`ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ
ಅಧ್ಯಾಯ ಹನ್ನೆರಡು

[ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಅಂತಃಸತ್ತ್ವದೀಪ್ತ ಜನಾಂಗದ ದೈನಂದಿನ ಗತಿಶೀಲ ಜೀವನದ ವೇಳೆ ಹಲವಾರು ಮೌಲ್ಯಗಳು ಕೆನೆಗಟ್ಟುತ್ತವೆ; ಮೊಸರು ಕಡೆವಾಗ ಬೆಣ್ಣೆ ತುಣುಕುಗಳು ಮೈದಳೆಯುವಂತೆ. “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ” ಮುಂತಾದ ಅನುಭವೋಕ್ತಿಗಳು ಇಂಥ ಮೌಲ್ಯಗಳ ಮೊತ್ತಕ್ಕೆ ನಿದರ್ಶನಗಳು. ಈ ಮೊತ್ತವೇ ಸಂಸ್ಕೃತಿ – ಪೀಳಿಗೆಯಿಂದ ಪೀಳಿಗೆಗೆ ಹರಿಯುವ ಜೀವನಾದರ್ಶ, ಇದನ್ನು ಸಭ್ಯವ್ಯಕ್ತಿಗಳ ಸಹಜ ನಡೆಯಲ್ಲಿ ಸದಾ ಕಾಣಬಹುದು. ನುಡಿಗಳಲ್ಲಿ ಕೇಳಬಹುದು. ಆದರೆ ಆದರ್ಶದ ಹಾದಿ ಎಂದೂ ಸರಳವಲ್ಲ. ಪ್ರತಿಯೊಂದು ಪೀಳಿಗೆಯೂ ವ್ಯಕ್ತಿಯೂ ಈ ಹಾದಿಯನ್ನು ಸ್ವತಃ ಕಂಡುಕೊಂಡು ಅದರ ಮೇಲೆ ಅಂಜದೆಯೆ ಅಳುಕದೆಯೆ ನಡೆಯುವುದೊಂದೇ ಋಜು ಜೀವನಕ್ಕೆ ಪ್ರವರ್ತನಕಾರಿ. ತಾತ್ಕಾಲಿಕ ವೈಫಲ್ಯಗಳು? ಶಾಶ್ವತ ಸತ್ಯದೆಡೆಗಿನ ಕೈಗಂಬಗಳು – ಪರೀಕ್ಷಾ ಕೇಂದ್ರಗಳು. ನಡೆದಂತೆ ಕಾಣೆಯಾಗುವ ಸಿಂಹಿಕಾ ಪ್ರಕರಣಗಳು ಇವು. ಸಾಗರೋಲ್ಲಂಘನದ ವೇಳೆ ಹನುಮಂತ ಮೈನಾಕಾಮಿಷ ಮತ್ತು ಸಿಂಹಿಕಾಪಾಯಗಳನ್ನು ಎದುರಿಸಿದ ಪರಿ “ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ” ಅನ್ವೇಷಕನಿಗೆ ಉಲ್ಲಾಸ ಉತ್ಸಾಹ ಉಚ್ಛ್ವಾಸ ಊಡಬೇಕು.
ಉಲ್ಲಾಸನಾವೆಯನ್ನೇರಿ ಸಾರಿದೆ ನಾನು
ವರ್ತಮಾನದಿ ತೀವ್ರ ಕಾರ್ಯಮಗ್ನತೆಯಲ್ಲಿ
ಆದರ್ಶಗಳ ಬೀಡ ದಾಟುತ್ತ ಹೋದಂತೆ
ಆದೆ ನಾನಾದರ್ಶ! ವೈಚಿತ್ರ್ಯ ಅತ್ರಿಸೂನು]

ಮುದ್ದಣನ ಶಬ್ದ ಭಂಡಾರಕ್ಕೆ ಕಸಾಪ ಹಾಕಿದ ಕನ್ನ

ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಬಂಧ ಪಟ್ಟಂತೆ ಮೂರು ವಿಭಿನ್ನ ಘಟನೆಗಳೊಂದಿಗೆ ಇದೊಂದು ಪ್ರಸಂಗ ನಿರೂಪಿಸುತ್ತೇನೆ. ೧೯೯೪ರ ಕೊನೆಯ ದಿನಗಳಲ್ಲೊಂದು ದಿನ (೨೪-೧೨-೯೪) ಕಸಾಪ ಬೆಂಗಳೂರಿನ ನ್ಯಾಷನಲ್ ಕಾಲೇಜು ವಠಾರದಲ್ಲಿ ಪ್ರಥಮ ಕನ್ನಡ ಸಾಹಸ ಸಾಹಿತ್ಯ ಸಮ್ಮೇಳನ ಏರ್ಪಡಿಸಿತ್ತು. ಬಹುಶಃ ಅದು ಬೇದ್ರೆ ಮಂಜುನಾಥರ ಉತ್ಸಾಹದ ಮತ್ತು ದುಡಿಮೆಯ ಫಲ. ಅಲ್ಲಿ ನಾನೊಬ್ಬ ಪ್ರಬಂಧಕೋರ! ಅದರ ಕಲಾಪಗಳ ನಡುವೆ ನಾನು ಹತ್ತಿರದಲ್ಲೇ ಇದ್ದ ಪರಿಷತ್ತಿನ ಮಾರಾಟ ವಿಭಾಗಕ್ಕೆ ಹೋಗಿದ್ದೆ. ಅಲ್ಲಿ ಹೊಸ ಪ್ರಕಟಣೆ – ಮುದ್ದಣನ ಶಬ್ದ ಪ್ರತಿಭೆ- (ಮುಶಪ್ರ) ಡಾ| ನಾ.ದಾಮೋದರ ಶೆಟ್ಟರ ಪುಸ್ತಕ, ನೋಡಿದ ಮೇಲೆ, ಸ್ಪಷ್ಟೀಕರಣಕ್ಕಾಗಿ ಅಧ್ಯಕ್ಷ – ಗೊರು ಚನ್ನಬಸಪ್ಪರನ್ನು ಭೇಟಿ ಮಾಡಿದ್ದೆ. ಅದರ ಮುದ್ರಿತ ಬೆಲೆಯ ಬಗ್ಗೆ ನಾನು ಸೌಮ್ಯವಾಗಿ ಆಕ್ಷೇಪಿಸಿದೆ. ಆಗ ಹೋಲಿಕೆಗೆ ಒದಗಿದ್ದು ಅದೇ ಸುಮಾರಿಗೆ ಪ್ರಕಟವಾಗಿದ್ದ ನನ್ನ ಪ್ರಕಟಣೆ `ಆಲ್ಬರ್ಟ್ ಐನ್ಸ್‍ಟೈನ್’. ಇದು ಗಾತ್ರದಲ್ಲಿ ೪೨೦ ಪುಟ ಮಿಕ್ಕರೂ ಬೆಲೆ ರೂ ೪೫ ಇಟ್ಟದ್ದನ್ನು ಅಧ್ಯಕ್ಷರು ಪ್ರಶಂಸಿಸಿದರು. ನಿಸ್ಸಂದಿಗ್ದವಾಗಿ ತಮ್ಮ ೧೫೦ ಪುಟದ ಮುಶಪ್ರಕ್ಕೆ ರೂ ೫೨ ಇಟ್ಟದ್ದು ವಿಪರೀತವಾಗಿದೆ, ಇಳಿಸುತ್ತೇವೆ ಎಂದೂ ಆಶ್ವಾಸಿಸಿದರು. ಆ ನಿಟ್ಟಿನಲ್ಲಿ ಅಲ್ಲೇ ಪರಿಷತ್ತಿನ ಕಾರ್ಯದರ್ಶಿಗಳಿಗೆ ಆದೇಶವನ್ನೂ ನೀಡಿದ್ದರು.

ಮುಂದೆ ಅದೇ ಮುಶಪ್ರ ೪-೧-೧೯೯೫ರಂದು ಬಿಲ್ಲಾಗಿ ನನಗೆ ಬಂದಾಗ ಪ್ರತಿಗಳ ಬೆಲೆ ಇಳಿದಿರಲಿಲ್ಲ. ಅಂದರೆ ನಮ್ಮ ಅನೌಪಚಾರಿಕ ಮಾತುಕತೆಯ ತೀರ್ಮಾನ ನಿಜ ಆದೇಶ ಆಗಲಿಲ್ಲ ಅಥವಾ ಮುದ್ರಿತ ಬೆಲೆಯೇ ನ್ಯಾಯ ಬೆಲೆಯೆಂದು ನಿರ್ಧರಿಸಿದ್ದಿರಬೇಕು. “ನಾನಿವನ್ನು ರೂ ೫೨ಕ್ಕೇ ಮಾರಬೇಕೇ? ಅಥವಾ ಇಳಿಸಿದ ಬೆಲೆ ಎಷ್ಟೆಂದು ದೂರವಾಣಿಸಿ ತಿಳಿಸಿ, ಹಿಂದಿನಿಂದ ಯುಕ್ತ ಹೊಂದಾಣಿಕೆ ಪತ್ರ ಕಳಿಸಿ” ಎಂದೇ ಸ್ಪಷ್ಟವಾಗಿ ಪತ್ರಿಸಿ ಕೇಳಿದ್ದೆ.

೧-೧-೧೯೯೫ರಂದು ದಕಜಿಲ್ಲಾ ಕಸಾಪದ ಆಶ್ರಯದಲ್ಲಿ ಹಾಮಾನಾ ಔಪಚಾರಿಕ ಲೋಕಾರ್ಪಣೆ ಮಾಡಿದ ಕೃತಿಯಾದರೂ ಇದೇ ಮುಶಪ್ರ. ಸಭಾಧ್ಯಕ್ಷತೆಯನ್ನು ಕಸಾಪದ ಜಿಲ್ಲಾಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಿದ್ದರು. ಹಾಮಾನಾ ಮತ್ತು ಲೇಖಕ ನಾದಾಶೆಟ್ಟಿ ಈ ಪುಸ್ತಕದ ಬೇರೊಂದೇ ಅಧ್ವಾನವನ್ನು ಹೊರಗೆಡಹಿದರು. ೧೪೦ ಪುಟಗಳ ಪುಸ್ತಕದಲ್ಲಿ ೨೫೦ಕ್ಕೂ ಮಿಕ್ಕು ಮುದ್ರಣ ದೋಷಗಳು! ನಾದಾಶೆಟ್ಟರು ೧. ಪರಿಷ್ತತಿಗಾಗಿ ಪುಸ್ತಕವನ್ನು ಮಂಗಳೂರಿನಲ್ಲೇ ಅಂದರೆ ಪೂರ್ಣ ತಮ್ಮ ಜವಾಬ್ದಾರಿಯಲ್ಲೇ ಮುದ್ರಿಸಿ ಕೊಡಲು ಸಿದ್ಧರಿದ್ದರಂತೆ. ೨. ಹಾಗೆ ಮಾಡುವಲ್ಲಿ ಪರಿಷತ್ತಿನ ನಿಗದಿತ ಮುದ್ರಣ ವೆಚ್ಚ ಮೀರಿದಲ್ಲಿ ವೈಯಕ್ತಿಕವಾಗಿ ತಾವೇ ಭರಿಸುವ ಮಾತೂ ಕೊಟ್ಟಿದ್ದರಂತೆ. ೩. ಅದೇ ಅಸಾಧ್ಯವಾದರೆ ಕರಡಚ್ಚು ಕಳಿಸಿದರೆ ಒಪ್ಪೊತ್ತಿನಲ್ಲಿ ತಿದ್ದಿ ತ್ವರಿತ ಮರುಟಪಾಲಿನಲ್ಲಿ ಕಳಿಸುವ ಆಶ್ವಾಸನೆಯನ್ನೂ ಕೊಟ್ಟಿದ್ದರಂತೆ. ಅವರು ಇವನ್ನೆಲ್ಲ ಸಭೆಗೆ ನಿವೇದಿಸಿದರು. ಹಾಮಾನಾ ಅಂತೂ `ಇನ್ನು ಪರಿಷತ್ತು ಪುಸ್ತಕಕ್ಕೆ ತಪ್ಪು ಸರಿ ಪಟ್ಟಿ ಸೇರಿಸುವುದಲ್ಲ. ಎಲ್ಲ ಪ್ರತಿಗಳನ್ನು ಹಿಂತೆಗೆದುಕೊಂಡು ದೋಷರಹಿತ ಮರುಮುದ್ರಣವನ್ನೇ ಕೈಗೊಳ್ಳಬೇಕು’ ಎಂದು ಸಾರಿದರು.

ಇವನ್ನೆಲ್ಲ ನಾನು ಕಸಾಪ ಅಧ್ಯಕ್ಷ ಗೊರುಚ ಅವರಿಗೆ ಪತ್ರ ಬರೆದು ತಿಳಿಸಿದೆ. ಅವರು ಕ್ಷಮಾಪತ್ರ ಬರೆದರು. ಪ್ರತಿಗಳನ್ನು ವಾಪಾಸು ಪಡೆದರು. ಆದರೆ ಅಲ್ಲಿಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆಯಲ್ಲಿ ನನ್ನ ಹಣದ ಹೊಂದಾಣಿಕೆಗೆ ಬೇರೇ ಪುಸ್ತಕಗಳನ್ನು ಪಡೆಯಬೇಕಾದರೆ ಇನ್ನೊಂದೇ ಅಧ್ಯಕ್ಷಾವಧಿ (ಸಾಶಿ ಮರುಳಯ್ಯ) ತೊಡಗಿಯಾಗಿತ್ತು! ಆದರೆ ಮಶಪ್ರ ಏನಾಯ್ತು? ತಿದ್ದೋಲೆ ಸಹಿತವೋ ಮರುಮುದ್ರಣವೋ – ನನಗೆ ಅದು ಕಡಿದ ಎಳೆ, ಹಾಗಿರಲಿ.

ಅದಕ್ಷತೆಯಲ್ಲೊದಗಿದ ನಷ್ಟದ ವ್ಯವಹಾರ
೧೯೯೭ರ ಜುಲೈಯಲ್ಲಿ ಕಸಾಪಕ್ಕೆ ಸಾಕಷ್ಟು ದೊಡ್ಡ ಬೇಡಿಕೆ ಕಳಿಸಿದೆ. ಆಗಸ್ಟಿನಲ್ಲಿ ಪರ್ವತ ಪ್ರಸವದಂತೆ ಪುಟ್ಟ ಪುಸ್ತಕ ಕಟ್ಟು ಬಂತು. ಅದರ ದುಸ್ಥಿತಿಯ ಕುರಿತು ಸ್ವಯಂವಿವರಣೆ ಕೊಡುವ, ನಾನು ಕಸಾಪ ಅಧ್ಯಕ್ಷರಿಗೆ ೨೫-೮-೧೯೯೭ರಂದು ಬರೆದ ಪತ್ರದ ಸಾರಾಂಶ ಹೀಗಿದೆ. “ನೀವು ಕಳಿಸಿದ ಶೀರ್ಷಿಕೆಗಳ ಸಂಖ್ಯೆ ಐದು, ಒಟ್ಟು ಪ್ರತಿಗಳು ಇಪ್ಪತ್ತು. ಮುದ್ರಿತ ಬೆಲೆಯ ಮೊತ್ತ ರೂ ೬೭೧, ನನಗೆ ದಕ್ಕಿದ ವ್ಯಾಪಾರೀ ವಟ್ಟಾ ೨೨೧. ಆದರೆ ಖರ್ಚು? ಬಿಲ್ಲಿನಲ್ಲೇ ತೋರಿಸಿದಂತೆ ಲಾರಿಗೆ ಸಾಗಣೆ ಮತ್ತು ಅಂಚೆಗೆ ರೂ ೨೫, ಲಾರಿ ಸಾಗಣೆ ರೂ ೫೦. ದಾಖಲೆಗಳು ಬ್ಯಾಂಕ್ ಮೂಲಕ ಬರುವುದರಿಂದ ಬ್ಯಾಂಕ್ ವೆಚ್ಚ ರೂ ೪೫, ಲಾರಿಯಿಂದ ಅಂಗಡಿಗೆ ೧೫ – ಒಟ್ಟಾರೆ ರೂ ೧೩೫. ಅಂದರೆ ಅಷ್ಟೂ ಪುಸ್ತಕಗಳು ನನ್ನಲ್ಲಿ ಯಾವುದೇ ಸಾಂಸ್ಥಿಕ ಅಥವಾ ವಿಶೇಷ ಸಂದರ್ಭದ ಮಾರಾಟಗಳಿಗೆ ಒಡ್ಡಿಕೊಳ್ಳದೇ ಕಾಲ ವಿಳಂಬದಿಂದ ನಷ್ಟ ಬಡ್ಡಿ ತಿನ್ನದೇ ಮಾರಿ ಹೋದರೆ ಆದಾಯ ಸುಮಾರು ರೂ ೮೫. ಅಂದರೆ ೧೪%! ೧೯% ಬಡ್ಡಿ ದರದ ಬ್ಯಾಂಕ್ ಓಡಿ ಖಾತೆ, ಅಂಗಡಿ ಬಾಡಿಗೆ, ವಿದ್ಯುತ್ ವೆಚ್ಚ, ಸಹಾಯಕನ ಸಂಬಳದ ಕೊನೆಯಲ್ಲಿ `ಯಜಮಾನ’ನಿಗೆ ಆದಾಯ ಸಾಕೇ?

“ತಪ್ಪು ಯಾರದು ಎನ್ನುವುದಕ್ಕೆ ನನ್ನ ಬೇಡಿಕೆಯ ಪಟ್ಟಿ ನೋಡಿ. ನಿಮ್ಮ ತಾರೀಕುರಹಿತ, ಆದರೆ ಹೊಸತೆಂದೇ ಕೊಡಲ್ಪಟ್ಟ ಮುದ್ರಿತ ಪಟ್ಟಿ ನೋಡಿಯೇ ನಾನು ಸಾಕಷ್ಟು ದೀರ್ಘ ಬೇಡಿಕೆ ಸಲ್ಲಿಸಿದ್ದೆ. ಅದರಲ್ಲೂ ಕೆಲವು ತೀರಾ ದೊಡ್ಡ ಸಂಖ್ಯೆಯಲ್ಲೇ (ತುಳು ಜನಪದ ಸಾಹಿತ್ಯ, ಹೊಸಗನ್ನಡ ಸಾಹಿತ್ಯ ಇತ್ಯಾದಿ) ಬೇಡಿಕೆ ಕೊಟ್ಟಿದ್ದೆ. ಸಾಲದ್ದಕ್ಕೆ ಅವು ಒಂದೋ ಈ ವಲಯದ ಸಾಂಸ್ಕೃತಿಕ ವೈಶಿಷ್ಟ್ಯಕ್ಕೆ ಇಂಬು ಕೊಡುವಂತವು ಅಥವಾ ಅಧ್ಯಯನಾತ್ಮಕ ಅಗತ್ಯಗಳಿಗೆ ಅನಿವಾರ್ಯವಾದವು ಎಂಬುದನ್ನೂ ವಿವರಿಸಿದೆ. ಮತ್ತೆ ಅವುಗಳ ಬಗ್ಗೆ ನನ್ನಲ್ಲಿರುವ ಪಟ್ಟಿಯಲ್ಲಾಗಲೀ ಪ್ರಸ್ತುತ ಬಿಲ್ಲಿನೊಡನೆ ಬಂದ ಪಟ್ಟಿಯಲ್ಲಾಗಲೀ (ನನ್ನಲ್ಲಿ ಹಿಂದಿದ್ದದ್ದೂ ಅದೇ ಮುದ್ರಣ!) ಅಲಭ್ಯ ಎನ್ನುವ ನಕ್ಷತ್ರ ಗುರುತಿನ ಸೂಚನೆ ಇಲ್ಲ. ಅವು ಯಾವವನ್ನೂ ಕಳಿಸದೆ ಅದಕ್ಕೆ ಸಮಜಾಯಿಷಿಯನ್ನೂ ಕೊಡದೆದೇ ಈ ಪಾರ್ಸೆಲ್ ಎಂಬ ಶಿಕ್ಷೆ ಕೊಟ್ಟದ್ದು ನನ್ನ ಯಾವ ಪಾಪ ಕರ್ಮಕ್ಕೆ? ಸದ್ಯ ನೀವು ಕಳಿಸಿದ ಪಟ್ಟಿಯೂ ವಾಸ್ತವವನ್ನು ಹೇಳುತ್ತಿಲ್ಲ ಎಂದ ಮೇಲೆ ಅದನ್ನು ಕಳಿಸುವ ಠಕ್ಕು ಯಾಕೆ? ನನಗಾಗಿ ಹೊಸ ಪಟ್ಟಿ ಮುದ್ರಿಸಿ ಎಂದು ಕೇಳುತ್ತಿಲ್ಲ. ಮುದ್ರಿತ ಪಟ್ಟಿಯಲ್ಲಿ ಅಲಭ್ಯ ಪ್ರತಿಗಳನ್ನು ಹೊಡೆದು ಹಾಕಿ, ಹೊಸದಾಗಿ ಸೇರ್ಪಡೆಯಾದ ನಾಲ್ಕೆಂಟು ಶೀರ್ಷಿಕೆಗಳನ್ನು ಬರೆದು ಸೇರಿಸುವುದು ಕನ್ನಡ ಸೇವೆಯಲ್ಲವೇ?

