(ಚಕ್ರವರ್ತಿಗಳು – ೨೮, ದಕ್ಷಿಣಾಪಥದಲ್ಲಿ… – ೫)

ಚಾಲಕ್ಕಾಯಂನಿಂದ ವಾಪಾಸು ಹೊರಟವರಿಗೆ ಮುಂದಿನ ಗುರಿ – ಕುಮಲಿ, ಬೇಗ ಸೇರುವ ತವಕ. ಹಾಗಾಗಿ ಪ್ಲಪಳ್ಳಿಯಿಂದ ಒಳದಾರಿ ಹಿಡಿದೆವು. ಆದರೆ ಎರಡು ಕಿಮೀ ಹೋಗುವಾಗಲೇ ಮುಂದಿನ ಸುಮಾರು ೭೦-೮೦ ಕಿಮೀ ದೀರ್ಘ ದಾರಿಯ ದುಃಸ್ಥಿತಿಯ ಅಂದಾಜಾಗಿ ಪ್ಲಪಳ್ಳಿಗೇ ಮರಳಿದೆವು. ಮತ್ತೆ ಹಳೇ ದಾರಿಯಲ್ಲೇ ರಾಣ್ಣಿ. ಅಲ್ಲಿ ಹೋಟೆಲ್ ಊಟ. ಪಂಟಿ ಬಿರಿಯ (ಹೊಟ್ಟೆ ಒಡೆಯುವಷ್ಟು) ಉಂಡವರಿಗೆ ಕೂಡಲೇ ಉರಿಬಿಸಿಲಿನಲ್ಲಿ ದಾರಿಗಿಳಿಯಲು ಮನಸ್ಸೇ ಬರಲಿಲ್ಲ. ಆದರೆ ಪೇಟೆ ಬಿಟ್ಟದ್ದೇ ಸಿಕ್ಕ ರಬ್ಬರ್ ತೋಟದ ನೆರಳು ತುಸು ಸಮಾಧಾನಿಸಿತು. ಮಣಿಮಾಲಾದಿಂದ ಸ್ವಲ್ಪ ಮುಂದೆ ಒಳದಾರಿಯೊಂದನ್ನು ಹಿಡಿದು ಕೊಟ್ಟಾಯಂ ಮಧುರೆ ಹೆದ್ದಾರಿ ತಲಪಿದೆವು. ಮುಂದೆ ಒಳ್ಳೆಯ ಘಟ್ಟ ದಾರಿ.

ಎಡಕ್ಕೆ ವಿಸ್ತಾರ ಕಣಿವೆ. ಅದರ ಆಳಕ್ಕೂ ಎತ್ತರಕ್ಕು ವಿಸ್ತಾರಕ್ಕು ಜನ ಛಲದಲ್ಲೇ ಕೃಷಿ ರೂಢಿಸಿದಂತಿತ್ತು. ಒಂದೇ ಸಮನೆ ಘಟ್ಟ ಏರುತ್ತಾ ದಿಗಂತವನ್ನೇ ಹಿಂತಳ್ಳಿದ, ಕೊಳ್ಳದ ಆಳವನ್ನೇ ಹೆಚ್ಚಿಸಿದ ಹಮ್ಮು ನಮ್ಮದು. ದಾರಿ ಬೆಟ್ಟ ಸಾಲಿನ ಮಗ್ಗಲು ಬದಲಿಸಿತು. ಈಗ ಸಣ್ಣಪುಟ್ಟ ಬೋಳು ಗುಡ್ಡೆಗಳ ಸರದಿ. ಅವುಗಳ ನಡುವಣ ಓಟ ಲಕ್ಷ್ಯದ ಹೊರೆಯನ್ನಾಗಲೀ ಮಾರ್ಗಾಯಾಸವನ್ನಾಗಲೀ ಹೇರದೆ ಉಲ್ಲಾಸದಾಯಕವಾಗಿತ್ತು. ಇಲ್ಲೊಂದು ದೊಡ್ಡೂರು – ಪಿರಮಿಡ್.

ಪಿರಮಿಡ್ – ಇದೆಲ್ಲಿನ ಗ್ರೀಕ್ ಹೆಸರು ಮಲೆಯಾಳಿ ನಾಡಿನಲ್ಲಿ! ಆದರೆ ಚಾ ತೋಟಗಳ ನಡುವೆ ಕಣ್ಣಾಮುಚ್ಚಾಲೆಯಾಡುತ್ತಿದ್ದ ದಾರಿ ಏರುವ ಚಂದ ಪಿರಮಿಡ್ಡಿನದೇ ಮೈಯಂತಿತ್ತು. ಆಗೀಗ ಸಿಕ್ಕುತ್ತಿದ್ದ ಸಣ್ಣ ಪುಟ್ಟ ಪೇಟೆ ಮನೆಗಳ ಮುಂದಿನಂಗಳದಲ್ಲಿ, ಹಿತ್ತಿಲ ಕುಪ್ಪೆಯಲ್ಲೂ ಮಾರ್ಗದಂಚಿನ ಪೊದೆಯಾಗಿಯೂ ಗುಡ್ಡ ಬೆಟ್ಟಗಳ ಬೆಳೆ ಕಳೆ ಎಲ್ಲವೂ ಚಾಮಯ; ಸಕಲವನ್ನೂ ಆವರಿಸಿದ್ದ ದಪ್ಪ ಉಣ್ಣೆಯ ಹಸುರು ಕೋಟು! ನಡುವೆ ಆಗೀಗ ಮಾತ್ರ ತೋರುವ ಕರಿ ಪಟ್ಟಿ ನಮ್ಮ ಮಾರ್ಗ. ಉಣ್ಣೆಕೋಟಿನಲ್ಲಿ ಓಡುವ ಜಿಪ್ಪರಿನಂತೆ ನಾವು ಹೋದಂತೆ ಎದುರು ಬಿಚ್ಚಿಕೊಳ್ಳುತ್ತಲೂ ಹಿಂದೆ ಮುಚ್ಚಿಕೊಳ್ಳುತ್ತಲೂ ಅಪ್ಪಟ ನೆಲದ ತುಸು ವಿವರಗಳಷ್ಟೇ ಕಾಣುತ್ತಿದ್ದುವು. ಮಳೆನೀರ ಕೊರಕಲೂ ಸರಿ, ಉಬ್ಬೆದ್ದ ಕರಿಕಲ್ಲಿನತ್ತಿತ್ತಣ ತುಸು ಮಣ್ಣೂ ಸರಿ – ಬೇಧವೆಣಿಸದೆ, ನಿಯತ ಅಂತರಗಳಲ್ಲಿ ಚಾ ಪೊದರುಗಳು ನಿಂತಿದ್ದುವು.

