೧. ಭಾಗ್ಯದ ‘ಲಕ್ಷ್ಮಿ’ (ಅಮ್ಮನ ಹೆಸರು ಕೂಡಾ) ನೆನಪುಗಳಲ್ಲಿ ಮೈದಳೆದ ಪರಿ

ಹತ್ತು ವರ್ಷಗಳ ಹಿಂದೆ ತಂದೆ, ಈಚೆಗೆ ತಾಯಿಯ ವಿಯೋಗವನ್ನು ನಾವು ಅತ್ರಿ ಸೋದರರು (ಅಶೋಕ, ಆನಂದ, ಅನಂತ) ಸ್ವೀಕರಿಸಿದ ಕ್ರಮ ಲೋಕಮುಖಕ್ಕೆ ಒಂದೇ ಇತ್ತು. ಅಂದರೆ, ಇಬ್ಬರ ದೇಹಗಳನ್ನೂ ವೈದ್ಯಕೀಯ ಆಸ್ಪತ್ರೆಗೆ ದಾನ ಕೊಟ್ಟೆವು. ಅವರಿಬ್ಬರ ಇಚ್ಛೆ ಮತ್ತು ನಮ್ಮ ನಂಬಿಕೆಯ ಭಾಗವಾಗಿಯೂ ಸಾಂಪ್ರದಾಯಿಕ ಸೂತಕ ಮತ್ತು ಶುದ್ಧಕ್ರಿಯೆಗಳನ್ನು ಕೈಗೊಳ್ಳಲಿಲ್ಲ. ಇದ್ದಷ್ಟು ಕಾಲ ತಾಯಿಯ ಬಾಹ್ಯ ಅಲಂಕಾರ ಮತ್ತು ಸಾಮಾಜಿಕ ಸ್ಥಿತಿಗಳಲ್ಲಿ ಯಾವುದೇ ಊನ ಬಾರದಂತೆ ಆಕೆಯ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದೆವು. ಇದರ ಮೇಲೆ…..

ಅಪ್ಪಮ್ಮರ ಜತೆಗಿದ್ದು, ಮುಖ್ಯವಾಗಿ ಅವರ ಕಷ್ಟಗಳಲ್ಲಿ ನೇರ ಭಾಗಿದಾರಿಕೆ ವಹಿಸಿಕೊಂಡ ಅನಂತ – ನಮ್ಮೂವರಲ್ಲಿ ಕಿರಿಯ. ಹಿರಿಯನಾದ ನಾನು ಮತ್ತು ಎರಡನೆಯವನಾದ ಆನಂದ ಹುಟ್ಟಿನ ಆಕಸ್ಮಿಕದ ಹಿರಿತನವನ್ನು ಅನಂತನ ಕ್ರಿಯಾ ಹಿರಿತನಕ್ಕೆ ಎಂದೋ ನಿಸ್ಸಂದೇಹವಾಗಿ ಒಪ್ಪಿಸಿದ್ದೆವು. ಹೋದವರಿಗಿಂತ ಇರುವವರ ಜೀವನ ಹೆಚ್ಚು ಹಸನಾಗಬೇಕೆಂಬ ಮಾತಿದೆ. ತಂದೆಯೂ ಈ ಮಾತನ್ನು ಒಪ್ಪುತ್ತಿದ್ದರು. ಅದಕ್ಕೇ ಅವರು ಸ್ವಂತಕ್ಕೆ ಯಾವ ವೈದಿಕ ಆಚರಣೆಗಳನ್ನು ಇಟ್ಟುಕೊಳ್ಳದಿದ್ದರೂ ತಾಯಿಯ ಪೂಜೆ, ವ್ರತಾದಿ ನಂಬಿಕೆಗಳಿಗೆ ಎಂದೂ ಭಂಗ ಉಂಟುಮಾಡುತ್ತಿದ್ದಿಲ್ಲ. ಅದೇ ರೀತಿಯಲ್ಲಿ, ಮೊದಲು ಅಪ್ಪನ ಉತ್ತರಕ್ರಿಯಾ ಆಶಯಕ್ಕೆ, ಮುಖ್ಯವಾಗಿ ಅಮ್ಮನ ಸಣ್ಣ ಆಸೆಗಳನ್ನೂ ಅನಂತರ ಅಮ್ಮನ ವಿದಾಯದಂದು ಅನಂತನ ಅಗತ್ಯಗಳಿಗಾಗಿಯೂ ಸಣ್ಣ ತಿದ್ದುಪಡಿಗಳನ್ನುಮಾಡಿಕೊಂಡಿದ್ದೆವು. ಹಾಗೆ ಬಂದ ಕಲಾಪಗಳು ಅಮ್ಮನ ನಂಬಿಕೆಗೂ ಅನಂತನ ಸಾಮಾಜಿಕ ಚಟುವಟಿಕೆಗಳಿಗೆ ಇಂಬಾಗಿಯೂ ನಡೆದವು. (೨೦೦೮ರಲ್ಲೇ ಬರೆದ ಲೇಖನ – ದೇಹದಾನ ನೋಡಿ.)

ಅಮ್ಮನ ನಿರ್ಯಾಣೋತ್ತರದಲ್ಲಿ – ದೇಹದಾನ (ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿಗೆ) ಮತ್ತು ಸಾಂಪ್ರದಾಯಿಕ ಕ್ರಿಯಾಭಾಗಗಳ ನಿರಾಕರಣ, ಹಿಂದಿನಂತೆಯೇ ನಡೆಸಿದೆವು. ಹಿಂದೆ ಅಮ್ಮನ ತೃಪ್ತಿಗಾಗಿ ನಡೆದ ಔಪಚಾರಿಕ ಕೂಟಕಲಾಪವನ್ನು ಈಗ ಅನಂತನ ಅಗತ್ಯಕ್ಕಷ್ಟೇ ಅಳವಡಿಸಿಕೊಂಡೆವು. ನಾವು (ದೇವಕಿ, ಅಭಯ, ರಶ್ಮಿ, ಆಭಾ) ಎಲ್ಲ ಬಂಧುಗಳಂತೆ (ಹೆಚ್ಚಲ್ಲ) ಭಾಗಿಯಾಗಿ, ಅನಂತ ದಂಪತಿಗೆ ಸಹಕರಿಸುವ ಸಂತೋಷವನ್ನು ಧಾರಾಳ ಅನುಭವಿಸಿದೆವು. ತಿಂಗಳ ಹಿಂದಷ್ಟೇ ಅಮೆರಿಕಾದಿಂದ ಎಂದಿನ ರಜೆಯಲ್ಲಿ ಬಂದು, ಅಮ್ಮನನ್ನು ಕಂಡು ಹೋಗಿದ್ದ ಆನಂದ, ‘ಅಂತಿಮ ದರ್ಶನ’ ಅಥವಾ ಇನ್ನೊಂದಕ್ಕಾಗಿ ಬರಲಿಲ್ಲ. ಬದಲಿಗೆ ಆಕಸ್ಮಿಕವಾಗಿ ಊರಿನಲ್ಲೇ ಇದ್ದ ಅವನ ಹೆಂಡತಿ ಜಯಶ್ರೀ ನಮ್ಮಂತೇ ಭಾಗವಹಿಸಿದ್ದಳು.

ಅನಂತನ ಕುಟುಂಬ (ಹೆಂಡತಿ ರುಕ್ಮಿಣಿ ಮತ್ತು ಇಂದು ಗೃಹಿಣಿಯಾಗಿ ಗಂಡನೊಡನೆ ಅಮೆರಿಕಾದಲ್ಲಿರುವ ಅವರ ಮಗಳು ಅಕ್ಷರಿ) ಮೈಸೂರು ಮನೆಯಲ್ಲಿ ಅಪ್ಪಮ್ಮರಿಗೆ ಜತೆಗಿದ್ದಷ್ಟೇ ಅವರ ಸ್ನೇಹಬಳಗದ ಒಡನಾಟಗಳನ್ನೂ ಒಪ್ಪಿ ನಡೆಸಿಕೊಂಡು ಬಂದಿದೆ. ಅಲ್ಲದೆ ಅನಂತನ ವೃತ್ತಿ ಮತ್ತು ಹವ್ಯಾಸಗಳ ಪರಿಯೂ ನಮ್ಮಿಬ್ಬರಿಂದ ಭಿನ್ನ. ಈ ಮಾತನ್ನು ಸಣ್ಣದಾಗಿ ಬಿಡಿಸಿ ಹೇಳುವುದಾದರೆ, ನನಗೂ ಆನಂದನಿಗೂ ಇಲ್ಲದ ಸಾಂಪ್ರದಾಯಿಕ ಒಡನಾಟಗಳು ಅನಂತ ದಂಪತಿಗೆ ತುಂಬ ಇತ್ತು. (ಕೆ. ಹೆಮ್ಮನ ಹಳ್ಳಿಯ ಮಹಾಲಿಂಗೇಶ್ವರ ದೇವಸ್ಥಾನ ನಿಮಗೆ ತಿಳಿದೇ ಇದೆ.) ಸಹಜವಾಗಿ ಅನಂತ ಸಾಂಪ್ರದಾಯಿಕ ಪರಿಧಿಯೊಳಗೇ ದಿನವೊಂದನ್ನು ಆಯ್ದು, ಮನೆಯಲ್ಲೇ ಸಣ್ಣದಾಗಿ ‘ದೇಹಶುದ್ಧಿ’ ನಡೆಸಿದ. ಹಿಂಬಾಲಿಸಿದಂತೆ ಸಭಾಮಂದಿರವೊಂದರಲ್ಲಿ ಆಮಂತ್ರಿತ ಆತ್ಮೀಯರಿಗೊಂದು ನುಡಿತರ್ಪಣಕ್ಕೆ ಅವಕಾಶ ಕಲ್ಪಿಸಿದ್ದ. ಅದರ ಪೂರ‍್ಣ ರೂಫ ವಿಡಿಯೊದಲ್ಲಿ ನೋಡೀ…

ಆ ಬೆಳಿಗ್ಗೆ ನಾವು ಮನೆ ಬಿಡುವ ಮೊದಲೇ ಬೆಂಗಳೂರಿನಿಂದ ತಂಗಿ (ಚಿಕ್ಕಪ್ಪ ರಾಘವೇಂದ್ರನ ಮಗಳು) ಜಯ (ಲಕ್ಷ್ಮಿ ಜ್ಞಾನಶೇಖರ್) ತಲಪಿದ್ದಳು. ಅವಳು ಚಿಕ್ಕಮ್ಮ ಸೀತೆಯ ಸೂಚನೆ ಮತ್ತು ಸ್ವಂತ ಭಾವತೃಪ್ತಿಗಾಗಿ ಅಮ್ಮನ ಕೋಣೆಯಲ್ಲೇ ಒಂದು ಗಾನನಮನ ಮಾಡಿದಳು. ಮುಂದೆ ಸಾರ್ವಜನಿಕ ಸಭೆಯಲ್ಲೂ ಹಲವು ಭಾವಪೂರ್ಣ ಹಾಡುಗಳನ್ನು ಹೇಳುವುದರೊಂದಿಗೆ ಬರಿಯ ಮಾತುಗಳ ಏಕತಾನತೆಯನ್ನೂ ತಪ್ಪಿಸಿದ್ದಳು. ಸಭೆಯಲ್ಲಿನ ಎಲ್ಲ ಹಾಡು ನುಡಿ ಮತ್ತು ಕಲಾಪಗಳು ಸಂದ ಜೀವದ ಕುರಿತು ವಿಷಾದದ ಛಾಯೆಯನ್ನು ಹೊತ್ತಿದ್ದರೂ ಜೀವಪ್ರವಾಹದ ಮುಂದುವರಿಕೆಗೆ ಬೆಳಕಿನಂತೂ ಇದ್ದವು.

