– ಗಿರಿಧರ ಕೃಷ್ಣ

[ಕರಾವಳಿ ಬಾಲ್ಯದ, ವೃತ್ತಿತಃ ಬೆಂಗಳೂರಿನ ಗಿರಿಧರ ಕೃಷ್ಣ ಪ್ರಕೃತಿಪರ ಚಟುವಟಿಕೆ ಪ್ರಿಯ. ಈ ಕಾಲಕ್ಕೆ `ಓದು ಕಳೆದು ಹೋದವರ’ ಗುಂಪಿನಲ್ಲಿ ನಿಲ್ಲದೇ ಗಿರಿ, ನನ್ನನ್ನೂ ಸ್ವಲ್ಪ ಓದಿಕೊಂಡದ್ದಕ್ಕೆ ಮತ್ತು ಅನುಸರಿಸುವ ಪ್ರಯತ್ನ ಮಾಡಿದ್ದಕ್ಕೆ, ಎರಡು ವರ್ಷಗಳ ಹಿಂದೆ ನಮ್ಮೊಡನೆ ಆತ ಕುದುರೆಮುಖ ಶಿಖರಕ್ಕೆ ಬಂದದ್ದೇ ದೊಡ್ಡ ಸಾಕ್ಷಿ. (ಇಲ್ಲಿದೆ ಪ್ರವೇಶಿಕೆ – ಕುದುರೆ ಕೆನೆಯುತಿದೆ ಕೇಳಿದಿರಾ!). ಅವರು ಸಿಕ್ಕಾಗೆಲ್ಲ, ಹಿಂದೆ ಸ್ವತಂತ್ರವಾಗಿ ನಡೆಸಿದ ಚಟುವಟಿಕೆಗಳ ಕೆಲವು ಸ್ವಾರಸ್ಯಗಳನ್ನು ನೆನಪಿಸಿಕೊಳ್ಳುವುದಿದೆ. ಆದರೆ ಸ್ವತಃ ಒಳ್ಳೇ ಓದುಗನಾಗಿಯೂ ತನ್ನ ಅನುಭವಕ್ಕೆ ಲಿಖಿತ ಅಭಿವ್ಯಕ್ತಿ ಕೊಡುವಲ್ಲಿ ಮಾತ್ರ ಎಂದೂ ಯೋಚಿಸಿದಂತಿರಲಿಲ್ಲ. ಈ ವಿಚಾರಲಹರಿಯ ಮುನ್ನೆಲೆಯಲ್ಲಿ, ಕಳೆದ ವರ್ಷ (೨೦೧೬ ಜುಲೈ) ಗಿರಿ ತನ್ನದೇ ಬಳಗ ಕಟ್ಟಿಕೊಂಡು ಮಳೆಗಾಲದ ಮಲೆನಾಡು ಸುತ್ತಾಟ ಸಣ್ಣದಾಗಿ ನಡೆಸಿದಾಗ ನಾನು ಹಿಡಿದುಕೊಂಡೆ. “ಇಂದಿನ ಕ್ಯಾಮರಾ ಕ್ರಾಂತಿಯಲ್ಲಿ ಹತ್ತು ಆಕರ್ಷಕ ಚಿತ್ರ ಫೇಸ್ ಬುಕ್ಕಿಗೆ ಯಾರೂ ಏರಿಸಿಯಾರು. ಅದನ್ನು ಗಳಿಸಲು ನಡೆಸಿದ ಸಾಹಸ ಎಷ್ಟು ಸಣ್ಣದಾದರೂ ಮತ್ತದರ ಸಾಮಾಜಿಕ ಉಪಯುಕ್ತತೆ ತೋರ ನೋಟಕ್ಕೆ ನಗಣ್ಯವಾಗಿ ಕಾಣಿಸಿದರೂ ದಾಖಲಿಸುವ ಅವಶ್ಯಕತೆ ಇದ್ದೇ ಇದೆ. ಬಹುಮಂದಿ ಇದರಲ್ಲಿ ಸೋಲುತ್ತಾರೆ. ತಾಕತ್ತಿದ್ದರೆ ನೀವು ಬರೆಯಿರಿ ನೋಡೋಣ” – ನನ್ನ ಸವಾಲು.

ಗಿರಿ, ದಿಟ್ಟವಾಗಿಯೇ ಪ್ರಾಮಾಣಿಕವಾಗಿಯೇ ತೊಡಗಿಕೊಂಡರು, ಬಹುಶಃ ಚರವಾಣಿಯಲ್ಲೇ ಚುಟುಕು ಚೂರುಗಳನ್ನು ಕುಟ್ಟಿ, ಕಚ್ಚಾರೂಪದಲ್ಲೇ ನನಗೆ ಕಳಿಸತೊಡಗಿದರು. ಅವೋ ನಡುನಡುವೆ ಸೇತುವಿಲ್ಲದ ಕಂದರಗಳು, ಶಿಖರ ಕಾಣದ ಅಲೆದಾಟಗಳು. ಇವರ ತಂಡ ಯಶಸ್ವಿಯಾಗಿಯೂ ಸುಖವಾಗಿಯೂ ಮನೆ ಸೇರಿದ್ದರೂ ಕಥನ ಎಲ್ಲೋ ಕಳೆದುಹೋಗಿತ್ತು. ನಾನು ಆಗ ಬಂದಷ್ಟೂ ಟಿಪ್ಪಣಿಗಳನ್ನು ನನ್ನ ಗಣಕದ ಮೂಲೆಯಲ್ಲಿ ಗುಡಿಸಿ ಗುಪ್ಪೆ ಹಾಕಿದ್ದೆ.