ಗುಜ್ಜು ಮುಂಡಕ್ಕೆ ವಿಸ್ತರಿಸಿದ ಮಂಡೆ ಇಟ್ಟು ಸಪಾಟು ಕ್ಷೌರ ಮಾಡಿದಂತಿನ ಒಂದೊಂದೂ ಪೊದರು ವಾಸ್ತವದಲ್ಲಿ (ಬೋನ್ಸಾಯ್) ಕುಬ್ಜ ವೃಕ್ಷ. ಪ್ರತಿಯೊಂದರ ಸುತ್ತೂ ಚಿಗುರು ಚಿವುಟುವವರು (ಎರಡೆಲೆ, ಒಂದು ಮುಗುಳು) ಸತತ ಬಳಸಿ ಗರಿಕೆಯೂ ಏಳದ ಜಾಡು, ಗಾರುಬಿದ್ದ ನೆಲ ದೂರ ನೋಟದ ರಮ್ಯವನ್ನು ಅಣಕಿಸುತ್ತಿತ್ತು. [ಈಚೆಗೆ ಕಾಡ್ಮನೆ ಚಾತೋಟಕ್ಕೆ ಹೋದಾಗ ಗಮನಿಸಿದ್ದು: ಕಾಲಕಾಲದ ವಿಷದ ಮಳೆ, ರಾಸಾಯನಿಕ ಗೊಬ್ಬರ ಊಡಿಕೆಯಿಂದ ಸಂತೃಪ್ತಗೊಂಡ ನೆಲ ಮತ್ತು ಪರಿಸರದಲ್ಲಿ ಉಪಕಾರಿ ಜೇನ್ನೊಣ ಬಿಡಿ, ಕಾಡಿನ ಕಟ್ಟೇಕಾಂತ ಬಿರಿಯುವ ಬಿಬ್ಬಿರಿ, ಮಳೆಗಾಲದಲ್ಲಷ್ಟೇ ಕಾಡುವ ಜಿಗಣೆ, ಎಲ್ಲಾ ಕಾಲಗಳಲ್ಲಿ ಕಾಡುವ ನೊಣ ಸೊಳ್ಳೆಗಳೂ ಇಲ್ಲವೆಂದಾಗ ಅಳು-ನಗುವಿನ ನಡುವೆ ಓಲಾಡಿದ್ದೆ. ಅದು ಘಟ್ಟವಲಯದ ಕೊಡಿ, ಅಲ್ಲಿನ ಪ್ರಾಕೃತಿಕ ಜಲಮೂಲಗಳನ್ನು ಮಲಿನಗೊಳಿಸಲು ಮೇಲ್ದಂಡೆಯಲ್ಲಿ ನಾಗರಿಕ ಚಟುವಟಿಕೆಗಳಿಲ್ಲವೆಂದು ತಿಳಿದೂ ಕಲಕಲಿಸುವ ಝರಿ, ತೊರೆಗಳು ಜೀವಿಗಳಿಗೆ ವಿಷಪಾನ (ಸುಮಾರು ಎರಡು ಶತಮಾನಗಳಿಂದ ತೋಟಕ್ಕೆಂದು ಸಿಂಪಡಿಸಿದ ವಿವಿಧ ವಿಷದ ಪ್ರಭಾವ) ಎಂದು ಕೇಳಿದಾಗಂತೂ ನಾವು ಉಸಿರಾಡಿ, ನಡೆದಾಡಿ ಉಳಿದದ್ದೇ ಹೆಚ್ಚೆಂದನ್ನಿಸಿಬಿಟ್ಟಿತ್ತು! ಅಲ್ಲಿ ಮೀನುಗಳ ಸರ್ವೇಕ್ಷಣೆ ನಡೆಸಿದ ಮಿತ್ರರು ವಾರಗಟ್ಟಳೆ ಅಡುಗೆ ಮತ್ತು ಕುಡಿಯಲು ಪೇಟೆಯಿಂದ ಬಿಸಿಲೇರಿ ಡ್ರಂ ತರಿಸಿಕೊಳ್ಳುತ್ತಿದ್ದರು!!]

ಬೈಕಿನ ವೇಗನಿರ್ದೇಶಕ ಮುಳ್ಳು ೫೦-೬೦ರ ಆಚೀಚೆ ಇದ್ದರೂ ಆ ವಿಸ್ತಾರ ಹರಹಿಗೆ ನಮ್ಮದು ಮಂದ್ರಗಾನ. ಸಂಜೆ ಸುಮಾರು ಐದು ಗಂಟೆಗೆ ಕುಮಲಿ ಎಂಬ ಪೇಟೆ ಸೇರಿದೆವು. ಇದು ಪೆರಿಯಾರ್ ವನಧಾಮದ, ಮಾನವಕೃತ ಸರೋವರದ (ಅಣೆಕಟ್ಟಿನ ಫಲವಾಗಿ ನಿಂತ ಕೃತಕ ಸರಸು) ಹೊರ ಅಂಚಿಗೆ ಸಮೀಪದ ಏಕೈಕ ನಾಗರಿಕ ತಾಣ. ನಾವು ಯೋಜನೆಯಂತೆ ಆ ರಾತ್ರಿ ಅಲ್ಲಿ ತಂಗುವವರೇ ಇದ್ದುದರಿಂದ ಮೊದಲು ನಮ್ಮ ಕನಿಷ್ಠಾವಶ್ಯಕತೆಗೆ ತಕ್ಕಂಥ (ಧಾರಾಳ ನೀರು, ಸ್ವತಂತ್ರ ಪಾಯಖಾನೆ ವ್ಯವಸ್ಥೆ, ಸೆಕೆಯೂರಾದರೆ ಫ್ಯಾನ್ ಮತ್ತು ಮಲಗಲು ಜಾಗ) ಹೋಟೆಲ್ ಹಿಡಿದೆವು. ಗಂಟು ಗದಡಿಗಳನ್ನು ಅಲ್ಲಿ ಕಳಚಿಟ್ಟೆವು. ಮತ್ತೆ ಪೆರಿಯಾರ್ ಸರೋವರದ ಒಂದು ಕವಲಿನ ಕೊನೆ – ತೇಕಡಿ, ಐದು ಕಿಮೀ ಅಂತರದ ವನಧಾಮದ ತಾಣಕ್ಕೆ ಧಾವಿಸಿದೆವು.

