`ಸೈಕಲ್ ವೆಂಕಿ’ ಎಂದೇ ಖ್ಯಾತರಾದ ಬೆಂಗಳೂರಿನ ವೀಲ್ ಸ್ಪೋರ್ಟ್ಸ್ ಸೈಕಲ್ ಅಂಗಡಿಯ ಯಜಮಾನರ ಫೇಸ್ ಬುಕ್ ನಮೂದು ನನ್ನನ್ನು ಆಕರ್ಷಿಸಿತು: “ಡಿಸೆಂಬರಿನ ಚಳಿಯ ಐದು ದಿನಗಳಲ್ಲಿ ಬಿಸಿಯೇರಿಸಲು, ಹೊಡೆಯಿರಿ ಸೈಕಲ್ ಉದಕಮಂಡಲಕ್ಕೆ!”

ಪ್ರವಾಸಿಗಳ ಸ್ವರ್ಗ ಅರ್ಥಾತ್ ಒಂದಕ್ಕೆ ನಾಲ್ಕರ ಬೆಲೆಯ ಲೂಟಿಯ ಊಟಿಯಲ್ಲೂ ಭಾಗಿಗಳಿಗೆ ವಾಸ, ತಿನಿಸು, ಉದ್ದಕ್ಕೂ ವೈದ್ಯಕೀಯ ಹಾಗೂ ತಾಂತ್ರಿಕ ಬೆಂಬಲಗಳು ಸೇರಿ ಕೇವಲ ಹದಿನೈದು ಸಾವಿರ ರೂಪಾಯಿಯ ಶುಲ್ಕ. ಆಗಲೇ ಕೆಲವು ಸೈಕಲ್ ಮಹಾಯಾನಗಳನ್ನು ಯಶಸ್ವಿಯಾಗಿ ಸಂಘಟಿಸಿ ವಿಶ್ವಾಸಾರ್ಹತೆ ಗಳಿಸಿದ್ದ ಬ್ಲೂ ಮೌಂಟೇನ್ ಬೈಕ್ ಟೂರ್ಸ್, ಹೃಸ್ವ ರೂಪದಲ್ಲಿ ಬೀಯೆಂಬೀಟಿ ಅರ್ಥಾತ್ ನೀಲಗಿರಿಯ ಸೈಕಲ್ ಯಾತ್ರೆ, ಮಹಾಯಾನದ ಸಂಘಟಕರು. ಇಷ್ಟಿದ್ದ ಮೇಲೆ ನನಗೆ ಸೈಕಲ್ ಹೊರಡಿಸಲು ಮಹಾ ಶಕ್ತಿ, ಧೈರ್ಯಗಳೇನೂ ಬೇಕಾಗಲಿಲ್ಲ – ಬಲ ಕುಸಿಯೆ ಕಾರಿಹುದು ಮಂಕುತಿಮ್ಮ! ಅಂತರ್ಜಾಲ ಅವಸ್ಥೆಯ ಬ್ಯಾಂಕಿನೊಡನೆ ಏಗಿ ಮುಂಗಡ ರವಾನಿಸಿದೆ, ಅರ್ಜಿ ಸಲ್ಲಿಸಿದೆ. ಮಗಸೊಸೆಯರ ಸಹವಾಸದಲ್ಲಿ ಬೆಂಗಳೂರು ನನಗೆ ಪರಕೀಯವಲ್ಲ. ಆದ್ದರಿಂದ ನವೆಂಬರ್ ಮೂವತ್ತರ ಸಂಜೆಗೇ ನಾನು `ಅ(ಭಯ)ರ(ಶ್ಮಿಯರ)ಮನೆ’ ಸೇರಿಕೊಂಡೆ. ಅಭಯನಲ್ಲಿದ್ದ ನನ್ನದೇ ಮಾದರಿಯ ಮೆರಿಡಾ ೨೧ ಸ್ಪೀಡಿನ, ಪರ್ವತಾರೋಹಿ ಸೈಕಲ್ (ಎಂಟೀಬೀ) ಸಜ್ಜಾಗಿ ಕಾದಿತ್ತು.

ಇದನ್ನು ನುಣ್ಣನೆ ದಾರಿಯಲ್ಲಿನ ವೇಗ ಸವಾರಿಗೆ ಸಾಮಾನ್ಯವಾಗಿ ಯಾರೂ ಬಯಸುವುದಿಲ್ಲ. ಆದರೆ ಎದುರು ಕಬೆಯ ಆಘಾತಹಿಂಗುವ ಗುಣ (ಶಾಕ್ ಅಬ್ಸಾರ್ಬರ್), ಎಂಥಲ್ಲೂ ನಿಟ್ಟುಸಿರು ಬಿಡದೆ ದಾರಿಕಚ್ಚಿ ಸಾಗುವ ದಪ್ಪ ಚಕ್ರಗಳು ನನಗಂತು ಪ್ರಿಯವೇ ಆಗಿವೆ. ಅಭಯ ದೊಡ್ಡ ಪಯಣಕ್ಕಾಗಿ ಗೊಪ್ರೊ ಕ್ಯಾಮರಾವನ್ನು ಅದರ ಹ್ಯಾಂಡಲ್ಲಿಗೇರಿಸಿದ್ದ. ಇದು ಇಟ್ಟಲ್ಲಿ (ಹ್ಯಾಂಡಲ್, ಶಿರಸ್ತ್ರಾಣ ಇತ್ಯಾದಿ) ಗಟ್ಟಿಯಾಗಿ ಕುಳಿತು, ಮಳೆಬಿಸಿಲುಗಳಲ್ಲಿ ತರತಮ ಮಾಡದೆ, ಬಲು ಸರಳ ನಿಯಂತ್ರಣದಲ್ಲಿ ಚಿತ್ರ, ಚಲಚಿತ್ರಗಳನ್ನು ದಾಖಲಿಸುತ್ತದೆ. ಅಭಯ ಅದನ್ನು ಬಳಸುವ ಕುರಿತು ಸರಳ ಪಾಠ ಬೇರೆ ಮಾಡಿದ. ಮಂಗಳವಾರ ಬೆಳಿಗ್ಗೆ ಒಂದು ಅಭ್ಯಾಸದ ಸರ್ಕೀಟ್ ಹೊರಟೆ.

ಚನ್ನಸಂದ್ರದ ಮನೆಯಿಂದ ಕೆಂಗೇರಿಯತ್ತ ಸ್ವಲ್ಪ ಹೋಗಿ, ಎಡ ಹೊರಳಿ ಕನಕಪುರ ರಸ್ತೆ ಅನುಸರಿಸಿದೆ. ಖೇಣಿ ರಸ್ತೆಯ ಅಡಿಗಾಗಿ, ಏರು ಮಾರ್ಗದ ಮುಡಿಗಾಗಿ, ನೀಲಗಿರಿ ತೋಪಿನ ನಡುವಿಗಾಗಿ ಸಾಗಿತು ಉರುಳು ಸೇವೆ. ಸ್ವಲ್ಪ ದಡಬಡ ನಿರ್ಜನ ಮಣ್ಣದಾರಿ ಕಳೆದು, ಮುಖ್ಯ ಕನಕಪುರ ರಸ್ತೆಯನ್ನೇ ಮುಟ್ಟಿದೆ. ಸುಬ್ರಹ್ಮಣ್ಯಪುರದ ಗದ್ದಲ, ‘ನಮ್ಮ ಮೆಟ್ರೋ’ ಸ್ತಂಭಗಳಿಕ್ಕೆಲ, ನಿಲುದಾಣಗಳ ನೆರಳ ತಳಮಳ ಕಳೆಯುತ್ತಿದ್ದಂತೆ ಬನಶಂಕರಿಯ ದೇವಳದ ಆಕರ್ಷಣೆ ಬಂತು. ಒಂದೆರಡು ನಾಮಫಲಕ ಮತ್ತೆ ಸಿಕ್ಕವರ ವಿಚಾರಣೆ ನಡೆಸುತ್ತ ದೇವಳದ ಎದುರಲ್ಲೇ ಒಮ್ಮುಖದ ಓಟ ಮುಗಿಸಿದೆ.

ನಾನು ದೇವ ದರ್ಶನಾಕಾಂಕ್ಷಿಯೇನೂ ಅಲ್ಲ; ಅದು ಮಾರಣೇ ದಿನದ ಮಹಾಯಾನದ ಆರಂಭ ಬಿಂದುವಾದ್ದಕ್ಕೇ ಆರಿಸಿಕೊಂಡಿದ್ದೆ. ಐದು ಮಿನಿಟು ನಿಂತು, ಮಂಗಳೂರಿನಿಂದ ಬರುವಾಗ ಬಾಟಲಿಯಲ್ಲಿ ತಂದು ಉಳಿದಿದ್ದ ನೀರನ್ನು ಕುಡಿದೆ. ಆದರೆ ಪುಢಾರಿಗಳ ಠಕ್ಕಿನಲ್ಲಿ “ನೇತ್ರಾವತಿ ಜಲವನ್ನು ಬನಶಂಕರಿಗೆ ಅರ್ಪಿಸಿ, ‘ಪರಿಸರ ಉಳಿಸು’ ಪ್ರಾರ್ಥನೆ ಸಲ್ಲಿಸಿ, ತೀರ್ಥ ಸ್ವೀಕರಿಸಿದರು” – ಹೀಗೂ ಹೇಳಬಹುದು! ಮುಂದೆ ‘ಡಾ| ವಿಷ್ಣುವರ್ಧನ’ ಮಾರ್ಗದಲ್ಲಿ (ಉತ್ತರಹಳ್ಳಿ-ಕೆಂಗೇರಿ ದಾರಿ) ಅಶೋಕವರ್ಧನನ ಒಂಟಿ ಸೈಕಲ್ ಮೆರವಣಿಗೆ ಸಾಗಿ, ಮತ್ತೆ ‘ಅರಮನೆ’ ಸೇರುವಾಗ ಗಂಟೆ ಹನ್ನೆರಡು. ದಿನವಿಡೀ ಮುಸುಗೆಳೆದು ಕೂರುವ ಸೂರ್ಯಸಂಕಲ್ಪಕ್ಕೆ ಮನಸಾ ಕೃತಜ್ಞತೆ ಸಲ್ಲಿಸಿ, ಚಹಾಪಾನದೊಡನೆ ಮಂಗಳ ಹಾಡಿದೆ.

ಬೀಯೆಂಬೀಟಿಯನ್ನು ಅದುವರೆಗೆ ಕೇವಲ ಮಿಂಚಂಚೆ, ಚರವಾಣಿಯಲ್ಲಷ್ಟೇ ಪರಿಚಯಿಸಿಕೊಂಡಿದ್ದೆ. ಹಾಗೆ ಸಂಪರ್ಕಕ್ಕೆ ಬಂದ ನಾಯಕ ಬಾಲು ಯಾನೆ ಬಾಲಕೃಷ್ಣ ಮತ್ತು ದೀಪಕ್ ಸಂಡೂರು ಬಳಗದ ವ್ಯವಸ್ಥೆಯನ್ನು ಅವರ ನೆಲೆಯಲ್ಲೇ ಕಂಡು, ಬಾಕಿ ಮೊತ್ತ ಪಾವತಿಸಲು ಚರವಾಣಿ ಪ್ರಯತ್ನ ಮಾಡಿದೆ. ಬಾಲು “ಇರ್ಲಿ ಸಾರ್. ಸಂಜೆ ನಾನೇ ಕಾಂಟಾಕ್ಟ್ ಮಾಡಿ, ನಿಮ್ಮಲ್ಲಿಗೆ ಬಂದು ಇಸ್ಕೊತ್ತೀನಿ” ಅಂದು ಬಿಟ್ಟರು. ಹಾಗೇ ಸಂಜೆ ಕಾರಿನಲ್ಲಿ ಅವರ ಇನ್ನೋರ್ವ ಗೆಳೆಯ ರಜನೀಕಾಂತ್ ಕೂಡಿಕೊಂಡೇ ಬಂದರು. ಇಬ್ಬರೂ ಸಣಕಲರು, ಸಂಕೋಚಿಗಳು – ಮಿತಭಾಷಿಗಳು. ನಾನು ಕೊಟ್ಟ ಬಾಕಿ ಮೊತ್ತ ಪಡೆದುಕೊಂಡರು, ನನಗವರ ಸಂಘಟನೆಯ ಅಂಗಿ ಕೊಟ್ಟರು, ಕೊನೆಯಲ್ಲಿ ಐದು ದಿನದ ನನ್ನ ಬಟ್ಟೆ ಬರಿಗಳ ಗಂಟೂ ವಿಚಾರಿಸಿಕೊಂಡರು. ಹೇಗೂ ಮರುದಿನ ಹೊರಡುವ ತಾಣದವರೆಗೆ ನನ್ನನ್ನು ಮುಟ್ಟಿಸಲು ಅಭಯ ಇದ್ದುದರಿಂದ ನಾನು ಮೂಟೆ ಕೊಡಲಿಲ್ಲ.

