ಕುದುರೆಮುಖದೆಡೆಗೆ – ಕನ್ನಡದ ಪ್ರಥಮ `ಸಾಹಸ ಪ್ರವಾಸ ಕಥನ’, ನನ್ನ ತಂದೆಯ ಪುಸ್ತಕ. ಅದು ಹೊಸತರಲ್ಲಿ (೧೯೬೮) ಪ್ರಕಟವಾದಾಗ ನಾನು ತುಸು ಖಿನ್ನತೆ ಅನುಭವಿಸಿದ್ದಿರಬೇಕು. ವಾಸ್ತವವಾಗಿ ಆ ಸಾಹಸಯಾತ್ರೆ ಆಯೋಜಿತವಾದದ್ದು ಕೇವಲ ಬೆಂಗಳೂರು ಸರಕಾರೀ ಕಾಲೇಜಿನ (ಗ್ಯಾಸ್ ಕಾಲೇಜ್!) ವಿದ್ಯಾರ್ಥಿಗಳಿಗೆ. ನಾನೋ ಬೆಂಗಳೂರು ಪ್ರೌಢಶಾಲೆಯ ವಿದ್ಯಾರ್ಥಿ ಮಾತ್ರ. ಆದರೇನು, ಇಡಿಯ ಕಾರ್ಯಕ್ರಮದ ನಾಯಕತ್ವ, ನಿರ್ವಹಣೆ ನನ್ನ ತಂದೆಯದಾಗಿತ್ತು (ಆಡಳಿತದಲ್ಲಿ ವರಿಷ್ಠ – ಮೇಜರ್ ನಾರಾಯಣ ಸಿಂಗ್ ಇದ್ದರೂ). ತಂದೆ ನನ್ನನ್ನು ಐದಾರರ ಹರಯದಿಂದಲೂ ಇಂಥ ವಿಶೇಷ ಚಟುವಟಿಕೆಗಳಲ್ಲಿ ಇಲಾಖೆಗೆ ಖರ್ಚು ತುಂಬಿ `ಅತಿಥಿ’ಯಾಗಿ ಸೇರಿಸಿಕೊಳ್ಳುವುದಿತ್ತು. ಹಾಗೇ ಇದರ ಕೆಲವು ಆಯ್ಕಾ ಪರೀಕ್ಷೆಗಳಲ್ಲಿ ನಾನು ಭಾಗಿಯಾಗಿದ್ದೆ. ಪ್ರಾಥಮಿಕ ಪರೀಕ್ಷೆಗೆ ಇನ್ನೂರು ಮುನ್ನೂರಕ್ಕೂ ಮಿಕ್ಕು ಉತ್ಸಾಹಿಗಳ ಮಹಾಪೂರವೇ ಬಂದಿತ್ತು. ಆಯ್ಕೆಗೆ ದೊಡ್ಡ ಕಣ್ಣಿನ ಜಾಲರಿ – ಕಾಲೇಜಿನಿಂದ ಇಬ್ಲೂರು ರೇಂಜಿಗೆ (ಆ ಕಾಲದಲ್ಲಿ ಬಂದೂಕು ಚಲಾವಣೆಗಿದ್ದ ಅಭ್ಯಾಸ ಕಣ) ರಸ್ತೆಯಲ್ಲಿ ನಡಿಗೆ; ಸುಮಾರು ಹನ್ನೆರಡು ಕಿಮೀ ಅಂತರ. ಮೊದಲ ಇಪ್ಪತ್ತು-ಮೂವತ್ತರೊಳಗಿದ್ದೆ ನಾನು. (ಆರಿಸಿದ್ದು ನೂರು-ನೂರಿಪ್ಪತ್ತು ಮಂದಿಯನ್ನು.) ಎರಡನೇ ಪರೀಕ್ಷೆ ಮಾಗಡಿಯ ಎನ್ಸಿಸಿ ವಾರ್ಷಿಕ ಶಿಬಿರದ ನಡುವೆ ಬಂತು; ಸಾವನದುರ್ಗದ ಏಕಶಿಲಾ ಶಿಖರಾರೋಹಣ.

ಆ ಶಿಬಿರದಲ್ಲಿ ನಾನು (ಈ ಕಾಲದ ಭಾಷೆಯಲ್ಲಿ ಹೇಳುವುದಾದರೆ) ಪೀಜೀ – ಪೇಯಿಂಗ್ ಗೆಸ್ಟ್! ಸಾವನದುರ್ಗದ ನೇರಮೈ ಹತ್ತಿದ ಅರ್ಥಾತ್ ಉತ್ತೀರ್ಣರಾದ ಆರೋ ಎಂಟೋ ಮಂದಿಯಲ್ಲೂ ನಾನಿದ್ದೆ. ಆದರೂ ನಿಜ ಸಾಹಸಯಾತ್ರೆ ನಡೆಯುವ ಕಾಲ ಬಂದಾಗ ಒಂದೆರಡು ತಿಂಗಳಂತರದಲ್ಲಿದ್ದ ನನ್ನ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಖ್ಯವೆಂದು ತಂದೆಯೇ ಪರಿಗಣಿಸಿ, ನನ್ನನ್ನು ಬಿಟ್ಟೇ ಹೋಗಿದ್ದರು.

೧೯೭೦ರಲ್ಲಿ ನನ್ನ ವಿದ್ಯಾರ್ಥಿ ಜೀವನ ಮೈಸೂರಿನಲ್ಲಿ ಮುಂದುವರಿಯಿತು. ಅಲ್ಲಿ ದಖ್ಖಣ ಪರ್ವತಾರೋಹಣ ಸಂಸ್ಥೆಯ ಸದಸ್ಯ ಆದೆ. ದಪಸಂ ವರ್ಷಕ್ಕೊಂದು ವಿಶೇಷ ಪರ್ವತಾರೋಹಣ ಶಿಬಿರ ನಡೆಸುವ ಸಂಕಲ್ಪ ಹೊಂದಿತ್ತು. ನಾನಿದ್ದಂತೇ ನಡೆದ ತಾತಾರ್ ಶಿಖರಾರೋಹಣ (ಓದದವರು ಇಲ್ಲಿ ಚಿಟಿಕೆ ಹೊಡೆಯಿರಿ) ನಿಮಗೆಲ್ಲ ತಿಳಿದದ್ದೇ. ಮುಂದೆ ಕರ್ನಾಟಕದ ಪ್ರಥಮ ಹಿಮಾಲಯ ಸಾಹಸಯಾತ್ರೆ ನಡೆಸಿದ ಖ್ಯಾತಿಯೂ ನಮ್ಮ ಸಂಸ್ಥೆಯದೇ ಆಯ್ತು.

[ದಪಸಂ ಮುಂದೆ ಒಳರಾಜಕೀಯಗಳಿಂದ ಹಾಳಾಗಿ ಹೋಯ್ತು. ಇಂದು ಬಹುಶಃ ಬರ್ಖಾಸ್ತಾಗಿದೆ] ಆದರೆ ನನ್ನ ದುರದೃಷ್ಟಕ್ಕೆ ದಪಸಂ ನಾನು ಸೇರುವುದಕ್ಕೂ ವರ್ಷ ಮೊದಲೇ ಕುದುರೆಮುಖಕ್ಕೆ ತನ್ನ ವಾರ್ಷಿಕ ವಿಶೇಷ ಸಾಹಸಯಾನವನ್ನು ನಡೆಸಿಬಿಟ್ಟಿತ್ತು; ಮತ್ತೆ ಕುದುರೆ ನನಗೆ ಲಾತ್ ಕೊಟ್ಟಿತ್ತು. ಯಾರಾದರೂ “ಕುದುರೆಮು..” ಎಂದು ಶಬ್ದ ಪೂರ್ಣಗೊಳಿಸುವ ಮೊದಲು “ನಾನಿದ್ದೇನೆ” ಎನ್ನುವ ಸ್ಥಿತಿ ನನ್ನದು! (೧೯೭೪)

* * * * *

“ಕುದುರೆಮುಖ ಶಿಖರಕ್ಕೆ ಹೋಗೋಣ್ವಾ” ಕ್ಯಾಪ್ಟನ್ ದೀಪಿಕಾ ಕೇಳಿದಾಗ ನಾನು ಕೂಡಲೇ ಒಪ್ಪಿದೆ (೨೦೧೪). ಆದರೆ ಅವರ ದಿನಕ್ಕಿಂತ ವಾರ ಮೊದಲೇ “ನಾವೂ ಹೋಗ್ತಾ ಇದ್ದೇವ್ರೀ” ಎಂದು ಸುಂದರರಾಯರು ಹೇಳಿದಾಗ ನಾನು ಪಕ್ಷಾಂತರಿಯಾದೆ. ಕಿರಿಯ ಗೆಳೆಯ ಮಹೇಶ ಮಯ್ಯನಿಗೆ ಒಂದೆರಡು ಬಾರಿ ಕುದುರೆಮುಖಕ್ಕೇ ಹೋಗಿಬಂದು ಅದರ ಗಿರವೇ ಹಿಡಿದಿತ್ತು ಎಂದರೆ ತಪ್ಪಲ್ಲ. ರಾಯರಂತೆ ನಾನೂ ಮಹೇಶನ ತಂಡದ ಸದಸ್ಯನಾದೆ.

