ಕುದುರೆಮುಖದಾಸುಪಾಸು – ೭

ಬೆಟ್ಟ ಹತ್ತುವಲ್ಲಿನ ಏಕಲಕ್ಷ್ಯ ಇಳಿಯುವಾಗ ಸಾಮಾನ್ಯವಾಗಿ ಉಳಿದಿರುವುದಿಲ್ಲ. ಅಂದು (೨೦೧೪) ಬೆಳಗ್ಗಿನ ತಿಂಡಿಯನ್ನು ತಡವಾಗಿ ತಿಂದದ್ದಕ್ಕೆ `ಮಧ್ಯಾಹ್ನದ ಊಟ’ ಎಂಬ ಬಿಡುವು ಬೇಕಿರಲಿಲ್ಲ. ಇಗರ್ಜಿ, ಹಿಂದಣ ಶಿಬಿರತಾಣಗಳ ಆಕರ್ಷಣೆ ಬಿಟ್ಟು ಶಿಖರದಲ್ಲೇ ಸಾಕಷ್ಟು ಸಮಯ ಕಳೆದುದರಿಂದ ಬಂದ ದಾರಿಯಲ್ಲೇ ಹಿಂದೆ ಹೊರಟೆವು.

ಜಗನ್ನಾಥ ರೈಗಳು ಮೋಟಾರು ಸೈಕಲ್ ರಿಪೇರಿಯನ್ನು `ಸರ್ವಶಕ್ತ’ ರಾಜಪ್ಪ ಗೌಡರಿಗೆ ವಹಿಸಿಕೊಟ್ಟಿದ್ದರು. ಆದರೆ ಆತ ಸಮೀಪದ ಸಂಸೆ ಅಥವಾ ಕಳಸಕ್ಕೆ ಚರವಾಣಿ ಸಂಪರ್ಕ ಇಲ್ಲದ ಸ್ಥಿತಿಯಲ್ಲಿ, ರಿಪೇರಿ ಜನವನ್ನು ಕರೆಸುವುದಾದರೂ ಹೇಗೆ ಎಂಬ ಆತಂಕ ನಮಗೆ ಉಳಿದೇ ಇತ್ತು. ಜತೆಗೆ ನಿನ್ನೆಯಂಥ ಮಳೆ ಪುನಃ ಬರುವ, ಕತ್ತಲ ಸವಾರಿ ಅನಿವಾರ್ಯವಾಗುವ ಬನ್ನಗಳೂ ನಡುಗಿಸುತ್ತಿದ್ದುವು. ವಾಸ್ತವದಲ್ಲಿ ನಮ್ಮ ಹಳಗಾಲದ ಸಾಹಸ ಯಾತ್ರೆಗಳ ಇತಿಹಾಸವನ್ನು ತೆರೆದರೆ ಸಿಗುವ ಕೆಲವು ಮನೆಗೆ ಮರಳುವ ಕಷ್ಟ ಪರಂಪರೆಯ ಎದುರು ಇವೆಲ್ಲ ಸಮಸ್ಯೆಗಳೇ ಅಲ್ಲ.

ಮಂಗಳೂರಿನವರಿಗೆ ನಾವೂರು – ಶಿಖರ, ನಡಿಗೆ ದೂರ ಮತ್ತು ಸಂಸೆ ಅಥವಾ ಕಳಸ – ಶಿಖರ, ಪ್ರಯಾಣ ದೂರ. ಅಲ್ಲಿಗೆಲ್ಲ ಹೋಗುವುದನ್ನು ನಾವು ನಿಗದಿಗೊಳಿಸಬಹುದು, ಮರಳುವುದನ್ನಲ್ಲ.

ನಮ್ಮನುಕೂಲದಲ್ಲಿ ಬೆಟ್ಟವಿಳಿದು ಊರು ಸೇರಿದರೆ ಸಾಕಾಗುವುದಿಲ್ಲ. ಮಂಗಳೂರಿನತ್ತ ಹೋಗುವ ಬಸ್ಸನ್ನು ಸಕಾಲಕ್ಕೆ ಹಿಡಿಯಲು ನಾವೂರಿನಿಂದ ಬೆಳ್ತಂಗಡಿ ಅಥವಾ ಸಂಸೆಯಿಂದ ಕಳಸ ಸುಲಭವಾಗಿ ಸೇರಲು ಅದೃಷ್ಟ ಬೇಕು. ಇಲ್ಲವೇ ಮತ್ತೆ ಕೆಲವು ಗಂಟೆಗಳ ಪಾದಯಾತ್ರೆಯೇ ಗತಿ. ಸಂಸೆ, ಕಳಸ, ಕೊಟ್ಟಿಗೆಹಾರಗಳಲ್ಲೆಲ್ಲ ಅವೇಳೆಯಲ್ಲಿ ಸಾಕಷ್ಟು ದಾರಿ ಬದಿಯಲ್ಲಿ ಹೊರಳಾಡಿ ಸರಣಿಯಲ್ಲಿ ಸಿಕ್ಕಿದ ಲಾರಿಗಳನ್ನು ಹಿಡಿದು, ಬೆಳ್ತಂಗಡಿಗೆ ಬಂದು ಬಿದ್ದರೂ ಮಂಗಳೂರಿನ ಕೊನೆಯ ಬಸ್ ತಪ್ಪಿದ್ದಿತ್ತು. ಅನಿವಾರ್ಯತೆಗೆ ದುಬಾರಿ ಬಾಡಿಗೆಕೊಟ್ಟು ಒಂದೇ ಕಾರಿನಲ್ಲಿ ಹನ್ನೆರಡು ಜನ ಇರುಕಿಕೊಂಡು ಅಪರಾತ್ರಿಗೆ ಮಂಗಳೂರಿನಲ್ಲಿ ಮರುಹುಟ್ಟು ಪಡೆದದ್ದೂ ಇತ್ತು. ನಾವೂರಿನಿಂದ ಬಂಗಾಡಿ ದಾರಿಗೆ (ಒಂದೆರಡು ಮೈಲು) ಮುಸ್ಸಂಜೆ ತಲಪುತ್ತಿದ್ದಂತೆ ಕಿಲ್ಲೂರಿನತ್ತಣ ಬಸ್ಸು ಸಿಕ್ಕಿದ್ದು, ಅದು ಬೆಳ್ತಂಗಡಿಯಲ್ಲಿ ಕೊನೆಯ ಚಿತ್ರದುರ್ಗ-ಮಂಗಳೂರು ಬಸ್ಸಿಗೆ ಸಕಾಲದಲ್ಲಿ ಮುಟ್ಟಿಸಿದ್ದು, ನಿರಾಯಾಸವಾಗಿ ಮಂಗಳೂರು ಸೇರಿದ್ದೂ ಇತ್ತು. ಆದರೆ ಸ್ವತಂತ್ರವಾಗಿ ಹಿರಿಮರುದುಪ್ಪೆಯನ್ನು – ಅಂದರೆ, ಹೇವಳದಿಂದ ಪೂರ್ವಕ್ಕಿರುವ ಶಿಖರವನ್ನು, ಏರಲು ಹೋದ ಎರಡೂ ಯಾತ್ರೆಗಳನ್ನು ಮುಗಿಸಿದ ಕಷ್ಟ ನನ್ನಲ್ಲಿ ಎಂದೂ ಮರೆಯದ ನೆನಪುಗಳಾಗಿಯೇ ಉಳಿದಿವೆ. ಬನ್ನಿ, ಆ ಚರಿತ್ರಾರ್ಹ ಯಾತ್ರೆಗಳ ಮೊದಲ ಭಾಗಕ್ಕೆ, ಬನ್ನಿ ೩೦-೧೧-೧೯೭೯ರ ಹಿಂದಕ್ಕೇರಿ ಕಾಲವಾಹನ…

ಹಿರಿಮರುದುಪ್ಪೆ, ಬಂಗಾರುಬಾಳಿಗ

ಎಂಟು ಜನರ ತಂಡ. ಎರಡು ಪೂರ್ಣ ದಿನಕ್ಕಾಗುವಷ್ಟು ತಿನಿಸು, ವಿಶ್ರಾಂತಿ ಸಾಮಗ್ರಿಗಳ ಮಿತವಾದರೂ ಚಾರಣಕ್ಕೆ ಭಾರೀ ಬೆನ್ನ ಹೊರೆ. ಮಂಗಳೂರಿನಿಂದ ದಿನದ ಕೊನೆಯ ಬಸ್ಸೇರಿ ಬೆಳ್ತಂಗಡಿಯಲ್ಲಿಳಿದೆವು. ಮತ್ತೆ ಮಾಮೂಲೀ ಏಳು ಮೈಲುದ್ದಕ್ಕೆ ನಾವೂರಿನ ಪಾದಯಾತ್ರೆ ಮುಗಿಸುವಾಗ ನಡುರಾತ್ರಿ ಒಂದು ಗಂಟೆಯೇ ಆಗಿತ್ತು. ಅರಣ್ಯ ಇಲಾಖೆಯ ಬಂಗ್ಲೆಯ ಎದುರು ಬಾಗಿಲಿಗೆ ಬೀಗ ಗಟ್ಟಿ, ಹಿಂದೆ ಬಾಗಿಲೇ ಬಿದ್ದು ಹೋಗಿತ್ತು. ನಾವು ಒಳಸೇರಿ ಇದ್ದದ್ದರಲ್ಲಿ ಕುಂಬು, ಕಸ ಕಡಿಮೆಯಿದ್ದ ನೆಲ ಚೊಕ್ಕ ಮಾಡಿ, ಮಲಗಿದೆವು.

