(ಚಕ್ರವರ್ತಿಗಳು ಮಾಲಿಕೆಯಲ್ಲಿ ಮೊದಲ ಸುತ್ತು)

ಹಿರಿಯ ಲೇಖಕರಾದ ಭೈರಪ್ಪನವರ ವಿದ್ವತ್ತು, ಬರವಣಿಗೆಯ ಗಾತ್ರ ಅಗಾಧ. ಅವರು ಭಾಷಾಗಡಿಗಳನ್ನೂ ಮೀರಿ ಗಳಿಸಿದ ಅಪ್ಪಟ ಜನಪ್ರಿಯತೆಯನ್ನು ನೋಡಿದವರೆಲ್ಲ ಬೆರಗಾಗಿ ಕೇಳುವ ಪ್ರಶ್ನೆ ಸಾವಿರಕ್ಕೆ, ಉತ್ತರಿಸುವ ಅನಿವಾರ್ಯತೆಗೆ, ಅವರೇ ಖುದ್ದು ಪ್ರಶ್ನಿಸಿಕೊಂಡರು ‘ನಾನೇಕೆ ಬರೆಯುತ್ತೇನೆ?’ ಅವರ ಉತ್ತರ ಅದೇ ಹೆಸರಿನ ಪುಸ್ತಕದುದ್ದಕ್ಕೆ ವ್ಯಾಪಿಸಿದೆ. (ಪ್ರತಿಗಳಿಗೆ – ಸಾಹಿತ್ಯ ಭಂಡಾರ, ಬೆಂಗಳೂರು) ಗಾತ್ರ, ವಿದ್ವತ್ತುಗಳಲ್ಲಿ ಅವರಿಗೆ ಯಾವ ಹೋಲಿಕೆಗೂ ಇಲ್ಲದವ ನಾನು. ಆದರೂ ಸರಳವಾಗಿ ಹೇಳುವುದೇ ಆದರೆ ಕುಶಿಗಾಗಿ, ನನ್ನ ಮಿತಿಯಲ್ಲಿ ಗಳಿಸಿದ ಅನುಭವವನ್ನು ಹತ್ತು ಜನರ ಅನುಭವಕ್ಕೊದಗಿಸುವ ಅನುಕೂಲಕ್ಕಾಗಿ ನಾನೂ ಬರೆಯುತ್ತೇನೆ. ಕಳೆದ ಸುಮಾರು ನಲ್ವತ್ತು ವರ್ಷಗಳಿಂದ ಬರೆಯುತ್ತಲೇ ಇದ್ದೇನೆ. (ಖ್ಯಾತ ಯಕ್ಷಗಾನ ಅರ್ಥದಾರಿ, ಹಲವು ಪುಸ್ತಕಗಳ ಕರ್ತೃ, ಆದರೂ ಆರ್ಥಿಕವಾಗಿ ಇಳಿಮುಖದಲ್ಲಿದ್ದ – ದೇರಾಜೆ ಸೀತಾರಾಮಯ್ಯನವರನ್ನು, ಅವರ ಅಭಿಮಾನಿಯೊಬ್ಬ ಅಂದಕಾಲತ್ತಿಲೆ ಕೇಳಿದ್ದನಂತೆ “ಈಚೆಗೇನು ಬರೆದಿದ್ದೀರಿ?” ದೇರಾಜೆಯವರ ಉತ್ತರ ಸಟಕ್ಕನೆ ಬಂತಂತೆ “ಚೊಕ್ಕಾಡಿ ಬರೆದೆ.” ಇಲ್ಲಿ ‘ಬರೆ’ ಎನ್ನುವುದನ್ನು ಚೊಕ್ಕಾಡಿ ಎಂಬ ಸ್ಥಳ ವಿಕ್ರಯದ ದಸ್ತಾವೇಜಿಗೆ ಬಳಸುವ ಪದವಾಗಿಯೇ ಕಂಡಿತ್ತು ದೇರಾಜೆಯವರ ಪ್ರತ್ಯುತ್ಪನ್ನಮತಿ, ಶ್ರೀಮಂತ ಮನಸ್ಸು! ಪುಣ್ಯಕ್ಕೆ ನನ್ನದು ಹಾಗಲ್ಲ!)

ಮೊದಲಿನಿಂದಲೂ ಶಾಲಾ ನೋಟ್ಸು, ಸ್ಪರ್ಧಾ ಪ್ರಬಂಧಗಳಂಥಲ್ಲದ ಸ್ವತಂತ್ರ ಬರವಣಿಗೆ ನನಗೆ ಬಹಳ ಪ್ರೀತಿಯ ಕೆಲಸ. (ಶಾಲಾ ಕಾಲೇಜು ದಿನಗಳಲ್ಲಿ ನನ್ನ ಯಾವ ನೋಟ್ಸೂ ಪರಿಪೂರ್ಣವಾಗಿರಲಿಲ್ಲ. ಮತ್ತೆ ಬೇರೆಯವರದು ನಕಲು ಮಾಡುವುದರಲ್ಲಿ ನಾನು ಶುದ್ಧ ಸೋಮಾರಿ. ವಿದ್ಯಾರ್ಥಿಗಳ ಮಟ್ಟದಲ್ಲಿ ಜೆರಾಕ್ಸ್ ಎಂಬ ದುಡ್ಡು ಮತ್ತು ಕಾಗದ ದಂಡ ವ್ಯವಸ್ಥೆ ಆಗ ಇರಲೇ ಇಲ್ಲ.) ಉದ್ದುದ್ದ ಪತ್ರ ಬರೆಯುವುದಕ್ಕೆ, ಲೇಖನಗಳನ್ನು ಮಾಡುವುದಕ್ಕೆ ಸದಾ ನನಗೆ ಉತ್ಸಾಹ (ಪ್ರಕಟಣೆಗೆ ಕಳಿಸಿದ್ದು ಕಡಿಮೆ). ಆ ದಿನಗಳಲ್ಲಿ ಸೈನ್ಯದಲ್ಲಿದ್ದ ನನ್ನ ಚಿಕ್ಕಪ್ಪ – ರಾಘವೇಂದ್ರನಿಗೆ ನಾನು ಬರೆದ ಪತ್ರಗಳಿಗೆ ಪುಟದ ಮಿತಿ ಮತ್ತು ಲೆಕ್ಕ ಇರಲೇ ಇಲ್ಲ. ಆ ಲಕೋಟೆಗಳ ಮೇಲೆ ಸೈನಿಕರ ಗೋಪ್ಯ ಪಾಲನೆಗಾಗಿ ಕೇವಲ ಹೆಸರು ಆರ್ಮಿ ಪೋಸ್ಟ್ ಆಫೀಸ್ ಸಂಖ್ಯೆ ಮಾತ್ರ ಬರೆಯಬೇಕಿತ್ತು. ಅಂಚೆ ಚೀಟು ಬೇಕಿರಲಿಲ್ಲ ಅಥವಾ ಹಾಕದೇ ಇದ್ದರೆ ದಂಡ ವಸೂಲಾತಿ ಇರಲಿಲ್ಲ; ನಾನಂತೂ ಹಾಕಿದ್ದೇ ಇಲ್ಲ! ನನ್ನ ಕಾಲಕ್ಕೆ ಶಾಲಾ ಮ್ಯಾಗಜೀನ್ ಬಂದಂತಿಲ್ಲ. ಕಾಲೇಜು ಮ್ಯಾಗಜೀನಿಗೆ ನಾನು ಬರಹದಲ್ಲಿ ಮುಂದು. ಮಹಾರಾಜಾ ಕಾಲೇಜು ಅನಂತರ ಮಾನಸಗಂಗೋತ್ರಿಯ ಪತ್ರಿಕೋದ್ಯಮ ವಿಭಾಗದಲ್ಲಿ ಅವರದೇ ವಿದ್ಯಾರ್ಥಿಗಳಿಗೆ ‘ಅಭ್ಯಾಸ ಪತ್ರಿಕೆ’ ಮುದ್ರಿಸಿ, ಪ್ರಕಟಿಸುತ್ತಿದ್ದರು. ಆದರೆ ಹೆಚ್ಚಿನ ವಿದ್ಯಾರ್ಥಿಗಳು ಪೆನ್ನು ಕಾಗದ ಹಿಡಿದು ಕಾಲೇಜಿನ ಯಾವ್ಯಾವುದೋ ಸಭೆಗಳಲ್ಲಿ ಕುಳಿತು ಭಾಷಣಕಾರರ ಮಾತುಗಳನ್ನು ಯಥಾವತ್ತು ಬರೆದುಕೊಂಡು, ‘ಹೇಳಿದರು’, ‘ನುಡಿದರು,’ ‘ಮುಂದುವರಿಸುತ್ತಾ’ ಮುಂತಾದ ಶಬ್ದಗಳನ್ನು ಅಲ್ಲಿಲ್ಲಿ ಸೇರಿಸಿ ಪತ್ರಿಕೆ ತುಂಬಿಸುತ್ತಿದ್ದರು. ಪುಟ ತುಂಬಿಸಲೋ ವೈವಿಧ್ಯ ಹೆಚ್ಚಿಸಲೋ ವಿಭಾಗಕ್ಕೆ ಹೊರಗಿನವನಾದ ನನಗೆ ನಾಡಿಗ ಕೃಷ್ಣಮೂರ್ತಿ ಮತ್ತು ಅನುಯಾಯೀ ಅಧ್ಯಾಪಕ ವರ್ಗ (ಪೂರ್ಣ ಹೆಸರುಗಳು ನೆನಪಾಗುವುದಿಲ್ಲ – ಖಾದ್ರಿ, ಭಂಡಾರ್ಕರ್. . .) ಸದಾ ಮುಕ್ತ ಅವಕಾಶ ಕೊಟ್ಟಿದ್ದರು. ಅದರಲ್ಲಿ ಪ್ರಕಟವಾದ ನನ್ನ ಬರಹಗಳಿಗೆ ಲೆಕ್ಕವೇ ಇಲ್ಲ. ನಾನಾದರೋ ಚಾಮುಂಡಿಯಲ್ಲಿ ಹೊಸ ಬಂಡೆ ಹತ್ತಿದ ವರದಿ, ದಸರಾ ಪ್ರದರ್ಶನಾಲಯದಲ್ಲಿ ಗೋಡೆ ಹಾರಿದ ಪರ್ವತಾರೋಹಿಗಳ ರೋಮಾಂಚನ, ಪಾಂಡವಪುರಕ್ಕೆ ಸೈಕಲ್ ಸಾಹಸದ ಕಥನವೆಲ್ಲಾ ಪ್ರತ್ಯಕ್ಷ ಅನುಭವದಿಂದ ಬರೆಯುತ್ತಿದ್ದೆ. ರಾಜಾ ರಾಯರ Cat & the Shakespeare ನಮಗೆ ಎಂಎ ಪಠ್ಯವಾಗಿತ್ತು. ನಾನು ಅದನ್ನು ಓದದೇ ಇದ್ದರೂ ತರಗತಿ ನಡೆಯುವಾಗ ಕೆಳಗೆ ಹರಟೆ ಮಾಡುತ್ತಿದ್ದ ಆಟೋ ರಾಕ್ಷಸನಿಂದ ಸ್ಫೂರ್ತಿಪಡೆದು ಕೂಡಲೇ Rickshaw and the Shakespeare ಬರೆದದ್ದಂತೂ ಮರೆಯಲಾರೆ.

