ಯಾರೇ ವಿಚಾರಿಸಿದಾಗ, ನನ್ನ ವಾಹನಪಟ್ಟಿಯಲ್ಲಿ ನಾನು ಮರೆಯದೆ ಸೇರಿಸುವ ಹೆಸರು ‘ದೋಣಿ.’ ಆದರೆ ಒಳಗೊಳಗೇ “ಅದರ ಬಳಕೆ ಮಾತ್ರ ಕಡಿಮೆ” ಎಂಬ ಕೀಳರಿಮೆ ನನ್ನನ್ನು ಬಿಟ್ಟದ್ದೂ ಇಲ್ಲ. ಅದನ್ನು ಸ್ವಲ್ಪವಾದರೂ ಹೋಗಲಾಡಿಸುವಂತೆ ನಮ್ಮ ‘ಅನಾಮಧೇಯ ಕಯಾಕೀ ಸಂಘ (ಅನೋಂ)’ದೊಳಗೆ ‘ಆದಿತ್ಯವಾರ (೨೯-೪-೧೮) ಕೂಳೂರು – ಮರವೂರು’ ಕರೆ ಕೊಟ್ಟೆ. ನಾನು ಕಂಡಂತೆ ಸೈಕಲ್ ಮೆಟ್ಟುವ ಹವ್ಯಾಸ/ಕ್ರೀಡೆ/ವ್ಯಾಯಾಮ ಈ ವಲಯದಲ್ಲಿ ಕಾಡಬೆಂಕಿಯಂತೆ, ಬಹಳ ವೇಗದಿಂದ ಹಬ್ಬಿಕೊಂಡಿತು. ನಿತ್ಯ ಓಡಾಡಿದ್ದೇ ಗಬ್ಬೆದ್ದ ದಾರಿ, ಅಶಿಸ್ತಿನ ಇತರ ವಾಹನ ಸಮ್ಮರ್ದ, ಪ.ಘಟ್ಟಗಳ ತಪ್ಪಲಾದ್ದರಿಂದ ವಿಪರೀತ ಏರಿಳುಕಲು, ರಣಗುಡುವ ಬಿಸಿಲು, ಭೋರ್ಗರೆವ ಮಳೆ ಎಲ್ಲವನ್ನೂ ಸುಧಾರಿಸಿಕೊಂಡು, ಲಕ್ಷದ ಮೇಲಿನ ಹಣ ಹಾಕಿಯೂ ಸೈಕಲ್ಲಿಗರು ಹೆಚ್ಚಿದರು. ಇದು ಖಂಡಿತವಾಗಿಯೂ ಸಂತೋಷದ ವಿಚಾರ. ಆದರೆ ಅಸಂಖ್ಯ ನದಿ, ಹಿನ್ನೀರ ಹರಹು, ಸಾಕ್ಷಾತ್ ಅರಬ್ಬೀ ಸಮುದ್ರವೇ ನಮ್ಮಲ್ಲಿದೆ. ಇವೆಲ್ಲವೂ ಪರಿಚಯಿಸುವ ಪ್ರಾಕೃತಿಕ ಲೋಕ ಅಸಾಧಾರಣ, ನಿತ್ಯ ಅನುಭವಿಸುವಂತದ್ದಲ್ಲ. ಇವುಗಳ ಮಹಾವ್ಯಾಪ್ತಿಯಲ್ಲಿ ಮುಖ್ಯವಾಗಿ ಕಾಣುವ ಮೀನುಗಾರ ಮತ್ತು ಮರಳುಗಾರ ತೀರಾ ಸಣ್ಣ ಭಾಗವನ್ನಷ್ಟೇ ಬಳಸುತ್ತಾರೆ. ತೀರಾ ಹಿಂದುಳಿದ ವಲಯಗಳಲ್ಲಿ ಮತ್ತು ನಗಣ್ಯ ಎನ್ನುವಂತೆ ವಿಹಾರ ಸರಸಿಗಳಲ್ಲಿ (ಉದಾ: ಪಿಲಿಕುಳ, ಕಡಲ್ಕೆರೆ, ಮಣ್ಣಪಳ್ಳ ಇತ್ಯಾದಿ) ಸಾರ್ವಜನಿಕರು ದೋಣಿ ಬಳಸಿದರೂ ಸ್ವತಃ ಚಲಾಯಿಸುವ ಸಂತೋಷಪಟ್ಟದ್ದಿಲ್ಲ, ಹೊಸತನ್ನು ಅನಾವರಣಗೊಳಿಸುವ ಅವಕಾಶ ಬಳಸಿದ್ದಿಲ್ಲ. ಇಂದು ಆಧುನಿಕ ಸೈಕಲ್ಲುಗಳಿಗೆ ಹೋಲಿಸಿದರೆ ತುಂಬಾ ಸುಲಭ ಬೆಲೆಯಲ್ಲಿ (ನನ್ನ ಕಯಾಕಿನ ಬೆಲೆ ಕೇವಲ ೨೫,೦೦೦ ರೂಪಾಯಿ) ವೈವಿಧ್ಯಮಯ ದೋಣಿಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿವೆ. ಹೀಗಿದ್ದೂ ಇಂದು ನನ್ನ ಗಮನಕ್ಕೆ ಬಂದಂತೆ, ನಮ್ಮಲ್ಲಿ ಐದು ಕಯಾಕ್‍ಗಳಿವೆ. (ಕಯಾಕ್ = ಒಂದು ನಮೂನೆಯ ದೋಣಿ.) ಅಂದರೆ ಕನಿಷ್ಠ ಹತ್ತು ಮಂದಿ (ಎಲ್ಲ ಎರಡು ಆಸನದವೇ) ಕಯಾಕೀಗಳಿದ್ದರೂ ನನ್ನ ಕರೆಗೆ ಜಾಗೃತರಾಗಿ ಬಂದವರು ನಬಿಲ್ – ಮರ್ಜೂಕ್ ಜೋಡಿ ಮಾತ್ರ.

ಬೆಳಿಗ್ಗೆ ಸುಮಾರು ಸುಮಾರು ಏಳೂವರೆಗೆ ಕೂಳೂರು ಸಂಕಕ್ಕಿಂತಲೂ ಮೊದಲು ಎಡಕ್ಕೆ ಸಿಗುವ ನವೋದಿತ ‘ಕಾಂಡ್ಲಧ್ವಂಸಿ ರಸ್ತೆ’ಯಲ್ಲಿ (Mangrove Devast Road – ಕಿರುರೂಪದಲ್ಲಿ MDR) ಒಟ್ಟುಗೂಡಿದೆವು. ನನ್ನ ಕಯಾಕ್ ಭರ್ಜರಿಯಾಗಿ ಕಾರಿನ ಮಾಡು ಅಲಂಕರಿಸಿ, ನಮ್ಮ ಚಟುವಟಿಕೆಗೆ ಸುಲಭ ಜಾಹೀರಾತು ಕೊಡುತ್ತದೆ! ಆಯಕಟ್ಟಿನ ಜಾಗದಲ್ಲಿ ಕಾರು ನಿಲ್ಲಿಸಿ, ಕಟ್ಟ ಬಿಚ್ಚಿ, ನಾವಿಬ್ಬರೇ ಅದನ್ನೆತ್ತಿ ಫಲ್ಗುಣಿ ಹೊಳೆ ದಂಡೆಯಲ್ಲಿಟ್ಟೆವು. ಅದರ ಮಗ್ಗುಲಲ್ಲೇ ಎರಡೂ ಕೊನೆಗಳಲ್ಲಿ ತೊಳಸುಗೈ ಇರುವ ಎರಡು ಹುಟ್ಟುಗಳನ್ನೂ ಇಟ್ಟದ್ದಾಯ್ತು. ತೇಲಂಗಿ (ಲೈಫ್ ಜ್ಯಾಕೆಟ್ಟೂ) ಚಟಕಾಯಿಸಿ, ಬಗಲಿಗೆ ಕುಡಿನೀರು ಕ್ಯಾಮಾರಾದಿ ಆವಶ್ಯಕತೆಗಳ ಚೀಲ ನೇತಾಕಿ, ತಲೆಗೆ ತೊಪ್ಪಿಯೇರಿಸಿ ಎರಡೇ ಮಿನಿಟಿನಲ್ಲಿ “ರೈಟ್ ಪೋಯಿ” ಎಂದೆವು.

