`ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ

ಅಧ್ಯಾಯ ಹತ್ತು

[ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಜನಪ್ರಿಯತೆ ಕಳೆದುಕೊಳ್ಳುವ, ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸಿ ತನ್ಮೂಲಕ ಸ್ವಂತ ಸುಖವನ್ನು ಸಾಧಿಸುವ, ಮುಂತಾಗಿ ಸರಕಾರ (ಅಂದರೆ ಮಂತ್ರಿಮಹೋದಯರು) ಪ್ರದರ್ಶಿಸುವ ಅನೇಕ ತದ್ದಿಂಗಿಣ ತೋಮ್‍ಗಳ ಸಾಲಿಗೆ ಸೇರುತ್ತದೆ ಬಗೆಬಗೆಯ ಪ್ರಾಧಿಕಾರಗಳು. ಉದ್ದೇಶ ಸ್ಪಷ್ಟವಿರದ ಮತ್ತು ಮಾರ್ಗ ತಿಳಿದಿರದ, ಪಂಚೇಂದ್ರಿಯಶೂನ್ಯ ವಿಕ್ತ ಸೃಷ್ಟಿಗಳಿವು. ಸಹಜವಾಗಿ ಪ್ರಾಧಿಕಾರದ ಅಧ್ಯಕ್ಷಗಿರಿಗೆ, ಸದಸ್ಯ ಪಟ್ಟಕ್ಕೆ ಅಂತೆಯೇ ಆಡಳಿತ ವರ್ಗಕ್ಕೆ ಯೋಗ್ಯತೆಯ ಹೊರತಾದ ಇತರ ಎಲ್ಲ ಪ್ರಭಾವಗಳೂ ಪೈಪೋಟಿ ನಡೆಸುತ್ತಿರುತ್ತವೆ. ಪಾರ್ಕಿನ್ಸನ್ನನ ಮೊದಲೆರಡು ನಿಯಮಗಳು ಇಂಥ ಹುಲುಸು ಕನ್ನೆನೆಲದಲ್ಲಿ ತಕ್ಷಣವೇ ಬುಸುಗುಟ್ಟುತ್ತವೆ: ೧. ಲಭ್ಯ ಕಾಲವನ್ನು ಪೂರ್ತಿ ಆಕ್ರಮಿಸುವಂತೆ ಕೆಲಸ ಸತತವಾಗಿ ವರ್ಧಿಸುತ್ತದೆ – ಗುಮಾಸ್ತರ ದಂಡು, ಮೇಲ್ವಿಚಾರಕರ ದಿಂಡು, ಅಧಿಕಾರಿಗಳ ಹಿಂಡು… ಇತ್ಯಾದಿ! ೨. ಸದಾ ಆದಾಯವನ್ನು ಮೀರಿ ಜಿಗಿಯುತ್ತದೆ ವೆಚ್ಚ – ಸಾರಿಗೆ, ಸಂಪರ್ಕ, ಸೌಕರ್ಯ, ಸವಲತ್ತು….! ಈ ದುಂದುಗಾರಿಕೆಯ ಬರಡು ನೆಲದಲ್ಲಿ ಮೊದಲ ಬಲಿ ಮೂಲೋದ್ದೇಶ!]

[ಕನ್ನಡ ಪುಸ್ತಕ ಪ್ರಾಧಿಕಾರ ಕುರಿತ ಬಹುತೇಕ ನಿರೀಕ್ಷೆ ನಿರಾಶೆಗಳನ್ನು ನಾನು ಹಿಂದಿನ ಅಧ್ಯಾಯಗಳಲ್ಲಿ ಸಾಂದರ್ಭಿಕವಾಗಿ ಚರ್ಚಿಸಿದ್ದೇನೆ. ಅವುಗಳ ಪುನರೋದನ್ನು ಇಲ್ಲಿ ನಿವಾರಿಸಿದ್ದೇನೆ. ಕಪುಪ್ರಾ ಇಂದು ಶ್ವಾಸ ಉಳಿಸಿಕೊಂಡಿರುವ ಒಂದೇ ಅಂಶ – ಸಗಟು ಖರೀದಿ. ಇಲ್ಲಿ ಸಗಟು ಖರೀದಿಯ ಕುರಿತಂತೇ ವಿಸ್ತೃತ ಚರ್ಚೆ ಮತ್ತದಕ್ಕೆ ಪೂರ್ವರಂಗವಾಗಿ ಕಪುಪ್ರಾದ ಕುರಿತ ನಾಲ್ಕು ಮಾತುಗಳನ್ನಷ್ಟೇ ಸಂಕಲಿಸಿದ್ದೇನೆ.]

ದಿನಾಂಕ ೯-೩-೧೯೯೪ರ ಮುಂಗಾರು ದೈನಿಕದಲ್ಲಿ ಪ್ರಕಟವಾದ ನನ್ನ ಪತ್ರ:

ಕನ್ನಡ ಪುಸ್ತಕ ಪ್ರಾಧಿಕಾರದ (ಕಪುಪ್ರಾ) ಕುರಿತು ಅಸ್ಪಷ್ಟ ರಾಜಕೀಯ ಘೋಷಣೆಗಳಲ್ಲಷ್ಟೇ ಕೇಳಿದ್ದೆವು. ೧೯೯೩ರ ಸೆಪ್ಟೆಂಬರಿನಲ್ಲೆಲ್ಲೋ ಇದು ಸಾಂಸ್ಥಿಕವಾಗಿ ರೂಪ ಪಡೆಯಿತು. ಇದರ ಕಾರ್ಯರೂಪದ ಬಗ್ಗೆ ಇನ್ನೂ ಸಾರ್ವಜನಿಕರಲ್ಲಿ ಸಂಶಯಗಳಷ್ಟೇ ಮೊಳೆತಿದ್ದಾಗ ನನ್ನಂಥವರಿಗೆ (ಪುಸ್ತಕೋದ್ಯಮಿಗಳಿಗೆ) ಪ್ರಾಧಿಕಾರದ ಅಧ್ಯಕ್ಷರಿಂದ ಔಪಚಾರಿಕ ಪತ್ರ ಬಂದಿತು. ಅದರಲ್ಲಿ ಪ್ರಾಧಿಕಾರದ ಪರಿಚಯವನ್ನೇನೂ ಕೊಡದೆ ನಮ್ಮ ಸಲಹೆಯನ್ನು ಮಾತ್ರ ಧಾರಾಳ ನಿರೀಕ್ಷಿಸಿದ್ದರು. ಸರಕಾರೀ ಕ್ರಮ ಯಾವತ್ತೂ ಹಾಗೆಯೇ ದಬಾಯಿಸಿ ಕೇಳಬಲ್ಲುದು, ವಿವರಿಸಿ ಸಂವಾದಿಸಲಾರದು!

