ಭಾಗ ಒಂದು – ತಮಿಳರ ಲೋಕದಲ್ಲಿ

ಯಾರದೇ ಮನೆಗೆ ಔಪಚಾರಿಕ ಹಾಜರಿ ಹಾಕುವಲ್ಲಿ ನನಗೆ ಯಾವತ್ತೂ ವಿಶೇಷ ಆಸಕ್ತಿಯಿಲ್ಲ. ಮನೆಗೆ ಬನ್ನಿ, (ಲೋಕಾಭಿರಾಮವಾಗಿ) ಮಾತಾಡುವಾಂದ್ರೆ ನಾನು ಮಾರು ದೂರ. ಆದರೆ ಯಾವುದೇ ಮನೆಯ ವಾಸ್ತು, ಪರಿಸರ, ಸನ್ನಿವೇಶ ಅಥವಾ ವ್ಯಕ್ತಿ ವೈಶಿಷ್ಟ್ಯಗಳು ಆಹ್ವಾನ ನೀಡಿದರೆ ನಾನು ಹೋಗದೇ ಉಳಿದದ್ದೂ ಇಲ್ಲ. (ವಾಸ್ತು ಎಂದಾಗ ಚಾಲ್ತಿಯಲ್ಲಿರುವ ಕಳಂಕಿತ ಅರ್ಥ ಖಂಡಿತಾ ಅಲ್ಲ. ದೇವು ಕಟ್ಟಿಸಿದ ಪರಿಸರ ಸ್ನೇಹೀ ಮಣ್ಣಿನಮನೆ, ನಿರೇನ್ ಕಟ್ಟಿಕೊಂಡ ದರೆಯಂಚಿನ ಬಿಡಾರ, ಕೃಶಿಯ ‘ಹಳೆಬೇರು ಹೊಸ ಚಿಗುರು,’ ಪಂಡಿತರ ಜಲಸ್ತಂಭ ಒಂದಕ್ಕಿಂತ ಒಂದು ಚಂದ. ಮುಂದೆಂದಾದರೂ ಸಂದರ್ಭ ಬಂದರೆ ಆ ಕುರಿತು ಇಲ್ಲಿ ಬರೆದುಕೊಳ್ಳುವ ಉತ್ಸಾಹವೂ ನನಗುಂಟು.) ಈಚೆಗೆ ವ್ಯಕ್ತಿ ವೈಶಿಷ್ಟ್ಯದ ‘ಪೀಡೆ’ ಶುರು ಮಾಡಿದವರು ನನ್ನ ತಮ್ಮ ಅನಂತನ ಮಗಳು ಅಕ್ಷರಿ ಮತ್ತವಳ ಗಂಡ ಮಹೇಶ. ಅವರು ಚೆನ್ನೈಯಲ್ಲಿ ಬಿಡಾರ ಹೂಡಿ “ದೊಡ್ಡಪ್ಪ (/ಮ್ಯಾಂವಾ) ಯಾವಾಗ?” ಎಂದು ಒತ್ತಡ ತರತೊಡಗಿದಳು. ಅನಂತ ರುಕ್ಮಿಣಿಯರದೂ ಮಗಳದೇ ಪಕ್ಷ. ಚೆನ್ನೈಯ ಸೆಕೆ, ಯಾವುದೋ ಫ್ಲ್ಯಾಟಿನ ಕೋಳಿಗೂಡಿನಂಥ ಒಂದಂಕಣಕ್ಕೆ ನುಗ್ಗಿ, ಝಂಡಾ ಹೊಡೆಯುವ ಕಷ್ಟವನ್ನು ಅಕ್ಷರಿಗಾಗಿ ಒಮ್ಮೆಯಾದರೂ ಮಾಡಬೇಕು ಅಂದುಕೊಳ್ಳುತ್ತಲೇ ಇದ್ದೆ. ಅದಕ್ಕೆ ನನ್ನ ಊರು ತಿರುಗುವ ಉತ್ಸಾಹವನ್ನು ಜತೆ ಮಾಡಿ “ಹಾಂ, ಒಟ್ಟಿಗೇ ಬರ್ತೇವೆ, ಬರ್ತೇವೆ” ಎಂದು ದಿನ ತಳ್ಳುತ್ತಾ ಇದ್ದೆ.

ಮುಗಿಯದ ಪಯಣ – ನನ್ನ ತಂದೆಯ ಆತ್ಮಕಥೆ. ಅದನ್ನು ಈಚೆಗೆ ಇಲ್ಲೇ ಹದಿನೈದು ದಿನಕ್ಕೊಂದು ಕಂತಿನಂತೆ ವಿ-ಧಾರಾವಾಹಿಯಾಗಿಸುತ್ತಿರುವುದು ನಿಮಗೆ ತಿಳಿದೇ ಇದೆ. ಅದನ್ನು ಗಣಕದಲ್ಲಿ ಕುಟ್ಟುತ್ತಿದ್ದಂತೆ ದಕ್ಕಿದ ಮರು ಓದಿನಲ್ಲಿ ಅವರ ಕಾಲೇಜ್ ದಿನಗಳ ಕ್ರೈಸ್ಟ್ ಮತ್ತು ಲಯೋಲಾ ಕಾಲೆಜ್, ತಾಂಬರಂ, ವಿಪುಲ ಸಂಗೀತ ಕಚೇರಿಗಳ ಮದ್ರಾಸನ್ನು ಇನ್ನಷ್ಟು ಆತ್ಮೀಯವಾಗಿ ಕಾಣುವ ಹಂಬಲ ಪೇರುತ್ತ ಹೋಯಿತು. ಆದರೆ ಈ ನಡುವೆ ಕಾವೇರಿಯಲ್ಲಿ ತುಂಬಾ ನೀರು ಹರಿದಿದೆ! ಮದ್ರಾಸು ಕೇವಲ ನಾಮಾಂತರಗೊಂಡು ಚೆನ್ನೈ ಆದದ್ದಲ್ಲ ಎಂಬ ಕಟು ಸತ್ಯ ಎಚ್ಚರಿಸುತ್ತಲೂ ಇತ್ತು. ಒಂದೇ ನಿದರ್ಶನ ಹೇಳುತ್ತೇನೆ, ಬನ್ನಿ ನನ್ನ ಕಾಲೇಜು ದಿನಕ್ಕೆ. ಎನ್ಸಿಸಿ ಮಿತ್ರರೊಡನೆ ಉತ್ತರ ಭಾರತದ ರೈಲು ಹಿಡಿದಿದ್ದಾಗ, ರೈಲು ಬದಲಿಸುವ ವಿರಾಮ ಮದ್ರಾಸಿನಲ್ಲಿತ್ತು. ಮರೀನಾ ಕಡಲ ಕಿನಾರೆ ನೋಡಲು ನಗರ ಸಾರಿಗೆ ಹಿಡಿದೆವು. ಅದು ಹಿಂದಿ ವಿರೋಧದ ಉತ್ಕರ್ಷ ಕಾಲ. ಆಗಲೇ ಭಾಷಾಭಿಮಾನದ ಮೇಲೆ ಭಾಷಾಂಧತೆ ಮೇಲುಗೈ ಸಾಧಿಸಿತ್ತು. ಮಿತ್ರಬಳಗದ ಕನ್ನಡ ಕಲರವಕ್ಕೆ ಬಸ್ಸಿನ ಕಂಡಕ್ಟರ್ ಗಟ್ಟಿಸಿ ನುಡಿದ “ಕನ್ನಟ ಸೊಲ್ಲಕೂಡಾದ್!” (ಅಕ್ಷರಿ ಇದನ್ನು ಸಾಕಷ್ಟು ಅನುಭವಿಸಿ, ಮುಂದಾಗಿಯೇ ನಮ್ಮನ್ನು ಎಚ್ಚರಿಸಿದ್ದಳು. ಅವಳ ಭಾಷಾ ಪ್ರಾವೀಣ್ಯವಾದರೋ ವಠಾರದಲ್ಲಿನ ಆಂಟಿ, ಮಾಮಿಯರ ಸರಸ ಸತ್ಕಥಾವಿನೋದದಿಂದ ರೊಂಬ ನಲ್ಲ ಇರ್ಕ್!) ಶಿವರಾಮ ಕಾರಂತರಿದ್ದಿದ್ದರೆ “ಕನ್ನಡದಲ್ಲಿ ನಗಬಹುದೇ – ಹ್ಹ ಹ್ಹ ಹ್ಹಾ” ಎಂದು ಕೇಳಿಯೇ ಬಿಡುತ್ತಿದ್ದರು!