ಮಂಗಳೂರಿನಲ್ಲಿ ಪುಸ್ತಕ ವ್ಯಾಪಾರಿಯಾಗಿ ನಿಂತ ಮೇಲೆ ನನ್ನ ಪತ್ರ ಸಾಹಿತ್ಯಕ್ಕೆ ಅವಕಾಶವೂ ಖಾಚಿತ್ಯವೂ ಧಾರಾಳ ಬಂತು. ವೃತ್ತಿ, ಹವ್ಯಾಸ ಮೇಳೈಸಿದ ಸನ್ನಿವೇಶದಲ್ಲಿ ನನ್ನ ಬರಹಕ್ಕೆ ಮೇರೆಗಳು ಇರಲೇ ಇಲ್ಲ. ಎಷ್ಟೋ ಬಾರಿ ಸಾರ್ವಜನಿಕವಾಗಿ ಬರೆಯಲಾಗದ್ದನ್ನು ನನ್ನ ಪತ್ರಗಳ (ಮಾತ್ರವಲ್ಲ, ನನ್ನ ಎಲ್ಲಾ ಬರಹಗಳ) ಬಲು ದೊಡ್ಡ ಸಹೃದಯೀ ಓದುಗಳಾದ ತಾಯಿಗೆ ಧಾರಾಳ ಬರೆಯುತ್ತಿದ್ದೆ. ಕೆಲವು ಬಾರಿ ‘ಪ್ರೀತಿಯ ಅಮ್ಮಾ’ ಎಂದು ಒಂದು ತಾರೀಕು ಹಾಕಿ ಶುರು ಮಾಡಿದ ಪತ್ರ, ಕೆಲಸಗಳ ಎಡೆಯಲ್ಲಿ ಮುಂದುವರಿಯುತ್ತಾ ‘ಇಂತು ನಿನ್ನ ಅಶೋಕ’ ಕಾಣುವಾಗ ಮೂರು ನಾಲ್ಕು ತಾರೀಕುಗಳೇ ಸೇರ್ಪಡೆಯಾಗುತ್ತಿತ್ತು. ಕಡ್ಡಾಯವಾಗಿ ಕವರಿನಲ್ಲೇ ಹೋಗುವಷ್ಟಿರುತ್ತಿದ್ದ ಆ ಪತ್ರ ಕಂತೆಗಳಲ್ಲಿ ಯಾವುದೇ ಔಪಚಾರಿಕ ಖಾಲೀ ಜಾಗ ಉಳಿಯುತ್ತಿರಲಿಲ್ಲ! ಪುಸ್ತಕ ಬೇಡಿಕೆ ಕಳಿಸುವಾಗ, ಪಾವತಿ ಕಳಿಸುವಾಗ ಲೇಖಕ/ಪ್ರಕಾಶಕರಿಗೆ ಬರೆಯುತ್ತಿದ್ದ ಪತ್ರಗಳಿಗೆ ಕನಿಷ್ಠ ಒಂದು ಓದುಗ ಖಾತ್ರಿ ಎನ್ನುವ ಧೈರ್ಯ. ಅಲ್ಲೆಲ್ಲ ಮುಖ್ಯ ವಿಷಯವನ್ನು ಅತ್ಯಂತ ಸಂಕ್ಷಿಪ್ತವಾಗಿ ಮುಗಿಸಿಬಿಡುತ್ತಿದ್ದೆ. ಮಾದರಿ ಪತ್ರ ಲೇಖನದ ಪರೀಕ್ಷೆಗೇನಾದರೂ ಅವು ಹೋಗಿದ್ದರೆ ನನಗೆ ಸೊನ್ನೆ ಸುತ್ತುತ್ತಿದ್ದರು. ‘ಮಾನ್ಯರೇ/ ಪ್ರಿಯರೇ ಪಾವತಿ ಲಗ್ತು. ತಲಪಿದ್ದಕ್ಕೆ ಒಂದು ಗೆರೆ ಬರೆಯಿರಿ’ ಎಂದವನೇ ಉಳಿದ ಖಾಲಿ ಜಾಗ ತುಂಬಿಸುವ ನೆಪದಲ್ಲಿ ಆರಿಸಿಕೊಳ್ಳುತ್ತಿದ್ದ ವಿಷಯ, ಶೈಲಿಗಳಿಗೆ ನಾನೇ ಮಿತಿ.

