(ಅಶೋಕವರ್ಧನ ಮತ್ತು ಗಿರೀಶ್ ಪಾಲಡ್ಕ ಜುಗಲ್ಬಂಧಿಯಲ್ಲಿ ಡಾರ್ಜಿಲಿಂಗ್ ಪ್ರವಾಸ ಕಥನ)

ಅಶೋಕವರ್ಧನ: ನನ್ನಂಗಡಿಯ ಸಂಬಂಧದಲ್ಲಿ, ಕೇವಲ ಮುಖಪರಿಚಯವಿರುವ, ಬಂದವರು ಒಲವು ತೋರಿದರೆ ಸಮಯ ಕಳೆಯಲು ಮಾತಾಡಿದ (ಹೆಚ್ಚಿನವು ದೀರ್ಘ ಕಾಲ ನೆನಪುಳಿಯುವಂಥವೇನೂ ಅಲ್ಲ) ಪರಿಚಯಗಳಲ್ಲಿ ಗಿರೀಶ್ ಅಥವಾ ಈಗಿನ ಅವರ ವೃತ್ತಿ-ವಾಸ್ತವ್ಯ ನೋಡಿ ಹೇಳುವುದಿದ್ದರೆ ಗಿರೀಶ್ ಬಜ್ಪೆ ಒಬ್ಬರು. ಇವರು…

ಗಿರೀಶ್ ಪಾಲಡ್ಕ: ನಾನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಅಗ್ನಿ ಶಮನ ಪ್ರಚಾಲಕ (ಫ಼ೈರ್ ಅಪರೇಟರ್). ನನಗೆ ಈ ಕೆಲಸದ ಕುರಿತು ಮೊದ ಮೊದಲಿಗೆ ಸ್ವಲ್ಪ ಕೀಳರಿಮೆಯಿತ್ತು. ಈಗ ನೋಡಿದರೆ ಅದೇ ಹುದ್ದೆಗೆ ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವೀಧರರೂ ಬರುತ್ತಿದ್ದಾರೆ. ವಿಷಾದದ ಸಂಗತಿಯೆಂದರೆ ನಾವು ಬೆರಳೆಣಿಕೆಯಷ್ಟು ಜನ ಮಾತ್ರ ಕನ್ನಡಿಗರು ಈ ಕ್ಷೇತ್ರದಲ್ಲಿದ್ದೇವೆ. ಈಗ ಇದಕ್ಕೆ ಅವಶ್ಯವಿರುವ ಅರ್ಹತೆ ಪಿ.ಯು.ಸಿ. ಅಥವಾ ಎಲೆಕ್ಟ್ರಿಕಲ್ /ಮೆಕ್ಯಾನಿಕಲ್ /ಅಟೋಮೊಬಾಯಿಲ್ ಡಿಪ್ಲೋಮಾ ಹಾಗೂ ಘನ (ಹೆವಿ) ವಾಹನ ಚಾಲನೆಯ ಲೈಸನ್ಸ್ ಮಾತ್ರ. ಜತೆಗೆ ದೈಹಿಕ ಕ್ಷಮತೆ ಅವಶ್ಯಕ (ಸೈನ್ಯದ ಮಾದರಿ).

ಇತ್ತೀಚೆಗೆ ದಕ್ಷಿಣ ಕ್ಷೇತ್ರದ ವಿಮಾನ ನಿಲ್ದಾಣಗಳಿಗೆ ಆಯ್ಕೆಯಾದ ನೂರಾ ನಲವತ್ತೆಂಟು ಮಂದಿಯಲ್ಲಿ ಕನ್ನಡಿಗರ ಸಂಖ್ಯೆ ಶೂನ್ಯ! ನಮ್ಮಲ್ಲಿ ಬಂದ ೨೬ ಜನ ಹೊಸಬರೆಲ್ಲಾ ಕೇರಳಿಗರು. ಬಂದವರೇನೂ ಅಯೋಗ್ಯರಲ್ಲ. ಬಹುಪಾಲು ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವೀಧರರು. ಕರ್ನಾಟಕದಲ್ಲಿ ಅರ್ಹ ಅಭ್ಯರ್ಥಿಗಳ ಸಂಖ್ಯೆ ಸಾಕಷ್ಟಿದ್ದರೂ ಹೀಗೇಕೆ ಆಗುತ್ತಿದೆ ಎನ್ನುವುದು ಮಾತ್ರ ಯಕ್ಷಪ್ರಶ್ನೆ! ಈಗೆಲ್ಲಾ ಜಾಹೀರಾತುಗಳು ಜಾಲತಾಣ (ವೆಬ್ ಸೈಟ್) ನಲ್ಲಿ ಮಾತ್ರ ಬರುತ್ತವೆ. ನಾವು ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಪ್ರಚಾರ ನೀಡಿದ್ದೆವು. ತಕ್ಕಮಟ್ಟಿನ ಪ್ರತಿಕ್ರಿಯೆಯೂ ಇತ್ತು. ಆದರೂ ಹೀಗೇಕೆ ಅನ್ನುವುದು ಮಾತ್ರ ನಮಗೆ ತಿಳಿಯುತ್ತಿಲ್ಲ.

ಅಶೋಕವರ್ಧನ: ಗಿರೀಶರ ಹಳೇ ಮಾತುಕತೆಗಳಲ್ಲಿ ನನಗೆ ಇಂದಿಗೂ ನೆನಪಿನಲ್ಲುಳಿದದ್ದು – ಅವರು ದಿಲ್ಲಿಯಿಂದ ಅದೇನೋ ವಿಶಿಷ್ಟ `ಅಗ್ನಿರಥ’ವನ್ನು (ಆಡುಮಾತಿನಲ್ಲಿ ಹೇಳುವಂತೆ ಫಯರ್ ಇಂಜಿನ್ – ಭಾರೀ ಲಾರಿ) ಮಂಗಳೂರಿಗೆ ಓಡಿಸಿಕೊಂಡು ಬಂದ ಕಥನ. ಹೆದ್ದಾರಿಗಳಲ್ಲಷ್ಟೇ ಓಡಬಹುದಾದ ಅದರ ರಾಕ್ಷಸ ಗಾತ್ರ. ಅಲ್ಲೂ ಅದಕ್ಕೆ ಪ್ರತ್ಯೇಕವಾಗಿ ವಲಯದಿಂದ ವಲಯಕ್ಕೆ ದಾರಿ ವಿಭಾಗಕ್ಕೆ ಮುನ್ಸೂಚನೆ ಕೊಟ್ಟು ಅನುಮತಿ ಪಡೆದುಕೊಂಡೇ ಬರಬೇಕಾದ ಕಷ್ಟ. ಅದಕ್ಕೆ ಇಂಧನವೋ ವಿಮಾನ ಯೋಗ್ಯತೆಯದ್ದೇ ಆಗಬೇಕು. ಅದಕ್ಕೂ ಮುಂದಾಗಿ ಯೋಜನೆ ಮಾಡಿ ಇವರು ಹೊರಟರೂ ಸಣ್ಣ ಎಡವಟ್ಟು ಇವರನ್ನು ಸತಾಯಿಸಿದ ವಿವರಗಳೆಲ್ಲ ನನಗೆ ಅದ್ಭುತ ಸಾಹಸ ಕಥನದಂತೇ ಕಾಡಿತ್ತು. ಸರಿಯಾಗಿ ಬಸ್ ಸರ್ವೀಸೂ ಇಲ್ಲದ ಕಾಟು ಮೂಲೆಯ, ಬಡ ಉಪಾಧ್ಯಾಯರ ಪುತ್ರನೊಬ್ಬ ಇಷ್ಟು ಮುಂದುವರಿದ ವಿಮಾನ ಸಂಸ್ಥೆಯ ಭಾಗವಾದದ್ದಾದರೂ ಹೇಗೆ? ಅದನ್ನವರ ಮಾತಿನಲ್ಲೇ…

ಗಿರೀಶ್ ಪಾಲಡ್ಕ:‌‍ ನನ್ನ ಪೂರ್ತಿ ಹೆಸರು ಗಿರೀಶ್ ಕುಮಾರ್. ಊರು – ಹಿಂದೆ ಕಾರ್ಕಳ ತಾಲೂಕಿನಲ್ಲಿದ್ದು, ಈಗ ಮಂಗಳೂರು ತಾಲೂಕಿಗೆ ಸೇರಿರುವ ಪಾಲಡ್ಕ. ಮೂಡಬಿದ್ರೆಯಿಂದ ೯ ಕಿ. ಮೀ, ಕೊಡ್ಯಡ್ಕ ದೇವಸ್ಥಾನದಿಂದ ೩ ಕಿ. ಮೀ. ಈ ಕಡೆ ಪಕ್ಕ ಕಡಂದಲೆ. ಒಂದು ಕಾಲಕ್ಕೆ ಕುಗ್ರಾಮದಂತಿದ್ದ ಆದರೆ ಕೃಷಿ ಪ್ರಧಾನವಾಗಿದ್ದ ಊರು. ಈಗ ಇತರೆಡೆಗಳಂತೆ “ಅಭಿವೃದ್ಧಿ” ಕಾಣುತ್ತಿದೆ, ಇರಲಿ. ನನ್ನ ತಂದೆ ದಿ. ಬಿ. ಸಿ. ಮೊಯ್ಲಿ, ಎಡಪದವು ಹೈಸ್ಕೂಲಿನಲ್ಲಿ ಹಿರಿಯ ಅಧ್ಯಾಪಕರಾಗಿದ್ದವರು. ತಾಯಿ ದಿ. ಯಮುನಾ ಗೃಹಿಣಿಯಾಗಿದ್ದವರು.

