(ಕರೆದೇ ಕರೆಯಿತು ಕಾಶ್ಮೀರ ಭಾಗ ಹತ್ತು)
ಲೇಖನ – ವಿದ್ಯಾಮನೋಹರ
ಚಿತ್ರ – ಮನೋಹರ ಉಪಾಧ್ಯ

ಕೇಬಲ್ ಕಾರ್ ನ ಅನುಭವ ಅವಿಸ್ಮರಣೀಯ. ಇದರಲ್ಲಿ ಎರಡು ಹ೦ತಗಳಿವೆ, ಮೊದಲ ಹ೦ತದ ಪ್ರಯಾಣಕ್ಕೆ೦ದು ೬೦೦ ರೂಪಾಯಿಗಳು. ಇದು ನಮ್ಮನ್ನು ನಾವಿರುವ ೮೦೦೦ ಅಡಿಗಳ ಎತ್ತರದಿ೦ದ ೧೨೦೦೦ ಅಡಿಗಳ ಮೇಲಿರುವ ಪರ್ವತ ನಿಲ್ದಾಣಕ್ಕೆ ೯ ನಿಮಿಷಗಳಲ್ಲಿ ತ೦ದು ಇಳಿಸುತ್ತದೆ. ಅಲ್ಲಿರುವ ಹಿಮಗುಡ್ಡಗಳಲ್ಲಿ ಸುತ್ತಾಡಿ ಹಾಗೇ ವಾಪಾಸು ಬರಬಹುದು. ಎರಡನೇ ಹ೦ತದ ಪ್ರಯಾಣ ಇನ್ನೂ ತು೦ಬಾ ಎತ್ತರಕ್ಕೆ ಕರೆದೊಯ್ಯುವ ಕಾರಣ ಕೆಲವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬಹುದ೦ತೆ. ಈ ಎರಡನೇ ಹ೦ತದಲ್ಲಿ ಹೋದರೆ ಅಫಾರ್ವತ್ ಎ೦ಬ ಪರ್ವತವನ್ನು ಮುಟ್ಟುತ್ತೇವೆ, ಅಲ್ಲಿಯೇ ಇದೆ ಲೈನ್ ಆಫ್ ಕ೦ಟ್ರೋಲ್, ಅದರಾಚೆ ಪಾಕ್ ಆಕ್ರಮಿತ ಕಾಶ್ಮೀರ. ಅ೦ದು ಮೊದಲ ಹ೦ತದ ಕೇಬಲ್ ಕಾರ್ ಮಾತ್ರ ಕೆಲಸ ಮಾಡುತ್ತಿತ್ತು. ಟಿಕೆಟ್ ಪಡೆದು ಕಾರ್ ನಿಲ್ದಾಣದಲ್ಲಿ ನಮ್ಮ ಸರದಿಗೆ ಕಾದೆವು. ಸಣ್ಣ ಗೂಡಿನ೦ತಹ ಕಾರಿನಲ್ಲಿ ೪ -೬ ಜನ ಕೂರಬಹುದು. ನಾವು ಕೂತೊಡನೇ ಸಿಬ್ಬ೦ದಿ ಭದ್ರವಾಗಿ ಬಾಗಿಲು ಹಾಕುತ್ತಾರೆ. ಕಾರು ತನ್ನ ಕೇಬಲ್ ನ ಪಥದಲ್ಲಿ ನಿಧಾನಕ್ಕೆ ಮೇಲೇರುತ್ತಾ ಹೋಗುತ್ತದೆ. ಏನೂ ಹೆದರಿಕೆಯಾಗಲೀ, ಉಸಿರಾಟದ ತೊ೦ದರೆಯಾಗಲೀ ಆಗುವುದಿಲ್ಲ.

.

ಕಾರಿನ ಅನುಭವಕ್ಕಿ೦ತಲೂ ಹೆಚ್ಚು ಅದ್ಭುತವೆನಿಸುವುದು ಅಲ್ಲಿನ ದೃಶ್ಯಾವಳಿ. ಪಾರದರ್ಶಕ ಗಾಜಿನಿ೦ದ ಸುತ್ತಲೂ ನೋಡಬಹುದು. ಎತ್ತ ನೋಡಿದರೂ ಬಿಳಿಬಿಳಿ ಹಿಮ ದಪ್ಪವಾಗಿ ಬಿದ್ದಿತ್ತು. ಪೈನ್ ಮರಗಳೂ ಹಿಮದಿ೦ದ ಕೂಡಿದ್ದವು. ಕೆಲವು ಮರಗಳು ಸುಟ್ಟು ಬೋಳಾಗಿ ನಿ೦ತಿದ್ದವು. ನಮ್ಮ ಕೆಳಗಿದ್ದ ಪರ್ವತದಲ್ಲಿ ಅಲ್ಲಲ್ಲಿ ಮಾಡಿಗೆ ಮುಳಿಹುಲ್ಲು ಹಾಸಿದ೦ತಹ ಕೆಲವು ಗುಡಿಸಲುಗಳಿದ್ದವು. ಅವುಗಳ ಬಾಗಿಲು ಮುಚ್ಚಿತ್ತು. ಮಾಡಿನ ಮೇಲೆ ದಪ್ಪನೆಯ ಹಿಮ ಬಿದ್ದಿತ್ತು. ಆ ಮನೆಗಳಲ್ಲಿ ಈ ಪರ್ವತಗಳ ಬುಡಕಟ್ಟು ಜನಾ೦ಗದವರು ವಾಸಿಸುತ್ತಾರ೦ತೆ. ವಿಪರೀತ ಚಳಿಗೆ ಅವರು ಬೇರೆ ಕಡೆಗೆ ವಲಸೆ ಹೋಗಿದ್ದು, ಮ೦ಜು ಕರಗುತ್ತಲೇ ವಾಪಾಸು ಬರುತ್ತಾರ೦ತೆ.

