(ನೀನಾಸಂ, ಕಥನ ಮಾಲಿಕೆ ೧)

ನೀನಾಸಂನ ಮಹತ್ತರ ನಾಟಕಗಳು ಮತ್ತು ತತ್ಸಂಬಂಧೀ ಕೆಲವು ಕಲಾಪಗಳನ್ನು ಸಂಚಿ ಫೌಂಡೇಶನ್ ವಿಡಿಯೋ ದಾಖಲೀಕರಣಕ್ಕೊಳಪಡಿಸಿ, ಯೂ ಟ್ಯೂಬ್ ಮೂಲಕ ಉಚಿತವಾಗಿ ಲೋಕಾರ್ಪಣಗೊಳಿಸುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ಈ ದಾಖಲೆಗಳು ಸಾರ್ವಕಾಲಿಕವಾಗುಳಿಯುತ್ತವೆ ಎನ್ನುವ ಎಚ್ಚರದೊಡನೆ ಸಂಚಿ ದುಡಿದರೆ, ಆಯಾ ಕಾಲಘಟ್ಟದ ಅತ್ಯುತ್ತಮ ಪ್ರಯೋಗವನ್ನೇ ಕೊಡಬೇಕೆನ್ನುವ ಕಾಳಜಿ ನೀನಾಸಂನಲ್ಲಿದೆ. ಆ ನಿಟ್ಟಿನಲ್ಲೇ ೧೫-೭-೧೯ರಂದು, ಸದ್ಯದ ಎರಡು ಹೊಸ ರಂಗಪ್ರಯೋಗಗಳ ವಿಶೇಷ ಪ್ರದರ್ಶನವನ್ನು ನೀನಾಸಂ ವ್ಯವಸ್ಥೆ ಮಾಡಿತ್ತು.

ಅದಕ್ಕೆ ಪೂರ್ವಭಾವಿಯಾಗಿ ಅಭಯನ ‘ಪಡ್ಡಾಯಿ – ಚಿತ್ರ ಕಟ್ಟಿದ ಕಥೆ, ಚಿತ್ರ ಕಥೆ’ ಪುಸ್ತಕದ ಲೋಕಾರ್ಪಣ (೧೩-೭-೧೯) ಮಂಗಳೂರಿನಲ್ಲಿ ನಡೆಯಿತು. ಪಡ್ಡಾಯಿ ಪುಸ್ತಕದ ಪ್ರಕಾಶಕನ ನೆಲೆಯಲ್ಲೂ ಸ್ವತಃ ಪುಟ ವಿನ್ಯಾಸ ಮಾಡಿದವನ ಭಾಗೀದಾರಿಕೆಯಲ್ಲೂ ಹೆಗ್ಗೋಡಿನಿಂದ ಕೆ.ವಿ. ಶಿಶಿರ (ಕೆವಿ ಅಕ್ಷರರ ಮಗ) ಕಾರಿನಲ್ಲಿ ಬಂದಿದ್ದರು. ಅವರು ಮಾರಣೇ ದಿನ ವಾಪಾಸು ಹೊರಟಾಗ, ದಾಖಲೀಕರಣದ ಜವಾಬ್ದಾರಿಯೊಡನೆ ಅಭಯ ಮತ್ತು ಆತನ (ಪಡ್ಡಾಯಿಯದ್ದೂ) ಕ್ಯಾಮರಾಮ್ಯಾನ್ ವಿಷ್ಣು ಸೇರಿಕೊಂಡರು. ಹೆಗ್ಗೋಡಿನಿಂದ ಬರುವಾಗಲೇ ಜತೆಗೊಟ್ಟಿದ್ದ, ಪಡ್ಡಾಯಿಯ ನಟ, ಪ್ರಸ್ತುತ ನೀನಾಸಂನ ಅಧ್ಯಾಪಕ ಅವಿನಾಶ್ ರೈ ಜತೆಗೆ ನಾನೂ ಕೇವಲ ಪ್ರೇಕ್ಷಕನ ನೆಲೆಯಲ್ಲಿ ಸೇರಿಕೊಂಡೆ.

ದಾರಿ ಯಾವುದಯ್ಯಾ

೧೯೮೮ರ ಮಳೆಗಾಲದಲ್ಲಿ ನಾನು ಆರೋಹಣದ ಮೋಟಾರ್ ಸೈಕಲ್ ಪಡೆಯೊಡನೆ ಮೊದಲ ಬಾರಿಗೆ ಹೆಗ್ಗೋಡಿಗೆ ಹೋಗಿದ್ದೆ. ಬಹುತೇಕ ಆಗ ಅನುಸರಿಸಿದ್ದ ದಾರಿಯಲ್ಲೇ ತದ್ವಿರುದ್ಧ ದಿಕ್ಕಿನಿಂದ ೨೦೧೫ರಲ್ಲಿ ಹೆಗ್ಗೋಡಿನಿಂದ ಮಂಗಳೂರಿಗೆ ಕಾರಿನಲ್ಲೂ ಬಂದಿದ್ದೆ. (ನೋಡಿ: ನೆಲ ನಿಲ್ಲಿಸುವುದು, ನೆಲ ಮುಳುಗಿಸುವುದು!) ಆಗ ಶರಾವತಿ ಹಿನ್ನೀರನ್ನು ಕೊಲ್ಲೂರು ಬದಿಯಿಂದ ಸಮೀಪಿಸಿ, ತುಮರಿ ಅಥವಾ ಈಗ ಜನಪ್ರಿಯವಾಗಿರುವ ಸಿಗಂದೂರು ದಂಡೆಯಿಂದ ಎದುರು ದಂಡೆಗೆ ನಮ್ಮ ವಾಹನ ಸಹಿತ ದೋಣಿಯಲ್ಲಿ ದಾಟುವ ವ್ಯವಸ್ಥೆ ಅನುಭವಿಸಿದ್ದೆವು. ಈ ಬಾರಿ ಶಿಶಿರ ಅಂಥದ್ದೇ ಇನ್ನೊಂದು ಮತ್ತು ಕಡಿಮೆ ವಾಹನ ಸಮ್ಮರ್ದದ ದಾರಿ ತೋರಿದರು. ಕುಂದಾಪುರಕ್ಕಾಗಿ, ಕೊಲ್ಲೂರು ಸೇರಿ ಊಟ ಮುಗಿಸಿದೆವು. ನಾಗೋಡಿ ಘಾಟೇರಿ ನಿಟ್ಟೂರಿಗೂ ಮೊದಲೇ ಎಡ ಹೊರಳಿ ತುಮರಿ ಕಡವು ಸೇರುವುದು ನನಗೆ ತಿಳಿದದ್ದೇ. ಈ ಬಾರಿ ನಿಟ್ಟೂರೂ ಕಳೆದು, ಸಂಪೆಕಟ್ಟೆಯಲ್ಲಿ ಎಡ ಹೊರಳಿ, ಹೊಸನಾಡಿನ ಹಸಿರುಮಕ್ಕಿ ಕಡವು ಅನುಭವಿಸಿದೆವು. ತುಮರಿ ಕಡವಿಗಿಂತ ಇದು ಅಗಲ ಕಿರಿದು. ಹಾಗೇ ನೀರ ಪಾತ್ರೆ ಹೆಚ್ಚು ಸಪಾಟಿರುವುದರಿಂದಲೋ ಏನೋ ನೀರು ವರ್ಷಕ್ಕೊಮ್ಮೆ ನಿಧಾನದಲ್ಲಿ ಏರಿಳಿತ ತೋರುವ ನೆಲದ ಹರಹು ದೊಡ್ಡದು. ಅದನ್ನು ಮುತ್ತಿದಂತೆ ತೋರಿದರೂ ವಾಸ್ತವದಲ್ಲಿ ಅದರಿಂದ ಹಿಂತಳ್ಳಲ್ಪಟ್ಟ ದಟ್ಟಾರಣ್ಯ ಮೇಲೆಂದ ಮೇಲೆ ನೋಡುವವರಿಗೆ ಬಹು ಸುಂದರ ದೃಶ್ಯಾವಳಿಯನ್ನೇ ಕಟ್ಟಿಕೊಡುತ್ತದೆ. ಆದರೆ ನೀರ ಹರಹಿನಲ್ಲಿ ವಿರಳವಾಗಿಯಾದರೂ ಕರಿಗಟ್ಟಿ, ಬೋಳು ಆರ್ತ ಕೈ ಚಾಚಿ ನಿಂತಂತೆ ತೋರುವ ಮರಗಳ ಅವಶೇಷ ಕಾಣುವಾಗ ಬಗೆಗಣ್ಣಿಗೆ ಹೊಳೆಯುವ ಮುಳುಗಡೆ ಕತೆ ನಮ್ಮನ್ನು ಮೂಕವಾಗಿಸುವುದೂ ದಿಟ. ಇಲ್ಲಿಗೆ ಭಾರೀ ವಾಹನ ಸೇತುವೆಯ ಕೆಲಸ ಪ್ರಗತಿಪಥದಲ್ಲಿದೆ. ನಮ್ಮ ‘ದೇವರ’ (ಪ್ರಜಾಸತ್ತೆ) ಕೆಲಸ ಎಂದು ಶುರುವಾಗಿದೆಯೋ ಇನ್ನೆಂದು ಮುಗಿದೀತೋ ಹೇಳಲು ನಾನೆಷ್ಟರವ!

