(ನಂದಿಹೋಗಲಿರುವ ನಂದಿಯ ಎರಡನೇ ಭಾಗ)

ಈ ಸಲದ ನಮ್ಮ ಬೆಂಗಳೂರು ಪ್ರವಾಸದ ಮುಖ್ಯ ಕಲಾಪ ಹಿಂದಿನ ಲೇಖನದಲ್ಲಿ ಹೇಳಿದಂತೆ – ಮಂಟಪರ ‘ಭಾಮಿನಿ’ ಪ್ರದರ್ಶನ ಮತ್ತು ಚರ್ಚೆ. ನಂದಿ ಬೆಟ್ಟದಿಂದ ಹೊರಟ ನಾವು ಸಕಾಲಕ್ಕೆ ತಲಪಿಕೊಂಡೆವು. ಆರೂವರೆಗೇ ಅನೌಪಚಾರಿಕವಾಗಿ ತೊಡಗಿದ ಚರ್ಚೆ, ಪ್ರದರ್ಶನ ಮತ್ತು ಮುಂದುವರಿದ ಚರ್ಚೆ ರಾತ್ರಿ ಹತ್ತೂವರೆಯವರೆಗೂ ಚೆನ್ನಾಗಿಯೇ ನಡೆಯಿತು. ಇದರ ಕುರಿತು ಮುಂದೆಂದಾದರೂ ಹೆಚ್ಚು ಅಧಿಕಾರಯುತವಾಗಿ ಅಭಯನೇ ಬರೆಯಬೇಕಾದ್ದರಿಂದ ನಾನು ವಿಷಯಾಂತರಿಸುತ್ತೇನೆ.

ಹನುಮಂತನಗರ

೧೯೬೫ರ ಸುಮಾರಿನಿಂದ ನಾಲ್ಕೈದು ವರ್ಷ ನನ್ನ ತಂದೆ ಸರಕಾರೀ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಸಹಜವಾಗಿ ನಾನು ಬೆಂಗಳೂರಿನಲ್ಲೇ ಪ್ರೌಢಶಾಲಾ (ಬೆಂಗಳೂರು ಹೈಸ್ಕೂಲ್) ಮತ್ತು ಪದವಿಪೂರ್ವ (ಸರಕಾರೀ ಕಲಾ ಮತ್ತು ವಿಜ್ಞಾನ ಕಾಲೇಜು ಅಥವಾ ಆ ಕಾಲದಲ್ಲಿ ಜನಪ್ರಿಯವಾಗಿ ಪ್ರಚಾರದಲ್ಲಿದ್ದಂತೆ ಗ್ಯಾಸ್ ಕಾಲೇಜ್ – G.A & S Collge!) ವಿದ್ಯಾಭ್ಯಾಸವನ್ನು ಮಾಡಿದ್ದೆ. ನಮ್ಮ ಬಾಡಿಗೆ ಮನೆ ಹನುಮಂತನಗರದ ಹದಿಮೂರನೇ ಅಡ್ಡ ರಸ್ತೆಯಲ್ಲೊಂದು ಮಾಳಿಗೆಯಲ್ಲಿತ್ತು. ಮೊನ್ನೆ ಬೆಂಗಳೂರಲ್ಲಿದ್ದ ಎರಡನೇ ಸಂಜೆ ನನಗೊಮ್ಮೆ ಅಲ್ಲೆಲ್ಲಾ ಸುತ್ತಿ ಬರುವ ಉತ್ಸಾಹ ಬಂತು. ಅಭಯನೇನೋ ಗೂಗಲ್ ನಕ್ಷೆ ಕೊಟ್ಟೇ ಕೊಟ್ಟ. ಆದರೆ ಮೈಸೂರು ರಸ್ತೆಯಲ್ಲಿದ್ದ ನನಗೆ, ಚಾಮರಾಜಪೇಟೆ, ಬಸವನಗುಡಿರಸ್ತೆ, ಹನುಮಂತನಗರವೆಲ್ಲ “ಅಂಗೈ ರೇಖೆ, ಎಲ್ಲಿಗೆ ಮಾರ್ಗದರ್ಶಿ” ಎಂಬ ಉಡಾಫೆ. ದೇವಕಿಯನ್ನು ಬೆಂಬಲಕ್ಕಿಟ್ಟುಕೊಂಡು ಬೈಕೇರಿ ಹೊರಟೇಬಿಟ್ಟೆ.

