[ಮುಮ್ಮಾತು: ಸಾವಿರ ಕೊಟ್ಟು ಲಕ್ಷ ಗಳಿಸುವ ಯೋಗ ೨೦೧೦ ರ ನನ್ನ ಆರು ಭಾಗಗಳ ಲಕ್ಷದ್ವೀಪ ಪ್ರವಾಸ ಕಥನ ನೀವೆಲ್ಲ ಓದಿದ್ದೀರಿ ಎಂದು ಭಾವಿಸುತ್ತೇನೆ. ಅನಂತರದ ದಿನಗಳಲ್ಲಿ ಗೆಳೆಯ ಅಬ್ದುಲ್ ರಶೀದ್ ಕವರತ್ತಿಯಲ್ಲಿರುವ ಆಕಾಶವಾಣಿಯ ಶಾಖೆಗೆ ವರ್ಗಾವಣೆಗೊಂಡರು. ಅವರ ಚಿತ್ರಗಳು, ಚಲಚಿತ್ರಗಳು ಎಲ್ಲಕ್ಕೂ ಮಿಗಿಲಾಗಿ ಲಕ್ಷದ್ವೀಪ ಡೈರಿಯ ಮುಗಿಯದ ಪುಟಗಳು, ನಮಗೆ ಎಂದೂ ಹಳತಾಗದ, ಕಡಲಲೆಗಳಂತೇ ಹೊಸ ವಿಚಾರಗಳನ್ನು ಮಗುಚುತ್ತಲೇ ಇವೆ. ನನಗೆ ಸಿಕ್ಕ ಈ ಆಪ್ತ ಸರಣಿಯಲ್ಲಿ ಮೂರನೇ ಕಣ್ಣು ತೆರೆಯುತ್ತಿರುವವರು – ಇನ್ನೊಬ್ಬ ಗೆಳೆಯ, ಗಿರೀಶ್. ಇವರದು ಉರಿಗಣ್ಣಲ್ಲ, ಲಕ್ಷದ್ವೀಪಗಳನ್ನಾವರಿಸಿದ ಅರಬೀ ಸಮುದ್ರದ್ದೇ ಇನ್ನೊಂದು (ಪೂರ್ವ) ಮಗ್ಗುಲಿನ ಕರಾವಳಿಯಲ್ಲೇ ಹದಗೊಂಡ ದೃಷ್ಟಿ. ವೃತ್ತಿಯಲ್ಲಿ ಅಗ್ನಿಶಾಮಕರಾಗಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿದ್ದ ಗಿರೀಶ್ ಈಗ ಲಕ್ಷದ್ವೀಪಕ್ಕೆ ವರ್ಗಾವಣೆಗೊಂಡಿದ್ದಾರೆ. ಇವರು ನನ್ನ ಜಾಲತಾಣದ ಓದುಗರಿಗೆ ಹೊಸಬರೇನಲ್ಲ (ನೋಡಿ: ಡಾರ್ಜಿಲಿಂಗ್ ಜೋಡುಕಥನ ). ಗಿರೀಶ್ ಬಜ್ಪೆಯ ‘ಟೇಬಲ್ ಟಾಪ್’ ನಿಂದ ಅಗಾತ್ತಿಯ ‘ಲಂಬಿಸಿದ ಮೀನಬಾಲ’ಕ್ಕೆ ತನ್ನ ವಿಶಿಷ್ಟ ನೋಟವನ್ನು ಅಳವಡಿಸಿದ್ದಾರೆ. ಅವರು ಲಕ್ಷದ್ವೀಪದ ಇಂದಿನ ಸಮಾಜದ ಪರಿಚಯಾತ್ಮಕ ಚಿತ್ರಣವನ್ನು ಸಣ್ಣ ಲೇಖನದ ಕಟ್ಟಿನಲ್ಲಿ ಹಿಡಿದು, ಜುಲೈ ೨೦೨೦ರ ಅನಂತ ಪ್ರಕಾಶ ಮಾಸ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಅದರ ಚಂದಕ್ಕೊಲಿದ ನನಗದನ್ನು ಯಥಾವತ್ತು ಮರು ಹಂಚಲು ಪರಿಷ್ಕರಿಸಿ, ಹೆಚ್ಚಿನ ಫೋಟೋ ಸೇರಿಸಿ ಅವಕಾಶ ಮಾಡಿಕೊಟ್ಟ ಗಿರೀಶರಿಗೆ ಧನ್ಯವಾದಗಳು.- ಅಶೋಕವರ್ಧನ] 

ಅಕ್ಟೋಬರ್ ೨೦೧೯ರಲ್ಲಿ ಲಕ್ಷದ್ವೀಪ ಸಮೂಹದ ಅಗಾತ್ತಿ ವಿಮಾನ ನಿಲ್ದಾಣಕ್ಕೆ ನನ್ನನ್ನು ವರ್ಗಾಯಿಸಿದ ಸುದ್ಧಿ ಬಂದಾಗ ನನಗಿಂತಲೂ ಇತರರಿಗೆ ಜಾಸ್ತಿ ಆತಂಕವಾದಂತಿತ್ತು. (ಅಥವಾ ಹಾಗಂತ ತೋರಿಸಿಕೊಳ್ಳುತ್ತಿದ್ದರು!) ಅಲ್ಲಿ ಏನೇನೂ ಇಲ್ಲ, ಬರೇ ಸಮುದ್ರ, ಮಾಂಸಾಹಾರ ಮಾತ್ರ ಲಭ್ಯ, ಸಸ್ಯಾಹಾರಿಗಳಿಗೆ ಅಲ್ಲಿ ಜೀವನ ಬಲು ಕಷ್ಟ ಇತ್ಯಾದಿ. ಸರಕಾರಿ ಕೆಲಸ ಅಂದ ಮೇಲೆ ವರ್ಗಾವಣೆ ಆದೇಶ ಬಂದ ಮೇಲೆ ಹೋಗಲೇ ಬೇಕಾಗುತ್ತದೆ. ಆದರೂ ಸ್ಥಳೀಯ ಸಿಬ್ಬಂದಿ ಕೊರತೆಯ ಕಾರಣಗಳಿಂದಾಗಿ ತಕ್ಷಣಕ್ಕೆ ನನ್ನನ್ನು ಅಲ್ಲಿಗೆ ತೆರಳಲು ಬಿಡಲಿಲ್ಲ. ಬದಲಾಗಿ ಫ಼ೆಬ್ರವರಿ ೨೦೨೦ರ ಮೊದಲ ವಾರದಲ್ಲಿ ನಾನು ಸೇವೆಯಿಂದ ಬಿಡುಗಡೆಗೊಂಡು ಅಗಾತ್ತಿಯತ್ತ ವಿಮಾನವೇರಿದೆ.

