(ಪ್ರಾಕೃತಿಕ ಭಾರತ ಸೀಳೋಟ – ೨) 

ಸಾಹಸಯಾನದುದ್ದಕ್ಕೂ ಬೆಳಗ್ಗೆ ಹೊರಡುವಲ್ಲಿ ಹಿಂದಿನದ ಸುಸ್ತು ಅಥವಾ ನಿದ್ರೆ ಬಾಕಿ ನಮ್ಮನ್ನು ಕಾಡದಂತೆ ನೋಡಿಕೊಂಡೆವು. ನಾಲ್ಕೈದು ಗಂಟೆಗೇ ಎದ್ದು ಪ್ರಾತಃ ಕರ್ಮಗಳನ್ನು ಮುಗಿಸಿ, ಉಷಃ ಕಾಲದಲ್ಲೇ ಬೈಕ್‍ಗಳು ಗುಡುಗುಡಿಸುವುದನ್ನು ರೂಢಿಸಿಕೊಂಡೆವು. ಇದಕ್ಕೆ ಹುಬ್ಬಳ್ಳಿಯ ಮುಂಜಾವೇ ಸಾಕ್ಷಿ. ಹುಬ್ಬಳ್ಳಿಯ ವಾಸದ ನೆಲೆಯೇನೋ ಸೌಕರ್ಯಪೂರ್ಣ ದೃಢ ಹಾಗೂ ಸುಂದರವಾಗಿಯೇ ಇತ್ತು. ಆದರೆ ಅದರ ಹೆಸರಿನಲ್ಲಿದ್ದ (ಮಧುಕುಂಜ) ಸಿಹಿಗೆ, ಗೆಳೆಯರು ಕೊಟ್ಟ ಪೇಢೆಯ ಪರಿಮಳ ಸೇರಿತೋ ಎನ್ನುವಂತೆ, ಅದೆಲ್ಲಿಂದಲೋ ಕಚ್ಚುವ ಇರುವೆಗಳ ಸಾಲು ಬಂದು, ನಮ್ಮ ಹಾಸೆಲ್ಲ ವ್ಯಾಪಿಸಿ “ನಿದ್ರಿಸದಿರು ವೀರಾ…” ಎಂದು ತುಂಬ ಸತಾಯಿಸಿತು. ಅವನ್ನು ಸುಧಾರಿಸಿ ನಿಶ್ಚಿಂತರಾಗುವುದರೊಳಗೆ ಊರ ಸೊಳ್ಳೆಗಳ ಕವಾಯತು ಶುರು. ರಾತ್ರಿಯುದ್ದಕ್ಕೆ “ಉತ್ತಿಷ್ಠ ಉತ್ತಿಷ್ಠ” ಎಂಬ ಜಾಗೃತಿಯ ಕರೆ!

ಹಾಗೂ ರಾತ್ರಿಯ ಕೊನೆಯ ಜಾವದ ಮಂಪರು ಕಳೆದುಕೊಳ್ಳುತ್ತೇವೆನ್ನುವಾಗ ಕೆಯಿಬಿ (ಕರೆಂಟಿಲ್ಲದ ಬೋರ್ಡ್!) ಕೈಕೊಟ್ಟಿತು. ಮಳೆ, ಗಾಳಿಗಳಿಲ್ಲದೆಯೂ ಆ ಹೊತ್ತಿಗೆ ಯಾಕೆ ತೆಗೆದರೋ! ಸೆಕೆ ತಡೆಯದೆ ಅಗತ್ಯಕ್ಕೂ ಬೇಗ ಎದ್ದರೂ ಉದಯರಾಗಗಳ ಪೂರೈಕೆಗೆ ಟಾರ್ಚ್, ಕ್ಯಾಂಡಲ್ ಬೆಳಕಿನ ಪರದಾಟ. ಸಮಯಕ್ಕೆ ಬೈಕೇನೋ ಹೊರಡಿಸಿಯೇ ಬಿಟ್ಟೆವು. ಅಂದ ಮಾತ್ರಕ್ಕೆ ಊರು ಬಿಟ್ಟೆವೆಂದಲ್ಲ! ಬೈಕ್ ರಿಪೇರಿ ಎಂದೆಲ್ಲ ರಾತ್ರಿ ತಡವಾಗಿ ಬಂದಾಗ ಸಿಕ್ಕ ಒಂದೆರಡು ಪೆಟ್ರೋಲ್ ಬಂಕುಗಳು ವ್ಯವಾಹಾರ ನಿಲ್ಲಿಸಿದ್ದು ಕಂಡಿದ್ದೆವು. ಬೆಳಿಗ್ಗೆ ಹಾಕಿಸಿಕೊಳ್ಳುವ ವಿಶ್ವಾಸವಿತ್ತು. ಆದರೆ ಅಲ್ಲಿನ ಬಹುತೇಕ ಬಂಕ್‍ಗಳು ಬೆಳಗ್ಗೆ ಬೇಗ ತೆರೆಯುವ ಅಭ್ಯಾಸವನ್ನೂ ಇಟ್ಟುಕೊಂಡಿರಲಿಲ್ಲ. ನಾಲ್ಕೆಂಟು ಬಂಕುಗಳನ್ನು ಅಲೆದು, ಅಂತೂ ಟ್ಯಾಂಕ್ ತುಂಬಿಸಿಕೊಂಡು ನಿಜದ ಓಟಕ್ಕಿಳಿಯುವಾಗ, ಸಮಸ್ಪರ್ಧಿಯಂತೆ ಸೂರ್ಯನೂ ಕಣಕ್ಕಿಳಿದಾಗಿತ್ತು.

ಹುಬ್ಬಳ್ಳಿಯ ಆ ಬೆಳಗ್ಗೆಯನ್ನು ನಾವು ಸಾಧನಕೇರಿಯ ಅಮರ ಉದ್ಗಾರಕ್ಕೆ ಧ್ವನಿ ಸೇರಿಸಿಯೇ ಹಾಡಿಕೊಂಡೆವು – ಅದು ಬರಿ ಬೆಳಗಲ್ಲೋ ಅಣ್ಣಾ! ಊರ ಹೊರವಲಯದ ಮುಖ್ಯ ದಾರಿಯಲ್ಲಿ ಊರಿಗೆ ಊರೇ ದಿಗಂತದ ಕೆಂಡದುಂಡೆಯನ್ನು ಹಿಡಿಯ ಹೊರಟಂತೆ ನಡೆದಿದ್ದರು. ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ‘ಮಾರ್ನಿಂಗ್ ವಾಕ್’ ನಮಗೆಲ್ಲ ನಿಜಕ್ಕೂ ಆಶ್ಚರ್ಯ ಹುಟ್ಟಿಸಿತ್ತು. ಇಂದಿಗೂ ಅದು ಹುಬ್ಬಳ್ಳಿ ಮಂದಿಯ ಆರೋಗ್ಯದ ಕಾಳಜಿಯೇ ನಗರದಲ್ಲಿ ಅನ್ಯ ತಾಣದ ಕೊರತೆ ಸೂಚಿಯೇ (ಅಲ್ಲ, ಅವರೂ ನಮ್ಮಂತೆಯೇ ಕೆಯಿಬಿ ಅವಕೃಪೆಯಲ್ಲಿ ನಿದ್ರೆ ಬಾರದ ಸಂಕಟಕ್ಕೆ ದಾರಿಗೆ ಬಿದ್ದಿದ್ದರೇ) ಎನ್ನುವುದು ನನಗೆ ಇಂದಿಗೂ ಬಗೆಹರಿದಿಲ್ಲ!

