(ಭಾರತ ಅ-ಪೂರ್ವ ಕರಾವಳಿಯೋಟ – ೮)

ಎಂಟು ತಿಂಗಳ ಹಿಂದೆ ನಾನು ಅಭಯ ರೈಲೇರಿ ಕೊಯಂಬತ್ತೂರಿಗೆ ಹೋಗಿದ್ದೆವು. ಇಬ್ಬರಿಗೂ ಅಪರಿಚಿತ ನೆಲ. ಅಭಯ ಸಹಜವಾಗಿ ಕರದೊಳಿದ್ದ ‘ಮಾಯೆ’ಗೆ (ಚರವಾಣಿ) ನಾವಿಳಿದ ಪೋದನೂರು ಮತ್ತು ಹೋಗಬೇಕಾದ ‘ಶ್ರದ್ಧಾ ಟ್ರಾನ್ಸ್ಪೋರ್‍ಟ್’ ಮಂತ್ರಾನುಸಂಧಾನ ಮಾಡಿದ. ಮತ್ತೆ ನಮ್ಮ ೫ ಕಿಮೀ ನಡಿಗೆಯ ಉದ್ದಕ್ಕೂ ಮೇಲಿನ ಲೋಕದಿಂದ, ಭೂ ಲಕ್ಷಣಗಳ ಯಥಾಚಿತ್ರದೊಡನೆ ಅಶರೀರವಾಣಿಯ ನಿಖರ ಮಾರ್ಗದರ್ಶನವೇ ಸಿಕ್ಕಿತ್ತು. ಆದರೆ ಇಲ್ಲಿ ನಾನು ಹೇಳುತ್ತಿರುವುದಾದರೂ ಇಂಥ ಸಿದ್ಧಿಗಳಿಲ್ಲದ ದಿನದ, ಅಂದರೆ ಇಪ್ಪತ್ನಾಲ್ಕು ವರ್ಷಗಳ ಹಿಂದಿನ (೧೯೯೬) ಕಥೆ. ಹಾಗಾಗಿ ಯೋಜನಾ ದಿನಗಳಲ್ಲೇ ಯಥಾನುಕೂಲದ ನಕ್ಷೆ, ವಿವರಣೆ ಕಾಗದದ ಮೇಲೆ ದಾಖಲಿಸಿ ನಾಲ್ಕೂ ಜನರಲ್ಲಿ ಒಂದೊಂದು ಪ್ರತಿ ಕೊಟ್ಟಿದ್ದೆ. ಅದೀಗ ಉಪಯೋಗಕ್ಕೆ ಬಂತು. “ಹದಿನೈದಿಪ್ಪತ್ತು ಮಿನಿಟಿನಲ್ಲೇ ಬಿದ್ದು ಹೋದ ಚೀಲ ತರ್ತೇವೆ” ಎಂದು ಮೂರೂವರೆ ಗಂಟೆಗೇ ಹೋದವರನ್ನು ಕಿಶೋರ್ ಉಪಾಧ್ಯ ಕಾದೇ ಕಾದರು. ಮಿನಿಟುಗಳುರುಳಿ, ಗಂಟೆಗಳು ಬದಲಿ, ಕತ್ತಲು ಮುಸುಕಿದರೂ ಮಿರಿಕ್ ಕಡೆಯಿಂದ ಸುದ್ದಿಯಿಲ್ಲ. ವಾನರಶ್ರೇಷ್ಠ, ಅಚಲ ಭ್ರಾತೃನಿಷ್ಠೆಯ ಸುಗ್ರೀವ, ರಕ್ಕಸನನ್ನಟ್ಟಿ ಗುಹೆಯೊಳಗೋಡಿದ ಪ್ರಚಂಡ ವಾಲಿಯನ್ನೇ ಕಾಯಲಿಲ್ಲವಂತೆ. ಇನ್ನು ಹುಲು ಮಾನವರಾದ ಕಿಶೋರ್, ಉಪಾಧ್ಯ ಏನು ಮಾಡಿಯಾರು! ಎಲ್ಲೂ ಅಲ್ಲದಲ್ಲಿ, ಮೂರಕ್ಕೂ ಮಿಕ್ಕು ಗಂಟೆ ನಿಂತದ್ದಲ್ಲದೆ, ರಾತ್ರಿಯ ಅನಿಶ್ಚಿತತೆ ಕಾಡಿ ಸೋತು ಹೋದರು. ಏಳೂವರೆ ಗಂಟೆಯ ಸುಮಾರಿಗೆ, “ಹೋದವರು ಆರೋಗ್ಯವಾಗಿರಲಿ” ಎಂದು ಹಾರೈಸುತ್ತ, ಅಲ್ಲೇ ಎಲ್ಲಾದರೂ ಉಳಿದಿರಬಹುದೆಂದು ಭಾವಿಸುತ್ತ, ಸ್ಥಳ ಬಿಟ್ಟಿದ್ದರು.

ನಕ್ಷೆಯ ಪ್ರತಿ, ಡಾರ್ಜಿಲಿಂಗ್ ಬಿಡುವಾಗಿನ ಮಾತಿನ ತಿದ್ದುಪಡಿ ಅವರಿಗೆ ಧೈರ್ಯ ಕೊಡಲಿಲ್ಲ. ಕತ್ತಲಲ್ಲಿ ಹೊಸತೇ ಒಳದಾರಿ ವಿಚಾರಿಸಿ, ಅನುಸರಿಸಿ, ಸುಖ್ನಾ ಸೇರುವ ಬದಲು ಮುಖ್ಯ ದಾರಿಯನ್ನೇ ಅನುಸರಿಸಿ ನೇರ ಸಿಲಿಗುರಿಗೇ ಹೋದರು. ಅಲ್ಲಿ ಅನುಕೂಲಕ್ಕೊದಗಿದ ಹೋಟೆಲ್ – ಪದ್ಮಾ ಲಾಜ್, ಹಿಡಿದು ನಿಂತರು. ಆದರೆ ‘ಅಶೋಕ್ ಜೋಡಿ ಎಲ್ಲಿ? ಚೀಲ ಸಿಕ್ಕಿತೇ? ಅವರೆಲ್ಲಾದರೂ ಅಪಘಾತಕ್ಕೆ ಸಿಲುಕಿದರೇ? ಮುಂದೇನು?? ಗಾಢ ಯೋಚನೆಗಳ ಜಾಲದಲ್ಲಿ ದುಃಸ್ವಪ್ನದ ರಾತ್ರಿ ಕಳೆದರು. ಬೆಳಿಗ್ಗೆ ಪೋಲೀಸ್ ಠಾಣೆಗೆ ಹೋಗಿ “ಕಳೆದು ಹೋಗಿದ್ದಾರೆ” ದೂರು ಕೊಟ್ಟರು. ಮತ್ತೆ ದೂರವಾಣಿ ಹುಡುಕಿ ಹಿಡಿದು, ನಮ್ಮ ಲೆಕ್ಕಕ್ಕೆ ವಲಯದ ಸೂತ್ರಧಾರರಾಗಿ ಒದಗಿದ್ದ ವಿಕೆ ಯಾದವರಿಗೂ ಯೋಜನಾಪಟ್ಟಿಯಂತೆ ಮುಂದಿನ ನೆಲೆಯಾದ ಜಲದಪಾರಾಕ್ಕೂ ಟ್ರಂಕಾಲ್ ಮಾಡಿ ಗೊಂದಲ ಪ್ರಸರಿಸಿದರು. ಇತ್ತ ನಾವೂ ದಿನದಂತೆ ಬೇಗ ಎದ್ದರೂ (೨೭-೪-೯೬) ಹಿಂದಿನ ಡಾರ್ಜಿಲಿಂಗ್ ನಿಶ್ಚಯದ ನೆನಪಿನಲ್ಲಿ ಏಳೂವರೆಯವರೆಗೂ ಅತಿಥಿಗೃಹ ಬಿಡಲಿಲ್ಲ. ಸಿಲಿಗುರಿಗೆ ಹೋದವರು ಬೇಗನೆದ್ದು ನಮ್ಮನ್ನು ಹುಡುಕುತ್ತ ಸುಖ್ನಾಗೆ ಬಂದಾರೆಂದೇ ಅಂದಾಜಿಸಿದ್ದೆವು. ಅಲ್ಲೇ ಫೋನ್ ಹುಡುಕಿ, ವಿ.ಕೆ.ಯಾದವರಿಗೂ ಜಲದಪಾರಾಕ್ಕೂ ಟ್ರಂಕಾಲ್ ಹಾಕಿ ಕಾದೆವು. ದ್ವಾಪರದಲ್ಲೊಬ್ಬ ‘ಯಾದವ’ ಮಹಾಯುದ್ಧ ನಿವಾರಣೆಗೆಂದು ಸಂಧಾನಕ್ಕಿಳಿದು ಸೋತರೂ ಇಲ್ಲಿ ‘ಯಾದವ ಸಂಧಾನ’ ಫಲಕಾರಿಯಾಯ್ತು. ಹತ್ತೂವರೆಯ ಸುಮಾರಿಗೆ ನಾವು ಪದ್ಮಾಲಾಜಿಗೆ ಹೋಗಿ, ಪುನರ್ಮಿಲನವಾಯ್ತು.