[ಇಲ್ಲೊಂದು ತಮಾಷೆ ಹೇಳದಿರಲಾರೆ: ನನ್ನ ಚಿಕ್ಕಪ್ಪ – ಜಿ.ಟಿ. ಈಶ್ವರ ಎನ್ಸಿಸಿ ಕಛೇರಿಯಲ್ಲಿ ಟಪಾಲು ನೋಡಿಕೊಳ್ಳುವ ಗುಮಾಸ್ತ. ಅಧಿಕೃತ ಪತ್ರದ ಕೊನೆಯಲ್ಲಿ ಅದಕ್ಕೆ ಲಗತ್ತಿಸಿದ ದಾಖಲೆಗಳ ಸಂಖ್ಯೆಯನ್ನು ನಮೂದಿಸಿ, ಸಂಬಂಧಿಸಿದ ಕಡತದಲ್ಲಿ ದಾಖಲಿಸಿ, ರವಾನೆಗೆ ಅಣಿಗೊಳಿಸುವುದು ಈತನ ಕರ್ತವ್ಯ. ಈತನ ಖಾಸಗಿ ಸಂಗ್ರಹದಲ್ಲಿ ಯಾವ್ಯಾವುದೋ ಸಣ್ಣಪುಟ್ಟ ಜಾಹೀರಾತು ಕರಪತ್ರಗಳಿರುತ್ತಿತ್ತು. ಸಮಯ ನೋಡಿ ಅವುಗಳಲ್ಲಿ ಒಂದೊಂದನ್ನು ಕೆಲವು ಪತ್ರಗಳ ಜೊತೆಗೆ ಸೇರಿಸಿ, ಸಂಖ್ಯೆ ನಮೂದಿಸುವಲ್ಲಿ ಅದರ ಲೆಕ್ಕವನ್ನೂ ಹಾಕಿ ಕಳಿಸಿಬಿಡುತ್ತಿದ್ದರು. ಮತ್ತೆ ನಮ್ಮಲ್ಲಿಗೆ ಬಂದಾಗ, ಅತ್ತ ವಿಳಾಸದಾರ ಕಛೇರಿಯ ಟಪಾಲು ಗುಮಾಸ್ತನ ಪೀಕಲಾಟವನ್ನು ನಮ್ಮಲ್ಲಿ ಹೇಳಿಕೊಂಡು ಬಿದ್ದು ಬಿದ್ದು ನಗುತ್ತಿದ್ದರು. ಉದಾಹರಣೆಗೆ, ವಾರ್ಷಿಕ ಶಿಬಿರದ ಅಗತ್ಯಗಳ ಕುರಿತು ಮೇಲಿನ ಕಛೇರಿಗೆ ಹೊರಟ ಅಧಿಕೃತ ಪತ್ರಕ್ಕೆ ವಾಸ್ತವದಲ್ಲಿ ಒಂದು ಪಟ್ಟಿ ಲಗತ್ತಿಸುವುದಿತ್ತು. ಆದರೆ ಈಶ್ವರ ಸೇರ್ಪಡೆಗಳ ನಮೂದಿನಲ್ಲಿ ಎರಡು ಕಾಣಿಸಿ, ಪಟ್ಟಿಯೊಡನೆ ಒಂದು ‘ಗಜಕರ್ಣಕ್ಕೆ ಜಾಲಿಮಲೊಶನ’ ಅಥವಾ ‘ಪ್ರತಿ ಮುಂಜಾವಿಗೆ ಶುದ್ಧ ನಂಜನಗೂಡಿನ ದಂತಧಾವನ ಚೂರ್ಣ’ದ ಕರಪತ್ರ ಸೇರಿಸಿದ್ದ! ಅತ್ತಣ ಟಪಾಲು ಗುಮಾಸ್ತನಿಗೆ ವಿಷಯ ಪ್ರಶ್ನಿಸುವ ಅಧಿಕಾರವಿಲ್ಲ. ಅಡಕಗಳು ಸಂಖ್ಯೆಯ ಮರ್ಯಾದೆಗೆ ಸರಿಯಾಗಿ ಎಲ್ಲವನ್ನೂ ತನ್ನ ಕಡತದಲ್ಲಿ ದಾಖಲಿಸಿ, ಕಛೇರಿಯಲ್ಲಿ ಸಂಬಂಧಿಸಿದವರಿಗೆ ಕಳಿಸುತ್ತಾನೆ. ಈಗ ‘ಕೇಸ್ ವರ್ಕರ್’ನ ಸಂಕಟ ಸುರು. ಆತ ಇದನ್ನು ಹರಿದೆಸೆದರೆ ಎರಡು ನಮೂದುಗಳನ್ನು (ಪತ್ರದಲ್ಲೇ ನಮೂದಿಸಲ್ಪಟ್ಟ ಅಡಕಗಳ ಸಂಖ್ಯೆ ಮತ್ತು ತಮ್ಮದೇ ಕಛೇರಿಯ ಟಪಾಲು ಕಡತ) ಧಿಕ್ಕರಿಸಿದ ‘ಅಪರಾಧ’ ಅಂಟಿಕೊಳ್ಳುತ್ತದೆ, ಇತ್ಯಾದಿ]

ನನ್ನ ಪತ್ರ ಸಾಹಿತ್ಯವನ್ನು ವಿಳಾಸದಾರರು ಪೂರ್ಣ ಓದುತ್ತಾರೋ ಅರ್ಥವಾಗುತ್ತೋ ತಮಾಷೇ ಮಾಡ್ತಾರೋ ಎಂಬಿತ್ಯಾದಿ ಭಾವಗಳು ನನ್ನನ್ನು ಕಾಡಿದ್ದೇ ಇಲ್ಲ. ಬರೆಯಲೇ ಬೇಕೆಂಬ ತುಡಿತಕ್ಕೆ ಆ ಪತ್ರಗಳು ಅಂಗಡಿಯ ಕೆಲಸದ ಒತ್ತಡದ ನಡುವೆ ಒಂದೇ ಧಾರೆಯಲ್ಲಿ ಹರಿಯುತ್ತಿತ್ತು. ಎಷ್ಟೋ ಪತ್ರಗಳನ್ನು ನಾನು ಕನಿಷ್ಠ ಕಾಗುಣಿತ ತಿದ್ದಲೂ ನಾನು ಇನ್ನೊಮ್ಮೆ ಓದಿ ನೋಡಿದ್ದಿಲ್ಲ. ಪ್ರತಿ ಇಟ್ಟದ್ದಂತೂ ಇಲ್ಲವೇ ಇಲ್ಲ. (ದೇಜಗೌ ಕುಲಪತಿಯಾಗಿದ್ದಾಗ ತಾವು ಬರೆದ ಪತ್ರಗಳ ಪ್ರತಿ ಇಟ್ಟದ್ದು ಮಾತ್ರವಲ್ಲ, ಅವನ್ನು ಹಲವು ಸಂಪುಟಗಳಲ್ಲಿ ಪ್ರಕಟಿಸಿಯೂ ಬಿಟ್ಟಿದ್ದರು!) ಸರಕಾರೀ ಸಗಟು ಖರೀದಿಗೇ ಹುಟ್ಟಿದ ಪ್ರಕಾಶಕನಿಗೆ ಪುಸ್ತಕೋದ್ಯಮದ ಸರಕಾರೀಕರಣವನ್ನು ಖಂಡಿಸಿ ಬರೆಯುತ್ತಿದ್ದೆ. ಒಬ್ಬ ಕಳ್ಳನನ್ನು ವಿಶ್ವಾಸಕ್ಕೆ ತೆಗೆದುಕೊಂಡಂತೆ ಇನ್ನೊಬ್ಬ ಕಳ್ಳನ ಪುರಾಣ ಬಿಚ್ಚುತ್ತಿದ್ದೆ. ಉಡುಪಿ ರಥಬೀದಿಯಲ್ಲೇ ಇದ್ದ ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯದ ಮಾಲಿಕರಿಗೆ ಅಲ್ಲಿನದೇ ಸ್ವಾಮಿಗಳ ಗೋಠಾಳೆಯನ್ನು ಗೇಲಿಮಾಡಿ ಪುಟ ತುಂಬಿಸುತ್ತಿದ್ದೆ. ಬಳ್ಳಾರಿಯ ‘ಮರುಭೂಮಿ’ಯಿಂದ ಬಂದ ವಸುಧೇಂದ್ರರಿಗೆ ಅಶೋಕವನದ ಹಸಿರಸಮೃದ್ಧಿಗೆ ಕರೆಕೊಡುತ್ತಿದ್ದೆ. ರಾಮಕೃಷ್ಣಾಶ್ರಮದ ಪ್ರಸಾರಾಂಗದ ಸ್ವಾಮಿಗಳಲ್ಲಿ ಪರಿಸರ ಸಂಕಟಗಳನ್ನು ಹಂಚಿಕೊಂಡದ್ದಕ್ಕಂತೂ ಲೆಕ್ಕವಿಲ್ಲ. ಇಷ್ಟಾದರೂ ದುಃಖದ ವಿಷಯವೆಂದರೆ ಇಂದಿನ ನಮ್ಮ ೯೯% ಲೇಖಕ/ ಪ್ರಕಾಶಕರು ಅನೌಪಚಾರಿಕ ಬರಹಗಳಿಗೆ ಪ್ರತಿಕ್ರಿಯಿಸುವಲ್ಲಿ ಒಂದೋ ಸೋಮಾರಿಗಳು (ಯಃಕಶ್ಚಿತ್ ವ್ಯಾಪಾರಿಗೇನು ಬರೆಯುವುದೆಂಬ ಉಪೇಕ್ಷೆಯೂ ಹಲವರಲ್ಲಿ ಇದ್ದಿರಬಹುದು) ಅಥವಾ ಇನ್ನೂ ಸರಿಯಾಗಿ ಹೇಳುವುದಾದರೆ ಪೈಸೆ ತಾರದ ಲೇಖನಕ್ಕೆ ಇಂಕು ಕಳೆಯದ ಜಾಣರು. ಅವರ ವ್ಯವಹಾರ ಪ್ರಪಂಚದಿಂದ ಹೊರಗೆ ಯಥಾರ್ಥವಾಗಿ ಅನಕ್ಷರಸ್ಥರೂ ಇರಬಹುದು! ಅಭಿನವದ ರವಿಕುಮಾರ್, ವಿವೇಕ್ ಶಾನಭಾಗ್, ಆಗೊಮ್ಮೆ ಈಗೊಮ್ಮೆ ಸಾಹಿತ್ಯ ಪ್ರಕಾಶನದ ಸುಬ್ರಹ್ಮಣ್ಯ ಪ್ರತಿಕ್ರಿಯಿಸಿದ್ದು ಉಂಟು. ಮತ್ತೆ ಕೆಲವರು ನಾನು ಪುಸ್ತಕ ಬೇಡಿಕೆಗೆ ದೂರವಾಣಿಸಿದಾಗ ಬರಿದೇ ‘ತುಟಿಸೇವೆ’ ಕೊಟ್ಟು, ನನ್ನ ‘ಉಸ್ತಾಹ’ವನ್ನು ‘ಪ್ರೋಸ್ತಾಹಿ’ಸುತ್ತಿದ್ದರು ಅಷ್ಟೆ. [ಹಳೆ ತಲೆಮಾರಿನಲ್ಲಿ ಗಾಂಧಿ, ಗೋವಿಂದಪೈ, ಕಾರಂತ, ಸೇಡಿಯಾಪು ಮುಂತಾದವರು ಪತ್ರಗಳಲ್ಲೂ ನಿರ್ಮಮವಾಗಿ ಲೋಕಜ್ಞಾನಕ್ಕೆ ತಮ್ಮ ಕಾಣಿಕೆ ಕೊಟ್ಟದ್ದು ನಾವು ಮರೆತೇಬಿಟ್ಟಿದ್ದೇವೆ!] ಏನೇ ಇರಲಿ, ನನಗಂತೂ ಬರವಣಿಗೆ ಸದಾ ಒಂದು ಬಿಡುಗಡೆ!

