ಮಂಗಳೂರಿನ ನಾವು ನಾಲ್ಕೈದು ದೋಣಿಮಿತ್ರರು ಮಳೆಗಾಲ ತಗ್ಗುವುದನ್ನು ಕಾದಿದ್ದೆವು. ನಾವಿನ್ನೂ ಕಡಲಿಗಿಳಿಯುವ ಕಲಿಗಳಲ್ಲ, ನದಿಗಳಲ್ಲೂ ಮಳೆಗಾಲದ ಸೆಳವು, ಸೆಡೆತಗಳೊಡನೆ ಸೆಣಸುವ ಸಾಹಸಿಗಳೂ ಅಲ್ಲ. ಸಣ್ಣದಕ್ಕೆ ಬಡಕಲು ಫಲ್ಗುಣಿ ನದಿಯನ್ನು ಆಯ್ದುಕೊಂಡೆವು. ಸುಲ್ತಾನ್ ಬತೇರಿಯಿಂದ ಕೂಳೂರು, (ಸ್ವಚ್ಛಭಾರತದಲ್ಲಿ ನಮ್ಮ ಹೊಳೆಗಳಿಲ್ಲವೇ?) ಕೂಳೂರಿನಿಂದ ಮೇಲಿನೊಂದು ಕುದ್ರುವಿನವರೆಗೆ (ಫಲ್ಗುಣಿಯ ಮೇಲೊಂದು ಪಲುಕು) ಎರಡು ಕಂತು ದೋಣಿಯಾನ ಹಿಂದೆ ಮಾಡಿದ್ದೆವು. ಆ ಸರಣಿಯನ್ನೇ ಈ ಬಾರಿ (೧೬-೯-೧೮) ಮುಂದುವರಿಸುವ ಹೊಳಹು ನಮ್ಮದು. ಆದರೆ ಅದಕ್ಕಿದ್ದ ಸಣ್ಣ ಅಡ್ಡಿ ಮಳವೂರು ಕಟ್ಟೆ. ಕಟ್ಟೆಯ ತೂಬುಗಳಿಗೆ ಹಲಿಗೆ ಇಳಿಸಿದ್ದರೆ ತೇಲಿ ಸಾಗುವ ಪ್ರಶ್ನೆಯೇ ಇರುತ್ತಿರಲಿಲ್ಲ. ಈಗ ಅದು ಮುಚ್ಚಿರದಿದ್ದರೂ ಕಂಡಿಗಳಲ್ಲಿನ ಹರಿವಿನ ವಿರುದ್ಧ ನಮ್ಮ ರಟ್ಟೆಬಲ ಪರೀಕ್ಷಿಸಲು ಧೈರ್ಯವಿರಲಿಲ್ಲ. ಹಾಗಾಗಿ ಅದರಿಂದಲೂ ತುಸು ಮೇಲೆಯೇ ನಮ್ಮ ದೋಣಿಗಳನ್ನು ನೀರಿಗಿಳಿಸಿ, ಮೇಲ್ಮುಖವಾಗಿ ಸಾಗಬೇಕು. ಗುರುಪುರ ಮತ್ತು ಪೊಳಲಿ ಸೇತುವೆಗಳನ್ನು ದಾಟಿ, ಮೂಲರಪಟ್ನದ ಕುಸಿದ ಸೇತುವೆಗೆ ಮುಗಿಸಬೇಕು.

ಅಲ್ಲಿ ದೋಣಿಗಳನ್ನು ದಡಕ್ಕೇರಿಸಿ, ಸಹವಾರರನ್ನು ಪಾರಕ್ಕೆ ಬಿಟ್ಟು, ಉಳಿದವರು ಯಾವುದಾದರೂ ವಾಹನ ವ್ಯವಸ್ಥೆಯಲ್ಲಿ ನಮ್ಮ ಕಾರುಗಳಲ್ಲಿಗೆ ಹೋಗಿ, ಕಾರು ತಂದು, ದೋಣಿ ಸಹಿತ ಮನೆಗೆ ಮರಳುವುದು ನಮ್ಮ ಯೋಜನೆ. ಇದನ್ನು ನೆಲದ ಸತ್ಯಕ್ಕೆ ತಾಳೆ ಹಾಕಲು ಹಿಂದಿನ ದಿನ ನಾನೂ ದೇವಕಿಯೂ ಮೋಟಾರ್ ಸೈಕಲ್ಲೇರಿ ಹೋಗಿದ್ದೆವು.
ಬಜ್ಪೆ ವಿಮಾನ ನಿಲ್ದಾಣದ ಇಳಿದಾರಿಯಿಂದ ಹೊಕ್ಕು, ಆದ್ಯಪಾಡಿಯತ್ತ ಕವಲೊಡೆದು ಮೊದಲು ಹೊಳೆಬದಿಗಿಳಿಯುವ ದಾರಿ ಯಾವುದಿದೆ ಎಂದು ಹುಡುಕುತ್ತ ಹೋದೆವು. ಆದಿನಾಥೇಶ್ವರ ದೇವಳದ ಕವಲಿನವರೆಗೂ ಸಿಕ್ಕ ಕೆಲವು ಕಚ್ಚಾ ದಾರಿಗಳು ನಮ್ಮ ನಿರೀಕ್ಷೆಗೆ ಬರಲಿಲ್ಲ. ಮುಂದಿನ ಬಲಗವಲು ಮರಳಿಗರ ಬಳಕೆಯದು ಎಂದು ಕಂಡ ಮೇಲೆ ನಿಶ್ಚಿಂತೆಯಿಂದ ಅನುಸರಿಸಿದೆವು. ಮಣ್ಣಿನ ದಾರಿಯಾದರೂ ಸಾಕಷ್ಟು ಕಲ್ಲ ಚಕ್ಕೆಗಳನ್ನು ಹುಗಿದು ಗಟ್ಟಿ ಮಾಡಿದ್ದರು. ಮೊದಲ ಸ್ವಲ್ಪ ದೂರವಷ್ಟೇ ತೀವ್ರ ಇಳುಕಲು. ಮುಂದೆ ಬಹುತೇಕ ಹಡಿಲು ಬಿಟ್ಟ ಗದ್ದೆ ಬಯಲಿನಲ್ಲೆ ಸುಮಾರು ಎರಡು ಕಿಮೀಯಷ್ಟು ದಡಬಡಾಯಿಸಿಕೊಂಡು ನದಿದಂಡೆ ಸೇರಿದೆವು. ಅಲ್ಲಿ ನಾವು ನಿರೀಕ್ಷಿಸದ ಇನ್ನೊಂದೇ ಅಡ್ಡಗಟ್ಟೆ, ಪರೋಕ್ಷವಾಗಿ ಎದುರು ದಂಡೆಯ ಪಡುಶೆಡ್ಡೆಗೆ ಸಣ್ಣ ಸೇತುವೆಯೇ ಆಗಿತ್ತು. ಈ ಕಟ್ಟೆ ಮಳವೂರ ಕಟ್ಟೆಗಿಂತಲೂ ಹಳೆಯದು, ಸಣ್ಣದು. ಆದರೆ ನಮ್ಮ ದೋಣಿಯಾನಕ್ಕೆ ಇನ್ನೊಂದೇ ಅಡ್ಡಿ ಖಂಡಿತ. ಹಾಗಾಗಿ ಆ ಕ್ಷಣದಲ್ಲಿ, ನಾಳೆ ಈ ಕಟ್ಟೆಯಿಂದಲೂ ಮೇಲೆ ದೋಣಿಗಳನ್ನು ನೀರಿಗಿಳಿಸುವ ಹೊಳಹಿನೊಡನೆ, ವಾಮಂಜೂರು ಮಾರ್ಗವಾಗಿ ಮರಳಿದೆವು. ಆದರೆ ಮಾರಣೆ ದಿನಕ್ಕೆ ಅನ್ಯ ಬಾಡಿಗೆವಾಹನ ಅಥವಾ ಹೊರಗಿನ ಓರ್ವ ಚಾಲಕನ ಹೊಂದಾಣಿಕೆಗಳು ಸರಿಯಾಗದ್ದಕ್ಕೆ…..

