(ಭಾರತ ಅ-ಪೂರ್ವ ಕರಾವಳಿಯೋಟ – ೯)

ದೇವರು, ನಂಬಿಕೆಗಳ ಕುರಿತ ನನ್ನ ವೈಯಕ್ತಿಕ ನಿಲುವು ಎಂದೂ ನನ್ನ ವೃತ್ತಿಯ ಭಾಗವಾದ ಪುಸ್ತಕ ವೈವಿಧ್ಯದ ಸಂಗ್ರಹ ಮತ್ತು ಮಾರಾಟವನ್ನು ಪ್ರಭಾವಿಸಿದ್ದಿಲ್ಲ. (ಎಲ್ಲೂ ಇಲ್ಲದ್ದು ಅತ್ರಿಯಲ್ಲಿ ವಿಚಾರಿಸಿ!) ಹಾಗಾಗಿ ಮಠಾಧಿಪತಿಗಳೂ ಜ್ಯೋತಿಷ್ಯ ಮಾರ್ತಾಂಡರೂ ಸಕಲ ಧರ್ಮೀಯರೂ ಸಂಶಯಚಿತ್ತರೂ ನಾಸ್ತಿಕ ಪ್ರಚಂಡರೂ ನನ್ನಂಗಡಿಯನ್ನು ಪುಸ್ತಕಾಸಕ್ತಿಗಾಗಿ ಒಪ್ಪಿಕೊಳ್ಳುತ್ತಿದ್ದರು. ಮತ್ತೆ ಯಥಾಮಿತಿಯಲ್ಲಿ ನನ್ನೊಡನೆ ವಿಚಾರ ವಿನಿಮಯಿಸುವುದೂ ಇತ್ತು. ಅಂಥವರಲ್ಲಿ ಮಾಧವ ಭಟ್ ಎಂಬೊಬ್ಬ ಅಪ್ಪಟ ಪುಣ್ಯಜೀವಿ, ಆಂಶ ಕಾಲಿಕ ಅರ್ಚಕ (ಕೆಲವು ಕಾಲ ಕರಂಗಲ್ಪಾಡಿಯ ಶಿವ ದೇವಾಲಯದ ನಿತ್ಯ ಅರ್ಚಕರೂ ಆಗಿದ್ದರು), ಡೊಂಗರಕೇರಿಯ ‘ಕೃಷ್ಣಮಠ’ ಎನ್ನುವ ಮನೆಯಿಂದ ನನ್ನಂಗಡಿಗೆ ಬಹಳ ಹಿಂದಿನಿಂದಲೂ ಬರುತ್ತಿದ್ದರು (ಪ್ರಸ್ತುತ ದಿವಂಗತರು). ಅವರ ಆರ್ಥಿಕ ಸ್ಥಿತಿ ಎಂದೂ ದೊಡ್ಡದಿರಲಿಲ್ಲ. ಆದರೆ ಯಥಾನುಶಕ್ತಿ ಪುಸ್ತಕ ಖರೀದಿಸುತ್ತಿದ್ದರು, ನನ್ನ ವಿಚಾರಪರತೆಯ ಪರಿಚಯವಿದ್ದೂ ನನ್ನಲ್ಲಿ ಅತೀವ ವಿಶ್ವಾಸ ಬೆಳಸಿಕೊಂಡಿದ್ದರು. ಅವರ ತೀರ್ಥಯಾತ್ರಾ ಅನುಭವಗಳು, (ಕೊಂಕಣಿ) ಸಮಾಜೋ ರಾಜಕೀಯ ತಲ್ಲಣಗಳನ್ನೆಲ್ಲ ಕುತೂಹಲಕರವಾಗಿ ಹಂಚಿಕೊಳ್ಳುತ್ತಿದ್ದರು.

ಪ್ರಾಕೃತಿಕ ಭಾರತ ಸೀಳೋಟ ಯಾನ – ಹಿಂದಿನ ಮೋಟಾರ್ ಸೈಕಲ್ ಯಾನಕ್ಕಾಗುವಾಗ, ಚತುರ್ಧಾಮಗಳ ಅನೇಕ ನಕ್ಷೆ, ಮಾಹಿತಿಗಳನ್ನು ಮಾಧವಭಟ್ಟರು ನಿರ್ವಂಚನೆಯಿಂದ ಕೊಟ್ಟಿದ್ದರು. ಅ-ಪೂರ್ವ ಕರಾವಳಿಯೋಟದ ಸಿದ್ಧತೆಯಲ್ಲೂ ಮುಖ್ಯವಾಗಿ ಗಯಾ ಮತ್ತು ಕಾಶಿ ಕುರಿತು, ನಿತ್ಯ ಎನ್ನುವಂತೆ ಅಂಗಡಿಗೆ ಬಂದು, ಮಾಹಿತಿ ಕೊಟ್ಟು, ಅಲ್ಲಿನ ಪರಿಚಯದವರಿಗೆ ಪತ್ರ ಬರೆದು ಉಪಕರಿಸಿದ್ದರು. ಆ ಪರಿಚಯ ಬಲದಲ್ಲಿ ಗಯಾದಲ್ಲಿ ನಾವು ಏಕಚಿತ್ತದಿಂದ ಧ್ಯಾನಿಸಿದ್ದು ಕರ್ನಾಟಕ ಭವನ (ಛತ್ರ). ಮಹಾ ಕಿಷ್ಕಿಂಧೆ ಹಾಗೂ ಕೊಳಕು ಗಲ್ಲಿಗಳ ಜಾಲದಲ್ಲಿ ಅದನ್ನು ಹುಡುಕಿ ಹಿಡಿಯುವಾಗ ನಾವು ಬೈಕಿನಲ್ಲಿ ಬಂದದ್ದು ಸಾರ್ಥಕ ಅನ್ನಿಸಿತ್ತು! ಯಾಕೆಂದರೆ, ಅದು ಛತ್ರ ಕಾರು ಬಸ್ಸಾದಿ ವಾಹನಗಳಿಗೆ ಅತೀತವಾದ ಓಣಿಜಾಲದ ಗೂಢದಲ್ಲಿದೆ. ಅಲ್ಲಿಗೆ ನಡೆಯುವುದು ಅಸಹ್ಯ, ಬಾಡಿಗೆ ಸೈಕಲ್ ರಿಕ್ಷಾ ಹಿಡಿದರೂ ಎಲ್ಲೆಡೆ ನುಸುಳೀತೆಂದು ಹೇಳುವುದು ಕಷ್ಟ.ಕರ್ನಾಟಕ ಛತ್ರ ವಾಸಕ್ಕೆ ಸರಳ ಕೋಣೆ ಚಾಪೆಯನ್ನಷ್ಟೇ ಕೊಟ್ಟಿತು. ಎಲ್ಲರೊಡನೊಂದಾಗುವ ಸ್ನಾನ, ಶೌಚ ವ್ಯವಸ್ಥೆ ಅಡ್ಡಿಯಿಲ್ಲ. ಬಾಡಿಗೆಯಾದರೂ ಕೇವಲ ಸಾಂಕೇತಿಕ. ಗಯಾದ ಖ್ಯಾತಿಗೆ ಹಿಂದೂ, ಜೈನ ಮತ್ತು ಬೌದ್ಧ ಎಂದು ಮೂರೂ ಮತಗಳನ್ನು ಹೆಸರಿಸುತ್ತಾರೆ. ನಮ್ಮ ಯೋಜನಾ ಹಂತದಲ್ಲಿ ಅಯಾಚಿತ ಸಲಹೆ ಕೊಟ್ಟವರೆಲ್ಲ, ಗಯಾ ಮತ್ತು ಕಾಶಿಯ ಪಂಡಾಗಳ ಸುಲಿಗೆಯ ಕತೆಗಳನ್ನು ಹೇಳಿದ್ದರು. ಆದರೆ ಯಾವುದೇ ಮತೀಯ ಆಚರಣೆಗಳ ಕಟ್ಟುಪಾಡಿಲ್ಲದ ನಮಗದರ ಸೋಂಕು ತಗಲಲೇ ಇಲ್ಲ. [ದೇವಕಿ ಪತ್ರ: “…ಸ್ನಾನ ಮುಗಿಸಿ, ಇಲ್ಲಿಗೆ ಖ್ಯಾತವಾದ ದೇವಳಕ್ಕೆ ಹೋಗಿ, ವಿಷ್ಣುಪಾದ ದರ್ಶನ ಮಾಡಿದೆವು. ಪಕ್ಕದಲ್ಲೇ ಇದ್ದ ಅಯ್ಯರ್ ಹೋಟೆಲಿನಲ್ಲಿ ಒಳ್ಳೆಯ ಇಡ್ಲಿ, ಊತಪ್ಪ ತಿಂದು ಮಲಗಿದೆವು. ಮಧ್ಯರಾತ್ರಿಯವರೆಗೆ ಕರೆಂಟಿಲ್ಲದೆ ಪತ್ರ ಲೇಖನ ಬಿಡು, ಸೆಕೆಗೆ ಫ್ಯಾನೂ ಇಲ್ಲದೆ ನಿದ್ರೆಯೂ ಇಲ್ಲವಾಯ್ತು…”] (ತಾ. ೩೫, ಔ.೧೦೫೦, ಓಟ ೩೮೬ ಕಿಮೀ)

