ಕಳೆದ ತಿಂಗಳು ನನಗೊಂದು ಅನಿರೀಕ್ಷಿತ ದೂರವಾಣಿ ಕರೆ, “ಶಿವಮೊಗ್ಗ ಕರ್ನಾಟಕ ಸಂಘದ ಕಾರ್ಯದರ್ಶಿ ಮಾತಾಡುತ್ತಿದ್ದೇನೆ. ನಿಮ್ಮ ಪುಸ್ತಕ – ಕುಮಾರ ಪರ್ವತದ ಸುತ್ತ ಮುತ್ತ, ಇದು ನಮ್ಮ ಸಂಘದ ೨೦೧೩ರ ಸಾಲಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಬಹುಮಾನಕ್ಕೆ ಆಯ್ಕೆಯಾಗಿದೆ, ಅಭಿನಂದನೆಗಳು. ಜುಲೈ ಐದಕ್ಕೆ ವಿತರಣಾ ಸಮಾರಂಭ. ಅವಶ್ಯ ಒಪ್ಪಿ, ಬರಬೇಕು.” ಸಹಜವಾಗಿ ಕೃತಜ್ಞತೆಗಳನ್ನು ತಿಳಿಸಿದೆ. ಅವರು ಪ್ರಾಸಂಗಿಕವಾಗಿ ಕೇಳಿದ ನನ್ನ ಅಂಚೆ ವಿಳಾಸ, ಸಚಿತ್ರ ಪರಿಚಯಗಳೆಲ್ಲಕ್ಕೂ ನನ್ನ ಜಾಲತಾಣದತ್ತ ಕೈ ತೋರಿದೆ. ಸಂಭಾಷಣೆಯನ್ನು ಖಾತ್ರಿಪಡಿಸುವಂತೆ ಮೂರೋ ನಾಲ್ಕೋ ದಿನಗಳಲ್ಲೆ ಗೌರವ ಕಾರ್ಯದರ್ಶಿ – ಡಾ| ಎಚ್.ಎಸ್. ನಾಗಭೂಷಣರಿಂದ ಸಂದೇಶವಾಹಕರ ಮೂಲಕ ಪತ್ರವೂ ಬಂತು. ಅದಕ್ಕುತ್ತರ ಬರೆಯುತ್ತ, “…ತಾತ್ತ್ವಿಕವಾಗಿ ಯಾವುದೇ ಬಹುಮಾನ, ಪ್ರಶಸ್ತಿ ಮುಂತಾದವುಗಳನ್ನು ಕೇಳಿ (ಅರ್ಜಿ, ಪ್ರಭಾವ ಇತ್ಯಾದಿ) ಪಡೆಯುವುದರಿಂದ ನಾನು ಮಾರು ದೂರವಿರುತ್ತೇನೆ. (ಅವಶ್ಯ ನೋಡಿ: ಪ್ರಜಾಸತ್ತೆಗೆ ಅವಮಾನ– ಪ್ರಶಸ್ತಿ, ಸಮ್ಮಾನ) ಅಂಥ ನನ್ನ ಅರಿವಿಗೆ ಬಾರದಂತೆ, ಪುಸ್ತಕದ ಪ್ರಕಾಶಕ – ಅಭಿನವ ಪ್ರಕಾಶನ, ಬೆಂಗಳೂರು ಇದರ ಮಾಲಿಕ ನ. ರವಿಕುಮಾರ ಅದನ್ನು ಸಲ್ಲಿಸಿರಬೇಕು. ಅದನ್ನುಳಿದಂತೆ, ಕರ್ನಾಟಕ ಸಂಘ (ಸ್ಥಾಪನೆ ೧೯೩೦) ಸ್ವತಂತ್ರವಾಗಿ ದೊಡ್ಡ ಇತಿಹಾಸ ಮತ್ತು ಘನತೆಯನ್ನು ಕಾಯ್ದುಕೊಂಡು ಬಂದಿರುವ ಸಂಸ್ಥೆ ಎಂದೂ ತಿಳಿದಿರುವುದರಿಂದ ಸವಿನಯ ಒಪ್ಪಿಕೊಳ್ಳುತ್ತಿದ್ದೇನೆ…”

ಸುಮಾರು ಹದಿನೈದು ವರ್ಷಗಳ ಹಿಂದೊಮ್ಮೆ ನಾನು ಸ್ವಂತ ಕಾರಿನಲ್ಲಿ ನನ್ನೆಲ್ಲ ಪ್ರಕಟಣೆಗಳ ಒಂದಷ್ಟು ಪ್ರತಿಗಳನ್ನು ಹೇರಿಕೊಂಡು, ಮಗನನ್ನು ಜೊತೆಮಾಡಿಕೊಂಡು, ನಾಲ್ಕೈದು ದಿನಗಳ ಮಾರಾಟ-ಪ್ರವಾಸ ನಡೆಸಿದ್ದೆ. ಆಗ ಶಿವಮೊಗ್ಗಕ್ಕೆ ಹೋಗಿದ್ದಾಗ ಬಹುಖ್ಯಾತವಾಗಿದ್ದ ಈ ಸಂಘಕ್ಕೆ ಭೇಟಿ ಕೊಟ್ಟಿದ್ದೆ. ಆಗ ಅವರು ತಮ್ಮ ಗ್ರಂಥಾಲಯದಲ್ಲಿಲ್ಲದ ಪುಸ್ತಕಗಳನ್ನು ನಗದು ಕೊಟ್ಟು ಕೊಳ್ಳುವುದರಲ್ಲಿ ಧಾರಾಳಿಗಳೇ ಆಗಿದ್ದರು. ಮುಂದೆಂದೋ ಇದೇ ಸಂಘ ಎಸ್.ವಿ ಪರಮೇಶ್ವರ ಭಟ್ಟರ ಕವನ ಸಂಕಲನವೊಂದನ್ನು ಪ್ರಕಟಿಸಿದಾಗ ವ್ಯಾಪಾರಿಯಾದ ನನ್ನನ್ನು ಸಂಪರ್ಕಿಸಿದ್ದರು. ನಾನು ಬಯಸಿದಂತೆ ಸಹಜ ವ್ಯವಹಾರಕ್ಕೂ ಸಂಘ ಒಲಿದು ವರ್ತಿಸಿತ್ತು. ಆದರೀಗ ಹೊಸ ಸಂಬಂಧ, ನನಗೂ ಮುಜುಗರ. ಎರಡು ವಾರಗಳ ಹಿಂದೆ ಮಂಟಪ ತ್ರಿವಳಿ ಎಂಬ ಯಕ್ಷಗಾನ ಕಾರ್ಯಕ್ರಮವನ್ನು ನೋಡಿ ಸಂತೋಷಿಸಲು ನಾನು ಶಿವಮೊಗ್ಗಕ್ಕೆ ಹೋಗಿದ್ದೆ. ಆಗ ಸಿಕ್ಕ ಸಣ್ಣ ಸಮಯಾವಕಾಶದಲ್ಲಿ ಗೆಳೆಯ ಮನೋಹರ ಉಪಾಧ್ಯರ ಜತೆಯಲ್ಲಿ ಸಂಘಕ್ಕೇ ಹೋಗಿದ್ದೆ. ಸಂಘದ ಕಾರ್ಯಕಾರೀ ಸಮಿತಿಯ ಬೈಠಕ್ಕು ನಡೆಯುವುದಿತ್ತು. ಹಾರ್ದಿಕವಾಗಿ ನಮ್ಮನ್ನು ಬರಮಾಡಿಕೊಂಡು, ಉಪಾಹಾರವಿತ್ತು, ಲಭ್ಯ ಮಾಹಿತಿಗಳನ್ನಿತ್ತರು, ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ತಪ್ಪಿಸ್ಕೊಳ್ಳಬಾರದೆಂದು ಮೌಖಿಕ ಒತ್ತಾಯ ಕೊಟ್ಟು, ಕಳಿಸಿಕೊಟ್ಟರು.

Karnataka Sangh of Shimoga which is celebrating its 80th year.

