`ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ
ಅಧ್ಯಾಯ ಹನ್ನೊಂದು

[ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಧೀರರು ಹೊಸ ಹಾದಿ ತುಳಿದು ವಿಕ್ರಮಾಭಿಮುಖರಾಗುತ್ತಾರೆ. ಅವರ ನಡವಳಿಕೆಗಳು ಇತರರಿಗೆ ಅನುಸರಣೀಯ ನಿಯಮಗಳಾಗುತ್ತವೆ. ಇಲ್ಲಿಯ ಸೂತ್ರ: ಪ್ರೀತಿ – ನೀತಿ ತಲದಲ್ಲಿ ಧೈರ್ಯ ಮತ್ತು ಪುರೋಗಮನ. ಆ ಗುಣಗಳಿಲ್ಲದವರು ಆ ಧೀರರ ಸ್ಥಾನಗಳಿಗೆ ಬಂದಾಗ ನಿಯಮಗಳ ದಾಸರಾಗುತ್ತಾರೆ – ಮಂತ್ರ ಮರೆತು ತಂತ್ರ ಲೀನರಾಗುವ ಯಾಂತ್ರಿಕರಂತೆ ಇಂಥ ಪಲಾಯನ ಶೂರರಿಗೆ ಮೊದಲ ತಂಗುದಾಣ ನಿಯಮಗಳ ಗೋಜಲು ಮತ್ತು ಇದಕ್ಕೆ ಖುದ್ದು ಅವರ ದೇಣಿಗೆ. ಸರಕಾರದ ಜಡ ಯಂತ್ರವನ್ನು ಝಾಡಿಸಿ ಋಜುಕಾರ್ಯಮಗ್ನವಾಗಿಸಲು ಬೇಕಿಂದು ನಮಗೊಬ್ಬ `ಬೃಹನ್ನಳೆ’, ಒಬ್ಬ `ಕೃಷ್ಣ’. ಆಗ ಎಂಥ `ಉತ್ತರಕುಮಾರ’ನೂ ಯುದ್ಧಗಾಮಿ ಆಗುತ್ತಾನೆ, ಎಂಥ `ಅರ್ಜುನ’ನೂ ಶಸ್ತ್ರಧಾರಿ ಆಗುತ್ತಾನೆ. `ಪಂಗುಂ ಲಂಘಯತೇ ಗಿರಿಂ.] [೧೯೯೯ರಲ್ಲಿ ನಾನೇ ಬರೆದ ಪೀಠಿಕೆ: ಸಾಮಾಜಿಕ ಬಾಧ್ಯತೆ ಇರುವ ಮೈಸೂರು ವಿಶ್ವವಿದ್ಯಾನಿಲಯದ ಪುಸ್ತಕ ಪ್ರಕಾಶನ ಮತ್ತು ಪ್ರಕಟಣೆಗಳ ಏಕೈಕ ಅಂಗವಾದ ಪ್ರಸಾರಾಂಗ ತೀವ್ರ ಕರ್ತವ್ಯಚ್ಯುತಿ ಎಸಗುತ್ತಿದೆ. ಅದನ್ನು ಸರಿದಾರಿಗೆ ನಿರ್ದೇಶಿಸಬೇಕಾದ ಕುಲಸಚಿವ, ಕುಲಪತಿ, ಕುಲಾಧಿಪತಿ ಹಾಗೂ ವಿದ್ಯಾ ಸಚಿವರುಗಳೆಲ್ಲ ನನ್ನ ಮನವಿಗಳಿಗೆ ನಿಷ್ಕ್ರಿಯರಾಗಿಯೇ ಉಳಿದರು. ಈ ಹೋರಾಟವನ್ನು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯಾಗಿ ನ್ಯಾಯಾಲಯವಾದರೂ ಸ್ವೀಕರಿಸೀತೇ ಎಂಬ ಉದ್ದೇಶದಿಂದ ೧೯೯೭ರ ಮಧ್ಯೆ, ಹೀಗೊಂದು ಲೇಖನ ಸಂಕಲಿಸಿದೆ]

ಸ್ವಪರಿಚಯ: ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವೀಧರ. ಸ್ವೋದ್ಯೋಗ ಬಯಸಿ ೧೯೭೪ರಲ್ಲಿ ಪುಸ್ತಕ ವ್ಯಾಪಾರಿಯಾದೆ. ೧೯೭೫ರಲ್ಲಿ ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರ್ ಹೆಸರಿನ ಪುಸ್ತಕ ಮಳಿಗೆಯನ್ನೇ ತೆರೆದು, ನಡೆಸಿಕೊಂಡು ಬಂದಿದ್ದ್ಡೇನೆ. ಸುಲಭ ವ್ಯಾಪಾರೀ ಸಾಮಗ್ರಿಗಳನ್ನು ಬಿಟ್ಟು, ಸಾರ್ವಜನಿಕ ಜ್ಞಾನಾಭಿವೃದ್ಧಿಗೆ ಸಹಕಾರಿಯಾಗುವಂತೆ ಅಂಗಡಿಯನ್ನು ಬೆಳೆಸಿದ್ದೇನೆ. ವ್ಯಾವಹಾರಿಕ ನ್ಯಾಯ ಪರಿಪಾಲನೆಯಲ್ಲಿ ಎಂದೂ ಎರಡನೆಯವನಾಗದ ಎಚ್ಚರ ವಹಿಸಿದ್ದೇನೆ. ಇದೇ ಮಾನದಂಡದಲ್ಲಿ ನನ್ನ ಪುಸ್ತಕ ಪ್ರಕಾಶಕ, ವಿತರಕರಿಂದಲೂ ಸೇವೆಯನ್ನು ನಿರೀಕ್ಷಿಸಿದ್ದೇನೆ. ವಿರೋಧ ಬಂದಲ್ಲಿ ಪ್ರಜ್ಞಾವಂತ ನಾಗರಿಕನ ನೆಲೆಯಲ್ಲಿ, ನ್ಯಾಯದ ಚೌಕಟ್ಟಿನಲ್ಲಿ ಹೋರಾಡಿದ್ದೇನೆ. ಅಂಥ ಒಂದು ಹೋರಾಟವನ್ನಿಲ್ಲಿ ನಿರೂಪಿಸುತ್ತಿದ್ದೇನೆ.

ಹಿನ್ನೆಲೆ: ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ತನ್ನ ವಠಾರದೊಳಗೆ ಬಿಡಿ ಪುಸ್ತಕ ವ್ಯಾಪಾರ ನಡೆಸಿದರೂ ಆರಂಭದಿಂದ ಮುಖ್ಯ ಪುಸ್ತಕ ವಿತರಣೆಯನ್ನು ದೇಶಾದ್ಯಂತವಿರುವ ಪುಸ್ತಕ ವ್ಯಾಪಾರಿಗಳ ಮೂಲಕವೇ ಮಾಡುತ್ತ ಬಂದಿದೆ. ಅದಕ್ಕೆ ಅನುಕೂಲವಾಗುಂತೆ ವ್ಯಾಪಾರೀ ನಿಯಮಾವಳಿಯನ್ನು ಒಳಗೊಂಡ ಪುಸ್ತಕ ಕ್ರಯಪಟ್ಟಿಯನ್ನು ಕಾಲಕಾಲಕ್ಕೆ ಪರಿಷ್ಕರಿಸಿ ಪ್ರಕಟಿಸುತ್ತಲೂ ಬಂದಿದೆ. ವ್ಯಾಪಾರಿಗಳು ತಮ್ಮ ಬೇಡಿಕೆಯೊಡನೆ ಸಾಗಣೆ ಮತ್ತು ಬ್ಯಾಂಕ್ ವಿವರ ತಿಳಿಸಿದರೆ ಸಾಕಿತ್ತು. ವಾರ, ಹತ್ತು ದಿನಗಳ ಅಂತರದಲ್ಲಿ ಪುಸ್ತಕ ರವಾನೆಯಾಗುತ್ತಿತ್ತು. ಪ್ರಸಾರಾಂಗ ವಿಶೇಷ ಸಂದರ್ಭಗಳಲ್ಲಿ (ರಾಜ್ಯೋತ್ಸವ, ಸಾಹಿತ್ಯಸಮ್ಮೇಳನ ಇತ್ಯಾದಿ) ಹೆಚ್ಚುವರಿ ರಿಯಾಯಿತಿ ಘೋಷಿಸಿಕೊಂಡರೆ, ವ್ಯಾಪಾರಿಗಳಿಗೆ ನೇರ ಅಲ್ಲದಿದ್ದರೂ ಪತ್ರಿಕಾ ಪ್ರಕಟಣೆಗಳ ಮೂಲಕ ಸುದ್ದಿ ಮುಟ್ಟಿಸಿ ಸಮಾನ ಅವಕಾಶ ಕಲ್ಪಿಸುತ್ತಿತ್ತು. ಸುಮಾರು ೧೯೮೬ರ ತನಕವೂ ಆ ನಡಾವಳಿಗೆ ವಿಶೇಷ ಬದಲಾವಣೆ ಬಂದಿರಲಿಲ್ಲ. ಆಗ ಆಡಳಿತದಲ್ಲಿಯ ಅವ್ಯವಹಾರದ ಆರೋಪಗಳು ವಿಪರೀತವಾಗಿ ಪ್ರಸಾರಾಂಗ ಕೆಲವು ಕಾಲ ವಿಚಾರಣಾಧೀನವೆಂದು ವ್ಯವಹಾರ ಸ್ಥಗಿತಗೊಳಿಸಿತ್ತು. ಪುನರಾರಂಭದೊಡನೆ ಇದು ವ್ಯಾಪಾರಿಗಳಿಗೆ ಆಜೀವ ನೋಂದಣಿ ಶುಲ್ಕವನ್ನು ವಿಧಿಸಿತು. ನಾನೂ ಅಂಗಡಿಯನ್ನು ನೋಂದಾಯಿಸಿಕೊಂಡೆ. ೧೯೯೦ರ ಸುಮಾರಿಗೆ ಪ್ರಸಾರಾಂಗದ ಅವ್ಯವಸ್ಥೆ ಮತ್ತೊಮ್ಮೆ ಪ್ರಕೋಪಿಸಿದ್ದು ಇಂದಿನವರೆಗೂ ಶಾಂತವಾಗಿಯೇ ಇಲ್ಲ. (೧೯೯೭) ಸ್ನಾತಕೋತ್ತರ ಕನ್ನಡ ವಿಭಾಗದ (ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ) ಅಧ್ಯಾಪಕರಲ್ಲೊಬ್ಬರು ಹಂಗಾಮಿಯಾಗಿ ಪ್ರಸಾರಾಂಗ ನಡೆಸುತ್ತಿರುವುದು ತೀರ ಅತೃಪ್ತಿಕರವಾಗಿದೆ. ಇದು ಕನಿಷ್ಠ ವಿದ್ಯಾರ್ಥಿಗಳ ಅಗತ್ಯಗಳ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇದನ್ನು ನನ್ನ ವ್ಯವಹಾರದ ಮಿತಿಯಲ್ಲೇ ಪಳಗಿಸಿ, ಅದರ ಕರ್ತವ್ಯ ನಿಭಾವಣೆಗೆ ಬಗ್ಗಿಸಬೇಕೆಂದು ಪಟ್ಟು ಹಿಡಿದಿದ್ದೇನೆ. ಯಾರಿಗೂ ಸರಿಯಾಗಿ ಒದಗದ ಒಂದು ಪ್ರಕಾಶನ ಸಂಸ್ಥೆಯ ಪುಸ್ತಕಗಳು ನನ್ನ ಅಂಗಡಿಗೂ ಬಾರದಿದ್ದರೆ ವ್ಯಾವಹಾರಿಕವಾಗಿ ನಾನು ಭಾರೀ ಏನೂ ಕಳೆದುಕೊಳ್ಳುವುದಿಲ್ಲ. ಆದರಿದು ಸಾರ್ವಜನಿಕ ಹಿತಕ್ಕಾಗಿ ಆಗಬೇಕಾದ ಕೆಲಸ ಎಂಬ ನಿಲುವಿನೊಡನೆ ನಡೆಸಿದ ಪತ್ರ ವ್ಯವಹಾರಗಳ ಮೂಲಕ ಸಮಸ್ಯೆಯನ್ನು ನಿರೂಪಿಸುತ್ತೇನೆ.

ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ತಪ್ಪುಗಳು: ದಿನಾಂಕ ೧೩-೨-೧೯೯೫ರಂದು ಪ್ರಸಾರಾಂಗಕ್ಕೆ ನಾನು ಸ್ವಲ್ಪ ತುರ್ತಿನ ಪುಸ್ತಕ ಬೇಡಿಕೆ ಕಳಿಸಿದೆ. ೯-೩-೧೯೯೫ರ ತಾರೀಕು ಹೊತ್ತ ಪ್ರಸಾರಾಂಗದ ಉತ್ತರದಲ್ಲಿ, “ದಾಸ್ತಾನು ಪರಿಶೀಲನೆ ನಡೆದಿರುವುದರಿಂದ ತಾತ್ಕಾಲಿಕವಾಗಿ ಮಾರಾಟವನ್ನು ನಿಲ್ಲಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ ಪಡೆಯಬಹುದು” ಎಂದು ತಿಳಿಯಿತು.