ಬೆಳಿಗ್ಗೆ (೩೦-೪-೯೬) ಬೈಕೇರಿ, ಸುಮಾರು ಹನ್ನೊಂದು ಕಿಮೀ ಅಂತರದ ಬೌದ್ಧ ಕ್ಷೇತ್ರ ಎಂದೇ ಹೆಸರಾದ ಬೋಧಗಯಾಕ್ಕೂ ಹೋದೆವು. [ಪತ್ರ: ಇಲ್ಲಿ ಬುದ್ಧನಿಗೆ ಜ್ಞಾನೋದಯವಾದ ಬೋಧಿ ವೃಕ್ಷವಿದೆ. ಅದಕ್ಕೆ ಸಾಮ್ರಾಟ್ ಅಶೋಕ ಕಟ್ಟಿಸಿದ ಕಟ್ಟೆ, ಆವರಣ, ದೇವಸ್ಥಾನ ಎಲ್ಲ ಚೊಕ್ಕಟ, ಚಂದ ಇದೆ….] ಎಂಟು ಗಂಟೆಗೆ ‘ಧಾರ್ಮಿಕ ಬಂಧ’ಗಳ ಕಟ್ಟು ಕಳಚಿಕೊಂಡು ಮತ್ತೊಂದೇ ಮುಕ್ತ ಪ್ರಾಕೃತಿಕ ತಾಣ – ಬೆತ್ಲಾ ವನಧಾಮದತ್ತ ಸವಾರಿ ಹೊರಟೆವು.

ಯೋಜನಾ ಹಂತದಲ್ಲಿ ನಾನು ಸಿಕ್ಕ ನಕ್ಷೆಗಳಲ್ಲಿ ನನಗೆ ಬೇಕಾದ ಎರಡು ಸ್ಥಳಗಳ ನಡುವೆ ದಾರಿ ಎಂಬ ಗೀಟುಗಳಲ್ಲಿ ಹತ್ತಿರದವನ್ನು ಆಯ್ದುಕೊಳ್ಳುತ್ತಿದ್ದೆ. ಆಮೇಲೆ ಅದರ ಉದ್ದಕ್ಕೆ ನೂಲನ್ನು ಆದಷ್ಟು ನಿಖರವಾಗಿ ಬಳುಕಿಸಿಟ್ಟು, ಇಂಚುಪಟ್ಟಿಯಲ್ಲಿ ಅಳೆದು, ಕಿಮೀಗೆ ಪರಿವರ್ತಿಸಿ ಪ್ರಯಾಣದ ಅಂದಾಜುಗಳನ್ನು ಮಾಡುತ್ತಿದ್ದೆ. ಆದರೂ ವಾಸ್ತವ ಭಿನ್ನವಿರುವ ಅಪಾಯ ಸದಾ ಇರುತ್ತಿತ್ತು. (ನನ್ನ ಅಂಗಡಿ ಇದ್ದ ಕಾಲದಲ್ಲಿ ಆಕ್ಸ್‍ಫರ್ಡ್ ವಿವಿ ಮಕ್ಕಳಿಗೊಂದು ಅಟ್ಲಾಸ್ ಪ್ರಕಟಿಸಿತ್ತು. ಅದರಲ್ಲಿ ಮಡಿಕೇರಿಗೆ ರೈಲ್ವೇ ಹಳಿ ಹಾಕಿದ್ದರು. ವಾಸ್ತವದಲ್ಲಿ ಇಂದಿಗೂ ಮಡಿಕೇರಿಯಲ್ಲಿ ನೋಡ ಸಿಗುವ ರೈಲು – ರಾಜಾಸೀಟಿನ ಮಕ್ಕಳ ರೈಲು!) ಹಾಗಾಗಿ ಕಟ್ಟುಪಾಡಿಲ್ಲದ ನಮಗದರ ಸೋಂಕು ತಗಲಲೇ ಇಲ್ಲ.ಆಯಾ ಸ್ಥಳಕ್ಕೆ ಹೋದಾಗ ನಾವು ಹಾಕಿಕೊಂಡ ದಾರಿಯ ಸ್ಥಿತಿಗತಿಗಳನ್ನು ಸ್ಥಳೀಯರಿಂದ ವಿಚಾರಿಸಿಕೊಂಡೇ ಮುಂದುವರಿಯುತ್ತಿದ್ದೆವು. ಅಂಥ ಸಂದರ್ಭಗಳಲ್ಲಿ ಸಮಗ್ರ ದೃಷ್ಟಿ ಇಟ್ಟುಕೊಂಡು, ನಿಖರವಾಗಿ ಅಂತರವನ್ನೋ ಪರ್ಯಾಯ ಉತ್ತಮ ದಾರಿಯನ್ನೋ ಹೇಳುವವರು ಸಿಗುತ್ತಿದ್ದದ್ದು ಬಹಳ ಕಡಿಮೆ. ಹಾಗಾಗಿ ಅಂದು ನಾವು ಗಯಾದಿಂದ ನೇರ ದಕ್ಷಿಣದ ರಸ್ತೆ ಅನುಸರಿಸಿದ್ದೆವು. ಆದರೆ ಇಂದು ಗೂಗಲ್ ನಕ್ಷೆ, ತದ್ವಿರುದ್ಧ ದಿಕ್ಕಿನಲ್ಲಿ ಹತ್ತಿರದ ಮತ್ತು ಉತ್ತಮ ದಾರಿ ತೋರಿಸುತ್ತದೆ (೨೦೦ ಕಿಮೀ ಮಾತ್ರ). ಅಂದಿಗೆ ಅದೇ ಸುಖವೆಂದು ನಂಬಿ, ನಾವು ಧೋಬಿ, ಹಂಟರ್ ಗಂಜ್, ಜೋರಿ ಎಂಬೆಲ್ಲ ಸಣ್ಣ ಊರುಗಳನ್ನು ಹಾದು ಸಾಗಿದ್ದೆವು. ಬೆಟ್ಟಗುಡ್ಡಗಳ ದಾರಿಯಲ್ಲಿ ಓಲಾಡುತ್ತಾ ಭಗ್ರಾ, ಬಾಲುಮತ್‍ ಎಂಬಿತ್ಯಾದಿ ಪುಟ್ಟ ಪೇಟೆಗಳನ್ನು ದಾಟಿದ್ದೆವು. ಉದ್ದಕ್ಕೂ ನಮ್ಮ ಮೇಲೆ ಅಕ್ಕಿ ಹಾಕಿದರೆ ಅರಳಾಗುವ ಬಿಸಿಲು, ಸುತ್ತಣ ದಟ್ಟ ಕಾಡೆಲ್ಲ ಒಣಗಿ, ಎಲೆ ಉದುರಿಸಿ, ಕಿಡಿ ಕಂಡರೆ ಕಾಳ್ಗಿಚ್ಚಾಗುವ ಸನ್ನಿವೇಶ. ದಾರಿಯ ಸ್ಥಿತಿಯಾದರೂ ಅಷ್ಟಕ್ಕಷ್ಟೇ. ಹಾಗೆ ದಾರಿಯ ಅನಿಶ್ಚಿತತೆಗೆ ಹೆದರಿ, ಹನ್ನೆರಡು ಗಂಟೆಯ ಸುಮಾರಿಗೆ ಸಿಕ್ಕ ‘ತಂಡ್ವಾ’ದಲ್ಲೇ ಊಟದ ಶಾಸ್ತ್ರವನ್ನೂ ಮುಗಿಸಿಕೊಂಡು ಮುಂದುವರಿದೆವು. ಆದರೆ ವಿಷಮ ಸನ್ನಿವೇಶಗಳಿಲ್ಲದೆ ಲತೆದಾರ್, ದುಬಿಯಾಖಂಡ್ ಮುಂತಾದವನ್ನು ದಾಟಿ ಅಪರಾಹ್ನ ಎರಡೂವರೆ ಗಂಟೆಗೇ ಬೆತ್ಲಾ ವನಧಾಮ ಸೇರಿದೆವು.

