(ನೀಲಗಿರಿಗೆ ಸೈಕಲ್ ಸವಾರಿ – ಅಂತಿಮ ಭಾಗ)

ಉದಕಮಂಡಲದಲ್ಲಿ ತ್ರಿಕೋನದ ಮೂರು ಮೂಲೆಗಳಂತೆ ಮುಖ್ಯ ನಗರಗಳಿವೆ. ಮೈಸೂರು ಮೂಲೆಯಲ್ಲಿನ ಮುಖ್ಯ ನಗರಿ ಊಟಿ. ಅದರ ನೇರ ಮುಂದುವರಿಕೆಯಾಗಿ ಸಿಗುವ ಕೂನೂರು ಮೆಟ್ಟುಪಾಳ್ಯಂ ಮೂಲೆಯಲ್ಲಿದೆ. ಇವೆರಡರ ಸುಮಾರು ಸಮಾನ ಅಂತರದ ಎದುರು ಮೂಲೆಯಲ್ಲಿನ ನಗರಿ ಕೋತಗೇರಿ. ಇದನ್ನು ಕಾಡುಮೂಲೆ ಎನ್ನುವುದೇ ಸರಿ! ವಾಸ್ತವದಲ್ಲಿ ಮೆಟ್ಟುಪಾಳ್ಯದ ಬಲಗವಲು ಮತ್ತು ಅನ್ಯ ಕಾರಣಗಳಿಗಾಗಿ ಉದಕಮಂಡಲದ ಉಳಿದೆಲ್ಲಾ ದಾರಿಗಳಿಗಿಂತ ಉತ್ತಮ ದಾರಿ ಕೋತಗೇರಿಯದ್ದು. ಗಿರಿ, ವನ, ಜಲಪಾತಗಳ ರೌದ್ರವೇ ಈ ವಲಯದ ವೈಶಿಷ್ಟ್ಯ. ಸಹಜವಾಗಿ ನಮ್ಮ ನೀಲಗಿರಿ ಸೈಕಲ್ ಸವಾರಿ ಮೂರು ನಾಲ್ಕನೇ ದಿನಗಳ ಸೈಕಲ್ ಕಲಾಪಗಳನ್ನು ಈ ದಿಕ್ಕಿನಲ್ಲೇ ವಿಸ್ತರಿಸಿತ್ತು. ವಾಸದ ನೆಲೆಯಾಗಿ ಕೂನೂರನ್ನೇ ಉಳಿಸಿಕೊಂಡಿತ್ತು. ಹೋಟೆಲ್ ವಿವೇಕ್ ಗಿರಿಪಟ್ಟಣಕ್ಕೆ ಸಾಕಷ್ಟು ದೊಡ್ಡ ವಠಾರದಲ್ಲೇ ಇದೆ. ಇದು ಮೂರು ಮಹಡಿಗಳ ಎತ್ತರಕ್ಕೆ ವಸತಿ ಕಲ್ಪಿಸುವ ಸಾಮಾನ್ಯ ಸೌಕರ್ಯಗಳಿರುವ ಹೋಟೆಲ್. ಸಾಮಾನ್ಯವಾಗಿ ಎಲ್ಲಾ ಹೋಟೆಲ್ಲುಗಳಂತೆ ಇಲ್ಲೂ “ಸ್ನಾನಕ್ಕೆ ಬಿಸಿನೀರು ಬೆಳಿಗ್ಗೆ ಮಾತ್ರ.” `ಎಕ್ಸ್‍ಪ್ರೆಸ್ ಗಾಡಿ’ ರಜನಿ, ಮೊದಲ ದಿನ ಅವರ ಬಟ್ಟೆ ಗಂಟು ಹೊತ್ತ ವಿಂಗರ್ ಬರುವ ಮೊದಲೇ ಹೋಟೆಲ್ ತಲಪಿದ್ದರು. ಹಾಗೇ ಎರಡನೇ ದಿನ ಅವರ ಕೋಣೆಯ ಕೀಲಿಕೈಯವರು ಬರುವ ಮೊದಲೇ ಹೋಟೆಲ್ ಸೇರಿದ್ದರು. ಆತ ಅನುಕೂಲಗಳ ದಾರಿ ಕಾಯದೇ ಬೆವರು ಮಳೆಯ ನೆನಕೆಯನ್ನು ಕೊರೆಶೀತದ ನೀರಿನಲ್ಲೇ “ಚಳಿ ಚಳಿ ತಾಳೆನು, ಅಹಾ ಉಹೂ” ಹಾಡುತ್ತಾ ತೊಳೆದುಕೊಂಡಿದ್ದರು. ನಾವು ಅಲ್ಲಿಗೆ ಮುಟ್ಟುವಾಗ ರಜನಿ ಹೋಟೆಲಿನವರ ಟೂ ಪೀಸ್ ಸೂಟಿನಲ್ಲಿ ಶೋಭಿಸುತ್ತಿದ್ದರು! ಕಿಟಕಿ ಮುಚ್ಚಿದ ವ್ಯಾನಿನೊಳಗಿನ ಬಿಸಿ ಕಳೆಯದೆ ನೋಡುವವರಿಗೆ ರಜನಿಯದ್ದು ಒಳ್ಳೇ ಹಾಸ್ಯ. ಆದರೆ ವ್ಯಾನಿನ ಬಾಗಿಲು ತೆರೆದು ಕಾಲು ಹೊರ ಇಟ್ಟ ಮರು ಮಿನಿಟಿಗೆ ಪರಿಸರದ ಶೈತ್ಯ ಅಮರಿಸುವಾಗ ಮಹಾ ಸಾಹಸ. ನಾನಂತು ನಿರ್ಯೋಚನೆಯಿಂದ ಘೋಷಿಸಿಬಿಟ್ಟೆ “ಧ್ರುವಪ್ರದೇಶದಲ್ಲಿ ಆರು ತಿಂಗಳು ಸ್ನಾನ ಇಲ್ಲ”! ಹೋಟೆಲ್ ವಿವೇಕಿನಲ್ಲೂ ತಿಂಡಿತೀರ್ಥದ ವಿಭಾಗ ಔತ್ತರೇಯರಿಗೆ ಪರಭಾರೆಯಾಗಿತ್ತು. ನಮ್ಮ ತಂಡ ಅನಿವಾರ್ಯತೆಯಲ್ಲಿ ಎರಡು ರಾತ್ರಿಗಳ ಊಟವನ್ನಷ್ಟೇ ಅಲ್ಲಿ ಮಾಡಿತು. ಅಲ್ಲಿನ ಕೋಣೆಗಳು ಸಣ್ಣವಾದ್ದರಿಂದ ಇಬ್ಬಿಬ್ಬರಿಗೊಂದು ಕೋಣೆ ಕೊಟ್ಟಿದ್ದರು. ಹಾಗಾಗಿ ಗೊರಕೆಯವರನ್ನು ಕಳಚಿಕೊಂಡ ರಜನಿ ಮತ್ತು ನನಗೆ ನಿದ್ದೆಗೆಡುವ ಪ್ರಸಂಗ ಬರಲಿಲ್ಲ!

ಮೂರನೇ ಬೆಳಿಗ್ಗೆ ತುಸು ನಿಧಾನಕ್ಕೇ ಆಯ್ತು! ಹಿಂದಿನ ದಿನ ಹೇಮಂತರ ಗಾಯಗಳಿಗೆ ಮೆಟ್ಟುಪಾಳ್ಯದಲ್ಲಿ ಕೆಲವು ಹೊಲಿಗೆ ಹಾಕಿ, ನೋವು ನಿವಾರಕಗಳನ್ನೂ ಕೊಟ್ಟೇ ಕಳಿಸಿದ್ದರು. ಅವರು ಲವಲವಿಕೆಯಲ್ಲೇ ಇದ್ದರೂ ಅಂದೇ ಬೆಂಗಳೂರಿಗೆ ಮರಳುವುದೆಂದು ನಿಶ್ಚೈಸಿದ್ದರು. ರಜನಿ ಪಂಚೇರನ್ನು, ಬದಲಿ ಟ್ಯೂಬಿನಿಂದ ಸರಿ ಮಾಡಿಕೊಂಡಿದ್ದರು. ದಿನದ ಸಣ್ಣ ಓಟಕ್ಕೆ ವಿಂಗರ್ ಮಾತ್ರ ಸಾಕಿತ್ತು. ಹಾಗಾಗಿ ಶರತ್ ಇನ್ನೋವಾವನ್ನು ಹೋಟೆಲಿನಲ್ಲೇ ಬಿಟ್ಟು, ಬಿಡುವಾಗಿದ್ದ ಹೇಮಂತರ ಸೈಕಲ್ಲೇರಿದ್ದರು. ನಾವು ಎಂಟೂವರೆ ಗಂಟೆಯ ಸುಮಾರಿಗೆ ವಸತಿಗೃಹ ಬಿಟ್ಟೆವು. ಊರೊಳಗಿನ ಸಣ್ಣ ಹೋಟೆಲೊಂದರಿಂದ ತಿಂಡಿ ಕಟ್ಟಿಸಿ ಒಯ್ದು, ಹೊರವಲಯದಲ್ಲಿ, ತೊರೆಯೊಂದರ ಸಾಕ್ಷಿಯಲ್ಲಿ ಹೊಟ್ಟೆಪಾಡು ಮುಗಿಸಿಕೊಂಡೆವು. ಭಾರತವ್ಯಾಪೀ ಮಾಲಿನ್ಯ ಆ ತೊರೆಯನ್ನೂ ಬಿಟ್ಟಿರಲಿಲ್ಲವಾದ್ದರಿಂದ ನಾವದನ್ನು ಬಳಸುವ ತಪ್ಪು ಮಾಡಲಿಲ್ಲ! ಆ ದಿನದ ಲಕ್ಷ್ಯ ಕೋತಗೇರಿ ಮೂಲಕ ಕೊಡನಾಡು ವ್ಯೂ ಪಾಯಿಂಟ್; ಸುಮಾರು ಮೂವತ್ತೈದು ಕಿಮೀ. ಅಪರಾಹ್ನ ವಾಪಾಸ್.

ವಸತಿಗೃಹ ಬಿಟ್ಟಲ್ಲಿಂದ, ಪೇಟೆಯೊಳಗೆ, ಊರಿನ ಖ್ಯಾತ ಪ್ರವಾಸೀ ಆಕರ್ಷಣೆ ಸಿಮ್ಸ್ ಉದ್ಯಾನವನದ ಪಕ್ಕದಲ್ಲಿ, ಕೊನೆಗೆ ಚಾ ತೋಟಗಳ ನಡುವೆಯೂ ದಾರಿ ಏಕಪ್ರಕಾರ ತೀವ್ರ ಏರನ್ನೇ ಕಾಣಿಸಿತು. ಉದಕಮಂಡಲದಲ್ಲಿ ಹೆಸರಿನ ಚಂದಕ್ಕಷ್ಟೇ ಒಂದನ್ನು ಮಾತ್ರ `ದೊಡ್ಡಬೆಟ್ಟ’ ಎಂದದ್ದಿರಬೇಕು. ಅಲ್ಲವಾದರೆ ಇದೇನು ಎನ್ನುವಂತೆಯೇ ಎಲ್ಲರೂ ದಮ್ಮು ಕಟ್ಟಿ ಪೆಡಲಿದೆವು. ಈಗ, ಇಲ್ಲೇ, ಮುಂದಿನ ತಿರುವಿನಲ್ಲೇ ಏರು ಮುಗಿಯುತ್ತದೆ ಎನ್ನುವ ಭಾವವೇ ನಮ್ಮ ನೂಕುಬಲ. ಹಾಗೂ ಒಮ್ಮೆ ಅದು ನಿಜಕ್ಕೂ ಮುಗಿದು, ಇಳಿಜಾರು ತೊಡಗಿದರೆ ಸಂತೋಷ ಕ್ಷಣಿಕ. ಹತ್ತಿ ಬಂದ ಅವಧಿಗೆ ಹೋಲಿಸಿದರೆ ಇಳಿದೋಡುವ ದಾರಿ ಅಲ್ಪಾಯುಷಿ! ಅನಾವಶ್ಯಕ ಚಿಂತೆ ಕಟ್ಟಿಕೊಳ್ಳುವವರಿಗಂತೂ “ಹಿಂದಿರುಗುವ ದಾರಿಯಲ್ಲಿ ಇದನ್ನೇ ಏರಿಸಬೇಕಲ್ಲಾ” ಎಂಬ ಮಾನಸಿಕ ಹೊರೆ ಬೇರೆ! ಎಷ್ಟೋ ಕಡೆ ಚಾ ದಿಬ್ಬಗಳ ನಯಸಾಣೆಯಲ್ಲಿ ದಾರಿಯ ಏರಿಕೆ ಕಾಣದಿದ್ದರೂ ತುಳಿಯುವಲ್ಲಿ ಅರಿವಾಗುತ್ತಿತ್ತು.  ಹಾಗೇ ಮಟ್ಟಸ ನೆಲ ಅರಿವಾಗದೇ ಹುಸಿ ಏರನ್ನು ನಿಭಾಯಿಸಲು ಬಲ ಹಾಕಿ ಸೋಲುತ್ತಿದ್ದದ್ದೂ ಉಂಟು.