ಕಲಾಪಗಳಲ್ಲಿ ಭಾಗಿಯಾಗಲು ಸಾಧ್ಯವಾಗದವರಿಗೆ – ಮುಖ್ಯವಾಗಿ ಅಕ್ಷರಿ ಮತ್ತು ಆನಂದರ ಕುಟುಂಬಕ್ಕಾಗಿ, ಅನಂತ ಎಲ್ಲವನ್ನೂ ಸಾಮಾನ್ಯ ವಿಡಿಯೋ ಮಾಡಿಸಿದ್ದ. ಅದನ್ನು ಅಭಯ ತುಸುವೆ ಪರಿಸ್ಃಕರಿಸಿ, ಯೂಟ್ಯೂಬ್ ಹಾಕಿರುವುದನ್ನು ನೊಡಬಹುದು. ಕೊನೆಯಲ್ಲಿ ಸರಳ ಊಟವೂ ಇತ್ತು,

೨. ಮೂಡಲಪಾಯ ಯಕ್ಷಗಾನದ ಪುನರುತ್ಥಾನ

ತಮ್ಮ ಅನಂತ ಕಾರ್ಯದರ್ಶಿಯಾಗಿ ನಡೆಸುತ್ತಿರುವ ಮಹಾಲಿಂಗೇಶ್ವರ ದೇವಸ್ಥಾನ ಸುತ್ತಣ ಹಳ್ಳಿಯ ಸಾಮಾಜಿಕ ಆರೋಗ್ಯವೃದ್ಧಿಯೊಂದನ್ನೇ ಲಕ್ಷ್ಯವಾಗಿರಿಸಿಕೊಂಡಿದೆ. ದೇವಾಲಯ ಮುಖ್ಯವಾಗಿ ಶ್ರದ್ಧಾಕೇಂದ್ರವಾದ್ದರಿಂದ ನಿತ್ಯಪೂಜೆಯೊಡನೆ ಸಾಂಪ್ರದಾಯಿಕ ಹಬ್ಬಗಳಂತೂ ಸರಳವಾಗಿ ನಡೆಯುತ್ತಲೇ ಇರುತ್ತವೆ. (ಅರ್ಚಕ, ಪುರೋಹಿತ ಮತ್ತು ಇತರ ಕೆಲಸಕ್ಕೊಂದು ಜನ ಅಲ್ಲಿದ್ದಾರೆ.) ಮಳೆನೀರು ಇಂಗಿಸುವುದು, ಹಸಿರು ಹೆಚ್ಚಿಸುವುದು, ಅನಾಥ ಜಾನುವಾರುಗಳಿಗೆ ಆಶ್ರಯ ಕಲ್ಪಿಸುವುದು ಯಥಾಮಿತಿ ನಡೆದಿದೆ. ಇಲ್ಲಿನ ಯಾವುದೇ ಕಲಾಪ ಹಾಗೂ ಯಾರದೇ ಪ್ರವೇಶಕ್ಕೆ ಯಾವುದೇ ಧಾರ್ಮಿಕ ಕಟ್ಟುಪಾಡುಗಳೂ (ಜಾತಿ-ವಿಜಾತಿ, ಮಡಿ-ಮೈಲಿಗೆ, ಶುಭಾಶುಭ) ಇಲ್ಲ; ಸರ್ವರಿಗೂ ಮುಕ್ತ.

ಊರಿನ ಯಾವುದೇ ಧರ್ಮದವರಿಗೆ, ಕನಿಷ್ಠ ವೆಚ್ಚದಲ್ಲಿ ಮದುವೆಯಾದಿ ಸಾಮುದಾಯಿಕ ಆಚರಣೆಗಳಿಗೆ ಇದು ನೆಲೆಯಾಗಿಯೂ ಒದಗುತ್ತಿದೆ. ಕೃಷ್ಯುತ್ಪನ್ನಗಳಿಗೆ ವಾರದ ಸಂತೆ, ಮಕ್ಕಳಿಗೆ ಅಸಾಂಪ್ರದಾಯಿಕ ಶಿಕ್ಷಣಕೇಂದ್ರ ಮುಂತಾದ ಪ್ರಯೋಗಗಳು ತೊಡಗಿದರೂ ಸಮೀಪಸ್ಥ ಮಹಾನಗರದ ದುಷ್ಪ್ರಭಾವದಲ್ಲಿ ಊರ್ಜಿತಗೊಳ್ಳಲಿಲ್ಲ. ಇಲ್ಲಿ ಗರಡಿ ರಚನೆ ಮಾಡಿ, ಸಾಂಪ್ರದಾಯಿಕ ನಾಡಕುಸ್ತಿಯ ಪುನರುತ್ಥಾನ ಮತ್ತು ಬೆಳವಣಿಗೆ, ಈ ವಲಯಗಳ ಜನಪದ ಆರಾಧನೆ ಎಂದೇ ಪ್ರಸಿದ್ಧವಾದರೂ ನಿಜ ಕೃಷಿಸಂಸ್ಕೃತಿ ಮಹತ್ತ್ವಸಾರುವ ‘ಕೊಂತಿಪೂಜೆ’ಗೆ ಇಲ್ಲಿ ನೆಲೆ ಕಾಣಿಸಿದ್ದೆಲ್ಲ ಗಮನಾರ್ಹ. ವರ್ಷಾವಧಿ ಮಹಾಶಿವರಾತ್ರಿಯಂತೂ ದೇವಳಕ್ಕೆ ಜಾತ್ರೆಯ ಕಳೆ ತರುವುದರೊಡನೆ, (ನೋಡಿ: ಶಿವರಾತ್ರಿಯಂದು ಶನಿಪ್ರಭಾವ ) ಸ್ಥಳೀಯ ಹವ್ಯಾಸೀ ಕಲಾವಿದರ ನಾಟಕ ಹಪಹಪಿಗೆ ದೊಡ್ಡ ಅವಕಾಶವನ್ನು ತೆರೆದಿಡುತ್ತಲೇ ಬಂದಿದೆ. ಇಂಥಾ ಚಟುವಟಿಕೆಗಳ ಸಹಜ ಟಿಸಿಲಾಗಿ ಈಚೆಗೆ ಮೂಡಿದ್ದು – ಯಕ್ಷಗಾನ ಮೂಡಲಪಾಯ.

ಅನಂತನಿಗೆ ಬಾಲ್ಯದಿಂದ ಯಕ್ಷಗಾನ (ಅಜ್ಜನೂರು – ಪುತ್ತೂರಿನ ಪ್ರಭಾವದಿಂದ, ಮುಖ್ಯವಾಗಿ ತೆಂಕುತಿಟ್ಟು) ಬಲುಪ್ರಿಯವೇ. ತನ್ನ ವೃತ್ತಿನೆಲೆ (ಚಾರ್ಟರ್ಡ್ ಅಕೌಂಟೆಂಟ್) ಗಟ್ಟಿಯಿರುತ್ತ, ಅನಂತ ಸಾರ್ವಜನಿಕ ಚಟುವಟಿಕೆಗಳಿಗೆ ತೆರೆದುಕೊಳ್ಳುತ್ತಿದ್ದಂತೆ, ಮೊದಮೊದಲು ಸಿಕ್ಕಿದ್ದೂ ಊರಿನಿಂದ ಪ್ರವಾಸ ಬರುತ್ತಿದ್ದ ಯಕ್ಷಗಾನ ತಂಡಗಳೇ. ಸ್ಥಳೀಯವಾಗಿ ಒಂದೋ ಎರಡೋ ಪ್ರದರ್ಶನಾವಕಾಶ ಕಲ್ಪಿಸುವುದರಿಂದ ತೊಡಗಿದ ಚಟುವಟಿಕೆಗಳು, ನೋಂದಾಯಿತ ಸಂಘಟನೆ, ಅವಶ್ಯ ಪುಸ್ತಕಗಳ ಪ್ರಕಟಣೆ, ಆಸಕ್ತರಿಗೆ ತರಬೇತಿ, ಹವ್ಯಾಸೀ ಯಕ್ಷ ಆಟ, ಕೂಟ ಎಂದು ವಿಸ್ತರಿಸುತ್ತ ಹೋಯ್ತು. ಬೇಗಾರು ಶಿವಕುಮಾರ್, ಪ್ರದೀಪ ಸಾಮಗರೇ ಮೊದಲಾಗಿ ಕೆಲವು ಯಕ್ಷ-ಶಿಕ್ಷಕರು ಅನಂತನ ಪ್ರಾಮಾಣಿಕ ಕಾಳಜಿಗೆ ಧಾರಾಳ ಸೇವೆಯನ್ನೇ ಕೊಟ್ಟದ್ದಿದೆ. ಮುಂದುವರಿದು ತೆಂಕುತಿಟ್ಟಿನ ಹಿರಿಯ ಮತ್ತು ಅದ್ವಿತೀಯ ನಾಟ್ಯಗುರು ಎಂದೇ ಖ್ಯಾತರಾದ ಕರ್ಗಲ್ಲು ವಿಶ್ವೇಶ್ವರ ಭಟ್ಟರು ಇವನಿಗೆ ಪೂರ್ಣಕಾಲೀನವಾಗಿ ಒದಗಿದ್ದಂತು ನಿಜಕ್ಕೂ ದೊಡ್ಡ ಅದೃಷ್ಟವೇ ಸರಿ. ಈ ಹಂತದಲ್ಲಿ ಯಕ್ಷಗಾನ ಅಕಾಡೆಮಿಯ ಕೆಲವು ಸಹಯೋಗಗಳೂ ಕೆ. ಹೆಮ್ಮನಹಳ್ಳಿಯ ಪರಿಸರದ ಮೂಲ ವಾಸನೆಗಳೂ ಒಟ್ಟುಗೂಡಿ ಬಹುತೇಕ ನಶಿಸಿಯೇ ಹೋಗಿರುವ ಮೂಡಲಪಾಯ ಯಕ್ಷಗಾನದ ಪುನರುತ್ಥಾನ ಅನಂತನ ಬಳಗಕ್ಕೆ ತೊಡರಿಕೊಂಡಿತು.

ಮೂಡಲಪಾಯ ಯಕ್ಷಗಾನ ಈ ವಲಯದ ಹಳ್ಳಿಹಳ್ಳಿಗಳಿಂದ ತೊಡಗಿ, ತಿಪಟೂರಿನ ಮೂಲೆಯವರೆಗೂ ದುರ್ಬಲ ಅಂತರ್ಜಲ ಸೆಲೆಯಂತೆ ವ್ಯಾಪಿಸಿರುವುದನ್ನು ಅನಂತ ಕಂಡುಕೊಂಡ. ಅದರ ಬೆಂಬತ್ತಿ, ಕಲಾವಿದರನ್ನು ಗುರುತಿಸುವಲ್ಲಿ ಅನಂತನ ಸಂಘಟನಾ ಚಾತುರ್ಯ ಬಳಕೆಯಾಯ್ತು. ಹಾಗೆ ಸಿಕ್ಕ ಹನಿಹನಿಯನ್ನು ಮೊಗೆಯುತ್ತ, ಕಸಕೊಳೆ ಕಳೆಯುತ್ತ, ಅದರ ಸ್ವತ್ವಕ್ಕೆ ತನ್ನ ಸತ್ತ್ವದ ಯಕ್ಷಾನುಭವದ ಬಲದಲ್ಲಿ ಎತ್ತುಗಡೆ ಕೊಡುತ್ತ, ಮಾತು ಧಾತು ತರಬೇತುಗಳನ್ನೂ ಕೊಡುತ್ತ, ಇಂದು ಅದನ್ನು ಮತ್ತೆ ಪ್ರದರ್ಶನ ಮಂಚಕ್ಕೆ ಏರಿಸುವಷ್ಟು ಕೆಲಸ ಮಾಡಿದ ಸಾಹಸ ಕರ್ಗಲ್ಲು ವಿಶ್ವೇಶ್ವರ ಭಟ್ಟರದು.


ಅದೇ ಪ್ರಥಮ ಎನ್ನುವಂತೆ ೧೩-೧-೨೦೧೮ರ ಸಂಜೆ, ಮಹಾರಾಜಾ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿದ್ದ ಸ್ವದೇಶೀಮೇಳದ ವೇದಿಕೆಯಲ್ಲಿ ಕೆ. ಹೆಮ್ಮನ ಹಳ್ಳಿ ಮಹಾಲಿಂಗೇಶ್ವರ ಕೃಪಾಪೋಷಿತ ಮೂಡಲಪಾಯ ಯಕ್ಷಗಾನ ಬಳಗ ಕೊಟ್ಟ ವಾಲಿಮೋಕ್ಷ ಪ್ರದರ್ಶನವನ್ನು ನೋಡುವ ಅವಕಾಶ ನನಗೆ ಒದಗಿತು. ನಮ್ಮ ಅಮ್ಮನ ಸ್ಮೃತಿಗೆ ಸೇರಿದ್ದ ಬಂಧುಗಳೆಲ್ಲರಿಗೂ ಒದಗಿತ್ತು. ಬಣ್ಣ ಬಳಿದು, ವೇಷ ಕಟ್ಟಿ, ರಂಗಕ್ಕೆ ನೂಕಿ, ನಾಲ್ಕು ಹೆಜ್ಜೆ ಕುಣಿಸಿ, ಕಥಾಪೋಷಣೆಯ ಮಾತುಗಳನ್ನೂ ತೆಗೆಸಿದ ಕರ್ಗಲ್ಲಿನವರ ಕೆಲಸ ಅಸಾಧಾರಣವೇ ಸರಿ. ಇದು ಬರುವ ದಿನಗಳಲ್ಲಿ ರೈತಾಪಿ ಕೊರಡುಗಳನ್ನು ಪರಿಪೂರ್ಣ ಯಕ್ಷ-ಕಲಾ ಕುಸುರಿಯಾಗಿ ಕಾಣಿಸುವುದರಲ್ಲಿ ನನಗಂತೂ ಅಪಾರ ನಂಬಿಕೆಯಿದೆ.

