(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಐದು)

ಹೊಸಬರಿಗಾಗಿ ತಿರುಮಲದ ದೇವದರ್ಶನದ ಕುರಿತು ಒಂದೆರಡು ಪೀಠಿಕೆ ಮಾತು ಇಲ್ಲಿ ಹೇಳಬೇಕು. ಇಲ್ಲಿನ ಗರ್ಭಗುಡಿ ಅಪರಾತ್ರಿ ಹನ್ನೆರಡೂವರೆಯಿಂದ ಬೆಳಗ್ಗಿನ ಜಾವ ಮೂರು ಗಂಟೆಯವರೆಗೆ ಮಾತ್ರ ಮುಚ್ಚಿರುತ್ತದೆ. ಆದರೆ ದೇವದರ್ಶನದ ಏಕೈಕ ಲಕ್ಷ್ಯದೊಡನೆ ಇಪ್ಪತ್ನಾಲ್ಕೂ ಗಂಟೆ ಕಳೆಯುವ, ಕಿಮೀಗಟ್ಟಳೆ ಸರದಿಯ ಸಾಲು (ಸ್ವರೂಪ ಬದಲಾಗಿ ಭಕ್ತರ ಶ್ರಮ ಕಡಿಮೆಯಾಗಿದ್ದರೂ ಫಲ ಅದೇ) ಅನುಸರಿಸುವ ಭಕ್ತಗಡಣ ಮಾತ್ರ ‘ನಡೆದೇ’ ಇರುತ್ತದೆ. ಅಂದರೆ ತಿರುಮಲ ಹೆಚ್ಚು ಕಡಿಮೆ ರಾತ್ರಿಯಿಡೀ ಜಾಗೃತವೇ ಇರುತ್ತದೆ. (“ಏನೂ ಆಶ್ಚರ್ಯವಿಲ್ಲಾ” ಎನ್ನುತ್ತಾರೆ, ಪ್ರತಿಷ್ಠಿತ ಬಾಲವಾಡಿಗೆ ತಮ್ಮ ಮಗುವನ್ನು ಸೇರಿಸುವ ಅನಿವಾರ್ಯತೆಗೆ ಬೆಂಗಳೂರು ಪುಟ್ಟಪಥದಲ್ಲಿ ಸರದಿಸಾಲಿಡಿದು, ಮಲಗಿ ಕಳೆದ ತಂದೆಯೊಬ್ಬರು!) ಮೊದಲೇ ಹೇಳಿದಂತೆ, ಭಕ್ತರ ಹಣ ಅಥವಾ ಶ್ರಮದ ಯೋಗ್ಯತಾನುಸಾರ ದೇವದರ್ಶನಕ್ಕಿಲ್ಲಿ ಬೇರೆ ಬೇರೆ ಮಣೆಗಳಿವೆ. ಅಷ್ಟಿದ್ದೂ ಪಾದ ಯಾತ್ರಿಕನಿಗೆ (ಗಾಳಿಗೋಪುರದ ಬಳಿ ಕೊಟ್ಟ ಪತ್ರ ತಂದವರು) ಪ್ರಥಮ ಪ್ರಾಶಸ್ತ್ಯ ಮತ್ತು ಒಂದೇ ಗಂಟೆಯೊಳಗೆ ‘ದರ್ಶನ ಗ್ಯಾರಂಟಿ.’ ದೇವಕಿ ಸಾಮಾನ್ಯವಾಗಿ ಎಲ್ಲೂ ತನ್ನ ಅಭಿಪ್ರಾಯವನ್ನು ಗಟ್ಟಿಸಿ ಹೇಳಿದವಳಲ್ಲ. ಆದರೆ ಅಂದು – ಚೆನ್ನೈ ಪ್ರಯಾಣ, ಮೆಟ್ಟಿಲೇರಿದ ಶ್ರಮ, ಮನೆ ಹಿಡಿಯಲು ನಡೆಸಿದ ಓಡಾಟದಿಂದ ನಾನು ಹಾಸಿಗೆ ಹೆಟ್ಟಲು ಹೊರಟಾಗ ಹೇಳಿದ್ದು ಮಾತ್ರವಲ್ಲ, ಮೇಲುಗೈ ಪಡೆದಳು. “ದೇವದರ್ಶನದ ಕಟ್ಟಳೆಯನ್ನು ಈಗಲೇ ಮುಗಿಸಿಕೊಳ್ಳುವ. ಆಗ ನಮ್ಮ ಯೋಜಿತ ಎರಡು ದಿನದ ಇತರ ದರ್ಶನಗಳೆಲ್ಲ ನಿರುಮ್ಮಳವಾಗಿರುತ್ತದೆ.”

‘ಅಣು ರೇಣು ತೃಣ ಕಾಷ್ಠ’ ಎಲ್ಲ ಗೋವಿಂದ ಎನ್ನುವ ಜಾತಿ ನಾನು. ನನಗೆ ಗರ್ಭಗುಡಿಯ ಅತಿರಂಜಿತ ಬಿಂಬವನ್ನೇ ದರ್ಶಿಸಬೇಕೆಂಬುದರ ಬಗ್ಗೆ ನಿರಾಸಕ್ತಿಯೇ ಇತ್ತು. ಮುನಿಸಿನ ಮುಸುಡಿನಲ್ಲೇ ಜೊತೆಗೊಟ್ಟೆ. ನಮ್ಮನೆಯಿಂದ ಮತ್ತೆ ಸೀಯಾರ್ವೋ ಮತ್ತೂ ಆಚೆಗೂ ಅಷ್ಟೇ ದೂರದಲ್ಲಿತ್ತು ತಿರುಮಲೇಶನ ಬಿಡಾರ. ಆದರೀಗ ಕಾಲೆಳೆಯುವ ಸಂಕಟವನ್ನು ಸ್ವತಃ ವೆಂಕಟರಮಣನೇ ಹರಣ ಮಾಡಿದ್ದ! ಟಿಟಿಡಿ ತಿರುಮಲದೊಳಗಿನ ಎಲ್ಲಾ ಮುಖ್ಯ ವಸತಿ ಕೇಂದ್ರಗಳನ್ನು ಮುಖ್ಯ ದೇವಾಲಯದೊಡನೆ ಸಂಪರ್ಕಿಸುವಂತೆ ಒಂದು ಸುತ್ತು ಜಾಡು (ಸ್ಥೂಲವಾಗಿ ರಿಂಗ್ ರೋಡ್ ಎನ್ನಿ) ಗುರುತಿಸಿತ್ತು. ಅದರಲ್ಲಿ ಸುಮಾರು ಹದಿನೈದು ವಿಶೇಷ ಬಸ್ಸುಗಳನ್ನು (ಸುಮಾರು ಆರು ಮಿನಿಟಿನ ಅಂತರದಲ್ಲಿ ಒಂದಲ್ಲ ಒಂದು ಸಿಗುವಂತೆ) ವಿಶೇಷವಾಗಿ ಓಡಿಸುತ್ತಿತ್ತು. ಸ್ವರ್ಣಾಭರಣದ ಕಾಂತಿಯ ಅಲಂಕಾರಗಳನ್ನು ಹೊತ್ತ, ಅಗ್ನಿವರ್ಣದ ಆ ಬಸ್ಸುಗಳನ್ನು ಪೌರಾಣಿಕ ರಥಗಳನ್ನು ಹೋಲುವಂತೆಯೇ ಮಾಡಿದ್ದರು. ಹೆಸರು ‘ಶ್ರೀವಾರಿ ಧರ್ಮ ರಥಂ.’ ಅವಕ್ಕೆ ಸ್ಪಷ್ಟ ನಿಲುಗಡೆಯ ಸ್ಥಾನಗಳಿದ್ದುವು. ಅದನ್ನನುಸರಿಸಿ ಯಾರೂ ಎಲ್ಲೂ ಏರಬಹುದು, ಎಲ್ಲೂ ಇಳಿಯಬಹುದು, ಎಷ್ಟು ಸುತ್ತೂ ಹಾಕಬಹುದು – ಪೂರ್ಣ ಉಚಿತ. ನಾವು ಸಾಮಾನೆಲ್ಲವನ್ನೂ ಅಲ್ಲೇ ಬಿಟ್ಟು, ಮನೆಗೆ ಬೀಗ ಹಾಕಿ ನಡೆದೆವು. ಜೀಎನ್ಸಿ ಸ್ಟಾಪಿನಲ್ಲಿ ಶ್ರೀವಾರಿ ಧರ್ಮರಥ ಹಿಡಿದು ಭಕ್ತಗಡಣದ ವಿಶ್ವ ಕೇಂದ್ರದಲ್ಲಿ ಇಳಿಯುವಾಗ ಗಂಟೆ ಎಂಟು.

ವೇಂಕಟೇಶನ ಷಡ್ದರ್ಶನಗಳಲ್ಲಿ ನಮ್ಮದು ಅಗ್ರಗಣ್ಯ – ದಿವ್ಯ ದರ್ಶನ; ಪಾದಚಾರಿಗಳಿಗೇ ಮೀಸಲು. (ಉಳಿದಂತೆ ಸರ್ವದರ್ಶನ – ಉಚಿತ, ಶೀಘ್ರ ದರ್ಶನ – ರೂ. ಮುನ್ನೂರು, ಸುದರ್ಶನ – ರೂ ಐವತ್ತು, ಊನಾಂಗಿ/ ವೃದ್ಧರಿಗೆ – ಉಚಿತ ಮತ್ತು ದಾಖಲೆಗಳಲ್ಲಿ ಅಘೋಷಿತ – ‘ಮಹಾಮಹಿಮ’ – ಬೆಲೆ ಕಟ್ಟಲಾಗದ್ದು!) ದೇವಾಲಯ ಸಮುಚ್ಚಯದಲ್ಲಿ ಉಚಿತ ಪಾದರಕ್ಷೆಗಳ ತಂಗುದಾಣ ನಿರೀಕ್ಷಿತವೇ. ಇಲ್ಲಿ ಮುಂದುವರಿದು ಕ್ಯಾಮರಾ, ಮೊಬೈಲ್ ಮುಂತಾದ ಸಲಕರಣೆಗಳನ್ನೂ ಕಡ್ಡಾಯವಾಗಿ ಇಡಸಿಕೊಳ್ಳುವ ಭದ್ರತಾ ವ್ಯವಸ್ಥೆಯಿತ್ತು. ಮುಂದೆ ನೌಕರರು ದರ್ಶನಾರ್ಥಿಗಳನ್ನು ವಿಂಗಡಿಸುವಾಗ ನಮ್ಮನ್ನೊಬ್ಬ ಸರ್ವದರ್ಶನಕ್ಕೆ ನೂಕಿದ. ನಾವು ಪಾದಯಾತ್ರೆಯಲ್ಲಿ ಬಂದವರೆಂದು ತಿಳಿಸಿದ್ದಕ್ಕೆ ಆತ ಪತ್ರ ಕೇಳಿದ. ಅದನ್ನು ಕೇಂದ್ರ ಆಡಳಿತ ಕಛೇರಿ ಪಡೆದುಕೊಂಡ ಬಗ್ಗೆ ತಿಳಿಸಿ, ಆ ಮೂಲಕ ಮನೆ ಪಡೆದ ರಸೀದಿ ಕಾಣಿಸಿದೆ. “ಇದಲ್ಲ, ಅದೇ ಬೇಕು. ಅದನ್ನವರು ಸಂಗ್ರಹಿಸಬಾರದಲ್ಲಾ” ಎಂದು ಆತ ಒಮ್ಮೆ ಗೊಣಗಿಕೊಂಡ. ಆದರೆ ಅಲ್ಲಿನ ನೌಕರರು ಜನ ನಿರ್ವಹಣೆಯಲ್ಲಿ ತುಂಬಾ ಪಳಗಿದ್ದಾರೆ. ಮರುಗಳಿಗೆಯಲ್ಲಿ ಶಾಂತವಾಗಿ “ಇರಲಿ ಬಿಡಿ, ಇಂದು ಜನ ತುಂಬಾ ಕಡಿಮೆ ಇದ್ದಾರೆ. ಒಂದೇ ಗಂಟೆಯೊಳಗೆ ಸರ್ವದರ್ಶನದಲ್ಲೇ ನಿಮಗೆ ಅವಕಾಶವಾಗುತ್ತದೆ, ಹೀಗೆ ಮುಂದುವರಿಯಿರಿ” ಎಂದು ನಮ್ಮನ್ನು ಸುಧಾರಿಸಿಯೇ ಬಿಟ್ಟ.