ರಾಜರಾಜೇಶ್ವರಿ ಗೇಟಿನಿಂದ ನಾಯಂಡ (ಮೋಣೆ?) ಹಳ್ಳಿವರೆಗಿನ ‘ನಮ್ಮ ಮೆಟ್ರೋ’ ಗೊಂದಲ ಹಾಗೂ ನೆರೆಯುಕ್ಕಿದಂಥ ವಾಹನಪ್ರವಾಹದಲ್ಲಿ ‘ಸೌತೆಂಡೂ, ರಾಯನ್ಸರ್ಕಲ್ಲೂ, ಬುಲ್‌ಟೆಂಪಲ್ಲೂ’ ಎಂದೇನೇನೋ ‘ಟೆಕ್ನಿಕಲ್’ ಜಪಿಸಿ, ಸದಾ ದಾರಿ, ದಿಕ್ಕುಗಳ ಬಗ್ಗೆ ಗೊಂದಲಗೂಡಾದ ದೇವಕಿಯನ್ನು ಮರುಳು ಮಾಡಿದೆ. ಆದರೆ ಎಲ್ಲಿ ಬಲ ಹೊರಳಬೇಕು, ಚಾಮರಾಜಪೇಟೆ ಹೇಗೆ ಹೊಕ್ಕುಹೊರಡಬೇಕು ಎನ್ನುವ ವಾಸ್ತವದಲ್ಲಿ ಸ್ವಲ್ಪ ಸೋತು, ಹೇಗೋ ಬಸವನಗುಡಿ ರಸ್ತೆಗೆ ಬಂದುಬಿದ್ದೆ. ಮತ್ತೆ ವೀರಾವೇಶ ಬಂತು. ‘ನನ್ನ ಬೆಂಗಳೂರು ಹೈಸ್ಕೂಲು, ನನ್ನ ರಾಮಕೃಷ್ಣ ಆಶ್ರಮ, ನಮ್ಮನೆ ದಾರಿ’ ಎಂದು ಕೊಚ್ಚಿಕೊಳ್ಳುತ್ತ ಹೋದೆ. ರಾಮಕೃಷ್ಣ ವೃತ್ತದಿಂದ ಮುಂದೆ, ನನ್ನ ಕಾಲದ ನೆನಪಿನ ದಾರಿಯಲ್ಲಿ, ಅಪರೂಪಕ್ಕೆ ಸಿಟಿ ಬಸ್ಸುಗಳು, ಗವೀಪುರಂ ಬಡಾವಣೆಯ ಮುಖ್ಯ ದಾರಿಗೆ ನುಗ್ಗುತ್ತಿದ್ದವು. ಮುಂದೆ (ಬಲದ ಮೈದಾನ ಕೊಕ್ಕಾಟಕ್ಕೆ ಪ್ರಸಿದ್ಧ, ಎಡದ ಒಂದು ರಸ್ತೆಯಾಚೆ ಮಾಸ್ತಿಯವರ ಮನೆ) ಬಲಕ್ಕೆ ರಾ.ಕೃ ಆಶ್ರಮದ ವಿದ್ಯಾರ್ಥಿ ನಿಲಯದ ಗೇಟು ಬರುವ ಮೊದಲೇ ಎಡಕ್ಕೆ ಅಂದರೆ ಹನುಮಂತನಗರದ ಪೊಸ್ಟಾಫೀಸ್ ರಸ್ತೆಗೆ ತಿರುಗಿಕೊಳ್ಳುತ್ತಿದ್ದುವು. ಮುಂದುವರಿದಂತೆ ಅದೇ ೧ನೇ ಮುಖ್ಯ ರಸ್ತೆಯಾಗಿ, ೧೩ನೇ ಅಡ್ಡ ರಸ್ತೆವರೆಗೂ ಹರಿದಿತ್ತು. ನಮ್ಮ ದಾರಿ ಹೆಸರಿಗೆ ಅಡ್ಡದಾರಿಯಾದರೂ ಆ ಕಾಲಕ್ಕೆ ಸಾಕಷ್ಟು ಅಗಲದ್ದೂ ಮುಖ್ಯವೂ ಆಗಿತ್ತು. ಬಸ್ಸುಗಳು ಇದಕ್ಕೆ ತಿರುಗಿಕೊಂಡು, ೫ನೇ ಮುಖ್ಯ ರಸ್ತೆ ಸಂಧಿಸುವಲ್ಲಿನ ಗಣೇಶ ಪ್ರಸಾದ್ ಹೋಟೆಲ್‌ಗೆ ನಗರದ ಮಿತಿ ಮುಗಿಸಿ, ‘ಲಾಸ್ಟ್ ಸ್ಟಾಪ್ ಸಾರ್’ ಘೋಷಿಸುತ್ತಿದ್ದುವು. (ಆಚೆಗೆ ತೀರಾ ಕಚ್ಚಾರಸ್ತೆಯಲ್ಲಿ ಶ್ರೀನಗರದ ಬೆಳವಣಿಗೆ ನಡೆದಿತ್ತು. ನಾವಿದ್ದ ಕೊನೆಯ ವರ್ಷಗಳಲ್ಲಿ ಕೆಲವು ಸಿಟಿ ಬಸ್ಸುಗಳು ಅತ್ತಲೂ ಹೋಗಿಬರಲು ಸುರು ಮಾಡಿದ್ದುವು) ಮತ್ತದು ಗಣೇಶನಲ್ಲಿ ಬೈಟೂ ಕಾಫಿ ಹಾಕಿ, ಬೋರ್ಡು ತಿರುಗಿಸಿಟ್ಟುಕೊಂಡು, ೫ನೇ ಮುಖ್ಯರಸ್ತೆಯಲ್ಲೇ ಡುರುಕಿ ಹಾಕಿ ಏರುತ್ತ ರಾ.ಕೃ. ವಿದ್ಯಾರ್ಥಿ ನಿಲಯದ ಇನ್ನೊಂದೇ ಮೂಲೆಯ ಬಳಿ ಮತ್ತೆ ಗವೀಪುರಂ ಬಡಾವಣೇ ದಾರಿ ಸೇರಿಕೊಳ್ಳುತ್ತಾ ಹೊಸ ‘ಟ್ರಿಪ್ ಶೀಟ್’ ಬರೀತಿತ್ತು.