ಬೆಟ್ಟ ಕಣಿವೆಗಳ ಚಳಿಗೆ ಏಕಪ್ರಕಾರ ಹೊದೆಸಿದ ಹಸಿರು ಹೊಳೆಯುವ ರನ್ನಗಂಬಳಿ ಚಾತೋಟ. ಅಲ್ಲಲ್ಲಿ ಅದಕ್ಕೆ ವಿವಿಧ ವರ್ಣಗಳ ಕೂಲಿ ಮನೆಗಳು – ಅಲಂಕಾರ. ದಾರಿಗಳೋ ಜರಿಯ ರೇಖೆಗಳು, ಅಂಚುಗಟ್ಟಿ ತೂಗಾಡುವ ಮರಗಳು ಕುಚ್ಚಿನ ಗಂಟುಗಳು. ಗಿಡಗಳ ನಡುವೆ ಅಡ್ಡಾಡುತ್ತ ಒಂದು ಚಿಗುರು, ಎರಡೆಲೆ ಎಂದು ಚಿವುಟುತ್ತ, ಸಾಗುವ ಹೆಂಗಳೆಯರಂತೂ ನಮ್ಮ ಸಿನಿ-ಭ್ರಮೆಯಲ್ಲಿ ವಿಹರಿಸುವ ಅಪ್ಸರೆಯರು – ಎಲ್ಲ ಸೂಪರ್ರು, ವೊವ್ವು, ಚಂದ, ಚಂದ. ಪೇಟೆಯ ಒತ್ತಡಗಳನ್ನು ಕಳಚಿಕೊಂಡು, ರಜದ ರಮ್ಯತೆಯನ್ನು ತಲೆಗೆ ತುಂಬಿಕೊಂಡು ಒಂದೆರಡು ದಿನಕ್ಕೆ ಬರುವವರು, ಹಿಂದೆಲ್ಲ ನಾನೂ ಹೀಗೆ ಉದ್ಗರಿಸಿದವನೇ.

ಆದರೆ ಹಾಸನ ಜಿಲ್ಲೆಯ ಕಾಡ್ಮನೆ ಚಾ ತೋಟಗಳಲ್ಲಿ ಗೆಳೆಯರು ನಡೆಸಿದ ಮತ್ಸ್ಯ ಸಮೀಕ್ಷೆಯ ಅನುಭವದ ತುಣುಕು, ಇಲ್ಲಿ ಪ್ರಕೃತಿಗೊದಗಿದ ದುರಂತವನ್ನೇ ಕಾಣಿಸುತ್ತದೆ! (ನೋಡಿ: ವಿಶ್ವ (ವಿ)ರೂಪದ ನಡುವೆ ಮತ್ಸ್ಯ ಸಮೀಕ್ಷೆ) ಯಾವುದೇ ಚಾ ತೋಟದ ನೆಲ, ನೀರು, ಹಸಿರು ವಿಷಮಯ! ಬಹುತೇಕ ಮೃಗ ಪಕ್ಷಿಗಳು ಅಡ್ಡಾಡಿ ನೋಡಲೂ ಬಯಸದ ನೆಲೆ. ಇನ್ನಲ್ಲಿನ ಜನಜೀವನ – ಕೋಳಿಗೂಡಿನಂಥ ಮನೆ, ಕೊಳೆಗೇರಿಯಂಥ ವಠಾರ, ಶೀತ ವಾತಾವರಣದಲ್ಲಿ ಸಂಸಾರ ನಡೆಸುವ ಅನಿವಾರ್ಯತೆ. ಬೆಳಗಾದರೆ ತಚಪಿಚ ಕೆಸರು ಮೆಟ್ಟಿಕೊಂಡು, ಇಬ್ಬನಿ ತೊಯ್ದ ಗಿಡಗಳನ್ನು ಆವರಿಸಿಕೊಂಡು ಅತಿಶೀತ ಗಾಳಿ, ಪರಿಸರದಲ್ಲೇ ಕೆಲಸ ನಡೆಸಬೇಕು. ನಾವು ಕ್ರಿಯಾಶೀಲವಾಗದೇ ಇಂಥ ಜಿಜ್ಞಾಸೆಗಳನ್ನು ಬೆಳೆಸುವುದು ಅಪ್ರಾಮಾಣಿಕವಾಗುವುದರಿಂದ ಮುಂದುವರಿಸುವುದಿಲ್ಲ.

ಒಂದೆಡೆ ಚಾ ಸೊಪ್ಪುಗಳ ಹೊಸ ಕುಯ್ಲಿನ ಬಟ್ಟೆ ಗಂಟುಗಳು ನಮ್ಮ ದಾರಿಯಂಚಿಯಲ್ಲೇ ಪೇರುತ್ತಿತ್ತು. ಅವನ್ನು ಕೆಲವೇ ಗಂಟೆಗಳಂತರದಲ್ಲಿ ಕಾರ್ಖಾನೆಗೆ ಮುಟ್ಟಿಸುವುದು ಅವಶ್ಯ. ಕೂಲಿಗಳು ಸಾಗಣೆ ವಾಹನದ ದಾರಿ ಕಾದಂತಿತ್ತು. ನಾವು ಹಾಗೇ ಒಂದೆರಡು ಕಡೆ ನಿಂತು ಚಿತ್ರಗ್ರಹಣ ನಡೆಸುತ್ತ ಸಾಗಿದೆವು. ಒಂದು ಏರಿನ ಕೊನೆಯಲ್ಲಿದ್ದ ವೈಭವೋಪೇತ ಹೋಟೆಲ್ – ಆರೆಂಜ್ ಪೀಕೋದಲ್ಲಿ, ಚಾ ಕುಡಿಯುವ ಮರುಳೂ ಅನುಭವಿಸಿದೆವು. ಡಬ್ಬಾ ಹೋಟೆಲಿನವನು ಕಡು ಕಂದುಬಣ್ಣದ, ಸಕ್ಕರೆಪಾಕದಂಥ ಸುಡು-ಚಾವನ್ನು ಲೋಟಕ್ಕೆ ಹತ್ತು ರೂಪಾಯಿಗೆ ಕೊಡುತ್ತಾನೆ. ಇವರು ನೂರೆಂಟು `ಭ್ರಮೆ’ (ಬ್ರಾಂಡ್) ತೋರಿ, ತಣಕಲು ಚಪ್ಪೆ ನೀರು ಕುಡಿಸಿ, ಮೂರೋ ನಾಲ್ಕೋ ಪಾಲು ಹೆಚ್ಚು ಹಣ ಪೀಕಿಸುವುದಕ್ಕೇ ಇರಬೇಕು ಹೆಸರು – ಪೀಕೋ! ಅಲ್ಲಿ ಪುಣ್ಯಕ್ಕೆ ನಾನು ನೇರ ಹಣ ಕೊಡುವ ಸಂಕಟ ಅನುಭವಿಸಲಿಲ್ಲ – ಎಲ್ಲತಂಡದ ಲೆಕ್ಕ!

ಅರ್ಧ ದಾರಿಯಲ್ಲಿ ಕೋತಗೇರಿ ದಾಟಿದೆವು. ಮುಂದೆ ದಾರಿಯ ಚಹರೆಯೇ ಬದಲಾಯಿತು. ಹಿಂದಿನ ದಿನ ತಪ್ಪು ದಾರಿಯಾಗಿ ಇದನ್ನು ಅನುಸರಿಸಿ ಬಂದಿದ್ದ ಸತೀಶ್ ಹೇಳಿದ ಮಾತು ಸುಳ್ಳಲ್ಲ. ಕಾರಣ ಸರಳ – ಈ ವಲಯದ ಬಹುತೇಕ ನೆಲ, ಅರ್ಥಾತ್ ಚಾ ತೋಟಗಳ ಯಜಮಾನಿಕೆ ಬಡವರ ಬಂಧು, ತಮಿಳ್ನಾಡಿನ ಮುಖ್ಯ ಮಂತ್ರಿ, ಸಾಕ್ಷಾತ್ ಜಯಲಲಿತಮ್ಮನದೇ ಅಂತೆ! ಸಹೋದ್ಯೋಗೀ ಮಂತ್ರಿಗಳನ್ನೆಲ್ಲ ಪಾದಸೇವೆಗೆ ಬಳಸುವ ಮಹಾತಾಯಿಗೆ, ಇಲ್ಲಿ ಸಾರ್ವಜನಿಕ ಇಲಾಖೆಗಳೆಲ್ಲ ಅಧಿಕಾಧಿಕ ನಜರೊಪ್ಪಿಸಿರುವುದು ಸಹಜವೇ ಇದೆ. ಕಿಮೀಗಟ್ಟಳೆ ದಾರಿಯಂಚಿನ ಅಂಥಾ ಅಪಾಯಕಾರಿಯೇನೂ ಅಲ್ಲದ ದರೆಯನ್ನು ನಾಲ್ಕಡಿ ಎತ್ತರಕ್ಕೆ ಕಡಿದು ಕಾಂಕ್ರೀಟ್ ಒತ್ತುಗೋಡೆಯನ್ನೇ ಕೊಟ್ಟಿದ್ದಾರೆ. ಈ ಗೋಡೆಗಳು ಉದ್ದಕ್ಕೂ (- ಏಐಏಡೀಯಂಕೆ ಸುಳ್ಳು) ಅಮ್ಮಪಕ್ಷದ ಖಾಯಂ ಪ್ರಚಾರ ಭಿತ್ತಿಗಳಾಗಿವೆ. ತಮಾಷೆಯೆಂದರೆ ಇದು ದೂರದೃಶ್ಯಕ್ಕೆ ಬಹಳ ಚಂದವಾಗಿಯೇ ಕಾಣಿಸುತ್ತದೆ. ದಾರಿಯ ಇನ್ನೊಂದು ಅಂಚಿಗೆ ತಂತೀಬಲೆಯ ಬೇಲಿ ಬಿಗಿದು ಅಲಂಕಾರಿಕ ಪೊದರುಗಳನ್ನಿಟ್ಟದ್ದು, ದಾರಿಯ ಕೊನೆಕೊನೆಗಾಗುವಾಗ ಭಾರೀ ಗೇಟು, `ನಿಷೇಧವಲಯ’ಗಳು ಹೆಚ್ಚಿದ್ದು ನೋಡುವಾಗ ನಮಗೂ ಅಮ್ಮನ ಬಗ್ಗೆ ಭಕ್ತಿಯಲ್ಲದಿದ್ದರೂ ಭಯ ಬಂದದ್ದು ನಿಜ.

ಗಿರಿಸಾಲು ಕೊಡನಾಡಿನ ಕೊನೆಯಲ್ಲಿ ಹೆಚ್ಚು ಕಡಿಮೆ ಧುತ್ತೆಂದು ಭಾರೀ ಕಣಿವೆಗಿಳಿದು ಮುಗಿದಂತೆಯೇ ತೋರುತ್ತದೆ. ಅಲ್ಲದಿದ್ದರೂ ನಮ್ಮ ದಾರಿ ಕಣಿವೆಯಂಚಿನ ಬಂಡೆ ನೆಲ ಮುಟ್ಟುವಲ್ಲಿ ಮುಗಿದಿತ್ತು. ಎಲ್ಲ ಸರಕಾರೀ ರಚನೆಗಳಂತೇ ಇಲ್ಲೂ ಪಾರಿಸರಿಕಜ್ಞಾನ, ಔಚಿತ್ಯಗಳಿಲ್ಲದ ಹತ್ತೆಂಟು ರಚನೆಗಳಿದ್ದುವು. (ನೋಡಿ: ಬಿಸಿಲೆಯಲ್ಲಿ ಭಾರೀ ಜಿಗಣೆ) ಅನಿವಾರ್ಯವಾಗಿ ಅವನ್ನೇರಿ ವೀಕ್ಷಣೆ ನಡೆಸಿದೆವು.

