(ಸೈಕಲ್ಲೇರಿ ವನಕೆ ಪೋಗುವಾ – ೨)

ಜೈಸಮಂಡ್, ಹವಾಮಹಲ್

ಜೈಸಮಂಡ್ ಅಣೆಕಟ್ಟೆಯ ಮಹಾದ್ವಾರದಲ್ಲಿ ಮತ್ತೆ ಅರಣ್ಯ ಇಲಾಖೆ ಢಮ್ಮ ಢಕ್ಕದ ಗದ್ದಲ, ತಿಲಕ, ಹಾರಗಳ ಸ್ವಾಗತ ಸಜ್ಜುಗೊಳಿಸಿತ್ತು. ಭಾಗ್ದೋರಾದಲ್ಲಿ ತೊಡಗಿದ್ದ ಈ ನಾಟಕ, ಅಲ್ಲಲ್ಲಿ ಮರುಕಳಿಸಲಿದೆ ಎಂಬ ಸೂಚನೆ ನನಗೆ ಹಿಡಿಸಲಿಲ್ಲ, ನಾನು (ಇನ್ನೂ ಕೆಲವರು) ತಲೆತಪ್ಪಿಸಿಕೊಂಡೆ. “ನಾಮ ಎಂಥದ್ದೋ ಕೆಮಿಕಲ್ ಮಾರಾಯ್ರೇ, ತೊಳೆದರೆ ಸುಲಭವಾಗಿ ಹೋಗುದಿಲ್ಲ” ಎಂದು ಹರಿ ಹೇಳಿದ್ದು ನನಗೆ ಹೆಚ್ಚಿನ ಅನುಕೂಲವೇ ಆಯ್ತು. ನಿಜದಲ್ಲಿ, ಕಟ್ಟೆಯಾಚಿನ ಸುವಿಸ್ತಾರ ‘ದೇವರ ಸರೋವರ’ವನ್ನು (ನೀರ ಹರಹಿನ ಇನ್ನೊಂದು ಹೆಸರು), ತರಂಗಿಸುತ್ತ ಬಂದ ಹಿತಗಾಳಿಯ ಸಮ್ಮಾನ ನಮಗೆ ಹೆಚ್ಚು ಅಪ್ಯಾಯಮಾನವಾಗಿತ್ತು. ಎಲ್ಲರೂ ಸಾಲುಗಟ್ಟಿ ಪೆಡಲುತ್ತ, ಕಟ್ಟೆಯುದ್ದಕ್ಕೆ ಸಾಗಿದೆವು. ಮೊದಲ ವೀಕ್ಷಣಾ ಅಟ್ಟಳಿಗೆ ಸಹಿತ ಸುಂದರ ಮಂಟಪ, ಮುಂದೆ ಗುಮ್ಮಟ ಸಾಲು, ದೇವಳಗಳೆಲ್ಲ ಹಿಂದೆ ಸರಿದವು. ಎದುರಿನ ವೀರಪುರ ಬೆಟ್ಟದ ಸವಾಲುತ್ತರಿಸುವ, ಅಲ್ಲಿನ ಹವಾಮಹಲಿನ ಸೌಂದರ್ಯ ವೀಕ್ಷಿಸುವ ಬಯಕೆಗಳನ್ನು ಹುರಿಗೊಳಿಸುತ್ತ, ಅದರ ನೇರ ತಪ್ಪಲಿನ ಅರಣ್ಯ ಇಲಾಖಾ ವಠಾರ ಸೇರಿದೆವು.

ಅಲ್ಲಿನ ಪ್ರಧಾನ ಕಟ್ಟಡ ಐತಿಹಾಸಿಕ ರಚನೆಯದೇ ಪರಿಷ್ಕರಣೆ. ಅದರ ಎದುರಿನ ಭಾರೀ ಆಲದ ಮರ ವಠಾರಕ್ಕೆ ಹೆಚ್ಚಿನ ಶೋಭೆ ತಂದಿತ್ತು. ಅಲ್ಲಿ ಸೈಕಲ್ಲುಗಳನ್ನು ಬಿಟ್ಟು, ಐದಾರು ಮಿನಿಟು ಗೌತಮ್ ತೋರಿಕೊಟ್ಟ ವ್ಯಾಯಾಮಗಳನ್ನು ಮಾಡಿ, ಊಟಕ್ಕೆ ಹೊರಡುವಾಗ ಗಂಟೆ ಮೂರನ್ನೇ ಸಮೀಪಿಸಿತ್ತು. ಅಣೆಕಟ್ಟೆಯ ಕೆಳಪಾತ್ರೆಯ ಉದ್ಯಾನವನದಲ್ಲಿ ನಮ್ಮ ಶಿಬಿರ ಸಜ್ಜಾಗಿತ್ತು. ಅದರ ಹುಲ್ಲ ಹಾಸಿನ ಒಂದು ಅಂಕಣದಲ್ಲಿ ಬಿಸಿಬಿಸಿ ಪಾಕವೈವಿಧ್ಯ ನಮ್ಮ ಹಸಿವು ತಣಿಸಲು ಕಾತರದಿಂದಿದ್ದರೆ, ಇನ್ನೊಂದು ಅಂಕಣದ ಶಿಸ್ತಿನ ಗುಡಾರಸಾಲು ಉತ್ತರೋತ್ತರ ವಿಶ್ರಾಂತಿ ಕೊಡಲು ಸಜ್ಜಾಗಿದ್ದವು. ಬಾಗ್ಡೊರಾದಲ್ಲಿ ವ್ಯಾನೇರಿದ್ದ ನಮ್ಮ ಹೆಚ್ಚಿನ ಹೊರೆಗಳು ಕೈಸೇರಿದ್ದವು. ಹುಲ್ಲ ಹಾಸಿನ ಬಲ ಮಗ್ಗುಲಿನ ಖಾಯಂ ಶೌಚಾಲಯಗಳು ನಮ್ಮ ದೇಹಭಾರಕ್ಕೆ ಮುಕ್ತವಿದ್ದರೆ, ಎಡ ಮಗ್ಗುಲಿನ ಬಯಲು ರಂಗಭೂಮಿ ರಾತ್ರಿಯಲ್ಲಿ ಮನೋರಂಜಿಸುವ ಆಶ್ವಾಸನೆ ನೀಡುತ್ತಿದ್ದಂತಿತ್ತು. ಇನ್ನೇನು ಗಟ್ಟಿಯುಂಡು, ಹಗುರಾಗಿ….. ಎಂದು ಯೋಚನಾಲಹರಿ ಬೆಳೆಸುವುದರೊಳಗೆ, ಕುಶಾಲ್ ತತ್ಕಾಲೀನ ಕಲಾಪ ಪಟ್ಟಿ ಘೋಷಿಸಿದರು. “ಊಟದ ಬೆನ್ನಿಗೆ, ಆಸಕ್ತರು ಬೆಟ್ಟ ಏರಿ ಹವಾಮಹಲನ್ನು ನೋಡಿ ಬರಬಹುದು. ಆದರೆ ಸೂರ್ಯಾಸ್ತವನ್ನು ಸರೋವರದ ಮೇಲಿನ ನೌಕಾವಿಹಾರದಲ್ಲಿ ಕಾಣುವ ನಮ್ಮ ವ್ಯವಸ್ಥೆಯನ್ನು ತಪ್ಪಿಸಿಕೊಳ್ಳಬೇಡಿ.” ಮಂಗಳೂರಿನ ನಾವು ಮೂವರು ಊಟದ ಬೆನ್ನಿಗಿದ್ದ ‘ವಿಶ್ರಾಂತಿ’ ಪದ ಹೊಡೆದು ಹಾಕಿ, ಮೊದಲಿಗರಾಗಿ “ಹವಾಮಹಲ್ ಚಲೋ” ಎಂದಿದ್ದೆವು. (ನಿಧಾನಕ್ಕೆ ಇನ್ನೂ ಹಲವರು ಹಿಂಬಾಲಿಸುತ್ತಲೇ ಇದ್ದರು) ವನ್ಯ ಕಛೇರಿಯ ಹಿಂದಿನ ಕಚ್ಚಾ ಮಾರ್ಗ ನೂರು ಮೀಟರಿನಲ್ಲೇ ಎರಡಾಗುತ್ತದೆ. ಸರೋವರದ ದಂಡೆಯನ್ನೇ ಅನುಸರಿಸಿದ ಎಡದ ಮಾರ್ಗ ಸುಮಾರು ಎರಡೂವರೆ ಕಿಮೀ ಬಳಸಂಬಟ್ಟೆಯಲ್ಲಿ ಇನ್ನೊಂದೇ ದಂಡೆಯ, ಪುಟ್ಟ ಗುಡ್ಡೆಯ ನೆತ್ತಿಯಲ್ಲಿ ತೋರುತ್ತಿದ್ದ ರಾಣೀ ಮಹಲಿನತ್ತ ಹೋಗುವುದಿತ್ತು. ಅದು ಬಹುತೇಕ ಮಟ್ಟಸ ಮಾರ್ಗವೇ ಇದ್ದಿರಬೇಕು. ಅದನ್ನೂ ನೋಡುವ ಕುತೂಹಲವೇನೋ ನಮಗಿತ್ತು. ಆದರೆ ಸಮಯದ ಮಹತ್ವ ಮರೆಯದೆ, ಬಲದ ಕಾಂಕ್ರೀಟ್ ಕಾಲುದಾರಿ (ಅಲ್ಲಲ್ಲಿ ಮೆಟ್ಟಿಲುಗಳೂ ಇವೆ) ಅನುಸರಿಸಿದೆವು.

ಎರಡೇ ಎಡಬಲ ತಿರುವಿನಲ್ಲಿ ಆದರೆ ತೀರಾ ಕಡಿದಾದ ಏರು ಮುಗಿಸಿ, ಶಿಖರ ಸೇರಿದೆವು. ಅರಮನೆ ಪ್ರಾಚ್ಯ ಇಲಾಖೆಯದ್ದಾದರೂ ಜೈಸಮಂಡ್ ವನ್ಯ ವಿಭಾಗದ ಉಸ್ತುವಾರಿಯಲ್ಲಿದೆ. ಇಲಾಖೆಯ ನೌಕರನೊಬ್ಬ ನಮ್ಮೊಡನೇ ಮೇಲೆ ಬಂದು, ಬಾಗಿಲುಗಳನ್ನು ತೆರೆದು, ಮಾರ್ಗ ತೋರಿ, ವೀಕ್ಷಣೆಗೆ ಅನುಕೂಲನಾದ. ಹಳೆಗಾಲದ ದೃಢ ರಚನೆಗಳ ಮೇಲೆ ಹೊಸಗಾಲದ ‘ಜೀರ್ಣೋದ್ಧಾರ’ ನಡೆದಂತಿತ್ತು. ಕೆಲಸದ ಗುಣಮಟ್ಟ ಕಳಪೆಯಾಗಿತ್ತು. ಕಳಚಿಬಿದ್ದ ಒಂದು ಸೆಜ್ಜ, ಮುಕ್ಕಾದ ಸಾರಣೆ, ದೂಳು, ಬಾವಲಿ ಹಿಕ್ಕೆ, ಹೊರ ಅಂಚುಗಳಲ್ಲಿ ಹೆಜ್ಜೇನ ಬಿಡಾರ ಬಿಟ್ಟರೆ ಎಲ್ಲ ಕೇವಲ ಗೋಡೆ, ಮಾಡು, ಒಂದೆರಡೇ ಒಡ್ಡೊಡ್ಡು ಬಾಗಿಲು ಮತ್ತು ಕೆಲವೇ ಹರಕು ಕಿಟಕಿಪಡಿ. ಆ ಎತ್ತರ, ಸರೋವರ ಮತ್ತು ಬೆಟ್ಟ ಸಾಲಿನ ದೃಶ್ಯ, ಗಾಳಿ ಬೆಳಕಿಗೆ ಮುಕ್ತವಾದ ಮಹಲಿನ ರಚನೆ ಮೋಹಕವಾಗಿತ್ತು. ಇದರ ನಿರ್ಮಾತೃ ಜೈಪುರದ ಮಹಾರಾಣಾ ಜೈಸಿಂಗ್, ಒಂದು ಕಾಲದಲ್ಲಿ ಬ್ರಿಟಿಷರಿಗೆ ತಲೆಬಾಗಿ, ರಜಪೂತರ ಹೆಮ್ಮೆಗೆ ಭಂಗ ತಂದನೆಂಬ ಅಪಖ್ಯಾತಿಗೀಡಾದ. ಮಾನಧನನಾದ ಅರಸ, ಪದವಿಯನ್ನು ಉತ್ತರಾಧಿಕಾರಿಗೆ ಒಪ್ಪಿಸಿ, ಶೇಷಾಯುಷ್ಯವನ್ನು ಜೈಸಮಂಡ್ ವಲಯದಲ್ಲೇ ಕಳೆದನೆಂದು ಇತಿಹಾಸದ ಪುಟಗಳಲ್ಲಿ ಕಂಡಿದ್ದೆ. ಕಾಲದ ಪರದೆ ಸಂದ ಸಂಭ್ರಮ, ವಿಷಾದಗಳನ್ನು ಮರೆಸಿ, ಹೊಸದೇ ಬಣ್ಣ ತರುವುದು ತಪ್ಪೇನಲ್ಲ. “ಜೈಸಿಂಗ್ ರಾಣಿಗೆ ಪ್ರತ್ಯೇಕ ಮಹಲು ಕೊಟ್ಟು, ಎರಡೂವರೆ ಕಿಮೀ ದೂರಕ್ಕೆ ಯಾಕಿಟ್ಟಾ” ಎಂದು ತಮಾಷೆ ಮಾಡಿದೆವು. ಶೌಚಕ್ಕೆಂದು ಮಹಡಿಯಲ್ಲಿ ದೊಡ್ಡ ಕೋಣೆ, ತಳದಲ್ಲಿ ಅದರ ಸಂಗ್ರಹಕ್ಕೂ ಅಷ್ಟೇ ದೊಡ್ಡ ವ್ಯವಸ್ಥೆ ಎಲ್ಲ ಮಾಡಿಸಿದವರು, ಒಂದೇ ಅಂಕಣದಲ್ಲಿ, ಅಂತಃಪಟವಿಲ್ಲದ ಮೂರು ಶೌಚಾಸನ ಯಾಕೆ ಮಾಡಿಸಿದನೆಂಬ ಜಿಜ್ಞಾಸೆಯೂ ಮೂಡದಿರಲಿಲ್ಲ. “ಒಟ್ಟಿಗೇ ಬಾಳೋಣ, ಒಂದಾಗಿ ಉಣ್ಣೋಣ, ಒಗ್ಗಟ್ಟಿನಲ್ಲಿ ದುಡಿಯೋಣ” (ಸಹನಾವವತು, ಸಹನೌ ಭುನಕ್ತು….) ಎಂಬ ಆಶಯ ಸರಣಿಗೆ ನಾಲ್ಕನೆಯ ಸೇರ್ಪಡೆ ಜೈಸಿಂಗ್ ಕಂಡಿದ್ದಾನೆ ಎಂದೂ ನಗುತ್ತ ಮರಳಿದೆವು.

ಸೂರ್ಯಾಸ್ತವನ್ನು ಮೋಟಾರ್ ಬೋಟಿನ ದೀರ್ಘ ಓಟದಲ್ಲಿ ಅನುಭವಿಸಿದೆವು. ಅಪ್ರದಕ್ಷಿಣಾ ವಿಧಿಯಲ್ಲಿ ತಾರಾ ಹೋಟೆಲಿದ್ದ ದೊಡ್ಡ ದ್ವೀಪವೊಂದನ್ನು ಸಮೀಪದಿಂದ ನೋಡಿದ್ದು ಬಿಟ್ಟರೆ, ಉಳಿದ ದೃಶ್ಯಗಳು ಕಡಲೂರಿನ ನಮಗೆ ವಿಶೇಷವೆನ್ನಿಸಲಿಲ್ಲ. ಕತ್ತಲಾಗುತ್ತಿದ್ದಂತೆ ಉದ್ಯಾನವನದ ರಂಗಸ್ಥಳ ಝಗಮಗಿಸಿ, ಮೈಕಿನಬ್ಬರದಲ್ಲಿ ನಮ್ಮ ಗಮನವನ್ನು ಸೆಳೆಯಿತು. ವಿಶೇಷವಾಗಿ ಕರೆಸಿಕೊಂಡಿದ್ದ ಜನಪದ ಮೇಳವೊಂದು ತನ್ನ ಹಾಡು, ನರ್ತನ ಮತ್ತು ಸಣ್ಣಪುಟ್ಟ ಚಮತ್ಕಾರಿಕ ಆಟಗಳಿಂದ ಕೆಲ ಹೊತ್ತುಗಳೆಯಿತು. ಲಕ್ಷದ್ವೀಪ ಪ್ರವಾಸದ ಕಾಲದಿಂದಲೇ ನನಗೆ ಪ್ಯಾಕೇಜ್ ಪ್ರವಾಸದ ದಟ್ಟ ವಾಣಿಜ್ಯ ವಾಸನೆ ಹಿಡಿಸುವುದಿಲ್ಲ. ನಮ್ಮದೋ ವನ್ಯಾಸಕ್ತಿಯ ಸಣ್ಣ ಪ್ರೇಕ್ಷಾ ಬಳಗ. ಭಾರೀ ವೇದಿಕೆ, ದೊಡ್ಡ ಮೈಕಿನ ಧಾಂ ಧೂಂ ಬಿಟ್ಟು ಹೆಚ್ಚು ಆಪ್ತ ಕಲಾಪಗಳನ್ನು ಸಂಯೋಜಿಸಬಹುದಿತ್ತು ಎಂದೇ ನನಗನ್ನಿಸಿತು. ತುಸು ಚಳಿ ಏರುತ್ತಿದ್ದಂತೆ, ಊಟದ ಶಾಸ್ತ್ರ ಮುಗಿಸಿಕೊಂಡು, ಗುಡಾರ ಸೇರಿದೆವು. ಬೆಚ್ಚಗಿದ್ದ ಗುಡಾರದ ಒಳಗೆ ಮತ್ತಷ್ಟು ಬಿಸಿ, ಮೆತ್ತಗಿನ ಮಲಗುಚೀಲ, ಗಾಳಿದಿಂಬು ಸಿಕ್ಕ ಮೇಲೆ ಕೇಳಬೇಕೇ. ಮರುದಿನದ ಶತೋತ್ತರ ಕಿಮೀ ದೀರ್ಘ ಓಟಕ್ಕೆ ಶಕ್ತಿ ಸಂಚಯಿಸುವವರಂತೆ ನಿದ್ರೆ ಮಾಡಿದೆವು.