ಪ್ರಜಾ ಸರಕಾರವಿಲ್ಲದ ಕಾಲದಲ್ಲೇ ಕನ್ನಡದ ಕೆಲಸಕ್ಕಾಗಿ ಸ್ಥಾಪನೆಗೊಂಡ ಈ ಸಂಘ ಸ್ವಂತ ಸ್ಥಳ, ಅನೇಕ ಕಟ್ಟಡಗಳು, ಸಭಾಭವನ, ಗ್ರಂಥಾಲಯ, ಇಂಥ ವಿನಿಯೋಗಗಳೇ ಸೇರಿದಂತೆ ಅನೇಕ ಕಲಾಪಗಳಿಗೆ ಆರ್ಥಿಕ ಶಕ್ತಿಯನ್ನು ಮುಖ್ಯವಾಗಿ ಗಳಿಸಿದ್ದು ಜನಪ್ರೀತಿಯಿಂದ ಎಂದು ತಿಳಿದು ತುಂಬ ಸಂತೋಷವಾಯಿತು. ಗೌರವ ಕಾರ್ಯದರ್ಶಿಗಳು, “ನಾವು ಸರಕಾರದ ಅನುದಾನ, ಪ್ರೋತ್ಸಾಹವನ್ನು ಎಂದೂ ಕೋರಿದವರಲ್ಲ” ಎಂದ ಮಾತಂತೂ ನನಗೆ ಗುರುಸಮಾನರಾದ ಕೀರ್ತಿಶೇಷ ಡಿವಿಕೆ ಮೂರ್ತಿಯವರ ಆದರ್ಶಕ್ಕೆ ಹಿಡಿದ ಕನ್ನಡಿಯಂತೇ ಕಂಡಿತು. (ಕನ್ನಡ ಪುಸ್ತಕ ಪ್ರಾಧಿಕಾರ ಹಿಂದೊಮ್ಮೆ ತಡವಾಗಿಯೇ ಆದರೂ ಅನಿವಾರ್ಯವಾಗಿ ತನ್ನೊಂದು ವಾರ್ಷಿಕ ವಿನಿಯೋಗವಾದ `ಅತ್ಯುತ್ತಮ ಪ್ರಕಾಶಕ ಪ್ರಶಸ್ತಿ’ ಡಿವಿಕೆ ಮೂರ್ತಿಯವರಿಗೆ ಕೊಡಲು ಮುಂದಾಗಿತ್ತು. ಅವರು ತೆಗೆದ ಬಾಯಿಗೆ ಬಯ್ದಿದ್ದರು “ಇವರಿಗೆ ಮಾಡೋಕ್ಬೇರೇ ಕೆಲಸವಿಲ್ಲಾ!” ಅದನ್ನು ಮೊಳಕೆಯಲ್ಲೇ ಚಿವುಟಿ, ರಾಜಸತ್ತೆಯ ಈ ಪಳೆಯುಳಿಕೆಯನ್ನು ಜನರ ಸರಕಾರ ಮಾಡಲೇ ಬಾರದು ಎಂದೂ ವಿವರವಾಗಿ ಬರೆದು ತಿಳಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಪರೋಕ್ಷವಾಗಿ ಕುಶಿಯೇ ಆಗಿರಬೇಕು. ಇಂಥವಕ್ಕೆಲ್ಲಾ ಅರ್ಜಿ ಗುಜರಾಯಿಸಿ, ಕಾಣಿಕೆ ಸಲಾಯಿಸಿ, ಹಲ್ಲು ಗಿಂಜುವವರ ಮಂದೆಯೇ ಅದರ ಕಛೇರಿಯ ಹೊಸ್ತಿಲಲ್ಲಿ ಕಾಲುಮುರಿದುಕೊಂಡು ಬಿದ್ದಿರುವಾಗ…)

ಕರ್ನಾಟಕ ಸಂಘದ ಕಾರ್ಯದರ್ಶಿಗಳು ಮುಂದುವರಿದು, ಜನರಿಂದ ಜನರಿಗಾಗಿ ದುಡಿಯುತ್ತಿರುವ ಸಂಘದ ಕೆಲಸಗಳೆಷ್ಟು ಪಾರದರ್ಶಕ ಎನ್ನುವುದಕ್ಕೂ (ನಾನು ನಿರೀಕ್ಷಿಸದೇ) ಸಾಕ್ಷಿಯನ್ನೂ ಕೊಟ್ಟರು. ಅದು ಆಯ್ಕಾ ಸಮಿತಿಯ ಕೃತಿ ವಿಮರ್ಶೆ. ಅದರ ಪೂರ್ಣ ಪಾಠ:

“ಜಿ.ಎನ್.ಅಶೋಕವರ್ಧನರ ‘ಕುಮಾರಪರ್ವತದ ಸುತ್ತ ಮುತ್ತ’ ಪುಸ್ತಕವನ್ನು ೨೦೧೩ರ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ (ಪ್ರವಾಸ) ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಿದ್ದೇವೆ.‘ಬಂಡೆ, ಕಾಡು, ಶಿಖರ, ಜಲಪಾತಗಳನ್ನ ಅರಸಿ, ಸಕಲ ಸವಲತ್ತುಗಳೊಡನೆ ಬೀಡು ಬಿಟ್ಟು ತಿರುಗಾಡುವುದನ್ನೇ `ಚಾರಣ’ ಎಂದು ಭಾವಿಸಿ ದಂಡೆತ್ತಿ ಪ್ರವಾಸ ಹೊರಡುವ ಇಂದಿನ ಯುವಜನಾಂಗಕ್ಕೆ, ಚಾರಣವೆಂದರೆ ಪ್ರಾಕೃತಿಕ ಸತ್ಯಗಳ, ಸೂಕ್ಷ್ಮಗಳ ಬಹುಶ್ರಮ ವೀಕ್ಷಣೆ, ತುಲನೆ, ಅರಿಯುವ ಜಾಣ್ಮೆ ಮತ್ತು ಅಧ್ಯಯನ ಎಂಬುದನ್ನು ಈ ಪುಸ್ತಕ ಮನವರಿಕೆ ಮಾಡಿಕೊಡುತ್ತದೆ. “ಮೂಲತಃ ಪರ್ವತಾರೋಹಿಯಾದ ಅಶೋಕವರ್ಧನರು ಚಾರಣದ ಕೌತುಕ, ರೋಚಕತೆಯನ್ನು ಸಮರ್ಥವಾಗಿ ಹಿಡಿದಿಟ್ಟು ಕೊಟ್ಟಿದ್ದಾರೆ. ಚಾರಣದ ಅನುಭವಗಳನ್ನು, ಅದು ಕಲಿಸಿಕೊಟ್ಟ ಪಾಠಗಳನ್ನು ಸ್ವಾರಸ್ಯಕರ ಶೈಲಿಯಲ್ಲಿ ಚಿತ್ರಿಸಿದ್ದಾರೆ. ಮತ್ತದೇ ಕಾಡು-ನೋದು, ಹಸಿರು-ನೀರು ಸುತ್ತಮುತ್ತಲೇ ಕಥನ ಸುತ್ತುತ್ತಿದ್ದರೂ ನವಿರಾದ ಹಾಸ್ಯ, ರಂಜನೀಯ ಶೈಲಿಯಿಂದಾಗಿ ಎಲ್ಲಿಯೂ ಬೇಸರವಾಗದಂತೆ ಕಥನ ಓಘ ಕಾಯ್ದಿಟ್ಟುಕೊಂಡಿದ್ದಾರೆ.

“ಅವರ ಭಾಷೆಯ ಸೊಗಡಿಗೆ ಒಂದು ಉದಾ: `ನೀರಧಾರೆಯ ಒನಪು, ಬಳ್ಳಿಹೂಗಳ ಸೊಂಪು, ಮೂಗಿಗೆ ಕಂಪು, ಕಿವಿಗೆ ಇಂಪು, ಸ್ವರ್ಗಕ್ಕೆ ಜಂಪು, ನೈಜ ಖಜಾನೆಗೆ ಬಂಪು’ ಈ ವರ್ಣನೆ ಖಂಡಿತವಾಗಿಯೂ ಆವರಿಸಲಿರುವ ಜೋಂಪನ್ನು ಹೈ-ಜಂಪ್ ಮಾಡಿಸಿ ಬಿಡುತ್ತದೆ!! “ಶೇಕಡ ೬೦ರಿಂದ ಈಗ ಶೇಕಡ ೩ಕ್ಕೆ ಇಳಿದಿರುವ ಕಾಡಿನ ಬಗೆ ಅತೀವ ಖೇದ ವ್ಯಕ್ತಪದಿಸುತ್ತ, ಆಹಾರ – ರಕ್ಷಣೆಗಳ ಪರಿಸರ ಸಮರ್ಪಕವಾಗಿದ್ದರೆ ಯಾವುದೇ ವನ್ಯಮೃಗವೂ ಮನುಷ್ಯನ ಮುಖಾಮುಖಿಯಾಗುವುದನ್ನು ಬಯಸುವುದಿಲ್ಲ ಎಂಬ ವೈಜ್ಞಾನಿಕ ಸತ್ಯ ಬಿಚ್ಚಿಡುತಲೇ ನಮ್ಮ ಎಲ್ಲಾ ಮುಂದಿನ ಯೋಜನೆ, ಸ್ವಲತ್ತುಗಳ ವಿಸ್ತರಣೆಗೆ ವನ್ಯಮೃಗ ಗಣತಿ ಅಪೇಕ್ಷಣೀಯ ಎಂದು ಪ್ರತಿಪಾದಿಸುತ್ತಾರೆ.