ಬೆಳಿಗ್ಗೆ ಆರು ಗಂಟೆಗೆ ನಮ್ಮ (ಅನಿಲ್ ಶೇಟ್, ಪ್ರವೀಣ್ ಮತ್ತು ನನ್ನ) ಮೂರು ದೋಣಿಗಳನ್ನು, ನಮ್ಮ ಮೂರು ಕಾರುಗಳಿಗೆ ಹೇರಿ, ಮೂರು ಸಹಯಾನಿಗಳೊಡನೆ (ಧನರಾಜ್, ಶಿವಾನಂದರಾವ್ ಮತ್ತು ದೇವಕಿ) ಪುತ್ತೂರು ದಾರಿ ಹಿಡಿದೆವು. ಫರಂಗಿಪೇಟೆಯ ಹೋಟೆಲಿನಲ್ಲಿ ತಿಂಡಿಯ ಚಿಂತೆ ಪರಿಹರಿಸಿಕೊಂಡೆವು. ಮುಂದೆ ಮಾರಿಪಳ್ಳದಿಂದ ಬೆಂಜನಪದವಿನ ಎತ್ತರಕ್ಕಾಗಿ ಪೊಳಲಿ ಕಣಿವೆಯತ್ತ ಹೊರಳಿದೆವು. ಇಲ್ಲಿ ನೇತ್ರಾವತಿ ಕೊಲ್ಲಿಯನ್ನು ಕಳಚಿ ನಿಂತ ನಮ್ಮೆದುರು ಫಲ್ಗುಣಿಯ ಕೊಲ್ಲಿ ಮೈಹರಡಿಕೊಂಡು ಬಿದ್ದಿತ್ತು.

ಬಾಲಭಾಸ್ಕರನ ಕರಪಲ್ಲವಗಳು ಮಂಜುಗಂಬಳಿ ಹೊದ್ದು ಮಲಗಿದ ಕಣಿವೆಗೆ ಕಚಗುಳಿಯಿಟ್ಟು ಎಬ್ಬಿಸುವ ಅಮೋಘಕ್ಕೆ, ದಿಗಂತದಲ್ಲಿ ಪಶ್ಚಿಮಘಟ್ಟದ ರಾಜಶಿಖರ – ಕುದುರೆಮುಖ ಮನಸೋತು, ಮರವಟ್ಟು ನಿಂತಂತಿತ್ತು. ಅತ್ತ ಸೀದಾ ಇಳಿದದ್ದು ಪೊಳಲಿ ಪೇಟೆಗೆ. ಸುಖ್ಯಾತ ಶ್ರೀರಾಜರಾಜೇಶ್ವರಿ ದೇವಳದ ಬಲಗವಲನ್ನು ಮೀರಿದ್ದೇ ಸಿಕ್ಕಿದಳು – ಪರ್ವತರಾಜಗುವರಿ, ಈ ಕಣಿವೆಯ ರಾಣಿ – ಫಲ್ಗುಣಿ.

ಕುರಿಯಂಗಲ್ಲು ಬೆಟ್ಟ ತಪ್ಪಲಿನ ಕುಗ್ರಾಮ – ಈದು. ಅಲ್ಲಿನ ವನದುರ್ಗ ದೇವಳದ ಬಳಿ ಫಲ್ಗುಣಿಯ ಪ್ರಧಾನ ಜಲಧಾರೆ ಹೊಳೆ ರೂಪ ತಳೆಯುತ್ತದೆ. ಅದಕ್ಕೆ ಮೂಡಬಿದ್ರೆ ಸಮೀಪದ ಹನ್ನೆರಡು ಕವಲಿನ ಬಳಿ, ವೇಣೂರಿನತ್ತಣಿಂದ ಬರುವ ಇನ್ನೊಂದು ಜಲಧಾರೆ ಬಲವೂಡುತ್ತದೆ. ಆದರೂ ಮೂಲರಪಟ್ನದವರೆಗೂ ಬಹುತೇಕ ಛಿದ್ರಗೊಂಡ ಕಲ್ಲಪಾತ್ರೆಯನ್ನೇ ಹೊಂದಿ, ದೋಣಿವಿಹಾರವನ್ನು ಇದು ನಿರಾಕರಿಸುವಂತೇ ತೋರುತ್ತದೆ. ಹಾಗಾಗಿ ನಾವು ಪೊಳಲಿಯಿಂದಷ್ಟೇ ತೊಡಗಿ, ಮೂಲರಪಟ್ನ ಮುಟ್ಟಿ, ಮರಳುವುದನ್ನು ದಿನದ ಲಕ್ಷವಾಗಿಸಿಕೊಂಡಿದ್ದೆವು. ಪೊಳಲಿ ಸೇತುವೆ ಕಳೆದದ್ದೇ ಬಲಕ್ಕಿಳಿಯುವ ಮರಳಿಗರ ದಾರಿಯಲ್ಲಿ ಕಾರನ್ನು ನದಿಯ ಪಶ್ಚಿಮ ದಂಡೆಗೆ ಇಳಿಸಿದೆವು. ಅಷ್ಟೇ ಚುರುಕಾಗಿ ದೋಣಿ ಇಳಿಸಿ, ನೀರ ತೊಳಸತೊಡಗುವಾಗ ಬೆನ್ನಿಗೆ ಬಿದ್ದ ಸೂರ್ಯ (ಏಳೂವರೆ ಗಂಟೆ), ಕೆಂಪು ಕಳೆದು ಬೆಳ್ಳಿಯ ಶಲಾಕೆಗಳಲ್ಲಿ ತಿವಿಯತೊಡಗಿದ್ದ! ನಾವು ನೀರಿನ ಹರಿವಿನ ಎದುರು, ತುಸು ಉತ್ತರ-ಪಶ್ಚಿಮ ಮುಖಿಗಳಾಗಿ ಯಾನಾರಂಭ ಮಾಡಿದ್ದೆವು.

