ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ
ಒಡಿಶಾದ ಒಡಲೊಳಗೆ ಅಧ್ಯಾಯ (೭) 

ನವೆಂಬರ್ ೨೫ರಂದು ಬೆಳಿಗ್ಗೆ ಬೇಗನೇ ತಯಾರಾದೆವು. ಅಂದು ನಾವು ಕ್ರಿಸ್ತಪೂರ್ವ ೨ನೆಯ ಶತಮಾನದ ಜೈನ ಮತ್ತು ಬೌದ್ಧ ವಾಸ್ತುಗಳಿಗೆ ಭೇಟಿಕೊಡುವ ಯೋಜನೆ ಹಾಕಿಕೊಂಡಿದ್ದೆವು. ಮೊದಲಿಗೆ ಭುವನೇಶ್ವರದಿಂದ ೮ ಕಿ.ಮೀ. ದೂರದಲ್ಲಿರುವ ಉದಯಗಿರಿ ಮತ್ತು ಖಂಡಗಿರಿಗಳಿಗೆ ಹೋದೆವು.

ಉದಯಗಿರಿ ಒಂದು ದೊಡ್ಡ ಬೆಟ್ಟ. ಈ ಬೆಟ್ಟದ ತುಂಬಾ ಬಂಡೆಗಲ್ಲುಗಳನ್ನು ಕೊರೆದು ಮಾಡಿದ ಹಲವಾರು ಗುಹಾಂತರ ದೇವಾಲಯಗಳಿವೆ. ಇದು ಕರ್ನಾಟಕದ ಬಾದಾಮಿಯನ್ನು ನೆನಪಿಸುತ್ತದೆ. ಅಜಂತಾ, ಎಲ್ಲೋರಾಗಳ ಗುಹಾಂತರ ದೇವಾಲಯಗಳಷ್ಟು ದೊಡ್ಡ ಮತ್ತು ಭವ್ಯವಾಗಿಲ್ಲವಾದರೂ ಇಂದಿಗೆ ಸುಮಾರು ೨೩೦೦ ವರ್ಷಗಳಿಗೂ ಹಿಂದೆ ಜನರು ಹೇಗೆ ಬದುಕುತ್ತಿದ್ದರು ಎಂದು ಯೋಚಿಸಲು ದಾರಿಯಾಗುತ್ತದೆ. ಉದಯಗಿರಿಯಲ್ಲಿ ಸುಮಾರು ೧೭ ಗುಹೆಗಳಿವೆ. ಈ ಗುಹೆಗಳಿಗೆ ಪುರಾತತ್ವ ಇಲಾಖೆಯವರು ೧,೨,೩,… ಹೀಗೆ ಕ್ರಮಸಂಖ್ಯೆ ನೀಡಿದ್ದಾರೆ. ಒಂದು ಗುಹೆಯಿಂದ ಇನ್ನೊಂದು ಗುಹೆಗೆ ಬಂಡೆಗಲ್ಲುಗಳನ್ನು ಏರಿ, ಕಲ್ಲಿನ ಮೆಟ್ಟಲುಗಳನ್ನು ಹತ್ತುತ್ತಾ ಸಾಗಬೇಕು. ಒಂದೊಂದು ಗುಹೆಯೂ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಈ ಗುಹೆಗಳನ್ನು ಮೊದಲು ಜೈನ ಸನ್ಯಾಸಿಗಳು ತಮ್ಮ ಧ್ಯಾನಕ್ಕಾಗಿ ಬಳಸುತ್ತಿದ್ದು, ಮುಂದೆ ಜನವಸತಿಗಾಗಿಯೂ ಬಳಕೆಯಾಗಿರಬಹುದೆಂದು ಪ್ರಾಚ್ಯ ಮತ್ತು ಪುರಾತತ್ವ ಇಲಾಖೆಯ ಉಲ್ಲೇಖ ತಿಳಿಸುತ್ತಿತ್ತು. ಒಂದು ಗುಹೆಯ ದ್ವಾರದಲ್ಲಿ ಒಂದು ಗಂಡು, ಒಂದು ಹೆಣ್ಣು ದ್ವಾರಪಾಲಕ/ಪಾಲಿಕೆಯರ ವಿಗ್ರಹಗಳಿದ್ದವು. ಇಂತಹ ಜೋಡಿಗಳನ್ನು ಮುಂದೆಯೂ ಕೆಲವು ಕಡೆ ನೋಡಿದೆ. ಸಾಮಾನ್ಯವಾಗಿ ಜಯ-ವಿಜಯರೆಂದು ಜೋಡಿ ಗಂಡು ವಿಗ್ರಹಗಳನ್ನೇ ದ್ವಾರಪಾಲಕರಾಗಿ ನೋಡಿದ್ದ ನನಗೆ ಈ ಜೋಡಿ ನೋಡಿ, ಹಿಂದೆ ಲಿಂಗಭೇದದ ವೈಭವೀಕರಣವಿರಲಿಲ್ಲವೆಂದನಿಸಿತು. ಒಡಿಶಾದಲ್ಲಿ ನಾವು ಜನಿವಾರ ತರಹದ್ದನ್ನು ಧರಿಸಿದ ಸ್ತ್ರೀ ವಿಗ್ರಹಗಳು, ಮದ್ದಳೆ, ಮೃದಂಗಗಳಂತಹ ತಾಳವಾದ್ಯಗಳನ್ನು ನುಡಿಸುತ್ತಾ ಕುಣಿಯುತ್ತಿರುವ ಸ್ತ್ರೀಯರು, ರಥ, ಕುದುರೆ ಸವಾರಿ ಮಾಡುತ್ತಿರುವ, ಕತ್ತಿ ಹಿಡಿದ ವೀರವನಿತೆಯರ ಕೆತ್ತನೆಗಳನ್ನು ಸಾಕಷ್ಟು ಕಡೆ ನೋಡಿದೆವು.