ನಾನು ಈ ವರ್ಷದ (೨೦೧೭) ಕಪ್ಪೆ ಶಿಬಿರದ ಕಥನಕ್ಕೆ ಪೂರ್ವ ಕಥನಗಳ ಕಡತ ಕೆದಕುವಾಗ, ಈ ವರ್ಷದ ಮಳೆಯ ಬಿಕ್ಕಳಿಕೆಯ ನಡುವೆ ಮೂಲೆಪಾಲಾದ ಗಿರಿ-ಟಿಪ್ಪಣಿಗಳ ಗುಪ್ಪೆ ಆಕರ್ಷಿಸಿತು. “ಇವಕ್ಕೆ ಏನಾದರೂ ಒಂದು ಗತಿ ಕಾಣಿಸಿ ಮಾರಾಯ್ರೇ” ಎಂದು ಅಷ್ಟನ್ನೂ ಗಿರಿಗೆ ಎತ್ತಿ ಹಾಕಿದ್ದೆ. ವಾರ ಬಿಟ್ಟು ಆತ “ಕ್ಷಮಿಸಿ, ಏನೋ ತೇಪೆ ಕೆಲಸ ಮಾಡಿದ್ದೇನೆ” ಎಂದು ಹೀಗೆ ಪರಿಷ್ಕರಿಸಿ ಕಳಿಸಿದ್ದಾರೆ, ಜತೆಗೊಂದಷ್ಟು ಚಿತ್ರಗಳನ್ನೂ ಲಗತ್ತಿಸಿದ್ದಾರೆ. ನನ್ನ ಬರಹಗಳಲ್ಲಿ ಬೇಡ ಎಂದರೂ ಇಣುಕುವ ನೂರೆಂಟು ಮುಖಗಳ ಕಾಟವೇನೂ ಇಲ್ಲದ ಈ ಸರಳ ಕಥನ ವರ್ಷ ಹಳತು ಎಂದನ್ನಿಸದ ತಾಜಾತನ ಹೊತ್ತಿರುವುದರಿಂದ, ಈಗ ನಿಮ್ಮ ಸಮಕ್ಷಮ ಇಡಲು ಸಂತೋಷಿಸುತ್ತೇನೆ. ಇಷ್ಟಕ್ಕೆಲ್ಲ ಅವಕಾಶ ಮಾಡಿಕೊಟ್ಟ ಗಿರಿಯನ್ನು ಅಭಿನಂದಿಸುತ್ತೇನೆ. ಗಿರಿಯಿಂದ ಮುಂದೆ ಇನ್ನು ಹೆಚ್ಚಿನ ನಿರೀಕ್ಷೆಯಿಟ್ಟುಕೊಂಡರೆ ತಪ್ಪಾದೀತೇ? – ಅಶೋಕವರ್ಧನ]

ಗಿರಿಧರ ಕೃಷ್ಣರ ೨೦೧೬ರ ಕಥನ

“ಈ ಬಾರಿ ವಾಡಿಕೆಗಿಂತ ಜಾಸ್ತಿ ಮಳೆ”.. ಕೆಲವು ತಿಂಗಳುಗಳ ಹಿಂದೆ ಮೇಲಿನ ಸಾಲನ್ನು ಕೇಳಿದಾಗಿನಿಂದ ಮಳೆಯಲ್ಲಿ ಹಸಿರಿನ ನಡುವೆ ತಿರುವುಮುರುವು ರಸ್ತೆಯಲ್ಲಿ ಸಾಗುತ್ತಾ ದಾರಿಗುಂಟ ಸಿಗುವ ಅಸಂಖ್ಯ ಝರಿ, ತೊರೆಗಳನ್ನು ನೋಡುತ್ತಾ ಮಳೆಗಾಲವನ್ನು ಅನುಭವಿಸುವ ಹುಳ ತಲೆಗೆ ಹೊಕ್ಕಿತ್ತು.

ಬಾಲ್ಯದಿಂದ ತೊಡಗಿ ಮಳೆಯಲ್ಲಿ ಹಲವಾರು ಬಾರಿ ನೆನೆದದ್ದಿದೆ. ಶಾಲೆಗೆ ಕೊಡೆ ಇಲ್ಲದೆ ಹೋದ್ದದ್ದು, ರಜಾದಿನಗಳಲ್ಲಿ ಭರ್ರೆಂದು ಮಳೆಬಂದಾಗ ಮನೆಯ ಒಳಗಿಂದ ಅಂಗಳಕ್ಕೆ ಬಂದು ಒದ್ದೆಯಾದದ್ದು, ಹೀಗೆ ಹಲವು ಬಾರಿ ಮಳೆಯ ಜೊತೆ ಆಟವಾಡಿದ ಅನುಭವ ಅನನ್ಯ. ಮಂಗಳೂರಿನ ಕಾಲೇಜಿನ ದಿನಗಳಲ್ಲಂತೂ ಒಂದು ದಿನವೂ ಮಳೆಯಿಂದ ರಕ್ಷಣೆಗಾಗಿ ಕೊಡೆ ಒಯ್ದದ್ದಿಲ್ಲ. ಚಿಕ್ಕ ಚಿಕ್ಕ ಹನಿಗಳ ಪ್ರೋಕ್ಷಣೆಯಿರಲಿ, ಓತಪ್ರೋತ ಧಾರೆಯ ಅಭಿಷೇಕವೇ ಇರಲಿ, ಬೇಗನೆ ಓಡಿ ಮರವೋ ಛಾವಣಿಯೋ ಮತ್ತೊಂದರ ಕೆಳಗೋ ಆಶ್ರಯ ಪಡೆಯುವ ಮಾತೇ ಇಲ್ಲ. ಇದಕ್ಕೆಂದೇ ಬೆನ್ನ ಚೀಲದೊಳಗಿನ ವಸ್ತುಗಳು ಪ್ಲಾಸ್ಟಿಕ್ ಹೊದ್ದು ಸದಾ ಸನ್ನದ್ಧವಿರುತ್ತಿದ್ದವು.

ಉದ್ಯೋಗಿಯಾಗಿ ಬೆಂಗಳೂರು ಸೇರಿದ ನಂತರ ಮಳೆ ಎಂದರೆ ಬಹುಮಹಡಿ ಕಟ್ಟಡದ ಗಾಜಿನ ಗೋಡೆಗಳಿಗೆ (ಹವಾ ನಿರ್ಬಂಧಿತ?) ಹೊರಗಿನಿಂದ ಬಡಿಯುವ ಹನಿಗಳು, ನಗರದ ಚಟುವಟಿಕೆಗಳಿಗೆ ಮುಸುಕಿದ ಕಪ್ಪನೆ ಟೊಪ್ಪಿ, ಕಾಣದ ಶಕ್ತಿಗೆ ತುಯ್ದಾಡುವ ಮರಗಿಡ…. ಹೀಗೆ ಕೇವಲ ನೋಡಿ ಅನುಭವಿಸಿದ್ದೇ ಹೆಚ್ಚು. ಹೆದ್ದಾರಿಯಲ್ಲಿ ಮೋಟಾರು ಸೈಕಲ್ ಸವಾರಿ ಹೋದಾಗ, ಎಲ್ಲೋ ನಾಲ್ಕೈದು ಬಾರಿಯಷ್ಟೇ ಆಕಸ್ಮಿಕವಾಗಿ ಮಳೆ ಸಿಕ್ಕಿದಾಗ, ಸಂತೋಷದಿಂದ ಅನುಭವಿಸಿದ್ದೇನೆ. ಬಸ್ಸಿನಲ್ಲಿ ದೂರ ಪ್ರಯಾಣಿಸುವಾಗ ಹೊರಗೆ ಮಳೆ ಬಂದಾಗಲೂ ಅದ್ಭುತವೆಂದೇ ಆಸ್ವಾದಿಸಿದ್ದೇನೆ. ಇತ್ತೀಚೆಗೆ ಕಾರು ಚಾಲನೆ ಕಲಿತ ನಂತರ, ಬಹುದಿನಗಳಿಂದ ಅದುಮಿಟ್ಟ ಬಯಕೆ – ಮಳೆಗಾಲದಲ್ಲಿ ಘಾಟಿ ರಸ್ತೆಯಲ್ಲಿ ಸಂಚರಿಸಬೇಕು, ಚಿಗಿತುಕೊಂಡಿತು. ಅದು ಕೈಗೂಡಿದ್ದು ೨೦೧೬ ಜುಲೈ ೧೬ ರಂದು.

