ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ
ಒಡಿಶಾದ ಒಡಲೊಳಗೆ ಅಧ್ಯಾಯ (೫)

ಕೋನಾರ್ಕದಿಂದ ಕುರುಮಾ ಕಡೆಗೆ ತೆರಳಬೇಕೆಂಬ ನಮ್ಮ ಅಭಿಪ್ರಾಯಕ್ಕೆ ಸಂತೋಷನ ಸಂತೋಷದ ಒಪ್ಪಿಗೆ ಇರಲಿಲ್ಲ. ಲೆಕ್ಕಾಚಾರಕ್ಕಿಂತ ಹೆಚ್ಚಿನ ದೂರಕ್ರಮಿಸಿದರೆ ಅದರ ಬಾಬ್ತಿನ ಹಣವನ್ನು ನಾವು ಕೊಡುತ್ತೇವೋ ಇಲ್ಲವೋ ಎಂಬ ಅನುಮಾನ ಅವನಿಗೆ ಇತ್ತೆನಿಸುತ್ತದೆ. ಕುರುಮಾ ಕೋನಾರ್ಕದಿಂದ ಸುಮಾರು ೮ ಕಿ.ಮೀ ದೂರದಲ್ಲಿರುವ ಹಳ್ಳಿ. ಪ್ರಸಿದ್ಧವಾದ ಜಾಗವೇನಲ್ಲ. ಒಂದೆರಡು ಕಿ.ಮೀ ದೂರ ಹೋದ ಮೇಲೆ ಕವಲು ದಾರಿ ಸಿಕ್ಕಿದಾಗ ನಾವು ಹೋಗಬೇಕಾದ ದಾರಿ ಯಾವುದೆಂದು ಸಂತೋಷನಿಗೆ ಗೊಂದಲವಾಯಿತು.

ದಾರಿಹೋಕರನ್ನು ಕೇಳುತ್ತಾ ಸ್ವಲ್ಪ ದೂರ ಸಾಗಿದ. ಮತ್ತೆ ಕವಲು ರಸ್ತೆ ಸಿಕ್ಕಿತು. ಈ ಬಾರಿ ಅವನ ಪಕ್ಕದಲ್ಲೇ ಕೂತು ಪ್ರಯಾಣಿಸುತ್ತಿದ್ದ ಮನೋಹರ್ ತಮ್ಮ ಜಿ.ಪಿ.ಎಸ್ ತಿಳಿಸಿದ ರಸ್ತೆಯಲ್ಲಿ ಸಾಗಲು ಹೇಳಿದರು. ಅದು ಸರಿಯಾದುದಲ್ಲವೆಂಬ ಸಂಶಯ ಸಂತೋಷನಿಗೆ. ಮತ್ತೆ ಒಂದಿಬ್ಬರನ್ನು ಕರೆದು ವಿಚಾರಿಸಹತ್ತಿದ. ಇನ್ನೇನು ಬೇರೆ ರಸ್ತೆಯ ಜಾಡು ಹಿಡಿಯುವವನಿದ್ದ. ಅಷ್ಟರಲ್ಲಿ ಮನೋಹರ್ “ಓಯ್, ಬೇಡ ಮಾರಾಯ, ಈ ಕಡೆಯೇ ಹೋಗು, ಜಿ.ಪಿ.ಎಸ್ನಲ್ಲಿ ಕೂಡಾ ಬರ್ತಾ ಇದೆ, ಈ ಕಡೆ, ಈ ಕಡೆ” ಎಂದರು ಖಡಕ್ಕಾಗಿ. ಬಳಿಕ ನಮ್ಮ ಕಡೆ ತಿರುಗಿ “ಇವನಿಗೆ ನಮ್ಮನ್ನು ಕರ್ಕೊಂಡು ಹೋಗಲು ಮನಸ್ಸಿಲ್ಲ, ಅದಕ್ಕೇ ಎಲ್ಲೆಲ್ಲೋ ಹೊತ್ತು ಕಳೆಯುವ ನಾಟಕ ಮಾಡ್ತಾ ಇದ್ದಾನೆ” ಎಂದರು. ಇದಕ್ಕೆ ನಾವೆಲ್ಲರೂ “ಹೌದೌದು” ಎಂದು ಪ್ರತಿಕ್ರಯಿಸಿ “ಗೊಳ್” ಎಂದು ನಕ್ಕೆವು, ಮುಂದಿನ ಪರಿಣಾಮದ ಅರಿವಿಲ್ಲದೇ. ಆ ಕ್ಷಣವೇ ಗಾಡಿ ತಿರುಗಿಸಿದ ಸಂತೋಷ ಮನೋಹರರ ಆಜ್ಞೆಯಂತೆ, ಅವರ ಜಿ.ಪಿ.ಎಸ್ ಹೇಳಿದಂತೆ ಗಾಡಿ ಓಡಿಸಲು ಶುರುಮಾಡಿದ.