ನಾನೂ ಗಂಟು ಸೌದೆ! ತಕ್ಷಣಕ್ಕೆ ಅದೇ ಸಮಯದಲ್ಲಿ `ಸುಧಾ’ದಲ್ಲಿ ಪ್ರಕಟವಾಗಿದ್ದ (ನೋಡಿ: ಸರಕಾರೀ ಪುಸ್ತಕೋದ್ಯಮ) ನನ್ನ ಲೇಖನ ಓದಿಕೊಳ್ಳಲು ಅಧ್ಯಕ್ಷರಿಗೆ ಸೂಚಿಸಿದೆ. ಕನ್ನಡ ರಾಜ್ಯೋತ್ಸವದ ಮುನ್ನಾದಿನ, ಅಂದರೆ ೧೯೯೩ರ ಅಕ್ಟೋಬರ್ ೩೧ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಪುಪ್ರಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜತೆಯಾಗಿ ಕನ್ನಡ ಪ್ರಕಾಶಕ ಮತ್ತು ಮಾರಾಟಗಾರರ ಪುಸ್ತಕ ಮೇಳವನ್ನು ನಡೆಸಿತು. ಅದರ ಪುಸ್ತಕಗೋಷ್ಟಿಯಲ್ಲಿ ಆಹ್ವಾನಿತ ಪ್ರಬಂಧಕಾರನಾಗಿ ಮತ್ತಷ್ಟು ವಿಚಾರಗಳನ್ನು ಸ್ಪಷ್ಟಪಡಿಸಿದೆ. ಅವೆರಡರ ಸಾರದಲ್ಲಿ ಕಪುಪ್ರಾದ ಬಗೆಗಿನ ನನ್ನ ನಿರೀಕ್ಷೆಗಳು ಹೀಗಿದ್ದುವು. ಯಾವುದೇ ಉದ್ಯಮದ ಕೆಡುಕಿಗೆ ಮದ್ದು ಸರಕಾರೀಕರಣ ಅಲ್ಲ. (ಕನ್ನಡದ) ಪುಸ್ತಕೋದ್ಯಮದ ಎಲ್ಲ ಅಂಗಗಳಲ್ಲೂ ಅಂದರೆ ಲೇಖನ, ಸಂಕಲನ, ಮುದ್ರಣ, ಪ್ರಕಾಶನ, ವಿತರಣೆ, ಖರೀದಿ, ಮಾರಾಟ, ಸಹಾಯ, ಬಹುಮಾನ, ಪ್ರೋತ್ಸಾಹ, ಸಂಶೋಧನ, ಸಮ್ಮೇಳನ ಇತ್ಯಾದಿಗಳಲ್ಲಿ ಸರಕಾರ ಈಗಾಗಲೇ ಧಾರಾಳ ಕೆಲಸ ಮಾಡಿದೆ, ಮಾಡುತ್ತಿದೆ. ಇದರಲ್ಲಿ ಹಣ ಹೂಡಿಕೆ, ಪ್ರತಿಫಲದ ದಾಮಾಶಯ ತೆಗೆದರೆ ಸರಕಾರ ಭಾರೀ ಸೋಲನ್ನು ಕಂಡಿರುವುದು ಲೋಕಕ್ಕೇ ತಿಳಿದಿದೆ. ಅಂದ ಮೇಲೆ ಅಗಾಧ ಧನಸಂಪತ್ತಿನ ಹೂಡಿಕೆ, ಸಿಬ್ಬಂದಿ, ಸವಲತ್ತುಗಳ ದರ್ಬಾರಿಗೆ ಇನ್ನೊಂದು ಹೆಸರು ಕಪುಪ್ರಾ ಆಗಬಾರದು. ಬದಲು ಈವರೆಗೆ ನಡೆದ ಸರಕಾರಿ ಮತ್ತು ಖಾಸಗಿ ಕನ್ನಡ ಪುಸ್ತಕ ಚಟುವಟಿಕೆಗಳ ಕೂಲಂಕಷ ಆಯವ್ಯಯ ಪತ್ರವನ್ನು ಪ್ರಾಧಿಕಾರ ಬರೆಯಬೇಕು. ಮತ್ತೆ ನಿಷ್ಕರುಣೆಯಿಂದ ಮುಂದಿನ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು. ಹುಸಿ ಅಭಿಮಾನದ ಹೆಸರಿನಲ್ಲಿ, ಅತಿ ಭಾವುಕತೆಯ ಸೋಗಿನಲ್ಲಿ ಕಪುಪ್ರಾ ಬೇಕಿಲ್ಲ, ಕನ್ನಡದ ಧಾತು ನಷ್ಟವಾಗುವಂತೆ ತಡೆಯುವ ಕಾವಲು ನಾಯಿ ಕಪುಪ್ರಾ ಆಗಲಿ.

ಆದರೆ ಮುಂದುವರಿದ ದಿನಗಳಲ್ಲಿ ಕಪುಪ್ರಾದ ಅಧ್ಯಕ್ಷರ ಪತ್ರಿಕಾ ಹೇಳಿಕೆಗಳು ವಿವೇಚನೆ ಉಳ್ಳವರನನ್ನು ಕಂಗೆಡಿಸುವಂತಿತ್ತು. ಪ್ರಾಧಿಕಾರ ಪುಸ್ತಕ ಪ್ರಕಟಣೆ, ಸಗಟು ಖರೀದಿ, ಸಾಹಿತ್ಯ ಜಾತ್ರೆಗಳನ್ನು ನಡೆಸುತ್ತದಂತೆ. ಸುಲಭ ಬೆಲೆಯ ಪ್ರಕಟಣೆಗಳಲ್ಲಿ ಹಣ ಪೋಲು ಮಾಡಲಿದೆ. ಪ್ರಜಾಪ್ರಭುತ್ವದಲ್ಲೂ ಖಿಲ್ಲತ್ತು ಕೊಡುವ `ತಾನು-ರಾಜತನ’ ಮೆರೆಯಲಿದೆ. ಪ್ರಾಯೋಗಿಕ ಅನುಭವ ಸೊನ್ನೆಯಾದರೂ ಕನಿಷ್ಠ ಜಿಲ್ಲೆಗೊಂದಾದರೂ ಮಾರಾಟ ಮಳಿಗೆ ಹಾಕುವ, ಸಾಲಸೌಲಭ್ಯ ಒದಗಿಸುವ ಬಡಾಯಿ ಕೊಚ್ಚುತ್ತಿದೆ. ಹಾಗಾದರೆ ಇಂಥವೇ ಸರ್ಕಸ್ಸುಗಳನ್ನು ಮಾಡುತ್ತಲೇ ಇರುವ ಇತರ ಸರಕಾರೀ ಸಾಹಿತ್ಯ ಜಿಗಣೆಗಳಿಂದ ಪ್ರಾಧಿಕಾರ ಏನು ಹೊಸತು? ಪುಸ್ತಕ ಪ್ರಾಧಿಕಾರ ಯಾಕೆ, ಎಂದು ಮೊದಲು ಚರ್ಚೆಯಾಗುವುದು ಅವಶ್ಯ. ಕೇವಲ ಅದರ ಅಧ್ಯಕ್ಷರ ಹೇಳಿಕೆಗಳ ಜಾಡನ್ನು ಅನುಸರಿಸಿ, ಕಪುಪ್ರಾಧಿಕಾರ ಬೇರೆಯದೇ ಜಾಡು ಹಿಡಿದಿದೆ ಎಂದು ಯೋಚಿಸುವುದು ಖಂಡಿತ ತಪ್ಪಾಗುತ್ತದೆ! ಈ ಮಾತುಗಳನ್ನು ಒಂದು ಪ್ರಸಂಗದ ವಿವರಗಳೊಂದಿಗೆ ಹೇಳಿ ಮುಗಿಸುತ್ತೇನೆ.

