(ಕುಮಾರಪರ್ವತದ ಸುತ್ತ ಮುತ್ತ ಭಾಗ ಒಂಬತ್ತು)

ಅಡ್ಡಹೊಳೆ ಸಂಕಕ್ಕೂ ನೂರಡಿ ಮೊದಲು ಬಲಬದಿಯ ತಟ್ಟೊಂದರಲ್ಲಿ ಇಲಾಖೆ ವನ್ಯ-ಸಸಿಮಡಿಯನ್ನು ನಡೆಸತೊಡಗಿರುವುದನ್ನು ಹಿಂದೆಯೇ ಹೇಳಿದ್ದೇನೆ. ಪ್ರಾಕೃತಿಕವಾಗಿಯೇ ನಡೆದುಹೋಗುವ ಬೀಜಪ್ರಸಾರ, ಸಸ್ಯ ಪುನರುತ್ಪಾದನೆಯನ್ನು ಮೀರುವ ಯೋಜನೆ ಇವರದು. ಮಣ್ಣು ಅಥವಾ ನೆಲ ಹದಗೊಳಿಸಿ, ಬಿಸಿಲಮರೆ ನಿಲ್ಲಿಸಿ, ತೊಟ್ಟೆಕೊಟ್ಟಣ ತುಂಬಿ, ವರ್ಗೀಕೃತ ವಿಭಾಗ ಮಾಡುವುದು. ಮತ್ತೆ ಕಾಡಿನ ವಿವಿಧೆಡೆಗಳಿಂದ ವಿವಿಧ ಋತುಗಳಲ್ಲಿ ಬೀಜ, ಗೆಲ್ಲಿನ ತುಂಡುಗಳನ್ನು ಒಟ್ಟುಮಾಡಿ, ಹದಬರಿಸಿ, ಸಕಾಲಕ್ಕೆ ಬಲು ದೊಡ್ಡ ಸಂಖ್ಯೆಯಲ್ಲಿ ಸಸಿ ತಯಾರಿಡುವುದು ಬಹಳ ಮುಖ್ಯ ಕೆಲಸವೇ. ಆದರೆ ಹಾಗೆ ಮಾಡುವಾಗ ಆರಿಸಿಕೊಳ್ಳುವ ಸಸ್ಯವರ್ಗ, ಅದಕ್ಕೂ ಮುಖ್ಯವಾಗಿ ಅವುಗಳ ವಿತರಣೆಯಲ್ಲಿನ ಆಶಯಗಳು ‘ವನರಹಿತ’ ಜಾಗಗಳಲ್ಲಿ ಹಸುರೀಕರಣಕ್ಕೆ ವ್ಯತಿರಿಕ್ತವಾಗಿರುವುದೇ ಹೆಚ್ಚು! ಆ ಕುರಿತು ಮೊದಲು ಮೂರು ಅಪಗತೆಗಳು.

ವಣಮಹೋಸ್ತವ: ಬಿಸಿಲೆ ಸಸ್ಯವಾಟಿಯ ಒಳ್ಳೇ ಗಿಡಗಳೆಲ್ಲ ಟಿಂಬಕ್ಟೂರಿನ ವನಮಹೋತ್ಸವದಲ್ಲಿ ಭಾಗಿಯಾಗಲು ಬ್ಯಾಂಡು ಗರ್ನಾಲ್ ಒಟ್ಟಿಗೆ ಮೆರವಣಿಸಿದವಂತೆ. ಚೋಮ, ಕಾಳರು ಸೇರಿ ಅವಕ್ಕೆಲ್ಲಾ ಸೂಕ್ತ ಹೊಂಡಾ ತೋಡಿ, ಹಂಚಿ ಕೂರೋ ವ್ಯವಸ್ಥೆ ಚೆನ್ನಾಗಿಯೇ ಮಾಡಿದರಂತೆ. ಅತಿಥಿ ಗಣ್ಯರು ತಮ್ಮ ಬಿಡುವಿರದ ಕಾರ್ಯಕ್ರಮಗಳ ಹೊಂದಾಣಿಕೆಯಲ್ಲಿ, ಪ್ರಾತಿನಿಧಿಕವಾಗಿ ಒಂದು ಸಸಿಗೆ, ಹೊಸಾ ಮೂಗಿರುವ ಬಕೆಟ್ಟಿನಲ್ಲಿ ಬಾಯಾರಿಕೆ ಕೊಟ್ಟು, ಆಶೀರ್ವಚನ ಕೊಡಲು ವೇದಿಕೆಯತ್ತ ಧಾವಿಸಿದರಂತೆ. ಸಮಾರಂಭಕ್ಕೆ ಕಳೆಗಟ್ಟಿಸುವ ಅಭಿಮಾನಿಗಳು ಅಷ್ಟೇ ಅವಸರಿಸಿದಾಗ ತೊತ್ತಳ ತುಳಿತದಲ್ಲಿ ಸಸಿಗಳೆಲ್ಲಾ ಮರಣಿಸಿದವಂತೆ. ಅಭಿಮಾನಿಗಳಲ್ಲಿ ಸ್ವಲ್ಪ ಸಂವೇದನೆ ಇರುವವರು “ಇಲ್ಲಾ ಬರೋ ವರ್ಷ ವಣಮಹೋಸ್ತವ ಆಚರಿಸಲು ಖಾಲೀ ಜಾಗ ಬೇಕಲ್ಲಾ” ಎಂದು ಸಮಾಧಾನಪಟ್ಟುಕೊಂಡರಂತೆ. ಎಲ್ಲ ಅತ್ತ ಹೋದದ್ದೇ ಮೂಗುಬಕೆಟ್ಟಿಗೆ ಕೈಕೊಟ್ಟವನು “ಇದು ಬರೋ ವರ್ಷಕ್ಕೆ ಎಂಗೂ ಹಳತಾಯ್ತದೆ ಬುಡೀ” ಅಂತ ನಡೀತ್ದ್ನಂತೆ. ಅಂಗಳದ ಅಂಚಿನಲ್ಲಿ ಹರಿದೆಸೆದ ತೊಟ್ಟೆ ಬರುವ ವರ್ಷಗಳ ಸಮಾರಂಭಗಳ ವೀಕ್ಷಣೆಗೆ ಇಳಿಯೆಣಿಕೆ ಸುರುಹಚ್ಚಿತಂತೆ – “೩೬೪, ೩೬೩, ೩೬೨. . .”