೩. ಪ್ರದರ್ಶನ, ಪ್ರಾಯೋಜಕತೆ, ಪ್ರಯೋಜನ! (ಜಾತ್ರೆಗಳೋ ಜಾತ್ರೆಗಳು!!)

ಸುತ್ತೂರಿನ ‘ಜಗದ್ಗುರು ಶಿವರಾತ್ರೀಶ್ವರ’ ಮಠ ಮತ್ತದರ ಸಹಯೋಗೀ ಅಸಂಖ್ಯ ಸಂಸ್ಥೆಗಳು ಮೈಸೂರ ಸುತ್ತುಮುತ್ತಲಿನ ಸಾಮಾಜಿಕ ಚಟುವಟಿಕೆಗಳಲ್ಲಿ ತುಂಬಾ ಪ್ರಸಿದ್ಧವಾಗಿವೆ. ಅದರದೇ ಒಂದು ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿ ಮೇಲೆ ಬಂದ ನನ್ನ ತಮ್ಮ ಅನಂತ, ಇಂದು ಅದರ (ಹೊರಗಿನಿಂದ) ಹಿರಿಯ ಲೆಕ್ಕಪತ್ರಾಧಿಕಾರಿಗಳಲ್ಲೂ ಒಬ್ಬನಾಗಿದ್ದಾನೆ. ಮೈಸೂರಿನಲ್ಲಿ ನಮ್ಮ ಅಮ್ಮನ ಕಲಾಪಗಳು ನಡೆದ ದಿನ ಸುತ್ತೂರಿನಲ್ಲಿ (ಮೈಸೂರಿನಿಂದ ಸುಮಾರು ಮೂವತ್ತು ಕಿಮೀ) ಮಠದ ಬಹುಖ್ಯಾತಿಯ ವರ್ಷಾವಧಿ ಜಾತ್ರೆ (ಸುತ್ತೂರು ಜಾತ್ರೆ) ನಡೆದಿತ್ತು. ಅದನ್ನು ತೋರಿಸಲೆಂದೇ ಮಾರಣೇ ದಿನ ಅನಂತ-ರುಕ್ಮಿಣಿಯರು, ಆನಂದನ ಹೆಂಡತಿ ಜಯಶ್ರೀ ಸೇರಿದಂತೆ ನಮ್ಮೀರ್ವರನ್ನೂ ಕರೆದೊಯ್ದಿದ್ದರು.

ಬಾಲ್ಯದಲ್ಲಿ ಪುತ್ತೂರು ಜಾತ್ರೆಯನ್ನು ಧಾರಾಳ ಸಂತೋಷಿಸಿ ಅನುಭವಿಸಿದ್ದ ನಾನು, ವಿಚಾರ ಬಲಿತ ಮೇಲೆ ಜಾತ್ರೆಗಳ ಆಕರ್ಷಣೆ ಕಳೆದುಕೊಂಡಿದ್ದೆ. ಚೂರಿಯಿಂದ ಟ್ರಾಕ್ಟರಿನವರೆಗೆ, ಕಲ್ಲ ಬಾನಿಯಿಂದ ಬಾನ ಬೋಗುಣಿಯವರೆಗೆ, ಕಡಲೆಯಿಂದ ಗೋಬಿಮಂಚೂರಿವರೆಗೆ, ಗಿಲೀಟು ಗೊಂಬೆಯಿಂದ ಅಪರಂಜಿವರೆಗೆ, ಭಜನೆಯಿಂದ ಭಾಷಣದವರೆಗೆ, ನೃತ್ಯನಾಟಕದಿಂದ ಗಾನಸಿನಿಮಾದವರೆಗೆ, ಕಾಡುಸೊಪ್ಪಿನಿಂದ ಗಜಗಾತ್ರದ ಕುಂಬಳದವರೆಗೆ, ಚಿಲ್ಲರೆ ಜೂಜುಗಳು, ಮನರಂಜನೆಗಳು, ಆಟಗಳು…… ಎಂದು ವಿಪರೀತಕ್ಕೆ ಬೆಳೆದಿರುವ ಈಚಿನ ಜಾತ್ರೆಗಳಾದರೋ ನೋಡಿ, ತಿರುಗಿ, ಸವಿದು ಮುಗಿಯದು. ಅವುಗಳ ಪ್ರಯೋಜನದ ಬಹುಮುಖವನ್ನು ಕಂಡದ್ದಕ್ಕೇ ಇಂದು, ದೇವರ ಸೋಂಕು ಇಲ್ಲದ ಸಾಹಿತ್ಯ, ಕ್ರೀಡೆ, ಕಲೆ, ವಿಜ್ಞಾನ ಎಂದೇನೆಲ್ಲ ಹೇಳಿಕೊಳ್ಳುವ ಕೂಟಗಳೂ ಯಶಸ್ವಿಯಾಗುತ್ತಿರುವುದು ಜಾತ್ರೆ ಸೇರಿಸುವುದರಲ್ಲೇ!!

ನಾವು ಮೈಸೂರಿನಲ್ಲಿದ್ದ ಎರಡು ದಿನಗಳಲ್ಲೂ ಮೈಸೂರಿನ ನಿತ್ಯದ ದೊಡ್ಡ ದೊಡ್ಡ ಮಾಲುಗಳಿಂದ ತೊಡಗಿ, ದಸರಾ ಮೈದಾನ, ಸ್ಕೌಟ್ ಮೈದಾನ (ಸಹಾರಾ ಮೇಳ), ಮಹಾರಾಜಾ ಕಾಲೇಜು ಮೈದಾನ (ಸ್ವದೇಶೀಮೇಳ), ರಂಗಾಯಣದ ವಠಾರಗಳಲ್ಲೆಲ್ಲ (ಬಹುರೂಪೀ) ಇಂಥ ಜಾತ್ರೆಗಳೇ ನಡೆದಿದ್ದವು. ವೈಯಕ್ತಿಕವಾಗಿ ಸಾಗಣೆ, ಸ್ಥಳ ಬಾಡಿಗೆ, ಪ್ರಚಾರ, ನಿರ್ವಾಹಕರ ಶ್ರಮ ಮತ್ತು ವೆಚ್ಚ, ಸ್ಪರ್ಧೆಗಳ ಹೊರೆಗಳನ್ನು ನಿಭಾಯಿಸಿದ ಕೊನೆಯಲ್ಲಿ, ಮಳಿಗೆದಾರರು ಬಹುತೇಕ ‘ಸತ್ತೇ ಹೋಗುತ್ತಾರೆ’! ಆದರೆ ವ್ಯವಸ್ಥಾಪನೆಯ ಕೀರ್ತಿ ಪತಾಕೆ ಜಾತ್ರೆಯಿಂದ ಜಾತ್ರೆಗೆ ಮೇಲೇರುತ್ತಲೇ ಇರುತ್ತದೆ. ಮತ್ತೀ ‘ದಾಖಲೆ’ಗಳ ಸಮರ್ಪಕತೆಯಲ್ಲಿ ಮುಂದಿನ ವರ್ಷಗಳ ಪ್ರಾಯೋಜಕ ದರದಲ್ಲಿ (ಸರಕಾರ, ಬ್ಯಾಂಕು, ಎಲ್ಲೋ ಬೋಳಿಸಿ ಇನ್ನೆಲ್ಲೋ ಮಹಾದಾನಿಗಳಂತೆ ತೋರುವವರು ಇತ್ಯಾದಿ) ಬಡ್ತಿ ಸಿಗುವುದೂ ಅಷ್ಟೇ ನಿಜ.

ನೆನಪಿರಲಿ, ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಿಂದ ತೊಡಗಿ, ಆಳ್ವಾಸ್ ನುಡಿಸಿರಿ ಅಥವಾ ವಿರಾಸತ್‍ಗಳಂಥ ಖಾಸಗಿ ಕಲಾಪಗಳನ್ನು ಹಾಯ್ದು, ಧಾರವಾಡದ (ಕಸಾಪ ಸಮ್ಮೇಳನಗಳ ಉತ್ತಮಿಕೆ ಎಂದೇ ಕೊಚ್ಚಿಕೊಳ್ಳುವ) ಸಾಹಿತ್ಯ ಸಂಭ್ರಮದವರೆಗಿನ ಎಲ್ಲ ಮಹಮಹಾ ‘ವೈಚಾರಿಕ ಕೂಟ’ಗಳ ನಿಜ ಯಶಸ್ಸಿರುವುದೇ ಹೀಗೆ ಪ್ರಾಯೋಜಕತ್ವದ ಪ್ರಗತಿಶೀಲ ನಿರಂತರತೆ ಸಾಧಿಸುವುದರಲ್ಲಿ! ಮತ್ತೂ ನೆನಪಿರಲಿ, ಅಂಥಲ್ಲೆಲ್ಲ ವೇದಿಕೆಯ ಮೇಲೆ ಕಲಾಪವಿಲ್ಲದೆಯೂ ಸಭೆಯಲ್ಲಿ ‘ಘನ ಉಪಸ್ಥಿತಿ’ಯನ್ನು ಕೊಡುವ ಬಹುತೇಕ ಹೆಸರಾಂತವರೂ ಅದೇ ಉದ್ದೇಶಕ್ಕೆ ಪ್ರಾಯೋಜಿತರೇ! ಅವರಾದರೂ ಕೇವಲ ಕುತೂಹಲದಿಂದ, ಸ್ವಂತ ಖರ್ಚಿನಲ್ಲಿ ಪ್ರಯಾಣ, ವಾಸ ಮಾಡುವುದಿಲ್ಲ. ಸ್ಪಷ್ಟ ಉದ್ದೇಶ ಇಲ್ಲದೆ ಅನೂಹ್ಯ ಹೊಸತು, ಅಸಾಧ್ಯ ಸಂಭ್ರಮ ಅರಸಿ ಎಂಥ ಉದಾತ್ತ ಹೆಸರಿನದೇ ಜಾತ್ರೆಗೆ ಹೋಗುವ ಮಂದಿ ನಿಜದಲ್ಲಿ ಮರುಳರೇ ಸರಿ. ಅದಕ್ಕೆ ಇರಬೇಕು ಗಾದೆ – ಜನ ಮರುಳೋ ಜಾತ್ರೆ ಮರುಳೋ.