ಗಣೇಶ ಹೋಟೆಲಿನಿಂದ ಹೊರಡುವ ಆ ಏರಿನಲ್ಲಿ ಎಡದ ಮೊದಲ ಒಂದೋ ಎರಡೋ ದಾರಿ, ಅಂದರೆ ಹನ್ನೆರಡು ಮತ್ತು ಹನ್ನೊಂದನೇ ಅಡ್ಡ ರಸ್ತೆ ಬಿಟ್ಟರೆ ಮುಂದಿನವೆಲ್ಲ ವಿವಿಧ ಅಂತರಗಳಲ್ಲಿ ಮುಟ್ಟಿದಂತೆ ಮಾಡಿ, ಸುತ್ತೋಡಿ ತಪ್ಪಿಸಿಕೊಳ್ಳುತ್ತಿದ್ದ ಗುಡ್ಡೆಯೇ ಹನುಮಂತನಗುಡ್ಡ! ನೆತ್ತಿಯಲ್ಲಿ ನಾಲ್ಕು ಒರಟು ಕಲ್ಲ ಚಪ್ಪಡಿ ನಿಲ್ಲಿಸಿ ಮಾಡಿದ ಗುಡಿ, ನೆಪಕ್ಕೆ ಹನುಮನ ವಿಗ್ರಹ. ಆದರೆ ನಿತ್ಯ ಪೂಜೆ, ಅರ್ಚಕರ ಹಾಜರಿ ನಾನು ಕಂಡದ್ದಿಲ್ಲ. ಅದರ ನೆತ್ತಿಯಲ್ಲಿ ನಿಂತು ನಮ್ಮನೆಯತ್ತ ದಿಟ್ಟಿಸಿದರೆ ಬಲಕ್ಕೆ ಕಾಣುತ್ತಿದ್ದ ಇನ್ನೊಂದು ಗುಡ್ಡ ನರಹರಿಬೆಟ್ಟ. ಅದು ಹೆಚ್ಚು ‘ಜನಪ್ರಿಯ’ವಾಗಿತ್ತು. ಅದರ ನೆತ್ತಿಯಲ್ಲಿ ನಗರಸಭೆಯ ದೊಡ್ಡ ಜಲಾಗಾರ, ಒತ್ತಿನಲ್ಲಿ ದೇವಾಲಯ, ತಪ್ಪಲಿನಲ್ಲಿ ಟೆಂಟ್ ಸಿನಿಮಾ. ತಮಿಳರು (ಕೊಂಗಾಟಿ!) ಅದ್ಯಾವುದೋ ಒಂದು ಋತುವಿನಲ್ಲಂತೂ ಹರಕೆಯ ಕಾವಡಿ ಹೊತ್ತು, ಕೆನ್ನೆಗೆ ಭರ್ಚಿ ಚುಚ್ಚಿಕೊಂಡು, ಭಾಜಾ ಭಜಂತ್ರಿಗಳೊಡನೆ ನಲಿಯುತ್ತ, ‘ಹರೋಗರ’ ಎಂದು ಬೊಬ್ಬೆ ಹಾಕುತ್ತ ಮೆರವಣಿಗೆ ಹೋಗುತ್ತಿದ್ದುದು ಇದೇ ನರಸಿಂಹ ಬೆಟ್ಟಕ್ಕೆ. ದಿನವೆಲ್ಲಾ ನೂರಾರು ಸಂಖ್ಯೆಯ ಕಾವಡಿ ಹೊತ್ತವರು, ದೇವಳದ ಬಾಗಿಲಿನಲ್ಲಿ ಸರದಿ ಸಾಲು ಕಟ್ಟುತ್ತಿದ್ದರು. ಮೊದಲೋ ಪೂಜೆ ಸಲ್ಲಿಸಿದ ಮೇಲೋ ಅವರು ಮುಡಿ ಕೊಟ್ಟು, ಅಲ್ಲಿನ ಕಲ್ಲಿನ ಹಾಸಿನಲ್ಲಿದ್ದ ಪ್ರಾಕೃತಿಕ ತಗ್ಗಿನಲ್ಲಿ ನಿಂತ ಅಪ್ಪಟ ಕೊಳಚೆ ನೀರಿನಲ್ಲಿ ‘ಪವಿತ್ರ ಸ್ನಾನ’ ಮಾಡಿ ಮರಳುತ್ತಿದ್ದರು. ಆ ಕಾಲದಲ್ಲೇ ನನಗೆ ಭಕ್ತಿಯಲ್ಲಿ ಮೌನ, ಶುಚಿ, ಸಂಸ್ಕಾರಗಳನ್ನು ನಿದರ್ಶನವಾಗಿಯೇ ಕೊಡುತ್ತಿದ್ದ ಶ್ರೀ ರಾಮಕೃಷ್ಣ ಆಶ್ರಮದ ಸಂಬಂಧವೂ ಇದ್ದುದರಿಂದ ಈ ಮುರುಗ ಭಕ್ತಿ, ಮೃಗಭಕ್ತಿಯಂತೇ ತೋರಿದ್ದರೆ ಆಶ್ಚರ್ಯವಿಲ್ಲ. ಅದಿರಲಿ,

ಹನುಮಂತನ ಗುಡ್ಡದ ಬುಡ ಮುಟ್ಟಲು ಆ ಕಾಲದಲ್ಲಿ ದಾರಿಗಳು ನಾಚಿಕೊಳ್ಳುತ್ತಿದ್ದುವು ಎಂದದ್ದಕ್ಕೂ ಕಾರಣ ಇದೆ. ಆ ಏರಿನ ಕೊನೆಯಲ್ಲಿ ಓಡಾಡುವವರೂ ಕಡಿಮೆ, ಡಾಮರೂ ಸರಿ ಹಾಕುತ್ತಿರಲಿಲ್ಲ. ನೆಪಕ್ಕೆ ಒಂದು ಕಸದ ತೊಟ್ಟಿಯಿತ್ತೋ ಏನೋ. ಆದರೆ ಆಸುಪಾಸಿನ ಎಲ್ಲಾ ದೊಡ್ಡ ಮತ್ತು ವೈವಿಧ್ಯಮಯ ಕಸ (ಸತ್ತ ಹೆಗ್ಗಣ, ಬಸ್ಸಿಗೆ ಸಿಕ್ಕ ನಾಯಿಯೂ ಸೇರಿ) ಅಲ್ಲಿ ನಾರುತ್ತಿತ್ತು. ಗುಡ್ಡದ ನೆತ್ತಿಗೇರಲು ಒಂದೆಡೆ ಸುಮಾರು ಐವತ್ತಡಿ ಎತ್ತರಕ್ಕೆ ಹಾಸುಗಲ್ಲೇ ಸಿಗುತ್ತಿತ್ತು. ಉಳಿದಂತೆ ಮರಳು ಕಲ್ಲು ಮಿಶ್ರಿತ ಮಣ್ಣ ಜಾಡುಗಳಲ್ಲಿ ಭಾರೀ ಬಂಡೆಗಳನ್ನು ಬಳಸುತ್ತ, ಮುಳ್ಳು ಪೊದರು ಸಾವರಿಸುತ್ತ ಎಷ್ಟೂ ಜಾಡು ನಮ್ಮನ್ನು ಹನುಮನ ಗುಡ್ಡ ದರ್ಶನ ಮಾಡಿಸುತ್ತಿದ್ದುವು. ಬಂಡೆಗಳೆಲ್ಲ ಮನುಷ್ಯ ಕೈ ಎಟಕುವ ಮಟ್ಟಕ್ಕೆ ಅನಿವಾರ್ಯವಾಗಿ ಸೆಗಣಿ ರೊಟ್ಟಿ (ಶಬ್ದ ದಾರಿದ್ರ್ಯ ಎನ್ನಬೇಡಿ, ಒಣಗಿದ ಮೇಲಷ್ಟೇ ಅವು ಬೆರಣಿ!) ಅಲಂಕಾರ ಪಡೆಯುತ್ತಿದ್ದುವು. ಅವುಗಳಿಗಾದರೆ ಒಂದು ವ್ಯವಸ್ಥೆಯಿತ್ತು. ಆದರೆ ಯಾರೂ ಸಂಗ್ರಹಿಸಲು ಇಚ್ಛಿಸದ ಮನುಷ್ಯರದೂ ಸೇರಿದಂತೆ ವೈವಿಧ್ಯಮಯ ಸೆಗಣಿಗಳು (ಸರಕಾರದ ಅವ್ಯವಸ್ಥೆಯ ಫಲವೋ ವ್ಯವಸ್ಥೆಯ ಅಂಗವೋ ನನಗಿಂದೂ ಸ್ಪಷ್ಟವಿಲ್ಲ!) ಜಾಡುಗಳುದ್ದಕ್ಕೂ ಮುಖ್ಯವಾಗಿ ಪೊದರುಗಳ ಮರೆಯಲ್ಲೂ ಸಿಗುತ್ತಿದ್ದುವು! ಆದರೂ ಗುಡ್ಡೆ ಏರಿಳಿಯುವ ಆಟದ ಭರದಲ್ಲಿ ನಮ್ಮ ‘ಹುಡುಗ ಬುದ್ಧಿಗೆ’ ಇವೆಲ್ಲ ಭಾರಿ ಹಿಂಜರಿಕೆ ಏನೂ ಮಾಡುತ್ತಿರಲಿಲ್ಲ.

