(ನೀನಾಸಂ ಕಥನ ಮಾಲಿಕೆ ೨)

ಅನೌಪಚಾರಿಕ ಸುಬ್ಬಣ್ಣ

೧೯೭೫ರಲ್ಲಿ ನಾನು ಪುಸ್ತಕದಂಗಡಿ ತೆರೆದಾಗ, ಸಹಜವಾಗಿ ಅಕ್ಷರಪ್ರಕಾಶನದ ನೆಪದಲ್ಲಿ ಹೆಗ್ಗೋಡೆಂಬ ಪಕ್ಕಾ ಹಳ್ಳಿಯ ಸಂಪರ್ಕವಾಯ್ತು. ಆದರೆ ಅದು ಬಲು ಬೇಗನೆ ವ್ಯಾಪಾರಿ ಬಂಧದಿಂದ ಮೇಲೇರಿ ಬಹುಮುಖೀ ಸಾಂಸ್ಕೃತಿಕ ಚಳವಳಿಕಾರ – ಕೆವಿ ಸುಬ್ಬಣ್ಣ, ಮುಂದುವರಿದು ಅವರ ಮಗ ಕೆವಿ ಅಕ್ಷರರ ಬಳಗದ ಗಾಢ ಸಾಂಸ್ಕೃತಿಕ ಸಂಬಂಧವೇ ಆಗಿದೆ. ೧೯೪೯ರಲ್ಲಿ ಹೆಗ್ಗೋಡಿನ ಹಳ್ಳಿಗರು ಗ್ರಾಮೀಣ ಮನರಂಜನೆಗೆಂದು ಕಟ್ಟಿಕೊಂಡ ಕೂಟ – ನೀಲಕಂಠೇಶ್ವರ ನಾಟ್ಯಸೇವಾ ಸಂಘ, ಅಥವಾ ಕಿರುರೂಪದಲ್ಲಿ ನೀನಾಸಂ. ಅದಕ್ಕೆ ಸ್ಪಷ್ಟ ಸಾಂಸ್ಥಿಕರೂಪ ಮತ್ತು ದಿಟ್ಟ ಸಾಂಸ್ಕೃತಿಕ ನಿಲುವು ಕೊಟ್ಟವರು ಕೆವಿ ಸುಬ್ಬಣ್ಣ. (ನೋಡಿ: ಸಹಪಾಠಿ ಗಂಗಾಧರ ಕಲ್ಲಹಳ್ಳ ಕಂಡ ಸುಬ್ಬಣ್ಣ)

ಸುಬ್ಬಣ್ಣನವರ ಸಹಯೋಗದ ನೀನಾಸಂ ೧೯೭೨ರಲ್ಲಿ ನಭೂತೋ ಎನ್ನುವಂತೆ, ಹಳ್ಳಿಮೂಲೆಯ ಹೆಗ್ಗೋಡಿನಲ್ಲಿ ಶಿವರಾಮ ಕಾರಂತ ರಂಗಮಂದಿರ ಕಟ್ಟಿ, ಸಿನಿಮಾ ಮತ್ತು ಯಾವುದೇ ರಂಗಪ್ರಯೋಗಗಳಿಗೆ ಮುಕ್ತ ಅವಕಾಶವನ್ನು ಲೋಕಾರ್ಪಣಗೊಳಿಸಿತು. ಇದನ್ನು ಕೇಂದ್ರವಾಗಿಟ್ಟುಕೊಂಡು ವ್ಯಾಪಿಸಿದ ಹೆಚ್ಚಿನ ಚಟುವಟಿಕೆಗಳು ನಾಟಕಕ್ಕೇ ಸಂಬಂಧಿಸಿತ್ತು. ಸಹಜವಾಗಿ (೧೯೮೦ರಲ್ಲಿ) ರಂಗಶಿಕ್ಷಣ ಕೇಂದ್ರವೂ ಅದರ ‘ಪುಣ್ಯಫಲ’ವನ್ನು ರಾಜ್ಯಾದ್ಯಂತ ಮುಟ್ಟಿಸಲು (೧೯೮೫ರಲ್ಲಿ) ‘ತಿರುಗಾಟ’ವೂ ಹೊರಟಿತು, ಇಂದಿಗೂ ಶಿಸ್ತುಬದ್ಧವಾಗಿ ನಡೆದೇ ಇದೆ. ಇವಕ್ಕೆಲ್ಲ ಅನಿವಾರ್ಯ ಸಂಗಾತಿಗಳಾಗಿ ಕೂಡಿಕೊಂಡ ಕಛೇರಿ, ವಸತಿ, ಭೋಜನಾಲಯ, ಗ್ರಂಥಾಲಯ ಮುಂತಾದವುಗಳೂ ರಂಗ ಮಂದಿರದ ಸರಳ ಉಪಯುಕ್ತತೆಯನ್ನೇ ಸಾರುತ್ತವೆ; ಸರಕಾರೀ ರಂಗದಂತೆ, ಅನುಪಯುಕ್ತ ವೈಭವೀಕರಣದಲ್ಲಿ ಕಳೆದುಹೋಗಿಲ್ಲ.

ಸುಬ್ಬಣ್ಣನವರ ಬಹುಮುಖೀ ಆಸಕ್ತಿ ವಿದ್ಯಾರ್ಥಿ ದಿನಗಳಲ್ಲೇ ಲೇಖನ, ಪ್ರಕಾಶನಗಳ ಮೂಲಕವೂ ಪ್ರಕಟವಾಗಿತ್ತು. ಸಹಜವಾಗಿ ೧೯೫೭ರಲ್ಲೇ ಹೆಗ್ಗೋಡಿನಲ್ಲವರು ಸ್ವಂತದ ಅಕ್ಷರ ಪ್ರಕಾಶನವನ್ನು ಕಟ್ಟಿದ್ದರು. ಹಾಗೇ ೧೯೬೨ರಲ್ಲಿ ತೊಡಗಿ, ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದಲ್ಲಿ ‘ಸಾಕ್ಷಿ’ ಪತ್ರಿಕೆಯನ್ನು ನಿಯತವಾಗಿ ಪ್ರಕಟಿಸಿದ್ದು ಅಷ್ಟೇ ಚರಿತ್ರಾರ್ಹ ಸಂಗತಿ. ಹೀಗೇ ಸಿನಿಮಾರಂಗದ ಕುರಿತೂ ಸುಬ್ಬಣ್ಣನವರಿಗಿದ್ದ ತೀವ್ರ ಆಸಕ್ತಿ ಸಮಾಜಮುಖಕ್ಕೆ ತೆರೆದುಕೊಂಡ ವರ್ಷ ೧೯೭೯. ಅಂದು ಶಿವರಾಮ ಕಾರಂತ ರಂಗಮಂದಿರದಲ್ಲಿ ಹತ್ತು ದಿನಗಳ ಸಿನಿಮಾ ರಸಗ್ರಹಣ ಶಿಬಿರವೇ ನಡೆದಿತ್ತು. ಜತೆಗೇ ಅಂಥ ಶಿಬಿರವನ್ನು ಮುಂದೆ ವರ್ಷಕ್ಕೊಮ್ಮೆ ನೀನಾಸಂನ ಬೌದ್ಧಿಕ ಹಬ್ಬವಾಗಿಯೇ ನಡೆಸಿಕೊಂಡು ಹೋಗುವ ಸಂಕಲ್ಪವನ್ನೂ ಮಾಡಿದರು. ಶಿಬಿರ ಎಂದೂ ‘ಹರಕೆಯ ಆಟ’ವಾಗದಂಥ ಖಾಚಿತ್ಯ ಸಂಘಟಕರಲ್ಲಿತ್ತು. ಸಹಜವಾಗಿ ಅದರ ಕಲಾಪಗಳನ್ನು ಕಾಲದ ನಿಕಷಕ್ಕೆ ಸದಾ ಕೊಟ್ಟು, ಪರಿಷ್ಕರಣಗಳನ್ನು ಅಳವಡಿಸಿಕೊಳ್ಳುತ್ತಲೂ ಬಂದರು. ಹಾಗಾಗಿ ಇಂದಿನ ವಾರ್ಷಿಕ ಹಬ್ಬ – ಸಂಸ್ಕೃತಿ ಶಿಬಿರವಾಗಿದೆ, ದಿನಗಳು ಐದಕ್ಕೆ ಇಳಿದಿವೆ.

ಹೆಗ್ಗೋಡಿಗೆ ನಾನು ಮೊದಲು ಕಾಲಿಟ್ಟದ್ದು ೧೯೮೮ರಲ್ಲಿ. (ನೋಡಿ: ನೆಲ ನಿಲ್ಲಿಸುವುದು ನೆಲ ಮುಳುಗಿಸುವುದು) ಅಂದು ನಾನಿದನ್ನು ನಮ್ಮ ಬೈಕ್ ಸಾಹಸಯಾನದಲ್ಲಿ ಒಂದು ರಾತ್ರಿಯ ತಂಗುದಾಣವನ್ನಾಗಿ ಮಾತ್ರ ಬಳಸಿಕೊಂಡಿದ್ದೆ. ಆದರೆ ಸುಬ್ಬಣ್ಣ ಅದನ್ನು ಒಂದು ಸಾಮುದಾಯಿಕ ಪ್ರೀತಿಯ ಅಭಿವ್ಯಕ್ತಿಯಾಗಿ ಹೇಗೆ ನಡೆಸಿಕೊಂಡರು, ಸಿಕ್ಕ ಅವಕಾಶದಲ್ಲೂ ನಮ್ಮ ಕಲಾವಂತಿಕೆಯ ಶ್ರೀಮಂತಿಕೆಗೆ ಹೇಗೆ ವಂತಿಗೆ ಕೊಟ್ಟರು ಎನ್ನುವುದನ್ನೂ ನೀವು ಮೇಲೆ ಉಲ್ಲೇಖಿಸಿದ ಲೇಖನದಲ್ಲಿ ಕಾಣಬಹುದು.

ಮುಂದುವರಿದ ದಿನಗಳಲ್ಲಿ ಹೆಗ್ಗೋಡಿನ ನಿಜ ಮಹತ್ತಿಗೆ ನಿದರ್ಶನವಾಗಿ ನಾನೆಷ್ಟೂ ಭೇಟಿ ಕೊಟ್ಟಿದ್ದೇನೆ. ಆದರೆ ಇಲ್ಲಿನ ಅನುಭವದ ಉತ್ತುಂಗವಾದ ‘ಸಂಸ್ಕೃತಿ ಶಿಬಿರ’ದಲ್ಲಿ ಪಾಲ್ಗೊಳ್ಳುವ ಬಯಕೆ ಮಾತ್ರ ಬಾಕಿಯೇ ಉಳಿದಿತ್ತು. ಅದನ್ನು ಈ ಸಲದ, ಅಂದರೆ ಅಕ್ಟೋಬರ್ ೪ರಿಂದ ೮ರವರೆಗೆ ನಡೆದ ೨೦೧೯ರ (ನಲ್ವತ್ತನೇ ಕಂತಿನ!) ಸಂಸ್ಕೃತಿ ಶಿಬಿರದಲ್ಲಿ ಪೂರ್ಣ ಭಾಗಿಯಾಗಿ ಮುಗಿಸಿಕೊಂಡೆ! ನಮ್ಮೊಳಗೆ ಪುಸ್ತಕೋದ್ಯಮ, ರಂಗಪ್ರೀತಿ ಮತ್ತು ಅಭಯನ ಸಂಚಿ ಟ್ರಸ್ಟ್ ಚಟುವಟಿಕೆಗಳು ಮುಪ್ಪುರಿಗೊಂಡದ್ದಕ್ಕೆನ್ನುವಂತೆ ಸುಬ್ಬಣ್ಣ, ಅಕ್ಷರ ಮತ್ತು ಇಡಿಯ ನೀನಾಸಂ ಬಳಗ ನಮ್ಮನ್ನು ‘ಖಾಯಂ ಆಹ್ವಾನಿತ’ರನ್ನಾಗಿಯೇ ಕಾಣುತ್ತ ಬಂದಿದೆ. ಅದನ್ನು ಈ ಶಿಬಿರದ ಮಟ್ಟಿಗೆ ನಾವೇ (ಹೆಂಡತಿ ದೇವಕಿ ಸೇರಿದಂತೆ) ನಿರಾಕರಿಸಿ, ಪಕ್ಕಾ ಶಿಬಿರಾರ್ಥಿಗಳಂತೆ ಭಾಗವಹಿಸಿದೆವು. ಪ್ರಾಯ ಸಹಜವಾದ ವೈಯಕ್ತಿಕ ಅನುಕೂಲಕ್ಕಾಗಿ ಮಾತ್ರ ನಾವು ಸಮೂಹ ವಸತಿಯನ್ನು ಒಪ್ಪಿಕೊಳ್ಳಲಿಲ್ಲ. ಸ್ವತಂತ್ರವಾಗಿ ಸಾಗರದ ಹೋಟೆಲೊಂದರಲ್ಲಿ ತಂಗಿ, ಉಳಿದಂತೆ ಬೆಳಗ್ಗಿನ ತಿಂಡಿಯಿಂದ ದಿನದ ಕೊನೆಯ ಕಲಾಪವಾದ ಊಟದವರೆಗೂ ನೀನಾಸಂ ಶಿಬಿರದ ಭಾಗವಾಗಿ ಆನಂದಿಸಿದೆವು.