ಒಂದನೇ ತಾರೀಕು ರಾತ್ರಿ ಬೇಗ ಮುಗಿಯಿತೋ ಎರಡರ ಬೆಳಿಗ್ಗೆ ಬೇಗ ಆಯ್ತೋ ತಿಳಿಯಲಿಲ್ಲ. ಅಂತೂ ಪ್ರಾತಃ ಕರ್ಮಗಳ ಪಟ್ಟಿಯನ್ನು ರಶ್ಮಿ ಮಾಡಿದ ಬಿಸಿಬಿಸಿ ಐದೇ ದೋಸೆ ತಿನ್ನುವುದರೊಡನೆ ಮುಗಿಸಿದೆ. ನನ್ನಜ್ಜಿ “ಗುಡ್ಡೇಹಿತ್ಲಿನವರು (ನನ್ನ ಹೆಸರಿನ ಜಿ ಪ್ರತಿನಿಧಿಸುವ ವಂಶನಾಮ) ತಿನಪಾಂಡಿಗಳು. ಮಧ್ಯರಾತ್ರಿ ಎಬ್ಬಿಸಿ ತಿಂಡಿ ಕೊಟ್ಟರೂ ತಿಂದೇ ಸಿದ್ಧ” ಎಂದದ್ದು ಸುಳ್ಳಲ್ಲ. ಐದೂವರೆಗೆ ಸೈಕಲ್ಲೇರಿ, ನನ್ನ ಬಟ್ಟೆ ಹೊರೆಯನ್ನಿಟ್ಟುಕೊಂಡು ಸ್ಕೂಟರಿನಲ್ಲಿ ಹೊರಟ ಅಭಯನ ಬೆನ್ನು ಹಿಡಿದೆ. ಆದರೆ ಸ್ವಲ್ಪೇ ಹೊತ್ತಿನಲ್ಲಿ ಆರೆಂಟು ಕಿಮೀ ದೂರವನ್ನು ಸಕಾಲದಲ್ಲಿ ಸೇರಲು ಈ ವೇಗ ಸಾಲದು ಎಂದು ಕಂಡದ್ದರಿಂದ ನಾನೂ ಸ್ಕೂಟರ್ ಏರುವುದು ಅನಿವಾರ್ಯವಾಯ್ತು. ಕೂತಂತೇ ಚಾಚಿದ ಬಲಗೈಯ್ಯಲ್ಲಿ ಹ್ಯಾಂಡಲ್ ಹಿಡಿದು ಖಾಲೀ ಸೈಕಲ್ಲನ್ನು ಜತೆಯೋಟದಲ್ಲಿ ಒಯ್ದೆವು. ವಾತಾವರಣ ಮೋಡ, ತಂಗಾಳಿಯದೇ ಇದ್ದರೂ ವಾಹನಗಳ ನಗರಸಂಚಾರದ ತರಾತುರಿ ನಮ್ಮನ್ನು ದೇವಳದ ಬಳಿಯ ಪೆಟ್ರೋಲ್ ಬಂಕಿನ ಖಾಲೀ ವಠಾರದತ್ತ ನೂಕಿತು. ನಮಗೆ ಜತೆಗೊಡಲಿದ್ದ ಒಂದು ಇನ್ನೋವಾ ಕಾರು – ಸದ್ಯ ಸೈಕಲ್ ಸವಾರನಾಗಿಯೇ ಹೊರಟ ಮತ್ತು ಬೀಯೆಂಬೀಟೀ ಸಂಚಾಲನಾ ಸಮಿತಿಯ ಸದಸ್ಯರಾದ ಡಾ| ಶಂಕರ್ ಅವರದು. ಕಾರಿನ ಚಾಲನೆಯನ್ನು ಬೀಯೆಂಬೀಟೀಯ ಇನ್ನೋರ್ವ ಸಂಚಾಲನಾ ಸದಸ್ಯ ಶರಶ್ಚಂದ್ರ, ಸೈಕಲ್ ತುಳಿಯುವ ಆಸೆ ಹತ್ತಿಕ್ಕಿ ವಹಿಸಿಕೊಂಡಿದ್ದರು. ಮತ್ತೊಂದು ಬಾಡಿಗೆ ವಾಹನ – ವಿಂಗರ್ ವ್ಯಾನು, ಡ್ರೈವರ್ ಅಲ್ಲದೆ ಹನ್ನೊಂದು ಸೀಟಿನದು. ಇದರ ಚಾಲಕ ರೇಣುಕಾ ನಾಯಕ್, ಬೀಯೆಂಬೀಟೀಯ ಖಾಯಂ ಒಡನಾಡಿಯೇ ಆದ್ದರಿಂದ ಎಲ್ಲೂ ಸಂಬಳಕ್ಕೆ ಬಂದವನೆಂಬ ಪ್ರತ್ಯೇಕತೆ ಕಾಣಿಸದೆ, ಪರಮಸ್ನೇಹಿಯೂ ಸಹಕಾರಿಯೂ ಆಗಿದ್ದದ್ದು ಉಲ್ಲೇಖಿಸಲೇಬೇಕು.

ತಂಡದ ಸವಾರನಲ್ಲದ ಮತ್ತೋರ್ವ ಸದಸ್ಯ – ಅಧಿಕೃತ ಚಿತ್ರಗ್ರಾಹಿ, ನಟರಾಜ. ಇವರು ಸಂಘಟನಾ ಸದಸ್ಯ ದೀಪಕ್ ಸಂಡೂರ್ ಅವರ ಕೀರ್ತಿ ಸ್ಟುಡಿಯೋದ ಭಾಗ. ದೀಪಕ್ ಪ್ರವಾಸದ ಕೊನೆಯೆರಡು ದಿನಗಳಲ್ಲಿ ನಮ್ಮನ್ನು ಸ್ವಂತ ಜೀಪಿನಲ್ಲಿ ಬಂದು ಸೇರಿಕೊಳ್ಳಲಿದ್ದರು. ನಟರಾಜ್ ವ್ಯಾನಿನ ಮುಂದಿನ ಸೀಟಿನಲ್ಲಿದ್ದುಕೊಂಡು ಪ್ರವಾಸವನ್ನು ಸ್ಥಿರ ಹಾಗೂ ಚಲಚಿತ್ರಗಳಲ್ಲಿ ದಾಖಲೀಕರಣಗೊಳಿಸುತ್ತಿದ್ದರು. ಹತ್ತು ಮಂದಿ ನಿಜ ಸವಾರರ ಹೆಚ್ಚಿನ ಹೊರೆಗಳೆಲ್ಲ ದೊಡ್ಡ ವಾಹನಗಳಿಗೆ ತುಂಬಿದ್ದಾಯ್ತು. ಅವಸರದ ತಿನಿಸಿಗೆ ಬಾಲು ಎಲ್ಲರಿಗೂ ಬ್ರೆಡ್ ಜ್ಯಾಮ್ ಹಾಗೂ ಮೋಹನ್ ಲಾಡು ವ್ಯವಸ್ಥೆ ಮಾಡಿದ್ದರು. ನಿಗದಿತ ವೇಳೆ ಆರೂವರೆ ಎಂದಿದ್ದರೂ ಏಳು ಗಂಟೆಯ ಸುಮಾರಿಗೆ ತಂಡ ಮಹಾಯಾನಕ್ಕಿಳಿದಿತ್ತು.

ಊಟಿಗೆ ದಾರಿಗಳು ಹಲವು. ನಾನೇ ಕಂಡಂತೆ, ೧೯೭೧ರಲ್ಲಿ ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯ ಸಾಹಸೀ ಸದಸ್ಯನಾಗಿ ತಾತಾರ್ ಶಿಖರಕ್ಕೆ ಹಿಡಿದದ್ದು ಪ್ರಥಮ ಪ್ರಾಶಸ್ತ್ಯದ್ದು. (ನೋಡಿ: ತಾತಾರ್ ಶಿಖರಾರೋಹಣ) ಉದಕಮಂಡಲ ಮೂಲದಲ್ಲಿ ಮೈಸೂರು ಸಂಸ್ಥಾನದ, ಕನ್ನಾಡಿನ ಭಾಗ. ಅಲ್ಲಿನ ಆದಿವಾಸಿಗಳಾದ ತೋಡ ಮತ್ತು ಕೋತರ ಮನೆಮಾತು ಕನ್ನಡದ್ದೇ ಪಾಠಬೇಧ. ಸಹಜವಾಗಿ ಮೈಸೂರು – ನಂಜನಗೂಡು – ಗುಂಡ್ಲುಪೇಟೆ – ಬಂಡಿಪುರ – ಮುದುಮಲೈ – ಗುಡಲೂರಿಗಾಗಿ ಹೋಗುವುದು ಹೆದ್ದಾರಿ. ಇದನ್ನೇ ನಕ್ಷೆ ನೋಡಿ ಹೇಳುವುದಿದ್ದರೆ, ಮೈಸೂರಿನಿಂದ ನೇರ ದಕ್ಷಿಣಕ್ಕಿಳಿದರೆ ಊಟಿ. ಇದರಲ್ಲಿ ಮುದುಮಲೈ ಅರಣ್ಯವಲಯದ ಒಳಗೆ ತೆಪ್ಪಕಾಡಿನಿಂದ ಪೂರ್ವಕ್ಕೆ ಕವಲಾಗುವ ದಾರಿ ಮಸಣಿಗುಡಿಯಿಂದಾಗಿ ಊಟಿಯತ್ತ ಮುಂದುವರಿಯುತ್ತದೆ. ಇದು ಗುಡಲೂರಿನ ಬಳಸುವಿಕೆ ನಿವಾರಿಸಿದರೂ ತೀರಾ ಕಡಿದಾದ ದಾರಿಯೆಂದೇ ಕುಪ್ರಸಿದ್ಧ! ಬೀಯೆಂಬೀಟೀ ತನ್ನ ನಾಲ್ಕು ವರ್ಷಗಳ ಅಸ್ತಿತ್ವದಲ್ಲಿ (೨೦೧೨) ಈ ದಿಕ್ಕಿನ ಪ್ರವಾಸಗಳನ್ನು ಮಾಡಿದ್ದಿದೆ. ಸದ್ಯ ವನಧಾಮಗಳ ಸ್ಥಳ ಸಂಕೋಚದಿಂದಾಗಿ ಮನುಷ್ಯ-ಪ್ರಾಣಿ ಸಂಘರ್ಷಗಳು ಹೆಚ್ಚುತ್ತಿವೆ. ಇವನ್ನು ಕಡಿತಗೊಳಿಸುವ ಕ್ರಮವಾಗಿಯೇ ವನಧಾಮಗಳಲ್ಲಿ ವಾಹನಗಳ ನಿಶಾಸಂಚಾರವನ್ನು ನಿಷೇಧಿಸಿದ್ದಾರೆ. ಉಳಿದಂತೆ ನಡೆಯುವ ಮತ್ತು ಸೈಕಲ್ ಸಂಚಾರವನ್ನೂ ಈಚೆಗೆ ಪೂರ್ಣ ನಿಷೇಧಿಸಿದ್ದಾರೆ. (ಇವರು ಆನೆಗಳ ಧಾಳಿಗೀಡಾಗುವುದು ಹೆಚ್ಚಂತೆ.) ಹೀಗಾಗಿ ಬೀಎಂಬಿಟಿ ಪರ್ಯಾಯ ದಾರಿ ಕಂಡುಕೊಂಡಿತು.

ಬ್ರಿಟಿಷರ ಆಡಳಿತಾವಧಿಯಲ್ಲಿ ಉದಕಮಂಡಲ ಮದ್ರಾಸ್ ರಾಜ್ಯದ ಭಾಗ. ಭಾರತದ ಬಹುತೇಕ ಗಿರಿಧಾಮಗಳನ್ನು ಗುರುತಿಸಿದ್ದು, ಅಥವಾ ನಾಗರಿಕಗೊಳಿಸಿದ್ದು ಚಳಿಯೂರಿನ ಬ್ರಿಟಿಷರೇ. ಸಹಜವಾಗಿ ಅವರು ಮದ್ರಾಸಿನಿಂದ ಪಶ್ಚಿಮಕ್ಕೆ ಸರಿಯುತ್ತ, ಮೈಸೂರು ಸಂಸ್ಥಾನದ ವಲಯವನ್ನು ಬಳಸುತ್ತ ಉದಕಮಂಡಲವನ್ನು ಸಮೀಪಿಸಿದ್ದಿರಬೇಕು. ಅನುಕೂಲಕ್ಕೆ ಪಶ್ಚಿಮ ಘಟ್ಟದ ಮುರಿದ ಗೊಣಸಿನ ಸಂದು ಅಥವಾ `ಪಾಲ್ಘಾಟ್ ಗ್ಯಾಪ್’ ಕಾಣಿಸಿದ್ದರಿಂದ ಮೆಟ್ಟುಪಾಳ್ಯದ ಮೂಲಕ ಅರ್ಥಾತ್ ಈ ಗಿರಿಧಾಮದ ದಕ್ಷಿಣಮೈಯ್ಯ ದಾರಿಯನ್ನು ರೂಢಿಸಿಕೊಂಡರು. ಹೆಚ್ಚೇನು ಡಾರ್ಜಿಲಿಂಗಿನಲ್ಲಿರುವಂತೇ ನ್ಯಾರೋಗೇಜ್ – ಇಂದಿನ ಅನ್ವರ್ಥನಾಮ ಹಾಗೂ ಬಳಕೆಯಲ್ಲಿರುವ `ಆಟದ ರೈಲು’ (ಟಾಯ್ ಟ್ರೇನ್ – ವಿಹಾರದ ಸವಾರಿ) ಮೂಲದಲ್ಲಿ ಆವಶ್ಯಕ ವ್ಯವಸ್ಥೆಯಾಗಿಯೇ ಇವರು ಸೇರಿಸಿದರು.