ಹಳ್ಳ ಹಿಡಿದ ಕೋಟಿ: ‘ಎತ್ತಿನ ಹಳ್ಳದ ತಿರುವಿಗೆ ಎರಡು ಕೋಟಿ ಬಿಡುಗಡೆ’ ನಮಗೆ ಬೇಸರ ಹೆಚ್ಚಿಸಿದ ವಾರ್ತೆ. ಆದರೂ ಸ್ಥಳ ನೋಡಿಬಿಡೋಣವೆಂದು ಧಾವಿಸಿದವರು ಮೂರು ನಾಲ್ಕು ಸಣ್ಣಪುಟ್ಟ ಕಣಿವೆಯಲ್ಲಿ ಹಣುಕಿ, ಶಿಖರ ಸಾಲು ಅಲೆದಿದ್ದೆವು. ಋತುಮಾನಕ್ಕೆ ತಕ್ಕಂತೆ ಭೋರ್ಗಾಳಿ, ಬೀಸುಮಳೆ, ಉರಿಬಿಸಿಲು, ಮೂಳೆಗಿಳಿವ ಚಳಿ ಕಾಡುವ ನೆಲ – ಅಜ್ಞಾನಿಗಳ ಲೆಕ್ಕಕ್ಕೆ ಏನೂ ಬೆಳೆಯದ ಬೀಳುನೆಲ, ಬೋಳುಮಂಡೆ! ಆ ನೆಲಕ್ಕೆ ಬಿಗಿ ಕವಚ ಕಟ್ಟಿದಂತಿದ್ದ ಹುಲ್ಲಿನ ಹಸುರಿನಲ್ಲಿ ಅದೆಷ್ಟು ಬಗೆ. ಕುರಿತು ನೋಡಿದರೆ ಅದರೆಡೆಯಲ್ಲಿ ಅಷ್ಟೇ ಆಪ್ತವಾಗಿ ನೆಲಕಚ್ಚಿ, ತಲೆದೂಗುವ ಕುರುಚಲು ಗಿಡಗಳು, ಅವುಗಳ ಗಾಢ ವರ್ಣವೈವಿಧ್ಯದ ಕುಸುಮ ಕಲೆ, ಮತ್ತವುಗಳ ಪ್ರತಿ ಪಾತ್ರಕ್ಕೆ ತಕ್ಕಂತೆ ಗಾತ್ರದಲ್ಲಿ ಹೊಕ್ಕುಹೊರಡುವ ಮಧುವಣಿಗರೂ ಅಷ್ಟೇ ವಿಧವಿಧ. ಗಾಳಿ ತೂರಿದ ಹುಡಿಯೋ ಪರ್ವತಮ್ಮನ ಜಾತ್ರೆಗೆ ಸಾಲುಹಿಡಿದ ಭಕ್ತರೋ ಬೇಟದಾಟದಲ್ಲಿ ದಣಿವರಿಯದ ಜೋಡಿಗಳೋ ಒಟ್ಟಾರೆ ಹೇಳಿ ಮುಗಿಯದು ಚಿಟ್ಟೆಗಳ ಕಥೆ. ಆ ಸಣ್ಣ ಓಡಾಟದಲ್ಲೂ ಎರಡು ವಿಧದ ಸೀತೆ ಹೂ (Orchid) ಬರಿದೇ ಕಂಗೊಳಿಸಿದ್ದಿರಬಹುದು, ಆದರೆ ಬಗೆತರದ ಕಾಡ ಹಣ್ಣುಗಳು ಅನುಭವಕ್ಕೂ ದಕ್ಕಿತ್ತು. “ಆಆಆ, ನನ್ನ ನಾಲಗೆ ನೋಡಿ, ಈ ಬಣ್ಣ ಅಲ್ಲಿ ತಿಂದ ಹಣ್ಣಿದ್ದೇ” ಎಂದು ಇಂದೂ ಹೇಳುವಷ್ಟು ನೇರಳೆ ಹಣ್ಣು ಕಬಳಿಸಿದ್ದೇವೆ. ಲಕ್ಷ್ಯ ಮರೆತೆವೇ ಎಂದು ಭಾವಿಸಬೇಡಿ, ಸಂಜೆಗಾಗುವಾಗ ‘ನದಿಮೂಲ’ವೇನೋ ಕಂಡುಕೊಂಡೆವು.

ಮತ್ತೆ ಚಾರಣ ಎಷ್ಟು ರಮ್ಯ ಎಂದೂ ಭ್ರಮಿಸಬೇಡಿ. ಒಂದೆಡೆ ಅರಣ್ಯ ಇಲಾಖೆ ಹಸುರೀಕರಣದ ಉತ್ಸಾಹದಲ್ಲಿ ತೋಡಿದ್ದ ಗುಂಡಿ ನಿಜಕ್ಕೂ ಆಳವಿದ್ದು ಒಬ್ಬರ ಕಾಲು ಮುರಿಯದಿದ್ದದ್ದು ಅಜ್ಜಿ ಪುಣ್ಯ. ಇನ್ನೊಂದೆಡೆ ಹಾಗೆ ನೆಟ್ಟ ಸಸಿಗಳಿಗೆ ಅಲೆಮಾರೀ ಜಾನುವಾರುಗಳಿಂದ ರಕ್ಷಣೆ ಕಲ್ಪಿಸಲು ಎಳೆದು ಗೋಜಲಾಗಿದ್ದ ಮುಳ್ಳತಂತಿ ಕಾಲರಾಯನ ಮರೆಸಿನಲ್ಲಿ ನಮಗೆ ತೊಡರಿಕೊಂಡಿತ್ತು. ನಾವೇನೋ ಪ್ರಥಮ ಚಿಕಿತ್ಸೆ, ಊರಿಗೆ ತಲಪಿದ್ದೇ ಇಂಜೆಕ್ಷನ್ ಮಾಡಿಸಿಕೊಂಡೆವು. ಆದರೆ ತಿಂಗಳ ಹಿಂದೆ ಅಲ್ಲಿನ ರೆಸಾರ್ಟ್ ಒಂದರ ಅಂಗಳಕ್ಕೆ ಬಂದಿದ್ದ ಕಾಡಾನೆಯ ಪಾದದ ಊತಕ್ಕೆ ಮದ್ದು ಮಾಡಿದವರುಂಟೇ? ರೆಸಾರ್ಟಿನ ಭೂತದಂತ ನಾಯಿ ಬೆನ್ನಟ್ಟಿದಾಗ ಇದೇ ತುಕ್ಕುಹಿಡಿದ ಮುಳ್ಳತಂತಿಗೆ ಸಿಕ್ಕು ಮೂಗು ಹರಿದ ಕಡವೆಗೆ ಮುದ್ದು ಕೊಟ್ಟವರುಂಟೇ? ಅದೆಲ್ಲಾ ಇರಲಿ, ಇನ್ನೂ ಮುಖ್ಯವಾಗಿ ಹೇಳಬೇಕಾದ ವಿಷಯ ಇಲ್ಲಿನ ಎಲ್ಲಾ ಗುಂಡಿಗಳಲ್ಲಿ ಸಮಾಧಿಸ್ಥವಾದ ಸಸಿಗಳು ನಮ್ಮ ಅಡ್ಡೊಳೆ ಸಸ್ಯವಾಟಿಯವು! (ರೆಸಾರ್ಟ್ ಮುಖ್ಯಸ್ಥ ನಗಾಡುತ್ತಿದ್ದರು “ಹೊಂಡಕ್ಕಿಷ್ಟು, ಸಾಗಣೆಗಿಷ್ಟು, ಮುಳ್ಳತಂತಿಗಿಷ್ಟು ಎನ್ನುವಲ್ಲೇ ರಾಮ, ಕೃಷ್ಣ ಜಪಿಸಿದವರಿಗೆ ಗಿಡದ್ದೊಂದು ಲೆಕ್ಕವೇನ್ರೀ?”)

