ಸುತ್ತು ಇಪ್ಪತ್ತ್ನಾಲ್ಕು

[ಚಲಿಸದ ಕತ್ತಿ ಕೊಯ್ಯುವುದಿಲ್ಲ, ಚಲಿಸುವ ಬೆಂಕಿ ಸುಡುವುದಿಲ್ಲ – ಇದು ಕತ್ತಿ ಅಲಗಿನ ಮೇಲೆ ನಿಲ್ಲುವವರ ಮತ್ತು ಕೊಂಡ ಹಾಯುವವರ `ದೈವಿಕ ಸಿದ್ಧಿ.’ ಅಂತೆಯೇ ಕಳಕ್ಕೆ ಇಳಿಯದ, ಇಳಿದು ನಡೆಯದ, ನಡೆದು ಎಡವದ, ಎಡವಿ ಬಿದ್ದು ಎದ್ದು ಗುರಿಯೆಡೆಗೆ ಸಾಗದ `ಸಾಹಸಿ’ ಪದಧ್ವಂಸಿಯಾಗುತ್ತಾನೆ. ವಾಸ್ತವ ಸಾಹಸಿಯಾದರೋ ಪದಗಳಿಗೆ ಹೊಸ ಆಯಾಮವೀಯುವ ಸಾಹಿತಿಯೇ ಆಗುತ್ತಾನೆ. – ಜಿಟಿನಾ ಸಂಪಾದಕೀಯ ಟಿಪ್ಪಣಿ]

`ಸಾಹಸ ಒಂದು ದೃಷ್ಟಿಕೋನ. ಇದು ಅತಿಮಾನುಷ ಆಗಬೇಕೆಂದಿಲ್ಲ’ (ನೋಡಿ: ಸಾಹಸ ಎಂದರೇನು?) ಎಂಬ ವಿಚಾರದ ಮುಂದುವರಿಕೆಯಾಗಿಯೇ ಅರಳಿತು `ಆರೋಹಣ’ದ ಹತ್ತು ದಿನಗಳ, ಆರು ಮಂದಿಗಳ, ಮೂರು (ಎಲ್ಲ ಯೆಜ್ದಿ) ಬೈಕುಗಳ ಯಾನ. ವಾರಾಂತ್ಯಗಳಲ್ಲಿ, ಸಾರ್ವಜನಿಕ ರಜಾ ದಿನಗಳಲ್ಲಷ್ಟೇ ಅಂಗಡಿ ಮುಚ್ಚಿ ಹವ್ಯಾಸಗಳನ್ನು ಹಮ್ಮಿಕೊಳ್ಳುತ್ತಿದ್ದ ನಾನು, ಹೆಂಡತಿ ಸಮೇತನಾಗಿ ಅದೇ ಮೊದಲು ಅಂಗಡಿಯನ್ನು ತಂದೆ – ಜಿಟಿ ನಾರಾಯಣ ರಾಯರಿಗೂ ಮನೆಯನ್ನು ತಾಯಿ – ಲಕ್ಷ್ಮೀ ದೇವಿಗೂ ಮೂರು ವರ್ಷದ ಮಗ ಅಭಯನನ್ನು ಅಜ್ಜನ ಮನೆ – ಕೊಂದಲಕಾನಕ್ಕೂ ವಹಿಸಿಕೊಟ್ಟು ಬಿಡುವು ಮಾಡಿಕೊಂಡಿದ್ದೆವು. ಅರವಿಂದ ರಾವ್ ತನ್ನ ಅಂಶಕಾಲಿಕ ವೃತ್ತಿ – ಕೊಳಚೆ ಜಲಮಂಡಲಿಯ ಪ್ರಯೋಗಾಲಯ ತಜ್ಞತೆಗೇನೋ ರಜೆ ಹಾಕಬಹುದಿತ್ತು. ಆದರೆ ಇನ್ನೂ ಪ್ರಾಥಮಿಕ ಹಂತದಲ್ಲಿ ವಿಕಸಿಸುತ್ತಿದ್ದ ಅವರ ಸ್ವೋದ್ಯೋಗ – ಕಮಲಜೀತ್ ಪ್ರಯೋಗಾಲಯ ಸೇವೆಗಳನ್ನು ಹತ್ತು – ಹನ್ನೊಂದು ದಿನಕ್ಕೆ ತ್ಯಜಿಸಿ ಹೊರಡುವುದು ಸಣ್ಣ ಮಾತಾಗಿರಲಿಲ್ಲ; ಆದರೂ ಹೊರಟಿದ್ದರು. ಅವರ ಸಹವಾರ ಬಾಲಕೃಷ್ಣ – ಮಜ್ಗಾಂ ಡಾಕ್ ನೌಕರ, ರಜಾರ್ಜಿ ಎಸೆದು ಸೊಂಟಪಟ್ಟಿ ಬಿಗಿ ಮಾಡಿದ್ದರು. ಭಾರೀ ಜಮೀನ್ದಾರರ ಮುದ್ದಿನ ಮಗ, ವೃತ್ತಿ-ಹವ್ಯಾಸಗಳ ತುರ್ತು-ಬಿಡುವುಗಳ ಒತ್ತಡವೇನೂ ಇಲ್ಲದ ಅರುಣ್ ನಾಯಕ್ “ಎಲ್ಲ ನೀವು ಹೇಳಿದ ಹಾಗೇ ಅಶೋಕ್” ಎಂದು ಕಣ್ಣುಮುಚ್ಚಿ ಹಿಂಬಾಲಿಸಲು ಸಜ್ಜಾಗಿ ತಂಡಾ ಸೇರಿದ್ದರು. ನನಗೆ ಅಷ್ಟಾಗಿ ಪರಿಚಿತರಲ್ಲದ ಅವರ ಆಪ್ತ ಮಿತ್ರ – ಆಲ್ವಿನ್ ಕೂಡಾ ಅದೇ ಮನೋಭಾವದಲ್ಲೇ ಅರುಣ್ `ಬೆಂಗಾವಲಿಗೆ’ ಸೇರಿಕೊಂಡಿದ್ದರು. [ನಮ್ಮನ್ನುಳಿದು ನಾಲ್ವರೂ ಅವಿವಾಹಿತರೇ.]