ಕಾರ್ಯಕ್ರಮವೊಂದರ ಪ್ರಯುಕ್ತ ಊರಿಗೆ ಬಂದ ನನಗೆ ವಾರಾಂತ್ಯದ ಕೊನೆಯ ಎರಡು ದಿನಗಳ ಬಿಡುವು ದೊರೆತಿತ್ತು. ಕಾಲೇಜಿನ ಅರ್ಧವರ್ಷದ ಮಧ್ಯದ ರಜೆಯಲ್ಲಿದ್ದ ಚಿಕ್ಕಮ್ಮ ಹಾಗೂ ಮಾವನ ಮಕ್ಕಳೂ ಜೊತೆಗಿದ್ದರು. ವರ್ಷಗಳೆರಡರ ಹಿಂದೆ ನಮ್ಮ ಇದೇ ಗುಂಪು ಕುಮಾರ ಪರ್ವತ ಏರಿಳಿದದ್ದನ್ನು ಮೆಲುಕು ಹಾಕುತ್ತಾ `ಮಳೆ ಯಾತ್ರೆ’ಯ ಪ್ರಸ್ತಾಪವನ್ನು ಮಾಡಿದೆ. ಮಳೆಗಾಲಕ್ಕೆ ವಿಶೇಷ ಸರ್ವೀಸು ಮಾಡಿಸಿಕೊಂಡ ಕಾರು ತಯಾರಿತ್ತು. ಹೋಗಲು ಜನರು ಮೊದಲೇ ತುದಿಗಾಲಲ್ಲಿ ನಿಂತಿದ್ದರು. ಹೋಗುವುದೆಲ್ಲಿಗೆ ಎನ್ನುವುದಷ್ಟೇ ನಿರ್ಧಾರಬಾಗಬೇಕಿತ್ತು. ಶನಿವಾರ ಹೊರಟು ಆದಿತ್ಯವಾರ ಹಿಂತಿರುಗುವಂತೆ ಯೋಚಿಸಿದಾಗ ಫಕ್ಕನೆ ಹೊಳೆದದ್ದು ಆಗುಂಬೆ-ತೀರ್ಥಹಳ್ಳಿ-ಕುದುರೆಮುಖ-ಚಾರ್ಮಾಡಿ. ನಂತರ ಬಂದದ್ದು ಬಿಸಿಲೆ-ಮಲ್ಲಳ್ಳಿ-ಕೋಟೆಬೆಟ್ಟ-ಮಾದಾಪುರ-ಮಡಿಕೇರಿ-ಸಂಪಾಜೆ. ಮೊದಲನೆಯದ್ದಕ್ಕೆ ಹೊರನಾಡಿನಲ್ಲೂ, ಎರಡನೆಯದ್ದಕ್ಕೆ ಮಡಿಕೇರಿಯಲ್ಲೂ ರಾತ್ರಿ ತಂಗುವ ಆಯ್ಕೆಗಳಿದ್ದವು. ಕೊನೆಗೆ ಗುಂಪಿನ ಹೆಚ್ಚಿನವರು ಇದುವರೆಗೂ ಹೋಗದ ಬಿಸಿಲೆ-ಮಲ್ಲಳ್ಳಿ ಗೆದ್ದಿತು. ಬಿಸಿಲೆ ಮಾರ್ಗದ ಕಾಮಗಾರಿ ಹಾಗೂ ವಾಹನ ಪ್ರವೇಶಕ್ಕಿರುವ ನಿರ್ಬಂಧಗಳ ಬಗ್ಗೆ ಬಿಸಿಲೆಯನ್ನು ಹತ್ತಿರದಿಂದ ಬಲ್ಲ ನಮ್ಮ ಅಶೋಕವರ್ಧನರಲ್ಲಿ ವಿಚಾರಿಸಿದ್ದಾಯಿತು. ಅಂತೆಯೇ ಮಡಿಕೇರಿಯಲ್ಲಿನ ತಂಗಿಯ ಮನೆಯಲ್ಲಿ ರಾತ್ರಿಗೆ ಬರುವುದಾಗಿ ತಿಳಿಸಿದ್ದಾಯಿತು. ಇನ್ನೇನು ಮರುದಿನ ಬೆಳಿಗ್ಗೆ ಹೊರಡುವುದೆಂದು ತೀರ್ಮಾನಿಸುವಷ್ಟರಲ್ಲಿ, ಗುಂಪಿನ ಕಿರಿಯ ಸದಸ್ಯೆಗೆ ಕಾಲೇಜಿನ ಕಲಾಪಗಳಿರುವುದರಿಂದ ತಡವಾಗಿ ಮಂಗಳೂರಿನಿಂದ ಹೊರಡಲು ನಿರ್ಧರಿಸಿದೆವು.

ಅಶೋಕರಿಂದ ದೊರೆತ ಬಿಸಿಲೆಯ ದೇವೇಗೌಡರ ದೂರವಾಣಿ ಸಂಖ್ಯೆಗೆ ಕರೆಮಾಡಿದಾಗ ಅದು ಮಾಮೂಲೆಂಬಂತೆ `ಅಸ್ತಿತ್ವದಲ್ಲಿ ಇರಲಿಲ್ಲ’! ಹೇಗೂ ಮಂಗಳೂರಲ್ಲಿದ್ದ ನಾನು, ಕದ್ರಿ ಕಂಬಳದ ಅಶೋಕರ ಮನೆಗೇ ಹೋಗಿ, ಬಿಸಿಲೆ ದಾರಿ ಸಂಚಾರಕ್ಕೆ ಮುಕ್ತವೆಂದು ಮತ್ತೊಮ್ಮೆ ಖಾತರಿಪಡಿಸಿಕೊಂಡೆ.

