(ನೀನಾಸಂ ಕಥನ ಮಾಲಿಕೆ ೪)

“ನಡು ಬೇಸಗೆಯಿರುಳ ನಲ್ಗನಸುಗಳನ್ನು ಯಾವುದೋ ಕೌಟುಂಬಿಕ ಕೂಟವೊಂದರ ಆನಂದಕ್ಕಾಗಿಯೇ ಶೇಕ್ಸ್‍ಪಿಯರ್ ರಚಿಸಿದ್ದಿರಬೇಕು. ಆದರೆ ದೂರದೃಷ್ಟಿಯಲ್ಲಿ ಅದು ಆತನ ಎಲ್ಲ ನಾಟಕಗಳ ಪ್ರಯೋಗಗಳೂ ನಡೆಯುತ್ತಿದ್ದ ಗ್ಲೋಬ್ ಥಿಯೇಟರ್ ಪರಿಸರಕ್ಕೂ ಹೊಂದುವಂತೆ ರಚಿಸಿದ, ಪ್ರಮುಖ ಪ್ರಹಸನ ನಾಟಕ” ಎಂಬ (ಶಿಬಿರಾರ್ಥಿಯಾಗಿಯೇ ಬಂದಿದ್ದ ಇಂಗ್ಲಿಷ್ ಪ್ರಾಧ್ಯಾಪಕರೊಬ್ಬರ – ಕ್ಷಮಿಸಿ, ಅವರ ಹೆಸರು ನೆನಪಿಲ್ಲ) ಉಪಯುಕ್ತ ಪ್ರಸ್ತಾವದೊಡನೇ ನಾಲ್ಕನೇ ದಿನದ ಮೊದಲ ಕಲಾಪ, ಅಂದರೆ ಹಿಂದಿನ ದಿನದ ರಂಗಪ್ರಯೋಗದ ವಿಮರ್ಶೆ, ತೊಡಗಿತ್ತು. ಹಿಂದೆ ಹೇಳಿದಂತೆ, ಇದು ಹೆಗ್ಗೋಡಿನ ಹತ್ತು ಸಮಸ್ತರ, ಸುಬ್ಬಣ್ಣ ಸ್ಮೃತಿದಿನದ (ಜುಲಯ್ ೧೬) ಪ್ರಸ್ತುತಿಯ, ಎರಡನೆಯ ಪ್ರಯೋಗ ಮತ್ತು ನಿರ್ದೇಶನ ಇಕ್ಬಾಲ್ ಅಹಮದ್ದರದ್ದು. ಅನಿವಾರ್ಯ ಕಾರಣಗಳಿಂದ ಅಂದು ನಿರ್ದೇಶಕರು ಬಂದಿರಲಿಲ್ಲವಾದರೂ ಒಟ್ಟಾರೆ ಪ್ರೇಕ್ಷಕರ ಮೆಚ್ಚುಗೆಯ ಮಾತುಗಳಿಗೆ ಏನೂ ಕೊರತೆಯಾಗಲಿಲ್ಲ. ಅದರಲ್ಲೂ ಶಿಷ್ಟ ತಂಡದೊಳಗೊಂದು ಅಪ್ಪಟ ಜನಪದ ತಂಡವನ್ನು ಮಾಡಿ, ನಾಟಕದೊಳಗಿನ ನಾಟಕವನ್ನು ನಡೆಸಿಕೊಟ್ಟ ಚಂದಕ್ಕೆ, ಹಿಂದಿನ ದಿನವೇ ಕಾರಂತ ರಂಗಮಂದಿರ ಗದಗುಟ್ಟಿತ್ತು. ಪ್ರತಿಕ್ರಿಯಿಸುವ ದಿನವೂ ನಗೆಯ ಸೋಂಕು ಇಳಿದಿರಲೇ ಇಲ್ಲ. ವಿಮರ್ಶೆಗಳ ಕೊನೆಯಲ್ಲಿ ನಟವರ್ಗವನ್ನು ಪರಿಚಯಿಸಿಕೊಡುವ ಸಂದರ್ಭದಲ್ಲಿ ಸಿಂಹ ಮಾಡಿದ್ದ ಅತ್ಯಂತ ಹಿರಿಯ ನಟ – ನರಹರಿಯವರ, ಪರಿಚಯಕ್ಕೆ ಬಿದ್ದ ಚಪ್ಪಾಳೆ, ಹುಯ್ಲು ಮೇಘಸ್ಫೋಟವೇ ಸರಿ!

ಇನ್ಸ್ಟಾಲೇಶನ್ ಕಲೆ

ಪೂರ್ವಾಹ್ನದ ಎರಡನೇ ಕಲಾಪದಲ್ಲಿ ದಕ ಮೂಲದ, ಮುಂಬೈ ನೆಲೆಯ ಸುದರ್ಶನ ಶೆಟ್ಟಿ ತಮ್ಮ ಇನ್ಸ್ಟಲೇಶನ್ ಅವತರಿಸಿದ ಗೌರೀಶಂಕರ) ಕುರಿತು, ತುಸು ಹೆಮ್ಮೆಯಿಂದಲೇ ಸಣ್ಣದಾಗಿ ಅವರಲ್ಲಿ ಹೇಳಿಕೊಂಡೆ. ಇದು ಖ್ಯಾತನಾಮರನ್ನು ಎಳೆದೆಳೆದು ಸ್ವಂತೀ ಹೊಡೆಯುವ ಪಡ್ಡೆ-ಉತ್ಸಾಹ ಆಯ್ತೋ ಏನೋ!
ಕಲೆಯ ಪರಿಚಯ ಮಾಡಿಕೊಟ್ಟರು. ನಮ್ಮ ದೈನಂದಿನ ಬಳಕೆಗೆ ಒಗ್ಗದ ವಸ್ತು ಅಥವಾ ಸಂಗತಿಯನ್ನು ವಿಶಿಷ್ಟ ವ್ಯವಸ್ಥೆಯಲ್ಲಿ ಅಥವಾ ಭಿನ್ನ ಚೌಕಟ್ಟುಗಳಲ್ಲಿ, ಧ್ವನಿ ಬೆಳಕಿನಲ್ಲಿ ಕಾಣಿಸಿ ಕಲಾನುಭವವನ್ನು ಉದ್ದೀಪಿಸುವುದು ಇವರ ಸಾಧನೆ ಮತ್ತು ವೃತ್ತಿ (ಜೀವನಯಾಪನೆಯ ದೃಷ್ಟಿಯಿಂದ ಹೇಳಿದ್ದು) ಕೂಡಾ! ತಮ್ಮದೇ ಕಲಾಕೃತಿಗಳ ಚಿತ್ರ, ಚಲಚಿತ್ರ ತುಣುಕುಗಳ ಪ್ರದರ್ಶನದೊಡನೆ ಮಾತುಗಳಿಗೆ ಅರ್ಥ ತುಂಬಿದರು. ಮರುದಿನ ಬಿಡುವಿನಲ್ಲಿ ಶೆಟ್ಟರು ಸಿಕ್ಕಾಗ, ನನ್ನ ಈಚಿನ ಮರಗೆತ್ತನೆಯ ಹವ್ಯಾಸದ (ನೋಡಿ:

ವಿಶ್ವಾಮಿತ್ರ ಮೇನಕೆ

ನಾಲ್ಕನೇ ದಿನದ ಅಪರಾಹ್ನ ನೀನಾಸಂ ರಂಗ ಮಂದಿರ, ಅದರದೇ ಅಧ್ಯಾಪಕ ವೃಂದದ ನಾಟಕ – ‘ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ?’ಗೆ ಸಾಕ್ಷಿಯಾಯ್ತು. ಅಭಯ ಈ ನಾಟಕವನ್ನೂ ಕಳೆದ ಭೇಟಿಯ ವೇಳೆ, ‘ನಡುಬೇಸಗೆಯಿರುಳ….’ ಜತೆಗೇ ನೀನಾಸಂ-ಸಂಚಿ ಯೋಜನೆಯಂತೆ ವಿಡಿಯೋ ದಾಖಲೀಕರಣ ಮಾಡಿದ್ದಾನೆ. ಮತ್ತೆ ಅದನ್ನೂ ಸದ್ಯದಲ್ಲೇ ಯೂ ಟ್ಯೂಬಿನಲ್ಲಿ ಆಸಕ್ತರು ನೋಡಬಹುದು. ಇನ್ನು ಪ್ರಯೋಗದ ಕುರಿತು ಒಂದೆರಡು ಮಾತು. ತಂಡ ಇದಕ್ಕೆ ಸ್ಪಷ್ಟ ಒಬ್ಬ ನಿರ್ದೇಶಕನನ್ನು ಹೆಸರಿಸಿಲ್ಲ! ಅಂದರೆ, ಅದನ್ನಾಡಬೇಕೆಂಬ ಆಯ್ಕೆ, ಪ್ರೇರಣೆ ಮತ್ತು ಸಹಾಯ ಒದಗಿಸಿದವ ಶಿಶಿರನಂತೆ. ಒತ್ತಾಸೆ ಕೊಟ್ಟವರು ಅಕ್ಷರರಂತೆ. ನಾಟಕದ ನಡೆಯಲ್ಲೂ ಸಣ್ಣಪುಟ್ಟ ಪರಿಷ್ಕಾರವನ್ನು ಸ್ವತಃ ಅಧ್ಯಾಪಕ-ನಟರೇ ಮಾಡಿಕೊಂಡದ್ದಿರಬೇಕು. ಶಿಬಿರದಲ್ಲಿನ ಪ್ರದರ್ಶನಕ್ಕೆ ನಾಟಕದ ‘ಲೇಖಕ’ ಜೋಗಿಯೂ ಹಾಜರಿದ್ದರು. ಪ್ರದರ್ಶನದುದ್ದಕ್ಕೂ ಸಭೆಯ ಪ್ರತಿಸ್ಪಂದನ ಯಾರೂ ನಿರೀಕ್ಷಿಸಬಹುದಾದಂತೆ ಪರಮಾದ್ಭುತವಾಗಿಯೇ ಇತ್ತು. ಹಾಗಾಗಿ ಪ್ರದರ್ಶನ ಮುಗಿದ ಮೇಲೆ ಪ್ರೇಕ್ಷಕ ಪ್ರತಿಕ್ರಿಯೆಯನ್ನು ಜೋಗಿಯವರೊಡನೆ ಸಂವಾದವಾಗಿಯೇ ಯೋಜಿಸಿದ್ದರು. ತಮಾಷೆ ಎಂದರೆ, ನಿರ್ದೇಶಕನಿಲ್ಲದ ನಾಟಕಕ್ಕೆ ಪೂರಕವೋ ಎಂಬಂತೆ ಮೊದಲ ಮಾತಿನಲ್ಲೆ ಜೋಗಿಯೂ “ನಾಟಕದ ಲೇಖಕನೂ ನಾನಲ್ಲ” ಎಂದೇ ಅಚ್ಚರಿ ಹುಟ್ಟಿಸಿದರು. ವಿವರಣೆಯಲ್ಲಿ, ಇಂಥ ನೂರು ಸಾವಿರಕ್ಕೆ ವಸ್ತು, ಪ್ರೇರಣೆ ಕೊಟ್ಟ ಕೀರ್ತಿಶೇಷ ವೈಯೆನ್ಕೆಯೇ ನಿಜದ ನಾಟಕಕಾರ, ತಾನು ಲಿಪಿಕಾರ ಎಂದೇ ಗೌರವಾರ್ಪಣೆ ಮಾಡಿದ್ದರು.

