(ಮಂಡೂಕೋಪಖ್ಯಾನದ ಎರಡನೇ ಮತ್ತು ಅಂತಿಮ ಭಾಗ)

ಆಗಸ್ಟ್ ಇಪ್ಪತ್ನಾಲ್ಕರ ಅಪರಾತ್ರಿ ಎರಡು ಗಂಟೆಯ ಸುಮಾರಿಗೇ ಬೆಂಗಳೂರಿನಲ್ಲೊಂದು ಕ್ವಾಲಿಸ್ ನಗರದ ವಿವಿಧ ಮೂಲೆಗಳಿಗೆ ಓಡಾಡಿ ಐದಾರು ಬಿಸಿಲೆ ‘ಯಾತ್ರಿ’ಗಳನ್ನು ಸಂಗ್ರಹಿಸಲು ತೊಡಗಿತ್ತು. ಮೂರೂವರೆ ಗಂಟೆಯ ಸುಮಾರಿಗದು ನಗರ ಬಿಟ್ಟದ್ದೂ ಆಗಿತ್ತು. ಹಾಗೇ ಇತ್ತ ಮಂಗಳೂರಿನಲ್ಲೊಂದು ಟೆಂಪೋ ಟ್ರಾವಲ್ಲರ್ ಐದು ಗಂಟೆಯ ಸುಮಾರಿಗೆ ಓಡಾಡಿ ಹನ್ನೆರಡು ಮಂದಿಯನ್ನು ಒಟ್ಟು ಮಾಡಿತು. ಮತ್ತೆ ಜೋಡುಮಾರ್ಗ, ಉಪ್ಪಿನಂಗಡಿಗಳಲ್ಲಿ ಇನ್ನು ಕೆಲವರನ್ನು ಸೇರಿಸಿಕೊಂಡು ಮಳೆಯ ಏಕಧಾರೆಯನ್ನು ಅಡ್ಡಕ್ಕೆ ಕತ್ತರಿಸುತ್ತಾ ಕತ್ತಲೆಯನ್ನು ಉದ್ದಕ್ಕೆ ಸೀಳುತ್ತಾ ದಾರಿ ತೆಮರಿನ ಕಲಕು ನೀರನ್ನು ಆಗಸಕ್ಕೆ ಹಾರಿಸುತ್ತಾ ಬಿಸಿಲೆಯತ್ತ ಹೊರಟದ್ದೂ ಆಯ್ತು. ಆದರೆ ನಾವು ನಾಲ್ವರು, ಬಿಸಿಲೆಯ ಸಮುದಾಯ ಭವನದೊಳಗೆ ಬೆಚ್ಚಗೆ ಮಲಗಿದ್ದವರು ಮಾತ್ರ, ಸುಂದರ ಕನಸುಗಳಲ್ಲಿ, ಕೊಳಕುಕಪ್ಪೆ ಸುಂದರ ರಾಜಕುಮಾರನಾಗಿ ಕತೆ ಕಾಡಿಗೆ ಹೋದ ಮೇಲೇ ಸುಖವಾಗಿ ಬೆಳಗ್ಗೆ ಮಾಡಿದೆವು. ಆರಾಮದಲ್ಲಿ ಪ್ರಾತರ್ವಿಧಿಗಳನ್ನು ಮುಗಿಸಿ, ದೇವೇ ಗೌಡರ ಚಾ ಹಾಕಿ ಯಾರ್ಯಾರು ಎಲ್ಲೆಲ್ಲಿ ಎಂದು ತಿಳಿಯಲು ಚರವಾಣಿಯಲ್ಲಿ ಪ್ರಯತ್ನ ಮಾಡಿದೆವು.

ಮೌರ್ಯ ಸಂಸ್ಥಾಪನಾಚಾರ್ಯ ಚಾಣಕ್ಯ ಹಳ್ಳಿಗಾಡಿನತ್ತ ನಡೆದಿದ್ದನಂತೆ. ಪುಟ್ಟ ದಿಬ್ಬದ ಮೇಲೆ ನಿಂತ ಕುರಿಗಾಹಿಯೊಬ್ಬ “ಮಹಾಸ್ವಾಮಿಗಳು ಬರಬೇಕು. ಪಾದ್ಯಕ್ಕೆ ನೀರು, ತೃಷೆಗೆ ಪಾನಕ, ಹಸಿವೆಗೆ…” ಎನ್ನುತ್ತ ಇಳಿದು ಬಂದನಂತೆ. ಚಾಣಕ್ಯ ಅನಿರೀಕ್ಷಿತ ಸಂಸ್ಕೃತಿ ಸಿಂಚನದಿಂದ ರೋಮಾಂಚನ ಅನುಭವಿಸಿ “ವತ್ಸಾ…” ಎನ್ನುವ ಮೊದಲು, ದಿಬ್ಬವಿಳಿದ ಅದೇ ಕುರಿಗಾಹಿ “ಏನ್ಲಾ ಜುಟ್ಟುಭಟ್ಟ, ಮನೇಲಿ ಮಸಾಲೆ ರುಬ್ಬಕ್ಕೇಳಿ, ಮರಿ ಹೊಡ್ಯಾಕೆ ಬಂದ್ಯಾ…” ಬೇರೇ ವರಸೆ ತೆಗೆದನಂತೆ. ಆಗ ಚಾಣಾಕ್ಷ ಚಾಣಕ್ಯ ಅದು ದಿಬ್ಬದ ಮಹಿಮೆ ಎಂದು ಅರಿವಾಗಿ, ಆ ದಿಬ್ಬವನ್ನು ಅಗೆಸಲಾಗಿ, ಸಂಸ್ಥಾನದ ಯೋಗ್ಯತೆಗೆ ತಕ್ಕುದಾದ ಮಹಿಮಾನ್ವಿತ ಸಿಂಹಾಸನ ಅಲ್ಲಿ ಹುಗಿದಿದ್ದಿತಂತೆ. ತದ್ರೀತಿಯಲ್ಲಿ ಬಿಸಿಲೆ ಅರಣ್ಯ ಇಲಾಖೆಯ ವಸತಿಯ ಎದುರೊಂದು ಮಹಿಮಾನ್ವಿತ ದಿಬ್ಬ – ‘ಚಾಣಕ್ಯದಿಬ್ಬ’ ಎನ್ನಿ, ಇದೆ. ಇಂದು ಎಲ್ಲ ಸರಿಯಿದ್ದ ದಿನಗಳಲ್ಲಿ ಬಿಸಿಲೆ ಪೇಟೆಯ ಹತ್ತೂ ಸಮಸ್ತರು ಸರತಿಯ ಸಾಲು ಹಿಡಿದು, ದಿಬ್ಬವೇರಿ ಜಗತ್ತಿನ ಮೂಲೆಮೂಲೆಗಳ ವಿದ್ಯಮಾನವನ್ನು ತಮ್ಮ ಮುಷ್ಠಿಯೊಳಗೆ ಆವಾಹಿಸಿಕೊಳ್ಳುತ್ತಿರುತ್ತಾರೆ! ಆದರೆ ಅಂದು ಮಾತ್ರ ವರುಣನ ಅವಕೃಪೆಯಿಂದ, ನಮ್ಮ ಮುಷ್ಠಿಗೆ ಮಹಾಶಕ್ತಿ ಒಲಿಯಲಿಲ್ಲ. ಆದರೆ ಬೀಟೀಸ್ಪಾಟ್‌ನಲ್ಲಿ ಸುಬ್ರಹ್ಮಣ್ಯದ ವಿಶೇಷ ಕೃಪೆ ಲಭ್ಯ ಎಂಬ ಅರಿವಿನಲ್ಲಿ ನಾವು ಅತ್ತ ವಿಹಾರ ಹೋದೆವು. ಬೆಂಗಳೂರಿನವರು ಹಾಸನದಲ್ಲೂ ಮಂಗಳೂರಿನವರು ನೇರ ತಪ್ಪಲಿನಲ್ಲೂ ಇದ್ದುದರಿಂದ ನಮ್ಮ ಕಾಯುವಿಕೆ ದೀರ್ಘಾಯುಷಿಯೇ ಎಂದುಕೊಂದು ಮರಳಿದೆವು. ಮಾಡಲು ಇನ್ನೇನೂ ಇಲ್ಲದ್ದಕ್ಕೆ ನಮ್ಮ ಉಪಾಹಾರದ ಕೊರತೆ ಮೊದಲು ನೀಗಿಸಿಕೊಂಡೆವು (ದೇವೇ ಗೌಡ ಕೃಪೆ). ಎಂಟೂವರೆಯ ಸುಮಾರಿಗೆ ಬಂದ ಮಂಗಳೂರಿನವರದು ಮುಂದಿನ ಕಂತು. ಅನಂತರ ಅವರೂ ಒಂದು ಸುತ್ತು ಬೀಟೀಸ್ಪಾಟ್ ಭೇಟಿ ಕೊಟ್ಟು, ಸಂಬಂಧಿತರಿಗೆಲ್ಲ ಪ್ರಯಾಣದ ಮತ್ತು (ಕೆಲವರು ಜನ್ಮದಲ್ಲೇ ಮೊದಲ ಬಾರಿ ಕಾಣುತ್ತಿದ್ದ ಪ್ರಾಕೃತಿಕ ಅದ್ಭುತವನ್ನು) ಸ್ಥಳದ ‘ಬಾಲ್ ಟು ಬಾಲ್’ ವಿವರಣೆ ಕೊಟ್ಟು ಬಂದರು. ಸುಮಾರು ಹತ್ತೂವರೆಗೆ ಬೆಂಗಳೂರಿನ ತಂಡವೂ ಬಂತು. ಅದು ನಿರೀಕ್ಷೆಗಿಂತ ತಡವಾಯ್ತು ಎನ್ನುವ ಆಕ್ಷೇಪಣೆ ಯಾರಲ್ಲೂ ಇರಲಿಲ್ಲ. ಆದರೆ ಆ ತಂಡದಲ್ಲಿದ್ದ ನಮ್ಮ ಶಿಬಿರದ ಸಂಪನ್ಮೂಲ ವ್ಯಕ್ತಿ ಡಾ| ಕೆ.ವಿ ಗುರುರಾಜ್ (ಕೆವಿಜಿ), ಸುಮಾರು ಅರ್ಧ ಗಂಟೆಯಲ್ಲೇ ಪ್ರಯಾಣದ ಕೊಳೆ ಕಳೆದು, ಉಪಾಹಾರದ ಆವಶ್ಯಕತೆ ಮುಗಿಸಿ, ಕಮ್ಮಟ ಕಲಾಪಕ್ಕೆ ಇಳಿದ ಪರಿ, ಅವರ ಕೆಲಸದ ಪ್ರೀತಿಗೂ ವಿಷಯದ ನಿಷ್ಠೆಗೂ ಹಿಡಿದ ಕನ್ನಡಿ ಎಂದು ಯಾರೂ ಹೇಳಿಯಾರು.