ನಾವೂರು ಬಂಗ್ಲೆಯದು ನಿಶ್ಚಿಂತ ಪರಿಸರವೇ ಆದರೂ ಬೆಳಗ್ಗೆ ಬೇಗ ಹೊರಡಬೇಕು ಎಂಬ `ನಾಯಕ’ನ ಜವಾಬ್ದಾರಿಯಲ್ಲೋ ಏನೋ ನನಗೆ ನಿದ್ರೆ ದೂರವಾಯ್ತು. ಉಳಿದವರ ಬಗ್ಗೆ ಯೋಚನೆ ಹರಿಯಿತು. ಇಡ್ಯ ವಿಠಲರಾವ್ – ಪುಸ್ತಕ ಪ್ರಿಯನೆಂದೇ ನನಗೆ ಪರಿಚಿತರಾದವರು. ವೃತ್ತಿಯಲ್ಲಿ ಕೃಷಿಕನಾದರೂ ಪ್ರಖರ ವೈಚಾರಿಕನಾಗಿದ್ದುದಕ್ಕೇ ಆ ಕಾಲದಲ್ಲೇ “ಆಹಾರ ಬೆಳೆಗಳ ವೈವಿಧ್ಯವನ್ನು ನಿರಾಕರಿಸಿ ಅಡಿಕೆ, ತೆಂಗು, ಒಳ್ಳೆಮೆಣಸು, ಗೇರು, ಕಾಫಿ, ಕಬ್ಬು, ಹತ್ತಿ ಮುಂತಾದ ಏಕಬೆಳೆಯನ್ನು ಅವಲಂಬಿಸುವ ನಾವು ರೈತರಲ್ಲ; ಉದ್ದಿಮೆಗಳ ಕಚ್ಚಾ ಸಾಮಗ್ರಿ ಬೆಳೆಗಾರರು” ಎಂದು ಘಂಟಾಘೋಷವಾಗಿ ಸಾರಿದವರು. ಆ ಕಾಲಕ್ಕೇ ಪ್ರಗತಿಪರರಾಗಿ ಸಾವಯವ ಕೃಷಿಯನ್ನೇ ರೂಢಿಸಿದವರು. ಅಂಥ ವಿಚಾರಧಾರೆಯ ಮುಂದುವರಿಕೆಯಾಗಿ, ೧೯೭೭ರ ಸುಮಾರಿಗೇ ರಾಯರು ತನ್ನೆರಡು ಗಂಡು ಮಕ್ಕಳನ್ನು ನನ್ನಂಗಡಿಗೆ ತಂದು ಪರಿಚಯಿಸಿದ್ದರು. ತನ್ನ ತುಸು ಹಿರಿಯ ಪ್ರಾಯ (ಆಗ ಅವರಿಗೆ ಪ್ರಾಯ ೪೦-೫೦ವರ್ಷ ಇದ್ದಿರಬಹುದು) ಹಾಗೂ ಜವಾಬ್ದಾರಿಗಳ ನಡುವೆ ಮಕ್ಕಳಿಗೆ ಪಾರಿಸರಿಕ ಮತ್ತು ಸಾಹಸಿಕ ಲೋಕಜ್ಞಾನದ ಕೊರತೆಯಾಗಬಾರದೆನ್ನುವುದು ಅವರ ಕಾಳಜಿ. ಅವರಲ್ಲಿ ಹಿರಿಯ ಸಮೀರ ಪಾಲಿಟೆಕ್ನಿಕ್ಕಿನಲ್ಲೂ ಕಿರಿಯ ಶೌರಿ ಪ್ರೌಢಶಾಲೆಯಲ್ಲೂ ವಿದ್ಯಾರ್ಥಿಗಳು ಮಾತ್ರ. ಆದರೆ ಸಾಧನೆಯಲ್ಲಿ ಯಾರಿಗೂ ಕಿರಿಯರಲ್ಲವೆಂಬಂತೆ ಪ್ರಸ್ತುತ ಹಿರಿಮರುದುಪ್ಪೆ ತಂಡದ ಸದಸ್ಯರಾಗಿದ್ದರು.

ಪತ್ರಿಕೆಯ ಓದುಗರ ಅಂಕಣದಲ್ಲಿ ಹಿಂದೆಂದೋ ನಾನು `ಚಾರ್ಮಾಡಿಯಿಂದ ಶಿರಾಡಿಗೆ’ ಚಾರಣದ ಕರೆ ಕೊಟ್ಟಾಗ, (ಉಡುಪಿ) ಸಾಲಿಗ್ರಾಮದಿಂದ ಅಪರಿಚಿತನಾಗಿಯೇ ಬಂದು ಸೇರಿದವರು ಮಂಜುನಾಥ ಉಪಾಧ್ಯ. ಮತ್ತೊಂದೆರಡು ಕಾರ್ಯಕ್ರಮಗಳಿಗೂ ಅವರು ಬಂದದ್ದಿರಬೇಕು. ಹಿರಿಮರುದುಪ್ಪೆ ವಿಚಾರ ಬಂದಾಗ, ಅವರಷ್ಟೇ ಪ್ರಾಕೃತಿಕ ವಿಸ್ಮಯಗಳ ಬಗ್ಗೆ ಒಲವಿದ್ದ ತಮ್ಮ, ವೆಂಕಟ್ರಮಣ ಉಪಾಧ್ಯರನ್ನು ನನಗೆ ಮೊದಲ ಪರಿಚಯವಾಗಿ ಕಳಿಸಿಕೊಟ್ಟಿದ್ದರು. ಮತ್ತದೇ ಕರೆಗೆ ಓಗೊಟ್ಟು ಆತ್ಮೀಯ ಪರಿಚಯಕ್ಕೆ ಸಿಕ್ಕ ಇನ್ನೋರ್ವ ಸದಸ್ಯ ಮುಕುಂದ ಚಿಪಳೂಣ್ಕರ್. ಭಗವತೀ ಘಾಟಿದಾರಿಯ ವಿಕಾಸಕ್ಕೆ ಮುನ್ನ ಕುಗ್ರಾಮವೇ ಆಗಿದ್ದ ಮಾಳ ಮೂಲದ ಚಿಪಳೂಣಕರ್ (ಬ್ಯಾಂಕ್ ಗುಮಾಸ್ತೆ) ಸಹಜ ಆರೋಹಿ. ತನ್ನೂರಿನ ಚಂದದ ವಿಸ್ತರಣೆಯನ್ನು (ಪಶ್ಚಿಮಘಟ್ಟ) ನೋಡುವವರ ಕೂಟಕ್ಕಾಗಿ ನಮ್ಮೊಡನೆ ತುಂಬಾ ಒಡನಾಡಿದ ಉತ್ಸಾಹಿ.

ಆ ಕಾಲದಲ್ಲಿ ಜಿಲ್ಲೆಯ ಏಕೈಕ ಪತ್ರಿಕೆ ಎಂಬಂತೆ ಮೆರೆಯುತ್ತಿದ್ದ ಉದಯವಾಣಿಯಲ್ಲಿ ಛಾಯಾಚಿತ್ರಕ್ಕೆ ಅದ್ವಿತೀಯ ಎಂಬಂತೆ ಯೋಗ್ಯತೆಯಿಂದಲೇ ಮೆರೆಯುತ್ತಿದ್ದವರು ಯಜ್ಞ. ಅವರಿಗೆ ನಗರದೊಳಗಿನ ಚಿತ್ರ ಸೆರೆ ಹಿಡಿಯುವಲ್ಲಿ ವೈವಿಧ್ಯ ಕಡಿಮೆ, ಏಕತಾನತೆ ಕಾಡುವುದಿತ್ತು. (ಮದುವೆಮನೆಗಳಲ್ಲಿ ಎಷ್ಟೋ ಬಾರಿ ಪುರೋಹಿತರಿಗೆ ಕ್ರಿಯಾನಿರ್ದೇಶನ ಮರೆತರೆ ಯಜ್ಞರು ಕೊಡುವುದಿತ್ತು – ಎಂಬ ಜೋಕು ಸುಳ್ಳಲ್ಲ!) ಅದರಲ್ಲಿ ಬರುವ ಕಾಸು ಜೀವನಕ್ಕೆ ಅನಿವಾರ್ಯವಿತ್ತು. ಆದರೆ ಅವರೊಳಗಿದ್ದ ನಿಜ ಕಲಾವಿದನ ದಾಹಕ್ಕಾಗಿ, ನನ್ನ ತಂಡದಲ್ಲಿ ಅವರೇ ಪಾಲುಕೊಟ್ಟು ಬರುವುದಿತ್ತು, ಅಂದೂ ಬಂದಿದ್ದರು.

ಹೊಸಪೇಟೆ ಮೂಲದ ಕಿರಣ್ ಕುಲಕರ್ಣಿ, ಯಾವುದೋ ರಸಗೊಬ್ಬರ ಕಾರ್ಖಾನೆಯ ಮಾರಾಟ ಪ್ರತಿನಿಧಿಯಾಗಿ ಮಂಗಳೂರಿನಲ್ಲಿದ್ದರು. ಆತ ದೈಹಿಕವಾಗಿ ಸಣ್ಣಾಳು, ಚಟುವಟಿಕೆಯಲ್ಲಿ ಹಿರಿಯಾಳು. ಸಮಾನ ಮಿತ್ರರೋರ್ವರ ಪರಿಚಯದ ಬಲದಲ್ಲಿ ನನ್ನತ್ತ ಬಂದವರು (ಕಾಲಾನಂತರ ವರ್ಗಾವಣೆಗೊಂಡು ಊರುಬಿಡುವವರೆಗೂ) ಎಲ್ಲ ಚಟುವಟಿಕೆಗಳಿಗೂ ಖಾಯಂ ಸದಸ್ಯ, ಇಲ್ಲೂ ಇದ್ದರು.