ಪಾಲಡ್ಕದ ಸಂತ ಇಗ್ನೇಶಿಯಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲ ಶಿಕ್ಷಣ. ೧೯೧೫ ರಲ್ಲಿ ಸ್ಥಾಪಿತವಾದ ಈ ಶಾಲೆ ಈಗ ಶತಮಾನೋತ್ಸವವನ್ನು ಆಚರಿಸುತ್ತಿದೆ. ಆ ನಂತರ ಕಡಂದಲೆ ಸುಬ್ರಹ್ಮಣ್ಯ ಸ್ವಾಮೀ ಹೈಸ್ಕೂಲು. ಬಳಿಕ ಮೂಡಬಿದ್ರಿಯ ಮಹಾವೀರ ಕಾಲೇಜಿನಲ್ಲಿ ಪದವೀ ಪೂರ್ವ ಶಿಕ್ಷಣ. ಅದರಲ್ಲಿ ನಿರೀಕ್ಷೆಯಷ್ಟು ಅಂಕಗಳು ಬಾರದೇ ಇದ್ದ ಕಾರಣ ತಾಂತ್ರಿಕ ಶಿಕ್ಷಣಕ್ಕಾಗಿ ಚಿಕ್ಕಮಗಳೂರಿನ ಡಿ. ಎ. ಸಿ. ಜಿ. ಪಾಲಿಟೆಕ್ನಿಕ್ ಸೇರಿಕೊಂಡು ಡಿಪ್ಲೋಮಾ ಮುಗಿಸಿದೆ. ಸಹಜವಾಗಿ ಉದ್ಯೋಗ ಬೇಟೆ. ಬೆಂಗಳೂರು, ಆಂಧ್ರ ಪ್ರದೇಶ, ಹುಬ್ಬಳ್ಳಿ ಹೀಗೆಲ್ಲಾ ಸುತ್ತಿದ್ದಾಯಿತು. ಆ ನಂತರ ಉದ್ಯೋಗ ವಿನಿಮಯ ಕೇಂದ್ರದ ಮಾಹಿತಿಯ ಮೇರೆಗೆ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಈಗ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ) ದಲ್ಲಿ ಅಗ್ನಿ ಶಮನ ಪ್ರಚಾಲಕ (ಫ಼ೈರ್ ಅಪರೇಟರ್) ಹುದ್ದೆಯ ಸ್ಪರ್ದಾತ್ಮಕ ಪರೀಕ್ಷೆಗೆ ಭಾಗವಹಿಸಿದೆ. ಎನ್. ಸಿ, ಸಿ, ಯ ಹಿನ್ನೆಲೆಯೂ ಇದ್ದುದರಿಂದ “ಅಗ್ನಿ ಯೋಧ”ನಾಗುವ ಹುಮ್ಮಸ್ಸೂ ಇತ್ತೆನ್ನಿ. ಅವಶ್ಯಕ ಅರ್ಹತೆ ೧೦ ನೆ ಯ ತರಗತಿ ಪಾಸ್ ಹಾಗೂ ವಾಹನ ಚಾಲನೆಯ ಲೈಸನ್ಸ್. ಆಯ್ಕೆಯೂ ಆದೆ. ನಾಲ್ಕು ತಿಂಗಳ ಕಠಿಣ ತರಬೇತಿ ಕೊಲ್ಕತ್ತದಲ್ಲಿ. ಹೆಚ್ಚು ಕಡಿಮೆ ಮಿಲಿಟರಿ ತರಬೇತಿಯಂತೆಯೇ ಇತ್ತು. ಮೊದಲಿಗೆ ನಿರಾಸಕ್ತಿಯಂತಾದರೂ ಕ್ರಮೇಣ ಸಂಬಳ ಸವಲತ್ತುಗಳಲ್ಲಿ ಸ್ವಲ್ಪ ಸುಧಾರಣೆಯಾದುದರಿಂದ ಮುಂದುವರೆದಿದ್ದೇನೆ.

ಅಗ್ನಿಶಮನ ತಂತ್ರಜ್ಞಾನದ ಉನ್ನತ ತರಬೇತಿ ನಿಮಿತ್ತ ನಾವು ಆಗಾಗ ಕೊಲ್ಕತ್ತಾ ಇಲ್ಲವೇ ದಿಲ್ಲಿಗೆ ಹೋಗಬೇಕಾಗುತ್ತದೆ. ತರಬೇತಿಯ ನಿಯಮಗಳು ಸ್ವಲ್ಪ ಬಿಗಿ. ಮಿಲಿಟರಿಯಷ್ಟು ಅಲ್ಲದೇ ಹೋದರೂ ಅದೇ ಮಾದರಿಯದೆನ್ನಬಹುದು. ಶಿಸ್ತಿಲ್ಲದೇ ಹೋದರೆ ಕ್ರಮಬದ್ಧವಾಗಿ ಕಲಿಸುವುದು ಅಸಾಧ್ಯವೆನ್ನುವ ಕಾರಣಕ್ಕೆ ಕೆಲವೊಮ್ಮೆ ಹೆಚ್ಚೇ ಎನ್ನುವಂತೆ ಬಿಗಿ ನಿಯಮ ಅನುಸರಿಸಲಾಗುತ್ತದೆ. ಅಂಥಾ ಒಂದು ಶಿಬಿರದಲ್ಲಿ….

ಗಿರಿರಾಜ ಡಾರ್ಜಿಲಿಂಗ್ ಗೆ ಗಿರೀಶರ ಮೊದಲ ಭೇಟಿ

೨೦೧೦ ರ ಎಪ್ರಿಲ್‌ನಲ್ಲಿ ನಾನು ಕೋಲ್ಕತ್ತದಲ್ಲಿ ತರಬೇತಿಯಲ್ಲಿದ್ದೆ. ನನ್ನ ಜತೆ ಇದ್ದ ಇತರ ದಕ್ಷಿಣ ಭಾರತೀಯರೆಂದರೆ ಕಲ್ಲಿಕೋಟೆ ವಿಮಾನ ನಿಲ್ದಾಣದ ಹಬೀಬ್ ರಹಮಾನ್, ತಿರುವನಂತಪುರದ ವಿಲ್ಸನ್, ಅಗಟ್ಟಿ (ಲಕ್ಷದ್ವೀಪ)ಯ ಅಬ್ದುಲ್ ನಜೀರ್, ಮಧುರೆಯ ಹರಿ ಕುಮಾರ್ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣದ ಚಂದ್ರಶೇಖರ್. ಇವರಲ್ಲಿ ಚಂದ್ರಶೇಖರ್ ಕನ್ನಡಿಗ (ಕಲಬುರ್ಗಿ ಮೂಲ). ಅವರಿಗೆ ಬೇರೆಯೇ ಕೊಠಡಿ ಸಿಕ್ಕಿತ್ತು. ವಯೋಮಾನ ಹಾಗೂ ಸೇವಾವಧಿಯಲ್ಲಿ ಸ್ವಲ್ಪ ಹಿರಿಯರು. ಹಾಗಾಗಿ ಅವರ “ಸಮಾನ”ರೊಂದಿಗೆ ಹೆಚ್ಚಾಗಿ ಇರುತ್ತಿದ್ದರು. ಉಳಿದ ನಾಲ್ಕು ಮಂದಿ ಕೇರಳಿಗರು, ನಾನೂ ಸೇರಿ ಒಂದೇ ಕೊಠಡಿಯಲ್ಲಿ ವಾಸ್ತವ್ಯ. ಕೋಲ್ಕತ್ತದ ಸುಡುವ ಸೆಕೆ ನಮ್ಮನ್ನು ಸುಸ್ತಾಗಿಸಿತ್ತು.

ವಾರಾಂತ್ಯದ ಎರಡು ದಿನಗಳಲ್ಲಿ ನಮಗೆ ತರಬೇತಿ ಕಾರ್ಯಕ್ರಮಗಳಿರುವುದಿಲ್ಲ. ಹಾಗಾಗಿ ಆ ದಿನಗಳಲ್ಲಿ ನಮ್ಮ ಹೊರ ಸುತ್ತಾಟಗಳು ಸಾಮಾನ್ಯ . ಈ ಮಧ್ಯೆ ಎಪ್ರಿಲ್ ನಾಲ್ಕನೇ ವಾರದಲ್ಲಿ ಬುಧವಾರದ ಮುಂಜಾನೆ ಅಕಸ್ಮಾತ್ತಾಗಿ ಮುಂದಿನ ನಾಲ್ಕು ದಿನಗಳ ನಿರಂತರ ರಜೆ ಇರುವುದು ಗೊತ್ತಾಯಿತು (ಬಹುಶಃ ಗುಡ್ ಫ್ರೈಡೇ ಇತ್ಯಾದಿ ಇದ್ದಿರಬೇಕು). ಈ ಸಲ ಸ್ವಲ್ಪ ದೂರ ಎಲ್ಲಾದರೂ ಹೋಗುವ ಕುರಿತು ಮಾತುಕತೆ ನಡೆಯಿತು. ನಾನಂದೆ “ಸುಂದರಬನ್” ಕಡೆ ಹೋಗೋಣವೆಂದು. ಹೀಗೇ ಚರ್ಚಿಸುತ್ತಿರುವಾಗ ತಟ್ಟನೆ ಹಬೀಬ್‌ ಹೇಳಿದ “ಡಾರ್ಜಿಲಿಂಗ್‌ಗೆ ಹೋಗೋಣವೇ…?” ತಕ್ಷಣ ನಮ್ಮೆಲ್ಲರ ಮುಖ ಅರಳಿತು. ಅಷ್ಟೇ ವೇಗದಲ್ಲಿ ಸಪ್ಪಗೂ ಆಯಿತು. ಯಾಕೆಂದರೆ, ಡಾರ್ಜಿಲಿಂಗ್ ಇರುವುದು ಕೋಲ್ಕತ್ತಾದಿಂದ ಸುಮಾರು ೭೦೦ ಕಿ. ಮೀ. ದೂರದಲ್ಲಿ. ಆಸುಪಾಸಿನ ನಗರಗಳ ವ್ಯಾಪ್ತಿಯಲ್ಲಿ ಸುತ್ತಾಡಲು (ಸುಮಾರು ನೂರು ಕಿಮೀ ಅಂತರದೊಳಗೆ) ನಮ್ಮ ಸಂಸ್ಥೆಯಲ್ಲಿ ಹೀಗೇ ಹೇಳಿ ಹೋದರೆ ಸಾಕಾಗುತ್ತಿತ್ತು. ದೂರ ಪ್ರದೇಶಗಳಿಗೆ ತರಬೇತಿ ಕೇಂದ್ರದ ಪ್ರಿನ್ಸಿಪಾಲರ ಅನುಮತಿಯಿಲ್ಲದೆ ಹೋಗುವಂತಿರಲಿಲ್ಲ. ಇದು ೭೦೦ ಕಿ. ಮೀ. ದೂರದ ಯೋಚನೆ, ಯಾರು ಅನುಮತಿ ನೀಡುತ್ತಾರೆ? ಆದರೂ ಒಂದು ಹೆಜ್ಜೆ ಪ್ರಯತ್ನಿಸಿ ನೋಡೋಣವೆಂದುಕೊಂಡೆವು.

ಪ್ರಿನ್ಸಿಪಾಲರನ್ನು ನೇರವಾಗಿ ಮಾತಾಡಿಸುವುದಕ್ಕಿಂತ ಅವರ ಆಪ್ತರಾದ ಇನ್ನೋರ್ವ ಉಪನ್ಯಾಸಕರನ್ನೇ ಮೊದಲು ಕಂಡು ನಮ್ಮ ಯೋಜನೆಯನ್ನು ವಿವರಿಸಿದ್ದಾಯಿತು. ಅದೇ ಸ್ವಲ್ಪ ಕ್ಷೇಮ. ಏಕೆಂದರೆ ಇಂತಹ ತರಬೇತಿಗಳಲ್ಲಿ ಅನವಶ್ಯಕವಾಗಿ ಯಾರೂ ಪ್ರಿನ್ಸಿಪಾಲರನ್ನಾಗಲೀ ಇತರ ಹಿರಿಯ ಶಿಕ್ಷಕರನ್ನಾಗಲೀ ಎದುರು ಹಾಕಿಕೊಳ್ಳುವುದು, ಹಾಗಿರಲಿ ತೀರಾ ಅವಶ್ಯಕತೆಯ ಹೊರತು ಮಾತಾಡಿಸುವುದಕ್ಕೂ ಹೋಗುವುದಿಲ್ಲ. ಇದು ನಮ್ಮನ್ನು ಯಾವ್ಯಾವುದೋ ತೊಂದರೆಗಳಲ್ಲಿ ಸಿಕ್ಕಿ ಹಾಕಿಸುವುದಿದೆ. ನಮ್ಮ ಫಲಿತಾಂಶಗಳ ಮೇಲೆ ಶಿಕ್ಷಕವೃಂದಕ್ಕೆ ಮುಖ್ಯವಾಗಿ ಪ್ರಾಂಶುಪಾಲರಿಗೆ ಪೂರ್ಣ ನಿಯಂತ್ರಣವಿರುತ್ತದೆ. ಹೆಚ್ಚು ಕಡಿಮೆಯಾದಲ್ಲಿ ಮತ್ತೊಮ್ಮೆ ತರಬೇತಿಗೆ ಬರುವ ಶಿಕ್ಷೆಯೇ ಸಿಗಬಹುದು! ಯಾರಿಗೆ ಬೇಕು ಇದು?