ಕಳೆದ ನಾಲ್ಕು ದಶಕಗಳಲ್ಲಿ ನಾನು ಕುದುರೆಮುಖ ಶಿಖರದ ಸುತ್ತ ಮುತ್ತ ನಡೆಸಿದ ಚಾರಣಗಳ ಲೆಕ್ಕ ಅಸಂಖ್ಯ ಮತ್ತು ಸದಾ ಸ್ಮರಣೀಯ. ಅದರಲ್ಲೂ ಸುಂದರ ಗಾಯನದಲ್ಲಿ ಮರುಕಳಿಸುವ ಮೋಹಕ ಪಲ್ಲವಿಯಂತೆ – ಕುದುರೆಮುಖ ಶಿಖರ. ವನ್ಯಸಂರಕ್ಷಣೆಯ ಆವಶ್ಯಕತೆಯಲ್ಲಿ ಕುದುರೆಮುಖದ ಸ್ಥಾನ ಏರಿರುವುದು ನಿಮಗೆ ತಿಳಿದೆ ಇದೆ. ಸಹಜವಾಗಿ ಇಲಾಖೆಯ ನಿಯಮಗಳು ಬಿಗಿಯಾಗಿಯೇ ಇವೆ. ತಂಡದ ನಾಯಕತ್ವವೇನಿದ್ದರೂ ಔಪಚಾರಿಕ ಅನುಮತಿ, ಪ್ರವೇಶಧನ, ಮಾರ್ಗದರ್ಶಿ/ಕಾವಲುಗಾರನ ಸಾಂಗತ್ಯ ಇತ್ಯಾದಿಗಳ ಜವಾಬ್ದಾರಿ. ಇದರಲ್ಲಿ ಮಹೇಶ ಪಳಗಿದ್ದುದರಿಂದ ನಾನು ನಿಶ್ಚಿಂತನಾಗಿ ನನ್ನ ಕುದುರೆಮುಖ ಕಡತಕ್ಕೆ ಹೊಸ ಪುಟಗಳನ್ನು ಸೇರಿಸಲು ಸಜ್ಜಾದೆ. (ಹಳತಕ್ಕೆ ಕೆಲವು ಸಾಕ್ಷಿಗಳಾಗಿ ವಾಲಿಕುಂಜ , ಪಾಂಡರಮಕ್ಕಿಜಾಡಿನಲ್ಲಿ, ಗಡಿಬಿಡಿಯಲ್ಲಿ ಗಂಗಡಿಕಲ್ಲು, ಮುಂತಾದವುಗಳನ್ನು ನೋಡಬಹುದು.) ಮಹೇಶ ಕುದುರೆಮುಖದ ಔಪಚಾರಿಕತೆಗಳಿಗೆ ಮುಳ್ಳೋಡಿಯ ರಾಜಪ್ಪ ಗೌಡರಲ್ಲಿ ಯಶಸ್ವಿ ಮಧ್ಯವರ್ತಿಯನ್ನು ಕಂಡುಕೊಂಡಿದ್ದ. ಸರಳವಾಗಿ ಹೇಳಬೇಕಾದರೆ ಕುದುರೆಮುಖ ಶಿಖರಕ್ಕೇರುವವರಿಗೆ ರಾಜಪ್ಪಗೌಡ ಏಕಗವಾಕ್ಷಿ ವ್ಯವಸ್ಥೆ! ರಾಜಪ್ಪ ರಾಷ್ಟ್ರೀಯ ಉದ್ಯಾನವನದೊಳಗಿನ ವಲಯದಿಂದ ಪುನರ್ವಸಿತರಾಗಿ ಹೊರ ಅಂಚಿಗೆ ಬಂದು ನೆಲೆಸಿದ ಕೃಷಿಕ. ಸಹಜವಾಗಿ ಇವರ ವನ್ಯ ಅನುಭವವನ್ನು ಪುರಸ್ಕರಿಸಿ ಇಲಾಖೆ ಇವರಲ್ಲೊಂದು ನೋಂದಾವಣೆ ಪುಸ್ತಕ ಇಟ್ಟು, ಸಾಹಸಯಾತ್ರಿಕರನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿದೆ. ದೂರದೂರುಗಳಿಂದ ಒಂದೆರಡು ದಿನಗಳನ್ನಷ್ಟೇ ಹೊಂದಿಸಿಕೊಂಡು ಕುದುರೆಮುಖದ ಜಪಮಾಡುತ್ತ ಧಾವಿಸುವವರಿಗೆ ಸರಕಾರೀ ನಿಧಾನದ್ರೋಹದೆದುರು ರಾಜಪ್ಪ-ಪ್ಯಾಕೇಜ್ ಯಶಸ್ವಿಯಾಗಿರುವುದು ತಪ್ಪಲ್ಲ!\

* * * * * *

ನಾನು ಕಂಡಂತೆ ಈ ವಲಯದಲ್ಲಿ ಪ್ಯಾಕೇಜ್-ಸಂಸ್ಕೃತಿ (ವಿಕೃತಿ?) ೧೯೮೦-೯೦ರ ದಶಕದಲ್ಲಿ ಬೆಂಗಳೂರಿನ ಸ್ಪಾರ್ಕಿನವರಿಂದ ತೊಡಗಿತು. ನನ್ನ ತಂದೆಯ ಕುದುರೆಮುಖ ತಂಡದಲ್ಲಿ ವಿದ್ಯಾರ್ಥಿಯಾಗಿದ್ದು, ಮುಂದೆ ಬೆಂಗಳೂರಿನಲ್ಲಿ ವಿಜ್ಞಾನಿಯಾಗಿ ವಿಕಸಿಸಿದವರು ಡಾ| ಟಿ. ವೆಂಕಟೇಶ್. ಅವರು ಪರ್ವತಾರೋಹಣ ಚಟುವಟಿಕೆಗಳನ್ನು ಪ್ರಚುರಿಸಲು ಕಟ್ಟಿಕೊಂಡ ಸಂಸ್ಥೆ – SPARK (ಇದರ ವಿಸ್ತರಣೆ ಇಂದು ಮರೆತಿದ್ದೇನೆ, ಕ್ಷಮಿಸಿ). ಇದು ಬೆಂಗಳೂರಿನಿಂದ ಅಸಂಖ್ಯ ತಂಡಗಳನ್ನು ಚಾರಣದ ಬೇಗಡೆ ಸುತ್ತಿ, ಕುದುರೆಮುಖಕ್ಕಟ್ಟುತ್ತಿತ್ತು. ಪಕ್ಕಾ ಬಯಲುಸೀಮೆಯ, ಬಹುತೇಕ ನಗರವಾಸದಿಂದಾಚೆ ಬದುಕು ಗೊತ್ತೇ ಇಲ್ಲದವರೂ ಸ್ಪಾರ್ಕಿಗೆ ಕಾಣಿಕೆ ಹಾಕಿ (ಆಗ ಕುದುರೆಮುಖದ ಕಾಡಿಗೆ ಅನುಮತಿ ಪತ್ರವಾಗಲಿ, ಪ್ರವೇಶಧನವಾಗಲಿ ಇರಲಿಲ್ಲ!), ಕೇವಲ ಕೆಲವು ಸೂಚನೆಗಳನ್ನಷ್ಟೇ ಹಿಡಿದುಕೊಂಡು ರಾತ್ರಿ ಬಸ್ಸೇರುತ್ತಿದ್ದರು. ಕುದುರೆಮುಖ ಶಿಖರದ ತಪ್ಪಲಿನ ಊರುಗಳಿಗೆ – ಮುಖ್ಯವಾಗಿ ಕಳಸ, ಸಂಸೆಗಳಿಗೆ ಬಂದ ನಿದ್ದೆಗೇಡಿಗಳು, ಏನೇನೋ ಪಡಿಪಾಟಲು ಪಟ್ಟು ಶಿಖರಾರೋಹಣ, ಶಿಬಿರವಾಸ ನಡೆಸಿ ಮರಳುತ್ತಿದ್ದರು. ಇವರ ಸಂಖ್ಯೆ, ಇವರು ನಡೆಸುತ್ತಿದ್ದ ಗದ್ದಲ, ಉಳಿಸಿಹೋಗುತ್ತಿದ್ದ ಕೊಳೆ ಅಪಾರ. ಆ ಕಾಲಕ್ಕೆ ನಾವು ನಿಯಂತ್ರಣವಿಲ್ಲದ ಪ್ರವಾಸೋದ್ಯಮದ ದುಷ್ಪ್ರಭಾವಕ್ಕೆ ಈ ಬೆಂಗಳೂರು ತಂಡಗಳನ್ನು ಹೆಸರಿಸಿ ಖಂಡಿಸುವುದಿತ್ತು.

