ನಾವು ಬೆಳಿಗ್ಗೆ ಹತ್ತು ಗಂಟೆಗೆ ಕಾರೇರಿ ಮಂಗಳೂರು ಬಿಟ್ಟೆವು. ಉಡುಪಿ ಹೆದ್ದಾರಿಯೋಟಕ್ಕೆ ಪಡುಬಿದ್ರೆಯಲ್ಲಿ ಬಲ ಹೊರಳಿಕೆ, ಬೆಳ್ಮಣ್ಣಿನಲ್ಲಿ ಚಾ ವಿರಾಮ. ನನ್ನ ಜತೆಗಿದ್ದ ಜೀವನ ಜತೆಗಾತಿ ದೇವಕಿಗೆ “ನಿಟ್ಟೆ-ಬಿಟ್ಟೆ, ಕಾರುಕಳ್ಳ, ಗೋಳಿಬಜೆ…” ನನ್ನ ಮಾಮೂಲೀ ಹಾಸ್ಯ ಉದ್ಗಾರಗಳು. ಅವನ್ನು ಕಳೆದು, ಕುದುರೆಮುಖ ರಾಷ್ಟ್ರೀಯ ಉದ್ಯಾನದ ತನಿಖಾಠಾಣೆಯಲ್ಲಿ ಓಟ ನಿಧಾನಿಸಿದೆವು. ನೇರ ಮುಂದುವರಿಯುವ, ಅಂದರೆ ಭಗವತಿ ಘಾಟಿ (ಕುದುರೆಮುಖ ನಗರಕ್ಕೆ ಹೋಗುವ ದಾರಿ) ಏರುವ ಸಂಗತಿ, ಕಳೆದ ಸುಮಾರು ನಲ್ವತ್ತು ವರ್ಷಗಳಲ್ಲಿ ನಾನು ಮಾಡಿದ್ದಕ್ಕೆ ಲೆಕ್ಕವಿಲ್ಲ. ಆದರೆ ಅದು ಬಿಟ್ಟು, ಅಲ್ಲೇ ಬಲ ತಿರುಗುವ, ಅಂದರೆ ಕೈಕಂಬ ಮನ್ನಿಸಿ ಮಾಳದತ್ತ ಮುಖ ಮಾಡಿದ್ದು, ತೀರಾ ಈಚೆಗೆ ಮತ್ತು ಇದು ಎರಡನೇ ಸಲ.

ತಿಂಗಳ ಹಿಂದಷ್ಟೇ ಗೆಳೆಯ ಡಾ| ಕೃಷ್ಣಮೋಹನ ಪ್ರಭು (ಕೃಶಿ) ಜೊತೆಯಲ್ಲಿ ಕಾರಿನಲ್ಲಿ ಮೂಡಬಿದ್ರೆಯಿಂದ ಹೀಗೇ ಬಂದಿದ್ದೆ. ದಾರಿ ಸ್ವಲ್ಪ ಒಳಹೋದಂತೆ ನೇರ ಇಳಿಜಾರಾಗಿತ್ತು. ಆಗ ಒಮ್ಮೆಲೆ ಎದುರಿನ ಕಡುಹಸಿರ ವಿಸ್ತಾರ ಕಣಿವೆ, ತೆಳು ಬಿಸಿಲಿನಲ್ಲಿ ಕಣ್ಣ ತುಂಬಿತ್ತು. ದಪ್ಪನಾಗಿ ಹಾಸಿದ್ದ ಪಚ್ಚೆಗಂಬಳಿಯಲ್ಲಿ ನವಿರಾದ ನೆರಿಗೆಗಳು, ಜಾರುಗಳು. ಸುತ್ತುವರಿದ ಅಗಾಧ ಘಟ್ಟವನ್ನೂ ಆವರಿಸಿಕೊಂಡಿತ್ತು ದಟ್ಟಾರಣ್ಯ. ಈ ಮಲೆ ಮುಚ್ಚಿಗೆಯನ್ನೂ ಹರಿದು, ಘಟ್ಟದ ಈ ವಲಯ ವರಿಷ್ಠ ಕುರಿಯಂಗಲ್ಲು (೧೧೬೨ ಮೀ. ಸಮುದ್ರ ಮಟ್ಟದಿಂದ) ಆ ಎತ್ತರದಲ್ಲೆಲ್ಲೋ ಇದ್ದಿರಬೇಕು. ನಮ್ಮ ದೃಷ್ಟಿಗೆ ಹಿಂಜಿದ ತುಪ್ಪುಳದ ಹಳಕುಗಳಂತೆ ಮೋಡಗಳ ತೆರೆ ಕೊಟ್ಟು, ಹಿನ್ನೆಲೆಯಲ್ಲಿ ನಗುತ್ತಿದ್ದಿರಬೇಕು. ನನಗೆ ಕಾರು ಹಾರಿಯಾದರೂ ಈ ಮೋಹಕ ಸನ್ನಿವೇಶವನ್ನು ಕನಿಷ್ಠ ಒಂದೆರಡು ದುರ್ಬಲ ಚಿತ್ರಗಳಲ್ಲಾದರೂ ಸೆರೆ ಹಿಡಿಯುವ ಬಯಕೆ. ಆದರೆ ನಾವಾಗಲೇ ನಮ್ಮ ಉದ್ದೇಶ ಸಾಧನೆಯಲ್ಲಿ ತಡವಾಗಿದ್ದ ನೆನಪು ಬಿಡಲಿಲ್ಲ, ಧಾವಿಸಿದ್ದೆವು. ಹಿಂದೆ ಬರುವಾಗ ದಾರಿ ಬದಲಿಸಿ, ನೇರ ಬಜಗೋಳಿಗೇ ಹೋದುದರಿಂದ ಅವಕಾಶ ವಂಚಿತನಾಗಿದ್ದೆ. ಆದರೆ ಇಂದು, ಭೂಮಿಯ ಮಾಡೇ ಕುಸಿದಂತೆ, ಘಟ್ಟವೇನು ಕಣಿವೆಯ ವಿಸ್ತಾರವೆಲ್ಲ ಕವಿದಂತೆ ದಟ್ಟ ಕರ್ಮೋಡವಿತ್ತು. ಅಂದಿನ ವೈಭವದ ನೆನಪಿನ ಚಿತ್ರವನ್ನು ನಾನು ಬರಿಯ ಮಾತಿನಲ್ಲಿ ದೇವಕಿಗೆ ಕೊಡುತ್ತಿದ್ದಂತೆ ಪರಶುರಾಮ ದೇವಳದ ಕವಲು ಬಂದಿತ್ತು. ಅಲ್ಲಿ ಎಡ ಹೊರಳಿ, ಅನತಿ ದೂರದಲ್ಲಿ ನಿಂತದ್ದೇ ದೇವಳದ ಮಹಾದ್ವಾರ.

ಮಹಾರಾಷ್ಟ್ರದಿಂದ ಮೊಘಲರ ಭೀತಿಗೆ ಓಡಿ ಬಂದ (ಮುಖ್ಯವಾಗಿ) ಚಿತ್ಪಾವನೀ ಬ್ರಾಹ್ಮಣ ಸಮುದಾಯ, ಭಯ ಕಳಚಿಕೊಳ್ಳಲಾರದೆ ಪಶ್ಚಿಮ ಘಟ್ಟದ ಮಲೆಗಳನ್ನಾಶ್ರಯಿಸಿದ್ದು ಇತಿಹಾಸದ ವಿದ್ಯಾರ್ಥಿಗಳಿಗೆಲ್ಲ ತಿಳಿದದ್ದೇ ಇದೆ. ಹಾಗೆ ಬಂದವರಲ್ಲಿ ನಾಲ್ಕೆಂಟು ಕುಟುಂಬಗಳು ಮಾಳದ ಈ ಮೂಲೆಯನ್ನೂ ಆಶ್ರಯಿಸಿದ್ದವು. ಅವರ ಸಾಹಸೀ ಜೀವನದ ಅಂಗವಾಗಿಯೇ ಬೆಳೆದು ನಿಂತ ಮುಖ್ಯ ಶ್ರದ್ಧಾ ಕೇಂದ್ರಗಳಲ್ಲಿ ಒಂದು ಈ ಪರಶುರಾಮ ದೇವಸ್ಥಾನ. ರಸ್ತೆಯ ಸಮಕ್ಕಿದ್ದ ದೇವರ ಉತ್ಸವ ಮಂಟಪದಿಂದ ಮೆಟ್ಟಿಲ ಸಾಲುಗಳಲ್ಲಿ ಮೊದಲು ಸಭಾಭವನ, ಅನಂತರ ದೇವಾಲಯದ ವಠಾರಕ್ಕೇ ಇಳಿದೆವು. ಅಂದಿನ ಪೂಜೆ, ದರ್ಶನಗಳ ವೇಳೆ ಮುಗಿದಿತ್ತು. ಅರ್ಚಕರು ಗರ್ಭಗುಡಿಯ ಬಾಗಿಲು ಹಾಕಿ, ಮನೆ ಸೇರಿದ್ದರು. ಆದರೆ ಆ ವಲಯದ ಓರ್ವ ಕೃಷಿಕ – ಗಂಗಾಧರ ಜೋಶಿ, ವಠಾರಕ್ಕೆಲ್ಲ ಒಬ್ಬರೇ ಎನ್ನುವಂತೆ, ತನ್ನ ಪಾಲಿನ ಸೇವೆ ನಡೆಸಿದ್ದರು; ಬಣ್ಣ ಕುಂದಿದ್ದ ಮುಖ್ಯ ಬಾಗಿಲನ್ನು ಓರೆ ಮಾಡಿ, ಸ್ವಯಂಸಿದ್ಧಿಯ ಕಲಾಬಲದಲ್ಲಿ ಚಿತ್ತಾರಗಳ ಮೆರವಣಿಗೆ. ನಾವು ಮಂಗಳೂರಿನಿಂದ ಬಂದದ್ದು, ಮತ್ತಿವರ ಹತ್ತಿರದ ಬಂಧುಗಳೇ ಆದ ಯಕ್ಷ-ವಿದ್ವಾಂಸ ಪ್ರಭಾಕರ ಜೋಶಿ ಮತ್ತು ಅಮೆರಿಕನ್ನಡಿಗ ಶ್ರೀವತ್ಸ ಜೋಶಿಯವರ ಮಿತ್ರ ಬಳಗದವರು ಎಂದೂ ತಿಳಿದ ಮೇಲೆ ಬಹಳ ಉತ್ಸಾಹದಿಂದಲೇ ಎದ್ದು ಬಂದರು. ಬಾಗಿಲು ದೂಡಿ ಒಳಗೆಲ್ಲ ಓಡಾಡಿಸಿ, ಗರ್ಭಗುಡಿಯ ಬಾಗಿಲ ಸರಳುಗಳೆಡೆಯಿಂದ ದೇವದರ್ಶನ ಮಾಡಿಸಿದರು. ಮತ್ತೆ, ಈ ದೇವಳದ ಸ್ಥಾಪನೆಯ ಆವಶ್ಯಕತೆಯಿಂದ ತೊಡಗಿ, ಸಂದ ಸುಮಾರು ನೂರಾನಲ್ವತ್ತು ವರ್ಷಗಳಲ್ಲಿ ಮೂರು ಬಾರಿ ಜೀರ್ಣೋದ್ಧಾರಗೊಂಡ ಕತೆ, ಸ್ಥಳೀಯ ಆಚರಣೆಗಳ ವೈಭವವನ್ನೆಲ್ಲ ಸೂಕ್ಷ್ಮವಾಗಿ ತಿಳಿಸಿ, ಬೀಳ್ಕೊಂಡರು. ಮುಂದೆ ಸಣ್ಣ ಬಳಸು ದಾರಿ…..

ರಾಘವ ನಂಬಿಯಾರರ ತೆಂಕು ತಿಟ್ಟು ಯಕ್ಷಗಾನ ಪುನರುತ್ಥಾನದ ಪ್ರಯೋಗಕ್ಕೆ ಸಾಂಕೇತಿಕ ಹೆಸರು – ದೀವಟಿಗೆ ಆಟ. ಅವರ ದೀರ್ಘ ಯಾನದಲ್ಲಿ, ನಾನೊಂದು ಕಟ್ಟೆಪೂಜೆಯನ್ನೂ (ಒಂದು ಪ್ರದರ್ಶನ) ನಡೆಸಿಕೊಟ್ಟಿದ್ದೆ! (ನೋಡಿ: ದೀವಟಿಗೆ ಆಟಕ್ಕೆ ಕೇಳಿ ಹೊಡೆಯುತ್ತಾ…) ಅನಂತರದ ದಿನಗಳಲ್ಲಿ ಯಾರೋ ತಿಳಿಸಿದ್ದರು, “ಅಡ್ವೆಯಲ್ಲೂ ಒಂದು ದೀವಟಿಗೆ ಆಟ ಇದೆ.” ಪಡುಬಿದ್ರೆ – ಕಾರ್ಕಳ ರಸ್ತೆಯಲ್ಲಿ ‘ಅಡ್ವೆ’ ಸ್ಥಳನಾಮ ಓದಿದ್ದು ನೆನಪಿತ್ತು. ಆದರೆ ನನ್ನ ಅಂಗಡಿಯ ಶಿಸ್ತಿಗೂ ಅಪ-ರಾತ್ರಿಯ ಪ್ರದರ್ಶನಕ್ಕೂ ತಾಳೆ ಬೀಳದೆ, ಪ್ರದರ್ಶನಕ್ಕೆ ಹೋಗುವ ಆಸೆ ಕೈಬಿಟ್ಟಿದ್ದೆ. ಮುಂದಿನ ದಿನಗಳಲ್ಲಿ ಈ ಅಡ್ವೆಗೊಂದು ವ್ಯಕ್ತಿನಾಮ – ಪುರುಷೋತ್ತಮ ಸೇರಿದ್ದು, ಆತ ಚಿತ್ರ ಮೂರ್ತಿಯಾದಿ ಕಲಾಕಾರ ಎಂದೆಲ್ಲ ಕೇಳಿದ್ದೂ ಇತ್ತು.

ಆದರೆ ಪರಿಚಯ ಲಾಭವಾಗಿರಲಿಲ್ಲ. ಈಚೆಗೆ ಎರಡು ಮೂರು ವರ್ಷಗಳಲ್ಲಿ ಪುರುಷೋತ್ತಮ ಅಡ್ವೆ ಮಾಳದ ಮೂಲೆಯಲ್ಲೊಂದು ಕೃಷಿ, ಕಲೆಗಳ ಸಂಗಮ ರೂಢಿಸುತ್ತಿರುವುದು ಹೆಚ್ಚೆಚ್ಚು ನನ್ನ ಕಿವಿ ತಟ್ಟಿತ್ತು. ಹಲವು ಮಿತ್ರರು, ಬಾಂಧವರು ಈ ಹೊಸ ‘ಆಶ್ರಮ’ದ ಭಜಕರಾಗುತ್ತಿದ್ದಂತೆ, ನನಗೇನೋ ಕಳೆದುಕೊಂಡ ಭಾವ ಕಾಡಿತ್ತು. ಈಚೆಗೆ ಅವನ್ನೆಲ್ಲ ನೀಗುವಂತೆ ನನಗೆ ಪುರುಷೋತ್ತಮ ಅಡ್ವೆಯವರೊಡನೆ ಫೇಸ್ ಬುಕ್ ಗೆಳೆತನ ಕುದುರಿತು. ಫೇಸ್ ಬುಕ್, ಜಾಲತಾಣಗಳ ಮೂಲಕ ಅಂತರ್ಜಾಲದಲ್ಲಿ ನಾನು ತುಸು ವಾಚಾಳಿ. ಆದರೆ ಈ ಪುರುಷೋತ್ತಮ ದಿವ್ಯಮೌನಿ. ಆದರೂ ಕಳೆದ ತಿಂಗಳು ಅವರು ಮೌನ ಮುರಿದು, ನನ್ನೊಡನೆ ದೂರವಾಣಿ ಸಂಪರ್ಕ ಬೆಳೆಸಿದಾಗ, ಪರಿಚಯಕ್ಕೆ ಹೊಸ ಆಯಾಮವೇ ಒದಗಿತ್ತು. ಅದು ಅವರ ಮಾಳದ ನೆಲೆಯ ಹೊಸ ಪ್ರಕೃತಿಪರ ಚಟುವಟಿಕೆಗಳಿಗೆ ಸಲಹೆ ಕೊಡುವ ಅವಕಾಶ. ಕೃಶಿ, ಹಿಂದೆಯೇ ಅಡ್ವೆಯವರ ಕೆಲವು ಕಲಾಪಗಳಲ್ಲಿ ಭಾಗಿಯಾಗಿದ್ದರು. ಸಲಹಾಕೂಟದಲ್ಲಿ ಅವರೂ ಭಾಗಿಯಾಗುತ್ತಾರೆ ಎಂದು ತಿಳಿದು, ನಾನು ಅವರೊಡನೆ ಸೇರಿಕೊಂಡೇ ಮಾಳಕ್ಕೆ ಹೋಗಿದ್ದೆ.

ಪುರುಷೋತ್ತಮ ಮಧ್ಯಮವರ್ಗದವರು, ಅಡ್ವೆ ಗ್ರಾಮದವರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು, ಹತ್ತನೇ ತರಗತಿಗೇ ಸಾಂಪ್ರದಾಯಿಕ ಶಿಕ್ಷಣದಿಂದ ಕಳಚಿಕೊಂಡರೂ ಭಾವಪೋಷಣೆಯ ದಾರಿ ಅನುಸರಿಸಿ ಗಟ್ಟಿಯಾದವರು. ನೆಲದ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಮಿಡಿತಕ್ಕೆ ಶ್ರುತಿಗೊಳ್ಳುತ್ತ ಚಿತ್ರಕಲೆ, ಮೂರ್ತಿಶಿಲ್ಪ, ಯಕ್ಷಗಾನ, ನಾಟಕ, ಸಂಗೀತ, ಕೃಷಿ, ಸಾಂಪ್ರದಾಯಿಕ ವೃತ್ತಿಕೌಶಲ ಎಂದೆಲ್ಲ ಹದಗೊಳ್ಳುತ್ತ ವಾಸ್ತವ್ಯವನ್ನು ಉಡುಪಿಗೆ ಬದಲಿಸಿದರು. ಸ್ವತಂತ್ರ ಕಲಾವಿದನಾಗಿಯೇ ವೃತ್ತಿ ಹಾಗೂ ಖ್ಯಾತಿ ಗಳಿಸಿದರು. ಇಂದು ಅವರು ತಾಯಿ, ಪತ್ನಿ ಹಾಗೂ ಎರಡು ಎಳೆಯ ಮಕ್ಕಳ ಗೃಹಸ್ಥ. ಆದರೆ ಇವರ ಬಹುಮುಖೀ ಚೈತನ್ಯ ಅಷ್ಟಕ್ಕೇ ತಣಿಯಲಿಲ್ಲ.

ಪುರುಷೋತ್ತಮ ಅಡ್ವೆ ವಿಸ್ತೃತ ಕನಸಿನೊಡನೆ ಉಡುಪಿಯ ಚೌಕಟ್ಟು ಮೀರಿ ಹುಡುಕಾಡಿದಾಗ ಕಾಣಿಸಿದ್ದು ಮಾಳದ ಮೂಲೆಯ ಒಂದು ಕೃಷಿಭೂಮಿ. ಪಶ್ಚಿಮಘಟ್ಟ ಎನ್ನುವ ಮಹಾ ಪರ್ವತಸಾಲಿನ ನೇರ ಬುಡ. ದುರ್ಗಮ ಬೆಟ್ಟ, ನಿಬಿಡ ಕಾಡು, ಋತುಮಾನಗಳ ವೈಪರೀತ್ಯದಲ್ಲಿ ಎಂದೂ ದಿಗ್ಬಂಧನ ಹೇರಬಲ್ಲ ಸೊಕ್ಕಿನ ಝರಿ-ತೊರೆಗಳ ಬೀಡು, ನಾಗರಿಕ ಮಾನದಲ್ಲಿ ಯಾರಿಗೂ ಬೇಡದ ಕೊಂಪೆ. ಸ್ವಂತ ದುಡಿಮೆಯ ಹಣಕ್ಕೆ, ಬ್ಯಾಂಕಿನ ಸಾಲ ಜೋಡಿಸಿ ಜಾಗ ಕೊಂಡೇ ಬಿಟ್ಟರು. ಸುಮಾರು ಇನ್ನೂರು ವರ್ಷಗಳ ಹಳತಾಗಿ ಸಾಕಷ್ಟು ಶಿಥಿಲವಾದ ಮನೆ ಮತ್ತು ಸುಮಾರು ಏಳು ಎಕ್ರೆ ವಿಸ್ತೀರ್ಣದ ಸಾಂಪ್ರದಾಯಿಕ ಕೃಷಿಭೂಮಿಯಲ್ಲಿ ನೆಲೆಯೂರಿ ಈಗ ಐದು ವರ್ಷಗಳೇ ಸಂದಿವೆ. ಹಾಗೆಂದು ವೃತ್ತಿ ಮತ್ತು ಕೌಟುಂಬಿಕ

ಚಿತ್ರ ಕೃಪೆ: ಪುರುಷೋತ್ತಮ ಅಡ್ವೆ

ಸೌಕರ್ಯಗಳ ಉಡುಪಿಯನ್ನು ಅವರು ಬಿಟ್ಟಿಲ್ಲ. ಉಡುಪಿ, ಮಾಳ ಎಂದು ಅನಿಶ್ಚಿತ ಓಡಾಟ ನಡೆಸಿಕೊಂಡು, ಕೆಲವು ಸಮಾನ ಮನಸ್ಕರ ಸಾಂಗತ್ಯದೊಡನೆ ಮಾಳದ ಮನೆ ಹಾಗೂ ಕೃಷಿಗೆ ಹೊಸತೇ ನಿರೂಪಣೆಯನ್ನು ಬರೆಯುತ್ತ ಬಂದಿದ್ದಾರೆ. ನಾಗರಿಕತೆಯ ಧಾವಂತ ಮಂಗಳ ಗ್ರಹದಲ್ಲೂ ನೆಲೆ ಹುಡುಕುತ್ತಿರುವ ಕಡಲಾಗಿರುವಾಗ, ಇದು ನಮ್ಮದೇ ನೆಲದ ಸ್ಪರ್ಷ ತಪ್ಪಿ ಹೋಗದಂತೆ ಪುರುಷೋತ್ತಮ ಕಟ್ಟಿಕೊಡುತ್ತಿರುವ ಮಣ್ಣ ಸೇತು; ತುಳುವಿನಲ್ಲಿ ಹೇಳುವುದಾದರೆ ಮಣ್ಣಪಾಪು! (ಅವರದೇ ಘೋಷ ವಾಕ್ಯ – Bridging the life)

