ಮುಗಿಯದ ಪಯಣ
(ಜಿ.ಟಿ ನಾರಾಯಣರಾಯರ ಆತ್ಮಕಥೆ ವಿ-ಧಾರಾವಾಹಿಯಾಗಿ ಕಂತು ಒಂದು)

[ಮುಗಿಯದ ಪಯಣ, ಜಿ.ಟಿ ನಾರಾಯಣ ರಾವ್ ಆತ್ಮಕಥೆ, ಅತ್ರಿ ಬುಕ್ ಸೆಂಟರ್ , ಮಂಗಳೂರು ಪ್ರಕಟಣೆ – ೨೦೦೬. ೧೬+೪೩೨ ಪುಟಗಳು ಬೆಲೆ ರೂ ೧೨೦ ಮಾತ್ರ. ನನ್ನ ತಂದೆ – ಜಿಟಿನಾ ಅವರ ಎಲ್ಲ ಕೃತಿಗಳನ್ನು ಅಂತರ್ಜಾಲಕ್ಕೇರಿಸಿ ಉಚಿತವಾಗಿ ಸಾರ್ವಜನಿಕಕ್ಕೆ ಒದಗಿಸುವ ಯೋಜನೆಯಲ್ಲಿ ‘ಭವಿಷ್ಯವಿಜ್ಞಾನ,’ ಪೂರೈಸಿದ್ದೇನೆ. ಈಗ ‘ಮಾನವ, ಚಂದ್ರನ ಮೇಲೆ’ ಮತ್ತು ತಂದೆಯ ಆತ್ಮಕಥೆಯೇ ಆದ ಇದನ್ನು ಪರ್ಯಾಯವಾಗಿ ಕೊಡಲು ತೊಡಗುತ್ತಿದ್ದೇನೆ. ಈಗಾಗಲೇ ಮಾಡುತ್ತಿರುವಂತೆ Micro soft wordನಲ್ಲಿ ೨೦ರ ಗಾತ್ರದ ಅಕ್ಷರಗಳಲ್ಲಿ ವಾರಕ್ಕೆ ಸುಮಾರು ೧೫-೨೦ ಪುಟಗಳಲ್ಲಿ, ಅಂದರೆ ಮೂಲ ಪುಸ್ತಕದ ಯಾವುದೇ ಅಧ್ಯಾಯದ ತಾರ್ಕಿಕ ಕೊನೆಯಲ್ಲಿ ಕೊನೆಗೊಳ್ಳುವಂತೆ ಹೊಂದಿಸಿಕೊಂಡು ಧಾರಾವಾಹಿಯಾಗಿಸುತ್ತಿದ್ದೇನೆ – ಅಶೋಕವರ್ಧನ.]

ಲೇಖಕನ ಅರಿಕೆ
ಆಲ್ಬರ್ಟ್ ಐನ್ಸ್‌ಟೈನ್ (೧೮೭೯-೧೯೫೫) ತಮ್ಮ ಸ್ನೇಹಿತರ ಹಾಗೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಆತ್ಮಚರಿತ್ರೆಯನ್ನು ಬರೆದಿದ್ದಾರೆ. ಅದರ ಆರಂಭದ ಸಾಲುಗಳು ಹೀಗಿವೆ, “ಇಲ್ಲಿ ನಾನು ನನ್ನ ಅರುವತ್ತೇಳನೆಯ ವಯಸ್ಸಿನಲ್ಲಿ ನನ್ನದೇ ಚರಮಗೀತೆಯಂಥ (Obituary) ಒಂದು ಲೇಖನ ಬರೆಯಲು ಕುಳಿತಿದ್ದೇನೆ. ಡಾ| ಶಿಲ್ಪ್ ನನ್ನನ್ನು ಹೀಗೆ ಮಾಡಲು ಒಪ್ಪಿಸಿದರೆಂಬ ಒಂದೇ ಕಾರಣಕ್ಕಾಗಿ ಇದನ್ನು ಮಾಡುತ್ತಿರುವುದಲ್ಲ. ಒಬ್ಬಾತನ ಕಾರ್ಯ ಮತ್ತು ಶೋಧನೆಗಳನ್ನು ಸಿಂಹಾವಲೋಕಿಸಿದಾಗ ಅವು ಆತನಿಗೆ ಹೇಗೆ ಕಾಣುತ್ತವೆಂಬುದನ್ನು ಆತನೊಡನೆ ದುಡಿಯುತ್ತಿದ್ದವರಿಗೆ ತೋರಿಸಿಕೊಡುವುದು ಒಳ್ಳೆಯದೆಂಬ ಕಾರಣಕ್ಕಾಗಿಯೂ ಈ ಕೆಲಸಕ್ಕೆ ಕೈ ಹಾಕಿದ್ದೇನೆ. ಇಂಥ ಯಾವುದೇ ಪ್ರಯತ್ನ ಎಷ್ಟು ಅಪರಿಪೂರ್ಣವೆಂಬುದನ್ನು ಸ್ವಲ್ಪ ಆತ್ಮಶೋಧಾನಂತರ ಅರಿತೆ. ಏಕೆಂದರೆ ಒಬ್ಬನ ಪ್ರವೃತ್ತ ಜೀವನ ಎಷ್ಟೇ ಸಂಕ್ಷೇಪ ಮತ್ತು ಸೀಮಿತವಾಗಿದ್ದರೂ ಅದರಲ್ಲಿ ದೋಷಪೂರಿತ ಮಾರ್ಗಗಳು ಎಷ್ಟೇ ಎದ್ದುಕಾಣುವಂತಿದ್ದರೂ [ಅದರತ್ತ ಹಿನ್ನೋಟ ಹರಿಸಿ ಸಂಚಿತ ಅನುಭವವನ್ನು ಬರೆಯಲು ತೊಡಗಿದಾಗ] ನಿರೂಪಣಾರ್ಹವಾದ ಅಂಶ ಅಷ್ಟೇನೂ ಸಲೀಸಾಗಿ ಬರುವುದಂತೂ ಇಲ್ಲ – ಇಂದು ಅರುವತ್ತೇಳರಲ್ಲಿರುವ ವ್ಯಕ್ತಿ ಐವತ್ತರಲ್ಲಿ, ಮೂವತ್ತರಲ್ಲಿ ಅಥವಾ ಇಪ್ಪತ್ತರಲ್ಲಿ ಇದ್ದವನ ಹಾಗೆ ಖಂಡಿತ ಇರುವುದಿಲ್ಲ. ಒಂದೊಂದು ಹಳೆಯ ನೆನಪೂ ಇಂದಿನ ಪರಿಸ್ಥಿತಿಯಿಂದ ಬಣ್ಣ ಪಡೆದಿರುತ್ತದೆ. ಎಂದೇ ಇದೊಂದು ಮಿಥ್ಯಾದೃಷ್ಟಿಕೋನ. ಈ ಒಂದು ಪರಿಗಣನೆಯೇ ನಮ್ಮನ್ನು ಕಾರ್ಯವಿಮುಖರಾಗಿಸಬಹುದು. ಇಂತಿದ್ದರೂ ಬೇರೆ ಒಂದು ಪ್ರಜ್ಞೆಗೆ ಗಮ್ಯವಾಗದ ಅನೇಕ ಅಂಶಗಳನ್ನು ಸ್ವಂತಾನುಭವದ ಮೂಸೆಯಿಂದ [ಹೆಕ್ಕಿ] ಹೊರತೆಗೆಯುವುದು ಸಾಧ್ಯವಿದೆ.”

ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ ರಾಮನ್ (೧೮೮೮-೧೯೭೦) ಮತ್ತು ಎಸ್. ಚಂದ್ರಶೇಖರ್ (೧೯೧೦-೯೫) ಇಬ್ಬರನ್ನೂ ವಿಭಿನ್ನ ಕಾಲ ಮತ್ತು ದೇಶಗಳಲ್ಲಿ ಆತ್ಮೀಯವಾಗಿ ಸಂದರ್ಶಿಸುವ ಯೋಗ ನನಗೊದಗಿತ್ತು. ಉಭಯ ಸಂದರ್ಭಗಳಲ್ಲಿಯೂ ನಾನು ಕೇಳಿದ ಒಂದು ಪ್ರಶ್ನೆ, “ನೀವೇಕೆ ನಿಮ್ಮ ಜೀವನಚರಿತ್ರೆ ಬರೆದಿಲ್ಲ?”

ರಾಮನ್ ಹೇಳಿದರು, “ಅದು ಒಂದೋ ಆತ್ಮಶ್ಲಾಘನೆ ಇಲ್ಲವೇ ಪರದೂಷಣೆ ಅಥವಾ ಎರಡರ ಮಿಶ್ರಣ ಆಗದಿರದು. ಶುದ್ಧ ಕಾಲಹರಣ. ನನ್ನ ವಿಜ್ಞಾನಕಾರ್ಯವೇ ನನ್ನ ಜೀವನಚರಿತ್ರೆ.” ಚಂದ್ರಶೇಖರ್ ನುಡಿದರು, “ನನ್ನ ಜೀವನ ನನಗೇನೂ ಮಹತ್ತ್ವದ್ದಾಗಿ ಕಾಣುವುದಿಲ್ಲ. ಆದ್ದರಿಂದ ಅಂಥ ಯಾವ ದುಸ್ಸಾಹಸಕ್ಕೂ ಕೈ ಹಾಕಲಾರೆ. ಅಲ್ಲದೇ ವಿಜ್ಞಾನದಲ್ಲೇ ನಾನು ಮಾಡಬೇಕಾದ ಕೆಲಸ ಸಾಕಷ್ಟಿದೆ.”

ಇತ್ತ ಗಾಂಧೀಜಿಯವರ (೧೮೬೦-೧೯೪೮) ‘ಸತ್ಯಶೋಧನೆ,’ ಶಿವರಾಮ ಕಾರಂತರ (೧೯೦೨-೯೭) ‘ಹುಚ್ಚು ಮನಸ್ಸಿನ ಹತ್ತು ಮುಖಗಳು’, ಪಾಶ್ಚಾತ್ಯ ಪಿಟೀಲು ಮಾಂತ್ರಿಕ ಯೆಹೂದಿ ಮೆನುಹಿನ್ (೧೯೧೬-೯೯) ಅವರ ಆತ್ಮಚರಿತ್ರೆ ‘Unfinished journey’, ದೇ. ಜವರೇಗೌಡರ (೧೯೧೮) ‘ಹೋರಾಟದ ಬದುಕು,’ ಆರ್.ಕೆ ಶ್ರೀಕಂಠಕುಮಾರ ಸ್ವಾಮಿಯವರ (೧೯೨೮) ‘ಹೃದಯಸಂಪನ್ನತೆ’ ಇತ್ಯಾದಿ ಅಭಿಜಾತ ಕೃತಿಗಳು ನನಗೆ ನೀಡಿದ ಸಂದೇಶ ಬೇರೆಯೇ; ಅವು ಘಟನಾ ಪರಂಪರೆಂii ನಿಷ್ಠುರ ನಿರಪೇಕ್ಷ ಜ್ಞೇಯನಿಷ್ಠ ನಿರೂಪಣೆಗಳು. ಅವುಗಳಲ್ಲಿ ಸ್ವವೈಭವೀಕರಣವಿಲ್ಲ ಅಥವಾ ಸ್ವಂತವೈಫಲ್ಯಗಳಿಗೆ ಇತರರನ್ನು ಬಲಿಪಶುಗಳಾಗಿಸುವ ಹುನ್ನಾರವಿಲ್ಲ, ಬದಲು, ಅತ್ಯಂತ ಪಾರದರ್ಶಕ ವಿವರಣೆಗಳಿವೆ, ತೀರ್ಮಾನಗಳನ್ನು ವಾಚಕರಿಗೇ ಬಿಡಲಾಗಿದೆ. ಎಂದೇ ಆ ಕೃತಿಗಳು ಉತ್ಕೃಷ್ಟ ಸೃಜನಶೀಲ ಪ್ರಕಾರಗಳಾಗಿಯೂ ನಮಗೆ ಆತ್ಮೀಯಯವಾಗುತ್ತವೆ. ಅವರ ವೈಫಲ್ಯಗಳಲ್ಲಿ ನಾವು ಸಹಚರಿಗಳಾಗುತ್ತೇವೆ, ಸಾಫಲ್ಯಗಳಲ್ಲಿ ಸಂಭ್ರಮಿಸುತ್ತೇವೆ. ಮೆನುಹಿನ್ ಅವರ ಆತ್ಮಚರಿತ್ರೆಯ ಹೆಸರೇ ಪ್ರಸ್ತುತ ಕನ್ನಡ ಪುಸ್ತಕದ ಶೀರ್ಷಿಕೆಗೆ ಸ್ಫೂರ್ತಿ. ಹಿರಿಯ ಸಮಾಜಸೇವಕ, ಸ್ವಾತಂತ್ರ್ಯಹೋರಾಟಗಾರ, ಸಂಘಟಕ, ಪ್ರಖರ ಚಿಂತಕ ಹಾಗೂ ಲೇಖಕ ಬಿ.ವಿ ಕಕ್ಕಿಲ್ಲಾಯರ ಆತ್ಮಚರಿತ್ರೆ ‘ಬರೆಯದ ದಿನಚರಿಯ ಮರೆಯದ ಪುಟಗಳು’ ನನಗೊಂದು role modelನ್ನೇ ಒದಗಿಸಿಕೊಟ್ಟಿತು.