* * * * * *

೧೯೭೪ರಲ್ಲಿ ನಾನು ಪ್ರಥಮ ಬಾರಿಗೆ ಕುದುರೆಮುಖವೇರಲು ಹೊರಟಾಗ ಭಾರೀ ವ್ಯವಸ್ಥೆಗಳೇನೂ ಇರಲಿಲ್ಲ ಆದರೆ ಮಾರ್ಗದರ್ಶಿಸಲು ಓರ್ವ ಸಮರ್ಥ ಏಕವ್ಯಕ್ತಿಯಂತೂ ಬೇಕೇ ಇತ್ತು ಮತ್ತು ಸಿಕ್ಕಿದ್ದ. ಅದನ್ನೇ ತುಸು ವಿವರದಲ್ಲಿ ನೆನಪಿಸಿಕೊಳ್ಳುತ್ತೇನೆ – ನಾನು ಮೈಸೂರಿನಲ್ಲಿ ಎಂಎ ಮುಗಿಸಿದ ಹೊಸತು. ದಕ ಜಿಲ್ಲೆಯನ್ನು ಸ್ವತಂತ್ರ ವೃತ್ತಿಪರ ನೆಲೆಯಾಗಿಸಿಕೊಂಡು ಮೊದಲ ಹೆಜ್ಜೆಗಳನ್ನು ಇಡಲು ತೊಡಗಿದ್ದ ಕಾಲ. ಪುತ್ತೂರಿನಲ್ಲಿ ಅಜ್ಜನ ಮನೆಗೆ ವಿವಿಧ ಪ್ರಕಾಶಕರಿಂದ ಪುಸ್ತಕ ತರಿಸಿಕೊಳ್ಳುತ್ತಿದ್ದೆ. ಅವುಗಳೆಲ್ಲದರ ಪಟ್ಟಿ ಹಿಡಿದುಕೊಂಡು ಊರೂರಿನ ಕಾಲೇಜು ಗ್ರಂಥಾಲಯ ಸುತ್ತುತ್ತಿದ್ದೆ. ಹಾಗೇ ಮಂಗಳೂರಿನಲ್ಲಿ ಅಂಗಡಿ ತೆರೆಯಲು ಯುಕ್ತ ಬಾಡಿಗೆ ನೆಲೆಯನ್ನೂ ಹುಡುಕುತ್ತಿದ್ದೆ. ಆ ನಡುವೆ ಒಂದು ದಿನ ಪರ್ವತಾರೋಹಿ ಮಿತ್ರ ವಿಶ್ವನಾಥ್ ಮೈಸೂರಿನಿಂದ ದಿಢೀರ್ ಎಂದು ಬಂದಿಳಿದಿದ್ದ. ಸಮಯ ಕಳೆಯದೆ, ಕುಮಾರ ಪರ್ವತ ಒಂದೇ ದಿನದಲ್ಲಿ ಹತ್ತಿಳಿದು ಮುಗಿಸಿದ್ದೆವು. (ನೋಡಿ: ಕುಮಾರಾದ್ರಿಗೆ ನಡೆ) ಅದರ ಯಶಸ್ಸಿನ ಬೆನ್ನಿಗೆ ಮತ್ತಷ್ಟು ದೊಡ್ಡ ತಂಡ ಕಟ್ಟಿದ್ದು, ವಿಸ್ತೃತ ಯೋಜನೆ ಹಾಕಿ ಮಡಿಕೇರಿಯಿಂದಲೇ ಮತ್ತೆ ಕುಮಾರಪರ್ವತಕ್ಕೆ ನಡೆದದ್ದು ನಿಮಗೆ ಗೊತ್ತೇ ಇದೆ. ಆಗ ಜೊತೆಗೊಟ್ಟವರಿಗೆ ಮೂಡಿದ ಪ್ರಶ್ನೆ – ಮುಂದೇನು? ಇನ್ನೂ ಎತ್ತರದ್ದು ಯಾವುದು? ಮನದ ಮೂಲೆಯಲ್ಲಿ ಕೆನೆತ ಕೇಳಿಸಿತು. ಬೆಳ್ತಂಗಡಿ ಸಮೀಪದ ಖುರಪುಟವಂತೂ ಪಶ್ಚಿಮ ಘಟ್ಟದ ವಲಯ ವರಿಷ್ಠನ ಹೆಸರನ್ನೇ ಅನುರಣಿಸಿದಂತಿತ್ತು – ಕುದುರೆಮುಖ, ಕುದುರೆಮುಖ!

ಅಂದು ಪುತ್ತೂರಿನಿಂದ ತುಸು ಅವಸರದಲ್ಲೇ ಹೊರಡುವವನಿದ್ದೆ. ಮಂಗಳೂರಿನ ಬಲ್ಮಠದಲ್ಲಿ ನನಗೊಂದು `ಬಾಡಿಗೆಗೆ’ ಮಳಿಗೆ ನೋಡುವುದಿತ್ತು. ಮುಂದುವರಿದು ಮೂಲ್ಕಿಯ ವಿಜಯಾಕಾಲೇಜಿನ ಮೋಹನರಾಯರಿಗೆ ಹೊಸ ಪುಸ್ತಕ ತೋರಿ, `ಆದೇಶಪಟ್ಟಿ’ ಸಂಗ್ರಹಿಸುವ ಯೋಚನೆಯೂ ಸುಳಿದಿತ್ತು. ತಿಂಗಳುಗಳ ಹಿಂದೆಯೇ ಅರ್ಜಿ ಗುಜರಾಯಿಸಿದ್ದಕ್ಕೆ ಬಂದ ಪರೀಕ್ಷಾಪತ್ರ, ತಿಂಗಳೊಳಗೆ ಬರಲಿದ್ದ ಐಪೀಯೆಸ್ ಪರೀಕ್ಷೆಗೆ ಗಟ್ಟಿ ಕುಳಿತು ಓದು ಎನ್ನುತ್ತಿತ್ತು. ಸಾಲದೆಂಬಂತೆ ಹೇಳದೇ ಕೇಳದೇ ತಮ್ಮ – ಆನಂದ, ಗೆಳೆಯ ಮೋಹನ್ ಮತ್ತು ವಿಶ್ವನಾಥರನ್ನು ಕೂಡಿಕೊಂಡು ಮೈಸೂರಿನಿಂದ ಅವತರಿಸಿದ. ನಾನು ಒಂದುಸಿರಲ್ಲಿ ಹೇಳುವುದನ್ನು ಆನಂದ ಅರ್ಧ ಉಸಿರಿನಲ್ಲೇ ಹೇಳಿಯಾನು – “ನಡಿ, ಕುದ್ರೆಮುಖಾ!” ಊರ ಕೆಲಸವೆಲ್ಲ ಹಾಳು ಮಾಡಿ ಮಂತ್ರಿ ಕಾರು ಬಿಟ್ಟಂತೆ ನನ್ನ ತಲೆ ಓಡಿತು. ರಾತ್ರಿ ಬಸ್ಸಿನಲ್ಲಿ ನಿದ್ದೆಗೆಟ್ಟು ಬಂದವರಿಗೆ ಸಂಜೆ ಸಿಕ್ಕುವೆನೆಂದು ತಿಳಿಸಿ ಮಂಗಳೂರಿಸಿದೆ.