“ಮಸುಕಾದ ಕಪ್ಪು ಬಿಳುಪಿನ ಫೋಟೋಗಳು ನಿರಾಸೆ ಉಂಟುಮಾಡುತ್ತವೆ. ಆಗಾಗ ಮರಳುವ ನಕ್ಷೆಯ ವಿವರಣೆ ಸಾಮಾನ್ಯ ಓದುಗನಿಗೆ ಕಬ್ಬಿಣದ ಕಡಲೆಯಂತೆನಿಸಿ ಕಿರಿಕಿರಿಯಾಗಬಹುದೇನೋ. “ಕೇವಲ ಪ್ರಕೃತಿ ರಮ್ಯತೆಯ ವರ್ಣನೆಯೊಂದಿಗೆ ಹತ್ತರಲ್ಲಿ ಹನ್ನೊಂದಾಗದೆ ಪರಿಸರ ರಕ್ಷಣೆ, ಸಂಶೋಧನೆ, ಸಮತೋಲನೆಗಳ ಉತ್ಕಟ ಸಮರ್ಥನೆಯಿಂದಾಗಿ ಈ ಪುಸ್ತಕ ಭಿನ್ನವಾಗಿ ಎದ್ದು ನಿಲ್ಲುತ್ತದೆ. ಹಾಗಾಗಿ ಪರಿಸರದ ಬಗ್ಗೆ ಆಸಕ್ತಿ ಕೆರಳಿಸಿ, ಕಾಳಜಿ ಹುಟ್ಟಿಸಿ, ಜಾಗೃತಿ ಮೂಡಿಸುವ ಇಂತಹ ಪುಸ್ತಕಗಳು ಶಾಲಾ ಕಾಲೇಜು ಗ್ರಂಥಾಲಯಗಳಲ್ಲಿ ಕಡ್ಡಾಯವಾಗಿ ಇಡಲು ಯೋಗ್ಯವಾಗಿದೆ ಮತ್ತು ಈ ಪ್ರಶಸ್ತಿಗೆ ಅರ್ಹವಾಗಿದೆ.”

ಇದನ್ನು ಓದಿಯಾದ ಮೇಲೆ, ಕೃತಿಯ ಔಚಿತ್ಯವನ್ನು ಗ್ರಹಿಸಿ ಕೊಟ್ಟ ಇದು ಬಹು ಮಾನವೇ ಸರಿ ಎಂದೂ ಒಪ್ಪಿಕೊಳ್ಳುವಂತಾಯ್ತು. [ಪುಸ್ತಕದ ಕುರಿತು ವಿಮರ್ಶೆ ಎತ್ತಿದ ಸಣ್ಣ ಅಸಮಾಧಾನಕ್ಕೊಂದು ಸಣ್ಣ ಸ್ಪಷ್ಟೀಕರಣ: ಈ ನನ್ನ ಜಾಲಲೇಖನಗಳೂ ಸಂಕಲನವೂ ಕೇವಲ ಓದುಗರನ್ನು ಉದ್ದೇಶಿಸಿದುವಲ್ಲ. ಸಾರ್ವಜನಿಕರಿಗೆ ಪ್ರೇರಣೆ ಕೊಡಬೇಕು, ಮೊದಲಿಗೆ ಅನುಸರಿಸಿ ಬೆಳೆಯುವವರಿಗೆ ಮಾರ್ಗದರ್ಶಿಯೂ ಆಗಬೇಕು ಎಂದೇ ನಕ್ಷಾ ವಿವರಗಳನ್ನು ಹೇಳುತ್ತಿರುತ್ತೇನೆ. ಜಾಲತಾಣದಲ್ಲಿ ಚಿತ್ರ ವಿಭಾಗದಲ್ಲಿ ಸ್ಪಷ್ಟ ರೇಖಾ ಚಿತ್ರಗಳಲ್ಲೂ ಕಾಣಿಸಿದ್ದೇನೆ.]

ನನಗಿತ್ತ ಬಹುಮಾನದ ನಾಮ ಗೌರವ – ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಎಂಬುವವರಿಗೆ ಸೇರುತ್ತದೆ. ೧೯೩೦ರಲ್ಲಿ ಶಿವಮೊಗ್ಗ ಕರ್ಣಾಟಕ ಸಂಘ ಸ್ಥಾಪನೆಯಾದಾಗ ಕೂಡಲಿ ಚಿದಂಬರಂ ಅವರನ್ನು ಕಾರ್ಯದರ್ಶಿಯಾಗಿ ಜತೆ ಸೇರಿಸಿಕೊಂಡು ಶಾಸ್ತ್ರಿಗಳು ಪ್ರಥಮಾಧ್ಯಕ್ಷರಾಗಿದ್ದದ್ದು ಮಾತ್ರ ತಿಳಿದು ಬಂತು. ಕೂಡಲಿ ಚಿದಂಬರಂ ಮುಂದೆ ಸ್ವಂತ ಪ್ರೀತಿ, ಶ್ರಮ, ಹಣವನ್ನೆಲ್ಲಾ ಒಗ್ಗೂಡಿಸಿ ಮೈಸೂರಿನಲ್ಲಿ ಕಾವ್ಯಾಲಯ ಪ್ರಕಾಶನವನ್ನು ಕಟ್ಟಿದ್ದು, ಅದು ಋಷಿಕವಿ ಡಿವಿಗುಂಡಪ್ಪ, ಪ್ರೇಮಕವಿ ಕೆ.ಎಸ್ ನರಸಿಂಹಸ್ವಾಮಿ, ಭಕ್ತ ಕವಿ ಪುತಿನರಾದಿ ಕನ್ನಡದ ಹಲವು ಖ್ಯಾತನಾಮರ ಕೃತಿಗಳಿಗೆ ಸುಂದರ, ಶಿಸ್ತುಬದ್ಧವಾದ ಹಾಗೂ ವಿಶ್ವಾಸಪಾತ್ರವಾದ ನೆಲೆಯೊದಗಿಸಿದ್ದೆಲ್ಲ ಇತಿಹಾಸ. ಪುಸ್ತಕೋದ್ಯಮದಲ್ಲೇ ಇದ್ದ ನನಗೆ ಚಿದಂಬರಂ ಅವರೊಡನೆ ಇದ್ದ ಮಧುರ ವ್ಯವಹಾರ ಸದಾ ಸ್ಮರಣೀಯ. ಆದರೆ ಪ್ರಾಯಶಃ ಕೂಡಲಿಯವರಿಗೆ ಹಿರಿಯರಾದ (ಹಾಗಾಗಿ ಅಧ್ಯಕ್ಷರಾಗಿದ್ದಿರಬೇಕು), ಸಹಜವಾಗಿ ಅವರ ಭವಿಷ್ಯತ್ತಿನ ಘನ ಕಾರ್ಯಗಳಿಗೆ ಪ್ರೇರಕರೂ ಆಗಿರಬಹುದಾದ ಕುಕ್ಕೆಯವರ ಬಗ್ಗೆ ತಿಳಿದುಕೊಳ್ಳಲು ಮಾಡಿದ ಪ್ರಯತ್ನ ವಿಫಲವಾಯಿತು. (ಸಂಘದ ಪೂರ್ವಾಧ್ಯಕ್ಷ ಪ್ರೊ| ತೀನಂ ಶಂಕರನಾರಾಯಣರು ಕುಕ್ಕೆಯವರ ಜೀವನ ಕಥೆಯನ್ನು ವಿಸ್ತಾರವಾಗಿ ಬರೆಯುತ್ತಿದ್ದೇನೆಂದು ತಿಳಿಸಿದ್ದಾರೆ) ಕರ್ನಾಟಕ ಸಂಘದ ಜಾಲತಾಣದಲ್ಲಾಗಲೀ ಕಾರ್ಯದರ್ಶಿಗಳೇ ಉದಾರವಾಗಿ ಕೊಟ್ಟ ೨೦೦೯ರಲ್ಲಿ ಪ್ರಕಟವಾದ ಸಂಘದ ಪರಿಚಯ ಪತ್ರದಲ್ಲಾಗಲೀ ಕುಕ್ಕೆಯವರದೂ ಸೇರಿದಂತೆ ಪೂರ್ವಸೂರಿಗಳ ಸವಿವರ ಉಲ್ಲೇಖಗಳಿಲ್ಲ. ಕಾದಂಬರಿ, ಅನುವಾದ, ಮಹಿಳಾ, ಮುಸ್ಲಿಂ, ಕವನ, ಅಂಕಣ, ಸಣ್ಣ ಕತೆ, ನಾಟಕ, ವಿಜ್ಞಾನ, ಮಕ್ಕಳ, ವೈದ್ಯ ಮತ್ತು ಪ್ರವಾಸ ಸಾಹಿತ್ಯವೆಂದು ಬಹುಮಾನ ಪ್ರಕಾರಗಳ ಹೆಸರು ಅಸ್ಪಷ್ಟವಾಗಿ ಮಾತ್ರ ಸಿಗುತ್ತದೆ. ಹಿಂದಿನೆಲ್ಲ ಪುರಸ್ಕೃತರ ಮತ್ತು ಕೃತಿಗಳ ವಿವರಗಳ ಉಲ್ಲೇಖವಿಲ್ಲ. ಸಂಘ ತನ್ನ ಜಾಲತಾಣವನ್ನು ಇನ್ನಷ್ಟು ಸಮೃದ್ಧಗೊಳಿಸುವುದರೊಡನೆ ಅಧುನಾತಮಗೊಳಿಸಲಿ ಎಂದು ಹಾರೈಸುತ್ತೇನೆ.