ಭವನದೊಳಗೆ ಎಲ್ಲಾ ನಿಂತುಕೊಂಡೇ ಪರಸ್ಪರ ಪರಿಚಯದ ಔಪಚಾರಿಕತೆ; ಐದೇ ಮಿನಿಟು. (ಕ್ಯಾಪ್ಟನ್ ದೀಪಿಕಾ “It gives me a great pleasure to introduce Dr. KV Gururaj…” ಎಂದಿತ್ಯಾದಿ ಉರು ಹಚ್ಚಿರಬಹುದಾದ ಪರಿಚಯ ಭಾಷಣ ವ್ಯರ್ಥವಾಗಿತ್ತು!) ಮರುಕ್ಷಣದಲ್ಲಿ ಕ್ಷೇತ್ರ ಕಾರ್ಯ ಶುರು. ಮಳೆಕೋಟು, ಕೊಡೆ ಮರೆತವರಿಲ್ಲ. ಬೇಕಾದ್ದು ಕಪ್ಪೆಯಾದರೂ ಜಿಗಣೆ ಸ್ಮರಣೆ ಅತಿಶಯವಾಗಿಯೇ ಇತ್ತು. ಜಿಗಣೆ ಕಾಲ್ಚೀಲದ (ಲೀಚ್ ಸಾಕ್ಸ್ – ಹಿಗ್ಗುವ ಗುಣವಿಲ್ಲದ ದಪ್ಪ ಬಟ್ಟೆಯದು) ಜನಪ್ರಿಯತೆ ಇಂದು ಹಲವರನ್ನು ಮುಟ್ಟಿತ್ತು. ಉಳಿದವರು ಮಾಮೂಲೀ ಉಪ್ಪು, ಡೆಟ್ಟಾಲ್, ಹೊಗೆ ಸೊಪ್ಪುಗಳಲ್ಲದೆ ಮಾಮೂಲೀ ಕಾಲ್ಚೀಲಗಳ ಮೇಲೆ ಕೆಲವು ಬುದ್ಧಿವಂತರು ಇಂಚಗಲದ ಪ್ಯಾಕಿಂಗ್ ಟೇಪನ್ನೇ ಮೂರು ಸುತ್ತು ಅಂಟಿಸಿದ ಚಂದ ನೋಡಿ ಜಿಗಣೆಗಳೇನು ನಾನೂ ಬೆರಗಾಗಿ ಹೋದೆ. ಪುಟ್ಟ ಪುಸ್ತಕ ಪೆನ್ಸಿಲ್ ಹಿಡಿದು ಅಂಗಳಕ್ಕಿಳಿದಲ್ಲೇ ಪಾಠ ಶುರು.

ಅಂಗಳದ ಹುಲ್ಲು, ಗೊಸರಿನಲ್ಲಿ ಕುಪ್ಪಳಿಸುತ್ತಿದ್ದವ, ಪಕ್ಕದ ಗಿಡದ ಮೇಲಾಡುತ್ತಿದ್ದಾಕೆ, ಮಳೆನೀರ ಹೊಂಡದಲ್ಲಿ ಬೀಸುಬಾಲವೇ ಎಲ್ಲ ಆಗಿದ್ದ ಜೀವ, ಝರಿಯಂಚಿನ ಬಂಡೆಗಂಟಿದವ, ಜಲಸ್ತಂಭನಕ್ಕಿಳಿಯುವ ಮುನ್ನ ಸಿಕ್ಕಿಬಿದ್ದವ, ಉದ್ದ ನಾಮದವ, ಸುಕ್ಕು ಚರ್ಮದವ, ಅಡ್ಡಗಣ್ಣಿನವ, ಹಳದಿಗಾಲಿನವ, ಹುಸಿ ಮರಣ ನಟಿಸಿದವ ಇತ್ಯಾದಿ ಹೆಸರಿಸಿ ಮುಗಿಯದ ವೈವಿಧ್ಯಗಳು ಕೈಸೆರೆಯಾದ್ದೆಲ್ಲಾ ಕಪ್ಪೆಗಳೇ. ಅವುಗಳಿಗೆ ನೋವಾಗದಂತೆ ಹಿಡಿದು, ದೇಹವರ್ಣನೆಗೆ ಬೇಕಾದಂತೆ ಬಿಡಿಸಿ, ಕವುಚಿ, ಮಗುಚುತ್ತಿದ್ದಂತೆಲ್ಲಾ ಆತ್ಮೀಯ ಶೈಲಿಯಲ್ಲಿ ಟಿಪ್ಪಣಿಗಳನ್ನು ಶಿಬಿರಾರ್ಥಿಗಳಿಂದಲೇ ಹೊರಡಿಸುತ್ತಿದ್ದರು ಕೆವಿಜಿ. ಕಪ್ಪೆಯ ಉದ್ದ, ಮೂಗಿನ ಡೊಂಕು, ಕಣ್ಣಿನ ಸೀಳು, (ಕಿವಿ) ತಮಟೆಯ ಬಣ್ಣ, ಚರ್ಮದ ರಚನೆ, ಪಾದದ ಜಾಲ, ಬೆರಳ ತುದಿಯ ಉಬ್ಬು, ಕೆಳತೊಡೆಯ ಸೂಕ್ಷ್ಮವೇ ಮುಂತಾದವುಗಳನ್ನು ತೋರುತ್ತ, ಔಚಿತ್ಯವನ್ನು ಕೆವಿಜಿ ತಿಳಿಸುತ್ತ ಹೋದರು. ನಮ್ಮ ಉತ್ಸಾಹಿಗಳು ಒಂದೇ ಪರಿಸರದಲ್ಲಿ ಧುಮುಕುವಾಗ ಒಂದೇ ಜಾತಿಯ ಮೂರು ನಾಲ್ಕು ಮಾದರಿಗಳು ಸಿಗುವುದಿತ್ತು. ಬರಿಯ ಗಾತ್ರದಲ್ಲಿ ಗುರುತಿಸುವಾಗ ಪ್ರೌಢ, ಮರಿಗಪ್ಪೆಗಳ ವ್ಯತ್ಯಾಸದಲ್ಲಿ ಎಡವುವುದೂ ಇತ್ತು. ಸರಿದಾರಿ ಹಿಡಿದಲ್ಲಿ ಭಲೆ, ಶಹಬ್ಬಾಸ್‌ಗಳೂ ಮುಗ್ಗರಿಸಿದಲ್ಲಿ ಕೈಯಾಸರೆ ಕೊಟ್ಟು ಗಟ್ಟಿಗೊಳಿಸುವ ಕೆವಿಜಿ ಶೈಲಿ ನಿಸ್ಸಂದೇಹವಾಗಿ ಅವರನ್ನು ಸದಾ ಗುಂಪಿನ ನಡುವೆಯೇ ಕಾಣುವಂತಾಯ್ತು.

ಗುರುಗ್ರಹಕ್ಕೆ ಅಸಂಖ್ಯ ಚಂದ್ರರು. ಆದರೂ ಆವರ್ತನ ಚುರುಕು (ಸುಮಾರು ಹತ್ತು ಭೂ ಗಂಟೆಗೆ ಒಂದು ಗುರುದಿನ). ಇನ್ನು ರಾಜರಿಗೋ ಪರಿವಾರ ದೊಡ್ಡದು. ಸಹಜವಾಗಿ ಪರಿಭ್ರಮಣೆ ನಿಧಾನ (ಸುಮಾರು ಹತ್ತು ಭೂವರ್ಷಗಳಿಗೆ ಒಂದು ಗುರುವರ್ಷ). ನಮ್ಮ ಗುರು+ರಾಜರಾದರೋ ವೈಯಕ್ತಿಕ ಚುರುಕಿನಲ್ಲಿ ಹತ್ತಿಪ್ಪತ್ತು ಮಂದಿಯನ್ನು ಸುಧಾರಿಸಿದರೂ ತಂಡ ಸಮುದಾಯ ಭವನದ ವಠಾರ ಬಿಟ್ಟು ನೂರಿನ್ನೂರು ಮೀಟರ್ ಕಳೆಯುವುದರೊಳಗೆ ಅವಧಿ ಎರಡೂವರೆ ಗಂಟೆಯಷ್ಟು ಸಂದು, ಎಲ್ಲರೂ ಮರೆತೇ ಬಿಟ್ಟಿದ್ದ ಊಟದ ಸಮಯವಾಗಿತ್ತು! ಸ್ಥಳವಂದಿಗನಾದ ನನಗೆ ಮೊದಲು ಸಿಕ್ಕ ಸೂಚನೆಯಂತೆ (ಪ್ರಾಕೃತಿಕ ತೊರೆ ದಂಡೆಗೆ ಒಯ್ಯಿರಿ.) ನಾನು ಎಲ್ಲರನ್ನು ಸಮುದಾಯ ಭವನದ ಒತ್ತಿನ ಸವಕಲು ಜಾಡಿನಲ್ಲಿ ಇಳಿಸಿಕೊಂಡು ಹೋಗಿ, ಅಶೋಕವನ ಮುಟ್ಟಿಸುವ ಅಂದಾಜು ಮಾಡಿದ್ದೆ. ಆದರೆ ಬಿಟ್ಟು ಬಿಟ್ಟು ಬರುತ್ತಿದ್ದ ಮಳೆಯೊಡನೆ ಹುಡುಕು ನೋಟ ಬೀರುತ್ತ ಹೆಜ್ಜೆಯಿಕ್ಕುವಾಗ ಅಂಗಳದ ಹುಲ್ಲಿನ ಮೇಲೆ, ಮಳೆನೀರ ಓಟಗಳಲ್ಲಿ, ಮಾರ್ಗದ ತೆಮರುಗಳಲ್ಲಿ, ನಾವು ಮೆಟ್ಟಿ ದಾಟಬೇಕಿದ್ದ ಝರಿಯೊಂದರ ಪಾತ್ರೆಯಲ್ಲಿ ನಮ್ಮೆಲ್ಲ ಸಮಯವನ್ನೂ ಆವರಿಸುವಷ್ಟು ಮಾದರಿಗಳು ಸಿಕ್ಕುತ್ತಲೇ ಇದ್ದವು.

ಆ ಝರಿಯಂತೂ ತನ್ನ ಚಂದ, ಹಸುರಿನ ನೋಟದಲ್ಲಿ ಎಲ್ಲರನ್ನು ಕಟ್ಟಿಯೇ ಹಾಕಿತು ಎಂದರೆ ತಪ್ಪಿಲ್ಲ. ಅದನ್ನು ಎಚ್ಚರದಲ್ಲಿ ಏರುತ್ತ, ಕೆವಿಜಿಯ ಹುಡುಕು ಕಲಾಪಗಳನ್ನು ಅನುಸರಿಸುತ್ತ, ಟಿಪ್ಪಣಿಗಳನ್ನು ದಾಖಲಿಸುತ್ತ ಹೊತ್ತು ಸಂದದ್ದು ಆಶ್ಚರ್ಯವೇ ಅಲ್ಲ. ಹೆಸರು ತುಳಸಿ ಹೋಟೆಲ್. ಆದರೆ ವಾಸ್ತವದಲ್ಲದು ದೇವೇಗೌಡ, ಕಮಲಮ್ಮರ ಮನೆ. ಎದುರಿನ ಎಡ ಕೋಣೆ ಪುಟ್ಟ ಅಂಗಡಿ. ಬಲ ಕೋಣೆಯ ಒಂದು ಮೇಜು, ಆಚೀಚೆ ಎರಡು ಬೆಂಚು, ಎರಡು ಕುರ್ಚಿಗೆ ಮುಗಿದಿತ್ತು ಹೋಟೆಲ್ಲು.

