ಅಖಂಡ ಕೆರೆಮಣೆ ಧ್ಯಾನದ ಗೆಳೆಯ ವೆಂಕಟ್ರಮಣ ಉಪಾಧ್ಯ (ನೋಡಿ:ಉಪಾಧ್ಯ ಹೆರೆಮಣೆ ೨೦೧೫) ಆಶ್ಚರ್ಯಕರವಾಗಿ “ಬಿಸಿಲೆಗೆ ಹೋಪನಾ” ಅಂತ ಕರೆ ಕೊಟ್ಟ ಮೇಲೆ ಹೇಗೆ ಹೇಳಲಿ ಇಲ್ಲ? ಹಾಗೆಂದು ಒಪ್ಪಿಗೆ ಕೊಟ್ಟರೆ, ಅವರ `ಅಷ್ಟಗ್ರಹ ಕೂಟ’ದ ಹೊಂದಾಣಿಕೆಯಲ್ಲಿ ನಾನು ಅನುಮೋದಿಸಿದ ದಿನಗಳ ಕುರಿತು ಉಂಟು, ಇಲ್ಲಗಳ ಸಂತೆ ಮುಗಿದದ್ದೇ ಇಲ್ಲ! ಎಲ್ಲಾ ಆಡಿಕೊಳ್ಳುವಂತೆ ಕೊನೆಗೂ ಅವರ ಒಬ್ಬ ಎಳೆಯ ಗೆಳೆಯ – ಋಷಿರಾಜ್, ಅನ್ಯ ಕಾರ್ಯ ನಿಮಿತ್ತ ಬೆಂಗಳೂರಿಸಿದ್ದವರು, ಶನಿವಾರ ರಾತ್ರಿ ಬಸ್ಸೇರಿ ಸಾಸ್ತಾನಕ್ಕೆ ಆದಿತ್ಯವಾರ ಬೆಳಿಗ್ಗೆ ಮರಳಿದರು. ಹಾಗೇ ದಡಬಡ ತಯಾರಿ ನಡೆಸಿ, ಸ್ವಂತ ಕಾರೇರಿ ಸಾಲಿಗ್ರಾಮದಲ್ಲಿನ ಉಪಾಧ್ಯರ ಮನೆಗೆ ಧಾವಿಸಿದರು. ಅಲ್ಲಿ ಇಪ್ಪತ್ತು ಲೀಟರಿನ ಎರಡು ಕ್ಯಾನ್ ತುಂಬಾ ಬಾವಿ ನೀರು ಸೇರಿ ನೂರೆಂಟು ಶಿಬಿರ ಸರಕುಗಳನ್ನು ತುಂಬಿಕೊಂಡು ಮಂಗಳೂರಿನತ್ತ ಹೊರಟದ್ದೇ ನನಗೆ ಸುದ್ಧಿ ಕೊಟ್ಟರು. ಅದೇ ವೇಳೆಗೆ ಅತ್ತ ಬೆಂಗಳೂರಿನಲ್ಲಿ, ಉಪಾಧ್ಯರ ಇನ್ನೋರ್ವ ಎಳೆಯ ಗೆಳೆಯ, ಋಷಿರಾಜರ ಸಹಪಾಠಿ, ನಮ್ಮೆಲ್ಲರ ಸಮಾನ ಮಿತ್ರ ಡಾ|ರಾಘವೇಂದ್ರ ಉರಾಳರ ಮಗ – ಸುಬ್ರಹ್ಮಣ್ಯ, ಅನ್ಯ ಮಿತ್ರರನ್ನು ಹೊರಡಿಸುವಲ್ಲಿ ವಿಫಲನಾಗಿ, ಅನಿವಾರ್ಯ ಏಕಾಂಗಿಯಾಗಿ ನಮ್ಮನ್ನು ಬಿಸಿಲೆಯಲ್ಲಿ ಸೇರಿಕೊಳ್ಳಲು ತನ್ನ ಕಾರೇರಿ ಹೊರಟ. ನಾನು ಸರದಿಯಲ್ಲಿ ಜೋಡುಮಾರ್ಗದ ಗೆಳೆಯ ಸುಂದರರಾಯರಿಗೆ ಸುದ್ಧಿಯ ಎಳೆ ಮುಟ್ಟಿಸಿದೆ. ಹತ್ತೂಕಾಲರ ಸುಮಾರಿಗೆ ಋಷಿ, ಉಪಾಧ್ಯರ ಕಾರಿಗೆ ನಾನು ಮಂಗಳೂರಿನಲ್ಲಿ ಏರಿಕೊಂಡೆ. ಮತ್ತೆ ಇಪ್ಪತ್ತು ಮಿನಿಟಿನಲ್ಲಿ ಜೋಡುಮಾರ್ಗದ ಸುಂದರರಾವ್ ಜೋಡಿಕೊಂಡರು.

ಉಪ್ಪಿನಂಗಡಿ ದಾಟಿ ಕಡಬದ ದಾರಿ ಹಿಡಿದಿದ್ದೆವು. ಸುಬ್ರಹ್ಮಣ್ಯನ ಚರವಾಣಿ ಕರೆ ಬಂತು. ಆತ ಹಾಸನಕ್ಕೂ ಮೊದಲೇ ಚೆನ್ನರಾಯನಪಟ್ನದಲ್ಲಿ ಕವಲಿ, ಹೊಳೆನರಸಿಪುರಕ್ಕಾಗಿ ಶನಿವಾರಸಂತೆ ಮುಟ್ಟಿದ್ದ. ಬಯಲು ಸೀಮೆಯ, ನುಣ್ಣನೆ ದಾರಿಯ ಅವನಿಗೆ ಬಿಸಿಲೆ ಮತ್ತೆ ಒಂದು ಗಂಟೆ ದಾರಿ. ಕಿಮೀ ಲೆಕ್ಕದಲ್ಲಿ ನಮ್ಮ ಅಂತರವೂ ಅಷ್ಟೇ ಇದ್ದಿರಬಹುದು. ಆದರೆ ಅನಿಶ್ಚಿತ ಘಟ್ಟ ಏರುವಲ್ಲಿ ಕಾಲಮಿತಿ ಹೇಳುವುದು ಕಷ್ಟ. ಸುಬ್ಬಣ್ಣನಿಗೆ ಬಿಸಿಲೆ ಹಳ್ಳಿಯಿಂದಲೂ ಒಂದು ಕಿಮೀ ನಮ್ಮತ್ತ ಇರುವ ಪ್ರಕೃತಿ ವೀಕ್ಷಣಾ ಕಟ್ಟೆ ಅರ್ಥಾತ್ `ಬೀಟೀ ಸ್ಪಾಟ್’ಗೆ (ಬ್ಯೂಟೀ ಸ್ಪಾಟಿನ ಜನಪದ ರೂಪ!) ಬಂದು ನಿಲ್ಲಲು ಸೂಚಿಸಿದೆವು. ನಾವು ಕಡಬ ಕಳೆಯುವುದರೊಳಗೆ ಸುಬ್ಬಣ್ಣ ಬೀಟಿ ಸ್ಪಾಟಿನಿಂದಲೇ ಕರೆ ಮಾಡಿದ್ದ. ನಾವಾತನಿಗೆ ಬಿಸಿಲೆ ಹಳ್ಳಿಗೇ ಹೋಗಿ, ನಮ್ಮ ಮಾಮೂಲೀ ತುಳಸೀ ಹೋಟೆಲಿನಲ್ಲಿ (ನೋಡಿ:ತುಳಸಿ ಹೋಟೆಲ್) ನಮ್ಮನ್ನೂ ಊಟದ ಲೆಕ್ಕಕ್ಕೆ ಸೇರಿಸಿ, ಕಾಯಲು ಸೂಚಿಸಿದೆವು. ಹೆಚ್ಚಿನ ಮಾತು ಬೆಳೆಸಲು ತಿಣುಕುತ್ತಿದ್ದಂತೆ ಸಂಪರ್ಕ ಕಡಿದೇ ಹೋಯ್ತು.

ಕರ್ನಾಟಕದ ಸಾರ್ವಜನಿಕ ದೇವಸ್ಥಾನಗಳ ಆದಾಯಪಟ್ಟಿಯಲ್ಲಿ ಕಳೆದ ವರ್ಷದ ಪ್ರಥಮ ಸ್ಥಾನಿ – ಕುಕ್ಕೆ ಸುಬ್ರಹ್ಮಣ್ಯ! ಅದನ್ನು ಸಮರ್ಥಿಸುವಂತೆ ಇತ್ತು ವಾಹನ ದಟ್ಟಣೆ. ಶಾಲಾಕಾಲೇಜುಗಳ ಬೇಸಗೆ ರಜೆ, ಹೆಚ್ಚುವರಿಯಾಗಿ ಆದಿತ್ಯವಾರದ ಲೆಕ್ಕ ಸೇರಿದ್ದಕ್ಕೋ ಏನೋ ಮಿನಿಟಿಗೆ ಇಪ್ಪತ್ತರಂತೆ ವಾಹನಗಳು ಮಿಂಚುತ್ತಲೇ ಇದ್ದುವು. ಅವುಗಳೆಡೆಯಲ್ಲಿ ನುಸಿಯುತ್ತ ನೆಟ್ಟಣಕ್ಕಾಗುವಾಗ ನಾವು ಸುಮಾರು ನೂರು ಕಿಮೀ ಅವಿರತ ಓಡಿದ್ದೆವು. ಹಾಗಾಗಿ ದಾರಿ ಬದಿಯ ಜೋಪಡಿ ಹೋಟೆಲಿನಲ್ಲಿ ನಾಲ್ಕು ಚಕ್ಕುಲಿ ಕಡಿದು, ಚಾ ಏರಿಸಿದೆವು. ಸುಬ್ರಹ್ಮಣ್ಯ ಪೇಟೆಗೆ ಮೂರು ಕಿಮೀ ಮೊದಲೇ ಕುಳ್ಕುಂದದಲ್ಲಿ ಅಂತಿಮವಾಗಿ ಎಡಗವಲು ಹಿಡಿದು, ಬಿಸಿಲೆ ಮಾರ್ಗ ಅನುಸರಿಸಿದೆವು. ಒಂದೇ ಕಿಮೀ ಅಂತರದಲ್ಲಿ, ಸಂತೆ ನಡುವಿನಿಂದ ನಿರ್ಜನ ಗೊಂಡಾರಣ್ಯಕ್ಕೆ ನುಗ್ಗಿದ ಅನುಭವ! ರಣ ಬಿಸಿಲಿಗೆ ಕಾಡು ಹಸಿರ ಛತ್ತೇರಿಸಿತ್ತು. ಅದುವರೆಗೆ ಅರೆ-ಒಂದು ಕಿಮೀ ಉದ್ದಕ್ಕೂ ದೃಷ್ಟಿಗೆ ನಿಲುಕುತ್ತಿದ್ದ ದಾರಿ, ಇಲ್ಲಿ ಪ್ರತಿ ಎಡಕ್ಕೂ ಒಂದು ಬಲಮುರಿಯನ್ನು, ಪ್ರತಿ ಬಲಕ್ಕೂ ಒಂದು ಎಡ ಬಳುಕನ್ನು ಜೋಡಿಸುತ್ತ ನಿಗೂಢವಾಗಿ, ನುಣ್ಣಗೆ, ತಣ್ಣಗೆ ಹರಿದಿತ್ತು. ಅದರ ಸ್ಫುರಣೆಯಲ್ಲೋ ಎಂಬಂತೆ ನಮ್ಮ ಗೆಳೆಯರಲ್ಲಿ ಯಾರೋ ಕೇಳಿದ್ದರು “ಇಲ್ಲಿ ಕಾಳಿಂಗ ಸರ್ಪಗಳು ತುಂಬ ಅಲ್ವಾ ಅಶೋಕ್?” ಸದ್ಯದ ಅಂದಾಜಿನಂತೆ, ಆಗುಂಬೆ ವಲಯದಷ್ಟು ಕಾಳಿಂಗ ಇಲ್ಲಿ ಖ್ಯಾತವಲ್ಲ. ಮತ್ತೆ ಎಲ್ಲಿಂದೆಲ್ಲಿಗೂ ಇರುವಂತೆ, ಇಲ್ಲೂ ನಿಜಕ್ಕೆ ಹೆದರಬೇಕಾದ್ದು ಮನುಷ್ಯನಿಗೇ! ಋಷಿರಾಜ್ ಈ ಮಾರ್ಗಕ್ಕೆ ಹೊಸಬರು. ಹಾಗಾಗಿ ನಾನು ಸ್ವಲ್ಪ ಆತಂಕದಲ್ಲೇ ಎದುರಿನಿಂದ ಅತಿವೇಗದಲ್ಲಿ ಮತ್ತು ಬೇಜವಾಬ್ದಾರಿಯಲ್ಲಿ ನುಗ್ಗಿ ಬರಬಹುದಾದ ದ್ವಿಚಕ್ರಿಗಳ ಬಗ್ಗೆ ಎಚ್ಚರಿಕೆ ಕೊಟ್ಟಿದ್ದೆ. ಆದರೆ ನಮ್ಮಾಶ್ಚರ್ಯಕ್ಕೆ ಒಂದು ವಾಹನವೂ ನಮಗೆ ಎದುರಾಗಲೇ ಇಲ್ಲ.

ಬಿಸಿಲೆ ಘಾಟಿಯ ಕುರಿತು ನನ್ನ ಹಳೆಯ ಓದುಗರಿಗೆ ತಿಳಿಯದ್ದೇನಲ್ಲ. ಸೂಕ್ಷ್ಮವಾಗಿ ಹೇಳುವುದಿದ್ದರೆ, ಇಲ್ಲಿ ಮೊದಲ ಸುಮಾರು ಆರು ಕಿಮೀ ದಕ ವಲಯದ್ದು, ಸಪಾಟು ಮತ್ತು ನುಣ್ಣನೆ ಡಾಮರಿನದ್ದು. ಮುಂದೆ ಹಾಸನ ವಲಯ, ಬಹುತೇಕ ಘಟ್ಟದೊಡನೆ ಅನುಸಂಧಾನದ್ದು. ನಾನು ಕಳೆದ ಮಳೆಗಾಲದಲ್ಲಿ ಸೈಕಲ್ಲೇರಿ ಇತ್ತ ಬಂದಿದ್ದಾಗ (ನೋಡಿ: ಬಿಸಿಲೆ ಕಾಡಿನ ಕೊನೆಯ ದಿನಗಳು) ಈ ಮಾರ್ಗ ಬಂದ್ ಮಾಡಿ, ಹಾಸನ ವಲಯದಲ್ಲಿ ವಿಸ್ತರಣೆ ಹಾಗೂ ಕಾಂಕ್ರಿಟೀಕರಣ ನಡೆದಿತ್ತು.

ಮತ್ತೊಂದೆರಡು ತಿಂಗಳಲ್ಲಿ, ನಾನು ಮಿತ್ರರೊಡನೆ ಕಾರೇರಿ ಶಿರಾಡಿ ಮಾರ್ಗವಾಗಿ ಎತ್ತಿನಹೊಳೆ ಯೋಜನೆಯ ತನಿಖೆಗೆ ಸಕಲೇಶಪುರಕ್ಕೆ ಹೋಗಿದ್ದೆ. ಕೊನೆಯಲ್ಲಿ ಹಾಗೇ ಬಿಸಿಲೆಗೆ ಬಂದಿದ್ದೆ. (ನೋಡಿ: ಎತ್ತಿನಹೊಳೆ ಯೋಜನೆ; ಇದುವರೆಗೆ ) ಆಗ ಘಾಟಿಯ ಕಾಂಕ್ರಿಟೀಕರಣ ಒಂದು ಹಂತಕ್ಕೆ ಸ್ಥಗಿತಗೊಂಡಿತ್ತು ಮತ್ತು ವಾಹನ ಸಂಚಾರ ನಡೆದಿತ್ತು. ಸಹಜವಾಗಿ ನಾವು ಮಂಗಳೂರಿಗೆ ಮರಳುವಲ್ಲಿ ಬಳಸಂಬಟ್ಟೆ ಬಿಟ್ಟು, ಇದರಲ್ಲೇ ಮರಳಿದ್ದೆವು.