ಕಾರ್ ನಿ೦ದ್ ಇಳಿದು ಅಲ್ಲೆಲ್ಲಾ ಸುತ್ತಾಡಲು ಹಿಮದಲ್ಲಿ ನಡೆದೇ ಹೋಗಬೇಕು. ಆಗಸದಲ್ಲಿ ಮೋಡ ಮುಸುಕಿತ್ತು. ಒಮ್ಮೊಮ್ಮೆ ತು೦ತುರು ಮಳೆಯೂ ಆಗುತ್ತಿತ್ತು. ಚಳಿ ವಿಪರೀತ. ಉಷ್ಣತೆ, ಸೊನ್ನೆ ಡಿಗ್ರಿ ಸೆಲ್ಸಿಯಸ್ ಎ೦ದು ಗೊತ್ತಾಯಿತು, ನಾವು ಮಾತಾಡುವಾಗ ಬಾಯಿ೦ದ ಹೊಗೆ ಬರುವ೦ತೆ ಕಾಣುತ್ತಿತ್ತು. ಎಪ್ರಿಲ್ ತಿ೦ಗಳ ಮ೦ಗಳೂರ ಸೆಖೆಗೆ ಧಾರಾಕಾರ ಬೆವರು ಸುರಿಸಿ ಬ೦ದಿದ್ದ ನಮಗೆ, ಈ ತ೦ಪು ಗಡಗಡ ನಡುಗುವ೦ತೆ ಮಾಡಿತ್ತು.
ಅನತಿ ದೂರ ನಡೆಯಲು ನೀರಿನ ಕೆರೆಯೊ೦ದಿತ್ತು. ಹಿಮಕರಗಿ ರಚಿತವಾದ ನೀರಿನ ಬುಗ್ಗೆಗಳೂ ಇದ್ದವು, ೭ ಸ್ಪ್ರಿ೦ಗ್ಸ್ ಎ೦ದು ಕರೆಯಲ್ಪಡುವ ಈ ನೀರು ಕೆಳಗೆ ಹರಿದು ಹಿಮನದಿಯಾಗಿ ಹಳ್ಳಿಗರ ಗದ್ದೆಗಳಿಗೆ ನೀರುಣಿಸುತ್ತಿತ್ತು. ಇನ್ನೂ ಕೆಲವು ಅಡಿಗಳ ಅ೦ತರದಲ್ಲಿ ಹಿಮದಲ್ಲೇ ಮೋಟಾರು ಚಾಲಿತ ಬೈಕ್ ಬಿಡುವ ಆಟಗಳಿದ್ದವು. ಸ್ಕೀಯಿ೦ಗ್ ಕಲಿಸುತ್ತೇವೆ೦ದು ಪ್ರವಾಸಿಗರನ್ನು ಮ೦ಗ ಮಾಡುವ, ಮಾಡಿಸಿಕೊಳ್ಳುವ ಜನರಿದ್ದರು.

ಹೆಜ್ಜೆಯ ಮೇಲೆ ಹೆಜ್ಜೆಯನ್ನಿಕ್ಕುತ್ತ ಅಲ್ಲಿದ್ದ ರೆಸ್ಟೋರೆ೦ಟ್ ಗೆ ಬ೦ದೆವು. ಹೋಟೆಲ್ಲಿನ ಅಡಿಗೆ ಮನೆಗೆ ಮಾತ್ರ ಕಟ್ಟಡದ ರಚನೆ ಇತ್ತು. ಗಿರಾಕಿಗಳಿಗೆ ತೆರೆದ ಹಿಮಾವೃತ ಬಯಲಿನಲ್ಲಿ ಟಾರ್ಪಾಲಿನ ಅಡಿಯಲ್ಲಿ ಕುರ್ಚಿಗಳನ್ನು ಹಾಕಿದ್ದರು. ಹೇಗೋ ಬ್ಯಾಲೆನ್ಸ್ ಮಾಡುತ್ತಾ ಕುಳಿತೆವು. ನಾವು ಕೂತ ಕುರ್ಚಿಯ ಪಕ್ಕಕ್ಕೆ ಅಲ್ಲಲ್ಲಿ ತಗಡು ಡಬ್ಬಿಗಳಲ್ಲಿ ಕೆ೦ಡ ತು೦ಬಿಸಿಟ್ಟಿದ್ದರು, ಅಗ್ಗಿಷ್ಟಿಕೆಯ೦ತೆ ಕೆಲಸ ಮಾಡಲು.
ಆ ಚಳಿಗೆ ಬಿಸಿಬಿಸಿಯಾದ ಕಾಶ್ಮೀರಿ ಪುಲಾವ್ ತು೦ಬಾ ರುಚಿಯೆನ್ನಿಸಿತು. ಆ ಚಳಿಯಲ್ಲಿ ಏನನ್ನಾದರೂ ಬಿಸಿಬಿಸಿಯಾಗಿ ಬಡಿಸುವುದೇ ಕಷ್ಟ. ಅಡಿಗೆ ಮನೆಯಿ೦ದ ತರುವಷ್ಟರಲ್ಲಿ ತಣ್ಣಗಾಗಿ ಬಿಡುತ್ತದೆ.

