ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ
ಒಡಿಶಾದ ಒಡಲೊಳಗೆ ಅಧ್ಯಾಯ (೨)

ನವೆಂಬರ ೨೨ ರ ಬೆಳಗ್ಗಿನಿಂದ ಆರಂಭವಾಗುವ ನಮ್ಮ ತಿರುಗಾಟ ಮಂಗಲಕರವಾಗಿರಲೆಂದು ಅದನ್ನು ಮಂಗಲಜೋಡಿಯಿಂದಲೇ ಆರಂಭಿಸಿದೆವು. ಹೆಚ್ಚೇನೂ ಪ್ರಸಿದ್ಧವಾಗಿಲ್ಲದ ಈ ಪಕ್ಷಿಧಾಮ ನಮ್ಮ ವೀಕ್ಷಣಾಸ್ಥಳಗಳ ಪಟ್ಟಿಗೆ ಸೇರ್ಪಡೆಯಾದದ್ದೇ ಒಂದು ಆಕಸ್ಮಿಕ.

ಪ್ರವಾಸದಲ್ಲಿ ನಾವು ಭೇಟಿಕೊಡುವ ಸ್ಥಳಗಳ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಮಾಹಿತಿ ಕಲೆಹಾಕಲು ಈಗ ಕಷ್ಟವೇನಿಲ್ಲ. ಪುರುಸೊತ್ತು ಇದ್ದರೆ ಇಂಟರ್ನೆಟ್ ನಿಂದ ಎಷ್ಟು ಬೇಕಾದರೂ ವಿಷಯ ಸಂಗ್ರಹಿಸಬಹುದು. ಒಡಿಶಾದಲ್ಲಿ ‘ಚಿಲಿಕಾ ಲೇಕ್’ ಎಂದು ಪ್ರಸಿದ್ಧವಾಗಿರುವ ಹಿನ್ನೀರಿನ ಬೃಹತ್ ಸರೋವರದ ಬಗ್ಗೆ, ಈ ಮೊದಲೇ ಅಲ್ಲಿಗೆ ಭೇಟಿ ಕೊಟ್ಟಿದ್ದ, ಪ್ರವಾಸಿಗರ ಅಭಿಪ್ರಾಯಗಳನ್ನು, ‘ಟ್ರಿಪ್ ಎಡ್ವೈಸರ್’ ಎಂಬ ಜಾಲತಾಣದಲ್ಲಿ ಓದುತ್ತಾ ಹೋದಂತೆ, ಯಾಕೋ ಮಾಮೂಲಿ ಪಿಕ್ನಿಕ್ ತರಹ- ಯಾಂತ್ರೀಕೃತ ಬೋಟ್, ಮತ್ಸ್ಯಾಹಾರ, ಅಲ್ಲೋ ಇಲ್ಲೋ ಕಾಣಸಿಗುವ ಡಾಲ್ಫಿನ್ ಗಳು, ಇವುಗಳ ಜತೆಗಿನ ಪಕ್ಷಿವೀಕ್ಷಣೆ ಮನಸ್ಸಿಗೆ ಹಿತವಾಗಲೇ ಇಲ್ಲ. ಎಲ್ಲೋ ನಮಗಿಷ್ಟವಾಗುವ ಚಿಲಿಕಾ ಇದೆ; ಸುಮಾರು ೧೧೬೫ ಚದರ ಕಿ.ಮೀ ಗಳಷ್ಟು ಹರಡಿರುವ ಈ ಸರೋವರದ ಹಲವಾರು ವೀಕ್ಷಣಾಯೋಗ್ಯ ತಾಣಗಳಲ್ಲಿ ಅದನ್ನು ಹುಡುಕಬೇಕು ಎಂದು ಅನಿಸುತ್ತಿತ್ತು. ಪ್ರವಾಸಿಗರ ಅಭಿಪ್ರಾಯದ ಜತೆಗೇ ಅವರು ತೆಗೆದ ಫೋಟೋ, ವೀಡಿಯೋಗಳನ್ನೆಲ್ಲಾ ನೋಡುತ್ತಾ ಹೋಗುತ್ತಿದ್ದಾಗ, ವಿದೇಶಿಗರೊಬ್ಬರು ಹಾಕಿದ್ದ ಯೂ ಟ್ಯೂಬ್ ವೀಡಿಯೋ ಗಮನ ಸೆಳೆಯಿತು. ಇದರಲ್ಲಿ ಅವರು ಚಿಲಿಕಾದ ಉತ್ತರಭಾಗದಲ್ಲಿರುವ ಮಂಗಲಜೋಡಿಯ ಕುರಿತು ಬರೆದು, ಅಲ್ಲಿನ ಒಂದು ಪರಿಸರ-ಪ್ರವಾಸ (ಇಕೊಟೂರಿಸಂ) ನಡೆಸುವ ಸಂಸ್ಥೆಯ ಕೊಂಡಿಯನ್ನೂ ಕೊಟ್ಟಿದ್ದರು. ತಕ್ಷಣವೇ ಇದು ನಮ್ಮ ಪ್ರವಾಸದ ವೇಳಾಪಟ್ಟಿಯಲ್ಲಿ ಮೊದಲನೆಯದಾಗಿ ಸ್ಥಾನ ಗಳಿಸಿತು.