ಬಂಗಾಳಿ ‘ಗುರಿ’ ನಮ್ಮಲ್ಲಿನ ‘ಊರು’ಗೆ (ಮಂಗಳೂರು, ಬೆಂಗಳೂರು…) ಸಮಾನ ಪದ. (ಜಲಪೈಗುರಿ, ಮಲ್ಲಗುರಿ..). ಹಾಗೆ ಹೇಳುವುದಿದ್ದರೆ, ‘ಸಿಲಿಯೂರು’ನಿಂದ ಕೇವಲ ನೂರಿಪ್ಪತ್ತೈದು ಕಿಮೀ ದೂರದ ಜಲದಪಾರಾ ವನಧಾಮ, ನಮ್ಮ ಅಂದಿನ ಗುರಿ. ಹೊರಟ ಮೊದಲಲ್ಲೇ ಅಡ್ಡವಾಗುವ ಭಾರೀ ನದಿ ತೀಸ್ತಾ. ಅದನ್ನುತ್ತರಿಸಲು ೧೯೪೧ರಲ್ಲೇ ಲೋಕಾರ್ಪಣಗೊಂಡ ಸೇತುವೆ – ಟೈಗರ್ ಬ್ರಿಜ್. ಅದು ತಳದಲ್ಲಿ ಈ ದಂಡೆಯಿಂದ ಆ ದಂಡೆಗೆ ಬಾಗಿದ ಒಂದು ಭಾರೀ ಕಮಾನು. ತುಂಬ ಆಕರ್ಷಕವಾಗಿದೆ. ಅದನ್ನು ಹೆಚ್ಚಿಸುವಂತೆ ಅದರ ಎರಡೂ ಕೊನೆಯಲ್ಲಿ ಒಂದೊಂದು ಹುಲಿಮೂರ್ತಿಯನ್ನು ಕೂರಿಸಿದ್ದಾರೆ. ಮತ್ತೆ ಅದನ್ನು ಅಂದಿನ (ಬ್ರಿಟಿಷ್ ಭಾರತ) ರಾಜನಿಷ್ಠೆಗೆ ಸಹಜವಾಗಿ, ಬ್ರಿಟಿಷ್ ಅರಸೊತ್ತಿಗೆಯ ಪಟ್ಟಾಭಿಷೇಕ ಒಂದರ ಸ್ಮರಣಾರ್ಥ ‘ಕೊರೊನೇಶನ್ ಬ್ರಿಜ್’ ಎಂದೇ ನಾಮಕರಣ ಮಾಡಿದ್ದರು. ಆದರೆ ಸ್ಥಳೀಯರು ಕಾಣದ ಪಟ್ಟಾಭಿಷೇಕ ಬಿಟ್ಟು, ಕಾಣುವ ಹುಲಿಗಳ ಲೆಕ್ಕ ಹಿಡಿದು, ‘ಬಾಘ್ ಪೂಲ್’ ಅರ್ಥಾತ್ ‘ಟೈಗರ್ ಬ್ರಿಜ್’ ಎಂದೇ ಗುರುತಿಸಿದ್ದಾರೆ, ಸ್ವತಂತ್ರ ಭಾರತದಲ್ಲೂ ಖ್ಯಾತವಾಗುಳಿದಿದೆ. ನಮ್ಮ ತಂಡದಲ್ಲಿ ಕಿಶೋರ್ ಮಾತ್ರ ಮಿಶ್ರಾಹಾರಿ, ಉಳಿದ ಮೂವರು ಕಟ್ಟಾ ಸಸ್ಯಾಹಾರಿಗಳು. ನಾನು, ದೇವಕಿ ನಮ್ಮ ಮಿತಿಯೊಳಗೆ, ಮುಕ್ತಾಹಾರಿಗಳು. ಆದರೆ ಉಪಾಧ್ಯ ಕಿಶೋರರಿಗೆ ಗೋಧಿ ತಯಾರಿಗಳು ಅಷ್ಟಕ್ಕಷ್ಟೇ, ಬಹುಕಾಲ ಅನ್ನ ದೂರರಾಗಲಾರರು. ಎಷ್ಟೋ ಸಲ ಉಪಾಧ್ಯರು ರೋಟಿಯೋ ಪೂರಿಯೋ ತಿನ್ನುವ ಅನಿವಾರ್ಯತೆಯಲ್ಲಿ ಕಷ್ಟಪಡುತ್ತಿದ್ದರೆ, ಕಿಶೋರ್ ಹೊರಗೆಲ್ಲಾದರೂ ಹುಡುಕಾಡಿ ಬ್ರೆಡ್-ಆಮ್ಲೆಟ್ ತಿಂದು ಸುಧಾರಿಸುವುದೂ ಇತ್ತು.