ಮನೆಯ ಆಯ, ರೂಪಗಳಿಗೆ ಭಂಗವಿಲ್ಲದಂತೆ, ಆದರೆ ವಿಸ್ತೃತ ಚಟುವಟಿಕೆಗಳ ಸರಳ ಅಗತ್ಯಗಳಿಗೆ ತಕ್ಕಂತೆ ಮರುರಚನೆ, ತಿದ್ದುಪಡಿ ಮಾಡಿಕೊಂಡಿದ್ದಾರೆ. ತೋಟದ ರಸಗೊಬ್ಬರ, ಕೀಟನಾಶಕಗಳ ಆಧಾರಿತ ಕೃಷಿಪದ್ಧತಿಯನ್ನು ಸಾವಯವಕ್ಕೆ ಒಗ್ಗಿಸಿದ್ದಾರೆ. ಹಿಂದಿನವರು ಉಳಿಸಿಕೊಟ್ಟ ಅಡಿಕೆ, ತೆಂಗು ಮುಂತಾದ ಏಕ ಬೆಳೆಗಳನ್ನು ಒಟ್ಟು ವ್ಯವಸ್ಥೆಯ ಆರ್ಥಿಕ ಸ್ವಾವಲಂಬನೆಗಾಗಿ ಉಳಿಸಿಕೊಂಡಿದ್ದಾರೆ. ಆದರೆ ಪ್ರಾಕೃತಿಕ ಪ್ರಭಾವಗಳಲ್ಲಿ ಅವು ಅಳಿದಂತೆ, ಜೀವ ವೈವಿಧ್ಯವನ್ನು ಸ್ಪಷ್ಟವಾಗಿ ತರುತ್ತಲೂ ಇದ್ದಾರೆ. ಇದರದೇ ಹಕ್ಕಿನ ಕೃಷ್ಯೇತರ ಭೂಮಿ ಸಹಜಾರಣ್ಯವಾಗಿ ಉಳಿಯುವಂತೆ ರಕ್ಷಿಸುತ್ತಲೂ ಇದ್ದಾರೆ. ಮೊದಲಲ್ಲಿ ತನ್ನ ಕಲಾ ಆಶಯದಂತೆ ಚಿತ್ರ, ಮೂರ್ತಿ ಶಿಲ್ಪಾದಿಗಳ (ಮಣ್ಣು, ಮರ, ಲೋಹ, ಶಿಲೆ ಇತ್ಯಾದಿ) ಪರಿಚಯಾತ್ಮಕ ಶಿಬಿರ, ಕಮ್ಮಟ ಸಾಕಷ್ಟು ನಡೆಸಿದ್ದಾರೆ. ಈಗ ಹೆಚ್ಚಿನ ಪರಿಸರ ಪಾಠಗಳಿಗೂ ಸುತ್ತಮುತ್ತಣ ಸಾಮಾಜಿಕ ವಾತಾವರಣದ ಹಸನುಗೊಳ್ಳುವಿಕೆಗೂ ಕಲಾಪಗಳನ್ನು ವಿಸ್ತರಿಸುವ ಬಯಕೆ ಅಡ್ವೆಯವರದು. ಹೆಗ್ಗೋಡಿನ ನಾಟಕಕಾರ, ಗಾಂಧೀವಾದಿ ಪ್ರಸನ್ನ ಇವರಿಗೆ ಹಳೆ ಪರಿಚಯ, ಅವರು ಬಂದವರಿದ್ದರು. ಮತ್ತೆ ಮೂಲತಃ ಕನ್ನಡಿಗರೇ ಆದರೂ ರಾಷ್ಟ್ರವ್ಯಾಪೀ ಸಾಮಾಜಿಕ ಕೆಲಸ ಮಾಡಿ ಪಳಗಿದ ಇನ್ನೂ ನಾಲ್ಕೈದು ಮಂದಿಯೂ ಕೇವಲ ಪುರುಷೋತ್ತಮರ ಪ್ರಾಮಾಣಿಕತೆ, ಪ್ರೀತಿಗೇ ಒಲಿದು ಅಲ್ಲಿದ್ದರು. (ಕ್ಷಮಿಸಿ, ನನಗವರೆಲ್ಲರ ತತ್ಕಾಲೀನ ಪರಿಚಯವೇನೋ ಆಗಿತ್ತು. ಆದರೆ ಇಲ್ಲಿ ದಾಖಲಿಸುವಷ್ಟು ನೆನಪು ಉಳಿದಿಲ್ಲ!) ಎಲ್ಲರೂ ಯಥಾನುಶಕ್ತಿ ಸಲಹೆಗಳನ್ನು ಕೊಟ್ಟಿದ್ದೆವು. ಅದರ ಮೊದಲ ಫಲ ಈಗ (ಜೂನ್ ೨೩-೨೪, ೨೦೧೮) ಕಾಣುವುದಿತ್ತು.

ಏಳು ವರ್ಷಗಳ ಹಿಂದೆ ಬಿಸಿಲೆಯ ಅಶೋಕವನದಲ್ಲಿ ಕಪ್ಪೆ ಗುರುತಿಸಿ ಶಿಬಿರ ತೊಡಗಿತ್ತು. ಮತ್ತದು ವಾರ್ಷಿಕ ವ್ರತದಂತೆ ನಡೆಯುತ್ತ ಬಂದಿರುವುದು ನಿಮಗೆಲ್ಲ ತಿಳಿದೇ ಇದೆ. (ಇಲ್ಲದವರು ಅವಶ್ಯ ಕಪ್ಪೆ ಶಿಬಿರಗಳು ಸೇತನ್ನು ಬಳಸಿ, ಸರಣಿಯ ಎಲ್ಲ ಲೇಖನಗಳನ್ನೂ ಒಂದೇ ಕಟ್ಟಿನಲ್ಲಿ ನೋಡಿ, ಓದಿ ತಿಳಿದುಕೊಳ್ಳಬಹುದು) ಅದರ ವಿಸ್ತರಣೆಯೋ ಎನ್ನುವಂತೆ ಕಾರ್ಕಳ, ಉಡುಪಿ, ಮೈಸೂರುಗಳಲ್ಲೂ ಕಪ್ಪೆ ಶಿಬಿರ ನಡೆದದ್ದು, ತನ್ಮೂಲಕವಾಗಿ ಮನುಷ್ಯ ಪರಿಸರದ್ದೇ ಬುನಾದಿ ಬಿಗಿಪಡಿಸುವ ಎಚ್ಚರ ಬೆಳೆದದ್ದೂ ಆಯ್ತು. ಅವುಗಳೆಲ್ಲಕ್ಕೂ ನಾಯಕತ್ವ ಕೊಟ್ಟವರು ಡಾ| ಕೆ.ವಿ ಗುರುರಾಜ್ (ಕೆವಿಜಿ) ಮತ್ತು ಗುಬ್ಬಿ ಲ್ಯಾಬ್ಸಿನ ವಿಜ್ಞಾನಾಸಕ್ತ ಬಳಗ.

ಕೆವಿಜಿ ತನ್ನ ಮಾತುಗಳಲ್ಲಿ ಆಗಿಂದಾಗ್ಗೆ ಹೇಳುವುದುಂಟು. ಕಪ್ಪೆಗಳು ಉಪ್ಪುನೀರು (ಸಮುದ್ರ) ಮತ್ತು ಅತಿಶೀತದಲ್ಲಿ (ಮುಖ್ಯವಾಗಿ ಧ್ರುವಪ್ರದೇಶ) ಜೀವಿಸಲರಿಯವು. ಆದರೆ ಉಳಿದಂತೆ ಇವು ವ್ಯಾಪಿಸದ ನೆಲವಿಲ್ಲ ಮತ್ತು ಅಲ್ಲಲ್ಲಿನ ಪ್ರಾಪ್ತಿಗೆ ತಕ್ಕಂತೆ ತಳೆಯದ ರೂಪ ವೈವಿಧ್ಯವೂ ಇಲ್ಲ. ಕಪ್ಪೆಗಳನ್ನೇ ಧ್ಯಾನಿಸುವವರಿಗೆ ಮಣ್ಣಿನಾಳದಲ್ಲಿ, ನೀರಲ್ಲೇ, ಸಂತಾನವೃದ್ಧಿಗಷ್ಟೇ ನೀರು, ವಾಟೆಯೊಳಗೆ, ಪೊದೆಗಳಲ್ಲಿ, ಮರಗಿಡಗಳ ವಿವಿಧ ಎತ್ತರಗಳಲ್ಲಿ, ಕರಿ ಬಂಡೆಯ ಮೇಲೆ, ಮುರಕಲ್ಲಿನ ಮೇಲೆ, ತೊರೆಯ ವಿವಿಧ ರೂಪಗಳಿಗೆ ತಕ್ಕಂತೆ, ಮೂರು ಮೀಟರ್ ವ್ಯಾಸಕ್ಕೊಂದು, ಊರಿನ ವಿಸ್ತಾರಕ್ಕೊಂದು…. ಹೀಗೆ ಗುರುತಿಸಿದಷ್ಟೂ ವಿಭಿನ್ನ ರೂಪಗಳಲ್ಲಿ, ವರ್ತನೆಗಳಲ್ಲಿ ಹೊಸ ಹೊಸ ಕಪ್ಪೆ ಜಾತಿಗಳು ಕಾಣುತ್ತಲೇ ಇವೆ. ಈ ‘ಜಾತಿ’ ಮನುಷ್ಯ ಸಮಾಜ ಕಲ್ಪಿಸಿಕೊಂಡ ವಿಕಾರವಲ್ಲ. ಮತ್ತೆ ನಾವೇ ಸಾಕುಪ್ರಾಣಿಗಳಲ್ಲಿ ಉದ್ದೇಶಪೂರ್ವಕವಾಗಿ ಕೈಯಾಡಿಸಿ, ಇಂದು ನಾಳೆ ಎಂಬಂತೆ ರೂಪಿಸಿದ ತಳಿಬೇಧಗಳೂ ಅಲ್ಲ. ಜೀವ ವಿಕಾಸಪಥದಲ್ಲಿ ಸಾವಿರಾರು ವರ್ಷಗಳಲ್ಲಿ ಸಹಜವಾಗಿ ರೂಪುಗೊಂಡು ದೃಢವಾದ ಕವಲುಗಳು. ಅವನ್ನು ವಿಮರ್ಶಕವಾಗಿ ಕಂಡು, ನಮ್ಮ ತಿಳುವಳಿಕೆಯ ಸೌಕರ್ಯಕ್ಕಾಗಿ ಮಾತ್ರ ವಿಜ್ಞಾನ ಹೆಸರಿಸಿದ, ನಿಜವಾದ ಜಾತಿ. ಕೆವಿಜಿಗೆ ‘ಕಪ್ಪೆ ಮತ ಪ್ರಚಾರ’ಕನ ಉತ್ಸಾಹ ತುಂಬ ಇದೆ. ಅಷ್ಟೇ ಸಂತೋಷದಲ್ಲಿ ಅವರು, ಶೋಧನೆ ನಡೆಯದ ನೆಲವೆನ್ನುವ ಉದ್ದೇಶದಲ್ಲೂ ‘ಕಪ್ಪೆ ಗುರುತಿಸಿ ಶಿಬಿರ’ದ ಹೊಸ ಕರೆಗಳನ್ನು ಸ್ವೀಕರಿಸುತ್ತಾರೆ. ಮಣ್ಣಪಾಪು ಮನೆಯ ಪುರುಷೋತ್ತಮ ಅಡ್ವೆ “ನಮ್ಮಲ್ಲೊಂದು ಕಪ್ಪೆ ಗುರುತಿಸಿ ನಡೆಸಿಕೊಡಬೇಕು” ಎಂದಾಗ ಕೆವಿಜಿ ಕುಶಿಯಿಂದ ಒಪ್ಪಿದ್ದರು. ಅಡ್ವೆಯವರ ಔದಾರ್ಯ ಈ ಸಂಬಂಧಕ್ಕೆ ನೆಪಮಾತ್ರರಾದ ನಮ್ಮನ್ನೂ ಜತೆಯಲ್ಲಿ ಆಹ್ವಾನಿಸಿತ್ತು. ಕಪ್ಪೆ ಶಿಬಿರ ನಮಗೆ ಹೊಸದಲ್ಲ. ಆದರೆ ಹೊಸತಾದ ಮಾಳ ಪರಿಸರ, ಯುವಚೇತನಗಳ ಸಾಂಗತ್ಯ ಮತ್ತು ಅಡ್ವೆಯವರ ಪರಿಚಯ ಹೆಚ್ಚಿಸಿಕೊಳ್ಳುವ ಅವಕಾಶ ಎಂದೇ ನಾವು ಮಾಳಕ್ಕೆ ಹೋಗಿದ್ದೆವು.