ಅಂದು ನಮ್ಮನ್ನು ಭುವನೇಶ್ವರದಿಂದ ೭೫ ಕಿ.ಮೀ ದೂರದಲ್ಲಿರುವ ಕುರ್ಡಾ ಜಿಲ್ಲೆಯ ಮಂಗಲಜೋಡಿ ಎಂಬ ಹಳ್ಳಿಗೆ ಕರೆದೊಯ್ಯಲು ‘ಪಾತ್ರಾ ಟೂರ್ಸ್ ಎಂಡ್ ಟ್ರಾವೆಲ್ಸ್’ ನವರು ಟೆಂಪೊ ಟ್ರಾವೆಲ್ಲರ್ ವಾಹನದ ಜತೆಗೆ ಕಳಿಸಿದ್ದು- ಸಂತೋಷನನ್ನು, ಹೆಸರಿಗೆ ತಕ್ಕಂತೆ ಪ್ರಸನ್ನಚಿತ್ತನಾಗಿರುವ ೨೫-೩೦ ರ ಯುವಕ ಚಾಲಕ ಸಂತೋಷನನ್ನು ಕಂಡು ಸಂತೋಷಗೊಂಡೆವು. ವ್ಯಾನ್ ನಲ್ಲಿ ಜಿ.ಪಿ.ಎಸ್ ಸಾಧನ ಮತ್ತು ರಿವರ್ಸ್ ಕ್ಯಾಮರಾಗಳ ಅಳವಡಿಕೆಯೂ ಇದ್ದುದನ್ನು ಗಮನಿಸಿದೆವು. ಹೊರಗಿನವರಿಗೆ ಬಿಡಿ, ಒಡಿಶಾದ ಸಂತೋಷನಿಗೂ ಮಂಗಲಜೋಡಿಯ ಬಗ್ಗೆ ಗೊತ್ತಿರಲಿಕ್ಕಿಲ್ಲವೆಂಬ ನನ್ನ ಗುಮಾನಿ ನಿಜವೇ ಆಯಿತು. ನನ್ನಿಂದ ಈ ಹೆಸರನ್ನು ಎರಡೆರಡು ಬಾರಿ ಹೇಳಿಸಿಕೊಂಡು ಸಂಸ್ಥೆಯ ಯಜಮಾನರಿಗೆ ಅದನ್ನು ತನ್ನ ಫೋನಿನ ಮೂಲಕ ರವಾನಿಸಿ ಅವರಿಂದ ನಿರ್ದೇಶನ ಪಡೆದು, ಜಿ.ಪಿ.ಎಸ್ ನಿಂದ ಆದೇಶ ಪಡೆಯುತ್ತಾ ಗಾಡಿಯನ್ನು ರಸ್ತೆಗಿಳಿಸಿದ.

ಸೂರ್ಯಾಸ್ತದಂತೆ ಸೂರ್ಯೋದಯವೂ ಬೇಗನೇ ಆಗುವ ಭುವನೇಶ್ವರದಿಂದ ಬೆಳಿಗ್ಗೆ ೬ ಗಂಟೆಗೆ ಹೊರಟು ೮ ಗಂಟೆಯ ಒಳಗೆ ಮಂಗಲಜೋಡಿಯನ್ನು ತಲಪಬೇಕೆನ್ನುವುದು ನಮ್ಮ ಯೋಜನೆಯಾಗಿತ್ತು. ಅಲ್ಲಿ ಬೆಳಗಿನ ತಿಂಡಿ ನಮಗಾಗಿ ಕಾಯುತ್ತಿತ್ತು. ನಾಲ್ಕು ಓಣಿಗಳ (ಅಷ್ಟ ಪಥ) ಉತ್ತಮ ಗುಣಮಟ್ಟದ ರಸ್ತೆಯಲ್ಲಿ ಬೆಳಗ್ಗಿನ ನಸುಚಳಿಯೊಂದಿಗೆ ನಗರ ಬಿಟ್ಟು ಹಳ್ಳಿ ಕಡೆಗೆ ಪ್ರಯಾಣ ಬೆಳೆಸಿದ್ದೇ ಆಹ್ಲಾದಕರವೆನಿಸತೊಡಗಿತು. ಸುತ್ತಲಿನ ಹಸಿರು, ಮರ, ಗಿಡ, ಪೊದೆಗಳು, ಗುಡ್ಡಗಳು, ಗುಡ್ಡದ ತುದಿಯಲ್ಲಿ ಮರಗಳು ಎಲ್ಲವೂ ‘ನಮ್ಮೂರಿನ ಹಾಗೇ’ ಎಂಬ ಭಾವವನ್ನು ಮೂಡಿಸಿದವು. ಆದರೂ ‘ಇಲ್ಲಿ ಘಟ್ಟ ಮಾತ್ರ ಇಲ್ಲ’ ಎನ್ನುತ್ತಾ ಪಶ್ಚಿಮ ಘಟ್ಟಗಳ ನೆನಪು ಊರಿನ ಹೆಮ್ಮೆಯ ಸೆಲೆಯನ್ನು ಬಡಿದೆಬ್ಬಿಸಿತು.