ನಬಿಲ್‍ರ ಕಯಾಕ್ ಅವರಂತೆ ನುಣ್ಣಗೆ, ತಣ್ಣಗೆ ಸಂಕೋಚಿಸಿ ಚೀಲದೊಳಗೆ ಅವಿತು, ಡಿಕ್ಕಿಯೊಳಗೆ ಕುಳಿತಿತ್ತು. ಅದಕ್ಕಾಗಿ ಒರಟು ಮಣ್ಣ ನೆಲದ ಮೇಲೊಂದು ಹಸೆ ಹಾಕಿ, ಚೀಲದ ಜಿಪ್ ಜಾರಿಸಿ, ಚಕ್ಕುಬಿದ್ದಿದ್ದ ಬುಗ್ಗೆದೋಣಿಯನ್ನು ಬಿಡಿಸಿ ಹಾಸಿದರು. ಇದಕ್ಕೆ ಗಾಳಿಯೂಡಲು ಜತೆಗೇ ಒಂದು ಪುಟ್ಟ ಕೈತಿದಿ (ಹ್ಯಾಂಡ್ ಪಂಪು ಮಾರಾಯ್ರೇ) ಇದೆ. ನಾನು ಕಂಡಂತೆ ಇದರಲ್ಲಿ ತಳ, ಅಂಚುಗಟ್ಟೆ ಮತ್ತು ಮೂರು ಸವಾರರ ಆಸನವೆಂದು ಐದು ಪ್ರತ್ಯೇಕ ಗಾಳಿಮೂತಿಗಳಿವೆ. ಅವಕ್ಕೆಲ್ಲ ಪ್ರತ್ಯೇಕ ಪ್ರತ್ಯೇಕ ಗಾಳಿ ಹೊಡೆಹೊಡೆದು ಉಬ್ಬಿಸಿದ ಮೇಲೆ “ಈಗ ಬನ್ನಿ ಸವಾರಿಗೆ” ಎಂದಿತ್ತು. ಫೈಬರ್ ಕಯಾಕ್ (ನನ್ನದೂ ಅಂಥದ್ದೇ) ಯಜಮಾನ ಅನಿಲ್ ಸೇಟ್ ಹಿಂದಿನ ಸಲ ಇದನ್ನೇರಿ ಕುಳಿತು ನೋಡಿದ್ದರಂತೆ. ಅದರ ಮೆತ್ತನೆ ಆಸನಕ್ದಕ್ಲ್ಲೆ ಮರುಳಾಗಿ “ಹಾ ಇದು ಐರಾವತ (ವಾಲ್ವೋ), ನಮ್ಮವು (ಫೈಬರ್ ತಯಾರಿ) ಗೋರ್ಮೆಂಟ್ (ಸಾಮಾನ್ಯ ಬಸ್ಸು) ಮಾರಾಯ್ರೇ” ಎಂದೇ ಉದ್ಗರಿಸಿದ್ದರಂತೆ! ಆದರೆ ಈ ಬಾರಿ ನಬಿಲ್ ಹೆಮ್ಮೆ ತುಸು ಕಡಿಮೆ ಮಾಡುವಂತೆ, ಈ ನಾಜೂಕು ಮಾಲು, ಹಿಂದೆಲ್ಲೋ ಕಲ್ಲೋ ಕೋಲೋ ಗೀರಿದ್ದಕ್ಕೆ ಸಣ್ಣದಾಗಿ ನಿಟ್ಟುಸಿರು ಬಿಡತೊಡಗಿತ್ತು. ಹಿಂದೆ ಕೊರಕಲು ಬಿದ್ದ ಶಿರಾಡಿ ಘಾಟಿನಲ್ಲಿ ‘ಐರಾವತ’ ಅಡಿ ಹರಿದುಕೊಂಡು ಕಷ್ಟಪಡುವಾಗ ‘ಗೋರ್ಮೆಂಟ್’ ನಿರಾಯಾಸವಾಗಿ ಪಯಣಿಸುತ್ತಿದ್ದದ್ದು ನೆನಪಾಗದಿರಲಿಲ್ಲ.

ನಮ್ಮ ಎರಡು ಪದರದ (ಡಬಲ್ ಲೇಯರ್ಡ್) ಫೈಬರ್ ಕಯಾಕ್ ಬಹಳ ಗಟ್ಟಿ. ಇವು ಸಾಂಪ್ರದಾಯಿಕ ದೋಣಿಗಳು (ಗಾಂಧೀ ಟೋಪಿ ಮಾದರಿಯವು. ಈಚೆಗೆ ಇವನ್ನು ಕಬ್ಬಿಣ ಮತ್ತು ಫೈಬರಿನಲ್ಲೂ ಮಾಡುತ್ತಿದ್ದಾರೆ.) ಹೆದರುವ ನೀರ ಜಾಡುಗಳನ್ನೂ ಯಾವ ಆತಂಕಕ್ಕೂ ಎಡೆಯಿಲ್ಲದಂತೆ ಪಾರುಗಾಣಿಸುತ್ತವೆ. ಮರಳು, ಕೆಸರು, ಜೊಂಡಾದಿ ಕೊಳೆ ಕಸ ಕೆನೆಗಟ್ಟಿದ ತೆಳು ನೀರ ಪದರವೂ ಇವಕ್ಕೆ ಸಾಕಾಗುತ್ತವೆ. ಹಗುರಕ್ಕೆ ಕಲ್ಲಿನ ಸಂಪರ್ಕ, ಪರಸ್ಪರ ದೋಣಿಗಳ ತಾಕಲಾಟಗಳಿಗೆ ನಮ್ಮ ಫೈಬರ್ ಕಯಾಕ್ ನಲುಗುವುದಿಲ್ಲ. ಈ ಕಯಾಕುಗಳು ಅಂಚಿನಲ್ಲಿ ಬೆಸೆದಂತೆ ಎರಡು ಪದರದವು. ತಳಪದರ ತೆಪ್ಪ, ಹರಿಗೋಲುಗಳಂತೆ ಚಪ್ಪಟೆಯಾಗಿರುವುದರಿಂದ ಎಲ್ಲೂ ಸಿಕ್ಕಿಕೊಳ್ಳದೆ ಸುಲಭದಲ್ಲಿ ಜಾರುತ್ತದೆ. ಒಳ ಪದರ, ವ್ಯಕ್ತಿ ವಿಶೇಷವಾಗಿ ಎರಡು ಆಸನಗಳ ರೂಪದಲ್ಲೆ ಇದೆ. ಇದರಲ್ಲಿ ಕುಳಿತು ಕೊಳ್ಳುವ ಆಸನದಷ್ಟೇ ಸ್ಪಷ್ಟವಾಗಿ ಬೆನ್ನೊತ್ತು, ಎರಡು ಕಾಲೊತ್ತುಗಳ ರಚನೆಯೂ ಇದ್ದು, ಸವಾರನಿಗೆ ಹುಟ್ಟು ತೊಳಸುವ ಶ್ರಮ ಕಡಿಮೆ, ಬಲಜಾಸ್ತಿ ಸೌಕರ್ಯವನ್ನೇ ಕೊಡುತ್ತದೆ. ಎರಡು ಪದರಗಳ ನಡುವೆ ಬಂಧಿತ ಗಾಳಿಯ ಸಹಕಾರದಿಂದ, ಸವಾರಿಯಲ್ಲಿ ಹೊರಗಿನಿಂದ ತುಳುಕಿದ ನೀರು ಸವಾರನ ಹೊಂಡದ ಒಳಗೆ ಪೂರ್ಣ ತುಂಬಿದರೂ ದೋಣಿ ಮುಳುಗುವ ಆತಂಕ ಇಲ್ಲ. ಈ ದೋಣಿಗಳ ತಗ್ಗು ಅಂಚು, ಹೊಂಡದಂಥ ಆಸನ ವ್ಯವಸ್ಥೆಗಳಿಂದ ಸವಾರ ಬಹುತೇಕ ಹೊರಗಿನ ನೀರ ಮಟ್ಟದಲ್ಲೇ ಕುಳಿತುಕೊಳ್ಳುವುದರಿಂದ, ಕಯಾಕುಗಳು ಸಾಮಾನ್ಯವಾಗಿ ಮಗುಚಿಕೊಳ್ಳುವುದೂ ಇಲ್ಲ. ಹಿಂದಿನ ನಮ್ಮ ನೇತ್ರಾವತಿ ಸವಾರಿಯ ಕಥನ ಓದಿದವರಿಗೆ (ನೋಡಿ: ಸ್ವಚ್ಛತೆ’ಯ ಹಾದಿಯಲ್ಲಿ ನೇತ್ರಾವತಿಯ ನಾಡಿ ಮಿಡಿದು) ಇನ್ನೂ ಹೆಚ್ಚಿನ ವಿವರಣೆ ಬೇಡವೆಂದೇ ತಿಳಿಯುತ್ತೇನೆ.