ಚಂದ್ರನ ಹಸುರೀಕರಣ: ಅದೊಂದು ವನ್ಯ ಶಿಬಿರ. ಬೆಳ್ಳಾಂಬೆಳಿಗ್ಗೆ ಹಕ್ಕಿಯುಲಿಯ ಬೆನ್ನು ಹಿಡಿದ ನಾವು, ಚಾರಣ ಮಿತ್ರರಿಬ್ಬರು ದಾರಿಯ ಇನ್ನೊಂದು ಬದಿಯ ಹಡ್ಲನ್ನು ಬಹಳ ಎಚ್ಚರದಿಂದ ದಾಟಿದ್ದೆವು. ಸಾಮಾನ್ಯವಾಗಿ ಯಾವುದೇ ಜನ ನುಗ್ಗದ ಕಾಡೆಂದು ಸಂಭ್ರಮಿಸುವಾಗ ಮಾಸಿಹೋದ ಹೊಂಡ ಸರಣಿ, ಹರಕಲು ತೊಟ್ಟೆಗಳೂ ಕಾಣಿಸಿತು. ದೊಡ್ಡ ಬೋರ್ಡಿನ ಪುಟ್ಟ ಅವಶೇಷ ಘನ ಸರಕಾರದ ಬೆತ್ತ ಅಭಿವೃದ್ಧಿಯ ಕನಸಿನಲ್ಲೇ ಸತ್ತು ಒರಗಿತ್ತು. ಬೋರ್ಡು ಜೀವಿಸಿದ್ದ ಕಾಲದಲ್ಲಿ ಸುಲಭಗಮ್ಯವಲ್ಲದ ಹಡ್ಲಿನ ಆಚಿನ ದಾರಿಯಲ್ಲಿ ಆರಾಮ ಕಾರಿನಲ್ಲಿ ಕುಳಿತು, ದೂರದರ್ಶಕದಲ್ಲೇ ತನಿಖೆ ನಡೆಸಿರಬಹುದಾದ ಎಷ್ಟೂ ಮೇಲಧಿಕಾರಿಗಳಿಗೆ ಇದು ಮಂಕುಬೂದಿ ಎರಚಿರಬಹುದು! ನನಗೆ ಮಾಹಿತಿ ಹಕ್ಕಿನಲ್ಲಿ ಕೇಳುವುದಿದೆ – ಚಂದ್ರನ ಕುಳಿಗಳಿಗೆ ಹಸುರೀಕರಣದ ಯೋಜನೆಯಲ್ಲಿ ಬಿಲ್ಲಾಗಿದೆಯೇ? ಅದಕ್ಕೆ ಅಡ್ಡೊಳೆಯಲ್ಲಿ ಸಸಿಮಡಿ ಸಜ್ಜಾಗಿದೆಯೇ?

ಖೋಲೀ ಖಾಲೀ ಹೈ!: ನಾಗರಿಕ ವಲಯಗಳಲ್ಲಿ ಸಾಮಾನ್ಯವಾಗಿ ಯಾವುದೇ ಖಾಲೀ ಜಾಗಗಳಲ್ಲಿ ಯಾವುದೇ ಕಟ್ಟಡ ಬರುವುದಿದ್ದರೂ ತತ್ಕಾಲೀನ ಒಂದು ಶೆಡ್ಡು ಕಟ್ಟಿಕೊಳ್ಳುವುದು ನೋಡಿದ್ದೇವೆ. ಆದರೆ ಅಡ್ಡೊಳೆಗೆ ಹೊಸ ಸಂಕ ಕಟ್ಟಿದವರು ಸೇತುವೆಯ ರಚನೆಗೆ ಹಿತ್ತಿಲ ಗೋಡೆ ಸೇರಿಹೋಗುವಂತೆಯೇ ಭದ್ರವಾದ ಕೋಣೆಯನ್ನೇ ಕಟ್ಟಿದ್ದರು. ಆದರೆ ಯಾಕೋ ಏನೋ ಅದನ್ನು ಎಲ್ಲ ಮುಗಿದ ಮೇಲೆ ಇತರೆಡೆಗಳಂತೆ ಕೆಡವಿ ಚೊಕ್ಕ ಮಾಡದೇ ಉಳಿಸಿಬಿಟ್ಟಿದ್ದಾರೆ. ೨೪ಗಂಟೇ ಗುಣಿಸು ೭ದಿನಾ ಗುಣಿಸು ೫೨ವಾರಾ ಪರಿಶುದ್ಧ ನೀರು ಉಚಿತ. ಅದು ಸದ್ಯ ಹಾದಿಹೋಕರ ತತ್ಕಾಲೀನ ಗುಪ್ತ ಚಟುವಟಿಕೆಗಳಿಗೆ ಒಡ್ಡಿಕೊಳ್ಳುತ್ತಾ ಮತ್ತವರ ಕೊಳೆ ಸೇರಿಸಿಕೊಳ್ಳುತ್ತಾ ಇದೆ. ನಗರದೊಳಗೆ ಎಲ್ಲೂ ಅಲ್ಲದಲ್ಲಿ ಒಂದು ಕಸತೊಟ್ಟಿ ಇಟ್ಟರೆ ಪರಿಸರ ಹೆಚ್ಚು ಶುದ್ಧವಾಗುವ ಬದಲು ಇನ್ನೊಂದೇ ಆಗುವ ಹಾಗೆ. ಅದರ ಬದಲು ನಗರದಲ್ಲಿ ವಸತಿ ಕಷ್ಟವಾದವರು ಅಡ್ಡೊಳೆ ಸಂಕದ ಉಚಿತ ಕೋಣೆ ಅವಶ್ಯ ನೋಡಬಹುದು! ಸಂಪರ್ಕಿಸಿರಿ : ಅರಣ್ಯ ಇಲಾಖೆ, ಹಾಸನ ಜಿಲ್ಲೆ.