ಪರಶುರಾಮ ದೇವಳ ಕಳೆದು ನೂರಿನ್ನೂರು ಮೀಟರ್ ಸಪುರ ಕಚ್ಚಾರಸ್ತೆಯಲ್ಲೇ ಮಣ್ಣಪಾಪು ಮನೆಯ ಮತ್ತೆ ಹಿತ್ತಿಲ ಗೇಟ್. ನೇರ ಮನೆಯಂಗಳಕ್ಕೇ ಹೋಗಲು ದಾರಿಗಳೇನೋ ಎರಡಿದ್ದರೂ ಮಳೆಗಾಲದ ಪ್ರಭಾವದಲ್ಲಿ ಸಾಮಾನ್ಯ ಕಾರುಗಳಿಗೆ ಅವು ಅಸಾಧ್ಯವೇ ಇತ್ತು. ನಾವು ದಾರಿಯಂಚಿನಲ್ಲೇ ಕಾರು ಬಿಟ್ಟಿಳಿದೆವು. ಎಡಕೊಳ್ಳದ ಝರಿ ಮಳೆಗಾಲದ ಸೊಕ್ಕಿನಲ್ಲಿ ಭಾರೀ ಗದ್ದಲವೆಬ್ಬಿಸಿಕೊಂಡಿತ್ತು. ದಾರಿಯುದ್ದಕ್ಕೆ ಅಷ್ಟೇನೂ ಕಾಡದ ಮಳೆ ಈಗ ಚಿರಿಪಿರಿಗುಟ್ಟುತ್ತಿದ್ದಂತೆ, ಕೊಡೆಯರಳಿಸಿ, ಚೀಲ ಹೊತ್ತು ಮನೆ ಸೇರಿದೆವು. ಒಳ ಅಂಗಳ, ನಾಲ್ಕೂ ಸುತ್ತಣ ವಾಸ ವ್ಯವಸ್ಥೆಯ ಹಳೆ ಶೈಲಿಯ ಮನೆ. ಜೀರ್ಣಗೊಂಡ ಸಾಕಷ್ಟು ಭಾಗಗಳನ್ನೂ ಶೈಲಿಗೊಪ್ಪುವ ಮತ್ತು ಆವಶ್ಯಕ ಎಷ್ಟೋ ವ್ಯವಸ್ಥೆ ಮತ್ತು ಸೇರ್ಪಡೆಗಳನ್ನು ಪುರುಷೋತ್ತಮ ಮಾಡಿಕೊಂಡದ್ದು ಸ್ಪಷ್ಟವಿತ್ತು. ನಮಗೂ ಮೊದಲೇ ಬಂದಿದ್ದ ಒಂದಷ್ಟು ಶಿಬಿರಾರ್ಥಿಗಳನ್ನು ಪುರುಷೋತ್ತಮ್ ಸಮೀಪದ ಜಲಪಾತಕ್ಕೆ ಕರೆದೊಯ್ದಿದ್ದಾರೆಂದು ಅಡುಗೆಯವರು ತಿಳಿಸಿದರು. ನಮ್ಮ ಚೀಲಗಳನ್ನು ಮನೆಯಲ್ಲೇ ಬಿಟ್ಟು, ಅಡುಗೆಯವರಿಂದಲೇ ಜಲಪಾತದ ಜಾಡಿನ ಸೂಚನೆಗಳನ್ನು ಪಡೆದು ನಾವೂ ಅತ್ತ ನಡೆದೆವು.

ಅಡಕೆ ತೋಟ ಕಳೆಯುತ್ತಿದ್ದಂತೆ ಹಿಂದಿನ ಝರಿಯ ಗದ್ದಲ ಅಡಗಿ ಎದುರಿನ್ನೊಂದೇ ಝರಿನೀರ ಸದ್ದು ಕೇಳತೊಡಗಿತ್ತು. ಎದುರು ಗೇಟ್ ದಾಟುತ್ತಿದ್ದಂತೆ ಎಡ ಕಣಿವೆಯ ಕಾಲುದಾರಿಯಿಂದ ಸಾಲುಗಟ್ಟಿದಂತೆ ಶಿಬಿರಾರ್ಥಿಗಳು ಅಡ್ವೆಯವರ ಜೊತೆಗೇ ಏರಿಬಂದರು. ಸದ್ಯ ಬೇರೇನೂ ಶಿಬಿರ ಕಲಾಪವಿರದುದರಿಂದ ನಾವಿಬ್ಬರು ಸ್ವತಂತ್ರವಾಗಿ ಜಲಪಾತ ನೋಡಲು ಕಾಲುದಾರಿಯ ಮೆಟ್ಟಿಲುಗಳನ್ನಿಳಿದೆವು. ಒಂದೆರಡು ಮಿನಿಟುಗಳಲ್ಲೇ ಕೊಕ್ಕೋ ಗಿಡಗಳ ನೆರಳು ಕಳೆದು, ಸಣ್ಣ ಗೇಟ್ ದಾಟಿ, ಮುಳ್ಳು ಕುರುಚಲುಗಳು ಅಂಚುಗಟ್ಟಿದ ಭಾರೀ ಬಂಡೆ ಹಾಸಿನ ಝರಿದಂಡೆ ಸೇರಿದೆವು. ಮೊದಲು ಅಲ್ಲಿದ್ದೊಂದು ಅಡಿಕೆಮರಗಳ ಪಾಲ ದಾಟಿದೆವು. ಎದುರು ದಂಡೆಯ ಬಂಡೆಗೆ ಕಾಲಿಡಲು ಹೋದ ನಮಗೆ ಅನಿರೀಕ್ಷಿತ ಬೆರಗು! ನಾವು ಕಂಡಂತೆ ಇದೇ ಮೊದಲೆನ್ನುವಂತೆ, ನೂರು ಸಾವಿರ ಸಂಖ್ಯೆಯಲ್ಲಿ ಗೊದಮೊಟ್ಟೆಗಳು, ಅರ್ಥಾತ್ ಕಪ್ಪೆ ಮರಿಗಳು ಚಿಮ್ಮಿ ಚದುರತೊಡಗಿದವು. ಅನಂತರ ಕೆವಿಜಿ ಸೂಚಿಸಿದಂತೆ, ಬಂಡೆ ಹಾಸಿನ ಉದ್ದಗಲಕ್ಕೂ ಹಬ್ಬಿದ್ದ ತೆಳು ಪಾಚಿಯನ್ನು ಅವು ಮೇಯುತ್ತಿದ್ದಿರಬೇಕು. ನಮಗಲ್ಲಿ ಹೆಚ್ಚು ನಡೆದಾಡುವುದೂ ಅಪರಾಧ ಎನ್ನುವಂತಾಗಿ ಮೊದಲ ದಂಡೆಗೇ ಮರಳಿದೆವು. ಅಲ್ಲಿ ಜಲಧಾರೆಯ ಒತ್ತಿನ ತೀವ್ರ ಇಳುಕಲಿನ ಸವಕಲು ಜಾಡಿನಲ್ಲಿ ತುಸು ಕೆಸರು, ನಾಲ್ಕೆಂಟು ಮುಳ್ಳಕೈ, ಕೊನೆಗೆ ಪ್ರಾಕೃತಿಕ ವಾಟೆ-ಗೇಟ್ ದಾಟಿ ನಿಂತದ್ದು ಪುಟ್ಟ ಜಲಪಾತದ ಸಮಕ್ಷಮದಲ್ಲೇ. ಜಡಿಗುಟ್ಟುವ ಮಳೆಯೋ ಝರಿಯ ಹರಿವಿನ ರಭಸಕ್ಕೆ ಸಿಡಿಮಿಡಿಗುಟ್ಟುತ್ತಿದ್ದ ಹನಿಗಳ ಪ್ರತಿಭಟನೆಯೋ ತಿಳಿಯದ ಸ್ಥಿತಿ ನಮ್ಮದು. ಗಾಳಿಯಲೆಗೆ ತುಯ್ದಾಡುವ ಕೊಡೆ ಚಿತ್ರ-ಚೌಕಟ್ಟಿನಲ್ಲಿ ಇಣುಕದಂತೆ, ಸೀರ್ಪನಿಗಳ ಸಂಪರ್ಕ ಕ್ಯಾಮರಾಕ್ಕೆ ಆಗದಂತೆ ನಾಲ್ಕೈದು ಕ್ಲಿಕ್ಕಿದಲ್ಲಿ, ಒಂದಾದರೂ ದಕ್ಕಿದ್ದು ನಮ್ಮ ಪುಣ್ಯವೆಂದುಕೊಂಡೆವು. ಇನ್ನೂ ಪ್ರಶಸ್ತ ಅವಕಾಶ ಕಾದು ನಿಂತು, ಝರಿಯ ಮೇಲಿನ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಬಂದರೆ, ಈಗಿನ ಸಿಂಚನ ಹೋಗಿ, ಇಡಿಯ ತೊರೆಯೇ ನಮ್ಮ ಮೇಲೆ ಕವುಚಿಬೀಳುವ ಅಪಾಯವಿತ್ತಾದ್ದರಿಂದ, ಬೇಗ ಜಾಗ ಖಾಲಿ ಮಾಡಿದೆವು.