ಇಬ್ಬರು ಸಿನಿಮಾಕಾರರು

ಅಂದು ಅಪರಾಹ್ನದ ಎರಡನೇ ಕಲಾಪಕ್ಕೂ ಜನಪ್ರಿಯತೆಯದ್ದೇ ಥಳುಕಿತ್ತು! ‘ಒಂದು ಮೊಟ್ಟೆಯ ಕತೆ’ ಖ್ಯಾತಿಯ ರಾಜ್ ಬಿ. ಶೆಟ್ಟಿ ಮತ್ತು ‘ರಾಮಾ ರಾಮಾರೇ’ ಖ್ಯಾತಿಯ ಸತ್ಯಪ್ರಕಾಶ್ ತಮ್ಮ ಮೊದಲ ಸಿನಿಮಾಗಳ ಯಶಸ್ಸಿನ ಹಿಂದಿನ ಕತೆಯನ್ನು ಆತ್ಮೀಯವಾಗಿ, ಸರಳವಾಗಿ ಬಿಚ್ಚಿಟ್ಟರು. ರಾಜ್ ಶೆಟ್ಟಿ – ವಿದ್ಯಾರ್ಜನೆಯಲ್ಲಿ ದಡ್ಡ, ದೈಹಿಕ ರೂಪಿನಲ್ಲಿ ಅಚಂದ ಮತ್ತು ವೃತ್ತಿ ಮಾರ್ಗದಲ್ಲಿ ಕಾಲು ಸೋತವರು. ಆದರೂ ಕಿರು ಚಿತ್ರವನ್ನಾದರೂ ಮಾಡಲೇಬೇಕೆಂಬ ಹಠಕ್ಕೆ ಬಿದ್ದು, ಬಹು ಸಣ್ಣ ಮೊತ್ತದಲ್ಲಿ ಹಿರಿಚಿತ್ರವನ್ನೇ ಸಾಧಿಸಿದ್ದನ್ನು ಸರಳ, ಕೇಳುಗ ರಮ್ಯವಾಗಿ ಹೇಳಿದರು. ಸತ್ಯಪ್ರಕಾಶ್ ಮೊದಲಿಗೇ ತನ್ನನ್ನು ‘ಮಹಾ ಸುಳ್ಳುಗಾರ’ ಎಂದೇ ಘೋಷಿಸಿಕೊಂಡು, ರಾಜ್ ಶೆಟ್ಟಿಯವರಿಂದ ಭಿನ್ನ ಆದರೆ ಹೆಚ್ಚು ಕಠಿಣವೇ ಆದ ಪರಿಸ್ಥಿತಿಗಳಲ್ಲಿ ರಾಮಾ ರಾಮಾರೇ ಪೂರೈಸಿದ್ದನ್ನು ಹೇಳಿಕೊಂಡರು. (ಈ ಕಥನದ ವಿಸ್ತೃತ ಮತ್ತು ಅಧಿಕೃತ ರೂಪವನ್ನು ಇವರ ಅನುಮತಿಯೊಡನೇ ಸಿದ್ಧಗಂಗಯ್ಯ ಕಬ್ಬಾಳು ಬರೆದಿದ್ದಾರೆ, ಪ್ರಕಾಶಕರು ಟೋಟಲ್ ಕನ್ನಡ, ಬೆಂಗಳೂರು, ಬೆಲೆ ರೂ ೨೯೯)

ವೆನ್ ದ ಡೆಡ್ ಅವೇಕನ್

ಆ ಸಂಜೆಯ ನಾಟಕ ಇಂಗ್ಲಿಷಿನದ್ದು. ಇದು ಆಧುನಿಕ ನಾಟಕಗಳ ಹರಿಕಾರನೆಂದೇ ಭಾವಿಸುವ ಹೆನ್ರಿಕ್ ಇಬ್ಸೆನ್ನನದ್ದು. ದೊಡ್ಡ ಆಶಯದ, ಭಾರೀ ಮಾತುಗಳ ಈ ಗಂಭೀರ ಕೃತಿಯ ಗಾತ್ರಕ್ಕೇ ಬಹುತೇಕ ನಿರ್ದೇಶಕರು ವಹಿಸಿಕೊಳ್ಳಲು ಹಿಂಜರಿಯುತ್ತಾರಂತೆ. ಆದರೆ ತ್ರಿಶೂರಿನ ಶಂಕರ್ ವೆಂಕಟೇಶ್ವರನ್ ಇದನ್ನು ಥಿಯೇಟರ್ ರೂಟ್ಸ್ ಅಂಡ್ ಯಂಗ್ಸ್ ಬಳಗಕ್ಕೆ ಭಿನ್ನ ರೀತಿಯಲ್ಲಿ ಸಂಗ್ರಹಿಸಿ, ನಿರ್ದೇಶಿಸಿದ್ದಾರೆ. ಕನಿಷ್ಠ ಮಾತು ಮತ್ತು ಅತ್ಯಂತ ನಿಧಾನಗತಿಯ ಕನಿಷ್ಠ ಚಲನೆಗಳೇ ಪ್ರಯೋಗದ ಗುಟ್ಟು. ಶಂಕರ್ ಈ ಹಿಂದೆ ನೀನಾಸಂ ಮರು ತಿರುಗಾಟಕ್ಕೊಂದು ನಾಟಕ – ನೀರಿನ ನಿಲುದಾಣ ನಿರ್ದೇಶಿಸಿದ್ದರು. ನಾನದನ್ನು ಉಡುಪಿಗೆ ಹೋಗಿ ನೋಡಿ ಬಂದಿದ್ದೆ. ಅದರಲ್ಲಿ ತೀರಾ ನಿಧಾನ ಚಲನೆಯೊಡನೆ ಮಾತನ್ನೂ ನೀಗಿಕೊಂಡಿದ್ದರು!

ಪ್ರಸ್ತುತ ಪ್ರದರ್ಶನಕ್ಕೆ ಪ್ರೇಕ್ಷಕರನ್ನು ತಡವಾಗಿಯೇ ಭವನದೊಳಗೆ ಬಿಟ್ಟುಕೊಂಡರು. ಅಂದರೆ ಆಗಲೇ ನಾಟಕ ಆರಂಭವಾಗಿತ್ತೆಂಬಂತೆ ಎಲ್ಲ ಮುಖ್ಯ ಪಾತ್ರಧಾರಿಗಳು ಆಯಕಟ್ಟಿನ ಸ್ಥಳಗಳಲ್ಲಿ ಶಿಲ್ಪಗಳಂತೆ ನಿಂತಂತ್ತಿದ್ದರು. ರಂಗ ಸಜ್ಜಿಕೆ ಸರಳವೇ ಆದರೂ ಏನೋ ಭಾರಿಯನ್ನೇ ಪ್ರತಿನಿಧಿಸಿತ್ತು. ನಾಟಕ ನಿಧಾಆಆಆಆಆನಕ್ಕೆ ನಡೆದು ಮುಗಿದಾಗ, ಮೊದಲೇ ಕೊಟ್ಟಿದ್ದ ಕರಪತ್ರದ ಬಲದಲ್ಲಿ ನನಗೆ ಸಣ್ಣದಾಗಿ ಭಾವ ಗ್ರಹಿಕೆಯಾಗಿದ್ದರೂ ದೊಡ್ಡದಾಗಿ ಗೊಂದಲವೇ ತಲೆ ತುಂಬಿತ್ತು. (ನೀನಾಸಂ ತನ್ನ ಸಾರ್ವಜನಿಕ ಪ್ರದರ್ಶನಗಳ ಕಾಲದಲ್ಲಿ, ಒಟ್ಟಾರೆ ಚಿತ್ರಗ್ರಹಣವನ್ನು ಕಡ್ಡಾಯವಾಗಿ ನಿಷೇಧಿಸುತ್ತದೆ. ಅದು ಬಿಟ್ಟು ಅವಕಾಶ ಕೊಟ್ಟಿದ್ದರೆ, ನಾನು ವಿಡಿಯೋ ಮಾದರಿ ಮಾಡಿದ್ದರೆ, ನೀವು “ವಿಡಿಯೋ ಮುಂದೋಡುತ್ತಿಲ್ಲ” ಎಂದು ದೂರುತ್ತಿದ್ದಿರಿ ಖಂಡಿತ!) ಹಿಂದಿನ ಮೂರು ದಿನಗಳ ನಾಟಕಗಳಾದರೋ ವಿವರಗಳಲ್ಲಿ ನಮ್ಮ ಗ್ರಹಣ ಸಾಮರ್ಥ್ಯಕ್ಕೆ ಸಾಕಷ್ಟು ಆಹಾರ ಕೊಟ್ಟು, ರಾತ್ರಿಯ ವಿರಾಮದಲ್ಲಿ ಇಡಿಯನ್ನು ವಿಶ್ಲೇಷಿಸಲು ಬಿಡುತ್ತಿದ್ದವು. ಈ ನಾಟಕದ ಮಂಥನಕ್ಕೂ ಸಮಯಾವಕಾಶವೇನೋ ಅಷ್ಟೇ ಇತ್ತು, ಆದರೆ ವಿವರಗಳು ಒಗಟು, ಇಡಿಯಂತೂ ಬ್ರಹ್ಮ ಗಂಟು. ನಾನು ಮರುದಿನದ ಇತರರ ವಿಶ್ಲೇಷಣೆಗೇ ಶರಣು ಎಂದು ನಮಸ್ಕಾರ ಹಾಕಿಬಿಟ್ಟೆ.

ಹೆಸರಿಸಲು ಬಿಟ್ಟು ಹೋಗಿರುವವರ ಕ್ಷಮೆ ಯಾಚಿಸಿ….

ಪ್ರಾತರ್ವಿಧಿಗಳನ್ನು ಮುಗಿಸಿದ್ದೇ ಕನಿಷ್ಠ ಅರೆಪಾವಿನಷ್ಟಾದರೂ ಸೊಗಸಾದ ಸೋಸುಗದ ಕಾಫಿಯ ಶೋಕಿ ನಮ್ಮದು. ಆ ಲೆಕ್ಕದಲ್ಲೇ ಪ್ರತಿ ಬೆಳಿಗ್ಗೆ ನಾವು ‘ಸಾಗರಶೋಧ’ ನಡೆಸಿದ್ದೆವು ಎಂದರೆ ತಪ್ಪಾಗದು. ದಿನಕ್ಕೊಂದು ದಾರಿ, ದಿನಕ್ಕೊಂದು ಹೋಟೆಲ್ ಏನೋ ಸರಿ, ಆದರೆ ಸಿಕ್ಕುವುದೆಲ್ಲ ಅರೆ ಇಂಚಿನ ಪೇಪರ್ ಲೋಟ ಮಾತ್ರ ಎನ್ನುವುದೇ ನಮ್ಮ ಕೊರಗು. ಪ್ಲ್ಯಾಸ್ಟಿಕ್ ಲೋಟ ಬೇಡ ಎನ್ನುವ ಗದ್ದಲದಲ್ಲಿ ಪೇಪರ್ ಲೋಟವೂ ನಮ್ಮಾರೋಗ್ಯಕ್ಕೆ ಅಷ್ಟೇ ಹಾನಿಕರ ಎನ್ನುವುದು ತುಂಬ ಜನರಿಗೆ ತಿಳಿದಂತಿಲ್ಲ. ಇಲ್ಲಿ ತೋರಿಕೆ ಮತ್ತು ಬಲಕ್ಕೆ ಪೇಪರಿದ್ದರೂ ಜಲ ತಾಳಿಕೆಗೆ ಹಚ್ಚುವ (ಸರಳ ಮೇಣ ಅಲ್ಲ) ರಾಸಾಯನಿಕ ಪ್ಲ್ಯಾಸ್ಟಿಕ್ಕಿನಷ್ಟೇ ಆರೋಗ್ಯ ಮಾರಕ. ಶಿಬಿರದುದ್ದಣ ನಮ್ಮ ಮುಖ್ಯ ಆಹಾರ ಪಾನೀಯಗಳ ಕೇಂದ್ರವೂ ಆಗಿದ್ದ ನೀನಾಸಂ ಆಹಾರ್ಯ ಈ ಅವಸ್ಥೆಯನ್ನು ಬಹುತೇಕ ನೀಗಿತ್ತು. ನಾಗಾಭರಣರ ಯಾಜಮಾನ್ಯದ ‘ಆಹಾರ್ಯ‘ವನ್ನು ಶಿಬಿರ ಕಾಲದಲ್ಲಿ ಬಲಪಡಿಸಿದ್ದರು. ಮಾಮೂಲೀ ಊಟದ ಮನೆಯ ಜಗುಲಿ ಮತ್ತು ತಾಲೀಮು ಮನೆಗಳಲ್ಲೆಲ್ಲ ಮೇಜು ಕುರ್ಚಿ, ಸಮರ್ಥ ವಿತರಣಾ ಮಂದಿಯೊಡನೆಗಳ ವಿಸ್ತರಣೆಯಾಗಿತ್ತು. ಇಲ್ಲಿ ಎಲ್ಲರೂ ಸಮಾನರು ಎಂದು ನಡೆಸಿಕೊಂಡ ವ್ಯವಸ್ಥೆ ಮುದವುಂಟು ಮಾಡಿತ್ತು. ಮುಂದೆ, ಮುಖ್ಯ ಮೂರು ಹೊತ್ತಿನಂತೇ ಸಂಜೆಯ ಉಪಾಹಾರಕ್ಕೂ (ಪೇಪರ್ ತಟ್ಟೆ ಲೋಟ ಹೋಗಿ) ಸ್ಟೀಲೇ ಬರುವಂತಾಗಲಿ. ಹಾಗೇ ನಿಯತ ಆಹಾರಗಳ ಹೊರತಾಗಿ ತಿನಿಸು ಬಯಸುವವರ ತತ್ಕಾಲೀನ ಕ್ಯಾಂಟೀನೂ (ಕಚೇರಿ ಪಕ್ಕದ ಕೊಟ್ಟಿಗೆ) ಪರಿಸರ ಸ್ನೇಹಿಯಾಗಲಿ. ಸಭಾಕಾಲದ ಪರ್ಲ್‍ಪೆಟ್ ಬಾಟಲಿ ನೀರುಗಳನ್ನೂ ಮುಂದಿನ ವರ್ಷಗಳಲ್ಲಿ ನಿವಾರಿಸುವಂತಾಗಬೇಕು. ಪರ್ಲ್ಪೆಟ್ ಬಾಟಲನ್ನು ಟಿ.ಎಂ ಕೃಷ್ಣ ಆವುಟಗಳಿಲ್ಲದೆ ನಿರಾಕರಿಸಿದ ಸಂಗತಿ ನನಗಂತು ಬಹಳ ಕುಶಿ ಕೊಟ್ಟಿತು.