ಔಪಚಾರಿಕ ಸಭೆ, ಭಾಷಣಗಳನ್ನು ನಾನೆಂದೂ ಬಯಸಿದವನಲ್ಲ. ಆದರೆ ಸಾರ್ವಜನಿಕರಿಗೂ ನನ್ನ ವಿಶಿಷ್ಟ ಅನುಭವಗಳು ಒದಗಬೇಕೆಂಬ ತುಡಿತದಲ್ಲಿ ನಾನು ಅಂಗಡಿಯಲ್ಲಿ ಜನ ನೋಡಿಕೊಂಡು ಎಷ್ಟೋ ಬಾರಿ ಬಲು ಮಾತಾಳಿಯಾಗುತ್ತಿದ್ದೆ! ಇದನ್ನು ಮೆಚ್ಚಿಕೊಂಡವರು, ಪುಸ್ತಕ ಕೊಳ್ಳುವ ಅನಿವಾರ್ಯತೆಗೆ ಒಪ್ಪಿಕೊಂಡವರು, ಹಿಂದೆ ಬಿಟ್ಟು ಬಯ್ದವರೂ ಇದ್ದಾರೆ. ಯಾರೋ ಪ್ರಾಮಾಣಿಕ ಹಿತೈಷಿಗಳು ಗೆಳೆಯ ಸುಂದರರಾಯರ ಪತ್ನಿ ರಮಾ ಮೂಲಕ ನನ್ನನ್ನು ತಿದ್ದಲು ಪ್ರಯತ್ನ ಮಾಡಿದ್ದೂ ಇತ್ತು. ಅಂಥಲ್ಲೆಲ್ಲ ಹುಳಿ ನಗೆಬೀರಿ “ನೋಡಿ ಸ್ವಾಮೀ ನಾನಿರೋದೇ ಹೀಗೆ” ಎಂದುಬಿಡುತ್ತಿದ್ದೆ! ನನ್ನ ಅನುಭವ ಕೋಶದೊಳಗೆ ದೊಡ್ಡ ಸಾಹಸಯಾನ, ಪಕ್ಕಾ ‘ವಸ್ತು’ ದಕ್ಕಿದರೆ ಮಾತ್ರ ಲೇಖನ ಮಾಡುವ ಪ್ರಯತ್ನ ಮಾಡುತ್ತಿದ್ದೆ. ಹಾಗೆ ಬರೆಯುವಾಗ ಮಾತ್ರ ಇದು ನಿರ್ದಿಷ್ಟ ಪತ್ರಿಕೆಗೆ, ಇಷ್ಟೇ ಗಾತ್ರದಲ್ಲಿ ಎಂದೆಲ್ಲ ಅಂದಾಜಿಸಿಯೇ ಪೆನ್ನು ಕಾಗದದ ಮೇಲೆ ಹರಿಯಬಿಡುತ್ತಿದ್ದೆ. ನನ್ನ ಕುಶಿಗೆ ಅಥವಾ ಸಾರ್ವಜನಿಕಕ್ಕೆ ಉಪಯೋಗವಾಗುತ್ತದೆಂದು ನನಗೆ ತಿಳಿದೆಲ್ಲವನ್ನೂ ಕಾಗದಕ್ಕೆ ಇಳಿಸಿದರೆ ಮುದ್ರಣ ಮಾಧ್ಯಮ ಸಹಿಸುತ್ತಿರಲಿಲ್ಲ. ಬರೆದ ಸ್ವಲ್ಪದರಲ್ಲೂ ಆ ಪತ್ರಿಕೆಯ ಸ್ಥಾಪಿತ ಹಿತಾಸಕ್ತಿಗಳಿಗೆ (ವ್ಯಕ್ತಿಗಳು, ಸಂಸ್ಥೆಗಳು) ಟೀಕೆ ಬಿಡಿ, ಮುಜುಗರವೂ ಆಗದಂತೆ ಶಬ್ದಗಳನ್ನು ಒರೆಗೆ ಹಚ್ಚಿ ಬಳಸುವುದು ಅನಿವಾರ್ಯ ಕರ್ಮ!

ಒಮ್ಮೆ ಆಕಾಶವಾಣಿ ನನ್ನಿಂದ ಪುಸ್ತಕೋದ್ಯಮದ ವಿಚಾರ ಹದಿನೈದು (ಅಂದರೆ ಹದಿಮೂರು) ಮಿನಿಟಿನ ಭಾಷಣ (ಅಂದರೆ ಪ್ರಬಂಧದ ಓದು) ಕೇಳಿತ್ತು. ಧ್ವನಿಮುದ್ರಿಸುವ ಮುನ್ನ ಲೇಖನ ಪರಿಶೀಲಿಸಿದ ‘ಪ್ರಭುತ್ವದ ನಿಷ್ಠಾವಂತ ಸೇವಕ’ನೊಬ್ಬ (ಗೋರ್ಮೆಂಟ್ ಸರ್ಮೆಂಟು), ನಾನು ‘ರಾಜ’ನನ್ನು (ಸರಕಾರ) ಟೀಕಿಸಿದ ಮಾತುಗಳನ್ನು ತೆಗೆಯಬೇಕೆಂದು ಪಟ್ಟು ಹಿಡಿದ. ವಿಷಯಕ್ಕೆ ನ್ಯಾಯ ಒದಗಿಸುವ ದೃಷ್ಟಿಯಲ್ಲಿ ನಾನು ಒಪ್ಪಲಿಲ್ಲ, ಅವಕಾಶವನ್ನೇ ತಿರಸ್ಕರಿಸಿ ನಡೆಯಲೂ ಸಿದ್ಧನಾದೆ. ಆಕಾಶವಾಣಿಯ ಕಡತಗಳಲ್ಲಿ ಆಗಲೇ ನನ್ನದು ಘೋಷಿತ ಕಾರ್ಯಕ್ರಮ. ಇನ್ನು ಅದು ರದ್ದು ಎಂದಾದರೆ, ಆ ಕುರಿತ ವಿಚಾರಣೆಗೆ ತಲೆ ಕೊಡುವ ರಗಳೆಗೆ ಹೆದರಿ ಆತನೇ ತಗ್ಗಿದ. ಆದರೆ ಬೀಳ್ಕೊಡುವಾಗ ಮುಂದೆ ನನ್ನನ್ನು ಬ್ಲ್ಯಾಕ್ ಲಿಸ್ಟ್ ಮಾಡುವುದಾಗಿ ಹೇಳಲು ಮರೆಯಲಿಲ್ಲ! ಆಕಾಶವಾಣಿಯ ಹಂಗು ನನಗೂ ಯಾಜಮಾನ್ಯ ಆತನಿಗೂ ಇರದ ಕಾರಣ ಆತನ ಮಾತು ನಡೆಯಲಿಲ್ಲ ಎನ್ನುವುದು ಪ್ರತ್ಯೇಕ.