ನಾವು ನಿಂತ ನೆಲ ನಾವು ಹಿಂದಿನ ದಿನ ಇಳಿದು ಬಂದ ದಿಂಬಂ, ಬನ್ನಾರಿ, ಭವಾನಿಸಾಗರ್ ಪ್ರದೇಶಗಳ ಇನ್ನೊಂದು ಮಗ್ಗುಲು. ನಡುವಣ ಶಿಖರಾಗ್ರಗಳು ಆ ಬದಿಯ ತಗ್ಗಿನಿಂದಾಗಿ ಕೇವಲ ಗೋಡೆಯಂತೆ ಕಂಡರೆ, ಇಲ್ಲಿ ವೈವಿಧ್ಯಮಯ, ರುದ್ರರಮಣೀಯ. ಸುಲಭ ಸಾಮೀಪ್ಯ ಸಾಧ್ಯವಿಲ್ಲದ ಶಿಖರಗಳ ಏಳು ಬೀಳು, ಒಂದಂಚಿನಲ್ಲಿ ಧುಮುಕುತ್ತಿದ್ದ ಜಲಪಾತ, ನಿಗೂಢ ಸದ್ದುಮೌನಗಳ ಮೊತ್ತದಂತಿದ್ದ ವಿಸ್ತಾರ ಕಣಿವೆ, ಬಯಲುಗಳನ್ನೆಲ್ಲ ಧಾರಾಳ ಮನ ತುಂಬಿಕೊಂಡೆವು.

ಅಲ್ಲೇ ತುಸು ಮೇಲೆ ಇದ್ದ ಕ್ಯಾಂಟೀನಿನಲ್ಲಿ ಊಟ ಮಾಡಿ, ಮರಳಿ ಕೂನೂರು ದಾರಿ ಹಿಡಿದೆವು. ಈಗ ಏರಿ ಬಂದ ಕಷ್ಟಗಳನ್ನಷ್ಟೇ ನೆನಪಿಸಿಕೊಳ್ಳುತ್ತ, ಇಳಿಯುವ ಸಂತೋಷಗಳನ್ನು ಕಲ್ಪಿಸಿಕೊಳ್ಳುತ್ತ ಹೆಚ್ಚು ಚೈತನ್ಯ ತುಂಬಿಕೊಂಡೆವು. ಬೆಳಿಗ್ಗೆ ಹೋಟೆಲ್ ಬಿಟ್ಟಾಗ ತೊಡಗಿದ ಮಹಾ ಏರನ್ನು ನಾವು ಕಿಮೀ ಲೆಕ್ಕದಲ್ಲಿ ಗಮನಿಸಿಯೇ ಇರಲಿಲ್ಲ. ಆದರೆ ಹಿಂದಿರುಗುವ ದಾರಿಯಲ್ಲಿ ಅದು ಸುಮಾರು ಎಂಟು ಕಿಮೀ ಉದ್ದದ, ಅಂದರೆ ಅಕ್ಷರಶಃ ಹೋಟೆಲ್ ಅಂಗಳದವರೆಗೂ ಪೆಡಲನ್ನು ಒಂದು ಸುತ್ತೂ ತುಳಿಯ ಬೇಕಿಲ್ಲದ ಅಪ್ಪಟ ಗಾಳಿಗುದುರೆಯ ಸವಾರಿಯಾಗಿ ಅನುಭವಿಸಿದ್ದಂತೂ ಚಿರಸ್ಮರಣೀಯವೇ ಸರಿ. ಗ್ರೀಕಿನ ಮಹಾನ್ ಯೋಧ ಜೂಲಿಯಸ್ ಸೀಸರ್ ತನ್ನ ಜೀವಮಾನದ ಸಾಧನೆಯನ್ನು ಮೂರೇ ಶಬ್ದಗಳಲ್ಲಿ – ವಿನಿ, ವಿಡಿ, ವಿಸಿ (ನಾನು ಬಂದೆ, ನೋಡಿದೆ, ಆಕ್ರಮಿಸಿದೆ) ಸೂತ್ರೀಕರಿಸಿದ್ದನಂತೆ. ಹಾಗೇ ಇಲ್ಲಿ ಕಥನ ಸುಖಕ್ಕಾಗಿ ನಾನೂ ಕೊಡನಾಡು ಸಾಧನೆಯನ್ನು ಸಂಕ್ಷಿಪ್ತಗೊಳಿಸಿದ್ದೇನೆ. ನಮ್ಮ ಹಿಂದಿನೆರಡು ದಿನಗಳ ಮಾರ್ಗಕ್ರಮಣದಂತೆ ಇಲ್ಲಿ ಒಟ್ಟು ಮಾರ್ಗಕ್ರಮಣದ ಲೆಕ್ಕ ಹಿಡಿದರೆ ಸುಮಾರು ಅರುವತ್ನಾಲ್ಕೇ ಕಿಮೀ. ಹಾಗೆಂದ ಮಾತ್ರಕ್ಕೆ ಇಲ್ಲಿ ಪಟ್ಟ ಶ್ರಮ, ವಾತಾವರಣದ ಚಳಿಯನ್ನೂ ಹರಿದು ಹರಿಸಿದ ಬೆವರು, ಒಟ್ಟಾರೆ ಸಾಧನೆ ಕಡಿಮೆಯದ್ದೇನೂ ಅಲ್ಲ!

ಕೂನೂರಿನ ಎರಡನೇ ಸಂಜೆಗೆ ನಮ್ಮ ತಂಡಕ್ಕೆ ಕೊಯಂಬತ್ತೂರಿನ ಉದ್ಯಮಿ ಜೋಡಿ – ಚಕ್ರವರ್ತಿ ಮತ್ತು ಸುಲೈಮಾನ್, ಡಸ್ಟರ್ ಕಾರಿನಲ್ಲಿ ಬಂದು ಸೇರಿಕೊಂಡರು. ಈರ್ವರೂ ಅಪ್ಪಟ ಕನ್ನಡಿಗರು. ಇವರು ಸೈಕಲ್ ಸಂಬಂಧದಲ್ಲೇ ಬೀಯೆಂಬೀಟಿಗೆ ಹಳೆ ಪರಿಚಯಸ್ಥರು. ಅವರು ಈಗ ಕೂನೂರಿಗೆ ಬಂದದ್ದೂ ಸೈಕಲ್ಲಿಗರ ಸುಖ ಸಾಂಗತ್ಯಕ್ಕೇ. ಅವರ ಕಾರಿನ ನೆತ್ತಿಯನ್ನು ಎರಡು ವಿಶಿಷ್ಟ ಸೈಕಲ್ಲುಗಳು ಅಲಂಕರಿಸಿದ್ದುವು ಎಂದು ಪ್ರತ್ಯೇಕ ಹೇಳಬೇಕೇ. ಆದರೆ ನಮ್ಮ ಮುಂದಿನ ಏಕೈಕ ಸವಾರಿ ಏಕಮುಖದ್ದೇ ಆದ್ದರಿಂದ ಕೇವಲ ಚಕ್ರವರ್ತಿ ಸೈಕಲ್ ಬಳಸಿದರು, ಸುಲೈಮಾನ್ ಕಾರು ಚಲಾಯಿಸುವುದರಲ್ಲೇ ತೃಪ್ತರಾದರು.

ಕೂನೂರಿನ ಎರಡನೇ ಸಂಜೆಗಾಗುವಾಗ ಹೋಟೆಲಿನ ವಿವೇಕ ಹೆಚ್ಚು ವಿಕಸಿಸಿತ್ತು. ಅಥವಾ ನಮ್ಮ ಸೈಕಲ್ ಯಾನದ ಶ್ರಮ, ಬಳಲಿಕೆಗಳ ಅರಿವು ಅವರನ್ನು ಪ್ರಭಾವಿಸಿತ್ತು. ನಮ್ಮವರು ಕುರಿತು ಕೇಳಿದ್ದಕ್ಕೆ, ವಿಶೇಷವಾಗಿ ಸ್ನಾನದ ಬಿಸಿನೀರು ಒದಗಿಸಿದರು. ಸಹಜವಾಗಿ ಅಂದಿನ ಪಟ್ಟಾಂಗ, ಊಟ, ಕೊನೆಯಲ್ಲಿ ನಿದ್ರೆಯೂ ವಿಶೇಷವೇ ಆಗಿತ್ತು!

ಮಹಾಯಾನದ ನಾಲ್ಕನೇ ಭಾಗ ಬೀಯೆಂಬೀಟೀ ಲೆಕ್ಕಕ್ಕೆ ಉದಕಮಂಡಲದೊಳಗೇ ಇನ್ನೊಂದು ಹೊಸ ದಾರಿಯನ್ನು ಶೋಧಿಸುವುದಾಗಿತ್ತು. ಇದು ಊಟಿ – ಕೂನೂರು – ಕೋತಗೇರಿ ತ್ರಿಕೋನದ ಕೇಂದ್ರ ಹಾಯ್ದು ಅತ್ತ ಊಟಿ – ಕೋತಗೇರಿ ದಾರಿಯನ್ನು ಸಂಪರ್ಕಿಸುವ ಕಡಿಮೆ ಜನಪ್ರಿಯ ದಾರಿ. ಅದರ ಆರಂಭ ಕೂನೂರು ಪೇಟೆಯ ಜಂಝಡದೊಡನೆ ತೀವ್ರ ಇಳುಕಲಿನದಾದ್ದರಿಂದ ಮೊದಲ ಹಂತದ ಸೈಕಲ್ ಸವಾರಿಯನ್ನು ಬಾಲು ನಿವಾರಿಸಿದ್ದರು. ಹೋಟೆಲ್ ಖಾಲಿ ಮಾಡುವಾಗಲೇ ಎಲ್ಲ ಸೈಕಲ್ಲುಗಳನ್ನು ವ್ಯಾನು, ಕಾರುಗಳಿಗೇರಿಸಿದ್ದೆವು. ಕೂನೂರಿನದೇ ಕೇಂದ್ರ ಭಾಗದ ಒಂದು ದೊಡ್ಡ ಹೋಟೆಲಿನಲ್ಲಿ ತಿಂಡಿತೀರ್ಥ ಪೂರೈಸಿಕೊಂಡೆವು.

ಅನಂತರ ಕಠಿಣ ಇಳುಕಲನ್ನು ಪೂರ್ಣಗೊಳಿಸಿ, ಕಣಿವೆಯಲ್ಲಿ ಸೈಕಲ್ಲುಗಳನ್ನೇರಿದೆವು. ಇದೂ ಚಾ ತೋಟಗಳ ನಡುವೆ ಆಟವಾಡುವ ದಾರಿಯೇ. ಅಗಲ ಕಿರಿದು, ಏರಿಳುಕಲು ಮತ್ತು ತಿರುವುಮುರುವು ತುಸು ತೀವ್ರ. ಕೊಡನಾಡಿನ ದಾರಿಯಲ್ಲಿ ಕಾಡದ ಮಳೆ ಇಲ್ಲಿ ಮತ್ತೆ ಅವತರಿಸಿತು. ಈ ದಾರಿಯಲ್ಲಿ ಒಂದೆಡೆ ದಾರಿಯ ಪಕ್ಕದಲ್ಲೇ ತೋಟದ ಭಾಗವಾಗಿ ಚಾ ಸಂಸ್ಕರಣದ ಕಾರ್ಖಾನೆ – ಚಾಮರಾಜಾ ಇತ್ತು. ಅದು ದಾರಿಗೇ ಒಂದು ಸಣ್ಣ ಮಳಿಗೆ ತೆರೆದು ಬಿಸಿ ಬಿಸಿ ಚಾ ಹಾಗೂ ತಮ್ಮ ಉತ್ಪನ್ನಗಳ ಬಿಡಿ ಮಾರಾಟವನ್ನೂ ನಡೆಸುತ್ತಿದ್ದರು. ಕೇವಲ ಹತ್ತು ರೂಪಾಯಿಗೆ ದೊಡ್ಡ ಲೋಟಾ ತುಂಬಾ ಹಾಲಿಲ್ಲದ ಬಿಸಿ ಲಿಂಬುಚಾ ತುಂಬ ಒಳ್ಳೇದಿತ್ತು. ಅಷ್ಟಾಗುವಾಗ ಮಳೆಯೂ ತುಸು ಬಲ ಪಡೆದುದರಿಂದ ನಾವು  ಎರಡನೇ ಡೋಸು ಚಾ ಏರಿಸಿದ್ದಲ್ಲದೆ, ಕೆಲವರು ಅಲ್ಲಿ ವಿಶಿಷ್ಟ ಚಾ ಪುಡಿಕೆಗಳನ್ನೂ ಮನೆಗೆಂದು ಕೊಂಡದ್ದೂ ಆಯ್ತು!