ಪೊಳಲಿ ವಲಯದಲ್ಲಿ ಫಲ್ಗುಣಿ ತೀವ್ರ ತಿರುವುಗಳನ್ನೇ ಒಡ್ಡುತ್ತದೆ. ಆ ತಿರುವುಗಳಲ್ಲಿ ನದಿ ಪಾತ್ರೆಯ ರಚನೆಯನ್ನನುಸರಿಸಿ ಸುಳಿ, ಸೆಳವುಗಳು ಇದ್ದರೆ, ನಮಗೆ ಅಪಾಯಕಾರಿಯಾಗಬಹುದೇ ಎಂಬ ಸಣ್ಣ ಸಂದೇಹ ನಮ್ಮ ತಲೆಯೊಳಗಿತ್ತು. ಈ ಕುರಿತು ಸಿಕ್ಕೊಬ್ಬ ಸ್ಥಳೀಯ ದೋಣಿಗನಲ್ಲಿ ವಿಚಾರಿಸಿದ್ದು ಪ್ರಯೋಜನಕ್ಕೆ ಸಿಗಲಿಲ್ಲ. ಆದರೂ ಎಚ್ಚರದಲ್ಲೇ ಮೊದಲಿಗೆ ನಾವು ಪ್ರವಾಹದ ಎದುರೀಜನ್ನೇ ಆಯ್ದುಕೊಂಡಿದ್ದೆವು. ನಿಮಗೆ ತಿಳಿದೇ ಇದೆ, ನಮ್ಮ ದೋಣಿಗಳು (ಕಯಾಕ್) ರಚನೆಯ ವೈಶಿಷ್ಟ್ಯದಲ್ಲಿ, ಒಳಗೆ ಪೂರ್ಣ ನೀರು ತುಂಬಿದರೂ ಮುಳುಗದು. ಹಾಗಾಗಿ ಒಂದೊಮ್ಮೆ ಸುಳಿ, ಸೆಳವು ನಮ್ಮ ದೋಣಿ ನಿಯಂತ್ರಣವನ್ನು ತಪ್ಪಿಸಿದರೂ ಹೊರಟಲ್ಲಿಗೇ ಮುಟ್ಟಿಯೇವು ಎಂಬ ಧೈರ್ಯ ನಮ್ಮ ಬಂಡವಾಳ!

ನದಿಯ ತಿರುವುಗಳಿಗೆ ಮುಖ್ಯ ಕಾರಣವಾಗಿರಬಹುದಾದ ಶಿಲಾಹಾಸು ಕೆಲವೆಡೆ ನೀರಿನ ನಡುವಿನಲ್ಲೂ ಸಣ್ಣದಾಗಿ ತಲೆ ಎತ್ತಿದ್ದಿತ್ತು. ಆದರೆ ಅವೆಲ್ಲ ನಿರಪಾಯಕಾರಿಯಾಗಿತ್ತು. ಮುಖ್ಯ ತಿರುವುಮುರುವುಗಳನ್ನು ಕಳೆದು ನಿಜದಿಕ್ಕಿಗೆ, ಅಂದರೆ ಘಟ್ಟಶ್ರೇಣಿಯಿರುವ ಉತ್ತರ-ಪೂರ್ವಕ್ಕೆ ನಾವು ಮುಂದುವರಿಯುತ್ತಿದ್ದಂತೆ, ನಮ್ಮ ಬೆಂಗಾವಲಿಗಿದ್ದ ಸೂರ್ಯ ಎದುರುಬಿದ್ದಿದ್ದ! ನೀರಿನ ನಡುವೆ ತಲೆ ಎತ್ತಿದ ಬಂಡೆಗಳ ಅಕ್ಕಪಕ್ಕದಲ್ಲಿ ಅಥವಾ ತಿರುವುಗಳಲ್ಲಿ ನಾವು ಹೆದರಿದಂತೆ ಸುಳಿ ಸೆಳವುಗಳೇನೂ ನಮ್ಮನ್ನು ಕಾಡಲಿಲ್ಲ. ಆದರೆ ಅವು ನೀರಿನ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿ, ವಿಹಾರವಾಗಬೇಕಿದ್ದ ನಮ್ಮ ಯಾನವನ್ನು ವಿಷಾದಕ್ಕಿಳಿಸಿದ್ದಂತೂ ನಿಜ. ಯಾವುದೇ ತಿರುವು ನಿರ್ದೇಶಿಸುವ ದಂಡೆಯ ದೂರದಂಚುಗಳಲ್ಲಿ ನೀರು ತಿಳಿಯಾಗಿ ಹರಿದಂತೆ ತೋರುತ್ತದೆ. ಆದರೆ ಆ ತಿರುವಿನ ಒಳಮೈಯಲ್ಲಿ ಅಥವಾ ಮರೆಯಲ್ಲಿ ನೀರು ಬಹುತೇಕ ನಿಶ್ಚಲವಿರುತ್ತದೆ. ಅಂಥಲ್ಲೆಲ್ಲ ನದಿಯಲ್ಲಿ ತೇಲಿಬರುವ ತೂಕದ ಕಸ, ಕಲ್ಮಶಗಳು ತಳದಲ್ಲಿ ತಂಗುತ್ತವೆ. ಹಗುರದವು ಮಥನಕ್ಕೊಳಗಾಗಿ ಕೆನೆಗಟ್ಟಿ ತೋರುತ್ತವೆ. ತೀವ್ರ ದುಃಖದ ಸಂಗತಿ ಎಂದರೆ, ನಮಗೆ ಇಲ್ಲಿ ಹಾಗೆ ಕಾಣಿಸಿದ್ದೆಲ್ಲ ಮನುಷ್ಯರ ಮಲ-ನವನೀತಗಳು! ಅಂಥಲ್ಲೆಲ್ಲ ಹುಟ್ಟಾಡಿಸುವಾಗ ಸೀರ್ಪನಿಗಳು ಏಳದಂತೆ ಬಹಳ ಎಚ್ಚರವಹಿಸುತ್ತಿದ್ದೆವು. ಇಲ್ಲವಾದರೆ ಅವು ನಮ್ಮ ಮುಖಮೈಗಳಿಗೆ ಸಿಡಿದು, ಹೇವರಿಕೆ ಹೆಚ್ಚಿಸುವುದು ಖಾತ್ರಿ ಇತ್ತು.

