(ಭಾರತ ಅ-ಪೂರ್ವ ಕರಾವಳಿಯೋಟ – ೧೨)

ಜಬ್ಬಲ್ ಪುರದ ಜಬ್ಬರ್ದಸ್ತ್ ಸರ್ವೀಸಾಗಿ ಏಳ್ನೂರು ಕಿಮೀ ಕಳೆಯುವುದರೊಳಗೇ ಅಂದರೆ, ಎರಡೇ ದಿನದ ಓಟದೊಳಗೇ ಬೈಕುಗಳು ಬಹಳ ಬಳಲಿದ್ದವು. ಹಾಗಾಗಿ ಸಂಜೆ ನಾಲ್ಕಕ್ಕೆ ದೊಡ್ಡ ಊರಾಗಿ ಸಿಕ್ಕಿದ ಬಿಲಾಸ್‍ಪುರದಲ್ಲಿ ಓಟ ಮುಗಿಸಿದ್ದೆವು. ತರಾತುರಿಯಿಂದ ಹೋಟೇಲ್ ಹಿಡಿದು, ಹೊರೆ ಇಳಿಸಿ, ಬೈಕುಗಳ ಸಮಗ್ರ ತನಿಖೆಗಾಗಿ ಹೀರೊಂಡಾ ಮಳಿಗೆಗೆ ಓಡಿದ್ದೆವು. ಆದರೆ ನಮ್ಮ ನಿರಾಶೆಗೆ ಅಂದು ಆ ವಲಯದಲ್ಲಿ ಚುನಾವಣಾ ರಜೆ. ಇದರಿಂದ ಮರುದಿನ ಸುಮಾರು ಹನ್ನೆರಡು ಗಂಟೆಯವರೆಗೂ ನಮಗೆ ಅಘೋಷಿತ ವಿರಾಮ ಕಡ್ಡಾಯವಾಯ್ತು. ಅದನ್ನು ಸದುಪಯೋಗಪಡಿಸುವಂತೆ ಈ ದಿನಗಳಲ್ಲಿ (೨೦೨೦) ಡಿಜಿಟಲ್ ಚಿತ್ರಗ್ರಹಣ, ಅದೂ ಪ್ರತ್ಯೇಕ ಕ್ಯಾಮರಾ ಕೇಳದೇ ಅಂಗೈ ಬ್ರಹ್ಮಾಂಡ – ಚರವಾಣಿಯೊಳಗೆ, ಬಂದು ಕೂತಿದೆ. ಸಹಜವಾಗಿ ಇಂದು ಬಹುಮಂದಿ ಅಭಿವ್ಯಕ್ತಿ ಮಾಧ್ಯಮವಾಗಿದ್ದ ಭಾಷೆಯನ್ನು ಕಳಚಿಕೊಂಡು ಚಿತ್ರಮಯವಾಗಿಬಿಟ್ಟಿದ್ದಾರೆ. ಎಷ್ಟೋ ಕಡೆ ಮಾಹಿತಿಗಳ ಚೀಟಿ ಬರೆದುಕೊಳ್ಳುವಲ್ಲಿ ನಾನೂ ಚಿತ್ರ ತೆಗೆಯುತ್ತಿದ್ದೆನೆ! ಕಾಸು ಖರ್ಚಿಲ್ಲದೆ, ಸ್ಪರ್ಷ ಮಾತ್ರಗಳಲ್ಲಿ ಅಮಿತ ಚಿತ್ರ ಅಥವಾ ಚಲಚಿತ್ರ, ಫಲಿತಾಂಶ, ಸರಿ/ತಪ್ಪು ವಿಮರ್ಶೆ, ಪರಿಷ್ಕರಣೆ, ದಾಸ್ತಾನು, ನಕಲು, ವರ್ಗಾವಣೆ, ಪ್ರಕಟಣೆ… ಹೀಗೆ ತೆರೆದುಕೊಳ್ಳುವ ಅನಂತ ಸಾಧ್ಯತೆಗಳಿಗೆ ಯಾರೂ ಮರುಳಾಗುತ್ತಾರೆ. ಈಚಿನ ನಮ್ಮ ಮೇಘಾಲಯ ಪ್ರವಾಸದಲ್ಲಿ, ಹತ್ತು ದಿನಗಳ ಉದ್ದಕ್ಕೂ ನಾನು ತೆಗೆದ ಏಳ್ನೂರು ಚಿಲ್ಲರೆ ಸ್ಥಿರ, ಚರ ಚಿತ್ರಗಳೆಲ್ಲ ನನ್ನ ಚರವಾಣಿಯೊಳಗೇ ಬಂದಿತ್ತು. ಆದರೆ ಅಂದು – ಇಪ್ಪತ್ನಾಲ್ಕು ವರ್ಷಗಳ ಹಿಂದೆ, ಅಂಥಾ ಕಲ್ಪನೆಯೂ ಇಲ್ಲದ ದಿನಗಳು. ಪ್ರತ್ಯೇಕ ಕ್ಯಾಮರಾ, ರೀಲು ಇದ್ದರಾಗಲಿಲ್ಲ, ಒಂದೊಂದು ಕ್ಲಿಕ್ಕೂ ಕಿಸೆಗೆ ಕಿಕ್ಕೂ! ಮೂವತ್ತಾರೇ ಕ್ಲಿಕ್ಕಿಗೆ ರೀಲು ಖತಂ. ಮತ್ತದು ತೊಳೆದು, ಮುದ್ರಣವಾಗಿ ಬರುವವರೆಗೂ ಫಲಿತಾಂಶ ಲಾಟರಿ ಟಿಕೇಟಿನದ್ದೇ! ರೀಲು ತುಂಬಿದ್ದು ಎಡವಟ್ಟಾಗಿ, ಬೆಳಕು ಮತ್ತು ಸಂಸ್ಕರಣೆಗಳ ತಪ್ಪು ಕಾಡಿ, ನಾನೇ ಕಳೆದುಕೊಂಡ ಅಪೂರ್ವ ಚಿತ್ರಗಳು ಅಸಂಖ್ಯ. ಅಂಥ ಹೆದರಿಕೆಗಳ ಫಲವಾಗಿಯೇ ಬಿಲಾಸ್ ಪುರದಲ್ಲಿ ಸಮಯವಿದೆಯೆಂದು ತಿಳಿದದ್ದೇ ಒಳ್ಳೇ ಸ್ಟುಡಿಯೋ ಹಿಡಿದೆ. ಅದುವರೆಗೆ ಪೂರ್ಣಗೊಂಡಿದ್ದ ಎರಡೋ ಮೂರೋ ರೀಲು ತೊಳೆಸಿ, ಮುದ್ರಿಸಿಕೊಂಡೆ. ಪ್ರಸ್ತುತ ಲೇಖನ ಮಾಲೆಯಲ್ಲಿ ಮಂಗಳೂರಿನಿಂದ ಕಾನ್ಹಾದವರೆಗೆ ನೀವು ನೋಡಿದ ನನ್ನ ಚಿತ್ರಗಳೆಲ್ಲ ಬಿಲಾಸ್ಪುರ ಮುದ್ರಣಗಳು. ಉಪಾಧ್ಯರ ಕ್ಯಾಮರಾ, ರೀಲು, ದೃಶ್ಯದ ಆಯ್ಕೆ, ಕಲೆಗಾರಿಕೆ, ಸಂಸ್ಕರಣ, ಮುದ್ರಣಗಳೇ ಭಿನ್ನ. ಅವರು ತೆಗೆದ ಚಿತ್ರಗಳು ಸಂಖ್ಯೆಯಲ್ಲಿ ಕಡಿಮೆ ಆದರೆ ಗುಣದಲ್ಲಿ ಉತ್ತಮ. ಉಪಾಧ್ಯರು ಉದಾರವಾಗಿ ಅವನ್ನೂ ನನ್ನೀ ಮಾಲಿಕೆಯಲ್ಲಿ ಬಳಸಲು ಬಿಟ್ಟಿದ್ದಾರೆ. ಇಲ್ಲಿ ಅವರ ಚಿತ್ರಗಳಿಗೆ ನಾನು ಪ್ರತ್ಯೇಕ ಗುರುತಿನ ಗೌರವ ಕೊಡುವುದು ನನ್ನದೇ ಮಿತಿಯಲ್ಲಿ ಸಾಧ್ಯವಾಗಿಲ್ಲ.