ಏಪ್ರಿಲಿನಲ್ಲಿ ಏನೂ ಬರಲಿಲ್ಲ. ಮೇ ತಿಂಗಳೂ ಹಾಗೇ ಸರಿಯುವುದನ್ನು ಕಂಡು ೨೩-೫-೧೯೯೫ರಂದು ನೆನಪಿನೋಲೆ ಬರೆದೆ. ಪ್ರತಿಕ್ರಿಯೆ ಕಾಯುತ್ತ ನಲ್ವತ್ತು ದಿನಗಳೇ ಕಳೆದುಹೋದುವು. ಎಳೆಯ ಮಂಗಳೂರು ವಿಶ್ವವಿದ್ಯಾಲಯ ತನ್ನ ಹಲವು ಪಠ್ಯ ಪುಸ್ತಕಗಳಿಗೆ ಅಧಿಕೃತ ಒಪ್ಪಂದದ ಮೇರೆಗೆ ಮೈಸೂರನ್ನು ಅವಲಂಬಿಸಿತ್ತು. ಹಾಗಾಗಿ ೧೯೯೫-೯೬ರ ಪಠ್ಯ ಬೇಡಿಕೆ ಸುರುವಾಯ್ತು. ಹಾಗಾಗಿ ೧೩-೭-೧೯೯೫ರಂದು ಇನ್ನೊಂದು ನೆನಪಿನೋಲೆ ಬರೆಯುತ್ತ ಕೆಲವು ಹೊಸ ಬೇಡಿಕೆಗಳನ್ನೂ ಸೇರಿಸಿದೆ. ಪ್ರತಿಕ್ರಿಯೆ ಬರಲಿಲ್ಲ. ವಿದ್ಯಾರ್ಥಿ ಬೇಡಿಕೆಯ ಒತ್ತಡ ಏರುತ್ತ ಹೋಯಿತು. ೮-೮-೧೯೯೫ರಂದು ಮತ್ತೊಂದು ನೆನಪಿನೋಲೆ ಬರೆದೆ. ಅದರ ಯಥಾಪ್ರತಿಯನ್ನು ಕುಲಪತಿಗಳಿಗೂ ಕಳಿಸಿದೆ. ಅದರಲ್ಲಿ ಪುಸ್ತಕ ಪಡೆಯುವ ನನ್ನ ಹಕ್ಕನ್ನು ನೆನಪಿಸಿ ಕಾನೂನು ಕ್ರಮದ ಬೆದರಿಕೆಯನ್ನು ಹಾಕಿದೆ. ಆಗ ಪ್ರತಿಕ್ರಿಯೆಯಾಗಿ ನಿರ್ದೇಶಕರ ಸಹಿ ಹೊತ್ತ (೨೪-೮-೧೯೯೫) ಪತ್ರ ಬಂತು. ಅದರಲ್ಲಿ “ಪ್ರಸಾರಾಂಗ ತಾಂತ್ರಿಕ ಕಾರಣಗಳಿಗಾಗಿ ಮುಚ್ಚಿದೆ. ಅದು ತೆರೆದ ತಕ್ಷಣವೇ ತಿಳಿಸುತ್ತೇವೆ” ಎಂಬ ಆಶ್ವಾಸನೆ ಮಾತ್ರ ಸಿಕ್ಕಿತು. ಮುಂದೆ ದೀರ್ಘ ಮೌನ. ನಾನು ಮೈಸೂರಿನ ನನ್ನ ಪರಿಚಿತರ ಮೂಲಕ ಪ್ರಸಾರಾಂಗದ ಪುನರಾರಂಭದ ಕುರಿತು ವಿಚಾರಿಸಿಕೊಳ್ಳುತ್ತಲೇ ಇದ್ದೆ.

೧೯೯೬ರ ಫೆಬ್ರುವರಿಯಲ್ಲಿ ಹೊಸಬರೊಬ್ಬರು ಪ್ರಸಾರಾಂಗದ ನಿರ್ದೇಶಕತ್ವ ವಹಿಸಿಕೊಂಡ ಸುದ್ದಿ ಸಿಕ್ಕಿತು. ಇವರು ನನಗೆ ಪೂರ್ವಪರಿಚಿತರೇ (ಅರವಿಂದ ಮಾಲಗತ್ತಿ) ಇದ್ದುದರಿಂದ ೧೪-೨-೧೯೯೬ರಂದು ನಾನಿವರನ್ನು ಅಭಿನಂದಿಸಿ ಒಂದು ಕಾರ್ಡು ಬರೆದೆ. ಅದರಲ್ಲೇ “ಪ್ರಸಾರಾಂಗದ ಪುನರುತ್ಥಾನ ಮಾಡಿ” ಎಂದು ಸೇರಿಸಿ, ನನ್ನ ಹಳೇ ಬೇಡಿಕೆಯನ್ನೂ ನೆನಪಿಸಿದೆ. ೨೮-೨-೧೯೯೬ರ ಪ್ರಸಾರಾಂಗದ ಪತ್ರ ಈ ಮಹಾಶಯರ ಸಹಿ ಹೊತ್ತೇ ಬಂತು. ಆದರೆ ಶುದ್ಧ ವ್ಯಾವಾಹಾರಿಕವಾಗಿತ್ತು. “ನಿಮ್ಮ ಬೇಡಿಕೆ ಪಟ್ಟಿ ಬಹಳ ಹಿಂದಿನದು ಆಗಿರುವುದರಿಂದ ಹೊಸ ಬೇಡಿಕೆ ಕಳಿಸಿ. ತಕ್ಷಣವೇ ಸರಬರಾಜು ಮಾಡುತ್ತೇವೆ.” ಸಂದ ಒಂದೂವರೆ ವರ್ಷದಲ್ಲಿ ಪ್ರಸಾರಾಂಗದ ಲಭ್ಯ ಪುಸ್ತಕಗಳ ಸ್ಥಿತಿ ಹೇಳುವ ಪಟ್ಟಿಯನ್ನೇನೂ ಅದಕ್ಕೆ ಲಗತ್ತಿಸಿರಲಿಲ್ಲ. ಸಾಲದ್ದಕ್ಕೆ ಆರ್ಥಿಕ ಮತ್ತು ವಿದ್ಯಾವರ್ಷಗಳ ಕೊನೆ ಸಮೀಪಿಸುತ್ತಿತ್ತು. ಮತ್ತೆ ನನ್ನ ಪೂರ್ವರ್ ಯೋಜನೆಯಂತೆ ಏಪ್ರಿಲ್ ಮೇ ತಿಂಗಳಲ್ಲಿ ನಾನು ಖಾಸಗಿ ಪ್ರವಾಸದಲ್ಲಿ ಇದ್ದುದರಿಂದ ಹೊಸ ಬೇಡಿಕೆ ಪಟ್ಟಿ ಕಳಿಸಲಿಲ್ಲ.

೬-೬-೧೯೯೬ರಂದು ಹೊಸ ಬೇಡಿಕೆ ಪಟ್ಟಿ ಎಂದಿನಂತೇ ಕಳಿಸಿಕೊಟ್ಟೆ. ಹತ್ತು ದಿನ ಬಿಟ್ಟು ನನ್ನ ಬೇಡಿಕೆಯ ಗತಿ ಏನಾಯ್ತೆಂದು ವಿಚಾರಿಸಲು ಮೈಸೂರಿನ ನನ್ನ ಆತ್ಮೀಯರೊಬ್ಬರಿಗೆ ಸೂಚಿಸಿದೆ. ಅವರು ಪ್ರಸಾರಾಂಗದಲ್ಲಿ ಪ್ರಶ್ನಿಸಿದಾಗ ತಿಳಿದದ್ದು ಇಷ್ಟು: “ಈಗಿನ ಹೊಸ ನಿಯಮದಂತೆ ಪ್ರತಿ ಬೇಡಿಕೆಗೂ ಬಿಲ್ ಮೊತ್ತದ ಅಂದಾಜು ೨೫% ಮುಂಗಡ ಜೊತೆಗೂಡಬೇಕು. ಪ್ರಸಾರಾಂಗ ಬಿಲ್ ಮೊತ್ತದಲ್ಲಿ ಅದನ್ನು ಹೊಂದಿಸಿ, ಬಾಕಿ ಮೊತ್ತಕ್ಕಷ್ಟೇ ದಾಖಲೆಗಳನ್ನು ಬ್ಯಾಂಕ್ಮೂಲಕ ಕಳಿಸುತ್ತದೆ.” ಇಂದಿನ ವ್ಯವಹಾರ ಸೂಕ್ಷ್ಮಗಳ ಪರಿಚಯ ಅಷ್ಟಾಗಿಲ್ಲದ ನನ್ನ ಆತ್ಮೀಯರು ಕೂಡಲೇ ತಮ್ಮ ಕೈಯಿಂದ ೫೦೦ ರೂಪಾಯಿ ನಗದನ್ನು ನನ್ನ ಬೇಡಿಕೆಗೆ ಮುಂಗಡವೆಂದು ಕೊಟ್ಟು ಆ ಸಲಕ್ಕೆ ನನಗೆ ಪುಸ್ತಕಗಳು ತಲಪುವಂತೆ ಮಾಡಿದರು. ಆದರೆ ಇದರೊಡನೆ ನನಗೆ ಹಲವು ಸಂಶಯಗಳು ಹುಟ್ಟಿಕೊಂಡವು. ಅವಕ್ಕೆ ಸಹೃದಯೀ ಉತ್ತರ ನಿರೀಕ್ಷಿಸಿ ನೇರ ನಿರ್ದೇಶಕರಿಗೇ ಹೀಗೆ ಪತ್ರ ಬರೆದೆ.

“ಮಾನ್ಯ್ರರೇ (೧೧-೮-೧೯೯೬) ಇದು ಅರೆ-ಅಧಿಕೃತ ಪತ್ರ ಎಂದು ನೀವು ಗಮನಿಸಿ, ಕೂಡಲೇ ಕಾರ್ಯಪ್ರವೃತ್ತರಾಗುತ್ತೀರಿ ಎಂದು ಭಾವಿಸುತ್ತೇನೆ. ಸುಮಾರು ಒಂದು ವರ್ಷ ಕಾಲ ಪ್ರಸಾರಾಂಗ ಏನೇನೋ ನೆಪ ಹೇಳಿ ಪುಸ್ತಕ ಸರಬರಾಜು ನಡೆಸಲಿಲ್ಲ. ನನ್ನ ೬-೬-೧೯೯೬ರ ಆದೇಶದ ಪ್ರಕಾರ ನಿಮ್ಮ ಭಾಂಗಿಬಂದಾಗ ಹಲವು ಪುಸ್ತಕಪ್ರೇಮಿಗಳು ಸಂತೋಷ ಪಟ್ಟರು. ಮುದ್ರಣದಲ್ಲಿ ೧೯೯೩ನೇ ಇಸವಿ ಕಾಣಿಸಿದರೂ ವಾಸ್ತವದಲ್ಲಿ ೧೯೯೬ರಲ್ಲಿ ಪ್ರಥಮವಾಗಿ ಸಿಕ್ಕ ಜೈಮಿನಿ ಭಾರತವನ್ನು ಮುಗಿಬಿದ್ದುಕೊಂಡರು. ಪೂರ್ಣ ಪರಿಷ್ಕೃತ ಮತ್ತು ವಿಸ್ತೃತ ಇಂಗ್ಲಿಷ್ ಕನ್ನಡ ನಿಘಂಟಿನ A-Dವರೆಗಿನ ಮೊದಲ ಸಂಪುಟವನ್ನು ಕೇವಲ ವಿಶ್ವಾಸದಿಂದ ಕೊಂಡವರು, ಕಾಲಾನುಕ್ರಮದಲ್ಲಿ `ನಿಘಂಟು ಸಮಿತಿಯೇ ಬರ್ಖಾಸ್ತುಗೊಂಡಿದೆ’ ಎಂದು ಕೇಳಿದಾಗ` ಬೇಸ್ತುಬಿದ್ದೆವು’ ಎಂದುಕೊಂಡಿದ್ದರು. ಅದಾಗಿ ಮೂರುನಾಲ್ಕು ವರ್ಷದ ಮೇಲೆ, ಈಗ ಹಿಂದಿನಂತಲ್ಲದೆ D-Lವರೆಗಿನ ಭಾಗ ಪ್ರಕಟಗೊಂಡ ವರ್ಷದ ನಮೂದಿನಂತೇ ಬಂದದ್ದು ನೋಡಿ “ಪವಾಡವೇ ಸರಿ” ಎಂದು ಹರ್ಷಾತಿರೇಕವನ್ನೇ ತೋರಿದರು. ಇದರ ನಡುವೆ ನನ್ನ ಗೋಳನ್ನು ಮರೆಯಬೇಕೇ ಎಂದು ಗೊಂದಲಗೊಳ್ಳುವಂತಾಗಿದೆ. ಆದರೆ ನಿಮಗೆ ಗೊತ್ತು…..

