(ಚಕ್ರವರ್ತಿಗಳು ಸುತ್ತು ಇಪ್ಪತ್ತೇಳು)
ದಕ್ಷಿಣಾಪಥದ ಚಕ್ರವರ್ತಿಗಳು ಭಾಗ ನಾಲ್ಕು

ಪಂಬಾ ನದೀ ತೀರೇ, ಚಾಲಕ್ಕಾಯಮ್ – ಶಬರಿಮಲೈ ಕುರಿತು ಹೋಗುವ ಯಾವುದೇ ವಾಹನಕ್ಕೂ ಕೊನೆಯ ನಿಲ್ದಾಣ. ನಮ್ಮ ನಿರೀಕ್ಷೆಗೆ ಮೀರಿ ಸಾರ್ವಕಾಲಿಕ ಬಳಕೆಗೆ ಸುಸಜ್ಜಿತವಿತ್ತು. ಆದರೆ ಅಯ್ಯಪ್ಪಸ್ವಾಮಿ ಸಾರ್ವಕಾಲಿಕ ದರ್ಶನ ಕೊಡುವ ದೇವನಲ್ಲವಾದ್ದರಿಂದ ಅನ್ಯ ಕ್ಷೇತ್ರಗಳಂತೆ ಇಲ್ಲಿ ಬಹುಶಃ ಶುದ್ಧ ವ್ಯಾಪಾರ ಸೋಲುತ್ತದೆ. ಹಾಗಾಗಿ ಪೆಟ್ರೋಲ್ ಬಂಕ್, ಅಂಚೆತಂತಿ ವ್ಯವಸ್ಥೆಗಳೂ ಅಯ್ಯಪ್ಪ-ಋತುಗಳಲ್ಲಿ ಮಾತ್ರ ಕೆಲಸ ಮಾಡುತ್ತವೆ. ಅಂಗಡಿ ಹೋಟೆಲುಗಳಂತೂ ತತ್ಕಾಲೀನ ರಚನೆಗಳಲ್ಲೇ ನಿಂತು, ಉಳಿದಂತೆ ಗಂಟುಮೂಟೆ ಕಟ್ಟುತ್ತವೆ! ಕುಡಿಯುವ ನೀರು, ವಿದ್ಯುಚ್ಛಕ್ತಿ, ದೇವಸ್ವಂ ಇಲಾಖೆಯ ಅಭಿವೃದ್ಧಿ ವ್ಯವಸ್ಥೆಗಳಷ್ಟೇ ಸಾರ್ವಕಾಲಿಕ. ಮೂರು ದಿನಗಳ ಹಿಂದೆ ಸನ್ನಿಧಾನದಲ್ಲಿ ವಿಷು ಹಬ್ಬ ಕಳೆದಮೇಲಿನ ಕೊನೆಯ ದರ್ಶನಾವಕಾಶ ಮುಗಿದಿತ್ತು. ಅದಕ್ಕೆ ಬಂದಿದ್ದ ತಡಿಕೆಯಂಗಡಿಗಳು ಮಡಚಿ ಲಾರಿ ಏರುತ್ತಿದ್ದವು, ಕೂಲಿಕಾರರ ತಿಂಡಿತೀರ್ಥಕ್ಕೆಂದು ದುರ್ಬಲ ವ್ಯಾಪಾರೀ ವ್ಯವಸ್ಥೆಯಷ್ಟೇ ಉಳಿದಿತ್ತು. ಅಂಥ ಒಂದರಲ್ಲಿ ಹತತೆಂಟುಬಾರಿ ಕಾದು, ಕುದ್ದು, ಸೋಸಿ, ಹಿಂದಿ `ಚಾ’ ಬಿಟ್ಟಿದ್ದ ವಸ್ತು ನಮ್ಮ ನಾಲ್ವರನ್ನೂ ತನ್ನ ವಿಸ್ತೃತ ಔದಾರ್ಯಕ್ಕೆ ಒಳಪಡಿಸಿತು. ದೋಸೆಯನ್ನು (ಮಲಯಾಳೀ ನಾಲಗೆ) `ದೋಷ’ ಎಂದು ಕರೆದದ್ದು ತಪ್ಪಲ್ಲ, ಕಾವ್ಯಾತ್ಮಕ ನ್ಯಾಯವುಂಟೂಂತ ಎಂದು ನಮ್ಮ ಹೊಟ್ಟೆ ದುರ್ಬಲವಾಗಿ ಸಾಕ್ಷಿ ನುಡಿಯಿತು.