“ಶಿಬಿರದ ಯಶಸ್ಸು ಭೋಜನಶಾಲೆಯಲ್ಲಿದೆ” ಎಂಬ ಲೋಕೋಕ್ತಿಯನ್ನು, ವ್ಯಂಗ್ಯವಿಲ್ಲದೆ ನೀನಾಸಂ ಶಿಬಿರಕ್ಕೆ ಧಾರಾಳ ಅನ್ವಯಿಸಬಹುದು. ಎರಡು ಹೊತ್ತಿನ ತಿನಿಸು – ಪಾನೀಯ ಮತ್ತು ಎರಡೂಟ, ದಿನ ಬಿಟ್ಟು ದಿನ ಸಿಹಿ ತಿನಿಸಿನ (ಜಿಲೇಬಿ, ಹೋಳಿಗೆ ಮತ್ತು ಕೇಸರಿಬಾತ್) ಬೋನಸ್, ಎಲ್ಲವೂ ಸರಳ, ರುಚಿಕರ, ಧಾರಾಳವಾಗಿದ್ದುವು. ತಟ್ಟೆ ಲೋಟಗಳ ಶುಚಿ, ಬಡಿಸುವವರ ಶಿಸ್ತು, ಸೌಜನ್ಯ….. ಎಂದೇನೇ ಹೆಸರಿಸಿದರೂ ನಾಗಾಭರಣ ಬಳಗಕ್ಕೆ ಹಾರ್ದಿಕ ಅಭಿನಂದನೆಗಳೊಂದನ್ನೇ ಹೇಳಬಹುದು. ಆಹಾರದ ಮುಂದಿನ ಹೆಜ್ಜೆ…..

ನೀನಾಸಂ ವಠಾರ ಜೇನುಗೂಡು. ನಿತ್ಯದ ರಂಗಶಿಕ್ಷಣ ಶಾಲೆಯ ವಿದ್ಯಾರ್ಥಿಗಳು, ಸುಬ್ಬಣ್ಣ ಸ್ಮೃತಿದಿನದಂತೆ ವರ್ಷದಲ್ಲಿ ಹರಡಿ ಬಿದ್ದ ಹತ್ತೆಂಟು ಸಾರ್ವಜನಿಕ ಕಲಾಪಗಳಿಗೆ ಗಣ್ಯಾತಿಗಣ್ಯರು ಬಂದು ಹೋಗುತ್ತಲೇ ಇರುವ ಕ್ಷೇತ್ರ. ‘ಇತಿಹಾಸ’ ದೊಡ್ಡದಾದಷ್ಟೂ ಜವಾಬ್ದಾರಿ (ಔದಾರ್ಯವೂ) ದೊಡ್ಡದು ಎನ್ನುವುದನ್ನು ನೆನಪಿಸುವಂತೆ ವರ್ಷಪೂರ್ತಿ ಅಯಾಚಿತ ಹಳೇ ವಿದ್ಯಾರ್ಥಿಗಳ ಭೇಟಿ, ಅನಾಹ್ವಾನಿತ ಗಣ್ಯರ ಭೇಟಿಯೂ ಆಗಿರುತ್ತದೆ. ಅವರೆಲ್ಲ ಸ್ವತಂತ್ರ ವಾಸ್ತವ್ಯ ಬಯಸಿದರೆ ಕನಿಷ್ಠ ಹತ್ತು ಕಿಮೀ ಆಚಿನ ಸಾಗರ ನೋಡಬೇಕು, ಅನಿಯತ ಸಾರಿಗೆ ಬಸ್ಸುಗಳ ಮರ್ಜಿ ಕಾಯಬೇಕು. ಅಲ್ಲದಿದ್ದರೆ, ಮಾಮೂಲೀ ದಿನಗಳಲ್ಲಿ ತೋರಿಕೆಗೆ ನೀನಾಸಂ ವಠಾರ ನಿರ್ಜನ ಎಂದೇ ಕಂಡರೂ ಕಚೇರಿಯ ಆಚೀಚೆ ಪ್ರತ್ಯಕ್ಷರಾಗಿ “ಹೋ ಎಂದು ಬಂದ್ರಿ? ಕಾಫಿ ಆಯ್ತಾ…” ಎಂಬಲ್ಲಿಂದ ತೊಡಗಿ ನಿಮ್ಮ ವಾಸ, ಕನಿಷ್ಟಾವಶ್ಯಕತೆಗಳ ಸಮರ್ಥ ಪೂರೈಕೆ ಮಾಡುವವರು (ದೊಡ್ಡ ಹೆಸರು ಹೇಳುವುದಿದ್ದರೆ – ಎಸ್ಟೇಟ್ ಮ್ಯಾನೆಜರ್ಸೂ) ಕಿಟ್ಟಣ್ಣ (ಕೃಷ್ಣಮೂರ್ತಿ) ಮತ್ತು ಪ್ರಭಕ್ಕ ದಂಪತಿ. ನೀನಾಸಂ ವಠಾರದಲ್ಲಿ ವೈಚಾರಿಕ ಮಥನದ ಆದಿಬಿಂದು, ಕಲಾನುಭವಕ್ಕೆ ತಾಂತ್ರಿಕ ಬಲ ಒದಗಿಸುವುದರಲ್ಲಿ ಈ ದಂಪತಿಯ ಕೊಡುಗೆ ದೊಡ್ಡದು, ಎಷ್ಟೋ ಸಂದರ್ಭಗಳಲ್ಲಿ ಇವರದು ಯಾರ ಗುರುತಿಗೂ ಸಿಗದ ಸೇವೆಯೂ ಹೌದು. ಶಿಬಿರದ ಕೊನೆಯ ದಿನದ ಉದ್ದುದ್ದ ಉಪಚಾರಕ್ಕಿಳಿದೆನೆಂದು ಭಾವಿಸಬೇಡಿ………

ವೆನ್ ವಿ ಡೆಡ್ ಅವೇಕನ್

ಮರೆತೇನೆಂದರೂ ಮರೆಯಲಾಗದ, ನಾಲ್ಕನೇ ರಾತ್ರಿಯೆಲ್ಲ ತಲೆ ಹೊತ್ತ ಭಾರ – ವೆನ್ ವಿ ಡೆಡ್ ಅವೇಕನ್, ಸಣ್ಣದಾಗಿಯಾದರೂ ಇಳಿಸಲೇ ಬೇಕು! ನಮ್ಮಷ್ಟೇ ಕುತೂಹಲದಲ್ಲಿ ಇಡಿಯ ನಾಟಕ ತಂಡವೂ ಐದನೇ ದಿನದ ಮೊದಲ ಕಲಾಪ – ನಾಟಕದ ಕುರಿತ ಪ್ರೇಕ್ಷಕ ಅಭಿಪ್ರಾಯಗಳನ್ನು ಕೇಳಲು ಕಾದಿತ್ತು. ಶಿಲ್ಪಿಯೊಬ್ಬ ಜೀವನಪ್ರೀತಿಯನ್ನು ಮೀರಿದ ಕಲಾಮೋಹದಲ್ಲಿ ಬಿದ್ದು, ಯಾಂತ್ರಿಕ ನಿಸ್ಸಾರತೆಯಲ್ಲಿರುವಲ್ಲಿಂದ ತೊಡಗಿತ್ತು ರಂಗಕ್ರಿಯೆ. ಆ ಸತ್ತಂತ ಬದುಕಿಗೆ, ಬಹಳ ಹಿಂದೆ ಬಿಟ್ಟಿದ್ದ ಅಪೂರ್ಣ ಪ್ರೀತಿ ಹಾಗೂ ಶಿಲ್ಪವೇ ಕಾರಣವೆಂಬ ಜಾಗೃತಿ ದುರಂತದ ಸಹಯೋಗದಲ್ಲಿ ಬರುವುದೇ ನಾಟಕದ ವಸ್ತು. ನಾನು ಇಬ್ಸೆನ್ನನ ಮೂರು ನಾಟಕಗಳನ್ನು (ಘೋಸ್ಟ್ಸ್, ಮಾಸ್ಟರ್ ಬಿಲ್ಡರ್ ಮತ್ತು ಎನಿಮಿ ಆಫ್ ದ ಪೀಪಲ್) ವಿದ್ಯಾರ್ಥಿ ದೆಸೆಯಲ್ಲಿ (ಇಂಗ್ಲಿಷನ್ನು ಸ್ನಾತಕ, ಸ್ನಾತಕೋತ್ತರದಲ್ಲಿ ಐಚ್ಛಿಕವಾಗಿ ಆರಿಸಿಕೊಂಡ ತಪ್ಪಿಗೆ?) ಪುಟ ಮಗುಚಿದ್ದೆನೆಂದಷ್ಟೇ ಹೇಳಬಲ್ಲೆ. ಚರ್ಚೆಯ ಕೊನೆಯಲ್ಲೂ ಈ ಪ್ರಯೋಗ ತನ್ನ ಪ್ರದರ್ಶನದಲ್ಲಿ ಬೆರಗು ಹುಟ್ಟಿಸಿದಷ್ಟು ನನ್ನ ಸ್ಮರಣೆಯಲ್ಲಿ ಸ್ಥಾನ ಗಿಟ್ಟಿಸಲಿಲ್ಲ ಎಂದೇ ಹೇಳಬೇಕು.

ರುಸ್ತುಂ ಭರೂಚಾ

“ಸುಮಾರು ಎರಡೂವರೆ ದಶಕಗಳ ಹಿಂದೆ, ನೀನಾಸಂಗೆ ಫೋರ್ಡ್ ಫೌಂಡೇಶನ್ ಅನುದಾನ ಕೊಡುವ ಮೊದಲು, ಮೌಲ್ಯಮಾಪನಕ್ಕೆಂದು ಮೊದಲ ಬಾರಿಗೆ ಹೆಗ್ಗೋಡಿಗೆ ಬಂದಿದ್ದರು ಈ ಕೊಲ್ಕೊತ್ತಾ ಪ್ರೊಫೆಸರ್ – ರುಸ್ತುಂ ಭರೂಚಾ. ಮತ್ತವರು ನೀನಾಸಂನ ಭಾಗವೇ ಆಗಿರುವುದು ಇತಿಹಾಸ” ಎಂದೇ ಒಮ್ಮೆ ಅಕ್ಷರ ಉದ್ಗರಿಸಿದ್ದರು. ಆ ಮಾತನ್ನು ಪ್ರಮಾಣಿಸುವಂತೆ ಶಿಬಿರದ ಉದ್ದಕ್ಕೂ ಚರ್ಚೆ, ಪ್ರಾತ್ಯಕ್ಷಿಗೆ ಮತ್ತು ಪ್ರಯೋಗಗಳಲ್ಲಿ ರುಸ್ತುಂ ತಲ್ಲೀನರಾಗಿ ಭಾಗಿಯಾಗಿದ್ದರು. ಅವರೇ ಹೇಳಿಕೊಂಡಂತೆ, “ನೇರ ಕನ್ನಡ ಬರದಿದ್ದರೂ ಇಷ್ಟು ವರ್ಷಗಳ ಹೆಗ್ಗೋಡಿನ ಒಡನಾಟದಿಂದ ಮತ್ತು ಸನ್ನಿವೇಶದ ಬಲದಿಂದ, ಭಾವಭಾಷೆಯಲ್ಲಿ ಬೇಕಾದ್ದನ್ನೆಲ್ಲ ಸರಿಯಾಗಿಯೇ ಗ್ರಹಿಸಿಕೊಳ್ಳಬಲ್ಲ”ವರಾಗಿದ್ದಾರೆ. ಚರ್ಚೆಗಳಲ್ಲಿ ಕುರಿತು ಕೇಳಿದಾಗ, ಆಗೊಮ್ಮೆ ಈಗೊಮ್ಮೆ ಕೊಟ್ಟ ಒಂದೆರಡೇ ಮಾತುಗಳು ಅವರ ಹಿರಿತನಕ್ಕೆ ಒಪ್ಪುವಂತೇ ಇತ್ತು. ರಂಗಕಲೆಗಳ ವಿದ್ವಾಂಸ, ನಿರ್ದೇಶಕ, ವಿಮರ್ಶಕರಾಗಿ ಇವರ ನಾಲ್ಕೈದು ದಶಕಗಳ ಸಾಧನೆ ದೇಶವಿದೇಶಗಳ ವಿದ್ವತ್ ವಲಯಗಳಲ್ಲೂ ಹಲವು ಲೇಖನಗಳಲ್ಲೂ ಕೆಲವು ಪುಸ್ತಕಗಳಲ್ಲೂ ಪ್ರಸಿದ್ದವೇ ಇವೆ.