ಜೊತೆಗೆ ತುಸು ಲಘುವಾಗಿ ಇನ್ನೊಂದು ಮಾತನ್ನು ಸೇರಿಸಬೇಕು: ವ್ಯಕ್ತಿ ತನ್ನ ಕ್ರಿಯಾಶೀಲ ಜೀವನದ ಕೊನೆಯ ಘಟ್ಟ ತಲಪಿದಾಗ ಕುಸಿಯಲಾರಂಭಿಸುವ ಉತ್ಸಾಹವನ್ನು ಸಂವರ್ಧಿಸಲು ಆತ್ಮಚರಿತ್ರೆ ಬರೆಯುವುದರತ್ತ ಮಾಲುವುದಾಗಿರಬಹುದೇ? ಆದರೆ ಈ ಸಮಸ್ಯೆ ನನ್ನನ್ನೆಂದೂ ಬಾಧಿಸಲಿಲ್ಲ: ಸಮಾಜಕ್ಕೆ ನನ್ನ ಅಸ್ತಿತ್ವ ಅನಿವಾರ್ಯವೆಂದು ಯಾವ ಕ್ಷಣದಲ್ಲೂ ನನಗೆ ಅನ್ನಿಸಿಲ್ಲ. ಬದಲು, ಸ್ವಸಂತೋಷಾರ್ಥ ನಾನು ಸದಾ ಕ್ರಿಯಾಶೀಲವಾಗಿ ಬಾಳಬೇಕೆಂಬುದು ನನ್ನ ಸಂಕಲ್ಪ ಮತ್ತು ನಡವಳಿಕೆ. ಇದೊಂದು ಬಗೆಯ ಋಣ ಸಂದಾಯ – ಸಮಾಜದಿಂದ ವ್ಯಕ್ತಿ ಪಡೆದುದನ್ನು ಕೃತಜ್ಞತಾಪೂರ್ವಕವಾಗಿ ಸಮಾಜಕ್ಕೆ ಮರುಸಲ್ಲಿಸುವ ಪುಣ್ಯಸ್ನಾನ; ಜೊತೆಗೆ ಆತ್ಮವಿಮರ್ಶೆ ಅಥವಾ ಉತ್ತರದಾಯಿತ್ವ (accountability) ಕೂಡಾ.

ಇಷ್ಟೆಲ್ಲ ಸಂಗತಿಗಳು ನನಗೆ ಗೊತ್ತಿದ್ದರೂ ನಾನೇಕೆ ದೇವತೆಗಳು ಕಾಲಿಡಲು ಅಂಜುವ ಈ ಕಳಕ್ಕೆ ದುಮುಕಿದೆ? ಸರಳ ಉತ್ತರ: ‘ಎನ್‌ಸಿಸಿ ದಿನಗಳು’ ಪುಸ್ತಕ ವ್ಯಾಪಕ ಜನಪ್ರಿಯತೆ, ಮೊಮ್ಮಗ ಅಭಯನ ಒತ್ತಾಯ, ಬಂಧುಮಿತ್ರರ ಹಾಗೂ ಅಭಿಮಾನಿಗಳ ಪ್ರೀತಿಯ ಬೇಡಿಕೆ ಎಲ್ಲ ಒಗ್ಗೂಡಿ ಸುಮಾರು ಹದಿನೆಂಟು ತಿಂಗಳ ಹಿಂದೆ ಗತಾನುಭವದ ಹೊನಲಿಗೆ ಹಾರಿದೆ. ಹಾದಿ ತಿಳಿದಿರಲಿಲ್ಲ, ಗುರಿ ಗೊತ್ತಿರಲಿಲ್ಲ. ಆದರೆ ಅಭಯ ಇಂಥ ಒಂದು ದಾಖಲೆಯ ಆವಶ್ಯಕತೆ ಕುರಿತು ಮನಂಬುಗುವ ವಿವರಣೆ ನೀಡಿ ನನ್ನನ್ನು ಮುಂದುವರಿಯಲು ಹುಮ್ಮಸ್ಸು ಊಡಿದ. ಸೋದರಭಾವ ರಾಮನಾಥ ಹಾಗೂ ಸೋದರಳಿಯ ರಾಧಾಕೃಷ್ಣ ಇಬ್ಬರೂ ಎಡೆಬಿಡದೆ ವಿಚಾರಿಸುತ್ತ, ಈ ನಿಟ್ಟಿನಲ್ಲಿ ನನ್ನ ನಿಷ್ಕ್ರಿಯತೆ ಅಥವ ಔದಾಸೀನ್ಯದ ಕಾರಣವಾಗಿ, ನನ್ನಲ್ಲಿ ‘ಅಪರಾಧ ಪ್ರಜ್ಞೆ’ (guilty conscience) ಮೊಳೆಯುವಂತೆ ಮಾಡಿದರು. ಮಗ ಅಶೋಕ ಮತ್ತು ಮಡದಿ ಲಕ್ಷ್ಮಿ ಹೃತ್ಪೂರ್ವಕವಾಗಿ ಈ ಪ್ರಯತ್ನವನ್ನು ಸ್ವಾಗತಿಸಿದರು. ಹೀಗೆ ಹತ್ತು ಹನ್ನೊಂದು ಅರ್ಜುನ ಪ್ರೇರಣೆ ಅಥವಾ ಕುಮ್ಮಕ್ಕು ಒದಗಿದಾಗ ಈ ‘ಉತ್ತರಕುಮಾರ’ ಕೊಳುಗುಳಕ್ಕಿಳಿಯದೇ ಗತಿಯುಂಟೇ? ಅಂದ ಮಾತ್ರಕ್ಕೆ ‘ಅಪರಾಧಿ ನಾನಲ್ಲ, ಅಪರಾಧವೆನಗಿಲ್ಲ’ ಎಂಬ ವಿಶ್ವಾಮಿತ್ರ-ವಿನ್ಯಾಸ ತಳೆಯುವುದು (ಶಿಶು ಶಕುಂತಳೆಯನ್ನು ತಾಯಿ ಮೇನಕೆ ತಂದೆ ವಿಶ್ವಾಮಿತ್ರನಿಗೊಪ್ಪಿಸಲು ಮುಂದಾದಾಗ ಆತನ ಪ್ರತಿಕ್ರಿಯೆ) ನನ್ನ ಉದ್ದೇಶವಲ್ಲ. ಈಗ ನನ್ನ ನಿವೇದನೆ ಇಷ್ಟೆ (ಕುವೆಂಪು ಕ್ಷಮೆ ಕೋರಿ): “ಇದೊ ಮುಗಿಸಿ ತಂದಿಹೆನ್ ‘ಮುಗಿಯದ ಪಯಣ’ ಕೃತಿಯ ನಿಮ್ಮ ಸಿರಿಯಡಿಗೊಪ್ಪಿಸಲ್ಕೆ ಓ ವಾಚಕರೆ! ಪುರುಳಿರ್ದರಿದರೊಳಗೆ ಕರುಣಿಸಿಂ ಪೇಳ್ದೆನಗೆ, ದೋಷಂಗಳಿರ್ದೊಡೆ ಕ್ಷಮೆಯಿರಲಿ.”