ಮೀನುಗಾರಿಕಾ ಕಾಲೇಜಿನ ಅಧ್ಯಾಪಕ ಶ್ರೀಕಂಠಯ್ಯರ ತುಳು ಮಾತಿನ ಬಲ ನೋಡಿದ ಯಾರೂ ಅವರನ್ನು ಘಟ್ಟದ ಮೇಲಿನವರೆಂದು ಒಪ್ಪುತ್ತಿರಲಿಲ್ಲ! ಕಲಿಕೆ ಮತ್ತು ವೃತ್ತಿಯ ಮುನ್ನೆಲೆಯಲ್ಲಿ ಇಲ್ಲಿನ ನೀರು (ಕೆರೆ, ಹೊಳೆ, ಸಮುದ್ರ) ಕಂಡಷ್ಟೇ ಕರಾವಳಿ ವಲಯದ ಕಾಡು, ನೆಲ, ಘಟ್ಟ ನೋಡುವ ಉಮೇದವರದು. ನನ್ನ ಹಲವು ಚಟುವಟಿಕೆಗಳ ಪಾಲುದಾರರಾಗಿದ್ದ ಶ್ರೀಕಂಠಯ್ಯ “ಹಿರಿಮರುದುಪ್ಪೆಗೆ ಜೈ” ಎಂದು ಸೇರಿಕೊಂಡಿದ್ದರು. (ಗುಂಡಲ್ಪಾದೆಯಲ್ಲಿ ಯಜ್ಞ ತೆಗೆದ ಈ ಚಿತ್ರಕ್ಕೊಂದು ನಾಮಸೂಚಿ: ಎಡದಿಂದ ಬಲಕ್ಕೆ: ಮರ ಹಿಡಿದಿರುವವನು ಶೌರಿ, ಕುಲಕರ್ಣಿ, ಚಿಪ್ಲೂಣಕರ್, ಸಮೀರ, ನಾನು, ಶ್ರೀಕಂಠಯ್ಯ ಮತ್ತು ವೆಂಕಟ್ರಮಣ ಉಪಾಧ್ಯ. ಚಿತ್ರ – ಯಜ್ಞ)

ಕುದುರೆಮುಖ ಶಿಖರಕ್ಕೆ ಎರಡೋ ಮೂರೋ ಬಾರಿ ಲಗ್ಗೆ ಹಾಕಿದಾಗೆಲ್ಲ ಹೇವಳದಲ್ಲಿ ಕಣ್ಣಚುಚ್ಚಿ ಕೆಣಕಿಯೇ ಇತ್ತು ಹಿರಿಮರುದುಪ್ಪೆ. ಈ ಬಾರಿ ಅದಕ್ಕೆ ಲಗ್ಗೆ ಎಂದು ಯೋಚಿಸಿದ ಮೇಲೆ, ನನ್ನಲ್ಲೇ ಇದ್ದ ಸರ್ವೇಕ್ಷಣ ನಕ್ಷೆ ಹಿಡಿದು ಬಳುಕು ರೇಖೆಗಳ (ಕಾಂಟೂರ್ ಲೈನ್ಸ್) ನಡುವೆ ಅದೃಶ್ಯ ಜಾಡು ಅರಸಿದೆ. ನನ್ನದಕ್ಕಿಂತಲೂ ಹೆಚ್ಚಿನ ವಿವರಗಳುಳ್ಳ ಮತ್ತು ಈಚಿನ ವರ್ಷಗಳಲ್ಲಿ ಪರಿಷ್ಕರಿಸಲ್ಪಟ್ಟ ನಕ್ಷೆ ಮಂಗಳೂರಿನ ಭೂವಿಜ್ಞಾನ ಇಲಾಖೆಯಲ್ಲಿರುವುದು ನನಗೆ ತಿಳಿದಿತ್ತು. ಆ ಕಾಲದಲ್ಲಿ ಈ ನಕ್ಷೆಗಳೆಲ್ಲ ರಾಷ್ಟ್ರೀಯ ಗೋಪ್ಯತಾ ಕಾನೂನಿನ ಬಿಗಿ ಕಟ್ಟುಗಳಲ್ಲಿದ್ದುವು. (ಗಗನದಾಳದಲ್ಲಿ ಕುಳಿತು ರಾಷ್ಠ್ರಗಳ ಪರಿವೆಯಿಲ್ಲದೆ ಅಣುಅಣುವನ್ನು ವೀಕ್ಷಿಸಬಲ್ಲ ಕೃತಕ ಉಪಗ್ರಹಗಳು ಬಂದಿರಲಿಲ್ಲ) ಆದರೆ ಇಲಾಖಾ ಮುಖ್ಯಸ್ಥರು ನನ್ನ ಆಸಕ್ತಿ ಬಲ್ಲವರಾದ್ದರಿಂದ ಅಲ್ಲೇ ಹೋಗಿ ನೋಡಿ, ಟಿಪ್ಪಣಿ ಮಾಡಿಕೊಳ್ಳಲು ಧಾರಾಳ ಅನುಮತಿಕೊಟ್ಟರು. ಅನಂತರ ಈ ಹಬ್ಬದ ಬಿಡುವು ನೋಡಿಕೊಂಡು ಎರಡು ಪೂರ್ಣ ದಿನದ ಯಾನಕ್ಕಿಳಿದದ್ದು. ನಕ್ಷೆ ಬಂದ ಮೇಲೆ ಸೋಜಾನಂತ ಮಾರ್ಗದರ್ಶಿಯ ಸಹಾಯ ಬಿಟ್ಟಿದ್ದೆವು. ಹಾಗಾಗಿ ರಾತ್ರಿಯೇ ಕಾಡು ನುಗ್ಗುವ ಸಾಹಸ ಮಾತ್ರ ಮಾಡಲಿಲ್ಲ.

ಬೆಳಗ್ಗೆ ಕುದುರೆಮುಖ ಸಾಹಸಯಾನಗಳಂತೇ ಕಲಾಪಗಳು ಅನಾವರಣಗೊಳ್ಳುತ್ತ ಹೋದವು. ಕಾಡಿನ ಜಾಡು ಸಹಜ ಬೆಳಕಿನಲ್ಲಿ ಕರೆಯುತ್ತಿದ್ದಂತೆ, ಚಳಿ ಹರಿಯುತ್ತ ನಡೆದಿದ್ದೆವು. ಅದೇ ಗುಂಡಲ್ಪಾದೆ, ಹದಿನೇಳು ಸುತ್ತು….. ಲೆಕ್ಕ ಹಾಕುತ್ತ ಎಷ್ಟು ಚುರುಕಾಗಿ ನಡೆದರೂ ಮಧ್ಯಾಹ್ನದೊಳಗೆ ಓಂತಿಗುಡ್ಡೆ ಕಳೆಯುವುದಾಗಲಿಲ್ಲ. ಒಂದೆರಡು ಝರಿಗಳ ಸಮೀಪ ವಿಶ್ರಮಿಸಿದರೂ ಮೂರನೆಯದರ ಬಳಿ ಊಟಕ್ಕೇ ನಿಂತೆವು. ಕಲ್ಲೊಟ್ಟಿ ಒಲೆ ಹೂಡಿ ಕೊಕೋ ಪಾನೀಯ ಮಾಡಿಕೊಂಡೆವು. ಹೋಟೆಲಿನವರಿಗೆ ಹೇಳಿ, ಹಿಂದಿನ ರಾತ್ರಿಯಷ್ಟೇ ವಿಶೇಷವಾಗಿ ಮಾಡಿಸಿ, ಕಟ್ಟಿ ಒಯ್ದ ಇಡ್ಲಿ ಚಟ್ನಿ ಮುಕ್ಕಿದೆವು. ಶೂ ಬಿಚ್ಚಿ ಉಂಗುಷ್ಟದಿಂದ ಕಣಕಾಲವರೆಗೂ ಜಿಗಣೆ ಕೊಯ್ಲು ನಡೆಸಿ, ಒಲೆಯಲ್ಲಿ ಹೋಮಿಸಿ ತೃಪ್ತಿಪಟ್ಟುಕೊಂಡೆವು. ಮತ್ತೆ ಜಿಗಣೆ ಹತ್ತದಂತೆ ಎಲ್ಲರೂ ಕಾಲ್ಚೀಲಗಳನ್ನು ಡೆಟ್ಟಾಲ್ ದ್ರಾವಣದಲ್ಲಿ ಮುಳುಗಿಸಿಯೇ ಬಳಸಿದೆವು. ಹೇವಳ ಮುಟ್ಟುವಾಗ ಮೂರೂವರೆ ಗಂಟೆಯೇ ಆಗಿತ್ತು. ನಮಗಿಂತ ಚುರುಕಾಗಿ ಸೂರ್ಯ ಕುದುರೆಮುಖದ ಮರೆಗೆ ಸರಿದು ನೆರಳಿನ ಚಿತ್ರಗಳನ್ನು ಹಿರಿಮರುದುಪ್ಪೆಯ ಗೋಡೆಯ ಮೇಲೆ ಬಿಡುತ್ತಿದ್ದ.