ಮಳೆಗಾಲದ ನದಿಯ ಉಬ್ಬರದ ಕುರುಹುಗಳನ್ನು ಎರಡೂ ದಂಡೆಗಳ ಮರಗಿಡಗಳು ದಾಖಲಿಟ್ಟಿದ್ದವು. ಅಂದರೆ, ಕೊಚ್ಚಿ ಬಂದು ಸಿಲುಕಿಕೊಂಡ ಎಷ್ಟೋ ನಾಗರಿಕ ಕಸಗಳು ಎತ್ತೆತ್ತರದ (ಕೆಲವೆಡೆ ನಮ್ಮ ದೋಣಿಯಿಂದ ಎರಡಾಳು ಎತ್ತರದಲ್ಲಿದ್ದವು!) ಕೊಂಬೆಗಳಲ್ಲಿ ರಾರಾಜಿಸುತ್ತಿದ್ದವು. ಈ ಕುರುಹುಗಳು ನಮ್ಮ ಲೆಕ್ಕಕ್ಕೆ ನದಿಯ ಉನ್ನತಿಗಿಂತ ಸದ್ಯದ ಅವನತಿಯನ್ನೇ ಹೇಳುವಂತೇ ತೋರುತ್ತಿತ್ತು; ಮಳೆಗಾಲ ಪೂರ್ಣ ಮುಗಿಯುವ ಮೊದಲೇ ನದಿ ತೀವ್ರ ಸೊರಗಿದೆ. ತೋಡು ಹೊಳೆಗಳಲ್ಲಿ ದಂಡೆ ಎನ್ನುವುದು ಒಂದು ಸ್ಪಷ್ಟ ರೇಖಾತ್ಮಕ ಗಡಿಯಲ್ಲ. ದೊಡ್ಡ ಮರ, ಪೊದರು, ಜವುಗು ಪ್ರದೇಶದ ಹುಲ್ಲು, ಜಲಸಸ್ಯ ಎಂದೆಲ್ಲ ಹರಡಿಕೊಂಡು ನದಿಪಾತ್ರೆ ನಿಧಾನಕ್ಕೆ ಆಳವಾಗುತ್ತದೆ. ಆದರೆ ನಾವು ಕಂಡ ಫಲ್ಗುಣಿಯ ಬಹ್ವಂಶ ದಂಡೆಗಳು, ಮರಳಿಗರ ದಾಳಿಯಲ್ಲಿ ಪ್ರಾಕೃತಿಕ ರೂಪ ಕಳೆದುಕೊಂಡಿವೆ. ಬೋಳುಬೋಳಾಗಿ ಬಹುತೇಕ ನೀರ ಹರಿವಿಗೆ ಲಂಬವಾಗಿ ನಿಂತ ಈ ದಂಡೆಗಳು ಇಂದು ಹರಿನೀರು ಭರದಿಂದ ಇಳಿಯುತ್ತಿರುವುದನ್ನು ಮರಳಸ್ತರಗಳ ರೇಖೆಯಲ್ಲಿ (ವಿಡಿಯೋ ನೋಡಿ) ತೋರಿಸುತ್ತಿವೆ. ಇವೆಲ್ಲ ನಮ್ಮ ದುರಾಸೆಯ ಉತ್ಪಾತಗಳಿಗೆ ಪ್ರಕೃತಿ ತೋರುತ್ತಿರುವ ಕೆಂಪು ನಿಶಾನಿ. ಒಂದೆಡೆ ದಂಡೆಯಲ್ಲಿದ್ದ ಸ್ಥಳೀಯನೊಬ್ಬನನ್ನು ಮಾತಾಡಿಸಿದ್ದೆ. “ಫಲ್ಗುಣಿ ಇಷ್ಟು ತುಂಬಿದಂತೆ, ಮಂದವಾಗಿ ಹರಿಯುತ್ತಿರುವುದು ಆದ್ಯಪಾಡಿ ಅಣೆಕಟ್ಟಿನ ಪ್ರಭಾವವೇ?” ಎಂದೇ ಕೇಳಿದ್ದೆ. ಆತ “ಇಲ್ಲ ಇಲ್ಲ. ಆದ್ಯಪಾಡಿ, ಮರವೂರುಗಳ ಕಿಂಡಿ ಅಣೆಕಟ್ಟುಗಳಲ್ಲಿ ಇನ್ನೂ ಹಲಗೆಯನ್ನೇ ಇಳಿಸಿಲ್ಲ. ನಿಜದಲ್ಲಿ ನದಿಯಲ್ಲಿ ನೀರು ತುಂಬಾ ಕಮ್ಮಿಯಿದೆ, ಹರಿವೇ ಇಲ್ಲ. ನಿಮಗೆ ಕಾಣುತ್ತಿರುವ ವಿಸ್ತೃತ ನೀರು, ಮರಳು ತೆಗೆತೆಗೆದು ಆಗಿರುವ ಹೊಂಡಗಳಲ್ಲಿ ನಿಂತ ನೀರು!” ಎಲ್ಲ ಮುಗಿದಾಗ ಇದು ನಿಜ ಎನ್ನುವಂತೆ, ನಾವು ಎರಡೂ ದಿಕ್ಕುಗಳಲ್ಲಿ ಒಂದೇ ಶ್ರಮದಿಂದ ಹುಟ್ಟು ಹಾಕಿಯೇ ಪ್ರಗತಿ ಕಂಡಿದ್ದೆವು.

ನದಿಯಂಥ ಮುಕ್ತ ಜಲಮೂಲಗಳೂ (ಕಾಡು, ಬೆಟ್ಟ ಗುಡ್ಡಗಳಾದಿಯಾಗಿ ಒಟ್ಟಾರೆ ಪ್ರಕೃತಿಯಂತೇ) ಕೇವಲ ಮನುಷ್ಯ ಉಪಯೋಗಕ್ಕೆ ಎಂಬ ತೀರಾ ಅವಾಸ್ತವ, ಸಂಕುಚಿತ ಧೋರಣೆ (ಸಾಮಾನ್ಯರಿಂದ ಆಡಳಿತವರ್ಗದವರೆಗೂ) ಇಂದು ಎಲ್ಲೆಲ್ಲೂ ಮೆರೆದಿದೆ.

ಏಕಕಾಲಕ್ಕೆ ಇವು ಪೂಜನೀಯವೂ ಹೌದು, ನಮ್ಮೆಲ್ಲ ಕೊಳಕುವಾಹಿನಿಯೂ ಹೌದು (ಪೂಜ್ಯವೆಂದು ಹಾಲೂ ಸುರಿಯುತ್ತೇವೆ, ನಿರ್ಲಜ್ಜವಾಗಿ ಹೇಲೂ ಹರಿಸುತ್ತೇವೆ!). ಇಂದು ತೂತುಬಾವಿಗಳ ಅತಿರೇಕ, ತಿರುಗಿ ಬರಲಾಗದ ಕುರುಡುಕೊನೆ (ಡೆಡ್ ಎಂಡ್) ಕಾಣಿಸುತ್ತಿರುವಾಗ, ಪ್ರಾಕೃತಿಕ ಹರಿನೀರನ್ನು ಸಾರ್ವಕಾಲಿಕವಾಗಿ ಪಳಗಿಸುವ (ಅಣೆಕಟ್ಟುಗಳ ಮೂಲಕ) ಹುಚ್ಚು ನಮ್ಮ ‘ನಾಡಶಿಲ್ಪಿ’ಗಳ ತಲೆಗಡರಿದೆ. (ನಿನ್ನೆ ಮೊನ್ನೆಯಷ್ಟೇ ‘ಹರೇಕಳ – ಅಡ್ಯಾರು ಬ್ಯಾರೇಜ್ ಕಂ ಬ್ರಿಜ್’ ಯೋಜನೆಯನ್ನು ಸಚಿವ ಖಾದರ್ ತೇಲಿಬಿಟ್ಟಿದ್ದಾರೆ!)