“ಆದಿಯಲ್ಲಿ, ಅಂದರೆ ೧೩-೨-೧೯೯೫ರಂದು ನಾನು ಪ್ರಸಾರಾಂಗಕ್ಕೊಂದು ಬೇಡಿಕೆ ಕಳಿಸಿದ್ದೆ. ನಿರ್ದೇಶಕರು `ದಾಸ್ತಾನು ಪರಿಶೀಲನೆ ನಡಿದಿದೆ, ಏಪ್ರಿಲ್ಲಿನಲ್ಲಿ ಕಳಿಸ್ತೇವೆ’ ಎಂದೇ ಉತ್ತರಿಸಿದರು. ಆದರೆ ಹಾಗಾಗಲಿಲ್ಲ. ಮೇ ಬಂತು ನೆನಪಿನೋಲೆ ಕಳಿಸಿದೆ, ಪ್ರತಿಕ್ರಿಯೆ ಇಲ್ಲ. ಜೂನ್ ಪಠ್ಯಪುಸ್ತಕ ಋತು. ಜುಲೈಯಲ್ಲಿ ಪೂರಕ ಬೇಡಿಕೆಯೊಡನೆ ಹೋದ ನನ್ನ ನೆನಪಿನೋಲೆಗೂ ಪ್ರತಿಕ್ರಿಯೆ ಶೂನ್ಯ. ಆಗಸ್ಟಿನಲ್ಲಿ ಕಟು ನೆನಪಿನೋಲೆ ನೇರ ಕುಲಪತಿಗಳಿಗೇ ಬರೆದೆ. ತಿಂಗಳ ಕೊನೆಯಲ್ಲಿ ನಿರ್ದೇಶಕರದೇ ಚುಟುಕು ಉತ್ತರ ಬಂತು. ‘ತಾಂತ್ರಿಕ ಕಾರಣಕ್ಕೆ ಮುಚ್ಚಿದೆ, ತೆರೆದ ತಕ್ಷಣವೇ ತಿಳಿಸುತ್ತೇವೆ’. ೧೯೯೬ರ ಜೂನ್ ಬಂದರೂ ಪ್ರಸಾರಾಂಗ ತೆರೆದ ಸೂಚನೆ ನನಗೆ ಬರಲೇ ಇಲ್ಲ. ಆದರೆ ಮೈಸೂರಿನಲ್ಲಿರುವ ನನ್ನ ಪರಿಚಿತರ ಮೂಲಕ ಅದು ತೆರೆದಿದೆ ಎಂಬ ಸುದ್ಧಿ ಸಿಕ್ಕಾಗ, ನಾನು ಬೇಡಿಕೆ ಕಳಿಸಿದೆ. ಸಕಾಲಕ್ಕೆ ನನ್ನ ಭಾಂಗಿ ಹೊರಡದಾಗ ಮತ್ತೆ ಅವರ ಮೊರೆಹೋದೆ. ಅವರ ವಿಚಾರಣೆಯಲ್ಲಿ ನನಗೆ ಹೊಸ ಸಂಗತಿ ತಿಳಿಯಿತು. ಪ್ರತಿ ಬೇಡಿಕೆಯೊಡನೆ ರೂಪಾಯಿ ಐದುನೂರು ಮುಂಗಡ ಕಟ್ಟಬೇಕು. ನನ್ನ ಮೇಲಿನ ವಿಶ್ವಾಸದಿಂದ ಪರಿಚಿತರು ಅಲ್ಲೇ ಮುಂಗಡ ಕೊಟ್ಟು ನಿಮ್ಮಲ್ಲಿಂದ ಭಾಂಗಿ ಹೊರಡಿಸಿದರು. ನನ್ನ ಸ್ಪಷ್ಟ ನೆನಪಿನಂತೆ ಹಿಂದಿನ ನಿರ್ದೇಶಕರ ಕಾಲದಲ್ಲೇ ಪ್ರಸಾರಾಂಗ ಮಾರಾಟಗಾರರಿಂದ ನಿಬಡ್ಡಿ ಠೇವಣಿ ಕೇಳಿತ್ತು. ನಾನು ಅದೆಷ್ಟೋ ಐವತ್ತೋ ನೂರೋ ಖಾತಾಪಾವತಿಯೇ ಆಗುವ ಡ್ರಾಫ್ಟ್ ಮೂಲಕವೇ ಕಳಿಸಿದ್ದೆ. ಆದರೆ ಅದಕ್ಕೆ ಪ್ರಸಾರಾಂಗದ ರಸೀದಿ ಬರಲೇ ಇಲ್ಲ. ಇದನ್ನೆಲ್ಲ ನನ್ನ ಮೈಸೂರು ಪರಿಚಿತರಿಗೆ ತಿಳಿಸಿ, ನಾನು ನೇರ ಬೇಡಿಕೆ ಕಳಿಸಿದ್ದೆ. ಈಗ ಠೇವಣಿಯ ಮೇಲೆ ಮುಂಗಡದ ಹೇರಿಕೆ. ಗಮನಿಸಿ, ಪ್ರಸಾರಾಂಗ ವ್ಯಾಪಾರಿಗಳಿಗೆ ಎಂದೂ ಸಾಲದ ಲೆಕ್ಕದಲ್ಲಿ ಪುಸ್ತಕ ಕೊಟ್ಟದ್ದಿಲ್ಲ. ಈಗ ಖಾಯಂ ಠೇವಣಿ, ಮುಂಗಡ ಮತ್ತು ಬ್ಯಾಂಕ್ ಮೂಲಕವೆಂದು ಒಟ್ಟಾರೆ ಮೂರು ಬಾರಿ ಬ್ಯಾಂಕ್ ವೆಚ್ಚ, ಅಷ್ಟು ಸಲ ಅಂಚೆವೆಚ್ಚ ನಮ್ಮ ಮೇಲೆ ಹೇರುವುದು ಸರಿಯೇ ಎಂದು ಪ್ರಶ್ನಿಸಿದ್ದೆ. ಇದಕ್ಕೆಲ್ಲ ಪ್ರತಿಕ್ರಿಯೆಯಾಗಿ ನಿಮ್ಮಲ್ಲಿಂದ ತಣ್ಣಗೆ ಭಾಂಗಿ ಬಂದೇ ಬಿಡುತ್ತದೆ ಎಂದು ಅಂದುಕೊಂಡಿದ್ದೆ. ಆದರೆ ಭಾಂಗಿ ಬಿಡಿ, ನಿಮ್ಮ ಪತ್ರವೂ ಬಂದಿಲ್ಲ. ಸ್ವಲ್ಪ ಅತ್ತ ನೋಡಿ…..

“ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಸಾರಾಂಗ, ಹಲವು ದಶಕಗಳ ಕಾಲ ಜನವಿರೋಧಿಯಾಗಿದ್ದದ್ದು, ಈಗ ಎಚ್.ಎಲ್ ನಾಗೇಶರ ನಿರ್ದೇಶಕತ್ವದೊಡನೆ ಒಮ್ಮೆಗೆ ತನ್ನ ಬಾಗಿಲು ಹಾರುಹೊಡೆದು `ವಿಶ್ವವಿದ್ಯೆ’ ತತ್ತ್ವವನ್ನು ಸಾರ್ಥಕಗೊಳಿಸುತ್ತಿದೆ. ನಾಗೇಶರು ಎರಡೆರಡು ಬಾರಿ ತನ್ನ ಖಾಸಗಿ ಮಂಗಳೂರು ಭೇಟಿಯ ನಡುವೆ ನನ್ನ ಪುಸ್ತಕದಂಗಡಿಗೆ ನುಗ್ಗಿ, ಪ್ರಸಾರಾಂಗದ ಪಟ್ಟಿ ಕೊಟ್ಟು `ದಯವಿಟ್ಟು ನಮ್ಮ ಪುಸ್ತಕ ತರಿಸಿಕೊಳ್ಳಿ, ಜನಕ್ಕೆ ಮುಟ್ಟಿಸಿ’ ಎಂದ ಪರಿ ಇಂದು ಅಪಮೌಲ್ಯಗೊಂಡ (ಕೀಳರ್ಥಕ್ಕೂ ಸಂದ?) ಸರಕಾರದ ಕೆಲಸ ದೇವರ ಕೆಲಸ’ ಎಂಬ ಗಾದೆ ಮಾತಿಗೆ ನಿಜ ಅರ್ಥ ಕೊಟ್ಟಿದೆ. ಹಲವು ದಶಕಗಳ ಮೇಲೆ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಸಾರಾಂಗ ಗುರುತರವಾದ ಅರಿವು ಪಡೆದಿದೆ – ಅರಿವೇ ಗುರು! ಆದರೆ ಕರ್ನಾಟಕ ವಿವಿನಿಲಯಗಳ ಮಾತೆ, ಪ್ರಚಾರ ಪುಸ್ತಕ ಮಾಲೆ, ಗೃಹ ಸರಸ್ವತಿ ಗ್ರಂಥಮಾಲೆ, ಕನ್ನಡ ಗ್ರಂಥಮಾಲೆಯಂಥ ಪೂರ್ಣ ಸಾರ್ವಜನಿಕ ಉದ್ದೇಶವನ್ನೇ ಇಟ್ಟುಕೊಂಡು ಬೆಳೆದ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ, ಇಂದು ಜನ ವಿಮುಖವಾಗುತ್ತಿದೆ. ಸಂಶೋಧನೆ, ಯೋಜನೆ, ಸಂಪಾದನೆಗಳಲ್ಲಿ ಹೊಸದು ಬಿಡಿ, ಪರಂಪರೆಯನ್ನೇ ಇದು ದಿಕ್ಕರಿಸಿದೆ. ವಿಶ್ವಕೋಶ, ವಿಷಯ ವಿಶ್ವಕೋಶ, ಯುಗಯಾತ್ರಿ ಭಾರತೀಯ ಸಂಸ್ಕೃತಿ, ತೋಟಗಾರಿಕೆ, ಪ್ರವಾಸಿ ಕಂಡ ಇಂಡಿಯಾ, ವ್ಯಾಸಭಾರತ, ಧರ್ಮಶಾಸ್ತ್ರ ಇತ್ಯಾದಿ ಅಪೂರ್ಣ ಪ್ರಕಟಣೆಗಳ ಪಟ್ಟಿ ಬೆಳೆಯುತ್ತಿದೆ. ಪುರಾಣನಾಮ ಚೂಡಾಮಣಿ, ಪಂಪಭಾರತ, ಯೋಗಾಸನ, ಏಕ ಸಂಪುಟ ನಿಘಂಟು, ಹಲವು ಪಠ್ಯಪುಸ್ತಕಗಳು ಆವಶ್ಯಕತೆಯ ಪರಾಕಾಷ್ಠೆಯನ್ನು ಕಂಡರೂ ಪ್ರಸಾರಾಂಗ ಗೌಡರ ಗೂಳಿಯಾಗಿದೆ (ಅರ್ಥಕ್ಕೆ ನೋಡಿ: ಇಂಕನಿ ಸಂಪುಟ ೧, ಪುಟ ೧೫೧೫, ನುಡಿಗಟ್ಟು ೭).

“ವ್ಯಾವಾಹಾರಿಕ ಚಟುಲತೆ ಹೆಚ್ಚಿಸಿಕೊಳ್ಳಬೇಕಾದ ಪ್ರಸಾರಾಂಗದಲ್ಲಿ ಬಿಡಿಸಲಾಗದ ಆಡಳಿತಾತ್ಮಕ ಕಗ್ಗಂಟಿನಲ್ಲಿ ಬಿದ್ದಿರುವುದು ಮುಖವಿರುವ ಯಾರೂ ತಲೆ ತಗ್ಗಿಸುವಷ್ಟಿದೆ. ಪ್ರಬುದ್ಧ ಕರ್ನಾಟಕದ ಚಿನ್ನದ ಹಬ್ಬದ ವಿಜ್ಞಾನ ಸಂಪುಟಗಳು ನೂರರ ಲೆಕ್ಕದಲ್ಲಿ ಹೊರ ಹಾಕುವವರಿಲ್ಲದೆ ಕೊಳೆಯುತ್ತಿವೆ. ಮೇಲೆ ಹೆಸರಿಸಿದ ಜೈಮಿನಿ ಭಾರತದಂಥ ಉದಾಹರಣೆ, ಅಂದರೆ೧೯೯೩ರ ಮುದ್ರಣ ೧೯೯೬ರಲ್ಲಿ ಮಾರುಕಟ್ಟೆಗೆ, ಹೆಜ್ಜೆಗೊಂದು ತೊಡರುತ್ತವೆ. ಇವುಗಳಿಗೆ ಕಳಶಪ್ರಾಯವಾಗಿ ಠೇವಣಿಯಾಯ್ತು, ಈಗ ಮುಂಗಡದ ನೆಪ, ಹಾಗೇ ಮೌನಿಯಾಗಿರಬೇಕೆಂಬ ಶಪಥವನ್ನೂ ಮಾಡಿದಂತಿದೆ! ಪ್ರಕಾಶಕರಾಗಿ ನಿಮಗಿಲ್ಲದ ಜವಾಬ್ದಾರಿಕೆಯನ್ನು ಮಾರಾಟಗಾರನಾದ ನಾನು ಉಳಿಸಿಕೊಂಡು ಬರೆದ ಈ ಪತ್ರಕ್ಕೆ ಜಿದ್ದಿನ ಶಿಕ್ಷೆ ಅಥವಾ ಅಂತಃಕರಣವಿಲ್ಲದ ವಿಷಾದ ಅಥವಾ ನಿಷ್ಕ್ರಿಯೆ ಸಮರ್ಥಿಸುವ ಜಾಣತನದ ಉತ್ತರಗಳನ್ನು ಹುಡುಕುವ ಪ್ರಯತ್ನಗಳನ್ನು ಬಿಟ್ಟು, ಕೂಡಲೇ ನನಗೆ ಪುಸ್ತಕ ಕಳಿಸಿ. ಪುಸ್ತಕೋದ್ಯಮದ ಆದರ್ಶಗಳಿಗೆ ಸಾಟಿಯಾಗುವ ವ್ಯಾವಹಾರಿಕ ನೀತಿ ಅನುಸರಿಸಿ ಜ್ಞಾನ ಸಮದಂಡಿ ಈ ವಿಶ್ವವಿದ್ಯಾನಿಲಯ ಎಂದು ಬುಧರು ಕೊಂಡಾಡುವಂತೆ, ಅಂದರೆ ನಹಿಜ್ಞಾನಪ್ರಸಾರೇಣ ಸದೃಶಂ ಎಂದು ಕಾಣುವಂತೆ ನಿಲ್ಲಿಸುವಿರಾಗಿ ಹಾರೈಸುತ್ತೇನೆ.”

ಮೇಲಿನ ಪತ್ರಕ್ಕೊಂದು ವಿಶೇಷ ಸೂಚನೆ ಸೇರಿಸಿದ್ದೆ – ಹದಿನೈದು ದಿನಗಳೊಳಗೆ ಸಕಾರಾತ್ಮಕ ಪ್ರತಿಕ್ರಿಯೆ ಕಾಣದಿದ್ದಲ್ಲಿ ಈ ಪತ್ರವನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುತ್ತೇನೆ. ಪತ್ರದ ಯಥಾಪ್ರತಿಗಳನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ, ಕುಲಾಧಿಪತಿಗಳಾದ ರಾಜ್ಯಪಾಲರಿಗೆ ಹಾಗೂ ವಿದ್ಯಾಸಚಿವರಾದ ಎಚ್.ಜಿ. ಗೋವಿಂದೇಗೌಡರಿಗೂ ಕಳಿಸಿದೆ.. ೨೩-೮-೧೯೯೬ರವರೆಗೂ ಉತ್ತರ ಬರಲಿಲ್ಲ. ಮೇಲಿನ ಪತ್ರದ ಕೊನೆಗೆ ಹೀಗೆ ಇನ್ನೊಂದು ವಾಕ್ಯ ಸೇರಿಸಿ, ಮುಖ್ಯ ಕನ್ನಡ ಪತ್ರಿಕೆಗಳಿಗೆ ಕಳಿಸಿದೆ. “ಪಠ್ಯ ಸಿಗದ ವಿದ್ಯಾರ್ಥಿಗಳು, ಕಲಿಸಲಾಗದ ಅಧ್ಯಾಪಕರು, ಅವಿದ್ಯೆ ಕಾಣುವ ಪೋಷಕರು, ಅನೀತಿ ಸಹಿಸದ ನಾಗರಿಕರು, ಒಟ್ಟಾರೆ ಜವಾಬ್ದಾರಿಯುತ ಪ್ರಜೆಗಳು ಪ್ರಭುತ್ವದ ಧ್ವನಿ ತೆಗೆದು ಕೇಳುವ ಕಾಲ ಬಂದಿದೆ – ಮೈಸೂರು ವಿಶ್ವವಿದ್ಯಾನಿಲಯ ಯಾರಿಗಾಗಿ ಇದೆ?”