ಅರ್ಧ ಚಂದ್ರಾಕೃತಿಯ, ಬಹುಮಡಿಯ ಕಟ್ಟಡವದು. ಬಹುಶಃ ಮೊದಲ ಮಾಳಿಗೆಯ ಎಡ ಸುತ್ತಿನ ಓಣಿಯಲ್ಲಿ, ‘ಗುಂಪಿನಲ್ಲಿ ಗೋವಿಂದ’ವಾಗಿ ನಡೆದೆವು. (ಅಲ್ಲಿ ನೇರವೂ ಬಲಬದಿಗೆ ಸುತ್ತು ಹಾಕುವ ಓಣಿಯೂ ಇತ್ತು. ಅವುಗಳ ವ್ಯಾಪ್ತಿ ಏನೆಂದು ನನಗೆ ತಿಳಿದಿಲ್ಲ.) ನಮ್ಮ ಓಣಿಯ ಬಲ ಬದಿಗೆ ದೊಡ್ಡ ಜಾಲರಿ ಗೇಟಿರುವ ಎರಡೆರಡು ದೊಡ್ಡ ಹಜಾರಗಳನ್ನು ದಾಟಿದೆವು. ಅದರೊಳಗೆಲ್ಲಾ ಜನ ಗಿಜಿಗುಟ್ಟಿದ್ದರು. ಮೂರನೆಯದರೊಳಗೆ ನಾವಿದ್ದ ಪ್ರವಾಹ ಮುಖ ತಿರುಗಿ, ಸೇರುತ್ತಾ ಹೋಯಿತು. ಅದೊಂದು ವೇದಿಕೆಯಿಲ್ಲದ ಪಕ್ಕಾ ಆಧುನಿಕ ಸಭಾಭವನ. ಸುಮಾರು ನೂರು ನೂರೈವತ್ತು ಅಡಿ ಉದ್ದ, ಪ್ರವೇಶದಲ್ಲಿ ಐವತ್ತರವತ್ತಡಿ ಅಗಲವಿದ್ದರೂ ಕಟ್ಟಡದ ಆಯದಂತೆಯೇ ಇನ್ನೊಂದು ಕೊನೆಯಲ್ಲಿ ಸಪುರಗೊಂಡ ರಚನೆ. ಪ್ರವೇಶ ದ್ವಾರದ ಬಳಿ ತುಸು ಅಗಲದ ಜಗುಲಿ ಉಳಿಸಿ ಮುಂದೆ ಸುಮಾರು ಐದಾರಡಿ ಅಗಲದ ಹಲವು ಇಳಿಮೆಟ್ಟಿಲುಗಳ ನೆಲ. ಎಲ್ಲ ಶ್ವೇತ ಅಮೃತಶಿಲಾಮಯ ಮತ್ತು ಬಲು ಚೊಕ್ಕವಿತ್ತು. ಎರಡೂ ಪಕ್ಕಗಳಲ್ಲಿ ಉಕ್ಕಿನ ಜಾಲರಿಗಳೇ ಗೋಡೆಗಳ ಸ್ಥಾನದಲ್ಲಿದ್ದುದರಿಂದ ಮೊದಲೆರಡು ಭವನಗಳ ಜಂಗುಳಿಯ ದರ್ಶನ, ಸದ್ದುಗಳೊಡನೆ ಏಕೋಭಾವ ತಳೆಯುವುದು ಸುಲಭವಿತ್ತು. ಬೆಳಕು, ತಂಗಾಳಿಯೂಡುವ ಕೊಳವೆ, ಫ್ಯಾನ್, ಅಂಚುಗಳಲ್ಲಿ ಸರದಿ ಸಾಲು ಹೂಡಲು ಕೊಳವೆಗಳ ಆಸರೆ ಕಲ್ಪಿಸಿದ್ದರು. ಮೇಲಿನ ಜಗುಲಿಯ ಅಂಚಿನಲ್ಲಿ ಕುಡಿಯುವ ನೀರು, ಆಹಾರಗಟ್ಟೆಯ ವ್ಯವಸ್ಥೆಯಿದ್ದರೆ ಕೆಳಕೊನೆಯಲ್ಲಿ ಶೌಚಾಲಯಕ್ಕೆ ದ್ವಾರ ತೋರಿದ್ದರು. ಆ ಕೊನೆಯ ಗೋಡೆಯಲ್ಲಿ ಭಾರೀ ಪರದೆಯಲ್ಲಿ ತಿರುಮಲದ ಯಾವ್ಯಾವುದೋ ಉತ್ಸವಗಳ ವಿಡಿಯೋ ದರ್ಶನ ನಡೆದಿತ್ತು.

ಮೊದಲ ಒಂದು ಸಾಲಿನಲ್ಲಿ ಮಾತ್ರ ಇದ್ದ ಕೆಲವು ಭದ್ರ ಆಸನಗಳಲ್ಲಿ ನಾವಿಬ್ಬರು ಕುಳಿತುಕೊಂಡೆವು. ಆದರೆ ಅದಕ್ಕೇನೂ ವಿಶೇಷ ಆಕರ್ಷಣೆಯಿಲ್ಲದಂತೆ ಎಲ್ಲಾ ಬಗೆಯ ಜನ ನಿಶ್ಚಿಂತೆಯಿಂದ ಮೆಟ್ಟಿಲುಗಳ ಮೇಲೆ ಹರಡಿಕೊಳ್ಳುತ್ತಾ ಹೋದರು. ಕಾಲು ಬಿಗಿದು ಕುಳಿತು ಧ್ಯಾನ ಮಾಡುವವರು, ಭಜನಾಮಂಡಳಿ, ಕಣ್ಣು ಎದುರಿನ ಪರದೆಯ ಮೇಲಿ ಕೀಲಿಸಿ ಧನ್ಯರಾಗುವವರು ಮತ್ತಾ ನೆಪದಲ್ಲಿ ಅಂತರಂಗದ ತುಮುಲಗಳೊಳಗೆ ಕಳೆದು ಹೋಗುವವರು – ಹೀಗೇ ಎಷ್ಟು ಜನರೋ ಅಷ್ಟೂ ಭಾವ! ಕುರ್ಚಿಯಲ್ಲಿ ಕುಳಿತೂ ತೂಕಡಿಸುವವರು, ಶಾಲು ಹಾಸಿ ಮಲಗುವವರು, ಕೌಟುಂಬಿಕ ಪಟ್ಟಾಂಗಕ್ಕೆ ಸಮಯ ಒದಗಿದವರು, ಬಹುಕಾಲದ ಬಯಕೆಯ ಓದಿನಲ್ಲಿ ಮುಳುಗಿದವರು, ‘ನಮ್ಮ ಸರದಿ ಬಂತೇ, ಪ್ರಸಾದ ಬಂತೇ’ ಎಂದಿತ್ಯಾದಿ ನೌಕರರ ತಲೆತಿನ್ನುವ ಆತುರಗಾರರು ಇತ್ಯಾದಿ ಇನ್ನೊಂದೇ ವರ್ಗ. (ಚರವಾಣಿಯ ಬಹೂಪಯೋಗ – ಸಂದೇಶ, ಸಂಗೀತ, ಆಟ ಇತ್ಯಾದಿ ಬಳಸುವುದೇ ಚರಮಗುರಿ ಅಂದುಕೊಂಡ ಅದೆಷ್ಟು ವಿಕಲಚೇತನಗಳು ಇಲ್ಲಿ ಚಡಪಡಿಸಿದ್ದುವೋ ನನಗೆ ತಿಳಿದಿಲ್ಲ) ವಿವಿಧ ದೈಹಿಕ ಅಸಹಾಯಕತೆಗಳಿಗೆ ಗಾಲಿಕುರ್ಚಿ, ಢೋಲಿಸೇವೆ ಕೊಡುವುದೆಲ್ಲಾ ನನಗೆ ಗೊತ್ತು. ಇಲ್ಲಿ ಎಳೆ ಹಸುಳೆ ತಂದಿಬ್ಬರು ತಾಯಂದಿರಿಗೆ ಅವರಿದ್ದ ಜಗುಲಿಗೇ ಪುಟ್ಟ ತೊಟ್ಟಿಲುಗಳು ಬಂದಾಗ, ‘ಹೌದಲ್ಲಾ ಯಾಕಾಗಬಾರದು’ ಎಂದೂ ಅನಿಸಿತು. ತುಸು ಹೊತ್ತಿನಲ್ಲೆ ನೌಕರರ ಕಣ್ಣಂದಾಜಿನಲ್ಲಿ ನಮ್ಮ ಭವನ ಭರ್ತಿಯಾದಂತನ್ನಿಸಿರಬೇಕು. ಆದರೆ ಜನಪ್ರವಾಹ ನಡೆದೇ ಇತ್ತು, ನಾಲ್ಕನೇ ಭವನದತ್ತ.