ಅಂಗಡಿಯ ಗಲ್ಲಾದಿಂದ ಹಿಡಿದು, ಹೋಟೆಲಿನ ಅಡುಗೆ, ವಿತರಣೆ ಮತ್ತು ಶುದ್ಧೀಕರಣವೆಲ್ಲ ದಂಪತಿಗಳದೇ. ಪ್ರತ್ಯೇಕ ಸಹಾಯಕರು ಸಿಗುವ ಊರು ಅದಲ್ಲ ಮತ್ತು ಇಟ್ಟುಕೊಳ್ಳುವ ತಾಕತ್ತೂ ಇವರದಲ್ಲ. ನಮ್ಮ ಶಿಬಿರಾವಧಿಯಲ್ಲಿ ಅಲ್ಲೇ ಬಾಣಂತನ ಕಳೆಯುತ್ತಿದ್ದ ಅವರ ಏಕೈಕ ಮಗಳು (ಮತ್ತು ಮೊಮ್ಮಗು) ಸಣ್ಣಪುಟ್ಟ ಸಹಾಯಕ್ಕೆ ಒದಗಿದಷ್ಟೂ ತಂದೆತಾಯರ ಜವಾಬ್ದಾರಿಗೂ ಪಾತ್ರಳೇ ಎನ್ನುವುದನ್ನು ನಾವು ಮರೆಯುವಂತಿಲ್ಲ.

ಆದರೂ ವೈವಿಧ್ಯ, ರುಚಿ, ಶುಚಿ, ಸಮೃದ್ಧಿ ಮತ್ತು ಸಮಯನಿಷ್ಠೆಯಲ್ಲಿ ನಮ್ಮನ್ನು ಎಲ್ಲೂ ಸೋಲಿಸಲಿಲ್ಲ ದಂಪತಿ. ಸಮುದಾಯ ಭವನಕ್ಕೂಅವರ ಹೋಟೆಲ್/ಮನೆಗೂ ಅಂತರ ಸುಮಾರು ಮುನ್ನೂರು ಮೀಟರೇ ಇರಬಹುದು. ಆದರೆ ಮಳೆ, ಗೊಸರೆದ್ದ ನೆಲದಲ್ಲಿ ಊಟ ಸಾಗಿಸಲು ಅಲ್ಲಿದ್ದದ್ದು ದೇವೇಗೌಡರ ಕಾಲ್ಬಲ ಮಾತ್ರ. ಅದನ್ನು ಕಾದು ಕೂರದೇ ಊಟಗಳ ಹೊತ್ತಿಗೆ ಮಾತ್ರ ಕಾರು ಒಯ್ದು ಎಲ್ಲವನ್ನೂ (ದೇವೇಗೌಡರ ಸಹಿತ) ಡಿಕ್ಕಿಗೆ ಹೇರಿಕೊಂಡು ಬರುತ್ತಿದ್ದದ್ದೂ ಒಂದು ಸ್ಮರಣೀಯ ಕಲಾಪವೇ ಆಗಿತ್ತು. ಮಳೆ, ಚಳಿ ಹರಿದುಕೊಂಡು ತಟ್ಟೆ ಹಿಡಿದವರಿಗೆ ಹಬೆಯಾಡುವ ಅನ್ನ, ಪಲ್ಯ, ತಿಳಿಸಾರು, ಚಟ್ನಿ, ಸಾಂಬಾರು, ಹಪ್ಪಳ, ಮಜ್ಜಿಗೆ, ಉಪ್ಪಿನಕಾಯಿ ರಸಗವಳವೇ ಅನ್ನಿಸಿದ್ದು ಸುಮ್ಮನಲ್ಲ. ಬೆಳಗ್ಗಿನ ತಿಂಡಿ, ಸಂಜೆಯ ಕುರುಕಲು, ಕೇಳಿದಾಗೆಲ್ಲಾ ಚಾ ಹೇಗೆ ನಿರ್ವಹಿಸಿದರೋ ಎಂದು ಬೆರಗುಪಡುವುದಕ್ಕಿಂತ ಶಿಬಿರ ಸಾರ್ಥಕ ಅನಿಸಲು ಇನ್ನೊಂದೇ ದೊಡ್ಡ ಕಾರಣವಾದದ್ದಂತೂ ನಿರ್ವಿವಾದ.

ಕೆಲಸದ ಬದಲಾವಣೆಯೇ ವಿಶ್ರಾಂತಿ ಎಂದು ನಂಬಿದವರಲ್ಲಿ ಕೆವಿಜಿಯೂ ಇದ್ದಾರೆ. ಊಟವಾದ ಮೇಲೇಏಏ ಎಂದು ಬಾಯಿಕಳೆದು ಎರಡು ಚಿಟಿಕೆ ಹೊಡೆಯುವವರ ನಿರೀಕ್ಷೆಗೆ ವಿರುದ್ಧವಾಗಿ, ಒಟ್ಟಾರೆ ಸುಮಾರು ಒಂದೇ ಗಂಟೆಯ ಭೋಜನ ಬಿಡುವಿನ ಬೆನ್ನಿಗೆ, ಪಾಠಕ್ಕೆ ಭವನದೊಳಗೇ ಕುಳಿತದ್ದಾಯ್ತು. ಸುಮಾರು ಒಂದೂವರೆ ಗಂಟೆಯದ್ದೊಂದು ಭಾಗ, ಹತ್ತು ಮಿನಿಟಿನ ವಿರಾಮದನಂತರ ಮತ್ತೊಂದು ಗಂಟೆಯ ಭಾಗ. ಭವನದ ಜಗುಲಿಯ ಮರೆಯಲ್ಲಿ (ನಾವೇ ಒಯ್ದಿದ್ದ) ವಿದ್ಯುಜ್ಜನಕ ಚಾಲೂ ಮಾಡಿ, ಒಳಗೆ ವೇದಿಕೆಯ ಹಿಂದಿನ ಶುಭ್ರ ಬಿಳೀ ಗೋಡೆಯ ಮೇಲೆ ಬಿಂಬ ಮೂಡುವ ವ್ಯವಸ್ಥೆಯೊಡನೆ (ನಮ್ಮದೇ ಪ್ರಾಜೆಕ್ಟರ್), ಕೆವಿಜಿ ತನ್ನ ಲ್ಯಾಪ್ ಟಾಪ್ ಸಹಾಯದೊಡನೆ ಪಾಠಮಾಡಿದರು. ಅಲ್ಲಲ್ಲ, ಆತ್ಮೀಯ ಶೈಲಿಯಲ್ಲಿ ಪಥ ತೋರಿದರು. ಕನ್ನಡದಲ್ಲಿ ಸಹಜವಾಗಿ ತೊಡಗಿದ ಕಲಾಪ, ಶಿಬಿರಾರ್ಥಿಗಳಲ್ಲಿ ಓರ್ವ ಬಂಗಾಳಿ ಮತ್ತೊಬ್ಬ ಒಡಿಸ್ಸಿಯೂ ಇದ್ದುದರಿಂದ ಮುಂದೆ ಅಷ್ಟೇ ಸರಾಗವಾಗಿ ಎಲ್ಲ ಇಂಗ್ಲಿಷಿನಲ್ಲಿ ನಡೆಯುವುದು ಅನಿವಾರ್ಯವಾಯ್ತು. ಕೋಣೆಯೊಳಗೆ ಮತ್ತೂ ಕೆಲವು ಪಾಠಗಳು ಮಾರಣೇ ದಿನವೂ ನಡೆಯಿತು. ಅದರಲ್ಲಿ ಒಂದನ್ನು ಕೆವಿಜಿಯ ಪುಸ್ತಕದ ಪ್ರಕಾಶಕನೂ ಆದ, ಅವರಿಗೆ ಸಹಾಯಕನೂ ಆಗಿ ಬಂದಿದ್ದ ಸುಧೀರ್ ನಡೆಸಿದ್ದರು.

ಕಪ್ಪೆಗಳು ಯಾಕೇ ಅಥವಾ ಬೇಕೇ ಎಂಬ ಎಂದೂ ಮುಗಿಯದ ತಾರ್ಕಿಕ ಗುದ್ದಾಟ ಅಲ್ಲಿರಲಿಲ್ಲ; ನಾವೆಲ್ಲ ಜೀವವೈವಿಧ್ಯವನ್ನು ಗೌರವಪೂರ್ಣವಾಗಿ ಒಪ್ಪಿದವರೇ. ಪರಿಸರದ ಉಳಿವು, ಮಾಲಿನ್ಯದ ಹರಹುಗಳಂಥ ವಿಶ್ವವಿಚಾರಗಳ ಅತಿ ವ್ಯಾಪ್ತಿಗೂ ನಾವು ಅಲ್ಲಿ ಹೋಗಲಿಲ್ಲ. ಅನ್ಯ ಕಲಿಕಾ ಶಿಸ್ತುಗಳಿಂದ ಬಂದಿದ್ದ ಉತ್ಸಾಹಿಗಳಿಗೆ ಕಪ್ಪೆಗಳ ಲೋಕಕ್ಕೆ ಆವಶ್ಯಕ ಪ್ರವೇಶಿಕೆ ಅಲ್ಲಿತ್ತು. ಕ್ಷೇತ್ರ ಕಾರ್ಯದ ಕಲಾಪಗಳಿಗೆ ಪೂರಕ ವಿಚಾರಗಳು ತಾಂತ್ರಿಕ ಭಾಷೆಯ ಬಿಗಿತವಿಲ್ಲದೆ ಹರಿದುಬಂತು. ಕಪ್ಪೆಗಳನ್ನು ಸಹಜ ಪರಿಸರದಲ್ಲಿ ಗುರುತಿಸಿ, (ಯಾವುದೇ ಜೀವಹಾನಿಯಾಗದಂತೆ) ಸಂಗ್ರಹಿಸಿ, ಹೊರ ಚಹರೆಗಳಿಂದ ವರ್ಗೀಕರಿಸುವುದು (ವೈಜ್ಞಾನಿಕ ನಾಮಕರಣ ಸೇರಿದಂತೆ) ಪ್ರಾಥಮಿಕ ಪಾಠ. ಹಿಂದಿನ ಹಲವು ವಿದ್ವಾಂಸರುಗಳ ಕೆಲಸ ಮತ್ತು ದಾಖಲೆಗಳ ಸಹಾಯದೊಡನೆ, ಸಂಗ್ರಹಿಸಿದ ಮಾದರಿಗಳ ವಿಕಾಸ ಶೈಲಿ ಮತ್ತು ವರ್ತನ ಕ್ರಮಗಳನ್ನು ಅರಿತುಕೊಳ್ಳುವುದು ಮುಂದಿನ ಹಂತ. ಇದರಲ್ಲಿ ಪ್ರಾಸಂಗಿಕವಾಗಿ ಕೆವಿಜಿ ಸಂಶೋಧನೆ ನಡೆಸಿದ ಕಪ್ಪೆಗಳ ಕಥೆಯೂ ಬಂತು. ಶರಾವತಿ ಕೊಳ್ಳದಲ್ಲಿ ಇವರೇ ವೈಜ್ಞಾನಿಕ ಜಗತ್ತಿಗೆ ಪ್ರಥಮವಾಗಿ ಪರಿಚಯಿಸಿ ಇವರೇ ಇಟ್ಟ ‘ಹುಸೇನೀ’ (ಹಕ್ಕಿಗಳ ಲೋಕದಲ್ಲಿ ಒಳ್ಳೇ ಕೆಲಸ ಮಾಡಿದವರು ಎಂದು ಇವರು ಗೌರವಿಸುತ್ತಿದ್ದ ವ್ಯಕ್ತಿಯ ಸ್ಮರಣೆಯಲ್ಲಿ) ಎಂಬ ಹೆಸರು ಹೋಗಿ ‘ಕರ್ನಾಟಕೆನ್ಸೀಸ್’ ಮತ್ತೆ ‘ನೀಲ ನೇತ್ರಸ್ಸು’ (ದೈಹಿಕವಾಗಿ ಈಗಲೂ ಅದಕ್ಕೆ ನೀಲಕಣ್ಣು ಇದ್ದು, ಹೆಸರು ಅನ್ವರ್ಥಕವಾಗಿಯೇ ಇದ್ದರೂ) ಹೋಗಿ ‘ಲ್ಯೂಟಿಯೋಲಸ್’ ಕಾರಣಾಂತರಗಳಿಂದ ಬಂದದ್ದನ್ನು ಹೇಳುವಲ್ಲಿ ಕೆವಿಜಿಗೆ ಇದ್ದ ನಿರ್ಮೋಹ ಆಶ್ಚರ್ಯಕರವಾದದ್ದೇ ಸರಿ.