ಅಡ್ಡೊಳೆ ಒಂದ್ಕೋಣೆ ರೆಸಾರ್ಟ್: ಸೇತುವೆಯ ಕೋಣೆ ಲೋ ಬಜೆಟ್ಟಿನದು. ಹೈ ಎಂಡಿಗೆ ಸ್ವತಃ ಅರಣ್ಯ ಇಲಾಖೆಯೇ ಇಲ್ಲೇ ಪಕ್ಕದಲ್ಲಿ ವ್ಯವಸ್ಥೆ ಮಾಡಿದೆ! ಸಾರ್ವಜನಿಕವಿತ್ತದ ಅಪವ್ಯಯಕ್ಕೆ ಮತ್ತು ವನ್ಯದ ಅವಹೇಳನಕ್ಕೆ ಅರಣ್ಯ ಇಲಾಖೆಯೂ ಇಲ್ಲೇ ಕೈಗೂಡಿಸಿದ್ದನ್ನು ಇನ್ನೂ ದೊಡ್ಡಕ್ಕೆ ನೋಡಬಹುದು. ಪ್ರಜಾಪ್ರಭುತ್ವದ ಅಣಕವಾಗಿ ‘ಆಳಿದ ಮಹಾರಾಜರ’ ಎಲ್ಲಾ ಅಥವಾ ಒಂದು ಕೈಮಿಗಿಲು ಎನ್ನುವ ಖಯಾಲಿಗಳನ್ನು ಇಂದು ಐದು ವರ್ಷಕ್ಕೂ ಬಾಳ್ತನ ಬರದ ನಮ್ಮ ಜನಪ್ರತಿನಿಧಿಗಳು ಪ್ರದರ್ಶಿಸುವುದು ದಿನೇ ದಿನೇ ಹೆಚ್ಚಾಗುತ್ತಿದೆ. ಅವರದೇ ಸಂಕ್ಷಿಪ್ತ ರೂಪವನ್ನು ನಾವು ಇಲಾಖೆಗಳಲ್ಲೂ ಕಾಣುತ್ತೇವೆ. ಆ ಕೆಲವು ಅಧಿಕಾರಿಗಳು (ಒಳ್ಳೆಯವರು ಬಹುಸಂಖ್ಯೆಯಲ್ಲೇ ಇದ್ದಾರೆ, ಆದರೆ ದಿಟ್ಟವಾಗಿ ಎದುರು ಬರುವುದಿಲ್ಲ!) ತಮ್ಮದು ಜವಾಬ್ದಾರಿ ಮಾತ್ರ ಎಂಬುದನ್ನು ಮರೆತು ಸಾರ್ವಭೌಮತ್ವ ಆರೋಪಿಸಿಕೊಳ್ಳುತ್ತಾರೆ. ಅನ್ಯರ ಸದುದ್ದೇಶ ಸ್ಪಷ್ಟವಾದರೂ ನಿಯಮ ದೊಡ್ಡದೆಂದೂ (ಆಗುಂಬೆಯಲ್ಲಿ ರೊಮುಲಸ್ ವಿಟೇಕರ್ ಮೇಲೆ ಹರಿಹಾಯ್ದ ಪತ್ರಿಕಾ ವರದಿ ನೋಡಿ) ತಮ್ಮೆಲ್ಲಾ ಚಟುವಟಿಕೆಗಳು ಎಷ್ಟು ತಪ್ಪಾದರೂ ಪ್ರಶ್ನಾತೀತವೆಂದೂ ದುರಾಗ್ರಹ ಬೆಳೆಸಿಕೊಂಡದ್ದಕ್ಕೆ ಒಂದು ಸಣ್ಣ ಉದಾಹರಣೆ ಅಡ್ಡೊಳೆ ರೆಸಾರ್ಟ್! (ಹಾಗೊಂದು ಬೋರ್ಡ್ ಮಾತ್ರ ಇಲ್ಲ)

ಅಡ್ಡೊಳೆ ಸಂಕದ ಒತ್ತಿನಲ್ಲೇ ಸಪುರ ಮೆಟ್ಟಿಲ ಸಾಲೊಂದು ಕಡಿದಾದ ಗುಡ್ಡೆಯನ್ನು ಏರುತ್ತದೆ. ಭಾರೀ ಮರ, ಕತ್ತಲೊತ್ತುವ ಪೊದರುಗಳ ನಡುವೆ ತಿರುವೇರಿನಲ್ಲಿ ಅರವತ್ತೆಪ್ಪತ್ತು ಮೆಟ್ಟಿಲಕೊನೆಯಲ್ಲಿ ಗುಡ್ಡೆಯಲ್ಲಿ ತಟ್ಟು ಮಾಡಿ ಎರಡು ಮಾಳಿಗೆಯ ತಾರಸಿ ಕಟ್ಟಡವನ್ನು ನಿಲ್ಲಿಸಿದ್ದಾರೆ. ವನ್ಯ ಇಲಾಖೆಯ ಮಚಾನಿನಂತೆ ಕೆಳಗೆ ನಾಲ್ಕು ಪಿಲ್ಲರ್ ಮತ್ತು ಮೇಲೇರಲು ಮೆಟ್ಟಿಲ ಸಾಲು ಮಾತ್ರ. ಮೊದಲ ಮಹಡಿಯಲ್ಲಿ ಸುತ್ತ ಬಾಲ್ಕನಿಯಾಗಿ ಒಳಗೆ ಒಂದು ವಾಸಯೋಗ್ಯ ಹಾಗೂ ಅದಕ್ಕೆ ಸೇರಿದಂತೆ ಪುಟ್ಟ ‘ಮರ್ಯಾದಸ್ಥರ’ ಕೋಣೆ (ನಲ್ಲಿ ಸಂಪರ್ಕ ಸಹಿತ ವಾಶ್ ಬೇಸಿನ್, ವೆಸ್ಟರ್ನ್ ಕಮೋಡ್ ಈಗಲೂ ಇದೆ) ಮಾತ್ರ ಇದೆ. ಇಲ್ಲಿಗೆ ವಿದ್ಯುತ್ ಸಂಪರ್ಕ ಅಸಾಧ್ಯವಾದ್ದರಿಂದ ವಯರು ಬಲ್ಬು, ಫ್ಯಾನ್, ಎ.ಸಿ ಕಾಣಲಿಲ್ಲ! ಮೆಟ್ಟಿಲ ಸಾಲು ಮತ್ತೂ ಒಂದು ಮಹಡಿಗೇರುತ್ತದೆ. ಅದು ಸ್ಪಷ್ಟ ನಾಲ್ಕೂ ಗೋಡೆ ಇಲ್ಲದ, ಆದರೆ ಪಕ್ಕಾ ತಾರಸಿಯಿರುವ ಕೇವಲ ಬಾಲ್ಕನಿ. ಮಹಾಸ್ವಾಮಿಗಳಿಗೆ ಆರಾಮಾಸನದಲ್ಲಿ ಕುಳಿತು ಉಪ್ಪೇರಿದ ಗೇರುಬೀಜ ಮೆಲ್ಲುತ್ತಾ ಪಾನೀಯ ಸ್ವೀಕರಿಸಲು ಹೇಳಿ ಮಾಡಿಸಿದ ಸ್ಥಳ. ಒಂದೇ ಅವಗುಣ – ಸ್ನಾನಕ್ಕೆ ಮಾತ್ರ ನೆಲಕ್ಕೆ ಬಂದು ಪ್ರತ್ಯೇಕ ಕಟ್ಟಿರುವ ಬಚ್ಚಲನ್ನೇ ಉಪಯೋಗಿಸಬೇಕಾಗುತ್ತದೆ. ಆದರೆ ಸಹವಾಸಿಗಳೊಡನೆ ಸ್ಪರ್ಧೆ ಬಾರದಂತೆ ಬಚ್ಚಲು ಡಬ್ಬಲ್ ಮಾಡಿದ್ದಾರೆ. ಒಳಗೆ ಮೀಯದೇ ಹೊರಗೆ ಮೀಯುವವರ ಕಂಡು ಬೆರಗಾಗಿ ನಗುತ್ತಿದ್ದ ಪುರಂದರ ವಿಠಲ!