ಜಲದಪಾರಾ ದಾರಿಯಲ್ಲಿ ಮುಂದುವರಿಯುತ್ತಾ ಒಂದು ಸಾಕಷ್ಟು ದೊಡ್ಡ ಊರಿನ ಡಾಬಾದಲ್ಲಿ ಮಧ್ಯಾಹ್ನದ ಹೊಟ್ಟೆಪಾಡಿಗೆ ನಿಂತಿದ್ದೆವು. ಎಲ್ಲೆಡೆಗಳಂತೆ ಇಲ್ಲೂ ಮೊದಲಿಗೆ “ಏನುಂಟು ಬಿಸೀ?” ಕೇಳಿದ್ದೆವು. ಆತನ ಪಾಕಪಟ್ಟಿಯಲ್ಲಿ ದೋಸೆ ಹೆಸರು ಬಂದಾಗ ಮಾತ್ರ ಎಲ್ಲರಿಗೂ ಕುಣಿದಾಡುವ ಕುಶಿಯಾಗಿತ್ತು. ಕಣ್ಣು ಮುಚ್ಚಿ ದೋಸೆಗೆ ಜೈ ಎಂದೆವು. ಹಾಗೆಂದು ಎಲ್ಲರೆದುರು ತಟ್ಟೆಯಲ್ಲಿ ಎಣ್ಣೆ ಮುಳುಗೆದ್ದ ಎರಡೆರಡು ದಪ್ಪನ್ನ, ಸುಡುಸುಡು ವಸ್ತು ಪ್ರತ್ಯಕ್ಷವಾದಾಗ ಗೊತ್ತಾಯ್ತು ಅದು ನಿಜ ದೋಸೆಗೆ ಅವಮಾನ, ಸರಿಯಾದ ಅರ್ಥದಲ್ಲಿ ದೋಷ. ಉದ್ದು ಬೆರೆಸಿ, ಹುದುಗು ಬರಿಸುವ ತಂತ್ರ ಅವನಿಗೆ ತಿಳಿದೇ ಇರಲಿಲ್ಲ. ಮತ್ತೆ ಕಾವಲಿಯೊಡನೆ ಹಿಟ್ಟೊಣಗಿದ್ದರ ಗಾಢ ಸಂಬಂಧ ಹರಿಯುವಲ್ಲಿ ಸೇರು ಎಣ್ಣೆ ಸುರಿದವನಿಗೆ ತೆಳು ದೋಸೆಯ ಕನಸೂ ಬೀಳಲಾರದು! ಇಂಚು ದಪ್ಪದ ‘ನಾಯಿ ಚಕ್ಕಳ’ಕ್ಕೆ, ಅನಿಷ್ಟ ಕೂಟಕ. ತರಿಸಿದ ತಪ್ಪಿಗೆ ತಿಂದು ಪರಿಹಾರ ಮಾಡಿ ಮುಗಿಸಿದಾಗ, ಊರಿನ ಹೆಸರು ಸಾರ್ಥಕವಾಗಿತ್ತು – ಭಿನ್ನಗುರಿ. ‘ದೋಸೆ’ ಹೆಸರಿಸಿ ಭಿನ್ನವಾದ್ದನ್ನೇ ಕೊಟ್ಟ ಊರು! ಜಲದಪಾರಾ ರಾಷ್ಟ್ರೀಯ ಉದ್ಯಾನವನ್ನು ಸಂಜೆ ತಲಪಿದೆವು. ೧೯೪೧ರಲ್ಲೇ ಘೋಷಿತವಾದ ಜಲದಪಾರಾ ಬ್ರಹ್ಮಪುತ್ರಾದ ಒಂದು ಉಪನದಿಯಾದ ತೋರ್ಸಾದ ದಂಡೆಯಲ್ಲಿದೆ. ಇಲ್ಲಿನ ಬಹುತೇಕ ಜವುಗು ನೆಲ ಮತ್ತು ಹುಲ್ಲ ಹರಹುಗಳು ಘೆಂಡಾಮೃಗಕ್ಕೆ ಹೆಸರಾಗಿವೆ. ಒಂದು ಕೊಂಬಿನ ಘೆಂಡಾಗಳಿಗೆ ಬ್ರಹ್ಮಪುತ್ರಾ ನದಿಯ ಮೇಲ್ದಂಡೆಯ ಅಸ್ಸಾಂನ ಕಾಜಿರಂಗಾ ಜಗದ್ವಿಖ್ಯಾತವಾದರೆ, ಇದು ಪಶ್ಚಿಮ ಬಂಗಾಳದ ಲೆಕ್ಕಕ್ಕೆ ಅದ್ವಿತೀಯ ಘೆಂಡಾ ನೆಲೆ. ಇದರ ಮುಖ್ಯಸ್ಥ ಶುಭಂಕರ್ ಸೆನ್ ಗುಪ್ತಾರನ್ನು ಅವರ ಮನೆ-ಕಚೇರಿಯಲ್ಲೇ ಭೇಟಿಯಾದೆವು. ವಲಯ ವರಿಷ್ಠ ವಿಕೆ ಯಾದವರ ನಿರೀಕ್ಷೆ ಹಾಗೂ ಪತ್ರದ ಪರಿಣಾಮಗಳನ್ನು ಗುಪ್ತಾರಲ್ಲಿ ನಾವು ವಿಚಿತ್ರವಾಗಿ ಅನುಭವಿಸಿದೆವು. ಸ್ನೇಹದೂರ ಮಾತುಗಳಲ್ಲೇ ನಮ್ಮನ್ನು ಸುಧಾರಿಸಿದರು. ವನಧಾಮದ ಅತಿಥಿಗೃಹ, ಸಂಜೆಯ ವನವಿಹಾರ ನಮಗೆ ದಕ್ಕಲಿಲ್ಲ. ಆದರೆ ಮರುದಿನ ಬೆಳಗ್ಗಿನ ಆನೆ ಸವಾರಿಯನ್ನು ಮಾತ್ರ ಅಯಾಚಿತವಾಗಿ ನಮಗೆ ಉಚಿತವಾಗಿ ನೀಡಿದರು!

[೨೮-೪-೯೬ರಂದು ಪೂರ್ನಿಯಾದಿಂದ ದೇವಕಿ ಪತ್ರ: “ಪ್ರಿಯ ಅಭಯಾ …ಗುಪ್ತಾರಿಗೆ ನಾವು ಬರುವ ಪೂರ್ವ ಸೂಚನೆ ಇರಲೇ ಇಲ್ಲವಂತೆ. ಶನಿವಾರವಾದ್ದರಿಂದ ಫುಲ್ ರಶ್. ಹಾಗಾಗಿ ನಾವು ಹೊರಗೆ ಬಂದು WBT ಲಾಜಿನಲ್ಲಿ ತಲಾ ರೂ ೧೯೫ ಕೊಟ್ಟು ನಾಲ್ಕು ಬೆಡ್ ಹಿಡಿಯಬೇಕಾಯ್ತು….] ಸಂಜೆ ವನಧಾಮದೊಳಗಿದ್ದ ಪ್ರಕೃತಿ ಪರಿಚಯ ಕೇಂದ್ರ (ನೇಚರ್ ಇಂಟರ್‍ಪ್ರಿಟೇಶನ್ ಸೆಂಟರ್ – ಎನ್ನೈಸಿ) ಹಾಗೂ ಇನ್ನೊಂದು ಮೂಲೆಯಲ್ಲಿದ್ದ ವನ್ಯ ಮೃಗ ಮರುವಸತಿ ಕೇಂದ್ರಗಳನ್ನು (ರಿಹೆಬಿಲಿಟೇಶನ್ ಸೆಂಟರ್) ಪರಿಚಯಿಸಿಕೊಳ್ಳುವುದು ಸಾಧ್ಯವಾಯ್ತು. ಸ್ವತಂತ್ರ ಆಕರ್ಷಕ ಕಟ್ಟಡ, ವನ್ಯದ ರಮ್ಯ ಚಿತ್ರಗಳು, ಪ್ರಾಣಿಗಳ ವಿವಿಧ ರೂಪಿನ ಪ್ರತಿಕೃತಿಗಳು, ಧ್ವನಿ ಸಂಗ್ರಹ, ಚಲಚಿತ್ರ ಮುಂತಾದವಿರುವ ಪ್ರ.ಪ.ಕೇಂ ಅಶಿಕ್ಷಿತ ಪ್ರವಾಸಿಗಳ ಲೆಕ್ಕದಲ್ಲಿ ಅವಶ್ಯವೇ ಸರಿ.

