“ದಟ್ಟಡವಿ, ಸಾಧಾರಣ ಮನೆ!” ಇದು ಮೊನ್ನೆ ನಮ್ಮಗ – ಅಭಯಸಿಂಹ, ಬೆಂಗಳೂರಿನಿಂದ ಬಂದವನು ಜಪಿಸುತ್ತಿದ್ದ ಮಂತ್ರ! ಎಲ್ಲೋ ಅನಂತನಾಗ್ ಅವರ ಹೊಸ ಸಿನಿಮಾ – ಗೋಧಿ ಬಣ್ಣ, ಸಾಧಾರಣ ಮೈಕಟ್ಟನ್ನು ತಪ್ಪಾಗಿ ಕೇಳಿಸಿಕೊಂಡೆನೋ ಅಂದರೆ ಇಲ್ಲ. ಇದು ಅವನ ಮುಂದಿನೊಂದು ಯೋಜನೆಯ ಬಹುಮುಖ್ಯ ಅಗತ್ಯ ಎಂದು ಮಾತ್ರ ತಿಳಿಯಿತು. ಹಾಗಾಗಿ ನನ್ನ ಅನುಭವ ಮತ್ತು ಸಂಪರ್ಕದ ಮಿತಿಯಲ್ಲಿ ಮುಂದಿನ ಎರಡು ದಿನ ನಾನೂ ಅದನ್ನೇ ಪುರಶ್ಚರಣ ಮಾಡುತ್ತಾ ಕಾರಿನೊಡನೆ ಅವನಿಗೆ ಜತೆಗೊಟ್ಟೆ. ಬೆಳಿಗ್ಗೆ ಮನೆಯಲ್ಲೇ ಹೊಟ್ಟೆಭರ್ತಿ ಮಾಡಿ, ನಮ್ಮ ಸವಾರಿ ಹೊರಟಿತು. ಜೋಡುಮಾರ್ಗ, ಬೆಳ್ತಂಗಡಿ, ಉಜಿರೆ, ಮುಂಡಾಜೆ ಕಳೆದು ಇನ್ನೇನು ಘಟ್ಟ ಬಂತೆನ್ನುವಲ್ಲಿರುವ ಹಳ್ಳಿ ಕಕ್ಕಿಂಜೆ ನಮಗೆ ಮೊದಲ ಕವಲೂರು. ಸುಮಾರು ಮೂವತ್ತೆಂಟು ವರ್ಷಗಳ ಹಿಂದೆ, ಮಂಗಳೂರು ದಾವಣಗೆರೆ ಬಸ್ಸಿನಲ್ಲಿ ಅದೇ ಪ್ರಥಮ ಬಾರಿ ಎಂಬಂತೆ ನಾನು ಗೆಳೆಯ ಲೋಕೇಶನೊಡನೆ ಇಲ್ಲೇ ಬಂದಿಳಿದಿದ್ದೆ. ಆದರೆ ಅದು ಅಮಾವಾಸ್ಯೆಯ ಕಾರಿರುಳಿನ ಹನ್ನೊಂದು ಗಂಟೆ, ವಿದ್ಯುಚ್ಛಕ್ತಿಯ ಸೌಕರ್ಯ (ಅನಾನುಕೂಲ?) ತಿಳಿಯದ ವಲಯ, ಇದ್ದಿರಬಹುದಾದ ನಾಲ್ಕೆಂಟು ಗೂಡಂಗಡಿಗಳೂ ಮುಚ್ಚಿದ್ದ ಸಮಯ – ಕಂಡದ್ದೇನು?

ನಮ್ಮದೇ ಆಶಯದತ್ತ ಚಲಿಸುವ ಕ್ಷೀಣ ಬೆಳಕು! ಹೌದು, ಅಜ್ಞಾತ ಮಾರ್ಗದರ್ಶಿಯಾಗಿ ಒದಗಿ ಬಂದಾತನ ಬೀಡಿ ಬೆಳಕಿನ ಔದಾರ್ಯ! ಅಂದು ಇದ್ದ ಲಕ್ಷ್ಯ ಅಮೆದಿಕ್ಕೆಲ್ ಆರೋಹಣ. (ವಿವರಗಳನ್ನು ಮುಂದೆಂದಾದರೂ ಇಲ್ಲೇ ಬರೆಯುತ್ತೇನೆ) ಆದರೆ ಪರಿಸ್ಥಿತಿಯ ಫಿತೂರಿಯಲ್ಲಿ ಗಳಿಸಿದ ಲಾಭ, ನೆರಿಯ ರಾಘವ ಹೆಬ್ಬಾರರ ಆತ್ಮೀಯ ಪರಿಚಯ. ಅದೇ ಸಂಬಂಧ ನಮ್ಮ ಇಂದಿನ ಹುಡುಕಾಟಕ್ಕೂ ಅನುಕೂಲವಾದೀತು ಎಂದನ್ನಿಸಿದ್ದಕ್ಕೇ ಅತ್ತ ಹೊರಳಿದೆವು. ಹಿಂದೆ ಇಲ್ಲಿ ಆರೇಳು ಕಿಮೀ ಓಟದ ಕೊನೆಯಲ್ಲಿ ಕಚ್ಚಾದಾರಿ ನೆರಿಯ ಕೃಷಿಲೋಕದಲ್ಲಿ ಸಾರ್ಥಕ್ಯ ಕಾಣುತ್ತಿತ್ತು. ಆದರೆ `ಅಭಿವೃದ್ಧಿ’ ನಗರೀಕರಣದ ಮೂಲಮಂತ್ರ! ಇಂದು ಬಹುಮಹಡಿಗಳ ಕಟ್ಟಡ, ವಾಣಿಜ್ಯ ವಹಿವಾಟು ವಾಹನಗಳ ಭರಾಟೆಯಲ್ಲಿ ಗಿಜಿಗುಡುತ್ತಿದೆ ಕಕ್ಕಿಂಜೆ ಪೇಟೆ. ಮಕ್ಕಳನ್ನು ಹೆಕ್ಕುದುರಿಸುವ ಇಂಗ್ಲಿಷ್ ಮಾಧ್ಯಮದ ಎರಡು-ಮೂರು ವಾಹನ ಸಿಕ್ಕ ಮೇಲೆ ಕೇಳಬೇಕೇ. ದಾರಿ ನುಣ್ಣನೆ ಡಾಮರು ಕಂಡಿದೆ. ಉದ್ದಕ್ಕೂ ನಡೆದಿರುವ ಅಸಂಖ್ಯ ನಾಗರಿಕ ಚಟುವಟಿಕೆಗಳ ಸರಣಿಯಲ್ಲಿ ಒಂದು ಅಮುಖ್ಯ ಕಚ್ಚಾ ದಾರಿಯ ಮೂಲೆ ಹಿಡಿದಂತಿದೆ ನೆರಿಯ ಎಸ್ಟೇಟ್ಸ್!