ನನ್ನ ಚೆನ್ನೈ ಅ-ಪ್ರೀತಿಗೆ ಬೇರೆರಡು ಉಪಕಥೆಗಳು. ಸುಮಾರು ಹದಿನೈದು ವರ್ಷಗಳ ಹಿಂದೆ ನಾವು ಎರಡನೇ ಭಾರತ ಬೈಕ್ ಯಾತ್ರೆ ಯೋಜಿಸಿದ್ದ ಸಮಯ. ಸವಾರಿಯನ್ನು ಕೊಲ್ಕತ್ತದಿಂದ ಶುರು ಮಾಡಲೆಂದು ಮಂಗಳೂರಿನಿಂದ ಬೈಕಿನೊಡನೆ ರೈಲೇರಿದ್ದೆವು. ಮರುಬೆಳಿಗ್ಗೆ ಚೆನ್ನೈಯಲ್ಲಿ ರೈಲು ಗಾಡಿ ಬದಲಿಸಬೇಕಿತ್ತು. ನನ್ನ ಸೋದರಮಾವ ಗೌರೀಶಂಕರನ ಬೀಗ – ಎಂಎಸ್ ಭಟ್ಟರ (ನಿವೃತ್ತ ರೈಲ್ವೇ ಇಂಜಿನಿಯರು) ಸಹಕಾರದಲ್ಲಿ ನಿರ್ವಿಘ್ನವಾಗಿ, ವಿಳಂಬರಹಿತವಾಗಿ ಬೈಕ್ ಬದಲಿಸಿದ್ದಾಯ್ತು. ಬಿಡು ಸಮಯದಲ್ಲಿ ನಾವು ಒಂದಷ್ಟು ಪೇಟೆ ಸುತ್ತಿ, ಸಂಜೆ ಹೊರಡಲಿದ್ದ ರೈಲು ಹಿಡಿಯಲು ನಿಲ್ದಾಣದ ಜನಸಾಗರದಲ್ಲಿ ಈಜುತ್ತಲಿದ್ದೆವು. ಒಮ್ಮೆಗೆ ಯಾರೋ ಒಬ್ಬ ಭುಜ ತಟ್ಟಿ, ಪಕ್ಕಕ್ಕೆ ಸರಿಯಲು ಸನ್ನೆ ಮಾಡಿದ. ಅದುವರೆಗೆ ನಾನು ಸಿನಿಮಾದಲ್ಲಷ್ಟೇ ನೋಡಿದಂತೆ ತನ್ನ ಗುರುತಿನ ಚೀಟಿ ತೋರಿಸಿ, ಮಫ್ತಿ ಪೊಲಿಸ್ ಎಂದ. ಅದು ಶ್ರೀಲಂಕಾದ ಅಂತರ್ಯುದ್ಧದ ದುಷ್ಕಾಲ. ನನ್ನ ಭಾರೀ ಬೆನ್ನ ಚೀಲ, ಹುರಿಗಟ್ಟಿದ ಮೀಸೆ ಅವನಿಗೆಲ್ಲೋ ಎಲ್ಟಿಟಿಯಿ ಉಗ್ರನ ಚಹರೆ ಕಾಣಿಸಿರಬೇಕು. ಆದರೆ ಪ್ರಶ್ನೋತ್ತರ ಮತ್ತು ನನ್ನ ಸಾಹಸಯಾನದ ದಾಖಲೆ ಎಲ್ಲಾ ನೋಡಿ ಕೊನೆಗೆ ಶುಭಹಾರೈಕೆಗಳೊಂದಿಗೆ ಕೈಕುಲುಕಿ ಬೀಳ್ಕೊಟ್ಟ. ಮತ್ತೊಂದು ನೆನಪು – ಅಂಡಮಾನ್ ದಾರಿಯಲ್ಲಿ ಚೆನ್ನೈಯಲ್ಲಿ ಕಳೆದ ಒಂದು ರಾತ್ರಿ. ತಮಿಳರ ಬಗ್ಗೆ ಹೆಚ್ಚು ತಿರಸ್ಕಾರವನ್ನು ಮೂಡಿಸಿದ ಆ ಕಥನವನ್ನು ಇಲ್ಲೇ ಹಿಂದೆ ಓದದವರು ಈಗಲೂ ಇಲ್ಲಿ ಚಿಟಿಕೆಹೊಡೆದು, ಓದಿಕೊಳ್ಳಬಹುದು.

ತಿಂಗಳ ಹಿಂದೆ ಬೆಂಗಳೂರು ಯಾನದ ಕೊನೆಯಲ್ಲಿ ನಾವು ಬೈಕ್ ಏರಿ ತಿರುಪತಿಗೆ ಹೊರಟ ಕತೆ ನೀವು ಎರಡು ವಾರಗಳ ಹಿಂದೆ ಓದಿಯೇ ಇದ್ದೀರಿ! ಅಂದು ಅಂದಾಜಿಸಿದಂತೆ ತಿರುಪತಿ ದಕ್ಕಿದ್ದರೆ, ಎರಡು ದಿನ ಕಳೆದು ಮುಂದೆ ಅಷ್ಟೇ ಅಂತರದ ಚೆನ್ನೈಗೂ ಬೈಕ್ ಓಡಿಸುವವರಿದ್ದೆವು. ಬಿಡಿ, ಅದು ಸೋತ ಮೇಲೆ ಹ್ಯಾಪ್ಮೋರೆ ಹಾಕಿಕೊಂಡು, ಮಂಗಳೂರಿಸಿ “ಇನ್ಯಾವತ್ತಾದರೂ..” ಎಂದು ಕೂತುಬಿಟ್ಟೆವು. ಆದರೆ ಇದ್ದಕ್ಕಿದ್ದಂತೆ ಅಕ್ಷರಿ ಹೊಸ ಬೆದರಿಕೆ ಹಾಕಿದಳು, “ಹೆಚ್ಚಿದ ಹೊಣೆಗಾರಿಕೆಗಾಗಿ ಮಹೇಶ ಅಮೆರಿಕಾಕ್ಕೆ ಹೋದ. ನಾನು ಎರಡೇ ವಾರದಲ್ಲಿ ಚೆನ್ನೈ ಬಿಡಾರ ಖಾಲಿ ಮಾಡುತ್ತಿದ್ದೇನೆ. ಬೇಗ ಬಂನ್ನೀ” (“ಅನುನಯಕ್ಕೆ ಅನುನಾಸಿಕ ದೋಷವಲ್ಲ” ಎಂದು ಶತಾವಧಾನಿ ಗಣೇಶರು ಹೇಳಲಿದ್ದಾರೆ!). ಮತ್ತೆ ಯೋಚಿಸಲಿಲ್ಲ. ಚರವಾಣಿ ಬಿಸಿ ಮಾಡಿ, ಪರಸ್ಪರ ಅನುಕೂಲ ಮಾತಾಡಿಕೊಂಡೆವು. ಎರಡೇ ದಿನದ ಅಂತರವಿರುವಂತೆ ಅಂತರ್ಜಾಲದಲ್ಲಿ ರೈಲ್ವೆ ಟಿಕೇಟನ್ನೂ ಅವಳೇ ಖಾತ್ರಿಪಡಿಸಿಕೊಟ್ಟಳು. ಮಂಗಳೂರಿನಲ್ಲಿ ಯಾವ ಧಾವಂತವಿಲ್ಲದೆ ಸಂಜೆ ರೈಲೇರಿದ ನಮ್ಮನ್ನು ವೇಳಾಪಟ್ಟಿಗೆ ಸರಿಯಾಗಿ ಮರುಬೆಳಿಗ್ಗೆ ಚೆನ್ನೈಯಲ್ಲಿ ಅಕ್ಷರಿ ಇಳಿಸಿಕೊಂಡಳು. ನಿಲ್ದಾಣದ ಹೊರಗೆ ತಗುಲಿಕೊಂಡ ರಿಕ್ಷಾ ಚಾಲಕನೊಬ್ಬನೊಡನೆ ಅವಳೇ ಸರಾಗ ‘ದಮಿಳಿನಲ್ಲಿ ಶೊಲ್ಲಿ’ ನೂರೆಂಬತ್ತು ರೂಪಾಯಿ ಬಾಡಿಗೆಗೊಪ್ಪಿಸಿ ನಮ್ಮನ್ನು ಮನೆಯೂ ಸೇರಿಸಿಬಿಟ್ಟಳು.

ತಮಿಳುನಾಡು ಪ್ರವಾಸೋದ್ಯಮ ಇಲಾಖೆಯ ಬಗಲಿನಲ್ಲಿ ಕೆಲವು ಪ್ರವಾಸಿ ಪೊಟ್ಟಣಗಳಿದ್ದವು (tour packages). ಅದರಲ್ಲಿ ಹೋದ ದಿನವೇ ಅಪರಾಹ್ನದ ಅರೆ ಹಗಲಿನ ‘ನಗರದರ್ಶನ’ಕ್ಕೂ ಮರುದಿನದ – ಒಂದು ಹಗಲಿನ ‘ಮಾಮಲ್ಲಪುರ ಭೇಟಿ’ಗೂ ನಮ್ಮನ್ನು ಅಕ್ಷರಿ ಮೊದಲೇ ‘ತುಂಬಿ’ಬಿಟ್ಟಿದ್ದಳು. ಮುಂದುವರಿದು ಸಿಟಿಬಸ್ಸಿನ ರಗಳೆ, ತಮಿಳು ಗೊಂದಲಗಳು ನಮ್ಮನ್ನು ಕಾಡದಂತೆ ಜಗನ್ನಾಥಪುರದ ಅವಳ ಮನೆ ಬಾಗಿಲಿನಿಂದ ದೂರದ ಟ್ರಿಪ್ಲಿಕೇನಿನ ಇಲಾಖಾ ಕಛೇರಿಗೆ ನಮ್ಮನ್ನು ‘ಉದುರಿಸಲು’ ಆಟೋರಾಕ್ಷಸನನ್ನೂ ನಿಗದಿಸಿಬಿಟ್ಟಿದ್ದಳು (ರೂ ಇನ್ನೂರು! ಅದೇ ಅರ್ಧದಿನದ ಪ್ರವಾಸೀ ಪೊಟ್ಟಣಕ್ಕೆ ತಲಾ ಹಾಸಲು ಇನ್ನೂರ ಹದಿನೈದು ಮಾತ್ರ. ಮಿತವ್ಯಯದ ಬಗ್ಗೆ ನಮಗಿದ್ದ ಗೀಳಿನಲ್ಲಿ ಮತ್ತೇನಿದ್ದರೂ ಸಾರ್ವಜನಿಕ ಸಾರಿಗೆ, ಅಂದರೆ ಸಿಟಿಬಸ್ಸನ್ನೇ ಹಿಡಿಯಬೇಕೆಂದು ತೀರ್ಮಾನಿಸಿಬಿಟ್ಟೆವು! ಇವಳ ಕೊಯಾಂಬೀಡು ಬಸ್ ನಿಲ್ದಾಣದಿಂದ ಟ್ರಿಪ್ಲಿಕೇನ್ ನಿಲ್ದಾಣಕ್ಕೆ ಸಿಟಿಬಸ್ ಹಾಸಲು ಕೇವಲ ರೂ ಹದಿನೈದು!). ಮರೀನಾ ಕಿನಾರೆಯ ಬಳಿಯಲ್ಲೇ ಇದ್ದ ಇಲಾಖಾ ಕಛೇರಿಯನ್ನು ಸಮಯಕ್ಕೇ ತಲಪಿದೆವು. ಇಪ್ಪತ್ತು ಸೀಟ್‌ಗ ಮಿನಿಬಸ್ (ಎರಡು ಸೀಟ್ ಕಾಲಿಯುಳಿಸಿಕೊಂಡು) ಕಾಲರ್ಧ ಗಂಟೆ ತಡವಾದರೂ ಹೊರಟಿತು.