ಮೊತ್ತಮೊದಲ ಬಾರಿಗೆ ಮಂಗಲಜೋಡಿಗೆ ಹೋಗುವ ಅವಕಾಶ ಸಿಕ್ಕಿತೆಂದು ಖುಶಿಯಲ್ಲೇ ಇದ್ದ ಸಂತೋಷ, ಸಮಯಕ್ಕೆ ಸರಿಯಾಗಿ ನಮ್ಮನ್ನು ಮುಟ್ಟಿಸಿದ. ಪೂರಿ ಭಾಜಿಗಳ ಬೆಳಗ್ಗಿನ ಭೂರಿ ಭೋಜನವನ್ನು ಹಳ್ಳಿಯ ವಾತಾವರಣದ ಸೊಬಗನ್ನು ಸವಿಯುತ್ತಾ ಹೊರಾಂಗಣದಲ್ಲೇ ಏರ್ಪಾಟಾಗಿದ್ದ ಉದ್ಯಾನದಲ್ಲಿ ಸವಿದೆವು. ಅಲ್ಲೇ ಇದ್ದ ದಾರೆಪುಳಿ ಮರದಿಂದ ಹಣ್ಣುಗಳನ್ನು ಕಿತ್ತು ತಿಂದೆವು. ಇಲ್ಲಿಂದ ಮುಂದೆ ನಮ್ಮನ್ನು ಆ ಸಂಸ್ಥೆಯ ಗೈಡ್ ಗಳು ದೋಣಿಗಳಲ್ಲಿ ಪಕ್ಷಿ ವೀಕ್ಷಣೆಗೆ ಕರೆದೊಯ್ಯುವವರಿದ್ದರು.

ಮಂಗಲಜೋಡಿಯು ಒಂದು ಕಾಲದಲ್ಲಿ ಪ್ರಾಕೃತಿಕ ವಿಸ್ಮಯಕ್ಕೆ ಸಾಕ್ಷಿಯಾಗಿದ್ದ ಜಾಗ. ಹಲವಾರು ತರಹದ ಪ್ರಾಣಿ, ಪಕ್ಷಿ, ಮತ್ಸ್ಯ ಸಂತತಿಗಳಿದ್ದ ಅಲ್ಲಿ, ವಿಪರೀತ ಮತ್ಸ್ಯೋದ್ಯಮ ನಡೆದು ಪರಿಸರದ ಅಸಮತೋಲನಕ್ಕೆ ಕಾರಣವಾಯಿತು. ಇದು ಚಿಲಿಕಾದ ಇನ್ನಿತರ ಕಡೆಗಳಲ್ಲೂ ನಡೆಯಿತು. ಇಂತಹ ಸಮಯದಲ್ಲಿ ಹುಟ್ಟಿಕೊಂಡ ‘ಚಿಲಿಕಾ ಸರೋವರ ರಕ್ಷಣಾ ಸಮಿತಿ’ ಎಂಬ ಸಂಸ್ಥೆ ಪರಿಸರದ ಉಳಿವಿಗೆ ಮಾಡಿದ ಹಲವಾರು ಯೋಜನೆಗಳು ಚೆನ್ನಾಗಿ ಕಾರ್ಯಗತವಾಗಿ ಮತ್ತೆ ಮೊದಲಿನಂತೆ ಪ್ರಾಣಿ, ಪಕ್ಷಿ, ಮತ್ಸ್ಯ, ಉರಗ ಸಂತತಿಗಳಿಂದ ನಳನಳಿಸುವಂತಾದ್ದು ಮಂಗಲಜೋಡಿಯಲ್ಲಿ. ಇದಕ್ಕೆ ಮುಖ್ಯಕಾರಣ ಜನರಿಗೆ ಕೊಟ್ಟ ಅರಿವು, ತರಬೇತಿ, ಉದ್ಯೋಗ ಖಾತ್ರಿ. ಮತ್ಸ್ಯೋದ್ಯಮದಿಂದ ಪರಿಸರಕ್ಕೆ ಮಾರಕರಾಗಿದ್ದ ಬೆಸ್ತರನ್ನೇ ಮನಃಪರಿವರ್ತಿಸಿ, ಪರಿಸರ ರಕ್ಷಕರನ್ನಾಗಿ ಮಾಡಿದ್ದು ಸಾಹಸವೇ ಸರಿ.

ಈಗ ಅಂತಹವರೇ ಈ ಮಂಗಲಜೋಡಿ ಇಕೊಟೂರಿಸಂ ಸಂಸ್ಥೆಯ ಕೆಲಸಗಾರರು, ಅಂಬಿಗರು, ಗೈಡ್ ಗಳು, ಹಕ್ಕಿಗಳ ಬಗ್ಗೆ ವಿವರ ನೀಡಬಲ್ಲ ತಜ್ಞರು. ಈ ಉದ್ಯೋಗಖಾತ್ರಿಯಿಂದ ಹೊಟ್ಟೆಪಾಡಿನ ಚಿಂತೆ ಇಲ್ಲವಾಯಿತು. ನಮ್ಮಂತಹ ಪ್ರವಾಸಿಗರಲ್ಲದೇ ವಿದೇಶಿ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಬರುವುದೂ ಪರಿಸರ ರಕ್ಷಣೆಯ ಕಡೆಗೆ ಅವರ ಉತ್ಸಾಹ ಹೆಚ್ಚಲು ಕಾರಣವಾಗಿದೆ.