ಅನ್ಯ ಬಯಕೆಗಳ ಬೈಕೇರಿ

ನೀನಾಸಂ ಹಲವು ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೂ ಹೆಗ್ಗೋಡಿನ ಸಮೂಹ ವಸತಿಗೆ ಭಿನ್ನವಾಗಿ ಸಾಗರದ ವಿವಿಧ ಹೋಟೆಲುಗಳಲ್ಲೇ ತಂಗುವ ವ್ಯವಸ್ಥೆ ಮಾಡಿತ್ತು. ಮತ್ತವರ ಅನುಕೂಲಕ್ಕಾಗಿ ದಿನಕ್ಕೆರಡು ಬಾರಿ ತನ್ನ ವ್ಯಾನೊಂದನ್ನು ಉಚಿತವಾಗಿಯೇ ಓಡಾಡಿಸುತ್ತಲೂ ಇತ್ತು. ಆದರೆ ನಮಗೋ ಮಂಗಳೂರಿನಿಂದ ಹೋಗಿ ಬರುವ ಪ್ರಯಾಣದಲ್ಲಿ ಮಳೆ ತೊಳೆದಿಟ್ಟ ಘಟ್ಟವನ್ನು ಅನುಭವಿಸುವುದರೊಡನೆ, ಅನ್ಯ ‘ಲಾಭ’ಗಳ ಲೆಕ್ಕಾಚಾರವಿದ್ದುದರಿಂದ ಮೋಟಾರ್ ಸೈಕಲ್ ಯಾನವನ್ನೇ ಆಯ್ದುಕೊಂಡೆವು. ಮಳೆಗಾಲ ಮುಗಿಯಿತೆನ್ನುವ ಭಂಡ ಧೈರ್ಯದಲ್ಲಿ, ಮೂರರ ಬೆಳಿಗ್ಗೆ, ಎಂಟೂವರೆಯ ಸುಮಾರಿಗೆ ನಾವು ಮಂಗಳೂರು ಬಿಟ್ಟೆವು. ಹೆದ್ದಾರಿಯಲ್ಲಿ ಉಡುಪಿಗಾಗಿ ಸಾಲಿಗ್ರಾಮದವರೆಗೆ ಅವಿರತ ಓಟ. ಮಂಟಪ ಹೋಟೆಲಿನಲ್ಲೊಂದು ಕಾಫಿ ಹಾಕಿ, ಪಕ್ಕದಲ್ಲೇ ಇದ್ದ ಗೆಳೆಯ ವೆಂಕಟ್ರಮಣ ಉಪಾಧ್ಯರಿಗೆ ಹ್ವಾಯ್ ಹೇಳಿ ಮುಂದುವರಿದೆವು. ಕೋಟೇಶ್ವರದ ಕೈಕಂಬವನ್ನು ಹೆದ್ದಾರಿಯ ಮೇಲ್ಸೇತಿನಲ್ಲಿ ತಪ್ಪಿಸಿಕೊಂಡದ್ದಕ್ಕೆ ಎರಡು ಕಿಮೀ ಹೆಚ್ಚೋಡಿದರೂ ಮತ್ತೆ ಯೋಜನೆಯಂತೇ ಸಾಗರ ದಾರಿಗೇ ಅಂಟಿಕೊಂಡೆವು. ಸಿದ್ಧಾಪುರ ಕಳೆದು, ಹುಲಿಕಲ್ ಘಾಟಿ ತುಡುಕಿದೆವು. ಬಳುಕುವ ದಾರಿಯಾದರೂ ಬಹುತೇಕ ನುಣ್ಣನೆ ಡಾಮರ್ ಉಳಿದಿದ್ದುದರಿಂದ ಎಲ್ಲೂ ಕಷ್ಟವಾಗಲೇ ಇಲ್ಲ. ಏರು ದಾರಿಯ ಕೊನೆಯ ಹಂತದ ಮಾರ್ಗದಂಚಿನಲ್ಲೊಂದು ಜಲಪಾತವಿದೆ. ಇದು ಮಳೆಗಾಲದಲ್ಲಿ ಅಬ್ಬರ ನಡೆಯ ರಕ್ಕಸಿಯಂತಿದ್ದರೂ ಈಗ ‘ಮಾಯಾಶೂರ್ಪನಖಿ’ಯ ಬಡನಡುವಿನ ಲಾಸ್ಯದಲ್ಲಿತ್ತು. ಅಲ್ಲೊಂದು ಐದು ಮಿನಿಟು ಚಿತ್ರಗ್ರಹಣ ನಡೆಸಿ, ಮುಂದುವರಿದೆವು.

ಜಲಪಾತದನಂತರದ ಹಿಮ್ಮುರಿ ತಿರುವು ಕಳೆದದ್ದೇ ಸಿಗುವ ದೇವಳದಲ್ಲಿ ನಮಗೇನೂ ಕೆಲಸವಿರಲಿಲ್ಲ. ಆದರೆ ಹುಲಿಕಲ್ ಘಾಟಿಯ ಸಮಾಪನದೊಡನೆ ಸಿಗುವ ಬಲದ ಕವಲಿನೊಡನೆ ಸಣ್ಣ ಬಯಕೆಯೊಂದು ಟಿಸಿಲೊಡೆದಿತ್ತು. ಅದರಲ್ಲಿ ಆರೆಂಟು ಕಿಮೀ ಅಂತರದಲ್ಲೇ ವರಾಹಿ ನದಿಗಡ್ಡಗಟ್ಟಿದ ಮಾಣಿ ಅಣೆಕಟ್ಟು ಇತ್ತು. ಮತ್ತದನ್ನು ನೋಡುವ ಆಸೆಯೂ ನಮಗಿತ್ತು. ಆ ಕೈಕಂಬ ತಲಪುತ್ತಿದ್ದಂತೆ, ಎಲ್ಲೆಲ್ಲಿನ ತಿಳಿ ಕರ್ಮೋಡಗಳೆಲ್ಲ ಆಕಾಶದಲ್ಲಿ ಒಟ್ಟೈಸಿ “ಟಠಡಢಣಾ” ಎಂದು ರಣಘೋಷವನ್ನೇ ಹಾಕಿದವು. ಬೈಕಿನ ಸೋರು ಡಬ್ಬಿ ಹಾಗೂ ದೇವಕಿಯ ಬೆನ್ನೇರಿದ್ದ ಚೀಲಗಳಲ್ಲಿ ನಮ್ಮ ಐದಾರು ದಿನಗಳ ಮೊಕ್ಕಾಂಗೆ ಅವಶ್ಯವಿದ್ದ ಬಟ್ಟೆ ಬರಿಗಳ ನೆನಪಾಗಿ, ಮಾಣಿ ಅಣೆಕಟ್ಟಿನ ಯೋಚನೆ ಕೈಬಿಟ್ಟೆವು. ಮನದೊಳಗೇ ಪಿಟಿಪಿಟಿಗುಟ್ಟುತ್ತ ಸಾಗರ ದಾರಿಯಲ್ಲೇ ವೇಗವರ್ಧಿಸಿದೆವು.

ಈ ವಲಯದಲ್ಲಿ ಘಟ್ಟದ ಮೇಲೆ ಅನೇಕ ಅಣೆಕಟ್ಟುಗಳ ಹಿನ್ನೀರ ಜಾಲ ಸಾಮಾನ್ಯರನ್ನು ದಿಕ್ಕೆಡಿಸುವಂತೆ ದರ್ಶನ ಕೊಡುತ್ತವೆ. ಅದರಲ್ಲಿ ನಮಗೆ ಮೊದಲು ಸಿಗುವ ತುಸು ದೀರ್ಘ ರಮ್ಯ ಓಟವನ್ನೇ ಕಲ್ಪಿಸುವ ನೀರ ಸೆರಗು, ಸಾವೆಹಕ್ಲು ಅಣೆಕಟ್ಟೆಯದ್ದಿರಬೇಕು. ಮೋಡದ ಬೆದರಿಕೆಗೆ ಸೊಪ್ಪು ಹಾಕಿ, ಅಲ್ಲೊಂದೆರಡು ಮಿನಿಟು ಚಿತ್ರ ವಿರಾಮ ನಡೆಸಿದ್ದೇ ಸಾಕಾಯ್ತು. ಮೋಡಪ್ಪ ಹನಿದೂತರನ್ನು ಕಳಿಸಿದ. ನಾವು ಅವಸರವಸರವಾಗಿ ಸ್ವಲ್ಪ ದಾರಿ ಕಳೆದರೂ ಕಬಾಳೆ ಎನ್ನುವಲ್ಲಿ ದಾರಿ ಮಗ್ಗುಲಿನ ಜೋಪಡಿಯೊಂದಕ್ಕೆ ಶರಣಾದೆವು. ಆ ಮನೆಯ ಬಡಬಾಗಿಲಿಗೆ ಬೀಗ ಹಾಕಿತ್ತು. ಪಹರೆಯಲ್ಲಿದ್ದ ಡೊಂಕುಬಾಲದ ನಾಯಕರಿಬ್ಬರು “ಎಚ್ಚರೆಚ್ಚರ ಎಚ್ಚರೆಚ್ಚರ…” ಎಂದೇನೋ ವೀರಾವೇಶದಿಂದಲೇ ಕೂಗಿಕೊಂಡರು. ನಾವು ತಲೆ ಕೆಡಿಸಿಕೊಳ್ಳದೆ ಮನೆ ಮುಂದಿದ್ದ ಶೀಟಿನ ಚಪ್ಪರಕ್ಕೇ ಬೈಕ್ ನುಗ್ಗಿಸಿ ನಿಂತೆವು. ಬಡ ನಾಯಿಗಳು ತಾವು ಪಿರಿಪಿರಿ ಮಳೆಯಲ್ಲಿ ಚಂಡಿಯಾಗುತ್ತೇವೆಂಬ ಸಂಕಟಕ್ಕೆ ನಮ್ಮೊಡನೆ ರಾಜಿ ಮಾಡಿಕೊಂಡವು. ಆ ಚಪ್ಪರ ಸುಮಾರು ಒಂದು ಗಂಟೆಯ ಕಾಲ ನಮ್ಮನ್ನು ಬೆಚ್ಚಗಿಟ್ಟು ಬೀಳ್ಕೊಂಡಿತು. ಹೊಸನಗರಕ್ಕೆ ಬರುವಾಗ ಊಟದ ಸಮಯವೇ ಆಗಿತ್ತು.

ರಸ್ತೆಯಂಚಿನಲ್ಲಿ ಮುಂದಿನೂರು ಮತ್ತು ಅಂತರ ಸೂಚೀ ಫಲಕಗಳನ್ನು ಹಾಕುವಲ್ಲಿ ನಮ್ಮ ಇಲಾಖೆಗಳು ಬಹಳ ಉಡಾಫಿಗಳು. ಪಯಣಿಗರು ಮುಂದಿನೂರಿನ ಮಾಹಿತಿ ನಿರೀಕ್ಷೆಯಲ್ಲಿದ್ದರೆ, ಹೆಚ್ಚಿನ ಫಲಕಗಳು ನೂರಾರು ಕಿಮೀ ಆಚಿನ, ಅದರಲ್ಲೂ ಎಷ್ಟೋ ಬಾರಿ ಅಮುಖ್ಯವಾದ ಊರನ್ನೇ ಪ್ರಧಾನವಾಗಿ ಪೋಷಿಸುವುದು ನಿಮಗೆಲ್ಲರಿಗೂ ತಿಳಿದಂತೇ ಇದೆ. (ಸಣ್ಣ ಉದಾಹರಣೆ: ಮೈಸೂರು – ಮಂಗಳೂರು ರಸ್ತೆಯಲ್ಲಿ, ಸುಳ್ಯ, ಪುತ್ತೂರು ಬಿಡಿ, ಮಂಗಳೂರನ್ನೂ ಉಲ್ಲೇಖಿಸದೆ, ಬಂಟ್ವಾಳ ಕಾಣುತ್ತಿರುತ್ತದೆ!) ಈ ಗೊಂದಲದಿಂದಾಗಿ ಹೊಸನಗರದ ಹೊರ ಅಂಚಿನಲ್ಲಿನ, ನಾವು ಬಳಸಬೇಕಿದ್ದ ಮಾವಿನಕೊಪ್ಪದ ಕವಲು, ತಪ್ಪಿಸಿಕೊಂಡೆ. ನನ್ನ ಮನೋಚಿತ್ರದಲ್ಲಿ ಕೋಟೇಶ್ವರದಿಂದ ಹೊರಟರೆ ಹೊಸನಗರ, ಸಾಗರ, ಶಿವಮೊಗ್ಗ ಒಂದೇ ದಾರದಲ್ಲಿ ಪೋಣಿಸಿಕೊಂಡಿದ್ದವು. ಹಾಗಾಗಿ ಕಿಮೀ ಕಲ್ಲುಗಳು ಶಿವಮೊಗ್ಗವನ್ನಷ್ಟೇ ಕಾಣಿಸುತ್ತಿದ್ದರೂ ಸುಮಾರು ಹತ್ತು ಕಿಮೀಯವರೆಗೆ ನಿರ್ಯೋಚನೆಯಿಂದಲೇ ಬೈಕೋಡಿಸಿದ್ದೆ. ಅಷ್ಟರಲ್ಲಿ ಏನೋ ಸರಿಯಿಲ್ಲ ಎನ್ನುವ ಭಾವ ಕಾಡಿದ್ದಕ್ಕೆ, ಸಿಕ್ಕ ಹಳ್ಳಿಗರಲ್ಲಿ ವಿಚಾರಿಸಿದೆ. ನಾವು ಶಿವಮೊಗ್ಗ ದಾರಿಯಲ್ಲಿದ್ದದ್ದು ನಿಜ, ಆದರೆ ಅದು ಹೆಗ್ಗೋಡು, ಸಾಗರಗಳಿಗೆ ತದ್ವಿರುದ್ಧ ದಿಕ್ಕಿನಲ್ಲಿದ್ದದ್ದೂ ನಿಜ. ಈ ಲೆಕ್ಕದಲ್ಲಿ ಒಟ್ಟಾರೆ ಇಪ್ಪತ್ತು ಕಿಮೀ ವ್ಯರ್ಥ ಮಾಡಿಕೊಂಡು, ಹೆಗ್ಗೋಡು ಸೇರುವಾಗ ಗಂಟೆ ಮೂರು ಕಳೆದಿತ್ತು.