ಹನುಮಂತನ ಗುಡ್ಡದ ಮಗ್ಗುಲಲ್ಲಿ, ತುಸು ಮೇಲೇ ಎನ್ನುವಂತೆ ಒಂದು ಜೋಪಡಿಯಂಥಾ ಮನೆ/ ಕಲಾಶಾಲೆ ಇತ್ತು. ನಮ್ಮ ಲೆಕ್ಕಕ್ಕೆ ಯಾರೋ ಅನ ಸುಬ್ಬರಾವ್ ಎನ್ನುವ ಮುದುಕರು ಅಲ್ಲೇನೋ ಚಿತ್ರಕಲೆ ಕಲಿಸುತ್ತಿದ್ದರಂತೆ. (ಅಂದಿನ ನನ್ನ ಅಲ್ಪಜ್ಞಾನಕ್ಕೆ ಕ್ಷಮೆ ಇರಲಿ. ನಾವು ಬೆಂಗಳೂರು ಬಿಟ್ಟ ಮೇಲೇ ನಾನು ಎಲ್ಲೆಲ್ಲೋ ಕೇಳಿದಾಗಲೇ ತಿಳಿದದ್ದು ಅನಸು – ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ಸೇನಾನಿ, ಸಮಾಜಸೇವಾಸಕ್ತ. . . ಈಚೆಗೆ ನಮ್ಮನ್ನಗಲಿದ ಆಕಾಶವಾಣಿಯ ಈರಣ್ಣ ಎಂದೇ ಖ್ಯಾತರಾದ ಎ.ಎಸ್. ಮೂರ್ತಿಯವರ ತಂದೆ!) ಆದರೆ ಮುಂದೊಂದು ದಿನ ಆ ಗುಡ್ಡದ ಮೇಲಿನ ಬಂಡೆಗಳಲ್ಲೆಲ್ಲ ರಾಮಾಯಣ ಕಥಾನಕ ಅಜ್ಞಾತವಾಗಿ ಕುಳಿತಿವೆ ಎಂಬಂತೆ ಒಬ್ಬ ಹುಡುಗ – ಶ್ರೀನಿವಾಸ ವರ್ಮ, ‘ಗುರುತಿಸ’ ತೊಡಗಿದ. ಆಗ ಅನಸು ಒಬ್ಬ ಮಾಂತ್ರಿಕ! ಎಲ್ಲೋ ದಾರಿಬದಿಯಲ್ಲಿ ಇದ್ದಲು, ಸುಣ್ಣ ಬಳಸಿ ಚಿತ್ರ ಬರೆದು ನಾಲ್ಕು ಕಾಸು ಮಾಡಿಕೊಳ್ಳುತ್ತಿದ್ದ ಹುಡುಗನನ್ನು ಮನೆಮಗ ಮಾಡಿಕೊಂಡು ಪ್ರತಿಭೆಗೆ ಹೊಳಪು ಕೊಟ್ಟದ್ದು ಇವರೇ. ಈ ಹುಡುಗನ ತಾಕತ್ತು ನೋಡಿ ಯಾರೋ ಸೇವಾಪರರು ಅಲ್ಪ ಸ್ವಲ್ಪ ಆಯಿಲ್ ಪೈಂಟ್ ಉದಾರವಾಗಿ ಕೊಡುತ್ತ ಬಂದರಂತೆ. ವರ್ಮನ ಕಣ್ಣಿಗೆ ಬಂಡೆಗಳ ಸಹಜ ಅಸಡ್ಡಾಳ ಗಾತ್ರಗಳು, ಡೊಂಕು ಒಡಕುಗಳೆಲ್ಲಾ ರಾಮಾಯಣದ ಒಂದೊಂದು ರಸಸನ್ನಿವೇಶದ ಪ್ರತಿನಿಧಿಯಾಗಿ ಕಾಣಿಸಿತು. ಈತ ಬರಿದೇ ಅವನ್ನು ಸ್ಫುಟಗೊಳಿಸಿದ್ದಿರಬೇಕು ಎನ್ನುವಷ್ಟು ಸುಲಭವಾಗಿ ಆ ಬಂಡೆಗಳು ವಿಕಸಿಸತೊಡಗಿದವು. (ಮಹಾಶಿಲ್ಪಿಯೊಬ್ಬನ್ನನ್ನು ಉದ್ಧರಿಸುತ್ತಾ ಶತಾವಧಾನಿ ಗಣೇಶರು ಹೇಳಿದ ಮಾತು ನೆನಪಿಗೆ ಬರುತ್ತದೆ – “ಮೂರ್ತಿ ಕಲ್ಲಿನೊಳಗೇ ಇತ್ತು. ನಾನು ಅನಾವಶ್ಯಕ ಆವರಣಗಳನ್ನು ಮಾತ್ರ ತೆಗೆದೆ!”) ಈ ಕಲಾಕೊಡುಗೆ ಭಕ್ತಾಭಿಮಾನಿಗಳ ಒತ್ತಿನಲ್ಲಿ ಗುಡ್ಡೆಯ ಪರಿಸರವನ್ನೇ ‘ಪವಿತ್ರ’ಗೊಳಿಸುತ್ತಾ ಬಂದದ್ದನ್ನು ನಾನು ನಿತ್ಯ ನಿತ್ಯ ಎಂಬಂತೆ ಮುಗಿಯದ ಬೆರಗಿನಲ್ಲೇ ನೋಡಿ ಆನಂದಿಸಿದ್ದೆ.