ಸಾಮಾಜಿಕ ಶಾಸನಗಳು ಸಾರ್ವಜನಿಕರಿಗೆ ಕಾನೂನಾತ್ಮಕವಾಗಿ ಸಣ್ಣ ಹೊಳೆಗೂ ಪಂಪ್ ಹಾಕಲು ಅನುಮತಿಸುವುದಿಲ್ಲ. (ನಮ್ಮ ದೋಣಿಯಾನದಲ್ಲಿ ನದಿಗೆ ಸೇದುಗೊಳವೆಯನ್ನು ಗುಟ್ಟಾಗಿ ಇಳಿಬಿಟ್ಟಂತ ಕೆಲವು ಕೃಷಿಭೂಮಿಗಳನ್ನು ಕಂಡೆವು.) ಆದರೆ ಎಲ್ಲ ಆಡಳಿತಗಳೂ ಸ್ವತಃ ಹೊಳೆಪಾತ್ರೆಗಿಳಿದು, ವಿವಿಧ ಗಾತ್ರದ ಕಾಂಕ್ರೀಟ್ ರಿಂಗುಗಳನ್ನಿಳಿಬಿಟ್ಟು ಮಾಡಿದ ಅಸಂಖ್ಯ ಅವ್ಯವಸ್ಥೆಗಳು ಸದಾ ಅಸಂಖ್ಯ ಮತ್ತು ಅವನ್ನು ಫಲ್ಗುಣಿಯಲ್ಲೂ ಧಾರಾಳ ಕಂಡೆವು. ಇವೆಲ್ಲ ವಿವಿಧ ಪೇಟೆ, ಪಟ್ಟಣಗಳ ಕುಡಿನೀರ ಯೋಜನೆಗಳೇ ಇರಬಹುದು. ಆದರೆ ಇವಕ್ಕೂ ಮುನ್ನ ಆ ಜನ, ಆ ಸ್ಥಳಗಳು ಬಳಸುತ್ತಿದ್ದ ಜಲಮೂಲಗಳು ಏನಾದವು? ಅವನ್ನೇ ಯಾಕೆ ಅಭಿವೃದ್ಧಿಪಡಿಸಲಿಲ್ಲ ಎಂದೆಲ್ಲ ಕೇಳುವವರನ್ನು ಜನವಿರೋಧಿಗಳೆಂದೇ ಶೂಲಕ್ಕೇರಿಸುವ ಸ್ಥಿತಿಯನ್ನು ಜನಪ್ರತಿನಿಧಿಗಳು ಮಾಡಿದ್ದಾರೆ.\

ಸರಕಾರಗಳು ಪ್ರಕೃತಿಯೊಡನಾಡುವ ಯಾವುದೇ ಪ್ರಯತ್ನಗಳಲ್ಲಿನ ವೈಫಲ್ಯ, ಇನ್ನಷ್ಟು ದೊಡ್ಡ ಯೋಜನೆಗೆ ದಾರಿಯಾಗುತ್ತದೆಯೇ ಹೊರತು, ನಿರ್ಣಾಯಕವಾಗಿ ಅಪರಾಧಿಗಳನ್ನು ಗುರುತಿಸಿ, ಶಿಕ್ಷಿಸುವ ಕೆಲಸ ನಡೆಯುವುದೇ ಇಲ್ಲ. ಇನ್ನೂ ದೊಡ್ಡ ದುರಂತವೆಂದರೆ, ಆ ಮೂಲಕ ಪ್ರಕೃತಿ ಮೇಲೆ ಹೇರಿದ ವಿಕಾರಗಳನ್ನು ಕಳಚುವ ಯೋಚನೆಯೂ ಸುಳಿಯುವುದಿಲ್ಲ. (ಯೋಜನೆಯಂತೆ ಕೆಲವೇ ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಬೇಕಿದ್ದ ವರಾಹೀ ನದಿ ಜೋಡಣೆ ಯೋಜನೆ ಮೂರುದಶಕಗಳಿಂದಲೂ ನಡೆಯುತ್ತಲೇ ಇದೆ. ಮೂಲ ಯೋಜನಾ ಅಂದಾಜು ಪಟ್ಟಿ ನೂರ್ಮಡಿ ಹೆಚ್ಚಿಯೂ ಉದ್ದಿಷ್ಟ ಪ್ರಯೋಜನ ಶೂನ್ಯ, ಪ್ರಕೃತಿ ಅವಹೇಳನ ಮಾತ್ರ ಅಪಾರ!)\

ಇಂದು ದಾರಿಗಳ ಉನ್ನತೀಕರಣದಲ್ಲಿ ಹೀಗೇ ಅಸಂಖ್ಯ ಶಿಥಿಲ ಸೇತುವೆಗಳು ಹೊಳೆಪಾತ್ರೆಗೆ ಹೊರೆಯಾಗಿಯೇ ಉಳಿದಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಲೇಬೇಕು. ಅದಕ್ಕೆ ಬಹಳ ದೊಡ್ಡ ಹೊಸ ಉದಾಹರಣೆಯನ್ನು ನಾವು ಇದೇ ದೋಣಿಯಾನದಲ್ಲಿ ಮೂಲರಪಟ್ನದಲ್ಲಿ ಕಂಡೆವು. ಅಲ್ಲಿ ಮೂರು ನಾಲ್ಕು ತಿಂಗಳ ಹಿಂದಷ್ಟೇ ಭಾರೀ ಸೇತುವೆ ಕುಸಿದು ಬಿದ್ದದ್ದು ನಿಮಗೆಲ್ಲ ತಿಳಿದೇ ಇದೆ. ನಮ್ಮ ವ್ಯವಸ್ಥೆಯಲ್ಲಿ ಇಂಥ ದುರಂತಗಳ ತನಿಖೆ ಕೇವಲ ಆಡಿಕೊಳ್ಳುವವರ ನಾಲಿಗೆತೀಟೆಯಷ್ಟೇ ಆಗಬಲ್ಲುದು. ಮೂವತ್ತಾರು ವರ್ಷಗಳ ಕಿರಿಪ್ರಾಯದಲ್ಲದು ಕುಸಿದದ್ದಕ್ಕೆ ರಚನಾ ಭ್ರಷ್ಟತೆ, ಕಾಲಿಕ ಉಸ್ತುವಾರಿಯ ಕೊರತೆ, ಮರಳಿಗರ ದ್ರೋಹಗಳು ಎದ್ದು ಕಾಣುತ್ತವೆ. ಆದರೆ ನಮ್ಮ ಭ್ರಷ್ಟ ವ್ಯವಸ್ಥೆ ನಿಧಾನದ್ರೋಹದ ಕೊನೆಯಲ್ಲಿ ಇಂಥವನ್ನು ಪ್ರಾಕೃತಿಕ ವೈಪರೀತ್ಯದ ಚಾಪೆಯಡಿ ಗುಡಿಸಿಬಿಡುತ್ತಾರೆ ಖಂಡಿತ.

ಅದು ಹಾಳಾಗಲಿ. ಇನ್ನೊಂದು ಮುಖದಲ್ಲಿ, ಎಷ್ಟು ನಿಧಾನವಾಗಿಯಾದರೂ ಮತ್ತಷ್ಟೇ ಅದಕ್ಷವಾಗಿ ಹೊಸ ಸೇತುವೆಯ ಯೋಜನೆ ಮತ್ತು ಅನುಷ್ಠಾನ ತೊಡಗಿಕೊಳ್ಳುತ್ತದೆ. ಈ ಎರಡರ ನಡುವೆ ಹೊಳೆಪಾತ್ರೆಯಲ್ಲುಳಿದ ಭಗ್ನಸೇತುವಿನ ಅವಶೇಷಗಳನ್ನು ಕಳಚಿ ತೆಗೆಯುವ ಯೋಜನೆ ಮಾತ್ರ ಯಾರೂ ಹಾಕುವುದೇ ಇಲ್ಲ. ಪರಿಸರ ರಕ್ಷಣೆಯಲ್ಲಿ ನಿರುಪಯುಕ್ತ ಮನುಷ್ಯ ರಚನೆಗಳ ಪೂರ್ಣ ನಿರಚನೆ ಬಹಳ ದೊಡ್ಡ ಪಾತ್ರವಹಿಸುತ್ತದೆ. ನಮ್ಮ ಫಲ್ಗುಣಿ ಯಾನದಲ್ಲಿ ಕಂಡ ಅಸಂಖ್ಯ ನಿರುಪಯುಕ್ತ ಜ್ಯಾಕ್ ವೆಲ್ಲುಗಳೂ ಮೂಲರಪಟ್ನ ಭಗ್ನ ಸೇತುವೆಗಳೆಲ್ಲದರ ಕಲ್ಲು, ಕಬ್ಬಿಣ, ಮುರುಕು ಕಾಂಕ್ರೀಟ್ ಗಟ್ಟಿಗಳನ್ನು ಹೊಳೆಪಾತ್ರೆಯಿಂದ ಹೊರಹಾಕುವ ಕೆಲಸ ತುರ್ತಾಗಿ ಆಗಲೇಬೇಕು.