ಉದಯಗಿರಿಯಲ್ಲಿರುವ ಒಟ್ಟು ೧೭ ಗುಹೆಗಳಲ್ಲಿ ಹಾತಿಗುಫಾ( ಆನೆಗುಹೆ) ಎಂಬುದು ದೊಡ್ಡದಾಗಿದೆ ಮಾತ್ರವಲ್ಲ, ಈ ಗುಹೆಯ ಬಾಯಿಯ ಮೇಲಿನ ಕಲ್ಲಿನಲ್ಲಿ ಪ್ರಾಕೃತ ಭಾಷೆಯಲ್ಲಿ ಬ್ರಾಹ್ಮೀ ಲಿಪಿಯಲ್ಲಿ ಕೆತ್ತಿದ ಶಾಸನ ಕಾಣಸಿಗುತ್ತದೆ. ಈ ಶಾಸನವನ್ನು ರಾಜ ಖಾರವೇಲ ಎಂಬವನು ಬರೆಸಿದ್ದಾಗಿ ಹೇಳಲಾಗಿದೆ. ಈ ಶಾಸನದ ಪ್ರಕಾರ, ಆತನು, ಈ ಹಿಂದೆ ಕಳಿಂಗದ ಮೇಲೆ ಆಕ್ರಮಣ ಮಾಡಿದ್ದ ಮಗಧರ ಮೇಲೆ ಪ್ರತೀಕಾರದ ಧಾಳಿ ಮಾಡಿ ಅವರು ಕೊಂಡೊಯ್ದಿದ್ದ ಜೈನತೀರ್ಥಂಕರರ ಮೂರ್ತಿಗಳನ್ನು ವಾಪಾಸು ತಂದುದಾಗಿ ಹೇಳಲಾಗಿದೆ. ರಾಜ ಖಾರವೇಲ ಕೂಡಾ ತನ್ನ ಪ್ರಜೆಗಳಿಗಾಗಿ ತಂಪು ನೀರಿನ, ಹಸಿರು ನೆರಳಿನ ವ್ಯವಸ್ಥೆ ಮಾಡಿದ್ದನ್ನು ಶಾಸನದಲ್ಲಿ ನಮೂದಿಸಲಾಗಿದೆ. ಈ ಶಾಸನವನ್ನು ಗುಹೆಯ ಮೇಲಿನ ಛಾವಣಿಯ ಜಾಗದಲ್ಲಿ ಕೆತ್ತಲಾಗಿದೆ ಮಾತ್ರವಲ್ಲ ಹಿಂದೆ ಕಳಿಂಗವನ್ನು ಆಕ್ರಮಿಸಿ ಜನರ ಮೇಲೆ ಒತ್ತಾಯದ ಬೌದ್ಧ ಮತಾಚರಣೆಯನ್ನು ಸಾರುವ, ಇಲ್ಲಿಂದ ೬ ಮೈಲಿಗಳ ದೂರದಲ್ಲಿರುವ, ಧೌಲಿ ಎಂಬ ಜಾಗದಲ್ಲಿ ರಾಜ ಅಶೋಕನು ಕೆತ್ತಿಸಿದ ಶಾಸನಕ್ಕೆ ನೇರವಾಗಿದ್ದು, ಆ ಜಾಗಕ್ಕೆ ಕಾಣುವಂತೆ ರಚಿಸಲಾಗಿದೆಯಂತೆ. ಶಾಸನಕ್ಕೊಂದು ಪ್ರತಿಶಾಸನ! ಆದರೂ ಇತಿಹಾಸಕಾರರು ಇದುವರೆಗೆ ಅಶೋಕನಿಗೆ ನೀಡಿದ ಪ್ರಾಮುಖ್ಯತೆಯನ್ನು ಖಾರವೇಲನಿಗೆ ನೀಡಿಲ್ಲ. ಸರಕಾರವೂ ಈ ಶಾಸನದ ರಕ್ಷಣೆಗೆ ಗಾಜಿನ ಪೆಟ್ಟಿಗೆ ಕಟ್ಟಿಲ್ಲ!