ಪತ್ರಿಕೆಗಳಿಗೆ ಲೇಖನ ಬರೆಯುವಾಗ ಗಮನ ಹರಿಸಬೇಕಾದ ಇನ್ನೊಂದು ಮುಖ್ಯ ವಿಷಯ (ಈಗ ಈ ಕಾಯಿಲೆ ಇನ್ನಷ್ಟು ಬಿಗಡಾಯಿಸಿದೆ!) ಸ್ಥಳದ ಕೊರತೆ. ಓದುಗರಿಗೆ ಜವಾಬ್ದಾರವಾಗುವ ಎಚ್ಚರ ಇಂದು ಹೆಚ್ಚಿನ ಸಮೂಹ ಮಾಧ್ಯಮದಲ್ಲಿ ಕಳೆದು ಹೋಗಿದೆ. ವರ್ತಮಾನದ ಎಲ್ಲ ವಿಚಾರಗಳಿಗೂ ಕಿಂಡಿ ಕೊಡುವ ಹುಚ್ಚಿನಲ್ಲಿ ಪಾವೆಂ ಆಚಾರ್ಯರಂತವರು ಲೇಖಕರನ್ನು ಹುಟ್ಟಿಸುತ್ತಿದ್ದರು. ಕೊರತೆ ಬಂದಲ್ಲಿ ತಾವೇ ಮರಸು-ನಾಮಗಳಲ್ಲಿ (ಲಾಂಗೂಲಾಚಾರ್ಯ, ರಾಧಾಕೃಷ್ಣರಾವ್, ಮುರಳೀಧರ ಇತ್ಯಾದಿ) ಬರೆಯುತ್ತಿದ್ದರು. ನನ್ನ ತಂದೆ ವಿಶ್ವಕೋಶಕ್ಕೆ, ವಯಸ್ಕರ ಶಿಕ್ಷಣ ಸಂಸ್ಥೆಯ ಮಾಸಿಕಕ್ಕೆ ಎಳೆದು ತಂದ ಲೇಖಕರಿಗಂತೂ ಕೊನೆಯೇ ಇಲ್ಲ. ಆದರಿಂದು ಸಾರ್ವಜನಿಕ ವಿಶ್ವಾಸಾರ್ಹತೆ ಅರ್ಥಾತ್ ಪತ್ರಿಕಾ ಸ್ವಾತಂತ್ರ್ಯ ಎನ್ನುವ ಮೌಲ್ಯವನ್ನು ಉದ್ಯಮದ ಆರ್ಥಿಕ ಯಶಸ್ಸಿಗೆ ಅಡವಿಟ್ಟವನೇ ಯಶಸ್ವೀ ಪತ್ರಿಕೋದ್ಯಮಿ. ದೂರದರ್ಶನದ ಭಾಷೆಯಲ್ಲಿ ಹೇಳುವುದಾದರೆ ಟೀಯಾರ್ಪೀ, ಪ್ರಸಾರ ಸಂಖ್ಯೆಯೊಂದೇ ಮಾನದಂಡ. ಗುಣಮಟ್ಟದ ಬಗ್ಗೆ ನಾವು ಕಳವಳಿಸಿದರೆ ಹಗುರವಾಗಿಯೇ ಹೇಳ್ತಾರೆ “ಹೋಗಲಿ ಸ್ವಾಮಿ ಮಾನ ದಂಡಾ.” ಸಹಜವಾಗಿ ದೈನಂದಿನ ಜಾಹೀರಾತುದಾರರು ಮತ್ತು ‘ಪಾವತಿ ಸುದ್ದಿ’ಗಳಿಗೆ ಪ್ರಥಮಾದ್ಯತೆ. (ಚುನಾವಣಾ ಕಾಲದಲ್ಲಿ ಪತ್ರಿಕೆಗೆ ಒಂದು ಸಾವಿರ ಪ್ರತಿಗಳ ಖರೀದಿ ಮುಂಗಡ ಸಿಕ್ಕಾಗ ಲೋನ್ ಪೂಜಾರಿ ಎಂದೇ ಗೇಲಿ ಮಾಡುತ್ತಿದ್ದ ಸಾಪ್ತಾಹಿಕವೊಂದು ಜನಾರ್ದನ ಪೂಜಾರಿಯವರ ಸಮಾಜಸೇವೆಯ ಬಗ್ಗೆ ಅಗ್ರ ಲೇಖನ ಪ್ರಕಟಿಸಿದ್ದು ನಾನೆಂದೂ ಮರೆಯಲಾರೆ.) ಅನಂತರ ನಿಗದಿತ ಪುಟ, ಅಂಕಣಗಳ ಗೋಜಲಿನಲ್ಲೂ ಉಳಿಯಬಹುದಾದ ಜಾಗಕ್ಕೆ ವಿಷಯದ ಗಾಂಭೀರ್ಯ ಮತ್ತು ಹರಹನ್ನು ಲೇಖಕನೇ ಅಂದಾಜಿಸಿ ಮಿತಗೊಳಿಸಬೇಕು. ಇಲ್ಲವಾದರೆ ‘ಸಂಪಾದಕೀಯ ಸ್ವಾತಂತ್ರ್ಯ’ದ ಹೆಸರಿನಲ್ಲಿ ಕುರುಡು ಕತ್ತರಿ ಪ್ರಯೋಗವಾಗುವುದು ಖಂಡಿತ. ಸದ್ಯ ನೆನಪಾಗುವ ಸಣ್ಣ ಉದಾಹರಣೆ, ಇಲ್ಲೇ ಕೆಲವು ವಾರದ ಹಿಂದೆ ಪ್ರಕಟವಾದ ವಾಲಿಕುಂಜ. ಅದರ ಮೊದಲ ಆರೋಹಣದ ಕಥನವನ್ನು ನಾನೊಂದು ಪತ್ರಿಕೆಗೆ ಕಳಿಸಿದ್ದೆ (ಸುಮಾರು ಎರಡು ದಶಕದ ಹಿಂದಿನ ಕಥೆ). ನನ್ನ ಕಥನದಲ್ಲಿ ಏರಿದಷ್ಟೇ ರೋಚಕತೆ ಇಳಿಯುವಲ್ಲೂ ಇತ್ತು. ಆದರೆ ಪ್ರಕಟಿಸಿದ ಸಂಪಾದಕರು ತಂಡವನ್ನು ‘ಒಂದೇ ಗೆರೆ’ಯಲ್ಲಿ ಊರಿಗೆ ಮರಳಿಸಿದ್ದರು!

ಆ ಕಾಲದಲ್ಲಿ ಲೇಖನ ಅದಕ್ಕೆ ಪೂರಕವಾದ ಚಿತ್ರಗಳೆಲ್ಲವನ್ನು ಕಾಗದ ರೂಪದಲ್ಲೇ ಸಜ್ಜುಗೊಳಿಸಿ (ಹಾರ್ಡ್ ಕಾಪಿ, ಈಗಿನಂತೆ ಡಿಜಿಟಲ್ ಅರ್ಥಾತ್ ಮಿಂಚಂಚೆಯಲ್ಲ), ಅಂಚೆ ಮೂಲಕ ಕಳಿಸಿಕೊಡಬೇಕಾಗುತ್ತಿತ್ತು. ಒಂದೊಮ್ಮೆ ಅದು ತಿರಸ್ಕೃತವಾದರೆ, ಅವೆಲ್ಲ ನಮಗೆ ಬೇಕೇ ಆದರೆ, ಮರಳಿಸಲು ನಾವು ಸಾಕಷ್ಟು ಅಂಚೆ ಚೀಟಿಯನ್ನು ಲಗತ್ತಿಸಬೇಕಿತ್ತು. ಅಷ್ಟಾಗಿಯೂ ಪತ್ರಿಕೆಯವರು ನಮಗೆ ಯಾವುದೇ ರೀತಿಯಲ್ಲಿ ಜವಾಬು-ದಾರರಾಗುತ್ತಿರಲಿಲ್ಲ. (ತುಂಬಾ ಹಿಂದೆ ‘ಸ್ವೀಕೃತ/ಅಸ್ವೀಕೃತ’ ಕಾರ್ಡು ಬರುತ್ತಿತ್ತು. ಮುಂದುವರಿದ ದಿನಗಳಲ್ಲಿ ಆ ಸೌಜನ್ಯಕ್ಕೂ ಕತ್ತರಿಬಿತ್ತು!) ಕೆಲಕಾಲ ಕಳೆದು ಲೇಖನ ಪ್ರಕಟವಾಗಲೂಬಹುದು. ವಾರೀಸುದಾರರು ಕಾದೇ ಇರಬೇಕು. ತಿಂಗಳೆರಡು ಕಳೆದು ‘ವಿಷಾದ ಪತ್ರ’ ಹೊತ್ತು ಕಡತ ಮರಳಲೂಬಹುದು. ಲಗತ್ತಿಸಿದ ಅಂಚೆಚೀಟೂ ಸೇರಿ ಕಡತ ಯುದ್ಧರಂಗಕ್ಕೆ ಹೋದ ಆತ್ಮೀಯನಂತೆ ಬಾರದಿರಲೂಬಹುದು. (ಇಂದಾದರೋ ವಿದ್ಯುನ್ಮಾನ ಸೌಕರ್ಯದಲ್ಲಿ ಎಲ್ಲ ಗಣಕದ ಒಂದೆರಡು ಗುಂಡಿಗಳಲ್ಲಿ ಮುಗಿದುಹೋಗುತ್ತದೆ!) ಈ ಎಲ್ಲಾ ವೆಚ್ಚ, ಹಿಂಸೆಗಳ ನಿವಾರಣೆಗೆ ಅಂದು ನನಗೆ ಕಾಣುತ್ತಿದ್ದ ಒಂದೇ ದಾರಿ – ನನ್ನದೇ ಪುಸ್ತಕ ಪ್ರಕಟಣೆ. (ಇಂದು ಅದ್ಭುತವಾಗಿ ಒದಗಿದೆ ನನ್ನದೇ ಜಾಲತಾಣ.)