ಮಧ್ಯಾಹ್ನ ೧ಕ್ಕೆ ಮಂಗಳೂರು ಬಿಟ್ಟ ನಾವು ಮಾಣಿಯಲ್ಲಿ ನೇರ ಉಪ್ಪಿನಂಗಡಿಗಾಗಿ ಕುಳ್ಕುಂದಕ್ಕೆ ಹೋಗುವ ಬದಲು, ಅಭ್ಯಾಸಬಲದಲ್ಲಿ ಪುತ್ತೂರಿಗೆ ಬಲಕ್ಕೆ ತಿರುಗಿದೆವು. `ಮಾಡಿದ ಪಾಪ ತಿಂದು ಪರಿಹಾರ’ – ಪುತ್ತೂರಿನಲ್ಲಿ ಊಟ ಮುಗಿಸಿದೆವು. ಮುಂದೆ ಕಾಣಿಯೂರು ಯೇನೆಕಲ್ಲು ಹಾದು ಬಿಸಿಲೆ ದಾರಿ ಹಿಡಿದೆವು. ಜನವಸತಿ ಕಳೆದು ನಿಧಾನವಾಗಿ ಹಸಿರು ಹೊದ್ದ ಕಾಡಿನೊಳಗೆ ಪ್ರಯಾಣ ಮುಂದುವರೆಯಿತು. ದಕ ಗಡಿಯವರೆಗೆ ಸುಂದರ ಡಾಮರೀಕರಣವಾಗಿತ್ತು. ಹಾಸನವಲಯದೊಳಗೆ ಬೂದಿಚೌಡಿಯ ಮುಂಭಾಗವನ್ನುಳಿದು ಬಹ್ವಂಶ ದಾರಿಯಂತೂ ದಪ್ಪನೆಯ ಕಾಂಕ್ರೀಟನ್ನೇ ಹೊದ್ದಿತ್ತು. ನುಣ್ಣಗಿನ ಕಾಂಕ್ರೀಟಿನ ಮೇಲೆ ಸಾಗುತ್ತಿರುವಾಗ ಹಿಂದೆ ಇಲ್ಲೇ ಕಚ್ಚಾ ದಾರಿಯಲ್ಲಿ ಬೈಕು ಓಡಿಸಿದ ನೆನಪಿನ ಪುಟಗಳು ತೆರೆದುಕೊಂಡವು. ಒಂಟಿಭೂತದಂತೇ ಹೋದ ನಾನು ಆ ದಾರಿಗೆ ಹೊಸಬ. ದಾರಿ ಕಚ್ಚಾ ಮಾತ್ರವಲ್ಲ, ಕಿಷ್ಕಿಂಧೆ ಕೂಡಾ. ಅಂಕಾಡೊಂಕಿಯಲ್ಲಿ ಸರಿಯಾಗಿಯೇ ಬಳುಕಾಡಿ, ಹಿಮ್ಮುರಿ ತಿರುವನ್ನು ಯಶಸ್ವಿಯಾಗಿಯೇ ಕಳೆದು ಸಾಗಿದ್ದಂತೆ ಎದುರಿನಿಂದೊಂದು ಕಾರು ಅಬ್ಬರತಾಳದಲ್ಲಿನ ರಕ್ಕಸನಂತೇ ಬಂತು. ನಾನು ರಗಳೆ ಬೇಡವೆಂದು ಬದಿಗೇ ಸರಿದು ನಿಂತರೂ ಕಾರಿನ ಧಾವಂತ ತಗ್ಗಲಿಲ್ಲ. ಬೈಕಿನ ಮುಂದಿನ ಚಕ್ರಕ್ಕೆ ಕಾರಿನ ಬಂಪರ್ ಗುದ್ದಿತ್ತು. ಆಘಾತಕ್ಕೆ ಬೈಕಿನ ಹೆಡ್‍ಲೈಟ್ ಹುಡಿಯಾಗಿ, ಬ್ರೇಕ್ ಪೆಡಲು ಹಿಂಬಾಗಿತ್ತು. ಸಾಲದ್ದಕ್ಕೆ ವಿಚಾರಣೆಗೂ ಸಿಕ್ಕದಂತೆ ಕಾರು ಓಡಿಹೋಗಿತ್ತು! ಕಾರಿನ ಗುದ್ದಿನಿಂದ ಕೆಲಸಮಾಡಲು ನಿರಾಕರಿಸಿದ ಬ್ರೆಕ್ ಪೆಡಲಿಗೆ, ನಾನು ಹಾದಿಬದಿಯ ಗುಂಡುಕಲ್ಲಿನಿಂದ ಪ್ರತಿಗುದ್ದು ಕೊಟ್ಟು ತತ್ಕಾಲೀನವಾಗಿ ಸುಧಾರಿಸಿಕೊಂಡು ಮುಂದುವರಿದಿದ್ದೆ. ಅದೃಷ್ಟವಶಾತ್ ಮುಂದೆ `ಕೂಡುರಸ್ತೆ’ ಎಂದೇ ಖ್ಯಾತವಾದ ವಣಗೂರಿನಲ್ಲಿ ಸಿಕ್ಕ ಮೆಕಾನಿಕ್ ಬೈಕನ್ನು ಪೂರ್ಣ ಸರಿಪಡಿಸಿ ಕೊಟ್ಟದ್ದಕ್ಕೆ ಬ್ಯಾಕ್ರಳ್ಳಿ, ಮಂಜರಾಬಾದಿಗಾಗಿ ಶಿರಾಡಿ ದಾರಿಯನ್ನು ಸೇರಿಕೊಂಡೆ ಮತ್ತು ಅಷ್ಟೇ ನಿಶ್ಚಿಂತವಾಗಿ ಉಪ್ಪಿನಂಗಡಿ ಪುತ್ತೂರಾಗಿ ಮನೆಯನ್ನೂ ಸೇರಿದ್ದೆ.