ಅಗಾತ್ತಿ ಲಕ್ಷ ದ್ವೀಪ ಸಮೂಹದಲ್ಲಿ, ಜನವಸತಿ ಇರುವ ದ್ವೀಪಗಳಲ್ಲಿ ಒಂದು. ಇಲ್ಲಿ ಲೆಕ್ಕಕ್ಕೆ ಸುಮಾರು ಮೂವತ್ತೈದು ದ್ವೀಪಗಳಿವೆ ಎಂದು ಹೇಳುತ್ತಾರೆ. ಆದರೆ ಶಾಶ್ವತ ಅರ್ಥಾತ್ ಸಾರ್ವಕಾಲಿಕ ಜನವಸತಿ ಇರುವುದು ಹತ್ತು ದ್ವೀಪಗಳಲ್ಲಿ ಮಾತ್ರ. ಇಲ್ಲಿರುವ ಎಲ್ಲವೂ ಹವಳ ದಿಬ್ಬಗಳಿಂದ ಪರಿವರ್ತಿತವಾದ ದ್ವೀಪಗಳು. ಗಟ್ಟಿಮಣ್ಣು ಇಲ್ಲಿ ಕಾಣ ಸಿಗದು. ಎಲ್ಲೆಡೆಯೂ ಹವಳದ ನುಣುಪಾದ ಬಿಳಿಮರಳು. ಅಗಲ ಕಿರಿದು ರಸ್ತೆಗಳು, ಸಮುದ್ರ ಪಕ್ಕದ ವಾತಾವರಣ ಇತ್ಯಾದಿಗಳನ್ನು ಹೆಚ್ಚು ಕಡಿಮೆ ನಮ್ಮ ಕಡಲತೀರಕ್ಕೆ ತೀರಾ ಸಮೀಪವಿರುವ ಸಸಿಹಿತ್ಲು ಮುಂತಾದ ಊರುಗಳಿಗೆ ಹೋಲಿಸಬಹುದು. ಸಮುದ್ರದ ಪಕ್ಕ ಬೆಳೆಯಲು ಸಾಧ್ಯವಿರುವ ಮರಗಳೆಲ್ಲವೂ ಇಲ್ಲಿವೆ. ತೆಂಗು ಅತ್ಯಧಿಕ ಸಂಖ್ಯೆಯಲ್ಲಿದ್ದರೆ ಬೇವು, ನುಗ್ಗೆ, ದೀವಿಗೆ ಹಲಸು (ಜೀಗುಜ್ಜೆ) ಇತ್ಯಾದಿ ಮರಗಳಿವೆ. ಸಮುದ್ರ ಪಕ್ಕದಲ್ಲಿ ಕಾಂಡ್ಲಾ, ನೋಣಿ, ಚಬುಕು ಇತ್ಯಾದಿ ಮರಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ದ್ವೀಪದ ಕೆಲವೆಡೆ ಪಡುವಲ, ಸೋರೆ ಮುಂತಾದ ತರಕಾರಿಗಳನ್ನು ಬೆಳೆಸುತ್ತಾರೆ.

ಲಕ್ಷದ್ವೀಪ ಸಮೂಹದ ಒಟ್ಟು ಜನಸಂಖ್ಯೆ ಸುಮಾರು ಎಪ್ಪತ್ತೈದು ಸಾವಿರ. ಈ ಗುಂಪಿನಲ್ಲಿ ಉಳಿದ ದ್ವೀಪಗಳಿಗೆ ಹೋಲಿಸಿದಲ್ಲಿ ಆಂದ್ರೋತ್ ಎನ್ನುವ ದ್ವೀಪ ವಿಸ್ತೀರ್ಣದಲ್ಲಿ ಹಿರಿದಾಗಿದ್ದು ಜನಸಂಖ್ಯೆ ಸುಮಾರು ೧೫ ಸಾವಿರದಷ್ಟಿದೆ. ನಾನಿರುವ ಅಗಾತ್ತಿಯಲ್ಲಿ ಸುಮಾರು ೭೦೦೦ದಷ್ಟು ಜನರಿದ್ದಾರೆ. ಅತೀ ಚಿಕ್ಕ ಜನವಸತಿ ದ್ವೀಪವಾದ ಭಿತ್ರಾದಲ್ಲಿ ಕೇವಲ ೩೦೦ ಜನರಷ್ಟೇ ಇರುವುದು. ಉಳಿದಂತೆ ಕಡಮತ್, ಕಿಲ್ತಾನ್, ಚೇತ್ಲಾತ್, ಅಮೀನಿ, ಕಲ್ಪೇನಿ, ಕವರಟ್ಟಿ ಹಾಗೂ ಮಿನಿಕಾಯ್ ದ್ವೀಪಗಳು ಶಾಶ್ವತ ಜನವಸತಿ ಹೊಂದಿವೆ. ಇನ್ನುಳಿದ ಬಂಗಾರಂ, ತಿನ್ನಗರ, ಸುಹೇಲಿ, ಪರೇಲಿ ಇತ್ಯಾದಿ ಕೆಲವು ದ್ವೀಪಗಳನ್ನು ಪ್ರವಾಸೋದ್ಯಮಕ್ಕೆಂದೇ ಅಭಿವೃದ್ಧಿಪಡಿಸಲಾಗುತ್ತಿದೆ. ಉಳಿದಂತೆ ಈ ದ್ವೀಪಗಳೆಲ್ಲಾ ನಿರ್ಜನ ನಡುಗುಡ್ದೆಗಳು. ಈ ದ್ವೀಪ ಸಮೂಹದ ಆಡಳಿತಕ್ಕೆ ರಾಜಧಾನಿ ಕವರತ್ತಿ ದ್ವೀಪ. ಇದರಲ್ಲಿ ಮಿನಿಕಾಯ್ ದ್ವೀಪವು ಮಾಲ್ಡಿವ್ಸ್‌ನ ಕೊನೆಯ ದ್ವೀಪಕ್ಕೆ ಹೆಚ್ಚು ಸಮೀಪದಲ್ಲಿದೆ. ಅಂದರೆ ಸುಮಾರು ೧೨೦ಕಿ.ಮೀ.ಗಳಷ್ಟು ದೂರದಲ್ಲಿದೆ. ಮಿನಿಕಾಯ್‌ಗೆ ಹತ್ತಿರದ ಭಾರತದ ಮುಖ್ಯ ಭೂಮಿಯ ನಗರ ಎಂದರೆ ತಿರುವನಂತಪುರ. ಅಲ್ಲಿಂದ ಸುಮಾರು ೪೦೦ಕಿ. ಮೀ. ದೂರ.

ಎಲ್ಲರಿಗೂ ತಿಳಿದಿರುವಂತೆ ಲಕ್ಷ ದ್ವೀಪವು ಕೇಂದ್ರಾಡಳಿತ ಪ್ರದೇಶ. ಇಲ್ಲಿನ ಆಡಳಿತವು ಕೇಂದ್ರ ಸರಕಾರದಿಂದ ನೇರವಾಗಿ ನಿಯಂತ್ರಿಸಲ್ಪಡುತ್ತದೆ. ಇಲ್ಲಿನ ಆಡಳಿತ ಮುಖ್ಯಸ್ಥ – ‘ಆಡಳಿತಗಾರ’ (Administrator). ಇವರನ್ನು ರಾಷ್ಟ್ರಪತಿಗಳ ಪ್ರತಿನಿಧಿ ಎಂದು ಕರೆಯಲಾಗುತ್ತದೆ. ಕೇಂದ್ರದ ನೇರ ಸುಪರ್ದಿಯಲ್ಲಿರುವ ಕಾರಣ ಎಲ್ಲಾ ಆಡಳಿತ ವಿಭಾಗಗಳಿಗೂ ಐ.ಎ.ಎಸ್. ಮಟ್ಟದ ಅಧಿಕಾರಿಗಳಿದ್ದಾರೆ. ಲಕ್ಷ ದ್ವೀಪಕ್ಕೊಂದು ಪ್ರತ್ಯೇಕ ಸಂಸತ್ ಕ್ಷೇತ್ರವಿದೆ. ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ ೪೦೦೦೦ಕ್ಕಿಂತ ಕಡಿಮೆ. ಅಂದರೆ ಬೆಂಗಳೂರು, ಮುಂಬೈಗಳಂತಹ ಮಹಾ ನಗರಗಳ ಒಂದು ವಾರ್ಡಿನ ಮತದಾರರ ಸಂಖ್ಯೆಗಿಂತಲೂ ಕಡಿಮೆ! ಧಾರ್ಮಿಕ ಜನಾಂಗದ ವಿಷಯ ಹೇಳುವುದಾದರೆ ಬಹು ಹಿಂದಿನಿಂದಲೂ ಇಲ್ಲಿನ ಶಾಶ್ವತ ಪ್ರಜೆಗಳು ಎಲ್ಲರೂ ಮುಸ್ಲಿಮರೆ.