ಹಿರಿಮರುದುಪ್ಪೆ ಚಾರಣಿಗರು ಅಷ್ಟಾಗಿ ಬಳಸದ ಶಿಖರ. ಅಲ್ಲಿಗೆ ನಾವು ಹಿಡಿದದ್ದೇ ದಾರಿ. ಭೂಪಟದಲ್ಲಿ ಹಿಂದಿನ ರಾಜ್ಯ ಗಡಿ (ಮದ್ರಾಸ್, ಮೈಸೂರು), ಈಗಿನ ಜಿಲ್ಲಾಗಡಿ (ದಕ, ಚಿಕ್ಕಮಗಳೂರು) ಗುರುತಿಸುವ ರೇಖೆ ಸ್ಪಷ್ಟವಿತ್ತು. ಅದು ಇಲ್ಲಿ ಕುದುರೆಮುಖ ಶಿಖರದಿಂದ (- ಸಮುದ್ರ ಮಟ್ಟದಿಂದ ೬೨೦೭ ಅಡಿ,) ಹೇವಳದ ಆಳಕ್ಕೆ (- ಸ.ಮ. ೩೯೪೨ ಅಡಿ), ಅಂದರೆ ಪೂರ್ವಕ್ಕೆ ಇಳಿದದ್ದು, ನಮ್ಮ ಜಾಡನ್ನು ಹಾಯ್ದು ಮತ್ತೂ ತುಸು ಇಳಿದೇ ಸಾಗಿತ್ತು. ಅಲ್ಲಿ ಅದನ್ನು ಬೃಹತ್ ಗೋಡೆಯಂತೆಯೇ ಅಡ್ಡಗಟ್ಟಿ, ಕಿರಿದಂತರದಲ್ಲಿ (ಹಕ್ಕಿ ಹಾರಿದಂತೆ ಹೇಳುವುದಿದ್ದರೆ ಒಂದು ಮೈಲಿಗೂ ಕಡಿಮೆ) ಮುಗಿಲಿನೆತ್ತರಕ್ಕೆ ಮಲೆತ ಶಿಖರ ಹಿರಿಮರುದುಪ್ಪೆ (೫೬೪೩ ಅಡಿ). ಬಲು ಸಪುರದ ಬೋಳುಮಂಡೆ ಈ ಶಿಖರ. ಅದರ ದಕ್ಷಿಣ ಮೈ ನೀವು ತಿಳಿದಂತೇ ನಾವೂರಿನ ಕೊಳ್ಳದಿಂದೇರಿದರೆ ಪೂರ್ವದ ಮೈಯೂ ಹೆಚ್ಚು ಕಡಿಮೆ ನಾವುರಿನದೇ ವಿಸ್ತರಣೆಯಾದ ಬಂಗಾಡಿಕೊಳ್ಳದಿಂದ ಏರಿದೆ. ಆ ಕೊಳ್ಳಕ್ಕೆ ಕಲ್ಪನಾ ಹಕ್ಕಿಯನ್ನು ನೇರ ಹಾರಿಬಿಟ್ಟರೆ ಸುಮಾರು ಮೂರು-ನಾಲ್ಕು ಮೈಲಂತರದಲ್ಲೇ ಊರು ಸೇರುವುದು ಖಾತ್ರಿ. ಆದರೆ ನಮ್ಮ ಸಾಹಸವಿದ್ದದ್ದು ಪಾದಚಾರಿಯ ಮಾನಕದಲ್ಲಿ – ಭಯಕಾರೀ ಐದುಸಾವಿರದ ಮುನ್ನೂರಡಿಯಾಳ; ಹೆಚ್ಚು ಕಡಿಮೆ ೯೦ ಡಿಗ್ರಿ! ಅದನ್ನು ನಿರಾಕರಿಸಿ, ಶಿಖರ ಸಾಲಿನಲ್ಲೇ, ಅಂದರೆ ಗುಪ್ಪೆ ಸಾಲನ್ನೇ ಅನುಸರಿಸುತ್ತ ಸೌಮ್ಯವಾಗಿ ಇನ್ನೊಂದೇ ಊರು – ಯಳನೀರು ಅಥವಾ ದಿಡುಪೆಗೂ ನಾವು ಹೋಗಬಹುದು. ನಕ್ಷೆ ಈ ಶಿಖರ ಸಾಲನ್ನು ಬಂಗಾರಬಳಿಗ ಎಂದು ಗುರುತಿಸುತ್ತದೆ. ಹೇವಳಕ್ಕೆ ಪಶ್ಚಿಮದಲ್ಲಿ ಕುದುರೆಮುಖದ ಗೋಡೆಯಿದ್ದಂತೆ, ಪೂರ್ವದಲ್ಲಿ – ಸಮರೇಖೆಯಂತೇ ನಿಂತಿದೆ ಈ ಗೋಡೆ. ನಮಗೆ ಕೊನೆಯಲ್ಲಿ ಪಶ್ಚಿಮಕ್ಕೆ ತುಸು ಬಾಗಿದಂತೆ ತೋರುವ, ನುಣ್ಣನೆ ಹುಲ್ಲುಹಾಸಿನ ಭ್ರಮೆ ಹುಟ್ಟಿಸುವ ಭಾಗವೊಂದೇ ಏರಲಿದ್ದ ಭರವಸೆ. ಬಂಗಾರಬಳಿಗ ಶಿಖರ ಸಾಲು ತುಂಬ ಸಪುರ. ನಕ್ಷೆ ಹೇಳುವಂತೆ ಆ ಎತ್ತರದಲ್ಲಿ ಜಲಮೂಲಗಳೇನೂ ಇರಲಿಲ್ಲ. ಹಾಗಾಗಿ ನಾವು ಯೋಜನೆಯಂತೆ ಏರೋಣವನ್ನು ಮಾರಣೇ ದಿನಕ್ಕೆ ಉಳಿಸಿ, ರಾತ್ರಿಗೆ ಹಿರಿಮರುದುಪ್ಪೆಯ ಪಾದದಲ್ಲೇ ತಂಗಲು ಜಾಗದ ಬೇಟೆಗೆ ತೊಡಗಿದೆವು.

ಪೂರ್ವಮುಖಿಗಳಾಗಿ ಹೊಂಬಣ್ಣದ ಹುಲ್ಲುಗಾವಲಿನಲ್ಲಿ ಹಗುರಾಗಿ ಇಳಿಯುತ್ತ ನಡೆದೆವು. ಗುಡ್ಡೆಯ ಮೈಯಗಲಕ್ಕೂ ಚದರಿಕೊಂಡು ಇಳಿಜಾರನ್ನು ಅವರವರ ಅನುಕೂಲಕ್ಕೆ ಬಳಸಿಕೊಂಡು, ಅಗತ್ಯ ಬಿದ್ದಲ್ಲೆಲ್ಲ ಹುಲ್ಲನ್ನು ಬಗೆದೇ ನಡೆದೆವು. ಪರ್ವತದ ಏಣು ಸಪುರಗೊಳ್ಳುತ್ತ, ಎರಡೂ ಬದಿಯ ಆಳದಲ್ಲಿ ಕಡುಹಸಿರ ಕಾಡು ಸ್ಪಷ್ಟವಾಗುತ್ತ ಬಂತು. ಅದರಲ್ಲೂ ಬಲಬದಿಯದು ಹೆಚ್ಚು ಆಳ, ಅಸಂಖ್ಯ ತೊರೆ-ಝರಿಗಳ ನೆಲೆ. ನೀರ ಬೀಳು, ಗಾಳಿ ಬೀಸು, ಜೀರುಂಡೆಯಾದಿ ಅಸಂಖ್ಯ ವನಸ್ವನಗಳು ನಮ್ಮದೇ ವಿಹಾರಗಾನವೆಂಬಂತೆ ಅನುಭವಿಸಿದೆವು. ಅದು ಮೋಹಕದಷ್ಟೇ ಭಯಕಾರಿಯಾದ್ದಕ್ಕೇ ಇರಬೇಕು ಕ್ರಮವಾಗಿ ಎಲ್ಲ ಒಂದೇ ಸಾಲಿಗೆ ಬಂದು ಬಲು ಎಚ್ಚರದಿಂದ ಪ್ರತಿ ಹೆಜ್ಜೆಯನ್ನು ತೂಗಿ ಇಡುತ್ತಿದ್ದೆವು. ಹೇವಳದ ಜನ ಮತ್ತು ಸಾಕುಪ್ರಾಣಿಗಳ ಬಳಕೆಯ ಕುರುಹುಗಳು ವಿರಳವಾದವು. ಆ ಹಂತದಲ್ಲಿ ಇಳಿಜಾರು ಮುಗಿದಿತ್ತು. ಮುಂದೆ ಸಣ್ಣ ಏರಿನಲ್ಲಿ ಅಂದರೆ, ಹಿರಿಮರುದುಪ್ಪೆಯ ಪಾದದಲ್ಲೇ ಒಂದು ಸಣ್ಣ ಪೊದರು ಮರಗಳ ನೆಲೆಯನ್ನು ದೂರದಿಂದಲೇ ಗುರುತಿಸಿದೆವು. ಅಲ್ಲಿ ನೀರಿನಾಸರೆ ಇರಬೇಕೆಂದು ಅಂದಾಜಿಸಿ ಅತ್ತ ಸರಿದೆವು.