ನಾನು ಅಂಗಡಿಯಲ್ಲಿ ಲಭ್ಯ ಭೂಪಟ ಮತ್ತು ಪುಸ್ತಕಗಳನ್ನು ಜಾಲಾಡಿದೆ. (ನೆನಪಿರಲಿ, ಅಂದು ನನಗೆ ತಿಳಿದಂತೆ, ಸಾಮಾನ್ಯರಿಗೆ ಅಂತರ್ಜಾಲದ ಕಲ್ಪನೆಯೂ ಇರಲಿಲ್ಲ. ಚರವಾಣಿ ಬಿಡಿ, ದೂರವಾಣಿಯೂ ಸುಲಭ ಸಂಪರ್ಕಕ್ಕೂ ಹಣಹಗುರದ ಮಾಧ್ಯಮವಾಗಿಯೂ ಚಾಲನೆಯಲ್ಲಿಲ್ಲದ ದಿನಗಳು.) ಅಂಗಡಿಗೆ ಬರುವ ಪರಿಚಿತರಿಂದ, ದೂರದ ಮಿತ್ರರಿಂದ ಪತ್ರ ಮಾಹಿತಿ ಸಂಗ್ರಹಿಸಿ, ಒಂದು ರೇಖಾಚಿತ್ರದಲ್ಲಿ ಎಲ್ಲವನ್ನೂ ಕ್ರೋಢೀಕರಿಸಿದೆ. ಅದರಲ್ಲಿ ಒಟ್ಟಾರೆ ನಕ್ಷೆ, ಅಂದಾಜು ಅಂತರಗಳು, ನಮ್ಮ ಆಯ್ಕೆಯ ಪ್ರೇಕ್ಷಣೀಯ ಸ್ಥಳಗಳು ಮತ್ತು ರಾತ್ರಿಯ ನಿಲ್ದಾಣಗಳು – ಪೂರ್ವ ಪರಿಚಿತವೇ ಆದಲ್ಲಿ ಪೂರ್ಣ ವಿಳಾಸ ಸಹಿತ ದಾಖಲಿಸಿದ್ದೆ. ಅದನ್ನು ನೆರಳಚ್ಚಿನಲ್ಲಿ ಆರು ಪ್ರತಿಮಾಡಿಸಿ ಎಲ್ಲ ಸದಸ್ಯರಿಗೂ ಹಂಚಿದ್ದೂ ಆಯ್ತು. ಬೈಕ್‍ಗಳನ್ನು ತೀವ್ರ ತಪಾಸಣೆಗೊಳಪಡಿಸಿ ಆವಶ್ಯಕ ರಿಪೇರಿ, ತುರ್ತಿಗೊದಗುವ ಬಿಡಿ ಸಾಮಾನುಗಳನ್ನು ಹೊಂದಿಸಿದೆವು. ವೈಯಕ್ತಿಕ ಅಗತ್ಯಗಳನ್ನಂತೂ ಬಹು ವಿವರಗಳಲ್ಲಿ ವಿಮರ್ಶಿಸಿ ಸಜ್ಜುಗೊಳಿಸಿದೆವು.
ತಪ್ಪಿಸಿಕೊಂಡವರು

ಆದಿತ್ಯವಾರ ಬೆಳಗ್ಗೆ ನಮ್ಮ ಜೋಡಿ ಯೋಜನೆಗಿಂತ ಒಂದೆರಡು ಮಿನಿಟು ತಡವಾಗಿ `ಬ್ಲೇಝಿ ಮನೆ’ ಅರ್ಥಾತ್ ಹೊರಡುವ ಜಾಗ ತಲಪಿತು. [ಕಂಕನಾಡಿಯ ಇಂದಿನ ಕರಾವಳಿ ವೃತ್ತದ ಅಂಚಿನಲ್ಲೇ ಇದ್ದ, ಅಂದಿನ ಗಣ್ಯ ರಾಜಕಾರಣಿ ಬ್ಲೇಸಿಯಸ್ ಡಿಸೋಜಾರ ಮನೆಯ ಹೆಸರು ಗುರುತಕ್ಕೆ ಮಾತ್ರ. ನಾವು ಸೇರಿದ್ದು ಅಲ್ಲೇ ಹೊರಗೆ ರಸ್ತೆಯಂಚಿನಲ್ಲಿ!] ಅರುಣ್ ನಾಯಕ್ ಜೋಡಿ ಕಾದಿತ್ತು. ಅರವಿಂದರ ಜೋಡಿ ಮತ್ತೆರಡು ಮಿನಿಟು ತಡವಾಗಿ, ಗಡಿಬಿಡಿಯಲ್ಲೇ ಬಂತು. ಸಿದ್ಧತೆಯಲ್ಲಿ ಏನೋ ಹೊಂದಾಣಿಕೆ ಬಾಕಿಯಾದ್ದರಿಂದ ಮತ್ತೂ ಒಂದೆರಡು ಮಿನಿಟು ಸಮಯ ಕೇಳಿ, ಅರವಿಂದರ ವಾಸ್ತವ್ಯದ ಸ್ಥಳಕ್ಕೇ ಧಾವಿಸಿತು. ಬಂಟ್ವಾಳ ತಾಲೂಕಿನ ಹಳ್ಳಿಮೂಲೆಯ ಅರವಿಂದ, ಅಂದಿನ ಬ್ರಹ್ಮಚಾರಿ ಬಿಡಾರವನ್ನು ಕಛೇರಿಯಲ್ಲೇ ಹೂಡಿದ್ದರು. ಅದು ನಾವು ಅನುಸರಿಸಲಿದ್ದ ಹೆದ್ದಾರಿಯ ಪಕ್ಕದಲ್ಲಿ, ಅಂದರೆ ಎಕ್ಕೂರು ಗುಡ್ಡೆಯ ಎದುರು ಬದಿಯಲ್ಲೇ ಇದ್ದುದರಿಂದ ನಾವು ಅವರನ್ನು ನಿಧಾನಕ್ಕೆ ಹಿಂಬಾಲಿಸಿದೆವು. ಅವರ ಕಛೇರಿ ಸಮೀಪಿಸುತ್ತಿದ್ದಂತೆ ನಾನು ಹೆಚ್ಚು ನಿಧಾನಿಸಿದೆ, ಅರುಣ್ ನನ್ನನ್ನು ಹಿಂದಿಕ್ಕಿ ಸೀದಾ ಹೋದರು. ಅರವಿಂದರ ಕಚೇರಿ ಗೇಟಿನ ಬಳಿ ನಾವು ಕಾದೆವು. ಮಿನಿಟು ಒಂದು ಹೋಗಿ ಹತ್ತಾದರೂ ಜೋಡಿ ಹೊರಡಲಿಲ್ಲ. ಇವರ್ಯಾಕೆ ಬರಲಿಲ್ಲಾಂತ ನಾನು ದಾರಿ ಬಿಟ್ಟು ಸುಮಾರು ನೂರು ಮೀಟರಷ್ಟೇ ಒಳಗಿರುವ ಕಚೇರಿಯಂಗಳಕ್ಕೆ ಬೈಕ್ ಒಳಗೋಡಿಸಿದೆ. ಅಲ್ಲಿ ಮಿತ್ರರಿಬ್ಬರ “ಅದು ಬೇಡನಾ, ಇದು ಬೇಕನಾ…” ಪ್ರೇಮಕಲಹ ಇನ್ನೂ ಮುಗಿದಿರಲಿಲ್ಲ. ವಿಳಂಬವನ್ನು ಚುಚ್ಚಿ ಹೇಳಿ, ಅಂತೂ ಅವರನ್ನು ಮತ್ತೆ ಹೆದ್ದಾರಿಗೆ ತಂದೆ. ನಾನು ಕಂಡಂತೆಯೇ ಮುಂದೆ ಹೋದ ಅರುಣ್ ಜೋಡಿಯನ್ನು ಹಿಡಿಯುವ ಆತುರದಲ್ಲಿ ಎರಡೂ ಬೈಕ್‍ಗಳ ವೇಗೋತ್ಕರ್ಷ ಮಾಡಿದೆವು.