ಮಧ್ಯಾಹ್ನ ಒಂದೂವರೆ ಗಂಟೆಯ ಸುಮಾರಿಗೆ ಕೆವಿಜಿ, ಮಿತ್ರ ಸಮೀರ್ ಅಲಿ ಮತ್ತವರ ತಂಗಿಯನ್ನು ಕೂಡಿಕೊಂಡು ಕಾರಿನಲ್ಲಿ ಚಿಕ್ಕಮಗಳೂರು ದಾರಿಯಲ್ಲಾಗಿ ಬಂದು ತಲಪಿದರು. ಅಲ್ಲಿಗೆ ಬಹುತೇಕ ಶಿಬಿರಾರ್ಥಿಗಳೆಲ್ಲ ಬಂದಂತಾಗಿತ್ತು. ಮೊದಲು ಮನೆಯ ಒಳ ಜಗುಲಿಗಳಲ್ಲಿ ಅಂಜೂರದ ಎಲೆ ಹಾಕಿ, ಸರಳ ಆದರೆ ರುಚಿಕರ ಊಟ. ಎರಡು ಗಂಟೆಯ ಸುಮಾರಿಗೆ ಯಾವುದೇ ಠಕ್ಕುಗಳಿಲ್ಲದೆ (ಪ್ರಾರ್ಥನೆ, ಉದ್ಘಾಟನೆ, ಸ್ವಾಗತ, ಪ್ರಾಸ್ತಾವಿಕ……) ಕೆವಿಜಿ ಕೆಲಸಕ್ಕಿಳಿದೇಬಿಟ್ಟರು.

ಶಿಬಿರಾರ್ಥಿಗಳಲ್ಲಿ ಸ್ಪಷ್ಟ ಎರಡು ಸ್ತರಗಳಿತ್ತು. ಒಂದು, ಮಾಳದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಾಧಾಕೃಷ್ಣ ಜೋಶಿ ಕರೆ ತಂದಿದ್ದ ಎಂಟು ಹತ್ತು ಮಕ್ಕಳ ತಂಡ. ಆ ತಂಡಕ್ಕೆ ಹಕ್ಕಿ, ಕಪ್ಪೆ, ಕಾಡು, ಬೆಟ್ಟಗಳೆಲ್ಲ ನಿತ್ಯ ಬಳಕೆಯವು, ವಿಶೇಷ ಅಲ್ಲ. ಅವರಿಗೆ ಜೀವವೈವಿಧ್ಯವನ್ನು ಗುರುತಿಸಿ, ಮಹತ್ವವನ್ನು ತಿಳಿದು ನೋಡುವ ಹೊಸದೃಷ್ಟಿಯ ಅಗತ್ಯವಿತ್ತು. ಅದು ಸಾಧಿತವಾದಲ್ಲಿ ‘ವನ್ಯ ಸಂರಕ್ಷಣೆ’ಗೆ ಸಂಬಳ ಸವಲತ್ತುಗಳ ಸೈನ್ಯ ಕಟ್ಟುವುದು, ಹತ್ತು ಭಾಷಣ ಕುಟ್ಟುವುದು, ಸಾಹಿತ್ಯದ ಸೌಧ ನಿಲ್ಲಿಸುವುದೆಲ್ಲ ವ್ಯರ್ಥ. ಇದು ಅಡ್ವೆಯವರ ಮತ್ತು ತುಂಬ ಸರಿಯಾದ ಯೋಚನೆ. ಮಕ್ಕಳ ತಂಡ ದಿನದ ಕೊನೆಯಲ್ಲಿ ತಂತಮ್ಮ ಮನೆಗೇ ಮರಳುವುದಿತ್ತು. ಉಳಿದಂತೆ ಬೆಂಗಳೂರು, ಮೈಸೂರುಗಳಿಂದಲೂ ಬಂದು ಸೇರಿದ, ಮುಖ್ಯವಾಗಿ ನಗರವಾಸೀ (೧೦-೧೨) ಯುವಜನರದ್ದು. ಇವರು ಪೂರ್ಣಾವಧಿ ಶಿಬಿರಾರ್ಥಿಗಳು. ಇವರಲ್ಲಿ ಹೆಚ್ಚಿನವರಿಗೆ ಜೀವವೈವಿಧ್ಯದ ಔಪಚಾರಿಕ ಅರಿವೇನೋ (ಪುಸ್ತಕ, ಶಿಕ್ಷಣ, ಚಲಚಿತ್ರ. ಒಂದಿಬ್ಬರು ಕೆವಿಜಿಯದೇ ಹಿಂದೊಂದು ಶಿಬಿರ ಭಾಗಿಗಳು.) ಇತ್ತು. ಆದರೆ ಅವುಗಳನ್ನು ಸಹಜ ಸಮೃದ್ಧ ಪರಿಸರದಲ್ಲೇ ಕಂಡು ಪರಿಚಯಿಸಿಕೊಳ್ಳುವ ಅನಿಭವ ಬೇರೇ ಎಂದು ಬಯಸಿ ಬಂದವರು. ಒಟ್ಟು ಶಿಬಿರಾರ್ಥಿಗಳೆಲ್ಲ ಕನ್ನಡದವರೇ ಆದರೂ ಪ್ರಾಯ ಮತ್ತು ಗ್ರಹಿಕೆಯ ಸೌಕರ್ಯಗಳಲ್ಲಿ ಈ ಎರಡು ಸ್ತರಗಳ ನಡುವೆ ತುಸು ಹೊಂದಾಣಿಕೆ ಅನಿವಾರ್ಯವಿತ್ತು. ಇದನ್ನು ಕೆವಿಜಿ ಚೆನ್ನಾಗಿ ನಿಭಾಯಿಸಿದರು. ಕಪ್ಪೆ ಅರಿವಿನ ಕ್ಷೇತ್ರ ಕಾರ್ಯಕ್ಕೆ ಪ್ರಾಥಮಿಕವಾಗಿ ಬೇಕಾದ ವಿಚಾರಗಳು ಸ್ಲೈಡ್, ವಿಡಿಯೋ ಪ್ರದರ್ಶನಗಳೊಡನೆ ಸಂವಾದರೂಪದಲ್ಲೇ ನಡೆಯಿತು. ಸುಮಾರು ಒಂದೂವರೆ ಗಂಟೆಗಳ ಅದರ ಬೆನ್ನಿಗೆ ಬೆಳಿಗ್ಗೆ ನೋಡಿದ್ದ ಝರಿ, ಜಲಪಾತಗಳ ಪಾತ್ರೆಗೆ ನಡೆದೆವು. ಈ ವೇಳೆಗೆ ಮಳೆ ಬಿಟ್ಟಿದ್ದದ್ದು ಹೆಚ್ಚಿನ ಅನುಕೂಲವಾಯಿತು.

ನಾವು ಸಾಮಾನ್ಯವಾಗಿ ಮನುಷ್ಯರ ಬಾಹ್ಯಾಡಂಬರ ಮತ್ತು ಮಾನಸಿಕ ವಿಕಲ್ಪಗಳನ್ನು ನೋಡಿ ಈ ಜಾತಿ, ಆ ಜಾತಿ ಎಂದೆಲ್ಲ ಗುರುತಿಸುತ್ತೇವೆ. ಹಾಗಲ್ಲದೆ, ಕಪ್ಪೆಗಳ ಮೂಲಕ ನಿಜ ಜೀವಲೋಕದ ಜಾತಿ ವೈವಿಧ್ಯ ಇಲ್ಲಿ ತಿಳಿಯಿತು. (ಆ ಲೆಕ್ಕದಲ್ಲಿ ಎಲ್ಲ ಮನುಷ್ಯರದೂ ಒಂದೇ ಜಾತಿ!) ಕಪ್ಪೆ ಎಂಬ ಎರಡಕ್ಕರದ ನೂರಾರು ಅವಸ್ಥಾಂತರಗಳು ಶುದ್ಧ ಪ್ರಾಕೃತಿಕ ಪರಿಸರದ ಪ್ರತಿಬಿಂಬಗಳು. ಸಾವಿರಾರು ವರ್ಷಗಳ ಈ ಸಹಜ ವಿಕಾಸವೇ ಅವುಗಳ ಭಿನ್ನ ಜಾತಿ ಸೂಚಕಗಳು. ತೋಟ, ಜಲಪಾತಗಳ ದಾರಿಯಲ್ಲಿ ಹುಡುಕುನೋಟಕ್ಕೆ ಸಿಕ್ಕವನ್ನು ಗುರುತಿಸಿ, ಬಂಡೆಗಳ ಮೇಲಿದ್ದ ಅಸಂಖ್ಯ ಗೊದಮೊಟ್ಟೆಗಳನ್ನು ಹೆಚ್ಚಿನ ಆಸಕ್ತಿಯಿಂದ ಗ್ರಹಿಸಿ, ಸಂಜೆ ಮಣ್ಣಪಾಪು ಮನೆಗೆ ಮರಳಿದೆವು. ಹಾಗೇ ಮಾಳದ ಮಕ್ಕಳನ್ನೂ ಬೀಳ್ಕೊಂಡೆವು. ಉಳಿದವರು ಚಾ, ಸಣ್ಣ ವಿಶ್ರಾಂತಿ ಮುಗಿಸಿ ಹೆಚ್ಚಿನ ಕ್ಷೇತ್ರ ಕಾರ್ಯಕ್ಕೆ ಸಜ್ಜಾದೆವು.