ಇನ್ನು ಪ್ರಶಸ್ತಿ, ಬಹುಮಾನ, ಸಮ್ಮಾನಗಳ ಔಚಿತ್ಯ ಕುರಿತಂತೆ ನಾನು ಮುಂದುವರಿಯುವ ಮುನ್ನ ಕನ್ನಡ ಮತ್ತು ಪುಸ್ತಕದ ಬಗ್ಗೆ ನನ್ನ ಇನ್ನೊಂದಷ್ಟು – ಮೇಲೆ ಸೇತು ಸೂಚಿಸಿದ ಲೇಖನ `ಪ್ರಜಾಸತ್ತೆಗೆ ಅವಮಾನ….’ ಅಲ್ಲದೆ, ಪೂರ್ವಾಗ್ರಹವನ್ನು ತುಸು ವಿಸ್ತರಿಸುವುದು ಅವಶ್ಯವಾಗುತ್ತದೆ. ವೈವಿಧ್ಯಮಯ ಪುಸ್ತಕ, ಓದಿನ ವಿಸ್ತೃತ ಅವಕಾಶ, ಕನ್ನಡ ಪುಸ್ತಕಗಳಿಗೆ ಪ್ರಾಶಸ್ತ್ಯ ಮುಂತಾದ ವಿಚಾರಗಳನ್ನು ಬುದ್ಧಿಪೂರ್ವಕವಾಗಿ ಸೇರಿಸಿಕೊಂಡೇ ಮೂವತ್ತಾರು ವರ್ಷಗಳ ಕಾಲ ಪುಸ್ತಕೋದ್ಯಮದ, ಅದರಲ್ಲೂ ಸುಮಾರು ಎರಡು ದಶಕಗಳ ಕಾಲ ಪ್ರಕಾಶಕನಾಗಿಯೂ ಶುದ್ಧ ವೃತ್ತಿಪರವಾಗಿಯೂ ದುಡಿದು ಗಳಿಸಿದ ಅನುಭವ ನನ್ನ ಬಲ ಎನ್ನುವುದನ್ನು ಸೂಚಿಸಬಯಸುತ್ತೇನೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ಕಾಲದಲ್ಲಿ ಭಾಷಾವಾರು ರಾಜ್ಯವಿಂಗಡಣೆ ಮಾಡಿದ್ದು ಬಹಳ ದೊಡ್ಡ ತಪ್ಪು. ಆಡಳಿತದ ಮೌಲ್ಯಗಳನ್ನು ಲೆಕ್ಕ ಹಾಕಬೇಕಾದವರು ಅದರ ಉಪೋಪ ಅಂಗದಲ್ಲಷ್ಟೇ ಉಲ್ಲೇಖಗೊಳ್ಳಬಹುದಾಗಿದ್ದ ಭಾಷೆಯನ್ನೇ ರಾಜ್ಯ ವಿಭಾಗ ಕ್ರಮವಾಗಿ ಅನುಸರಿಸಬಾರದಿತ್ತು. ಇದರಿಂದ ಅದುವರೆಗೆ ಯಾವ ಕಟ್ಟುಪಾಡುಗಳೂ ಇಲ್ಲದೆ ಸಮೃದ್ಧ ಜನಭಾಷೆಗಳಾಗಿದ್ದವು, ಸಹಜ ಸಂವಹನ ಮಾಧ್ಯಮವಾಗಿದ್ದವು ಅನ್ಯ ಕಾರಣಗಳಿಗಾಗಿ ಆರ್ಥಿಕ ಆಯಾಮ ಗಳಿಸತೊಡಗಿದುವು, ಹುಸಿ ಗರ್ವದ ಸಂಕೇತವೂ ಆಗಿಹೋಯ್ತು. ಇಂದು ಪ್ರಾಕೃತಿಕ ಮತ್ತು ಸಾಮಾಜಿಕ ಸತ್ಯವನ್ನೇನೂ ಪ್ರತಿನಿಧಿಸದ ಭಾಷೆ ಆಡಳಿತದ ಮುಂಚೂಣಿಯಲ್ಲಿ ನಿಂತು ಪ್ರಥಮವಾಗಿ ತನ್ನನ್ನೇ ಮತ್ತೆ ಇತರೆಲ್ಲ ನೈಜಾವಶ್ಯಕತೆಗಳನ್ನೂ ಬಲಿಗೊಳ್ಳುತ್ತಿದೆ. ಜೀವಿಗಳಿಗೆ ನೀರು ಅವಶ್ಯ. ಆದರೆ ತಮಿಳು ನಾಡಿನ ತಕ್ಕಡಿಯಲ್ಲಿ ಕನ್ನಡದ ನೀರಿನ ಬಗ್ಗೆ ಹೋರಾಟ ಹೂಡುವ ನಾವು (ಇದು ತಮಿಳರೂ ಸೇರಿ ಎಲ್ಲಾ ಭಾಷಾಂಧರಿಗೂ ಅನ್ವಯಿಸುತ್ತದೆ), ಅಷ್ಟೇ ಮೂರ್ಖತನದಿಂದ ಕನ್ನಡದೊಳಗೇ ನದಿ ತಿರುವಿನ ಪ್ರಶ್ನೆ ಬಂದಾಗ ತುಳುನಾಡು ಮುಂದೆ ಮಾಡುವ, ಕೊಡವ ಜಾಗೃತಿಯನ್ನು ಆವಾಹಿಸುವ ದುಃಸ್ಥಿತಿ ಬಂದಿದೆ. ಪಾರಿಸರಿಕ ಸಮಸ್ಯೆಗಳ ಕುರಿತು ಗಂಭೀರರಾಗಬೇಕಾದವರು ಭಾಷಾಭಿಮಾನದಲ್ಲಿ ಕಳೆದೇ ಹೋಗಿದ್ದೇವೆ. ಅಂದರೆ ಪ್ರಕೃತಿದತ್ತವಾದ ಬಿಸಿಲು, ಗಾಳಿ, ನೀರು, ಆಹಾರ, ಭದ್ರತೆ, ಸಂವಹನ ಎಂಬಿತ್ಯಾದಿ ಭಿನ್ನ ಕವಲುಗಳಲ್ಲಿ ಒಂದು ಸಣ್ಣ ಅಂಗವಷ್ಟೇ ಆಗಬೇಕಿದ್ದ ಭಾಷೆ (ಅದರಲ್ಲೂ ಮುಖ್ಯವಾಗಿ ಹಿಂದಿ ದಬ್ಬಾಳಿಕೆಯ ವಿರುದ್ಧ ಕೋಟೆಗಟ್ಟುವ ಎಚ್ಚರದಲ್ಲಿ ದಕ್ಷಿಣ ಭಾರತದ ಮುಖ್ಯವಾಗಿ ದ್ರಾವಿಡ ಮೂಲದ ಪ್ರಾದೇಶಿಕ ಭಾಷೆಗಳು) ರಾಜ್ಯಗಳ ಸಿಂಹಾಸನದಲ್ಲಿ ಕುಳಿತು ಇಂದು ಆಡಳಿತ ಗೊಂದಲದ ಗೂಡಾಗಿದೆ. ಮನೆಯಲ್ಲಿ ಅಜ್ಜಿಮನೆಯ ಕುಂಬ್ರ ಸೀಮೆಯ ತುಳು, ಓರಗೆಯವರೊಡನೆ ಕುಡ್ಲದ ತುಳು, ಶಾಲಾ ಗೆಳೆಯರೊಡನೆ ಮಂಗ್ಳೂರು ಕನ್ನಡ, ಕಲಿಕೆಗೆ ರಾಣೀ ಇಂಗ್ಲಿಷ್, ಹವ್ಯಾಸಕ್ಕೆ ಅಮೆರಿಕನ್ ಇಂಗ್ಲಿಷ್, ವೃತ್ತಿಗೆ ಜರ್ಮನ್, ಮನರಂಜನೆಗೆ ಹಿಂದಿ ಹಿಂಬಾಲಿಸಿದರೂ ನಾವೇ ಮಾಡಿಕೊಂಡ ರಾಜಕೀಯ ಗಡಿ – ಕರ್ನಾಟಕದೊಳಗೆ ಕನ್ನಡಕ್ಕಷ್ಟೇ ಜೈಕಾರ ಹಾಕಬಲ್ಲಿರಿ. ಇಂದು `ಕನ್ನಡ’ ಎನ್ನುವುದು ಗಡಿ, ಪ್ರದರ್ಶನ ಚಟ, ರಾಜಕೀಯ ಅಸ್ತ್ರ, ಗರ್ವದ ಸಂಕೇತ; ಸಹಜವಾಗಿ ಬಹು ದೊಡ್ಡ ವರ್ಗಕ್ಕೆ ಹುಸಿ ಜೀವನದ ದಾರಿಯೇ ಆಗಿದೆ. ಸುಮಾರು ಎರಡು ದಶಕಗಳ ಹಿಂದೆ ಹಾಮಾನಾಯಕರು ಅದೇ ಮೊದಲಿಗೆ ನನ್ನಂಗಡಿಗೆ ಬಂದವರು ಎದುರಿನ ಪ್ರದರ್ಶನ ಕಿಂಡಿಯ ಮೇಲೆ ಕಣ್ಣಾಡಿಸಿ “ಕನ್ನಡ ಪುಸ್ತಕಗಳು ತುಂಬಾ ಕಡಿಮೆಯಿವೆ” ಎಂದು ಆಕ್ಷೇಪಾರ್ಹ ಉದ್ಗಾರ ತೆಗೆದಿದ್ದರು. (ಹಿಂದೂ ಸಮಾಜೋತ್ಸವದ ಕಾರ್ಯಕರ್ತರ ಹಿಂಡು ಕಟ್ಟಿಕೊಂಡು ಅಂಗಡಿ ಅಂಗಡಿ ನುಗ್ಗುತ್ತಿದ್ದ ನಾಯಕಮಣಿಯೊಬ್ಬರು “ಅತ್ರಿಯಲ್ಲಿ ಭಗವಾಧ್ವಜ ಇಲ್ಲ” ಎಂದು ಒರಲಿದ್ದಕ್ಕೆ ಇದೇನೂ ಭಿನ್ನವಲ್ಲ!) ಖ್ಯಾತನಾಮರು, ಹಿರಿಯರು, ನನ್ನ ತಂದೆಯ ಇಲಾಖಾ ವರಿಷ್ಠರು, ಅದುವರೆಗೆ ನನಗೂ ಗೌರವಾರ್ಹರೇ ಆಗಿದ್ದ ಹಾಮಾನಾಗೆ “ಪ್ರದರ್ಶನ ಯೋಗ್ಯ ಕನ್ನಡ ಪುಸ್ತಕ ವೈವಿಧ್ಯ ಇಲ್ಲ” ಎಂದೇ ನಾನು ಉತ್ತರಿಸಿದ್ದೆ.