ಚೆನೈ ನಗರದರ್ಶನ

ಬಟ್ಲರ್ ಇಂಗ್ಲಿಷಿನ ಮಾರ್ಗದರ್ಶಿ, ಚಾಲಕನ ಗೂಡಿನೊಳಗಿನಿಂದ ಹಾದಿಬದಿಯ ಕಟ್ಟಡಗಳನ್ನು ಬಹುದೊಡ್ಡ ಐತಿಹಾಸಿಕ ಮಹತ್ತ್ವದ್ದೆಂಬಂತೆ ಕೇವಲ ಹೆಸರಿಸುತ್ತ ಹೋದ. ಅವನ ಇಂಗ್ಲಿಷಿಗೆ ಕಾಗುಣಿತ ಹುಡುಕುವ ಬದಲು, ಸಮರ್ಥವಾಗಿ ಧ್ವನಿಸುವ ಕನ್ನಡ ಲಿಪಿಯಲ್ಲೇ ಒಂದೆರಡು ಉದಾಹರಣೆಗಳು “ಟುಯ್‌ವರ್ ಲೆಫ್ಟ್-ನ್ಡ್-ಸಾಆಆಯ್.. ಆರ್ಮಿ ಆಪಿಸರ್ಸ್ ಮೇಏಏಸ್, ಸ್ಟ್ರೇಟಾಆಆನ್ ವಾರ್ ಮೆಮೊರಿಯಾಆಆಲ್..” ಆ ಪುಣ್ಯಾತ್ಮನಿಗೆ ಸೀಮಿತ ವರ್ಗದ ಅಡುಗೆಮನೆಯೂ ಒಂದೇ ಹುತಾತ್ಮರನ್ನು ನೆನಪಿಸುವ ಯುದ್ಧಸ್ಮಾರಕವೂ ಒಂದೇ. ಎಲ್ಲವನ್ನೂ ದಿವ್ಯ ಮಂತ್ರೋಚ್ಚಾರಣೆಯ ಶ್ರುತಿಯಲ್ಲಿ ಎರಡೆರಡು ಬಾರಿ ಹೇಳುತ್ತಿದ್ದಂತೆ ನಮಗೆ ಕೇಳುವ ಆಸಕ್ತಿ ಕಳೆದುಹೋಯಿತು. ವಾಹನ ಸಮ್ಮರ್ದ, ಗಲಾಟೆ ಗೊಂದಲಗಳ ನಡುವೆ ಭವ್ಯ ರಚನೆಗಳನ್ನು ಮರೆಸಿ, ಕನ್ನಾಡಿನ ರಾಜಧಾನಿ ಬೆಂದಕಾಳೂರನ್ನು ಸೋಲಿಸುವಂತೆ ಎಲ್ಲೆಡೆ ಹರಡಿದ್ದ ಕಸಕುಪ್ಪೆ, ಮೂಗುಬಿಡಲಾಗದ ‘ಪರಿಮಳ’ದ ಯಾವುದೋ ಹೊಳೆ (ಹಿನ್ನೀರು? ಬೆಂಗಳೂರಿನ ವೃಷಭಾವತಿಯ ಸೋದರಿ?) ಅನುಭವಿಸುವಂತಾಗುವಾಗ ಹುಚ್ಚ ಕಂಠದಲ್ಲಿ ದೇಶಭುಕ್ತಿ ಗೀತೆಯನ್ನು ಹಾಡಬೇಕೆನಿಸಿತು “ನಾವೆಲ್ಲರೂ ಒಂದೇ… ನಾವ್ ಕೊಳಕರೂ.”

ಫೋರ್ಟ್ ಸೈಂಟ್ ಜಾರ್ಜ್

ನಮ್ಮ ಮೊದಲ ಭೇಟಿ ಫೋರ್ಟ್ ಸೈಂಟ್ ಜಾರ್ಜ್ ಎನ್ನುವ ಕಟ್ಟಡ. ಕ್ರಿ.ಶ ೧೬೪೪ರಲ್ಲಿ ಬ್ರಿಟಿಶರ ಒಂದು ಖಾಸಗಿ ಸಂಸ್ಥೆಯ ಅಪ್ಪಟ ಸರಕು ಸಾಗಾಣಿಕೆಯ ಕೇಂದ್ರ ಮತ್ತು ಬಂದರಕ್ಕಾಗಿ ತೊಡಗಿದ ಇಲ್ಲಿನ ಕೋಟೆಯಂಥಾ ರಚನೆಗಳು ಭಾರತದ ಪಾರತಂತ್ರ್ಯದ ಮೊದಲ ಹೆಜ್ಜೆಗಳೂ ಹೌದು. ಅದನ್ನು ಆಡಳಿತಗಳು ಕಾಲಕ್ಕೆ ತಕ್ಕಂತೆ ಪರಿಷ್ಕರಿಸಿಕೊಂಡು ಬಳಸುತ್ತಲೇ ಬಂದಿವೆ. ಹಾಗಾಗಿ ಅದರ ಮಡಿಲಿನ ಒಂದು ಕಟ್ಟಡವನ್ನಷ್ಟೇ (ಸರಕಾರೀ) ವಸ್ತು ಸಂಗ್ರಹಾಲಯ (ಮ್ಯೂಸಿಯಂ) ಮಾಡಿ, ಸಾರ್ವಜನಿಕ ಪ್ರದರ್ಶನಕ್ಕೆ ತೆರೆದಿದ್ದಾರೆ. ಭಯೋತ್ಪಾದನೆಯ ವಿರುದ್ಧ ವಠಾರಕ್ಕೆ ಪ್ರವೇಶಿಸುವಲ್ಲೇ ವಿವರವಾದ ಪೊಲಿಸ್ ತಡಮೆ ಇತ್ತು. ಮತ್ತೆ ಪ್ರದರ್ಶನ ಕಟ್ಟಡಕ್ಕೆ ಪ್ರವೇಶಪತ್ರ ಖರೀದಿಸಬೇಕಿತ್ತು. ಇದು ಭಾರತೀಯರಿಗೆ ಸಾಂಕೇತಿಕವೂ ಇಲಾಖೆಯೇ ಭರಿಸಿ ಕೊಡುವುದೂ ಇತ್ತು. ಆದರೆ ವಿದೇಶೀಯರಿಗೆ ಒಂದಕ್ಕೆ ಐದೋ ಹತ್ತೋ ಪಟ್ಟು ಹೆಚ್ಚು ಮತ್ತು ಪ್ರವಾಸಿಗಳೇ ಕೊಡಬೇಕಾಗುತ್ತಿತ್ತು. ನಮಗೆ ಐದಾದರೆ ಅವರಿಗೆ ಐವತ್ತು ರೂಪಾಯಿ ಎಂದು ನಿರ್ವಾಹಕ ಘೋಷಿಸಿದಾಗ ನಮಗೆ ಭಾರತೀಯ ಅಂದುಕೊಳ್ಳಲು ನಾಚಿಕೆಯಾಗುತ್ತಿತ್ತು. ನಮ್ಮ ತಂಡದ ಓರ್ವ ಬಿಳಿ ಮಹಿಳೆ ಸಾಕ್ಷ್ಯ ಕೊಟ್ಟು ತಾನು ವಿದೇಶೀಯಳಲ್ಲ ಎಂದು ಪ್ರಮಾಣಿಸುವವರೆಗೂ ಪ್ರಸಂಗ ವಿಸ್ತರಿಸಿದ್ದು ಇನ್ನಷ್ಟು ನಾಚಿಗೆಗೇಡು! ಸಾಲದ್ದಕ್ಕೆ ತರಹೇವಾರಿ ಕ್ಯಾಮರಾಗಳಿಗೆ ತರಹೇವಾರಿ ಶುಲ್ಕವಸೂಲಾತಿ ಇನ್ನೊಂದು ಚೋದ್ಯ. ನಾನಂತೂ ಕಟ್ಟಡದ ಹೊರಗಿನ ಒಂದೆರಡು ದೃಶ್ಯಗಳನ್ನು ಸೆರೆಹಿಡಿದಲ್ಲಿಗೇ ಕ್ಯಾಮರಾ ಕಿಸೆ ಸೇರಿಸಿಬಿಟ್ಟೆ.