ನಕ್ಷೆ ನರಗುಂದವನ್ನು ಬೆಳಗ್ಗಿನ ಕಾಫಿಂಡಿಗೆ ಸೂಚಿಸಿತ್ತು. ಅದನ್ನೇ ಜಪಿಸುತ್ತ ಹೋಗುತ್ತಿದ್ದವರಿಗೆ ಏಳು ಗಂಟೆಯ ಸುಮಾರಿಗೆ ಢಾಳಾಗಿ ‘ನವಲಗುಂದ’ದ ಬೋರ್ಡು ಕಾಣಿಸಿತು. ನಾವು ‘ನರ’, ‘ನವ’ಗಳಲ್ಲಿ ಗೊ/ಗುಂದಲಿಸಿಕೊಂಡು ಬೈಕ್ ನಿಧಾನಿಸಿ ಯೋಗ್ಯ ಹೋಟೆಲ್ ಹೆಸರಿಗೆ ಹುಡುಕುನೋಟ ಹಾಕಿಕೊಂಡಿದ್ದೆವು. ಒಮ್ಮೆಗೆ ‘ಉಡುಪಿ ಹೋಟೆಲ್’ ಕಾಣಿಸಿದಾಗ ಕರುಳ ಕರೆಗೆ ಊರ ರುಚಿಯೂ ಸೇರಿದಂತಾಗಿ ಕಾಫಿಂಡಿಗೆಂದು ನಿಂತೇ ಬಿಟ್ಟೆವು. ಆದರೆ ತಿಂದ ತಿಂಡಿ ಮೈಗೆ ಹತ್ತುವಂತಿರಲಿಲ್ಲ, ಎಲ್ಲಕ್ಕೂ ಒಂದು ಚಿಟಿಕೆಯಲ್ಲ, ಹಿಡಿ ಉಪ್ಪು ಹೆಚ್ಚು ಹಾಕಿದ್ದರು. ಉಡುಪಿ ಹೋಟೆಲ್ ಎಷ್ಟಿದ್ದರೂ ಉಪ್ಪುನೀರ ಗಾಳಿಯವರದೆಂದು ಹೀಗೂ ಮಾಡುವುದೇ? ಆದರೆ ಅಲ್ಲಿನ ಅನ್ಯ ಗಿರಾಕಿಗಳ ಸೊಲ್ಲಿಲ್ಲದ್ದು ನೋಡಿ ನಾವು ಸಣ್ಣದಾಗಿಯೇ ವಿಚಾರಿಸಿದೆವು. ನಮ್ಮ ದೂರುವಾಣಿ ಸ್ಪಷ್ಟವಾಗಿ ಪ್ರಾದೇಶಿಕ ಭಿನ್ನತೆಯ ಹೆಸರಿನಲ್ಲಿ ನಿರ್ಲಕ್ಷಿಸಲ್ಪಟ್ಟಿತು. ಯಜಮಾನರು “ಇಲ್ಲಿನವರಿಗೆ ಸದಾ ಉಪ್ಪು ಮುಂದೆ” ಎಂದು ಹಲ್ಲು ಕಿಸಿದಾಗ, ಅವರ ಅತ್ಯುಪ್ಪಿನ ಪ್ರೀತಿ ನಮ್ಮನ್ನು ಬೆಪ್ಪಾಗಿಸಿತು.

ನರಗುಂದದ ಸಿದ್ದೇಶ್ವರ ಬೆಟ್ಟದ ಬಗ್ಗೆ ನಮ್ಮ ನಕ್ಷೆಯಲ್ಲಿ ನಾನು ಸ್ಪಷ್ಟ ಉಲ್ಲೇಖವನ್ನೇ ಮಾಡಿದ್ದೆ. ಆಕರ್ಷಕವಾಗಿ ಕಾಣಿಸಿದರೆ ಹೊಕ್ಕು ಹೊರಡುವ ಅಂದಾಜೂ ಇತ್ತು. ಆದರೆ ವಾಸ್ತವದಲ್ಲಿ ನಾವು ನರಗುಂದವನ್ನು ಎಂಟು ಗಂಟೆಯ ಸುಮಾರಿಗೆ ದಾಟಿದ ವಿವರವನ್ನಷ್ಟೇ ದೇವಕಿ ದಾಖಲಿಸಿದ್ದಾಳೆ. ನಾವು ಆರು ಜನಕ್ಕೆ ಮೂರು ಕ್ಯಾಮರಾ ಏನೋ ಹೊತ್ತಿದ್ದೆವು. (ಇಂದಿನ ಡಿಜಿಟಲ್ ಯುಗದಲ್ಲಿ ಚರವಾಣಿ ಇದ್ದವರೆಲ್ಲ ಚಿತ್ರಗ್ರಾಹಿಗಳೇ ನಿಂತದ್ದು ಕುಂತದ್ದಕ್ಕೆಲ್ಲ ಒಂದೇನು, ಹತ್ತು ಕ್ಲಿಕ್ಕುಗಳೇ!) ಆದರೆ ಪ್ರತಿ ಕ್ಲಿಕ್ ಮಾಡುವ ಮುನ್ನ ತಲೆಯೊಳಗೆ ವಿತ್ತಶಾಖೆ ಚುರುಕು ಮುಟ್ಟಿಸುತ್ತಿತ್ತು “ಮೂವತ್ತೈದು ಅವಕಾಶಗಳಲ್ಲಿ ಒಂದು ಕಳೆಯಬೇಕೇ? ತೊಳೆದು, ಮುದ್ರಿಸುವ ಖರ್ಚಿಗೆ ಒಂದು ಸೇರಿಸಬೇಕೇ?” ಹಾಗಾಗಿ ಇಂದು ನನ್ನಲ್ಲಿ ನರಗುಂದ ಸಿದ್ಧೇಶ್ವರ ಬೆಟ್ಟದ ಚಿತ್ರವೂ ಇಲ್ಲ ನೆನಪಿನ ಚಿತ್ರವೂ ಇಲ್ಲ. ಇಂದು ಗೂಗಲ್ ನಕ್ಷೆಯಲ್ಲಿ ಆ ಪುಟ್ಟ ಬೆಟ್ಟವನ್ನು ಅಲಂಕರಿಸಿದ ಪುರಾತನ ದೇವಳವನ್ನೂ ಬಡಿದ ಆಧುನಿಕ ಗಾಳಿಗಿರಣಿಯ ಗೂಟವನ್ನೂ ಕಾಣುತ್ತೇನೆ.