ನನಗೆ ವೈಯಕ್ತಿಕವಾಗಿ ಇವರು, ಕುಶಿ ಹರಿದಾಸ ಭಟ್ಟರ ಒಡನಾಟದಲ್ಲಿ ಕೆಲವು ಬಾರಿ ನನ್ನಂಗಡಿಗೆ ಬಂದ, ಪುಸ್ತಕಗಳನ್ನು ಕೊಂಡ ನೆನಪು ಸ್ಪಷ್ಟವಿದೆ. ಅದಕ್ಕೂ ಮಿಗಿಲಾಗಿ ನೀನಾಸಂನ ಒಂದು ಮರುತಿರುಗಾಟದಲ್ಲಿ ಇವರು ನಿರ್ದೇಶಿಸಿದ ‘ಶಾಕುಂತಲ’ವನ್ನು (ಕನ್ನಡ) ನೋಡಿ ಬೆರಗಾದ ಅಸಂಖ್ಯಾತರಲ್ಲಿ ನಾನೂ ಒಬ್ಬ. (ನೋಡಿ: ಸಂಚಿ ಭರೂಚಾ ಸಂದರ್ಶನ) ನಮ್ಮ ಬಹುತೇಕ ನಾಟಕ, ಸಿನಿಮಾದಿಗಳು ಪ್ರಾದೇಶಿಕವಾಗಿ ನಮಗೆ ಒಗ್ಗಿದ ದೈಹಿಕ ಚಹರೆಗಳಲ್ಲೇ (ಸುಂದರ) ಪಾತ್ರಗಳನ್ನು ಆರೋಪಿಸಿ ನಮಗುಣಿಸುತ್ತವೆ. (ಬಹುಶಃ ಅದಕ್ಕೇ ನಮ್ಮ ಬಹುತೇಕ ‘ಜನಪ್ರಿಯ ಸಿನಿಮಾ’ಗಳು ಹಳ್ಳ ಹಿಡಿಯುತ್ತವೆ!) ಅದಕ್ಕೆ ವ್ಯತಿರಿಕ್ತವಾಗಿ ರುಸ್ತುಂ, ಶುದ್ಧ ಆಫ್ರಿಕನ್ ಚಹರೆಯ (ಅಪ್ಪಟ ಕನ್ನಡಿಗರೇ ಆದ) ಸಿದ್ಧಿ ಸಮುದಾಯದ ನಟಿಯನ್ನೇ ಶಕುಂತಲೆಯಾಗಿ ರೂಪಿಸಿ (ಗಿರಿಜಾ ಸಿದ್ಧಿಯವರ ಸಾಧನೆಯನ್ನು ಸಣ್ಣ ಮಾಡದೇ) ಯಶಸ್ಸು ಕಂಡದ್ದು ಮರೆಯಲಾಗದ ಅನುಭವ.

ನಾಲ್ಕನೇ ದಿನದ ಎರಡನೇ ಕಲಾಪ ರುಸ್ತುಂ ಭರೂಚರದ್ದು. ಶಿಬಿರದ ಮೊದಲ ದಿನ ಸುಂದರ್ ಸಾರುಕ್ಕೈ ಹರಿಬಿಟ್ಟ ಕಲಾನುಭವಕ್ಕೆ ಇಲ್ಲಿ ರುಸ್ತುಂ ಚಿಂತನಧಾರೆ ಸೇರಿಕೊಂಡಿತು. ಅವರ ಇಂಗ್ಲೀಷ್ ಮಾತುಗಳು ನಮ್ಮೆಲ್ಲರ ಗ್ರಹಿಕೆಗೆ ಸುಲಭವಾಗುವಂತೆ ಮಾಧವ ಚಿಪ್ಳಿ ಚುರುಕಾದ ಸಂಗ್ರಹಾನುವಾದವನ್ನು ಕೊಟ್ಟು ಸಹಕರಿಸಿದರು.

ಟಿ.ಪಿ. ಅಶೋಕ

ತೀರಾ ಈಚಿನವರೆಗೂ ನನಗೆ ಸ್ಪಷ್ಟವಾಗಿ ಹೆಗ್ಗೋಡಿನೊಡನಿದ್ದ ಸಂಬಂಧ – ಪುಸ್ತಕ ವಹಿವಾಟು ಮತ್ತು ಮಂಗಳೂರಿಗೆ ಬರುತ್ತಿದ್ದ ನೀನಾಸಂ ನಾಟಕಗಳದ್ದು ಮಾತ್ರ. ಮತ್ತೇನಿದ್ದರೂ ಅವರಿವರ ಮಾತುಗಳು, ದುರ್ಬಲ ಪತ್ರಿಕಾ ವರದಿಗಳು. ಇವುಗಳಲ್ಲೆಲ್ಲ ನನಗೆ ಸುಬ್ಬಣ್ಣನವರ ತರುಣ ಪ್ರತಿನಿಧಿಯಂತೆ, ನೀನಾಸಂನ ಹೊರ ಊರುಗಳ ಸಾಹಿತ್ಯಕ ಕಲಾಪಗಳಲ್ಲೆಲ್ಲ ಅದರ ರಾಯಭಾರಿಯಂತೇ ಕಾಣುತ್ತಿದ್ದವರು ಟಿಪಿ ಅಶೋಕ (ಇಂಗ್ಲಿಷ್ ಅಧ್ಯಾಪಕರು, ಸಾಹಿತ್ಯ ವಿಮರ್ಶಕರು). ನನ್ನ ಹೆಗ್ಗೋಡು ಸಂಬಂಧ ಹೆಚ್ಚಾದ ಈಚಿನ ದಿನಗಳಲ್ಲೂ ಟಿಪಿ ಅಶೋಕರ ದರ್ಶನ ಎಂದೂ ತಪ್ಪಿದ್ದಿಲ್ಲ. ಹಾಗಾಗಿ ರುಸ್ತುಂ ಭರೂಚಾರ ಮಾತಿನೊಡನೆ ಹೊಸ ತಲೆಮಾರಿನ ಮಾಧವ ಚಿಪ್ಳಿ, ಟಿ.ಎಂ ಕೃಷ್ಣ ಸೇರಿದಂತೆ ಕಲಾವಿದರನ್ನು ಪರಿಚಯಿಸುವಲ್ಲಿ ದೀಪಾ ಗಣೇಶ್ ಮುಂತಾದವರು ಸಮರ್ಥವಾಗಿಯೇ ಇದ್ದರೂ ಹಳೆ ತಲೆಮಾರಿನ ಟಿಪಿ ಅಶೋಕರ ನೆನಪಾಯ್ತು. ಶಿಬಿರದುದ್ದಕ್ಕೂ ಅಶೋಕರ ದರ್ಶನವೇ ಆಗಲಿಲ್ಲ, ವಿಚಾರಿಸಲೂ ನನಗಾಗದೇಹೋಯ್ತು!

ಕಬೀರ್ ಭಕ್ತಿ ಸಂಗೀತ

ಕೊನೆಯ ದಿನದ ಅಪರಾಹ್ನದ ಮೊದಲ ಕಲಾಪ – ಶಬನಮ್ ವೀರ್ಮಾನಿಯವರಿಂದ ಕಬೀರನ ಭಕ್ತಿ ಸಂಗೀತ. ಶಬನಮ್ ಪಂಜಾಬಿನಲ್ಲಿ ಹುಟ್ಟಿ, ದಿಲ್ಲಿಯಲ್ಲಿ ಶಿಕ್ಷಿತಳಾಗಿ, ೧೯೮೦ರ ದಶಕದಲ್ಲಿ ಪತ್ರಕರ್ತೆಯಾಗಿ ವೃತ್ತಿ ರಂಗಕ್ಕಿಳಿದರು. ಆಗ ಇವರ ಕ್ರಿಯಾಶೀಲತೆಗೆ ರಾಜಸ್ತಾನದ ರೂಪ್ ಕನ್ವರ್ ಪ್ರಸಂಗ ಸಿಕ್ಕಿ, ಜೀವವಿರೋಧೀ ‘ಸತಿಪದ್ಧತಿ’ಯ ಸಂಪ್ರದಾಯಕ್ಕೆ ತಡೆ ತಂದರು. ಆದರೆ ಮುಂದುವರಿದ ಕಾಲದಲ್ಲಿ, ಶಬನಮ್ ಅಹ್ಮದಾಬಾದಿನಲ್ಲಿದ್ದಾಗ (೨೦೦೨), ಗೋಧ್ರ ನರಮೇಧಕ್ಕೆ ಸಾಕ್ಷಿಯಾದರು. ಆ ಮಹಾಹೊಯ್ಲಿನಲ್ಲಿ ಈಕೆ ಸಿಡಿಯುವ ದಾರಿ ಬಿಟ್ಟು, ಸಮಾಧಾನದ ದಾರಿಯನ್ನು – ಕಬೀರ್ ಭಕ್ತಿ ಸಂಗೀತದಲ್ಲಿ ಕಂಡುಕೊಂಡರು. ೨೦೦೩ರಿಂದ ತೊಡಗಿದಂತೆ ಇವರ ತಿರುಗಾಟ, ಸಾಕ್ಷ್ಯ ಚಿತ್ರಗಳು, ಅಹ್ಮದಾಬಾದ್ ಮತ್ತೆ ಬೆಂಗಳೂರಿನಲ್ಲಿ ಪ್ರೇರಿಸಿ ಮತ್ತು ಸಹಯೋಗ ಕೊಟ್ಟು ಬೆಳೆಯಿಸಿದ ಶಿಕ್ಷಣ ಸಂಸ್ಥೆಗಳೆಲ್ಲ ಜೀವಪ್ರೀತಿ, ಮನುಷ್ಯ ಧರ್ಮದ ಪ್ರತಿಪಾದನೆಯನ್ನೇ ಅನ್ವೇಷಿಸಿವೆ, ಪ್ರಚುರಿಸಿವೆ. ಲಕ್ಷ್ಯ ಸಾಧನೆಗಾಗಿ ಇವರು ಸಾಧಿಸಿದ ಸಿನಿ-ಮಾರ್ಗ ತಂದ ಪ್ರಶಸ್ತಿಗಳು ಅದೇ ಭಕ್ತಿ ಮಾರ್ಗದಲ್ಲಿ ಹೆಚ್ಚಿನ ಸಾಧನೆಗೆ ಸರಕಾಗಿವೆ. ಹಾಗೇ ಶಬನಮ್ ಪಳಗಿಸಿದ ಸಂಗೀತ ಮಾರ್ಗ ಆರೋಗ್ಯಪೂರ್ಣ ಸಮಾಜ ಕಟ್ಟುವಲ್ಲಿ ಅಸಂಖ್ಯ ಅನುಯಾಯಿಗಳನ್ನೂ ದೇಶವಿದೇಶಗಳಲ್ಲೂ ಪಸರಿಸಿದೆ. ಆತ್ಮಪ್ರತ್ಯಯವಿಲ್ಲದಂತೆ ಶಬನಮ್ ನಡೆಸಿಕೊಟ್ಟ ಮಾತು (ಇಂಗ್ಲಿಷ್/ ಹಿಂದಿ), ಗೀತಗಳ ಶುದ್ಧಧಾರೆಯಲ್ಲಿ ನಾವೆಲ್ಲ ಮುಳುಗೆದ್ದೆವು. ಆಕೆಯ ದೊಡ್ಡ ಕೆಲಸದತ್ತ ನನ್ನದೊಂದು ಸಣ್ಣ ಕೈಮರ ನಿಲ್ಲಿಸುವಾಗ ಬುಡ ಒತ್ತಿಕೊಳ್ಳಲು ಕಿರು ವಿಡಿಯೋ ತುಣುಕುಗಳನ್ನಷ್ಟೇ ನಾನು ಮಾಡಿದ್ದೇನೆ. ಅಂತಜಾಲದಲ್ಲಿ ಧಾರಾಳ ಲಭ್ಯವಿರುವ ಆಕೆಯ ಸಿನಿಮಾ, ಪುಸ್ತಕಾದಿಗಳನ್ನು ಅನುಸರಿಸಲು, ಅವಕಾಶ ಸಿಕ್ಕಲ್ಲಿ ಮುಖತಃ ಕಂಡು ತಿಳಿವಿನ ದೀಪ ವಿಸ್ತರಿಸಲು ಇಷ್ಟು ಸಾಕು ಎಂದು ಭಾವಿಸುತ್ತೇನೆ.