“ಮನೆಗೆ ಹಾವು ನುಗ್ಗಿದೆ”, “ಬಾವಿಗೆ ಚಿರತೆ ಬಿದ್ದಿದೆ” ನಾವು ಕೇಳುತ್ತಲೇ ಇರುತ್ತೇವೆ. ವನ್ಯದಿಂದ ದಾರಿ ತಪ್ಪಿಯೋ ಆಹಾರದ ಅನಿವಾರ್ಯತೆಯಲ್ಲಿ ಎಡವಟ್ಟು ಮಾಡಿಕೊಂಡೋ ಜೀವಂತ ಸಿಗುವ ಪ್ರಾಣಿಗಳನ್ನು ಮತ್ತೆ ವನ್ಯಕ್ಕೆ ಮರಳಿಸುವುದೇ – ವನ್ಯ ಪುನರ್ವಸತಿ ಕೇಂದ್ರದ ಉದ್ದೇಶ. ಇದು ಮುಖ್ಯವಾಗಿ ಸೆರೆ ಸಿಕ್ಕುವ ಹಂತದಲ್ಲಿ ಪ್ರಾಣಿಗಳಿಗೆ ಉಂಟಾಗಿರಬಹುದಾದ ದೈಹಿಕ ಗಾಯಗಳಿಗೆ ಚಿಕಿತ್ಸೆ ನೀಡುವಲ್ಲಿ ಮುಖ್ಯ ಪಾತ್ರ ವಹಿಸಬಲ್ಲವು. ಇದು ಪ್ರಾಣಿ ಸಂಗ್ರಹಾಲಯವಲ್ಲ, ತತ್ಕಾಲೀನ ನೆಲೆ ಮಾತ್ರ ಎಂಬ ಸ್ಪಷ್ಟ ಅರಿವು ಇದರ ನಿರ್ವಾಹಕರಿಗೆ ಅವಶ್ಯ ಇರಬೇಕು. ಅಂದರೆ ಇಲ್ಲಿ ಪ್ರಾಣಿಗೆ ಮನುಷ್ಯರ ಒಡನಾಟ ಆದಷ್ಟು ಕಡಿಮೆ ಇರಬೇಕು ಎನ್ನುವುದು ತತ್ವ. ಇಲ್ಲವಾದಲ್ಲಿ (ಪ್ರಾಣಿ ಸಂಗ್ರಹಾಲಯದಂತೆ) ಸೆರೆ ಸಿಕ್ಕ ಪ್ರಾಣಿ – ಮುಖ್ಯವಾಗಿ ಚಿರತೆ ಹುಲಿಯಂಥವುಗಳಿಗೆ ಮನುಷ್ಯರ ಬಳಕೆ ಹೆಚ್ಚಾಗಿ, ಬಿಡುಗಡೆಗೊಂಡ ಮೇಲೆ ನಗರ ತಾಕಲಾಟ ಹೆಚ್ಚಾಗಬಹುದು, ಅವು ನರಭಕ್ಷವೇ ಆಗಬಹುದು ಎಂದೇ ವಿಜ್ಞಾನಿಗಳು ಹೇಳುತ್ತಾರೆ. ಆದರೆ ಇಲಾಖಾ ಉಡಾಫೆ ಸುಜ್ಞಾನಗಳಿಗೆ ಕಿವಿ ಕೊಡುವುದು ತುಂಬಾ ಕಡಿಮೆ. ಜಲದಪಾರಾದ ಪುನರ್ವಸತಿ ಕೇಂದ್ರದ ಒಂದೆರಡು ಗಾಯಾಳು ಚಿರತೆಗಳು ಪ್ರವಾಸಿಗಳಿಗೆ ತತ್ಕಾಲೀನ ಪ್ರಾಣಿಸಂಗ್ರಹಾಲಯದ ಐಟಂ ಆಗಿತ್ತು. ಮತ್ತೆ ಅವು ವೀಕ್ಷಕರ ಮೇಲಿನ ಆಕ್ರೋಶವನ್ನು ಸುತ್ತುವರಿದ ಬೇಲಿಯ ಮೇಲೆ ತೀರಿಸಹೋಗಿ ಉಗುರು ಹಲ್ಲುಗಳಿಗೆ ಹೆಚ್ಚುವರಿ ಜಖಂ ಮಾಡಿಕೊಳ್ಳುತ್ತಿದ್ದವು!

ನಾವು ಪರಿಚಯ ಕೇಂದ್ರ ಮತ್ತು ಪುನರ್ವಸತಿ ಕೇಂದ್ರಗಳ ಕಲ್ಪನೆಗೆ ಹೊಸಬರಾದ್ದರಿಂದ ಒಮ್ಮೆಗೆ ಮೆಚ್ಚಿಕೊಂಡೆವು. ಆದರೆ ಅಂಥವನ್ನೇ ಮುಂದೆ ಬೆಟ್ಲಾ, ಕನ್ಹಾ, ತಿಕರಪಾರಗಳಲ್ಲೂ ಕಂಡಾಗ, ನಿರ್ಮಿತಿಗಳ ಕಳಪೆ ಗುಣಮಟ್ಟ ಮತ್ತು ನಿರ್ವಹಣೆಯಲ್ಲಿನ ಉಡಾಫೆಗಳು ಶೋಚನೀಯವೇ ಆಗಿತ್ತು. ಎಲ್ಲ ಸರಕಾರೀ ಯೋಜನೆಗಳಂತೆ ಅಂತಿಮವಾಗಿ ಇವೂ ಅನೈತಿಕ ಹಣಮಾಡುವುದಕ್ಕೇ ದುಡಿಯುವಂತಿದ್ದವು. (ಅ-ಪೂರ್ವಯಾನ ಮುಗಿದಂದೇ ಬರೆದಿದ್ದ ಇಂಗ್ಲಿಷ್ ಫಲಶ್ರುತಿಯಲ್ಲಿ ಹೆಚ್ಚಿನ ವಿವರಗಳಿವೆ. ಈ ಸರಣಿಯ ಕೊನೆಯಲ್ಲಿ ಪ್ರಕಟಿಸುತ್ತೇನೆ, ಕಾದಿರಿ) ( ತಾ. ೩೦, ದಿನದ ಓಟ ೧೮೧ ಕಿಮೀ) ಬೆಳಿಗ್ಗೆ (೨೮-೪-೯೬) ಆರೂವರೆಗೇ ಇತರ ಪ್ರವಾಸಿಗಳೊಡನೆ ನಾವೂ ಇಲಾಖಾ ಜೀಪಿನಲ್ಲಿ (ಪ್ರತ್ಯೇಕ ಟಿಕೆಟ್ ಸಹಿತ) ಕಾಡಿನೊಳಗಿನ ಆನೆ ಶಿಬಿರಕ್ಕೆ ಹೋಗಿದ್ದೆವು. ಅಲ್ಲಿದ್ದ ಸಾಕಾನೆಗಳಲ್ಲಿ ಐದನ್ನು (ಒಂದರ ಮರಿ ಕೂಡಾ ನಮ್ಮನ್ನು ಹಿಂಬಾಲಿಸಿತ್ತು) ಆ ದಿನದ ಪ್ರವಾಸಿಗಳಿಗಾಗಿ ಹೊರಡಿಸಿದ್ದರು. ಆ ಸವಾರಿಯನ್ನು ಮಾತ್ರ ನಮಗೆ ಉಚಿತವಾಗಿಯೇ ಕೊಟ್ಟರು. [ಪತ್ರ “…ಆನೆ ಸವಾರಿಯಲ್ಲಿ ನವಿಲೊಂದು ನಮ್ಮೆದುರು ಎರಡು ಗರಿ ಉದುರಿಸಿತ್ತು. ಮಾವುತ ಹೆಕ್ಕಿಕೊಟ್ಟ. ಆದರೆ ಬೈಕಿನಲ್ಲಿ ಅದು ಹುಡಿಯಾಗಲಿಕ್ಕಿಲ್ಲವೇಂತ ಅಲ್ಲೇ ಬಿಟ್ಟೆ…”] ಆನೆಗಳು ಗುಂಪಾಗಿ ಹೋದವು. ಮಾವುತರು ವನಚರ ಮಾರ್ಗದರ್ಶಿಗಳಾಗುವ ಬದಲು, ಚರಚರ ವಾಚಾಳಿಗಳಾಗಿದ್ದರು. ಇತರ ಪ್ರವಾಸಿಗಳಾದರೂ ‘ಭಯಂಕರ ಕಾಡಿನೊಳಗೆ ಒಂದು ಗಂಟೆ ಆನೆ ಸವಾರಿ’ಯ ಸಂಭ್ರಮದ ಗದ್ದಲದಲ್ಲೇ ಎಲ್ಲ ಮರೆತರು. ನಾವು ಮಾತ್ರ ಜಿಂಕೆ, ಕಾಡು ಹಂದಿಯಿಂದಾಚೆ, ಬಹಳ ಮುಖ್ಯವಾಗಿ ಘೆಂಡಾಮೃಗವೇ ಕಾಣಸಿಗಲಿಲ್ಲ ಎಂಬ ಕೊರಗುಳಿದೇ ಹೋಯ್ತು. ಹತ್ತು ಗಂಟೆಗೆ ಜಲದಪಾರ ಬಿಟ್ಟೆವು.