ಮರಳುಗಾರಿಕೆಯ ಉಚ್ಛ್ರಾಯದಲ್ಲಿ ಈ ಕೂಳೂರು ಸಂಕದ ಮೂಲೆಯಲ್ಲೂ ಭಾರೀ ಮರಳಗುಡ್ಡೆಗಳು ಏಳುತ್ತಿದ್ದವು, ಜೆಸಿಬಿ ಲಾರಿಗಳ ಭರಾಟೆ ಸಾಕಷ್ಟು ನಡೆದಿತ್ತು. “ಯಾವುದೇ ಸಂಕದಿಂದ ೫೦೦ ಮೀಟರ್ ಅಂತರದಲ್ಲಿ ಮರಳುಗಾರಿಕೆ ನಿಷೇಧ” ಎಂಬ ಕಾನೂನು ಪುಸ್ತಕಗಳಲ್ಲೇ ಉಳಿದಿತ್ತು. ಭಾರೀ ಹೋರಾಟಗಳ ಮೇಲೆ ಇಂದು ಈ ತಾಣದಲ್ಲಿ ಮರುಳಾಟ ನಡೆದಿಲ್ಲ. ಆದರೆ ಹಳೆಯ ‘ವೈಭವ’ವನ್ನು ಸಾರುವ ಎಷ್ಟೂ ಕಸ ಕೊಳಕು ಇಲ್ಲಿ ಹರಡಿ ಬಿದ್ದಿದೆ. ಅಂಚಿನಲ್ಲಾಡುವ ನೀರೂ ಅಷ್ಟೇ ಕೆಟ್ಟದ್ದಾಗಿತ್ತು. ಆದರೆ ನದಿಗೆ ಮೇಲ್ಮುಖವಾಗಿ ಹೋಗುವ, ನಗರದಿಂದ ದೂರಾಗುವ ನಮ್ಮ ಲಕ್ಷ್ಯಕ್ಕೆ, ಮಾಲಿನ್ಯ ಹೆಚ್ಚು ಕಾಡದು ಎಂಬ ಅವಸರದಲ್ಲಿ ನಾವು ದೋಣಿ ಇಳಿಸಿದೆವು. ‘ಅವಸರಕ್ಕೆ ಬುದ್ಧಿ ಕಡಿಮೆ’ ಎಂಬ ಗಾದೆಯಂತೆ, ನಮ್ಮ ದೋಣಿಯನ್ನು ಮೂತಿ ಮುಂದಾಗಿ ನೀರಿಗಿಳಿಸಿದ್ದರಿಂದ ಅಷ್ಟು ಕೊಚ್ಚೆನೀರು ಎದುರು ಕೂರುವ ದೇವಕಿಗೆ ಉಚಿತವಾಗಿ ಸಿಕ್ಕಿತು. ದೋಣಿಯನ್ನು ದಂಡೆಗೆ ಸಮರೇಖೆಯಲ್ಲಿ ಇಳಿಸಿದರೆ ಈ ಸಮಸ್ಯೆ ಇಲ್ಲ ಎನ್ನುವ ಹಳೆಪಾಠ ತಡವಾಗಿ ನೆನಪಿಸಿಕೊಂಡೆವು.