ಹೆಬ್ಬಾರ್ ಕುಟುಂಬದ ಓರ್ವ ಸಮರ್ಥ ಕುಡಿ, ನನ್ನ ಸಮವಯಸ್ಕ ಗೆಳೆಯ ರಾಧಾಕೃಷ್ಣ ಹೆಬ್ಬಾರ್ ಸಿಕ್ಕಿದರು. ಅವರು ನಮ್ಮ ಅಗತ್ಯ ಕೇಳಿ, ಸಹಾಯಕರೊಡನೆ ಚರ್ಚಿಸಿ ಒಂದು ಸ್ಥಳದ ಸಲಹೆ ನೀಡಿದರು. ಮತ್ತೆ ಅದನ್ನು ಸಾಧಿಸುವಲ್ಲಿ ತನ್ನೊಬ್ಬ ಪ್ರತಿನಿಧಿಯನ್ನು (ಶೇಖರ) ಮಾರ್ಗದರ್ಶಿಯಾಗಿಯೂ ಕಳಿಸಿಕೊಟ್ಟರು. ಕಕ್ಕಿಂಜೆಗೆ ಮರಳುವ ದಾರಿಯಲ್ಲಿ ಜೈನ ಮಠದ ಸಮೀಪ ನಾವು ಕಾರು ಬಿಟ್ಟು, ಒಂದು ಬಾಡಿಗೆ ಜೀಪ್ ಹಿಡಿದೆವು. ಮತ್ತೆ ಅಲ್ಲೇ ಬಲಕ್ಕೆ ಕವಲೊಡೆದ ಹರಕು ಡಾಮರುದಾರಿ, ಸ್ವಲ್ಪದರಲ್ಲೇ ಕಚ್ಚಾದಾರಿಯಾದ್ದನ್ನು ಅನುಸರಿಸಿದೆವು. ಜನ ಜಾನುವಾರು ಸಂಪರ್ಕವನ್ನು ಮೀರಿದ, ದಟ್ಟ ಕುರುಚಲು ಕಾಡ ಹೊದ್ದಿಕೆಯ ಬೆಟ್ಟ. ಇಲ್ಲಿ ಬೆಟ್ಟದ ಓರೆ ಹುಡುಕುವ ಹೆದ್ದಾರಿಗಳ ಅನುನಯವಿಲ್ಲ. ವ್ಯವಸ್ಥಿತ ಚರಂಡಿಯೂ ಇಲ್ಲ. ಸಹಜವಾಗಿ ಮಳೆನೀರು ಸಣ್ಣಪುಟ್ಟ ತಿರುವುಗಳಲ್ಲೆಲ್ಲ ಬೇಕಾದ ಆಟವಾಡಿತ್ತು. ಹಾಗೆ ಮೂಡಿದ ಸವಕಳಿಯ ಕೊರಕಲು, ಒತ್ತಿನಿಂತ ದಿಬ್ಬಗಳು, ಎದ್ದ ಕಲ್ಲುಗಳನ್ನೆಲ್ಲ ಲೆಕ್ಕಕ್ಕಿಡದೆ, ಚತುರ್ಬಲ ಹಾಕಿ (ಜೀಪು ನಾಲ್ಕೂ ಚಕ್ರಗಳಲ್ಲಿ ಶಕ್ತಿ ಊಡಿತ್ತು!) ಏಕವೇಗದ ಖಚಿತ ನಡೆಯಲ್ಲಿ ಜೀಪು ಏರಿತು. ಶಿಖರಸಾಲು ಮುಟ್ಟಿ ಹಿಮ್ಮೈಯ ಕಿರು ಕಣಿವೆಗಿಳಿದೆವು. ಸುಮಾರು ಮೂರು ಕಿಮೀ ಕೊನೆಯಲ್ಲೊಂದು ಹಳೆಯ ಕಿಂಡಿ ಅಣೆಕಟ್ಟು, ಆಚೆ ಮನೆ ಕೃಷಿಭೂಮಿ ಕಾಣಿಸಿತ್ತು. ಅಣೆಕಟ್ಟಿನ ಪಾತ್ರೆ ನೀರಿಳಿಸಿ, ಹುಲ್ಲುಗಾವಲಿನಂತೆ ಶೋಭಿಸಿತ್ತು. ಅದರಲ್ಲೊಂದೆರಡು ಸಾಕುಪ್ರಾಣಿಗಳು ವಿರಾಮದಲ್ಲಿ ಹುಲ್ಲು ಮೇಯುತ್ತಿರುವುದು ಕಾಣುತ್ತಿದ್ದಂತೆ ನನ್ನ ನೆನಪಿನ ಕವಾಟವೂ ತೆರೆದುಕೊಂಡಿತು. ಸುಮಾರು ಮೂರೂವರೆ ದಶಕಗಳ ಹಿಂದೆ ನಾನು ಈ `ಮಲ್ಲ’ ಎಂಬ ಕಗ್ಗಾಡಮೂಲೆಯನ್ನು ಭೂಪಟದ ಮೇಲೆ ನೀಲ ಬೊಟ್ಟಾಗಿಯೇ ಗುರುತಿಸಿದ್ದೆ. ಅಂದು ನನ್ನಲ್ಲಿ ಮೂಡಿದ ಪ್ರಶ್ನೆ “ಆ ಎತ್ತರದಲ್ಲಿ, ಅಷ್ಟು ದೊಡ್ಡ ನೀರಹರಹು ಪ್ರಾಕೃತಿಕವೇ?” ಉತ್ತರ ಹಿಡಿಯಲು ಹೆಚ್ಚು ತಡಮಾಡದೆ, ಒಂದು ಬೆಳಿಗ್ಗೆ, ಮೂರ್ನಾಲ್ಕು ಮಿತ್ರರನ್ನು ಕೂಡಿಕೊಂಡು ಕಕ್ಕಿಂಜೆಗೆ ಬಸ್ಸೇರಿದ್ದೆ. ಅದೂ ಬೇಸಗೆಯ ಕೊನೆಯ ದಿನಗಳೇ. ಬಸ್ಸಿಳಿದಾಗ ಅದೃಷ್ಟಕ್ಕೆಂಬಂತೆ ಅಲ್ಲೇ ಜೀಪೇರಿ ಬಂದವರು ನೆರಿಯ ರಾಜಗೋಪಾಲ ಹೆಬ್ಬಾರರು (ರಾಧಾಕೃಷ್ಣ ಹೆಬ್ಬಾರರ ಚಿಕ್ಕಪ್ಪ). ಅವರು ನಮ್ಮ `ಹುಚ್ಚಿ’ಗೆ ನಕ್ಕರೂ ಜೀಪಿನಲ್ಲಿ ಜೈನಮಠದ ಎದುರಿನಿಂದ ದಾರಿಯಿದ್ದಷ್ಟೂ ಒಳಕ್ಕೆ ಬಿಟ್ಟು ಹೋಗಿದ್ದರು. ದಟ್ಟ ಕಾಡು, ಕಟ್ಟೇರಿನ ನಡುವೆ ಕೇವಲ ಸವಕಲು ಜಾಡಿನಲ್ಲಿ ಬೆಟ್ಟ ಕಳೆದು, ಈ ಸರಸಿಯ ದಂಡೆಗಿಳಿದಾಗ ಅಂದೂ ಈ ಸರೋವರ ಹೀಗೇ ಖಾಲಿಯೇ ಇತ್ತು, ಜಾನುವಾರು ಮೇಯ್ದುಕೊಂಡಿತ್ತು. ಮಲೆಕುಡಿಯರ ದನಗಾಹಿಯನ್ನು ವಿಚಾರಿಸಿದ್ದೆ, “ನೀರೆಲ್ಲಿ?” ಆತ ಸಹಜವಾಗಿ ಉತ್ತರಿಸಿದ್ದ “ಧರ್ಮಸ್ಥಳದ ತೋಟಕ್ಕೆ ಹೋಗಿದೆ!”

ಕೆರೆಯ ಎದುರು ದಂಡೆಯ ಮೇಲಿದ್ದ ಬಹುಶಃ ಒಂದೇ ಕುಟುಂಬದ ಎರಡು ಮೂರು ಮನೆ ನೋಡಿದೆವು. ಅವುಗಳಲ್ಲಿ ಹೊಸತೆನ್ನುವುದೇ ೧೯೫೧ನೇ ಇಸವಿಯದ್ದು. ಹಜಾರದ ಮಹಾತೊಲೆಯ ಮೇಲೆ ಮನೆಯ ಯಜಮಾನನ ಹೆಸರು ಮತ್ತು ಮನೆ ಕಟ್ಟಿದ ಇಸವಿಯನ್ನು ಇಂಗ್ಲಿಷಿನಲ್ಲಿ ಕೆತ್ತಿದ್ದರು!

ಅಲ್ಲಿಂದೀಚೆಗೆ ಕಚ್ಚಾದಾರಿ ರೂಪುಗೊಂಡದ್ದು ಮತ್ತು ವಿದ್ಯುತ್ ಮನೆಯನ್ನು ಬೆಳಗಿದ್ದೇ ಆ ಕಗ್ಗಾಡಮೂಲೆ ಕಂಡ ಮಹಾ ಬದಲಾವಣೆ ಇರಬೇಕು. ಅಲ್ಲಿ ಜೀಪಿಳಿದ ಮೇಲೆ ಮನೆಗಳ ವಠಾರಕ್ಕೆ ಭಾರೀ ಮರಗಳ ನಡುವೆ ಹಾದು ಹೋಗುವ ನಡೆಜಾಡು, ಗೃಹಕೃತ್ಯಗಳಿಗೆ ದಂಬೆಗಳಲ್ಲಿ ನಿರಂತರ ಹರಿದು ಬರುವ ಬೆಟ್ಟದ ನೀರು, ಸುತ್ತಣ ಕಾಡು ಅಭಯನ ಕಲ್ಪನೆಗೆ ಪೂರಕವಾಗಿಯೇ ಇತ್ತು. ಆದರೆ ಒಬ್ಬ ವ್ಯಕ್ತಿಯಷ್ಟೇ ವಾಸಿಸುವ ಸರಳ ಮನೆ ಅವು ಆಗಲಾರವು ಎಂದನ್ನಿಸಿದಕ್ಕೆ, ಮೌನವಾಗಿಯೇ ವಾಪಾಸು ಹೊರಟೆವು. ಬಂದದ್ದಕ್ಕೆ ನಷ್ಟವಾಗದಂತೆ ಬಿದ್ದಿದ್ದ ಕಾಡುಮಾವಿನ ಸವಿ ಅನುಭವಿಸುತ್ತ ಮತ್ತೆ ಜೀಪೇರಿದೆವು. ಜೈನ ಮಠದ ಬಳಿ ಮಾರ್ಗದರ್ಶಿ, ಜೀಪನ್ನೆಲ್ಲ ಬೀಳ್ಕೊಟ್ಟು, ಕಾರು ಸೇರಿ, ಚಾರ್ಮಾಡಿಯತ್ತ ಮುಂದುವರಿದೆವು.