ನಮ್ಮ ಸೈಕಲ್ ಮಹಾಯಾನದ ಆಯ್ಕೆಯೂ ಇದೇ ದಾರಿ. ಉದಕಮಂಡಲದ ಉತ್ತರ ಮೈ ಅಥವಾ ಮೈಸೂರು ದಿಕ್ಕು ಹಿಡಿದು ಏರಿದರೆ ಸಿಗುವ ಊಟಿ – ವಲಯದ ಮುಖ್ಯ ನಗರಿ. ಹಾಗೇ ದಕ್ಷಿಣ ಮೈ ಅಥವಾ ಮೆಟ್ಟುಪಾಳ್ಯದಿಂದ ಏರುವ ಮುಖ್ಯರಸ್ತೆಗೆ ಉದಕಮಂಡಲದಲ್ಲಿ ಸಿಗುವ ಸ್ಥಳ ಕೂನೂರು – ಎರಡನೇ ಪ್ರಾಶಸ್ತ್ಯದ ನಗರಿ. ನಮ್ಮ ಲಕ್ಷ್ಯ ಕೂನೂರೇ ಇತ್ತು.

ಬೆಳಗ್ಗಿನ ತಂಪಿಗೆ ಮಳೆಗಾಲದ ವಾತಾವರಣ ಸೇರಿ ನಮ್ಮ ಓಟಕ್ಕೆ ಒಳ್ಳೆಯ ಆರಂಭಿಕ ವೇಗವೇ ಸಿಕ್ಕಿತು. ದಾರಿ ಹಳೆಗಾಲದ ದ್ವಿಪಥ. ಶೋಭಾಯಮಾನವಾಗಿ ಪುಷ್ಟ ಮರಗಳ ಸಾಲು. ವಾಹನ ಸಂಚಾರ ವಿರಳವಿತ್ತು. ದಾರಿ ನುಣ್ಣಗೆ, ಬಹುತೇಕ ಲಘು ಇಳಿಜಾರಿನಂತೇ ಇದ್ದು ನಮಗೆ ಉತ್ತೇಜನಕಾರಿ ಆರಂಭವನ್ನೇ ನೀಡಿತ್ತು. ಉದ್ದಕ್ಕೂ ಹಲವು ಕೆರೆಗಳು ಸಿಕ್ಕುತ್ತಲೇ ಇದ್ದುವು. ಈಚಿನ ಅಕಾಲಿಕ ಮಳೆಯಿಂದ ಅವೆಲ್ಲ ಜಲಸಮೃದ್ಧಿ ಕಂಡು ದೃಶ್ಯ ಮೋಹಕವಾಗಿತ್ತು. ಅವುಗಳ ಕಾವಲಿಗೆ ನಿಂತ ಸರದಾರರಂತೆ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ನಿಂತ ಪುಟ್ಟ ಗುಡ್ಡೆಗಳು ಆಕರ್ಷಣೆಯನ್ನು ಹೆಚ್ಚಿಸುತ್ತಿತ್ತು. ಎಂಟೂವರೆಯ ಸುಮಾರಿಗೆ ಹಾರೋಹಳ್ಳಿಯ ಬಳಿ ತಿಂಡಿಯ ವಿರಾಮ.

ಈ ವೇಳೆಗೆ ತಂಡದ ಸೈಕಲ್ ಸವಾರರಲ್ಲಿನ ವೈಶಿಷ್ಟ್ಯಗಳು ತುಸು ಸ್ಪಷ್ಟವಾಗತೊಡಗಿತ್ತು. ವೇಗ ಮತ್ತು ದೀರ್ಘ ಓಟಗಳಲ್ಲಿ ನಾಯಕ ಬಾಲು ಮತ್ತು ರಜನೀಕಾಂತ್ ಮೇಲ್ವರ್ಗದಲ್ಲಿ ಸಮಾನರಂತಿದ್ದರು. ತಂಡದಲ್ಲಿ ಸಂಘಟನೆಯ ಭಾಗವೇ ಆಗಿದ್ದ ಶಂಕರ್ ಅಲ್ಲದೆ, ರಮೇಶ್ ಮತ್ತು ಶೇಖರ್ ರಾವ್ ವೈದ್ಯ ಸದಸ್ಯರು. ಉಳಿದಂತೆ ಸತೀಶ್ ಅದ್ದಂಕಿ, ಶ್ಯಾಮಸುಂದರ್, ಹೇಮಂತ್ ಕಮತಗಿ ಮತ್ತು ದಯಾನಂದ ಅರಸ್. ಪ್ರಾಯದ ಹಿರಿತನದಲ್ಲಿ ಅರವತ್ನಾಲ್ಕರ ನನ್ನಿಂದ ಶೇಖರ್ ರಾವ್ (೫೫), ರಮೇಶ್ (೫೪) ಮುಂತಾಗಿ ಎಲ್ಲ ಕೆಳಗಿದ್ದರು. ಆದರೆ ಒಟ್ಟಾರೆ ದೀರ್ಘ ಸವಾರಿಯ ಸಾಮರ್ಥ್ಯದಲ್ಲಿ “ಎನಗಿಂತ ಕಿರಿಯರಿಲ್ಲ”.

ತಿಂಡಿ ತಿಂದ ಮೇಲಿನ ಪ್ರಗತಿ ದೃಢವಾಗಿತ್ತು. ನಿಧಾನಿಗಳನ್ನು ಮುಂದೆ ಬಿಟ್ಟುಕೊಂಡು ಆಗಿಂದಾಗ್ಗೆ ಪರಸ್ಪರ ಸ್ಥಾನ ಬದಲಾಯಿಸಿಕೊಳ್ಳುತ್ತ ಸಾಗಿದ್ದೆವು. ಅಲ್ಲಿ ಇಲ್ಲಿ ಇಬ್ಬನಿಯೇ ಬಲಗೊಂಡಿತೋ ಮಳೆಯೇ ದುರ್ಬಲಗೊಂಡಿತೋ ಎಂಬಂತೆ ಆಗಸ ದ್ರವಿಸುತ್ತಿತ್ತು, ಶುಭ್ರವಾಗುತ್ತಿತ್ತು. ನಮಗಂತೂ ಅದು ಬೆವರ ಹನಿಗಳನ್ನು ತೊಳೆಯುವ, ಬಿಸಿ ದೇಹವನ್ನು ತಣಿಸುವ ಪ್ರಾಕೃತಿಕ ವರವೆಂದೇ ಕಾಣಿಸಿದ್ದು ಸುಳ್ಳಲ್ಲ. (ನಮ್ಮಲ್ಲಿದ್ದ ಕ್ಯಾಮರಾದಂಥ ಸಣ್ಣಪುಟ್ಟ ಸಾಮಾನುಗಳಿಗೆ ಪ್ಲ್ಯಾಸ್ಟಿಕ್ ರಕ್ಷೆ ಒದಗಿಸಿದ್ದೆವು)

ಹಿಂದಿನ ದಿನ ಬಾಲು ನಮ್ಮನೆಗೆ ಬರುವ ಮೊದಲು, ನನಗೆ ಬೀಯೆಂಬೀಟಿಯ ಸವಾರಿ ಅಂಗಿ ತರಲು ಅಳತೆ ವಿಚಾರಿಸಿದ್ದರು. ದಗಳೆ ಷರಾಯಿ, ಜೋಲುವ ಜುಬ್ಬಾ ಇಷ್ಟ ಪಡುವ ನಾನು ಸಹಜವಾಗಿ “ಲಾರ್ಜ್ ತನ್ನಿ” ಎಂದಿದ್ದೆ. ಆದರೆ ಅವರು ತಂದದ್ದನ್ನು ಪರೀಕ್ಷಿಸಲು ಹಾಕಿದಾಗ ಬಾಲು, ರಜನಿ ಆಕ್ಷೇಪಿಸಿದರು. “ಸವಾರಿ ಅಂಗಿ ಬಿಗಿಯಾಗಿ ದೇಹಕ್ಕೆ ಕೂರಬೇಕು. ಇದರ ಬಟ್ಟೆಯ ರಚನೆ – ಬೆವರು ಹೀರಿದರೂ ಭಾರವಲ್ಲ ಮತ್ತು ಮೈ ಮುಚ್ಚಿದರೂ ವಾತಾಯನ ಎಲ್ಲ, ಎನ್ನುವ ತತ್ತ್ವದ್ದು. ಇದನ್ನು ಧರಿಸುವಾಗ ಒಳಗೆ ಪ್ರತ್ಯೇಕ ಬನಿಯನ್ನು ಹಾಕಿದರೆ ಸೆಕೆ, ಭಾರ ಹೆಚ್ಚುತ್ತದೆ. ಇದು ದಗಳೆಯಿದ್ದರೆ ವಾಯುತಡೆ ಹೆಚ್ಚು” ಎಂದೆಲ್ಲಾ ವಿವರಣೆ ಬೇರೆ ಕೊಟ್ಟು ವಾಪಾಸು ಒಯ್ದಿದ್ದರು. ಹೊರಡುವ ಬೆಳಿಗ್ಗೆ ನೆನಪಿನಲ್ಲಿ `ಸ್ಮಾಲ್’ ಅಳತೆಯದ್ದನ್ನೇ ನನಗೆ ಕೊಟ್ಟಿದ್ದರು.

ಇಂಥಲ್ಲೆಲ್ಲ ನಾನು ಸ್ವಲ್ಪ ಗಂಟು ಸೌದೆ! ನನ್ನ ಮಾಮೂಲೀ ಬನಿಯನ್ನಿನ ಮೇಲೇ ಇದನ್ನು ಧರಿಸಿದ್ದೆ. ಎಂದಿನಂತೆ ಕಾಲು ಮಡಿಸಿದ ಪ್ಯಾಂಟಿನ ಬದಲು ಹೊಸದಾಗಿ ಖರೀದಿಸಿದ್ದ ಮುಕ್ಕಾಲು ಪ್ಯಾಂಟನ್ನೇನೋ ಹಾಕಿದ್ದೆ. ಆದರೆ ಅದೂ ದಪ್ಪ ಬಟ್ಟೆಯ, ಒರಟು ಹೊಲಿಗೆಯ, ಗಾಳಿತಡೆ ಮಾಡುವ ಎರಡು ಮುಚ್ಚಳದ ಕಿಸೆಗಳ ರಚನೆ. ಮಳೆಯಲ್ಲಿ ತೊಯ್ದು ಭಾರ, ಅಂಚು ಮಡಿಚಿ ಹಾಕಿದ್ದ ಹೊಲಿಗೆ ಸಾಲು ಮೊಣಕಾಲು ತರಿದು ಉರಿಯೆಬ್ಬಿಸುತ್ತಿತ್ತು. ಅರ್ಧ ದಿನದ ಸವಾರಿಯನಂತರ ಅದರ ಕಾಲನ್ನು ಒಂದುಸುತ್ತು ಮೇಲಕ್ಕೆ ಮಡಿಚಿ ಸುಧಾರಿಸಿಕೊಂಡಿದ್ದೆ. ಆದರೆ ಹೇಳಲಾಗದ ಸಂಕಟ ತೊಡೆ ಸಂದಿನದು. ಅಲ್ಲಿನ ಒರಟು ಹೊಲಿಗೆ ತೊಡೆಯಲ್ಲಿ ರಕ್ತ ಜಿನುಗುವ ಗಾಯವನ್ನೇ ಮಾಡಿಬಿಟ್ಟಿತ್ತು. ಇವಕ್ಕೆಲ್ಲ ಆದರ್ಶ ಸವಾರನ ಮಾದರಿಯಾಗಿ ರಜನಿಯನ್ನು ಹೆಸರಿಸಲೇಬೇಕು.