ಪೆರಿಯಾರ್ ವ್ಯಾಘ್ರಧಾಮ ಈ ವಲಯದಲ್ಲಿ ಸಾಕಷ್ಟು ವಿಸ್ತಾರವಾಗಿ ಹರಡಿಕೊಂಡಿದೆ. ಅದರ ನಡುವೆ ಹರಿಯುವ ಪೆರಿಯಾರ್ ನದಿಗಡ್ಡಲಾಗಿ ೧೯೭೯ರಲ್ಲಿ ಕಟ್ಟಿದ ಅಣೆಕಟ್ಟಿನ ಪರಿಣಾಮವಾಗಿ ಹಿಮ್ಮೈಯ ಒಂದಷ್ಟು ಕಣಿವೆಗಳಲ್ಲಿ ನಿಂತ ನೀರೇ ಪೆರಿಯಾರ್ ಸರೋವರ. ಅದರ ಒಂದು ಪುಟ್ಟ ಎಳೆ ತೇಕಡಿ ವಲಯದಲ್ಲೂ ಚಾಚಿಕೊಂಡಿದೆ. ಇಲ್ಲಿ ಮುಳುಗಡೆಯಾದ ಕಾಡಿನ ಅವಶೇಷ, ಅಪ್ರಾಕೃತಿಕ ಜಲಸ್ತಂಭನದಿಂದ ಸಸ್ಯಾದಿ ಜೀವಜಾಲದ ಮೇಲಾದ ಪರಿಣಾಮ, ಜಲರೇಖೆ ಮೀರಿದ ಶಿಖರಗಳು ದ್ವೀಪಗಳೇ ಆದ ಚೋದ್ಯವನ್ನೆಲ್ಲ ಬಳಸಿಕೊಂಡು ಅರಣ್ಯ ಇಲಾಖೆ ಪ್ರವಾಸೋದ್ಯಮ ನಡೆಸಿದೆ. ವಿಶಿಷ್ಟವಾದ ದೋಣಿ ವಿಹಾರ, ಮಾರ್ಗದರ್ಶಿಯೊಡನೆ ನಿಗದಿತ ಪಥಗಳಲ್ಲಿ ವನ್ಯ ಚಾರಣ ಮತ್ತು ನಡುಗಡ್ಡೆಯೊಂದರಲ್ಲಿ ದುಬಾರಿ ವಸತಿ ಸೌಕರ್ಯ ಇಲಾಖೆಯ ಪಟ್ಟಿಯಲ್ಲಿದೆ.

ಎಲ್ಲಾ ವನಧಾಮಗಳ ಆದರ್ಶ ವನ್ಯಾಸಕ್ತರಿಗೆ ಕನಿಷ್ಠ ಜೀವನಾವಶ್ಯಕತೆಗಳೊಡನೆ – ಸಹಜವಾಗಿ ಕನಿಷ್ಠ ವೆಚ್ಚದೊಡನೆ, ವನ್ಯ ಶಿಕ್ಷಣವೇ ಇರುತ್ತದೆ. ಆದರೆ ವಾಸ್ತವದಲ್ಲಿ ಅಂದಿನಿಂದ ಇಂದಿನವರೆಗೂ ಎಲ್ಲೆಲ್ಲ ಅರಣ್ಯ (ವನ್ಯ) ಇಲಾಖೆ `ಪರಿಸರ ಪ್ರೇಮಿ’ಗಳಿಗೆ ಎಂದು ವಸತಿ ವ್ಯವಸ್ಥೆ ಮಾಡುತ್ತದೋ ಅವೆಲ್ಲ ಆರ್ಥಿಕವಾಗಿ ಅನಾವಶ್ಯಕ ಶೋಷಕವಾಗಿಯೂ ವನ್ಯ ವಿರೋಧಿಯಾಗಿಯೂ ಇರುತ್ತವೆ. ಉಲ್ಲಾಸ ಕಾರಂತರು ಮತ್ತೆ ಮತ್ತೆ ಹೇಳುತ್ತಿರುತ್ತಾರೆ (ನೂರು ಸಾವಿರ ಉದಾಹರಣೆಗಳೊಡನೆ) “ಹೋಟೆಲ್ ನಡೆಸುವುದು ಅರಣ್ಯ ಅಥವಾ ವನ್ಯ ಇಲಾಖೆಯ ಆದ್ಯತೆ ಅಲ್ಲ.” ರಕ್ಷಣೆ, ಸಂಶೋಧನೆಯ ಮೂಲಕ ನಿರ್ವಹಣೆ ಮತ್ತು ಕೊನೆಯಲ್ಲಿ ಶಿಕ್ಷಣದ ಅಂಗವಾಗಿ ಬರಬೇಕಾದ ವಸತಿ ಇಂದು ತುಟಿ ಮೀರಿದ ಹಲ್ಲಾಗಿದೆ.

[ವನಧಾಮ ಸ್ಥಾಪನೆಯ ನೀತಿಗಳು ಪ್ರಥಮ ಪ್ರಾಶಸ್ತ್ಯದಲ್ಲಿ ವನ್ಯವನ್ನು ಸ್ವತಂತ್ರವಾಗಿ ರೂಢಿಸಿಕೊಂಡು ಮತ್ತು ಬಳಸಿಕೊಂಡು ತಲೆಮಾರುಗಳನ್ನೇ ಕಳೆದವರಿಗೆ ಹೊರಗೆ ಮರುವಸತಿ ಕೊಡುವುದನ್ನೂ ಶಿಫಾರಿಸುತ್ತದೆ. ಅದರ ಗುಣಾವಗುಣಗಳ ಚರ್ಚೆಯಲ್ಲಿ ಸದಾ ಗಟ್ಟಿಯಾಗಿ ಕೇಳಿಬರುವ – ವನ್ಯಸ್ನೇಹೀ ಬದುಕು ಅಥವಾ ಸಂತುಲಿತ ಅಭಿವೃದ್ಧಿಯನ್ನು ಒಟ್ಟಾರೆ ನಾಗರಿಕತೆ ಬೆಳೆದು ಬಂದ ಪರಿಯ ಮುನ್ನೆಲೆಯಲ್ಲಿ ನೋಡುವಾಗ ಅರ್ಥಹೀನ. ಇಂಥ ಮಾತುಗಳು ಬಹುತೇಕ ಮನುಷ್ಯ ಸ್ವಾರ್ಥದ, ಅದರಲ್ಲೂ ನಾಗರಿಕ ಮೌಲ್ಯಗಳ ದ್ವಿಮುಖ ನೀತಿಯನ್ನೇ ಪ್ರತಿಪಾದಿಸುತ್ತವೆ.]