ತಿಂಡಿ ತಿಂದು ನಮ್ಮ ವಾಹನದಲ್ಲೇ ಸುಮಾರು ೨ ಕಿ.ಮೀ ಹಳ್ಳಿರಸ್ತೆಯಲ್ಲಿ ಸಾಗಿದೆವು. ಈ ದಾರಿಯಲ್ಲಿ ಒಂದು ರೈಲ್ವೆಗೇಟ್ ಸಿಕ್ಕಿದ್ದರಿಂದ ಸ್ವಲ್ಪ ಕಾಯಬೇಕಾಯಿತು. ಆದರೇನೂ ಬೇಸರವಾಗಲಿಲ್ಲ. ಸುತ್ತಮುತ್ತಲಿದ್ದ ಮನೆಗಳ ಗೋಡೆಗಳಲ್ಲೆಲ್ಲಾ ಬಣ್ಣಬಣ್ಣದ ಚಿತ್ರಗಳನ್ನು ಬರೆದಿದ್ದರು. ಪುಟ್ಟ ಹುಡುಗಿಯರೂ ಸೇರಿದಂತೆ ಹೆಂಗಸರು ಸೀರೆಯನ್ನೇ ಮೈತುಂಬಾ ಹೊದೆದಿದ್ದರು. ಕುಪ್ಪಸದ ಬಳಕೆ ಇಲ್ಲದೆಯೇ ಸೀರೆಯನ್ನೇ ಅಷ್ಟು ಚೆನ್ನಾಗಿ ಸುತ್ತಿ ಹಾಯಾಗಿ ಕೆಲಸ ಮಾಡುತ್ತಿದ್ದರು. ಅಲ್ಲೇ ಸಮೀಪದಲ್ಲಿ ಹಳ್ಳಿಗರು ತಮ್ಮ ಕುಲಕಸುಬುಗಳಲ್ಲಿ ನಿರತರಾಗಿರುವುದು ಕಣ್ಣಿಗೆ ಬಿತ್ತು. ಒಂದುಕಡೆ ಚಾಪೆ ಹೆಣೆಯುವವರು ಬಹಳ ಸೊಗಸಾಗಿ ಚಾಪೆಗಳನ್ನು ಹೆಣೆಯುತ್ತಿದ್ದರು. ಮನೋಹರ್ ಖುಶಿಯಿಂದ ಅವರ ಚಿತ್ರೀಕರಣ ನಡೆಸಿದರು. ಸ್ವಲ್ಪವೂ ವಿಚಲಿತರಾಗದೆ ತಮ್ಮ ಪಾಡಿಗೆ ಕೆಲಸ ಮುಂದುವರಿಸಿದ ಅವರು, ನಮ್ಮ ಗೈಡ್ ನ ‘ಸ್ಮೈಲ್ ಪ್ಲೀಸ್’ ಎಂಬ ಆಂಗ್ಲ ಆದೇಶಕ್ಕೆ ನಸು ನಗುತ್ತಲೇ ಸಮ್ಮತಿಸಿದರು. ಅಲ್ಲೇ ಇನ್ನೊಂದು ಕಡೆ, ಅಂದವಾಗಿ ಕೆತ್ತಿದ್ದ ಕೆಂಪುಕಲ್ಲುಗಳನ್ನು ಕಂಡೆ. ಕೆತ್ತಿದ ಬಳಿಕ ಆ ಕಲ್ಲುಗಳನ್ನು ಅಡ್ಡ ಹಾಕದೆ ಉದ್ದಕ್ಕೆ ಅಚ್ಚುಕಟ್ಟಾಗಿ ಒಂದರ ಪಕ್ಕದಲ್ಲಿ ಒಂದನ್ನು ಜೋಡಿಸಿಟ್ಟಿದ್ದರು. ಕಸುಬು ಏನೇ ಇರಲಿ, ಅದರಲ್ಲೊಂದು ಕಲಾತ್ಮಕತೆ ಇರಲಿ ಎಂಬುದು ಒರಿಯಾಗಳ ನಿಲುವು ಎಂಬ ಸೂಕ್ಷ್ಮಹೊಳೆಯಿತು.