ನೂರು ಕಿಲೋಮೀಟರ್ ಗುರಿಯಲ್ಲಿ

ಅರ್ಜಿಗಳು ಬಂದ ಕ್ರಮದಲ್ಲೇ ಇಬ್ಬಿಬ್ಬರಿಗೆ ಒಂದೊಂದು ಗುಡಾರ ಹಂಚಿದಾಗ ಅನಿಲ್ ಮತ್ತು ಹರಿ ಒಂದಕ್ಕೆ ಸೇರಿಹೋದರೆ, ನನಗೆ ಸಿಕ್ಕವರು ರಮೇಶ್ ದಶೋರಾ. ಉದಯಪುರದಲ್ಲೇ ಸಣ್ಣ ಪ್ರವಾಸೋದ್ದಿಮೆ ನಡೆಸಿರುವ ನಡು ಹರಯದ ರಮೇಶ್, ಮೊದಲು ವಿಶೇಷ ಸೈಕಲ್ ಬಿಟ್ಟವರಲ್ಲ. ಆದರೆ ‘ಕಾಡಿಗೆ ಪೆಡಲಿ’ ವಿವರ ತಿಳಿದಾಗ ನಿರ್ಯೋಚನೆಯಿಂದ ಹೆಚ್ಚಿನ ಕಸರತ್ತಿಗೆ ರಂಗಕ್ಕೆ ಧುಮುಕಿದ್ದರಂತೆ. ಸುಮಾರು ಎರಡು ವಾರಗಳ ಹಿಂದೆ, ಅರ್ಜಿ ಗುಜರಾಯಿಸಿ, ಸೇರ್ಪಡೆಗೆ ಒತ್ತಾಯಿಸಿದ್ದರಂತೆ. ಜತೆಗೇ ಹೊಸದಾಗಿ ಸಾದಾ ಸೈಕಲ್ಲೊಂದನ್ನು ಕೊಂಡು, ನಿತ್ಯ ಅಭ್ಯಾಸ ಗಟ್ಟಿಯಾಗಿಯೇ ಮಾಡಿದರಂತೆ. ಬಾಗ್ಡೋರಾದಲ್ಲಿ ಮೊದಲ ಬಾರಿಗೆ ಗೇರ್ ಸೈಕಲ್, ಅದರಲ್ಲೂ ಪರ್ವತಾರೋಹಿ ಮಾದರಿಯದ್ದನ್ನು (ಎಂಟೀಬೀ) ಏರಿದ್ದರು. ಧೈರ್ಯಂ ಸೈಕಲ್ ಸಾಧನಂ ಎಂದೇ ಜಪಿಸುತ್ತ, ಯಾರಿಂದಲೋ ಗೇರ್ ಬಳಕೆಯನ್ನು ಕಲಿಯುತ್ತ, ಮೊದಲ ೪೮ ಕಿಮೀ – ಜೈಸಮಂಡ್, ಓಟವನ್ನು ನಗಣ್ಯ ಮಾಡಿಬಿಟ್ಟಿದ್ದರು. ದೀರ್ಘದೇಹಿ, ಮೃದುವಚನಿ, ನನಗೆ ಮುಜುಗರವಾಗುವಷ್ಟು ವಿನಯಿ! (ಅತಿ ವಿನಯಂ…?)

“ಐದು ಗಂಟೆಗೆ ಚಾ, ಆರಕ್ಕೆ ಉಪಾಹಾರ, ಏಳಕ್ಕಾದರೂ ದಾರಿಯಲ್ಲಿರಬೇಕು, ನೂರು ಕಿಮೀ ದಾರಿ ಸೀತಾಮಾತೆಗೆ” (ಸೀತಾಮಾತ ವನಧಾಮ) ಎಂದು ಹಿಂದಿನ ರಾತ್ರಿ ಕುಶಾಲ್ ಮತ್ತೆ ಎಚ್ಚರಿಸಿದ್ದರು. ಹಾಗೇ ಅವರು ಐದಕ್ಕೇ ಎಲ್ಲರ ನಿದ್ರೆಯನ್ನೇನೋ ಕೆಡಿಸಿದ್ದರು. ಆದರೆ ತಂಡದ ನಿಧಾನಕ್ಕೆ, ಅಡುಗೆಯವರ ಆರಾಮ್ ಸೇರಿ, ಸೈಕಲ್ಲುಗಳು ದಾರಿಗಿಳಿಯುವಾಗ ಗಂಟೆ ಎಂಟೂವರೆಯಾಗಿತ್ತು. ವ್ಯಾನಿನಲ್ಲಿ ಬಂದಿದ್ದ ಸೈಕಲ್ ಪರಿಣತ ಹಿಂದಿನ ದಿನವೇ ಎಲ್ಲರ ಸೈಕಲ್ಲುಗಳ ವಿಶೇಷ ಸಮಸ್ಯೆಗಳ ಪಟ್ಟಿ ಮಾಡಿಕೊಂಡಿದ್ದ. ನಾವು ಬೆಟ್ಟ, ದೋಣಿ ಎಂದು ವಿಹಾರದಲ್ಲಿದ್ದಾಗ, ಕೊರತೆಗಳನ್ನು ಸಾಕಷ್ಟು ನೇರ್ಪುಗೊಳಿಸಿದ್ದ. ಮತ್ತೆ ತಂದಿದ್ದ ಪುಟ್ಟ ಪವರ್ ಜೆಟ್ಟಿನಿಂದ ಎಲ್ಲಕ್ಕೂ ಮಜ್ಜನ, ಎಣ್ಣೆ ಭಾಗ್ಯ ಕರುಣಿಸಿದ್ದ. ಇದು ಒಟ್ಟಾರೆ ಸವಾರರಿಗೆ ಹೊಸ ಹುಮ್ಮಸ್ಸನ್ನು ತಂದಿತ್ತು.

ನನಗೆ ಸಿಕ್ಕ ಸೈಕಲ್ಲಿನ ಎರಡು ಕಿರುಕುಳ, ಕೊನೆಯವರೆಗೂ ನಿವಾರಿಸಲು ಆಗಲೇ ಇಲ್ಲ. ಮೊದಲನೇದಾಗಿ, ಮುಂದಿನ ಗೇರ್ ಶಿಫ್ಟರ್ ಭಾರೀ ಬಿಗಿಯಿತ್ತು. ‘ವೈದ್ಯ’ ಹೇಳಿದ, “ಶಿಫ್ಟರ್ರೇ ಹೊಸತಾಗಬೇಕು. ಆದರೆ ಸಂಚಾರಿ ವೈದ್ಯಶಾಲೆಯಲ್ಲಿ ಮೇಜರ್ ಸರ್ಜರಿಗೆ ಅವಕಾಶವಿಲ್ಲ”! ಏರು ದಾರಿ ಬರುವಾಗ ಎರಡಕ್ಕೋ ಒಂದಕ್ಕೋ ಗೇರ್ ಇಳಿಸುವುದು ಸುಲಭವಿತ್ತು. ಅದೇ ಹಿಂಬರಲು ಮಾತ್ರ ಸೆಟೆದುಕೊಳ್ಳುತ್ತಿತ್ತು. ನಿರಂತರ ಏರಿಳಿತಗಳ ಓಟದಲ್ಲೆಲ್ಲ ನಾನು ಎರಡು, ಒಂದರಲ್ಲೇ ಸುಧಾರಿಸಿಕೊಂಡೆ. ದೀರ್ಘ ಸಮತಟ್ಟಿನ ಓಟ ಬಂದಾಗ ಮಾತ್ರ, ಪೂರ್ಣ ಅಂಗೈಬಲ ಹಾಕಿ, ಬಲು ಎಚ್ಚರದಿಂದ ಮೂರನೇ ಗೇರಿಗೆ ಏರಿಸಿಕೊಳ್ಳುತ್ತಿದ್ದೆ. ಅದೃಷ್ಟಕ್ಕೆ ಶಿಪ್ಟರ್ ಮುರಿದೋ, ತಂತಿ ಕಡಿದೋ ನನ್ನ ಸವಾರಿಗೆ ಕುತ್ತು ಬರಲಿಲ್ಲ. ಮತ್ತಿನದು, ಸೈಕಲ್ ಸೀಟ್. ಇವನ್ನು ಸವಾರರು ವೈಯಕ್ತಿಕ ಎತ್ತರಕ್ಕೆ ತಕ್ಕಂತೆ ಹೊಂದಿಸಿಕೊಳ್ಳಲೇಬೇಕು. ಅದು ತಗ್ಗಿದರೆ ಪೆಡಲಿಕೆಯಲ್ಲಿ ಸೊಂಟದ ಒತ್ತಡ ತಪ್ಪಿ, ಮೊಣಕಾಲ ಬಲ ಹೆಚ್ಚಿ, ಅನಾವಶ್ಯಕ ಬಳಲುತ್ತೇವೆ. ಅದು ಹೆಚ್ಚು ಎತ್ತರವಾದರೆ ತುದಿಗಾಲಿನ ಪೆಡಲಿಕೆಯಲ್ಲಿ, ನಮ್ಮ ಮೀನಖಂಡವೇ ಸೆಟೆಯುತ್ತದೆ. ನನ್ನ ಸೈಕಲ್ಲಿನ ಸೀಟ್ ಕೊಳವೆ ಸವೆದುಹೋಗಿ, ಬಿಗಿ ನಿಲ್ಲುತ್ತಲೇ ಇರಲಿಲ್ಲ. ಮೊದಲ ದಿನ ೨೦-೩೦ ಕಿಮೀ ಸಾಗಿದ್ದಂತೆ, ಎಡ ಮೊಣಕಾಲಿನಲ್ಲಿ ಸಣ್ಣ ನೋವು ಕಾಣಿಸಿದಾಗ, ಎಲ್ಲೋ ಕಂಕನಾಡಿ ಆಘಾತದ ಪರಿಣಾಮ ಎಂದೇ ಸುಮಾರು ದೂರ ಸುಧಾರಿಸಿಕೊಂಡೆ. ನಿಜ ಸಮಸ್ಯೆ ತಿಳಿದ ಮೇಲೆ ಮೆಕ್ಯಾನಿಕ್ ಸಂಪರ್ಕಿಸಿದೆ. ಇದಕ್ಕೂ “ಸುಧಾರಿಸಿಕೊಳ್ಳಿ” ಮಂತ್ರ! ಮೂರೂ ದಿನ, ನಿಂತಲ್ಲೆಲ್ಲ ನನ್ನದು ಸೀಟ್ ಹೊಂದಾಣಿಕೆ! (೨೦೧೯ರ ಚುನಾವಣೆ ಸಮೀಪಿಸುತ್ತಿರುವುದಕ್ಕೂ ಇದಕ್ಕೂ ರಾಜಕೀಯ ಪಕ್ಷಗಳು ಸಂಬಂಧ ಕಲ್ಪಿಸಬಾರದು!) ಕೆಲವರ ಸೈಕಲ್ಲುಗಳಿಗೆ ಮಾಮೂಲಿ ಬೆಲ್ ಇದ್ದರೆ, ನನ್ನ ಸೈಕಲ್ಲಿಗೆ ಮಾತ್ರ ಒಂದು ಪುಟ್ಟ ರಬ್ಬರ್ ಹಾರ್ನ್ ಇತ್ತು. ನಮ್ಮೂರಲ್ಲಿ ಮೀನು ಮಾರುವ ಬ್ಯಾರಿಗಳು ಪಿಂಯ್ಯಂ ಪಿಂಯ್ಯಾ ಹಾರ್ನ್ ಕಟ್ಟಿಕೊಳ್ಳುವುದು ಕಂಡಿದ್ದೆ. ಇಲ್ಲಿ ನಾನದನ್ನು ಕೇವಲ ತಮಾಷೆಗೆ, ಧಾರಾಳ ಬಳಸಿಕೊಂಡೆ.

ಮೇಜರ್ ಇರ್ಷಾದ್ ಖಾನ್ ಮತ್ತು ಆತನ ಪತ್ನಿ ಸಬೀಹಾ ರಿಜ್ವಿ – ತಂಡದ ಏಕೈಕ ದಂಪತಿ. ಇವರು ಮೂರೂ ದಿನ ಬಹಳ ಪಟ್ಟು ಹಿಡಿದು, ಬಹುತೇಕ ಜೊತೆಯಲ್ಲೇ ಪೆಡಲುತ್ತಿದ್ದರು. ಮೇಲಾಟ, ಸೋಲಾಟದಲ್ಲಿ ನಡುವೆ ಸಿಕ್ಕುವ ಇತರ ಸವಾರರನ್ನು ಮೀರಿ, ಜೋಡಿ ಉಳಿಯುವಲ್ಲಿ, ಹೆಚ್ಚು ಶಕ್ತ ಪೆಡಲಿಗ ಇರ್ಷಾದ್ ಕೊಡುಗೆ ಜಾಸ್ತಿ. ಕುತ್ತೇರುಗಳಲ್ಲಿ ಸಬೀಹಾ ಹಿಂದುಳಿದಾಗ, ಅಸಾಧ್ಯ ಎನ್ನಿಸಿ ಇಳಿದು ನೂಕತೊಡಗಿದಾಗ ಇರ್ಷಾದ್ ಕೂಡಾ ನಿಂತೋ ಇಳಿದೋ ಅನುಸರಿಸಿದರು. ಆಕಸ್ಮಿಕಗಳಲ್ಲಿ ಆಕೆ ಮುಂದೋಡುವಂತಾದರೆ ಇರ್ಷಾದ್ ಸೀಟಿಂದೆದ್ದು ತುಳಿದು ಬೆನ್ನು ಹಿಡಿಯುತ್ತಿದ್ದರು. ಒಂದು ಭಾರೀ ಏರಿನಲ್ಲಿ ಇರ್ಷಾದ್ ಸರಪಳಿ ಕೈಕೊಟ್ಟರೂ ‘ಸಂಚಾರಿ ವೈದ್ಯ’ ಬಹು ಬೇಗನೆ ಚಿಕಿತ್ಸೆ ಕೊಟ್ಟು ‘ಓಟದ ದಾಂಪತ್ಯ’ವನ್ನು ಸುಗಮಗೊಳಿಸಿದ್ದರು! ಯಾನದ ಸಮಾರೋಪದ ದಿನವೇ ಸಬೀಹಾರ ಜನ್ಮದಿನದ ಆಕಸ್ಮಿಕ ಬರುವುದನ್ನು ಸಂಘಟಕರು ಮೌನವಾಗಿ ಗುರುತಿಸಿಟ್ಟುಕೊಂಡು, ಸಭೆಯಲ್ಲಿ ಅನೌಪಚಾರಿಕವಾಗಿ ಕೇಕು, ಕ್ಯಾಂಡಲ್ಲು, ಹಾಡಿನ ಸಂಭ್ರಮ ಸ್ಫೋಟಿಸಿದ್ದು ತುಂಬ ಆಪ್ತವಾಗಿತ್ತು; ಆಕೆಗೆ ಚಿರಸ್ಮರಣೀಯವೂ ಆಗಿರಬೇಕು.

ಎಲ್ಲಾ ಸ್ಪರ್ಧಾತೀತ ಸಮೂಹ ಸೈಕಲ್ ಸವಾರಿಗಳಲ್ಲೂ ನಾನು ಅನಾವಶ್ಯಕ ಮೇಲಾಟದವರನ್ನು ಸಾಕಷ್ಟು ಕಂಡಿದ್ದೇನೆ. ಇಲ್ಲೂ ಅದಕ್ಕೆ ಧಾರಾಳ ಸಾಕ್ಷಿಗಳು ಸಿಕ್ಕಿದವು. ಅಂಥವರಿಂದಾಗಿ ಪೂರ್ಣ ಹೊಸ ಪರಿಚಯಗಳಿಗೆ ತೆರೆದುಕೊಳ್ಳುವ, ಇನ್ನೂ ಮುಖ್ಯವಾಗಿ ವನ್ಯ ಉದ್ದೇಶವನ್ನು ತಿಳಿದುಕೊಳ್ಳುವ ಪ್ರಯತ್ನಗಳು ವೈಯಕ್ತಿಕವಾಗಿ ನಡೆಯಲೇ ಇಲ್ಲ. (ಇದಕ್ಕೆ ಸಾಂಸ್ಥಿಕವಾಗಿಯೂ ಅವಕಾಶ ಕಲ್ಪಿಸದೇ ಇದ್ದದ್ದು ದೊಡ್ಡ ಕೊರತೆ. ಈ ವಿಚಾರವನ್ನು ಕೊನೆಯ ಸಲಹಾಪಟ್ಟಿಯಲ್ಲಿ ತುಸು ವಿಸ್ತರಿಸುತ್ತೇನೆ.) ಪೆಡಲುವ ಕರ್ಮದಲ್ಲಿ, ಗುರಿ ಮುಟ್ಟುವುದೇ ಸಾಧನೆ ಎಂದಿದ್ದವರೇ ಹೆಚ್ಚು. ಇದರ ಅತಿರೇಕವನ್ನು ನಾನು ಒಬ್ಬನಲ್ಲಿ ಕಂಡದ್ದನ್ನಷ್ಟೇ ಹೇಳಿಬಿಡುತ್ತೇನೆ. ನೂರು ಕಿಮೀ ಸವಾರಿಯ ಕೊನೆಯ ಹಂತವನ್ನು ನಾವು ಸಮಯದ ಕೊರತೆಯಲ್ಲಿ ನಡೆಸಬೇಕಾಯ್ತು. ಆದರೆ ಅದು ಯಾವುದೇ ಒತ್ತಡಗಳ ಫಲವಾಗಬಾರದು ಎಂದೇ ಸಂಘಟಕರು ಸ್ಪಷ್ಟವಾಗಿ ಹಾರೈಸಿದ್ದರು. ಅದನ್ನು ನಿರಾಕರಿಸಿ ಬಂದೊಬ್ಬ ವ್ಯಕ್ತಿಗೆ ನಿಜದಲ್ಲಿ ಪೆಡಲಿಕೆ ಅಸಾಧ್ಯವೇ ಆಗಿತ್ತು. ಮೊದಲು ಆತ ದಾರಿಯಲ್ಲಿ ಹೋಗುತ್ತಿದ್ದ ಯಾವುದೋ ಮೋಟಾರ್ ಸೈಕಲ್ಲಿನವನನ್ನು ಒಲಿಸಿ, ಆತನ ಕೈ ಹಿಡಿದುಕೊಂಡು, ಕಿಮೀಗಟ್ಟಳೆ ಈತ ಸೈಕಲ್ಲನ್ನು ಎಳೆಸಿಕೊಂಡಿದ್ದ. ಬೈಕಿನವನ ದಾರಿ ಬೇರೆಯಾಗುವಲ್ಲಿ, ಈತ ಖಾಲಿ ಹೋಗುತ್ತಿದ್ದ ಟ್ರ್ಯಾಕ್ಟರಿಗೇ ಸೈಕಲ್ ತುಂಬಿ ಸಾಗಿದ್ದ. ಶಿಬಿರತಾಣವನ್ನು ಯಶಸ್ವೀ ಸೇರಿದವರಲ್ಲಿ ಹೆಸರಿಸಿಕೊಂಡ.

