(ಚಕ್ರವರ್ತಿಗಳು – ೩೨, ದಕ್ಷಿಣಾಪಥದಲ್ಲಿ… – ೯)
ರಂಗನಾಥ ಸ್ತಂಭವನ್ನು ನಮ್ಮ ತಂಡ ಸಾಧಿಸಿದ ಧನ್ಯತೆಯಲ್ಲಿ ಕಳೆದು ಹೋಗಲಿಲ್ಲ. ಬಹುಶಃ ಕೋತಗೇರಿಯಲ್ಲಿ ಊಟ ಮುಗಿಸಿಕೊಂಡೆವು. ಅನಂತರ ಮನೆಯ ದಾರಿಯಲ್ಲಿ ವರ್ಮ ನಮ್ಮನ್ನು ಆತನ ಗೆಳೆಯನೋರ್ವನ ಚಾ ಕಾರ್ಖಾನೆಗೆ ಒಯ್ದರು.

ಸೊಪ್ಪು ಚೂರ್ಣವಾಗುವ ಕಥೆ: ಚಾ ಸೊಪ್ಪು ಕೊಯ್ದ ಹದಿನೈದೇ ಮಿನಿಟುಗಳಲ್ಲಿ, ಪರಿಸರದ ಪ್ರಭಾವದಲ್ಲಿ ಬಾಡಲು ಅಥವಾ ಕೊಳೆಯಲು ತೊಡಗುತ್ತದಂತೆ. ಇದನ್ನು ನಿಯಂತ್ರಿಸಲು ಸೊಪ್ಪನ್ನು ಕಾರ್ಖಾನೆಗೆ ಮುಟ್ಟಿಸುವುದು ಅವಶ್ಯ. ಹಾಗಾಗಿ ಮೂವತ್ತು ನಲವತ್ತು ಕಿಮೀ ಉದ್ದಗಲಕ್ಕೆ ಹಬ್ಬಿದ್ದ ಮೂನಾರಿನಂಥ ಚಾ ತೋಟಗಳ ನಡುವೆ ಜಗತಿನಲ್ಲೇ ಅತಿ ದೊಡ್ಡದೂ (ಚಂದುವರೈ) ಸೇರಿದಂತೆ ಹಲವು ಚಾ ಕಾರ್ಖಾನೆಗಳಿವೆ, ಮತ್ತದು ಅನಿವಾರ್ಯ! ಮೂನಾರಿನಲ್ಲಿ ನಮಗೆ ಚಾ ಕಾರ್ಖಾನೆ ನೋಡಲು ಸಮಯಾವಕಾಶ ಸಿಗಲಿಲ್ಲವೆನ್ನುವ ಕೊರಗು ಇಲ್ಲಿ ಪೂರೈಸಿತು. ಚಾ ಗಿಡಗಳ ಬೆಳವಣಿಗೆಯನ್ನನುಸರಿಸಿ ನಿಗದಿತ ವೇಳಾಪಟ್ಟಿಯಂತೆ ಎಲೆ ಕೊಯ್ಯುವವರು ಗಿಡ ಗಿಡ ಸುತ್ತುತ್ತಾರಂತೆ. ವಾಸ್ತವದಲ್ಲಿ ಹಳೆಯ ತೋಟಗಳಲ್ಲಿ `ಗಿಡ’ಗಳು ಪ್ರಾಯದಲ್ಲಿ ವರ್ಷಾನುಗಟ್ಟಳೆ ಹಿರಿಯವೇ ಇರುತ್ತವೆ. ಎತ್ತರಕ್ಕೆ ಬೆಳೆಯುವ ಗೆಲ್ಲುಗಳ ನಿಯತ ಕಪಾತ್ (`ಕಾಫಿ’ ಭಾಷೆಯಲ್ಲಿ ಕಡಿಯುವುದನ್ನು ಹೀಗೆ ಹೇಳುತ್ತಾರೆ. `ಚಾ’ ಭಾಷೆ ನನಗೆ ನೆನಪಿಲ್ಲ) ಮತ್ತು ಚಿಗುರೆಲೆಗಳ ಕೊಯ್ಲಿನಿಂದ `ಗಿಡ’ಗಳು ಸರಾಸರಿ ಕೊಯ್ಲುಗಾರರ ಎತ್ತರವನ್ನು ಮೀರುವುದಿಲ್ಲ. ವಾಸ್ತವದಲ್ಲಿ ಇವು ತೋರ ಕಾಂಡ ಮತ್ತು ದೀರ್ಘ ಬಾಹುಗಳುಳ್ಳ ಕುಬ್ಜವೃಕ್ಷಗಳು. ಕೊಯ್ಲುಗಾರರು ಅವುಗಳ ಕೊಂಬೆಗಳುದ್ದಕ್ಕೆ ಮೂಡುವ ನವಜಾತ ಒಂದು ಮುಗುಳು, ಎರಡು ಎಲೆಗಳನ್ನಷ್ಟೇ ಚಿವುಟಿ ಬೆನ್ನ ಬುಟ್ಟಿ ಸೇರಿಸುತ್ತಾರೆ. ಬೆನ್ನ ಬುಟ್ಟಿ ಹಳಸದಂತೆ (ಹೊರೆಯೂ ಹೆಚ್ಚದಂತೆ) ಫಸಲು ಕಾಲಕಾಲಕ್ಕೆ ಕೈಗಾಡಿ, ಮುಂದೆ ಟ್ರ್ಯಾಕ್ಟರ್ ಏರಿ, ಹಗಲಿನ ಎಲ್ಲ ಹೊತ್ತೂ ಕಾರ್ಖಾನೆಗೆ ರವಾನೆಯಾಗುತ್ತಲೇ ಇರುತ್ತವೆ. ಅಲ್ಲಿ ಅವನ್ನು ವಿವಿಧ ವಿಸ್ತಾರ ತಟ್ಟೆಗಳಲ್ಲಿ ಹರಡಿ, ಋತುಮಾನಕ್ಕೆ ತಕ್ಕಂತೆ ಗಾಳಿಹಾಕಿ ದಾಸ್ತಾನುಮಾಡುತ್ತಾರೆ, ಸಂಸ್ಕರಣದ ಕಲಾಪಗಳನ್ನು ನಡೆಸುತ್ತಾರೆ. ಬಾಡಿಸಿ, ಚೂರು ಮಾಡಿ, ಹುರಿದು, ವಿವಿಧ ಗಾತ್ರದ ಹುಡಿ ಮಾಡಿ, ನಾರು ತೆಗೆದು, ರುಚಿ ನೋಡಿ, ವಿಂಗಡಿಸಿ, ದಾಸ್ತಾನು ಡಬ್ಬಿ ತುಂಬುವವರೆಗಿನ ಕತೆ ಮನದುಂಬಿಕೊಂಡೆವು. ಮುಂದೇನಿದ್ದರೂ ಕೊಳ್ಳುಗರ ಅಗತ್ಯಾನುಸಾರ ವೈವಿಧ್ಯಮಯ ತೂಕಗಳಲ್ಲಿ, ಸುಂದರ ಆವರಣಗಳಲ್ಲಿ ಅವತರಿಸುವುದೆಲ್ಲ ಕಾರ್ಖಾನೆಯ ಪರಿಧಿಯನ್ನು ಮೀರಿದ ಮಾರುಕಟ್ಟೆ ವಿಭಾಗದ ಗುದಾಮುಗಳಲ್ಲಿ ಎಂದೂ ತಿಳಿದೆವು. ಸುಮಾರು ಆರು ಕಿಲೋ ಹಸಿ ಸೊಪ್ಪು ಒಂದು ಕಿಲೋ ಚೂರ್ಣವಾಗುತ್ತದೆ. ಸಂಸ್ಕರಣದ ಎಲ್ಲ ಹಂತಗಳಲ್ಲೂ ತಲೆ, ಮೂಗು ಹಾಕಿ ಕೊನೆಯಲ್ಲಿ ನಾವು ಪರೋಕ್ಷವಾಗಿ ವಿಪರೀತ ಚಾ ಕುಡಿದ ಪರಿಣಾಮವನ್ನೆ ಗಳಿಸಿದ್ದೆವು! ಅಷ್ಟಾಗಿಯೂ ಅದರ ವಿಚಿತ್ರ ವ್ಯಾವಾಹಾರಿಕ ತರ್ಕ ಮಾತ್ರ ನಮ್ಮ ತಲೆಗೆ ಹತ್ತಲೇ ಇಲ್ಲ. ಕಾರ್ಖಾನೆ ಆರು ಕಿಲೋ ಹಸಿ ಸೊಪ್ಪನ್ನು ಕೊಳ್ಳುವ ಬೆಲೆಗೇ ಒಂದು ಕಿಲೋ ಚೂರ್ಣವನ್ನು ಮಾರುತ್ತದಂತೆ! (ಬಹುಶಃ ಮಾರುಬೆಲೆ ಅಸಲು ತಂದರೆ, ಉಪೋತ್ಪನ್ನಗಳ ವಹಿವಾಟು ಲಾಭಾಂಶವಿರಬೇಕು) ಸೊಪ್ಪನ್ನು ಚೂರ್ಣವಾಗಿಸುವಲ್ಲಿ ಚೈನಾ ವಿಧಾನ ಬೇರೆಯೇ ಇದೆಯಂತೆ. ಅದರಲ್ಲಿ ಮಾತ್ರ ದರ ಒಂದಕ್ಕೆ ನಾಲ್ಕಂತೆ. ಎರಡು ಮೂರು ಗಂಟೆ ವಿಸ್ತಾರ ಕಾರ್ಖಾನೆಯಲ್ಲಿ ಅಡ್ಡಾಡಿ ಈ ವಿಪರೀತಗಳ ಕತೆ ಕೇಳಿ ಏರಿದ ಮಂಡೆ ಬಿಸಿಯನ್ನು, ಕಾರ್ಖಾನೆ ಮಾಲೀಕ ಕೊಟ್ಟ ಬಿಸಿ ಚಾದಲ್ಲಿ ತಣಿಸಿ ಹೊರಬಿದ್ದೆವು.