ಅಂದಿನ ಓಟದ ಪರಮ ಲಕ್ಷ್ಯ ಸುಮಾರು ೬೮೦ ಕಿಮೀ ದೂರದ ಗಯಾ. ಆದರೆ ದಿನದ ಬೆಳಕು ಮಾಸುವವರೆಗೆ ಅಂತರ ಕಡಿಮೆ ಮಾಡಿ, ಸಿಗುವ ಯಾವುದೇ ದೊಡ್ಡ ಊರಿನಲ್ಲಿ ತಂಗುವ ಅಂದಾಜು ಇಟ್ಟುಕೊಂಡೇ ಹೊರಟಿದ್ದೆವು. ಸಿಲಿಗುರಿಯವರೆಗೆ ಹಿಂದಿನ ಬಂದದ್ದೇ ದಾರಿ. ಅನಂತರ ನಾಲ್ಕು ದಿನಗಳ ಹಿಂದೆ ಮಾಲ್ಡಾ ಬಿಟ್ಟು ಸಿಲಿಗುರಿಗೆ ಬಂದ ದಾರಿಯಲ್ಲೂ ಸುಮಾರು ಹೋಗುವುದಿತ್ತು. ಇದು ಯೋಜನಾ ನಕ್ಷೆಯಲ್ಲೂ ಇತ್ತು, ಹೊರಡುವ ಮೊದಲು ನಾವು ಮಾತಿನಲ್ಲೂ ಸ್ಪಷ್ಟ ಮಾಡಿಕೊಂಡಿದ್ದೆವು. ಆದರೆ ಹೋಗುವ ದಾರಿಯಲ್ಲಿ ‘ದೋಸೆ’ ಹೆಸರಿಸಿ, ಭಿನ್ನ ತಿನಿಸು ಕಾಣಿಸಿದ್ದ ಭಿನ್ನಗುರಿ, ಈಗ ಭಿನ್ನ ದಾರಿಯನ್ನೇ ತೋರಿಸಿ ಸಣ್ಣದಾಗಿ ಸೋಲಿಸಿತು. ನಾಲ್ಕೂ ಮಂದಿ ಅಂದಾಜು ತಪ್ಪಿ, ಎಡಕ್ಕೆ ಸಿಕ್ಕಿದ ಜಲಪೈಗುರಿ ದಾರಿ (ರಾ. ಹೆದ್ದಾರಿ ೨೭) ಹಿಡಿದುಬಿಟ್ಟೆವು. ತಡವಾಗಿ ತಪ್ಪಿನರಿವಾಯ್ತು. ಆದರೆ ಸ್ಥಳೀಯ ವಿಚಾರಣೆಯಲ್ಲಿ, ವಿಶೇಷ ವ್ಯತ್ಯಾಸವಾಗದೆಂದು ತಿಳಿದದ್ದಕ್ಕೆ, ಹಾಗೇ ಮುಂದುವರಿದೆವು.

ಇದರಲ್ಲಿ ತೀಸ್ತಾ ನದಿಯನ್ನು ಬೇರೊಂದೇ ಸೇತುವೆಯಲ್ಲಿ ದಾಟಿದೆವು. ಅದಕ್ಕೆ ಹುಲಿಸೇತಿನ ಚಂದ ಮಾತ್ರ ಇರಲಿಲ್ಲ. ಜಲಪೈಗುರಿಯಲ್ಲಿ ವಿಕೆ ಯಾದವರಿಗೆ ಮುಖತಃ ಧನ್ಯವಾದ ಹೇಳುವ ಆಸೆ ಮೊಳೆತಿತ್ತು. ಆದರೆ ಅವರು ಪರವೂರಿಗೆ ಹೋಗಿದ್ದರು. ಮತ್ತೆ ಆಗೀಗ ನೆರಳಿನ ತಣ್ಪು, ನೀರು, ಚಾ, ಊಟ ಎಂದೆಲ್ಲ ವಿರಮಿಸುತ್ತಾ ಜಲಪೈಗುರಿ, ಸಿಲಿಗುರಿಯಂಥ ದೊಡ್ಡ ಪೇಟೆಗಳನ್ನು ಹೊರವಲಯದಲ್ಲೇ ಹಾಯುತ್ತಾ ಏಕ ನಿಷ್ಠೆಯಲ್ಲಿ ಮಾರ್ಗಕ್ರಮಣವನ್ನಷ್ಟೇ ಲಕ್ಷಿಸಿದೆವು. [ಪತ್ರ: “…ಇಲ್ಲಿನ ಮಾಂಬುಳ ಕೊಂಡು ತಿಂದೆವು, ಒಳ್ಳೇದಿರಲಿಲ್ಲ. ಇಲ್ಲೆಲ್ಲ ಇನ್ನೂ ಎರಡು ತಿಂಗಳು ಮಾವಿನ ಸೀಸನ್ ಅಂತೆ. ತುಂಬಾ ಗದ್ದೆಗಳಲ್ಲಿ ಅನಾನಸ್ ಬೆಳೆಸಿದ್ದಾರೆ. ದಾರಿಕರೆಯಲ್ಲಿ ನಮ್ಮಲ್ಲಿ ಕಬ್ಬಿನ ಹಾಲಿನ ಜೋಪಡಿಗಳಂತೇ ಇಲ್ಲಿ ಅನಾನಸು ಜೂಸನ್ನು ಕೊಡುವವರಿದ್ದಾರೆ. ನೀರಿಲ್ಲದೇ ಉಪ್ಪು ಹಾಕಿ ಕೊಡ್ತಾರೆ – ಲೋಟಕ್ಕೆ ಮೂರು ರೂಪಾಯಿ. ಒಂಥರಾ ರುಚಿಯಿರುತ್ತದೆ. ದೊಡ್ಡ ದೊಡ್ಡ ವೀಳ್ಯದೆಲೆ ತೋಟಗಳಿವೆ. ಭತ್ತದ ಬೆಳೆ ಧಾರಾಳ ಇದೆ…”]