ಮೊದಲ ಕಟ್ಟಡದಲ್ಲಿ ಎರಡು ಮಾಳಿಗೆಗಳೆತ್ತರಕ್ಕೆ, ವಿಸ್ತಾರ ಕೋಣೆಗಳ ಅಂಚಿನುದ್ದಕ್ಕೆ ಒಂದಷ್ಟು ಐತಿಹಾಸಿಕ ಚಿತ್ರ, ಆಯುಧ, ಹಳಗಾಲದ ಪೋಷಾಕು, ನಾಣ್ಯ ಮುಂತಾದವನ್ನು ಕನ್ನಡಿ ಕಪಾಟುಗಳಲ್ಲಿ ಹರಡಿದ್ದಾರೆ. ಕಣ್ಣು ಮಿಟುಕಿಸುವ ಟ್ಯೂಬ್ ಲೈಟ್, ತಿರುಗದ ಫ್ಯಾನ್, ‘ಮಂಡೆಬೆಚ್ಚ’ದಲ್ಲಿ ಕೆಟ್ಟು ಕೂತ ಹವಾನಿಯಂತ್ರಕ, ಪ್ರದರ್ಶಿಕೆಗಳನ್ನಾವರಿಸಿದ್ದ ದೂಳುಬಲೆ ತೆಗೆಯುವುದಕ್ಕೂ ಹೊಸ ಅನುದಾನ ಕಾಯುತ್ತ ಖಾಯಂ ಸಂಬಳ ತಿನ್ನುವ ಸಿಬ್ಬಂದಿ ಅಲ್ಲಲ್ಲಿ ಕುಳಿತಿದ್ದರು. ಇನ್ನೊಂದು ಹೊಸದೇ ಕಟ್ಟಡ – ಪೂರ್ಣ ಲೋಹ ಎರಕದ, ಐತಿಹಾಸಿಕ ವಿಗ್ರಹಗಳ ಸಂಗ್ರಹಕ್ಕೇ ಮೀಸಲಿಟ್ಟಿದ್ದರು. ವ್ಯವಸ್ಥೆಯ ಕುರಿತಂತೆ ಒಂದೇ ಬಳ್ಳಿಯ ಹೂಗಳನ್ನು ನಾನು ವಿವರಿಸಲೇಕೆ! ಒಟ್ಟಾರೆ ಹೇಳುವುದಾದರೆ, ಈ ವಸ್ತು ಸಂಗ್ರಹಾಲಯಗಳು ಪೊಟ್ಟಣ ಪ್ರವಾಸದ ಸಮಯದ ಮಿತಿಗೆ ದೊಡ್ಡದಾಯಿತು. ಹಾಗೆಂದು ವಿವರವಾದ ಸ್ವತಂತ್ರ ವೀಕ್ಷಣೆಗೆ ಹೋಗುವುದಿದ್ದರೆ ಪ್ರದರ್ಶಿಕೆಗಳಿಗೆ ಸೂಕ್ತ ಇತಿಹಾಸ ನಮೂದು ಮಾಡದಿರುವುದು, ಅಶಿಕ್ಷಿತ ಸಿಬ್ಬಂದಿಯ ನಡುವೆ ದಾಸ್ತಾನು ಕೋಠಿಗೆ ನುಗ್ಗಿದಷ್ಟೇ ಲಾಭವಾದೀತು. ಫೋಟೋ ನಿಷೇಧಿಸಿದ್ದು ಅಲ್ಲಿನ ಮೌಲ್ಯಗಳ ಮೇಲೆ ಸ್ವಾಮ್ಯ ಸ್ಥಾಪಿಸುವುದಕ್ಕಿಂತ ಸಿಬ್ಬಂದಿಯ ಸೋಮಾರಿತನ ಸಚಿತ್ರ ಜಾಹೀರಾಗಬಾರದೆಂಬ ಎಚ್ಚರಕ್ಕೇ ಇರಬೇಕು!

ಪ್ರದರ್ಶನಾಲಯ ವೀಕ್ಷಣೆಗೆ ನಮಗೆ ಸಮಯಮಿತಿಯನ್ನು ನಿರ್ವಾಹಕ ಒತ್ತಿ ಒತ್ತಿ ಹೇಳಿದ್ದ. ಬಹುತೇಕ ಎಲ್ಲರೂ ಐದಾರು ಮಿನಿಟು ಹೆಚ್ಚುಕಡಿಮೆಯೆಂಬಂತೆ ಬಸ್ಸಿನ ಬಳಿ ಸೇರಿದ್ದೆವು. ಆದರೆ ಅದೇ ವೇಳೆಯಲ್ಲಿ ತಂದಿದ್ದ ಬುತ್ತಿಯೂಟಕ್ಕಿಳಿದ ಚಾಲಕ ನಿರ್ವಾಹಕರು ಉರಿಬಿಸಿಲಿನಲ್ಲಿ ಅರ್ಧ ಗಂಟೆ ವಿಳಂಬಿಸಿದರು. ಈ ನಡುವೆ ನಮ್ಮ ಚಾಲಕ ನಿರ್ವಾಹಕರ ಚೇಲಾನಂತೊಬ್ಬ ಗುಜ್ಜಾರಿ, ಬಲು ಶೋಕೀವಾಲ ಸೇರಿಕೊಂಡಿದ್ದ. ಅವನ ಮಂಡೆಯಷ್ಟೇ ದಪ್ಪವಿದ್ದ ಬಿಳೀ ಬೂಟು ಹಾಕಿ, ಬಿಳೀ ಪ್ಯಾಂಟ್, ಕೆಂಪು ಬನಿಯನ್ನ್ ತೊಟ್ಟು, ಕಿವಿಗೆ ಚರವಾಣಿಯಿಂದ ಖಾರ್ಡ್ ಹಾಕಿ ಬಹಳ ಲಹರಿಯಲ್ಲಿದ್ದ. ಹಾಡಿನ ತಾಳಕ್ಕೆ ತಲೆ ಕೊಡಹುತ್ತ, ಅರೆನಿಮೀಲಿತ ಕಣ್ಣು, ನಸು ಬಿರಿದ ನಗೆ, ಆಗೀಗ ಕೈ ಬೀಸುತ್ತ ಲಘು ಹೆಜ್ಜೆಯಿಡುವ ಚಂದ ಯಾವುದೋ ಕಾರ್ಟೂನ್ ಜೀವತಳೆದ ಭಾವನೆ ಬರುತ್ತಿತ್ತು. ಆಗೀಗ ಅವನ ಬಿಳಿ ಬೂಟಿಗೆ ದೂಳು ಕೂತಾಗ ಮಾತ್ರ ಆತ ಕಿಸೆಯಿಂದ ಚೊಕ್ಕ ಮಡಿಸಿದ ಕರವಸ್ತ್ರದಲ್ಲಿ ದೂಳು ಒರೆಸುತ್ತಿದ್ದ. ಮತ್ತೆ ಅಷ್ಟೇ ಎಚ್ಚರದಿಂದ ಅದೇ ಕರವಸ್ತ್ರದಲ್ಲಿ ಮುಖದಲ್ಲಿ ಮೂಡಿದ ಬೆವರ ಹನಿಗಳನ್ನೂ ಒತ್ತಿಕೊಳ್ಳುತ್ತಿದ್ದ; ಪೊಟ್ಟಣ ಪ್ರವಾಸಿಗಳಿಗೆ ಉಚಿತ ಮನರಂಜನೆ.