ಸಂಸ್ಕೃತಿ ಶಿಬಿರ ೨೦೧೯ಕ್ಕೆ ಮಂಗಳಂ

ಐದು ದಿನಗಳ ಸಂಸ್ಕೃತಿ ಶಿಬಿರದ ಕೊನೆಯ ಸಭಾ ಕಲಾಪ ಬಂದಿತ್ತು. ಪಿಕೆ ನಾಯರ್, ಸುಬ್ಬಣ್ಣ, ಅನಂತಮೂರ್ತಿ, ಕೀರ್ತಿನಾಥ ಕುರ್ತುಕೋಟಿ, ಟಿಪಿ ಅಶೋಕಾದಿಗಳ ನಿರ್ದೇಶನದಲ್ಲಿ, ತುಸು ಭಿನ್ನ ರೂಪ ಮತ್ತು ಹೆಸರುಗಳಲ್ಲಿ ೨೨ ವರ್ಷಗಳುದ್ದಕ್ಕೆ ಸಾಗಿಬಂದಿದೆ ಈ ಶಿಬಿರ ಸರಣಿ. ಈ ಗಂಭೀರ ಸಾಂಸ್ಕೃತಿಕ ಕಸರತ್ತಿನ ೨೩ನೇ ಕಂತನ್ನು, ಪರಂಪರೆಗೆ ಕುಂದುಂಟಾಗದಂತೆ ನಡೆಸಿಕೊಟ್ಟ ಜಶವಂತ ಜಾಧವ್, ನಿರ್ದೇಶಕನ ಕೊನೆಯ ಕೆಲವೇ ಮಾತುಗಳನ್ನೂ ಅಷ್ಟೇ ಸಹಜ ಮತ್ತು ಚೊಕ್ಕವಾಗಿ ನಿರ್ವಹಿಸಿದರು.

ಎಲ್ಲೆಡೆ ನಡೆಯುವಂತೆ ಶಿಬಿರಾರ್ಥಿಗಳ ಅಭಿಪ್ರಾಯ ಕೇಳಿಕೆ ಎಂಬ ಪ್ರಶಂಸಾ ‘ನಾಟಕ’ಕ್ಕೆ ಅವಕಾಶ ನಿರಾಕರಿಸಿದರು. ಆದರೆ ಭಾಗಿಗಳ ವಸ್ತುನಿಷ್ಠ ಅಭಿಪ್ರಾಯ ಮತ್ತು ಸೂಚನೆಗಳನ್ನು ಲಿಖಿತ ರೂಪದಲ್ಲಿ ಕಳಿಸಲು ಸ್ಪಷ್ಟ ಮನವಿ ಮಾಡಿದರು. ಹಾಗೂ ಆ ಬರಹಗಳಿಗೆ ಕಾಳಜಿಪೂರ್ಣ ಓದುಕೊಟ್ಟು, ಸಂಸ್ಥೆಯ ಇತಿಮಿತಿಗೊಪ್ಪಿದರೆ, ಮುಂದಿನ ಶಿಬಿರ ಕಾಲದಲ್ಲಿ ಅನುಷ್ಠಾನಿಸುವ ಭರವಸೆಯನ್ನೂ ಕೊಟ್ಟರು. ಉದ್ಘಾಟಕ ಮಹಾಪೃಷ್ಟನಿಂದ ತೊಡಗಿ ಕಸ ಉಡುಗಿದ ಕನಿಷ್ಠನವರೆಗೆ ಕೃತಜ್ಞತಾ ಪಟ್ಟಿಯನ್ನು ಬಿಚ್ಚದೆ ಒಂದೇ ಶಬ್ದದ ಧನ್ಯವಾದವನ್ನಷ್ಟೇ ಹೇಳಿದರು. ವೈಚಾರಿಕ ದೀಪದ ಕೊನೆಯ ಬೆಳಕೂ ಪ್ರಖರವಾಗಿರುವಂತೆ ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರಿಗೆ ‘ಕೊನೆಯ ಮಾತು’ ಆಡಲು ವೇದಿಕೆ ಬಿಟ್ಟುಕೊಟ್ಟರು. ತೋಳ್ಪಾಡಿಯವರು ಐದೂ ದಿನಗಳುದ್ದಕ್ಕೆ ತೆರೆದ ಮನಸ್ಸಿನಲ್ಲಿ ಎಲ್ಲವನ್ನೂ ಗ್ರಹಿಸಿ, ಸಮೀಪಿಸಿದ ಎಲ್ಲರಲ್ಲೂ ಮುಕ್ತವಾಗಿ ಸಲ್ಲಪಿಸುತ್ತ ಬಂದಿದ್ದರು. ನಿಜಕ್ಕೂ ಭಾವಸ್ಪರ್ಷಿಯಾದ ಸನ್ನಿವೇಶವೊಂದು, ಭಾವುಕತೆಯ ಅಲೆಯಲ್ಲಿ ತೇಲಿಹೋಗದಂತೆ, ಇವರು ಮೊದಲಿಗೆ ಹಾಸ್ಯದ ಲೇಪ ಕೊಟ್ಟರು. ಮುಂದೆ ಶಿಬಿರ ನಡೆದು ಬಂದ ದಾರಿಗೆ ಪೂರಕವಾಗಿ ವೈಚಾರಿಕ ಹೊಳಪು ಕೊಟ್ಟು ಮುಗಿಸಿದರು.

ದಕ್ಷ ಯಕ್ಷಗಾನ

ನಾಲ್ಕೂ ದಿನಾಂತ್ಯದ ಕಲಾಪವಾಗಿ ನಡೆದು ಬಂದ ರಂಗ ಪ್ರಯೋಗವನ್ನು ಇಂದು ಯಕ್ಷಗಾನ ತೆಂಕು ತಿಟ್ಟಿನ ವೃತ್ತಿಪರ ಆಯ್ದ ಕಲಾವಿದರ ಕೂಟ ನಡೆಸಿತು. ಯಕ್ಷಗಾನದ ಕಥಾಮುಖದಲ್ಲಿ, ಶಿವ ಹಮ್ಮಿಕೊಂಡಿದ್ದ ವೈಚಾರಿಕ ಕೂಟವೊಂದು ದಕ್ಷನ ಅಹಂಕಾರವನ್ನು ಪ್ರಚೋದಿಸಿ, ಹೆಚ್ಚಿನ ತಿಳಿವಿಗೆ ತೆರೆದುಕೊಂಡ ಕಥಾನಕ – ದಕ್ಷಯಜ್ಞ, ಸಂಸ್ಕೃತಿ ಶಿಬಿರದ ಆಶಯಕ್ಕೆ ಹೊಂದುವಂತೇ ಇತ್ತು. ಸುಮಾರು ಮೂರು ಗಂಟೆಯ ಅವಧಿಯಲ್ಲಿ ಯಕ್ಷಗಾನ ನಮ್ಮನ್ನು ರಂಜಿಸಿತು.

ಸ್ವಗತ

ನಾನು ಮೊದಲೇ ತಪ್ಪೊಪ್ಪಿಕೊಂಡದ್ದನ್ನು ನೆನಪಿಸುತ್ತೇನೆ – ನಾನು ವಿದ್ಯಾರ್ಥಿ ದೆಸೆಯಲ್ಲೇ ಕೇಳಿದ್ದನ್ನು ಟಿಪ್ಪಣಿಗಿಳಿಸಿ, ಮುಂದೆ ಔಚಿತ್ಯಪೂರ್ಣ ಮಾತು ತೊಡಿಸುವ ಶಿಸ್ತಿನವನಲ್ಲ. ಮತ್ತೆ, ಶಿಬಿರದ ಎಲ್ಲ ಕಲಾಪಗಳು ನನಗೆ ಅರ್ಥವಾಗಿದೆ ಎಂಬ ಠಕ್ಕೂ ಮಾಡಲಾರೆ. ಆದರೆ ದಕ್ಕಿದ್ದಷ್ಟನ್ನು ಮೊದಲು ಭಾವಕೋಶಕ್ಕೆ ತುಂಬಿಕೊಂಡು, ಯಥಾನುಶಕ್ತಿ (ಅಂದರೆ ಕೊರತೆ ಸಹಿತ) ಇಲ್ಲಿ ಹರಿಸುವ ಪ್ರಯತ್ನ ಮಾಡಿದ್ದೇನೆ. ನೀನಾಸಂ ಶಿಸ್ತಿನಲ್ಲೇ ಹೇಳುವುದಿದ್ದರೆ – ದಯವಿಟ್ಟು ತಪ್ಪುಗಳನ್ನು ತೋರಿಕೊಡಿ. ಮತ್ತು ಮುಖ್ಯವಾಗಿ ಹೊಗಳಿಕೆಯನ್ನು ಹೇರಬೇಡಿ.

ರಾತ್ರಿಯ ಊಟದೊಡನೆ ನಾವಿಬ್ಬರೂ ಹೆಗ್ಗೋಡಿಗೆ ವಿದಾಯ ಹೇಳಿದೆವು. ಐದು ದಿನಗಳ ಅದ್ಭುತಕ್ಕೆ ಮೂಲ ಕಿಡಿ ಹಚ್ಚಿದವರು ಕೆವಿ ಸುಬ್ಬಣ್ಣನಾದರೆ, ಅಷ್ಟೇ ದೃಢ ದೀಪಧಾರಿಯಾಗಿ ಕಾಣಿಸುವವರು ಕೆವಿ ಅಕ್ಷರ. ಮತ್ತೆ ನನ್ನ ಚಿತ್ತಭಿತ್ತಿಗೆ ಹೊಸದಾಗಿ ಹತ್ತಿಕೊಂಡ ಗಟ್ಟಿ ಚಿತ್ತಾರಗಳಲ್ಲಿ ವ್ಯಕ್ತಿಗಳಾಗಿ ಸುಂದರ್ ಸಾರುಕ್ಕೈ, ರಾಜೀವ್ ನಾಯಕ್, ಮಿನಾಕ್ಷೀ ಬಾಳಿ, ಟಿ.ಎಂ ಕೃಷ್ಣ, ಶಬನಮ್ ವೀರ್ಮಾನಿ, ರುಸ್ತುಂ ಭರೂಚಾ ಮೊದಲಾದವರಿದ್ದರೆ, ಗಟ್ಟಿ ಸಂಗತಿಗಳಾಗಿ ಅಟ್ಟಕಳರಿ, ಪಾರಿಜಾತ ಭಜನೆ, ಊರವರೇ ಉದ್ಧರಿಸಿದ ಕೆರೆ ಮೊದಲಾದವೂ ಇರುತ್ತವೆ. ಇವುಗಳ ಮೆಲುಕಾಟದಲ್ಲಿ ಸುಖ ಕಾಣುತ್ತ, ಸಾಗರವಾಸದಲ್ಲಿ ರಾತ್ರಿ ಕಳೆದು, ಬೆಳಗ್ಗೆ ಹೊಸದೇ ಅನುಭವದತ್ತ ಬೈಕೋಡಿಸಿದೆವು.

ಹೊಸದೇ ಕನಸಿಗೆ ಬುನಾದಿ

ನಮ್ಮ ದೋಣಿಸವಾರಿಗಳ ಬೆಳಕಿನಲ್ಲಿ ಗೂಗಲ್ ನಕ್ಷೆ ತೆರೆದು ನೋಡಿದಾಗೆಲ್ಲ ನನ್ನನ್ನು ಕಾಡುತ್ತಿದ್ದ ಚಿತ್ರ ಶರಾವತಿ ಸಾಗರದ್ದು (ಲಿಂಗನಮಕ್ಕಿ ಅಣೆಕಟ್ಟಿನಿಂದಾಗಿ ನಿಂತ ನೀರ ಹರಹು). ತುಮರಿ ಹಸಿರುಮಕ್ಕಿಗಳ ಕಡವುಗಳಲ್ಲಿ ಇದನ್ನು ಅಡ್ಡ ಹಾಯ್ದಾಗ, ಗೆಳೆಯ ಡಿ.ಎಸ್. ಶ್ರೀಧರರ ‘ಮುಳುಗಡೆ’ಯ ಕಥನಗಳನ್ನು ಓದಿದಾಗೆಲ್ಲ, ಆ ಮರಿಸಾಗರದಲ್ಲಿ ನಮ್ಮ ದೋಣಿ ಚಲಾಯಿಸುವ, ಅಲ್ಲಿನ ಕುದ್ರುಗಳಲ್ಲಿ (ದ್ವೀಪ) ತಂಗುವ ಕನಸು ಕಂಡಿದ್ದೆ. ಹಾಗಾಗಿ ನೀನಾಸಂ ಸಂಸ್ಕೃತಿ ಶಿಬಿರಕ್ಕೆ ಬೈಕೇರಿ ಹೊರಟಾಗಲೇ ಕೊನೆಯಲ್ಲಿ ಶರಾವತಿ ಸಾಗರದ ತನಿಖೆಯ ಅಂದಾಜು ಮನದಲ್ಲೇ ಇಟ್ಟುಕೊಂಡಿದ್ದೆವು. ಆ ಪ್ರಕಾರವೇ ಹೊಸ ದಿನದ ಬೆಳಕು ಹರಿಯುತ್ತಿದ್ದಂತೆ, ಸಾಗರಕ್ಕೆ ವಿದಾಯ ಹೇಳಿ, ಜೋಗದ ದಾರಿ ಹಿಡಿದಿದ್ದೆವು.