ಹಳ್ಳಿ ರಸ್ತೆ, ಅಲ್ಲಲ್ಲಿ ನೆಟ್ವರ್ಕ್ ಸಮಸ್ಯೆಯೂ ಇತ್ತು. ಹೀಗೇ ಅರ್ಧ- ಮುಕ್ಕಾಲು ಗಂಟೆ ಹೋದ ಬಳಿಕ ಒಂದು ಇಕ್ಕಟ್ಟಾದ ಮರಳು ಹೊದ್ದ ಮಣ್ಣಿನ ರಸ್ತೆಯ ಇದಿರು ಗಾಡಿ ನಿಂತಿತು. ನಾವೆಲ್ಲಾ ಕತ್ತೆತ್ತಿ ಇಲ್ಲಿ ಉತ್ಖನನದ ಜಾಗ ಎಲ್ಲಿದೆ? ಶಬ್ದ ಕೇಳಿಸುತ್ತಿದೆಯೇ? ದೊಡ್ಡ ಬಾವಿಯಾ ಕಂದಕವಾ ಏನಾದರೂ ಕಾಣಿಸುತ್ತಿದೆಯೇ? ತುಂಬಾ ಜನರು ಇರಬೇಕಲ್ಲಾ ಎಂದೆಲ್ಲಾ ಸುತ್ತಲೂ ನೋಡುತ್ತಿದ್ದರೆ, ಸಂತೋಷ, ಒಂದು ಕಿ.ಮೀ ದೂರದಲ್ಲಿದ್ದ ಆಧುನಿಕ ಕಟ್ಟಡವನ್ನು ತೋರಿಸಿ, “ಓ ಅಲ್ಲಿ, ನಿಮ್ಮ ಹುಡುಕಾಟದ ಜಾಗ, ಗಾಡಿ ಈ ಮರಳಿನ ರಸ್ತೆಯಲ್ಲಿ ಮುಂದೆ ಹೋಗುವುದಿಲ್ಲ, ನಾನು ಹೇಗಾದರೂ ರಿವರ್ಸ್ ಮಾಡಿ ನಿಲ್ಲಿಸಿರುತ್ತೇನೆ. ನಿಮಗೆ ಹೋಗಬೇಕಿದ್ದರೆ ನಡೆದೇ ಹೋಗಿ ಬನ್ನಿ” ಎಂದ; ಧ್ವನಿಗಡುಸಾಗಿತ್ತು! ಸಂಜೆಯ ಹೊತ್ತು, ತಂಪು ವಾತಾವರಣ, ಹಳ್ಳಿ ರಸ್ತೆಯಲ್ಲಿ ನಡೆಯಲು ನಾವ್ಯಾರೂ ಹೆದರಲಿಲ್ಲ. ಇನ್ನೇನು ಗಾಡಿಯಿಂದ ಇಳಿಯಬೇಕೆನ್ನುವಷ್ಟರಲ್ಲಿ “ಎಂತೆಂತಹ ಸುಂದರ ದೇವಾಲಯಗಳಿವೆ ಈ ನಾಡಿನಲ್ಲಿ, ನಾನು ತೋರಿಸುತ್ತಿರಲಿಲ್ಲವಾ ನಿಮಗೆ. ಅದೂ ಈ ಕೆಟ್ಟ, ದೂರದ ರಸ್ತೆಯಲ್ಲಿ ಎಷ್ಟು ಸುತ್ತಾಡಿಸಿಕೊಂಡು ಕರ್ಕೊಂಡು ಬಂದಿರಿ, ನಾನು ಆವಾಗ ಹೇಳಿದ ರಸ್ತೆಯಲ್ಲಿ ಸುಲಭವಾಗಿ, ಬೇಗನೇ ಬರುತ್ತಿದ್ದೆವು, ನೀವು ನನ್ನನ್ನೇ ಸಂಶಯಿಸಿದಿರಿ.” ಮುಂದುವರಿಸಿ, ” ಸಾರ್ ನೀವು ಯಾರ ಮಾತನ್ನೂ ಕೇಳುವುದಿಲ್ಲ, ನೀವು ಹೇಳಿದ್ದೇ ಆಗಬೇಕು ನಿಮಗೆ” ಎಂದ, ಮನೋಹರ್ ಕಡೆಗೆ ತಿರುಗಿ ಖಾರವಾಗಿ. ‘ಎಲಾ ಇವನ! ನನ್ನ ಡೈಲಾಗ್ ಯಾವಾಗ ಕಲಿತ?’ ಎಂದು ನಾನೂ ಆಶ್ಚರ್ಯದಿಂದ ಅವನ ಕಡೆ ನೋಡಿದೆ. ಸ್ವಾಭಿಮಾನಿ ಕಳಿಂಗದ ಕಾಳಿಂಗ ಭುಸಗುಟ್ಟತೊಡಗಿತ್ತು! “ನೋಡುವಾಗ ಬರೀ ಪಾಪದವನ ಹಾಗೆ ಕಾಣ್ತಾನೆ, ಕಂಡ ಹಾಗೆ ಅಲ್ಲ ಹುಡುಗ, ಜೋರಿದ್ದಾನೆ” ಎನ್ನುತ್ತಾ ಬೇಗಬೇಗ ಹೆಜ್ಜೆ ಹಾಕಿದೆವು.