ರಜನಿ ಹಿಂದಿನ ದಿನ ನಮ್ಮನೆಗೆ ಬಂದಾಗ ಹೊರವಾಗಿ ಗಡ್ಡಮೀಸೆಗಳಲ್ಲೇ ಇದ್ದರು. ಆದರೆ ಅದೇ ಸಂಜೆ ಅವನ್ನೂ ತೋಳು ಕಾಲುಗಳ ರೋಮವನ್ನೂ ಕ್ಷೌರಿಕನ ಬಾಳಿಗೊಪ್ಪಿಸಿ ನುಣ್ಣಗಾಗಿದ್ದರು! ಸಾಯಿಬಾಬಾನಂಥ ತಲೆಗೂದಲಿದ್ದರೂ ಅದು ಬಿಗಿಯಾದ ಶಿರಸ್ತ್ರಾಣದೊಳಗೆ ಅಡಕವಾಗುವಂತೆ ಅಳತೆ ನಿಗದಿಸಿದ್ದರು. ಅವರ (ಬಹುತೇಕ ಇತರೆಲ್ಲರ) ಸವಾರಿಚಡ್ಡಿಯೂ ಅಂಗಿಯಂತೇ ಮಿದು ಬಟ್ಟೆಯದು, ಗಾಳಿತಡೆಯೊಡ್ಡದಂತೆ ಬಿಗಿ ಸಾಲದ್ದಕ್ಕೆ ತೊಡೆ ಸಂದಿನಲ್ಲಿ ಜೋಡಣೆಯ ಚಡಿ ನಿವಾರಿಸಿದ ರಚನೆ. ಸೀಟಿನಲ್ಲಿ ಕೂರುವ ಬಾಗು ಭಂಗಿ, ಹಸ್ತ ಜೋಮು ಹಿಡಿಯದಂತೆ ಹ್ಯಾಂಡಲ್ ಎಳೆದು ಹಿಡಿಯುವ ಎರಡೆರಡು ವಿಶಿಷ್ಟ ಹಿಡಿಕೆಗಳು, ಕೈ ಗವುಸು, ಮುಖದ ಓರೆಗೆ ಬಾಗಿ ಕೂರುವ ತಂಪುಗನ್ನಡಕಗಳೆಲ್ಲ ನೋಟಕ್ಕೆ ವಿಚಿತ್ರವಾಗಿ ಕಂಡರೂ ದೀರ್ಘ ಓಟದ ಆವಶ್ಯಕತೆಗಳೇ. ನಾವೆಲ್ಲ ಒಮ್ಮೆಗೆ ಅರ್ಧ ಸುತ್ತು ಮಾತ್ರ ಪೆಡಲೊತ್ತುತ್ತೇವೆ. ಮತ್ತರ್ಧವನ್ನು ಖಾಲೀ ಅಥವಾ ಅರಿವಿಲ್ಲದೆ ಇನ್ನೊಂದು ಕಾಲಿನ ಒತ್ತಿನೊಡನೆ ಮೇಲೆತ್ತುತ್ತಿರುತ್ತೇವೆ. ಆದರೆ ರಜನಿಯ (ಇನ್ನೂ ಕೆಲವರೂ ಧರಿಸಿದ್ದರು) ಬೂಟು ಪೆಡಲ್ ಒತ್ತುವುದರೊಡನೆ ಮೇಲೆತ್ತುವುದರಲ್ಲೂ ತೊಡಗುವ ಕೀಲುಯುಕ್ತವಾದ್ದು (ಕ್ಲೀಟ್ಸ್). ಇನ್ನು ಅವರ ಮತ್ತು ಇತರರ ಸೈಕಲ್ ವಿವರಗಳನ್ನು ದಾಖಲಿಸುವುದೇ ಆದರೆ ಪುರಾಣೋಕ್ತಿಯಂತೆ ಸಾವಿರ ನಾಲಗೆಯ ಆದಿಶೇಷನಿಗೂ ಹೇಳಿ ಪೂರೈಸದು, ಬಿಡಿ.

ಹಾರೋಹಳ್ಳಿ (ಬೆಂಗಳೂರಿನಿಂದ ೪೦ ಕಿಮೀ) ಕಳೆದು ಇಪ್ಪತ್ತೆರಡು ಕಿಮೀಯಲ್ಲಿ ಕನಕಪುರ. ಮತ್ತೆ ನಲ್ವತ್ತೇಳು ಕಿಮೀ ಅಂತರದಲ್ಲಿ ಮಳವಳ್ಳಿ. ಭೂಪಟದಲ್ಲಿ ತೋರುವಂತೆ ಇದು ನಮ್ಮ ಲಕ್ಷ್ಯ ಸಾಧನೆಯಲ್ಲಿ ಅನಾವಶ್ಯಕ ಪಶ್ಚಿಮದ ಬಳಸು. ಅಂದರೆ ಸಾತನೂರಿನಿಂದ ಶಿವನಸಮುದ್ರ ಅಥವಾ ಸತ್ಯಗಾಲವನ್ನು ನೇರ ಅಂದರೆ ಕಾಗೆ ಹಾರಿದಂತೆ ಸಂಪರ್ಕಿಸುವುದು ಸಾಧ್ಯವಿದ್ದರೆ ಕನಿಷ್ಠ ನಲ್ವತ್ತು ಕಿಮೀ ಅಂತರವನ್ನು ಉಳಿಸುವಂತೆ ಭಾಸವಾಗುತ್ತದೆ. ಆದರೆ ವಾಸ್ತವದಲ್ಲಿ ಭೂ ಮೇಲ್ಮೈ ನಕ್ಷೆಯ ಹಾಳೆಯಂತೆ ಸಪಾಟಲ್ಲವಲ್ಲ. ಮತ್ತೆ ದಾರಿಯಾದರೋ ವಿಸ್ತರಣೆಗೊಳ್ಳುವ ನಾಗರಿಕತೆಯ ಕೇಂದ್ರಗಳನ್ನು ಸಂಪರ್ಕಿಸುವ ರಚನೆ. ಭೂಮಿಯ ವಿಸ್ತಾರ ಹರಹಿನಲ್ಲಿ ಜನವಸತಿಗಳು ಮೊದಲು, ಮಾರ್ಗ ಅನಂತರ ಎನ್ನುವುದನ್ನು ಮರೆಯಬಾರದು. ಚತುಷ್ಪಥ, ಷಟ್ಪಥ, ಅಷ್ಟಪಥ, ಎಕ್ಸ್ಪ್ರೆಸ್ ವೇ, ಬುಲೆಟ್ ರೈಲು, ಹದಿನೆಂಟು ಕಿಮೀ ದೀರ್ಘ ಸುರಂಗ ಎಂದೆಲ್ಲಾ ದಾರಿಯೇ ಅಭಿವೃದ್ಧಿಯ ಲಕ್ಷ್ಯವಾಗುತ್ತಿರುವ ದಿನಗಳಿವು. ಅವುಗಳ ನೆನಪಲ್ಲಿ ಇಲ್ಲಿ ಒಳದಾರಿ ಬರದಿರಲಿ. ಆ ವಲಯದಲ್ಲಿ ಉಳಿದಿರುವ ಬಸವನ ಬೆಟ್ಟ ಹಾಗೂ ಕಾಡು ಬಲಿಯಾಗದಿರಲಿ ಎಂದು ಹಾರೈಸುತ್ತ, ನಾವು ಕಾವೇರಿ ಪಾತ್ರೆ ಸೇರಿದೆವು.

ಸೈಕಲ್ಲಿನಲ್ಲಿ ದೂರಕ್ರಮಣದೊಡನೆ ವೇಗ ಮತ್ತು ಔನ್ನತ್ಯ ಸಾಧನೆಗಳನ್ನು ಲಕ್ಷ್ಯವಾಗಿಟ್ಟುಕೊಂಡ ಹಲವು ಅರ್ಹತಾ ಪದವಿಗಳೂ (ಬ್ರೆವೆ ಇತ್ಯಾದಿ) ಸ್ಪರ್ಧೆಗಳೂ (ಟೂರ್ ಡಿ ಫ್ರಾನ್ಸ್ ಇತ್ಯಾದಿ) ಜಾಗತಿಕ ಮಟ್ಟದಲ್ಲಿ ವಿಖ್ಯಾತವೇ ಇವೆ. ಅವೆಲ್ಲ ಮೈದಾನದ ಮಿತಿಯನ್ನು ಮೀರಿದ ಸವಾರಿಗಳೇ ಆದರೂ ದೇಹದ ಬಳಲಿಕೆಗೆ ಅಗತ್ಯದ ವಿಶ್ರಾಂತಿ, ಪೋಷಣೆಗಳಿಗಷ್ಟೇ ಅವಕಾಶ ಕಲ್ಪಿಸುತ್ತವೆ. ಆದರೆ ನಮ್ಮ ಮಹಾಯಾನ ನಿಗದಿತ ಗುರಿಸಾಧನೆಗೆ ಕೊರತೆಯಾಗದಂತೆ ನಿಲುಗಡೆ, ವೀಕ್ಷಣೆ ಮತ್ತೂ ಬಯಸಿದರೆ ಸವಾರಿಯಿಂದಲೇ ನಿವೃತ್ತಿಯನ್ನೂ ಕಲ್ಪಿಸುತ್ತದೆ. ನಾವು ಶಿವನಸಮುದ್ರವನ್ನು ಅಥವಾ ಶಿಂಷಾ ಸಮೀಪಿಸಿದ್ದೆವು.

ಅಲ್ಲಿನ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಧಾರೆಗಳು ಕಾವೇರಿಯ ಜೋಡಿ ಜಡೆಗಳು. ಇವುಗಳ ಮೇಲ್ದಂಡೆಯಲ್ಲಿ ನಮ್ಮ ದಾರಿ ಸರಿದಿತ್ತು. ಕೈಕಂಬ ಮತ್ತು ಕವಲು ದಾರಿ ನಮ್ಮನ್ನು ಅತ್ತ ಕರೆದದ್ದೂ ಆಯ್ತು. ನಾನಿದನ್ನು ಕೆಲವು ದಶಕಗಳ ಹಿಂದಷ್ಟೇ ನೋಡಿದ್ದರಿಂದ ಮನದ ಮಸಕು ಚಿತ್ರವನ್ನು ಬೆಳಗುವ ಆಸೆಯೇನೋ ಇತ್ತು. ಆದರೆ ಜನಪ್ರಿಯ ಪ್ರವಾಸೀ ತಾಣದಲ್ಲಿ ಸಮಯದ ಹೊಂದಾಣಿಕೆ ಕಷ್ಟವಾಗಬಹುದೆಂದು ಬೀಯೆಂಬೀಟಿ ಸರಿಯಾಗಿಯೇ ಯೋಚಿಸಿದಂತಿತ್ತು. ನಾವು ಹೊರಸುತ್ತಿನ ದಾರಿಯಲ್ಲೇ ಅವಿರತ ಮುಂದುವರಿದೆವು. ಒಂದೂವರೆ ಗಂಟೆಯ ಸುಮಾರಿಗೆ ಕೊಳ್ಳೇಗಾಲ ತಲಪಿ ಹೋಟೆಲೊಂದರಲ್ಲಿ ಊಟಿಸಿದೆವು. ಸುಮಾರು ನೂರಾ ನಲ್ವತ್ತೈದು ಕಿಮೀ ದಾರಿ ಕಳೆದ ಸುಸ್ತಿಗೆ ದಯಾನಂದ ಅರಸ್ ತನ್ನ ಸೈಕಲನ್ನು ವಿಂಗರ್ ತಲೆಗೇರಿಸಿ, ಕಾರು ಸೇರಿಕೊಂಡಿದ್ದರು. ಉಳಿದಂತೆ ಎಲ್ಲರೂ ಸೌಮ್ಯ ಮಾರ್ಗದಲ್ಲಿ ಅಪ್ಯಾಯಮಾನ ವಾತಾವರಣದಲ್ಲಿ ಸೈಕಲ್ ತುಳಿಯುವುದೇ ಭಾಗ್ಯ ಎಂದೇ ಭಾವಿಸಿದಂತಿತ್ತು.

ಬೆಂಗಳೂರ ಸಮೀಪದಲ್ಲೆಲ್ಲ ವಿರಳವಾಗಿ, ಒಂಟೊಂಟಿಯಾಗಿ ಕಾಣುತ್ತಿದ್ದ ಗುಡ್ಡೆ ಬೆಟ್ಟಗಳೆಲ್ಲ ಈಗ ಶ್ರೇಣಿ, ಉನ್ನತ ಶಿಖರಗಳಾಗಿ `ಸಂಘಟನೆ’ಗೊಳ್ಳತೊಡಗಿದ್ದವು. ಕೊಳ್ಳೆಗಾಲದಿಂದ ಸುಮಾರು ಎಪ್ಪತ್ತು ಕಿಮೀ ಪೂರ್ವಕ್ಕೆ ಮಲೆ ಮಹದೇಶ್ವರ ಶಿಖರ ಶ್ರೇಣಿಯಿತ್ತು. ಇದು ನಾನು ಕಾಣದ ಕ್ಷೇತ್ರ. ಆದರೆ ಪ್ರಸ್ತುತ ಮಹಾಯಾನಕ್ಕೆ ಬಹು ದೊಡ್ಡ ವಿಚಲನೆಯೆಂದೇ ಬೀಯೆಂಬೀಟಿ ನಿರಾಕರಿಸಿತ್ತು.

ಮುಂದೆ ಯಳಂದೂರು ಸಿಕ್ಕಾಗ, ಕೈಕಂಬ ಬಿಳಿಗಿರಿರಂಗನ ಬೆಟ್ಟಕ್ಕೆ ಕೇವಲ ಇಪ್ಪತ್ತೇ ಕಿಮೀ ಕಾಣಿಸಿತು. ಅದೂ ನಮ್ಮ ಮಹಾಯಾನದ ಪಟ್ಟಿಯಲ್ಲಿರಲಿಲ್ಲ. ಆದರೆ ನನ್ನ ಮನೋಗುದುರೆಯನ್ನು ಲಗಾಮು ಕಳಚಿ ಅತ್ತ ಓಡಿಸುವಲ್ಲಿ ಯಾರೂ ತಡೆಯುವಂತಿರಲಿಲ್ಲ! ೧೯೭೦ರ ದಶಕದಲ್ಲಿ, ಮೈಸೂರಿನ ವಿದ್ಯಾರ್ಥಿ ಜೀವನಾವಧಿಯಲ್ಲಿ, ಸಾಮಾನ್ಯ ಸೈಕಲ್ಲೇರಿ ನಾನೂ ಗಿರೀಶ ಪುತ್ರಾಯನೂ ಆ ಗಿರಿಧಾಮವನ್ನು ಸಾಧಿಸಿದ್ದೆವು. (ನೋಡಿ: ಕರಿಗಿರಿಯ ಬಿಳಿಗಿರಿಗೆ) ಅದರ ನೆನಪು ಇಂದಿನ ಪ್ರಯತ್ನಕ್ಕೆ ಹೊಸ ಹುರುಪನ್ನೇ ತಂದುಕೊಟ್ಟಿತು.