ನೆಲೆ ತಪ್ಪಿದ ಕನ್ನಡಾಭಿಮಾನ ಇಂದು ಕನ್ನಡ ಪುಸ್ತಕೋದ್ಯಮವನ್ನು ಸಂಪೂರ್ಣ ಕುಲಗೆಡಿಸಿದೆ. ಅದೂ ಇಂದಿನ ಬೆಂಗಳೂರಿನ (ಊರೂರಿನ ಎನ್ನಿ ಬೇಕಾದರೆ) ಕಸದಗುಡ್ಡೆಯಂತೆ ಭಯಕಾರಿಯಾದಾಗ, ತೇಪೆ ಕೆಲಸವಾಗಿ ಪುಸ್ತಕ ನೀತಿಯ ಜಪವೂ ನಡೆದದ್ದಿತ್ತು; ಎಲ್ಲ ಸರಕಾರೀ ಘೋಷಣೆಗಳಂತೆ ಯಥಾ ಸ್ಥಿತಿ ಮುಂದುವರಿದಿದೆ. (ಪ್ರಸ್ತುತ ಪ್ರಚಾರದುತ್ತಂಗದಲ್ಲಿರುವ `ಸಾಂಸ್ಕೃತಿಕ ನೀತಿ’ಯೂ ಹಾಗೇ. ಸೃಜನಶೀಲತೆಗೆ, ಸಹಜ ವಿಕಾಸಕ್ಕೆ ತೊಡಿಸಲಿರುವ ಇನ್ನೊಂದೇ ಸುವರ್ಣ ಸಂಕೋಲೆ) ಎಲ್ಲಾ ವೈವಿಧ್ಯದೊಡನೆ ಪ್ರಾದೇಶಿಕ ಭಾಷೆಗಳ ವಿಕಾಸಕ್ಕೆ ತಕ್ಕ ಪರಿಸರ ನಿರ್ವಹಣೆಯಷ್ಟೇ ಮಾಡಬೇಕಿದ್ದ ಸರಕಾರವಿಂದು ನೂರೆಂಟು ಬಗೆಯಲ್ಲಿ ಸ್ವತಃ ತೊಡಗಿಕೊಂಡು ಸಹಜತೆಯನ್ನು ನಾಶಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂಬಲ್ಲಿಂದ ತೊಡಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅನುವಾದ ಪ್ರಾಧಿಕಾರ, ಎಲ್ಲಾ ವಿವಿನಿಲಯಗಳಲ್ಲೂ ಹೆಣಭಾರದ ಕನ್ನಡ ವಿಭಾಗಳಿದ್ದದ್ದು ಸಾಲದೆಂಬಂತೆ ಕನ್ನಡ ವಿಶ್ವವಿದ್ಯಾಲಯ ಇತ್ಯಾದಿ ಒಂದು ಸಾಲು. ಇನ್ನು ಮುಟ್ಟಿದ್ದಕ್ಕೆ ಬಿಟ್ಟದಕ್ಕೆ ಒಂದೊಂದು ಅಕಾಡೆಮಿ, ಪ್ರಾಧಿಕಾರ, ಅನುದಾನಿತ ಖಾಸಗಿ ಸಾವಿರಾರು ಸಂಘ ಸಂಸ್ಥೆಗಳೆಲ್ಲಾ ಖಜಾನೆ ಲೂಟಿ ಮಾಡುವುದು ಕನ್ನಡದ ಹೆಸರಿನಲ್ಲೇ. ಎಷ್ಟೋ ಬಾರಿ ಔಚಿತ್ಯ, ಸಾಮರ್ಥ್ಯ, ಕನಿಷ್ಠ ಪರಿಶ್ರಮಗಳ ಗಂಧಗಾಳಿಯಿಲ್ಲದಂತೆ ಪ್ರಕಟಿಸುವುದೂ ಕನ್ನಡವನ್ನೇ! ಇನ್ನು ಇವುಗಳ ಔದಾರ್ಯ ಮೇರೆವರಿಯುವುದನ್ನು ಬಟವಾಡೆ ಪಟ್ಟಿಯಲ್ಲಿ ಕಾಣಬೇಕು – ಸಹಾಯ, ಮಾಸಾಶನ, ಅನುದಾನ, ಬಹುಮಾನ, ಪ್ರಶಸ್ತಿ, ವಿವಿಧ ಭತ್ತೆಗಳು ನಾಳೆ ಹುಟ್ಟಬಹುದಾದ ಮಗು ಬರೆಯಬಹುದಾದ ಕೃತಿರತ್ನಕ್ಕೂ ಮೀಸಲಾಗಿಯೇ ಇರುತ್ತದೆ; ಸೂಕ್ತ ತಂತಿ ಮಿಡಿದರೆ! ಇವೆಲ್ಲವುಗಳ ಮೊತ್ತವಾಗಿ…