ಮಂಗಳೂರಿನಲ್ಲಿ ಏನೋ ಎಂಥದ್ದೋ ಮಾಡಿಯಾಗುವಾಗ ಬೆಳ್ತಂಗಡಿ ಬಸ್ಸು ಕಾಣಿಸಿತು – ಹತ್ತಿದೆ. ಇಳಿದವನೇ ನಿಲ್ದಾಣದ ಕೂಲಿಯವನನ್ನು ಪ್ರಶ್ನಿಸಿದೆ “ಕುದ್ರೆಮುಖ ಪೋಯಾರ ಒಂಜಿ ಗೈಡ್ ತಿಕ್ಕುಂಡೇ?” “ಉಮ್ಮಪ್ಪಾ, ಪಂಚೈತ್ ಆಪೀಸ್ಟ್ ಕೇಣ್ಲೆ” ಅಂದ. ಅಲ್ಲಿನ ಸೋಮಯ್ಯನಿಂದ ರಾಮಣ್ಣನ ಮೂಲಕ ಕೊನೆಗೂ ಸಿಕ್ಕ ಮಾರ್ಗದರ್ಶಿ – ಸೋಜಾ; ಊರವರ ಸಾಮಾನು ಸರಂಜಾಮು ಊರೊಳಗೆ ಸಾಗಿಸಿಕೊಡುವ `ಬಾಡಿಗೆಗೆ’ ಜೋಡೆತ್ತಿನ ಬಂಡಿಬೋವ. ಆ ದಿನಗಳಲ್ಲಿ ವಟವೃಕ್ಷ, ಅಲ್ಲಲ್ಲ, ಆಟೋರಾಕ್ಷಸಗಳು ದಾರಿಯನ್ನು ಕಾಡುತ್ತಿರಲಿಲ್ಲ. ಬೆಳ್ತಂಗಡಿ ಬಂಗಾಡಿ ಮಾರ್ಗದಲ್ಲಿ ಒಮ್ಮೆಗೆ ಇಪ್ಪತ್ತೆರಡರವರೆಗೂ ಜನ ಮತ್ತವರ ವೈಯಕ್ತಿಕ ಹೊರೆಗೆ ಒಂದೊಂದೂ ಅಂಬಾಸಿಡರ್ ಕಾರು ಧಾರಾಳ ಒದಗುತ್ತಿತ್ತು. ಉಳಿದಂತೆ ಬರಿಯ ಹೇರಿಗೆ ಸೋಜಾನಂಥವರ ಎತ್ತಿನ ಗಾಡಿಯೇ ಕಿರು ಲಾರಿ! ಅಂಥಾ ಸೋಜಾನೊಡನೆ ಎರಡು ದಿನದ ಕಲಾಪಕ್ಕೆ ನಮ್ಮದು ಸಗಟು ಒಪ್ಪಂದ (ಪ್ಯಾಕೇಜ್!) – ಊಟ ಕಾಫಿಯ ಮೇಲೆ ರೂಪಾಯಿ ಇಪ್ಪತ್ತು!! ಮುಹೂರ್ತ ಅದೇ ರಾತ್ರಿಗೆ ನಿಶ್ಚೈಸಿ, ಸಿಕ್ಕ ವಾಹನ ಹಿಡಿದು ಪುತ್ತೂರಿಗೆ ಮರಳಿದೆ.

ಅತಿಥಿಗಳು (ನಿಜ ಅರ್ಥದಂತೆ ತಿಥಿಯಿಲ್ಲದೆ ಬಂದವರು) ಬೆಳಗ್ಗೆ ಆನಂದನ ಉಸ್ತುವಾರಿಯಲ್ಲಿ, ಸಮೀಪದ ನಮ್ಮದೇ ಹಳ್ಳಿ – ಮರಿಕೆಗೆ ಹೋಗಿದ್ದರು. ಅಲ್ಲಿ ತೋಟದ ಕೆರೆಗಳಲ್ಲಿ ಮನಸಾ ಈಜಿ, ಸೋದರ ಮಾವಂದಿರ (ಮೂರಿದ್ದವು, ಈಗ ನಾಲ್ಕಾಗಿವೆ!) ಮನೆಗಳ ಉಪಚಾರ ಸೂರೆಗೊಂಡು ಬಂದು ಧಾರಾಳ ನಿದ್ರೆಯನ್ನೂ ಮುಗಿಸಿದ್ದರು. ಒಮ್ಮೆಲೆ ಎಲ್ಲರಿಗೂ ದಿನದ ಕೊನೆಯ ಬೆಳ್ತಂಗಡಿ ಬಸ್ಸಾದರೂ ಹಿಡಿಯುವ ತರಾತುರಿ. ಅತಿಥಿಗಳನ್ನು ಬೆಳಗ್ಗಿನಿಂದ ಸುಧಾರಿಸಿದ್ದ ಅತ್ತೆ (ಸೋದರ ಮಾವನ ಹೆಂಡತಿ – ದೇವಕಿ), ಅಜ್ಜಿಯರು ರಾತ್ರಿ ಮತ್ತು ಮರುಹಗಲಿಗಷ್ಟು ಚಪಾತಿ, ಪಲ್ಯದ ಬುತ್ತಿ ಕಟ್ಟಿಕೊಟ್ಟರು. ಮತ್ತೆ ನಮ್ಮ ಮಾಮೂಲೀ ಮೀಯಲು, ಹಾಸಲು, ಹೊದೆಯಲು, ಅಡುವಲು, ನೀರಿಗೆ, ಬೆಳಕಿಗೆ……. ಎಲ್ಲಾ ಕಟ್ಟಿ ಬೆನ್ನಿಗೆ ಹೇರಿಕೊಂಡು ಓಡೋಡಿ, ನಿಲ್ದಾಣಕ್ಕೇನೋ ಹೋದೆವು. ಲೆಕ್ಕಕ್ಕೆ ಅಲ್ಲಿ ಇನ್ನೂ ಮೂರು ಬಸ್ಸುಗಳು ಕಾರ್ಯಕ್ರಮ ಪಟ್ಟಿಯಲ್ಲಿತ್ತು. ಆದರೆ ಆ ದಿನಗಳ ಮಾಮೂಲೀ ಕ್ರಮದಂತೆ, ಎರಡು ಬಸ್ಸು ರದ್ದಾಗಿ ತಡವಾಗಿ ಬಂದ, ಕಡೇ ಬಸ್ಸಿಗೆ ನೇತುಬಿದ್ದೆವು. ಒರಟು ದಾರಿಯಲ್ಲಿ ಅದುರಿ, ಅಂಕಾಡೊಂಕಿನಲ್ಲಿ ಕುಲುಕಿ ಬಸ್ಸು ಉದಾರವಾಗಿ ಎಲ್ಲರನ್ನೂ ಸುಧಾರಿಸಿಕೊಂಡು ಒಂಬತ್ತೂವರೆಗೆ ಗಂಟೆಯ ಸುಮಾರಿಗೆ ಬೆಳ್ತಂಗಡಿ ಮುಟ್ಟಿಸಿತು. ಪಂಚಾಯತ್ ಕಛೇರಿಯ ಪಕ್ಕದಲ್ಲಿ ನಿಂತು ಹಿಂದಿನ ಕತ್ತಲನ್ನು ಉದ್ದೇಶಿಸಿದಂತೆ ನಾನು ಕೂಗಿ ಕರೆದೆ “ಸೋಜಾ, ಓ ಸೋಜಾ.”