ಇಡಿಯ ಮಹಾಯಾನದುದ್ದಕ್ಕೆ ಒಮ್ಮೆ ಇನ್ನೋವಾ ಮತ್ತೆಲ್ಲೋ ವಿಂಗರ್ ನಿಧಾನಕ್ಕೆ ನಮ್ಮನ್ನು ಹಿಂದಿಕ್ಕಿ ಸಾಗುವುದು ನಡೆದೇ ಇತ್ತು. ಎಡ ಕಿಟಕಿಯಲ್ಲಿ ಕ್ಯಾಮರಾ ಕಣ್ಣಿನ ಮೂಲಕ ನಟರಾಜೋ ದಯಾನಂದೋ ವಿಭಿನ್ನ ಹಿನ್ನೆಲೆಗಳೊಡನೆ ನಮ್ಮನ್ನು ಸೆರೆ ಹಿಡಿಯುತ್ತಲೇ ಇದ್ದರು. ನಮ್ಮ ಪುಟ್ಟ ನೀರಂಡೆಗಳು ಖಾಲಿಯಾಗಿದ್ದರೆ ಮರುಪೂರಣಕ್ಕೆ ಅವರು ಸದಾ ಸಿದ್ಧ. ಬಾಳೆಹಣ್ಣು, ಕಿತ್ತಳೆ, ಚಿಕ್ಕಿ ಮೊದಲಾದ ತತ್ಕಾಲೀನ ಚಪ್ಪರಿಕೆಗೂ ಅವರ ದಾಸ್ತಾನು ಯಾನದುದ್ದಕ್ಕೂ ಧಾರಾಳವೇ ಇತ್ತು. ಒಂದೆರಡು ಗಂಟೆಗೊಮ್ಮೆಯೋ ದೀರ್ಘ ಏರು ಮುಗಿದಲ್ಲಿಯೋ ಏನಲ್ಲದಿದ್ದರೂ ಒಳ್ಳೆಯ ಚಾ ದುಕಾನಿನ ನೆಪ ಮಾಡಿಯೋ ಅವರು ನಮ್ಮನ್ನು ಕಾದು ನಿಂತು, ಉಸಿರು ಹೆಕ್ಕಲು, ಬಾಯಿ ಹಸಿ ಮಾಡಲು ನಿಶ್ಚಿತ ಅವಕಾಶ ಮಾಡುತ್ತಿದ್ದರು.

ವಿಭಿನ್ನ ಲಯದ ಸವಾರರನ್ನು ಒಟ್ಟುಗೂಡಿಸಿ ನಿಧಾನಿಗಳಿಗೆ ಮುಂದಾಗಲು, ಚುರುಕಿನವರಿಗೆ ಬೆನ್ನಟ್ಟಲು ಸಮಯ ಕಲ್ಪಿಸುತ್ತಿದ್ದರು. ನಮ್ಮೆಲ್ಲರ ಚರವಾಣಿಯಲ್ಲೂ ಬೆಂಬಲದ ವಾಹನಗಳ ಮತ್ತು ಬಾಲು, ಶಂಕರಾದಿ ಮುಖ್ಯರ ಸಂಪರ್ಕ ಸಂಖ್ಯೆಗಳು ಜಾಗೃತವಾಗಿಯೇ ಇದ್ದವು. ಅಲ್ಲದೆ ದಾರಿಯ ಸೂಚನೆಗಳು, ದಿನದ ಕೊನೆಯ ತಂಗುದಾಣದ ವಿವರಗಳನ್ನೆಲ್ಲ ಬಾಲು ಕಿರು ಸಂದೇಶದ ಮೂಲಕ ಮುಂದಾಗಿಯೇ ಕೊಟ್ಟಿರುತ್ತಿದ್ದುದರಿಂದ ವಿಶೇಷ ಆತಂಕಕ್ಕೆ ಅವಕಾಶವೇ ಇರಲಿಲ್ಲ. ಸಂಜೆ ಐದು ಗಂಟೆಯ ಸುಮಾರಿಗೆ ದಿನದ ಲಕ್ಷ್ಯ – ಚಾಮರಾಜನಗರ, ಎಲ್ಲ ಸೇರಿ ನಿಜಗುಣ ರೆಸಿಡೆನ್ಸಿ ಎಂಬ ಹೋಟೆಲಿನಲ್ಲಿ ತಂಗಿದೆವು. ಸುಮಾರು ನೂರಾ ಎಂಬತ್ಮೂರು ಕಿಮೀ ಅಂತರವನ್ನು ಹತ್ತು ಗಂಟೆಯ ಅಂತರದಲ್ಲಿ, ಅಂದರೆ ಊಟ, ವಿಶ್ರಾಂತಿ ಎಲ್ಲ ಸೇರಿಯೂ ಗಂಟೆಗೆ ಹದಿನೆಂಟು ಕಿಮೀ ವೇಗದಲ್ಲಿ ನಾವು ಸಾಧಿಸಿದ್ದು ಸಣ್ಣ ಮಾತೇನಲ್ಲ.

ವಿಸ್ತಾರ ಅಂಗಳದಲ್ಲಿನ ಸುಂದರ ಉದ್ಯಾನದ ನಡುವೆ ವಿನ್ಯಾಸಗೊಂಡಿತ್ತು ನಿಜಗುಣ ರೆಸಿಡೆನ್ಸಿ ಎಂಬ ಆಧುನಿಕ ವಸತಿ ಗೃಹ. ಅದರ ಕೋಣೆ, ಸವಲತ್ತುಗಳು, ಭೋಜನಾಲಯವೂ ಸದಭಿರುಚಿಯವೇ ಇದ್ದರೂ ಸೇವಾವಿಭಾಗದಲ್ಲಿ ಕೊರತೆಯಿತ್ತು. ನೆಲ ಕನ್ನಡದ್ದೇ ಆದರೂ ಹೋಟೆಲಿನ ಸಿಬ್ಬಂದಿ ಹಿಂದಿಯವರೆಂದು ತಿಳಿದಾಗಲೇ ನಮಗೆ ಸಮಸ್ಯೆಯ ಅರಿವಾಗಿತ್ತು. ದಿನದಲ್ಲಿ ಹರಿಸಿದ ಬೆವರು, ಹೊತ್ತ ದೂಳು, ಪಟ್ಟ ಶ್ರಮಕ್ಕೆಲ್ಲ ಆಗಲೇ ಒಂದು ಬಿಸಿನೀರ ಸ್ನಾನ ಸಿಕ್ಕೀತೆಂದು ಭಾವಿಸಿದವರಿಗೆ ಸೋಲಾಗಿತ್ತು. ಸಂಜೆಯ ಲಘು ತಿನಿಸು, ಕಾಫಿಗೇನೋ ಭೋಜನಾಲಯ ಒಗ್ಗಿಸಿಕೊಂಡೆವು. ಆದರೆ ರಾತ್ರಿಯ ಊಟಕ್ಕೆ ಅವರ ಸಹಕಾರ ನಮಗೆ ಕೂಡಿಬರಲಿಲ್ಲ. ಎಲ್ಲ ಕಾರು, ವ್ಯಾನೇರಿ ರುಚಿಗೆ ತಕ್ಕಂತೆ ಊರಿನ ಇತರ ಹೋಟೆಲು ಕಂಡುಬಂದೆವು. ಸಹಜವಾಗಿ ಮರುದಿನದ ಹಾಸಿಗೆ ಚಾ, ಉಪಾಹಾರಗಳಿಗೆ ನಿಜಗುಣವನ್ನು ನಾವು ನೆಚ್ಚಲೇ ಇಲ್ಲ. ಇಬ್ಬರ ಕೋಣೆಯಲ್ಲಿ ಹೆಚ್ಚಿನ ಒಂದೊಂದು ಹಾಸಿಗೆ ಹಾಕಿ ನಾವೆಲ್ಲ ಮಲಗಿದ್ದೆವು. ನಾನು ರಜನಿಕಾಂತ್ ಮತ್ತು ನಟರಾಜರೊಡನೆ ಕೋಣೆ ಹಂಚಿಕೊಂಡಿದ್ದೆ. ಹಗಲೆಲ್ಲ ಕ್ಯಾಮರಾ ಕಣ್ಣಿನಲ್ಲಿ ನಿಶ್ಶಬ್ದವಾಗಿ ನಮ್ಮನ್ನು ಹಿಡಿಯುತ್ತಿದ್ದ ನಟರಾಜ್, ರಾತ್ರಿ ಮಾತ್ರ ಭೀಕರ ಗೊರಕೆ ಹೊಡೆದು ನಮ್ಮಿಬ್ಬರನ್ನೂ ಎಚ್ಚರವಾಗುಳಿಸಿದ್ದೊಂದು ಪ್ರಾಕೃತಿಕ ವಿಪರ್ಯಾಸವೇ ಸರಿ.

ಏಳೂವರೆ ಗಂಟೆಯ ಸುಮಾರಿಗೆ ನಮ್ಮ ಎರಡನೇ ದಿನದ ಸವಾರಿ ತೊಡಗಿತ್ತು. ಶರಶ್ಚಂದ್ರ (ಇನ್ನೋವಾ) ಪೇಟೆಯೊಳಗೆ ಕಾದು ನಿಂತು, ನಮಗೆಲ್ಲ ಉಪಾಹಾರವನ್ನು ಕಟ್ಟಿಸಿಕೊಂಡು ತಂದು ಮುಂದೆಲ್ಲೋ ಕೊಡುತ್ತಾರೆಂಬ ವ್ಯವಸ್ಥೆಯೊಡನೆ ಖಾಲೀ ಹೊಟ್ಟೆಯಲ್ಲೇ ಪೆಡಲಿದೆವು. ಮೊದಲ ಸುಮಾರು ಹದಿನೈದು ಕಿಮೀ ಕಳೆಯುತ್ತಿದ್ದಂತೆ ಬೆಟ್ಟ, ಕಾಡು ಸಮೀಪಿಸಿದ್ದೆವು.

ನಿಜಗುಣ ರೆಸಿಡೆನ್ಸಿಯ ಕಾವಲುಗಾರ – ಸ್ಥಳೀಯ, ದಾರಿಯ ಕುರಿತು ಎಚ್ಚರಿಸಿದ್ದ, “ಇಲ್ಲೇ ಹದಿನೈದು ಕಿಮೀಯಾಚೆಯೇ ಆನೆಗಳು ಬರುತ್ತವೆ, ಹುಶಾರು.” ನಾಗರಹೊಳೆ, ಬಂಡಿಪುರ, ಮುದುಮಲೈ ಎಂದು ವನಧಾಮಗಳ ಸಾಲು ಹೊತ್ತು ದಕ್ಷಿಣಕ್ಕೆ ಸಾರುವ ಪಶ್ಚಿಮ ಘಟ್ಟದ ಸೆರಗು ಇಲ್ಲಿ ಪೂರ್ಣ ಒಳಚಾಚಿ ಮಲೆಮಾದೇಶ್ವರ ಬೆಟ್ಟ ಸಾಲಿನತ್ತ ಸಾಗುವ ಸನ್ನಿವೇಶ. ದಾರಿ ಗಿರಿಶ್ರೇಣಿಯನ್ನು ಅತಿ ಕಿರಿದಂತರದಲ್ಲಿ ಕಳೆದೋಡುವ ಯತ್ನದಲ್ಲಿ ನೇರ ಏರತೊಡಗಿತ್ತು.

ಪುಣಜನೂರಿನಲ್ಲಿ ರಾಜ್ಯ ಗಡಿ ಕಳೆದು ಪ್ರವೇಶಿಸಿದ್ದು ತಮಿಳುನಾಡಿನ `ಸತ್ಯಮಂಗಳ ಟೈಗರ್ ರಿಸರ್ವ್. ಪುಣಜನೂರು ಕುಖ್ಯಾತ ವೀರಪ್ಪನ್ ವಲಯವಾಗಿಯೂ ಒತ್ತಿನ ತಾಳವಾಡಿ ತಮಿಳರೊಂದಿಗಿನ ಕನ್ನಾಡಿನ ಗಡಿ ವಿವಾದದಿಂದಲೂ ಪ್ರಸಿದ್ಧವೇ ಇದ್ದದ್ದು ನೆನಪಾಗದಿರಲಿಲ್ಲ. ಶಶಿಧರ್ ತಂಡದ ಸದಸ್ಯರು ಇದ್ದಿದ್ದಲ್ಲಿಗೇ ತಿಂಡಿಯ ಪೊಟ್ಟಣವನ್ನು ಕೊಡುತ್ತ ಬಂದವರು ನನಗೂ ಜತೆಗಿದ್ದ ಡಾ| ರಮೇಶ್ ಅವರಿಗೂ ಪುಣಜನೂರ್ ಗೇಟ್ ಬಳಿಯೇ ಕೊಟ್ಟರು. ಸಾಕಷ್ಟು ದೊಡ್ಡವೇ ಇದ್ದ ಬಿಸಿಬಿಸಿ ಇಡ್ಲಿ, ಒಡೆ ಹೊಡೆದ ಮೇಲೆ ಎದುರಾದ ಕಟ್ಟೇರಿನ ದಾರಿಯಲ್ಲೂ ನಮ್ಮ ತುಳಿ-ಬಲ ಪರಿಣಾಮಕಾರಿಯಾಗಿಯೇ ಹೆಚ್ಚಿತ್ತು. ಮೋಡ, ಆಗೀಗ ಹನಿಯುದುರಿಸುವ ತಣ್ಪು, ತೂಗಾಡುವ ಬಿದಿರು ಹಿಂಡಲಿನೊಡನೆ ಮನಮುದಗೊಳಿಸುವ ಮಲೆಯ ಪರಿಸರ ನಮ್ಮ ಶ್ರಮವನ್ನು ಅರ್ಧಕ್ಕರ್ಧ ಹಗುರಗೊಳಿಸಿತ್ತು ಎಂದರೆ ಅತಿಶಯೋಕ್ತಿಯಲ್ಲ. ವಿರಳವಾಗಿಯೇ ಸಿಗುತ್ತಿದ್ದ ಮೂರು, ನಾಲ್ಕು ಸಾಲು ಚಕ್ರದ ಲಾರಿಗಳು ಸೇಂಕುತ್ತ ಏರುತ್ತಿದ್ದಂತೆ ನಾವೂ ದಮ್ಮು ಕಟ್ಟಿ ಪೆಡಲುತ್ತಲೇ ಹೋದೆವು.