 

ನನಗೆ ದಕ್ಕಿದ ಸಗಟು ಖರೀದಿ

ದಿನಾಂಕ ೨೨-೬-೧೯೯೬ರಂದು ಕನ್ನಡ ಪುಸ್ತಕ ಪ್ರಾಧಿಕಾರದಿಂದ ನನಗೊಂದು ಪತ್ರ ಬಂತು: “ಕಪುಪ್ರಾ `ಸುಬ್ರಹ್ಮಣ್ಯನ್ ಚಂದ್ರಶೇಖರ್’ – ವೈಜ್ಞಾನಿಕ ಜೀವನ ಚರಿತ್ರೆ, ಪುಸ್ತಕದ ೧೫೦ ಪ್ರತಿಗಳನ್ನು, ವಿಶೇಷ ಖರೀದಿ ಯೋಜನೆಯಡಿಯಲ್ಲಿ, ಮುಖಬೆಲೆಯಲ್ಲಿ ಶೇಕಡ ೨೫ರಷ್ಟು ಸೋಡಿ ಬಿಟ್ಟು ಖರೀದಿಸಬೇಕೆಂದು ತೀರ್ಮಾನಿಸಲಾಗಿದೆ. (ಗಮನಿಸಿ: ಪುಸ್ತಕ ನನ್ನದು, ತೀರ್ಮಾನ ಅವರದು!) ಆದ ಕಾರಣ `ವೈಜ್ಞಾನಿಕ ಜೀವನ ಚರಿತ್ರೆ’ಯ ಒಂದು ಪ್ರತಿಯನ್ನು ದಯಮಾಡಿ ಕಳುಹಿಸಿ ಕೊಡಬೇಕಾಗಿ ವಿನಂತಿ. ಅನಂತರ ತಮಗೆ ಆದೇಶವನ್ನು ಕಳುಹಿಸಿಕೊಡಲಾಗುತ್ತದೆ.”

ಅದು ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ನೆಲಮನೆ ದೇವೇಗೌಡರ ಅಧ್ಯಕ್ಷತೆಯ ಕಾಲ. ಕೇವಲ ಗುಣಕ್ಕೆ ಮಣೆಹಾಕಿ, ಜಿಟಿಎನ್ ಅವರ ಒಂದು ಪುಸ್ತಕವನ್ನಾದರೂ ಕಪುಪ್ರಾ ಖರೀದಿಸಲೇಬೇಕೆನ್ನುವುದು ಅಧ್ಯಕ್ಷರ ಬಯಕೆಯಾಗಿತ್ತಂತೆ!

ಅದಕ್ಕೆ ನನ್ನ ೨೭-೬-೧೯೯೬ರ ಉತ್ತರ: “ನಾನು ಅರ್ಜಿ, ಮನವಿ ಸಲ್ಲಿಸದೇ ನನ್ನ ಪ್ರಕಟಣೆಯನ್ನು ನೀವು ವಿಶೇಷ ಖರೀದಿಗಾಗಿ ಆರಿಸಿದ್ದಕ್ಕೆ ಆಭಾರಿ. ಹಾಗೇ ನೀವು ವಿಧಿಸಿದ ೨೫% ವಟ್ಟಾ ಕೂಡ ನನಗೆ ಒಪ್ಪಿಗೆಯೇ. (ಇಲ್ಲಿ ಸಾರ್ವಜನಿಕ ತಿಳುವಳಿಕೆಗಾಗಿ ಒಂದು ಮಾತು: ನನ್ನ ಪ್ರಕಟಣೆಗಳ ಐದು, ಹತ್ತು ಪ್ರತಿ ಕೊಳ್ಳುವವರಿಗೆ ನಾನು ಇಲ್ಲದಿದ್ದರೂ ೩೩.೩೩% ವ್ಯಾಪಾರಿ ವಟ್ಟಾ ಕೊಡುವವನೇ ಇದ್ದೆ. ಕಪುಪ್ರಾ ನೂರೈವತ್ತು ಪ್ರತಿಗಳ ಗಿರಾಕಿಯಾಗುವಾಗ ೨೫% ವಟ್ಟಾ ಕೊಡುವುದು ದುರಭ್ಯಾಸವಲ್ಲ.) ಆದರೆ ೧. ಪುಸ್ತಕಗಳನ್ನು ನನ್ನ ಖರ್ಚಿನಲ್ಲಿ ಲಾರಿಗೆ ಹಾಕಿ ಬೆಂಗಳೂರಿಗೆ ಕಳಿಸಬಲ್ಲೆ. ಖುದ್ದು ನಿಮ್ಮ ಬಾಗಿಲಿಗೆ ತಂದೊಪ್ಪಿಸಲಾರೆ. ೨. ನನ್ನ ಪುಸ್ತಕ ಮತ್ತು ಬಿಲ್ಲು ನಿಮಗೆ ತಲಪಿದ ೧೫ ದಿನಗಳೊಳಗೆ, ಮಂಗಳೂರಿನಲ್ಲಿ ನಗದಾಗುವಂತೆ ಬ್ಯಾಂಕ್ ಡ್ರಾಫ್ಟ್ ಮೂಲಕ ನಿಮ್ಮ ಪಾವತಿ ಬರಬೇಕು. ಈ ಎರಡು ಆಶ್ವಾಸನೆ ಕೊಟ್ಟಲ್ಲಿ, ನಾನು ಸದ್ಯ ಮಾದರಿ ಪ್ರತಿ ಕಳಿಸಿ, ಮುಂದುವರಿಯುತ್ತೇನೆ. ಇಲ್ಲವಾದಲ್ಲಿ ಕ್ಷಮಿಸಿ, ನಿಮ್ಮ ಬೇಡಿಕೆಯಲ್ಲಿ ನನಗಾಸಕ್ತಿ ಇಲ್ಲ. ಕೂಡಲೇ ಉತ್ತರಿಸುವಿರಾಗಿ ನಂಬಿದ್ದೇನೆ.”

ನಾನು `ಕೂಡಲೇ’ ಎಂದಿದ್ದರೂ ಸುಮಾರು ಹತ್ತು ದಿನ ಕಳೆದು, ಅಂದರೆ ೧೦-೭-೧೯೯೬ರಂದು ಕಪುಪ್ರಾ “ತಾವು ಬಯಸಿದಂತೆ ಪುಸ್ತಕಗಳನ್ನು ಸರಬರಾಜು ಮಾಡಿ ಬಿಲ್ಲನ್ನು ಸಲ್ಲಿಸಿದ ೧೫ ದಿನಗಳಲ್ಲಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು.” ಎಂದು ಪತ್ರಿಸಿತು.

೬-೭-೧೯೯೬ರಂದು ಒಂದು ಮಾದರಿ ಪ್ರತಿಯನ್ನು ಅಂಚೆಯಲ್ಲಿ ಕಳಿಸಿಕೊಟ್ಟೆ. ಎರಡು ತಿಂಗಳು ಕಳೆದರೂ ಆದೇಶ ಬರಲಿಲ್ಲ. ೧೮-೯-೧೯೯೬ರಂದು ನೆನಪಿನೋಲೆ ಹೀಗೆ ಬರೆದೆ. “ನಿಮ್ಮ ಭರವಸೆಯ ಮೇರೆಗೆ ಒಂದು ಪ್ರತಿ ಕಳಿಸಿದ್ದೆ. ನೀವೇ ಹೇಳಿದ ಜುಲೈ ಕೊನೆ ಬಿಟ್ಟು ಆಗಸ್ಟ್ ಕಳೆದರೂ ಆದೇಶ ಬಂದಿಲ್ಲ. ನಾನು ಮೊದಲೇ ಸ್ಪಷ್ಟಪಡಿಸಿದಂತೆ, ಇಲಾಖೆಯ ನಿಧಾನದ್ರೋಹದಲ್ಲಿ ಸಿಲುಕಿಕೊಂಡು ಪುಸ್ತಕ ತಳ್ಳುವ ಆಸಕ್ತಿ ನನಗೆ ಇಲ್ಲ. ಕಳಿಸಿದ ಮಾದರಿ ಪ್ರತಿಯನ್ನು ನಿಮ್ಮಿಂದಾದ ಖರೀದಿ ಎಂದು ಮಾಡಿ ಬಿಲ್ ಲಗತ್ತಿಸಿದ್ದೇನೆ. ಹತ್ತು ದಿನಗಳೊಳಗೆ ರೂ. ೬೩ರ ಪಾವತಿಯನ್ನು ನನಗೆ ಮುಟ್ಟಿಸುತ್ತೀರಿ ಎಂದು ನಿರೀಕ್ಷಿಸುತ್ತೇನೆ.” ಏನೂ ಆಗಲಿಲ್ಲ. ಸುಮಾರು ಮೂರು ವಾರ ಕಳೆದು, ಅಂದರೆ ೫-೧೦-೧೯೯೬ ಮತ್ತೆ ಹತ್ತು ದಿನ ಕಳೆದು, ಅಂದರೆ ೧೬-೧೦-೧೯೯೬ರಂದು ಖಾರ ಹೆಚ್ಚಿಸಿ ನೆನಪಿನೋಲೆಗಳನ್ನು ಬರೆದೆ.