ಬಿವಿ ಕಾರಂತ ರಂಗ ಸಂಕೀರ್ಣ

ಮೈಸೂರಿನ ಜಯರಾಮ ಪಾಟೀಲರನ್ನು ‘ಒಳ್ಳೆತನಗಳಿಗೊಂದು ಕೈಕಂಬ’ ಎಂದೇ ಹಿಂದೊಂದು ಪ್ರಸಂಗದಲ್ಲಿ (ನೋಡಿ: ಲಕ್ಷ್ಮಿ ಭಾಗ್ಯ ಮತ್ತು ಇತರ ಟಿಪ್ಪಣಿಗಳು) ಅದರಲ್ಲಿ ಟಿಪ್ಪಣಿ ೪ ಮತ್ತು ೫) ನಾನು ಬರೆದದ್ದು ಇಂದು ನೀನಾಸಂ ವಠಾರದಲ್ಲೂ ಕವಳ ಕತ್ತರಿಸುವ ಪಾಟೀಲ್-ದಂಪತಿ ನಿಜವಾಗಿದೆ. ಬಿವಿ ಕಾರಂತರು ಬದುಕಿದ್ದ ಕಾಲದಲ್ಲಿ ಅವರ ಪತ್ನಿ ಪ್ರೇಮಾ ಮತ್ತು ಆತ್ಮೀಯ ರಂಗಕರ್ಮಿ ಜಯರಾಮ ಪಾಟೀಲರು ಸೇರಿಸಿಕೊಂಡಂತೆ ಒಂದು ಟ್ರಸ್ಟ್ ಮಾಡಿದ್ದರು. ಕಾರಂತ ದಂಪತಿಗೆ ಮಕ್ಕಳಿರಲಿಲ್ಲ. ಸಹಜವಾಗಿ ಅವರು ತಮ್ಮೆಲ್ಲ ಸಂಪಾದನೆಗಳನ್ನು ಟ್ರಸ್ಟಿಗೆ ವಹಿಸಿ ನಿರುಮ್ಮಳರಾಗಿದ್ದರು. ಕಾರಂತ ದಂಪತಿ ಕಾಲವಶರಾದ ಮೇಲೆ ಅದರ ಪೂರ್ಣ ಹೊರೆ ಉಳಿದಿದ್ದ ಏಕೈಕ ಟ್ರಸ್ಟೀ – ಜಯರಾಮ ಪಾಟೀಲರ ತಲೆಯ ಮೇಲಿತ್ತು. ಅಭಿಮಾನೀ ಹೆಸರಿನಲ್ಲಿ, ರಂಗಾಯಣದ ನೆಪದಲ್ಲಿ ಟ್ರಸ್ಟಿನೆಲ್ಲವನ್ನೂ ಸ್ವಾರ್ಥಕ್ಕೆ ಕವುಚಿಹಾಕಿಕೊಳ್ಳುವ ಮಹಾ ಫಿತೂರಿಗಳನ್ನು ದಿಟ್ಟವಾಗಿ ಎದುರಿಸುವಲ್ಲಿ ಪಾಟೀಲರು ಜಯರಾಮನೇ ಆದರು. ಕಾರಂತರ ಹೆಸರಿನಲ್ಲಿ ಭಜನಾ ಕೇಂದ್ರವೋ ವೈಭವೀಕೃತ ಗೋರಿಯೋ ರೂಪುಗೊಳ್ಳುವುದನ್ನು ಅವರು ತಡೆದರು. ವಿವೇಚನೆ ಬಳಸಿ, ಇನ್ನೊಬ್ಬ ದ್ರಷ್ಟಾರ – ವಿಜಯನಾಥ ಶೆಣೈ, ಮಣಿಪಾಲದಲ್ಲಿ ಸಂಘಟಿಸಿದ್ದ ‘ಹಸ್ತಶಿಲ್ಪ’ದ ಮಹತ್ವವನ್ನು ಗುರುತಿಸಿದರು. ಬಿವಿ ಕಾರಂತರ ವಾದ್ಯ ಹಾಗೂ ನಾಟಕ ಪರಿಕರಗಳ ದೊಡ್ಡ ಸಂಗ್ರಹವನ್ನು ಹಸ್ತಶಿಲ್ಪಕ್ಕೆ ವರ್ಗಾಯಿಸಿದರು. ಮತ್ತುಳಿದ ಇಪ್ಪತ್ತೈದು ಸಾವಿರಕ್ಕೂ ಮಿಕ್ಕ ಅದ್ಭುತ ಪುಸ್ತಕ ಸಂಗ್ರಹ ಹಾಗೂ ಹಣವನ್ನು ಹೆಗ್ಗೋಡಿನ ನೀನಾಸಂಗೆ ಧಾರೆ ಎರೆದರು. ಅದರ ಫಲವಾಗಿ ನಾನು ಹಿಂದಿನ ಸಲ (ವರ್ಷದ ಹಿಂದೆ) ಹೆಗ್ಗೋಡಿಗೆ ಬಂದಿದ್ದಾಗ, ನೀನಾಸಂ ವಠಾರದಲ್ಲಿ ಅಪೂರ್ಣವಾಗಿ ಕಂಡಿದ್ದ ಕಟ್ಟಡ ಇಂದು ಸಂಪೂರ್ಣವಾಗಿ, ಒಳಗೂ ಸಜ್ಜಾಗಿ ಬಿವಿ ಕಾರಂತ ರಂಗ ಸಂಕೀರ್ಣವೆಂದೇ ಹೆಸರು ಹೊತ್ತಿದೆ. ಒಂದೆರಡು ತಿಂಗಳ ಹಿಂದೆ ಶಿವಮೊಗ್ಗ ರಂಗಾಯಣದ ಭಾರೀ ಕಟ್ಟಡ ನೋಡುವ ಅವಕಾಶ ಬಂದಾಗ ನಾನು ನಿಜಕ್ಕೂ ಬೆರಗಾಗಿದ್ದೆ. ಆದರೆ ಅದನ್ನು ತುಂಬಿ ಬರದ ಅದರ ಚಟುವಟಿಕೆಗಳಿಂದ ನಿರಾಶನೂ ಆಗಿದ್ದೆ. ಅದಕ್ಕೆ ತದ್ವಿರುದ್ಧ ಚಿತ್ರ ಇಲ್ಲಿದೆ. ತನ್ನ ಕ್ರಿಯಾಶೀಲತೆಯಿಂದಲೇ ಖ್ಯಾತವಾದ ನೀನಾಸಂ ರಂಗ ಶಿಕ್ಷಣ ಕೇಂದ್ರವೀಗ ಬಿವಿ ಕಾರಂತ ರಂಗ ಸಂಕೀರ್ಣಕ್ಕೆ ಬಂದಿದೆ. ಅಲ್ಲೇ ನೀನಾಸಂನ ಗ್ರಂಥ ಭಂಡಾರಕ್ಕೆ ಕಾರಂತ ಪುಸ್ತಕ ಸಂಗ್ರಹ ಸೇರಿ, ರಂಗಕಲೆಗಳಿಗೆ ಸಂಬಂಧಿಸಿದಂತೆ ಅತ್ಯಪೂರ್ವ ಗ್ರಂಥಾಲಯವೂ ಸಜ್ಜುಗೊಂಡಿದೆ.

ಲೋಕರೂಢಿಯಂತೆ ಮುಂದುವರಿದಿದ್ದರೆ, ಕಾರಂತ ಟ್ರಸ್ಟಿನ ಉಳಿದ ಹಣದಲ್ಲಿ ಬಿವಿ ಕಾರಂತರ ಒಂದು ಸುಂದರ ಮೂರ್ತಿ ನಿಲ್ಲಿಸಬಹುದಿತ್ತು. ಮತ್ತು ಬ್ಯಾಂಕಿನಲ್ಲಿ ಇಡುಗಂಟಿಟ್ಟು ಬಡ್ಡಿಯಲ್ಲಿ ವಾರ್ಷಿಕ ‘ತಿಥಿ’ ಮಾಡಿ, ಬಟವಾಡೆ ವ್ಯವಸ್ಥೆ ಮಾಡಬಹುದಿತ್ತು. (ನೀನಾಸಂ ವಠಾರದೊಳಗೆ ಕೆವಿ ಸುಬ್ಬಣ್ಣನವರ ವಿಗ್ರಹ ಬಿಟ್ಟು, ಔಪಚಾರಿಕ ಚೌಕಟ್ಟಿನ ಒಂದು ಚಿತ್ರವೂ ಇಲ್ಲ!) ಆದರೆ ಜಯರಾಮ ಪಾಟೀಲ್ ಮತ್ತು ಕೆವಿ ಅಕ್ಷರ ಕಾರಂತ ಟ್ರಸ್ಟಿನ ಹೆಚ್ಚುವರಿ ಹಣವನ್ನು ರಂಗಸಂಶೋಧನೆಗೆ ಮೂಲ ಸಂಪತ್ತಾಗಿ ಠೇವಣಿ ಇಟ್ಟಿದ್ದಾರೆ. ಅದರ ಬಡ್ಡಿಯಲ್ಲಿ, ರಂಗ ಸಂಶೋಧನೆಗೇ ವರ್ಷಕ್ಕೆರಡು ವಿದ್ಯಾರ್ಥಿವೇತನವನ್ನು ಘೋಷಿಸಿದ್ದಾರೆ. (ಈಗ ತಾನೇ ದೊರೆತ ಸುದ್ದಿ: ಖ್ಯಾತ ರಂಗ ನಿರ್ದೇಶಕ ಎಸ್. ರಘುನಂದನ್ ಅವರಿಗೆ ಪ್ರಥಮ ಬಿವಿ ಕಾರಂತ ಸಂಶೋಧನಾ ಅವಕಾಶ ಘೋಷಣೆಯಾಗಿದೆ) ಅಂಥ ಸಂಶೋಧಕರಿಗಾಗಿ ಹೊಸ ಕಟ್ಟಡದಲ್ಲಿ ವಾಸದ ಕೋಣೆ ಮತ್ತು ಸಮೃದ್ಧಗೊಂಡ ಗ್ರಂಥಾಲಯದಲ್ಲಿ ಅಂತರ್ಜಾಲದ ವ್ಯವಸ್ಥೆಗಳನ್ನೂ ಸೇರಿಸಿದ್ದಾರೆ. ಉಳಿದಂತೆ ನೀನಾಸಂನದ್ದೇ ಸಕ್ರಿಯ ರಂಗಶಾಲೆ ಹಾಗೂ ‘ಆಹಾರ್ಯ’ವಿದ್ದೇ ಇದೆ. ಹೀಗೆ ರಂಗಸಂಶೋಧನೆಯಲ್ಲೂ ಹೆಗ್ಗೋಡು ಮುಂದೆ ವಿಶಿಷ್ಟ ಕೇಂದ್ರವಾಗುವುದರಲ್ಲಿ ಸಂದೇಹವಿಲ್ಲ.

ನೀನಾಸಂ ಪ್ರತಿ ಜುಲೈ ಹದಿನಾರರಂದು ಕೆವಿ ಸುಬ್ಬಣ್ಣನವರ (ತಿಥಿಯಲ್ಲ) ಸ್ಮೃತಿ ದಿನವನ್ನು ಅರ್ಥಪೂರ್ಣವಾಗಿ ನಡೆಸುತ್ತದೆ (ಹಿಂದಿನದೊಂದನ್ನು ನೋಡಲು: ನೀನಾಸಂನಲ್ಲಿ ನಾಟಕಗಳ ಮಳೆ, ಮಳೆ ನೀರ ಕೊಯ್ಲು). ಈ ವರ್ಷದ್ದು (೨೦೧೯) ಇನ್ನೆರಡು ದಿನಗಳಲ್ಲೇ ಬರುತ್ತಿದೆ ಎನ್ನುವುದು ನಾವು ಕಾರೇರಿದ ಮೇಲೆ ನನಗೆ ನೆನಪಾದ್ದರಿಂದ, ನನ್ನ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಲಿಲ್ಲ. ಸ್ಮೃತಿ ದಿನದ ಕಲಾಪಕ್ಕೆಂದೇ ಕೆಲವು ಅತಿಥಿ ಗಣ್ಯರು ಹದಿನೈದರಂದೇ ಹೆಗ್ಗೋಡಿಗೆ ಬರತೊಡಗಿದ್ದರು. ಅವರಲ್ಲಿ ಈ ಬಿವಿ ಕಾರಂತ ಸ್ಮೃತಿ ಸಂಕೀರ್ಣಕ್ಕೆ ಕಾರಣರಾದ ಜಯರಾಮ ಪಾಟೀಲ ದಂಪತಿಗಳೂ ಇದ್ದರು.

ದಶಶಿರನನ್ನು ಮೀರಿಸುವ ರಂಗಪುರುಷ

ನೀನಾಸಂ ರಂಗಶಿಕ್ಷಣ ಕೇಂದ್ರ ಈ ಶೈಕ್ಷಣಿಕ ವರ್ಷದ (೨೦೧೯-೨೦) ತರಬೇತಿಗೆ ಆಯ್ದ ಇಪ್ಪತ್ತು ಮಂದಿಯನ್ನು ‘ಸ್ವಾಗತಿಸುವ’ ಕಲಾಪ ನನಗೆ ಈ ಬಾರಿ ಸಿಕ್ಕ ಬೋನಸ್! ಸಾರ್ವಜನಿಕ ಮಾಧ್ಯಮಗಳಲ್ಲಿ ಕರೆ ಕೊಟ್ಟು, ರಾಜ್ಯ ಹೊರರಾಜ್ಯದಿಂದಲೂ ಈ ಸಲ ಬಂದ ನೂರೈವತ್ತಕ್ಕೂ ಮಿಕ್ಕ ಅರ್ಜಿದಾರರನ್ನು ಬಹುಕಣ್ಣಿನ ವಂದರಿಯಾಡಿಸಿ ಈ ಇಪ್ಪತ್ತನ್ನು ಆಯ್ದಿದ್ದರು. ಅವರೆಲ್ಲರಿಗೆ ವೈಯಕ್ತಿಕವಾಗಿ ಹೋಗಿದ್ದ ಪತ್ರದ ಪ್ರತಿಯೊಂದು ರಂಗ ಕೇಂದ್ರದ ಪ್ರಕಟಣಾ ಹಲಿಗೆಯ ಮೇಲೂ ಇತ್ತು. ಅಭ್ಯರ್ಥಿ ಹದಿನೈದರ ಬೆಳಿಗ್ಗೆ ಹಾಜರಾಗದಿದ್ದರೆ, ಖಡಕ್ಕಾಗಿ ಆಯ್ಕೆಯ ರದ್ಧತಿಯನ್ನೂ ನಮೂದಿಸಿದ್ದು ವಿಶೇಷವಾಗಿ ನನ್ನ ಗಮನ ಸೆಳೆದಿತ್ತು. ಅದಕ್ಕೆ ಸರಿಯಾಗಿ ಯುವ ಅಭ್ಯರ್ಥಿಗಳು ಪತ್ರ ಸೂಚನೆಯಂತೇ ತಮ್ಮ ಒಂದೆರಡು ಹಿರಿಯರನ್ನು ಕೂಡಿಕೊಂಡು ಹಿಂದಿನ ಸಂಜೆಯಿಂದಲೇ ಬಂದು ಸೇರಿದ್ದರು. ಹದಿನೈದರಂದು ಅವರೆಲ್ಲ ಕಛೇರಿಯ ಔಪಚಾರಿಕತೆಗಳನ್ನೆಲ್ಲ ಮೊದಲೇ ಮುಗಿಸಿ, ಹತ್ತು ಗಂಟೆಯ ಸುಮಾರಿಗೆ ಆಪ್ತರಂಗದ ಒಳಾಂಗಣದಲ್ಲಿ ಸೇರಿದ್ದರು.