ನಾನು ಎರಡನೆಯ ಬಾರಿ ಈ ದಾರಿಯಲ್ಲಿ ಸವಾರಿ ಬಂದಾಗ, ತಮ್ಮ ನನ್ನ ಬೆನ್ನಿಗಿದ್ದ. ಆಗ ಬಿಸಿಲೆ ಚೆನ್ನಾಗಿಯೇ ದಾಟಿ, ಪಾಟ್ಲದಲ್ಲಿ ಬಲಗವಲು ಹಿಡಿದು ಮಲ್ಲಳ್ಳಿ ಅಬ್ಬಿ ನೋಡಿದ್ದೆ, ಸೂರ್ಲಬ್ಬಿ ಮಡಿಕೇರಿ ಸುತ್ತಿದ್ದೆ. ಆ ಸಮಯದಲ್ಲಿ ಅಲ್ಲೇನೋ ಜೀಪುಗಳ ಕಚ್ಚಾಮಾರ್ಗದ ಓಟದ ಸ್ಪರ್ಧೆ (ಆಫ್ ರೋಡ್ ರ್‍ಯಾಲೀ) ನಡೆದಂತಿತ್ತು. ಬಹುಶಃ ಅದರ ಸಮಾರೋಪದಲ್ಲಿ, ವಿಜಯದ ಅಮಲಿಗೆ ನಿಜದ ಅಮಲನ್ನು ಹೆಚ್ಚಾಗಿಯೇ ಸೇರಿಸಿದ್ದವನೊಬ್ಬ ಮಲ್ಲಳ್ಳಿ – ಮಾದಾಪುರ ರಸ್ತೆಯಲ್ಲಿ ಇನ್ನೊಂದು ಜೀಪನ್ನು ಹಿಂದಿಕ್ಕುವ ಭರದಲ್ಲಿ ಚಕ್ರವನ್ನು ಚರಂಡಿಗಿಳಿಸಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬವನ್ನು ಉರುಳಿಸಿ, ತಾನೂ ನಿಜವಾದ off roader ಆಗಿದ್ದ: ಕಣಿವೆಯಲ್ಲಿ ಅಡ್ಡ ಮಲಗಿದ್ದ! ತಮ್ಮ rally-mateನ್ನು ಮೇಲೆತ್ತುವವರ ಗಡಿಬಿಡಿಯಲ್ಲಿ ರಸ್ತೆಯ ತುಂಬೆಲ್ಲ ಅಡ್ಡಾದಿಡ್ಡಿ ಜೀಪುಗಳು ನಿಂತು, ಸುಮಾರು ಅರ್ಧಗಂಟೆ ವಾಹನ ಸಂಚಾರ ಸ್ತಬ್ಧಗೊಂಡಿತ್ತು, ಹೆಚ್ಚೇನು – ಗಾಯಾಳು ಸಾಗಿಸಲು ಬಂದ ಆಂಬ್ಯುಲೆನ್ಸಿಗೂ ದಾರಿಯಿಲ್ಲದಾಗಿತ್ತು. ಮುಂದೆ ಸೂರ್ಲಬ್ಬಿಯ ಜಲಪಾತದ ಸದ್ದಿಗೂ ಈ ರ್‍ಯಾಲೀಪಟುಗಳ ಜೀಪು, ಜಿಪ್ಸಿಗಳಲ್ಲಿ ಅಳವಡಿಸಿದ್ದ ಸಬ್ ವೂಫರುಗಳು ಸ್ಪರ್ಧೆಯೊಡ್ಡಿದ್ದವು!

ನೆನಪಿನ ತುಣುಕುಗಳು ವರ್ತಮಾನದ ಅಖಂಡ ಚಿತ್ರಕ್ಕೆ ವಿಶಿಷ್ಟ ರಂಗಿನ ಬೊಟ್ಟುಗಳು. ದಾರಿಗೆ ಅಡ್ಡ ಬಿದ್ದ ಬಿದಿರನ್ನು ತೆರವುಗೊಳಿಸಿದ ಅವಶೇಷಗಳು, ಪಕ್ಕದ ಮರಗಳಿಂದ ಉದುರಿದ ಎಲೆಗಳು, ಆನೆಗಳ ಸಂಚಾರಕ್ಕೆ ಸಾಕ್ಷಿ ಹೇಳುವಂತಿದ್ದ ಒಣಗಿದ ಲದ್ದಿ ಗುಪ್ಪೆಗಳು, ಕಲಕಲಿಸುವ ಜಲಧಾರೆಗಳು, ತೊಳೆದಿಟ್ಟ ಹಸಿರ ಸಮೃದ್ಧಿ ನೋಡುತ್ತ ಸಾಗಿದ್ದೆವು. ಆಕ್ಸಿಲರೇಟರಿನ ಮೇಲಿಟ್ಟ ಕಾಲಿನ ಒತ್ತಡವನ್ನು ಹೆಚ್ಚುಕಡಿಮೆ ಮಾಡುತ್ತಾ ಸ್ಟೇರಿಂಗ್ ನೇವರಿಕೆಯಲ್ಲಿ ನಯವಾದ ಎಡ ಬಲ ತಿರುವುಗಳನ್ನು ಕಳೆಯುತ್ತಾ ದೃಶ್ಯ ವೈಭವವನ್ನು ಸವಿಯುತ್ತಾ ಸಾಗಿದ್ದನ್ನೆಲ್ಲ ಬಣ್ಣಿಸುವಲ್ಲಿ ನನ್ನ ಪದಜ್ಞಾನ ಸೋಲುತ್ತದೆ.

ಅಡ್ಡಹೊಳೆಯಲ್ಲೊಂದು ಸಣ್ಣ ಫೋಟೋ ವಿರಾಮ. ಕೆಲವೇ ಗಂಟೆಗಳ ಪಯಣಕ್ಕೇ `ವಿರಾಮ’ ಬಯಸಿದ ನಮ್ಮನ್ನಣಕಿಸುವಂತೆ ಸಹಸ್ರಮಾನಗಳುದ್ದಕ್ಕೆ ಮಣ್ಣ ಕೊಚ್ಚಿ, ಬಂಡೆಗಪ್ಪಳಿಸಿ, ಹುಲ್ಲ ಎಸಳೇನು ಭಾರೀ ಮರದವನ್ನೂ ಗಿರಗಿಟ್ಟಳೆಯಾಡಿಸುತ್ತಲೇ ಅವಿರತ ಅಬ್ಬರಯಾತ್ರೆ ನಡೆಸಿತ್ತು ಅಡ್ಡಹೊಳೆ. ಮುಂದೊಂದು S ಆಕಾರದ ತಿರುವಿನ ನಂತರ ಹಸಿರಮೊತ್ತ ತುಸು ತೆರೆದುಕೊಂಡ ಜಾಗದಲ್ಲೂ ನಿಂತಿದ್ದೆವು. ಮೋಡಗಳ ಮೇಲೆ ಸವಾರಿ ಹೊರಟ ಶಿಖರಗಳು, ಬಹು ಅಲೆಯ ಹಸಿರಿನ ಎರಕವಾದ ಕಣಿವೆಯನ್ನಷ್ಟು ಕಣ್ತುಂಬಿಕೊಂಡು ಮುಂದುವರಿದೆವು. ಘಟ್ಟದಾರಿಗೆ ನಮ್ಮ ಕೊನೆಯ ಕಟ್ಟೆಪೂಜೆ ಬ್ಯೂಟಿ ಸ್ಪಾಟಿನಲ್ಲಿ. ಇಲ್ಲಿ ಮಾತ್ರ ನಮಗೆ ನಾಲ್ಕೈದು ಮಂದಿ ಕಾಣಸಿಕ್ಕಿದ್ದರು. ಇಬ್ಬರು ನಾಲ್ಕು ರೆಕ್ಕೆಗಳ ಹಾರುಯಂತ್ರಕ್ಕೆ (ಡ್ರೋನ್) ಸಿಕ್ಕಿಸಿದ್ದ ಕ್ಯಾಮರದಲ್ಲಿ ವೀಡಿಯೋಗ್ರಹಣ ತಲ್ಲೀನರಾಗಿದ್ದರು. ಮೂಲ ಕಾಡುಬಂಡೆ, ಮತ್ತೆ ಎತ್ತಿ ನಿಲ್ಲಿಸಿದ ಕಾಂಕ್ರೀಟ್ ಅಟ್ಟಳಿಗೆಗಳನ್ನೂ ಮೀರಿ ನಮಗೆ ಅಗಮ್ಯವಾದ ಎತ್ತರ ಮತ್ತು ಸಾಮೀಪ್ಯಗಳ ವಿಡಿಯೋದ ಊಹಾ ಸಂತೋಷದಲ್ಲೇ ನಾವು ಮುಂದಿನ ದಾರಿಗಿಳಿಯುವವರಿದ್ದೆವು.