ಅದರ ತಪ್ಪಲಿನ ವಿಸ್ತಾರ ಸರಸಿ ನಿಜದಲ್ಲೂ ಮನೋಹರಿಯೇ ಇರಬೇಕು. ಹಾಗೆಂದು ಅಂತರ್ಜಾಲದ ಕೃಪೆಯಲ್ಲಿ ಆ ಪರಿಸರದ ಒಂದಾದರೂ ಆಕರ್ಷಕ ಚಿತ್ರ ‘ಕದಿಯಲು’ ಸಣ್ಣ ಪ್ರಯತ್ನ ಮಾಡಿದೆ. ಆದರೆ ಆ ಪ್ರಯತ್ನಕ್ಕೆಲ್ಲ ಸಿಕ್ಕಿದ್ದು ರಾಮನಗರದ ಬಳಿಯ ಶ್ರೀರೇವಣ ಸಿದ್ಧೇಶ್ವರ ಬೆಟ್ಟದ (ಎಸ್ಸಾರೆಸ್ ನಾನು ಕಂಡಂತೆ) ದೃಶ್ಯಗಳೇ ಆದ್ದರಿಂದ ಕೈ ಬಿಟ್ಟೆ.

ಹುಬ್ಬಳ್ಳಿ – ಬಿಜಾಪುರ ಹೆದ್ದಾರಿಯಲ್ಲಿ ನಾವು ವೀಕ್ಷಣೆಗೆ ಮುಖ್ಯವಾಗಿ ಗುರುತಿಸಿಕೊಂಡ ಮೂರು ಕೇಂದ್ರಗಳಾದ ಬಾದಾಮಿ, ಪಟ್ಟದ ಕಲ್ಲು ಮತ್ತು ಐಹೊಳೆ ಒಂದು ಸರಣಿಯಲ್ಲಿ ಬರುತ್ತವೆ. ಅವಕ್ಕೆ ಆರಂಭ ಬಿಂದುವಾಗಿ ನಾವು ಹೆದ್ದಾರಿಯನ್ನು ಕುಲಗೇರಿ ಕೈಕಂಬದಲ್ಲಿ ಬಿಟ್ಟೆವು. ಬಲ ಹೊರಳಿ, ತೀರಾ ಕಚ್ಚಾರಸ್ತೆಯಲ್ಲಿ ಸುಮಾರು ಒಂಬತ್ತು ಕಿಮೀಗೆ ಸಿಕ್ಕಿತ್ತು ಬಾದಾಮಿ, ಊರವರು ಹೇಳುವಂತೆ ಬದಾಮಿ. ಭಾರೀ ಬಂಡೆ ಗುಡ್ಡಗಳದ್ದೇ ನಾಡು, ತಪ್ಪಲಿನಲ್ಲಿ ವಿಸ್ತಾರ ಕೊಳ, ಸುತ್ತುವರಿದಂತೆ ಆಧುನಿಕ ಪೇಟೆ. ಸುಮಾರು ಆರನೇ ಶತಮಾನದ ಚಾಲುಕ್ಯರಾಡಳಿತ ಕಾಲಕ್ಕೆ ಈ ಗುಡ್ಡೆಯ ಬಂಡೆಗಳನ್ನು ಕೊರೆದು ಮಾಡಿದ ಮಂದಿರ, ವಿಗ್ರಹಗಳು ಇಂದು ವಿಶ್ವಖ್ಯಾತಿಯನ್ನೇ ಗಳಿಸಿವೆ. ಇಲ್ಲಿನ ಕಲಾಲಯ ವೈದಿಕ ಧರ್ಮಕ್ಕೇ ಸೀಮಿತಗೊಳ್ಳದೆ ಜೈನ, ಬೌದ್ಧ ಪ್ರಭಾವಗಳನ್ನೂ ಪ್ರತಿನಿಧಿಸುತ್ತವೆ. ಕನ್ನಡದ ಪ್ರಥಮ ಶಾಸನದ ಖ್ಯಾತಿಯೊಡನೆ ಪ್ರಚಾರದಲ್ಲಿರುವ ಕಪ್ಪೆ ಅರಭಟ್ಟನ ನೆಲೆಯೂ ಇದೇ ಬಾದಾಮಿ.

ದೇವಕಿಗೆ ಬಾದಾಮಿ ಎರಡನೇ ದರ್ಶನ. ಅಂದಿಗೆ ಒಂದೆರಡು ವರ್ಷ ಮೊದಲು, ನನ್ನ ತಂದೆ ಎಂ.ಎಸ್.ಐ.ಎಲ್ ಪರವಾಗಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ಒಂದನ್ನು ನಡೆಸುತ್ತಿದ್ದರು. ಅದರ ಭಾಗವಾಗಿ ಅವರು ಈ ವಲಯಗಳಲ್ಲಿ ವಿಶೇಷ ಕಾರಿನಲ್ಲಿ ಬಂದಿದ್ದಾಗ ತಾಯಿ, ದೇವಕಿ, ಅಭಯರನ್ನೂ ಜತೆಗೆ ಸೇರಿಸಿಕೊಂಡಿದ್ದನ್ನು ನೆನಪಿಸಿಕೊಂಡಳು. ಸೂರ್ಯನ ಉರುಬೇಗೆಯಲ್ಲಿ ಕೊಳ ತುಂಬ ಸೊರಗಿತ್ತು, ಬಂಡೆಗಳು ಕಾದು ಕೆಂಪೇರಿದಂತಿತ್ತು. ಅಲ್ಲಿನ ನಾಗರಿಕ ಮಂಗಗಳು ನಮ್ಮ ಬೈಕಿನ ಚೀಲಗಳನ್ನು ಆಹಾರಕ್ಕಾಗಿ ಶೋಧಿಸುವ ಅಪಾಯವನ್ನು ಸ್ಥಳೀಯರು ಎಚ್ಚರಿಸಿದರು. ಹಾಗೆ ಅದರ ಮೇಲೊಂದು ಕಣ್ಗಾವಲು ಇಟ್ಟುಕೊಂಡೇ ನಾವು ಗುಹಾಲಯಗಳತ್ತ ಹೊರಟೆವು.