ಒಂಬತ್ತು ಗಂಟೆಯ ಅಂದಾಜಿಗೆ ಎರಡನೇ ಭವನಕ್ಕೆ ಆಹಾರ ಬಂದಿರಬೇಕು. ನಮ್ಮಲ್ಲಿ ಕೆಲವರಿಗೆ ಹೊಟ್ಟೆಗೆ ಬರ ಬಂದಂತಿತ್ತು. ಮಧ್ಯಂತರ ಬೇಲಿಯಲ್ಲಿ ಕೈದಾಟಿಸಿ ದಕ್ಕಿಸಿಕೊಂಡರು. ಮತ್ತೊಂದರ್ಧ ಗಂಟೆಯೊಳಗೆ ನಮ್ಮದೇ ಆಹಾರ ಕಟ್ಟೆಗೆ ಸುಡುಬಿಸಿಯ ಉಪ್ಪಿಟ್ಟು ಬಂತು. ಪೇಪರ್ ತಟ್ಟೆಯಲ್ಲಿ ಎಲ್ಲರಿಗೂ ಕೇಳಿದಷ್ಟು ಹಾಕಿ ಕೊಡತೊಡಗಿದರು. ನನ್ನ ಮುನಿಸಿನ್ನೂ ಪೂರ್ತಿ ಇಳಿದಿರಲಿಲ್ಲ! ದೇವಕಿ ಹೋಗಿ ಎರಡು ತಟ್ಟೆಯಲ್ಲಿ ಹಾಕಿಸಿ ತಂದು, ನನಗೊಂದು ಕೊಟ್ಟಳು; ಹಸಿವೆಗೆ ನಾಚಿಕೆಯಿಲ್ಲ. ಬಿಡಿ, ದುರಾಸೆಗೆ, ಹಾಳುಗೇಡಿತನಕ್ಕೆ ಏನು ಮಾಡೋಣ. ನಮ್ಮೆದುರು ನೆಲದಲ್ಲಿದ್ದವನೊಬ್ಬ, ಕಾಣಲು ಸ್ಥಿತಿವಂತನಂತೇ ಇದ್ದವ ಹೋಗಿ ಎರಡು ತಟ್ಟೆಯಲ್ಲಿ ಉಪ್ಪಿಟ್ಟು ತಂದ. ಒಂದನ್ನು ಮುಗಿಸಿದ. ಮತ್ತೊಂದನ್ನು ಬಹುಕಾಲ ಹಾಗೇ ಇಟ್ಟು ತಂಗುಳು ಮಾಡಿದ. ಅನಂತರ ನೌಕರರ ಕಣ್ಣು ತಪ್ಪಿಸುವಂತೆ ತಟ್ಟೆಯನ್ನೇ ಓರೆಮಾಡಿ ಮುಚ್ಚಿ, ಕಸದ ತೊಟ್ಟಿ ಸೇರಿಸಿದ!

ನಾವು ಕುಳಿತು ಎರಡು ಗಂಟೆಗಳೇ ಕಳೆದಿತ್ತು. ಸರದಿಯಲ್ಲಿ ನಮಗಿಂತ ಎರಡು ಭವನದಾಚಿನಷ್ಟು ಮುಂದಿನವರೂ ಬಿಡುಗಡೆಗೊಂಡಿರಲಿಲ್ಲ. ಇದರ ಅರಿವಿದ್ದಂಥ ನಮ್ಮ ಭವನದ್ದೇ ಕೆಲವು ಮಂದಿ ಮೊದಲೇ ದ್ವಾರಪಾಲಕನೊಡನೆ ಬಾಯ್ದೆರೆ ಅನುಮತಿ ಮಾಡಿಸಿಕೊಂಡು ಹೊರಗೆಲ್ಲೋ ಅಡ್ಡಾಡಿ ಬಂದದ್ದೂ ತಿಳಿಯಿತು. ಮತ್ತೆ ಎಷ್ಟೋ ಹೊತ್ತಿಗೆ ಮೊದಲ ಭವನದಲ್ಲಿ ತುಸು ಸಂಚಲನ ಕಾಣಿಸಿತು. ಸರದಿ ಬಂತೋ ಎಂಬಂತೆ ಎದ್ದರಂತೆ, ಎರಡು ಕೈಯೆತ್ತಿ ಉಚ್ಛಕಂಠದಲ್ಲಿ ದೇವಸ್ತುತಿಗಿಳಿದರು. ಅಲ್ಲಿನ ಗೋವಿಂದ ಘೋಷಗಳಿಗೆ ಎರಡನೆಯ ಮತ್ತು ನಮ್ಮ ಭವನವೂ ಸಾಕಷ್ಟು ಧ್ವನಿ ಸೇವೆ ಕೊಟ್ಟದ್ದಾಯ್ತು. ಕೆಲವು ಬುದ್ಧಿವಂತರು ಕೆಳಸಾಲಿನ ಶೌಚದ್ವಾರಗಳು ನಿಜದಲ್ಲಿ ಎಲ್ಲಾ ಭವನದವರಿಗೂ ಮುಕ್ತವಿರುವುದು ಕಂಡುಕೊಂಡಿದ್ದರು. ಮತ್ತೆ ಭವನಗಳೊಳಗಿನ ಲೆಕ್ಕವೆಲ್ಲಾ ಅಂದಾಜಿನದ್ದೆಂದೂ ತಿಳಿದುಕೊಂಡಿದ್ದರು. ಸಹಜವಾಗಿ ಕೆಲವು ಪಕ್ಷಾಂತರಗಳೂ ನಡೆದವು. ಆದರೆ ಗಂಟೆ ಹತ್ತೂವರೆಯಾದರೂ ಮೊದಲ ಭವನದವರಿಗೇ ಮುಂದುವರಿಯುವ ಅವಕಾಶ ಬರಲಿಲ್ಲ! ದೇವಕಿಯ ವಿಶ್ವಾಸ ಕರಗಿತು. ನಮ್ಮ ದ್ವಾರಪಾಲಕನ ಬಳಿ ವಿಚಾರಿಸಿದಳು. ಆತ ಮೊದಲು ನಮ್ಮನ್ನು ಇತ್ತ ನೂಕಿದವನಷ್ಟೇ ಉತ್ಸಾಹದಲ್ಲಿ “ಹಾಂ, ಇನ್ನೇನು ಒಂದು ಗಂಟೆಯೊಳಗೆ ದರ್ಶನ ಖಂಡಿತ” ಎಂದ. ನಮ್ಮ ಕುಲದೇವ ಗಣಪತಿ. ಆತ ಮದುವೆ ಬಯಸಿ ಹೆಡ್ಡುಬಿದ್ದ ಕತೆ ಕೇಳಿದ್ದೆ. ನಾವು ಹಾಗಾಗದೆ, ‘ಒಂದು ಗಂಟೆ’ಯನ್ನು ಅರ್ಥ ಮಾಡಿಕೊಂಡು ‘ಸಭಾತ್ಯಾಗ’ ಮಾಡಿದೆವು. ಆ ವಲಯದಲ್ಲಿ ಭಕ್ತರ ಒಳಹರಿವು ನಿಂತಂತಿತ್ತು. ಚಪ್ಪಲಿ ಬಿಡಿಸಿಕೊಂಡೆವು. ಚರವಾಣಿ ಕ್ಯಾಮರಾ ಲಾಕರಿನವ ಮೆಲುಧ್ವನಿಯಲ್ಲಿ ‘ಸಂ ಥಿಂಗ್’ ಕೇಳಿ ನನ್ನ ತಿರಸ್ಕಾರ ಪಡೆದ. ‘ಎಲಾ ಇವನಾ’ ಎಂದು ಒಮ್ಮೆ ಆಶ್ಚರ್ಯವಾಯಿತು. ಬಹುಶಃ ರಗಳೆ ಮಾಡಿ ದಕ್ಕಿಸಿಕೊಳ್ಳುವ ಧೈರ್ಯ ಬಾರದಷ್ಟು ಅಲ್ಲಿನ ಆಡಳಿತದ ಹಿಡಿತ ಬಿಗಿ ಇರಬೇಕು; ನಿಜಕ್ಕೂ ಮೆಚ್ಚಿಕೊಳ್ಳುವ ಸಾಧನೆ.