ವಲ್ಲುವರಕೊಟ್ಟಂ

ಮ್ಯೂಸಿಯಂಗೆ ಶುಕ್ರವಾರ ವಾರದ ರಜೆಯಂತೆ. ಆ ದಿನದ ಪ್ರವಾಸಿಗಳಿಗೆ ಬದಲಿಯಾಗಿ ಬಿರ್ಲಾ ತಾರಾಲಯ ತೋರಿಸುತ್ತಾರಂತೆ. ಅದು ಇದಕ್ಕಿಂತಲೂ ಉತ್ತಮವಿರಬಹುದೇ ಎಂದು ನಮ್ಮ ಜೀವ ‘ಇಲ್ಲದುದರೆಡೆಗೆ ತುಡಿ’ಯುತ್ತಿದ್ದಂತೆ ಅಶರೀರವಾಣಿ ಮೊಳಗಿತು “ನೆಶ್ಟ್ ವೀ ಗೋಟೂ ವಲ್ಲುವರಕೊಟ್ಟಂ.” ಬಸ್ಸು ಆ ರಸ್ತೆ, ಈ ಕಟ್ಟಡ ಸುತ್ತಿ ಎಂಟು ಹತ್ತು ಮಿನಿಟುಗಳಲ್ಲಿ ನಮ್ಮನ್ನೊಂದು ಉದ್ಯಾನವನದಂಚಿನಲ್ಲಿ ಇಳಿಸಿತು. ಅಲ್ಲಿ ನಡುವೆ ತಲೆ ಎತ್ತಿದ್ದ ಬೃಹತ್ ರಥದಂತಹ ಮಂದಿರ (ಸುಮಾರು ೧೨೮ ಅಡಿ ಎತ್ತರ) ವಲ್ಲುವರಕೊಟ್ಟಂ. ನಮ್ಮ ಹಂಪಿಯ ಕಲ್ಲುರಥ ಪೌರಾಣಿಕ ಸಾಗಣೆ ಮತ್ತು ಯುದ್ಧಗಳ ಅಗತ್ಯದ ಪ್ರತೀಕವಾದರೆ ಇದು ನಮ್ಮ ದೇವಾಲಯಗಳ ಉತ್ಸವಮೂರ್ತಿಯ ಸವಾರಿಗೆ ಬಳಸುವ ರಥಗಳ ನಕಲಿನಂತಿದೆ. (ಅನಾವಶ್ಯಕ ಹೋಲಿಕೆಯನ್ನು ಇನ್ನೊಂದೇ ಹೆಜ್ಜೆ ಮುಂದುರಿಸುವುದೇ ಆದರೆ) ಹಂಪಿಯದು ಅಖಂಡಶಿಲೆ ಕೆತ್ತಿ ಮೂಡಿಸಿದ ಬಿಂಬ. ಇದು ಕಾಣುವಂತೆ ಕಾಂಕ್ರೀಟ್/ ಕಬ್ಬಿಣ ಹಂದರಗಳೇನೂ ಇಲ್ಲದೆ, ಸುಮಾರು ಮೂರು ಸಾವಿರಕ್ಕೂ ಮಿಕ್ಕು ವಿವಿಧ ಗಾತ್ರದ ಶಿಲಾಖಂಡಗಳನ್ನು, ಬೆಸೆದು ನಿಲ್ಲಿಸಿದ ರಚನೆಯಂತೆ (-ವಿಕಿಪೀಡಿಯಾ). ಏನಿದ್ದರೂ ಒಮ್ಮೆಗೆ ಇದರ ಭವ್ಯತೆ ಕಣ್ಣುತುಂಬುತ್ತದೆ.

೧೯೭೫ರಲ್ಲಿ ಮುಖ್ಯಮಂತ್ರಿ ಎಂ. ಕರುಣಾನಿಧಿ, ಇಲ್ಲಿ ಬಿದ್ದಿದ್ದ ಕಸಗುಪ್ಪೆಯನ್ನು ಹಸನುಮಾಡಿ ತಿರುವಳ್ಳುವರ್ ಸ್ಮೃತಿಗೆ ಅರ್ಪಿಸಿದ (ಸ್ವಂತ ಕಿಸೆಯಿಂದೇನೂ ಅಲ್ಲ) ರಚನೆಯಿದಂತೆ. ಅದಕ್ಕೆ ತಗುಲಿದಂತಿರುವ ಭಾರೀ ಸಭಾಭವನ (ನಾಲ್ಕು ಸಾವಿರ ಮಂದಿಯನ್ನು ತುಂಬಿಕೊಳ್ಳಬಲ್ಲುದಂತೆ) ಏನೋ ರಿಪೇರಿ ಕೆಲಸದಲ್ಲಿದ್ದುದರಿಂದ ನಮಗೆ ಪ್ರವೇಶ ಸಿಗಲಿಲ್ಲ. ಇಂದು ಪುರಾತನ ದೇವಮಂದಿರಗಳೂ ಸೇರಿದಂತೆ ಎಲ್ಲ ಶ್ರದ್ಧಾ ಕೇಂದ್ರಗಳು ಪಕ್ಕಾ ‘ಉದ್ಯಮ’ದ ರೂಪಪಡೆಯುತ್ತಿವೆ. ಅವುಗಳ ಎಡೆಯಲ್ಲಿ ಹೀಗೊಂದೂ ಬೇಕಿತ್ತೇ ಎಂದನ್ನಿಸಲು ಯಾರೂ ನಾಸ್ತಿಕರಾಗಬೇಕಿಲ್ಲ. ಬಿರ್ಲಾ ಮಂದಿರ್, ಸ್ವಾಮಿ ನಾರಾಯಣ ಮಂದಿರ, ಇಸ್ಕಾನ್ ಸರ್ಕಸ್ಸುಗಳ ಶೈಲಿಯಲ್ಲಿ ಇದೂ ಒಂದು ಆಧುನಿಕ ಆರಾಧನಾ ಕೇಂದ್ರ ಎಂದು ಸರಳವಾಗಿ ಒಪ್ಪಿಕೊಳ್ಳುವುದು ಕಷ್ಟ. ಇಲ್ಲಿ ಸ್ಪಷ್ಟ ಸಾರ್ವಜನಿಕ ವ್ಯವಸ್ಥೆಯ ಅಥವಾ ಹುದ್ದೆಯ ತೊಡಗುವಿಕೆಯಿದೆ. ತಮಿಳುನಾಡಿನಲ್ಲಿ ಬೇರೆಲ್ಲಾ ರಾಜ್ಯಗಳಿಗಿಂತಲೂ ಸ್ಪಷ್ಟ ರಾಜಕೀಯ ಬಣ್ಣಗಳಿವೆ ಎನ್ನುವುದನ್ನು ಮರೆಯುವಂತಿಲ್ಲ. ರೈಲಿಳಿದು ಮನೆಗೆ ಬರುವ ದಾರಿಯಲ್ಲಿ ಅಕ್ಷರಿ ನಮಗೆ ‘ಅಣ್ಣಾಗೇಟ್’ ಎಂದು ಮುಖ್ಯ ರಸ್ತೆಯೊಂದಕ್ಕೆ ಹಾಕಿದ್ದ ಎರಡು ಕಮಾನು ತೋರಿಸಿದ್ದಳು. ಅದರ ನೆಪದಲ್ಲಿ ಜಯಾ ಕರುಣಾರ ವೈಯಕ್ತಿಕ ದ್ವೇಷ ಸಾಧನೆ ರಾಜ್ಯದ ಖಜಾನೆಯ ವೆಚ್ಚದಲ್ಲಿ ನಡೆದದ್ದನ್ನು ವಿವರಿಸಿದ್ದು ವಲ್ಲುವರಕೊಟ್ಟಂ ನೋಡುವಾಗ ನೆನಪಿಗೆ ಬಂತು.

ತಮಿಳುನಾಡಿನ ಆಡಳಿತ ಕೇಂದ್ರ ಕಛೇರಿ, ನಮ್ಮ ವಿಧಾನಸೌಧದಂಥ ಕಲಾಪಗಳು ನಡೆಯುತ್ತಿರುವುದು ಸ್ವಾತಂತ್ರ್ಯಪೂರ್ವ ಕಟ್ಟಡ – ಫೋರ್ಟ್ ಜಾರ್ಜಿನ ಭಾಗದಲ್ಲೇ! ಹೊಸ ಕಾಲ ಮತ್ತು ಅಗತ್ಯಕ್ಕೆ ತಕ್ಕಂಥ ಕಟ್ಟಡವನ್ನು ಕರುಣಾನಿಧಿ ಸರಕಾರ ಸಾಕಷ್ಟು ಭವ್ಯವಾಗಿಯೇ ಹೆಚ್ಚುಕಡಿಮೆ ಪೂರೈಸುವುದರೊಳಗೆ ಅಧಿಕಾರ ಕಳೆದುಕೊಂಡಿತು. ಗೆದ್ದು ಬಂದ ಜಯಲಲಿತಾ ಆದ್ಯತೆಯಲ್ಲಿ ಆ ಕಟ್ಟಡಕ್ಕೆ ಯಾವುದೋ ಇಲಾಖಾ ಕಛೇರಿ ಮಟ್ಟಕ್ಕೆ ನಿಯೋಜಿಸಿಬಿಟ್ಟಿತಂತೆ. ಸಹಜವಾಗಿ ರಾಜ್ಯದ ಆಡಳಿತ ಯಂತ್ರಕ್ಕೆ ಈಗಲೂ ಕ್ರಿ.ಶ. ೧೬೪೪ರ ಬ್ರಿಟಿಷ್ ಅವಶೇಷಗಳನ್ನು ಕಳಚಿ ಏಳುವುದಕ್ಕಾಗಿಲ್ಲವಂತೆ. “ಯಾರ ಖರ್ಚಿನಲ್ಲಿ ಇವರ ಮುಯ್ಯಿ ತೀರಿಸಾಟ” ಎಂದು ಪ್ರಶ್ನಿಸುವವರಿಲ್ಲವಾಗಿದೆ! ವಲ್ಲುವರಕೊಟ್ಟಂ ನಾಳೆ ‘ತಿರುವಳ್ಳುವರ್‌ಗೆ ಕೈಕೊಟ್ಟಂ’ ಆದರೆ ಆಶ್ಚರ್ಯಪಡಬೇಡಿ. (ಉತ್ತರಪ್ರದೇಶದಲ್ಲಿ ಮಾಯಾವತಿ ನಿಲ್ಲಿಸಿದ ನೂರಾರು ಶಿಲಾವಿಗ್ರಹಗಳಲ್ಲಿ ಬಹುತೇಕ ಬಹುಜನ ಸಮಾಜ ಪಕ್ಷದ ಚುನಾವಣಾ ಚಿಹ್ನೆಯಾದ ಆನೆಯದಂತೆ. ಮತ್ತೆ ಸ್ವತಃ ಆಕೆಯದೂ ಆಕೆಯ ಗುರು ಕಾನ್ಶೀರಾಂರದ್ದೂ ಇವೆಯಂತೆ. ರಾಜ್ಯ ಸರಕಾರ ಈ ವಿಗ್ರಹ ವಹಿವಾಟಿನ ಕೇವಲ ೨೫೦೦ ಕೋಟಿ ವೆಚ್ಚವನ್ನು ದಲಿತ ಜಾಗೃತಿ ಯೋಜನೆಯಲ್ಲಿ ಬರೆದುಕೊಂಡಿತಂತೆ. ಈಗ ಅವೆಲ್ಲ ಮೂಲಾಯಂ ರಸ್ತೆಗೆ ಜಲ್ಲಿಕಲ್ಲಾಗುವ ಸರತಿಯ ಸಾಲಿನಲ್ಲಿವೆ. ನಮ್ಮಲ್ಲೇ ಮತದಾರ ಪ್ರಭುಗಳು ಜಲ್ಲಿ ಅಗಿಯುತ್ತಿರುವಾಗ, ಖರ್ಗೆ ಸಾಹೇಬರು ಅಮೃತಶಿಲೆಯಲ್ಲಿ ಕಟ್ಟಿಸಿದ ಬೌದ್ಧ ಮಂದಿರವೇನು ಸಣ್ಣ ಬಾಬೇ?)