ಇಂದು ಕಾಡು ಕಾಯಲು ಜನವಿಲ್ಲದಿದ್ದರೂ ವನ್ಯ ವಸತಿಯ ಅತಿಥಿಗೆ ಸಂಜೆ ಅಣಕದ ಶಿಬಿರಾಗ್ನಿ ಎಬ್ಬಿಸಲು, ಎದುರು `ಹುರಿತಿನಿಸು, ಪಾನಕ’ (ಅನಧಿಕೃತ) ಕೊಡಲು ಜನ, ವ್ಯವಸ್ಥೆ ತಪ್ಪುವುದಿಲ್ಲ! ಮೂಲವಾಸಿಗಳ ಮರುವಸತಿ ನೇರ್ಪಾಗದಿದ್ದರೂ ಅವರ ಖಾಸಾ ಜೀವನಕ್ರಮವನ್ನು ಮಾರಾಟಕ್ಕಿಟ್ಟು ಒರಲಿಸುವುದು, ಅಂಗಸಾಧನೆ ಮಾಡಿಸುವುದು ಕಡಿಮೆಯಿಲ್ಲ. ತೇಕಡಿಯ ದಂಡೆಯಲ್ಲೇ ಎಲ್ಲೋ ಇಲಾಖೆಯದೇ ತ್ರಿತಾರಾ ಮಟ್ಟದ ವಸತಿ ವ್ಯವಸ್ಥೆ ಇದೆ ಎಂದು ಬೋರ್ಡು ನೋಡಿದೆವು. ಅದನ್ನೂ ಮೀರಿದ್ದು ಜಲಯಾನದ ಇನ್ನೊಂದು ಕೊನೆಯ ನಡುಗಡ್ಡೆಯಲ್ಲಿರುವುದನ್ನೂ ಕಾಣುತ್ತೇವೆ. ಆ ವಸತಿ ವ್ಯವಸ್ಥೆಗಳ ದರಗಳು ಇಂದು ನನಗೆ ನೆನಪಿಲ್ಲ. ಆದರೆ ಖಂಡಿತ ನಮ್ಮ ಕಲ್ಪನಾಮಿತಿಯನ್ನು ಮೀರಿಯೇ ಇರುತ್ತದೆ. ನಾವು ಕುಮಿಲಿಯಲ್ಲಿ ಹೋಟೆಲ್ ಹಿಡಿದದ್ದಕ್ಕೆ ಪಶ್ಚಾತ್ತಾಪವೇನೂ ಪಡಲಿಲ್ಲ. ಹಗಲಿನ ಬೆಳಕಿನಲ್ಲಷ್ಟೇ ನಡೆಯುವ ದೋಣಿ ವಿಹಾರ ಅಂದಿನದು ಕೊನೆಗಂಡಿತ್ತು. ಪಶ್ಚಿಮ ಘಟ್ಟಗಳ ಗಿರಿವನಗಳಲ್ಲಿ ಸ್ವತಂತ್ರವಾಗಿ ಸುತ್ತಿದ ನಮಗೆ ಅಲ್ಲಿನ ಚಪ್ಪೆ ಚಾರಣದಲ್ಲಿ ಆಸಕ್ತಿಯಂತೂ ಮೂಡಲೇ ಇಲ್ಲ. ಮರುದಿನ ಬೆಳಗ್ಗಿನ ಮೊದಲ ದೋಣಿ ಸವಾರಿಗೆ ಹಾಜರಾಗುವ ಅಂದಾಜು ಮಾಡಿಕೊಂಡು ಕುಮಲಿಗೆ ಮರಳಿದೆವು. ಆ ಉದ್ದಕ್ಕೂ ಇನ್ಯಾವುದೋ ಕಲ್ಪನಾ ಲಹರಿಯಲ್ಲಿದ್ದ ಬಾಲಣ್ಣ “ಅಶೋಕರೇ ನಾವು ತೇಕಡಿಗೆ ಯಾವಾಗ ಹೋಗುವುದು” ಎಂದು ಮುಗ್ಧವಾಗಿ ಕೇಳಿದ್ದ! ಅರವಿಂದ ಹಾಸ್ಯಕ್ಕೊದಗಿದ ಅವಕಾಶ ಕಳೆದುಕೊಳ್ಳದೆ – “ತೇಕಡಿಯಲ್ಲಿ ಬೆಪ್ಪುತೇಕ್ಕಡಿ” ಎಂದು ಭಜನೆ ಮಾಡಿ ನಲಿದದ್ದನ್ನು ನೆನೆಯುವಾಗ ಇಂದು ಬಾಲಣ್ಣನೂ ಮೂವತ್ತೆರಡು ಹಲ್ಲು (ಉಳಿದಿವೆ ಎಂದು ಭಾವಿಸುತ್ತೇನೆ) ಕಿಸಿಯುತ್ತಾರೆ! ಮರುದಿನ ಬೆಳಗ್ಗೆ ತೆಳು ಮಂಜಿನ ಪರದೆ ಸರಿಸುತ್ತ, ಪೂರ್ವದ ಹೆದ್ದೀಪ ಪ್ರಖರಗೊಳ್ಳುವ ಮುನ್ನ ನಾವು ಮತ್ತೆ ತೇಕಡಿಯಲ್ಲಿದ್ದೆವು. ಅಣೆಕಟ್ಟೆಯ ನೀರ ದಾಸ್ತಾನು ತುಂಬಾ ಇಳಿದಿತ್ತು. ಖಾಯಂ ದೋಣಿಗಟ್ಟೆ ನಿರುಪಯೋಗಿಯಾಗಿತ್ತು. ಆಳೆತ್ತರದ ನೊಜೆ ಹುಲ್ಲನ್ನಷ್ಟು ಸೊಂಟ ಮುರಿದು, ಗೊಸರ ನೆಲದಲ್ಲಷ್ಟು ಜಾಡು ಗಟ್ಟಿ ಮಾಡಿ ತುಸು ಕೆಳಗೆ ದೋಣಿ ಏರಲು ವ್ಯವಸ್ಥೆ ಮಾಡಿದ್ದರು. ಅಂದು ಸವಾರಿಯಲ್ಲೂ ಕೆಲವೆಡೆಗಳಲ್ಲಿ ದೋಣಿಯ ತಳ ನೆಲವನ್ನೋ ಮುಳುಗು-ಮರವನ್ನೋ ಸವರಿದ ಅನುಭವವಾಗಿತ್ತು. ಅದನ್ನು ಇಂದು ನೆನೆಸುವಾಗ, ಅದರಲ್ಲೂ ಐದು ವರ್ಷಗಳ ಹಿಂದಿನ ದುರಂತದ ಮುನ್ನೆಲೆಯಲ್ಲಿ ಯೋಚಿಸುವಾಗ ಮೈ ಜುಂ ಎನ್ನುತ್ತದೆ.