ನಬಿಲ್ ದೋಣಿಯ ಗಾಳಿ ಸೋರಿಕೆ ಸಣ್ಣದಿತ್ತು. ಆದರೆ ಅದನ್ನು ಪತ್ತೆ ಹಚ್ಚುವ ತಾಳ್ಮೆ, ಮತ್ತೂ ಮುಖ್ಯವಾಗಿ ಅದನ್ನು ಸರಿಪಡಿಸುವ ತಂತ್ರ ಅವರಲ್ಲಿರಲಿಲ್ಲ. ಗಾಳಿಮೂತಿಗಳೆಲ್ಲ ದೋಣಿಯ ಒಳಬದಿಯಲ್ಲೇ ಇದ್ದುದರಿಂದ, ಅಗತ್ಯಬಿದ್ದರೆ ಸವಾರಿಯಲ್ಲೇ ತಿದಿಯೊತ್ತಿದರಾಯ್ತೆಂದುಕೊಂಡು ಅವರು ನಮಗಿಂತಲೂ ಮುಂದಾಗಿಯೇ ನೀರಿಗಿಳಿಸಿ ಹುಟ್ಟು ತೊಳಸಿದ್ದರು. ಇಲ್ಲಿ ನಮ್ಮ ಸಾಲಿಗ್ರಾಮದ ಗೆಳೆಯ ವೆಂಕಟ್ರಮಣ ಉಪಾಧ್ಯರ ನೆನಪು ಅನಿವಾರ್ಯವಾಗಿ ಕಾಡುತ್ತದೆ. ಸುಮಾರು ಹತ್ತು ವರ್ಷಗಳ ಹಿಂದೆ, ಅವರೊಬ್ಬ ಶಿಷ್ಯ ಅಮೆರಿಕಾದಿಂದ ರಜೆಯಲ್ಲಿ ಊರಿಗೆ ಬಂದಾಗ ಒಂದು ಹಳೆಯ, ಇಂಥದ್ದೇ ಗಾಳಿ ತುಂಬುವ ತೆಪ್ಪ ಕೊಟ್ಟು ಹೋಗಿದ್ದನಂತೆ. ಇವರು ಮೂರು ನಾಲ್ಕು ಗೆಳೆಯರನ್ನು ಕಟ್ಟಿಕೊಂಡು, ಹಳೆ ಡಿಂಗಿಯ ತೇಪೆ, ಗಾಳಿ ಸರಿ ಮಾಡಿ, ಸಾಲಿಗ್ರಾಮದಿಂದ ಮಲ್ಪೆ ಬಳಿಯ ಸಂತ ಮೇರಿ ದ್ವೀಪಕ್ಕೆ ಸಮುದ್ರಯಾನಕ್ಕಿಳಿದೇ ಬಿಟ್ಟರು. ಕಡಲಿನ ತುಯ್ತ, ಎಸೆತಗಳಲ್ಲಿ ಇವರ ಹುಟ್ಟು ತೊಳಸುವ ಶ್ರಮ ಸಣ್ಣದೇನೂ ಇರಲಿಲ್ಲ. ಆದರೆ ಕಡಲಿನಲ್ಲಿ ತುಂಬ ಮುಂದುವರಿದ ಮೇಲೆ, ಡಿಂಗಿಯ ಧಾರಣಾಶಕ್ತಿಯೂ ಕಡಿಮೆ ಎಂಬ ಕುರುಹುಗಳು ಕಾಣ ತೊಡಗಿದ್ದು ನಿಜಕ್ಕೂ ಆತಂಕಕಾರಿಯಾಗಿತ್ತು. ಒತ್ತಡಕ್ಕೆ ಹಳೆತೇಪೆಗಳು ಸೆರೆಬಿಟ್ಟು ಪುಸ್ಸೆನ್ನತೊಡಗಿತ್ತು. ತೇಪೆಗಳ ಎಡೆಗೆ ರಬ್ಬರ್ ಗೋಂದು ಹನಿಸುವುದು, ಹೊಸ ತೇಪೆ ಒಲಿಸುವುದು, ತೆಪ್ಪದ ಏಕ ಬಾಯಿಗೆ ತಿದಿಯೊತ್ತುತ್ತ ಚಕ್ಕುಬೀಳದಂತೆ ನಿಭಾಯಿಸುವುದು, ಕಡಲ ಒಯ್ಯಲನ್ನು ಮೀರಿ ದಂಡೆಯತ್ತ ಹುಟ್ಟು ಹಾಕುವುದು, “….ಯ್ಯೋ ಆಪುದಲ್ಲ ಹೋಪುದಲ್ಲ.!” ಉಪಾಧ್ಯರ ತಂಡ ಹೆಚ್ಚಿನ ಅವಘಡಗಳೇನೂ ಇಲ್ಲದೆ ಮರಳಿದ ಕತೆ ನನ್ನ ಅಕ್ಷರಗಳಲ್ಲಿ ಹಿಡಿಯುವಂಥದ್ದಲ್ಲ, ಉಪಾಧ್ಯರ ಬಾಯಲ್ಲೇ ಕೇಳಬೇಕು. ಆದರೆ ನಬಿಲ್, ಮರ್ಜೂಕ್ ಅದೃಷ್ಟ ಚೆನ್ನಾಗಿತ್ತು. ಒಟ್ಟು ಯಾನಾವಧಿಯಲ್ಲಿ ನಾಲ್ಕೈದು ಬಾರಿ ತಿದಿಯೊತ್ತಿದ್ದರು. ಆದರೆ ಎಲ್ಲೂ ಆತಂಕಕಾರಿಯಾಗಿ ದೋಣಿ ಕಾಡಲಿಲ್ಲ.

ನಬಿಲ್ ಅಂದಿನ ‘ಸಮುದ್ರ ಪಂಚಾಂಗ’ ನೋಡಿ ಬಂದಿದ್ದರು. ನಾವು ಏಳೂಮುಕ್ಕಾಲರ ಅಂದಾಜಿಗೆ ಯಾನ ಶುರು ಮಾಡಿದ್ದಿರಬೇಕು. ಅದು ಕಡಲ ಇಳಿತದ ಕೊನೆಯ ಪಾದವಂತೆ. ಹನ್ನೊಂದು ಗಂಟೆಯನಂತರ ಭರತ. ಅಷ್ಟರೊಳಗೆ ವಾಪಾಸು ತಲಪುವ ಅಂದಾಜು ನಮ್ಮದು.

ನಾವು ಹೊರಟಾಗ ಗಾಳಿ ತುಂಬ ತೆಳುವಿತ್ತು. ಬೇಸಗೆಯ ಪ್ರಭಾವದಲ್ಲಿ ಹೊಳೆಯಲ್ಲಿ ಮೂಲ ಹರಿವು ಏನಿಲ್ಲದಿದ್ದರೂ ಕಡಲ ಸಾಮೀಪ್ಯದಿಂದ ಆ ವಲಯದಲ್ಲಿ ಕಡ ತಂದ ಸಂಪತ್ತು ನಮಗೆ ಸಾಕಷ್ಟಿತ್ತು. ಮತ್ತದೇ ಕಾರಣಕ್ಕೆ ಹೊಳೆಯಲ್ಲಿ ಕಾಣುತ್ತಿದ್ದ ಸಮುದ್ರದ ಇಳಿತಕ್ಕೂ ನಮ್ಮ ಪ್ರಗತಿಗೆ ಅಡ್ಡಿಪಡಿಸಲಾಗದ ನಿಶ್ಶಕ್ತಿ. ಹೆದ್ದಾರಿಯ ಜೋಡಿ ಸೇತುವೆಗಳ ಕುಂದಗಳು ನಮಗೆ ಹೆಬ್ಬಾಗಿಲೇ ಸರಿ. ಆದರೆ ಮೇಲೋಡುವ ‘ರಾಕ್ಷಸ’ರು ಎಲ್ಲಿ ನಮ್ಮ ‘ಯಜ್ಞ’ಕ್ಕೆ ಹೊಲಸೆರಚುತ್ತಾರೋ ಎಂಬ ಭಯ. ನಾವು ದಾಟುತ್ತಿದ್ದಂತೆ ಒಂದೆರಡು ಕಸತೊಟ್ಟೆಗಳು ಹೊಳೆಗೆ ಬಂದು ಬಿದ್ದದ್ದೂ ಆಯ್ತು, ಅದೃಷ್ಟಕ್ಕೆ ನಮ್ಮ ತಲೆಯ ಮೇಲಲ್ಲ.