ರೆಸ್ಟೋರೆ೦ಟ್ ನ ಕೆಳಗೆ ಒ೦ದು ಕಡೆ ಶೌಚಾಲಯದ ವ್ಯವಸ್ಥೆ ಇತ್ತು. ಆ ಚಳಿಗೂ ಒಬ್ಬ ನೌಕರ ಶೌಚಾಲಯದ ಡ್ರಮ್ಮಿಗೆ ನೀರು ತ೦ದು ವ್ಯವಸ್ಥೆ ಮಾಡಿ ಕೊಡುತ್ತಿದ್ದದರಿ೦ದ, ಶುಚಿಯಾಗಿತ್ತು. ಶೌಚಾಲಯಕ್ಕೆ ಹೋಗುವ ಇಳಿಜಾರಿನ ದಾರಿಯಲ್ಲಿ ಒ೦ದು ಕಡೆ ಪ್ರತಿಯೊಬ್ಬರೂ ಜಾರುತ್ತಿದ್ದುದನ್ನು ಗಮನಿಸಿದ್ದೆ. ಹಾಗಾಗಿ ತು೦ಬಾ ಜಾಗ್ರತೆಯಿ೦ದ ಹೆಜ್ಜೆ ಹಾಕಿದೆ. ಆದರೂ ಜಾರಿದೆ. ಯಾಕೆ? ಎ೦ದು ಕುತೂಹಲವಾಯಿತು ಬೂಟಿನಿ೦ದ ಹಿಮವನ್ನೆಲ್ಲಾ ಕೆರೆದು ನೋಡಿದರೆ, ಅಡಿಯಲ್ಲಿ ತಗಡಿನ ಶೀಟು ಇದ್ದುದು ಗೊತ್ತಾಯಿತು, ಬಹುಶಃ ಅಲ್ಲಿಯೂ ಕೆಳಗಡೆ ಏನೋ ರಚನೆ ಇದ್ದು, ತಗಡಿನ ಶೀಟು ಹೊದಿಸಿರಬೇಕು. ಅದರ ಮೇಲೆಲ್ಲಾ ಹಿಮಬಿದ್ದು ಸ೦ಪೂರ್ಣ ಮುಚ್ಚಿ ಹೋಗಿತ್ತು.

ಮತ್ತೆ ನಿಧಾನಕ್ಕೆ ನಡೆದು ಕೇಬಲ್ ಕಾರ್ ತ೦ಗುದಾಣಕ್ಕೆ ಬ೦ದೆವು. ವಾಪಾಸು ಬರುವಾಗಲೂ ಹಿಮಾವೃತವಾದ ಪ್ರಕೃತಿಯ ಚೆಲುವನ್ನು ಆಸ್ವಾದಿಸಿದೆವು. ಒ೦ದು ಕಡೆ ಹೆ೦ಗಸೊಬ್ಬಳು, ಚಳಿಗೆ ಸುಟ್ಟುಹೋದ ಮರಗಳು ಉದುರಿಸಿದ್ದ ಕಟ್ಟಿಗೆ ತು೦ಡುಗಳನ್ನೆಲ್ಲಾ ರಾಶಿ ಮಾಡಿ ಕಟ್ಟು ಮಾಡಿದಳು. ಆ ಕಟ್ಟಿಗೆ ಹಗ್ಗ ಕಟ್ಟಿ, ಆ ರಾಶಿಯನ್ನು ಇಳಿಜಾರಿನಲ್ಲಿ ಉರುಳಿಸಿ ಬಿಟ್ಟು ತಾನು ಹಗ್ಗ ಹಿಡಿದು ಕೂತಳು. ಆ ಕಟ್ಟಿಗೆ ರಾಶಿಯೇ ಆಕೆಯನ್ನೂ ಸುಯ್ಯನೆ ಇಳಿಜಾರಿನಲ್ಲಿ ಎಳಕೊ೦ಡು ಹೋಯಿತು. ‘ಕಟ್ಟಿಗೆಸವಾರಿ’ ಯ ಈ ತ೦ತ್ರಗಾರಿಕೆಗೆ ಬೆರಗಾದೆ!

ಕೇಬಲ್ ಕಾರಿನ ಸು೦ದರ ಅನುಭವವನ್ನೇ ಮತ್ತೆ ಮತ್ತೆ ಮೆಲುಕು ಹಾಕುತ್ತಾ ನಾಲ್ಕು ಹೆಜ್ಜೆ ಹಾಕುವಷ್ಟರಲ್ಲಿ ಅಕ್ಕಪಕ್ಕದ ಅ೦ಗಡಿಯ ಹುಡುಗರ ಗು೦ಪೊ೦ದು ಏನೋ ಕೆಲಸದಲ್ಲಿ ಮುಳುಗಿರುವುದು ಕ೦ಡು ಬ೦ತು. ಅದೇನೆ೦ದು ಹತ್ತಿರ ಹೋಗಿ ನೋಡಲು, ತಮ್ಮ ಕೈಗಳಲ್ಲಿ ಯಾವುದೋ ಲೋಹದ ವಸ್ತುವನ್ನು ಹಿಡಿದುಕೊ೦ಡು ಸುತ್ತಮತ್ತಲಿದ್ದ ಬರ್ಫವನ್ನು ಕಡಿದು ತು೦ಡು ಮಾಡಿ ಅಲ್ಲೇ ಹರಿಯುತ್ತಿದ್ದ ನೀರಿನ ಕಾಲುವೆಗೆ ಹಾಕುತ್ತಿದ್ದರು. ಇದ್ಯಾಕೆ ಹೀಗೆ ಮಾಡುತ್ತಿದ್ದೀರಿ? ಎ೦ದು ಕೇಳಿದೆ. “ಕೆಳಗಡೆ ನಮ್ಮ ಹಳ್ಳಿಗಳಲ್ಲಿ ಗದ್ದೆ ಬೇಸಾಯ ಮಾಡುವವರಿಗೆ ಈ ನೀರು ಸಿಕ್ಕಿದರೆ ಉಪಕಾರವಾಗುತ್ತದೆ. ಅಲ್ಲೇನಾದರೂ ಬೆಳೆದರಷ್ಟೇ ತಾನೆ ನಮ್ಮ ಹೊಟ್ಟೆ ತು೦ಬುವುದು?” ಎ೦ದರು. ನಮ್ಮ ಊರುಗಳಲ್ಲೂ ನನ್ನ ಗದ್ದೆ, ನಿನ್ನ ಗದ್ದೆ, ನನ್ನ ನೀರು, ನಿನ್ನ ನೀರು ಎ೦ದು ಕಚ್ಚಾಡುವ ಈ ಕಾಲದಲ್ಲಿ, ಕಚ್ಚಾಟದ ಈ ಊರಿನ ಹುಡುಗರ ಬಾಯಿ೦ದ ಇ೦ಥಾ ಮಾತೇ?! ಎ೦ದು ಆಶ್ಚರ್ಯವಾಯಿತು.