ನೀನಾಸಂ ಕಚೇರಿಯಲ್ಲಿ ಔಪಚಾರಿಕ ಹಾಜರಿ ಒಪ್ಪಿಸಿ, ನಮಗಾಗಿ ಕಾಯ್ದಿರಿಸಿದ್ದ ಸಾಗರದ ಹೋಟೆಲಿನ (ವರದಶ್ರೀ) ವಿವರ ಪಡೆದು ಮುಂದುವರಿದೆವು. ಆ ಹತ್ತು ಕಿಮೀ ಅಂತರದಲ್ಲಿ ಮಳೆ ನಮ್ಮನ್ನು ಮತ್ತೆ ಎರಡೆರಡು ಬಾರಿ ಸತಾಯಿಸಿ, ಹೋಟೆಲ್ ತಲಪುವಾಗ ಗಂಟೆ ನಾಲ್ಕು ದಾಟಿಸಿತ್ತು. ಮಂಗಳೂರು – ಸಾಗರ, ಸುಮಾರು ಐದು ಗಂಟೆ ಪಯಣದ ಹಾದಿ ಅಥವಾ ಇನ್ನೂರಿಪ್ಪತ್ತು ಕಿಮೀ ಅಂತರವನ್ನು ಕಳೆಯುವಲ್ಲಿ ನಾವು ಸುಮಾರು ಏಳು ಗಂಟೆಯನ್ನೇ ಕಳೆದಿದ್ದೆವು. ಲಕ್ಷ್ಯ ಸಾಧನೆಯಷ್ಟೆ ಮಾರ್ಗಕ್ರಮಣವನ್ನೂ ಸುಖಿಸುವವರು ನಾವು. ಮುಂದಿನ ಐದು ದಿನಗಳ ಶಿಬಿರದ ವಿಷಯವಾದರೋ – ಕಲೆಗಳ ಅನುಭವ, ಅಂದರೆ ಅಮೂರ್ತವನ್ನು ಕಂಡುಕೊಳ್ಳುವ ಪ್ರಯತ್ನವೇ. ಅದಕ್ಕೆಂದೇ ಬಂದ ನಾವು ಪ್ರಯಾಣದ ಬಳಲಿಕೆಯನ್ನು ಪ್ರಚೋದನೆಯೆಂದೇ ಗ್ರಹಿಸಿ, ಉತ್ಸಾಹ ಕುಂದದೇ ವರದಶ್ರೀಯಲ್ಲಿ ತಂಗಿದೆವು.

ಕಲಾನುಭವದ ಅವ್ಯಕ್ತಕ್ಕೆ ಭಾಷೆ ಕೊಡುವ ಪ್ರಯತ್ನ ಸಂಸ್ಕೃತಿ ಶಿಬಿರದ ಮೊದಲ ದಿನ (೪-೧೦-೧೯) ಹೆಗ್ಗೋಡಿನ ನೀನಾಸಂ ವಠಾರ (ಬೇಂದ್ರೆ ಕ್ಷಮೆ ಕೋರಿ) ಬರಿ ಬೆಳಗನ್ನೇ ಕಂಡಿತ್ತು. ಪೈಡ್ ಮೀಡಿಯಾ ಒದರುವಂತೆ, “ಸಂಭ್ರಮ ಮನೆ ಮಾಡಿ” ಇರಲಿಲ್ಲ. ಚಕುಪುಕು ದೀಪ ಮಾಲೆ, ಪರಿಸರದ ಗಿಡ ಮರಗಳನ್ನು (ಇಲ್ಲವಾದಲ್ಲಿ ಕಂಬ ಊರಿ) ಜಗ್ಗುವ ಬುಗ್ಗೆಜೊಂಪೆ, ಗೂಡುದೀಪ, ಹೂಮಾಲೆ, ಬಾಳೆ ಕಂದು, ಮಾವಿನೆಲೆ, ಆಯಕಟ್ಟಿನ ಜಾಗಗಳಲ್ಲಿ ನುಡಿಮುತ್ತುದುರಿಸುವ ಫಲಕಗಳು, ದಿಗ್ಭಿತ್ತಿಗಳು ಹರಿಯುವಂತೆ ‘ಸಂಘೀತ’……. ಇಲ್ಲವೇ ಇಲ್ಲ. ಜಗಮಗಿಸುವ ದಿರಿಸು, ಅಲಂಕಾರ, ಬಣ್ಣ ಹೇರಿಕೊಂಡವರ ದಿಕ್ಕೆಟ್ಟ ಧಾವಂತಗಳೂ ಇರಲಿಲ್ಲ. ಸಾಹಿತ್ಯ ಜಾತ್ರೆಗಳ ಜಂಗುಳಿ, ಸಕಲ ಸರಕಿನ ಮಳಿಗೆಗಳು, ವಾಹನಗಳ ಮೇಳವಂತು ಕಾಣಲೇ ಇಲ್ಲ. ಮಳೆಗಾಲದ ಪಾಚಿ, ಕೆಸರು, ಕಳೆಗಳನ್ನಷ್ಟೇ ಕಳೆದು, ಕಟ್ಟಡಗಳ ಮಾಸಿದ ಬಣ್ಣಗಳನ್ನಷ್ಟೆ ತುಂಬಿ, ನೆಲದ ಕಸವನ್ನಷ್ಟೇ ಗುಡಿಸಿ ತೆಗೆದಿದ್ದರು. ನೂರು ನೂರಿಪ್ಪತ್ತೈದು ಶಿಬಿರಾರ್ಥಿಗಳು, ಇಪ್ಪತ್ತು ಮೂವತ್ತು ಸಂಪನ್ಮೂಲ ವ್ಯಕ್ತಿಗಳು, ಉಳಿದಂತೆ ನೀನಾಸಂನ ಎಲ್ಲ ಮಂದಿ, ಆಸಕ್ತಿ ಮತ್ತು ಸ್ವಯಂಸೇವೆಯ ಮಿಶ್ರಣದ ಕೆಲವು ಊರವರು ಸುವಿಸ್ತಾರ ವಠಾರದಲ್ಲಿ ಹಂಚಿಹೋಗಿದ್ದರು. ಸೂಚ್ಯವಾಗಿ ‘ಹಬ್ಬದ’ ಭಾವ ಮೂಡಿಸುವಂತೆ, ಕೆಲವೇ ಸರಳ, ಆದರೆ ಧ್ವನಿಪೂರ್ಣ ಸ್ತಬ್ಧಶಿಲ್ಪ, ಗೋಡೆ ಚಿತ್ರ, ಹಳೆಯ ತಿರುಗಾಟದ ಪಟಗಳೆಲ್ಲ ಅಲ್ಲಲ್ಲಿ ಮೆರೆದಿದ್ದವು. ಶಿಬಿರದ ಬಹುತೇಕ ಕಲಾಪಗಳು ನಡೆಯುತ್ತಿದ್ದದ್ದು ನೀನಾಸಂ ರಂಗಮಂದಿರದಲ್ಲಿ (ಗಮನಿಸಿ, ಇದು ಶಿವರಾಮ ಕಾರಂತ ಭವನ ಅಲ್ಲ). ಅದರ ಅಂಗಳದಲ್ಲಿ, ಪುಟ್ಟ ಉರುಟು ಮಣೆಯಿಟ್ಟು (ಮಳೆ ಬಂದಾಗ ರಕ್ಷಿಸುವ ಸಲುವಾಗಿ) ದಿನಕ್ಕೊಂದು ಹೊಸ ವಿನ್ಯಾಸದಲ್ಲಿ ಸುಂದರ ರಂಗೋಲಿ ಇಡುವುದನ್ನೂ ಕೆಲ ವಿದ್ಯಾರ್ಥಿನಿಯರು ವಹಿಸಿಕೊಂಡಿದ್ದರು.

ಮೆಲು ಧ್ವನಿಯಲ್ಲಿ “ತಿಂಡಿ ಆಯ್ತಾ? ಇಲ್ದಿರೆ ಆಹಾರ್ಯಕ್ಕೋಗಿ” ಎಂದು ವಿಚಾರಿಸಿಕೊಳ್ಳುವವರಿಂದಷ್ಟೇ ನಾವು ವ್ಯವಸ್ಥಾಪಕ ವರ್ಗವನ್ನು ಗುರುತಿಸಬೇಕಾಗುತ್ತಿತ್ತು. ಹೊತ್ತು ಹೊತ್ತಿಗೆ ಇನ್ನೂ ಇಂಥ ಹಲವು ಆತ್ಮೀಯ ವಿಚಾರಣೆಗಳನ್ನು (ಠಕ್ಕಲ್ಲ, ಪ್ರಾಮಾಣಿಕವಾಗಿ) ಅಕ್ಷರ, ಐತಾಳರಿಂದ ತೊಡಗಿ ಎಲ್ಲರೂ ಹೊರಗಿನಿಂದ ಬಂದ ಎಲ್ಲರೊಡನೆಯೂ ಮಾಡುತ್ತಿದ್ದರು. ಅದಲ್ಲದಿದ್ದರೆ ಅತಿಥಿ ಮತ್ತು ಆತಿಥೇಯರಿಗೆ ವ್ಯತ್ಯಾಸ ತೋರುವ ಯಾವುದೇ ಕ್ರಮಗಳು (ವಿಶಿಷ್ಟ ದಿರಿಸು, ಬ್ಯಾಜ್ಜು…) ಅಲ್ಲಿರಲಿಲ್ಲ! ಶಿಬಿರದ ಹೆಚ್ಚಿನೆಲ್ಲ ಕಲಾಪಗಳು ನಡೆಯಲಿದ್ದ ನೀನಾಸಂ ರಂಗ ಮಂದಿರದ ಒಳಗೂ ಅಷ್ಟೆ – ಮೂರೂ ದಿಕ್ಕಿನ ಜಗುಲಿ ಮತ್ತು ನಡುವಣ ತೊಟ್ಟಿಯಲ್ಲಿ ಯಾರೂ ಎಲ್ಲೂ ಕೂರುವಂತೆ ಸಾಮಾನ್ಯ ಕುರ್ಚಿಗಳನ್ನು ಜೋಡಿಸಿದ್ದರು. ಎಷ್ಟೋ ಸಂದರ್ಭಗಳಲ್ಲಿ ಅಕ್ಷರ ಮೆಟ್ಟಿಲ ಮೇಲೆ ಕುಳಿತದ್ದೂ ಐತಾಳ ಮಾಷ್ಟ್ರು ಎಲ್ಲೋ ಮೂಲೆಯಲ್ಲಿ ನಿಂತೇ ಭಾಗವಹಿಸಿದ್ದು ಕಂಡಿದ್ದೇನೆ. ಅಕ್ಷರರ ಹೆಂಡತಿ ವಿದ್ಯಾ ಬಿಡುವಿನಲ್ಲಿ ಭಾಗವಹಿಸಿದಾಗೆಲ್ಲ ವೇದಿಕೆಯ ಎಡ ಮೂಲೆಯ ಮೇಜೊಂದರ ಮೇಲೆ, ಕೊನೆಯವರಾಗಿ ಕುಳಿತಿದ್ದದ್ದೇ ಹೆಚ್ಚು. ಒಮ್ಮೆ ನಾನು ಸ್ವಲ್ಪ ಸಂಕೋಚ ಮತ್ತು ಹಾಸ್ಯದಲ್ಲಿ “ನೀವೇನು ಸದಾ ಮೂಲೆಪಾಲಾಗಿರುತ್ತೀರಿ” ಎಂದಿದ್ದೆ. ಅವರು ಕೂಡಲೇ ನಗುತ್ತಾ “ಅಯ್ಯೋ ಹಾಗೇನಿಲ್ಲ, ಇಲ್ಲಿ ಕುಳಿತರೆ ಮೂರೂ ದಿಕ್ಕಿನ ಪ್ರೇಕ್ಷಕರೆಲ್ಲರ ಮುಖ ಕಾಣುವ ಅನುಕೂಲವಿದೆ” ಎಂದಿದ್ದರು. ನೀನಾಸಂ ರಂಗ ಮಂದಿರದ ನಾಲ್ಕನೇ ದಿಕ್ಕಿನ ಜಗುಲಿ ಕಂಬಗಳಿಗೊಂದು ಸರಳ ಕಪ್ಪು ತೆರೆ ಕಟ್ಟಿ, ಮೇಲೆ ತೆಳುವಾಗಿ ಪುಟ್ಟ ಪುಟ್ಟ ಹೂ, ಬಳ್ಳಿ ತೊಡಿಸಿದ್ದರು. ಅದರ ಮುನ್ನೆಲೆಯಲ್ಲಿ ತೊಟ್ಟಿಯನ್ನು ಎರಡು ಮೆಟ್ಟಿಲೆತ್ತರಿಸಿ, ಪಕ್ಕದ ಜಗುಲಿಗಳಿಗೆ ಸಮ ಮಾಡಿ ವೇದಿಕೆಯನ್ನೇ ರೂಪಿಸಿದ್ದರು. ಆದರೆ ಶಿಬಿರಾರಂಭದ ಮುಹೂರ್ತ ಸಮೀಪಿಸಿದ್ದರೂ ಪೂರ್ಣ ಖಾಲಿ ಬಿಟ್ಟಿದ್ದರು! ಹೌದು, ಕನಿಷ್ಠ ಮೂರು ನಾಲ್ಕು ಕುರ್ಚಿ, ಹೂಕುಂಡ ಹೊತ್ತ ಕಾಲ್ಮಣೆ, ಮಾತುಗಟ್ಟೆ (ಪೋಡಿಯಂ), ಅಡ್ಡಾತಿಡ್ಡಾ ವಯರೆಳೆದ ಮೂರು ನಾಲ್ಕು ಮೈಕ್, ಮೆದುವಾಗಿಯಾದರೂ ಏನೋ ಸಂಗೀತ ……. ಏನೂ ಇಲ್ಲ. ಬಂದವರೆಲ್ಲ (ಒಟ್ಟು ಇನ್ನೂರು – ಇನ್ನೂರೈವತ್ತು ಮಂದಿ ಇದ್ದಿರಬಹುದು) ಮುಖ್ಯಾಮುಖ್ಯತೆಯ ಸೋಂಕಿಲ್ಲದೆ, ‘ಯೋಗ್ಯ ಕುರ್ಚಿ’ ಹಿಡಿಯುವ ಹುಂಬತನವಿಲ್ಲದೆ, ಎಲ್ಲೆಂದರಲ್ಲಿ ಕುಳಿತೋ ನಿಂತೋ ಗುಂಪುಗೂಡಿಯೋ ಮಾತು, ನಗೆ ಧಾರಾಳ ವಿನಿಮಯಿಸುತ್ತಿದ್ದದ್ದು ನಿಜಕ್ಕೂ ಸಂಭ್ರಮವನ್ನು ಮೆರೆದಿತ್ತು.