[ಐದು ವರ್ಷಗಳ ಹಿಂದೆ (ಅಂದರೆ ನಮ್ಮ ಭೇಟಿಯಿಂದ ಸುಮಾರು ಹದಿನೈದು ವರ್ಷ ಮುಂದೆ) ಇದೇ ತೇಕಡಿ ೪೫ ಪ್ರವಾಸಿಗಳ ಬಲಿಯೊಡನೆ ಭೀಕರದೋಣಿದುರಂತಕ್ಕೆ ಸಾಕ್ಷಿಯಾಗಿತ್ತು. ಆದರೆ ಅದೂ ಎಂದಿನಂತೆ ಜನಪ್ರತಿನಿಧಿಗಳ ಬಾಯ ತಾಂಬೂಲವಾಗಿ, ಪರಿಹಾರ ನಿಧಿಗಳಿಂದ ತೊಡಗಿ ಬಹಳ ದೊಡ್ಡ ಆರ್ಥಿಕ ವಿನಿಯೋಗವಾಗಿ, ತನಿಖಾ ಆಯೋಗಗಳ `ವಿಹಾರ ನೆಪ’ವಾಗಿ, ಜ್ಯಾರಿಗೆ ಬಾರದ (ಎಷ್ಟೋ ಬಾರಿ ಶುದ್ಧ ಅಪ್ರಾಯೋಗಿಕವೂ ಹೌದು) ಶಿಫಾರಸುಗಳ ಕಡತವಾಗಿ ಮರೆವಿಗೆ ಸಂದಿರಲೇಬೇಕು. ಎಲ್ಲವನ್ನೂ ಎಲ್ಲರಿಗೂ ಮುಟ್ಟಿಸುವ ಅಮಲು ಸರಕಾರಗಳ ತಲೆಗೇರಿದಷ್ಟು ಚುರುಕಾಗಿ ಇಳಿಯುವುದಿಲ್ಲ ಎನ್ನುವುದು ನಮಗೆ ತಿಳಿದದ್ದೇ ಇದೆ. ಅದನ್ನು ಶ್ರುತಪಡಿಸಿಕೊಳ್ಳಲು, ಈಚೆಗೆ ತೇಕಡಿ ನೋಡಿದವರು ತಮ್ಮ ಸವಿವರ ಅನುಭವ ಕಥನವನ್ನು ಇಲ್ಲಿನ ಪ್ರತಿಕ್ರಿಯಾ ಅಂಕಣಕ್ಕೆ ಅವಶ್ಯ ತುಂಬುತ್ತಾರೆ ಎಂದು ಆಶಿಸುತ್ತೇನೆ.]