ಆ ಕಾಲಘಟ್ಟದಲ್ಲಿ ಬಿಹಾರ, ಜಾರ್ಖಂಡ್ ಎಂಬ ಸ್ವತಂತ್ರ ರಾಜ್ಯ ಕಲ್ಪನೆಯ ಕ್ರಾಂತಿಯಲ್ಲಿ ಕುದಿಯುತ್ತಿತ್ತು. (ನಾಲ್ಕು ವರ್ಷ ಕಳೆದು, ಅಂದರೆ ೨೦೦೦ದಲ್ಲಿ ಜಾರ್ಖಂಡ್ ರಾಜ್ಯ ಘೋಷಣೆಯಾಯ್ತು) ನಮ್ಮ ಉರಿಬಿಸಿಲು, ಸುಡುಗಾಡು ಪಯಣಕ್ಕಿಂತ ಹೆಚ್ಚಿಗೆ ನಾವು ಕ್ರಾಂತಿಕಾರಿಗಳ ನೆಲೆಯೇ ಆಗಿರುವ ವನಮಾರ್ಗದಲ್ಲಿ ನಿರಪಾಯವಾಗಿ ಬಂದದ್ದೇ ಹಲವರಿಗೆ ಆಶ್ಚರ್ಯದ ಸಂಗತಿಯಾಗಿತ್ತು. ನಮಗೆ ವನಧಾಮದ ಅತಿಥಿಗೃಹದಲ್ಲಿ ವಸತಿಯೇನೋ ಕೊಟ್ಟರು. ಆದರೆ ಬಂದೋಬಸ್ತಿನ ಕಾರಣ ಪ್ರವಾಸಿಗಳಿಗೆ ಸಂಜೆಯ ವನವಿಹಾರಗಳು ರದ್ದಾಗಿ ಕೆಲ ಕಾಲವಾದ್ದನ್ನೂ ತಿಳಿಸಿದರು. ಮೇಲೆ, ಸಂಜೆಯಾಗುತ್ತಿದ್ದಂತೆ ಕೋಣೆಯೊಳಗೇ ಇರುವುದು, ಕಿಟಕಿಗಳನ್ನು ಓರೆ ಮಾಡಿಕೊಳ್ಳುವುದು ಉತ್ತಮ ಎಂಬ ಸ್ಪಷ್ಟ ಎಚ್ಚರಿಕೆಗಳೂ ಸಿಕ್ಕವು. “ಉಗ್ರಗಾಮಿಗಳು ಬಾಣ ಹೊಡೀತಾರೆ, ಕಿಟಕಿ ಮೂಲಕ ನಾಡಬಾಂಬೂ ಎಸೆಯುವುದುಂಟು.” ನಮ್ಮ ಪೂರ್ವಾಹ್ನದ ತರಾತುರಿಯನ್ನು ನಿಷ್ಕ್ರಿಯಾ ಅಪರಾಹ್ನ ಅಣಕಿಸಿತು. ರಾತ್ರಿಯೂ ಅಷ್ಟೇ ನಿಸ್ಪಂದವಾಗಿ, ನಿದ್ರೆಯ ಮಟ್ಟಿಗೆ ನಿಶ್ಚಿಂತವಾಗಿ ಸಂದುಹೋಯ್ತು. (ತಾ. ೪೫, ಔ. ೧೭೫೦, ದಿನದ ಓಟ ೨೪೪ ಕಿಮೀ)

[ಪತ್ರ: ಪ್ರಿಯ ಅಭಯಾ, ಭಾರತದ ಪ್ರಥಮ ಸುತ್ತಿನ ವ್ಯಾಘ್ರಧಾಮ ಘೋಷಣೆಯಲ್ಲೇ ಹೆಸರಿಸಲ್ಪಟ್ಟ ವನಧಾಮಗಳಲ್ಲಿ ಬಿಹಾರದ (ಇಂದು ಜಾರ್ಖಂಡಿನ) ಪಲಮಾವು ಜಿಲ್ಲೆಯ ಈ ಬೆತ್ಲಾ ರಾಷ್ಟ್ರೀಯ ಉದ್ಯಾನವನ ಒಂದು. ಇದರ ಖ್ಯಾತಿಗೆ ಆನೆ, ಹುಲಿಗಳಿಂದ ಹಿಡಿದು ತೋಳ ನವಿಲಿನವರೆಗೆ ಪಟ್ಟಿ ದೊಡ್ಡದೇ ಇದೆ. ಆದರೆ ನಾವು ಆರಿಸಿಕೊಂಡ ಋತುಮಾನ ತೀರಾ ತಪ್ಪಿನದ್ದಾಗಿದೆ. ಇದ್ದದ್ದರಲ್ಲಿ ವನಚರಗಳು ಹೆಚ್ಚು ಜಾಗೃತವಾಗಿರುವ ಬೆಳಗ್ಗಿನ (೧-೫-೯೬) ತಂಪು ಹೊತ್ತಿನಲ್ಲಿ, ನಮ್ಮನ್ನು ಆನೆ ಸವಾರಿಯಲ್ಲಿ ಕಾಡು ಸುತ್ತಿಸಿದರು. ಎಲೆ ಉದುರಿಸಿದ ಒಣ ಕಾಡು. ಹುರಿದ ಹಪ್ಪಳದ ಹರಹನ್ನೇ ಚರುಮುರುಗುಟ್ಟಿಸುತ್ತ ಆನೆ ನಡೆದಂತಿತ್ತು. ಅದಲ್ಲವಾದರೆ ‘ಸಾಲ್’ ಮರಗಳಲ್ಲಿ ಇನ್ನೂ ಅಂಟಿಕೊಂಡಿರುವ ಒಂದು ಒಣ ಎಲೆ ಉದುರಿದರೆ ಅದೇ ದೊಡ್ಡ ಸುದ್ದಿಯಾಗುವಷ್ಟು ಕಾಡು ನೀರವ. ಮಾಹುತ “ಒಂದೆರಡು ದಿನಗಳ ಹಿಂದೆ ಇಲ್ಲೇ ಹುಲಿ ಕಂಡಿದ್ದೆ” ಎಂದು ಹೇಳುತ್ತ, ಕಲ್ಲು ಮುಳ್ಳು, ಬೋಳಾಬೋಳು ಮರಗಳ ನಡುವಣ ಜಾಡುಗಳಲ್ಲಿ ಸುಳಿಯುತ್ತ, ಪುಟ್ಟ ಪುಟ್ಟ ಗುಡ್ಡಗಳನ್ನು ಹತ್ತಿಳಿಸಿ, ಸುಮಾರು ಒಂದು ಗಂಟೆ ಸುತ್ತಿಸಿದ್ದೆಲ್ಲ ಅಂತಿಮವಾಗಿ ಪುಸ್ಕು! ನಮಗೆ ಒಟ್ಟಾರೆ ಕಾಣಿಸಿದ್ದು ಮತ್ತದೇ ಜಿಂಕೆ, ನವಿಲು, ಮತ್ತು ನೀನು – ಅಲ್ಲಲ್ಲ, ಮಂಗಾ…] ಬಿಸಿಲೇರಿದ ಮೇಲೆ ಇನ್ನೊಮ್ಮೆ ಬಯಲಿನಲ್ಲಿ ಹುರಿಗಾಳಾಗುವುದನ್ನು ಹಗುರಗೊಳಿಸುವಂತೆ, ಏಳೂಮುಕ್ಕಾಲರ ಸುಮಾರಿಗೇ ಬೆತ್ಲಾ ಬಿಟ್ಟೆವು.

ಈಗ ನಮ್ಮ ಗುರಿ ಕಾಶಿ ಯಾನೆ ವಾರಾಣಸಿ. ನಾನು ಮೇಲೆ ಹೇಳಿದಂತೆ, ಗಯಾದಿಂದ ಬೆತ್ಲಾಕ್ಕೆ ಬರಬಹುದಾಗಿದ್ದ ಸುಲಭ ದಾರಿಯ ಅರ್ಧ ಭಾಗವನ್ನು ಈಗ ಕ್ರಮಿಸಿದೆವು. ಆ ಉದ್ದದಲ್ಲಿ ನಮ್ಮ ನೆನಪಿನ ಭಾಗವಾಗಿ ಏನೂ ಉಳಿದಿಲ್ಲವಾದರೂ ನಿಮಗೊಂದು ಸಮಯ ಮತ್ತು ನಾವು ಕ್ರಮಿಸುತ್ತಿದ್ದ ಅಂತರಗಳ ಅಂದಾಜಿಗೆ ದಿನಚರಿಯ ನಮೂದನ್ನಷ್ಟೇ ಕೊಡುತ್ತೇನೆ. ಬೆತ್ಲಾ ಬಿಡುವಾಗ ನನ್ನ ಬೈಕಿನ ಮೀಟರ್ ೩೮೨೩ರಲ್ಲಿತ್ತು, ಸಮಯ ೭.೫೦ ಗಂಟೆ. ಇದೇ ಕ್ರಮದಲ್ಲಿ ಮುಂದೆ, ದುಬಿಯಾಖಂಡ್ – ಮೀ ೩೮೩೬ ಗಂ ೮.೦೫, ಡಾಲ್ಟನ್ ಗಂಜ್ – ಮೀ ೩೮೪೬ ಗಂ ೮.೧೫, ಛತ್ತರ್‍ಪುರ್ – ಮೀ ೩೮೯೧ ಗಂ ೯.೨೦, ಖಾರಿ ಶ್ರೇಣಿಯ, ಕೊಠಿಲಾ ಶಿಖರದಲ್ಲಿರುವ (ಈ ಶ್ರೇಣಿ, ಶಿಖರ ಮತ್ತು ಹಳ್ಳಿ ಹೆಸರು ಗೂಗಲಿನಲ್ಲಿಲ್ಲ!) ಡಾಬ್‍ಕಲಾ – ಮೀ ೩೯೦೬ (ಸಮಯದ ನಮೂದಿಲ್ಲ), ಹರಿಹರಗಂಜ್ – ಮೀ ೩೯೧೪ ಮತ್ತು ಗಂ ೯.೫೫, ಅಂಬಾ ಮೀ ೩೯೨೩ ಮತ್ತು ಗಂ ೧೦.೦೫, ಔರಂಗಾಬಾದ್ ಮೀ ೩೯೪೦ ಮತ್ತು ಗಂ ೧೦.೨೦. ಒಂದೇ ಹೆಸರಿನ ಒಂದಕ್ಕೂ ಮಿಕ್ಕು ಊರುಗಳಿರುವುದು ಹೊಸ ವಿಚಾರವೇನಲ್ಲ. ಪ್ರಸ್ತುತ ಔರಂಗಾಬಾದ್ ಜಾರ್ಖಂಡ್ ರಾಜ್ಯದ್ದು. ವಿಶ್ವಖ್ಯಾತ ಅಜಂತಾ ಎಲ್ಲೋರ ಗುಹೆಗಳಿಗೆ ಆರಂಭ ತಾಣವಾದ ಔರಂಗಾಬಾದ್ ಮಹಾರಾಷ್ಟ್ರದ್ದು. ಇಲ್ಲಿ ಸಮೀಪದಲ್ಲೇ ಹರಿವ ಸೋನಾ ನದಿಗೆ ಬ್ರಿಟಿಷರ ಕಾಲದಲ್ಲೇ (ಕ್ರಿ.ಶ ೧೯೦೦) ರೈಲ್ವೇ ಸೇತುವೆಯಾಗಿತ್ತು. ‘ಸೋನಾ ಮೇಲ್ದಂಡೆ ಸೇತುವೆ’ ಎಂದೇ ಹೆಸರಾದ ಇದು, ಬಹುಕಾಲದವರೆಗೆ ಭಾರತದ ಅತ್ಯಂತ ಉದ್ದದ (ಮೂರು ಕಿಮೀ ಮಿಕ್ಕು ಉದ್ದ) ರೈಲ್ವೇ ಸೇತುವೆ ಎಂದೇ ಖ್ಯಾತಿ ಗಳಿಸಿತ್ತು. ಸ್ವತಂತ್ರ ಭಾರತ ಇದನ್ನು ‘ನೆಹರೂ ಸೇತು’ ಎಂದು ನಾಮಕರಣ ಮಾಡಿರಬೇಕು. ೧೯೬೫ರಲ್ಲಿ ಇದಕ್ಕೆ ಜತೆಗಾರನಾಗಿ ವಾಹನಗಳ ಸೇತುವೆಯನ್ನು ನಿರ್ಮಿಸಿ, ಜವಹರ್ ಸೇತು ಎಂದೇ ಹೆಸರಿಸಿದ್ದಾರೆ. ಇಲ್ಲಿ ಹರಿಯುವ ರಾ. ಹೆದ್ದಾರಿ ಸಂಖ್ಯೆ ೧೯, ಪೂರ್ವಕ್ಕೆ ಗಯಾವನ್ನೂ ಪಶ್ಚಿಮಕ್ಕೆ ಕಾಶಿಯನ್ನೂ ಕಾಣಿಸುತ್ತದೆ.