ಫಲ್ಗುಣಿ ಹೊಳೆ ಅವಹೇಳನದಲ್ಲಿ. ಸದ್ಯ ತತ್ಕಾಲೀನವಾಗಿ ಸ್ಥಗಿತಗೊಂಡಿರುವ ಮರಳುಗಾರಿಕೆಗೆ ಬಹಳ ದೊಡ್ಡ ಪಾತ್ರವಿದೆ. ಹಾಗಾಗಿ ನಮಗೆ ಉದ್ದಕ್ಕೂ ದಂಡೆಯಲ್ಲಿ ಅಸಂಖ್ಯ ದೋಣಿಗಳು ಕವುಚಿ ಮಲಗಿಕೊಂಡಿರುವುದು ಕಾಣಿಸುತ್ತಲೇ ಇತ್ತು. ಹಾಗೇ ಅಲ್ಲಿಗೆ ಲಾರಿಗಳಿಳಿಯಲು ಮಾಡಿದ ತತ್ಕಾಲೀನ ದಾರಿ, ಹೊರೆ ವರ್ಗಾಯಿಸಲು ಮಾಡಿದ ದಕ್ಕೆ, ಇಂದು ಖಾಲಿಯಾದರೂ ಮೊದಲು ಮರಳು ಹರಡಿದ ತಟ್ಟುಗಳೂ ಸಾಕಷ್ಟು ಕಾಣುತ್ತಲೇ ಇದ್ದವು. ಈ ತತ್ಕಾಲೀನ ರಚನೆಗಳು ಮಳೆಗಾಲದ ಉಕ್ಕಿಗೆ ಕೊರೆದು, ಕುಸಿದು ಹೋಗುವುದರೊಡನೆ ಎಷ್ಟೆಷ್ಟೋ ಇತರ ಕಟ್ಟೋಣ ಸಾಮಗ್ರಿಗಳನ್ನೂ ಹೊಳೆ ಪಾತ್ರೆಗೆ ತುಂಬುತ್ತಲೇ ಇರುತ್ತವೆ. ಹಾಗೆ ಒಂದು ಇಡಿಯ ದೋಣಿ, ಎಷ್ಟೋ ಕಾಂಕ್ರೀಟ್ ರಿಂಗುಗಳು, ತೊಲೆಗಳು, ನೀರ ಮೇಲಕ್ಕೂ ಭರ್ಚಿಯಂತೆ ನಿಂತುಕೊಂಡು ಬೆದರಿಸುತ್ತಿದ್ದವು. ನಮ್ಮ ದೋಣಿಗಳು ಗಟ್ಟಿಯಾದ ಫೈಬರ್ ಅಥವಾ ಪ್ಲ್ಯಾಸ್ಟಿಕ್ಕಿನವು. ಹಾಗಾಗಿ ಸಣ್ಣ ಗೀರೋ ಒರಸುಗಳಲ್ಲೋ ಸುಧಾರಿಸಿಕೊಂಡೆವು. ಹಿಂದೆ ನಬೀಲ್ ಮತ್ತು ಮಜರೂಕ್ ಜೋಡಿ ತಂದಿದ್ದ ಗಾಳಿದುಂಬಿ ಚಲಾಯಿಸುವ ದೋಣಿಯೇನಾದರೂ ಬಂದಿದ್ದರೆ, ಹರಿದು ಹೆಚ್ಚಿನ ಅಪಘಾತವೇ ಆಗಬಹುದಿತ್ತು.

ಅದೊಂದು ಕಡೆ, ನಮಗೆ ಆಶ್ಚರ್ಯಕರವಾಗಿ ನದಿಯ ಎರಡೂ ದಂಡೆಗಳಲ್ಲಿ ನದಿಗೇ ಮುಖ ಮಾಡಿದಂತೆ ಭಾರೀ ಬೋರ್ಡುಗಳು ಕಾಣಿಸಿದವು. ಮೀಯುವ, ಬಟ್ಟೆ ಒಗೆಯುವ, ಒಟ್ಟಾರೆ ಮನೆವಾರ್ತೆಗೆ ನದಿ ನೀರು ಬಳಸುವ ಸಂಸ್ಕೃತಿ ಮರೆತೇ ಹೋದ ಈ ದಿನಗಳಲ್ಲಿ ಈ ಬೋರ್ಡ್ ಯಾರಿಗೆ? ಹೋಗಲಿ, ಮೀನುಗಾರಿಕೆ, ಮರಳುಗಾರಿಕೆಯ ದಿನಗಳಲ್ಲಿ ಸಾಕಷ್ಟು ದೋಣಿಯಾನಿಗಳಾದರೂ ಬೋರ್ಡ್ ಓದಿಕೊಳ್ಳುತ್ತಿದ್ದರು ಎನ್ನಬಹುದಿತ್ತು. ಆದರಿಂದು ಅವೂ ನಿಂತು ಹೋಗಿವೆ ಎನ್ನುವಾಗ ಈ ಬೋರ್ಡ್ ಯಾರಿಗೆ? ಆಶ್ಚರ್ಯ ಹೆಚ್ಚಿದ್ದಕ್ಕೆ ಓದುವ ಕುತೂಹಲಕ್ಕಾಗಿಯೇ ಸಮೀಪಿಸಿದ್ದೆ. “ಈ ವಲಯದಲ್ಲಿ ಹೂಳೆತ್ತುವುದಾಗಲೀ ಮರಳುಗಾರಿಕೆ ನಡೆಸುವುದಾಗಲೀ ನಿಷೇಧಿಸಿದೆ.” “ಅಬ್ಬಾ, ಕೊನೆಗೂ ಹೊಳೆಯ ಕುರಿತು ಕಾಳಜಿಯ….” ಎಂದು ಅವಸರದ ತೀರ್ಮಾನಕ್ಕೆ ಬಂದೀರಿ! ಇಲ್ಲ, ಅದು ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋ ಉತ್ಪನ್ನಗಳನ್ನು ರವಾನಿಸುವವರ ಶಾಸನ ವಿಧಿಸಿದ ಎಚ್ಚರಿಕೆ. ಅವರು ಹೊಳೆ ಪಾತ್ರೆಯ ತಳವನ್ನು ಅಡ್ಡಕ್ಕೆ ಸೀಳಿ, ಹುಗಿದ ಕೊಳವೆ ಸಾಲಿನ ಕಾಳಜಿ. ಒಂದೊಮ್ಮೆ ಕೊಳವೆಗೆ ಜಖಂ ಆಗಿ, ಪರಿಣಾಮದಲ್ಲಿ ಜೀವ ಸೊತ್ತುಗಳ ಭೀಕರ ನಾಶವಾದರೆ ನೈತಿಕ ಬಾಧ್ಯತೆ ಕಳಚಿಕೊಳ್ಳುವ ಜಾಣ್ಮೆ. ಅವರಿಗೆ ಹೊಳೆ ಒಂದು ಅನಿವಾರ್ಯ ಅಡ್ಡಿ.