ಅಸ್ಸಾಂ ಹಿಡಿದದ್ದಕ್ಕೆ ಡಾರ್ಜಿಲಿಂಗ್ ಉಚಿತ!

ಅಶೋಕವರ್ಧನ: ಕಾರ್ಕಳದ ಕಾಡುಮೂಲೆಯ ಗಿರೀಶ್ ಕೊಲ್ಕತ್ತಾದಲ್ಲಿ ಕುಳಿತು ಡಾರ್ಜಿಲಿಂಗ್ ಕನಸಿದಂತೇ ಇತ್ತು ವಿದ್ಯಾರ್ಥಿಯಾಗಿದ್ದ ನನ್ನ ಕತೆ. ಅದು ೧೯೭೦ರ ಬೇಸಗೆ ರಜಾದಿನಗಳು. ನಾನಾಗ ಮೈಸೂರಿನ ಮಹಾರಾಜಾ ಕಾಲೇಜಿನ ವಿದ್ಯಾರ್ಥಿ, ಎನ್ಸಿಸಿಯ ಹುದ್ದರಿ. ಆ ಬೇಸಗೆಯಲ್ಲಿ ಎನ್ಸಿಸಿಯ ಅಖಿಲ ಭಾರತ ಮಟ್ಟದ ಉನ್ನತ ನಾಯಕತ್ವದ ಶಿಬಿರ ಅಸ್ಸಾಂ ರಾಜ್ಯದಲ್ಲಿ ನಡೆದಿತ್ತು. ಮೂರು ವಾರಗಳ ಶಿಬಿರಕ್ಕೆ ಕರ್ನಾಟಕದ ಪ್ರತಿನಿಧಿಗಳಾಗಿ ಮೈಸೂರಿನಿಂದ ಹದಿಮೂರು ಹುಡುಗರ ತಂಡವನ್ನು ಆಯ್ದು, ಸುಬೇದಾರ್ ಉದೆಸಿಂಗ್ ರಕ್ಷಣೆಯಲ್ಲಿ ಕಳಿಸಿದ್ದರು. ತಂಡದ ವಿದ್ಯಾರ್ಥಿ ನಾಯಕ ನಾನು. ಶಿಬಿರ ಮುಗಿದು ಮರಳಿ ಮೈಸೂರಿನ ರೈಲಿನಲ್ಲಿ “ಲಟ್ ಲಟ್ಕಾ ಪಟ್ ಪಟ್ಕಾ….” ಲಯಕ್ಕೆ ಹೊಂದಿಕೊಳ್ಳುತ್ತಾ ಇದ್ದೆವು. ಆಗ ಶಿಬಿರಕ್ಕೆ ಹೋಗುವ ದಾರಿಯಲ್ಲಿ ಜಲಪೈಗುರಿ ನಿಲ್ದಾಣ ಕಂಡದ್ದು ನೆನಪಾಯ್ತು. ಅದರ ಎಲ್ಲೋ ಮೂಲೆಯಲ್ಲಿತ್ತು ಬೋರ್ಡು – Alight here for Darjeeling! ಜಲಪೈಗುರಿ ಡಾರ್ಜಿಲಿಂಗಿನ ತಳಶಿಬಿರ. ಅಂದರೆ ಸುಮಾರು ಒಂದು ನೂರು ಕಿಮೀಯಷ್ಟು ಸಮೀಪಕ್ಕೆ ಬಂದೂ ವಿಶ್ವಖ್ಯಾತ ಗಿರಿನಗರ ಡಾರ್ಜಿಲಿಂಗ್ ನೋಡದೇ ಮರಳುವುದುಂಟೇ? ತಿಂಗಳ ಕಾಲ ಮನೆಯಿಂದ ದೂರವಿದ್ದ ನಾವು ಹೆಚ್ಚೆಂದರೆ ಒಂದು ದಿನ ವಿಳಂಬವಾದರೆ ಊರಲ್ಲಿ ಯಾರೂ ಆತಂಕಿಸಲಾರರು. ಆದರೆ ಅಷ್ಟು ದೂರ ಹೋಗಿಯೂ ಡಾರ್ಜಿಲಿಂಗ್ ನೋಡಲಿಲ್ಲವೇ ಎಂದು ಯಾರಾದರೂ ಕೇಳಿದರೇ?

ರೈಲುಗಳಲ್ಲಿ ಟಿಕೆಟ್ ಒಂದೇ ಆದರೂ ನಡುವೆ `ಬ್ರೇಕ್ ಜರ್ನಿ’ ಎಂಬ ವಿಶೇಷ ಅನುಮತಿಯ ವ್ಯವಸ್ಥೆಯಿತ್ತು. ಅದರಿಂದ ನಾವು ಯಾವುದೇ ಹೆಚ್ಚುವರಿ ಹಣ ಖರ್ಚು ಮಾಡದೆ, ಬಯಸಿದಲ್ಲಿ ಒಂದೋ ಎರಡೋ ದಿನ ನಿಂತು, ಇನ್ನೊಂದು ರೈಲಿನಲ್ಲಿ ಪ್ರಯಾಣ ಮುಂದುವರಿಸಬಹುದಿತ್ತು. ಎನ್ಸಿಸಿ ನಮಗೆ ಕೊಟ್ಟ ವ್ಯವಸ್ಥೆಯಂತೆ ನಾವು ಮೂರನೇ ದರ್ಜೆ ಪ್ರಯಾಣಿಕರು (ಆ ಕಾಲದಲ್ಲಿ ರೈಲಿನಲ್ಲಿ ಥರ್ಡ್ ಕ್ಲಾಸ್ ಇತ್ತು). ಲೆಕ್ಕಕ್ಕೆ ನಮ್ಮದು ಸ್ಥಳ ಕಾಯ್ದಿರಿಸಿದ ಟಿಕೆಟ್ಟೇ. ಆದರೆ ಎಂದೂ ಅದನ್ನು ದಕ್ಕಿಸಿಕೊಳ್ಳಲಾಗದಂಥ ಅವ್ಯವಸ್ಥೆ ಆ ವಲಯದ ರೈಲುಗಳಲ್ಲಿತ್ತು. ಹಾಗಾಗಿ ದಿನ ಮುಂದೂಡಿದ್ದಕ್ಕೆ ಮತ್ತೆ ಸೀಟು ಸಿಕ್ಕೀತೇ ಎಂಬ ಆತಂಕಕ್ಕೂ ಅವಕಾಶವಿರಲಿಲ್ಲ. ನಿಜವಾದ ಸಮಸ್ಯೆ ಇದ್ದದ್ದು ನಮ್ಮ (೧೩ ಕರ್ನಾಟಕ ಕೇಡೆಟ್ಸ್) ಉಸ್ತುವಾರಿ ಅಧಿಕಾರಿ ಉದೆಸಿಂಗ್.

ಉದೆಸಿಂಗ್ ನಿವೃತ್ತಿಯ ಅಂಚಿನ ಮಹಾ ಸೋಮಾರಿ. ನಾವು ಹೆಚ್ಚಿನ ಸಾಹಸಕ್ಕಿಳಿದು ಏನಾದರೂ ಆದರೆ ತನ್ನ ಪಿಂಚಣಿಗೆ ತೊಂದರೆಯಾದೀತು ಎನ್ನುವುದು ಅವರ ಭಯ. ಮೊದಲಿನಿಂದಲೂ ಅವರೆದುರು ಬಂಡಾಯಗಾರನಾಗಿ ನಿಲ್ಲುತ್ತಲೇ ಬಂದಿದ್ದ ನನ್ನ ತಲೆಗೇ ಅನುಮತಿ ಗಿಟ್ಟಿಸುವ ಜವಾಬ್ದಾರಿ ಬಂತು.

ಗಿರೀಶ್ ಪಾಲಡ್ಕ: ಆ ಉಪನ್ಯಾಸಕರೇನೋ ನಮ್ಮ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದರು. ಆಗ ಪ. ಬಂಗಾಳದ ವಿಧಾನಸಭೆಗೆ ಚುನಾವಣೆ ನಡೆಯುತ್ತಿತ್ತು. ಹಾಗಾಗಿ ಕಾನೂನು ಮತ್ತು ಸುವ್ಯವಸ್ಥೆಯ ಆದೇಶ ಬಿಗಿಯಾಗಿದ್ದು “ಗೂರ್ಖಾಲ್ಯಾಂಡ್” ಚಳವಳಿ ಕೂಡಾ ನಿಯಂತ್ರಿತವಾಗಿತ್ತು. ಹಾಗಾಗಿ ಅವರು ನಮ್ಮ ಜತೆಗೆ ಬಂದು ಪ್ರಿನ್ಸಿಪಾಲರಿಗೂ ಅದನ್ನೇ ಮನವರಿಕೆ ಮಾಡಿದರು. ಅರ್ಥಮಾಡಿಕೊಂಡ ಪ್ರಿನ್ಸಿಪಾಲರು ಗಂಭೀರವಾಗಿ ನುಡಿದರು ” ನೋಡ್ರಪ್ಪಾ, ನಾನು ನಿಮಗೆ ಅಧಿಕೃತ ಅನುಮತಿ ನೀಡುವಂತಿಲ್ಲ. ನಿಮ್ಮ ಸ್ವಂತ ಜವಾಬ್ಧಾರಿಯ ಮೇಲೆ ಹೋಗ್ತಾ ಇದ್ದೀರಾ. ಅನಾಹುತ ಅಪಚಾರಗಳಾಗದಂತೆ ನೋಡಿಕೊಳ್ಳಿ. ರವಿವಾರ ರಾತ್ರಿಯ ಮೊದಲು ನೀವು ಇಲ್ಲಿರುತ್ತೀರ. ನೀವು ಹೋಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಅಷ್ಟೆ. “ಶುಭ ಪ್ರಯಾಣ”. ನಮಗಷ್ಟೇ ಸಾಕಾಗಿತ್ತು!