“ಸರಕಾರದ ಅನುದಾನ, ಸಾರ್ವಜನಿಕ ಸಹಾಯಧನಗಳ ಲಭ್ಯತೆಯಲ್ಲಷ್ಟೇ ಅಲ್ಪ ಕ್ರಿಯಾಶೀಲವಾಗಿ ಮಹತ್ತಿನ ಪ್ರಚಾರವನ್ನು ಮಾತ್ರ ಮರೆಯದೇ ಪಡೆಯುವ ಎಲ್ಲ ಸರಕಾರೀ ಅರೆ ಸರಕಾರೀ ಪುಸ್ತಕೋದ್ಯಮ ಸಂಸ್ಥೆಗಳು ಈ ತೆರದಲ್ಲಿ ನಿಜವೃತ್ತಿಪರರನ್ನು ನಿಷ್ಕಾರಣವಾಗಿ ಹಿಂಸಿಸುವುದನ್ನು ಕೇಳಿ, ಅನುಭವಿಸಿ ನನಗೆ ಸಾಕಾಗಿ ಹೋಗಿದೆ. ಕೇವಲ ವೈಯಕ್ತಿಕ ಒಳ್ಳೆಯತನದಿಂದ ನಿಮ್ಮಂಥವರು ಸಂಗತಿಗಳನ್ನು ಸರಿದಾರಿಗೆ ತರಬಹುದು ಎಂದನ್ನಿಸಿದ್ದರಿಂದ ನೇರ ಬರೆದಿದ್ದೇನೆ. ನಿಮ್ಮ ಆಡಳಿತಾವಧಿಗೂ ಮೊದಲು ನಡೆದ ಇಂಥದ್ದೇ ಇನ್ನೊಂದು ಪ್ರಸಂಗ ನೆನೆಗುದಿಗೆ ಬಿದ್ದದ್ದನ್ನು (ಮುಶಪ್ರದ ಹಣ ಹೊಂದಾಣಿಕೆ) ಬಗೆಹರಿಸಿದವರು ನೀವೆನ್ನುವುದನ್ನು ನಾನು ಮರೆತಿಲ್ಲ. ಬರಲಿರುವ ಮಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವೀ ಸಭೆಯೊಂದಕ್ಕೆ ಬಂದ ನೀವು ನನ್ನಂಗಡಿಗೆ ಅನೌಪಚಾರಿಕ ಭೇಟಿಕೊಟ್ಟು ಪ್ರೋತ್ಸಾಹದ ನುಡಿಗಳಾಡಿದ್ದನ್ನು ನಾನು ನೆನಪಿನಲ್ಲಿಟ್ಟುಕೊಂಡೇ ಪರಿಹಾರದ ನಿರೀಕ್ಷೆಯಲ್ಲಿರುತ್ತೇನೆ.”

ಪ್ರತಿಕ್ರಿಯೆ ಬರಲೇ ಇಲ್ಲ. ೨೩-೯-೧೯೯೭ರಂದು ನೆನಪಿನೋಲೆ ಬರೆದೆ: “ಸಭೆ ಸಮಾರಂಭಗಳಲ್ಲಿ ಆಡುವ ಸಾಮಾನ್ಯೀಕರಣದ ಮಾತುಗಳಿಗೆ ಘನತೆ ಬರುವುದು ಇಂಥ ಪ್ರಾಯೋಗಿಕ ಸಮಸ್ಯೆಗಳ ನಿಭಾವಣೆಯಲ್ಲಿ. ಇಂದು ಭಾಂಗಿಯ ನಷ್ಟದಿಂದ ನಾನು ಮುಳುಗುವುದಿಲ್ಲ, ಒಂದು ತಪ್ಪಿನಿಂದ ಕಸಾಪವನ್ನು ಅಥವಾ ಯಾವುದೇ ವ್ಯಕ್ತಿಯನ್ನು ದ್ರೋಹಿ ಎಂದೂ ನಾನು ಭಾವಿಸುವುದಿಲ್ಲ. ಆದರೆ ನಿಗೂಢ ಮೌನ ಮತ್ತು ಸ್ಪಷ್ಟ ದಾಖಲೆಗಳೊಡನೆ ದೂರು ಬಂದಾಗಲೂ ಚರ್ಚಿಸದೆ ಮುಂದುವರಿಯುವ ಧೋರಣೆ ಮಾತ್ರ ಆರೋಗ್ಯಕರವಲ್ಲ. ಕೂಡಲೇ ಉತ್ತರಿಸಿ.”
ಈ ಹಂತದಲ್ಲಿ ಮಿಣಿಯ ಅರ್ಥಾತ್ ಒಟ್ಟು ಪ್ರಸಂಗಕ್ಕೆ ಸಂಬಂಧಿಸಿದ ಮೂರನೆಯ ಎಳೆಯನ್ನು ಅಥವಾ ಘಟನೆಯನ್ನು ವಿವರಿಸಿ, ಹುರಿಯನ್ನು ಹೊಸೆಯುತ್ತೇನೆ ಅಥವಾ ಕಥನವನ್ನು ಮುಂದುವರಿಸುತ್ತೇನೆ.

ಸುಮಾರು ಎಂಟುತಿಂಗಳ ಹಿಂದೆ ಹಾಸನದಲ್ಲಿ ೬೫ನೇ ಸಾಹಿತ್ಯ ಸಮ್ಮೇಳನ ಇನ್ನಿಲ್ಲದ ಗೊಂದಲದೊಡನೆ ಮುಗಿದಿತ್ತು. ಆಗ ನಾನು ಕಸಾಪದ ದಕ ಜಿಲ್ಲಾಧ್ಯಕ್ಷರಿಗೆ (ಹರಿಕೃಷ್ಣ ಪುನರೂರು) ಬರೆದ ಪತ್ರ (೬-೧-೧೯೯೭) ಹೀಗಿದೆ: “ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳೂರಿನಲ್ಲಿ ಆಗುವಂತೆ ಮಾಡುವಲ್ಲಿ ಮತ್ತದನ್ನು ಯಶಸ್ವಿಯಾಗಿ ನಡೆಸುವಲ್ಲಿ ನಿಮ್ಮದು ಪ್ರಧಾನ ಪಾತ್ರವೇ ಇರುತ್ತದೆ ಎಂದು ತಿಳಿದೇ ಈ ಪತ್ರ ಬರೆಯುತ್ತಿದ್ದೇನೆ. ಮೊದಲು ನಿಮಗೆ ಅಭಿನಂದನೆಗಳು.

“ಹಾಸನ ಸಮ್ಮೇಳನಾಂತ್ಯದಲ್ಲಿ ಅನೌಪಚಾರಿಕವಾಗಿ ನೀವು ಪುಸ್ತಕ ವ್ಯಾಪಾರಿಗಳಿಗೆ ಮಂಗಳೂರು ಸಮ್ಮೇಳನಕ್ಕೆ ಆಹ್ವಾನ ಕೊಟ್ಟದ್ದು ತಿಳಿಯಿತು. ಅದರಲ್ಲಿ ಪುಸ್ತಕ ಮಳಿಗೆಗಳನ್ನು ಮತ್ತು ಮಾರಾಟಗಾರರಿಗೆ ಆತಿಥ್ಯವನ್ನು ಉಚಿತವಾಗಿ ಕೊಡುವ ನಿಮ್ಮ ಮೊದಲ ಸೂಚನೆ ಆಕರ್ಷಣೀಯವಾಗಿದೆ. ಇದರ ಔಚಿತ್ಯ, ಪ್ರಾಯೋಗಿಕತೆಯನ್ನು ನೀವು ವಿಮರ್ಶಿಸಿ ಬದಲಾಯಿಸಿದರೆ ತಪ್ಪೇನೂ ಇಲ್ಲ. ನನ್ನ ಆಕ್ಷೇಪಣೆ ಇರುವುದು ಎರಡನೆಯ ಸೂಚನೆಗೆ – `ಎಲ್ಲ ಮಾರಾಟಗಾರರು ೨೦% ರಿಯಾಯ್ತಿ ವ್ಯಾಪಾರ ನಡೆಸಬೇಕು’, ಇದು ಸರಿಯಲ್ಲ. ಸಮ್ಮೇಳನ, ಗೋಷ್ಠಿ, ಭಾಷಣಗಳು ನಡೆದರೂ ನಡೆಯದಿದ್ದರೂ ಸಾಹಿತ್ಯ ಗಟ್ಟಿಗೊಳ್ಳುವುದು ಪುಸ್ತಕೋದ್ಯಮದಲ್ಲಿ. ವರ್ಷಕ್ಕೊಮ್ಮೆ ನಡೆಯುವ ಮೂರು ನಾಲ್ಕು ದಿನಗಳ ಸಂಭ್ರಮಕ್ಕಾಗಿ ಪುಸ್ತಕೋದ್ಯಮ ತನ್ನ ಆರ್ಥಿಕ ನಿಬಂಧನೆಗಳನ್ನು ಸಡಿಲಿಸಿಕೊಳ್ಳುವುದು ಸಹಜವಾದರೆ, ರಿಯಾಯ್ತಿ ಎನ್ನುವುದು ಕೊಳ್ಳುಗರ ಹಕ್ಕಾಗುತ್ತದೆ. ಸಾಲದ್ದಕ್ಕೆ ಮುಂದಿನ ಸಮ್ಮೇಳನ ಸಂಘಟಕರು ತಮ್ಮ ಹೆಚ್ಚುಗಾರಿಕೆ ಮೆರೆಸಲು ರಿಯಾಯ್ತಿ ದರವನ್ನು ಏರಿಸುವ ಅಪಾಯವೂ ಉಂಟು. ಇದಕ್ಕೆ ಉದಾಹರಣೆಯಾಗಿ ಹಾಸನದಲ್ಲೇ ಪುಡಾರಿಯೊಬ್ಬ – ಬಹುಶಃ ಆಗ ಸಚಿವರಾಗಿದ್ದ ಎಚ್.ಡಿ ರೇವಣ್ಣ, ಎರಡನೇ ದಿನ ಸಾರ್ವಜನಿಕವಾಗಿ `ಎಲ್ಲ ಮಳಿಗೆಗಳೂ ಪುಸ್ತಕಗಳನ್ನು ಶೇಕಡಾ ಐವತ್ತರ ರಿಯಾಯ್ತಿ ದರದಲ್ಲಿ ಮಾರುತ್ತಾರೆ’ ಎಂದು ಸುಳ್ಳೇ ಘೋಷಿಸಿ ಗೊಂದಲವೆಬ್ಬಿಸಿದ್ದು ನಿಮಗೆ ತಿಳಿದಿರಬೇಕು.

“ಸರಕಾರೀಕರಣದ (=ಪರಿಸರಮಾಲಿನ್ಯ) ಗಾಢ ಪ್ರಭಾವದಲ್ಲಿ ಸ್ವಾಯತ್ತತೆಯನ್ನು ಈಗಾಗಲೇ ಸಾಕಷ್ಟು ಕಳೆದುಕೊಂಡು ಬಳಲಿರುವ ಪುಸ್ತಕೋದ್ಯಮಕ್ಕೆ ಯಾವುದೇ ಬಾಹ್ಯ ನಿರ್ದೇಶನಗಳು ಮಾರಕವೇ ಆಗುತ್ತವೆ. ಈಗ ಪುಸ್ತಕಗಳ ಬೆಲೆ ನಿರ್ಧಾರದ ಮುಖ್ಯ ಘಟಕಗಳು ಮುದ್ರಣ ವೆಚ್ಚ, ಲೇಖಕ ಸಂಭಾವನೆ, ವ್ಯಾಪಾರಿ ವಟ್ಟಾ ಮತ್ತು ಪ್ರಕಾಶಕನ ಆದಾಯ. ಮುಂದೆ `ಸಮ್ಮೇಳನ ರಿಯಾಯ್ತಿ’ ಎಂಬ ಹೊಸ ಘಟಕವೇ ಸೇರಿ ಮುದ್ರಿತ ಬೆಲೆ ಏರಿಕೆಯಷ್ಟೇ ಸಾಧಿಸಿದಂತಾಗುತ್ತದೆ. ನಿಮ್ಮ ಹೋಟೆಲ್ ಉದ್ಯಮದಲ್ಲೇ (ಹರಿಕೃಷ್ಣ ಪುನರೂರು ಹೋಟೆಲುಗಳ ಮಾಲಿಕರು) ಹೊರಗಿನ ಶಕ್ತಿಗಳು ಅತಾರ್ಕಿಕವಾಗಿ `ಬೆಲೆ ಇಳಿಸಿ’ ಎಂದದ್ದಕ್ಕೆ ತಲೆಬಾಗಿದಂತೆ ತೋರಿಸಿದರೂ ನೀವು ತಿನಿಸು ಪಾನೀಯಗಳ ಗಾತ್ರ ಇಳಿಸಿ ಸುಧಾರಿಸಿಕೊಳ್ಳುವಂತಾದದ್ದು ನಾನು ಜ್ಞಾಪಿಸಬೇಕೇ?

“ದಯವಿಟ್ಟು ಪುಸ್ತಕೋದ್ಯಮವನ್ನು ನಿರ್ದೇಶಿಸುವ ಸೂತ್ರಗಳನ್ನು ಮೂರು ದಿನದ ಉತ್ಸವಕ್ಕಾಗಿ ಗೋಜಲು ಮಾಡಬೇಡಿ. ಈ ನಿಟ್ಟಿನಲ್ಲಿ ಸಮ್ಮೇಳನದ ಪೂರ್ವಭಾವೀ ಸಭೆಗಳಲ್ಲೇ ಆದರೂ ನೀವು ಕೇಳಿದರೆ, ನಾನು ನನ್ನ ಮಿತಿಯಲ್ಲಿ ಹಾಜರಿದ್ದು ವಿವರಣೆ ಕೊಡಲು ಸಿದ್ಧನಿದ್ದೇನೆ. ಮಾಹಿತಿಯ ನೆಲೆಯಲ್ಲಿ ಈ ಪತ್ರದ ಯಥಾ ಪ್ರತಿಯನ್ನು ಕಸಾಪ ಅಧ್ಯಕ್ಷರಿಗೂ ಕೆಲವು ಗೌರವಾನ್ವಿತ ಪ್ರಕಾಶಕ ಮಿತ್ರರಿಗೂ ಕಳಿಸುತ್ತಿದ್ದೇನೆ. ನಿಮ್ಮ ಸಹೃದಯೀ ಉತ್ತರ ನಿರೀಕ್ಷೆಯೊಡನೆ ವಿರಮಿಸುತ್ತೇನೆ.”

ಭಾರೀ ಚುರುಕಾಗಿಯೇ ಜಿಲ್ಲಾಧ್ಯಕ್ಷರ ಉತ್ತರವೇನೋ ಬಂತು. ಆದರೆ ಧೋರಣೆ ಹೇಗಿತ್ತು ಎನ್ನುವುದಕ್ಕೆ ಪತ್ರದ ಸಾರಂಶ ನೋಡಿ. “ನಿಮ್ಮ ಪತ್ರ ಓದಿ ಅಭಿಪ್ರಾಯ ತಿಳಿಯಿತು. ನಮ್ಮ ಕಮಿಟಿ ತೀರ್ಮಾನಿಸಿದಂತೆ ಎಲ್ಲರೂ ನಡೆದುಕೊಳ್ಳಬೇಕು. ನನ್ನ ಸಲಹೆಯಲ್ಲಿ ಬದಲಾವಣೆ ಇಲ್ಲ. ನಿಮ್ಮ ಅಭಿಪ್ರಾಯ ಸೂಚಿಸಿದ ಬಗ್ಗೆ ಧನ್ಯವಾದಗಳು.”

ನಾನು ಯಾವ ಸಮ್ಮೇಳನಗಳಲ್ಲೂ ಮಳಿಗೆ ಇಡುವವನಲ್ಲ. ಹಾಸನದಲ್ಲಿ ಮತ್ತು ಸಾಮಾನ್ಯವಾಗಿ ಎಲ್ಲ ಸಮ್ಮೇಳನಗಳಲ್ಲಿ ಮಳಿಗೆ ಇಡುವಂಥ ಸಾಹಿತ್ಯ ಭಂಡಾರ, ಸಮಾಜ ಪುಸ್ತಕಾಲಯ ಮುಂತದವರಿಗೆ ಇದರ ಪ್ರತಿ ಕಳಿಸಿ “ಹೋರಾಟ ಅಥವಾ ಮಣಿಯುವ ಆಯ್ಕೆಯನ್ನು ನಿಮಗೇ ಬಿಟ್ಟಿದ್ದೇನೆ. ಸರ್ವಾಧಿಕಾರೀ ಜಿಲ್ಲಾಧ್ಯಕ್ಷರ ಪತ್ರ ನೋಡಿದ ಮೇಲೆ ಅವರ ಸಮಿತಿ ಸಭೆಗೆ ನನ್ನನ್ನು ಕರೆಸುವುದಾಗಲೀ ನನ್ನ ಪತ್ರವನ್ನು ಅವರೇ ಸಮಿತಿಯ ಮುಂದೆ ಮಂಡಿಸುವುದಾಗಲೀ ನಡೆಯಲಾರದು ಎನ್ನುವುದು ಸ್ಪಷ್ಟ. ಇಂದು ೨೦% ಹೇಳಿರಬಹುದು, ನಾಳೆ ೫೦% ಹೇಳಬಾರದು ಎಂದಿಲ್ಲ. ನೀವು ಒಪ್ಪಲಿಲ್ಲವೆಂದರೆ ಅವರು ಗಂಟುಮೂಟೆ ಕಟ್ಟಿ ಎನ್ನಲೂಬಹುದಲ್ಲವೇ? ಏನು ನಿರ್ಧರಿಸುತ್ತೀರೋ ತಿಳಿಸಿ. ಉದ್ಯಮದ ಹಿತಕ್ಕಾಗಿ ನನ್ನಿಂದೇನಾದರೂ ಆಗಬೇಕಿದ್ದರೆ ತಿಳಿಸಿ, ನಾನು ಸಿದ್ಧ.”