ಅದೊಂದೆಡೆ ದಾರಿ ತುಸು ಸಮತಟ್ಟಿನಲ್ಲೇ ಸಾಗಿತ್ತು. ನಮ್ಮ ತಂಡದ ಸದಸ್ಯ – ಹೇಮಂತ್, ರಸ್ತೆಯ ಎಡ ಅಂಚಿನಲ್ಲೇ ಕಣ್ಣು ಕೀಲಿಸಿ, ಓಟ ಸ್ಥಿರವಾಗಿಸಿ (ಓಲಾಟವಿಲ್ಲದೇ), ತನ್ನದೇ ಲಯದಲ್ಲಿ ಪೆಡಲೊತ್ತುತ್ತ ಸಾಗಿದ್ದರು. ಇವರ ದುರದೃಷ್ಟಕ್ಕೆ ಒತ್ತಿನಲ್ಲೇ ಎರಡು ಬಸ್ಸುಗಳು ಎದುರುಬದರಾದವು. ಎಡ ಅಂಚಿನ ಬಸ್ಸಿನ ಮೂತಿ ಹೇಮಂತರನ್ನು ಸರಿಯಾಗಿಯೇ ಹಿಂದಿಕ್ಕಿತು. ಆದರೆ ಎದುರು ಬಸ್ಸಿನ ಕುರಿತ ಅತಿ ಜಾಗ್ರತೆಯಲ್ಲಿ ಬಸ್ಸಿನ ಹಿಮ್ಮೈ ಹೇಮಂತರನ್ನು ಸಣ್ಣದಾಗಿ ಸವರಿಬಿಟ್ಟಿತು.

ಡಾಮರು ಮತ್ತಾಚಿನ ಮಿದು ನೆಲದ ವ್ಯತ್ಯಾಸ ಆರಿಂಚಿಗೂ ಹೆಚ್ಚಿತ್ತು. ಹೇಮಂತರ ಸೈಕಲ್ಲಿನ ಸಪುರ ಚಕ್ರ ಡಾಮರಿನಿಂದ ಜಾರಿ, ಗೊಸರಿನಲ್ಲಿ ಹೂಳಿ ಪಲ್ಟಿ ಹೊಡೆಯಿತು. ಹೇಮಂತ್ ಹೆಚ್ಚಿನ ಕ್ಷಮತೆಗೆಂದೇ ಕೀಟ್ಸ್ (ಪೆಡಲಿಗೆ ಪಾದಬಂಧ) ಹಾಕಿದ್ದನ್ನು ಚುರುಕಿನಲ್ಲಿ ಕಳಚಲಾಗದೇ ಎಡಮಗ್ಗುಲಿನಲ್ಲೇ ಧರಾಶಾಯಿಯಾದರು. ಅದೃಷ್ಟದಾಟ ಚೆನ್ನಾಗಿತ್ತು. ಹೇಮಂತ್ ಬಸ್ಸಿನತ್ತ ವಾಲದೇ ಹುಲ್ಲು ಗೊಸರು ನೆಲದ ಮೇಲೇ ಬಿದ್ದರು. ಒರೆಸಿದ ಬಸ್ಸು ಇವರ ಬೀಳನ್ನು ಗೋಷ್ಠಿ ಮಾಡದೇ ಮಾಯವಾಗಿತ್ತು. ಆದರೆ ಎದುರಿನಿಂದ ಬಂದ ಬಸ್ ಗುರುತಿಸಿ, ನಿಲ್ಲಿಸಿ ಕಂಡಕ್ಟರ್ ಹಾಗೂ ಕೆಲವು ಪ್ರಯಾಣಿಕರೂ ಸಹಾಯಕ್ಕೆ ಧಾವಿಸಿದ್ದರು. ಸ್ವಲ್ಪವೇ ಹಿಂದೆ ಮುಂದೆ ಇದ್ದ ನಮ್ಮ ತಂಡದ ಕೆಲವು ಸದಸ್ಯರು, ಬೆಂಬಲದ ವಾಹನಗಳೂ ಕೂಡಿಕೊಂಡವು. ನಾಲ್ಕೈದು ಮಿನಿಟು ತುಸು ಗೊಂದಲವೇ ಆಯ್ತು. ಆದರೆ ಅನುಭವೀ ವೈದ್ಯರುಗಳೇ ಆದ ಶಂಕರ್, ರಮೇಶ್ ಅಲ್ಲೇ ಇದ್ದುದರಿಂದ ಪ್ರಥಮ ವರದಿ ಮತ್ತು ಚಿಕಿತ್ಸೆ ವಿಳಂಬವಾಗಲಿಲ್ಲ. ಎಡಗೈಯಲ್ಲಿ ಹಲವು ತರಚಲು ಗಾಯಗಳಾಗಿತ್ತು. ಹಸ್ತ ತುಸು ಹೆಚ್ಚು ಘಾಸಿಕೊಂಡಿದ್ದರೂ ಮೂಳೆ ಮುರಿತ, ಮಾನಸಿಕ ಆಘಾತವಿಲ್ಲದೇ ಹೇಮಂತ್ ಪಾರಾಗಿದ್ದರು. ಸೈಕಲ್ಲಿನ ಸೀಟಷ್ಟೇ ಹರಿದಿತ್ತು. ಸುಮಾರು ಹತ್ತು ಹದಿನೈದು ಮಿನಿಟಿನಲ್ಲಿ ಬ್ಯಾಂಡೇಜಿನಲ್ಲಿದ್ದ ಹೇಮಂತರನ್ನು ಕಾರೂ ಅವರ ಸೈಕಲ್ಲನ್ನು ವ್ಯಾನೂ ಏರಿಸಿಕೊಂಡಲ್ಲಿಗೆ, ಮಹಾಯಾನ ಮುಂದುವರಿಯಿತು. ಸಣ್ಣ ವಿಷಾದ – “ಆಗಬಾರದಿತ್ತು” ಮತ್ತು ದೊಡ್ಡ ಸಮಾಧಾನ – “ಇಷ್ಟಕ್ಕೆ ಮುಗಿಯಿತಲ್ಲ”, ಎಲ್ಲರ ಮನದಲ್ಲಿ ಮಾತಿನಲ್ಲಿ ಉಳಿದುಬಿಟ್ಟಿತು. ಸವಾರಿ ನಡೆಸಿದ ಒಂಬತ್ತು ಮಂದಿಯ ಅಗತ್ಯಗಳನ್ನು ನೋಡಿಕೊಳ್ಳುವಂತೆ ವ್ಯಾನ್ ಹಿಂದುಳಿಯಿತು. ಹೇಮಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರು ಮಾತ್ರ ನೇರ ಮುಂದಿನ ದೊಡ್ಡ ಊರು – ಮೆಟ್ಟುಪಾಳ್ಯಕ್ಕೆ ಧಾವಿಸಿತು.

ನಾವು ಆ ಶ್ರೇಣಿಯ ನೆತ್ತಿಯನ್ನು ಅನ್ವರ್ಥಕ ನಾಮದ – ತಲೈಮಲೈಯಲ್ಲಿ ಪೂರೈಸಿದೆವು. ಮುಂದೆ ಶ್ರೇಣಿಯ ದಕ್ಷಿಣ ಮೈಗಿಳಿಯುವ ಮೂವತ್ನಾಲ್ಕು ಹಿಮ್ಮುರಿ ತಿರುವುಗಳ ಘಾಟಿ; ತುಸು ಕುಖ್ಯಾತವೇ.

ಘಾಟಿಯ ಕೆಳಕೊನೆಯಲ್ಲಿ ಸಿಗುವ `ಬನ್ನಾರಿಯಮ್ಮ’ನ ದೇವಾಲಯದ ಹೆಸರಿಗೆ ಸೇರಿದಂತೆ ಇದನ್ನು `ದಿಂಬಂ’ ಎಂದೇ ಗುರುತಿಸುತ್ತಾರೆ. ಹಿಂದಿನ ಕಾಲದಲ್ಲಿ ದ್ವಿಪಥ ಸಂಚಾರಕ್ಕೆ ಇದು ಧಾರಾಳವಾಗಿಯೇ ರೂಪುಗೊಂಡಿತ್ತು. ಆದರೆ ಇಂದಿನ ವಾಹನ ಕ್ರಾಂತಿಯಲ್ಲಿ ಅದು ಸಾಲದಾಗಿತ್ತು! ಎರಡು ಸಾಲು ಚಕ್ರದ ಲಾರಿಗಳನ್ನುಳಿದು ಎಲ್ಲ ಭಾರೀ ವಾಹನಗಳೂ ಬಹುತೇಕ ಹಿಮ್ಮುರಿ ತಿರುವುಗಳನ್ನು ಕಂತಿನಲ್ಲೇ ನಿಭಾಯಿಸುವ ಅನಿವಾರ್ಯತೆ ಕಾಣುತ್ತಿತ್ತು.

ಅದಕ್ಕೆ ಸಹಜವಾಗಿ ಕಾರು ಮುಂತಾದ ಸಣ್ಣ ವಾಹನಗಳು ತರಾತುರಿಯಲ್ಲಿ ತಪ್ಪು ಮಗ್ಗುಲುಗಳಲ್ಲಿ ನುಗ್ಗುವುದು, ಗೊಂದಲಿಸುವುದು ನಾವೇ ಕಂಡೆವು. ನಮ್ಮ ತಂಡ ಅನುಭವಿಗಳದ್ದೇ ಆದರೂ ಬಾಲು ಇಳಿವೇಗದ ಕುರಿತು ಹೆಚ್ಚಿನ ವಿಚಾರಗಳನ್ನು ಹಂಚಿಕೊಂಡೇ ತೊಡಗಿದೆವು.

ಇಳಿದಾರಿಯಲ್ಲಿ ನಾವೇ ಪರಮ ಸುಖಪುರುಷರು! ಬಿರಿಯ ಕ್ಯಾನ್ವಾಸ್ ಸುಟ್ಟುಕೊಂಡು, ಕಯ್ಯೋ ಮುರ್ರೋ ಒರಲಿಕೊಂಡು ಹೋಗುತ್ತಿದ್ದ ಎಷ್ಟೋ ಮಹಾಕಾಯರನ್ನು ಜಮ್ಮೆಂದು ಹಿಂದಿಕ್ಕಿ ಹೋಗುವ ಸಂತೋಷ ನಮ್ಮದು.

ತುಳಿತದ ಲಯತಪ್ಪುವ ಯೋಚನೆಯಿಲ್ಲದೆ ಎಲ್ಲಂದರಲ್ಲಿ ನಿಂತು ಕೊಳ್ಳ, ದೂರದ ಗಿರಿಪಂಕ್ತಿಗಳನ್ನು ದಿಟ್ಟಿಸುವ, ಏರು ದಾರಿಯಲ್ಲಿ ಬಸಿದ ಬೆವರಿಗೆ ತಂಗಾಳಿ ತೀಡಿಸಿ ಸುಖಿಸುವ ಸೌಭಾಗ್ಯ ನಮಗೆ ಮಾತ್ರ ದಕ್ಕೀತು. ಯಾಕೆಂದರೆ ತೀರಾ ವಿರಳವಾಗಿ ಹಾದುಹೋಗುತ್ತಿದ್ದ ಬೈಕ್ ಸ್ಕೂಟರ್ ಸವಾರರಿಗೆ ನಮ್ಮ ತಂಗಾಳಿ ಕುಳಿರ್ಗಾಳಿಯಾಗಿ ಕಾಡುತ್ತಿತ್ತು!