ಗಂಟೆ ಇನ್ನೂ ಹನ್ನೊಂದೂವರೆ. ಆದರೆ ಮುನ್ನೆಚ್ಚರಿಕೆಯಲ್ಲಿ ಚಾರ್ಮಾಡಿ ಹಳ್ಳಿಯ ಹೋಟೆಲಿಗೆ ಒಳ್ಳೆಯ ಗಿರಾಕಿಗಳೇ ಆದೆವು. ಆರೋಹಣದ ಪ್ರಾಥಮಿಕ ಪಾಠ – ಹೊಟ್ಟೆ ಗಟ್ಟಿಯಿರಬೇಕು, ಘಟ್ಟವೆದುರಾಗಬೇಕು! ಅನಂತರ ಕಾರೇನೋ ನಿಧಾನಕ್ಕೇ ಘಟ್ಟ ಏರತೊಡಗಿತು. ಆದರೆ ದಾರಿಬದಿಯ ನೂರೆಂಟು ನಿಶಾನಿಗಳು ಪ್ರಚೋದಿಸುತ್ತಿದ್ದಂತೆ, ನಾನು ನೆನಪಿನ ಹೆದ್ದಾರಿಯಲ್ಲಿ ಬಲುವೇಗದಲ್ಲೇ ಇಳಿಯತೊಡಗಿದ್ದೆ. ಈಚಿನ ಸೈಕಲ್ ಸಾಹಸಯಾನದ ಕಥೆಯಿಂದ ತೊಡಗಿ, ೧೯೭೬ರ ಸುಮಾರಿಗೆ ಡಾ|ರಾಘವೇಂದ್ರ ಉರಾಳರ `ಡಕೋಟಾ’ ಕಾರಿನಲ್ಲಿ ಬಂದು ಏರಿಕಲ್ಲು ಏರಿದವರೆಗೂ ಅಸಂಖ್ಯ ನೆನಪಿನ ಕಡತ ವಿಲೇವಾರಿ ಮಾಡಿ ಅಭಯನ ತಾಳ್ಮೆ ಪರೀಕ್ಷೆ ಮಾಡಿದ್ದೆ! ಆದರೆ ಅಷ್ಟು ಕೊಚ್ಚಿದ್ದಕ್ಕೆ ಇಷ್ಟು ಲಾಭವೆನ್ನುವಂತೆ, ಮುಂದಿನ ತನಿಖಾ ಸ್ಥಳ ಬಿದಿರುತಳ ಎಂದುಕೊಂಡೆವು.

ಅಣ್ಣಪ್ಪನ ಗುಡಿ ಕಳೆದು ಒಂದು ಕಿಮೀಗೆ ದಾರಿಯ ಎಡಮಗ್ಗುಲಿಗೆ ಸಿಗುವ ಕವಲು ದಾರಿ ಬಿದಿರುತಳದ್ದು. ೧೯೮೦ರ ದಶಕದ ಕೊನೆಯಲ್ಲೆಲ್ಲೋ ನಮ್ಮ ಒಂದು ತಂಡ ಅಣ್ಣಪ್ಪನ ಗುಡಿಗೂ ಎರಡು ಕಿಮೀ ಮೊದಲಲ್ಲೆಲ್ಲೋ ಬಸ್ಸಿಳಿದು, ಈ ಶ್ರೇಣಿಯನ್ನು ತುಡುಕುವ ಸಾಹಸ ಮಾಡಿತ್ತು. ಅಂದು ಕೊಡೆಕಲ್ಲೇರಿ, ಆಚಿನ ಬಾಳೇಕಲ್ಲಿನ ಮರಗಳ ನೆರಳಿನಲ್ಲಿ ಬುತ್ತಿಯೂಟ ಉಂಡಿದ್ದೆವು. ಮತ್ತೆ ಅದೇ ದಿಕ್ಕನ್ನು ಮುಂದುವರಿಸಿ ಕಣಿವೆಯಾಳದ ದುರ್ಗದ ಹಳ್ಳಕ್ಕಿಳಿಯುತ್ತಿದ್ದಾಗ ನಮ್ಮ ಆಶ್ಚರ್ಯಕ್ಕೆ ಪಕ್ಕದ ಕಣಿವೆಯಾಚೆ ಅಸ್ಪಷ್ಟವಾಗಿ ಕಾಣಿಸಿದ ಜನವಸತಿ ಈ ಬಿದಿರುತಳ. ಅನಂತರವೂ ಬೇರೆ ಬೇರೆ ಸಂದರ್ಭದಲ್ಲಿ ನಾನು ಈ ವಲಯದಲ್ಲಿ ಓಡಾಡಿದ್ದಿತ್ತು. ಮುಖ್ಯ ದಾರಿಯಿಂದ ಬೇನಾಮಿ ಸವಕಲು ಜಾಡಷ್ಟೇ ಇದ್ದ ಹಳ್ಳಿಗೆ ಹೆಸರುಹೊತ್ತ ಕೈಕಂಬ, ಅಪ್ರಾಯೋಗಿಕ ಕಚ್ಚಾದಾರಿ, ದಾರಿಯಂಚಿನಲ್ಲೊಂದು ಪ್ರಯಾಣಿಕರ ಗೂಡು ಬಂದದ್ದೆಲ್ಲವನ್ನು ಗಮನಿಸಿದ್ದೆ. ಗೆಳೆಯ ದಿನೇಶ ಹೊಳ್ಳ ತನ್ನ ಚಾರಣಿಗರ ಬಳಗಗಳನ್ನು ಆ ಹಳ್ಳಿಗೇ ಒಯ್ದು ರಾತ್ರಿ ವಾಸ ನಡೆಸುತ್ತಿದ್ದುದನ್ನೂ ಕೇಳಿದ್ದೆ. ಈಗ ಬಿದಿರುತಳ ನಮ್ಮ `ದಟ್ಟಡವಿ, ಸಾಧಾರಣ ಮನೆ’ ಅಗತ್ಯಕ್ಕೆ ಒಲಿದೀತೇ ಎಂದು ನೋಡಿಬಿಡುವ ಪ್ರಯತ್ನ ನಡೆಸಿದೆವು.

ಘಾಟೀದಾರಿಯ ನಿರ್ಜನ ಪ್ರದೇಶದಲ್ಲಿ ಕಾರು ಬಿಟ್ಟುಹೋಗುವುದು ಸರಿಯಲ್ಲ, ಆದರೆ ನಮಗೆ ಅನಿವಾರ್ಯ. ಈ ಕಚ್ಚಾದಾರಿ ಏರಿನಲ್ಲಾಗಲೀ ದುಃಸ್ಥಿತಿಯಲ್ಲಾಗಲೀ ಮಲ್ಲದ ದಾರಿಗೆ ಏನೂ ಕಡಿಮೆಯಿರಲಿಲ್ಲ. ನಾವು ನಮ್ಮ ಬಡಕಲು ಕಾಲುಗಳಿಗೇ ಚತುರ್ಬಲ ಆವಾಹಿಸಿಕೊಂಡು ಹೆಜ್ಜೆಯ ಮೇಲೆ ಹೆಜ್ಜೆ ಹೇರತೊಡಗಿದೆವು. ನಮ್ಮ ಅದೃಷ್ಟಕ್ಕೆ ಇಲ್ಲಿ ದಾರಿ ಹೆಚ್ಚು ಉದ್ದವಿಲ್ಲ. ಶಿಖರ ಸಾಲನ್ನು ಅತ್ಯಂತ ತಗ್ಗು ಅವಕಾಶದಲ್ಲೇ ಹತ್ತಿ ಕಳೆದಿದ್ದೆವು.
ಆಚೆ ಕೆಲವು ನೂರು ಮೀಟರುಗಳಲ್ಲಿ ಬಿದಿರುತಳದ ಪುಟ್ಟ ಬೋಗುಣಿ ತೆರೆದುಕೊಂಡಿತು. ಅಲ್ಲಿ ತುಸು ಚದುರಿದಂತೆ ಐದು ಸರಳ ಮನೆಗಳೇನೋ ಇದ್ದುವು. ಆದರೆ ಕೃಷಿಯ ಅವಸ್ಥಾಂತರಗಳಲ್ಲಿ ಪರಿಸರವೆಲ್ಲ ನಾಗರಿಕ ಅವ್ಯವಸ್ಥೆಗಳು ಅಥವಾ ಬೋಳು ಬೋಳು. ಹಿನ್ನೆಲೆಗೆ ಕಾಡಲ್ಲದಿದ್ದರೂ ಶಿಖರದ ಕುಡಿಗಳಾದರೂ ದಕ್ಕಿಯಾವೇ ಎಂದರೂ ನಮಗೆ ಸೋಲು. ಮಳೆಗಾಲದ ರಾವು ಬಡಿಯುವಾಗ, ಕರಾವಳಿಯ ಪಶ್ಚಿಮಮಾರುತ ಘಟ್ಟ ಹಾಯುವಾಗ ಮನೆ ಸೊತ್ತುಗಳ ರಕ್ಷಣೆ, ಒಳಗೆ ಜೀವನದ ಬಿಸುಪು ಕಾಯ್ದುಕೊಳ್ಳುವ ಎಚ್ಚರವೇ ಇಲ್ಲಿನ ವಾಸ್ತುವಿನ್ಯಾಸವನ್ನು ನಿರ್ದೇಶಿಸಿತ್ತು. ಮತ್ತೆ ಅದನ್ನು ನಿರಾಕರಿಸುವಷ್ಟು ಹಣದ ಸೊಕ್ಕಿನವರು ಆ ಹಳ್ಳಿಗರಲ್ಲ! ಆದರೂ ಐದು ಮಿನಿಟಿನ ಸುತ್ತಾಟದಲ್ಲಿ ಅಲ್ಲಿನ ಮೂರ್ನಾಲ್ಕು ಮನೆ ಅಂಗಳ ತುಳಿದು ಬಂದೆವು. ಓರ್ವ ವಯೋವೃದ್ಧನನ್ನುಳಿದು (ರುದ್ರೇಗೌಡ) ಹಳ್ಳಿಗರೆಲ್ಲ, ಮನೆಗಳ ಬಾಗಿಲು ಮುಂದೆ ಮಾಡಿ, ದೂರದಲ್ಲೆಲ್ಲೋ ಕೂಲಿ ಕೆಲಸಕ್ಕೆ ಹೋಗಿದ್ದರು.