ಚಂಡಿಮುಂಡು ಒಣಗುವವರೆಗೆ ಪದವಿಟ್ಟಳುಪದಗ್ಗಳಿಕೆಯ ಕುಮಾರವ್ಯಾಸ ಬಿಡಿ, ಪುರಾಣಪುರುಷ. ಹುಚ್ಚುಮನಸ್ಸಿನ ಹತ್ತು ಮುಖವಿದ್ದೂ ಕಾರಂತರು ನಾಲ್ಕೆಂಟು ದಿನ ಶಿಸ್ತುಬದ್ಧವಾಗಿ ಕುಳಿತು ಕಾದಂಬರಿಗಳನ್ನು ಬರೆದು ಮುಗಿಸಿದ್ದು ಕೇಳಿದ್ದೇನೆ. ಭೈರಪ್ಪನವರು ಒಂದು ಕಾದಂಬರಿ ರಚನೆಗಿಳಿದರೆಂದರೆ ಅಜ್ಞಾತವಾಸಕ್ಕೇ ಸಂದು ಹೋಗುತ್ತಾರೆ. ಸಿನಿಮಾರಂಗದ ಅಭಯ ಹೇಳ್ತಾನೆ ಅಲ್ಲಿನ ಕವಿ/ ಸಾಹಿತಿ ಬ್ರಹ್ಮರು ವರ ಕರುಣಿಸಬೇಕಾದರೆ ಸ್ಟಾರ್ ಹೋಟೆಲ್ಲಿನ ಏಕಾಂತದಲ್ಲಿ ತಪಶ್ಚರ್ಯೆ ಮಾಡುತ್ತಾರಂತೆ! ಇವು ಯಾವವೂ ನನ್ನನ್ನು ಪ್ರಭಾವಿಸಿಲ್ಲ. ನನ್ನ ಸ್ವಭಾವದಲ್ಲಿ ಯಾವುದೇ ಸಂಗತಿಯನ್ನು ಏಕಧ್ಯಾನದಲ್ಲಿ ನಡೆಸಿದ್ದಿಲ್ಲ. ನನ್ನ ಬರವಣಿಗೆಯೂ ಹಾಗೇ. ನನ್ನ ಲೆಕ್ಕದಲ್ಲಿ ಹೇಳುವುದಾದರೆ, ಉದ್ದ ಲೇಖನದಂತೆ ಬಂದದ್ದರಿಂದಲೋ ಇನ್ನೂ ಜಾಣತನ ಬೆಳೆಯದ್ದರಿಂದಲೋ ಏಕಪ್ರವಾಹವಾಗಿ ಬಂದ ತಾತಾರ್ ಶಿಖರಾರೋಹಣ ಒಂದು ಅಪವಾದ. ಸ್ವಲ್ಪ ಮುಂದುವರಿದು ಸ್ನಾತಕ ಪದವಿಯಲ್ಲಿದ್ದಾಗ ನಾನು ಸರಣಿ ಹಿಡಿದು ಇಂಗ್ಲಿಷ್ ಮೃಗಯಾ ಸಾಹಿತ್ಯ ಓದಿದ್ದಿತ್ತು. ಆಗ ಭಾರೀ ಇಷ್ಟಪಟ್ಟು ನೈನ್ ಮ್ಯಾನ್ ಈಟರ್ಸ್ ಅಂಡ್ ಒನ್ ರೋಗ್ (ಲೇಖಕ – ಕೆನೆತ್ ಆಂಡರ್ಸನ್) ಅನುವಾದಕ್ಕೆ ತೊಡಗಿಕೊಂಡೆ. ಮೊದಲ ಅಧ್ಯಾಯ ಅರ್ಧ ಆಗುವ ಮೊದಲು ಏಳನೇ ಅಧ್ಯಾಯ ಹೆಚ್ಚು ಆಕರ್ಷಿಸಿತು. ಅದನ್ನು ನಾಲ್ಕು ಪ್ಯಾರಾ ಮುಗಿಸುವುದರೊಳಗೆ ಇನ್ನೊಂದು, ಮತ್ತೊಂದು ಎಂದು ಪ್ರತ್ಯೇಕ ಹಾಳೆಗಳಲ್ಲಿ ‘ಶ್ರೀಕಾರ’ ಹಾಕಿದ್ದೇ ಬಂತು. ಅಂದು ಹೀಗೇ ಮಾಡಿಬಿಟ್ಟ ಹಾಳೆಗಳನ್ನು (ಇಂದೂ ನನ್ನಲ್ಲಿವೆ) ಒಟ್ಟು ನೋಡಿದರೆ ಮೂಲ ಪುಸ್ತಕದ ಮುಕ್ಕಾಲು ತೂಕವೇನೋ ಅನುವಾದಗೊಂಡಿದೆ. ಆದರೆ ಒಂದು ಅಧ್ಯಾಯವು ‘ಸಮಾಪ್ತಿ’ ಕಂಡೇ ಇಲ್ಲ! ಒಟ್ಟಾರೆ ಪುಸ್ತಕ ಬರೆಯುವ ಮಾತು ದೂರ ಉಳಿಯಿತು

ಪ್ರಕಟಣೆಗಾಗಿ ಬರೆಯುವುದೆಂದ ಕೂಡಲೇ ನನ್ನ ಲೇಖನಿ ಕುಂಟುತ್ತದೆ. ಪ್ರೀತಿ ಕಡಿಮೆಯಾಗುವುದಿಲ್ಲ, ಆದರೆ ಅನುಭವ ಅದು ಒಂದು ಎಳೆಯಾಗಿ ಬರುವುದೇ ಇಲ್ಲ. ಪ್ರತಿ ವಾಕ್ಯ, ಪ್ರತಿ ವಾಕ್ಯ ಖಂಡದಲ್ಲು ಅನೇಕ ಹೊಳಹುಗಳು, ಪ್ರಯೋಗಗಳು ಮುಂದೊತ್ತಿ, ಆಯ್ಕೆಯಲ್ಲಿ ತಡವುತ್ತಲೇ ಸಾಗುವುದು ನನ್ನ ಖರ್ಮ. ಕಾಗದದಲ್ಲಿ ಬರೆಯುತ್ತಿದ್ದ ಕಾಲದಲ್ಲಿ ಕನಿಷ್ಠ ಎರಡು ಬಾರಿಯಾದರೂ ಇಡೀ ಲೇಖನ ಕಾಟು, ಚಿತ್ತು ಮತ್ತು ಓಟವನ್ನು ಮರುನಿರ್ದೇಶನ ಮಾಡುವ ಅಸಂಖ್ಯ ಬಾಣ ಗುರುತುಗಳಿಂದ ‘ಅಲಂಕಾರ’ಗೊಂಡೇ ಶುದ್ಧ ಪ್ರತಿಗೆ ಬರುತ್ತಿತ್ತು. ಅಲ್ಲೂ ತೃಪ್ತಿಯಾಗದೇ ಮತ್ತೊಂದೇ ಶುದ್ಧ ಪ್ರತಿಗೆ ಹೋದ ಸಂದರ್ಭಗಳೂ ಇಲ್ಲದಿಲ್ಲ. ನನ್ನ ನಾಲ್ಕು ಪುಟದ ಲೇಖನ ಸಿದ್ಧಗೊಳ್ಳುವುದೆಂದರೆ ಕನಿಷ್ಠ ಎಂಟು ಬಿಳೀ ಹಾಳೆಗಳು ಇನ್ನು ಜಾಗವಿಲ್ಲದಂತೆ ಮಸಿತುಂಬಿ, ಕಡೆಗೆ ಮುದ್ದೆಯಾಗಿ ಕಬು ಸೇರಲೇಬೇಕಿತ್ತು. (ಗಣಕ ಬಂದಮೇಲೆ ವಿದ್ಯುತ್ ಹೆಚ್ಚು ಖರ್ಚಾದರೂ ಕಾಗದ ಹಾಳಾಗುತ್ತಿಲ್ಲ. ಆರಿಸು, ಕತ್ತರಿಸು, ಅಂಟಿಸು ಮತ್ತು ಅಳಿಸು ಬರವಣಿಗೆಯ ಶ್ರಮವನ್ನು ತುಂಬಾ ಕಡಿಮೆ ಮಾಡಿದೆ.) ಇದು ಸ್ವಲ್ಪ ತಂದೆಯಿಂದ ಬಂದ ಪರ್ಫೆಕ್ಷನಿಸ್ಟ್ ಅಭ್ಯಾಸ ಮತ್ತು ಬಹ್ವಂಶ ನನ್ನದೇ ಬಹುಮುಖೀ ಆಸಕ್ತಿಗಳಿಂದ ಉಂಟಾಗುವ ಗೊಂದಲ. ತಂದೆ ಯಾವುದೇ ಲೇಖನವನ್ನು ಕನಿಷ್ಠ ಎರಡು ಬಾರಿಯಾದರೂ ತಿದ್ದಿ ಬರೆಯುತ್ತಿದ್ದರು. ಮತ್ತು ತಮ್ಮದೇ ಪುಸ್ತಕಗಳಲ್ಲೂ ಪ್ರತಿ ಮರುಮುದ್ರಣಕ್ಕೂ ಆಮೂಲಾಗ್ರ ಪರಿಷ್ಕರಿಸುತ್ತಿದ್ದರು. ನನ್ನ ದಿಕ್ಕೇಡಿತನಕ್ಕೆ ಉದಾಹರಣೆಗೆ ಈ ಲೇಖನ ರೂಪುಗೊಂಡ ಬಗೆಯನ್ನೇ ತೆಗೆದುಕೊಳ್ಳಿ.