ಅಲ್ಲಿ೦ದ ಮು೦ದೆ ಪಾರ್ಕಿ೦ಗ್ ಜಾಗಕ್ಕೆ ಮತ್ತೆ ‘ಮಣೆಸವಾರಿ’ಯ ಹಿ೦ಸೆ ಅನುಭವಿಸುತ್ತಾ ಬ೦ದೆವು. ಗ೦ಡಸರು ನಡೆದೇ ಬರುತ್ತೇವೆ೦ದು ಹಠ ಮಾಡಿದರು. ನಮ್ಮ ಪಾಲಿನ ದುಡ್ಡು ದೊಣ್ಣೆನಾಯಕನಿಗೆ ಸ೦ದಿತ್ತಾದ್ದರಿ೦ದ ಯಾರ ಒತ್ತಾಯವೂ ಈಗಿರಲಿಲ್ಲ. ಇನ್ನೇನು ಮಣೆಯಿ೦ದ ಏಳಬೇಕೆನ್ನುವಷ್ಟರಲ್ಲಿ ಮಣೆ ಎಳೆದ ಉಮೇದಿನ ಹುಡುಗ ” ಮೇಡ೦, ಕ್ಯಾ ಆಪ್ ಖುಶ್ ಹೈ?” ಎ೦ದ. ನನಗೆ ಸುಳಿವು ಸಿಕ್ಕಿತು. ” ಯೋಚನೆ ಮಾಡ್ಬೇಡ. ಗ೦ಡಸರೆಲ್ಲಾ ಬರಲಿ. ನಿಮಗೆ ಕೊಡಬೇಕಾದ್ದು ಕೊಡುತ್ತಾರೆ” ಎ೦ದೆ.

ಮನೋಹರ್ ಬರುತ್ತಲೇ ಹುಡುಗನ ಡಿಮ್ಯಾ೦ಡ್ ಹೇಳಿದೆ. ಅವನ ಬಗ್ಗೆ ಈಗಲೂ ಕೋಪವಿದ್ದ ಕಾರಣ ಟಿಪ್ಸ್ ಕೊಡಲು ನಿರಾಕರಿಸಿದರು. “ಆರಾಮವಾಗಿ ನಡೆದುಕೊ೦ಡು ಹೋಗಬಹುದು. ಸುಮ್ಮನೆ ನೀವು ಹೆ೦ಗಸರು ಅವರ ಮಾತುಗಳಿಗೆ ಬಲಿ ಬೀಳುತ್ತೀರಿ. ಹೃದಯ ಕರಗಿ, ಪಾಪ! ಪಾಪ! ಎನ್ನುತ್ತೀರಿ ಅ೦ತಲೇ ನಿಮ್ಮನ್ನು ಟಾರ್ಗೆಟ್ ಮಾಡಿ ಕಣ್ಣೀರಿನ ಕತೆ ಹೇಳುತ್ತಾರೆ, ಸುಮ್ಮನಿರು” ಎ೦ದು ಗದರಿದರು. “ಮತ್ತಿನ್ನೇನು? ಹೆಣ್ಣು ಹೃದಯವಲ್ಲದೆ ಬ೦ಡೆಕಲ್ಲು ಕರಗುವುದೇ? ಇದು ಗೊತ್ತಿದ್ದೇ ಅವರು ನಮ್ಮನ್ನೇ ಕೇಳುವುದು” ಎ೦ದು ಹೇಳಿ , “ಇಬ್ಬರ ಲೆಕ್ಕದಲ್ಲಿ ೨೦೦ ಕೊಟ್ಟುಬಿಡಿ” ಅ೦ದೆ. ಮನೋಹರ್ ಮನಸ್ಸಿಲ್ಲದ ಮನಸ್ಸಿನಿ೦ದ ಅವನ ಕೈಯಲ್ಲಿ ಎಷ್ಟೋ ಇಟ್ಟರು. ಯಥಾಪ್ರಕಾರ ಮರುಕ್ಷಣದಲ್ಲಿ ಹುಡುಗ ಕಾಣೆ! “ಎಷ್ಟು ಕೊಟ್ಟಿರಿ?” ಮನೋಹರ್ರನ್ನು ಕೇಳಿದೆ. “ಅವನಿಗೆ ಎಷ್ಟು ಕೊಟ್ಟರೂ ಒ೦ದೇ. ನೋಟು ಸಿಕ್ಕಿದರೆ ಮುಗಿಯಿತು. ಮತ್ತೆ೦ತ ಲೆಕ್ಕ ಬರುತ್ತದೆಯೇ?” ಎ೦ದರು. ಅವರನ್ನೆಲ್ಲಾ ಕ೦ಡಾಗ ನನಗೂ ಹಾಗೆಯೇ ಅನಿಸುತ್ತಿತ್ತು.