ಇನ್ನೊಂದು ಗುಹೆಯ ಬಳಿ ಕೆಂಪು ಕಲ್ಲುಗಳ ಕಟ್ಟಡದ ಅವಶೇಷವಿತ್ತು. ಇದು ಪುರಾತನ ಜೈನ ದೇವಾಲಯದ ಪಳೆಯುಳಿಕೆಯಂತೆ. ತಜ್ಞರು ಕ್ರಿಸ್ತಪೂರ್ವ ೨ನೇ ಶತಮಾನದಷ್ಟು ಹಳೆಯದು ಎಂದು ಅಭಿಪ್ರಾಯಪಡುತ್ತಾರೆ. ಈ ರಚನೆಯಿಂದ ಭುವನೇಶ್ವರ ನಗರದ ಕಡೆಗೆ ಕಣ್ಣು ಹಾಯಿಸಿದರೆ ಅತ್ಯಾಧುನಿಕ ಬಹುಮಹಡಿ ಕಟ್ಟಡ ಸಮುಚ್ಚಯ ಕಾಣ ಸಿಗುತ್ತದೆ. ಭಾರತದಲ್ಲಿ ಹಲವು ಧರ್ಮ, ಸಂಸ್ಕೃತಿಗಳು ಮಾತ್ರವಲ್ಲ, ಬೇರೆ ಬೇರೆ ಕಾಲ ಘಟ್ಟಕ್ಕೆ ಸಂಬಂಧಿಸಿದ ಕಟ್ಟಡಗಳೂ ಅಕ್ಕಪಕ್ಕದಲ್ಲೇ ಸಹಜೀವನ ನಡೆಸಬಲ್ಲವು ಎಂಬುದಕ್ಕೆ ಇದು ಸಾಕ್ಷಿಯೆಂದೆನಿಸಿತು.

ಉದಯಗಿರಿಯಿಂದ ಹೊರಗೆ ಬಂದು ರಸ್ತೆ ದಾಟಿದರೆ ಖಂಡಗಿರಿ ಸಿಗುತ್ತದೆ. ಹೆಸರೇ ಹೇಳುವಂತೆ ಇದು ಈ ಬೆಟ್ಟದ ಇನ್ನೊಂದು ಭಾಗ. ಖಂಡಗಿರಿಯೂ ಹಲವಾರು ಕಲ್ಲಿನ ಗುಹೆಗಳು, ಅವುಗಳಲ್ಲಿ ಕೆತ್ತಲ್ಪಟ್ಟ ದೇವಾಲಯಗಳನ್ನು ಹೊಂದಿದೆ. ಈ ಬೆಟ್ಟದಲ್ಲಿರುವ ದೇವಾಲಯಗಳಲ್ಲಿ ಜೈನ ಪರಂಪರೆಗೆ ಸೇರಿದ ಕ್ರಿಸ್ತಪೂರ್ವ ೨ನೆಯ ಶತಮಾನದಿಂದ, ಇತ್ತೀಚೆಗೆ ನವೀಕರಿಸಲ್ಪಟ್ಟ ವೃಷಭನಾಥ ದೇವಾಲಯದವರೆಗೆ ರಚನೆಗಳಿವೆ. ಇಲ್ಲಿಯೂ ಗುಹೆಗಳು ಮತ್ತು ಜೈನರಿಗೆ ಸಂಬಂಧಿಸಿದ ಕೆತ್ತನೆಗಳು, ತೀರ್ಥಂಕರರ ಕೆತ್ತನೆಗಳು ತುಂಬಾ ಇವೆ. ಇಲ್ಲಿನ ಒಂದು ದೇವಸ್ಥಾನದಲ್ಲಿ ನಾವು ಹಿಂದಿನ ದಿನ ಪೀಪ್ಲಿಯಲ್ಲಿ ಕಂಡಿದ್ದ ಜೈನ ಹೋಟೇಲಿನ ಗೋಡೆಯಲ್ಲಿದ್ದ ನವಗುಂಜರ ಚಿತ್ರವಿತ್ತು.