ದಾರಿ ಖರ್ಚಿಗೆ ಹಣವನ್ನು ನಾವು ಸ್ಟೇಟ್ ಬ್ಯಾಂಕಿನ ಟ್ರಾವೆಲರ್ಸ್ ಚೆಕ್ಕಿನ ರೂಪದಲ್ಲಿ ಒಯ್ದಿದ್ದೆವು (ಭಾರತದಲ್ಲಿ ಎಟಿಎಂಗಳ ಮೊದಲ ಹೆಜ್ಜೆ ಗುರುತು ಮೂಡಿದ್ದು ೧೯೯೭ರಲ್ಲಿ). ಬೆಳಿಗ್ಗೆ (೮-೫-೯೬) ಉಪಾಧ್ಯರು ಒಂದು ಚೆಕ್ ನಗದು ಮಾಡಿಸಿಕೊಳ್ಳಲು ಹತ್ತಿರದ ಎಸ್ಬೀಐ ಶಾಖೆಗೆ ಹೋದರು. ಆದರೆ ಆಶ್ಚರ್ಯಕರವಾಗಿ ಮ್ಯಾನೇಜರ್ ವಿನಾ ಕಾರಣ ಪಾವತಿ ನಿರಾಕರಿಸಿದ. ವ್ಯಕ್ತಿ ಪರಿಚಯ ದಾಖಲೆ, ಚೆಕ್ಕಿನ ಸಿಂಧುತ್ವ, ಹೆಚ್ಚುವರಿಯಾಗಿ ನಮ್ಮ ಸಾಕ್ಷಿಗಳಿದ್ದರೂ ಆತ ಪಾವತಿ ಕೊಡಲೇ ಇಲ್ಲ. ಉಪಾಧ್ಯರು ಚೆಕ್ ನಗದು ಮಾಡಿಸಿದ್ದು ಅದು ಮೊದಲಲ್ಲ, ಮುಂದಿನೂರಿನಲ್ಲಿ ಮಾಡಿಸುವಾಗ ಸಮಸ್ಯೆಯೂ ಆಗಲಿಲ್ಲ. ಬಿಲಾಸ್ ಪುರದಲ್ಲೇ ಪಟ್ಟು ಹಿಡಿದು ಹಣಪಡೆಯಲು ನಮ್ಮಲ್ಲಿ ಸಮಯವಿರಲಿಲ್ಲ. ಊರಿಗೆ ಮರಳಿದ ಮೇಲಾದರೂ ದೂರುಪತ್ರ ದಾಖಲಿಸಿದರೋ ಬಿಟ್ಟರೋ ನೆನಪಿಲ್ಲ. ಆದರೆ ಇಂಥದ್ದೇ ತುಸು ಭಿನ್ನ ಕಹಿ ಅನುಭವ ನನಗೆ ಜಬ್ಬಲ್ ಪುರದಲ್ಲಾಗಿತ್ತು, ಹೇಳುವುದು ಮರೆತಿದ್ದೆ. ಇಲ್ಲೇ ಕಿರಿದರಲ್ಲಿ ಜಬ್ಬಲ್‍ಪುರದ ಎಸ್ಬೀಐ ಶಾಖೆಗೆ ನಾನು ಚೆಕ್ ನಗದಿಸಲು ಹೋಗಿದ್ದೆ. ಶಾಖಾಧಿಕಾರಿ ಅನಗತ್ಯವಾಗಿ ನನ್ನ ರುಜು ಕನ್ನಡದ್ದು ಎಂದು ತಿಳಿದದ್ದೇ ಪಾವತಿ ನಿರಾಕರಿಸಿದ. ರುಜು ಭಾಷಾತೀತ, ಖಾಸಾ ಸಂಕೇತ ಎನ್ನುವ ವಾದಗಳನ್ನು ಆತ ಒಪ್ಪಲೇ ಇಲ್ಲ. ಆಗಲೂ ನಾವು ಕೋಪ ನುಂಗಿಕೊಂಡು, ಮುಂದೊಂದು ಶಾಖೆಯಲ್ಲಿ, ಯಾವ ರಗಳೆ ಇಲ್ಲದೆ ನಗದು ಮಾಡಿಸಿಕೊಂಡೆವು. ನಾನು ಮಂಗಳೂರಿಗೆ ಬಂದದ್ದೇ ಖಡಕ್ ದೂರುಪತ್ರ ಬರೆದು, ಚೆಕ್ ಕೊಟ್ಟ ಮಂಗಳೂರು ಶಾಖೆ, ಬ್ಯಾಂಕಿನ ರಾಜ್ಯ ಕಛೇರಿ ಮತ್ತು ಜಬ್ಬಲ್ಪುರದ ಶಾಖೆಗಳಿಗೆ ಪ್ರತಿ ಕಳಿಸಿದೆ. ಮೂರು ನಾಲ್ಕನೇ ದಿನಕ್ಕೆ ಸ್ಥಳೀಯ ಶಾಖಾಧಿಕಾರಿ, ಬ್ಯಾಂಕ್ ನೀತಿಸಂಹಿತೆ ಹಿಡಿದುಕೊಂಡೇ ನನ್ನಂಗಡಿಗೆ ಓಡಿ ಬಂದರು! “ನಿಮ್ಮ ಪತ್ರ ನ್ಯಾಯವಾಗಿದೆ. ಆದರೆ ನಮ್ಮ ಬ್ಯಾಂಕಿನ ನೀತಿ ಸಂಹಿತೆಯಲ್ಲಿ ಸ್ಪಷ್ಟವಾಗಿ ರುಜು ಇಂಗ್ಲಿಷ್ ಅಥವಾ ಹಿಂದಿಯಲ್ಲಿರಬೇಕೆಂದೇ ಇರುವುದನ್ನು ನಾನು ಇದುವರೆಗೆ ಗಮನಿಸಿರಲಿಲ್ಲ. ನೀವು ನನ್ನನ್ನು ಕ್ಷಮಿಸಿ, ಪತ್ರ ಹಿಂತೆಗೆಯದಿದ್ದರೆ ನನಗೆ ಶಿಕ್ಷೆಯಾಗುತ್ತದೆ…” ನನಗಾದರೂ ಇಲ್ಲಿನ ಶಾಖಾಧಿಕಾರಿಯ ಮೇಲೆ ಕೆಟ್ಟ ಭಾವ ಇಲ್ಲದ್ದಕ್ಕೆ ವ್ಯಾಜ್ಯ ಕೈಬಿಟ್ಟೆ.