ಆಗ ಕಂಡಂತೆ, ಮಾರ್ಗವಿಸ್ತರಣೆ ಬೂದಿ ಚೌಡಿ ದೇವಳದ ಬಳಿ ಎಂದೋ ನಿಂತು ಹೋಗಿತ್ತು. ದಕ-ಹಾಸನ ಗಡಿಯಲ್ಲಿದ್ದ ಅಪೂರ್ಣ ಸೇತುವೆಯನ್ನು ತತ್ಕಾಲೀನ ವ್ಯವಸ್ಥೆಯಲ್ಲಿ ಸಂಚಾರ ಮುಕ್ತಗೊಳಿಸಿದ್ದರು. ಇಂದು ಅದರ ನೆನಪಿನಲ್ಲೇ ನಾವು ಬೂದಿಚೌಡಿ ದೇವಳವನ್ನೇನೋ ಬಲು ಚುರುಕಾಗಿಯೇ ಸಮೀಪಿಸಿದ್ದೆವು. ನಮ್ಮ ದುರದೃಷ್ಟಕ್ಕೆ ದೂರದಿಂದಲೇ ಗೇಟ್ ಮಾತ್ರ ಪೂರ್ಣ ಬಂದ್ ಆಗಿರುವುದು ಕಾಣಿಸಿತ್ತು!

ದೇವಳದ ಒತ್ತಿನಲ್ಲೊಂದು ಕಾರು, ಒಂದೆರಡು ಅರಣ್ಯ ಇಲಾಖಾ ನೌಕರರು, ಕೆಲವು ಸಾಮಾನ್ಯರೂ ನಿಂತಿದ್ದರು. ತತ್ಕಾಲೀನ ಪರ್ಯಾಯ ದಾರಿಯಿದೆಯೋ ಎಂಬ ಹುಡುಕು ನೋಟವೂ ನಿರಾಶಾಜನಕವೇ ಇತ್ತು. ಗೇಟ್ ಅಕ್ಕ ಪಕ್ಕದಲ್ಲಿ ದ್ವಿಚಕ್ರಿಗಳೂ ನುಸುಳದಂತೆ ಸೈಜುಗಲ್ಲುಗಳ ರಾಶಿ ಹಾಕಿದ್ದರು. ಈ ಗೊಂದಲದಲ್ಲಿ, ಋಷಿರಾಜ್ ಕಾಂಕ್ರೀಟ್ ಹಾಸು ಮುಗಿದದ್ದು ಗಮನಿಸದೆ ಧಡಾರನೆ ಹಳೆಯ ಡಾಮರಿನ ತಗ್ಗಿಗೆ ಕಾರು ಹಾರಿಸಿದ್ದರು; ನಮ್ಮ ಯೋಜನೆಯ ಸ್ತರಭಂಗವೇ ನಾಟಕೀಯವಾಗಿ ಅನುಭವಕ್ಕೊದಗಿತ್ತು. ಅದೃಷ್ಟಕ್ಕೆ ಕಾರಿಗೇನೂ ಜಖಂ ಆಗಲಿಲ್ಲ. ಇಲ್ಲಿ ನಮಗೆ ಮೊದಲು ಹೊಳೆದದ್ದು “ಬಂದ ದಾರಿಗೆ ಸುಂಕವಿಲ್ಲದೇ ಮರಳು”! ಕುಳ್ಕುಂದ, ನೆಟ್ಟಣದವರೆಗೆ ಹಿಂದೆ ಹೋಗಿ, ಗುಂಡ್ಯ, ಮಂಜರಾಬಾದಿಗಾಗಿ ಇರುವ ಬಳಸು ದಾರಿ. ಅಂದರೆ, ಸುಮಾರು ನೂರಾ ಆರು ಕಿಮೀ ಸುತ್ತು ಅಥವಾ ಕನಿಷ್ಠ ಮೂರು ಗಂಟೆಯ ಪ್ರಯಾಣ. ಮತ್ತೆ ಕಾಣಿಸಿದ್ದು ಚಾರಣದ ಅವಕಾಶ. ವನರಕ್ಷಕರನ್ನು ವಿಚಾರಿಸಿದೆವು. ಪುನರಾರಂಭಗೊಂಡ ಕಾಂಕ್ರಿಟೀಕರಣ ಅಡ್ಡಹೊಳೆ ಸಮೀಪ ನಡೆದಿತ್ತು. ಅಂದರೆ, ಆ ನಾಲ್ಕು ಕಿಮೀ ಅಂತರವನ್ನು ನಾವು ನಡೆದರೆ ಮತ್ತಿನ ಸುಮಾರು ಆರೇಳು ಕಿಮೀ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಅಡ್ಡಹೊಳೆಯಲ್ಲಿ ಈ ಕಾಮಗಾರಿಗೆ ಬೇಕಾದ ಕಚ್ಚಾಮಾಲನ್ನೆಲ್ಲ ಒದಗಿಸುತ್ತಿರುವ ಟಿಪ್ಪರುಗಳ ಸೈನ್ಯವೂ ದಕ್ಕೀತು. ಇದು ಸಂಪರ್ಕ ಯುಗವೇನೋ ನಿಜ. ಅತ್ತ ಲಾರಿಯಿಲ್ಲದಿದ್ದರೂ ನಮ್ಮ ಸಣ್ಣ ಸೂಚನೆಗೆ ಸ್ವತಃ ಸುಬ್ರಹ್ಮಣ್ಯನೇ – ಓಹ್, ಕುಕ್ಕೇ ಸುಬ್ರಹ್ಮಣ್ಯನಲ್ಲ, ಉರಾಳರ ಸುಬ್ರಹ್ಮಣ್ಯನೇ ಕಾರಿಳಿಸಿ ಬರಬಹುದಿತ್ತು. ಆದರೆ ಪರಿಸ್ಥಿತಿಯ ಸಂಚು ನೋಡಿ – ಇಲ್ಲಿ ನಾವೂ ಅಲ್ಲಿ ಅವನೂ “ವ್ಯಾಪ್ತಿ ಪ್ರದೇಶದ ಹೊರಗಿದ್ದೆವು.”]

ಮುಖ್ಯವಾಗಿ ವನವಾಸ ಮತ್ತೆ ಲಘು ಚಾರಣವನ್ನು ಬಯಸಿ ಹೋದವರು ನಾವು. ಹಾಗಾಗಿ ನಮ್ಮ ಶಿಬಿರ ತಯಾರಿಗಳೆಲ್ಲ ಕಾರಿನ ಆಧಾರದಲ್ಲಿತ್ತು. ಸಹಜವಾಗಿ ತುಸು ಹೆಚ್ಚೇ ಗಂಟುಗದಡಿ ಇತ್ತು, ಮತ್ತು ಉದ್ದದ ದಾರಿಗಾದರೆ ಅನುಕೂಲದಲ್ಲಿ ಹೊತ್ತು ಸಾಗಿಸುವ ಸೌಕರ್ಯಗಳು – ಮುಖ್ಯವಾಗಿ, ಬೆನ್ನಚೀಲ ಕಡಿಮೆಯಿತ್ತು. ಅವೆಲ್ಲವನ್ನು ವಿಮರ್ಶಿಸಿ, ತೀರಾ ಅವಶ್ಯವಾದವನ್ನು ಮಾತ್ರ ನಾಲ್ವರೊಳಗೆ ಹೊರೆ ಹೊಂದಾಣಿಕೆ ಮಾಡಿ, ಕಾರನ್ನು ಅಲ್ಲೇ ಬಿಟ್ಟು ನಡಿಗೆಗಿಳಿದೆವು.

ನಮ್ಮ ಗೊಂದಲದೆಡೆಯಲ್ಲೂ ಬೂದಿಚೌಡಿಯ ವಠಾರದಲ್ಲಿದ್ದ ಇಲಾಖೇತರರಲ್ಲಿ ತರುಣನೊಬ್ಬ ನನ್ನ ಗುರುತು ಹಿಡಿದ. ಆತ – ನನ್ನ ಮಗ ಅಭಯಸಿಂಹನ ಪದವಿಪೂರ್ವ ತರಗತಿಗಳಲ್ಲಿ ಸಹಪಾಠಿ ಗೆಳೆಯ. ಸದ್ಯ ಮಂಗಳೂರಿನ ಖ್ಯಾತ ಆಸ್ಪತೆಯೊಂದರಲ್ಲಿ ವೈದ್ಯ. ಅಲ್ಲೇ ಇದ್ದ ಆತನ ತಂದೆತಾಯಿಯರ ಪರಿಚಯವನ್ನೂ ನಮಗೆ ಮಾಡಿಕೊಟ್ಟ. ಆ ತಂದೆ, ಸ್ವಂತ ಉಮೇದಿನಲ್ಲಿ ಮಂಗಳೂರಿನ ನೀರನಿರ್ವಹಣೆಗೆ ಹೊಸ ಯೋಜನೆಯೊಂದನ್ನು ಹಾಕಿದ್ದರು.

ಕಡುಬೇಸಗೆಯಲ್ಲೂ ಇಲ್ಲಿ ಸಣ್ಣದಾಗಿ ಕಲಕಲಿಸುವ ಅಡ್ಡ ಹೊಳೆ ಪಾತ್ರೆಗೇ ಕೊಳಾಯಿ ಒಡ್ಡುವುದಂತೆ. ಅದನ್ನು ಗುರುತ್ವಾಕರ್ಷಣ ಬಲದ ನಿರ್ವಹಣೆಯಲ್ಲೇ ಅಂದರೆ ಹೊಳೆ ಪಾತ್ರೆಯನ್ನೇ ಅನುಸರಿಸಿ ಮಂಗಳೂರಿಗೆ ಮುಟ್ಟಿಸುವುದಂತೆ. ಇದರಿಂದ ನೆಲ ಕುಡಿಯುವ (ಇಂಗುವಿಕೆ), ಸೂರ್ಯ ಹೀರುವ (ಆವಿಯಾಗುವಿಕೆ), ಮಾಲಿನ್ಯ ಸೇರುವ (ದಾರಿಯಲ್ಲಿ ಊರೂರಿನ ಚರಂಡಿ, ಕಸ) ಮತ್ತು ವಿದ್ಯುಚ್ಛಕ್ತಿ ಕುಡಿಯುವ (ಪಂಪಿಂಗ್) ಸಮಸ್ಯೆಗಳೇ ಇರುವುದಿಲ್ಲ. ಅವರೇ ಹೇಳಿಕೊಂಡಂತೆ ಇದು ಎತ್ತಿನಹೊಳೆ ಯೋಜನೆಗೆ ಪ್ರತೀಕಾರವಂತೆ! ಇದು ಅವರ ಸುಮಾರು ಏಳು ವರ್ಷಗಳ ಚಿಂತನೆಯ ಫಲ! ಸದ್ಯ ಅರಣ್ಯ ಇಲಾಖೆಯ ಸಹಕಾರದಿಂದ ಖಾಸಗಿಯಾಗಿ ಅಡ್ಡಹೊಳೆಯ ಈ ಋತುವಿನ ಹರಿವಿನ ಪ್ರಮಾಣ ಮತ್ತು ವೇಗ ಅಳತೆ ಮಾಡಲು ಬಂದಿದ್ದರು. ಪ್ರಾಮಾಣಿಕವಾಗಿ ಏನೋ ಸಾಮಾಜಿಕ ಹಿತ ಸಾಧಿಸುವ ಅವರ ಮಾತು ಕೇಳುವಾಗ ಒಮ್ಮೆಗೆ ಎದುರುತ್ತರ ನೀಡಲು ನನಗೆ ಸಂಕೋಚವಾಯ್ತು. ಅಡ್ಡಹೊಳೆ ಪುಷ್ಪಗಿರಿ ವನಧಾಮದ ಗಡಿ ಮತ್ತು ಬಿಸಿಲೆ ರಕ್ಷಿತಾರಣ್ಯದ (ಡೀಮ್ಡ್ ಫಾರೆಸ್ಟ್) ಭಾಗವೇ ಆಗಿದೆ. ಇಲ್ಲಿ ಯಾವುದೇ ಪ್ರಾಕೃತಿಕ ಸಂಪತ್ತನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಸುವಂತಿಲ್ಲ, ಎಂದು ಅವರಿಗೆ ತಿಳಿದಂತಿರಲಿಲ್ಲ. ಅದಕ್ಕೂ ಮುಖ್ಯವಾಗಿ, ಘಟ್ಟ ಬಿಡುವ ನೀರು “ಮಂಗಳೂರ ದಾರಿಯಲ್ಲಿ ವ್ಯರ್ಥವಾಗುತ್ತದೆ” ಎಂಬ ಯೋಚನೆಯೇ ತಪ್ಪು. ಯಾವುದೇ ನೀರು ಹರಿಯುವಲ್ಲಿ, ಇಂಗುವಲ್ಲಿ ಅದಕ್ಕೆ ನೂರೆಂಟು ಸಾರ್ಥಕತೆಗಳಿವೆ ಎಂಬಿತ್ಯಾದಿ ವಿಚಾರ ಆ ಹಿರಿಯರಿಗಲ್ಲದಿದ್ದರೂ ಯೋಜನೆಯನ್ನು ಒಪ್ಪಿನಡೆಸಬೇಕಾದ ಸರಕಾರಕ್ಕೆ ಇರಲೇಬೇಕು. “ನೇತ್ರಾವತಿಯ ಮಳೆಗಾಲದ ಪ್ರವಾಹ ವ್ಯರ್ಥ ಸಮುದ್ರ ಸೇರುತ್ತದೆ” ಎಂಬ ಎತ್ತಿನಹೊಳೆ ಯೋಜನೆಯ ತಪ್ಪು ಕಲ್ಪನೆಯೇ ಇಲ್ಲೂ ಮುಂದುವರಿದಿದೆ! (ನೋಡಿ: ಎತ್ತಿನ ಹೊಳೆಯಲ್ಲಿ ಸುಳ್ಳಿನ ಪ್ರವಾಹ)

ಉಪಾಧ್ಯರು ಚಾರಣ ಅಥವಾ ಯಾವುದೇ ನಮೂನೆಯ ವಿಶೇಷ ದೈಹಿಕ ಚಟುವಟಿಕೆ ಮಾಡದೆ ದಿನಗಳು ಹಲವಾಗಿದ್ದವು. ಸಹಜವಾಗಿ ಮಾಂಸಖಂಡಗಳ ಸೆಟೆತ ಮತ್ತು ಸುಸ್ತು ಕಾಡುವ ಹೆದರಿಕೆಯಿದ್ದುದರಿಂದ ಹಗುರಾಗಿಯೇ ನಡೆಯಲು ಬಯಸಿದ್ದರು. ಸಹಜವಾಗಿ ನಾವೇ ಮೂವರು ಎಲ್ಲ ಹಂಚಿಕೊಂಡೆವು. ಅರವತ್ತರ ಹರಯದ ಮೇಲಿದ್ದ ನಮ್ಮೂವರಿಗೆ ಹೋಲಿಸಿದರೆ ನಲ್ವತ್ನಾಲ್ಕರ ಋಷಿರಾಜ್ ಅಪ್ಪಟ ಬಾಲಕ! ಇಲ್ಲದಿದ್ದರೂ ನಿತ್ಯ ದೀರ್ಘ ಓಟ, ಕರಾಟೆ ಮಾಡಿದ ಗಟ್ಟಿಜೀವ, ಉಪಾಧ್ಯರ ಮೇಲಿನ ಗುರುಭಕ್ತಿ ಸೇರಿ ಋಷಿ ಗರಿಷ್ಠ ಹೊರೆ ಹೊತ್ತಿದ್ದರು. ನಡಿಗೆಯ ಕೊನೆಯ ಹಂತದಲ್ಲಿ, ಸಿಮೆಂಟ್ ಇನ್ನೂ ಹಸಿಯಿದ್ದ ಒಂದೈವತ್ತು ಅಡಿ ಬಿಟ್ಟರೆ ಒಟ್ಟಾರೆ ಪಾದಯಾತ್ರೆ ಕಷ್ಟವಾಗಲೇ ಇಲ್ಲ. ಏರುದಾರಿಯೇ ಆದರೂ ನಾಲ್ಕು ಕಿಮೀ ಉದ್ದಕ್ಕೂ ಚೊಕ್ಕ ಸಪಾಟು ಕಾಂಕ್ರೀಟ್ ಹಾಸು, ಅಂಚುಗಟ್ಟಿದ ದಟ್ಟ ಕಾಡಿನ ನೆರಳು, ನೀರು ಹಸಿರಿನ ತಂಪು ವಾತಾವರಣ, ಯಾವುದೇ ವಾಹನ ಸಂಚಾರದ ಗೊಂದಲಗಳೂ ಇರಲಿಲ್ಲ.