ಅಲ್ಲಿ ಭೂಪಟವನ್ನು ಅತಿ ವಿವರಗಳಲ್ಲಿ ಕಣುಂಬಿಕೊಳ್ಳುವಂತಿತ್ತು ದೃಶ್ಯ. ಎದುರು ಕನಿಷ್ಠ ಒಂದೂವರೆ ಗಂಟೆಯ ಆರೋಹಣ ಸಮಯ ಕೇಳುವ ದಿಟ್ಟ ಹಿರಿಮರುದುಪ್ಪೆ. ಉತ್ತರಕ್ಕೆ ಚಾಚಿದ ಆ ಗೋಡೆಯ ಬುಡದಲ್ಲಿ ಉದ್ದಕ್ಕೂ ಸಣ್ಣ ಸಣ್ಣ ಹಸುರು ಹುಲ್ಲಿನ ಏಣುಗಳು ಕಣಿವೆಯ ಕಾಡು ನುಗ್ಗುವುದು ಕಾಣುತ್ತಿತ್ತು. ಏಣಿನ ಕಣಿವೆಗಳಂಚಿನಲ್ಲಿ ಬಹು ಕಿರಿದಂತರದಲ್ಲೇ ಹುಲ್ಲು ಮರೆಯಾಗುತ್ತ, ಚೆರ್ಮೆ (ಫರ್ನ್ಸ್), ಪೊದರು ಗಿಡಗಳು ವಿಸ್ತರಿಸುತ್ತ ಕಣಿವೆಯ ಕಾಡಾಗುವ ಚಂದ, ಶೋಲಾ ಕಾಡಿನ ಪಾಠಕ್ಕೆ ಪ್ರಕೃತಿಯೇ ಪುಟ್ಟಪುಟ್ಟದಾಗಿ ಮಾಡಿಟ್ಟ ಸುಂದರ ಮಾದರಿ. ಆ ಸರಣಿಯಲ್ಲಿ ಮೊದಲ ಪಾದವನ್ನೇ ನಾವಾರಿಸಿಕೊಂಡೆವು. ಅಲ್ಲಿ ಜವುಗು ನೆಲ ಹೆಚ್ಚಿದ್ದು, ಗೊರಸಿನ ಪ್ರಾಣಿಗಳ ಓಡಾಟದ ಸಾಕ್ಷಿಗಳೂ ಧಾರಾಳವಿತ್ತು. ಅಲ್ಲಿ ಕಾಡು ನುಗ್ಗಿದ್ದರೆ ನಿಸ್ಸಂದೇಹವಾಗಿ ನೀರ ಹರಿವು ಸ್ಪಷ್ಟಗೊಳ್ಳುತ್ತಿತ್ತು. ಆದರೆ ನಮಗೆ ಶಿಬಿರಹೂಡಲು ನೆಲ ಸಿಕ್ಕುವುದು ಸಂಶಯವಿದ್ದುದರಿಂದ ಮತ್ತೂ ಉತ್ತರಕ್ಕೆ ಮುಂದುವರಿದೆವು. ಕತ್ತಿ ಪ್ರಯೋಗಿಸಿ ಕಾಡು ನುಗ್ಗಿದೆವು. ನೆಲದ ತರಗೆಲೆ ಹಾಸು ಸಂದ ವರ್ಷಗಳ ದಾಖಲೆ ದಫ್ತರದಂತಿತ್ತು. ನೀರಪಸೆಯೂ ಧಾರಾಳ ಇದ್ದುದರಿಂದ ಬೆರಳುದ್ದದ ಜಿಗಣೆಗಳು ಜಿಮಿಗುಟ್ಟುತ್ತಿದ್ದುವು. ಅದುವರೆಗಿನ ನಡಿಗೆಯ ಉಜ್ಜಾಟ ಮತ್ತು ಹರಿದ ಬೆವರಿನಲ್ಲಿ ಕಾಲ್ಚೀಲದ ಡೆಟ್ಟಾಲ್ ಪ್ರಭಾವವೂ ಕಡಿಮೆಯಾದ್ದು ಅನುಭವಕ್ಕೆ ಬಂತು. ಅಲ್ಲೇ ಅಡ್ಡ ಬಿದ್ದ ಒಂದು ಭಾರೀ ಮರದ ಬೊಡ್ಡೆಯ ಮೇಲೆ ಕುಳಿತು ಒಯ್ದ ಚಕ್ಕುಲಿ, ಹಲ್ವಾ ಸವಿದೆವು. ಅಲ್ಲಿನ ಝರಿನೀರನ್ನು ಲೋಟಗಳಲ್ಲಿ ಹಿಡಿದು ಕುಡಿದದ್ದಲ್ಲ, ಪಾನಕದಂತೇ ಸವಿದೆವು. ಹಾಗೇ ವಿಚಾರಮಾಡಿದಾಗ ಶಿಬಿರತಾಣ ಜಿಗಣೆಮುಕ್ತವೂ ಆಗಬೇಕಾದರೆ ತೆರೆಮೈಯೇ ಬೇಕೆಂದು ತಿದ್ದುಪಡಿ ಹಾಕಿಕೊಂಡೆವು. ಜಿಗಣೆ ಗೇಣಿಕ್ಕಿದಲ್ಲಿ ನಾವು ದಾಪುಗಾಲಿಕ್ಕಿ, ಆ ಪುಟ್ಟ ಕಣಿವೆ ಕಾಡಿನ ಇನ್ನೊಂದು ಬದಿಯಿಂದ ಹೊರ ಬಂದು ಮತ್ತಷ್ಟು ಉತ್ತರಕ್ಕೆ ಸರಿದೆವು.

ಬೆಟ್ಟದ ಮುಂದಿನ ನೆರಿಗೆಯಲ್ಲಿ ಹುಲ್ಲ ಮೈಯಲ್ಲೇ ಒಂದು ಪುಟ್ಟ ಜಲಪಾತ ಕಾಣಿಸಿತು. ಅದರ ತಳದಿಂದಷ್ಟೇ ಕಾಡು ತೊಡಗಿದ್ದರಿಂದ ನಾವು ಜಲಪಾತದ ಭುಜದತ್ತ ಧಾವಿಸಿದೆವು. ಭಾರೀ ಬಂಡೆ ತುಣುಕುಗಳು, ಗೊಸರು, ದಟ್ಟ ಹುಲ್ಲು, ಎಡೆಯಲ್ಲಿ ಕಾಲು ಸಿಕ್ಕಿಕೊಳ್ಳುವ ಅಪಾಯಗಳನ್ನೆಲ್ಲ ಸುಧಾರಿಸಿ ಮುಂದುವರಿಯುವ ನಮ್ಮ ವೇಗಕ್ಕೆ ದಿನದ ಬೆಳಕು ಉಳಿಯಲಿಲ್ಲ. ಮಸಕು ಬೆಳಕಿನಲ್ಲಿ ಜಲಪಾತದ ಬುಡ ಹಾಯ್ದು, ಎದುರು ದಂಡೆಯ ಮೇಲಿನ ತಟ್ಟು ಸೇರಿದೆವು.

ಶ್ರೇಣಿಯ ಮೇಲೆಲ್ಲೋ ಜಿನುಗಿ, ತೊಟ್ಟಿಕ್ಕಿ, ಹುಲ್ಲ ಸಂದಿನಲ್ಲಿ ಸರಿದು, ಇಲ್ಲಿ ಬಂಡೆಪಾತ್ರೆಯಲ್ಲಿ ಝರಿ- ಜಲಪಾತವೇ ಆಗಿತ್ತು ಆ ನೀರಾಸರೆ. ನಾವಾಯ್ದ ತಟ್ಟಿನ ಸೊಂಪಾದ ಹಸಿರುಹುಲ್ಲು ಎಂಟರ ತಂಡಕ್ಕೆ ಸುಪ್ಪತ್ತಿಗೆ. ಕತ್ತಲ ಪತ್ತಲ ನಮ್ಮ ಸುತ್ತಲ ಪೂರ್ಣಗೊಂಡರೇನು, ದಿನವೀಡೀ ಭುಜ ಜಗ್ಗಿದ ಹೆಣಭಾರ ಕಳೆದ ಸಂತೋಷ, ಎಲ್ಲೋ ಮುಟ್ಟಬೇಕೆಂಬ ತರಾತುರಿಯಲ್ಲೂ ಕಾಡುವ ಅಧೀರ ನಡೆಗೊಂದು ಮುಕ್ತಾಯ ಸಣ್ಣದಲ್ಲ. ಇಡಿಯ ರಾತ್ರಿ ನಮ್ಮದು ಎಂಬ ಲಹರಿಯಲ್ಲಿ, ಟಾರ್ಚ್ ಬೆಳಗಿಕೊಂಡು ಶಿಬಿರದ ಅಗತ್ಯಗಳನ್ನು ಸಜ್ಜುಗೊಳಿಸಿದೆವು. ನಮ್ಮ ನಸು ಇಳಿಜಾರಿನ ಕಲ್ಲ ಹಾಸು ಎಲ್ಲಾ ಒರಟುತನದಲ್ಲೂ ಸುಮಾರು ಎರಡಡಿ ಎತ್ತರದ ಎರಡು ವಿಸ್ತಾರ ಸೋಪಾನದಂತಿತ್ತು. ಅದರ ಒಡಕು ಬಿರುಕುಗಳಲ್ಲಿ ತೆಳು ಮಣ್ಣ ಪದರದಲ್ಲಿ ತಮ್ಮ ಬೇರ ಜಾಲ ಹರಡಿದ ಹುಲ್ಲ ಹಾಸು ಬಂಡೆಯ ಒರಟನ್ನು ಮರೆಮಾಡಿತ್ತು. ಕೆಳ ಮೆಟ್ಟಿಲಲ್ಲಿ ಝರಿಯಿಂದ ಸಾಕಷ್ಟು ಅಂತರವಿಟ್ಟೇ ಮೂರು ಕಲ್ಲು ಹೂಡಿ ಒಲೆ ಮಾಡಿದೆವು. ನಾವು ವಿರಮಿಸುವಷ್ಟು ಜಾಗದಲ್ಲಿ ಪುಡಿಗಲ್ಲುಗಳನ್ನು ನಿವಾರಿಸಿ, ಮೇಲ್ಮೈಯಷ್ಟೇ ಹುಲ್ಲು ಕತ್ತರಿಸಿ ಹಾಸಿಕೊಂಡೆವು. ಕಲ್ಲು ಕೊರಕಲುಗಳ ರಾಶಿಯ ನಡುವೆ ದಟ್ಟವಾಗಿ ಹೆಣೆದ ಕೆಳಗಿನ ಕಾಡಿನಲ್ಲಿ, ಎರಡು ದೊಡ್ಡ ಸೆಲ್ಲಿನ ಪುಟ್ಟ ಬೆಳಕುಗಳಲ್ಲಿ (ಆ ದಿನಗಳಲ್ಲಿ, ಅಂಗೈಯೊಳಗೆ ಕೂತರೂ ಸೂರ್ಯಪ್ರಕಾಶವನ್ನು ನಾಚಿಸುವ ಎಲ್ಲೀಡಿ ಟಾರ್ಚುಗಳಿರಲಿಲ್ಲ ಸ್ವಾಮೀ!) ಸೌದೆ ಸಂಗ್ರಹಿಸುವುದು ಭಾರೀ ಪ್ರಯಾಸದ ಕೆಲಸವಾಯ್ತು. ಜಲಪಾತದ ಬುಡಕ್ಕಿಳಿಯುವ ಜಾಡು ತೆರವುಮಾಡಿ, ನೀರು ಸಂಗ್ರಹಕ್ಕೊಂದು ತಗ್ಗೂ ಮಾಡಿಕೊಂಡೆವು. ಇವೆಲ್ಲ ಆಗುತ್ತಿದ್ದಂತೆ ಆರಂಭಿಕ ಬಿಸಿಯಳಿದು, ಬೆಟ್ಟದ ಸಹಜ ಚಳಿ ಸುತ್ತಿಕೊಂಡಿತ್ತು. ಮಂಗನತೊಪ್ಪಿ, ಕಂಠಕ್ಕೆ ಸುತ್ತಿ, ಉಣ್ಣೆ ಕೋಟು ಸಾಲದೆಂದು ಮಲಗುವ ಸಾಹಿತ್ಯಗಳನ್ನೂ ಕೆಲವರು ಮೈಸುತ್ತಿಕೊಂಡದ್ದು ತಮಾಷೆಯಾಗಿತ್ತು. ಶಿಬಿರಾಗ್ನಿ ಬಹಳ ಕಷ್ಟದಲ್ಲಿ ಉರಿದಿತ್ತು. ಊಟದ ವೇಳೆ ಮೀರಿದ್ದರೂ ಮೊದಲು ಸಂಜೆಯ ಕಾಫಿ – ಹುಡಿ ಕರಡಿ ಮಾಡಿದ ಗಟ್ಟಿ ಪಾಕ! ಅನಂತರ ಎಲ್ಲ ಸೇರಿ ತರಕಾರಿ ಹೆಚ್ಚುವುದನ್ನು ನಡೆಸಿದೆವು. ಒಲೆಗೂ ಸೌದೆ ನಾವು ನಿರೀಕ್ಷಿಸಿದ ಹಾಗೆ ಸಿಗಲಿಲ್ಲ. ಬರಿಯ ಗಂಜಿ ಕಾಯಿಸಿ ಊಟಕ್ಕೆ ಕೂರುವಾಗ ಒಂಬತ್ತೂವರೆ ಗಂಟೆಯಾಗಿತ್ತು. ಊಟ ತೀರಾ ಸರಳ – ಸುಡುಸುಡು ಗಂಜಿಯೊಡನೆ, ಹಸಿ ಪಚ್ಚಡಿ, ನಂಚಲು ಗರಮಾಗರಮ್ ಉಪ್ಪಿನಕಾಯಿಯನ್ನೇ ಮನಸೋ ತಿಂದೆವು. (ಆ ಕಾಲಗಳಲ್ಲಿ ಮಾರುಕಟ್ಟೆ ತಿನಿಸುಗಳ ಹಾವಳಿಯಿರಲಿಲ್ಲ ಮತ್ತು ತಂಡದಲ್ಲಿನ ಸದಸ್ಯರಿಗೆ ವೈಯಕ್ತಿಕ ತಿನಿಸುಗಳ ಗೀಳೂ ಇರಲಿಲ್ಲ. ನಮ್ಮ ಈಚಿನ ಕುದುರೆಮುಖ ಶಿಖರದ ಬೆಳಗ್ಗಿನ ಉಪಾಹಾರದ ವೈಭವ ಆ ದಿನಗಳಲ್ಲಿ ಕನಸಿನಲ್ಲೂ ಬರುವುದು ಅಸಾಧ್ಯವಿತ್ತು!)