ಮೂರೂ ದೋಣಿಗಳು ಯಾನವನ್ನು ಆರಾಮವಾಗಿಯೇ ಮೊದಲಿಟ್ಟವು. ಪ್ರವೀಣ್ ಧನರಾಜ್ ಜೋಡಿ ಅಡ್ಡಾತಿಡ್ಡ ಮತ್ತು ಹಿಮ್ಮುಖ ಚಲನೆಗಳಲ್ಲಿ ವಿಶೇಷ ಪ್ರಯೋಗ ನಡೆಸಿದ್ದರು. ಅನಿಲ್ ಶಿವಾನಂದ್ ಜೋಡಿಯದ್ದು ಹುಟ್ಟು ಹಾಕುವಲ್ಲಿ ಏಕತೆಯ ಸಾಧನೆ. ನಮ್ಮಿಬ್ಬರಿಗೆ ದೋಣಿ ಒಂದು ಮಾಧ್ಯಮ, ಹೇಗಾದರೂ ಪ್ರಗತಿ, ಹೊಸ ಕುತೂಹಲಗಳ ಅನಾವರಣ. ಅದಕ್ಕೆ ಸರಿಯಾಗಿ, ದೂರ ಎಡ ತೀರದಲ್ಲಿ ಪೊದರುಗಳ ನಡುವೆ ಚೂರೇ ಚೂರು ತೆರೆದ ದರೆಯಲ್ಲಿ ದೇವಕಿ ದೊಡ್ಡ ಉಡವೊಂದನ್ನು ಗುರುತಿಸಿದಳು. ಮೂರೂ ದೋಣಿಗಳು ಉಡದ ಸಮೀಪ ದರ್ಶನಕ್ಕಾಗಿ ಬಲು ಎಚ್ಚರದಿಂದಲೇ ಮುಂದುವರಿದವು. ಜೂಮ್, ಸ್ವಂತೀ, ವಿಡಿಯೋ ಎಂದೆಲ್ಲ ಸರ್ಕಸ್ಸುಗಳು ನಡೆಯುತ್ತಿದ್ದಂತೆ ಅದು ಓಡಿ ಕಣ್ಮರೆಯಾದದ್ದೂ ಆಯ್ತು. ಉಳಿದಂತೆ ನಮಗೆ ತೀರಾ ಅಪರೂಪಕ್ಕೆ ನಮಗೆ ಕಾಣ ಸಿಕ್ಕದ್ದು ಒಂದೆರಡು ಹಕ್ಕಿಗಳು ಮಾತ್ರ; ಅಳುವ ಹೊಳೆಯ ಮೇಲೆ ನಗದ ದೋಣಿ ವಿಹಾರ!

ಮೂಲರಪಟ್ನ ಸಮೀಪಿಸುತ್ತಿದ್ದಂತೆ ನಮಗೆ ಮೊದಲು ಕಾಣಿಸಿದ್ದು ಬಲು ಸುಂದರ ದೃಶ್ಯವೇ ಆದ ತೂಗು ಸೇತುವೆ. ಇದು ಕಳೆದ ಎರಡುವರ್ಷಗಳ ಹಿಂದಿನ ರಚನೆಯಂತೆ. ಮೇಲೆ ಐವತ್ತು ನೂರು ಮೀಟರ್ ಅಂತರದಲ್ಲೇ ತೋರಿಕೆಗೆ ಸದೃಢ ಎಲ್ಲಾ ವಾಹನಯೋಗ್ಯ ಸೇತುವೆ ಇದ್ದಂತೆಯೇ ಇದನ್ನು ಯಾಕೆ ರಚಿಸಿದರೋ ಎಂದು ಒಮ್ಮೆ ಆಶ್ಚರ್ಯವಾಗುತ್ತದೆ. ಆದರೆ ಇಂದು ಆ ಕಾಂಕ್ರೀಟ್ ಸೇತುವೆ ಕುಸಿದು ಬಿದ್ದ ಸ್ಥಿತಿಯಲ್ಲಿ, ತೂಗು ಸೇತುವೆಯ ಯೋಜಕರಿಗೆ ಭವಿಷ್ಯದ ಕಾಣ್ಕೆಯಿತ್ತು ಎಂದರೆ ನಂಬಲೇಬೇಕು.
ಮೂಲರಪಟ್ನ ವಲಯದಲ್ಲಿ ಮರಳ ಅಡ್ಡೆ ಸಾಕಷ್ಟು ದೊಡ್ಡದೇ ಇದ್ದಿರಬೇಕು. ಅದರ ಕೂಲಿ ವಸತಿಗಳು, ದಕ್ಕೆಗಳೂ ಸೇರಿದಂತೆ ಎತ್ತರದ ದಂಡೆ, ಬಹುಶಃ ಸೇತುವೆ ಕುಸಿದು ಬೀಳುವ ಕಾಲದ ನೀರ ಸೊಕ್ಕಿಗೆ ಸಾಕಷ್ಟು ಕುಸಿದು, ಕೊಚ್ಚಿ ಹೋದಂತಿತ್ತು. ಅದಲ್ಲದೇ ಸೇತುವೆ ಬಿದ್ದ ಹೊಸತರಲ್ಲಿ ಸಾರ್ವಜನಿಕ ಕಣ್ಕಟ್ಟಿಗೆ ಮಾಡಿದ್ದಿರಬಹುದಾದ ಮಣ್ಣದಾರಿ ನೀರಿನಲ್ಲಿ ಕರಡಿಹೋಗಿತ್ತು. ಮತ್ತಲ್ಲೇ ಸುರಿದಿದ್ದ ಕಾಂಕ್ರೀಟ್ ಜಾಡೂ ಮುಳುಗಡೆಯಲ್ಲಿತ್ತು. ಪ್ರವಾಹ ಎಲ್ಲಿಂದಲೋ ಹೊತ್ತು ತಂದಿದ್ದ ಬಿದಿರು ಹಿಂಡಿಲೊಂದನ್ನು ಒಂದು ‘ಅಪ್ಪ-ಮಗ ಕಂಪನಿ’ ಹಿಸಿದು, ಗೃಹೋಪಯೋಗಕ್ಕೆ ಒಯ್ಯುವ ಅಂದಾಜಿನಲ್ಲಿತ್ತು. ದಯವಿಟ್ಟು ಯಾರೂ ಇದನ್ನು ಅರಣ್ಯ ಇಲಾಖೆಯ ಗಮನಕ್ಕೆ ತರಬೇಡಿ. ಗೊತ್ತಾದರೆ ಅವರು ದೇಶದ ಸಂಪತ್ತನ್ನು ಲೂಟುವ ಆ ಜೋಡಿಯನ್ನು ಒದ್ದು ಒಳಗೆ ಹಾಕಿಯಾರು!