ವರ್ಷದ ಹನ್ನೆರಡು ತಿಂಗಳು ಹರಿಯುವ ತೊರೆ, ಪರಂಪರೆಯಲ್ಲಿ ರೂಢಿಸಿದ ಕೃಷಿ ಎಲ್ಲ ಹಡಬೆಬಿಟ್ಟಿದ್ದರು. ಅಷ್ಟೇ ಏನು ಕನಿಷ್ಠ ಮನೆ ಸುತ್ತ ಮುತ್ತಣ ಮರಗಳಲ್ಲಿ ಮುಷ್ಟಿಗಾತ್ರದ ರಾಶಿ ಸೀಬೆ ಹಣ್ಣುಗಳನ್ನು ಹೊತ್ತು ತೊನೆಯುತ್ತಿದ್ದ ಮರಗಳೂ ವ್ಯರ್ಥವಾದಂತಿತ್ತು. ಮತ್ತೇನು, ಸೀಬೆ ಹಣ್ಣು ಕೊಯ್ದು, ಕೊಟ್ಟಿಗೆಹಾರದ ದೂರಕ್ಕೆ ಒಯ್ದರೆ ಒಬ್ಬನ ಕಾಫಿ ಖರ್ಚೂ ಹುಟ್ಟುವುದಿಲ್ಲ. ಗೌಡ್ರನ್ನ ವಿಚಾರಿಸಿದೆವು. ಈಚಿನ ನಾಲ್ಕೈದು ವರ್ಷಗಳಿಂದ ಕಾಡುತ್ತಿರುವ ಆನೆಗಳ ಕತೆ ಹೇಳಿದರು. “ಅಜ್ಜಾ ತಪ್ಪು ಆನೆಗಳದ್ದಲ್ಲ, ನಮ್ಮದು! – ನಗರದವರ ದಾರಿ ತಪ್ಪಿದ ಅಭಿವೃದ್ಧಿಯದ್ದು” ಎನ್ನಲು ನನಗೆ ಧ್ವನಿ ಬರಲೇ ಇಲ್ಲ. ಆನೆ ಮುಟ್ಟುವುದಿಲ್ಲವೆಂದು ಗುಡ್ಡದ ಓರೆಗಳಲ್ಲಿ ಮಜ್ಜಿಗೆ ಹುಲ್ಲು ಬೆಳೆದರೂ ಅದರಿಂದ ಎಣ್ಣೆ ಭಟ್ಟಿಯಿಳಿಸಿ ಮಾರುವ ಶ್ರಮ ವೆಚ್ಚಕ್ಕಿಂತ ಆಗೀಗ ಹುಲ್ಲು ಕೇಳಿಕೊಂಡು ಬರುವ ಪಿಕ್ಕಪ್ಪುಗಳಿಗೇ ತುಂಬಿ ಕಳಿಸುವುದು ಹೆಚ್ಚು ಪ್ರಾಯೋಗಿಕವಂತೆ. ಅಂತಿಮವಾಗಿ ಪ್ರಕೃತಿಮಡಿಲಲ್ಲಿ ಸ್ವತಂತ್ರವಾಗಿ ಆರೋಗ್ಯಪೂರ್ಣ ನೀರು, ಹವೆ, ದುಡಿಮೆ, ಆಹಾರ ಅನುಭವಿಸುತ್ತ, ಏನೋ ಒಂದು ಬದುಕ ಕಾಣುತ್ತಿದ್ದವರು, ಇಂದು ದಾರುಣವಾಗಿ ಎಲ್ಲ ಬಿಟ್ಟು ಯಾರದೋ ತೋಟಗಳಲ್ಲಿ ಕೂಲಿಗಳಾಗಿ ಕಳೆದುಹೋಗಿದ್ದಾರೆ!

ಜಿಲ್ಲಾಡಳಿತ ನಾಮಕಾವಸ್ಥೆ ದಾರಿಯನ್ನು ಸರಿಪಡಿಸುತ್ತೇನೆ ಎಂದರೆ ಅರಣ್ಯ ಇಲಾಖೆ ಅಡ್ಡಗಾಲಿಡುತ್ತದೆ. ಕೃಷಿಗೆ ನುಗ್ಗುವ ಆನೆಯನ್ನಾದರೂ ತಡೆಯಿರಿ, ಪರಿಹಾರ ಕೊಡಿ ಎಂದರೆ ಅದೇ ಇಲಾಖೆ ರೆವೆನ್ಯೂ ಇಲಾಖೆಯನ್ನು ಕೇಳಿ ಎಂದು ಕೈಚೆಲ್ಲುತ್ತದೆ. ದಮ್ಮಯ್ಯ ದೂರ ಎಲ್ಲಾದರೂ ಮರುವಸತಿ ಕೊಡಿ ಎಂದರೂ ಕೇಳುವ ಕಿವಿಗಳೇ ಇಲ್ಲವಂತೆ! ಕುದುರೆಮುಖ, ಭದ್ರಾ, ನಾಗರಹೊಳೆ ವನಧಾಮಗಳಲ್ಲಿ ಬಹಳ ಶ್ರಮವಹಿಸಿ, ನಿರಂತರ ಹಿಂದೆಳೆಯುವ ಅಸಂಖ್ಯ ಬಲಗಳನ್ನು ಧಿಕ್ಕರಿಸಿ ಪ್ರಾಮಾಣಿಕವಾಗಿ ಸಾಕಷ್ಟು ಮರುವಸತಿ ಕೊಡಿಸಿದ ಸ್ವಯಂಸೇವಾ ಬಳಗ ನಮ್ಮ ಗೆಳೆಯರದ್ದೇ ಇದೆ. ಆದರೆ ಅದನ್ನು ಇಲ್ಲಿಗೂ ವಿಸ್ತರಿಸಲು ಆಗದ ಅಸಹಾಯಕತೆಯನ್ನು ನಾವಾದರೂ ಎಲ್ಲಿ ತೋಡಿಕೊಳ್ಳೋಣ? ನಾವು ಜಡ್ಡುಗಟ್ಟಿದ ಮನಸ್ಸಿನಲ್ಲಿ, ಬಿದ್ದಿದ್ದ ಒಂದೆರಡು ಸೀಬೆ ಹಣ್ಣುಗಳನ್ನಷ್ಟೇ ಹೆಕ್ಕಿ ಚಪ್ಪರಿಸುತ್ತ ಕಾರಿಗೆ ಮರಳಿದೆವು.

ಮಂಗಳೂರು ಬಿಡುವ ಮೊದಲೇ ನಾನು ಮಲೆನಾಡು ವಲಯದ ಮೂರ್ನಾಲ್ಕು ಮಿತ್ರರನ್ನು ಸಂಪರ್ಕಿಸಿದ್ದೆ. `ದಟ್ಟಡವಿ, ಸಾಧಾರಣ ಮನೆ’ ಮಂತ್ರೋಪದೇಶ ಮಾಡಿ, ಸಿದ್ಧಿ ಕಂಡುಕೊಳ್ಳಲು ಕೇಳಿಕೊಂಡಿದ್ದೆ. ಆ ಪಟ್ಟಿಯಲ್ಲಿದ್ದರೂ ಕಳೆದೆರಡು ದಿನಗಳಿಂದ ವ್ಯಾಪ್ತಿಪ್ರದೇಶದಿಂದ ಹೊರಗೇ ಇದ್ದು, ಒಮ್ಮೆಯೂ ಮಾತಿಗೆ ಸಿಗದವರು ಕೊಟ್ಟಿಗೆಹಾರದ ಗೆಳೆಯ ರಾಮಕೃಷ್ಣ ಕಾರಂತರು. ಚಾರ್ಮಾಡಿ ತಳದಿಂದ ಬಿದಿರುತಳದತ್ತ ಏರುವವರೆಗೆ ಒಟ್ಟಾರೆ ನಾವೂ ಅವ್ಯಾಪ್ತರಾಗಿದ್ದೆವು. ಅಲ್ಲಿನ ಶಿಖರ ಸಮೀಪಿಸುತ್ತಿದ್ದಂತೆ ಒಮ್ಮೆಗೆ ಯಾವುದೋ ದೂರತೀರದ ಅಲೆಗಳು ಬರತೊಡಗಿದ್ದು ಅಭಯನ ಕಿಸೆ ಸಾರತೊಡಗಿತು. ಸಹಜವಾಗಿ ನಾನು ಕಾರಂತರಿಗೆ ಇಲ್ಲಿಂದಲೂ ಒಂದು ಕರೆ ಹಾಕಲೆಂದು ಕಿಸೆ ತಡಕಿದರೆ ಚರವಾಣಿ ಸಲಕರಣೆಯೇ ನನ್ನ ವ್ಯಾಪ್ತಿಪ್ರದೇಶದಿಂದ ಕಳಚಿಹೋಗಿತ್ತು! ಅಂದು ಮಂಗಳೂರು ಬಿಡುವಾಗ ಅದನ್ನೊಮ್ಮೆ ಬಳಸಿ, ಕಿಸೆಗೆ ಬಿಟ್ಟದ್ದು ನೆನಪು. ಅಂದರೆ, ಅದು ಬಿದ್ದಿರಬಹುದಾದ ಸ್ಥಳ ಊಹಿಸುವುದು ಅಥವಾ ಹುಡುಕುತ್ತ ಹೋಗುವುದು ಅಪ್ರಾಯೋಗಿಕ. ಸಹಜವಾಗಿ ಅಭಯನ ಚರವಾಣಿಯ ಮೂಲಕ ಮಂಗಳೂರಿನಲ್ಲಿ ದೇವಕಿಗೆ `ವಿಷಾದವಾರ್ತೆ’ಯನ್ನು ಪ್ರಸರಿಸಿ, ಉತ್ತರೋತ್ತರ ವ್ಯವಸ್ಥೆಗೆ ಚಾಲನೆ ಕೊಟ್ಟುಬಿಟ್ಟೆ.