ಮೇಲಂಕಣದಲ್ಲಿ ರಂಗಶಾಲೆಯ ಆಡಳಿತ ಮಂಡಳಿಯವರು ಮತ್ತು ಕೆಲವು (ನಮ್ಮಂತೆ) ಕುತೂಹಲಿಗಳು. ಕೆಳಾಂಕಣದಲ್ಲಿ, ನಮಗೆ ಮುಖ ಹಾಕಿ ಅರ್ಧ ಚಂದ್ರಾಕೃತಿಯಲ್ಲಿ ಅಭ್ಯರ್ಥಿಗಳು. ಪಕ್ಕದ ಜಗುಲಿ ಸೇರಿದಂತೆ, ಜಾಗ ಸಿಕ್ಕಲ್ಲಿ ಅವರ ಹಿರಿಯರೂ ಆಸೀನರಾಗಿದ್ದರು. ಮೈಕಿನ ಗದ್ದಲ, ಅಲಂಕಾರಗಳ ಹೊರೆ, ನಿರ್ವಾಹಕನೆಂಬ ಅನರ್ಥಕಾರಿ, ದೀಪೋಜ್ವಲನ ಪ್ರಾರ್ಥನೆಗಳಂಥ ಕೃತಕತೆಗಳಿಲ್ಲದೇ ಕಲಾಪ ತೊಡಗಿತ್ತು. “ನಾನು ಅಕ್ಷರ, ರಂಗ ಶಿಕ್ಷಣ ಕೇಂದ್ರದಲ್ಲಿ ದುಡಿಯುತ್ತಿದ್ದೇನೆ…” ಎಂದು ನೇರ ಕೆಲಸಕ್ಕಿಳಿದವರು, ಅದೇ ಅನೌಪಚಾರಿಕ ಧಾಟಿಯಲ್ಲೇ ಕೇಂದ್ರದ ಪ್ರಾಂಶುಪಾಲ ಬಿಯಾರ್ ವೆಂಕಟ್ರಮಣ ಐತಾಳರಿಂದ ತೊಡಗಿ ಶಿಕ್ಷಕ ವರ್ಗ ಮತ್ತು ಅಧ್ಯಕ್ಷರಿಂದ ತೊಡಗಿ ಹಾಜರಿದ್ದ ಐದಾರು ಆಡಳಿತ ಮಂಡಳಿ ಸದಸ್ಯರ ಸೂಕ್ಷ್ಮ ಪರಿಚಯ ಮೊದಲು ಮಾಡಿಕೊಟ್ಟರು. ಅನಂತರ ವಿದ್ಯಾರ್ಥಿಗಳು ಸ್ವಪರಿಚಯದೊಡನೆ ಜತೆಗೆ ಬಂದ ಹಿರಿಯರನ್ನೂ ಸಭೆಗೆ ಪರಿಚಯಿಸಿದರು. ಇವೆಲ್ಲವೂ ಸರಸ ಸಂಭಾಷಣೆಯಂತೇ ನಡೆದದ್ದು ಆಪ್ತವಾಗಿತ್ತು. ಅನಂತರ ಅಕ್ಷರರದ್ದೊಂದೇ ತುಸು ದೀರ್ಘ ಮಾತು.

ಮೊದಲಲ್ಲಿ ಸ್ಪಷ್ಟವಾಗಿ ಆಯ್ಕೆಯ ಪ್ರಕ್ರಿಯೆಯನ್ನು ವಿವರಿಸುವುದರೊಡನೆ, ನಾಡಿನ ಜನತೆಯ ಹಣವೇ ಇಲ್ಲಿ ಸರಕಾರೀ ಅನುದಾನದ ರೂಪದಲ್ಲಿ ಬರುತ್ತಿದೆ ಎನ್ನುವುದನ್ನು ಮನಮುಟ್ಟಿಸಿದರು. ಅದರ ಮುಂದುವರಿಕೆಯಂತೆ, ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೆ ನಾಡಿನ ಜನತೆ ಹೂಡಿದ ಸುಮಾರು ಒಂದೂವರೆ ಲಕ್ಷ ಹಣ ಮತ್ತು ಆಯ್ಕೆಯಾಗದ ನೂರಕ್ಕೂ ಮಿಕ್ಕು ಮಂದಿಯ ನಿರೀಕ್ಷೆ ಇದೆ ಎಂದೂ ಬಿಡಿಬಿಡಿಸಿ ಹೇಳಿದರು. ರಾಜ್ಯದಲ್ಲಿ ಎಲ್ಲೂ ಇಲ್ಲದಂತೆ ನೀನಾಸಂನಲ್ಲಿ ಮಾತ್ರ ಊಟ, ವಾಸ, ಕಲಿಕೆಗಳೆಲ್ಲ ಅಭಿನ್ನವಾಗಿ ಒಂದೇ ವಠಾರದೊಳಗೆ ಸಿಗುತ್ತದೆ ಎನ್ನುವುದನ್ನೂ ನಿಗರ್ವವಾಗಿ ತೋರಿಕೊಟ್ಟರು. ನಾಟಕ ರಂಗ ಒಂದು ಸಮೂಹಕ್ರಿಯೆ. ಅದರಲ್ಲಿ ವ್ಯಕ್ತಿಯ ಮೇಲುಕೀಳು, ವಹಿಸುವ ಪಾತ್ರದ ಸ್ಥಾನಮಾನ ನಡೆಯುವುದಿಲ್ಲ. ಹಾಗಾಗಿ ಎಲ್ಲ ವಿದ್ಯಾರ್ಥಿಗಳು ಕಲಿಕೆಯ ಅವಧಿಯನ್ನು (ರಜೆ, ವಿಶ್ರಾಂತಿಗಳನ್ನು ಮರೆತು) ೨೪ ಗಂಟೆ, ಮುನ್ನೂರರವತ್ತೈದು ದಿನವೆಂಬಂತೇ ಗ್ರಹಿಸಿ ನಡೆಸಬೇಕು. ಇದಕ್ಕೆ ವ್ಯತ್ಯಯವಾಗದಂತೆ, ಎಲ್ಲ ಸಂಬಂಧಿಕರೂ ಮನೆಯ, ಊರ ಯಾವುದೇ ನೆಪಗಳ ಆಕರ್ಷಣೆಯನ್ನು ಅವರಿಗೆ ಒಡ್ಡದೆ ಸಹಕರಿಸಬೇಕು ಎನ್ನುವುದನ್ನು ಒತ್ತು ಕೊಟ್ಟೇ ಹೇಳಿದರು. ಶಿಕ್ಷಕರ ಪಾತ್ರದ ಕುರಿತಂತೆ, ತಾವಿಲ್ಲಿ ಪಾಠ ಮಾಡುವುದಲ್ಲ, ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಗಳಾಗುತ್ತೇವೆ, ಎಂಬುದನ್ನು ವಿಸ್ತರಿಸಿ ಮನದಟ್ಟುಗೊಳಿಸಿದರು. ಕೊನೆಯಲ್ಲಿ, ವರ್ಷ ಮುಗಿಯುವುದರಲ್ಲಿ ಇಪ್ಪತ್ತು ತಲೆ ಮತ್ತು ನಲ್ವತ್ತು ಕೈಕಾಲುಗಳ ಒಬ್ಬ ರಂಗ ಪುರುಷನ ನಿರ್ಮಾಣದಲ್ಲಿ ಎಲ್ಲ ಯಶಸ್ವಿಗಳಾಗಬೇಕೆಂದು ಹಾರೈಸಿದರು.

ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ?

ಈ ಬಾರಿ ಅಭಯನಿಗೆ ದಾಖಲಿಸಿಕೊಳ್ಳಲು ನೀನಾಸಂ ಎರಡು ನಾಟಕಗಳನ್ನು ಒಡ್ಡಿಕೊಳ್ಳಲಿತ್ತು. ದಾಖಲೀಕರಣ ಚಲನಚಿತ್ರದ ಮಾಧ್ಯಮದಲ್ಲೇ ಆದರೂ ಮುಂದೆ ಅದರ ವೀಕ್ಷಣೆ ನಿಜ ನಾಟಕದ ಅನುಭವವನ್ನೇ ಕೊಡಬೇಕು ಎನ್ನುವುದು ಅಭಯನ ನಿಲುವು. ಇದಕ್ಕೆ ಕ್ಯಾಮರಾದ ಎದುರಿನ ಪ್ರಯೋಗಕ್ಕೂ ಮೊದಲೊಂದು ಪ್ರದರ್ಶನ ಸಿಗುವುದು ಅಪೇಕ್ಷಣೀಯ. ಅದಕ್ಕೆ ಹೊಂದುವಂತೆ, ನಾಟಕ ತಂಡಗಳು ನಾವು ಹೋದ ಸಂಜೆಯೇ ಅಭ್ಯಾಸಕ್ಕೆಂಬಂತೆ ಎರಡೂ ನಾಟಕಗಳನ್ನು ಬೆನ್ನುಬೆನ್ನಿಗೆಂಬಂತೆ ಪ್ರಯೋಗಿಸಿದರು.

ಮೊದಲನೇದು ಜೋಗಿ ಬರೆದ ನಾಟಕ – ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ. ಇದು ಹೊಸ ವಿದ್ಯಾರ್ಥಿಗಳ ಸ್ವಾಗತ ಕಲಾಪದ ಭಾಗವಾಗಿ, ಮರುದಿನ ಆಪ್ತ ರಂಗಭೂಮಿಯಲ್ಲಿ ನಿಜ ಪ್ರದರ್ಶನ ಕೊಡಲಿದ್ದ ಪ್ರಯೋಗ. ಇದರಲ್ಲಿ ನಟಿಸಿದ ಐದೂ ಮಂದಿ ಶಿಕ್ಷಣ ಕೇಂದ್ರದ ಅಧ್ಯಾಪಕರೇ. ಅವರು ವರ್ಷಪೂರ್ತಿ ರಂಗ ಪ್ರಯೋಗಗಳ ಬಿಡಿ ಬಿಡಿ ಅಂಗಗಳನ್ನು (ಉದಾ: ನಟನೆ, ರಂಗಸಜ್ಜಿಕೆ, ತೊಡವು, ಬೆಳಕು, ಧ್ವನಿ ಇತ್ಯಾದಿ) ಕಲಿಸಿಕೊಡುತ್ತಾರೆ. ಅದನ್ನು ಬಿಟ್ಟು, ಸ್ವಂತಕ್ಕೊಂದು ಸಮಗ್ರ ಪ್ರದರ್ಶನವನ್ನೇ ಕೊಡುವ ಅವಕಾಶ ಮತ್ತು ಹೊಸ ವಿದ್ಯಾರ್ಥಿಗಳಿಗೆ ಸೂಕ್ಷ್ಮವಾಗಿ ತಮ್ಮ ಪ್ರತಿಭಾ ಪರಿಚಯ ಮಾಡಿಕೊಡುವ ಉದ್ದೇಶ ಇಲ್ಲಿ ಮೇಳೈಸಿತ್ತು. ಇಲ್ಲಿ ನಟವರ್ಗವೆಲ್ಲ ನಿರ್ದೇಶನ ಸಾಮರ್ಥ್ಯವಂತರೇ ಇರುವುದರಿಂದ ಸ್ಪಷ್ಟ ನಿರ್ದೇಶಕರನ್ನು ಹೆಸರಿಸಿಲ್ಲ. ಬದಲಿಗೆ ಪುಸ್ತಕದಲ್ಲಿ ನಾಟಕವನ್ನು ಓದಿ, ರಂಗಕ್ಕೆ ತರಬೇಕೆಂದು ಆಶಿಸಿ ದುಡಿದ ಕೆವಿ ಶಿಶಿರ, ಜೊತೆಗೆ ‘ಮನೆ’ಯ ಯಜಮಾನನಂತೆ ಸಹಕರಿಸಿದ ಕೆವಿ ಅಕ್ಷರ ರಂಗದ ಹಿಂದೆ ಕೆಲಸ ಮಾಡಿದವರೆಂದು ಹೆಸರು ದಾಖಲಿಸಿದ್ದಾರೆ.