ಸರಸ್ಸಿನ ಬಲ ಮಗ್ಗುಲು ಕಾಡಿನೊಳಕ್ಕೆ ಮರೆಯಾಗಿತ್ತು. ಎಡಕ್ಕೆ ತೀರಾ ಕಡಿದಾದ ಬೆಟ್ಟ ಆಳೆತ್ತರದ ಹುಲ್ಲಿನ ಹೊದಿಕೆ ಹೊದ್ದು ನೀರಿಗಿಕ್ಕಿದ ಭಾರೀ ಗಂಡಿಕಲ್ಲಿನ ಹಾಗೇ ಕಾಣಿಸುತ್ತಿತ್ತು. ಬಿಬ್ಬಿರಿ ಕೀಟಾದಿ ವನಶ್ರುತಿಗೆ ಹಕ್ಕಿಗಳು ಆಲಾಪಿಸುತ್ತಿರಲು, ಸರಸಿಯಲಿ ತೆಳು ನಿರಿಗೆಗಳ ಚಿಮ್ಮುತ್ತ ವಿಹರಿಸುವ ನಮ್ಮ ದೋಣಿಯನ್ನು ನೆನೆದು ನಾನು “ದೋಣಿಸಾಗಲಿ, ಮುಂದೆ ಹೋಗಲಿ…” ಶಿಳ್ಳೆಗಾನಕ್ಕೂ ಶ್ರುತಿ ಹೊಂದಿಸುತ್ತಲಿದ್ದೆ. ಕನಸು ಕ್ಷಣಾರ್ಧದಲ್ಲಿ ಕುಸಿದು ಬಿತ್ತು; ಡಸ್ ಪುಸ್ಸೆಂದು ತೊಡಗಿ, ಕಬ್ಬೊಗೆ ಕಾರಿ, ಕೊಟಕೊಟ ಡೀಸೆಲ್ ಇಂಜಿನ್ನಿನ ನಮ್ಮ ದೋಣಿ ಹೊರಟಿತ್ತು! ಧ್ವನಿ ಸತ್ತ ಪರಿಸರದ ಆರ್ತ ಸಂಕೇತದಂತೆ ಮೊದಲು ನಮ್ಮ ಗಮನ ಸೆಳೆದದ್ದು ಸರೋವರದ ನಡುವೆ ಅಲ್ಲಿ ಇಲ್ಲಿ ಉಳಿದ ಕೆಲವೇ ಮರಗಳು. ಅವು ವಾಸ್ತವದಲ್ಲಿ ಒಂದು ಕಾಲದ ಭೀಮ ವೃಕ್ಷಗಳ ಅವಶೇಷಗಳು ಮಾತ್ರ. ನೀರ ಯಾವಯಾವುದೋ ಆಳದಲ್ಲಿ ಇನ್ನೂ ತಮ್ಮ ಸತ್ತ ಬೇರಜಾಲದ ಬಲದಲ್ಲಿ ನಿಂತು, ನೀರನ್ನು ಮೀರಿ ತಮ್ಮ ಬೋಳು ಕಾಂಡ, ಕೆಲವೇ ಕೊಂಬೆಗಳನ್ನು ಚಾಚಿಕೊಂಡು ನಿಂತಿದ್ದವು. ಅಭಿವೃದ್ಧಿಯ ಹೆಸರಿನಲ್ಲಿ ಕಾಡು ಮುಳುಗಿಸುವವರಿಗೆ ಹಾಕುವ ಧಿಕ್ಕಾರದಂತೆ, ಮೂರು ಮುಳುಗಿನ ಆಚೆಗೆ ಸತ್ತು ಸೆಟೆದ ಆರ್ತತೆಯಂತೆಯೂ ಅವು ಕಾಣುತ್ತಿದ್ದುವು. ದೋಣಿ ಸಂಚಾರಕ್ಕೆ ಆಳ ಹಾಗೂ ದಿಕ್ಕು ನಿರ್ದೇಶಿಸುವ ಮುಳುಗೋಲು, ಕೈಕಂಬಗಳಂತೆಯೂ ಅವು ಅರ್ಥ ವೈವಿಧ್ಯವನ್ನು ಸ್ಫುರಿಸುತ್ತಿದ್ದುವು. ಹಳೇ ಸಾಂಗತ್ಯದ ಹಕ್ಕಿಗಳು ಅಲ್ಲಿ ವಿಶ್ರಮಿಸುವುದು, ರೆಕ್ಕೆ ಆರಿಸುವುದು, ನೀರಿನಲ್ಲಿ ಛಳಕುವ ಕೊಳ್ಳೆ ಹೊಂಚುವುದು ನಡೆದಿತ್ತು. ತೊಗಟೆ ಕಳಚಿದ ಕಂದು, ಕರಿ ಬೊಡ್ಡೆಗಳ ಮೇಲೆ ಮಲಧಾರೆ ಹರಿಸಿ ಚಿತ್ತಾರ ಮೂಡಿಸುವುದೂ ಇದೆ. ಹೊಸ ಕೂಡಿಕೆಗಳಲ್ಲಿ ಕೆಲವು ಕವಲು, ಪೊಟರೆಗಳಲ್ಲಿ ಹಕ್ಕಿ ಬಿಡಾರಗಳನ್ನೂ ಕಂಡೆವು. ನಮ್ಮ ದೋಣಿಯ ಗದ್ದಲ ಅಲ್ಲಿನ ಪ್ರಾಕೃತಿಕ ಸ್ವನಗಳನ್ನೆಲ್ಲ ಮರೆಸಿದ್ದು ನಿಜ. ಆದರೂ ಅದೃಷ್ಟಕ್ಕೆ ಅಲ್ಲಿನ ಕೆಲವು ಜೀವಿಗಳು ಇದನ್ನು ನಿರಪಾಯಕಾರಿ ಎಂದು ರೂಢಿಸಿಕೊಂಡಿದ್ದುದಕ್ಕೆ ನಮಗೆ ದರ್ಶನ ಲಾಭವಾಯಿತು. [ಹೀಗೇ ಹೊಂಚುತ್ತಿದ್ದ ಹುಲಿಯಾಗಲೀ ಬಲಿಬೀಳಬಹುದಾಗಿದ್ದ ಜಿಂಕೆಯಾಗಲೀ ರಣಥೊಂಬರಾ ವನಧಾಮದಲ್ಲಿ ಪ್ರವಾಸೀ ವಾಹನಗಳನ್ನು ನಿರ್ಲಕ್ಷಿಸುವುದು ಕಂಡಿದ್ದೇನೆ] ಆ ನೀರ ಹರಹು ವ್ಯವಸ್ಥಿತ ಕೆರೆಯಲ್ಲವಾದ್ದಕ್ಕೆ ಅಂಚುಗಟ್ಟಿದ ವೈವಿಧ್ಯಮಯ ಜಲ ಹಾಗೂ ನೆಲ ಸಸ್ಯಗಳು ಸಾಕ್ಷ್ಯ ಒದಗಿಸುತ್ತಿದ್ದುವು. ಒಂದೆಡೆಯ ಗೊಸರು ನೆಲದಲ್ಲಿ ಸಾಕಷ್ಟು ದೊಡ್ಡ ಕಾಡು ಹಂದಿಗಳ ಸೈನ್ಯ `ಉಳುಮೆ’ ಕಾಯಕವನ್ನು ನಿಶ್ಚಿಂತೆಯಿಂದ ನಡೆಸಿದ್ದುವು. ಇನ್ನೆಲ್ಲೋ ಅರೆಮುಳುಗಿದ ಬೊಡ್ಡೆಯ ಮೇಲೆ ಅಖಿಲ ತೇಕಡಿ ಆಮೆ ಪರಿಷತ್ತು ಮುಂದಿನ ವಿಶ್ವಸಮ್ಮೇಳನದ ಕುರಿತು ಮಂತ್ರಾಲೋಚನೆ ನಡೆಸಿದ್ದುವು. ದಿನಗಟ್ಟಲೆ ದೋಣಿ ಸವಾರಿಗಲ್ಲಿ ಅವಕಾಶವಿದ್ದಿರಬಹುದಾದರೂ ಸಾಮಾನ್ಯ ಪ್ರವಾಸೀ ಮಿತಿಗನುಗುಣವಾಗಿ (ತಲಾ ರೂ ಏಳರ ಮೌಲ್ಯಕ್ಕನುಗುಣವಾಗಿ) ಸುಮಾರು ಎರಡು ಗಂಟೆಯ ಸುತ್ತು ಮುಗಿಸಿ ಮರಳುವಾಗ ಕಡಿದಾದ ಗುಡ್ಡದ ಮೈಯ್ಯಲ್ಲಿ ಎರಡಾನೆಗಳು ವಿರಾಮದಲ್ಲಿ ಹುಲ್ಲು ಹಿರಿದು ಮುಕ್ಕುತ್ತಾ ಏರುತ್ತಿದ್ದುವು. ದಂಡೆಯ ಹುಲ್ಲ ಹರಹುಗಳಲ್ಲಿ ಜಿಂಕೆಗಳೂ ಇದ್ದುವು. ಆದರೆ ಸಮ-ಹಕ್ಕಿನಲ್ಲಿ ಎಂಬಂತೆ ಊರ ಜಾನುವಾರುಗಳೂ ಮೇಯುತ್ತಿದ್ದುದನ್ನು ಕಂಡು ನಮಗೆ ಬಹಳ ಆಶ್ಚರ್ಯವಾಗಿತ್ತು. ಅರಣ್ಯ ಇಲಾಖೆಯ ಬೇಜವಾಬ್ದಾರಿ, ವನ್ಯ ಚರಾವಿನ ಮೇಲಿನ ಅಕ್ರಮ ಒತ್ತಡ ಮತ್ತು ನಾಗರಿಕ (ಜಾನುವಾರು) ಕಾಯಿಲೆಗಳನ್ನು ವನ್ಯ ಮೃಗಗಳಿಗೆ ವಿಸ್ತರಿಸುವ ಅಪಾಯದ ಚಿಂತೆಗಳು ಮುಪ್ಪುರಿಗೊಂಡು ನಮ್ಮನ್ನು ಹಿಂಸಿಸಿದುವು. ಸಾರ್ವಜನಿಕ ದೃಷ್ಟಿ ವಲಯದಲ್ಲೇ ವನಧಾಮ ಹೀಗಾದರೆ ಉಳಿದಂತೆ ಹೇಗೆ ಎನ್ನುವ ಪ್ರಶ್ನೆಗೆ ಇಂದೂ ಸಮಾಧಾನ ಸಿಕ್ಕಿಲ್ಲ.