ಅದೃಷ್ಟಕ್ಕೆ ನಾನು ಕಾರಂತರ ಚರವಾಣಿ ಸಂಖ್ಯೆಯನ್ನು ಪ್ರತ್ಯೇಕ ಚೀಟಿಯೊಂದರಲ್ಲೂ ಬರೆದಿಟ್ಟಿದ್ದೆ. ಹಾಗೆ ಅಭಯನ ಸಲಕರಣೆ ಮೂಲಕ ಪ್ರಯತ್ನಿಸಿದಾಗ ಕಾರಂತರ ಸಂಪರ್ಕ ಸಾಧ್ಯವಾಗಿತ್ತು. ಕಾರಂತರು ಸಂತೋಷದಿಂದ “ಯೋಚಿಸುತ್ತೇನೆ, ಮನೆಯಲ್ಲೇ ನಿಮ್ಮಿಬ್ಬರನ್ನೂ ಕಾದಿರುತ್ತೇನೆ” ಎಂದರು. ಚುರುಕಾಗಿ ದಾರಿಗಿಳಿದು, ಸುಕ್ಷೇಮವಾಗಿದ್ದ ಕಾರು ಸೇರಿ, ಇನ್ನೇನು “ಛಲೋ ಕೊಟ್ಟಿಗೆಹಾರ್” ಹೇಳುವುದಷ್ಟೇ ಬಾಕಿ. ಅದುವರೆಗೆ ಮೌನವಾಗಿ ಹುಡುಕಾಟ ನಡೆಸಿದ್ದ ಕಣ್ಣು ಒಮ್ಮೆಲೇ ಘೋಶಿಸಿತು “ಕಳ್ಳ ಸಿಕ್ಕ!” ಬಿದಿರುತಳದಿಂದ ಇಳಿಯುವ ದಾರಿಯುದ್ದಕ್ಕೂ ನಿಂತ ಕಾರಿನ ಸುತ್ತಲೂ ಕೊನೆಗೆ ಕಾರ ಒಳಗೆ ಸೀಟಿನಲ್ಲೋ ಕಾಲಿಡುವಲ್ಲೋ ಕಾಣಲಿಚ್ಛಿಸಿದ್ದ ಚರವಾಣಿ, ಸೀಟ್ ಮತ್ತು ಗೇರ್‍ಕಟ್ಟೆಯ ನಡುವಣ ಸಂದಿನಲ್ಲಿ ಬೆಚ್ಚಗೆ ಕುಳಿತಿತ್ತು; ಬಿಟ್ಟೆನೆಂದರೂ ಬಿಡದೀ ಮಾಯೆ! ಉತ್ತರಕ್ರಿಯೆಯಲ್ಲಿ ಕಂಡದ್ದಿಷ್ಟು: ಹಿಂದೊಮ್ಮೆ ನಾನು ಎಲ್ಲೋ ಕೂರುವಾಗ ನನ್ನ ಜೋಭದ್ರ ಜುಬ್ಬಾದ ಎಡಗಿಸೆಯ ಮೇಲೇ ಕುಳಿತು, ಒಳಗಿದ್ದ ಚರವಾಣಿ ಕೆಡಿಸಿಬಿಟ್ಟಿದ್ದೆ. ಹಾಗಾಗಿ ಮುಂದೆ ಸದಾ ಆ ಕಿಸೆಯನ್ನು, ಮುಖ್ಯವಾಗಿ ಚರವಾಣಿ ಸಹಿತ ಪಕ್ಕಕ್ಕೆಳೆದು, ಕುಳಿತ ಮೇಲೆ ತೊಡೆಯ ಮೇಲೆ ಹಾಕಿಕೊಳ್ಳುವುದನ್ನು ರೂಢಿಸಿಕೊಂಡಿದ್ದೆ. ಇದರಿಂದ ಕಿಸೆಯ ತಳ ಅದರ ಬಾಯಿಗೆ ಸಮನಾಗಿ, ಪ್ರಯಾಣದ ಅಲುಗಾಟದಲ್ಲಿ ಚರವಾಣಿ ತಣ್ಣಗೆ ಹೊರ ಜಾರಿತ್ತು!

ಬಿದಿರುತಳದ ಹಳ್ಳಿಗರಿಗಿಲ್ಲದ ದೌಲತ್ತಿನ ಪ್ರದರ್ಶನಕ್ಕೆ ಉತ್ತಮ ಉದಾಹರಣೆ `ಮಲಯಮಾರುತ’. ಬಿದಿರುತಳ ಕವಲಿನಿಂದ ತುಸು ಮುಂದೆ ಘಟ್ಟಮಾಲೆ ತುಸು ತಗ್ಗಿ, ಮೇಲ್ನಾಡಿನತ್ತ ನುಗ್ಗಿಬರುವ ಪಶ್ಚಿಮ ಗಾಳಿಮಳೆಗೆ ದ್ವಾರ ನಿರ್ಮಿಸಿದೆ. ಘಟ್ಟದುದ್ದಕ್ಕೆ ಅಲ್ಲಲ್ಲಿರುವ ಇಂಥವನ್ನು ಜನಪದ `ಗಾಳಿಗಿಂಡಿ’ಗಳೆಂದೇ ಅರ್ಥಪೂರ್ಣವಾಗಿ ಹೆಸರಿಸುತ್ತದೆ. ಪ್ರಕೃತಿ ಇಂತಲ್ಲಿನ ನೆಲ, ಹಸಿರುಗಳನ್ನು ತನ್ನ ಸಹಸ್ರಾರು ವರ್ಷಗಳ ಪ್ರಯೋಗದಲ್ಲಿ ಹುರಿಗೊಳಿಸಿಟ್ಟಿದೆ. ಅದನ್ನು ಅರ್ಥಮಾಡಿಕೊಂಡು ಕಾಪಿಡಬೇಕಾದ, ಅನಿವಾರ್ಯವಾದರೆ ಕನಿಷ್ಠ ಕಲಾಪ ಯೋಜಿಸಿ ಪ್ರಕೃತಿಯನ್ನು ಅನುಸರಿಸಬೇಕಾದ ಅರಣ್ಯ ಇಲಾಖೆ ಇಲ್ಲಿ ಮಾಡಿದ್ದೇನು? ಡಾಮರುದಾರಿಯ ಆಳದಿಂದ ದಿಬ್ಬದೆತ್ತರಕ್ಕೆ ಸುವಿಸ್ತಾರವಾದ, ಸುಲಭ ಏರಿನ ದಾರಿ ಕಡಿದು, ದಿಬ್ಬದ ನೆತ್ತಿಯನ್ನು ಮಟ್ಟಮಾಡಿ, ನೆಲದ ಬಿಗಿ ಕಳೆದರು. ಪರಿಸರ ವೈರಿಯಾದ ಬಂಗ್ಲೆ ಕಟ್ಟಿ, ಲಾನೂ ಗಾರ್ಡನ್ನೂ ರೂಢಿಸಿ `ಮಲಯಮಾರುತ’ ಎಂದರು!