ಕೋನಾರ್ಕದ ಸುತ್ತುಮುತ್ತಲಿನ ಪ್ರೇಕ್ಷಣೀಯ ಜಾಗಗಳನ್ನು ಜಾಲತಾಣಗಳಲ್ಲಿ ಹುಡುಕುತ್ತಾ ಹೋದಾಗ ಸಿಕ್ಕಿದ ಜಾಗ ಕುರುಮಾ. ಇದು ಇತ್ತೀಚೆಗಿನ ಉತ್ಖನನ ಜಾಗವೆಂದೂ ಬಹಳ ಪುರಾತನವಾದ ಬೌದ್ಧ ಸಂಬಂಧೀ ಶಿಲ್ಪಗಳು, ಕಟ್ಟಡಗಳಿಗೆ ಇದು ಸಾಕ್ಷಿಯಾಗಿದೆಯೆಂದೂ ತಿಳಿದುಬಂದದ್ದರಿಂದ ನಮ್ಮ ಪಟ್ಟಿಗೆ ಸೇರಿಸಿಕೊಂಡಿದ್ದೆವು.

ಕುರುಮಾ ಹಳ್ಳಿ ಬಹಳ ಸುಂದರವಾಗಿದೆ. ಹಸಿರು, ಹಳದಿ ಬಣ್ಣದ ಗದ್ದೆಗಳಿಂದ, ಕಬ್ಬು, ಭತ್ತ, ಧಾನ್ಯ, ತರಕಾರಿ ಬೆಳೆಗಳಿಂದ, ಕೆರೆಗಳಿಂದ, ೧೦-೧೨ ಹಳ್ಳಿಮನೆಗಳಿಂದ ಆವೃತವಾಗಿದೆ. ಹಲವು ಬಿಳಿ ಬಿಳಿ ದನಗಳು, ಕೆಲವು ಕೋಳಿಗಳು, ಅಲ್ಲೋ ಇಲ್ಲೋ ಹಂದಿಗಳು ಹಳ್ಳಿಗರೊಂದಿಗೆ ಖುಶಿಯಲ್ಲಿದ್ದವು. ಇದರ ಸೊಬಗನ್ನೆಲ್ಲಾ ಹೀರುತ್ತಾ ಪಶ್ಚಿಮದೆಡೆಗೆ ಓಡುವ ಸೂರ್ಯನನ್ನು ಕಂಡು, ನಾವೂ ಓಡುತ್ತಲೇ ಸಂತೋಷ ತೋರಿಸಿದ್ದ ಕಟ್ಟಡ ತಲಪಿದೆವು. ಅದೊಂದು ಶಾಲಾಮಕ್ಕಳ ವಸತಿಗೃಹವಾಗಿತ್ತು. ಒಂದು ವ್ಯಾನ್ ಜನ ಓಡೋಡಿ ಬರುತ್ತಿರುವುದನ್ನು ಕಂಡು ಮಕ್ಕಳೂ ಹೊರಗೆ ಓಡೋಡಿ ಬಂದರು. ನಾವು ಅಲ್ಲಿಗೆ ತಲಪುತ್ತಲೇ “ಓ ಅಲ್ಲಿದೆ, ಓ ಅಲ್ಲಿದೆ” ಎಂದು ಬಲಗಡೆಗೆ ಕೈ ತೋರಿದರು. ಅಲ್ಲೊಂದು ಪುಟ್ಟ ಪುರಾತನ ದೇವಾಲಯ. ಒಬ್ಬ ಸನ್ಯಾಸಿ ಅರ್ಚಕ ಹೊರಗಡೆ ಕುಳಿತಿದ್ದರು. “ಉತ್ಖನನ ಜಾಗ ಎಲ್ಲಿದೆ?” ಎಂದು ಕೇಳಿದಾಗ ಒಂದು ಮನೆಯ ಪಂಚಾಂಗದಂತೆ ಕಂಡು ಬರುವ ರಚನೆಯನ್ನು ತೋರಿಸಿದರು.