೪. ಒಳ್ಳೆತನಗಳಿಗೊಂದು ಕೈಗಂಬ – ಜಯರಾಮ ಪಾಟೀಲ್

ಸುತ್ತೂರು ಜಾತ್ರೆ ಸುತ್ತಲು ಹೊರಟಿದ್ದ ನಾವು, ಮೈಸೂರ ಉಂಗುರ ರಸ್ತೆಯಿಂದ ಉತ್ತನಹಳ್ಳಿ ಕವಲು ಹಿಡಿದೆವು. ಒಮ್ಮೆಲೆ ಅನಂತ, “ಏ ಐದೇ ಮಿನಿಟಿಗೆ ನಿನ್ನ ಪಾಟೀಲ್ರ ಮನೆ ನೋಡಿಬಿಡು….” ಎಂದವನೇ ಅದೊಂದು ಪುಟ್ಟ ಕಾಡಿನಂಥ ವಠಾರದೆದುರು ನಮ್ಮನ್ನು ಕಾರು ಇಳಿಸಿಯೇಬಿಟ್ಟ. ನನ್ನ ನೆನಪಿನಂಗಳದಲ್ಲಿ ಜಯರಾಮ ಪಾಟೀಲ್ ಅಂದರೆ, ಆಗೀಗ ನನ್ನಂಗಡಿಗೆ ಬರುತ್ತಿದ್ದ ಒಬ್ಬ ಪುಸ್ತಕಪ್ರೇಮಿ ಮಾತ್ರ. ಆದರೆ ಅನಂತನ ನೆಪದಲ್ಲಿ ಅಂದೂ ಮರುದಿನವೂ ಒದಗಿದ ಒಡನಾಟದಲ್ಲಿ, ಪಾಟೀಲ್ ಬ್ರಹ್ಮಾವರ ಮೂಲದ, ಬಹುತೇಕ ಸ್ವಯಂಶಿಕ್ಷಣದ, ಕಳೆದೆರಡು ದಶಕಗಳಿಗೂ ಮಿಕ್ಕು ಮೈಸೂರಿನಲ್ಲಿ ವೃತ್ತಿತಃ ಕಟ್ಟಡ ಉದ್ದಿಮೆದಾರನಾಗಿ ನೆಲೆಸಿರುವ, ಬಹುತೇಕ ಸಮಾನ ಗುಣಧರ್ಮಗಳ ರಜನೀ ಪತಿಯಾಗಿರುವ, (ಏಕೈಕ ಮಗ – ಸಕುಟುಂಬ, ಬೆಂಗಳೂರಿನಲ್ಲಿ ನೆಲೆಸಿರುವ ವೃತ್ತಿಪರ ಫೊಟೋಗ್ರಾಫರ್!) ನಿಜ ಒಲವಿನಲ್ಲಿ ಸಾಹಿತ್ಯ, ರಂಗಕಲೆ ಹಾಗೂ ಮಾನವೀಯ ಮೌಲ್ಯಗಳ ಪ್ರೇಮಿ, ಪ್ರಚಾರದೂರದ ಮನುಷ್ಯ ಎಂದರಿವಾಯ್ತು. ಪಾಟೀಲರು ಹೊಟ್ಟೆಪಾಡಿಗಾಗಿ ಮುಂಬೈಯಾದಿ ಲೋಕಪರ್ಯಟನೆ ನಡೆಸಿ ಆರ್ಥಿಕವಾಗಿ ಗಟ್ಟಿಯಾದದ್ದು ಮೈಸೂರಿನಲ್ಲಿ. ಆದರೆ ಅವರ ಮನೋಸಾಧನೆಯಲ್ಲಿ – ಸಾಹಿತ್ಯ, ನಾಟಕ – ಅದರಲ್ಲೂ ಮುಖ್ಯವಾಗಿ ಬಿವಿಕಾರಂತರ ಒಡನಾಟದೊಡನೆ ಗಳಿಸಿದ ‘ಸಂಪತ್ತು’ ಅಸಾಮಾನ್ಯ ಮತ್ತದು ಪರೋಕ್ಷವಾಗಿ ಅವರ ಮಾತು, ಕೃತಿಗಳಲ್ಲಿ ನಮ್ಮನ್ನು ಗಾಢವಾಗಿ ಪ್ರಭಾವಿಸಿತು.

ಪಾಟೀಲರ ಆವಾಸ ಸುಮಾರು ಅರ್ಧ ಎಕರೆ ನೆಲದಲ್ಲಿತ್ತು. ಉತ್ತನಳ್ಳಿ – ಸುತ್ತೂರ ದಾರಿ, ಬಹುತೇಕ ಮರೆವಿಗೆ ಸಂದ ರಾಜಕಾಲುವೆ ಮತ್ತು ಹಾಳುಬಿದ್ದ ಹೊಲಗಳ ಎಡೆಯಲ್ಲಿನ, ಭೌಗೋಳಿಕವಾಗಿ ಅಷ್ಟೇನೂ ಆಕರ್ಷಕವಲ್ಲದ ಜಾಗ. ಆದರೆ ಮಳೆನೀರು, ಮನೆನೀರು ವ್ಯರ್ಥವಾಗದಂತೆ ಅಲ್ಲೇ ನೆಲದೊಳಕ್ಕಿಳಿಸುವ ವ್ಯವಸ್ಥೆ, ಇದ್ದ ತೆಂಗು ಸೇರಿದಂತೆ ಕೆಲವು ಮರಗಳಿಗೆ ಇನ್ನಷ್ಟು ಹಸಿರು ಸೇರಿಸಿ ಮೂಡುವ ವಾತಾವರಣ ಆಧುನಿಕದಲ್ಲೊಂದು ಋಷ್ಯಾಶ್ರಮವನ್ನೇ ನೆನಪಿಸುತ್ತದೆ. ಆಶ್ರಮಕ್ಕೆ ಸಹಜವಾಗಿ ಅಲ್ಲಿನ ಮರಗಳ ಮೇಲೆ (ಐವತ್ತಕ್ಕೂ ಮಿಕ್ಕು?) ಸಾಕಷ್ಟು ಮಂಗಗಳು ಖಾಯಂವಾಸಿಗಳು. ಅವುಗಳಿಗೆ ಉಚಿತ ಹಣ್ಣು ಆಹಾರಗಳ ವ್ಯವಸ್ಥೆ ಪಾಟೀಲ (-ರಜನಿ) ದಂಪತಿಯದ್ದೇ. ಮೂಲದಲ್ಲಿ ಹಂಚು ಹೊದ್ದ ಮನೆಯ ಮಾಡಿಗೆ ಪೂರ್ತಿ ತಗಡಿನ ಮುಚ್ಚಿಗೆ ಬಂದಿರುವುದು, ಕಿಟಕಿ, ಜಗುಲಿಯ ಕಪಾಟುಗಳಿಗೆಲ್ಲ ಸಣ್ಣ ಕಣ್ಣಿನ ಬಲೆ ಬೆಸೆದಿರುವುದು ಮಂಗಗಳನ್ನು ಸಹಿಸಿಕೊಳ್ಳುವುದಕ್ಕಾಗಿಯೇ! ನಮ್ಮ ಚಪ್ಪಲಿಗಳನ್ನು ಮನೆ ಒಳಗೇ ಬಿಡಿಸಿದ್ದರು. ಮಾರಣೇ ದಿನ ಅಲ್ಲಿ ನಮ್ಮ ಕಾರು ಬಿಡುವುದಿದ್ದಾಗ ಅದನ್ನೂ ಶೆಡ್ಡಿನೊಳಗೆ ಬಂದ್ ಮಾಡಿಸಿದ್ದರು. ನಮನಿಮಗೆ ಸಹಜವಾಗಿ ಬರುವ ಯೋಚನೆ – ಇಷ್ಟೆಲ್ಲ ಕಷ್ಟದ ಬದಲು ಆಹಾರ ಕೊಡದೇ ಆಗೀಗ ಒಂದು ಪಟಾಕಿ ಹೊಡೆದರೆ ಸಾಕಲ್ಲಾ – ಪಾಟೀಲ ದಂಪತಿಯ ಯೋಚನಾಲಹರಿಯೇ ಅಲ್ಲ! ನಾವಲ್ಲಿದ್ದಷ್ಟು ಹೊತ್ತೂ ಆಗೀಗ ಧಬಕ್ ಸದ್ದು ಕೇಳಿದಾಗೆಲ್ಲ ನಮ್ಮ ಹುಬ್ಬು ಹಾರುತ್ತಿತ್ತು. “ಹಾಂ ಏನಿಲ್ಲ, ಮಂಗ ಮಾಡಿಗಿಳಿದ ಸದ್ದು” ಎಂದು ಅವರು ನಮ್ಮನ್ನು ಸಮಾಧಾನಿಸುತ್ತಿದ್ದರು. ಮರುದಿನ ನಾವಲ್ಲಿ ಊಟ ಮಾಡುವ ಹೊತ್ತಿಗೆ ಆ ಈ ಕಿಟಕಿಯಲ್ಲಿ ಕುತೂಹಲದ ಮಂಗನ ಕಣ್ಣುಗಳು ಇಣುಕುವುದು ನಮಗೂ ಒಗ್ಗಿಹೋಗಿತ್ತು!

ನಗರ ಪರಿಸರಕ್ಕೆ ಸಹಜವಾಗಿ ಪೋಲಿಬಿದ್ದ ನಾಯಿಗಳು, ಬೀಡಾಡೀ ಬೆಕ್ಕುಗಳು ಎಷ್ಟೋ ಇವರಲ್ಲಿ ಖಾಯಂ ನೆಲೆಸಿದ್ದರೆ ಮತ್ತೆಷ್ಟೋ ಖುಶಿವಾಸೀ ಭೇಟಿಕೊಡುತ್ತಲೂ ಇರುತ್ತವಂತೆ. ಅವುಗಳ ಆಹಾರ ಮಾತ್ರವಲ್ಲ, ಆರೋಗ್ಯರಕ್ಷಣೆಯ ಹೊಣೆಯನ್ನೂ ಪಾಟೀಲ ದಂಪತಿ, ಜತೆಗೆ ಮನೆಯವರಂತೇ ಇದ್ದ ಎರಡು – ಬಹುತೇಕ ಅನಾಥ ಮಹಿಳೆಯರ ಸಹಕಾರದೊಡನೆ ನಡೆಸಿದ್ದರು. (ಮರುದಿನ ನಾವು ಪಾಟೀಲರೊಡನೆ ಹೊರಗಿದ್ದು ಬರುವಾಗ, ರಜನಿ ಯಾವುದೋ ಅಸ್ವಸ್ಥ ಬೆಕ್ಕಿಗೆ ಅದೇನೋ ಔಷಧಿಯ ಚುಚ್ಚುಮದ್ದು ಕೊಟ್ಟ ವರದಿ ಕೇಳಿದ್ದೆವು. ಗಮನಿಸಿ, ರಜನಿ ವೈದ್ಯೆ ಏನೂ ಅಲ್ಲ.) ನಾಯಿಗಳಂತೆ ಮನೆಬಾಗಿಲ ಹೊರಗುಳಿವ ಶಿಸ್ತು ಬೆಕ್ಕುಗಳದ್ದಲ್ಲ. ಅವುಗಳ ಸಹಜ ಓಡಾಟ ಅನುಕೂಲಿಸುವಂತೆ ಮನೆಯ ಒಂದೆರಡು ಆಯಕಟ್ಟಿನ ಜಾಗಗಳಲ್ಲಿ ಖಾಯಂ ತೆರೆಕಿಂಡಿಗಳೇ ಇದ್ದುವು. ಅವು ಸಾಕಷ್ಟು ಎತ್ತರದಲ್ಲೇ ಇತ್ತು. ಆದರೂ ಸುತ್ತ ಕಾಡು ಕೂಡಿರುವಾಗ ಸಮೃದ್ಧವೇ ಇರಬೇಕಾದ ಇಲಿ, ಹೆಗ್ಗಣಗಳು ಮನೆ ಹೊಕ್ಕಾವಲ್ಲ – ನನ್ನ ಸಂದೇಹ. ಗುಡ್ಡ ನಡುಗಿದಂತೆ ಪಾಟೀಲ್ ನಕ್ಕು ನುಡಿದರು “ಹೊರಗೆ ಒಂದೇ ಒಂದು ಇಲಿ, ಹೆಗ್ಗಣ ಉಳಿಯದಂತೆ ಅಲ್ಲಿ ಸಹಜವಾಗಿರುವ ಹಾವುಗಳು ನೋಡಿಕೊಳ್ಳುತ್ತವೆ.” ‘ನಮ್ಮನೆ’ಯ ರಮ್ಯ ಕಲ್ಪನೆಯೊಡನೆ ಇಲ್ಲಿಗೆ ಬರುವವರೇ ಎಚ್ಚರ – ಅಸಂಖ್ಯ ಗುರ್ರಪ್ಪನವರನ್ನು ಸಮಾಧಾನಿಸುವುದರೊಂದಿಗೆ, ತಲೆಯಲ್ಲಿ ಮಂಗಪ್ರಸಾದ ಹೊತ್ತು, ಕಾಲಿಗೆ ಉರಗಬಳ್ಳಿ ತೊಡಬೇಕಾದೀತು – ಎಚ್ಚರೆಚ್ಚರ!