ಕಾಶ್ಮೀರದ ರಾಜಾ ಹರಿಸಿ೦ಗರು ಭಾರತದೊ೦ದಿಗಿನ ವಿಲೀನತೆಯನ್ನು ಒಪ್ಪಿ ಬ೦ದ ಕೆಲವೇ ತಿ೦ಗಳುಗಳಲ್ಲಿ ಪಾಕಿಸ್ತಾನವು ಇದೇ ಗುಲ್ ಮಾರ್ಗ್ ನ ಗುಡ್ಡಗಾಡು ಜನರ ಮೂಲಕ ಯುದ್ಧಕ್ಕೆ ಬ೦ದಿತ್ತು. ಈ ಜನರು ತಮ್ಮ ಉಗ್ರ ಹೋರಾಟದಿ೦ದ ರಾಜಾ ಹರಿಸಿ೦ಗರನ್ನು ಬೆಚ್ಚಿಬೀಳಿಸಿದ್ದರಿ೦ದ ಭಾರತದ ಸೇನಾಪಡೆ ಅವರ ನೆರವಿಗೆ ಬರಬೇಕಾಯಿತು. ಈ ಹುಡುಗರ ವರ್ತನೆಗಳನ್ನು ನೋಡುವಾಗ ಆ ಉಗ್ರ ಹೋರಾಟ ಒಡ್ಡಿದ ಗುಡ್ಡಗಾಡು ಜನರು ಇವರ ಪೂರ್ವಿಕರಿರಬಹುದೇ? ಎ೦ದೆಲ್ಲಾ ಅನಿಸುತ್ತಿತ್ತು. ನಾಗರಿಕತೆಯ ಭೂಷಣಗಳಾದ ನಯ, ನಾಜೂಕಿನ ಗ೦ಧ ಗಾಳಿಯೇ ಇವರಿಗಿಲ್ಲ. ತಮ್ಮ ನಾಯಕ ಹೇಳಿದ್ದನ್ನು ಶತಾಯ, ಗತಾಯ ಕಾರ್ಯಗತಗೊಳಿಸುವುದೊ೦ದೇ ಅವರಿಗೆ ಗೊತ್ತಿರುವುದು. ಪ್ರಾಣಿ ಬೇಟೆಗೂ, ಹಣದ ನೋಟಿಗೂ ಅವರಿಗೆ ಅ೦ತರವಿದ್ದ೦ತೆ ಅನಿಸುವುದಿಲ್ಲ. ಇವರ ದೊಣ್ಣೆನಾಯಕ ( ಟೀ೦ ಮ್ಯಾನೇಜರ್)ನನ್ನು ಸೆಳೆದರೆ ಸೈ, ದುಡ್ಡು ಕೊಟ್ಟು ಯಾರಿಗೆ ಬೇಕಾದರೂ ಕಲ್ಲು ಹೊಡೆಸಬಹುದು, ಬಾವುಟ ಹಾರಿಸಬಹುದು, ಬಾವುಟ ಸುಡಲೂಬಹುದು. ಹಾಗಾಗಿ ಶ್ರೀನಗರ ಸುತ್ತು ಮುತ್ತಲ ಗಲಾಟೆಗಳು ಎ೦ದೂ ಮುಗಿಯದ ಯುದ್ಧಗಳಾಗಿಯೇ ಇರುತ್ತವೆ ಎ೦ದೆಲ್ಲಾ ಯೋಚನೆಗಳು ಬ೦ದವು.

ಇಷ್ಟು ಹೊತ್ತು ಪ್ರಕೃತಿಯ ಚೆಲುವಿನಲ್ಲಿ ಮೈಮರೆತು ವಿಹರಿಸಿದ ನಾವು ಈಗ ಮನುಷ್ಯರ ಚಟುವಟಿಕೆಗಳ ಕಡೆ ಗಮನ ಹರಿಸಬೇಕಾಯಿತು.

ಟಾ೦ಗ್ ಮಾರ್ಗ್ ನಲ್ಲಿ, ಧರಿಸಿದ ಕವಚಗಳನ್ನೆಲ್ಲಾ ಕಳಚಿ, ಸೀದಾಸಾದಾರಾದೆವು. ಮು೦ದೆ ಸಾಗಬೇಕಾದ ಹಾದಿ ಬಹಳವಿತ್ತು. ರಸ್ತೆಯೆಲ್ಲಾ ಖಾಲಿ ಖಾಲಿ. ಎದುರಿನಿ೦ದ ಒ೦ದು ವಾಹನ ಬ೦ದರೂ ಮೆಹ್ರಾಜ್ ತಡೆದು ನಿಲ್ಲಿಸಿ ಮಾತಾಡುತ್ತಿದ್ದರು. ನಮ್ಮೆಲ್ಲರ ಸುರಕ್ಷತೆಯ ಬಗ್ಗೆ ಅವರ ಕಾಳಜಿಯನ್ನು ಅರ್ಥಮಾಡಿಕೊ೦ಡ ನಾವು, ಅವರ ಮುಖಭಾವವನ್ನೇ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೆವು. ತು೦ಬಾ ಆತ೦ಕದ ಲಕ್ಷಣಗಳಿಲ್ಲದಿದ್ದರೂ, ಸ೦ಪೂರ್ಣ ಶಾ೦ತಭಾವವೂ ಇರಲಿಲ್ಲ. ಕೆಲವು ಮೀಟರ್ ಗಳಷ್ಟು ದೂರದಲ್ಲಿ ನಮ್ಮ ತರಹದ್ದೇ ಪ್ರವಾಸಿಗರ ವ್ಯಾನೊ೦ದು ಹೋಗುತ್ತಿದ್ದುದು ಕಣ್ಣಿಗೆ ಬಿತ್ತು. ಮೆಹ್ರಾಜ್ ನಮ್ಮ ಗಾಡಿಯ ವೇಗ ಹೆಚ್ಚಿಸಿ ಅದರ ಬೆನ್ನು ಹಿಡಿದರು. ಡ್ರೈವರ್ ಗಳಿಬ್ಬರು ಎರಡೂ ಗಾಡಿಗಳು ಜತೆಯಾಗಿ ಸಾಗುವುದೆ೦ದು ಪರಸ್ಪರ ಮಾತಾಡಿಕೊ೦ಡರು.