ಮಿಂಚುನೋಟದಲ್ಲಿ ಊಟಿ: ಮೂರನೇ ದಿನ ನಮ್ಮ ಉದಕಮಂಡಲ ವಾಸ್ತವ್ಯದ ಕೊನೆಯ ದಿನವೂ ಹೌದು. ಹಾಗಾಗಿ ಗಂಟು ಗದಡಿಗಳನ್ನೆಲ್ಲ ಬೈಕಿಗೇರಿಸಿಯೇ ಬೆಳಗ್ಗೆ ಟ್ರಾವಾಂಕೂರ್ ಮನೆಗೆ ವಿದಾಯ ಹೇಳಿದೆವು. ನಮ್ಮ ಅವಸರ ವರ್ಮ ಕುಟುಂಬದ ಔದಾರ್ಯಕ್ಕೆ ಏನೂ ಒಪ್ಪಿಗೆಯಿರಲಿಲ್ಲ. ಹಾಗಾಗಿ ಅಂದಿನ ಕನಿಷ್ಠ ಅರ್ಧ ದಿನವಾದರೂ ನಮ್ಮೊಡನೆ ಮತ್ತಷ್ಟು ಸುತ್ತಿ, ಊಟಿಯಲ್ಲೇ ಬೀಳ್ಕೊಡುತ್ತೇವೆಂದು ವರ್ಮ ಕುಟುಂಬ ಎಂದಿನಂತೆ ಜೊತೆಗೊಟ್ಟಿತ್ತು.