ನಾವು ಆ ಪಂಚಾಂಗ ಹತ್ತಿ ನಡೆದಾಡಿದೆವು. ಅಷ್ಟರಲ್ಲಿ “ನಾನು ಸೇನಾಪತಿ” ಎನ್ನುತ್ತಾ ಆ ಹಳ್ಳಿಯ ರೈತರೊಬ್ಬರು ಬಂದು ನಮಗೆ ಎಲ್ಲಾ ವಿವರಿಸಿದರು. ಹಲವು ವರ್ಷಗಳ ಹಿಂದೆ ಇವರು ಸಣ್ಣ ಹುಡುಗನಾಗಿದ್ದಾಗ ಈ ಜಾಗದಲ್ಲಿ ತುಂಬಾ ಮರಗಳಿದ್ದವಂತೆ. ಇಲ್ಲೇ ಇದ್ದ ಆಲದ ಮರದ ಅಡಿಯಲ್ಲಿ ಇವರು ಆಟವಾಡುತ್ತಾ ಬೆಳೆದವರಂತೆ. ಆ ಹಳ್ಳಿಗೆ ಬಂದ ಶಾಲಾಮಾಸ್ತರರೊಬ್ಬರಿಗೆ, ಕೆಲ ಹೆಂಗಸರು ಆಲದ ಮರದ ಬುಡದಲ್ಲಿದ್ದ ಮಣ್ಣನ್ನು ಆಭರಣ ತಯಾರಿಗೆಂದು ಅಗೆಯುತ್ತಿದ್ದಾಗ ಏನೋ ವಸ್ತು ಕಂಡು ಸಂಶಯ ಬಂತಂತೆ. ಇನ್ನಷ್ಟು ಅಗೆದಾಗ ಅದು ಪುರಾತನ ಶಿಲ್ಪವೆಂಬ ಅನುಮಾನ ಉಂಟಾಗಿ ಪ್ರಾಚ್ಯ ಮತ್ತು ಪುರಾತತ್ವ ಇಲಾಖೆಗೆ ತಿಳಿಸಿದರಂತೆ. ಮುಂದೆ ಸುಮಾರು ವರ್ಷಗಳ ಕಾಲ ಅಗೆತ ನಡೆದು, ಅಂದಾಜು ೩೦ ವರ್ಷಗಳ ಹಿಂದೆ ನಿಂತಿತಂತೆ. ಇಲ್ಲೊಂದು ಬೌದ್ಧವಿಹಾರವಿತ್ತೆಂದೂ, ಇಲ್ಲಿ ದೊರಕಿದ ಮೂರ್ತಿಗಳ ಪೂಜೆ ಹಿಂದೆ ಅಲ್ಲಿ ನಡೆಯುತ್ತಿದ್ದಿರಬೇಕೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರಂತೆ. ಆ ಮೂರ್ತಿಗಳೇ ಈಗ ಈ ಪುಟ್ಟ ದೇಗುಲದಲ್ಲಿರುವುದು ಎಂದು ತೋರಿಸಿದರು.