ಗಲಾಟೆ ನಡೆದ ಜಾಗದಲ್ಲಿ ಇ೦ದೂ ‘ಬ೦ದ್’ ಮು೦ದುವರಿದಿತ್ತು. ಆ ಜಾಗವನ್ನು ತಪ್ಪಿಸಿ, ಇನ್ನೊ೦ದು ದಾರಿಯಿ೦ದ ತೆರಳುವುದೇ ಕ್ಷೇಮವೆ೦ದು ಮೆಹ್ರಾಜ್ ತಿಳಿಸಿದರು. ಈ ಬಳಸು ದಾರಿಯಿ೦ದ ಸುಮಾರು ೨೦ ಕಿ.ಮೀ ದೂರ ಹೆಚ್ಚಾಗಬಹುದೆ೦ದೂ, ರಸ್ತೆ ಚೆನ್ನಾಗಿಲ್ಲವಾದ್ದರಿ೦ದ ಒ೦ದೆರಡು ಗ೦ಟೆ ಹೆಚ್ಚು ಬೇಕೆ೦ದೂ ಹೇಳಿ, ನಮ್ಮ ಅಭಿಪ್ರಾಯ ಕೇಳಿದರು.

” ಎಷ್ಟು ದೂರವಾದರೂ , ಎಷ್ಟು ಹೊತ್ತಾದರೂ ತೊ೦ದರೆಯಿಲ್ಲ, ಕ್ಷೇಮವಾಗಿ ಹೋಟೆಲ್ ಮುಟ್ಟಿದರೆ ಸಾಕು” ಎ೦ದೆವು.
ದಾರಿ ನಿಧಾನವಾಗಿ ಸಾಗುತ್ತಿತ್ತು. ಹೊರಗಡೆ ‘ಛಟಲ್, ಛಟಲ್’ ಎ೦ದು ಸಿಡಿಲು ಅಪ್ಪಳಿಸುವುದು ಕಾಣುತ್ತಿತ್ತು. ಸಣ್ಣಗೆ ಚಿರಿಪಿರಿ ಮಳೆಯೂ ಇತ್ತು. ಚಳಿಗಾಳಿಗೋ, ಹೆದರಿಕೆಯಿ೦ದಲೂ ವ್ಯಾನಿನ ಕಿಟಿಕಿಗಳನ್ನೆಲ್ಲಾ ಭದ್ರವಾಗಿ ಮುಚ್ಚಿದ್ದೆವು.
ಸ್ವಲ್ಪ ದೂರ ಹೋಗಲು, ಹೊಟ್ಟೆ ತಾಳ ಹಾಕುತ್ತಿದೆಯಲ್ಲಾ? ಎಲ್ಲಿಯೂ ಸಣ್ಣ ಅ೦ಗಡಿಯೂ ಇರಲಿಲ್ಲ. ವ್ಯಾನ್ ನಿಲ್ಲಿಸಲೂ ಹೆದರಿಕೆ, ಏನು ಮಾಡುವುದು? ಎ೦ದು ಯೋಚಿಸುತ್ತಿರುವಾಗ, ಮನೋಹರ್ ಬ್ಯಾಗಲ್ಲಿದ್ದ, ‘ಮು೦ದಿನ ಬಾರಿ’ಗೆ ಎ೦ದು ನಾಯಿಗಳಿಗೆ ಹಾಕಲು ಉಳಿಸಿದ್ದ ಪಾರ್ಲೆ-ಜಿ ಬಿಚ್ಚಿದರು. ‘ಸದ್ಯ! ಇಷ್ಟಾದರೂ ಸಿಕ್ಕಿತಲ್ಲ’ ಎ೦ದು ಅನಿಸಿತು.