ಕಾಮಗಾರಿಯ ಸ್ಥಾನೀಯ ಶಿಬಿರ ಮತ್ತು ಅಡ್ಡಹೊಳೆ ಸೇತುವೆ ಕಳೆದಲ್ಲಿಗೆ ನಾವು ಅಂದಾಜಿಸಿದಂತೇ ಟಿಪ್ಪರ್ ಲಾರಿಗಳು ಸಿಕ್ಕವು. ನಮ್ಮನ್ನು ನಿಜವಾಗಿ ಕಾಡಿದ್ದು ವೈಚಾರಿಕ ಹೊರೆ – ಈ ಮಾರ್ಗಾಭಿವೃದ್ಧಿ ಬೇಕೇ? ಘಟ್ಟದಾರಿ ದೊಡ್ಡ ವಾಹನಸಂಚಾರಕ್ಕೆ ತೆರೆದುಕೊಡಬೇಕೆಂಬ ಕಾರಣಕ್ಕೆ ಅಭಿವೃದ್ಧಿಪರರು ಈ ಮಾರ್ಗಕ್ಕೆ ಅದರಲ್ಲೂ ಕಾಂಕ್ರೀಟ್ ಹಾಸಿಗೆ ನಿಯತ ಅಗಲ, ತಿರುವಿನ ಶಿಸ್ತು ಮತ್ತು ಏರುಕೋಣ ಹಾಕಿಕೊಂಡಿದ್ದರು. ಅದಕ್ಕಾಗಿ ಕೆಲವೆಡೆಗಳಲ್ಲಿ ಹಳೆ ದಾರಿಯ ಜಾಗ ಅನುಪಯುಕ್ತವಾದರೆ ಮತ್ತೆ ಕೆಲವೆಡೆ ಕಾಂಕ್ರೀಟ್ ಹಾಸು ದರೆಯ ತಳರೇಖೆಯಿಂದ ಪ್ರಪಾತದ ಅಂಚಿನವರೆಗೂ ವ್ಯಾಪಿಸಿತ್ತು.

ಮಳೆನೀರ ಚರಂಡಿ, ಅಂಚುಗಟ್ಟೆಗಳೆಲ್ಲ ಇನ್ನು ನಿಧಾನಕ್ಕೆ ಆಗಬೇಕು. ತಳದಲ್ಲಿ ಅದೆಷ್ಟೋ ದಪ್ಪಕ್ಕೆ ಯಂತ್ರ ಬಿಗಿಮಾಡಿದ ಜಲ್ಲಿ ಹಾಸು, ಮತ್ತೆ ನೀರ ಪಸೆ ಮೇಲೇರದಂತೆ ಸಿಲ್ಪಾಲಿನ್ ಹಾಳೆ, ಪೊಳ್ಳು ಜವುಗು ಕಂಡಲ್ಲಿ ಕಬ್ಬಿಣ ಸರಳಿನ ಹಂದರದ ಹೆಚ್ಚಿನ ಬಲ ಕೊಟ್ಟು, ಅಂತಿಮವಾಗಿ ಒಂದಡಿ ದಪ್ಪಕ್ಕೆ ಕಾಂಕ್ರೀಟ್! ಅದು ಮಳೆಗಾಲದಲ್ಲಿ ಜಾರುದಾರಿಯಾಗದಂತೆ ಹಸಿ ಇದ್ದಾಗಲೇ ಅಡ್ಡಗೀಚು, ಬಿರುಕು ನಿರೋಧಿಸುವಂತೆ ಡಾಮರು ಗಿಡಿದ ಸೀಳುಗಳೆಲ್ಲ ಸಮರ್ಪಕವಾಗಿಯೇ ಕಾಣುತ್ತಿತ್ತು. ಅಲ್ಲಿ ಇಲ್ಲಿ ಚಲ್ಲಿಯೋ ಉಳಿದೋ ವ್ಯರ್ಥವಾಗುವ ಅಮೂಲ್ಯ ಕಚ್ಚಾ ಸಾಮಗ್ರಿ – ಜಲ್ಲಿ, ಜಲ್ಲಿಹುಡಿ ಮತ್ತು ಮರಳು ಮರೆಯುವುದೇ ಲಾಭವೇನೋ!

ನೆಲ ಹಸನುಗೊಳಿಸುವಾಗ ಬೀಳಿಸಿದ ಮರ, ಎಬ್ಬಿಸಿದ ಕಲ್ಲು, ಕರೆಗೊತ್ತರಿಸಿದ ಮಣ್ಣು, ಖಾಲಿ ಸಿಮೆಂಟ್ ಚೀಲ, ಹೆಸರಿಸಲಾಗದ ಬಹುವಿಧದ ನಾಗರಿಕ ಕಸ ಸಹಜ ಎನ್ನುವಂತೆ ಸರ್ವವ್ಯಾಪಿಯಾಗಿತ್ತು. ಕೆಲಸ ನಡೆಯುತ್ತಿದ್ದ ಜಾಗದಲ್ಲಂತು ನಮಗೆ ಕಾಮಗಾರಿಯ ಎಲ್ಲ ವಿವರಗಳೂ ನಿಚ್ಚಳವಾದವು. ಮೂರು-ನಾಲ್ಕು ಕಿಮೀ ಮೇಲೆ ಯಾವುದೋ ಬೆಟ್ಟದ ಝರಿಗೆ ಪೈಪಿಟ್ಟು, ಉದ್ದಕ್ಕೂ ತಂದು ಕೆಲಸದ ಜಾಗದಲ್ಲಿ ಹರಿನೀರು ಧಾರಾಳ ಮಾಡಿಕೊಂಡಿದ್ದರು.

ಕೊಳಾಯಿ ನೀರನ್ನು ಕಾಂಕ್ರೀಟ್ ಮಿಶ್ರಣದ ಅನುಕೂಲಕ್ಕಾಗಿ ಟ್ಯಾಂಕರ್ ಒಂದರಲ್ಲಿ ತುಂಬಿಕೊಳ್ಳುತ್ತ, ಉಳಿದವನ್ನು ದಿನ ಕಳೆದ ಕಾಂಕ್ರೀಟ್ ಹಾಸಿನ ಉದ್ದಕ್ಕೂ ಹರಿಬಿಟ್ಟಿದ್ದರು. ಅಲ್ಲಿ ತತ್ಕಾಲೀನ ವಾರೆಕೋರೆಯ ಕಟ್ಟೆ, ಚರಂಡಿ ಮಾಡಿ, ನೀರು ಪೂರ್ಣ ದಾರಿಯನ್ನು ನೆನೆಸುವಂತೆ ಮಾಡಿದ ಕ್ರಮ ನಮ್ಮ ಮೆಚ್ಚುಗೆಗೆ ಪಾತ್ರವಾಯ್ತು. ಕೂಲಿಯವರು ಅದೇ ನೀರಿನಲ್ಲಿ ಮಿಂದು, ಅಟ್ಟು, ಕುಡಿದು, ತೂರಿದ್ದಕ್ಕೂ ಅಲ್ಲಿ ಸಾಕ್ಷಿ ಧಾರಾಳ ಇತ್ತು!

ಜೆಸಿಬಿ ಮತ್ತು ರೆಡಿಮಿಕ್ಸ್ ಲಾರಿಗಳನ್ನು ಕಸಿ ಮಾಡಿದಂಥ ಮೂರು ಭಾರೀ ಯಂತ್ರಗಳು ಸರದಿಯಲ್ಲಿ ಮೇಲೆ ಕೆಳಗೆ ಓಡಿಯಾಡುತ್ತಿದ್ದುವು. ಅವುಗಳ ಗೋಚುಗೈಗಳು ಟಿಪ್ಪರುಗಳು ತಂದು ಹಾಕಿದ ಮಹಾರಾಶಿಗಳಿಂದ ಯುಕ್ತ ಪ್ರಮಾಣದಲ್ಲಿ ಮರಳು, ಜಲ್ಲಿ, ಸಿಮೆಂಟುಗಳನ್ನು ಬಾಚಿ, ತನ್ನದೇ ತಿರುಗುಹಂಡೆಗೆ ತುಂಬಿಕೊಳ್ಳುತ್ತಿತ್ತು. ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ ಪಾಕ ಹದ ಮಾಡಿಕೊಳ್ಳುತ್ತ ಬಂದು ಬೇಕಾದ ಜಾಗದಲ್ಲಿ ಕಕ್ಕುತ್ತಿತ್ತು. ಅದನ್ನು ಕೂಲಿಗಳು ಕಂಪನಕೋಲು ಮತ್ತು ಭಾರೀ ತಿರುಗುತಟ್ಟೆಗಳಿಂದ ಸಮರ್ಪಕವಾಗಿಯೇ ಬಿಗಿ ಹಾಗೂ ಸಪಾಟು ಮಾಡುತ್ತಲೇ ಸಾಗಿದ್ದರು.

ಆದರೆ ಮೂಲದಲ್ಲಿ ತನ್ನುಪಯುಕ್ತತೆಯನ್ನು ಪೂರ್ಣ ಕಳೆದುಕೊಂಡಿದ್ದ ಬಿಸಿಲೆ ಘಾಟಿಗೆ ಇವೆಲ್ಲ ಬೇಕೇ ಎನ್ನುವಾಗ ನನಗಂತೂ ತೀವ್ರ ವಿಷಾದವೊಂದೇ ಕಾಣುತ್ತದೆ. (ನೋಡಿ: ಘಾಟಿಯೊಂದರ ಸಾಚಾ ವೃತ್ತಾಂತ; ಬಿಸಿಲೆ) ಉತ್ತರಕ್ಕೆ ಶಿರಾಡಿ, ದಕ್ಷಿಣಕ್ಕೆ ಸಂಪಾಜೆ ಘಾಟಿಗಳ ನಡುವೆ ಹಾಯುವ ಬಿಸಿಲೆಘಾಟಿ ವಾಸ್ತವದಲ್ಲಿ ಯಾವ ದೊಡ್ಡ ನಗರಕ್ಕೂ ಸಂಪರ್ಕ ಸೇತುವಲ್ಲ. ಮಾರ್ಗರಚನೆಯಲ್ಲಿನ ಭಾರೀ ಸರಕಾರೀ ವೆಚ್ಚದಲ್ಲಿನ ಭಾರೀ ಖಾಸಾ ಒಳ ಆದಾಯಗಳ ಮೇಲೆ ಕಣ್ಣಿಟ್ಟವರು, ವನ್ಯಶೋಷಣೆಗೆ ಕೆಟ್ಟ ಹಂಚಿಕೆಗಳನ್ನು ಹೆಣೆಯುವವರು, ಶ್ರಮ ದಕ್ಷತೆಗಳನ್ನು ಕೇಳುವ ನಿಜ ಅಭಿವೃದ್ಧಿಗಳನ್ನು ಸಾಧಿಸಲು ಸೋತು ಹುಸಿ ಸಾಕ್ಷಿಗಳನ್ನು ವೈಭವೀಕರಿಸುವವರು ಮಾತ್ರ ಈ ಮಾರ್ಗವನ್ನು ಸಮರ್ಥಿಸಿಕೊಳ್ಳಬಲ್ಲರು.

ಜಲ್ಲಿ, ಮರಳು, ಸಿಮೆಂಟ್ ಮೊದಲಾದ ಕಚ್ಚಾ ಸಾಮಗ್ರಿಗಳನ್ನು ಸಮೀಪದ ಪಾಟ್ಲಾದಿಂದ ಕೆಲಸದ ಸ್ಥಳಕ್ಕೆ ನಿರಂತರವಾಗಿ ಸಾಗಿಸಿಕೊಡುವ ನಾಲ್ಕೈದು ಟಿಪ್ಪರ್ ಲಾರಿಗಳು ತಂಗಿದ್ದುವು. ಅವು ವಾರದ ದಿನಗಳಲ್ಲಿ ಮೂರೋ ನಾಲ್ಕೋ ಸವಾರಿ ನಡೆಸುತ್ತವಂತೆ. ಆದಿತ್ಯವಾರ ಮಾತ್ರ ಒಂದೇ. ನಮ್ಮ ಅದೃಷ್ಟಕ್ಕೆ ಅವಿನ್ನೂ ಹೋಗಿರಲಿಲ್ಲ. ಚಾಲಕರೆಲ್ಲ ಅಡ್ಡ ಹೊಳೆಯಲ್ಲಿ ಸ್ನಾನದ ಸಂತೋಷ ಅನುಭವಿಸುತ್ತಿದ್ದರು.

ಅವರಲ್ಲಿ ಓರ್ವ ಚಾಲಕ – ಆನಂದರಾಜ್, ನಮ್ಮನ್ನೆಲ್ಲ ಸಂತೋಷದಿಂದ ತನ್ನ ಲಾರಿಯ ಕ್ಯಾಬಿನ್ನಿಗೇ ಹತ್ತಿಸಿಕೊಂಡು ಬಿಸಿಲೆಗೆ ಒಯ್ದರು. ತಮಿಳು ಮೂಲದ, ಎರಡು ದಶಕಗಳಿಂದೀಚೆಗೆ ಬೆಂಗಳೂರು ಕನ್ನಡಿಗನೇ ಆದ ಈ ಆನಂದರಾಜ್ ವಿದ್ಯಾರ್ಹತೆ ಮೂರನೇ ತರಗತಿ ಮಾತ್ರ. ಆದರೆ ಶ್ರಮ ಮತ್ತು ಜಾಣ್ಮೆ ಬೆರೆಸಿ ಈತ ಇಪ್ಪತ್ತು ರೂಪಾಯಿ ದಿನಗೂಲಿಯಿಂದ ಇಂದು ಎರಡು ಟಿಪ್ಪರುಗಳ ಯಜಮಾನಿಕೆಗೆ ಬೆಳೆದು ನಿಂತಿದ್ದಾರೆ. ಅಂದ ಮಾತ್ರಕ್ಕೆ ಸೋಮಾರಿ ಬೀಳದೆ ಒಂದು ಟಿಪ್ಪರನ್ನು ಸ್ವತಃ ತಾನೇ ಓಡಿಸುತ್ತಲಿದ್ದರು.