೧೭-೧೦-೧೯೯೬ರ ದಿನಾಂಕ ಹೊತ್ತ ಅವರ ಉತ್ತರ ಬಂತು: “ನಿಮ್ಮ ಪತ್ರ, ನಗದು ಬಿಲ್ಲು ತಲಪಿದೆ. ಕಪುಪ್ರಾ ವಿಶೇಷ ಖರೀದಿ ಯೋಜನೆಯಡಿಯಲ್ಲಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಕುರಿತು ರಚಿಸಲಾದ ಪುಸ್ತಕವನ್ನು ಖರೀದಿಸಲಾಗುವುದೆಂದು ತಿಳಿಸಲಾಗಿತ್ತು. ಈ ಕುರಿತು ಸರಕಾರ ೨೯-೯-೧೯೯೬ರಂದು ಆದೇಶವನ್ನು ಹೊರಡಿಸಿದೆ. ಅದರ ಪ್ರತಿಯನ್ನು ಮಾಹಿತಿಗಾಗಿ ಲಗತ್ತಿಸಿದೆ. ಆದ ಕಾರಣ ಸುಬ್ರಹ್ಮಣ್ಯನ್ ಚಂದ್ರಶೇಖರ್ ೧೫೦ ಪ್ರತಿಗಳನ್ನು ಸರಬರಾಜು ಮಾಡಬೇಕೆಂದು ಈಗಷ್ಟೇ ವಿನಂತಿಸುತ್ತಿದ್ದೇನೆ. ತಮ್ಮ ಬಿಲ್ಲು ತಲಪಿದ ೧೫ ದಿನಗಳ ಒಳಗಾಗಿ ಬಿಲ್ಲಿನ ಮೊತ್ತವನ್ನು ಪಾವತಿ ಮಾಡುತ್ತೇವೆ. ನಿಮಗಾಗಿರುವ ತೊಂದರೆಗೆ ವಿಷಾದಿಸುತ್ತೇವೆ.

ನಾನು ಕಳಿಸಿದ ಮಾದರಿ ಪ್ರತಿಯನ್ನು ಮೇಲೆ ಕಳಿಸಿ, ಅನುದಾನ ಮತ್ತು ಆದೇಶವನ್ನು ಅವರು ಹೊಸದಾಗಿ ಪಡೆಯಬೇಕೆಂಬ ಆಡಳಿತದ ಸಿಕ್ಕನ್ನು ಕಪುಪ್ರಾ ನನಗೆ ಮೊದಲು ತಿಳಿಸಿರಲಿಲ್ಲ. ಈಗ ಅವರು ನನ್ನ ಅವಗಾಹನೆಗಾಗಿ ಕಳಿಸಿದ ಸರಕಾರೀ ಆದೇಶದ ಯಥಾಪ್ರತಿಯಲ್ಲಿ ವಿಶೇಷ ಖರೀದಿ ಲೆಕ್ಕಕ್ಕೆ ರೂ. ಇಪ್ಪತ್ತು ಲಕ್ಷ ಮಂಜೂರಾದದ್ದು ಸ್ಪಷ್ಟವಿತ್ತು. ಹಾಗಾಗಿ ಅವರ ವಿವರಣೆ ಒಪ್ಪಿಕೊಂಡು ೨೨-೧೦-೧೯೯೬ರಂದು ಪುಸ್ತಕಗಳನ್ನು ಲಾರಿಯಲ್ಲೂ ದಾಖಲೆಗಳನ್ನು ಅಂಚೆಯಲ್ಲೂ ಕಳಿಸಿಕೊಟ್ಟೆ. ಹದಿನೈದು ದಿನಗಳೊಳಗೆ ಪಾವತಿ ಬರದಿದ್ದರೂ ನನ್ನ ನೆನಪಿನೋಲೆ ಹೊರಡುವುದರೊಳಗೆ ಬಂತು. ಮಂಗಳೂರಿನಲ್ಲಿ ಪಾವತಿ ಸಿಗುವಂತೆ ಎಂಬ ನನ್ನ ಕರಾರು ಮುರಿದು ಬೆಂಗಳೂರ ಚೆಕ್ ಕಳಿಸಿದ್ದರು. ಅದನ್ನು ನಾನು ಉದಾರವಾಗಿ ಮನ್ನಿಸಿ, ಒಪ್ಪಿಕೊಂಡೆ, ಚೆಕ್ ನಗದೀಕರಿಸುವ ವೆಚ್ಚವನ್ನೂ ಭರಿಸಿಕೊಂಡೆ. ಎಲ್ಲ ಮುಗಿಯಿತೆಂದುಕೊಂಡು ಕಡತ ಮುಚ್ಚಿದೆ. ಆದರೆ ಸ್ವಲ್ಪ ನಿಧಾನಕ್ಕೆ ನನಗೆ ಅದರ ಇನ್ನೊಂದು ಮುಖ ಕಾಣಿಸಿತು.

ಮಾರ್ಚ್ ಸಮೀಪಿಸುತ್ತಿದ್ದಂತೆ ಅಂದಿನ ಅವಿಭಜಿತ ದಕ ಜಿಲ್ಲೆಯ ಸಗಟು ಖರೀದಿ ಆಕಾಂಕ್ಷಿಗಳಲ್ಲಿ ಕಪುಪ್ರಾದ ಆದೇಶ ಬಾರದೆ ಆತಂಕ ತುಂಬಿಕೊಂಡಿತು. ಅನೌಪಚಾರಿಕ ಚರ್ಚಾಕೂಟಗಳು ಏರ್ಪಟ್ಟು, ಕೊನೆಗೆ ಜಿಲ್ಲಾ ಸಾಹಿತ್ಯ ಪರಿಷದಧ್ಯಕ್ಷರ (ಹರಿಕೃಷ್ಣ ಪುನರೂರು) ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ಮನವಿ ಕಳಿಸುವುದು, ಸಾಂಕೇತಿಕ ಪ್ರತಿಭಟನಾ ಸಭೆ ನಡೆಸುವುದು ಎಂದು ತೀರ್ಮಾನವಾಯಿತು. ಆ ಕೂಟದ ಕೆಲವು ಉತ್ಸಾಹಿಗಳು ನನ್ನನ್ನೂ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಲು ಕೇಳಿಕೊಂಡರು. ಅವರಿಗೆ ನಾನು ನಿಸ್ಸಂದಿಗ್ಧವಾಗಿ ಸಗಟು ಖರೀದಿಯ ಕುರಿತು ನನಗಿದ್ದ ತಿರಸ್ಕಾರವನ್ನು ಹೇಳಿದ್ದೆ. ಮುಂದುವರಿದು, ಆದರೂ ನನಗೊದಗಿದ ವಿಶೇಷ ಖರೀದಿಯ ವಿವರಗಳನ್ನು ಕೊಟ್ಟು ಪ್ರಶ್ನಿಸಿದೆ, “ನನ್ನಂತೆ ತರ್ಕಬದ್ಧವಾಗಿ ನೇರ ಸಂತ್ರಸ್ತರೇ ಹೋರಾಡಿದರೆ ಸಾಲದೇ? ಜಿಲ್ಲಾ ಪರಿಷದಧ್ಯಕ್ಷರಂತ ಉತ್ಸವಮೂರ್ತಿಗಳೊಡನೆ ಈ ದ್ರಾವಿಡ ಪ್ರಾಣಾಯಾಮ ಬೇಕೇ?” ನಾನು ಭಾಗವಹಿಸಲಿಲ್ಲ. ಮೆರವಣಿಗೆ, ಘೋಷಣೆ, ಅರ್ಪಣೆ ನಡೆಯಿತು. ಕಾಕತಾಳೀಯವಾಗಿ ಕೆಲವರಿಗೆ ಸಗಟು ಖರೀದಿ ಆದೇಶವೂ ಬಂದಿರಬೇಕು. ದಿನಗಳು ತಣ್ಣಗೆ ಸರಿದಿದ್ದುವು. ಆಗ ಇದ್ದಕ್ಕಿದ್ದಂತೆ ತನ್ನ ಮನಸ್ಸಾಕ್ಷಿಯ ಒಪ್ಪಕ್ಕಾಗಿ ಎಂಬಂತೆ ಜಿಲ್ಲೆಯ ಓರ್ವ ಮಹಿಳಾ ಸಾಹಿತಿ (ಸಾರಾ ಅಬೂಬಕ್ಕರ್) ಪತ್ರಿಕೆಗೆ ಈ ಅರ್ಥದಲ್ಲಿ ಒಂದು ಕಾಗದ ಬರೆದರು:

“ನಾವು ಸಗಟು ಖರೀದಿಯ ಕುರಿತು ಪ್ರತಿಭಟನೆ ನಡೆಸುವುದು ಅನಗತ್ಯವಿತ್ತು. ಕಪುಪ್ರಾ ಅಧ್ಯಕ್ಷರು ಈಗ ನನಗೆಲ್ಲ ದಾಖಲೆಗಳನ್ನು ಕಳಿಸಿ, ತಮ್ಮ `ಇಷ್ಟು ಕಾಳಜಿಯುಕ್ತ ಕಾರ್ಯಕ್ರಮವನ್ನು ನೀವೂ ಅರ್ಥಮಾಡಿಕೊಳ್ಳಲಿಲ್ಲವೇ’ ಎಂದದ್ದಕ್ಕೆ ಈ ಸ್ಪಷ್ಟೀಕರಣ ಕೊಟ್ಟಿದ್ದೇನೆ.” ವಾಸ್ತವದಲ್ಲಿ ನನ್ನ ಸುಬ್ರಹ್ಮಣ್ಯನ್ ಚಂದ್ರಶೇಖರ್ ಪುಸ್ತಕದ ವಿಶೇಷ ಖರೀದಿಗೆ ಮೇಲಿನಿಂದ ಬಂದಂಥದ್ದೇ ಬೇರೊಂದು ಸರಕಾರೀ ಆದೇಶದ ಯಥಾಪ್ರತಿಯನ್ನು ಇವರಿಗೂ ಕಳಿಸಿದ್ದರು. ವಿಳಂಬದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಎನ್ನುವುದಕ್ಕಿಂತ, ಅಂದಿನ ಅದರ ಅಧ್ಯಕ್ಷರಾಗಿದ್ದ ನೆಲಮನೆ ದೇವೇಗೌಡರು `ಅಪರಾಧಿ ಅಲ್ಲ’ ಎನ್ನುವುದು ಸಾಬೀತಾಗಿತ್ತು.

ಪ್ರತಿಭಟನಾ ಸಭೆಯ ಸಂಘಟನೆಯಲ್ಲಿ ದೊಡ್ಡ ಪಾತ್ರವಹಿಸಿದ ಒಬ್ಬರು (ಸುಮುಖಾನಂದ ಜಲವಳ್ಳಿ) ಪತ್ರಿಕಾ ಪ್ರಕಟಣೆಯನ್ನು ತಮ್ಮ ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಂಡು, ಪತ್ರಿಕೆಯಲ್ಲೇ ಹೀಗೆ ಪ್ರತಿಕ್ರಿಯಿಸಿದರು. “ಕಪುಪ್ರಾದ ವಿಳಂಬ ನೀತಿಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ನಾನೂ ಪಾಲ್ಗೊಂಡಿದ್ದೆ. ಹಾಗಾಗಿ ಈ ಪ್ರತಿಕ್ರಿಯೆ. ಮಹಿಳಾ ಸಾಹಿತಿ ತಡವಾಗಿ `ಪ್ರತಿಭಟನೆ ಸಕಾರಣವಲ್ಲ’ ಎನ್ನುವ ಹಿನ್ನೆಲೆಯಲ್ಲಿ ಕಪುಪ್ರಾದ ಅಧ್ಯಕ್ಷರ ಹಿತಾಸಕ್ತಿ ಕಾಣುತ್ತಿದೆ. ಪ್ರತಿಭಟನೆಯಲ್ಲಿ ಜಿಲ್ಲೆಯ ಹಿರಿಯ ಸಾಹಿತಿಗಳನೇಕರು ಭಾಗವಹಿಸಿದ್ದರು. ಕಪುಪ್ರಾ ಅಧ್ಯಕ್ಷರು ಅವರಿಗೆಲ್ಲ ಹೀಗೆ ಬರೆದಿದ್ದಾರೆಯೋ ಗೊತ್ತಿಲ್ಲ. ಈ ವಿಳಂಬದ ವಿರುದ್ಧದ ಚಳವಳಿ ಒಂದು ತಿಂಗಳಿಂದ ಪ್ರಚಾರದಲ್ಲಿತ್ತು. ಆಗ ಅಧ್ಯಕ್ಷರು ಗೊರಕೆ ಹೊಡೆಯುತ್ತಿದ್ದರೇ? ಈ ಮಹಿಳಾ ಸಾಹಿತಿಗೆ ದಾಖಲೆಗಳನ್ನು ಕಳಿಸುವ ಬದಲು ಪ್ರತಿಭಟನಾ ಸಭೆಯ ಅಧ್ಯಕ್ಷರಿಗೇ ನೇರ ಮನವರಿಕೆ ಮಾಡಿಕೊಡಬಹುದಿತ್ತಲ್ಲ?…… ಹೀಗೇ ಉದ್ದವಾಗಿ ಮುಂದುವರಿದ ಅವರ ಪತ್ರ ಅಯಾಚಿತವಾಗಿ ನನ್ನೆಡೆಗೆ ಹೊರಳಿದ್ದು ನೋಡಿ.

“೧೯೯೬ರ ಮಧ್ಯಾವಧಿಯಲ್ಲಿ ಕಪುಪ್ರಾ ಮಂಗಳೂರಿನ ಅತ್ರಿ ಬುಕ್ ಸೆಂಟರಿನಿಂದ ಒಂದು ಪುಸ್ತಕದ ೧೫೦ ಪ್ರತಿಗಳನ್ನು ವಿಶೇಷ ನೆಲೆಯಲ್ಲಿ ಎಂದೇ ಹೆಸರಿಸಿ ಖರೀದಿಸಿತು. ಹಾಗಾದರೆ ವಿಶೇಷ ಖರೀದಿ, ಸಾಮಾನ್ಯ ಖರೀದಿ ಅಂತ ಪ್ರಾಧಿಕಾರದಲ್ಲಿ ಬೇರೆ ವ್ಯವಸ್ಥೆಯಿದೆಯೇ? ವಿಶೇಷ ಖರೀದಿ ಯಾರು ಯಾರಿಗೆ?…..” ಬಲು ದೀರ್ಘವಿತ್ತು ಅವರ ವಾಕ್ಪ್ರಹಾರ. ಅದರ ಸುಳಿಯಲ್ಲಿ ನನ್ನ ಹೆಸರಿದ್ದುದರಿಂದ ನಾನು ಅನಿವಾರ್ಯವಾಗಿ ಪತ್ರಿಕೆಯ ಮೂಲಕವೇ ಹೀಗೆ ಪ್ರತಿಕ್ರಿಯಿಸಿದೆ.