ಅಂದಿನ ಪೂರ್ವ ನಿಶ್ಚಿತ ಕಾರ್ಯಕ್ರಮದಂತೆ ನಾವು ಮಧ್ಯಾಹ್ನದೂಟಕ್ಕೆ, ತುಳಿದು ಪೂರೈಸಬೇಕಿಲ್ಲದ ದೂರದ ಊಟಿಯನ್ನು ತಲಪಲೇ ಬೇಕಿತ್ತು. ಮೂರು ದಿನಗಳ ಶ್ರಮದ ಜತೆಗೆ ಹನಿಮಳೆಯ ಕಾಟ ಮರಳಿ ತೊಡಗಿತ್ತು. ಹಾಗಾಗಿ ಸುಮಾರು ಹನ್ನೆರಡು ಗಂಟೆಯ ಹೊತ್ತಿಗೆ, ಅಂದರೆ ಊಟಿ-ಕೋತಗೇರಿ ಮುಖ್ಯ ರಸ್ತೆಯನ್ನು ತಲಪುವ ಮೊದಲೇ ಬಾಲು ರೇಣುಕಾರಿಗೆ ಸ್ವೀಪ್ ಆದೇಶವಿತ್ತರು. ನಮ್ಮನ್ನೆಲ್ಲ ಇದ್ದಿದ್ದಲ್ಲಿಂದ ವಿಂಗರ್ ಎತ್ತಿಕೊಂಡಿತು, ಊಟದ ಹೊತ್ತಿಗೆ ಸರಿಯಾಗಿ ಊಟಿಯನ್ನು ಕಾಣಿಸಿತು.

ಊಟಿಯ ದೊಡ್ಡ ಹೋಟೆಲೊಂದರಲ್ಲಿ ಊಟ ಮಾಡಿದೆವು. ನಾನು ಮೊದಲೇ ತಿಳಿಸಿದಂತೇ ದೀಪಕ್ ಸಂಡೂರ್, ಜೀಪಿನಲ್ಲಿ ತನ್ನಿಬ್ಬರು ಸಂಗಾತಿಗಳೊಡನೆ ಅಲ್ಲಿಗೇ ನೇರ ಬೆಂಗಳೂರಿನಿಂದ ಬಂದು ಸೇರಿಕೊಂಡರು. ದೀಪಕ್ ಸದ್ಯ ವೈದ್ಯರ ಶಿಫಾರಸಿನ ಮೇಲೆ ಸೈಕಲ್ ರಜೆಯಲ್ಲಿದ್ದಾರೆ. ಹಾಗಾಗಿ ಸ್ನೇಹಾಚಾರ, ಮಾರಣೇ ದಿನ ಇಡಿಯ ತಂಡದ ಚಿತ್ರಗ್ರಹಣವನ್ನು ಹೆಚ್ಚು ವ್ಯವಸ್ಥಿತಗೊಳಿಸುವುದು ಮತ್ತು ಅಗತ್ಯವಿದ್ದರೆ ಬೆಂಗಳೂರಿಗೆ ಮರಳುವಲ್ಲಿ ಹೆಚ್ಚುವರಿ ಸೈಕಲ್ ಮತ್ತು ಜನರನ್ನು ತುಂಬಿಕೊಳ್ಳುವ ಉದ್ದೇಶದಿಂದ ಬಂದಿದ್ದರು.

ಉದಕಮಂಡಲದಲ್ಲಿನ ನಮ್ಮ ಕೊನೆಯ ಕಲಾಪ, ಪಾರ್ಸನ್ಸ್ ಕಣಿವೆಯ ವಿರಾಮಧಾಮದಲ್ಲಿ ತಂಗುವುದು. ಮತ್ತು ಮರುದಿನ ಹಗುರದ ಚಾರಣ ನಡೆಸಿ, ಕಾರು ವ್ಯಾನುಗಳಲ್ಲೇ ಬೆಂಗಳೂರಿಗೆ ಮರಳುವುದು. ಬ್ರಿಟಿಷರ ಕಾಲದಲ್ಲಿ, ಉದಕಮಂಡಲದ ಖ್ಯಾತ ಶಿಖರ ಮುಕುರ್ತಿಯ ಒತ್ತಿನ ವಲಯದಲ್ಲೊಮ್ಮೆ ಭಾರೀ ಕಾಳ್ಗಿಚ್ಚೆದ್ದಿತ್ತಂತೆ. ಅದನ್ನು ದಿಟ್ಟವಾಗಿ ತಡೆಯುವಲ್ಲಿ ಪೋರ್ತಿಮಂಡ್ ಪಾರ್ಸನ್ ಎಂಬ ಅಧಿಕಾರಿ ಹುತಾತ್ಮನಾದ್ದರ ಸ್ಮರಣೆಗೇ ಆ ಕಣಿವೆಯನ್ನು ಪಾರ್ಸನ್ಸ್ ವ್ಯಾಲೀ ಎಂದಿದ್ದರು. ಅಲ್ಲಿನ ತೊರೆಯೊಂದಕ್ಕೆ ಅಣೆಕಟ್ಟು ಕಟ್ಟಿ, ನಿಲ್ಲಿಸಿದ ಸರೋವರಕ್ಕೂ ಪೋರ್ತಿಮಂಡ್ ಲೇಕ್ ಎಂದೇ ಹೆಸರು.

ಅದಕ್ಕೆ ಬಲು ಸಮೀಪದ ಕಣಿವೆಯೊದರಲ್ಲಿ ಕಳೆದ ಶತಮಾನದಲ್ಲೇ ಸುಮಾರು ಐದೆಕ್ರೆಯ ಭೂ ತುಣುಕೊಂದನ್ನು ಸ್ಥಳೀಯರು ಯಾರೋ ಪಳಗಿಸಿ ಕೃಷಿ ರೂಢಿಸಿಕೊಂಡಿದ್ದರಂತೆ. ಅನಂತರ ಆ ಕಾಲದ ಸುಮಾರಿಗೇ ಅದನ್ನು ಕೊಂಡು ಕೃಷಿ ಮುಂದುವರಿಸಿದವರು ಮಂಡ್ಯ ಮೂಲದ ಒಂದು ಗೌಡ ಕುಟುಂಬ. ಹಾಗೆ ಬಂದ ಹಿರಿಯರೊಬ್ಬರು, ಇಂದಿನ ಕಾಲಧರ್ಮದಂತೆ ಅದಕ್ಕೆ ವಿಹಾರಧಾಮದ ರೂಪವನ್ನೂ ಕೊಟ್ಟಿದ್ದಾರೆ. ಡಾ| ಶಂಕರರಿಗೆ ಆ ಹಿರಿಯರೊಡನೆ ಪೂರ್ವ ಪರಿಚಯವೂ ಅಲ್ಲಿಗೊಮ್ಮೆ ಭೇಟಿ ಕೊಟ್ಟ ನೆನಪೂ ಇದ್ದುದಕ್ಕೆ ನಮ್ಮ ಕೊನೆಯ ಕಲಾಪ ರೂಪುಗೊಂಡಿತ್ತು. ಗೌಡರು ಕಳಿಸಿದ್ದ ಮಾರ್ಗದರ್ಶಿ ಕೂಡಾ ನಾವು ಊಟ ಮಾಡಿದ ಹೋಟೆಲಿಗೆ ಬಂದಿದ್ದುದರಿಂದ ನಮ್ಮ ನಾಲ್ಕು ವಾಹನಗಳ ಪಯಣ ನಿರ್ಯೋಚನೆಯಲ್ಲೇ ಹೊರಟಿತು.

ಊಟಿ – ಮೈಸೂರು ದಾರಿಯಲ್ಲಿ ಹತ್ತು-ಹನ್ನೆರಡು ಕಿಮೀ ಹೋಗಿ, ಎಡಕ್ಕೆ ಕವಲಾದರೆ ಮತ್ತೆ ಹಲವು ಜಾಡುಗಳ ಜಿಡುಕು ಬಿಡಿಸುತ್ತಾ ಹೋಗಬೇಕು. ಅಲ್ಲಿ ಅರಣ್ಯ ಇಲಾಖೆಯ ಅನುಮತಿ, ಖಾಸಗಿ ಚಾ ತೋಟದ ಒಳಗೆ ಹಾಯಲು ರುಸುಮು, ಪೋರ್ತಿಮಂಡ್ ಅಣೆಕಟ್ಟೆಯ ಮೇಲಿನ ಒಳದಾರಿ ಬಳಸಲು `ಜಾಣತನ’ಗಳಲ್ಲೆಲ್ಲ ಮಾರ್ಗದರ್ಶಿ ಪಳಗಿದ್ದುದರಿಂದ ನಮಗೆ ರಹದಾರಿಯ ಸಮಸ್ಯೆ ಕಾಡಲಿಲ್ಲ. ಆದರೆ ಕೊನೆಯಲ್ಲಿ ವಿಹಾರಧಾಮಕ್ಕೆ ನೇರ ಇಳಿಯುವ ಸುಮಾರು ಒಂದು ಕಿಮೀ ಅಂತರದ ಪೂರ್ಣ ಕಚ್ಚಾದಾರಿ ಮಾತ್ರ ಸ್ವಲ್ಪ ಸತಾಯಿಸಿತು. ಈಚಿನ ಮಳೆಯಿಂದ ಅದು ತುಸು ಕೊರಕಲು ಬಿದ್ದಿತ್ತು. ನಮ್ಮಲ್ಲಿ ಬಹುಮಂದಿ ವಾಹನ ಇಳಿದು, ವಾಹನಗಳ ತಳಕ್ಕೆ ಕಲ್ಲು ಹೆಟ್ಟದಂತೆ, ಚಕ್ರ ಇರುಕಿನಲ್ಲಿ ಸಿಲುಕದಂತೆ ವಿಶೇಷ ನಿರ್ವಹಣೆ ನಡೆಸಿದರು. ಊಟಿಯಿಂದ ಸುಮಾರು ೨೫ ಕಿಮೀ ಅಂತರದ ವಿರಾಮಧಾಮ ತಲಪುವಾಗ ಮಂಜುಮುಸುಕಿದ ಸಂಜೆಯಲ್ಲಿನ್ನೂ ಬೆಳಕು ಸಾಕಷ್ಟು ಉಳಿದಿತ್ತು.

ಕಣಿವೆಯ ಕಿರು ತೊರೆ, ಹುಲ್ಲು ಬಾಣೆಗಳ ನಡುವಣ ಪುಟ್ಟ ಕೃಷಿಭೂಮಿಯೇ ನಮ್ಮ ವಿರಾಮಧಾಮ. ಕಾಡು, ತೋಟದ ನಡುವೆ ಅತಿಶೀತ ಹಾಗೂ ವನ್ಯಮೃಗಗಳಿಂದ ರಕ್ಷಿಸಿಕೊಂಡು ಉಳಿಯಲು, ಕೃಷಿ ಸಾಮಗ್ರಿ ಮತ್ತು ಉತ್ಪನ್ನಗಳನ್ನು ತತ್ಕಾಲೀನವಾಗಿಯಾದರೂ ಕಾಪಾಡಿಕೊಳ್ಳಲು ರಚಿಸಿದ ನಾಲ್ಕೆಂಟು ಕಟ್ಟಡಗಳೇ ಇಂದು ತುಸು ತೇಪೆ ಕೆಲಸಗಳೊಡನೆ ಪ್ರವಾಸಿಗಳ ವಸತಿ ಸೌಕರ್ಯಗಳಾಗಿವೆ! ಅಂದರೆ, ತುಸು ಬದಲಾದ ರೂಪಿನ, ಆದರೆ ಮೌಲ್ಯದಲ್ಲಿ ವಿಪರೀತ ಹೆಚ್ಚಿಕೊಂಡ ದನದ ಕೊಟ್ಟಿಗೆಗಳು ನಮಗಲ್ಲಿ ಬಂಗ್ಲೆಗಳು! ವಸತಿ ವಠಾರಗಳನ್ನುಳಿದ ಜಾಗಗಳಲ್ಲಿ ಗಜ್ಜರಿ, ಎಲೆಕೋಸು ಮುಂತಾದ ಚಳಿವಲಯಕ್ಕೆ ಹೊಂದಿದ ತರಕಾರಿ ಕೃಷಿ ಅವ್ಯವಸ್ಥಿತವಾಗಿ ಹರಡಿತ್ತು. ಎಲ್ಲವನ್ನೂ ವನ್ಯ ಮೃಗಗಳಿಂದ ಕಾಪಾಡಲು ವಿದ್ಯುತ್ ಬೇಲಿಯ ಆವರಣವಿತ್ತು.