ನಿರ್ಲಜ್ಜವಾಗಿ `ಪ್ರವಾಸೋದ್ಯಮ’ಕ್ಕೆ ತಮ್ಮ ಕೊಡುಗೆ ಎಂದೇ ಘೋಷಿಸಿಕೊಂಡರು. ೧೯೯೩ರ ಸುಮಾರಿಗೆ ಹೀಗೆ ಅರ್ಧ ಕೋಟಿಗೂ ಮಿಕ್ಕು ಸಾರ್ವಜನಿಕ ಹಣ ಹಾಳುಮಾಡಿದ ಇಲಾಖೆ ಈ ಉದ್ದಕ್ಕೂ ಅದನ್ನು ಊರ್ಜಿತದಲ್ಲಿಡಲು ಮತ್ತೆಷ್ಟು ಕೋಟಿ ಚೆಲ್ಲಿರಬಹುದು ಎನ್ನುವುದನ್ನು ನಿಮ್ಮ ಊಹೆಗೇ ಬಿಡುತ್ತೇನೆ. ಮಲಯಮಾರುತ ಲೋಕಾರ್ಪಣಗೊಂಡ ಹೊಸತರಲ್ಲಿ, ಒಂದು ಮಳೆಗಾಲ ನಮ್ಮ ಆರೋಹಣದ ಬೈಕ್ ತಂಡದೊಡನೆ ಬಂದು ಇದರಲ್ಲಿ ಉಳಿದೂ ನೋಡಿದ ನೆನಪು ನಮ್ಮದು. ಅಂದು ತಂಡದಲ್ಲಿ ಹನ್ನೆರಡರ ಹರಯದ ಅಭಯನೂ ಇದ್ದ. ಆ ನೆನಪನ್ನಷ್ಟೇ ಎರಡು ಮಾತಿನಲ್ಲಿ ಮಾಡಿಕೊಳ್ಳುತ್ತ ಮಲಯಮಾರುತ ದಾಟಿ ಹೊರಟಿದ್ದೆವು. ಆದರೆ ಹಿನ್ನೋಟದಲ್ಲಿ ಅಭಯನಿಗೆ “ಹೇಗೂ ಬಂದಿದ್ದೇವಲ್ಲ. ಒಮ್ಮೆ ನೋಡಿಬಿಡುವಾ” ಅನ್ನಿಸಿತು. ಕಾರನ್ನು ಅಲ್ಲೇ ಬಿಟ್ಟು ಹಿಂದೆ ನಡೆದೆವು. ಅದರ ಗೇಟಿಗೆ ಬೀಗ ಹಾಕಿತ್ತು. ಗೇಟಿನ ಮೇಲೇರಿ ದಾಟಿ, ಬಂಗ್ಲೆ ಎತ್ತರಕೆ ನಡೆದೆವು. ಅಲ್ಲಿ ಇನ್ನೊಂದು ಪುಟ್ಟ ಪ್ರವಾಸೀ ತಂಡವೂ ಹೀಗೇ `ಸೌಕರ್ಯ’ಗಳ ಪರಿಶೀಲನೆ ನಡೆಸಿತ್ತು. ನಾವು ಮುದಿಮೇಟಿಯನ್ನು ಅನುಮತಿ ಪಡೆದು, ಚುರುಕಾಗಿ ಒಂದು ಸುತ್ತು ಹಾಕಿದೆವು. ನಿರಂತರ ಠಳಾಯಿಸುವ ಮಲೆತ ಮಾರುತನ ಪ್ರತಿ ಬೀಸಿಗೂ ನಡನಡುಗಿ ಉಳಿದ ಕಿಟಕಿಗಳು ಲಟಕಟಾಯಿಸುತ್ತಲೇ ಇದ್ದುವು. ಕುಂಬಾದ ಬಾಗಿಲು, ಕಳಚಿಹೋದ ಚಿಮಣಿ, ಒಡೆದ ಕನ್ನಡಿಗಳಿಗೆ ಬದಲಿಬಂದ ಪ್ಲ್ಯಾಸ್ಟಿಕ್ ತೇಪೆಗಳು, ಮುಕ್ಕಾದ ಕಾಂಕ್ರೀಟ್ ಗ್ರಿಲ್ಲುಗಳು, ಕಾಡುಬಿದ್ದ ಹುಲ್ಲಹಾಸು ಮತ್ತು `ಉದ್ಯಾನ’, ನಿರಂತರ ರಿಪೇರಿಯನ್ನು ಸಾರುವ ಕಲ್ಲು ಮರಳು ರಾಶಿ – ಸರಕಾರೀ ರಚನೆಗಳು ಹೇಗಿರಬೇಕೋ ಹಾಗೇ ಇತ್ತು, ಮಲಯಮಾರುತ! ನೂರಾರು ಬಿದಿರುತಳಗಳಿಗೆ ರಕ್ಷಣೆಯನ್ನೋ ಮರುವಸತಿಯನ್ನೋ ಏನಲ್ಲದಿದ್ದರೂ ಗೌರವಯುತ ಜೀವನಾವಕಾಶವನ್ನೋ ಕೊಡಲು ಒದಗದ ಸಂಪತ್ತು ಇಲ್ಲಿ ಸೋರುತ್ತಲೇ ಇದೆ. ನಾವು ಕಾರಿಗೆ ಮರಳಿದೆವು.

ಮೂರು ನಾಲ್ಕು ದಶಕಗಳ ಹಿಂದೆ ಕರಂಗಲ್ಪಾಡಿ ಮಾರುಕಟ್ಟೆಯ ಹೊರಾವರಣದಲ್ಲಿ ಚಿಕ್ಕಮಗಳೂರಿನ ಪಾಂಡುರಂಗ ಕಾಫಿ ಪುಡಿಯ ವಿತರಣೆ ನಡೆಸಿದ್ದವರು ರಾಮಕೃಷ್ಣ ಕಾರಂತ. ನಮ್ಮೊಳಗಿನ ಸ್ನೇಹಾಚಾರ ಅವರ ಪುಡಿ, ನನ್ನ ಪುಸ್ತಕಗಳ ಕೊಳುಕೊಡೆಗಳನ್ನು ಮೀರಿ ಬೆಳೆದಿತ್ತು. ೧೯೯೨ರ ಸುಮಾರಿಗೆ ಕಾರಂತ ಮಂಗಳೂರು ಬಿಟ್ಟು, ಕೊಟ್ಟಿಗೆಹಾರದಲ್ಲಿ ಕೃಷಿ, ವೈದಿಕವೆಂದು ನೆಲೆಸಿದರು. ಆಗ ಸಹಜವಾಗಿ ಸಂಪರ್ಕ ದೂರವಾಗಿದ್ದರು. ಆದರೆ ಈಗ, ನಮ್ಮ “ದಟ್ಟಡವಿ, ಸಾಧಾರಣ ಮನೆ” ಶೋಧಕ್ಕೆ ಮತ್ತೆ ಹತ್ತಿರ ಎಳೆದುಕೊಂಡಿದ್ದೆ. ಮಲೆಯಮಾರುತ ಬಿಟ್ಟ ಕಾರು, ಕೊಟ್ಟಿಗೆಹಾರ ಮುಖ್ಯಪೇಟೆಯಿಂದಲೂ ಸುಮಾರು ಒಂದು ಕಿಮೀ ನೇರ ಮುಂದೆ ಬಲಕ್ಕೆ ಹೊರಳಿತು. ಮತ್ತೆ ಸುಮಾರು ಒಂದು ಕಿಮೀ ಕಳೆದು ನಿಂತದ್ದು ಒಂದು ಹಳೆಗಾಲದ ಭಾರೀ ಸ್ತಂಭದ ಪುಟ್ಟ ಗುಡಿ ಎದುರು.

ಅದರ ಒತ್ತಿಗೇ ಅಂದರೆ ದಾರಿಯ ಬಲ ಮಗ್ಗುಲಿನದೇ ಕಾರಂತರ ಮನೆ. ಉಪಚಾರಗಳಲ್ಲಿ ಹೊತ್ತುಗಳೆಯದೆ ಮೊದಲು ನೇರ ಕೆಲಸಕ್ಕಿಳಿದೆವು. ಕಾರಂತರು ದಟ್ಟಡವಿ ತೋರದಾದರು. ಒಂದೆರಡು ಸಾಧಾರಣ ಮನೆಗಳನ್ನೇನೋ ತೋರಿದರು. ಆದರವು ನಮ್ಮ ಕಲ್ಪನೆಗೆ ಒಡ್ಡಿಕೊಳ್ಳಲಿಲ್ಲ. ಕಾರಂತರ ಅತಿಥಿ ಸತ್ಕಾರ ಮಾತ್ರ ಅನುಪಮೇಯವಾಗಿತ್ತು. ನಾವು ತುಸು ಸಡಿಲವಾದರೆ ಇನ್ನೆಲ್ಲಿ ರಾತ್ರಿ ಊಟಕ್ಕೆ ನಿರ್ಬಂಧಿಸುತ್ತಾರೋ ಎಂದು ಹೆದರಿ ಮತ್ತೆ ದಾರಿಗಿಳಿದೆವು.