ಅಶೋಕವರ್ಧನ: ಮುಂದಿನ ನಿಲ್ದಾಣದಲ್ಲೇ ಉದೆ ಸಿಂಗ್ ಇದ್ದ ಪ್ರಥಮ ದರ್ಜೆ ಭೋಗಿಗೆ ನಾನು ಧಾಳಿ ಮಾಡಿದೆ. ನಿರೀಕ್ಷೆಯಂತೆ ಅವರು ಅನುಮತಿಸಲಿಲ್ಲ. “ಡಾರ್ಜಿಲಿಂಗಿಗೆ ಹೋಗುವ ಜೀಪುಗಳು ಭಾರೀ ಅಪಾಯಕಾರಿಗಳು. ಅಲ್ಲಿ ಅಪಘಾತ ಏನಾದರೂ ಆಗಿಬಿಟ್ಟರೆ ನಿಮಗಿಂತ ಮುಖ್ಯವಾಗಿ ನನ್ನ ನಿವೃತ್ತಿ ಸಮಯಕ್ಕೆ ಭಾರೀ ಸಮಸ್ಯೆಯಲ್ಲಿ ನಾನು ಬೀಳುತ್ತೇನೆ…” ಎಂದು ಕರುಣಾಜನಕವಾಗಿ ಹೇಳಿದರು. “ಇಷ್ಟು ಹತ್ತಿರದಲ್ಲಿರುವ ಅವಕಾಶ ತಪ್ಪಿಸಿಕೊಂಡು ಊರು ಸೇರಲು ನಾವೂ ಸಿದ್ಧರಿಲ್ಲ. ನೀವು ಒಪ್ಪದಿದ್ದರೂ ನಾವು ಜಲಪೈಗುರಿಯಲ್ಲಿ ರೈಲಿಳಿದು ಹೋಗುವವರೇ” ಎಂದು ನಾನು ಬಂಡಾಯದ ಧ್ವನಿ ತೆಗೆಯಲೇಬೇಕಾಯ್ತು. ಮುದುಕ ಬೆದರಿಕೆಯೊಡ್ಡಿದ “ಮೈಸೂರಿಗೆ ಹೋದದ್ದೇ ಬಟಾಲಿಯನ್ ಕಮಾಂಡರಿಗೆ ದೂರು ಕೊಟ್ಟು ನಿನ್ನ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುತ್ತೇನೆ.” ನಾನೂ ಅಷ್ಟೆ ಖಡಕ್ಕಾಗಿ “ಹೆಚ್ಚೆಂದ್ರೆ ನೀವು ನನ್ನನ್ನು ಎನ್ಸಿಸಿಯಿಂದ ತೆಗೆದು ಹಾಕಬಹುದು. ತಲೆ ತೆಗೆಸಲು ನಾನು ಸೈನ್ಯದಲ್ಲಿಲ್ಲ, ನಾಗರಿಕ ಪ್ರಪಂಚದಲ್ಲಿದ್ದೇನೆ.” ಉದೆಸಿಂಗ್ ತಗ್ಗಿ, ರಾಜೀ ಮಾತಿಗೆ ಬಂದರು. ಹದಿಮೂರೂ ಮಂದಿ ತಮ್ಮದೇ ಜವಾಬ್ದಾರಿಯಲ್ಲಿ ಹೋಗುತ್ತಿರುವುದಾಗಿಯೂ ಏನಾದರೂ ಆಕಸ್ಮಿಕಗಳು ಘಟಿಸಿದರೆ ಸುಬೆದಾರ್ ಉದೆಸಿಂಗ್ ಜವಾಬ್ದಾರರಲ್ಲವೆಂದೂ ಬರೆದು ಕೊಟ್ಟೆವು. ಜಲಪೈಗುರಿ ಬಂದಾಗ ಎಂದಿನಂತೆ ನಮ್ಮ ಗಂಟುಮೂಟೆಗಳೊಡನೆ ಉದೆಸಿಂಗರ ಸಾಮಾನಿನ ಹೊರೆಯನ್ನೂ ನಾವೇ ಇಳಿಸಿದೆವು. (ಉದ್ದಕ್ಕೂ ಅವರ ಕೂಲಿ ಕೆಲಸ, ಅವರ ಪ್ರಥಮ ದರ್ಜೆ ಭೋಗಿ, ಸೀಟು ಹುಡುಕಿ ಕೂರಿಸಿ ಬರುವ ಬಿಟ್ಟಿ ಚಾಕರಿ ನಾವೇ ಮಾಡುತ್ತಿದ್ದೆವು!) ಅವರನ್ನು ನಿಲ್ದಾಣದಲ್ಲೇ ಇದ್ದ ಸೈನಿಕ ವಿರಾಮಧಾಮಕ್ಕೆ ಮುಟ್ಟಿಸಿ, ನಮ್ಮ ಚೀಲಗಳನ್ನೂ ಅವರ ಸುಪರ್ದಿಗೇ ಒಪ್ಪಿಸಿದೆವು. ಕೊನೆಯದಾಗಿ ನಮ್ಮ ಟಿಕೆಟ್ಟುಗಳನ್ನು ನಿಲ್ದಾಣದಲ್ಲಿ ಮರುದಿನದ ರೈಲಿಗೆ ಬರೆಯಿಸಿ ಹೊರಬಿದ್ದೆವು.

ಗಿರೀಶ್ ಪಾಲಡ್ಕ: ನಮ್ಮ ಕೋಲ್ಕತ್ತಾ ಸಹೋದ್ಯೋಗಿ ದೀಪಕ ಸರ್ಕಾರ್ ದಾರಿಯ ಮಾಹಿತಿಯಿತ್ತರು. ಕೋಲ್ಕತ್ತದಿಂದ ಸಿಲಿಗುರಿ (ರೈಲ್ವೇ ನಿಲ್ದಾಣ- ನ್ಯೂ ಜಲಪಾಯಿಗುರಿ, ವಿಮಾನ ನಿಲ್ದಾಣ – ಬಾಗ್‌ಡೋಗ್ರಾ) ಅಲ್ಲಿಂದ ನೇರ ಡಾರ್ಜಿಲಿಂಗ್‍ಗೆ ಟ್ಯಾಕ್ಸಿಯಲ್ಲಿ. ಸಿಲಿಗುರಿಗೆ ಹೋಗಲು ರೈಲು, ಬಸ್ಸು ಟಿಕೇಟು ಲಭ್ಯವಿರಲಿಲ್ಲ. ದೀಪಕ್ ಸರ್ಕಾರ್ ನ ಮಿತ್ರನೋರ್ವ ಬಾಡಿಗೆಗೆ ಟಾಟಾ ಸುಮೋ ಇಟ್ಟುಕೊಂಡಿದ್ದ. ಅದನ್ನೇ ಗೊತ್ತುಪಡಿಸಿದ್ದಾಯಿತು. ಬುಧವಾರ ಸಂಜೆ ಹೊರಟೇ ಬಿಟ್ಟೆವು ಸಿಲಿಗುರಿಯತ್ತ.

ನಜೀರ್ ನನ್ನು ಹೊರತುಪಡಿಸಿ ನಮ್ಮ ಮಲೆಯಾಳಿ ಮಿತ್ರರೆಲ್ಲಾ ಸ್ವಲ್ಪ “ಮದ್ಯಾವಂತ” ಜನ. ಹೊರಗಡೆ ಹೋದಾಗ ಮದ್ದು ಸೇವನೆಯಾಗದಿದ್ದರೆ ಪ್ರವಾಸವೇ “ಬೋರಿಂಗ್, ವ್ಯರ್ಥ..” ಎಂದೆಲ್ಲಾ ಬೇಸರಿಸುವ ಮಂದಿ. ನಾನು ಅತಿ ಸುಭಗನೇನೂ ಅಲ್ಲದಿದ್ದರೂ ಈ ವಿಷಯದಲ್ಲಿ ಹಿಂದಿನ ಅನುಭವಗಳು ನನಗೆ ಪಾಠ ಕಲಿಸಿದ್ದವು. ಹಾಗಾಗಿ ಉಳಿದವರು ಎಚ್ಚರ ತಪ್ಪಿದರೂ ನಾನೂ ನಜೀರೂ ಇಬ್ಬರು ಮಾತ್ರ ಎಚ್ಚರವಾಗಿರಲೇಬೇಕೆಂದು ಎಲ್ಲರ ಸೌಮ್ಯ ಅಪೇಕ್ಷೆ ಹಾಗೂ ಅಪ್ಪಣೆಯೂ ಆಗಿತ್ತು! ಈ ಜವಾಬ್ದಾರಿಯ ಮೇಲೆ ನನಗೆ ಮುಂದೆ ಡ್ರೈವರ್ ಪಕ್ಕದ ಆಸನ ನೀಡಲಾಯಿತು. ಸ್ವಲ್ಪ ಸೊಂಟ ನೋವಿನ ಸಮಸ್ಯೆ ಇರುವ ನನಗೆ ಇದರಿಂದ ಅನುಕೂಲವೇ ಆಯಿತು. ದಾರಿ ಮಧ್ಯೆ “ನದಿಯಾ” ಪಟ್ಟಣದ ಬಳಿ ರಾತ್ರಿ ಊಟವಾಗಿ ಹೊರಟ ನಂತರ ನನಗೆ ಹೆಚ್ಚು ಕಡಿಮೆ ಒಂದು ಗಂಟೆ ನಿದ್ರೆ ಸಿಕ್ಕಿರಬಹುದು. ಎಚ್ಚರವಾದದನ್ನು ಗಮನಿಸಿದ ಡ್ರೈವರ್ ವಿಜಯ್ ಹೇಳಿದ “ಮಾತಾಡಿಕೊಳ್ಳುತ್ತಾ ಹೋಗೋಣವೇ?” ಚಾಲಕನಿಗೆ ನಿದ್ರೆ ಬಾರದಂತೆ ನೋಡಿಕೊಳ್ಳುವುದೂ ನನ್ನ ಜವಾಬ್ದಾರಿಯಲ್ಲಿತ್ತು. ಸರಿಯೆಂದೆ ನಾನು. ಇನ್ನೂ ೭ – ೮ ಗಂಟೆಯ ದಾರಿ. ಅಷ್ಟೂಹೊತ್ತು ಏನು ಮಾತಾಡಲಿ..? ಚಿಂತೆ ಅನವಶ್ಯಕವಾಗಿತ್ತು. ವಿಜಯನ ನೆನಪುಗಳ ಖಜಾನೆ ಬಲುದೊಡ್ಡದು. ಆತನ ಬಾಡಿಗೆ ಗಾಡಿಯ “ಡ್ರೈವಾನುಭವ”ಗಳು ಅಗಾಧವಾಗಿದ್ದವು. ನನಗೆ ಆಗಾಗ ಹೂಂ ಅನ್ನುತ್ತಾ ಅಲ್ಪ ಸ್ವಲ್ಪ ಒಗ್ಗರಣೆ ಹಾಕುವುದಷ್ಟೇ ಕೆಲಸ. ಸಪಾಟು, ನೇರ ರಸ್ತೆಗಳ ಮೇಲೆ ಗಂಟೆಗೆ ೧೨೦ -೧೪೦ ಕಿ. ಮೀ ವೇಗದಲ್ಲಿ ಓಡುತ್ತಿದ್ದ ಸುಮೋ. ವಿಜಯ ನನ್ನ ಕಡೆ ನೋಡದೆ (ಕೆಲವು ಚಾಲಕರಿಗೆ ಮಾತಾಡುತ್ತಾ ಆಗಾಗ ತಲೆಯನ್ನು ಪಕ್ಕಕೆ ತಿರುಗಿಸುವ ಅಭ್ಯಾಸವಿರುತ್ತದಲ್ಲಾ..) ಮಧ್ಯಮ ದ್ವನಿಯಲ್ಲಿ ಮಾತಾಡುತ್ತಾ ಓಡಿಸುತ್ತಿದ್ದ. ಆ ರಸ್ತೆ (ರಾ.ಹೆ. ೩೪)ಯಲ್ಲಿ ಅನೇಕ ಸಲ ಗಾಡಿ ಓಡಿಸಿದ ಅನುಭವಿ. ಮಧ್ಯೆ ಬರುವ ಪೇಟೆ, ಪಟ್ಟಣಗಳ ಬಗ್ಗೆ ವಿವರಿಸುತ್ತಿದ್ದ. ಮಾಲ್ದಾ ಎನ್ನುವ ಪಟ್ಟಣವನ್ನು ಹಾದು ಹೋಗುವಾಗ ವಿಜಯ್ ಹೇಳಿದ ” ಹಗಲು ಹೊತ್ತು ಅದೂ ಬೆಳಿಗ್ಗೆ ಬಂದಲ್ಲಿ ಇಲ್ಲಿನ ಮಾವಿನ ಹಣ್ಣಿನ ರುಚಿ ನೋಡಬಹುದಿತ್ತು. ಇಲ್ಲಿನ ಮಾವುಗಳು ವಿಶ್ವದಾದ್ಯಂತ ರಫ್ತಾಗುತ್ತವೆ.” ಹಾಗೆಯೇ ಮುಂದೆ ಸಿಕ್ಕ ಫಾರೋಕ್ (ಫರಾಕ್ಕಾ) ಅಣೆಕಟ್ಟು, ಅಲ್ಲಿನ ವಿದ್ಯುದಾಗಾರ ಇತ್ಯಾದಿಗಳ ಬಗ್ಗೆಯೂ ಹೇಳಿದ. ಫಾರೋಕ ಅಣೆಕಟ್ಟಿನ ಮೇಲೆ ರಾತ್ರಿ ಹೊತ್ತು ಸಂಚರಿಸುವಾಗ ವಾಹನಗಳು ದೀಪ ಆರಿಸಿ ನಿಧಾನವಾಗಿ ಸಾಗಬೇಕೆನ್ನುವ ನಿಯಮವಿತ್ತು. ಕತ್ತಲಲ್ಲಿ ಹೋಗಬೇಕೆಂದಿಲ್ಲ, ರಸ್ತೆ ದೀಪಗಳು ಸಾಕಷ್ಟಿವೆ!