ಅವರ ಶ್ರಮ, ಅನಿರೀಕ್ಷಿತಗಳ ಮುಖಾಮುಖಿಯಲ್ಲದಿದ್ದರೆ ಈ ಸಾಗಾಣಿಕೆ ಒಳ್ಳೆಯ ಆದಾಯದ ಕೆಲಸ ಎಂದೇ ಯಾರೂ ಭ್ರಮಿಸಬಹುದು. ಅದಕ್ಕುದಾಹರಣೆಯಂತೆ ಆನಂದರಾಜ ಅವರದೇ ಇನ್ನೊಂದು ಟಿಪ್ಪರ್ ಕತೆ ಹೇಳಿದರು. ಕಾಲಧರ್ಮದಂತೆ ಯೋಗ್ಯ ಸಂಬಳ ಕೊಟ್ಟೇ ಚಾಲಕನನ್ನಿಟ್ಟುಕೊಂಡಿದ್ದರು. ಇವರ ಹಿಂದೆ ಮುಂದೆಯೇ ಓಡಾಡಿಕೊಂಡೇ ಇದ್ದಾತ, ವಾರದ ಹಿಂದೆ ಕದ್ದು ಅಮಲು ಸೇವಿಸಿ, ಲಾರಿಯನ್ನು ಇಲ್ಲೇ ಒಂದು ಕಮರಿಗೆ ಉರುಳಿಸಿಬಿಟ್ಟ! ಆ ಲಾರಿಯ ಜೀರ್ಣೋದ್ಧಾರಕ್ಕೆ ಒಂದೂವರೆ ಲಕ್ಷ ರೂಪಾಯಿಗೂ ಮಿಕ್ಕು ವೆಚ್ಚ ಬಂತು. ಸಂಬಳವನ್ನೇ ಮುಂಗಡ ಸಾಲವಾಗಿ ಪಡೆಯುವ ಚಾಲಕ ಏನು ಕೊಟ್ಟಾನು? “ಅದೃಷ್ಟಕ್ಕೆ ಜೀವ ಹಾನಿಯಾಗಲಿಲ್ಲ” ಎನ್ನುವಲ್ಲಿ ಆನಂದರಾಜ್‍ಗೆ ಸಮಾಧಾನವಿತ್ತು! ಕ್ಯಾಬಿನ್ನಿನೊಳಗೆ ನಮ್ಮ ನಾಲ್ವರಿಗೆ ಮತ್ತು ಗಂಟುಗದಡಿಗಳಿಗೆ ಒಳ್ಳೆಯ ಸ್ಥಳಾವಕಾಶವೇ ಇತ್ತು. ಆದರೆ ದಾರಿಯ ಕಚ್ಚಾಸ್ಥಿತಿ, ಇಕ್ಕಟ್ಟು ನಮ್ಮನ್ನು ಸಾಕಷ್ಟು ಉರುಳಾಡಿಸಿತು.

ಕೆಲವು ವರ್ಷಗಳ ಹಿಂದೆ ಇದೇ ಮಾರ್ಗದಲ್ಲಿ ಒಮ್ಮೆ ಬಸ್ಸಿನಲ್ಲೂ ಒಮ್ಮೆ ಜೀಪಿನಲ್ಲೂ ಈ ಮಾರ್ಗಕ್ರಮಣ ಮಾಡಿದ ಚಿತ್ರಿಕೆಗಳನ್ನೂ ಇಲ್ಲೇ ನೋಡಿಬಿಡಿ.

ನೆನಪಿರಲಿ, ಈಗ ನಡೆಯುತ್ತಿರುವ ಕಾಂಕ್ರಿಟೀಕರಣ ಪೂರ್ಣಗೊಂಡಮೇಲೆ ಬಿಸಿಲೆಘಾಟಿಯ ಈ ಉಚಿತ `ರೋಲರ್ ಕೋಸ್ಟರ್’ ಅನುಭವ ಅಲಭ್ಯ. ನಾವು ಸುಮಾರು ಇಪ್ಪತ್ತು ಮಿನಿಟಿನಲ್ಲಿ ನಾವು ಬಿಸಿಲೆ ಹಳ್ಳಿ ತಲಪಿದ್ದೆವು.

ಸುಬ್ಬಣ್ಣ ಚರವಾಣಿಯ ನಮ್ಮ ಅಸ್ಪಷ್ಟ ಸಂವಾದದಂತೆ ಹೋಟೆಲಿನಲ್ಲಿ ಊಟವೇನೋ ಹೇಳಿದ್ದ. ಅದರೆ ಮೊದಲೇ ದಾರಿ ಮುಚ್ಚಿರುವುದರ ಬಗ್ಗೆ ತಿಳಿಯದ್ದಕ್ಕೆ, ಹೆಚ್ಚು ಮಾತಾಡಲು ಅಥವಾ ಮತ್ತೆ ಸಂಪರ್ಕಿಸಲು ಇತ್ತಂಡವೂ ವ್ಯಾಪ್ತಿ ಪ್ರದೇಶದಿಂದ ಹೊರಗಾದ್ದಕ್ಕೆ, ಒಟ್ಟಾರೆ ಅನಿಶ್ಚಿತತೆ ಬಗ್ಗೆ ತುಸು ಚಿಂತಿತನಾಗಿದ್ದ. ಆಗ ದೇವೇಗೌಡರ ಹೆಂಡತಿ – ಹೋಟೆಲಿನ ನಿಜ ಚಾಲನಾಶಕ್ತಿ, ಕಮಲಮ್ಮ, “ಹಂಗೇನಿಲ್ಲ. ಅಶೋಕ್ವರ್ಧನ್ ಸೈಕಲ್ ಬುಟ್ಕಂಡಾದ್ರೂ ಬಂದ್ಬುಡ್ತಾರೆ” ಎಂದು ಸಮಾಧಾನಿಸಿದ್ದರಂತೆ! ಅನಿವಾರ್ಯತೆಯನ್ನು ಸುಬ್ಬಣ್ಣ ಒಪ್ಪಿಕೊಂಡ. ಸ್ವಂತದ ಊಟ ಮುಗಿಸಿ, ಹೋಟೆಲಿನ ಹೊರ ಜಗುಲಿಯಲ್ಲಿ ಮೈಚಾಚಿದ್ದ. ಲಾರಿಯಿಂದ ನಾವಿಳಿಯುವಾಗ ಕನಸೇ ಇರಬೇಕೆಂದು ಮೈಪರಚಿಕೊಂಡು ಎದ್ದಿದ್ದ! ಲಾರಿಯವರೆಲ್ಲ ದೇವೇಗೌಡರ ಗಿರಾಕಿಗಳೇ. ಹಾಗಾಗಿ ಮೊದಲ ಅವಕಾಶ ಅವರಿಗೆ ಕೊಟ್ಟು, ನಾವೂ ಊಟ ಮುಗಿಸುವಾಗ ಗಂಟೆ ಮೂರಾಗಿತ್ತು. ಮತ್ತೆ ಅಂದಿನ ಚಾರಣದ ಅಂದಾಜನ್ನು ಮರುದಿನಕ್ಕೆ ದೂಡಿ, ಎಲ್ಲ ಸುಬ್ರಹ್ಮಣ್ಯನ ಕಾರೇರಿ ಅಶೋಕವನದತ್ತ ಸಾಗಿದೆವು.

ಬಿಸಿಲೆಗೇಟಿನಿಂದ ಸುಬ್ರಹ್ಮಣ್ಯದತ್ತ (ನಾವು ಬಂದದ್ದೇ ದಾರಿ) ಒಂದು ಕಿಮೀಗೆ ಪ್ರಕೃತಿವೀಕ್ಷಣಾ ಕಟ್ಟೆ, ಅರ್ಥಾತ್ ಬೀಟೀಸ್ಪಾಟ್! ವನ್ಯ ರಕ್ಷಣೆಯ ಗಂಭೀರ ಕೆಲಸಗಳನ್ನು ಬಿಟ್ಟು ಅರಣ್ಯ ಇಲಾಖೆ ಮತ್ತೆ ಇದರ ಶೃಂಗಾರಕ್ಕೆ ಸಿದ್ಧತೆ ನಡೆಸಿದ್ದು ಕಾಣಿಸಿತು. ಆವರಣದ ಒಳಗೆ ಇಂಟರ್ಲಾಕ್ ಇಟ್ಟಿಗೆಗಳನ್ನು ಪೇರಿಸಿ ಇಟ್ಟಿದ್ದರು. ಹಿಂದೆ ಅತ್ತ ಸುಮಾರು ಇನ್ನೂರು ಮೀಟರಿನಷ್ಟೇ ಅಂತರದಲ್ಲಿರುವ ದರೆಯಂಚಿಗೆ ಜನ ಸುಲಭ ಸಹಜವಾದ ಜಾಡು ರೂಪಿಸಿಕೊಂಡಿದ್ದರು. ಇಲಾಖೆ ಜಾಡು ಹಸನುಗೊಳಿಸುವ ಹೆಸರಿನಲ್ಲಿ ಪೊದರು- ಪುಟ್ಟ ಮರ ಕಳೆದು, ಮಣ್ಣು ಕೆರೆಸಿ ಬೇರಗಟ್ಟೆಗಳನ್ನು ತೋರಿದರು. ತೀರಾ ಸುಲಭದ ಏರಿಗೂ ಮಣ್ಣ ಮೆಟ್ಟಿಲು ಕಡಿದು, ಅನಾವಶ್ಯಕವಾಗಿ ಅಂಚಿಗೆ ಸಾಲು ಇಟ್ಟಿಗೆಗಳನ್ನು ಹುಗಿದರು. ಮತ್ತೆ ಕೆಸರು ತುಂಬುತ್ತದೆಂದೂ ಜಾರುತ್ತದೆಂದೂ ಕಚ್ಚಾ ಕಲ್ಲಿನ ಮೆಟ್ಟಿಲು, ಅಂಚಿಗೆ ಅಲಂಕಾರ ಪೊದರ ಸಾಲು ಏನೆಲ್ಲ ಮಾದಿದರು. ಮತ್ತದರ ಉಬ್ಬುತಗ್ಗು ಹಾಗೂ ಜಾರು ನಿವಾರಿಸುವಂತೆ ಸಪಾಟು ಒರಟು ಕೆತ್ತಿದ ಕಲ್ಲಹಾಸುಗಳೂ ಬಂದಿದ್ದುವು.

ಬಹುಶಃ ಈಗ ಅವನ್ನೂ ಕಳಚಿ ಇಂಟರ್ಲಾಕ್. ಮುಂದೆ ಇವು ಜಾರದಂತೆ, ಪ್ರವಾಸಿ-ಬಂಧು ಬಿಸಿಲಿಗೆ ಬಾಡದಂತೆ, ಮಳೆಗೆ ಮುದುಡದಂತೆ ಪ್ಲ್ಯಾಸ್ಟಿಕ್ ಮಾಡು ಬರಬಹುದು. ಅದು ಗಾಳಿಗೆ ಹರಿದುಹೋದಾಗ ತಗಡಿನ ಟೊಪ್ಪಿ, ಅದೂ ಹಾರಿಹೋದಾಗ ಆರ್ಸಿಸಿ ತಾರಸಿಯೇ ಬಂದರೆ ಆಶ್ಚರ್ಯವಿಲ್ಲ. ಆಗ ಸಹಜವಾಗಿ ಮರದಂತೇ ಕಾಣುವ ಕಾಂಕ್ರೀಟ್ ಕುಂದಗಳ ಅಡಿಪಾಯಕ್ಕಾಗಿ ಇಲ್ಲಿನ ವಿಪರೀತ ಹವಾಮಾನದಲ್ಲೂ ಉಳಿದುಕೊಂಡ ಹತ್ತೆಂಟು ಗಂಟು ಮರಗಳನ್ನು ಬೇರು ಸಹಿತ ಕಿತ್ತೊಗೆಯುವುದು ಅನಿವಾರ್ಯವಾಗಬಹುದು. ಹಾಗೆ ಬೋಳಾದ ನೆಲಕ್ಕೆ ನಾಲ್ಕು ಬಾಂಬೆ ಮಲ್ಲಿಗೆ, ಮೇಫ್ಲವರಿನ ಮಡಿ, ಉಳಿದಂತೆ ಲಾಲ್ಬಾಗಿನ ತೋಟಗಾರಿಕಾ ಇಲಾಖೆಯಿಂದ ತರಿಸಿದ ಸಿಲ್ಕ್-ಲಾನ್, ಲತಾ ಮಂಟಪದ ಕನಸಿಗಾಗಿ ಕಬ್ಬಿಣದ ಹಂದರಗಳು, ಯಥಾನುಶಕ್ತಿ ವನ್ಯ ಸಂದೇಶ ಸಾರುವ ಬೋರ್ಡುಗಳು, ಕಷ್ಟದಲ್ಲಿ ಉಳಿದ ಮರಗಳಿಗೆ ತಮ್ಮ ವೈಜ್ಞಾನಿಕ ಗುರುತು ತಿಳಿಸುವಂಥ, ಸಾರ್ವಜನಿಕರಿಗದರ ಔಷಧೀಯ ಗುಣಗಳನ್ನು ಸಾರುವ ಫಲಕಗಳನ್ನೇ ಇಟ್ಟು ಬಡಿದ ಮೊಳೆಗಳು, ಮಕ್ಕಳಾಟಕ್ಕೆ ಜಾರುಬಂಡಿ, ಏತಪಾತ, ಉಯ್ಯಾಲೆ, (ab)Use me ತೊಟ್ಟಿಗಳು, ಉಸ್ತುವಾರಿಗೊಂದು ಕೊಠಡಿ, ಈಗಾಗಲೇ ಹೊಟ್ಟಾಗಿರುವ ತೂತುಬಾವಿಗೊಂದು ಪರ್ಯಾಯ ವ್ಯವಸ್ಥೆ… ಹೆಸರಲ್ಲಷ್ಟೇ ಬ್ಯೂಟೀ ಇಟ್ಟು ಅರಣ್ಯ ಇಲಾಖೆಯ ಎಲ್ಲಾ ಕೊಳಕನ್ನೂ ಸಾರುವ ಈ ಜಾಗ ಅನ್ವರ್ಥಕವಾಗಿ ಹೇಳುವುದಿದ್ದರೆ ಅಗ್ಲೀ ಸ್ಪಾಟ್!

“ಪರಿಸರ ರಕ್ಷಣೆ ನಾವು ಮಾಡುವುದಲ್ಲ. ಜಗತ್ತಿನ ಹರಹಿನಲ್ಲಿ ಕೇವಲ ಶೇಕಡಾ ಮೂರನ್ನು ಮಾತ್ರ ನಗರ/ಹಳ್ಳಿಗಳೆಂದು ವಾಸ್ತವ್ಯಕ್ಕೆ ಪಳಗಿಸುವಲ್ಲಿ ಯಶಸ್ವಿಯಾದ ಮನುಷ್ಯ ಹೆಚ್ಚು ಕಡಿಮೆ ಶೇಕಡಾ ಐವತ್ತನ್ನು ಕೃಷಿ (೧೨%), ಕಾಡು (೯%), ಇತರ ಜೀವಿಗಳು (೨೪%) ಎಂದೆಲ್ಲ ಹೆಸರಿಸಿ ತನ್ನ ಪ್ರಭಾವದಲ್ಲಿ ಉಳಿಸಿಕೊಂಡಿದ್ದಾನೆ. ಈ ಪ್ರಭಾವವನ್ನು ಕಳಚಿ, ಸಾಧ್ಯವಾದಷ್ಟೂ ಪ್ರಕೃತಿಯನ್ನು ಅದರಷ್ಟಕ್ಕೇ ಬಿಡುವುದು ನಾವು ಮಾಡುವ ನಿಜ ಮತ್ತು ದೊಡ್ಡ ಪರಿಸರ ಸೇವೆ” ಎಂದೇ ಇಲ್ಲೊಬ್ಬ ಪರಿಸರ ವಿಜ್ಞಾನಿ ಹೇಳುತ್ತಿದ್ದಾನೆ. ಅವಶ್ಯ ಕೇಳಿ:

ಅಂಥ ಒಂದು ಯೋಚನೆಯಲ್ಲೇ ನಾನು ಮತ್ತು ಗೆಳೆಯ ಡಾ| ಕೃಷ್ಣಮೋಹನ ಪ್ರಭು ಎಂಟು-ಹತ್ತು ವರ್ಷಗಳ ಹಿಂದೆ ಬಿಸಿಲೆ ವಲಯದಲ್ಲಿ ಕೊಂಡ ನೆಲದ ಕೇವಲ ಅಂಕಿತನಾಮ – ಅಶೋಕವನ. (ನೋಡಿ: ಹುಲಿ ಹುಲಿ) ಇದು ಅರಣ್ಯ ಇಲಾಖೆಯ ಅಗ್ಲೀ ಸ್ಪಾಟಿನಿಂದ ಸ್ವಲ್ಪ ಮುಂದೆ ದಾರಿಯ ಬಲಮಗ್ಗುಲಿನಲ್ಲಿ ಹದಿನೈದು ಎಕ್ರೆ ವಿಸ್ತೀರ್ಣಕ್ಕೆ ವ್ಯಾಪಿಸಿದೆ. ಇದಕ್ಕೆ ಬೋರ್ಡು, ಬೇಲಿಗಳಿಂದ ತೊಡಗಿ ಯಾವುದೇ ಮನುಷ್ಯ ಪ್ರಭಾವ ಬಾರದಂತೆ ಉಳಿಸಿಕೊಳ್ಳುವುದೇ ನಮ್ಮ ಉದ್ದೇಶ. ಇಲ್ಲಿ ಪರಿಚಯದ ಕಣ್ಣಿಗಷ್ಟೇ ಪ್ರವೇಶ ಜಾಡು ಕಾಣಿಸೀತು, ಸರಕಾರೀ ದಾಖಲೆಗಳಲ್ಲಷ್ಟೇ ಪ್ರತ್ಯೇಕತೆಯ ಸಾಕ್ಷಿ ಸಿಕ್ಕೀತು. ತನ್ನ ಹೆಸರಿಗೇ ಅವಹೇಳನ ಮಾಡಿಕೊಳ್ಳುವ ಅರಣ್ಯ ಇಲಾಖೆ, ಇಲ್ಲೇ ಸ್ವಲ್ಪ ಒಳಮೈಯಲ್ಲಿ ಅಯಾಚಿತವಾಗಿ `ಆನೆ-ತಡೆ’ ಎಂದು ಕಟ್ಟಿಕೊಟ್ಟ ವಿದ್ಯುತ್ ಬೇಲಿ ಇದನ್ನು ಕೃಷಿಭೂಮಿಯೆಂದೇ ಗುರುತಿಸಿದೆ.