[ಶುದ್ಧ ಅಪ್ರಾಸಂಗಿಕವಾದರೂ ಇಲ್ಲಿ ಒಂದು ಉದಾಹರಣೆ ಹೇಳದಿರಲಾರೆ: ‘ಯಡಿಯೂರಪ್ಪ’, ಒಬ್ಬ ವ್ಯಕ್ತಿಗೆ ಜೀವನದ ಬಹುಭಾಗವನ್ನು (ಆರು ದಶಕಗಳಿಗೂ ಹೆಚ್ಚು ಪ್ರಾಯ) ಮತ್ತು ನಿರೀಕ್ಷೆಯ ಬಲು ಎತ್ತರವನ್ನೂ ಕಾಣಿಸಿದ ಹೆಸರು. ಆದರೆ ಆ ಎತ್ತರದಲ್ಲಿ ಆ ವ್ಯಕ್ತಿ ಹೆಸರಿನ ಜನಪದ ಹೃಸ್ವರೂಪ (ಯಡ್ಡಿ) ಅಥವಾ ಇಂಗ್ಲಿಶ್ ಕಾಗುಣಿತದ ‘ಕೊರತೆ’ಯನ್ನು (ನನಗೆ ತಿಳಿದಂತೆ ಯಾವುದೋ ಗಿಣಿರಾಮನಿಗಾಗಿ ಅದೂ ಇಂಗ್ಲಿಷ್ Yadiyurappaದಲ್ಲಿ ಒಂದು ಅಕ್ಷರ ಹೆಚ್ಚು ಕಡಿಮೆ) ತಿದ್ದಿಕೊಳ್ಳುವುದಕ್ಕೆ ಮಾಡಿದ ಸಾರ್ವಜನಿಕ ಮನವಿ, ಹೊರಡಿಸಿದ ಪತ್ರಿಕಾ ಪ್ರಕಟಣೆ ನಿಜಕ್ಕೂ ನಾಚಿಕೆಗೇಡು.]

ಕಪ್ಪೆಗಳು ನಿಜಾರ್ಥದ ದ್ವಿಜ (ಗೊದಮೊಟ್ಟೆಯ ಅವಸ್ಥೆ ನೀರಿನದು, ಪ್ರೌಢಾವಸ್ಥೆ ವಾಯುಮಂಡಲದು) ಎಂದೇ ಗುರುತಿಸಿದ್ದ ನಮ್ಮ ಪುರಾಣಿಕರ ಪ್ರಕೃತಿ ವೀಕ್ಷಣಾ ಚಾತುರ್ಯಕ್ಕೆ ಕೆವಿಜಿ ಮಾತಿನಲ್ಲಿ ಪ್ರಶಂಸೆಯಿತ್ತು. ವ್ಯತಿರಿಕ್ತವಾಗಿ ವರ್ತಮಾನದ ಸಮಾಜ, ರಾಸಾಯನಿಕ ಕೀಟನಾಶಕಗಳ ಅಮಲಿನಲ್ಲಿ ಪ್ರಕೃತಿದತ್ತ ಈ ಕಾವಲುಗಾರನ ನಷ್ಟವನ್ನೇ ಗಣಿಸದಿರುವ ಉಡಾಫೆಯ ಬಗ್ಗೆ ಖೇದವೂ ಇತ್ತು. ಉಭಯಚರಿಗಳ ಕುರಿತು ನಾವು ಈವರೆಗೆ ತಿಳಿದದ್ದಕ್ಕಿಂತ ಭಾರೀ ವಿಚಾರಗಳು ಇನ್ನೂ ತಿಳಿಯುವುದಕ್ಕೆ ಬಾಕಿಯಿದೆ ಎನ್ನುವುದನ್ನಂತೂ ಕೆವಿಜಿ ಸಾಂದರ್ಭಿಕವಾಗಿ, ತಿಳುವಳಿಕಸ್ತನ ವಿನಯದಲ್ಲಿ ಮತ್ತೆಮತ್ತೆ ಹೇಳುತ್ತಿದ್ದರು.

[ಮತಮಾರುಕಟ್ಟೆಯಲ್ಲಿ ಗೆದ್ದ ಜನನಾಯಕನೊಬ್ಬ “ನಮ್ಮ ಭಾರತ ಎಷ್ಟು ದೊಡ್ಡದೆಂದರೆ, ರೆ, ರೆ ನನಗೇ ಗೊತ್ತಿಲ್ಲ” ಎಂದನಂತೆ. ಇದು ವಿಚಾರ ದಾರಿದ್ರ್ಯದ ಸಂಕೇತ. ಅದೇ ವಿಜ್ಞಾನಿಯೊಬ್ಬ ಖಚಿತವಾಗಿ “ಗೊತ್ತಿಲ್ಲ” ಎನ್ನುವುದು ವಿಷಯದ ಅಂದಿನ ತಿಳುವಳಿಕೆಯ ಮಿತಿ. ವಿಜ್ಞಾನದ ವಿನಯವನ್ನು ದುರಾಜಕೀಯದ ಲಾಭಕ್ಕೆ ಬಳಸುವಲ್ಲಿ ನಿರ್ಲಜ್ಜ ‘ಉಭಯಚರಿ’ಗಳು ಅರ್ಥಾತ್ ಕಳ್ಳ ಜ್ಯೋತಿಷಿಗಳು, ಅವರನ್ನು ಮುಂದೆ ಬಿಟ್ಟು ತಮ್ಮ ಗ್ರಾಹಕ ಬಳಗ ಹೆಚ್ಚಿಸಿಕೊಳ್ಳುವ ಸಂಪರ್ಕ ಮಾಧ್ಯಮಗಳು ಇಂದಿನ ಬಲುದೊಡ್ಡ ಸಾಮಾಜಿಕ ದುರಂತ]
ಕಪ್ಪೆಗಳು ಬರಿಯ ನೋಟದಲ್ಲಿ ಹೇಳುವುದಾದರೆ ಕೊಳಕಾಗಿ ತೋರುವುದಿರಬಹುದು. ಆದರೆ ಅವುಗಳಲ್ಲಿನ ಹಸಿಹೊಳೆತ, ಒಣಸುಕ್ಕು ಮುಂತಾದ ವರ್ಣ ಮತ್ತು ರಚನಾ ವೈವಿಧ್ಯಗಳಲ್ಲಿ ಕೆಲವೊಂದರ ಪ್ರಾಕೃತಿಕ ಔಚಿತ್ಯವನ್ನು ಕೆವಿಜಿ ಬಿಡಿಸಿಟ್ಟರು. ಇದರಿಂದ “ಸುಂದರ ತ್ವಚೆಗಾಗಿ” ಎಂಬ ಭ್ರಮೆಯಲ್ಲಿ ನೂರೆಂಟು ರಾಸಾಯನಿಕಗಳನ್ನು (ಸೋಪು, ಬೇಸು, ಟಾಪು ಎಂದೇನೆಲ್ಲಾ ಹೇಳಿಕೊಂಡು) ಸುರಿದುಕೊಳ್ಳುವ ನಾವು ವಿಕಾಸಪಥದಲ್ಲಿ ಎಷ್ಟು ಹಿಂದುಳಿದವರು ಮತ್ತು ಅಜ್ಞಾನಿಗಳು ಎನ್ನುವ ಬೆರಗು ಮೂಡಿತು. ನಮಗೆ ಕಂಡಂತೆ ಪಾರಿಸರಿಕವಾಗಿ ಕೊಳಕಾದ ನೀರಿನಲ್ಲೂ (ಕೆಲವು ಜಾತಿಯ) ಕಪ್ಪೆಗಳು ನಿರ್ಬಾಧಿತವಾಗಿ ಜೀವನಚಕ್ರ ಉರುಳಿಸುವ ಪರಿಯನ್ನು ಗುರುರಾಜ ಮಾರ್ಮಿಕವಾಗಿ ವಿವರಿಸಿದರು. ಆಗ ಶಿಷ್ಯವೃಂದದಲ್ಲೊಬ್ಬನಿಗೆ ಸಹಜವಾಗಿ ಮೂಡಿದ ಸಂಶಯ ‘ಅಂದರೆ ಅಭಿವೃದ್ಧಿಯು ಸಹನೀಯ ಮಿತಿ ಮೀರಿಲ್ಲ.’ ಇದನ್ನು ಬಗೆಹರಿಸುವಲ್ಲಿ ಕೆವಿಜಿ ವಿಜ್ಞಾನಿಯಾಗಿ ತಳೆದ ನಿಲುವು ಗಮನಾರ್ಹ. ವಿಜ್ಞಾನ ಕಂಡಷ್ಟನ್ನೇ ಹೇಳುತ್ತದೆ. ಅದರ ಅರ್ಥವನ್ನು ಸಾಮಾಜಿಕ ಹಿತಾಹಿತ ಗಣಿಸಿ ಪ್ರಚುರಿಸುವ ವಿವೇಚನೆ ಪತ್ರಿಕೋದ್ಯಮದ್ದಾಗಬೇಕು.