ಇಲ್ಲಿ ಮಾಂಸಾಹಾರವೇ ಹೆಚ್ಚು ಎನ್ನುವುದು ನಿಜವಾದರೂ ಸಸ್ಯಾಹಾರವೂ ಇಲ್ಲಿ ಲಭ್ಯ. ದೋಸೆ ಇಡ್ಲಿಗಳೂ ಸಿಗುತ್ತವೆ. ಆದರೆ ಮುಖ್ಯ ಭೂಮಿಯಂತೆ ಸಸ್ಯಾಹಾರಕ್ಕೆ ಮೀಸಲಾದ ಒಳ್ಳೆಯ ಹೋಟೆಲುಗಳು ಮಾತ್ರ ಇಲ್ಲಿಲ್ಲ. ಜೀನಸು ಪದಾರ್ಥಗಳು ಹಾಗೂ ಹಣ್ಣು ತರಕಾರಿಗಳು ಹೆಚ್ಚಾಗಿ ಮಂಗಳೂರು ಮತ್ತು ಕಲ್ಲಿಕೋಟೆಯಿಂದ ಬರುತ್ತವೆ. ಕೊಚ್ಚಿನ್ನಿಂದ ವಿಮಾನದ ಮೂಲಕವೂ ಆಹಾರ ವಸ್ತುಗಳು ಬರುವುದಿದೆ. ಕರ್ನಾಟಕದ ನಂದಿನಿ ಗುಡ್ಲೈಫ್ ಹಾಲು ಇಲ್ಲಿ ಸಿಗುತ್ತದೆ. ಕೇರಳದ ಮೊಸರು ಕೂಡಾ ಇಲ್ಲಿನ ಅಂಗಡಿಗಳಲ್ಲಿ ಲಭ್ಯ. ಒಣ ತರಕಾರಿಗಳು, ಧಾನ್ಯಗಳು ಸದಾ ಲಭ್ಯ. ಸಸ್ಯಾಹಾರಿಗಳಿಗೆ ಇಲ್ಲಿ ಮನೆ ಊಟ ತಯಾರಿಸಿ ಕೊಡಬಲ್ಲ ಕೆಲವು ಮನೆಗಳೂ ಅತಿಥಿಗೃಹಗಳೂ ಇವೆ. ಕಟ್ಟಾ ಸಂಪ್ರದಾಯಸ್ಥ ಶಾಕಾಹಾರಿಗಳಾದರೆ ಮಾತ್ರ ಸ್ವತಂತ್ರವಾಗಿ ಅಡುಗೆ ಮಾಡಲು ಶಕ್ತರಿರಬೇಕಾಗುತ್ತದೆ, ಮತ್ತೊಂದು ವಿಷಯವೆಂದರೆ ಇಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ! ವೈನ್ ಶಾಪ್‌ಗಳು ಎಲ್ಲೂ ಇಲ್ಲವೇ ಇಲ್ಲ. ಪಾನಪ್ರಿಯ ಪ್ರವಾಸಿಗರಿಗೆ ಕೊಂಚ ನಿರಾಸೆಯಾಗಬಹುದೋ ಏನೋ, ಕೆಲವು ತಾರಾ ಮಟ್ಟದ ರೆಸಾರ್ಟ್ಗಳಲ್ಲಿ ವಿದೇಶದ ಪ್ರವಾಸಿಗರಿಗಾಗಿ ಆಂತರಿಕವಾಗಿ ಕೆಲ ಬ್ರಾಂಡ್‌ಗಳ ಮದಿರೆ ಲಭ್ಯವಂತೆ. ದರ ಮಾತ್ರ ದುಬಾರಿ.

ಲಕ್ಷ ದ್ವೀಪಗಳಲ್ಲಿ ಬಾವಿ ತೆಗೆದರೆ ಧಾರಾಳ ನೀರು ಸಿಗುತ್ತದೆ.ಆದರೆ ಅದು ಗಡಸು ನೀರು. ಬಹುತೇಕ ಕಡೆ ಈ ನೀರು ಕುಡಿಯುವುದಕ್ಕೆ ಅಷ್ಟೊಂದು ಯೋಗ್ಯವಾಗಿಲ್ಲ. ಮೊದಲೆಲ್ಲಾ ಕುಡಿಯುವುದಕ್ಕೆ, ಅಡುಗೆಗೆ, ಬಟ್ಟೆ ತೊಳೆಯವುದು ಇತ್ಯಾದಿ ಕಾರ್ಯಗಳಿಗೆ ಇದೇ ನೀರನ್ನು ಉಪಯೋಗಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಪಂಪ್ ಮಾಡಿ ತೆಗೆಯುವ ನೀರಿನ ಪ್ರಮಾಣ ಹೆಚ್ಚಾಗುತ್ತಾ ಬಂದಂತೆ ನೀರಿನ ಗಡಸುತನವೂ ಹೆಚ್ಚಾಗುತ್ತಾ ಬಂತು. ಅರ್ಥಾತ್ ನೀರಿನ ಲವಣಾಂಶ ಹಾಗೂ ಗಂಧಕಾಂಶದ ಸಾಂದ್ರತೆ ಕ್ರಮೇಣ ಏರುತ್ತಿರುವುದು ಕಂಡು ಬಂತು. ಅದಕ್ಕೊಂದು ಪರಿಹಾರವೆಂಬಂತೆ ಸರಕಾರವು ಸಮುದ್ರದ ನೀರನ್ನು ಲವಣ ಮುಕ್ತಗೊಳಿಸಿ ಸರಬರಾಜು ಮಾಡುವ ಯೋಜನೆಯನ್ನು ಅನುಷ್ಠಾನಗೊಳಿಸಿತು. ಇಂದು ಅಗಾತ್ತಿ ದ್ವೀಪದಲ್ಲಿ ದಿನಂಪ್ರತಿ ಸುಮಾರು ಹತ್ತುಸಾವಿರ ಲೀಟರ್ಗಳಷ್ಟು ಶುದ್ಧ ನೀರನ್ನು ಒದಗಿಸಬಲ್ಲ ನಿರ್ಲವಣೀಕರಣ (ಡಿಸೆಲಿನೇಶನ್) ಸ್ಥಾವರ ಕಾರ್ಯ ನಿರ್ವಹಿಸುತ್ತಿದೆ. ಈ ಸ್ಥಾವರದಲ್ಲಿ ಒತ್ತಡ ತಂತ್ರಜ್ಞಾನದ ಮೂಲಕ ಹಿಮ್ಮುಖ ಪರಾಸರಣ (ರಿವರ್ಸ್‌ಆಸ್ಮೋಸಿಸ್) ಕ್ರಿಯೆಯ ಮುಖಾಂತರ ಸಮುದ್ರದ ನೀರನ್ನು ಲವಣ ಮುಕ್ತಗೊಳಿಸಲಾಗುತ್ತದೆ.

ಅಲ್ಲಿನ ಬೃಹತ್ ಟಾಂಕಿಯಲ್ಲಿ ಶೇಖರವಾದ ಈ ಶುದ್ಧ ನೀರು ವಾರದಲ್ಲಿ ಎರಡು ದಿನ ದ್ವೀಪದ ವಿವಿಧ ಪ್ರದೇಶಗಳಲ್ಲಿ ಹಲವೆಡೆ ಅಳವಡಿಸಲಾಗಿರುವ ವಿಶೇಷ ನಲ್ಲಿಗಳ ಮೂಲಕ ಜನರಿಗೆ ಲಭ್ಯವಾಗುತ್ತದೆ. ಈ ಸ್ಥಾವರದ ಮೂಲ ಪರಿಕಲ್ಪನೆಯೊಂದಿಗೆ ಯೋಜನೆಯನ್ನು ರೂಪಿಸಿದವರು ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶಿಯನ್ ಟೆಕ್ನಾಲಜಿ – ಎನ್‌ಐಓಟಿ.). ಹಾಗಾಗಿ ಈ ಶುದ್ಧ ನೀರನ್ನು ಇಲ್ಲಿನ ಜನರು ಎನ್. ಐ. ಓ. ಟಿ. ನೀರೆಂದೇ ಕರೆಯುವುದು. ಇದು ಮಾತ್ರವಲ್ಲದೆ ಕೆಲವೆಡೆ ವಾತಾವರಣದಿಂದ ನೀರನ್ನು ಪಡೆಯುವ ಪುಟ್ಟ ಯಂತ್ರ ವ್ಯವಸ್ಥೆಗಳೂ ಕಾರ್ಯನಿರ್ವಹಿಸುತ್ತಿವೆ. ಇವು ಗಾಳಿಯಲ್ಲಿರುವ ತೇವಾಂಶವನ್ನು ಪ್ರತ್ಯೇಕಿಸಿ ಒಂದು ಚಿಕ್ಕ ಟಾಂಕಿಯಲ್ಲಿ ಸಂಗ್ರಹವಾಗುವಂತೆ ಮಾಡುತ್ತವೆ. ಈ ನೀರೂ ಸ್ವಚ್ಛವಾಗಿದ್ದು ಕುಡಿಯಲು ಯೋಗ್ಯವಾಗಿದೆ.