ಗಿರಿಧಾಮದ ಕಲ್ಪನೆಯಲ್ಲಿ ಮೂಲಧಾತು ಪ್ರಕೃತಿ ವೈಭವವೇ ಸರಿ. ಆದರೆ ಸಾಮಾನ್ಯರ ಆಕರ್ಷಣೆಯ ನಿಟ್ಟಿನಲ್ಲಿ ಉದ್ಯಾನವನಗಳು ಸೇರಿದಂತೆ ಬೀದಿ ಶೃಂಗಾರ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಆ ಲೆಕ್ಕದಲ್ಲಿ ಕೂನೂರಿನ ಸಿಮ್ಸ್ ಪಾರ್ಕ್ ಸಾಕಷ್ಟು ಖ್ಯಾತವೇ ಇದೆ. ನಾವು ಮೊದಲು ಅಲ್ಲಿಗೇ ಹೋದೆವು. ಪಾರ್ಕಿನ ಹಿರಿತನವನ್ನು ಸಾರುವಂತೆ ಮೊದಲ ನೋಟಕ್ಕೆ ವೈವಿಧ್ಯಮಯ ಮರಗಳು ಕಂಗೊಳಿಸುತ್ತವೆ. ಮತ್ತೆ ವಿವಿಧ ತತ್ಕಾಲೀನ ಪಾತಿಗಳಲ್ಲಿ ಅರಳಿದ ಏಕವರ್ಣದ ಪುಷ್ಪರಾಶಿ, ನೆಲದ ಏರುತಗ್ಗುಗಳನ್ನು ಮರಸುವ ದಪ್ಪ ರಗ್ಗಿನಂತೆ ಕೀಸಿಟ್ಟ ಹುಲ್ಲ ಹಾಸು, ವಿವಿಧ ವಿನ್ಯಾಸಗಳಲ್ಲಿ ಕತ್ತರಿಸಿಟ್ಟ ಪೊದರುಗಳು, ಬಳಕುವ ತೋರಣಗಳು, ಬಳ್ಳಿಮಾಡಗಳು, ಪ್ರಾಣಿ ಪ್ರತಿಕೃತಿಗಳು, ಕಾರಂಜಿಗಳು, ನಡೆಮಡಿಗಳು, ಗಾಜಿನಮನೆ, ಕತ್ತಲಲ್ಲೂ ರಂಜಿಸುವಂತಾ ಬೆಳಕಿನ ವಿನ್ಯಾಸ ಎಂದೆಲ್ಲಾ ಸಿಮ್ಸ್ ಪಾರ್ಕ್ ವಿಸ್ತರಿಸಿತ್ತು. ಅಂದಿನ ಒಂದೇ ಕೊರತೆ, ಇವನ್ನೆಲ್ಲ ವಿರಾಮದಲ್ಲಿ ಸುತ್ತುವ ಮತ್ತು ಆಸ್ವಾದಿಸುವ ಮನೋಸ್ಥಿತಿ ನಮ್ಮದಾಗಿರಲಿಲ್ಲ! ಅಲ್ಲೇ ಪಕ್ಕದಲ್ಲಿ `ಉಪಾಸಿ’ ಹೆಸರಿನ ಕೃಷಿಕರ ಒಕ್ಕೂಟದ ವಠಾರವೂ ಇತ್ತು. ಇದು ಪ್ರದರ್ಶನದ ಉದ್ಯಾನವನಕ್ಕಿಂತಲೂ ಹೆಚ್ಚು ಅರ್ಥಪೂರ್ಣವಾಗಿತ್ತು ಎಂದು ನನ್ನ ನಂಬಿಕೆ. ಉದಕಮಂಡಲ ವಲಯದ ಕೃಷಿಕರಿಗೆ ಸಂಬಂಧಿಸಿದ (ಉತ್ಪನ್ನ, ಸಲಕರಣೆ, ಬೀಜ, ಗೊಬ್ಬರ, ಸಾಲ ಇತ್ಯಾದಿ) ಎಲ್ಲಾ ಕೊಡು-ಕೊಳೆಯ ಕೇಂದ್ರವಂತೆ. ಮೇಲ್ನೋಟಕ್ಕೇ ನಮಗೆ ಹಲವು ವಿಧದ ಸಸ್ಯಮಡಿಗಳೂ, ಕೆಲವು ತಳಿವರ್ಧನೆ ಮಾಡಿದ ಸಾಕುಪ್ರಾಣಿಗಳೂ ಅಲ್ಲಿ ಮಾರಾಟಕ್ಕಿರುವುದು ಕಾಣಿಸಿತು.

ಪ್ರವಾಸಿಗರ ಕೈಪಿಡಿಯಲ್ಲಿದ್ದರೂ ಅಷ್ಟೇನೂ ಜನಪ್ರಿಯವಾಗದ ಜಲಪಾತ – ಲಾಸ್ ಫಾಲ್ಸ್. ಅದನ್ನು ಬಹಳ ಹಿಂದೆ ನೋಡಿದ ಅಸ್ಪಷ್ಟ ನೆನಪಿನಲ್ಲೇ ವರ್ಮ ನಮಗೆ ದಾರಿ ತೋರಿದರು. ಕೂನೂರು-ಮೆಟ್ಟುಪಾಳ್ಯಮ್ ದಾರಿಯಲ್ಲಿ ಸುಮಾರು ಎಂಟು ಕಿಮೀ ಇಳಿದು ಎಡಕ್ಕೊಂದು ಕಚ್ಚಾದಾರಿಯಲ್ಲಿ ಕಾಡು ನುಗ್ಗಿದೆವು. ಒಂದು ಹಂತದವರೆಗೆ ಅಷ್ಟೇನೂ ಬಳಕೆಯಲ್ಲಿಲ್ಲದ ಕಚ್ಚಾ ಕಾಡುದಾರಿಯಲ್ಲಿ ಸಾಗಿದ್ದೆವು. ಮುಂದೆ ಬೈಕ್ ಇಳಿಸಿದರೆ ಮರಳಿ ತರುವುದು ಕಷ್ಟವಾಗಬಹುದೆಂದು ಹೆದರಿ ಇಳಿದು ನಡೆದೆವು. ಜಲಪಾತದ ಸದ್ದು, ಸುತ್ತಣ ವನ್ಯರವದೊಡನೆ ನಮ್ಮನ್ನು ಚುರುಕಾಗಿಸಿತು. ಅಲ್ಲಿ ಹೆಮ್ಮರಗಳ ದಟ್ಟ ಹಸಿರಿನಡಿಯಲ್ಲಿ ಭಾರೀ ಬಂಡೆಗಳ ಒತ್ತಿನಲ್ಲಿ ತೊರೆಯೊಂದು ಸಣ್ಣದಾಗಿಯೇ ಬಿದ್ದು, ಮಡುಗಟ್ಟಿ ಹರಿದಿತ್ತು. ಆದರೆ ಅದು ದೂರದರ್ಶನಕ್ಕಷ್ಟೆ ಮನೋಹರ! ಹತ್ತಿರವಾಗುತ್ತಿದ್ದಂತೆ ನಮ್ಮ ಮೂಗು ಬೇರೇನೋ ಸಾರತೊಡಗಿತು. ವರ್ಮರ ಪುಟ್ಟ ಮಗಳು – ಸ್ಯಾಲೀ, (ಇಂದು ಅವಳೇ ಒಬ್ಬ ಪತ್ನಿ, ಒಬ್ಬ ತಾಯಿಯಾಗಿದ್ದಾಳೆ) ತನ್ನ ಬಾಲಮುಗ್ಧತೆಯಲ್ಲಿ ನಮ್ಮ ಸಂದೇಹವನ್ನು ಗಟ್ಟಿಯಾಗಿಯೇ ಸಾರಿಬಿಟ್ಟಳು, “ಮುಂದೆ ಹೋಗಬೇಡ ಅಪ್ಪಾ, ಹೇಲಿನ ಗುಂಡಿಯಲ್ಲಿ ಬಿದ್ದು ಸತ್ತು ಹೋದೀಯೇ.” ಜಲಪಾತದ ಅಂಚುಗಟ್ಟಿದ್ದ ಅಷ್ಟೂ ನಸು ಹಳದಿ ಕೆಸರು ಸ್ಪಷ್ಟವಾಗಿ ಕೂನೂರು ನಾಗರಿಕರ ಪ್ರಾಮಾಣಿಕ ಕೊಡುಗೆ! ಐತಿಹಾಸಿಕವಾಗಿ ಶುದ್ಧ