[ಭಾರತದಲ್ಲಿ ೨% ಮಾತ್ರ ಪ್ರಾಕೃತಿಕ ಕಾಡು ಉಳಿದಿದೆ ಎನ್ನುತ್ತಾನೆ ವನ್ಯಪ್ರೇಮಿ. ಇಲ್ಲಾ ೩೫% (ಅಥವಾ ಇನ್ನೂ ಹೆಚ್ಚು) ಹಸಿರಹೊದಿಕೆ ಇದೆ (ಏಕ ಬೆಳೆಯ ತೋಟ, ಹೊಲ, ಗದ್ದೆ ಸೇರಿಸಿ) ಎನ್ನುತ್ತಾನೆ ‘ಅಭಿವೃದ್ಧಿಪರ’ ಪುಡಾರಿ. ಎರಡನ್ನೂ ತೂಗಿ ನುಡಿಯುವುದು ಜವಾಬ್ದಾರಿಯುತ ಪತ್ರಿಕೋದ್ಯಮ.]

ಕೆಲವು ಕಪ್ಪೆಗಳ ಚರ್ಮ ಸನ್ನಿವೇಶಕ್ಕೆ ತಕ್ಕಂತೆ ಸೂಸುವ ವಿಷ, ತಳೆಯುವ ಬಣ್ಣಗಳೂ ಚರ್ಚೆಯಲ್ಲಿ ಬಂದವು. [ಇಷ್ಟಾಗಿಯೂ ಸಾಮಾನ್ಯವಾಗಿ ಕಪ್ಪೆಗಳ ವಿಷ ಮನುಷ್ಯನನ್ನು ಬಾಧಿಸುವುದು ಕಡಿಮೆಯಂತೆ. ಆದರೆ ಸಾಮೂಹಿಕ ಅಡುಗೆಗಳಲ್ಲಿ ಅನ್ಯ ಕಾರಣಗಳಿಗೆ ವಿಷಪ್ರಭಾವ ಕಾಣಿಸಿದಾಗೆಲ್ಲಾ ‘ಜಾಣ’ರು ಸತ್ತ ಕಪ್ಪೆಯನ್ನೋ ಅಷ್ಟೇ ನಿಷ್ಪಾಪಿಯಾದ ಹಲ್ಲಿಯನ್ನೋ ದೂಷಿಸುವುದು ನಡೆದೇ ಇದೆ. ಅಂಥಾ ಮಹಾ ಆನೆ, ಹುಲಿಗಳಿಗೇ ಇಲ್ಲದ ನ್ಯಾಯ ಕೇಳುವ ಧ್ವನಿ ಬಡ ಕಪ್ಪೆಗಳಿಗೆಲ್ಲಿ ಬರಬೇಕು! ಕೆವಿಜಿಯೇ ಹೇಳಿದ ಮತ್ತೊಂದು ವಿಚಾರ – ಕೆಲವೊಂದು ಜಾತಿಯ ಕಪ್ಪೆಗಳ ಬೆನ್ನಿನ ವಿಷಸ್ರವಿಕೆಯನ್ನು ನೆಕ್ಕಿಯೇ ಗುರುತಿಸುವ ವಿಜ್ಞಾನಿಗಳು ಇನ್ನೂ ಆರೋಗ್ಯಕರವಾಗಿ ಬದುಕಿಯೇ ಇದ್ದಾರೆ!]

ಕಪ್ಪೆಗಳ ಉಲಿ, ಸಂತಾನಕ್ರಿಯೆಯ ಕಲಾಪಗಳು, ಜೀವನಚಕ್ರದ ಅದ್ಭುತಗಳು ಬೀಸು ನೋಟಕ್ಕಷ್ಟೇ ಸಿಕ್ಕರೂ ತೆರೆದಿಟ್ಟ ಪ್ರಪಂಚ ಬಲು ವಿಸ್ತಾರ. ನೀರು, ನೆಲ, ಪಾತಾಳದಲ್ಲೂ (ಕೇರಳದ ಒಂದು ಕಪ್ಪೆ ಜಾತಿ, ಸುಮಾರು ಎಂಟು ಮೀಟರ್ ಆಳಕ್ಕೆ ಸ್ವತಃ ಮಾಟೆ ತೋಡಿ ವಾಸಿಸುತ್ತದಂತೆ. ವರ್ಷಕ್ಕೆ ಯಾವುದೋ ನಿಯತವೇಳೆ – ಒಂದೋ ಎರಡೋ ಬಾರಿಮಾತ್ರ, ಮೇಲಕ್ಕೆ ಬಂದು ಸಂತಾನೋತ್ಪತ್ತಿಯ ಕ್ರಿಯೆ ಮುಗಿಸಿ ಮರಳುತ್ತವಂತೆ) ಹುಲ್ಲು, ಗಿಡ, ಮರಗಳ ಹಸಿರಿನ ವಿವಿಧ ಔನ್ನತ್ಯಗಳಿಗೆ ಮೀಸಲಾಗಿಯೇ ವಿಕಾಸಗೊಂಡ ಕಪ್ಪೆಗಳು ಇವೆ. ಹೀಗೇ ಕಪ್ಪೆಯ ಕುರಿತ ಪಾಠದ ಮತ್ತೆ ಈಗಲೂ ಕೆವಿಜಿ ಮಿಂಚಂಚೆ ಮೂಲಕ ಭಾಗಿಗಳಿಗೆ ಕಳಿಸುತ್ತಿರುವ ವಿವಿಧ ಮಾಹಿತಿ ಮೂಲಗಳ ಜಾಡು ಹಿಡಿದರೆ ನನ್ನ ಪಾತ್ರೆಯೂ ಸಾಲದು, ಈ ಕಥೆಯೂ ಮುಗಿಯದು! ಹಾಗಾಗಿ ಇನ್ನು ಸಜ್ಜುಗೊಳ್ಳಿ ನಿಶಾಚರತ್ವಕ್ಕೆ.

ಮೊದಲ ದಿನದ ತಡಸಂಜೆ, ‘ಕಪ್ಪೆ ಬಳಗ’ ವಾಹನಗಳನ್ನೇರಿ ಬೀಟೀಸ್ಪಾಟ್‌ನಲ್ಲಿ ತುಸು ವಿಹರಿಸಿತು. ಮಂಜು ಮೋಡಗಳ ಕಡಲಲ್ಲಿ ಶಿಖರ ಶ್ರೇಷ್ಠರು ಮಥನದ ಮೇರುಗಳು. ವನ್ಯಬಳಗದ ಸಮೂಹಗಾನ ದೇವ ಮತ್ತು ರಾಕ್ಷಸ ಬಳಗದ ಉಛ್ವಾಸ ನಿಶ್ವಾಸ. ಈ ಮಹಾನಾಟಕಕ್ಕೆ ಝರಿ ಹೊಳೆಗಳ ಅಬ್ಬರ ವೀಕ್ಷಕರ ನಿಬ್ಬೆರಗಿನ ಘೋಷ! ಅಂದು ಸೂರ್ಯಾಸ್ತವಿಲ್ಲ (ಸೂರ್ಯನನ್ನು ಕಂಡವರೇ ಇಲ್ಲ), ಹಗಲು ಕತ್ತಲಿಗೆ ನಿಧಾನಕ್ಕೆ ಜಾರಿತು. ಅನಂತರ ಎರಡು ಕಿಮೀ ವಾಹನಗಳಲ್ಲೇ ಇಳಿದಾರಿಯಲ್ಲಿ ಹೋಗಿ, ನಿಂತದ್ದು – ಕ್ಷೇತ್ರಕಾರ್ಯಕ್ಕೆ ಆರಿಸಿಕೊಂಡ ಅಶೋಕವನ. ಹಲವರ ಕೈಯಲ್ಲಿ, ಕೆಲವರ ತಲೆ ಪಟ್ಟಿಯಲ್ಲಿದ್ದ ಟಾರ್ಚುಗಳ ಬೆಳಕೋಲಿನಲ್ಲಿ ದಟ್ಟ ಅಡವಿಗೆ ಸಾಲು ಹಿಡಿದು ನಿಧಾನಕ್ಕೆ ನುಗ್ಗಿದೆವು. ಒಟ್ಟು ತಂಡದಲ್ಲಿ ಎಲ್ಲೋ ಮೂರು-ನಾಲ್ಕು ಮಂದಿಯಷ್ಟೇ ಅದೂ ಬೇಸಗೆಯ ಹಗಲಿನಲ್ಲಿ ಒಮ್ಮೆ ಮಾತ್ರ ನೋಡಿ ಅಬ್ಬಾ ಎಂದ ಕಾಡದು. ಎಲ್ಲರಿಗು ಕಣ್ಗಾಪು ಕಟ್ಟಿದ ಕುದುರೆಯಂತೆ, ಬೆಳಕೋಲಿನ ಛೇದದಲ್ಲಷ್ಟೇ ದೃಷ್ಟಿ. ನೇತು ಬಿದ್ದದ್ದು ಬಳ್ಳಿಯೋ ಹೆಬ್ಬಾವೋ ನಿಶ್ಚಲವಾಗಿರುವುದು ಹೆಬ್ಬಂಡೆಯೋ ಆನೆಯೋ! ಹೀಗೆ ಊಹಾತ್ಮಕ ಭಯಗಳನ್ನು ಅತಿಶಯಗೊಳಿಸುವಂತೆ ಪ್ರತಿ ಹೆಜ್ಜೆಯಲ್ಲೂ ಉರುಳುವ ಕಲ್ಲು, ಹೂಳುವ ಗೊಸರು, ಅಡ್ಡಗಟ್ಟುವ ಕುಂಬು ಮರ, ಪಕ್ಕದಿಂದ ತಟ್ಟಿ ಒರೆಸುವ ಪೊದರು (“ಮುಳ್ಳಿದ್ದೀತು ಹುಶಾರ್”) ಇತ್ಯಾದಿ.