ಅಲ್ಲಾಗಲೇ ಆರೇಳು ಕಾರುಗಳಲ್ಲಿ ಕೆಲವು ಪ್ರವಾಸಿಗಳು ನೆಲೆಸಿದ್ದರು. ಅವರನ್ನು ಸುಧಾರಿಸುವುದರೊಡನೆ ಹಿರಿಯ ಗೌಡರು ನಮ್ಮನ್ನೂ ಆತ್ಮೀಯವಾಗಿಯೇ ನಡೆಸಿಕೊಂಡರು. ಯಾವುದೇ ಕೆಲಸಕ್ಕೂ ಇಂದು ಸ್ಥಳೀಯ ಮಂದಿ ಒದಗುವುದಿಲ್ಲ ಎಂಬ ಸಾರ್ವತ್ರಿಕ ಸಮಸ್ಯೆ ಗೌಡರನ್ನೂ ಕಾಡುತ್ತಿತ್ತು. ಚಾಮರಾಜನಗರ, ಕೂನೂರುಗಳಲ್ಲಿ ಕಂಡಂತೆ ಇಲ್ಲೂ ಅಡುಗೆ, ಸತ್ಕಾರಗಳ ಸಹಾಯಕರಲ್ಲಿದ್ದವರು ಔತ್ತರೇಯರು! ನಾಲ್ನಾಲ್ಕು ಮಂಚ ಅಂಟಿಸಿಟ್ಟಂತಿದ್ದ ತಗ್ಗು ಮಾಡಿನ ಕೊಟ್ಟಿಗೆಯೊಂದಕ್ಕೆ ನಾವು ನಾಲ್ಕು ಮಂದಿ (ಡಾ|ಶೇಖರ್ ರಾವ್, ಶ್ಯಾಮ್ ಮತ್ತು ರೇಣುಕಾ) ಹೊಂದಿಕೊಂಡೆವು. ಉಳಿದವರೂ ಹೀಗೇ ಆಚೀಚಿನ ಕಟ್ಟಡಗಳಲ್ಲಿ ತೂರಿಕೊಂಡರು.

ನಮ್ಮ ಕೋಣೆಗೆ ಕಕ್ಕೂಸ್ ಮತ್ತು ಸ್ನಾನದ ಮನೆ ಒಂದೇ ಆದ ರಚನೆ ಲಗತ್ತಾಗಿತ್ತು. ಅಲ್ಲಿನ ಎಲ್ಲ ವ್ಯವಸ್ಥೆಗಳಲ್ಲೂ ಬೆಟ್ಟದ ತೊರೆ ನಲ್ಲಿ ಮೂಲಕ ಧಾರಾಳವಾಗಿಯೇ ಪ್ರವಹಿಸುತ್ತಿತ್ತು. ಆದರೆ ಆ ಕೊರೆಶೀತಕ್ಕೇನು ಮಾಡ್ತೀರಿ? ನಮ್ಮ ಕೋಣೆಯ ಗೀಸರ್ ಮಹಾಸೋಮಾರಿ; ಅರ್ಧ ಗಂಟೆ ಕಾದರೂ ತಿಣುಕುತ್ತಲೇ ಇತ್ತು. ನಾನಂತೂ ಮರು ಬೆಳಿಗ್ಗೆ ಇನ್ನೊಂದೇ ಕೋಣೆಯಲ್ಲಿನ ಗೀಸರ್ ನಿಜಕ್ಕೂ ಬಿಸಿನೀರು ಕೊಡುತ್ತಿದೆ ಎಂದು ಖಾತ್ರಿಯಾಗುವವರೆಗೆ ಸ್ನಾನದ ಯೋಚನೆಯನ್ನೇ ಬಿಟ್ಟುಬಿಟ್ಟಿದ್ದೆ! ಉಳಿದ ಕ್ರಿಯೆಗಳನ್ನೂ ಎಲ್ಲರೂ ತೀರಾ ರೇಶನ್ ಮಾಡಿದ್ದೆವು ಎಂದರೆ ನಿಮಗೆ ಅರ್ಥವಾಗಬೇಕು. ಸೂರ್ಯಾಸ್ತಕ್ಕೆ ಇನ್ನೂ ಸ್ವಲ್ಪ ಸಮಯ ಉಳಿದಿದ್ದುದರಿಂದ ಗೌಡರು ಸೂಚಿಸಿದ ಚಾರಣಾವಕಾಶವನ್ನು ನಮ್ಮ ತಂಡವೇನೋ ಗಂಭೀರವಾಗಿಯೇ ಸ್ವೀಕರಿಸಿತು. ಆದರೆ ಮೊದಲೇ ಅಲ್ಲಿದ್ದ `ನಿಜ ವಿಹಾರಿ’ಗಳು ಅನಾವಶ್ಯಕ ನಿಧಾನಿಸಿದರು. ಮುಂದೆ ಚಾರಣದಲ್ಲೂ ಮಾತಿನ ಚಪಲ ಕಳಚಿಕೊಳ್ಳದೇ ಎಲ್ಲ ನಿರೀಕ್ಷೆಯ ವನ್ಯ ಮೃಗದರ್ಶನ ವಂಚಿತರಾದೆವು. ತೀರಾ ಮಸುಕಾಗಿ ಕಾಣಿಸಿದ ಒಂದು ಕಾಟಿ, ಹಾಗೇ ಎಲ್ಲೋ ಮಾಯಾಮೃಗದಂತೆ ಮಿಂಚಿದ ಒಂದು ಕಡವೆಯಷ್ಟೇ ಅಂದು ನಮ್ಮ ನೆನಪಿಗೆ ಠೇವಣಿ.

ಬಿಸಿ ಬಿಸಿ ಬೋಂಡಾ, ಚಾ ಚಾಲನೆಯೊಡನೆ ನಾವು ಶಿಬಿರಾಗ್ನಿ ಸಂಭ್ರಮಕ್ಕೆ ಸಜ್ಜುಗೊಂಡೆವು. ಗೌಡರು ನಮಗಾಗಿ ಮೇಲಂಗಳದಲ್ಲಿ ಪ್ರತ್ಯೇಕ ಕುಂಡದಲ್ಲೇ ಬೆಂಕಿ ಎಬ್ಬಿಸಿ, ಸುತ್ತ ಕುರ್ಚಿ ಜೋಡಿಸಿ ಕೊಟ್ಟರು. ಆದರೆ ನಾಲ್ಕೂ ದಿನ ನಮ್ಮನ್ನು ಆತ್ಮೀಯವಾಗಿ ವಿಚಾರಿಸಿಕೊಳ್ಳುತ್ತಲೇ ಇದ್ದ ಪಿರಿಪಿರಿ ಮಳೆರಾಯರು ಜತೆಯಲ್ಲೇ ಚಳಿಯಪ್ಪಯ್ಯನವರನ್ನು ಕಟ್ಟಿಕೊಂಡು ಹಾಜರಿ ಹಾಕಿದರು! ಅದೂ ಉದ್ದಕ್ಕೆ ಬರಲಿಲ್ಲ, ಬಿಟ್ಟು ಬಿಟ್ಟು ಬಂತು. ನಾವು ಬೆಂಕಿಗೆ ಅಮರುವುದು, ಹೊಗೆಗೆ ದೂರುವುದು, ಹನಿ ಬಲಗೊಂಡಾಗ ಮರೆಗೆ ಸರಿಯುವುದು, ನಡುವೆ ಗೌಡರು ಪೂರೈಸಿದ ಪುಟ್ಟ ತಿನಿಸು ಕುರುಕುವುದು ನಡೆದೇ ಇತ್ತು. ಪ್ರತಿದಿನ ಸಂಜೆ ಒಂದೆರಡು ಗಂಟೆಯುದ್ದಕ್ಕೆ ಪ್ರವಾಸದ ಅನಿವಾರ್ಯ ಭಾಗವೇ ಆಗಿದ್ದ ಪಾನಗೋಷ್ಟಿಯಂತೂ ಇಲ್ಲಿ ತುಸು ದೀರ್ಘಾವಧಿಗೇ ನಡೆಯಿತು. ಒಟ್ಟಾರೆ ಆತ್ಮೀಯ ಮಾತು, ಪ್ರಸ್ತುತ ಸೈಕಲ್ ಮಹಾಯಾನದ ಬಗ್ಗೆ ವಿಮರ್ಶೆ ನಡೆಸುವುದರಲ್ಲಿ ಊಟವೇ ಮರೆತು ಹೋಗಿತ್ತು ಎಂದರೆ ತಪ್ಪಾಗದು! ಕೊನೆಗೆ ಅಲ್ಲಿನ ನೌಕರರ ದಿನಚರಿಗೆ ಭಾರೀ ವ್ಯತ್ಯಯ ಬರಬಾರದು ಎಂಬ ಗೌಡರ ವಿನಂತಿಗೆ ಒಪ್ಪಿ, ನಾವು ಊಟ ಮಾಡಿ ಮಲಗುವಾಗ ಗಂಟೆ ಹನ್ನೊಂದೇ ಕಳೆದಿತ್ತು.

“ವನ್ಯ ಮೃಗಗಳು ಹಗಲು ರಾತ್ರಿಯ ಸಂಧಿ ಸಮಯಗಳಲ್ಲಿ (ಮುಂಜಾನೆ ಮತ್ತು ಸಂಜೆ) ಹೆಚ್ಚು ಚಟುವಟಿಕೆಯಿಂದಿರುತ್ತವೆ” ಎನ್ನುವುದು ಪರಿಣತರ ಮಾತು. ಅವುಗಳಲ್ಲಿ ಗೊರಸಿನ ಪ್ರಾಣಿಗಳು ಅಂದರೆ ಜಿಂಕೆ, ಕಡವೆಯಂಥವಕ್ಕೆ ಇಲ್ಲಿ ಮನುಷ್ಯ ತಮ್ಮನ್ನು ಬಲಿ ಹಾಕುವುದಿಲ್ಲ, ಬದಲಿಗೆ ಹುಲಿ ಚಿರತೆಯಂಥ ಬೇಟೆಗಾರರಿಂದ ರಕ್ಷಣೆ ಕೊಡುತ್ತಾನೆ ಎಂಬ ಭರವಸೆ ಮೂಡಿದಲ್ಲಿ, ರಾತ್ರಿಯ ನಿದ್ದೆಗೆ ಮನುಷ್ಯ ವಸತಿಗಳ ಸಮೀಪವೇ ಒಗ್ಗೂಡುತ್ತವೆ. ಬಂಡಿಪುರ, ನಾಗರಹೊಳೆಯಂಥ ವನಧಾಮಗಳಲ್ಲಿ ವಸತಿ ಸಮೂಹಗಳ ಅಂಗಳಗಳಲ್ಲಿ ರಾತ್ರಿ ಸಾವಿರ ಸಂಖ್ಯೆಯಲ್ಲಿ ಜಿಂಕೆ, ಕಡವೆಗಳು ಬಂದು ಸೇರುವುದನ್ನು ನೋಡುವುದೇ ಒಂದು ಹಬ್ಬ. ಇಂಥದ್ದೇ ಸೂಚನೆಯನ್ನು ಸಂಜೆಯೇ ಗೌಡರು ನಮಗೆ ಕೊಟ್ಟಿದ್ದರು.

ನಮ್ಮ ಸಂಜೆ ಚಾರಣದ ಜಾಡಿನಲ್ಲೂ ತುಂಬ ವ್ಯಾಪಕವಾಗಿದ್ದ ವನ್ಯಮೃಗಗಳ ಗೊರಸಿನ ಜಾಡು, ಕೇವಲ ಕೆಲವು ಗಂಟೆಗಳಷ್ಟೇ ಹಳತಾದ ಸೆಗಣಿ ಎಲ್ಲ ಅವರ ಮಾತನ್ನೇ ಬೆಂಬಲಿಸಿತ್ತು. ಆದರೆ ನಮ್ಮ ಗದ್ದಲದಲ್ಲಿ ಅವುಗಳ ಆಗಮನದ ಚಂದ ನೋಡಲು ತಪ್ಪಿಸಿಕೊಂಡೆವು. ಊಟವಾದ ಮೇಲೆ ಪರಿಸರ ಮರೆತು, ನಿದ್ರೆಯೇ ಮುಖ್ಯವಾಗಿ, ಬಾಣೆಗೆ ದೀಪ ಬಿಟ್ಟು ನೋಡುವ ಕುತೂಹಲವನ್ನೇ ಕಳೆದುಕೊಂಡಿದ್ದೆವು. ಕೊನೆಯ ಅವಕಾಶವೆಂದು ಬೆಳಿಗ್ಗೆಯೂ ನಮ್ಮವರು ಜಾಗೃತರಾಗಲೇ ಇಲ್ಲ. ಇನ್ನೊಂದು ಬಳಗ ಮೊದಲ ಬೆಳಕಿಗೇ ಎದ್ದಿದ್ದರೂ ಪರಿಸರ ಕುತೂಹಲ ಉಳಿಸಿಕೊಳ್ಳದೆ, ಅಂಗಳದ ಹುಲ್ಲ ಹಾಸಿನ ಮೇಳೆ ಕ್ರಿಕೆಟ್ ಗದ್ದಲ ನಡೆಸಿದ್ದರು. ನಾವು ಅಪರಾಧೀ ಪ್ರಜ್ಞೆಯಲ್ಲಿ ತಿಂಡಿ ತಡವಾದರೂ ಸರಿ ಎಂದು ಚಾರಣವೇನೋ ನಡೆಸಿದೆವು.