ಹಿರೊಂಡಾ ಶಾಖೆಯವನು ಅರ್ಧ ದಿನದಷ್ಟು ಸತಾಯಿಸಿ ಬಿಟ್ಟ. ಹನ್ನೆರಡು ಗಂಟೆಗೆ ಬಿಲಾಸಪುರದಿಂದ ಕಳಚಿಕೊಂಡೆವು. ಮುಂದಿನದೆಲ್ಲ ‘ಸಾಹಸಯಾನ’ ಸಾರ್ಥಕ್ಯ ಪಡೆದುಕೊಳ್ಳುವಂತೆ, ಹಾಳು ದಾರಿಯೊಡನೆ ಗುದ್ದಾಟವೇ ಆಯ್ತು. ಕೆಳಗೇರುಗಳಲ್ಲಿ ಓಡಿಸಿದ್ದು ಹೆಚ್ಚಾಗಿ, ಬೈಕುಗಳ ಅನಿರೀಕ್ಷಿತ ಪೆಟ್ರೋಲ್ ದಾಹ ತೀರಿಸಲು ಒಂದೆರಡು ಕಡೆ ನಾವು ಕಾಳಸಂತೆಗೂ ಶರಣಾಗಿದ್ದೆವು. ಪಂಚೇರ್ ಸರಣಿ ಸ್ವಲ್ಪ ಕಾಡಲಿಲ್ಲ. ಒಟ್ಟಾರೆ ಸಾಹಸಯಾನಗಳ ಲೆಕ್ಕದಲ್ಲಿ, ತೇಪೆ ಸರಣಿ ತಾಳಲಾಗದೇ ಹೊಸ ಟ್ಯೂಬನ್ನೇ ಕೊಳ್ಳುವಂತಾದ್ದು ಈ ಮಾರ್ಗದಲ್ಲೇ.

ಎರಡಕ್ಕೂ ಮೀರಿದ ಚಕ್ರಗಳ ವಾಹನಗಳಲ್ಲಿ ಸವಾರರು ಹೆಚ್ಚಾಗಿ ವಾಹನಕ್ಕಾಗುವ ಆಘಾತವನ್ನು ಯೋಚಿಸಿ ವೇಗವನ್ನು ನಿರ್ಧರಿಸುತ್ತಾರೆ. ದ್ವಿಚಕ್ರಗಳಲ್ಲಾದರೆ ಅದರೊಡನೆ ವಾಹನದ ಸಮತೋಲನವನ್ನೂ ಕಾಯ್ದುಕೊಳ್ಳುವ ಒತ್ತಡ ಚಾಲಕನಿಗೂ ಸಹವಾರರಿಗೂ ಇರುತ್ತದೆ. ಆಸನಗಳ ಮೇಲೆ ಕುಶಿ ಬಂದಂತೆ ಅಂಡೂರುವ ಸ್ವಾತಂತ್ರ್ಯ ಕಳೆದುಕೊಂಡು, ಅಂಡು ಉರಿ ಮಾತ್ರ ಉಳಿದುಬಿಡುತ್ತದೆ! ವಾತಾವರಣದ ಬಿಸಿ, ಬೈಕ್ ಸೀಟಿನ ರೆಕ್ಸಿನ್ ಉಜ್ಜಾಟ ಮತ್ತು ಬಹುತೇಕ ಒಂದೇ ಭಂಗಿಯಲ್ಲಿ ಕೂರುವ ಅನಿವಾರ್ಯತೆ ಎಲ್ಲರನ್ನೂ ಕಾಡಿತ್ತು. ಹೆಚ್ಚು ಹೇಳಿದೆನೆಂದು ಬಯ್ಯಬೇಡಿ, ಇಲ್ಲಿನ ಸವಾರಿಯಲ್ಲಿ ಒಳಚಡ್ಡಿಗಳ ಅಂಚಿನ ಮಿದು ಹೊಲಿಗೆಯೂ ನಮ್ಮನ್ನು ‘ಅಲ್ಲಿ ಕಚ್ಚಿ’ (ಪಾದಕ್ಕೆ ‘ಚಪ್ಪಲಿ ಕಚ್ಚಿತು’ ಎನ್ನುವಂತೆ) ಗಾಯಗೊಳಿಸಿತ್ತು. ಕಿಶೋರ್ ಅಂತೂ ಒಂದು ಹೊದಿಕೆಯನ್ನು ಎಂಟು ಮಡಚಿ, ಸೀಟಿನ ಮೇಲೆ ಹಾಕಿಯೇ ಸವಾರಿ ನಡೆಸಿದ್ದರು!

ಜಬ್ಬಲ್ ಪುರದಿಂದೀಚೆಗೆ ನಮ್ಮ ಪ್ರಯಾಣ ಹೆಚ್ಚು ಪೂರ್ವಭಿಮುಖವಾಗಿತ್ತು. ಶಿವ್ರಿನಾರಾಯಣ್ ಎಂಬ ತೀರ್ಥಕ್ಷೇತ್ರದ ಬಳಿ ಮಹಾಸೇತುವೊಂದರಲ್ಲಿ ಪೂರ್ವವಾಹಿನಿಯೇ ಆದ ಮಹಾನದಿಯ ದರ್ಶನವೂ ಆಯ್ತು. ಶಿವ್ರಿನಾರಾಯಣದ ಸ್ಥಳಪುರಾಣ ಕುತೂಹಲಕರವಾಗಿದೆ. ಈ ವಲಯದ ಕಾಡು ರಾಮಾಯಣದ ದಂಡಕಾರಣ್ಯವಂತೆ. ಇಲ್ಲೇ ರಾಮಸ್ವರೂಪೀ ನಾರಾಯಣನಿಗೆ ಶಿವ್ರಿ ಯಾನೇ ಶಬರಿ ಎಂಜಲು ತಿನ್ನಿಸಿದ್ದಂತೆ! ರಾಮಾಯಣವನ್ನು ಇತಿಹಾಸವೆಂದು ಪ್ರಮಾಣಿಸಿದವರು ಹೇಳಿದ್ದು ನೆನಪಾಯ್ತು. ರಾಮಾಯಣ ನಾಟಕರಂಗ ವಿಂಧ್ಯಾಟವಿಯನ್ನು ದಾಟಿಲ್ಲ. ‘ಸಾಗರೋಲ್ಲಂಘನ’ (ಯಾವುದೋ ಸಣ್ಣ ಜಲಮೂಲ), ‘ಲಂಕೆ’ (ಕುದುರು ಯಾನೆ ನದೀದ್ವೀಪ) ಮುಂತಾದ್ದೆಲ್ಲವೂ ಇಂದಿನ ಶ್ರೀಲಂಕಾ ಬಿಡಿ, ದಕ್ಷಿಣ ಭಾರತವನ್ನೂ ಕಂಡಿಲ್ಲ. ನಾವು ದಿನದ ಲಕ್ಷ್ಯವನ್ನು ತಿಕರ್ಪಾರಾ ಎಂಬ ವನಧಾಮಕ್ಕೆ ಅನುಸಂಧಾನ ಮಾಡಿದ್ದೆವು. ಆದರೆ ದರಿದ್ರ ದಾರಿಯ ಬಂಡಾಟದಲ್ಲಿ ಭಟ್‍ಗಾಂವ್, ಸರೈಪಲಿ ಕಳೆಯುವಾಗಲೇ ಸಂಜೆಗೆಂಪು ಮೂಡಿತ್ತು. ಕತ್ತಲೆಯೊಡನೆ ಬಂದ ಸೊಹೋಲ್ ನಮ್ಮನ್ನು ಉಳಿಸಿಕೊಳ್ಳಲಾಗದಷ್ಟು ಸಣ್ಣದಿತ್ತು. ನಮ್ಮ ತಾಳ್ಮೆಯನ್ನು ಮತ್ತಷ್ಟು ಜಗ್ಗಿ, ಧೈರ್ಯ ಮಾಡಿ, ನಿರ್ವಿಘ್ನವಾಗಿ ‘ದೊಡ್ಮನೆ’ ಅಲ್ಲಲ್ಲ, ಮುಂದಿನೂರು ‘ಬರ(/ಡಾ)ಘರ್’ ತಲಪುವಾಗ ಗಂಟೆ ಏಳೂಮುಕ್ಕಾಲೇ ಆಗಿ ಹೋಗಿತ್ತು. ಸಿಕ್ಕಿದ ಹೋಟೆಲ್ ಹಿಡಿದೆವು. (ತಾ. ೩೫, ತೇ.೨೩%, ಸುಮಾರು ಒಂಬತ್ತು ಗಂಟೆಯಲ್ಲಿ ದಿನದ ಓಟ ಕೇವಲ ೨೨೬ ಕಿಮೀ)