ಪ್ರಸ್ತುತ ಓಡಾಟದ ಸಂಕಲ್ಪ ಕಾಲದಲ್ಲೇ ನಾನು ಸ್ಪಷ್ಟ ನೆಚ್ಚಿದ ಒಂದೇ ಹೆಸರು ಟಸ್ಕ್ ಅಂಡ್ ಡಾನ್ ರಿಸಾರ್ಟ್ ಅಥವಾ ಅದರ ಯಜಮಾನ – ವಿಕ್ರಂ ಗೌಡ. ತಿಂಗಳ ಹಿಂದಷ್ಟೇ ನನ್ನ ಚಾರ್ಮಾಡಿ-ಶಿರಾಡಿ ಸೈಕಲ್ ಯಾನದ ಸಂದರ್ಭದಲ್ಲಿ ನವೀಕರಣಗೊಂಡಿದ್ದ ಆ ಪರಿಸರವಂತೂ ನನ್ನ ಯೋಚನೆಯಲ್ಲಿ ಅಭಯನ ಅಗತ್ಯಕ್ಕೆ ಹೇಳಿ ಮಾಡಿಸಿದಂತಿತ್ತು. ಅಲ್ಲಿನ ಮನೆಗಳ ವ್ಯವಸ್ಥೆ ಮಾತ್ರ ಅಭಯನಿಗೆ ಹೇಗಾದೀತೋ ಎಂಬ ಸಂಶಯ ಉಳಿದಿದ್ದಂತೇ ಕಾroadಸಿದೆ. ಮೂಡಿಗೆರೆ ಹ್ಯಾಂಡ್‍ಪೋಸ್ಟ್, ಜನ್ನಾಪುರ, ಹಾನಬಾಳ್ ಮತ್ತು ಕೊನೆಯ ಸುಮಾರು ಎಂಟು ಹತ್ತು ಕಿಮೀ ಕಾಫೀತೋಟಗಳ ಒಳಒಳಗಿನ ಕಚ್ಚಾದಾರಿ. ಸಂಧ್ಯಾರಾಣಿ ಮೋಡಮೂಟೆಗಳನ್ನು ನೆರಹಿ, ಮಿಂಚತೊಡಗಿದಂತೆ ನಾವು ಟಸ್ಕ್ ಅಂಡ್ ಡಾನ್ ತಲಪಿದ್ದೆವು.

ರಿಸಾರ್ಟಿನ ನಿರ್ವಾಹಕ ಮುಖ್ಯಸ್ಥ ಪ್ರೇಮನಾಥ ರೈಗಳು ಒಳ್ಳೆಯ ಸ್ವಾಗತವನ್ನೇ ಕೊಟ್ಟರು. ಆದರೆ ಮಾಸುತ್ತಿದ್ದ ಹಗಲಿನ ಲೆಕ್ಕವಿಟ್ಟು, ಉಪಚಾರಗಳನ್ನು ಬದಿಗಿಟ್ಟು ವೀಕ್ಷಣೆ ಚುರುಕುಗೊಳಿಸಿದೆವು. ಸುಲಭ ನಡೆಯಲ್ಲಿ ವೈವಿಧ್ಯಮಯ ದಟ್ಟ ಕಾಡು, ಯಾವುದೇ ಕೋನಗಳಿಂದಲೂ ನೋಟಕರನ್ನು ಮಂತ್ರಮುಗ್ಧವಾಗಿಸುವ ಮೂರ್ಕಣ್ಣ ಬೆಟ್ಟ, ಎತ್ತಿನಹೊಳೆಯ ಮೂಲಸ್ರೋತಗಳಲ್ಲಿ ಒಂದಾದ ಝರಿಯ ವೈಭವಗಳಿಂದ ತೊಡಗಿ, ರಿಸಾರ್ಟಿನಲ್ಲಿ ಅತಿಥಿ ಸತ್ಕಾರದ ಭಾಗವಾಗಿಲ್ಲದ ಗೋಲಾಕೃತಿಯ ವೀಕ್ಷಣಾ ಉಪ್ಪರಿಗೆಯವರೆಗೂ ಎಲ್ಲವನ್ನು ಅಭಯ ಗಮನಕ್ಕೆ ತಂದುಕೊಂಡೋ ನೋಡಿಯೋ ಮುಗಿಸಿದ. ಅನಂತರ ರೈಗಳ ಬೆಚ್ಚನ್ನ ಆತಿಥ್ಯಕ್ಕೆ ಒಳಗಾದೆವು. ರಿಸಾರ್ಟಿನ ವಾಸಸೌಲಭ್ಯಗಳು ಮುಂದಾಗಿ ಸ್ಥಳ ಕಾಯ್ದಿರಿಸಿ ಬಂದ ಗಿರಾಕಿಗಳಿಂದ ಭರ್ತಿಯಾಗಿದ್ದವು. ಅನ್ಯ ಕಾರ್ಯಗಳಲ್ಲಿ ವ್ಯಸ್ತವಾಗಿದ್ದ ವಿಕ್ರಮರೇನೋ ಅಂದು ಬೆಳಿಗ್ಗೆ, ಮತ್ತೆ ಮಧ್ಯಾಹ್ನವೂ ಚರವಾಣಿಗೆ ಸಿಕ್ಕಾಗ “ರೈಗಳಿಗೆ ಹೇಳ್ತೇನೆ, ಉಳಿದು ಹೋಗಿ” ಎಂದಿದ್ದರು. ಆದರೆ `ಅ-ತಿಥಿ’ಗಳಾಗಿಯೇ (=ಸಮಯ ತಿಳಿಸದೇ ಬಂದವರು) ತಲಪಿದ್ದ ನಾವು, ಅಲ್ಲಿನ ಪರಿಸ್ಥಿತಿ ನೋಡಿದ ಮೇಲೂ ವಾಸಸೌಕರ್ಯ ಬಯಸಿ ರೈಗಳನ್ನು ಕಾಡಲಿಲ್ಲ.

ಮಳೆ ಬರಲಿಲ್ಲ. ಆದರೂ ಕತ್ತಲು ಪೂರ್ಣವಾಗುವುದರೊಳಗೆ ನಾವು ಕಚ್ಚಾದಾರಿ ಕಳೆದುಕೊಂಡಿದ್ದೆವು. ಮತ್ತೆ ಹಾನುಬಾಳು ಹಾದು ಸಕಲೇಶಪುರದಲ್ಲಿ ರಾತ್ರಿ ವಾಸಕ್ಕೆ ಹೋಟೆಲ್ ಹಿಡಿದೆವು. ಮಂಗಳೂರು ಬಿಡುವಂದೇ ನಾವು ಅಂತಿಮ ಸುತ್ತನ್ನು ನಮ್ಮ ಬಿಸಿಲೇವಲಯಕ್ಕೆ ಮೀಸಲೆಂದುಕೊಂಡಿದ್ದೆವು. ಈ ವಲಯದಲ್ಲಿ ಕೃಷಿ ಹಿಡುವಳಿಗಳು ತುಸು ಸಣ್ಣವೇ ಇರುವುದರಿಂದ, ನಮ್ಮ ಅಗತ್ಯದ ಸಾಧಾರಣ ಮನೆಗಳು ಸಿಗುವ ಸಾಧ್ಯತೆ ಹೆಚ್ಚಿತ್ತು. ಆ ನಿಟ್ಟಿನಲ್ಲಿ ಸ್ಥಳೀಯರೇ ಆದ ಗೆಳೆಯ ಕಿಶೋರ್ ಕುಮಾರ್, ಹೊಂಗಡಳ್ಳ (ಹಾಸನದಲ್ಲಿ ವಕೀಲರು, ಎತ್ತಿನಹೊಳೆ ವಿರುದ್ಧದ ಹೋರಾಟದಲ್ಲಂತೂ ಅಪ್ರತಿಮರು) ಇವರ ಸಹಾಯ ಕೋರಿದ್ದೆ. ಅವರ ನಿರ್ದೇಶನದಂತೇ ಮರುದಿನ ಬೆಳಿಗ್ಗೆ ನಾವು ಸೀದಾ ಹೋದದ್ದೇ ಹೊಂಗಡಳ್ಳಕ್ಕೆ.

ಮಂಗಳೂರು ಹೆದ್ದಾರಿಯಿಂದ ಮಂಜರಾಬಾದ್ ಕವಲಿಗೆ ನುಗ್ಗಿ, ಹೆತ್ತೂರು, ಬಾಚಳ್ಳಿಗಾಗಿ ಹೊಂಗಡಳ್ಳ ಪೇಟೆ ತಲಪಿದೆವು. ಕಿಶೋರ್ ಕುಮಾರರ ತಮ್ಮ – ಕಿರಣ್ ಕುಮಾರ್, ಕೃಷಿಕ, ನಮ್ಮನ್ನು ಕಾದಿದ್ದರು. ಅವರು ನಮಗೆ ಗೋಪಾಲ ಎಂಬ ಮಾರ್ಗದರ್ಶಿ ಮಾಡಿಕೊಟ್ಟರು. ನಮಗೆ ಸ್ವಲ್ಪ ತಡವಾಗಿ ತಿಳಿಯಿತು – ಸ್ವತಃ ಸಣ್ಣ ಕೃಷಿಕನೂ ಆದ ಗೋಪಾಲ್, ಮದುವೆ ಸಂಬಂಧಗಳನ್ನು ಗಂಟು ಹಾಕುವಲ್ಲಿ ಊರ ಬುದ್ಧಿವಂತರಂತೆ! ಮೊದಲು ಅವರನ್ನೇರಿಸಿಕೊಂಡು ಮೂರು ನಾಲ್ಕು ಕಿಮೀ ಕಚ್ಚಾದಾರಿಯಲ್ಲಿ, ನೇರ ಹೊಂಗಡಳ್ಳದ ಪಾತ್ರೆಯತ್ತ ಕಾರನ್ನೇ ಓಡಿಸಿದೆವು. ಆದರೆ ದಾರಿ ಕಠಿಣವಾಗಿ ಕಾಣಿಸುವಲ್ಲಿ ಕಾರು ಬಿಟ್ಟು ತುಸು ನಡೆದದ್ದೂ ಆಯ್ತು. ಹೊಂಗಡಳ್ಳ, ಮೊದಲು `ಗುಂಡ್ಯ ೨೦೦ ಮೆಗಾವಾಟ್’ ವಿದ್ಯುತ್ ಯೋಜನೆಯಲ್ಲೂ ಸದ್ಯ ಎತ್ತಿನಹೊಳೆ ತಿರುವಿನಲ್ಲೂ ಹೆಸರಿಸಲ್ಪಟ್ಟ ಮೊದಲ ಬಲಿ! ಇಂದು ಅದು ಒಂದೆಡೆ ಜನಪರ ಬೇಡಿಕೆಯ ಮೇರೆಗೆ ಈಗಾಗಲೇ ಇರುವ ತೂಗುಸೇತುವೆಯನ್ನು ಕಳಚಿಕೊಂಡು, ಸರ್ವವಾಹನಯೋಗ್ಯ ಗಟ್ಟಿ ಸೇತುವೆಯ ಕೆಲಸ ಕಾಣುತ್ತಿದೆ.