ಲಿಂಗನಮಕ್ಕಿ ಅಣೆಕಟ್ಟಿನ ಸಮೀಪದಲ್ಲೇ ಹೊನ್ನೆಮರಡು ಎಂಬೊಂದು ಕುಗ್ರಾಮ ನಮ್ಮ ಲಕ್ಷ್ಯ. ಅಲ್ಲಿ ನನ್ನ ಪ್ರಾಚೀನ ಪರಿಚಯದ ಎಸ್.ಎಲ್.ಎನ್ ಸ್ವಾಮಿ ಎನ್ನುವವರು ತಮ್ಮದೇ ಜಲಕ್ರೀಡಾ ಸಂಸ್ಥೆಯೊಂದನ್ನು ನಡೆಸುತ್ತಿರುವ ಮಾಹಿತಿಯಷ್ಟೇ ನನ್ನಲ್ಲಿತ್ತು. ವಿಸ್ತಾರ ಹಸಿರು ಗದ್ದೆಗಳ ಬಯಲಿನಲ್ಲಿ ಅಡಿಕೋಲಿಟ್ಟು ಗೆರೆ ಎಳೆದಂತೇ ಇದ್ದ ರಸ್ತೆಯಲ್ಲಿ, ಬೆಳಗ್ಗಿನ ನಸು ಚಳಿಯಲ್ಲಿ ನಾವು ಬೈಕೋಡಿಸಿದ್ದಲ್ಲ, ವಿಹರಿಸಿದ್ದು ಎಂದರೆ ಹೆಚ್ಚು ಸರಿ. ತಾಳಗುಪ್ಪದ ಗೂಡು ಹೋಟೆಲೊಂದರಲ್ಲಿ ತಿಂಡಿ ವಿರಾಮ. ಮುಂದೆ ಅವರಿವರಲ್ಲಿ ವಿಚಾರಿಸಿ, ಎಡದ ಕಾರ್ಗಲ್ ದಾರಿಗೆ ಕವಲಾಗಿ ಮತ್ತೆ ಸ್ವಲ್ಪ ಅಂತರದಲ್ಲಿ ಇನ್ನೊಂದೇ ಎಡ ತಿರುವು ಆಯ್ದುಕೊಂಡೆವು. ಅಲ್ಲಿನ ಕೈ ಮರದ ದೊಡ್ಡ ಹೆಸರುಗಳೆಡೆಯಲ್ಲಿ ಸೇರಿಕೊಂಡ ಹೊನ್ನೆಮರಡು ಏಳೇ ಕಿಮೀ ದೂರದಲ್ಲಿದ್ದು ಕರೆದಿತ್ತು.

ಹೊನ್ನೆಮರಡು ದಾರಿಯ ಮೊದಲ ಸುಮಾರು ಒಂದು ಕಿಮೀನಷ್ಟು ಕಾಂಕ್ರೀಟ್, ಜಲ್ಲಿಹಾಸುಗಳ ಪ್ರಯೋಗ ನಡೆದಿತ್ತು. ಮತ್ತೆ ಪೂರ್ತಿ ಮಣ್ಣಿನ ರಸ್ತೆ. ನಿತ್ಯ ಮಳೆಯ ಪ್ರಭಾವದಲ್ಲಿ ಅಲ್ಲಲ್ಲಿ ಕೆಸರೆದ್ದುಕೊಂಡೂ ಇತ್ತು. ಆದರೆ ವಿಪರೀತ ಏರಿಳಿತವಿರಲಿಲ್ಲ. ಹಾಗೇ ಹೆಚ್ಚು ವಾಹನ ಸಂಚಾರವೂ ಇಲ್ಲದ ದಾರಿಯಾದ್ದಕ್ಕೆ ನಮಗೇನೂ ಕಷ್ಟವಾಗಲಿಲ್ಲ. ಕೃಷಿ ಭೂಮಿ, ಕುರುಚಲು ಕಾಡು ಹಾಯ್ದು ಸಾಗಿದ್ದಂತೆ, ಅದೊಂದು ಮನೆಯ ಮಗ್ಗುಲಲ್ಲೆ ಎಂಬಂತೆ ತುಂಬಿನಿಂತ ಶರಾವತಿ ಸಾಗರದ ಮೊದಲ ನೋಟವೂ ಸಿಕ್ಕಿತು. ದಾರಿ ಇನ್ನೇನು ಮುಗಿಯಿತು ಎನ್ನುವಲ್ಲೊಂದು ಹರಕು ಚಪ್ಪರ, ಎರಡು ಅನಾಥ ಸ್ಕೂಟರ್, ಕೆಲವು ಕಟ್ಟಡಗಳು, ಕವುಚಿ ಬಿದ್ದುಕೊಂಡಿದ್ದ ಹರಿಗೋಲುಗಳೆಲ್ಲ ಸಾಹಸ ಸಂಸ್ಥೆಯ ಚಿತ್ರವನ್ನೇನೋ ಕೊಟ್ಟವು. ಆದರೆ ಕಟ್ಟಡಗಳಿಗೆಲ್ಲ ಬೀಗವಿತ್ತು. ನಮ್ಮ ಅದೃಷ್ಟಕ್ಕೆ ದಾರಿಯ ಕೊನೆಯ ಕೃಷಿಕ್ಷೇತ್ರದಲ್ಲಿ ಸಿಕ್ಕ ತರುಣ ಕೃಷಿಕನೊಬ್ಬ, ಸ್ವಾಮಿಯ ಖಾಯಂ ನೆಲೆ ತಾಳಗುಪ್ಪವೆಂದು ತಿಳಿಸಿದ್ದಲ್ಲದೆ, ಅವರ ಚರವಾಣಿ ಸಂಖ್ಯೆಯನ್ನೂ ಕೊಟ್ಟರು.

ಸ್ವಾಮಿ, ನೊಮಿತಾ ದಂಪತಿ

ಮೈಸೂರಿನಲ್ಲಿ ನನಗೆ (೧೯೭೦-೭೪) ಪರ್ವತಾರೋಹಣದ ಮೂಲಪಾಠ ಮಾಡಿದವರು ವಿ.ಗೋವಿಂದರಾಜ್, ಅರ್ಥಾತ್ ದಖ್ಖಣ ಪರ್ವತಾರೋಹಣ ಸಂಸ್ಥೆ. ನಾನು ಮೈಸೂರು ಬಿಟ್ಟು ಬಂದ ಕಾಲಕ್ಕೆ ಗೋವಿಂದರಾಜ್ ಶಿಷ್ಯತ್ವದಲ್ಲಿ ಸಾಹಸ ಶಿಕ್ಷಣವನ್ನು ರೂಢಿಸಿಕೊಂಡವರು ಎಸ್.ಎಲ್.ಎನ್ ಸ್ವಾಮಿ. ಅಂದರೆ ನನಗರಿವಿಲ್ಲದೇ ಸ್ವಲ್ಪ ನನ್ನ ಬೂಟೊಳಗೇ ಕಾಲಿಟ್ಟಂತೆ ಬಂದವರು ಈ ಸ್ವಾಮಿ. ಅವರು ನನ್ನ ಬಗ್ಗೆ ರೂಪಿಸಿಕೊಂಡ ಚಿತ್ರ ವಾಸ್ತವಕ್ಕೂ ದೊಡ್ಡದೇ ಇತ್ತು! ನಾನು ಫೋನ್ ಮಾಡಿದ್ದೇ ಸಾಕು, ಸ್ವಾಮಿ ಅವರ ತಾಳಗುಪ್ಪದ ಕೆಲಸಗಳನ್ನು ಅರ್ಧಕ್ಕೇ ಬಿಟ್ಟು ಹೊನ್ನೆಮರಡುವಿಗೆ ಬರುವ ಆತುರ ತೋರಿದರು. ನಾವೇ ತಡೆದು, ತಾಳಗುಪ್ಪದಲ್ಲೇ ಭೇಟಿ ನಿರ್ಧರಿಸಿ, ಬಂದಂತೇ ಮರಳಿದೆವು. ಸ್ವಾಮಿ ಮತ್ತವರ ಸಾಹಸ ಚಟುವಟಿಕೆಗಳ ಸಕ್ರಿಯ ಪಾಲುದಾರಳೂ ಆದ ಹೆಂಡತಿ ನೊಮಿತಾ ಕಾಮ್ದಾರ್, ಅವರೊಡನೆ ಹೋಟೆಲ್ ಒಂದರಲ್ಲಿ ಐದು-ಹತ್ತು ಮಿನಿಟಿನ ಚಾಕಾಲ ಭೇಟಿಯಷ್ಟೇ ನಡೆಸಿದೆವು. ಅವರ ‘ಅಪರಿಮಿತ ಸಂತೋಷ’, ‘ದಿನಗಟ್ಟಳೆ ಮಾತು’ಗಳನ್ನೆಲ್ಲ ಮುಂದೆ ಬರಲಿರುವ ಒಂದು ಸಹಯೋಗದ ಸಾಹಸಯಾನಕ್ಕೆ ಮೀಸಲಿಡುವಂತೆ ಕೇಳಿಕೊಂಡು ಬೀಳ್ಕೊಂಡೆವು.

ಜೋಗಾದ ಗುಂಡಿ ಇನ್ನು ನಾಲ್ಕೈದು ಗಂಟೆಯ ಮಂಗಳೂರು (ಸುಮಾರು ೨೩೦ ಕಿಮೀ) ಯಾನಕ್ಕೂ ಮೊದಲು ೧೩ಕಿಮೀಯ ಜೋಗ ನೋಡಿಯೇ ಬಿಡುವುದೆಂದು ಬೈಕ್ ಹೊರಳಿಸಿದೆವು. ಶರಾವತಿ ಸೇತುವೆ ದಾಟಿ, ಮುಖ್ಯ ವೀಕ್ಷಣಾ ತಾಣಕ್ಕೇ ಹೋದೆವು. ನಾವಿತ್ತ ಬರದೆ ಕೆಲವು ದಶಕಗಳೇ ಕಳೆದಿರಬೇಕು. ಭರ್ಜರಿ ಅಭಿವೃದ್ಧಿ ಕಲಾಪಗಳು ನಡೆದಂತಿತ್ತು. ಸಹಜವಾಗಿ ಮೊದಲು ಬೈಕ್ ಮತ್ತು ತಲೆ ಲೆಕ್ಕದಲ್ಲಿ ನಲ್ವತ್ತು ರೂಪಾಯಿ ದಂಡ ಕೊಟ್ಟು ಒಳ ಹೋದೆವು. ವಾರದ ದಿನವಾದ್ದರಿಂದ ಲಿಂಗನಮಕ್ಕಿ ಅಣೆಕಟ್ಟೆಯ ಕವಾಟಗಳು ಮುಚ್ಚಿಕೊಂಡಿದ್ದಿರಬೇಕು. (ಅಥವಾ ತುಸುವೇ ತೆರೆದಿತ್ತು.) ಆದರೆ ಇನ್ನೂ ಬಿಡದ ಮಳೆಯ ಬಲದಲ್ಲಿ ಜಲಧಾರೆಗಳು ತುಸು ತೆಳು ಎನ್ನಿಸಿದರೂ ಆಕರ್ಷಕವಾಗಿಯೇ ತೋರಿದವು. ಭಾರೀ ವಾಹನ ಜನ ಸಂದಣಿಯೂ ಇರಲಿಲ್ಲ. ಹಾಗಾಗಿಯೋ ಏನೋ ಅಲ್ಲಿನ ವೀಕ್ಷಣಾ ತಾಣದ ಬೇಲಿಗಳನ್ನು ಮೀರಿದ ದೃಶ್ಯಸಾಮೀಪ್ಯಕ್ಕೆ ಗುಂಡಿಗಿಳಿಯುವ ಸುಂದರ ಸೋಪಾನಗಳು ಆಕರ್ಷಿಸಿದವು. ಬೈಕ್ ಬಿಟ್ಟಲ್ಲಿದ್ದ ಕಾವಲುಗಾರ ಅಪ್ರಸನ್ನವದನ. ಹಾಗಾಗಿ ಬೈಕಿನ ಡಬ್ಬಿಯಲ್ಲಿದ್ದ ಬಟ್ಟೆ ಗಂಟು, ಎರಡು ಶಿರಸ್ತ್ರಾಣಗಳನ್ನು ‘ಅದೃಷ್ಟ’ಕ್ಕೆ ಬಿಟ್ಟು, ಹೆಚ್ಚಿನ ಬೆನ್ನಚೀಲವನ್ನು ಮಾತ್ರ ಹೊತ್ತು, ಜೈ ಎಂದೆವು. ‘ಸಾಯೋದ್ರೊಳಗೆ ಇನ್ನೊಮ್ಮೆ ನೋಡು ಜೋಗಾಗುಂಡಿ’ ಎಂದು ನಮ್ಮದೇ ಗುನುಗಿಗೆ ಹೆಜ್ಜೆ ಹಾಕಿದೆವು.