ಕೆಲವು ತಿರುವುಗಳಲ್ಲಿ ಲಾರಿಗಳಿಂದ ಉದುರಿದ ಜೋಳ ಮುಂತಾದ ಕಾಳುಗಳ ಮೇವರಸಿ ಬಂದ ಜಾನುವಾರು, ಮಂಗಗಳ ಹಿಂಡಲ್ಲದೆ ಇನ್ನಾವ ಭಾರೀ ವನ್ಯಮೃಗಗಳೂ ಅಲ್ಲಿ ಬಯಸಿ ಸಂಚಾರಬರದೆಂಬ ವಿಶ್ವಾಸ ಬೇರೆ. ನಾವು ದಿಂಬಂ ಘಾಟಿಯನ್ನು ಬಹಳ ಚುರುಕಾಗಿಯೇ ಇಳಿದು ಬನ್ನಾರಿ ಅಮ್ಮನ ಗುಡಿ ಕಂಡೆವು. ದಿಂಬಂ ಘಾಟಿಯ ವಾಹನ ಸಮ್ಮರ್ದಕ್ಕನುಗುಣವಾಗಿ ಬನ್ನಾರಿ ಅಮ್ಮ ತನ್ನ ಸೋದರ ಶಕ್ತಿಗಳೇ ಆದ ನಮ್ಮೂರಿನ ಚಾರ್ಮಾಡಿ ದಾರಿಯ ಅಣ್ಣಪ್ಪ, ಶಿರಾಡಿ ಘಾಟಿಯ ಚಾಮುಂಡಿ, ಬಿಸಿಲೇ ಘಾಟಿಯ ಬೂದಿಚೌಡಿ ಮುಂತಾದವರಿಂದ ಹೆಚ್ಚು ಶ್ರೀಮಂತೆಯಾಗಿ ಕಾಣಿಸಿದಳು.

ಬನ್ನಾರಿ ಅಮ್ಮನ ಸ್ಥಳದಲ್ಲಿ ಹೆದ್ದಾರಿ ಸತ್ಯಮಂಗಳಕ್ಕಾಗಿ ಕೊಯಂಬತ್ತೂರಿನೆಡೆಗೆ ಸಾಗಿದರೆ. ನಾವು ಅಮುಖ್ಯ ಬಲಗವಲು ಅನುಸರಿಸಿದೆವು. ಇದರಲ್ಲಿ ಅದುವರೆಗಿನ ಸುಮಾರು ೬೪ ಕಿಮೀಗೆ ಯಾವುದೇ ಹೋಲಿಕೆಯಿಲ್ಲದ ಅಪ್ಪಟ ಬಯಲು ಸೀಮೆಯ ಹದಿಮೂರು ಕಿಮೀ ಸೇರಿಸಿ ಭವಾನಿ ಸಾಗರ್ ಊರು ಸೇರಿದೆವು. ಇಲ್ಲಿ ಹೆಸರೇ ಸೂಚಿಸುವಂತೆ ಭವಾನಿ ನದಿಗೆ ಭಾರೀ ಅಣೆಕಟ್ಟಿತ್ತು, ನಿಂತ ಹಿನ್ನೀರೇ ಭವಾನಿ ಸಾಗರ.

ಸಹಜವಾಗಿ ಇಲ್ಲಿನ ಅಪ್ಪಟ ಹಳ್ಳಿಮೂಲೆ, ಅರೆಬರೆ ನಗರದ ಸ್ಥಿತಿಗೆ ಏರಲು ಚಡಪಡಿಸಿದಂತಿತ್ತು. ಪೇಟೆಯಲ್ಲಿ ನಾವು ಬಹಳ ಹುಡುಕಿದ ಮೇಲೆ ಸಸ್ಯಾಹಾರಿ ಊಟಕ್ಕೆ ದಕ್ಕಿದ್ದು ಒಂದು ಗೂಡು ಹೋಟೆಲ್. ಆದರೂ ಸಮೃದ್ಧ ಊಟತಿಂಡಿಯಲ್ಲಿ ಖ್ಯಾತವಾದ ತಮಿಳ್ನಾಡಿನ ಹಿರಿಮೆಗೆ ಕೊರತೆಯಾಗದಂತೆ ಅಲ್ಲಿನ ಊಟ ಚೆನ್ನಾಗಿಯೇ ಇತ್ತು.

ಅಪರಾಹ್ನದ ಮೊದಲ ಲಕ್ಷ್ಯ ಮೂವತ್ತೆಂಟು ಕಿಮೀ ದೂರದ ಮೆಟ್ಟುಪಾಳ್ಯಂ. ಆದರೆ ಮನೋವ್ಯಾಪಾರದಲ್ಲಿ ಕಾಡುತ್ತಿದ್ದದ್ದು ಮತ್ತಿನ ಮೂವತ್ತಾರು ಕಿಮೀ ಅಂತರದ ಕೂನೂರು. ಮೂರು ದಿನದಿಂದ ಮೋಡದ ಕಂಬಳಿಕುಪ್ಪೆ ಸರಿಸದ ಸೂರ್ಯಪ್ಪ ಇಲ್ಲಿ ಮಾತ್ರ ಮಂಕಾಗಿಯೇ ಹೊರಬಿದ್ದಿದ್ದ. ಅವನು ದಿಗಂತಕ್ಕೆ ನೂಕಿದ್ದ ಮೋಡವೆಲ್ಲ ಘನೀಭವಿಸಿದಂತೆ ಉದಕಮಂಡಲದ ಗಿರಿಶ್ರೇಣಿಗಳು ಕಾಣತೊಡಗಿದ್ದವು.

ಭವಾನಿ ಸಾಗರ್ ಬಿಟ್ಟ ಮೊದಲಲ್ಲಿ ಒಂದು ದೀರ್ಘ ಏರು ಬಿಟ್ಟರೆ ಉಳಿದಂತೆ ದಾರಿ ಪಕ್ಕಾ ಬಯಲುಸೀಮೆಯದೇ. ಮೂರೂವರೆಯ ಸುಮಾರಿಗೆ ನಾನು ಮೆಟ್ಟುಪಾಳ್ಯದ ಹೊರವಲಯ ತಲಪಿದ್ದೆ. ಮೆಟ್ಟುಪಾಳ್ಯ – ಉದಕಮಂಡಲದ ಪ್ರಮುಖ ತಳ ಊರಾಗಿ ಸಾಕಷ್ಟು ದೊಡ್ಡದೇ ಇತ್ತು. ಅಲ್ಲಿ ಇನ್ನೋವಾ ಮತ್ತೆ ನಮ್ಮನ್ನು ಸೇರಿಕೊಳ್ಳಬೇಕಿತ್ತು. ಅದರೊಡನೆ ಘಾಟಿ ಏರುವ ಮುನ್ನ ಎಲ್ಲ ಒಟ್ಟಾಗಿ, ಚಾಕೂಟ ನಡೆಸುವ ಮಾತೂ ಬಂದಿತ್ತು. ಆದರೆ ಯಾರೂ ಕಾಣಲಿಲ್ಲ. ಹೇಗೂ ಒಬ್ಬಿಬ್ಬ ಸದಸ್ಯರೂ ವಿಂಗರ್ರೂ ನನ್ನ ಹಿಂದಿದೆ. ಉಳಿದವರು ಹೀಗೇ ದಾರಿಯ ಬದಿಯಲ್ಲಿ ಸಿಕ್ಕಿಯಾರು ಎಂದು ಯೋಚಿಸುತ್ತ, ನಾನು ಕೂನೂರು ದಾರಿ ವಿಚಾರಿಸುತ್ತ ಮುಂದುವರಿದೆ. ಆದರೆ ಊರು ಬಿಟ್ಟ ಮತ್ತು ಘಟ್ಟದಾರಿ ತೊಡಗುವ ಲಕ್ಷಣವಾಗಿ ಸಿಗುವ ದೊಡ್ಡ ಭೂಚಿಹ್ನೆ – ಬ್ಲ್ಯಾಕ್ ಥಂಡರ್, ಜಲಕ್ರೀಡಾ ಕೇಂದ್ರ, ಕಾಣಿಸಿದಾಗ ಏನೋ ತಪ್ಪಿದೆ ಎಂದನ್ನಿಸಿತು. ಬಾಲುಗೆ ಚರವಾಣಿಸಿದೆ. ಊರಿನ ಗಲ್ಲಿಗಳಲ್ಲಿ ತಂಡವೆಲ್ಲ ಚಲ್ಲಾಪಿಲ್ಲಿಯಾದಂತಿತ್ತು. ಅವರೂ ಗೊಂದಲದಲ್ಲಿದ್ದರು. ಹಾಗಾಗಿ ಬಾಲು, ಕೇವಲ ಸರಿದಾರಿಯನ್ನೊಪ್ಪಿ, ಹಾಗೇ ಮುಂದುವರಿಯಲು ಹೇಳಿದರು.

ಮತ್ತೆ ಸ್ವಲ್ಪೇ ಸಮಯದಲ್ಲಿ ನನ್ನ ಅಂದಾಜಿಗೆ ವ್ಯತಿರಿಕ್ತವಾಗಿ, ಬಾಲು ಹಿಂದಿನಿಂದಲೇ ಬಂದರು. ಪೇಟೆಯ ಒಳಗೆಲ್ಲೋ ಅವರು ಚಾ ಕುಡಿಯಲು ನಿಂತಿದ್ದರಂತೆ. ಊರ ಜಂಗುಳಿಯಲ್ಲಿ ನಾವು ಪರಸ್ಪರ ಗುರುತಿಸಿಕೊಳ್ಳಲು ತಪ್ಪಿದ್ದೆವು. “ಇರಲಿ, ಸ್ವಲ್ಪ ಹಿಂದೆ ಮುಂದೆ ಆಯ್ತು. ಎಲ್ಲ ಕೂನೂರಿನಲ್ಲಿ ಸೇರಿಯೇ ಸೇರುತ್ತೇವೆ” ಎಂದು ಬಾಲು ವಿಷಯ ಹಗುರ ಮಾಡಿ, ವೇಗ ಹೆಚ್ಚಿಸಿ, ಮುಂದಿನ ತಿರುವಿನಲ್ಲಿ ಕಣ್ಮರೆಯಾದರು. ದಟ್ಟ ಕಾಡು, ಕಠಿಣ ಏರಿಗೆ ಸಹಜವಾಗಿ ದಾರಿ ವಿಪರೀತ ಬಳಸಂಬಟ್ಟೆ!

ಖ್ಯಾತ ಪ್ರವಾಸೀ ಕೇಂದ್ರದ ದಾರಿ ಎಂದ ಮೇಲೆ ವಾಹನ ಸಂಚಾರ, ವೇಗ, ಗದ್ದಲವೂ ಕಡಿಮೆಯಿರಲಿಲ್ಲ. ನಮ್ಮ ಇನ್ನೋವಾ, ವಿಂಗರ್ಗಳೂ ತಂಡದ ಕೆಲವು ಸದಸ್ಯರೂ ಎಂದಿನಂತೆ ಅವರವರ ತಾಕತ್ತಿನಂತೆ ನನ್ನನ್ನು ಹಿಂದಿಕ್ಕಿ ಹೋದರು. ನಾನಂತೂ ನಿರುಮ್ಮಳವಾಗಿ, ಆದರೆ ಸಾಕಷ್ಟು ಚುರುಕಾಗಿಯೇ ಹಳೆಗಾಲದ ಸೇತುವೆ, ನ್ಯಾರೋಗೇಜ್ ರೈಲಿನ ಹಳಿಗಳ ಚಿತ್ರಗ್ರಹಣ ತಪ್ಪಿಸಿಕೊಳ್ಳದೆ ದಾರಿ ಸವೆಸಿದ್ದೆ. ಈ ವಿಳಂಬದಲ್ಲೇ ಬಹುಶಃ ತಂಡದ ಕೊನೆಯ ಸದಸ್ಯನಂತೆ ಡಾ| ಶೇಖರ್ ರಾವ್ ಅವರದೇ ಲಯದಲ್ಲಿ ಪೆಡಲೊತ್ತುತ್ತ ಸಿಕ್ಕಿದರು.

ಶೇಖರ್ ರಾವ್ ಮಿತಭಾಷಿ, ಆದರೆ ಕುರಿತು ಕೇಳಿದರೆ ಬಹುಮುಖೀ ಆಸಕ್ತಿಯವರು. ಮಹಾಯಾನದುದ್ದಕ್ಕೂ ಪೂರ್ಣ ಸಸ್ಯಾಹಾರ ಹಾಗೂ `ಚಾ ಒಂದೇ ಪಾನೀಯ’ (ಟೀ ಟೋಟಲರ್ ಎನ್ನುವ ಅರ್ಥದಲ್ಲಿ) ಎನ್ನುವಲ್ಲಿ ನನಗೆ ಸಿಕ್ಕ ಏಕೈಕ ಜತೆ ಇವರು. ಶೇಖರ್ ಹೆಂಡತಿ ಕೂಡಾ ಉತ್ಸಾಹೀ ಸೈಕಲ್ವಾಲಿಯಂತೆ. ಇಲ್ಲಿಗೆ ಮಾತ್ರ ಯಾಕೋ ಬಂದಿರಲಿಲ್ಲ. ಆದರೆ ದಾರಿಯ ಅಪಾಯಗಳ ಅರಿವು ಆಕೆಗಿದ್ದುದರಿಂದ ಮಿನುಗುವ ಪುಟ್ಟ ಕೆಂಪು ದೀಪವೊಂದನ್ನು ಗಂಡನ ಅಂಗಿ ಬೆನ್ನಿನಲ್ಲಿ ಕಡ್ಡಾಯಗೊಳಿಸಿದ್ದರು! ರಾಯರ ಬಳಿ ಶುದ್ಧ ನುಣ್ಣನೆ ದಾರಿಯ ವೇಗಸಾಧನೆಗೆ ಪೂರಕವಾದ ಚಕ್ರ ಹೊಂದಿದ, ಅಂದರೆ ಸಪುರ ಟಯರಿನ ಸೈಕಲ್ ಕೂಡಾ ಇತ್ತು. ಆದರೆ ಈ ಮಹಾಯಾನದ ಕಠಿಣ ವಲಯಗಳಲ್ಲಿ ಸಂಚರಿಸುವಾಗ ದೃಢ ಸಮತೋಲನಕ್ಕೆ ಪರ್ವತಾರೋಹಿ ಸೈಕಲ್ಲೇ ಸರಿ ಎಂದು ನೆಚ್ಚಿ, ಏರಿ ಬಂದಿದ್ದರು. ಹೆಚ್ಚು ಹೇಳುವುದಿದ್ದರೆ ನನ್ನ ಸೈಕಲ್ಲಿನ ಚಕ್ರಕ್ಕೂ ತುಸು ತೋರವೇ ಇತ್ತು ಅವರ ಚಕ್ರ. ಮೊದಲೇ ಹೇಳಿದಂತೆ ತಂಡದ ಪ್ರಾಯದ ಹಿರಿತನದಲ್ಲಿ ನನಗಿವರು ಎರಡನೆಯವರಾದರೂ ಓಟದಲ್ಲಿ ಕೊನೆಯ ಸ್ಥಾನಕ್ಕೆ ತೀವ್ರ ಸ್ಪರ್ಧಿ!