ನಾವು ರಸ್ತೆಯದೇ ಶಿಸ್ತನ್ನು ಪಾಲಿಸುವಂತೆ, ಎಡದಂಡೆಗೆ ಹೆಚ್ಚು ಸಮೀಪವಿರುವಂತೆ ಸಾಗಿದೆವು. ಕವಾಯತು ಹೊರಟ ಸೈನ್ಯದಂತೆ ಎಮ್ಮಾರ್ಪೀಯೆಲ್ ಕೊಳವೆಗಳನ್ನು ಹೊತ್ತ ಕುಂದಸಾಲು, ಅವುಗಳಾಚೆ ಕೆಟ್ಟಮುಖ ಹೊತ್ತು ಕತ್ತು ಚಾಚುವ ಬೀಡುಕಬ್ಬಿಣದ ಕಾರ್ಖಾನೆಯ ಅವಶೇಷ, ರಚನೆಗಳ ರಕ್ಷಣೆಯ ನೆಪದಲ್ಲಿ ಹೊಳೆಪಾತ್ರೆ ಒತ್ತುವರಿ ಮಾಡಿದ ಗೋಡೆ, ವಿವಿಧ ಕಾಮಗಾರಿಗಳ ಹಾಳಮೂಳಗಳಿಂದ ತಳ್ಳಿಸಿಕೊಂಡರೂ ಕಲ್ಲುಕೊರಕಲಿನಲ್ಲಿ ಬೇರೂರಿ ದಾರಿಯಂಚಿಗೆ ತಲೆ ಎತ್ತಿ ನಿಂತ ಮುಳ್ಳಮರ, ಅದನ್ನು ಎಳೆದು ಹತ್ತಿ, ಜೋತಾಡಿ ಹೂನಗುವ ಬಳ್ಳಿ, ಆಗೀಗ ಸುಳಿದಾಡುವ ಹಕ್ಕಿಗಳೆಲ್ಲ ಒಂದು ನಮೂನೆಯ ಸಂತಸದ ದೃಶ್ಯ ಸರಣಿ. ಒಂದೆರಡು ಕಡೆ ಅದೇ ದಂಡೆಯಿಂದಿಳಿದ ಕಚ್ಚಾ ದಾರಿ, ಹೊಳೆಯಂಚಿನ ತುಂಡು ನೆಲದಲ್ಲಿನ ಮರಳುಗಾರರ ಬೀಡಿಗಿಳಿಯುವುದರಿಂಡ ಉಂಟಾದ ವಿವರಗಳು ಇನ್ನೊಂದೇ ದರ್ಶನ. ಸಮುದ್ರ ಪ್ರಭಾವದ ಲಹರಿ ಕಾದು, ಹೊಳೆಯಾಳದಿಂದ ಎಳೆದು ತಂದು ಗುಡ್ಡೆ ಹಾಕಿದ ಮರಳು, ಆಳುವವರ ಹುಚ್ಚು ಖಯಾಲಿಗಳನ್ನು ಕಾದು ಬುಸುಗುಟ್ಟುತ್ತ ಲಾರಿ ತುಂಬುವ ಜೆಸಿಬಿಗಳು, ದೌಡುವ ಲಾರಿಗಳು, ಚಿಂದಿ ತಾಡಪತ್ರಿಗಳ ಮರೆಯಲ್ಲಿ ಅಡುಗೆಯೋ, ವಿಶ್ರಾಂತಿಯೋ ಮೇಲಿಂದ ಸಿಗುವ ಕಾಸೋ ನೆಚ್ಚಿ ಎಲ್ಲೆಲ್ಲಿಂದ (ಬಿಹಾರ, ಒರಿಸ್ಸಾ, ಬಂಗ್ಲಾ?) ಬಂದ ಬಡಪಾಯಿಗಳು, ಕವುಚಿಬಿದ್ದು ತೂತಕ್ಕೆ ತೇಪೆಯೋ, ತುಕ್ಕಿಗೆ ಎಣ್ಣೆಯೋ ಕಾದಿರುವ ಹಳೆ ದೋಣಿಗಳು, ಯಂತ್ರ ಮನುಷ್ಯ ಬಿಟ್ಟ ಕೊಚ್ಚೆಗಳು, ಎಲ್ಲೆಲ್ಲಿನ ಸಂಸ್ಕೃತಿ ಸಾರುತ್ತ, ಅಯಾಚಿತ ಹೊಳೆಯಿಂದ ದಂಡೆ ಸೇರಿಸಿದ ನಾಗರಿಕ ಕಸಗಳೆಲ್ಲ ಸಂಕಟದ ಮುಖಗಳು. ಹೀಗಿದ್ದೂ ಅಲ್ಲುಳಿದ ಸಂದಿನಲ್ಲಿ ಯಾರೋ ಬುಡ ಇಟ್ಟು, ಇನ್ಯಾರೋ ಗೊನೆ ಇಳಿಸುವ ಬಾಳೆ ಹಿಂಡಿನ ಹಸಿರು, ಗಾಳಿಗೆ ಪರಿಮಳ ಹೊರಿಸುವ ಮಲ್ಲಿಗೆ ನಲಿವು ನೋಡುವಾಗ, ನಾನು ತಿಳಿದ ‘ಜೀವಪ್ರೀತಿ’ಯ ಅರ್ಥವೇ ತಳಮೇಲಾಗಿತ್ತು.

ಪುಟ್ಟ ಹರಿಗೋಲೊಂದರಲ್ಲಿ ಜೋಡಿಯೊಂದು ಗಂಭೀರವಾಗಿ ಮೀನುಗಾರಿಕೆ ನಡೆಸಿತ್ತು. ಎಷ್ಟು ಹೊತ್ತಿಗೋ ನಿಶಾನಿಯಿಟ್ಟು, ದೀರ್ಘ ವೃತ್ತಾಕಾರದಲ್ಲಿ ಇಳಿಸಿದ್ದ ಬಲೆಯನ್ನು ಲಯಬದ್ಧವಾಗಿ ಎಳೆದು ಗುಡ್ಡೆ ಹಾಕುತ್ತಲೇ ಇತ್ತು ಗಂಡು. ಆಗೀಗ ಆತ ಹೆಕ್ಕಿದ ಜಲಚರಕ್ಕೆ ಬುಟ್ಟಿ ಒಡ್ಡುತ್ತ, ಉಳಿದಂತೆ ಬಲೆಯಲ್ಲಿ ಅಯಾಚಿತ ಬಂದಿದ್ದ ಕಸ ಕಳೆಯುತ್ತ ಕುಳಿತಿತ್ತು ಹೆಣ್ಣು. ನೆಲಕ್ಕಿಳಿದಿದ್ದಿರಬಹುದಾದ ಬಲೆ ಎಳೆಯುವುದೇ ಪರೋಕ್ಷವಾಗಿ ಅವರ ಹರಿಗೋಲಿನ ಮುನ್ನೂಕುವ ಶಕ್ತಿ. ಅವರು ನಮ್ಮನ್ನು ಗಮನಿಸುವುದಿರಲಿ, ಪರಸ್ಪರ ಮಾತಿನಲ್ಲೂ ಸಮಯ ಕಳೆದುಹೋದೀತೋ ಎಂಬ ತತ್ಪರತೆಯಲ್ಲಿದ್ದದ್ದು ಕಂಡು ನಾವೂ ಮೌನವಾಗಿ ಮುಂದುವರಿದೆವು. ಸುಮಾರು ಮುಕ್ಕಾಲು ಗಂಟೆಯ ಕಾಲ, ಆಗಾಗ ಹುಟ್ಟು ಅಡ್ಡ ಹಾಕಿ ಉಸಿರು ಹೆಕ್ಕುತ್ತ, ಏರುತ್ತಿದ್ದ ಬಿಸಿಗೆ ಬಾಟಲ್ ನೀರು ಗುಟುಕರಿಸುತ್ತ, ಚಿತ್ರಕ್ಕಾಗಿ ಒಮ್ಮೊಮ್ಮೆ ಅಡ್ಡಾದಿಡ್ಡಿ ಸುತ್ತು ತೆಗೆಯುತ್ತ, ಪರಸ್ಪರ ಮಾತಾಡಿಕೊಳ್ಳುತ್ತ ಪೆರ್ಮನ್ನೂರು ಕೊನೆಯ ಕುದುರು ಮುಟ್ಟಿದ್ದೆವು.

