲ. ಸಹಜವಾಗಿ ಅದುವರೆಗೆ ನಮ್ಮ ಲೆಕ್ಕಕ್ಕೆ ಕಳೆದುಹೋಗಿದ್ದ ದಾರಿಯ ಚಹರೆಗಳು ಮತ್ತೆ ಕೂಡಿಕೊಳ್ಳತೊಡಗಿದವು. ಮರವಂತೆಯಲ್ಲಿ ಐದು ಮಿನಿಟಿನ ವಿರಾಮ, ಬೈಂದೂರಿನ ಪೂರ್ವದಿಗಂತ ನಿರ್ಧರಿಸುವ ಕೊಡಚಾದ್ರಿಗೆ ದೂರದ ನೆನಕೆ. ಒತ್ತಿನೆಣೆಯ ವಿಶಿಷ್ಟ ಪ್ರಾಕೃತಿಕ ನೆಲೆ ನಮಗೆ ಸದಾ ರೋಚಕ. ಮಳೆ ಕಳೆದ ಮೊದಲ ತಿಂಗಳುಗಳಲ್ಲಿ ಅಲ್ಲಿಂದ ದೂರದರ್ಶನವಷ್ಟೇ ಕೊಡುವ ಶಿರೂರು ಅಬ್ಬಿ ಪಶ್ಚಿಮ ಘಟ್ಟಕ್ಕೊಂದು ಬೆಳ್ಳಿ ಬೆಳಕು. ಪಶ್ಚಿಮದಲ್ಲಿ ಮಾತ್ರ ಕೆಲವೇ ನೂರು ಮೀಟರುಗಳಲ್ಲಿ ಸಮುದ್ರಕ್ಕೇ ನುಗ್ಗಿದಂತಿರುವ ಈ ಸುಟ್ಟ ಕಲ್ಲಿನ ಗುಪ್ಪೆಗೆ ಮೈಯಲ್ಲಿ ಸಾಕಷ್ಟು ಹಸಿರೂ ನೆತ್ತಿಯ ವಿಸ್ತಾರ ತಟ್ಟಿನಲ್ಲಿ ಋತುಮಾನಕ್ಕೆ ತಕ್ಕಂತೆ ಮುಳಿಟೊಪ್ಪಿಯೂ ಕೊಡುವ ಶೋಭೆ ಅನನ್ಯ. ಇಲ್ಲಿ ಸಹಜವಾಗಿ ಮನುಷ್ಯ ವಸತಿ, ಕೃಷಿ ಅಸಾಧ್ಯ. ಆದರೆ ಪ್ರವಾಸೀ ಸಾಧ್ಯತೆಗಳನ್ನು ಅನುಲಕ್ಷಿಸಿ ನಡೆದಿರುವ ಎರಡು ದಾರಿ ತಪ್ಪಿದ ಬೆಳವಣಿಗೆಗಳು – ಸರಕಾರೀ ಅತಿಥಿಗೃಹ ಮತ್ತು ಒಂದು ದೇವಾಲಯ (ಮತ್ತವಕ್ಕಂಟಿದ ಕ್ಷುದ್ರ ಕಳೆಗಳು). ಹಾಗೇ ಈ ನೆಲೆ ಕಲ್ಪಿಸುವ ಏಕಾಂತ ಇನ್ನೂ ಕೆಲವು ಮನುಷ್ಯ ವಿಕಾರಗಳಿಗೆ ತೆರೆದುಕೊಳ್ಳುತ್ತಿರುವುದನ್ನು ನಾವು ವಿಷಾದಗಳೊಡನೆ ಕೇಳುತ್ತಲೂ ಇದ್ದೇವೆ. ಅದರಲ್ಲೂ ಹೊಸತು ಅಲ್ಲಿನ ಹೆಣ್ಬೇರು ತಪ್ಪಲಿನಲ್ಲಿ ಯಾರೋ ಎಸೆದ ವಿಷವಸ್ತುಗಳನ್ನು ತಿಂದು ಅಸಂಖ್ಯ ಅಮಾಯಕ ಜಾನುವಾರುಗಳು ಮೃತವಾದದ್ದು. (ನಾವಲ್ಲಿ ಹೋಗಿ, ಬಂದ ದಿನಗಳಲ್ಲಿ ಇದು ನಡೆದೇ ಇತ್ತು. ಆದರೆ ನಮಗೆ ಮಾತ್ರ ಮಂಗಳೂರಿಗೆ ಮರಳಿದ ಮೇಲೆ ಪತ್ರಿಕೆಗಳಿಂದಷ್ಟೇ ತಿಳಿಯಿತು) ಇವು ಯಾವವನ್ನೂ ನಾನಿಲ್ಲಿ ವಿಸ್ತರಿಸ ಹೋಗುವುದಿಲ್ಲ. (ಒತ್ತಿನೆಣೆಯ ಕುರಿತು ಹೆಚ್ಚಿನ ಓದಿಗೆ ಇಲ್ಲೇ ನನ್ನ ಹಳೆಯ ಲೇಖನ ನೋಡಲು ಇಲ್ಲಿ ಚಿಟಿಕೆ ಹೊಡೆಯಿರಿ. ಮತ್ತೂ ಮುಂದುವರಿದ ಓದಿಗೆ ಅದರೊಳಗೆ ಇನ್ನೊಂದು ಸೇತೂ ಇದೆ, ಗಮನಿಸಿ.)