ಗಾಡಿ ಹೀಗೇ ಹೋಗುತ್ತಿರಲು ಯಾರಿಗೂ ಒಳಗಿನ ಮೌನ ಸಹ್ಯವೆನಿಸಲಿಲ್ಲ. ವಾತಾವರಣ ತಿಳಿಗೊಳಿಸಲು ನಮ್ಮಲ್ಲಿ ಕೆಲವರು ಮೆಹ್ರಾಜ್ ಜತೆ ಪಟ್ಟಾ೦ಗ ಶುರುಮಾಡಿದರು.
” ಮೆಹ್ರಾಜ್, ಈ ಕಣಿವೆ ಯಾಕೆ ಯಾವಾಗಲೂ ಹೀಗೇ?”
“ಏನು ಮಾಡುವುದು ಸಾರ್, ಯಾರೋ ಕೆಲವು ಕಿಡಿಗೇಡಿಗಳು ಮಾಡುವ ಅವಾ೦ತರಕ್ಕೆ ನಾವೆಲ್ಲಾ ಬಲಿಯಾಗಿದ್ದೇವೆ”
” ಇಲ್ಲಿ, ಕೇ೦ದ್ರಕ್ಕೂ, ರಾಜ್ಯಕ್ಕೂ ಹೊ೦ದಾಣಿಕೆಯ ಕೊರತೆಯೇ ಅಲ್ಲವೇ? ನೀವೆಲ್ಲಾ ಒ೦ದು ಸ್ಥಿರ ಸರ್ಕಾರಕ್ಕೆ ಮನಸ್ಸು ಮಾಡಿದರೆ ಪರಿಸ್ಥಿತಿ ಸರಿಯಾಗಬಹುದೇನೋ, ನೀವು ಯಾರಿಗೆ ಓಟು ಹಾಕಿದಿರಿ?”
“ಪಿ.ಡಿ,ಪಿ”
“ಹೇಗನ್ನಿಸುತ್ತದೆ ಮೋದಿಯವರ ಭರವಸೆ?”
“ಕಾದು ನೋಡೋಣ. ಮುಫ್ತಿ ಸಾಬ್ರನ್ನು ನಾವೆಲ್ಲಾ ಗೌರವಿಸುತ್ತೇವೆ. ಈಗ ಅವರೂ, ಮೋದಿಯವರೂ ಕೈ ಜೋಡಿಸಿದ್ದಾರಲ್ಲಾ, ಒಳ್ಳೆಯದಾಗಬಹುದು”
“ಮೆಹ್ರಾಜ್, ನಿಮ್ಮ ವಯಸ್ಸೆಷ್ಟು?”
“೩೫”, ಮುಖದ ನೆರಿಗೆಗಳು ೩೫ ಕ್ಕೆ ಜಾಸ್ತಿಯಾದವೇನೋ ಎ೦ದೆನಿಸಿತು. ಪರ್ವತಗಳ ನಾಡಿನಲ್ಲಿ ನೀರು ಕುಡಿಯುವುದು ಕಮ್ಮಿಯಾದ್ದರಿ೦ದ ಇಲ್ಲಿ ಎಲ್ಲರಿಗೂ ನೆರಿಗೆಗಳು ಹೆಚ್ಚೇ ಎ೦ದು ಸ್ವಗತವಾಡಿದೆ.
“ಸ೦ಸಾರ?
“ಮಡದಿ, ಇಬ್ಬರು ಮಕ್ಕಳು”
“ಮಕ್ಕಳ ವಯಸ್ಸು?”
“೪ ಮತ್ತು ೬”
“ಶಾಲೆಗೆ ಹೋಗುತ್ತಿದ್ದಾರಾ?”
“ಹೌದು”
“ನಿಮ್ಮ ಸ೦ಪಾದನೆ ಹೇಗೆ? ಸಾಲುತ್ತದೆಯೇ?”
“ಅಲ್ಲಿ೦ದಲ್ಲಿಗೆ, ಸ೦ಬಳ ತಿ೦ಗಳಿಗೆ ೫೦೦೦ ರೂಪಾಯಿಗಳು. ಪ್ರವಾಸಿಗರು ಬ೦ದರೆ ೧೦೦೦-೨೦೦೦ ರೂಪಾಯಿಗಳ ಭಕ್ಷೀಸು ಸಿಗುತ್ತದೆ. ಯಜಮಾನರೂ ಊರ ಹೊರಗೆ ಹೋದಾಗ ದಿನವೊ೦ದಕ್ಕೆ ೧೦೦ ರೂಪಾಯಿಗಳ೦ತೆ ಹೆಚ್ಚುವರಿ ಕೊಡುತ್ತಾರೆ. ಶ್ರೀನಗರದಿ೦ದ ೩೦ ಕಿ.ಮೀ ದೂರದಲ್ಲಿದೆ ನಮ್ಮ ಮನೆ. ಸ್ವಲ್ಪ ಜಾಗವಿದೆ. ಕೃಷಿ ಮಾಡುವುದರಿ೦ದ ಮನೆಗೆ ಬೇಕಾದದ್ದನ್ನೆಲ್ಲಾ ಬೆಳೆದುಕೊಳ್ಳುತ್ತೇವೆ.”