ನನ್ನ ಒಂದು ತೋರ ಅಂದಾಜಿನ ಪ್ರಕಾರ ಇದು ಎದುರು ದಂಡೆಯ ಸಸ್ಯವಾಟಿಯ ‘ಮೇಲುಸ್ತುವಾರಿಯ’ ವೈಭವಿರಬಹುದು. ಅದನ್ನು ಸಮರ್ಥಿಸುವಂತೆ ಮೊದಲು ಇಲ್ಲಿಂದ ನೂರಿನ್ನೂರು ಮೀಟರ್ ಉದ್ದಕ್ಕೆ ಪ್ರತ್ಯೇಕ ಆರಿಂಚಿನ ಗ್ಯಾಲ್ವನೈಸ್ಡ್ ಕೊಳವೆ ಸಾಲಿನ ವ್ಯವಸ್ಥೆ ಅಡ್ಡೊಳೆಯನ್ನೂ ಅಡ್ಡ ಹೊಡೆದು ಸಸ್ಯವಾಟಿ ತಲಪಿದ್ದು ನೋಡಿದ್ದೇನೆ. ಬೆಟ್ಟದಲ್ಲಿ ಮೇಲೆಲ್ಲೋ ತೊರೆಯೊಂದಕ್ಕೆ ಕೊಳವೆ ಹಚ್ಚಿ ತಂದದ್ದರಿಂದ ರೆಸಾರ್ಟ್‌ನಲ್ಲೂ ಸಸ್ಯವಾಟಿಗೆ ರವಾನಿಸಲೂ ನೀರು ನಿರಂತರ. ಆದರೆ ಯೋಜನೆಯಲ್ಲಿ, ಕಡತಗಳಲ್ಲಿ ನೀರಿಗಾಗಿ ಬೋರು, ಬಾವಿ, ಪಂಪು, ಸಂಪು, ಡಂಪು ವೆಚ್ಚವಾಗಿದ್ದರೆ ಆಶ್ಚರ್ಯಪಡುವಂತದ್ದೇನೂ ಇಲ್ಲ. ಇನ್ನೂ ತಮಾಶೆ ಎಂದರೆ ಸಸ್ಯವಾಟಿ ಎಂದೂ ಬತ್ತದ ಅಡ್ಡೊಳೆ ದಂಡೆಯಲ್ಲೇ ಇದೆ. ಇದರಲ್ಲಿ ಉಳಿದಿರಬಹುದಾದ ‘ಮಹಾರಾಜ’ ನಡೆಸಿದ ದರ್ಬಾರಾದರೂ ಎಷ್ಟು ದಿನದ್ದೋ ಮತ್ತು ಎಂಥದ್ದೋ ಎಂದೆಲ್ಲಾ ಊಹಾಪೋಹಗಳನ್ನು ಬೆಳೆಸಲು ನಾನು ಹೇಸುತ್ತೇನೆ. ಇಲ್ಲಿ ಮನುಷ್ಯವಾಸ ಇದ್ದದ್ದು ಎಂದೂ ನನ್ನ/ನಮ್ಮವರ ಗಮನಕ್ಕೆ ಬಂದಿಲ್ಲ. ಆದರೆ ಈಗ ಕೆಲವು ವರ್ಷಗಳಿಂದೀಚೆಗೆ ಇದು ಹೇಳಿ ಕೇಳುವವರಿಲ್ಲದೆ ಕ್ರಮವಾಗಿ ಶಿಥಿಲವಾಗುತಿರುವುದಂತೂ ಸ್ಪಷ್ಟ. ಹಿಂದೆ ಬೀಗ ಜಡಿದ ಬಾಗಿಲುಗಳ ಒಳಗೆ ಸಸ್ಯವಾಟಿಯ ಅಗತ್ಯಕ್ಕೆ ಒದಗುವ ಹತ್ಯಾರುಗಳ ಸಂಗ್ರಹವಿರಬಹುದು, ಕೂಲಿಗಳಿಗೆ ಮಳೆಗಾಲದ ವಿಪರೀತದಲ್ಲಿ ಕನಿಷ್ಠ ವಸತಿ ವ್ಯವಸ್ಥೆ ಇರಬಹುದು ಎಂದೆಲ್ಲಾ ತಪ್ಪಂದಾಜಿಸಿದ್ದೆ. ಆದರೆ ಮೊನ್ನೆ ನೋಡಿದಾಗ, ಸುಂದರ ಬಾಲ್ಕನಿಯ ಕಟಾಂಜನಗಳೆಲ್ಲಾ ಮುಕ್ಕಾಗಿ ನೇಲುತ್ತಿವೆ. ಗಾಳಿ ಮಳೆಗೆ ಬಾಗಿಲು ಹಾರುಹೊಡೆದಿದೆ. ಕಿಟಕಿ ಕನ್ನಡಿ ಹುಡಿಯಾಗಿ ಒಂದೆರಡು ಪಡಿಯೇ ಕಳಚಿಹೋಗಿದೆ. ವೃಥಾ ತುಕ್ಕು ಸಂಗ್ರಹಿಸುವ ಗ್ಯಾಲ್ವನೈಸ್ಡ್ ಕೊಳವೆ ಸಾಲನ್ನು ಯಾರೋ ಸದುಪಯೋಗಪಡಿಸಲು (ಕದ್ದು?) ಒಯ್ದಂತಿದೆ. ಅಂಗಳದಲ್ಲಿ ಬಹುಕಾಲ ನಲ್ಲಿ ಮೂತಿಯಿಂದ ಚೊಳಚೊಳಾಯಿಸುತ್ತಿದ್ದ ಕಾಡುತೊರೆಯ ನೀರೂ ಪ್ರಾಕೃತಿಕ ನ್ಯಾಯದಲ್ಲಿ ನಿಂತು ಹೋಗಿದೆ. ಬಚ್ಚಲಿನಲ್ಲಿ ಇದ್ದಿರಬಹುದಾದ ಕಡಾಯಗಳು ಮಾಯವಾಗಿವೆ. ಈ ಕಟ್ಟಡದ ಕಡತಗಳು ಇಂದು ಶಾಂತವಾಗಿರಲೇ ಬೇಕು. ಸರ್ವೇ ಜನಾಃ ಸುಖಿನೋ ಭವಂತು.