೨೬-೮-೧೯೯೬ರಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರ ಕಛೇರಿಯಿಂದ ಪ್ರಸಾರಾಂಗದ ನಿರ್ದೇಶಕರನ್ನು ಉದ್ದೇಶಿಸಿ ಬರೆದ ಪತ್ರದ ಯಥಾಪ್ರತಿ ನನಗೆ ಬಂತು. ಅದರ ವಿಷಯ – ಜಿ.ಎನ್.ಅಶೋಕವರ್ಧನರ ಪತ್ರ ಸೂಚಿಸಿದಂತೆ ಪುಸ್ತಕಗಳನ್ನು ಸುಮಾರು ಒಂದೂವರೆ ವರ್ಷದಿಂದ ಸರಬರಾಜು ಮಾಡದಿರುವುದಕ್ಕೆ ಕಾರಣ ಸಮೇತ ವರದಿಯನ್ನು ಮರುಟಪಾಲಿನಲ್ಲಿ ಕಳಿಸಿ. ೩೧-೮-೯೬ರಂದು ನಿರ್ದೇಶಕರ ಸಹಿ ಹೊತ್ತ ಪತ್ರ ಬಂತು. ಅದರ ಯಥಾಪ್ರತಿ ಹೀಗಿದೆ: “ನಿಮ್ಮ ಪತ್ರ ತಲಪಿದೆ, ಕೃತಜ್ಞತೆಗಳು. ಪುಸ್ತಕ ವ್ಯಾಪಾರಿಗಳು ಪುಸ್ತಕ ಬೇಡಿಕೆ ಕಳುಹಿಸುವುದರ ಜೊತೆಗೆ ಬೇಡಿಕೆ ಪತ್ರದ ಪುಸ್ತಕಗಳ ಒಟ್ಟು ಅಂದಾಜು ಮೊತ್ತದ ಕಾಲು ಭಾಗದಷ್ಟು ಹಣವನ್ನು ಕಳಿಸಿಕೊಡಬೇಕು ಎನ್ನುವುದು ಪ್ರಸಾರಾಂಗದ ನಿಯಮ. ಪ್ರಸಾರಾಂಗದಿಂದ ಪುಸ್ತಕ ಪಾರ್ಸಲ್ ಮಾಡಿ ಕಳಿಸಿದ ಅನಂತರ ವ್ಯಾಪಾರಸ್ಥರು ಬಂಡಲನ್ನು ಬಿಡಿಸಿಕೊಳ್ಳದಿರುವುದರಿಂದ ಮರಳಿ ಬರುತ್ತಿದ್ದುವು. ಹೀಗೆ ಮರಳಿ ಬಂದಾಗ ಸಾರಿಗೆ ವೆಚ್ಚ, ಲಾರಿ ಕಛೇರಿಯ ದಂಡ ಶುಲ್ಕಗಳನ್ನು ಪ್ರಸಾರಾಂಗವೇ ಭರಿಸಿದ ಕಹಿ ಪ್ರಸಂಗಗಳು ಹಲವಾರಿವೆ. ಮುಂದೆ ಆಡಿಟ್ಟಿನವರ ತಕರಾರಿನಿಂದ ಮೇಲಿನ ನಿಯಮ ಮಾಡಲಾಗಿದೆ.

“ನೀವು ಕಳುಹಿಸಿದ ೫೦ ರೂಪಾಯಿ ನೀವು ಬರೆದಂತೆ ನೋಂದಣಿ ಶುಲ್ಕವೇ ವಿನಾ ಠೇವಣಿಯಲ್ಲ. ತಾವು ನೋಂದಣಿಯನ್ನು ಮಾಡುವಾಗ `ಬದಲಾಗುವ ಪ್ರಸಾರಾಂಗದ ನಿಯಮಗಳಿಗೆ ನಾನು ಬದ್ಧನಾಗಿರುತ್ತೇನೆ’ ಎಂದು ಘೋಷಿಸಿ ರುಜು ಹಾಕಿದ್ದನ್ನು ನೆನಪಿಸಬಯಸುವೆ. ನೀವು ಸ್ನೇಹಿತರು ಎನ್ನುವ ಕಾರಣಕ್ಕೆ ನಿಮಗೊಂದು ನಿಯಮ ಇತರರಿಗೊಂದು ನಿಯಮ ಮಾಡಲಾಗದು. ಅದಕ್ಕಾಗಿ ವಿಷಾದಿಸುತ್ತೇನೆ.”

ಅದಕ್ಕೆ ನನ್ನ ೨-೯-೯೬ರ ಉತ್ತರ. “ಬಲು ದೀರ್ಘ ಮೌನ ಮುರಿದು, ಕನಿಷ್ಠ ಉತ್ತರಿಸಿದ್ದಕ್ಕೆ ಕೃತಜ್ಞ. ಹಿಂದಿನ ನಿರ್ದೇಶಕರು ನನ್ನ ಪುಸ್ತಕ ಬೇಡಿಕೆಯನ್ನು ಪೂರೈಸದ ಮುನ್ನೆಲೆಯಲ್ಲಿ ನೀವು ಬಂದಿದ್ದೀರಿ. ಆಗ ನಿಮ್ಮನ್ನು ಪರಿಚಯದ ನೆಲೆಯಲ್ಲಿ ಅಭಿನಂದಿಸಿದ್ದೆ. `ಪ್ರಸಾರಾಂಗದ ಪುನರುತ್ಥಾನ ಮಾಡಿ’ ಎಂಬ ಸೂಚನೆಯೊಡನೆ ನೆನೆಗುದಿಗೆ ಬಿದ್ದ ನನ್ನ ಬೇಡಿಕೆಯ ಪೂರೈಕೆಯನ್ನೂ ನೆನಪಿಸಿದ್ದೆ (೧೪-೨-೧೯೯೬). ಅದಕ್ಕೆ ಕನಿಷ್ಠ ಸೌಜನ್ಯದ ಮಾರೋಲೆಯನ್ನೂ ಬರೆಯದ ನೀವು ಪ್ರಸ್ತುತ ಪತ್ರದ ಕೊನೆಯಲ್ಲಿ ನಾನು ಸ್ನೇಹ ದುರುಪಯೋಗಿಸಲು ಹವಣಿಸಿದಂತೆ ವಿಷಾದಿಸಿದ್ದು ಆತ್ಮವಂಚನೆ. ನನ್ನ ೨-೭-೧೯೯೬ರ ಬೇಡಿಕೆ ಮತ್ತದರಲ್ಲಿ ಎತ್ತಿದ ಆಕ್ಷೇಪಣೆಗಳಿಗೆ ಉತ್ತರಿಸದವರು ೧೧-೮-೯೬ರ ಪತ್ರದ ಸಮಯದ ಗಡು (೨೦-೮-೯೬) ಮುಗಿದ ಮೇಲೂ ಉತ್ತರಿಸದವರು, ಕುಲಸಚಿವರ ಪತ್ರದ ಒತ್ತಡಕ್ಕಷ್ಟೇ ಉತ್ತರಿಸಿದ್ದೀರಿ. ಅದರ ಮೇಲೆ ನೀವು ತಳೆದ ನಿಲವು ಆರೋಗ್ಯಕರವೂ ಅಲ್ಲ. ಏಕಪಕ್ಷೀಯವಾಗಿ ವ್ಯಾಪಾರಿಗಳಿಗಷ್ಟೇ ನಿಯಮ, ಬದ್ಧತೆ, ಪ್ರಸಾರಾಂಗದ ಹಿತರಕ್ಷಣೆ ಇತ್ಯಾದಿ ನೆನಪಿಸಿದ್ದಂತೂ ಸಂವಿಧಾನದ ಆಶಯಗಳಿಗೇ ಅಪಮಾನಕಾರಿ.

“೧. ಕಾಲಕಾಲಕ್ಕೆ ಬದಲಾದ ನಿಯಮಗಳನ್ನು ನೋಂದಾಯಿತ ವ್ಯಾಪಾರಿಗಳಿಗೆ ತಿಳಿಸಬೇಕೆನ್ನುವ ನಿಯಮ ನಿಮಗಿಲ್ಲವೇ? ಕನಿಷ್ಠ ಪ್ರಸಾರಾಂಗ ಪುನಃ ವ್ಯವಹಾರಕ್ಕಿಳಿದಾಗ `ನಿಮಗೆ ತಿಳಿಸುತ್ತೇವೆ’ ಎಂದ ನಿಮ್ಮದೇ ಮಾತಿನ ಕಟ್ಟುಪಾಡೂ ನಿಮಗಿಲ್ಲವೇ? ನಿಮ್ಮ ಸಾಮರ್ಥ್ಯವನ್ನು ಪದಜೋಡಣೆಗೆ ವ್ಯರ್ಥಮಾಡುವ ಬದಲು ಪುಸ್ತಕ ವಿತರಣೆಗೆ ಹೊಸ ದಾರಿ ಹುಡುಕಲು ವ್ಯಯಿಸಿದ್ದರೆ ಅದಕ್ಕಿಂಥ ದೊಡ್ಡ ಪ್ರಸಾರಾಂಗದ ಹಿತರಕ್ಷಣೆ ಇತ್ತೇ? (ಇದನ್ನು ಸೂಚಿಸಲೆಂದೇ ಎಚ್.ವಿ.ನಾಗೇಶರ ಹೆಸರನ್ನೂ ಉದಾಹರಿಸಿದ್ದೆ. ಅವರು ನನಗೆ ಪೂರ್ವಪರಿಚಿತರೂ ಅಲ್ಲ!) ೧೯೮೯ರಿಂದ ಇಂದಿನವರೆಗೂ ಯಾವುದೇ ನಿಯಮಗಳನ್ನು ಪ್ರಸಾರಾಂಗ ಹೊಸದಾಗಿ ತಿಳಿಸಿದ್ದಿಲ್ಲ. ಬರಿದೇ ಊಹಿಸಿಕೊಂಡು ಕಾಲಕಾಲಕ್ಕೆ ವ್ಯಾಪಾರಿ (ಅದರಲ್ಲೂ ನನ್ನಂಥ ದೂರದೂರಿನವರು) ಪ್ರಸಾರಾಂಗ ಎಡತಾಕಿಕೊಂಡು ವಿಚಾರಿಸುತ್ತಿರಬೇಕೆಂದು ನೀವು ನಿರೀಕ್ಷಿಸುವುದು ಅಪ್ರಾಯೋಗಿಕ.

“೨. ಬೇಡಿಕೆ ಪುಸ್ತಕಗಳ ಅಂದಾಜು ಮೊತ್ತದ ಕಾಲುಭಾಗ ಪ್ರತಿಬಾರಿ ಕಳುಹಿಸಲು ತಿಳಿಸಿದ್ದೀರಿ. ಆದರೆ ಬಡಪೆಟ್ಟಿಗೆಲ್ಲ ಲಭ್ಯ ಪುಸ್ತಕಪಟ್ಟಿ, ಹೊಸ ಬಿಡುಗಡೆಗಳ ಸುದ್ದಿಯನ್ನು ತಿಳಿಸುವ ಕ್ರಮ ಪ್ರಸಾರಾಂಗಕ್ಕಿಲ್ಲ. ಹಾಗಾಗಿ ನಮ್ಮ ಅಂದಾಜು ಯಾವತ್ತೂ ಭಾರೀ ತಪ್ಪುವ ಸಾಧ್ಯತೆಗಳಿವೆ. ಅಲ್ಲದೇ ಈ ನಿಯಮ ಹಳೆಯ ನಿಯಮಕ್ಕೆ ಹೆಚ್ಚುವರಿಯಾಗಿ ಬಂದದ್ದಾದ್ದರಿಂದ ಪ್ರತೀ ಖರೀದಿಗೆ ವ್ಯಾಪಾರಿ ಎರಡೆರಡು ಬಾರಿ ಬ್ಯಾಂಕ್ ಮತ್ತು ಅಂಚೆ ವೆಚ್ಚವನ್ನು ಭರಿಸುವ ಸಂಕಟ ಸೇರುತ್ತದೆ. ಇದು ಸರಿಯೇ?

“೩. ಪ್ರಸಾರಾಂಗ ವ್ಯಾಪಾರಸ್ಥರಿಂದ ಅನುಭವಿಸಿದ್ದ ಕಹಿಪ್ರಸಂಗಗಳನ್ನು ಉಲ್ಲೇಖಿಸಿದ್ದೀರಿ. ಕೆಲವೇ ಉದಾಹರಣೆಗಳನ್ನು ಸಾಮಾನ್ಯೀಕರಿಸುವ ಮೊದಲು ಆತ್ಮಶೋಧ ಮಾಡಿಕೊಂಡಿದ್ದೀರಾ? ವ್ಯಾಪಾರಿಯೊಬ್ಬ ಪಠ್ಯಪುಸ್ತಕಗಳನ್ನು ಮೇ – ಜೂನಿನಲ್ಲಿ ಕೇಳಿದರೆ ಅತಿ ವಿಳಂಬಿತವಾಗಿ ಕಳಿಸುವ ದಕ್ಷತೆ ನಿಮ್ಮದು. ಯಾಕೆಂದರೆ ಪುಸ್ತಕ ಮಾರಾಟವಾಗದಿದ್ದರೂ ಗೆದ್ದಲು ತಿಂದೋ ನೀರುಕುಡಿದೋ ಹಾಳಾದರೂ ಸಿಬ್ಬಂದಿಗಳ ಸಂಬಳ ಸವಲತ್ತಿಗೆ ಬಾಧೆ ಬರದ ವ್ಯವಸ್ಥೆ ನಿಮ್ಮದು. ಆದರೆ ಪ್ರತಿ ಪುಸ್ತಕದ ಲಾಭ ನಷ್ಟಗಳ ಸಂಭಾಳನೆಯಲ್ಲೇ ಜೀವನ ನಿರ್ವಹಣೆ ಕಾಣುವ ಪಾಡು ವ್ಯಾಪಾರಿಯದು. ಆತ ಅಕಾಲಕ್ಕೆ ಪುಸ್ತಕ ಬಂದ ಸಂಕಟಕ್ಕೆ ಅನಿವಾರ್ಯವಾಗಿ, ಆದರೆ ಖಂಡಿತ ನೋವುಂಡೇ ಭಾಂಗಿಯನ್ನು ತಿರಸ್ಕರಿಸುತ್ತಾನೆ. ಸ್ಪಷ್ಟವಾಗಿ ತಿಳಿದುಕೊಳ್ಳಿ – ಯಾವ ವ್ಯಾಪಾರಿಯೂ ಪ್ರಸಾರಾಂಗಕ್ಕೋ ಇನ್ನೊಂದು ಸಂಸ್ಥೆಗೋ ನಷ್ಟ ಉಂಟು ಮಾಡಲೆಂದೇ ಬೇಡಿಕೆ ಕಳಿಸಲಾರ. ಕಾರಣಗಳನ್ನು ವಿಚಾರಿಸಿ, ಪರಸ್ಪರ ಸಹಕಾರ ವಿಶ್ವವಿದ್ಯಾಪ್ರಸಾರಕ್ಕೆ ಅವಶ್ಯ ಎಂದು ತಿಳಿದು ಪ್ರಸಾರಾಂಗ ಎಂದೂ ವರ್ತಿಸಿದ್ದಿಲ್ಲ. ಪ್ರಸಾರಾಂಗದ ಕಪ್ಪು ಪಟ್ಟಿಗೆ ಬೀಳಬಾರದೆಂದೇ ನಾನು ಕೆಲವು ಅಕಾಲಿಕ ಭಾಂಗಿಗಳನ್ನು ಬಿಡಿಸಿದ್ದಕ್ಕೆ, ಇಂದು ನನ್ನಲ್ಲೂ ದೂಳು ತಿನ್ನುತ್ತಿರುವ ಪುಸ್ತಕಗಳು ಸಾಕಷ್ಟಿವೆ ಗೊತ್ತೇ? ದೇಜಗೌ ಮೊನ್ನೆಯಷ್ಟೇ ನೋಡಿದ್ದಾರೆ. (ವಿಸೂ: ಅವರು ಮಂಗಳೂರಿನ ಯಾವುದೋ ಕಾರ್ಯಕ್ರಮಕ್ಕೆ ಬಂದಿದ್ದವರು ನನ್ನ ಅಂಗಡಿಗೂ ಭೇಟಿಕೊಟ್ಟಿದ್ದರು) ಈಚಿನ ಕೆಲವು ವರ್ಷಗಳ ಪ್ರಸಾರಾಂಗದ ಬಿಕ್ಕಳಿಕೆಗಳಿಗೆ ಕಾರಣ ಯಾವುದೇ ವ್ಯಾಪಾರಿಯ ಮೋಸವಲ್ಲ. ಆ ವೈಫಲ್ಯವನ್ನು ಮೀರುವ ಪರಿಸರ ಕಲ್ಪಿಸಿ, ಕನಿಷ್ಠ ಸಾರ್ವಜನಿಕ ಸದಭಿಪ್ರಾಯವಾದರೂ ಕ್ರೋಢೀಕರಿಸುವಂತೆ ವ್ಯವಹರಿಸಿ. ಆ ನಿಟ್ಟಿನಲ್ಲಿ ನಾನು ೧೧-೮-೯೬ರ ಪತ್ರದಲ್ಲಿ ಸೂಚಿಸಿದಂತೇ ಆ ಪತ್ರವನ್ನು ೨೩-೮-೯೬ರಂದು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದೇನೆ. ಈ ಪತ್ರದ ಪ್ರತಿಗಳನ್ನೂ ನನಗೆ ಸರಿ ಕಾಣಿಸಿದ ಪ್ರಸಾರಾಂಗದ ಹಿತೈಷಿಗಳಿಗೆಲ್ಲ ಕಳಿಸುತ್ತೇನೆ. ಅನಿವಾರ್ಯವಾದರೆ ಬಳಕೆದಾರ ಹಿತರಕ್ಷಣ ವೇದಿಕೆಗೂ ಏರಿಸುತ್ತೇನೆ.