“ಗೈಡ್ ಸರ್, ಗೈಡ್” ಎಂದು ಕೇಳುವವರು ಬಾದಾಮಿಯಲ್ಲಿದ್ದಂತೆ ದೊಡ್ಡ ಪ್ರವಾಸೀ ಕೇಂದ್ರಗಳಲ್ಲಿ ಸಾಮಾನ್ಯವಾಗಿರುತ್ತಾರೆ. ಅವರು ಕೊಡುವ ಮಾಹಿತಿಯಲ್ಲಿ ಒಂದು ಮಟ್ಟಿನ ಅಧ್ಯಯನ, ಅನುಭವದ ಪಕ್ವತೆ ಇದ್ದೇ ಇರುತ್ತದೆ. ಅವರು ಮಾಡುವುದು ಕೇವಲ ಹೊಟ್ಟೆಪಾಡಲ್ಲ, ಆ ಶ್ರಮಕ್ಕೊಂದು ವೃತ್ತಿ ಗೌರವವಿರುವುದೂ ನಿಜವೇ. ಆದರೆ ನಮ್ಮ ‘ಓಟ’ಕ್ಕೆ ಅವು ಪಾಠಪಟ್ಟಿಯ ಕಟ್ಟುಪಾಡಿನ ಉಪನ್ಯಾಸದಂತೆ ಹೊರೆಯಾಗುತ್ತಿತ್ತು. ನಾವೋ ಬಹುತೇಕ ಖಾಲಿ ಕಿಸೆಯಿಟ್ಟುಕೊಂಡು, ಜಾತ್ರೆಯ ನೂರೆಂಟು ಸರಕು ಮಳಿಗೆಗಳ ನಡುವೆ ಓಡುವ ಬಾಲಕರು. ನಮ್ಮ ಕಾಲಮಿತಿ ಹಾಗೂ ಗ್ರಹಣ ಸಾಮರ್ಥ್ಯ ಹೆಚ್ಚಿನವಕ್ಕೆ ಸಿದ್ಧವಿರಲಿಲ್ಲ. ಇಲ್ಲಿ ಕಾಡು, ಅಲ್ಲಿ ದೇವಳ, ಮತ್ತೆಲ್ಲೋ ಐತಿಹಾಸಿಕ ರಚನೆ, ಇನ್ನೆಲ್ಲೋ ಪ್ರಾಕೃತಿಕ ವೈಶಿಷ್ಟ್ಯ… ಎನ್ನುತ್ತ ಪರಸ್ಪರ ಪೂರಕವಾಗಬೇಕಿಲ್ಲದ ಸಂಗತಿಗಳ ಸರಳ ದರ್ಶನವನ್ನಷ್ಟೇ ಉದ್ದೇಶಿಸಿ ಓಡುವವರು. ಬಾದಾಮಿಯ ಗೈಡುಗಳು ಇಂಗ್ಲಿಷ್, ಹಿಂದಿ, ಕನ್ನಡ ಎಂದಿತ್ಯಾದಿ ಭಾಷಾವೈವಿಧ್ಯ ಮೆರೆದರೂ ದರಗಳಲ್ಲಿ ಕೆಳಸ್ತರಕ್ಕಿಳಿದರೂ ನಿರಾಕರಿಸಿದೆವು. ನನ್ನ ನೆನಪನ್ನು ಮೀರಿದ ವಿಚಾರಗಳನ್ನು ಆಸಕ್ತರು ಅಂತರ್ಜಾಲದಲ್ಲಿ ಎಷ್ಟೂ ಕಂಡುಕೊಳ್ಳಬಹುದು. ನಾವು ಸ್ವತಂತ್ರವಾಗಿ, ಚುರುಕಾಗಿ ಸುತ್ತು ಹಾಕಿ, ಸುಮಾರು ಒಂದೂವರೆ ಗಂಟೆಯನ್ನೇ ಕಳೆದು, ಮುಂದಿನೂರಿನ ದಾರಿ ನೋಡಿದೆವು.

ಪಟ್ಟದ ಕಲ್ಲಿನ ಸುವಿಸ್ತಾರ ಬಯಲಿನಲ್ಲಿ ಹಲವು ದೇವಾಲಯಗಳು ಹರಡಿಕೊಂಡಿವೆ. ಇವೂ ಬಾದಾಮಿಯಂತೇ ಆರನೇ ಶತಮಾನದ ಚಾಲುಕ್ಯರ ಕಾಲಕ್ಕೆ ಸೇರಿದವು ಮತ್ತು ಜೈನ ಪ್ರಭಾವಕ್ಕೂ ಒಳಗಾದವು. ಕೆಲವು ರಾಜವಂಶಗಳ ಪೀಠಗ್ರಹಣ ಸಮಾರಂಭಕ್ಕೆ ಸಾಕ್ಷಿಯಾಗಿ ಒದಗಿದ ಸ್ಥಳವೂ ಇದು ಆದ್ದರಿಂದಲೇ ಪಟ್ಟದಕಲ್ಲು ಎಂಬ ಹೆಸರು ಹೊತ್ತಿದೆಯಂತೆ. ನಾವು ಹೋದ ಕಾಲಕ್ಕೆ, ಕೆಲವು ಮುಖ್ಯ ದೇವಸ್ಥಾನಗಳನ್ನು ಬಿಟ್ಟು ಇತರ ಪ್ರದೇಶವನ್ನೆಲ್ಲ ವರ್ತಮಾನದ ಹಳ್ಳಿಗಳು ಆಕ್ರಮಿಸಿ ಬಿಟ್ಟಿದ್ದವು. ಬಹುಶಃ ಪ್ರಾಚ್ಯ ಇಲಾಖೆ, ತೆರವಿದ್ದಷ್ಟಕ್ಕೆ ತತ್ಕಾಲೀನ ಪಾಗಾರ ಹಾಕಿ, ಹುಲ್ಲ ಹಾಸು ಮುಂತಾದ ಪ್ರದರ್ಶನ ಯೋಗ್ಯತೆಯನ್ನು ತಂದುಕೊಟ್ಟಿತ್ತು. ಇಂದು ಅವೆಲ್ಲ ವಿಶ್ವ ಪರಂಪರೆಯ ಮಾನ್ಯತೆಯ ಛತ್ತಿನಡಿಯಲ್ಲಿವೆ. ಬಹುಶಃ ಹಳ್ಳಿಗಳನ್ನೆಲ್ಲ ಮುಕ್ತಗೊಳಿಸಿ, ಪೂರ್ಣ ಮತ್ತು ಹೆಚ್ಚಿನ ಸುವ್ಯವಸ್ಥಿತ ಪ್ರದರ್ಶನ ಲಭ್ಯವಿರಬಹುದು. ನಾವು ಅಲ್ಲಿನ ವೀಕ್ಷಣೆಯನ್ನು ನಲ್ವತ್ತೇ ಮಿನಿಟಿನಲ್ಲಿ ಮುಗಿಸಿಕೊಂಡು ಸರಣಿಯ ಕೊನೆಯ ತಾಣ – ಐಹೊಳೆಯತ್ತ ಸಾಗಿದೆವು.

೩೭ ಡಿಗ್ರಿ ಸೆಲ್ಶಿಯಸ್ಸಿನ ತಾಪಕ್ಕೆ (ತೇ ೩೦%) ಮೈಯೊಡ್ಡಿ, ಬರಿಯ ಮಣ್ಣು, ಡಾಮರು ಕಿತ್ತ ಹರಕು ಮುರುಕು ರಸ್ತೆಯಲ್ಲಿ ದೂಳೀ ಸ್ನಾನ ಮಾಡುತ್ತ ಹದಿನಾಲ್ಕು ಕಿಮೀ ಕಳೆದು ಒಂದೂ ಮುಕ್ಕಾಲರ ಮಟಮಟ ಮಧ್ಯಾಹ್ನ ಐಹೊಳೆ ಸೇರಿದೆವು. ಇದು ಬಾದಾಮಿಯಷ್ಟು ಭವ್ಯವಲ್ಲದಿದ್ದರೂ ಮತ್ತೆ ಕಲ್ಲುಗುಡ್ಡೆಗಳ ಪರಿಸರ. ಅಲ್ಲಿನ ಪ್ರವಾಸೀ ಬಂಗ್ಲೆಯಲ್ಲಿ ದಿಢೀರ್ ಊಟ ಕೊಡುವ ಉತ್ಸಾಹೀ ಮೇಟಿ ಸಿಕ್ಕ. ಅಲ್ಲೇನು ಊಟದ ಶಾಸ್ತ್ರ ಮಾಡಿದೆವೋ ನೆನಪಿಲ್ಲ. ಗುಡ್ಡೆಯ ಪರಿಸರದಲ್ಲಿ ಓಡಾಡಿದೆವು. ಬಾದಾಮಿಗಿಂತಲೂ ರೂಕ್ಷವಾಗಿ ತೋಡಿದ್ದ, ಕೆತ್ತಿದ್ದ ಗುಹಾಲಯಗಳನ್ನು, ಮುರುಕು ಮಂಟಪಗಳನ್ನು ಸುತ್ತಾಡಿ ಮುಗಿಸಿದೆವು. ಮತ್ತೆ ಬಿಸಿಲ ಕಾವು ಹಾಗೂ ಹಿಂದಣ ರಾತ್ರಿಯ ಅತಂತ್ರವನ್ನು ಸ್ವಲ್ಪವಾದರೂ ಹಗುರಗೊಳಿಸುವಂತೆ ಸ್ವಲ್ಪ ವಿಶ್ರಾಂತಿ ಪಡೆದೆವು.