ಕಳ್ಳರಗಂಡಿ: ನಮ್ಮ ಅಶೋಕವನದ ಪಶ್ಚಿಮ ಗಡಿ ರೇಖೆಯುದ್ದಕ್ಕೆ ಇತಿಹಾಸ ಕಾಲದ ಗಾಡಿ ದಾರಿಯ ಅವಶೇಷವಿದೆ. ಅದು ಕೆಳಗಿನಿಂದ ಬಂದು ಇಂದಿನ ಡಾಮರು ದಾರಿಯನ್ನು ಅಡ್ಡ ಹಾಯುವ ಮೊದಲೊಂದು ಭಾರೀ ಮರ ಪೊದರುಗಳ ಮರೆಯಿದೆ. ಕರಿಯಣ್ಣ ಆ ಜಾಗವನ್ನು ಕಳ್ಳರಗಂಡಿ ಎನ್ನುತ್ತಿದ್ದ. ರಾಜರ ಕಾಲದಲ್ಲಿ ಘಟ್ಟ ಹಾಯುವ ವಿಶೇಷ ದಿನಗಳ ಕಾವಲು ಕಟ್ಟೆಯಿದ್ದಿರಬೇಕು. ಆದರೆ ಉಳಿದ ದಿನಗಳ ಬಡಯಾತ್ರಿಗಳು, ಚಿಲ್ಲರೆ ಸರಕು ಸಾಗಣೆದಾರರನ್ನು ಇಲ್ಲಿ ಕಳ್ಳರು ಅಟಕಾಯಿಸುತ್ತಿದ್ದರಂತೆ. ಕಾವಲಕಟ್ಟೇ ಅನ್ನಿಸಿಕೊಳ್ಳಬಹುದಾದ ಸ್ಥಳ ಕಳ್ಳರಗಂಡಿಯಾಗಿ ಹೋಯ್ತು. ಅನ್ವರ್ಥನಾಮದ ಹಿಂದಿನ ಕರಿಯಣ್ಣ ಪುರಾಣದ ಒಂದು ಆಖ್ಯಾನ ಹೀಗಿದೆ. ಘಟ್ಟ ಇಳಿದ ಮುದುಕನೊಬ್ಬ ಕ್ಷೇತ್ರದಲ್ಲಿ ಚಿನ್ನದ ನಾಣ್ಯಗಳನ್ನು ದಾನ ಪಡೆದನಂತೆ. ಆತ ವಾಪಾಸು ಹೊರಟಾಗ ತಲೆಯೋಡಿಸಿ ಒಂದು ವಾಟೆಗಿಡ ಕಡಿದುಕೊಂಡನಂತೆ. ಮತ್ತದರ ನಡುವಿನ ಗಂಟುಗಳ ಒಳತಡೆ ಕಳೆದು, ನಾಣ್ಯಗಳನ್ನು ಉದ್ದಕ್ಕೆ ಒಳಗೆ ಬಿಟ್ಟುಕೊಂಡನಂತೆ. ಅಜ್ಜನ ಜಿಡ್ಡುಹಿಡಿದ ಮಡಿಪಂಚೆ, ಬೆವರಕಮಟಿನ ಉತ್ತರೀಯ, ಸೇರಕ್ಕಿ, ಹಣ್ಣು ಕಾಯಿ, ಊರೆಗೋಲು ಕಳ್ಳರಿಗೆ ಕೇವಲ ಹಾಸ್ಯದ ವಸ್ತು, ಬಿಟ್ಟುಕೊಟ್ಟರು. ಕಳ್ಳರ ದೃಷ್ಟಿ ತಪ್ಪಿದ ಸಂತೋಷದಲ್ಲಿ ಮುದಿಯ ಸಂಭ್ರಮಿಸಿ, ಕೋಲೂರಿ ನಡೆದನಂತೆ. ಆಗ ನಾಣ್ಯಗಳ ಝಣತ್ಕಾರ ಅವನ ಸಂತೋಷವನ್ನು ಅಲ್ಪಾಯು ಮಾಡಿತಂತೆ!

ಪೊದರುಗಳನ್ನು ಕೈಯಲ್ಲೇ ಸರಿಸುತ್ತ ಹಳೆ ದಾರಿ ಅನುಸರಿಸಿದರೆ ಅಲ್ಲೇ ಮರೆಯಲ್ಲಿ ಭಾರೀ ಬುರುಜಿನಂತೆ ಕಲ್ಲಗೋಡೆಯೇನೋ ಕಾಣಿಸುತ್ತದೆ. ಆದರೆ ಅವುಗಳೆಡೆಯಲ್ಲಿ ಬೇರು, ಬಳ್ಳಿಗಳು ಹೊಕ್ಕು, ಸುತ್ತಿಟ್ಟಿವೆ. ಮರಗಳಂತೂ ಕಿಸಗಾಲ ಹಾಕಿ ಗೋಡೆಯ ಮೇಲೇ ಸವಾರಿ ಕೂತಿವೆ. ಇದು ಶೈಥಿಲ್ಯವೇ ಗಟ್ಟಿಮಾಡಿದ್ದೇ ಎಂದು ಚರ್ಚೆಗಿಳಿಯುವ ಮೊದಲು ಕಣ್ಣು ಇನ್ನೂ ಹೆಚ್ಚು ತೆರೆದು ನೋಡಿ. ಇಲ್ಲಿ ದಾರಿಯ ಅವಶೇಷ ಕೊರಕಲು ಬಿದ್ದಿಲ್ಲ, ಸಮತಟ್ಟಾಗಿದೆ. ಸಣ್ಣ ಕುರುಚಲು ಮುರಿದು ಸಾಗುವುದಿದ್ದರೆ ಈಗಲೂ ಜೀಪು ಕಾರು ಸುಲಭವಾಗಿ ದಾಟುತ್ತವೆ. ಸ್ವಲ್ಪೇ ಸುತ್ತಿ ಸ್ವಲ್ಪ ಕೆಳಗೆ ಮತ್ತೊಮ್ಮೆ ಡಾಮರು ದಾರಿಗೇ ಬರುತ್ತದೆ. ಈ ಬಳಸಿನಲ್ಲಿ ದಾರಿಯ ನೆಲಗಟ್ಟಿನ ಅಂಚು ಕುಸಿಯದಂತೆ ಹಿಂದಿನವರು ಕೆಳಗಿನಿಂದ ಕಗ್ಗಲ್ಲಿನ ಗೋಡೆ ಕಟ್ಟಿಕೊಟ್ಟಿದ್ದಾರೆ.