ಆದರೆ ವಾಸ್ತವದಲ್ಲಿ ಇದು ಸುತ್ತಣವಲಯ, ಅಂದರೆ ಬಿಸಿಲೆ ಕಾಯ್ದಿರಿಸಿದ ಕಾಡು, ಆಚಿನ ಪುಷ್ಪಗಿರಿ ವನಧಾಮದ ಅಖಂಡ ಭಾಗವಾಗಿಯೇ ಉಳಿದಿದೆ. ಸದ್ಯ ದಾರಿಯ ಅಭಿವೃದ್ಧಿಯ ಅಂಗವಾಗಿ ರಾಶಿ ಬಿದ್ದ ಒಂದು ಜಲ್ಲಿಗುಪ್ಪೆಯ ಒತ್ತಿನಲ್ಲಿ ಪೊದರು ನುರಿದು, ಉದುರು ಸೌದೆ ಸರಿಸಿ, ಕಾರನ್ನು ಸ್ವಲ್ಪ ಒಳನುಗ್ಗಿಸಿ, ದಾರಿಗೆ ಕಾಣದಂತೆ ನಿಲ್ಲಿಸಿದೆವು. ಅನಂತರ ನಮ್ಮೆಲ್ಲ ಶಿಬಿರ ಸಾಮಗ್ರಿಗಳೊಂದಿಗೆ ಸಣ್ಣ ದಿಬ್ಬವನ್ನು ಏರಿ, ಆಚಿನ ಪುಟ್ಟ ಕಣಿವೆಗೆ ಇಳಿದೆವು. ಇಲ್ಲಿ ಹಿಂದಿನ ಕೃಷಿಕರು ಏಲಕ್ಕಿ ಸಸಿಮಡಿಗೆಂದೇ ಮಾಡಿಕೊಂಡ ತಟ್ಟು, ಒತ್ತು ಹುಲ್ಲುಗಾವಲು ನಮಗೆ ಶಿಬಿರತಾಣ. ಒತ್ತಿನ ಸರ್ವಋತುಗಳಲ್ಲೂ ಕುಲುಕುಲಿಸುವ ಶುದ್ಧ ನೀರಿನ ತೊರೆ ನಮ್ಮ ಜಲಾಶ್ರಯ.

ಋಷಿರಾಜ್ ಬಳಿ ಇಬ್ಬರಿಗಾಗುವ ಒಳ್ಳೆಯ ಗುಡಾರವಿತ್ತು. ಅವರದನ್ನು ಅರಳಿಸಿದರೂ ಚಳಿ ಮಳೆಯ ಲಕ್ಷಣವಿಲ್ಲದ್ದಕ್ಕೆ ನಾವ್ಯಾರೂ ಬಯಸಲಿಲ್ಲ. ಶಿಬಿರತಾಣದ ಹುಲ್ಲ ಮರೆಯಲ್ಲಿ ಪುಟ್ಟ ಏಡಿ ಮಾಟೆಗಳಿವೆ. ಮತ್ತೆ ಇರುವೆ, ಚೇಳು ಮುಂತಾದ ಸಣ್ಣ ಜೀವಗಳೂ ನಮ್ಮ ಇರವಿಗೆ ಆಕ್ಷೇಪ ಪ್ರಕಟಿಸುವುದಿದೆ. ಹಾಗಾಗಿ ಒಂದು ಸಿಲ್ಪಾಲಿನ್ ಶೀಟನ್ನು ದೊಡ್ಡದಾಗಿ ಹಾಸಿ ಅದರ ಮೇಲೇ ಉಳಿದವರು ಹೆಚ್ಚು ಕಮ್ಮಿ ಬೀಡು ಬಿಟ್ಟೆವು. ತೊರೆಯ ಹರಿವು ತುಂಬ ತೆಳುವಿತ್ತು. ನಾವೊಂದು ಆಯಕಟ್ಟಿನ ಜಾಗ ನೋಡಿ, ಅಲ್ಲೇ ಇದ್ದ ನಾಲ್ಕು ಕಾಡುಕಲ್ಲು ಹೊಂದಿಸಿ, ಸೊಪ್ಪು ತೊರೆಗೆಸರು ಜಡಿದು, ಪುಟ್ಟ ಒಡ್ಡು ಮಾಡಿದೆವು. ಪಾತ್ರೆಯ ತಳದ ತುಸು ಕೆಸರು ಮಿಶ್ರಿತ ಬಹುತೇಕ ಕಲ್ಲುಮರಳನ್ನು ಬರಿಗೈಯಲ್ಲೇ ಬಾಚಿ, ಒಡ್ಡನ್ನು ಬಲಗೊಳಿಸುವುದರೊಡನೆ ಪಾತ್ರೆಯನ್ನು ತುಸು ಆಳವೂ ಮಾಡಿಕೊಂಡೆವು. ನಮ್ಮ `ಕನ್ನಂಬಾಡಿ’ಗೆ ಒಂದು ಬದಿಯಲ್ಲಿ ಸಣ್ಣ ತೆರಪು ಕೊಟ್ಟು ಐದು ಮಿನಿಟು ಬಿಟ್ಟದ್ದೇ ಸಾಕಾಯ್ತು. ನೀರು ಹಣಿಯಾಗಿ, ನಮ್ಮ ಕೈಪಾತ್ರೆಗೋ ಕುಡಿ ನೀರ ಅಂಡೆಗೋ ಅಕ್ಷಯವಾಯ್ತು.

ನಾವು ಬಿಸಿಲೆ ಹಳ್ಳಿಗೆ ಬಂದಾಗಲೆಲ್ಲಾ ಸಿಕ್ಕ ಹಳ್ಳಿಗರಲ್ಲಿ “ದಯವಿಟ್ಟು ನಮ್ಮ ಜಮೀನಿಗೆ ನುಗ್ಗಬೇಡಿ, ದನ ಮೇಯಿಸಬೇಡಿ, ಸೌದೆಯಾದಿ ಏನೂ ಸಂಗ್ರಹಿಸಬೇಡಿ….” ಎಂದು ನೂರೆಂಟು ಮನವಿಮಾಡುವುದಿದೆ. ಆದರೂ ಶಿಬಿರತಾಣದ ತಟ್ಟಿನಂಚಿನಲ್ಲಿ ಒಂದಷ್ಟು ವಾಟೆ ಗಿಡಗಳನ್ನು ಯಾರೋ ಕಡಿದಿಕ್ಕಿದ್ದರು. ಆಚೀಚೆ ಕಾಡಿನಲ್ಲಿ ಸಹಜವಾದ ಸಾಕಷ್ಟು ಉದುರು ಕೊಂಬೆ, ಅಡರೂ ಇತ್ತು. ಅವನ್ನೆಲ್ಲ ನಾವು ಒಂದು ರಾತ್ರಿಯ ಅಗತ್ಯಕ್ಕೆ ತುಸು ಹೆಚ್ಚೇ ಎನ್ನುವಷ್ಟು ನಮ್ಮ ಶಿಬಿರತಾಣದ ಪಕ್ಕದಲ್ಲಿ ಒಟ್ಟಿಕೊಂಡೆವು. ಮತ್ತೆ ಈ ಪಕ್ಕಕ್ಕೆ ಮೂರು ಕಲ್ಲು ಜೋಡಿಸಿ ಗಂಜಿ ಬೇಯಿಸಲೊಂದು ಒಲೆ, ಆ ಪಕ್ಕಕ್ಕೆ ಶಿಬಿರಾಗ್ನಿಯ ನೆಲೆ ಎಂದು ನಿಶ್ಚಯಿಸಿ ಆರಾಮಾದೆವು.

ನನ್ನ ನೂರೆಂಟು ಯೋಚನೆಗಳೇನು, ಚಟುವಟಿಕೆಗಳಲ್ಲೂ ಸಂಗಾತಿಗಳಾಗಿ ಕಾಣಿಸುತ್ತಲೇ ಬಂದ ಉಪಾಧ್ಯ (ನೋಡಿ: ಉಪಾಧ್ಯ ಹೆರೆಮಣೆ ೨೦೧೫) ಅಥವಾ ಸುಂದರರಾಯರ (ನೋಡಿ: ಎತ್ತಿನಹೊಳೆ ಮತ್ತು ಸುಂದರರಾಯರು) ಬಗ್ಗೆ ನಾನು ಇಲ್ಲಿ ಹೊಸದಾಗಿ ಹೇಳಬೇಕಿಲ್ಲ ಎಂದೇ ಭಾವಿಸುತ್ತೇನೆ. ಎರಡನೇ ತಲೆಮಾರಿನವನೇ ಆದರೂ ಸುಬ್ರಹ್ಮಣ್ಯ ಉರಾಳನಿಗೂ ನನಗೂ ಹೆಚ್ಚುಕಮ್ಮಿ ನಲ್ವತ್ತು ವರ್ಷಗಳ ಆತ್ಮೀಯತೆ! ಆತ ಉಪಾಧ್ಯರ ಮಿತ್ರ ಕೂಟದಲ್ಲಿ ಹೆಚ್ಚು ಕಾಡು, ಬೆಟ್ಟ, ನಕ್ಷತ್ರ ನೋಡಿದವನಾದರೂ ಬಿಸಿಲೆಗೆ ಹೊಸಬನೇನಲ್ಲ. (ನೋಡಿ: ಬಿಸಿಲೆಯಲ್ಲಿಭಾರೀ ಜಿಗಣೆ) ಅಂದು ವೃತ್ತಿಸಂಬಂಧದಲ್ಲಿ (ಆರ್ಕಿಟೆಕ್ಟ್) ದುಬೈವಾಸಿಯಾಗಿದ್ದ ಸುಬ್ಬಣ್ಣ ಈಗ ಬೆಂಗಳೂರಿನಲ್ಲಿದ್ದಾನೆ, ಅಷ್ಟೆ.

ಋಷಿರಾಜ್ ಪ್ರೌಢಶಾಲಾ ಒಂಬತ್ತನೇ ತರಗತಿಗಾಗುವಾಗ ಆಕಸ್ಮಿಕ ಎನ್ನುವಂತೆ ಸುಬ್ರಹ್ಮಣ್ಯನ ಸಹಪಾಠಿಯಾದರಂತೆ. ಮತ್ತವರ ಮಾತಿನಲ್ಲೇ ಕೇಳಿ. “ಸುಬ್ರಹ್ಮಣ್ಯನ ಅಪ್ಪನ (ಡಾ| ರಾಘವೇಂದ್ರ ಉರಾಳ) ವೈಜ್ಞಾನಿಕ ಮನೋಧರ್ಮ ಮತ್ತು ವೈಚಾರಿಕತೆ, ಉಪಾಧ್ಯರ ಪ್ರಾಯೋಗಿಕತೆ ಮತ್ತು ಸರ್ವಂಕಷ ಕುತೂಹಲಗಳನ್ನೆಲ್ಲ ಇಷ್ಟಪಟ್ಟೆ, ಪರ್ವತಾರೋಹಣವೇ ಮುಂತಾದ ಸಾಹಸಗಳಲ್ಲಿ ಧಾರಾಳ ಭಾಗಿಯಾದೆ. ವಾಸ್ತವದಲ್ಲಿ ಉಪಾಧ್ಯರೊಡನೆ ಬೆಟ್ಟಗಳಿಗೆ ಹೋದಾಗೆಲ್ಲ, ಅಂದರೆ ಈಚಿನ ಸುಮಾರು ಮೂವತ್ತು ವರ್ಷಗಳಲ್ಲಿ, ನಾನು ನಿಮ್ಮೊಡನೆಯೂ ಇದ್ದೆ. ಆದರೆ ಮುಖತಃ ಭೇಟಿ ಮತ್ತು ನಿಮ್ಮ ಕಲಾಪದಲ್ಲಿ ನೇರ ಭಾಗಿಯಾಗುತ್ತಿರುವುದು ಇದೇ ಮೊದಲು!” ಋಷಿ ೧೯೯೦ರ ದಶಕದಲ್ಲಿ ಸುರತ್ಕಲ್ಲಿನ ಕೇಯಾರೀಸಿ ವಿದ್ಯಾರ್ಥಿ (ಇಂದಿನ ಎನ್ನೈಟೀಕೆ). ಇಂದು ನನಗೆ ಸೈಕಲ್ ಒಡನಾಡಿಯಾಗಿ ಬರುತ್ತಿರುವ ಗೋಪಾಲಕೃಷ್ಣ ಬಾಳಿಗ ಋಷಿಗೆ ಕನಿಷ್ಠ ಹತ್ತು ವರ್ಷ ಹಿರಿಯ. ಬಾಳಿಗಾ ೧೯೮೦ರ ದಶಕದ ನಮ್ಮ (`ಆರೋಹಣ ಪರ್ವತಾರೋಹಿಗಳು ಸಾಹಸಿಗಳು’) ಪರ್ವತಾರೋಹಣ ಸಪ್ತಾಹದಿಂದ ಪ್ರಭಾವಿತರಾದರು. ಹಾಗೆ ಹುಟ್ಟಿಕೊಂಡ `ಕೇಯಾರೀಸೀ ಸಾಹಸ ಸಂಘ’ಕ್ಕೆ ಉದ್ಘಾಟನಾ ಕಲಾಪ ಕೊಟ್ಟದ್ದೇ ನಮ್ಮ ಬಳಗ. ಬಾಳಿಗಾ ಕೇಯಾರೀಸೀ ಬಿಟ್ಟ ಮೇಲೇ ಮಲಗಿದ್ದ ಸಾಹಸ ಸಂಘಕ್ಕೆ ಮರುಜೀವ ಕೊಟ್ಟದ್ದು ಇದೇ ಋಷಿರಾಜ್ ಎನ್ನುವುದು ಒಂದು ಆಶ್ಚರ್ಯಕರ ಆಕಸ್ಮಿಕ! ಬಹುಶಃ ಎಳವೆಯಲ್ಲಿ ಸಿಕ್ಕ ಈ ವೈವಿಧ್ಯ ಪುಟವಿಟ್ಟ ಋಷಿಯ ಪ್ರತಿಭೆ, ವೃತ್ತಿರಂಗದಲ್ಲಿ ವಿದೇಶಗಮನದವರೆಗೂ ಬೆಳೆದದ್ದು ವಿಶೇಷಲ್ಲ. ಅದರಲ್ಲೇ ಕಳೆದು ಹೋಗದೇ ಹಣಗಳಿಕೆಯನ್ನೂ ಮೀರಿದ ಜೀವನಾಸಕ್ತಿಗಾಗಿ ಸ್ವಸ್ಥಾನವಾದ ಸಾಸ್ತಾನಕ್ಕೇ ಮರಳಿ, ಸ್ವತಂತ್ರ ವೃತ್ತಿಪರನಾಗುವಂತೆ ನಿಂತದ್ದು ಖಂಡಿತವಾಗಿಯೂ ವಿಶೇಷವೇ.