ಪುರಾಣ ಪುಟಗಳನ್ನೇ ಮಗುಚಿ ಹೇಳುವಾಗ ಈ ವಲಯದಲ್ಲಿ ಮೊದಲೆಲ್ಲಾ ಗೋಕರ್ಣ ಒಂದೇ ತುಸು ಮುಂಚಾಚಿಕೊಳ್ಳುತ್ತಿತ್ತು. ಇಲ್ಲಿ ಗೋಕರ್ಣ, ಧಾರೇಶ್ವರ, ಗುಣವಂತೇಶ್ವರ ಮತ್ತು ಶೆಜ್ಜೇಶ್ವರದೊಡನೆ ಸೇರಿದಂತೆ ಪಂಚ ಈಶ್ವರ ಕ್ಷೇತ ಎನ್ನುವಲ್ಲಿ ಜೂಗರಿಸಿಕೊಂಡು ಮುರುಡೇಶ್ವರ ಎನ್ನುವುದೂ ಒಂದಿತ್ತು! ಆದರೆ (ಹುಬ್ಬಳ್ಳಿ ಮೂಲ) ಈ ವಲಯದ ಖ್ಯಾತ ಕಂತ್ರಾಟುದಾರ – ಆರೆನ್ ಶೆಟ್ಟಿ, ಒಮ್ಮೆ ಅಲ್ಲಿ ಕೈ ಹಾಕಿದ ಮೇಲೆ ಅದರ ಖದರೇ ಬೇರೆಯಾಯ್ತು; ನವ- ಚತುಷ್ಪಥದಂತೆ! ಭಟ್ಕಳ-ಹೊನ್ನಾವರದ ನಡುವಣ ಈ ಹಳ್ಳಿಕೊಂಪೆ ಧರ್ಮೋದ್ಯಮದ ಅಪರಿಮಿತ ಶಕ್ತಿಗೆ, ಅತಿಕ್ಷಿಪ್ರ ಸಾಕ್ಷಿಯಾಗಿ (ವಿಕಸಿಸು ತುಂಬಾ ಸೌಮ್ಯ ಶಬ್ದ) ಸಿಡಿದು ನಿಂತಿದೆ! ರೈಲ್ವೇ ಸ್ಟೇಶನ್, ಹೆದ್ದಾರಿಪಕ್ಕದ ಮಹಾದ್ವಾರ, ಇಪ್ಪತ್ತೇಳು ಮಾಳಿಗೆಗಳ ಸ್ವಾಗತ ಗೋಪುರ, ಪೌರಾಣಿಕ ಕಲ್ಪನೆಗಳು ಭೂಮವಾಗಿ ಮೂರ್ತಿವೆತ್ತಂತೆ ಸಿಮೆಂಟ್ ಶಿಲ್ಪಗಳು, ಕಡಲಕಿನಾರೆಯನ್ನಾವರಿಸಿದ ವಿಶ್ರಾಂತಿಭವನ, ಹೋಟೆಲು (ಹೆದ್ದಾರಿಯಲ್ಲೇ ಸ್ಟಾರ್ ಹೋಟೇಲೂ ಇದೆ) ಮತ್ತೆಲ್ಲಕ್ಕೂ ಆಧಾರವಾದ ಮುರ್ಡೇಶ್ವರನ ದೇವಾಲಯ ಜಗತ್ಪ್ರಸಿದ್ಧಿಯನ್ನೇ ಗಳಿಸುತ್ತಿದೆ ಎಂದರೆ ತಪ್ಪಲ್ಲ.

ನವ ಮುರ್ಡೇಶ್ವರದ ಕೇಂದ್ರ ಆಕರ್ಷಣೆ ಎಂದೇ ತೋರುವ ಬೃಹತ್ ಶಿವನ ಮೂರ್ತಿ (ಸಿಮೆಂಟ್ ಶಿಲ್ಪ) ದಿಬ್ಬವೊಂದರ ಮೇಲೆ, ಸಾಮಾನ್ಯರಿಗೆ ಮುಟ್ಟಲು ಸಿಗದಂತೆ ಹುಲ್ಲಹಾಸಿನ ಆವರಣದೊಳಗೆ ಇರುವುದನ್ನು ಕಂಡಿದ್ದೆ. ಇನ್ಯಾವತ್ತೋ ಪ್ರಾಕೃತಿಕ ಹೊಡೆತದಲ್ಲಿ (ಬಹುಶಃ ಸಿಡಿಲಿರಬೇಕು) ಅಂಗಭಂಗಗೊಂಡಿದ್ದೂ ಶಿಲ್ಪಿಗಳು ಅದರ ರಿಪೇರಿಯಲ್ಲಿ ನಿರತರಾಗಿದ್ದೂ ನೋಡಿದ್ದೆ. ಈ ಸಲ ಶಿವನನ್ನು ಹೊತ್ತ ದಿಬ್ಬ ಸಾರ್ವಜನಿಕರನ್ನು ಸ್ವಾಗತಿಸುತ್ತಿತ್ತು. ಸುಂದರ ಸೋಪಾನಗಳನ್ನೇರಿ ಹೋದವರಿಗೆ ನೇರ ವಿಗ್ರಹದ ತಳದ ಹವಾನಿಯಂತ್ರಿತ ಗುಹಾರೀತಿಯ ಕೋಣೆ ದೊಡ್ಡ ಆಕರ್ಷಣೆ. ತಲಾ ಹತ್ತು ರೂಪಾಯಿ ಪ್ರವೇಶ ದಕ್ಷಿಣೆ ಕೊಟ್ಟು ಒಳಗೊಂದು ಪ್ರದಕ್ಷಿಣೆ ತೆಗೆದೆವು. ರಾವಣೋದ್ಭವದಿಂದ ಗೋಕರ್ಣ ಸ್ಥಾಪನೆಯವರೆಗಿನ ಪ್ರಮುಖ ಘಟನೆಗಳಲ್ಲಿ ಆಯ್ದವನ್ನು ಇಲ್ಲಿ ಸುಂದರ ನಾಟಕೀಯ ಆಕರ್ಷಣೆಯುಳ್ಳ ಸಿಮೆಂಟ್ ಶಿಲ್ಪದಲ್ಲಿ ಮೂಡಿಸಿದ್ದಾರೆ. ಇಲ್ಲಿ ಬೆಳಕು, ಧ್ವನಿ, ಹಿನ್ನೆಲೆಯ ಚಿತ್ರ, ಉಬ್ಬುಚಿತ್ರ ಮತ್ತು ಮುಖ್ಯ ಪ್ರಸಂಗದ ಶಿಲ್ಪಗಳೆಲ್ಲಾ ಸಜೀವ ಗಾತ್ರದಲ್ಲೇ ಇದ್ದು, ಪರಸ್ಪರ ಪೂರಕವಾಗಿ ಸೇರಿ ಮುದ ಕೊಡುತ್ತವೆ. ಇಲ್ಲಿಗೆ ಅವಶ್ಯವೇ ಆದ ಒಂದೂವರೆ ಅಡಿ ದಪ್ಪದ ಹವಾನಿಯಂತ್ರಕ ಕೊಳವೆಯನ್ನೂ ಪೌರಾಣಿಕ ಪರಿಸರ ನಿರ್ಮಾಣದಲ್ಲಿ ಸೇರಿಸಿಕೊಳ್ಳುವಂತಾಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. (ಸಾಂಪ್ರದಾಯಿಕ ಯಕ್ಷಗಾನದ ವ್ಯವಸ್ಥೆ ಎಲ್ಲಾ ಚೊಕ್ಕ ಮಾಡಿ, ಚೌಕಿ ಪೂಜೆಯಲ್ಲಿ ‘ದೇವರನ್ನು’ ಪ್ಲ್ಯಾಸ್ಟಿಕ್ ಕುರ್ಚಿಯಲ್ಲಿ ಕೂರಿಸಿದಂತೆ ಕಾಣುತ್ತದೆ!) ಶಿವಗಿರಿಯ ಪಕ್ಕದ ದಿಬ್ಬದ ನೆತ್ತಿಯಲ್ಲಿ ಪಶ್ಚಿಮಮುಖಿಯಾಗಿ ಸಪ್ತಾಶ್ವಗಳನ್ನು ಹೂಡಿದ ಸೂರ್ಯರಥವನ್ನೂ ಅದಕ್ಕೆ ಬೆನ್ನಂಟಿಸಿದಂತೆ ಗೀತೋಪದೇಶದ ಸುಂದರ ಮತ್ತೆ ಭೂಮ ಪ್ರತಿಕೃತಿಗಳನ್ನೂ ನಿಲ್ಲಿಸಿದ್ದಾರೆ. ಒಟ್ಟು ಅಭಿವೃದ್ಧಿಯ ಸರಿತಪ್ಪುಗಳ ವಿವೇಚನೆಯನ್ನು ಮರೆತು ಪರಿಗಣಿಸುವುದಾದರೆ ಶಿಲ್ಪಗಳ ಆಯದಿಂದ ತೊಡಗಿ ಶೆಟ್ಟರ ಆಡಳಿತಕ್ಕೂ ಪ್ರಭಾವಕ್ಕೂ ಒಳಪಟ್ಟ ವ್ಯವಸ್ಥೆಗಳೆಲ್ಲಾ ಚೆನ್ನಾಗಿಯೇ ಇವೆ. ಸಹಜವಾಗಿ ಎಲ್ಲೆಲ್ಲಿನ ಸಾರ್ವಜನಿಕರನ್ನು ಆಕರ್ಷಿಸುತ್ತಲೂ ಇವೆ.

ಕುಮಟದಿಂದ ಶಿರಸಿ ಘಾಟಿಯಲ್ಲಿ ಏರಿ ಯಲ್ಲಾಪುರಕ್ಕೆ ಅಡ್ಡ ಹಾಯುವುದು ಅಥವಾ ಅಂಕೋಲದವರೆಗೆ ಮುಂದುವರಿದು ನೇರ ಯಲ್ಲಾಪುರಕ್ಕೇ ಏರುವುದು ನಮಗಿದ್ದ ಸ್ಪಷ್ಟ ಆಯ್ಕೆಗಳು. ನಡುವೆ ಇನ್ನೊಂದೇ ಒಳದಾರಿಯಿದೆ ಎಂದು (ನನ್ನ ಅಸ್ಪಷ್ಟ ನೆನಪೂ ಸೇರಿದಂತೆ) ಕೆಲವರು ಹೇಳಿದರಾದರೂ ಹೋಗುವ ದಾರಿಯಲ್ಲದು ದಕ್ಕಲಿಲ್ಲ. ವಾಪಾಸಾಗುವಾಗ ಕುಳಗಿಯಲ್ಲೇ ಫಾರೆಸ್ಟ್ ಗಾರ್ಡ್ ನಾಯಕ್ ಸೂಚಿಸಿದಂತೆ ಇದು ಯಲ್ಲಾಪುರ ಘಾಟಿಯಲ್ಲೇ ಹೆಬ್ಬುಳದ ಮುಂದೆ ದಕ್ಕಿತು! (ನಕ್ಷೆ ನೋಡಿ. ಸುಮಾರು ಇಪ್ಪತ್ತು ಕಿಮೀ ಉಳಿತಾಯ) ಯಲ್ಲಾಪುರದಿಂದ ಮುಂದೆ ನಮ್ಮ ಹುಡುಕಾಟ ಶುರುವಾಯ್ತು. ರತ್ನಾಕರರು ಕೊಟ್ಟ ಸೂಚನೆಗಳು ಪ್ರತ್ಯಕ್ಷದರ್ಶಿಯದ್ದಲ್ಲವಾಗಿ ಅಸ್ಪಷ್ಟವಿತ್ತು. ಊಟ ಮಾಡಿದ ಹೋಟೆಲಿನವರು ಹೇಳಿದಂತೆ ಏಳೇ ಕಿಮೀಗೆ (ಹುಬ್ಳೀ ಕ್ರಾಸ್, ನಮ್ಮ ಬಂಟ್ವಾಳ್ ಕ್ರಾಸ್ ಯಾನೆ ಬೀಸಿರೋಡ್ ಇದ್ದ ಹಾಗೆ) ಹೆದ್ದಾರಿ ಬಿಡಬೇಕು. ಮತ್ತೆ ಇಪ್ಪತ್ತು ಕಿಮೀಗೊಮ್ಮೆ (ಭಾಗವತಿ ಅಥವಾ ಹಳಿಯಾಳ್ ಕ್ರಾಸ್) ಕವಲಿದರೆ ಹದಿನೆಂಟೇ ಕಿಮೀಗೆ ಕುಳಗಿ ಶಿಬಿರ. ಅಂಕೋಲಾದಿಂದ ಮುಂದೆ ಉದ್ದಕ್ಕೂ ಕಾಡಿನದೇ ಪರಿಸರ, ಅರಣ್ಯ ಇಲಾಖೆಯ ಕವಲು ದಾರಿಗಳು, ಗೇಟುಗಳು, ಕಾವಲುಗಾರರ ತತ್ಕಾಲೀನ ಜೋಪಡಿಗಳು, ಪ್ರಚಾರ ಸಾಹಿತ್ಯ ಧಾರಾಳವಿದೆ. ಹೆದ್ದಾರಿಯ ಕೊನೆಯ ಹಂತದಲ್ಲೊಂದಿಷ್ಟು ಏರು ಮತ್ತು ಅಂಕುಡೊಂಕು ಬಿಟ್ಟರೆ ಉಳಿದಂತೆ ಎಲ್ಲವೂ ನೇರ, ನುಣ್ಣನೆ, ಸಪಾಟು. ಉರಿಬಿಸಿಲು, ಮೋಡ ಕವಿದ ಕುದಿ ಬೈಕ್ ಚೆನ್ನಾಗಿ ಓಡುತ್ತಿರುವವರೆಗೂ ಗಣ್ಯವೇ ಆಗುವುದಿಲ್ಲ. ಆದರೆ ನಮ್ಮ ಬೈಕೇ ಬಯಕೆಯಂತೋಡದಿದ್ದರೆ?