೧೯೬೯ರಲ್ಲಿ ನಾವು/ನಾನು ಬೆಂಗಳೂರು ಬಿಟ್ಟೆವು. ಅನಂತರ ಶ್ರೀನಿವಾಸ ವರ್ಮ ಮಹಾನ್ ಕಲಾವಿದನಾಗಿ ಬೆಳೆದು, ಪ್ರಸಿದ್ಧರಾದದ್ದು ಕೇಳಿಯೂ ಶತಾವಧಾನಿ ಗಣೇಶರ ಕೆಲವು ಮಂಗಳೂರು, ಉಡುಪಿಯ ಕಾರ್ಯಕ್ರಮಗಳಲ್ಲಿ (ಚಿತ್ರಾವಧಾನದ ಅಂಗ ಇದ್ದಲ್ಲಿ) ನೋಡಿಯೂ ಸಂತೋಷ ಹೆಚ್ಚಿಸಿಕೊಂಡಿದ್ದೆ. ಗೆಳೆಯ ಡಾ| ಮನೋಹರ ಉಪಾಧ್ಯರು ಮಂಗಳೂರಿನಲ್ಲಿ ವ್ಯವಸ್ಥೆ ಮಾಡಿದ್ದ ಅವಧಾನಿ ಉಮೇಶ ಗೌತಮರ – ಯಕ್ಷ, ಚಿತ್ರ, ಕಾವ್ಯಬಂಧ ಕಾರ್ಯಕ್ರಮದಲ್ಲಂತೂ ನಾನು ಪ್ರೇಕ್ಷಕರ ನಡುವಿನ ಪೃಚ್ಛಕನಾಗಿ ಸವಾಲೊಡ್ಡಿದ್ದೂ ಇದೇ ಶ್ರೀನಿವಾಸ ವರ್ಮರಿಗೆ. (“ನನ್ನ ಬಾಲ್ಯದಲ್ಲಿ ಕಂಡಂತೆ ಹನುಮಂತನ ಗುಡ್ಡೆಯಲ್ಲಿ ಕಲ್ಲುಗಳಿಗೆ ಜೀವ ತುಂಬಿದ ಶ್ರೀನಿವಾಸ ವರ್ಮರೇ ಕುಪಿತ ಗೌತಮ ಜೀವಂತ ಅಹಲ್ಯೆಯನ್ನು ಕಲ್ಲಾಗಿಸುವ – reverse action, ಚಿತ್ರ ಕೊಡಿ.” ವರ್ಮ ಅಂದು ನಾಕೆಂಟು ಮಿನಿಟುಗಳ ಬೀಸಿನಲ್ಲಿ ಸುಮಾರು ನಾಲ್ಕಡಿ ಮೂರಡಿ ಅಳತೆಯ ಹಾಳೆಯ ಮೇಲೆ ಇದ್ದಲಿನಲ್ಲಿ ಮಾಡಿಕೊಟ್ಟ ಅದ್ಭುತ ಚಿತ್ರವನ್ನು ಉಪಾಧ್ಯರು ಸಭಾನಂತರ ನನಗೇ ಕೊಟ್ಟುಬಿಟ್ಟರು. ಅದನ್ನೇ ನಮ್ಮ ಅಭಯಾರಣ್ಯದ ಮೊದಲ ಕಲಾಪದ ವೇದಿಕೆಯ ಹಿಂದಿನ ಪರದೆಗೆ ಸಿಕ್ಕಿಸಿದ್ದು ಚಿತ್ರದಲ್ಲಿ ನೋಡಬಹುದು)

ಹನುಮಂತನ ಗುಡ್ಡ ಮತ್ತೆ ನೋಡಲು ನನಗೆ ಅವಕಾಶವೇ ಒದಗಿರಲಿಲ್ಲ. ಹಾಗಾಗಿ ಮೊನ್ನಿನ ಸಂಜೆಯ ಭೇಟಿಯ ಪ್ರಧಾನ ಲಕ್ಷ್ಯ ಹನುಮಂತನ ಗುಡ್ಡ. ಆದರೆ ಧಾರೆ ಕಡಿಯದ ವಾಹನ ಸಮ್ಮರ್ದದಲ್ಲಿ, ಹಳೆ ಚಹರೆ ಉಳಿಸಿಕೊಳ್ಳದ ಕಟ್ಟಡಗಳ ರಾಶಿಯಲ್ಲಿ ಎಲ್ಲೋ ನುಗ್ಗಿ ಎಲ್ಲೋ ಹೊರಟು ನಾನು ಮತ್ತೆ ಎಲ್ಲೂ ಅಲ್ಲದಲ್ಲಿ ಕಳೆದು ಹೋದೆ. ಗುಡ್ಡ ಕಾಣಿಸಲೇಬೇಕು ಎಂದುಕೊಂಡವ ಸೋತು, ಯಾರನ್ನೋ ಕೇಳಿದೆ.