ಉದಾರ ವಾಸ್ತುವಿನ ಮನೆಯೊಳಗೊಂದು ಪುಟ್ಟ ಚೌಕ ತೆರೆದಂಗಳವೂ ಇದೆ. ಅದಕ್ಕೆ ಭದ್ರ ಕಬ್ಬಿಣ ಸಲಾಕೆಗಳ ಚಪ್ಪರ ಹೆಣೆದಿದ್ದರು. ‘ಕಳ್ಳರ ಭಯವಿರಬೇಕು’ ಎಂಬ ನಮ್ಮ ಸರಳ ತೀರ್ಮಾನವನ್ನು ಪಾಟೀಲರು ಹುಸಿ ಮಾಡಿದರು. ಹಿಂದೆ ಅದು ತೆರೆದುಕೊಂಡಿದ್ದಾಗ ಒಂದೆರಡು ಬಾರಿ ಚಿರತೆಗಳು ಇಳಿದು, ಅಯಾಚಿತವಾಗಿ ಇವರ ಬೆಕ್ಕಿನದೋ ನಾಯಿಯದೋ ಲೆಕ್ಕವನ್ನು ಕಡಿಮೆ ಮಾಡಿದ್ದುವಂತೆ. ಅದು ಸಮೂಹ (ಸನ್ನಿ) ಮಾಧ್ಯಮಗಳಲ್ಲಿ ಭೀಕರ ಸುದ್ದಿಯಾಗುವುದು ಬೇಡವೆಂಬ ಒಂದೇ ಕಾರಣಕ್ಕೆ ಚಿರತೆ ಸುದ್ದಿ ತಮ್ಮೊಳಗೇ ಇಟ್ಟುಕೊಂಡು, ತಡೆಬೇಲಿ ಮಾಡಿಸಿದ್ದರು. “ಹಾಗೆ ಚಿರತೆ ಮಾತ್ರವಲ್ಲ, ಕಾಡು ಬೆಕ್ಕುಗಳೂ ಇಲ್ಲಿ ಸಾಕಷ್ಟಿವೆ ಮತ್ತೆ ಕೆಲವು ನಮ್ಮ ಕಬ್ಬಿಣ ಹಾಗೂ ಹಂಚಿನ ಮಾಡುಗಳ ಸಂದಿನಲ್ಲಿ ಬಿಡಾರ ಹೂಡುತ್ತವೆ. ಗಾತ್ರದಲ್ಲಿ ನಮ್ಮ ಬೆಕ್ಕುಗಳಿಗೆ ವಿಶೇಷ ವ್ಯತ್ಯಾಸವಿಲ್ಲದ ಕಬ್ಬೆಕ್ಕು, ಚಿರತೆ-ತಡೆ ಮೀರಬಲ್ಲವು. ಆದರೆ ಅವಕ್ಕೆ ಮನೆಯೊಳಗಿನ ಆಕರ್ಷಣೆ ಏನೂ ಇಲ್ಲ.”

ಕಾಡು, ಅದಕ್ಕೆ ತಾಗಿದಂಥ ಜಾಗಗಳಲ್ಲಿ ಜೀವನ ರೂಢಿಸಿಕೊಂಡವರ (ಹೆಚ್ಚಾಗಿ ಕೃಷಿಕರೇ) ಕಥನಗಳು ಎಷ್ಟೂ ಕೇಳುತ್ತೇವೆ, ನನ್ನ ಆತ್ಮೀಯ ಬಂಧುಗಳಲ್ಲೇ ಸಾಕಷ್ಟು ಜನರನ್ನು ಕಾಣುತ್ತಲೂ ಇದ್ದೇನೆ. ಕಪಿಕಾವಲಿಗೆ – ನಿತ್ಯದ ಜನ, ಬೋನು, ಬಂಧಿಸಿಟ್ಟ ಮಂಗಗಳ ಸಂದೇಶ, ಹಕ್ಕಿಗಳಿಗೆ – ಬೆರ್ಚಪ್ಪ, ಹಳ್ತು ಟೇಪಿನ ಮಾಲೆ, ಬಲೆ ಮತ್ತೆ ಹಂದಿ ತಡೆಗಂತೂ ನೂರೆಂಟು ವಿಧಾನ – ಮನುಷ್ಯನ ಕೂದಲು, ಸ್ಫೋಟಕ ಹುಗಿದ ಮಾಂಸ, ಕತ್ತರಿ, ಹಳೆಸೀರೆ ಇತ್ಯಾದಿ. ಆನೆಯೋಡಿಸಲು ಅಟ್ಟಳಿಗೆ ಕಟ್ಟಿ ಜಾಗರಣೆ ನಡೆಸುವವರ ಬೆಂಕಿ, ಡಬ್ಬಿಬಡಿತ, ಆಗೀಗ ಪಟಾಕಿ, ಹುಸಿ ಗುಂಡು…. ಮುಗಿಯದ ಕತೆ, ಖಂಡಿತಕ್ಕೂ ವ್ಯಥೆ ಇದು. ಈ ಎಲ್ಲ ಸುಸ್ತಿನ ನಿವಾರಣೆಯನ್ನೇ ಬಯಸುವ ಮಂದಿಯನ್ನು ಪಕ್ಕಾ ನಾಗರಿಕರು ವೈಭವೀಕರಿಸುವ ಭರದಲ್ಲೋ ತಪ್ಪಿಯೋ ‘ಪ್ರಕೃತಿಯೊಂದಿಗೆ ಸಹಜೀವನ’ (One with Nature!) ಎಂದೇ ಹೇಳುವುದುಂಟು. ಆದರೆ ನಿಜದಲ್ಲಿ ನಗರದಲ್ಲಿದ್ದುಕೊಂಡೂ ವನ್ಯವನ್ನು ಆಕರ್ಷಿಸಿ (ಎಷ್ಟೇ ಸಣ್ಣವಿರಲಿ) ಉಳಿಸಿಕೊಂಡಿರುವ ಜಯರಾಮ ಪಾಟೀಲರ ಜೀವನ ಶೈಲಿಗೆ (ನೆನಪಿರಲಿ, ಇವರು ಯಾವವನ್ನೂ ಬಂಧಿಸಿಟ್ಟಿಲ್ಲ, ಎರೆ ಕಟ್ಟಿ ಸಂಗ್ರಹಿಸಿದ್ದೂ ಅಲ್ಲ!) ಮೇಲಿನ ವಿಶೇಷಣಗಳು ಅನ್ವಯಿಸುವಂಥವು, ಅವರ ಆದರ್ಶ ದೊಡ್ಡದು. ಸೊಳ್ಳೆ, ನೊಣಗಳೂ ನುಸಿಯದಂತೆ ಕಿಟಕಿಗಳಿಗೆ ಬಲೆ ಕಟ್ಟಿ, ಒಳಗೆ ವಿಷವಾಯು ಬಿಟ್ಟುಕೊಂಡು ಬದುಕುವ ನಮ್ಮಂಥವರ ಅದೃಷ್ಟಕ್ಕೆ, ‘ಪಾಟೀಲ ನಿವಾಸ’ (ಹೆಸರು – ನಮ್ಮನೆ) ಮೈಸೂರು ನಗರಕ್ಕೆ ತಾಗಿದಂತೇ ಇದೆ. ಹಾಗಾಗಿ ಹುಲಿ, ಆನೆ, ಸಿಂಹಗಳ ಸಹಯೋಗದ ಕುರಿತಾಗಿ ಪಾಟೀಲ ದಂಪತಿ ಹೇಳುವಂತಾಗಿಲ್ಲ!

ಮೊದಲ ದಿನ ನಾವು ಚುರುಕಾಗಿ ಜಯರಾಮ ಪಾಟೀಲರ ಮನೆಗೊಂದು ಸುತ್ತು ಹಾಕಿ ನಾಲ್ಕೇ ಮಾತಾಡಿ ಹೊರಟಿದ್ದೆವು. ಆದರೆ ಅಷ್ಟರಲ್ಲೇ ಆಡಿದ ಮಾತುಗಳಲ್ಲಿ ನಾವು ಸಂಗ್ರಹಿಸಿದ ಸುಳುಹೊಂದು ಹೇಗೆ ನಮ್ಮನ್ನು ಮಾರಣೇ ದಿನವೂ ಅವರ ಮನೆಗೆ ಆಕರ್ಷಿಸಿತು ಮತ್ತೂ ಹೆಚ್ಚಿನ ಪರಿಚಯಗಳಿಗೆ ಅವಕಾಶ ಮಾಡಿಕೊಟ್ಟಿತು.

೫. ಕುಂದೂರು ಬೆಟ್ಟದ ಕಾಮೇಗೌಡರು

ಜಯರಾಮ ಪಾಟೀಲರು ತಾನು ವಿಶ್ವಸ್ಥನಾಗಿದ್ದ ಬಿವಿ ಕಾರಂತರ ಸ್ಮರಣ ಸಂಸ್ಥೆಯ ಹೊರೆಯನ್ನು, ನ್ಯಾಯಿಕವಾಗಿ ಸಮರ್ಥ ಸಂಸ್ಥೆಯೊಂದಕ್ಕೆ ವಿಲೇವಾರಿ ಮಾಡುವ ಕುರಿತು ನನ್ನ ತಮ್ಮನ ಹೆಚ್ಚಿನ ಸಂಪರ್ಕಕ್ಕೆ ಬಂದದ್ದಿರಂತೆ. (ಈಗ ಅದನ್ನು ಹೆಗ್ಗೋಡಿನ ನೀನಾಸಂಗೆ ಒಪ್ಪಿಸಿ ನಿರಾಳರಾಗಿದ್ದಾರೆ!) ಆಗ ಮಾತು ವಿಸ್ತರಿಸಿದಾಗ, ಪಾಟೀಲರಿಗೆ ಗಣೇಶಬೀಡಿಗಳ ಯಜಮಾನರುಗಳೊಡನೆ ಇರುವ ಆಪ್ತತೆ ಮತ್ತು ಆ ಸಂಸ್ಥೆ ಕೊಡಮಾಡುವ ‘ರಮಾಗೋವಿಂದ ಪುರಸ್ಕಾರ’ದ ಉಲ್ಲೇಖವೂ ಬಂದಿತ್ತಂತೆ. ಅನಂತರ ಎಂದೋ ಅವರು ರಮಾಗೋವಿಂದ ಪುರಸ್ಕಾರದ ಆಮಂತ್ರಣವನ್ನು ಅನಂತನಿಗೆ ಕಳಿಸಿದ್ದರು. ಸುತ್ತೂರು ದಾರಿಯಲ್ಲಿ ನಾವು ಪಾಟೀಲರನ್ನು ಭೇಟಿಯಾಗಿದ್ದಾಗ, ಪ್ರಾಸಂಗಿಕವಾಗಿ “ಈ ಕುಂದೂರು ಬೆಟ್ಟದ ಕಾಮೇಗೌಡರ ಕೆಲಸ ನೀವು ನೋಡಬೇಕು” ಎಂಬ ಮಾತೂ ಬಂದಿತ್ತು. ಸಂಜೆ (೧೪-೧-೧೮) ಮನೆಯ ನಮ್ಮ ವಿರಾಮದ ಪಟ್ಟಾಂಗದಲ್ಲಿ, ಪಾಟೀಲರು ಕಳಿಸಿದ್ದ ರಮಾಗೋವಿಂದ ಪುರಸ್ಕಾರದ ಆಮಂತ್ರಣದ ಮೇಲೆ ಕಣ್ಣಾಡಿಸುತ್ತಿದ್ದಂತೆ (ಅದು ೨೮-೧-೧೮ರಂದು ಮೈಸೂರಿನಲ್ಲಿ ನಡೆಯಿತು) ನಮ್ಮನ್ನು ಅದರಲ್ಲಿನ ಬೆಟ್ಟ ಆಕರ್ಷಿಸಿತು. “ನಾಳೆ ನಾವು ಯಾಕೆ ಕುಂದೂರು ಬೆಟ್ಟ ಹತ್ತಿ ಬರಬಾರದು” ಎಂದು ಎಲ್ಲರೂ ತೊಡಗಿಕೊಂಡೆವು. ಕೇವಲ ದಾರಿ ಮತ್ತು ಹೆಚ್ಚಿನ ಮಾಹಿತಿಗಾಗಿ ನಾವು ಪಾಟೀಲರಿಗೆ ಫೋನ್ ಹಚ್ಚಿದೆವು. ಆದರೆ ಪುಣ್ಯಾತ್ಮ, “ಇಲ್ಲ, ಅಲ್ಲಿ ದಾರಿ ಕಠಿಣ. ನೀವು ನಮ್ಮನೆಗೆ ಬನ್ನಿ. ನನ್ನ ದೊಡ್ಡ ಕಾರಿನಲ್ಲೇ ಹೋಗೋಣ” ಎಂದೇ ನಿಶ್ಚೈಸಿಬಿಟ್ಟರು. ಮರುದಿನ ಅವರ ಔದಾರ್ಯ ಬಳಸಿದ ಸಂಕೋಚ ಕಾಡಿದರೂ, ನಿಜ ಬೆಟ್ಟವನ್ನು ಪೂರ್ತಿ ಹತ್ತದಿದ್ದರೂ ಸಂಜೆಗೆ ಎಲ್ಲ ಮುಗಿಸಿ ಮನೆಗೆ ಮರಳಿದಾಗ ನಮಗುಳಿದದ್ದು ಧನ್ಯತೆ ಒಂದೇ.