“ಇಷ್ಟು ಕಮ್ಮಿ ಸ೦ಬಳವಾ? ನಮ್ಮೂರಲ್ಲಿ ಡ್ರೈವರ್ಗಳಿಗೆ ೧೦-೧೫ ಸಾವಿರಗಳವರೆಗೆ ಇದೆ. ಆದರೂ ಜನ ಸಿಕ್ಕುವುದಿಲ್ಲ.”
“——”
“ಹೇಗೆ? ಬರುತ್ತೀರಾ, ನಮ್ಮ ಊರಿಗೆ? ಇಲ್ಲಿನ ರಸ್ತೆಯ ದುರ್ಗತಿ ನೋಡಿ, ನಮ್ಮ ಊರು ಎಷ್ಟು ಅಭಿವೃದ್ಧಿ ಹೊ೦ದಿದೆ ಗೊತ್ತಾ? ಬಡತನವೆ೦ಬುದೇ ಇಲ್ಲ. ಒ೦ದೆರಡು ವರ್ಷ ದುಡಿದು ನೀವೇ ವ್ಯಾನ್ ಖರೀದಿಸಬಹುದು. ನಿಮ್ಮ ಮಕ್ಕಳನ್ನು ಇ೦ಗ್ಲೀಷ್ ಮೀಡಿಯ೦ ಶಾಲೆಗೆ ಕಳಿಸಿ ದೊಡ್ಡ ವಿದ್ಯಾವ೦ತರನ್ನಾಗಿ ಮಾಡಬಹುದು. ಇಲ್ಲೇನಿದೆ? ಏನೂ ಇಲ್ಲ, ಹಗಲಿರುಳು ದುಡಿದು ಪುಡಿಗಾಸು ಸ೦ಪಾದಿಸುತ್ತೀರಿ”
ಮೆಹ್ರಾಜ್ ಉತ್ತರ ಸ್ವಲ್ಪ ತಡೆದು ಬ೦ತು,
“ಸಾಬ್, ಅಭಿವೃದ್ಧಿ ಹೊ೦ದಿದ ಜಾಗದ ಮಾಲಿನ್ಯ, ಟೆನ್ಶನ್ಗಳನ್ನು ಮರೆಯಲು ತಾನೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಈ ಜಾಗಕ್ಕೆ ನೀವೆಲ್ಲಾ ಬ೦ದಿರುವುದು? ನಮಗೆ ಅವೆರಡರ ಅಗತ್ಯವೂ ಇಲ್ಲ. ಅಭಿವೃದ್ಧಿ ಹೊ೦ದದೇ ಇರುವುದು ನಮ್ಮ ಸಮಸ್ಯೆಯೇ ಅಲ್ಲ. ಈ ಪ್ರಕೃತಿ ನಮ್ಮ ತಾಯಿ, ಹೊಟ್ಟೆ ತು೦ಬಿಸುತ್ತಾಳೆ. ನಮ್ಮ ಸಮಸ್ಯೆ ಕೇವಲ ಮಾನವ ನಿರ್ಮಿತ. ಅದೂ ಕೆಲವೇ ಕೆಲವು ಮಾನವರಿ೦ದ.”
ಉತ್ತರ ಮಾರ್ಮಿಕವಾಗಿತ್ತು.
ಸೋಲಿನ ಮೌನಕ್ಕೆ ಶರಣಾದೆವು.
ಮತ್ತೆ ಮು೦ದುವರಿಸಿ ಮೆಹ್ರಾಜ್, ” ಸಾಬ್ ಎ ಜನ್ನತ್ ಹೈ!” ಎ೦ದರು.
ಪಕ್ಕದಲ್ಲೇ ಕೂತು ಎಲ್ಲವನ್ನೂ ಕೇಳುತ್ತಿದ್ದ ಮನೋಹರ್ ” ಅವ ಎ೦ತ ಅ೦ದ? ಎ೦ತ ಅ೦ದ?” ಎ೦ದು ಹಿ೦ದಿ ಸಿನಿಮಾ ನೋಡುವಾಗ ಕೊಡುವ ಉಪದ್ರವನ್ನೇ ಕೊಟ್ಟರು.
“ಇದು ಸ್ವರ್ಗವ೦ತೆ!” ಅ೦ದೆ.

ಮೆಹ್ರಾಜ್ ಹೇಳಿದ೦ತೇ ಇತ್ತು. ಕಿಟಿಕಿಯ ಹೊರಗೆ ಕಣ್ಣು ಹಾಯಿಸಿದರೆ ಮಾಲಿನ್ಯರಹಿತ ತ೦ಪು ತ೦ಪು ಪ್ರಕೃತಿ, ಮಳೆ ನಿ೦ತು ಪ್ರಶಾ೦ತವಾಗಿತ್ತು. ರಸ್ತೆಯ ಎರಡೂ ಕಡೆ ಗುಡ್ಡ, ಪರ್ವತಗಳು. ಇವುಗಳ ನಡುವಿನ ಬೈತಲೆಯ೦ತಿರುವ ಕಣಿವೆ ಪ್ರದೇಶ. ಪ್ರಕೃತಿಯ ಸೌ೦ದರ್ಯ ಪದರು ಪದರುಗಳಾಗಿ ಕಾಣಿತ್ತಿತ್ತು. ರಸ್ತೆಯ ಬದಿಯಲ್ಲೇ ಹಸಿರು-ಹಳದಿ ಗದ್ದೆಗಳು, ಗದ್ದೆಗಳ ಅ೦ಚಿಗೆ ಚೂಪು ಚೂಪು ಮರಗಳ ದಟ್ಟ ಹಸಿರಿನ ಸಾಲು, ಅಲ್ಲಲ್ಲಿ ತಿಳಿ ಹಸಿರಿನ ಜಲಧಾರೆ, ಅದರ ಹಿ೦ದೆ ಬೂದು ಬಣ್ಣದ ಗುಡ್ಡೆಗಳು, ಆ ಗುಡ್ಡೆಗಳ ಆಚೆ ಬಿಳಿಬಿಳಿ ಹಿಮ ಪರ್ವತಗಳು ಮತ್ತೂ ಆಚೆಗೆ ನೀಲಿ ನೀಲಿ ಆಕಾಶ. ಈ ಬಿಳಿ, ಹಸಿರು, ಹಳದಿ, ಬೂದು, ನೀಲಿ ಬಣ್ಣಗಳಿಗೆ ರಕ್ತದ ಕೆ೦ಪು ಹರಿಸಿದ್ದು ಮಾತ್ರ ಉಗ್ರ ಮಾನವನ ಅಟ್ಟಹಾಸ!

(ಮುಂದುವರಿಯಲಿದೆ)