ಉಳ್ಳಾಲ ಸಂಕದ ಮೇಲೆ ನಿಂತಿರಬಹುದು ಅಂದುಕೊಂಡರೆ, ಇಲ್ಲ. ನಮ್ಮ ಗಾಡಿಗಳ ವೇಗಸೂಚಿ ಮುಳ್ಳು ಎಂಬತ್ತರ ಮೇಲೆ ತೊನೆಯುತ್ತಿದ್ದಂತೆ ತೊಕ್ಕೋಟಿನ ಚಾದಂಗಡಿಗಳ ಅಂಚಿನಲ್ಲೂ ಗೆಳೆಯರು ಕಾಣಲಿಲ್ಲ. ತಲಪಾಡಿಯಲ್ಲೋ ಉಪ್ಪಳದಲ್ಲೋ ವಿರಮಿಸಿರಬಹುದು ಎಂದು ನಾವು ಗಂಭೀರವಾಗಿಯೇ ಮುಂದುವರಿದೆವು – ನಾಸ್ತಿ. ಉರಿಬೇಸಗೆಯ ತಂಪು ಮುಂಜಾನೆ, ಖಾಲಿಬಿದ್ದ ವಿಸ್ತಾರ ಹೆದ್ದಾರಿಯಲ್ಲಿನ ವೇಗಚಾಲನೆಯ ಮೋಜನುಭವಿಸುತ್ತಾ ಕಾಸರಗೋಡಿಗೇ ಹೋಗಿರಬಹುದೆಂದು ಅದನ್ನೂ ಕ್ಲಪ್ತ ಕಾಲದಲ್ಲಿ ಸಾಧಿಸಿದೆವು. ಹುಡುಕುನೋಟ, ಊಹೆಗಳನ್ನೆಲ್ಲಾ ಮೀರಿದಂತೆ ಆ ಜೋಡಿಯ ಕುರಿತು ನಮ್ಮ ತಳಮಳ ಏರಿದ್ದಷ್ಟೇ ಲಾಭ. ಆದರೂ ಒಂದು ಸಣ್ಣ ತೃಪ್ತಿ – ಎಲ್ಲರೂ ಹಂಚಿಕೊಂಡ ನಕ್ಷೆಯಲ್ಲಿ ಬೆಳಗ್ಗಿನ ತಿಂಡಿ ವಿರಾಮಕ್ಕೆ ಕಾಂಞಂಗಾಡ್ ನಮೂದಿಸಿತ್ತು; ಅಲ್ಲಿ ಖಾತ್ರಿ ಎಂದುಕೊಂಡೇ ಮತ್ತೆ ಇಪ್ಪತ್ತೇಳು ಕಿಮೀಯನ್ನೂ ಮುಗಿಸಿದೆವು.

ದಾರಿ ಪಕ್ಕದಲ್ಲೇ ಇದ್ದ ದೊಡ್ಡ ಹೋಟೆಲೊಂದರಲ್ಲಿ ನಿಂತು ಸಾಕಷ್ಟು ವಿರಾಮದಲ್ಲೇ ಉಪಾಹಾರ ಧ್ವಂಸ ಮಾಡಿ ಮುಗಿಸಿದ್ದೂ ಆಯ್ತು; ಅರುಣ್ ಜೋಡಿಯ ಪತ್ತೆ ಆಗಲೇ ಇಲ್ಲ! ನಮ್ಮ ನಿಗದಿತ ವೇಳಾಪಟ್ಟಿಗೆ ನಾವು ಆಗಲೇ ಸಾಕಷ್ಟು ಹಿಂದೆ ಬಿದ್ದಿದ್ದೆವು. ಮತ್ತೆ ಕಾಯುವುದಾಗಲೀ ಮಂಗಳೂರಿನ ಐವತ್ತು ಕಿಮೀ ಮರಳಿ ಹುಡುಕುವುದಕ್ಕಾಗಲೀ ಅರ್ಥವಿರಲಿಲ್ಲ. ಎಲ್ಲಕ್ಕೂ ಮುಖ್ಯವಾಗಿ ನಮ್ಮ ಮುಂದಿನ ಹತ್ತೂ ದಿನಗಳ ಕಲಾಪ ಪಟ್ಟಿಯ ನಕಲು ಅವರಲ್ಲೂ ಇರುವುದರಿಂದ, ಬೇಕಿದ್ದರೆ ಅನುಸರಿಸುತ್ತಾರೆ. ಕನಿಷ್ಠ ರಾತ್ರಿಯಾದರೂ ನಮ್ಮ ತಂಗುದಾಣದ ವಿಳಾಸಕ್ಕೆ (ಮಿತ್ರನೋರ್ವನ ಮನೆ) ಬಂದಾರೆಂದು ಸಮಾಧಾನಪಟ್ಟುಕೊಂಡೆವು. ವೃಥಾ ಆತಂಕದಿಂದ ಅದುವರೆಗೆ ಮಾರ್ಗಕ್ರಮಣದ ಸಂತೋಷವನ್ನು ಅನುಭವಿಸಲಾಗದ್ದಕ್ಕೆ ಅರುಣ್ ಜೋಡಿಗೆ ಒಂದೆರಡು ಹುಸಿ ಶಾಪ ಹಾಕಿ ಮುಂದುವರಿದೆವು. [ಚರವಾಣಿಯ ಏರುಜ್ವರದ ಈ ಕಾಲದಲ್ಲಿ ಇವೆಲ್ಲ ಎಷ್ಟು ತಮಾಷೆಯಾಗಿ ಕೇಳುತ್ತದೆ! ಕರ್ನಾಟಕದೊಳಗೇ ಇದ್ದೆವು – ವಲಯಮೀರಿದ ದುಬಾರಿ ದರವಿಲ್ಲದ ಒಂದು ಕರೆ, ಬೇಡ ಒಂದು ಕಿರು ಸಂದೇಶ ಸಾಕಿತ್ತು!!]
ರಾಷ್ಟ್ರಕ್ಕೆ ಬಲಿ ಎಲಿ

ರಜಾದಿನದ ವಿರಳವಾಹನ ಸಂಚಾರ ಮತ್ತು ಬೆಳಗಿನ ಹಿತಕರ ಹವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ, ನಮ್ಮ ಅನಾವಶ್ಯಕವಾಗಿ ಪೇರಿಕೊಂಡ ಸಮಯದ ಕೊರತೆಯನ್ನೂ ನೀಗುವಂತೆ ಮುಂದಿನೂರುಗಳನ್ನು ಭರದಿಂದ ಹಿಂದಿಕ್ಕಿದೆವು. ಸುಮಾರು ನೂರಾಹದಿಮೂರು ಕಿಮೀ ಓಟದ ಕೊನೆಯಲ್ಲಿ – ಪಯ್ಯನ್ನೂರು, ನಮ್ಮ ಮೊದಲ ನಿಗದಿತ ಪ್ರೇಕ್ಷಣೀಯ ಸ್ಥಳದ ಭೇಟಿಗಾಗಿ ಹೆದ್ದಾರಿ ಬಿಟ್ಟೆವು.