‘ದಿವ್ಯದರ್ಶನ ತಪ್ಪಿದರೂ ಲಡ್ಡು ಬಿಡೆ’ ಎನ್ನುತ್ತಿತ್ತು ಜಿಹ್ವಾಚಾಪಲ್ಯ. ಅವರಿವರನ್ನು ವಿಚಾರಿಸಿಕೊಂಡು ನಡೆದೆವು. ದೇವಳದ ಹೊರವಲಯದ ಒಂದು ಪಾರ್ಶ್ವದಲ್ಲಿ ಸರದಿ ಸಾಲಿನ ವ್ಯವಸ್ಥೆಗಳೊಡನೆ ಹತ್ತೆಂಟು ವಿತರಣಾ ಕೊಠಡಿಗಳನ್ನು ಮಾಡಿದ್ದರು. ಭಕ್ತರು ಹಮ್ಮಿಕೊಂಡ ಸ್ವಾಮಿಸೇವಾ ವೈವಿಧ್ಯ ಅನುಸರಿಸಿ ಅಲ್ಲಿ ಲಡ್ಡು ಮಾತ್ರವಲ್ಲದೆ ಇನ್ನೇನೇನೋ ವಿತರಣೆಗಳು ನಡೆದಂತಿತ್ತು. ಆದರೆ ಉಚಿತ ಲಾಡು ಮಾತ್ರ “ದಿವ್ಯ ದರ್ಶನ ಮುಗಿಸಿ ಹೊರಬರುವ ಬಾಗಿಲಲ್ಲೇ ಸಿಕ್ಕುತ್ತದೆ. ಇಲ್ಲಿಲ್ಲ” ಎಂದು ತಿಳಿದು ಚಪ್ಪೆಯಾದೆವು. ಧರ್ಮಾರ್ಥದ್ದು ಬೇಡ, ಬರಿದೇ ಕೊಳ್ಳುತ್ತೇವೆಂದರೂ ಆ ತಡರಾತ್ರಿಯಲ್ಲಿ ಇನ್ನೊಂದೇ ಜನಸಾಗರ ಈಜಬೇಕಿತ್ತು. ಆದರೆ ಅದಕ್ಕಿನ್ನೊಂದೇ ವ್ಯವಸ್ಥೆ ಗಟ್ಟಿಯಿತ್ತು. ಪಕ್ಕದ್ದೇ ಕಟ್ಟಡ, ಮತ್ತೊಂದೇ ಉದ್ದಾನುದ್ದ ಸಾಲು, ಕೊನೆಯಲ್ಲಿ ತಿಮ್ಮಪ್ಪನ ಅಧಿಕೃತ ಖಜಾಂಚಿ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವೇ ಖಾತೆ ತೆರೆದಿಟ್ಟು ಕಾದಿತ್ತು. ಅಲ್ಲಿ ತಲಾ ರೂಪಾಯಿ ಇಪ್ಪತ್ತೈದರಂತೆ ಹಣಪಾವತಿಸಿ ರಸೀದಿ ಪಡೆದು (ಒಬ್ಬರಿಗೆ ಗರಿಷ್ಠ ನಾಲ್ಕೇ ಲಡ್ಡು), ಪುನಃ ಲಡ್ಡು ಕಟ್ಟೆಗೆ ಹೋಗಿ ಸಂಗ್ರಹಿಸಿಕೊಂಡು, ಥಣ್ಣಗೆ ಧರ್ಮರಥ ತಂಗುದಾಣಕ್ಕೆ ಕಾಲೆಳೆದೆವು.