ಮೈಸೂರು – ಮಳವಳ್ಳಿ ಸುಮಾರು ಐವತ್ತು ಕಿಮೀ. ಮತ್ತೆ ಕೊಳ್ಳೆಗಾಲದತ್ತ ಸುಮಾರು ಹತ್ತು ಕಿಮೀಗೆ ದಾಸನಕೊಪ್ಪ ಅಥವಾ ಪಂತಳ್ಳಿ (ಪಂಡಿತ ಹಳ್ಳಿ!). ಅಲ್ಲಿನ ಕಲ್ಲುಗುಂಡು, ಕುರುಚಲುಗಳ ರಾಶಿ – ಸಾಕಷ್ಟು ಆಕರ್ಷಕವಾಗಿಯೇ ಕಾಣುವ ಕುಂದೂರು ಬೆಟ್ಟ, ಆರೆಂಟು ಕಿಮೀ ದೂರದಿಂದಲೇ ನಮ್ಮನ್ನು ಸ್ವಾಗತಿಸಿತು. ಬೆಟ್ಟಪಾದದ ಒಂದು ಮೂಲೆಯನ್ನು ತಬ್ಬಿಕೊಂಡಂತೇ ಇತ್ತಾ ಪುಟ್ಟ ಹಳ್ಳಿ. ಅದರ ಅನಾಕರ್ಷಕ ಗಲ್ಲಿಗಳ ಒಂದು ಕೊನೆಯ ಮನೆ, ಕುರುಬ ಕಾಮೇಗೌಡರದ್ದು. ಅವರೆರಡು ಮಕ್ಕಳಲ್ಲೊಬ್ಬ – ದರ್ಜಿವೃತ್ತಿಯ ಬಲರಾಮನಿಗೆ, ಪಾಟೀಲರು ‘ನಾವು ಕೆಲವರು ಬರುತ್ತಿದ್ದೇವೆ’ ಎಂದು ಪಾಟೀಲರು ಮುಂದಾಗಿ ತಿಳಿಸಿದ್ದನ್ನು, ಆತ ಎಂದಿನ ಉಡಾಫೆಯಲ್ಲಿ ಕಾಮೇಗೌಡರಿಗೆ ದಾಟಿಸಿರಲಿಲ್ಲ. ಮನೆಮಂದಿಗೆ ಈ ಲೋಕೋಪಕಾರಿ ಕಾಮೇಗೌಡ (ಸ್ವಂತದ್ದನ್ನೆಲ್ಲ ಕಳಕೊಂಡೂ ಮನೆಗೆ ಏನೂ ಮಾಡಲಿಲ್ಲ ಎಂಬ ಕೋಪ) ಅಷ್ಟೇನೂ ಪ್ರಿಯರಲ್ಲ! ಗೌಡ್ರು ಏನೋ ಔಷಧಕ್ಕೆಂದು, ಬಸ್ ಹಿಡಿದು ಮಳವಳ್ಳಿಗೆ ಹೋಗಿಬಿಟ್ಟಿದ್ದರು.

ಪಾಟೀಲರು ಒಂದೆರಡು ಗಲ್ಲಿಗಳಾಚೆ ನೇರ ಬೆಟ್ಟಕ್ಕೇ ಹೋಗುತ್ತಿದ್ದ ಕಲ್ಲೆದ್ದ ಹರಕು ದಾರಿಯಲ್ಲಿ ಕಾರೋಡಿಸಿದರು. ಅಲ್ಲಿ ಇಲ್ಲಿ ನಿಂತು, ಸ್ವಲ್ಪ ನಡೆದು ಸುತ್ತಿ, ತಾವೇ ಮಾರ್ಗದರ್ಶಿಯಾಗಿ ಕಾಮೇಗೌಡರ ಖಾಸಾ ಕಾಮಗಾರಿ ತೋರಿದರು. ಜಮೀನು, ವಹಿವಾಟು, ಶ್ರೀಮಂತಿಕೆ (ವಿದ್ಯೆ ಹೇಗೂ ಇಲ್ಲ) ಏನೂ ಇಲ್ಲದ ಬಡ ಕುರಿಗಾಹಿ ಕಾಮೇಗೌಡ. ಆದರೆ ಆತ ತನ್ನ ಕುರಿ ಸೇರಿದಂತೆ ವಲಯದ ಸಕಲ ಜೀವಜಾಲಕ್ಕೇ ಅವಶ್ಯವಾದ ಜೀವಜಲ ಸಾರ್ವಕಾಲಿಕವಾಗಿ, ಮುಕ್ತವಾಗಿ ಸಿಗುವ ಉದಾತ್ತ ಯೋಚನೆಗೆ ತನ್ನದೇ ಮಿತಿಯಲ್ಲಿ ರೂಪುಕೊಟ್ಟ ಬಗೆ ಕಂಡು ಬೆರಗುವಟ್ಟೆವು. ವಿವಿಧ ಋತುಮಾನಗಳಿಗೆ ಬೆಟ್ಟ ಮತ್ತದರ ತಪ್ಪಲಿನ ನಾಡಿ ಹಿಡಿದು, ಕಾಮೇಗೌಡರು ನೀರಜಾಡು ಕಂಡುಕೊಂಡಿದ್ದರು. ಯೌವನದಲ್ಲಿ ಸಬಳ, ಗುದ್ದಲಿ ಹಿಡಿದು ಒಂಟಿಯಾಗಿಯೇ ಜಲದ ಕಣ್ಣು ತೆರೆಸುತ್ತ, ಹರಿದು ಬಂದದ್ದಕ್ಕೆ ತಗ್ಗು ಮಾಡುತ್ತ ಹೋದರು. ಜಾರಿಸಿದ ಕಲ್ಲು, ತೆಗೆದ ಮಣ್ಣನ್ನು ಆಯ ಹಿಡಿದು ಎದುರು ದಂಡೆ ಕಟ್ಟಿದರು. ಬೆಟ್ಟದಲ್ಲಿ ಅಂತಸ್ಥವಾಗಿದ್ದ ಜಿನುಗುಧಾರೆಗಳು ಹಳ್ಳದಲ್ಲಿ ಕೂಡಿ ತಂಗಿದುವು. ಮಳೆ ಬಂದು, ಈ ಕೆರೆಗಳು ತುಂಬಿದಾಗಲೂ ಇವರು ಕೊಟ್ಟ ಕೋಡಿಗಳಲ್ಲಿ ವಿಧೇಯವಾಗಿ ಹರಿದು, ಕೆಳ ಹಂತಗಳಲ್ಲಿನ ತಂಗುದಾಣ ಅರಸಿದವು. ಹೀಗೆ ವರ್ಷಾನುಗಟ್ಟಳೆ ಕಾಮೇಗೌಡ ಮಾಡಿದ ಕಾಯಕತಪಸ್ಸಿಗೆ ಇಂದು ನೀರು ತುಂಬಿದ ಏಳು ಕೆರೆಗಳು ಸಾಕ್ಷಿ! ನೆನಪಿರಲಿ, ಇದು ಗೌಡರ ಸ್ವಂತ ಜಮೀನಲ್ಲ (ರೆವಿನ್ಯೂ ನೆಲ) ಮತ್ತಿದರ ಉಪಯೋಗ ಸಾರ್ವಜೀವಕ್ಕೆ ಮುಕ್ತ.

ಕಾಮೇಗೌಡರ ಹಿಂಗದ ಲೋಕೋಪಕಾರಿ ಬುದ್ಧಿಗೆ, ಏರುತ್ತಿದ್ದ ಪ್ರಾಯ (ಇಂದು ಎಂಬತ್ತರ ಆಸುಪಾಸಿನಲ್ಲಿರಬೇಕು) ಮತ್ತು ಇಳಿಯುತ್ತಿದ್ದ ದೇಹಶಕ್ತಿ ಅಡ್ಡಿಯಾಗಲಿಲ್ಲ. ಈತ ಸ್ವಂತದ ಕುರಿಗಳನ್ನೇ ಕ್ರಮವಾಗಿ ಮಾರುತ್ತ ಬುಲ್ಡೋಜರ್, ಕೂಲಿ ಎಂದೇ ಮುಂದುವರಿಸಿದ್ದರು. ಒಂದು ಕೆರೆ ಮಾಡುವಾಗ ಜತೆಗೇ ಮೂಡುತ್ತಿದ್ದ ನೀರಸೆಲೆಯ ಹೊಸ ಅರಿವುಗಳನ್ನು ಸುಣ್ಣದ ಗುರುತು ಹಾಕಿಟ್ಟು, ಮುಂದಿನ ಕಾಮಗಾರಿಯನ್ನು ಯೋಜಿಸುವುದನ್ನೂ ನಡೆಸುತ್ತಲೇ ಬಂದರು. ಕೆರೆಗಳ ಅಂಚುಗಳಲ್ಲಿ ಒಂದೆರಡು ತೋರ ಕಲ್ಲ ಕಂಬಗಳನ್ನು ಊರಿದರು – ಜಾನುವಾರುಗಳ ಮೈಯ ನವೆ ನೀಗಲು. ಗಿಡಗಳನ್ನು ನೆಟ್ಟು, ಅವಶ್ಯ ಕಾಲಗಳಲ್ಲಿ ಕೈಯಾರೆ ನೀರೂಡಿ ಬೆಳೆಸಿದರು; ಹಕ್ಕಿಗಳ ಗೆಳೆತನಕ್ಕೂ ಆಯ್ತು. (ಕಾಮೇಗೌಡರ ‘ಹಕ್ಕಿಮತ್ತಿತರ ಪುಣ್ಯ ಕಥನ’ಗಳಿಗೆ Face Bookನಲ್ಲಿ ಅವಶ್ಯ Abdul Rashid ಅವರ ವಿಡಿಯೋ ದಾಖಲೀಕರಣ ನೋಡಿ/ಕೇಳಿ.)