“ನಾನು ಪ್ರಧಾನವಾಗಿ ಪುಸ್ತಕ ಮಾರಾಟಗಾರ. ಮತ್ತೆ ಸಣ್ಣ ಪ್ರಕಾಶಕ. ನನ್ನ ಸಣ್ಣ ನೆಲೆಯನ್ನು ಕುರಿತು ಕಪುಪ್ರಾದಿಂದ ಒಂದು ಅಯಾಚಿತ – ಗಮನಿಸಿ, ನಾನು ಕೇಳಿ ಅಥವಾ ಅರ್ಜಿ ಸಲ್ಲಿಸಿ ಪಡೆದದ್ದಲ್ಲ, ಹಾಗಾಗಿ ಅನಿರೀಕ್ಷಿತವೂ ಪತ್ರ ಬಂತು. ‘ನಿಮ್ಮ ಒಂದು ಪುಸ್ತಕವನ್ನು ವಿಶೇಷ ಖರೀದಿಗೆ ಆರಿಸಿದ್ದೇವೆ, ಮಾದರಿ ಪ್ರತಿ ಕಳಿಸಿ.’ ಪುಸ್ತಕೋದ್ಯಮದ ವೃತ್ತಿಪಾವಿತ್ರ್ಯ ಉಳಿಸಲು ನಾನು ಸರಕಾರಿ ಅಥವಾ ಬೃಹತ್ ಸಾಂಸ್ಥಿಕ ಕೃಪಾಶ್ರಯವನ್ನು ಎಲ್ಲ ನೆಲೆಗಳಲ್ಲೂ ಅಂದರೆ, ಸಹಾಯಧನ, ಬಹುಮಾನ, ಸಗಟು ಖರೀದಿ ಇತ್ಯಾದಿ ತಿರಸ್ಕರಿಸಿದ್ದೇನೆ. ಅವಕಾಶ ಒದಗಿದಲ್ಲೆಲ್ಲ ಟಿಪ್ಪಣಿ, ಲೇಖನ, ಭಾಷಣಾದಿಗಳಲ್ಲಿ ಸತರ್ಕ ಖಂಡಿಸಿದ್ದೇನೆ. ಹಾಗಾಗಿ ಪ್ರತಿ ಕಳಿಸುವುದಕ್ಕೂ ಮೊದಲು ನನ್ನ ನಿಬಂಧನೆಗಳನ್ನು ಒಡ್ಡಿದೆ. ಅದಕ್ಕೂ ಕಪುಪ್ರಾದಿಂದ ಒಪ್ಪಿಗೆ ಬಂದಾಗ, ಪುಸ್ತಕ ವ್ಯಾಪಾರಿಯ ನೆಲೆಯಲ್ಲಿ ಮುಂದುವರಿದೆ. ಇಲ್ಲಿ ಅವರು ಗುರುತಿಸಿದಂತೆ ಪುಸ್ತಕದ ಯೋಗ್ಯತೆ ಒಂದೇ ಮಾನದಂಡ. ನಾನು ಎಲ್ಲೂ ವ್ಯವಹಾರ ನೀತಿಯಲ್ಲಿ ರಾಜೀ ಮಾಡಿಕೊಳ್ಳದಿದ್ದದ್ದು ಗಮನಾರ್ಹ. ಸರಕಾರದ ಸಗಟು ಖರೀದಿ ತಮ್ಮ ಹಕ್ಕೆಂಬಂತೆ ವಾದಿಸುವವರು ೧೯೯೬-೯೭ರ ಆರ್ಥಿಕ ವರ್ಷದ ಕೊನೆಯಲ್ಲಿ ಧ್ವನಿ ಏರಿಸಿದರು. ಕೆಲವರು ನನ್ನ ಬೆಂಬಲ ಕೋರಿಯೂ ಬಂದಿದ್ದರು. ಅವರಿಗೆ ನನ್ನ ಸಗಟು ಖರೀದಿ ವಿರೋಧೀ ನಿಲುವನ್ನು ಸ್ಪಷ್ಟಪಡಿಸಿದ್ದಲ್ಲದೆ, ಅದರ ಮೇಲೂ ನನಗೆ ಸಂದ ವಿಶೇಷ ಖರೀದಿಯ ವಿವರವನ್ನೂ ಕೊಟ್ಟಿದ್ದೇನೆ. ಸಹಜವಾಗಿ ಪ್ರತಿಭಟನಾ ಸಭೆಗೆ ಯಾರೂ ನನ್ನನ್ನು ನಿರೀಕ್ಷಿಸಲಿಲ್ಲ, ನಾನೂ ಭಾಗವಹಿಸಲಿಲ್ಲ. ಆದರೆ ಲೇಖನಸತ್ತ್ವದೊಡನೆ ಪ್ರಕಾಶನದ ಜವಾಬ್ದಾರಿಯನ್ನೂ ವಹಿಸಿಕೊಂಡ ಇತರ ಹಲವರು, ಉಭಯಸಂಕಟದಲ್ಲೇ ಪ್ರತಿಭಟನೆಗೆ ಧ್ವನಿ ಸೇರಿಸಿದರು. ಅವರಲ್ಲಿ ಈ ಮಹಿಳಾ ಸಾಹಿತಿ ಒಬ್ಬರು. ಇವರು ತನ್ನ ಬರವಣಿಗೆಗಳನ್ನು ತಾನೇ ಪ್ರಕಟಿಸುತ್ತಾರೆ. ಇವರು ಪ್ರತಿಭಟನೆಗೆ ಸೇರಿದ ಮಾತ್ರಕ್ಕೆ ವೈಯಕ್ತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಯಬಾರದು. ಬಹುಶಃ ಹಾಗಾಗಿ ಕಪುಪ್ರಾ ಅಧ್ಯಕ್ಷರು ಇವರಿಗೆ ನೇರ ಸ್ಪಷ್ಟೀಕರಣ ಕಳಿಸಿದ್ದಾರೆ, ತಪ್ಪಲ್ಲ. ಹಾಗೆಂದು ಪ್ರತಿಭಟನಾ ಭಾಗಿಗಳೆಲ್ಲರೂ ಕಪುಪ್ರಾ ಅಧ್ಯಕ್ಷರಿಂದ ವೈಯಕ್ತಿಕ ಸಮಜಾಯಿಷಿ ಪಡೆಯಲು ಅರ್ಹರು ಎಂದು ಭಾವಿಸುವುದು ತಪ್ಪಾಗುತ್ತದೆ. ಅತ್ತ ಸಾಹಿತ್ಯಿಯೂ ಪುಸ್ತಕೋದ್ಯಮಿಯೂ ಅಲ್ಲದ ಮತ್ತು ಕೇವಲ ಅನೌಪಚಾರಿಕ ಪ್ರತಿಭಟನಾ ಕೂಟದ ಅಧ್ಯಕ್ಷರಿಗೂ ಸಮಜಾಯಿಷಿ ಬರಬೇಕಿತ್ತು, ಅವರಷ್ಟೇ `ಹೋರಾಟ’ದ ಸೋಲು ಗೆಲವುಗಳಿಗೆ ಬಾಯಿಯಾಗಬೇಕು ಎಂಬ ನಿಲುವು ತೀರಾ ಹಾಸ್ಯಾಸ್ಪದ.”