ಕಡಲಂಚು ಅಥವಾ ಭೂಮಿಯ ಚಾಚು ಸರಳ ರೇಖೆ ಹಾಗೂ ಮಟ್ಟಸವಾಗಿಯೇ ಇರುತ್ತದೆಂದೇನೂ ಇಲ್ಲ. ಸಹಜವಾಗಿ ಭೂರಚನೆಯನ್ನು ಮುಂಗಂಡು ಹೆದ್ದಾರಿಯೂ ಕೆಲವೆಡೆಗಳಲ್ಲಿ ಸಾಗರದಂಚನ್ನು ಸಮೀಪಿಸಿದಂತೇ ಕೆಲವೆಡೆಗಳಲ್ಲಿ ತುಸು ಹೆಚ್ಚೇ ಎನ್ನುವಷ್ಟು ಒಳಕ್ಕೆ ಸರಿಯುವುದೂ ಇದೆ. ಕಾಞ್ಞಂಗಾಡ್-ಬೇಕಲ ವಲಯದಲ್ಲಿ ಕಡಲಗಾಳಿಯಲ್ಲೇ ತುಯ್ದಾಡಿದ್ದ ನಾವು ಪಯ್ಯನ್ನೂರಿನಲ್ಲಿ ತುಸು ಒಳನಾಡಿಗೆ ಸರಿದಿದ್ದೆವು. ಹೆದ್ದಾರಿ ಬಿಟ್ಟ ನಮ್ಮ ಓಟ ಸುಮಾರು ಹದಿನೈದು ಕಿಮೀ ಹೆಚ್ಚು ಕಡಿಮೆ ನೇರ ಪಶ್ಚಿಮದತ್ತವೇ ಇತ್ತು. ಸರಿಸುಮಾರು ದಕ್ಷಿಣ-ಪೂರ್ವಕ್ಕೇ ಓರೆಯಲ್ಲಿ ಸಾಗಿದ್ದ ಸಾಗರದಂಚು ಆ ಕೊನೆಯಲ್ಲಿ ಒಮ್ಮೆಗೇ ತುಸು ಹೆಚ್ಚೇ ಪೂರ್ವಕ್ಕೆ ನುಗ್ಗಿತ್ತು. ಅದನ್ನು ದೃಢಪಡಿಸುವಂತೆ ಕಡಲಂಚಿಗೆ ಸಮಾನಾಂತರದಲ್ಲಿ ಅಲ್ಲೊಂದು ಪುಟ್ಟ ಗುಡ್ಡ ಸಾಲೂ ಇತ್ತು. ಶಾಸ್ತ್ರಕಾರರು ಇಂಥಾ ರಚನೆಗಳನ್ನು ಭೂಶಿರಗಳೆಂದೇ ಗುರುತಿಸುತ್ತಾರೆ. ಕಡಲ ಸೊಕ್ಕಿಗೆ ಸವಾಲಿಕ್ಕಿದ ಪುಟ್ಟ ಬೆಟ್ಟ ಎಲಿಮಲೆ; ಬ್ರಿಟಿಷರೇ ಸರ್ವೇಕ್ಷಣೆ ನಡೆಸಿ ನಕ್ಷೆಯಲ್ಲಿ ನಮೂದಿಸಿದಂತೆ ಮೌಂಟ್ ಎಲಿ!

ಸುಮಾರು ಒಂಬತ್ತು ವರ್ಷಗಳ ಹಿಂದೊಮ್ಮೆ, ನಾನು ಎಂದಿನಂತೆ, ಮಂಗಳೂರು ಕೇಂದ್ರಿತವಾಗಿ ಚಾರಣಾವಕಾಶಗಳನ್ನು ಭೂಪಟಗಳಲ್ಲಿ ಹುಡುಕುತ್ತಿದ್ದಾಗ ಇದು ನನ್ನ ಕಣ್ಣು ಕುಕ್ಕಿತ್ತು. ಅಲ್ಲಿವರೆಗೂ ವಾಹನಯೋಗ್ಯ ದಾರಿಯೂ ಇರುವುದನ್ನು ಗುರುತಿಸಿದಾಗ ಅಂದು (ನನ್ನ ಮದುವೆಗೂ ಮೊದಲ ದಿನಗಳು) ನನ್ನ ಹಾಸ್ಟೆಲ್-ಮೇಟ್ ಗೆಳೆಯರಾಗಿ ಪರಿಚಿತರಾಗಿದ್ದ ಡಾ ರಾಘವೇಂದ್ರ ಉರಾಳರು ತನ್ನ ಕಾರು ಹೊರಡಿಸುವ ಉತ್ಸಾಹವನ್ನೂ ತೋರಿದರು. ಆ ಕಾಲದಲ್ಲಿ ನಾವು ಕುದುರೆಮುಖ ಗಣಿಗಾರಿಕಾ ಪ್ರದೇಶ, ಜಮಾಲಾಬಾದ್ ಮುಂತಾದವನ್ನು ಹೀಗೇ ಕಾರಿನಲ್ಲಿ ಹೋಗಿ ಅನುಭವಿಸಿದ್ದನ್ನು ನನ್ನ ಜಾಲತಾಣದ ಹಳೆಯ ಓದುಗರೆಲ್ಲ ಮರೆತಿಲ್ಲವೆಂದು ಭಾವಿಸುತ್ತೇನೆ.