“೪. ಮಾಜಿ ಕುಲಪತಿ ದೇಜಗೌ ಅವರೊಡನೆ ಈ ಸಮಸ್ಯೆ ಕುರಿತು ಮಾತಾಡಿದೆ. ಮಂಗಳೂರು ಪ್ರಸಾರಾಂಗದ ನಿರ್ದೇಶಕ ವಿವೇಕ ರೈ ಅವರೊಡನೆ ವಿಚಾರ ವಿನಿಮಯ ನಡೆಸಿದೆ. ದಕ್ಷ ಆಡಳಿತೆಗೆ ಹೆಸರಾದ ಹಲವು ಹಿರಿಯರ ಅನುಭವ ಕಥನ ಓದಿದ್ದೇನೆ. ಮೂಡಿದ ಏಕಾಭಿಪ್ರಾಯ – ಲೆಕ್ಕ ಪರಿಶೋಧನಾ ವರದಿ ಅರ್ಥಾತ್ ಆಡಿಟ್ ರಿಪೋರ್ಟ್ ಸಂದ ಕೆಲಸದ ಶುಷ್ಕ ತಾಂತ್ರಿಕ ವಿಶ್ಲೇಷಣೆ ಮಾತ್ರ. ಸಂಕಲ್ಪ, ಕಾಯಕ ಸಾರ್ವಜನಿಕ ಹಿತಕ್ಕಾಗಿಯೇ ಅಧಿಕಾರದ ಮಿತಿಯೊಳಗೆ ಎಷ್ಟು ವಿಸ್ತರಿಸಿದರೂ ಆಡಿಟ್ ಅನುಸರಿಸುವ ಬಂಟ. ಅದಿಲ್ಲವಾದಲ್ಲಿ ನಿಷ್ಕ್ರಿಯೆಗೂ ಗುರುಗುಟ್ಟುವಂತ ಕಾವಲುಗಾರ. ಕೋಟ್ಯಂತರ ರೂಪಾಯಿ ಮೌಲ್ಯದ ಪುಸ್ತಕಗಳು ಮಾರದೇ ಹಾಳಾಗುವುದನ್ನು ಆಡಿಟ್ಟಿನಲ್ಲಿ ಸಮರ್ಥಿಸಿಕೊಳ್ಳುವುದು ಸಾಧ್ಯವಾದರೆ, ಕೇವಲ ನೂರಾರು ರೂಪಾಯಿ ನಷ್ಟದಲ್ಲಷ್ಟೇ ಅವನ್ನು ಜನರಿಗೆ ಮುಟ್ಟಿಸುವುದು ತಪ್ಪಾಗಲು ಸಾಧ್ಯವೇ ಇಲ್ಲ. ಅದೇ ತತ್ತ್ವದಲ್ಲಿ ಈಗ……

“ನನ್ನ ವಲಯದ ಪುಸ್ತಕ ಪ್ರೇಮಿಗಳಿಗೆ ವಂಚನೆ ಆಗದಿರಲಿ ಎಂಬ ಉದ್ದೇಶದೊಡನೆ ನನ್ನ ೨-೭-೧೯೯೬ರ ಬೇಡಿಕೆಗೆ ಪೂರಕ ಬೇಡಿಕೆಯೊಡನೆ ಮುಂಗಡ ರೂಪಾಯಿ ಐನೂರರ ಡ್ರಾಫ್ಟ್ ಲಗತ್ತಿಸಿದ್ದೇನೆ. ಪುಸ್ತಕಗಳನ್ನು ಕೂಡಲೇ ಕಳಿಸಿ, ಜೊತೆಗೇ ಸದ್ಯ ಲಭ್ಯ ಪುಸ್ತಕಗಳ ಪಟ್ಟಿಯನ್ನೂ ಕಳಿಸಿ. ಪರಿಷ್ಕೃತ ವ್ಯಾವಹಾರಿಕ ನೀತಿ ಆದಷ್ಟು ಬೇಗನೇ ರೂಪುಗೊಳಿಸಿ, ನೋಂದಾಯಿತ ವ್ಯಾಪಾರಿಗಳಿಗೆಲ್ಲ ಕಳಿಸುವಿರೆಂದು ಕಾದಿರುತ್ತೇನೆ.”

ಈ ಪತ್ರದ ಯಥಾಪ್ರತಿಯನ್ನೂ ಮೈಸೂರು ವಿವಿನಿಲಯದ ಕುಲಸಚಿವ, ಸರಕಾರದ ವಿದ್ಯಾಸಚಿವ ಎಚ್.ಜಿ. ಗೋವಿಂದೇಗೌಡ, ಉನ್ನತ ಶಿಕ್ಷಣ ಸಚಿವ ವಿ. ಸೋಮಶೇಖರ, ಮೈ.ವಿವಿ ನಿಲಯದ ನಿವೃತ್ತ ಹಿರಿಯರುಗಳಾದ ದೇಜಗೌ ಮತ್ತು ಹಾಮಾನಾ, ಗೀತಾ ಬುಕ್ ಹೌಸ್, ಡಿವಿಕೆ ಮೂರ್ತಿ, ಸಮಾಜ ಪುಸ್ತಕಾಲಯ, ನವಕರ್ನಾಟಕ ಪಬ್ಲಿಕೇಶನ್ಸ್, ರಾಜಾರಾಮ್ ಬುಕ್ ಹೌಸ್, ಸಾಹಿತ್ಯ ಭಂಡಾರ, ಸಾಹಿತ್ಯ ಪ್ರಕಾಶನ ಮೊದಲಾದ ಗಣ್ಯ ಪುಸ್ತಕೋದ್ಯಮಿಗಳಿಗೂ ಕಳಿಸಿದೆ. ಬಂಟ್ವಾಳದಲ್ಲಿ ಸೇಡಿಯಾಪು ಸಂಸ್ಮರಣ ಕಾರ್ಯಕ್ರಮಕ್ಕೆ ಬಂದಿದ್ದ ಸಚಿವ ಗೋವಿಂದೇಗೌಡರನ್ನು ವಿರಾಮದಲ್ಲಿ ಭೇಟಿಯಾಗಿ ಮೇಲಿನೆರಡೂ ಮುಖ್ಯ ಪತ್ರಗಳ ಛಾಯಾಪ್ರತಿಗಳನ್ನು ಕೊಟ್ಟು ಪ್ರಸಂಗ ವಿವರಿಸಿದೆ. ಸಚಿವರು ಉನ್ನತ ಶಿಕ್ಷಣ ಸಚಿವರ ಮೂಲಕ ಸರಿಪಡಿಸಲು ಪ್ರಯತ್ನ ಅವಶ್ಯ ಮಾಡುವೆನೆಂದರು.

ಮೈಸೂರು ವಿವಿನಿಲಯದಿಂದ ಹಿಡಿದು ಯಾರಿಂದಲೂ ಏನೂ ಪ್ರತಿಕ್ರಿಯೆ ಬರಲಿಲ್ಲ! ಬಳಕೆದಾರರ ನ್ಯಾಯಾಲಯದಿಂದಾದರೂ ಸಹಾಯವಾದೀತೇ ಎಂದುಕೊಂಡು ೧-೧೦-೧೯೯೬ರಂದು ಮತ್ತೆ ಪ್ರಸಾರಾಂಗಕ್ಕೆ ಹೀಗೊಂದು ಪತ್ರ ಬರೆದು ನೋಂದಾಯಿತ ಅಂಚೆಯಲ್ಲಿ ಕಳಿಸಿದೆ. “ನಾನು ತಾ ೨-೭-೧೯೯೬ರಂದು ನಿಮಗೊಂದು ಪುಸ್ತಕ ಬೇಡಿಕೆ ಸಲ್ಲಿಸಿದ್ದೆ. ಅದಕ್ಕೆ ವಿಳಂಬಿತ ಪ್ರತಿಕ್ರಿಯೆಯಲ್ಲಿ ವ್ಯಾಪಾರಿ ಪ್ರತಿ ಪಾರ್ಸೆಲ್ಲಿಗೂ ಮುಂಗಡ ತೆರಬೇಕೆಂದು ಸೂಚಿಸಿದ್ದೀರಿ. ಈ ಕ್ರಮದ ತಾರ್ಕಿಕತೆಯನ್ನು ನಾನು ಪ್ರಶ್ನಿಸಿದರೂ ನನ್ನ ಅಂಗಡಿಯ ಗಿರಾಕಿಗಳಿಗೆ ತೊಂದರೆಯಾಗಬಾರದೆಂದು ತಾ ೨-೯-೯೬ರ ಪತ್ರದೊಡನೆ ರೂ ಐನೂರರ ಮುಂಗಡವನ್ನು ಪೂರಕ ಬೇಡಿಕೆಯೊಡನೇ ಕಳಿಸಿದ್ದೆ. ಆದರೆ ನೀವು ಪೂರಕ ಬೇಡಿಕೆಯ ಪುಸ್ತಕಗಳಿಗಷ್ಟೇ ಮುಂಗಡ ಹೊಂದಿಸಿ, ಹೆಚ್ಚಿನ ಮೊತ್ತಕ್ಕೆ ಬ್ಯಾಂಕ್ ಮೂಲಕ ದಾಖಲೆಗಳನ್ನು ಕಳಿಸಿದ್ದೀರಿ. ೧. ನನ್ನ ೨-೭-೯೬ರ ಮೂಲ ಬೇಡಿಕೆಯನ್ನು ಯಾಕೆ ಕಳಿಸಲಿಲ್ಲ? ೨. ನೋಂದಾಯಿತ ವ್ಯಾಪಾರಿಯ ಹಕ್ಕಿನ ಮೇರೆಗೆ ಕೇಳುತ್ತೇನೆ – ನನ್ನ ಆಕ್ಷೇಪಗಳಿಗೆ ಉತ್ತರ ಯಾಕಿಲ್ಲ? ೩. ಹೊಸ ಪುಸ್ತಕಗಳ ಪಟ್ಟಿ ಯಾಕಿಲ್ಲ? ೪. `ಕಾರಣ ಏನೇ ಇರಲಿ, ನಿಮ್ಮಿಂದ ತಪ್ಪಾಗಿದೆ. ಈ ಪತ್ರ ನೋಡಿದ ಮೇಲಾದರೂ ತಿದ್ದಿಕೊಳ್ಳಿ’ ಎಂದು ತಾ ೧೧-೯-೯೬ರ ಕಾರ್ಡಿನಲ್ಲಿ ಬರೆದು ಸೂಚಿಸಿದೆ. `ಇದರಿಂದ ಅವ್ಯಾವಾಹಾರಿಕವಾದ ಖರ್ಚುಗಳು – ಭಾಂಗಿ ಕಟ್ಟುವುದು, ಸಾಗಣೆ ಮತ್ತು ಬ್ಯಾಂಕ್ ವೆಚ್ಚಗಳು ನನಗೆ ಗಾಯದ ಮೇಲೆ ಎಳೆದ ಬರೆಯಂತಾದರೂ ಈ ಬಾರಿ ಕ್ಷಮಿಸಿ, ಒಪ್ಪಿಕೊಳ್ಳುತ್ತೇನೆ’ ಎಂದೂ ತಿಳಿಸಿದ್ದೆ. ಇವೆಲ್ಲಕ್ಕೂ ಮೌನವಾಗಿರುವ ನಿಮ್ಮ ಮೇಲೆ ನಾನ್ಯಾಕೆ ಬಳಕೆದಾರರ ನ್ಯಾಯ ಮಂಡಳಿಗೆ ದೂರು ಸಲ್ಲಿಸಬಾರದು?

“ಇಂದಿನಿಂದ ಸರಿಯಾಗಿ ಹತ್ತು ದಿನಗಳೊಳಗೆ, ಅಂದರೆ ೧೦-೧೦-೧೯೯೬ರೊಳಗೆ ನಿಮ್ಮಿಂದ ಆ ಪುಸ್ತಕಗಳು ಬಾರದಿದ್ದಲ್ಲಿ ಒದಗುವ ಎಲ್ಲ ಕಷ್ಟಪರಂಪರೆಗೂ ನೀವೇ ಜವಾಬ್ದಾರರು.”