ಔರಂಗಾಬಾದಿನಿಂದ ಮುಂದೆ ಸಸಾರಾಂ ( ಮೀ ೩೯೮೫), ಕುದ್ರಾ (ಮೀ ೪೦೧೦), ಮೋಹಿನಿಯಾ (ಮೀ.೪೦೩೦ – ಇಲ್ಲಿ ಊಟ ಮುಗಿಸಿದೆವು) ಚಂದೌಲಿ (೪೦೭೩) ಕೆಲವು ದೊಡ್ಡ ಪೇಟೆಗಳು ಎಂದಷ್ಟೇ ಲೆಕ್ಕ ಹಾಕುತ್ತ, ಸಂಜೆ ಮೂರೂ ಕಾಲಕ್ಕೆ ವಾರಾಣಸಿ ಯಾನೆ ಕಾಶಿ ತಲಪಿದೆವು. ಹೀರೋ ಹೊಂಡಾ ಕಂಪೆನಿಯಿಂದ ಸಿಕ್ಕಿದ್ದ ಪಟ್ಟಿಯ ಆಧಾರದಲ್ಲಿ, ಮುಂದಾಗಿ ಕಾಶಿಯ ಹೀರೋ ಹೊಂಡಾ ಮಳಿಗೆಯೊಂದರಲ್ಲಿ ತುರ್ತು ಬೈಕ್ ಸೇವೆ ಕೇಳಿದ್ದೆವು. ಯು.ಎಸ್. ಅಗರ್ವಾಲ್ ಅಂಡ್ ಕೋ ನಮ್ಮನ್ನು ಹಾರ್ದಿಕವಾಗಿ ಸ್ವಾಗತಿಸಿ, ಝಟ್‍ಪಟ್ ಮತ್ತು ಸಮರ್ಥ ಸೇವೆಯನ್ನು, ಅಯಾಚಿತವಾಗಿ ಉಚಿತವಾಗಿಯೇ ಕೊಟ್ಟು, ಶುಭ ಹಾರೈಸಿದರು. ಮತ್ತೆ ನಮ್ಮ ವಾಸ್ತವ್ಯದ ತಲಾಷಿಗಿಳಿದೆವು. ಕೊಳಚೆ ಮತ್ತು ಕಿಷ್ಕಿಂಧಾ ಗಲ್ಲಿಗಳ ಲೆಕ್ಕದಲ್ಲಿ ಕಾಶಿ ಗಯಾವನ್ನು ಮೀರುತ್ತದೆ. ಅದನ್ನು ಇಲ್ಲಿ ಹರಿವ ಗಂಗಾನದಿಯೂ ಪ್ರತಿಫಲಿಸುತ್ತದೆ ಎಂಬ ಕಾರಣಕ್ಕೇ ಸ್ವಚ್ಛ ಆಂದೋಲನದ ಪ್ರಥಮ ಅಪರಾಧಿಯಾಗಿಯೂ ಕಾಶಿ ಹೆಸರುವಾಸಿಯಾಗಿದೆ. ಗಯಾದಲ್ಲೇ ಹೇಳಿದಂತೆ, ಇಲ್ಲೂ ಮಾಧವ ಭಟ್ಟರ ಸಲಹೆ ಸಹಾಯದಂತೆ ಕರ್ನಾಟಕ ಛತ್ರವನ್ನೇ ನೆಚ್ಚಿದ್ದೆವು. ಭಾರೀ ಹುಲ್ಲ ಮೆದೆಯಲ್ಲಿ ಸೂಜಿ ಹುಡುಕಿ ಹಿಡಿದಂತೆ ಛತ್ರ ಸೇರುವಲ್ಲೂ ಯಶಸ್ವಿಗಳಾದೆವು! ಅಲ್ಲಿನ ಕೋಣೆ ವಿಸ್ತಾರವಾಗಿಯೂ ಶೌಚಾದಿ ವ್ಯವಸ್ಥೆಗಳು ಸಮರ್ಪಕವಾಗಿಯೂ ಇತ್ತು. ಛತ್ರ ಗಂಗಾತೀರಕ್ಕೆ ಸಮೀಪದಲ್ಲಿದ್ದುದರಿಂದ ದೃಶ್ಯವೂ ಚೆನ್ನಾಗಿತ್ತು. ಉಸ್ತುವಾರಿಯವರು ಮಾಧವ ಭಟ್ಟರ ನಾಮಸ್ಮರಣೆಗೆ ವಿಶೇಷವಾಗಿ ಒಲಿದು, (ನಾವು ಒತ್ತಾಯಿಸಿದರೂ) ಬಾಡಿಗೆ ತೆಗೆದುಕೊಳ್ಳಲಿಲ್ಲ!