ಸಮ್ಮೇಳನ ಸಮೀಪಿಸುತ್ತಿದ್ದಂತೆ ಸುದ್ದಿಯ ಸುಗ್ಗಿಯಲ್ಲಿ ಸಾಂಗತ್ಯ ಸೊರಗಿದಂತನ್ನಿಸಿ ಸಾಮಾನ್ಯನ ಸ್ತರದಿಂದ ಎಲ್ಲ ಸಮಾಚಾರಪತ್ರಗಳ ಸಂಪಾದಕರುಗಳಿಗೆ ಹೀಗೊಂದು ಪತ್ರಿಸಿದೆ:
“ಕನ್ನಡ ಸಾಹಿತ್ಯ ಸಮ್ಮೇಳನ ಹಬ್ಬವಲ್ಲ, ಶೋಕ ಸಭೆಯಾಗಬೇಕು!
ವಾರದ ಗೆಯ್ಮೆಯ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಹಾಗೂ ಮುಂದಿನ ವಾರದ ದುಡಿಮೆಗೆ ಸ್ಫೂರ್ತಿ ಹಾಗೂ ಆವಶ್ಯಕತೆಗಳಿಗಾಗಿ ಹಿಂದೆಲ್ಲ ವಾರದ ಸಂತೆ ಊರೂರಿನಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಅಷ್ಟೇಕೆ, ಈಗಲೂ ಅದರ ಪಳೆಯುಳಿಕೆಗಳನ್ನು ಕೆಲವೆಡೆಗಳಲ್ಲಿ ನೋಡಬಹುದು. ದೊಡ್ಡ ಮಟ್ಟದ ಸಂತೆ ಅಥವಾ ವಾರ್ಷಿಕ ಸಂತೆಯ ರೂಪದಲ್ಲಿ ಜಾತ್ರೆಗಳನ್ನೂ ಹೆಸರಿಸಬಹುದು. ಸಾಹಿತ್ಯವಲಯದ ಇಂಥದ್ದೇ ಅಗತ್ಯಗಳಿಗಾಗಿ ಹುಟ್ಟಿಕೊಂಡವು – ಭಾಷಣ, ವಿಚಾರಗೋಷ್ಠಿ, ಸಾಹಿತ್ಯ ಸಮ್ಮೇಳನ. ಆದರೆ ದಲ್ಲಾಳಿಗಳು, ತಲೆಹಿಡುಕರು ಸಂತೆ ಜಾತ್ರೆಗಳನ್ನು ಕುಲಗೆಡಿಸಿದಂತೆ ಇಂದು ಗೋಷ್ಠಿ ಸಮ್ಮೇಳನಗಳೂ ಅರ್ಥ ಕಳೆದುಕೊಳ್ಳುತ್ತಿವೆ. ಅನೈತಿಕ ಹಣ ಸಂಚಯನ ಮತ್ತು ಸಂಘಟನೆಯ ಸಾಕಾಣಿಕೆಯ ಅದ್ದೂರಿಯಲ್ಲಿ ಸಾಹಿತ್ಯಪ್ರೇಮಿಗಳು ಬಳಲುತ್ತಾರೆ, ಸಾಹಿತಿಗಳು ನಿಸ್ತೇಜರಾಗುತ್ತಾರೆ ಮತ್ತು ಸಾಹಿತ್ಯ ಜಾಳಾಗುತ್ತದೆ. ಆರಾಧನೀಯ ಬಿಂಬ ಕುಬ್ಜವಾಗಿ ಬಾಜಾಬಜಂತ್ರಿ ಮೆರೆಯುತ್ತದೆ.

“ಸಮ್ಮೇಳನದ ಯಶಸ್ಸು ಸಂಘಟನೆಯ ಮೌನದಲ್ಲಿ ಪ್ರಕಟವಾಗಬೇಕು. ಸಮ್ಮೇಳನಗಳ ಪಟ್ಟಿಯಲ್ಲಿ ಕೇವಲ ಕ್ರಮ ಸಂಖ್ಯೆಯಾದ ೬೬ಕ್ಕೆ ಒತ್ತುಕೊಟ್ಟು ಕೃತಿ ಹೆರಿಗೆ ಸಾಧುವಲ್ಲ. ಐತಿಹಾಸಿಕ ಆಕಸ್ಮಿಕಗಳು, ಉದಾಹರಣೆಗೆ ಸ್ವಾತಂತ್ರ್ಯ ಸ್ವರ್ಣೋತ್ಸವವೋ ಅಬ್ಬಕ್ಕನೋ ಮತ್ತೊಂದೋ ಸರ್ವಸ್ವ ಎಂಬಂತೆ ಸಂಭ್ರಮ ಸಮ್ಮಾನಗಳು, ಔಪಚಾರಿಕ ಸಮಿತಿ ಮತ್ತು ಕಲಾಪಗಳು ರೂಪುಗೊಳ್ಳುತ್ತ ನಿತ್ಯ ಕಾಡುವ ಸುದ್ದಿಗಳ ಭರಾಟೆಯಲ್ಲಿ ಔಚಿತ್ಯ ಎಂಬ ಬಹುಮುಖ್ಯ ಗುಣವೇ ಕಾಣೆಯಾಗಿದೆ. ಸಾಹಿತ್ಯಕ ಆಯ-ವ್ಯಯ ಪಟ್ಟಿಯ ಬಗ್ಗೆ ಗಂಭೀರ ದೃಷ್ಟಿ ಬೀರುವುದು ಮತ್ತು ಆದರ್ಶಗಳನ್ನು ರೂಢಿಸುವ ವಾತಾವರಣ ಕಲ್ಪಿಸುವುದು ಸಾಧ್ಯವಾಗಿದ್ದರೆ ಇದು ನಿಜಕ್ಕೂ ಬುದ್ಧಿಯ ಜಾತ್ರೆಯಾಗಬಹುದಿತ್ತು. ಈಗಲೂ ತಡವಾಗಿಲ್ಲ ಎಂದು ಸೂಚಿಸುವಂತೆ ನನ್ನ ಮಿತಿಗೆ ನಿಲುಕಿದ ಕೆಲವು ಅಪರಿಹಾರ್ಯ ಸಾಹಿತ್ಯಕ ಸಮಸ್ಯೆಗಳನ್ನು ಮಂಡಿಸಲಿಚ್ಛಿಸುತ್ತೇನೆ.

“೧. ಕನ್ನಡ ಸಾಹಿತ್ಯ ಪರಿಷತ್ತು ಕೆಲವು ವರ್ಷಗಳ ಹಿಂದೆ ಮಂಗಳೂರಿನಲ್ಲೇ ಜಿಲ್ಲಾ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ, ಮುದ್ದಣನ ಬಗ್ಗೆ ಪ್ರಕಟಿಸಿದ ಒಂದು ಪುಸ್ತಕ ದೋಷಪೂರ್ಣವೆಂದು ಕಂಡದ್ದರಿಂದ ಪೂರ್ಣ ಪ್ರತಿಗಳನ್ನು ಹಿಂದೆ ಪಡೆಯಿತು. ಮತ್ತು ಪರಿಷ್ಕೃತ ಮುದ್ರಣವನ್ನು ಬೇಗನೆ ತರುವ ಆಶ್ವಾಸನೆಯನ್ನೂ ಕೊಟ್ಟಿತು. ಇಂದಿನವರೆಗೂ ಮಾತು ನಿಜ ಮಾಡದ ಕಸಾಪ ಸಮ್ಮೇಳನದಲ್ಲಿ ಯಾವ ಸಾಹಿತ್ಯಕ್ಕೇನು ಸಮ್ಮಾನ ಮಾಡೀತು?
“೨. ಕನ್ನಡದ ಅಪೂರ್ವ ಕೆಲಸಗಳಲ್ಲಿ ಹಲವನ್ನು ವಹಿಸಿಕೊಂಡ ಮೈಸೂರು ವಿಶ್ವವಿದ್ಯಾನಿಲಯ ತನ್ನ ಬೇಜವಾಬ್ದಾರಿಯಿಂದ ಹೆಚ್ಚಿನವನ್ನು ನಿಧಾನದ್ರೋಹಕ್ಕೆ ಒಡ್ಡಿದೆ. ವಿಶ್ವಕೋಶ, ನಿಘಂಟು, ಸಾಹಿತ್ಯ ಚರಿತ್ರೆ ಇತ್ಯಾದಿ ಮಹತ್ಕಾರ್ಯಗಳು ಬಿಡಿ, ತನ್ನ ವಾರ್ಷಿಕ ವಿದ್ಯಾರ್ಥಿ ಅಗತ್ಯಗಳಾದ ಕನ್ನಡ ಪಠ್ಯಗಳನ್ನು ಕೊಡುವಲ್ಲೂ ಸೋತಿದೆ. ಇದನ್ನು ಮತ್ತು ಇಂಥ ಹಲವು ಸಾರ್ವಜನಿಕ ಅನ್ನದಂಡದ ಸರಕಾರೀ ಕತ್ತೆಗಳನ್ನು ದಂಡಿಸಿ ದುಡಿಸುವ ಛಾತಿ ಸಮ್ಮೇಲನಕ್ಕೆ ಬಂದೀತೇ?
“೩. ಕನ್ನಡ ಪುಸ್ತಕ ಪ್ರಾಧಿಕಾರ ಕೇವಲ ನೂರಾ ಎಂಟು ಪುಟಗಳ ಮಕ್ಕಳ ಕವನ ಸಂಕಲನವನ್ನು ಅದೂ ತೀರಾ ಕೆಟ್ಟ ಮುದ್ರಣದಲ್ಲಿ ಹೊರ ತಂದದ್ದಲ್ಲದೆ, ಜನ ಮುಟ್ಟಲಾಗದ ರೂ ಇನ್ನೂರರ ಭಾರೀ ಬೆಲೆ ಇಟ್ಟಿದೆ. ಇಂಥ ಕನ್ನಡ ಸೇವೆ ಬೇಕೆ? ಕನ್ನಡದ ಮೇರುಕೃತಿಗಳಾದ ಪಂಪ ಭಾರತ, ರನ್ನ ಗದಾಯುದ್ಧ, ತೊರವೆ ರಾಮಾಯಣ ಇತ್ಯಾದಿಗಳು ಬಿಡಿ, ಆಧುನಿಕರಾದ ಗುಂಡಪ್ಪ, ಕಾರಂತ, ಬೇಂದ್ರೆ, ಅಡಿಗ ಮೊದಲಾದವರ ಕೃತಿಗಳಿಗೂ ಸಮರ್ಥ ಪ್ರಕಾಶನ ವಿತರಣ ವ್ಯವಸ್ಥೆ ನಮ್ಮಲ್ಲಿಲ್ಲ. ಪಂಪ ರನ್ನರು ನಮಗೆ ಯಾರೋ ಜಗಿದುಗಿದ ಗೈಡುಗಳಲ್ಲಿ ಸಿಕ್ಕುತ್ತಾರೆ. ಬೇಂದ್ರೆ ಅಡಿಗರೂ ಜೆರಾಕ್ಷಸನ ಕೃಪೆಯಲ್ಲೆ ಬದುಕಿದ್ದಾರೆ. ಬಹುಶಃ ಇವರ ಪಕ್ಷವಹಿಸಿ ಲಾಬಿ ನಡೆಸುವವರಿದ್ದರೆ ಕನ್ನಡ ಇಲ್ಲೂ ಉಂಟೆಂದು ಅರಿವಾದೀತೋ ಏನೋ!
“೪. ಸಾರ್ವಜನಿಕ ಮತ್ತು ಸಾರ್ವಕಾಲಿಕ ಬೇಡಿಕೆಯ ಪುಸ್ತಕಗಳನ್ನು ಸುಲಭ ಬೆಲೆಗೆ ಪ್ರಕಟಿಸುತ್ತಲೇ ಬಂದಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿತರಣೆ ಬಗ್ಗೆ ಎಂದೂ ಕಾಳಜಿ ವಹಿಸಿಲ್ಲ. ಈಗಾಗಲೇ ಲಕ್ಷಾಂತರ ಪ್ರತಿಗಳವರೆಗೆ ಬಹು ಕಡಿಮೆ ಬೆಲೆ ಆವೃತ್ತಿ ಸೌಲಭ್ಯ ಪಡೆದ ಶ್ರೀ ರಾಮಯಣ ದರ್ಶನವನ್ನು ಇಂದು ರೂ ೭೫೦ ರ ಭಾರೀ ಬೆಲೆಯ ಹಸ್ತಪ್ರತಿ ಆವೃತ್ತಿಯಲ್ಲಿ ಇವರೇ ಪ್ರಕಟಿಸಿದ್ದಾರೆ. ಈ ದರ್ಬಾರು ಕನ್ನಡಕ್ಕೆ ಈ ಕಾಲಘಟ್ಟದಲ್ಲಿ ಎಷ್ಟು ಸರಿ ಎಂಬ ಪ್ರಶ್ನೆಯನ್ನು ಕುವೆಂಪು ಗೌರವಕ್ಕೆ ಚ್ಯುತಿ ಬಾರದಂತೆ ಕೇಳುವ ಸಮ್ಮೇಳನ ಇದಾದೀತೇ?
“೫. ಸಾಹಿತ್ಯ, ಜನಪದ, ಚಿತ್ರಕಲೆ ಇತ್ಯಾದಿ ಅಕಾಡೆಮಿಗಳು, ಗಝೆಟಿಯರ್, ಅರಣ್ಯ, ಸರಕಾರೀ ಮುದ್ರಣಾಲಯ ಇತ್ಯಾದಿ ಇಲಾಖೆಗಳು ಸಾರ್ವಜನಿಕ ಉಪಯುಕ್ತತೆಯ ಹೆಸರಿನಲ್ಲಿ ಪ್ರಕಟಿಸಿದರೂ ಎಂದೂ ಗುದಾಮು ಬಿಡದ ಆ ಅಸಂಖ್ಯ ಪುಸ್ತಕಗಳ ಸೆರೆ ಬಿಡಿಸುವ ಕಾಯಕಕ್ಕೆ ಇಲ್ಲಿ ಚಾಲನೆ ಸಿಕ್ಕೀತೇ?

“ಮೇಲೆ ಹೆಸರಿಸಿದ ಮತ್ತು ಹೆಸರಿಸದ ಒಂದೊಂದೂ ಸರಕಾರೀ ಅಥವ ಅರೆ ಸರಕಾರೀ ಸಂಸ್ಥೆಗಳ ಅರ್ಥಾತ್ ಬಿಳಿ ಆನೆಗಳ, ಕಡತ ಬಿಚ್ಚಿದರೆ ನೂರು ಕನ್ನಡ ಅಪಮಾನಗಳನ್ನು ಪಟ್ಟಿ ಮಾಡಬಹುದು. ಅವುಗಳ ಪಟ್ಟಿಗೆ ಸೇರುವಂತೆ ನಡೆಯಲಿರುವ ಈ ಸಮ್ಮೇಳನಕ್ಕೆ ಸಾಹಿತ್ಯ ಎಂಬ ಪೂರ್ವಪದ ಕೇವಲ ಶಬ್ದಾಡಂಬರ ಮಾತ್ರ. ಹೇರಿಕೆಯ ನೆಲೆಯಲ್ಲಿ ಹಣವೋ ಪ್ರಾತಿನಿಧ್ಯವೋ ದೊಡ್ಡ ಸಂಖ್ಯೆಯಲ್ಲಾಗಬಹುದು. ಭೋಜನಶಾಲೆಯ ಸಮರ್ಪಕತೆಯಲ್ಲಿ ಶಿಬಿರದ ಯಶಸ್ಸು ಅಳೆಯುವ ಮೂರ್ಖತೆ ಇಲ್ಲೂ ಆಗಬಹುದು. ದಾಕ್ಷಿಣ್ಯದ ಹೇಳಿಕೆ, ನಿರ್ದೇಶಿತ ವರದಿಗಳಿಂದ ಮಾಧ್ಯಮಗಳಲ್ಲಿ ಶಭಾಸ್ಗಿರಿ ಗಿಟ್ಟಿಸಲೂಬಹುದು. ಆದರೆ ನೆನಪಿರಲಿ, ನಿಜ ಸಾಹಿತ್ಯ ಸೃಷ್ಟಿಯಾಗುವುದು ಏಕಾಂತದಲ್ಲಿ, ವಿಕಸಿಸುವುದು ವಿರಾಮದಲ್ಲಿ. ಇಂದು ಆಚರಿಸಬೇಕಾದದ್ದು ಗಂಭೀರ `ಸರ್ವ ಕನ್ನಡಿಗ ಸಭೆ’ ಅಥವಾ ಶೋಕದಿನ. ಖಂಡಿತಾ ಹಬ್ಬ ಅಲ್ಲ. ಏನೋ ಹೆಕ್ಕಿ, ಪರಡಿ ಸವಿದ ಮುನ್ನೂರಾರವತ್ತೊಂದು ದಿನದ ಬಾಳುವೆಯನ್ನು ನಾಲ್ಕು ದಿನದ ಅಬ್ಬರದಲ್ಲಿ ಹಾಳುಗೆಡಹುವ ಈ ಪ್ರವೃತ್ತಿಯನ್ನು ವಿಚಾರವಂತರೆಲ್ಲರೂ ನಿಸ್ಸಂದಿಗ್ಧವಾಗಿ ಖಂಡಿಸಲೇಬೇಕು.”

ಪತ್ರವನ್ನು ವಿವಿಧ ಪತ್ರಿಕೆಗಳಿಗೆ ಪ್ರತಿ ಮಾಡುವಾಗ ಹೀಗೆ ಕೆಲವು ಪಾಠಾಂತರಗಳನ್ನು ಸೇರಿಸಿದ್ದೂ ಇತ್ತು. ೧. “ವಿವೇಕದ ಮಾತುಗಳನ್ನು ಅದುಮಿ ಪ್ರಚಾರದ ಭ್ರಮೆಗಳು ಅನಂತವಾಗುತ್ತಿವೆ. ಅಧ್ಯಕ್ಷ ಯಾರು, ಸ್ಮರಣ ಸಂಚಿಕೆಗಳೆಷ್ಟು, ಹಣ ಎಲ್ಲಿಂದ, ಕಲಾಪಗಳು ಪುಸ್ತಕಗಳು ಯಾಕೆ, ಏನು, ಎಂಬುದೆಲ್ಲ ಪಾವಿತ್ರ್ಯ ಕಳೆದ ಚರ್ಚಾವಸ್ತುಗಳಾಗುತ್ತಿವೆ. ಆದ್ದರಿಂದ ಅನಿವಾರ್ಯವಾಗಿ ನನಗಿಷ್ಟು ಹೇಳಲೇಬೇಕಾಗಿದೆ.”

ಸಮ್ಮೇಳನದ ಸ್ವಾಗತ ಸಮಿತಿ ಧನದಾಹದಲ್ಲಿದ್ದರೂ ಕೊಜೆಂಟ್ರಿಕ್ಸನ್ನು ವಿದೇಶೀ ಎಂಬಂತೆ ಹೆಸರಿಸಿ ಪ್ರತ್ಯೇಕಿಸಿತು. ಆದರೆ ವಾಸ್ತವದ ಪರಿಸರವಿರೋಧಿ ನಿಲುವನ್ನು ಮರೆತಂತೆ ನಟಿಸಿ, ನಾಗಾರ್ಜುನವೋ ಎಮ್ಮಾರ್ಪೀಯೆಲ್ಲೋ ಮತ್ತೊಂದನ್ನೋ ಮನ್ನಿಸುವ ಅಪಾಯ ಸ್ಪಷ್ಟಪಡಿಸಿತು. ಸ್ವಾತಂತ್ರ್ಯ ಸ್ವರ್ಣೋತ್ಸವದಂದು ಈ ಒಡೆದು ಆಳುವ ನೀತಿ ಮರುಹುಟ್ಟು ಪಡೆಯುವುದನ್ನು ನಾನು ಪರಿಸರಮಿತ್ರನಾಗಿ ಮಾತ್ರ ಹೀಗೆ ಟೀಕಿಸಿದೆ:
“ಕೊಜೆಂಟ್ರಿಕ್ಸ್‍ನಂಥವು ತ್ರಿಕರಣಪೂರ್ವಕವಾಗಿ ಅಂದರೆ ಕಾಯಾ – ನೆಲ, ನೀರು, ಗಾಳಿಗೆ ವಿಷ, ವಾಚಾ – ಪೊಳ್ಳು ಆಶ್ವಾಸನೆ, ಸುಳ್ಳು ಸಮಾಧಾನ ಮತ್ತು ಮನಸಾ – ಸ್ವಾರ್ಥ ಚಿಂತನೆಗಳ ಮೂಲಕ ಮಾಡುತ್ತಿರುವ ಭಾರೀ ಹಾನಿ ಎಲ್ಲ ತಿಳಿ-ಮನಸ್ಕರಿಗೆ ಗೊತ್ತಿದ್ದದ್ದೇ ಆಗಿದೆ. ವಂಚಕರು ಸಣ್ಣ ದಾನ ಮಾಡಿ, ದೊಡ್ಡ ಶುಭಗತನ ಗಿಟ್ಟಿಸಲು ಸಮ್ಮೇಳನ ಮಾಧ್ಯಮವಾಗಬಾರದು.