ದ್ವಿತೀಯ ಭಾರತಯಾನಕ್ಕೊದಗಿದ ಹೀರೋಹೊಂಡಾ ಸಿಡಿ ೧೦೦ ಸಾಕಷ್ಟು ಹಳತಾದರೂ ವಾರದ ಹಿಂದೆಯಷ್ಟೇ ಸಮಗ್ರ ‘ವಸಂತ ಸ್ಪರ್ಷ’ ಪಡೆದಿತ್ತು! (ಚಿಗುರು ಪಲ್ಲವಿಸಿ, ಕೋಗಿಲೆ ಕೂಜನದೊಡನೆ “ನವಿಲು ಕುಣಿಯುತಿದೆ ನೋಓಓಓಓಡ” ಇತ್ಯಾದಿ ಕಲ್ಪಿಸಬೇಡಿ) ವಸಂತಣ್ಣ ಉರುಫ್ ವಸಂತ ಸಾಲಿಯಾನ್ ಎಂದೇ ಮಂಗಳೂರಿನಲ್ಲಿ ಖ್ಯಾತರಾದ ಪ್ರಥಮ ದರ್ಜೆಯ ಮೆಕ್ಯಾನಿಕ್. ವಸಂತರು ತಾರುಣ್ಯದಲ್ಲಿ ಸ್ವತಃ ರ‍್ಯಾಲೀಪಟು. ಇವರ ಏಕೈಕ ದೋಷ ಪರ್ಫೆಕ್ಷನ್ (ಸಮರ್ಪಕತೆ)! ಸಾಲಿಗ್ರಾಮದವರೆಗೆ ವಾಹನ ಸಮ್ಮರ್ದದಲ್ಲಿ ನನಗೆ ಮನೋವೇಗದಲ್ಲಿ ಚಲಿಸುವುದಾಗಿರಲಿಲ್ಲ. ಆದರೆ ಮುಂದೆ ಅದು ಸಾಧ್ಯವಾಗುವಲ್ಲಿ ಯಾಕೋ ಬೈಕ್ ತುಸುವೇ ಜಗ್ಗಿದಂತಾಗುತ್ತಿತ್ತು. ಏರಿದ ಹವೆಯ ಬಿಸಿ, ನೂರು ಕಿಮಿಗೂ ಮಿಕ್ಕು ಏಕ ಓಟ, ಕೊನೆಗೆ ಎಂಜಿನ್ನೂ ಸಾಕಷ್ಟು ಹಳತು ಎಂದೆಲ್ಲಾ ಸಮಾಧಾನಿಸಿಕೊಂಡೆ. ಒತ್ತಿನೆಣೆ, ಭಟ್ಕಳದ ಘಾಟಿ ಏರುವಾಗಲಂತೂ ಒಮ್ಮೊಮ್ಮೆ ಎಂಜಿನ್ ಪೂರ್ಣ ಬಂದಾಗಿ ನಮ್ಮನ್ನು ಯೋಚನೆಗೇ ಹಚ್ಚಿತು. ಆದರೆ ಮರುಕ್ಷಣದಲ್ಲಿ ಒದ್ದು ಚಲಾಯಿಸಿದಲ್ಲಿ, ಮುಂದೆಲ್ಲೋ ಕ್ಷಣದಲ್ಲಿ ಸ್ಫುರಿಸಿದ ಜಾಣತನದಲ್ಲಿ ಕ್ಲಚ್ ಹಿಡಿದು ಯಾಕ್ಸಿಲರೇಟರ್ ಹೆಚ್ಚು ಕೊಟ್ಟಾಗೆಲ್ಲಾ ‘ಒಂದೂ ಗೊಣಗಿಲ್ಲದೆ’ ಗಾಡಿ ಮುಂದುವರಿಯುತ್ತಿತ್ತು. ಹೆಚ್ಚಲು ಹೋಗದೆ ಒಂದೇ ಹದದಲ್ಲಿ ಮುಂದುವರಿದದ್ದೇ ಆರೋಗ್ಯಕರವಾಗಿಯೇ ಇರುತ್ತಿತು. ಹೀಗೆ ಇದರ ಅನುಭವ ಬೆಳೆದಂತೆ ಹೊನ್ನಾವರ, ಕುಮಟಗಳಲ್ಲಿ ದಾರಿಬದಿಯ ಮೆಕ್ಯಾನಿಕ್ಕುಗಳಿಗ್ಯಾರಿಗಾದರೂ ತೋರಿಸುವುದೋ ಎಂಬ ಭಾವನೆ ಬಿಟ್ಟು ಮುಂದುವರಿದೆವು. ವಸಂತರು ನಗರದೊಳಗಿನ ಓಡಾಟಕ್ಕೆ ಅದನ್ನು ಸಜ್ಜುಗೊಳಿಸಿದ್ದಿರಬೇಕು (ಆಮೇಲೆ ತಿಳಿದಂತೆ ಅದು ನಿಜವೂ ಹೌದು). ಸಹಜವಾಗಿ ವೇಗ ಅರವತ್ತೈದು ಮೀರಲು ಹೊರಟಾಗ ಇಂಜಿನ್ನಿಗೆ ಇಂಧನದ ಕೊರತೆ ಕಾಡಿ ತಡವರಿಸುತ್ತಿತ್ತು. ಮತ್ತೆ ನಾನು ವೇಗವನ್ನು ಅರವತ್ತರ ಹಿಂದೆಮುಂದೆಗೆ ಮಿತಿಗೊಳಿಸಿದ್ದರಿಂದ ಸಮಸ್ಯೆ ಮರುಕಳಿಸಲಿಲ್ಲ. ಆದರೆ ಕಾನೂನು ಮತ್ತು ವೈಯಕ್ತಿಕ ಮಿತಿಯಲ್ಲಿ ಗರಿಷ್ಠ ವೇಗದಲ್ಲೇ ಇರಬೇಕೆಂಬ ಮನೋಭೂಮಿಕೆಯ ನನಗೆ ಹಿಂದಿನಿಂದ (ಕೆಣಕಿ?) ಬರುವವರಿಗೆ ಅಣ್ಣ, ಮೀರಿ (ಅಣಕಿ?) ಹೋಗುವವರಿಗೆ ತಮ್ಮನಾಗುವುದು ಕಷ್ಟಾ, ಕರಕಷ್ಟ! ಇದಕ್ಕೆ ಸಣ್ಣ ಸಾಕ್ಷಿಯಾಗಿ ಹಗಲಿನ ಎಲ್ಲಾ ಉರಿಯನ್ನು ಹೀರಿಕೊಂಡ ನನ್ನ ಎಡಗೈ ಚಿತ್ರ (ಮಣಿಗಂಟಿನ ಬಳಿ ಕೈಗಡಿಯಾರ ಮರೆಮಾಡಿದೆ) ಲಗತ್ತು.

ವಾಹನ ಸಂಚಾರವನ್ನೇ ನೆಚ್ಚಿ ದಾರಿ ಬದಿ ಬೆಳೆಯುವ ಅಸಂಖ್ಯ ವ್ಯಾಪಾರಕ್ಕೆ ಕುಮಟಾ ಅಂಕೋಲಗಳ ನಡುವೆ ನಾವು ಕಂಡ ಗೊಂಚಲು ನೀರುಳ್ಳಿ ಹೊಸ ಸೇರ್ಪಡೆ. ವಾಪಾಸಾಗುವಾಗ ನಾವೂ ಒಂದು ಗೊಂಚಲು (ಸುಮಾರು ನಾಲ್ಕು ಕೆಜಿ ತೂಕದ್ದು) ಕೊಂಡೆವೆನ್ನಿ. ಉತ್ತರ ಭಾರತದ ಆಹಾರಕ್ರಮಗಳು ನಮ್ಮವಕ್ಕಿಂತ ಸರಳ. ಸಹಜವಾಗಿ ಅಲ್ಲಿನ ಹೋಟೆಲ್ ಸಂಸ್ಕೃತಿ ಸಾಮಾನ್ಯ ಮಾರ್ಗಕ್ರಮಣದವರಿಗೆ ಧಾಬಾ ಮಟ್ಟದಿಂದ ಮೇಲೇರಿಯೇ ಇಲ್ಲ. (ನಾವಾದರೋ ‘ರೋಮಿನಲ್ಲಿರುವಾಗ ರೋಮಣ್ಣ’ರೇ ಆಗಿದ್ದುದರಿಂದ ಭಾರತ ಯಾತ್ರೆಗಳಲ್ಲಿ ಆಹಾರ ಸಮಸ್ಯೆ ಆಗಲೇ ಇಲ್ಲ!) ಆದರಿಲ್ಲಿ ದೊಡ್ಡ ಊರು ಮತ್ತು ಕನಿಷ್ಠ ಎದುರಿನಿಂದ ಕಾಣಲಾದರೂ ಚೊಕ್ಕವೆನ್ನುವ ಹೋಟೆಲುಗಳನ್ನೇ ನೆಚ್ಚುವುದು ಅನಿವಾರ್ಯ. [ತಿಂಗಳ ಹಿಂದೆ ಹಾಸನ ರೈಲ್ವೇ ನಿಲ್ದಾಣದ ಕ್ಯಾಂಟೀನಿನಲ್ಲಿ ಮಧ್ಯಾಹ್ನ ನಾವಿಬ್ಬರೂ ಹೊಟ್ಟೆ ತುಂಬಿಕೊಂಡಿದ್ದೆವು. ಆಗ ದೇವಕಿ ಮನೆಯಿಂದ ಒಯ್ದ ನೀರನ್ನೇ ಕುಡಿದಳು. ಸದಾ ತುರ್ತು ಸ್ಥಿತಿಗೆ ದೇಹಪಳಗಿಸುವ ಹುಚ್ಚಿನಲ್ಲಿ ನಾನು ಕ್ಯಾಂಟಿನ್ ಕೊಟ್ಟ ನೀರು ಕುಡಿದಿದ್ದೆ. ಮತ್ತೆ ಕೆಲವೇ ಗಂಟೆಗಳಲ್ಲಿ ನಾವು ಮನೆ ತಲಪಿದ್ದರಿಂದ ಮರ್ಯಾದೆ ಉಳಿಯಿತು. ಗುಟ್ಟಾಗಿ ಹೇಳ್ತೇನೆ – ಆ ಸಂಜೆ ಮತ್ತು ರಾತ್ರಿ ಕನಿಷ್ಠ ನಾಲ್ಕು ಸಲ ನನ್ನ ಬೂಚು ರಟ್ಟಿತ್ತು!] ಸಾಲಿಗ್ರಾಮದ ಮಂಟಪದವರಂತೇ ಕುಮಟಾದ ಕಾಮತರೂ ಯಲ್ಲಾಪುರದ ಶಾನುಭಾಗರೂ ನಮ್ಮ ರುಚಿ ಆರೋಗ್ಯಗಳನ್ನು ಉಳಿಸಿದರು.