ಮೂರೂಮುಕ್ಕಾಲರ ಸಮಯಕ್ಕೆ ಮತ್ತೆ ಓಟಕ್ಕಿಳಿದೆವು. ದಾರಿಯ ದುರವಸ್ಥೆ, ಕವಲು ದಾರಿಗಳ ಗೊಂದಲ ನಿಭಾಯಿಸಿಕೊಂಡು ಮುಂದುವರಿದವರಿಗೆ ಅಲ್ಲೊಂದು ಬೋರ್ಡಿನ ಸಣ್ಣ ಆಶ್ಚರ್ಯ ಕಾದಿತ್ತು – ‘ಮಂಗಳೂರ –> (ನಾಕೆಂಟು)… ಕಿಮೀ.’ ಮಂಗಳೂರು ಬಿಟ್ಟು ಎರಡೇ ದಿನಗಳಲ್ಲಿ ಭೂಪ್ರದಕ್ಷಿಣೆಯನ್ನೇ ಮುಗಿಸಿಬಿಟ್ಟೆವೇ! ನನ್ನಂಗಡಿಯಲ್ಲಿ ಹಿಂದೊಮ್ಮೆ ಆಸ್ಟ್ರೇಲಿಯಾ ಮ್ಯಾಗಜೀನ್ ಒಂದರಲ್ಲಿ ‘ಮ್ಯಾಂಗಲೂರ್ ಅಂತಾರಾಷ್ಟ್ರೀಯ ವಿಮಾನ ಪ್ರದರ್ಶನ’ದ ಅದ್ಭುತ ಪಟಗಳನ್ನು ನೋಡಿ ಬೆರಳು ಕಚ್ಚಿದ್ದೆ. ಆ ದಿನಗಳಲ್ಲಿ ನಮ್ಮ ಮಂಗಳೂರು-ಬಜ್ಪೆ ವಿಮಾನ ನಿಲ್ದಾಣಕ್ಕೆ ದೇಶೀಯ ದೊಡ್ಡ ವಿಮಾನಗಳನ್ನೂ ಧರಿಸುವ ತಾಕತ್ತಿರಲಿಲ್ಲ! ಮತ್ತೆ ನೋಡಿದರೆ ಅದು ಆಸ್ಟ್ರೇಲಿಯಾದ ಮಂಗಳೂರು! ಭಾರತ ಸೇವೆಯಲ್ಲಿದ್ದು ನಿವೃತ್ತರಾದ ಹಲವು ಬ್ರಿಟಿಷ್ ಅಧಿಕಾರಿಗಳು ಆಸ್ಟ್ರೇಲಿಯಾದ ನಿರ್ಜನ ಪ್ರದೇಶಗಳಲ್ಲಿ ನೆಲೆಸುತ್ತಿದ್ದರು. ಅವರು ಭಾರತ ಸೇವಾವಧಿಯಲ್ಲಿ ತಾವು ಪ್ರೀತಿಸಿದ ಸ್ಥಳನಾಮಗಳನ್ನು ಆಸ್ಟ್ರೇಲಿಯಾದ ಅಕ್ಷತ ನೆಲಗಳಿಗೆ ಇಟ್ಟುಕೊಂಡದ್ದರ ಫಲವಂತೆ ಅದು. ಆದರಿಲ್ಲಿ ಹಾಗೇನೂ ಇದ್ದಂತಿಲ್ಲ. ಮಲಪ್ರಭಾ ನದೀದಂಡೆಯ ಹಸಿರುಹೊದ್ದ ಪುಟ್ಟ ಮಂಗಳ ನೆಲೆಯೇ ಈ ಮಂಗಳೂರು. ಇಂದಿಗೂ ಅದು ಪುಟ್ಟ ಹಳ್ಳಿ ಮಾತ್ರ.

ಇನ್ನೊಂದು ಕುತೂಹಲ ಮೂಡಿಸಿದ ಕವಲು – ಕೂಡಲ ಸಂಗಮಕ್ಕೆ ೪೦ ಕಿಮೀ. ಮಲಪ್ರಭಾ ಮತ್ತು ಕೃಷ್ಣಾ ನದಿಗಳ ಸಂಗಮ ಸ್ಥಾನ, ಜಗದ್ಗುರು ಬಸವಣ್ಣ ಪುನೀತ ಕ್ಷೇತ್ರ ನಿಸ್ಸಂದೇಹವಾಗಿ ಪ್ರೇಕ್ಷಣೀಯವೇ. ಆ ದಿನಗಳಲ್ಲಿ ಭಾರೀ ಆಲಮಟ್ಟಿ ಅಣೆಕಟ್ಟಿನ ನಿರ್ಮಾಣ ನಡೆದಿತ್ತು. ಅದರ ಪರಿಣಾಮವಾಗಿ ಕ್ಷೇತ್ರದ ಮಹತ್ವಕ್ಕೆ ಮನ್ನಣೆ ಕೊಟ್ಟು, ರಚನೆಗಳನ್ನು ಸ್ಥಳಾಂತರಿಸುವ ಯೋಜನೆ ಭಾರೀ ಸಾರ್ವಜನಿಕ ತಲ್ಲಣವನ್ನೂ ಉಂಟು ಮಾಡಿತ್ತು. (ಮುಂದಿನ ದಿನಗಳಲ್ಲಿ ಕ್ಷೇತ್ರ ಇದ್ದಲ್ಲಿಗೇ ಭಾರೀ ತಡೆಗೋಡೆಯ ರಕ್ಷಣೆ ಕೊಟ್ಟದ್ದು ನಿಮಗೆಲ್ಲ ತಿಳಿದೇ ಇದೆ. ೨೦೦೫ರಲ್ಲಿ ಅಣೆಕಟ್ಟು ಲೋಕಾರ್ಪಣಗೊಂಡಿತು.) ಆದರೆ ನಮ್ಮ ‘ಪ್ರಾಕೃತಿಕ’ ಎಂಬ ಪ್ರಧಾನ ಶ್ರುತಿ ತಪ್ಪಿಸಿ, ಒಟ್ಟಾರೆ ಎಂಬತ್ತು ಕಿಮೀ ಪ್ರಯಾಣ ಮತ್ತು ಅಷ್ಟೇ ಸಮಯ ಕಳೆಯುವುದು ಅಸಾಧ್ಯ ಎಂದೇ ಯೋಜನಾನಿಷ್ಠೆಯನ್ನು ಉಳಿಸಿಕೊಂಡೆವು.