ಛಲಬಿಡದ ತ್ರಿವಿಕ್ರಮರಂತೆ ಬೆಳಿಗ್ಗೆ (೯-೫-೯೬) ಐದೂಕಾಲಕ್ಕೇ ಮತ್ತೆ ದಾರಿಗಿಳಿದಿದ್ದೆವು. ಸ್ವಲ್ಪದರಲ್ಲೇ ನಮ್ಮ ಮಾರ್ಗಾಯಾಸ ಪರಿಹಾರಕ್ಕೆ (ಶವದೊಳಗಿರುವ ಬೇತಾಳ ಅಲ್ಲ,) ಆ ಕಣಿವೆಯ ಮಹಾಶಕ್ತಿ – ಮಹಾನದಿ ದೊಡ್ಡ ಕತೆಯನ್ನೇ ತೆರೆದಿಟ್ಟಿತು. ೧೯೩೬ರ ಮಹಾನದಿಯ ಮಹಾಪ್ರವಾಹದ ಹಾನಿಗಳನ್ನು ನಮ್ಮವರೇ ಆದ ಎಂ. ವಿಶ್ವೇಶ್ವರಾಯರು ಅಧ್ಯಯನ ಮಾಡಿದ್ದರು. ಅವರು ೧೯೪೫ರಲ್ಲಿ ಮಾಡಿದ ಗಟ್ಟಿ ಶಿಫಾರಸಿನ ಸಾರಾಂಶ ಹಿರಾಕುಡ್ ಅಣೆಕಟ್ಟು ಯೋಜನೆ. ೧೯೪೬ರಲ್ಲಿ ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿ ಇದಕ್ಕೆ ಅಂಗೀಕಾರ ಕೊಟ್ಟಿತು. ೧೯೪೭ರ ಬ್ರಿಟಿಷ್ ಆಡಳಿತಾವಧಿಯಲ್ಲೇ ಒರಿಸ್ಸಾ ರಾಜ್ಯಪಾಲ ಹಾಥಾರ್ನ್ ಲೂಯಿಸ್ ಅಣೆಕಟ್ಟಿನ ಅಡಿಪಾಯ ಹಾಕಿದ್ದರು. ೧೯೪೮ರಲ್ಲಿ ಸ್ವತಂತ್ರ ಭಾರತದ ಪ್ರಧಾನಿಯಾಗಿ ಜವಹರಲಾಲ್ ನೆಹರೂ ಪ್ರಥಮ ಕಾಂಕ್ರೀಟ್ ಸುರಿಸಿದ್ದಲ್ಲದೆ, ೧೯೫೭ರಲ್ಲಿ ಲೋಕಾರ್ಪಣೆಯನ್ನೂ ಮಾಡಿದ್ದರು. ಕಬ್ಬಿಣ, ಕಲ್ಲು, ಸಿಮೆಂಟ್ ಅಷ್ಟೇ ಅಲ್ಲ, ಸುಯೋಗ್ಯವಾಗಿ ಮಣ್ಣನ್ನೂ ಬಳಸಿ ಬಂದ ಅಣೆಕಟ್ಟಿದು. ಕಟ್ಟೆಯ ತಲೆಯಿಂದ ತಲೆಗೆ ೨೬ ಕಿಮೀ ಉದ್ದವೇ ಇರುವ, ಒಂದು ಕಾಲಕ್ಕೆ ಭಾರತದ ಅಣೆಕಟ್ಟುಗಳ ಅಗ್ರಣಿಯೇ ಆಗಿದ್ದ ಹಿರಾಕುಡ್‍ನ ಹಿನ್ನೀರ ಹರಹು ಕಂಡೂ ಕಾಣದಂತೆ ಹೋಗುವುದಾಗಲಿಲ್ಲ. ಹತ್ತು ಕಿಮೀ ಅಡ್ಡ ದಾರಿ ಹಿಡಿದು ಹೋದದ್ದೇನೋ ಆಯ್ತು. ಆದರೆ [ಅಭಯನಿಗೆ ಬರೆದ ಪತ್ರ] “…. ಕಟ್ಟೆಯ ಮೇಲಿನ ಸವಾರಿಗೆ, ಮೊದಲ ಗೇಟು, ಕೆಳ ಅಂಚಿನ ಗೇಟು, ಸಮೀಪದ ಶಿಖರದ ನೆತ್ತಿಗೇರುವ ದಾರಿಯ ಗೇಟುಗಳೆಲ್ಲ ಲಂಚ ಕೇಳಿದವು. “ಹಾಳಾಗಿ ಹೋಗಿ. ಇದರಜ್ಜನಂಥ ತುಂಗಭದ್ರಾ, ಹಾರಂಗಿ, ಕೃಷ್ಣರಾಜ ಸಾಗರ… ನೋಡಿದ್ದೇವೆ” ಎಂದು ಮನದಲ್ಲೇ ಹಂಗಿಸುತ್ತ ವಾಪಾಸಾದೆವು. ಮುಂದಿನಗಳಲ್ಲಿ ‘ಭವ್ಯ ಭಾರತದೊಳಗೆ’ ವಿವಿಧ ಭಯೋತ್ಪಾದನೆಗಳು ವಿಕಸಿಸಿದ ಪರಿಯಲ್ಲಿ, ಇಲ್ಲೆಲ್ಲ ಬಹುತೇಕ ಅಣೆಕಟ್ಟುಗಳ ಸಾರ್ವಜನಿಕ ಸಂದರ್ಶನಾವಕಾಶವೇ ರದ್ಧಾಗಿರುವುದು ಕಾಣುತ್ತೇವೆ. ಹಾಗಿದ್ದರೂ ಇಂದು ಹಿರಾಕುಡ್ ಸಾರ್ವಜನಿಕ ಸಂದರ್ಶನ ಲಂಚ ಕೊಟ್ಟರೆ ದಕ್ಕೀತೇ? (ಉತ್ತರ ತಿಳಿದೂ ಹೇಳದಿದ್ದರೆ, ನಿಮ್ಮ ತಲೆ ನಾವನುಭವಿಸಿದ ದಾರಿಗಳ ಡಾಮರು ಹಾಸಿನಂತೆ ಚಿಂದಿಯಾಗುವುದು, ಹುಶಾರ್!)