* * * * * *

ಈಚಿನ (೨೦೧೪) ನಮ್ಮ ತಂಡ ನಾಲ್ಕು ಬೈಕಿನಲ್ಲಿ ಶನಿವಾರ ಅಪರಾಹ್ನ ಮೂಡಬಿದ್ರೆಯಿಂದ ಹೊರಟಿತ್ತು. ಅದೇ ಊರಿನ ಪಶುವೈದ್ಯ – ಜಗನ್ನಾಥ ರೈಗಳ ಬೆನ್ನಿಗೆ ಬೆಂಗಳೂರಿನ ಗಿರಿಧರ ಕೃಷ್ಣ. ಗಿರಿಧರಕೃಷ್ಣ ಮೂಲತಃ ಕಾಸರಗೋಡು ವಲಯದವರಾದರೂ ಐಟಿ ವೃತ್ತಿಯ ನೆಲೆ ಕಂಡದ್ದು ಬೆಂಗಳೂರಿನಲ್ಲಿ. ಆತ ರಾತ್ರಿ ಬಸ್ಸಿಡಿದು ಮಂಗಳೂರಿಗೆ ಬಂದಿದ್ದರು. ಹಾಗಾಗಿ ಮೂಡಬಿದ್ರೆವರೆಗೆ ನನ್ನ ಸಹವಾರ. ತಂಡದ ನಾಯಕ – ಮಹೇಶ, ಬಂಟ್ವಾಳದಿಂದ ಹೊರಟರೂ ಸಹವಾರಿಗೆ ಗೆಳೆಯ ನಿಶಾಂತನನ್ನು ಕಾರ್ಕಳದಿಂದ ಸೇರಿಸಿಕೊಂಡ. ಜೋಡುಮಾರ್ಗದ ಸುಂದರರಾಯರು ಸ್ವತಂತ್ರವಾಗಿ ಸ್ಕೂಟಿಯಲ್ಲಿ ಬಂದು ಮುಂದಕ್ಕೆ ನನ್ನ ಬೆಂಬಲಿಗರಾದರು. ಅಲ್ಲಿಂದಲೇ ಬಂದ ಇನ್ನೊಂದು ಬೈಕಿನಲ್ಲಿ ತಮ್ಮ ಅಕ್ಕರ ಜೋಡಿ – ಅಭಿಜಿತ್ ಮತ್ತು ದಿವ್ಯಾ. ಬಜಗೋಳಿಯಲ್ಲಿ ಗೋಳಿಬಜೆ ಹಾಕಿ, ಭಗವತಿ ಘಾಟಿ ಹಿಡಿದೆವು.

ಮಳೆಕಳೆದು ಹಸುರುಕ್ಕುವ ಸುಂದರ ದೃಶ್ಯಗಳ ಸೂರೆಗೊಳ್ಳುವ ನಮ್ಮ ಉದ್ದೇಶ ಸೋಲಿಸಲು ಮೂಡಬಿದ್ರೆಯಲ್ಲೇ ಹುಡುಹುಡು ಚಕ್ರವಾತ ಅ-ತಿಥಿಯಾಗಿ ಸೇರಿಕೊಂಡಿತ್ತು. ಮಳೆಕೋಟುಗಳೇನೋ ನಮ್ಮಲ್ಲಿದ್ದುವು. ಅದನ್ನೂ ವ್ಯರ್ಥಗೊಳಿಸಿದಂತೆ ಭರ್ಜರಿ ಮಳೆ ಕುದುರೆಮುಖ ಪೇಟೆಯವರೆಗೂ ನಮ್ಮನ್ನು ಬಿಟ್ಟು ಹೋಗಲೇ ಇಲ್ಲ. ಘಟ್ಟದ ಮೇಲೇರುತ್ತಿದ್ದಂತೆ ನೀರು ಕೋಟಿನ ಒಳಗೂ ಇಳಿದು ಕಾಡುವ ಚಳಿ, ಮಂಜುಗಟ್ಟಿದ (ಕನ್ನಡಕದವರಿಗೆ ವಿಪರೀತ) ದೃಷ್ಟಿಯಲ್ಲಿ ಮಾರ್ಗಕ್ರಮಣ ಕೇವಲ ಸಾಹಸವಾಯ್ತು, ಮನೋಹರವಲ್ಲ. ಗಣಿಗಾರಿಕೆಯ ಚಟುವಟಿಕೆಗಳು ನಿಂತ ಮೇಲಿನ ವನ್ಯ ವಿಕಾಸದ ವ್ಯತ್ಯಾಸ ಗುರುತಿಸುವ ನಮ್ಮ ಉತ್ಸಾಹ ಬಹುತೇಕ ಇಂಗಿಯೇಬಿಟ್ಟಿತು. ಎಸ್ಕೇ ಬಾರ್ಡರ್ ಎಂದೇ ಖ್ಯಾತವಾದ ಸ್ಥಳದಲ್ಲಿ ವನ್ಯಕ್ಕೆ ಕಿಸುರಾಗಿ ಉಳಿದಿದ್ದ ಒಂದೆರಡು ಅಂಗಡಿ, ವಾಸ್ತವ್ಯಗಳ ಎತ್ತಂಗಡಿ ಹೊಸದಾಗಿ ಕಂಡೆವು. (ಹಿಂದಿನ ಚಾರಣದಲ್ಲಿ, ಗಣಿಗಾರಿಕೆ ನಗರದ ಭಾರೀ ವಿದ್ಯುತ್ ಅಗತ್ಯ ಪೂರೈಸಿದ್ದ ಮಹಾ ಸ್ತಂಭ, ತಂತಿ ಕಳಚಿದ್ದು ದಾಖಲಿಸಿದ್ದೇನೆ – ಗಮನಿಸಿ.) ಆದರೆ ಮುಂದುವರಿದಾಗ, ತೀರಾ ಈಚಿನವರೆಗೆ ಮುಚ್ಚಿಕೊಂಡಿದ್ದ ಹನುಮಾನ್ ಗುಂಡಿ ಅಥವಾ ಸೂತನಬ್ಬಿ ಮತ್ತೆ ದಂಧೆಗೆ ಇಳಿದದ್ದು ಕಾಣಿಸಿತು. ಕಂಪೆನಿಗೆ ಕಾನೂನಿನ ಪಾಠ, ಹೊಟ್ಟೇಪಾಡಿನವರಿಗೆ ಒಲವಿನ ಕೂಟಕೊಟ್ಟು ಆಚೆಗಿಡುವುದೇ ಪೂರ್ಣಗೊಂಡಿಲ್ಲ. ಇಲ್ಲಿ ಮನೆಯವರು – ಸ್ವತಃ ವನ್ಯ ಇಲಾಖೆ, ಬಾಗಿಲು ಹಾರುಹೊಡೆದು ಅನಾಚಾರ ನಡೆಸಿದೆ. ಆ ಜಡಿ ಮಳೆಯಲ್ಲೂ ಒಂದೆರಡು ಖಾಸಗಿ ವಾಹನಗಳು ಹನುಮಾನ್ ಗುಂಡಿಯ ಗೇಟಿನಲ್ಲಿ ತಂಗಿದ್ದವು. ಅಂದರೆ ಜನ ಅಬ್ಬಿಯೆಡೆಗೆ ಹೋಗಿರಬೇಕು. ವನ್ಯಶಿಸ್ತು ಹಾಳಾಗಲಿ, ಕನಿಷ್ಠ ಮನುಷ್ಯ ಕಾಳಜಿಯಾದರೂ ಇಲಾಖೆಗೆ ಬೇಡವೇ? ಅನ್ಯ ಸ್ಥಳಗಳಲ್ಲಿ ಸ್ವಚ್ಛ ವಾತಾವರಣ ಇದ್ದೂ ಮೇಲಿನ ಪಾತ್ರೆಯಲ್ಲೆಲ್ಲೋ ಭಾರೀ ಮಳೆ ಕಂಡ ಜಲಪಾತ್ರೆಗಳಲ್ಲಿ ವಿಹಾರಿಗಳು ದುರ್ಮರಣಕ್ಕೀಡಾದ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿವೆ.

ಅಂಥದ್ದರಲ್ಲೂ ಇಳಿದಾರಿ, ಅಬ್ಬಿಗಳೆಲ್ಲಾ ಅಪಾಯಕಾರಿ ಮಳೆಯನ್ನು ಕಾಣುತ್ತಿರುವ ಇಲ್ಲಿ ಪ್ರವಾಸಿಗಳನ್ನು ಬಿಟ್ಟುಕೊಂಡ ಇಲಾಖೆಯ ಸಾಮಾನ್ಯ ಜ್ಞಾನ ನಿಜಕ್ಕೂ ಕಳವಳಕಾರಿ.