ಬಾಗಲಕೋಟೆ ಸಮೀಪಿಸುತ್ತಿದ್ದಂತೆ ಬಂಡೆಗಿಡಿದ ಗುಡ್ಡ ಸಾಲು ಪ್ರತ್ಯೇಕವಾಗಿ ಬಿಸಿಗಾಳಿ ಊಡಿ ನಮ್ಮನ್ನು ಹೈರಾಣಗೊಳಿಸಿತ್ತು. ಪೇಟೆಯ ‘ಶಾಸ್ತ್ರಿ ಹೋಟೆಲ್’ನಲ್ಲಿ ಕಾಫಿಂಡಿಗಿಂತಲೂ ಮುಖ್ಯವಾಗಿ ಸ್ವಲ್ಪಾದರೂ ನೆರಳು, ಫ್ಯಾನಿನ ತಣ್ಪು ಬಯಸಿ ಹತ್ತಿಪ್ಪತ್ತು ಮಿನಿಟು ನಿಂತಿದ್ದೆವು. ಬದಲಿಗೆ ನಮಗೆ ಸಿಕ್ಕಿದ್ದು ಆ ವಲಯದ ಜನಮನದಲ್ಲಿ ನೆಲೆಗಟ್ಟಿ, ಬಲಿಯುತ್ತಿದ್ದ ಮುಳುಗಡೆ ಭೀತಿಯ ಕಾವು. ಅಲಮಟ್ಟಿ ಅಣೆಕಟ್ಟಿನ ಲೋಕಾರ್ಪಣೆಯಾದಂದು ಬಹುಶಃ ಆ ಹೋಟೆಲಿದ್ದ ಪ್ರದೇಶ ಜಲಗರ್ಭ ಸೇರಿರಬೇಕು!

ಗದ್ದನಕೇರಿ ಕ್ರಾಸಿನಲ್ಲಿ ನಾವು ಮತ್ತೆ ಹುಬ್ಬಳ್ಳಿ – ಬಿಜಾಪುರ ರಸ್ತೆ ಸೇರಿಕೊಂಡೆವು. ಇಂದು ರಾಷ್ಟ್ರೀಯ ಹೆದ್ದಾರಿ ೫೨ ಎಂದೇ ನಮೂದು ಕಾಣಿಸುವ ಆ ದಾರಿ (ನಿಜಕ್ಕೂ ಹೇಗಿದೆಯೋ ಗೊತ್ತಿಲ್ಲ), ಮೂವತ್ತು ವರ್ಷಗಳ ಹಿಂದೆ ಆ ಸುಳಿವನ್ನು ಕೊಡುವಂತಿರಲಿಲ್ಲ. ಸಾಧಾರಣ ಡಾಮರು ಕಂಡ, ದೊಡ್ಡ ಎರಡು ವಾಹಗಳಿಗೆ ಅಗಲ ಕಡಿಮೆಯ ದಾರಿ. ಅಷ್ಟೇ ಏನು ಕೆಲವೊಮ್ಮೆ ಎದುರಿನಿಂದ ಬರುವ ಭಾರೀ ವಾಹನಗಳಿಂದ ಬದುಕುಳಿಯಬೇಕಾದರೆ ನಾವೇ ಮಣ್ಣಿಗಿಳಿದು ದಾರಿ ಕೊಡುವ ಅವಸ್ಥೆ. ಬಲು ಜಾಗ್ರತೆಯಲ್ಲಿ ಕೊಲ್ಹಾರ ಕಳೆಯುವ ಸುಮಾರಿಗೆ ಅನಿರೀಕ್ಷಿತ ಸಣ್ಣ ಮಳೆ ಸುರಿಯತೊಡಗಿತು. ಬಿಸಿಲು, ಬೇಗೆ, ಬೆವರಿನಲ್ಲಿ ಬೆಂದ ನಮ್ಮ ಜೀವಕ್ಕೇನೋ ಕುಶಿ ಸಿಕ್ಕಿತು. ನಮ್ಮ ಹಣ, ಪತ್ರ, ಬಟ್ಟೆಗಳೆಲ್ಲ ಪ್ಲ್ಯಾಸ್ಟಿಕ್ ಆವರಣದಲ್ಲೇ ಇದ್ದುದರಿಂದ ನಮಗವು ನೆನೆದು ಹೋಗುವ ಭಯವೂ ಇರಲಿಲ್ಲ. ಆದರೆ ಒಮ್ಮೆಗೇ ನಮ್ಮೆದುರು ಹೋಗುತ್ತಿದ್ದ ಬಸ್ಸೊಂದು ವಿರುದ್ಧ ದಿಕ್ಕಿನ ವಾಹನಕ್ಕೆ ರಸ್ತೆ ಕೊಡಲು ಮಣ್ಣಿಗಿಳಿದದ್ದು ನೋಡಿದಾಗ ನಮ್ಮದು ನೀರೊಳಗಿದ್ದೂ ಬೆವರುವ ಸ್ಥಿತಿ. ಅಷ್ಟು ದೊಡ್ಡ ವಾಹನ ನೀರು ಬಿದ್ದ ಕರಿಮಣ್ಣಿನಲ್ಲಿ ಪಾಚಿ ಮೆಟ್ಟಿದ ಧಡಿಯನಂತೆ ಜಾರಿ ಚರಂಡಿ-ಚಕ್ರವಾಗಿತ್ತು. ಅದೃಷ್ಟಕ್ಕೆ ಜನ, ಅನ್ಯ ವಾಹನ, ಮರ, ಪ್ರಪಾತ ಇರಲಿಲ್ಲ. ನಾವು ಸಿಕ್ಕ ಯಾವುದೋ ಮರೆಯಲ್ಲಿ ನಿಂತು, ಮಳೆ ಬಿಡುವುದನ್ನು ಕಾದೆವು. ಅನಂತರವೂ ತರಾತುರಿ ತೋರದೆ, ಮಣ್ಣಿಗಿಳಿಯದೇ ಬಿಜಾಪುರ ಮುಟ್ಟುವಾಗ ಏಳೂಕಾಲಾಗಿತ್ತು; ಉಪಾಧ್ಯರ ಮಾತಿನಂತೆ “ಅಪಘಾತಕ್ಕೆ ಸಿಕ್ಕಿ ಏಳೂಕಾಗದಂತೆ” ಆಗಲಿಲ್ಲ!