ಏಳೂವರೆ ಗಂಟೆಯ ಸುಮಾರಿಗೆ ದೊಡ್ಡ ನಗರ ಸಂಭಾಲ್ಪುರ್ ತಲಪಿದೆವು. ಅಲ್ಲಿ ನಮ್ಮ ಜಡ್ಡುಗಟ್ಟಿದ ನಾಲಗೆಯ ಅದೃಷ್ಟಕ್ಕೆ ‘ಮದ್ರಾಸೀ ಹೋಟೆಲ್’ ಸಿಕ್ಕಿ ಸಂಭ್ರಮವಾಯ್ತು. ಮುಂದಿನದು ರಾಷ್ಟ್ರೀಯ ಹೆದ್ದಾರಿ ೫೫. ಇಂದಿನಂತೆ ಬಹುತೇಕ ಸಪಾಟು, ನೇರ, ಚತುಷ್ಪಥ… ಏನೂ ಇರಲಿಲ್ಲ. ಆದರೆ ಒಳ್ಳೇ ಡಾಮರಿನ, ವಿರಳ ವಾಹನ ಸಂಚಾರದ, ಬಹುತೇಕ ನಿರ್ಜನದ ದಾರಿ. ಮತ್ತೇನು, ಹಾಳು ದಾರಿಗಳಲ್ಲಿ ರೋಸಿ ಹೋದ ಮನಸ್ಸಿಗೆ ಭಾರೀ ಬಿಡುಗಡೆಯೇ ಸಿಕ್ಕಿದಂತಾಯ್ತು. ನಾನು ಮುಂದಿದ್ದೆ, ನಡುವಣ ಅಂತರ ನೂರಿನ್ನೂರು ಮೀಟರ್ ಇದ್ದಂತೆ ಕಿಶೋರ್ ಹಿಂಬಾಲಿಸಿದ್ದರು. ಆಗಲೇ ಕಾವೇರಿದ್ದ ಮಾರ್ಗಕ್ಕೆ ಬೀಸುಗಾಳಿ ಕೊಡುವಂತೆ ನನ್ನ ಬೈಕ್ ಧಾವಿಸಿತ್ತು. ವೇಗಮಾಪಕ ಮುಳ್ಳು ೮೦ – ೯೦ ಇನ್ನೇನು ನೂರು ಮುಟ್ಟಿತು ಎನ್ನುವಷ್ಟರಲ್ಲಿ ಇಂಜಿನ್ ಒಮ್ಮೆಗೆ ಭೋರಿಟ್ಟು, ಭಾರೀ ಹೊರೆ ಜಗ್ಗಿದಂತೆ ಚಕ್ರಗಳು ಕೊಂಯ್‍ಗುಟ್ಟಿ ನಿಂತೇ ಬಿಟ್ಟಿತು! (ಗಂಟೆ ೧೦) ನಾಲ್ಕೂ ತಲೆಗಳು ಸೇರಿ ಸಮಸ್ಯೆಯ ತನಿಖೆ ಹಾಗೂ ಪರಿಹಾರ ನಿಶ್ಚೈಸಿದೆವು.

ಬಿಲಾಸ್ ಪುರದ ಉಡಾಫಿಗಳು ಎಂಜಿನ್ ಎಣ್ಣೆ ಬದಲಾಯಿಸಿದ ಮೇಲೆ ಸೋರುಬೂಚನ್ನು (ಡ್ರೇನ್ ಬೋಲ್ಟ್) ಸಾಕಷ್ಟು ಬಿಗಿಗೊಳಿಸಿರಲಿಲ್ಲ. ಕೆಟ್ಟ ದಾರಿಯ ಕಂಪನ ಅದನ್ನು ಹೆಚ್ಚೆಚ್ಚು ಸಡಿಲಿಸಿ, ಇಲ್ಲಿ ರಟ್ಟಿಸಿತ್ತು. ಮರುಕ್ಷಣದಲ್ಲೇ ಎಣ್ಣೆಯೆಲ್ಲ ಸೋರಿಹೋಗಿತ್ತು. ನಮ್ಮ ಅದೃಷ್ಟಕ್ಕೆ ಯಂತ್ರ ಸೀದುಹೋಗಲಿಲ್ಲ, ಕೇವಲ ಆರಿಹೋಗಿತ್ತು. ಎಲ್ಲೋ ರಟ್ಟಿ ಹೋಗಿರಬಹುದಾದ ಬೂಚು ಹುಡುಕುವ ಪ್ರಯತ್ನವನ್ನು ಬೇಗನೆ ಕೈಬಿಟ್ಟೆವು. ನಮ್ಮಲ್ಲಿದ್ದ ಬಟ್ಟೆ ಹರಗುವ ಹಗ್ಗದಿಂದ ಕಿಶೋರ್ ಬೈಕಿನ ಹಿಂದೆ ನನ್ನದನ್ನು ಕಟ್ಟಿ ಎಳೆಸುವ ವ್ಯವಸ್ಥೆ ಮಾಡಿಕೊಂಡೆವು. (ಆ ಮೇಲೆ ತಿಳಿದಂತೆ) ಮೋಚಿಬಹಾಲ್ ವನ್ಯ ವಲಯದಿಂದ ಅನಿರ್ದಿಷ್ಟ ಭವಿಷ್ಯದತ್ತ ನಿಧಾನಕ್ಕೆ ಮುಂದುವರಿದೆವು. ಮಾರ್ಗ ಚೆನ್ನಾಗಿಯೂ ಬಹುತೇಕ ಸಮತಟ್ಟಾಗಿಯೂ ಇದ್ದದ್ದು ನಮ್ಮ ಅದೃಷ್ಟ. ಸುಮಾರು ನಲ್ವತ್ತು ಮಿನಿಟಿನಲ್ಲಿ (ಗಂಟೆ ೧೦.೫೦) ಇಪ್ಪತ್ತೈದು ಕಿಮೀ ಕಳೆದು ಸಿಕ್ಕ ಮೊದಲ ನಾಗರಿಕ ವ್ಯವಸ್ಥೆ ರಾಯ್ರಾಖೋಲ್ ಅರಣ್ಯ ತನಿಖಾ ಠಾಣೆ. ತನಿಖೆಗೆಂಬಂತೆ ಒಂದು ಲಾರಿಯೂ ನಿಂತಿತ್ತು. ಅಲ್ಲಿದ್ದ ಇನ್ನೊಂದೇ ಹೆಚ್ಚುವರಿ ರಚನೆ ಒಂದು ಹರಕು ಡಾಬಾ. ನಮ್ಮಷ್ಟೇ ಅಸಹಾಯಕನಾದ ಠಾಣೆದಾರನಲ್ಲಿ ನಮ್ಮ ಕತೆ ತೋಡಿಕೊಂಡು, ಚಾ ಕುಡಿಯಲು ಕುಳಿತೆವು. ನಮ್ಮ ಅದೃಷ್ಟಕ್ಕೆ ಆ ಲಾರಿಯ ಚಾಲಕ ಒಲಿದ. ಅವನ ರಿಪೇರಿ ಪೆಟ್ಟಿಗೆಯೊಳಗಿದ್ದ ಯಾವುದೋ ತುಸು ಸಪುರದ ಬೋಲ್ಟಿಗೆ ಸಾಕಷ್ಟು ಹಗ್ಗ ಸುತ್ತಿ ನನ್ನ ಯಂತ್ರಕ್ಕೆ ಕಾಯಿಸಿದೆವು. ಮತ್ತೆ ಅವನಲ್ಲೇ ಇದ್ದ ಲಾರಿ ಗ್ರೇಡಿನ ಎಣ್ಣೆಯನ್ನೇ ನನ್ನ ಎಂಜಿನ್ನಿಗೆ ತುಂಬಿದ್ದೂ ಆಯ್ತು. ಒಲವಿನ ಹೀರೊಂಡಾ ವಿಶೇಷ ಕೊಸರಾಡದೆ ಒಲಿಯಿತು! ಲಾರಿಯವ ಕೇವಲ ಎಣ್ಣೆಯ ನ್ಯಾಯ ಬೆಲೆ ಮಾತ್ರ ತೆಗೆದುಕೊಂಡು, ನಮಗೆ ಶುಭ ಕೋರಿದ. (ಗಂಟೆ ೧೧.೨೦)