ಜೈಸಮಂಡ್ ಅಣೆಕಟ್ಟೆಯ ಎತ್ತರದಿಂದ ಝರ್ರೆಂದು ಇಳಿಸುತ್ತ ಓಡಿತ್ತು ಡ ಸಮಂಡ್ ಅಣೆಕಟ್ಟೆಯ ಮಹಾದ್ವಾರದಲ್ಲಿ ಮತ್ತೆ ಅರಣ್ಯ ಇಲಾಖೆ ಢಮ್ಮ ಢಕ್ಕದ ಗದ್ದಲ, ತಿಲಕ, ಹಾರಗಳ ಸ್ವಾಗತ ಸಜ್ಜುಗೊಳಿಸಿತ್ತು. ಭಾಗ್ದೋರಾದಲ್ಲಿ ತೊಡಗಿದ್ದ ಈ ನಾಟಕ, ಅಲ್ಲಲ್ಲಿ ಮರುಕಳಿಸಲಿದೆ ಎಂಬ ಸೂಚನೆ ನನಗೆ ಹಿಡಿಸಲಿಲ್ಲ, ನಾನು (ಇನ್ನೂ ಕೆಲವರು) ತಲೆತಪ್ಪಿಸಿಕೊಂಡೆ. “ನಾಮ ಎಂಥದ್ದೋ ಕೆಮಿಕಲ್ ಮಾರಾಯ್ರೇ, ತೊಳೆದರೆ ಸುಲಭವಾಗಿ ಹೋಗುದಿಲ್ಲ” ಎಂದು ಹರಿ ಹೇಳಿದ್ದು ನನಗೆ ಹೆಚ್ಚಿನ ಅನುಕೂಲವೇ ಆಯ್ತು. ನಿಜದಲ್ಲಿ, ಕಟ್ಟೆಯಾಚಿನ ಸುವಿಸ್ತಾರ ‘ದೇವರ ಸರೋವರ’ವನ್ನು (ನೀರ ಹರಹಿನ ಇನ್ನೊಂದು ಹೆಸರು), ತರಂಗಿಸುತ್ತ ಬಂದ ಹಿತಗಾಳಿಯ ಸಮ್ಮಾನ ನಮಗೆ ಹೆಚ್ಚು ಅಪ್ಯಾಯಮಾನವಾಗಿತ್ತು. ಎಲ್ಲರೂ ಸಾಲುಗಟ್ಟಿ ಪೆಡಲುತ್ತ, ಕಟ್ಟೆಯುದ್ದಕ್ಕೆ ಸಾಗಿದೆವು. ಮೊದಲ ವೀಕ್ಷಣಾ ಅಟ್ಟಳಿಗೆ ಸಹಿತ ಸುಂದರ ಮಂಟಪ, ಮುಂದೆ ಗುಮ್ಮಟ ಸಾಲು, ದೇವಳಗಳೆಲ್ಲ ಹಿಂದೆ ಸರಿದವು. ಎದುರಿನ ವೀರಪುರ ಬೆಟ್ಟದ ಸವಾಲುತ್ತರಿಸುವ, ಅಲ್ಲಿನ ಹವಾಮಹಲಿನ ಸೌಂದರ್ಯ ವೀಕ್ಷಿಸುವ ಬಯಕೆಗಳನ್ನು ಹುರಿಗೊಳಿಸುತ್ತ, ಅದರ ನೇರ ತಪ್ಪಲಿನ ಅರಣ್ಯ ಇಲಾಖಾ ವಠಾರ ಸೇರಿದೆವು. ಅಲ್ಲಿನ ಪ್ರಧಾನ ಕಟ್ಟಡ ಐತಿಹಾಸಿಕ ರಚನೆಯದೇ ಪರಿಷ್ಕರಣೆ. ಅದರ ಎದುರಿನ ಭಾರೀ ಆಲದ ಮರ ವಠಾರಕ್ಕೆ ಹೆಚ್ಚಿನ ಶೋಭೆ ತಂದಿತ್ತು. ಅಲ್ಲಿ ಸೈಕಲ್ಲುಗಳನ್ನು ಬಿಟ್ಟು, ಐದಾರು ಮಿನಿಟು ಗೌತಮ್ ತೋರಿಕೊಟ್ಟ ವ್ಯಾಯಾಮಗಳನ್ನು ಮಾಡಿ, ಊಟಕ್ಕೆ ಹೊರಡುವಾಗ ಗಂಟೆ ಮೂರನ್ನೇ ಸಮೀಪಿಸಿತ್ತು. ಅಣೆಕಟ್ಟೆಯ ಕೆಳಪಾತ್ರೆಯ ಉದ್ಯಾನವನದಲ್ಲಿ ನಮ್ಮ ಶಿಬಿರ ಸಜ್ಜಾಗಿತ್ತು. ಅದರ ಹುಲ್ಲ ಹಾಸಿನ ಒಂದು ಅಂಕಣದಲ್ಲಿ ಬಿಸಿಬಿಸಿ ಪಾಕವೈವಿಧ್ಯ ನಮ್ಮ ಹಸಿವು ತಣಿಸಲು ಕಾತರದಿಂದಿದ್ದರೆ, ಇನ್ನೊಂದು ಅಂಕಣದ ಶಿಸ್ತಿನ ಗುಡಾರಸಾಲು ಉತ್ತರೋತ್ತರ ವಿಶ್ರಾಂತಿ ಕೊಡಲು ಸಜ್ಜಾಗಿದ್ದವು. ಬಾಗ್ಡೊರಾದಲ್ಲಿ ವ್ಯಾನೇರಿದ್ದ ನಮ್ಮ ಹೆಚ್ಚಿನ ಹೊರೆಗಳು ಕೈಸೇರಿದ್ದವು. ಹುಲ್ಲ ಹಾಸಿನ ಬಲ ಮಗ್ಗುಲಿನ ಖಾಯಂ ಶೌಚಾಲಯಗಳು ನಮ್ಮ ದೇಹಭಾರಕ್ಕೆ ಮುಕ್ತವಿದ್ದರೆ, ಎಡ ಮಗ್ಗುಲಿನ ಬಯಲು ರಂಗಭೂಮಿ ರಾತ್ರಿಯಲ್ಲಿ ಮನೋರಂಜಿಸುವ ಆಶ್ವಾಸನೆ ನೀಡುತ್ತಿದ್ದಂತಿತ್ತು. ಇನ್ನೇನು ಗಟ್ಟಿಯುಂಡು, ಹಗುರಾಗಿ….. ಎಂದು ಯೋಚನಾಲಹರಿ ಬೆಳೆಸುವುದರೊಳಗೆ, ಕುಶಾಲ್ ತತ್ಕಾಲೀನ ಕಲಾಪ ಪಟ್ಟಿ ಘೋಷಿಸಿದರು. “ಊಟದ ಬೆನ್ನಿಗೆ, ಆಸಕ್ತರು ಬೆಟ್ಟ ಏರಿ ಹವಾಮಹಲನ್ನು ನೋಡಿ ಬರಬಹುದು. ಆದರೆ ಸೂರ್ಯಾಸ್ತವನ್ನು ಸರೋವರದ ಮೇಲಿನ ನೌಕಾವಿಹಾರದಲ್ಲಿ ಕಾಣುವ ನಮ್ಮ ವ್ಯವಸ್ಥೆಯನ್ನು ತಪ್ಪಿಸಿಕೊಳ್ಳಬೇಡಿ.”

ಮಂಗಳೂರಿನ ನಾವು ಮೂವರು ಊಟದ ಬೆನ್ನಿಗಿದ್ದ ‘ವಿಶ್ರಾಂತಿ’ ಪದ ಹೊಡೆದು ಹಾಕಿ, ಮೊದಲಿಗರಾಗಿ “ಹವಾಮಹಲ್ ಚಲೋ” ಎಂದಿದ್ದೆವು. (ನಿಧಾನಕ್ಕೆ ಇನ್ನೂ ಹಲವರು ಹಿಂಬಾಲಿಸುತ್ತಲೇ ಇದ್ದರು) ವನ್ಯ ಕಛೇರಿಯ ಹಿಂದಿನ ಕಚ್ಚಾ ಮಾರ್ಗ ನೂರು ಮೀಟರಿನಲ್ಲೇ ಎರಡಾಗುತ್ತದೆ. ಸರೋವರದ ದಂಡೆಯನ್ನೇ ಅನುಸರಿಸಿದ ಎಡದ ಮಾರ್ಗ ಸುಮಾರು ಎರಡೂವರೆ ಕಿಮೀ ಬಳಸಂಬಟ್ಟೆಯಲ್ಲಿ ಇನ್ನೊಂದೇ ದಂಡೆಯ, ಪುಟ್ಟ ಗುಡ್ಡೆಯ ನೆತ್ತಿಯಲ್ಲಿ ತೋರುತ್ತಿದ್ದ ರಾಣೀ ಮಹಲಿನತ್ತ ಹೋಗುವುದಿತ್ತು. ಅದು ಬಹುತೇಕ ಮಟ್ಟಸ ಮಾರ್ಗವೇ ಇದ್ದಿರಬೇಕು. ಅದನ್ನೂ ನೋಡುವ ಕುತೂಹಲವೇನೋ ನಮಗಿತ್ತು. ಆದರೆ ಸಮಯದ ಮಹತ್ವ ಮರೆಯದೆ, ಬಲದ ಕಾಂಕ್ರೀಟ್ ಕಾಲುದಾರಿ (ಅಲ್ಲಲ್ಲಿ ಮೆಟ್ಟಿಲುಗಳೂ ಇವೆ) ಅನುಸರಿಸಿದೆವು.

ಎರಡೇ ಎಡಬಲ ತಿರುವಿನಲ್ಲಿ ಆದರೆ ತೀರಾ ಕಡಿದಾದ ಏರು ಮುಗಿಸಿ, ಶಿಖರ ಸೇರಿದೆವು. ಅರಮನೆ ಪ್ರಾಚ್ಯ ಇಲಾಖೆಯದ್ದಾದರೂ ಜೈಸಮಂಡ್ ವನ್ಯ ವಿಭಾಗದ ಉಸ್ತುವಾರಿಯಲ್ಲಿದೆ. ಇಲಾಖೆಯ ನೌಕರನೊಬ್ಬ ನಮ್ಮೊಡನೇ ಮೇಲೆ ಬಂದು, ಬಾಗಿಲುಗಳನ್ನು ತೆರೆದು, ಮಾರ್ಗ ತೋರಿ, ವೀಕ್ಷಣೆಗೆ ಅನುಕೂಲನಾದ. ಹಳೆಗಾಲದ ದೃಢ ರಚನೆಗಳ ಮೇಲೆ ಹೊಸಗಾಲದ ‘ಜೀರ್ಣೋದ್ಧಾರ’ ನಡೆದಂತಿತ್ತು. ಕೆಲಸದ ಗುಣಮಟ್ಟ ಕಳಪೆಯಾಗಿತ್ತು. ಕಳಚಿಬಿದ್ದ ಒಂದು ಸೆಜ್ಜ, ಮುಕ್ಕಾದ ಸಾರಣೆ, ದೂಳು, ಬಾವಲಿ ಹಿಕ್ಕೆ, ಹೊರ ಅಂಚುಗಳಲ್ಲಿ ಹೆಜ್ಜೇನ ಬಿಡಾರ ಬಿಟ್ಟರೆ ಎಲ್ಲ ಕೇವಲ ಗೋಡೆ, ಮಾಡು, ಒಂದೆರಡೇ ಒಡ್ಡೊಡ್ಡು ಬಾಗಿಲು ಮತ್ತು ಕೆಲವೇ ಹರಕು ಕಿಟಕಿಪಡಿ. ಆ ಎತ್ತರ, ಸರೋವರ ಮತ್ತು ಬೆಟ್ಟ ಸಾಲಿನ ದೃಶ್ಯ, ಗಾಳಿ ಬೆಳಕಿಗೆ ಮುಕ್ತವಾದ ಮಹಲಿನ ರಚನೆ ಮೋಹಕವಾಗಿತ್ತು. ಇದರ ನಿರ್ಮಾತೃ ಜೈಪುರದ ಮಹಾರಾಣಾ ಜೈಸಿಂಗ್, ಒಂದು ಕಾಲದಲ್ಲಿ ಬ್ರಿಟಿಷರಿಗೆ ತಲೆಬಾಗಿ, ರಜಪೂತರ ಹೆಮ್ಮೆಗೆ ಭಂಗ ತಂದನೆಂಬ ಅಪಖ್ಯಾತಿಗೀಡಾದ. ಮಾನಧನನಾದ ಅರಸ, ಪದವಿಯನ್ನು ಉತ್ತರಾಧಿಕಾರಿಗೆ ಒಪ್ಪಿಸಿ, ಶೇಷಾಯುಷ್ಯವನ್ನು ಜೈಸಮಂಡ್ ವಲಯದಲ್ಲೇ ಕಳೆದನೆಂದು ಇತಿಹಾಸದ ಪುಟಗಳಲ್ಲಿ ಕಂಡಿದ್ದೆ. ಕಾಲದ ಪರದೆ ಸಂದ ಸಂಭ್ರಮ, ವಿಷಾದಗಳನ್ನು ಮರೆಸಿ, ಹೊಸದೇ ಬಣ್ಣ ತರುವುದು ತಪ್ಪೇನಲ್ಲ. “ಜೈಸಿಂಗ್ ರಾಣಿಗೆ ಪ್ರತ್ಯೇಕ ಮಹಲು ಕೊಟ್ಟು, ಎರಡೂವರೆ ಕಿಮೀ ದೂರಕ್ಕೆ ಯಾಕಿಟ್ಟಾ” ಎಂದು ತಮಾಷೆ ಮಾಡಿದೆವು. ಶೌಚಕ್ಕೆಂದು ಮಹಡಿಯಲ್ಲಿ ದೊಡ್ಡ ಕೋಣೆ, ತಳದಲ್ಲಿ ಅದರ ಸಂಗ್ರಹಕ್ಕೂ ಅಷ್ಟೇ ದೊಡ್ಡ ವ್ಯವಸ್ಥೆ ಎಲ್ಲ ಮಾಡಿಸಿದವರು, ಒಂದೇ ಅಂಕಣದಲ್ಲಿ, ಅಂತಃಪಟವಿಲ್ಲದ ಮೂರು ಶೌಚಾಸನ ಯಾಕೆ ಮಾಡಿಸಿದನೆಂಬ ಜಿಜ್ಞಾಸೆಯೂ ಮೂಡದಿರಲಿಲ್ಲ. “ಒಟ್ಟಿಗೇ ಬಾಳೋಣ, ಒಂದಾಗಿ ಉಣ್ಣೋಣ, ಒಗ್ಗಟ್ಟಿನಲ್ಲಿ ದುಡಿಯೋಣ” (ಸಹನಾವವತು, ಸಹನೌ ಭುನಕ್ತು….) ಎಂಬ ಆಶಯ ಸರಣಿಗೆ ನಾಲ್ಕನೆಯ ಸೇರ್ಪಡೆ ಜೈಸಿಂಗ್ ಕಂಡಿದ್ದಾನೆ ಎಂದೂ ನಗುತ್ತ ಮರಳಿದೆವು.

ಸೂರ್ಯಾಸ್ತವನ್ನು ಮೋಟಾರ್ ಬೋಟಿನ ದೀರ್ಘ ಓಟದಲ್ಲಿ ಅನುಭವಿಸಿದೆವು. ಅಪ್ರದಕ್ಷಿಣಾ ವಿಧಿಯಲ್ಲಿ ತಾರಾ ಹೋಟೆಲಿದ್ದ ದೊಡ್ಡ ದ್ವೀಪವೊಂದನ್ನು ಸಮೀಪದಿಂದ ನೋಡಿದ್ದು ಬಿಟ್ಟರೆ, ಉಳಿದ ದೃಶ್ಯಗಳು ಕಡಲೂರಿನ ನಮಗೆ ವಿಶೇಷವೆನ್ನಿಸಲಿಲ್ಲ. ಕತ್ತಲಾಗುತ್ತಿದ್ದಂತೆ ಉದ್ಯಾನವನದ ರಂಗಸ್ಥಳ ಝಗಮಗಿಸಿ, ಮೈಕಿನಬ್ಬರದಲ್ಲಿ ನಮ್ಮ ಗಮನವನ್ನು ಸೆಳೆಯಿತು. ವಿಶೇಷವಾಗಿ ಕರೆಸಿಕೊಂಡಿದ್ದ ಜನಪದ ಮೇಳವೊಂದು ತನ್ನ ಹಾಡು, ನರ್ತನ ಮತ್ತು ಸಣ್ಣಪುಟ್ಟ ಚಮತ್ಕಾರಿಕ ಆಟಗಳಿಂದ ಕೆಲ ಹೊತ್ತುಗಳೆಯಿತು. ಲಕ್ಷದ್ವೀಪ ಪ್ರವಾಸದ ಕಾಲದಿಂದಲೇ ನನಗೆ ಪ್ಯಾಕೇಜ್ ಪ್ರವಾಸದ ದಟ್ಟ ವಾಣಿಜ್ಯ ವಾಸನೆ ಹಿಡಿಸುವುದಿಲ್ಲ. ನಮ್ಮದೋ ವನ್ಯಾಸಕ್ತಿಯ ಸಣ್ಣ ಪ್ರೇಕ್ಷಾ ಬಳಗ. ಭಾರೀ ವೇದಿಕೆ, ದೊಡ್ಡ ಮೈಕಿನ ಧಾಂ ಧೂಂ ಬಿಟ್ಟು ಹೆಚ್ಚು ಆಪ್ತ ಕಲಾಪಗಳನ್ನು ಸಂಯೋಜಿಸಬಹುದಿತ್ತು ಎಂದೇ ನನಗನ್ನಿಸಿತು. ತುಸು ಚಳಿ ಏರುತ್ತಿದ್ದಂತೆ, ಊಟದ ಶಾಸ್ತ್ರ ಮುಗಿಸಿಕೊಂಡು, ಗುಡಾರ ಸೇರಿದೆವು. ಬೆಚ್ಚಗಿದ್ದ ಗುಡಾರದ ಒಳಗೆ ಮತ್ತಷ್ಟು ಬಿಸಿ, ಮೆತ್ತಗಿನ ಮಲಗುಚೀಲ, ಗಾಳಿದಿಂಬು ಸಿಕ್ಕ ಮೇಲೆ ಕೇಳಬೇಕೇ. ಮರುದಿನದ ಶತೋತ್ತರ ಕಿಮೀ ದೀರ್ಘ ಓಟಕ್ಕೆ ಶಕ್ತಿ ಸಂಚಯಿಸುವವರಂತೆ ನಿದ್ರೆ ಮಾಡಿದೆವು.

ನೂರು ಕಿಲೋಮೀಟರ್ ಗುರಿಯಲ್ಲಿ ಅರ್ಜಿಗಳು ಬಂದ ಕ್ರಮದಲ್ಲೇ ಇಬ್ಬಿಬ್ಬರಿಗೆ ಒಂದೊಂದು ಗುಡಾರ ಹಂಚಿದಾಗ ಅನಿಲ್ ಮತ್ತು ಹರಿ ಒಂದಕ್ಕೆ ಸೇರಿಹೋದರೆ, ನನಗೆ ಸಿಕ್ಕವರು ರಮೇಶ್ ದಶೋರಾ. ಉದಯಪುರದಲ್ಲೇ ಸಣ್ಣ ಪ್ರವಾಸೋದ್ದಿಮೆ ನಡೆಸಿರುವ ನಡು ಹರಯದ ರಮೇಶ್, ಮೊದಲು ವಿಶೇಷ ಸೈಕಲ್ ಬಿಟ್ಟವರಲ್ಲ. ಆದರೆ ‘ಕಾಡಿಗೆ ಪೆಡಲಿ’ ವಿವರ ತಿಳಿದಾಗ ನಿರ್ಯೋಚನೆಯಿಂದ ಹೆಚ್ಚಿನ ಕಸರತ್ತಿಗೆ ರಂಗಕ್ಕೆ ಧುಮುಕಿದ್ದರಂತೆ. ಸುಮಾರು ಎರಡು ವಾರಗಳ ಹಿಂದೆ, ಅರ್ಜಿ ಗುಜರಾಯಿಸಿ, ಸೇರ್ಪಡೆಗೆ ಒತ್ತಾಯಿಸಿದ್ದರಂತೆ. ಜತೆಗೇ ಹೊಸದಾಗಿ ಸಾದಾ ಸೈಕಲ್ಲೊಂದನ್ನು ಕೊಂಡು, ನಿತ್ಯ ಅಭ್ಯಾಸ ಗಟ್ಟಿಯಾಗಿಯೇ ಮಾಡಿದರಂತೆ. ಬಾಗ್ಡೋರಾದಲ್ಲಿ ಮೊದಲ ಬಾರಿಗೆ ಗೇರ್ ಸೈಕಲ್, ಅದರಲ್ಲೂ ಪರ್ವತಾರೋಹಿ ಮಾದರಿಯದ್ದನ್ನು (ಎಂಟೀಬೀ) ಏರಿದ್ದರು. ಧೈರ್ಯಂ ಸೈಕಲ್ ಸಾಧನಂ ಎಂದೇ ಜಪಿಸುತ್ತ, ಯಾರಿಂದಲೋ ಗೇರ್ ಬಳಕೆಯನ್ನು ಕಲಿಯುತ್ತ, ಮೊದಲ ೪೮ ಕಿಮೀ – ಜೈಸಮಂಡ್, ಓಟವನ್ನು ನಗಣ್ಯ ಮಾಡಿಬಿಟ್ಟಿದ್ದರು. ದೀರ್ಘದೇಹಿ, ಮೃದುವಚನಿ, ನನಗೆ ಮುಜುಗರವಾಗುವಷ್ಟು ವಿನಯಿ! (ಅತಿ ವಿನಯಂ…?)