ಇಸ್ಲಾಂಪುರ, ಕಿಶನ್ ಗಂಜ್, ದಾಲ್ಕೋಲಾ ಎಂದು ದೊಡ್ಡೂರುಗಳು ಹಿಂದೆ ಸರಿದಂತೆ, ಪ.ಬಂಗಾಳದಿಂದ ಬಿಹಾರ ರಾಜ್ಯಕ್ಕೆ ನಮ್ಮ ಪ್ರವೇಶವಾಗಿತ್ತು. ನೆರಳುಗಳು ಉದ್ದವಾಗತೊಡಗಿದಂತೆ, ದಾರಿ ಬದಿಯ ಪುಟ್ಟ ಪೇಟೆಗಳಲ್ಲಿ ಜನ ಸಂಚಾರ ಹೆಚ್ಚತೊಡಗಿತ್ತು. ಆ ಸುಮಾರಿಗೆ ಎಲ್ಲೋ ಚಾ ದುಕಾನಿನ ವಿಚಾರಣೆಯಿಂದ ಮತ್ತೆ ಇಳಿಸಂಕಿ ತೋರುತ್ತಿದ್ದ ಕಿಲೋ ಕಲ್ಲ ಲೆಕ್ಕದಿಂದ ನಾವು ರಾತ್ರಿಗೆ ‘ಪೂರ್ನಿಯಾ’ದಲ್ಲಿ ನಿಲ್ಲುವ ಅಂದಾಜೂ ಮಾಡಿಕೊಂಡೆವು. ಹಾಗೆ ನಿರಾತಂಕವಾಗಿ ಸಾಗಿದ್ದಂತೆ ಅದೊಂದು ಪಕ್ಕಾ ಹಳ್ಳಿ ಸಂತೆ. ಯಾವ ಇತರ ವಾಹನ ಸಂಚಾರವೂ ಇಲ್ಲದ ಹೊತ್ತು. ಆದರೂ ನಾನು ನಿಧಾನದಲ್ಲೇ ಆಗೀಗ ಹಾರ್ನ್ ಮಾಡುತ್ತ ನಡು ದಾರಿಯಲ್ಲೇ ಸಾಗಿದ್ದೆ. ಇದ್ದಕ್ಕಿದ್ದಂತೆ ಎದುರು ಬಲ ಅಂಚಿನ ಜಂಗುಳಿಯಿಂದೊಬ್ಬ ಸೈಕಲ್ವಾಲ, ಕ್ಯಾರಿಯರಿನಲ್ಲಿ ಅಗಲ ತೆರೆಬಾಯಿ ಬುಟ್ಟಿ ತುಂಬ ಟೊಮಾಟೋ ಹೇರಿಕೊಂಡವ, ನಡು ದಾರಿಗೆ ನುಗ್ಗಿದ್ದ. ನಾನು ಅನೈಚ್ಛಿಕ ಕ್ರಿಯೆಯಲ್ಲಿ ಹಾರ್ನಿನೊಡನೆ ಬೊಬ್ಬೆಯೂ ಹಾಕಿ ಬೈಕನ್ನು ತುಸುವೇ ಎಡ ವಾಲಿಸಿದೆ. ಗಾಬರಿಗೆಟ್ಟ ಅವನೂ ಅವನ ಎಡಕ್ಕೆ ವಾಲಿಸಿದ್ದ. ಮುಖಾಮುಖಿಯಾಗುವುದು ತಪ್ಪಿತೆನ್ನುವುದರೊಳಗೆ ನನ್ನ ಬೈಕಿನ ಬಲ ಡಬ್ಬಿಯೂ ಆತನ ಅಗಲ ಬುಟ್ಟಿಯೂ ಕ್ಷಣಿಕ ಸಂಬಂಧ ಬೆಳೆಸಿಬಿಟ್ಟಿದ್ದವು. ನಾನು ಬಿರಿ ಒತ್ತಿ ಸಾವರಿಸಿಕೊಂಡು, ಹತ್ತಿಪ್ಪತ್ತು ಮೀಟರ್ ಮುಂದೆ ಹೋಗಿ ನಿಂತು, ಹಿಂದೆ ನೋಡಿದೆ. ಟೊಮೆಟೋಗಳ ಹರಹಿನ ನಡುವೆ ಸೈಕಲ್ ಅಡ್ಡ ಮಲಗಿತ್ತು. ಬಹುಶಃ ಜೊತೆಗೇ ದಾರಿ ಮುಟ್ಟಿದ್ದ ಸವಾರ, ಸಾವರಿಸಿಕೊಂಡು ಏಳುತ್ತ ಸೈಕಲ್ ಎತ್ತುತ್ತಿದ್ದ. ಸಂತೆ ಜನ “ಹೋ.. ಹಾ..” ಎಂದು ಇನ್ನೂ ಧ್ವನಿ ಹುಡುಕಿದ್ದರು. ನನಗೆ ಮೊದಲು ಬಂದ ಉದ್ಗಾರ “ಅಬ್ಬ! ಸವಾರನಿಗೇನೂ ಆಗಿಲ್ಲ.” ಮರುಕ್ಷಣದಲ್ಲಿ ತಲೆಯಲ್ಲಿ ಮೂಡಿದ ಚಿತ್ರ – ಜನ ತಪ್ಪೇನೂ ಇಲ್ಲದಿದ್ದರೂ ‘ದೊಡ್ಡ ವಾಹನ’ ಮರ್ಯಾದೆ ಸಲ್ಲುವ ನಮಗೆ ಮುತ್ತಿಗೆ ಹಾಕಿದ್ದು. ಕೂಡಲೇ ನಾನು ಬೈಕ್ ಇಳಿದು ವಿಚಾರಿಸಿಕೊಳ್ಳುವ ಯೋಚನೆ ಬಿಟ್ಟು, ಬಚಾವಾಗುವ ದಾರಿ ಕಂಡುಕೊಂಡೆ. ವೇಗ ಸಾಧಿಸಿ ಹಳ್ಳಿ ದೂರನಾದೆ. ನಿರಪಾಯ ದೂರ ಸಾಧಿಸಿದ ಮೇಲೆ, ಬದಿಯಲ್ಲಿ ನಿಂತು ಕಿಶೋರ್ ಬೈಕ್ ಕಾದೆವು. ಒಂದೆರಡು ಮಿನಿಟು ಹಿಂದಿದ್ದ ಅವರು, ಘಟನೆಯ ಅರಿವಿಲ್ಲದೇ ಆರಾಮವಾಗಿಯೇ ಬಂದರು. ಹಳ್ಳಿಯಲ್ಲೇನೂ ಗೊಂದಲವಿರಲಿಲ್ಲ, ತಮ್ಮನ್ನು ಯಾರೂ ತಡೆಯಲಿಲ್ಲ ಎಂದ ಮೇಲೆ ಹೆಚ್ಚು ನಿಶ್ಚಿಂತನಾದೆ.