‘ಮುಗಿಯದ ಪಯಣ’ದ ಬರವಣಿಗೆ ತೊಡಗಿದಾಗ ನಾನು ವಿಧಿಸಿಕೊಂಡ ಕೆಲವು ಮುಖ್ಯ ನಿಯಮಗಳಿವು: ‘ಎನ್‌ಸಿಸಿ ದಿನಗಳು’ ಪುಸ್ತಕದಲ್ಲಿಯಂತೆ ಇಲ್ಲಿಯೂ ಘಟನೆಗಳಿಗೆ ಪ್ರಾಮುಖ್ಯ ನೀಡಬೇಕು, ಸ್ವವಿಭವೀಕರಣ ಎಲ್ಲಿಯೂ ಸಲ್ಲದು, ತಿಳಿದೋ ತಿಳಿಯದೆಯೋ ನಾನು ಮಾಡಿದ ತಪ್ಪುಗಳನ್ನು ಮತ್ತು ಆ ಕಾರಣವಾಗಿ ಕಲಿತ ಪಾಠವನ್ನು ಎತ್ತಿ ಕಾಣಿಸಬೇಕು. ಇತರರಿಗೆ ನೋವು ಅಥವಾ ಮುಜುಗರ ಉಂಟುಮಾಡಬಹುದಾದ ಪ್ರಸಂಗಗಳನ್ನು ತೇಲಿಸಿ ಬರೆಯಬೇಕು, ಮತ್ತು ಪ್ರಸ್ತುತ ಕೃತಿ ಸಂದ ಯುಗಕ್ಕೆ ಇಂದು ಹಿಡಿದ ಕನ್ನಡಿ ಆಗಿರುವಂತೆ ಸರ್ವಪ್ರಯತ್ನ ಹೂಡಬೇಕು. ನಾಗರಿಕತೆಯ ಒಂದು ಸಂಕ್ರಮಣ ಕಾಲದಲ್ಲಿ ನನ್ನ ಬಾಳು ಬೆಳೆದು ಅರಳಿತು: ೧೯೪೭ರಲ್ಲಿ ಸಾಫಲ್ಯ ಕಂಡ ಭಾರತದ ಸ್ವಾತಂತ್ರ್ಯ ಆಂದೋಳನದ ಉತ್ಸಾಹ, ಎರಡನೆಯ ಪ್ರಪಂಚ ಮಹಾಸಮರದ ಕಾವು (೧೯೩೯-೪೫), ಭಾರತ ವಿಭಜನೆಯ ನೋವು, ಶೂನ್ಯ ಉದ್ಯೋಗಾವಕಾಶ ಮುಂತಾದ ದೇಶದೊಳಗಿನ ತುಮುಲಗಳು ಒಂದು ಕಡೆ, ಗಣಕ ಮತ್ತು ಆಕಾಶಯುಗಗಳ ಪ್ರವೇಶ (೧೯೫೭), ತಂತ್ರವಿದ್ಯೆಯ ಅನೂಹ್ಯ ಉತ್ಕರ್ಷೆ, ಜ್ಞಾನಸೀಮೆಯ ಹಠಾತ್ ವಿಸ್ತರಣೆ ಮುಂತಾದವು ಜಾಗತಿಕ ಚಿಂತನೆ ಹಾಗೂ ಸಾಮಾಜಿಕ ಪ್ರಜ್ಞೆ ಮೇಲೆ ಬೀರಿದ ಪ್ರಭಾವ ಇನ್ನೊಂದು ಕಡೆ ಎರಡೂ ಕ್ರಿಯಾಶೀಲವಾಗಿದ್ದ ಪರ್ವಕಾಲವದು. ಮನುಕುಲ ನಾಲ್ಕನೆಯ ಕ್ರಾಂತಿಯತ್ತ ಸಾಗುತ್ತಿದೆಯೋ ಎನ್ನುವಂಥ ಪರಿಸ್ಥಿತಿ ತಲೆದೋರಿತ್ತು. ಆ ಕ್ರಾಂತಿಗಳಿವು: ಮಾತಿನ ಆರಂಭ (ವಿಕಾಸದ ಯಾವ ಮಜಲಿನಲ್ಲಿ ಇದು ಸಂಭವಿಸಿತೆಂಬುದು ತಿಳಿದಿಲ್ಲ), ಲಿಪಿಶೋಧನೆ (ಕ್ರಿಪೂ ಸು ೩೦೦೦), ಮುದ್ರಣ ಕ್ರಾಂತಿ (ಕ್ರಿಶ ೧೫ನೆಯ ಶತಮಾನ), ಎಲೆಕ್ಟ್ರಾನಿಕ್ ಯುಗದ ಆವಾಹನೆ (೨೦ನೆಯ ಶತಮಾನದ ಉತ್ತರಾರ್ಧ).

ನಾಲ್ಕನೆಯ ಕ್ರಾಂತಿಯ ಉಷಃ ಕಾಲದಲ್ಲಿ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನಾನು ಇದರ ಕ್ಷಿಪ್ರ ಅಭಿವೃದ್ಧಿ ಕಂಡು ಬೆರಗಾಗಿ ಉದ್ದೀಪನಗೊಂಡು ಕನ್ನಡದಲ್ಲಿ ವೈಜ್ಞಾನಿಕ ಲೇಖನಗಳನ್ನೂ ಪುಸ್ತಕಗಳನ್ನೂ ಬರೆದು ಪ್ರಕಟಿಸಲು ತೊಡಗಿದೆ. ನನ್ನ ವೃತ್ತಿ (ಕಾಲೇಜಿನಲ್ಲಿ ಗಣಿತೋಪನ್ಯಾಸಕ, ೧೯೪೭ರಿಂದ) ಈ ಹವ್ಯಾಸಕ್ಕೆ ಪೂರಕ ಪೋಷಕವಾಗಿತ್ತು. ಮುಂದೇನಾಯಿತು? ಪ್ರಸ್ತುತ ಕೃತಿಯ ಪುಟಗಳಲ್ಲಿ ಆ ಘಟನೆಗಳು ಕ್ರಮಶಃ ಅನಾವರಣಗೊಳ್ಳುವುದನ್ನು ವಾಚಕರು ಗುರುತಿಸಬಹುದು. ಪೂರ್ವಸಿದ್ಧ ಯೋಜನಾನುಸಾರ ರಚಿತವಾದ ಕೃತಿ ಇದಲ್ಲ, ಗತ ಜೀವನದ ಗೊಂಡಾರಣ್ಯದಲ್ಲಿ ನಡೆದಂತೆ ಹಾದಿ ಹುಡುಕಿ ವರ್ತಮಾನಕ್ಕೆ ತಲಪುವ ಪ್ರಯತ್ನ ಮಾತ್ರ.

ಆಗಸ್ಟ್ ೨೦೦೬ರ ವೇಳೆಗೆ ಬರವಣಿಗೆ (ಅಲ್ಲ, ಗಣಕ ಬೆರಳಚ್ಚು ಕೆಲಸ) ಮುಗಿಯಿತು. ಇಲ್ಲಿ ಪ್ರದರ್ಶಿತವಾಗುತ್ತಿರುವ ದೃಶ್ಯಪರಂಪರೆ ಹೇಗಿದೆ? ಡಿವಿಜಿಯವರ ಅಮರವಾಣಿಯಲ್ಲಿ –

ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಲದಿ
ಕೋಟಿ ನಟರಾಂತಿಹರು ಚಿತ್ರ ಪಾತ್ರಗಳ
ಆಟಕ್ಕೆ ಕಥೆಯಿಲ್ಲ, ಮೊದಲಿಲ್ಲ, ಕಡೆಯಿಲ್ಲ
ನೋಟಕರುಂ ಆಟಕರೆ ಮಂಕುತಿಮ್ಮ

ಎಂಬ ಉಕ್ತಿಗೆ ‘ಮುಗಿಯದ ಪಯಣ’ ಒಂದು ಕಿರಿಯ ನಿದರ್ಶನ ಮಾತ್ರ. ಇದರಲ್ಲಿ ಪ್ರದರ್ಶಿಸಿರದ ಇತರ ದೃಶ್ಯಗಳನ್ನು ಮುಖ್ಯವಾಗಿ ‘ಎನ್‌ಸಿಸಿ ದಿನಗಳು [ಬೆಲೆ ರೂ ೫೫], ‘ಸುಬ್ರಹ್ಮಣ್ಯಂ ಚಂದ್ರಶೇಖರ್ [ಬೆಲೆ ರೂ ೫೫],’ ‘ಸವಾಲನ್ನು ಎದುರಿಸುವ ಛಲ’ ಮತ್ತು ‘ಸಪ್ತ ಸಾಗರದಾಚೆಯೆಲ್ಲೋ… [ಬೆಲೆ ರೂ ೬೦]’ ಎಂಬ ಕೃತಿಗಳಲ್ಲಿ ಕಾಣಬಹುದು. ಇಷ್ಟಾಗಿಯೂ ಉಳಿದವನ್ನು ‘ಸಂಗೀತ ರಸನಿಮಿಷಗಳು [ಬೆಲೆ ರೂ ೬೦]’ ಹೆಸರಿನ ಹೊಸ ಪುಸ್ತಕದಲ್ಲಿ ಸದ್ಯವೇ ಪ್ರಕಟಿಸುವ ಸಂಕಲ್ಪವಿದೆ.

[ಬೆಲೆ ನಮೂದಿಸಿರುವ ಪುಸ್ತಕಗಳು ಇಂದು ನನ್ನಲ್ಲಿ ಮಾರಾಟಕ್ಕೆ ಲಭ್ಯವಿವೆ.ಮುದ್ರಿತ ಬೆಲೆ ಮಾತ್ರ ಕಳಿಸಿದರೆ ಸಾಕು, ಉಚಿತ ಅಂಚೆಯಲ್ಲಿ ಕಳಿಸುತ್ತೇನೆ – ಅವ]

ಪ್ರಸ್ತುತ ಆತ್ಮಚರಿತ್ರೆಗೆ ‘ಮುಗಿಯದ ಪಯಣ’ದ ಬದಲು ‘ಮುಗಿದ ಪಯಣ’ ಎಂಬ ಹೆಸರು ಅಧಿಕ ಸಮಂಜಸವಾಗಿರುತ್ತಿತ್ತು ಎಂದೊಬ್ಬ ಆತ್ಮೀಯ ಮಿತ್ರ ಸೂಚಿಸಿದಾಗ ನನ್ನ ಆಯ್ಕೆಗೊಂದು ವಿವರಣೆ ಅಗತ್ಯವೆನ್ನಿಸಿತು. ‘ಪಯಣ’ ಪದ ಕಾಲಚಕ್ರದ ನಿರಂತರ ಏಕಮುಖ ಏಕವೇಗ ಪರಿಕ್ರಮಣ ಸೂಚಕ. ಆನ್ವಯಿಕವಾಗಿ ಇದು ಮನುಕುಲದ ಅಥವಾ ನಾಗರಿಕತೆಯ ಚಲನಶೀಲತೆಯನ್ನು ಧ್ವನಿಸುತ್ತದೆ. ಈ ಅನಂತ ಹಾಸು ಬೀಸುಗಳಲ್ಲಿ( space and time) ಯಾವನೇ ವ್ಯಕ್ತಿ ಆತ ಎಂಥ ಸಾರ್ವಭೌಮ ಮಹಾಪುರುಷನಾಗಿರಲಿ ಇಲ್ಲವೇ ಕೇವಲ ನಗಣ್ಯ ಸಾಮಾನ್ಯನಾಗಿರಲಿ ಒಂದು ಚುಕ್ಕಿ ಮಾತ್ರ. ಭೂಗಾತ್ರದೊಡನೆ ಹೋಲಿಸುವಾಗ ಸಾಕ್ಷಾತ್ ಮೌಂಟ್ ಎವರೆಸ್ಟ್ (ಭೂ ವ್ಯಾಸ ೧೨,೮೦೦ ಕಿಮೀ, ಎವರೆಸ್ಟ್ ಔನ್ನತ್ಯ ೮ ಕಿಮೀ) ಕೇವಲ ಧೂಳ ಕಣ ಎಂಬ ಭೌತಸತ್ಯವನ್ನು ಮರೆಯದಿರೋಣ. ಅದೇ ರೀತಿ ಭೂಮಿಯ ವಯಸ್ಸಿನೊಡನೆ (೫,೦೦೦,೦೦೦,೦೦೦ ವರ್ಷಗಳು) ಅಥವಾ ನಾಗರಿಕತೆಯ ಪ್ರಾಯದೊಡನೆ (ಸುಮಾರು ೧೦,೦೦೦ ವರ್ಷಗಳು) ಹೋಲಿಸುವಾಗ ವ್ಯಕ್ತಿಯ ಜೀವಿತಾವಧಿಗೇನು ಸ್ಥಾನವಿದೆ? ಈ ಸೀಮಿತ ವ್ಯಾಪ್ತಿಯಲ್ಲೂ ಎಷ್ಟೊಂದು ಕಾಲವನ್ನು ಆತ ವೃಥಾ ಅಪವ್ಯಯ ಅಥವಾ ದುರ್ವ್ಯಯ ಮಾಡಿರುತ್ತಾನೆ ಎಂಬ ಸಂಗತಿಗಳನ್ನು ಗಮನಿಸುವಾಗ ೮೦ರ ಎತ್ತರದಲ್ಲಿ ನಿಂತಿರುವ ನನ್ನಂಥವನ ಪ್ರತಿಕ್ರಿಯೆ ಏನು? ವ್ಯಕ್ತಿಯ ಬದುಕಿಗೆ ಕೊನೆ ಇದ್ದೇ ಇದೆ. ಅದು ಖಾತ್ರಿ ಮುಗಿದ ಪಯಣವಾಗುತ್ತದೆ. ಆದರೆ ಈ ಅಲ್ಪಾವಧಿ ಮತ್ತು ಅತಿಸೂಕ್ಷ್ಮ ಅವಕಾಶಗಳನ್ನು ಆತ ಹೇಗೆ ಬಳಸಿಕೊಂಡಿದ್ದಾನೆ ಎಂಬುದು ಮಾತ್ರ ಮುಖ್ಯವಾಗುತ್ತದೆ.