“ಹಾಗಾದರೆ ನಾವೀಗ ನಿಂತಿರುವುದು ಎಷ್ಟು ಹಳೆಯ ಕಟ್ಟಡದ ಮೇಲೆ?” “ಸುಮಾರು ಒಂದೂಕಾಲು ಸಾವಿರವರ್ಷಗಳಷ್ಟು ಹಳೆಯದು” ಎಂದರು, ನಾವು ದಂಗಾದೆವು! ಆ ಕಾಲದ ಮಣ್ಣಿನ ಇಟ್ಟಿಗೆಗಳು, ಎಷ್ಟು ಅಚ್ಚುಕಟ್ಟಾಗಿ ಎರಕವಾಗಿದೆ, ಕಟ್ಟಲ್ಪಟ್ಟಿವೆ! ಈ ಜಾಗದ ಹಲವು ಪ್ರಕೃತಿ ವಿಕೋಪಗಳಿಗೂ ಹೇಗೆ ಉಳಿದುಕೊಂಡಿದೆ? ಎಂದು ನಿಬ್ಬೆರಗಾದೆವು!

“ಹೌದು ಈ ಜಾಗ ಹಲವು ಚಂಡಮಾರುತಗಳಿಗೆ ಒಳಗಾಗಿರುವುದು, ಈಗ ಚಂಡಮಾರುತದ ಸಮಯದಲ್ಲಿ ನೋಡಿ, ಆ ಹಾಸ್ಟೆಲಿನ ಕಟ್ಟಡವೇ ಪುನರ್ವಸತಿ ಕೇಂದ್ರವಾಗುವುದು” ಎಂದು ತೋರಿಸಿದರು. ಇತ್ತೀಚೆಗೆ ೨೦೧೩ರಲ್ಲಿ ಭೀಕರ ಚಂಡಮಾರುತದ ಆಕ್ರಮಣವಾದರೂ ಸಾವುನೋವುಗಳ ಪ್ರಮಾಣ ಬಹಳ ಕಡಿಮೆ. ಅಷ್ಟೇ ಅಲ್ಲದೆ ಬಿಜುದಾದಾರ ಮಗ ಮುಖ್ಯಮಂತ್ರಿ ನವೀನ್ ಪಟ್ನಾಯಕರು ವಿಕೋಪ ಪರಿಸ್ಥಿತಿ ನಿರ್ವಹಿಸಿದ ಬಗ್ಗೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ಬಂದಿತ್ತು” ಎಂದು ನೆನಪಿಸಿದರು.

ಇಷ್ಟು ದೂರದ ಹಳ್ಳಿ ಮೂಲೆಯಲ್ಲಿದ್ದರೂ ಸೇನಾಪತಿಯವರು ಕೇರಳ ತಮಿಳುನಾಡಿಗೆ ಪ್ರವಾಸ ಬಂದಿದ್ದರಂತೆ. ಬೆಂಗಳೂರೂ ನೋಡಿದ್ದೇನೆಂದರು. “ಈ ಹಳ್ಳಿಗೆ ಬೇಕಾದ ವ್ಯವಸ್ಥೆಗಳೆಲ್ಲಾ ಇವೆಯೇ?” ಎಂದು ಕೇಳಿದೆ. ರಸ್ತೆ ನೀವೇ ನೋಡಿದ್ದೀರಲ್ಲಾ, ಪರವಾಗಿಲ್ಲ. ನೀವು ಬಂದ ಕಾಲುದಾರಿಗೆ ನಾವು ಹಳ್ಳಿಗರೇ ಸೇರಿ ಕಲ್ಲುಹಾಸಿನ ವ್ಯವಸ್ಥೆ ಮಾಡಿದ್ದೇವೆ. ಆದರೆ ವಿದೇಶಿ ಪ್ರವಾಸಿಗರು ಅದರಲ್ಲೂ ಬೌದ್ಧಾನುಯಾಯಿಗಳಾದ ಜಪಾನೀಯರು ಇಲ್ಲಿಗೆ ಬರಲು ಆಸೆಪಡುತ್ತಾರೆ. ಆವಾಗ ಸೌಕರ್ಯ ಸಾಲದೆಂದು ಅನಿಸುತ್ತದೆ. ಉಳಿದಂತೆ ನಾವು ಹಳ್ಳಿಗರು ಒಟ್ಟಾಗಿ ಕೃಷಿ ಮಾಡುತ್ತೇವೆ, ಬೆಳೆಯುತ್ತೇವೆ. ನಮ್ಮ ಗದ್ದೆಗಳು ಅಲ್ಲಲ್ಲಿ ತುಂಡುತುಂಡಾಗಿವೆ, ಒಟ್ಟಾಗಿಲ್ಲ. ಹಾಗಾಗಿ ಕೃಷಿಕಾರ್ಯ ಉಳಿದಿದೆ. ವಿದ್ಯುತ್ ಇದೆ, ಶಾಲೆಇದೆ, ಆಸ್ಪತ್ರೆಇದೆ. ಹೈಸ್ಕೂಲ್ ಹಂತದಲ್ಲಿ ಸೈಕಲ್ಲು, ಕಾಲೇಜು ಹಂತದಲ್ಲಿ ಲ್ಯಾಪ್ ಟಾಪ್‍ಗಳ ವಿತರಣೆಯಾಗುತ್ತದೆ” ಎಂದರು. “ಲ್ಯಾಪ್ಟಾಪಾ!?” ಎಂದೆ ನಾನು. “ಹೌದು” ಎಂದರು ಸೇನಾಪತಿ.