ಈ ಪತ್ರದ ಯಥಾಪ್ರತಿಯನ್ನು ಬಳಕೆದಾರರ ಶಿಕ್ಷಣ, ಬಸ್ರೂರು, ದಕ ಇವರಿಗೂ ಕಳಿಸಿದೆ. ಅತ್ಯಾಶ್ಚರ್ಯಕರವಾಗಿ ಏಳನೇ ದಿನದಂದೇ ನಿರ್ದೇಶಕರ ಪತ್ರ ಬಂತು. ಆದರೆ ಎರಡೇ ವಾಕ್ಯಗಳು: “ದಿನಾಂಕ ೨-೭-೧೯೯೬ರ ಬೇಡಿಕೆ ಪತ್ರ ಸಲ್ಲಿಸಲಾಗಿದೆ ಎಂದು ಬರೆದಿರುವಿರಿ. ಆ ಪತ್ರ ನಮಗೆ ತಲಪಿಲ್ಲ. ಬೇರೊಂದು ಬೇಡಿಕೆ ಪತ್ರ ಸಲ್ಲಿಸಿದರೆ ಪುಸ್ತಕಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗುವುದು.”

ಅದಕ್ಕೆ ನನ್ನ ಪತ್ರೋತ್ತರ ಹೀಗಿದೆ: “ನನ್ನ ೧೧-೮-೧೯೯೬ರ ಪತ್ರದ ಹಕ್ಕೊತ್ತಾಯ ಸುರುವಾದದ್ದೇ ನನ್ನ ೨-೭-೯೬ರ ಬೇಡಿಕೆ ಪೂರೈಸಿಕೊಳ್ಳಲು. ಅದಕ್ಕೆ ಪ್ರತಿಕ್ರಿಯೆಯಾಗಿ ನೀವು ಬರೆದ ತಾ ೨೮-೮-೯೬ರ ಪತ್ರ, ನನ್ನ ಪೂರಕ ಬೇಡಿಕೆಯನ್ನಷ್ಟೇ ಪೂರೈಸಿದಾಗ ಜತೆಗೊಟ್ಟ ನಿಮ್ಮ ೭-೯-೯೬ರ ಪತ್ರಗಳಲ್ಲಿ ನನ್ನ ಮೂಲಬೇಡಿಕೆಯ ಉಲ್ಲೇಖವೇ ಇಲ್ಲ. ಈಗ ನನ್ನ ೧೧-೯-೯೬ ನೆನಪಿನೋಲೆಗೆ ಪ್ರತಿಕ್ರಿಯೆ ಕೊಡುವ ನೆಪದಲ್ಲಿ ಬರೆದ ಪತ್ರದಲ್ಲಿ `ಮೂಲ ಬೇಡಿಕೆಯೇ ಬಂದಿಲ್ಲ’ ಎಂದು ತಿಳಿಸಿದ್ದಾದರೂ ಕಾನೂನು ಕ್ರಮದ ಭಯದಿಂದ ಎನ್ನುವುದು ಸ್ಪಷ್ಟ. ನಿಮ್ಮ ಒಕ್ಕಣೆಯ ಋಜುತ್ವವನ್ನು ಒಪ್ಪಿಕೊಳ್ಳುವುದು ಬಲು ಕಷ್ಟ. ವಿಶ್ವವಿದ್ಯೆ ಹರಡಬೇಕಾದವರು ಕಾನೂನು ಕೋಟೆ ಕಟ್ಟಿ, ಕುಂಟು ನೆಪ, ನಿಧಾನದ್ರೋಹ ನಡೆಸಬಹುದು. ನಾನು ಹಾಗೆ ಮಾಡಲಾರೆನಾದ್ದರಿಂದ ನನ್ನ ಬೇಡಿಕೆಯ ಪಟ್ಟಿಯ ಯಥಾಪ್ರತಿಯನ್ನು ಲಗತ್ತಿಸಿದ್ದೇನೆ. ಪುಸ್ತಕಗಳನ್ನು ಕೂಡಲೇ ಕಳಿಸಿ.”

ಆ ಪತ್ರವನ್ನು ಮುಂದುವರಿಸುತ್ತಾ “ಮೇಲಿನದೆಲ್ಲ ನನ್ನ ೧-೧೦-೯೬ರ ಪತ್ರದ ಮೊದಲ ಪ್ರಶ್ನೆಯ ವಿಚಾರಕ್ಕೆ ಮಾತ್ರ ಅಯ್ತು. ಅಲ್ಲೇ ಉಳಿದ ಮೂರು ಪ್ರಶ್ನೆಗಳಿಗೆ ನಿಮ್ಮ ಸಮಾಧಾನ ಏನೂ ಬಂದಿಲ್ಲ. ಈಗ ಬದಲಾದ ಪರಿಸ್ಥಿತಿಯಲ್ಲಿ ನನ್ನ ಬೇಡಿಕೆ ಪೂರೈಕೆಗೆ ನಿಮಗೆ ಮತ್ತೆ ಹತ್ತು ದಿನ ಅವಕಾಶ ಕೊಡುತ್ತೇನೆ. ಅಂದರೆ ೧೯-೧೦-೯೬ರೊಳಗೆ ನನಗೆ ನಿಮ್ಮ ಪುಸ್ತಕಗಳು ತಲಪುವಂತೆ ವ್ಯವಸ್ಥೆ ಮಾಡುವಿರಾಗಿ ನಂಬಿದ್ದೇನೆ.” ಯಥಾಪ್ರತಿಯನ್ನು ನಿರ್ದೇಶಕರ ಪತ್ರದ ಛಾಯಾಪ್ರತಿ ಸಹಿತ ಬಳಕೆದಾರರ ಶಿಕ್ಷಣ, ಬಸ್ರೂರು ಇವರಿಗೂ ಕಳಿಸಿದೆ.

ಪ್ರಸಾರಾಂಗದಿಂದ ಪ್ರತಿಕ್ರಿಯೆ ಬರಲಿಲ್ಲ. ೪-೧೧-೯೬ರಂದು ಕಾರ್ಡಿನಲ್ಲಿ ನೆನಪಿನೋಲೆ ಬರೆದೆ: “ಅಂಚೆ ಮುಷ್ಕರದ ಕಾರಣ ನಿಮ್ಮ ಪತ್ರ ದಾಖಲೆಗಳು ವಿಳಂಬಿಸುವುದು ಸಹಜ ಎಂದು ಕಾದಿದ್ದೇನೆ. ೧೯೯೪ರ ನಿಮ್ಮ ಪ್ರಕಟಣಾ ಪಟ್ಟಿಯೊಂದು ಸಾದಾ ಅಂಚೆಯಲ್ಲಿ ಬಂತು. ಆದರೆ ನಾನು ನಿರೀಕ್ಷಿಸಿದಂತೆ ಅದರಲ್ಲಿ ಹೊಸ ಪ್ರಕಟಣೆಗಳ ಪಟ್ಟಿ ಸೇರಿಲ್ಲ. ಅಲಭ್ಯ ಪುಸ್ತಕಗಳ ಹೆಸರು ಹೊಡೆದು ಹಾಕಿಯೂ ಇಲ್ಲ. ಹೀಗೊಂದು ಕೈಯಲ್ಲೇ ಪರಿಷ್ಕರಿಸಬಹುದಾದ ಪಟ್ಟಿಯನ್ನು ಇನ್ನಾದರೂ ಕಳಿಸುವಿರಾ? ನನ್ನ ೮-೧೦-೯೬ರ ಪುಸ್ತಕಗಳನ್ನು ವಿಲೇವಾರಿ ಮಾಡಿದ ಬಗ್ಗೆ ಮಾಹಿತಿ ಕಳಿಸುವಿರಾ?” ಯಥಾಪ್ರತಿಯನ್ನು ಮತ್ತೆ ಬಳಕೆದಾರರ ಶಿಕ್ಷಣ ಬಸ್ರೂರಿಗೂ ಕಳಿಸಿದೆ. ಅಂತೂ ಪಾರ್ಸೆಲ್ ಬಂತು. ಆದರೆ ಅದು ಹುಟ್ಟು ಹಾಕಿದ ಹೊಸದೇ ಸಮಸ್ಯೆಗಳಿಗೆ ನನ್ನ ೧೫-೧೧-೯೬ರ ಪತ್ರ ಓದಿ: “ನನ್ನ ೨-೭-೯೬ರ ಬೇಡಿಕೆಯ ಯಥಾಪ್ರತಿಯನ್ನು ತಾ ೮-೧೦-೯೬ರಂದು ನಾನು ಕಳಿಸಿದಾಗ ೧೯-೧೦-೯೬ರೊಳಗೆ ಒದಗಿಸುವಂತೆ ತಾಕೀತು ಮಾಡಿದ್ದೆ. ಆದರೆ ಬಾಧ್ಯತೆಗಳ ಬಗ್ಗೆ ದಿವ್ಯ ನಿರ್ಲಕ್ಷ್ಯದಲ್ಲಿ ನೀವು ಬಿಲ್ಲು ಮಾಡಿದ್ದು ೩೦-೧೦-೯೬, ಲಾರಿಗೆ ತುಂಬಿದ್ದು ೪-೧೧-೯೬ ಎಂದು ನೋಡುವಾಗ ಹೆಚ್ಚಿನ ವ್ಯವಸ್ಥಿತ ಅನ್ಯಾಯವೂ ಕಾಣಿಸುತ್ತದೆ. `ಹಾಗಿಲ್ಲ’ ಎಂದು ತೋರುವಂತೆ ಮೊದಲು ಕ್ರಿಯೆ ಅನಂತರ ಪತ್ರ ಬರೆಯಬಲ್ಲಿರಾ?

“೧. ನನ್ನ ೨-೭-೯೬ರ ಪತ್ರ ನಿಮಗೆ ತಲಪಿಯೂ ತಲಪಿಲ್ಲವೆಂಬ ಸುಳ್ಳಾಡಿದ್ದರ ತಪ್ಪೊಪ್ಪಿಗೆಯಾಗಿ ಮುಂಗಡ ಇಲ್ಲದೆ ಪುಸ್ತಕ ಪೂರೈಸಲು ನೀವು ಬದ್ಧರಾದಿರಿ. ಅದಕ್ಕೆ ಸಹಜವಾಗಿ ನನ್ನ ಬೇಡಿಕೆ ಪ್ರಥಮಾದ್ಯತೆಯಲ್ಲಿ ವಿಲೇವಾರಿಯಾಗಬೇಕಿತ್ತು. ಅಂದರೆ ೧೧-೧೦-೯೬ರೊಳಗೆ ತಲಪಿರಲೇಬೇಕಾದ ನನ್ನ ಬೇಡಿಕೆ ೧೪-೧೫ರೊಳಗಾಗಿ ಹೊರಡಲೇಬೇಕಿತ್ತು. ಇದು ಆಗಿಲ್ಲ, ಬದಲಿಗೆ ತಿಂಗಳ ಕೊನೆಗೆ ಹೋಯಿತು. ಇಲ್ಲಿ ಅಂಚೆ ಮುಷ್ಕರದ ಕುಂಟು ನೆಪ ಕೊಡಬೇಡಿ. ಅದು ೨೩-೧೦-೯೬ರಿಂದ ಆರು ದಿನ ನಡೆಯಿತು. ಹಾಗಾಗಿ ೩೦ಕ್ಕೆ ಬಿಲ್ ಮಾಡಬಹುದಾದವರು ೨೩ಕ್ಕೂ ಮೊದಲೇ ಧಾರಾಳ ಬಿಲ್ ಮಾಡಬಹುದಿತ್ತು. ಲಾರಿಗೂ ತುಂಬಬಹುದಿತ್ತು. ಕೇವಲ ದಾಖಲೆಗಳ ವಿಲೇವಾರಿಯಲ್ಲಿ ಅಂಚೆ ಮುಷ್ಕರ ನಿಮ್ಮನ್ನು ಬಾಧಿಸಿರಬಹುದೆಂದು ನಾನು ಉದಾರವಾಗಿ ಭಾವಿಸಿ ೪-೧೧-೯೬ರಂದು ಕಾರ್ಡು ಬರೆದು ನೆನಪು ಹುಟ್ಟಿಸಿದೆ. ಕಾಲಮಿತಿ ಮೀರಿದಿರೆಂದು ಆರೋಪಿಸಲಿಲ್ಲ. ವಿಳಂಬ ದ್ರೋಹದ ಅನಂತರವೂ ಬಿಲ್ಲು ನವೆಂಬರ್ ಪ್ರವೇಶಿಸಿದೇ ಇರುವುದರಲ್ಲಿ ಇನ್ನೊಂದು ವಂಚನೆಯಿದೆ. ಅದೇನೆಂದರೆ….

“೨. ನವೆಂಬರ್ ೧ ಕನ್ನಡ ರಾಜ್ಯೋತ್ಸವ. ಅಂದಿನಿಂದ ಕೆಲವು ದಿನಗಳ ಮಟ್ಟಿಗೆ ನೀವು ನಿಮ್ಮ ಸಾಮಾನ್ಯ ಪ್ರಕಟಣೆಗಳಿಗೆಲ್ಲ ೫೦% ರಿಯಾಯ್ತಿ ಘೋಷಿಸಿಕೊಂಡಿದ್ದಿರೆಂದು ತಿಳಿದು ಬಂತು. ಇದು ಸಹಜವಾಗಿ ನನಗೆ ಒದಗಬಹುದಿತ್ತು. ಅದನ್ನು ನಿರಾಕರಿಸುವಂತೆ ಎರಡು ದಿನ ಮೊದಲು ಬಿಲ್ ಮಾಡಿಸಿದಿರಿ. ಆದರೆ ಲಾರಿ ತುಂಬಿದ್ದು (೧-೧೧-೯೬) ಮತ್ತು ದಾಖಲೆಗಳನ್ನು ವಿಲೇವಾರಿ ಮಾಡಿದ್ದು (೪-೧೧-೯೬) ನವೆಂಬರಿನಲ್ಲೇ ಎನ್ನುವುದು ಗಮನಾರ್ಹ.