ಸುಮಾರು ನೂರು ಮೀಟರ್ ತುಸು ಏರು ಜಾಡು ಮತ್ತೆ ಅಷ್ಟೇ ಇಳಿಜಾಡಿನ ಕೊನೆಯಲ್ಲಿ ನಾವು ಸಣ್ಣ ಹಡ್ಲು (ಹುಲ್ಲು ಬೆಳೆದ ಗೊಸರು ನೆಲ) ತಲಪಿದ್ದೆವು. ಅಲ್ಲಿ ಹರಿಯುವ ಸಾರ್ವಕಾಲಿಕ ತೊರೆಯ ಜಲಾನಯನ ವ್ಯಾಪ್ತಿ ಸಣ್ಣದು. ಹಾಗಾಗಿ ಅದೆಂದೂ ಅಪಾಯಕಾರಿಯಾಗಲು ಸಾಧ್ಯವಿರಲಿಲ್ಲವೆಂಬ ನನ್ನ ಭರವಸೆಯ ಮೇಲೆ ಎಲ್ಲ ಕಪ್ಪೆ ಭೇಟಿಗೆ ತೊಡಗಿದರು. “ಅದೇನು ವಟಗುಟ್ತೀ” ಎನ್ನುವಲ್ಲಿನ ಮನುಜಕುಲದ ತಿರಸ್ಕಾರದ ಭಾವ, ವಾಸ್ತವವಾಗಿ ಮಂಡೂಕಲೋಕದ ಉತ್ಕಟ ಪ್ರೇಮಗಾನ; ಕರೆದರೂ ಕೇಳದೇ. ಗಾಯನಕ್ಕೆ ಭಾಷೆಯ ಬಂಧವಿಲ್ಲ ಆದರೆ ಭಾವದ ಸ್ತರಗಳಿವೆ ಎನ್ನುವುದು ಇಲ್ಲಿಯೂ ನಿಜವೇ. ವಿವಿಧ ಜಾತಿಯ ಧ್ವನಿಗಳು ಮತ್ತು ತರಂಗಗಳನ್ನು ಕೆವಿಜಿ ತರಗತಿಯಲ್ಲಿ ದ್ವನಿಮುದ್ರಿಕೆಯಿಂದ ಕೇಳಿಸಿ, ಚಿತ್ರಗಳೊಡನೆ ವಿವರಿಸಿದ್ದರು.

ಹೀಗೆ ಸಮೀಪಿಸುವ ಯೋಗ್ಯ ಸಂಗಾತಿಗೆ ಸ್ಪರ್ಧೆ ಏರ್ಪಟ್ಟಲ್ಲಿ ಅವು ಕಾಲಿನಲ್ಲಿ ನೆಲತಟ್ಟಿ ಪ್ರತಿಸ್ಪರ್ಧಿಯನ್ನು ಎಚ್ಚರಿಸುವುದು, ನಮ್ಮ ಜಟ್ಟಿಕಾಳಗಕ್ಕೆ ಬಿಟ್ಟಿಲ್ಲ. ಅಗತ್ಯ ಬಂದರೆ ಹಿಂಗಾಲು ಚಾಚಿ ಪೌರುಷ ಪ್ರದರ್ಶಿಸುವುದು, ಮುಂದುವರಿದು ಒಂದನ್ನೊಂದು ಒದ್ದು ಕಳೆಯುವುದನ್ನು ವಿಡಿಯೋ ತುಣುಕುಗಳಲ್ಲಿ ಕಂಡು ಬೆರಗಾಗಿದ್ದೆವು. ಆದರೆ ತಂತ್ರಜ್ಞಾನದ ಬಲದಲ್ಲಿ ಮುದಕೊಟ್ಟಿದ್ದ, ಮನವರಿಕೆಯಾಗಿದ್ದ ಆ ಎಲ್ಲ ಮಾಹಿತಿಗಳು ಅಶೋಕವನದ ವಾಸ್ತವದೆದುರು ದಿಕ್ಕೆಟ್ಟು ಕುಳಿತವು. ಸಂತೆಕಟ್ಟೆಯ ಗದ್ದಲಕ್ಕಿಳಿದ ಕಡಸಿನಂತೆ ಹೆಚ್ಚಿನವರು (ಪೆರ್ಚುಗಟ್ಟುವುದು) ಹೌಹಾರುವುದೊಂದೇ ಬಾಕಿ. ತೊರೆಯಂಚಿನಲ್ಲಿ, ಹುಲ್ಲಿನಲ್ಲಿ, ಮರದ ಬುಡದಲ್ಲಿ, ಪೊದರ ಎಲೆಯ ಮೇಲೆ, ಬಿದ್ದ ಗೆಲ್ಲಿನ ಮರೆಯಲ್ಲಿ ಅದೆಷ್ಟು ಗಾಯಕರು, ಅದೇನು ಲಹರಿ. ಗಂಟಲಲ್ಲಿ ಒಂದು ಚೀಲ, ಎರಡು ಚೀಲ ತುಂಬಿಕೊಂಡವರು, ಮಂದ್ರದವರು ತಾರದವರು, ವಿಲಂಬಿತರು, ದ್ರುತದವರು, ಏನು ಕಿರಲು ಏನು ಒರಲು! ಕೆಲವು ಮಾದರಿಗಳನ್ನು ನಮ್ಮವರು ಕೈಸೆರೆ ಮಾಡಿ (ಕಪ್ಪೆಯ ಮುಂಗಾಲೊಂದನ್ನು ಎರಡು ಬೆರಳುಗಳ ನಡುವೆ ಹಗುರಕ್ಕೆ ಒತ್ತಿ ಹಿಡಿದು ಅಂಗೈ ಮೇಲಿ ಬಿಟ್ಟುಕೊಂಡರೆ ಕೊಸರಾಡದೆ ಕೂರುವುದನ್ನು ಕೆವಿಜಿಯೇ ಹೇಳಿಕೊಟ್ಟಿದ್ದರು), ಉಳಿದಂತೆ ಅವಿದ್ದಲ್ಲಿಗೇ ಬೆಳಕೋಲುಗಳನ್ನು ಬಿಟ್ಟು ನೋಡಿದರು, ಗುಣಗಾನ ಮಾಡಿದರು, ಟಿಪ್ಪಣಿಸಿದರು, ಪರಸ್ಪರ ಹೋಲಿಸಿಕೊಂಡರು, ಮಳೆಯ ರಿಯಾಯಿತಿ ಸಿಕ್ಕಲ್ಲೆಲ್ಲ ವಿವಿಧ ಕೋನ, ಬೆಳಕುಗಳಲ್ಲಿ ಕ್ಯಾಮರಾವನ್ನೂ ಚಕುಪುಕು ಮಾಡಿದರು. ಭೇಟಿಯ ಕೊನೆಯಲ್ಲಿ ಸಿಕ್ಕ ಹಸಿರು ತೇಲುಗಪ್ಪೆಯೊಂದಂತೂ ಯಾವ ಸಿನಿಮಾ ತಾರೆಗೂ ಕಡಿಮೆಯಿಲ್ಲದಷ್ಟು ಭಂಗಿಗಳನ್ನೂ ಕೊಟ್ಟು ಅಭಿಮಾನಿಗಳನ್ನೂ ಗಳಿಸಿತು!

ತಿಂಗಳ ಹಿಂದೆ, ಎಂಟು ಆನೆಗಳ ಹಿಂಡೊಂದು, ವಾರ ಕಾಲ, ಅಶೋಕವನದಲ್ಲೇ ಠಿಕಾಣಿ ಹೂಡಿತ್ತು ಎಂದು ಬಿಸಿಲೆ ಹಳ್ಳಿಯಲ್ಲಿ ಹೇಳುವುದು ಕೇಳಿದ್ದೆ. ಮತ್ತೆ ಸಹಜವಾಗಿ ಕಾಳಿಂಗನಿಂದ ಹಿಡಿದು ಎಲ್ಲಾ ವರ್ಗದ ಹಾವುಗಳಂತೂ ಇಲ್ಲಿ ಇರಬೇಕಾದವೇ. ಈ ಎರಡರ ಮುಖಾಮುಖಿ ನಮಗಾಗದಿದ್ದರೆ ಸಾಕು ಎಂದು ಆಶಿಸುವುದು ಮತ್ತು ಅಷ್ಟೇನೂ ಪರಿಣತವಲ್ಲದ ನನ್ನ ಕಿವಿಕಣ್ಣನ್ನು ಆ ಕುರಿತು ಎಚ್ಚರದಲ್ಲಿಡಲು ನಾನು ಪ್ರಯತ್ನ ನಡೆಸಿಯೇ ಇದ್ದೆ. ತೊರೆ, ದರೆ, ಪೊದರು, ಮರವೆಂದು ಬೆಳಕೋಲು ಬಿಟ್ಟು ಕೆದಕುವ ಭರದಲ್ಲಿ ಗುಂಪಿನಿಂದ ಯಾರೂ ಕಳೆದು ಹೋಗಬಾರದಲ್ಲಾ ಎನ್ನುವ ಭಯವೂ ಸ್ವಲ್ಪ ಇತ್ತು. ಆದರೆ ಬಿಟ್ಟುಬಿಟ್ಟು ಸುರಿಯುತ್ತಿದ್ದ ಪಿರಿಪಿರಿ ಮಳೆ, ಆಗೀಗ ಎಲ್ಲೋ ದೌಡಾಯಿಸಬೇಕಿದ್ದ ಮೋಡ ಚೈತನ್ಯ ಉಡುಗಿ ಬಿದ್ದಂತೆ ಮುಸುಕಿ, ಮತ್ತೆದ್ದು ಹೋಗುತ್ತಾ ಒಟ್ಟಾರೆ ನಮ್ಮನ್ನು ಸ್ವಲ್ಪ ನಿರುತ್ತೇಜನಗೊಳಿಸಿದ್ದೂ ಸೇರಿಕೊಂಡಿತು. ಕೇವಲ ಎರಡು ದಿನದ ಅಗತ್ಯಕ್ಕೆ ಕೆಲವರೆಲ್ಲಾ ಕೊಡೆಯಲ್ಲೂ ಅರೆಬರೆ ಮಳೆಕೋಟುಗಳಲ್ಲೆ ಸುಧಾರಿಸುವ ಮನಸ್ಸು ಮಾಡಿದ್ದರಿಂದ ಕೈಕಾಲುಗಳನ್ನು ಮುಕ್ತವಾಗಿಟ್ಟುಕೊಂಡು ತೊರೆಪಾತ್ರೆ, ಪೊದರ ಸಂದಿಗಳಲ್ಲಿ ನುಗ್ಗಿ ಹೊರಡುವುದು ಕಷ್ಟವೂ ಆಗುತ್ತಿತ್ತು. ಎಲ್ಲಕ್ಕೂ ಹೆಚ್ಚಿಗೆ ಉಳಿದವರಲ್ಲಿ ಹೆಚ್ಚಿನವರಿಗೆ ಕಪ್ಪೆ ನೋಡುವ ಉತ್ಸಾಹದಲ್ಲಿ ಹಾಗೂ ಹೀಗೂ ತಿಪ್ಪರ್ಲಾಗ ಹಾಕಿ ಬಂದದ್ದು ಎಲ್ಲಿಂದ, ಹೋಗುವುದು ಎಲ್ಲಿಗೆ ಎನ್ನುವ ಪ್ರಜ್ಞೆ ತಪ್ಪಿಹೋಗಿತ್ತು. ಕನಿಷ್ಠ ಮಿತ್ರ ಬಳಗದಿಂದ ಕಳೆದುಹೋಗದ ಎಚ್ಚರ ಬೆಳೆದಿತ್ತು! ಕೆಲವರಿಗಾದರೂ ಹಗಲಿನ ಮೋಜಣಿಯನ್ನು ಇದೇ ವಠಾರದಲ್ಲಿ ಮಾಡಬೇಕಿತ್ತು ಎಂದನಿಸಿತು. ಆಗ ಕತ್ತಲಲ್ಲಿ ತುಸು ಹೆಚ್ಚು ಕೈಕಾಲು ಚಾಚಬಹುದಿತ್ತು, ಹೆಚ್ಚು ಧೈರ್ಯವೂ ಬರುತ್ತಿತ್ತೆಂಬ ಅಭಿಪ್ರಾಯ ಮೂಡುವ ಸಮಯಕ್ಕೆ ಗಂಟೆ ಒಂಬತ್ತಾಗಿತ್ತು. ನಿಧಾನಕ್ಕೆ ದಾರಿಗೆ ಮರಳಿ, ವಾಹನ ಸೇರಿ ದಿನದ ಕಲಾಪಗಳಿಗೆ ಮಂಗಳ ಹಾಡಿದೆವು.