ಪರಿಸರಪರ ಮೌಲ್ಯವೇ ಆದರೂ ಅಪಮೌಲ್ಯಗೊಳಿಸುವಲ್ಲಿ ನಮ್ಮ ಇಲಾಖೆಗಳು ಹಿಂದೆ ಬೀಳುವುದಿಲ್ಲ. ಅದಕ್ಕೆ ಇಲ್ಲೇ ಒಂದು ಉದಾಹರಣೆ. ಮಳೆನೀರು ಇಂಗಿಸುವುದು ಅಥವಾ ವನ್ಯ ಜೀವಿಗಳಿಗೆ ಅಕಾಲಕ್ಕೆ ನೀರು ದೊರಕುವಂತೆ ಮಾಡಲು ಒಟ್ಟಾರೆ ಮಳೆ ನೀರಿಗೆ ಕಟ್ಟೆ ಮಾಡುವುದು ಯೋಜನೆ; ಚೆಕ್ ಡ್ಯಾಂ! ಇದರ ಅನುಷ್ಠಾನ ಕಾಲದಲ್ಲಿ ನಾನು ಅನುದ್ದೇಶಿತವಾಗಿ ಇಲ್ಲಿ ಮೂಗು ತೂರಿದ್ದೆ (ನನ್ನ ಮೇಲೆ ವಿಶೇಷ ಪ್ರೀತಿಯವರು “ಮೀಸೆ ತೂರಿಸಿದ್ದು” ಎನ್ನುತ್ತಾರೆ, ಬಿಡಿ). ಇಲಾಖೆಯ ಟ್ರ್ಯಾಕ್ಟರ್ ಮತ್ತು ಕೂಲಿಯಾಳುಗಳು ಕಳ್ಳರಗಂಡಿ ದಾರಿಗೆ ನುಗ್ಗಿ ಅಂಚಿನ ಕಲ್ಲುಗಳನ್ನು ಸುಲಭದಲ್ಲಿ ಕಿತ್ತು ತುಂಬಿ ಒಯ್ಯುತ್ತಿದ್ದರು. ಮತ್ತದನ್ನು ಸ್ವಲ್ಪ ಮುಂದೆ ಸಹಜ ತೊರೆಯೊಂದಕ್ಕೆ ಸುರಿಯುತ್ತಿದ್ದರು. (ಬಿಲ್ಲಿನ ಬಾಬುಗಳು ಕಾಡುಗಲ್ಲು ಸಂಗ್ರಹಿಸಿದ್ದಕ್ಕೂ ಡ್ಯಾಂ ಕಟ್ಟಿದ್ದಕ್ಕೂ ಚೆನ್ನಾಗಿಯೇ ಆಗಿರಬೇಕು. ತೊರೆಯ ಸಹಜ ನೀರು “ನಾ ನಾಲ್ಕು ಕಲ್ಲುಗಳಿಗೆ ಹೆದರಿ ನಿಲ್ಲುವವಳಲ್ಲ” ಎಂದು ಕಲಕಲಿಸುತ್ತಲೇ ಇದೆ.)

ಆದರೆ ಡ್ಯಾಮೋ ಮತ್ತೊಂದೋ ಕೆಲಸಕ್ಕೆ ಯಾರೂ ಕಳ್ಳರಗಂಡಿಯ ಬುರುಜಿಗೆ ಕೈ ಹಾಕಿದ್ದಿಲ್ಲ! ಕಾರಣ ಸರಳ. ಮೊದಲೇ ಹೇಳಿದ ಪ್ರಾಕೃತಿಕ ಬಂಧನದಲ್ಲಿ ಅಲ್ಲಿನ ಒಂದು ಕಲ್ಲೂ ಅಲುಗಾಡಿಸಲಾಗದ ಸ್ಥಿತಿಯಿದೆ. (ಅಂಡಮಾನ್, ಅಂಕೋರ್ ವಾಟ್ ಮುಂತಾದವು ನೆನಪಾಗುತ್ತದೆ) ಇದು ಜೀರ್ಣವೇ? ದೃಢೀಕರಣವೇ? ಏನೇ ಇರಲಿ ಕಳ್ಳರಗಂಡಿ ಹೆಸರು ಈ ಕಾಲಕ್ಕೂ ಅನ್ವರ್ಥಕವೇ!

ಶ್ರೀ ಕ್ಷೇತ್ರ ಬೂದಿಚೌಡಿ: ಮೊದಲು ಹಳೆಯ ಪತ್ರಿಕಾ ಲೇಖನವೊಂದನ್ನು ಉದ್ಧರಿಸಿಬಿಡುತ್ತೇನೆ. ಈ ಮಂಟಪ ಇರಬಾರದಿತ್ತು, ಇಲ್ಲಿ ಇರಬಾರದಿತ್ತು, ಹೀಗಂತೂ ಇರಲೇಬಾರದಿತ್ತು! ಇತಿಹಾಸಕ್ಕೂ ದಕ್ಕದ ಕಾಲದಲ್ಲೆಲ್ಲೋ ಕಗ್ಗಾಡ ಮಧ್ಯೆ ಈ ಒಂದು ಕುಮಾರಧಾರಾ ಸಂಗಮಕ್ಕೆ ಮನುಷ್ಯನ ಭಾವ ಇಟ್ಟ ಸಾಕ್ಷೀ ಕಲ್ಲು, ಆರಾಧನೀಯವಾಗಿ ಬೆಳೆದು ಬಂತು. ಸೇವಾ ಹೇರಾಟದಲ್ಲಿ ಇಂದು ಅದಕ್ಕೆ ಸಿಮೆಂಟ್ ನೆಲ, ಫೆರೋ ಕಾಂಕ್ರೀಟಿನ ನಾಲ್ಕು ಕುಂದ ಮೇಲೊಂದು ತಾರಸಿ ಬಂದಾಗಿದೆ. ಬಣ್ಣ ಕೊಟ್ಟು, ಗಂಟೆ ಇಳಿಬಿಟ್ಟು, ಕಾಲಕಾಲಕ್ಕೆ ದೀಪದೂಪ ಹಚ್ಚಿಕೊಟ್ಟು ದಿಕ್ಕುದಿಕ್ಕುಗಳಿಗೂ ಸಾರಿಯಾಗಿದೆ (ಸೇವಾರ್ಥಿಯ ಒಣಪ್ರತಿಷ್ಠೆ?), ದೇವರಿದ್ದಾರೆ ಬನ್ನಿ, ಬನ್ನಿ! ಅನಿಷ್ಠ ಆರತಿ ತಟ್ಟೆ ಸಂಸ್ಕೃತಿ ಬೆಳೆಯಲಿದೆ. ಬರಲಿದೆ ಸನ್ನಿವೇಶ ಮತ್ತು ಸಾಕ್ಷಿ ಅದಲು ಬದಲಾಗುವ ದಿನಗಳು. (ಹೌದು, ಇಂದು ಅಡ್ಡಹೊಳೆಯ ಕಿನಾರೆಗೋ ಕುಮಾರಧಾರಾ ಸಂಗಮಕ್ಕೋ ಜನ ಹೋಗದಂತೆ ಮುಳ್ಳತಡೆ ಹಾಕಿದ್ದಾರೆ.) ಹೊಳೆ ಬತ್ತಿದರೂ ಕಾಡು ಹೊತ್ತಿದರೂ ಬೂದಿ ಚೌಡಿಯ ಮಹಿಮೆ, ಆವರಣ, ಗೋಪುರ, ಮಹಾದ್ವಾರ ಬಡಾಯಿಸಲಿದೆ; ಹೆಚ್ಚಲಿದೆ ಶುದ್ಧ ಅವಲಕ್ಷಣ.