ಮಾರ್ಗದರ್ಶಿ ನಮ್ಮನ್ನು ಸುಮಾರು ಒಂದೂವರೆ ಗಂಟೆಯಷ್ಟು ತೊರೆಯುದ್ದಕ್ಕೆ ಕರೆದೊಯ್ದ. ಹುಲ್ಲುಗಾವಲಿನ ಒಂದು ಮೂಲೆಯಲ್ಲಿ ಏನೋ ಹೊಂಚು ಹಾಕಿದ್ದ ಒಂದು ನರಿ ಬಿಟ್ಟರೆ ಬೇರೇನೂ ಕಾಣ ಸಿಕ್ಕಲಿಲ್ಲ. ಪಾರ್ಸನ್ಸ್ ಬೋಗುಣಿಯಲ್ಲಿ ವಿರಾಮಕ್ಕೆ ಹರಿದಿದ್ದ ಪುಟ್ಟ ತೊರೆ, ಅದರ ಇಕ್ಕೆಲಗಳ ಹಸಿರು ಬಾಣೆಗಳು, ಎಲೆಯೆಲ್ಲ ಮುಳ್ಳೇ ಆದರೂ ಮೋಹಕ ಹೂ ಬಿಟ್ಟ ಪೊದರುಗಳು, ಶೀತ ವಲಯಕ್ಕೆ ಸಹಜವಾದ ಪೈನ್ ವರ್ಗದ ಭಾರೀ ಮರಗಳು ಮೋಹಕವಾಗಿದ್ದವು. ಅವುಗಳ ನಡುವಣ ಸೋಮಾರಿ ನಡಿಗೆ ಕಳೆದ ನಾಲ್ಕು ದಿನಗಳ ವೇಗ, ಶ್ರಮಗಳಿಗೆ ಸೂಕ್ತ ಪ್ರತ್ಯೌಷಧದಂತೆ ಕೆಲಸ ಮಾಡಿತು. ಹತ್ತು ಗಂಟೆಯ ಸುಮಾರಿಗೆ ವಸತಿಗಳಿಗೆ ಮರಳಿ, ಬೆಳಗ್ಗಿನ ಉಪಾಹಾರವನ್ನು ಮುಗಿಸಿಕೊಂಡೆವು. ಕೊನೆಯಲ್ಲಿ ದೀಪಕ್ ವ್ಯವಸ್ಥೆ ಮಾಡಿದ್ದ `ಫೋಟೋ ಸೆಶನ್.’ ಅನಂತರ ಗಂಟುಮೂಟೆ ಕಟ್ಟಿ ವಿರಾಮಧಾಮಕ್ಕೆ ವಿದಾಯ ಹೇಳಿದೆವು.

ವನ್ಯಪರಿಣತ ಮಾರ್ಗದರ್ಶಿಗಳನ್ನಿಟ್ಟುಕೊಂಡು, ನಿಜ ವನಧಾಮಗಳಲ್ಲಿ ಗಂಭೀರ ಆಸಕ್ತಿಯೊಂದಿಗೆ ವನ್ಯವೀಕ್ಷಣೆ ಮಾಡಿದವರ ಲೆಕ್ಕದಲ್ಲಿ ಹೇಳುವುದಿದ್ದರೆ ಪಾರ್ಸನ್ ಕಣಿವೆಯ ವಿರಾಮಧಾಮ ಏನೂ ಅಲ್ಲ. ಹೋಗಲಿ ಆ ಸುಂದರ ವಾತಾವರಣದಲ್ಲಿ ಊಟ, ವಸತಿ, ಅಪ್ಪಟ ನಾಗರಿಕ ಖಯಾಲಿಗನುಗುಣವಾಗಿ ಸವಲತ್ತುಗಳು (ಉದಾಹರಣೆಗೆ – ಅಜೀರ್ಣವಾಗುವಷ್ಟು ತಿನಿಸು ಪಾನೀಯಗಳ ಪೂರೈಕೆ, ಸುಂದರ ಕೋಣೆ, ಒಳಾಂಗಣ ಆಟಗಳು, ಟೀವಿ, ಈಜುಕೊಳ, ಕಾರಂಜಿ, ಉದ್ಯಾನವನ, ನೃತ್ಯನೆಲಗಳು ಇತ್ಯಾದಿ) ಇವೆಯೇ ಎಂದು ನೋಡಿದರೆ ಗೌಡರ ವ್ಯವಸ್ಥೆ ತೀರಾ ಕಳಪೆ ಎಂದು ವಿಷಾದದಿಂದಲೇ ಹೇಳಬೇಕು. ನನ್ನ ಲೆಕ್ಕಕ್ಕೆ, ನಗರದಲ್ಲಿ `ಸತ್ತ-ಜೀವ’ಗಳಿಗೆ ಕಚ್ಚಾವನ್ಯದ ಸಣ್ಣ ರಮ್ಯ ಸ್ಪರ್ಷ ಕೊಡುತ್ತದೆ ಎನ್ನುವುದಕ್ಕಷ್ಟೇ ಪಾರ್ಸನ್ ಕಣಿವೆಯ ವಿರಾಮಧಾಮ ಸೀಮಿತ.

ಮೊದಲ ಕಿಮೀಯಲ್ಲಿ ಮಾತ್ರ ವಾಹನಗಳನ್ನು ಇಳಿಸಿದಷ್ಟೇ ಕಷ್ಟದಲ್ಲಿ ಏರಿಸಿದೆವು. ಮತ್ತೆ ವಿಶೇಷ ಕಷ್ಟ ಪಡದೆ ಹೆದ್ದಾರಿ ಸೇರಿದೆವು. ಅಲ್ಲಿ ಮೂರು ವಾಹನಗಳು ಮೈಸೂರಿನತ್ತ ಮುಖ ತಿರುಗಿಸಿದರೆ, ಒಂದು ಊಟಿಗಾಗಿ ಕೊಯಂಬತ್ತೂರು. ಗುಡಲೂರಿನ ಹೋಟೆಲೊಂದರಲ್ಲಿ ಊಟ ಮುಗಿಸಿ ಮುಂದುವರಿದೆವು. ಮುದುಮಲೈ ವನಧಾಮದೊಳಗಿನ ದಾರಿ ತೀರಾ ಕೆಟ್ಟಿತ್ತು. ಅದರಲ್ಲಿ ನಮ್ಮಿಂದ ಸ್ವಲ್ಪ ಮುಂದಿದ್ದ ಯಾವುದೋ ಮಲಯಾಳಿಗಳ ಕಾರು ಹಾಗೂ ಎದುರಿನಿಂದ ಬಂದ ತಮಿಳರ ಲಾರಿ ದಾರಿ ಹಂಚಿಕೊಳ್ಳುವಲ್ಲಿ ಮಾತಿನ ಗಡಿ ದಾಟಿದರು. ಸರಿ, ಇತರರ ಸಂಚಾರಕ್ಕೆ ಅಡ್ಡಿ ಮಾಡಿ ಅವರು ಪರಸ್ಪರ ತೋಳ್ಬಲದಲ್ಲಿ ನ್ಯಾಯ ಹುಡುಕುವ ಪ್ರಯತ್ನ ನಡೆಸಿದರು. ಎರಡೂ ತಂಡ ಮದಿರಾದೇವಿಯ ಸೆರೆಯಲ್ಲಿದ್ದಿರಬೇಕು. ಪೆಟ್ಟಿಗಿಂತ ಬೀಸು ಜಾಸ್ತಿ, ತಿಂದದ್ದಕ್ಕಿಂತ ತಪ್ಪಿಸುವ ನಡೆಯಲ್ಲೇ ಮಗುಚಿದ್ದು ಹೆಚ್ಚು. ಮೂರನೇ ದರ್ಜೆಯ ಸಿನಿಮಾವೊಂದರ ನೀರಸ ಫೈಟ್ ಸೀನ್ ನೋಡುವುದರಲ್ಲಿ ನಮ್ಮ ಅರ್ಧ ಗಂಟೆಯೇ ಕಳೆದುಹೋಯ್ತು. ಮಲಯಾಳಿಯ ಉದುರಿ ಹೋದ ಪಂಚೆ, ಪೊದರಿನಾಚೆಗೆ ಉರುಳಿದಾಗ ತಮಿಳ ಕಳೆದುಕೊಂಡ ಜೇಬಿನ ಹೂರಣ, ಇನ್ನೋರ್ವನ ಹರಿದ ಅಂಗಿ, ಮತ್ತೋರ್ವನ ರಕ್ತ ಜಿನುಗಿದ ಮೂಗುಗಳ ಕೊನೆಯಲ್ಲಿ ನಾವಿನ್ನು ನ್ಯಾಯಾಧಿಪತಿಗಳೋ ಸಂಧಿವಿಗ್ರಹಿಗಳೋ ಆಗಬೇಕು ಎಂದು ಹೆದರಿದ್ದೆವು. ಅದೃಷ್ಟಕ್ಕೆ ಅವರನ್ನು ಸುಧಾರಿಸುವ ಕಷ್ಟವಿಲ್ಲದೆ ದಾರಿ ತೆರವಾದಾಗ ಹೆಚ್ಚು ಯೋಚನೆ ಮಾಡದೇ ಸ್ಥಳ ಖಾಲೀ ಮಾಡಿದೆವು.

ಬಂಡೀಪುರದ ಪಗ್ ಮಾರ್ಕ್ ಹೋಟೆಲಿನಲ್ಲಿ ಒಳ್ಳೆಯ ಕಾಫಿಯಾಯ್ತು. ಗುಂಡ್ಲುಪೇಟೆಯಲ್ಲಿ ಮೈಸೂರು ದಾರಿ ಎಡಕ್ಕೆ ಬಿಟ್ಟು ಮತ್ತೆ ಚಾಮರಾಜನಗರ ಸೇರಿದೆವು. ಮುಂದೆ ನಾವು ನಾಲ್ಕು ದಿನದ ಹಿಂದೆ ಸೈಕಲ್ ಚಕ್ರದ ಗುರುತು ಹಚ್ಚಿದ್ದ ದಾರಿಯನ್ನೇ ಕಾರು, ವ್ಯಾನುಗಳ ಚಕ್ರದಲ್ಲಿ ಅಳಿಸುತ್ತಾ ಬೆಂಗಳೂರು ಸೇರುವಾಗ ರಾತ್ರಿ ಹನ್ನೊಂದೂವರೆಯೇ ಆಗಿತ್ತು. ಬಾಲು ಎಲ್ಲರನ್ನೂ ಸೈಕಲ್ ಸಹಿತ ಅವರವರ ಮನೆಗಳಿಗೇ ಮುಟ್ಟಿಸುವ ವ್ಯವಸ್ಥೆ ಮಾಡಿದ್ದರು. ಮಹಾಯಾನದ ಮೊದಲ ಮೂರು ದಿನ ಪೇರುತ್ತ ಹೋದ ಸವಾರಿಯ ಕಾಠಿಣ್ಯ ಮತ್ತಿನ ಎರಡು ದಿನಗಳಲ್ಲಿ ಇಳಿಯುತ್ತ ಬಂದಿತ್ತು. ಮನೆ ಸೇರುವಾಗಂತೂ ತುಸು ನಿದ್ದೆಗೇಡಿತನ ಬಿಟ್ಟರೆ ಬಳಲಿಕೆಯೇ ಮರೆತು ಹೋಗಿತ್ತು. ಒಯ್ದ ಬಟ್ಟೆಗಳ ಕೊಳೆ, ಸೀಮಿತವಾಗಿಯೇ ಹಿಡಿದರೂ ಇದ್ದ ಚಿತ್ರಗಳ ರಾಶಿಯಲ್ಲದಿದ್ದರೆ ನಮ್ಮನ್ನು ಮನೆಯವರೇ ನಂಬದ ಲವಲವಿಕೆ ತುಂಬಿತ್ತು.