ದ್ವೀಪ ಸಮೂಹದ ಪ್ರಾಣಿಪಕ್ಷಿಗಳ ಬಗ್ಗೆ ಹೇಳುವುದಾದರೆ ಈ ದ್ವೀಪಗಳಲ್ಲಿ ಹಾವು ಹಾಗೂ ನಾಯಿಗಳಿಲ್ಲ. ಹಾವುಗಳು ಕೆಲವೊಮ್ಮೆ ಮುಖ್ಯ ಭೂಮಿಯಿಂದ ಆಮದಾಗುವ ಕಟ್ಟಡ ಸಾಮಗ್ರಿಗಳೊಂದಿಗೆ ಬರುವುದಿದೆ. ಮಂಗಗಳೂ ಇಲ್ಲ. ಒಂದು ವೇಳೆ ಅವುಗಳಿದ್ದಿದ್ದರೆ ಇರುವ ತೆಂಗಿನ ಮರಗಳಲ್ಲಿ ಕೀಳುವುದಕ್ಕೆ ಒಂದು ಕಾಯಿಯೂ ಸಿಗುತ್ತಿರಲಿಲ್ಲವೇನೋ. ಅಕ್ಕಪಕ್ಕ ಕಾಡುಗಳಿಲ್ಲದ ಈ ದ್ವೀಪಗಳ ಪರಿಸರ ಕಪಿಗಳ ವಾಸ್ತವ್ಯಕ್ಕೆ ಅಷ್ಟು ಸೂಕ್ತವಲ್ಲ. ಅಗಾತ್ತಿಯೂ ಸೇರಿದಂತೆ ಕೆಲವು ದ್ವೀಪಗಳಲ್ಲಿ ಕಾಗೆಗಳೂ ಇಲ್ಲ. ಮತ್ತೆ ಇಲ್ಲಿ ಯಾವ ಪ್ರಾಣಿಗಳಿವೆಯಪ್ಪಾ ಎಂದರೆ ಎಂದರೆ ಮನೆಗಳಲ್ಲಿ ಬೆಕ್ಕುಗಳಿವೆ. ಹಾಲು ಮತ್ತು ಮಾಂಸಗಳೆರಡಕ್ಕೂ ಯೋಗ್ಯವೆನಿಸಿದ ಆಡುಗಳು, ಹಸು, ಹೋರಿಗಳೂ ಕಾಣಸಿಗುತ್ತವೆ. ನಾಡಕೋಳಿಗಳು ಸಾಕಷ್ಟಿವೆ. ಅಲ್ಲಲ್ಲಿ ಕೊಕ್ಕರೆ, ಪಾರಿವಾಳಗಳು ಕಾಣಸಿಗುತ್ತವೆ. (ಇಲ್ಲಿನ ಕೆಲವು ದ್ವೀಪಗಳಲ್ಲಿರುವ ಕಪ್ಪೆಗಳ ಕುರಿತು, ಕವರತ್ತಿಯ ಆಕಾಶವಾಣಿ ಕೇಂದ್ರದಲ್ಲಿರುವ ಕನ್ನಡಿಗ ಅಬ್ದುಲ್ ರಶೀದ್ ಬರೆದಿರುವ ಬಹಳ ಸ್ವಾರಸ್ಯಕರ ಲೇಖನ ಓದಿ: ದ್ವೀಪದ ಕಪ್ಪೆಗಳು) ಈ ದ್ವೀಪ ಸಮೂಹದಲ್ಲಿರುವ ‘ಪಕ್ಷಿಪಿಟ್ಟಿ’ ಎನ್ನುವ ದ್ವೀಪದಲ್ಲಿ ವಲಸೆ ಹಕ್ಕಿಗಳನ್ನೂ ಸೇರಿಸಿ ಬರೇ ಪಕ್ಷಿಗಳು ಇವೆ; ಮನುಷ್ಯರಿಲ್ಲ. ಪಕ್ಷಿವಾಸ ಪರಿಸರದ ದೃಷ್ಠಿಯಿಂದ ಇದು ನಿರ್ಬಂಧಿತ ದ್ವೀಪ. ಅನುಮತಿ ಪಡೆದ ಪ್ರವಾಸಿಗರಿಗಷ್ಟೇ ಪ್ರವೇಶ.

ನಾನಿರುವ ಅಗಾತ್ತಿ ದ್ವೀಪದ ಉದ್ದ ಸುಮಾರು ಆರೂವರೆ ಕಿಲೋ ಮೀಟರುಗಳು. ಅಗಲ ಸುಮಾರು ಒಂದೂವರೆ ಕಿಲೋಮೀಟರು (ಮಧ್ಯಭಾಗದಲ್ಲಿ). ಹದಿನೈದು ಅಡಿಗಳಷ್ಟು ಅಗಲವಿರುವ ರಸ್ತೆಗಳೇ ಎಲ್ಲೆಡೆಗೂ. ವಿಸ್ತೀರ್ಣದಲ್ಲಿ ಕಿರಿದಾಗಿರುವ ಈ ದ್ವೀಪಗಳಲ್ಲಿ ದ್ವಿಚಕ್ರ ವಾಹನಗಳದ್ದೇ ಕಾರುಬಾರು. ಇಲ್ಲಿ ಅಲ್ಪಸಂಖ್ಯೆಯಲ್ಲಿ ಕಾರು, ರಿಕ್ಷಾಗಳೂ ಇವೆ. ಲಾರಿ, ಬಸ್ಸು ಇತ್ಯಾದಿ ಘನ ವಾಹನಗಳು ಇಲ್ಲವೇ ಇಲ್ಲವೆನ್ನಬಹುದು. ಸದ್ಯಕ್ಕಿಲ್ಲಿ ಪೆಟ್ರೋಲ್ ಪಂಪುಗಳು ಇಲ್ಲ. ಸಾರ್ವಜನಿಕರಿಗೆ ಪೆಟ್ರೋಲನ್ನು ಸಹಕಾರಿ ಸಂಘದ ಮೂಲಕ ನಿಯಮಿತವಾಗಿ ವಿತರಿಸಲಾಗುತ್ತದೆ. ಪೆಟ್ರೋಲ್ ಬೆಲೆ ಮುಖ್ಯ ಭೂಮಿಯಲ್ಲಿನ ದರಕ್ಕಿಂತ ದುಬಾರಿ. ಇದಲ್ಲದೆ ಕೆಲವು ಅಂಗಡಿಗಳಲ್ಲಿ ಪೆಟ್ರೋಲನ್ನು ಬಾಟಲಿಗಳಲ್ಲಿ ತುಂಬಿಸಿ ಮಾರುತ್ತಾರೆ. ಅದು ಇನ್ನೂ ದುಬಾರಿ. ಕವರತ್ತಿ ಸೇರಿದಂತೆ ಒಂದೆರಡು ದ್ವೀಪಗಳಲ್ಲಿ ನೂತನ ಪೆಟ್ರೋಲ್ ಪಂಪನ್ನು ಪ್ರಾರಂಭಿಸುವ ಯೋಜನೆ ಕಾರ್ಯ ರೂಪದಲ್ಲಿದೆ.