ಗಿಂಡಿ ಉರಗೋದ್ಯಾನ

ಮಂಗಳೂರಿನ ಆದಿ ಉರಗೋದ್ಯಾನ ಕಾಲದಿಂದಲೂ ರೊಮುಲಸ್ ವಿಟೇಕರ್ ಮತ್ತು ಆತ ಗಿಂಡಿಯಲ್ಲಿ ಸ್ಥಾಪಿಸಿದ ಉರಗೋದ್ಯಾನ ನೋಡಬೇಕೆಂಬ ಆಸೆಯ ಮೊಟ್ಟೆಗೆ ಕಾವು ಕೊಡುತ್ತಲೇ ಇದ್ದೆ. ಅಕ್ಷರಿ ಕರೆ ಬಂದಾಗ ಒದಗಿದ ಪ್ರಶಸ್ತ ಕಾಲಕ್ಕೀಗ ಚಿಪ್ಪು ಬಿರಿಯುವ ಸಮಯ. ಪೊಟ್ಟಣ ಪ್ರವಾಸದ ಸರದಿಯಲ್ಲಿ ಬಂದಿತ್ತು – ಭಾರತದಲ್ಲಿ ಪ್ರಥಮವಾಗಿ ತಲೆ ಎತ್ತಿದ ಖ್ಯಾತಿಯ ಗಿಂಡಿ ಉರಗೋದ್ಯಾನ. ವಾಸ್ತವದಲ್ಲಿ ಚೆನ್ನೈಯಲ್ಲಿನ ರಾಜ್ಯಪಾಲರ ನಿವಾಸದ ಸುತ್ತಮುತ್ತಣ ಸುಮಾರು ಎರಡೂವರೆ ಎಕ್ರೆ ಸಹಜ ಕಾನನ ಈಗಲೂ ದೇಶದ ಅತ್ಯಂತ ಸಣ್ಣ ರಾಷ್ಟ್ರೀಯ ಉದ್ಯಾನವನ! (ಗಿಂಡಿ ನ್ಯಾಷನಲ್ ಪಾರ್ಕ್,) ಕೆಲವು ದಶಕಗಳ ಹಿಂದೆ ಅಮೆರಿಕಾದಿಂದ ಕೇವಲ ಉರಗಗಳ ಆಕರ್ಷಣೆಗೆ ಭಾರತಕ್ಕೆ ಬಂದವರು ರೋಮುಲಸ್ ವಿಟೇಕರ್. ಆತ ತಮಿಳುನಾಡಿನ ಹಳ್ಳಿಮೂಲೆಯೊಂದರಲ್ಲಿ ಕಾಳಿಂಗಾದಿ ಹಲವು ಹಾವುಗಳನ್ನು ಸಂಗ್ರಹಿಸಿ, ವೈಜ್ಞಾನಿಕ ಚಟುವಟಿಕೆಗಳನ್ನು ನಡೆಸಿದ್ದರು. ಇವರು ಉರಗಗಳ ಕುರಿತಂತೆ ಮೂಢನಂಬಿಕೆಗಳಲ್ಲಿ ಕಳೆದುಹೋದ ಜನಕ್ಕೆ ಕೊಟ್ಟ ಶಿಕ್ಷಣದಿಂದ ಪ್ರೇರಿತವಾಗಿ ಸರಕಾರ ಗಿಂಡಿಯ ಒಂದು ಸಣ್ಣ ಮೂಲೆಯನ್ನು ಉರಗೋದ್ಯಾನಕ್ಕಾಗಿ ಕೊಟ್ಟಿತಂತೆ. ವಿಟೇಕರ್ ಆಸಕ್ತಿ ಹಾವಿನೊಡನೆ ಮೊಸಳೆ, ಆಮೆ ಎಂದು ದೇಶಾದ್ಯಂತ ವ್ಯಾಪಿಸುತ್ತಿದ್ದಂತೆ, ಸ್ಥಳೀಯವಾಗಿ ‘ಅನ್ಯ ಆಸಕ್ತಿ’ಗಳ ಮೇಲಾಟದಲ್ಲಿ ಗಿಂಡಿಯಿಂದ ಬುಡ ಕಳಚಬೇಕಾಯ್ತಂತೆ. [ಮಂಗಳೂರು ಉರಗೋದ್ಯಾನಕ್ಕೆ ಏಕೈಕ ಸಂಪನ್ಮೂಲ ವ್ಯಕ್ತಿಯಾಗಿ ಒದಗಿದವರು ಇದೇ ವಿಟೇಕರ್.

ಈಚಿನ ವರ್ಷಗಳಲ್ಲಿ ಆತ ಕಾಳಿಂಗಸರ್ಪವನ್ನೇ ಸಂಶೋಧನಾ ಲಕ್ಷ್ಯವನ್ನಾಗಿಸಿಕೊಂಡು ಆಗುಂಬೆಯಲ್ಲಿ ಕೇಂದ್ರ ನಡೆಸಿದ್ದು ವಿಚಾರವಂತರಿಗೆ ತಿಳಿದೇ ಇದೆ. ಮುಂದುವರಿದು ಇಲ್ಲಿನ ಪಿಲಿಕುಳದಲ್ಲೂ ಆತ ಬಂಧನದಲ್ಲಿ ಕಾಳಿಂಗಸರ್ಪ ಸಂತಾನಾಭಿವೃದ್ದಿ ನಡೆಸುವ ಕುರಿತು ಸಂಶೋಧನೆ ನಡೆಸಿದ್ದು, ಸದ್ಯ ಅದೂ ‘ಅನ್ಯಾಸಕ್ತಿ’ಗಳವರಿಂದ ಬಳಲುತ್ತಿರುವುದನ್ನು ಇಲ್ಲಿ ಕೇವಲ ನೆನಪಿಸಿಕೊಳ್ಳಿ, ನಾನು ವಿಸ್ತರಿಸಲು ಬಯಸುವುದಿಲ್ಲ.] ತಮಿಳುನಾಡಿನಲ್ಲಿ ಬೇರೆಲ್ಲೋ ಓಡಿಸ್ಸಾದ ಕರಾವಳಿಗಳಲ್ಲಿ ಆತ ಮೊಸಳೆ, ಆಮೆಗಳ ಕುರಿತೂ ಸಾಕಷ್ಟು ಕೆಲಸ ಮಾಡಿದ್ದು ಕೇಳಿದ್ದೇನೆ. ಅಂಡಮಾನಿನಲ್ಲಿ ಅವರದೇ ಮೊಸಳೇ ಸಂಶೋಧನಾ ಕೇಂದ್ರದಲ್ಲೇ ನಾವು ಎರಡು ರಾತ್ರಿ ಕಳೆದದ್ದಂತೂ ಅವಿಸ್ಮರಣೀಯ.

ಗಿಂಡಿ ಉರಗೋದ್ಯಾನ ಇಂದು ಗಳಿಸಿರುವ ಖ್ಯಾತಿ ಮತ್ತು ಜನಪ್ರಿಯತೆಗೆ ತಕ್ಕ ವ್ಯವಸ್ಥೆ ಕಂಡಿಲ್ಲ. ಒತ್ತಿನ ಮಕ್ಕಳ ಉದ್ಯಾನ ಸೇರಿದಂತೆ ಜನ, ವಾಹನ ಸಂದಣಿ ಅಸಾಮಾನ್ಯವೇ ಇತ್ತು. ಟಿಕೆಟ್ ಪಡೆದು ಆವರಣದ ಒಳಗೆ ಹರಿಯುತ್ತಿದ್ದ ಜನರೂ ಕಡಿಮೆಯಿರಲಿಲ್ಲ. ಆದರೆ ಇನ್ನೂ ಪ್ರಾರಂಭಕಾಲದ ಹರಕು ಮುರುಕು ಜೋಪಡಿಗಳಲ್ಲಿ, ಮಸಕು ಕನ್ನಡಿ ಗೂಡುಗಳಲ್ಲಿ ಉರಗ ಸಂಪತ್ತನ್ನು ತುಂಬಿದ್ದರು. ಕಡಲ ಹಾವುಗಳಿಗಾಗಿ ಮೀನ್ಮನೆ, ಮೊಸಳೆ ಆಮೆಗಳಿಗಾಗಿ ಪುಟ್ಟ ಕೊಳಗಳೇನೋ ಮಾಡಿದ್ದರು. ಆದರೆ ವ್ಯವಸ್ಥೆ ಮೀರಿದ ಒಳಗಿನ ಜೀವಿ ಸಂಖ್ಯೆ ನಮ್ಮಲ್ಲಿ ಕನಿಕರ ಮೂಡಿಸುತ್ತಿತ್ತು.