ಪಕ್ಕದ ದಾರಿಯಲ್ಲೇ ಭಾರೀ ಕಾಂಕ್ರೀಟ್ ತಡೆಗೋಡೆಯೊಳಗೆ ತುಂಬಿಟ್ಟಂತಿದ್ದ ಎತ್ತರದ ಸ್ಥಳವನ್ನೇ ಗುಡ್ಡ ಎಂದು ತೋರಿಸಿದರು. ಮೂರೋ ನಾಲ್ಕೋ ದಿಕ್ಕಿನಿಂದ ಏರುವ ಹಲವು ವಿಸ್ತಾರ ಸುಂದರ ಸೋಪಾನ ಸರಣಿ, ಬಲೆ ಬೇಲಿಗಳ ಬಂಧನದಲ್ಲಿ ಹರಡಿದ ಹಸುರುಕ್ಕುವ ಲಾನು, ಅಲಂಕಾರಿಕ ಗಿಡ ಮರ ಲತಾಕುಂಜಗಳ ಇನ್ನೊಂದೇ ಮನುಷ್ಯ ರಚನೆಯಲ್ಲಿ ಹನುಮಂತ ಇದ್ದಾನೆ ಅನ್ನಲೋ ಬಂಧಿ ಎನ್ನಲೋ? ನಾನು ನಿಜಕ್ಕೂ ಗಾಬರಿಗೆಟ್ಟುಹೋದೆ. (ತನ್ನದೇ ತ್ರೇತಾಯುಗದಲ್ಲಿ ರಾಕ್ಷಸ ಬಂಧನದಿಂದೇನೋ ಹನುಮಂತ ಪಾರಾದ್ದಿರಬಹುದು. ಅವನದ್ದಲ್ಲದ ಈ ಕಲಿಯುಗದ ಬಂಧನ? ಅಯ್ಯೋ ಪಾಪ!) ವ್ಯಾಯಾಮಕ್ಕಾಗಿ ಹತ್ತಿಳಿವವರು, ಭಕ್ತಿಯನ್ನಷ್ಟೇ ಕಾಣುವವರು, ಧ್ಯಾನಲೀನರು, ಹರಟೆಮಲ್ಲರು, ಬೇಲಿ ಹಾರಿ ಪೊದರ ಮೂಲೆ ಸೇರಿದ ಪ್ರೇಮಿಗಳವರೆಗೆ ಎಲ್ಲರಿದ್ದರು. ಶಿಖರದಲ್ಲಿ ಅಂದಿನ ಅಪ್ಪಟ ಜನಪದೀಯ ಹನುಮನ ಗುಡಿ ಭವ್ಯ ಆಂಜನೇಯನ ದೇವಳವಾಗಿರುವುದನ್ನೂ ಕಂಡೆ. ಒಳಗಿನಿಂದ ‘ಆಗಮನಾಂತು ದೇವಾನಾಂ ನಿರ್ಗಮನಾಂತು ರಾಕ್ಷಸಂ’ ಗಂಟಾನಾದ ಕೇಳುತ್ತಲೇ ಇತ್ತು. (ಮತ್ತೆ ನಾನು ಪ್ರವೇಶಿಸಲುಂಟೇ!) ದೇವಳದ ಮುಕುಟದಲ್ಲಿ ಸಾಕ್ಷಾತ್ ಶ್ರೀರಾಮಚಂದ್ರನೇ ಬಂದು ಹನುಮನ ‘ಸಾಧನೆ’ಗೆ ಬೆರಗಾಗಿ ಬಿಗಿಯಪ್ಪುಗೆ ಕೊಡುತ್ತಿರುವುದು (ಬೃಹದಾಕಾರದ ಸಿಮೆಂಟ್ ಶಿಲ್ಪ) ಕಂಡ ಮೇಲೆ ನನ್ನ ವಿಮರ್ಶಾ ಹತ್ಯಾರುಗಳೆಲ್ಲಾ ಮೊಂಡಾಗಿ ಹೋದುವು. ನನಗೆ ಗುಡಿಯೊಳಗೆ ಇಣುಕುವ ಅಗತ್ಯವೇನೂ ಇರಲಿಲ್ಲ.