ಪಂಬಾ ನದಿಯಲ್ಲಿ ನಿಂತ ನೀರು, ಅದೂ ಜಾತ್ರೆ ಕಳೆದನಂತರದ ಸ್ಥಿತಿ ಕುರಿತು ನಾನು ಹೆಚ್ಚು ಹೇಳಬೇಕೇ; ಕೊಳಚೆಮಂಡಲಿಯ ಸಂಗ್ರಹಸಮುದ್ರ ಎಂದಷ್ಟೇ ಹೇಳಬಹುದು. ನಮ್ಮ ಅದೃಷ್ಟಕ್ಕೆ ಜಲಮಂಡಲಿಯ ವಿಶ್ರಾಂತಿ ಗೃಹ ನಮಗೆ ಸಿಕ್ಕಿತು. ಧಾರಾಳ ಮತ್ತು ಶುದ್ಧ ನೀರು, ವಿಶಾಲ ಕೋಣೆಯ ಫೋಮು ಹಾಸಿಗೆಯುಕ್ತ ಮಂಚ, ವಿದ್ಯುತ್ ಪಂಖ ನಮ್ಮ ವಿಶ್ರಾಂತಿ ಮತ್ತು ರಾತ್ರಿಯನ್ನು ನಿಶ್ಚಿಂತವಾಗಿಸಿತು. ಮರುದಿನ ಬೆಳಗ್ಗೆ ಮತ್ತೆ ಬಣ್ಣಗೆಟ್ಟ ನೀರೋ ಕುಲಗೆಟ್ಟ ತಿನಿಸೋ ಕಾಯದೆ, ರಾತ್ರಿಯ ತಪ್ಪಿಗೆ ಪರಿಮಾರ್ಜನೆ ಎಂಬಂತೆಯೂ ನೀರಾಹಾರಿಗಳಾಗಿ ನಡಿಗೆಗಿಳಿದೆವು. ನಮ್ಮ ಗಂಟುಗದಡಿ, ಬೈಕುಗಳನ್ನು ನೋಡಿಕೊಳ್ಳಲು ವಿಶ್ರಾಂತಿಗೃಹದ ನೌಕರ ಮುಂದಾದ್ದು ನಮಗೆ ಹೆಚ್ಚಿನ ನಿರಾತಂಕ ಚುರುಕನ್ನೇ ಕೊಟ್ಟಿತು.

ಸನ್ನಿಧಾನ ಅಥವಾ ಸ್ವಾಮಿ ಅಯ್ಯಪ್ಪನ ಮಂದಿರಕ್ಕೆ ಭಾರೀ ಹಸುರು ಮುಚ್ಚಿದ ಪುಟ್ಟ ಗುಡ್ಡ ಸಾಲು – ನೀಲಿಮಲೆ, ದಾಟುವ ಹಗುರ ಕಲಾಪ ನಮ್ಮದು. ವಿಸ್ತಾರ ಏರುಜಾಡು, ಬದಿಯಲ್ಲಿ ವನಾಲಯದ ಸ್ತಂಭರಾಜಿಯಂತೆ ಮರಗಳು, ತೋರಣ ಮಾಲಿಕೆಗಳಂತೆ ನೇತುಬಿದ್ದ ಬಳ್ಳಿ ಬೀಳಲುಗಳು, ನಿನದಿಸುವ ಘಂಟಾತಾನದಂತೆ ಪಕ್ಷಿಗಾನ, ಧೂಪಧೂಮದಂತೆ ಮೆಲ್ಲನೇಳುವ ಮೇಘಾವಳಿ. ಲಕ್ಷಾಂತರ ಜನರ ಎಲ್ಲಾ ತೆರನ ಚಟುವಟಿಕೆ, ಗದ್ದಲಗಳ ಶೇಷ ಲಕ್ಷಣಗಳು, ಕಾಡುವ ವಾಸನೆಗಳು ಧಾರಾಳವೇ ಇದ್ದರೂ ನಮ್ಮ ಸಂದರ್ಭದಲ್ಲಿ ತೀರಾ ವಿರಳ ಜನಸಂಚಾರವಿದ್ದುದರಿಂದ ಪರಿಸರ ಒಂದು ಮಿತಿಯಲ್ಲಿ ದೈವೀಕವೇ ಆಗಿತ್ತು. ಅಲ್ಲಲ್ಲಿ ಇರುತ್ತಿದ್ದ ಮೆಟ್ಟಿಲ ಸರಣಿಗಳು ಜನಲಕ್ಷದ ನಿರಂತರ ಪದಾಘಾತಕ್ಕೆ ಮುಕ್ಕಾದ್ದು ತೋರುತ್ತಿತ್ತು. ಉಳಿದಂತೆ ಇದ್ದ ಬೆಟ್ಟದ ವಿಸ್ತಾರ ಜಾಡನ್ನು ಮಳೆಗಾಳದ ಹರಿನೀರು ಕೊರಕಲಾಗಿಸದಂತೆ ಅಲ್ಲಲ್ಲಿ ತಡೆದಿಬ್ಬ ಕೊಟ್ಟು ಬಿಗಿ ಮಾಡಿದ್ದರು. ಕಳಾಹೀನವಾದ ಬೀದಿ ದೀಪ, ತುಕ್ಕು ಹಿಡಿದ ಪಂಪ್ ಹೌಸ್‍ಗಳು, ಪಥಿಕರ ಬಳಕೆಗಾಗಿ ಸದಾ ಸೋರುವ ನಲ್ಲಿ ಕಟ್ಟೆಗಳು ಇರಬೇಕಾದವೇ. ಅಲ್ಲದೆ, ಮುರುಕು ಜೋಪಡಿಗಳು (ಪೂಜಾ ಮತ್ತಿತರ ಜಾತ್ರಾ ಸಾಮಾಗ್ರಿ ಮಳಿಗೆಗಳ ಅವಶೇಷ ಇರಬಹುದು), ಹರಕು ಬಟ್ಟೆಗಳು, ಅವರ್ಣನೀಯ ಕಸವಂತು ಸಾರ್ವತ್ರಿಕ. ಹಾಗೇ ಸಿಕ್ಕ ಸಣ್ಣ ಕವಲು ದಾರಿಗಳು ನಮ್ಮ ಪೂರ್ವಾಗ್ರಹಗಳಿಗೆ ಪೂರಕವಾಗಿಯೇ ಕಾಣಿಸಿದರೂ ಅನುಸರಿಸಿ ಸ್ಪಷ್ಟಪಡಿಸಿಕೊಳ್ಳುವ ಆಸಕ್ತಿ ನಮಗೇನೂ ಇರಲಿಲ್ಲ. ಒಂದೆರಡು ಪುಟ್ಟ ಗುಡಿಗಳು – ಸ್ಥಳಪುರಾಣದ ಕಡತದಲ್ಲೂ ಭಕ್ತಾದಿಗಳಿಗೂ ಅನಿವಾರ್ಯ ಅಧ್ಯಾಯ ಹಾಗೂ ವಿಶ್ವಾಸ ಕೇಂದ್ರಗಳೇ ಇದ್ದಿರಬೇಕು – ನಮ್ಮನ್ನು ವಿಶೇಷ ಆಕರ್ಷಿಸಲಿಲ್ಲ. ಸದೃಢವಾದ ಕಾಣಿಕೆ ಹುಂಡಿಗಳು, ಕಳಚುವ ವಿವಿಧ ಹಂತಗಳಲ್ಲಿದ್ದ ವಿಸ್ತಾರ `ಗುಡಾರ ಹೋಟೆಲು’ಗಳು, ಜಾಹೀರಾತು ಕಮಾನುಗಳನ್ನು ಹಾಯ್ದು ಮುಂದುವರಿದಂತೆ ಸುಮಾರು ಒಂದೂವರೆ ಕಿಮೀ ಆರಾಮ ನಡಿಗೆಯಲ್ಲೇ ಮೊದಲ ಗುಡ್ಡೆಸಾಲಿನ ನೆತ್ತಿ ಸೇರಿದ್ದೆವು.

[ಪೂರ್ವಾಗ್ರಹದ ಕುರಿತು ಮೂರು ಮಾತು: ನಲ್ವತ್ತು ದಿನಗಳ ಕಾಲ ಚಟಗಳಿರಲಿ, ಸಹಜವಾದ ಆಹಾರ ವಿಹಾರಗಳನ್ನೂ ಹತ್ತಿಕ್ಕಿ ವ್ರತಬದ್ಧರಾದ ಮಂದಮತಿಗಳನ್ನು ಮರಳುವ ದಾರಿಯಲ್ಲಿ ವಿಳಂಬರಹಿತವಾಗಿ ಮರುಳುಗೊಳಿಸಲು ಹೆಣ್ಣು, ಹೆಂಡ ಮುಂತಾದವುಗಳ ವ್ಯವಸ್ಥೆ ಪೂರ್ತಿ ಅಕ್ರಮವಾಗಿ ಸುತ್ತಲಿನ ಕಾಡಿನಲ್ಲಿ ಬೀಡುಬಿಟ್ಟಿರುತ್ತವಂತೆ! (ಅಪ್ಪಟ ಭಕ್ತರೇ ಹೇಳಿದ ಮಾತು.) ಇವನ್ನು ಪೂರ್ಣ ನಿವಾರಿಸುವ ಮಾತುಗಳು ಸ್ವತಃ ಭಗವಂತನಿಗೇ (ಹಾಗೊಬ್ಬನಿದ್ದರೆ!) ಅಸಾಧ್ಯವಾದೀತು. ಆದರೆ ಮುಂದುವರಿದ ಈ ದಿನಗಳಲ್ಲಿ ಸ್ಥಳೀಯಾಡಳಿತಗಳು (ದೇವಸ್ವಂ ಬೋರ್ಡ್, ಅರಣ್ಯ, ಪೊಲಿಸ್ ಇಲಾಖೆ ಇತ್ಯಾದಿ) ಅವನ್ನು ಕನಿಷ್ಠ ವಿರಳಗೊಳಿಸುವ ಹಾಗೂ ಕ್ಷೇತ್ರದಿಂದ ದೂರ ಮಾಡುವ ಕೆಲಸದಲ್ಲಾದರೂ ಯಶಸ್ಸು ಕಂಡಿರಬಹುದೆಂದು ಭಾವಿಸುತ್ತೇನೆ. ೨. ಶಬರಿಮಲೆ ಕ್ಷೇತ್ರದ ಪವಾಡಗಳಲ್ಲಿ ಬಲು ಪ್ರಚುರಿತ ಐಟಂ – ಮಕರವಿಳುಕ್ಕು! ಈಚೆಗೆ ದೇವಸ್ವಂ ಬೋರ್ಡೇ ಒಪ್ಪಿಕೊಂಡಂತೆ, ಅದು ಅನತಿದೂರದ ಕಣಿವೆ – ಪೊನ್ನಂಬಲಮೇಡುವಿನಲ್ಲಿ ದೇವಾಲಯ ಸಮಿತಿಯೇ ಉರಿಸುವ ಕರ್ಪೂರದ ರಾಶಿಯ ಫಲ. ಆ ಜಾಗ ಸಾರ್ವಜನಿಕ ಪ್ರವೇಶಕ್ಕೆ ನಿಷಿದ್ಧವಿದೆ. ಚಾಲಕ್ಕಾಯಂ ಬಳಿ ಎಲ್ಲೋ ವಾಹನಯೋಗ್ಯ ಕಚ್ಚಾಮಾರ್ಗವೂ ಉಳಿದಂತೆ ಇದೇ ನೀಲಿಮಲೆಯತ್ತಣಿಂದ ಕೆಲವು ಸವಕಲು ಜಾಡುಗಳೂ ಹೋಗುವುದು ಇದೆಯಂತೆ. ೩. ಏನಲ್ಲದಿದ್ದರೂ ಆರಾಧ್ಯ ಋತುಗಳ ಉಬ್ಬರದಲ್ಲಿ ಎಂಥಾ ನಾಗರಿಕ ಸೌಲಭ್ಯಗಳೂ ಸಾಲದಾಗುವಲ್ಲಿ, ಅಂದರೆ `ಒಂದು’, `ಎರಡ’ರಿಂದ ತೊಡಗಿ ಸ್ವಯಂಪಾಕ, ವಿಶ್ರಾಂತಿ ಇತ್ಯಾದಿಗಳಿಗೆ, ಜನ ಕಾಡು ನುಗ್ಗುವುದು ಇದ್ದೇ ಇದೆ. ಇದನ್ನು ನಿಯಂತ್ರಿಸಲು ಹೆಚ್ಚುವರಿ ಜಾಗಕ್ಕಾಗಿ ದೇವಾಲಯ ಮತ್ತು ಅರಣ್ಯ ಇಲಾಖೆಗಳ ನಡುವೆ ಕತ್ತಿವರಸೆ ಬಹಳ ಕಾಲದಿಂದ ನಡೆಯುತ್ತಲೇ ಇದೆ.]

ನೀಲಿಮಲೆ ಶ್ರೇಣಿಯ ನೆತ್ತಿಸಾಲಿನಲ್ಲೇ ಸುಲಭವಾಗಿ ತುಸು ಮುಂದುವರಿದು, ಬೆಟ್ಟದ ಮಗ್ಗುಲು ಬದಲಿಸುತ್ತಿದ್ದಂತೆ ನಮ್ಮ ಕಲ್ಪನೆಯ ಬಸಿರು ಹುಸಿಯಾದಂತೆ ಸನ್ನಿಧಾನದ ಕ್ಷೇತ್ರ ಪ್ರತ್ಯಕ್ಷವಾಯಿತು; ಸ್ವಾಮಿಯೇ ಶರಣಂ ಅಯ್ಯಪ್ಪಾ! ಬಲು ಮಹಡಿ ಕಟ್ಟಡಗಳು, ಇಲಾಖ ವಿಶ್ರಾಂತಿ ಗೃಹಗಳು, ಭೂರಿ ಛತ್ರಗಳು, ದೇವದರ್ಶನಕ್ಕೆ ಸಾಲು ನಿಲ್ಲಲು ಸುವಿಸ್ತಾರ ಕಲ್ನಾರು ಮಾಡುಗಳು, ಕಟಕಟೆಗಳು, ಹೋಟೆಲ್ ಶೌಚಾಲಯಗಳ ಮೆದೆಯಲ್ಲಿ ಅಯ್ಯಪ್ಪನ ಗುಡಿ ಒಂದು ಸೂಜಿ; ನಮಗೆ ಕಾಣಿಸಲೇ ಇಲ್ಲ! ಆದರೂ ಇಲ್ಲಿ ಎಲ್ಲವೂ ನಾಜೂಕು. ಜಿಡ್ದು ಸುರಿಯುವ ದೊಂದಿ ದೀಪಗಳಿಲ್ಲ; ಸೋಡಿಯಂ ನಿಯಾನ್ ಲೈಟುಗಳೆ ಎಲ್ಲ. ಅಯ್ಯಪ್ಪ ಮುದ್ರೆಯ ಅಪ್ಪ, ತುಪ್ಪಗಳ ಖರೀದಿಗೆ ವ್ಯವಸ್ಥಿತ ಮಳಿಗೆಗಳು, ಇದರ ಗಿರಾಕಿಗಳ ಮತ್ತು ದೇವದರ್ಶನಾಕಾಂಕ್ಷಿಗಳ ಸಾಲು ತಾಕಲಾಡದಂತೆ ಮೇಲ್ಸೇತುವೆ, ಉಸ್ತುವಾರಿ ಪೊಲೀಸರಿಗೆ ಅಟ್ಟಳಿಗೆಯಂಥ ನಿರೀಕ್ಷಣಾ ಕೊಠಡಿ, ವ್ರತಿಗಳಷ್ಟೇ ಏರುವ ಹದಿನೆಂಟು