ಸಂಸ್ಕೃತಿ ಶಿಬಿರದಲ್ಲಿ ಕಾಲ ಯಾರಿಗೂ ಹೊರೆಯಾಗುವುದಿಲ್ಲ. ಒಂಬತ್ತೂವರೆಯ ಸುಮಾರಿಗೆ, ನಮಗೆ ನೀನಾಸಂ ‘ತಿರುಗಾಟ’ದ ನಾಟಕಗಳಲ್ಲಿ ರೂಢಿಸಿದ, ಮೂರನೇ ಗಂಟೆ ಕೇಳಿಸಿತು. ಸಭೆ ತನ್ನಷ್ಟಕ್ಕೇ ನೆಲೆಸಿ, ಘನ ನಿರೀಕ್ಷೆಯ ಮೌನ ವ್ಯಾಪಿಸಿತ್ತು. ವೇದಿಕೆಯ ಎಡಭಾಗದ ಜಗುಲಿಯ ಮೂಲೆಯಲ್ಲಿ ಕುಳಿತ ಅರುಣ್ ಮೇಷ್ಟ್ರು ಕೀ ಬೋರ್ಡ್ ನಾದ ತುಂಬುತ್ತಿದ್ದಂತೆ, ಹಿನ್ನೆಲೆಯ ತೆರೆಯ ಬಲಮಗ್ಗುಲಿನಿಂದ ರಂಗ ಶಿಕ್ಷಣದ ಹತ್ತಿಪ್ಪತ್ತು ವಿದ್ಯಾರ್ಥಿಗಳು ಆರೇಳು ನಗಾರಿ ಬಾರಿಸುತ್ತ ವ್ಯವಸ್ಥಿತವಾಗಿ ವೇದಿಕೆ ತುಂಬಿದರು. ಧಾರೆ ಕಡಿಯದೇ ಎರಡು ರಂಗಗೀತೆಗಳನ್ನು (ಪುತಿನ ಹಾಗೂ ಕಂಬಾರರ ರಚನೆಗಳು. ವಿಡಿಯೋ ತುಣುಕು ನೋಡಿ/ ಕೇಳಿ. ಅದರ ಅರ್ಥ ಔಚಿತ್ಯವನ್ನು ಸಂಕ್ಷಿಪ್ತವಾಗಿ ಸಂಚಾಲಕ ಜಶವಂತ್ ಮುಂದೆ ತಿಳಿಸಿದರು.) – ಪ್ರಾರ್ಥನೆ ಎನ್ನಿ, ಆಶಯ ಗೀತೆ ಎನ್ನಿ, ಸುಂದರವಾಗಿ ಹಾಡಿಹೋದರು. ಬೆನ್ನಿಗೇ ನಾಟಕದ ಶಿಸ್ತಿನಲ್ಲೇ ವೇದಿಕೆಯ ಬಲ ಮೂಲೆಗೊಂದು ದೀಪಕಂಬ ಬಂತು. ಶಿಬಿರ ಸಂಚಾಲಕ – ಜಶವಂತ್ ಜಾಧವರ, ಅನೌಪಚಾರಿಕ ಸೂಚನೆಗೆ, ಸಭೆಯಲ್ಲಿ ಕುಳಿತಿದ್ದ ಮರಾಠಿಯ ಹಿರಿಯ ರಂಗ ತಜ್ಞ – ರಾಜೀವ್ ನಾಯಕ್ ಬಂದು ದೀಪ ಬೆಳಗಿದರು. ಸಮುದಾಯ ಪ್ರೀತಿಯ ಭಾಗವೆನ್ನುವಂತೆ ಅವರು ಕರೆದದ್ದಕ್ಕೆ, ಕೆವಿ ಅಕ್ಷರ ಕೂಡಾ ಅನೌಪಚಾರಿಕವಾಗಿ ಸೇರಿಕೊಂಡು ದೀಪ ಬೆಳಗುವುದನ್ನು ಪೂರೈಸಿದ್ದರು. ಇಷ್ಟರೊಳಗೆ ಚೊಕ್ಕ ನಾಟಕಗಳಲ್ಲಿ ದೃಶ್ಯ ಬದಲಾಯಿಸಿದಷ್ಟೇ ಸಹಜವಾಗಿ ರಂಗಕ್ಕೆ ಎರಡು ಕುರ್ಚಿ, ಮೈಕ್, ಭಾಷಣಗಟ್ಟೆ ಬಂದಿತ್ತು. ನೀನಾಸಂ ಬಳಗದ ಅಧ್ಯಕ್ಷ – ಶ್ರೀಧರ ಭಟ್ಟರು ಯಾರ ಹೆಸರನ್ನೂ ವಿಶೇಷಣಗಳನ್ನೂ ಪಟ್ಟಿ ಮಾಡುವ ಗೋಜಿಲ್ಲದೇ ನಾಲ್ಕೇ ನಾಲ್ಕು ಸ್ವಾಗತದ ನುಡಿ ಕೊಟ್ಟರು. ಉದ್ಘಾಟಕ ರಾಜೀವ ನಾಯಕರು ಅಷ್ಟೇ ಚಿಕ್ಕ, ಚೊಕ್ಕವಾದ ಶುಭಾಶಯವನ್ನೂ ಕೋರಿದರು. (ವಿಕ ಪತ್ರಿಕಾ ತುಣುಕು ನೋಡಿ).

[ಒಂದು ವಿನಂತಿ: ನಾನು ವಿದ್ಯಾರ್ಥಿ ಜೀವನದಲ್ಲೇ ಟಿಪ್ಪಣಿ ಮಾಡುವ, ಅನಿಸಿಕೆಗಳಿಗೆ ಔಚಿತ್ಯಪೂರ್ಣ ಮಾತು ತೊಡಿಸುವ ಶಿಸ್ತು ಬೆಳೆಸಿಕೊಂಡವನಲ್ಲ. ಹಾಗಾಗಿ ಐದೂ ದಿನದ ಕಲಾಪಗಳನ್ನು (ಸಣ್ಣ ಪುಟ್ಟ ತೂಕಡಿಕೆ ಬಿಟ್ಟರೆ,) ನಾನು ಬುದ್ಧಿಪೂರ್ವಕವಾಗಿಯೇ ಅನುಭವಿಸಿದ್ದೇನೆ. ಆದರೆ ಸಾರ್ವಜನಿಕ ಸಂವಾದಗಳಲ್ಲಿ ಬಾಯಿಬಿಟ್ಟವನಲ್ಲ ಮತ್ತು ಇಲ್ಲೂ ಚೊಕ್ಕ ಅಭಿವ್ಯಕ್ತಿಯನ್ನು ಕೊಡಲಾರೆ; ಕ್ಷಮೆಯಿರಲಿ!]

ಶಿಬಿರದ ಒಟ್ಟಾರೆ ಆಶಯಕ್ಕೆ ಪೀಠಿಕೆಯನ್ನು ಜಶವಂತ ಜಾದವ್ ಹಾಕಿದರು. ಅದನ್ನು ವಿಸ್ತರಿಸುವ ಮತ್ತು ಸಭಿಕರ ಪಾಲುದಾರಿಕೆಯಲ್ಲಿ ವಿಶ್ಲೇಷಿಸುತ್ತ, ವಿಕಾಸಕ್ಕೊಳಪಡಿಸುವ ಕೆಲಸವನ್ನು ಪ್ರಕಾಂಡ ಪಂಡಿತ ಸುಂದರ್ ಸಾರುಕ್ಕೈ ಅದ್ಭುತವಾಗಿ ನಡೆಸಿದರು. ಶಿಬಿರದ ಪ್ರಧಾನ ಭಾಷಾಮಾಧ್ಯಮ ಕನ್ನಡ. ಆದರೆ ಹಲವು ಸಂಪನ್ಮೂಲ ವ್ಯಕ್ತಿಗಳು, ಕೆಲವು ಶಿಬಿರಾರ್ಥಿಗಳೂ ಅನ್ಯ ಭಾಷಿಕರಾದ್ದರಿಂದ ಇಂಗ್ಲಿಷ್ ಬಂದಲ್ಲಿ ಮೈಲಿಗೆಯ ಸೊಲ್ಲು ಯಾರೂ ಎತ್ತಲಿಲ್ಲ. ಆಗೀಗ ಅರ್ಥಸಂದಿಗ್ದತೆ ಮೂಡುವಂತಲ್ಲಿ, ಸಂಚಾಲಕ ಬಳಗ ಸಮರ್ಥ ಅನುವಾದವನ್ನೂ ಕೊಡುತ್ತಿತ್ತು. ಹೀಗೆ ನಿರಂತರ ಹಿಂಜುವಿಕೆ ಮತ್ತು ಹುರಿಗೊಳಿಸುವಿಕೆಯಲ್ಲಿ ಅನುಕ್ತವಾಗುಳಿವ ಕಲಾನುಭವ ಮತ್ತು ಅದು ಸಮಾಜದ ತಿಳಿವು, ಸ್ವಾಸ್ಥ್ಯಗಳಲ್ಲಿ ವ್ಯಾಪಿಸಿಕೊಳ್ಳುವ ಪರಿಗಳನ್ನು, ಶಿಬಿರದುದ್ದಕ್ಕೂ ನಡೆಯಿತು. ಸಭೆಯಿಂದ ಹಲವರು (ಅವರಿಗೆ ಮೈಕ್ ಒದಗಿಸಲಾಗುತ್ತಿತ್ತು), ವೇದಿಕೆಯಿಂದಲೂ ಕೆಲವರು ನಿಸ್ಸಂಕೋಚವಾಗಿ ಅಭಿಪ್ರಾಯಗಳನ್ನು ಹಂಚಿಕೊಂಡು ವಿಷಯ ಬೆಳೆಸಿದರು. ಹೀಗೆ ಕಲಾನುಭವದ ಪ್ರಾಥಮಿಕ ಚರ್ಚೆಗಳು (ದಿನದ ಎರಡನೇ ಕಲಾಪ) ಊಟದ ವಿರಾಮದವರೆಗೂ ಅರ್ಥಪೂರ್ಣವಾಗಿ ನಡೆಯಿತು.