ಖಂಡಗಿರಿಯಲ್ಲಿ ತುಂಬಾ ಮರಗಳಿದ್ದು ಅವುಗಳ ತುಂಬಾ ಕೋತಿಗಳಿವೆ. ಭುವನೇಶ್ವರದ ಯುವಕ ಯುವತಿಯರಿಗೆ ಈ ಬೆಟ್ಟ ಒಂದು ಪಿಕ್ನಿಕ್ ಜಾಗದಂತಿದ್ದು ಸಾಕಷ್ಟು ಸಂಖ್ಯೆಯಲ್ಲಿ ಬಂದು ಕೋತಿಚೇಷ್ಟೆ ಮಾಡುತ್ತಾ ಕೋತಿಗಳಿಗೇ ಬೆರಗು ಮೂಡಿಸುತ್ತಿರುತ್ತಾರೆ. ಅವನ್ನೆಲ್ಲಾ ನೋಡುತ್ತಿದ್ದ ನನಗೆ, ‘ಮಂಗನಿಂದ ಮಾನವನೋ, ಮಾನವನಿಂದ ಮಂಗನೋ’ ಎಂದು ಭಾಸವಾಗಿ, ಈಗಾಗಲೇ ಕುಸಿಯತೊಡಗಿರುವ ಡಾರ್ವಿನ್ನನ ವಿಕಾಸವಾದ ಬೇಗನೇ ಬುಡಮೇಲಾಗಲೂಬಹುದು ಎಂದೆನಿಸಿತು.

ಹೀಗೆ ೨ ಬೆಟ್ಟಗಳನ್ನು ಏರಿಳಿದು ದಣಿವಾರಿಸಿಕೊಳ್ಳಲು ಅಲ್ಲೇ ಹತ್ತಿರವಿದ್ದ ಎಳೆನೀರು, ಹಣ್ಣುಗಳ ಅಂಗಡಿಗೆ ನುಗ್ಗಿದೆವು. ಹೊಟ್ಟೆ ತುಂಬಾ ಬಾಳೆ ಹಣ್ಣು ತಿಂದು, ಉಳಿದವುಗಳನ್ನು ಮತ್ತೆ ಬೆಟ್ಟ ಹತ್ತಿ ಮಂಗಗಳಿಗೆ ಕೊಟ್ಟು, ಸಿಹಿಸಿಹಿಯಾದ ಎಳೆನೀರು ಸವಿದೆವು. ಒಡಿಶಾದಲ್ಲಿ ಪ್ರಯಾಣದುದ್ದಕ್ಕೂ ಎಳೆನೀರು, ಹಣ್ಣು, ಮಜ್ಜಿಗೆ, ನಿಂಬೆಜ್ಯೂಸ್‍ಗಳ ಗೂಡಂಗಡಿಗಳು ಅಲ್ಲಲ್ಲಿ ಇದ್ದವು. ಎಲ್ಲಿಯೂ ಪ್ಯಾಕೆಟ್ ತಿಂಡಿ, ಬಣ್ಣದ ನೀರಿನ ಮಾಯಾಜಾಲಕ್ಕೆ ಬೀಳಬೇಕಾಗಲಿಲ್ಲ.