“ಈ ಜಾಗವನ್ನು ಪ್ರಾಚ್ಯ ಮತ್ತು ಪುರಾತತ್ವ ಇಲಾಖೆಯವರು ಇನ್ನಷ್ಟು ಅಭಿವೃದ್ಧಿಪಡಿಸಬಹುದಿತ್ತಲ್ಲವೇ?” ಎಂದೆ. “ದುಡ್ಡುಬೇಕಲ್ಲಾ, ಪ್ರಾಯಃ ಸಾಧ್ಯವಾದಷ್ಟು ಮಾಡುತ್ತಿದ್ದಾರೆ ಎಂದೆನಿಸುತ್ತದೆ. ನಮ್ಮ ನಾಡಲ್ಲಿ ಪ್ರಾಚ್ಯ ವಸ್ತುಗಳಿಗೆ ಬರವಿಲ್ಲ. ಎಲ್ಲಿ ಹೋದರೂ, ಅಗೆದರೂ ಸಿಗುತ್ತವೆ. ಎಷ್ಟೆಂದು ಮಾಡಿಯಾರು? ನೋಡಿ, ಆ ಪುಷ್ಕರಣಿ, ಅದೇ ಹೇಳುತ್ತದೆ, ಇಲ್ಲಿ ನೀರಿನ ಆಸರೆ ಯಥೇಚ್ಚವಿರುವಲ್ಲಿ ಬೌದ್ಧರು ಬೀಡುಬಿಟ್ಟಿದ್ದರು ಎಂದು. ಒಂದು ಕಾಲದಲ್ಲಿ ಇಲ್ಲಿನ ಹೆಚ್ಚಿನವರೂ ಅದೇ ಮತಾನುಯಾಯಿಗಳಾಗಿದ್ದರು, ನನ್ನ ವಂಶಜರೂ ಸೇರಿದಂತೆ. ಆದರೆ ಮುಂದೆ ಯಾವಾಗಲೋ ನಾವು ಹಿಂದೂ ಮತಕ್ಕೇ ವಾಪಾಸು ಬಂದಿದ್ದೇವೆ” ಎಂದರು. ಇಷ್ಟೆಲ್ಲಾ ವಿವರಣೆ ಕೊಟ್ಟ ಸೇನಾಪತಿಗಳಿಗೆ ವಂದನೆ ಸಲ್ಲಿಸಿ ವಾಪಾಸು ಹೊರಡಲನುವಾದೆವು.” ದೇವಸ್ಥಾನಕ್ಕೆ ಭೇಟಿಕೊಟ್ಟು ಹೋಗಿ” ಎಂದರು.