ಮಂಗಳೂರಿಗೆ ಉತ್ತರ-ಪೂರ್ವ ಮೂಲೆಯ ಕುದುರೆಮುಖ ಶ್ರೇಣಿಗಳಿಂದಲೇ ಹೊರಡುವ ಫಲ್ಗುಣಿ ಬಹುತೇಕ ಪಶ್ಚಿಮಕ್ಕೆ ಹರಿದಿದ್ದಾಳೆ. ಗೂಗಲ್ ನಕ್ಷೆಯಲ್ಲಿ ನೋಡಿದರೆ, ಆಕೆ ಕೊನೆಯ ಹಂತದಲ್ಲಿ, ಅಂದರೆ ಅಡ್ಡೂರು ಬಳಿ, ಒಂದು ಲಾಗ ಹೊಡೆದು ಒಮ್ಮೆಗೆ ದಿಕ್ಚ್ಯುತಿಗೊಂಡಂತೆ ಕಾಣುತ್ತಾಳೆ. ಅನಂತರ ಹಿಮ್ಮುರಿ ತಿರುವು, ವಿಪರೀತ ಅಂಕಾಡೊಂಕಿ ಚಲನೆಗಳಲ್ಲಿ ಅಲ್ಲಲ್ಲಿ ಎರಡಾಗಿ, ಮತ್ತೆ ಒಂದಾಗುತ್ತ ಕುದುರುಗಳ (ನದೀದ್ವೀಪ) ಸರಣಿಯನ್ನೇ ಕೊಡುತ್ತ ಬರುತ್ತಾಳೆ. ಕೊನೆಯಲ್ಲಿ ಫಲ್ಗುಣಿ ನೇರ ಸಾಗರಮುಖಿಯಾಗುವಾಗ ನಿರ್ಮಿಸಿದ ಸಾಕಷ್ಟು ದೊಡ್ಡ ಕುದುರು ಪೆರ್ಮನ್ನೂರು ನೆಲ ಸಮೀಪದ್ದು. ಇಂದು ಅಲ್ಲಿ ಪ್ರಾಕೃತಿಕವಾಗಿ ನಿರೀಕ್ಷಿಸಬಹುದಾದ ಕಾಂಡ್ಲಾವನ ಆವರಿಸಿಕೊಂಡಿಲ್ಲ. ಅದಕ್ಕೆ ಕಾರಣ, ಸ್ವಲ್ಪ ಮುಂದುವರಿದ ಮೇಲೆ ತಿಳಿಯಿತು; ಅದು ಜನವಸಿತ. ಅಲ್ಲಿ ಬಹುಶಃ ಕುಟುಂಬ ಒಂದೇ ಇರಬೇಕು. ಅವರು ಋತುಮಾನದ ಏರುಪೇರಿಗೆ ಹೆದರಿ ಹೊಳೆದಂಡೆಯ ಕೃಷಿಯನ್ನೇನೋ ನಡೆಸಿದಂತಿರಲಿಲ್ಲ. ಆದರೆ ಅದಕ್ಕೆ ಅಂಚುಗಟ್ಟಿದ್ದಿರಬಹುದಾದ ಕಾಂಡ್ಲದಂಥ ಸ್ಪಷ್ಟ ಉಪಯೋಗದ (ನಾನು ಕೇಳಿದಂತೆ, ಇದ್ದಿಲು ತಯಾರಿಕೆಗೆ ಇದು ಬಹು ಶೋಷಿತವಂತೆ) ಹಸಿರು ಮಾತ್ರ ಸೂರೆಹೋಗಿತ್ತು. ಈಗ ಉಳಿದ ಕುರುಚಲಿನ ಮರೆಯಲ್ಲಿ ಹೊಳೆ ಎತ್ತಿಹಾಕಿದ ಕಲ್ಮಶ ರಾಶಿ ಧಾರಾಳ ಇತ್ತು. ನಡುವೆ ಎಲ್ಲೋ ಸಣ್ಣ ದೋಣಿ, ಇಳಿಗಟ್ಟೆ, ಅತ್ತ ಮನೆ, ಜನ ಎಲ್ಲ ಕಾಣಿಸಿದರು. ನಾವು ನಿಂತು, ಮಾತಾಡಿಸುವ ಉಸಾಬರಿಗಿಳಿಯದೆ, ಬರಿದೆ ದಾರಿ ಸಾಗುವವರಂತೆ ಹೊಳೆದ್ವೀಪದ ಇನ್ನೊಂದೇ ಕೊನೆ ಸೇರಿದೆವು. ಅಲ್ಲಿ ಅದುವರೆಗಿನ ಸಮಯ, ಶ್ರಮ ಪರಿಗಣಿಸಿ ನಮ್ಮ ಲಕ್ಷ್ಯವನ್ನು ಪರಿಷ್ಕರಿಸಿ, ‘ಮರವೂರು’ ಕೈ ಬಿಟ್ಟು, ಹಿಮ್ಮುಖ ಆರಿಸಿಕೊಂಡೆವು. ಕುದುರಿಗೆ ಪ್ರದಕ್ಷಿಣೆ ಹಾಕುವಂತೆ ತಿರುಗಿದೆವು.

ನಾವು ಅದುವರೆಗೆ ಬಂದದ್ದು ನಮ್ಮ ಎಡಮಗ್ಗುಲಿಗೆ. ಈಗ ಹೊಳೆಯ ಎಡ ಮಗ್ಗುಲನ್ನು ಅನುಸರಿಸಿದ್ದೆವು. ಈ ದಂಡೆಯಲ್ಲಿ ಸುಮಾರು ಮೂರು ವಾರದ ಹಿಂದಷ್ಟೇ ನಾನು ಪ್ರಥಮ ಬಾರಿಗೆ ಸೈಕಲ್ ಸರ್ಕೀಟ್ ಹೊಡೆದಿದ್ದೆ. (ನೋಡಿ: ಸೈಕಲ್ ಸರ್ಕೀಟ್ ೩೯೩ – ಫಲ್ಗುಣೀ ತೀರ ವಿಹಾರಿ, ಅವರ್ಧನ ಹಿಡಿದದ್ದೇ ದಾರಿ) ಆಗ ಇಲ್ಲಿಗೇ ಹೊಳೆ ದಂಡೆಯ ದಾರಿ ಮುಗಿದು, ನಾನು ಒಳನಾಡಿಗೆ ಸರಿದು, ಗದ್ದೆಗಳ ನಡುವೆ ಹಾಯ್ದು ಮರಕಡ ತಲಪಿದ್ದನ್ನು ಜ್ಞಾಪಿಸಿಕೊಂಡೆ.

ನಮ್ಮ ದೋಣಿಗಳು ಕುದುರುವಿನ ಪೂರ್ಣ ಮರೆಗೆ ಬಂದದ್ದೇ ಇದ್ದ ಚೂರುಪಾರು ಗಾಳಿಯೂ ಸ್ಥಗಿತಗೊಂಡಿತ್ತು. ಒಮ್ಮೆಗೇ ದಾರಿಯಾಚಿನ ಭಾರೀ ಮರ, ಹಳ್ಳೀಮನೆ, ತೆಂಗಿನಗರಿಗಳು, ನಾವು ರಟ್ಟೆ ಸೋಲುವಂತೆ ಹುಟ್ಟೆಳೆಯುತ್ತಿದ್ದರೂ ನಮ್ಮ ದೋಣಿಯೂ ರಣಗುಡುವ ಬಿಸಿಲಿನಲ್ಲಿ ಮೂರ್ಛೆ ತಪ್ಪಿದ ಭ್ರಮೆ ಮೂಡಿತ್ತು. ನಡು ಬೇಸಗೆ, ಮಾಮೂಲೀ ದಿರುಸಿನ ಮೇಲೆ ಕಟ್ಟಿಕೊಂಡ ಫೋಮ್, ರೆಕ್ಸಿನ್ನಿನ ದಪ್ಪದ ತೇಲಂಗಿ, ಗಂಟೆಗೂ ಮಿಕ್ಕು ಹುಟ್ಟು ಹಾಕಿದ ಶ್ರಮ ಹರಿದ ಬೆವರಹೊಳೆ ಫಲ್ಗುಣಿಗೆ ಸಮದಂಡಿಯಾಗಬೇಕಿತ್ತು. ಆದರೆ ಟೊಪ್ಪಿಯ ತುಣುಕು ನೆರಳು ಬಿಟ್ಟರೆ, ಪೂರ್ಣ ಸೂರ್ಯಕೃಪೆಯನ್ನು ನಾವು ಧರಿಸಿದ್ದಕ್ಕೋ ಏನೋ ಬೆವರು ಆರಿ ಒಣ ಸಂಡಿಗೆಯಂತಾಗಿದ್ದೆವು. ಹೇಗೋ ಹೊಳೆಯ ಎಡ ಮಗ್ಗುಲು ತಲಪುತ್ತಿದ್ದಂತೆ, ನೀರಿನ ಸಣ್ಣ ತಳಬುಳುಕ್ ನಮಗೆ ಕಾಲ ನಿಂತಿಲ್ಲವೆಂಬ ಧೈರ್ಯಕೊಟ್ಟಿತು. ಅಲ್ಲೊಂದು ಒಣ ಕೊಬೆ ಮೂರು ಒಣ ತೆಂಗಿನಕಾಯಿಗಳ ಸಾಂಗತ್ಯದಲ್ಲಿ ದಿಕ್ಕೆಟ್ಟು ತೇಲಿಕೊಂಡಿತ್ತು. ಅದನ್ನು ದಡ ತಲಪಿಸುವ ಜವಾಬ್ದಾರಿ ನಮ್ಮ ಮೇಲೆ ತಂದುಕೊಂಡು, ಎಳೆದು ದೋಣಿಗೆ ಹಾಕಿಕೊಂಡೆ. ಮುಂದೆ ದಂಡೆಯ ಮೇಲೆ ಯಾರಾದರೂ ಜನ ಕಾಣಿಸ್ತಾರೆಯೇ ಎಂದು ನೋಡುತ್ತ ಇಳಿದಾರಿಯಲ್ಲಿ ಹುಟ್ಟು ತೊಳಸಿದೆವು.