ಜಲಪಾತವನ್ನು ಗುರುತಿಸಿ, ದಾಖಲಿಸಿದ ಬ್ರಿಟಿಷ್ ಅಧಿಕಾರಿ – (ಎಂಥದ್ದೋ) Law, (Law’s Falls) ಎನ್ನುವವನ ಹೆಸರನ್ನೇನೋ ಅದಕ್ಕಿಟ್ಟಿರುವುದು ಸರಿಯೇ. ಆದರೆ ಅದರ ವರ್ತಮಾನ ಸ್ಥಿತಿಯನ್ನು ನೋಡಿದಾಗ ಇದು ಪ್ರಕೃತಿಗೆಸಗಿದ ಅಪಚಾರ, ನಿಸ್ಸಂದೇಹವಾಗಿ ಪರಿಸರಕ್ಕೂ ಪ್ರವಾಸಿಗಳಿಗೂ ತುಂಬಲಾಗದ Loss, False! (ನಷ್ಟ, ಢೋಂಗಿ.) ಇಂದಿಗೂ ಮಡಿಕೇರಿಯ ಕೊಳಚೆಯನ್ನು ವಿಖ್ಯಾತ ಅಬ್ಬಿಫಾಲ್ಸಿನಲ್ಲಿ ಪ್ರಚುರಿಸುತ್ತಿರುವ ನಮಗೆ ನಗುವ ಅಧಿಕಾರವಿಲ್ಲ. ಕಳೆದ ವಾರಗಳಲ್ಲಿ ನಾನೇ ಪ್ರತ್ಯಕ್ಷದರ್ಶಿಯಾಗಿ ಕೊಟ್ಟ ಕರಾವಳಿಯ ನದಿಗಳ ಅನಾರೋಗ್ಯ ವರದಿ, ಅದರಲ್ಲೂ ಮುಖ್ಯವಾಗಿ ಉಚ್ಚಿಲ ಬಟಪಾಡಿಯ ನದಿಮುಖಜ ಭೂಮಿಯ ದುಸ್ಥಿತಿ ಲಾಸ್ ಫಾಲ್ಸಿಗೇನೂ ಭಿನ್ನವಲ್ಲ ಎನ್ನುವುದನ್ನು ಮರೆಯಬಾರದು.

ನಮ್ಮ ಗುಹಾಶೋಧಗಳ ಕತೆ ಕೇಳಿದ್ದ ವರ್ಮ ಕೂನೂರು ಊಟಿ ದಾರಿಯ ಟೈಗರ್ ಹಿಲ್ಲಿನಲ್ಲೂ ಕೆಲವು ಗುಹೆಗಳಿವೆ ಎಂದು ಸುದ್ದಿ ಸಂಗ್ರಹಿಸಿದ್ದರು. ಲಾಸನ್ನು ಟೈಗರಿನಲ್ಲಿ ಗೈನ್ ಮಾಡುವವರಂತೆ ಅಲ್ಲಿಗೆ ಧಾವಿಸಿದೆವು. ಅವರಿವರ ಸೂಚನೆಯಂತೆ ಘಟ್ಟ ದಾರಿಯ ಎಲ್ಲೂ ಅಲ್ಲದ ಒಂದೆಡೆ ಬಲದ ದರೆ ಎತ್ತರದಲ್ಲಿ ಗುಹೆಯ ಲಕ್ಷಣಗಳು ಕಾಣಿಸಿದುವು. ನಾವು ಬೈಕುಗಳನ್ನು ಬಿಟ್ಟು, ಬಲದ ದರೆಯ ಮೇಲಿದ್ದ ಅಸ್ಪಷ್ಟ ಜಾಡು ಅನುಸರಿಸಿ, ನಾಲ್ಗಾಲಿನಲ್ಲಿ ಏರಿದೆವು. ಸಾಹಸದೂರವಾದ ವರ್ಮ ಕುಟುಂಬ ಬೈಕಿನೊಡನೇ ಹಿಂದೆ ಉಳಿಯಿತು. (ನಮ್ಮ ಬೈಕುಗಳಿಗೆ ರಾಜ ಕಾವಲು!)

ಟೈಗರ್ ಹಿಲ್ಸಿನ ಶಿಖರ ಭಾರೀ ಬಂಡೆಗುಂಡುಗಳು ರಾಶಿ. ಸಹಜವಾಗಿ ಅವುಗಳ ಸಂದುಗಳೆಲ್ಲ ಗುಹೆಗಳು. ಉಪಯೋಗಿಸುವವರ ಅನುಕೂಲದಲ್ಲಿ ಹಿಂದೆ ಅವು ಹುಲಿಗಳಿಗೂ ಆವಾಸ ಸ್ಥಾನವಾದದ್ದಕ್ಕೆ ಹೆಸರು ಟೈಗರ್ ಹಿಲ್ಸ್. ನಾವೊಂದೆರಡು ಮೂರನ್ನು ಹೊಕ್ಕು ಮೇಲಿನಿಂದ ಮೇಲೆ ಅಂದಾಜು ಮಾಡಿದೆವು. ಹೆಚ್ಚಿನೆಲ್ಲದರಲ್ಲಿ ವರ್ತಮಾನದ ಗಟ್ಟಿ ಒಕ್ಕಲು – ಬಾವಲಿಗಳು. ಅವು ಶಿಲಾ ಚಪ್ಪರಕ್ಕೆ ಅಂಟಿಸಿ ನೇಯ್ದಿದ್ದ ಜೊಂಡಿನ ಗೂಡುಗಳು ನಮ್ಮ ಅನುಭವಕ್ಕೆ ಹೊಸ ಸೇರ್ಪಡೆ. `ಹಾರುವ ಸ್ತನಿ’ ಎಂದೇ ಖ್ಯಾತವಾದ ಬಾವಲಿ ಈ ನೇಲುವ ಗೂಡುಗಳಲ್ಲಿ ಹೇಗೆ ಮರಿಗಳನ್ನು ಇಡುತ್ತವೆ, ಸಲಹುತ್ತವೆ ಎಂಬಿತ್ಯಾದಿ ಕುತೂಹಲವನ್ನು ಸಮಯದ ಅಭಾವದಿಂದ ಹತ್ತಿಕ್ಕಿದೆವು. ಶುದ್ಧ ಬಂಡೆ ಗುಹೆಗಳ ನೆಲವೆಲ್ಲ ಬಾವಲಿ ಹಿಕ್ಕೆ ಮತ್ತು ಯುಗಯುಗಗಳ ಮಳೆ ಕೊಚ್ಚಲಿನಿಂದ ಬಿಗಿಯಾದ ಆದರೆ ಮೃದುವಾದ ಹಾಸು ಪಡೆದಿತ್ತು. ಬಂಡೆ ಒಟ್ಟಣೆಯ ಆಚೆ ಏನೋ ದೇವರ ಪೀಠ, ಮಂಟಪಗಳ ರಚನೆಗಳಿದ್ದುವು. ಮತ್ತೆ ಬಹುಶಃ ಹಿಂದಣ ಮೈಯಲ್ಲಿ ಸಾರ್ವಜನಿಕರಿಗೆ ಏರಿ ಬರಲು ಸುಲಭದ ದಾರಿಯೂ ಇದ್ದಿರಬೇಕು. ಆದರೆ ಎಲ್ಲರೂ ಮಾಡುವುದರಲ್ಲಿ ನಮಗೆ ವಿಶೇಷ ಆಸಕ್ತಿಯೇನೂ ಇಲ್ಲದ್ದಕ್ಕೆ, ಗುಡಿ ಸುಲಭ ಜಾಡುಗಳನ್ನು ಶೋಧಿಸಲಿಳಿಯದೆ, ಬಂದಂತೇ ಬೈಕಿಗೆ ಮರಳಿದೆವು.