ಉರಾಳರ ಕಾರಿನಲ್ಲಿ ಬಂದಿದ್ದಾಗಿನ ನೆನಪಿನಿಂದ ಹೆಕ್ಕಿದರೆ, ಹೆದ್ದಾರಿ ಬಿಟ್ಟ ಕಚ್ಚಾರಸ್ತೆ ಲಂಬವಾಗಿಯೇ ಕಡಲಂಚನ್ನು ಸೇರಿತ್ತು. ಮತ್ತೆ ಪೂರ್ಣ ಎಡಕ್ಕೆ ಹೊರಳಿ, ಬಲಕ್ಕೆ ತೆರೆನೀರು ದಾರಿ ನೆಕ್ಕುತ್ತಿದ್ದಂತೆ ನೇರ ಸುಮಾರು ಉದ್ದಕ್ಕೆ ಓಡಿತ್ತು. ಎಡಕ್ಕೆ ಸಮಾನಾಂತರದಲ್ಲಿ ದಟ್ಟ ಹಸುರು ಹೊದ್ದ ಗುಡ್ಡ ಸಾಲೂ `ಆ ಕೊನೆ’ ನೋಡುವ ಉತ್ಸಾಹದಲ್ಲೇ ಇತ್ತು. ಆದರೆ ವಿಶೇಷ ಆರೈಕೆ ಮಾಡದ ದಾರಿಯ ಕಲ್ಲು ಕಿತ್ತು, ಮರಳ ದಿಬ್ಬಗಳು ಮೆರೆದು ನಮಗೆ ಬೇಗನೆ ಕಾರಿನ ಮೇಲೆ ಕರುಣೆ ಬಂತೋ ಮರಳಿ ಅಂದೇ ಮಂಗಳೂರು ಸೇರುವ ಆಸೆಗೆ ಆತಂಕ ಬಂತೋ ಅಂತೂ ಅರ್ಧದಲ್ಲೇ ಕಾರಿಳಿದೆವು. ಥಳಥಳಿಸುತ್ತಿದ್ದ ಕಡಲು, ಝಳ ಎಬ್ಬಿಸುತ್ತಿದ್ದ ಮಳಲು ನಾವೇನೂ ಕಾಣದ್ದಲ್ಲವೆಂದುಕೊಂಡು ಗುಡ್ಡೆಯತ್ತ ಹೊರಳಿದೆವು. ಆಳೆತ್ತರದ ಹುಲ್ಲು, ಮುಳ್ಳಬಲ್ಲೆ, ಪುಡಿಗಲ್ಲುಗಳ ನಡುವೆ ಸವಕಲು ಜಾಡು ಅನುಸರಿಸಿದೆವು. ಹೆಚ್ಚಿಲ್ಲ, ಐದೇ ಮಿನಿಟಿನಲ್ಲಿ ನೆತ್ತಿ ಸೇರಿದ್ದೆವು.

ಅಲ್ಲಿ ಮೂರು ದಶಕದ ಪ್ರಾಯವನ್ನಷ್ಟೇ ಕಂಡಿರಬಹುದಾದ ತರುಣ ದಂಪತಿಯೊಂದು ಅಸಾಧಾರಣ ಕಸರತ್ತಿನಲ್ಲಿ ತೊಡಗಿತ್ತು. ಗಂಡಸು – ಬಾಬು (ಹೆಸರು ನೆನಪಿಲ್ಲ, ಬಾಬು, ಲಿಲ್ಲಿ ಎಂದಿಟ್ಟುಕೊಳ್ಳಿ), ಬೆಂಗಳೂರಿನಲ್ಲೆಲ್ಲೋ ದಿನಗೂಲಿ ಮೆಕ್ಯಾನಿಕ್. ಲಿಲ್ಲಿಯೂ ಬಹುಶಃ ಇನ್ನೇನೋ ದುಡಿಮೆ ನಡೆಸುತ್ತಿದ್ದಿರಬೇಕು. ಅವರು ಗಳಿಸಿ ಉಳಿಸಿದ ಪುಡಿಗಾಸನ್ನು ಊರಿನ ಮೋಹದಲ್ಲಿ ಇಲ್ಲಿ ತಂದು, ತುಂಡು ನೆಲ ಕೊಂಡಿದ್ದರು. ಮತ್ತೆ ಹಾಗೇ ರಜಾದಿನಗಳನ್ನು ಕೂಡಿಸಿ ಊರಿಗೆ ಬಂದು ಸ್ವತಃ ದುಡಿದಿದ್ದರು. ಅದೂ ಏನು ಸಾಮಾನ್ಯ ದುಡಿಮೆಯಲ್ಲ – ಗುಡ್ಡೆಯ ನೆತ್ತಿಯಲ್ಲಿ ಬಾವಿ ತೋಡುತ್ತಿದ್ದರು. ಬಾಬು ಹೊಂಡದ ಆಳದಲ್ಲಿ, ಬೆವರಧಾರೆಯಲ್ಲಿ ಮೀಯುತ್ತ ತೋಡಿ ತೆಗೆದ ಕಲ್ಲುಮಣ್ಣನ್ನು ಬುಟ್ಟಿ ತುಂಬಿ `ಆರಿಯಾ’ ಹೇಳಿದರೆ, ತಲೆ ತೂತಾಗುವ ಬಿಸಿಲಿನಲ್ಲಿ ಸೆರಗು ಕಟ್ಟಿ ನಿಂತ ಲಿಲ್ಲಿ, ರಾಟೆಯಲ್ಲಿ ಹಗ್ಗ ಜಗ್ಗಿ `ಐಸಾ’ ಮಾಡುವವಳು. ಬಾಬುಗೆ ಒಮ್ಮೆ ತೋಡಿದ್ದು ಮುಗಿದಾಗಲೋ ಲಿಲ್ಲಿಗೆ ಬುಟ್ಟಿ ತುಂಬಿ ಎಳೆಯುವಲ್ಲಿ ಕೈಸೋತಾಗಲೋ ಕೆಲಸಕ್ಕಿನ್ನೊಂದು ರೂಪ. ತಮ್ಮ ಜಾಗದ ಇಳಿಮೈಯಲ್ಲಿ ದಪ್ಪ ಕಾಡುಗಲ್ಲುಗಳಿಂದ ಬಿಗಿಯಾದ ಅಂಚುಗಟ್ಟೆ ಮಾಡಿ, ಸುಮಾರು ಹತ್ತು-ಹದಿನೈದು ಅಡಿ ಅಗಲದ ಅಂಕಣಗಳನ್ನು ರಚಿಸುತ್ತಿದ್ದರು. ಮತ್ತದನ್ನು ಬಾವಿಯಾಳದಿಂದ ತಂದ ಮಣ್ಣಿನಿಂದ ತುಂಬಿ ಕೃಷಿಯೋಗ್ಯಗೊಳಿಸುತ್ತಿದ್ದರು. ಪುಡಿ ಬಂಡೆ ಮಣ್ಣಿನ ಆ ಗುಡ್ಡೆ ಕಡಲಂಚಿನಲ್ಲೇ ಇದ್ದುದರಿಂದ ಒಂದು ಹಂತದಲ್ಲಿ ಬಾವಿಯಲ್ಲಿ ನೀರು ಕಾಣುವ ಭರವಸೆ ಅವರದು. ಬಾವಿಯ ಗೋಡೆ ಕೆಲವೊಮ್ಮೆ ಭಾರೀ ಗುಂಡುಕಲ್ಲುಗಳ ಅಡ್ಡಿಯಲ್ಲಿ ವಾರೆಕೋರೆ ಆದರೂ ಆಳ ತುಸು ಹೆಚ್ಚುಕಮ್ಮಿಯಾದರೂ ಹಿಂಗದ ಹುಮ್ಮಸ್ಸು ಇವರದು. ಬಾವಿ ಆಳ ಹೆಚ್ಚಾದರೇ ಕಟ್ಟೆಗೆ ಕೂಡೋ ಮಣ್ಣು ಹೆಚ್ಚು ಲಾಭ ಎಂದಿದ್ದ ಬಾಬು!