ಕುದುರೆಮುಖ ನಗರ ತಲಪುವಾಗ ಮಳೆ ಬಿಟ್ಟಿತ್ತು. ಪೇಟೆಯೇನೋ ಭಣಭಣ ಕಾಣಿಸಿದ್ದು ಸರಿಯಾಗಿಯೇ ಇತ್ತು. ಆದರೆ ರಾಜಕಾರಣಿಗಳ ಮನದೊಳಗಣ ಮಣಮಣ ಮಾಟ ಪೋಲಿಸ್ ಅಕಾಡೆಮಿ, ಪ್ರವಾಸೋದ್ದಿಮೆ, ಲಕ್ಯಾ ಅಣೆಕಟ್ಟಿನಿಂದ ಮಂಗಳೂರು ಜಲಪೂರೈಕೆ, ಲಕ್ಯಾ ಹೂಳಿನಿಂದ ಇಟ್ಟಿಗೆ ಭಟ್ಟಿಗಳನ್ನೆಲ್ಲ ಯೋಚಿಸಿದ್ದೆಲ್ಲ ಮರೆಯಲುಂಟೇ! ಅವನ್ನು ಮೀರಿ ಇನ್ನೇನು ಹೊಸದು ಹೊಸೆಯುತ್ತದೋ ಎಂಬ ಹೆದರಿಕೆ ಹೆಚ್ಚಿನದು. ಕೆಳಗೆ ಮಾಳ ಗೇಟಿನಲ್ಲಿ ವನ್ಯ ಇಲಾಖೆಯಿಂದ ಸಂಗ್ರಹಿಸಿದ್ದ `ಯಾತ್ರಾ ಚೀಟಿ’ಯನ್ನು ಮೇಲೆ ಸಂಸೆ ಗೇಟಿನಲ್ಲಿ ಕೊಟ್ಟು, ಸಂಸೆ ಪೇಟೆಯಂಚಿಗೆ ಬರುವಾಗ ನಮ್ಮ ನಿರೀಕ್ಷೆ ಮೀರಿ ಸಂಜೆಯಾಗಿತ್ತು.

ಸಂಸೆಪೇಟೆಗೂ ಮೊದಲೇ ಸಿಗುವ ಬಲ ಕವಲು ಕುದುರೆಮುಖ ಶಿಖರಕ್ಕೆ ದಾರಿ. ಅದರಲ್ಲಿ ಮೊದಲ ಒಂದೆರಡು ಕಿಮೀ ಮಾತ್ರ ಡಾಮರು. ಮತ್ತಿನ ಸುಮಾರು ಆರು ಕಿಮೀ ಅಂದರೆ, ಮುಳ್ಳೋಡಿ ಅಥವಾ ರಾಜಪ್ಪ ಗೌಡರ ಮನೆಯವರೆಗೆ ವಿಪರೀತ ಏರಿಳಕಲುಗಳ ಕೆಸರಗದ್ದೆಯನ್ನೇ ದಾರಿ ಅಂದುಕೊಳ್ಳಬೇಕಿತ್ತು. ಸಹವಾರರನ್ನು ಅಲ್ಲಲ್ಲಿಳಿಸುತ್ತ, ಕೆಲವೆಡೆಗಳಲ್ಲಿ ಅವರ ಕೈಯಾಸರೆ ಪಡೆದು ತೇಕುತ್ತ ಕತ್ತಲ ಮುನ್ನ ಮನೆ ಸೇರುವ ಪ್ರಯತ್ನವೇನೋ ನಡೆಸಿದೆವು. ಇನ್ನೇನು ಒಂದು ಕಿಮೀ ಉಳಿದಿದೆ ಎನ್ನುವಲ್ಲಿ ರೈಗಳ ಬೈಕಿನ ಸರಪಳಿ ತುಂಡಾಯ್ತು. ಕವಿದು ಬರುತ್ತಿದ್ದ ಕತ್ತಲು, ಕೆಸರಿನ ಗೊಂದಲದಲ್ಲಿ ಅದಕ್ಕೆ ಪರಿಹಾರ ಹುಡುಕುವ ಯೋಚನೆ ಬಿಟ್ಟೆವು.

ನಮ್ಮ ಗಂಟು ಮೂಟೆಗಳೇನಿದ್ದರೂ ಚಾರಣಕ್ಕೆಂದೇ ಸಜ್ಜಾಗಿತ್ತು. ಅವನ್ನು ಬೆನ್ನಿಗೇರಿಸಿ, ಎಲ್ಲ ಬೈಕುಗಳನ್ನೂ ಅಲ್ಲಲ್ಲೇ ದಾರಿ ಬದಿಯ ತೋಟದ ಮನೆಗಳ ಆಶ್ರಯದಲ್ಲಿ ಬಿಟ್ಟು ನಿರುಮ್ಮಳವಾಗಿ ನಡೆದೆವು. ತೋಟದ ಕತ್ತಲಿನ ಮೊತ್ತದಲ್ಲಿ ಟಾರ್ಚ್ ಬೆಳಕಿನ ಸುರಂಗ ತೋಡುತ್ತಾ ಸರಿದವರಿಗೆ ಸ್ವತಃ ರಾಜಪ್ಪಗೌಡರೇ ಎದುರಾಗಿ ಆತ್ಮೀಯ ನಗೆ ಬೀರಿ “ಓ ಬಂದ್ರಾ” ಎಂದಲ್ಲಿಗೇ ವಿರಾಮ ಸಿಕ್ಕಿತು.

* * * * *

ಆದರೆ ನಾಲ್ಕು ದಶಕಗಳ ಹಿಂದಿನ ನನ್ನ ಕೂಗಿಗೆ ಇಂಥ ಗಿಲೀಟಿನ ಪ್ರತಿಕ್ರಿಯೆಯೇನೂ ಸಿಗಲಿಲ್ಲ. ನಾನು ಕೂಗಿದ್ದು ನೆನಪಿಸಿಕೊಳ್ಳಿ – “ಸೋಜಾ, ಓ ಸೋಜಾ.” ಕಾಡ ಪರಿಸರದಲ್ಲಿ, ಬೀಡಿ-ಬಚ್ಚಿರೆಗಳಲ್ಲಿ ಹುರಿಗೊಂಡ ಧ್ವನಿ, ಅಷ್ಟೇ ಗಟ್ಟಿಯಾಗಿ “ಹೋಯ್” ಮರುತ್ತರಿಸಿತು. ಯಕ್ಷಗಾನದ ಹುಚ್ಚು ಹೆಚ್ಚಾದ ಆನಂದನಿಗೆ ಮೊದಲೇ ನನ್ನ ಕೂಗು “ಮಹಿಷಾ, ಮಗನೇ ಬಾ ಬಾ” ಎಂದ ಹಾಗೆ ಕೇಳಿದ್ದಿರಬೇಕು. ಕತ್ತಲಮೊತ್ತದಲ್ಲಿ ಧಿಗ್ಗನೆ ದೀಟಿಗೆಗೆ ರಾಳ ಬಡಿದೇಳುವ ಬಣ್ಣದ ವೇಷದ (ಮಹಿಷಾಸುರ, ಕುಂಭಕರ್ಣಾದಿ ರಕ್ಕಸರು) ನಿರೀಕ್ಷೆಯಲ್ಲಿದ್ದ. ಆನಂದನ ಗೆಳೆಯ ಮೋಹನ್ ಶೆಣೈಗೆ ಸೋಜಾ ಕೊಂಕಣಿಯಿರಬಹುದೇ ಇಲ್ಲಾ ಬ್ರಿಟಿಷ್ ದೊರೆಗಳ ಕಾಲದವನಾಗಿ ಹ್ಯಾಟು ಬೂಟಿನ ಆಂಗ್ಲೋ ಇಂಡಿಯನ್ನಿರಬಹುದೇ ಎಂಬ ದ್ವಂದ್ವ. ಬೆಟ್ಟಗುಡ್ಡಗಳ ನಾಡಿನ ಕೊಡವ ವಿಶ್ವನಾಥ್, ಕರ್ನಾಟಕದ ಸರ್ವ ಪ್ರಥಮ ಹಿಮಾಲಯ ಸಾಹಸ ಯಾತ್ರೆಯಲ್ಲಿ ಭಾಗಿಯಾಗಿ ಬಂದವ. ಆ ಯಾನದಲ್ಲಿ ಕಟ್ಟು ಮಸ್ತಾದ ಶೆರ್ಪಾ ಮಾರ್ಗದರ್ಶಿ, ಹೊರೆಯಾಳುಗಳನ್ನೆಲ್ಲ ನೋಡಿದ ನೆನಪಿನಲ್ಲಿ ಈ ವಲಯದ ಕಾಡು, ಬೆಟ್ಟದ ಪ್ರತಿನಿಧಿಯೆಂದರೆ ಆಜಾನುಬಾಹು, ಹುಲಿಮೀಸೆಯ ಕಟ್ಟಾಳುವೇ ಸರಿ ಎಂದು ಕಲ್ಪಿಸಿದ್ದಿರಬೇಕು. ಬಯಲಾಟದಲ್ಲಿ ನಿರ್ಲಿಪ್ತವಾಗಿ ತೆರೆ ಹಿಡಿದವನಂತೆ ನಿಂತಿದ್ದ ನನ್ನ ಬಳಿಗೆ ಅರವತ್ತೈದರ ಮುದಿಯ ಬಂದ.