ಗಟ್ಟಿ ಊಟದ ಬಳಿಕ ಸಾಮಾನ್ಯರಿಗೆ ತೂಕಡಿಕೆ ಸಹಜ. ಆದರಿದು ಕಲಾಪಗಳಿಗೆ ಅಡ್ಡಿಯಾಗದಂತೆ ಐದೂ ದಿನಗಳಲ್ಲಿ ಅಪರಾಹ್ನದ ಮೊದಲ ಅವಧಿಯಲ್ಲಿ ಪ್ರಾತ್ಯಕ್ಷಿಕೆಗಳಂಥ ಮಾತು ಮೀರಿದ ಕಲಾಪಗಳನ್ನೇ ಕೊಟ್ಟರು. ಅದರಲ್ಲಿ ಮೊದಲು ಬಂದದ್ದು – ಬೆಂಗಳೂರಿನ ‘ಅಟ್ಟಕಳರಿ’. ಗುರು ಜಯಚಂದ್ರನ್ ಐದು ಶಿಷ್ಯರ ತಂಡ ತಂದಿದ್ದರು. ಅವರ ವಿವರಣೆ ಮತ್ತು ಶಿಷ್ಯ ಕೆಲವೊಂದರಲ್ಲಿ ಸ್ವತಃ ತಾವೇ ಸೇರಿ, ಅಟ್ಟಕಳರಿ ಎನ್ನುವ ನೃತ್ಯ ವಿಶೇಷವನ್ನು ನಮಗೆ ಮನಗಾಣಿಸಿದರು. ಹಲವು ಸಾಂಪ್ರದಾಯಿಕ ಮತ್ತು ಅನೌಪಚಾರಿಕ ನೃತ್ಯ ಪ್ರಕಾರಗಳನ್ನೂ ಸಾಂಪ್ರದಾಯಿಕ ಯುದ್ಧ ಕಲೆ ಎಂದೇ ಖ್ಯಾತವಾದ ಕಳರಿಯನ್ನೂ ವಿಶಿಷ್ಟ ರಾಗ ತಾಳಗಳೊಂದಿಗೆ ಸಂಯೋಜಿಸುವ ಕಲಾಪ್ರಕಾರವೇ ಅಟ್ಟಕಳರಿ. ಭರತನಾಟ್ಯ, ಕೂಚುಪುಡಿ, ಬ್ಯಾಲೇ ಮೊದಲಾದ ನೃತ್ಯ ವಿಶೇಷಗಳಲ್ಲಿ ಪರಿಣತರಾದವರೂ ಒಟ್ಟಾರೆ ಕುಣಿಯಬೇಕೆಂಬವರೂ ಇದನ್ನು ಎಷ್ಟು ಸಹಜವಾಗಿ ಮೈಗೂಡಿಸಿಕೊಳ್ಳಬಲ್ಲರು ಎನ್ನುವುದನ್ನು ಇವರು ಶಿಷ್ಯರ ಮತ್ತು ಕೆಲವು ವಿಡಿಯೋ ತುಣುಕುಗಳ ಮೂಲಕ ಪ್ರಸ್ತುತಪಡಿಸಿದರು.

ಅಟ್ಟಕಳರಿ ಕಲೆಯೇ ಕ್ರೀಡೆಯೇ? ಈ ಅಭಿವ್ಯಕ್ತಿಯ ಪ್ರದರ್ಶನ ಮೌಲ್ಯ ಏನು? ಯಾವುದೇ ಕಥನವಿಲ್ಲದ, ಅಮೂರ್ತ ಕಸರತ್ತಿನಂತೆ ಭಾಸವಾಗುವ ಅಟ್ಟಕಳರಿಯಲ್ಲಿ ಕಲಾನುಭವ ಸಾಧ್ಯವೇ? ಹೀಗೆಲ್ಲ ಮೂಡುವ ಪ್ರಶ್ನೆಗಳಿಗೆ ಜಯಚಂದ್ರನ್ ಬಳಿ ಸಮರ್ಥ ಸಮಾಧಾನಗಳಿದ್ದುವು. ಕಲೆಗಳೆಲ್ಲ ಸಾರ್ವಜನಿಕ ಪ್ರದರ್ಶನಕ್ಕೇ ಎಂಬ ನಿಲುವು ತಪ್ಪು. ಸ್ವಾಂತ ಸುಖಕ್ಕಾಗಿ, ನಮ್ಮದೇ ದೇಹಸಾಧ್ಯತೆಗಳ ತಿಳಿವಿಗಾಗಿ, ನೀರಸ ವ್ಯಾಯಾಮ ಎನ್ನುವ ಆಯಾಮ ಮೀರಿದ ಕಲಾನುಭವಕ್ಕಾಗಿಯೇ ಅಟ್ಟಕಳರಿ ಜನಪ್ರಿಯವಾಗಿದೆ (http://www.attakkalari.org/index.php?page=overview) ಸಣ್ಣ ಆತ್ಮಕಥಾನಕಕ್ಕೆ ಕ್ಷಮೆಯಿರಲಿ. “ಬೆಟ್ಟ ಹತ್ತುವುದು ಯಾಕೆ?” ಎಂದು ಕಳೆದ ಸುಮಾರು ಐವತ್ತು ವರ್ಷಗಳುದ್ದಕ್ಕೂ ಹಲವರಿಂದ ಕೇಳಿದ್ದೇನೆ. ಅದಕ್ಕುತ್ತರವಾಗಿ, ತೇನ್ಸಿಂಗನ ಸುಪ್ರಸಿದ್ಧ ಮಾತು “ಅದು ಅಲ್ಲಿರುವುದರಿಂದ” ಉದ್ಧರಿಸುತ್ತಲೂ ಬಂದಿದ್ದೇನೆ. ಹೆಚ್ಚಿನ ವಿವರಣೆ ಕೊಡಲಾರೆನಾದರೂ ಆದಾಯ, ಪ್ರಶಸ್ತಿ, ಕನಿಷ್ಠ ಪ್ರೇಕ್ಷಕರೂ ಇಲ್ಲದ ನಮ್ಮ ಪರಿಸರದ ಸುತ್ತಾಟಗಳಂತೇ ಅಟ್ಟಕಳರಿಯೂ ಇರಬಹುದಲ್ಲವೇ! ಎನ್ನುವುದನ್ನು ಜಯಚಂದ್ರನ್ ಸುಂದರವಾಗಿ ನಿರೂಪಿಸಿದರು. (ಹೆಚ್ಚಿನ ವಿವರಗಳಿಗೆ ಅವರದೇ ಜಾಲತಾಣ ನೋಡಿ:

ಅಪರಾಹ್ನದ ಎರಡನೇ ಕಲಾಪವನ್ನು ಕತೆಗಾರ ವಿವೇಕ್ ಶಾನುಭಾಗ್ ನಿರ್ವಹಿಸಿದರು. ಸಾಹಿತ್ಯದ ವಿವಿಧ ಮುಖಗಳನ್ನು ಶೋಧಿಸುತ್ತಲೇ ಬಂದಿರುವ ಎಚ್. ಎಸ್ ವೆಂಕಟೇಶಮೂರ್ತಿ ಹಾಗೂ ತಾರುಣ್ಯದಲ್ಲಿ ನಾಟಕ, ಸಾಹಿತ್ಯಗಳಲ್ಲಿ ತೀವ್ರವಾಗಿ ತೊಡಗಿ, ಪ್ರಸ್ತುತ ಅಧ್ಯಾತ್ಮ ಸಾಧನೆಯ ಪಥದಲ್ಲಿರುವ ವೀಣಾ ಬನ್ನಂಜೆ ತಂತಮ್ಮ ಕಲಾನುಭವದ ಒಳನೋಟಗಳನ್ನು ಹಂಚಿಕೊಂಡರು.

ದಿನದ ಕೊನೆಯ ಕಲಾಪ ಶಿವರಾಮ ಕಾರಂತ ರಂಗ ಮಂದಿರದಲ್ಲಿ ಪೂರ್ಣ ಮಟ್ಟದ ಒಂದು ರಂಗಪ್ರದರ್ಶನ. ಇದನ್ನು ಹೊರಗಿನ ಪ್ರೇಕ್ಷಕರಿಗೆ ಟಿಕೆಟ್ ಸಹಿತ ತೆರೆದಿಡುತ್ತಾರೆ; ಶಿಬಿರಾರ್ಥಿಗಳಿಗೆ ಉಚಿತ. ಈ ಸರಣಿಯಲ್ಲಿ ಮೊದಲೆರಡು ದಿನ ನೀನಾಸಂ ತಿರುಗಾಟ ೨೦೧೯ಕ್ಕೆ ಸಜ್ಜಾದ ಎರಡು ನಾಟಕಗಳು (ರಾಕ್ಷಸ-ತಂಗಡಿ ಮತ್ತು ಕರ್ಣ ಸಾಂಗತ್ಯ) ಪ್ರಥಮ ಪ್ರದರ್ಶನಕ್ಕೆ ಬಂದವು. ಮೂರನೇ ದಿನ ಹೆಗ್ಗೋಡಿನ ಸಾರ್ವಜನಿಕರ ಅಭಿನಯದ ನಾಟಕ. ಊರ ಅಲಿಖಿತ ಸಂಪ್ರದಾಯದಂತೆ, ಕೆವಿ ಸುಬ್ಬಣ್ಣನವರ ಸ್ಮೃತಿ ದಿನಕ್ಕೆಂದೇ ಪ್ರತೀ ವರ್ಷ ತಯಾರಿಸಿ, ಪ್ರದರ್ಶಿಸುತ್ತಾರೆ (ಜುಲೈ ೧೬). ಈ ವರ್ಷದ ಅಂಥ ರಂಗ ಪ್ರಯೋಗ, ನಾನು ಮೊದಲ ಕಂತಿನಲ್ಲೇ ಹೇಳಿದ – ನಡು ಬೇಸಗೆಯಿರುಳ ನಲ್ಗನಸು. ಅದಕ್ಕೆ ಇದು ಎರಡನೇ ಸಾರ್ವಜನಿಕ ಪ್ರದರ್ಶನ ಅವಕಾಶ. ನಾಲ್ಕನೇ ದಿನಕ್ಕೆ ತ್ರಿಶೂರಿನ ಥಿಯೇಟರ್ ರೂಟ್ಸ್ ಅಂಡ್ ಎಂಗ್ಸ್ ತಂಡದ ಒಂದು ಇಂಗ್ಲೀಷ್ ನಾಟಕ – ವೆನ್ ವಿ ಡೆಡ್ ಅವೇಕನ್ ಬಂದಿತ್ತು. ಕೊನೆಯ ದಿನ ಆಯ್ದ ತೆಂಕು ತಿಟ್ಟಿನ ಕಲಾವಿದರಿಂದ ಯಕ್ಷಗಾನ – ಪ್ರಸಂಗ, ದಕ್ಷ ಯಜ್ಞ. ಎಲ್ಲ ದಿನಗಳಲ್ಲೂ ಅಕ್ಷರಶಃ ತುಂಬಿದ ಗೃಹಕ್ಕೇ ಪ್ರದರ್ಶನಗಳು ಮೆರೆದವು. ಮುನ್ನೂರು ಚಿಲ್ಲರೆ ಆಸನಗಳೂ ಭರ್ತಿಯಾಗಿ, ಅಸಂಖ್ಯಾತರು (ಮುಖ್ಯವಾಗಿ ಶಿಕ್ಷಣ ಶಾಲೆಯ ವಿದ್ಯಾರ್ಥಿಗಳು ಮತ್ತು ಊರವರು) ಭವನದ ಎಲ್ಲ ಒಳ ಓಣಿಗಳಲ್ಲೂ ಜಮಖಾನ ಹಾಸಿ, ಯಾವ ಅಸಮಾಧಾನ, ಗದ್ದಲಗಳಿಲ್ಲದೆ ಕುಳಿತು ಅನುಭವಿಸಿವುದನ್ನು ನಾನು ಇನ್ನೆಲ್ಲೂ ಕಂಡಿಲ್ಲ!