ದೋಣಿವಿಹಾರಕ್ಕೆ ತೆರಳುವ ಜಾಗ ಬರುತ್ತಲೇ ನಮ್ಮ ಜತೆಯೇ ಬಂದಿದ್ದ ಗೈಡ್, ತಾನು ಜತೆಗೇ ತಂದಿದ್ದ ದೋಣಿಯ ಮೇಲ್ಭಾಗಕ್ಕೆ ಕಟ್ಟಲಿಕ್ಕಿರುವ ಬಟ್ಟೆ, ಪಕ್ಷಿಗಳ ವಿವರಗಳಿದ್ದ ಪುಸ್ತಕ, ಬೈನ್ಯಾಕುಲರ್ ಸಹಿತ ಗಾಡಿಯಿಂದಿಳಿದ. ಅವನನ್ನು ಅನುಸರಿಸುತ್ತಾ ನಾವೂ ಹೋದೆವು. ನವೆಂಬರ್ ನಿಂದ ಫೆಬ್ರವರಿವರೆಗೆ ಸಹಸ್ರಸಹಸ್ರ ಸಂಖ್ಯೆಗಳಲ್ಲಿ ಬರುವ ಪಕ್ಷಿಗಳಿಂದ ಮಂಗಲ ಜೋಡಿ ತುಂಬಿಹೋಗುತ್ತದೆ. ಬಹಳ ದೂರದವರೆಗೂ ಅವುಗಳ ಕೂಗು, ಕೇಕೆ, ಚಿಲಿಪಿಲಿಗಳು ಕೇಳುತ್ತವೆ. ಈ ಪರಿಸರದಲ್ಲಿ ಅವುಗಳದ್ದೇ ರಾಜ್ಯಭಾರ. ನಾವು ಮೌನವಾಗಿ ದೋಣಿಯಲ್ಲಿ ಹೋಗುತ್ತಾ, ಹಿನ್ನೀರಿನ ಜೊಂಡುಹುಲ್ಲಿನ ಪೊದೆಗಳ ಎಡೆಯಿಂದ ಸಾಗುತ್ತಾ, ಆಚೀಚೆ ನೋಡುತ್ತಾ ಆ ಒಟ್ಟೂ ಪರಿಸರವನ್ನು ಅನುಭವಿಸಬೇಕು. ಇದೊಂದು ಅದ್ಭುತ ಅನುಭವ! ಸುಮಾರು ಎರಡೂವರೆ ಗಂಟೆಗಳ ಕಾಲ ಹೀಗೇ ಸಾಗುತ್ತಾ ಅದೆಷ್ಟೋ ಬಗೆಯ ಹಕ್ಕಿಗಳನ್ನು, ನೀರಿನ ಜಂತುಗಳನ್ನು, ಬಣ್ಣಬಣ್ಣದ ಲಿಲ್ಲಿಯೇ ಮೊದಲಾದ ಹೂವುಗಳನ್ನು, ನೀರಿನಲ್ಲೇ ಹುಟ್ಟಿ, ಬೆಳೆದು, ಬಿದ್ದುಹೋಗುವ ಆ ಜೌಗುನೆಲದ ವಿಧವಿಧದ ಸಸ್ಯ, ಕಾಯಿ, ಬೀಜಗಳನ್ನೂ ನೋಡಿದೆವು ಮತ್ತು ತಿಂದೆವು ಕೂಡಾ. ಅಲ್ಲಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಬಿದಿರಿನ ಸಲಿಕೆಗಳನ್ನು ಕಟ್ಟಿ ಬಲೆಗಳನ್ನು ಹಾಕಿದ್ದರು.ಕೆಲವು ಹಕ್ಕಿಗಳು ಸುಲಭದಲ್ಲಿ ಸಿಕ್ಕುವ ಆಹಾರಕ್ಕಾಗಿ ಅವುಗಳ ಬಳಿಯೇ ಸುಳಿದಾಡುತ್ತಿದ್ದವು.

ನಿಜಕ್ಕಾದರೆ, ನಮ್ಮ ಗೈಡ್ ಎಷ್ಟೋ ಹಕ್ಕಿಗಳನ್ನು ಗುರುತಿಸಿ ಅವುಗಳ ಆಂಗ್ಲ ಹೆಸರುಗಳನ್ನೆಲ್ಲಾ ಒಪ್ಪಿಸಿದ. ಆದರೆ ನನಗೆ ಈಗ ಒಂದರ ಹೆಸರೂ ನೆನಪಿಲ್ಲ. ಹಿಂದಿ ಅಥವಾ ಒರಿಯಾದ ಹೆಸರುಗಳು ಅವನಿಗೂ ಗೊತ್ತಿರಲಿಲ್ಲ. ವಿದೇಶಿ ದೇಣಿಗೆಯಿಂದ ವಿದೇಶೀ ಪ್ರವಾಸಿಗರಿಗಾಗಿ ನಡೆಯುವ ದೇಶೀ ಜನರ ಸೇವಾಗಿರಿ ಹೀಗೇ ಇರುವುದಲ್ಲವೇ ನಮ್ಮ ‘ಮಾಡರ್ನ್ ಎಜ್ಯುಕೇಶನಿನಂತೆ’ ಎಂದುಕೊಂಡೆ. ಚಿನ್ನದ ಬಣ್ಣದ ಹಕ್ಕಿ, ಬಿಳಿ, ಕಪ್ಪು, ಬೂದು, ನೀಲಿ, ದೊಡ್ಡ ಹಕ್ಕಿ, ಸಣ್ಣ ಕೊಕ್ಕು, ಬೇರೆ ಹಕ್ಕಿಗಳನ್ನು ತಿನ್ನುವ ಜೋರಿನ ಹಕ್ಕಿ, ಮಿಂಚುಳ್ಳಿ ತರಹದ ಹಕ್ಕಿ, ನೀರು ಕಾಗೆ, ಚೆಂದ ಚೆಂದ ಚೆಂದದ ಹಕ್ಕಿ.. ಇವಿಷ್ಟೇ ನನ್ನ ವರ್ಣನೆಯ ಪದಗಳು. ಈ ಬರವಣಿಗೆಗೆ ನೆರವನ್ನು ಕೊಟ್ಟ ಯೂ ಟ್ಯೂಬ್ ಕೊಂಡಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಹೇಳುತ್ತಾ ಅಲ್ಲಿ ಕೊಟ್ಟದ್ದನ್ನೇ ಬರೆಯುತ್ತಿದ್ದೇನೆ:- ವಿಲ್ಸನ್ ಸ್ನಾಪ್, ಇಂಡಿಯನ್ ಪಾಂಡ್ ಹೆರಾನ್, ಕಾಮನ್ ರಿಂಗ್ಡ್ ಫ್ಲೋವರ್, ಗ್ಲಾಸಿ ಐಬಿಸ್, ಬ್ಲಾಕ್ ವಿಂಗ್ಡ್ ಸ್ಟಿಲ್ಟ್, ಏಷಿಯನ್ ಓಪನ್ ಬಿಲ್, ಸ್ಯಾಂಡ್ ಪೈಪರ್, ನಾದರ್ನ್ ಪಿನ್ ಟೈಲ್ ಡಕ್, ಗ್ರೇಟ್ ಇಗ್ರೆಟ್, ಓರಿಯಂಟಲ್ ವೈಟ್ ಐಬಿಸ್, ಬ್ಲಾಕ್ ಟೈಲ್ಡ್ ಗಾಡ್ ವಿಟ್, ಮಾರ್ಷ್ ಸ್ಯಾಂಡ್ ಪೈಪರ್, ಕಾಮನ್ ರೆಡ್ ಶಾಂಕ್, ಬ್ರಾಹ್ಮಿಣಿ ಡಕ್, ಕೊರ್ ಮೊರಾಂಟ್, ರೆಡ್ ವೇಟಲ್ಡ್ ಲಾಪ್ ವಿಗ್, ಕೋಂಬ್ ಡಕ್, ಪರ್ಪಲ್ ಮೂರ್ ಹೆನ್, ಲಿಟ್ಲ್ ಇಗ್ರೆಟ್.