ಮಳೆಗಾಲದಲ್ಲಿ ಅದೂ ರಾತ್ರಿಯ ತಂಪು ವೇಳೆಯಲ್ಲಿ ಕಪ್ಪೆಗಳ ಲೈಂಗಿಕ ಚಟುವಟಿಕೆಗಳು ಹೆಚ್ಚು. ಹಾಗಾಗಿ ನಾವು ಟಾರ್ಚ್ ಹಿಡಿದು, ಚಳಿ ಮಳೆಯುಡುಪುಗಳನ್ನು ತೊಟ್ಟು ಮುಸ್ಸಂಜೆಗೆ ಮತ್ತೆ ತುಸು ದೀರ್ಘ ಚಾರಣಕ್ಕೇ ಇಳಿದೆವು. ಇದಕ್ಕೆ ಪುರುಷೋತ್ತಮ್ ನುರಿತ ಎರಡು ಮಾರ್ಗದರ್ಶೀ ಸ್ಥಳೀಯರನ್ನೂ ಜೊತೆ ಮಾಡಿಕೊಂಡಿದ್ದರು. ಮೊದಲು ನಾವು ಕಾರುಗಳಲ್ಲಿ ಬಂದ ಮಾರ್ಗದ ಅಂಚುಗಳಲ್ಲೇ ಹುಡುಕುತ್ತ ಕೆಲವು ದೂರ ಹೋದೆವು. ವಿದ್ಯಾರ್ಥಿಗಳಿಲ್ಲದೆ ಕೆಲವು ವರ್ಷಗಳಿಂದ ಮುಚ್ಚಿಹೋದ ಪ್ರಾಥಮಿಕ ಶಾಲಾ ವಠಾರ, ದೇವಸ್ಥಾನದ ದ್ವಾರ, ಬಳಕೆ ಕಡಿಮೆಯಾಗಿ ನಿಗಿದು ಹೋಗುತ್ತಿರುವ ನೀರ ಹೊಂಡ, ದರೆ, ತೊರೆದಂಡೆಯ ಹಸಿರು ಎಂದೆಲ್ಲ ಬೆಳಕಿನ ಕೋಲಿನಲ್ಲಿ ಬೆದಕುತ್ತ ಮುಖ್ಯವಾಗಿ ಕಪ್ಪೆ, ಅಯಾಚಿತವಾಗಿ ಕಾಣಿಸಿದ ಹಾವು, ಹಲ್ಲಿ, ಓತಿಗಳನ್ನೂ ಎಚ್ಚರಿಕೆಯಿಂದಲೇ ದಾಖಲಿಸಿಕೊಂಡಿದ್ದೆವು. ಮತ್ತೆ ಎಡ ಮಗ್ಗುಲಿನ ಒಂದು ರಬ್ಬರ್ ತೋಟದ ಮೂಲಕ ಹಾದು, ಇನ್ನೊಂದೇ ತೊರೆ ದಂಡೆ, ಮತ್ತೊಂದೇ ಬಾವಿಯಂಚುಗಳಲ್ಲೆಲ್ಲ ಕಪ್ಪೆಭಟ್ಟರ ವಟವಟಿಕೆಗೆ ಹುಡುಕುನೋಟ ಹಾಕಿದ್ದಾಯ್ತು. ಹಿಂದಿನಂತೇ ಟಿಪ್ಪಣಿ, ಛಾಯಾಚಿತ್ರ, ವಿಡಿಯೋ, ಧ್ವನಿಗ್ರಹಣಾದಿ ವೈಜ್ಞಾನಿಕ ದಾಖಲಾತಿಗಳನ್ನೂ ಮಾಡಿದ್ದಾಯ್ತು. ಇಷ್ಟರಲ್ಲೇ ನಮ್ಮರಿವಿಲ್ಲದೇ ನಾವು ಅಂದಾಜಿಸಿದ್ದ ಮೂರು ಗಂಟೆಗಳು ಸಂದು ಹೋಗಿದ್ದವು!

ವಾಪಾಸು ಹೋಗಲು ಮಾರ್ಗದರ್ಶಿಗಳು ಒಳದಾರಿ ಹಿಡಿಸಿದರು. ಇದು ಕಾಡಿನ ದಟ್ಟಣೆ ಹೆಚ್ಚಿದ್ದ ಕಚ್ಚಾ ಏರುದಾರಿ. ವೈಯಕ್ತಿಕವಾಗಿ ನನಗೆ ಮೊದಲ ಹಂತದಲ್ಲೇ ಚಪ್ಪಲಿ ಕಚ್ಚಿ ಬರಿಗಾಲ ನಡಿಗೆ ಅನಿವಾರ್ಯವಾಗಿತ್ತು. ಮತ್ತೆ ಬೆಣಚುಕಲ್ಲಿನ ಚೂರುಗಳು ನಿಗಿದ ಏರುದಾರಿ, ಬೆಟ್ಟವೇರಿ ಸವಕಲು ಜಾಡಿಗಿಳಿದಾಗ ಸಣ್ಣಪುಟ್ಟ ಗಿಡಗಳ ಕುತ್ತಿಗಳು, ಮುಳ್ಳು ಸಿಕ್ಕಾಬಟ್ಟೆ ಸತಾಯಿಸಿಬಿಟ್ಟವು. (ಅಂತರ್ಜಾಲದಲ್ಲಿ ಪ್ರಧಾನಿ ಮೋದಿ ತಮ್ಮ ದೈಹಿಕ ಚಟುಲತೆ ಪ್ರದರ್ಶಿಸುವಲ್ಲಿ ನುಣ್ಣನೆ ಕಲ್ಲುಗಳ ಹಾಸಿನ ಮೇಲೆ ಓಡಿ, ‘ಆಕ್ಯುಪ್ರೆಷರ್ ವಾಕ್ ಛಾಲೆಂಜ್’ ಎಂದೇ ವಿರೋಧಿಗಳನ್ನು ಕೆಣಕ್ಕಿದ್ದು ನೋಡಿದ್ದೆ. ಮಾಳದಲ್ಲಿ ನಾನು ಮಾಡಿದ್ದು ‘ಆಕ್ಯುಪಂಚರ್ ವಾಕ್ ಛಾಲೆಂಜ್’! ಇದನ್ನೆಲ್ಲಾದರೂ ಸ್ವತಃ ಮೋದಿ ಎತ್ತಿಕೊಂಡರೂ ಸೋಲು ಖಾತ್ರಿ!) ಒಟ್ಟಾರೆ ನಡಿಗೆಗೇ ದೂರಾದ ಕೆಲವರು, ಬಂದ ದಾರಿಗಿಂತಲೂ ಒಳದಾರಿ ಬಳಸು, ಕಠಿಣ ಎಂದನ್ನಿಸಿ ನನಗಿಂತಲೂ ಹಿಂದೆ ಬಿದ್ದುದರಿಂದ ನನ್ನ ಮೀಸೆಯ ಗೌರವಕ್ಕೇನೂ ಕುಂದಾಗಲಿಲ್ಲ. ಒಂಬತ್ತು ಗಂಟೆಗೆ ಮನೆ ಸೇರಬೇಕಾದವರು ನಿಜದಲ್ಲಿ ಮನೆ ಮುಟ್ಟಿದಾಗ ಹತ್ತೂಮುಕ್ಕಾಲೇ ಆಗಿತ್ತು! ಅನಂತರ ಮೊದಲೇ ಮಾತಾಡಿಕೊಂಡಂತೆ, ದಿನದ ಒಟ್ಟು ಗ್ರಹಿಕೆಗಳ ಮೌಲ್ಯಮಾಪನ ನಡೆದು, ಶುದ್ಧ ಮಾಹಿತಿಗಳ ಕ್ರೋಢೀಕರಣ ಆಗಬೇಕಿತ್ತು. ಆದರೆ ಕೊನೆಯ ಚಾರಣ ಎಲ್ಲ ಉತ್ಸಾಹವನ್ನು ಹಿಂಗಿಸಿದ್ದಕ್ಕೆ, ಭರ್ಜರಿ ಊಟ ಮುಗಿಸಿದ್ದೇ ನಿದ್ರೆಗೆ ಜಾರಿದೆವು! ಬೆಳಿಗ್ಗೆ ತಿಂಡಿಗೆ ಮುನ್ನ ಒಂದು ಹುಡುಕು-ನಡಿಗೆ ಏಳು ಗಂಟೆಗೆ ಹೊರಡುವುದೆಂದು ರಾತ್ರಿ ಮಾತಾದ್ದೇನೋ ನಿಜ. ಆದರೆ ಎಲ್ಲರೂ ಬಲವಂತದಲ್ಲಿ ನಿದ್ರೆ ಕಳೆದು, ಕಳ್ಳನಗೆ ಬೀರುತ್ತ ಹೊರಡುವಾಗ ಗಂಟೆ ಎಂಟೇ ಕಳೆದಿತ್ತು. ಮನೆಯ ದಾರಿಯ ಒತ್ತಿನ ಝರಿಯ ಉದ್ದಕ್ಕೆ ಏರುವ ಇನ್ನೊಂದೇ ಕಚ್ಚಾದಾರಿಯನ್ನನುಸರಿಸಿ ರಬ್ಬರ್, ಅಡಿಕೆ ತೋಟಗಳನ್ನೂ ಒಂದೆರಡು ಮನೆಗಳನ್ನೂ ಹಾದು ನೈಜ ದಟ್ಟ ಕಾಡು, ಅಂದರೆ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಅಂಚಿನವರೆಗೂ ನಡೆದು ಮರಳಿದೆವು. ಹಿಂದಿನ ರಾತ್ರಿಯ ಚಾರಣದ ಕೊನೆಯಲ್ಲಿ ನಾನು “ಇನ್ನು ಸಾಕು” ಎಂದೇ ನಿರ್ಧರಿಸಿದ್ದೆ. ಆದರೆ ಬೆಳಗ್ಗೆ ನಾನು ಎಲ್ಲರಿಗೂ ಮೊದಲೇ ಎದ್ದು, ಸಜ್ಜಾಗಿ, ಕುಂಟು ಹೆಜ್ಜೆಗಳಲ್ಲೇ ಈ ಚಾರಣವನ್ನೂ ಪೂರೈಸಿದ್ದಕ್ಕೆ ಕಾರಣ ಒಂದೇ – ಸಹವಾಸದೋಷ! ನಮ್ಮೆಲ್ಲರಿಗೂ ಇದು ಒಂದು ಚಾರಣ ಎಂದನ್ನಿಸಿದರೂ ಒಟ್ಟಾರೆ ವಲಯದ ಪರಿಸರ ಅರ್ಥಮಾಡಿಕೊಳ್ಳುವಲ್ಲಿ ಕೆವಿಜಿಗೆ ಅವಶ್ಯ ಹೆಚ್ಚಿನ ಸಹಕಾರಿಯಾಗಿರಬೇಕು.