ರಾಕ್ಷಸ-ತಂಗಡಿ, ಗಿರೀಶ ಕಾರ್ನಾಡರ ಕೊನೆಯ ಕೃತಿ. ಇದರ ನಿರ್ದೇಶಕ – ರಂಗ ಶಿಕ್ಷಣ ಶಾಲೆಯ ವರಿಷ್ಠರೂ ಗುರುಗಳೂ ಆದ ಬಿ. ಆರ್. ವೆಂಕಟ್ರಮಣ ಐತಾಳ. (ಉಳಿದ ವಿವರಗಳಿಗೆ ಲಗತ್ತಿಸಿದ ಕರಪತ್ರ ನೋಡಿಕೊಳ್ಳಿ.) ವಿಜಯನಗರದ ಭವ್ಯತೆ ಅಳಿದು, ಹಾಳು ಹಂಪಿ ರೂಪುಗೊಂಡ, ಐತಿಹಾಸಿಕ ದುರಂತದ ಕಥನ. ಪ್ರತಿ ರಾತ್ರಿಯ ಪ್ರದರ್ಶನದ ಕುರಿತು (ಯಕ್ಷಗಾನವೊಂದನ್ನುಳಿದು) ಮರುದಿನದ ಮೊದಲ ಅವಧಿಯಲ್ಲಿ ಚರ್ಚೆ ಎಂದೇ  ನಿಶ್ಚೈಸಿದ್ದರು. ಅಂದರೆ ಪ್ರದರ್ಶನದುದ್ದಕ್ಕೆ ಮೂಡುವ ತತ್ಕಾಲೀನ ಭಾವಗಳನ್ನು ವಿರಾಮದಲ್ಲಿ ವಿಚಾರದ ಮೂಸೆಯಲ್ಲಿಡಬೇಕು. ರಂಗಮಂದಿರದ ಹೊರಗೆ ಸಿಗಬಹುದಾದ ನಿರ್ದೇಶಕ, ಕಲಾವಿದರು ಮತ್ತು ಅನ್ಯ ಶಿಬಿರಾರ್ಥಿಗಳೊಡನೆ ಆಪ್ತ ಚರ್ಚೆಯ ಪುಟ ಕೊಡಬೇಕು. ಹಾಗೆ ಬರುವ ಅಭಿಪ್ರಾಯಗಳನ್ನು ಮರುದಿನ ಶಿಬಿರದ ಸಭೆಯಲ್ಲೇ ಮಂಡಿಸಿ, ವಿದ್ವಜ್ಜನರೊಡನೆ ಚರ್ಚಿಸಿ, ಹೊಳಪು ಕೊಡುವ ಅವಕಾಶ ಕಲ್ಪಿಸಿದ್ದರು. ಹಾಗಾಗಿ ಇಲ್ಲಿ ನನ್ನ ಅಭಿಪ್ರಾಯಗಳನ್ನು ಕಾಯ್ದಿರಿಸಿ, ಮುಂದಿನ ಕಂತಿನಲ್ಲಿ ಹಂಚಿಕೊಳ್ಳುತ್ತೇನೆ.

ಶಿಬಿರಾತೀತ ಅನುಭವಗಳು

ಶಿಬಿರದ ನಿಯೋಜಿತ ಕಲಾಪಗಳಿಂದಲೂ ಹೊರಗೂ ಕೆಲವು ಕಲಾಪಗಳು ಹೆಗ್ಗೋಡಿನಲ್ಲೂ ಸಾಗರದಲ್ಲೂ ನಮಗೊದಗಿತ್ತು. ಕೆವಿ ಅಕ್ಷರ “ಫೋಟೋಗ್ರಫಿ ಆಸಕ್ತರು ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ಕಾರಂತ ಭವನದ ಅಂಗಳಕ್ಕೆ ಬರಬಹುದು. ಅಲ್ಲಿ ರಾಜಾರಾಮ್ ಫೋಟೋಗ್ರಫಿ ಮತ್ತು ಹಕ್ಕಿ ವೀಕ್ಷಣೆಗೆ ಕಿವಿಮಾತುಗಳನ್ನು ಉಚಿತವಾಗಿ ಹಂಚಿಕೊಳ್ಳಲು ಕಾದಿರುತ್ತಾರೆ.” ಇನ್ಯಾರೋ ಹೇಳಿದರು “ಬೆಳಿಗ್ಗೆ ರಂಗ ಶಿಕ್ಷಣದ ಮಕ್ಕಳು ಬಯಲಿನಲ್ಲಿ ನಡೆಸುವ ಕೋಲಾಟದಲ್ಲೂ ಸೇರಬಹುದು.” ಆದರೆ ಸಾಗರವಾಸಿಗಳಾದ, ಮಳೆ ತಪ್ಪಿಸಿಕೊಂಡು ನಿತ್ಯ ಹತ್ತತ್ತು ಕಿಮೀ ಬೈಕೋಡಿಸಬೇಕಾದ ನಮಗೆ, ಇವುಗಳನ್ನು ಅನುಭವಿಸುವುದು ಸ್ವಲ್ಪ ಕಷ್ಟವೇ ಸರಿ ಅನ್ನಿಸಿತ್ತು. ಮತ್ತೆ ನಾವಲ್ಲಿದ್ದಷ್ಟೂ ದಿನ ಅವೇಳೆಗಳಲ್ಲಿ ಮಳೆ, ಮಂಜು ಕಾಡುತ್ತಲೇ ಇತ್ತು. ಕರಾವಳಿ ವಲಯದಲ್ಲೋ ಹನಿಮಳೆಗೆ ನೆಂದು ಸುಧಾರಿಸಿಕೊಳ್ಳುವುದು ದೊಡ್ಡ ಮಾತಲ್ಲ. ಆದರೆ ಮಲೆನಾಡಿನ ವಲಯದಲ್ಲಿ ಸ್ವಲ್ಪ ಚಂಡಿಯಾದರೂ ‘ಥಂಡಿ’ ಹತ್ತಿ, ನನಗೆ ಬೈಕ್ ಬಿಡುವುದು ಅಸಾಧ್ಯವೇ ಆಗಿಬಿಡುತ್ತಿತ್ತು! ನಾವು ಯಾವ ಹೊತ್ತಿಗೆ ಮಳೆ ಸಿಕ್ಕರೂ (ಹೆಗ್ಗೋಡು ಅಥವಾ ಸಾಗರದಲ್ಲಿ) ಬೈಕ್ ಬಿಟ್ಟು, ನೀನಾಸಂ ವ್ಯಾನೇರುವ ಯೋಜನೆ ಕಿಸೆಯಲ್ಲಿಟ್ಟುಕೊಂಡೇ ಇದ್ದೆವು; ಅದೃಷ್ಟವಶಾತ್ ಬಳಸಬೇಕಾಗಲಿಲ್ಲ.

ಒಂದು ಬೆಳಿಗ್ಗೆ ತುಸು ಬೇಗನೇ ಹೆಗ್ಗೋಡು ತಲಪಿದ್ದೆವು. ನೀನಾಸಂ ವಠಾರದ ಡಾಮರ್ ಅಂಗಳಕ್ಕೆ ಮಳೆ ತಳಿದು, ಬಸ್ಸು, ಭವನ, ಕಚೇರಿಗಳ ಚೌಕಟ್ಟು ಕೊಟ್ಟು, ರಂಗಕ್ಕೆ ‘ಸ್ಮೋಕ್ ಹೊಡೆ’ದಂತೆ ತೆಳು ಮಂಜು ವ್ಯಾಪಿಸುತ್ತಿದ್ದಂತೆ, ನಾಲ್ಕೈದು ಹುಡುಗರು ಕೋಲು ಕುಟ್ಟತೊಡಗಿದ್ದರು. ಅವರಲ್ಲೊಬ್ಬ “ನಮ್ಮೂರ ಕೆರೆಯೊಳಗೇಏಏ…..” ಹೊಯ್ಲು ತೆಗೆದದ್ದೇ ಕಾಲುಗಳಿಗೆ ನಡೆ ಬಂತು, ಕೋಲು ಕುಟ್ಟಿದ್ದು ತಾಳವಾಯ್ತು. ಕುಣಿತ ಮಣಿತಗಳು ವೈವಿಧ್ಯ ಕಾಣುತ್ತಿದ್ದಂತೇ ಎಲ್ಲೆಲ್ಲಿಂದಲೋ ಎನ್ನುವಂತೆ ಹೊಸ ಹೊಸ ಹುದ್ದರಿಗಳು ಓಡೋಡಿ ಬರುತ್ತಿದ್ದರು. ಕಲ್ಲಮಂಚದ ಮೇಲಿದ್ದ ಡಬ್ಬಿಯಿಂದೆರಡೆರಡು ಕೋಲು ಹಿಡಿದು, ಗುಂಪಿನಲ್ಲಿ ಕರಗುತ್ತಾ ನಲಿಕೆಯ ವೃತ್ತ ವಿಸ್ತರಿಸುತ್ತಾ ಹೋದರು. ಶಿಬಿರಾರ್ಥಿಗಳ ಕುತೂಹಲದ ಮುತ್ತಿಗೆ ಹೆಚ್ಚುತ್ತಾಹೋಯ್ತು. ವ್ಯವಸ್ಥಾಪಕ ಹಿರಿಯರು, ತಿಂಡಿ ಮತ್ತು ಶಿಬಿರ ಕಲಾಪಗಳ ನೆನಪು ಹುಟ್ಟಿಸದಿದ್ದರೆ, ಸ್ವಲ್ಪ ಹೊತ್ತಿನಲ್ಲಿ ನಾವೂ ಆಟದ ಸುಳಿಗೆ ಕೋಲು ಹಿಡಿದು ಧುಮುಕುತ್ತಿದ್ದೇವೋ ಏನೋ!

ಮಂಗಳೂರು ಬಿಡುವಾಗ ನನ್ನ ವಯೋಸಹಜವಾಗಿ ಸೇವಿಸಬೇಕಿದ್ದ ಒಂದು ಮಾತ್ರೆ ಮರೆತು ಬಂದಿದ್ದೆ. ಬೆಳಿಗ್ಗೆ ಸಾಗರದಲ್ಲಿ ಕೊಳ್ಳೋಣವೆಂದರೆ ಯಾವ ಔಷಧ ಅಂಗಡಿಯೂ ತೆರೆದಿರಲಿಲ್ಲ. ಅರೆ ಸಂದೇಹದಲ್ಲೇ ಹೆಗ್ಗೋಡು ‘ಮಹಾಪೇಟೆ’ಯಲ್ಲಿ ಹುಡುಕಿದೆ. ಇದ್ದ ಮೂರೂ ಮುಕ್ಕಾಲು ಮಳಿಗೆಗಳ ಮೂಲೆಯಲ್ಲಿ ಒಂದು ಮನೆ/ ಔಷಧ ಮಳಿಗೆ ಸಿಕ್ಕಿದ್ದು ಮಾತ್ರವಲ್ಲ ನನ್ನ ಅಗತ್ಯವನ್ನೂ ಸರಿಯಾಗಿಯೇ ಪೂರೈಸಿತು. ಕುತೂಹಲ ತಡೆಯದೆ ವಿಚಾರಿಸಿದೆ “ಹಳ್ಳಿಮೂಲೆಯಲ್ಲಿ ಚೀಟಿ ಕೊಡುವ ಯಾವ ವೈದ್ಯರೂ ಇಲ್ಲ.

ಮತ್ತೆ ನಿಮ್ಮ ಜೀವನಮಾರ್ಗ……”. ಯಜಮಾನರು “ಒಂದು ಲೆಕ್ಕದಲ್ಲಿ ನಿಮ್ಮ ಸಂಶಯ ಸರಿಯಾದ್ದೇ. ಆದರೆ ನಗರದ ಚೀಟಿಯಲ್ಲೇ ಪೂರಕ ಬೇಡಿಕೆಯವರು ಇಲ್ಲಿ ಬರುತ್ತಾರೆ. ಮತ್ತೆ ಮೇಲಿನವನ ದಯೆಯಲ್ಲಿ ಎರಡು ದಶಕಕ್ಕೂ ಮಿಕ್ಕು ಇಲ್ಲಿ ಉಳಿದಿದ್ದೇನೆ” ಎಂದು ಸಣ್ಣದಾಗಿ ನಕ್ಕರು! ಹಳ್ಳಿಮೂಲೆಯಲ್ಲಿ ಆಧುನಿಕ ಔಷಧ ಸಿಕ್ಕ ಸಂತೋಷ, ಕೃಷಿಮೂಲದ ಬಾಳೆ ಹಣ್ಣು ಹುಡುಕಿದಾಗ ಕಳೆದೇ ಹೋಯ್ತು! ಅದೇ ಮೂರೂಮುಕ್ಕಾಲು ಮಳಿಗೆ, ಅರೆ ಹೋಟ್ಲಿನವರು ಹತ್ತೆಂಟು ಬಗೆಯ ಕರುಕುರುಗಳ ಹಾರ ಸೋಗೋಲೆಗಳನ್ನು ನೇತಾಡಿಸಿಕೊಂಡು ರಕ್ಕಸರಂತೆ ಗಹಗಹಿಸಿದರು “ಇಲ್ಯಾರೂ ಬಾಳೆ ಹಣ್ಣು ತಿಂತಿಲ್ಲೆ ಮಾರಾಯ್ರೇ!” ಹಳ್ಳಿಮೂಲೆಯಲ್ಲಿ ಆರೋಗ್ಯಕರ ಆಹಾರಕ್ಕಿಂತ ಹೆಚ್ಚಿಗೆ ಔಷಧಗಳು ಸಿಗುವಂತಾಗಿರುವ ಕಾಲಕ್ಕೆ ನಮಸ್ಕಾರ.