ಮುಂದೊಂದು ಮನೆಯ ಎದುರು, ಕಲ್ಲು ಕಟ್ಟಿದ ಹೊಳೆ ದಂಡೆಯಲ್ಲಿ ಇಬ್ಬರು ಗಾಳಿಗರು ಕಾಣಿಸಿದರು. ನಾವು ಅತ್ತ ದೋಣಿ ಚಲಾಯಿಸ ತೊಡಗಿದ್ದೇ ಅವರು ಕುಳಿತಲ್ಲೇ ಧ್ಯಾನಭಂಗವಾದವರಂತೆ ಚಡಪಡಿಸಿ, ದಾರ ಎಳೆದುಕೊಳ್ಳತೊಡಗಿದರು. (ಅವರ ದಾರಕ್ಕೆ ನಾವೆಲ್ಲಾದರೂ ತೊಡರಿಕೊಳ್ಳುತ್ತೇವೋ ಎಂಬ ಹೆದರಿಕೆಯೂ ಇದ್ದಿರಬಹುದು!) ಹಾಗಾಗಿ ದೋಣಿ ದಂಡೆ ಸಮೀಪಿಸುವ ಮುನ್ನವೇ ನಾನು ಮೌನ ಮುರಿದು, ಕಾಯಿ ತೋರಿಸುತ್ತ “ಇದು ನಿಮ್ಮದ್ಯಾರದ್ದೋ ಇರಬೇಕಲ್ಲಾ, ದಂಡೆಗೆ ಎಸೀಲಾ…?” ಒಬ್ಬ ಅವಸರವಸರವಾಗಿ “ಇಲ್ಲ ಇಲ್ಲ, ಎಲ್ಲೋ ಮೇಲಿಂದ ಬಂದಿರಬಹುದು, ನಮಗಿದೆ. ಅದನ್ನು ನೀವೇ ಒಯ್ಯಿರಿ” ಎಂದ. ಅವರ ಮುಜುಗರ ಅರ್ಥವಾಗಿ ನಾವು ಮತ್ತೆ ಕೂಳೂರುಮುಖಿಗಳಾದೆವು.

ಏರು ದಾರಿಯಲ್ಲಿ ದೂರದಲ್ಲಿ ಕಾಣಿಸಿದ್ದ ಎರಡು ಮರಳುಗಾರ ದೋಣಿಗಳಲ್ಲಿ ಒಂದು, ಬಹುಶಃ ಭರ್ತಿಯಾದ್ದಕ್ಕೆ ನಿಧಾನಕ್ಕೆ ಎದುರು ದಂಡೆಯ ಮರಳುಗಾರರ ಬಿಡಾರದ ಹೊರಟಿತ್ತು. ಅದರಲ್ಲಿ ಒಬ್ಬನೇ ನಾವಿಕ ಗಳುವೆತ್ತಿ, ಇಳಿಸಿ, ನೂಕುತ್ತಲೇ ಇದ್ದ. ಸ್ವಲ್ಪ ಮುಂದೆ ತುಸು ದೊಡ್ಡ ಇನ್ನೊಂದು ಮರಳುಗಾರ ದೋಣಿ ಪೂರ್ಣ ಕಾರ್ಯಾಚರಣೆಯಲ್ಲಿತ್ತು. ಒಬ್ಬ ತೆರೆದ ಬಾಯಿಯ ಗೋಣಿ ಕಟ್ಟಿದ ಗಳುವನ್ನು ನೇರ ಹೊಳೆಯಾಳಕ್ಕಿಳಿಸುತ್ತಿದ್ದ. ಇನ್ನೊಬ್ಬ ಅದೇ ಗೋಣಿಯ ಬಾಯಿಗೆ ಕಟ್ಟಿದ್ದ ಹಗ್ಗದ ಈ ಚಿತ್ರ ಮತ್ತು ಕೆಳಗಿನ ನಮ್ಮ ವಿಡಿಯೋ ಕೃಪೆ: ನಬಿಲ್ ಅಹಮದ್

ಇನ್ನೊಂದು ತುದಿಯನ್ನು ಎಳೆಯುತ್ತ ದೋಣಿಯಲ್ಲಿ ಉದ್ದಕ್ಕೆ ನಡೆಯುತ್ತಿದ್ದ. ಕೊನೆಯಲ್ಲಿ ಇಬ್ಬರೂ ಸೇರಿ ಹೊಳೆ ತಳದಲ್ಲಿ ಮರಳು ಗೋರಿ ತುಂಬಿಕೊಂಡಿರಬಹುದಾದ ಗೋಣಿಯನ್ನು ಮೇಲೆತ್ತಿ ದೋಣಿಯೊಳಗೆ ಸುರಿದುಕೊಳ್ಳುತ್ತಿದ್ದರು. ಆರಾಮವಾಗಿ ಕುಳಿತು, ಕ್ರೀಡೆಗಾಗಿ ದೋಣಿ ಚಲಾಯಿಸುತ್ತಿದ್ದ ನಮಗೇ ವಾತಾವರಣದ ಪ್ರಭಾವ ಅಸಹನೀಯವಾಗಿರುವಾಗ ಈ ಹೊಟ್ಟೆಪಾಡಿನ ಗಿರಾಕಿಗಳು ಒದ್ದಾಡುವ ಪರಿ ನಿಜಕ್ಕೂ ಅನ್ಯಾಯ. ಪರಿಸರ ಹಾಗೂ ಸಾಮಾಜಿಕ ಅನ್ಯಾಯಗಳು ವಿಶೇಷವೇನೂ ಆಗದೆ ಮರಳೆತ್ತಲು ಹತ್ತೆಂಟು ಯಂತ್ರ, ಸಾಧ್ಯತೆಗಳಿವೆ. ಆದರೆ ಆಡಳಿತವರ್ಗದ ದೊಡ್ಡ ದ್ರೋಹ ಮುಚ್ಚಲು ಇಂದು “ಮರಳು ಮಾಫಿಯಾದ ತಡೆಗೆ ಯಾಂತ್ರಿಕ ‘ಗಣಿಗಾರಿಕೆ’ಗೆ ನಿಷೇಧ” ಹಾಕಿದ್ದಾರೆ. (ಕನ್ನಡ ಚಿತ್ರರಂಗದಲ್ಲಿ ತಮ್ಮ ಕಳಪೆ ನಿರ್ಮಾಣ/ ನಿರ್ದೇಶನಗಳ ಚಿತ್ರಗಳನ್ನು ಕಾಪಾಡಿಕೊಳ್ಳಲು, ಡಬ್ಬಿಂಗ್ ಚಿತ್ರಗಳಿಗೆ ನಿಷೇಧ ಹಾಕಿದ ಹಾಗೆ!) ಸಾವಿರ ಕೋಟಿಗಳನ್ನು ನುಂಗಿ ತಣ್ಣಗೆ ಕೂತವರ ಹೆಸರಿನಲ್ಲಿ, ಕೇವಲ ಹೊಟ್ಟೆ ಹಸಿವಿಗೆ ಮೈ ಹುಡಿ ಮಾಡುವವನ ಬಾಯಿ ಕಟ್ಟುವ ಕಾನೂನುಗಳು ಊರಿಗೊಂದು, ಗಲ್ಲಿಗೊಂದು!