“ಯೋಗ್ಯತೆ, ಹಿರಿತನಗಳಿಂದ ಅನಿವಾರ್ಯವಾಗಿ ಅಧ್ಯಕ್ಷಗಿರಿಗೆ ಬಂದವರು ಕಯ್ಯಾರ ಕಿಞ್ಞಣ್ಣ ರೈಗಳು. ಅವರ ನಿರಂತರ ಹೋರಾಟದ ಗುರಿ ಕನ್ನಡ ನೆಲಕ್ಕೆ ಮಲೆಯಾಳಿ ಬಂಧದಿಂದ ಬಿಡುಗಡೆ. ಅದು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ವಾಹಿನಿಯಲ್ಲಿ ಒಂದಾಗುವುದೇ ಆಗಿದೆ. ಆದರೆ ಈಗ ಕಯ್ಯಾರರಿಗೆ ಸಾಂಸ್ಕೃತಿಕ ಪೋಷಣೆಯ ಯಾಜಮಾನ್ಯದೊಡನೆ ತಮ್ಮ ವಲಯದ ಪರಿಸರ ಶೋಷಣೆಯ ಗುರಿಕಾರತನ ಅಯಾಚಿತವಾಗಿ ಒದಗುತ್ತಿದೆ. ದ್ವಂದ್ವಗಳಿಲ್ಲದಂತೆ ಎರಡನೆಯದನ್ನು ತಿರಸ್ಕರಿಸಿ ಕಯ್ಯಾರರು ಗುಡುಗಬೇಕು. ಪರಿಸರ ವಿರೋಧಿಗಳ ಸಹಾಯ ಧಿಕ್ಕರಿಸಿ ಗಟ್ಟಿತನ ಮೆರೆಯಬೇಕು” ಎಂದೂ ಬರೆದೆ. ಅದನ್ನು ಮುಂದುವರಿಸಿ `ಪಾಪಕ್ಕೆ ಪಾಲುದಾರರಿಲ್ಲ’ ಎಂಬ ಶೀರ್ಷಿಕೆಯಲ್ಲಿ ಹೀಗೂ ಕೆಲವು ಪತ್ರಿಕೆಗಳಿಗೆ ಬರೆದಿದ್ದೆ:

“ಕಾಡಿನಲ್ಲಿ ತಿರುಗುವವರ ತಲೆ ಒಡೆದು ತನ್ನ ಸಂಸಾರ ನಿಭಾಯಿಸುತ್ತಿದ್ದನೊಬ್ಬ ಬೇಡ.
ಪಾಪ ಕಾರ್ಯದ ಫಲದಲ್ಲಿ ಕುಟುಂಬಿಕರ ಪಾಲುದಾರಿಕೆ ನಂಬಿ ಆತ ಸಾರ್ವಜನಿಕರಿಗೆ ತರುತ್ತಿದ್ದ ಕೇಡ
ಸಮಚಿತ್ತದ ಸಪ್ತರ್ಷಿಗಳು ತುಳಿಯಲಾ ಕಾಡುಜಾಡ, ಬಿಡದೆ ಕಾಡಿದ ಬೇಡ
ಅವರಾದರೋ ಅನ್ನಲಿಲ್ಲ “ಬೇಡ”, ಬರಿದೆ ವಿಮರ್ಶಿಸಿದರು ಅವನ ಪಾಡ
ವಿಚಾರವಿಚಾರಣೆಗಳ ಅಲೆಯಲ್ಲಿ ಅರಿವಿನ ಬೆಳಕು ಹೊಳೆದು, ಚದರಿತು ಮನಕವಿದ ಮೋಡ
ಹುತ್ತದೊಳಗೆ ಬಲೆಯಿಲ್ಲ, ಎದ್ದ ಮೇಲೆ ಬೇಡನಿಲ್ಲ!!
ವಾಲ್ಮೀಕಿಯ ಬೆಳಕು ಕಯ್ಯಾರರಿಗೆ ಬೇಡವೇ? ಬಂಧುಮೋಹಕ್ಕಾಗಿ ಕೇಡಿಗ ಹಣವನ್ನೊಪ್ಪುವುದೇ? ವಿಶ್ವ ಬಂಧುರತೆಗೆ ಹುತ್ತ ಸೇರಿದರೇನು, ಆಗರೇ ಮಹಾಕವಿ?”

ಬಹುತೇಕ ಕನ್ನಡ ಪತ್ರಿಕೆಗಳು ನನ್ನ ಪತ್ರಗಳನ್ನು ಬೇರೆ ಬೇರೆ ರೂಪಗಳಲ್ಲಿ ಪಕಟಿಸಿದುವು. ಎಲ್ಲಕ್ಕೂ ಅಧಿಕೃತ ವಕ್ತಾರರು ಮೌನವಾಗಿಯೇ ಉಳಿದುಬಿಟ್ಟರು. ನನಗೆ ಬರೆಯಬಹುದಾದ ಅರೆ ಖಾಸಗಿ ಪತ್ರದಲ್ಲಾದರೂ ಚರ್ಚಿಸುವ ಧೈರ್ಯ ತೋರಿಯಾರೇ ಎಂದುಕೊಂಡು ಕಸಾಪದೊಡನೆ ನನಗಿದ್ದ ಖಾಸಗಿ ಸಮಸ್ಯೆ ಕುರಿತ ಪತ್ರ-ಯುದ್ಧ ಮುಂದುವರಿಸಿದೆ. ೮-೧೦-೧೯೯೮ರ ನೆನಪಿನೋಲೆ ಹೀಗೆ ಬರೆದೆ:
“ನಾನಿನ್ನೂ ನಿಮ್ಮ ಪರಿಹಾರಕ್ರಮ, ಕನಿಷ್ಠ ಪತ್ರವನ್ನು ಕಾದಿದ್ದೇನೆ. ಮಂಗಳೂರು ಸಮ್ಮೇಳನ ಕುರಿತು ವಾತಾವರಣ ಹಲವು ತೆರನಾಗಿ ಕಾವೇರುತ್ತಿರುವಾಗ ಇಂಥ ಒಂದೊಂದು ಪ್ರಸಂಗವೂ ಸ್ಫೋಟಕದ ಬಳಿಯಾಡುವ ಕಿಡಿಯಾಗಲಾರದೇ? ಬಹುತೇಕ ಪ್ರಮುಖ ಕನ್ನಡ ಪತ್ರಿಕೆಗಳು ಸಮ್ಮೇಳನವನ್ನು ಕುರಿತ ನನ್ನ ಪತ್ರವನ್ನು ಪ್ರಕಟಿಸಿದ್ದನ್ನು ನೀವು ಗಮನಿಸಿರಲೇಬೇಕು. ಕ್ಷುದ್ರ ಮೊಳೆಯಿಂದ ಯುದ್ಧವೇ ಕಳೆದುಹೋದ ಕತೆ, ದುರ್ಬಲ ಕಿರು ಬೆರಳಿನಿಂದ ಕೈಕೇಯಿ ಅಸುರರನ್ನೇ ಜಯಿಸಿದ್ದು ಮುಂತಾದ ಕತೆಗಳ ಸಾಂಕೇತಿಕತೆಯನ್ನು ಮಹೋಪಾಧ್ಯಾಯರಾದ ನಿಮಗೆ ನಾನು ವಿವರಿಸಬೇಕೇ? ನನ್ನ ಮೂರನೇ ನೆನಪಿನೋಲೆಗೆ ಕಾಲ ತಳ್ಳಬೇಡಿ.”

೧೫-೯-೧೯೯೭ ಎಂದು ತಾರೀಕು ನಮೂದಿಸಿಕೊಂಡು ಅಧ್ಯಕ್ಷರಿಂದ ಬಂದ ಉತ್ತರ ಹೀಗಿತ್ತು: “ತಾವು ಕಾಳಜಿ ಇರಿಸಿ ಬರೆದಿರುವ ಎರಡೂ ಪತ್ರಗಳು ತಲಪಿವೆ. ಕನ್ನಡ ಸಾಹಿತ್ಯ ಪರಿಷತ್ತು ಹಿರಿಯರು ಕಟ್ಟಿ ಬೆಳೆಸಿದ ಮಹಾನ್ ಸಂಸ್ಥೆ. ಆ ಸಂಸ್ಥೆಯ ಬಗೆಗೆ ತಮ್ಮ ನಿಲವು ಏಕೋ ಅಸಮಾಧಾನದಿಂದ ಕೂಡಿದೆ. ದಯವಿಟ್ಟು ತಮಗಾಗಿರುವ ಅಸಮಾಧಾನದ ಬಗೆಗೆ ಕೂಲಂಕಷವಾಗಿ ತಿಳಿಸಿದರೆ, ಪರಿಷತ್ತಿನ ನಿಯಮದ ಚೌಕಟ್ಟಿನೊಳಗೆ ಪರಿಹರಿಸಬಹುದಾದ್ದನ್ನು ಖಂಡಿತ ಪರಿಹರಿಸಲಾಗುತ್ತದೆ. `ಸಾಹಿತ್ಯ ಸಮ್ಮೇಳನಗಳು ಹಬ್ಬವಲ್ಲ, ಶೋಕಸಭೆಯಾಗಬೇಕು’ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತೀರಿ. ಅದು ತಮ್ಮ ವೈಯಕ್ತಿಕ ಅಭಿಪ್ರಾಯ.”

ಅದಕ್ಕೆ ನನ್ನ ೨೦-೧೦-೧೯೯೭ರ ಉತ್ತರ ಹೀಗಿತ್ತು: “ನನ್ನ ೨೫-೮-೧೯೯೭ರ ಮೂಲಪತ್ರ ನಿಮಗೆ ತಲಪಿಯೇ ಇಲ್ಲ ಎಂಬ ಭಾವ ಈ ಪತ್ರದಿಂದ ಬಂತು. ನನ್ನ ಮೊದಲ ನೆನಪಿನೋಲೆ ಬಂದಾಗಲೇ ನೀವಿದನ್ನು ಸೂಚಿಸಿದ್ದರೆ ಎಷ್ಟು ಮಾತು ಉಳಿಯುತ್ತಿತ್ತು, ಗಮನಿಸಿ.” ೨೫-೮-೧೯೯೭ರ ಪತ್ರದ ಯಥಾಪ್ರತಿಯನ್ನು ಲಗತ್ತಿಸುವಾಗ ಅದಕ್ಕೊಂದು ಹೊಸ ಟಿಪ್ಪಣಿ ಸೇರಿಸಿದೆ: “ಪರಿಷತ್ತೇ ಯಾಕೆ, ಯಾವುದೇ ಸಾಮಾಜಿಕ ನಿಯಮಗಳ ಚೌಕಟ್ಟು ನಿರ್ಧಾರವಾಗುವುದು ಅದನ್ನು ಅರ್ಥವಿಸುವ ವ್ಯಕ್ತಿಗಳಿಂದ. ನಾನು ನಿಮ್ಮಿಂದ ನಿರೀಕ್ಷಿಸುವುದು ಆ ತಿಳಿವಳಿಕೆಯ ಆಳವನ್ನೇ ಹೊರತು ಅಕ್ರಮವನ್ನಲ್ಲ, ಎಂದು ಮೊದಲು ಸ್ಪಷ್ಟಪಡಿಸಬಯಸುತ್ತೇನೆ. `ಕಸಾಪ ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆ’ ಎಂದಿದ್ದೀರಿ. ಇದು ಚರಿತ್ರೆಯ ಮಾತು. ಯಾವುದೇ ಸಂಸ್ಥೆಯ ಪ್ರಭಾವಳಿಯೊಡನೆ ಕಾಲಕ್ಕೊಬ್ಬ ವ್ಯಕ್ತಿ ನಿಲ್ಲುವುದು ತಪ್ಪಲ್ಲ. ಆದರೆ ಆ ಬೆಳಕೇ ಎಲ್ಲವನ್ನೂ ನಡೆಸುತ್ತದೆ ಎಂದು ಬಿಟ್ಟರೆ ಆತನ ಅಸಾಮರ್ಥ್ಯವನ್ನೇ ಸಾರಿದಂತಾಗುತ್ತದೆ. ಆ ಬೆಳಕಿಗೆ ತನ್ನ ಮಿತಿಯ ಎಣ್ಣೆ ಹೊಯ್ಯುವುದು ವ್ಯಕ್ತಿಯ ಕರ್ತವ್ಯ. ಇಲ್ಲಿ ನಾನು ವರ್ತಮಾನದ ಸಮಸ್ಯೆಯೊಂದನ್ನು ಚರ್ಚಿಸುತ್ತಿರುವಾಗ ನಿಮ್ಮಿಂದ ಕರ್ತವ್ಯ ನಿಷ್ಠೆಯನ್ನಷ್ಟೇ ನಿರೀಕ್ಷಿಸುತ್ತೇನೆ; ಇತಿಹಾಸ ಪಾಠವನ್ನಲ್ಲ. (ನೇರ ಮಾತುಗಳು ಒರಟು ಎಂದನ್ನಿಸಿದರೆ ಕ್ಷಮಿಸಿ).

“ನನ್ನ `ಪ್ರಜಾವಾಣಿ ಪತ್ರ ತಾ ೨೪-೯-೯೭, ಇದರ ಪೂರ್ಣಪಾಠ ೩-೧೦-೯೭ರ ಸಂಯುಕ್ತ ಕರ್ನಾಟಕದಲ್ಲೂ ವಿವಿಧ ಸಂಗ್ರಹ ರೂಪಗಳು ೨೨-೯-೯೭ರ ಕನ್ನಡ ಜನ ಅಂತರಂಗದಲ್ಲಿ, ೨೭-೯-೯೭ರ ಕನ್ನಡ ಪ್ರಭದಲ್ಲಿ, ೭-೧೦-೯೭ರ ಉದಯವಾಣಿಯಲ್ಲೂ ಪ್ರಕಟವಾದವು. ಒಟ್ಟಾರೆ ಇವನ್ನು ನೀವು `ವೈಯಕ್ತಿಕ ಅಭಿಪ್ರಾಯ’ ಎಂದು ತಳ್ಳಿ ಹಾಕಿದ್ದು ಬೇಜವಾಬ್ದಾರಿತನದ ಮಾತು. ನನ್ನದು ೨೧ ವರ್ಷಗಳ ಸಾರ್ವಜನಿಕ ಪುಸ್ತಕ ವಿತರಣೆಯೊಡನೆ ಗಳಿಸಿದ ಅನುಭವದ ಮಾತುಗಳು. ಅದನ್ನು ವಿವಿ ನಿಲಯದ, ಸಾಹಿತ್ಯ ಸಮ್ಮೇಳನದ ವೇದಿಕೆಗಳಿಂದಲೂ ಪತ್ರಿಕಾ ಲೇಖನ ಮತ್ತು ಟಿಪ್ಪಣಿಗಳಿಂದಲೂ ಕಾಲಕಾಲಕ್ಕೆ ಒರೆಗೆ ಹಚ್ಚಿ ನೋಡಿಕೊಂಡಿದ್ದೇನೆ. (ಗಮನಿಸಿ: ಅದ್ವಿತೀಯ ವಿಶ್ವಕನ್ನಡ ಸಮ್ಮೇಳನ ಮತ್ತು ಮುಧೋಳದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳೆರಡರಲ್ಲೂ ನಾನು ಪುಸ್ತಕೋದ್ಯಮಿಯಾಗಿಯೇ ಪ್ರಬಂಧ ಮಂಡಿಸಿದವ.) ನಾನು ನನ್ನ ಅಂಗಡಿಯ ಅಥವಾ ಒಂದು ವ್ಯಕ್ತಿ ಮಿತಿಯ ಸಾಧಾರಣೀಕರಣಗಳನ್ನು ಎಲ್ಲೂ ಸೇರಿಸಿಲ್ಲ ಎನ್ನುವುದಕ್ಕೆ ಐದು ಸ್ಪಷ್ಟ ಉದಾಹರಣೆಗಳನ್ನು ಅಲ್ಲಿ ಕೊಟ್ಟಿದ್ದೇನೆ, ನೀವು ಓದಿದಂತಿಲ್ಲ. ಇಂದಿನ ಬೆಳಕಿನಲ್ಲಿ ಆ ಪೈಕಿ ಮೂರನ್ನು ಇಲ್ಲಿ ಇನ್ನಷ್ಟು ಬಿಡಿಸಿಡುತ್ತೇನೆ. ಗಮನವಿಟ್ಟು ಓದಿ.
“೧. ಮುಶಪ್ರ – ಇದು ನೇರ ನಿಮ್ಮ ಜವಾಬ್ದಾರಿಯದು. ನಿಮ್ಮ ಆಡಳಿತಾವಧಿಯ ಮೊದಲಲ್ಲೇ ಇದರ ಕುರಿತು ನಮ್ಮೊಳಗೆ ನಡೆದ ಪತ್ರವ್ಯವಹಾರವನ್ನು ನಿಮ್ಮ ಕಡತ ತೆಗೆದು ನೋಡಿಕೊಳ್ಳಿ. ತಪ್ಪು ಮುದ್ರಣ ಒಪ್ಪಿಕೊಂಡು ನೀವು ಹಿಂತೆಗೆದುಕೊಂಡ ಅಷ್ಟೂ ಪ್ರತಿಗಳೇನಾದವು? ಅದರ ಖರ್ಚಿನ ಲೆಕ್ಕಾಚಾರ ಏನಾಯಿತು? ಮತ್ತು ಶುದ್ಧ ಪ್ರತಿಯ ಮರುಮುದ್ರಣದ ಕೆಲಸ ಎಲ್ಲಿಗೆ ಬಂತು?
“೨. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ನನ್ನ ಪ್ರಜಾವಾಣಿ ಪತ್ರ ನೋಡಿ ವೈಯಕ್ತಿಕವಾಗಿ ನನಗೆ ಪತ್ರ ಬರೆದಿದ್ದಾರೆ. ತಮ್ಮ ಅಸಹಾಯಕತೆಯನ್ನು ತೋಡಿಕೊಂಡು ನಾನು ಹೆಸರಿಸಿದ ಅನ್ಯಾಯ ಬೆಲೆಯ ಪುಸ್ತಕವನ್ನು ಸರಿಪಡಿಸುವ ಬಗ್ಗೆ ಆಶ್ವಾಸನೆ ಕೊಟ್ಟಿದ್ದಾರೆ. ನಾನು ತರಿಸಿಕೊಂಡ ಮೇಲೆ ರೂಪ, ಬೆಲೆ, ಒಪ್ಪಿಗೆಯಾಗದೆ ಮರಳಿಸಿದ ಎಲ್ಲ ಪ್ರತಿಗಳನ್ನು ಅವರದೇ ಖರ್ಚಿನಲ್ಲಿ, ಅಸಮಾಧಾನದ ಒಂದು ಮಾತೂ ಆಡದೆ, ಹಿಂದೆಗೆದುಕೊಂಡಿದ್ದಾರೆ.
“೩. ಹಸ್ತಪ್ರತಿ ಆವೃತ್ತಿ ಶ್ರೀರಾಮಾಯಣ ದರ್ಶನಂ – ಇದರ ಕುರಿತು ಲಂಕೇಶ್ ಪತ್ರಿಕೆ ಖ್ಯಾತ ಬರಹಗಾರರಿಂದಲೇ ಲೇಖನಮಾಲೆಯನ್ನೇ ತಂದದ್ದನ್ನು ನೀವು ಗಮನಿಸಿರಲೇಬೇಕು. ಅದಕ್ಕೂ ಮಿಗಿಲಾಗಿ ಸಂಸ್ಕೃತಿ ಇಲಾಖೆ ಯಾವುದೇ ಪುಸ್ತಕ ವ್ಯಾಪಾರಿಯೊಡನೆ ವ್ಯವಹಾರ ಸಂಬಂಧ ಹೊಂದಿಲ್ಲ ಎನ್ನುವುದೂ ನಿಮಗೆ ಗೊತ್ತಿರಬೇಕು.