ಪಾರ್ಸನ್ ಕಣಿವೆಯ ಶಿಬಿರಾಗ್ನಿ ಸಂದರ್ಭದಲ್ಲಿ ಬಾಲು ಎಲ್ಲರ ಎದುರೇ ಬೀಯೆಂಬೀಟಿ ಸಂಘಟನೆಯ ಕುರಿತು ನನ್ನ ಅಭಿಪ್ರಾಯ ಕೇಳಿದ್ದರು. ಪ್ರಾಮಾಣಿಕವಾಗಿ ನನ್ನ ಸಂತೋಷವನ್ನೇ ಹೇಳಿಕೊಂಡಿದ್ದೆ. ಆದರೆ ಅಷ್ಟಕ್ಕೆ ಬಿಡದೆ, ನನ್ನ ಪ್ರಾಯ ಮತ್ತು ಅನುಭವದ ಹಿರಿತನದೊಂದಿಗೆ ವಿಮರ್ಶಾ ಮಾತುಗಳೇ ಬೇಕೆಂದರು. ಎಲ್ಲೂ ಯಾರದ್ದೂ ವೈಯಕ್ತಿಕ ಇಷ್ಟಾನಿಷ್ಟಗಳನ್ನು ನೋಯಿಸದೆ ನಡೆಸಿಕೊಂಡ ಬಳಗವನ್ನು, ವಿಮರ್ಶೆಯ ಒರೆಗೆ ಹಚ್ಚುವುದು ಅಷ್ಟು ಸುಲಭದ ಕೆಲಸವಲ್ಲ. ಅವಸರದ ಮಾತಿನ ಚಪಲದಲ್ಲಿ ಅವರಿಟ್ಟ ವಿಶ್ವಾಸ ಹುಸಿಯಾಗಬಾರದೆಂಬ ಎಚ್ಚರದಲ್ಲಿ, ಮಂಗಳೂರು ಸೇರುವವರೆಗೆ ಯೋಚಿಸಲು ಸಮಯ ಕೇಳಿದ್ದೆ. ಈಗ ಪ್ರವಾಸ ಕಥನದ ನೆಪದಲ್ಲಿ ಇಷ್ಟುದ್ದ ಮನೋಮಂಥನ ನಡೆಸಿದಾಗ ನನಗೆ ಕಂಡದಿಷ್ಟು:

ನಾಲ್ಕು ದಿನಗಳಲ್ಲಿ ಸುಮಾರು ಎಂಟ್ನೂರು ಕಿಮೀ ಪಯಣ, ಬಯಲುಸೀಮೆ ಬೆಂಗಳೂರಿನ ಬಿಸಿಯಿಂದ ಪಶ್ಚಿಮ ಘಟ್ಟದ ಉನ್ನತ ಶ್ರೇಣಿಯ ಶಿಖರ ಸಾಲಿನೆತ್ತರದ ಶೀತವಲಯಕ್ಕೆ ಏರಿ ಮರಳಿದ್ದು, ಸುಮಾರು ಹದಿನೈದು ಇಪ್ಪತ್ತು ಮಂದಿಯೊಡನೆ ಐದು ದಿನಗಳ ಆತ್ಮೀಯ ಒಡನಾಟ, ಕೊನೆಯಲ್ಲೂ ದೇಹ ಮತ್ತು ಮನಸ್ಸುಗಳಲ್ಲಿ ಪೂರ್ಣ ಸುಖಾನುಭವದ ಶ್ರೀಮಂತರಾಗಿ ಮನೆ ಸೇರುವಂತಾದ್ದು ನಿಸ್ಸಂದೇಹವಾಗಿ ಬೀಯೆಂಬೀಟಿಯ ಸಾಧನೆ. ಆದರೆ ಇವೆಲ್ಲಕ್ಕೂ ಏಕೈಕ ಆಧಾರ ಸೈಕಲ್. ಮನುಷ್ಯನ ಚಲನಶೀಲತೆಯನ್ನು ಅನ್ಯ ವೆಚ್ಚಗಳಿಲ್ಲದೇ ಅಪಾರ ವಿಸ್ತರಿಸುವುದರೊಂದಿಗೆ ಆರೋಗ್ಯದಾಯಿಯೂ ಆದ ಸರಳ ಯಂತ್ರ – ಸೈಕಲ್! ಅಂಥ ಸೈಕಲ್ಲಿನ ತತ್ತ್ವಕ್ಕೆ ವಿರೋಧಿಯಾದ ಪಾನಗೋಷ್ಠಿಯನ್ನು ಸಾರ್ವಜನಿಕ ನೆಲೆಯಲ್ಲಿ ಪ್ರತಿ ಸಂಜೆ ಮಾಡಿದ್ದು ನನಗೆ ಸರಿ ಕಾಣಲಿಲ್ಲ. ತಂಡದಲ್ಲಿ ಕೆಲವರು ಚಟದಾಸರಾಗಿ ಸಿಗರೇಟು ಸೇದುತ್ತಿದ್ದರು. ದೇಹದ ಕೊರತೆಗಳಿಗೆ ಅನಿವಾರ್ಯವಾಗಿ ಏನೇನೋ ಔಷಧಿ ಸೇವಿಸುವವರಂತೂ ಇದ್ದಿರಲೇಬೇಕು. ಹಾಗೇ ಪೂರ್ಣ ಖಾಸಗಿ ಸಮಯ ಮತ್ತು ಅನುಕೂಲಗಳಲ್ಲಿ ಪಾನ ನಡೆದಿದ್ದರೆ ಆಕ್ಷೇಪಿಸಲು ನಾನು ಅಧಿಕಾರಿಯಲ್ಲ. ಆದರೆ ತಂಡ ಒಂದಾಗಿ ವಿಚಾರ ವಿನಿಮಯ ಮತ್ತು ಆತ್ಮೀಯತೆಯ ವಿಸ್ತರಣೆಯಾಗಬೇಕಿದ್ದ ವೇಳೆಯಲ್ಲಿ ಅಮಲು ಸೇವನೆ ಯೋಜನೆಯ ಭಾಗವಾಗಿಯೇ ರೂಪುಗೊಂಡದ್ದು – ಅದೆಷ್ಟು ಮಿತಿಯಲ್ಲಿದ್ದರೂ ತಪ್ಪು. ಇದು ಎಲ್ಲೂ ಹದ ತಪ್ಪಿದ್ದಿಲ್ಲ, ಸೇವಿಸದವರನ್ನು ಯಾರೂ ಒತ್ತಾಯಿಸಿದ್ದೂ ಇಲ್ಲ. ಪರ್ಯಾಯ ಬಯಸುವವರಿಗಾಗಿ ಲಘು ಪಾನೀಯದ ಅವಕಾಶವನ್ನೂ ಮಾಡಿತ್ತು. ಆದರೂ ಸಮೂಹ ಕಲಾಪವಾಗಿ ಇದನ್ನು ಯೋಜಿಸಿದ್ದೇ ಸರಿಯಲ್ಲ. ಥಂಸಪ್ ಕೋಕಾಕೋಲದಂಥ ಲಘು ಪಾನೀಯಗಳಾದರೂ ಆರೋಗ್ಯಪೇಯವಲ್ಲ ಎಂದು ವೈದ್ಯರೂ ಭಾಗವಾಗಿಯೇ ಇರುವ ಸಂಘಟನೆಗೆ ನಾನು ತಿಳಿಸಬೇಕೇ? (ಡಾ| ಶೇಖರ್ ರಾವ್ ತಂಡದ ಸಹಯೋಗಕ್ಕಾಗಿ ಥಂಸಪ್ ಕುಡಿಯುತ್ತಿದ್ದರು, ನಾನು ಅದನ್ನೂ ಸೇವಿಸಲಿಲ್ಲ) ಇದರ ಆರ್ಥಿಕ ಆಯಾಮವನ್ನು ಏನೂ ಕುಡಿಯದ ನಾನೊಬ್ಬನೇ ಪ್ರಶ್ನಿಸುವುದು ಹೆಚ್ಚಾಗುತ್ತದೋ ಏನೋ! ತಂಡದಲ್ಲಿ ಆಹಾರದ ಭಾಗವಾಗಿ ಸಸ್ಯ, ಮಾಂಸಗಳ ಬೇಧ, ವೈಯಕ್ತಿಕ ತಿನ್ನುವ ಸಾಮರ್ಥ್ಯದಲ್ಲಿ ಹೆಚ್ಚು ಕಡಿಮೆಯ ಅಳತೆ ಎಲ್ಲ ಲೆಕ್ಕ ಹಾಕುವುದು ನಾನೊಪ್ಪುವುದಿಲ್ಲ. ಆದರೆ ಕೇವಲ ವಿಲಾಸದ ಅಂಗವಾದ ಪಾನಗೋಷ್ಟಿ ಸೈಕಲ್ ಮಹಾಯಾನದಂಥ ಆರೋಗ್ಯಕೂಟಕ್ಕೆ ಖಂಡಿತಾ ಹೇಳಿದ್ದಲ್ಲ. (ನನ್ನ – ಆರೋಹಣ, ತಂಡದಲ್ಲಿ ಧೂಮ ಹಾಗೂ ಮದಿರಾಪಾನ ಸದಾ ನಿಷಿದ್ಧ)