ದೇವಸ್ಥಾನದ ಒಳಗೆ ಸುಂದರ ನಗುವಿನ ಧ್ಯಾನದಲ್ಲಿದ್ದ ಬುದ್ಧ. ಅವಲೋಕಿತೇಶ್ವರರನ್ನೂ ಅಲ್ಲೇ ಹೊರಗೆ ಮರಿಗಳಿಗೆ ಹಾಲೂಡುತ್ತಾ ಮಮತೆಯ ಧ್ಯಾನದಲ್ಲಿದ್ದ ತಾಯಿ ನಾಯಿಯನ್ನೂ ಕಂಡೆವು. ಸುತ್ತಲಿನ ಪ್ರಶಾಂತತೆ, ಸೌಂದರ್ಯದಲ್ಲಿ ಸಮಯಹೋದದ್ದೇ ತಿಳಿಯಲಿಲ್ಲ. ಕತ್ತಲಾವರಿಸತೊಡಗಿತ್ತು. ಮತ್ತೆ ಒಂದು ಕಿ.ಮೀ ನಡೆದು ಗಾಡಿಯೇರಬೇಕಲ್ಲಾ ಎಂದು ತಿರುಗಿ ಬರಲು ಹೊರಟಾಗ ನೋಡುತ್ತೇವೆ, ನಮ್ಮಿದಿರೇ ಗಾಡಿ ನಿಲ್ಲಿಸಿ ಸಂತೋಷ ನಗುತ್ತಿದ್ದ. “ಹೇಗೋ ಮರಳಿನ ಮೇಲೆ ಮೆಲ್ಲಮೆಲ್ಲ ತಂದೆ” ಎಂದ. ಆಗಿನ ನೃಸಿಂಹ ಈಗ ಬುದ್ಧನಾಗಿದ್ದ! ‘ಎಲ್ಲಾ ಅವನ ಮಹಿಮೆ’ ಎಂದು ಮೇಲೆ ಕೈ ತೋರುತ್ತಾ ಗಾಡಿಯೇರಿದೆವು.

ಈಗ ತನ್ನ ದಾರಿಯಲ್ಲೇ ನಮ್ಮನ್ನೆಲ್ಲಾ ವಾಪಾಸು ಕರಕೊಂಡು ಹೊರಟಿದ್ದ ಸಂತೋಷ. “ಇಂತಹ ಹಳ್ಳಿಗಳಲ್ಲಿರುವ ಶಾರ್ಟ್ಕಟ್ಗಳು ಜಿ.ಪಿ.ಎಸ್ಗೆ ಗೊತ್ತಿರುವುದಿಲ್ಲ” ಎನ್ನುತ್ತಾ ಕವಲು ದಾರಿಗಳಲ್ಲಿ ದಾರಿಹೋಕರನ್ನು ಕೇಳುತ್ತಾ ಮುಂದೆ ಸಾಗಿದ. ರಸ್ತೆ ಅವನು ಹೇಳಿದಂತೆ ಹತ್ತಿರದ್ದೂ ಉತ್ತಮವಾದದ್ದೂ ಆಗಿತ್ತು. ಅವನು ಯಾಕೆ ತನ್ನ ಗಾಡಿಯಲ್ಲಿದ್ದ ಜಿ.ಪಿ.ಎಸ್ ಹಾಕಿರಲಿಲ್ಲವೆಂದು ಈಗ ಅರ್ಥವಾಯಿತು. ಅವನು ಅವರಿವರಲ್ಲಿ ದಾರಿ ಕೇಳುವಾಗ “ಇವನಿಗೂ ರಸ್ತೆ ಯಾವುದಂತ ಗೊತ್ತಿಲ್ಲ, ಕೋಪದಲ್ಲಿ ಹಾರಾಡಲು ಮಾತ್ರ ಗೊತ್ತಿದೆ” ಎಂಬ ಮನೋಹರರ ಮಾತಿಗೆ “ಹೌದೌದು” ಎಂದು ಗಂಭೀರ ವದನರಾಗಿ ಪ್ರತಿಕ್ರಿಯಿಸಿದೆವೇ ಹೊರತು ತಪ್ಪಿಯೂ ತುಟಿಯಂಚಿನಲ್ಲೂ ನಗಲಿಲ್ಲ. ಮನೋಹರ್ ಮಾತ್ರ ಮುಂದೆ ತಮ್ಮ ಜಿ.ಪಿ.ಎಸ್ಸನ್ನು ಸಂತೋಷನ ಇದಿರು ಪ್ರವಾಸದ ಕೊನೆವರೆಗೂ ಹಾಕಲಿಲ್ಲ.