ವಿರಾಮದ ಪಟ್ಟಾಂಗಗಳು ಬೆಳೆಯುವುದರ ನಡುವೆ ಉಪಾಧ್ಯರು ಪುಟ್ಟ ಗ್ಯಾಸ್ ಒಲೆಯಲ್ಲಿ ಕಾಫಿ ಕಾಯಿಸಿಕೊಟ್ಟರು. ಮಧ್ಯಾಹ್ನದ ಊಟ ತಡವಾದ್ದರಿಂದ ತಿಂಡಿ ತಿನ್ನುವ ಉತ್ಸಾಹ ಯಾರಿಗೂ ಇರಲಿಲ್ಲ. ಸೂರ್ಯಪ್ರಭೆ ಮಾಸುತ್ತಿದ್ದಂತೆ ಚಂದ್ರ ವರ್ಚಸ್ಸು ಏರಿಸಿಕೊಂಡ. ಒಂಟಿ ಮಲಬಾರಿ ಹಕ್ಕಿ ಹಗಲಿನ ವಿದಾಯಕ್ಕೊಂದೆರಡು ರಾಗಾಲಾಪಗಳನ್ನು ಎಸೆಯುತ್ತಿದ್ದಂತೆ ಕಿರುಹಕ್ಕಿಯುಲಿಗಳು ವಿರಳವಾಗುತ್ತ ಹೋಯ್ತು. ಮರಗಳೆತ್ತರದಲ್ಲಿ ಸಂಜೆಯರಳಿನ ಯಾವುದೋ ಹೂವಿನ ಘಮಲು ಏರಿರಬೇಕು. ಸಂಗೀತ ಮುಗಿದ ಮೇಲೂ ಶ್ರುತಿ ತುಸು ಮುಂದುವರಿದಂತೆ, ಸ್ವಲ್ಪ ಹೊತ್ತು ಕಾಡೆಲ್ಲ ಜೇನು ಝೇಂಕರಿಸಿ, ಕೆಲಕಾಲದಲ್ಲೇ ಮಸಳುತ್ತ, ಹಗಲಿಗೆ ಮುಕ್ತಾಯ ಹಾಡಿತು. ಸೌದೆ ಒಲೆಯ ಮೇಲೆ ಗಂಜಿ ಕೊತಗುಡತೊಡಗಿತು. ಸಿಲ್ಪಾಲೀನ್ ಶೀಟ್ ನಡುವೆ ಸಣ್ಣ ಮರದ ಕೊಚ್ಚು ಮಣೆಯಿಟ್ಟು ಉಪಾಧ್ಯರು ಕುಳಿತರೆ ನಾವೆರಡು ಮೂರು ಮಂದಿ ಸುತ್ತುಗಟ್ಟಿ ನೀರುಳ್ಳಿ, ಟೊಮೆಟೋ, ಮೆಣಸು ಕೊಚ್ಚುವ ಕೆಲಸ ನಡೆಸಿದೆವು. ಹಾಗೇ ಇನ್ನೊಂದು ದಿಕ್ಕಲ್ಲಿ ಬೆಳಕು ಹಾಗೂ ಆತ್ಮರಕ್ಷಣೆಗೆನ್ನುವಂತೆ ಶಿಬಿರಾಗ್ನಿಯನ್ನೂ ಎಬ್ಬಿಸಿದೆವು.

ವಿರಾಮದಲ್ಲಿ ಗಂಜಿ, ಖಿಚಡಿ, ಮೊಸರು, ಉಪ್ಪಿನಕಾಯಿಗಳನ್ನು ಮನಸಾರೆ ಸವಿದು ದಣಿದೆವು. ಬೆಳಿಗ್ಗೆ ಬೇಗನೆದ್ದ, ನಾಲ್ಕೈದು ಕಿಮೀ ಹೊರೆ ಸಹಿತ ನಡೆದ, ಮಾಡಲೇನೂ ಕೆಲಸವಿಲ್ಲದ ಸ್ಥಿತಿ ಯಾರನ್ನೂ ಕಾಡಿದಂತಿರಲಿಲ್ಲ. ಸುಬ್ಬಣ್ಣನಿಗೆ ಅದೇನೋ ಪ್ರೆಷರ್ ಕುಕ್ಕರುಗಳ ಬಗ್ಗೆ ರಾತ್ರಿಯಿಡೀ ಉಪಾಧ್ಯರೊಡನೆ ಚರ್ಚಿಸುವ ಉಮೇದು. ಹೊರಡುವ ಮುನ್ನ ಉಪಾಧ್ಯರು ಶಿಬಿರಾಗ್ನಿ ಸಮಕ್ಷಮದಲ್ಲಿ ಸ್ವಾರಸ್ಯಕರವಾಗಿ ಹರಟಲೆಂದೇ ಕೆಲವು ವಿಚಾರಗಳ ಪಟ್ಟಿ ಮಾಡಿದ್ದರಂತೆ. ಆದರೆ ಹೊರಡುವ ಸಂಭ್ರಮದಲ್ಲಿ ಚೀಟಿಯನ್ನೇ ಮರೆತು ಬಂದಿದ್ದರು. ಹಾಗೆಂದ ಮಾತ್ರಕ್ಕೆ ಸಂಶೋಧನೆ, ಜನಾಭಿಪ್ರಾಯ ಸಂಗ್ರಹ ಮತ್ತೆ ಪರಿಷ್ಕರಣೆಗಳ ಸರಣಿಯಲ್ಲಿ ದಶಾವತಾರ ಕಂಡ ಕೆರೆಮಣೆಯ ಕತೆಗಳಿಗೇನೂ ಕೊರತೆಯಾಗಲಿಲ್ಲ. ನಾನು ಮಾತಿನ ವಗ್ಗರಣೆಯಲ್ಲೂ ರಾಯರು ಮೌನಾಸ್ವಾದನೆಯಲ್ಲೂ ಧಾರಾಳ ರುಚಿಕಂಡೆವು. ಪಾಪ ಋಷಿ ಇನ್ನೂ ಹೆಚ್ಚನ್ನೇ ಬಯಸಿ ಬಂದಿದ್ದರೂ ನಿದ್ರೆಯ ಲೆಕ್ಕ ಯಾಕೋ ವಿಜಯ ಮಲ್ಯನ ಸಾಲದಂತೆ ಬಾಧಿಸಿತ್ತು. ಬೆಂಗಳೂರಿನಿಂದ ರಾತ್ರಿ ಪಯಣಿಸಿದ ನಿದ್ದೆಗೇಡಿತನ, ಬೆಳಿಗ್ಗೆ ಕಾರು ಚಲಾಯಿಸಿ, ಮತ್ತೆ ಅಸೀಮ ಭಾರ ಹೊತ್ತು ನಡೆದುದೆಲ್ಲ ಚಕ್ರಬಡ್ಡಿಯಾಗಿ ಕಾಡಿದ್ದಕ್ಕೆ ಮೊದಲು ಗುಡಾರ ಸೇರಿದರು. ನಾವೆಲ್ಲ ಅದೇ ಸಿಲ್ಪಾಲೀನ್ ಹಾಸಿನ ಮೇಲೇ ಶಿಬಿರಾಗ್ನಿಯತ್ತ ಕಾಲು ಚಾಚಿ ಬೆನ್ನ ಹುರಿಗೆ ವಿಶ್ರಾಂತಿ ಕೊಟ್ಟೆವು. ದೂರದಲ್ಲೆಲ್ಲೋ ಆಕಾಶ ಗುರುಗುಟ್ಟಿ, ನಮ್ಮತ್ತ ಕೇವಲ ತೆಳು ಮೇಘದೂತರನ್ನಷ್ಟೇ ಕಳಿಸಿತ್ತು. ಹಾಗಾಗಿ ನಿರೀಕ್ಷೆಯಂತೆ ತಂಗಾಳಿ ತೀಡುವ, ನಕ್ಷತ್ರ ಎಣಿಸುವ ಸುಖವಂಚಿತರಾದೆವು. ಆದರೆ `ಮಳೆ ಬಂದರೆ’ ಎನ್ನುವ ಆತಂಕ ಕಳೆದದ್ದರಿಂದ ಎಚ್ಚರಿಕೆಗಳನ್ನು ಬಿಟ್ಟು, ವಾತಾವರಣದ ಸಹಜ ತಂಪಿಗೆ, ಶಿಬಿರಾಗ್ನಿಯ ಬಿಸುಪಿಗೆ ಮೈ ಒಡ್ಡಿ ಒಬ್ಬೊಬ್ಬರೇ ನಿದ್ದೆಗೆ ಜಾರಿದರು. ನನಗೆ ಈಚಿನ ದಿನಗಳಲ್ಲಿ ಹಾಗೇ ನಿದ್ದೆ ಕಡಿಮೆ. ಇನ್ನು ಹೊಸಸ್ಥಳ, ಕಾಡೂ ಆದುದರಿಂದ ತಂಡದ ಕಾವಲು ಮತ್ತು ಬೆಂಕಿಯ ನಿರಂತರತೆ ಕಾಪಾಡಿಕೊಳ್ಳುವ ಅಗತ್ಯಗಳಿಗಾಗಿ ಕುಳಿತೇ ಕಾಲ ಕಳೆದೆ.

ದೊಡ್ಡ ಎರಡು ಮರದ ಬೊಡ್ಡೆಗಳನ್ನು ಕತ್ತರಿ ಹಾಕಿ ನಡುವಿಗೇ ಪುಡಿ ಸೌದೆ ಹಾಕಿ ಬೆಂಕಿ ತೊಡಗಿಸಿದ್ದೆವು. ಬೊಡ್ಡೆಗಳು ನಾಲ್ಕಾಗಿ, ಎರಡಾಗಿ, ಪುಡಿಗಳನ್ನೆಲ್ಲ ಸಂಗಮಿಸಿ, ವಾಟೆಗಳ ಪುಟ್ಟ ಬಣವೆಯನ್ನೂ ಕರಗಿಸಿ ರಾತ್ರಿ ಹಗಲಾಗುವುದರೊಳಗೆ ಬೂದಿಯಾಗಿತ್ತು. ಹಾಗೆಂದು ಭಾರೀ ಕಿಚ್ಚೇನೂ ಎಬ್ಬಿಸಲಿಲ್ಲ. ಆದರೆ ಹಳದಿ ಮಿಶ್ರಿತ ಕೆನ್ನಾಲಿಗೆ ಕುಣಿಯುವ, ಆಗೀಗ ವಾಟೆ ಸಿಡಿಯುವ ಚಂದ ರಾತ್ರಿಯಿಡೀ ಉಳಿಸಿಕೊಂಡಿದ್ದೆ. ಸುತ್ತಣ ಕಾಡು ಮರವಟ್ಟು ನಮ್ಮನ್ನು ನೋಡುವುದರಲ್ಲೇ ಮೌನಿಯಾದಂತಿತ್ತು. ಎಲ್ಲೋ ದೂರಕ್ಕೊಮ್ಮೆ ಯಾವುದೋ ಜೀವಿ “ಪ್ರಿಯೇ” ಎಂದಂತೆ, ಇನ್ನೆಲ್ಲೋ ಮೂಲೆಯಿಂದ “ಇಲ್ಲೇ ಇದ್ದೇನಲ್ಲಾ” ಎಂದಂತೆ ಕೇಳಿದ್ದಿತ್ತು. ಅದೆಷ್ಟೋ ಹೊತ್ತಿಗೆ ಒಮ್ಮೆ ನನ್ನ ಹಿಂದೆಯೇ ಕಾಡಿನೊಳಗೆ ದಢಾರನೆ ಏನೋ ಬಿದ್ದ ಸದ್ದು ನನ್ನ ಒಂದಷ್ಟು ಎದೆ ಬಡಿತವನ್ನೇ ತಪ್ಪಿಸಿದ್ದೂ ಆಯ್ತು. ಆ ಸದ್ದನ್ನು ಮತ್ತೆ ದಿವ್ಯಮೌನ ಹಿಂಬಾಲಿಸಿದ್ದರಿಂದ ಊಹೆಗಳ ಸಂಸ್ಕಾರ ಮಾಡಿದೆ. ಎಲ್ಲೋ ಭಾರೀ ಕುಂಬು ಕೊಂಬೆಯೋ ಮರವೋ ಬಳ್ಳಿಬಂಧನಗಳನ್ನು ಹರಿದು ನೆಲ ಕಚ್ಚಿದ್ದಿರಬೇಕು.

“ನಂದು ಸ್ವಲ್ಪ ಚಳಿ ಪ್ರವೃತ್ತಿ” ಎಂದುಕೊಂಡೇ ಸುಂದರರಾಯರು ಮಲಗೋಚೀಲ ಬಳಸಿದ್ದರು. ಅವರು, ಉಪಾಧ್ಯರು ಆಗೀಗ ನಿದ್ರೆಯ ವಿವಿಧ ಅಧ್ಯಾಯಗಳ ನಡುವೆ ನನ್ನನ್ನು ವಿಚಾರಿಸಿಕೊಂಡದ್ದಿತ್ತು. ಸಹಜ ನಿಟ್ಟುಸಿರಿಗೆಲ್ಲ “ಅಮ್ಮಾ”ನನ್ನು ಕರೆದುಕೊಳ್ಳುತ್ತಿದ್ದ ಸುಬ್ರಹ್ಮಣ್ಯ ನಿದ್ರಾಲೋಕದ ದೀರ್ಘ ಓಟದಲ್ಲಿದ್ದ. ಸದ್ದು, ಭಂಗಿಗಳ ಪರಿಚಯಕ್ಕೆ ನಿಲುಕದಂತೆ ಗುಡಾರದೊಳಗಿದ್ದ ಋಷಿಯಂತೂ ಮೆರಥಾನ್ ಓಟದಲ್ಲೇ ಇದ್ದಿರಬೇಕು. ನಡುರಾತ್ರಿ ಎರಡು ಗಂಟೆಯ ಸುಮಾರಿಗೆ ಉಪಾಧ್ಯರು ಮತ್ತೆ ಸ್ಟವ್ ಹಚ್ಚಿ, ಆಸಕ್ತರಿಗೆ ಕಾಫಿ ಕಾಯಿಸಿದರು. ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ ಕಾಫಿಸೇವನೆಯನಂತರ ಸುಬ್ರಹ್ಮಣ್ಯ ಗುಡಾರದ ಒಳಗೂ ಉಪಾಧ್ಯರು ಮೊದಲಿನಂತೆಯೂ ನಿದ್ರೆ ಮುಂದುವರಿಸಿದ್ದರು! ಮೂರು ಗಂಟೆಯ ಮೇಲೆ ಉಳಿದೆಲ್ಲರು ತುಸು ಜಾಗೃತರಿದ್ದಂತೆ ಕಾಣಿಸಿದಾಗ ನಾನು ಇದ್ದಲ್ಲೇ ಮೈಚಾಚಿ ನಿದ್ದೆ ಕದಿಯುವ ಯತ್ನ ಮಾಡಿದೆ. ಮರುಹಗಲಿನ ಚಟುವಟಿಕೆಗಳಿಗೆ ಬೇಕಾದ ವಿಶ್ರಾಂತಿಯಂತೂ ಸಿಕ್ಕೇ ಸಿಕ್ಕಿತು. ಅದಕ್ಕೂ ಮುಖ್ಯವಾಗಿ…