ನನ್ನ ಲೆಕ್ಕಕ್ಕೆ ಸೈಕಲ್ ಒಂದು ಮಾಧ್ಯಮ. ಅದರ ಉತ್ತಮಿಕೆಗಾಗಿ ಸಮಯ, ವೇಗ, ಅಂತರಗಳನ್ನು ಲೆಕ್ಕ ಹಾಕುವುದು ಅವಶ್ಯ. ಅದರ ವ್ಯಾಪ್ತಿಯನ್ನು ಹೆಚ್ಚಿಸುವಂತೆ ವಿನ್ಯಾಸಗಳನ್ನು ಉತ್ತಮಪಡಿಸುತ್ತಿರುವುದೂ ಆಗಲೇಬೇಕಾದ್ದು. ಇವುಗಳಿಗಾಗಿ ಬ್ರಿವೆಯಿಂದ ತೊಡಗಿ, ಟೂರ್ ಡಿ ಫ್ರಾನ್ಸಿನವರೆಗೂ ಸಾಮರ್ಥ್ಯವಂತರು ಸ್ಪರ್ಧಿಸುವುದು, ಯೋಚಿಸುವುದು ನಡೆಯುತ್ತಿರಲೇಬೇಕು. ಆದರಿವೆಲ್ಲ ಸೂಜಿಯ ಮೊನೆಯಿದ್ದಂತೆ. ಅದನ್ನು ಹಿಂಬಾಲಿಸುವ ದಾರಕ್ಕೆ ಕೊನೆಯಿಲ್ಲ ಎನ್ನುವುದನ್ನು ಮರೆಯುವಂತಿಲ್ಲ! ಬಹುಶಃ ಇದನ್ನು ಗಮನಿಸಿಯೇ ಬೀಯೆಂಬೀಟಿ ಸ್ಪರ್ಧೆಯಿಲ್ಲದ ನಮ್ಮೀ ಶುದ್ಧ ಪ್ರವಾಸವನ್ನು ಆಯೋಜಿಸಿತ್ತು. ಹೀಗೇ ಉದಕಮಂಡಲದೆತ್ತರ, ಕನ್ಯಾಕುಮಾರಿಯ ದೂರ, ಹಿಮಾಲಯದ ನೆಲ, ರಾಜಸ್ತಾನದ ಹವೆ ಎಂದೆಲ್ಲ ಪಟ್ಟಿ ಮಾಡಿದಷ್ಟೂ ಮುಗಿಯದ ಸಾಧನೆಗೆ ಸೈಕಲ್ಲನ್ನು ಬಳಸುತ್ತಲೇ ಬಂದಿರುವುದು ಎಲ್ಲರಿಗೂ ತಿಳಿದೇ ಇದೆ. ಹಾಗಿರುವಾಗ ದಾರಿಯಲ್ಲಿನ ಪ್ರೇಕ್ಷಣೀಯ ಅಂಶಗಳ ಆಯ್ದ ವೀಕ್ಷಣೆ ನಮ್ಮ ಮಹಾಯಾನಕ್ಕೆ ಜೋಡಣೆಗೊಳ್ಳಬೇಕಿತ್ತು. ಉದಾಹರಣೆಗೆ ಶಿಂಷಾದಲ್ಲಿ ನಾವು ಕಾಫಿಗೋ ಊಟಕ್ಕೋ ತುಸು ಹೆಚ್ಚು ನಿಲ್ಲುವಂತೆ ಮಾಡಬಹುದಿತ್ತು. ವನಧಾಮದ ಭಾಗವಾದ ಪಾರ್ಸನ್ ಕಣಿವೆಯಲ್ಲಿ ತಂಗುತ್ತೇವೆಂದ ಮೇಲೆ ಅಲ್ಲಿನ ಪರಿಸರವನ್ನು ಒಳಗೊಳ್ಳುವ ಕಲಾಪ ಅವಶ್ಯ ರೂಪುಗೊಳ್ಳಬೇಕಿತ್ತು. ವಿರಾಮಧಾಮದಲ್ಲಿ ಅಣಕು ಶಿಬಿರಾಗ್ನಿಯೆದುರು ಸಮಯ ಕಳೆದು, ವಠಾರದ ಹೊರಗೆ ನೆರೆದಿದ್ದಿರಬಹುದಾದ ವನ್ಯಮೃಗಗಳನ್ನು ಕಾಣುವ ಪ್ರಯತ್ನವನ್ನೇ ಕೈಚೆಲ್ಲಿದ್ದು ಏನೇನೂ ಸರಿಯಲ್ಲ. ಇಂಥ ವಿಪರೀತದಲ್ಲಿ `ಅಳಿದೂರಿಗೆ ಉಳಿದವನೇ ಗೌಡ’ ಎನ್ನುವಂತೆ ನಾನು ತೋರಿದ್ದು ಆಶ್ಚರ್ಯವಲ್ಲ. ಅವಕಾಶ ಸಿಕ್ಕಲ್ಲೆಲ್ಲ ಚೂರುಪಾರು ತಿಳಿದುಕೊಳ್ಳಲು ಪ್ರಯತ್ನಿಸುವ ನನ್ನನ್ನು ನನಗೇ ಮುಜುಗರವಾಗುವಂತೆ ವಿಶ್ವಕೋಶ ಮಾಡಿದಿರಿ. ನೀವು ಮುಖಸ್ತುತಿಗೆ ಹೇಳಿದಿರೋ ನಿಜವಾಗಿ ಹೇಳಿದಿರೋ ಎಂದು ನಾನು ಸಂಶಯಿಸುವುದಿಲ್ಲ. ನಾವೆಲ್ಲ ಭಾವಿಸುವ ಪರಮ ಕಲ್ಪನೆ – ದೇವರೂ (ಹಲವರಿಗೆ ಇದ್ದಾನೆ, ಕೆಲವರಿಗೆ ಇಲ್ಲ ಎನ್ನುವುದು ಪ್ರತ್ಯೇಕ, ಬಿಡಿ) ಸ್ತುತಿಪ್ರಿಯನೇ ಎಂದ ಮೇಲೆ ನಾನೇನು ಬಿಡಿ. ಒಳ್ಳೇ ಮಾತುಗಳಿಗೆ ಕೃತಜ್ಞ.

ಸಂಕೀರ್ಣ ಯಂತ್ರಗಳನ್ನು, ವಿಶೇಷ ಆಹಾರ ಪಾನೀಯಗಳನ್ನು ನಿರಾಕರಿಸುವುದು, ಅರ್ಥಾತ್ ಸಹಜ ಮನುಷ್ಯ ಶಕ್ತಿಯ ಅವಲಂಬನೆ, ಸೈಕಲ್ ಚಾಲನೆಯಲ್ಲಿ ಬಹುಕಾಲ ಬಾಳಲು ಅವಶ್ಯ ಎಂದು ನಾನು ನಂಬಿದ್ದೇನೆ. ಸಾಂಪ್ರದಾಯಿಕ ಸೈಕಲ್ಲುಗಳನ್ನು ತಮ್ಮ ದೈನಂದಿನ ಕೆಲಸಗಳಿಗೆ ಹೊಂದಿಸಿಕೊಂಡು ಬಳಸುತ್ತಿದ್ದ ನಮ್ಮ ಹಿರಿಯರೆಲ್ಲ ಸೈಕಲ್ಲಿನಲ್ಲಿ ಬೆಲ್ಲು, ದೀಪಕ್ಕಿಂತ ಹೆಚ್ಚಿನ ಸಲಕರಣೆಗೆ ಮನ ಮಾಡಿದ್ದಿಲ್ಲ. ಆಹಾರ ಕ್ರಮದಲ್ಲಿ ಅವರು ಕನಿಷ್ಠ ನೀರಿನ ಬಾಟಲು ಇಟ್ಟುಕೊಂಡದ್ದೂ ಇಲ್ಲ, ಒಂದು ತುತ್ತು ಅನ್ನ ಹೆಚ್ಚು ಹೊಟ್ಟೆಗಿಳಿಸಿದ್ದೂ ಇಲ್ಲ ಎನ್ನುವುದನ್ನು ನಾವು ಮರೆಯಬಾರದು. (ಇದು ಪೂರ್ತಿ ಸರಿ ಎಂದಲ್ಲ.)

ಯಂತ್ರಗಳ ಹೆಚ್ಚಳದಿಂದ ಹೆಚ್ಚು ಆರೋಗ್ಯಪೂರ್ಣವಾದ ನೇರಾನೇರ ಮನುಷ್ಯ ಸಂವಹನ ಕಳೆದು ಹೋಗುತ್ತದೆ. ಇನ್ನು ಯಂತ್ರದ ಮಿತಿ ಕೈಕೊಟ್ಟಾಗಂತೂ ಕಂಗಾಲಾಗುವ ಪರಿಸ್ಥಿತಿಯೇ ಉದ್ಭವಿಸುವುದನ್ನು ನಾವು ತಪ್ಪಿಸಬೇಕು. ಈ ನಿಟ್ಟಿನಲ್ಲಿ ದೊಡ್ಡ ವೈರಿಯಾಗಿ ನಾನು ಕಾಣುವುದು ಚರವಾಣಿ. ಇದರ ಪರಿಣಾಮವನ್ನು ಸಣ್ಣದರಲ್ಲಿ ನಾವು, ಕೋತಗೇರಿ ದಾರಿಯಲ್ಲಿ ಸತೀಶ್ ಸಿಗದಾಗ (ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದರು) ಮತ್ತು ರಜನಿ ಊಟಿ ದಾರಿಯಲ್ಲಿ ಚಕ್ರದ ಗಾಳಿ ಕಳೆದುಕೊಂಡಾಗ (ಚಾರ್ಜ್ ಕಡಿಮೆಯಿತ್ತು) ಅನುಭವಿಸಿದ್ದೇವೆ. ಇದೇ ಪಾರ್ಸನ್ ಕಣಿವೆಯಂಥ ಪ್ರದೇಶಗಳಲ್ಲಾಗಿದ್ದರೆ (ಪೂರ್ಣ ವ್ಯಾಪ್ತಿ ಪ್ರದೇಶದೊಳಗೇ ಇಲ್ಲ) ಅಪಾಯಕಾರಿಯೂ ಆಗುವ ಸಾಧ್ಯತೆಯನ್ನು ಗಮನಿಸಬೇಕು. ಬದಲು ಪ್ರಯಾಣದಲ್ಲಿ ಸಾಮಾನ್ಯವಾಗಿ ಸಂದೇಹ ಕಾಡುವ ಕವಲು ದಾರಿಗಳಲ್ಲೆಲ್ಲ ತಿಳಿದವರು ಉಳಿದವರನ್ನು ಕಾದು, ಸೇರಿಸಿಕೊಂಡು ಮುಂದುವರಿದರೆ ಧೈರ್ಯಕ್ಕೂ ಆಯ್ತು, ಸಮೂಹ ಸ್ಫೂರ್ತಿಯೂ ಕಳೆಗಟ್ಟುತ್ತಿತ್ತು. (ನಮ್ಮ ಮಂಗಳೂರಿನ ಹೊಸ ತಲೆಮಾರಿನ ಕೆಲವು ಸೈಕಲ್ಲಿಗರನ್ನು ಕಾಣುವಾಗಂತೂ ನನಗೆ ಭಯವಾಗುತ್ತದೆ. ಅದೇನು ಸೈಕಲ್ಲೋ ಯುದ್ಧ ಸಜ್ಜಾದ ಯಂತ್ರವೋ!)

ಆಧುನಿಕ ಜೀವನಶೈಲಿಯಲ್ಲಿ ಪೇರಿಕೊಂಡ ಬೊಜ್ಜು, ಕಾಯಿಲೆಯೆಂದು ಭ್ರಮಿಸಿದ ನೋವುಗಳನ್ನು ತೊಲಗಿಸಲೆಂದೇ ಸೈಕಲ್ ಏರುತ್ತಿರುವ ತಲೆಮಾರು ನಮ್ಮದು. ಈ ಹೊಸ ತಲೆಮಾರಿನ ಕುರಿತು ಒಟ್ಟಾರೆ ಹೇಳುತ್ತೇನೆ – ಸಾಮಾನ್ಯ ಬಾಯಾರಿಕೆಗೂ ನೀರಿಗದೆಷ್ಟು ಪುಡಿಗಳು, ಜೂಸುಗಳು, ಶಕ್ತಿವರ್ಧಕ ಪೇಯಗಳು! ಇನ್ನು ಬಿಸ್ಕೆಟ್ ಚಾಕ್ಲೇಟಾದಿ ವೈವಿಧ್ಯಮಯ ತಿನಿಸುಗಳು – ಸ್ಪಷ್ಟ ಮಾತಿನಲ್ಲಿ ಹೇಳುವಂತೆ ವ್ಯರ್ಥ ತಿನಿಸು ಅಥವಾ ಝಂಕ್ ಫುಡ್ಸ್, ದಿನದ ಕೊನೆಯಲ್ಲಿ ನೋವು ನಿವಾರಕ ಗುಳಿಗೆಗಳನ್ನೆಲ್ಲ ಕಬಳಿಸುವುದು, ಶಿಫಾರಸು ಮಾಡುವುದು ಅಪಾಯಕಾರಿಯಾಗಿಯೇ ಕಂಡಿದ್ದೇನೆ. ಕರಗಿಸಿದ ಕೊಬ್ಬಿಗಿಂತ ಮರುಪೂರಣಗೊಳ್ಳುವ ಆಹಾರ ಕಂಡು ನಿಜಕ್ಕೂ ಕಂಗಾಲಾದದ್ದಿದೆ. ಆ ಲೆಕ್ಕದಲ್ಲಿ, ಉದಕಮಂಡಲ ಯಾತ್ರೆಯಲ್ಲಿ ನಮಗೆ ನಿತ್ಯ ಒಗ್ಗಿದವುಗಳನ್ನೇ ಧಾರಾಳ ಒದಗಿಸಿದ್ದು (ಕಿತ್ತಳೆ, ಬಾಳೆ, ಚಿಕ್ಕಿ, ಚಾ ಇತ್ಯಾದಿ) ನನಗಂತೂ ಅಪ್ಯಾಯಮಾನವಾಯ್ತು.

ಇತ್ತ ಮಂಗಳೂರಿನಿಂದ ಬಂದ ನನ್ನನ್ನು, ಅತ್ತ ಕೊಯಂಬತ್ತೂರಿನಿಂದ ಬಂದ ಜೋಡಿಯನ್ನೂ ಆತ್ಮೀಯ ಏಕ ಸೂತ್ರದಲ್ಲಿ ಬಂಧಿಸಿ, ಸೈಕಲ್ ಮೇಲಿನ ನೀಲಗಿರಿ ಮಹಾಯಾನ ೨೦೧೫ನ್ನು ಚಂದಗಾಣಿಸಿದ `ನೀಲಗಿರಿ ಸೈಕಲ್ ಪ್ರವಾಸಿ’ ಬಳಗಕ್ಕೆ ಅನಂತ ವಂದನೆಗಳು, ಅಭಿನಂದನೆಗಳು. ಇನ್ನಷ್ಟು ಇಂಥ ಯಾತ್ರೆಗಳನ್ನು ಸಂಯೋಜಿಸಿ ಮತ್ತು ಅವುಗಳಲ್ಲಿ ನನಗೆ ಭಾಗವಹಿಸುವ ಅವಕಾಶಗಳೂ ಕೂಡಿ ಬರಲಿ ಎಂದು ಹಾರೈಸುತ್ತೇನೆ.

(ಮುಗಿಯಿತು)