ಆಗ ಹಿಂದಿನಿಂದೊಂದು ‘ಎಕ್ಸ್‍ಕ್ಯೂಸ್ಮಿ’ ಕೇಳಿಸಿತು. ನಗರ ಸಂಸ್ಕೃತಿಗೆ ಸಹಜವಾಗಿ ನಾವೇನೋ ಅವರಿಗೆ ಮುಂದೆ ಹೋಗಲು ದಾರಿಬಿಟ್ಟೆವು. ಆದರೆ ಅವರೋ ‘can you please drop us somewhere ahead’ ಎಂದೇ ಬೇಡಿಕೆ ಸಲ್ಲಿಸಿದ್ದರು. ಆದದ್ದಿಷ್ಟೆ… ಬೆಂಗಳೂರಿನ ಆ ಜೋಡಿ, ರಜೆಯಲ್ಲಿ ಸಕಲೇಶಪುರ ವೀಕ್ಷಣೆಗೆ ಬಂದವರು ಅತಂತ್ರವಾಗಿಯೇ `ಬ್ಯೂಟೀ ಸ್ಪಾಟ್’ನ್ನೂ ತಲಪಿಬಿಟ್ಟಿದ್ದರು. ಮರಳಿ ಹೋಗಲು ಯಾವುದೇ ವ್ಯವಸ್ಥೆ ಕಾಣದೆ ಸಂಕಷ್ಟದಲ್ಲಿದ್ದರು. ಮುಂದೆ ಅವರಿಗೆ `ಅನ್ಯ ವ್ಯವಸ್ಥೆಗಳು’ ಒದಗುವವರೆಗೆ ನಮ್ಮೈವರ ಕಾರಿಗೆ ಏಳರ ಭಡ್ತಿ! ಬಿಸಿಲೆ ಗೇಟು, ಮಾಂಕನಹಳ್ಳಿಯ ಹಳ್ಳ, ಪಶ್ಚಿಮ ಘಟ್ಟದ ಅತ್ಯುನ್ನತ ಏಣನ್ನು ಈ ವಲಯದಲ್ಲಿ ಗುರುತಿಸುವ ಬ್ರಿಟಿಷ್ ಕಟ್ಟೆಗಳನ್ನು ಹಾಯುತ್ತಿದ್ದಂತೆ ದಪ್ಪನೆ ಮಳೆ ಹನಿಗಳು ಕಾರಿನ ಗಾಜುಗ ಮೇಲೆ ಟ್ಯಾಪ್ ಡ್ಯಾನ್ಸ್ ಶುರುಮಾಡಿದವು. ಅನಿವಾರ್ಯವಾಗಿ ನಾವು ಬಲ ಹೊರಳಬೇಕಿದ್ದ ಪಾಟ್ಲ ಕವಲನ್ನು ಅವಗಣಿಸಿ ವಣಗೂರಿನ ಕೂಡುರಸ್ತೆಯವರೆಗೂ ಹೋಗಬೇಕಾಯ್ತು. ಅಲ್ಲಿ ಆ ಜೋಡಿಗೆ ಸಕಲೇಶಪುರದ ಬಸ್ಸು ದೊರಕುವ ಧೈರ್ಯವಿತ್ತು. ಹಾಗೆ ಅವರನ್ನು ಇಳಿಸಿ, ಪಾಟ್ಲಕ್ಕೆ ಹಿಂದೆ ಬಂದು ಸೋಮವಾರಪೇಟೆ ದಾರಿ ಹಿಡಿದೆವು.

ಕುಂದಳ್ಳಿಯಲ್ಲಿ ಬಲ ತಿರುವು ತೆಗೆದು, ಮಲ್ಲಳ್ಳಿ ಅಬ್ಬಿಯ ದರ್ಶನಕ್ಕೆ ಹೋದೆವು. ಇಲ್ಲಿ ಕೊನೆಯ ಕೆಲವು ಕಿಲೋಮೀಟರ್ ಗಳ ಮಣ್ಣು ಮಾರ್ಗವೇನೋ ಕಾಂಕ್ರೀಟ್ ಕಂಡಿತ್ತು. ಆದರೆ ಇನ್ನೂ ಕ್ಯೂರಿಂಗ್ ಪೂರ್ತಿಯಾಗಿರದ ಕಾರಣ ಗೇಟು ಹಾಕಿತ್ತು, ವಾಹನಗಳಿಗೆ ಮುಕ್ತವಿರಲಿಲ್ಲ. ನಾವು ಕಾಲ್ನಡಿಗೆಯಲ್ಲಿ ಮಲ್ಲಳ್ಳಿ ತಲುಪಿದಾಗ ಸಂಜೆ ೭:೧೫. ವಿಲಂಬಿತ ಸೂರ್ಯಾಸ್ತದ ದಿನಗಳಾದ್ದರಿಂದ ನಮಗೆ ಜಲಪಾತದ ವಿಹಂಗಮ ನೋಟವಾದರೂ ಸಿಕ್ಕಿತ್ತು. ಜಲಪಾತದ ತಳಕ್ಕಿಳಿಯುವ ಮೆಟ್ಟಿಲ ಸಾಲೇನೋ ಆಸೆ ಹುಟ್ಟಿಸುತ್ತಿತ್ತು. ಆದರೆ ಕತ್ತಲಾವರಿಸುವ ಕಾರಣವನ್ನು ಮರೆಯದೆ, ಸಿಕ್ಕಷ್ಟೇ ಲಾಭವೆಂದುಕೊಳ್ಳುತ್ತ ವಾಪಾಸು ನಡೆದೆವು. ಕಾರು ಸೇರಿದಾಗ ಗಂಟೆ ಎಂಟಾಗಿತ್ತು.
“ರಾತ್ರಿಯಲ್ಲಿ ಇನ್ನೇನು ಸೂರ್ಲಬ್ಬಿ” ಎಂದು ಅದರ ಕವಲನ್ನು ನಿರ್ಲಕ್ಷಿಸಿ, ಸೋಮವಾರಪೇಟೆಯಾಗಿ ಮಡಿಕೇರಿ ಸೇರಿದೆವು. ಮೊದಲೇ ನಿಗದಿಪಡಿಸಿದ್ದರೂ ಮಡಿಕೇರಿಯ ಭಾವ-ತಂಗಿಯರ ಮನೆಯಲ್ಲಿನ ರಾತ್ರಿಯೂಟಕ್ಕೆ ಹೊಸ ರುಚಿ ಬಂದಿತ್ತು, ವಸತಿ ವ್ಯವಸ್ಥೆಗೆ ಹೆಚ್ಚಿನ ಬಿಸುಪು ತುಂಬಿತ್ತು.