ದ್ವೀಪದ ಅಗತ್ಯದ ವಿದ್ಯುತ್ತನ್ನು ಡೀಸೆಲ್ ಜನರೇಟರ್‌ಗಳ ಮೂಲಕ ತಯಾರಿಸಿ ಸರಬರಾಜು ಮಾಡುತ್ತಾರೆ. ಇದಕ್ಕೊಂದು ವ್ಯವಸ್ಥಿತ ವಿದ್ಯುದಾಗಾರವಿದೆ. ವಿದ್ಯುತ್ ದರ ಮುಖ್ಯಭೂಮಿಗೆ ಹೋಲಿಸಿದರೆ ಇಲ್ಲಿ ಕಡಿಮೆ. ಇಲ್ಲಿರುವ ದ್ವೀಪಗಳ ಮಧ್ಯೆ ಸಂಚಾರಕ್ಕಾಗಿ ವೇಗದ ನಾವೆಗಳಿವೆ. ನಿಗದಿತ ಹಡಗುಗಳೂ ಇವೆ. ಅವಕ್ಕೆಲ್ಲಾ ಪ್ರತ್ಯೇಕ ವೇಳಾಪಟ್ಟಿ ಇದೆ. ಬಯಸಿದಾಗ ಹೊರಡಬೇಕೆಂದರೆ ಯಾವುದಾದರೂ ಖಾಸಗಿ ನಾವೆಯ ಅಥವಾ ಮೋಟಾರು ದೋಣಿಯನ್ನು ದುಬಾರಿ ಬಾಡಿಗೆಗೆ ಪಡೆದು ಹೋಗಬೇಕಾಗುತ್ತದೆ. ಜನವಸತಿ ದ್ವೀಪಗಳೇನೂ ಒಂದಕ್ಕೊಂದು ತೀರಾ ಸಮೀಪದಲ್ಲಿ ಇಲ್ಲ. ಹೆಚ್ಚು ಕಡಿಮೆ ೬೦ ರಿಂದ ೨೫೦ ಕಿ. ಮೀ. ದೂರದಲ್ಲಿವೆ. ದ್ವೀಪದಿಂದ ದ್ವೀಪಕ್ಕೆ ೨ ರಿಂದ ೬ಗಂಟೆಗಳ ಕಾಲದ ಪ್ರಯಾಣವಿದೆ. ಮಿನಿಕಾಯ್‌ನಂತಹ ದ್ವೀಪಗಳನ್ನು ತಲುಪಲು ಸುಮಾರು ೧೨ ಗಂಟೆಗಳು ಬೇಕು. ದ್ವೀಪಗಳಿಂದ ಭಾರತದ ಮುಖ್ಯ ಭೂಮಿಗೆ ಬರಲು ಹಡಗುಗಳು ಸಿಗುತ್ತವೆ. ಹಾಗೆಂದು ಬೇಕಾಬಿಟ್ಟಿ ಹೊರಟು ಬರಲು ಸಾಧ್ಯವಿಲ್ಲ. ಹಡಗು ಪ್ರಯಾಣದ ಕಾರ್ಯಸೂಚಿ ಒಂದೆರಡು ತಿಂಗಳ ಮುಂಚೆ ಬಿಡುಗಡೆಯಾಗುತ್ತದೆ. ಅದನ್ನು ನೋಡಿ ನಾವು ನಮ್ಮ ಪ್ರಯಾಣವನ್ನು ಕಾದಿರಿಸಬೇಕು. ಈ ದ್ವೀಪಗಳಿಂದ ಮುಖ್ಯಭೂಮಿಯಲ್ಲಿರುವ ಕೊಚ್ಚಿಗೆ ಹೆಚ್ಚಿನ ಸಂಖ್ಯೆಯಲ್ಲಿ ದೊಡ್ಡ ಹಡಗುಗಳ ಸಂಚಾರವಿದೆ.

ಕಲ್ಲಿಕೋಟೆ ಹಾಗೂ ಮಂಗಳೂರಿಗೆ ಚಿಕ್ಕ ಹಡಗುಗಳು ಸಂಚರಿಸುತ್ತವೆ. ಆದರೆ ಈ ಮಾರ್ಗಗಳಲ್ಲಿ ಪ್ರಯಾಣಿಕ ಹಡಗುಗಳಿಗಿಂತ ಸರಕು ಹೊತ್ತ ಮಚವೆಗಳ (ಮಂಜಿ) ಸಂಚಾರ ಹೆಚ್ಚು. ಮಂಗಳೂರಿನ ಹಳೆ ಬಂದರು ಪ್ರದೇಶದ ವ್ಯಾಪಾರಸ್ಥರಿಗೆ ಲಕ್ಷದ್ವೀಪ ಎನ್ನುವ ಶಬ್ದ ಹೊಸತಲ್ಲ. ಇದು ಬಹಳ ಹಿಂದಿನಿಂದಲೂ ಲಕ್ಷದ್ವೀಪದೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿದೆ. ಇಲ್ಲಿಂದ ಆಹಾರ ಪದಾರ್ಥಗಳು ಹಾಗೆಯೇ ಇನ್ನಿತರ ಸಾಮಗ್ರಿಗಳು ಲಕ್ಷದ್ವೀಪಗಳಿಗೆ ರವಾನೆಯಾಗುತ್ತವೆ. ಮುಖ್ಯಭೂಮಿಯ ಕರಾವಳಿ ಪಟ್ಟಣಗಳಿಂದ ನೇರ ದೂರದ ಲೆಕ್ಕಾಚಾರದಲ್ಲಿ, (ಸಮುದ್ರದ ಮೇಲೆ ಗೀಟೆಳೆದಂತೆ) ಮಿನಿಕಾಯ್‌ಗೆ ತಿರುವನಂತಪುರವೂ ಕಲ್ಪೇನಿಗೆ ಕೊಚ್ಚಿಯೂ ಆಂದ್ರೋತ್‌ಗೆ ಕಲ್ಲಿಕೋಟೆಯೂ ಸಮೀಪವಾಗುತ್ತವೆ. ಅವನ್ನು ಹೊರತುಪಡಿಸಿದರೆ ಉಳಿದೆಲ್ಲಾ ದ್ವೀಪಗಳಿಗೆ ಮಂಗಳೂರೇ ಹತ್ತಿರ. ಆದರೂ ಭಾಷಾ ಮತ್ತು ವ್ಯವಹಾರಗಳ ಕಾರಣಕ್ಕೆ ಎಲ್ಲ ದ್ವೀಪವಾಸಿಗಳಿಗೂ ಕೇರಳ ಹೆಚ್ಚು ನಿಕಟವೆನಿಸಿದೆ.

ವಿಮಾನಯಾನ ಬೇಕೆಂದರೆ ಸದ್ಯಕ್ಕೆ ಇಲ್ಲಿರುವ ಏಕೈಕ ಪುಟ್ಟ ವಿಮಾನ ನಿಲ್ದಾಣ ಅಗಾತ್ತಿಯದು. ಇದು ಅತ್ಯಂತ ನಯನ ಮನೋಹರವಾಗಿದೆ (ವಿವಿಧ ಚಿತ್ರಗಳು ಗೂಗಲ್‌ನಲ್ಲಿ ಲಭ್ಯ). ಆಗಾತ್ತಿ ದ್ವೀಪ ಉದ್ದ ಬಾಲದ ಮೀನಿನ ಆಕಾರದಲ್ಲಿದೆ. ಅದರ ಬಾಲದ ತುದಿಯಲ್ಲಿರುವುದೇ ಅಗಾತ್ತಿ ವಿಮಾನ ನಿಲ್ದಾಣ. ರನ್ವೇಯನ್ನು ೨೦೦ ಮೀಟರ್‌ಗಳಿಗಿಂತಲೂ ಕಡಿಮೆ ಅಂತರದಲ್ಲಿ ಮೂರೂ ದಿಕ್ಕಿನಿಂದ ಸಮುದ್ರ ಆವರಿಸಿದೆ. ಇಲ್ಲಿ ವಿಮಾನಗಳಿಗೆ ಪ್ರತ್ಯೇಕ ನಿಲುಗಡೆಗೆ (ಏಪ್ರನ್) ಜಾಗವಿಲ್ಲ. ಹಾಗಾಗಿ ಇಳಿದ ವಿಮಾನಗಳು ರನ್ವೇಯ ವಿಸ್ತರಿತ ತುದಿಯಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡ ಬಳಿಕ ತಿರುಗಿ ಓಡಿ, ಹಾರಿ ಹೊರಟು ಹೋಗುತ್ತವೆ. ಹಾಗಿದ್ದೂ ಸದ್ಯ ಅದು ದೊಡ್ಡ ಸಮಸ್ಯೆ ಅಲ್ಲ. ಏಕೆಂದರೆ ಇಲ್ಲಿ ನಿತ್ಯಕ್ಕೆ ಬೆಂಗಳೂರು – ಕೊಚ್ಚಿ – ಅಗಾತ್ತಿಯೆಂದು ಏರ್ ಇಂಡಿಯಾದ ಒಂದು ಸೇವೆ ಮಾತ್ರ ಇದೆ. ತುರ್ತು ವೈದ್ಯಕೀಯ ಅಗತ್ಯಗಳಿಗೆ ದ್ವೀಪಗಳ ಮಧ್ಯೆ ಅಥವಾ ಕೆಲವೊಮ್ಮೆ ಮುಖ್ಯಭೂಮಿಗೆ ತೆರಳಲೂ ದ್ವೀಪವಾಸಿಗಳಿಗೆ ಸರಕಾರ ಹೆಲಿಕಾಪ್ಟರ್ ಸೌಲಭ್ಯ ಒದಗಿಸುತ್ತಿದೆ.