ಮೂನಾರ್ ದಾರಿ:

ತೇಕಡಿ ಭೇಟಿ ಮುಗಿಸಿ ಹತ್ತು ಗಂಟೆಗೆ ಕುಮಲಿ ಬಿಟ್ಟೆವು. ಕುಮಲಿ ಕೇರಳದ ಗಡಿಪೇಟೆಯಷ್ಟೇ ತಮಿಳುನಾಡಿಗೆ ಪ್ರವೇಶ ಠಾಣ್ಯವೂ ಹೌದು. [ನಮ್ಮ ಅಡ್ಯನಡ್ಕ ಪೇಟೆಯೂ ಹೀಗೇ ಇದೆ! ವಿಟ್ಲದಿಂದ ಹೋಗುವ ದಾರಿ ಇಲ್ಲಿ ಎಡಬಲದಲ್ಲಿ ಕರ್ನಾಟಕ ಕೇರಳವನ್ನು ಬೇರ್ಪಡಿಸುವ ಗಡಿರೇಖೆಯೇ ಆಗಿದೆ] ನಾವು ಕರಾವಳಿಯಿಂದ ಬಂದಿದ್ದ ದಾರಿ ಹೆದ್ದಾರಿಯಂತೇ ನೇರ ಪೂರ್ವಕ್ಕೆ, ಅಂದರೆ ಮಧುರೆಗೆ ಮುಂದುವರಿಯುತ್ತದೆ. ಲಂಬಕೋನದಲ್ಲಿ ಎಡಕ್ಕೆ ತಿರುಗುವ ದಾರಿ, ಅಂದರೆ ಉತ್ತರಕ್ಕೆ ಸಾಗುವ ದಾರಿ ಈಗ ನಮ್ಮದು. ಲಕ್ಷ್ಯ ಮೂನಾರ್ – ಕೇರಳದ ಪ್ರಮುಖ ಗಿರಿಧಾಮ. ಇದು ಪಿರಮಿಡ್ ದಾರಿಯದೇ ತದ್ಪ್ರತಿ, ಚಾ ಸಾರ್ವಭೌಮತೆ. ಏಕಪ್ರಕಾರದ ಏರು ಜಾಡಿನಲ್ಲಿ ಬಾಗು ಬಳಕುಗಳಿದ್ದರೂ ದಿಟ್ಟಿ ಹರಿಯುವವರೆಗೂ ಎಲ್ಲ ವೈವಿಧ್ಯಕ್ಕೂ ಹಸುರುಗಂಬಳಿ ಮುಚ್ಚಿತ್ತು. ಎಲ್ಲೋ ಒಂದು ಘಟ್ಟದಂಚಿನಲ್ಲಿ ನಿಂತು ನೋಡಿದಾಗಂತೂ ನೇರ ತಪ್ಪಲಿನದು ಸೂಕ್ಷ್ಮದರ್ಶಕದಡಿಯಲ್ಲಿ ಎಲೆಯೊಂದನ್ನು ಒಡ್ದಿದಾಗ ತೋರುವ ಜೀವಕೋಶಗಳ ಜೋಡಣೆಯಂತೇ ಕಾಣುತ್ತಿತ್ತು. ಅದೇ ದೂರ ಸರಿದಂತೆ ಉದ್ಯಾನವನಗಳಲ್ಲಿ ಕೃತಕ ಏರುತಗ್ಗುಗಳನ್ನು ಮಾಡಿ ಹಬ್ಬಿಸಿದ ಮಕ್ಮಲ್ ಹುಲ್ಲ ಹಾಸು. ಕೆಲವು ಗಿರಿಯಂಚುಗಳಲ್ಲಿ ನಿಯಂತ್ರಿತ ನೆರಳು ಕೊಡುವುದಕ್ಕೋ ಏನೋ ಸಾಲು ಸಿಲ್ವರ್ ಓಕ್ ಮರಗಳು ನಿಂತಿದ್ದುವು. ಅಂಚುಗಟ್ಟಿದಂತೆ ತೋರುವ ಅವುಗಳ ಬೆಳ್ಳಿ ಮಿರುಗು ಮೊಂಬತ್ತಿ ಸಾಲಿನಂತೆಯೂ ಒಳಗೊಂಡ ಹಸುರು ಅಖಂಡತೆಯಲ್ಲಿ ಅಸ್ಪಷ್ಟವಾಗಿ ತೋರುವ ಅಡ್ಡ ನೀಟ ಸವಕಲು ಜಾಡುಗಳು ಚೂರಿ ಗೀಟಿನಂತೆಯೂ ಕಂಡು ಬೃಹತ್ ಕೇಕಿನ ನೆನಪಾಗದಿರಲಿಲ್ಲ. ಆದರೆ ಪ್ರಾಕೃತಿಕ ವಿಪರ್ಯಾಸದಲ್ಲಿ (ಹುಟ್ಟು, ಕಲ್ಯಾಣ ಇತ್ಯಾದಿ) ಸಂಭ್ರಮದ ಚಿತ್ರ ಕಂಡದ್ದಕ್ಕೆ ನಮಗೆ ನಾವೇ ನಾಚಿಕೊಂಡು ಯಾಂತ್ರಿಕವಾಗಿ ಮುಂದುವರಿದೆವು. ಮಕ್ಕಳಾಟದ ಸಿನಿಮಾ ಡಬ್ಬಿಯಲ್ಲಿ ಇದ್ದೊಂದು ತುಣುಕು ಚಿತ್ರಿಕೆಯನ್ನೇ ಮತ್ತೆ ಮತ್ತೆ ಸುತ್ತುತ್ತಿದ್ದೇವೋ ಎಂದು ಭ್ರಮಿಸುವಂತಾಗಿತ್ತು. ಇಳಿಯೆಣಿಕೆಯ ಕಿಮೀ ಕಲ್ಲು, ಔನ್ನತ್ಯ ಗಳಿಸುತ್ತಿದ್ದಂತೆ ಹೆಚ್ಚಿದ ವಾತಾವರಣದ ತಣ್ಪಷ್ಟೇ ನಮ್ಮನ್ನು ಮಾನಸಿಕವಾಗಿಯೂ ತಣಿಸುತ್ತಿದ್ದುವು.