ನನ್ನ ಬ್ರಹ್ಮಚಾರಿ ಬಿಡಾರ ಆರ್ಯ ಸಮಾಜ ರಸ್ತೆಯಲ್ಲಿದ್ದಾಗ ಎದುರು ಮನೆಯನ್ನೇ ಕಛೇರಿ ಮಾಡಿಕೊಂಡಿದ್ದ ವೈನ್ ವಿತರಕ ಸಂಸ್ಥೆಯೊಂದರ ನೌಕರ ಮಣಿಕುಂಡಲ ಛಾಯಾಪತಿ ರಾಮು, ಸುಲಭ ಗುರುತಕ್ಕೆ ಎಂ.ಸಿ.ರಾಮು. ಮಜ್ಜಿಗೆ ನೀರಿನಿಂದಾಚಿನ ಪರಿಚಯವಿಲ್ಲದ ನನಗೆ ಇವರು ಕೇವಲ ನಾಟಕದ ರಾಮು. ಇದ್ದ ಬಡಪಾಯೀ ಸಂಬಳದಲ್ಲೂ ನನ್ನಲ್ಲಿ ನಾಟಕ ಪುಸ್ತಕ ಖರೀದಿಸುತ್ತಿದ್ದರು, ಏನೇನೋ ತಂಡ ಸೇರಿ, ಕಟ್ಟಿ (ಅಯನ), ಕಸರತ್ತು ನಡೆಸಿ, ಎಲ್ಲೋ ದುಂಬಾಲು ಬಿದ್ದು ಪ್ರದರ್ಶನಕ್ಕೇರಿಸುತ್ತಿದ್ದರು. ರಾಮು ಬೇಸಗೆ ರಜಾದಿನಗಳಲ್ಲಿ ಮಕ್ಕಳ ಶಿಬಿರ ನಡೆಸುವ ಕಾಲಕ್ಕೆ, ನಮ್ಮ ಕಿರಿಯ ಅಭಯನನ್ನು ಒಳಗೊಂಡು ನಮಗೆ ಇನ್ನಷ್ಟು ಆಪ್ತರಾದರು. ಹಾಗೇ ಅವರ ರಂಗ ಮತ್ತು ಸಮೂಹ ಚಟುವಟಿಕೆಗಳ ಸಾಧ್ಯತೆ, ಸಂಪರ್ಕಗಳು ರಾಜ್ಯಮಟ್ಟಕ್ಕೇ ವಿಸ್ತರಿಸಿದ್ದವು.

ರಾಮು ನಮ್ಮ ಭಾರತ ಪ್ರವಾಸದ ಯೋಜನೆಯ ಪ್ರಸ್ತಾಪ ಬಂದ ಕೂಡಲೇ ನನಗೆ ಬಿಜಾಪುರದ ಜೋಶಿಯವರನ್ನು (ಕ್ಷಮಿಸಿ, ಪೂರ್ಣ ಹೆಸರು ಮರೆತಿದ್ದೇನೆ) ಪರಿಚಯಿಸಿದ್ದರು. ನಾವು ಜೋಶಿಯವರ ಮನೆಯನ್ನು ತಡವಾಗಿಯೇ ತಲಪಿದಾಗ ‘ಯಜಮಾನ’ ಜೋಶಿಯವರಿಲ್ಲದಿದ್ದರೂ ಸಕಲ ವ್ಯವಸ್ಥೆಗಳು ನಮ್ಮನ್ನೇ ಕಾದಿದ್ದವು. ಜೋಶಿಯವರ ಕುಟುಂಬ ಮೊದಲಿಗೆ ನಮ್ಮನ್ನು ಮನೆಯವರಂತೆಯೇ ಸತ್ಕರಿಸಿದರು. ಅನಂತರ ನಮಗೆ ರಾತ್ರಿಗೆ ತಂಗಲು ವೈವಿಕೆ (ಯುವಕ ವಿಕಾಸ ಕೇಂದ್ರ) ಕಛೇರಿಯ ಕೀಲಿಕೈಯನ್ನೇ ಕೊಟ್ಟುಬಿಟ್ಟರು. ನಮ್ಮನ್ನೇ ಕಾದಿದ್ದ ಕಛೇರಿ ಸಹಾಯಕ ಸಿದ್ಧಣ್ಣ ಬಿರಾದಾರ್ ತಮ್ಮ ಮೊಪೆಡ್ ಏರಿ ನಮಗೆ ವೈವಿಕೆ ದಾರಿ ತೋರಿದರು. ವೈವಿಕೆಯೊಳಗೆ ನಾವು ಹೊರೆ ಇಳಿಸಿ ಸುಧಾರಿಸಿಕೊಂಡ ಬೆನ್ನಿಗೆ, ಸಮೀಪದ ಹೋಟೆಲಿಗೊಯ್ದು, ಜೋಶಿಯವರ ಲೆಕ್ಕದಲ್ಲೇ ಒಳ್ಳೆಯ ಊಟವನ್ನೂ ಹಾಕಿಸಿದರು. ಕೊನೆಯದಾಗಿ ಬೆಳಿಗ್ಗೆ ನಮ್ಮನುಕೂಲಕ್ಕೆ ಬಂದು ನಗರದರ್ಶನ ಮಾಡಿಸುವ ಆಶ್ವಾಸನೆ ಕೊಟ್ಟೇ ಹೋದರು.

ಆ ದಿನಗಳಲ್ಲಿ ಬಿಜಾಪುರ ಭಾರೀ ನೀರ ಕೊರತೆಯಲ್ಲಿ ಬಳಲಿತ್ತು. ನಮ್ಮೆಲ್ಲಾ ಮಹಾನಗರಗಳೂ ಸ್ಥಳೀಯ ಸಂಪತ್ತನ್ನು ಕಸ ಮಾಡಿ, ಇನ್ನೆಲ್ಲಿನದಕ್ಕೋ ಹಪಹಪಿಸುವಂತೆ, ಬಿಜಾಪುರವೂ ಕೃಷ್ಣಾ ನದಿಯ ನೀರಿನ ಕನಸ್ಸಿನಲ್ಲಿತ್ತು. ನಮಗಂತೂ ವೈವಿಕೆಯ ವ್ಯವಸ್ಥೆಯಲ್ಲಿ ಹಿತವಾದ ಸ್ನಾನ, ವಸ್ತ್ರಶುದ್ಧಿಗೆ ಯಾವ ಕೊರತೆಯೂ ಆಗಲಿಲ್ಲ. ಇನ್ನೇನು ಹುಬ್ಬಳ್ಳಿಯಲ್ಲಿ ಬಾಕಿಯಾಗಿದ್ದ ನಿದ್ರೆಯ ಶಿಲ್ಕನ್ನು ನಿರಾತಂಕವಾಗಿ ಚುಕ್ತಾ ಮಾಡುವುದು ಎನ್ನುವಾಗ ಅನಿರೀಕ್ಷಿತವಾಗಿ ಬಾಲಣ್ಣನಿಂದ ಅಪಸ್ವರ ಕೇಳಿತು.