ದ್ವೀಪಗಳ ಆಡುಭಾಷೆಯ ಹೆಸರು “ಜಸರಿ”. ಮೇಲ್ನೋಟಕ್ಕೆ ಇದು ಮಲಯಾಳ ಭಾಷೆಯನ್ನು ಹೋಲುತ್ತದೆ. ಹಲವಾರು ತುಳು, ಕನ್ನಡ, ತಮಿಳು ಶಬ್ಧಗಳೂ ಈ ಭಾಷೆಯಲ್ಲಿ ಸೇರಿ ಹೋಗಿವೆ. ಇಲ್ಲಿನ ಶಿಕ್ಷಣ ಮಾಧ್ಯಮ ಮಲಯಾಳ ಮತ್ತು ಇಂಗ್ಲೀಷ್ ಭಾಷೆಗಳಲ್ಲಿದೆ. ಮಕ್ಕಳು ಹೆಚ್ಚಾಗಿ ಆಂಗ್ಲಮಾಧ್ಯಮದಲ್ಲಿ ಕಲಿತರೂ ಅವರ ಆಡುಮಾತಿನಲ್ಲಿ ಮಲೆಯಾಳದ ಪ್ರಭಾವ ಎದ್ದು ಕಾಣುತ್ತದೆ. ಎಲ್ಲ ದ್ವೀಪಗಳಲ್ಲೂ ಮೂಲಶಿಕ್ಷಣ ವ್ಯವಸ್ಥೆ ಚೆನ್ನಾಗಿದೆ. ಸರಕಾರವೇ ನಿರ್ಮಿಸಿದ ಉತ್ತಮ ಶಾಲೆಗಳಿವೆ. ಉಚಿತ ಶಿಕ್ಷಣ. ನಮ್ಮಲ್ಲಿಯಂತೆ ಕಲಿಕೆ ಇನ್ನೂ ವಾಣಿಜ್ಯೀಕರಣವಾಗಿಲ್ಲವೆನಿಸುತ್ತದೆ. ಅಗಾತ್ತಿಯಲ್ಲಿ ಪ್ಲಸ್ ಟು (ನಮ್ಮಲ್ಲಿನ ಪಿ.ಯು.ಸಿ)ವರೆಗೆ ಶಿಕ್ಷಣ ವ್ಯವಸ್ಥೆಯಿದೆ. ಒಂದೆರಡು ದ್ವೀಪಗಳಲ್ಲಿ ಕಾಲೇಜು ಕೂಡಾ ಇದೆ. ಕೆಲವೆಡೆ ಐ.ಟಿ.ಐ. ಮಟ್ಟದ ವೃತ್ತಿ ಶಿಕ್ಷಣವನ್ನೂ ನೀಡಲಾಗುತ್ತದೆ. ಉಳಿದಂತೆ ಹೆಚ್ಚಿನವರು ಉನ್ನತ ಶಿಕ್ಷಣಕ್ಕಾಗಿ ಮುಖ್ಯಭೂಮಿಗೆ ತೆರಳುತ್ತಾರೆ. ಉನ್ನತ ಶಿಕ್ಷಣ ಪ್ರವೇಶದಲ್ಲಿ ದ್ವೀಪವಾಸಿಗಳಗೆ ಮೀಸಲಾತಿ ಇದೆ. ಹಾಗಾಗಿ ಹೆಚ್ಚಿನವರು ಕೇರಳ, ಕರ್ನಾಟಕ, ತಮಿಳುನಾಡುಗಳಲ್ಲಿ ವೈದ್ಯಕೀಯ, ತಾಂತ್ರಜ್ಞಾನಿಕ ಹಾಗೂ ಇತರ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ಮಿನಿಕಾಯ್‌ ದ್ವೀಪದಲ್ಲಿ ಹೆಚ್ಚಿನ ಗಂಡಸರು ನೌಕಾ ಉದ್ಯೋಗಿಗಳು. ದೇಶವಿದೇಶಗಳ ಹಡಗುಗಳಲ್ಲಿ ಚಿಕ್ಕ ಸಹಾಯಕನಿಂದ ಹಿಡಿದು ಕಫ್ತಾನನವರೆಗೂ ಕೆಲಸ ಕಂಡುಕೊಡವರಿದ್ದಾರೆ. ಮತ್ತಿದು ಮಾಲ್ಡೀವ್ಸ್‌ನ ಕೊನೆಯ ದ್ವೀಪಕ್ಕೆ ಸಮೀಪದಲ್ಲಿದೆ. ಪ್ರಾಯಶಃ ಹಾಗಾಗಿ ಅಲ್ಲಿನ ಮುಖ್ಯ ಭಾಷೆ ಮಹಾನ್‌. ಅಗಾತ್ತಿಗೆ ಬರುವ ಅತಿಥಿಗಳು ಆಡುವ ಮಹಾನ್ ಭಾಷೆಯನ್ನು ನಾನು ಕೇಳಿಸಿಕೊಂಡಿದ್ದೇನಾದರೂ ಆ ಭಾಷೆಯ ಬಗ್ಗೆ ಹೆಚ್ಚಿನ ತಿಳುವಳಿಕೆಯಲ್ಲ. ದಕ್ಷಿಣ ಭಾರತೀಯ ಭಾಷೆಗಳಿಗೆ ಅಷ್ಟಾಗಿ ಸಂಬಂಧವಿಲ್ಲದ ಭಾಷೆ ಅನ್ನುವುದಷ್ಟೇ ಗೊತ್ತು. ಜೊತೆಗೆ ನೌಕಾ ಯಾನದ ಪರಿನತರಾದ ಕಾರಣ, ಬಹುಶಃ ಮಿನಿಕಾಯ್‌ ವಾಸಿಗಳು ಹಿಂದಿ ಚೆನ್ನಾಗಿ ಮಾತನಾಡುತ್ತಾರೆ. ಬೇರೆ ದ್ವೀಪಗಳಲ್ಲಿ ಹಿಂದಿ ಅಷ್ಟಾಗಿ ಬೇರೂರಿಲ್ಲ. ಮಿನಿಕಾಯ್ ವಾಸಿಗಳ ಪ್ರಕಾರ ಆ ದ್ವೀಪದಲ್ಲಿ ಹಿಂದಿ ದ್ವಿತೀಯ ಭಾಷೆಯಂತೆ. ಅಷ್ಟಾಗಿ ಆಸಕ್ತಿ ಇರದೇ ಹೋದರೂ ಶಿಕ್ಷಣ ಮಾಧ್ಯಮದಲ್ಲಿ ಮಾತ್ರ ಮಲೆಯಾಳದ್ದೇ ಕಾರುಭಾರು. ಯಾಕೋ ನಮ್ಮ ಕಾಸರಗೋಡು ಕನ್ನಡಿಗರ ನೆನಪಾಯಿತು.