ಶಿಬಿರಾಗ್ನಿ ದೊಡ್ಡದು ಮಾಡಿ, ಸರದಿಯ ಪಹರೆಯೊಡನೆ ನಿದ್ರೆ ಕಾರ್ಯಕ್ರಮದ ಪಟ್ಟಿಯಲ್ಲಿತ್ತು. ಆದರೆ ಚಳಿಗಾಳಿ ಬೀಸುವುದರೊಡನೆ, ಸೌದೆ ಹಸಿಯೋ ಕುಂಬೋ ಆಗಿ, ಮುನಿಸಿದ್ದರಿಂದ ಬೆಳಕು ಬಿಸಿಗಿಂತ ಹೊಗೆ ಶ್ರಮ ಹೆಚ್ಚಾಯ್ತು; ನಿದ್ರೆ ಕನಸಾಯ್ತು. ವಾತಾವರಣದ ಚಳಿ ಹೆಚ್ಚುತ್ತಿದ್ದಂತೆ ಮುರುಟಿ ಮಲಗಿದ್ದ ಕೆಲವರಿಗೆ ತಳದ ಜಮಖಾನವೂ ಥಂಡಿ ಮುಟ್ಟಿಸತೊಡಗಿತ್ತು. ಬೆಳಗಾದ ಮೇಲೆ ನಿಚ್ಚಳವಾದ ವಾಸ್ತವ – ನಾವು ತಂಗಿದ್ದಷ್ಟೂ ಬಂಡೆ ಹಾಸಿನ ಮೇಲೆ ಬೆಟ್ಟದಿಂದಿಳಿವ ನೀರ ಜಿನುಗು ಸಹಜವಾಗಿ ವ್ಯಾಪಿಸುತ್ತಿತ್ತು. ಕತ್ತಲಲ್ಲಿ, ಮೇಲಷ್ಟು ಹಸಿ ಹುಲ್ಲು ಹೆರೆದು ಹಾಕಿದ್ದರಲ್ಲಿ ಮೊದಮೊದಲು ನಮಗೆ ಅದು ಅರಿವಿಗೆ ಬಂದೇ ಇರಲಿಲ್ಲ. ಆದರೆ ಹೊತ್ತು ಕಳೆದಂತೆ ನಮ್ಮ ಹಾಸುಗಳೂ ಪಸೆ ಎಳೆದುಕೊಂಡು ಚಂಡಿಯಾಗಿ ಹೆಚ್ಚು ಕಡಿಮೆ ಎಲ್ಲರಿಗೂ ನಿದ್ದೆಗೇಡು. ನಮ್ಮ ಶಿಬಿರಾಗ್ನಿ ಅಕ್ಷರಶಃ `ನೀರಮೇಲಿನ ಹೋಮ’ವಾದ ಮೇಲೆ ಉರಿಯುವುದೆಲ್ಲಿಂದ! ಸುಮಾರು ಮಧ್ಯರಾತ್ರಿಯ ವೇಳೆಗೆ ಹಿರಿಮರುದುಪ್ಪೆಯ ಮರೆಯಿಂದ ಚಂದಿರ ಬಂದ. ಅವನು ಬೆಳಕೇನೋ ಕೊಟ್ಟ, ತಂಗದಿರನಾದ್ದಕ್ಕೆ ಚಳಿಯನ್ನೂ ಹೆಚ್ಚಿಸಿದ ಎನ್ನುವ ಹಾಗಾಯ್ತು! ಗಾಳಿ ಕುಣಿಸಿದಂತೆಲ್ಲ ಕಟ್ಟಿಗೆ ರಾಶಿ ಹೊಗೆ ಕುಣಿಸುತ್ತಿತ್ತು. ಚಳಿ ತಡೆಯಲಾಗದ ಕಷ್ಟಕ್ಕೆ ನಾವು ಸುತ್ತಣಿಂದಲೂ ಬಗ್ಗಿ, ತಗ್ಗಿ ತುಟಿ ಚೂಪು ಮಾಡಿ ಗಾಳಿ ಊದಿದ್ದೇನು, ಸೌದೆ ನುರಿದದ್ದೇನು! ಚಳಿಹಿಡಿದ ಬೆಂಕಿ ನಮ್ಮ ಹಿಂಸೆ ತಡೆಯದಾದಾಗ ಒಮ್ಮೊಮ್ಮೆ ಧಗ್ಗನೆ ಜ್ವಾಲೆಯೆಬ್ಬಿಸಿದರೂ ಅಲ್ಪಾಯುಷಿಯಾಗಿ, ಬಳಕುವ ಹೊಗೆಕಂಬ ನಿಲ್ಲಿಸುತ್ತಿತ್ತು, ನಮ್ಮ ನಿದ್ದೆಗೆಟ್ಟ ಕಣ್ಣ ಆಳದಿಂದ ನೀರ ತೆಗೆಯುತ್ತಿತ್ತು. ಸುಳಿಗಾಳಿಗೆ ಸಂಭ್ರಮಿಸುವ ಹುಲ್ಲ ಹಾಸಿನ ಸದ್ದು, ಕಣಿವೆಯ ಜೀವಶ್ವಾಸದಂತೆ ಕೇಳಿಯೂ ಕೇಳದ ಅನಂತ ನೀರ ಬೀಳುಗಳ ಸದ್ದು ಬಿಟ್ಟರೆ ರಾತ್ರಿ ಹೆಚ್ಚು ಕಡಿಮೆ ನೀರವ, ನಿಸ್ಪಂದ. ಆ ಪೂರ್ಣ ಮೌನದಲ್ಲಿ ಎಲ್ಲೋ ಗಂಟೆಗೊಮ್ಮೆ ಎರಡು ಬಾರಿಯೋ ಜಲಪಾತದ ಬುಡದಿಂದ ವಿಚಿತ್ರ ಸದ್ದು ಕೇಳುತ್ತಿತ್ತು. ನಮಗರ್ಥವಾಗದ ಭಾಷೆಯಲ್ಲಿ ಯಾರೋ ಮನುಷ್ಯನೇ ಧ್ವನಿ ತೆಗೆದ ಹಾಗೆ. ನಾವೊಂದಿಬ್ಬರು ಟಾರ್ಚು, ದೊಣ್ಣೆ ಸಜ್ಜಿತರಾಗಿ ಪತ್ತೇದಾರಿ ಪುರುಷೋತ್ತಮ ಮಾಡಿದಾಗ ಕಂಡದ್ದೊಂದು ಮಹಾ ಮಂಡೂಕ! (ಕ್ಷಮಿಸಿ ಕಪ್ಪೆ ಪಂಡಿತ ಕೆ.ವಿ ಗುರುರಾಜರೇ ಇಂದು ಅದರ ಯಾವುದೇ ದೈಹಿಕ ಲಕ್ಷಣಗಳು ನನ್ನ ನೆನಪಿನಲ್ಲಿಲ್ಲ.)