ಉದಕಮಂಡಲ ವಲಯಕ್ಕೆ ಬಲು ಎತ್ತರದ ವೀಕ್ಷಣಾ ತಾಣ – ದೊಡ್ಡಬೆಟ್ಟ, ಬಹುಖ್ಯಾತ ಬಟಾನಿಕಲ್ ಗಾರ್ಡನ್, ಗುಲಾಬಿ ವನ ಎಂದಿತ್ಯಾದಿ ಪಟ್ಟಿ ದೊಡ್ಡದು ಉಳಿದೇ ಇತ್ತು. ಕೂನೂರು-ಊಟಿ ದಾರಿಯಲ್ಲಿ ಹೋಗುತ್ತಿದ್ದಂತೆ ಬಲಬದಿಗೆ ವೆಲ್ಲಿಂಗ್ಟನ್ನಿನ ಸೈನ್ಯಾಧಿಕಾರಿಗಳ ತರಬೇತಿ ಕೇಂದ್ರ ಕಂಡಾಗಂತೂ ನನ್ನ ತಂದೆಯ ಎನ್ಸಿಸಿ ದಿನಗಳಲ್ಲಿನ ಹಲವು ವ್ಯಕ್ತಿಗಳೂ ಘಟನೆಗಳೂ ನನ್ನ ಕಣ್ಣ ಮುಂದೆ ಮಿಂಚಿದಂತೇ ಭಾಸವಾಯ್ತು. ಆ ಕಾಲಕ್ಕೆ ಖ್ಯಾತವಾದ ಆಗ್ಫಾ ಕ್ಯಾಮರಾದ ತಯಾರಕ ಸಂಸ್ಥೆ ಊಟಿಯಲ್ಲಿತ್ತು. ಅದರಲ್ಲಿದ್ದ ನಮ್ಮ ಕುಟುಂಬ ಮಿತ್ರರಂತೂ “ಊಟಿಗೆ ಬಂದಾಗ ಅವಶ್ಯ ಬನ್ನಿ, ತೋರಿಸುತ್ತೇನೆ” ಎಂದು ಖಾಯಂ ಆಮಂತ್ರಣವನ್ನೂ ಕೊಟ್ಟಿದ್ದರು. ಆದರೆ ಎಲ್ಲಕ್ಕೂ ಬಿಗಿಯಾಗಿ ಸಮಯದ ಕಡಿವಾಣ ಜಗ್ಗುತ್ತಿದ್ದುದರಿಂದ ಊಟಿಯಲ್ಲಿ ಊಟದ ಆವಶ್ಯಕತೆಯನ್ನು ಮಾತ್ರ ಪೂರೈಸಿಕೊಂಡು ವರ್ಮ ಕುಟುಂಬವನ್ನು ಬೀಳ್ಕೊಂಡೆವು.

ಮರುಭೂಮಿ?: ಊಟಿಯಿಂದ ಮೈಸೂರಿನತ್ತ ಹೋಗುವ ಸಾಮಾನ್ಯ ಮತ್ತು ಸ್ವಲ್ಪ ಬಳಸಂಬಟ್ಟೆ ಗುಡಲೂರಿನದು. ಊಟಿಯ ಪೇಟೆ ಕಳೆದದ್ದೇ ಬಲಕ್ಕೆ ಸಿಗುವ ಕಲಹಟ್ಟಿ ಕವಲು ಹಿಡಿದು ಮಸಣಿಗುಡಿಗಾಗಿ ಮುಂದುವರಿಯುವುದು ತುಂಬ ಹತ್ತಿರ ಆದರೆ ತೀವ್ರ ಇಳುಕಲು. ಹಿಂದೆ ತಾತಾರ್ ಶಿಖರರೋಹಣ ಮಾಡುವ ಕಾಲಕ್ಕೆ, ಮಸಣಿಗುಡಿಯಲ್ಲಿ ಶಿಬಿರ ಹೂಡಿದಾಗಲೇ ಈ ಕಠಿಣ ದಾರಿಯ ಕತೆಯೇನೋ ಕೇಳಿದ್ದೆ. ಈಗ ಅದನ್ನು ಅನುಭವಿಸುವ ಸಂತೋಷದೊಡನೆ ಉಳಿತಾಯವೂ ಆಗುತ್ತದೆಂದ ಮೇಲೆ ಕೇಳಬೇಕೆ – ಅದನ್ನೆ ಅನುಸರಿಸಿದೆವು. ಕೇವಲ ಎಂಟು ಕಿಮೀ ಅಂತರದಲ್ಲಿ ಸುಮಾರು ಮೂವತ್ತಾರು ಹಿಮ್ಮುರಿ ತಿರುವಿನೊಡನೆ ಈ ದಾರಿ ಘಟ್ಟದೆತ್ತರದಿಂದ ಬಯಲು ಸೀಮೆಯ ಸ್ತರಕ್ಕೆ ಮುಟ್ಟಿಸುತ್ತದೆ. ಗುಡಲೂರು ದಾರಿಯಿಂದ ಸುಮಾರು ಇಪ್ಪತ್ತು ಕಿಮೀ ಕಿರಿದಂತರದಲ್ಲಿ (೧೩೦ ಕಿಮೀ. ಗುಡಲೂರು ದಾರಿ ಸುಮಾರು ೧೫೦ಕಿಮಿ) ಇದು ಮೈಸೂರು ಕಾಣಿಸುತ್ತದೆ. ಎರಡು ಮಹಾಶಿಖರಗಳ ನಡುವಣ ಬಂಡೆಗಿಡಿದ ಸಪುರ ಕಣಿವೆಯಲ್ಲಿ ನಾವಿಳಿದೆವು. ಉತ್ತಮ ವಾಹನ ಚಾಲನೆಯ ಒಂದು ಸೂಚನೆ ಹೇಳುತ್ತದೆ – ಏರನ್ನು ಹತ್ತಿದ ಗೇರಿನಲ್ಲೇ ಇಳಿಸಬೇಕು. ಇದರ ಆವಶ್ಯಕತೆ ನಮಗಿಲ್ಲಿ ತುಂಬ ಕಾಣಿಸಿತು. ಇಲ್ಲಿ ವಾಹನ ಸಂಚಾರವೇ ವಿರಳ. ಆದರೂ ಅವುಗಳ ಬಿರಿಯ ಕ್ಯಾನ್ವಾಸ್ ಸುಟ್ಟ ವಾಸನೆ ಅಲ್ಲಿನ ವಾತಾವರಣದಲ್ಲಿ ದಟ್ಟವಾಗಿತ್ತು. ಡಾಮರೀಕರಣವೇನೋ ಚೆನ್ನಾಗಿಯೇ ಇತ್ತು. ಅಷ್ಟು ಮಾತ್ರಕ್ಕೆ ಸಾಮಾನ್ಯ ಚಾಲಕರು ಇದನ್ನೇರುವುದಕ್ಕೇ ಬಂದಲ್ಲಿ ಕೈಕಾಲು ಬೀಳುವುದು ಖಂಡಿತ.