ಖಂಡಗಿರಿಯಿಂದ ಮುಂದೆ ರತ್ನಗಿರಿ, ಲಲಿತಗಿರಿ, ಜೈಪುರ ಜಿಲ್ಲೆಯ ಉದಯಗಿರಿಗಳಿಗೆ ಹೊರಟೆವು. ಭುವನೇಶ್ವರದಿಂದ ಸುಮಾರು ೯೦ ಕಿ.ಮೀ.ಗಳ ಪ್ರಯಾಣ. ಭುವನೇಶ್ವರ ನಗರದ ಹೊರವಲಯ ಸಮೀಪಿಸುತ್ತಿದ್ದಂತೆ ವ್ಯಾನಿನ ಬಾಯಾರಿಕೆ ನೀಗಲು ಸಂತೋಷ ಗಾಡಿಯನ್ನು ಪೆಟ್ರೋಲ್ ಬಂಕ್ ಒಂದಕ್ಕೆ ನುಗ್ಗಿಸಿದ. ನಮ್ಮ ಕರಾರಿನಂತೆ ಗಾಡಿಗೆ ದಾಹವಾದಾಗಲೆಲ್ಲಾ ಡೀಸಲಿನ ಖರ್ಚನ್ನು ನಾವು ಭರಿಸಬೇಕಿತ್ತು. ಪೆಟ್ರೋಲ್ ಬಂಕ್ ಬಂದ ಕೂಡಲೇ ಸಂತೋಷ, “ನಿಮ್ಮಲ್ಲಿ ಯಾರ ಬಳಿಯಾದ್ರೂ ೫೦೦, ೧೦೦೦ ರೂಪಾಯಿಗಳ ನೋಟಿದ್ದರೆ ಕೊಡಿ, ನಾಳೆಯಿಂದ ಅವು ಉಪಯೋಗಕ್ಕೆ ಬಾರವು” ಎಂದ. ಅದುವರೆಗೂ ನಮಗೆ, ಪ್ರವಾಸಕ್ಕೆ ೧೨ ದಿನಗಳ ಹಿಂದೆ ಅಂದರೆ, ನವೆಂಬರ್ ೮ ರ ರಾತ್ರಿ ಘೋಷಣೆಯಾಗಿದ್ದ ನೋಟು ಅನಾಣ್ಯೀಕರಣದ ವಿಷಯ ಮರೆತೇ ಹೋಗಿತ್ತು. ಘೋಷಣೆಯಾದ ಮೊದಲೆರಡು ದಿನ ತಲೆಬಿಸಿಮಾಡಿಕೊಂಡೆವಾದರೂ ಆಮೇಲೆ ಸುಲಭದಲ್ಲಿ ನೋಟು ಬದಲಾವಣೆ ಮಾಡಿ ತಯಾರಾದೆವು. ನಮ್ಮ ಪ್ರಯಾಣದ ಟಿಕೆಟ್, ವಸತಿಗೃಹಗಳ ಮುಂಗಡ ಕಾದಿರಿಸುವಿಕೆಗಳೆಲ್ಲಾ ಗಣಕೀಕೃತ ಹಣ ರವಾನೆಯ ಮೂಲಕ ಅದಾಗಲೇ ನಡೆದಿದ್ದರಿಂದ ಈಗ ಹಣದ ವ್ಯವಹಾರಬೇಕಾಗಿದ್ದುದು ಸಂತೋಷನ ಗಾಡಿ, ನಮ್ಮ ಹೊಟ್ಟೆ, ಅಲ್ಲಲ್ಲಿ ಪ್ರವೇಶದರಗಳ ಪಾವತಿಗೆ ಮಾತ್ರ. ನಾವು ತಿಂಡಿ, ಊಟ ಮಾಡಿದ ಹೆಚ್ಚಿನ ಹೋಟಲ್ಲುಗಳಲ್ಲಿ ಕಾರ್ಡ್ಗಳ ಬಳಕೆಗೆ ಅವಕಾಶವಿತ್ತು. ಹಾಗಾಗಿ ಏನೂ ಕಷ್ಟವಾಗಲಿಲ್ಲ. ಈಗ ಸಂತೋಷ ನೆನಪು ಮಾಡಿದ ಕೂಡಲೇ ಎಲ್ಲರೂ ಅವರವರ ಚೀಲ, ಪರ್‍ಸ್‍ಗಳನ್ನೆಲ್ಲಾ ತಡಕಾಡಿ ಎಲ್ಲೋ ಉಳಿದಿದ್ದ ಒಂದೆರಡು ನೋಟುಗಳನ್ನು ಕೊಟ್ಟೆವು. ಸಂತೋಷನ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದೆವು. ಪೆಟ್ರೋಲ್ಬಂಕಿಗೆ ಬರುವ ಮೊದಲು ಮಾನವ ಸರಪಳಿಯೊಂದು ಏನೋ ಘೋಷಣೆ ಕೂಗುತ್ತಿದ್ದುದು ನೆನಪಿಗೆ ಬಂತು. ಅದು ನೋಟು ಅನಾಣ್ಯೀಕರಣದ ವಿರುದ್ಧವಾಗಿ ಎಂದು ಈಗ ಅರ್ಥವಾಯಿತು.

(ಮುಂದುವರಿಯಲಿದೆ)