ತೀರಾ ಮಂದ ಗತಿಯಲ್ಲೇ ಬೈಕೋಡಿಸಿದೆವು. ಯಂತ್ರ ಲೆಕ್ಕಕ್ಕೂ ಮೀರಿ ಬಿಸಿ ಏರುವುದು ಅರಿವಾದಗೆಲ್ಲ ಹತ್ತತ್ತು ಮಿನಿಟಿನ ವಿಶ್ರಾಂತಿ ಕೊಡುತ್ತ ಸಾಗಿದೆವು. ಬೊಯಿಂಡಾ (ಗಂಟೆ ೧೨.೩೫) ಎಂಬ ಸ್ವಲ್ಪ ದೊಡ್ಡ ಹಳ್ಳಿ ಸಿಕ್ಕರೂ ಪ್ರಯೋಜನವಾಗಲಿಲ್ಲ. ಮುಂದೆಲ್ಲೋ ಸಿಕ್ಕ ಡಾಬಾದಲ್ಲಿ ಸ್ವಲ್ಪ ದುಬಾರಿ ದರದಲ್ಲೇ ಊಟದ ಶಾಸ್ತ್ರ ಮುಗಿಸಿಕೊಂಡೆವು. ಎರಡು ಗಂಟೆಗೆ ಆ ವಲಯದ ದೊಡ್ಡ ಪೇಟೆ – ಅಂಗುಲ್ ಬಂತು. ಅಲ್ಲಿ ರಿಪೇರಿ ಮಳಿಗೆಗಳೇನೋ ಇದ್ದವು, ಆದರೆ ಅಂದು ಗುರುವಾರ; ಊರಿನ ಮುಖ್ಯ ಮಳಿಗೆಗಳಿಗೆ ವಾರದ ರಜಾದಿನ! ಹಾಗೆಂದು ನಿರಾಶೆ ದೀರ್ಘಾಯುಷಿಯಾಗಲಿಲ್ಲ. ಸುಮಾರು ಏಳು ಕಿಮೀ ಮುಂದೆ, ನಲ್ಕೋ ಎಂಬಲ್ಲಿದ್ದ ಮುಖ್ಯವಾಗಿ ಕಾರಿನ ವರ್ಕ್‍ಶಾಪ್, ನಮ್ಮ ಸುದೀರ್ಘ ಸಂಕಟಕ್ಕೆ ಸಮರ್ಥ ಸಮಾಧಾನ ಕೊಟ್ಟಿತು.

ಸುಮಾರು ನಾಲ್ಕೂಮುಕ್ಕಾಲು ಗಂಟೆಯಲ್ಲಿ ೧೨೩ ಕಿಮೀ ಅಷ್ಟೇ ಪ್ರಯಾಣಿಸಿದ್ದೆವು! ನಮ್ಮ ಮೂಲ ಯೋಜನೆಯಂತೆ ಸಂಜೆಗೆ ಪೂರ್ವ ಕರಾವಳಿಯ ಕಟಕ್ ತಲಪುವುದನ್ನು ಕೈ ಬಿಟ್ಟೆವು. ಯೋಜನಾ ಹಂತದಲ್ಲಿ ಅರೆಮನಸ್ಸಿನಲ್ಲಿ ಗುರುತು ಹಾಕಿಕೊಂಡಿದ್ದ ತಿಕರ್‍ಪಾರ ವನಧಾಮಕ್ಕೆ ಭೇಟಿ ಹಾಕಿಕೊಂಡೆವು.

ಪಶ್ಚಿಮ ಘಟ್ಟಗಳಷ್ಟು ಪ್ರಮುಖವಲ್ಲದಿದ್ದರೂ ಪೂರ್ವ ಘಟ್ಟಗಳು ಮರೆಯುವಂಥವಲ್ಲ. ಅದರಲ್ಲಿ ಸುಮಾರು ೬೭ ಕಿಮೀ ಉದ್ದಕ್ಕೆ ಮಹಾನದಿ ಕೊರೆದು ಮಾಡಿದ ವೈಶಿಷ್ಟ್ಯಪೂರ್ಣ ಕೊರಕಲು ಸಾತ್ಕೋಸಿಯಾ ಗಾರ್ಜ್. ಮಹಾನದಿ ಸಿಹಿನೀರಿನ ಮೊಸಳೆಗಳಿಗೆ ಹೆಸರುವಾಸಿಯಾಗಿದೆ. ಹಾಗಾಗಿ ಅಲ್ಲಿನ ಕಾಡನ್ನು ಸಾತ್ಕೋಶಿಯಾ ವನಧಾಮವೆಂದೂ (೧೯೭೬) ನದಿ ಪಾತ್ರೆಯ ಸಮೀಪದ ಹಳ್ಳಿ ತಿಕರ್ಪಾರಾವನ್ನು ‘ಮೊಸಳೆ ಸಂರಕ್ಷಣಾಧಾಮ’ವೆಂದೂ (೧೯೭೫) ಘೋಶಿಸಲಾಗಿದೆ. ನಾವು ಅಂಗುಲಿನಿಂದ ಕೆಲವು ರಸ್ತೆಗಳ ಗೊಂದಲ ಪರಿಹರಿಸಿಕೊಂಡು, ಆ ಮಹಾ ಕಣಿವೆಯ ಕಿಂಚಿತ್ ಅನುಭವಗಳನ್ನು ಸಂಗ್ರಹಿಸಿಕೊಂಡೆವು. ಅಲ್ಲಿನ ಬೆಟ್ಟಗಳು ನಮ್ಮನ್ನು ಅಪಾರ ಪ್ರಭಾವಿಸಿದರೂ ವನ್ಯದ ಅಂಶ ತುಂಬ ಬಡವಾಗಿತ್ತು. ಅದನ್ನು ಸಮರ್ಥಿಸುವಂತೇ ದಾರಿ ಬದಿಯಲ್ಲಿ ಹೇರಳ ಸೌದೆ ಮತ್ತು ಬೀಳಲುಗಳ ಕಟ್ಟುಗಳು ಬಿದ್ದುಕೊಂಡಿದ್ದವು. ಇವು ‘ಗ್ರಾಮೀಣ ಜನರ ಅಗತ್ಯಕ್ಕೆ ತಲೆಹೊರೆ ಮಿತಿ’ ಎಂಬ ಕಾನೂನು ಭಾಷೆಯ ಮುಸುಕಿನಲ್ಲಿ ನಿತ್ಯ ನಡೆಯುತ್ತಿರುವ ವನ್ಯಶೋಷಣೆ. ನಿತ್ಯೋಪಯೋಗಕ್ಕೆ ದಿನವಿಡೀ ಸೌದೆ, ಬೀಳಲುಗಳ ಸಂಗ್ರಹಿಸುವುದೇ ನಿಜವಾದರೆ ಹೊಟ್ಟೆಗೇನು ಮಾಡುತ್ತೀರಿ ಎಂದು ಯಾರೂ ಕೇಳಿದವರಿಲ್ಲ. ವನ್ಯ ಇಲಾಖೆ ಅಷ್ಟೂ ಮುಗ್ಧವೇ?!!