“ಐದು ಗಂಟೆಗೆ ಚಾ, ಆರಕ್ಕೆ ಉಪಾಹಾರ, ಏಳಕ್ಕಾದರೂ ದಾರಿಯಲ್ಲಿರಬೇಕು, ನೂರು ಕಿಮೀ ದಾರಿ ಸೀತಾಮಾತೆಗೆ” (ಸೀತಾಮಾತ ವನಧಾಮ) ಎಂದು ಹಿಂದಿನ ರಾತ್ರಿ ಕುಶಾಲ್ ಮತ್ತೆ ಎಚ್ಚರಿಸಿದ್ದರು. ಹಾಗೇ ಅವರು ಐದಕ್ಕೇ ಎಲ್ಲರ ನಿದ್ರೆಯನ್ನೇನೋ ಕೆಡಿಸಿದ್ದರು. ಆದರೆ ತಂಡದ ನಿಧಾನಕ್ಕೆ, ಅಡುಗೆಯವರ ಆರಾಮ್ ಸೇರಿ, ಸೈಕಲ್ಲುಗಳು ದಾರಿಗಿಳಿಯುವಾಗ ಗಂಟೆ ಎಂಟೂವರೆಯಾಗಿತ್ತು. ವ್ಯಾನಿನಲ್ಲಿ ಬಂದಿದ್ದ ಸೈಕಲ್ ಪರಿಣತ ಹಿಂದಿನ ದಿನವೇ ಎಲ್ಲರ ಸೈಕಲ್ಲುಗಳ ವಿಶೇಷ ಸಮಸ್ಯೆಗಳ ಪಟ್ಟಿ ಮಾಡಿಕೊಂಡಿದ್ದ. ನಾವು ಬೆಟ್ಟ, ದೋಣಿ ಎಂದು ವಿಹಾರದಲ್ಲಿದ್ದಾಗ, ಕೊರತೆಗಳನ್ನು ಸಾಕಷ್ಟು ನೇರ್ಪುಗೊಳಿಸಿದ್ದ. ಮತ್ತೆ ತಂದಿದ್ದ ಪುಟ್ಟ ಪವರ್ ಜೆಟ್ಟಿನಿಂದ ಎಲ್ಲಕ್ಕೂ ಮಜ್ಜನ, ಎಣ್ಣೆ ಭಾಗ್ಯ ಕರುಣಿಸಿದ್ದ. ಇದು ಒಟ್ಟಾರೆ ಸವಾರರಿಗೆ ಹೊಸ ಹುಮ್ಮಸ್ಸನ್ನು ತಂದಿತ್ತು.

ನನಗೆ ಸಿಕ್ಕ ಸೈಕಲ್ಲಿನ ಎರಡು ಕಿರುಕುಳ, ಕೊನೆಯವರೆಗೂ ನಿವಾರಿಸಲು ಆಗಲೇ ಇಲ್ಲ. ಮೊದಲನೇದಾಗಿ, ಮುಂದಿನ ಗೇರ್ ಶಿಫ್ಟರ್ ಭಾರೀ ಬಿಗಿಯಿತ್ತು. ‘ವೈದ್ಯ’ ಹೇಳಿದ, “ಶಿಫ್ಟರ್ರೇ ಹೊಸತಾಗಬೇಕು. ಆದರೆ ಸಂಚಾರಿ ವೈದ್ಯಶಾಲೆಯಲ್ಲಿ ಮೇಜರ್ ಸರ್ಜರಿಗೆ ಅವಕಾಶವಿಲ್ಲ”! ಏರು ದಾರಿ ಬರುವಾಗ ಎರಡಕ್ಕೋ ಒಂದಕ್ಕೋ ಗೇರ್ ಇಳಿಸುವುದು ಸುಲಭವಿತ್ತು. ಅದೇ ಹಿಂಬರಲು ಮಾತ್ರ ಸೆಟೆದುಕೊಳ್ಳುತ್ತಿತ್ತು. ನಿರಂತರ ಏರಿಳಿತಗಳ ಓಟದಲ್ಲೆಲ್ಲ ನಾನು ಎರಡು, ಒಂದರಲ್ಲೇ ಸುಧಾರಿಸಿಕೊಂಡೆ. ದೀರ್ಘ ಸಮತಟ್ಟಿನ ಓಟ ಬಂದಾಗ ಮಾತ್ರ, ಪೂರ್ಣ ಅಂಗೈಬಲ ಹಾಕಿ, ಬಲು ಎಚ್ಚರದಿಂದ ಮೂರನೇ ಗೇರಿಗೆ ಏರಿಸಿಕೊಳ್ಳುತ್ತಿದ್ದೆ. ಅದೃಷ್ಟಕ್ಕೆ ಶಿಪ್ಟರ್ ಮುರಿದೋ, ತಂತಿ ಕಡಿದೋ ನನ್ನ ಸವಾರಿಗೆ ಕುತ್ತು ಬರಲಿಲ್ಲ. ಮತ್ತಿನದು, ಸೈಕಲ್ ಸೀಟ್. ಇವನ್ನು ಸವಾರರು ವೈಯಕ್ತಿಕ ಎತ್ತರಕ್ಕೆ ತಕ್ಕಂತೆ ಹೊಂದಿಸಿಕೊಳ್ಳಲೇಬೇಕು. ಅದು ತಗ್ಗಿದರೆ ಪೆಡಲಿಕೆಯಲ್ಲಿ ಸೊಂಟದ ಒತ್ತಡ ತಪ್ಪಿ, ಮೊಣಕಾಲ ಬಲ ಹೆಚ್ಚಿ, ಅನಾವಶ್ಯಕ ಬಳಲುತ್ತೇವೆ. ಅದು ಹೆಚ್ಚು ಎತ್ತರವಾದರೆ ತುದಿಗಾಲಿನ ಪೆಡಲಿಕೆಯಲ್ಲಿ, ನಮ್ಮ ಮೀನಖಂಡವೇ ಸೆಟೆಯುತ್ತದೆ. ನನ್ನ ಸೈಕಲ್ಲಿನ ಸೀಟ್ ಕೊಳವೆ ಸವೆದುಹೋಗಿ, ಬಿಗಿ ನಿಲ್ಲುತ್ತಲೇ ಇರಲಿಲ್ಲ. ಮೊದಲ ದಿನ ೨೦-೩೦ ಕಿಮೀ ಸಾಗಿದ್ದಂತೆ, ಎಡ ಮೊಣಕಾಲಿನಲ್ಲಿ ಸಣ್ಣ ನೋವು ಕಾಣಿಸಿದಾಗ, ಎಲ್ಲೋ ಕಂಕನಾಡಿ ಆಘಾತದ ಪರಿಣಾಮ ಎಂದೇ ಸುಮಾರು ದೂರ ಸುಧಾರಿಸಿಕೊಂಡೆ. ನಿಜ ಸಮಸ್ಯೆ ತಿಳಿದ ಮೇಲೆ ಮೆಕ್ಯಾನಿಕ್ ಸಂಪರ್ಕಿಸಿದೆ. ಇದಕ್ಕೂ “ಸುಧಾರಿಸಿಕೊಳ್ಳಿ” ಮಂತ್ರ! ಮೂರೂ ದಿನ, ನಿಂತಲ್ಲೆಲ್ಲ ನನ್ನದು ಸೀಟ್ ಹೊಂದಾಣಿಕೆ! (೨೦೧೯ರ ಚುನಾವಣೆ ಸಮೀಪಿಸುತ್ತಿರುವುದಕ್ಕೂ ಇದಕ್ಕೂ ರಾಜಕೀಯ ಪಕ್ಷಗಳು ಸಂಬಂಧ ಕಲ್ಪಿಸಬಾರದು!) ಕೆಲವರ ಸೈಕಲ್ಲುಗಳಿಗೆ ಮಾಮೂಲಿ ಬೆಲ್ ಇದ್ದರೆ, ನನ್ನ ಸೈಕಲ್ಲಿಗೆ ಮಾತ್ರ ಒಂದು ಪುಟ್ಟ ರಬ್ಬರ್ ಹಾರ್ನ್ ಇತ್ತು. ನಮ್ಮೂರಲ್ಲಿ ಮೀನು ಮಾರುವ ಬ್ಯಾರಿಗಳು ಪಿಂಯ್ಯಂ ಪಿಂಯ್ಯಾ ಹಾರ್ನ್ ಕಟ್ಟಿಕೊಳ್ಳುವುದು ಕಂಡಿದ್ದೆ. ಇಲ್ಲಿ ನಾನದನ್ನು ಕೇವಲ ತಮಾಷೆಗೆ, ಧಾರಾಳ ಬಳಸಿಕೊಂಡೆ.

ಮೇಜರ್ ಇರ್ಷಾದ್ ಖಾನ್ ಮತ್ತು ಆತನ ಪತ್ನಿ ಸಬೀಹಾ ರಿಜ್ವಿ – ತಂಡದ ಏಕೈಕ ದಂಪತಿ. ಇವರು ಮೂರೂ ದಿನ ಬಹಳ ಪಟ್ಟು ಹಿಡಿದು, ಬಹುತೇಕ ಜೊತೆಯಲ್ಲೇ ಪೆಡಲುತ್ತಿದ್ದರು. ಮೇಲಾಟ, ಸೋಲಾಟದಲ್ಲಿ ನಡುವೆ ಸಿಕ್ಕುವ ಇತರ ಸವಾರರನ್ನು ಮೀರಿ, ಜೋಡಿ ಉಳಿಯುವಲ್ಲಿ, ಹೆಚ್ಚು ಶಕ್ತ ಪೆಡಲಿಗ ಇರ್ಷಾದ್ ಕೊಡುಗೆ ಜಾಸ್ತಿ. ಕುತ್ತೇರುಗಳಲ್ಲಿ ಸಬೀಹಾ ಹಿಂದುಳಿದಾಗ, ಅಸಾಧ್ಯ ಎನ್ನಿಸಿ ಇಳಿದು ನೂಕತೊಡಗಿದಾಗ ಇರ್ಷಾದ್ ಕೂಡಾ ನಿಂತೋ ಇಳಿದೋ ಅನುಸರಿಸಿದರು. ಆಕಸ್ಮಿಕಗಳಲ್ಲಿ ಆಕೆ ಮುಂದೋಡುವಂತಾದರೆ ಇರ್ಷಾದ್ ಸೀಟಿಂದೆದ್ದು ತುಳಿದು ಬೆನ್ನು ಹಿಡಿಯುತ್ತಿದ್ದರು. ಒಂದು ಭಾರೀ ಏರಿನಲ್ಲಿ ಇರ್ಷಾದ್ ಸರಪಳಿ ಕೈಕೊಟ್ಟರೂ ‘ಸಂಚಾರಿ ವೈದ್ಯ’ ಬಹು ಬೇಗನೆ ಚಿಕಿತ್ಸೆ ಕೊಟ್ಟು ‘ಓಟದ ದಾಂಪತ್ಯ’ವನ್ನು ಸುಗಮಗೊಳಿಸಿದ್ದರು! ಯಾನದ ಸಮಾರೋಪದ ದಿನವೇ ಸಬೀಹಾರ ಜನ್ಮದಿನದ ಆಕಸ್ಮಿಕ ಬರುವುದನ್ನು ಸಂಘಟಕರು ಮೌನವಾಗಿ ಗುರುತಿಸಿಟ್ಟುಕೊಂಡು, ಸಭೆಯಲ್ಲಿ ಅನೌಪಚಾರಿಕವಾಗಿ ಕೇಕು, ಕ್ಯಾಂಡಲ್ಲು, ಹಾಡಿನ ಸಂಭ್ರಮ ಸ್ಫೋಟಿಸಿದ್ದು ತುಂಬ ಆಪ್ತವಾಗಿತ್ತು; ಆಕೆಗೆ ಚಿರಸ್ಮರಣೀಯವೂ ಆಗಿರಬೇಕು.

ಎಲ್ಲಾ ಸ್ಪರ್ಧಾತೀತ ಸಮೂಹ ಸೈಕಲ್ ಸವಾರಿಗಳಲ್ಲೂ ನಾನು ಅನಾವಶ್ಯಕ ಮೇಲಾಟದವರನ್ನು ಸಾಕಷ್ಟು ಕಂಡಿದ್ದೇನೆ. ಇಲ್ಲೂ ಅದಕ್ಕೆ ಧಾರಾಳ ಸಾಕ್ಷಿಗಳು ಸಿಕ್ಕಿದವು. ಅಂಥವರಿಂದಾಗಿ ಪೂರ್ಣ ಹೊಸ ಪರಿಚಯಗಳಿಗೆ ತೆರೆದುಕೊಳ್ಳುವ, ಇನ್ನೂ ಮುಖ್ಯವಾಗಿ ವನ್ಯ ಉದ್ದೇಶವನ್ನು ತಿಳಿದುಕೊಳ್ಳುವ ಪ್ರಯತ್ನಗಳು ವೈಯಕ್ತಿಕವಾಗಿ ನಡೆಯಲೇ ಇಲ್ಲ. (ಇದಕ್ಕೆ ಸಾಂಸ್ಥಿಕವಾಗಿಯೂ ಅವಕಾಶ ಕಲ್ಪಿಸದೇ ಇದ್ದದ್ದು ದೊಡ್ಡ ಕೊರತೆ. ಈ ವಿಚಾರವನ್ನು ಕೊನೆಯ ಸಲಹಾಪಟ್ಟಿಯಲ್ಲಿ ತುಸು ವಿಸ್ತರಿಸುತ್ತೇನೆ.) ಪೆಡಲುವ ಕರ್ಮದಲ್ಲಿ, ಗುರಿ ಮುಟ್ಟುವುದೇ ಸಾಧನೆ ಎಂದಿದ್ದವರೇ ಹೆಚ್ಚು. ಇದರ ಅತಿರೇಕವನ್ನು ನಾನು ಒಬ್ಬನಲ್ಲಿ ಕಂಡದ್ದನ್ನಷ್ಟೇ ಹೇಳಿಬಿಡುತ್ತೇನೆ. ನೂರು ಕಿಮೀ ಸವಾರಿಯ ಕೊನೆಯ ಹಂತವನ್ನು ನಾವು ಸಮಯದ ಕೊರತೆಯಲ್ಲಿ ನಡೆಸಬೇಕಾಯ್ತು. ಆದರೆ ಅದು ಯಾವುದೇ ಒತ್ತಡಗಳ ಫಲವಾಗಬಾರದು ಎಂದೇ ಸಂಘಟಕರು ಸ್ಪಷ್ಟವಾಗಿ ಹಾರೈಸಿದ್ದರು. ಅದನ್ನು ನಿರಾಕರಿಸಿ ಬಂದೊಬ್ಬ ವ್ಯಕ್ತಿಗೆ ನಿಜದಲ್ಲಿ ಪೆಡಲಿಕೆ ಅಸಾಧ್ಯವೇ ಆಗಿತ್ತು. ಮೊದಲು ಆತ ದಾರಿಯಲ್ಲಿ ಹೋಗುತ್ತಿದ್ದ ಯಾವುದೋ ಮೋಟಾರ್ ಸೈಕಲ್ಲಿನವನನ್ನು ಒಲಿಸಿ, ಆತನ ಕೈ ಹಿಡಿದುಕೊಂಡು, ಕಿಮೀಗಟ್ಟಳೆ ಈತ ಸೈಕಲ್ಲನ್ನು ಎಳೆಸಿಕೊಂಡಿದ್ದ. ಬೈಕಿನವನ ದಾರಿ ಬೇರೆಯಾಗುವಲ್ಲಿ, ಈತ ಖಾಲಿ ಹೋಗುತ್ತಿದ್ದ ಟ್ರ್ಯಾಕ್ಟರಿಗೇ ಸೈಕಲ್ ತುಂಬಿ ಸಾಗಿದ್ದ. ಶಿಬಿರತಾಣವನ್ನು ಯಶಸ್ವೀ ಸೇರಿದವರಲ್ಲಿ ಹೆಸರಿಸಿಕೊಂಡ. ಜೈಸಮಂಡ್ ಅಣೆಕಟ್ಟೆಯ ಎತ್ತರದಿಂದ ಝರ್ರೆಂದು ಇಳಿಸುತ್ತ ಓಡಿತ್ತು ಡಾಮರ್ ದಾರಿ. ಆ ಉದ್ದಕ್ಕೂ ಕಾಣ ಸಿಕ್ಕ ಸರೋವರದ ನೀರಾವರಿಯ ಪ್ರಭಾವ, ಕೃಷಿ ಸಮೃದ್ಧಿ ನಮ್ಮ ಓಟವನ್ನು ಮನೋಹರಗೊಳಿಸಿತ್ತು. ಪ್ರಾರಂಭಿಕ ಸುಮಾರು ಹದಿನೈದು ಕಿಮೀ ಅಂತರದ ಕೊನೆಯಲ್ಲಿ, ನಮ್ಮೂರೇ ಬಂದಂತೆ, ‘ಕರಾವಳಿ’ ಹೆಸರಿನ ಪುಟ್ಟ ಪೇಟೆ ಸಿಕ್ಕಿತ್ತು. ಇಲ್ಲಿ ಎರಡು ಕವಲು ತೆಗೆದು, ಅದುವರೆಗೆ ನಮ್ಮ ಮಗ್ಗುಲಿನಲ್ಲಿ ಸುಮ್ಮನೇ ಮಲಗಿದ್ದ ಪರ್ವತಸಾಲನ್ನು ತುಡುಕಿದೆವು. ಸಹಜವಾಗಿ ದಾರಿಯ ಸ್ಥಿತಿಯೂ ಅಸ್ಥಿರವಿತ್ತು. ಇಲ್ಲಿನ ಒಂದು ಭಾರೀ ಏರಂತೂ ಅದೇ ಮೊದಲ ಬಾರಿಗೆನ್ನುವಂತೆ ಬಹುತೇಕ ಸವಾರರನ್ನು ಚಿತ್‍ಗೊಳಿಸಿಬಿಟ್ಟಿತ್ತು. ಡಾಮರ್ ಕಿತ್ತು ಹೋಗಿ, ಮಣ್ಣು ಕೊರಕಲು ಬಿದ್ದು, ಬಲ ಅಂಚಿನಲ್ಲಿ ಸಪುರದ ಒಂದು ಜಾಡಷ್ಟೇ ಉಳಿದಿತ್ತು. ಅದನ್ನುತ್ತರಿಸುವಲ್ಲಿ ಜಾರಿ ಅಡ್ಡ ಮಲಗಿದವರು, ಇಲ್ಲಾ ಅಂಥವರನ್ನು ನೋಡಿ ಹೆದರಿ ಸೀಟಿನಿಂದ ಹಾರಿದವರು ಕೆಲವರು. ಇನ್ನು ಕೆಲವರು, ಮೊದಲಿಳಿದವರು ಕೂಡಲೇ ತಮ್ಮ ಸೈಕಲ್ಲನ್ನು ಪಕ್ಕಕ್ಕೆ ಎಳೆದುಕೊಂಡು, ಹಿಂದಿನವರಿಗೆ ದಾರಿ ಮುಕ್ತವಾಗಿಸದ್ದಕ್ಕೆ ಅನಿವಾರ್ಯವಾಗಿ ಇಳಿಯಬೇಕಾದವರು. ತೀರಾ ಕಡಿದಾದ ಏರುಗಳಲ್ಲಿ, ಒಂದನೇ ಗೇರಿನ ಸಂಯೋಜನೆಗಳಲ್ಲಿ ಮತ್ತೆ ಸವಾರಿಗೇರುವುದು ಬಹಳ ಕಷ್ಟ, ನೂಕಿಯೇ ಮುಗಿಸಬೇಕಾಗುತ್ತದೆ. ಆ ಚಡಾವನ್ನು ಅದೃಷ್ಟಕ್ಕೆ, ಹರಿಯೂ ನಾನೂ ಸೀಟಿಳಿಯದೆ ಪೂರ್ಣಗೊಳಿಸಿದ್ದೆವು. ನಾನು ಮೊದಲ ಪರಿಚಯದ ಹಂತದಲ್ಲಿ ಹಾಕಿದ, ‘ಟ್ರ್ಯಾಕ್ಟರ್ವಾಲಾ’ ನಿರಾಯಾಸವಾಗಿ ಪೆಡಲುವ ಚಂದದ ಚಲಚಿತ್ರ ಹಿಡಿದದ್ದು ಇಲ್ಲೇ!