ಮೂವತ್ತಾರು ವರ್ಷಗಳ ಪುಸ್ತಕೋದ್ಯಮದ ಗಾಢ ಸಂಬಂಧವನ್ನು ನಾನು ಎರಡು ಹಂತದಲ್ಲಿ ಕಳಚಿಕೊಂಡೆ. ನ್ಯಾಯಯುತವಾದ ಆದಾಯವನ್ನು ನಿರಾಕರಿಸಿ, ಅಂದರೆ ಲೇಖಕನ ಗೌರವಧನ, ಪುಸ್ತಕ ತಯಾರಿಯ ಖರ್ಚು ಮತ್ತು ವೃತ್ತಿಪರ ಮಾರಾಟಗಾರರ ವಟ್ಟಾಂಶವನ್ನಷ್ಟೇ ಪರಿಗಣಿಸಿ ಬೆಲೆ ಮುದ್ರಿಸಿ, ಮಾರಿ, ಸುಮಾರು ಎರಡು ದಶಕಗಳ ಕಾಲ ನಾನು ಪುಸ್ತಕ ಪ್ರಕಾಶನವನ್ನು ನಡೆಸಿದ್ದೆ. ಐವತ್ತಕ್ಕೂ ಮಿಕ್ಕು ಪ್ರಕಟಣೆಗಳನ್ನು ತಂದೆ. ಅವನ್ನು ಉದ್ದಿಮೆಯ ಎಲ್ಲಾ ಒತ್ತಡ, ಆಮಿಷಗಳ ಎದುರೀಜಿನಲ್ಲಿ ಸಾಮಾನ್ಯ ಓದುಗನಿಗೆ ತಲಪಿಸುವ ಜವಾಬ್ದಾರಿಯನ್ನು ನಿರ್ವಹಿಸಿದೆ. ಅದನ್ನು ಮೊದಲು ಮುಚ್ಚಿದೆ. ವಿವರಗಳಿಗೆ ನೋಡಿ: ಅತ್ರಿ –ಪ್ರಕಾಶನವನ್ನು ಮುಚ್ಚಿದೆ. ಪ್ರಕಾಶನ ಮುಚ್ಚಿ ವರ್ಷ ಕಳೆಯುತ್ತಿದ್ದಂತೆ, ಮೂವತ್ತಾರು ವರ್ಷಗಳ ಕಾಲ ನನ್ನ ಜೀವನದ ಏಕೈಕ ಆದಾಯ ಮೂಲವೇ ಆದ, ನಾನೇ ಕಟ್ಟಿ ಬೆಳೆಸಿದ ಪುಸ್ತಕದ ಮಳಿಗೆಯಿಂದಲೂ ಪೂರ್ಣ ಕಳಚಿಕೊಂಡೆ. ಅರ್ಥಾತ್, ಮೂರು ವರ್ಷಗಳ ಯೋಚನೆಯನ್ನು ಕ್ರಮಬದ್ಧವಾಗಿ ರೂಢಿಸಿ, ಪುಸ್ತಕೋದ್ಯಮದಿಂದಲೇ ನಿವೃತ್ತಿಯನ್ನು ಕೈಗೊಂಡೆ. ನೋಡಿ: ಅತ್ರಿ ಬುಕ್ ಸೆಂಟರ್ ಮುಚ್ಚಿ, ವಾನಪ್ರಸ್ಥ!

ಮೇಲಿನವೆಲ್ಲಾ ಪುಸ್ತಕೋದ್ಯಮದ ವಿರುದ್ಧ ನನ್ನ ವೈಯಕ್ತಿಕ ಮಿತಿಯ ಕಾರುಭಾರುಗಳು. ಸಾರ್ವಜನಿಕದಲ್ಲಿ ಸನ್ನಿವೇಶ ಬಂದಲ್ಲೆಲ್ಲ ವಿರೋಧಿಸಿದೆ (ಹುಡುಕಿಕೊಂಡು ಹೋಗಲಿಲ್ಲ), ಜಿದ್ದಿಲ್ಲದೆ ನೇರ ಸಂಬಂಧಪಟ್ಟವರಿಗೇ ಮೊದಲು ಬರೆದೆ, ಪ್ರಯೋಜನವಿಲ್ಲದಾಗ ಪತ್ರಿಕೆಗಳಿಗೂ ಬರೆದೆ. ಮೈಸೂರಿನಲ್ಲಾದ ಮೊದಲ ವಿಶ್ವಕನ್ನಡ ಸಮ್ಮೇಳನ, ಮುಧೋಳದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂಥ ವೇದಿಕೆಗಳು, ಕಮ್ಮಟಗಳಂಥ ಒದಗಿದ ಹಲವು ವೇದಿಕೆಗಳಲ್ಲಿ ಪ್ರಬಂಧಗಳು, ಆಕಾಶವಾಣಿಯ ಸಂವಾದ ಕೂಟಗಳಲ್ಲೆಲ್ಲ ಯಾವುದೇ ದಾಕ್ಷಿಣ್ಯವಿಟ್ಟುಕೊಳ್ಳದೆ, ಆದರೆ ಎಲ್ಲೂ ವ್ಯಕ್ತಿನಿಂದನಾತ್ಮಕವಾಗದಂತೆ ನಾನು ಕಂಡ ಸತ್ಯವನ್ನು ಪ್ರತಿಪಾದಿಸಿದೆ. ಒಂದು ಹಂತದ ಬರಹಗಳನ್ನು ಸಂಕಲಿಸಿ ೧೯೯೯ರಲ್ಲಿ `ಪುಸ್ತಕ ಮಾರಾಟ ಹೋರಾಟ’ ಎಂಬ ಪುಸ್ತಕವನ್ನೂ ಪ್ರಕಟಿಸಿದೆ. (ಸದ್ಯ ಅಲಭ್ಯ. ಆಸಕ್ತರು ಗ್ರಂಥಾಲಯಗಳಲ್ಲಿ ಹುಡುಕಿ ನೋಡಿ.) ಅನಂತರವೂ ಬಂದ ಕೆಲವು ಬರಹಗಳನ್ನು ಇಲ್ಲೇ `ಪುಸ್ತಕೋದ್ಯಮ’ ವಿಭಾಗಕ್ಕೆ ಹೋಗಿ, ಆಯ್ದು ಓದಿಕೊಳ್ಳಬಹುದು.

ಮುದ್ರಣ ಮಾಧ್ಯಮದ ಸೋಲಿನಿಂದ ನನ್ನ ಮಿತಿಯ ಜ್ಞಾನಸಂಗ್ರಹವನ್ನು ಸಮಾಜಕ್ಕೆ ಮರಳಿಸುವ ಋಣ (ಇದು ನನ್ನ ತಂದೆ ಸದಾ ಹೇಳುತ್ತಿದ್ದ ಮಾತೂ ಹೌದು.) ಕಳಚಿಕೊಳ್ಳಬಾರದೆಂದು ಜಾಲತಾಣಕ್ಕಿಳಿದೆ; ನನ್ನ ಈ ಜಾಲತಾಣಕ್ಕೀಗ ಪ್ರಾಯ ಆರು ವರ್ಷವನ್ನು ಮೀರಿದೆ. ಅಂಕಿ ಸಂಕಿಗಳು ಪೂರ್ಣ ಸತ್ಯವನ್ನು ಹೇಳುವುದಿಲ್ಲ ಎಂಬ ಅರಿವಿದ್ದರೂ ಹೇಳಿಬಿಡುತ್ತೇನೆ – ಇದುವರೆಗೆ ನನ್ನ ಜಾಲತಾಣದಲ್ಲಿ ನಾನೂರಕ್ಕೂ ಮಿಕ್ಕು ಲೇಖನಗಳು ಮತ್ತವಕ್ಕೆ ೨೬೦೦ಕ್ಕು ಮಿಕ್ಕು ಓದುಗ ಪ್ರತಿಕ್ರಿಯೆಗಳು, ದಾಖಲಾಗಿವೆ. ಸರಾಸರಿಯಲ್ಲಿ ದಿನಕ್ಕೆ ಸುಮಾರು ಅರವತ್ತು ಮಂದಿಯಂತೆ – ಒಂದು ಲಕ್ಷದ ಮೂವತ್ತು ಸಾವಿರಕ್ಕೂ ಮಿಕ್ಕು ವೀಕ್ಷಕರು (ವೀಕ್ಷಕರೆಲ್ಲಾ ಓದುಗರು ಎಂದು ನಾನು ಭ್ರಮಿಸಿಲ್ಲ) ಇದನ್ನು ಅನುಭವಿಸಿದ್ದಾರೆ. ಅಲ್ಲದೇ ವಿ-ಪುಸ್ತಕದ ರೂಪದಲ್ಲಿ ಹದಿನಾಲ್ಕು ಘನ ಕೃತಿಗಳನ್ನು ಪೂರ್ಣ ಉಚಿತವಾಗಿ ಇಲ್ಲೇ ಕೊಡುವುದು ಸಾಧ್ಯವಾಗಿದೆ. ಇನ್ನು ನಕ್ಷೆಗಳು, ಚಿತ್ರಗಳು, ಚಲಚಿತ್ರಗಳು ಅಲ್ಲದೇ ಧ್ವನಿವಾಹಿನಿಗಳೂ ಆಸಕ್ತರ ಬಳಕೆಗೆ ಮುಕ್ತವೇ ಇವೆ. ಸದ್ಯ ಧಾರಾವಾಹಿಯಾಗಿ ಪ್ರಕಟವಾಗುತ್ತಿರುವ ಚಾರ್ಲ್ಸ್ ಡಿಕನ್ಸಿನ ಆತ್ಮಕಥಾನಕ ಇಂಗ್ಲಿಷ್ ಕಾದಂಬರಿಯ ಕನ್ನಡ ಭಾವಾನುವಾದವನ್ನು ಶ್ರವಣ-ಪುಸ್ತಕವನ್ನಾಗಿಯೂ ಕಂತುಗಳಲ್ಲಿ (ಪರೋಕ್ಷವಾಗಿ ಓದುತ್ತ ಕೂರಲು ಸಮಯಾವಕಾಶವಿಲ್ಲದೆ ಅನ್ಯ ದೈಹಿಕ ಕಾರ್ಯನಿರತರಾದವರಿಗೂ ಅನುಕೂಲವಾಗುವಂತೆ) ಹರಿಸುತ್ತಿರುವುದು ನಿಮಗೆಲ್ಲಾ ತಿಳಿದೇ ಇದೆ. ಜಾಲತಾಣದಲ್ಲಿ ಹೊಸ ಲೇಖನಗಳನ್ನು ವಾರಕ್ಕೆರಡು ಬಾರಿ – ಮಂಗಳವಾರ ಮತ್ತು ಶುಕ್ರವಾರ ಪ್ರಕಟಿಸುತ್ತಲೇ ಬಂದಿದ್ದೇನೆ. ಅದರ ಕುರಿತು ಖಾಯಂ ತಿಳುವಳಿಕೆ ಕೊಡುತ್ತಿರಬೇಕು ಎಂದು ಬಯಸಿ ತಮ್ಮ ಮಿಂಚಂಚೆ ವಿಳಾಸವನ್ನು ಕೊಟ್ಟ, ಅಂದರೆ ಖಾಯಂ ಓದುಗ ಬಳಗ ಎಂದೇ ಭಾವಿಸಬಹುದಾದವರ ಸಂಖ್ಯೆ ಎಂಟನೂರಕ್ಕೂ ಮಿಕ್ಕು ಇದೆ. (ಹಾಗೆ ತಿಳುವಳಿಕೆ ಪತ್ರ ಸಿಗದವರು ನಿಮ್ಮ ಮಿಂಚಂಚೆ ವಿಳಾಸವನ್ನು ಈಗಲೂ ಅವಶ್ಯ ಕೊಡಬಹುದು)