ಪ್ರಸ್ತುತ ಪುಸ್ತಕದ ಉದ್ದಕ್ಕೂ ಬರುವ ‘ಅತ್ರಿಸೂನು ಚೌಪದಿ’ ಕುರಿತು ಒಂದು ವಿವರಣೆ. ಡಿವಿಜಿಯವರ ‘ಮಂಕುತಿಮ್ಮನ ಕಗ್ಗ’ ನಾನು ಮೆಚ್ಚಿರುವ ಪರಮೋತ್ಕೃಷ್ಟ ಕೃತಿಗಳ ಪೈಕಿ ಒಂದು. ಕಗ್ಗ ಮತ್ತು ಕತೆ ಹೊಸೆಯುವ ಚಾಳಿ ಚಿಕ್ಕಂದಿನಿಂದಲೂ ನನಗೆ ಅಂಟಿರುವ ಗೀಳು. ಆಧುನಿಕ ವಿಜ್ಞಾನ ಪರಿಕಲ್ಪನೆ ಮತ್ತು ಸಾಧನೆಗಳನ್ನು ಜನಪ್ರಿಯ ಶೈಲಿಯಲ್ಲಿ ಬರೆಯುವುದು ೧೯೪೯ರ ಸುಮಾರಿಗೆ ನನ್ನನ್ನು ವಶೀಕರಿಸಿಕೊಂಡ ಹವ್ಯಾಸ. ಶುದ್ಧ ಸಾತ್ತ್ವಿಕ ಶಾಸ್ತ್ರೀಯ ಸಂಗೀತದ ಒಬ್ಬ ನೈಷ್ಠಿಕ ಶ್ರೋತೃ ನಾನು. ಇಂಗ್ಲಿಷಿನಲ್ಲಿಯ Limmericks & Doggerel verses (ಚುಟುಕಗಳು) ನನಗೆ ಬಲುಪ್ರಿಯ. ಇವೆಲ್ಲ ಪರಿಕರಗಳೂ ನನ್ನ ಅನುಭವದ ಮೂಸೆಯಲ್ಲಿ ಪಾಕಗೊಂಡು ಕನ್ನದ ಜನಪ್ರಿಯ ವಿಜ್ಞಾನ ಕ್ಷೇತ್ರದಲ್ಲಿ ವಿವಿಧ ಪ್ರಯೋಗಗಳನ್ನು ಮಾಡಲು ಪ್ರೇರಣೆ ಊಡಿದವು. ರತ್ನ ಹಾಡಿರುವಂತೆ, “ಬುಂಡೇನೆತ್ತಿ ಕುಡುದ್ಬುಟ್ಟಾಂದ್ರೆ ತಕ್ಕೋ ಪದಗೋಳ್ ಬಾಣಾ!”

ಆರ್ಕಿಮಿಡೀಸ್‌ನಿಗೆ ಸಾಪೇಕ್ಷ ರಹಸ್ಯ ಸ್ಫುರಣವಾದಾಗಿನ ಉದ್ಗಾರ “ಯುರೀಕಾ” (ಕಂಡೆನಾ, ಕಂಡೆನಾ!), ರಾಮಾಯಣದಲ್ಲಿ ಸೀತಾದರ್ಶನಪುಳಕಿತ ಹನುಮಂತ ಶ್ರೀರಾಮನಿಗೆ ಆ ರೋಮಾಂಚಕ ಸುದ್ದಿಯನ್ನು ಅರುಹಿದ ‘ದೃಷ್ಟಾ ದೇವೀ’ – ಕಂಡೆನಾ ದೇವಿಯನು ಸನ್ನಿವೇಶ, ೧೯೧೯ರ ಸಂಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತಕ್ಕೆ ನಿಸರ್ಗ ಒತ್ತಿದ ಅಸ್ತು ಮುದ್ರೆಯ ನಾಟಕೀಯ ಸನ್ನಿವೇಶ ಮುಂತದವು ಹೇಗೆ ಇಂಗ್ಲಿಷಿನಲ್ಲಿ ಅಸಂಖ್ಯ ಕವನ ಮತ್ತು ಚುಟಕಗಳಿಗೆ ಸ್ಫೂರ್ತಿ ನೀಡಿವೆ ಎಂಬುದು ಸುಪರಿಚಿತ. ಉದಾಹರಣೆಗೆ ಪುಟ ೩೭೧ರಲ್ಲಿ [ಜಾಲತಾಣದಲ್ಲಿ ಮುಂದಿನೊಂದು ಪುಟ] ನಿರೂಪಿತವಾಗಿರುವ ಸೂತ್ರವಾಕ್ಯ : Wha Oh Be A Fine Girl Kiss Me Right Now Sweet! (ಇಲ್ಲಿಯ ಸೂತ್ರಪದಗಳು W,O,B,A,F,G,K,M,R,N,S ನಕ್ಷತ್ರಗಳ ಗುಣಧರ್ಮಗಳನ್ನು ನಿರ್ದಿಷ್ಟ ಕ್ರಮಾನುಸಾರ ಪ್ರತಿನಿಧಿಸುತ್ತವೆ). ಅಂದ ಮೇಲೆ ಚೆಲುಗನ್ನಡದಲ್ಲಿಯೂ ಸಂವಾದೀ ಸೂತ್ರವಾಕ್ಯ ಮರುವುಟ್ಟು ಪಡೆಯಬೇಡವೇ? ಅದು “ವ್ಹಾರೆವಾ! ಓನನ್ನ ಬಾಳ್ಬೆಳಕೆ ಆಗಮಿಸು! ಪ್ಲೇನಮಯ ಗೋರಸವ ಕೊಡು ನನಗೆ ಮೃದುಭಾಷಿ ರಸಿಕಮಣಿ ನಗುನಗುತ ಸಾರೆಲೇ!” ಇದನ್ನು ಇಂಗ್ಲಿಷಿಗೆ ಲಿಪ್ಯಂತರಿಸಿದರೆ ಇಲ್ಲಿ ಪ್ರತಿಯೊಂದು ಗಣದ ಆದಿ ಅಕ್ಷರ ಮೇಲಿನ ಸೂತ್ರಪದಗಳೇ ಆಗಿವೆ ಎಂಬುದನ್ನು ಗಮನಿಸಬಹುದು. ಹಾಗೆ ನೋಡುವುದಾದರೆ ಆದಿಕಾವ್ಯದ ಆರಂಭ ಘಟನೆಯೇ (ಮಾ ನಿಷಾದ!) ವಾಲ್ಮೀಕಿಯ ಅವತಾರ ಕಾರಣವಲ್ಲವೇ?

ನಕ್ಷತ್ರವೊಂದರ ವಿಕಾಸ ಹಲವು ಬಿಲಿಯನ್ ವರ್ಷಗಳ ವಿಶ್ವ ವಿದ್ಯಮಾನ. ಇದರ ವಿವಿಧ ಹಂತಗಳನ್ನೂ ಇವನ್ನು ರೂಪಿಸುವ ವಿವಿಕ್ತ ಬಲಗಳನ್ನೂ ಖಭೌತ ವಿಜ್ಞಾನಿಗಳು ೨೦ನೆಯ ಶತಮಾನದ ಉತ್ತರಾರ್ಧದಲ್ಲಿ ಅನಾವರಣಗೊಳಿಸಿದರು. ಆ ರೋಮಾಂಚಕ ಸಂದರ್ಭದಲ್ಲಿ ಒಬ್ಬ ಮುಂಚೂಣಿ ಸಂಶೋಧಕನ ಕಾವ್ಯ ಪ್ರತಿಭೆ ಮಿಂಚಿತು: ಆತ ತನ್ನ ಗಣಕಕ್ಕೆ ಕಾಲದ ಹೊರತಾಗಿ ಉಳಿದೆಲ್ಲ ಮಾಹಿತಿಗಳನ್ನೂ ಊಡಿದ. ಕಾಲ ಕುರಿತಂತೆ ಮಾತ್ರ ಬಿಲಿಯನ್ ವರ್ಷಗಳನ್ನು ಕೇವಲ ಸೆಕೆಂಡಿನ ಅಲ್ಪಾಂಶಕ್ಕೆ ಹ್ರಸ್ವಗೊಳಿಸಿದ. ಆಗ ಆ ಗಣಕದ ತೆರೆ ಮೇಲೆ ಪ್ರಕಟವಾದ ಅಭೂತಪೂರ್ವ ದೃಶ್ಯ ಅವನಿಂದ ಹೊಮ್ಮಿಸಿದ ಕಾವ್ಯೋದ್ಗಾರ: At the yonder galaxy I saw a star dancing to the tune of gravity! ಇದರ ಕನ್ನಡ ರೂಪ: ಬ್ರಹ್ಮಾಂಡ ಗರ್ಭದಲಿ ಗುರುತ್ವದ ಗಾಯನಕೆ ನಕ್ಷತ್ರ ನರ್ತನವ ನಾಕಂಡೆ!”