ಒಂಟಿ ಬೈಕ್ ಮತ್ತು (ಅನ್ಯರ ಬಾಯಿಗೆ ಬಿದ್ದಂತೆ) ಮುದಿಪ್ರಾಯದ ದೀರ್ಘ ಪ್ರಯಾಣದ ಬಳಲಿಕೆಯೊಡನೆ ರಾತ್ರಿ ಪ್ರಯಾಣದ ಅನಿವಾರ್ಯತೆ ತಂದುಕೊಳ್ಳಬಾರದೆಂದು ಎರಡೂ ದಿಕ್ಕಿನಲ್ಲಿ ಬೆಳಿಗ್ಗೆ ಬೇಗ ಹೊರಟು, ದಾರಿಯಲ್ಲಿ ಅನ್ಯಾಸಕ್ತಿಗಳನ್ನು ಕನಿಷ್ಠಗೊಳಿಸಿದ್ದೆವು. ಸಹಜವಾಗಿ ಎರಡೂ ಕೊನೆಯನ್ನು ಬೇಗನೇ ತಲಪಿದ್ದೆವು. ಹೋಗುವಾಗ ನಮಗೆ ಯಲ್ಲಾಪುರದಿಂದ ಮುಂದೆ ದಾರಿ ಮತ್ತು ದೂರದ ಕಲ್ಪನೆ ಸ್ಪಷ್ಟವಿರಲಿಲ್ಲ, ಸಮಯ ಧಾರಾಳವಿತ್ತು. ಆದರೂ (ಮಾಗೋಡು ಮೊದಲಾದ ಕೆಲವು ಅಬ್ಬಿ, ಕವಡಿಕೆರೆಯಂತ ಆಕರ್ಷಣೆಗಳನ್ನು ನಿರಾಕರಿಸಿ) ನಾಲ್ಕು ಗಂಟೆಗೇ ಕುಳಗಿ ತಲಪಿದ್ದೆವು. ಆದರೆ ನಮ್ಮ ಸುಖಪ್ರಯಾಣವನ್ನು ಮಾತಿನುಪಚಾರ ಮೀರಿ ಬಯಸಿದ್ದ ಕೆಲವರಿಗೆ ಚರವಾಣಿಸಿ ತಿಳಿಸೋಣವೆಂದರೆ ಶಿಬಿರಸ್ಥಾನ ಬೆಟ್ಟದಮರೆಯ ಜಾಗವಾಗಿ ಸಂಪರ್ಕಜಾಲದ ಹೊರಗಿತ್ತು. ಮತ್ತಲ್ಲಿನ ನೌಕರನೊಬ್ಬನ ಸಲಹೆಯ ಮೇರೆಗೆ ದಾರಿಯಲ್ಲೇ ಒಂದು ಕಿಮೀ ನಡೆದು ಒಂದು ಪಕ್ಷಿವೀಕ್ಷಣಾ ಅಟ್ಟಳಿಗೆಯ ಸಹಾಯಪಡೆದೆವು. ಹಕ್ಕಿಗಳುಲಿಗೆ ಕಿವಿಯಾಗಬೇಕಾದಲ್ಲಿ ನಮ್ಮದಷ್ಟು ‘ಹಲೋ’ ‘ಕೇಳುದಿಲ್ಲಾ’ ‘ಆಞಾ’ ‘ಎಂತಾ’ಗಳನ್ನು ಬಿತ್ತರಿಸಿ ಮರಳುವಾಗ ಕತ್ತಲಾಗಿತ್ತು.