ಮೆಟ್ಟಲಿಗೆ ಹಿತ್ತಾಳೆಯ ಒಪ್ಪ, ಅವ್ರತಿಗಳಿಗೆ ಮೇಲಂಗಳದ ಹಿತ್ತಿಲಿನಲ್ಲಿ ಏರಲು ಪ್ರತ್ಯೇಕ ಕಾಂಕ್ರೀಟ್ ಸೋಪಾನ, ಮೇಲಂಗಳದ ಕಿರು ಆವರಣದಲ್ಲೇ ಮತ್ತೆ ಭಕ್ತಾದಿಗಳ ಒತ್ತಡ ನಿಯಂತ್ರಣಕ್ಕೆ ಅಂಚುಗಟ್ಟೆಯ ಮೇಲೆ ಸರದಿ ಸಾಲಿನ ಬಾಲ್ಕನಿ, ಅಲ್ಲಿಂದ ಕಾಲಕಾಲಕ್ಕೆ ಭಕ್ತಾದಿಗಳನ್ನು ಇಳಿಸಿಕೊಳ್ಳಲು ವಿಮಾನ ನಿಲ್ದಾಣದ ಮೆಟ್ಟಿಲಗಾಡಿಯಂಥವೇ ಇಟ್ಟು ತೆಗೆಯುವ ವ್ಯವಸ್ಥೆ ಇತ್ಯಾದಿ ನೋಡಿದ್ದೇ ನೋಡಿದ್ದು. ಭಕ್ತರ ಬುಡಕ್ಕೇ ಹೋಗಿ ಕಾಣಿಕೆ ಸ್ವೀಕರಿಸಲು ಐಸ್ ಕ್ಯಾಂಡಿ ಗಾಡಿಗಳಂಥ ನೂಕು ಹುಂಡಿಗಳೇ ಇರುವಾಗ ಪ್ರಧಾನ ಹುಂಡಿ ಕಡಿಮೆಯಾಗಬಹುದೇ? ಗರ್ಭಗುಡಿಯನ್ನುಳಿದು ಮೇಲಂಗಳದ ನೆಲದಡಿಯಲ್ಲೆಲ್ಲಾ ಆಧುನಿಕ ಕೊಠಡಿಗಳು ವ್ಯಾಪಿಸಿವೆ. ಅವುಗಳಲ್ಲೊಂದರ ಮೇಲಕ್ಕೆ ತೆರೆದ ಬಾಯಿಯೇ ಪ್ರಧಾನ ಹುಂಡಿ! ಇದರಲ್ಲಿ ಹಾಕಿದ ಕಾಣಿಕೆ ಸಾಗುಪಟ್ಟಿ ಮೂಲಕ ಸರಿದು ಗರ್ಭಸ್ಥವಾದ ಅಗೋಚರ ಖಜಾಂಚಿಗಳೆದುರು ಲೆಕ್ಕಕ್ಕೆ ಒಡ್ಡಿಕೊಳ್ಳುತ್ತದಂತೆ, ಆಗಿಂದಾಗ್ಗೆ ಕಾಣಿಕೆಯ ಮೌಲ್ಯವೂ ದಾಖಲಾಗುತ್ತದಂತೆ. [ಬಹುಶಃ ಅವರಿಗೂ ಆಚೆ ಅಗೋಚರನಾದ ಚಿತ್ರಗುಪ್ತನ ಕಡತದಲ್ಲಿ ಪುಣ್ಯದ ನಿಷ್ಕರ್ಷೆಯೂ ತತ್ಸಮಯದಲ್ಲೇ ಆಗುವುದಿರಬೇಕು. ಇಲ್ಲವಾದರೆ, ಎಷ್ಟೋ ಮಂದಿ ಕ್ಷೇತ್ರದಿಂದ ಮರಳುವ ದಾರಿಯಲ್ಲಿ `ಬಿಡುಗಡೆ’ ಹೊಂದಿದ ಕುಶಿಯಲ್ಲಿ ಸೇವಿಸಿದ `ತೀರ್ಥ’ ಹೆಚ್ಚಾಗಿ, ಅಪಘಾತಗಳಿಗೀಡಾದಾಗ `ಸ್ವರ್ಗಸ್ಥರಾದರು’ ಎಂದೇ ಖಚಿತ ಪತ್ರಿಕಾ ವರದಿಗಳು ಬರುವುದು ಅಸಾಧ್ಯ.] ಇಷ್ಟಕ್ಕೆ ಮುಗಿಯಲಿಲ್ಲ. ಭಕ್ತರು ಎರೆದ ತುಪ್ಪ ಕಾಯಿಸಲು ವಿದ್ಯುತ್ ಸುರುಳಿಗಳು, ಪ್ರಸಾದ ರೂಪವಾಗಿ ಮರಳುವ ಅಪ್ಪಗಳನ್ನು ತಯಾರಿಸಲು ಯಂತ್ರ ಎಲ್ಲವೂ ಪರಿಷ್ಕಾರ – ಸೂಪರ್ ಬಜಾರಿನಂತೆ. [ಆ ಕಾಲದಲ್ಲಿ ನಾನು ತಿರುಪತಿಯವ್ಯವಸ್ಥೆಗಳನ್ನು ನೋಡಿರಲಿಲ್ಲ. ಇಲ್ಲವಾದರೆ ಸಾಮ್ಯ, ಉತ್ತಮಿಕೆಗಳ ಕೋಷ್ಠಕ ಇಲ್ಲೇ ಹಾಕಿಬಿಡುತ್ತಿದ್ದೆ!]