ಐದಡಿ ಆಸುಪಾಸಿನ ನಿಲುವು, ಸುರುಟಿಸುಕ್ಕಿದ ಮುಖಕ್ಕೆ ನರೆತ ಪೊದರು ಮೀಸೆಯ ಹೊರೆ, ಒಣಕಾಷ್ಠದಂತಿದ್ದ ಕಾಲು, ಕುಂಟೋ ಎಂಬಂತ ನಡಿಗೆ! ಬಿಳಿ ಮಾಸಿದ ಗೀಟುಗೀಟಿನ ಪಂಚೆ ಮತ್ತೂ ಮಾಸಿಹೋಗದಂತೆ ಮೇಲೆತ್ತಿ ಕಟ್ಟಿ, ಹಾಗೆ ಕಟ್ಟಿದ್ದು ತುಸು ಹೆಚ್ಚಾಯ್ತೋ ಎನ್ನುವಂತೆ ಆಗೀಗ ಕೆಳಗೆ ಇಣುಕುತ್ತಿದ್ದ ಕೆಂಪಿನಲ್ಲಿ ಕಪ್ಪು ಚೌಕುಳಿಯ ಒಳಗಿನ ತುಂಡು ಬಟ್ಟೆ (ನಿಮಗ್ಗೊತ್ತು!), ದಗಳೆ ಅಂಗಿ, ತಲೆ ಸುತ್ತಿದ ಮುಂಡು, ಎಡ ಭುಜಕ್ಕೊಂದು ಸಣ್ಣ ಸಂಚಿ, ಬಲಗೈಯಲ್ಲೊಂದು ಕತ್ತಿ, ಕಾಲಿಗೆ ಚರ್ಮದ ಮೆಟ್ಟು – ಪ್ರತ್ಯಕ್ಷವಾಗಿತ್ತು ರಾಜಾ ಸೋಜಾನ ವೇಷವಲ್ಲ, ನಿಜರೂಪು! ಬಂದವನೇ “ಪೋಯಿ” ಎಂದ. ನನ್ನ ತಂದೆ ಕಾಲದ ಕುದುರೆಮುಖ ಸಾಹಸಯಾನಕ್ಕೆ ಒದಗಿದ `ಗಾಯ್ಡು’ ನಾವೂರಿನ ಮೆಂಗಿಲ ಶೇಣವ – ಇವನ ಭಾವ. ಇನ್ನು ಕುದುರೆಮುಖದ ಏಕೈಕ ಖಾಸಾ ಒಕ್ಕಲು ಎಂದೇ ಖ್ಯಾತಿವೆತ್ತ ಹೇವಳದ (ಶಿಖರಕ್ಕೂ ಸುಮಾರು ಎರಡು ಗಂಟೆ ಮೊದಲು ಸಿಗುವ ಕೃಷಿಭೂಮಿ – ತೊಳಲಿ, ಎಂದೂ ಹೇಳುತ್ತಾರೆ.) ಸಿಂಹ ಪುರ್ಬುವೂ ಇನ್ನೇನೋ ಸುತ್ತು ಬಳಸಿನಲ್ಲಿ ಇವನ ನೆಂಟ. ಕುದುರೆಮುಖ ವಲಯದ ಕಾಡು, ಬೆಟ್ಟದ ವಿವರಗಳು ಈತನಿಗೆ ಸ್ವಂತ ಅಂಗೈ ರೇಖೆಗಳು. ಬರಿದೆ ಶಿಖರಕ್ಕೆ ದಾರಿ ಈತ ಎಷ್ಟೂ ಬಾರಿ ತೋರಿದವನೇ. ವಿವಿಧ ಖನಿಜಗಳ ಮಾದರಿ ತೋರಿಸಿದ ಭೂವಿಜ್ಞಾನ ಸರ್ವೇಕ್ಷಣ ಇಲಾಖೆಗೆ ಈ ಕಾಡಿನ ಹರಹಿನಲ್ಲಿ ಸಾಮ್ಯ ತೋರಿದ ಪರಿಣತ ಇದೇ ಸೋಜಾ. ಸಸ್ಯ ವರ್ಗಗಳ ಹಂಚಿಕೆ, ಬೇಟೆಯ ಹೊಂಚಿಕೆಗಳಲ್ಲೂ ಹಿಂದುಳಿಯದ ಪರಿಣತಿ ಈತನದು. ಕಾಡಿಗೆ ನುಗ್ಗಿದರೆ ಆತನಿಗೆ ಹಗಲು ರಾತ್ರಿಗಳ, ಋತುಮಾನಗಳ ಬೇಧವೇ ಕಾಡುತ್ತಿರಲಿಲ್ಲ. ದೇಹ ಬಡಕಲಿದ್ದರೇನು, ಪ್ರಾಯ ಹಿರಿದಾದರೇನು, ಆತನೇ ಹೇಳಿಕೊಂಡ ಹಾಗೆ – ಫಾರಶೀ ಕುದುರೆ; ಜವಾಬ್ದಾರಿಗೆ ಜಗ್ಗ, ವೇಗಕ್ಕೆ ಕುಗ್ಗದ ಏಕವ್ಯಕ್ತಿ ಸೈನ್ಯ – ಜಾಕೋಬ್ ಸೋಜಾ!

ಬೇಸಗೆಯ ದಿನಗಳಾದರೂ ಬಸ್ಸಿನೊಳಗಿನ ಉಬ್ಬೆ ಮನೆ ಕಳಚಿಕೊಂಡ ಕುಶಿಯಲ್ಲಿ ತಂಪಾಗಿಯೇ ಕಾಲು ಬೀಸಿದೆವು. ಪೇಟೆ ಬೆಳಕು ಮಾಸಿದ ಮೇಲೂ ತಿಂಗಳ ಬೆಳಕು ನಮ್ಮನ್ನು ನಡೆಸಿತು. ನೇತ್ರಾವತಿ ಸೇತು ದಾಟಿ, ಬಂಗಾಡಿ ದಾರಿ ತುಳಿದೆವು. ಸೋಜಾನಿಗೆ ತಾಂಬೂಲ ಚರ್ವಣದಷ್ಟೇ ಸರಾಗ ಕಥಾ ಸಲ್ಲಾಪ; ಅವಿರತ, ಅವಿಸ್ಮರಣೀಯ. ಅಂದು ನನಗಿರದ ಐತಿಹಾಸಿಕ ಪ್ರಜ್ಞೆಗೆ ಇಂದು ಕೊರಗುತ್ತೇನೆ; ಆತ ದಾರಿಯುದ್ದಕ್ಕೂ ಹಾಸಿದ ಆ ಕಥನಗಳನ್ನು ನಾನು ದಾಖಲಿಸಿಕೊಳ್ಳಲೇ ಇಲ್ಲ.