ಸಮುದಾಯ ಭವನದಲ್ಲಿ ಗದ್ದಲವೋ ಗದ್ದಲ. ಒತ್ತಿನ ಕೆರೆಗಳೆರಡರ ಕಪ್ಪೆಗಳು ತಮ್ಮನ್ನು ನಿರ್ಲಕ್ಷಿಸಿ ಅತ್ತಿನ ತೊರೆ ಹುಡುಕಿಕೊಂಡು ಹೋದದ್ದಕ್ಕೆ ಧಿಕ್ಕಾರ ಹಾಕಿದ್ದವು. ಬಾನ್ದೇವೀ ಮೋಡದ ಹೊದಿಕೆ ಹೊಚ್ಚಿ, ಹನಿಗಳ ಲಾಲಿ ಹಾಡಿದ್ದು ಪ್ರಯೋಜನಕ್ಕೇ ಬರಲಿಲ್ಲ. ಆದರೆ ನಮಗೋ ಚಂಡಿ ಬಟ್ಟೆಗಳಿಂದ ಬಿಸುಪಿಗೆ ಬದಲಿದ್ದು, ಮೊಂಬತ್ತಿ ಬೆಳಕಿನಲ್ಲಿ ಬಿಸಿಯೂಟ ಮುಗಿಸಿದ್ದು ಅಷ್ಟೇ ಗೊತ್ತು. ಹತ್ತುಮಂಚ, ಹತ್ತು ಹಾಸಿಗೆ ಮಾತ್ರ ಸಮುದಾಯ ಭವನದ ಲೆಕ್ಕದಲ್ಲಿದ್ದರೂ ಇಪ್ಪತ್ನಾಲ್ಕು ನಿದ್ರೆಗೇನೂ ಕೊರತೆಯಾಗಲಿಲ್ಲ. ಇಂದು ಹೊಸ ಅರಿವಿನಲ್ಲಿ, ನನ್ನ ಕನಸಿನ ಲೋಕದಲ್ಲಿ ವಿಕಸಿಸಿದ ಕಥೆಯೇ ಹೊಸತು. ಮಾಟಗಾತಿಯ ಶಾಪದ ನೆಪದಲ್ಲಿ ಕಪ್ಪೆಲೋಕದ ಸಾಹಚರ್ಯ ಒದಗಿದ್ದ ರಾಜಕುಮಾರ, ಊರಿಗೆ ಬಂದು ಸುಖಿಯಾಗಲಿಲ್ಲ. ಮಾಟಗಾತಿಯಿಂದ ರಾಜಕುಮಾರಿಯನ್ನೂ ಸೇರಿಸಿಕೊಂಡು ವರವನ್ನೇ ಪಡೆದು ಮರಳಿ ಕಪ್ಪೆಯಾಗಿ ಕಾಡಿಗೆ ಹೋದ. ಕಥೆ ಸುಂದರ ಪುಸ್ತಕಗಳಲ್ಲಿ ಅಚ್ಚಾಗಿ ಊರಿಗೆ ಬಂತು.

ಸುಮಾರು ನಾಲ್ಕು ಗಂಟೆಯಿಂದಲೇ ಒಬ್ಬೊಬ್ಬರೇ ಎದ್ದು ಸಜ್ಜುಗೊಳ್ಳುತ್ತಲಿದ್ದುದರಿಂದ, ದೇವೇಗೌಡರು ಚಾ-(ಕ್ಷೇತ್ರಕಾರ್ಯಕ್ಕೆ)ಲನೆ ಕೊಟ್ಟಂತಾಯ್ತು. ಬೆಳಗ್ಗಿನ ಚಾರಣ ಸಕಲೇಶಪುರದತ್ತಣ ದಾರಿಯುದ್ದಕ್ಕೆ ಬೆಳೆಯಿತು. ಮಳೆ ಕುಟ್ಟುತ್ತಲೇ ಇತ್ತು. ತುಸು ವಿನೋದ, ತುಸು ವ್ಯಾಯಾಮ (ಮಾರ್ನಿಂಗ್ ವಾಕು ಸಾರ್!) ಇದ್ದರೂ ಕಣ್ಣು ಅಂಚುಗಟ್ಟಿದ ಚರಂಡಿಗಳಲ್ಲಿ, ದರೆ ಇಳಿದು ಬರುವ ತೊರೆಗಳಲ್ಲಿ, ತಗ್ಗಿನ ಗದ್ದೆಗಳಲ್ಲಿ ಅರಸುತ್ತಿದ್ದದ್ದು ಕಪ್ಪೆ, ಕಪ್ಪೆ ಮತ್ತು ಕಪ್ಪೆಯನ್ನೇ. ಗೇಟಿಂದ ಸುಮಾರು ಅರ್ಧ ಕಿಮೀ ದೂರದ ಬಿಸಿಲೆ ಶಾಲೆಯ ಬಳಿಯ ಪೊದರುಗಪ್ಪೆಯೊಂದು ಬಿಟ್ಟುಬಿಡದೇ ಸಂದೇಶ ಕೊಟ್ಟು ಕೆವಿಜಿಯನ್ನು ಸತಾಯಿಸಿತು. ಮುಂದೊಂದು ಬೆಟ್ಟದ ತೊರೆಯಂಚಿನ ಸಸ್ಯರಾಜಿಯಲ್ಲೂ ಕಾಣಬೇಕಾಗಿದ್ದ ಇನ್ನೊಂದೇ ಜಾತಿಯ ಕಪ್ಪೆಯ ಸಂತತಿ ವಿಸ್ತರಣೆಯ ಲಕ್ಷಣಗಳೂ ಸಿಗಲಿಲ್ಲ. (ಹೀಗೇ ಅಪರಾಹ್ನದಂದು ಕೆರೆಯಂಚಿನಲ್ಲೂ ಮತ್ತೊಂದೇ ಜಾತಿಯೂ ಕೈತಪ್ಪಿತು)

ಇವ್ಯಾವವೂ ಕೆವಿಜಿ ಕಾಣದ್ದಲ್ಲ. ಆದರೆ ಶಿಬಿರಾರ್ಥಿಗಳಿಗೆ ಅವಶ್ಯ ದರ್ಶನೀಯ ಎನ್ನುವುದು ಅವರ ಉದ್ದೇಶ. ಹಾಗೆಂದು ಸೋಲೊಪ್ಪುವಲ್ಲಿ ಕೆವಿಜಿ ಅನುದಾರಿಯಾಗಿರಲಿಲ್ಲ. ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ್ ಆವಿಷ್ಕರಿಸುವ ಕಾಲದಲ್ಲಿ ಸಾವಿರಕ್ಕೂ ಮಿಕ್ಕು ವಿಫಲ ಪ್ರಯೋಗಗಳನ್ನು ಮಾಡಿದ್ದನಂತೆ. ಆಗ ಯಾರೋ ಕಾಲೆಳೆಯುವ ಉತ್ಸಾಹಿಗೆ ಎಡಿಸನ್ ಸಂಭ್ರಮದಲ್ಲೇ ಹೇಳಿದ್ದನಂತೆ “ಆ ಸಾವಿರಕ್ಕೂ ಮಿಕ್ಕ ದಾರಿಗಳು ಉದ್ದೇಶಿತ ಸತ್ಯಕ್ಕಲ್ಲ ಎಂದು ಪ್ರಮಾಣವಾದದ್ದೂ ಒಂದು ಸಾಧನೆ.” ಕಪ್ಪೆ ಹುಡುಕಾಟದಲ್ಲಿ ಕೈಚೆಲ್ಲುವಾಗ ಗುರುರಾಜರದೂ ಇದೇ ಭಾವ. ನಮ್ಮ ನಡಿಗೆಯ ಕೊನೆಯಲ್ಲೊಂದು ಝರಿಯಲ್ಲಿ ಕಪ್ಪೆಯರಸುತ್ತಿದ್ದಾಗ ಕಾಣ ಸಿಕ್ಕ ಭಾರೀ ಹಸುರು ಕೊಂಬಚ್ಚೇಳು ಮುಂಜಾನೆಯ ಚಾರಣಕ್ಕೊದಗಿದ ಬೋನಸ್ಸು!

ಚಾ ಬಲದ ಚಾರಣ ಒಟ್ಟಾರೆ ಸುಮಾರು ಹತ್ತು ಕಿಮೀಯಷ್ಟು ಲಂಬಿಸಿದ್ದರಿಂದ ತಿಂಡಿ ತಿನ್ನುವಾಗ ಊಟಕ್ಕೆ ಸಮಯದ ಅಂತರ ಹೆಚ್ಚು ಉಳಿದಿರಲಿಲ್ಲ! (ಹಾಗೇ ಹಿಂದಿನ ದಿನದ ಎರಡು ಅವಧಿ ಮತ್ತು ಅಂದಿನ ಚಾರಣದ ಫಲವಾಗಿ ಯಾರಲ್ಲೂ ಒಣ, ಚಂಡಿ ಬಟ್ಟೆಗಳ ಅಂತರವೂ ಹೆಚ್ಚಿರಲಿಲ್ಲ. ಅದಕ್ಕೆ ಸಣ್ಣ ನಿದರ್ಶನ ನನ್ನ ವೇಷ!) ಪೂರ್ವಾಹ್ನದಲ್ಲಿ ಎರಡು ತರಗತಿಗಳು, ಅಪರಾಹ್ನದ ಕೊನೆಯ ಅವಧಿಯಲ್ಲಿನ ಕಲಿಕೆಯ ಮರುಪರಿಶೀಲನೆ ಬೈಠಕ್ಕುಗಳು ಚೆನ್ನಾಗಿಯೇ ನಡೆಯಿತು. ಮಧ್ಯಾಹ್ನದ ಊಟಾನಂತರ ಒತ್ತಿನ ಕೆರೆಯ ಪರಿಸರದಲ್ಲಿ ಕ್ಷೇತ್ರಕಾರ್ಯವೇನೋ ಯೋಜನೆಯಂತೇ ನಡೆಸಿದೆವು. ಆದರೆ ಆಕಾಶರಾಯರು ಆದಿನ ಅಪೂರ್ವ ಮಂಜು ಮಳೆಯ ವ್ಯವಸ್ಥೆ ಮಾಡಿದ್ದರು.