ಸರತಿ ಸಾಲಿನ ಮಾಡುಗಳಡಿಯಲ್ಲಿ ನಾವೇ ನಾವಾಗಿ ನಡೆದರೂ ಹದಿನೆಂಟು ಮೆಟ್ಟಲುಗಳ ಬಳಿ ಸಾಕಷ್ಟು ಸೇವಾಕರ್ತರ, ಭಕ್ತರ ಓಡಾಟವಿತ್ತು. ನಮಗೆ ಮೇಲಂಗಳಕ್ಕೆ ಹೋಗಲು ಅವರು ಹಿತ್ತಲಿನ ಕಾಂಕ್ರೀಟ್ ಮೆಟ್ಟಲುಗಳತ್ತ ಕೈ ತೋರಿದರು. ಮೇಲಿನ ಆಧುನಿಕ ವ್ಯವಸ್ಥೆಗಳ ನಡುವೆ ತೀರಾ ನಗಣ್ಯವಾಗಿ ಎರಡೋ ಮೂರೋ ಹಳೆಗಾಲದ ಪುಟ್ಟ ಗುಡಿಗಳಿದ್ದವು; ಅವುಗಳಲ್ಲೊಂದು ಅಯ್ಯಪ್ಪನ ಮಂದಿರ. ಎಲ್ಲವೂ ಬಾಗಿಲು ಹಾಕಿದ್ದುದರಿಂದ ಆರಾಧನೆಯ ಗಡಿಬಿಡಿಗಳು, ಭಜಕರ ಸಂದಣಿಯೇನೂ ಇರಲಿಲ್ಲವಾಗಿ ನಾವು ವಿರಾಮದಲ್ಲಿ ಸುತ್ತು ಹಾಕಿ ಮತ್ತೆ ಕಾಂಕ್ರೀಟ್ ಮೆಟ್ಟಲುಗಳಲ್ಲೇ ಕೆಳಗಿಳಿದೆವು. [ನಮ್ಮ ಅನಂತರದ ದಿನಗಳಲ್ಲಿ ಸಿನಿ-ನಟಿ ಜಯಮಾಲಾ ಅಯ್ಯಪ್ಪ ದರ್ಶನ ಮಾಡಿದ ಪ್ರಕರಣ, ಇಪ್ಪತ್ತೈದು ವರ್ಷಗಳ ಬಳಿಕ ಅಂದರೆ ಈಚೆಗೆ ಕೆರಳಿಕೊಂಡಾಗ ನಮ್ಮಲ್ಲಿ ವಿಷಾದದ ನಗೆಯಷ್ಟೇ ಉಳಿದಿತ್ತು. ನಮ್ಮೊಡನೆ ಇನ್ನೂ ಇಪ್ಪತ್ತೈದರ ಹರಯದಲ್ಲಿದ್ದ ದೇವಕಿ ಆ ವಠಾರವನ್ನೆಲ್ಲ ನಮ್ಮೊಡನೆ ಸಹಜವಾಗಿ ಸುತ್ತಾಡಿದ್ದಳು. ನೇರ ಅಯ್ಯಪ್ಪ ಗುಡಿಯದ್ದೇ ಮುಚ್ಚಿದ ಬಾಗಿಲ ಎದುರೂ ನಿಂತು ಆರಾಮವಾಗಿಯೇ ಮರಳಿದ್ದಳು. ಅಂದಿನ ದಿನಗಳಲ್ಲಿ ಇರದ ಸ್ಥಾನಿಕ ನಿಷೇಧವನ್ನು ಇಂದು ಕಂಡುಕೊಂಡು, ತನಿಖಾ ಆಯೋಗ, ತೀರ್ಪು, ಶಿಕ್ಷೆ ಎಂದೆಲ್ಲಾ ಜನಮನದಲ್ಲಿ ವಿಷಬಿತ್ತುವವರು ನಿಜದಲ್ಲಿ ಪಾಖಂಡಿಗಳು.]