ತಿಕರ್ಪಾರಾ ಹಳ್ಳಿಯ ಸಮೀಪದಲ್ಲೇ ಮಹಾನದಿಗೆ ಸೇರಿದಂತೇ ಮೊಸಳೆ ಧಾಮ ಹರಡಿಕೊಂಡಿತ್ತು. ಕಟ್ಟಡಗಳು, ಸಿಮೆಂಟ್ ಕೊಳಗಳು, ಬೇಲಿ ಎಂದೆಲ್ಲಾ ಕಾಮಗಾರಿ ಧಾರಾಳ ನಡೆದ ಲಕ್ಷಣವಿತ್ತು. ಎಲ್ಲೋ ಕೆಲವು ಕೊಳಗಳಲ್ಲಷ್ಟೇ (ಸಂಶೋಧನಾ ಹೆಸರಿನಲ್ಲೇ ಇರಬೇಕು) ಕೆಲವು ಮೊಸಳೆಗಳು ಬಂಧಿಗಳಾಗಿರುವುದನ್ನು ಕಂಡೆವು. ಹೆಚ್ಚಿನವು ಒಡೆದ, ಕಸ ಕೊಳಕು ಸೇರಿದ ತಿರಸ್ಕೃತ ಹೊಂಡಗಳು, ಕುಸಿದ ಕಟ್ಟಡಗಳು. ಅಮವಾಸ್ಯೆ – ಹುಣ್ಣಿಮೆಗಷ್ಟೇ ಜನಸಂಚಾರವಾದಂತೆ ಕಾಣುತ್ತಿದ್ದ ಸ್ವಾಗತ ಕಛೇರಿ, ಭೂತ ಬಂಗ್ಲೆಯಂಥ ಅತಿಥಿಗೃಹಗಳಿಗೆಲ್ಲ ಸುತ್ತು ಹಾಕಿದೆವು. ಹೇಳಿಕೊಳ್ಳಲೂ ಒಬ್ಬ ಜನ ಕಾಣಿಸಲಿಲ್ಲ. ನದೀ ತೀರದಲ್ಲಿ ರಾತ್ರಿ ಕಳೆಯುವ ಸಂತೋಷಕ್ಕಾದರೂ ಅಲ್ಲಿ ಉಳಿಯ ಬೇಕೆಂಬ ಹಠದಲ್ಲಿ ಹಳ್ಳಿಯಲ್ಲಿ ವಿಚಾರಿಸಿದಾಗ ಸ್ವತಃ ಅತಿಥಿಗೃಹದ ಚೌಕೀದಾರನೇ ಸಿಕ್ಕಿದ. ವ್ಯವಸ್ಥೆ ಬಗ್ಗೆ ಕೇಳಿದಾಗ, “ಅಂಗುಲಿನ ಕಛೇರಿಯಿಂದ (ಐವತ್ತು ಕಿಮೀ ಹಿಂದೆ) ಪತ್ರ ತಂದು, ಹತ್ತು ಕಿಮೀ ಮುಂದೆಲ್ಲೋ ಇದ್ದ ಕಿರಿಯ ಅಧಿಕಾರಿಯಿಂದ ಅನುಮೋದನೆ ಪಡೆದು, ಕೊನೆಯಲ್ಲಿ…..” ಈತನ ಮರ್ಜಿ ಕಾಯಬೇಕೆನ್ನುವುದು ಸ್ಪಷ್ಟವಾಯ್ತು. ಅವೆಲ್ಲ ಇಂದು ಬೇಕಿಲ್ಲ ಎನ್ನುವಂತೆ, ಚೌಕೀದಾರ ಆತನ ‘ಚಾಯ್ಪಾನೀ’ ನೋಡಿಕೊಂಡರೆ ಉದಾರನಾಗುವ ರಾಗ ತೆಗೆದ. ನಾವು ಹೇಸಿಕೊಂಡು ಅಂಗುಲ್ಲಿಗೇ ಮರಳಿ, ಬಡ ಹೋಟೆಲ್ ಹಿಡಿಯುವಾಗ ರಾತ್ರಿ ಏಳೂವರೆಯೇ ಆಗಿತ್ತು. (ತಾ.೩೯, ತೇ ೨೩%, ದಿನದ ಓಟ ೩೭೦ ಕಿಮೀ)

ನೆಲ ಜಲಗಳೆರಡಕ್ಕೂ ಸಹಜವಾಗಿ ಹೊಂದಿಕೊಂಡ (ಉಭಯಚರಿ) ಅತ್ಯಂತ ಪ್ರಾಚೀನ ಪ್ರಾಣಿಗಳು ಆಮೆಗಳು. ಅವುಗಳಲ್ಲೂ ಕಡಲಾಮೆಗಳ ಕತೆ ಖಂಡಾಂತರ ವಲಸೆ ಹೋಗುವ ಹಕ್ಕಿಗಳಷ್ಟೇ ರೋಚಕ. ಅವು ಜೀವಮಾನದಲ್ಲಿ ಫಲಿತ ಮೊಟ್ಟೆ ಇಡಲು ಮಾತ್ರ ನೆಲದ ಮೇಲೆ ಬರುತ್ತವೆ. ಅವು ಕಡಲಿನ ಯಾವ ದೂರದಲ್ಲಿದ್ದರೂ (ಪಾರಂಪರಿಕ, ರೂಢಿಗತಗಳಿಗೂ ಮಿಗಿಲಾಗಿ) ಜೀನುಗತವಾದಂತೆ ಮತ್ತೆ ಮತ್ತೆ ತನ್ನ ಅರಿವಿನ ಅದೇ ಕರಾವಳಿಗೆ ಬಂದು ಮೊಟ್ಟೆ ಇಡುತ್ತವೆ. ಇನ್ನೂ ಹೆಚ್ಚಿನ ವೈಶಿಷ್ಟ್ಯವೆಂದರೆ, ಅದೊಂದು ಋತುವಿನಲ್ಲಿ ಅದೂ ರಾತ್ರಿ ಕಾಲಗಳಲ್ಲಿ ಇವು ಸಾಮೂಹಿಕವಾಗಿಯೇ ಮರಳ ತೀರಗಳಿಗೆ ಬರುತ್ತವೆ. ಅಲ್ಲಿ ಒಂದೊಂದೂ ಆಮೆ ಹಿಂಗಾಲುಗಳಲ್ಲಿ ಮರಳು ಚಿಮ್ಮಿ, ಹೊಂಡ ಮಾಡಿ, ಬಹುಸಂಖ್ಯೆಯಲ್ಲಿ ಮೊಟ್ಟೆಯಿಟ್ಟು, ಮರಳು ಮುಚ್ಚಿ, ನಿರ್ಯೋಚನೆಯಿಂದ ಕಡಲಿಗೆ ಮರಳುತ್ತವೆ. ಆ ಮೊಟ್ಟೆಗಳು ಮರಳ ಹೊದಿಕೆಯಲ್ಲಿ, ಬಿಸಿಲ ಶಾಖದಲ್ಲಿ ನಾಕೆಂಟು ದಿನಗಳಲ್ಲಿ ವಿಕಸಿಸಿ, ಮರಿಯಾಗಿ, ಮರಳಿನಿಂದ ಹೊರಬಂದು, ಕಡಲು ಸೇರುತ್ತವೆ. ಮೂರು – ನಾಲ್ಕು ದಶಕಗಳ ಹಿಂದೆಯೇ ನಮ್ಮ ಬೆಂಗ್ರೆಯಲ್ಲೂ ಈ ವಿದ್ಯಮಾನವನ್ನು ಮಿತ್ರ ಶರತ್ ನೇತೃತ್ವದಲ್ಲಿ ಕಂಡಿದ್ದೆ. ಆದರೆ ಜಗತ್ತಿನ ಎಲ್ಲವೂ ಮನುಷ್ಯನ ಉಪಭೋಗಕ್ಕೇ ಮೀಸಲು ಎಂದೇ ತಿಳಿವ ದುಷ್ಟರು, ಈ ನಿಷ್ಪಾಪೀ ಕಡಲಾಮೆಗಳ ಸಂತಾನಾಭಿವೃದ್ಧಿಗೆ ದೊಡ್ಡ ಕಂಟಕರಾಗಿದ್ದಾರೆ. ಬಸಿರ ಸಂಕಟದಲ್ಲಿ ಬರುವ ಆಮೆಗಳನ್ನು ಹೊಂಚಿ, ಮೊಟ್ಟೆ ಹಾಗೂ ಕಣ್ತಪ್ಪಿ ಮುಂದೆ ಮರಿಗಳೆದ್ದರೆ ಅವನ್ನು ಕದ್ದು ತಿಂದೋ ಮಾರಿಯೋ ಭಾರೀ ಪರಿಸರ ಅಸಮತೋಲನಕ್ಕೆ ಕಾರಣರಾಗುತ್ತಿದ್ದಾರೆ. ಅಕ್ರಮವನ್ನು ತಡೆಯುವಲ್ಲಿ, ಕಡಲಾಮೆಗಳ ವರ್ತನಾವಿಜ್ಞಾನವನ್ನು ಹೆಚ್ಚು ತಿಳಿಯುವಲ್ಲಿ ವಿಶ್ವಾದ್ಯಂತ ಸರಕಾರಗಳು ಹೆಚ್ಚೆಚ್ಚು ಜಾಗೃತವಾಗುತ್ತಿವೆ. ಹಾಗೆ ನೋಡುವಾಗ ಭಾರತದಲ್ಲಿ ಅತ್ಯಧಿಕ ಕಡಲಾಮೆಗಳು (ಆಲಿವ್ ರಿಡ್ಲೀ ಜಾತಿಯವು) ಬರುವ ನೆಲೆ ಒರಿಸ್ಸಾದ ಕರಾವಳಿ, ಅದರಲ್ಲೂ ಕೇಂದ್ರಪಾರಾ ಜಿಲ್ಲೆ.