ಮರುದಿನ ಬೆಳಗ್ಗೆ ನಮ್ಮ ಲಕ್ಷ್ಯ ಪುಷ್ಪಗಿರಿ ವನ್ಯಧಾಮದ ಇನ್ನೊಂದು ಮಗ್ಗುಲು, ಈಚಿನ ದಿನಗಳಲ್ಲಷ್ಟೇ ಜನಪ್ರಿಯವಾದ ಸ್ಥಳ – ಮಾಂದಲಪಟ್ಟಿ. ವಾಸ್ತವವಾಗಿ ಇದೊಂದು ಬೆಟ್ಟ ಸಾಲಿನ ತುದಿ. ಇಲ್ಲಿ ಬೆಳಗ್ಗೆ ಹೆಚ್ಚಾಗಿ ಮಂಜು ಮುಸುಕಿರುತ್ತದೆ. ಮುಸುಕು ಸರಿದಾಗ ಬೆಟ್ಟಗಳ ಹಾಗೂ ಪಕ್ಕದ ಕಣಿವೆಯ ನೋಟವೇನೋ ರಮ್ಯವಾಗೇ ಇರುತ್ತದೆ. ಆದರೆ ಇಲ್ಲಿ ಎದ್ದು ಕಾಣುವುದು ಬೆಟ್ಟದ ಮೇಲೆ ಬರೆ ಎಳೆದಂತಿರುವ ಕಚ್ಚಾ ವಾಹನ ದಾರಿ, ಪ್ರವಾಸಿಗಳನ್ನು ಕರೆತರುವ ಜೀಪುಗಳು, ವಿಹಾರಕ್ಕೆಂದು ಬರುವ ಜಂಗುಳಿ. ನಾವು ಡಾಮರು ರಸ್ತೆ ಬದಿಯಲ್ಲೇ ಕಾರು ನಿಲ್ಲಿಸಿ, ನಮ್ಮ ಕಾಲುಗಳನ್ನೇ ನೆಚ್ಚಿ ಸುಮಾರು ಮೂರು ಕಿಲೋಮೀಟರ್ ಸುತ್ತಾಡಿ, ವೀಕ್ಷಣಾ ಗೋಪುರವನ್ನು ಹತ್ತಿಳಿದು, ಸುತ್ತಮುತ್ತಲಿನ ದೃಶ್ಯಗಳನ್ನು ಕಣ್ತುಂಬಿ ವಾಪಾಸಾದೆವು.

ಕೆಲವು ವರ್ಷಗಳ ಹಿಂದೆ ಈ ಮಾಂದಲಪಟ್ಟಿ ಕೇವಲ ಸುತ್ತಲಿನ ಜನರು, ಕೆಲ offroading enthusiasts (ಮಾರ್ಗವಲ್ಲದ ಕಚ್ಚಾ ಜಾಡುಗಳಲ್ಲಿ ವಾಹನ ಚಾಲನಾಸಕ್ತರು) ಬಿಟ್ಟು ಹೊರಗಿನ ಜನರಿಗೆ ಅಷ್ಟೊಂದು ಪರಿಚಿತವಾಗಿರಲಿಲ್ಲ. ಜನರ ಜೀವನಕ್ರಮ ಸುಧಾರಿಸಿದಂತೆ, ಕೊಡಗಿಗೆ ಬರುವ ಪ್ರವಾಸಿಗರೂ ಹೆಚ್ಚಾದರು. ಅದರಂತೆ ಹೋಮ್ ಸ್ಟೇ, ರೆಸಾರ್ಟ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ಜನರಿಗೂ ರಾಜಾಸೀಟು, ಅಬ್ಬೀಫಾಲ್ಸು, ನಿಸರ್ಗಧಾಮ, ಗೋಲ್ಡನ್ ಟೆಂಪಲ್ಲು ನೋಡಿ ಸಾಕಾಗಿತ್ತು. ಎಲ್ಲ ಕಡೆಯೂ ಪ್ರವಾಸಿಗರು ತುಂಬಿ ತುಳುಕುತ್ತಿದ್ದರು. ಹೊಸ ತಾಣವೊಂದರ ಉಗಮಕ್ಕೆ ವೇದಿಕೆ ಸಿದ್ಧವಾಗಿತ್ತು.