ವೈದ್ಯಕೀಯ ನೆರವು ಕೂಡಾ ಇಲ್ಲಿ ಬಹುತೇಕ ಉಚಿತ. ಎಲ್ಲ ದ್ವೀಪಗಳಲ್ಲೂ ಪ್ರಾಥಮಿಕ ಚಿಕಿತ್ಸಾ ಸೌಲಭ್ಯವಿದೆ. ದ್ವೀಪ ಕಲ್ಪಗಳ ಪೈಕಿ ಅಗಾತ್ತಿಯಲ್ಲಿ ಸ್ವಲ್ಪ ಉತ್ತಮ ಮಟ್ಟದೆನ್ನಬಹುದಾದ ಶಸ್ತ್ರಚಿಕಿತ್ಸೆ ಇತ್ಯಾದಿ ಉನ್ನತ ಸೌಲಭ್ಯಗಳಿರುವ ಒಂದು ಆಸ್ಪತ್ರೆಯಿದೆ. ಇದು ಕೇಂದ್ರ ಸರಕಾರದಿಂದ ಪ್ರಾಯೋಜಿಸಲ್ಪಟ್ಟು ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಆಸ್ಪತ್ರೆ. ಇನ್ನೂ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಕಲ್ಲಿಕೋಟೆ ಅಥವಾ ಕೊಚ್ಚಿನ್‌ಗೆ ತೆರಳಬೇಕಾಗುತ್ತದೆ. ಅದಕ್ಕೂ ಸರಕಾರದ ಸಹಾಯ ಹಸ್ತವಿದೆ.

ಮೀನುಗಾರಿಕೆ ಇಲ್ಲಿನ ಪ್ರಧಾನ ವೃತ್ತಿ. ಆಳ ಸಮುದ್ರದ “ಟ್ಯೂನಾ”ದಂತಹ ಮೀನುಗಳು ಇಲ್ಲಿ ಹೆಚ್ಚಾಗಿ ಸಿಗುತ್ತವೆ. ಟ್ಯೂನಾ ಅಂದರೆ ನಮ್ಮಲ್ಲಿ ಕುಟ್ಟಿ ಅಂಜಲ್ ಅಥವಾ ಕೆದಾರ್ ಎಂದು ಕರೆಯಲ್ಪಡುವ ಮೀನು. ನಮ್ಮಲ್ಲಿ ಈ ಮೀನಿಗೆ ಅಷ್ಟಾಗಿ ಬೇಡಿಕೆ ಇಲ್ಲ. ಇಲ್ಲಿ ಅದನ್ನು ಹೆಚ್ಚು ತಿನ್ನುವುದಲ್ಲದೆ, ರಫ್ತು ಕೂಡಾ ಮಾಡುತ್ತಾರೆ. ಅದಲ್ಲದೆ ಇಲ್ಲಿನ ಲಗೂನ್‌ಗಳಲ್ಲಿ (ಲಗೂನ್= ನೀರಿನ ಆಳ ಕಡಿಮೆ ಇರುವ ಸಮುದ್ರದ ವಿಸ್ತರಿತ ಭಾಗ) ಇತರ ಮೀನುಗಳೂ ಸಾಕಷ್ಟು ಸಿಗುತ್ತವೆ. ಮಂಗಳೂರಿನಲ್ಲಿ ಸಿಗುವಂತಹ ಬಹುತೇಕ ಮೀನುಗಳಾದ ಬಂಗುಡೆ, ಬೂತಾಯಿ, ನಂಗ್, ಕೊಡ್ಡೆಯಿಯಂತಹ ಮೀನುಗಳು ಇಲ್ಲಿ ಕಾಣಸಿಗುವುದು ಕಷ್ಟ. ಅಷ್ಟೇ ರುಚಿಯಾದ ಇತರ ಮತ್ಸ್ಯಗಳಿವೆ. ಒಣಮೀನು ರಫ್ತು ಮಾಡುವ ಉದ್ಯಮವೂ ಇಲ್ಲಿದೆ. ಇಲ್ಲಿ ಹೇರಳವಾಗಿ ಸಿಗುವ ಟ್ಯೂನಾ ಮೀನನ್ನು ಒಣಗಿಸಿ ತಯಾರಿಸುವ “ಮಾಸ್” ಎನ್ನುವ ಉತ್ಪನ್ನಕ್ಕೆ ಹೊರಗಡೆ ಉತ್ತಮ ಬೇಡಿಕೆ ಇದೆ.

ಮೀನುಗಾರಿಕೆಯಲ್ಲದೆ ಇಲ್ಲಿ ಧಾರಾಳ ಸಿಗುವ ಕೊಬ್ಬರಿಯನ್ನು ರಫ್ತು ಮಾಡುವವರೂ ಇದ್ದಾರೆ. ಜೊತೆಗೆ ತೆಂಗಿನ ಮರದಿಂದ ನೀರಾ ಇಳಿಸುವ ಕಾಯಕವೂ ಚಾಲ್ತಿಯಲ್ಲಿದೆ. ನೀರಾವನ್ನು ನೇರವಾಗಿ ಇಂಗಿಸಿ ಬೆಲ್ಲ ತಯಾರಿಸುವ ವೃತ್ತಿಯವರು ಹಲವರಿದ್ದಾರೆ. ಔಷಧೀಯ ಗುಣವುಳ್ಳದ್ದೆಂದು ಹೇಳಲಾಗುವ, ಶರ್ಕರ ಎಂದು ಕರೆಯಲ್ಪಡುವ ತುಸು ದುಬಾರಿ ಬೆಲೆಯ ಈ ಬೆಲ್ಲಕ್ಕೆ ಒಳ್ಳೆಯ ಬೇಡಿಕೆ ಇದೆ.

ಲಕ್ಷದ್ವೀಪವಾಸಿಗಳು ಹಿಂದೆ ಎಲ್ಲಾ ಬಹಳ ಪರಿಶ್ರಮಿಗಳು ಎಂದು ಇಲ್ಲಿನ ನಿವಾಸಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಈ ದ್ವೀಪಗಳಿಗೆ ಸರಕಾರದ ಕೃಪೆ ತುಸು ಹೆಚ್ಚೇ ಇದೆ. ಶಿಕ್ಷಣ ಹಾಗೂ ವೈದ್ಯಕೀಯ ಚಿಕಿತ್ಸೆ ಸಂಪೂರ್ಣ ಉಚಿತ. ಸರಕಾರದ ಉದ್ಯೋಗಗಳಲ್ಲಿ ಮೀಸಲಾತಿ ಇರುವುದರಿಂದ ಬಹುತೇಕ ಜನರು ಸರಕಾರಿ ಉದ್ಯೋಗಗಳಲ್ಲಿ ಇದ್ದಾರೆ. ಸ್ಥಳಿಯ ಮೀನುಗಾರಿಕೆ ಮತ್ತಿತರ ಉದ್ಯೊಗ ವ್ಯವಹಾರಗಳಲ್ಲದೆ ಅನೇಕರು ಮುಖ್ಯಭೂಮಿಯಲ್ಲೂ ಉದ್ಯಮ, ಗುತ್ತಿಗೆ ಇತ್ಯಾದಿ ವ್ಯವಹಾರಗಳನ್ನು ಹೊಂದಿದ್ದಾರೆ. ದ್ವೀಪದಲ್ಲಿ ಅದ್ದೂರಿ ಬಂಗಲೆ ಅನ್ನಬಹುದಾದ ಮನೆಗಳೂ ಸಾಕಷ್ಟಿವೆ. ಆರ್ಥಿಕ ಬಡವರು ಇಲ್ಲವೆಂದಲ್ಲ. ಇಲ್ಲಿ ತೀರಾ ಬಡವರು ಅನ್ನುವವರ ಸಂಖ್ಯೆ ಮೇಲುನೋಟಕ್ಕೆ ಕಡಿಮೆ ಎಂದೇ ಹೇಳಬಹುದು.