ಎಲಿಮಲೆಯುದ್ದಕ್ಕೆ ಹಲವು `ಬಾಬು ಲಿಲ್ಲಿ’ಯರಿದ್ದರು, ವಿಕಾಸದ ವಿವಿಧ ಹಂತದಲ್ಲೂ ಇದ್ದರು! ಇಳಿಯುವಾಗ ಒತ್ತಿನ ಇನ್ಯಾರದೋ ಒಂದು ಕೃಷಿತ ತುಂಡು ಭೂಮಿಯಲ್ಲಿ ಹಾದು ಬಂದೆವು. ಇಕ್ಕೆಲಗಳ ದೊಡ್ಡ ಅಂಕಣಗಳಲ್ಲಿ ಧಾರಾಳ ತೆಂಗು, ಬಾಳೆ, ಮರಕೆಸುವು, ಗೇರು, ಚಿಕ್ಕು ಮುಂತಾದ ಗಿಡಗಳ ತೋಟ ನಿಲ್ಲಿಸಿದ್ದರು. ಸಾಲಿನಲ್ಲಿ ಕೊರತೆ ಬಿದ್ದಲ್ಲಿ ಪೊಂಗಾರೆ ಗಿಡ ಬೆಳೆಸಿ, ಅದರೆತ್ತರಕ್ಕೆ ಒಳ್ಳೇಮೆಣಸು (ಕರಿಮೆಣಸು) ಬಳ್ಳಿ ಹಬ್ಬಿಸಿದ್ದರು. ಅಲ್ಲದೆ ಆಯಕಟ್ಟಿನ ಜಾಗಗಳನ್ನು ನೋಡಿಕೊಂಡು ಇನ್ನಷ್ಟು ಸಣ್ಣಪುಟ್ಟ ಸಸಿಗಳನ್ನು ರೂಢಿಸುತ್ತಲೇ ಇದ್ದರು. ಪ್ರತಿಯೊಬ್ಬರೂ ತಂತಮ್ಮ ನೆಲದ ತುಂಡುಗಳಲ್ಲಿ (ಎಲ್ಲಾ ಸೆಂಟುಗಳ ಲೆಕ್ಕ. ಅಲ್ಲೆಲ್ಲ ಎಕ್ರೆ ಇದ್ದವನು ಸಾಹುಕಾರ!) ಗುಡ್ಡದ ನೆತ್ತಿಯಿಂದ ಬುಡದವರೆಗೂ ದೊಡ್ಡ ಅಂಕಣಗಳನ್ನು ಇಕ್ಕಡಿಗೈವಂತೆ ನಡುವೆ ಕಾಡುಕಲ್ಲುಗಳನ್ನೇ ಬಿಗಿಯಾಗಿ ಜೋಡಿಸಿ ಮೆಟ್ಟಿಲ ಸಾಲು ಮಾಡಿಕೊಂಡಿದ್ದರು. ಬಿಸಿಲ ದಿನಗಳಲ್ಲಿ ನಿರಂತರ ಗುಡ್ಡದ ನೆತ್ತಿಯ ಬಾವಿಯಿಂದ ಕೊಡದಲ್ಲಿ ನೀರು ಸೇದಿ ಮೆಟ್ಟಿಲಗುಂಟ ಹೊತ್ತು ಪ್ರತಿಯೊಂದರ ಬುಡದ ಹಸಿ ಕಾಪಿಟ್ಟುಕೊಳ್ಳುತ್ತಿದ್ದರು. ಮೋಟಾರ್ ಇಟ್ಟು ಎತ್ತಿಸುವ, ಚರಂಡಿ ಕಟ್ಟಿ ಹರಿಸುವ ಧಾರಾಳ ಅಲ್ಲಿರಲೇ ಇಲ್ಲ. ಇದು ಬರಿಯ ಬಡವರ ಹೊಟ್ಟೆಪಾಡಲ್ಲ, ಅದನ್ನು ಮೀರಿದ ಜೀವನಪ್ರೀತಿ; ಅರ್ಥಮಾಡಿಕೊಳ್ಳಲು ನನ್ನ ಅನುಭವಕೋಶದಲ್ಲಿ ಶಬ್ದಗಳೇ ಇರಲಿಲ್ಲ.

ಗುಡ್ಡದ ನೆತ್ತಿಯಿಂದಲೇ ಕಡಲತ್ತ ನಾವು ವಿಹಂಗಮ ನೋಟ ಹರಿಸಿದ್ದೆವು. ನೇರ ಎದುರು ಕೆಲವು ವರ್ಷಗಳ ಹಿಂದೆ ಏನೋ ಯಾಂತ್ರಿಕವೋ ಹವಾಮಾನವೋ ವೈಪರೀತ್ಯಕ್ಕೆ ಸಿಕ್ಕಿ ದಂಡೆ ಸಮೀಪಿಸಿ, ಸುಮನೋಹರ ನೀರ ಮುಚ್ಚಿಗೆಯಡಿಯ ಬಂಡೆ ಕೊರಕಲುಗಳಲ್ಲಿ ಆಘಾತಕ್ಕೀಡಾದ ಒಂದು ವಿದೇಶೀ ಹಡಗಿನ ಭಾರೀ ಅವಶೇಷ ಕಾಣಿಸುತ್ತಿತ್ತು. ನಮ್ಮ ದೃಷ್ಟಿಯನ್ನು ಹಾಗೇ ನೆಲದಲ್ಲೇ ದಕ್ಷಿಣ ಕೊನೆಗೆ ಹರಿಯಿಸಿದೆವು. ಭೂಶಿರ ರೂಪುಗೊಂಡ ಕೊನೆಯಲ್ಲಿ ಐತಿಹಾಸಿಕ ಕಾಲದಲ್ಲಿ ಯಾರೋ ಕೋಟೆಯಂತೇ ಆದರೆ ಸಣ್ಣದಾಗಿ, ಕಗ್ಗಲ್ಲ ಮೋಟು ಗೋಡೆ ಕಟ್ಟಿದ್ದು ಅಸ್ಪಷ್ಟವಾಗಿ ಕಾಣುತ್ತಿತ್ತು. ಅದರಾಚೆಗೂ ಇನ್ಯಾವುದೋ ಒಂದು ಹಡಗಿನ ಅವಶೇಷ ನೋಡಲು ಸಿಗುತ್ತದೆ ಎಂದು ಬಾಬು ದಂಪತಿಯಿಂದ ತಿಳಿಯಿತು. ಹೋಗಿ ನೋಡಲೇನೂ ಉಳಿದಿಲ್ಲವೆಂದು ಹಾಗೇ ಮರಳಿದ್ದೆವು. ಬಹುಶಃ ಈ ದುರ್ಗಮತೆ ಆ ಎಲಿಮಲೆ ಕಡಲಂಚನ್ನು ಅಂದು ಜನಪ್ರಿಯಗೊಳಿಸಿರಲಿಲ್ಲ. ಆದರೆ…