ನನ್ನ ಜಾಲತಾಣದ ಲೇಖನಗಳಲ್ಲಿ ಹಲವು ಕಡೆ ಅನಿವಾರ್ಯವಾಗಿ ನಾನು ‘ಚಕ್ರವರ್ತಿಗಳು’ (೧೯೯೦ರಲ್ಲಿ ಅತ್ರಿಯಲ್ಲೇ ಪ್ರಕಟವಾದ ನನ್ನದೇ ಪುಸ್ತಕ, ಸದ್ಯ ಅಲಭ್ಯ) ಉಲ್ಲೇಖಿಸುತ್ತಿರುತ್ತೇನೆ. ಯಾಕೇ ಇರಲಿ, ಪ್ರತಿಗಳನ್ನು ಕೇಳುವವರು ಹೆಚ್ಚುತ್ತಾ ಇದ್ದರು. ಪುಸ್ತಕವನ್ನು ಹಾಗೇ ಮರುಮುದ್ರಣ ಮಾಡುವುದು ಓದುಗರನ್ನು ಅವಮಾನಿಸಿದಂತೇ ಸರಿ. ಈಗಾಗಲೇ ನನ್ನ ಮೊದಲ ಪುಸ್ತಕ ತಾತಾರ್ ಶಿಖರಾರೋಹಣವನ್ನು ಪರಿಷ್ಕರಿಸಿ ಇಲ್ಲೇ ಜಾಲಲೇಖನ ಮಾಡಿದೆ. ಮತ್ತದಕ್ಕೆ ಪುನರ್ಮುದ್ರಣದಲ್ಲಿ ಹೊಸ ಪುಸ್ತಕವಾಗುವ ಗಾತ್ರವಿಲ್ಲವೆಂದು ಪರಿಗಣಿಸಿ, ಈಚೆಗೆ ಪ್ರಕಟವಾದ ನನ್ನ ಪುಸ್ತಕ – ಶಿಲಾರೋಹಿಯ ಕಡತಕ್ಕೆ ಸೇರಿಸಿಬಿಟ್ಟೆ. ಹಾಗೆಯೇ ಚಕ್ರವರ್ತಿಗಳನ್ನು ಅದು ದಾಖಲಿಸುವ ಮೌಲ್ಯಕ್ಕಾಗಿ, ವಿರಾಮದಲ್ಲಿ ಪರಿಷ್ಕರಿಸಿ, ಮರುಲೇಖಿಸಿ ಜಾಲತಾಣಕ್ಕೇರಿಸುವುದೆಂದು ಕೈಗೆತ್ತಿಕೊಂಡೆ. ಸಹಜವಾಗಿ ಈ ಕಾಲಕ್ಕೂ ಮತ್ತೆ ಜಾಲತಾಣಕ್ಕೂ ಅವಶ್ಯವಾದ ಪೀಠಿಕೆ ಒಂದು ಪುಟದ್ದೇನೋ ಬರೆದೆ. ಮತ್ತೆ ಅದೇ ಉಸಿರಿನಲ್ಲಿ ಪುಸ್ತಕದ ಮೊದಲ ಲೇಖನವನ್ನು ಕುಟ್ಟ ತೊಡಗಿದೆ. ಆದರೆ ಪ್ರತಿ ಬಾರಿ ಗಣಕದೆದುರು ಈ ಕಾರ್ಯಕ್ಕಿಳಿದಾಗ, ಪೀಠಿಕೆ ಓದುತ್ತಿದ್ದಂತೆ ವಿಷಯ ವಿಸ್ತರಿಸುತ್ತಾ ಹೋಯ್ತು. ಈಗ ಹೀಗೊಂದು ಸ್ವತಂತ್ರ ಲೇಖನವೇ ಆಗಿದೆ! ಜಾಲತಾಣಗಳು, ಪರೋಕ್ಷವಾಗಿ ಅಂತರ್ಜಾಲ ವ್ಯವಸ್ಥೆ ಲೇಖನಕ್ಕೆ, ವಿಚಾರ ಮಂಥನಕ್ಕೆ ಬಹು ದೊಡ್ಡ ಆಯಾಮವನ್ನೇ ಕೊಟ್ಟಿವೆ. ಮೊದಲು ಅದು ತನ್ನನ್ನು ಸಾರ್ವಜನಿಕಕ್ಕೆ ತೆರೆದುಕೊಳ್ಳಲು ಬಯಸುವ ಯಾವುದೇ ಲೇಖಕನಿಗೆ ಅಪಾರ ಸ್ವಾತಂತ್ರ್ಯ ಕೊಡುತ್ತದೆ. (ಹಾಗಾಗಿ ಇಲ್ಲಿ ವೈಯಕ್ತಿಕ ಅಂಚೆಯಲ್ಲೂ ಸ್ಪಾಮ್ ಎಂಬ ಜಾಲರಿ/ಕಸದಬುಟ್ಟಿ ಉಚಿತವಾಗಿಯೇ ಕೊಟ್ಟಿರುತ್ತಾರೆ ಅಲ್ಲವೇ!) ಮತ್ತೆ ಅದು ಅಕ್ಷರಶಃ ಮಾಹಿತಿ ಸಾಗರವನ್ನು ಪೂರಕ ಮಾಹಿತಿಯಾಗಿಯೋ, ಚಿತ್ರವಾಗಿಯೋ, ಧ್ವನಿಯಾಗಿಯೋ ಒಡ್ಡಿಕೊಳ್ಳುವ ಪರಿಯಂತೂ ಅಸದೃಶ. ಇಲ್ಲಿ ಅದನ್ನೆಲ್ಲ ನಿಮಗೆ ವಿವರಿಸ ಹೊರಟರೆ, ತಮ್ಮ ಅಮೂಲ್ಯ ಸಮಯ ಹೊಂದಿಸಿ, ಟಿಕೆಟ್ಟು ಖರೀದಿಸಿ ನಾಟಕವೋ ಯಕ್ಷಗಾನಕ್ಕೋ ಕುಳಿತವರೆದುರು, ಜನ್ಮದಲ್ಲಿ ನೈಜ ಆಸಕ್ತಿಯಿಂದ ಕಲೆಯನ್ನು ಆಸ್ವಾದಿಸದವನು, ಅನ್ಯ ಕಾರಣಗಳಿಗೆ ಮೈಕ್ ಹಿಡಿದ ಏಕೈಕ ಯೋಗ್ಯತೆಯಿಂದ ಕೊರೆದಂತಾದೀತೆಂದು ಹೆದರಿ ಕಥನಕ್ಕಿಳಿಯುತ್ತೇನೆ.