ರಂಗ ಸಜ್ಜಿಕೆ ಮತ್ತು ಬಹುತೇಕ ಪರಿಕರಗಳು ಎರಡೂ ಪ್ರಯೋಗಗಳಲ್ಲಿ ಪೂರ್ಣವೇ ಇದ್ದವು. ಎರಡೂ ನಮ್ಮನ್ನು ಧಾರಾಳ ರಂಜಿಸಿದವು. ಆದರೂ ನಿಜ ಪ್ರದರ್ಶನದಂದು, ದಾಖಲೀಕರಣ ಮತ್ತು ಹೊಸ ವಿದ್ಯಾರ್ಥಿಗಳ ಎದುರಿನ ಪ್ರಯೋಗ ಎನ್ನುವ ಮನದಾಳದ ಜಾಗೃತಿ ಅಧ್ಯಾಪಕ ಕಲಾವಿದರನ್ನು ಕಾಡಿರಬಹುದೋ ಎನ್ನುವಂತೆ ಒಂದು ಗುಲಗಂಜೀ ತೂಕದಷ್ಟು ಲವಲವಿಕೆ ಕಡಿಮೆಯಾಯ್ತು. ಈ ನಾಟಕ ಭರಪೂರ ರಂಜನೆಯೊಡನೆ ಕಟು ವಾಸ್ತವದ ಅಭಿವ್ಯಕ್ತಿಯೂ ಹೌದು. ಇದರ ಕಥಾ ಸ್ವಾರಸ್ಯವನ್ನು (ಬಹಳ ದೊಡ್ಡದೇನಲ್ಲ) ವಿಸ್ತರಿಸುವ ಮತ್ತು ವಿಮರ್ಶೆಯ ಎತ್ತರಕ್ಕೆ ಏಣಿ ಇಡುವ ಉದ್ದೇಶ ನನ್ನದಲ್ಲ. ಪ್ರದರ್ಶನ ನಾಲ್ಕು ಕ್ಯಾಮರಾ ಕಣ್ಣಿಗೂ ಸ್ವತಂತ್ರ ಧ್ವನಿಗ್ರಹಣ ವ್ಯವಸ್ಥೆಗೂ ಒಡ್ಡಿಕೊಂಡದ್ದಾಗಿದೆ. ಪ್ರಯೋಗಶಾಲೆಯಲ್ಲಿ ಸಂಕಲನಕ್ಕೆ ಒಡ್ಡಿಕೊಂಡು ಒಂದಾಗಿ, ಸದ್ಯದಲ್ಲೇ ಶುದ್ಧ ನಾಟಕದ ಪ್ರದರ್ಶನದ ಅನುಭವವನ್ನೇ ಲೋಕಕ್ಕೆ ನೀಡಲು ಬರಲಿದೆ. ಎಂದಿನಂತೆ ಯೂ ಟ್ಯೂಬಿನಲ್ಲಿ, ಸಂಚಿ ಪ್ರತಿಷ್ಠಾನದ ಜಾಲತಾಣದಲ್ಲಿ ಉಚಿತವಾಗಿ ನೋಡಿ, ಸಮಾನಾಸಕ್ತ ಬಳಗದಲ್ಲಿ ಧಾರಾಳ ಹಂಚಿ, ವಿಮರ್ಶಿಸುವ ಭಾಗ್ಯ ನಿಮ್ಮದು.

ನಡುಬೇಸಗೆಯಿರುಳ ನಲ್ಗನಸುಗಳು: ಸುಬ್ಬಣ್ಣ ಸ್ಮೃತಿ ದಿನಕ್ಕೆ ಹೆಗ್ಗೋಡಿನ ಜನ ಒಂದು ನಾಟಕ ಪ್ರದರ್ಶಿಸುವುದು ಅಲಿಖಿತ ಸಂಪ್ರದಾಯವೇ ಆಗಿದೆ. (ಎರಡು ಉದಾಹರಣೆಗಳು ೨೦೧೬ರ – ಮಾಲತಿ ಮಾಧವ, ೨೦೧೫ರ ಒರೆಸ್ತಿಸ್ ಪುರಾಣ) ಹಾಗೆ ಈ ಬಾರಿ ಶೇಕ್ಸ್‍ಪಿಯರನ ನಾಟಕ ಮಿಡ್ ಸಮ್ಮರ್ ನೈಟ್ ಡ್ರೀಮ್ಸ್‍ನ ನಿಸಾರ್ ಅಹಮದ್ ಕನ್ನಡ ರೂಪಾಂತರ – ನಡು ಬೇಸಗೆಯಿರುಳ ನಲ್ಗನಸುಗಳು ಆರಿಸಿಕೊಂಡಿದ್ದರು. ಈ ಹಿಂದೆಯೇ ಹೇಳಿದಂತೆ, ಹದಿನಾಲ್ಕರ ಸಂಜೆಯೇ ವಿಶ್ವಾಮಿತ್ರ ಮೇನಕೆ ಬೆನ್ನಿಗೇ ಅದರ ಪೂರ್ಣ ಪ್ರಯೋಗವನ್ನು ಇಟ್ಟುಕೊಂಡಿದ್ದರು. ಅದನ್ನು ರಂಗ ಕೃತಿಯಾಗಿ ನಿರ್ದೇಶಿಸಿದವರು ಗಂಭೀರ ನಾಟಕ ಪ್ರಿಯರೆಲ್ಲ ಸಾಕಷ್ಟು ಕೇಳಿದ, ಆದರೆ ನಾನು ಎಂದೂ ಕಂಡಿರದ ಇಕ್ಬಾಲ್ ಅಹಮದ್. ಖಾಲಿ ಶಿವರಾಮ ಕಾರಂತ ರಂಗ ಮಂದಿರದ ಕತ್ತಲೊಳಗೆ ಅಭಯ, ವಿಷ್ಣು ಮರುದಿನಕ್ಕೆ ಕ್ಯಾಮರಾ ಇಡುವುದೆಲ್ಲೆಂದು ಲೆಕ್ಕ ಹಾಕುತ್ತ ಹಿಂದಿನ ಕತ್ತಲಲ್ಲಿ ಕರಗಿಹೋಗಿದ್ದರು. ಎದುರು ಸಾಲಿನಲ್ಲಿ ಮಸಕಾಗಿ, ಒಂಟಿಯಾಗಿ ಕುಳಿತ ಅಪರಿಚಿತ ಮುದುಕ, ಪ್ರಯೋಗ ಶುರುವಾಗುವ ಮುನ್ನ ಆಗೀಗ ಗೊಣಗಿದ್ದಷ್ಟೇ ಕೇಳಿಸಿತ್ತು. ಕೊನೆಯಲ್ಲಿ ಆತ ನಟರನ್ನೆಲ್ಲ ಎದುರು ಕರೆಸಿಕೊಂಡು ಸೂಚನೆ ಕೊಡತೊಡಗಿದಾಗ ತಿಳಿಯಿತು, ಅವರೇ ಇಕ್ಬಾಲ್ ಅಹಮದ್. ನಾವು ಮೂವರು, ನಿರ್ದೇಶಕ ನಟರ ನಡುವಿನ ಆಪ್ತ ಸಂವಾದಕ್ಕೆ ಅಡ್ಡಿಯಾಗದಂತೆ ಎದ್ದು ಬಂದಿದ್ದೆವು.

ಹದಿನೈದರ ಬೆಳಗ್ಗೆ ರಾತ್ರಿ ಬಸ್ಸಿನಲ್ಲಿ ಅಭಯನ ಕ್ಯಾಮರಾ ಮುಂತಾದ ಸಲಕರಣೆಗಳೂ ಇಬ್ಬರು ಸಹಾಯಕರೂ ಬಂದಿಳಿದರು. ದಾಖಲೀಕರಣದ ಕಲಾಪವೆಲ್ಲ ಸಂಜೆಗಷ್ಟೆ ಇತ್ತು. ಹಾಗಾಗಿ ಬೆಳಿಗ್ಗೆ ನಾವೆಲ್ಲ ಆರಾಮವಾಗಿಯೇ ‘ಆಹಾರ್ಯ’ದ (ನೀನಾಸಂನ ಆಹಾರ ಕೇಂದ್ರ!) ಇಡ್ಲಿಗಳನ್ನು ಸಂಹರಿಸಿ, ನೀನಾಸಂ ಕಛೇರಿಯ ಎದುರು ಕೋಣೆಯಲ್ಲಿ ಪತ್ರಿಕೆ ಧ್ವಂಸ ಮಾಡುತ್ತಿದ್ದೆವು. ಅಲ್ಲಿಗೆ ನಮ್ಮಷ್ಟೇ ಆರಾಮಾಗಿ ಬಂದ ಇಕ್ಬಾಲ್ ಅಮಹದರನ್ನು, ಮೊದಲಿಗೆ ನಾನು ಊರಿನ ಯಾರೋ ಹೆಗ್ಡೇರು ಎಂದೇ ಭ್ರಮಿಸಿಬಿಟ್ಟಿದ್ದೆ! ಪುಣ್ಯಕ್ಕೆ ಅಭಯನಿಗವರ ಪರಿಚಯ ಚೆನ್ನಾಗಿತ್ತು. ಮಾತು ಬೆಳೆದಾಗ, ಶಿಕಾರಿಪುರ ಮೂಲದ, ಗುಡಿಕೈಗಾರಿಕೆಯನ್ನು ಪ್ರೀತಿಸಿ ಆದಾಯಮೂಲವಾಗಿ ನೆಚ್ಚಿದರೂ (‘ಗುಡಿ’ ಹೆಸರಿನಲ್ಲೇ ಇವರಿಗೊಂದೆರಡು ಕಲಾಕೃತಿಗಳನ್ನು ನಿರ್ಮಿಸುವ ಮತ್ತು ಮಾರುವ ಮಳಿಗೆಗಳೇ ಇವೆ) ನಾಟಕಗಳನ್ನು ವಿಪರೀತ ಹಚ್ಚಿಕೊಂಡ, ಸಿನಿಮಾಗಳನ್ನು ಅಷ್ಟೇ ಪ್ರೀತಿಸುವ ವ್ಯಕ್ತಿ ಈ ಇಕ್ಬಾಲ್ ಅಹಮದ್. ರಂಗಭೂಮಿಯ ಮೂಲವಾಸನೆಯಿಂದ ಸುಬ್ಬಣ್ಣನವರ ಕಾಲದಲ್ಲಿ ನೀನಾಸಂ ವಿದ್ಯಾರ್ಥಿಯಾಗಿ, ಕೆಲವು ತಿರುಗಾಟಗಳ ಕಲಾವಿದನಾಗಿ, ಸ್ವತಃ ನಿರ್ದೇಶಕನಾಗಿಯೂ ಬೆಳೆದ ಇಕ್ಬಾಲರೊಡನೆ ಮಾತು ಬೆಳೆಸಿದ್ದಕ್ಕೆ ನಾನು ನಿಜಕ್ಕೂ ‘ಅಶೋಕವರ್ಧನ’ನಾದೆ (ಸಂತೋಷ ಹೆಚ್ಚಿತು)!

ಕನ್ನಡದ ಮಿಡ್ ಸಮ್ಮರ್ ನೈಟ್ ಡ್ರೀಮ್ಸನ್ನು ನಾನು ಹಿಂದೆ ಅನ್ಯ ಕೂಟಗಳ ಪ್ರದರ್ಶನಗಳಲ್ಲಿ ಕಂಡವನೇ. ಹಾಗಾಗಿ ಇದರ ಅಭ್ಯಾಸ ಪ್ರಯೋಗದಲ್ಲಿ, ಕಥಾ ಓಟದ ಪರಿಚಯವಿದ್ದೂ ಮಣಿತ, ಮಾತುಗಳೆಲ್ಲ ಚೆನ್ನಾಗಿಯೇ ಇದ್ದೂ ನನಗೆ ಅಷ್ಟಾಗಿ ಹಿಡಿಸಲಿಲ್ಲ. ಅದಕ್ಕೆ ಪಾತ್ರಧಾರಿಗಳು ಯುಕ್ತ ಬಣ್ಣ, ತೊಡವುಗಳಲ್ಲಿ ಕಾಣಿಸದಿದ್ದದ್ದು, ಮಂಗಳೂರಿನ ಪಯಣದ ಬಳಲಿಕೆ ಮತ್ತು ಒಂದು ನಾಟಕ (ವಿಶ್ವಾಮಿತ್ರ ಮೇನಕೆ…) ನೋಡಿ ಬಂದ ಬಳಲಿಕೆಗಳೆಲ್ಲ ಕಾರಣಗಳಿದ್ದಿರಬೇಕು. ಆದರೆ ಮಾರಣೇ ದಿನ, (ಖಾಲಿ ರಂಗಮಂದಿರದಲ್ಲೇ ಆದರೂ) ಪೂರ್ಣ ಬಣ್ಣ ವೇಷಗಳಿಂದ ದಾಖಲೀಕರಣಕ್ಕಾಗಿಯೇ ಕೊಟ್ಟ ಪ್ರಯೋಗ ತುಂಬ ಸ್ವಾರಸ್ಯಕರವಾಗಿಯೇ ರಂಜಿಸಿತು. ಹಿಂದಿನ ಟಿಪ್ಪಣಿಯಲ್ಲಿ ಹೇಳಿದಂತೆ ಹೇಳಿದಂತೆ, ನಾನು ಪ್ರದರ್ಶನದ ವಿಮರ್ಶೆಗೆ ಕುಳಿತಿಲ್ಲ. ಅದು ಹೇಗೂ ನಾಲ್ಕು ಕ್ಯಾಮರಾ ಕಣ್ಣಿಗೂ ಸ್ವತಂತ್ರ ಧ್ವನಿಗ್ರಹಣ ವ್ಯವಸ್ಥೆಗೂ ಒಡ್ಡಿಕೊಂಡದ್ದಾಗಿದೆ. ಇನ್ನು ಪ್ರಯೋಗಶಾಲೆಯಲ್ಲಿ ಸಂಕಲನಕ್ಕೆ ಒಡ್ಡಿಕೊಂಡು ಒಂದಾಗಿ, ಸದ್ಯದಲ್ಲೇ ಶುದ್ಧ ನಾಟಕದ ಪ್ರದರ್ಶನದ ಅನುಭವವನ್ನೇ ಅಂತರ್ಜಾಲದಲ್ಲಿ ಲೋಕಕ್ಕೆ ನೀಡಲು ಬರಲಿದೆ. ಎಂದಿನಂತೆ ಯೂ ಟ್ಯೂಬಿನಲ್ಲಿ, ಸಂಚಿ ಪ್ರತಿಷ್ಠಾನದ ಜಾಲತಾಣದಲ್ಲಿ, ನಿಮ್ಮನುಕೂಲದಲ್ಲಿ, ಉಚಿತವಾಗಿ ನೋಡಿ, ಸಮಾನಾಸಕ್ತ ಬಳಗದಲ್ಲಿ ಧಾರಾಳ ಹಂಚಿ. ಹಾಗೇ ವಿಮರ್ಶಿಸುವ ಭಾಗ್ಯವೂ ನಿಮ್ಮದೇ ಆಗಲಿ.