ಐದೂಮುಕ್ಕಾಲು ಗಂಟೆಗೇ ನಾವು ಪೂರ್ನಿಯಾ ತಲುಪಿದೆವು. [ಪತ್ರ: “…ಹೋಟೆಲ್ ಅನಾಮಿಕಾದಲ್ಲಿ ರೂಂಗೆ ೭೨ ರೂಪಾಯಿ ಕೊಟ್ಟು ಉಳಿದಿದ್ದೇವೆ. ಊಟಕ್ಕೆ ಬಸುಮತಿ ಅನ್ನ, ಮೊಸರು, ಮಾವಿನ ಎಣ್ಣೆಗಾಯ್ ಉಪ್ಪಿನ ಕಾಯಿ ಸಿಕ್ಕಿ ಭರ್ಜರಿಯಾಯ್ತು…”] ಸಮಯ ಧಾರಾಳವೇ ಇದ್ದುದರಿಂದ ಬೇಗನೇ ಮಲಗಿದ್ದೆವು. ಆದರೆ ನನಗೆ ನಿದ್ರೆ ಬಹಳ ಹೊತ್ತು ಸತಾಯಿಸುತ್ತಲೇ ಇತ್ತು – ಸೈಕಲ್ವಾಲಾ ಸರಿಯಿದ್ದಾನೆಂದು ಕಂಡ ಮೇಲೂ ನಾನು ಓಡಿದ್ದು ಯಾಕೆ? ಅದು ನನಗೆ ಇಂದಿಗೂ ಬಗೆಹರಿದಿಲ್ಲ. (ಸಂಜೆ ತಾ ೩೧, ದಿನದ ಓಟ ೨೭೭ ಕಿಮೀ) ಪೂರ್ನಿಯಾದಿಂದ ಗಯಾಕ್ಕಿರುವ ಬಹು ಬಳಕೆಯ ದಾರಿ ಮುಜಫರ್ ಪುರ್ ಮತ್ತು ಪಾಟ್ನಾ ಮಹಾನಗರಗಳನ್ನು ಬಳಸಿ ಸಾಗುವ ೪೮೦ ಕಿಮೀ ಉದ್ದದ ರಾ. ಹೆದ್ದಾರಿ ಸಂ. ೨೭. ಆದರೆ ನಾವು ಹೆದ್ದಾರಿ, ಮಹಾನಗರಗಳ ಮೋಹ ಬಿಟ್ಟು, ಮಹಾಗಂಗೆಯ ಸಾಮೀಪ್ಯ ಬಯಸಿದ್ದೆವು. ಸುಮಾರು ೩೪೦ ಕಿಮೀಯ ಒಳದಾರಿ ಓಟವನ್ನು ಆಯ್ದುಕೊಂಡಿದ್ದೆವು. (೨೯-೪-೯೬ರ) ಐದೂ ಮುಕ್ಕಾಲಕ್ಕೇ ಪೂರ್ನಿಯಾ ಬಿಟ್ಟು ಖತ್ರಿಯಾ, ನೌಗಚ್ಚಿಯಾ, ಬಿಹುಪುರ್, ಮಹೇಶ್ಖುಂಟ್, ಖಗರಿಯಾ, ಎಂದಿತ್ಯಾದಿ ಅರೆವಾಸಿ ದೊಡ್ಡೂರುಗಳನ್ನು ಗಂಗಾ ಪಾತ್ರೆಯ ಉತ್ತರ ದಂಡೆಯಲ್ಲೇ ಕಳೆದೆವು. ನದಿಹರಿವಿನ ಎದುರು ದಿಕ್ಕಿಗೇ ಆದರೂ ಬಳುಕಾಡುವ ದಾರಿಗೆ ಸಮಜೋಡಿಯಾಗಿ ಮಾರ್ಗಕ್ರಮಣವನ್ನೇ ಮಾಡಿದ್ದೆವು. ಅದಕ್ಕೆ ಕೊನೆ ಹಾಕಿದ್ದು ಬೆಗುಸರಾಯ್ ಕಳೆದ ಮೇಲೆ ಸಿಕ್ಕ ರಾಜೇಂದ್ರ ಸೇತು. ಬಿಹಾರ್ ರಾಜ್ಯದ ನಡು ಸೀಳಿದಂತೇ ಗಂಗಾನದಿ ಹರಿದಿತ್ತು. ಸ್ವತಂತ್ರ ಭಾರತ ಅದು ಸುಲಭ ಏಕತೆಯನ್ನು ಸಾಧಿಸುವಂತೇ ಸೇತುವೆ ನಿರ್ಮಾಣದ ಯೋಜನೆ ಹಾಕಿತು. ಅದಕ್ಕೆ ಸೂಕ್ತ ಸ್ಥಳ ಆಯ್ಕೆಗೆ ರಾಜ್ಯದ ಮು.ಮಂ. ಡಾ| ಶ್ರೀಕೃಷ್ಣ ಸಿನ್ಹಾರಿಂದಲೇ ವಿಶೇಷವಾಗಿ ಆಹ್ವಾನಿತರಾದವರು – ನಮ್ಮವರೇ ಆದ ಮೋಕ್ಷಗುಂಡಂ ವಿಶ್ವೇಶ್ವರಾಯರು. ಆಗಲೇ ತೊಂಬತ್ತರ ಹರಯ ಮೀರಿದ್ದ ಮೇಧಾವಿ, ಹಿಂಗದ ಉತ್ಸಾಹದಲ್ಲಿ ಬಂದು, ಗಾಲಿ ಕುರ್ಚಿಯಲ್ಲೇ ಓಡಾಡಿ ಆಯ್ದ ನೆಲೆಯಲ್ಲೇ ಇಂದೂ ನಿಂತಿದೆ ರಾಜೇಂದ್ರ ಸೇತು. ೧೯೫೯ರಲ್ಲಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಲೋಕಾರ್ಪಣ ಮಾಡಿದ, ಎರಡು ಕಿಮೀ ಉದ್ದದ ಮಹಾಸೇತು ರಾಜ್ಯಕ್ಕಂತೂ ಪ್ರಥಮವೇ ಇತ್ತು. ಏಕರೂಪದಲ್ಲಿ ರೈಲು ಮತ್ತು ವಾಹನ ಓಡಾಟಕ್ಕೆ ಅನುಕೂಲಿಸುವಲ್ಲಿ ಇದು ದೇಶಕ್ಕೇ ಪ್ರಥಮವಾಗಿತ್ತು.

ಮಹಾಸೇತು ಕಳೆದ ಮೇಲೆ ನಾವು ನೇರ ಗಯಾದತ್ತ ಹೋಗುತ್ತಿದ್ದ ಮುಖ್ಯ ದಾರಿಯನ್ನು ಬಿಟ್ಟು ಮತ್ತೆ ಗಂಗೆಗೇ ಹೆಚ್ಚು ಆಪ್ತರಾದೆವು. ಅದು ನುಲಿದಂತೆ ಬಾರ್ಹ್, ಭಕ್ತಿಯಾರ್ಪುರ್ ಎಂದೇ ಬಳುಕಿ, ಮಧ್ಯಾಹ್ನದ ಊಟಕ್ಕೆ ನಳಂದಾ ಸೇರಿದ್ದೆವು. ಸುಮಾರು ಎಂಟು ಶತಮಾನಗಳ ಕಾಲ (ಐದರಿಂದ ಹದಿಮೂರನೇ ಶತಮಾನ) ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯವಾಗಿ ಖ್ಯಾತವಾದ ನೆಲೆ. ಮತ್ತೆ ಸುಮಾರು ಐದಾರು ಶತಮಾನಗಳ ಮರವೆಗೆ ಬಿದ್ದ ನೆಲ. ಈಗ ಆಂಶಿಕವಾಗಿ ಕೇವಲ ಐತಿಹಾಸಿಕ ಪ್ರದರ್ಶನಾಂಗಣವಾಗಿ ಉಳಿದಿದೆ.