ಇವೆಲ್ಲ ನನ್ನ ಕು-ಕವಿತೆಗಳ ಒರತೆಗಳಿಗೆ ಕಾರಣ, ಚಿಕ್ಕಂದಿನಿಂದಲೇ ಕಗ್ಗ ಹೊಸೆತದಲ್ಲಿ ನಾನು ಮಾಡಿದ ಕವಾಯತಿ ಮತ್ತು ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ವಾಙ್ಮಯ ರಚನೆಯ ವೇಳೆ ವಿವಿಧ ಶೋಧಗಳು ನನ್ನಲ್ಲಿ ಪ್ರೇರಿಸಿದ ಅಮೂರ್ತ ಭಾವನೆಗಳು. ಪ್ರಾಯಶಃ ೧೯೭೦ರ ದಶಕದಲ್ಲಿ, ಮುಖ್ಯವಾಗಿ ಐನ್ಸ್ಟೈನ್ ಜೀವನ ಚರಿತ್ರೆ ಬರೆಯಲು ತೊಡಗಿದಾಗ, ಇವು ತಂತಾವೇ ಪ್ರವಹಿಸತೊಡಗಿಸಿದುವು. ಆಗ ಅತ್ರಿಸೂನು-ಉವಾಚ ಉಗಮಿಸಿತು. [‘ಅತ್ರಿಸೂನು ಉವಾಚ’ ಬೆಲೆ ರೂ ೩೦. ಲಭ್ಯ – ಅವ] ಸ್ವಗೃಹದ ನಾಮ ಅತ್ರಿ, ಎಂದೇ ‘ಮಂಕುತಿಮ್ಮ’ ಗಣಕ್ಕೆ ಸಂವಾದಿಯಾಗಿ ‘ಅತ್ರಿಸೂನು’ ಅಂಕಿತ. ಅಂದ ಮೇಲೆ ಆ ಮಹಾಪ್ರತಿಭೆ ಜೊತೆ ನನ್ನನ್ನು ಹೋಲಿಸಿಕೊಂಡಾಗ ನನ್ನ ಸ್ಥಾನ ಏನು?

ಅತ್ರಿಸೂನೆಂಬಾತ ಮಂಕುತಿಮ್ಮನಿಗೇನು ಪುತ್ರನೇ, ಭ್ರಾತೃವೇ, ನಕಲಿಯೇ?
ಚಿತ್ರಭಾನುವು ತಿಮ್ಮ ಕಿರಿ ಸೊಡರು ಸೂನು
ಶತ್ರುಗಳುಭಯರುಂ ತಮಂಧಕ್ಕೆ ಅತ್ರಿಸೂನು
ಜೊತೆಗೆ ಮಂಕುತಿಮ್ಮನ ಕಗ್ಗದಲ್ಲಿ, ಅಂತೆಯೇ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ವೈಜ್ಞಾನಿಕ ಅಂಶಗಳು ಎಂಬ ಪ್ರತ್ಯೇಕ ಅಧ್ಯಯನಗಳನ್ನು ‘ಕುವೆಂಪು ದರ್ಶನ ಸಂದರ್ಶನ’ [ಲಭ್ಯ, ಬೆಲೆ ರೂ ೪೫ – ಅವ] ಎಂಬ ನನ್ನ ಪುಸ್ತಕದಲ್ಲಿ ಗಮನಿಸಬಹುದು.

ಇನ್ನು ಕಿರಿದರೊಳ ಪಿರಿದರ್ಥ ತುಂಬಿರುವ ಬೆನ್ನುಡಿ ಬಗ್ಗೆ ಎರಡು ಮಾತು. ೧೯೬೯ರಲ್ಲಿ ನಾವು ಮೈಸೂರಿನ ಶಾಶ್ವತ ನಿನಾಸಿಗಳಾದಾಗ ಕನ್ನಡ ಪ್ರಾಧ್ಯಾಪಕ ಎಸ್. ರಾಘವೇಂದ್ರ ಭಟ್ಟ ಮತ್ತು ಅವರ ಮಡದಿ ಕಮಲಾಕ್ಷಿ ದಂಪತಿಗಳ ಪರಿಚಯವಾಯಿತು – ಅಕ್ಕಪಕ್ಕದ ಮನೆಗಳವರೆಂದ ಅನಿವಾರ್ಯತೆಯಿಂದ! ಆದರೆ ಸಮಾನಾಸಕ್ತಿ ಮತ್ತು ಮನೋಧರ್ಮಗಳ ಕಾರಣವಾಗಿ ಈ ಕುಟುಂಬ ಸ್ನೇಹ ಕಾಲ ಸಂದಂತೆ ಅಧಿಕ ಗಾಢತೆ ಪಡೆದಿದೆ. ನನ್ನ ಎಲ್ಲ ಹಾರಾಟ, ಚೀರಾಟ ಮತ್ತು ಹುಚ್ಚಾಟಗಳಿಗೆ ಸಾಕ್ಷಿಯೂ ಮನಸ್ಸಾಕ್ಷಿಪಾಲಕರೂ ಆಗಿದ್ದಾರೆ ಭಟ್ಟರು. ವಿದ್ವಾಂಸ, ಸಹೃದಯ, ನಿಶಿತಮತಿ ಆದರೆ ಲೇಖನವಿದೂರ ರಾಘವೇಂದ್ರ ಭಟ್ಟರು ನನ್ನ ಕೋರಿಕೆಯನ್ನು ಮನ್ನಿಸಿ ಬೆನ್ನುಡಿ ಬರೆದುಕೊಟ್ಟು ಉಪಕರಿಸಿದ್ದಾರೆ.