ಇದೇ ಸಮಯದಲ್ಲಿ ಕನ್ನಡದ ನ್ಯೂಸು ಚಾನೆಲ್ಗಳಲ್ಲೂ ಮಾಂದಲಪಟ್ಟಿಯನ್ನು ತೋರಿಸಿದರು‌. ಆಗ ಬಂದ ಕೆಲ ಚಲನಚಿತ್ರಗಳೂ ಜಾಗದ ಮಹಾತ್ಮೆಯನ್ನು ಹೆಚ್ಚಿಸಿದವು. ಹೀಗೆ ಮಾಂದಲಪಟ್ಟಿ ಮುಗಿಲುಪೇಟೆಯಾಗಿತ್ತು. ಇನ್ನೇನು ಬೇಕು? ತಗೊಳ್ಳಿ.. ಜನರನ್ನು ಹೇರಿಕೊಂಡು ಜೀಪುಗಳು ಬಂದವು. ಮೊದಲು ಮುಕ್ತವಾಗಿದ್ದ ಜಾಗಕ್ಕೆ ಪ್ರವೇಶ, ಪಾರ್ಕಿಂಗು ಚೀಟಿ ಹರಿದುಕೊಡಲೊಬ್ಬ ಬಂದ, ಹರಕು ಅಂಗಡಿಗಳು, ಚಿಪ್ಸು ಲಕೋಟೆಗಳು, ಬಾಟಲಿ ನೀರು/ಪಾನೀಯ, ಹರಿದ ಚಪ್ಪಲಿಗಳು, ಬಿಯರ್ ಟಿನ್ನುಗಳು, ಒಡೆದ ಬಾಟ್ಲಿಗಳು ಇತ್ಯಾದಿ ಒಂದೇ ಎರಡೇ? ಇನ್ನು ಕೆಲದಿನಗಳಲ್ಲಿ ಅರಣ್ಯ ಇಲಾಖೆಯ ಗೆಸ್ಟ್ ಹೌಸ್ ಬಂದರೂ ಆಶ್ಚರ್ಯವಿಲ್ಲ.

ವಾಪಾಸು ಮಡಿಕೇರಿಗೆ ಬರುತ್ತಾ ಬುತ್ತಿಯಲ್ಲಿ ಕೊಂಡುಹೋದ ಚಿತ್ರಾನ್ನವನ್ನು ಮುಗಿಸಿ, ನಮ್ಮ ಮುಂದಿನ ಹಾಗೂ ಕೊನೆಯ ತಾಣವಾಗಿ ಕೋಟೆಬೆಟ್ಟದ ಬುಡವನ್ನು ಆರಿಸಿಕೊಂಡೆವು. ಮಡಿಕೇರಿಯಿಂದ ಸೋಮವಾರಪೇಟೆ ದಾರಿಯಲ್ಲಿ ಸಿಗುವ ಹಟ್ಟಿಹೊಳೆಯ ಬಲಮಗ್ಗುಲಿನಲ್ಲಿರುವ ಎತ್ತರವಾದ ಬೆಟ್ಟವೇ ಕೋಟೆಬೆಟ್ಟ. ಸಮಯದ ಅಭಾವದ ಕಾರಣ ನಾವು ಬೆಟ್ಟ ಏರುವ ಬದಲು ಅದರ ಇನ್ನೊಂದು ಮಗ್ಗುಲಿನ ಬುಡಕ್ಕೆ ಹೋಗಿಬರಲು ನಿರ್ಧರಿಸಿದ್ದೆವು. ಸೋಮವಾರಪೇಟೆ ದಾರಿಯಲ್ಲಿ, ಮಾದಾಪುರದಿಂದ ಎಡಕ್ಕೆ ತಿರುಗಿ ಮುಂದೆ ಗರ್ವಾಲೆಯಲ್ಲಿ ಪುನ: ಎಡಕ್ಕೆ ತಿರುಗಿ ಬೆಟ್ಟದ ಬುಡ ತಲುಪಲು ವಾಹನಯೋಗ್ಯ ರಸ್ತೆ ಇದೆ.

ಬೆಳಗ್ಗೆ ಹನ್ನೊಂದೂವರೆಗೆ ಮಡಿಕೇರಿಯಲ್ಲಿ ಹೊಟ್ಟೆ ಗಟ್ಟಿಮಾಡಿಕೊಂಡು ಕೋಟೆಬೆಟ್ಟಕ್ಕೆ ಗಾಡಿಬಿಟ್ಟು, ಗಂಟೆಯೊಳಗೆ ಅಲ್ಲಿದ್ದೆವು. ದಾರಿಯಲ್ಲಿ ದೂರದಿಂದಲೇ ಬೃಹತ್ತಾದ ಕಲ್ಲನ್ನೊಳಗೊಂಡ ಬೆಟ್ಟದ ನೋಟವೇ ಕಣ್ಮನ ತಣಿಸಿತ್ತು. ಅಲ್ಲಲ್ಲಿ ನಿಲ್ಲಿಸಿ ಫೊಟೋ ಕ್ಲಿಕ್ಕಿಸಿ ಮುಂದುವರೆದೆವು. ನಡು ಮಧ್ಯಾಹ್ನವಾದರೂ ವಾತಾವರಣ ತಣ್ಣಗಿತ್ತು. ಬೆಟ್ಟದ ಬುಡದಲ್ಲಿ ನಾಲ್ಕು ಕಲ್ಲುಬೆಂಚು ಹಾಕಿತ್ತು. ಆದರೆ ಅಲ್ಲಾಗಲೇ ಯುವಕಯುವತಿಯರ ಗುಂಪೊಂದು ಪಾನಗೋಷ್ಠಿ ನಡೆಸಿತ್ತು. ನಮಗೆ ರಸಭಂಗವಾಗಿ ಆ ಜಾಗದಲ್ಲಿ ವೃಥಾ ಕಾಲಹರಣ ಮಾಡದೆ ಸ್ವಲ್ಪ ಮೇಲೆಯೇ ಇದ್ದ ಪುಟ್ಟ ಗುಡಿಯ ವಠಾರದಲ್ಲಿ ಕೂತು ವಿಹಂಗಮ ದೃಶ್ಯವನ್ನು ನೋಡಿ ಹಿಂತಿರುಗಿದೆವು.

ಮಡಿಕೇರಿಯಲ್ಲಿ ಮಧ್ಯಾಹ್ನದೂಟ ಮುಗಿಸಿದೆವು. ಗುಂಪಿನಲ್ಲಿದ್ದ ಮಕ್ಕಳನ್ನೆಲ್ಲ ಸಂಜೆಯೊಳಗೆ ಅವರವರ ಮನೆ ಮುಟ್ಟಿಸುವ ಹೊಣೆ ಇದ್ದುದರಿಂದ ಮತ್ತೇನೂ ವೀಕ್ಷಣೆಗೆಳಸದೆ ಕೊಡಗಿಗೆ ತಾತ್ಕಾಲಿಕ ವಿದಾಯ ಹೇಳಿದೆವು. ಜೋಡುಪಾಲ ಸಂಪಾಜೆ ಘಾಟಿಯಾಗಿಳಿದು, ಸುಳ್ಯ, ಜಾಲ್ಸೂರುಗಳಲ್ಲಿ ಹಾಯ್ದು, ಸಂಜೆ – ಸಕಾಲಕ್ಕೆ, ಮನೆ ಸೇರಿದೆವು.