ದೇವಳದ ಅಂಗಳಕ್ಕೂ ಮೇಲಿನದೊಂದು ಮೈದಾನ. ಅಲ್ಲಿ ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಿ ಸಾಂಸ್ಕೃತಿಕ ಕಲಾಪಗಳನ್ನು ನಡೆಸಲು ಅನುಕೂಲವಾಗುವಂತೆ ಒಂದು ಪಾರ್ಶ್ವದಲ್ಲಿ ವಿಸ್ತಾರ ವೇದಿಕೆಯನ್ನೂ ಕಟ್ಟಿದ್ದಾರೆ. ಆ ವೇದಿಕೆಯದೇ ಮುಂದುವರಿಕೆ ಎಂಬ ಒಂದು ಕೊನೆಯಲ್ಲಿ ಅಖಂಡ ಭಜನಾ ಮಂಟಪ (ವರ್ಷದ ಮುನ್ನೂರೈವತ್ತೈದು ದಿನವೂ?) ಇದ್ದುದನ್ನು ಸಂಜೆಯೇ ಗಮನಿಸಿದ್ದೆವು. ಬೇರೆ ಬೇರೆ ಊರುಗಳಿಂದ, ಇಲ್ಲಿಗೆ ತಂಡಗಳು ಬಂದು ಪೂರ್ವ ನಿಗದಿತ ಸಮಯ ಮತ್ತು ಅವಧಿಗಳೊಳಗೆ ಅವರವರ ಸಿದ್ಧಿಯಂತೆ (ಭಾಷೆಯಲ್ಲಿ) ಭಜನೆ ನಡೆಸುತ್ತಾರಂತೆ. ಆ ತಡರಾತ್ರಿಯಲ್ಲಿ ಸುಮಾರು ಎಂಟು ಹತ್ತು ಮಂದಿಯ ತಂಡವೊಂದು ನಮಗರ್ಥವಾಗದ ಭಾಷೆಯಲ್ಲಿ ಹಾರ್ಮೋನಿಯಂ, ಮದ್ದಳೆ, ತಾಳ, ಚಪ್ಪಾಳೆಗಳೊಡನೆ ಆವೇಶಭರಿತ ಸೇವೆ ನಡೆಸಿದ್ದರು. ಕುಳಿತು ಕೇಳುವ ಒಂದು ನರಪಿಳ್ಳೆ ಅಲ್ಲಿರಲಿಲ್ಲ. ಆದರೆ ಧ್ವನಿವರ್ಧಕದ ಬಲದಲ್ಲಿ, ಭಕ್ತಿಯ ಆವೇಶದಲ್ಲಿ ಅಲ್ಲೇ ಕೆಳ ಅಂಗಳದ ಒಂದೆರಡು ಗೋಡೆಗಳ ಮರೆಯಾಚಿನ ಗೋವಿಂದನಿಗಂತೂ ಮುಟ್ಟುವ ಖಾತ್ರಿ ಆ ತಂಡಕ್ಕಿದ್ದಂತಿತ್ತು. ಹಾಗಾದರೆ ಸಂಜೆ ನಮ್ಮಷ್ಟಕ್ಕೆ ನಾವು “ಇಂದು ಎನಗೆ ಶ್ರೀಗೋವಿಂದಾ…” ಎಂದು ಹಾಡಿಕೊಂಡು ಹೊರಟದ್ದು ಆತನಿಗೆ ಕೇಳಿರಲಾರದೇ ಎಂಬ ಸಂಶಯ ಕಾಡುತ್ತಿದ್ದಂತೆ ತಂಗುದಾಣ ಸೇರಿದ್ದೆವು.

ಧರ್ಮರಥಂ ಇನ್ನೂ ಬಂದಿರಲಿಲ್ಲ. ಅಲ್ಲೊಂದು ಐದಾರು ಹಿರಿಯ ಮಹಿಳಾ ಸದಸ್ಯರೇ ಇದ್ದ ಔತ್ತರೇಯರ ತಂಡ, ನಮ್ಮ ಕಾಲಿನಲ್ಲಿ ಚಪ್ಪಲಿ ಕಂಡು ಆರ್ತವಾಗಿ ವಿಚಾರಿಸಿದರು “ನಿಮ್ಮ ಚಪ್ಪಲಿಗಳೆಲ್ಲಿ ಸಿಕ್ಕಿತು?” ತಿರುಮಲದೊಳಗೇ ಇನ್ನೂ ಕೆಲವು ಮಂದಿರಗಳು, ಸಹಜವಾಗಿ ‘ಚಪ್ಪಲಿ ನಿಷೇಧ’ಗಳು, ಜೊತೆಗೇ ಉಚಿತವಾಗಿ ಕಾಯ್ದುಕೊಳ್ಳುವ ಕಟ್ಟೆಗಳು ಇದ್ದುವು. (ನಮಗೆ ತಿಳಿದಿರಲಿಲ್ಲ.) ಈ ತಂಡ ಮಧ್ಯಾಹ್ನವೋ ಸಂಜೆಯೋ ಎಲ್ಲೋ ಚಪ್ಪಲಿ ಬಿಟ್ಟು, ಎಲ್ಲೆಲ್ಲೋ ದರ್ಶನ ಮುಗಿಸಿ, ಅಪರಾತ್ರಿಯಲ್ಲಿ ಇನ್ನೆಲ್ಲೋ ಚಪ್ಪಲಿ ಹುಡುಕಿ ಹೈರಾಣಾಗಿದ್ದರು. ನಮಗೆ ತಿರುಮಲದ ನಕ್ಷೆ, ಚಪ್ಪಲಿ ಕಾಯ್ಕಟ್ಟೆಗಳ ದಿಕ್ಕು ದೆಸೆಯೇನೂ ತಿಳಿಯದ ಸಂಕಟಕ್ಕೆ ‘ಪಾಪ, ಈ ಬಡವರಿಗೆ ನಿನ್ನಯ ಪಾದಾರವಿಂದವಲ್ಲದಿದ್ದರೂ (ಅವರವರದೇ) ಪಾದರಕ್ಷೆಯನ್ನಾದರೂ ತೋರೋ ಮುಕುಂದಾ’ ಎಂದುಕೊಂಡು ಅಷ್ಟರಲ್ಲಿ ಬಂದ ಶ್ರೀವಾರಿ ಧರ್ಮರಥವೇರಿದೆವು.

ಮನೆ ಮತ್ತು ತಿರುಮಲದ ಹವೆ ತಂಪಾಗಿತ್ತು. ರಾತ್ರಿಯಿಡೀ ವಾಹನ ಸಂಚಾರ, ಪಕ್ಕದ ತನಿಖಾಠಾಣೆಯ ಸದ್ದುಗಳು, ಕ್ಷೇತ್ರ ನಿಯಮದಂತೆ ಮೂರು ಗಂಟೆಗೇ ಧ್ವನಿವರ್ಧಕಗಳಲ್ಲಿ ಸುಪ್ರಭಾತದೊಡನೆ ತೊಡಗಿದ ಭಕ್ತಿ ಗಾನವಾಹಿನಿ ನಮ್ಮನ್ನು ಆಗೀಗ ಎಚ್ಚರಿಸಿದರೂ ನಿದ್ರೆ ಹಿತವಾಗಿತ್ತು. ನಮ್ಮನುಕೂಲದ ಬೆಳಿಗ್ಗೆ, ಕಾವಲುಮನೆಯಿಂದ ತಂದ ಬಿಸಿನೀರಿನೊಡನೆ ನಮ್ಮ ಪ್ರಾತರ್ವಿಧಿಗಳನ್ನು ಮುಗಿಸಿ, ಜೀವನದ ಪರಮೋದ್ದೇಶ ಸಾಧನೆಗಾಗಿ ಮುಖ್ಯ ಪೇಟೆಯತ್ತ ಇಳಿದೆವು. ಸೀಯಾರ್ವೋ ಅಂಗಳದಲ್ಲೇ ಇದ್ದ ಹೊಟೆಲ್ ಅದನ್ನು ಸಮರ್ಥವಾಗಿಯೇ ಪೂರೈಸಿತು. ಇಡ್ಲಿ, ಒಡೆ, ದೋಸೆ, ಕಾಫಿಗಳ ನಿರಖು ಠೇವಣಿಯೊಡನೆ ಊರನ್ನು ಸುತ್ತಲು ಪಾದ ಬೆಳೆಸಿದೆವು.