ಕೆಲಸ ಮಾಡಲು ಸಿದ್ದರಿದ್ದರೆ, ವಿಶೇಷವಾಗಿ ಕೂಲಿ ಕೆಲಸ ಸಿಕ್ಕೇ ಸಿಗುತ್ತದೆ. ನುರಿತ ಕೆಲಸ ಗಳಿಗೆ ಮಾತ್ರ ವೃತ್ತಿಪರರ ಕೊರತೆ ಇದೆ. ಹಾಗಾಗಿ ಇಲ್ಲಿ ಕೊಳ್ಳುವ ಹೆಚ್ಚಿನ ಉಪಕರಣಗಳಿಗೆ ಪೂರ್ಣ “ಗ್ಯಾರಂಟಿ” ನೀಡಲು ಕೆಲ ವರ್ತಕರು ಹಿಂಜರಿಯುತ್ತಾರೆ! ಅದೂ ಅಲ್ಲದೆ ಚಿಕ್ಕ ಬಿಡಿಭಾಗಗಳು ಕೂಡಾ ಮುಖ್ಯಭೂಮಿಯಿಂದಲೇ ಬರಬೇಕಲ್ಲವೇ!ನಾನು ಕೊಂಡ ವಿದ್ಯುತ್‌ ಉಪಕರಣವೊಂದಕ್ಕೆ ಎರಡು ವರ್ಷದ ಗ್ಯಾರಂಟಿ ಇದ್ದರೂ ದ್ವೀಪದಲ್ಲಿ ಅದು ಆರು ತಿಂಗಳಿಗೆ ಮಾತ್ರ ಅನ್ವಯವಾಯಿತು. ನಾನು ಕೊಂಡ ಹೊಸ ಸೈಕಲ್ಲಿನ ಪೆಡಲ್ಲಿನಲ್ಲಿ ಒಂದು ತಿಂಗಳಲ್ಲೇ ತೊಂದರೆ ಕಾಣಿಸಿಕೊಂಡಾಗ, ದುಡ್ದು ಕೊಟ್ಟೇ ಪೆಡಲ್ಲಿನ ಭಾಗ ಬದಲಿಸಬೇಕಾಯಿತು. ಸೇವೆ ಮಾತ್ರ ಉಚಿತ! ಇಲ್ಲಿನ ಜನ ಸ್ವಲ್ಪ ಹೆಚ್ಚೇ ತಾಳ್ಮೆ ಉಳ್ಳವರು. ದೋಣಿ, ಮಂಜಿ, ಹಡಗುಗಳಿಗಾಗಿ ದಿನಗಟ್ಟಲೆ ಕಾಯಬೇಕಾದ ಇಲ್ಲಿನ ವಾತಾವರಣದಲ್ಲಿ ಸಹಜವಾಗಿಯೇ ಸಹನೆ ಬಲಗೊಳ್ಳುತ್ತದೆ.

ಈ ದ್ವೀಪಗಳಲ್ಲಿ ಕಳ್ಳತನ, ಕೊಲೆ, ದರೋಡೆ ಇತ್ಯಾದಿ ಕ್ರಿಮಿನಲ್ ಚಟುವಟಿಕೆಗಳು ತೀರಾ ಕಡಿಮೆ. ಇಲ್ಲಿನ ಪೊಲೀಸ್‌ ಸಿಬಂದಿಯೊಬ್ಬರ ಪ್ರಕಾರ ಕಳೆದ ಆರು ತಿಂಗಳಲ್ಲಿ ದಾಖಲಾದ ಕೇಸುಗಳ ಸಂಖ್ಯೆ ಕೇವಲ ಆರು. ಅದೂ ನೆರೆಹೊರೆಯ ವಿವಾದ ಹಾಗೂ ಆಸ್ತಿ ತಕರಾರುಗಳ ಕೇಸುಗಳಷ್ಟೆ. (ಸಮಸ್ತ ಲೋಕದಲ್ಲೂ ಇಂತಹ ಕೇಸುಗಳಿಗೇನೂ ಬರವಿಲ್ಲ!). ಬಹಳ ಅಪರೂಪಕ್ಕೆ ಮೊಬಾಯಿಲ್ ಫೋನ್ ಇತ್ಯಾದಿ ಚಿಕ್ಕಪುಟ್ಟ ಕಳವು ಕೇಸುಗಳು ದಾಖಲಾಗಿದ್ದಿವೆಯಂತೆ. ಇಲ್ಲಿ ಜಗಳ, ಗಲಾಟೆಗಳನ್ನೂ ನಾನು ಕಂಡದ್ದು ಕಡಿಮೆ. ಏನೇ ಮಾಡಿದರೂ ಚಿಕ್ಕದಾದ ಸೀಮಿತ ವಿಸ್ತೀರ್ಣದಈ ದ್ವೀಪ ಬಿಟ್ಟು ಎಲ್ಲಿಗೆ ಅಂತ ಓಡಿ ಹೋದಾರು? ಹಾಗಂತ ಇಲ್ಲಿನ ಎಲ್ಲಾ ಜನರೂ ಬೆರಳು ಚೀಪಲೂ ಗೊತ್ತಿಲ್ಲದಷ್ಟು ಮುಗ್ಧರೇನೂ ಅಲ್ಲ! ಅಂಗಡಿಗಳಿಗೆಲ್ಲಾ ಸರಿಯಾಗಿ ಬೀಗ ಹಾಕಿಯೇ ಹೊರ ಹೋಗುತ್ತಾರೆ!

ಪ್ರವಾಸೋದ್ಯಮವೂ ಇಲ್ಲಿ ಆದಾಯ ತಂದುಕೊಡುವ ಕ್ಷೇತ್ರ. ವಿದೇಶೀಯರೂ ಸೇರಿದಂತೆ ಲಕ್ಷಕ್ಕೂ ಅಧಿಕ ಪ್ರವಾಸಿಗರು ಪ್ರತಿವರ್ಷ ಲಕ್ಷದ್ವೀಪ ಸಮೂಹಗಳಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸಮುದ್ರದಡಿಯಲ್ಲಿ ಹಲವೆಡೆ ಹವಳ ಗುಡ್ಡೆಗಳಿವೆ. ಪ್ರಶಾಂತವಾಗಿರುವ ಈ ದ್ವೀಪಗಳಲ್ಲಿ ನೆಮ್ಮದಿಯನ್ನು ಅರಸಿ ಬರುವ ಪ್ರವಾಸಿಗರೇ ಜಾಸ್ತಿ. ಸ್ಕೂಬಾ ಡೈವಿಂಗ್, ಸ್ನಾರ್ಕೆಲ್ಲಿಂಗ್ ಇತ್ಯಾದಿ ಸೌಲಭ್ಯಗಳೊಂದಿಗೆ ಸಜ್ಜಾಗಿ ಇಲ್ಲಿನ ಪ್ರವಾಸೋದ್ಯಮ ಹೊರ ಜಗತ್ತನ್ನು ಆಕರ್ಷಿಸುತ್ತಿದೆ. ದರ ಸ್ವಲ್ಪ ಹೆಚ್ಚಾಯಿತೆನಿಸಿದರೂ ಬರುವ ಪ್ರವಾಸಿಗಳಿಗೇನೂ ಕೊರತೆ ಇಲ್ಲ. ಭಾರತೀಯರೇ ಆದರೂ ಲಕ್ಷದ್ವೀಪ ಸಮೂಹಗಳಿಗೆ ತೆರಳಬೇಕಾದರೆ ’ಪ್ರವೇಶಾನುಮತಿ’ (Entry permit) ಪಡೆದುಕೊಳ್ಳಬೇಕಾಗುತ್ತದೆ. ಏಜನ್ಸಿಗಳ ಮುಖಾಂತರ ಪ್ರವಾಸ ಆಯೋಜಿಸಿದಲ್ಲಿ ಅವರೇ ಪ್ರವೇಶಾನುಮತಿಯ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಾರೆ. ಆದರೆ ಈ ವರ್ಷದ ಪ್ರವಾಸೀ ಋತುವಿನಲ್ಲಿ ಕೊರೋನಾಸುರನ ಕಾಟದಿಂದಾಗಿ ಚಟುವಟಿಕೆಗಳೆಲ್ಲಾ ಸ್ತಬ್ಧವಾಗಿ ಹೋದವು. ಅದನ್ನೇ ನಂಬಿದ್ದ ಹೆಚ್ಚಿನ ಉದ್ಯೋಗಿಗಳ ಆದಾಯಕ್ಕೂ ಕತ್ತರಿ ಬಿತ್ತು. ಪ್ರಾಯಶಃ ಇನ್ನು ಮಳೆಗಾಲ ಕಳೆದ ಮೇಲಷ್ಟೇ ಪ್ರವಾಸ ಮತ್ತೆ ಶುರುವಾಗಬಹುದು. ಆಗಲಾದರೂ ಪರಿಸ್ಥಿತಿ ಅನುಕೂಲವಾಗಿರಲಿ ಎಂದು ಇಲ್ಲಿನವರ ಆಶಯ.

ಲೇಖಕ – ಗಿರೀಶ್ ಪಾಲಡ್ಕ