ಬೇಸಗೆಯ ಉಗ್ರ ಕಾವಿನಲ್ಲಿ ಆ ದಾರಿಯ ಪರಿಸರ ತೀರಾ ಒಣಗಿ ಅನಾಕರ್ಷಕವಾಗಿತ್ತು. ಎದುರು ಕಾಣುತ್ತಿದ್ದ ಬೆಟ್ಟದಂಚಿನವರೆಗೆ ಹಬ್ಬಿದ್ದ ಚಾ ತೋಟವಂತೂ ಅನಾವೃಷ್ಟಿಯಲ್ಲಿ ಪೂರ್ಣ ಒಣಗಿಯೇ ಹೋಗಿತ್ತು, ಅಲ್ಲಿದ್ದ ಪುರಾತನ ಬಂಗ್ಲೆಯೂ ಹಾಳು ಸುರಿದಿತ್ತು. ಘಟ್ಟ ಇಳಿದ ಸ್ವಲ್ಪದರಲ್ಲೇ ಸಿಗುವ ಊರು ಮಸಣಿಗುಡಿಯಾದರೂ (ಮಸಣ = ಸ್ಮಶಾನ) ಬರಗಾಲದ ಮುಂದುವರಿಕೆಯನ್ನೇ ಧ್ವನಿಸುವಂತಿತ್ತು. ಮರಗಳೆಲ್ಲ ಎಲೆ ಉದುರಿಸಿ ಬೋಳು ಬೊಡ್ಡೆಗಳಂತಿದ್ದರೆ, ತೊರೆ ಪಾತ್ರೆಗಳು ಪುಡಿಬಂಡೆಗಳ ಸಾಲುರಾಶಿಯಂತೆ ತೋರುತ್ತಿದ್ದವು. ಲೆಕ್ಕಕ್ಕದು ಮುದುಮಲೈ ವನಧಾಮದ ಭಾಗ, ಖ್ಯಾತಿಯಲ್ಲಿ ಆನೆಗಳದೇ ಸಾಮ್ರಾಜ್ಯ. ಇದನ್ನು ನಮಗೆ ಮನಗಾಣಿಸುವಂತೆ ಒಂದು ಖಾಸಗಿ ವಿಶ್ರಾಂತಿಧಾಮವೂ (ರಿಸಾರ್ಟ್) ಅಲ್ಲಿ ತಲೆ ಎತ್ತುತ್ತಾ ಇತ್ತು. ಆದರೆ `ಓಯಸಿಸ್’ (ಮರುಭೂಮಿಯ ನಡುವಣ ಜಲಾಸರೆ) ಎಂಬ ಅದರ ಹೆಸರು ಸುತ್ತಣ ಪರಿಸರ ಮರುಭೂಮಿಯಂತೆ ತೋರುವುದಕ್ಕೆ ಹೊಂದುತ್ತಿದ್ದುದು ಪರಿಸ್ಥಿತಿಯ ವ್ಯಂಗ್ಯವೇ ಸರಿ. ಆ ಹೋಟೆಲ್ ಅಲಂಕಾರದ ಭಾಗವಾಗಿ ತನ್ನ ವಠಾರದೊಳಗೆ ಆನೆಯೊಂದರ ಸಿಮೆಂಟ್ ಪ್ರತಿಕೃತಿಯನ್ನು ನಿಲ್ಲಿಸುತ್ತಿದ್ದುದು ವನಧಾಮದ ಅನಾಥ ಭಾವವನ್ನು ಇನ್ನಷ್ಟು ತೀವ್ರಗೊಳಿಸುವ ಹಾಗೆಯೇ ಕಾಣಿಸಿತು. ಕಾಡೆಂದು ಬಯಸಿ ಬಂದವರಿಗೆ ಮರಳುಗಾಡಿನ ಸೌಲಭ್ಯ. ಎಂಟೆದೆಯ ಭಂಟರೂ ಬೆಚ್ಚಬೇಕಾದ ಸಲಗವಿಲ್ಲಿ ಮಕ್ಕಳಾಟದ ಗೊಂಬೆ; ಗೊಂಬೆಯಾಟವಯ್ಯಾ ಪ್ರವಾಸೋದ್ಯಮ!

ಆ ವಲಯದಲ್ಲಿ ನನ್ನ ತಾತಾರ್ ಶಿಬಿರದ ನೆನಪುಗಳು ಅಲೆಯಲೆಯಾಗಿ ಬಂದುವು. ಇಂದಿನ ಒಣತೊರೆಯೇ ಅಲ್ಲವೇ ಅಂದು ನಮ್ಮ ಶಿಬಿರಕ್ಕೆ ನೀರಿನೊಡನೆ ನಟೀಮಣಿ ಜಯಲಲಿತಳ ಬೆಡಗು ಮುಟ್ಟಿಸಿದ್ದು! ಹಾಂ, ಇದೇ ಬಯಲಿನಲ್ಲಿ ನಾವು ಗಂಧದ ಕೊರಡುಗಳಲ್ಲೇ ಶಿಬಿರಾಗ್ನಿ ಎಬ್ಬಿಸಿದ್ದು ಮತ್ತೆ ಒದ್ದೆ ಕನಸುಗಳನ್ನು ಕಂಡದ್ದು. ಸ್ನೇಹಪರ ಅರಣ್ಯಾಧಿಕಾರಿ ಜಾನ್ ಅಂಬ್ರೋಸ್ ಅವರ ಆಸ್ಥಾನ – ಚೆಕ್ ಪೋಸ್ಟಿನ ಕಳೆಗೆ ಈಗ ಗೆದ್ದಲು ಹತ್ತಿದೆ. ಅದರಿಂದಾಚಿನ ದಿಗಂತವನ್ನು ಆಕಾಶದೆತ್ತರಕ್ಕೇರಿಸಿಟ್ಟದ್ದೇ ಅಲ್ಲವೇ ನಮ್ಮ ತಾತಾರ್! ಸಿನಿಮಾ ಜೀಪ್ ಲಿಫ್ಟ್ ಕೊಟ್ಟ ಜಾಗ ಇದೇ. ಅರೆ, ನಾವು ನಾಲ್ಕು ನೆಲ್ಲಿಕಾಯಿ ಆಸೆಗೆ ಗೆಲ್ಲು ಮುರಿದು ಬೈಸಿಕೊಂಡ ಮರ ಎಲ್ಲಿ ಹೋಯ್ತಪ್ಪಾ…… ನೆನಪಿನ ರೀಲಿಗೆ ವರ್ತಮಾನದ ಚಿತ್ರ ಬೆಸೆದಂತೆ ತೆಪ್ಪಕಾಡು ಬಂದಿತ್ತು. ಅಂದು ಕಾಡಿನ ಭಾಗವಾಗಿ, ವನ್ಯ ಜನಪದದ ಮುಂದುವರಿಕೆಯಾಗಿ ಕಾಣುತ್ತಿದ್ದ ಆನೆಗಳ ತರಬೇತಿ ಕೇಂದ್ರ ಈಗ ಪ್ರವಾಸೋದ್ಯಮದ ಭಾಗವಾಗಿ ಭರ್ಜರಿ ರಚನೆ, ಬಣ್ಣ, ಬೊಂಬೆ ಎಲ್ಲಾ ಹೊತ್ತಿತ್ತು. ಹೀಗೆ ತೋರಣ ಶೃಂಗಾರವಾದರೆ ಹೂರಣ ಅಂಗಾರವೇ ಸರಿ ಎಂದು ನಾವು ವಿಶೇಷ ತಳುವಲಿಲ್ಲ. ಅಲ್ಲೇ ಹೊಳೆಯಾಚೆಗೆ ಗುಡಲೂರಿನಿಂದ ಬರುವ ಮುಖ್ಯ ದಾರಿಯನ್ನು ಸೇರಿ ಮೈಸೂರಿನತ್ತ ಮುಂದುವರಿದೆವು.