೧೯೬೨ರ ಸುಮಾರಿಗೆ ಬಳ್ಳಾರಿಯಿಂದ ನಾವೆಲ್ಲ (ಅಪ್ಪಮ್ಮ, ನಾವು ಮೂವರು ಮಕ್ಕಳು) ಬಂದು, ಕಂಡ ತಿರುಮಲದ ಮಸಕು ನೆನಪುಗಳಿಗೆ ಇಂದಿನ ಯಾವ ಮೂಲೆ ಮೊಡಕೂ ತಾಳೆ ಬೀಳಲೇ ಇಲ್ಲ. ಆಗಲಾದರೋ ಕ್ಷೇತ್ರದ ಪಾವಿತ್ರ್ಯ ಕಡಿಮೆಯಿತ್ತು ಎನ್ನಲಾರೆ. ಆದರೆ ಅದರ ಮೇಲಿನ ಜನಪದೀಯ ಛಾಪು ಬಲವಾಗಿತ್ತು. ನಿಜ ಬೆಟ್ಟಗಾಡಿನ ಮೂಲೆ ಎನ್ನುವಂತದ್ದೇ ಒಂದು ಪುಟ್ಟ ಹಂಚಿನ ಮನೆ ನಮಗೆ ಸಿಕ್ಕಿತ್ತು (ಬಹುಶಃ ಆಗಲೂ ದೇವಾಲಯದ ಆಡಳಿತವೇ ಕೊಟ್ಟದ್ದಿರಬೇಕು. ಸಂಪರ್ಕ, ಬಾಡಿಗೆ ಇತ್ಯಾದಿ ಯಾವ ವಿವರವೂ ನನಗೆ ತಿಳಿದಿಲ್ಲ). ಸಾರ್ವಜನಿಕ ಪ್ರದೇಶಗಳು ಇಷ್ಟೇ ಎನ್ನುವಂಥಾ ನೈರ್ಮಲ್ಯದ ಬಚ್ಚಲು, ಕಕ್ಕೂಸು. ಬಿಸಿನೀರ ಸಂಗತಿಯಿಲ್ಲ. ಚಳಿಗಾಲದ ಆ ಬೆಳಿಗ್ಗೆ ಇನ್ನೂ ಹತ್ತು ಹನ್ನೊಂದರ ಬಾಲಕ (ನಾನೇ!) ತಣ್ಣೀರ ಸ್ನಾನ ಮಾಡಿದ್ದ ಎಂದರೆ ದೇವರ ಭಯವೇ ಇದ್ದಿರಬೇಕು.

ಅಂದಿನ ಇನ್ನೊಂದು ಬಿಡಿಚಿತ್ರದಲ್ಲಿ, ವಿಸ್ತಾರ ಇಳಿಜಾರ ದಾರಿ. ಎಡಮಗ್ಗುಲಿಗೆ ದೇವಳದ ಭಾರೀ ಪೌಳಿ. ಬಲಬದಿಯ ಕಟ್ಟೆಯ ಮೇಲೆ ಸಾಲು ಸಾಲು ಜನ ತಲೆಬೋಳಿಸಿಕೊಳ್ಳುತ್ತಿದ್ದರು. ಮುಂದುವರಿದಂತೆ ಗಲ್ಲಿದಾರಿಗಳುದ್ದಕ್ಕೂ ಗಿಜಿಗುಡುವ ಜನ, ನೂರೆಂಟು ತರದ ಭಕ್ತಿ ಸಲಕರಣೆ, ಸ್ಮರಣಿಕೆ ಮಾರುವ ಮುಂಗಟ್ಟೆಗಳು, ಎಲ್ಲೆಂದರಲ್ಲಿ ಉಗುಳು, ಬೀಡಿ, ಕಸ, ಬಿಕ್ಷುಕರು, ನಾಯಿ – ಮಡಿಕೇರಿ ವಾರದ ಸಂತೆಯದೇ ದೃಶ್ಯ (ಕ್ಷಮಿಸಿ, ಮಡಿಕೇರಿಯೂ ಈಗ ಬದಲಾಗಿರಲೇಬೇಕು). ಅಲ್ಲೆಲ್ಲೋ ಮುಡಿಕೊಟ್ಟವರು ಸ್ನಾನ ಮಾಡುವ ಪವಿತ್ರ ಕೆರೆಯಂತೆ – ಪುಷ್ಕರಿಣಿ. ಅದೊಂದು ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ – ಸಂದ ಯುಗಗಳ ಪಾಪವೆಲ್ಲವೂ ಕೆನೆಗಟ್ಟಿ ನಿಂತಂಥ ಕೊಳ, ಅಲ್ಲ ಕೊಳಕು!