ಘಟ್ಟದೆತ್ತರ ಸೇರಿದ ಮೇಲಿನ ಪ್ರಸ್ಥಭೂಮಿಯ ದಾರಿ ಬಹುತೇಕ ನೇರ ಮತ್ತು ಸಣ್ಣಪುಟ್ಟ ಏರಿಳಿತದ್ದಷ್ಟೇ ಇತ್ತು. ಆದರೆ ಹೆಚ್ಚಿನ ಉದ್ದಗಳು ಅಗಲೀಕರಣ ಮತ್ತು ಉತ್ತಮೀಕರಣಗಳ ಹೆಸರಿನಲ್ಲಿ ಬೇರೆ ಬೇರೆ ಹಂತದಲ್ಲಿ ಕೆದಕಿ ಹಾಕಿದ್ದರು. ಅದು ಲೆಕ್ಕಕ್ಕೆ ಹಳೆಯ ಉತ್ತಮ ಡಾಮರು ದಾರಿ ಎಂದೇ ಇದ್ದರೂ ನಮ್ಮ ಭಾಗ್ಯಕ್ಕೆ ದಕ್ಕಿದ್ದು ಜಲ್ಲಿಹಾಸು ಮತ್ತು ದೂಳಿನ ಅಲೆಗಳೇ. ಅದು ರಾಜಸ್ತಾನದ ಚುನಾವಣಾ ಪ್ರಚಾರ ಜೋರಿದ್ದ ದಿನಗಳು. ಸಾಲದ್ದಕ್ಕೆ ಅಂದೇ ಸಮೀಪದಲ್ಲೆಲ್ಲೋ ಭಾಜಪದ ಮು.ಮಂ ವಸುಂಧರಾರಾಜೇ ಪ್ರಚಾರ ಭಾಷಣಕ್ಕೆ ಬರುವರಿದ್ದರಂತೆ. ಸಹಜವಾಗಿ ಸುಮಾರು ಬಸ್ಸು, ವ್ಯಾನು ಕೇಸರಿ ಕುರಿಗಳನ್ನು ನೆತ್ತಿ ಎತ್ತರಕ್ಕೂ ತುಂಬಿಕೊಂಡು, ಬೊಬ್ಬಿರಿದುಕೊಂಡು ಹೋಗುವುದು ನೋಡ ಸಿಕ್ಕಿದವು. ಅಂಥಾ ಒಂದೆಡೆ, ನಾನು ಬಸ್ಸಿನ ಚಿತ್ರ ಹಿಡಿಯಲೆಂದು ನಿಂತಿದ್ದೆ. ಆಗ ಅಲ್ಲೇ ಕೃತಕೃತ್ಯರಾಗಿ ಇನ್ನೂ ಬಸ್ಸಿನ ಕೆಳಗೇ ನಿಂತಿದ್ದ ‘ಕುರುಬರು’ (ಗ್ರಾಮ ಮುಖಂಡರಿರಬೇಕು) ನನ್ನನ್ನೆಲ್ಲೋ ಯಾವುದೋ ಮಾಧ್ಯಮದ ವರದಿಗಾರನೆಂದು ಭ್ರಮಿಸಿದರೋ ಏನೋ. ಒಮ್ಮೆಲೇ ನನ್ನೆದುರು ಗುಂಪುಗೂಡಿ ನಿಂತು, ತಮ್ಮದೂ ಒಂದು ಪಟ ತೆಗೆಯಬೇಕೆಂದು ಒತ್ತಾಯಿಸಿದರು. ಸಂವಹನ ಮಾಧ್ಯಮಗಳ ಸಾಕಷ್ಟು ಪರಿಚಯ ಇರುವ ನಗರ ಮಂದಿಯೇ ಹೋದಲ್ಲಿ-ಬಂದಲ್ಲಿ, ನಿಂತಲ್ಲಿ-ಕೂತಲ್ಲಿ ಎದುರಾದ ಕ್ಯಾಮರಾಗಳಿಗೆ ಹಲ್ಲುಗಿಂಜುವುದು, ಯಾರಿಲ್ಲದಿದ್ದರೂ ಸ್ವಂತೀ ಎಳೆದುಕೊಳ್ಳುವುದು ನೋಡುತ್ತಲೇ ಇರುವ ನನಗೆ ಆಶ್ಚರ್ಯವಾಗಲಿಲ್ಲ, ಹೊಡೆದೆ. ಡಿಜಿಟಲ್ ಯುಗದ ಧಾರಾಳದಲ್ಲಿ, ಸದ್ಯ ಗ್ರಹಣದ ಚಿಟಿಕೆ ಹೊಡೆದರೂ ಬೇಡವೆಂದೆನಿಸಿದರೆ, ಮುಂದಿನ ಗಳಿಗೆಯಲ್ಲಿ ಅದಕ್ಕೆ ನಿರ್ವಾಣ ಚಿಟಿಕೆಯೂ ಹೊಡೆಯಬಹುದಲ್ಲವೇ!

ದಾರಿ ಸಾಗಿದ್ದಂತೆ ಅರಣ್ಯ ಇಲಾಖೆಯ ವಲಯಗಳ ಬದಲಾವಣೆ ನಮಗೆ ಹೊಸದೇ ನಾಮ, ಹಾರಗಳ ಸ್ವಾಗತದಿಂದ ಅರಿವಾಗುತ್ತಿತ್ತು. ಮತ್ತೆ ಅಲ್ಲೆಲ್ಲ ಒತ್ತಾಯಪೂರ್ವಕವಾಗಿಯೇ ಕೊಡುತ್ತಿದ್ದ ಬಿಡಿ ತಿನಿಸು ಪಾನೀಯಗಳ ‘ಹೊರೆ’, ಏರಿದ್ದ ಬಿಸಿಲ ಝಳವನ್ನು ತಂಪು ಮಾಡಿತ್ತು. ಇದು ಇನ್ನೊಂದು ಲೆಕ್ಕದಲ್ಲಿ ನಾವು ಮಧ್ಯಾಹ್ನದೂಟಕ್ಕೆ ತಲಪಬೇಕಿದ್ದ ಸ್ಥಳ, ಸಮಯ ಮತ್ತು ಹಸಿವನ್ನೂ ಮರೆಯಿಸಿಯೇಬಿಟ್ಟಿತ್ತು. ದಿನದ ಮೊದಲಲ್ಲಿ ‘ಕರಾವಳಿ’ ನೋಡಿದ್ದ ಕುಶಿಯಲ್ಲಿ, ಕುಶಾಲ್ ಮಾತನ್ನು ನಾನು ‘ಮಧ್ಯಾಹ್ನದ ಊಟಕ್ಕೆ ಧಾರವಾಡ’ವೇ ಬರಲಿದೆಯೆಂದು ಗ್ರಹಿಸಿದ್ದೆ. ಆದರೆ ನಿಜದಲ್ಲಿ ಮೂರು ಗಂಟೆಯ ಸುಮಾರಿಗೆ ಆ ಸ್ಥಳ – ಧಾರವಾಡವಲ್ಲ, ಧರಿಯಾವಾಡ್ ಬಂದಾಗ ನನ್ನ ತಪ್ಪಿನ ಅರಿವಾಗಿತ್ತು! ಇದು ಸಾಕಷ್ಟು ದೊಡ್ಡ ಪೇಟೆ. ಪ್ರತಿ ವೃತ್ತ, ದೊಡ್ಡ ಕವಲುಗಳಲ್ಲೆಂಬಂತೆ ಇಲಾಖೆಯ ನೌಕರರು ನಮಗೆ ಕೈಮರವಾಗಿ ನಿಂತಿದ್ದರು. ಬಹುತೇಕ ತಂಡದ ಮುಂಚೂಣಿಯಲ್ಲೇ ಇದ್ದ ನಾವು, ಊರಿನಾಚೆ ಎರಡು ಕಿಮೀ ದೂರದಲ್ಲಿದ್ದ ಅರಣ್ಯ ಇಲಾಖಾ ಕಛೇರಿಗೆ ತಲಪಿದಾಗ ಮತ್ತೆ ಅರ್ಧ ಗಂಟೆಯಷ್ಟು ನಮ್ಮ ಊಟ ತಣಿದಿತ್ತು!

ಬಿಸಿಲು, ಬಳಲಿಕೆ ಮತ್ತು ತೊಡರಿದ ಪ್ರತಿಯೊಂದು ಉಪಚಾರಕ್ಕೂ ಸೋಲುತ್ತ ಹೋದ ಬಹುಮಂದಿ ತುಂಬಾ ಹಿಂದುಳಿದಿದ್ದರು. ಕುಶಾಲ್ ಮುಂದೆ ಬಂದವರ ಅವಸರದ ಊಟ ಮುಗಿಯುತ್ತಿದ್ದಂತೆ ಸ್ಪಷ್ಟವಾಗಿಯೇ ಘೋಷಿಸಿದರು. “ನಮ್ಮ ದಿನದ ಲಕ್ಷ್ಯ – ಸೀತಾಮಾತಾಕ್ಕೆ ಇನ್ನೂ ಸುಮಾರು ೨೫ ಕಿಮೀ ದಾರಿ ಬಾಕಿಯಿದೆ. ಪೆಡಲಬೇಕೆಂಬ ಹಠವಿರುವವರು ಕೂಡಲೇ ಹೊರಡಿ. ಉಳಿದವರು ಸಂಕೋಚಪಡಬೇಡಿ, ಸೂರ್ಯಾಸ್ತಕ್ಕೆ ಮುನ್ನ ನಿಮ್ಮನ್ನು ವ್ಯಾನುಗಳಲ್ಲಿ ಗುರಿಮುಟ್ಟಿಸುತ್ತೇವೆ.” ಅನಿಲ್ ಶಾಸ್ತ್ರಿ ಮೊದಲೇ ಹಿಂದುಳಿದಿದ್ದರು. ಸಹಜವಾಗಿ ವ್ಯಾನಿನ ಮೊರೆಹೊಗುವುದು ಅನಿವಾರ್ಯವಾಗಿದ್ದಿರಬೇಕು. ಹರಿ ಮತ್ತು ನಾನು ‘ಸವಾರಿ ಸವಾಲು’ ಹಗುರ ಮಾಡದೇ ಮುಂದುವರಿದೆವು. ಅನೂಪ್ಪುರ ಎಂಬ ಅರಣ್ಯ ಠಾಣೆಯವರೆಗೂ ಬಹುತೇಕ ಸಮತಟ್ಟಿನ ಮತ್ತು ಉತ್ತಮ ಡಾಮರ್ ದಾರಿ ನಮ್ಮನ್ನು ಓಲೈಸಿತು. ಮುಂದೆ ನಿಜ ಅರಣ್ಯ ತೊಡಗಿದಲ್ಲಿ ಮಾತ್ರ ದಾರಿ ತೀರಾ ಕಚ್ಚಾ ಹಾಗೂ ತೀವ್ರ ಇಳುಕಲಿನದ್ದಿತ್ತು. ಈ ಹೊತ್ತಿಗೆ ಸೂರ್ಯನೂ ನಮ್ಮೊಡನೆ ಸ್ಪರ್ಧೆಗಿಳಿದಂತೆ ಘಟ್ಟ, ಕಾಡುಗಳ ಮರೆಯಲ್ಲಿ ತೀವ್ರವಾಗಿಯೇ ಇಳಿದಿದ್ದ. ಕಾಡು ಭಾಗ್ಡೋರಾದ್ದಕ್ಕೂ ದಟ್ಟವೂ (ನಮ್ಮ ಪಶ್ಚಿಮಘಟ್ಟದ್ದಕ್ಕೆ ಅಲ್ಲಿನ ಯಾವುದೂ ಸಾಟಿಯಲ್ಲ, ಬಿಡಿ!) ಪೂರ್ಣ ನಿರ್ಜನವೂ ಇದ್ದಂತಿತ್ತು. ಆದರೆ ಸಿಕ್ಕ ಒಂದೆರಡು ಕವಲು ದಾರಿಗಳಲ್ಲಿ ನಮಗೋಸ್ಕರ ಸ್ಪಷ್ಟ ನಾಮಫಲಕದ ಕೈಮರಗಳನ್ನೇ ಹಾಕಿದ್ದರು. ಮುಸ್ಸಂಜೆ ಮಾಸುವ ಮುನ್ನ ನಾವು ಸೀತಾಮಾತ ವನಧಾಮದ ಹೃದಯ ಭಾಗ, ಅಂದರೆ ಜಖಂ ನದಿಪಾತ್ರದ ಶಿಬಿರತಾಣವನ್ನು ಸೇರಿದ್ದೆವು.

ವನದರ್ಶನದ ಬಯಕೆ ಶಾಪವಾದ ಸ್ಥಳ

ಜಖಂ – ಗಾಬರಿಯಾಯ್ತೇ? ಬಿಡಿ, ಇದೊಂದು ನದಿ, ಸೀತಾಮಾತಾ ಕಾಯ್ದಿರಿಸಿದ ಕಾಡನ್ನು ಇಕ್ಕಡಿಗೈದ ಚೈತನ್ಯದಾಯೀ. ಮಾಳ್ವ ಪ್ರಸ್ಥಭೂಮಿ, ಅರಾವಳಿ ಮತ್ತು ವಿಂಧ್ಯಾಚಲಗಳ ಕೂಡು ಬಿಂದುವಿನಲ್ಲಿದೆ ಸೀತಾಮಾತಾ ವನಧಾಮ. ಕೃಷಿ ನೀರಾವರಿಗಾಗಿ ಇದರ ಮೇಲ್ಪಾತ್ರೆಯಲ್ಲಿ ಅಣೆಕಟ್ಟು ಕಟ್ಟಿದ್ದಾರೆ. ಸಹಜವಾಗಿ ಕೆಳಪಾತ್ರೆಯ ನೀರ ಹರಿವು ತೆಳುವಾಗಿದೆ. ಆದರೂ ವನ್ಯ ಉಸ್ತುವಾರಿಯ ದೃಷ್ಟಿಯಿಂದ, ಇಲಾಖೆಯೇ ಇದರ ಕೆಳ ವಿಸ್ತಾರ ಪಾತ್ರೆಯಲ್ಲಿ ತಗ್ಗಿನ ಸೇತುವೆ ಕಟ್ಟಿಸಿಕೊಂಡಿದ್ದಾರೆ. ಪ್ರವಾಹಕಾಲದಲ್ಲಿ ಇದರ ಕಿಂಡಿಗಳು ಮುಚ್ಚಿಯೋ ಅವನ್ನು ಮೀರಿಯೋ ನೀರು ನುಗ್ಗಿದರೆ ಆಶ್ಚರ್ಯವೇನೂ ಇಲ್ಲ. ಸುಮಾರು ಇನ್ನೂರು ಮೀಟರ್ ಉದ್ದ, ಹತ್ತು ಮೀಟರ್ ಅಗಲಕ್ಕೆ ಓರೆಕೋರೆಯಾಗಿ ಮಲಗಿರುವ ಸೇತುವೆಯೇ ನಮ್ಮ ಶಿಬಿರತಾಣ. ಅದರ ಮಧ್ಯಂತರದಲ್ಲಿ ಕೆಳ ಅಂಚಿಗೆ ಬೆನ್ನು ಹಾಕಿದಂತೆ ಗುಡಾರಗಳ ಸಾಲು ನಮ್ಮನ್ನು ಕಾದಿದ್ದವು. ಉಳಿದ ಉದ್ದಗಳಲ್ಲಿ ಅಡುಗೆ, ಶಿಬಿರಾಗ್ನಿ, ಸೈಕಲ್ಲುಗಳನ್ನೂ ಸೇರಿಸಿ ವಾಹನ ತಂಗುದಾಣಗಳೆಲ್ಲ ತತ್ಕಾಲೀನವಾಗಿ ಸಜ್ಜುಗೊಂಡಿದ್ದವು. ಬಿಸಿನೀರ ಸ್ನಾನಕ್ಕೂ ವ್ಯವಸ್ಥಿತ ಶೌಚಕ್ಕೂ ಮೊದಲ ದಂಡೆಯಲ್ಲೇ ಪುಟ್ಟ ಗುಡಾರಗಳೇನೋ ಇದ್ದವು. ಆದರೆ ಹೆಚ್ಚಿನ ಸೈಕಲ್ ಸವಾರರು, ಪುಟ್ಟ ಮರ ಗಿಡಗಳ ಸುತ್ತಾಡುತ್ತ ನೂರೆಂಟು ಮಡು, ಜಾಡುಗಳಲ್ಲಿ ಕಲಕಲಿಸುತ್ತಿದ್ದ ಸ್ವಚ್ಛ ತಂಪು ನೀರು ವ್ಯರ್ಥಗೊಳ್ಳದಂತೆ ನೀರಾಟವಾಡಿದರು. ಪೂರ್ಣ ಕತ್ತಲಾದಾಗ ಏರಿದ ಚಳಿಗೆ, ಸೇತಿನ ಮೇಲೆ ಹಾಕಿದ್ದ ಶಿಬಿರಾಗ್ನಿಗಳ ಸುತ್ತ ಜಮಾಯಿಸಿದರು. ತಿಂಡಿ, ತೀರ್ಥ, ಊಟಗಳನ್ನು ಸವಿದರು. ಸ್ವಲ್ಪ ಹೊತ್ತು ಸಮೀಪದ ಹಳ್ಳಿಯಿಂದ ಬಂದಿದ್ದ ಜನಪದ ಗಾಯಕರ ಸ್ತುತಿಗೀತಗಳಿಗೆ ಕಿವಿಯಾದರು. ಕೊನೆಗೆ ಗುಡಾರಗಳನ್ನು ಸೇರಿ, ನಿರಂತರ ಪಾರಾಯಣೀ ಜಖಂ ನದಿಯ ಜೋಗುಳಕ್ಕೆ ಪೂರ್ಣ ಸೋತರು. ಮರು ಬೆಳಗ್ಗೆ ಹೊರಡುವಾಗ “ಸೀತಾಮಾತೆಯ ಮಮತೆಯಲ್ಲಿ ರಾತ್ರಿ ಕಳೆದದ್ದೇ ತಿಳಿಯಲಿಲ್ಲ” ಎನ್ನುವುದು ಬಹುಮತದ ಸೊಲ್ಲು!