ಹೆಗ್ಗೋಡಿನ ಊರವರು: ಮೊದಲ ದಿನ ಎರಡನೇ ನಾಟಕ ಶುರುವಾಗುವುದಕ್ಕೂ ಬಹಳ ಮೊದಲೇ ನಾನು ಶಿವರಾಮ ಕಾರಂತ ರಂಗಮಂದಿರದೊಳಗೆ ಸುಮ್ಮನೇ ಕೂತಿದ್ದೆ. ಪ್ರೇಕ್ಷಾಂಗಣದಲ್ಲಿ ಇನ್ಯಾವುದೋ ರಂಗ ಚಟುವಟಿಕೆಗೆಂದು ಒಟ್ಟಿದ್ದ ಭಾರೀ ಬೆಂಚುಗಳ ಅಟ್ಟಣೆಯನ್ನು ಎರಡು ಗಂಡಸರು (ನಟರೇ ಇರಬೇಕು) ಒಂದೊಂದಾಗಿಯೇ ರಂಗದ ಮೇಲೆತ್ತಿಟ್ಟು ಮತ್ತೆ ಹಾಗೇ ಮಗ್ಗುಲ ಮರೆಗಳಿಂದಾಚೆ ಸಾಗಿಸುತ್ತಿದ್ದರು. ಹಾಗೇ ಬಂದ ಮೂರು ನಾಲ್ಕು ಮಕ್ಕಳು (ನಾಟಕದ ಸಮೂಹ ಪಾತ್ರಗಳಲ್ಲಿದ್ದಿರಬೇಕು) ಉತ್ಸಾಹದಲ್ಲೇ ಬೆಂಚು ಎತ್ತಲು ಮುಂದಾಗಿದ್ದರು. ಒಳಗಿಂದ ಬಂದ ವಿದ್ಯಾ ಹೆಗಡೆ (ಶ್ರೀಮತಿ ಅಕ್ಷರ ಮತ್ತು ಪ್ರಸ್ತುತ ನಾಟಕದ ಮುಖ್ಯ ನಟರಲ್ಲೊಬ್ಬರು) “ಮಕ್ಕಳೆ ಇದು ನಿಮಗಲ್ಲ” ಎಂದು ಬಿಡಿಸಿ ಇನ್ಯಾರೋ ತರುಣನನ್ನು ಜೋಡಿ ಮಾಡಿಕೊಂಡು ಬೆಂಚು ಸಾಗಣೆಯನ್ನು ಚುರುಕು ಮಾಡಿದರು. ಅನಂತರ ಅವರೇ ಹಿಡಿಸೂಡಿ ತಂದು ಪ್ರೇಕ್ಷಾಂಗಣದಲ್ಲಿ ಅವು ಇದ್ದ ಜಾಗದ ದೂಳು ಕಸವನ್ನಷ್ಟು ಗುಡಿಸಿ ತೆಗೆದರು. ಉಳಿದಂತೆಯೂ ಚೌಕಿಯತ್ತಣಿಂದ, ಪ್ರೇಕ್ಷಾಂಗಣದ ಹಿಂದೆ ಮಾಳಿಗೆಯಲ್ಲಿದ್ದ ದೀಪ, ಧ್ವನಿಗಳ ನಿಯಂತ್ರಣ ಕೊಠಡಿಯಿಂದ, ನಮಗೆ ಕಾಣದ ಕ್ಯಾಟ್ ವಾಕಿನ ಮೇಲಿಂದ, ಕರೆಂಟ್ ಹೋದಾಗ ಅತ್ತ ಕಚೇರಿ ಬಳಿಯಿದ್ದ ಜನರೇಟರ್ ಕೋಣೆ ದಿಕ್ಕಿನಿಂದ ಯಾವ್ಯಾವ್ದೋ ಹೆಸರಿಗೆ “ಅಣ್ಣಾ, ಅಕ್ಕಾ” ಸೇರಿಸಿಕೊಂಡು ಅಶರೀರವಾಣಿಗಳು ಸೂಚನೆ ಕೊಡುತ್ತಾ ಕೆಲಸಗಳು ನಡೆಯುತ್ತಲೇ ಇದ್ದ ಪರಿ ನಾನು ಇದೇ ಮೊದಲು ಕಂಡದ್ದೇನಲ್ಲ, ಇಲ್ಲಿನಂತೆ ಬೇರೆಲ್ಲು ಕಂಡದ್ದೂ ಇಲ್ಲ.

ಎಲ್ಲೆಡೆಗಳಂತೆ ಈ ಸಲ ಹೆಗ್ಗೋಡಿನಲ್ಲೂ ಮಳೆ ತುಂಬ ಕಡಿಮೆ. ಆದರೂ ಹದಿನೈದರ ಬೆಳಿಗ್ಗೆ ನಾನು ಪಂಚೆಯನ್ನು ಮೇಲೆತ್ತಿ ಕಟ್ಟಿ, ಅಭಯ ಮುಕ್ಕಾಲು ಚಡ್ಡಿಯಲ್ಲಿ ಸಣ್ಣ ‘ವಾಕಿಂಗ್’ ಹೊರಟಾಗ, ಬೆನ್ನಿಗೆ ಕೊಡೆ ತಗಲಿಸಿಕೊಳ್ಳುವುದನ್ನು ಮರೆಯಲಿಲ್ಲ. ನುಣ್ಣನೆ ಡಾಮರ್ ತುಳಿಯುತ್ತಿದ್ದಂತೆ, ಬಲಕ್ಕೆ ಕಮಾನಿಟ್ಟು ಸ್ಥಳದ ದೇವರು ನೀಲಕಂಠೇಶ್ವರ Come-on ಎಂದ. ಕಚ್ಚಾರಸ್ತೆಯ ತಚಿಪಿಚಿ ಮೆಟ್ಟಿ ನಡೆದಿದ್ದಂತೆ, ಹಿಂದಿನಿಂದ ಗೊರಡೊರ ಹೇಳಿಕೊಂಡೊಂದು ಅಜ್ಜಜ್ಜ ಸ್ಕೂಟರ್ ನಿಧಾನಕ್ಕೇ ಬಂತು. ನಾವು ನಡುವೆ ದಾರಿ ಬಿಟ್ಟುಕೊಟ್ಟರೂ ಅಲ್ಲಿಗೇ ಬಂದು ಡಸಕ್ಕೆಂದು ಇಂಜಿನ್ ಆರಿಸಿಕೊಂಡೇ ನಿಂತಿತು. ಹಾಗೆ ಸವಾರಿಯಲ್ಲಿದ್ದ ಅಜ್ಜರ ದಿಟ್ಟಿಯಲ್ಲೇ ಬಹಳ ಸ್ಪಷ್ಟವಿದ್ದ ಪ್ರಶ್ನೆ ಮಾತಿನಲ್ಲೂ ಬಂತು “ಎಲ್ಲಾಯ್ತು?” ಮತ್ತಿನ ಸಂವಾದದಲ್ಲೂ ತಮ್ಮೂರಿಗೆ ಬಂದವರನ್ನು ಮಾತಾಡಿಸದಿದ್ದರೆ ಹೇಗೆ ಎನ್ನುವ ಕಾಳಜಿಯೂ ಮಾತು ಅಧಿಕವಾಗದ ಸಂಯಮವೂ ಕಾಣಿಸಿ ನಮಗೆ ಕುಶಿ ಕೊಟ್ಟಿತು. ಅವರ ನಿತ್ಯದ ವಾಕಿಂಗ್ ದಾರಿ ಕೆಸರಾದ್ದಕ್ಕೆ, ಅಂದು ಸ್ಕೂಟರಿನಲ್ಲಿ ಬಂದಿದ್ದರಂತೆ. ಅವರು ಮುಂದುವರಿದು, ನಿತ್ಯದಂತೆ ಎರಡು ದೇವಳಕ್ಕೆ ನಮಸ್ಕಾರ ಹಾಕಿ, ವಾಪಾಸು ಹೊರಟಿದ್ದರು. ಆ ಎಡೆಯಲ್ಲಿ ನಾವೂ ನೀಲಕಂಠ ನಿವಾಸ ಕಂಡು ವಾಪಾಸು ನಡೆದಿದ್ದೆವು. ಹನಿಹನಿ ಮಳೆ ತೊಡಗಿದ್ದಕ್ಕೆ ಕೊಡೆಯರಳಿಸಿ, ನಡೆ ಚುರುಕು ಮಾಡಿದ್ದೆವು. ಆದರವರು ಮತ್ತೊಮ್ಮೆ ನಮ್ಮ ನಡುವೆ ನಿಲ್ಲಿಸಿ, ಅದೇ ಕಾಳಜಿಯಲ್ಲಿ ವಿಚಾರಿಸಿಕೊಂಡರು “ನಡೆದು ದಣುವಾಗಿದ್ದರೆ ಸ್ಕೂಟರಿಗೆ ಹತ್ತಿಕೊಳ್ಳಿ, ಬಿಡ್ತೇನೆ.”

ಸ್ಕೂಟರಜ್ಜ ಭೇಟಿ ಕೊಟ್ಟ ಮೊದಲ ದೇವಳ ಬಹುತೇಕ ಖಾಸಗಿ ಮನೆಯ ಭಾಗದಂತಿತ್ತು – ನಾವು ಹೋಗಲಿಲ್ಲ. ನಾನು ಹಿಂದೊಮ್ಮೆ ಕಂಡಿದ್ದ ನೀಲಕಂಠ ದೇವಳ ಅಭಯನಿಗೆ ಹೊಸದು. ದೇವಳದ ಒಳಾಂಗಣದಲ್ಲಿ ಒಂದು ಸುತ್ತು ಹಾಕಿ, ಪೂಜಾರಮ್ಮ ಪ್ರಸಾದ ತಟ್ಟೆಯೊಡನೆ ಸಜ್ಜಾಗುವಾಗ ತಣ್ಣಗೆ ಜಾರಿಕೊಂಡೆವು. ಅಲ್ಲಿ ಗರ್ಭಗುಡಿ ಮತ್ತು ಎರಡು ‘ಔಟ್ ಹೌಸ್’ ಗುಡಿಗಳಿಗೂ ಒಂದು ನಿಜದ್ವಾರವೇನೋ ಇದೆ. ಉಳಿದ ಮೂರು ದಿಕ್ಕಿಗೆ ಬಂದ್ ಮಾಡಿದಂತೆ ಕಾಣುವ ಹುಸಿ ದ್ವಾರ (ಕಲಾತ್ಮಕವೇನೂ ಅಲ್ಲ) ಇತ್ತು. ಪಂಚಿಪಾತ್ರೆಗೆ ಉದ್ಧರಣೆ ಠಣಕ್ಕೆನ್ನಿಸಿ “ಅರ್ಘ್ಯಂ ಸಮರ್ಪಯಾಮೀ…” ಎಂದೆಲ್ಲಾ ಮಂಗ ಮಾಡಿದಂತೆ, ಇಲ್ಲಿ ಕವಾಟ ಸೇವೇಂತೇನಾದರೂ ಇದ್ದರೆ, ಭೋಲಾ ಶಂಕರನನ್ನು ಯಾಮಾರಿಸುತ್ತಿದ್ದಾರೋ ಅಥವಾ ವಾಸ್ತು ಬ್ರಹ್ಮರ ಆದೇಶಕ್ಕೆ ಒಳದಾರಿ ಹಿಡಿಯುವ ಹಿಕ್ಮತ್ತು ನಡೆಸಿದ್ದಾರೋ ಗೊತ್ತಿಲ್ಲ!