ನಾವು ಹೀಗೆ ದೋಣಿಯಲ್ಲಿ ತೇಲುತ್ತಾ ಸಾಗುತ್ತಿರಬೇಕಾದರೆ, ದೂರದಲ್ಲಿ ರೈಲು ಸಾಗುವ ಸದ್ದು ಕೇಳಿಸುತ್ತಲೇ ಇತ್ತು. ಎಷ್ಟೊಂದು ರೈಲುಗಳು ಆ ಹಳ್ಳಿಯನ್ನು ಹಾದು ಹೋಗುತ್ತಿದ್ದವು! ಸ್ವಲ್ಪ ದೂರದಲ್ಲಿ ಪರಿಸರ ಇಲಾಖೆಯ ಭವನದ ನಿರ್ಮಾಣ ಕಾರ್ಯವೂ ನಡೆಯುತ್ತಿತ್ತು. ಮೊಬೈಲ್ ಟವರ್ ಗಳು ಒಬ್ಬರಿಗೊಬ್ಬರು ಸ್ಪರ್ಧಿಸುತ್ತಾ ನಿಂತಿದ್ದವು. ಚಿಲಿಕಾ ಸರೋವರದಿಂದ ಉಪ್ಪು ನೀರು ಬರುವ ದೊಡ್ಡಕಾಲುವೆಯಲ್ಲಿ ಯಾಂತ್ರಿಕ ದೋಣಿಯೊಂದು ಸದ್ದು ಮಾಡುತ್ತಾ ಹಾದು ಹೋಯಿತು. ಸದ್ಯಕ್ಕೆ ಇದ್ಯಾವುದರ ಪರಿವೆಯೂ ಇಲ್ಲದಂತೆ ಜೊಂಡುಹುಲ್ಲಿನ ಮೆಳೆಗಳೊಳಗೆ ಹಕ್ಕಿಗಳು ಅವುಗಳ ಪಾಡಿಗೇ ಇದ್ದವು. ಈ ಸುಖ ಎಷ್ಟು ಸಮಯದವರೆಗೋ ಗೊತ್ತಿಲ್ಲ.

ಮಂಗಲಜೋಡಿಯ ಈ ಪಕ್ಷಿಧಾಮ ಜೌಗು ನೆಲದಲ್ಲಿದೆ. ಇಲ್ಲಿ ಹೆಚ್ಚು ಆಳವಿಲ್ಲದ ನೀರಿನಮೇಲೆ ಹೋಗಬಲ್ಲ ದೋಣಿಗಳಲ್ಲಿ ಸಾಗಬೇಕು. ಇಂತಹ ದೋಣಿಗಳ ನಿರ್ಮಾಣದಲ್ಲೂ ಇಲ್ಲಿನವರದು ಎತ್ತಿದ ಕೈ. ಒಂದು ಕಾಲದಲ್ಲಿ ನೌಕಾಯಾನದಲ್ಲಿ ಪ್ರಪಂಚದಲ್ಲೇ ಅತ್ಯಂತ ಮುಂದುವರಿದಿದ್ದವರು ಈ ಚಿಲಿಕಾ ಮತ್ತು ಆಸುಪಾಸಿನ ಕಳಿಂಗ ಎಂದು ಗುರುತಿಸಲ್ಪಡುವ ಪ್ರದೇಶದ ಜನರು. ವ್ಯಾಪಾರ ವಹಿವಾಟುಗಳಲ್ಲಿ ಪ್ರಭುತ್ವ ಹೊಂದಿದ ಇಲ್ಲಿನವರು ಅಂದಿನ ಯುರೋಪ್, ಅರೇಬಿಯಾ, ಶ್ರೀಲಂಕಾ, ಇಂಡೋನೇಷಿಯಾ, ಸುಮಾತ್ರಾ, ಜಾವಾ, ಬಾಲಿ, ಕಾಂಬೋಡಿಯಾಗಳೇ ಮುಂತಾದ ಪ್ರದೇಶಗಳ ಜನರೊಡನೆ ಸಂಪರ್ಕ, ಪ್ರಭಾವ, ವಿನಿಮಯಗಳನ್ನು ಹೊಂದಿದ್ದರಂತೆ. (ಹೆಚ್ಚಿನ ವಿವರಗಳಿಗೆ ನೋಡಿ ಫೆಬ್ರವರಿ ಕಳೆದರೆ ಈ ಜಾಗ ಬಿರುಕು ಬಿಟ್ಟ ನೆಲವಾದರೆ ಮುಂದೆ ಮಳೆಗಾಲದಲ್ಲಿ ನೀರಿನಲ್ಲಿ ಪೂರ್ತಿ ಮುಳುಗಿಹೋಗುತ್ತದೆ. ಆಗ ಇಲ್ಲಿ ಹಕ್ಕಿಗಳೂ ಇಲ್ಲ, ದೋಣಿಗಳೂ ಇಲ್ಲ, ಪ್ರವಾಸಿಗರೂ ಇಲ್ಲ. ಗೈಡ್ ಗಳು ಆ ಸಮಯದಲ್ಲಿ ತಮ್ಮ ಹೊಲಗಳಲ್ಲಿ ದುಡಿಯುವುದು, ಮಕ್ಕಳಿಗೆ ಪಾಠ ಹೇಳಿ ಕೊಡುವುದು, ದೋಣಿ ತಯಾರಿಯೇ ಮುಂತಾದ ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರಂತೆ.