ತಂಡವಾಗಿ ನಾವಾರು ಮಂದಿ ಎಷ್ಟೂ ಬೈಕ್ ಯಾನಗಳನ್ನು ಮೊದಲು ಮಾಡಿದವರೇ ಇದ್ದೆವು. ಇಲ್ಲೂ ನಮ್ಮ ಓಟದ ಶಿಸ್ತು ಬದಲಾಗಿರಲಿಲ್ಲ. ಯಾರೋ ಒಬ್ಬ ಮುಂದೆ ಹೊರಡುತ್ತಿದ್ದ, ಉಳಿದವರು ಅನುಕೂಲದಂತೆ ಹಿಂಬಾಲಿಸುತ್ತಿದ್ದೆವು. ಮೂರು ಬೈಕುಗಳು ದೀರ್ಘ ಕಾಲಕ್ಕೆ ಪರಸ್ಪರರ ಕಣ್ಣಳವಿಯಿಂದ ತಪ್ಪಿ ಹೋಗದ ಎಚ್ಚರ ವಹಿಸುತ್ತಿದ್ದೆವು. ಅತಿ ವೇಗ, ಪರಸ್ಪರ ಸ್ಪರ್ಧಾ ಓಟ, ಅನಾವಶ್ಯಕ ಸಮಭುಜದ ಓಟಗಳನ್ನೆಲ್ಲ ನಾವು ಮಾಡುತ್ತಿರಲಿಲ್ಲ. ಸಹಜವಾಗಿ ಆಗೀಗ ಒಬ್ಬರನ್ನಿನ್ನೊಬ್ಬರು ಹಿಂದೆ ಹಾಕುತ್ತ ಓಟದಲ್ಲೇ ಸ್ಥಾನಗಳು ಬದಲುತ್ತಿರುವಂತೆಯೂ ನೋಡಿಕೊಳ್ಳುತ್ತಿದ್ದೆವು. ಇದರಿಂದ ಒಬ್ಬರಿನ್ನೊಬ್ಬರ ಬೈಕ್ ಮತ್ತು ಸವಾರರುಗಳ ಸ್ಥಿತಿಗತಿಗಳನ್ನು ಹೊರಗಿನಿಂದ ಕಂಡು ವಿಮರ್ಶೆ ಮಾಡಿಕೊಳ್ಳುವುದೂ ಸಾಧ್ಯವಾಗುತ್ತಿತ್ತು. ಆ ಲೆಕ್ಕದಲ್ಲಿ ಎರಡೂ ದಿನ ನಾನು “ಬಾಲಣ್ಣ ಯಾಕೋ ಮೈ ಭಾರೀ ಬಿಗಿ ಮಾಡಿ ಬಿಡುವಂತೆ ಕಾಣುತ್ತದೆ” ಎಂದು ದೇವಕಿಯಲ್ಲಿ ಹೇಳಿದ್ದಿತ್ತು. ಹೊಸ ಯೋಜನೆಯ ಆತಂಕವೋ ಸಣ್ಣಪುಟ್ಟ ದೈಹಿಕ ಸೆಡವೋ ಸರಿಯಾದೀತೆಂದು ಸುಮ್ಮನಾಗಿದ್ದೆವು. ಆದರೆ ನಿಜದಲ್ಲೇ ಬಾಲಣ್ಣ ಎರಡೂ ದಿನ ಬಳಲಿದ್ದರು. ಫಲವಾಗಿ ಮಲಗಲು ಹೊರಡುತ್ತಿದ್ದಂತೆ ಒಮ್ಮೆಗೇ ಘೋಷಿಸಿದ್ದರು “ಅಶೋಕರೇ, ನಾನು ನಾಳೆ ವಾಪಾಸು ಮಂಗಳೂರಿಗೆ ಹೋಗುತ್ತೇನೆ”!

ನಮಗೆಲ್ಲರಿಗೂ ದೊಡ್ಡ ಆಘಾತವೇ ಆಗಿತ್ತು. ಮೊದಲು ಯಾವ ವೈಯಕ್ತಿಕ ಅಸಮಾಧಾನವೂ ಇಲ್ಲ, ಶುದ್ಧ ದೈಹಿಕ ನೋವೊಂದೇ ಕಾರಣ ಎನ್ನುವುದನ್ನು ಸ್ಪಷ್ಟ ಮಾಡಿಕೊಂಡೆವು. ಅವರಿಗೆ ಹುಬ್ಬಳ್ಳಿ ತಲಪಿದಂದೇ ಬೆನ್ನು ನೋವಿತ್ತಂತೆ. ಅದು ಬಹು ದೀರ್ಘ ಓಟದ ಪರಿಣಾಮವಿರಬಹುದು ಎಂದುಕೊಂಡರಂತೆ. ರಾತ್ರಿ ವಿಶ್ರಾಂತಿಯೂ ಸರಿಯಾಗಲಿಲ್ಲ. ಎರಡನೇ ದಿನದ ಕೊನೆಗಾಗುವಾಗ ನೋವು ಇನ್ನು ಅಸಾಧ್ಯ ಎನ್ನುವ ಭಾವ ಮೂಡಿಸಿತ್ತು. ಸುಲಭವಾಗಿ ಊರಿಗೆ ಮರಳಲಾದಷ್ಟು ದೂರಕ್ಕೆ ಹೋಗುವುದು, ನಿರಂತರ ಇಪ್ಪತ್ತೆಂಟು ದಿನಗಳಿಗೆ ತಂಡಕ್ಕೆ ಭಾರವಾಗುವುದು ಅವರಿಗೆ ಹಿಡಿಸಲಿಲ್ಲ. ಸಂಕೋಚ ಮರೆತು ಹೇಳಿಕೊಂಡಿದ್ದರು. ಮ್ಗತ್ತೆ ನಾವೆಲ್ಲ ಅವರ ಸವಾರಿ ಭಂಗಿಯ ವಿಮರ್ಶೆ ಮಾಡಿದೆವು. ತತ್ಕಾಲೀನವಾಗಿ ಸಣ್ಣ ನೋವು ಉಪಶಮನಕಾರೀ ಮಾತ್ರೆ ಕೊಟ್ಟು ಸಮಾಧಾನಿಸಿದೆವು. ಮೂರನೇ ದಿನದ ಓಟವೂ ಸಣ್ಣದಿರುವುದರಿಂದ ಪ್ರಯೋಗ ಮುಂದುವರಿಸಲು ಧೈರ್ಯ ತುಂಬಿದೆವು. ವಿಜಯಪುರ ನಿದ್ರೆಯಲ್ಲಾಗಲೀ ಬಾಲಣ್ಣನನ್ನಾಗಲೀ ಸೋಲಿಸಲಿಲ್ಲ. ಮುಂದೆ ಬೆನ್ನು ಸಡಿಲ ಬಿಟ್ಟ ಸವಾರ ಬಾಲಣ್ಣನಿಗೆ ಬೆನ್ನು ನೋವು ಬರಲಿಲ್ಲ, ನೋವು ಉಪಶಮನ ಮಾತ್ರೆ ಕರಗಿಸಲೂ ಇಲ್ಲ. ಮಂಗಳೂರಿಗೆ ಮರಳುವ ಮಾತಂತು ಮರೆತೇ ಹೋಯ್ತು! (ದಿನದ ಓಟ ೨೭೦ ಕಿಮೀ. ರಾತ್ರಿಯ ತಾ. ೩೩, ತೇ. ೨೬% ಔ. ೨೨೦೦ ಅಡಿ)

(ಮುಂದುವರಿಯಲಿದೆ)