ಸೀತಾಮಾತ ಶಿಬಿರಕ್ಕೆ ನಮಗಿಂತ ಮೊದಲೇ ವ್ಯಾನಿನಲ್ಲಿ ಬಂದಿದ್ದ ಅನಿಲ್ ಶಾಸ್ತ್ರಿ ನದಿ ಸ್ನಾನದ ಸಂತೋಷ ಅನುಭವಿಸಿದರು. ಆದರೆ ಪೆಡಲುತ್ತ ತಡವಾದ ನಾವು (ಹರಿ ಮತ್ತು ನಾನು), ಚಳಿಯ ಮೊದಲಪಾದವನ್ನು ಗಮನಿಸಿ ಸ್ನಾನ ಮರೆತೆವು. ಬದಲು ಎದುರು ದಂಡೆಯ ಪಕ್ಕದಲ್ಲಿದ್ದ ಪುಟ್ಟ ಚೂಪು ಗುಡ್ಡೆಯ ನೆತ್ತಿಗೇರಿ, ಸೂರ್ಯಾಸ್ತದ ಚಂದದೊಡನೆ ವನಧಾಮದ ಹಕ್ಕಿನೋಟವನ್ನು ಪಡೆದೆವು. ಮರು ಬೆಳಗ್ಗೆ ಚುರುಕಾಗಿ ಶೌಚಕ್ಕೆ ಕಾಡು ನುಗ್ಗಿ, ಬಿಸಿನೀರ ಸ್ನಾನದ ಸುಖ ವ್ಯವಸ್ಥೆಯಲ್ಲೇ ಮುಗಿಸಿ, ಚುರುಕಾಗಿಯೇ ತಿಂಡಿ ತೀರ್ಥವನ್ನು ಮುಗಿಸಿಕೊಂಡೆವು. ಇತರ ಭಾಗಿಗಳ ನಿಧಾನದ ಲಾಭ ತೆಗೆಯುವಂತೆ ನದಿ ಪಾತ್ರೆಯ ಮೇಲ್ದಂಡೆಯಲ್ಲೂ ಸುಮಾರು ದೂರ ನಡೆದು ನೋಡಿ ಮರಳಿದೆವು. ಆಶ್ಚರ್ಯಕರವಾಗಿ ನಾಗರಿಕತೆಯ ತೇಲು ಮಾಲಿನ್ಯಕಾರಕಗಳು ( ಮುಖ್ಯವಾಗಿ ಪ್ಲ್ಯಾಸ್ಟಿಕ್ ಮೂಲದವು) ಕಾಣಿಸಲೇ ಇಲ್ಲ. ಮರಳು, ಕಲ್ಲು ಪ್ರಧಾನವಾದ ಪರಿಸರದಲ್ಲೂ ಆ ಮಟ್ಟದ ಕಾಡು ವಿಕಸಿಸಿರುವ (ಇಲ್ಲಿನ ಮಹಾಮರಗಳನ್ನು ಅರ್ಜುನ ವೃಕ್ಷಗಳೆಂದೇ ಗುರುತಿಸುತ್ತಾರೆ) ಪ್ರಾಕೃತಿಕ ಸತ್ಯವನ್ನು, ಉಳಿಸಿಕೊಳ್ಳುವ ಮಾನವಮತಿಯ ಫಲಕ್ಕೆ (ಸೀತಾಮಾತ ಕಾಯ್ದಿರಿಸಿದ ಅರಣ್ಯ) ಎಂದೂ ‘ಅಭಿವೃದ್ಧಿ’ಯ ಶಾಪ ತಾಗದಿರಲಿ ಎಂದು ಹಾರೈಸುತ್ತೇನೆ.

ರಾಮಾಯಣದ ಕೊನೆಯ ಹಂತದಲ್ಲಿ ಬಸುರಿ ಸೀತೆ ರಾಮನಲ್ಲಿ ವನದರ್ಶನ ಹಾಗೂ ಮುನಿಜನ ಸೇವೆಯ ಬಯಕೆ ತೋಡಿಕೊಂಡದ್ದು ನಿಮಗೆಲ್ಲ ತಿಳಿದೇ ಇದೆ. ಆದರದು ಶಾಪವಾಗಿ, ಲಕ್ಷ್ಮಣನ ಮೂಲಕ ಸೀತಾಪರಿತ್ಯಾಗವಾಗಿ ಪರಿಣಮಿಸಿದ್ದು ಇದೇ ವಲಯದಲ್ಲಿ ಎನ್ನುತ್ತದೆ ಸ್ಥಳ ಪುರಾಣ. ಇದಕ್ಕೆ ಪುರಾವೆಯಾಗಿ, ನಮ್ಮ ಪೆಡಲಿಕೆಯ ಅಂತಿಮ ಚರಣದಲ್ಲಿ ಸಿಕ್ಕ ಪುಟ್ಟ ಕೆರೆಯ ಸ್ಥಳವನ್ನು ‘ಭಾಗಿ ಬಾವಡಿ’, ಅರ್ಥಾತ್ ವನಗಮನದಲ್ಲಿ ಬಾಯಾರಿದ ಸೀತೆಗೆ ಲಕ್ಷ್ಮಣ ಕಲ್ಪಿಸಿದ ಜಲಭಾಗ್ಯ ಎಂದೇ ಗುರುತಿಸುತ್ತಾರೆ. ಇಲ್ಲಿನ ತೊರೆ, ಲವಕುಶರಿಗಾಗಿ ಸ್ವತಂತ್ರ ಪುಟ್ಟ ನೀರ ಕುಂಡಗಳು, ವಾಲ್ಮೀಕಿಯ ಹೋಮಪೀಠವನ್ನೂ ಅಲ್ಲಿದ್ದ ಅರಣ್ಯ ಇಲಾಖಾ ನೌಕರ ತೋರಿಕೊಟ್ಟ. ಸೀತಾಮಾತೆ, ಹನುಮನ ದೇವಳಗಳೂ ವಾಲ್ಮೀಕಿ ಆಶ್ರಮಸ್ಥಳಗಳೂ ವನಧಾಮದ ಒಳಗೇ ಇವೆ ಎಂದು ಕೇಳಿದೆವು. ಆದರವು ಕೇವಲ ಚಾರಣಕ್ಕಷ್ಟೇ ನಿಲುಕುವಂತವು ಮತ್ತೂ ಮುಖ್ಯವಾಗಿ ನಮ್ಮ ವೇಳಾಪಟ್ಟಿಗೆ ಮೀರಿದವು ಎಂಬ ಕಾರಣಕ್ಕೆ ನೋಡಲಾಗಲಿಲ್ಲ. ಏನೇ ಇರಲಿ, ಸೀತೆಯ ಮೂಲ ಬಯಕೆ – ವನದರ್ಶನ, ನಮ್ಮ ಪಾಲಿಗೆ ಸುಂದರ ವರವಾದ ಸಂತೋಷದಲ್ಲಿ ನಾವು ಮತ್ತೆ ಪೆಡಲಿಕೆಗಿಳಿದೆವು.

ಸಮಾರೋಪವಲ್ಲ, ಪೀಠಿಕೆ

ಸೀತಾಮಾತಾ ಶಿಬಿರತಾಣಕ್ಕೆ ಬರುವುದು ಅಂದರೆ, ಧರಿಯಾವಾಡ್ ವಲಯ ಅಥವಾ ಜಖಂ ನದಿಯ ದಕ್ಷಿಣ ದಂಡೆಯನ್ನು ನೇರ ಇಳಿಯುವುದೇ ಆಗಿತ್ತು. ಅದರ ಕೊನೆಯ ಹಂತದಲ್ಲಿ ದಾರಿ ತೀರಾ ಕಚ್ಚಾ ಇದ್ದರೂ ಸಣ್ಣದೂ ಬಹುತೇಕ ಇಳಿಜಾರಿನದೂ ಇದ್ದು, ಸುಲಭವೇ ಆಗಿತ್ತು. ಆದರೆ ಮರುದಿನದ ಲಕ್ಷ್ಯ, ಲೆಕ್ಕದಲ್ಲಿ ಸುಮಾರು ಇಪ್ಪತ್ತೇ ಕಿಮಿ ಅಂತರದ್ದೇ ಆದರೂ ಬಹಳ ಕಠಿಣವಿತ್ತು. ಅದು ನೇರ ಉತ್ತರ ದಂಡೆ, ಅಂದರೆ ಚಿತೋರ್‍ಗಢ್ ವಲಯದ ಇನ್ನೊಂದೇ ದ್ವಾರಕ್ಕೆ ಮುಗಿಯುವುದಿತ್ತು. ಅದರಲ್ಲಿ ಬಹುಭಾಗ ದೊಡ್ಡ ಕಲ್ಲ ಚಕ್ಕೆಗಳು (ಬೇಬಿ ಜಲ್ಲಿ, ಜಲ್ಲಿಗಳಿಗಿಂತಲೂ ದೊಡ್ಡದು – ಬೋಲ್ಡರ್) ಒಟ್ಟಣೆಯನ್ನೇ ಏರಿ ಸಾಗುವ ಅನುಭವ. ಎಂದೋ ಡಾಮರ್ ಪೂರ್ವ ಸಂಸ್ಕಾರವೆನ್ನುವಂತೆ ಹುಗಿದಿದ್ದ ಅಷ್ಟೂ ಕಲ್ಲು ಮಳೆಗಾಲದಲ್ಲಿ ಮಣ್ಣು ಕೊರಕಲು ಬಿದ್ದಾಗ, ಓಡಾಡುವ ಲಾರಿ ಜೀಪುಗಳ ಒತ್ತಡಕ್ಕನುಗುಣವಾಗಿ ಎದ್ದು, ಬಡ ಸೈಕಲ್ಲುಗಳಿಗೆ ತೀರಾ ಕಠಿಣ ಸವಾಲನ್ನೇ ಒಡ್ಡಿತ್ತು. ಹೊರಡುವ ಮೊದಲೇ ಮಜ್ಬೂರ್, ಕುಶಾಲ್ ಇದನ್ನು ಸ್ಪಷ್ಟಪಡಿಸಿದ್ದುದರಿಂದ ಕೆಲವು ‘ಸಾಹಸಿ’ಗಳು ಪ್ರಯತ್ನವನ್ನೂ ಮಾಡದೆ, ಸೈಕಲ್ಲುಗಳೊಡನೆ ವ್ಯಾನಿಗೆ ಶರಣಾಗಿದ್ದರು. ಇನ್ನೂ ಕೆಲವರು ಶಿಬಿರತಾಣ ಬಿಡುವಲ್ಲೇ ಸೈಕಲ್ ಸೀಟಿಳಿದು ನೂಕತೊಡಗಿದವರು, ಕೊನೆಯಲ್ಲಿ ಊಟ ಮುಗಿಸಿ ಸಮಾರೋಪ ಸಮಾರಂಭ ತೊಡಗುವವರೆಗೂ ಬರುತ್ತಲೇ ಇದ್ದರು!

ಗೇರ್ ಸೈಕಲ್ಲುಗಳು ಸಾಮಾನ್ಯರು ತಿಳಿದಂತೆ, ಪರ್ಯಾಯ ಯಂತ್ರಚಾಲಿತವಲ್ಲ, ಅದು ಶಕ್ತಿಯೂಡುವುದಿಲ್ಲ. ಸವಾರನ ಕಡಿಮೆ ಶ್ರಮಕ್ಕೆ ಹೆಚ್ಚಿನ ನೂಕುಬಲ ಒದಗುವಂತೆ ಮಾಡುವುದಷ್ಟೇ ಗೇರ್ ವ್ಯವಸ್ಥೆಯ ಗುಟ್ಟು. ಅದನ್ನು ಸರಳವಾಗಿ, ಹಿಂದೆಲ್ಲ ಭಾರೀ ಮರದ ದಿಮ್ಮಿಗಳನ್ನು ಗೇರ್ ಯುಕ್ತ ರಾಟೆಗಳ ಸಹಾಯದಲ್ಲಿ ಒಬ್ಬಿಬ್ಬ ಕೂಲಿಗಳು ಲಾರಿಗೇರಿಸುತ್ತಿದ್ದದಕ್ಕೆ ಹೋಲಿಸಬಹುದು. ವಿಶಿಷ್ಟ ಲೋಹ ಸಂಯೋಜನೆಯಿಂದ ಸೈಕಲ್ ತೂಕದಲ್ಲಿ ಕಡಿತ ಮತ್ತು ಬಿಡಿ ಭಾಗಗಳ ಚುರುಕು ಕೂಡಾ ಈ ಆಧುನಿಕ ಸೈಕಲ್ಲುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಕಠಿಣ ಪರಿಸ್ಥಿತಿಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ಒಂದು ಮಿತಿಯ ಪೆಡಲಿಕೆಯ ನಿರಂತರತೆಯನ್ನಷ್ಟೇ ಸವಾರ ಸಾಧಿಸಬೇಕು. ಇಲ್ಲವಾದರೆ ಏರು ತೀವ್ರವಿದ್ದಲ್ಲಿ, ಮುಂಚಕ್ರಕ್ಕೆ ಕಲ್ಲಕಟ್ಟೆ ಹೆಟ್ಟಿ ಚಕ್ರವೇ ಮೇಲೇಳುವ ಅಥವಾ ಹ್ಯಾಂಡಲ್ ಸ್ಥಿರತೆ ಕಳೆದು ಅಡ್ಡ ತಿರುಗಿಹೋಗುವ ಅಪಾಯವಿದ್ದೇ ಇದೆ. ಎರಡರ ಫಲಿತಾಂಶ ಒಂದೇ – ಸೈಕಲ್ ಮಗುಚಿ, ಸವಾರ ಪಲ್ಟಿ. ಚಕ್ರ ಏಳದಂತೆ ದೇಹವನ್ನು ಮುಂಬಾಗಿಸಿಕೊಂಡು, ವೇಗ ಇಳಿಯದಂತೆ ಪೆಡಲಿಕೆಯ ನೈರಂತರ್ಯ ಕಾಪಾಡಿಕೊಳ್ಳುವುದಕ್ಕೆ, ಸತತ ಅಭ್ಯಾಸ ಒಂದೇ ಸಹಕಾರಿ. ಅನಿಲ್ ಶಾಸ್ತ್ರಿ ವೃತ್ತಿಪರ ಪತ್ರಕರ್ತರೂ ಆದ್ದರಿಂದ ಹೆಚ್ಚಿನ ಮಾಹಿತಿ, ಫೋಟೋಗಳಿಗಾಗಿ ಅವರ ಸವಾರಿ ತಡವರಿಸುತ್ತಿತ್ತು. ಅನಿಲರ ಇನ್ನೊಂದು ಸಣ್ಣ ಕೊರತೆ ದೇಹಭಾರ. ಹಾಗಾಗಿಯೋ ಏನೋ ಅವರೇ ಹೇಳಿಕೊಂಡಂತೆ, ಹಿಂದಿನ ದಿನವೂ ಈ ದಾರಿಯ ಕೊನೆಯಲ್ಲೂ ಅವರು ಬೆಂಬಲದ ವ್ಯಾನಿಗೆ ಮೊರೆಹೋದರು. ನಾನು ತೀರಾ ಆಕರ್ಷಕವಾದರೆ ಮಾತ್ರ ಚಿತ್ರಕ್ಕೆ ನಿಲ್ಲುವವ. ಉಳಿದಂತೆ ಸವಾರಿಯ ಜತೆಗೆ ಗ್ರಹಿಸಿದ್ದರ ನೆನಪಿನ ಸುರುಳಿಯನ್ನಷ್ಟೇ ಅವಲಂಬಿಸಿ, ಅನುಭವ ಕಥಿಸುವ (ಬೇಜವಾಬ್ದಾರೀ ಅಂದರೂ ತಪ್ಪಿಲ್ಲ) ಹವ್ಯಾಸಿ. ಅನಿಲರ ಬಾಧ್ಯತೆ ಮತ್ತು ಒತ್ತಡಗಳಿಲ್ಲದ ನಾನು ನನ್ನದೇ ವೇಗ ಮತ್ತು ಸಮಯದಲ್ಲಿ ಬೇರೇ ಉಳಿಯುತ್ತಿದ್ದೆ.

ಹರಿಪ್ರಸಾದ್ ನಮ್ಮೂರಿನ ಬಹುಮಂದಿ ಸವಾರರಂತೆ, ಬಿಸಿಲಿನ ಹೊಡೆತ ತಪ್ಪಿಸಲು ಬೆಳಗ್ಗಿನ ಏಳೆಂಟು ಗಂಟೆಯೊಳಗೆ ನಿತ್ಯದ ಸವಾರಿ ಮುಗಿಸುತ್ತಿದ್ದರು. ಅದಕ್ಕೆ ಅನುಕೂಲವಾಗಿ ಹೆದ್ದಾರಿಗಳನ್ನೂ ಸಪುರ ಗಾಲಿಯ ಸೈಕಲ್ಲನ್ನೂ ಬಳಸುತ್ತಿದ್ದರು. ಅವರು ಕಾಡಿಗೆ ಪೆಡಲಿಗೆ ಬಂದ ಮೊದಲ ಹಂತದಲ್ಲಷ್ಟೇ (ಬಾಗ್ದೋರಾ) ಪರ್ವತಾರೋಹಿ ಸೈಕಲ್ ಮತ್ತು ಕಚ್ಚಾ ಮಾರ್ಗದ ಲಯವನ್ನು ಕಂಡುಕೊಂಡಿದ್ದರು. ಉಳಿದಂತೆ ನಿತ್ಯ ದೀರ್ಘ ಸೈಕಲ್ ಸವಾರಿಗಳ ಅಪಾರ ಅನುಭವವನ್ನು ಸೀತಾಮಾತದಲ್ಲಿ ತೊಡಗಿಸಿದರು. ಹರಿ ಸ್ವಭಾವತಃ ತುಂಬ ಹಿಂಜರಿಕೆಯವರು. ಇವರು ಪೆಡಲಿಕೆಯನ್ನಷ್ಟೇ ಸ್ವಂತ ಸುಖಕ್ಕೆ ನೆಚ್ಚಿದ್ದಾರೆ. ಉಳಿದಂತೆ ಆಯ್ದುಕೊಂಡ ಗೆಳೆತನದಲ್ಲಿ ಅಪಾರ ನಿಷ್ಠೆ ಮತ್ತು ಇನ್ನೊಬ್ಬರ ಕಥನದಲ್ಲಿ ಪ್ರೀತಿಯನ್ನಷ್ಟೇ ತೋರಬಲ್ಲ ಸಹೃದಯಿ. ಹಾಗಾಗಿ ಈ ದಾರಿಯಲ್ಲಿ ನಾನೂ ಹರಿಯೂ ಪರಸ್ಪರ ಇಪ್ಪತ್ತು ಮೂವತ್ತಡಿಯ ಆರೋಗ್ಯಪೂರ್ಣ ಅಂತರವನ್ನು ಕಾಯ್ದುಕೊಂಡು ಒಟ್ಟಿಗೇ ಸಾಗಿದೆವು. ಊರಿನಲ್ಲಿ ನನ್ನ ಸವಾರಿಗಳೆಲ್ಲ ಪರ್ವತಾರೋಹಿ ಸೈಕಲ್ಲಿನದ್ದೇ. ಹಾಗೇ ಅಲ್ಲಿ ನಾನಾರಿಸಿಕೊಳ್ಳುವ ದಾರಿಗಳು ಬಹುತೇಕ ಕಡಿಮೆ ಜನಪ್ರಿಯ, ಕಚ್ಚಾ ಮಾರ್ಗಗಳು. ಆ ಅನುಭವ ಇಲ್ಲಿ ನನಗೆ ಹೆಚ್ಚಿನ ಬಲ ಕೊಟ್ಟಿತು. ಇಲ್ಲಿ ಬೇಕಾಗುವುದು ವೇಗವಲ್ಲ, ಸ್ಥಿರತೆ ಮಾತ್ರ. ಒಂದೆರಡು ಕಡೆ, ಇತರ ಸವಾರರ ಅನುದ್ದೇಶಿತ ಅಡ್ಡಿಯಲ್ಲಿ, ನಾನು ಏರಿನ ನಡು ಹಂತದಲ್ಲಿ ಕೈ ಚೆಲ್ಲಿ, ಸೈಕಲ್ ನೂಕುವಂತಾಗಿತ್ತು. ಮತ್ತೆ ಲವಕುಶ ಕುಂಡ ಕಳೆದದ್ದೇ ಸಿಗುವ ಏರಿನಲ್ಲಿ ಸಣ್ಣದಾಗಿ ಸೋಲಲೂ ಬೇಕಾಯ್ತು. ಅದು ಸುಮಾರು ಮುನ್ನೂರಡಿ ಉದ್ದದ ಮಹಾ ಏರು. ಬಹುಶಃ ಇಲಾಖಾ ವಾಹನಗಳಿಗೂ ಅಸುಧಾರಣೀಯವಾದ್ದಕ್ಕೇ ಇರಬೇಕು, ಅಷ್ಟಕ್ಕೇ ಕಾಂಕ್ರೀಟ್ ಹೊದಿಕೆ ಇದೆ. ಅಲ್ಲಿ ನಾನು ಏರಿನ ತೀವ್ರತೆಗೆ ಮುಂಚಕ್ರ ಏಳಬಾರದೆಂದು ಮುಂಬಾಗಿದ್ದು ಹೆಚ್ಚಾಯ್ತೋ ಬಲವೂಡುವ ಹಿಂಚಕ್ರ ಒತ್ತು ಕಳೆದುಕೊಂಡಿತ್ತೋ ತಿಳಿಯಲಿಲ್ಲ, ಜಾರಿ ತೂರಾಡಿಹೋದೆ. ಕಠಿಣ ಕಚ್ಚಾ ಏರುಗಳಲ್ಲೂ ಕಲ್ಲಗುಂಡುಗಳ ಮೇಲೆ ಪುಟ ನೆಗೆದೂ ಮಗುಚದ ನಾನಿಲ್ಲಿ, ಇಳಿದು ನೂಕುವುದು ಅನಿವಾರ್ಯವಾಯ್ತು!