ಎರಡೋ ಮೂರನೆಯ ದಿನವೋ ಶಿವಾನಂದ ಕಳವೆಯವರು ಸ್ವಲ್ಪ ಸಮಯಕ್ಕೆ ಶಿಬಿರದಲ್ಲಿದ್ದರು. ಸುಮಾರು ಮೂರು ದಶಕಗಳ ಹಿಂದೆ ಇವರು ಕಳವೆಯಲ್ಲೇ ನಡೆಸಿದ್ದ ‘ಪರಿಸರ ಲೇಖಕರ ಕಮ್ಮಟ’ ಒಂದರಲ್ಲಿ ಭಾಗಿಯಾಗುವಲ್ಲಿಂದ ನಮ್ಮ ಬಂಧ ತೊಡಗಿ ಬಲಗೊಂಡಿತ್ತು. ಶಿವಾನಂದರು ಸಿರ್ಸಿ ಸಮೀಪದ ಮೂಲನೆಲೆಯಲ್ಲೇ ಬೇರು ಬಿಟ್ಟರೂ ಕೃಷಿ, ವನ್ಯ, ನೀರು ಮುಂತಾದ ಮೌಲ್ಯಗಳ ಬಗ್ಗೆ ಬೆಳೆಸಿಕೊಂಡ ಜ್ಞಾನ, ಮಾಡಿದ ಕೆಲಸ, ಕೊಟ್ಟ ಪ್ರೇರಣೆ ಮತ್ತು ಬರವಣಿಗೆ ಅಸಾಧಾರಣವಾದದ್ದು. ಅವರೊಡನೆ ಪಟ್ಟಾಂಗದಲ್ಲಿ “ನಾವು ಅಂದರೆ, ಊರವರು ಸೇರಿಕೊಂಡು, ಯಾವುದೇ ಸರಕಾರೀ ಮರ್ಜಿ ಕಾಯದೇ ಇಲ್ಲೊಂದು ಕೆರೆ ಜೀರ್ಣೋದ್ಧಾರ ಮಾಡಿದ್ದು, ಈಗ ಸಮೃದ್ಧವಾಗಿದೆ ನೋಡಿದ್ರಾ” ಎಂದರು. ನೀನಾಸಂ ವಠಾರದ ಎದುರು ಹಾಯುವ ದಾರಿಯ ಇನ್ನೊಂದು ಬದಿಯಲ್ಲಿ ದಟ್ಟ ಕಾಡಿರುವುದು ನಿಮಗೆ ತಿಳಿದೇ ಇದೆ ಎಂದು ಭಾವಿಸುತ್ತೇನೆ. ಒಂದು ಕಾಫಿ ಬಿಡುವಿನಲ್ಲಿ ನಾವೆರಡು ಮೂರು ಮಂದಿ, ಶಿವಾನಂದರು ತೋರಿದ್ದ ದಿಕ್ಕಿನಲ್ಲಿ ಕಾಡಿನ ಸವಕಳಿ ಜಾಡು ಅನುಸರಿಸಿದೆವು. ಅಲ್ಲಿನೆಲ್ಲ ಮರಗಳ ಬುಡದಲ್ಲೂ ಕೆರೆಯಿಂದೆತ್ತಿದ ಹೂಳು ಹಂಚಿ ಹಾಕಿದ್ದರು. ನೂರಿನ್ನೂರು ಮೀಟರ್ ಆಚಿನ ಪುಟ್ಟ ಕಣಿವೆಯಲ್ಲಿ ದಂಡೆ ಗಟ್ಟಿ ಮಾಡಿದ ವಿಸ್ತಾರ ಕೆರೆ ಆರೋಗ್ಯಪೂರ್ಣವಾಗಿ ತುಂಬಿ ನಗುತ್ತಿತ್ತು. ಸರಕಾರೀ ಯೋಜನೆಗಳಲ್ಲಿ ಹೂಳೆತ್ತುವ ಸಾವಿರದೆಂಟು ಯೋಜನೆ, ಸಾರ್ವಜನಿಕ ಖಜಾನೆಯಿಂದ ಲೆಕ್ಕವಿಲ್ಲದಷ್ಟು ಕೋಟಿಗಳ ವಿತರಣೆಯ ಕತೆ ಕೇಳುತ್ತಲೂ ಕಾಣುತ್ತಲೂ ಬಂದಿದ್ದೇವೆ. ಆದರೆ ಇಂಥ ಒಂದಾದರೂ ಪರಿಪೂರ್ಣವಾದ ಚಿತ್ರ ಸಿಕ್ಕಿದ್ದುಂಟೇ?

‘ಸಮುದಾಯ’ದ ಹೆಸರಿನಲ್ಲಿ ರಾಜ್ಯದೊಳಗೆ ೧೯೭೦-೮೦ರ ದಶಕಗಳಲ್ಲಿ ನಾಟಕಗಳ ಅಲೆ ಎಬ್ಬಿಸಿದವರು ಪ್ರಸನ್ನ. ಮುಂದುವರಿದು ಸುಮಾರು ನಾಟಕದ ಜತೆಗೆ ಗ್ರಾಮೀಣ ನೇಕಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೆಗ್ಗೋಡಿನಲ್ಲೇ ನೆಲೆಸಿದರು ಎಂದೂ ತಿಳಿದು ಹೆಚ್ಚಿನ ಕುತೂಹಲ ಬೆಳೆಸಿಕೊಂಡಿದ್ದೆ. ಪ್ರಸನ್ನರ ಹೆಸರು ಹೇಳಿಕೊಂಡು ಖಾದೀ ಬಟ್ಟೆ ಮಾರುವವರು ವಿಶಿಷ್ಟ ಸಾಹಿತ್ಯ ಕಲಾಕೂಟಗಳಲ್ಲಿ ಕಾಣಿಸಿದಾಗ ನಾನು ಅಭಿಮಾನದಿಂದಲೇ ಕೊಂಡದ್ದೂ ಉಂಟು. ಅವರ ದೇಸೀ ಪ್ರಕಾಶನದ ಪುಸ್ತಕ ಪ್ರಕಟಣೆಗಳನ್ನು ತರಿಸಿ ಮಾರಿದ್ದಿತ್ತು. ಅವರೇ ಬೆಂಗಳೂರು, ಮಂಗಳೂರಾದಿ ನಗರಗಳಲ್ಲಿ ದೇಸೀ ಮಳಿಗೆಗಳನ್ನು ತೆರೆದದ್ದನ್ನು ಕಂಡು ಸಂತೋಷಪಟ್ಟದ್ದೂ ಇತ್ತು. ಹಿಂದೊಮ್ಮೆ ನೀನಾಸಂಗೆ ಹೋಗಿದ್ದಾಗ, ಪ್ರಾತಃಕಾಲದ ತುಸು ಬಿಡುವಿನಲ್ಲಿ ಹೆಗ್ಗೋಡಿನ ಉದ್ದಗಲ ನಡೆದಾಗ, ಎರಡು ಮೂರು ಕಡೆ ಚರಕ, ಅರಿವೆ… ಎಂದೆಲ್ಲ ಹೆಸರು ಹೊತ್ತ ಕಟ್ಟಡಗಳನ್ನು ನೋಡಿದ್ದೂ ಇತ್ತು. ಆದರೆ ಯಾವವನ್ನೂ ಅವುಗಳ ಕಾರ್ಯಾಚರಣೆಯ ಅವಧಿಯಲ್ಲಿ ನೋಡುವುದಾಗಿರಲಿಲ್ಲ. ಸಂಸ್ಕೃತಿ ಶಿಬಿರದ ನೆಪದಲ್ಲಿ ಇದರ ಎದುರಿಗೇ ಇದ್ದ ಮಣ್ಣ ರಚನೆಯಲ್ಲಿ ‘ಅರಿವೆ’ ಹೆಸರು ಹೊತ್ತ ಒಂದು ಮಳಿಗೆ, ಪಕ್ಕದಲ್ಲೇ ತತ್ಕಾಲೀನ ಮಾಡಿಳಿಸಿದ ಇನ್ನೊಂದರಲ್ಲೂ ಇವೇ ಸ್ಥಳೀಯ ಉತ್ಪನ್ನಗಳೇ ಆದ ಖಾದಿ ಬಟ್ಟೆಗಳ ಮಾರಾಟ ಪ್ರದರ್ಶನ ಕಂಡು ಒಂದರಲ್ಲಿ ವ್ಯವಹರಿಸಿದ್ದೂ ಆಯ್ತು. ಆಗ ನನ್ನಲ್ಲುಂಟಾದ ಅರಿವು, ಪ್ರಸನ್ನರ ಬಗೆಗಿನ ತಿಳಿವನ್ನು ತೊಳೆದು ಹಾಕುವಂತಿತ್ತು. (ವಿವರಗಳು ಇಲ್ಲಿ ಬೇಡ.) ದೇಸೀ, ಸರಳತೆ, ಸಾಮುದಾಯಿಕ ಕಾಳಜಿ, ಅಹಿಂಸಾತ್ಮಕ ಪ್ರತಿಭಟನೆ, ಪ್ರಚಾರ ಬಯಸದ ಪ್ರಚಾರ, ಪ್ರಶಸ್ತಿ, ಅನುಭಾವ…. ಮುಂತಾದವುಗಳೂ ಹೇಗೆ ಮೌಲ್ಯ ಕಳೆದುಕೊಂಡು ಬರಿಯ ಶಬ್ದಗಳಾಗಿವೆ ಎಂದು ತಿಳಿದು ತೀರಾ ಕೆಟ್ಟದ್ದೆನಿಸಿತು!

ಶಿಬಿರದಲ್ಲಿ ರಾತ್ರಿ ನಾಟಕ ಮತ್ತೆ ಊಟ ಮುಗಿಯುವಾಗ ಸಾಮಾನ್ಯವಾಗಿ ಹತ್ತು ಗಂಟೆ ದಾಟುತ್ತಿತ್ತು. ಮತ್ತೆ ಸಾಗರಕ್ಕೋಡಿ ಹೊಟೆಲ್ ಸೇರಿ, ಶುದ್ಧರಾಗಿ, ಮಲಗುವಾಗ ಕನಿಷ್ಠ ಹನ್ನೊಂದುವರೆಯಾದರೂ ಕಳೆಯುತ್ತಿತ್ತು. ಹಾಗೆಂದು ಬೆಳಗ್ಗೆ ತಡಮಾಡಬಾರದೆಂಬ ಅತಿ ಎಚ್ಚರಿಕೆ, ಐದೂವರೆ ಆರು ಗಂಟೆಗೇ ನಮ್ಮನ್ನು (ಎಲ್ಲ ವಿಧಿ ಪೂರೈಸಿಕೊಂಡೇ) ಹೋಟೆಲಿನಿಂದ ಹೊರ ನೂಕುತ್ತಿತ್ತು. ಹೋಟೆಲ್ ಸೇರಿದ ಮೊದಲ ದಿನ (೩-೧೦-೧೯), ಏಳೆಂಟು ಗಂಟೆಯ ಮೋಟಾರ್ ಸೈಕಲ್ ಯಾನದ ಏಕತಾನತೆ ಕಳೆಯಲು, ಶಿವಮೊಗ್ಗ ದಾರಿಯಲ್ಲಿ ನಾವಿಬ್ಬರೂ ಸಣ್ಣದಾಗಿ ಕಾಲಾಡಿಸಿದ್ದೆವು. ಮುಂದೆ ದಿನವಿಡೀ ಶಿಬಿರದಲ್ಲಿ ಕುಳಿತು ಕೇಳುವ ವಾಕ್-ಆಡಂಬರಕ್ಕೆ ಸಜ್ಜಾಗುವಂತೆ, ಬೆಳಗ್ಗೆ ಇಲ್ಲೊಂದು ಸಾಮಾನ್ಯ Walk ಗಟ್ಟಿ ಮಾಡಿಕೊಂಡಿದ್ದೆವು. (ಮಳೆಯ ಕಾರಣಕ್ಕೆ ಒಂದು ಬೆಳಗ್ಗೆ ಮಾತ್ರ ತಪ್ಪಿತು.) ವಿವಿಧ ದಿಕ್ಕುಗಳ ನಮ್ಮೀ ‘ಸಾಗರ ಶೋಧ’ದ ಕೆಲವು ಕುತೂಹಲಕರ ಚಿತ್ರಗಳನ್ನು ಸೂಕ್ಷ್ಮದಲ್ಲಿ ಹೇಳಿಬಿಡುತ್ತೇನೆ.