ಮತ್ತೊಂದೆಡೆ ಜನವಿರೋಧವನ್ನು ಮೆಟ್ಟಿ, ನದಿತಿರುವಿನ ನೆಪದ ಅಣೆಕಟ್ಟಿನ ಭಾರವನ್ನೂ ಹೊರಲು ಸಜ್ಜಾಗುತ್ತಿದೆ. ಗೋಪಾಲ್ ಹೊಳೆಯ ಎದುರು ದಂಡೆಯಲ್ಲಿ ಒಂದೆರಡು ಮನೆಗಳನ್ನೇನೋ ತೋರಿಸಿದರು. ಆದರೆ ಅವು ನಮ್ಮ `ಸಾಧಾರಣ ಮನೆ’ ಎಂಬ ಕಲ್ಪನೆ ಮಧ್ಯವರ್ತಿಗಳನ್ನು ಮುಟ್ಟುವಲ್ಲಿ ಸೋತ ಪರಿಯನ್ನಷ್ಟೇ ಹೇಳುವಂತಿತ್ತು; ಕಳಪೆ ಕೊಟ್ಟಿಗೆಗಳು! ಮತ್ತೆ ಹೊಂಗಡಳ್ಳ ಪೇಟೆಗೇ ಮರಳಿದೆವು. ಈ ಬಾರಿ ಸ್ವತಃ ಕಿರಣ್ ಕುಮಾರ್ ತಮ್ಮ ಜೀಪಿಗೇ ನಮ್ಮನ್ನೇರಿಸಿಕೊಂಡು ಜಗಟ ಎನ್ನುವ ಇನ್ನೊಂದೇ ಮಲೆಯ ಮೂಲೆಗೆ ಒಯ್ದರು.

ಇಲ್ಲಿ ದಾರಿ ಕೆಲವೆಡೆಗಳಲ್ಲಿ ನಾವು ಹಿಂದಿನ ದಿನ ನೆರಿಯದಿಂದ ಮಲ್ಲಕ್ಕೆ ಏರಿದ ದಾರಿಯನ್ನೂ ನಾಚಿಸುವಷ್ಟು ಕಠಿಣವಾಗಿತ್ತು! ಆದರೆ ದಾರಿಯ ಕಾಠಿಣ್ಯ ಅಥವಾ ಲಕ್ಷ್ಯವನ್ನು ಸಾಧಿಸಿದ ಕ್ರಮ ನಮ್ಮ ಹುಡುಕಾಟದ ವಿಷಯ ಆಗಿರಲಿಲ್ಲ. ಸಿಕ್ಕ ಮನೆಗಳು ನಮಗೆ ಹೊಂದುವಂತಿರಲಿಲ್ಲ. ಈ ವೇಳೆಗೆ ನಮ್ಮೊಳಗಿನ `ಗಿರಾಕಿ’ಯನ್ನು ಸಾಕಷ್ಟು ಸರಿಯಾಗಿಯೇ ಗುರುತಿಸಿದ್ದರು ವ್ಯವಹಾರ ಚತುರ ಗೋಪಾಲ್. ಸಿನಿಮಾ ಕಣ್ಕಟ್ಟಿನ ಆಟ ಎಂದು ಅಭಯನಿಗೇ ಪಾಠ ಮಾಡಿದ್ದರು ಮತ್ತು ಅವರ ಕ್ಯಾಚ್ಮೆಂಟ್ ಏರಿಯಾಕ್ಕೆ ನಮ್ಮ ಯಾವ `ಕಲ್ಯಾಣ’ಗುಣಗಳೂ ಉಪಯುಕ್ತವಾಗವು ಎಂದೂ ತಿಳಿದುಬಿಟ್ಟಿದ್ದರು! ಅವರೆಲ್ಲರಿಗೆ ಕೃತಜ್ಞತೆಯನ್ನೂ ಶುಭಾಶಯವನ್ನೂ ಹೇಳಿ ಬೀಳ್ಕೊಂಡೆವು.

ಎರಡು – ಮೂರು ತಿಂಗಳ ಹಿಂದೊಮ್ಮೆ ಹೀಗೇ ಅಭಯನಿಗೆ ಹುಕಿ ಬಂದಾಗ ದೇವಕಿಯನ್ನೂ ಸೇರಿಸಿಕೊಂಡು ನಾವು ಕೇವಲ ಬಿಸಿಲೆ ವಲಯ ಸುತ್ತಾಡಿದ್ದಿತ್ತು. ಆಗ ಕಂಡ ಮನೆ, ಸುತ್ತಿದ ನೆಲ ಬಿಟ್ಟು ಇನ್ನಷ್ಟು ಶೋಧ ನಡೆಸುವ ಉತ್ಸಾಹ ಈ ಬಾರಿಯದು. ಆದರೆ ಘಾಟೀ ದಾರಿಯಕಾಮಗಾರಿ ಪೂರ್ಣಗೊಂಡಿರದಿದ್ದರೆ ಈ ಬಾರಿ ಅತ್ತ ಹೋಗುವುದೇ ಬೇಡ ಎನ್ನುವ ಯೋಚನೆಯೂ ನಮ್ಮ ಒಂದೂವರೆ ದಿನದ ಓಡಾಟದಲ್ಲಿ ರೂಪುಗೊಂಡಿತ್ತು. ಬಾಚಳ್ಳಿಯಿಂದ ಬಿಸಿಲೆಯತ್ತ ತಿರುಗಿಕೊಂಡರೂ ಮುಖ್ಯ ಕವಲೂರಾದ ಕೂಡುರಸ್ತೆಯಲ್ಲಿ ನಿರುತ್ತೇಜಕ ಸುದ್ದಿ ಖಾತ್ರಿಯಾಯ್ತು. ಮತ್ತೆ ಬಿಸಿಲೆಹಳ್ಳಿ ಕಾಣುವ ಪ್ರಯಾಣ ಬಿಟ್ಟು ಬಂದ ದಾರಿ ಅನುಸರಿಸಿದೆವು. ಮಂಜರಾಬಾದ್, ಶಿರಾಡಿಘಾಟಿಗಾಗಿ ಉಪ್ಪಿನಂಗಡಿಯಲ್ಲಿ ಊಟಕ್ಕೆ ನಿಂತು, ಸಂಜೆಯ ಕಾಫಿಗೆ ಮಂಗಳೂರ ಮನೆಯನ್ನೇ ಸೇರಿ, ಹುಡುಕಾಟ ಮುಗಿಸಿಬಿಟ್ಟೆವು.

ಅಭಯನ ಯೋಜನೆ ಏನು, ಓಡಾಟ ಎಷ್ಟು ಫಲಕಾರಿಯಾಯ್ತು ಎಂದಿತ್ಯಾದಿ ಹೇಳಲು ಅಧಿಕಾರಿ ನಾನಲ್ಲ. ಹಾಗೆಂದು ಕಾಡು ಸುತ್ತುವ ಅವಕಾಶ, ಬೆಟ್ಟ ತಿರುಗುವ ನೆಪ ನನಗೆ ಕೊಟ್ಟ ಸಂತೋಷವನ್ನು ಹೇಗೆ ಹೇಳದಿರಲಿ? ಎಲ್ಲಕ್ಕೂ ಮುಖ್ಯವಾಗಿ ಕೇಳುವವರಿದ್ದಾರೋ ಇಲ್ಲವೋ ಎಂಬ ಅರಿವಿಲ್ಲದವನಂತೆ ಮತ್ತೆ ವನ್ಯ ಪರಿಸರದ ಮೇಲೆ ಹೆಚ್ಚುತ್ತಿರುವ ವಿವೇಚನಾರಹಿತ ದೌರ್ಜನ್ಯದ ಕುರಿತು ಎಚ್ಚರಿಕೆಯ ಗಂಟೆ ಜಗ್ಗುವ ಕೆಲಸ ಮಾಡಿದ ಅಲ್ಪತೃಪ್ತಿಯೊಡನೆ ವಿರಮಿಸುತ್ತೇನೆ.