ತಮಿಳ್ನಾಡಿನಲ್ಲಿ ಮುದುಮಲೈ, ಕರ್ನಾಟಕದಲ್ಲಿ ಬಂಡೀಪುರ ಎಂದೇನೇ ಅನ್ನಿ ಒಂದೇ ಹರಹಿನ ಪ್ರಾಕೃತಿಕ ಸತ್ಯಕ್ಕೆ ಭಂಗವಿಲ್ಲ. ಆದರೆ ಕೇವಲ ಸಾಮಾಜಿಕ ಆಡಳಿತದ ಅನುಕೂಲಕ್ಕಾಗಿ ಮಾಡಿದ `ರಾಜ್ಯ’ ಎಂಬ ವಿಭಾಗಗಳು ಹೇಗೆ ದುರಭಿಮಾನದ, ನಿರರ್ಥಕ ಹಣ ಹಾಳು ಮಾಡುತ್ತವೆ ಎನ್ನುವುದಕ್ಕೆ ಸಾಕ್ಷಿ ಕರ್ನಾಟಕದ ಗಡಿಯಲ್ಲಿತ್ತು – ಭಾರೀ ಕಾಂಕ್ರೀಟ್ ಸ್ವಾಗತ ಕಮಾನು! ಸ್ವಲ್ಪ ಬಿಟ್ಟು, ರಸ್ತೆ ಪಕ್ಕದಲ್ಲಿ ಸಚಿತ್ರ ಭಾರೀ ಜಾಹೀರಾತು ಫಲಕ ಬಂಡೀಪುರ ವನಧಾಮದ ವೈಭವವನ್ನು ಸಾರುತ್ತಿತ್ತು. ಚಿತ್ರದ ವಿವರಗಳು ಇಂದು ನೆನಪಿಲ್ಲ, ಆದರೆ ಜಿರಾಫೆ ಸಿಂಹಗಳೂ ಅದರಲ್ಲಿ ಕಾಣಿಸಿದ್ದರೆ ಆಶ್ಚರ್ಯವೂ ಇಲ್ಲ! ರಸ್ತೆಯ ಎರಡೂ ಬದಿಗಳಲ್ಲಿ ವಾಸ್ತವ ಮಾತ್ರ ತೀರಾ ಕ್ರೂರವಾಗಿ ಅಣಕಿಸುತ್ತಿತ್ತು – ಕಣ್ಣೆಟಕುವವರೆಗೂ ಕೆಳಮಟ್ಟದ ಕಾಡೆಲ್ಲ ಮಸಿ, ಬೂದಿ. ದಾರಿಹೋಕರ `ಅಪಾತ್ರ ವನ್ಯಪ್ರೀತಿ’ಯನ್ನು ಹೊಟ್ಟೆಹೊರೆಯುವುದಕ್ಕೆ ರೂಢಿಸಿಕೊಂಡ ಮಂಗಗಳ ದೊಡ್ಡ ಹಿಂಡು ಮಾತ್ರ ಕಾಣಿಸಿತು. ಅವು ಆಗೀಗ ಬೂದಿ ಒಕ್ಕಿ, ನಮ್ಮತ್ತ ಹುಬ್ಬು ಹಾರಿಸಿ, ಪಿಳಿಪಿಳಿ ನೋಡುವಾಗ ವನಧಾಮವನ್ನೇ ಮಂಗಗಳಿಗೆ ವಹಿಸಿರಬೇಕು ಎಂದು ಸಂಶಯಿಸುವ ಹಾಗಾಯ್ತು! ಮಳೆ ಬಂದಾಗಾದರೂ ಸದ್ಯ ಒಂದೆಲೆಯನ್ನೂ ಉಳಿಸಿಕೊಳ್ಳದ ಕರಿಕರಿ ಬೊಡ್ಡೆಗಳಷ್ಟೂ ಚಿಗುರೊಡೆಯಲಿ, ಅವುಗಳ ಕೈಯ ಮೇಲೆ ಕುಳಿತು ಹಕ್ಕಿಗಳು ಹಾಡಲಿ ಎಂದು ಹಾರೈಸುವುದಷ್ಟೇ ನಮಗುಳಿಯಿತು.