“೩. ವಿಶೇಷ ರಿಯಾಯ್ತಿ ಕೇವಲ ವ್ಯಕ್ತಿಗಳಿಗೆ ಮಾತ್ರವೆಂದೋ ಒಂದೊಂದೇ ಪ್ರತಿ ಕೊಳ್ಳುವವರಿಗೆ ಮಾತ್ರ ಎಂದೋ ನೀವು ಸಬೂಬು ಕೊಡಬಹುದು. ವಾಸ್ತವದಲ್ಲಿ ಹಾಗೆಂದು ವದಂತಿಯೂ ಕೇಳಿದ್ದೇನೆ. ಒಂದು ಪುಸ್ತಕದ ಹತು ಪ್ರತಿ ಬೇಕಾದ ವ್ಯಾಪಾರಿಯೊಬ್ಬ ಹತ್ತು ಬಿಲ್ಲುಗಳಲ್ಲಿ ಒಂದೇ ಪುಸ್ತಕವನ್ನು ಕೊಳ್ಳಲು ಮುಂದಾದರೆ ಹೇಗೆ ನಿರಾಕರಿಸುತ್ತೀರಿ? ಅಥವಾ ಕೊಂಡವರೆಲ್ಲರೂ ಸ್ವಂತ ಬಳಕೆಗೇ ಒಯ್ಯುತ್ತಾರೆ ಎನ್ನುವುದನ್ನು ನೀವು ಹೇಗೆ ಶ್ರುತಪಡಿಸಿಕೊಳ್ಳುತ್ತೀರಿ? ವ್ಯಕ್ತಿ ಮಾಲಕತ್ವದ ಸಂಸ್ಥೆಗಳು ಪರ್ಯಾಯದಲ್ಲಿ ವ್ಯಕ್ತಿಯಂತೆಯೂ ವ್ಯವಹರಿಸುವುದು ಅಪರಾಧವಲ್ಲ. ಇದನ್ನು ಹೇಗೆ ಅಲ್ಲಗಳೆಯುತ್ತೀರಿ?

“೪. ವಿಶೇಷ ರಿಯಾಯ್ತಿ ಎಲ್ಲರಿಗೂ ಸಲ್ಲುವಂಥದ್ದೇ ಆದರೆ ನಿಮ್ಮಲ್ಲಿ ನೋಂದಾಯಿತ ವ್ಯಾಪಾರಿಯಾದ ನನಗೆ ತಿಳುವಳಿಕೆ ಪತ್ರ ಯಾಕೆ ಹಾಕಿಲ್ಲ? ಈ ಹಿಂದೆ ನನಗೆ ಬದ್ಧತೆ ಪಾಠ ನೀವು ಕೊಟ್ಟಾಗ ಪ್ರತಿಕ್ರಿಯೆಯಲ್ಲಿ ನಾನೆತ್ತಿಯೂ ಉತ್ತರ ಸಿಗದ ಹಲವು ಪ್ರಶೆಗಳಲ್ಲಿ ಇದೂ ಒಂದಾಗಿತ್ತು.

“೫. ನನ್ನ ೮-೧೦-೯೬ರ ಬೇಡಿಕೆಯ ಪಟ್ಟಿಯಲ್ಲಿ ಹಲವು ಪುಸ್ತಕಗಳು ಪೂರೈಕೆಯಾಗಿಲ್ಲ. ಆದರೆ ಅವುಗಳ ಕುರಿತು ನಿಮ್ಮ ವಿವರಣೆ ಬಂದಿಲ್ಲ. ಅವು ಅಲಭ್ಯ ಎಂದು ನಾನು ಅಂದಾಜಿಸುವುದು ಸರಿಯಾಗುವುದಿಲ್ಲ. ಯಾಕೆಂದರೆ ಈ ಹಿಂದೊಮ್ಮೆ ನಿಮ್ಮಿಂದ `ಕೊನೆಯ ಪ್ರತಿಗಳು’ ಎಂಬ ಷರಾ ಹೊತ್ತು ಹಲವು ಹುಳು ಕೊರೆದ, ಗೆದ್ದಲು ಅಲ್ಲಲ್ಲಿ ರುಚಿ ನೋಡಿದ ಪ್ರತಿಗಳು ಬಂದು ಬಿದ್ದಿದ್ದುವು. ನಾನವನ್ನು ಗಿರಾಕಿಗಳಿಗೆ ತಿಳಿಯ ಹೇಳಿ ಮಾರಿದ್ದೆ. ಆದರೆ ಪ್ರಸ್ತುತ ಭಾಂಗಿಯಲ್ಲಿ ಅದೇ ಪುಸ್ತಕದ ಮತ್ತು ಅದೇ ಮುದ್ರಣದ ಸುಂದರ ಪ್ರತಿಗಳು ನಾನು ಕೇಳಿದಷ್ಟು ಬಂದಿವೆ! ಹೀಗೇ ಹಿಂದೆ ಹಲವು ಬಾರಿ `ಲಾಸ್ಯರಂಜನಂ’ ಲಭ್ಯ ಪ್ರತಿಯ ನೆಲೆಯಲ್ಲಿ ರೂ ೪೦ರ ಅತ್ಯುತ್ತಮ ಆವೃತ್ತಿ ಬಂದಿತ್ತು. ಆದರೆ ಈ ಬಾರಿ ರೂಪಾಯಿ ಮೂವತ್ತರ ಉತ್ತಮ ಆವೃತ್ತಿ ಬಂದಿದೆ. ಇಂಥ ಅವ್ಯವಸ್ಥೆಗಳನ್ನು ತೊಡೆಯಲು ಕಾಲಕಾಲಕ್ಕೆ ಲಭ್ಯಾಲಭ್ಯ ಪುಸ್ತಕ ಪಟ್ಟಿ ಕಳಿಸಿ ಎಂದು ಕೇಳಿಕೊಂದಿದ್ದೆ, ನೆನಪಿನೋಲೆಯನ್ನೂ ಬರೆದಿದ್ದೆ. ಇವುಗಳಿಗೆಲ್ಲ ನಿಮ್ಮಿಂದ ಉತ್ತರಪಡೆಯುವ ಹಕ್ಕು ನನಗಿದೆ ಎಂಬುದು ನೆನಪಿರಲಿ. ಈ ಎಲ್ಲಕ್ಕೂ ನಿಮ್ಮ ಕ್ರಿಯಾಪರವಾದ ಉತ್ತರ ಇಂದಿನಿಂದ ಹದಿನೈದು ದಿನಗಳೊಳಗಾಗಿ ನನಗೆ ಬರತಕ್ಕದ್ದು. ಇಲ್ಲವಾದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದು ನನಗೆ ಅನಿವಾರ್ಯವಾಗುತ್ತದೆ” ಯಥಾಪ್ರತಿಯನ್ನು ಬಳಕೆದಾರರ ಶಿಕ್ಷಣ, ಬಸ್ರೂರಿಗೂ ಕಳಿಸಿದೆ.

ಏನೂ ಆಗಲಿಲ್ಲ. ೧೧-೧೨-೯೬ರಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಮೇಲಿನ ಪತ್ರದ ಯಥಾಪ್ರತಿಯನ್ನು ಮುಂದೆ ಕಾಣಿಸಿದ ಟಿಪ್ಪಣಿಯೊಡನೆ ಕಳಿಸಿದೆ. “ಪ್ರಸಾರಾಂಗದ ಅವ್ಯವಸ್ಥೆ ಕುರಿತ ಈ ಪತ್ರಕ್ಕೆ, ತಡವಾಗಿಯೂ ನಿರ್ದೇಶಕರಿಂದ ಉತ್ತರ ಬಂದಿಲ್ಲ. ವಿವಿನಿಲಯದ ವರಿಷ್ಠರಾಗಿ ನಿಮ್ಮಿಂದ ನ್ಯಾಯಬಯಸಿ ಅದೇ ಪತ್ರವನ್ನು ಕಳಿಸುತ್ತಿದ್ದೇನೆ.” ಮತ್ತೂ ಏನೂ ಆಗಲಿಲ್ಲ.

ಏತನ್ಮಧ್ಯೆ ಪ್ರಜಾವಾಣಿ ತನ್ನ ಅನಿಯತ ಅಂಕಣ `ವಿವಿನಿಲಯದೊಳಗೊಂದು ಸುತ್ತು’ವಿನಲ್ಲಿ ಮೈವಿವಿನಿಲಯದ ಕುರಿತೇ ಬರೆಯಿತು (೭-೧೧-೯೬). ಅದಕ್ಕೆ ಪ್ರತಿಕ್ರಿಯೆಯಾಗಿ ಇಷ್ಟು ಬರೆದೆ: “ನಿಮ್ಮ ಅಂಕಣ ಮೈವಿವಿನಿಲಯದ ಒಂದು ಸ್ನಾತಕೋತ್ತರ ಕೇಂದ್ರದ ವಠಾರಕ್ಕಷ್ಟೇ ಅದರಲ್ಲೂ ಒಂದು ಚಳವಳಿಗಷ್ಟೇ ಸೀಮಿತಿಗೊಂಡಿದೆ. ವಿವಿನಿಲಯದ ನಿಜ ಅಂಗಗಳಾದ ಅಧ್ಯಾಪನ, ಸಂಶೋಧನ, ಪ್ರಕಟಣಾಂಗಗಳ ಬಗ್ಗೆ ಮೌನ ನಿರಾಶೆಯುಂಟುಮಾಡಿತು. ಈ ವಿಶ್ವವಿದ್ಯಾನಿಲಯಕ್ಕೆ ಭವ್ಯ ಪರಂಪರೆಯೇನೋ ಇದೆ. ಆದರೆ ಅದು ಇಂದು ಪ್ರತಿ ವಿಭಾಗದಲ್ಲೂ ಹೇಗೆ ಶಿಥಿಲವಾಗಿದೆ ಎನ್ನುವುದಕ್ಕೆ ಪ್ರಸಾರಾಂಗದ ಕಿರು ಉದಾಹರಣೆಯನ್ನು ಕೊಡುತ್ತೇನೆ.

“ಕೋಟ್ಯಂತರ ರೂಪಾಯಿಯ ಸಾವಿರಾರು ಪುಸ್ತಕಗಳು ಇಂದು ಪ್ರಸಾರಾಂಗದ ದಾಸ್ತಾನಿನಲ್ಲಿವೆ. ಖಾಸಗಿ ಪ್ರಕಾಶಕರು ತೊಳಲಾಡುವ ಲಾಭನಷ್ಠಗಳ ಗೊಡವೆ ಇದಕ್ಕಿಲ್ಲ. ಪುಸ್ತಕ ವಿತರಣೆಯೊಂದೇ ಇದರ ಪರಮೋದ್ದೇಶ. ಉದ್ದೇಶಗಳೇನೋ ಕಡತಗಳ ಮೂಲಕ ಎಲ್ಲ ಕಾಲಕ್ಕೂ ದಾಟಬಹುದು. ಆದರೆ ಆದರ್ಶಗಳ ಸಿದ್ಧಿಯ ಕೊರತೆಗೇನು ಮದ್ದು? ಪ್ರಸಾರಾಂಗ ವಿಚಾರಣಾಧೀನ ಅರಾಜಕತೆಯಲ್ಲಿ ತಿಂಗಳುಗಟ್ಟಳೆ, ಹಂಗಾಮಿ ನಿರ್ದೇಶಕತ್ವದಲ್ಲಿ ವರ್ಷಗಟ್ಟಳೆ ತೊಳಲುತ್ತಲೇ ಇದೆ. ಪ್ರಥಮಾದ್ಯತೆಯ ಪಠ್ಯ ಪುಸ್ತಕಗಳ ವಿತರಣೆಯಲ್ಲೇ ಇದು ಸೋತಿದೆ. ಅದಕ್ಕೂ ಮಿಗಿಲಾಗಿ ಸಿದ್ಧ ದಾಸ್ತಾನಿನಿಂದ ಪುಸ್ತಕ ಕೊಡುವಲ್ಲೂ ಇದರ ಸೋಮಾರಿತನದ ಕಥೆಗಳು ಎಲ್ಲೆಲ್ಲೂ ಇವೆ. ಇಲ್ಲಿ ನಿಯಮಗಳು ಮೈಗಳ್ಳತನ, ಸಂಬಳಗಳ್ಳತನಕ್ಕೆ ರೂಪುಗೊಳ್ಳುತ್ತಿವೆ! ನೆಲದ ಮೇಲ್ಮೈಯ ಬಿರುಕು ಕಣ್ಣಿದ್ದವರಿಗೆಲ್ಲ ಕಂಡೇ ಕಾಣಿಸುತ್ತದೆ. ಸ್ತರಭಂಗದ (Fault) ಕುರಿತು ಲೇಖನಗಳನ್ನು ಕೊಡುತ್ತೀರಾ?” ಪ್ರಜಾವಾಣಿಯ ಅಂಕಣಕಾರ ನನ್ನ ಮಿತ್ರರೇ ಆಗಿದ್ದುದರಿಂದ ಮೇಲ್ಕಾಣಿಸಿದ ಪತ್ರವನ್ನು ಅವರ ಮೂಲಕವೇ ಪ್ರಜಾವಾಣಿಗೆ ಕಳಿಸಿದ್ದೆ. ಮಿತ್ರ ಮಾಹಿತಿ ಕೊರತೆಯಿಂದ ಪ್ರಸಾರಾಂಗವನ್ನು ಗಮನಿಸದೇ ಇದ್ದಿರಬಹುದು ಎಂಬ ಯೋಚನೆಯೊಡನೆ ನನ್ನ ಅದುವರೆಗಿನ ಪ್ರಸಾರಾಂಗ-ಪತ್ರ ವ್ಯವಾಹಾರದ ಎಲ್ಲ ವಿವರಗಳನ್ನೂ ಒದಗಿಸಿದ್ದೆ. ಜೊತೆಗೆ “ಇದು ನನ್ನೊಬ್ಬನ ಕೊರಗಲ್ಲ. ಇಲ್ಲೆಲ್ಲ ಅತ್ರಿ ಬರಿಯ ಆಕಸ್ಮಿಕ. ಗೀತಾ ಬುಕ್ ಹೌಸ್, ನವಕರ್ನಾಟಕ ಬೇಕಾದರೆ ಕೇಳಿ ನೋಡಿ. ನೀವೇ ಸಾಮಾನ್ಯ ಗಿರಾಕಿಯಾಗಿ ಪ್ರಸಾರಾಂಗಕ್ಕೇ ಹೋಗಿ ನೋಡಿ. ದೇಜಗೌ, ಹಾಮಾನಾ ಮೊದಲಾದವರನ್ನು ಸಂದರ್ಶಿಸಿ ತಿಳಿದುಕೊಳ್ಳಿ. ನಿವೃತ್ತ ನಿರ್ದೇಶಕರುಗಳನ್ನೂ ಸಂಪರ್ಕಿಸಿ.” ಪ್ರಜಾವಾಣಿ ನನ್ನ ಪ್ರತಿಕ್ರಿಯೆಯನ್ನು ಪ್ರಕಟಿಸಲಿಲ್ಲ, ಮಿತ್ರ ಕೆಲಸ ಮಾಡಲಿಲ್ಲ.