ಇಷ್ಟಾದರೂ ನನ್ನಪ್ಪ (ಜಿಟಿನಾ) ಉದಾರಿ! ವೈದಿಕ ಸಂಸ್ಕಾರಗಳಲ್ಲಿ ನನಗಿಲ್ಲದ ಪರಿಣತಿ ಅವರಿಗೆ ಇತ್ತು. ಆದರೆ ಅವನ್ನೆಲ್ಲ ಕಲಿಕೆ, ಲೋಕಾನುಭವ ಮತ್ತು ವೈಚಾರಿಕತೆಯಲ್ಲಿ ಬಿಟ್ಟು, ಬೆಳೆದು ನಿಂತರು. (ವಿವರಗಳಿಗೆ ಮುಗಿಯದಪಯಣ ನೋಡಿ) ನನ್ನ ತಾಯಿಯ ತಿಳುವಳಿಕೆ, ಲೋಕಾನುಭವ, ಸ್ವತಂತ್ರ ಓದು ಸಣ್ಣದಲ್ಲ. ಆದರೆ ಆಕೆ ಅಂದೂ ಇಂದಿನಂತೇ (ಕಂದಾಚಾರ ರಹಿತ) ಶ್ರದ್ಧಾಳು. ತಂದೆ ಬಳ್ಳಾರಿಯಲ್ಲಿ ಪೂರ್ಣಾವಧಿ ಎನ್ಸಿಸಿ ಅಧಿಕಾರಿಯಾಗಿದ್ದ ದುರ್ಭರ ದಿನಗಳವು (ವಿವರಗಳಿಗೆ ಎನ್ಸಿಸಿ ದಿನಗಳು ಪುಸ್ತಕ ಓದಿ, ಬೆಲೆ ರೂ ೫೫ ಮಾತ್ರ). ಬಳ್ಳಾರಿ ತಿರುಪತಿಗೆ ಹತ್ತಿರದೂರು ಎನ್ನುವ ಸುಳುಹು ನನ್ನ ತಾಯಿಗೆ ಸಾಕಾಯ್ತು. ನನ್ನಜ್ಜಿ (ವೆಂಕಟಲಕ್ಷ್ಮಿ) ತನ್ನ ಚೊಚ್ಚಲ ಹೆರಿಗೆಯಲ್ಲಿ (ಮಗು ವೆಂಕಟನಾರಾಯಣ – ಇದು ಅವರು ಸಂಕಲ್ಪಿಸಿದ ಹೆಸರು, ದಾಖಲೆಗಳಲ್ಲಿ ಕೇವಲ ನಾರಾಯಣ, ಮುಂದೆ ಜಿಟಿನಾ.) ತಿಮ್ಮಪ್ಪನಿಗೆ ಮಾಡಿಕೊಂಡ ಹರಿಕೆಯು ನೆಪವಾಯ್ತು. ತಂದೆಯ ಸಹೋದ್ಯೋಗೀ ಮಿತ್ರರೊಬ್ಬರು (ಮೇ| ಜರೆ ಅವರಿರಬೇಕು) ಸಹಾಯಕ್ಕೊದಗಿದರು. ತಂದೆ ‘ಸಕುಟುಂಬ ಹರಕೆ ಮುಟ್ಟಿಸುವ’ ಜವಾಬ್ದಾರಿ ನಿರ್ವಹಿಸಿದರು. (ನಾನು ಖಂಡಿತಾ ನಡೆಸುತ್ತಿರಲಿಲ್ಲ, ಹೌದು ಇದನ್ನು ಓದುವಾಗ ಅಮ್ಮ ಉದ್ಗರಿಸುತ್ತಿದ್ದಾಳೆ “ಹಾಂ, ಗಂಟು ಸೌದೆ!”)

ಆರ್ಥಿಕವಾಗಿ ಅಂಥಾ ಶಕ್ತರೇನೂ ಅಲ್ಲದ ಕಾಲದಲ್ಲಿ, ಮಾನಸಿಕವಾಗಿ ಪ್ರವಾಸವನ್ನೇ ಇಷ್ಟಪಡದ ವ್ಯಕ್ತಿ, ವೈಚಾರಿಕವಾಗಿ ಬದ್ಧ ವಿರೋಧವಿದ್ದ ತೀರ್ಥಕ್ಷೇತ್ರಕ್ಕೆ ಕರೆದುಕೊಂಡು ಹೋದದ್ದಲ್ಲದೆ ದೇವದರ್ಶನವನ್ನೂ ಮಾಡಿಸಿದ್ದರು! ಜಿಡ್ಡು ಹಿಡಿದ ಗೋಡೆಗಳು, ಉಗುಳು (ಮಕ್ಕಳ ಮಲಮೂತ್ರವೂ ಇದ್ದ ನೆನಪು) ಕಸ, ಕೊಳಕಿನ ನಡುವೆ ಮೈಲುದ್ದದ ಕೊಳವೆ ಸಾಲಷ್ಟೇ ಇದ್ದ ಸರದಿ ಸಾಲು. ಸೆಕೆ, ಬೆವರು, ವಾಸನೆ, ಅಸಹನೆಗಳೆಲ್ಲವನ್ನೂ ಮೀರಿ ಸರದಿಸಾಲಿನ ತಾರ್ಕಿಕ ಕೊನೆಯನ್ನು ತಂದೆ ಮುಟ್ಟಿಸಿದ್ದರು. (ನನ್ನ ಹಾಗೆ ಸಭಾತ್ಯಾಗ ಮಾಡಲಿಲ್ಲ.) ದೇವಬಿಂಬ ಕಾಣಿಸಿರಬೇಕು ಎಂಬ ಗುಮಾನಿಯೊಡನೇ ಅಲ್ಲಿನ ಎಲ್ಲರಂತೆ ಹೊರ ತಳ್ಳಿಸಿಕೊಂಡಿದ್ದೆವು. (ಇಂದಿನ ದಿನಗಳಲ್ಲಾಗಿದ್ದರೆ ಕ್ರಿಕೆಟ್ಟಿನ ಕ್ರಿಟಿಕಲ್ ಕ್ಲಿಂಚಸ್ಸಿನಂತೆ ವಿದ್ಯುನ್ಮಾನ ಪರದೆಯ ಮೇಲೆ ಹಿಂದೆ ಮುಂದೆ ಮಾಡಿ ನೋಡಿ ನಿರ್ಧರಿಸಬೇಕಾಗುತ್ತಿತ್ತು!) ಮತ್ತೆ ಆ ದಿನಗಳಲ್ಲಿ ತಿರುಮಲದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ಇದ್ದಂತಿರಲಿಲ್ಲ. ನಮ್ಮನ್ನು ದೂರವೇ ನಿಲ್ಲಿಸಿ, ನೂಕು ನುಗ್ಗಲಿನಲ್ಲಿ ಏಗಾಡಿ ‘ಅನ್ನ, ಲಾಡು ಹಾಗೂ ಒಡೆ’ ಪ್ರಸಾದಗಳನ್ನೂ (ಸಾಂಕೇತಿಕ ಅಗತ್ಯಕ್ಕೆ ಮಾತ್ರ. ಸಿಕ್ಕಿದವೂ ಧಾರಾಳವಿರಲಿಲ್ಲ. ಈಗ ಅಲ್ಲಿ ಒಡೆ ಪ್ರಸಾದವನ್ನೇ ನಿಲ್ಲಿಸಿಬಿಟ್ಟಿದ್ದಾರೆ.) ಸಂಗ್ರಹಿಸಿ ಕೊಟ್ಟಿದ್ದರು!

[ನಾನು/ನಾವು ದೇವದರ್ಶನವಂತೂ ಮಾಡಲಿಲ್ಲ. ಕ್ಷೇತ್ರದರ್ಶನವನ್ನಾದರೂ ಚಂದಗಾಣಿಸಿದೆವೇ ಎನ್ನುವುದರೊಡನೆ, ಅಂತಿಮ ಕಂತಿಗೆ ಮುಂದಿನವಾರದವೆರೆಗೆ ನಿಮ್ಮ ತಾಳ್ಮೆ ಕೋರುತ್ತೇನೆ.]

(ಮುಂದುವರಿಯಲಿದೆ)