ಅಶೋಕವರ್ಧನ: ಏಯ್! ಫರಕ್ಕಾ ಸೇತುವೆ. ಹೌದು, ಅಂದು ನಾವು ಅಸ್ಸಾಂನತ್ತ ರೈಲಿನಲ್ಲೇ ಹೋಗುವಾಗ ಇದನ್ನು ವಿಶಿಷ್ಟವಾಗಿ ದಾಟಿದ ನೆನಪಾಗುತ್ತಿದೆ. ಈ ಸೇತುವೆ ಆಗಿನ್ನೂ ಪೂರ್ಣಗೊಂಡಿರಲಿಲ್ಲ ಅಥವಾ ನಾದುರಸ್ತಿಯಲ್ಲಿತ್ತು. ಎಲ್ಲಾ ರೈಲುಗಳೂ ನದಿಯಂಚಿನಲ್ಲಿ ಖಾಲಿಯಾಗುತ್ತಿದ್ದವು. ಪ್ರಯಾಣಿಕರು ತಂತಮ್ಮ ಹೊರೆ ಹೊತ್ತುಕೊಂಡು ಅಥವಾ ಅಲ್ಲಿ ಲಭ್ಯರಿದ್ದ ಕೂಲಿಗಳಿಂದ ಹೊರಿಸಿಕೊಂಡು, ಅಪೂರ್ಣ ಸೇತುವೆಯ ಮೇಲೆ ಇಲ್ಲಿಂದಲ್ಲಿಗೆ ಅಥವಾ ಅಲ್ಲಿಂದಿಲ್ಲಿಗೆ ನಡೆಯಬೇಕಾಗುತ್ತಿತ್ತು. ಮತ್ತಾಚೆ ಕಾದಿರುತ್ತಿದ್ದ ಖಾಲಿ ರೈಲಿನಲ್ಲಿ ಉಳಿದವರಿಗೆಲ್ಲ ಹಿಂದಿನಂತೆ ಕಾಯ್ದಿರಿಸಿದ ಸ್ಥಾನಗಳು ಸಿಗುತ್ತಿತ್ತು. ಥರ್ಡ್ ಕ್ಲಾಸಿನ ಬಡಪಾಯಿಗಳು ಮಾತ್ರ ಸ್ಥಾನದ ಮೇಲಾಟಕ್ಕೆ ಎರಡನೇ ಮಹಾಯುದ್ಧ ನಡೆಸಬೇಕಾಗುತ್ತಿತ್ತು. ಅಲ್ಲೂ ಉದೆಸಿಂಗರ ಸಾಮನುಗಳಿಗೆ ನಾವು ಉಚಿತ ಕೂಲಿಗಳು. ಸಾಲದ್ದಕ್ಕೆ, ನಮ್ಮ ಅನಿಶ್ಚಿತ ನೆಲೆಯ ಸಮಸ್ಯೆಯನ್ನು ಗೆಳೆಯರಿಗೇ ಪರಿಹರಿಸಲು ಬಿಟ್ಟು, ನಾನು ಉದೆಸಿಂಗರಿಗೆ ಪ್ರಥಮ ದರ್ಜೆ ಭೋಗಿ, ಸೀಟು ಹುಡುಕಿ ಸ್ಥಾಪಿಸಿಯೂ ಬರಬೇಕಾಯ್ತು! ನಿಜನಾಯಕತ್ವ, ಲೋಕಾನುಭವ, ಕನಿಷ್ಠ ರೈಲ್ವೇ ಸ್ಥಿತಿಗತಿಗಳನ್ನು ತಿಳಿಯುವ, ಇಂಗ್ಲಿಷ್ ಓದೂ ಇಲ್ಲದ ಆತನನ್ನು ಕೇವಲ `ಅಧಿಕಾರ’ದ ಬಲದಲ್ಲಿ ನಮಗೆ ಉಸ್ತುವಾರಿಯಾಗಿ ಹೇರಿದ ಎನ್ಸಿಸಿ ವ್ಯವಸ್ಥೆ ಬಗ್ಗೆ ಯೋಚಿಸಿದರೆ ಇಂದೂ ಮೈ ಉರಿಯುತ್ತದೆ.

ಗಿರೀಶ್ ಪಾಲಡ್ಕ: ಮುಂಜಾನೆ ದಾಟುವ ಗಾಡಿ ಹೊತ್ತಿಗೆ ಇಸ್ಲಾಂಪುರ ಎಂಬಲ್ಲಿ ತಲಪಿತ್ತು. ಮಾತಿನ ಮಧ್ಯೆಯೂ ವಿಜಯನಿಗೆ ತೂಕಡಿಕೆ ಬರುತ್ತಿದ್ದು ಗಾಡಿ ಲಯ ತಪ್ಪುತ್ತಿದ್ದುದನ್ನು ಗಮನಿಸಿ ನಾವು ಗಾಡಿ ನಿಲ್ಲಿಸಲು ಹೇಳಿದೆವು. ಸ್ವಲ್ಪ ದೂರದ ವರೆಗೆ ನಮ್ಮಲ್ಲೊಬ್ಬ ಗಾಡಿ ಚಲಾಯಿಸಿ ವಿಜಯನಿಗೆ ಅಲ್ಪ ವಿಶ್ರಾಂತಿ ನೀಡುವುದು ಎಂದಾಯಿತು. ರಾತ್ರಿ ಸಾಕಷ್ಟು ನಿದ್ರಿಸಿದ್ದ ಹರಿ ಚಾಲಕನ ಸೀಟಿನಲ್ಲಿ ಕುಳಿತ. ಸಿಲಿಗುರಿ ಹತ್ತಿರವಾಗುತ್ತಿದ್ದಂತೆ ಎಚ್ಚರಗೊಂಡ ವಿಜಯ ತಾನೆ ಸ್ಟಿಯರಿಂಗ್ ತೆಗೆದುಕೊಂಡ. ಸುಮಾರು ೯.೩೦ ರ ಹೊತ್ತಿಗೆ ಗಾಡಿ ಸಿಲಿಗುರಿ ತಲಪಿತು. ಈ ಗಾಡಿಯನ್ನು ಸಿಲಿಗುರಿಯಲ್ಲಿಯೇ ಬಿಟ್ಟು ಬೇರೆ ಗಾಡಿಯಲ್ಲಿ (ಅದೂ ಟಾಟಾ ಸುಮೋಗಳೇ ಹೆಚ್ಚು) ಡಾರ್ಜಿಲಿಂಗ್‍ಗೆ ಹೋಗಬೇಕಾಗಿತ್ತು. ಕೊಲ್ಕತ್ತಾದಿಂದ ಬರುವ ಹೆಚ್ಚಿನ ಟ್ಯಾಕ್ಸಿ ಚಾಲಕರೆಲ್ಲಾ ಡಾರ್ಜಿಲಿಂಗ್‍ನ ಬೆಟ್ಟ ಹತ್ತಲು ಒಪ್ಪುವುದಿಲ್ಲ. ಸಪೂರ ರಸ್ತೆ, ಅಂಕುಡೊಂಕು ಇತ್ಯಾದಿ ಕಾರಣ ನೀಡಿದರೂ ಅಲ್ಲಿನ ಖಾಯಂ ಟ್ಯಾಕ್ಸಿ ಮಾಲಕರು/ಚಾಲಕರ ಪ್ರತಿರೋಧವೇ ಇದಕ್ಕೆ ನಿಜ ಕಾರಣವೆನ್ನಲಾಗುತ್ತಿದೆ. ಹಾಗೆಂದು ಖಾಸಗಿಯಾಗಿ ಯಾರೂ ಹೋಗುವುದೇ ಇಲ್ಲ ಅಥವಾ ಹೋಗಲೇಬಾರದು ಎಂದೇನಿಲ್ಲ. ಸ್ವಂತ ವಾಹನಗಳನ್ನು ಡಾರ್ಜಿಲಿಂಗ್‌ನತ್ತ ಚಲಾಯಿಸುವವರು ಸಾಕಷ್ಟಿದ್ದಾರೆ.

ನಮಗೆ ಬೆಳಿಗ್ಗಿನ ಕರ್ಮಗಳನ್ನು ಮುಗಿಸಬೇಕಾಗಿತ್ತು. ಒಂದು ವಸತಿಗೃಹದಲ್ಲಿ ಕೋಣೆಯೊಂದನ್ನು ತಾತ್ಕಾಲಿಕವಾಗಿ ಬಾಡಿಗೆಗೆ ಪಡೆದು ಸ್ನಾನ, ಶೌಚ ಗಳನ್ನು ಮುಗಿಸಿದೆವು. ನಮ್ಮ ಜತೆಗೆ ಡಾರ್ಜಿಲಿಂಗ್‍ಗೆ ಬರುವ ಆಸೆಯಿಟ್ಟುಕೊಂಡಿದ್ದ ವಿಜಯನಿಗೆ ಇದರಿಂದಾದ ಒಂದು ಲಾಭವೆಂದರೆ ಮರುದಿನದವರೆಗೆ ಆತನ ಗಾಡಿಯನ್ನು ತಮ್ಮ ವಠಾರದಲ್ಲಿ ನಿಲ್ಲಿಸಲು ಲಾಜ್‌ನವರು ಅನುಮತಿ ನೀಡಿದ್ದು.