ಸುಮಾರು ಅರ್ಧ ದಾರಿಯಲ್ಲೆಲ್ಲೋ ಸಿಕ್ಕ ಏಕೈಕ ದೊಡ್ಡ ಊರು ನೆಡುಖಂಡಂ (ಕುಮಲಿ-ಮೂನಾರಿನ ನಡುವಿರುವ ಊರೆಂಬ ಅರ್ಥದಲ್ಲಿ ಅನ್ವರ್ಥವೂ ಇರಬಹುದು!) ನಾವು ಹಣ್ಣು, ಪಾನಕ ಸೇವಿಸಿದ್ದಲ್ಲದೆ ವಿರಳ ಪೆಟ್ರೊಲ್ ಬಂಕುಗಳಿಗೆ ಹೆದರಿ ಬೈಕಿನ ದಾಹವನ್ನೂ ಕಂಠಮಟ್ಟ ತೀರಿಸಿದೆವು.

ಕಣಿವೆಯೊಂದರ ಆಳದಲ್ಲಿನ ಸಣ್ಣ ಅಣೆಕಟ್ಟು ಹಿಡಿದಿಟ್ಟ ನೀರಿನ ಹರಹು ಬಹಳ ಚಿತ್ರವತ್ತಾಗಿ ಕಾಣುತ್ತಿತ್ತು. ಚಾ ಹರಹು ಮೂರುಮುತ್ತಿದ ಸಮುದ್ರವಾದರೆ ಜಲರೇಖೆ ದಕ್ಷಿಣ ಭಾರತದ್ದೇ ರೂಪ ಎಂದನ್ನಿಸಿತು ನನಗೆ. ಅರವಿಂದ ನೀರು ಉತ್ತರ ಭಾರತ, ಹಸುರ ಮೊತ್ತ ಹಿಮಾಲಯ ಎಂದರು. ದೇವಕಿಯ ಕಲ್ಪನೆಯಲ್ಲಿ ಚಾಹಸುರು ಕನ್ನೆಗೆ ಹಿನ್ನೀರು ಉಡುಪು, ಸಾಲುಮರ ತೊಡಪು! ಬಾಲಣ್ಣ ಕಲ್ಪನಾಲೋಕ ಬಿಟ್ಟು ಸತ್ಯಾನ್ವೇಷಿಯಾಗಿ ಬಳಿಯ ಚಾ ಪೊದರಿನ ನಾಲ್ಕು ಚಿಗುರು ಚಿವುಟಿ ಜಗಿಯುತ್ತ ಮೇಲೆ ನೀರೆರೆದು ಚಪ್ಪರಿಸಿದ. ಬಹುಶಃ ಹಾಲು ಸಕ್ಕರೆಯ ಕೊರತೆ ಆತನ ಜಟ್ಪಟ್ ಟೀ ಪ್ರಯೋಗ ವಿಫಲಗೊಳಿಸಿ, “ಥೂ ಚೊಗರು” ಎಂದು ಬಾಯಿ ತೊಳೆದುಕೊಂಡದ್ದೂ ಆಯ್ತು! ದೂರದಾಳದ ದಾರಿಯಲ್ಲಿ ಓಡುತ್ತಿದ್ದ ಲಾರಿ ನಮ್ಮತ್ತ ಏರುಗಮನದಲ್ಲಿದೆಯೇ ಇಲ್ಲವೇ ಎಂಬ ಲೆಕ್ಕಾಚಾರ ಬಗೆಹರಿಯಲೇ ಇಲ್ಲ. ಆ ವಿಸ್ತಾರದಲ್ಲಿ ಸಾರ್ವಜನಿಕ ದಾರಿ ಒಂದೇ. ಆದರೆ ತೋಟದ ಅಸಂಖ್ಯ ನಿರ್ವಹಣಾ ದಾರಿಗಳಲ್ಲಿ ಆ ಲಾರಿಯ ಲಹರಿ ಕಳೆದುಹೋಯ್ತೋ ನಾವೇ ಮಾಯಾಮೃಗದ ಹಿಂದೆ ಬಿದ್ದವರಾದೆವೋ ತಿಳಿಯಲಿಲ್ಲ.

ಏರೇರಿ ವಿಶಿಷ್ಟವಾದೊಂದು ಶಿಖರವಲಯ ಸಮೀಪಿಸಿದೆವು. ಚಾ ಅಖಂಡತೆಯನ್ನು ಪ್ರತಿಭಟಿಸಿದಂತೆ ಇಲ್ಲಿ ಬೆಟ್ಟ ಪೂರ್ಣ ಬೋಳು ಬಂಡೆಗೈಗಳನ್ನು ಆಕಾಶದತ್ತ ತೂರಿತ್ತು. ದಾರಿ ಗಳಿಸಿದ್ದ ಔನ್ನತ್ಯವನ್ನು ಕಳೆದುಕೊಳ್ಳದಂತೆ ಸುಮಾರು ಎರಡು ಕಿಮೀ ಉದ್ದಕ್ಕೆ ಕಲ್ಲನ್ನೇ ಕೊರೆದು ದಾರಿ ಮುಂದುವರಿದಿತ್ತು. ಈ ಕಂಡಿದಾರಿಗೆ ಅನ್ವರ್ಥಕವಾಗಿಯೇ ಗ್ಯಾಪ್-ರೋಡ್ ಎಂದೇ ಹೆಸರಿಸಿದ್ದೂ ತಿಳಿಯಿತು. ಅಲ್ಲಿನ ರಸ್ತೆಯಂಚಿನ ಕಟಕಟೆಯನ್ನು ಹಿಡಿದು ಕೊಳ್ಳ ಹಣಿಕಿದಾಗ ನಮ್ಮ ತುಟಿಗಳೂ ಅಬ್ಬಾ ಎಂದು ಗ್ಯಾಪ್ ಬಿಟ್ಟದ್ದೂ ಆಯ್ತು, ತೇಕುಸುರು (ಗ್ಯಾಸ್ಪ್) ಬಿಟ್ಟದ್ದೂ ಆಯ್ತು! ಅಪರಾಹ್ನ ಸುಮಾರು ಎರಡು ಗಂಟೆಗೆ ಮೂನಾರ್ ಸೇರಿದೆವು.

[ಮುಂದಿನ ಕಂತಿನಲ್ಲಿ: ಇಲ್ಲಿ ಸರಕಾರ ಟಾಟಾಟೀ (ಟೆಟೇಟೈಟೊಟೋಟೌಟಂಟಃ ಅಲ್ಲ)]