ಗುಂಡ್ಲುಪೇಟೆಯಲ್ಲಿ ಚಾ ಕುಡಿಯುವಷ್ಟೇ ವಿರಾಮ. ನಂಜನಗೂಡು ಸಮೀಪಿಸುತ್ತಿದ್ದಂತೆ ಬಂಡೀಪುರದ ನಮ್ಮ ಹರಕೆಯನ್ನು ತುರ್ತಾಗಿ ಪೂರೈಸುವಂತೆ ದಟ್ಟ ಮೋಡಗಳು ಮುತ್ತತೊಡಗಿದವು. ಅಸಾಧ್ಯ ಸುಳಿಗಾಳಿ ದೂಳಿನ ಕಂಬಗಳನ್ನೇ ಎಬ್ಬಿಸುತ್ತ ಬಂದಾಗ ನಾವು ಗಂಭೀರವಾಗಿ ನಿಲ್ಲುವ ಯೋಚನೆ ಮಾಡಿದೆವು. ಹಳೆಗಾಲದ ಆ ದಾರಿಯುದ್ದಕ್ಕೆ ಭಾರೀ ಸಾಲುಮರಗಳೇನೋ ಇದ್ದುವು. ಉರಿಬಿಸಿಲಿಗೆ ಹೇಗೋ ಜಡಿಮಳೆಗೂ ಹಾಗೇ ಜಗ್ಗದ ಕೊಂಬೆಗಳ ಜಾಲ ಅವುಗಳದು. ಆದರೆ ಅಕಾಲಿಕ ಗಾಳಿ ಮಳೆಯ ಆಘಾತಕ್ಕೆ ದಾರಿಯ ದ್ರೋಹದಲ್ಲಿ ಬಳಲಿದ ಅವುಗಳ ಬುಡವೇ ನೆಚ್ಚುವಂತದ್ದಲ್ಲ ಎಂಬುದು ನಮಗೆ ತಿಳಿದಿತ್ತು. ದಾರಿ ಬದಿಯಲ್ಲೇ ತುಸು ಬಯಲಲ್ಲಿದ್ದ ಒಂದು ಶಾಲೆಯ ಜಗುಲಿಯನ್ನೇರುತ್ತಿದ್ದಂತೆ ಬಿರುಮಳೆ ಅಪ್ಪಳಿಸಿತು. ಸುಮಾರು ಅರ್ಧ ಗಂಟೆ ಹೊಡೆದು ಬಿಟ್ಟಿತು. ಇನ್ನೂ ದಿನದ ಬೆಳಕು ಕಳೆಯುವ ಮೊದಲೇ ಬಿಟ್ಟುಕೊಟ್ಟ ಮಳೆಗೆ ಹಾರ್ದಿಕ ವಂದನೆ ಸಲ್ಲಿಸುತ್ತಾ ನಾವು ಮತ್ತೆ ದಾರಿಗಿಳಿದೆವು. ಆದರೆ ವಾಸ್ತವದಲ್ಲಿ ಮಳೆ ಕೆಲವೇ ಮಿನಿಟುಗಳ ವಿರಾಮವನ್ನಷ್ಟೇ ಪಡೆದಿತ್ತು. ಮತ್ತೆ ತಟಪಟ ಹನಿಯಪ್ಪ, ಭೋರ್ ಭೋರ್ ಸುರಿಯಪ್ಪ! ಹನಿಯ ಚೌಕಾಸಿಯಲ್ಲಿ ವ್ಯವಹಾರ ಸೋತ ನಾವು, ಕನಿಷ್ಠ ಬೆಳಕಿನ ಲೆಕ್ಕಾಚಾರದಲ್ಲಾದರೂ ಗೆಲ್ಲುವ ಆಸೆಯಲ್ಲಿ ಮುಂದುವರಿದೆವು. ಅಲ್ಲಲ್ಲಿ ಸಣ್ಣ ಪುಟ್ಟ ಗೆಲ್ಲು ಮುರಿದು ಬಿದ್ದವು ನಮ್ಮ ಓಟಕ್ಕೇನೂ ಅಡ್ಡಿಯಾಗಲಿಲ್ಲ. ಆದರೆ ಕತ್ತಲು ದಟ್ಟವಾಗುತ್ತಿದ್ದಂತೆ, ಮುಂದೊಂದು ಕಡೆ ಭಾರೀ ಮರವೇ ದಾರಿಗಡ್ಡ ಮಲಗಿದ್ದು ಸಿಕ್ಕಿತು. ಎರಡೂ ಬದಿಗಳಲ್ಲಿ ವಾಹನಗಳ ಸಾಲು ಬೆಳೆದಿತ್ತು. ಸಾಹಸೀ ಕಾರುಚಾಲಕನೊಬ್ಬ ಬಿದ್ದ ಮರದ ಬುಡದಿಂದಲೂ ಆಚೆಗಿನ ಹೊಲದ ತಗ್ಗನ್ನು ಮಿಣುಕು ದೀಪದಲ್ಲೇ ಕಣ್ಣಂದಾಜಿಸಿ, ಕಾರು ನುಗ್ಗಿಸಿದ. ಪಾಪ, ನುಸುಲು ಮಣ್ಣು ಮಳೆನೀರ ಸ್ನೇಹ ಗಾಢವಾಗಿ ಕಾರು ಸಿಕ್ಕಿಬಿತ್ತು. ಆದರೆ ಕಾರಿನ ಪ್ರಯತ್ನ ನಮಗೊಂದು ಸಾಧ್ಯತೆಯನ್ನಂತೂ ಧಾರಾಳ ತೋರಿತ್ತು. ವಾಹನ ಸಣ್ಣದಾದ್ದರಿಂದಲೂ ನಮ್ಮ ಅನುಭವ ಹೆಚ್ಚಿದ್ದುದರಿಂದಲೂ ಅದೇ ಜಾಡಿನಲ್ಲಿ ಸುಲಭವಾಗಿ ಪಾರಾದೆವು. ಎಂಟು ಗಂಟೆಯ ಸುಮಾರಿಗೆ ಮೈಸೂರಿನ ನನ್ನ ತವರುಮನೆಯನ್ನು ಸುಕ್ಷೇಮವಾಗಿ ತಲಪಿದೆವು. ಮತ್ತೆಲ್ಲ ವಿವರಿಸುವಂತದ್ದೇನಿಲ್ಲ – ಬೆಚ್ಚನೆ ಸ್ನಾನ, ಮನದಣಿಯೆ ಮನೆಯೂಟ, ನಚ್ಚನೆ ನಿದ್ರೆ. ಮರುದಿನ ಬೆಳಗ್ಗೆ ಹೊಸ ಚೈತನ್ಯದೊಡನೆ ಮಂಗಳೂರಿಸಿ ಹತ್ತು ದಿನದ ದಕ್ಷಿಣಾವರ್ತದ ಜೈತ್ರ ಯಾತ್ರೆಗೆ ಮಂಗಳ ಹಾಡಿದೆವು. ಚಕ್ರವರ್ತಿಗಳಾಗಿ ಸುಮಾರು ಎರಡು ಸಾವಿರ ಕಿಮೀ ಮೆರೆದು ಗೆದ್ದ ಅನುಭವ ಸಾಮ್ರಾಜ್ಯ ಆಜೀವ ನಮ್ಮದು. ಇದು `ಬರೆದಷ್ಟೂ’ ಉಳಿಯುತ್ತದೆ, `ಕೊಟ್ಟಷ್ಟೂ’ ಬೆಳೆಯುತ್ತದೆ.

(ದಕ್ಷಿಣಾಪಥದಲ್ಲಿ ಚಕ್ರವರ್ತಿಗಳು ಅಧ್ಯಾಯ ಇಲ್ಲಿಗೆ ಮುಗಿಯಿತು)

(ಚಕ್ರವರ್ತಿಗಳು ಪುಸ್ತಕ ಮುಂದುವರಿಯಲಿದೆ)