ಭಾರತ ಯಾತ್ರಿ ಕಂಡ ಡಾರ್ಜಿಲಿಂಗ್

ಅಶೋಕವರ್ಧನ: ನನ್ನ ಎರಡನೇ ಡಾರ್ಜಿಲಿಂಗ್ ದರ್ಶನವೂ ತೊಡಗಿದ್ದು ಕೊಲ್ಕೊತ್ತದಿಂದಲೇ. ಅದು ೧೯೮೫ರ ಉರಿ ಬೇಸಗೆ. ನಮ್ಮ ಲಕ್ಷ್ಯವಾದರೂ ಭಾರತದ ಪ್ರಾಕೃತಿಕ ವೈಶಿಷ್ಟ್ಯಗಳನ್ನು ಸಾಧ್ಯವಾದಷ್ಟು ಪೋಣಿಸುತ್ತ ಪ್ರಯಾಣ. ಸಹಜವಾಗಿ ನಾವು ನಾಲ್ವರು (ನನ್ನ ಬೆನ್ನಿಗೆ ಹೆಂಡತಿ ದೇವಕಿ. ಮತ್ತೆ ಕಿಶೋರ್ ಕುಮಾರರ ಬೆನ್ನಿಗೆ ವೆಂಕಟ್ರಮಣ ಉಪಾಧ್ಯ) ನಮ್ಮೆರಡು ಮೋಟಾರ್ ಸೈಕಲ್ಲುಗಳನ್ನು ಮಂಗಳೂರಿನಿಂದ ಜತೆಗೇ ರೈಲಿನಲ್ಲಿ ತಂದಿದ್ದೆವು.

ಕೊಲ್ಕೊತ್ತಾದಲ್ಲಿ ಬೈಕೇರಿದವರು ಪೂರ್ವ ಯೋಜನೆಯಂತೆ, ಮೂರು – ನಾಲ್ಕು ದಿನಗಳಲ್ಲಿ ಆ ನಗರದ ಹಾಗೂ ದಾರಿಯ ಕೆಲವು ಮುಖ್ಯ ಸ್ಥಳಗಳನ್ನು ನೋಡುತ್ತ, ಅಲ್ಲಲ್ಲಿ ಹೋಟೆಲುಗಳಲ್ಲಿ ಮೊಕ್ಕಾಂ ಹೂಡುತ್ತ ಸಿಲಿಗುರಿ ತಲಪಿದ್ದೆವು. (ಈ ಅಖಿಲ ಭಾರತ ಮೋಟಾರ್ ಸೈಕಲ್ ಯಾನವನ್ನು ಪೂರ್ಣರೂಪದಲ್ಲಿ ಬರೆಯುವುದು ನನಗಿನ್ನೂ ಆಗಲೇ ಇಲ್ಲ!)

ಊರಿನಿಂದ ಸುಮಾರು ಹತ್ತು ಕಿಮೀ ಹೊರ ವಲಯದಲ್ಲಿ, ಅಂದರೆ ಡಾರ್ಜಿಲಿಂಗ್ ಪರ್ವತ ಶ್ರೇಣಿಯ ನೇರ ತಪ್ಪಲಿನ ವನಧಾಮವನ್ನೇ ನಾವು ಆಯ್ದುಕೊಂಡಿದ್ದೆವು. ಆ ವಲಯದ ಪ್ರಮುಖ ನದಿಯ ಹೆಸರನ್ನೇ ಹೊತ್ತ ಮಹಾನಂದ ವನಧಾಮ, ಇನ್ನೂ ಬಾಲ್ಯಾವಸ್ಥೆಯಲ್ಲಿತ್ತು. ಆದರೆ ಕರ್ನಾಟಕದ ದೂರದಿಂದ ನಾವದನ್ನೇ ಹುಡುಕಿ ಬಂದಿದ್ದೇವೆಂಬುದು ಅಲ್ಲಿನ ಅಧಿಕಾರಿಗೆ ಭಾರೀ ಹೆಮ್ಮೆಯ ಸಂಗತಿಯಾಯ್ತು. ಮತ್ತೆ ಇದ್ದೊಂದು ಅತಿಥಿ ಕೊಠಡಿಯೂ ಖಾಲಿಯೇ ಇದ್ದುದರಿಂದ ದಿನಕ್ಕೆ ಕೇವಲ ಹತ್ತು ರೂಪಾಯಿಯ ಬಾಡಿಗೆಯಲ್ಲಿ ಒದಗಿಸಿದ್ದರು. ಅದಕ್ಕೆ ಸಾಮಾನ್ಯ ನೀರಿನ ವ್ಯವಸ್ಥೆ ಸಹಿತ ಶೌಚ ವ್ಯವಸ್ಥೆಯೂ ಇದ್ದುದು ನಮಗೆ ಭಾರೀ ಸೌಕರ್ಯವೇ ಆಗಿತ್ತು. ಬಹುಶಃ ನಾವು ಮಹಾನಂದವನ್ನು ಅಪರಾಹ್ನ ತಲಪಿರಬೇಕು. ಸಂಜೆ ಅಲ್ಲಿನೊಬ್ಬ ನೌಕರ ನಮ್ಮನ್ನು ವನವೀಕ್ಷಣೆಗೆ ಒಯ್ಯಲು ಮುಂದಾದ. ವನಧಾಮದೊಳಗೆ ಕೆಲವು ಕಿಮೀ ಉದ್ದಕ್ಕೆ ಕಚ್ಚಾ ಮಾರ್ಗವೇನೋ ಇತ್ತು. ಆದರೆ ಇಲಾಖೆಯ ಬಳಿ ಸಾರ್ವಜನಿಕರಿಗೆ ಯಾವುದೇ ವಾಹನವ್ಯವಸ್ಥೆಯಿರಲಿಲ್ಲ. ಆದರೆ ಹುಡುಗರ ಬೈಕಿನಲ್ಲಿ ಆತನನ್ನು ಮೂರನೇ ಸಹವಾರನನ್ನಾಗಿ ಹೊತ್ತೊಯ್ದೆವು. ಅಂದು ಮರಗಿಡಬಳ್ಳಿ ಬಿಟ್ಟು ಕಂಡದ್ದೇನೂ ಇಲ್ಲ. ಇಂದಿನ ಅನುಭವದಲ್ಲಿ ಹೇಳುವುದಿದ್ದರೆ, ಬೈಕ್ ಬಿಟ್ಟು ಒಂದೆರಡೇ ಕಿಮೀ ನಿಶ್ಶಬ್ಧವಾಗಿ ನಡೆದಿದ್ದರೂ ನಮಗೆ ಹೆಚ್ಚಿನ ವನ್ಯ ದರ್ಶನವಾಗುತ್ತಿತ್ತು ಖಂಡಿತ.

ಗಿರೀಶ್ ಪಾಲಡ್ಕ: ಆ ನಂತರ ಟ್ಯಾಕ್ಸಿ ಸ್ಟ್ಯಾಂಡ್‍ಗೆ ಬಂದಾಗ ಸಜ್ಜನನಂತೆ ಕಂಡ ಮಧ್ಯವರ್ತಿಯೋರ್ವ ನಮಗೊಂದು ಟಾಟಾ ಸುಮೋವನ್ನು ಗೊತ್ತು ಮಾಡಿಕೊಟ್ಟ (ಏಕಮುಖ ಪ್ರಯಾಣಕ್ಕೆ ಮಾತ್ರ. ಡಾರ್ಜಿಲಿಂಗ್‍ನಲ್ಲಿ ಸ್ಥಳೀಯ ಪ್ರವಾಸಕ್ಕೆ ಮತ್ತೆ ಪ್ರತ್ಯೇಕ ವ್ಯವಸ್ಥೆಯಾಗಬೇಕು. ನಿಗದಿಯಾದ ಮೊತ್ತ ನೆನಪಿಲ್ಲ) ಆ ಟ್ಯಾಕ್ಸಿಯಲ್ಲಿ ೨-೩ ಕಿ. ಮೀ. ಮುಂದೆ ಸಾಗಿದಾಗ ಹೀಗೇ ಮಾತಾಡುತ್ತಾ ಚಾಲಕ ಹೇಳಿದ ದರ ನಾವು ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಕಡಿಮೆ ೬೦೦ ರೂಪಾಯಿಯಷ್ಟು ಹೆಚ್ಚಿತ್ತು! ಇದೇನಿದು ಮೋಸ ಏಂದೆಲ್ಲಾ ನಾವು ಜೋರು ದನಿಯಲ್ಲಿ ಎಗರಾಡಿದಾಗ “ಹಾಗಾದರೆ ವಾಪಾಸು ಹೋಗೋಣ, ಜಗಳ ಮಾಡಿ ತಲೆ ಹಾಳುಮಾಡಿಕೊಂಡು ಬೆಟ್ಟ ಹತ್ತುವುದು ನನ್ನಿಂದ ಸಾಧ್ಯವಿಲ್ಲ” ಎಂದ ಅಷ್ಟೇ ಜೋರು ಧ್ವನಿಯಲ್ಲಿ. ನಾವೇ ತಣ್ಣಗಾಗಬೇಕಾಯಿತು! ನಮಗೆ ಸಹಾಯ ಮಾಡುವ ನೆಪದಲ್ಲಿ ಬರುವ ಕೆಲ ಮಧ್ಯವರ್ತಿ ಮಹಾಶಯರು ಪ್ರಯಾಣಿಕರಿಗೆ ಕಡಿಮೆ ದರ ಹೇಳಿ ಈ ರೀತಿ ಗೊಂದಲಕ್ಕೆ ಸಿಕ್ಕಿಸುತ್ತಾರೆ ಎಂದು ಆ ನಂತರ ತಿಳಿಯಿತು. ಡ್ರೈವರ್ ತಿಳಿಸಿದ ಮೊತ್ತ ಸರಿಯಾಗಿಯೇ ಇತ್ತು.

ಅಶೋಕವರ್ಧನ: ಸದ್ಯ ನನ್ನ ಮೊದಲ ಭೇಟಿಯದ್ದೇ ಮುಂದುವರಿಸುತ್ತೇನೆ – ರೈಲ್ವೇ ನಿಲ್ದಾಣದ ಹೊರಗೇ ಜೀಪುಗಳ ಸಂತೆ ನೆರೆದಿತ್ತು. ಅವರಲ್ಲಿ ಎಲ್ಲಾ ಒಮ್ಮುಖ ಸಾಗಣೆಯ ಮಾತುಗಳಷ್ಟೇ ಇತ್ತು. ನಮಗೆ ಮೇಲೆ ಹೋದಮೇಲೆ ಉಳಿಯುವುದೆಲ್ಲಿ, ನೋಡುವುದು ಏನನ್ನು, ಅಲ್ಲಿ ಪ್ರತ್ಯೇಕ ವಾಹನ ಸೌಕರ್ಯ ಬೇಕಾದೀತೋ ಇತ್ಯಾದಿ ಪ್ರಶ್ನೆಗಳು ಮೂಡಿರಲೇ ಇಲ್ಲ! ತಲಾ ಇಷ್ಟು ಎಂದೇನೋ ಚೌಕಾಸಿಯಲ್ಲಿ ನಿಶ್ಚಯವಾದಂತೆ ನಾವು, ಬಹುಶಃ ಎರಡು ಜೀಪುಗಳಿಗೆ ಹಂಚಿಕೊಂಡು ಹತ್ತಿ ಹೊರಟೇ ಬಿಟ್ಟೆವು. ಬಾಡಿಗೆ ಎಷ್ಟುಕೊಟ್ಟೆವು, ಜೀಪುಗಳಲ್ಲಿ ಎಷ್ಟು ಜನ ತುಂಬಿದರು ಎಂದೆಲ್ಲ ವಿವರಗಳು ಈಗ ನೆನಪಿಲ್ಲ.