“ನನ್ನ ಪತ್ರದ ಕೆಲವು ಪದಪ್ರಯೋಗಗಳು ಶಬ್ದಾಡಂಬರಕ್ಕಾಗಿ ಬಂದಿರಬಹುದು ಎಂದು ನೀವು ಭಾವಿಸಿದ್ದರೆ ತಪ್ಪು. ವಾರ ಹತ್ತು ದಿನಗಳಿಂದೀಚೆಗೆ ಕಾಲವೇ ಅದನ್ನು ಹೇಗೆ “ಸತ್ಯ. ಸತ್ಯ” ಎನ್ನುತ್ತಿದೆ ಎಂಬುದಕ್ಕೆ ಕೆಲವು ನಿದರ್ಶನಗಳು: ೧. ಅನೈತಿಕ ಹಣ ಸಂಚಯನ – ಕೊಜೆಂಟ್ರಿಕ್ಸಾದಿ ಪರಿಸರ ಶೋಷಕರಿಂದ ದೇಣಿಗೆ (ಇದು ಸರಿಯಲ್ಲ ಎಂದು ನೀವೇ ಕೊಟ್ಟ ಪತ್ರಿಕಾ ಹೇಳಿಕೆ ನಾನು ನೋಡಿದ್ದೇನೆ), ಜಿಲ್ಲಾ ಕಛೇರಿಯೋ ಆರ್ಟೀವೋ ಕಛೇರಿಯೋ ಅವಶ್ಯ ಕೆಲಸಗಳಿಗೆ ಹೋದವರಿಗೆ ಸಮ್ಮೇಳನದ ದೇಣಿಗೆ ಚೀಟಿ ಹಿಡಿಸುವುದು ಸರಿ ಎನ್ನುತ್ತೀರಾ? ಶಾಲಾ ಅಧ್ಯಾಪಕರುಗಳು ತಮ್ಮ ಸಂಘದ ನಿರ್ಧಾರಕ್ಕೆ ಬದ್ಧರಾಗಿ ಒಂದು ದಿನದ ಸಂಬಳ ಸಮ್ಮೇಳನಕ್ಕೆ ಕೊಡಲೊಪ್ಪಿದ್ದಾರೆ. ಅವರಲ್ಲಿ ಇರುವ ಹಲವು ನಿಜ ಕನ್ನಡ ಅಭಿಮಾನಿಗಳು ತಮ್ಮ ದೇಣಿಗೆಯನ್ನು ಪ್ರತಿನಿಧಿ ಶುಲ್ಕವಾಗಿ – ಕೊರತೆ ಬಂದರೆ ತುಂಬಿಸಿಕೊಂಡು, ಪರಿವರ್ತಿಸಲು ಕೇಳಿಕೊಂಡದ್ದಕ್ಕೆ ನಕಾರ ಉತ್ತರ ಬಂದದ್ದು ಮರ್ಯಾದೆಯೇ? ಇಷ್ಟು ಸಾಲದೆಂಬಂತೆ ನವೆಂಬರ್ ಒಂದರಿಂದ ಕನ್ನಡ ಭುವನೇಶ್ವರಿ ರಥ ಏರಿ ಭಿಕ್ಷಾಟನೆಗೆ ಇಳಿಯಲಿದ್ದಾಳಂತೆ!!
“೨. ದಲ್ಲಾಳಿಗಳು, ತಲೆಹಿಡುಕರಂಥವರು – ಸಾಹಿತ್ಯ ಸಮ್ಮೇಳನ ಕೇವಲ ಲೇಖಕರ ಮತ್ತು ಓದುಗರ ಮುಖಾಮುಖಿಯನ್ನಷ್ಟೇ ಉದ್ದೇಶಿಸಬೇಕು. ಎರಡೂ ಅಲ್ಲದವರು ಇಲ್ಲಿ ಸೇವಾ ಮಟ್ಟದಲ್ಲಿ ಬೇಕೇ ಬೇಕು. ಆದರೆ ನಿರ್ದೇಶನ ಮಟ್ಟದಲ್ಲಿ ಮೆರೆಯುತ್ತಿರುವುದಕ್ಕೆ ಎರಡು ಸಾಕ್ಷ್ಯಗಳನ್ನು ನೋಡಿ: ಮೊದಲನೆಯದು, ೨೦% ರಿಯಾಯ್ತಿಯಲ್ಲಿ ಕನ್ನಡ ಪುಸ್ತಕ ಮಾರಾಟದ ಪ್ರಶ್ನೆ ಸಾಹಿತ್ಯಕವೇ? ಎರಡನೆಯದು, ಸ್ವಾಗತ ಸಮಿತಿಯ ನಾಲ್ಕು ಕಾರ್ಯದರ್ಶಿಗಳಲ್ಲಿ ಒಬ್ಬರು – ಕನ್ನಡ ಲೇಖಕ – ಅಧ್ಯಾಪಕ , ಆಗಲೇ ರಾಜೀನಾಮೆ ಕೊಟ್ಟು ಹೊರನಡೆದಾಗಿದೆ. ಇನ್ನೊಬ್ಬರು – ಕನ್ನಡ ಸಾಹಿತಿ – ಅಧ್ಯಾಪಕ, ರಾಜೀನಾಮೆಯ ಬೆದರಿಕೆ ಹಾಕುತ್ತಿದ್ದಾರೆ. ಉಳಿದವರಲ್ಲೊಬ್ಬರು ಅಧಿಕಾರ ನಿಮಿತ್ತ ಬಂದವರು, ಮತ್ತೊಬ್ಬರು ಪತ್ರಕರ್ತರು.
“೩. ಪಾವಿತ್ರ್ಯ ಕಳೆದ ಚರ್ಚೆ: ಸಮ್ಮೇಳನಾಧ್ಯಕ್ಷರನ್ನು ಆರಿಸುವ ಸಮಿತಿ, ವಿಧಾನ, ಸ್ಥಳ, ದಿನಾಂಕ ಎಲ್ಲ ಗೊತ್ತಿದ್ದೂ ಪ್ರತಿ ಉಪ ಉಪೋಪ ಸಮಿತಿ ಬೈಠಕ್ಕುಗಳಲ್ಲೂ ಬೊಬ್ಬೆ ಹೊಡೆದದ್ದು ಚಂದವೇ? ಸೂಚನೆ, ಮನವಿ, ತಲೆ ಎಣಿಕೆಗಳೆಲ್ಲ ನಡೆದು ಬೆದರಿಕೆ ಮಟ್ಟಕ್ಕೇ ಮುಟ್ಟಿದ್ದು ಸುಳ್ಳೇ?
“೪. ಆಕಸ್ಮಿಕಗಳು ಸರ್ವಸ್ವ: ಆಕಸ್ಮಿಕಗಳನ್ನು ಬಹುವಾಗಿ ಹಚ್ಚಿಕೊಂಡು ಮುಂದುವರಿಯುವುದು ಕಲ್ಪನಾ ದಾರಿದ್ರ್ಯ ಹಾಗೂ ಅವೈಜ್ಞಾನಿಕತೆಯ ಲಕ್ಷಣ. ದ್ವಾರಗಳು ಅಗತ್ಯವಿದ್ದರೆ, ಪ್ರಾತಿನಿಧಿಕ ಹೆಸರುಗಳಿದ್ದರೆ ೬೬ ಯಾಕೆ, ೧೩೨ ಇಡಿ. ಮೌಲ್ಯಯುತ ಕೃತಿಗಳಿದ್ದರೆ ಶತಕ ಬಾರಿಸಿ, ೬೬ರಲ್ಲೇ ಯಾಕೆ ನಿಲ್ಲುತ್ತೀರಿ? ಬದಲು, ೬೬ ಕನ್ಯೆಯರಿಂದ ೬೬ ಪೂರ್ಣ ಕುಂಭ ಹಿಡಿಸಿ ಸ್ವಾಗತ, ೬೬ ಟ್ಯಾಬ್ಲೋ, ೬೬ ಪ್ರಬಂಧಗಳು, ೬೬ ಬಗೆಯ ತಿನಿಸುಗಳು, ೬೬ ವೈದ್ಯರು, ೬೬೬ ಹಾಸಿಗೆಗಳ ಆಸ್ಪತ್ರೆ, ೬೬೬೬ ಅಜೀರ್ಣ ದೂರುಗಳು… ಒಳ್ಳೆಯ ಹಾಸ್ಯ ಸಾಹಿತ್ಯದ ಸರಕಾಗಿ ತೋರುವುದಿಲ್ಲವೇ? ರಾಜಕೀಯ ವಲಯಗಳಲ್ಲೇ ಸ್ವಾತಂತ್ರ್ಯ ಸ್ವರ್ಣೋತ್ಸವದ ಲೆಕ್ಕದಲ್ಲಿ ಸಾಕಷ್ಟು ದೇಶದ ಹಣ ಹಾಳು ಮಾಡಿಯಾಗಿದೆ. ಸರ್ವಾಂಗೀಣ ಶೈಥಿಲ್ಯ, ಅದರಲ್ಲೂ ಮುಖ್ಯವಾಗಿ ನೈತಿಕತೆಯಲ್ಲೇ ಬಿದ್ದವರು ಮಾತಾಡಿದ್ದು ನಮ್ಮ ಭವ್ಯ ಪರಂಪರೆಯ ಕುರಿತು! ಆ ಠಕ್ಕನ್ನು ಇಲ್ಲೂ ತರಬೇಕೇ? ಅಬ್ಬಕ್ಕನ ಸ್ಮರಣೆಗೆ ಆಗಲೇ ಸ್ವತಂತ್ರ ಸಮಿತಿ ಉಳ್ಳಾಲವಲಯದಲ್ಲಿ ರಚಿತವಾಗಿ, ವ್ಯಯಪಟ್ಟಿ ತಯಾರು ಮಾಡಿ ಆಯದ ದಾರಿ ಹುಡುಕುತ್ತಿದ್ದಾರೆ. ತಮಾಷೆ ಎಂದರೆ ಐತಿಹಾಸಿಕ ದಾಖಲೆಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದೆ ಮುಂದುವರಿದಿದ್ದಾರೆ. ನಮ್ಮ ನಡುವಿರುವ ಶಾಸನ ಮತ್ತು ಇತಿಹಾಸಗಳ ಘನ ಸಂಶೋಧಕ ನಿವೃತ್ತ ಪ್ರೊಫೆಸರ್ ವಸಂತ ಮಾಧವರು ಗುರುತಿಸುವ ಅಬ್ಬಕ್ಕ ಈ `ಈ ಜನಪ್ರಿಯ ಅಬ್ಬಕ್ಕ’ನಿಂದ ಬಲು ದೂರ ಇದ್ದಾಳೆ ಗೊತ್ತೇ?
“ಕ್ಷಮಿಸಿ, ಬಲು ದೊಡ್ಡ ಜವಾಬ್ದಾರಿ ಹೊತ್ತ ನಿಮ್ಮ ಕಾಲವನ್ನು ಇನ್ನೂ ಉದ್ದಕ್ಕೆ ಎಳೆಯುವುದಿಲ್ಲ. ನನ್ನ ಮೂಲ ಸಮಸ್ಯೆಗೆ, ಸಮ್ಮೇಳನದ ಉಳಿವಿಗೆ ಅವಶ್ಯ ತೊಡಗುವಿರೆಂದು ಭಾವಿಸುತ್ತೇನೆ.” ಕಸಾಪ ಅಧ್ಯಕ್ಷರು ಮೊದಲ ಅಂಚೆ ತಲಪಲೇ ಇಲ್ಲವೆಂಬ ಸಣ್ಣ ಸುಳ್ಳು ಹೇಳಿರಲಾರರು. ಸಂದ ಐವತ್ತು ವರ್ಷಗಳಲ್ಲಿ ಹೆಚ್ಚಿದ ಅಂಚೆ ಅದಕ್ಷತೆಯನ್ನೇ ಒಪ್ಪಿಕೊಂಡು, ಇದನ್ನು ನೋಂದಾಯಿತ ಅಂಚೆಯಲ್ಲೇ ಕಳಿಸಿದೆ.

ಉರುಳು ಬಿಗಿಯುವ ಮುನ್ನ
ಈ ವೇಳೆಗೆ ಸಮ್ಮೇಳನದ ತುರ್ತು ಕಸಾಪ ಅಧ್ಯಕ್ಷರನ್ನೂ ಸಕಲ ಪುಸ್ತಕೋದ್ಯಮಿಗಳನ್ನೂ ವಿಭಿನ್ನ ಮುಖಗಳಲ್ಲಿ ದಟ್ಟವಾಗಿ ಆವರಿಸಿತ್ತು. ಮಂಗಳೂರು – ಸಮ್ಮೇಳನದ ಕೇಂದ್ರ, ಧರ್ಮಸ್ಥಳ – ಸ್ವಾಗತ ಸಮಿತಿ ಅಧ್ಯಕ್ಷ ಡಿ. ವೀರೇಂದ್ರ ಹೆಗ್ಗಡೆಯವರ ನೆಲೆ, ಕಾಸರಗೋಡು – ಸಮ್ಮೇಳನಾಧ್ಯಕ್ಷ ಕಯ್ಯಾರರ ಊರು, ಎಂದೆಲ್ಲಾ ಸುತ್ತುತ್ತಿದ್ದ ಕಸಾಪ ಅಧ್ಯಕ್ಷರು ಸಮೀಪವರ್ತಿಗಳ ಮೂಲಕ ನನಗೆ ಸೂಚನೆಯನ್ನೇ ಕಳಿಸಿದರು – ತುಂಬ ಖಾರವಾಗಿ ಬರೆದಿದ್ದಾರೆ, ಆದರೆ ಸತ್ಯ. ದಯವಿಟ್ಟು ಸಮ್ಮೇಳನ ಮುಗಿಯುವವರೆಗೆ ತಾಳ್ಮೆ ವಹಿಸಲಿ. ಅನಂತರ ತಾನು ಅಧ್ಯಕ್ಷಗಿರಿಗೇ ರಾಜೀನಾಮೆ ಕೊಟ್ಟು, ಒಟ್ಟು ವ್ಯವಸ್ಥೆಯ ಕುರಿತ ಅವರ ಅಸಂತೋಷವನ್ನು ಪ್ರಕಟಿಸಲಿದ್ದಾರೆ!

ಇತ್ತ ಪುಸ್ತಕೋದ್ಯಮಿಗಳು ಸಮ್ಮೇಳನದಲ್ಲಿ ೨೦% ರಿಯಾಯಿತಿ ಕಡ್ಡಾಯದ ವಿರುದ್ಧ ಸಂಘಟಿತರಾಗುತ್ತ ಬಂದರು. ಹಾಸನದಲ್ಲಿ ಪ್ರಸ್ತಾಪ ಮೌಖಿಕವಾಗಿ ಮೊಳೆತಾಗಲೇ ಹೊಸಕಲು ನೋಡಿದ ಸಾಹಿತ್ಯ ಭಂಡಾರದ ಗೆಳೆಯ ಅರುಣ್ ಆದಿಯಾಗಿ ಹಲವರು ವೈಯಕ್ತಿಕ ಮಟ್ಟದಲ್ಲೂ ಕೆಲವು ಸಾಂಘಿಕ ಮಟ್ಟದಲ್ಲೂ ಸ್ವಾಗತ ಸಮಿತಿಗೆ, ಪರಿಷದಧ್ಯಕ್ಷರಿಗೆ ಅಹವಾಲುಗಳನ್ನು ಸಲ್ಲಿಸಿದರು. ಬರವಣಿಗೆಯಲ್ಲಿ ಮತ್ತು ಹೆಚ್ಚು ಸ್ಪಷ್ಟವಾಗಿ ಮೊದಲು ವಿರೋಧಿಸಿದವನು ನಾನೆಂಬ ನೆಲೆಯಲ್ಲಿ ಎಲ್ಲರೂ ಅಯಾಚಿತವಾಗಿ ನನಗೂ ಸುದ್ಧಿ ಮುಟ್ಟಿಸುತ್ತಿದ್ದರು. ಪ್ರದರ್ಶನ ಮತ್ತು ಮಾರಾಟ ಉಪಸಮಿತಿಯ ಅಧ್ಯಕ್ಷರು (ಕಾರ್ಕಳದ ಎಂ. ರಾಮಚಂದ್ರ) ಮತ್ತು ಹಲವು ಸದಸ್ಯರು ನನ್ನ ಮಿತ್ರರೇ ಆಗಿದ್ದುದರಿಂದ ಮುಚ್ಚುಮರೆಯಿಲ್ಲದೆ ಅವರನ್ನು ಕಾಡಿದ್ದೆ. ಔಪಚಾರಿಕ ಪದನಾಮಗಳೇನಿದ್ದರೂ ವಾಸ್ತವದಲ್ಲಿ ಕಸಾಪ ಜಿಲ್ಲಾಧ್ಯಕ್ಷ – ಹರಿಕೃಷ್ಣ ಪುನರೂರು, ಮೊದಲೇ ನನಗೆ ಬರೆದು ತಿಳಿಸಿದ ಮಾತು “ನನ್ನ ಸಲಹೆಯಲ್ಲಿ ಬದಲಾವಣೆ ಇಲ್ಲ,” ಅದೇ ಖಾಯಂ ಎಂದು ನನ್ನ ಅರಿವಿಗೆ ಬರತೊಡಗಿತು. ಸಹಜವಾಗಿ ಬೆಂಗಳೂರಿನ ಪ್ರಕಾಶಕರ ಕೂಟಗಳಲ್ಲಿ “ಸಮ್ಮೇಳನ ಬಹಿಷ್ಕಾರ” ಅಥವಾ ೨೦% ರಿಯಾಯ್ತಿ ಬಗ್ಗೆ ಕಾನೂನು ಕ್ರಮದ ಬಗ್ಗೆ ವಿಚಾರಗಳೂ ಹರಿಯತೊಡಗಿದವು. ಈ ಹಂತದಲ್ಲಿ ಎಲ್ಲರನ್ನು ಅವಗಣಿಸಿ, ಹೆಚ್ಚು ಪ್ರಭಾವಿಯಾದ ವೀರೇಂದ್ರ ಹೆಗ್ಗಡೆಯವರ ಮೊರೆಹೊಗುವುದೇ ಸರಿ ಎಂದು ನನಗನ್ನಿಸಿತು. ಹಾಗಾಗಿ ೪-೧೨-೧೯೯೭ರಂದು ನಾನು ಅವರಿಗೆ ಹೀಗೊಂದು ಪತ್ರ ಹಾಕಿದೆ:

“ಕಳೆದ ಡಿಸೆಂಬರಿನಲ್ಲಿ ಅನೌಪಚಾರಿಕವಾಗಿ ೨೦% ರಿಯಾಯ್ತಿ ಕುರಿತು ಮಾತು ಬಂದಾಗಲೇ, ಅಂದರೆ ಇನ್ನೂ ಸ್ವಾಗತ ಸಮಿತಿಯ ರಚನೆ ಆಗುವ ಮೊದಲೇ ಜಿಲ್ಲಾಧ್ಯಕ್ಷರಿಗೆ ಈ ಕುರಿತು ಬರೆದಿದ್ದೆ. ‘ನಿಮ್ಮ ಯಾವುದೇ ಹಂತದ ಸಮಿತಿ, ಸಭೆಗೆ ನನ್ನನ್ನು ಕರೆದರೂ (ಪದಾಧಿಕಾರದ ಆವಶ್ಯಕತೆ ನನಗಿಲ್ಲ) ಬಂದು ವಿವರಿಸಬಲ್ಲೆ’ ಎಂದೂ ಸೂಚಿಸಿದ್ದೆ. ಅವರು ಪಟ್ಟು ಸಡಿಲಿಸಲಿಲ್ಲ. ಸ್ವಾಗತ ಸಮಿತಿಯ ಸಂಬಂಧಿತ ಪದಾಧಿಕಾರಿಗಳನ್ನು ಅಥವಾ ವೃತ್ತಿಪರರನ್ನು ವಿಶ್ವಾಸಕ್ಕೂ ತೆಗೆದುಕೊಂಡಿಲ್ಲ. ಮೌಖಿಕವಾಗಿ `ಸಡಿಲಿಸುತ್ತೇನೆ’ ಎನ್ನುತ್ತ, ಮಾರಾಟಗಾರರಿಗೆ ಕಳಿಸಿದ ಮೊದಲ ಪರಿಪತ್ರದಲ್ಲಿ `೨೦% ರಿಯಾಯ್ತಿ ಕೊಡಬೇಕೆಂದು ಕೋರುತ್ತೇವೆ’ಎಂದೇ ಸೇರಿಸಿದ್ದಾರೆ. ಈಗ ಅಂತಿಮ ಪರಿಪತ್ರದಲ್ಲಿ ಮತ್ತು ನಿಮ್ಮ ಮೂಲಕ ಬಂದ ಪತ್ರಿಕಾ ಹೇಳಿಕೆಯಲ್ಲಿ `೨೦% ಕಡ್ಡಾಯ’ ಎಂದಿರುವುದು ಆಘಾತಕಾರಿಯಾಗಿದೆ. ಸಹಜವಾಗಿ ಮಾರಾಟಗಾರರು ಸಮ್ಮೇಳನ ಬಹಿಷ್ಕಾರದ ಮಾತಾಡುತ್ತಿದ್ದಾರೆ. ಇದು ನಾವು ಯಾರೂ ಬಯಸಿ ಬಂದ ಸ್ಥಿತಿಯಲ್ಲ, ಮತ್ತು ಕಡೇ ಗಳಿಗೆಯಲ್ಲಿ ಸ್ವಾಗತ ಸಮಿತಿಯ ತಲೆನೋವು ಹೆಚ್ಚಿಸಲೆಂದು ಕೈಗೊಂಡ ಕ್ರಮವಲ್ಲ ಎಂಬುದು ನಿಮಗೆ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ. ಇನ್ನೂ ಪರಿಸ್ಥಿತಿ ತಿಳಿಗೊಳಿಸುವ ಶಕ್ತಿ ನಿಮಗಿದೆ ಎಂದೇ ಇಷ್ಟು ನೇರ ಬರೆಯುತ್ತಿದ್ದೇನೆ.”