ತಿಂಡಿ, ತೀರ್ಥದ ಚಿಂತೆ ಮುಗಿಸಿದ್ದೇ ಕೆವಿಜಿ ರಾತ್ರಿ ಬಾಕಿಯಾಗಿದ್ದ ಮೌಲ್ಯಮಾಪನ ಕ್ರಿಯೆಗಿಳಿದರು. ಕೆವಿಜಿ ಹಿಂದಿನ ದಿನ ಶಾಲಾ ಮಕ್ಕಳಿಗೆ ಜೀವಂತ ಗೊದಮೊಟ್ಟೆ ನೋಡಿಕೊಂಡು ಚಿತ್ರ ಬಿಡಿಸಲು ಸೂಚಿಸಿದ್ದರು. ಇದು ಪರೋಕ್ಷವಾಗಿ ಯಾವುದೇ ಜೀವಿಯ ದೈಹಿಕ ವಿವರಗಳನ್ನು ಅನಿವಾರ್ಯವಾಗಿ ವಿಶ್ಲೇಷಿಸುವುದನ್ನೂ ಕಲಿಸುತ್ತದೆ. ಕೆವಿಜಿ ಹಾಗೆ ಕ್ಷೇತ್ರಕಾರ್ಯದಲ್ಲಿ ತೋರಿದ ಉತ್ಸಾಹವನ್ನೇ ಈಗ ಒಳಾಂಗಣದ ವಿಮರ್ಶಾ ಅವಧಿಗೂ ತಂದುಕೊಂಡರು. ಒಂದೊಂದಾಗಿಯೇ ಎಲ್ಲರ ಕ್ಯಾಮರಾ ಚಿಪ್ಪುಗಳನ್ನು ತನ್ನ ಗಣಕದ ಮೂಲಕ ಗೋಡೆಗೆ ಬಿಂಬಿಸುತ್ತ ವಿಮರ್ಶೆ, ಚರ್ಚೆ ನಡೆಸಿದರು. ಎಲ್ಲರ ಟಿಪ್ಪಣಿ, ವಿವರಣೆಗಳನ್ನೂ ಪ್ರತ್ಯೇಕ ಆಲಿಸಿ, ಚರ್ಚಿಸಿ ವಿಚಾರ ಗಟ್ಟಿ ಮಾಡಿಕೊಟ್ಟರು. ಅಲ್ಲದೆ ಅವರೆಲ್ಲರಿಗೂ ತಂತಮ್ಮ ಕಾರ್ಯಕ್ಷೇತ್ರಗಳಿಗೆ ಮರಳಿದ ಮೇಲೆ ಇನ್ನಷ್ಟು ಕೆಲಸ ಮಾಡಲು ಪ್ರೇರಣೆಯನ್ನೂ ಕೊಟ್ಟರು. ಇದರ ಪರಿಣಾಮವಾಗಿ ಅನಂತರ ಖಾಸಾ ಮಾತಿನಲ್ಲಿ ಹಲವು ಭಾಗಿಗಳ ಭಾವಲಹರಿ ಹೀಗೆ ಹರಿದಿತ್ತು – ಇದುವರೆಗೆ ಹೀಗೇ ಕಣ್ಣಿಗೆ ಬೀಳುವ ಗಿಡ, ಮರ, ಹಕ್ಕಿ, ಹಾವುಗಳ ಪಟ್ಟಿಯಲ್ಲಿದ್ದ ಕಪ್ಪೆಗಳು ಇನ್ನು ನಮಗೆ ಹಾಗೆ ಕಾಣುವುದಿಲ್ಲ. ದೇಹರಚನೆ ತ್ರಿಕೋನಾಕೃತಿಯೋ, ಮೂಗು ಮೊಂಡೋ, ಬೆರಳ ತುದಿ ಹಿಗ್ಗಿದ್ದೋ, ಬೆನ್ನ ಚರ್ಮ ಒರಟೋ, ಕಣ್ಣು ಮತ್ತು ಕಿವಿತಮಟೆಗಳ ವ್ಯವಸ್ಥೆ ಹೇಗೆ, ದೇಹದ ವರ್ಣಾಲಂಕಾರ ಮತ್ತು ಇದ್ದರೆ ರೇಖೆಗಳು ಸಹಜದ್ದೋ ಋತುಮಾನದ್ದೋ…..ಎಂಬಿತ್ಯಾದಿ ವಿವರಗಳಲ್ಲಿ ಕಳೆದುಹೋಗುವುದು ನಿಶ್ಚಿತ. ಇನ್ನು ಕಾಣದೆಯೂ ಕೇಳುವ ಧ್ವನಿಗಳು (ಕಪ್ಪೆಯೋ ಬಿಬ್ಬಿರಿಯೋ ಹಕ್ಕಿಯೋ…), ಆಕಸ್ಮಿಕಗಳಲ್ಲಿ ರಸ್ತೆಗೆ ಅಂಟಿಹೋದ ಹುತಾತ್ಮಗಳು, ಮಾಲಿನ್ಯದ ಹೊಂಡಗಳಲ್ಲಿ ಕಾಣಿಸುವ ಕಪ್ಪೆಗಳೆಲ್ಲ ನಮ್ಮನ್ನು ಇನ್ನೊಂದೇ ನಿಟ್ಟಿನಲ್ಲಿ ಕಾಡುತ್ತವೆ. ಕೊನೆಗೆ ಮನುಷ್ಯರ ಜಿಹ್ವಾಚಾಪಲ್ಯಕ್ಕೆ ಬಲಿಯಾಗುವ, ಮೂಢನಂಬಿಕೆಗಳ ಸರಣಿಯಲ್ಲಿ – ತಿನಿಸು ತಯಾರಕರ ಅವ್ಯವಸ್ಥೆಗೆ ವಿಷವಾಗುವ (ಅನ್ನದೊಡನೆ ಬೆಂದ ಸಾಮಾನ್ಯ ಹಲ್ಲಿ, ಕಪ್ಪೆಗಳು ವಿಷವಲ್ಲ), ಅನಿಷ್ಠಕ್ಕೋ (ದೇಹದ ತಂಪು ಕಾಯ್ದುಕೊಳ್ಳಲು ಮನುಷ್ಯ ವಸತಿಗೆ ನುಗ್ಗುವವು), ಮಂಗಳಕ್ಕೋ (ಕಪ್ಪೆ ಮದುವೆ!) ಬಹುತೆರನ ಹಿಂಸೆಗೊಳಗಾಗುವ ನಿಷ್ಪಾಪೀ ಕಪ್ಪೆಗಳ ಬಗ್ಗೆ ನಮ್ಮ ಅನುಕಂಪವಂತೂ ಅಪರಿಮಿತ.

ಬಂಟ್ವಾಳ ಸಮೀಪದ ಮಣಿನಾಲ್ಕೂರಿನ ‘ನಾದ’ ಪರಿಸರಪ್ರೇಮಿ, ಗಾಯಕ. ಅವರು ಅಡ್ವೆಯವರ ಪೂರ್ವಪರಿಚಯದಲ್ಲಿ ಶಿಬಿರಕ್ಕೆ ಸೇರಿಕೊಂಡಿದ್ದರು. ಎರಡು ದಿನದ ಕಲಾಪಗಳಿಗೊಂದು ಅನೌಪಚಾರಿಕ ಮುಕ್ತಾಯ ಹಾಡುವಂತೆ ಈ ಹಂತದಲ್ಲಿ ನಾದ ಎರಡು ಪರಿಸರ ಮತ್ತೊಂದು ತತ್ತ್ವಪದ ಹಾಡಿದ್ದು ಎಲ್ಲರ ಮನ ತುಂಬಿಬಂತು.

ಇವೆಲ್ಲ ಮಧ್ಯಾಹ್ನ ಹನ್ನೆರಡು ಗಂಟೆಯ ಸುಮಾರಿಗೆ ಮುಗಿದಂತಾಗಿತ್ತು. ಆದರೆ ಊಟಕ್ಕಿನ್ನೂ ವೇಳೆ ಇದೆ ಎನ್ನುವ ನೆಲೆಯಲ್ಲಿ ಇನ್ನೊಂದೇ ಅನೌಪಚಾರಿಕ ಸಂವಾದ ನಡೆದದ್ದು ತುಂಬ ಅರ್ಥಪೂರ್ಣವಾಗಿಯೇ ಇತ್ತು. ಅದರಲ್ಲಿ ಅಡ್ವೆ ಮತ್ತು ಅವರ ಸಹಕಾರಿಗಳು ಕಂಡಂತೆ ಮಾಳ ಮತ್ತು ಒತ್ತಿನ ವನ್ಯರಕ್ಷಣಾ ವಲಯದ ಮಾತುಗಳು ಧಾರಾಳ ಬಂದವು. ತೀರಾ ಈಚೆಗೆ ಮಣ್ಣಪಾಪು ಮನೆಯಿಂದಲೂ ಮೇಲಿನ ಕೆಲವು ಒಕ್ಕಲುಗಳು – ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯೊಳಗಿದ್ದವರು, ಸರಕಾರದ ಧಾರಾಳ ಪರಿಹಾರ ಪಡೆದು, ಸ್ಥಳ ಬಿಟ್ಟು ಮರುವಸತಿಗೆ ಹೋಗಿದ್ದರು. ಹಾಗೆ ಹಿಂದುಳಿದ ಮನುಷ್ಯ ರಚನೆಗಳನ್ನು ವನ್ಯ ಆವರಿಸಿಕೊಳ್ಳಲು ಸುಲಭಗೊಳಿಸಿದ್ದರು. ಅದಲ್ಲದೆ ಉದ್ಯಾನವನದ ವ್ಯಾಪ್ತಿಯ ಹೊರಗಿರುವ ಕೆಲವು ಕೃಷಿಕರು ವನ್ಯದ ಒತ್ತಡಕ್ಕೆ ಬಳಲಿ, ಕೇವಲ ಹೆಚ್ಚುವರಿ ಹಣಕ್ಕಾಗಿ ಪರಿಸರ ವಿರೋಧೀ ಜನಗಳಿಗೆ ನೆಲ ಮಾರಿಹೋಗುವ ಆತಂಕಗಳು ಕಾಣಿಸುತ್ತಿವೆಯಂತೆ. ಅದು ದೂರ ಮಾಡುವಂತೆ ಅಡ್ವೆ ಮತ್ತು ಗೆಳೆಯರು ಇನ್ನಷ್ಟು ಸಮಾನ ಮನಸ್ಕರ ಹುಡುಕಾಟದಲ್ಲಿದ್ದಾರೆ. ಮಾತಿನ ಭರದಲ್ಲಿ ಸಮಯ ಸಂದದ್ದು ಅರಿವಾಗದೇ ಊಟಕ್ಕೇಳುವಾಗ ಗಂಟೆ ಎರಡಾಗಿತ್ತು!