ನಿದ್ದೆ ಮಾಡಲಾಗದ ಸಂಕಟಕ್ಕೆ ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೇ ನಾವು ಹೊಸದಿನದ ಕಲಾಪಗಳಿಗಿಳಿದಿದ್ದೆವು. ಅವಲಕ್ಕಿ ಒಗ್ಗರಿಸಿ, ಚಾ ಕಾಯಿಸಿ ಹೊಟ್ಟೆ ಗಟ್ಟಿ ಮಾಡಿಕೊಂಡೆವು. ಸುತ್ತಣ ಕೊಳ್ಳ ಕೊರಕಲುಗಳ ಪರಿಚಯ ಏನೂ ಇಲ್ಲದ್ದರಿಂದ ಶೌಚಕ್ಕೆ ಯುಕ್ತ ಜಾಗ ಹುಡುಕುವ ಅಪಾಯ ತಂದುಕೊಳ್ಳಲಿಲ್ಲ. ಸಹಜ ಕತ್ತಲೆಯ ಮರಸು ಬಳಸಿ, ನಾವು ವಾಪಾಸು ಹೋಗುವ ದಾರಿಯೊಂದನ್ನುಳಿದು ಅಲ್ಲೇ ಸುತ್ತ ಮುತ್ತ ಮುಗಿಸಿಕೊಂಡೆವು! ಹೀಗೆ ಚಳಿ, ಕತ್ತಲೆ, ಅಸಮ ನೆಲದ ತಕರಾರೆಲ್ಲವನ್ನು ಸುಧಾರಿಸಿಕೊಂಡೂ ನಮ್ಮ ಸೈನ್ಯ ಸೂರ್ಯೋದಯದ ಸಮಯಕ್ಕೂ ಗಂಟೆ ಮುಂದಾಗಿಯೇ ಸಜ್ಜಾಗಿತ್ತು. [ಶಿಬಿರ ಚಿತ್ರಕ್ಕೊಂದು ವಿವರಣೆ: ನಕ್ಷೆಯ ಸುರುಳಿ ಹಿಡಿದು ಬುರುಡೆ ಬಿಡುವವ ನಾನು, ಶೋತೃಗಳು – ಎಡಕ್ಕೆ ಕೈಕಟ್ಟಿ ಶ್ರೀಕಂಠಯ್ಯ, ಶೂ ಲೇಸ್ ಬಿಗಿಯುತ್ತ ಸಮೀರ, ಚಳಿ ಕಾಯಿಸುತ್ತ ಶೌರಿ, ಕ್ರಿಕೆಟ್ ಟೊಪ್ಪಿಯ ಉಪಾಧ್ಯ ಮತ್ತು ಸೈನಿಕ ಟೊಪ್ಪಿಯ ಕುಲಕರ್ಣಿ, ಚಿಪ್ಲೂಣಕರ್ ಗುಪ್ತ ಕಾರ್ಯಾಚಾರಣೆಗೆ ಹೋಗಿದ್ದು, ಚಿತ್ರಗ್ರಾಹಿ ಯಜ್ಞರ ಗಮನಕ್ಕೆ ಬಂದಿಲ್ಲ] ಸಾಮಾನ್ಯ ಜಗತ್ತಿನ ದಿಗಂತಕ್ಕೆ ಅರುಣನೇನೋ ಕಾಲನಿಷ್ಠನಾಗಿ ಬಂದದ್ದಿರಬಹುದು. ಆದರೆ ಬೆಟ್ಟದ ಸ್ಪಷ್ಟ ಪಶ್ಚಿಮ ಮೈಯಲ್ಲಿದ್ದ ನಮಗವನ ಆಗಮದ ಸೂಚನೆ ಸಿಕ್ಕುವಾಗ ಗಂಟೆ ಏಳು ಕಳೆದಿತ್ತು.

ಶಿಬಿರ ತಾಣಕ್ಕೆ ನಾವನುಸರಿಸಿದ ದಿಕ್ಕಲ್ಲಿ ಮುಂದುವರಿಯುತ್ತ ಮೇಲೇರುವುದು ಅಸಾಧ್ಯ ಕಲ್ಪನೆ. ಅತ್ತ ಶಿಖರ ಸಾಲು ಹುಲ್ಲಿನ ಹೊದಿಕೆಯನ್ನೂ ಕಳಚಿ, ಕರಿಕರಿ ಕಲ್ಲಾಗಿ, ನಮ್ಮ ಮೇಲೇ ಕವುಚಿಬೀಳುವಂತೆ ತೋರುತ್ತಿತ್ತು. ಹಾಗಾಗಿ ಹಿಂದಿನ ಸಂಜೆ ಬಂದ ದಿಕ್ಕಿಗೇ (ದಕ್ಷಿಣ) ಮುಖಮಾಡಿ, ಅನುಕೂಲ ಒದಗಿದಂತೆ ಓರೆಯಲ್ಲೇ ಬೆಟ್ಟ ಏರತೊಡಗಿದೆವು. ಮೊದಮೊದಲು ಸೂರ್ಯಪ್ರಕಾಶ ಸಾಲದೆ, ಬೆಳಗಿನ ಮಸುಕು ಹರಿಯದೆ, ಹತ್ತಿಪ್ಪತ್ತು ಅಡಿಯಾಚೆ ಏನೂ ಕಾಣುತ್ತಿರಲಿಲ್ಲ. ಆದರೆ ದೃಷ್ಟಿ ಹರಿಯುವಷ್ಟೆತ್ತರಕ್ಕೂ ಹಬ್ಬಿದ್ದ ಹಸುರು ಹುಲ್ಲು ನಮ್ಮ ಭರವಸೆ. ಅವು ವರ್ಷಾನುಗಟ್ಟಳೆ ಬೆಟ್ಟದ ಮೈಯಲ್ಲಿ ಮರು ಹುಟ್ಟುಕಾಣುತ್ತಲೂ ತನ್ನ ಒಂದೊಂದು ಸಮೂಹದ (ನೆಲದ ಮೇಲಿನ ಗಡ್ಡೆಯಂತೇ ಭಾಸವಾಗುತ್ತದೆ) ಬೇರಜಾಲವನ್ನು ವಿಸ್ತರಿಸಿ ದೃಢಗೊಳಿಸುತ್ತಲೂ ಬಂದಿವೆ. ಹುಲ್ಲ ಮೇಯುತ್ತ ಅಲೆವ ಕಾಟಿ, ಕಡವೆಗಳು ಇಲ್ಲೆಲ್ಲ ಬೇರ ಗಡ್ಡೆಯಿಂದ ಗಡ್ಡೆಗೆ ನಿರಂತರ ಅಲೆದಾಡಿ ಜಾಡುಮೂಡಿಸಿವೆ. ಬೆಳಕು ಹೆಚ್ಚಿದಂತೆ ಈ ಜಾಡಿನ ಜಾಲ ನಮ್ಮ ಬಗೆಗಣ್ಣಿಗೆ ಬೆಟ್ಟದ ಮೈಯಲ್ಲಿನ ವಿಸ್ತಾರ ಬಲೆಯಂತೆಯೇ ತೋರಿತು. ಬೆಟ್ಟದ ಮೈಯಲ್ಲಿ ಯಾರೂ ಕೇವಲ ಕಾಲಬಲ ನೆಚ್ಚುವಂತಿರಲಿಲ್ಲ; ಎಲ್ಲರೂ ನಾಲ್ಗಾಲರು! ಪ್ರತಿಯೊಬ್ಬರೂ ಅವರವರ ನಿಲುಕಿಗೆ ದಕ್ಕಿದಂತೆ ಎರಡೂ ಕೈಗಳಲ್ಲಿ ಮೇಲಿನ ಹುಲ್ಲಿನ ಮೊತ್ತವನ್ನು ಜಗ್ಗಿ, ಹಾಗೇ ಕೆಳಗೊದಗಿದ ಹುಲ್ಲಗಡ್ಡೆಯನ್ನು ಮೆಟ್ಟಿ ಮುಂದುವರಿಯುತ್ತಿದ್ದೆವು. ಮೊದಲೇ ಚಳಿಯಿಂದ ಸೆಟೆದ ಬೆರಳುಗಳಲ್ಲಿ ಇಬ್ಬನಿಯಿಂದ ತೊಯ್ದ ಹರಿತ ಅಂಚಿನ ಹುಲ್ಲನ್ನು ಸೆಳೆದು ಹಿಡಿಯುವುದು ಸಾಮಾನ್ಯ ಮಾತಲ್ಲ. ಚಳಿ, ನೀರಪಸೆಗೆ ಬಿಳಿಚಿ ಹೋಡ ಬೆರಳ ತುಂಬಾ ಬ್ಲೇಡ್ ಗೀರಿದಂತೆ ಗಾಯಗಳು. ಕೆಲವೊಮ್ಮೆ ಹಿಡಿಯಲಾರೆ, ಬಿಡಲೂ ಆರೆ ಎನ್ನುವ ಸಂಕಟ. ಸಮಸ್ಥಿತಿಯ ಚಾರಣದಲ್ಲಿ ಕಿರು ಆಕಸ್ಮಿಕಗಳಲ್ಲಿ ಮುಂದಿನವನ ಬೂಟನ್ನು ಹಿಂದಿನವನು ತುಳಿಯುವ ಸಾಧ್ಯತೆ ಇರುತ್ತದೆ. ಆದರೆ ಇಲ್ಲಿ ಮುಂದಿನವನ ಪಾದ ಹಿಂದಿನವನ ಮುಖಕ್ಕೆ ತಗಲುವ ಅಪಾಯವಿತ್ತು; ಅಷ್ಟೂ ಕಡಿದು. ಕೆಲವೆಡೆಗಳಲ್ಲಿ ನೆಲದಿಂದ ಬಂಡೆಯೇ ಉಬ್ಬೆದ್ದು, ನಮಗೆ ಹುಲ್ಲ ಆಧಾರವಿಲ್ಲದೆ ಮುಂದುವರಿಯುವುದು ಅಸಾಧ್ಯವಾಗುತ್ತಿತ್ತು. ಅಲ್ಲಿನ ಸ್ಥಿತಿಯಲ್ಲಿ ಶಿಲಾರೋಹಣದ ಸಾಧ್ಯತೆಗಳನ್ನು ನಾವು ಪ್ರಯೋಗಿಸಲಿಲ್ಲ. ಸಾಮಾನ್ಯರಂತೆ ಬಂಡೆಯನ್ನು ಬಳಸಿ ಹೋಗಲು ಅವಕಾಶ ಹುಡುಕುತ್ತಿದ್ದೆವು, ಇಲ್ಲವೇ ನಿರ್ಯೋಚನೆಯಿಂದ ಹಿಂದೆ ಸರಿದು ಬೇರೇ ದಿಕ್ಕಿನಿಂದ ಮುಂದುವರಿಯುತ್ತಿದ್ದೆವು. ಇಷ್ಟೆಲ್ಲ ನಿಧಾನಕ್ಕೆ ನಿಭಾಯಿಸಿದರೂ ನಾವು ನಿರೀಕ್ಷೆಗೂ ಮೊದಲೇ ಅಂದರೆ, ಎಂಟು ಗಂಟೆಗೇ ಶಿಖರ ಸಾಧಿಸಿದ್ದೆವು. ಮೊದಲೇ ಚಳಿ ಹಿಡಿದ ನಮ್ಮನ್ನು ಉದ್ದಕ್ಕೂ ಒದ್ದೆ ಹುಲ್ಲು ಮೈಸವರಿ ದೈಹಿಕವಾಗಿ ಗದಗುಟ್ಟುವಂತೆ ಮಾಡಿತ್ತು. ಏರಿನ ಕಾಠಿಣ್ಯವಂತೂ ಒಳಗಿಂದ ಬೆವರಿಸಿಯೂಬಿಟ್ಟಿತ್ತು. ಆದರೆ ಸಾಧನೆಯ ಬಿಸುಪು, ಎಲ್ಲ ಚಳಿ, ನೋವನ್ನು ಮರೆಸಿತ್ತು.