ಈಗ ಕೃತಜ್ಞತಾ ಸಮರ್ಪಣೆ: ‘ಮುಗಿಯದ ಪಯಣ’ವನ್ನು ಪ್ರಕಟಿಸುತ್ತಿರುವಾತ ಅತ್ರಿ ಬುಕ್ ಸೆಂಟರಿನ ಮಾಲಿಕ ಮತ್ತು ನಮ್ಮ ಮಗ ಅಶೋಕ; ತಮ್ಮದೇ ಕೆಲಸವೆಂಬ ನಿವೇದಿತ ಭಾವದಿಂದ ಇದನ್ನು ಮುದ್ರಿಸಿಕೊಟ್ಟಿರುವವರು ಶ್ರೀ ಶಕ್ತಿ ಎಲೆಕ್ಟ್ರಿಕ್ ಪ್ರೆಸ್‌ನ ಕುಟುಂಬ ಮಿತ್ರ ರಾ. ಮೋಹನಮೂರ್ತಿ, ಬೆರಳಚ್ಚುಗಾರ್ತಿ ಸಿ.ಕೆ ಲತಾ ಮತ್ತು ಇವರ ಸಹಚರರು; ಮುದ್ರಣ ಕರಡನ್ನು ಸಂಪಾತಿ ದೃಷ್ಟಿಯಿಂದ ಓದಿದಾಕೆ ಸೊಸೆ ರುಕ್ಮಿಣಿಮಾಲಾ; ನನ್ನ ಕೆಲಸಕ್ಕೆ ಸದಾ ಉತ್ಸಾಹೋಲ್ಲಾಸ ಸಿಂಚನ ಒದಗಿಸುತ್ತಿದ್ದಾಳೆ ಮೊಮ್ಮಗಳು ಅಕ್ಷರಿ; ‘ದೈವಿಕ ಗೊಂದಲ’ದ ಗೂಡಾಗಿರುವ ನನ್ನ ದಫ್ತರಗಳಿಂದ ಸಾಂದರ್ಭಿಕ ಛಾಯಾಚಿತ್ರಗಳನ್ನು ಆಯ್ದು ಮುದ್ರಣಕ್ಕೆ ಹೊಂದಿಸಿದವರು ಮಡದಿ ಲಕ್ಷ್ಮಿ ಮತ್ತು ಸೊಸೆ ಮಾಲಾ; ಛಾಯಾಚಿತ್ರಗಳ ಗೊಂಡಾರಣ್ಯದಿಂದ ಅಮೂಲ್ಯವಾದವನ್ನು ಮುದ್ರಣಕ್ಕೆ ಅಳವಡಿಸಿ, ಹೊದಿಕೆ ಚಿತ್ರಗಳ ವಿನ್ಯಾಸ ಮಾಡಿದವರು ಮೋಹನಮೂರ್ತಿ ಮತ್ತು ಅಭಯ. ನನ್ನ ಸೋದರ ಮತ್ತು ಜ್ಞಾತಿಸಂಬಂಧಿಗಳಾಗಿರುವ ಗೋವಿಂದ, ಕೃಷ್ಣಮೂರ್ತಿ, ರಾಘವೇಂದ್ರ, ದಿವಾಕರ, ನಾರಾಯಣ, ರಾಧಾಕೃಷ್ಣ ಮೊದಲಾದವರು ನಮ್ಮ (ಗುಡ್ಡೆಹಿತ್ಲು ಮತ್ತು ಅಡಮನೆ) ಕುಟುಂಬಗಳ ಬಗ್ಗೆ ಸಮೃದ್ಧ ಮಾಹಿತಿಗಳನ್ನು ಒದಗಿಸಿದ್ದಾರೆ. ದೇಜಗೌ ಅವರ ಛಾಯಾಚಿತ್ರ ನೀಡಿದವರು ಅರ್ಕೇಶ್. ಇವರೆಲ್ಲರ ನಿಷ್ಕಾಮ ಕರ್ಮವನ್ನು ಹೇಗೆ ತಾನೇ ಅಳೆಯಲಿ! ನಲ್ಮೆಯ ನೆಲೆಯಲ್ಲಿ ಮಾನಕ ಮೂಕವಾಗುವುದಿಲ್ಲವೇ?

ಆವ ಗಾಳಿಯದಾವ ಧೂಳ್ಕಣವ ಪೊತ್ತಿಹುದೊ!
ಆವ ಧೂಳಿನೊಳಾವ ಚೈತನ್ಯಕಣವೊ!
ಜೀವವಿಂತಜ್ಞಾತ ಸೂತ್ರದಾಟದ ಬೊಂಬೆ
ಭಾವಿಸಾ ಸೂತ್ರಗಳ ಮಂಕುತಿಮ್ಮ||
ನಾದನಾವೆಯನೇರಿ ಋತಚಿದ್ರಸಾಬ್ದಿಯಲಿ
ವೇದಪುರುಷನ ತಾಣ ಶೋಧಿಸಲು ತೇಲಿದೆನು
ಮೋದಪ್ರಮೋದಗಳ ನಾಡಿನಿಂ ಜಿಗಿದಂತೆ
ವೇದವೇ ನಾವೆಯಲಿ ಲೀನಿಸಿತು ಅತ್ರಿಸೂನು||
ಸಂಕಲ್ಪ ಶುದ್ಧವಿರೆ ಮಾರ್ಗ ಬಲು ಸುಸ್ಪಷ್ಟ
ಶಂಕೆತೊರೆ ನಚಿಕೇತ ನಿಷ್ಠೆಯಿಂ ಮುನ್ನಡೆಯೊ!
ಸಂಕಷ್ಟ ಸರ್ವಸ್ವ ಮರೆಯಾಗಿ ಬಾಳಿನಲಿ
ಶಂಕರತೆ ನಳನಳಿಸುವುದು ದಿಟವೊ ಅತ್ರಿಸೂನು||
“ಮತವೆಂತೊ ಪಥವಂತು” ವಾದಿಸಿದ ವೇದಾಂತಿ
“ಪಥದಂತೆ ಮತ”ವೆಂದು ನಡೆದನು ವಿಜ್ಞಾನಿ
ಮತ-ಪಥವಭಿನ್ನವೆಂದಿತು ವಿಶ್ವ – ವಾಸ್ತವದಿ
ಸತತ ಕ್ರಿಯಾಶೀಲನಾಗಿರೋ ಅತ್ರಿಸೂನು||
ಅನುಭವಕೆ ನುಡಿಯೊಡಲ ಕೊಡಲು ಪ್ರಯತ್ನಿಸುವೆ-
ನನವರತ ದೊರೆವುದೆನಗಾನಂದವೀ ಪಥದಿ
ಮನವೊಪ್ಪಿದರೆ ನಿಮಗೆ ಸ್ವೀಕರಿಸಿ – ಹಕ್ಕಿ ಹಾ-
ಡನು ಬಂಧಿಸುವ ಸಾಹಸವನು ಬಿಡಿ ಅತ್ರಿಸೂನು||
ಕಾರ್ಯಮಂಥನದಲ್ಲಿ ಗರಳಬರೆ ಕೊರಳಿನಲಿ
ಧೈರ್ಯದಿಂ ಧರಿಸುವಾ ಶಿವನಾಗು, ಸುಧೆಯೊಸರೆ
ಸ್ಥೈರ್ಯದಿಂ ಹಂಚು ಮೋಹಿನಿಯಂತೆ ಮನುಕುಲಕೆ
ಆರ್ಯತ್ವಮಿದು ಕಣಾ ಬದುಕಿನಲಿ ಅತ್ರಿಸೂನು||

ಸುವರ್ಣ ಕರ್ನಾಟಕ ರಾಜ್ಯೋತ್ಸವ ದಿವಸ ೨೦೦೬
ಜಿ.ಟಿ. ನಾರಾಯಣ ರಾವ್