ನನ್ನ ಸ್ಪಷ್ಟೀಕರಣಕ್ಕೆ ಆ ವ್ಯಕ್ತಿ ಮರುಪತ್ರಲೇಖನದಲ್ಲಿ ನೇರ ನನ್ನನ್ನೇ ಗುರಿಯಾಗಿಸಿದರು. ಅದರ ಪೂರ್ಣ ಪಾಠ: “ಅಶೋಕರು ಸ್ಪಷ್ಟೀಕರಣದಲ್ಲಿ `ಸರಕಾರದ ಸಗಟು ಖರೀದಿ ತಮ್ಮ ಹಕ್ಕೆಂಬಂತೆ ವಾದಿಸುವವರು’ ಎಂಬ ಮಾತನ್ನು ಗಮನಿಸಿದರೆ ಧ್ವನಿ ಏರಿಸಿದವರಿಗೆ ನಿಜವಾಗಿ ಹಕ್ಕು ಇರಲಿಲ್ಲ ಎಂಬ ಅರ್ಥ ಸ್ಪಷ್ಟವಾಗುತ್ತದೆ. ಹಾಗಾದರೆ ಪುಸ್ತಕ ಸಗಟು ಖರೀದಿಯ ಸೌಲಭ್ಯ ಪಡೆಯುವ ಹಕ್ಕು ಯಾರ್ಯಾರಿಗಿದೆ ಎಂಬುದನ್ನು ಯಾರೇ ಆಗಲಿ ತಿಳಿಸಿದರೆ ತುಂಬ ಉಪಕಾರ. ಮುಂದಿನ ಸಗಟು ಖರೀದಿಯ ಸಂದರ್ಭದಲ್ಲಿ ನಮ್ಮಂಥ ಸಾಮಾನ್ಯ ಲೇಖಕರು ಯಾವ ಗೊಂದಲಗಳಿಗೂ ಕಾರಣವಾಗದೆ ತಮ್ಮ ಇತಿಮಿತಿಯೊಳಗೇ ವ್ಯವಹರಿಸಲು ಅನುಕೂಲವಾಗುವುದು ಅಲ್ಲವೇ?”

ಅದಕ್ಕೆ ಪ್ರತಿಕ್ರಿಯೆಯಾಗಿ ೫-೮-೧೯೯೭ರಂದು ಮತ್ತೆ ಪತ್ರಿಕೆಯಲ್ಲೇ ಪ್ರಕಟವಾದ ನನ್ನ ಪತ್ರ: “ಸರಕಾರ ಎನ್ನುವುದು ಕೋಟ್ಯಂತರ ಜನರನ್ನು ಅದಕ್ಕೂ ಮಿಕ್ಕ ಆಸಕ್ತಿಗಳನ್ನು ಒಂದು ಆರೋಗ್ಯಪೂರ್ಣ ಕಟ್ಟಿನಲ್ಲಿ ಉಳಿಸಿ, ಬೆಳೆಯಲು ಅವಕಾಶ ಕಲ್ಪಿಸುವ ವ್ಯವಸ್ಥೆ. ಇದು ಆಡಳಿತದ ಅನುಕೂಲಕ್ಕಾಗಿ ಆಹಾರ, ಆರೋಗ್ಯ, ವಸತಿ, ಉದ್ಯೋಗ, ಸಾರಿಗೆ ಎಂಬಿತ್ಯಾದಿಗಳಂತೆ ವಿದ್ಯೆ/ಭಾಷೆಯನ್ನೂ ಮೂಲಧಾತುವಾಗಿ ಗುರುತಿಸಿ ಪೋಷಿಸುವ ಸಂಸ್ಥೆ. ಇದರ ಮಹತ್ತಿನ ತೀರ್ಮಾನಗಳನ್ನು ಪ್ರಶ್ನಿಸುವ ದೊಡ್ಡ ಹಕ್ಕು ಮರೆತ ಪ್ರಜಾಪ್ರಭುಗಳು ಕೇವಲ ಒಂದು ಆದೇಶ ಬರಲಿಲ್ಲವೆಂದು ಬೊಬ್ಬಿಡುವುದನ್ನಷ್ಟೇ ನಾನು ಗೇಲಿಮಾಡಿದ್ದು. ಸಗಟು ಖರೀದಿ ಯಾಕೆ? ಕನ್ನಡ ಪುಸ್ತಕ ಪ್ರಾಧಿಕಾರ ಬೇಕೇ? ಸರಕಾರೀ ಪುಸ್ತಕೋದ್ಯಮ ಸರಿಯೇ? ಪುಸ್ತಕೋದ್ಯಮದ ಬಗ್ಗೆ ವಿಶಾಲ ದೃಷ್ಟಿ ಹರಿಸಿ ನೋಡಿ. ಇದು ಲೇಖಕ ಮತ್ತು ಓದುಗ ಅಥವಾ ಇನ್ನೂ ಹಿಂದಿನ ಸ್ಥಿತಿಯನ್ನು ನೆನೆಸುವುದಾದಲ್ಲಿ ಕೇವಲ ಶ್ರಾವಕ, ಅಪರೂಪಕ್ಕೆ ಪ್ರತಿಕಾರ ಎಂಬಲ್ಲಿಂದ ತೊಡಗಿ ಬೆಳೆ ಬೆಳೆಯುತ್ತ ಹಲವು ಪೂರ್ಣಾವಧಿಯ ಉಪವೃತ್ತಿಗಳನ್ನು, ಅಂದರೆ ಮುದ್ರಣ, ಪ್ರಕಾಶನ, ಮಾರಾಟ, ಗ್ರಂಥಾಲಯ ಇತ್ಯಾದಿಗಳನ್ನು ಒಳಗೊಂಡು ಪೋಷಿಸಿತು. ಆದರೂ ನಿಜ ಲೇಖಕನ ಪರಮಗುರಿ ಓದುಗನೇ ಆಗಿದ್ದ. ಆಗ ಬಂತು – ವ್ಯಕ್ತಿಗಳನ್ನು ತಿರಸ್ಕರಿಸಿ ಓಟು ಬ್ಯಾಂಕುಗಳನ್ನು ಸಂಘಟಿಸುವ ಪುಡಾರೀಕರಣ. ಇದು ಸಮಾಜದ ಎಲ್ಲ ಅಂಗಗಳನ್ನು ಕೆಡಿಸಿದಂತೆ ಪುಸ್ತಕೋದ್ಯಮಕ್ಕೂ ವ್ಯಾಪಿಸಿತು. ಇಂದು ಮುದ್ರಣಕ್ಕೆ ಸಹಾಯಯಾಚನೆ, ಪುರಸ್ಕಾರಕ್ಕೆ ಪುಸಲಾವಣೆ, ಪ್ರಾತಿನಿಧ್ಯಕ್ಕೆ ಹೋರಾಟ, ಪಠ್ಯ ಆಯ್ಕೆಗೆ ಪಿಟೀಲು, ಸಗಟು ಖರೀದಿಗೆ ಹಪಹಪಿಕೆ ಎಲ್ಲವೂ ಸಂಸ್ಥೀಕರಣಗೊಂಡಿವೆ; ಮರಿಲೇಖಕನಿಂದ ಮಹಾಕವಿಯವರೆಗೆ ಭೀಕರ ಅಂಟು ಜಾಡ್ಯವೇ ಆಗಿದೆ. ಸಹಜವಾಗಿ ಲೇಖನ ಒಂದು ಅಭಿವ್ಯಕ್ತಿ ಎಂಬುದರ ಬದಲಿಗೆ ವಾಣಿಜ್ಯ ವ್ಯವಹಾರವಾಗಿದೆ. ಪುಸ್ತಕ ಕೇವಲ `ಮಾಲು’ ಆಗಿ, `ಓದುಗ’ ಬರಿಯ ‘ಕೊಳ್ಳುಗ’ ಆಗಿದ್ದಾನೆ.