ಸಂಚಾರಿ ಥಿಯೇಟರ್

ಅನಸು ಅವರ ಕಲಾಶಾಲೆಯಾದರೂ ಹೇಗಿದೆಯೋ ಎಂದುಕೊಳ್ಳುತ್ತಾ ಹನುಮಂತನ ಗುಡ್ಡದ ಒಂದು ದಿಕ್ಕಿನ ಮೆಟ್ಟಲು ಇಳಿಯತೊಡಗಿದೆವು. ಅಲ್ಲಿ ಗುಡ್ಡದ ಮೈಯನ್ನೇ ಏರಿಬಂದಂತೊಂದು ಭಾರೀ ಸಭಾಭವನ ಕಾಣಿಸಿತು. ಅದರ ಸರಕಾರೀ ಜೋಭದ್ರ ಕಳೆ ನೋಡಿ ಹಾಗೇ ಹೊರಗಿನ ಸುತ್ತಲ್ಲೇ ಮುಂದುವರಿದೆವು. ಅನಸು ಅವರ ಮನೆಯನ್ನು ಇದು ನುಂಗಿರಬೇಕೆಂಬ ಕಳವಳ ಮನಸ್ಸಿನಲ್ಲಿ ಸೇರಿಕೊಂಡಿತು. ಹೋಗಲಿ, ಇನ್ನು ಅಲ್ಲೇ ಕೆಳಗಿನ ದಾರಿಯಲ್ಲೇ ಇದ್ದ ನನ್ನ ತಂದೆಯ ಗೌರವಾನ್ವಿತ ಮಿತ್ರ, ವಿದ್ವಾನ್ ಭಾರತೀರಮಣಾಚಾರ್ಯರ ಮನೆ ಏನಾದರೂ ಕಾಣಿಸೀತೋ ಎಂದು ಹುಡುಕು ನೋಟ ಹರಿಸಿದ್ದೆ. (ಆಚಾರ್ಯರು ಇಂದು ದಿವಂಗತರು. ಅವರ ಮಗ ಸೊಸೆಯೊಡನೆ ನಮ್ಮ ಕುಟುಂಬ ಮೈತ್ರಿ ಮುಂದುವರಿದಿದೆ.) ಆಗ ದೇವಕಿ ಕಣ್ಣಿಗೆ ಸಭಾಭವನದ ನೆಲ ಅಂತಸ್ತಿನ ಅಂಗಳದಲ್ಲಿ ಹಳತಾದ ಯಾವುದೋ ನೀನಾಸಂ ಪೋಸ್ಟರ್ ಕಾಣಿಸಿತು. ನಮ್ಮ ‘ಗುಣಪಕ್ಷಪಾತ’ದಲ್ಲಿ ನೀನಾಸಂ ಸದಾ ಅಗ್ರಣಿ. ಸಹಜವಾಗಿ ನಮ್ಮ ಗಮನ ಅತ್ತ ಹೆಚ್ಚು ಹರಿದಾಗ ಮಾಸುತ್ತಿದ್ದ ಬೆಳಕಿನಲ್ಲಿ ಯಾರೋ ಕೆಲವು ಯುವಕರ ಓಡಾಟ, ಮಾತುಕತೆ ಕಾಣಿಸಿ, ಕುತೂಹಲದಲ್ಲಿ ಮತ್ತೆ ಮೆಟ್ಟಿಲೇರಿ ಅತ್ತ ಸರಿದೆವು. ಅಂಗಳದಲ್ಲಿ ಮತ್ತಷ್ಟು ಭಾರೀ ಪೋಸ್ಟರುಗಳು, ಯಾವ್ಯಾವುದೋ ನಾಟಕಗಳ ಫೋಟೋಗಳನ್ನೂ ಪ್ರದರ್ಶನಕ್ಕಿಟ್ಟಂತಿತ್ತು. ನಮ್ಮ ನೆನಪಿಗೆ ಕೀ ಕೊಟ್ಟಂತೆ ಶಿರೋಬರಹದಲ್ಲಿ ‘ಸಂಚಾರಿ ಥಿಯೇಟರ್’ ಕಾಣಿಸಿತು. ಅರೆ, ವಾರದ ಹಿಂದಷ್ಟೇ ಮಂಗಳೂರಿನ ಮಳೆಬಿಲ್ಲು ನಾಟಕೋತ್ಸವದಲ್ಲಿ, ಬೆಂಗಳೂರಿನಿಂದ ಬಂದು ‘ನರಿಗಳಿಗೇಕೆ ಕೋಡಿಲ್ಲ’ ಆಡಿದ ತಂಡ ಇದೇ ಅಲ್ಲವೇ ಎಂದು ನೆನೆಸಿಕೊಳ್ಳುತ್ತಿದ್ದಂತೆ, ಅಲ್ಲಿ ಕೇಳುತ್ತಿದ್ದ ಧ್ವನಿಗಳೆಲ್ಲ ಗುಬ್ಬಣ್ಣ, ಗುಬ್ಬಕ್ಕ, ಹುಲಿರಾಯವೇ ಆಗಿ ಹೋಯ್ತು. ಸ್ವತಃ ನಿರ್ದೇಶಕಿ ಮಂಗಳಾ ಕೂಡಾ ಭೇಟಿಯಾಗಿ ಕಳೆದು ಹೋದ ಹನುಮಂತನ ಗುಡ್ಡೆಯಲ್ಲಿ ಸಂಜೀವಿನಿ ಸಿಕ್ಕ ಹಾಗಾಯ್ತು.