ಅಪರಾಹ್ನ ಭವಾನಿಸಾಗರ ವಲಯದಲ್ಲಿ ಆಗಸ ಗುಡಿಸಿ, ಕರೆಗೆ ನೂಕಿದ್ದ ಮೋಡವೆಲ್ಲ ನಮ್ಮೀ ಏರುಮಲೆಯಲ್ಲಿ ರಾಶಿ ಬಿದ್ದಂತಿತ್ತು. ಶೀತಗಾಳಿ, ನೀರಪುಡಿಯುದುರಿದಂಥ ಮಳೆ ನಮ್ಮನ್ನು ಆಗಾಗ ವಿಚಾರಿಸಿಕೊಳ್ಳುತ್ತಿತ್ತು. ಇಲ್ಲದಿದ್ದರೂ ಕಾಡು ಬೆಟ್ಟಗಳಲ್ಲಿ ಕತ್ತಲಾಗುವುದೂ ಬೇಗ ಎಂದು ನಾವು ಅಂದುಕೊಳ್ಳುತ್ತಿದ್ದಂತೆ ನಮ್ಮ ವಿಂಗರ್ ಎದುರಿನಿಂದಲೇ ಬಂತು. ನಮ್ಮ ಕೂನೂರು ದಾರಿ ಇನ್ನೂ ಸುಮಾರು ಅರ್ಧಾಂಶ ಬಾಕಿಯಿದ್ದಂತೆ, ವಿಂಗರ್ ಚಾಲಕ ರೇಣುಕಾ ನಾಯಕ್, ಬಾಲುವಿನ “ಸ್ವೀಪ್” (ಗುಡಿಸಿ ಎತ್ತಾಕ್ಕಳಿ!) ಆದೇಶ ಒಪ್ಪಿಸಿದರು. ನಾವಿಬ್ಬರೂ ಸಾವಕಾಶವಾಗಿ ಕೂನೂರು ಸೇರುವ ಛಲದವರೇ ಆಗಿದ್ದರೂ `ಪಿಕಪ್ಪ್’ನ್ನು ತಿರಸ್ಕರಿಸುವ ಹಠ ಕಳೆದುಕೊಂಡಿದ್ದೆವು!

ನಿಮಗೆ ತಿಳಿದಿರಬಹುದು, ನಮ್ಮ ಹೊಸ ತಲೆಮಾರಿನ ಸೈಕಲ್ಲುಗಳನ್ನು ಬಿಚ್ಚುವುದಾಗಲೀ ಜೋಡಿಸುವುದಾಗಲೀ ಕ್ಷಣಾರ್ಧದ ಕೆಲಸ. ನಟರಾಜ್ ಬರಿಗೈಯಲ್ಲಿ ಎದುರಿನ ಬ್ರೇಕ್ ಜೋಡಣೆಯನ್ನು ವಿತಂತುಗೊಳಿಸಿ, ಚಕ್ರದ ಗುಂಭ ಕೀಲು (ಯಾಕ್ಸೆಲ್ ಲಿವರ್) ಎತ್ತಿ ಬಿಡುತ್ತಿದ್ದರು. ಯಾವ ಸ್ಪ್ಯಾನರ್ ತಿರುಪು, ಸುತ್ತಿಗೆಗಳ ಬಡಿತವಿಲ್ಲದೆ ಎದುರು ಚಕ್ರ ಪ್ರತ್ಯೇಕವಾಗುತ್ತಿತ್ತು. ಅಷ್ಟರೊಳಗೆ ರೇಣುಕ ವಿಂಗರಿನ ತಲೆಗೇರಿರುತ್ತಿದ್ದರು. ಉಳಿದಷ್ಟು ಹಗುರ ಸೈಕಲ್ಲನ್ನು ನಟರಾಜ್ ಎತ್ತಿ ಕೊಟ್ಟರಾಯ್ತು. ವಿಶೇಷ ಸ್ಟ್ಯಾಂಡಿನ ಒಂದು ಯಾಕ್ಸೆಲ್ಲಿಗೆ ಸೈಕಲ್ಲಿನ ಮುಂಗೈಗಳನ್ನು ಸಿಕ್ಕಿಸಿ ಬಿಗಿ ಮಾಡಿ, ಹಿಂದಿನ ಚಕ್ರಕ್ಕೆ ಸುತ್ತುವ ಅಂಟುಪಟ್ಟಿಯಲ್ಲಿ ಬಂಧನ. ಮತ್ತೆ ವ್ಯಾನು ಹೊಂಡ ಹಾರಿದರೂ ಸೈಕಲ್ ಸೆಮೀ ಅಲುಗದು! ಕಳಚಿದ ಎದುರು ಚಕ್ರ ಸಹಿತ ನಾವು ವ್ಯಾನು ಸೇರಿಕೊಂಡೆವು. ಆಶ್ಚರ್ಯಕರವಾಗಿ ವ್ಯಾನು ಮತ್ತೆ ಇಳಿದಾರಿಯಲ್ಲೇ ಅಂದರೆ, ಮೆಟ್ಟುಪಾಳ್ಯದತ್ತ ಓಡತೊಡಗಿತು! ಕಥೆಯೇನೆಂದರೇ…

ಬಾಲು ಸುವೇಗದಲ್ಲೇ ಕೂನೂರು ಸೇರಿದ್ದರು. ಮಳೆ ಚಳಿಯಲ್ಲೂ ಪೂರ್ವ ನಿಗದಿತ ಹೋಟೆಲ್ ವಿವೇಕ್ ತಲಪಿಯಾಗುವಾಗ ನಿರೀಕ್ಷೆಯಂತೆ ಸರ್ವ ಪ್ರಥಮನಾಗಿರಬೇಕಿದ್ದ ರಜನೀಕಾಂತ್ ಕಾಣಲಿಲ್ಲ. ಚರವಾಣಿ ಸಂಪರ್ಕ ಸಾಧಿಸಿದಾಗ, ಆತ ಅರಿವಿಲ್ಲದೇ ಕೂನೂರು ಕಳೆದು ಊಟಿಯತ್ತ ಮುಂದುವರಿದು, ಎಲ್ಲೂ ಅಲ್ಲದಲ್ಲಿ ಚಕ್ರವೊಂದು ಪಂಚೇರ್ ಆಗಿ ಸಿಕ್ಕಿಬಿದ್ದಿದ್ದರು. ಬೆಂಬಲ ವಾಹನದ ದಾರಿ ಕಾದಿದ್ದರು! ಆಗ ತಾನೇ ಹೋಟೆಲ್ ತಲಪಿದ ಇನ್ನೋವಾ ಹೇಮಂತರನ್ನಿಳಿಸಿ, ರಜನಿ ಬೇಟೆಗೆ ಹೋಯ್ತು. ಇತ್ತ ಕೋತಗೇರಿ ದಾರಿಯಿಂದ ಬಾಲುಗೆ ಶ್ಯಾಮಸುಂದರ್ ಕರೆ. “ಗೆಳೆಯಾ ನೀವೆಲ್ಲಿ? ನಾನೆಲ್ಲಿ?” ಅಂದು ಮಧ್ಯಾಹ್ನದ ವೇಳೆಗೆ ಸುಸ್ತೆಂದು ವ್ಯಾನಾಶ್ರಯಿಸಿದ್ದ ಶ್ಯಾಮನನ್ನು ಸತೀಶ್ ಹುರಿದುಂಬಿಸಿ ಮತ್ತೆ ಸವಾರಿಗೆ ಇಳಿಸಿದ್ದರು. ಅವರಿಬ್ಬರು ಜೊತೆಗೇ ಪೆಡಲುತ್ತಾ ಮೆಟ್ಟುಪಾಳ್ಯಕ್ಕೆ ಬಂದಿದ್ದರು. ಅಲ್ಲಿ ಆಯಕಟ್ಟಿನ ಜಾಗದಲ್ಲಿ ಕೈಕಂಬವೊಂದು ಬಲದ ಸುಂದರ ದಾರಿಯನ್ನು `ಕೋತಗೇರಿ’, ಎಡದ ಇಕ್ಕಟ್ಟಿನ ದಾರಿಯನ್ನು `ಊಟಿ’ ಎಂದಷ್ಟೇ ಘೋಷಿಸಿತ್ತು.

ಇವರು `ಕೂನೂರು’ ವಿಚಾರಿಸಿದರು. ಯಾರೋ ಅತಿ ಬುದ್ಧಿಯವ ಕೋತಗೇರಿಯಾಗಿಯೂ ಕೂನೂರು ಸೇರಬಹುದು ಎಂದುಕೊಂಡು ಬಲಕ್ಕೆ ಕೈ ಮಾಡಿದ. ದಾರಿಯ ವಿಸ್ತಾರ, ಅಚ್ಚುಕಟ್ಟುತನ, ದೃಶ್ಯದ ಸೌಂದರ್ಯಗಳಲ್ಲಿ ಸತೀಶ್ ಏರುದಾರಿಯ ಶ್ರಮ ಮರೆತು, ಸ್ವಲ್ಪ ಶ್ಯಾಮನನ್ನೂ ಮರೆತು ಮುಂದೆ ಹೋಗಿದ್ದಾರೆ. ಒಂಟಿಯಾದ ಶ್ಯಾಮ ಹಿಂದಿನಿಂದ ಯಾರನ್ನೂ ಕಾಣದೆ ಚರವಾಣಿ ಮೊರೆ ಹೋದಾಗಲೇ ಗೊತ್ತು – ತಾವು ತಪ್ಪು ದಾರಿಯಲ್ಲಿದ್ದೇವೆ. ಬಾಲು ಅವರಿಬ್ಬರಿಗೂ ಮೆಟ್ಟುಪಾಳ್ಯಕ್ಕೆ ಮರಳಲು ಸೂಚನೆ ಕೊಟ್ಟರು. ಹಾಗೇ ಕೂನೂರಿನಲ್ಲಿ ಮಳೆ, ಚಳಿ, ಕತ್ತಲೆಯೊಡನೆ ವಾಹನ ಭರಾಟೆಯೂ ಏರುವುದನ್ನು ಕಂಡ ಬಾಲು ದಿನ ಮುಗಿಸಲು ನಿರ್ಧರಿಸಿದರು. ವಿಂಗರ್ ಮತ್ತೆ ಮೆಟ್ಟುಪಾಳ್ಯದತ್ತ ಮುಖಮಾಡಿ ಸವಾರರೆಲ್ಲರನ್ನೂ ಗುಡಿಸಿಕೊಳ್ಳುತ್ತ ಹೊರಟಿತ್ತು. ಮೆಟ್ಟುಪಾಳ್ಯದ ಕೈಕಂಬದ ಬಳಿ ಸತೀಶ್, ಶ್ಯಾಮ್ ಕೂಡಾ ಸಿಕ್ಕರು. ಮೊದಲಾಗಬೇಕಿದ್ದ ಚಾ ಕೂಟವನ್ನು ಈಗ ವಿರಾಮದಲ್ಲಿ ಪೂರೈಸಿ, ಕೂನೂರಿನ ಹೋಟೆಲ್ ಸೇರುವಾಗ ಗಂಟೆ ಆರಾಗಿತ್ತು. ಬೆಂಗಳೂರಿನಿಂದ ಸರಿ ಸುಮಾರು ಮೂನ್ನೂರ ಇಪ್ಪತ್ತೈದು ಕಿಮೀ ದಾರಿ ಕ್ರಮಿಸಿ ಮುಖ್ಯ ಲಕ್ಷ್ಯ ಸಾಧಿಸಿದ್ದೆವು.

[ಮುಂದೇನು? ಓದುವ ಶ್ರಮ ಸಣ್ಣದಲ್ಲವಾದ್ದರಿಂದ ವಾರ ಕಾಲ ಬಿಡುವು ಕೊಟ್ಟು ಮುಂದುವರಿಸುತ್ತೇನೆ – ಕ್ಷಮೆಯಿರಲಿ]