ಹರಿ ಮತ್ತು ನಾನು ಗದ್ದೆಯ ಹೂಟೆಯಲ್ಲಿ ಬಳಲಿದ ಜೋಡೆತ್ತುಗಳನ್ನು ಪ್ರಚೋದಿಸುವಂತೆ ಸೈಕಲ್ಲಿಗೆ (?) ಹುಯ್ಲು, ಕಾಕುಗಳನ್ನು ಹಾಕುತ್ತ ಬಹುತೇಕ ಏರುಗಳನ್ನು ಸೀಟಿಳಿಯದೇ ಮೆಟ್ಟಿದೆವು. ಆಗೀಗ ಬರುತ್ತಿದ್ದ ಸಣ್ಣ ಇಳಿಜಾರುಗಳಲ್ಲಿ ನಾವು ಬಹಳ ನಿಧಾನಿಗಳು. ಇತರ ಕೆಲ ಸವಾರರು ಸ್ವಂತ ಸಾಮರ್ಥ್ಯದಲ್ಲೋ ಹುಂಬ ಧೈರ್ಯದಲ್ಲೋ ಒಮ್ಮೆಗೆ ಹಿಂದಿನಿಂದ ಭರಭರನೆ (ಹೆದ್ದಾರಿಗಳಲ್ಲಿ ಭಾರದ ವಾಹನಗಳು ಓಡಿದಂತೇ) ಧಾವಿಸುವಾಗ ನಮ್ಮೆದೆ ತಲ್ಲಣಿಸುತ್ತಿತ್ತು. ಅವರ ಹಾಗೂ ನಮ್ಮ ಅದೃಷ್ಟಕ್ಕೆ ಯಾರೂ ನಮಗೆ ಢಿಕ್ಕಿಯನ್ನೂ ಕೊಡಲಿಲ್ಲ, ನಮ್ಮೆದುರು ಅಡ್ಡಕ್ಕೂ ಬೀಳಲಿಲ್ಲ. ನಾವು ಕಾಣದಂತೆ ಬಿದ್ದು ಎದ್ದವರು, ತರಚಲು ಗಾಯ ಮಾಡಿಕೊಂಡವರು, ಸಣ್ಣಕ್ಕೆ ಕುಂಟಡಿಯಿಡುವಂತಾದವರು ಕೆಲವರಿದ್ದರು, ಬಿಡಿ.

ಹಿಂದಿನ ದಿನಕ್ಕಿಂತ ಈ ವಲಯದಲ್ಲಿ ಜಲಮೂಲಗಳು, ಸಹಜವಾಗಿ ವನ್ಯದ ದಟ್ಟಣೆ ತುಸು ಹೆಚ್ಚೇ ಇತ್ತು. ಅದರಲ್ಲೂ ಮೊದಲೇ ಉಲ್ಲೇಖಿಸಿದ ಭಾಗೀ ಬಾವಡಿ ಆಸುಪಾಸಿನಲ್ಲಿ ಒಂದೆಡೆ ದಾರಿ ಸ್ವಲ್ಪ ತೊರೆಗಿಳಿದೇ ಸಾಗಿತ್ತು. ಇಲ್ಲಿ ಕಂಬುಳದ ಕೋಣಗಳಂತೆ ನೀರ ಅಲೆ ಎಬ್ಬಿಸುವ ಉಮೇದಿನಲ್ಲೋ ಅತಿ ಎಚ್ಚರದ ತಡವರಿಕೆಯಲ್ಲೋ ಒಂದಿಬ್ಬರು ನಿರಪಾಯವಾಗಿ ಮಗುಚಿಬಿದ್ದದ್ದೂ ಇತ್ತು.

ಸೀತಾಮಾತ ಶಿಬಿರತಾಣದಿಂದ ಹೊರಟ ಮೊದಲಲ್ಲಿ, ಅದುವರೆಗೆ ನಮ್ಮನ್ನು ಕಾರು ಜೀಪುಗಳಲ್ಲಷ್ಟೇ ಅನುಸರಿಸಿದ್ದ ವನ್ಯ ಮುಖ್ಯಸ್ಥ ರಾಹುಲ್ ಭಟ್ನಾಗರ್ ಮತ್ತು ಯಾತ್ರಾ ಮುಖ್ಯಸ್ಥ ಸುಹೇಲ್ ಮಜ್ಬೂರ್ ಅವರುಗಳಿಗೂ ಉಮೇದು ಹೆಚ್ಚಿದ್ದಿರಬೇಕು. ಸವಾರಿಬಿಟ್ಟವರ ಒಂದೊಂದು ಸೈಕಲ್ಲನ್ನು ಇವರು ಹಿಡಿದು, ಏರಿಯೇ ಬಿಟ್ಟರು. ಎಂದೋ ಸೈಕಲ್ ಬಿಟ್ಟ ನೆನಪಲ್ಲಿ (ನಿತ್ಯ ಅಭ್ಯಾಸ ಇಲ್ಲದ ಕೊರತೆಯಲ್ಲಿ) ಅವರು ಕೆಲ ದೂರವನ್ನಷ್ಟೇ ಕ್ರಮಿಸಿದರು. ಆದರೆ ಅದು ಇತರ ಭಾಗಿಗಳಿಗೆ ಕೊಟ್ಟ ಉತ್ತೇಜನ ಖಂಡಿತಕ್ಕೂ ಸಣ್ಣದಲ್ಲ.
ಹನ್ನೆರಡು ಗಂಟೆಯ ಆಸುಪಾಸಿನಲ್ಲಿ ಒಮ್ಮೆಗೆ ನಮ್ಮ ಆರೋಹಣ ಪರ್ವ ಮುಗಿದಿತ್ತು. ಕಾಡೂ ಕಳೆದು ದಾರಿ ಮಟ್ಟಸ ಬಯಲಿನಲ್ಲಿ ಓಡಿತ್ತು. ಜತೆಗೇ ಢಮ ಢಮ ಡೋಲೂ ಕೇಳ ತೊಡಗಿದಂತೇ ನಮ್ಮ ಚೈತನ್ಯ ಇಮ್ಮಡಿಸಿತು. ಒಟ್ಟಾರೆ ಸುಮಾರು ಹದಿನೆಂಟೇ ಕಿಮೀ ಅಂತರದಲ್ಲಿ ನಾವು ದಿನದ ಮತ್ತು ‘ಕಾಡಿಗೆ ಪೆಡಲಿ’ಯ ಕೊನೆಯ ಹಂತವನ್ನೂ ಯಶಸ್ವಿಯಾಗಿ ಮುಗಿಸಿದ್ದೆವು. ಸೀತಾಮಾತಾ ವನಧಾಮದ ಚಿತೋರ್‍ಘರ್ ವಲಯ ದ್ವಾರದ ಕಛೇರಿ ವಠಾರ ನಮ್ಮನ್ನು ಹಾರ್ದಿಕವಾಗಿ ಸ್ವಾಗತಿಸಿತು. ಮುಂದಿನ ಸುಮಾರು ಮುಕ್ಕಾಲು ಗಂಟೆಯ ಉದ್ದಕ್ಕೂ ಒಬ್ಬೊಬ್ಬರಾಗಿಯೇ ಸವಾರರು ಬರುತ್ತಲೇ ಇದ್ದರು. ಅವರೆಲ್ಲರ ಮುಖ, ಹಾವಭಾವಗಳಲ್ಲಿ ಸಾರ್ಥಕ್ಯದ ಭಾವ ಡೋಲಿನ ಧಮಾಕದಷ್ಟೇ ಸ್ಪಷ್ಟವಾಗಿ ಮಿಡಿಯುತ್ತಿತ್ತು. ಭರ್ಜರಿ ಊಟ, ಮೊದಲೇ ಹೇಳಿದಂತೆ ಸಬೀಹಾರ ಹುಟ್ಟು ಹಬ್ಬದಾಚರಣೆ, ಕೊನೆಯಲ್ಲಿ ಸಮಾರೋಪ ಸಮಾರಂಭ. ಒಬ್ಬೊಬ್ಬರಾಗಿ ಎಲ್ಲರನ್ನೂ ವೇದಿಕೆಯ ಗಣ್ಯರೆದುರು ಕರೆಯಿಸಿ, ಎರಡೆರಡು ಸ್ಮರಣಿಕೆ, ಅರ್ಹತಾ ಪತ್ರ ಕೊಟ್ಟು, ಎರಡು ಮಾತಿನ ಅನಿಸಿಕೆಗಳಿಗೂ ಅವಕಾಶವನ್ನು ಮುಕ್ತವಾಗಿರಿಸಿದ್ದರು. ನಮ್ಮ ಕಡೆಯಿಂದ ಎಂಬಂತೆ, ಅನಿಲ್ ಶಾಸ್ತ್ರಿ ಎರಡು ಮೆಚ್ಚುಗೆಯ ನುಡಿಯಾಡಿದರು. ಜತೆಗೇ ಭಾಗಿಗಳಿಗೆ ಈ ವನ್ಯಧಾಮಗಳ ಕುರಿತ ಮಾಹಿತಿ ಕೊಡದ ಕೊರತೆಯನ್ನು ಸರಿಯಾಗಿಯೇ ಬೊಟ್ಟು ಮಾಡಿ ತೋರಿ, ಮುಂದಿನ ವರ್ಷಗಳಲ್ಲಿ ಮುದ್ರಿತ ಕರಪತ್ರವನ್ನೇ ಕೊಡಬಹುದು ಎಂಬ ಪರಿಹಾರವನ್ನೂ ಸೂಚಿಸಿದರು.

ಸಭೆಯ ಮುಕ್ತಾಯದೊಡನೆ ಅದುವರೆಗೆ ನಮ್ಮವಾಗಿದ್ದ ಸೈಕಲ್ಲುಗಳನ್ನು ಮರಳಿಸಿ, ನಮ್ಮ ಹೆಚ್ಚುವರಿ ಚೀಲಗಳನ್ನು ಸಂಗ್ರಹಿಸಿಕೊಂಡು, ಕಾದಿದ್ದ ಬಸ್ಸೇರಿದೆವು. ಭಾರೀ ಬಸ್ಸು ಮೊದಮೊದಲು ಹಳ್ಳಿದಾರಿಗಳಲ್ಲಿ ಸ್ವಲ್ಪ ನಿಧಾನಿಸಿದರೂ ಅನಂತರ ಹೆದ್ದಾರಿ ಸೇರಿ, ಸುಮಾರು ಒಂದು ನೂರು ಕಿಮೀ ಪಯಣಿಸಿ ಸಂಜೆ, ಸಕಾಲಕ್ಕೆ ನಮ್ಮನ್ನು ಮತ್ತೆ ಉದಯಪುರ ಸೇರಿಸಿತ್ತು. ನಾವು ಮೂವರು ಚುರುಕಾಗಿ ಬೈಕ್ ಸ್ಟುಡಿಯೋದಲ್ಲೇ ಇದ್ದ ಹೋಟೆಲ್ ವ್ಯವಸ್ಥೆಯಲ್ಲೇ ಪುನಶ್ಚೇತನರಾಗಿ, ಇನ್ನೊಂದೇ ಹೊಸ ಅನುಭವಕ್ಕೆ ಪೀಠಿಕೆ ಎಂಬಂತೆ ರೈಲ್ವೇ ನಿಲ್ದಾಣಕ್ಕೆ ಧಾವಿಸಿದೆವು.

ಫಲಶ್ರುತಿ, ಮಂತ್ರಾಕ್ಷತೆ

‘ಪೆಡಲ್ ಟು ಜಂಗಲ್’ ಸಮಾರೋಪದಲ್ಲಿ ಕೊಟ್ಟ ಮೈಕನ್ನು ನಾನು ಸವಿನಯ ಬಳಸದೆ ಮರಳಿಸಿದೆ. ಮತ್ತೆ ಎಲ್ಲರಿಗೂ ಕೊಟ್ಟ ಫೀಡ್ ಬ್ಯಾಕ್ ಪತ್ರದಲ್ಲಿ “ಸಮಯ ಬೇಕು” ಎಂದೇ ಬರೆದೆ, ಅವಸರದ ಹೇಳಿಕೆ ಕೊಡಲಿಲ್ಲ. ಅನುಭವವನ್ನು ವಿರಾಮದಲ್ಲಿ ಮಥಿಸಿ, ಮೂಡಿದ ವಿಚಾರಗಳನ್ನಷ್ಟು ಹಂಚಿಕೊಳ್ಳುವ ಸಮಯ ಈಗ ಬಂದಿದೆ.

‘ಪೆಡಲ್….’ ಎನ್ನುವಲ್ಲಿನ ಪ್ರವಾಸದ ಕಲ್ಪನೆಯನ್ನು ಸಲಕರಣೆ, ತಿನಿಸು, ಪಾನೀಯ, ವಾಸ, ಮಾರ್ಗದರ್ಶನ ಮುಂತಾದವುಗಳಲ್ಲಿ ಜಂಟಿ ವ್ಯವಸ್ಥಾಪಕರು ತುಂಬ ಸಮರ್ಥವಾಗಿ ನಡೆಸಿದ್ದಾರೆ, ಹೃತ್ಪೂರ್ವಕ ಧನ್ಯವಾದಗಳು. ಆದರೆ ಇದಕ್ಕೆ ಸಾಹಸ ಮತ್ತು ಪರಿಸರದ ಆಯಾಮವೂ ಇರುವುದನ್ನು ಅವರು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ಅಸ್ಪಷ್ಟ ಕೊರಗು, ನನ್ನನ್ನು ಪ್ರತಿಕ್ರಿಯಿಸುವಲ್ಲಿ ನಿಧಾನಿಸಿತು. ಅಭ್ಯರ್ಥಿ ಪತ್ರಗಳೇನೋ ನೂರೈವತ್ತಕ್ಕೂ ಮಿಕ್ಕು ಬಂದಿದ್ದವಂತೆ. “ನಮ್ಮ ಆಯ್ಕೆಯಲ್ಲಿ ಉಳಿದವರು ಮಾತ್ರ ಮೂವತ್ತೇಳು” ಎಂದೇನೋ ಲೆ ಟೂರ್ ಡಿ ಇಂಡಿಯಾದ ಕುಶಾಲ್ ರಾಥೋರ್ ಒಮ್ಮೆ ಉದ್ಗರಿಸಿದ್ದರು. ನಿಜ, ದುಡ್ಡು ಕೊಟ್ಟವರಿಗೆಲ್ಲ ಇದು ಸಿಗುವ ‘ಸವಲತ್ತು’ ಅಲ್ಲ. ಇದು ಸಾರ್ವಜನಿಕ ರಂಜನೆಯನ್ನು ಮೀರಿದ ಒಂದು ಆದರ್ಶ. ಆದರೆ ಶಿಬಿರ ನಡೆಸುವಲ್ಲಿ ಮಾತ್ರ ಆ ಬಿಗಿ ಕಾಣಲಿಲ್ಲ. ಸಾಹಸದ ಕಲ್ಪನೆ, ಸಮಯದ ಬೆಲೆ ಮತ್ತು ಪರಿಸರದ ಬಗೆಗಿನ ಕುತೂಹಲ ಹೆಚ್ಚಿನವರಿಗೆ ಇದ್ದಂತಿರಲಿಲ್ಲ, ಸಂಘಟಕರು ಹೇರಲಿಲ್ಲ. ಇದರಿಂದ ಅಲ್ಪ ಸಾಧನೆಯನ್ನು, ಉತ್ಪ್ರೇಕ್ಷಿತ ಬೆಳಕಿನಲ್ಲಿ ನೋಡುವಂತಾಗಿದೆ. ಒಂದೆರಡು ಉದಾಹರಣೆ ನೋಡಿ.

ಮೊದಲನೇದಾಗಿ, ಎರಡೂ ಮಧ್ಯಾಹ್ನಗಳಲ್ಲಿ ನಾವು ಊಟವನ್ನು ತುಂಬ ತಡವಾಗಿ ಮಾಡುವಂತಾಯ್ತು. ಇದರಲ್ಲಿ ದಾರಿಯ ಕಾಠಿಣ್ಯ ಅಥವಾ ಕ್ರಮಿಸಿದ ಅಂತರ ದೊಡ್ಡ ಸಂಗತಿಯಾಗಿರಲಿಲ್ಲ. ಪರಿಣಾಮವಾಗಿ ಮುಂದಿನ ಕಲಾಪಗಳೆಲ್ಲ ಒತ್ತಡ ಹೆಚ್ಚಿ, ಅಡಿ ತಪ್ಪಿತ್ತು. ಇನ್ನೊಂದು, ಪರಿಸರ ಸಂವಾದ ಮತ್ತು ಜನಪದಕ್ಕೆ ಸ್ಪಂದನ, ಇದು ನಮ್ಮ ಯಾನದ ಉದಾತ್ತ ಆಶಯ. ಆದರೆ ನಾವು ಭೇಟಿಕೊಟ್ಟು ಸಂವಾದ ನಡೆಸಿದ್ದು ಒಂದೇ ಶಾಲೆಗೆ. ನಮಗೆ ಅಲ್ಲಲ್ಲಿ ತಿಲಕವಿಟ್ಟು, ಮಾಲೆ ಹಾಕಲು ಕಾದಿರುತ್ತಿದ್ದ ಹಳ್ಳಿಗರೆಲ್ಲ ಸ್ಪಷ್ಟವಾಗಿ ಅರಣ್ಯ ಇಲಾಖೆಯ ವ್ಯವಸ್ಥೆಯ ಭಾಗ. ಇವರೆದುರು ನಾವೇನೋ ಭಾರೀ ಆದರ್ಶವಾದಿಗಳಂತೆ, ಸಾಹಸಿಗಳಂತೆ ಪೋಸು ಕೊಡುವಂತಾದ್ದು ನಾಚಿಗೆಗೇಡು.