ವರದಶ್ರೀ ಹೋಟೆಲಿನ ಸಮೀಪಸ್ಥ ಇನ್ನೂ ಕೆಲವು ಹೋಟೆಲ್ – ಓಶನ್ ಪರ್ಲ್, ಟಿಪ್ ಟಾಪ್….ಇತ್ಯಾದಿಗಳಲ್ಲೂ ನೀನಾಸಂ ಶಿಬಿರದ ಹಲವು ಅತಿಥಿಗಳು ಹಂಚಿಹೋಗಿದ್ದರು. ನಾವು ಕಂಡಂತೆ, ಎಚ್.ಎಸ್.ವಿ, ಮಗ್ರಮಾದ ರಮಾನಾಥ ಜೋಶಿ, ಅರವಿಂದ ಕುಲಕರ್ಣಿ, ಶಾಂತ ಕುಮಾರ್, ಸತ್ಯಪ್ರಕಾಶ್ ಮೊದಲಾದವರು ನಮ್ಮಲ್ಲೇ ಇದ್ದರು. ಸಾಗರಕ್ಕೆ ಬರುವವರೆಗೆ ನಮ್ಮ ಕಾಲದ ಲಯ ಕಳೆದುಕೊಂಡ ಮನಸ್ಸು, ಇನ್ನೂರು ಮುನ್ನೂರರ ಬಾಡಿಗೆ ಕೋಣೆಯ ನಿರೀಕ್ಷೆಯಲ್ಲಿತ್ತು. ವರದಶ್ರೀ ಸಾದಾ ಕೋಣೆಗೆ ಆರ್ನೂರೈವತ್ತು ಎಂದದ್ದನ್ನು ಒಪ್ಪಿಕೊಂಡರೂ ಸಂತೋಷ ಇರಲಿಲ್ಲ. ಹಾಗೇ ಮೊದಲ ಸಂಜೆಯ ನಡಿಗೆಯಲ್ಲಿ ನೂರಡಿ ಆಚೆ ಪಿಡಬ್ಲ್ಯುಡೀ ಪ್ರವಾಸೀ ಮಂದಿರದ ಬೋರ್ಡ್ ಕಂಡಾಗ ಸಣ್ಣ ಆಸೆ ಮೊಳೆತಿತ್ತು. ಪಕ್ಕಾ ಸರಕಾರೀ, ನೆಲದುಂದಿನ ವಠಾರ. ಒಳಗೆ ಅಡ್ಡಾದಿಡ್ಡಿ ಕಟ್ಟಡ ಸಮುಚ್ಚಯ. ಹಳೆಯ ಕಟ್ಟಡಗಳು ಬಹುತೇಕ ಬಳಕೆ ದೂರವಾದಂತಿತ್ತು. ಭರ್ಜರಿಯಾಗೆದ್ದ ಹೊಸ ಕಟ್ಟಡವೂ ಅಷ್ಟಕ್ಕಷ್ಟೇ ಎನ್ನುವಂತೆ ತೋರಿತು. ಅದರ ಅರೆ ತೆರೆದ ಹೆಬ್ಬಾಗಿಲು ನೂಕಿ, ನಾವು ಹಲವು ಬಾರಿ ಕೂಗಿದರೂ ಕರೆ ಕೇಳುವವರೇ ಇರಲಿಲ್ಲ. ಮತ್ತೆ ವಾಸಯೋಗ್ಯತೆಯನ್ನು ನಿರೀಕ್ಷಿಸದೇ ಹೊರನಡೆದಿದ್ದೆವು. ಅಲ್ಲೇ ಎದುರು ಅಗ್ರಹಾರ ದಾರಿಯಲ್ಲಿ, ರಾಮಚಂದ್ರಾಪುರ ಮಠ ಹೊಸದಾಗಿ ನಿರ್ಮಿಸಿದ್ದ ರಾಘವೇಶ್ವರ ಭವನ ಮಿರಮಿರ ಮಿಂಚುತ್ತಿತ್ತು. ಆದರೆ ಅಲ್ಲಿ ಮಠಕ್ಕೆ ಸಹಜವಾದ ಆರಾಧನೆಯ ಅಥವಾ ಜೀವ ಸಂಚಾರದ ಯಾವ ಕುರುಹುಗಳೂ ಕಾಣಿಸಲಿಲ್ಲ. ಹಿಂದಿನಿಂದ ತಿಳಿದಂತೆ, ಅದೊಂದು ಕಲ್ಯಾಣ ಮಂಟಪವಂತೆ.

ಮಠಕ್ಕೆ ಯಾರದೋ ದಾನದಲ್ಲಿ ಸಿಕ್ಕಿರಬಹುದಾದ ನಿವೇಶನ, ಇನ್ನೆಷ್ಟೋ ದಾನಗಳಲ್ಲಿ ಮೂಡಿರಬಹುದಾದ ಕಲ್ಯಾಣ ಮಂಟಪ ಸರಿಯೇ ಇರಬಹುದು. ಆದರೆ ಅಲ್ಲೇ ಅಕ್ಕಪಕ್ಕದಲ್ಲಿ ಬಡತನ ಜಗ್ಗುತ್ತಿದ್ದ ಹಲವು ಹಳೆಗಾಲದ ಮನೆಗಳನ್ನು ನೋಡಿದಾಗ, ಅವಕ್ಕೆ ‘ಕಲ್ಯಾಣ’ ಯೋಗ ದಕ್ಕಿದ್ದರೆ ಧರ್ಮ ಕಾರ್ಯ ನಿಜ ಸಾರ್ಥಕ್ಯ ಕಾಣುತ್ತಿತ್ತು ಎಂದೇ ಅನ್ನಿಸಿತು.

ಹೋಟೆಲಿನ ಹಿತ್ತಲಿನಲ್ಲಿ ಎನ್ನುವಂತೆ ಹರಡಿಕೊಂಡಿದ್ದ ಭಾರೀ ಕೆರೆ – ಗಣಪತಿ ದೇವಳದ ಹೆಸರನ್ನೇ ಹೊತ್ತಿದೆ. ಬೇರೆ ಬೇರೆ ದಿನಗಳಲ್ಲಿ ಕೆರೆಯ ವಿಸ್ತೃತ ದಂಡೆಗಳಲ್ಲಿ, ಅಂದರೆ ಸರಿಯಾದ ಮಾರ್ಗ ಇದ್ದಂತೆ, ನಾವು ಪಾದಯಾತ್ರೆ ಮಾಡಿದ್ದೇವೆ. ಆ ಕೆರೆ, ಉದ್ಧಾರಕರು (ಕೆಲಸದ ಯೋಗ್ಯತೆ ನೋಡಿದರೆ ಸರಕಾರವೇ ಇರಬೇಕು) ಮಾಡಿರಬಹುದಾದ ಹಲವು ಯೋಜನೆಗಳ, ಅರೆಬರೆ ರಚನೆಗಳು ಕೊಳಚೆ ನೀರು ತುಂಬಿ, ಜೊಂಡು ನಿಗಿದು, ಇನ್ನಷ್ಟು ಮತ್ತಷ್ಟು ದೊಡ್ಡ ಯೋಜನೆಗಳಿಗೆ ಅವಕಾಶವನ್ನು ಮುಕ್ತವಾಗಿಯೇ ಉಳಿಸಿತ್ತು. ಕೆರೆಯಲ್ಲಿ ಈಗಾಗಲೇ ಮುಳುಗಿರಬಹುದಾದ ಹಣದ ಲೆಕ್ಕವೊಂದು ನನ್ನಲ್ಲಿ ಕೇಳಬೇಡಿ! ಸಾಗರದ ಹಳೆ ಬಸ್ ನಿಲ್ದಾಣ ವಾಹನ ಸಮ್ಮರ್ದದಲ್ಲಿ ಬಳಲಿದೆ. ಅತ್ತ ಹುಚ್ಚುಚ್ಚಾರ ಕಟ್ಟಿದ ಹೊಸ ನಿಲ್ದಾಣದ ಕಟ್ಟಡ, ಬಹುತೇಕ ಪೂರ್ಣಗೊಂಡಂತಿದ್ದರೂ ಸ್ಥಾಪಿತ ಹಿತಾಸಕ್ತಿಗಳ ಮತ್ತು ಅನ್ಯ ಲಾಭಾಸಕ್ತರ ವ್ಯೂಹದಲ್ಲಿ ನಿದ್ರೆ ಮಾಡುತ್ತಿರುವುದನ್ನೂ ಕಂಡೆವು, ಕೇಳಿದೆವು. ನಗರದ ಸುತ್ತ ಪ್ರಾಕೃತಿಕವಾಗಿ ಒದಗಿರುವ ವಿಸ್ತಾರ ಜವುಗು ಪ್ರದೇಶ ಮತ್ತು ಗಣಪತಿ ಕೆರೆಗಳೆಲ್ಲ ನಿಜ ನೀರ ನೆಲೆಗಳಾಗಿ ಸಾಗರ ನಾಮ ಅನ್ವರ್ಥವಾಗಲಿ, ಹೊಸ ನಿಲ್ದಾಣ ಬೇಗ ಜನಪರವಾಗಲಿ ಎಂದಷ್ಟೇ ಹಾರೈಸಬಲ್ಲೆ.

ಬೆಳಬೆಳಗ್ಗೆ ಅಂಗಡಿಗಳಲ್ಲಿ ಮೊಟ್ಟೆ ಕ್ರೇಟ್ ಇಳಿಸುವುದು, ಕೊಚ್ಚುವ ಕೋಳಿಗಳ ಪಂಜರಗಳನ್ನು ಹೊತ್ತು ಹಾಕುವುದನ್ನು ನಾನು ಮಂಗಳೂರಿನಲ್ಲೂ ಕಂಡದ್ದುಂಟು. ಇಲ್ಲಿ ವ್ಯಾನಿನಲ್ಲಿ ಬಂದು, ಮಟನ್ ಸ್ಟಾಲಿಗಿಳಿಯುತ್ತಿದ್ದ ಕುರಿ ಸಾಲನ್ನು ಹೊಸದಾಗಿ ಕಂಡೆ. ಕುರಿಗಳು ಇಳಿದದ್ದೇ ಆವರಣದೊಳಗೆ ಸಿಕ್ಕ ಗರಿಕೆಗೆ ಬಾಯಿ ಹಾಕುವ ಸಂಭ್ರಮವನ್ನೂ ಕಂಡಾಗ ಕತೆಯಲ್ಲೆಲ್ಲೋ ಬಲಿಪಶುವೊಂದು ತನ್ನನ್ನು ಕಟ್ಟಿ ಹಿಡಿದಿದ್ದ ನಾರಿನ ಹಗ್ಗವನ್ನು ಸವಿಯಾಗಿ ಜಗಿಯುತ್ತಿದ್ದ ಕತೆ ನೆನಪಾಗದಿರಲಿಲ್ಲ. ಅಂದು ಆಯುಧ ಪೂಜೆ ಇದ್ದಿರಬೇಕು. ಮಾರ್ಗದಂಚಿನ ಕಬ್ಬಿಣದ ಕಟಕಟೆಗಳೆಲ್ಲ ಹೂವಾಡಿಗರ ವರ್ಣಮಯ ಶೋಕೇಸುಗಳೇ ಆಗಿದ್ದವು. ದೇವಾಲಯ, ಆಯಕಟ್ಟಿನ ಗಲ್ಲಿದ್ವಾರಗಳು ಪುಷ್ಪಾಲಂಕಾರದ ಸ್ಪರ್ಧೆಯಲ್ಲಿದ್ದಂತಿದ್ದವು. ಹಾಗೆ ಮುಂದುವರಿದಾಗ ರಸ್ತೆ ಗುಡಿಸುವ ಮಂದಿಯ ಕೈಗಾಡಿ, ಕಸ ಹೊರುವ ಟ್ರ್ಯಾಕ್ಟರ್ಗುಗಳೂ ಭರ್ಜರಿ ನಾಮ, ಬಾಳೆ ಕಂದು, ಹೂಗಳ ಶೃಂಗಾರದಲ್ಲಿ ಬೀಗುತ್ತಿದ್ದದ್ದನ್ನು ಕಂಡಾಗ ಒಮ್ಮೆ ಸಣ್ಣ ನಗೆ ಬಂತು. ಹೇಗೂ ನಮ್ಮ ಘನತೆವೆತ್ತ ಸಚಿವರು ವಿದೇಶಕ್ಕೆ ಹೋಗಿ, ನಮ್ಮಲ್ಲಿಗೆ ಬರಬಹುದಾದ ಯುದ್ಧ ವಿಮಾನಗಳಿಗೆ ಮುಂಗಡ ಆಯುಧಪೂಜೆ ಮಾಡಿ ಬಂದಷ್ಟು ಇವು ಸಾರ್ವಜನಿಕ ಹಣಕ್ಕೆ ಹೊರೆಯಾಗದು ಎಂದು ಸಣ್ಣ ಸಮಾಧಾನ ಹಿಂಬಾಲಿಸಿತು. ಕೊನೆಯಲ್ಲಿ, ನಾಳಿನ ಭಾರೀ ಕಸವನ್ನು ಇಂದು ಮೆರೆಸುವವರಿಗೂ ಮಟನ್ ಸ್ಟಾಲಿನಲ್ಲಿಳಿದ ಕುರಿಯ ಗರಿಕೆ ಮೆಲ್ಲುವ ಆತುರಕ್ಕೂ ಅಸಂಗತ ಸಾದೃಶ್ಯ ಹೊಳೆದು ವಿಷಾದವಷ್ಟೇ ಉಳಿಯಿತು!

(ಮುಂದುವರಿಯಲಿದೆ)