ಹಿಂದೆ ಬರುವಾಗ ಮಾತ್ರ ಕುಂದಾಪುರ ಉಡುಪಿಗಳೆಲ್ಲಾ ನಮ್ಮ ಹಿತ್ತಲಿನಂತೆ ಪರಿಚಯದವೇ ಆದ್ದರಿಂದ ಸ್ವಲ್ಪ ತಡವಾದರೂ ಅಡ್ಡಿಯಿಲ್ಲವೆಂದು ಗೋಕರ್ಣಕ್ಕೆ ನುಗ್ಗುವ ಮನಸ್ಸು ಮಾಡಿದ್ದೆವು. ದಾರಿಯಲ್ಲೇ ಸಿಕ್ಕುವ ಸಾಣೆಕೊಪ್ಪದಲ್ಲಿ ಉಪ್ಪಿನಮಡಿಗಳು ನಮ್ಮನ್ನು ಆಕರ್ಷಿಸಿದವು. ಸಿಗಡಿ ಮಡಿಗಳಷ್ಟು ಆಳ, ಹರಹು ಇಲ್ಲದ, ನೀರು ತುಂಬಿದ ಅಂಕಣಗಳು. ಅವುಗಳ ಅಂಚಿನಲ್ಲಿ ಪುಟ್ಟಪುಟ್ಟ ಗುಪ್ಪೆ ಮಾಡಿಟ್ಟ ಕಂದು ಬಣ್ಣದ ಉಪ್ಪು. ಅವನ್ನು ದೂರದಂಚಿನ ದೊಡ್ಡಾ ಗುಪ್ಪೆಗೆ ಒಯ್ಯುವ ಕೂಲಿಗಳು. ತೆರೆದ ಗೇಟಿನಲ್ಲಿ ಬೈಕ್ ಹೊಗ್ಗಿಸ್ ಇಳಿದು ನೋಡಿದೆವು. ದೊಡ್ಡ ಗುಪ್ಪೆಯ ಪಕ್ಕದಲ್ಲೇ ತತ್ಕಾಲೀನ ಜೋಪಡಿಯೊಳಗೆಯೂ ಭಾರೀ ಕೂಲಿ ಚಟುವಟಿಕೆ ಮತ್ತು ಯಂತ್ರದ ಸದ್ದೂ ಕೇಳುತ್ತಿತ್ತು. ಇಣುಕಿದೆವು. ಯಾವ ನಿರಬಂಧವೂ ಹೇರದೆ ಅಲ್ಲಿನ ಮ್ಯಾನೇಜರ್ ಕಚ್ಚಾ ಉಪ್ಪಿಗೆ ನಿಯತ ಅಳತೆಯಲ್ಲಿ ಅಯೋಡಿನ್ ಬೆರೆಸುವ ಕ್ರಮ, ಮತ್ತೆ ಒಂದೊಂದು ಕೇಜಿಯ ತೊಟ್ಟೆಗಳಲ್ಲಿ ತುಂಬಿ ಸೀಲು ಮಾಡಿ ಪ್ಯಾಕ್ ಮಾಡುವದನ್ನೆಲ್ಲ ತೋರಿಸಿದರು. ನಮ್ಮ ಸಹಜ ಕುತೂಹಲಕ್ಕೆ ಒಂದು ಕೇಜಿ ಪ್ಯಾಕೆಟ್ಟನ್ನೇ (ಬೇಡಾ ಎಂದರೂ ಕೇಳದೆ) ಉಚಿತ ಕೊಟ್ಟು, ನಮ್ಮನ್ನು ಉಪ್ಪಿನ ಋಣಕ್ಕೆ ಬೀಳಿಸಿದರು! ಇಲ್ಲಿನ ನೀರಿನ ಗುಣದಲ್ಲಿ ಕಂದು ಮತ್ತು ಮಾಸಲು ಬಿಳಿಬಣ್ಣದ ಉಪ್ಪಾಗುತ್ತಿದ್ದದ್ದು ನಮಗೆ ಆಶ್ಚರ್ಯವಾಯ್ತು. (ಸಮುದ್ರದ ನೀರೆಲ್ಲಾ ಒಂದೇ ಎನ್ನುವ ಗ್ರಹಿಕೆಗೂಮಿತಿಗಳಿವೆ) ಮತ್ತವು ದಿನಂಪ್ರತಿ ಸಂಗ್ರಹಿಸುವ ಪರಿಪಾಠದಲ್ಲಿ ಸಾಮಾನ್ಯ ಮರಳಿನಷ್ಟೇ ತೋರವಿತ್ತು. “ಹಾಗಾದರೆ. . . .” ಎನ್ನುವ ನನ್ನ ಉದ್ಗಾರ ಬರುವ ಮೊದಲು ಇಲ್ಲೆಲ್ಲಾ ನಿತ್ಯ ಬಳಕೆಯಲ್ಲಿರುವ ಬಿಳಿಯುಪ್ಪು, ಕಲ್ಲುಪ್ಪೆಲ್ಲಾ ತಮಿಳು ನಾಡಿನವು ಎಂದು ವಿವರಿಸಿಬಿಟ್ಟರು. ಅಲ್ಲಿ ವಾರಕ್ಕೊಮ್ಮೆಯಷ್ಟೇ ಮಡಿಗಳನ್ನು ಗೋರುವುದರಿಂದ ನೀರಾರಿದಂತೆ ಹರಳು ಕಟ್ಟುವ ಕ್ರಿಯೆ ದೊಡ್ಡ ಗಾತ್ರದ್ದಾಗುತ್ತದಂತೆ. ನಾಲ್ಕು ಚಿತ್ರ ಹಿಡಿದು ಮುಂದುವರಿದೆವು.

ಮೊದಲೇ ಹೇಳಿದಂತೆ ಮುರುಡೇಶ್ವರ ಬಲವತ್ತರವಾದ ಆಧುನಿಕತೆಯ ವಶವಾಗಿದ್ದರೆ, ಗೋಕರ್ಣ ಈಚೆಗೆ ಅಷ್ಟೇ ಬಿಗಿಹಿಡಿತದ ಕರ್ಮಠರ (ಅಥವಾ ಬರಿಯ ಮಠವೆನ್ನಿ, ಶ್ರೀ ರಾಮಚಂದ್ರಾಪುರ ಮಠದ) ವಶಕ್ಕೆ ಒಳಪಟ್ಟಿತ್ತು. ಇಲ್ಲಿ ಲೋಕರೂಢಿ, ಕಾನೂನು, ರಾಜಕೀಯ ಆಯಾಮಗಳ ತಪ್ಪು ಸರಿಗಳ ವಿವೇಚನೆ (ನನ್ನ ತುತ್ತಲ್ಲ) ಬದಿಗಿಟ್ಟು, ಕೇವಲ ಸಾರ್ವಜನಿಕರ ದೃಷ್ಟಿಯಿಂದ ನೋಡುವಾಗ ನಿರಾಶೆಮೂಡುತ್ತದೆ. ಸಾಮಾನ್ಯವಾಗಿ ವಿವಿಧ ದೇವಸ್ಥಾನಗಳಲ್ಲಿ ಅಂಗಳ, ಒಳ ಪ್ರಾಕಾರ, ಗರ್ಭಗುಡಿ ಎಂಬಿತ್ಯಾದಿ ಕಟ್ಟಡದ ವಿವಿಧ ಅಂಕಣಗಳು ಜಾತೀವಾರು ಗಡಿ ನಿರ್ಧರಿಸುವ ವ್ಯವಸ್ಥೆಗಳಾಗುತ್ತವೆ. ಆದರೆ ಆ ಕಾಲದಲ್ಲೂ ಯಾವ ಪ್ರಶ್ನೆಯಿಲ್ಲದೆ ಪ್ರತಿ ಆಸಕ್ತನ (ಭಕ್ತನೇ ಆಗಬೇಕೆಂದೂ ಇರಲಿಲ್ಲ) ದರ್ಶನಕ್ಕೆ ಮತ್ತು ಕರಾರ್ಚನೆಗೆ ಒಡ್ಡಿಕೊಂಡಿದ್ದ ಗೋಕರ್ಣೇಶ್ವರ ಈಗ ಭಕ್ತನ ಮತೀಯ ಗುರುತುಗಳನ್ನು ಸ್ವಲ್ಪವಾದರೂ ಜಾಹೀರು ಮಾಡಲು ನೆಪವಾಗುತ್ತಿರುವುದು ದುರಂತವೇ ಸರಿ. ಗಂಡಸರಿಂದ ಅಂಗಿ, ಬನಿಯನ್ನುಗಳನ್ನು ಕಡ್ಡಾಯವಾಗಿ ತೆಗೆಸುವ ದೈವೀ ವ್ಯವಸ್ಥೆಗಳಲ್ಲೆಲ್ಲಾ ನನ್ನದೊಂದೇ ಘೋಷಣೆ, “ಆ ದೇವರಿಗೆ ನನ್ನ ದರ್ಶನ ಪಡೆಯುವ ಭಾಗ್ಯವಿಲ್ಲ.” ಪಾದರಕ್ಷೆಗಳನ್ನು ಕಳಚುವುದು, ಕೈಕಾಲು ತೊಳೆಯುವುದು, ಸ್ಥಳದಲ್ಲೇ ಸ್ನಾನ ಮಾಡಿ ಬರುವುದು ಇತ್ಯಾದಿ ದೈಹಿಕ ಶುಚಿತ್ವಕ್ಕೆ ಸಂಬಂಧಿಸಿದವು.

ಅದೆಲ್ಲ ಬಿಟ್ಟು ಕೇವಲ ಗಂಡಸರು ಮೇಲಿನುಡುಪುಗಳನ್ನು ಕಳಚುವುದೆಂದರೆ ಬ್ರಾಹ್ಮಣಿಕೆಯ ಸಂಕೇತವನ್ನು (ಜನಿವಾರ) ಪರೀಕ್ಷಿಸುವುದಲ್ಲದೆ ಇನ್ನೊಂದಲ್ಲ. ದೇವಳದ ಒಳಾಂಗಣದಲ್ಲಿ ಮಠದ ಖಯಾಲಿಯ ಉತ್ಪನ್ನಗಳ ಮಾರಾಟ ಮಳಿಗೆ ಇಟ್ಟಿರುವುದು ಬಿಟ್ಟರೆ ಸಾರ್ವಜನಿಕಕ್ಕೆ ದೇವಾಲಯ ಹೆಚ್ಚಿನೇನೂ ಸೌಕರ್ಯ ಕಲ್ಪಿಸಿದ್ದು ನನ್ನರಿವಿಗೆ ಬರಲಿಲ್ಲ. ಈ ದೇವರಿಗೆ, ಊರಿಗೆ ಸಹಜವಾಗಿ ಒದಗಿದ್ದ ಮುನ್ನಡೆಯನ್ನು ಧರ್ಮರಾಜಕೀಯದವರು ಏನೂ ಕೊಡುಗೆಯಿಲ್ಲದೆ, ಕೇವಲ ಸ್ವಕೀಯ ಲಾಭಕ್ಕಾಗಿ ಬಳಸಿಕೊಂಡಂತೆ ಕಾಣುವಾಗ ಔಟ್ ಸೋರ್ಸಿಂಗ್ ಹೀಗೂ ಇರಬಹುದಲ್ಲವೇ ಎಂಬ ಬೆರಗಷ್ಟೇ ಉಳಿಯಿತು. [ಶಾಲಾ ಮಕ್ಕಳಿಗೆ ಊಟ ಕೊಡುವ ಯೋಜನೆ, ಹಣ ಸರಕಾರದ್ದು. ಆದರೆ ಅದನ್ನು ಊರೂರಿನಲ್ಲಿ (ಸರಕಾರೀ ಅನುದಾನದೊಡನೆ) ಜ್ಯಾರಿಗೆ ತರುವ ವ್ಯವಸ್ಥೆ ಇಸ್ಕಾನಿನದು! ನಿನ್ನೆ ಮೊನ್ನೆ ಪತ್ರಿಕೆಯಲ್ಲಿ ನೋಡಿದೆ, ಬಳ್ಳಾರಿಯಲ್ಲಿ ಇಸ್ಕಾನ್ ಎಷ್ಟೋ ಕೋಟಿಯ ಭರ್ಜರಿ ಅಡುಗೆಮನೆಯನ್ನೇ ಕಟ್ಟಿಸುತ್ತಿದ್ದಾರಂತೆ!] ಇಲ್ಲಿ ಊರಿನ, ಅಲ್ಲಲ್ಲ – ಕ್ಷೇತ್ರದ ಅಗಲ ಕಿರಿದಾದ ಕೊಳಕು ಗಲ್ಲಿಗಳಿಗೆ ಬಿಡಿ, ಮುಖ್ಯ ದೇವಳದ ಜಿಡ್ಡು ಹಿಡಿದ ಗೋಡೆಗಳಿಗೂ ವ್ಯವಸ್ಥೆ ಇಲ್ಲದ ಈ ಆಡಳಿತಕ್ಕೆ ಹೇಸಿ, ಅಲ್ಲಿ ಒಂದು ಬೊಟ್ಟು ನೀರೂ ಮುಟ್ಟದೆ ಓಡಿದೆವು.

(ಮುಂದಿನವಾರ ಎರಡನೇ ಭಾಗ – ದಾಂಡೇಲಿ-ಅಣಶಿ ವ್ಯಾಘ್ರಧಾಮ ಅಥವಾ ಕುಳಗಿ ಪ್ರಕೃತಿ ಶಿಕ್ಷಣ ಕೇಂದ್ರ)