ಬೈಕ್ ಭದ್ರ ಮಾಡಿ, ಸ್ನಾನಾದಿ ಚೇತರಿಕೆ ಮುಗಿಸಿಕೊಂಡು, ಗಂಗಾತೀರಕ್ಕೆ ನಡೆದೆವು. ನದಿಯ ನಗರ ದಂಡೆಯನ್ನು ಉದ್ದಕ್ಕೂ ಬಲವಾಗಿ ಕಾಂಕ್ರೀಟ್, ಕಲ್ಲುಗಳಲ್ಲಿ ಎತ್ತರಿಸಿ ಕಟ್ಟಿ, ನದಿ ಪಾತ್ರೆಗೆ ಇಳಿಯಲು ಸೋಪಾನಗಳ ಸಾಲನ್ನೇ ಮಾಡಿದ್ದಾರೆ. ಒಂದೊಂದು ವಲಯದ ಗುರುತಿನ ಅನುಕೂಲಕ್ಕೆ ಇವು ಹಿಂದಿನಿಂದಲೂ ವಿವಿಧ (ಸ್ನಾನ ಘಟ್ಟ) ಘಾಟ್‍ಗಳೆಂದೇ ಪ್ರಸಿದ್ಧವಾಗಿವೆ. ನಾವು ಸಮೀಪದ ಹನೂಮಾನ್ ಘಾಟ್‍ನಿಂದ ತೊಡಗಿ ಲಲಿತಾ ಘಾಟ್‍ವರೆಗೂ ಎಲ್ಲವನ್ನು ನೋಡುತ್ತ ನಡೆದೆವು. ನಡುವೆ ಹೆಚ್ಚು ಪ್ರಸಿದ್ಧಿಯ ಹರಿಶ್ಚಂದ್ರ ಘಾಟ್‍ನಲ್ಲಿ ಧಗಧಗಿಸುವ ಚಿತೆ ಮತ್ತು ಸರತಿ ಸಾಲಿನಲ್ಲಿದ್ದ ಹೆಣಗಳನ್ನೂ ಕಂಡೆವು. ಇವು ಒಮ್ಮೆ ಯಾರನ್ನೂ ಭಾವುಕರನ್ನಾಗಿಸುತ್ತದೆ, ವಿಷಾದವನ್ನೋ ಭ್ರಮಾ ವೈರಾಗ್ಯವನ್ನೋ ನಿಸ್ಸಂದೇಹವಾಗಿ ಉಂಟು ಮಾಡುತ್ತದೆ. ಹಿಂದೆಲ್ಲ ನಮ್ಮೂರ ಹೊಳೆ, ಕೆರೆ ದಂಡೆಗಳಲ್ಲಿ ಮೋಜು – ಶುಚಿಗಳ ನೂರೆಂಟು ಚಟುವಟಿಕೆಗಳನ್ನು ನಾವು ಕಂಡವರೇ ಇದ್ದೇವೆ. ಇಲ್ಲಿ ಅವೆಲ್ಲವುಗಳು ಅತಿಶಯವಾಗಿ ನಡೆಯುವುದರಷ್ಟೇ ಸಹಜವಾಗಿ ಶವ ಸಂಸ್ಕಾರವೂ ನಡೆಯುತ್ತದೆ ಎನ್ನುವುದೇ ವಿಶೇಷ. ಅವಕ್ಕೆ ಎಷ್ಟೆಷ್ಟೋ ಪಾಲು ಮಿಗಿಲಾಗಿ ನಾಗರಿಕ ಮತ್ತು ಔದ್ಯಮಿಕ ಕೊಳಚೆಯೂ ಗಂಗವ್ವನ ಮಡಿಲಿಗೇ ಬೀಳುವುದನ್ನು ನಾನು ಹೊಸದಾಗೇನೂ ಹೇಳಬೇಕಿಲ್ಲ. ನೀರು ಅಂಚಿನಲ್ಲಿ ಮಡುಗಟ್ಟಿದಲ್ಲೆಲ್ಲ ಸ್ಪಷ್ಟವಾಗುವ ನೂರೆಂಟು ರೂಪ ಮತ್ತು ರೂಪರಹಿತ ಮಡ್ಡಿ ಹಾಗೂ ಒಟ್ಟಾರೆ ಕೊಳಕನ್ನು ನೋಡುತ್ತಿದ್ದಂತೆ ನಾವು ತಪ್ಪಿಯೂ ಅದರ ಒಂದು ಹನಿ ನಮ್ಮನ್ನು ಸೋಂಕದಂತೆ ಎತ್ತರದ ಮೆಟ್ಟಿಲುಗಳಲ್ಲೇ ನಡೆದೆವು. ಇಳಿ ಸೂರ್ಯನ ವರ್ಣ ವಿಲಾಸದ ಮುನ್ನೆಲೆಯಲ್ಲಿ, ಗಂಗಾತರಂಗದ ಅಂಗಣದಲ್ಲಿ, ತೇಲಿಬಿಡಬೇಕಿದ್ದ ಭಾವದೋಣಿಗಳೆಲ್ಲ ತೂತ ಬಿದ್ದಿದ್ದವು.

ನದೀ ತೀರ ಬಿಟ್ಟು, ಕಾಶಿಯ ಹೃದಯವೇ ಆದ ವಿಶ್ವನಾಥನ ಮಂದಿರಕ್ಕೆ ಹೋದೆವು. ಅದು ಗಲ್ಲಿಗಳ ಅಧ್ವಾನದ ವಿಸ್ತರಣೆಯೇ ಆಗಿತ್ತು. ಆ ಗೊಂದಲದಲ್ಲಿ ನಾವು ಪರಸ್ಪರ ಸಂಪರ್ಕ ಕಳೆದು, ಸಣ್ಣದರಲ್ಲಿ ಹೊಸದೇ ಗೊಂದಲವಾಗಿ, ಭಯವಾಯ್ತು. ಹೀಗೆ ನುಗ್ಗಿ, ಹಾಗೆ ಹೊರಗೋಡಿ ಬಂದೆವು. ಮತ್ತೆ ಛತ್ರಕ್ಕೆ ಹಿಂದಿರುಗುವಲ್ಲಿ [ಪತ್ರ: “…. ಪೇಟೆಯೊಳಗಾದರೂ ಸ್ವಲ್ಪ ಸುತ್ತಾಡಿ ಬರೋಣವೆಂದು ಪ್ರಯತ್ನಿಸಿದೆವು. ಆದರೆ ‘ಸಾಹಸಿಗಳು’ ಗಲ್ಲಿಗೋಜಲಿಗೆ ಹೆದರಿ ಮತ್ತೆ ಘಾಟ್ ದಾರಿಯಲ್ಲೇ ಮರಳಿದೆವು…”] ಸುಖ ನಿದ್ರೆಗೆ ಮಾತ್ರ ತೊಂದರೆಯಾಗಲಿಲ್ಲ. (ರಾತ್ರಿ ೯ ಗಂಟೆಗೂ ತಾಪಮಾನ ೩೬! ಔ. ೯೫೦, ದಿನದ ಓಟ ೨೮೮ ಕಿಮೀ)

ಚತುರ್ಧಾಮ ಯಾನ ಕಾಲದಲ್ಲಿ ಸಾಕ್ಷಾತ್ ಪರ್ವತರೂಪೀ ನೀಲಕಂಠನ ದರ್ಶನ ಪಡೆದಿದ್ದೆವು, ‘ದೇವಗಂಗೆ’ಯ ತಾಜಾ ಮಗ್ಗುಲುಗಳನ್ನು (ಗಂಗಾ, ಯಮುನಾ, ಅಲಕನಂದಾ, ಪಿಂಡಾರಿ…) ಕಂಡು, ಸಹಜ ತಣ್ಪು ಬಿಸುಪುಗಳನ್ನು ಅನುಭವಿಸಿದ್ದೆವು. ಅಂಥವುಗಳ ಸಾಂಕೇತಿಕ ಅಥವಾ ನಾಗರಿಕ ಮುಖವಾಗಿ ಗಯಾ, ಕಾಶಿ ಭಾವಿಸಿ ಬರುವವರಿಗೆ ಕಾಣುವುದು ಕೇವಲ ಅಗಾಧ (ಅ)ನಾಗರಿಕ ಪಾಪರಾಶಿಗಳು ಮಾತ್ರ. ಇವುಗಳ ಸಹವಾಸ ಇನ್ನೆಷ್ಟಕ್ಕೂ ಬೇಡ ಎಂದು ಬೆಳಗ್ಗೆ (೨-೫-೯೬) ಐದೂವರೆಗೇ ಕರ್ನಾಟಕ ಛತ್ರ ಖಾಲಿ ಮಾಡಿದೆವು. ಜನರ ನಿರ್ವಹಣೆ ಎಷ್ಟು ಕೆಟ್ಟದಿದ್ದರೂ ಕಾಡು ಸಾಕು ಎಂದು ಪನ್ನಾ ವನಧಾಮವನ್ನು ಉದ್ದೇಶಿಸಿ ಬೈಕ್ ಹೊರಡಿಸಿದೆವು.

ನನ್ನ ಕಲ್ಕತ್ತಾ ಟಿಪ್ಪಣಿಗಳನ್ನು ನೆನಪಿಸಿಕೊಳ್ಳಿ. ಅಲ್ಲಿ ಹೂಗ್ಲಿ ನದಿಗೆ ಅಡ್ಡಲಾಗಿ ಇಂದಿಗೂ ಇರುವ ರವೀಂದ್ರ ಸೇತು ಬರುವ (೧೯೪೩) ಪೂರ್ವದಲ್ಲಿ, ತೆಪ್ಪ-ಸೇತು ಅರ್ಥಾತ್ ಪೊಂಟೂನ್ ಬ್ರಿಜ್ (೧೮೭೪ರಿಂದ) ಇತ್ತು. ಅಂಥದ್ದೇ ತೇಲು ಸೇತುವೆಗಳನ್ನು ಸೈನ್ಯವೂ ಪರ್ವ ಕಾಲಗಳಲ್ಲಿ ಹಲವು ತೀರ್ಥ ಕ್ಷೇತ್ರಗಳಲ್ಲೂ ಹಲವು ವಿಧದಲ್ಲಿ ಮಾಡುವುದನ್ನು ನಾನು ಕೇಳಿದ್ದೂ ಕಂಡದ್ದೂ ಇದೆ. (ಮಂಗಳೂರಿನ ಸಮೀಪ ಕಣ್ಣೂರಿನ ಮಸೀದಿ ವರ್ಷಾವಧಿ ಉರೂಸ್ ಕಾಲದಲ್ಲಿ, ನೇತ್ರಾವತಿ ನದಿಯ ಮೇಲೆ ಮಾಮೂಲೀ ದೋಣಿಗಳನ್ನೇ ಒತ್ತೊತ್ತಾಗಿ ನಿಲ್ಲಿಸಿ ಸೇತುವೆ ಮಾಡುತ್ತದೆ) ಹೀಗೇ ಗಂಗೆಯ ಮೇಲಿದ್ದ ತೇಲು ಸೇತುವೆಯೊಂದನ್ನು ಆ ಬೆಳಿಗ್ಗೆ ನಾವು ಬೈಕ್ ಸವಾರಿಯಲ್ಲೇ ದಾಟಿ ಮುಂದುವರಿದದ್ದು ನನಗೆ ಇಂದಿಗೂ ಸ್ಮರಣೀಯವಾಗಿಯೇ ಇದೆ.