ಒಂದರ್ಧ ಗಂಟೆ ಪ್ರಯಾಣದ ಬಳಿಕ “ನೋಡಿ, ಇದೊಂದು ಸುಂದರ ಜಾಗ, ದೇವಿಯ ಆಲಯವೂ ಇದೆ. ನೋಡಿಬನ್ನಿ.” ಸಂತೋಷನ ಮಾತಿನಂತೆ ಸಮುದ್ರ ತೀರದಲ್ಲೇ ಇದ್ದ ಪುಟ್ಟ ರಾಮಚಂಡಿ ಮಂದಿರ ಆ ರಾತ್ರಿಯಲ್ಲೂ ಸುಂದರವಾಗಿ ಕಂಡಿತು. ಬಹಳ ಕಡಿಮೆ ಜನ, ವಾಹನ ಸಂಚಾರವಿತ್ತು. ನಾವಲ್ಲದೇ ಇನ್ನೊಂದು ಪ್ರವಾಸಿಗರ ಗುಂಪು ಮಾತ್ರವೇ ಇತ್ತು. ಆ ದೇವಸ್ಥಾನದಲ್ಲಿ, ಅಲ್ಲೇ ಸಮುದ್ರ ತೀರದಲ್ಲಿ ಸಿಕ್ಕಿದ್ದ ತಿಮಿಂಗಲದ ಮೂಳೆಯನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಅದನ್ನು ನೋಡಿಕೊಂಡು ಬರುವಾಗ ಅಲ್ಲಿದ್ದ ಇನ್ನೊಂದು ಪ್ರವಾಸಿಗರು ಕನ್ನಡದಲ್ಲಿ ಮಾತಾಡುತ್ತಿದ್ದುದು ಕೇಳಿ ಕಿವಿ ಅರಳಿಸಿದೆವು. ಅವರೊಡನೆ ಪಟ್ಟಾಂಗಕ್ಕೆ ಶುರು ಮಾಡಿ ತಡಮಾಡಿದರೆ ಮತ್ತೆ ಸಂತೋಷನ ಅಸಂತೋಷಕ್ಕೆ ಕಾರಣವಾಗಬಹುದೆಂದು ಸುಮ್ಮನಾದೆವು.

ಮುಂದೆ ಚಂದ್ರಭಾಗಾ ಎಂಬಲ್ಲೂ ಸ್ವಲ್ಪ ಹೊತ್ತು ಸಮುದ್ರ ತೀರದಲ್ಲಿ ಕಳೆದು ಕೆಲವೇ ದಿನಗಳಲ್ಲಿ ಅಲ್ಲಿ ನಡೆಯಲಿದ್ದ ಬೀಚ್ ಉತ್ಸವದ ತಯಾರಿಗಳನ್ನೆಲ್ಲಾ ನೋಡಿಕೊಂಡು ಪುರಿಗೆ ವಾಪಾಸಾದೆವು. ಪುರಿಯಲ್ಲೂ ಅಷ್ಟೇ, ಸಮುದ್ರ ತೀರದಲ್ಲೇ ರಸ್ತೆ, ಇಕ್ಕೆಲಗಳಲ್ಲೂ ಸಾಲುಸಾಲು ಅಂಗಡಿಗಳಿದ್ದವು.

ಆಗಲೇ ಪುರಿ ಬೀಚ್ ಉತ್ಸವ ಕಳೆಗಟ್ಟಲು ಶುರುವಾಗಿತ್ತು. ಜನಜಂಗುಳಿ, ಅಲಂಕಾರ, ಸಂಗೀತ, ನೃತ್ಯ ಕಾರ್ಯಕ್ರಮಗಳೂ, ಬಣ್ಣ ಬಳಿದುಕೊಂಡ ಕಟ್ಟಡಗಳು, ಅಂಗಳಗಳಲ್ಲೆಲ್ಲಾ ಕಂಗೊಳಿಸುತ್ತಿದ್ದ ರಂಗೋಲಿಗಳು.. ಹೀಗೆ ಎಲ್ಲೆಲ್ಲೂ ಸಂಭ್ರಮದ ವಾತಾವರಣ ಸೃಷ್ಠಿಯಾಗಿತ್ತು. ಇನ್ನು ನಾವಿದ್ದ ಹೋಟೆಲ್ಲಂತೂ ಮದುವೆ ಪಾರ್ಟಿಯಿಂದ ತುಂಬಿ ನಮಗೆ ವಸತಿಸೇವೆಯ ಜತೆ ಸಹಿಸಲು ಕಷ್ಟಸಾಧ್ಯವಾದ ಅಬ್ಬರದ ಸಂಗೀತದ ಮನರಂಜನೆಯನ್ನು ಪುಕ್ಕಟೆಯಾಗಿ ನೀಡಿತ್ತು.

(ಮುಂದುವರಿಯಲಿದೆ)