ಹೊಳೆ ತನ್ನ ಒಡಲಿನ ಆ ಒಂದು ನೂರು ಮೀಟರ್ ವ್ಯಾಪ್ತಿಯ ಅಡ್ಡಿಗಳನ್ನು ಸುಧಾರಿಸಿಕೊಳ್ಳುವಲ್ಲಿ, ಕೆಲವು ಮರಳ ದಿಬ್ಬ ಮಾಡಿ, ಒಂದೆಡೆ ಮಡುಗಟ್ಟಿ, ಓರೆಯಲ್ಲಿ ಸಳಸಳನೆ ಹರಿದಿತ್ತು. ನಾವು ಮೊದಲು ಒಂದು ಮರಳ ದಿಬ್ಬದಲ್ಲಿ ತುಸು ವಿಶ್ರಮಿಸಿದೆವು. ಒಂದಿಬ್ಬರು ತೆಳು ಹರಿ ನೀರಿನ ಆಕರ್ಷಣೆ ತಡೆಯಲಾರದೆ ಮುಳುಗೇಳುವ ಬಯಕೆಯನ್ನೂ ಪೂರೈಸಿಕೊಂಡರು. ಅನಂತರ ನಾವೂ ಓರೆ ಜಾಡನುಸರಿಸಿ, ಸ್ವಲ್ಪ ಶಕ್ತಿಯುತವಾಗಿಯೇ ಹುಟ್ಟು ಹಾಕಿ, ಕುಸಿದುಬಿದ್ದ ಸೇತುವೆಯ ಬಳಿಗೂ ಹೋಗಿಬಂದೆವು.

ಹಿಂದಿರುಗುವ ಯಾನದಲ್ಲಿ ಬಿಸಿಲ ಝಳ ವಿಪರೀತವೆನ್ನಿಸಿತು. ಮೊದಲೇ ಹೇಳಿದಂತೆ ಹರಿವಿನ ಸೌಕರ್ಯವೇನೂ ಸಿಗದೆ ಮೊದಲಿನಂತೇ ಹುಟ್ಟು ಹಾಕಿಯೇ ಹೋಗಬೇಕಾಯ್ತು. ಬೆವರು ಹರಿಯದೇ ಆವಿಯಾಗುವ ಸ್ಥಿತಿ! ಆದರೂ ನಾವು ಧಾರಾಳವೆಂದೇ ಒಯ್ದಿದ್ದ ಕುಡಿವ ನೀರನ್ನು ಕೊನೆಯವರೆಗೆ ಒಂದು ಗುಟುಕಾದರೂ ಉಳಿಸಿಕೊಳ್ಳಬೇಕೆನ್ನುವ ಎಚ್ಚರದಲ್ಲಿ ರೇಶನ್ ಮಾಡಿ ಬಳಲಿದೆವು. ಉಳಿದಂತೆ ಯಾವುದೇ ತಿನಿಸುಗಳನ್ನು ಒಯ್ಯದ ನಮ್ಮ ಸಾಮಾನ್ಯ ಜ್ಞಾನವನ್ನು ಶಪಿಸಿಕೊಳ್ಳುತ್ತ ಹುಟ್ಟು ಹಾಕಿದೆವು. ಹೋಗುವಾಗಿನ ಅಡ್ಡಾದಿಡ್ಡಿ, ಚಿತ್ರಗ್ರಹಣದ ಮೋಜನ್ನೆಲ್ಲ ಬಿಟ್ಟು ಎರಡೂ ದೋಣಿಗರು ನೇರ ಪೊಳಲಿ ಲಕ್ಷ್ಯ ಸಾಧಿಸಿದರು. ಹೋಗುವ ದಾರಿಯಲ್ಲಿ ಉಳಿದವರಿಂದ ಅನುಭವಿಗಳು ಎಂಬ ಗರ್ವದಲ್ಲಿ ಮುಂದಿದ್ದ ನಾವು, ಮರಳುವಲ್ಲಿ ಹಿರಿಯರು (ಮುದಿಯರು?) ಎಂಬ ರಿಯಾಯಿತಿ ನಾವೇ ಘೋಷಿಸಿಕೊಂಡು, ನಿಧಾನಕ್ಕೆ ಕಾರಿನ ಬಳಿ ದಡ ಸೇರಿದ್ದೆವು. ಗಂಟೆ ಹನ್ನೆರಡನ್ನು ತುಸುವೇ ಮೀರಿತ್ತು. ಆದರೆ ಎಲ್ಲರ ಬಳಲಿಕೆ, ಹಸಿವು, ನೀರಡಿಕೆಗಳಿಗೆ ಪೊಳಲಿ ಪೇಟೆ ಪರ್ಯಾಪ್ತವಾಗಲಾರದು ಎಂದೇ ಭಾವಿಸಿದ್ದಕ್ಕೆ, ಗುರುಪುರ ದಾರಿಯಲ್ಲಾಗಿ ಮಂಗಳೂರಿನ ನಂನಮ್ಮ ಮನೆಗಳನ್ನೇ ಮುಟ್ಟಿ ಶುದ್ಧ ಮಂಗಳ ಹಾಡಿದೆವು.

ಪರ್ಯಾಯದ್ವೀಪದ (ದಕ್ಷಿಣ ಭಾರತ) ಅಂಚಿನ ಮಹತ್ತಾದ ಜಲಾವರಣದ ಕಿಂಚಿತ್ ಅನುಭವಕ್ಕೆ, ಸ್ವಲ್ಪ ಸಾಹಸಾನುಭವಕ್ಕೆಂದೇ ನಾವು ದೋಣಿ ಹಿಡಿದು ಹೋಗಿದ್ದೆವು. ಆದರೆ ಆ ಕೊನೆಯಲ್ಲಿ ನಾವು ಕಂಡ ಮೂಲರಪಟ್ನದ ಮುರುಕು ಸೇತುವೆ ನಮ್ಮನ್ನೇ ಅಣಕಿಸಿದ ರೂಪಕದಂತೇ ಕಾಣಿಸಿತ್ತು. ಮೂಲರಪಟ್ನದ ಎರಡು ದಂಡೆಗಳ ವಾಹನಸಂಚಾರ ಇಂದು ಕಡಿದು ಹೋಗಿದ್ದರೂ ಕಿಂಚಿತ್ ಸಂಪರ್ಕ ಉಳಿಸಿ ಕೊಟ್ಟಿರುವುದು ತೂಗುಸೇತುವೆ. ನಮ್ಮ ದೋಣಿ ಅದರಡಿಯಲ್ಲಿ ಸಾಗುವಾಗ, ಅಲ್ಲಿ ಓಡಾಡುತ್ತಿದ್ದ ಮಂದಿ ನಮ್ಮ (ಅ)ವ್ಯವಸ್ಥೆಯ ಮಹಾಜಾಲದಲ್ಲಿ ಸಿಕ್ಕು ವಿಲಗುಟ್ಟುವ ಹುಳುಗಳಂತೇ ತೋರಿದರು. ಅವರಿಗೆ ನಾವಾದರೂ ಅದೇ (ಅ)ವ್ಯವಸ್ಥೆಯ ಬರಡುಹೊಳೆಯಲ್ಲಿ ಮಿಡುಕುವ ಮೀನುಗಳಷ್ಟೇ ಆದೇವು!