ಹುಡುಗರು ಯುವಕರು ಹಾರ್ಹಾರಿಕೊಂಡು, ಬೊಬ್ಬೆ ಹೊಡ್ಕೊಂಡು ಆಗೀಗ ನಮ್ಮನ್ನು ಹಿಂದೆ ಹಾಕುತ್ತಲೇ ಇದ್ದರು. ನವಜೋಡಿ ಒಂದೆರಡರ ತೇಲು ನಡೆಯ ಏಕಾಂತತೆಗೆ ಭಂಗ ಬರದಂತೆ ನಾವೇ ನಿಧಾನಿಸಿ, ತಿರುವಿನ ತಟ್ಟುಗಳಲ್ಲಿ ಫಕ್ಕನೆ ಮುಂದೆ ಜಾರಿಕೊಂಡೆವು. (ನಮಗಿಂತ) ಪ್ರಾಯಸ್ಥರು, ಅಸ್ಥಿರ ನಡೆಯವರು ಪ್ರತಿ ಮೆಟ್ಟಲನ್ನೂ ಅಳೆಯುತ್ತ, ಉಸಿರಾಟದಲ್ಲೇ ಹೋಗೋದೇ ಬಿಡೋದೇ ಶ್ವಸಿಸುತ್ತಲಿದ್ದಾಗ ಕಿರು ನಗೆಯಲ್ಲಷ್ಟೇ ಉತ್ತೇಜಿಸುತ್ತ ಮುಂದುವರಿದೆವು. ಆದರೆ ಏರಿ ಬರುತ್ತಿದ್ದ ಹೆಚ್ಚಿನವರ ಚಿತ್ರ ಒಂದೇ. ಪಕ್ಕದ ಬೇಲಿ ಜಗ್ಗುತ್ತ, ಮೊಣಕಾಲು ಸೊಂಟಕ್ಕೆ ಕೈ ಕೊಡುತ್ತ, ಅಸಾಧ್ಯ ಬುಸುಗುಡುತ್ತ, ನಾಲ್ಕು ಹೆಜ್ಜೆಗೊಮ್ಮೆ ಕುಳಿತರೆ ನಿಲ್ಲಲು ಮರೆಯುತ್ತ, ಇಳಿಯಲು ಪ್ರೇರಿಸಿದವರನ್ನು ಶಪಿಸುತ್ತ, ನೆನಪಿದ್ದಷ್ಟೂ ದೇವರ್ಕಳ ನಾಮ ಜಪಿಸುತ್ತ, ನೀರ ಬಾಟಲಿ ಸಣ್ಣದಾದ್ದಕ್ಕೆ ತಮ್ಮನ್ನೇ ಬೈದುಕೊಳ್ಳುತ್ತ, ಶಕ್ತಿಸ್ಫೋಟಕ್ಕೇನೂ ಸಿಕ್ಕದ್ದಕ್ಕೆ ಕೊನೆಗೆ ಮಾತಲ್ಲೇ ಗ್ಲೂಕೋಸ್ ಐಸ್ಕ್ರೀಮ್ ಚಪ್ಪರಿಸುತ್ತ ಒಜ್ಜೆಯ ಹೆಜ್ಜೆಗೆ ಹೆಜ್ಜೆ ಬೆಸೆದಿದ್ದರು. ಆ ಮಂದೆಯ ಕೆಲವರಂತೂ (ಅದರಲ್ಲೂ ತರುಣರೇ ಹೆಚ್ಚು!) “ಆಂಟೀ ಬೇಡೀ, ನಿಮಗಾಗಲ್ಲಾ…….

ಅಯ್ಯೋ ಅಂಕಲ್ ಅಷ್ಟ್ ದೊಡ್ಡ ಬ್ಯಾಗ್ ಬೇರೇ….” ಎಂದೆಲ್ಲ ನಮ್ಮ ‘ಗಾಳಿ ಬಿಡಲು’ ಪ್ರಯತ್ನಿಸಿದ್ದಿತ್ತು. ನಮ್ಮದು ಮುಗುಳು ನಗೆ ಮಾತ್ರ. ಇಳಿವಾಗ ಕೈ ಬೆಸೆದು, ಮೈ ತಾಗಿಸಿ ನಡೆದ ಜೋಡಿಗಳು ಒಬ್ಬರಿಗೊಬ್ಬರು ಹೊರೆಯಾಗಿ, ಬೆವರಿನ ಮಿನಿಜೋಗ ಇಳಿಸುತ್ತ “ಇನ್ನೆಷ್ಟಿದೆ ಆಂಟೀ…” ಎನ್ನುವ ಕರುಣಾಜನಕ ಸ್ಥಿತಿ ತೋರಿದಲ್ಲೂ ನಮ್ಮದು ಸಣ್ಣ ನಗೆಯಷ್ಟೇ ಉತ್ತರ. ನಿಜದಲ್ಲಿ ಮೆಟ್ಟಿಲ ಲೆಕ್ಕ ಅಥವಾ ಸಮಯದ ಅಳತೆ ಯಾರಿಗೆ ಬೇಕು!

ನಮ್ಮ ಅನುಭವದ ಬಲ ಎಷ್ಟಿದ್ದರೂ ನಿತ್ಯದ ಅಭ್ಯಾಸ ಕಡಿಮೆ ಇದ್ದದ್ದಕ್ಕೆ ಸಾವಧಾನದಲ್ಲೇ ಇಳಿದೆವು. ಸುಮಾರು ಅರ್ಧ ಗಂಟೆಯಲ್ಲಿ ನದಿಪಾತ್ರೆ ಸೇರಿದ್ದೆವು. ಜಲಪಾತಗಳಪ್ಪಳಿಸುವ ವಿಸ್ತಾರ ಮಡುವಿನಿಂದ ಸ್ವಲ್ಪ ಮೊದಲೇ ನಿಲ್ಲುವ ಆ ದಂಡೆಯಲ್ಲಿ ಒಂದಷ್ಟು ನೆಲ ಬಿಗಿ ಮಾಡಿ, ಯಾರೂ ದಾಟಿ ಹೋಗದಂತೆ ಎರಡಾಳೆತ್ತರದ ಬೇಲಿ ಮಾಡಿದ್ದಾರೆ. ಸಾಲದ್ದಕ್ಕೆ ಜನ ಬಿಡುವ ಸಮಯದುದ್ದಕ್ಕೂ (ಬಿರು ಮಳೆ ಇಲ್ಲದ ಹಗಲುಗಳಲ್ಲಿ, ಅದೂ ಸಂಜೆ ನಾಲ್ಕರವರೆಗೆ ಮಾತ್ರ) ಇಬ್ಬರು ಕಾವಲುಗಾರರ ಕಣ್ಗಾವಲನ್ನೂ ಇಟ್ಟಿದ್ದಾರೆ. ಜೋಗದ ದರೆಯ ಶುದ್ಧ ಕಿರುತೊರೆಯಷ್ಟೇ ಈ ಆವರಣದೊಳಗೇ ಹರಿಯುವಂತೆ ಮಾಡಿದ್ದಾರೆ. ಇದು ಹತ್ತಿಳಿಯುವವರ ದಾಹಶಮನಕ್ಕೆ ಯೋಗ್ಯವ್ಯವಸ್ಥೆ. ಜೋಗಾಗುಂಡಿಯ ರಚನೆಗಳೆಲ್ಲ ಬಂದು ಸುಮಾರು ಆರು ವರ್ಷವಷ್ಟೇ ಆಗಿದೆಯಂತೆ. ಆದರೆ ನಮ್ಮ ಜನಗಳ ಸಭ್ಯತೆ, ಶುಚಿತ್ವಕ್ಕೆ ಯಾವ ಶಿಕ್ಷೆ ಕೊಟ್ಟರೂ ಕಡಿಮೆಯೇ! ಎರಡೂ ಪಕ್ಕದ ರಕ್ಷಣಾ ಬೇಲಿಯ ಸಾಕಷ್ಟು ಕಬ್ಬಿಣ ಸರಳುಗಳನ್ನು ಲೂಟಿ ಮಾಡಿದ್ದಾರೆ. ಪಾತ್ರೆಯ ಆವರಣದ ಬಲೆಯನ್ನೂ ಸಾಕಷ್ಟು ಜಗ್ಗಾಡಿದ ಲಕ್ಷಣಗಳು ಸ್ಪಷ್ಟವಿವೆ. ಹಲವೆಡೆಗಳಲ್ಲಿ ಮೆಟ್ಟಿಲುಗಳೂ ಮುಕ್ಕಾಗಿವೆ. ಹೊರಡುವಲ್ಲಿ ಪ್ಲ್ಯಾಸ್ಟಿಕ್ ಒಯ್ಯದಂತೆ, ಕಸ ಎಸೆಯದಂತೆ ಸ್ಪಷ್ಟ ಸೂಚನೆಗಳೇನೋ ಇವೆ. ಮತ್ತೆ ಇಂಥ ಜಾಗಗಳಲ್ಲಿ ಮುಖ್ಯ ಕಸ ಉತ್ಪಾದಕರಾದ ತಿನಿಸು ಪಾನೀಯಗಳ ಅಡ್ಡೆಗಳಿಗೆ, ನ್ಯಾಯವಾಗಿಯೇ ಅಲ್ಲಿ ಅವಕಾಶವನ್ನೇ ಕೊಟ್ಟಿಲ್ಲ. ಕೊನೆಗೆ ನಿಯತ ಕಸ ಹೆಕ್ಕುವ ಸಿಬ್ಬಂದಿಯನ್ನೂ ಇಟ್ಟುಕೊಂಡಂತ್ತಿತ್ತು. ಆದರೆ ಅವೆಲ್ಲವನ್ನೂ ಮೀರಿ ಜನ ಕಸ ಕೊಳಚೆ ಎಸೆಯುವ ‘ಪವಿತ್ರ ಕರ್ತವ್ಯ’ ನಿರ್ವಹಿಸಿದ್ದಕ್ಕೆ ಸಾಕ್ಷಿ ಸುಮಾರು ಕಾಣಸಿಕ್ಕಿತು. ಮಳೆಯೊಡನೆ ಸ್ವಲ್ಪ ಮಣ್ಣು ಒಂದೆರಡು ಕಡೆ ಮೆಟ್ಟಿಲಿಗೆ ಬಂದಂತಿತ್ತು. ಯಾರದೋ ಭಾರದ ಹೆಜ್ಜೆಯೂ ಸ್ಥಳೀಯ ವಾಸಿಯ ದಾಟುವ ಸಮಯವೂ ಒಂದಾದ ಆಕಸ್ಮಿಕಕ್ಕೆ ಒಂದು ಸಣ್ಣ ಹಾವು ಸತ್ತು ಬಿದ್ದಿತ್ತು. ಡಾಮರ್ ದಾರಿಯಲ್ಲಿ ಮಾತ್ರ ‘ರೋಡ್ ಕಿಲ್’ ಅಲ್ಲ ಎನ್ನುವ ವಿಚಿತ್ರಕ್ಕಿದು ಸಾಕ್ಷಿ ಎನ್ನುವಂತಿತ್ತು.

ಐದು ಮಿನಿಟು ಎಲ್ಲ ನೋಡಿ, ನೀರು ಕುಡಿದು, ಅಂಡೆಗಳ ಮರುಪೂರಣ ಮಾಡಿಕೊಂಡು ಆರೋಹಣ ಶುರು ಮಾಡಿದೆವು. ಇಳಿದಾರಿಯ ನಡೆಗಿಂತಲೂ ನಿಧಾನಗತಿ. ತೀರಾ ಜರೂರಲ್ಲದೆ ಬೇಲಿ ಮೊಣಕಾಲುಗಳ ಆಧಾರವನ್ನೂ ನೆಚ್ಚದೆ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಬುದ್ಧಿಪೂರ್ವಕವಾಗಿ ಪೇರಿಸಿದೆವು. ಅಂದರೆ, ಮೆಟ್ಟಿಲೇರುವುದಿರಲಿ, ತಿರುವುಗಳ ತಟ್ಟು ಬರಲಿ – ಉಸಿರೆಳೆದದ್ದಕ್ಕೊಂದು ಹೆಜ್ಜೆ, ಬಿಟ್ಟದ್ದಕ್ಕೊಂದು ಹೆಜ್ಜೆ; ಧಾವಂತ ಕೂಡದು, ಆಲಸ್ಯ ನಿಲ್ಲಿಸದು. ಆಯಕಟ್ಟಿನ ಜಾಗಗಗಳಲ್ಲಿ ನಿಂತಂತೆ ದೃಶ್ಯವೀಕ್ಷಣೆ, ಚಿತ್ರಗ್ರಹಣ, ನೀರು ಕುಡಿಯುವಾಗ ಮಾತ್ರ ಹೆಚ್ಚಿನ ಪುನಶ್ಚೇತನದ ಅವಕಾಶಗಳು. ಉದ್ದಕ್ಕೂ ಮೊದಲು ಕಂಡ ‘ನಾಟಕ’ಗಳ ಇನ್ನೊಂದು ಮಗ್ಗುಲು ಸಣ್ಣದಾಗಿಯಾದರೂ ಕಾಣಿಸಿತು. “ಛೆ, ನೀವಾಗಬಹುದು ಆಂಟೀ…, ಈಗ ನಾವಿಳಿದದ್ದು ಅರ್ಧವಾದರೂ ಆಯ್ತಾ ಅಂಕಲ್….” ಇತ್ಯಾದಿ. ನಮ್ಮ ಪ್ರತಿಕ್ರಿಯೆಯಾದರೂ ಬಹುತೇಕ ಮೊದಲಿನಂತೇ – ಕಿರುನಗೆ.