“ಜಿಲ್ಲೆಯಲ್ಲೇ ಅಬ್ಬಬ್ಬಾ ಅಂದರೆ ಒಮ್ಮೆಗೆ ಒಂದು ಸಾವಿರ ಪ್ರತಿಯಷ್ಟೇ ಬಿಡುಗಡೆಗೊಳ್ಳುವ ಒಂದು ಕಿರುಪುಸ್ತಕದ ಉದಾಹರಣೆ ತೆಗೆದುಕೊಳ್ಳಿ. ನಾಲ್ಕೈದು ಕೋಟಿ ಕನ್ನಡಿಗರ ಮಾತು ಬಿಟ್ಟು, ಜಿಲ್ಲೆಯೊಳಗಿನ ಸಾವಿರಕ್ಕೂ ಮಿಕ್ಕ ಸಂಖ್ಯೆಯ ಎಲ್ಲ ವಿದ್ಯಾಸಂಸ್ಥೆಗಳು ಇದರತ್ತ ಗಮನಕೊಟ್ಟರೂ ಸಾಕು. ಈ ವಲಯದ ಸಾರ್ವಜನಿಕರು ತಮ್ಮ ಸಹಜ ಓಡಾಟದಲ್ಲೇ ಇದನ್ನು ನೋಡಿ, ಕೊಂಡರೂ ಆಯ್ತು; ಸಾವಿರ ಪ್ರತಿ ಒಂದು ಲೆಕ್ಕವೇ ಅಲ್ಲ. ಪುಸ್ತಕೋದ್ಯಮದ ಸರಕಾರೀಕರಣಕ್ಕೆ ಮುನ್ನ ಈ ವ್ಯವಸ್ಥೆ ಈ ಜಿಲ್ಲೆಯಲ್ಲಿ ವಿಕಾಸದ ಹಂತದಲ್ಲಿತ್ತು. ಇಂದಿನ ಹಲವು ದೊಡ್ಡ ಪಠ್ಯಪುಸ್ತಕ ಮತ್ತು ಲೇಖನ ಸಾಮಾಗ್ರಿ ಮಾರಾಟಗಾರರು (ಸ್ಕೂಲ್ ಬುಕ್ ಕಂ., ಇಂಡಿಯನ್ ಇಂಡಸ್ಟ್ರಿಯಲ್ಸ್ ಏಜೆನ್ಸೀಸ್), ಎಷ್ಟೋ ಪತ್ರಿಕಾ ವಿತರಣೆಗಾರರು (ಪಾಪ್ಯುಲರ್ ನ್ಯೂಸ್ ಏಜನ್ಸೀಸ್, ಅಸಾ-ಮಾನ್ಯ ವೆಂಕಟರಾವ್ – ಇವರ ಹುಟ್ಟೂರಿನ ಹೆಸರು `ಮಾನ್ಯ’) ಅಂದು ಒಳ್ಳೆಯ ಪುಸ್ತಕ ವ್ಯಾಪಾರಿಗಳೂ ಆಗಿದ್ದರು. ಹಳ್ಳಿ ಮೂಲೆಯ ಉತ್ಸವಗಳ ನೆಪ ಹಿಡಿದು ಪುಸ್ತಕ ಹರಡಿ ಮಾರುವವರ ದೊಡ್ಡ ಹಿಂಡೇ ಇತ್ತು. ಅವರಲ್ಲಿ ದಿ| ಐತಪ್ಪ ಶೆಟ್ಟಿ ಎಂಬವರು ಸಣ್ಣ ಪ್ರಕಾಶನವನ್ನೂ ನಡೆಸಿದ್ದರು. ದಿ| ಚಂದ್ರರಾಜಸೆಟ್ಟಿ ಸಿದ್ಧಕಟ್ಟೆಯವರು `ಬರಹಗಾರರ ಬಳಗ’ದಂಥ ಬೃಹತ್ ಲೇಖಕ ಪರಿಚಯ ಗ್ರಂಥವನ್ನೇ ಸಂಪಾದಿಸಿದ್ದು ತಿಳಿಯದವರುಂಟೇ? ಇಂಥ ಬಹುವ್ಯಾಪೀ ಹಕ್ಕಿಗೆ ವಿಮುಖರಾಗಿ ತೀರಾ ಪ್ರಾಥಮಿಕ ಹಕ್ಕಿಗೆ ಸುಮುಖರಾಗುವುದು ಆನಂದವೇ?”

** ** ** **

ಮೇಲಿನ ಪ್ರಬಂಧ ಕನಿಷ್ಠ ಇಪ್ಪತ್ತು ವರ್ಷ ಹಳತು. ಇಂದು ಕನ್ನಡ ಪುಸ್ತಕ ಪ್ರಾಧಿಕಾರವೇನು ಪುಸ್ತಕೋದ್ಯಮದಿಂದಲೂ ಕಳಚಿಕೊಂಡ ನಿರ್ಮಮ ಸ್ಥಿತಿಯಲ್ಲಿ ಕೆಲವು ಮಾತುಗಳನ್ನು ಸೇರಿಸುವುದು ಅಗತ್ಯವೆಂದೇ ಭಾವಿಸುತ್ತೇನೆ. ಇಲ್ಲಿ ಅತ್ರಿ ಪುಸ್ತಕ ಪ್ರಕಾಶನವನ್ನು ಮುಚ್ಚಿದಂದು ಬರೆದ ಲೇಖನ, ಒಟ್ಟಾರೆ ಅತ್ರಿ ಬುಕ್ ಸೆಂಟರನ್ನೇ ಬರ್ಖಾಸ್ತುಗೊಳಿಸಿದಂದು ಬರೆದ ಲೇಖನಗಳಿಗೆ ದಯವಿಟ್ಟು ಮರು ಓದು ಕೊಟ್ಟು ನೋಡಿ.

ಕನ್ನಡದ ಸತ್ವವನ್ನು ಪುಸ್ತಕೋದ್ಯಮದಲ್ಲಿ ಸ್ಥಾಪಿಸಿದ, ಬೆಳೆಸಿದ ಪ್ರಕಾಶನ ಸಂಸ್ಥೆಗಳಲ್ಲಿ ಬಹುತೇಕ ಇಂದು ನಿರ್ವಾಣಹೊಂದಿವೆ ಅಥವಾ ನೀರ್ವೀರ್ಯಗೊಂಡಿವೆ. ಕನ್ನಡ ಪುಸ್ತಕ ಪ್ರಾಧಿಕಾರ ನನ್ನ ಸ್ಪಷ್ಟ ನಿರೀಕ್ಷೆಯಂತೇ ಯಾವುದೇ ಹೆಚ್ಚುಗಾರಿಕೆಯಿಲ್ಲದೆ, ಸಾರ್ವಜನಿಕ ವೆಚ್ಚಕ್ಕೆ ಮತ್ತೊಂದೇ ಹೊರೆಯಾಗಿ ಉಳಿದಿದೆ. ಪುಡಾರಿಗಳ ತುಷ್ಟೀಕರಣದ ಮಹಾಜಾಲದಲ್ಲಿ ಇನ್ನೊಂದೇ ದೂಳು ಹಿಡಿದ ನಿಸ್ಸಾರ ಗಂಟಾಗಿ ಬಿದ್ದಿದೆ.

(ಅನಿಯತವಾಗಿ ಮುಂದುವರಿಯಲಿದೆ)