ಜೈಸಮಂಡ್ ಶಿಬಿರದಲ್ಲಿ ಅಷ್ಟು ಗದ್ದಲದ ಮೈಕ್, ಝಗಮಗಿಸುವ ದೀಪ ಬೇಕಿತ್ತೇ? ಸೀತಾಮಾತಾದೊಳಗೆ ತಂತ್ರಜ್ಞ ಮೈಕ್ ಸಜ್ಜುಗೊಳಿಸುತ್ತಿದ್ದಾಗಲೇ ಡೀಎಫೋ ಸವಿತಾ ಗಮನಿಸಿ, ನಿಷೇಧಿಸಿದ್ದು ತುಂಬ ಸರಿಯಾಯ್ತು. ಆದರೂ ರಾತ್ರಿ ಇಡೀ ವಿದ್ಯುಜ್ಜನಕದ ಗುಡುಗುಡಿಕೆಯೊಡನೆ ದೀಪ ಉರಿಸಿದ್ದು ಸರಿಯೇ? ಎಲ್ಲರಿಗೂ ಟಾರ್ಚ್ ತರಲು ಸೂಚಿಸಿದ್ದರು, ಆದರೆ ಬಳಸಲು ಬಿಡಲೇ ಇಲ್ಲ! ರಾತ್ರಿಯ ಸ್ವಚ್ಛ (ಹೊಗೆ, ದೂಳು ಮತ್ತು ಅನಾವಶ್ಯಕ ಬೆಳಕು ಇಲ್ಲದ) ಆಕಾಶ ದಿಟ್ಟಿಸುವ, ಕಾಡಿನ ಸಹಜ ಸದ್ದಿಗೆ ಕಿವಿಯಾಗುವ ಅವಕಾಶ ತಪ್ಪಿಯೇ ಹೋಯ್ತು. ನೀರ ಸಾಮೀಪ್ಯ ಬಯಸುವ ವನ್ಯಜೀವಿಗಳನ್ನೂ ಪರೋಕ್ಷವಾಗಿ ನಿರ್ಬಂಧಿಸಿ, ‘ಹೋಂ ಅವೇ ಫ್ರಮ್ ಹೋಂ’ ಅನುಭವಕ್ಕೆ ನಮ್ಮನ್ನು ಒಡ್ಡಿದ್ದು ಸರಿಯಲ್ಲ.

ಪ್ಲ್ಯಾಸ್ಟಿಕ್ ಅಥವಾ ಕಾಗದ ಲೋಟದ ಬದಲು ನಮಗೇ ಲೋಟ ತರಲು ಸೂಚಿಸಿದ್ದರು, ಬಳಕೆಯ ಅವಕಾಶ ತಪ್ಪಿಸಿ ಬಿಟ್ಟರು. ನಾಗರಿಕ ಕಸದ ಉತ್ಪತ್ತಿಯನ್ನು ತಡೆಯುವ ಬದಲು, ನಮ್ಮ ಒಂದು ರಾತ್ರಿ ವಾಸಕ್ಕೇ ಹತ್ತಿಪ್ಪತ್ತು ಗೋಣಿ ಕಸ ಸಂಗ್ರಹಿಸುವಂತಾದದ್ದು ನಿಜಕ್ಕೂ ಶೋಚನೀಯ.

ಸೈಕಲ್ ಆರೋಗ್ಯಪೂರ್ಣ ಚಟುವಟಿಕೆಯ ಸಂಕೇತ. ಅದನ್ನು ಅವಮಾನಿಸುವಂತೆ, ಅದೂ ರಕ್ಷಿತಾರಣ್ಯದ ಒಳಗೆ, ಮದ್ಯಪಾನಕ್ಕೆ ಅವಕಾಶ ಒದಗಿಸಿದ್ದು ದೊಡ್ಡ ತಪ್ಪು. ವನ್ಯದ ಗಂಭೀರ ಆಸಕ್ತಿಯ ಜನ ಅಖಿಲ ಭಾರತ ಮಟ್ಟದಲ್ಲಿ ಒಂದಾದ ಕೂಟವಿದು. ಇಲ್ಲಿ ಪರಸ್ಪರ ವಿಚಾರ ವಿನಿಮಯಕ್ಕೆ ತುಂಬ ಒಳ್ಳೆಯ ವೇದಿಕೆಯಾಗಬೇಕಿತ್ತು ಶಿಬಿರಾಗ್ನಿಯ ಸಮಯ. ಆದರೆ ಅದನ್ನು ಸಾಮಾನ್ಯ ಪ್ರವಾಸೀ ಯೋಜನೆಯಂತೆ, ಬಾಡಿಗೆ ಮಂದಿಯನ್ನು ತರಿಸಿ, ಮನರಂಜನಾ ಕಲಾಪಕ್ಕೆ ಮೀಸಲಿಟ್ಟದ್ದು ಏನೇನೂ ಸರಿಯಲ್ಲ. ಉದ್ಘಾಟನಾ ಸಭೆಯಲ್ಲಾದ ಔಪಚಾರಿಕ ಸ್ವಪರಿಚಯ, ಮುಂದೆ ಪರಸ್ಪರ ಎದುರಾದಾಗ ಹಾಯ್, ಬಾಯ್ ಗಳನ್ನು ಮೀರಿ ಬೆಳೆಯಲು ಅವಕಾಶ ಒದಗಲೇ ಇಲ್ಲ.

ಯೋಜನೆಯ ಉತ್ತರಾರ್ಧ ’….ಟು ಜಂಗಲ್’ನ್ನು, ಸ್ವತಃ ವನ್ಯ ಇಲಾಖೆಯೇ ವಹಿಸಿಕೊಂಡದ್ದು (ಕೇವಲ ಅನುಮತಿ ಕೊಟ್ಟದ್ದಲ್ಲ), ನನಗಂತೂ ಬಹಳ ದೊಡ್ಡ ಆದರ್ಶದ ಚಿತ್ರಣ ಕೊಟ್ಟಿತ್ತು. ಕಳೆದ ನಲ್ವತ್ತಕ್ಕೂ ಮಿಕ್ಕು ವರ್ಷಗಳಿಂದ ಪ್ರಕೃತಿ/ ವನ್ಯ ಸಂಬಂಧಿಸಿದ ಚಟುವಟಿಕೆಗಳಲ್ಲಿ ನನ್ನದೇ ಮಿತಿಯಲ್ಲಿ ತೀವ್ರವಾಗಿ ತೊಡಗಿದ ಅನುಭವ ನನ್ನದು. ನಾಗರಹೊಳೆಯಿಂದ ತೊಡಗಿ, ಬಂಡೀಪುರ, ಕುದುರೆಮುಖ, ಪುಷ್ಪಗಿರಿ, ಬ್ರಹ್ಮಗಿರಿಗಳು ನನಗೆ ನಿಕಟ ಸಂಬಂಧಿಗಳು. ನನ್ನ ಮೂರು ಬಾರಿಯ ಮೋಟಾರ್ ಸೈಕಲ್ ಯಾನದಲ್ಲೂ ನಾನು ಪ್ರಾಕೃತಿಕ ಭಾರತವನ್ನೇ ನೋಡ ಹೋದವ. ಆಗಲೂ ನನ್ನ ಪ್ರಧಾನ ಲಕ್ಷ್ಯ ಮತ್ತು ಸಾಧನೆಯಲ್ಲಿ ದಾಖಲಾದ ಹೆಸರುಗಳು – ಎರುವಿಮಲೈ, ಶಿವಪುರಿ, ರಣಥೊಂಬರಾ, ಭರತ್ಪುರ್, ಕನ್ಹಾ, ಬಾಂಧವ್ ಘರ್, ಮಹಾನದಿ, ಕೇವಲ್ ದೇವ್, ಚಿಲ್ಕಾ ಮೊದಲಾದ ವನಧಾಮಗಳೇ. ಅಂಥದ್ದನ್ನೇ ಇಲ್ಲಿ ರಾಜಸ್ತಾನದ ವನ್ಯ ಇಲಾಖೆ ಕೊಡುತ್ತಿದೆ ಎನ್ನುವ ಏಕೈಕ ಉತ್ಸಾಹದಲ್ಲಿ ನಾನು ಬಂದಿದ್ದೆ. ಆದರೆ ದಕ್ಕಿದ್ದು ಇಲಾಖಾ ಸಿಬ್ಬಂದಿಗಳ ಅನುತ್ಪಾದಕ ಸ್ನೇಹ ಮತ್ತು ಎರಡು ವನಧಾಮದ ಹಾರು ನೋಟ ಮಾತ್ರ. ಇಲ್ಲಿನ ವನ್ಯ ವಿಶೇಷ, ವರ್ತಮಾನದ ವಿದ್ಯಮಾನಗಳು ಮತ್ತು ಭವಿಷ್ಯದ ಕಲ್ಪನೆಗಳನ್ನು ಬಿಂಬಿಸುವ ಒಂದೂ ಸಂಗತಿ ನಮ್ಮ ನಾಲ್ಕು ದಿನಗಳ ಸಹಯೋಗದಲ್ಲಿ ಸಿಗಲೇ ಇಲ್ಲ.

ಭಾಗೀ ಬಾವಡಿ ಬಳಿ ಹಳ್ಳಿ ಹುಡುಗನನ್ನು ಚಿರತೆ ತಿಂದ ಕತೆ ಕೇಳಿದೆ. ಅಲ್ಲೇ ಯಾರೋ ಗುಡಾರ ಹಾಕಿ ಪಿಕ್ನಿಕ್ ನಡೆಸುತ್ತಿದ್ದದ್ದೂ ಕಂಡೆವು. ಕಾಡಿನೊಳಗೆ ಹಳ್ಳೀ ಜನಗಳ ಸಂಚಾರ, ಜಾನುವಾರುಗಳ ಮೇಯಾಟ ತಪ್ಪಿದಂತಿರಲಿಲ್ಲ. ಎಲ್ಲೋ ಒಂದೆಡೆ ಜಾನುವಾರು ತಡೆಗೆಂಬಂತೆ ಎಂದೋ ಮಾಡಿದ ಮೋಟುಗೋಡೆ ವನ್ಯರಕ್ಷಣೆಗೆ ಪರ್ಯಾಪ್ತವಾಗುವುದು ಅಸಾಧ್ಯ. ಗಣಿಗಾರಿಕೆಯ ತೊಂದರೆಗಳು, ಜಲಾಶಯಗಳಿಗೆ ತುಂಬುವ ಹೂಳು, ಬೆಂಕಿ, ಕಳ್ಳಬೇಟೆ, ಮೋಪುಗಳ್ಳತನ, ತೆಂಡು ಎಲೆ, ಜೇನುಗಳಾದಿ ವನೋತ್ಪತ್ತಿ ಸಂಗ್ರಾಹಕರ ಸಮಸ್ಯೆ, ಹಳ್ಳಿಗಳ ಮರುವಸತಿ….. ಹೀಗೆ ನೂರೆಂಟು ವಿಷಯಗಳ ಸೋದಾಹರಣ ಅರಿವು, ಚರ್ಚೆ ಈ ಯಾನದ ಭಾಗವಾಗಲೇ ಇಲ್ಲ.

ಬೈಕ್ ಸ್ಟುಡಿಯೋದ ಆವರಣದಲ್ಲಿ ನಡೆದ ಪಕ್ಕಾ ವನ್ಯ ಪರವಾದ ಉದ್ಘಾಟನಾ ಕಲಾಪದಲ್ಲಿ ಏಷ್ಯಾದ ಅತ್ಯಂತ ದೊಡ್ಡ ತೆರೆದ ಗಣಿಗಾರಿಕೆಯ ಗಣ್ಯ ಅಧಿಕಾರಿ ಭಾಗವಹಿಸಿದ್ದಂತು ನನಗೆ ಬಹಳ ದೊಡ್ಡ ಆಘಾತವಾಗಿತ್ತು. ಪಶ್ಚಿಮ ಘಟ್ಟದಲ್ಲಿದ್ದ ಕುದುರೆಮುಖ ಕಬ್ಬಿಣದ ಅದಿರಿನ ಗಣಿಗಾರಿಕೆಯನ್ನು ಬಹುದೀರ್ಘ ನ್ಯಾಯಿಕ ಹೋರಾಟದಲ್ಲಿ ಉಚ್ಛಾಟಿಸಿದ ಬಳಗದ (ವೈಲ್ಡ್ ಲೈಫ್ ಫಸ್ಟ್) ತೀರಾ ಸಣ್ಣ ಪಾಲುದಾರನಾಗಿ ನಾನಿದನ್ನು ನಿರೀಕ್ಷಿಸಿರಲೇ ಇಲ್ಲ. ಮೊದಲ ದಿನ ನಾವು ಬಾಗ್ದೋರಾದಿಂದ ಹೊರಗೆ ಪೆಡಲುತ್ತಿದ್ದಾಗ ಕಾಣಿಸಿದ ಈ ಗಣಿಗಾರಿಕೆ ನಡೆಸಿದ ಪಾರಿಸರಿಕ ದುರಂತದ ಚಿತ್ರ ಸ್ಪಷ್ಟವಿತ್ತು. ಅದು ನೇರ ಬಾಗ್ಡೋರಾದ ಪರಿಸರಕ್ಕೂ, ಕೆಳ ಪಾತ್ರೆಯ ಜೈಸಮಂಡ್ ಸರೋವರಕ್ಕೂ ಮಾಡುತ್ತಿರುವ ಅನ್ಯಾಯ ಸಾಮಾನ್ಯ ಜ್ಞಾನದ ಯಾರಿಗೂ ಅರಿವಾಗುತ್ತದೆ. ಅದರ ವಿರುದ್ಧದ ಮಾತಂತಿರಲಿ, ಒಂದು ಉಲ್ಲೇಖವನ್ನೂ ನಮ್ಮೆದುರು ಮಾಡದಿದ್ದುದು ಅನ್ಯಾಯ. ಲೋಕ ಸತ್ಯಗಳನ್ನು (ವೃದ್ಧಾಪ್ಯ, ಬಡತನ, ಮರಣ…) ಶುದ್ಧೋದನ ಮಹಾರಾಜ ಬಾಲ ಗೌತಮನಿಂದ ಮುಚ್ಚಿಡಲು ಹೊರಟಂತೇ ಇತ್ತು, ವನ್ಯ ಇಲಾಖೆಯ ಪ್ರಯತ್ನ.

ಸೈಕಲ್ ಯಾನಿಗಳು ಕೊಟ್ಟ ಜುಜುಬಿ ಒಂಬತ್ತು ಸಾವಿರ ರೂಪಾಯಿಯ ಶುಲ್ಕ – ಊಟ, ತಿಂಡಿ, ಗುಡಾರಕ್ಕೇ ಮುಗಿದಿದ್ದರೆ ಆಶ್ಚರ್ಯವೇನೂ ಇಲ್ಲ. ಅವನ್ನು ಮೀರಿದ್ದು, ಕನಿಷ್ಠ ಮೂರು ದಿನ ತೊಡಗಿಕೊಂಡ ಅಸಂಖ್ಯ ವನ್ಯ ಸಿಬ್ಬಂದಿ ಮತ್ತು ಸೌಕರ್ಯಗಳು. ಇವುಗಳ ಬೆಲೆ ಕಟ್ಟುವುದು ಕಷ್ಟ. ಇದನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸುವುದರೊಡನೇ ಜಾಗೃತ ಪ್ರಜೆಯಾಗಿ ಕೇಳುತ್ತೇನೆ – ಇದು ಯಾವ ಪುರುಷಾರ್ಥಕ್ಕೆ? ನನ್ನ ಇಲ್ಲಿನ ಅನುಭವದ ಬಲದಲ್ಲಿ ಹೇಳುವುದಿದ್ದರೆ, ನಿಜ ವನ್ಯ ರಕ್ಷಣೆಗೆ ಬೇಕಾದ ಸಿಬ್ಬಂದಿ, ಸವಲತ್ತು ಮತ್ತು ಶಿಕ್ಷಣಗಳ ತೀವ್ರ ಕೊರತೆಯಲ್ಲಿರುವ ಇಲಾಖೆ ಇಂಥಾ ಕೆಲಸ ಮಾಡುವ ಅಗತ್ಯ ಖಂಡಿತಾ ಇಲ್ಲ. ವನ್ಯ ಸಂರಕ್ಷಣೆ ಎಂದೂ ಪ್ರತ್ಯಕ್ಷ ಆದಾಯ ಕೊಡುವಂತದ್ದಲ್ಲ ಮತ್ತು ಜನಪ್ರಿಯ ಪ್ರಚಾರ ಬಯಸುವಂತದ್ದೂ ಆಗಬಾರದು.

ಒಟ್ಟಾರೆ ತಂಡದಲ್ಲಿ ಪ್ರಾಯದ ಹಿರಿತನದಿಂದ (ಹುಟ್ಟಿನ ಆಕಸ್ಮಿಕದಿಂದ ಇಂದು ನನಗೆ ೬೭ ನಡೆದಿದೆ) ನಾನು ಮೇಲಿದ್ದೆ. ಭಟ್ನಾಗರ್ ಹಾಗೂ ಇನ್ನೊಂದೆರಡು ಸಹ ಸವಾರರು ಷಷ್ಟ್ಯಬ್ದಿ ಸಮೀಪದವರೇ ಇದ್ದರು. ನಾನು ರೂಢಿಸಿಕೊಂಡ ಜೀವನ ಶೈಲಿ ಮತ್ತು ನನಗೊದಗಿದ ಅವಕಾಶಗಳಷ್ಟೇ ನನ್ನನ್ನು ಅವರಿಂದ ತುಸು ಮೇಲೆ ಕಾಣಿಸಿದ್ದಿರಬಹುದು. ಆದರೂ ಅಷ್ಟಕ್ಕೇ ಇಡಿಯ ಬಳಗ ಯಾನದುದ್ದಕ್ಕೂ ನನಗೆ ಕೊಟ್ಟ ಗೌರವ, ಉತ್ತೇಜನ ತುಂಬ ದೊಡ್ಡದು. ನನಗಿದು ಬಯಸದೇ ಬಂದ ಭಾಗ್ಯ. ಅದಕ್ಕೆ ನಾನೆಲ್ಲರಿಗೂ ಋಣಿ. ಮುಂದಕ್ಕಾದರೂ ‘ಕಾಡಿಗೆ ಪೆಡಲಿ’ ಎನ್ನುವುದೊಂದು ಪ್ರಕೃತಿ-ಶಿಕ್ಷಣದ ಕಮ್ಮಟವಾಗಬೇಕು; ಸಾಹಸ-ಪ್ರವಾಸವಲ್ಲ. (ಮೂರು ದಿನದಲ್ಲಿ ನಾವು ಕ್ರಮಿಸಿದ ಸುಮಾರು ೧೭೦ ಕಿಮೀ ದೊಡ್ಡ ಸಂಗತಿ ಏನೂ ಅಲ್ಲ.) ಇದರ ಅಸ್ಪಷ್ಟ ಕಲ್ಪನೆ ಕಾಡಿಗೆ-ಪೆಡಲಿ ಸಂಯೋಜನೆಯಲ್ಲಿ ಇದೆ. ಹಾಗಾಗಿ ಮುಂದೆ ಬರುವವರನ್ನು ‘ಮುದ್ದು’ ಮಾಡಬೇಡಿ, (ಗೌರವಾನ್ವಿತ, ಎನ್ನಿ ಬೇಕಾದರೆ) ಶಿಕ್ಷಣಾರ್ಥಿ ಎಂದು ನಡೆಸಿಕೊಳ್ಳಿ. ಆಗ ಇದನ್ನು ಮುಗಿಸಿ ಹೊರಟವರು ಸ್ವಂತೀ, ವಿಡಿಯೋಗಳಲ್ಲಿ ಕಳೆದುಹೋಗಲಾರರು, ಮುದ್ರಿತ ಅರ್ಹತಾ ಪತ್ರ ಸ್ಮರಣಿಕೆ ತೋರಿಸಿ ಸೊಕ್ಕಲಾರರು, ವನ್ಯ ಸಂರಕ್ಷಣೆಯ ಕಿರಿಯ ಸೇವಾಕರ್ತರಾಗಿ ಆದರ್ಶ ರಾಷ್ಟ್ರದ ಪಾಲುದಾರರಾದಾರು!

(ಮುಂದುವರಿಯಲಿದೆ)