ದೇವಕಿಯ ಕಾಗದವೇ ಹೇಳುವಂತೆ [೩೦-೪-೯೬ರ ದೇವಕಿ ಪತ್ರ: ಪ್ರೀತಿಯ ಅಭಯ ನಿನ್ನೆ ಬೆಳಿಗ್ಗೆ ಪೂರ್ನಿಯಾದಿಂದ ಹೊರಟು ನಲಂದಾಕ್ಕೆ ಬಂದೆವು. ಇಲ್ಲಿ ಪುರಾತನ ಬೌದ್ಧ ವಿಶ್ವವಿದ್ಯಾನಿಲಯವಿತ್ತು. ಅದನ್ನು ಈಗ ಪ್ರಾಚ್ಯ ಸಂಶೋಧನಾ ಇಲಾಖೆಯವರು ಮಣ್ಣಿನಿಂದ ಮೇಲೆತ್ತುವ ಕೆಲಸ ನಡೆಸಿದ್ದಾರೆ. ಹ್ಯೂಯೆನ್ತ್ಸಾಂಗನ ಪ್ರಕಾರ ಇದು ಏಳು ಮೈಲು ಉದ್ದ ಐದು ಮೈಲು ಅಗಲವಿತ್ತಂತೆ. ಈಗ ಒಂದು ಮೈಲು ಮಾತ್ರ ಶೋಧಿಸಿದ್ದಾರೆ. ಇಲ್ಲಿ ಮೇಸ್ಟ್ರುಗಳಿಗೂ ವಿದ್ಯಾರ್ಥಿಗಳಿಗೂ ವಾಸ ವ್ಯವಸ್ಥೆ ಇತ್ತು. ಈಗ ನೋಡುವಾಗಲೇ ವ್ಯವಸ್ಥೆಯ ಅಗಾಧತೆ ತಿಳಿಯುತ್ತದೆ, ನಷ್ಟದ ಕುರಿತು ವ್ಯಥೆಯಾಗುತ್ತದೆ. ಅಲ್ಲಿಂದ ರಾಜಗಿರ್‍ಗೆ ಬಂದೆವು. ಇಲ್ಲೂ ನೋಡುವಂತದ್ದು ತುಂಬಾ ಇದೆ. ಬಿಸಿ ನೀರ ಬುಗ್ಗೆ ಇದೆ. ಒಳ್ಳೇ ಬಿಸಿ ನೀರು. ಸುತ್ತಲೂ ಬೆಟ್ಟಗಳ ಮೇಲೆಲ್ಲಾ ಬೌದ್ಧರ ರಚನೆಗಳಿವೆ. ಒಂದು ದೇವಾಲಯಕ್ಕೆ ಹತ್ತಲು ರೋಪ್ ವೇ ಕೂಡಾ ಇದೆ. ನಾವಲ್ಲಿಗೆ ತಲಪಿದಾಗ ಉರಿ ಬಿಸಿಲು. ಮೊನ್ನೆ ತಾನೇ ಟೈಗರ್ ಹಿಲ್ ಮೇಲೆ ೧೦ ಡಿಗ್ರಿ ಚಳಿಯಲ್ಲಿ ಗದಗುಟ್ಟುತ್ತಿದ್ದ ನಾವು ಇಲ್ಲಿ ೪೮ ಡಿಗ್ರಿಯಲ್ಲಿ ಬೇಯುತ್ತಾ ಸಮಯ ಸಾಕಾಗದು ಎಂದು ಕೊರಗುತ್ತಾ…”] ಮಧ್ಯಾಹ್ನ ಸುಮಾರು ಹನ್ನೆರಡರಿಂದ ಅಪರಾಹ್ನ ಮೂರು ಗಂಟೆಯವರೆಗೂ ವೀಕ್ಷಣೆ, ಊಟ, ವಿಶ್ರಾಂತಿ ಎಂದೆಲ್ಲ ಸಮಯ ಕಳೆದೆವು. ಮತ್ತೆ ನೋಡಿ ಮುಗಿಯದ್ದಕ್ಕೆ ನಿಂತು ವ್ಯಥಿಸುವುದು ಬಿಟ್ಟು, ಸೂರ್ಯ ಮೃದುವಾಗುತ್ತಿದ್ದಂತೆ ಗಯಾದತ್ತ ಬೈಕೋಡಿಸಿದೆವು, ಸಂಜೆ ಆರು ಗಂಟೆಗೆ ಮುಟ್ಟಿದೆವು.

ಬರೆಯಲು ಕುಳಿತಾಗ ಅಂದಿನ ನಮ್ಮ ನೋಟ ಮತ್ತು ಗ್ರಹಿಕೆಗಳ ಕುರಿತು ಗಹನತೆಯನ್ನು ಆರೋಪಿಸಿಕೊಂಡು, ಇಂದು ಯಾವುದೇ ವಿಶೇಷ ನೆನಪು, ಟಿಪ್ಪಣಿ ಉಳಿದಿಲ್ಲವಲ್ಲಾ ಎಂದು ಸಣ್ಣ ವಿಷಾದ ಮೂಡುವುದಿದೆ. ಆದರೆ ಕೇವಲ ಅಂದಿನ ಹೆಸರುಗಳನ್ನು ಇಂದಿನ ಪ್ರಾಕೃತಿಕ ನಕ್ಷೆಯಲ್ಲಿ, ಸುಲಭಗ್ರಾಹ್ಯ ಮಾಹಿತಿಗಳ ಕಣಜದಲ್ಲಿ (ಅಂತರ್ಜಾಲ) ಗುರುತಿಸುತ್ತಿದ್ದಂತೆ, ಅಂದು ನಾವು ನೋಡಿದ್ದಾದರೂ ಎಷ್ಟು ಸ್ವಲ್ಪ ಎಂದು ತಿಳಿದು ಸಮಾಧಾನವಾಗುತ್ತದೆ. ಪಶ್ಚಿಮ ಘಟ್ಟದ ಲಕ್ಷಾಂತರ ಚದರ ಕಿಮೀ ವಿಸ್ತೀರ್‍ಣದಲ್ಲಿ ಎಲ್ಲೋ ಮೂಲೆಯಲ್ಲಿ ಒಂಬತ್ತು ಇಂಚು ಗಾತ್ರದ ಪಾದ ಊರಿ, ಭಾವುಕವಾಗಿ ಏನೋ ಒಂದು ಹೆಸರು ಕೊಟ್ಟು (ಕುದುರೆಮುಖ ಎನ್ನಿ), ಅಹಂಕಾರ ಮೆರೆಸಿದಷ್ಟೇ ಸತ್ಯ ಈ ಪ್ರವಾಸ. ಬಹುಮಂದಿ ಇಷ್ಟೂ ಮಾಡುವುದಿಲ್ಲ ಎನ್ನುವ ಲೆಕ್ಕದಲ್ಲಷ್ಟೇ ಇದು ಸಾಹಸಯಾನವೂ ಹೌದು! ನಿಜದಲ್ಲಿ ದೊಡ್ಡ ಹೆಸರಿನ ‘ಭಾರತ ಅ-ಪೂರ್ವ ಕರಾವಳಿಯೋಟ’ವಾದರೂ ಟೊಮೆಟೋ ಸೈಕಲ್ವಾಲ ಪ್ರಸಂಗದಂತೇ ‘ಮುಟ್ಟಿ, ಓಡು’ ಕಥನ ಮಾತ್ರ!

(ಮುಂದುವರಿಯಲಿದೆ)