ಪರಿಸರಗೇಡಿಗಳ ನಿರುತ್ತೇಜನಕ್ಕೆ, ಇವರು ಅಲ್ಲಿ ಇಲ್ಲಿ ಕಾಡಕಲ್ಲುಗಳು ಇದ್ದಂತೇ ಸುಣ್ಣ ನಾಮ ಬಳಿದು, ದೇವರಭಯ ಬಳಸಿದ್ದಾರೆ. ಬಣ್ಣ ಬರಹ ಇರುವ ಮಂದಿ ಸಿಕ್ಕಾಗ, ಉದಾತ್ತ ಮಾತುಗಳನ್ನು ಬಂಡೆಗಳಲ್ಲಿ ಬರೆಸಿದ್ದಾರೆ. ಬೆಟ್ಟದ ಪಾದದಲ್ಲೇ ತುಸು ಎತ್ತರದಲ್ಲಿ ಊರವರ ಆರಾಧ್ಯ ದೈವ – ಸಿದ್ಧಪ್ಪಾಜಿಯ ಸದೃಢ ಮಂದಿರವೇನೋ ಇದೆ. ಆದರೆ ಅದರ ಆರಾಧನೆಗೆ ಬರುವವರು ಎಲ್ಲೆಂದರಲ್ಲಿ ಪಾಯಖಾನೆ ಮಾಡಿ, ಬೆಟ್ಟದ ಸ್ವಚ್ಛತೆಗೆ ಭಂಗ ತರಬಾರದೆಂದು ಕಾಮೇಗೌಡರು ನಾಲ್ಕು ಕಕ್ಕೂಸ್ ರಚನೆಗೂ ಮುಂದಾಗಿದ್ದರು. ಆದರೆ ಸಾಲಸೋಲ ಮಾಡಿ ಗೋಡೆ ಎಬ್ಬಿಸಿ, ತಂದು ಹಾಕಿದ ಪಿಂಗಾಣಿ, ಶೀಟು ಎಲ್ಲ ಅನಾಥವಾಗಿ ಬಿದ್ದಿದೆ; ಊರವರು ‘ಮೈಲಿಗೆ ಆಗುತ್ತದೆ’ ಎಂದು ಕೆಲಸ ಪೂರೈಸಲು ಬಿಡಲಿಲ್ಲ! ಎಡೆಯಲ್ಲಿ ತನ್ನ ಹೆಚ್ಚುಗಾರಿಕೆ ಮೆರೆಸಲು ಸ್ಥಳೀಯ ಆಡಳಿತ ಒಂದು ಕೆರೆ ಮಾಡಿಸಲು ಸಾಕಷ್ಟು ಸ್ಥಳ ಗೆಬರಾಡಿದರಂತೆ; ಕಾಮೇಗೌಡರ ತಿಳುವಳಿಕೆ ಬಳಸಲಿಲ್ಲ. ಇಂದು ಕಾಮೇಗೌಡರ ಕೆರೆಗಳ ಎಡೆಯಲ್ಲಿ ಬಿದ್ದಿರುವ ಒಣಹಳ್ಳ, ನಮ್ಮ ‘ಸಾರ್ವಜನಿಕ ಕಾಮಗಾರಿ’ಗಳ ಹುಸಿತನವನ್ನು ಸಾರುತ್ತಿದೆ. ಗೌಡರ ಕೆರೆಗಳ ಸಾರ್ಥಕತೆಯನ್ನು ಊರ ಜನ, ಜಾನುವಾರುಗಳು ಪಡೆಯುತ್ತಿರುವುದನ್ನೂ ನೋಡುವ ಅವಕಾಶ ನಮಗೊದಗಿತು. ಇಷ್ಟರಲ್ಲಿ ಬಿಸಿಲು ಸಾಕಷ್ಟು ಏರಿತ್ತು. ಹಾಗಾಗಿ ಶಿಖರ ಸಾಧನೆಯನ್ನು ಮುಂದೊಂದು ದಿನಕ್ಕೆ ದೂಡಿ, ಮರಳಿ ಮೈಸೂರ ದಾರಿ ಹಿಡಿದೆವು.

“ಕಾಮೇಗೌಡರ ಭೇಟಿ ತಪ್ಪಿಹೋಯ್ತಲ್ಲಾ” ಎನ್ನುವ ಹಳಹಳಿ ನಮಗುಳಿಯದಂತೆ, ಮಳವಳ್ಳಿ ಸಮೀಪಿಸುತ್ತಿದ್ದಂತೆ ಪಂತಳ್ಳಿಯಿಂದ ಬಲರಾಮನ ಫೋನ್ ಬಂತು, “ಅಪ್ಪಾಜಿ ಈಗ ಮನೆಗೆ ಬಂದಿದ್ದಾರೆ.” ನಮ್ಮ ಉಪಚಾರದ ಮಾತು ಮೀರಿ, ಪಾಟೀಲರು ಕಾರಿಗೆ ಹಿಮ್ಮುರಿ ತಿರುವು ಕೊಟ್ಟು, ಮತ್ತೆ ನಮ್ಮನ್ನು ಪಂಥಳ್ಳಿಗೆ ಮುಟ್ಟಿಸಿದರು. ಪಕ್ಕಾ ‘ಹಳ್ಳೀ ಬುದ್ಧಿವಂತ’ ಕಾಮೇಗೌಡರು ನಮ್ಮೊಡನೆ ಸಾಕಷ್ಟು ಸಂವಾದ ನಡೆಸಿದರು. ಅವರ ವಿಚಾರಮೂಸೆಯಲ್ಲಿ ಇಂಗ್ಲಿಷ್ ಶಬ್ದಗಳು, ಪುರಾಣ, ನಾಟಕಗಳ ಮಾತುಗಳೆಲ್ಲ ಕರಗಿ, ಕಲಸಿ ಹೋಗಿ ಅವರದೇ ಕಥನವಾಗುವ ಚಂದ ವಿರಾಮದಲ್ಲಷ್ಟೇ ಸವಿಯಬಹುದು. ಮಾದರಿ ವಿಡಿಯೋ ತುಣುಕು ನೋಡಿ, ಕೇಳಿ

ಕಾಮೇಗೌಡರು ಹೆಸರು ಹಣಕಾಸಿನ ಕುರಿತು ಆಡಿದ ಎರಡು ವಿಚಾರಗಳು ತುಂಬ ಮನನೀಯ. ಪಾಟೀಲರು ಶಿಫಾರಸು ಮಾಡಿ, ಗಣೇಶಬೀಡಿಯ ಯಜಮಾನರುಗಳು ಕಾಮೇಗೌಡರಿಗೆ ಪ್ರಶಸ್ತಿ (ಮೂರು ಲಕ್ಷ ರೂಪಾಯಿ ನಗದು) ಕೊಡಲೊಪ್ಪಿದ್ದಾಗಿತ್ತು. ಕಾಮೇಗೌಡರನ್ನು ಸ್ವತಃ ಪ್ರಥಮ ಬಾರಿಗೆ ಕಂಡು, ಅದನ್ನು ತಿಳಿಸಲು ಆ ಯಜಮಾನರುಗಳು ಪಂತಳ್ಳಿಗೇ ಹೋಗಿದ್ದರಂತೆ. ಅವರಿಗೇ ಈತ ಹೇಳಿದ ಮಾತು (ಕ್ಷಮಿಸಿ, ಭಾಷೆ ನನ್ನದು) “ಈಗ ಕಾಸು ನೀವು ಕೊಡ್ತೀರಾ, ಆದರೆ ನಾಳೆ ಜನ ಮಾತ್ರ ‘ಕಾಮೇಗೌಡನ ಕೆರೆ’ ಎಂದೇ (ತನ್ನುದ್ದೇಶವಿಲ್ಲದೇ) ಗುರುತಿಸುತ್ತಾರೆ.” (ಬೇಸರವಾಗುವುದಿದ್ದರೆ, ಪ್ರಶಸ್ತಿ ಹಿಂದೆಗೆದುಕೊಳ್ಳಿ ಎನ್ನುವ ಸ್ಥಿತಪ್ರಜ್ಞ ನಿಲುವು ಅದರಲ್ಲಿದ್ದಂತಿತ್ತು.) ಯಜಮಾನರುಗಳಿಗೆ ಇದು ತಿಳಿಯದ್ದೇನಲ್ಲ, ಹಾಗಾಗಿ ಅವರು ವಿಚಲಿತರಾಗಲಿಲ್ಲ.

“ಹಣವನ್ನು ನೇರ ಬ್ಯಾಂಕಿಗೇ ಹಾಕಿ. (ಕೆರೆ ಮಾಡಲು ಒದಗಿದ) ಸಾಲಗಾರರನ್ನೆಲ್ಲ ಅಲ್ಲಿಗೇ ಕರೆಸಿ ತೀರಿಸಿಬಿಡುತ್ತೇನೆ. ನನಗೆ ಹತ್ತು ಕೆರೆ ಮಾಡುವ ಆಸೆಯಿದೆ. ಉಳಿಕೆಯನ್ನು ಇನ್ನು ಮೂರು ಕೆರೆಗಳಿಗೆ ಬಳಸುತ್ತೇನೆ. ಹೆಂಡ್ತಿ, ಮಕ್ಕಳಿಗೆ ಬಟ್ಟೆ, ಚಿನ್ನಾಂತ ಒಂದು ಪೈಸೆ ವಿನಿಯೋಗ ಮಾಡುವುದಿಲ್ಲ. ನಾಳೆ ನಾ ಸತ್ತ ಮೇಲೆ ಚರಾಚರ ಜೀವಗಳೆಲ್ಲ ಕೆರೆ ನೋಡಲು/ ಬಳಸಲು ಬರ್ತಾವೆ. ಮನೇ ಅಲ್ಮಾರದಲ್ಲಿ ತುಂಬಿದ ಬಟ್ಟೆಬರೀ ನೋಡಕ್ ಬರ್ತಾವಾ?!”

ನಾವಲ್ಲಿದ್ದ ಸುಮಾರು ಅರ್ಧ ಗಂಟೆ ಕಾಲ, ಬಹುಶಃ ಆ ಮನೆಯ ಪಾಲುದಾರನಾಗಿದ್ದ ಓರ್ವ ಮಗ ಅಪ್ಪನ ಜಬರ್ದಸ್ತಿಗೆ ಹೆದರಿ ಅಂಗಳದಲ್ಲೇ ಕುಳಿತಿದ್ದ. ಗಂಡನಿಗೆ ಹೆದರಿ ಒಳಗಿದ್ದ ಅವರ ಹೆಂಡತಿಯನ್ನು ನಾವೇ ಕರೆಸಿ ಮಾತಾಡಿಸಿದೆವು. ಪಕ್ಕದ ಮನೆಯಲ್ಲೇ ಇದ್ದ ಇನ್ನೋರ್ವ ಮಗನ ಪುಟ್ಟ ಮಕ್ಕಳು ಮಾತ್ರ ಅಜ್ಜನಲ್ಲಿ ಸದರ ವಹಿಸುತ್ತಿದ್ದವು. ಆ ಮನೆ ಸೊಸೆ, ಅನಿರೀಕ್ಷಿತವಾಗಿ ನಮಗಷ್ಟೂ ಮಂದಿಗೆ ನಿಂಬೆಹಣ್ಣು ಪಾನಕ ಮಾಡಿ ಮಕ್ಕಳ ಜತೆ ಕಳಿಸಿಕೊಟ್ಟಾಗ, ನಾವು ಸಂಕೋಚದಲ್ಲೇ ಕುಡಿದೆವು. ಅವರ ಆರ್ಥಿಕ ಸ್ಥಿತಿಯ ಅರಿವಿದ್ದೇ ಅನಂತ ಗುಟ್ಟಾಗಿ ಸಣ್ಣ ಮೊತ್ತವೊಂದನ್ನು ಕಾಮೇಗೌಡರ ಕೈಗೆ ಹಿಡಿಸಿದ. ಆತ ಅದೆಷ್ಟೆಂದೂ ನೋಡದೇ ಜೇಬಿಗಿಳಿಸಿದ್ದರು. ಆಮೇಲೆ ಅನಂತನಿಗೆ ಗೌಡರು ಮುದಿತನದಲ್ಲಿ, ಹಣ ಕಳೆದುಕೊಂಡಾರೇಂತ ಸಂಶಯ ಕಾಡಿತು. ಸಣ್ಣದಾಗಿ ವಿಚಾರಿಸಿಕೊಂಡ. ಇಲ್ಲ, ಕಾಮೇಗೌಡರು ಸ್ಥಿತಪ್ರಜ್ಞ ಹೌದು, ವ್ಯವಹಾರಶೂನ್ಯ ಅಲ್ಲ!