ಎಲ್ಲ ಮರೆಯುವ ಮುನ್ನ: ೧೦-೭-೯೭ರಂದು ಬಳಕೆದಾರರ ವೇದಿಕೆಯಿಂದೊಂದು ಕಾರ್ಡು ಬಂತು: “ಮೈವಿವಿನಿಲಯದ ಪ್ರಸಾರಾಂಗದ ನಿಷ್ಕ್ರಿಯತೆಯ ವಿರುದ್ಧದ ನಿಮ್ಮ ಹೋರಾಟದ ಕೊನೆಯ ಪತ್ರ ೧೫-೧೧-೯೬ರ ದಿನಾಂಕದ್ದು. ಅನಂತರ ಏನಾಯ್ತೆಂದು ತಿಳಿಸುತ್ತೀರಾ? ನೀವು ಕೇಳಿದ ಪ್ರಶ್ನೆಗಳಿಗೆ ಅವರಿಂದ ಉತ್ತರ ಬಂದಿವೆಯೇ ಎಂಬುದನ್ನು ತಿಳಿಸಿರಿ.”

ನನ್ನ ೧೫-೭-೯೭ರ ಉತ್ತರ: “ನಿಮ್ಮ ಕಾಳಜಿಗೆ ಅನಂತ ವಂದನೆಗಳು. ನೀವೇ ತಿಳಿಸಿದ ನನ್ನ ೧೫ರ ಪತ್ರವೇ ಹೆಚ್ಚುಕಮ್ಮಿ ಕೊನೆಯ ಪತ್ರ. ಇಡಿಯ ಪತ್ರ ವ್ಯವಾಹಾರದಲ್ಲಿ, ಘಟನೆಗಳಲ್ಲಿ ಅನಾವಶ್ಯಕ ಎನ್ನುವವನ್ನು ಬಿಟ್ಟು ಅಥವಾ ಸಂಕ್ಷೇಪಿಸಿ, ಅಗತ್ಯವಿದ್ದಲ್ಲಿ ನನ್ನ ಟಿಪ್ಪಣಿ ಸೇರಿಸಿ ಸುಮಾರು ಐದಾರು ಪುಟಗಳ ವರದಿ ತಯಾರಿಸಿ ನನ್ನ ವಕೀಲರಿಗೆ ತೋರಿಸಿದೆ. ಇದನ್ನು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯಾಗಿ ಉಚ್ಛ ನ್ಯಾಯಾಲಯ ಸ್ವೀಕರಿಸಬಹುದೇ ಎನ್ನುವುದು ನನ್ನ ಪ್ರಶ್ನೆಯಾಗಿತ್ತು. ವಕೀಲರು “ಇಲ್ಲ” ಎಂದರು. ಕಾರಣಗಳ ವಿಶ್ಲೇಷಣೆಯಲ್ಲಿ ಮುಖ್ಯವಾಗಿ ಕಾಣಿಸಿದ್ದು ಎರಡು. ೧. ಪುಸ್ತಕ ಒದಗಿಸಲು ನಿರಾಕರಣೆ ಪ್ರಸಾರಾಂಗದಿಂದ ಎಂದೂ ಬಂದಿಲ್ಲ. ಮತ್ತೆ ೨. ಇದು ಒಂದು ಅಂಗಡಿ ಅಥವಾ ಒಂದು ವ್ಯಕ್ತಿಯ ಅಹವಾಲು ಅಲ್ಲ ಎನ್ನುವುದಕ್ಕೆ ಪುರಾವೆಗಳು ಸಾಲದು. ಪುರಾವೆ ಸಂಗ್ರಹಕ್ಕೆಂದು ಓಡಾಟ ಸ್ವಾತಂತ್ರ್ಯ, ಬಿಡುವು ನನಗಿಲ್ಲವೆಂದು ಒಪ್ಪಿ ಸುಮ್ಮನಾದೆ.

“ವಿದ್ಯಾರ್ಥಿಗಳು ಪಠ್ಯಪುಸ್ತಕಗಳು ಸಿಗುತ್ತಿಲ್ಲವೆಂದರೆ ಅಧ್ಯಾಪಕರು ದೂರನ್ನು ಯುಕ್ತ್ಗ ದ್ವಾರಗಳ ಮೂಲಕ ಮೇಲಕ್ಕೆ ಒಯ್ದು ಸರಿಪಡಿಸಲು ಪ್ರಯತ್ನಿಸಲೇ ಇಲ್ಲ; `ಜೆರಾಕ್ಸ್ ಮಾಡಿಸಿಕೊಳ್ಳಿ’ ಎಂದು ಮುಗಿಸಿದರು. ಬೆಂಗಳೂರು, ಧಾರವಾಡ, ಮೈಸೂರು ಇತ್ಯಾದಿ ಪುಸ್ತಕ ವ್ಯಾಪಾರಿಗಳಲ್ಲಿ ಹಲವು ಪರಿಚಿತರಿಂದ ಪ್ರಸಾರಾಂಗದ ಬಗ್ಗೆ ಸಹಸ್ರನಾಮ ಕೇಳಿದ್ದೆ. ಆದರೆ ತರ್ಕಬದ್ಧ ಹೋರಾಟಕ್ಕೆ ಅವರ್ಯಾರೂ ನನ್ನ ಜೊತೆಗೆ ಬರಲಿಲ್ಲ. `ಕಾನೂನಿನ ಪ್ರಕಾರ, ಮರು ಮಾರಾಟಗಾರನಿಗೆ ಬಳಕೆದಾರನ ನೆಲೆ ಇಲ್ಲ’ ಎಂದು ನೀವೇ ಹಿಂದೊಮ್ಮೆ ತಿಳಿಸಿದ್ದಿರಿ. ಹಾಗಾಗಿ ನನ್ನ ಸ್ವಭಾವಕ್ಕೆ ವಿರುದ್ಧವಾಗಿ, ಕೈ ಚೆಲ್ಲಿ ಯಥಾ ಸ್ಥಿತಿಯನ್ನು ಒಪ್ಪಿಕೊಂಡಿದ್ದೇನೆ.”

ಉಪಸಂಹಾರ: ೪-೮-೯೭ರಂದು ಪ್ರಸಾರಾಂಗಕ್ಕೆ ಹೀಗೊಂದು ಬೇಡಿಕೆ ಸಲ್ಲಿಸಿದೆ. “ಪ್ರಸಾರಾಂಗದ ಹೊಸ ಬಿಡುಗಡೆಗಳೇನು ಮತ್ತು ಕಳ್ಳವ್ಯಾಪಾರಿಗಳನ್ನು ತಡೆಗಟ್ಟಲು ಹೊಸ ನಿಯಮಗಳೇನು ಎಂಬುದರ ಬಗ್ಗೆ ಎಂದಿನಂತೆ ನನ್ನನ್ನು ನೀವು ಅಜ್ಞಾನದಲ್ಲೇ ಇಟ್ಟರೂ ಸ್ಥಳೀಯ ಜನರ ಅಗತ್ಯಗಳನ್ನು ನನ್ನ ಮಿತಿಯಲ್ಲಿ ಪೂರೈಸುವ ಅನಿವಾರ್ಯತೆಯೊಡನೆ ಮತ್ತೆ ಮುಂಗಡ ಸಹಿತ….” ಎಂದಿತ್ಯಾದಿ ಪೀಠಿಕೆಯೊಡನೇ ಬರೆದೆ. ಎಂದಿನ ನಿಧಾನಗತಿಯಲ್ಲಿ ಪುಸ್ತಕಗಳು ಬಂದವು. ಮತ್ತು ಎಂದಿನಂತೆ ಕೆಲವು ತಪ್ಪುಗಳನ್ನೂ ಮಾಡಿದ್ದರು. ನಾನವನ್ನು ಸರಿಪಡಿಸಿಕೊಡುವಂತೆ ಕಾರ್ಡು ಬರೆಯ ತೊಡಗಿದ್ದೆ. ಆಗ ಪ್ರಸಾರಾಂಗದ ನಿರ್ದೇಶಕರಿಂದಲೇ ಒಂದು ಸಾದಾ ಅಂಚೆಯ ಲಕೋಟೆ ಬಂತು. ಒಳಗೆ ರೂ ೫೮೧೬ರ ಬ್ಯಾಂಕ್ ಡ್ರಾಫ್ಟ್ ಮತ್ತು ನಿರ್ದೇಶಕರ ಪತ್ರ ಹೀಗಿತ್ತು: “ನಿಮಗೆ ಬೇಕಾಗುವ ಪುಸ್ತಕಗಳಿಗೆ ಡಿಡಿಯನ್ನು ನಿರ್ದೇಶಕರು, ಪ್ರಸಾರಾಂಗ, ಮೈವಿವಿನಿಲಯ ಇವರ ಹೆಸರಿಗೆ ಕಳುಹಿಸಬೇಕು. ಮುಂಗಡವನ್ನು ಹಾಗೇ ಕಳುಹಿಸಿರುತ್ತೀರಿ. ಈಗ ಮಾತ್ರ ಡಿಡಿ ಕೇವಲ ಮೈಸೂರು ವಿಶ್ವವಿದ್ಯಾನಿಲಯ ಎಂದಿದ್ದು, ಇದನ್ನು ಒಪ್ಪಿಕೊಳಲು ಬರುವುದಿಲ್ಲವಾದ್ದರಿಂದ ಹಿಂದಿರುಗಿಸಲಾಗಿದೆ. ಕ್ರಮಬದ್ಧವಲ್ಲದ ಪತ್ರವ್ಯವಹಾರ ನಡೆಸುವುದು ವಿಳಂಬಕ್ಕೆ ಕಾರಣವಾಗುತ್ತದೆ. ಪುಸ್ತಕಗಳ ಪಟ್ಟಿ ಮಾಡುವಾಗ ಕ್ರಮಸಂಖ್ಯೆವಾರು ಪಟ್ಟಿ ಮಾಡಿ ಕಳಿಸಿದರೆ ತಕ್ಷಣ ಕ್ರಮಕೈಗೊಳ್ಳಲು ಅನುಕೂಲವಾಗುತ್ತದೆ ಎಂಬ ಅಂಶವನ್ನು ಸಹ ತಿಳಿಸ ಬಯಸುತ್ತೇನೆ.”

ಪ್ರಸಾರಾಂಗಕ್ಕೆ ಮುಂಗಡ ಡ್ರಾಫ್ಟ್ ಖರೀದಿ ಜವಾಬ್ದಾರಿ ನನ್ನದು. ಅದು ಸರಿಯಿತ್ತು ಎಂದು ಅವರೇ ಹೇಳಿದ್ದರು. ಬಿಲ್ಲಿನ ಉಳಿದ ಮೊತ್ತವನ್ನು ಕಳಿಸುವ ಜವಾಬ್ದಾರಿ ಬ್ಯಾಂಕಿನದು. ಇಲ್ಲಿ ತಪ್ಪು ಯಾರದ್ದೆಂದು ಗುರುತಿಸುವ, ಮತ್ತೆ ಸಾವಿರಾರು ರೂ ಮೊತ್ತದ ದಾಖಲೆಯೊಂದನ್ನು ಸಾದಾ ಅಂಚೆಯಲ್ಲಿ ಕಳುಹಿಸಬಾರದೆಂಬ ವ್ಯವಹಾರಜ್ಞಾನ ಇಲ್ಲದ ನಿರ್ದೇಶಕರ ಬಗ್ಗೆ ನನಗೆ ಕನಿಕರ ಬಂತು. ಆದರೆ ವೃಥಾ `ಕ್ರಮಬದ್ಧವಲ್ಲದ ಪತ್ರ ವ್ಯವಹಾರ ನಡೆಸುವವನು’ ಎಂಬ ಕಟಕಿ ಬಂದದ್ದಕ್ಕೆ ಕೋಪವೂ ಬಂತು. ಡಿಡಿ ಮತ್ತು ಪತ್ರವನ್ನು ನಾನು ಹರಿದೊಗೆದು, ಅವು ಬರಲೇ ಇಲ್ಲ ಎಂಬ ನಿಲುವು ತಳೆದಿದ್ದರೆ ನಿರ್ದೇಶಕರಿಗೆ ಕ್ರಮಬದ್ಧತೆಯ ಪಾಠವಾಗುತ್ತಿತ್ತೋ ಏನೋ! ಅವರು ಹೇಗೆ ಮುಂದುವರಿಯುತ್ತಾರೋ ನೋಡೋಣ ಎಂದು ಸುಮಾರು ಎರಡು ತಿಂಗಳು ಸುಮ್ಮನಿದ್ದೆ. ಅನಂತರ ಅನ್ಯಕಾರ್ಯ ನಿಮಿತ್ತ ಮೈಸೂರಿಗೆ ಹೋದವನು, ಪ್ರಸಾರಾಂಗಕ್ಕೆ ಹೋಗಿ ನಿರ್ದೇಶಕರನ್ನು ಭೇಟಿಯಾದೆ. ವೈಯಕ್ತಿಕ ಜಿದ್ದು ನನಗೇನೂ ಇರಲಿಲ್ಲವಾದ್ದರಿಂದ ಸ್ನೇಹಹಸ್ತ ಚಾಚಿದೆ. ಡ್ರಾಫ್ಟ್, ಅವರ ಪತ್ರ ಎಲ್ಲ ತೋರಿಸಿ ವಿವರಿಸಿದೆ. ಅವರು ಏನೂ ಕಡಿಮೆ ಮಾಡಲಿಲ್ಲ, ಅನನುಭವಕ್ಕೆ ಕ್ಷಮೆ ಕೇಳಿದರು. ಮಂಗಳೂರಿಗೆ ಮರಳಿದ ಮೇಲೆ ನಿರ್ದೇಶಕರ ಮನವಿಯ ಮೇರೆಗೆ ಬ್ಯಾಂಕಿನಲ್ಲಿ ಡಿಡಿ ಸರಿಮಾಡಿಸಿ ಕಳಿಸಿಕೊಟ್ಟೆ. ಅದರನಂತರ ಅವರೇ ನನ್ನಂಥವರನ್ನೆಲ್ಲ ಮೈಸೂರಿಗೆ ಕರೆಸಿಕೊಂಡು ಪ್ರಸಾರಾಂಗವನ್ನು ವ್ಯಾವಾಹಾರಿಕವಾಗಿ ಹೇಗೆ ಸುಲಭಗೊಳಿಸಬಹುದೆಂದು ಸಲಹೆ ಕೇಳಿದ್ದಂತೂ ಪ್ರಸಾರಾಂಗದ ಇತಿಹಾಸದಲ್ಲಿ ನಭೂತೋ! ಇದು ಕಾರ್ಯರೂಪದಲ್ಲೂ ಪಸರಿಸಲಿ ಎಂದು ಹಾರೈಸುತ್ತೇನೆ.

(ಅನಿಯತವಾಗಿ ಮುಂದುವರಿಯಲಿದೆ)