ಹೀಗಿದ್ದೂ…..

ಪುಸ್ತಕೋದ್ಯಮದಿಂದ ನಾನು ಕಳಚಿಕೊಂಡರೂ ಅಲ್ಲಿ ಗಳಿಸಿದ ಗೆಳೆತನಗಳು ದೂರವಾಗಿರಲಿಲ್ಲ. ಹಾಗೆ ಅಭಿನವ ಪ್ರಕಾಶನದ ನ. ರವಿಕುಮಾರ ನನ್ನೊಂದಾದರೂ ಪುಸ್ತಕ ತನ್ನ ಪ್ರಕಟಣೆಯಾಗಬೇಕು ಎಂದು ಬಯಸಿದಾಗ ಯಾವ ಶರತ್ತೂ ಇಲ್ಲದೆ ಒಪ್ಪಿಕೊಂಡೆ. ಹಾಗೆ ಪ್ರಕಟವಾದ ದ್ವೀಪ ಸಮೂಹಗಳ ಕತೆ (ಗಮನಿಸಿ – ಇದು ಬಿಡಿ ಲೇಖನಗಳ ಮಾಲೆಯಾಗಿ ಈಗಲೂ ನನ್ನ ಜಾಲತಾಣದಲ್ಲಿ ಲಭ್ಯ) ನನಗರಿಯದ ಮಾಯೆಯಲ್ಲಿ ಸದ್ಯ ಎರಡನೇ ಮುದ್ರಣದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ! ರವಿಕುಮಾರ್ ಮತ್ತೆ ಬಯಸಿ ಪಡೆದುಕೊಂಡು ಪ್ರಕಟಿಸಿದ್ದು ಈ ಸಂಕಲನ – ಕುಮಾರಪರ್ವತದ ಸುತ್ತ ಮುತ್ತ. (ಹೀಗೇ ಬರಹ ಪಬ್ಲಿಷಿಂಗ್ ಹೌಸ್ ಅಥವಾ ಪ್ರಗತಿ ಗ್ರಾಫಿಕ್ಸಿನ ಎಂ. ಭೈರೇ ಗೌಡರೂ ಬಯಸಿ `ಶಿಲಾರೋಹಿಯ ಕಡತ’ ಎಂಬ ಇನ್ನೊಂದು ಸಂಕಲನವನ್ನು ತಂದಿದ್ದಾರೆ.) ಕುಕ್ಕೆಶ್ರೀ ಬಹುಮಾನವನ್ನು ನಾನು ಒಪ್ಪಿಕೊಂಡದ್ದೇ ಮನಃಸ್ಥಿತಿಯಲ್ಲಿ ಈ ಸಂಕಲನಗಳನ್ನು ನಾನು ಪ್ರಕಟಣೆಗೆ ಕೊಟ್ಟುದಾಗಿದೆ. ಸರಳವಾಗಿ ಹೇಳುವುದಾದರೆ, ಇನ್ನೂ ಮುದ್ರಿತ ಪುಸ್ತಕವನ್ನು ಕೊಂಡು ಓದುವ ಅಥವಾ ಗಮನಿಸಿ ಪುರಸ್ಕರಿಸುವ ಜನಗಳಿದ್ದರೆ ಅಲ್ಲಿಯೂ ಈ ವಿಚಾರಗಳು ಪ್ರಚಾರ ಪಡೆಯಲಿ (ನನ್ನ ಕೀರ್ತಿಪತಾಕೆಯನ್ನು ಹಾರಿಸಲಿ ಎಂದಲ್ಲ) ಎಂದಷ್ಟೇ ಆಗಿತ್ತು. ಇದು ಎಷ್ಟು ಫಲಿಸಿತು ಎನ್ನುವುದಕ್ಕೆ ಕುಕ್ಕೆಶ್ರೀ ಪ್ರಶಸ್ತಿ ಒಂದು ದೊಡ್ಡ ಸಾಕ್ಷಿ ಎಂದೇ ನಾನು ಭಾವಿಸುತ್ತೇನೆ. ಅಲ್ಲದೆ ಇನ್ನೂ ಒಂದು ಸಾಕ್ಷಿಯನ್ನು ನಾನಿಲ್ಲಿ ಸಂಕ್ಷಿಪ್ತವಾಗಿಯಾದರೂ ಹೇಳಲೇಬೇಕು.

ತಿಂಗಳೆರಡರ ಹಿಂದೆ ರಾತ್ರಿ ಏಳೂವರೆ ಗಂಟೆಗೆ ನನ್ನ ಸ್ಥಿರವಾಣಿಗೊಂದು ಕರೆ ಬಂತು. “ನಾನು ಚನ್ನರಾಯಪಟ್ಟಣದ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಅಧ್ಯಾಪಕ. ಪುಸ್ತಕ ಮಳಿಗೆಯಲ್ಲಿ ಕುಮಾರಪರ್ವತದ ಸುತ್ತ ಮುತ್ತ ಕಂಡು, ಕುತೂಹಲದಲ್ಲಿ ಕೊಂಡು, ಕೊಂಡದ್ದಕ್ಕೆ ಓದಿ ಮೆಚ್ಚಿದೆ. ಆ ವಲಯವನ್ನು ಸ್ವಲ್ಪವಾದರೂ ಕಂಡು ಹೆಚ್ಚಿನ ಆನಂದಕ್ಕೂ ಮುಂದಾದೆ. ಪೂರ್ವಪರಿಚಿತ ಅರಣ್ಯ ಇಲಾಖೆಯ ಮಿತ್ರರೊಬ್ಬರನ್ನು ಸಂಪರ್ಕಿಸಿ ಬಿಸಿಲೆಗೆ ಭೇಟಿ ಕೊಟ್ಟು, ಕೆಲವೆಲ್ಲಾ ನೋಡಿಯಾಗುವಾಗ ಸಂಜೆ ಗಂಟೇ ಮೂರಾಗಿತ್ತು. ನಾನೇನೂ ನಿರೀಕ್ಷಿಸದೇ ಮಂಗಳೂರತ್ತಣ ದಿನದ ಕೊನೆಯ ಬಸ್ಸು ಬಿಸಿಲೆ ಗೇಟಿಗೆ ಬಂದಿತ್ತು. ಹಾಗೇ ಯೋಜನೆಯಿಲ್ಲದೆ ಅದನ್ನೇರಿ, ಸುಬ್ರಹ್ಮಣ್ಯದಲ್ಲಿ ಬಸ್ಸು ಬದಲಾಯಿಸಿ ಮಂಗಳೂರಿಗೆ ಬಂದಿದ್ದೇನೆ. ಪುಸ್ತಕದಲ್ಲೇ ಕೊಟ್ಟ ವಿಳಾಸವನ್ನು ವಿಚಾರಿಸಿಕೊಂಡು ನಿಮ್ಮ ವಠಾರದಲ್ಲೇ ಎಲ್ಲೋ ಸಿಕ್ಕಿಬಿದ್ದಿದ್ದೇನೆ, ದಾರಿ ಹೇಳಿ.” ಅವರು ಬಂದರು, ಧಾರಾಳ ಸಂವಾದ ನಡೆಯಿತು, ನನ್ನ ಬೇರೊಂದಷ್ಟು ಪ್ರಕಟಣೆಗಳನ್ನು ಬಯಸಿ (ಇಲ್ಲ, ನಾನು ಒಡ್ಡುವುದೂ ಇಲ್ಲ, ಒತ್ತಾಯಿಸುವುದೂ ಇಲ್ಲ) ಕೊಂಡರು, ನಮ್ಮ ಯಾವ ಆತಿಥ್ಯಕ್ಕೂ ನಿಲ್ಲದೆ ಹತ್ತು ಗಂಟೆಯ ರಾತ್ರಿ ಬಸ್ಸಿಗೆ ಹೊರಟೇ ಹೋದರು. ನಂಬಿದರೆ ನಂಬಿ, ಈ ಸನ್ನಿವೇಶದ ಬೆರಗು ಕಳೆದ ಕಾಲಕ್ಕೆ ನಾನು ಆ ಮಿತ್ರರ ಚರವಾಣಿ, ಸ್ಪಷ್ಟ ವಿಳಾಸ ಬಿಡಿ, ಹೆಸರನ್ನೂ ಮರೆತುಬಿಟ್ಟಿದ್ದೆ! (ತಿಂಗಳ ಹಿಂದೆ ಚನ್ನರಾಯಪಟ್ಟಣದ ಪಪೂ ಕಾಲೇಜಿನ ವಿಳಾಸಕ್ಕೆ ಒಂದು ಅಂಚೆ ಕಾರ್ಡು ಬರೆದಿದ್ದೆ, ಇಂದಿನವರೆಗೂ ಉತ್ತರ ಬಂದಿಲ್ಲ.)