ಕೆಳವಲಯದಲ್ಲಿ ಬಹುಶಃ ನಾಲ್ಕೂ ದಿಕ್ಕಿಗೆ ವಿವಿಧ ಆಧುನಿಕ ರಚನೆಗಳು ಹರಡಿದ್ದುವು. ಹೆಂಗುಸರನ್ನು ಕಂಡ ನೆನಪಿಲ್ಲ. ಇದ್ದ ಗಂಡಸರಾದರೋ ಕ್ಷೇತ್ರಕ್ಕೆ ಹೊಂದಿಕೆಯಾಗುವ ವೇಷಭೂಷಣಗಳಲ್ಲೇ – ಅಂದರೆ, ಮಾಸುಗಂದು ಪಂಚೆ ಸುತ್ತಿ, ತುಂಡು ಶಾಲು ಹೊದ್ದು, ವಿಭೂತಿ ಪಟ್ಟೆ ಹೊಡೆದ ಗಡ್ಡಧಾರಿಗಳು ಮತ್ತು ಹೆಚ್ಚಿನವರು ಮಲಯಾಳಿಗಳು. ತೋರಿಕೆಯಲ್ಲಿ ನಾವು ವ್ರತಸ್ಥರಲ್ಲ, ಆಂತರ್ಯದಲ್ಲಿ ಭಕ್ತರೂ ಅಲ್ಲ. ಹಾಗೆಂದು ಅಲ್ಲಿ ನಮಗೆ ವಸ್ತುನಿಷ್ಠ ವೀಕ್ಷಣೆ ಹೊರತಾಗಿ ಬೇರೆ ಯೋಜನೆಗಳು ಏನೂ ಇರಲಿಲ್ಲ. ನಾವು ತುಂಬ ಮಿತಿಯಲ್ಲಿ ಮತ್ತು ಎಚ್ಚರದಲ್ಲಿ ಪರಸ್ಪರ ಮಾತಾಡಿಕೊಳ್ಳುತ್ತಿದ್ದೆವು. ಮೇಲಿನಂಗಳಕ್ಕೇರುವಾಗ ಬೋರ್ಡಿನ ಸೂಚನೆಯಂತೆ ಪಾದರಕ್ಷೆ ಕಳಚಿದ್ದೆವು. ಉಳಿದಂತೆ ಪ್ಯಾಂಟು, ಶರ್ಟು, ಟೋಪಿ ಮತ್ತು ನಮಗೆ ಸಹಜ ಮುಖಾಲಂಕಾರದಲ್ಲಿದ್ದುದರಿಂದ (ಮೂವರೂ ಮೀಸೆವಂತರು, ಗಡ್ಡ ಕೀಸಿದವರು. ದೇವಕಿಗೆ ಮಾತ್ರ ಹಣೆಯಲ್ಲಿ ಬೊಟ್ಟು, ಉಳಿದವರಿಗೆ ಗಂಧ, ಕುಂಕುಮ, ವಿಭೂತಿಯಾದಿ ಯಾವುದೇ ಮುದ್ರೆಗಳಿರಲಿಲ್ಲ) ಸುಲಭವಾಗಿ ಎಲ್ಲರ ಗಮನ ಸೆಳೆದಿದ್ದೆವು, ಒಂದಿಬ್ಬರಂತೂ ನಮ್ಮ ಮೇಲೆ ಗುಮಾನಿಯ ನೋಟವನ್ನೇ ಇಟ್ಟಂತಿತ್ತು. ಕೊನೆಗಾಗುವಾಗ ಅವರಲ್ಲೊಬ್ಬ ತರುಣ ಮುಂಬಂದು, ಕಿರು ನಗೆ ಸೂಸಿ ಪರಿಚಯಿಸಿಕೊಂಡಾಗ ನಮ್ಮ ಮನಸ್ಸು ನಿರುಮ್ಮಳವಾಯಿತು.