ಮೂಲದಲ್ಲಿದ್ದ ಪುಸ್ತಕ ಬಂಧ

ಅತ್ರಿ ಬುಕ್ ಸೆಂಟರ್ ಕಾರಣದಿಂದ ಹೆಗ್ಗೋಡಿನೊಡನೆ ನನ್ನ ಮೂಲಬಂಧ ಪುಸ್ತಕದ್ದು. ಹೆಗ್ಗೋಡಿನ ಸಾಹಿತ್ಯಕ ಚಟುವಟಿಕೆಗಳ ಬಹುದೊಡ್ಡ ವಕ್ತಾರ, ಸಾಗರ ಕಾಲೇಜಿನ ಇಂಗ್ಲಿಷ್ ಅಧ್ಯಾಪಕ (ನಿವೃತ್ತ) – ಟಿಪಿ ಅಶೋಕ. ಇವರು ದಕ ಜಿಲ್ಲಾ ವಲಯಗಳಲ್ಲಿ ಭಾಷಣ, ಶಿಬಿರಗಳೆಂದು ಬಂದಾಗೆಲ್ಲ, ನೀನಾಸಂ ಗ್ರಂಥಾಲಯ ಬಲಗೊಳಿಸುವಂತೆ ನನ್ನಲ್ಲಿಂದ ಧಾರಾಳವಾಗಿ ಪುಸ್ತಕಗಳನ್ನು ಕೊಳ್ಳುತ್ತಿದ್ದರು. ಅದಕ್ಕೂ ಮುಖ್ಯವಾಗಿ, ಕೂಡಲೇ ನಗದು ಕೊಟ್ಟು ಮುಗಿಸುತ್ತಿದ್ದರು. ಈ ಒತ್ತು ಕೊಡುವುದಕ್ಕೆ ಸಣ್ಣ ಸ್ಪಷ್ಟೀಕರಣ ಕೊಡುವುದವಶ್ಯ. ಅವರಾದರೋ (ಅಕ್ಷರ ಪ್ರಕಾಶನ) ಗುದಾಮಿನಲ್ಲಿ ನೂರಾರು ಸಂಖ್ಯೆಯಲ್ಲಿ ಪುಸ್ತಕ ದಾಸ್ತಾನಿಟ್ಟು, ವಿವಿಧ ಮಳಿಗೆಗಳ ಮೂಲಕ ಹಗುರಾಗುವ ಪ್ರಯತ್ನದಲ್ಲಿರುವ ಪ್ರಕಾಶಕ. ಇವರು ವಿಶ್ವಾಸಾರ್ಹ ಮಳಿಗೆಗಳನ್ನು ತಮ್ಮದೇ ಗುದಾಮಿನ ವಿಸ್ತರಣೆ ಎಂಬಂತೆ ಭಾವಿಸಿ, ಅನಿರ್ದಿಷ್ಟ ಪಾವತಿ ಕಾಯುವುದು ವಿಶೇಷವಲ್ಲ. ನಾನಾದರೋ (ಪುಸ್ತಕ ವ್ಯಾಪಾರಿ) ನೂರಾರು ಪ್ರಕಾಶಕರ ಪುಸ್ತಕಗಳನ್ನು ಒಂದೆರಡರ ಮಿತಿಯಲ್ಲಿ ಒಟ್ಟುಗೂಡಿಸಿ, ಪ್ರತಿ ಮಾರಾಟದಲ್ಲೂ ನವೀಕರಣ ಅಥವಾ ಹೊಸ ಹೂಡಿಕೆಗೆ ಅವಕಾಶವನ್ನು ಕಾಣುವ ಬಿಡಿ ವಿತರಕ. ಬಹುತೇಕ ಪ್ರಕಾಶಕರು ಅಪರೂಪಕ್ಕಾದರೂ ನಮ್ಮಿಂದೇನಾದರೂ ಅನ್ಯ ಪ್ರಕಾಶನದ ಪುಸ್ತಕಗಳನ್ನು ಕೊಂಡರೆ, ತಮ್ಮ ಪುಸ್ತಕಗಳ ಖರೀದಿಗೆ ಹೊಂದಿಸುವುದೇ ಹೆಚ್ಚು. ನನ್ನ ಮೂವತ್ತಾರು ವರ್ಷಗಳ ಪುಸ್ತಕ-ವೃತ್ತಿ ಜೀವನದಲ್ಲಿ ಸ್ವಚ್ಛವಾಗಿ ‘ಪರಸ್ಪರ’ ಎಂಬಂತೆ ವ್ಯವಹರಿಸಿದ ಏಕೈಕ ಉದಾಹರಣೆ ಇದು. ಕನ್ನಡ ಪುಸ್ತಕ ಪ್ರಪಂಚದಲ್ಲಿ ಹಲವು ಪ್ರಕಾಶಕರು ಮಳಿಗೆಯಿಟ್ಟು, ತಮ್ಮದರೊಡನೆ ಇತರ ಪುಸ್ತಕಗಳನ್ನೂ ಇಟ್ಟುಕೊಂಡು ಬಿಡಿ ಮಾರಾಟ ನಡೆಸುವುದು ಧಾರಾಳ ಇತ್ತು. ನಾನು ಬಹುತೇಕ ಎಲ್ಲ ಪ್ರಕಾಶಕರ ಎಲ್ಲ ಪ್ರಕಟಣೆಗಳಿಗೂ ನನ್ನ ಮಳಿಗೆಯಲ್ಲಿ ಉಚಿತ ಪ್ರಾತಿನಿಧ್ಯ ಕೊಡುತ್ತಿದ್ದೆ. ಆದರೆ ಇತರ ಯಾವುದೇ (ಶುದ್ಧ ಪ್ರಕಾಶಕರಲ್ಲ) ಬಿಡಿ ಪುಸ್ತಕ ಮಾರಾಟ ಮಳಿಗೆಗಳು, ಪುಸ್ತಕ ವಿತರಕರು ತಮ್ಮ ಊರುಗಳಲ್ಲಿ ಅಥವಾ ತಮ್ಮ ಪುಸ್ತಕ ಜಾಲಗಳಲ್ಲಿ ನನ್ನ ಪ್ರಕಟಣೆಗಳಿಗೆ ಸಾರ್ಥಕ ಅವಕಾಶ ಕೊಟ್ಟದ್ದೇ ಇಲ್ಲ!

ಅಡಿಗರಿಂದ ಮರುಹುಟ್ಟು ಪಡೆದ ‘ಸಾಕ್ಷಿ’, ಮುಂದುವರಿದ ಕಾಲದಲ್ಲಿ ‘ಮಾತುಕತೆ’, ವಿವೇಕ ಶಾನುಭಾಗರ ದೇಶಕಾಲ ನಿಯತಕಾಲಿಕಗಳ ಮೂಲಕವೂ, ಕೆಲವು ಧೋರಣಾತ್ಮಕ ನಿಲುವುಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆಗಳಲ್ಲೂ ಅಕ್ಷರ ಪ್ರಕಾಶನಕ್ಕೂ ನನಗೂ ಸಮಾನಮನಸ್ಕ ಬಂಧವೇ ಇತ್ತು. ನಾನು ಪುಸ್ತಕ ಮಳಿಗೆಯ ಹೆಸರಿನಲ್ಲೇ ಸ್ವತಂತ್ರ ಪ್ರಕಾಶನ ಕಾರ್ಯಗಳನ್ನೂ ನಡೆಸತೊಡಗಿದಾಗ ಬಿಡಿ ಮಾರಾಟ ಮಳಿಗೆ ಇಲ್ಲದ ಅಕ್ಷರ ಪ್ರಕಾಶನವನ್ನೆಂದೂ ಸಂಪರ್ಕಿಸಿದ್ದಿಲ್ಲ. ಆದರೆ ಅವರು ಮಂಗಳೂರು ವಲಯಗಳಲ್ಲಿ ತಮ್ಮ ಪ್ರಕಟಣೆಗಳಿಗೆ ಸಂಬಂಧಪಟ್ಟ ಬೇಡಿಕೆ ಬಂದಾಗ ನನ್ನನ್ನೆಂದೂ ಮರೆತದ್ದಿಲ್ಲ. ಮಂವಿವಿ ನಿಲಯಕ್ಕೆ ಪಠ್ಯವಾಗಿ ಆಯ್ಕೆಗೊಂಡ ಅವರೆಲ್ಲ ಪುಸ್ತಕಗಳಿಗೂ ಏಕೈಕ ಸಗಟು ವಿತರಕನಾಗಿ ನನ್ನನ್ನೇ ಹೆಸರಿಸುತ್ತಿದ್ದದ್ದು ಇಲ್ಲಿ ನೆನಪಾಗುತ್ತದೆ.

ನಾನು ಪುಸ್ತಕೋದ್ಯಮದಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರೂ ಸ್ವಂತ ಓದಿನಲ್ಲಿ ದೊಡ್ಡ ಪುಸ್ತಕಗಳನ್ನು ಪೂರೈಸಿದ್ದು ವಿರಳವೇ. ಪತ್ರಿಕೆ, ಕೆಲವು ನಿಯತಕಾಲಿಕಗಳು ಮತ್ತು ಪುಸ್ತಕಗಳಲ್ಲಿ ಹೆಕ್ಕಿ ಹೆಕ್ಕಿ ಓದಿದ್ದೇ ಹೆಚ್ಚು. ನನಗೆ ಕೆವಿ ಅಕ್ಷರರ ಬರಹಗಳ ಕುರಿತು ಆಸಕ್ತಿ ಕುದುರಿದ್ದು ದೇಶಕಾಲ ಪತ್ರಿಕೆಯಿಂದ. ಅವರ ಒಲವು, ನಿಲುವುಗಳೆಲ್ಲ ಬಹುತೇಕ ನನಗೆ ಒಗ್ಗುವವೇ ಆಗಿವೆ. ಅಕ್ಷರ ಶರಾವತಿಯ ಮುಳುಗಡೆಯ ಹಿನ್ನೆಲೆ ಇಟ್ಟುಕೊಂಡು ಮೊದಲು ರಂಗಕ್ಕೆ ಮತ್ತೆ ಪುಸ್ತಕವಾಗಿಯೂ ತಂದ ಮೂರು ನಾಟಕಗಳಂತು ನಾನು ಹೆಚ್ಚು ತೊಡಗಿಸಿಕೊಂಡ ವನ್ಯ ಸಂರಕ್ಷಣೆಯ ಪರವೂ ಇರುವುದರಿಂದ ನನಗೆ ಹೆಚ್ಚು ಆತ್ಮೀಯವೂ ಆಗಿತ್ತು. (ನೋಡಿ: ೨೦೧೬ರ ಸ್ವಯಂವರಲೋಕ, ೨೦೧೮ರ ಸೇತುಬಂಧನ, ಮತ್ತೊಂದೂ ಸಂಚಿಯಲ್ಲಿರಬೇಕು.) ಇವುಗಳಿಂದ ಪುಷ್ಟವಾದ ನನ್ನ ‘ಅಕ್ಷರ-ಕುತೂಹಲ’ಕ್ಕೆ ಹೊಸ ಆಹಾರವಾಗಿ ತೋರಿದ್ದು, ಅಕ್ಷರ ಈಚೆಗೆ ಬರೆದು, ಪ್ರಕಟಿಸಿದ ಪುಸ್ತಕ – ಶಂಕರ ವಿಹಾರ. ಇದು ದೇವರು, ಪುರಾಣಾದಿಗಳನ್ನು ಸಾಂಪ್ರದಾಯಿಕ ನಂಬಿಕೆಯ ನೆಲೆಯಿಂದ ಕಳಚಿ, ವಿಚಾರದ ಒರೆಗೆ ಉಜ್ಜಿದ ಬರಹ, ಅವರೇ ಹೇಳಿಕೊಂಡಂತೆ – ಆಧುನಿಕನೊಬ್ಬನ ಅದ್ವೈತಯಾತ್ರೆ. ಅಭಯ ಅದನ್ನು ಬೆಂಗಳೂರಿನಲ್ಲೇ ಕೊಂಡಿದ್ದ. ಆದರೆ ಹೆಗ್ಗೋಡಿಗೆ ಹೊರಟಾಗ ನಾನೂ ಒಂದು ಪ್ರತಿ ಕೊಂಡೇ ಓದುವುದೆಂದುಕೊಂಡಿದ್ದೆ. ಹದಿನೈದರಂದು ಹೊಸ ವಿದ್ಯಾರ್ಥಿಗಳ ಸ್ವಾಗತ ಕಲಾಪ ಮುಗಿದ ಬಿಡುವಿನ ಸಮಯ ನೋಡಿ, ನಾನು ಗುಟ್ಟಿನಲ್ಲಿ ಶಿಶಿರನ ಬಳಿ ಶಂಕರ ವಿಹಾರದ ಒಂದು ಪ್ರತಿ ಕ್ರಯಕ್ಕೇ ಕೊಡಬೇಕು ಎಂದು ಕೇಳಿದೆ. ಪುಣ್ಯಾತ್ಮ ‘ವಿಶ್ವಾಸ ದ್ರೋಹ’ ಮಾಡಿ, ಸ್ವಲ್ಪ ಅತ್ತ ಇದ್ದ ಅಪ್ಪನಿಗೆ ತಿಳಿಸಿಬಿಟ್ಟ. ಅಕ್ಷರ ನನ್ನನ್ನು ತಮ್ಮ ಪುಸ್ತಕ ಗುದಾಮಿಗೇ ಕರೆದೊಯ್ದರು. ಶಂಕರ ವಿಹಾರದ ಜತೆಗೆ ಅವರ ಇನ್ನೊಂದು ಹೊಸ ಪುಸ್ತಕ – ಚಿತ್ರದ ಕುದುರೆ – ಬಿಡಿ ಲೇಖನಗಳ ಸಂಕಲನವನ್ನೂ ‘ಪ್ರೀತಿಪೂರ್ವಕ’ವಾಗಿ ಕೊಟ್ಟುಬಿಟ್ಟರು. ನಾನು ಹಣ ಕೊಡಲು ಒತ್ತಾಯಿಸದಂತೆ “ನೀವೀಗ ಪುಸ್ತಕ ವ್ಯಾಪಾರಿಯಲ್ಲ, ನಮ್ಮ ಅತಿಥಿ” ಎಂದು ಮುಗಿಸಿಬಿಟ್ಟರು!