ಇದಕ್ಕೆ ಪ್ರಥಮ ಪ್ರತಿಕ್ರಿಯೆಯಾಗಿಯೇ ನಾನು ಕರ್ನಾಟಕ ಸಂಘಕ್ಕೆ ಬರೆದ ಪತ್ರದಲ್ಲೇ ಹೇಳಿಕೊಂಡಂತೆ ನಾನು ಪ್ರಶಸ್ತಿ, ಬಹುಮಾನಗಳಿಗೆ ಪ್ರಯತ್ನಿಸಿದವನೇ ಅಲ್ಲ, ಕೆಲವೇ ಕೆಲವು ಬರಬಹುದೆಂಬ ಸೂಚನೆಯಿದ್ದವನ್ನೂ ಪ್ರಚಾರದ ತೀಟೆಯಿಲ್ಲದೆ ನಿರಾಕರಿಸಿದ್ದೇನೆ. ಅಂದರೆ ಇದನ್ನು ಒಪ್ಪಿಕೊಂಡದ್ದು ಮತ್ತು ಮುಂದಿನ ದಾರಿಯ ಕುರಿತು ಕೆಲವು ಸ್ಪಷ್ಟೀಕರಣಗಳು: ೧. ಪ್ರಸ್ತುತ ಬಹುಮಾನ ಸ್ಪರ್ಧೆಯ ಫಲಿತಾಂಶದ ಘೋಷಣೆಯವರೆಗೂ ನನಗೆ ಹೀಗೊಂದು ಅವಕಾಶ ಉಂಟು, ಅದಕ್ಕೆ ನನ್ನ ಅಭ್ಯರ್ಥಿತನ ಪ್ರಕಾಶಕರಿಂದ ಹೋಗಿದೆ ಇತ್ಯಾದಿ ತಿಳಿದೇ ಇರಲಿಲ್ಲ. ಬಹುಮಾನ ಘೋಷಣೆಯನಂತರ ಕರ್ನಾಟಕ ಸಂಘದ ಚಾರಿತ್ರ್ಯ ಅಂದರೆ, ಬಹಳ ಮುಖ್ಯವಾಗಿ ಸರಕಾರೀ ಪೋಷಣೆಯನ್ನು ಧಿಕ್ಕರಿಸಿ ಜನಪೋಷಣೆಯನ್ನೇ ನೆಚ್ಚಿ ೮೪ ವರ್ಷಗಳಿಗೂ ಮಿಕ್ಕು ದೃಢವಾಗಿ ನಿಂತು, ಮುಂದುವರಿಯುವ ಛಲ ತಿಳಿದು ಹೆಚ್ಚಿನ ಕುಶಿಪಟ್ಟಿದ್ದೇನೆ. ೨. ಕುಮಾರ ಪರ್ವತದ ಸುತ್ತಮುತ್ತ – ನನ್ನ ಅನುಭವಗಳ ಸಂಕಲನ. ಆದರೆ ರಮ್ಯ ಸಾಹಸಕಥನ ಅಥವಾ ಆತ್ಮಕಥಾನಕವಾಗದ ರೀತಿಯಲ್ಲಿ ವನ್ಯವಲಯದ ಸಮಸ್ಯೆ, ಉಳಿವಿನ ಹೋರಾಟದ ಧ್ವನಿಯಾಗುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇನೆ. ಬಹುಮಾನದ ಪ್ರಭಾವಲಯ ಈ ಪಾರಿಸರಿಕ ವಿಚಾರ – ವನ್ಯಸಂರಕ್ಷಣೆಯ ಜಾಗೃತಿಯ ಪ್ರಚಾರಕ್ಕೆ ಒದಗುತ್ತದೆ ಎಂದೇ ಭಾವಿಸಿದ್ದೇನೆ. ದನ್ನು ಮೀರಿದ… ೩. ಮೂವತ್ತಾರು ವರ್ಷಗಳುದ್ದಕ್ಕೆ ಪುಸ್ತಕೋದ್ಯಮವನ್ನು ಬುದ್ಧಿಪೂರ್ವಕವಾಗಿ – ಸ್ಪಷ್ಟವಾಗಿ ಹೇಳುವುದಿದ್ದರೆ, ಕೇವಲ ಹೊಟ್ಟೆಪಾಡಿಗೆಂಬಂತೆ ಅಲ್ಲ, ತತ್ತ್ವ, ಆದರ್ಶಗಳ ಸಹಿತ ನಡೆಸಿ ನಿವೃತ್ತನಾದವನು ನಾನು. ನಾನು ದಿವಾಳಿಯಾದವನಲ್ಲ, ಅನುಚಿತ ನಿಧಿಗ್ರಹಣ ಮಾಡಿ ಭೂಗತನಾದವನೂ ಅಲ್ಲ; ಸ್ವಯಾರ್ಜಿತ ಆರ್ಥಿಕತೆಯಲ್ಲಿ ತೃಪ್ತನಾಗಿ ಹೊರಬಂದವ. ಹಾಗಾಗಿ ಸಂಘದ ಆತಿಥ್ಯವನ್ನು ನಾನು ಒಪ್ಪಿಕೊಂಡರೂ ಬಹುಮಾನದ ಹಣವನ್ನು ಸವಿನಯ ಅದಕ್ಕೇ ಮರಳಿಸುತ್ತಿದ್ದೇನೆ. ೪. ಬಹುಮಾನ ಪ್ರದಾನ ಸಮಾರಂಭದಲ್ಲಿ ನನಗಿಂತ ಅನುಭವ ಮತ್ತು ಸ್ಥಾನದಲ್ಲಿ ಅನೇಕ ಹಿರಿಯರಿದ್ದು ನನ್ನ ಕೆಲವು ವಿಚಾರಗಳು ಸ್ಪಷ್ಟವಾಗದಿರಬಹುದು ಎಂಬ ಹೆದರಿಕೆಗೆ ಇಲ್ಲಿ ಬರವಣಿಗೆಯಲ್ಲಿ ತೋಡಿಕೊಂಡಿದ್ದೇನೆ. ೫. `ಕುಮಾರಪರ್ವತ’ದ ಆರೋಹಣದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಪ್ರಥಮ ವಂದ್ಯ. ಈಗ ಅಲ್ಲಿನ ಅನುಭವಗಳು ಪುಸ್ತಕಕ್ಕೆ ಇಳಿದು ಬಂದಲ್ಲಿಯೂ ಶ್ರೀ ಕುಕ್ಕೆ ಸುಬ್ರಹ್ಮಣ್ಯ (ಶಾಸ್ತ್ರಿಗಳ ಹೆಸರು) ಬಂದಿರುವುದು ಆಕಸ್ಮಿಕವೇ ಆದರೂ ಆನಂದದಾಯಕ.