ಗಿರೀಶ್ ಪಾಲಡ್ಕ: ದಾರಿ ಮಧ್ಯೆ ಹೋಟೆಲೊಂದರಲ್ಲಿ ಉಪಹಾರ ಮುಗಿಸಿ ಮತ್ತೆ ಮುಂದುವರೆಯಿತು ಪ್ರಯಾಣ. ಏರು, ತಿರುವು, ಸಮತಟ್ಟುಗಳಲ್ಲಿ ಮುಂದೆ ಸಾಗುತ್ತಾ ಹೋದಾಗ ಮೊದಲು ಸಿಗುವ ಪೇಟೆ “ತುಸಾಂಗ್”. ಇಲ್ಲಿಯವರೆಗೆ ಡಾರ್ಜಿಲಿಂಗ್‍ನ “ಆಟಿಕೆ ರೈಲಿನ” ಸೌಲಭ್ಯವಿದೆ. ಇಲ್ಲೇನೂ ಅಂತಹ ಪ್ರವಾಸೀ ಮಹತ್ವದ ಸ್ಥಳವಿಲ್ಲವೆಂದು ಚಾಲಕ ಹೇಳಿದ. ವ್ಯಾಪಾರ, ವ್ಯವಹಾರ ಜೋರಾಗಿದ್ದಂತೆ ಕಂಡು ಬಂದ ಇಲ್ಲಿ ನಾವು ಇಳಿಯುವುದಕ್ಕೆ ಹೋಗಲಿಲ್ಲ. ಅಲ್ಲಿಂದ ಸುಮಾರು ಒಂದು ಗಂಟೆಯ ಪ್ರಯಾಣದ ಬಳಿಕ ಸಪೂರ ರಸ್ತೆಗಳ ವಾಹನ ದಟ್ಟಣೆಯಲ್ಲಿ ಸುಧಾರಿಸಿ ನಾವು ತಲುಪಿದ್ದು ಡಾರ್ಜಿಲಿಂಗ್‌ಗೆ.

ನಗರಕ್ಕೆ ಪ್ರವೇಶಿಸುತ್ತಿದ್ದಂತೆಯೇ ಓರ್ವ ನೇಪಾಳಿ ನಮ್ಮ ಗಾಡಿಯ ಹಿಂಬಾಗದ ಫೂಟ್‍ಬೋರ್ಡ್ ಮೇಲೆ ಹತ್ತಿ ಜೋತಾಡುತ್ತಾ ನಮ್ಮ ಜತೆಗೇ ಕೊನೇ ನಿಲ್ದಾಣದವರೆಗೂ ಬಂದೇ ಬಂದ. ನಾವು ಇಳಿಯುತ್ತಿದ್ದಂತೆ ನಮ್ಮ ಲಗ್ಗೇಜುಗಳನ್ನೂ (ವಿಶೇಷವಾದದ್ದೇನೂ ಇರಲಿಲ್ಲ ಬಿಡಿ) ಹೊರಲು ಸಿದ್ಧನಾದ. “ಆಯಿಯೇ ಸಾಬ್, ಅಚ್ಛಾ ಲಾಜ್ ಹೇ… ಸಭೀ ಚೀಜ಼್ ಮಿಲೇಗಾ…. ಕೋನ್ಸಾ ಬಜೆಟ್ ಕಾ ಚಾಹಿಯೇ ಆಪ್‍ಕೋ…” ನಾವು “ನಹೀ” ಎಂದು ನಮ್ಮ ಪಾಡಿಗೆ ನಡೆಯುತ್ತಿದ್ದರೂ ಬೆನ್ನು ಬಿಡುವಂತೆ ಕಾಣಲಿಲ್ಲ. ಯಾವುದೇ ಕಾರಣಕ್ಕೂ ಅಲ್ಲಿನ ಸ್ಥಳೀಯರೊಡನೆ ವಾದ, ವಿವಾದ, ಜಗಳಕ್ಕೆ ಹೋಗಬೇಡಿ.. ಹೀಗೆಂದು ಕೋಲ್ಕತ್ತದಲ್ಲಿ ಮೊದಲೇ ನಮ್ಮನ್ನು ಎಚ್ಚರಿಸಿದ್ದರು. ನಾವೂ ನಮ್ಮಷ್ಟಕ್ಕೇ ಅದ್ಯಾವುದೋ ಒಂದು ಲಾಜ್‍ನತ್ತ ತಿರುಗಿದೆವು. ಅಲ್ಲಿಗೂ ಬಂದ ಅಸಾಮಿ. ಕೊನೆಗೆ ನಮ್ಮ ಮೇಲೆ ತಿರಸ್ಕಾರ ಬಂದಿತೋ ಏನೋ.. ತಿರುಗಿ ಹೊರಟು ಹೋದ. ನಮಗೆ ಒಂದು ದಿನಕ್ಕಷ್ಟೇ ಉಳಿದು ಕೊಳ್ಳಲಿದ್ದುದರಿಂದ ಅಂತಹ ದುಬಾರಿ ಹೋಟೆಲಿನ ಅಗತ್ಯ ಕಾಣಲಿಲ್ಲ. ಸಾಮಾನ್ಯ ಲಾಜ್‌ ಒಂದರಲ್ಲಿ ನಮ್ಮ ಲಗೇಜುಗಳನ್ನಿಟ್ಟು ಹೊರ ಬಿದ್ದೆವು. ವಾತಾವರಣ ಸ್ವಲ್ಪ ತಂಪೆನ್ನಿಸಿತು. ಡಾರ್ಜಿಲಿಂಗ್‌ನ ಬಹುತೇಕ ಅಂಗಡಿಗಳ ಬೋರ್ಡ್‌ಗಳಲ್ಲಿ “ಗೋರ್ಖಾಲ್ಯಾಂಡ್‌” ಎಂದು ಬರೆಯಲಾಗಿತ್ತು ಅಥವಾ ಪೇಪರ್‌ನಲ್ಲಿ ಬರೆದು ಅಂಟಿಸಲಾಗಿತ್ತು. ಪ್ರತಿಭಟನೆಯೋ ಅಥವಾ ದೂರದ ಭರವಸೆಯೋ ತಿಳಿಯಲಿಲ್ಲ. ಡಾರ್ಜಿಲಿಂಗ್‍ನಲ್ಲಿ ಸ್ಥಳೀಯ ಪ್ರವಾಸ ಅರಂಭವಾಗುವುದು ಮುಂಜಾನೆ ೪ ಗಂಟೆಗೆ. ಈಗ ಪೇಟೆ ಸುತ್ತಾಡ ಬೇಕಿತ್ತು ಅಷ್ಟೆ, ಮಾಡಿದ್ದೂ ಅದನ್ನೆ. ತಿರುಗಾಟ, ಒಂದಷ್ಟು ಖರೀದಿ.

ಮರುದಿನದ ಪ್ರವಾಸಕ್ಕೆ ಒಂದು ಟ್ಯಾಕ್ಸಿ ಬೇಕಾಗಿತ್ತಲ್ಲ. ಅಲ್ಲೇ “ಡಾರ್ಜಿಲಿಂಗ್‍ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್” ಎನ್ನುವ ಬೋರ್ಡ್ ನೋಡಿ ಒಳ ಹೊಕ್ಕೆವು. ಅದರ ಮಾಲೀಕರು (ಹೆಸರು ಮರೆತು ಹೋಗಿದೆ) ನಮ್ಮನ್ನು ಕುಳ್ಳಿರಿಸಿ ವಿಚಾರಿಸಿದರು. ನಾನು “ಮ್ಯಾಂಗಲೋರ್” ಅಂದ ತಕ್ಷಣ “ಬ್ಯಾಂಗಲೋರ್ ಓರ್ ಮ್ಯಾಂಗಲೋರ್?” ಏನೋ ಆಸಕ್ತಿಯಿಂದ ಮತ್ತೆ ಪ್ರಶ್ನಿಸಿದರು. ಮತ್ತೆ ತಿಳಿಯಿತು. ಅವರು ಮಂಗಳೂರಿಗೆ ಮೂರ್ನಾಲ್ಕು ಸಲ ಬಂದು ಹೋಗಿದ್ದರು. ಅವರ ಮಗ ಮಣಿಪಾಲದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ. ” ನಿಮ್ಮ ಕಡೆಯವರೆಲ್ಲಾ ಒಳ್ಳೆಯ ಜಂಟಲ್‍ಮ್ಯಾನ್‍ಗಳು” ಎನ್ನುತ್ತಾ ತನ್ನ ಜಂಟಲ್‍ಮ್ಯಾನ್‍ಗಿರಿಯನ್ನು ತೋರ್ಪಡಿಸಿದರು. ಮರುದಿನಕ್ಕೆ ಟ್ಯಾಕ್ಸಿಯ ವ್ಯವಸ್ಥೆಯೂ ಆಯಿತು. ಅಪೇಕ್ಷಿಸದಿದ್ದರೂ ಕೊಂಚ ರಿಯಾಯತಿಯೂ ದೊರೆಯಿತು. ಸ್ವಚ್ಛ ಇಂಗ್ಲಿಶ್‌ನಲ್ಲಿ ಮಾತಾಡುತ್ತಿದ್ದ ಆ ಮಹಾಶಯನ ಮಾತೂ ಖಡಕ್. “ನಿಮ್ಮ ಸಮಯ ಕಾಪಾಡಿಕೊಳ್ಳುವುದು ನಿಮ್ಮ ಕರ್ತವ್ಯ. ತಡವಾಗಿ ಬರಬೇಡಿ. ನಮ್ಮಿಂದೇನಾದರೂ ಲೋಪವಾದಲ್ಲಿ ಮುಲಾಜಿಲ್ಲದೆ ತಿಳಿಸಿ. ಸಮಾಧಾನವಾದರೆ ಮಾತ್ರ ದುಡ್ದು ಕೊಡಿ”. ಸೇವೆಯೂ ಹಾಗೆಯೇ ಇತ್ತೆನ್ನಿ.