ಒಂಬತ್ತು ವರ್ಷಗಳ ಅವಧಿಯಲ್ಲಿ ಎಲಿಮಲೆ ಇನ್ನೊಂದೇ ನಿಟ್ಟಿನಲ್ಲಿ ಸಾಕಷ್ಟು ಪ್ರಚಾರ ಗಳಿಸಿತ್ತು! ಇಲ್ಲಿನ ಕಡಲಂಚಿನ ಭೂರಚನೆ ಭಾರತೀಯ ನೌಕಾದಳದ ಕಾವಲುಠಾಣೆಗೆ ಹೇಳಿಮಾಡಿಸಿದಂತಿತ್ತು. ಅದರ ಘೋಷಣೆ, ಭೂಗ್ರಹಣದ ವರದಿಗಳು, ವಿವಿಧ ಹಂತದ ಯೋಜನೆ, ಉದ್ಘಾಟನೆ, ಗೋಪ್ಯಪಾಲನೆಯ ವಿವರಗಳು ಹಲವನ್ನು ನಾನು ಪತ್ರಿಕೆಗಳಲ್ಲಿ ನೋಡುತ್ತಲೇ ಇದ್ದೆ. ಸಹಜವಾಗಿ ಬೈಕ್ ಯಾತ್ರೆಯ ಮೊದಲ ಪ್ರೇಕ್ಷಣೆಯನ್ನು ಅಲ್ಲಿಗೆ ನಿಗದಿಸಿದ್ದೆ. ಜತೆಗಾರರೆಲ್ಲರಿಗೆ ಅದು ಪ್ರಥಮ ದರ್ಶನವೂ ಆದ್ದರಿಂದ ಕುತೂಹಲ ಹೆಚ್ಚೇ ಇತ್ತು. ಆದರೆ ಹಿನ್ನೀರ ಮಡುಗಳನ್ನು ಹಾಯ್ದು ನೇರ ಕಡಲಂಚಿಗೆ ಬರುತ್ತಿದ್ದಂತೆ ಬದಲಾದ ದೃಶ್ಯ ನನಗಂತೂ ವಿಷಾದವನ್ನೇ ಮೂಡಿಸಿತು.

ಗುಡ್ಡ ಸಾಲಿನ ಹಸಿರು ಮಾಯವಾಗಿ ಕರಡ, ಮುಳ್ಳ ಕಂಟಿಗಳ ನೆಲವಾಗಿ ಹಾಳುಸುರಿದಿತ್ತು. ಮಣ್ಣಮಕ್ಕಳನ್ನು ಗುಳೆ ಎಬ್ಬಿಸಿ ಮೂಡಿದ್ದ ಹೊಸದೇ ರಚನೆಗಳು ಪ್ರಕೃತಿ ಮೋಹಕ ವೃತ್ತಿಯವಾಗಿರಲಿಲ್ಲ. ಗುಡ್ಡೆಯ ಎತ್ತರದ ಸ್ಥಳದಲ್ಲೊಂದು ಹದಿನೆಂಟು ಮೀಟರ್ ಎತ್ತರದ ದೀಪಸ್ತಂಭ ರಚಿಸಿದ್ದರು. ಅದನ್ನು ಸಮೀಪಿಸಲು ಮತ್ತು ಏರಲು ಸಾರಣೆ ಬಣ್ಣಗಳ ಸುಂದರ ಸೋಪಾನ ರಚಿಸಿದ್ದರು. ಸೂಕ್ತ ಟಿಕೆಟ್ ಖರೀದಿಸಿದ ಸಾರ್ವಜನಿಕರಿಗೆ, ಬಿಗು ಪಹರೆಯಲ್ಲಿ ಅಲ್ಲಿಗೊಂದು ಪ್ರವೇಶಾವಕಾಶ ಇಟ್ಟಿದ್ದರು. ಉಳಿದಂತೆ ಭಾರೀ ಪಾಗಾರ, ತನಿಖಾಠಾಣೆ, ಆಚೆ ವಿಸ್ತಾರ ಕವಾಯತು ಮೈದಾನ, ಚದರಿದಂತೆ ಇದ್ದ ಕಟ್ಟಡಗಳೆಲ್ಲ ಸಾರ್ವಜನಿಕರಿಗೆ ಅಪ್ರವೇಶ್ಯ. ನಾವು ರುಸುಮು ಕೊಟ್ಟು ದೀಪಸ್ತಂಭವನ್ನೇನೋ ಏರಿದೆವು. ಹೆಚ್ಚು ಕಡಿಮೆ ಮೂರೂ ದಿಕ್ಕಿಗೆ ತೆರೆದಿಟ್ಟಂತೆ ಕಡಲ ನೀಲಿಮೆ ಮತ್ತು ಅದರ ವ್ಯರ್ಥ ಪದರಗಳೆಡೆಯಲ್ಲಿ ಉರುಡುತ್ತಿದ್ದ ಡಾಲ್ಫಿನ್ ಜೋಡಿಯೇನೋ ರಮಣೀಯವಾಗಿದ್ದುವು. ಕೂವೆ ಮರವನ್ನು ಇನ್ನೂ ಮೇಲಕ್ಕೇ ಉಳಿಸಿಟ್ಟಿದ್ದ ಹಳೇ ನತದೃಷ್ಟ ಹಡಗುಗಳೆರಡರ ಅವಶೇಷಗಳು ನಮ್ಮ ನೆನಪಿಗೆ ಮೀಟುಗೋಲನ್ನು ಇಡುವಂತಿದ್ದುವು. ಉಳಿದಂತೆ ರಾಷ್ಠ್ರಹಿತಕ್ಕಾಗಿ ಎಲಿಮಲೆ ಬಲಿಯಾಗಿತ್ತು. ಮೇಲ್ಮೈ ರಚನೆಗಳಿರಲಿ, ಕೇಂದ್ರೀಕರಣದ ಕೆಟ್ಟ ಉದಾಹರಣೆಯಾಗಿ ಐತಿಹಾಸಿಕ ಹೆಸರೂ `ಮೌಂಟ್ ದಿಲ್ಲಿ’ ಎಂದು ಪುನರ್ನಾಮಕರಣಗೊಂಡಿತ್ತು!