ಮೂರು ದಿಕ್ಕಿಗೂ ಭಾರೀ ಕೊಳ್ಳ ದರ್ಶನವನ್ನೇ ಕೊಡುತ್ತಿದ್ದ ಹಿರಿಮರುದುಪ್ಪೆ – ಅಕ್ಷರಶಃ ಬೋಳುಮಂಡೆ, ನಮಗೆ ಒಲಿದಿತ್ತು. ನಮ್ಮ ಮುಂದಿನ ಲಕ್ಷ್ಯ, ಅತ್ಯಂತ ತಗ್ಗಿನದು – ಪೂರ್ವದಲ್ಲಿ ಸೂರ್ಯಸ್ನಾನಕ್ಕೆ ಮೈ ಬಿಚ್ಚಿ ಬಿದ್ದಿದ್ದ ಬಂಗಾಡಿ ಕಣಿವೆ. ಬೆಟ್ಟದ ಪಾದಕ್ಕೆ ಕಾಡು, ಆಚೆ ತೋಟ, ಗದ್ದೆ, ಹರಡಿದಂತೆ ಬಂಗಾಡಿಯ ವಿರಳ ಕಟ್ಟಡಗಳೆಲ್ಲ ಇನ್ನೂ ಮಂಜುಮೋಡದ ಹೊದಿಕೆಯನ್ನು ಪೂರ್ಣ ಕಳೆದಿರಲಿಲ್ಲ. ಇನ್ನೊಂದು ಲೆಕ್ಕದಲ್ಲಿ ಹೇಳುವುದಿದ್ದರೆ, ಸೋಮಾರಿ ಮಂಜುಮೋಡಗಳೇ ಕಾಡು-ಬಯಲಿನ ಸುಪ್ಪತ್ತಿಗೆ ಬಿಟ್ಟೇಳುವಲ್ಲಿ ನಿಧಾನಿಸುತ್ತಾ ವಿಚಿತ್ರ ಭಂಗಿಗಳಲ್ಲಿ ಮೈಮುರಿಯುತ್ತಾ ಆಕಳಿಸಿದಾಗಷ್ಟೇ ಕೊಳ್ಳದ ವಿವರ ತೋರುತ್ತಿದ್ದುವು. ಎಲ್ಲೋ ಅವಸರದವಷ್ಟೇ ಗಾಳಿಗುದರಿ ಏರಿ ನಮ್ಮೆತ್ತರಕ್ಕೂ ಬಂದು ಒಂದೆರಡು ಮಿನಿಟಿಗೆ ಕವಿದು, ತೆರೆದು ಆಟವಾಡುತ್ತಿದ್ದುವು. ಸರಿ ಪಶ್ಚಿಮಕ್ಕೆ ಕುದುರೆಮುಖ, ದಕ್ಷಿಣಕ್ಕೆ ನಾವು ಹಿಂದಿನ ದಿನ ಏರೇರಿ ಬಂದ ನಾವೂರ ಜಾಡು ಮತ್ತು ಜಮಾಲಬಾದ್. ಪೂರ್ವಕ್ಕೆ ಬಲ್ಲಾಳರಾಯನ ಶ್ರೇಣಿ ನಮ್ಮ ಸಮಕ್ಕೇ ಕಾಣಿಸುತ್ತಿತ್ತು. ಆದರೆ ಅಲ್ಲಿಂದಲೇ ಅದು ಉತ್ತರಕ್ಕೊಂದು ಒಳ ಸುತ್ತು ತೆಗೆದು ಕಿಲ್ಲೂರು ಕೊಳ್ಳವನ್ನಾವರಿಸಿ, ಯಳನೀರಿಗಾಗಿ ಬಂಗಾರುಬಳಿಗ ಶ್ರೇಣಿಯಾಗುತ್ತಿತ್ತು. ಅಂದರೆ ಹಿರಿಮರುದುಪ್ಪೆಯನ್ನು ಸಂಪರ್ಕಿಸಿತ್ತು.

ಆರೋಹಣದ ಮುಕ್ತಾಯ, ಅವರೋಹಣದ ಆರಂಭವನ್ನು ಸಿಹಿ ತಿಂದು, ನೀರು ಕುಡಿದು ಆಚರಿಸಿದೆವು. ನಾವು ಯೋಜಿಸಿದ್ದಂತೆ ಶಿಖರಸಾಲಿನಲ್ಲಿ ಉತ್ತರಕ್ಕೆ ನಡೆದೆವು. ಬಂಗಾರುಬಳಿಗವನ್ನು ತುಸು ಅನುಸರಿಸಿದರೂ ಆದಷ್ಟು ಬೇಗನೇ ಪೂರ್ವಕ್ಕಿಳಿಯುವ ಯಾವುದಾದರೂ ಕಿರು ಬೆಟ್ಟ ಸಾಲನ್ನು (ಕುದುರೆಮುಖದ ಸಂದರ್ಭದಲ್ಲಿ ಓಂತಿಗುಡ್ಡೆ ನೆನಪಿಸಿಕೊಳ್ಳಿ) ಕಣ್ಣಂದಾಜಿನಲ್ಲಿ ಹುಡುಕುತ್ತಲೇ ಇದ್ದೆವು. ಅರ್ಧ – ಮುಕ್ಕಾಲು ಗಂಟೆಯಲ್ಲಿ ಮೊದಲೇ ನಕ್ಷೆ ನೋಡಿ ಅಂದಾಜಿಸಿದ್ದಂತೆ ಉಪ್ಪಿನಗುಡ್ಡ ಶ್ರೇಣಿಯನ್ನು, ಗುರುತಿಸಿ ಪೂರ್ವಕ್ಕೆ ತಿರುಗಿದೆವು. ಅದೂ ದೀರ್ಘ ನಡೆಯಲ್ಲಿ ಉತ್ತರಮುಖಿಯಾಗುವುದು, ಯಳನೀರಿನತ್ತ ಸಾರುವುದು ನಮಗೆ ತಿಳಿದೇ ಇತ್ತು. ಹಾಗಾಗಿ ಮತ್ತೆ ಸಾವಿರ ಅಡಿಗೂ ಮಿಕ್ಕ ಕಗ್ಗಲ್ಲ ಗೋಡೆಯೆಂದೇ ನಕ್ಷೆ ರೇಖಿಸಿದ ದಕ್ಷಿಣ ಮೈಯ ಇಳಿಜಾಡು ಗುರುತಿಸುವ ಚಪಲ. ಭೂಪಟ ಸೂಚಿಸದ ಸೂಕ್ಷ್ಮವನ್ನು ಕಣ್ಣಂದಾಜಿನಲ್ಲಿ ಪತ್ತೆಮಾಡುವ ಹಠ. ಬಿಗಿ ಹುಲ್ಲಲ್ಲದೆ ಏನೂ ಇಲ್ಲದ ಶಿಖರಸಾಲು ಸರಾಸರಿಯಲ್ಲಿ ಮೂವತ್ತಡಿ ಅಗಲವಿದ್ದಿರಬಹುದು. ಹೆಚ್ಚಿನವರು ನೇರ ನೆತ್ತಿಯಲ್ಲಿ, ವನಚರಗಳು ಮೂಡಿಸಿದ್ದ ನಿರಪಾಯ ಜಾಡನ್ನೇ ಅನುಸರಿಸಿದರು. ಇಬ್ಬರು ಮಾತ್ರ ಬಲದ ಪ್ರಪಾತಂದಂಚನ್ನು ಎಚ್ಚರಿಕೆಯಲ್ಲಿ ಇಣುಕುತ್ತ, ಅವಶ್ಯ ಬಿದ್ದರೆ ನಕ್ಷೆಯಲ್ಲಿ ಸುಳುಹು ಪಡೆಯಲು ಹೆಣಗುತ್ತ ನಡೆದೆವು. ಅಲ್ಲಲ್ಲಿ ಹುಲ್ಲು ಹರಿದು ಬರಿಯ ಬಂಡೆ, ತುಸು ಜವುಗು ನೆಲ ಸಿಗುವುದಿತ್ತು. ಅಗತ್ಯ ಬಿದ್ದಲ್ಲಿ ನಾಲ್ಗಾಲರಾಗಿ, ಅಸಾಧ್ಯವಾದಲ್ಲಿ ಮೇಲೆ ಸರಿದು ಬಳಸು ನಡೆ ಹಾಕಿದರೂ ಕತ್ತು ಪೂರ್ವದ ಕೊಳ್ಳದತ್ತ ತಿರುಗಿಯೇ ಇರುತ್ತಿತ್ತು, ದಿಟ್ಟಿ ಆಳಕ್ಕಿಳಿಯುವ ಸುಲಭ ಜಾಡು ಅರಸುತ್ತಲೇ ಇತ್ತು.

[ಸಿಕ್ಕಿತೇ ಜಾಡು? ಕೊಳ್ಳಕ್ಕೆ ಕೆಡೆಯಲಿಲ್ಲವೇ ಬಾಳು? ಕಾದು ಓದಿ ಮುಂದಿನ ಗೋಳೂ?]