ನಾವು ಮತ್ತೆ ಮೈಸೂರು ದಾರಿ ಹಿಡಿದೆವು. ಈ ವರ್ಷಾವಧಿ ಪ್ರಶಸ್ತಿಗೆ ಸಮಾಜಸೇವಾ ನಿರತ ಒಂದು ಸಂಸ್ಥೆ, ಮತ್ತಿಬ್ಬರು ವ್ಯಕ್ತಿಗಳನ್ನು ಪ್ರಾಮಾಣಿಕವಾಗಿ ಆಯ್ಕೆ ಮಾಡುವಲ್ಲಿ ಜಯರಾಮ ಪಾಟೀಲರ ಮಹತ್ತ್ವ, ಶ್ರಮ ಬಹಳ ದೊಡ್ಡದು. ಆದರಿದು ಎಲ್ಲೂ ಪ್ರಚಾರಕ್ಕೆ ಬಾರದ ವಿನಯ ಪಾಟೀಲರದು! ಪಾಟೀಲರ ಮನೆಯಲ್ಲಿ ಅನಾಥ ನಾಯಿಗಳಿಗೆ ಆಶ್ರಯವಿದೆ ಎಂದು ಕೇಳಿದ ಯಾರೋ ಇವರಿಗೆ ಸೂಚನೆಯನ್ನೂ ಕೊಡದೆ, ಇವರ ಮನೆ ಗೇಟಿಗೆ ತಮ್ಮ ತಿರಸ್ಕೃತ ನಾಯಿ ಕಟ್ಟಿ ಹೋಗಿದ್ದರಂತೆ! ಹಾಗೇ ಇನ್ನು ನಾಳೆ ಸ್ವಾರ್ಥಿಗಳು ಪ್ರಶಂಸೆ, ಪ್ರಶಸ್ತಿಗೆ ಇವರ ಮೇಲೆ ಮುಗಿಬೀಳದ ಎಚ್ಚರವೂ ಇರಬಹುದು. ಸಂದ ವರ್ಷಗಳಲ್ಲಿ ಆಮ್ಟೆ ದಂಪತಿ, ಹರೇಕಳದ ಹಾಜಬ್ಬಾದಿ ಪ್ರಶಸ್ತಿ ಪಡೆದ ಸಂಸ್ಥೆಗಳನ್ನೂ ವಿಜಯನಾಥ ಶೆಣೈ, ಲಕ್ಷ್ಮೀಶ ತೋಳ್ಪಾಡಿಯಂಥ ವ್ಯಕ್ತಿಗಳನ್ನೂ ಕಾಮೇಗೌಡರ ಜತೆಗೆ ವೇದಿಕೆ ಹಂಚಿಕೊಳ್ಳಲಿದ್ದ ನೀನಾಸಂ (ಕೆವಿ ಅಕ್ಷರ) ಮತ್ತು ಮರಾಠವಾಡದ ಗೋದಾವರಿ ಡಾಂಗೆಯವರನ್ನೂ ಪರಿಭಾವಿಸುವಾಗ ಪಾಟೀಲರ ಪ್ರಾಮಾಣಿಕತೆ, ಪರಿಶ್ರಮ ಅರ್ಥವಾಗದಿರದು.

ಎರಡು ಬಾರಿ ಹಿಂದುಮುಂದೋಡಿ ಮೈಸೂರು ತಲಪುವಲ್ಲಿ ಸಾಕಷ್ಟು ತಡವಾದರೂ ನಮ್ಮ ಮನದುಂಬಿ ಬಂದಿತ್ತು. ಅದರ ಮೇಲೆ, ಪಾಟೀಲ ರಜನಿಯವರ ಪ್ರೀತಿಯ ಫಿತೂರಿಯಲ್ಲಿ, ಅವರ ಮನೆಯ ಸರಳ ಆದರೆ ರುಚಿಕರವಾದ ಊಟ ನಮ್ಮ ಹೊಟ್ಟೆಯನ್ನೂ ತಣಿಸಿತು. ಪ್ರಚಾರದೂರರಾದ ಜಯರಾಮ ಪಾಟೀಲ ದಂಪತಿಗೆ ನಾನಿಲ್ಲಿ ಬರೆದದ್ದು ಹಿಡಿಸದೇ ಇರಬಹುದು. ಆದರೆ ನಾನಾದರೂ ನನ್ನ ಸಮಾಧಾನಕ್ಕೆ ಇಷ್ಟಾದರೂ ಬರೆಯದಿರಲಿ ಹೇಗೆ?

೬. ಸತ್ತವರ ಸಂಗದಲಿ…..

ಸಂಬಂಧಗಳು ಚೇತನ ಇರುವವರೆಗೆ ಮಾತ್ರ ಎನ್ನುವುದು ವಾಸ್ತವ. ಆದರೆ ಜತೆಗೇ ಕಾಡುವ ನೆನಪಿನ ಚಿತ್ರವನ್ನು ಪೂರ್ತಿ ತೆಗೆದು ಹಾಕುವಂತಿಲ್ಲವಲ್ಲ. ತಾಯಿಯನ್ನು ಕಳಿಸಿಕೊಟ್ಟ ಹದಿನಾಲ್ಕನೇ ದಿನಕ್ಕೆ, ಸುಮಾರು ಹತ್ತು ವರ್ಷಕ್ಕೂ ಮೊದಲೇ ಹೋದ ತಂದೆಯನ್ನು ಯಾಕೆ ನೋಡಿ ಬರಬಾರದು ಅಂತನ್ನಿಸಿತು! ಹೌದು, ನನ್ನ ತಂದೆಯನ್ನು (ಜಿಟಿನಾ) ಮೂರ್ತರೂಪದಲ್ಲಿ ನೋಡುವ ಅನುಕೂಲವನ್ನು (ಸಾರ್ವಜನಿಕರಿಗೂ) ಮೈಸೂರಿನ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನ ಅನಾಟಮಿ ವಸ್ತು ಸಂಗ್ರಹ ಅಂದಿನಿಂದ ಇಂದಿನವರೆಗೂ ಮಾಡುತ್ತಲೇ ಇದೆ. ತಂದೆಯ ಮರಣಾನಂತರ, ಅವರಿಚ್ಛೆಯಂತೇ ವೈದ್ಯ-ವಿದ್ಯಾರ್ಥಿಗಳ ಕಲಿಕೆಗೊದಗುವಂತೆ ದೇಹದಾನವನ್ನೇನೋ ನಾವು (ಅಮ್ಮ ಸೇರಿದಂತೆ ಮಕ್ಕಳು) ಮಾಡಿದ್ದೆವು. ಆದರೆ ಅಲ್ಲಿನ ವಿಭಾಗದ ಗಣ್ಯರಾದ ಶ್ಯಾಮಸುಂದರ್ “ಈ ದೇಹವನ್ನು ಮಾತ್ರ ನೇರ ಕಲಿಕೆಗೆ ಬಳಸುವುದಿಲ್ಲ. ಎಂಬಾಮಿಂಗ್ ಮಾಡಿ (ಹಿಂದೆ ಐಗುಪ್ತನರು ಮೃತದೇಹಗಳನ್ನು ದೀರ್ಘ ಕಾಲ ಕೆಡದಂತೆ ಉಳಿಸಿಕೊಳ್ಳಲು ಮಾಡುತ್ತಿದ್ದ ‘ಮಮ್ಮಿ’ ಕ್ರಿಯೆಯ ಆಧುನಿಕ ರೂಪ) ಪ್ರದರ್ಶನಕ್ಕಿಡುತ್ತೇವೆ. ಜಿಟಿನಾ ದೊಡ್ಡ ಹೆಸರು. ಇವರ ಆದರ್ಶ ಇನ್ನಷ್ಟು ಮಂದಿಗೆ ದೇಹದಾನ ಕ್ರಿಯೆಗೆ ಪ್ರೇರಕವಾಗಬೇಕು” ಎಂದೇ ಹೇಳಿದ್ದರು, ಮಾಡಿದ್ದರು.

ಸಂಜೆ ಹೋದೆವು, ಕೆಲಕಾಲ ಅಲ್ಲಿದ್ದು ನೋಡಿದೆವು. ಪ್ರದರ್ಶನಾಲಯದ ಪ್ರವೇಶದಲ್ಲೇ ಪ್ರತ್ಯೇಕ ಪಾರದರ್ಶಕ ಕನ್ನಡಿ ಗೂಡುಗಳಲ್ಲಿ ಮೂರ್ನಾಲ್ಕು ದೇಹಗಳನ್ನು ಇಡಿಯಾಗಿ ಇಟ್ಟಿದ್ದರು. ಅವುಗಳಲ್ಲಿ ನಡುವಿನದ್ದು ತಂದೆಯದು. ಮುಖ ಮತ್ತು ಪಾದವನ್ನಷ್ಟು ಮುಕ್ತವಾಗಿಟ್ಟು ಬಿಳಿಯ ಬಟ್ಟೆ ಹೊದೆಸಿದ್ದರು. ಆಶ್ಚರ್ಯಕರವಾಗಿ ಈಗ ಬಂದು ಮಲಗಿದ್ದಾರೋ ಎಂಬ ಕಳೆ ಆ ಹತ್ತು ವರ್ಷಗಳ ಹಳೆಯ ಶವದಲ್ಲಿತ್ತು! ಉಳಿದ ಶವಗಳಿಗೆ ಕೊಟ್ಟ ಮರಣೋತ್ತರ ಸಂಸ್ಕಾರವೋ ಸಂದ ಪ್ರಾಯದ ಹಿರಿತನದಲ್ಲೋ ಪ್ರದರ್ಶಿಕೆಯ ಕೆಲವು ಭಾಗಗಳು ಮುಕ್ಕಾಗಿದ್ದುವು, ಬಣ್ಣ ಬದಲಿತ್ತು. ತಂದೆಯ ಶವಪೆಟ್ಟಿಗೆಯ ಹಿಂದಿನ ಗೋಡೆಯಲ್ಲಿ ದೇಹದಾನದ ಮಹತ್ವವನ್ನು ಹೇಳುವ ಬರಹ, ಮೇಲೆ ಹಾರಹಾಕಿ ಅಲಂಕರಿಸಿದ ತಂದೆಯ ಒಂದು ಜೀವನ ಕಾಲದ ಫೋಟೋ ಕೂಡಾ ಹಾಕಿದ್ದಾರೆ.

ವಿಸ್ತಾರ ಪ್ರದರ್ಶನಾಲಯದೊಳಗೆ ಉಳಿದಂತೆ ಸಾಲು ಮೇಜುಗಳನ್ನಿಟ್ಟು, ಗಾಜಿನ ಭರಣಿಗಳಲ್ಲಿ ರಾಸಾಯನಿಕ ದ್ರಾವಣಗಳಲ್ಲಿ ಹಲವು ದೇಹ ಮಾದರಿಗಳನ್ನು – ಊನಾಂಗ ರಚನೆಯ ಶಿಶುಗಳದೇ ಹೆಚ್ಚು, ದೇಹದ ಬಿಡಿಭಾಗಗಳನ್ನೂ ಇಟ್ಟಿದ್ದಾರೆ. ಅಲ್ಲೆಲ್ಲ ಮೇಜುಗಳ ಮೇಲೆ ಸಚಿತ್ರ, ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರಕರಣಗಳ ವಿವರಗಳನ್ನೂ ಕಾಣಿಸಿದ್ದಾರೆ. ಮೊದಲು ಸ್ವಲ್ಪ ಮಾನಸಿಕ ತಡೆಯಲ್ಲಿ ಬರಲೊಪ್ಪದೇ ಮತ್ತೆ ನಮ್ಮ ಒತ್ತಾಯಕ್ಕೆ ಬಂದಿದ್ದ ನನ್ನ ಓರ್ವ ಚಿಕ್ಕಮ್ಮ – ಸೀತೆ, ಕೊನೆಯಲ್ಲಿ ಧನ್ಯತೆಯ ಉದ್ಗಾರ ತೆಗೆದಾಗ ನಮ್ಮೆಲ್ಲರ ಸಮಾಧಾನಕ್ಕೂ ಬಲ ಬಂತೆಂದೇ ಹೇಳಬೇಕು.

ಪ್ರವಾಸ ಯಾವ ಕಾರಣಕ್ಕೇ ಇರಲಿ, ಔಪಚಾರಿಕ ಲಕ್ಷ್ಯಗಳೇನಾದರೂ ಇದ್ದರೆ ಮುಗಿಸಿದ ಮೇಲೆ, ಊರುಊರುಗಳಲ್ಲೂ ಕಾಣಸಿಗುವ ಥಳುಕಿನ ಮಾಲ್, ಜಾತ್ರೆ, ಮೇಳಗಳ ಹುಸಿಗೆ ಮರುಳಾಗಬಾರದು, ಮುದುಡಿ ಕೂತು ಮಾಮೂಲೀ ಮಾತುಗಳಲ್ಲಿ ಕಳೆದುಹೋಗಬಾರದು ಎನ್ನುವುದು ಸದಾ ನನ್ನ ಧ್ಯಾನ. ಆ ಲೆಕ್ಕದಲ್ಲಿ ಸ್ಥಳೀಯ ವೈಶಿಷ್ಟ್ಯಗಳನ್ನು ಸಾರುವ ಮೂಡಲಪಾಯ, ಪಾಟೀಲ, ಕಾಮೇಗೌಡ ಮತ್ತು ಜೆ.ಎಸ್.ಎಸ್ ಪ್ರದರ್ಶನಗಳು ಕಟ್ಟಿಕೊಟ್ಟ ಮೌಲಿಕ ಆದರ್ಶಗಳು ನಾನು ಎಷ್ಟೂ ಬಾರಿ ಕಂಡ ಮೈಸೂರನ್ನು ಹೊಸ ಬೆಳಕಿನಲ್ಲೇ ತೋರಿಸಿತ್ತು.