ತೀರ್ಥಯಾತ್ರಿಗಳು ಕಾಶಿಯಷ್ಟೇ ಪ್ರಾಮುಖ್ಯ ಕೊಡುವ ಅಲಹಾಬಾದ್ ಅಥವಾ ಪ್ರಯಾಗ್ ರಾಜ್ (ಸಂಗಮಗಳ ರಾಜ!) ನಮ್ಮ ದಾರಿಯಲ್ಲೇ ಬರುವುದಿತ್ತು. ಆ ಹೆದ್ದಾರಿ ಮುಂದೆ ಚಿತ್ರಕೂಟದವರೆಗೂ ನಮಗೆ ಉತ್ತಮ ಸವಾರಿಯನ್ನೂ ಕೊಡಬಹುದಿತ್ತು. ಆದರೆ ತೀರ್ಥಕ್ಷೇತ್ರದ ‘ಸಾವಾಸ ಸಾಕು’ ಎನ್ನಿಸಿದ್ದಕ್ಕೆ, ನಾವು ಅಲ್ಲಿ ಇಲ್ಲಿ ವಿಚಾರಿಸಿಕೊಳ್ಳುತ್ತ ಮಿರ್ಜಾಪುರ್ ಕವಲು ಹಿಡಿದಿದ್ದೆವು. ಇದು ಒಮ್ಮೆ ನಮ್ಮನ್ನು ತಪ್ಪು ದಿಕ್ಕು ಹಿಡಿಸಿ ಏಳೇಳು ಕಿಮೀ ಮುಂದೆ ಹಿಂದೆ ಹೋಗುವಂತೆ ಮಾಡಿದರೂ ಚಕ್ರ ಠುಸ್ ಮಾಡಿದರೂ ಬೇಸರಿಸದೇ ಮುಂದುವರಿದೆವು. ದೊಡ್ಡ ನಗರ ಹಾಗೂ ಹೆದ್ದಾರಿಗಳ ಆಸುಪಾಸಿನಲ್ಲಿ ಡಾಬಾಗಳು ಕೆಲವೊಮ್ಮೆ ವಿರಳ ಅಥವಾ ಸ್ವಲ್ಪ ಒಳಗಿದ್ದು ಹುಡುಕಿ ಹಿಡಿಯುವುದು ಕಷ್ಟವಿರುತ್ತದೆ. ಚಾರಣ, ಸೈಕಲ್ ಸವಾರಿಗಳಷ್ಟು ಬೈಕೋಟ ದೈಹಿಕ ಶ್ರಮದ್ದಲ್ಲ. ಹಾಗಾಗಿ ಅಂದು ಕಾಶಿಯಲ್ಲಿ ಕೇವಲ ಚಾ ಕುಡಿದವರು, ಬಿಸಿಲೇರುವ ಮುನ್ನ, ಸರಿಯುವ ಮಿನಿಟುಗಳೊಡನೆ ಎಷ್ಟು ಕಿಮೀ ಕಲ್ಲು ಹಿಂದೆ ಜಾರಿಸಬಹುದು ಎಂದೇ ದೌಡಾಯಿಸಿದ್ದೆವು. ಏಳೂವರೆ ಗಂಟೆಯ ಸುಮಾರಿಗೆ ‘ಶಂತನು ಮಹಾರಾಜನೂ ಬೆಸ್ತನ ಕುವರಿಯೂ’ ಪ್ರಸಂಗ ನೆನಪಿಸುವಂತೆ, ಯಃಕಶ್ಚಿತ್ ಗೂಡಂಗಡಿಯಲ್ಲಿ ಕುದಿ ಎಣ್ಣೆ ಸ್ನಾನ ನಡೆಸಿದ್ದ ಜಿಲೇಬಿ ಕರೆದಿತ್ತು. ಅವಿರತ ಓಟ ಸುಧಾರಿಸಿಕೊಳ್ಳುವಂತೆ ಅಲ್ಲಿನ ಎರಡು ಲಟಾರಿ ಬೆಂಚಿನ ಮೇಲೆ ನಾವು ಹರಡಿ ಕುಳಿತು, (ಹೆಲ್ಮೆಟ್ ಅತ್ತ, ತಂಪು ಕನ್ನಡಿ ಇತ್ತ, ಬಗಲ ಚೀಲ ಎತ್ತ…) ಎರಡೆರಡು ತಟ್ಟೆ ಜಿಲೇಬಿ ಖಾಲಿ ಮಾಡಿ, ಮೇಲಷ್ಟು ಚಾ ಎರೆದು ಢರ್ ಎನ್ನಿಸಿದೆವು. ಮತ್ತೆ ಕುದುರೆ ಏರಿ ಹತ್ತಿಪ್ಪತ್ತು ಕಿಮೀ ಸವೆದಾಗ ಒಮ್ಮೆಲೇ ಕಿಶೋರ್ ಬೊಬ್ಬೆ ಹೊಡೆದರು “ಅಯ್ಯೋ ನನ್ನ ಬಗಲಚೀಲ!” ಜಿಲೇಬಿ ತಿನ್ನುವ ಭರದಲ್ಲಿ ಅಂಗಡಿಯ ಬೆಂಚಿನಿಂದ ಅದು ಜಾರಿ ಕೆಳಬಿದ್ದಿರಬೇಕು. ಇವರು ಮರೆತು ಬಂದಿದ್ದರು. ಪ್ರಯಾಣ ದಾಖಲೆಗಳು, ಸ್ವಲ್ಪ ನಗದು, ಟ್ರಾವೆಲ್ಲರ್ಸ್ ಚೆಕ್ ಇತ್ಯಾದಿ ಅದರೊಳಗಿತ್ತು. ಬೈಕ್ ಹಿಂದೋಡಿತ್ತು. ಈಗ ಕಾಯುವ ಸರದಿ ನಮ್ಮದು. ಮಿನಿಟುಗಳ ಲೆಕ್ಕ ಇಟ್ಟು ಗಳಿಸಿದ ಸಮಯದಲ್ಲಿ ಅರ್ಧ-ಮುಕ್ಕಾಲು ಗಂಟೆ ಕಳೆದುಹೋದರೂ ಅದೃಷ್ಟ ಚೆನ್ನಾಗಿತ್ತು. ಅಂಗಡಿಯಾತ ಎತ್ತಿಟ್ಟಿದ್ದ ಚೀಲವನ್ನು ಪೈಸೆಯಷ್ಟು ವಂಚಿಸದೇ ಇನಾಮು ಬಯಸದೇ ವಾಪಾಸು ಕೊಟ್ಟಿದ್ದ.

ಮುಂದೆ ದಾಖಲಾರ್ಹ ಘಟನೆಗಳು ಏನೂ ಇಲ್ಲವೆನ್ನುವಂತೆ ಊರು, ಕಿಮೀ, ಗಂಟೆಗಳ ಪಟ್ಟಿಯಷ್ಟೇ ಬೆಳೆದದ್ದನ್ನು ಇಲ್ಲಿ ಪ್ರತಿ ಮಾಡುವುದಿಲ್ಲ. ನಿತ್ಯದ ಅಗತ್ಯಗಳೇ ಆದರೂ ಪ್ರಯಾಣದಲ್ಲಿ ಗಮನ ಸೆಳೆಯುವ ಅಂಶಗಳಾದ ಹೊಟ್ಟೆ ಪಾಡು ಮುಗಿಸಿದ ವಿವರಗಳು, ಅವನ್ನೆಲ್ಲ ಪೂರೈಸಿದ ಬಹುತೇಕ ಜೋಪಡಿಗಳ ಮತ್ತು ಕೆಲವು ಮಹಲುಗಳ ಚಿತ್ರಗಳು, ಚಂಡಿ ಬಟ್ಟೆ ಮಾಡಿ ಮುಖ ಸುತ್ತಿಯೂ ಐದು ಹತ್ತು ಮಿನಿಟಿನಲ್ಲಿ ಅವು ಗರಿಗರಿಯಾಗಿ ಒಣಗಿಹೋಗುತ್ತಿದ್ದ ಬಿಸಿಲ ಅನುಭವಗಳು…. ಅಂದಂದಿನ ಕುಸುರಿಯೊಡನೆ ಬಂದರಷ್ಟೇ ಸ್ವಾರಸ್ಯಕರ ಎಂದು ನಂಬಿದ್ದೇನೆ. ಪ್ರಸ್ತುತ ಕಥನ ಪೂರ್ವದಲ್ಲೇ ಹೇಳಿದಂತೆ, ಕಾಲ ಬಂಧಿಯಾಗಿ ನಾನವನ್ನೆಲ್ಲ ಕಳೆದುಕೊಂಡಿದ್ದೇನೆ. ಇನ್ನು ಕೇವಲ ಮಾಹಿತಿಯ ಮಟ್ಟದಲ್ಲಾದರೆ ಅಂತರ್ಜಾಲದ ಸಾಧ್ಯತೆಗಳನ್ನು ಶೋಧಿಸುವಲ್ಲಿ ನೀವು ನನಗಿಂತ ಸಮರ್ಥರು ಎಂದೂ ನಂಬಿ, ವಿವರಿಸದುಳಿದಿದ್ದೇನೆ. ಕ್ಷೇಮವಾಗಿ ಸಂಜೆ ಏಳೂವರೆಗೆ ಪನ್ನಾ ವನಧಾಮದ ಹೊರವಲಯದಲ್ಲೇ ಇರುವ ಹೋಟೆಲ್ ಸೇರಿಕೊಂಡೆವು. (ಔ. ೧೯೫೦, ದಿನದ ಓಟ ೪೧೪ ಕಿಮೀ)

(ಮುಂದುವರಿಯಲಿದೆ)