ಹೋಗುವ ದಾರಿಯಲ್ಲಿ ವೃತ್ತಾಕಾರವಾಗಿ ಬಲೆ ಎಳೆಯುತ್ತಿದ್ದ ಜೋಡಿ, ಬಹುಶಃ ಮತ್ತೆ ಹೊಸದೇ ಆಶಯ (ಬಲೆ) ಬೀಸಿ, ನಿಶಾನಿ ಕಟ್ಟಿ ಹೋಗಿತ್ತು. ಅದನ್ನು ಬಳಸಿ ಮುಂದುವರಿದೆವು. ಈಗ ಪಶ್ಚಿಮಾಗಸ ನಮ್ಮೆದುರು ವಿಸ್ತಾರವಾಗಿ ತೆರೆದುಕೊಂಡಿತ್ತು. ಅದರಲ್ಲೊಂದು ಕಿರು ಮೋಡ ನಮ್ಮ ಕಲ್ಪನೆಗೆ ಪ್ರಚೋದನೆ ಕೊಡುವಂತೆ ನಲಿದು ತೋರಿತು. ಕೂಳೂರು ಸಂಕದ್ವಯದ ಮೇಲೆ ರಜಾದಿನದ ವಿರಳ ವಾಹನ ಸಂಚಾರ, ಪೆರ್ಮನ್ನೂರು ದಾಟುವಾಗ ಕೇಳಿದ್ದ ಕ್ರಿಸ್ತ ಪ್ರಾರ್ಥನೆಯ ನಾದ ಕೂಳೂರು ಇಗರ್ಜಿಯಲ್ಲಿ ಅನುರಣಿಸಿದ ಅನುಭವ, ಬಹುಕಾಲದಿಂದ ನಿಷ್ಕ್ರಿಯವಾಗಿರುವ ಕೇಐಸೀಓಎಲ್ಲಿನ ಕಾರ್ಯಾಗಾರದ (ಪೆಲೆಟೈಸೇಶನ್ ಪ್ಲಾಂಟ್) ಶಾಂತರೆ, ನವಿರಾಗಿ ಸುಳಿಯತೊಡಗಿದ್ದ ಗಾಳಿ, ಸಣ್ಣದಾಗಿ ತಾಳ ಹಾಕಿದಂತೆ ನಮ್ಮ ದೋಣಿಯ ಮೂಕಿಯನ್ನೆತ್ತೆತ್ತಿ ಆಡಿಸುತ್ತಿದ್ದ ತೆರೆಗಳಾಟಗಳೆಲ್ಲ ನಮ್ಮ ಜಲಯಾನದ ಸಮಾಪ್ತಿಗೆ ಶುಭಕೋರುವಂತೇ ಭಾಸವಾಗಿ ಉಲ್ಲಸಿತರಾದೆವು. ಆದರೆ…

ಒಮ್ಮೆಗೇ ನವಮಂಗಳೂರು ಬಂದರದ ಸೈರನ್ ಇರಬೇಕು, ಕರ್ಕಶವಾಗಿ, ದೀರ್ಘವಾಗಿ ಅಬ್ಬರಿಸಿತು. ಅದಕ್ಕೆ ಸೇರಿ ಬಂದಂತೆ ಅದೇ ವಲಯದಲ್ಲಿ ಯಾವುದೋ ಚಿಮಣಿಯಿಂದ ಕರಿಕಪ್ಪು ಹೊಗೆ ಆಗಸಕ್ಕೆ ಚಿಮ್ಮಿ ವಿಕಟ ನುಲಿತ ತೋರಿತು. ಹಿಂಬಾಲಿಸಿದಂತೆ ಬಂದ ಕೂಳೂರು ಇಗರ್ಜಿಯ ಗಂಟಾನಾದ ನನ್ನನ್ನು ಇಂಗ್ಲಿಷಿನ ಮಹಾಕವಿ ಥಾಮಸ್ ಗ್ರೇಯ ಎಲಿಜಿಯ ವಿಷಾದದ ಸಾಲುಗಳನ್ನು ಹೊಸದೊಂದು ಛಾಯೆಯಲ್ಲಿ ಕಾಣಿಸಿತು (For whom the bell tolls). ಸಂಕದಾಚಿನ ವಸತಿ ಸಾಲಿನದ್ದೂ ಸೇರಿದಂತೆ ‘ಬೆಳಗ್ಗಿನ ಕೊಳೆ’ ಹೊತ್ತ ನೀರಿನ ವಾಸನೆ ಮೂಗು ಗುರುತಿಸಿತು. ನಾವಿನ್ನೇನು ದಂಡೆಗೆ ಬಂದೆವೆನ್ನುವಾಗ ಚಡ್ಡಿ ಎಳೆದುಕೊಂಡು ಹೋದವನ ‘ಸ್ವಚ್ಛ’ವನ್ನು ನಾವು ಮೆಟ್ಟಿಹೋಗದ ಎಚ್ಚರದಲ್ಲಿ ಹುಡುಕಿಕೊಳ್ಳಬೇಕಾಯ್ತು. ದುರುದುಂಡಿಗಳು ಪ್ರಾಕೃತಿಕ ರಕ್ಷಣಾಕೋಟೆಯದೇ ಮಗ್ಗುಲು ಮುರಿದಂತೆ, ದೂಡಿ ಮಲಗಿಸಿದ ಕಾಂಡ್ಲಾಕಾಡಿನ ಅವಶೇಷವಂತೂ ನನ್ನದೇ ಸೋಲೆನ್ನುವಂತೆ ಕಾಣುತ್ತಿತ್ತು. ದೂಳೇಳುತ್ತಿದ್ದ ಹೊಸ ವಿಸ್ತಾರ ಕೆಮ್ಮಣ್ಣ ದಾರಿಯನ್ನುಳಿದು ಎಲ್ಲಾ ಸ್ಥಳಗಳಲ್ಲಿ ರಾಶಿಬಿದ್ದ ಊರಿನ ಹಾಳಮೂಳಂತೂ ನಮ್ಮಲ್ಲುಳಿದಿರಬಹುದಾದ ಚೂರುಪಾರು ಸಂತಸವನ್ನೂ ಕಳೆದೇ ಹಾಕಿತು. ಯಾವುದಕ್ಕೀ (ಇಗರ್ಜಿಯ) ಗಂಟಾನಾದ? ಪರಿಸರದ ಅಂತ್ಯಕ್ಕೋ, ‘ಅಭಿವೃದ್ಧಿ’ಯ ಆನಂದಕ್ಕೋ ಅರ್ಥೈಸಿಕೊಳ್ಳಲಾಗದ ಸ್ಥಿತಿಯಲ್ಲಿ ನಾವು ಮರಳಿದೆವು.