ಕೆವಿ ಸುಬ್ಬಣ್ಣ ಸ್ಮರಣೆ

೧೯೭೫ರಲ್ಲಿ ನಾನು ಅತ್ರಿ ಬುಕ್ ಸೆಂಟರ್ ಪ್ರಾರಂಭಿಸಿದಾಗ ಬಹುತೇಕ ಪೂರ್ಣ ಪ್ರಾಯೋಜಕರೇ ಎನ್ನುವ ಅದ್ವಿತೀಯ ಸ್ಥಾನದಲ್ಲಿ ಡಿವಿಕೆ ಮೂರ್ತಿಯವರಿದ್ದರು. ಉಳಿದಂತೆ ಮೈಸೂರಿನ ಬಹುತೇಕ ಪ್ರಕಾಶಕರು, ನನ್ನ ತಂದೆಯ ಪೂರ್ಣ ಪರಿಚಯ ಬಲವಿದ್ದುದರಿಂದ, ಬಂಡವಾಳವಿಲ್ಲದೇ ವ್ಯಾಪಾರಕ್ಕಿಳಿದ ನನಗೆ ಬೇಕಾದಷ್ಟು ಪುಸ್ತಕಗಳನ್ನು ಸಾಲದಲ್ಲಿ ಕೊಟ್ಟು, ಕಂತಿನಲ್ಲಿ ಪಾವತಿ ಸ್ವೀಕರಿಸುತ್ತ ನಡೆಸಿದರು. ಆಗ ಹೊರ ಊರಿನಿಂದ ಮತ್ತು ಸ್ಪಷ್ಟವಾಗಿ ಸಾಹಿತ್ಯದ ಒಂದು ಭಿನ್ನ ಸ್ತರದ ದೊಡ್ಡ ಪ್ರಕಾಶಕರಾಗಿ, ವಿಶೇಷ ಕಾರಣಗಳೇನೂ ಇಲ್ಲದೆ, ನನ್ನಲ್ಲಿ ಪೂರ್ಣ ವಿಶ್ವಾಸವಿಟ್ಟು ನಡೆಸಿಕೊಂಡವರು ಹೆಗ್ಗೋಡಿನ ಅಕ್ಷರ ಪ್ರಕಾಶನದ ಕೆವಿ ಸುಬ್ಬಣ್ಣನವರು. ಅವರು ಅಷ್ಟಕ್ಕೇ ನಿಲ್ಲದೆ, ನನಗರಿವಿಲ್ಲದೇ ಬೆಂಗಳೂರಿನ ಸಾಹಿತ್ಯ ಭಂಡಾರದ ಗೋವಿಂದರಾಯರಿಗೆ ನನ್ನ ಹೆಸರು ಶಿಫಾರಸು ಮಾಡಿ, ಪುಸ್ತಕ ಸಾಲ ಕೊಡಿಸಿದ್ದರು. (ಮುಂದೊಂದು ಕಾಲದಲ್ಲಿ ಸ್ವತಃ ಗೋವಿಂದರಾಯರೇ ನನಗೀ ಮಾತು ತಿಳಿಸಿದ್ದರು. ಸುಬ್ಬಣ್ಣ ಹೀಗೆ ಇನ್ಯಾರಿಗೆಲ್ಲ ನನ್ನ ಹೆಸರು ಶಿಫಾರಸು ಮಾಡಿದ್ದರೋ ನನಗೆ ತಿಳಿದಿಲ್ಲ.) ೧೯೭೮ರ ಸುಮಾರಿಗೆ ‘ಮಂಗಳಾ ಫಿಲಂ ಸೊಸಾಯಿಟಿ’ (ಮುಖ್ಯವಾಗಿ ಗೆಳೆಯರಾದ ಕೆ.ಎಲ್ ರೆಡ್ಡಿ, ತಿಲಕನಾಥ ಮಂಜೇಶ್ವರ ಇದರ ಹಿಂದಿದ್ದ ದೊಡ್ಡ ಕ್ರಿಯಾಶಕ್ತಿಗಳು) ಮಂಗಳೂರಿನಲ್ಲಿ ಮೊದಲ ಬಾರಿಗೆ ಚಲನಚಿತ್ರ ರಸಗ್ರಹಣ ಶಿಬಿರ ನಡೆಸಿದಾಗ, ಏಕೈಕ ಸಂಪನ್ಮೂಲ ವ್ಯಕ್ತಿಯಾಗಿ ಹೆಗ್ಗೋಡಿನಿಂದ ಇದೇ ಕೆವಿ ಸುಬ್ಬಣ್ಣ ಬಂದಿದ್ದರು. ಬಹುಶಃ ಅದೇ ನನ್ನ ಅವರ ಮೊದಲ ಭೇಟಿ. ಸುಬ್ಬಣ್ಣನವರ ಆ ಮಂಗಳೂರು ಭೇಟಿ ನಮಗೆ (ಮಂಗಳೂರಿಗರಿಗೆ) ಇನ್ನಷ್ಟು ಸ್ಮರಣೀಯವಾಗಲು ದೊಡ್ಡ ಕಾರಣವನ್ನು ನಾನು ಹೇಳದಿರಲಾರೆ. ಸುಬ್ಬಣ್ಣ ಹೆಗ್ಗೋಡಿನಿಂದ ಸಾರ್ವಜನಿಕ ಬಸ್ಸಿನಲ್ಲೇ ಬಂದು, ಶಿಬಿರವನ್ನು ಚೆನ್ನಾಗಿಯೇ ನಡೆಸಿ, ಹಾಗೇ ವಾಪಾಸಾದರು. ಸೊಸಾಯಿಟಿ ತನ್ನ ಸೀಮಿತ ಅನುಕೂಲದಲ್ಲಿ ಅವರ ಊಟ ವಸತಿ ನೋಡಿಕೊಂಡು, ಕೊನೆಯಲ್ಲಿ ಕಿಂಚಿತ್ ಹಣವನ್ನು ಬಸ್ ವೆಚ್ಚ ಮತ್ತು ಗೌರವಾರ್ಥ ಎಂದೇ ಅಂದಾಜಿಸಿ, ಕವರಿಗೆ ಹಾಕಿ ಕೊಟ್ಟಿದ್ದರು. ಎರಡು ದಿನ ಕಳೆಯುವುದರೊಳಗೆ ಅಂಚೆಯಲ್ಲಿ ಸುಬ್ಬಣ್ಣವರಿಂದ ಒಂದು ಚೆಕ್ ಬಂತು. ಜತೆಗಿನ ಪತ್ರ “ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದೀರಿ. ನೀವು ಕೊಟ್ಟ ಹಣದಲ್ಲಿ ನನ್ನ ಹೋಗಿ ಬರುವ ಬಸ್ ಚಾರ್ಜು ಕಳೆದ ಮೊತ್ತವನ್ನು ಈ ಮೂಲಕ ಮರಳಿಸುತ್ತಿದ್ದೇನೆ.”

೧೯೯೦ರ ದಶಕದಲ್ಲೊಂದು ದಿನ, ನಾವೈವರು (ತಂದೆ, ತಾಯಿ, ಹೆಂಡತಿ, ಮಗ) ಕಾರೇರಿ ಮಂಗಳೂರಿನಿಂದ ಸಾಗರ ದಾರಿ ಹಿಡಿದಿದ್ದೆವು. ಅಭಯ ಬಹುಶಃ ಪೀಯೂಸೀ ವಿದ್ಯಾರ್ಥಿ, ದಾರಿ ಖರ್ಚಿಗೆಂದು ನಾಗತಿಹಳ್ಳಿ ಚಂದ್ರಶೇಖರರ ಹೊಸ ಕಥಾ ಸಂಕಲನ ಹಿಡಿದುಕೊಂಡಿದ್ದ. ಅಜ್ಜ – ಎಷ್ಟಿದ್ದರೂ ಹಳೇ ಮೇಸ್ಟ್ರು, ಒತ್ತಾಯಿಸಿದ್ದಕ್ಕೆ, ದಾರಿಯಲ್ಲಿ ಅಭಯನಿಂದ ಒಂದು ಕಥಾವಾಚನವೂ ನಡೆಯಿತು. ವರಾಹಿ ಭೂಗತ ವಿದ್ಯುದಾಗರ ದರ್ಶನ ಮೊದಲ ಕಟ್ಟೆಪೂಜೆ. ಮುಂದೆ ಶ್ರೀಧರಾಶ್ರಮ ದರ್ಶನ. ಹಿಂದಿರುಗುವ ದಾರಿಯಲ್ಲಿ ಹೆಗ್ಗೋಡಿನಲ್ಲಿ ಕೆವಿ ಸುಬ್ಬಣ್ಣ ಸಂದರ್ಶನಕ್ಕೆ ಮಂಗಳ. ಅದು ಸಣ್ಣ ಮಳೆಯ ದಿನ. ಸುಬ್ಬಣ್ಣ ನಮ್ಮನ್ನು ಇಂದಿನ ‘ಆಹಾರ್ಯ’ದ ಹೊರ ಜಗುಲಿಯಲ್ಲಿ ಕುಳ್ಳಿರಿಸಿ, ಅವಲಕ್ಕಿ ಕಷಾಯ ಕೊಟ್ಟು, ಮುಖ್ಯವಾಗಿ ತಂದೆಯೊಡನೆ ಧಾರಾಳ ಮಾತಾಡಿದ್ದರು. ಲೋಕನಾಥರ ಅದ್ಭುತ ಅಭಿನಯದ ‘ಗೆಲಿಲಿಯೋ’ (ಬ್ರೆಕ್ಟನ ನಾಟಕ) ನೋಡಿದಲ್ಲಿಂದ ತಂದೆಯ ತಲೆ ಸೇರಿದ್ದ ಗುಂಗೀ ಹುಳವನ್ನಿಲ್ಲಿ ಸುಬ್ಬಣ್ಣರ ತಲೆಗೆ ವರ್ಗಾಯಿಸಿದರು. “ಆಲ್ಬರ್ಟ್ ಐನ್ಸ್ಟೈನ್ (ವೈಜ್ಞಾನಿಕ) ಜೀವನ ಚಿತ್ರವನ್ನು ರಂಗಕ್ಕೆ ತನ್ನಿ. ನನ್ನ ಪೂರ್ಣ ಸಹಕಾರ ನಿಮ್ಮೊಡನಿದೆ.” ಐತಿಹಾಸಿಕ ಅಸ್ಪಷ್ಟತೆಯ ಗೆಲಿಲಿಯೋಗಿಂತ ಖಚಿತ ಸ್ವರೂಪದ ಮತ್ತು ಹೆಚ್ಚು ವರ್ಣಮಯ ವ್ಯಕ್ತಿತ್ವದ ಆಲ್ಬರ್ಟ್ ಐನ್ಸ್ಟೈನ್‍ನ್ನು ನಾಟಕವಾಗಿಸುವ ‘ಬೀಜದುಂಡೆ’ ಸುಬ್ಬಣ್ಣರ ಫಲವತ್ತಾದ ಮನೋಭೂಮಿಗೆ ಹಾಕಿದ್ದರು. ಯೋಗ್ಯ ರೂಪ ನೀಡಲು ಸುಬ್ಬಣ್ಣ, ಪೋಷಕಾಂಶಗಳ ಪೂರೈಕೆಗೆ ತಂದೆ, ಮರುಭೇಟಿಯಾಗುವ ದಿನಗಳ ಅಂದಾಜು ಮಾಡುತ್ತಲೇ ಬೀಳ್ಕೊಂಡಿದ್ದೆವು. (ಮುಂದೆ ಯೋಜನೆ ಏನಾಯ್ತೆಂದು ನಾನರಿಯೆ.) [೨೦೦೩ರಲ್ಲಿ ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಕಾಲದಲ್ಲಿ ಪ್ರಕಾಶ ಬೆಳವಾಡಿಯವರು ಸುಬ್ಬಣ್ಣನವರೊಡನೆ ದೂರದರ್ಶನಕ್ಕೆ ನಡೆಸಿಕೊಟ್ಟ ಸಂದರ್ಶನ ನೋಡಿ: https://www.youtube.com/watch?v=g-sKgf6ZXQw ]