ಅಶೋಕವರ್ಧನ: ಸಾಲೋ ಸಾಲು ಜೀಪುಗಳು ಭರದಿಂದ ಏರು ದಾರಿಯಲ್ಲಿ ಧಾವಿಸಿದ್ದವು. ಸುಮಾರಾಗಿದ್ದ ಡಾಮರ್ ದಾರಿಗೆ ಉದ್ದಕ್ಕೂ ಜತೆಗೊಡುವಂತೆ ಖ್ಯಾತ ನ್ಯಾರೋಗೇಜ್ ರೈಲಿನ ಹಳಿಗಳೂ ತೋರುತ್ತಿದ್ದವು. ಸ್ತರಗಳು ಮಾತ್ರ ಭಿನ್ನ. ಅದು ಕೆಲವೆಡೆ ನಮಗಿಂತ ಕೆಳಗೂ ಕೆಲವೆಡೆ ಮೇಲೂ ಹರಿದಿತ್ತು. ಎಲ್ಲೋ ಸಣ್ಣ ಏಣಿನ ಹಸಿರಿನ ನಡುವೆ ಮಾಯವಾಗಿ ಮತ್ತೆಲ್ಲೋ ಪ್ರತ್ಯಕ್ಷವಾಗುತ್ತಿತ್ತು. ಸುಮ್ಮನೇ ಬೆಟ್ಟದ ಕಡಿದಂಚಿನವರೆಗೆ ಹೋದಂತೆ ಮಾಡಿ ಬಳುಕಿ ಮರಳುತ್ತಿತ್ತು. ಅಲ್ಲಿ ಮೇಲ್ಸೇತಿನಲ್ಲಿ ಮೆರೆದು ಇಲ್ಲಿ ಅಡಿ ಸೇತಿನಲ್ಲಿ ನುಸುಳಿದಾಗ “ಎಲ್ಲ ಪುಟ್ಟ ಪುಟ್ಟ ನಾಲ್ಕು ಡಬ್ಬಿಗಾಗಿ” ಎಂದು ಜಲ್ಲಿ ಹಾಸಿನ ಮೇಲಿನ ಮರದ ತೊಲೆಗಳು ಹಲ್ಲು ಕಿಸಿದಂತೆ ಕಾಣುತ್ತಿತ್ತು.

ಜಲಪೈಗುರಿಯಲ್ಲಿ ಉರಿ ಬೇಸಗೆ ಎಂದೇ ಸಾರುತ್ತಿದ್ದ ಹವಾಮಾನ ಕಾಡು ನುಗ್ಗಿದಂತೇ ತಣಿದಿತ್ತು. ಔನ್ನತ್ಯ ಗಳಿಸಿದಂತೆಲ್ಲ ಬೀಸುಗಾಳಿಯೂ ಸೇರಿ ಬಹಳ ಹಿತಕರವೇ ಆಗಿತ್ತು. ಮಂಜೋ ಮೋಡವೋ ಸುಳಿಯುವ ಎತ್ತರ ಬರುತ್ತಿದ್ದಂತೆ ನಾವು ಹಿಮ ಕಾಣುವ ಸಂಭ್ರಮದಲ್ಲಿದ್ದೆವು. “ಅದಿರಲಿ, ಸದ್ಯಕ್ಕೆ ಇದು ನೋಡಿ” ಎಂಬಂತೆ ಒಮ್ಮೆಲೆ ಹಿಂಜಿದರಳೆಯಂತಿದ್ದ ಮೋಡಗಳೆಲ್ಲ ಅಮರಿಸಿ ಕಪ್ಪಾಗಿ ಭೋರೆಂದು ಮಳೆಯಾಗಿ ಅಪ್ಪಳಿಸಿತು. ಚಾಲಕ ಬದಿಯ ತಾಡಪತ್ರಿಯ ಪರದೆಗಳನ್ನು ಬಿಗಿಯಾಗಿ ಕಟ್ಟಿದ್ದರೂ ಸಂದಿನಲ್ಲಿ ಸಿಡಿಯುತ್ತಿದ್ದ ಕಿರು ಹನಿಗಳು ಸೂಜಿಮೊನೆಯಂತೆ ಕಂತಿದಾಗ ತುಸು ಗಾಬರಿಯೇ ಆಗಿತ್ತು. ಎರಡೋ ಮೂರೋ ಗಂಟೆಗಳ ಅವಿರತ ಓಟದಲ್ಲಿ ನಾವು ಡಾರ್‍ಜಿಲಿಂಗಿನ ಪೇಟೆ ತಲಪುವಾಗ ಮತ್ತೆ ಕಾಣಿಸಿಕೊಂಡ ಸಂಜೆ ಸೂರ್ಯ ನಕ್ಕರೂ ತೇಜೋಹೀನನಾಗಿದ್ದ. ಬಾಗಿಲ ಪರದೆಗಳನ್ನು ಸರಿಸಿ, ಆರೆಂಟು ಜನ ಗಿಡಿದು ಕುಳಿತ ಬೆಚ್ಚನೆ ಸ್ಥಾನದಿಂದೆದ್ದು ಹೊರಗೆ ಕಾಲಿಟ್ಟಾಗ ಒಮ್ಮೆಲೆ ರೆಫ್ರಿಜಿರೇಟರಿನ ಡೀಪ್ ಫ್ರೀಝ್ ವಿಭಾಗ ನಮ್ಮೆದುರು ಆಕಳಿಸದಂತಾಯ್ತು. ಜಲಪೈಗುರಿಯಲ್ಲಿ ಬಿಸಿಗೆ ಕರಗಿದಂತೆ ಬೆವರು ಹರಿಸುತ್ತ, ಹಾಕಿದ್ದ ಬನಿಯನ್ನು, ತೆಳು ಶರಟುಗಳು ಒದ್ದೆಯಾಗಿ ಅಂಟುತ್ತಾ ಇದ್ದಾಗ ಶಾಪ ಹಾಕಿದವರು ಈಗ ಒಮ್ಮೆಲೆ ಏನೂ ತೊಡದವರಂತೆ ನಡುಗಿ ಹೋದೆವು. ಎಲ್ಲರದೂ ಒಮ್ಮತದ ಜಪ “ಹೋಟೆಲ್, ಗರಂ ಚಾಯ್.” ಅವರಿವರು ತೋರಿದಂತೆ ನಾಲ್ಕು ಹೆಜ್ಜೆ ನಡೆದು ಯಾವುದೋ ಮಾಳಿಗೆಯಲ್ಲಿದ್ದ ಕಿಷ್ಕಿಂಧೆ ಸೇರಿದೆವು. ಏನಲ್ಲದಿದ್ದರೂ ಅಲ್ಲಿನ ನಾಲ್ಕು ಗೋಡೆಗಳ ಆವರಣವೇ ನಮಗೆ ಸಾಕಾಗಿತ್ತು. ಅದೇನೋ ನಾಯಿಕುರುಣೆಯಂತಿದ್ದ ಎರಡೇ ಎರಡು ತುಂಡು (ಕಟ್ಲೆಟ್ ನಾನು ಅದೇ ಮೊದಲು ಕಂಡದ್ದು, ತಿಂದದ್ದು!), ಟೊಮೆಟೋ ಚಟ್ನಿ (ಕೆಚಪ್ಪಂತೆ) ಸಮೇತ ಕೊಟ್ಟ. ಅಲ್ಲಿ ನಮ್ಮ ಬಾಯ್ತುಂಬುವ ಇಡ್ಲಿ, ದೋಸೆಗಳಂಥ ತಿನಿಸುಗಳೇನೂ ಇರಲಿಲ್ಲ. ಮೇಲೊಂದು ಚಾಯ್, ಅದೂ ಚಟಾಕು ಲೋಟದಲ್ಲಿ. ಬಿಲ್ಲು ಬಂದಾಗ ಅವನ್ನೇ ಮತ್ತೆ ತರಿಸಿ ಸೇವಿಸುವ ಶ್ರೀಮಂತಿಕೆ ನಮ್ಮದಲ್ಲ ಎಂಬ ಅರಿವೂ ಆಗಿ ಹೊರಬಿದ್ದೆವು.

ಜೀಪಿಳಿದಲ್ಲೇ ಹೆಚ್ಚಿನ ಗೆಳೆಯರು ಚದುರಿದ್ದರು. ವೈವಿಧ್ಯಮಯ ಉಣ್ಣೆವಸ್ತ್ರ, ಕಳ್ಳ ಮಾರುಕಟ್ಟೆಯ ವಿದೇಶೀ ಮಾಲು, ಡಾರ್ಜಿಲಿಂಗಿನ ವಿಶೇಷ ಬಾಡೂಟ ಎಂದೇನೇನೋ ತಲೆ ತುಂಬಿಕೊಂಡು ಹೋಗಿದ್ದರು. ನಾವೊಂದು ಮೂರು ನಾಲ್ಕು ಪುಳಿಚಾರು ಮತ್ತು ಜಿಪುಣರಷ್ಟೇ ಲಂಡನ್ ಅರಮನೆಗೆ ತಲಪಿದ ಇಲಿಯಂತೆ ಪುಟ್ಟಪಥದಲ್ಲಿ ತುಸು ತಿಣುಕಾಡಿ, ವಿಚಾರಣೆ ನಡೆಸಿದೆವು. ಅದು ದೂರ, ಇದಕ್ಕೆ ವೇಳೆಯಲ್ಲ, ಇನ್ನೊಂದಕ್ಕೆ ಸಮಯ ಸರಿಯಲ್ಲ ಎಂದು ಸಬೂಬುಗಳ ಸರಣಿಯಲ್ಲಿ ನಮಗುಳಿದದ್ದು ಮರಳುವ ದಾರಿ ಮಾತ್ರ. ಜೀಪಿನ ಚಾಲಕರು ಮೊದಲೇ ಎಚ್ಚರಿಸಿದ್ದರು – ತಡ ಸಂಜೆಯಾಗುತ್ತಿದ್ದಂತೆ ಏರುವ ಚಳಿಯಲ್ಲಿ ಜೀಪ್ ಚಾಲನೆ ಅಸಾಧ್ಯವಾಗುತ್ತದೆ. ಮತ್ತೇನಿದ್ದರೂ ಮಾರಣೇ ದಿನ ಬೆಳಿಗ್ಗೆಯೇ ವಾಪಾಸ್. ನಮಗೋ ಅಲ್ಲಿ ಉಳಿಯುವ ಆರ್ಥಿಕ ಬಲ, ಮಾನಸಿಕ ಸಿದ್ಧತೆ ಎಲ್ಲಕ್ಕೂ ಮುಖ್ಯವಾಗಿ ಏರುತ್ತಿದ್ದ ಚಳಿಯನ್ನು ತಡೆಯುವ ತಾಕತ್ತು ಇಲ್ಲವಾಗಿ ಕೂಡಲೇ ಸಿಕ್ಕ ಜೀಪ್ ಹಿಡಿದು “ಜಲಪೈಗುರಿ ಚಲೋ” ಘೋಷಿಸಿಯೇ ಬಿಟ್ಟೆವು. ಜೀಪಿನವರು ಇಳಿದಾರಿಯಲ್ಲಿ ಕೆಲವು ಹತ್ತೆಂಟು ಕಿಮೀ ಉಳಿಸುವ ಹೆಚ್ಚು ಕಡಿದಾದ ದಾರಿಯನ್ನೇ ಅನುಸರಿಸುತ್ತಾರೆ. ಹಾಗೆ ಭರ್ರೆಂದು ಏರಿದವರು ಜರ್ರೆಂದು ಇಳಿದಿದ್ದೆವು. ವೆಂಕು ಪಣಂಬೂರಿಗೆ ಹೋದ ಕತೆಗೆ ನಮ್ಮ ಅನುಭವ ಏನೂ ಭಿನ್ನವಲ್ಲ ಎಂದು ಈಗ ನಗೆ ಬರುತ್ತದೆ. ನಮ್ಮ ಹಾಗೇ ಉರಿಯುವ ಕೊಲ್ಕೊತ್ತಾದಿಂದ ಸೆಟೆಯುವ ಗಿರಿಗೆ ಬಂದ ಗಿರೀಶ್ ಬಳಗದ ಕಥನದೊಂದಿಗೆ ಮುಂದಿನ ವಾರ ತೊಡಗೋಣ.

(ಮುಂದುವರಿಯಲಿದೆ)