ಸ್ವಾಗತ ಸಮಿತಿಯ ಸುದ್ಧಿ ಮಾಡುವ ಹುಚ್ಚಿನ ವಕ್ತಾರರು ಈ ಸಮಯದಲ್ಲೇ ಹೀಗೊಂದು ಪತ್ರಿಕಾ ಹೇಳಿಕೆ ಕೊಟ್ಟರು “೨೦೦ ಮಳಿಗೆಗಳಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು ಒಂದು ಕೋಟಿ ರೂಪಾಯಿಗಳ ಪುಸ್ತಕ ಮಾರಾಟವಾಗುವ ನಿರೀಕ್ಷೆಯಿದೆ.” ಪತ್ರಿಕೆಗಳಲ್ಲೇ `ಅಂಕಿತಜ್ಞ’ ಎಂಬ ಹೆಸರಿನಲ್ಲಿ ನಾನು ಪ್ರತಿಕ್ರಿಯಿಸಿದೆ “ಒಂದು ಕೋಟಿ ಆದಾಯ ಮತ್ತು ೨೦೦ ಮಳಿಗೆಗಳನ್ನು ಮೊದಲು ವಿಶ್ಲೇಷಿಸೋಣ. ಎಲ್ಲ ಮಳಿಗೆಗಳಲ್ಲೂ ಸಮ್ಮೇಳನ ನಡೆಯುವ ನಾಲ್ಕೂ ದಿನಗಳಲ್ಲಿ ಕನಿಷ್ಠ ದಿನವೊಂದಕ್ಕೆ ರೂ ಒಂದೂಕಾಲು ಲಕ್ಷದ ಮಾರಾಟ ನಡೆಯಬೇಕು. ಕನ್ನಡದ ಸಂದರ್ಭದಲ್ಲಿ ನಾಲ್ಕಾಣೆಯ ಪ್ರಚಾರ ಪುಸ್ತಕಗಳಿಂದ ನಾನೂರು ರೂಪಾಯಿಯ ನೆನಪಿನ ದೋಣಿಯವರೆಗೆ ಬೆಲೆಯ ಹರಹನ್ನು ಕಾಣುತ್ತೇವೆ. ಒಟ್ಟಾರೆ ಅವುಗಳ ಬೆಲೆಯನ್ನು ಎಷ್ಟು ಮೇಲೇರಿಸಿದರೂ ಸರಾಸರಿಯಲ್ಲಿ ತಲಾ ಬೆಲೆ ರೂಪಾಯಿ ನೂರರ ಮೇಲೆ ಹೋಗಲಾರದು. ಸಮ್ಮೇಳನಕ್ಕೆ ಬರುವ ಎಲ್ಲರೂ ತಲಾ ಇಂಥ ಒಂದು ಪುಸ್ತಕವನ್ನು ಖರೀದಿಸುತ್ತಾರೆ ಎಂದಿಟ್ಟುಕೊಂಡರೆ, ಸಮ್ಮೇಳನದ ಜನಸಂದೋಹ ಒಂದು ಲಕ್ಷವಾಗಬೇಕು. ಇದನ್ನು ನಾಲ್ಕು ದಿನಗಳಿಗೆ ಹಂಚಿ ಹಾಕಿದರೂ ಯಾವುದೋ ಒಂದು ಕ್ಷಣದಕ್ಕಾದರೂ ಕನಿಷ್ಠ ೨೫೦೦೦ ಜನ ಸೇರುವುದು ಅನಿವಾರ್ಯವಾಗುತ್ತದೆ. ಆದರೆ ಹಿಂದೆ ಇಲ್ಲಿ ರೋಟರಿ ಸಮ್ಮೇಳನ ನಡೆಸಿದವರು ಮಂಗಳಾ ಕ್ರೀಡಾಂಗಣದ ತಾಕತ್ತು ಹತ್ತು ಸಾವಿರ ಕುರ್ಚಿ ಎಂದು ಕಂಡುಕೊಂಡಿದ್ದಾರೆ. ಈಗ ೨೫೦೦೦ ಕುರ್ಚಿ ಅಥವಾ ಮಂಗಳಾ ಕ್ರೀಡಾಂಗಣದ ವಠಾರ ವಿಸ್ತರಣ ಆಗುವ ಮಾತೇ? ನಿರಾಧಾರ ನಿರೀಕ್ಷೆಗಳನ್ನು ಹುಟ್ಟಿಸುವುದೂ ಗಾಳಿಮಾತು ಹರಡಿದಂತೆ ಶಿಕ್ಷಾರ್ಹ ಅಪರಾಧವಾಗದೇ?”

ಸಮ್ಮೇಳನ ಇನ್ನೇನು ನಾಲ್ಕೈದು ದಿನಗಳ ಅಂತರಕ್ಕೆ ಬರುತ್ತಿದ್ದಂತೆ ಉದ್ಯಮಿಗಳಲ್ಲಿ ಆತಂಕ ಏರತೊಡಗಿತು. ಪತ್ರಿಕಾ ವರದಿಗಳು, ಅಧಿಕೃತ ಹೇಳಿಕೆಗಳು ಒಂದಕ್ಕೊಂದು ವಿರೋಧಿಗಳಾಗಿಯೇ ಕಾಣುತ್ತಿದ್ದರೂ ಅಂತಿಮ ನಿರ್ಧಾರ ಸ್ವಾಗತ ಸಮಿತಿಯದೇ ಎಂಬ ತಿಳಿವಳಿಕೆ ಎಲ್ಲರಿಗೂ ಸ್ಪಷ್ಟವಿತ್ತು. ಹಾಗಾಗಿ ೬-೧೨-೧೯೯೭ರ ಬೆಳಗ್ಗೆ ನನಗೆ ಬೆಂಗಳೂರು ಮಿತ್ರರಿಂದ ದೂರವಾಣಿ ಬಂದಾಗ ಚಿಂತೆ ಬಲವಾಯಿತು. ಅವರು ವಕೀಲರ ಸಲಹೆಯ ಮೇರೆಗೆ ನ್ಯಾಯಾಲಯದ ಮೊರೆ ಹೊಕ್ಕು ಒಂದೋ ಸಮ್ಮೇಳನಕ್ಕೆ ಸ್ಥಾಗಿತ್ಯ, ಅಲ್ಲವಾದರೆ ಅನಿರ್ಬಂಧಿತ ಪುಸ್ತಕ ಮಾರಾಟಕ್ಕೆ ರಕ್ಷಣೆ ಪಡೆಯುವ ಸಿದ್ಧತೆಯಲ್ಲಿದ್ದರು. ಸಮ್ಮೇಳನಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಹೆಗ್ಗಡೆಯವರ ಪದ ನಿಮಿತ್ತ ಗೌರವಕ್ಕಿಂತಲೂ ವೈಯಕ್ತಿಕ ವರ್ಚಸ್ಸು ಹೆಚ್ಚಿನದು ಎಂಬುದು ನನಗೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಹಿಂದೊಮ್ಮೆ ಪ್ರಯತ್ನ ಮಾಡಿದ್ದೆ. ಆಗ ಅವರು ಊರಿನಲ್ಲಿರಲಿಲ್ಲವಾದ್ದರಿಂದ ಪತ್ರಿಸಿದ್ದಾಗಿತ್ತು. ಆ ನೆಪದಲ್ಲಿ ಈಗ ಇನ್ನೊಮ್ಮೆ ಪ್ರಯತ್ನಿಸಿದೆ. ಅತ್ತಣ ಧ್ವನಿ ಹೇಳಿತು “ಖಾವಂದರು ಮಂಗಳೂರಿನಲ್ಲೇ ಇದ್ದಾರೆ. ನಿಮ್ಮ ಪತ್ರವನ್ನು ಗಮನಿಸಿದ್ದಾರೆ.” ಮಂಗಳೂರಿನ ಶ್ರೀ ಧಮ ಕಾಲೇಜಿನಲ್ಲಿ ವಿಚಾರಿಸಿ ನೋಡಿದೆ. “ಉಡ್‍ಲ್ಯಾಂಡ್ಸ್ ಹೋಟೆಲಿನಲ್ಲಿ ಸಮ್ಮೇಳನದ ಕುರಿತ ಪತ್ರಿಕಾಗೋಷ್ಠಿಯಲ್ಲಿದ್ದಾರೆ” ಎಂದು ತಿಳಿಯಿತು. ನಾನಲ್ಲಿಗೆ ಧಾವಿಸಿದೆ.

ಗೋಷ್ಠಿಯಲ್ಲಿ ೨೦% ರಿಯಾಯ್ತಿ ಬಗ್ಗೆ ಯಾರೋ ಕೇಳಿದ ಪ್ರಶ್ನೆಗೆ ಹೆಗ್ಗಡೆಯವರು ಉತ್ತರಿಸುತ್ತ “…… ನಮಗೆ ವಿರೋಧವೇನೂ ಬಂದಿಲ್ಲ. ಬದಲಾಗಿ ೨೦೦ ಮಳಿಗೆಗಳು ಠೇವಣಿ ಸಹಿತ ಅರ್ಜಿ ಬಂದು ಭರ್ತಿಯಾಗಿವೆ ಮತ್ತು ಎಲ್ಲ ೨೦% ರಿಯಾಯ್ತಿಯಲ್ಲೇ ಮಾರುತ್ತಾರೆ. ಅವರಿಗೆ ಊಟ, ವಸತಿ ಮತ್ತು ಉಚಿತ ಮಳಿಗೆ ನಾವು ನೀಡುತ್ತಿರುವುದರಿಂದ ೨೦% ಕೊಟ್ಟದ್ದರಿಂದ ಅವರಿಗೆ ನಷ್ಟವಾಗದು…..” ಸ್ವಭಾವತಃ ನುಗ್ಗಿ ಮಾತಾಡುವ ಕೆಚ್ಚು ನನ್ನಲ್ಲಿ ಮೂಡಿದರೂ ಸಂಸ್ಕಾರ ಕಡಿವಾಣ ಹಾಕಿತು. ಅವರ ಮಾತು ಮುಗಿದ ಸಮಯ ನೋಡಿ, ವೇದಿಕೆಯಲ್ಲೇ ಅವರ ಕುರ್ಚಿಯ ಹಿಂದೆ ಹೋಗಿ, ನನ್ನ ಪರಿಚಯ ಹೇಳಿ ನಮ್ಮ ಅಹವಾಲಿನ ಪತ್ರದ ಪ್ರತಿ ಕೊಟ್ಟೆ. ಮೊದಲು ನಮ್ಮ ಹೋರಾಟದ ಪೂರ್ಣ ಪರಿಚಯ ತನಗಿಲ್ಲವೆಂದು ತಿಳಿಸಿ, ನನ್ನನ್ನು ನಿವಾರಿಸಲು ನೋಡಿದರು. ಸಮ್ಮೇಳನದ ಯೋಚನೆ ಬಂದಲ್ಲಿಂದಲೇ ಸಮಸ್ಯೆಯನ್ನು ಹೇಗೆ ನಿರ್ಲಕ್ಷಿಸಲಾಯ್ತು ಎಂಬುದನ್ನು ಸೂಕ್ಷ್ಮವಾಗಿ ನಾನು ಹೇಳತೊಡಗಿದಾಗ ಬೇರೆ ದಾರಿ ಹಿಡಿದರು. “ವಿರೋಧಿಗಳನ್ನು ನಾವು ಒಲಿಸಿಕೊಳ್ಳುತ್ತೇವೆ. ಅವರ ಪಟ್ಟಿ ಕೊಡಿ” ಎಂದರು. ಅವರು ಆಡಳಿತಾತ್ಮಕವಾಗಿ ಕೇವಲ ಗೌರವದ ಹಿರಿತನ ಒಪ್ಪಿಕೊಂಡರೆ, ನಿಜಗೌರವಕ್ಕೆ ಹೇಗೆ ಕುಂದುಂಟಾಗುವ ಸ್ಥಿತಿ ಬಂದಿದೆ ಎಂಬ ಅರಿವು ಅವರಿಗೆ ಮೂಡಿದಂತಿತ್ತು. ಆ ಕ್ಷಣವೇ ಅವರಿಂದ ನಿರ್ಧಾರವನ್ನು ಹೊರಡಿಸುವ ಮುಜುಗರ ಉಂಟು ಮಾಡದೇ ನಾನು ಹಿಂದೆ ಸರಿದೆ. ಅವರು ಬಯಸಿದಂತೆ – ಸಾಹಿತ್ಯ ಭಂಡಾರ, ನವಕರ್ನಾಟಕ, ಸಮಾಜ ಮುಂತಾದವರ ಹೆಸರ ಪಟ್ಟಿ ಮಾಡಿಕೊಟ್ಟೆ. ಆದರೆ ಮುಂದಿನ ಮೂರುನಾಲ್ಕು ದಿನಗಳಲ್ಲಿ ಯಾವ ಹಿರಿಯ ಪ್ರಕಾಶಕರನ್ನೂ ಯಾರೂ ಸಂಪರ್ಕಿಸಲಿಲ್ಲ!

ಇತ್ತ ಉದ್ಯಮಿಗಳ ಕಾನೂನು ಸಲಹೆಯಲ್ಲಿ, ತೀವ್ರ ಕ್ರಮಕ್ಕೆ ಇದು ಕಾಲವಲ್ಲ ಎಂದು ತಿಳಿಯಿತು. ಬದಲಿಗೆ ಪ್ರತಿಭಟನಾ ಪತ್ರವೊಂದನ್ನು ತಯಾರಿಸಿ, ಭಾಗಿಗಳೆಲ್ಲರ ಸಹಿ ಸಂಗ್ರಹಣೆ ಮಾಡಿ, ಅದನ್ನು ಮಳಿಗೆ ಹಿಡಿಯುವಂದು ಸ್ವಾಗತ ಸಮಿತಿಗೆ ಸಲ್ಲಿಸಿವುದು. ಅನಂತರ ೨೦% ರಿಯಾಯ್ತಿ ಧಿಕ್ಕರಿಸಿ, ಯಥಾನುಕೂಲ ಭಾಗವಹಿಸುವುದೆಂದು ನಿರ್ಧಾರವಾಯ್ತು. ಆ ಪ್ರಕಾರ ಕಸಾಪ ಜಿಲ್ಲಾಧ್ಯಕ್ಷ ಹಾಗೂ ಅಖಿಲ ಭಾರತ ೬೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯವರನ್ನು (ಹರಿಕೃಷ್ಣ ಪುನರೂರು) ಉದ್ದೇಶಿಸಿ ಹೀಗೊಂದು ಪತ್ರ ಸಿದ್ಧಪಡಿಸಿದೆವು:
“ಮಂಗಳೂರಿನಲ್ಲಿ ಜರಗಲಿರುವ ೬೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಯೋಜಿಸಿದ ಪುಸ್ತಕ ಪ್ರದರ್ಶನದ ಕುರಿತು ಈ ಪತ್ರವನ್ನು ತಮಗೆ ಬರೆಯುತಿದ್ದೇವೆ. ಪ್ರಾರಂಭ ಕಾಲದಲ್ಲಿ ಪುಸ್ತಕ ಮೇಳ ಮತ್ತು ವಸ್ತು ಪ್ರದರ್ಶನ ಸಮಿತಿಯವರು ಪ್ರಕಟಿಸಿದ ಕರಪತ್ರ ಮತ್ತು ತಾ ೧೨-೧೧-೯೭ ಪತ್ರಿಕೆಯಲ್ಲಿ ಪ್ರಕಟವಾದ ಗೌರವಾಧ್ಯಕ್ಷರ ಪತ್ರಿಕಾ ಹೇಳಿಕೆಯಲ್ಲಿ ಚುಟುಕಾಗಿ ಪ್ರಸ್ತಾವಿಸಿರುವ ಪುಸ್ತಕ ಪ್ರದರ್ಶನದ ವಿಚಾರವಲ್ಲದೆ ಇತರ ಯಾವುದೇ ಮಾಹಿತಿ ನಮಗಾಗಲೀ ಇತರ ಪುಸ್ತಕ ಮಾರಾಟಗಾರರಿಗಾಗಲೀ ದೊರಕಿಲ್ಲ. ಕರಪತ್ರದಲ್ಲಿ ಬರೆದಿರುವಂತೆ ಮಂಗಳಾ ಕ್ರೀಡಾಂಗಣದಲ್ಲಿ ೧೦ ಗುಣಿಸು ೧೦ ಅಡಿ ವಿಸ್ತೀರ್ಣದ ೩೦೦ ಮಳಿಗೆಗಳನ್ನು ಒದಗಿಸಲಾಗುತ್ತದೆಯೆಂದೂ ಪ್ರತಿಮಳಿಗೆಗೆ ರೂ ಐನೂರನ್ನು ಠೇವಣಿಯಾಗಿ ನವೆಂಬರ್ ತಿಂಗಳ ಹತ್ತನೆಯ ದಿನಾಂಕದ ಮೊದಲು ಪಾವತಿಸಬೇಕೆಂದೂ ತಿಳಿಸಲಾಗಿದೆ. ಅಲ್ಲದೆ. ಕನಿಷ್ಠ ೫೦ ಶೀರ್ಷಿಕೆಗಳನ್ನಾದರೂ ಮಳಿಗೆಗಳಲ್ಲಿ ಪ್ರದರ್ಶಿಸಬೇಕೆಂದೂ ಗ್ರಾಹಕರಿಗೆ ಪುಸ್ತಕಗಳನ್ನು ಕನಿಷ್ಠ ೨೦% ರಿಯಾಯ್ತಿಯಲ್ಲಿ ಮಾರಬೇಕೆಂದೂ ವಿನಂತಿಸಲಾಗಿದೆ.