ನಡು ಹಗಲೂ ದೃಷ್ಟಿ ಐವತ್ತಡಿ ಆಚೆ ಹರಿಯದ ಸ್ಥಿತಿ. ನಮ್ಮ ತಂಡವೇನೋ ಪ್ರಾಮಾಣಿಕವಾಗಿ ಸುಮಾರು ಎರಡು ಗಂಟೆಗಳ ಕಾಲ ಪರದಾಡಿದರೂ ಯಾವುದೇ ವಿಶೇಷ ಲಾಭವಾಗಲಿಲ್ಲ. ಆದರೆ ಅಲ್ಲೂ ಪ್ರಾಕೃತಿಕ ಸತ್ಯಗಳನ್ನು ಅವುಗಳ ಸಮಗ್ರತೆಯಲ್ಲೇ ಕಂಡುಕೊಳ್ಳಬೇಕು ಎನ್ನುವ ಸತ್ಯ ದರ್ಶನವಾದದ್ದೂ ಕಮ್ಮಟದ ಒಂದು ಪಾಠ. ಅಭಯಾರಣ್ಯಗಳ ಬಾಗಿಲಿನಲ್ಲಿ ನೂರಿನ್ನೂರು ರೂಪಾಯಿ ಬಿಸಾಡಿ, ಜೀಪಿನಲ್ಲಿ ಹೀಗೆ ಹೊಕ್ಕು ಹಾಗೆ ಹೊರಡುವ ಶೇಕಡ ತೊಂಬತ್ತು ಪ್ರವಾಸಿಗಳಿಗೆ ಅರಿವಿಗೇ ಬರದ ವಿಚಾರವಿದು. ಅಂಥಾ ಜನಗಳ ಪ್ರತಿನಿಧಿಯಾಗಿಯೇ ಮೇಲೇರಿ ಸರಕಾರ ನಡೆಸುವ ಬಹುತೇಕ ಮಂತ್ರಿ ಮಹೋದಯರಿಗೂ ಹೊಳೆಯದ ಸತ್ಯವಿದು. ಹಾಗಾಗಿ ಇಂಥ ಅನಾಚಾರಗಳ ಮೊತ್ತಕ್ಕೊಂದು ಎಚ್ಚರ ಕೊಡಲು ಸಾಕ್ಷಾತ್ ಪರಮೋಚ್ಛ ನ್ಯಾಯಾಲಯವೇ ವ್ಯಾಘ್ರಧಾಮಗಳ ಪ್ರವೇಶವನ್ನು ಸಂಪೂರ್ಣ ನಿಷೇಧಿಸುವ ದೊಡ್ಡ ಹೆಜ್ಜೆಯಿಡಬೇಕಾಯ್ತು! ಆ ನಿಟ್ಟಿನಲ್ಲಿ ನಮ್ಮಲ್ಲಿ ಯಾರೂ ವ್ಯಗ್ರಗೊಳ್ಳದೇ ಇದ್ದುದನ್ನು ನೆನಪಿಸಿಕೊಂಡರೆ ಕಮ್ಮಟ ನೂರಕ್ಕೆ ನೂರು ಯಶಸ್ವೀ ಅನಿಸಿತ್ತು. ಡಾ| ಕೆವಿ ಗುರುರಾಜರ ದಕ್ಷತೆ, ಶಿಬಿರಾರ್ಥಿಗಳ ಶ್ರದ್ಧೆ ಪರಸ್ಪರ ಕೃತಕೃತ್ಯತೆಯನ್ನು ಕೊಟ್ಟಿತು. ಸಂಜೆ ಸುಮಾರು ಐದು ಗಂಟೆಯ ಅಂದಾಜಿಗೆ ಎಲ್ಲ ಬಂದಂತೆಯೇ ಮರಳಿದೆವು.

ನನ್ನ ಕಾಲಕ್ಕೆ ಒಂಬತ್ತನೇ ತರಗತಿಗೇ ಐಚ್ಛಿಕಗಳನ್ನು ಆಯ್ದುಕೊಳ್ಳುವ ಪಾಠಕ್ರಮ ಇತ್ತು. ಆಗ ನನ್ನ ಆಯ್ಕೆ ಪೀಸೀಬಿ (ಭೌತ, ರಸಾಯನ ಮತ್ತು ಜೀವವಿಜ್ಞಾನ). ‘ಬಿ’ ಪ್ರಯೋಗಾಲಯದಲ್ಲಿ ಕಪ್ಪೆ ಕತ್ತರಿಸಲು ಕೊಡುತ್ತಾರೆ ಎನ್ನುವುದು ನನಗಂತೂ ಬಹಳ ದೊಡ್ಡ ಆಕರ್ಷಣೆ. (ಅಂದು ಕೊಂಡ ಡಿಸೆಕ್ಷನ್ ಬಾಕ್ಸಿನ ಒಂದು ಕತ್ತರಿ ಮೂವತ್ತಾರು ವರ್ಷಗಳ ಅತ್ರಿ ಸೇವೆ ಮಾಡಿ, ಇಂದೂ ನನ್ನಲ್ಲಿ ಬಳಕೆಯಲ್ಲಿದೆ) ಅಂದು (ಬಹುಶಃ ಅಧ್ಯಾಪಕರು) ನಿಶ್ಚೇಷ್ಟಿತ ಕಪ್ಪೆಯನ್ನು ಅಂಗಾತ ಹಲಿಗೆಯ ಮೇಲೆ ಮಲಗಿಸಿ, ನಾಲ್ಕೂ ಕಾಲನ್ನು ಚಾಚಿ ಆಣಿ ಬಡಿದು, ಅಡ್ಡ ನೀಟ ಕೊಯ್ದು (ಪರಿಣತನಿಗೂ ಮರುಜೋಡಿಸಲು ಸಾಧ್ಯವೇ ಇಲ್ಲದಂತೆ, ಸಾಯಿಸಿ) ಏನೋ ಒಂದಷ್ಟು ವಿವರ ಸಂಗ್ರಹಿಸಿದ್ದಿರಬೇಕು. ಆದರೆ ನನಗಿಂದೂ ನೆನಪಿನಲ್ಲಿ ಉಳಿದಿರುವುದು ಅದರ ಪುಟ್ಟ ಹೃದಯ. ತರಗತಿ ಮುಗಿದು ಹೊರಡುವಾಗಲೂ ಗಾಜಿನ ಬಟ್ಟಲೊಳಗದು, ಹೊಕ್ಕು ಹೊರಡುವ ರಕ್ತದಿಂದ ಹಿಡಿದು ಎಲ್ಲಾ ಪೂರಕ ದ್ರವ, ಅಂಗಾಂಗಗಳಿಂದ ದೂರಾಗಿದ್ದರೂ ಮಿಡಿಯುತ್ತಲೇ ಇತ್ತು! ಪ್ರಸ್ತುತ ಕಮ್ಮಟದಲ್ಲಿ ಇಪ್ಪತ್ತಕ್ಕೂ ಮಿಕ್ಕು ವೈವಿಧ್ಯಮಯ ಕಪ್ಪೆಗಳ ಉಲ್ಲೇಖವಾಗಿದೆ. ಸ್ವತಃ ಅಭ್ಯರ್ಥಿಗಳೇ ಹದಿನಾಲ್ಕು ಮಾದರಿಗಳನ್ನು ಕಂಡು, ಮುಟ್ಟಿ, ದೇಹ ಲಕ್ಷಣಗಳ ಟಿಪ್ಪಣಿ ಮಾಡಿ, ಚಿತ್ರ ಹಿಡಿದು ಸಂತೋಷಿಸಿದ್ದಾರೆ. ಕೋಡಂಗಿ ವೇಷ ಹಾಕಿ, ಕಪಟನಾಟಕದಲ್ಲಿ, ಒಣ ಪ್ರತಿಜ್ಞೆಗಳಲ್ಲಿ ಓರ್ವ ನಿಜ ಸಂರಕ್ಷಣಾವಾದಿಗೆ ದಕ್ಕದ ಗುಣಗ್ರಾಹೀ ಹದ ಇಲ್ಲಿ ಎಲ್ಲರಿಗೂ ಒದಗಿತ್ತು. ನಮ್ಮಲ್ಲೇ ಒಬ್ಬ ಟೆಕ್ಕಿ “ಸಂಶೋಧನೆಗೆ ನಮಗೆ ಡಿಗ್ರಿ ಇಲ್ವಲ್ಲಾ” ಎಂದು ಅನುಮಾನ ತೋಡಿಕೊಂಡ. ವಿಜ್ಞಾನದ ಎತ್ತರಕ್ಕೇರುವಲ್ಲಿ ಎಷ್ಟೋ ಸ್ಮರಣೀಯ ಸೋಪಾನಗಳನ್ನು ಕಟ್ಟಿದವರು ಸಹಜ ಆಸಕ್ತರು; ಅನ್ಯ ಲಾಭಗಳ (ಗೌರವ, ಪ್ರಶಸ್ತಿ, ಪುರಸ್ಕಾರ, ವೃತ್ತಿಲಾಭ ಇತ್ಯಾದಿ) ಲಕ್ಷ್ಯವಿಲ್ಲದೇ ನಡೆದವರು. ಸಲೀಂ ಆಲಿ, ರೋಮುಲಸ್ ವಿಟೇಕರ್, ಉಲ್ಲಾಸ ಕಾರಂತಾದಿಗಳು ಗಳಿಸಿದ್ದ ಪ್ರಮಾಣೀಕೃತ ವಿದ್ಯಾರ್ಹತೆಗೆ (ಡಿಗ್ರಿ) ಭಿನ್ನವಾದ ಸಾಧನೆಗಳಿಗಾಗಿ ಇಂದು ಸ್ಮರಣೀಯರಾಗಿದ್ದಾರೆ. ‘ಆಸಕ್ತಿಯಿಂದ ಹೋಗಿ, ನೋಡಿ, ಎಷ್ಟು ಪ್ರಾಥಮಿಕ ಅನ್ನಿಸಿದರೂ ಪ್ರಾಮಾಣಿಕ ದಾಖಲೀಕರಣ ನಡೆಸಿ ಮತ್ತು ಅನುಕೂಲ ಒದಗಿದಷ್ಟು ಸಾರ್ವಜನಿಕಗೊಳಿಸಿ’ ಎನ್ನುವುದು ಕಪ್ಪೆ ಕಮ್ಮಟದ ಕೊನೆಯಲ್ಲಿ ಮುಖ್ಯ ಶ್ರುತಿಯಾಗಿ ಉಳಿಯಿತು. ಎಲ್ಲ ಜೀವ ಸಂಬಂಧಗಳಿಂದ ಕಡಿದಿಟ್ಟರೂ ಮಿಡಿಯುವ ಕಪ್ಪೆ ಹೃದಯವೇ ನಮಗೆ ಸಂಕೇತ, ಕತ್ತಲ ಕಾಡಿನ ಅಸಂಖ್ಯ ವಟರ್, ಗೊಟರ್, ಟಿಕ್, ಟ್ರೋಂಯ್‌ಗಳು ಅರ್ಥಪೂರ್ಣ ಸಾಹಿತ್ಯ!