ಬೂದಿಚೌಡಿಯ ವರ್ತಮಾನದ ಬಗ್ಗೆ ಒಂದೇ ಒಂದು ಪ್ಯಾರಾ (ಇದು ಹಿಂದೀ ಪ್ಯಾರಾ ಖಂಡಿತಾ ಅಲ್ಲ, ವಾಖ್ಯಗುಚ್ಛ ಅನ್ನಿ) ಇಲ್ಲೇ ಹೇಳಿಬಿಡುತ್ತೇನೆ. ಕುಂದದಿಂದ ಕುಂದಕ್ಕೆ ಬಹುವರ್ಣದ ಗ್ರಿಲ್ಲು, ಬಾಗಿಲು, ಬೀಗ ಎಲ್ಲಾ ಬಂದಿದೆ. ಒಳಗೆ ಚಿನ್ನ, ಜರಿ ಮಿರುಗಿಸುವ (ಅಪ್ಪಟ ಚಿನ್ನವಿರಲಾರದು) ವಿಗ್ರಹಗಳ ಸಂತೆಯೇ ಇದೆ. ಪೂರ್ಣಾವಧಿ ಅರ್ಚಕ, ವಾಹನಗಳಿಗೆ ದೇವರ extension ಸೇವಾ (ಆರತಿ ತಟ್ಟೆ) ವ್ಯವಸ್ಥೆಯೂ ನಡೆದಿದೆ. ನಾನು ಮೊದಮೊದಲು ಇಲ್ಲಿ ಪರ್ವಕಾಲಗಳಲ್ಲಷ್ಟೇ ನೋಡಿದ್ದ ಕೋಳಿಬಲಿ ಈಗ ಎಂದೂ ಆಗಬಹುದು. ಇನ್ನೂ ಮುಖ್ಯ ವಿಚಾರ ಆ ‘ಪ್ರಸಾದ’ವನ್ನು ಸ್ವಾದಿಷ್ಟವಾಗಿ ಮಾಡಿಕೊಡುವುದರಲ್ಲೂ ಪ್ರಸ್ತುತ ಅರ್ಚಕ ಪಳಗಿದವನಂತೆ. ಇವೆಲ್ಲಕ್ಕೂ ಮತ್ತು ಹೆಚ್ಚಿನದಕ್ಕೆ ಅರಣ್ಯ ಇಲಾಖೆ ಪರೋಕ್ಷ ಅನುಮೋದನೆ ಕೊಡುವಂತೆ ‘ಯೋಜನಾಬದ್ಧ’ವಾಗಿ ಕುಳ್ಕುಂದದಲ್ಲಿದ್ದ ತನ್ನ ತನಿಖಾ ಗೇಟನ್ನು ಇಲ್ಲಿಗೇ ವರ್ಗಾಯಿಸಿಕೊಳ್ಳುವ ಶಾಸ್ತ್ರ ಮಾಡಿದ್ದಾರೆ. (ಕುಳ್ಕುಂದ – ದಕ ಜಿಲ್ಲೆಯಾದರೆ ಬೂದಿಚೌಡಿ – ಹಾಸನ ಜಿಲ್ಲೆ!) ಕಾವಲುಗಾರರ ಅನುಕೂಲದ ಲೆಕ್ಕದಲ್ಲಿ ಅರ್ಚಕನಿಗೆ ವಾಸಾನುಕೂಲ, ಕಾಡತೊರೆಗೆ ಸಿಮೆಂಟು, ಕಡಿದ ಕಲ್ಲುಗಳ ಸ್ನಾನಘಟ್ಟದ ವೈಭವ, ವಾಹನಗಳಿಗೆ ತಂಗಲು ದಾರಿಯ ಅಗಲೀಕರಣ (ಉಪದ್ರಕಾರೀ ಕೆಲವು ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದು ಕಳೆದಿದ್ದಾರೆ – ‘ಸಂಸ್ಕೃತಿ’ ಮುಖ್ಯ!), ದಾರಿಯ ಎದುರು ಬದಿಗೆ ಯಾತ್ರಿಗಳಿಗೆ ಶೌಚ ಸೌಕರ್ಯ ಎಲ್ಲಾ ಆಗಿದೆ! ನಂಬಿದರೆ ನಂಬಿ, ಈ ಚೌಡಿ ನೈಜಾರ್ಥದಲ್ಲಿ ಜಾತ್ಯಾತೀತಳು – ಇಷ್ಟೆಲ್ಲಾ ಅಭಿವೃದ್ಧಿ, ಕಾರಣಿಕ ಹೆಚ್ಚಿಸುತ್ತಿರುವ ಅರ್ಚಕ ಕ್ರಿಶ್ಚಿಯನ್ ಅಂತೆ! ಮುಂದುವರಿದು ಆತ ತನ್ನ ಸಹಾಯಕನ ಸ್ಥಾನಕ್ಕೆ ಬ್ಯಾರೀ ಅಭ್ಯರ್ಥಿಯನ್ನು ಆಹ್ವಾನಿಸಿದ್ದಾನೆ ಎನ್ನುವುದು ಮಾತ್ರ ಇಷ್ಟರವರೆಗೆ ಶುದ್ಧ ಸುಳ್ಳು!