ಒಂದು ಲೆಕ್ಕ

ಎಲಿಮಲೆಯಿಂದ ಪಯ್ಯನ್ನೂರಿಗೆ ಮರಳಿ ಮತ್ತೂ ದಕ್ಷಿಣಕ್ಕೆ ಬೈಕೋಡಿಸಿದೆವು. ಕಣ್ಣಾನೂರು ಸಮೀಪಿಸುತ್ತಿದ್ದಂತೆ ಒಂದು ದೀರ್ಘ ಸೇತುವೆ ದಾಟಿದೆವು. ಅಲ್ಲಿ ದಾರಿ ನಾಲ್ಕು ಸೀಳಾಗಿ ಎತ್ತರದ ಕಾಂಕ್ರೀಟ್ ತೋರಣದಡಿಯಲ್ಲಿ ಸಾಗುತ್ತದೆ. ಇದು ವಾಹನಗಳಿಂದ ಸೇತುವೆ ಸುಂಕ ವಸೂಲಿಗೆ ಆದ ವ್ಯವಸ್ಥೆ. [ಟೋಲ್ ನಾಕಾ ಆ ಕಾಲದಲ್ಲಿ ನಮಗೆ ಹೊಸತು!] ಕೋಟ್ಯಂತರ ರೂಪಾಯಿ ಬೆಲೆಯ ಸೇತುವೆ, ಲಕ್ಷಾಂತರ ಬೆಲೆಯ ವಸೂಲಿ ವ್ಯವಸ್ಥೆ, ದಿನದ ಇಪ್ಪತ್ನಾಲ್ಕೂ ಗಂಟೆ ನಿರ್ವಹಣೆಗೆ ಸಂಬಳ ಸವಲತ್ತುಗಳ ಎಂಟು-ಹತ್ತು ಉಸ್ತುವಾರಿ ಜನ ಎಲ್ಲ ಎಲ್ಲಾ ಇದ್ದೂ ವಸೂಲು ಮಾಡಬೇಕಾದ ಹಣ ಮಾತ್ರ ತಲಾ ಐವತ್ತು ಪೈಸೆ ಎನ್ನುವುದು ಬಲು ಚೋದ್ಯ. ಇದರ ಲೆಕ್ಕ ಮುಂದುವರಿಸಿ: ಎಂಜಿನ್ ಚಾಲೂ ಇದ್ದಂತೆ ಸುಮ್ಮನೆ ನಿಂತುಕೊಂಡರೆ ನನ್ನ ಬೈಕ್ ಗಂಟೆಗೆ ಸುಮಾರು ಎರಡು ಲೀಟರ್ ಪೆಟ್ರೋಲ್ ಉರಿಸುತ್ತದೆ. ಸುಂಕದ ಕಟ್ಟೆಯ ವಿಧಿಗಳಿಗೆಂದು ನಾನು ಕನಿಷ್ಠ ಐದು ಮಿನಿಟು ನಿಂತಿದ್ದೆ. ಅಂದರೆ, ಕನಿಷ್ಠ ಒಂದೂವರೆ ರೂಪಾಯಿ ಬೆಲೆಯ ಪೆಟ್ರೊಲ್ ಉರಿದಿತ್ತು. ಇದನ್ನೇ ಹೆದ್ದಾರಿಯಲ್ಲಿ ಚಲಿಸುವ ಎಲ್ಲ ವಾಹನಗಳಿಗೂ ಅನ್ವಯಿಸಿದರೆ ಈ ಚಿಲ್ಲರೆ ವಸೂಲಿಗೆ ಈ ಮಹತ್ತರ ರಾಷ್ಟ್ರೀಯ ವೆಚ್ಚ, ಪಾರಿಸರಿಕ ಹೊರೆ ಸಮರ್ಥನೀಯವೇ?

[ಬಂಟ್ವಾಳದಲ್ಲಿ ನೇತ್ರಾವತಿಗೆ ಹೊಸ ಸೇತುವೆ ಆದ ಕಾಲದಲ್ಲೂ ಈ ಪ್ರಶ್ನೆಯನ್ನು ನಾನು ಪತ್ರಿಕಾ ಅಂಕಣದಲ್ಲಿ ಪ್ರಶ್ನಿಸಿದ್ದೆ. ಆ ಹೊಸತರಲ್ಲಿ ಸಿಕ್ಕ ಪರಿಚಿತರಿಂದ, ಇಂದಿನ ಮುಖಪುಸ್ತಕದ ವ್ಯರ್ಥ `ಲಾಯಕ್ಕು'(ಲೈಕ್)ಗಳಂಥ ಬಾಯುಪಚಾರ ಮಾತ್ರ ಕೇಳಿಸಿಕೊಂಡೆ. ಆದರೆ ಈಚೆಗೆ ಮಹಾರಾಷ್ಟ್ರದಲ್ಲಿ ಹೆದ್ದಾರಿಯ ಇಂಥ ಸುಂಕ ಕಟ್ಟೆಗಳನ್ನು ವಿರೋಧಿಸುತ್ತಿರುವುದು ಒಂದು ಆಂದೋಳನವಾಗಿಯೇ ಹಬ್ಬುತ್ತಿರುವುದು ಕೇಳಿದ್ದೇನೆ. ಬ್ರಹ್ಮರ ಕೂಟ್ಲು ಬಳಿ ಹೊಸ ಹೆದ್ದಾರಿ ಸುಂಕದ ಕಟ್ಟೆಯಲ್ಲಿ ಇದರ ಛಾಯಾ ರೂಪಿನ ಆಂದೋಲನ ನಡೆದಿದೆ. ಆದರೆ ಇಲ್ಲಿ ದರ ನಿಷ್ಕರ್ಷೆ, ಸ್ಥಳೀಯ ಗುಂಪುಗಾರಿಕೆಗಳಂಥ ಅರೆ-ಮಥನದ ವಿಚಾರಗಳಷ್ಟೇ ಮೆರೆಯುತ್ತಿರುವುದು ಏನೇನೂ ಅಪೇಕ್ಷಣೀಯವಲ್ಲ. ಸ್ಥಳೀಯ ಆಡಳಿತಗಳು ವಾರ್ಷಿಕವಾಗಿ ವಸೂಲು ಮಾಡುವ ಎಲ್ಲಾ ವರ್ಗದ ವಸತಿಗಳ ಕರಭಾರದ ವಿವರಗಳಲ್ಲಿ ಹೆಚ್ಚಾಗಿ ಯಾರೂ ಗಮನಿಸದ ಒಂದು ಕಿರು ನಮೂದು `ರಸ್ತೆ ತೆರಿಗೆ.’ ಹಾಗೇ ಎಲ್ಲ ಮೋಟಾರು ವಾಹನಗಳ ನೋಂದಣೆ ಕಾಲದಲ್ಲಿ ಕಡ್ಡಾಯವಾಗಿ ಕಟ್ಟುವ ಸುಂಕಕ್ಕೆ ಹೆಸರೇ ರೋಡ್ ಟ್ಯಾಕ್ಸ್. ನಾಗರಿಕ ಸರಕಾರ ಕೊಡಲೇಬೇಕಾದ ಮೂಲ ಸವಲತ್ತುಗಳಲ್ಲಿ ಸಂಪರ್ಕ ಮಾರ್ಗ ಬಹುಮುಖ್ಯವಾದದ್ದೇ. ಇವನ್ನೆಲ್ಲ ನಗಣ್ಯ ಮಾಡಿ ಹೊಸದಾಗಿ, ಎಷ್ಟೋ ಬಾರಿ ಇದ್ದ ಹಳೆಯ ವ್ಯವಸ್ಥೆಗೆ ಬದಲಿಯಾಗಿಯೂ ಬಂದ ಕೆಲವು ಸೇತುವೆ, ಕೆಲವು ರಸ್ತೆಗಳಿಗೆ ಮಾತ್ರ ಹಾದುಹೋದ ಲೆಕ್ಕ ಹಿಡಿದು ಸುಂಕ ವಸೂಲು ಮಾಡುವುದು ನ್ಯಾಯವಲ್ಲ.]

(ಮುಂದುವರಿಯಲಿದೆ)