ಪುರುಷೋತ್ತಮ ಅಡ್ವೆಯವರ ಆತಿಥ್ಯ ನಿರಾಡಂಬರ ಬಿಸುಪಿನದ್ದು. ನಾನು ಮೊದಲ ಬಾರಿಗೆ ಕೃಶಿಯೊಡನೆ ಹೋದಾಗ, ಸಪುರ ದಾರಿ ಬದಿಯಲ್ಲಿ ಕಾರು ನಿಲ್ಲಿಸಲು ತುಸು ಕೊಸರಾಡಿದ್ದೆವು. ನಮ್ಮ ಗದ್ದಲ ಕೇಳಿ, ಮನೆಯಿಂದ ಅಡ್ವೆ ಓಡಿ ಬಂದಿದ್ದರು. ನಮ್ಮಿಬ್ಬರದು ಮೊದಲ ಭೇಟಿ. ಆದರೆ ಅಡ್ವೆ ವ್ಯವಹಾರದಲ್ಲಿ ಹೊಸತರ ಬಿಗಿ ಅಥವಾ ಪೂರ್ವ ತಿಳುವಳಿಕೆಯ ಸದರವೆರಡೂ ಇರಲಿಲ್ಲ. ಮನೆಯಲ್ಲೂ ಪ್ರಯಾಣಿಸಿ ಬಂದ ನಮ್ಮ ಆವಶ್ಯಕತೆಗಳನ್ನು ಮೊದಲು ನೋಡಿಕೊಂಡರು. ವಿಶಿಷ್ಟ ಆದರೆ ರುಚಿಕರವಾದ ಹಣ್ಣಿನ ಶರಬತ್ತೂ ಕೊಟ್ಟರು, ಚಾವಡಿಯ ನೆಲದಲ್ಲಿ ಬೇಕಾದಂತೆ ಕೈಕಾಲು ಚಾಚಿ ಕುಳಿತು ವಿಚಾರ ವಿನಿಮಯಕ್ಕೆ ಅನುಕೂಲಿಸಿದರು, ಹಿಂಬಾಲಿಸಿದಂತೆ ಸರಳ ಆದರೆ ದೇಸೀ ಊಟ, ಕೊನೆಯಲ್ಲಿ ನಾವೇ ಅವಸರಿಸಿದಾಗ ಅದೇ ಸಮಭಾವದಲ್ಲಿ ಬೀಳ್ಕೊಡಿಗೆ. ಅಡ್ವೆ ವಿನಯಿ, ಜಂಭ ಅಥವಾ ದೈನ್ಯತೆ ಅತಿಗಳಿಲ್ಲದೆ, ‘ತನ್ನ ಬಣ್ಣಿಸಬೇಡ’ ಎಂಬ ತತ್ತ್ವಾನುಷ್ಠಾನಿ. ಎರಡು ದಿನಗಳ ಕಪ್ಪೆ ಶಿಬಿರ ಮುಗಿದಾಗಲೂ ಹಾಗೇ. ನಾವು ಕುರಿತು ಕೇಳಿದರೆ ಮುಚ್ಚುಮರೆಯಿಲ್ಲ, ನಮ್ಮ ಆಸಕ್ತಿಗಳ ಮೇಲೆ ಸವಾರಿಯೂ ಇಲ್ಲ. “ಆರೋಗ್ಯಪೂರ್ಣ ಸಮಾಜ ಕಟ್ಟುವಲ್ಲಿ ನೀವು ಯೋಚಿಸುವ ಯಾವುದೇ ಪ್ರಕೃತಿಪರ ಚಟುವಟಿಕೆಗಳಿಗೂ ಮಣ್ಣಪಾಪು ಮನೆ ಮುಕ್ತ” ಎಂಬ ಅರ್ಥದ ಮಾತುಗಳನ್ನು ಅಡ್ವೆ ಹೇಳಿದ್ದರು. ಆಗ ನಾನು ಯಾವುದೇ ಆಧಾರವಿಲ್ಲದೇ ಅವರಲ್ಲಿ ಕಂಡದ್ದು ಆರ್ಥಿಕ ಸಮೃದ್ಧಿ. ಆದರೆ ಮಂಗಳೂರಿಗೆ ಮರಳಿದ ಮೇಲೆ, ಈ ಲೇಖನಕ್ಕಿಳಿದು ಸ್ಪಷ್ಟೀಕರಣ ಬಯಸಿದಾಗಷ್ಟೇ ನಿಜ ತಿಳಿಯಿತು – ಅವರು ಆ ನೆಲ ಕೊಳ್ಳುವಲ್ಲಿ, ಮನೆ ಸಜ್ಜುಗೊಳಿಸುವಲ್ಲಿ, ಅದರೊಳಗಿನ ಕಲಾವಸ್ತುಗಳನ್ನು ಸಂಗ್ರಹಿಸುವಲ್ಲಿ ಮತ್ತು ಇದುವರೆಗಿನ ಚಟುವಟಿಕೆಗಳು ನಡೆಸುವಲ್ಲಿ ವಿನಿಯೋಗಿಸಿದ್ದೆಲ್ಲ ಸ್ವಂತ ದುಡಿಮೆಯ ಹಣ ಮತ್ತು ಬ್ಯಾಂಕ್ ಸಾಲ! ನೇರ ಅಡುಗೆ, ದೊಡ್ಡ ಶುದ್ಧಿಗಳಿಗೆ ಒಂದೆರಡು ಹೊರ ಕೈಗಳನ್ನು ಅವಶ್ಯ ಬಳಸುತ್ತಾರೆ. ಆದರೆ ಅವರು ಮತ್ತವರ ಆಪ್ತಮಿತ್ರ ಬಳಗಕ್ಕೆ ತರಕಾರಿ ಹೆಚ್ಚುವಲ್ಲಿಂದ ಎಂಜಲು ಬಳಿಯುವವರೆಗೆ ಎಲ್ಲ ಕೆಲಸವೂ ಪ್ರೀತಿಯವೇ. ಇದು ಅಲ್ಲಿಗೆ ಯಾರೇ ಬಂದರೂ ತಾನೊಬ್ಬ ‘ಅತಿಥಿ’ ಎಂಬ ಭ್ರಮೆ ಉಳಿಯದಂತೆ ಮಾಡಿ, ಎಲ್ಲರೊಳಗೊಂದಾಗುವ ಪ್ರೇರಣೆ ಅವಶ್ಯ ಕೊಡುತ್ತದೆ. (ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಮುಂತಾದ ಕೃತಕತೆಯ ಸುಳಿವೇ ಇಲ್ಲಿಲ್ಲ.) ಮೊದಲ ಭೇಟಿಯ ಶರಬತ್ ಅಷ್ಟೇ ನಾನಿಲ್ಲಿ ಹೇಳಿದ್ದಿರಬಹುದು. ಆದರೆ ಅಂದೂ ಮತ್ತೆ ಈ ಎರಡು ದಿನಗಳಲ್ಲೂ ಅವರು ಕಾಲಕಾಲಕ್ಕೆ ನಮಗೆ ಕೊಟ್ಟ ವಿವಿಧ ಸರಳ ರುಚಿಗಳ ಪಟ್ಟಿ ಕೊಟ್ಟರೆ ನಿಮ್ಮಲ್ಲನೇಕರು ಇಂದೇ ಅಡ್ವೆಯವರಿಗೆ ಹೊರೆಯಾದೀರೋ ಎಂಬ ಭಯ ನನಗಿದೆ!

ಅಡ್ವೆ ಮಾಡಿದ ಅಸಂಖ್ಯ ಪ್ರಯೋಗಗಳ ಕುರಿತು ವಿಚಾರಿಸಿದರೆ ಅವರ ಖಾಸಾ ಟ್ಯಾಬ್ಲೆಟ್ಟಿನಲ್ಲಿ ಹಲವು ಚಿತ್ರಗಳನ್ನು ತೋರಿಸಿಯಾರು. ಮತ್ತೂ ಕೆದಕಿದರೆ ಉಪಾಧಿಗಳ ನೆರವಿನಲ್ಲಿ ಸಾಂದರ್ಭಿಕ ನೆನಪುಗಳನ್ನಷ್ಟೇ ಹಂಚಿಕೊಂಡಾರು. ಒಂದೆರಡೇ ಉದಾಹರಣೆಗಳನ್ನು ಮಾತ್ರ ಸದ್ಯ ದಾಖಲಿಸುತ್ತೇನೆ.

ಮನೆಯ ಹಿತ್ತಿಲಿನಲ್ಲೊಂದು ಸುಸ್ಥಿತಿಯಲ್ಲಿರುವ ಪುಟ್ಟ ಭೂತಸ್ಥಾನವಿದೆ. ಅದರೊಳಗಿನ ಸುಂದರ ‘ಮೊಗ’ವನ್ನು ಹಿಂದಿನವರು ಒಯ್ಯುವವರಿದ್ದರಂತೆ. ಅಡ್ವೆಯವರೊಳಗಿನ ಶಿಲ್ಪಿ ಅದನ್ನು ಉಳಿಸಿಕೊಂಡಿದ್ದಾನೆ. ಈಗ ಅದರ ನೆಪದಲ್ಲಿ ಮೈಕ್, ಪಟಾಕಿ ಮುಂತಾದ ಗದ್ದಲಗಳಿಲ್ಲದ, ತೋರಿಕೆಯ ಸಿರಿವಂತಿಕೆಯ ಅಬ್ಬರವೂ ಇಲ್ಲದ (ಮೂಲದಲ್ಲಿದ್ದಿರಬಹುದಾದಂಥ) ಭೂತಾರಾಧನೆಯನ್ನು ತೀರಾ ಆಪ್ತವರ್ಗದೊಡನೆ ಪುನರುಜ್ಜೀವಿಸಿದ್ದಾರೆ!

ಇನ್ನೊಂದು ಉದಾಹರಣೆ: ಇವರ ತೋಟ, ಮನೆಗೆ ಝರಿಯ ಬಿಡು ನೀರೇ ಜಲಮೂಲ. ಅದರ ಒಂದು ಕವಲನ್ನು ಬಳಸಿ, ಇವರ ಅಂಗಳದ ಹೊರ ಅಂಚಿನಲ್ಲಿ ತೋಟದೊಳಗೊಂದು ಪುಟ್ಟ ಖಾಸಾ ಕೆರೆ ಮಾಡಿಕೊಂಡಿದ್ದಾರೆ. ಅದರೊಳಗಿನ ಮೀನುಗಳು, ಖಾಯಂವಾಸಿಗಳಾದ ಎರಡು ನೀರಹಾವುಗಳು (ನೀರೊಳ್ಳೆ) ಇವರಿಗೆ ಪ್ರಾಕೃತಿಕ ಮೀನ್ಮನೆ (ಅಕ್ವೇರಿಯಂ). ಅದಕ್ಕಿಳಿವ ಎರಡು ವಿಸ್ತಾರ ಪಾವಟಿಗೆಗಳು, ಅವನ್ನೆಲ್ಲ ವಿರಾಮದಲ್ಲಿ ಕುಳಿತು ವೀಕ್ಷಿಸುವ ಧ್ಯಾನನೆಲೆಯೂ ಹೌದು. ಕೆರೆಗೆ ಮೊದಲೇ ಸಿಗುವ ವಿಸ್ತಾರ ಕೊಟ್ಟಿಗೆ ಅವರ ಮಣ್ಣು, ಶಿಲ್ಪಾದಿ ಕಲಾಕಲಾಪಗಳ ಕಮ್ಮಟ.

ಕಳೆದ ವರ್ಷ ಇಲ್ಲಿನ ಯಾವುದೋ ಒಂದು ಕಲಾಪ ನೆಪದಲ್ಲಿ ಭೇಟಿ, ಮತ್ತೆ ಪರಿಚಯ ಬೆಳೆಸಿಕೊಂಡ ನನ್ನ ಬಂಧು ವಸಂತ ಕಜೆ, ಬರೆದ ಒಂದು ಲೇಖನ (ನೋಡಿ: ಮಣ್ಣಿನೊಂದಿಗೆ ಬೆಸೆಯುವ ಮಣ್ಣಪಾಪು ಮನೆ) ಬರೆದಿದ್ದ. ಅದು ಬಿಟ್ಟರೆ ಪುಣ್ಯಾತ್ಮ ಅಡ್ವೆಯ ಬಗ್ಗೆ ನಿಮಗೆ ಕಾಣಸಿಗುವುದು ೨೦೧೫ರಲ್ಲಿ ಅವರೇ ಮಾಡಿಕೊಂಡ ಅಂತರ್ಜಾಲದಲ್ಲೊಂದು ಜಾಲತಾಣ – ಮಣ್ಣಪಾಪು ಮನೆ. ಆದರೆ ಇದನ್ನೂ ಸ್ವಪ್ರಚಾರ, ವಾಣಿಜ್ಯೀಕರಣಗಳ ಮೋಹವಿಲ್ಲದ ಅಡ್ವೆ ಮತ್ತೆ ತೆರೆದು ನೋಡಿದಂತೇ ಇಲ್ಲ. ಅವರದೇ ನಿಜ ನೆಲದಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಅದು ತುಂಬ ದೂರವಿದೆ! ಈಗ ಎರಡು ದಿನದ ಮಾಳ ಪರಿಸರದ ಕಪ್ಪೆ ಪರಿಚಯಕ್ಕೆ ಹೋದ ನಾನೂ ಇಷ್ಟುದ್ದ ಬರೆದೂ ಮಣ್ಣಪಾಪುವಿನ ಆಯಾಮವನ್ನು ಪೂರ್ಣ ಗ್ರಹಿಸಲಾಗದ ಗೊಂದಲದಲ್ಲೇ ವಿರಮಿಸುತ್ತೇನೆ.