ನಾವು ಆನಂದವಾಗಿ ದೋಣಿವಿಹಾರ ಮಾಡುತ್ತಾ ಪಕ್ಷಿವೀಕ್ಷಣೆಗೆ ಸಾಗುತ್ತಿರಬೇಕಾದರೆ ನಮ್ಮ ವೀಕ್ಷಣೆಗೆ ಹಳ್ಳಿಕಡೆಯಿಂದ ಒಂದು ದೊಡ್ಡ ದಿಬ್ಬಣವೇ ಬಂತು. ಹಿಂಡುಹಿಂಡಾಗಿ ‘ಜೊಂಯ್ ಜೊಂಯ್’ ಎನ್ನುತ್ತಾ ಬಂದವರು – ಕಪ್ಪು ಮೈಯಲ್ಲಿ ಮಿರಮಿರನೆ ಹೊಳೆಯುವ, ಕಂದು ಕೂದಲಿಗೆ ಚಿನ್ನದ ಹೊಳಪನ್ನು ಬೆರೆಸಿದ, ಹಣೆಗೆ ಬಿಳಿಯ ನಾಮವನ್ನು ಧರಿಸಿದ ಮಹಿಷ ಮಹಿಷಿಯರು! ಆ ಜೌಗುನೀರಿನಲ್ಲಿ ಕಾಲೆಳೆಯುತ್ತಾ ಸಾಗಿಬರುತ್ತಿದ್ದ ಅವರನ್ನು ಅವರ ಒಡೆಯರು ದೋಣಿಗಳ ಮೂಲಕವೇ ಸಾಗಿ ಬಂದು ನಿಯಂತ್ರಿಸುತ್ತಿದ್ದರು. ವರ್ಷದಲ್ಲಿ ಕೆಲವು ತಿಂಗಳುಗಳ ಕಾಲ ಮಾತ್ರ ಇರುವ ಇಲ್ಲಿನ ಜೊಂಡುಹುಲ್ಲಿನ ಭೋಜನಕ್ಕೆ ಸಾಗಿ ಬರುತ್ತಿದ್ದ ಎಮ್ಮೆ, ಕೋಣಗಳನ್ನು ನೋಡುವುದೇ ಸೊಗಸು. ಈ ಜಾನುವಾರುಗಳ ಮೇಲೆ ಕುಳಿತು ಕ್ರಿಮಿಕೀಟಗಳನ್ನು ತಿನ್ನುತ್ತಿದ್ದ ಹಕ್ಕಿಗಳ ಗಮ್ಮತ್ತು ಬೇರೆಯದೇ. ಹೀಗೆ ಬಂದ ಈ ಜಾನುವಾರುಗಳನ್ನು ಮೇಯಲು ಬಿಟ್ಟು ಯಜಮಾನರು ತಮ್ಮ ಪಾಡಿಗೆ ತಾವು ಹೊರಟು ಹೋಗುತ್ತಾರಂತೆ. ಸಂಜೆಯಾಗುತ್ತಿದ್ದಂತೆ ಮತ್ತೆ ಬಂದು ದೋಣಿಗಳ ಮೂಲಕವೇ ಅವುಗಳನ್ನು ಬೇಕಾದ ದಿಕ್ಕಿಗೆ ಹೋಗುವಂತೆ ನಿಯಂತ್ರಿಸಿ, ವಾಪಾಸು ಹಳ್ಳಿಗಳಿಗೆ ಕರೆದೊಯ್ಯುತ್ತಾರಂತೆ.