ಯಾವುದೇ ಸಾಹಸಯಾನಕ್ಕೆ ಹೊರಡುವಾಗ ಮಂಗಳೂರು ನಗರದಿಂದ ಯೋಜನೆಯಂತೆ ಊರಿಗೆ ಮೊದಲೋ ತಡ ರಾತ್ರಿಯಲ್ಲೋ ಏನೋ ಒಂದು ಸಾರ್ವಜನಿಕ ಸಾಗಣೆ ಹಿಡಿಯುವುದು ಸರಿ. ಉದಾಹರಣೆಗೆ ಆಳ ಸಮುದ್ರದಲ್ಲಿ ಮೀನು ಹಿಡಿಯುವುದು ನೋಡಬೇಕಾದರೆ ಬೆಳೀಈಈಗ್ಗೆ ಮೂರು ಗಂಟೆಗೆ ಮನೆ ಬಿಟ್ಟು ಉಚ್ಚಿಲಕ್ಕೆ ಬನ್ನಿ ಅಂತ ರವಿ ಕರೆ ಕೊಟ್ಟಾಗ ನಾವು ಏನೆಲ್ಲಾ ಪರದಾಡಿರಬಹುದು ಎಂದು ಯೋಚಿಸಿ. ಇನ್ನು ನಿಶಾಚರಿ ಬಸ್ಸಿನಲ್ಲಿ ಹೊರಟು ಎಲ್ಲೋ ಕಗ್ಗಾಡಮೂಲೆಯಲ್ಲಿ ಇಳಿದು ಮೊಲ ಬೇಟೆಯವರಿಗೆ ಈಡಾಗದೇ ಉಳಿದ ಕಥೆಯೂ ಇಲ್ಲಿ ವಿಸ್ತರಿಸುವುದಿಲ್ಲ. ಹೀಗೆಲ್ಲಾ ಹೋದದ್ದು ಏನೋ ಒಂದು ಯೋಜನೆಯಂತೇ ನಡೆಯುತ್ತಿತ್ತು. ಆದರೆ ಎಲ್ಲ ಮುಗಿದ ಮೇಲೆ ವಾಪಾಸು ಬರುವುದು ಮಾತ್ರ ಹೆಚ್ಚುಕಮ್ಮಿ ಯಾವತ್ತೂ ಸಮಸ್ಯಾತ್ಮಕವೇ ಆಗುತ್ತಿತ್ತು. ಯಾವ ಯೋಜನೆಗೂ ದಕ್ಕುತ್ತಿರಲಿಲ್ಲ. ಯಾಣಕ್ಕೆ ಹೋದವರು ಕತ್ತಲಲ್ಲಿ ಹೆದ್ದಾರಿಗೇನೋ ಮರಳಿದ್ದು ಸರಿ. ಆದರೆ ರಾತ್ರಿ ಬಸ್ಸುಗಳು ಇಲ್ಲದ ಕಾಲದಲ್ಲಿ ಬೆಳಕು ಹರಿಯುವುದರೊಳಗೆ ಮಂಗಳೂರು ಸೇರುವ ತುರ್ತು ನಿಭಾಯಿಸಿದ್ದು ನಿಜಕ್ಕೂ ಅಸಾಮಾನ್ಯ! (ನೀವೀಗಾಗಲೇ ಓದಿಲ್ಲದಿದ್ದರೆ, ಇಲ್ಲಿ ಚಿಟಿಕೆ ಹೊಡೆಯಿರಿ) ಪ್ರಥಮ ಜೋಗ ದರ್ಶನದಿಂದ ಮರಳುವಾಗ ಕೆಸರಟ್ಟಿಸಿ ಬಸ್ಸಿನೊಳಗಿನ ಓಣಿಯಲ್ಲಿ, ಗಾಂಧಿ ಕೃಪೆಯಲ್ಲಿ ಹೊರಳಾಡಿ ಮರಳಿದ್ದು (ಮರೆತಿರಾದರೆ ಇಲ್ಲಿ ಚಿಟಿಕೆ ಹೊಡೆಯಿರಿ) ಇನ್ನೊಮ್ಮೆ ಬೇಡಪ್ಪಾ ಬೇಡ! ನನ್ನ ಮಾವನ ಆ ಕಾಲದ ಸ್ಕೂಟರ್ ಜೀವಮಾನದಲ್ಲಿ ಅನುಭವಿಸಿದ ಕಠಿಣ ಸವಾಲುಗಳಿಗೆಲ್ಲಾ ಸವಾರ ನಾನೇ.

ಆರ್ಥಿಕವಾಗಿ ಅನುಕೂಲವಾದ ಮೊದಲಲ್ಲಿ ನಾನು ಮಾಡಿದ ಆಸ್ತಿ ಯೆಜ್ದಿ ಮೋಟಾರ್ ಬೈಕ್ (೧೯೮೦). ಸುಮಾರು ಆ ಕಾಲಕ್ಕೇ ನನ್ನ ಸಹವಾರಿತನಕ್ಕೆ ಖಾಯಂ ಸದಸ್ಯಳಾಗಿ ಜೀವನಸಾಥಿಯನ್ನೂ (ದೇವಕಿ) ಮಾಡಿಕೊಂಡೆ. ಹಾಗಾಗಿ ನನಗೆ ಜೊತೆಗೊಡುವ ಇತರ ಸಾಹಸಯಾನಿಗಳಿಗೂ ದ್ವಿಚಕ್ರ ಹೊಂದಿಸಿಕೊಳ್ಳಲು ಸೂಚಿಸುತ್ತಿದ್ದೆ. ಕನಿಷ್ಠ ತಮ್ಮ ಸಹವಾರತನವಾದರೂ ಗಟ್ಟಿಯಿರುವಂತೆ ಬೈಕ್ ಇರುವ ಮಿತ್ರರನ್ನು ಹೊರಡಿಸಿಕೊಂಡು ಬರಲು ಹೇಳುತ್ತಿದ್ದೆ. ಹಾಗೆಂದು ನಮಗೆ ಬೈಕ್ ಬರಿಯ ಸಾಗಣೆಗೇ ಮೀಸಲಾಗಲಿಲ್ಲ. ನಮ್ಮ ಸಾಹಸಯಾನಗಳಿಗೆ ಹೊಸ ಆಯಾಮ ಬಂತು, ಸುಪ್ತ ತಿರುಗೂಳಿತನ ಕೆರಳಿಕೊಂಡಿತು. ಅವುಗಳ ಫಲ ಈ ಚಕ್ರವರ್ತಿಗಳು.

ಸವಕಲು ಜಾಡು, ಎಂದೋ ಕಾಡು ಸಾಗಿಸಿದ ಕಚ್ಚಾದಾರಿ, ರೈಲ್ವೇ ಹಳಿ, ಸೊಂಟಮಟ್ಟದ ಹೊಳೆ ಎಂತೆಂಥಾ ಕಡೆಯೆಲ್ಲಾ ಶೋಧನ ಕುತೂಹಲದಿಂದ ನಾವು ಬೈಕ್ ನುಗ್ಗಿಸಿದ್ದೇವೆಂದಿಲ್ಲ. ರಾತ್ರಿ ಹಗಲುಗಳ ಬೇಧ ಮಾಡದೇ ಉತ್ತರ ಕನ್ನಡ, ಗೋವಾದವರೆಗೂ ಲಭ್ಯ ಒಂದೆರಡು ದಿನಗಳ ರಜೆಯಲ್ಲಿ ಪ್ರವಾಸ ಹುಡಿಹಾರಿಸಿದ್ದುಂಟು. ಇದರ ಪರಾಕಾಷ್ಠೆಯಲ್ಲಿ ಹತ್ತು ದಿನಗಳ ದಕ್ಷಿಣ ಭಾರತ ಸುತ್ತಿದ್ದೆವು. ಆ ಅನುಭವವನ್ನು ನಾನು ಯತ್ಕಿಂಚಿತ್ ಚಕ್ರವರ್ತಿಯಲ್ಲಿ ಬರೆದು ದಾಖಲಿಸಿದ್ದೇನೆ ಮತ್ತು ಇಲ್ಲೇ ಮುಂದೆ ಮರುಲೇಖಿಸುತ್ತೇನೆ. ಆದರೆ ತಲಾ ಮೂವತ್ತೈದು ದಿನಗಳ ಎರಡು ಭಾರತ ಯಾತ್ರೆ (ಬೈಕ್ ಹೀರೋ ಹೊಂಡಾ) ಮಾತ್ರ ಇನ್ನೂ ಬರಹಕ್ಕಿಳಿಸಲಾಗದ ಅದ್ಭುತ ನೆನಪಿನ ಹೊರೆಯಾಗಿಯೇ ಉಳಿದಿರುವುದನ್ನು ವಿಷಾದಪೂರ್ವಕವಾಗಿ ಹೇಳುವುದಷ್ಟೇ ಸಾಧ್ಯ. ದೇವುಹನೆಹಳ್ಳಿ ನನಗಿನ್ನೂ ಹತ್ತಿರದವರಾಗುವ ಮೊದಲೊಮ್ಮೆ ಸುಂದರರಾಯರನ್ನು ಭೇಟಿಯಾಗಿದ್ದಾಗ ನನ್ನ ಬಗ್ಗೆ ದೂರಿದ್ದರಂತೆ. “ಹೆಸರು ಮಾತ್ರ ಆರೋಹಣ ಪರ್ವತಾರೋಹಿಗಳು. ಜೊತೆಗೊಡಬೇಕಾದರೆ ಬೈಕ್ ಇರಬೇಕಂತೆ. ಆಪ್ದಲ್ಲ ಹೋಪ್ದಲ್ಲಾ.” ‘ಚಕ್ರವರ್ತಿಗಳು’ ವೈಭವದ ಹುಚ್ಚೆಂದು ಒಮ್ಮೆ ಅವರು ಭಾವಿಸಿದ್ದು ಸರಿ. ಆದರೆ ವಾಸ್ತವದಲ್ಲಿ ನಾವು ಅನುಭವ ಸಾಮ್ರಾಜ್ಯದ ವಿಸ್ತರಣೆಯಲ್ಲಿ ಆಸಕ್ತರು ಎನ್ನುವುದನ್ನು ಮುಂದೆ ಅವರು ತಿಳಿದುಕೊಂಡರು. ನಿಮಗೂ ಶ್ರುತಪಡಿಸಲು ಮುಂದಿನವಾರ ‘ಮೂರುದಾರಿ’ ಹಿಡಿದು ತೊಡಗುತ್ತೇನೆ. ಅಲ್ಲಿವರೆಗೆ ಸದ್ಯ ನನ್ನ ‘ದಾರಿ’ ಬಳಸಿದ್ದಕ್ಕೆ ನಿಮ್ಮನ್ನು ಸುಮ್ಕೇ ಬಿಡೋದಿಲ್ಲಾ ಹಾಕಿ ಕೆಳಗಿನ ಪ್ರತಿಕ್ರಿಯಾ ಅಂಕಣಕ್ಕೆ ಸುಂಕಾ.