ಇದ್ದುದರಲ್ಲಿ ತುಸು ಆಧುನಿಕವಾದ ಒಂದು ಕಟ್ಟಡದಲ್ಲಿ ಮ್ಯೂಸಿಯಮ್ಮೂ, ವೇದಿಕೆಯೊಂದರಲ್ಲಿ ಪರಿಣತನೊಬ್ಬನಿಂದ ಜೀವಂತ ಉರಗಗಳನ್ನು ನಿಭಾಯಿಸುವ ಕ್ರಮಗಳ ಪ್ರದರ್ಶನವೂ ನಡೆದಿತ್ತು. ಗಂಬೂಟು, ಮೊಣಕೈ ಮುಚ್ಚುವ ಕೈಗವುಸು ಹಾಕಿದ್ದ ಇರುಳನೊಬ್ಬ ನಿರ್ವಿಷದ ಹಾವಾದರೂ ಕ್ರಮದಂತೆ ಕೊಕ್ಕೆ ಕೋಲುಗಳಲ್ಲಿ ‘ಆಡಿಸು’ತ್ತಿದ್ದ. ಧ್ವನಿಮುದ್ರಿತ ಇಂಗ್ಲಿಶ್ ನಿರೂಪಣೆ ಸ್ಪಷ್ಟವಾಗಿ ಕೇಳಿಬರುತ್ತಿತ್ತು. ಆದರೆ ಜಗದ್ವಿಖ್ಯಾತ ಕಾಳಿಂಗ ಸರ್ಪ ಎಲ್ಲೂ ಕಾಣಿಸಲಿಲ್ಲ. ಒಟ್ಟಾರೆ ಉರಗೋದ್ಯಾನದಲ್ಲಿ ಅಂದಂದಿನ ಪ್ರದರ್ಶನದ ಹರಕೆ ಮೀರಿದ ಲವಲವಿಕೆ ಇರಲಿಲ್ಲ. ಮಂಗಳೂರಿನಲ್ಲಿ ಉರಗೋದ್ಯಾನವನ್ನು ನಾನು ಸಾಕಷ್ಟು ಕಂಡವನೇ. ಅಲ್ಲದೇ ಪ್ರಚಾರದಷ್ಟೇ ವಿವಾದಗಳನ್ನೂ ಹೊತ್ತ ಕೇರಳದ ಪಾಪಿನಶ್ಶೇರಿ ಉರಗೋದ್ಯಾನವನ್ನು ಕುರಿತುಹೋಗಿ ನೋಡಿ ಬಂದಿದ್ದೆ. ಅವುಗಳೊಡನೆ ಹೋಲಿಕೆಯಲ್ಲಿ ನನ್ನ ಬಲುವರ್ಷಗಳ ನಿರೀಕ್ಷೆಯ ಗಿಂಡಿ ನಿರಾಶೆಯ ಗಂಡಿಗೆ ಕೆಡೆದಿತ್ತು.

ಅನಂತಪದ್ಮನಾಭ ಸ್ವಾಮಿ

ಉರಗೋದ್ಯಾನದಿಂದ ಅನಂತನ (ಮಹಾಶೇಷನೆಂಬ ಉರಗ) ಮೇಲೇ ಮಲಗಿದ ಪದ್ಮನಾಭ ಸ್ವಾಮಿಯ ದೇವಾಲಯಕ್ಕೇ ನಮ್ಮ ಯಾತ್ರೆ ಸಾಗಿದ್ದು, ಬಹುಶಃ ಯಾರೂ ಅಂದಾಜಿಸದ ತಮಾಷೆ. ದೀರ್ಘ ಸಿಂಬಿಕಟ್ಟಿದ ಹಾವುಗಳರಸನ (ಆದಿಶೇಷ) ಮೇಲೆ ಒರಗಿದ್ದವನ ಸಮಗ್ರ ದರ್ಶನಕ್ಕೆ ಮೂರು ಬಾಗಿಲುಗಳಲ್ಲಿ ಹಣಿಕಿದೆವು. ಹೀಗೇ ಶಯನಸುಖ ಅನುಭವಿಸುವ ಇನ್ನೊಂದೇ ಹೊಕ್ಕುಳಲ್ಲಿ-ಹೂ-ಹೊತ್ತವನ ಬಿಂಬವನ್ನು ನಾನು ಶ್ರೀರಂಗಪಟ್ಟಣದಲ್ಲಿ ಕಂಡದ್ದು ನೆನಪಿಗೆ ಬಂತು. ಅಗಾಧ ಗುಪ್ತನಿಧಿಯಿಂದ ಲೋಕದ ಹುಬ್ಬನ್ನೇ ಮೇಲೇರಿಸಿದ ಕೇರಳದ ತಿರುವನಂತ, ತಮಿಳುನಾಡಿನ ಶ್ರೀರಂಗದ ಅಧಿಪತಿಯೂ ಹೀಗೇ ಮೈಚಾಚಿದ ವಿಷ್ಣುಮೂರ್ತಿ ಎಂದು ನಾನು ಕೇಳಿ ತಿಳಿದಿದ್ದೇನೆ. ಮಹಾನಗರದ ವ್ಯವಸ್ಥೆಯ ಜಾಲದೊಳಗೆ ಬಂಧಿಯಾದ ಚೆನ್ನೈ ಅನಂತಪದ್ಮನಾಭನ ಬಿಡಾರ ಮಾತ್ರ ಕಿಷ್ಕಿಂಧೆ. ಹಾಗೆಂದು ಈತನ ಭಕ್ತವೃಂದವೇನೂ ಸಣ್ಣದಾಗಿಲ್ಲ. ಪ್ರವಾಸ ಇಲಾಖೆಯ, ಜಾಹೀರಾತಿನ ಆಕರ್ಷಣ ತಂತ್ರಗಳು ಬಳಸುತ್ತಾನೆ. ನಿತ್ಯ ಕಾರು ಬಸ್ಸು ಓಡಾಟದ ಸಾರ್ವಜನಿಕ ದಾರಿಗೇ ಖಾಯಂ ಚಪ್ಪರ ಹಾಕಿ (ಒತ್ತುವರಿ?), ನಗರಕೊಳಕಿನ ಪುಟ್ಟಪಥದಲ್ಲೇ ಪಾದರಕ್ಷೆ ಕಳಚಿ ದೇವಾಲಯ ಪ್ರವೇಶಿಸುವ ನೇಮ ಬರೆಸಿದ್ದಾನೆ. ಅಷ್ಟರ ಮೇಲೆ ನಮ್ಮಲ್ಲಿ ಮುಕ್ಕಾಲು ಚಡ್ಡಿ ಹಾಕಿದ್ದ ವಿದೇಶಿಯನಿಗೆ ‘ಮಡಿ’ಯಾಗಿ ಮೇಲೊಂದು ಪಂಚೆ ಸುತ್ತಿಸಿ, ಚರ್ಮದ ಸೊಂಟಪಟ್ಟಿಯನ್ನೂ ತೆಗೆಸುವ ಚಾಪಲ್ಯವೂ ತೋರುತ್ತಾನೆ (ಅವನ ಚಡ್ಡಿ ಜಾರಿ ಬೀಳದಿದ್ದರೂ ಅನಿವಾರ್ಯವಾಗಿ ಪಂಚೆ ಎತ್ತಿ ಕಟ್ಟಿದ ಸ್ಥಿತಿ ಅಸಹ್ಯವಾಗಿತ್ತು). ಚಿತ್ರಗ್ರಹಣಕ್ಕಿಳಿದರಂತೂ ಮೈಲಿಗೆ ಎನ್ನುವಷ್ಟು ದೊಡ್ಡಸ್ತಿಕೆಯನ್ನೂ ಉಳಿಸಿಕೊಂಡಿದ್ದಾನೆ!

ಅಂದಿನ ಪೊಟ್ಟಣ ಯಾತ್ರೆಯ ಕೊನೆಯ ನಿಲ್ದಾಣ – ಮರಿನಾದತ್ತ ನಾವು ಸಾಗುತ್ತಿದ್ದಂತೆ ಸಂಚಾಲಕ ‘ಚುರುಕಾದ.’ ನಮ್ಮ ತಂಡದ ವಿದೇಶಿಯರಿಗೆ ಟಿಕೆಟ್ ಖರೀದಿಸಿ, ಚಿಲ್ಲರೆ ಮರಳಿಸುವಲ್ಲಿ ಈತನದೇನೋ ಚೌಕಾಸಿ ನಡೆದದ್ದು ನಾನು ಗಮನಿಸಿದ್ದೆ. (ಅಲ್ಲೆಲ್ಲ ಭಾರತೀಯರ ಪ್ರವೇಶ ವ್ಯವಸ್ಥೆ ಇಲಾಖೆಯದೇ ಆದ್ದರಿಂದ ಅದು ನೇರ ನಮ್ಮನ್ನು ಮುಟ್ಟಿರಲಿಲ್ಲ.) ಈಗ ಪ್ರತಿ ಸೀಟು ಸೀಟಿಗೂ ಕರಿಮೊಗದಲ್ಲಿ ಬಿಳಿನಗೆ ಚಿಮ್ಮುತ್ತಾ ತನ್ನ ಅಮೋಘ ಸೇವೆಗೆ ನೇರ ಟಿಪ್ಸ್ ಕೇಳತೊಡಗಿದ. ನಾನು ಖಡಕ್ಕಾಗಿ ನಿರಾಕರಿಸಿದೆ. (ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಕೊನೆಯಲ್ಲಿ ಆತ ನಮಗೆ ಮನೆಗೆ ಮರಳಲು ನಗರ ಸಾರಿಗೆ ವ್ಯವಸ್ಥೆಯ ಮಾಹಿತಿ ಕೊಡಲೇ ಇಲ್ಲ.) ಡಾಲರ್/ಯುರೋಗಳಿಗೆ ‘ಧಾರಾಳ’ ರೂಪಾಯಿ ಪಡೆದವರು ತಿರಸ್ಕಾರದಲ್ಲೇ ನೂರಿನ್ನೂರು ಕೊಡುತ್ತಿದ್ದಾಗ ಇನ್ನೊಮ್ಮೆ ನಾಚಿಕೆಯಲ್ಲೇ ದೇಶಭುಕ್ತಿ ಗೀತೆಯ ಇನ್ನೊಂದೇ ಚರಣದ ನೆನಪುಮುದ್ರಿತ ಸುರುಳಿ ಬಿಚ್ಚಿತು – ‘ನಾವು ಭಾರತೀಯರು, ನಾವೂ ಭಾರತೀಯರೂ.’