ರಂಗಾಯಣ ದಂಪತಿಯೇ ಆದ (ಹೌದು, ರಂಗಾಯಣ-) ರಘು ಮತ್ತು ಎನ್. ಮಂಗಳಾ ಮೈಸೂರು ಬಿಟ್ಟು ಬೆಂಗಳೂರಿನಲ್ಲಿ ಸ್ವತಂತ್ರ ಭವಿಷ್ಯ ಅರಸುತ್ತ ಕೆಲಕಾಲದ ಹಿಂದೆಯೇ ಬಂದರಂತೆ. ‘ಗುರು ಕಾರಂತರಿಂದ ಪಳಗಿದ ಮೇಲೆ ಏನೋ ಮಾಡಿ ಪ್ರದರ್ಶನ, ಪ್ರಚಾರ ಮತ್ತು ಆದಾಯಕ್ಕೆ ಅವಸರಿಸಬಾರದು’ ಎಂಬ ಅರಿವಿನೊಡನೆ ನಾಟಕಶಾಲೆ ಎಂಬ ಗಾಂಭೀರ್ಯದೊಡನೆ ಕೆಲಸ ಮಾಡಿದರಂತೆ. ಹಣಕಾಸು, ಕಟ್ಟಡ, ಸಲಕರಣೆಗಳ ರಾಶಿ, ಕೊನೆಗೆ ಸಾಹಿತ್ಯ ಸಂಗೀತ ಒಟ್ಟಾರೆ ಆಂಗಿಕ ಚಟುವಟಿಕೆಗಳೂ ನಾಟಕವಾಗಬೇಕಿಲ್ಲ. ಅವುಗಳೆಲ್ಲ ಇದ್ದೂ ಕೊರತೆಯಲ್ಲೂ ನಿತ್ಯನೂತನವಾಗಿ ವಿಕಸಿಸುವ ಭಾವಾಭಿವ್ಯಕ್ತಿ ನಾಟಕ ಎಂದು ತಿಳಿದವರು ಇವರು. ಎಲ್ಲೋ ಸಿಕ್ಕ ಜಾಗದಲ್ಲಿ ಕೆಲಸ ನಡೆಸಿದ್ದರಂತೆ. ಕೆಲವು ಪ್ರದರ್ಶನಗಳನ್ನೂ ಕೊಟ್ಟರಂತೆ. ಆಗ ಈ ಹನುಮಂತನ ಗುಡ್ಡದ ಸಭಾಭವನಕ್ಕೆ ಸಂಬಂಧಪಟ್ಟ ಸದಭಿರುಚಿಯ ಅಧಿಕಾರಿಯೋರ್ವರು ಸಂಚಾರಿ ಥಿಯೇಟರಿಗೆ ಈ ಗಟ್ಟಿ ನೆಲೆ ಕಾಣಿಸಿದರಂತೆ! ಮಂಗಳ ‘ತುಂಬಾನೇ’ (ಬೆಂಗಳೂರ ಈ ಪ್ರಯೋಗ ‘ಆನೆಯಷ್ಟು ತುಂಬ’ ಎಂಬಲ್ಲಿಂದ ತೊಡಗಿ, ಹಿಂದು ಮುಂದಾದ್ದಕ್ಕೆ ಅಂಶಿ ಸಂಧಿ ಎಂದೋ ಅಕಾರ ಲೋಪ ಸಂಧಿ ಎಂದೋ ಹೇಳಬಹುದೇ ಎಂದು ಶತಾವಧಾನಿ ಗಣೇಶರು ತಿಳಿಸಬೇಕು!) ಮಾತಾಡಿದರು (ರಘು ಅಲ್ಲಿ ಇರಲಿಲ್ಲ). ಅವರಿಗೆ ರಂಗಾಯಣದ ದಿನಗಳಲ್ಲಿ ನನ್ನ ತಂದೆಯೊಡನಿದ್ದ (ಜಿಟಿನಾ) ಅತ್ಮೀಯತೆಯನ್ನು ಬಗೆ ತರದಲ್ಲಿ ನೆನೆಸಿಕೊಂಡರು. ಸಿನಿ-ಕಲಾವಿದನೂ ಆದ ರಘು ಅವರಿಗೆ ನಮ್ಮ ಅಭಯನೊಡನೆ (ಗುಬ್ಬಚ್ಚಿಗಳು ಚಿತ್ರ) ಬೆಳೆದ ವೃತ್ತಿ ಬಾಂಧವ್ಯದ ಮಾತುಗಳು ಧಾರಾಳ ಹರಿದವು. ಮಳೆಬಿಲ್ಲು ನಾಟಕೋತ್ಸವದ ಕುರಿತ ನನ್ನ/ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡೆವು. (ಅದರ ಕುರಿತ ನನ್ನ ವಿಮರ್ಶೆ ಜಾಲಕ್ಕೇರಿತ್ತಾದರೂ ಮರುದಿನಕ್ಕೆ ಪ್ರಕಟವಾಗಲು ಯೋಜಿತವಾಗಿತ್ತು. ಅನಂತರ ಅದನ್ನು ಅವರು ಪ್ರೀತಿಯಿಂದ ತಮ್ಮ ಜಾಲತಾಣದಲ್ಲೂ ಹಾಕಿಕೊಂಡರು.) ಅವರ ತಯಾರಿಯಲ್ಲಿದ್ದ ಪಿನೊಕಿಯೋ ನಾಟಕ ಮತ್ತು ವಾರ ಕಳೆದು ಉಡುಪಿಯ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರಸ್ತುತಪಡಿಸಲಿದ್ದ ವ್ಯಾನಿಟಿ ಬ್ಯಾಗ್ ಕುರಿತೂ ತಿಳುವಳಿಕೆ ಮೂಡಿಸಿಕೊಂಡೆವು. ಎಲ್ಲಿ ನಮ್ಮ ವಿರಾಮ, ಮಂಗಳರ ಉತ್ಸಾಹ ಒಳಗೆ ಅಭ್ಯಾಸಕ್ಕೆ ಕಾಯುತ್ತಿದ್ದ ಬಳಗದ ಸದಸ್ಯರನ್ನು ವಂಚಿಸುತ್ತದೋ ಎಂದು ನಾವು ಮೆಲ್ಲ ಮೆಲ್ಲನೆ ದೂರ ಸರಿದರೂ ಮಂಗಳಾ ಮೆಟ್ಟಿಲ ಸಾಲಿನ ತುದಿಯವರೆಗೂ ನಮ್ಮನ್ನು ಮಾತಾಡಿಸುತ್ತಲೇ ‘ಕಂಡುಕೊಂಡರು.’ ಹಾಗೆ ಮಂಗಳರಿಂದ ಬೀಳ್ಕೊಂಡದ್ದೇ ಪಕ್ಕದಲ್ಲೇ ಇದ್ದ ಪೂರ್ಣ ಹೊಸರೂಪದ ಅನಸು ಅವರ ಮನೆ/ ಕಲಾಶಾಲೆಯ ಕಟ್ಟಡದಲ್ಲೂ ಏನೋ ಸಮೂಹ ಭಜನೆಯೋ ರಂಗಗೀತೆಯೋ ಕೇಳತೊಡಗಿತು. ನಮಗಂತೂ ಯಾವುದೋ ಸುಖಾಂತ ನಾಟಕದ ಕೊನೇ ದೃಶ್ಯದ ಪಾತ್ರಧಾರಿಗಳ ಭಾವ ಬಂದು ಅಪರಿಮಿತ ಉಲ್ಲಾಸದೊಡನೇ ಹನುಮಂತನಗರ ಬಿಟ್ಟೆವು.

ಇಷ್ಟು ಬರೆಯುವಾಗ ನನ್ನ ಹನುಮಂತನಗರದ ನೆನಪಿನಲ್ಲಿ ಒತ್ತಿಕೊಂಡು ಬಂದ ಇನ್ನೊಂದೇ ಕಥನವನ್ನು ಹೇಳದಿರಲಿ ಹೇಗೆ? ಆದರದನ್ನು ಮತ್ತೆ ವಾರದ ಬಿಡುವು ಕೊಟ್ಟು ಓದಿಸುತ್ತೇನೆ. ಅದುವರೆಗೆ ನಿಮ್ಮ ನೆನಪುಗಳ ಕೂಟದೊಡನೆ ಪ್ರತಿಕ್ರಿಯಾ ಅಂಕಣ ತುಂಬುತ್ತೀರಲ್ಲಾ?

(ಬೋರೇಗೌಡನ ಇನ್ನಷ್ಟು ನೆನಪುಗಳು ಎಂಬ ಮೂರನೇ ಭಾಗ ಕಾದು ನೋಡಿ)