ಈ ಮಾಲಿಕೆಯಲ್ಲಿ ಹಿಂದೆ ಹೇಳಿದಂತೆ, ನಾನು ಹೆಗ್ಗೋಡು ನೋಡಿದ್ದು ೧೯೮೮ರಲ್ಲಿ. ನಾನು ಮುಂದಾಗಿ ಕಡಿಮೆ ವೆಚ್ಚದ ಊಟ, ರಾತ್ರಿ ವಾಸದ ವ್ಯವಸ್ಥೆಯನ್ನು ಕೇಳಿ ಸುಬ್ಬಣ್ಣನವರಿಗೆ ಪತ್ರಿಸಿದ್ದೆ. ಅವರು ಸರಳವಾಗಿ ಬನ್ನಿ ಎಂದೇ ಬರೆದಿದ್ದರು. ನಮ್ಮದು ಹತ್ತೋ ಹನ್ನೊಂದೋ ದ್ವಿಚಕ್ರಗಳನ್ನೇರಿದ ಇಪ್ಪತ್ತೆರಡಕ್ಕೂ ಮಿಕ್ಕ ಸದಸ್ಯರ ತಂಡ. ಜಡಿ ಮಳೆಗಾಲದಲ್ಲಿ ಕೊಲ್ಲೂರ ಮೇಲಿನಿಂದ, ಶರಾವತಿ ಮುಳುಗಡೆ ವಲಯಗಳ ನಡುವಣ ತೀರಾ ಕಚ್ಚಾ ರಸ್ತೆಗಳಲ್ಲಿ ದಿನ ಪೂರ್ತಿ ಅಲೆದು, ತುಮರಿಯ ದೋಣಿ ಸವಾರಿ ಮುಗಿಸಿ, ಕತ್ತಲಲ್ಲಿ ಹೆಗ್ಗೋಡು ಮುಟ್ಟಿದ್ದೆವು. ಶುದ್ಧ ವ್ಯವಹಾರ ಪ್ರಪಂಚದಲ್ಲಿ ಅವರಿಗೆ ನಾವೇನೂ ಅಲ್ಲದಿದ್ದರೂ ಸುಬ್ಬಣ್ಣ ನಮ್ಮನ್ನು ಶಬರಿಯಂತೇ ಕಾದಿದ್ದರು. ನಮ್ಮ ನಿರೀಕ್ಷೆಯ ಬಿಸಿಬಿಸಿ ಊಟ, ಬೆಚ್ಚಗಿನ ಮಲಗುವ ವ್ಯವಸ್ಥೆ ಇದೇ ನೀನಾಸಂ ವಠಾರದೊಳಗೇ ಮಾಡಿದ್ದರು. ಹೆಚ್ಚುವರಿಯಾಗಿ ಶಿವರಾಮ ಕಾರಂತ ರಂಗ ಭವನದಲ್ಲಿ ಪ್ರೊಜೆಕ್ಟರ್, ಆಪರೇಟರ್ ಜತೆಗೆ ಅವರ ಖಾಸಗಿ ಸಂಗ್ರಹದಲ್ಲಿದ್ದ ಅಷ್ಟೂ ಕಿರು ಚಿತ್ರಗಳನ್ನು ಮುಕ್ತವಾಗಿಟ್ಟು, ನಾವು ತಾಳಿಕೊಳ್ಳುವಷ್ಟೂ ಹೊತ್ತು, ನೋಡಿ ಆನಂದಿಸುವ ವ್ಯವಸ್ಥೆಯನ್ನೂ ಮಾಡಿದ್ದರು. ಆ ರಾತ್ರಿ ಅವರು ಮನೆಗೆ ಮರಳುವ ಮೊದಲು, ಬೆಳಗ್ಗಿನ ಉಪಾಹಾರದ ಏರ್ಪಾಡೂ ಆಗಿರುವುದನ್ನು ಖಾತ್ರಿಗೊಳಿಸುವುದರೊಡನೆ, ಇವೆಲ್ಲ ತನ್ನ ಆತಿಥ್ಯ (ನಾವೇನೂ ಹಣ ಕೊಡಕೂಡದು) ಎಂಬುದನ್ನೂ ತಿಳಿಸಿ, ನನ್ನ ಕೈ ಕಟ್ಟಿದ್ದರು. ಅಂದು ಆರೇಳರ ಪ್ರಾಯದ ಬಾಲಕನಾಗಿ ನಮ್ಮೊಡನಿದ್ದ ಅಭಯ, ಇಂದು ತನ್ನ ಸಿನಿಮಾ ಸಾಧನೆಗಳ ಮೂಲ ಪ್ರೇರಣೆಯನ್ನು ಕೇಳಿದಲ್ಲೆಲ್ಲ ತಪ್ಪದೇ ಸ್ಮರಿಸುವ `ಕುರ್ಚಿಯ ಕತೆ‘ – ಅದ್ಭುತ ಕಿರುಚಿತ್ರವನ್ನು ಅಂದು ಇಲ್ಲಿ ಕಂಡಿದ್ದ! ಅದರ ಲೆಕ್ಕ ಒಂದು ಸುತ್ತು ಪೂರೈಸಿದಂತೆ ಈಚೆಗೆ ಅಭಯ ನೀನಾಸಂ ಒಡನಾಟ ಹೆಚ್ಚಿಸಿಕೊಂಡಿದ್ದಾನೆ. ಶಿಖರಪ್ರಾಯವಾಗಿ ಅವನ ಪ್ರಥಮ ಪುಸ್ತಕ – ಪಡ್ಡಾಯಿ ಚಿತ್ರ ಕಟ್ಟಿದ ಕತೆ ಮತ್ತು ಚಿತ್ರಕಥೆಯನ್ನು ಅಕ್ಷರಪ್ರಕಾಶನವೇ ಪ್ರಕಟಿಸಿದೆ!

ಹದಿನಾಲ್ಕರಂದು ಮಂಗಳೂರಿನಿಂದ ನಾನು ಶಿಶಿರನ ಜತೆ ಕಾರೇರಿದ ಸುಮಾರಿಗೆ, ಅನಿರೀಕ್ಷಿತವಾಗಿ ಗೆಳೆಯ ಉಲ್ಲಾಸ ಕಾರಂತರಿಂದ ಏನೋ ಸಣ್ಣ ಮಾಹಿತಿ ಕೇಳಿ ದೂರವಾಣಿ ಕರೆ ಬಂದಿತ್ತು. ಆಗ ನಾನು ಹೆಗ್ಗೋಡಿನ ಪ್ರಯಾಣದಲ್ಲಿರುವುದನ್ನು ತಿಳಿದು, ಅವರು ಸಂತೋಷದ ಆಕಸ್ಮಿಕ ಎಂದೇ ಉದ್ಗರಿಸಿದರು. ಕಾರಣ ಇಷ್ಟೇ: ಜುಲೈ ೧೬ ಕೆವಿ ಸುಬ್ಬಣ್ಣ ಸ್ಮೃತಿ ದಿನ ಮತ್ತು ಅಂದು ಪ್ರಥಮ ಸಾರ್ವಜನಿಕ ಪ್ರದರ್ಶನ ಕಾಣಲೆಂದೇ ನಡು ಬೇಸಗೆಯಿರುಳ ನಲ್ಗನಸುಗಳು ನಿರ್ಮಾಣಗೊಂಡದ್ದು ಎನ್ನುವುದು ನನಗೆ ತಿಳಿದಿತ್ತು. ಆದರೆ ಆ ದಿನದ ವಿಶೇಷ ಭಾಷಣಕಾರ ಉಲ್ಲಾಸ ಕಾರಂತ ಎನ್ನುವುದು ನನಗೆ ತಿಳಿದಿರಲಿಲ್ಲ.

ಉಲ್ಲಾಸ್ ದಂಪತಿ ದಿನ ಮುಂಚಿತವಾಗಿಯೇ ಬಂದರು. ಸಂಜೆಯ ನಾಟಕ – ವಿಶ್ವಾಮಿತ್ರ ಮೇನಕೆ….,, ನೋಡಿದರು. ಜತೆಗೆ ತಮ್ಮ ತಾರುಣ್ಯದ ಬೆಂಗಳೂರು ದಿನಗಳನ್ನು ನೆನೆಸಿಕೊಂಡು, ಆ ನಾಟಕದ ಮೂಲ ಪ್ರೇರಕ ವೈ.ಎನ್.ಕೆಯೆಂಬ ಬೆರಗನ್ನು ಹಂಚಿಕೊಂಡರು. ನಾವು ಲೋಕಾಭಿರಾಮವೂ ಸಾಕಷ್ಟು ಮಾತಾಡಿಕೊಂಡೆವು, ನಾನು ಮರುದಿನ ಸಂಜೆಯ ಅವರ ಭಾಷಣಕ್ಕೆ ನಿಲ್ಲಲು ಸಜ್ಜಾಗಿ ಬರಲಿಲ್ಲವೆಂಬ ಬೇಸರ ತೋಡಿಕೊಂಡೆ. ಉಲ್ಲಾಸ್ ಉದಾರವಾಗಿ, “ಅಯ್ಯೋ ಇದು ನೀವು ಕೇಳಿದ ವಿಷಯವೇ – ಹುಲಿಗಳು, ವಿಜ್ಞಾನ ಮತ್ತು ಸಮಾಜ; ವನ್ಯಜೀವಿ ಸಂರಕ್ಷಣೆಯ ಸಮಸ್ಯೆಗಳು” ಎಂದು ಬಿಟ್ಟರು. ಆತಿಥೇಯರ ನೆಲೆಯಲ್ಲಿ ಅಕ್ಷರರಿಂದ ತೊಡಗಿ (ಅಕ್ಷರರದ್ದೇ ಮಾತನ್ನು ಬಳಸುವುದಾದರೆ,) ನೂರೆಂಟು ತಲೆಯ ರಂಗಪುರುಷನ ಒತ್ತಾಯವೂ ಕಡಿಮೆಯಿರಲಿಲ್ಲ, ಸ್ಮೃತಿ ದಿನದ ಸಡಗರ ಹೆಚ್ಚಿಸುವಂತೆ ಆಗಲೇ ಬೆಂಗಳೂರಿನಿಂದ ಮಹೋಪಾಧ್ಯಾಯ ಎಂ.ಎಸ್ ಶ್ರೀರಾಮ್ ದಂಪತಿ ಬಂದಿದ್ದರು, ಇನ್ನಷ್ಟು ಮಂದಿ ಮರುದಿನ ಪೂರ್ವಾಹ್ನದಲ್ಲಿ ಬಂದು ಸೇರುವ ನಿರೀಕ್ಷೆಯೂ ಇತ್ತು. ಎಲ್ಲಕ್ಕೂ ಮಿಗಿಲಾಗಿ ನನ್ನದೇ ಬಯಕೆಯನ್ನು ಹತ್ತಿಕ್ಕಿ, ಹದಿನಾರರ ಬೆಳಗ್ಗಿನ ಮೊದಲ ಬಸ್ಸಿನಲ್ಲಿ ಮಂಗಳೂರಿಗೆ ಮರಳಿದೆ.

(ಮುಂದುವರಿಯಲಿದೆ)