“ಪುಸ್ತಕ ಪ್ರದರ್ಶನವನ್ನು ಏರ್ಪಡಿಸುವ ಕುರಿತು ತಾವು ಅಥವಾ ಸಮ್ಮೇಳನದ ಯಾವುದೇ ಸಂಘಟನಾಕಾರರು ನಮ್ಮನ್ನು ಸಲಹೆ ಸೂಚನೆಗಳಿಗೆ ಸಂಪರ್ಕಿಸಿದ್ದಿಲ್ಲ. ಅಷ್ಟೇಕೆ, ಕನ್ನಡ ಪುಸ್ತಕಗಳನ್ನು ಪ್ರೋತ್ಸಾಹಿಸಲೆಂದೇ ಇರುವ ಕಪುಪ್ರಾದಂಥ ಸಂಘಟನೆಯನ್ನೂ ಗಣನೆಗೆ ತೆಗೆದುಕೊಂಡಂತಿಲ್ಲ. ಸಾಹಿತ್ಯ ಸಮ್ಮೇಳನದ ಅತಿ ಪ್ರಮುಖ ಕಾರ್ಯಕ್ರಮವಾಗಿರುವ ಪುಸ್ತಕ ಪ್ರದರ್ಶನದ ಕುರಿತು ಪ್ರಕಾಶಕರ ಮತ್ತು ಮಾರಾಟಗಾರರ ಸಹಕಾರ ಸಮಾಲೋಚನೆ ಕೋರದೆ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ. ಪ್ರದರ್ಶನಕಾರರ ಅನುಕೂಲ, ಅನನುಕೂಲ, ಅವಕಾಶ, ಸೌಲಭ್ಯಗಳ ಕುರಿತು ಸಂಘಟಕರು ಯೋಚಿಸಿಲ್ಲ. ಈ ತನಕ ನಡೆದ ಎಲ್ಲ ಸಮ್ಮೇಳನಗಳಲ್ಲಿ ವ್ಯವಸ್ಥಿತವಾಗಿ ೧೦% ಕ್ಕಿಂತ ಹೆಚ್ಚು ರಿಯಾಯ್ತಿ ಕೊಟ್ಟದ್ದಿಲ್ಲ. ಆದರೆ ನಿಮ್ಮ ಪ್ರಾರಂಭಿಕ ಕರಪತ್ರದಿಂದ ತೊಡಗಿ, ಪತ್ರಿಕಾಗೋಷ್ಠಿಯವರೆಗೂ ೨೦% ರಿಯಾಯ್ತಿಯ ಪಟ್ಟು ಹಿಡಿದೇ ಇದ್ದೀರಿ. ಹಾಗೇ ಆ ಕುರಿತ ನಮ್ಮ ವಿರೋಧವೂ ಮೊದಲ ದಿನದಿಂದ ಇಂದಿನವರೆಗೂ ಹೇಳಿಕೆಗಳಲ್ಲಿ, ಪತ್ರಗಳಲ್ಲಿ ಸ್ಪಷ್ಟವಾಗಿ ಕೊಡುತ್ತಲೇ ಬಂದಿದ್ದೇವೆ. ಅವೆಲ್ಲವನ್ನೂ ಅವಗಣಿಸಿ ನೀವು ತಳೆದ ಏಕಪಕ್ಷೀಯ ನಿಲುವು ಬಹಳ ಖೇದಕರ. ಈ ೨೦%ರ ರಿಯಾಯ್ತಿ ಈಗಾಗಲೇ ದುಃಸ್ಥಿತಿಯಲ್ಲಿರುವ ಕನ್ನಡ ಪುಸ್ತಕೋದ್ಯಮದ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರುವುದರಲ್ಲಿ ಯಾವುದೇ ಸಂದೇಹವಿಲ್ಲ.

“ನಿಮ್ಮ ಕರಪತ್ರ ಮತ್ತು ಪತ್ರಿಕಾ ಹೇಳಿಕೆಗಳ ಭಾಗಶಃ ಸೂಚನೆಯಂತೆ ನಾವು ನಿಗದಿತ ದಿನಾಂಕದೊಳಗೆ ಠೇವಣಿ ಕಟ್ಟಿ ನೊಂದಾಯಿಸಿಕೊಂಡದ್ದಾಗಿದೆ. ಪ್ರದರ್ಶನದ ಶೋಭೆಗಾಗಿ ಹೆಚ್ಚುವರಿ ಪ್ರಕಟಣೆಗಳನ್ನು ಸಜ್ಜುಗೊಳಿಸಿಕೊಂಡಿದ್ದೇವೆ. ಆದರೀಗ ಸೂಚನೆಗಳು ಬದಲಾಗಿ ೨೦% ಕಡ್ಡಾಯವಾಗಿರುವುದು ಸರಿಯಲ್ಲ. ಇದರಿಂದ ಸುಲಭ ಬೆಲೆಯ ಪ್ರಕಟಣೆಗಳು, ಎಷ್ಟೋ ಉತ್ತಮ ಕೃತಿಗಳು ಮಳಿಗೆಗಳಲ್ಲಿ ಬಾರದಿರುವುದಕ್ಕೆ ನೀವು ಕಾರಣರಾಗುತ್ತಿದ್ದೀರಿ. ರಿಯಾಯ್ತಿ ಕಡ್ಡಾಯದ ಕುರಿತೂ ಈಗಲೂ ನಮ್ಮ ವಿರೋಧವಿದ್ದೇ ಇದೆ.

“ಭಾಗವಹಿಸುವ ಪ್ರಕಾಶಕರಿಗೆ ಹಾಗೂ ಪುಸ್ತಕ ವ್ಯಾಪಾರಿಗಳಿಗೆ ಊಟೋಪಚಾರ ಉಚಿತ ಎಂದು ತಿಳಿಸಿದ್ದೀರಿ. ಇದು ಎಲ್ಲ ಸಮ್ಮೇಳನದಲ್ಲೂ ಇರುವಂಥದ್ದೇ. ಆದರೆ ನಾವು ಯಾರೂ ಈ ಸೌಲಭ್ಯವನ್ನು ಬಳಸಿಕೊಳ್ಳುವಷ್ಟು ಕಾಲಾವಕಾಶ ಇರುವುದಿಲ್ಲ. ತಾವು ಬಾಡಿಗೆ ಕೂಡ ಉಚಿತವೆಂದು ತಿಳಿಸಿದ್ದೀರಿ. ನಾವು ಈಗಾಗಲೇ ಪಾವತಿ ಮಾಡಿರುವ ಠೇವಣಿ ಮೊಬಲಗನ್ನು ತಾವು ಬಾಡಿಗೆ ಎಂದು ಪರಿಗಣಿಸುವುದಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ ಮಾರಾಟದಲ್ಲಿ ೨೦% ರ ರಿಯಾಯ್ತಿ ನೀಡಲು ಮಾತ್ರ ಸಾಧ್ಯವೇ ಇಲ್ಲ. ಇಂಥ ಸಮ್ಮೇಳನಗಳಲ್ಲಿ ನಾವು ಎಷ್ಟೇ ಜಾಗರೂಕರಾಗಿದ್ದರೂ ಹಲವಾರು ಪುಸ್ತಕಗಳು ಕದ್ದುಹೋಗುತ್ತವೆ. ಇಂಥ ವಿಚಾರಗಳೆಲ್ಲವನ್ನು ಪರಿಗಣಿಸಿ, ಪುಸ್ತಕೋದ್ಯಮದ ಆರೋಗ್ಯಕರ ಬೆಳವಣಿಗೆ ದೃಷ್ಟಿಯಿಂದ ತಮ್ಮ ೨೦% ರಿಯಾಯ್ತಿ ನಿಲುವನ್ನು ಬದಲಾಯಿಸುವುದು ಒಳಿತು.

“ಸಮ್ಮೇಳನಾ ಕಾರ್ಯಕ್ರಮದಲ್ಲಿ ಯಾವುದೇ ವಿಘ್ನ ಅಥವಾ ಆತಂಕ ಒಡ್ಡಬಾರದೆಂಬ ನೈತಿಕ ಮನೋಧರ್ಮದಲ್ಲಿ ನಾವು ಈ ಆಕ್ಷೇಪಣೆಗಳನ್ನು ಸೌಮ್ಯವಾಗಿ ತಮ್ಮ ಮುಂದೆ ಮಂಡಿಸುತ್ತಿದ್ದೇವೆ. ನಮ್ಮ ಆಕ್ಷೇಪಣೆಗಳನ್ನು ಉಗ್ರ ರೂಪದಲ್ಲಿ ಪ್ರಕಟಿಸಿ, ಪ್ರದರ್ಶನವನ್ನು ಬಹಿಷ್ಕರಿಸಿ ಅಥವಾ ಇತರ ಒರಟು ರೂಪದಲ್ಲಿ ಪ್ರದರ್ಶನ ಮಾಡುವುದು ಸಾಹಿತ್ಯ ಪ್ರಕಾಶಕರ ಶಿಸ್ತು, ಸಹನಾ ಮನೋಧರ್ಮಕ್ಕೆ ಹೊಂದುವುದಿಲ್ಲ. ಹಾಗಾಗಿ ಬರವಣಿಗೆಯಲ್ಲಿ ತಿಳಿಸುತ್ತಿದ್ದೇವೆ. ಪುಸ್ತಕ ಮಾರಾಟ ದರದಲ್ಲಿ ೨೦% ರಿಯಾಯ್ತಿ ನಾವು ಒಪ್ಪಿಕೊಂಡಿಲ್ಲ ಎನ್ನುವುದನ್ನು ಪುನಃ ತಿಳಿಸುತ್ತಿದ್ದೇವೆ.”

ನವಕರ್ನಾಟಕದ ಪಬ್ಲಿಕೇಶನ್ಸಿನ ರಾಜಾರಾಮ್ ಹಾಗೂ ಬೆಂಗಳೂರು ಸಾಹಿತ್ಯ ಭಂಡಾರದ ಅರುಣ ಇವರುಗಳು ಮುಖ್ಯವಾಗಿ ತಲೆ ಸೇರಿಸಿ ಪತ್ರ ರೂಪಿಸಿ ಪ್ರತಿ ಮಾಡಿ ಮೈಸೂರು ಧಾರವಾಡ ಮಂಗಳೂರಾದಿ ಮುಖ್ಯ ಕೇಂದ್ರಗಳಿಗೆ ಮುಂದಾಗಿ ರವಾನಿಸಿದ್ದರು. ಸಮ್ಮೇಳನಾರಂಭಕ್ಕೆ ಕೇವಲ ಒಂದೇ ದಿನ ಬಾಕಿಯಿರುವಂತೆ ಈ ಹೊಸ ಜವಾಬ್ದಾರಿಗೆ ನ್ಯಾಯ ಒದಗುವಂತೆ, ಮಂಗಳೂರಿನ ನವಕರ್ನಾಟಕದ ಶಾಖೆಯ ಮುಖ್ಯಸ್ಥ ಜನಾರ್ದನ್ ಮೊದಲಾದವರು ಬೆಳಿಗ್ಗೆ ಹನ್ನೊಂದು ಹನ್ನೆರಡು ಗಂಟೆಯವರೆಗೂ ಸಮ್ಮೇಳನಾಂಗಣದಲ್ಲಿ ಓಡಾಡಿ, ಹೋಟೆಲ್ಲುಗಳಲ್ಲಿ ಹುಡುಕಾಡಿ, ಬರುತ್ತಿದ್ದ ಪುಸ್ತಕ ಮಾರಾಟಗಾರರ ಸಹಿ ಸಂಗ್ರಹ ಮಾಡುವುದರ ಜತೆಗೆ ಪತ್ರಿಕಾಗೋಷ್ಠಿಯನ್ನೂ ವ್ಯವಸ್ಥೆ ಮಾಡಿದ್ದರು. ಸಾಹಿತ್ಯ ಭಂಡಾರದ ಅರುಣ ಹೋರಾಟದ `ಸೇನಾನಿ’ ಪದ ಚೆನ್ನಾಗಿ ನಿರ್ವಹಿಸಿದರು. ಕೊನೆಗೆ ಮುಸ್ಸಂಜೆಯ ಹೊತ್ತಿಗೆ `ಸಮ್ಮೇಳನದ ವ್ಯವಸ್ಥಾಪಕರಿಗೆ ಪತ್ರ ಸಮರ್ಪಣ’ ಎಂದು ನಿಶ್ಚೈಸಿ ಚದುರಿದ್ದೆವು.

ಶ್ರೀ ಧಮ ಕಾಲೇಜು ವಠಾರ ಅಕ್ಷರಶಃ ಮದುವೆ ಮುನ್ನಾ ದಿನದ ಸಡಗರ, ಗೊಂದಲಗಳ ಬೀಡು. ವಿಸ್ತಾರ ಚಾವಡಿ ಒಂದರಲ್ಲಿ ಹತ್ತೆಂಟು ಮೇಜು, ಕುರ್ಚಿ, ಸ್ಥಾಯೀದೂರವಾಣಿ ಮತ್ತು ಆಗ ತಾನೇ ನಿಧಾನಕ್ಕೆ ಪ್ರವೇಶಿಸಿದ್ದ ಚರವಾಣೀಗಳ ಕಾರುಬಾರಿನೊಡನೆ ಜನವೋ ಜನ, ಕಾರ್ಯಕರ್ತರುಗಳು, ಪದಾಧಿಕಾರಿಗಳು, ಸಾಹಿತಿಗಳು, ಪರ ಊರುಗಳಿಂದ ಗಂಟುಗದಡಿ ಹೊತ್ತು ತಿರುಗುವ ಸಾಹಿತ್ಯ ಪ್ರೇಮಿಗಳು, ಕಲಾವಿದರು ಇತ್ಯಾದಿ ಇತ್ಯಾದಿ. ಎಲ್ಲರ ಕೈಗಳಿಗೂ ಮುಗಿದು ದಣಿವಿಲ್ಲ, ಮುಖಗಳೋ ಕಿಸಿದ ಬಾಯಿಗಳೇ. ಅಲ್ಲಿ ಇಲ್ಲಿ ಸಣ್ಣ ಸಣ್ಣ ಗುಂಪುಗಳಲ್ಲಿ ಆತ್ಮೀಯತೆಯ ಸಿಂಚನ ನಡೆದಿದ್ದಂತೆ, ನಾವು ಐದಾರು ಜನ ಮಾತ್ರ ಹತಾಶೆಯೇ ಮೈವೆತ್ತಂತೆ ಹೋಗಿದ್ದೆವು. ನಮ್ಮೂರಿನ ಶಾಸಕ – ಯೋಗೀಶ್ ಭಟ್, ಸಿಕ್ಕರು. ನಮ್ಮ ಅಹವಾಲು ಕೇಳಿದರು, ಉಪದೇಶಿಸಿ ನಮ್ಮನ್ನು ತಣಿಸಲು ಪ್ರಯತ್ನಿಸಿ ಸೋತರು. ಪರಿಸ್ಥಿತಿಯ ಬಿಸಿ ನೋಡಿ, ಮೆಲ್ಲಗೆ ಗೌರವ ಉಪಾಧ್ಯಕ್ಷ – ಏರ್ಯ ಲಕ್ಷ್ಮೀನಾರಾಯಣ ಆಳ್ವರೆಡೆಗೆ ಕೈಗಂಬವಾದರು. ಆಳ್ವರು ನನಗೆ ತುಂಬಾ ಆತ್ಮೀಯರೇ ಆದ್ದರಿಂದ ದಾಕ್ಷಿಣ್ಯ ಕಾಡಿರಬೇಕು. ಏನೋ ಉಪಾಯದಲ್ಲಿ ಸಹ-ಕಾರ್ಯದರ್ಶಿ – ಎಂ.ರಾಮಚಂದ್ರ, ಅವರತ್ತ ದಾಟಿಸಿದರು. ಇವರೂ ನನ್ನ ಆತ್ಮೀಯ ವರ್ಗದವರೇ. ಹಾಗಾಗಿಯೋ ಏನೋ ಊರಿನಲ್ಲೇ ಇರದ ಪ್ರದರ್ಶನ ಸಮಿತಿಯ ಅಧ್ಯಕ್ಷ ಅಥವಾ ಸ್ಥಳದಲ್ಲಿರದ ಪ್ರಧಾನ ಕಾರ್ಯದರ್ಶಿಗಳ ಭೇಟಿಯೇ ಯುಕ್ತ ಎಂದು ಒಮ್ಮೆ ಜಾರಿಕೊಂಡರು. ಆದರೆ ನಮ್ಮ ಛಲ ನಾಳಿನ ಸಮ್ಮೇಳನಕ್ಕೇ ಕುತ್ತಾಗಬಹುದೆಂದು ಅನ್ನಿಸಿದ್ದಕ್ಕೋ ಏನೋ ಪರಿಷದಧ್ಯಕ್ಷ – ಸಾಶಿ ಮರುಳಯ್ಯನವರತ್ತ ನೂಕಿ ಬಿಟ್ಟರು. ಅವರಾದರೋ ಮೊದಲೇ ನನ್ನ ಕಾಗದ ಸರಣಿಯಿಂದ ಹೈರಾಣಾದ್ದಕ್ಕೋ ಏನೋ “ಸ್ಥಳೀಯ ವ್ಯವಸ್ಥೆಗಳೆಲ್ಲ ಸ್ವಾಗತ ಸಮಿತಿಯ ಹೊಣೆ” ಎಂದು ಜಾರಿಕೊಂಡರು. ಅಂದರೆ ಇನ್ಯಾರು ಇನ್ಯಾರು ಎಂದು ನಾವು ಸುತ್ತ ನೋಡಿದಾಗ ಸ್ವಾಗತ ಸಮಿತಿಯ ಅಧ್ಯಕ್ಷ – ವೀರೇಂದ್ರ ಹೆಗ್ಗಡೆಯವರೇ ಅಂಗಳದ ಒಂದು ತುದಿಯಲ್ಲಿ ಕಾಣಿಸಿದರು. ಈಗ ನಮ್ಮ ತುಕಡಿಯನ್ನು ಅವರೆದುರು ಹಾಜರುಪಡಿಸುವ ಜವಾಬ್ದಾರಿ ನನ್ನ ತಲೆಗೆ ಬಿತ್ತು, ದಾಪುಗಾಲಿಕ್ಕಿದೆವು.

“ನಮಸ್ಕಾರ ಸಾರ್. ಅಶೋಕ ವರ್ಧ….” ಪರಿಚಯಿಸಿಕೊಳ್ಳಲಿದ್ದೆ. ನನ್ನ ಮಾತು ಕಡಿದು “ಗೊತ್ತು, ಗೊತ್ತು. ತಾನು ನಡೆದದ್ದೇ ದಾರಿ ಎನ್ನುವ ಅಭ್ಯಾಸದವರು” ಎಂದು ಆಶ್ಚರ್ಯಕರವಾಗಿ ವಾಗ್ದಾಳಿ ಮಾಡಿದರು. ಮುಂದುವರಿದು “ಸಮಾಜ ಸಂಸಾರದಲ್ಲಿ ಹಾಗಾಗುವುದಿಲ್ಲ. ಕೊಡುಕೊಳು ಇರಲೇಬೇಕು….” ಎನ್ನುತ್ತಿದ್ದಂತೆ ನಾನು ಸುಧಾರಿಸಿಕೊಂಡೆ. “ಇಲ್ಲ, ನಿಮಗೆ ತಪ್ಪು ತಿಳಿಸಿದ್ದಾರೆ….” ಎಂದು ತೊಡಗಿ ಸೂಕ್ಷ್ಮವಾಗಿ ನಮ್ಮ ಒಂದು ವರ್ಷದ ಹೋರಾಟ, ಹತಾಶೆಗಳನ್ನು ನಿವೇದಿಸಿದೆ. ಹೆಗ್ಗಡೆಯವರು ಬೇರೇ ದಾರಿ ಹಿಡಿದರು – ಮಳಿಗೆ ಉಚಿತ, ಊಟ ಉಚಿತ ಇತ್ಯಾದಿ. ಅದಕ್ಕೆ ಅರುಣ, ಈಗಾಗಲೇ ಪತ್ರದಲ್ಲಿ ಕಾಣಿಸಿದ ಸೂಕ್ಷ್ಮಗಳನ್ನು ಉಲ್ಲೇಖಿಸಿ ವಿವರಿಸಿದರು. ಅರುಣರ ಹಿನ್ನೆಲೆ, ಪ್ರಾಮಾಣಿಕತೆ, ಕನ್ನಡ ಪರ ಕಾಳಜಿ ಕೇಳಿಯಷ್ಟೇ ತಿಳಿದಿದ್ದ ಅಧ್ಯಕ್ಷರು ಮತ್ತೆ ಸಮಯಕೇಳುವ ಆಟ ಹಿಡಿಯಲಾಗಲಿಲ್ಲ. “ಪ್ರಧಾನ ಕಾರ್ಯದರ್ಶಿ ಅಸ್ತು ಅಂದರೆ ನಾನೂ ಅಷ್ಟೇ” ಎಂದದ್ದಲ್ಲದೆ ಅವರನ್ನು ಕೂಡಲೇ ಭೇಟಿಯಾಗಲು ಸೂಚನೆ ಕೊಟ್ಟು ಅನ್ಯ ಕಾರ್ಯಾರ್ಥ ನಿರ್ಗಮಿಸಿದರು.