ಜೋಗದ ಗುಂಡಿಯಲ್ಲಿದ್ದಾಗ ನನಗೆ ಫೇಸ್ ಬುಕ್ ಗೆಳೆಯ – ಅಶೋಕ ಹೆಗಡೆ ಮಾವಿನಗುಂಡಿಯವರ ನೆನಪಾಗಿತ್ತು. ನಾನು ಅವರನ್ನೆಂದೂ ಮುಖತಃ ಕಂಡವನಲ್ಲ. ಮೇಲೆ ಬಾಂಬೇ ಹೌಸಿನ ಬಳಿಯಲ್ಲೆಲ್ಲೋ ಅವರ ಕೃಷಿಭೂಮಿ, ಮನೆ ಇದೆ ಎಂದೇನೋ ತಿಳಿದಿದ್ದೆ. ಒಂದು ಕ್ಷಣದ ಉತ್ಸಾಹದಲ್ಲಿ ನಾನವರಿಗೆ ಚರವಾಣಿ ಕರೆ ಮಾಡಿಬಿಟ್ಟೆ. ಮತ್ತವರ
ಉತ್ಸಾಹಕ್ಕೆ, ಒಂದು ಕ್ಷಣ ಅವರ ಮನೆಗೆ ಭೇಟಿ ಕೊಡುವುದಾಗಿಯೂ ಒಪ್ಪಿಕೊಂಡದ್ದಾಗಿತ್ತು. ಆದರೆ ಗುಂಡಿಗೆ ಇಳಿಯುವಲ್ಲಿ ಸುಮಾರು ಅರ್ಧ ಗಂಟೆ ಕಳೆದವರು, ಹಿಂದಕ್ಕೇರುವಲ್ಲಿ ಒಂದು ಗಂಟೆಯನ್ನೇ ಬಳಸಿದ್ದೆವು. ಸಾಲದ್ದಕ್ಕೆ, ಆಕಾಶದಲ್ಲಿ ದಿನದ ಹೊಸ ನಾಟಕಕ್ಕೆ ರಂಗ ಸಜ್ಜಿಕೆಗಳು ಬರತೊಡಗಿದ್ದವು. ಕಳೆದೊಂದು ವಾರದ ಅನುಭವ ಸೇರಿಸಿ, ಇಂದು ಸಂಜೆಯೂ ಮಳೆ ಖಾತ್ರಿ ಎನ್ನುವ ಸಣ್ಣ ಆತಂಕ ನಮ್ಮಲ್ಲಿ ಮೂಡಿತು. ಹಾಗಾಗಿ ನಾವು ಬೈಕ್ ಬಿಟ್ಟ ವಠಾರದಲ್ಲಿ ವೇಳೆಗಳೆಯದೆ, ಗಾಂಧೀ ಪವರ್ ಹೌಸ್, ಬಾಂಬೇ ಹೌಸ್ ಎಲ್ಲಕ್ಕೂ ಮುಖ್ಯವಾಗಿ ಅಶೋಕ ಹೆಗಡೆಯವರ (ಮತ್ತೆ ಕರೆ ಮಾಡಿ ಕ್ಷಮೆಯಾಚಿಸಿ) ಭೇಟಿ ಮರೆತು ಮಂಗಳೂರ ದಾರಿ ಹಿಡಿದೆವು.

ಕೋಗಾರ್ ಘಾಟಿ…

ಜೋಗದಿಂದ ನೇರ ಘಟ್ಟದ ಇಳಿದಾರಿ, ಅಂದರೆ ಕೋಗಾರ್ ಘಾಟಿ ಅನುಸರಿಸಿದರೆ ನಾವು ಭಟ್ಕಳ ಸೇರುತ್ತೇವೆ. ಮತ್ತೆ ಸುಲಭದ ಹೆದ್ದಾರಿಯೋಟ ಮಾಡಿದರೆ, ಒಟ್ಟು ೨೧೬ ಕಿಮೀ ಅಂತರದಲ್ಲಿ, ಅಂದರೆ ಕತ್ತಲೆಗೆ ಮುನ್ನ ಮಂಗಳೂರು ಸೇರಿಕೊಳ್ಳುತ್ತೇವೆ ಎನ್ನುವುದು ನಮ್ಮ ಅಂದಾಜಿತ್ತು. ಜೋಗದ ವಿಸ್ತರಣೆಯೇ ಎಂಬಂತಿರುವ ಕಾರ್ಗಲ್ಲಿನಲ್ಲಿ ಅವಸರದ ಊಟ ಮುಗಿಸಿಕೊಂಡೆವು. ಮತ್ತೆ ನಗುವ ಆಕಾಶ ನಂಬಿ, ಹಾಡುವಳ್ಳಿ (ಪ್ರಾಚೀನ ಶಿಲ್ಪ ವೈಭವ) ಮತ್ತು ಭೀಮೇಶ್ವರ (ಸಣ್ಣ ಪ್ರಾಕೃತಿಕ ವೈಭವದ ದೇವಳ) ನೋಡುವ ಸಣ್ಣ ಆಸೆ ಜೀವಂತವಾಗಿಟ್ಟುಕೊಂಡು ಘಟ್ಟ ಇಳಿಯತೊಡಗಿದೆವು. ನಮ್ಮ ಲೆಕ್ಕಾಚಾರ ತಪ್ಪುವಂತೆ ತಟಪಟ ಹನಿಯಪ್ಪನೂ ಇಳಿಯತೊಡಗಿದ. ಮಳೆ ಸ್ವಲ್ಪ ಜೋರಾಗುತ್ತಿದ್ದಂತೆ, ಭಾನ್ಕುಳಿ ಪಂಚಾಯತ್ ಕಚೇರಿಯ ನೆರಳಲ್ಲಿ ಒಂದು ಗಂಟೆ ನಿಲ್ಲಲೇಬೇಕಾಯ್ತು.

ಹಾಡುವಳ್ಳಿಯನ್ನು ನಾನು ಮೊದಲು ಕಂಡವನಲ್ಲ. ಹಾಗಾಗಿ ಅದರ ಸೂಚನಾಫಲಕವೆಲ್ಲೋ ನಮ್ಮ ಕಣ್ತಪ್ಪಿತು. ಭೀಮೇಶ್ವರವಾದರೋ ನಾವು ಹಿಂದೊಮ್ಮೆ ಕಂಡವರೇ. ಆ ಸ್ಥಳ ಬಂದಾಗ, ಮೋಡಗಳ ಎರಡನೇ ಸಂಚಿನ ಹೊಂಚು ಕಂಡು ನಾವು ಅದನ್ನೂ ಕೈಬಿಟ್ಟೆವು. ದೈವಭೀರುಗಳು ಹೇಳುವಂತೆ, ಭೀಮೇಶ್ವರ ತುಸು ಮುನಿಸಿಕೊಂಡಿರಬೇಕು. ಸ್ವಲ್ಪ ಮುಂದುವರಿಯುವುದರೊಳಗೆ ಒಮ್ಮೆಲೇ ಧೋ ಎನ್ನತೊಡಗಿತ್ತು ಆಕಾಶ. ನಾವು ಮೊದಲ ಸಿಕ್ಕ ಅವಕಾಶ ಎಂದಷ್ಟೆ ಯೋಚಿಸಿ, ಬಲಬದಿಯಲ್ಲಿದ್ದ ಒಂದು ಕೃಷಿಭೂಮಿಯ ವಠಾರಕ್ಕೆ ನುಗ್ಗಿ, ಮನೆಯ ಇಳಿಸಿದ ಮಾಡಿನ ಆಶ್ರಯ ಪಡೆದೆವು. ಅದೊಂದು ಕೊಚ್ಚಿ ಕ್ರಿಶ್ಚಿಯನ್ನರ ಮನೆ. ಮನೆಮಂದಿ ಬೀಗವಿಕ್ಕಿ, ತೋಟದ ಕೆಲಸದಲ್ಲೆಲ್ಲೋ ಮುಳುಗಿದ್ದಿರಬೇಕು. ನಾವಲ್ಲಿದ್ದ ಸುಮಾರು ಅರ್ಧ ಗಂಟೆಯವರೆಗೂ ಯಾರೂ ಬರಲಿಲ್ಲ. ಮಳೆ ನಿಂತದ್ದೇ ಮನೆಯವರಿಗೆ ಮನದಲ್ಲೇ ಕೃತಜ್ಞತೆ ಹೇಳಿ ಹೊರಟೆವು.

ಕುಂದಾಪ್ರ ಸೂರ್ಯನ ‘ಮನೆ’ ಸೇರುವ ಅವಸರದಲ್ಲಿ ನಮ್ಮ ದಿನದ ಬೆಳಕಿನೊಡನೇ ಮಂಗಳೂರು ಸೇರುವ ಆಸೆ ಕಮರಿತ್ತು. ಹಿಂದೆಲ್ಲ ಅಂಗಡಿಯ ಅನಿವಾರ್ಯತೆ ಮತ್ತು ಹರಯದ ಸೊಕ್ಕು ಸೇರಿ, ಮಳೆಯಲ್ಲಿ ನೆನೆಯುತ್ತ, ರಾತ್ರಿಗೂ ಅಳುಕದೆ ಎಷ್ಟೂ ಸವಾರಿ ಮಾಡಿದ್ದಿತ್ತು. ಈಗ ಅಸಾಧ್ಯ ಮತ್ತು ಅನಗತ್ಯ. ಭಟ್ಕಳದಲ್ಲಿ ಕಾಫಿಯ ಶಾಸ್ತ್ರ ಮಾಡಿದೆವು. ಸೂರ್ಯಾಸ್ತದೊಳಗೆ ದಕ್ಕಿದಷ್ಟು ದಾರಿ ಎಂದು ಸವಾರಿ ಬೆಳೆಸಿದೆವು. ದಾರಿಯಲ್ಲೆಲ್ಲಾದರೂ ಯೋಗ್ಯ ವಸತಿಗೃಹ ಕಾಣಿಸಿದರೆ ತಂಗಿ, ಸಮೀಪದ ಮರವಂತೆಯ ಸೂರ್ಯಾಸ್ತ ಸವಿಯುವ ಸಣ್ಣ ಆಸೆಯ ಕುಡಿ ಹಚ್ಚಿಕೊಂಡಿದ್ದೆವು; ಸಿಗಲಿಲ್ಲ. ಒತ್ತಿನೆಣೆಯ ಹೆದ್ದಾರಿ ಅಧ್ವಾನ, ಮರವಂತೆಯ ಸೂರ್ಯಾಸ್ತದ ರಂಗುಗಳನ್ನು ಕೇವಲ ಹಾರುನೋಟದಲ್ಲಷ್ಟೇ ಕಣ್ತುಂಬಿಕೊಂಡು ಕತ್ತಲಿಗೆ ಕುಂದಾಪುರ ಸೇರಿಕೊಂಡೆವು.

ನಾಲ್ಕು ಹೋಟೆಲ್ ಚೌಕಾಸಿ ಮಾಡಿ, ಹರಿಪ್ರಸಾದದಲ್ಲಿ ನೆಲೆಸಿದೆವು. ಬಳಲಿಕೆಗೆ ಊಟವೇನೋ ಶಾಸ್ತ್ರದ್ದು ಮಾಡಿದೆವು. ಆದರೆ ಹೆದ್ದಾರಿ ಪಕ್ಕದ ಗದ್ದಲ, ದೂಳು ನಮಗೆ ನಿದ್ರೆಯನ್ನೂ ಶಾಸ್ತ್ರಕ್ಕೇ ಕೊಟ್ಟಿತು. ಬೆಳಗ್ಗಾಗುವುದನ್ನು ಕಾದವರಂತೆ, ಐದೂವರೆಗೇ ದಾರಿಗಿಳಿದೆವು. ಎಲ್ಲೋ ಹೊಟ್ಟೆಪಾಡು ಚಂದಗಾಣಿಸಿ, ಎಂಟು ಗಂಟೆಯ ಸುಮಾರಿಗೆ ಮಂಗಳೂರು ಸೇರಿಕೊಂಡೆವು. ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಪಡೆದ ಕಲಾನುಭವದ ವಿಸ್ತೃತ ನೋಟದೊಡನೆ, ಹೊಸದೇ ಸಾಹಸಾನುಭವಕ್ಕೆ ದಾರಿ ಕಂಡುಕೊಂಡ ಧನ್ಯತೆ ನಮ್ಮದಾಗಿತ್ತು.

(ಸರಣಿ ಮುಗಿಯಿತು)