ನನ್ನ ತಲೆಯೊಳಗೆ ಆ ಜಾಗೆಯ ವಿಕಾಸದ ಚಿತ್ರಗಳು ಮಧುರವಾದ ನೆನಪಿನ ಮೆರವಣಿಗೆಯಲ್ಲಿ ಸಾಗುತ್ತಲೇ ಇದ್ದು, ರಾತ್ರಿ ಕಳೆಯುವ ಶ್ರಮವನ್ನು ಹಗುರಾಗಿಸಿತ್ತು. ಈ ಸ್ಥಳದ ಮೊದಲ ದರ್ಶನದಲ್ಲಿ ಅದೆಷ್ಟು ಮಹಾಮರಗಳಿದ್ದುವು. ಮರಗಳ್ಳನ, ಇಲಾಖೆಯ ಬೇಜವಾಬ್ದಾರಿಯಲ್ಲಿ ಅವೆಲ್ಲ ಹೇಗೆ ಸೂರೆಹೋಯ್ತು ಎನ್ನುವ ವಿಷಾದದ ಎಳೆ ಮೊದಲು ಬಂತು. ಅದನ್ನು ಮೀರಿದ ಸಂತೋಷದ ಎಳೆ ಮರನಾಯಿಯನ್ನು ಗುರುತಿಸಿದ ಎರಡು ರಾತ್ರಿಯ ಶಿಬಿರವಾಸ. (ನೋಡಿ: ಕಾನನದೊಳಗಿಂದ ಎದ್ದುಬಂದವನಾವನಿವಂ ಮತ್ತೂ ಅರ್ಥಪೂರ್ಣ ಕಲಾಪ ಸರಣಿಗೆ ಕಾರಣವಾದ ಮೊದಲ ಕಪ್ಪೆ ಶಿಬಿರ. (ನೋಡಿ: ಮಂಡೂಕೋಪಖ್ಯಾನ) ಆ ಮಳೆಗಾಲದ ನಟ್ಟಿರುಳಿನಲ್ಲಿ ಇದೇ ನೆಲದ ಚಿತ್ರ ಅದೆಷ್ಟು ಭಿನ್ನ, ಅನುಭವ ಅದೆಷ್ಟು ರೋಚಕ. ಹಳ್ಳಿಯ ಸಮುದಾಯ ಭವನದಲ್ಲಿ ದೇವೇಗೌಡರು ಕೊಟ್ಟ ಬಿಸಿಬಿಸಿ ರಾತ್ರಿಯೂಟ ಮುಗಿಸಿದ್ದೆವು.

ಕಾಲಿನಿಂದ ತಲೆಯವರೆಗೆ ನೀರ ನಿರ್ಬಂಧಿಸುವ, ಚಳಿ ತೊಡೆಯುವ, ಜಿಗಣೆ ತಡೆಯುವ ಉಡುಪು ತೊಡಪುಗಳಲ್ಲಿ ಬಂಧಿಯಾಗಿ, ವ್ಯಾನಿನ ಬಿಸುಪಿನಲ್ಲಿ ಇಲ್ಲೇ ದಾರಿ ಬದಿಗೆ ಬಂದಿಳಿದಿದ್ದೆವು. ಬಿರುಮಳೆಯೇನೂ ಇರಲಿಲ್ಲ. ಆದರೆ ಸೋಂಯ್ಗುಟ್ಟುವ ಗಾಳಿಯಲ್ಲಿ ಸವಾರಿ ಹೊರಟ ದಪ್ಪ ದಪ್ಪ ಹನಿಗಳ ಆಟವೇನೂ ಕಡಿಮೆಯಿರಲಿಲ್ಲ. ಕಾಲುದಾರಿಗಳೆಲ್ಲ ತೊರೆಗಳು, ತೊರೆಯೋ ಸೊಂಟಮಟ್ಟದ ಪ್ರವಾಹ. ಕಚಪಚ ಕೆಸರು, ಪ್ರತಿ ಹೆಜ್ಜೆಗಂಟುವ ಜಿಗಣೆ ನಂಟು, ಕುಸಿದ ಮೋಡ, ಉಕ್ಕಿದ ಹಸಿರ ಸಂಭ್ರಮದಲ್ಲಿ ನಮ್ಮ ಅಸಾಧಾರಣ ಶಕ್ತಿಯ ಬೆಳಕೋಲುಗಳೂ ಬಡವಾಗುತ್ತಿದ್ದುವು, ನಮ್ಮನ್ನು ದಿಕ್ಕೆಡಿಸಿಯೇ ಬಿಡುತ್ತಿದ್ದುವು. ಅಸ್ಪಷ್ಟದಲ್ಲಿ ಅದೇನು ಮಹಾಮರವೋ ಬಂಡೆಯೋ ಎಂದು ಲೆಕ್ಕಾಚಾರಕ್ಕಿಳಿಯುವಾಗ ಒಂಟಿ ಸಲಗವೂ ಇರಬಹುದೆಂಬ ಯೋಚನೆಯನ್ನು ಕಳಚಿಕೊಳ್ಳಲು ಕಷ್ಟಪಟ್ಟಿದ್ದೆವು. (ಆಗ ವಿದ್ಯುತ್ ಬೇಲಿ ಬಂದಿರಲಿಲ್ಲ) ಇಷ್ಟಾಗಿಯೂ ಪ್ರತಿ ಗಿಡ, ಕಡ್ಡಿಯಲ್ಲೂ ಅದೇನು ಜೀವದುಬ್ಬರ – ಕಪ್ಪೆಗಳೋ ಕಪ್ಪೆಗಳು. ವಿಭಿನ್ನ ಸ್ಥಾಯಿಯಲ್ಲಿ, ರೂಪದಲ್ಲಿ, ಶೈಲಿಯಲ್ಲಿ ಕರೆದೇ ಕರೆಯುತ್ತಿತ್ತು ಮಂಡೂಕ ಸೈನ್ಯ. ಹಗಲಿಡೀ ಕೆವಿಜಿ ಕೊಟ್ಟ ಸ್ವಾರಸ್ಯಕರ ಪಾಠಕ್ಕಿಲ್ಲಿ ಅದೆಷ್ಟು ರೂಪದರ್ಶಿಗಳು, ಗಾಯಕರು, ವೀರಾಳುಗಳು! ಸಣ್ಣಪುಟ್ಟ ಕೊಸರಾಟದೊಡನೆ ನಮ್ಮ ಕೈಗಳಿಗೆ ಧಾರಾಳ ದಕ್ಕುತ್ತಿದ್ದ ಕೆಲವನ್ನು ಹಿಡಿದು, ಲಕ್ಷಣಗಳನ್ನು ಗುರುತಿಸಿ, ಚರ್ಚಿಸಿ, ಚಿತ್ರ ತೆಗೆದು ಮತ್ತೆ ಬಿಟ್ಟರೂ ಬಿಡಲಾಗದ ಮೋಹ.

ವಿವರಿಸುತ್ತ ಹೋದರೆ ಪುಟ ತುಂಬಬಹುದೇ ವಿನಾ ವಿಷಯ ಮುಗಿಯುವಂತದ್ದಲ್ಲ! ಆ ಸಾವಿರಸಾವಿರದ ಸೈನ್ಯ ಈಗ ಮತ್ತೆ ಹೊಸದೇ ಮಳೆ-ಮಹಾಕಾವ್ಯ ಸಾಕ್ಷಾತ್ಕಾರಕ್ಕೆ ಅದೆಂತೆಂಥಾ ವಲ್ಮೀಕಗಳಲ್ಲಿ ಧ್ಯಾನಸ್ಥವಾಗಿವೆಯೋ ಎಂದು ಯೋಚಿಸುವ ಸಂತೋಷಕ್ಕೆ ಕೊನೆಯಿಲ್ಲ. ಆದರೆ ಕಾಂಕ್ರೀಟು ದಾರಿ, ಇಂಟರ್ಲಾಕ್ ಪರಿಸರ, ಪ್ರವಾಸೋದ್ಯಮದ ಹಣಗಳಿಗೆ ಏನು ಕಳೆದುಕೊಳ್ಳುತ್ತಿದ್ದೇವೆ ಎಂಬ ಅಂದಾಜೂ ಇಲ್ಲದ ಅಧಿಕಾರಿ, ರಾಜಕಾರಣಿಗಳನ್ನು ಎಣಿಸುವಾಗ ಆ ಜೀವವೈವಿಧ್ಯ ಮತ್ತೆ ಮೆರೆಯುವುದುಂಟೇ ಎಂದು ಸಂಶಯವೂ ಕಾಡುತ್ತಿದ್ದಂತೆ ಬೆಳಗ್ಗಾಯ್ತು.

ಪ್ರಾತರ್ವಿಧಿಗಳು, ಕಾಫಿಯ ಹೊಸದೇ ಪಾಕ, ಮೊಸರವಲಕ್ಕಿಯ ರುಚಿಕರ ಕೂಟ ಮುಗಿಸಿ ಶಿಬಿರವೆತ್ತಿದೆವು. ಉಳಿದ ಎರಡೇ ಮೋಟು ಕೊಳ್ಳಿಯನ್ನು ನುರಿದು, ಕೆಂಡ ಬೂದಿಯನ್ನೆಲ್ಲ ಗುಪ್ಪೆ ಮಾಡಿ, ಎಲ್ಲಕ್ಕೂ ಧಾರಾಳ ನೀರು ಕುಡಿಸಿ ಮತ್ತೆ ಕಾರೇರಿದೆವು. ದೇವೇ ಗೌಡರ ಹೋಟೆಲ್ ಅಂಗಳದಲ್ಲಿ ಕಾರಿಟ್ಟು, ಸಣ್ಣ ಚಾರಣದ ಬಯಕೆಗಾಗಿ ಕನ್ನಡಿಕಲ್ಲಿನತ್ತ ಹೆಜ್ಜೆ ಹಾಕಿದೆವು. (ನೋಡಿ: ಕನ್ನಡಿ ಕಲ್ಲು)

ಸಮುದಾಯ ಭವನದ ಹಿತ್ತಲಿನಲ್ಲಿ ಹಾಯ್ದು, ಹಳ್ಳಿಮನೆಗಳ ಸಮೂಹವನ್ನು ಬಳಸಿ ಹೋಗುವ ದಾರಿ ಅನುಸರಿಸಿ, ಎರಡೆರಡು ಎಡಗವಲು ಹಿಡಿದು ಕಾಲುದಾರಿ ಅನುಸರಿಸಿದೆವು. ಗುಡ್ಡೆಯ ತೆರೆಮೈಯ ಹುಲ್ಲು ಮೇಯಲು ಹೋಗುವ ಅಸಂಖ್ಯ ಜಾನುವಾರು ಜಾಡುಗಳಲ್ಲಿ ತುಸು ಮೇಲೆ ತುಸು ಕೆಳಗೆ ಎಂದು ನಮಗೆ ಒಲಿದದ್ದನ್ನು ಅನುಸರಿಸುತ್ತ ಹೋದೆವು. ಮರಗಿಡಗಳ ಮರೆ ಕಳೆಯುತ್ತಿದ್ದಂತೆ ಕೊಳ್ಳದ ಬಿಸಿಲೆ ಘಾಟಿದಾರಿಯಲ್ಲಿ ಟಿಪ್ಪರ್ ಲಾರಿಗಳು ಹೊರೆ ಹೊತ್ತು ಚೀತ್ಕರಿಸುತ್ತ ಸಾಗಿದು ಕಾಣಿಸಿತು. ಅದೇ ಸಮಯದಲ್ಲಿ ಇನ್ನೂ ಆಚಿನ ಕುಮಾರಧಾರಾ ಕೊಳ್ಳದಾಳದಿಂದೆದ್ದ ದಿಗ್ಗಜ – ಕುಮಾರ ಪರ್ವತ, ಕತ್ತಿಗೆ ಶ್ವೇತಸುಂದರ ಮೋಡದ ಶಾಲು ಸುತ್ತಿ ಆಕಾಶ ಸಂವಾದ ನಡೆಸಿದ್ದ. ನಾವು ಸುಮಾರು ಒಂದು ಗಂಟೆಯ ಅವಧಿಯೊಳಗೇ ಕನ್ನಡಿ ಕಲ್ಲಿನ ನೆತ್ತಿಯಲ್ಲಿದ್ದೆವು.

ಮಲಗಿ ಕೊಳ್ಳ ಇಣುಕಿದ್ದಕ್ಕೆ ಲೆಕ್ಕವಿಲ್ಲ, ವಿವಿಧ ಮೂಲೆಗಳಲ್ಲಿ ನಿಂತು ಶಿಖರ ಸಾಲಿನುದ್ದಕ್ಕೆ ಕತ್ತು ಚಾಚಿದ್ದಕ್ಕೆ ಮಿತಿಯೇ ಇಲ್ಲ. ಬಿಸಿಲಿನ ಹೊಡೆತಕ್ಕೆ, ನೀರು ಕುಡಿಯುವುದಕ್ಕೆ, ಚಿತ್ರ ತೆಗೆಯುವುದಕ್ಕೆ ಮುಕ್ತಾಯ ಇಲ್ಲ ಎಂದರಿವಾದಾಗ ಮರಳಿ ಹೊರಟೆವು. ಹನ್ನೊಂದೂವರೆಗೆ ಮತ್ತೆ ಬಿಸಿಲೆಗೇಟ್ ತಲಪಿದ್ದೆವು. ಬೆಳಗ್ಗೆ ಧಾರಾಳ ಕಲಸಿದ್ದ ಮೊಸರವಲಕ್ಕಿ ಉಳಿದದ್ದನ್ನು ಹೊಟ್ಟೆಗಿಳಿಸಿ ತಂಪಾದೆವು.

ಸುಬ್ಬಣ್ಣ ಬಂದಂತೇ ಒಂಟಿಯಾಗಿ ಬೆಂಗಳೂರಿನತ್ತ ಹೋದ. ಕೆಲವೇ ಮಿನಿಟುಗಳಲ್ಲಿ ಮತ್ತದೇ ಆನಂದರಾಜ್ ಲಾರಿ ನಮಗಾಗಿಯೇ ಎಂಬಂತೆ ಹೊರೆ ಹೊತ್ತು ಬಂತು. ಲಾರಿಯಲ್ಲಿ ಘಟ್ಟ ಇಳಿಯುತ್ತಾ ಸಾಗಿದ್ದಂತೆ ಹಿಮ್ಮುರಿ ತಿರುವೊಂದರ ಬಳಿ ಆನಂದರಾಜ್‍ಗೆ ಕನ್ನಡಿ ಕಲ್ಲಿನ ದರ್ಶನ ಮಾಡಿಸಿದೆವು. ವಾರಗಟ್ಟಳೆ ಇಂಥ ಪರಿಸರಗಳಲ್ಲಿ ಓಡಾಡುವಾಗ ತಿಳಿದುಕೊಳ್ಳುವ, ಹೋಗಿ ಅನುಭವಿಸುವ ಆನಂದ ರಾಜನೂ ಆತ ಆಗಬಹುದು ಎನ್ನುವುದು ನಮ್ಮ ಅಂದಾಜು. ಆದರೆ ಆತ “ಅಯ್ಯೋ ಎಲ್ಲೂ ಲಾರಿ ಬಿಟ್ಟು ಇಳಿಯಲ್ಲಪ್ಪಾ” ಎಂದು ಉದ್ಗರಿಸಿದ! ಮತ್ತೆ ನೋಡಿದರೆ, ರಸ್ತೆ ಕೆಲಸವಾಗುತ್ತಿದ್ದಲ್ಲಿ ಒಂದೆರಡು ಬಾರಿ ಒಂಟಿ ಕಾಡಾನೆ ಬಂದು ಇವರೆಲ್ಲರನ್ನೂ ಹೆದರಿಸಿಬಿಟ್ಟಿತ್ತಂತೆ. ಅನಿವಾರ್ಯವಾಗಿ ಅಡ್ಡಹೊಳೆಯಲ್ಲಿ ಮೀಯುವುದಿದ್ದಾಗ ಯಾರದಾರೊಬ್ಬರು ಕಣ್ಗಾವಲು ನಡೆಸುತ್ತಾರಂತೆ. ಆಗ ನೆನಪಾಯ್ತು ವ್ಯಾಸಭಾರತದ ಖ್ಯಾತ ಶ್ಲೋಕ – ಕಾಡಿದ್ದರೆ ಹುಲಿ ಉಳಿಯುತ್ತದೆ, ಹುಲಿಯಿದ್ದರೆ ಕಾಡು ಉಳಿಯುತ್ತದೆ! ಆನಂದರಾಜ್ ಹಿಂದಿನ ದಿನವೇ ನಾವು ಪ್ರಯಾಣಿಸಿದ್ದಕ್ಕೆಂದು ಕೊಡಹೋದ ಹಣವನ್ನು ನಿರಾಕರಿಸಿದ್ದರು. ಎರಡನೇ ದಿನ ಅಡ್ಡ ಹೊಳೆಯಲ್ಲಿ ನಾವು ಅವರಿಗೆ ನಮ್ಮಲ್ಲಿದ್ದ ಬಾಳೆಕಾಯಿ ಚಿಪ್ಸಿನ ಇನಾಮಾದರೂ ಕೊಡುವುದೆಂದು ಕೊಂಡೆವು. ಆದರೆ ಈ ವಲಯದ ಒಟ್ಟಾರೆ ಊಟ ತಿಂಡಿಗಳಲ್ಲಿ ತನ್ನ ಹೊಟ್ಟೆ ಬಳಲಿದ ನೆಪ ಹೇಳಿ ಆತ ಅದನ್ನೂ ಸವಿನಯ ನಿರಾಕರಿಸಿ, ಪರೋಕ್ಷವಾಗಿ ಸೌಜನ್ಯದಲ್ಲಿ ನಮ್ಮನ್ನು ಸೋಲಿಸಿದರು.