ಅರ್ಧ ಗಂಟೆ ಕಳೆದು ಪ್ರಧಾನ ಕಾರ್ಯದರ್ಶಿ – ಹರಿಕೃಷ್ಣ ಪುನರೂರು, ಬಂದರು. ನಾವು ಪ್ರತಿಭಟನಾ ಪತ್ರ ಕೊಟ್ಟು ಸೂಕ್ಷ್ಮವಾಗಿ ನಮ್ಮ ವಾದವನ್ನೂ ಅಧ್ಯಕ್ಷರ ಸೂಚನೆಯನ್ನೂ ತಿಳಿಸಿದೆವು. ಅಲ್ಲೂ ಮೊದಲು ಆಕ್ರಮಣ! “ನೀವು ಯಾವಾಗ್ಲೂ ಲಾಭ ಮಾಡಬೇಕೂಂತ ಯೋಚಿಸುವುದನ್ನು ಬಿಡಿ…… ನಾವು ನಿಮಗೆ ಊಟ, ಮಳಿಗೆ…. ನೀವು ನಮಗೇನೂ ಕೊಡುವುದು ಬೇಡ. ಜನರಿಗೆ ರಿಯಾಯಿತಿ ಕೊಡಿ ಎಂದಷ್ಟೇ…..” ಯಾವ ತಿಳುವಳಿಕೆಯೂ ಇಲ್ಲದೆ ತೀರಾ ಒರಟಾಗಿತ್ತು ಅವರ ಮಾತಿನ ಸರಣಿ. ಅರುಣ ಗುರಾಣಿ ಗಟ್ಟಿಯಾಗಿ ಹಿಡಿದರು, “೪೦-೫೦ ವರ್ಷಗಳಿಂದ ಬರಿಯ ಕನ್ನಡ ಪುಸ್ತಕ ಭಂಡಾರ ನಡೆಸುತ್ತಿದೆ ನನ್ನ ಸಂಸ್ಥೆ. ಆದರೂ ಸ್ವಂತ ಅಂಗಡಿ ಕಟ್ಟಡ, ಮನೆ, ಆಸ್ತಿ ಏನೂ ಮಾಡಿಲ್ಲ. ೨೦ ವರ್ಷದಲ್ಲೇ ಪುಟ್ಟಪಥದಿಂದ ಬಹುಮಹಡಿ ಕಟ್ಟಡದವರೆಗೆ ಏರಿದವರ ಕಥೆ, ಅನ್ಯ ಭಾಷೆಯ ಮುಗ್ಗಲು ಸಾಹಿತ್ಯವನ್ನು ತಲೆ ತೆಗೆಯುವ ಬೆಲೆಗೆಸೆದು ಸರಕರೀ ಖಜಾನೆಯ ಕೊಳ್ಳೆ ಹೊಡೆಯುವವರ ತಂತ್ರ ನಮ್ಮದಲ್ಲ. ಗೋಪಾಲಕೃಷ್ಣರಾಯರು, ಭೈರಪ್ಪ ಇಂಥವರ ಘನತೆವೆತ್ತ ಕನ್ನಡ ಸಾಹಿತ್ಯವನ್ನಷ್ಟೇ ಪ್ರಕಟಿಸಿ, ವಿತರಿಸಿ ಉಳಿದವರು ನಾವು. ಇನ್ನು ಅತ್ರಿಯವರ ಪ್ರಕಟಣೆಗಳುನೋಡಿ – ಯಾವ ಸರಕಾರೀ ಪ್ರಕಟಣೆಯೂ ಸ್ಪರ್ಧಿಸಲಾರದಷ್ಟು ಸುಲಭ ಬೆಲೆ, ಶ್ರೇಷ್ಠ ಸಾಹಿತ್ಯ. ಇದು ಲಾಭವೇ? ಅದೆಲ್ಲ ಬಿಡಿ, ಮಂಡ್ಯದಲ್ಲಿ ಮಳೆ ಬಂದು ಪುಸ್ತಕ ಕೊಚ್ಚೋಯ್ತು, ಹಾಸನದ ದೊಂಬಿಯಲ್ಲಿ ಕದ್ದೋಯ್ತು. ನಾವು ಕೇಳೋಕ್ಕಾಗುತ್ತಾ ನೀವು ಕೊಡೋಕ್ಕಾಗುತ್ತಾ? ಇಷ್ಟೂ ವರ್ಷಗಳ ಉದ್ದಕ್ಕೆ ತೀರಾ ಅಸಾಧ್ಯ ಅನ್ನೋ ದೈಹಿಕ ತೊಂದರೆಗಾಗಿ ಒಂದೆರಡು ಸಮ್ಮೇಳನಕ್ಕೆ ಗೈರುಹಾಜರಾದದ್ದು ಬಿಟ್ಟರೆ ಒಂದೂ ಸಮ್ಮೇಳನ ತಪ್ಪಿಸಬಾರದು ಎಂಬ ತತ್ತ್ವಕ್ಕಾಗಿ ಭಾಗವಹಿಸುತ್ತ ಬಂದಿದ್ದೀವಿ. ಏನೋ ಒಂದು ಉಚಿತ ಸಿಗುತ್ತೇಂತ, ಇನ್ಯಾರೋ ನಷ್ಟ ತುಂಬ್ತಾರೇಂತ ಬದುಕಿದವರು ನಾವಲ್ಲ. ಹೋಗ್ಲಿ ಹೇಳಿದ್ದೆಲ್ಲ ನೀವು ಕೊಟ್ರಾ? ವಸತಿ ಕೊಡ್ತೀವಿ ಅಂದಿದ್ದು ಎಲ್ಲಿ? ಆಯ್ತು ಇಲ್ಲಿ ೨೦% ಕೊಟ್ವೀಂತಿಟ್ಟುಕೊಳ್ಳಿ.ನಾಳೆ ಇನ್ನೊಂದೂರಿನವರು ತಮ್ಮ ಹೆಚ್ಚುಗಾರಿಕೆಗೆ ೩೦%, ಮತ್ತೊಂದೂರಿನವರು ೫೦% ಹೇಳ್ತಾ ಹೋದ್ರೆ…..”

ನಿರುತ್ತರ, ನಿರುತ್ತರ! ಪ್ರಧಾನ ಕಾರ್ಯದರ್ಶಿಯವರದೀಗ ವಿಪ್ರಲಂಬ ಪ್ರಲಾಪ “ಹೋ ನಂಗೇನೂ ಬೇಡ. ನಾನು ಸಾಹಿತಿಯಲ್ಲ. ಪ್ರಕಾಶಕನಲ್ಲ. ಪುಸ್ತಕ ಮಾರಾಟಗಾರನೂ ಅಲ್ಲ. ಬರೀ ಹೋಟೆಲಿನವನು. ಏನೋ ಸ್ವಲ್ಪ ಸೇವೆ ಮಾಡುವಾಂತ ಇದ್ದೇನೆ ಅಷ್ಟೆ. ಎಲ್ಲರನ್ನ ಕರೀತೇನೆ, ಊಟ ಬಡಿಸ್ತೇನೆ, ಎಂಜಲೆಲೆಲ್ ತೆಗೀತೇನೆ, ನೆಲ ಸಾರಿಸ್ತೇನೆ – ಸೇವೆ, ಅಷ್ಟೆ. ನನ್ನ ವೈಯಕ್ತಿಕ ಅಭಿಪ್ರಾಯ ಹೇಳಿದ್ದೆ. ಇನ್ನು ನಿಮಗೆ ಇಷ್ಟ ಬಂದ…..”

ನಾನು ಅವರ ಮಾತು ತಡೆದು “ಸ್ವಾಮೀ, ನಿಮ್ಮ ವೈಯಕ್ತಿಕ ಅಭಿಪ್ರಾಯ ನಾವು ಕೇಳುತ್ತಿಲ್ಲ. ಸ್ವಾಗತ ಸಮೊಇತಿಯ ಪ್ರ. ಕಾರ್ಯದರ್ಶಿಯ ತೀರ್ಮಾನ ಬೇಕಾಗಿದೆ.” ಇಷ್ಟರಲ್ಲಿ ಸಾಹಿತ್ಯ ಕೇಂದ್ರದ ರತ್ನಾಕರರಿಗೆ ಸಿಟ್ಟು ತಡೆಯಲಿಕ್ಕಾಗದೆ “ಹೊಡ್ದು, ಕಾಲು ಮುರ್ದು, ಈಗ ನಂಗೊತ್ತಿಲ್ಲ, ನಾನಲ್ಲ ಎನ್ನುವವರಂತೆ ಮಾತಾಡ್ತಿದ್ದೀರಲ್ಲಾ” ಎಂದು ಧ್ವನಿ ಏರಿಸಿ ಉದ್ಗರಿಸಿದರು. ಅಲ್ಲಿಯವರೆಗೆ ಬರಿಯ ಪ್ರೇಕ್ಷಾಬಣದಲ್ಲಿದ್ದ ಉಪಾಧ್ಯಕ್ಷ – ಏರ್ಯ ಲಕ್ಷ್ಮೀನಾರಾಯಣ ಆಳ್ವರಿಗೆ ಒಮ್ಮೆಗೇ ಕೋಪ ಕೆರಳಿತು. ತಾರ ಪಂಚಮದಲ್ಲಿ “ಏನು ನಾವು ಕೈಕಾಲು ಮುರಿಯುವವರೋ ಅಬ್ಬ ನಿಮ್ಮ ಭಾಷೆ! ನಿಮ್ಮ ಪತ್ರದಲ್ಲೂ ಅದೇ…. ಏನು ಬರ್ದಿದ್ದೀರಿ, ನಾವು ಕುಯುಕ್ತಿ ಮಾಡುವವರೋ ದ್ರೋಹಿಗಳೋ….” ಈ ಹಿರಿಯರ ಧ್ವನಿ ಏರುವ ಪರಿ ನನಗೆ ಆತಂಕ ಮೂಡಿಸಿತು. ನಾನು ಅವರನ್ನು ಸಮಾಧಾನಿಸಲು ತೊಡಗುವಾಗ, ಸಹ-ಕಾರ್ಯದರ್ಶಿ – ಎಂ. ರಾಮಚಂದ್ರರಿಗೆ ಆವೇಶ ಬರತೊಡಗಿತು. “ಹೌದು, ನಾನೂ ಪತ್ರ ನೋಡಿದ್ದೇನೆ. You language…language…. insulting…” ತೊದಲಿದರು. ಈ ಹೊತ್ತಿಗೆ ನಮ್ಮೆಲ್ಲರ ಉದ್ವೇಗಗಳು ಆಶ್ಚರ್ಯಕರವಾಗಿ ಪಕ್ಷಾಂತರಗೊಂಡಿದ್ದುವು.ನಾನು ಸಮಾಧಾನದಲ್ಲಿ “ಆಯ್ತು, ನಾವು ಎಲ್ಲಿ ವಿಷಯ ಬಿಟ್ಟು, ತರ್ಕ ಮೀರಿ ಅವಮಾನಕರ ಭಾಷೆ ಬಳಸಿದ್ದೇವೆ? ತೋರಿಸ್ತೀರಾ?”

ಸಂಜೆಗತ್ತಲಿನಲ್ಲಿ ಏರುಧ್ವನಿಯ ಗುಂಪು ಕಂಡು ಅಲ್ಲಿ ಬಂದಿದ್ದ ಊರ, ಪರವೂರ ಮಂದಿಯೆಲ್ಲ ಕುತೂಹಲದಿಂದ ಸುತ್ತ ಘೇರಾಯಿಸಿ, ಡೊಂಬರಾಟದ ವಾತಾವರಣ ಮೂಡಿತ್ತು. ಕೋಪದಲ್ಲಿ ಇಂಗ್ಲಿಷ್ ತೊದಲಿದವರು, ನಮ್ಮ ಪ್ರತಿಭಟನಾ ಪತ್ರವನ್ನು ಗಟ್ಟಿಯಾಗಿ ಓದತೊಡಗಿದರು. ಅವರು ಮೊದಲ ಪ್ಯಾರಾ ಮುಗಿಸುತ್ತಿದ್ದಂತೆ ನಾನು ಬಾಯಿ ಹಾಕಿ “ಹೇಳಿ, ಎಲ್ಲಿ ತಪ್ಪಿದೆ” ಎಂದೆ. ಆದರೆ ಅವರು ಪೂರ್ಣ ಓದಿಯೇ ದೋಷ ಪಟ್ಟಿಕೊಡುತ್ತೇನೆ ಎಂದು ಮುಂದುವರಿದರು. ಹತ್ತುಮಿನಿಟಿನ ವೃಥಾ ಕಂಠ ಶೋಷಣೆಯನಂತರ “ಹಾಂ, ಇದಕ್ಕೇ ನೀವು ಕ್ಷಮೆ ಕೇಳಬೇಕು, you must apologise”
ಎಂದು ಮುಗಿಸಿದರು. ನಾನು ತಣ್ಣಗೆ “ಆಯ್ತು, ನಾವು ಭಾಷಾಪ್ರಯೋಗಗಳಿಗೆ ಕ್ಷಮೆ ಕೇಳುತ್ತೇವೆ. ೧೦% ರಿಯಾಯಿತಿಗೆ ನಿಮ್ಮ ಒಪ್ಪಿಗೆ ತಾನೇ?” ಪ್ರಧಾನ ಕಾರ್ಯದರ್ಶಿಯ ಧ್ವನಿ ಈಗ ಪ್ರಧಾನವಾಯ್ತು, “ಕ್ಷಮಾ ಕೋರಿಕೆ ಬರವಣಿಗೆಯಲ್ಲಿ ಬೇಕು.ಮತ್ತೆಲ್ಲ ಗೌರವಾಧ್ಯಕ್ಷರ ಸೂಚನೆ ನಮಗೆ ಮಾನ್ಯ” ಎಂದುಬಿಟ್ಟರು.

ಚಾವಡಿಯ ಬೆಳಕಿಗೆ ಹೋದೆವು. ನನಗೆ ಮೇಜು ಕುರ್ಚಿ ಕಾಗದ ಒದಗಿಸಿದರು. ನಾನು ಬರೆದೆ “ಮಾನ್ಯ ಗೌರವಾಧ್ಯಕ್ಷರ ಸಮಕ್ಷಮಕ್ಕೆ. ಪುಸ್ತಕ ಮಾರಾಟವನ್ನು ರಿಯಾಯಿತಿ ನಿರ್ಬಂಧಗಳೇನೂ ಹೇರದೆ ನಡೆಸಿಕೊಳ್ಳಲು ಪ್ರಧಾನ ಕಾರ್ಯದರ್ಶಿಗಳು ಒಪ್ಪಿದ್ದಾರೆ. ಆದರೆ ಈ ಕುರಿತು ಔಪಚಾರಿಕ ಘೋಷಣೆ ನಿಮ್ಮಿಂದಾಗಬೇಕೆಂದು ಕೋರಿದ್ದಾರೆ. ನಮ್ಮ ಪತ್ರದಲ್ಲಿ ಬಂದಿರಬಹುದಾದ ಯಾವುದೇ ಭಾಷಾ ಪ್ರಯೋಗಗಳು ನಿಮ್ಮನ್ನು ಅಥವಾ ಸ್ವಾಗತ ಸಮಿತಿಯ ಯಾರನ್ನೇ ಆದರೂ ನೋಯಿಸಿದ್ದರೆ ಅದು ನಮ್ಮ ಉದ್ದೇಶವಲ್ಲ. ಮತ್ತು ಅದಕ್ಕೆ ನಾವು ಕ್ಷಮೆ ಕೋರುತ್ತೇವೆ. ಎಲ್ಲ ಸಮ್ಮೇಳನಗಳಲ್ಲಿ ನಡೆದು ಬಂದಂತೆ ನಾವು ಈಗಲೂ ೧೦% ರಿಯಾಯಿತಿಯೊಡನೆ ಪುಸ್ತಕಗಳನ್ನು ಮಾರಲು ಬದ್ಧರಿದ್ದೇವೆ. ಕೇವಲ ನಿಮ್ಮ ಮಾತಿನ ಹರಕೆಯನ್ನು ಕಾದಿದ್ದೇವೆ.”

ಗೌರವಾಧ್ಯಕ್ಷರ ಒಪ್ಪಿಗೆ ನನ್ನದೇ ಪತ್ರದ ಮೇಲೆ ಟಿಪ್ಪಣಿಯಂತೆ ಬಂತು. ಸ್ವಾಗತ ಸಮಿತಿಯವರು ವಿಜಯೋತ್ಸಾಹದಿಂದ (?) ಅದನ್ನು ನಮಗೊಪ್ಪಿಸಿದರು! ತಮಾಷೆ ಎಂದರೆ, ಅವರ ಕಡತಗಳು ಈ ವಿಚಾರದ ಕಲಾಪಗಳ ದಾಖಲೆ ಉಳಿಸಿಕೊಳ್ಳುವುದಿದ್ದರೆ ನಮ್ಮ ಕ್ಷಮಾಕೋರಿಕೆ ಪತ್ರದ ಕೊರತೆಯೊಡನೆ, ೨೦% ರಿಯಾಯಿತಿ ಸೋತದ್ದು ಒಗಟಾಗಿಯೇ ಉಳಿದುಬಿಡುತ್ತದೆ! ರೋಟರಿ ಕ್ಲಬ್ ಪ್ರಣೀತ, ಜಿಲ್ಲಾಡಳಿತ ಸಹಯೋಗದ ಕರಾವಳಿ ಉತ್ಸವ ಸಮ್ಮೇಳನದ ಹಿಂದೆಯೇ ಅದೇ ವಠಾರದಲ್ಲಿ ಶುರುವಾಗುವುದಿತ್ತು. ಅವರ ಪ್ರದರ್ಶನ/ಮಾರಾಟ ಮಳಿಗೆಗಳಿಗಾಗಿ ಸಜ್ಜುಗೊಳ್ಳುತ್ತಿದ್ದ ಚಪ್ಪರ ಸಾಲು ಸಮ್ಮೇಳನಕ್ಕಾಗಿ ಸ್ವಲ್ಪ ಚುರುಕುಗೊಂಡು ಒದಗಿತ್ತು. ಮುಖ್ಯ ಸಾಹಿತ್ಯ ಕಲಾಪಗಳು ಮಂಗಳ ಕ್ರೀಡಾಂಗಣದ ಒಳಗೆ ನಡೆದಿದ್ದರೆ ಮಳಿಗೆಗಳು ಹೊರ ವಲಯದಲ್ಲಿದ್ದುವು. ಪುಸ್ತಕ ಮೇಳದ ವ್ಯವಸ್ಥೆಯನ್ನು ಒಂದೆರಡು ವರ್ಷಗಳ ಹಿಂದಷ್ಟೇ ಎನ್ಬೀಟಿ ಅಪೂರ್ವವಾಗಿ ಮಂಗಳೂರಿನಲ್ಲೇ ತೋರಿಕೊಟ್ಟಿದ್ದರಿಂದ ಸಮ್ಮೇಳನ ವ್ಯವಸ್ಥೆ ಸರ್ವತ್ರ ಟೀಕೆಗೊಳಗಾದದ್ದು ಸಹಜವೇ ಇತ್ತು. ಸಮ್ಮೇಳನದ ಒಟ್ಟು ವ್ಯಾಪಾರ ಸಾಹಿತ್ಯ ಭಂಡಾರದವರ ಅಂದಾಜಿನ ಪ್ರಕಾರ ರೂ ಮೂವತ್ತು ಲಕ್ಷಮೀರಲಾರದು. ಆದರೂ ಸ್ವಾಗತ ಸಮಿತಿ ಸಮ್ಮೇಳನದ ಪಶ್ಚಾತ್ ಕೊಟ್ಟ ಹೇಳಿಕೆ “ಕೋಟಿ ಮೀರಿದ” ವಹಿವಾಟನ್ನೇ ಕಾಣಿಸಿದ್ದು ಒಳ್ಳೆಯ ಹಾಸ್ಯೋಕ್ತಿ! ನನ್ನ ಮಟ್ಟಿಗೆ ಕಸಾಪ ತಾನೇ ಮುಪ್ಪುರಿಗೊಳಿಸಿ ತಯಾರಿಸಿದ ನೇಣಿನಲ್ಲಿ ತಾನೇ ನೇತು ಬಿದ್ದಂತೆ ತೋರಿದ್ದು ನಿಜಕ್ಕೂ ಪ್ರಹಸನವಲ್ಲ!