ನಮ್ಮೂರಲ್ಲಿ ಕ್ಯಾಲ್ಸಿಯಂನಿಂದ ಸಮೃದ್ಧವಾದ ಹಾಲನ್ನು ನೀಡಬೇಕಾಗಿರುವ ಗೋವುಗಳಿಗೇ ಕ್ಯಾಲ್ಸಿಯಂ ಕೊರತೆಯಾಗುತ್ತಿರುವುದು ಸಾಮಾನ್ಯ. ಇದಕ್ಕೆ ಅತ್ಯಗತ್ಯವಾಗಿರುವ ಸೂರ್ಯನ ಬಿಸಿಲು ಸಿಗಬೇಕಾದರೆ ಅವುಗಳನ್ನು ಮೇಯಲು ಹೊರಗೆ ಕಳಿಸಬೇಕು ಎಂದು ಮನೋಹರ್ ಹೇಳುತ್ತಿರುತ್ತಾರೆ. ಆಗ, “ಕಳಿಸಿದರೆ ವಾಪಾಸು ಬರುವ ಖಾತ್ರಿ ಇಲ್ಲ ಡಾಕ್ಟ್ರೇ” ಎಂದು ಎಷ್ಟೋ ರೈತರು, ಹೆಂಗಸರು ತಾವು ಕಳಕೊಂಡ ಹಸುಗಳು, ಎತ್ತುಗಳು, ಕರುಗಳು, ಗಬ್ಬದಗೌರಿ, ಲಕ್ಷ್ಮೀಯರ ಬಗ್ಗೆ ಹೇಳುತ್ತಾ ದುಃಖದಿಂದ ಕಣ್ಣೀರು ಹಾಕಿದ್ದು ನೋಡಿದ್ದೆ. ಇಲ್ಲಿನವರಿಗೆ ಆ ಸಮಸ್ಯೆ ಇಲ್ಲವೇ ಎಂದು ಕುತೂಹಲವಾಯಿತು. ಗೈಡ್ ಬಳಿ “ಈ ಜಾನುವಾರುಗಳನ್ನು ಯಾರೂ ಕದ್ದೊಯ್ಯುವುದಿಲ್ಲವೇ?” ಎಂದು ಕೇಳಿದೆ. “ಛೆ! ಛೆ! ಇಲ್ಲ, ಇಲ್ಲ” ಎಂದು ನಕ್ಕ. ” ಅಲ್ಲ, ಇವುಗಳ ಮಾಂಸಕ್ಕಾಗಿ?” ಪುನಃ ಕೇಳಿದೆ.” ಇಲ್ಲಿ ಯಾರೂ ಗೋಮಾಂಸ ತಿನ್ನುವುದಿಲ್ಲ, ಜಾನುವಾರುಗಳು ಸಹಜ ಸಾವನ್ನಪ್ಪುತ್ತವೆ. ಆಗ ಅವುಗಳ ಚರ್ಮದ ಕೆಲಸ ಮಾಡುವವರು ಬಂದು ಅದನ್ನು ಪಡಕೊಳ್ಳುತ್ತಾರೆ” ಎಂದ. “ಇಲ್ಲಿದ್ದಷ್ಟು ಕಾಲ ಸಾಧ್ಯವಾದಷ್ಟು ಹಾಲು, ಮಜ್ಜಿಗೆ ಕುಡಿಯುವಾ, ಕ್ಯಾಲ್ಸಿಯಂ ಧಾರಾಳ ಸಿಗಬಹುದು, ಊರಿಗೆ ವಾಪಾಸ್ಸಾದ ಮೇಲೆ ಗ್ಯಾರಂಟಿಯಿಲ್ಲ” ಎಂದು ಮಾತಾಡಿಕೊಂಡೆವು. ಇಷ್ಟು ಹೇಳುವಾಗಲೇ ನಮ್ಮ ಹೊಟ್ಟೆಯ ತಾಳ ಏರುಗತಿಯಾಗುತ್ತಿರುವುದು ಗಮನಕ್ಕೆ ಬಂತು. ವ್ಯಾನಿಗೆ ವಾಪಾಸ್ಸು ಬಂದು ಅರ್ಜೆಂಟಿಗೆ ಎಂದು ಊರಿನಿಂದ ತಂದಿದ್ದ ಉಂಡೆಗಳನ್ನು ತಿಂದು ಮತ್ತೆ ನಮ್ಮ ಸಂಸ್ಥೆಯವರು ಏರ್ಪಡಿಸಿದ್ದ ಮಧ್ಯಾಹ್ನದ ಭೂರಿಭೋಜನ ಹೊಡೆದೆವು.

ಆ ಹಳ್ಳಿಯಲ್ಲೇ ಬೆಳೆದ ಮುಳ್ಳುಸೌತೆ, ಬದನೆ, ದೊಡ್ಡ ತೊಂಡೆಯ ಆಕಾರದ ತರಕಾರಿಗಳಿಂದ ತಯಾರಾದ ಊಟ ರುಚಿರುಚಿಯಾಗಿತ್ತು. ಬದನೆಯನ್ನು ಉರುಟುರುಟಾದ ಬಿಲ್ಲೆಗಳಂತೆ ಕತ್ತರಿಸಿ, ಖಾರ ಬೆರೆಸಿದ ಕಡಲೆ ಹಿಟ್ಟಿನಲ್ಲಿ ಉರುಳಿಸಿ, ಎಣ್ಣೆಯಲ್ಲಿ ಕರಿದ ಬಜ್ಜಿಯಂತೂ ಅವಿಸ್ಮರಣೀಯ. ಅಲ್ಲಿನ ಹಪ್ಪಳವೂ ವಿಶೇಷವೆನಿಸಿ, ಅಡುಗೆಭಟ್ಟರನ್ನು ಕರೆದು ವಿವರಗಳನ್ನೆಲ್ಲಾ ಪಡಕೊಂಡೆವು. ಅಲ್ಲಿಂದ ವಾಪಾಸು ಬರುವ ದಾರಿಯಲ್ಲಿ ಗಾಡಿನಿಲ್ಲಿಸಿ, ಮುಳ್ಳುಸೌತೆ, ಹಪ್ಪಳಗಳನ್ನೆಲ್ಲಾ ಖರೀದಿಸಿಯೇ ಮುಂದೆ ಹೊರಟೆವು.

(ಮುಂದುವರಿಯಲಿದೆ)