ಅಡ್ಡಹೊಳೆಯಿಂದ ನಾವು ಸಾಕಷ್ಟು ಚುರುಕಾಗಿಯೇ ಇಳಿನಡೆಯಲ್ಲಿದ್ದೆವು. ಅರ್ಧ ದಾರಿಯಲ್ಲಿ ಜಲಯೋಜನೆಯ ಹಿರಿಯರು ಮತ್ತೆ ಸಿಕ್ಕಿದರು. ಅವರಿಗೊಬ್ಬ ಇಲಾಖಾ ನೌಕರ ತೈನಾತಿ. ಅವರಿಂದ ತುಸು ಹಿಂದಿದ್ದ ಎರಡನೇ ನೌಕರ ತಲೆಯ ಮೇಲೆ ದೊಡ್ಡ ಹಾಟ್ ಬಾಕ್ಸಿನಲ್ಲಿ ಆ ಹಿರಿಯರ ಮಧ್ಯಾಹ್ನದ ಊಟ ಹೊತ್ತಿದ್ದ! ಎರಡನೆಯವನಿಗೆ ನಮ್ಮ ವೈಚಾರಿಕ ಸ್ತರ ತಿಳಿದಂತಿತ್ತು. ಆತ ನಮ್ಮ ಬಳಿ ಮೆಲುಧ್ವನಿಯಲ್ಲಿ “ಇಂಥವರನ್ನು ನಂಬಿದರೆ ಕಾಡು ಉಳಿದ ಹಾಗೇ” ಎಂದು ವ್ಯಂಗ್ಯ ನಗೆಕೊಟ್ಟು ಜಾರಿಕೊಂಡ!

ಬೂದಿ ಚೌಡಿಯ ಗೇಟು ಹತ್ತಿರವಾಗುತ್ತಿದ್ದಂತೆ ಅನಿರೀಕ್ಷಿತವಾಗಿ ಎದುರಿನಿಂದ ಎರಡು ಜನ, ಏನೋ ವಿಶಿಷ್ಟ ಚೀಲ ಹ್ಯಾಂಡಲಿಗೆ ನೇಲಿಸಿಕೊಂಡು ಒಂದು ಮೋಟಾರ್ ಸೈಕಲ್ಲಿನಲ್ಲಿ ದಾಟಿಹೋದರು. ಯಾರೋ ತಿಳುವಳಿಕೆಯಿಲ್ಲದವರು ಎಂದೇ ನಾವು ಗ್ರಹಿಸಿ, ಅಪಾರ ಕರುಣೆಯಲ್ಲಿ “ಬೈಕ್ ದಾಟಲ್ಲಾ, ದಾರಿ ಬಂದ್ ಆಗಿದೆ” ಎಂದು ಬೊಬ್ಬೆ ಹಾಕಿ ಹೇಳಿದೆವು. ಆದರೆ ನಾವು ನಮ್ಮ ಕಾರು ತಲಪಿ, ನಿಧಾನಕ್ಕೆ ಚೀಲಗೀಲ ಹೊಂದಿಸುತ್ತಿದ್ದಂತೆ ಆ ಬೈಕ್ ಮರಳಿ ಬಂತು. ಈಗ ಅದರಲ್ಲಿ ಮೂವರಿದ್ದರು – ಹೋದವರ ಜತೆಗೆ ಸಮವಸ್ತ್ರದಲ್ಲೇ ಇದ್ದ ಅರಣ್ಯ ಇಲಾಖಾನೌಕರನೊಬ್ಬ! ಮೂವರೂ ಗೆಳೆತನದಲ್ಲೇ ಗೇಟಿನ ಬಳಿಯ ಕಲ್ಲರಾಶಿಯ ಮೇಲೆ, ಬೈಕನ್ನೆತ್ತಿ ಇತ್ತ ದಾಟಿಸಿದರು. ನಾನು ಒಟ್ಟಾರೆ ಫೋಟೋ ತೆಗೆಯುವವನಂತೆ ಅದನ್ನೂ ಕ್ಲಿಕ್ಕಿಸಿಕೊಂಡೆ. ಅದು ಬೈಕ್ ಸವಾರನಿಗೆ ಅಷ್ಟಾಗಿ ಹಿಡಿಸಲಿಲ್ಲ. ಅನಂತರ ಆ ಇಲಾಖಾ ನೌಕರ ಅವರ ವಸತಿಯ ಕಡೆಗೆ ಹೋಗುತ್ತಾ ಎಲ್ಲರಿಗೂ ಚಾ ಮಾಡುವ ಮಾತಾಡುತ್ತಿದ್ದ. ನಾವು ಏನೂ ಆಗಲಿಲ್ಲವೆನ್ನುವಂತೆ ಕಾರು ಹತ್ತಿದೆವು.

ಇಷ್ಟರಲ್ಲಿ ಇನ್ನೊಬ್ಬ ಇಲಾಖಾ ನೌಕರ ವಸತಿಯೊಳಗಿಂದ ಬಂದಾತ, ಸ್ಪಷ್ಟವಾಗಿ ಕುಡುಕ, “ಓ ಕಾರು ನಿಮ್ದಾ? ನಾವು ನಿನ್ನೆ ರಾತ್ರಿಗಾಗುವಾಗ ಯಾರೂ ಬರಲಿಲ್ಲವೆಂದು ತುಂಬ ಕಷ್ಟಪಟ್ಟೆವು. ಇಲ್ಲಿ ಯಾರೋ ಬಂದು ಕಾಡಲ್ಲೋ ಹೊಳೆಯಲ್ಲೋ ಹೋಗಿಬಿಟ್ಟರೆ ಮತ್ತೆ ನಮಗೆಷ್ಟು ಕಷ್ಟ ಗೊತ್ತಾ……” ಉದ್ದುದ್ದ ಒರಲುತ್ತ ಕಾರಿನ ಕಿಟಕಿಗೆ ತಗುಲಿಕೊಂಡ. ಹಿಂದಿನ ದಿನ ನಾವು ಸ್ಪಷ್ಟವಾಗಿ ಅಲ್ಲಿದ್ದ ಇಲಾಖಾ ನೌಕರರಲ್ಲೇ ದಾರಿ ವಿಚಾರಿಸಿದ್ದು, ನಡೆದು ಹೋಗುವ ಅನಿವಾರ್ಯತೆ ತಿಳಿಸಿದ್ದು, ಕಾರನ್ನು ಅಲ್ಲೇ ಬಿಟ್ಟು ಹೋಗಿ, ಮಾರಣೇ ದಿನ ಬರುವುದನ್ನು ಹೇಳಿದ್ದು ಎಲ್ಲ ಆತ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅದಕ್ಕೂ ಹೆಚ್ಚಿಗೆ, ಕಾರು ಮತ್ತು ಸಾರ್ವಜನಿಕರ “safe keeping” ಕುರಿತು ತಮಗಾದ ಮಾನಸಿಕ ಕ್ಷೋಭೆಗೆ ಅನಧಿಕೃತ ಪರಿಹಾರ ಪಡೆಯುವ ನಿರೀಕ್ಷೆಯಲ್ಲಿದ್ದ! ನಾವು ಆತನ ಸೂಚನೆಗಳ ಅರ್ಥವೇ ಆಗದವರಂತೆ, ಹಳೆಗಾಲದವರು ಹೇಳುವಂತೆ `ಕಿಲುಬು ಕಾಸ’ನ್ನೂ ಅತ್ತ ಎಸೆಯದೆ, ಆರಾಮದಲ್ಲೇ ಕಾರು ಹೊರಡಿಸಿಕೊಂಡು ಬಂದೆವು. ಆಳುವ ಮಹಾಸ್ವಾಮಿಗಳು (ಸರಕಾರ) ಹುಸಿ ಯೋಜನೆಗಳ ಮೇಲೆ (ಎತ್ತಿನಹೊಳೆ ತಿರುವು, ಟ್ರೀ ಪಾರ್ಕ್) ಸಾರ್ವಜನಿಕ ಹಣವನ್ನು ಕೋಟಿ ಕೋಟಿಗಳ ಲೆಕ್ಕದಲ್ಲಿ ಹೂಡಿದಂತೆ ಮಾಡುವಾಗ, ಪಾದ ಸೇವಕರು ತಮ್ಮ ಮಿತಿಯಲ್ಲಿ ಬಾಚಿಕೊಳ್ಳುವುದು ತಪ್ಪೇ?

ಋಷಿರಾಜ್ ತಡೆರಹಿತ ಓಟದೊಡನೆ ಜೋಡುಮಾರ್ಗದಲ್ಲಿ ರಾಯರನ್ನುದುರಿಸಿ, ಮಂಗಳೂರಿನಲ್ಲಿ ನನ್ನನ್ನು ಕಳಚಿಕೊಂಡು,, ಸಾಲಿಗ್ರಾಮದಲ್ಲಿ ಉಪಾಧ್ಯರನ್ನು ಬಿಟ್ಟು ಸ್ವಸ್ಥಾನ ಸೇರುವಾಗ ಹಗಲು ಕಳೆದಿರಬೇಕು. ಎಲ್ಲರಿಗೂ ಶಿಬಿರವಾಸದ ಮಧುರಸ್ಮೃತಿಯಲ್ಲದಿದ್ದರೂ ನಿದ್ರೆಬಾಕಿಯನ್ನು ಸರಿಯಾಗಿಯೇ ತೀರಿಸಲು ಸಮಯ ಸಿಕ್ಕಿರಬೇಕು ಅಂದುಕೊಂಡೆ. ಆದರೆ ಮರುದಿನ ಉಪಾಧ್ಯರ ಫೋನು “ರಾತ್ರಿ ಪೂರಾ ನಿದ್ರೆಯಿಲ್ಲ ಮಾರಾಯ್ರೇ!!” ಅವರ ಯೋಚನಾಲಹರಿಯಲ್ಲಿ ಚಂದದ ಕಾಡು, ಶಿಬಿರತಾಣ, ಸಮೃದ್ಧ ತೊರೆಗಳಿಗೆ ಇನ್ನು ಉತ್ತಮ ದಾರಿಯೂ ಸೇರಿಕೊಂಡಿತಂತೆ. ನಾವು ಆಗಾಗ ಹೋಗಬೇಕು ಎಂದೆಲ್ಲಾ ಯೋಚನೆಯೂ ಬಂತಂತೆ. ಅಷ್ಟರಲ್ಲಿ, ಅರಣ್ಯ ಇಲಾಖೆಯ ಸಿಬ್ಬಂದಿಯ ನೆನಪಾಯ್ತು. ಇವರು ಸರಕಾರದ ಮುದ್ರೆಯಿಲ್ಲದ `ಯಾರೋ’ ವನ್ಯ ಸಂಪತ್ತಿನ ಮೇಲೆ ಯೋಜನೆ ಹೊಸೆಯುವಾಗ ಬಿಸಿಯೂಟ ಕೊಡುತ್ತಾರೆ. ತಾವೇ ಅಡ್ಡಿಗಳನ್ನು ಒಡ್ದಿ ಬಂದ್ ಮಾಡಿದ ದಾರಿಯನ್ನೂ ನಿಗೂಢ ಕಾರಣಕ್ಕೆ ನಿವಾರಿಸಿ, ವಾಹನ ಚಲಾಯಿಸಿದವರ ಜತೆ ಕೈ ಸೇರಿಸುತ್ತಾರೆ, ಆತ್ಮೀಯವಾಗಿ ಚಾ ಹಂಚಿಕೊಳ್ಳುತ್ತಾರೆ. ಅಂದರೆ ಇವರೇ ಒಳ ಒಪ್ಪಂದದಲ್ಲಿ ನಾಳೆ ಅಶೋಕವನದಲ್ಲಿ `ಮಝಾ ಶಿಬಿರ’ ನಡೆಸತೊಡಗಿದರೆ ಕೇಳುವವರು ಯಾರು? ನೂರಿಪ್ಪತ್ತು ಕಿಮೀ ದೂರದ ನಾನು ಮಂಗಳೂರು ಬಿಟ್ಟು, ನಿತ್ಯ ಲಾಠಿ ಹಿಡಿದು ಅಶೋಕವನ ಪಹರೆ ನಡೆಸುವುದುಂಟಾ?

ಅರಣ್ಯ ಇಲಾಖೆಯೇ ನಡೆಸುತ್ತಿರುವ ಅನಧಿಕೃತ ಬೂದಿಚೌಡಿಯ ಗುಡಿ, ಅದಕ್ಕೂ ಮುಖ್ಯವಾಗಿ ಅಲ್ಲಿನ ಅರಣ್ಯ ಇಲಾಖೆಯ ವಸತಿ ಎತ್ತಂಗಡಿಯಾಗದೇ ಬಿಸಿಲೆಯ ವನ್ಯಕ್ಕೆ ಉಳಿಗಾಲವಿಲ್ಲ. ದಾರಿಯ ಅಭಿವೃದ್ಧಿ ಈಗ ಹಿಂದೆಗೆಯಲಾಗದ ಹೆಜ್ಜೆ. ಖ್ಯಾತ ವನಧಾಮಗಳಾದ ಬಂಡಿಪುರ, ಮುದುಮಲೈ, ನಾಗರಹೊಳೆ ಮುಂತಾದವುಗಳಲ್ಲಿ ಸಂಜೆಯಿಂದ ಮುಂಜಾವಿನವರೆಗೆ ವಾಹನ ಸಂಚಾರ ಸಂಪೂರ್ಣ ನಿಷೇಧವಿದೆ. ಕುಳ್ಕುಂದ ಮತ್ತು ಬಿಸಿಲೆಯ ಗೇಟುಗಳನ್ನು ಬಿಗಿ ಮಾಡಿ, ಕನಿಷ್ಠ ಆ ವನಧಾಮಗಳ ನಿಯಮವನ್ನಾದರೂ ಇಲ್ಲಿ ಜ್ಯಾರಿಗೊಳಿಸಿದರೆ ನಾಗರಿಕತೆಯ ಈ ಅಮೂಲ್ಯ ಪುಪ್ಪುಸಕ್ಕೆ ತುಸು ಸಾಂತ್ವನ ಸಿಕ್ಕೀತು.