ಆ ತರುಣ – ಮಹಾದೇವನ್, ದೇವಸ್ವಂ ಬೋರ್ಡಿನ ರಚನೆಗಳ ಉಸ್ತುವಾರಿ ನಡೆಸುತ್ತಿದ್ದ ಕಿರಿಯ ಇಂಜಿನಿಯರುಗಳಲ್ಲಿ ಒಬ್ಬ; ಅಯ್ಯಪ್ಪನಿಗೆ ಅನೈಚ್ಛಿಕ ಭಕ್ತ. (ರೋಮಿನಲ್ಲಿರುವಾಗ ಕ್ರಿಶ್ಚಿಯನ್ ಆಗು ಎಂದಂತೆ!) ಆತ ಕೇರಳದ ಇನ್ಯಾವುದೋ ಮೂಲೆಯವ. ಅಯ್ಯಪ್ಪ ದರ್ಶನ ಸಿಗದ ಕಾಲದಲ್ಲಿ ಬಂದ ನಮ್ಮ ಬಗ್ಗೆ ತುಸು ಕುತೂಹಲ ಮೂಡಿದ್ದಿರಬೇಕು. ಮತ್ತೆ ಅದಕ್ಕೂ ಮಿಗಿಲಾಗಿ, ಸಾರ್ವಜನಿಕ ಊಟ ವಸತಿಗಳೇನೂ ಲಭ್ಯವಿರದ ಕಾಲದಲ್ಲಿ “ಹೇಗೋ ಪಾಪ” ಎಂಬ ಕಾಳಜಿ ಕಾಡಿದ್ದಿರಬೇಕು. ನಮ್ಮ ಬೈಕ್ ಯಾತ್ರೆ, ರಾತ್ರಿಗೆ ಬಂಗ್ಲೆ ವಾಸ ಕೇಳಿ ಕುಶಿಪಟ್ಟ. ಆದರೆ ಹಿಂದಿನ ರಾತ್ರಿಯ ನಮ್ಮ `ಊಟ’, ಬೆಳಗ್ಗಿನ ಉಪವಾಸ ಕೇಳಿದ್ದೇ ಆತನ ಗಂಡುಬಿಡಾರಕ್ಕೆ ಒತ್ತಾಯದ ಆಹ್ವಾನವನ್ನೇ ಕೊಟ್ಟ. ಅವರು ಇಂಜಿನಿಯರುಗಳು ನಾಲ್ಕೈದು ಮಂದಿ ಸೇರಿ, ಇಲಾಖೆ ಒದಗಿಸಿದ ವಸತಿಯಲ್ಲೇ ಸ್ವಯಂಪಾಕ ವ್ಯವಸ್ಥೆ ಮಾಡಿಕೊಂಡಿದ್ದರು. ಅವರ ಬಿಸಿ ಉಪ್ಪುಗಂಜಿ, ಹುರುಳಿ ಪಲ್ಯ, ಹಪ್ಪಳಕ್ಕೆ ಆ ಮುಂಜಾನೆ ನಾವು ನಾಲ್ವರು ಗಟ್ಟಿಯ ಪಾಲುದಾರರಾದೆವು.

ಮಲೆ ಪ್ರಧಾನವಾಗಿರಬೇಕಾದಲ್ಲಿ ಕಬ್ಬಿಣ, ಕಾಂಕ್ರೀಟುಗಳ ಸಂತೆ ಸೇರುತ್ತಿದೆ. ಭಾವುಕರಿಗೆ ಸಾಂತ್ವನ ಸಿಗಬೇಕಾದಲ್ಲಿ ಪವಾಡ, ಕುರುಡು ಆಚಾರಗಳು ಒತ್ತುತ್ತಿವೆ. ಪ್ರಗತಿ, ದೇವರುಗಳ ಗೊಂದಲದಲ್ಲಿ ಕಾಡು ಬೋಳಾಗುತ್ತ, ವ್ರತದ ವಿಧಿನಿಷೇಧಗಳು ಇನ್ನಷ್ಟು ಮನುಷ್ಯ ವಿರೋಧಿಯಾಗುತ್ತ ಬೆಳೆಯುವ ಲಕ್ಷಣಗಳನ್ನು ವಿಷಾದದಲ್ಲೇ ನಾವು ಗಮನಿಸಿದೆವು. ಅಂಗಳಕ್ಕೇರುವ ಮೆಟ್ಟಲುಗಳೇ ಸ್ವರ್ಗಸೋಪಾನಗಳೆಂದೂ ಎಲ್ಲೋ ಹದ್ದು ಹಾರಿದ್ದನ್ನು ಇಲ್ಲಿನ ದೇವಸಂದೇಶವೆಂದೂ ಗುಡ್ಡೆ ಕರ್ಪೂರ ಸುಟ್ಟದ್ದನ್ನು ದೈವೀಪ್ರಕಾಶವೆಂದೂ ತೊಳಲುವವರ ಹೇರುವವರ ನಡುವೆ `ಹಸಿದ ಹೊಟ್ಟೆಗೆ ಗಂಜಿನೀಡು’ ಎಂಬ ಒಂದೇ ಮಂತ್ರದ ಮಹಾದೇವನ್ ಮಾತ್ರ ನಮ್ಮ ನೆನಪಿನಲ್ಲುಳಿಯುತ್ತಾರೆ. “ನೀವು ಮಕರವಿಳುಕ್ಕು ನೋಡಲಿಲ್ಲ” ಎಂದು ನಷ್ಟಪಟ್ಟಿ ನಮ್ಮ ಮುಂದೆ ಹಿಡಿಯುವವರಿಗೆ, ನಮ್ಮ ಬಂಪರ್ ಲಾಭ – ಮಹಾದೇವನ್ ಕಣ್ಣ ಮಿಂಚು, ಹೇಗೆ ಅರ್ಥವಾದೀತು!

(ಮುಂದುವರಿಯಲಿದೆ)