ಬಿಗಿ ಜಲ್ಲಿ ಹಾಸಿನ ಮಣ್ಣದಾರಿಯ ಮೇಲೆ ನಮ್ಮದೇ ಜರ್ಭರ್ ನಡಿಗೆ. ದಾರಿಯ ಇಕ್ಕೆಲಗಳಲ್ಲಿ ಕುರುಚಲಷ್ಟೇ ಇದ್ದು ಅಸ್ಪಷ್ಟತೆಗೆ ವಿಶಿಷ್ಟ ಅರ್ಥ ಕೊಡುತ್ತಿತ್ತು. ನಮ್ಮ ಎಡ ದಿಕ್ಕಿನಲ್ಲಿ ಉದ್ದಕ್ಕೂ ಆಗಸದೆತ್ತರಕ್ಕೂ ಕುದುರೆಮುಖ ಹೊತ್ತ ಘಟ್ಟ ಶ್ರೇಣಿ ಕರಿಹೊದ್ದು ಮೌನವಾಗಿ ಮಲಗಿತ್ತು. ಸ್ವತಂತ್ರವಾಗಿ ಘನಗಜದಂತೇ ಮೆರೆವ ಜಮಾಲಾಬಾದ್ ಈಗ ಕುದುರೆಗೆ ಒತ್ತಿ ಮಲಗಿದ ಮರಿ. ಅದೆಲ್ಲೋ ಮುಖ್ಯದಾರಿ ಬಂಗಾಡಿ, ಕಿಲ್ಲೂರಿನತ್ತ ಸಾಗಿದ್ದಂತೆ ನಾವು ಎಡಕ್ಕೆ ಕವಲಾಗಿ, ಶ್ರೇಣಿಯ ಪಾದದ ಕಾಡು ಹೊಕ್ಕೆವು. ಅಲ್ಲಿನ ಕತ್ತಲು, ದೂರದ ಝರಿ, ಜಲಪಾತಗಳ ಕೇಳಿಯೂ ಕೇಳದಂತ ಶ್ರುತಿ, ಆಗೀಗ ಅಜ್ಞಾತ ಪ್ರತಿಭೆಗಳು ಪಲಕುವ ವಿಶಿಷ್ಟ ಉದ್ಗಾರಗಳು ಸೋಜಾನ ಮಾರ್ಗದರ್ಶಿತ್ವಕ್ಕೇನೂ ತೊಂದರೆ ತರುತ್ತಿರಲಿಲ್ಲ. ಪ್ರತಿಯೊಂದಕ್ಕೂ ಅವನಲ್ಲಿ ಸ್ಪಷ್ಟ ಕಾರ್ಯಕಾರಣ ಇರುತ್ತಿತ್ತು, ರಂಗಾಗಿಸುವ ಕತೆ ಇರುತ್ತಿತ್ತು, ಎಲ್ಲವನ್ನೂ ಮೀರಿ ತನ್ನ ಕಲಾಪಕ್ಕೆ ಅದು ಸವಾಲೇ ಅಲ್ಲ ಎನ್ನುವ ನಿಶ್ಚಿಂತೆ ಇರುತ್ತಿತ್ತು. ಆದರೆ ನಮ್ಮ ಧೈರ್ಯಕ್ಕೆ ನಿರಂತರ ಬೆಳಕು ಬೇಕೆನ್ನಿಸಿ, ನಾವೇ ಒಯ್ದಿದ್ದ ಸೀಮೆಣ್ಣೆ ಲಾಂದ್ರ ಹೊಚ್ಚಿಕೊಂಡೆವು. ಆ ದಿನಗಳಲ್ಲಿ ನಾವು ಹೊರೆ ಹೆಚ್ಚದಂತೆ ಎರಡು ಸೆಲ್ಲಿನ ಟಾರ್ಚ್ ಒಯ್ಯುತ್ತಿದ್ದರೂ ಅದರ ಒಂದೆರಡು ರಾತ್ರಿಯ ಬಾಳ್ತನಕ್ಕೆ ಮಿತವ್ಯಯ ಸಾಧಿಸಲೇ ಬೇಕಾಗುತ್ತಿತ್ತು. ಇನ್ನೇನು ದಾರಿ ಏರುಮುಖಿಯಾಗುತ್ತದೆ ಎನ್ನುವಲ್ಲಿ ಬಲಕ್ಕೊಂದು ಹಾಳು ಸುರಿಯುವ ಪುಟ್ಟ ಕಟ್ಟಡ ಸಿಕ್ಕಿತು. ಕುದುರೆಮುಖದೆಡೆಗೆ – ನನ್ನ ತಂದೆಯ ಪುಸ್ತಕದಲ್ಲಿ, ಮೆರೆದ ನಾವೂರು ಫಾರೆಸ್ಟ್ ಬಂಗಲೆ ಅದೇ. ಕುದುರೆಮುಖಕ್ಕದು ಬೇಸ್ ಕ್ಯಾಂಪ್ ಅರ್ಥಾತ್ ತಳ ಶಿಬಿರ. ಗಂಟೆ ಸುಮಾರು ಹನ್ನೊಂದು. ಸೋಜಾ ಅಲ್ಲಿ ಸ್ವಲ್ಪ ನಿದ್ದೆ ತೆಗೆದು ಮುಂದುವರಿಯುವ ಎಂದ. ಬಂಗ್ಲೆಯ ಕುಂಬು ಸುರಿಯುತ್ತಿದ್ದ ಬಾಗಿಲು ದೂಡಿ, ಬಲು ಎಚ್ಚರದಲ್ಲಿ ಒಳಗೊಂದು ಸಣ್ಣ ತನಿಖೆ ನಡೆಸಿದೆವು. ಅಲ್ಲಿಲ್ಲಿ ಹಂಚು ಬಿದ್ದು, ಕಸ ಗೆದ್ದಲು ತುಂಬಿತ್ತು. ಅಂಗಳವನ್ನೇ ಆಯ್ದುಕೊಂಡೆವು. ಅವಸರವಸರವಾಗಿ ಒಂದಷ್ಟು ಉದುರು ಸೌದೆ, ತರಗೆಲೆ ಒಡ್ಡಿ, ಪುಟ್ಟ ಶಿಬಿರಾಗ್ನಿ ಎಬ್ಬಿಸಿ, ಆಯಕಟ್ಟಿನ ಜಾಗ ನೋಡಿ ಜಮಖಾನ ಬಿಡಿಸಿ, ಮೈಚಾಚಿದೆವು. ಕಾಡಿನಲ್ಲಿ ನಾನಾಗಿಯೇ ಎಂದೂ ಹಾಗೆ ಮುಕ್ತವಾಗಿ ಮಲಗಿದ್ದಿಲ್ಲ. ಕಾರಣ, ಮೊದಲನೆಯದಾಗಿ ನನ್ನ ಎನ್ಸಿಸಿ ತರಬೇತಿ – ಅಂದರೆ ಹೇಳಿಕೇಳಿ ಸೈನ್ಯದ ಜಾಗೃತಿ; ಸರದಿಯ ಪಹರೆ! ಮತ್ತಿನ ಕಾರಣ ನಿರಾಧಾರಿತ ವನ್ಯದ ಕುರಿತ ನಾಗರಿಕ ಭಯ. ಆದರೆ ವನ್ಯಪ್ರಜ್ಞೆಯ ಮೂರ್ತರೂಪ – ಸೋಜಾ, ನಕ್ಕು ಹಾಗೇನಾದರೂ ಆದರೆ ತನ್ನರಿವಿಗೆ ಸಹಜವಾಗಿ ಬರುತ್ತದೆ, ಮಲಗಿ ಎಂದದ್ದೇ ಸಾಕಾಯ್ತು. ಆ ದಿನಗಳಲ್ಲಿ ದಿಢೀರ್ ತಿನಿಸುಗಳು, ಸರಳ ವ್ಯವಸ್ಥೆಗಳು ನಮಗೆ ರೂಢಿಸಿರಲಿಲ್ಲ. ಹಾಗಾಗಿ ಸಾಕಷ್ಟು ಭಾರ ಹೊತ್ತು, ಬಿರು ನಡಿಗೆಯಲ್ಲಿ ಬೆವರಧಾರೆ ಇಳಿಸಿ ನಡೆದು ಬಂದ ನಮಗೆ ರೆಪ್ಪೆ ಕೂಡುವುದಕ್ಕಿಲ್ಲ, ಗಾಢ ನಿದ್ರೆ ಆವರಿಸಿತ್ತು.

[ಇಲ್ಲಿ ಬೆಳಗ್ಗಿನವರೆಗೂ ನಿದ್ರೆಯಾ? ಅತ್ತ ರಾಜಪ್ಪ ಗೌಡರ ಮನೆಯಲ್ಲಿ ಸುಪ್ಪತ್ತಿಗೆಯಾ? ಕಾದು ನೋಡಿ ಮುಂದಿನ ಕಂತು 🙂

[ಮುಂದುವರಿಯಲಿದೆ]