ಮರಿನಾ ಪುಳಿನತೀರ

ಭಾರತದ ಅತ್ಯಂತ, ಜಗತ್ತಿನ ಎರಡನೇ ದೀರ್ಘ (೧೩ ಕಿಮೀ) ಪ್ರಾಕೃತಿಕ ಕಡಲ ಕಿನಾರೆ ಮರೀನಾ. ದೇಶದ ಮೂರೂ ದಿಕ್ಕಿಗೆ ಸಮುದ್ರ ಮುತ್ತಿಕ್ಕುವ ಭಾಗ್ಯ ನಮ್ಮದು. ಆದರೇನು, ಅದಕ್ಕೆ ಬೆನ್ನು ಹಾಕಿ ನೆಲಕ್ಕೇ ಮಿತಿಗೊಳ್ಳುವ ಹೇಡಿಗಳು ನಾವು. ಮರೀನಾದ ಪುಳಿನ ಹಾಸು ಸಾಕಷ್ಟು ವಿಸ್ತಾರವಿರುವುದಂತೂ ನಿದ್ದೆಗಣ್ಣರಿಗೆ ಹಾಸಿಗೆ ಕೊಟ್ಟಂತಾಗಿದೆ. ಎಲ್ಲಾ ಗೊಂದಲ, ಗದ್ದಲಗಳೊಡನೆ ನಿತ್ಯ ಜಾತ್ರೆ ಅಲ್ಲಿ ನಡೆದಿತ್ತು. ಅತ್ತ ಒಂದು ದೀಪಸ್ತಂಭ, ಅಲ್ಲಲ್ಲಿ ಆ ಈ ಸ್ಮಾರಕ, ವಿಗ್ರಹಗಳ ಮೇಳ, ಜೋಡಿ ಮಾರ್ಗ ಆ ಕಿನಾರೆಗೊಂದು ಚೌಕಟ್ಟು ಹಾಕಲು ಪ್ರಯತ್ನಿಸಿದ್ದು ಕಾಣುತ್ತಿತ್ತು. ಆದರೆ ಪಕ್ಷಗಳ ಘೋಷಿತ ಚುನಾವಣಾ ಪ್ರಣಾಳಿಕೆ ಮೀರಿ ‘ದಕ್ಷಿಣೆ, ಉಡುಗೊರೆ’ ಗೆಲ್ಲಂಕ ತರುವಂತೆ ಇಲ್ಲೂ ಕಳ್ಳೇಕಾಯ್, ಚಾಕ್ಲೇಟ್. ಚರುಮುರಿ, ಚಾಟ್, ಜೂಸ್, ಐಸ್ಕ್ರೀಮ್, ಕುದುರೆ ಸವಾರಿ, ತಿರುಗು ತೊಟ್ಲು, ಬಣ್ಣಬಣ್ಣದ ಗ್ಯಾಸ್ ಬುಗ್ಗೆ, ಚಪ್ಲಿ, ಮಣಿಸರಕು, ಝಗಮಗ ಬಟ್ಟೆ ಏನುಂಟು ಏನಿಲ್ಲವೆಂಬಂತೆ ಗಿಜಿಗುಡುತ್ತಿತ್ತು. ಎಲ್ಲವನ್ನೂ ಸಾರ್ಥಕಗೊಳಿಸುವ ಜನಸಾಗರ ನಿಜಸಾಗರವನ್ನು ಮರೆಸಿಯೇ ಬಿಟ್ಟಿತ್ತು. ಮಂಗಳೂರಿನಲ್ಲಿ ಸಾಕಷ್ಟು ಕಡಲಕಿನಾರೆಗಳನ್ನು ಕಂಡ ನಾವು ಬಸ್ಸಿಳಿದಲ್ಲೇ ಐದು ಮಿನಿಟು ನಿಂತು ನಿರಾಸಕ್ತಿಯಲ್ಲಿ ಬಸ್ಸಿಗೆ ಮರಳಿದೆವು.

ಸಂಚಾಲಕನ ‘ಟೇಮ್ ಗಿವ್ವನ್’ ಮೀರಿ, ಸ್ವತಂತ್ರವಾಗಿ ಮನೆ ದಾರಿ ಹಿಡಿಯುವುದು ನಮ್ಮ ಯೋಜನೆ. ಸಂಚಾಲಕ ನಮ್ಮ ನಗರ ಸಾರಿಗೆ ಕುರಿತ ವಿಚಾರಣೆಯ ಬಗ್ಗೆ ಅಜ್ಞಾನ ಪ್ರದರ್ಶಿಸಿದರೂ ಕನಿಷ್ಠ ‘ಕಾಪಿ ಶಾಪಾಟ್’ ಖರ್ಚಾದರೂ ಗಿಟ್ಟೀತೇ ಎಂದು ಹಲ್ಲುಗಿಂಜುವುದನ್ನು ಮರೆಯಲಿಲ್ಲ. ಮಹಿಳಾ ಪೊಲಿಸ್, ಮರಿನಾ ಬಸ್‌ಸ್ಟಾಪಿನಲ್ಲಿದ್ದ ಅವರಿವರನ್ನು ವಿಚಾರಿಸಿಕೊಂಡೆವು. ಸಾಂಪ್ರದಾಯಿಕ ಚೆನ್ನೈಯ ತೀರಾ ಸಣ್ಣ ಹೊಸ ವಿಭಾಗವಾದ ಜಗನ್ನಾಥಪುರ ಬಹುಜನಕ್ಕೆ ತಿಳಿದಿಲ್ಲ. ಆದರೆ ಮರಿನಾ ವಲಯದ ದೊಡ್ಡ ಬಸ್ ನಿಲ್ದಾಣ – ಕನ್ನಗಿ ಕೇಂದ್ರಕ್ಕೆ ಕೈ ತೋರಿದರು. ಅಲ್ಲಿಗೊಂದು ಬಸ್ಸು ಹಿಡಿದು ಮತ್ತೆ ಜಗನ್ನಾಥಪುರದ ವಲಯಕ್ಕೆ ಹತ್ತಿರದ ಇನ್ನೊಂದೇ ಸುವಿಸ್ತಾರ ಬಸ್ ನಿಲ್ದಾಣ, ಕೋಯಾಂಬೀಡಿಗೆ ಬಸ್ಸು ಹಿಡಿದೆವು. (ಮತ್ತೆ ಎಲ್ಲಕ್ಕೂ ಚರವಾಣಿಯಲ್ಲಿ ಅಕ್ಷರಿಯ ಮಾರ್ಗದರ್ಶನವೂ ಇತ್ತನ್ನಿ.) ಇಲ್ಲಿನ ಬಸ್ಸುಗಳಲ್ಲಿ ಎಡ ಪಾರ್ಶ್ವ ಪೂರ್ತಿ ಸ್ತ್ರೀಸೀಟುಗಳೆಂದು ಘೋಷಿಸಿ, ಕಡ್ಡಾಯವಾಗಿ ಜಾರಿಗೆ ತಂದಿರುವುದು ಒಳ್ಳೆಯ ಕ್ರಮವೇ ಸರಿ. ಬಸ್ಸು ಪ್ರವಾಸೋದ್ಯಮ ಇಲಾಖೆಯ ಮುಂದಿನಿಂದಲೇ ಹಾದು ಹೋಗುವುದು ಕಂಡಾಗ ನಮ್ಮ ಮರುದಿನದ ಓಡಾಟದ ಯೋಚನೆ ಇನ್ನಷ್ಟು ನಿರುಮ್ಮಳವಾಯಿತು. ನಾವು ಬೇಡವೆಂದರೂ ಅಕ್ಷರಿ (ಜಗನ್ನಾಥಪುರದ) ಮನೆಯಿಂದ ಐದೇ ಮಿನಿಟಿನ ದಾರಿಯಲ್ಲಿ ಕೊಯಾಂಬೀಡು ನಿಲ್ದಾಣಕ್ಕೆ ನಡೆದು ಬಂದು ಕಾದಿದ್ದುದರಿಂದ ನಾವು ದಾರಿ ತಪ್ಪಿಸಿಕೊಳ್ಳುವ ಅವಕಾಶದಿಂದ ವಂಚಿತರಾದೆವು.

(ಮುಂದುವರಿಯಲಿದೆ)