ಕೇಂದ್ರಪಾರಾವನ್ನು ಲಕ್ಷ್ಯವಾಗಿಟ್ಟುಕೊಂಡು ಬೆಳಿಗ್ಗೆ (೧೦-೫-೯೬) ಐದು ಗಂಟೆಗೇ ಅಂಗುಲ್ ಬಿಟ್ಟೆವು. ದೆನ್ಕೆನಾಲ್, ಚೌದ್ವಾರಿಗಾಗಿ ಮಹಾನಗರ ಕಟಕ್ ಸೇರುವಾಗ ಗಂಟೆ ಏಳಾಗಿತ್ತು. ತಿಂಡಿ ತಿನ್ನುವ ವಿರಾಮದಲ್ಲಿ ಅಲ್ಲಿ ಇಲ್ಲಿ ‘ಆಮೆ ಸಂರಕ್ಷಣಾ ಕೇಂದ್ರ’ದ ಬಗ್ಗೆ ವಿಚಾರಿಸಿದೆವು. ಸ್ಪಷ್ಟ ಚಿತ್ರ ಸಿಗಲೇ ಇಲ್ಲ. ಆ ದಿನಗಳನ್ನು ಧ್ಯಾನಿಸುತ್ತ ಇಂದಿನ ಮಾಹಿತಿ ಕಣ್ಣಿನಲ್ಲಿ (ಅಂತರ್ಜಾಲ) ನೋಡುವಾಗ ನಮ್ಮ ಹೆಡ್ಡುತನದ ಬಗ್ಗೆ ನಗೆ ಬರುತ್ತದೆ. ನಾವು ಹುಡುಕುತ್ತಿದ್ದ ಭಿತರ್ ಕರ್ನಿಕಾ – ಉಪ್ಪು ನೀರಿನ ಮೊಸಳೆಗಳಿಗಾಗಿ ಸಂರಕ್ಷಣಾಧಾಮವನ್ನಾಗಿ ಘೋಷಿತವಾದದ್ದೇ ೧೯೯೮ರಲ್ಲಿ. ಹಾಗೇ ಕಡಲಾಮೆಗಳಿಗಾಗಿ ಗಹಿರ್ಮಾತಾದ ಘೋಷಣೆಯಾದದ್ದು ೧೯೯೭ರಲ್ಲಿ. ನಾವು ಅವೆರಡೂ ಹೆಸರುಗಳಿಗೆ ಮನ್ನಣೆ ಬರುವ ಮೊದಲೇ (೧೯೯೬) ಹುಡುಕಿದ್ದೆವು. ಅದೂ ಸುಮಾರು ನೂರಾ ನಲ್ವತ್ತು ಕಿಮೀ ದೂರದಲ್ಲಿ. ಸಣ್ಣ ಉದಾರಣೆಯಲ್ಲಿ ಹೇಳುವುದಿದ್ದರೆ, ಮಡಿಕೇರಿಯ ‘ಸಹಕಾರನಗರ’ವನ್ನು ಮಂಗಳೂರಿನ ದಾರಿಕರೆಯವನಲ್ಲಿ ವಿಚಾರಿಸಿದ ಹಾಗಾಗಿತ್ತು! ಕಲ್ಕತ್ತಾ ಹೆದ್ದಾರಿಯಲ್ಲಿ ಅನಾವಶ್ಯಕ ಹತ್ತೆಂಟು ಕಿಮೀ ಮೇಲೆ ಕೆಳಗೆ ಓಡಾಡಿದರೂ ಜಗತ್‍ಪುರದಿಂದ ಸರಿದಾರಿಗೆ ನುಗ್ಗಿದ್ದೆವು. ಬೋಳೇ ಬೋಳು ಬಯಲಿನಲ್ಲಿ ಉರಿ ಉರಿ ಬಿಸಿಲಿನಲ್ಲಿ ಬೈಕ್ ಓಡಿಸಿದ್ದೇ ಓಡಿಸಿದ್ದು. ಸಣ್ಣ ಪುಟ್ಟ ಪೇಟೆ, ಜನ ಸಂದಣಿ ಇದ್ದಲ್ಲಿ ವಿಚಾರಿಸಿಕೊಂಡಲ್ಲೆಲ್ಲ ಸಿಗುತ್ತಿದ್ದ ಉತ್ತರ “ಹಾಂ ಇಲ್ಲೇ ಸ್ವಲ್ಪ ಮುಂದಿರಬೇಕು… ಹಾಂ ಇನ್ನೇನು ಸ್ವಲ್ಪ…” ಹೀಗೆ ಒಂದೆರಡಲ್ಲ ಸುಮಾರು ಎಪ್ಪತ್ತು ಕಿಮೀ ಓಡಿದ ಮೇಲೇ ಯಾರೋ ನಿಜಕ್ಕೂ ತಿಳಿದವರಿಂದ ಸ್ಪಷ್ಟ ಚಿತ್ರ ಸಿಕ್ಕಿತು.

ನಾನು ಇಲ್ಲೇ ಹಿಂದೆ ಸುಂದರಬನಗಳ ವಿವರಣೆ ಕೊಡುವಾಗ ಕೊಟ್ಟ ಗೂಗಲ್ ನಕ್ಷೆ ಮತ್ತು ಬರೆದ ಮಾತು ನೆನಪಿಸಿಕೊಳ್ಳಿ “…ಅತ್ತ ಒರಿಸ್ಸಾದ ಅಂಚಿನಿಂದ ಇತ್ತ ಬಾಂಗ್ಲಾ ದೇಶದವರೆಗಿನ ವಿಸ್ತಾರವಾದ, ಬಹುತೇಕ ಜವುಗು ಪ್ರದೇಶದಲ್ಲಿ, ಒಂದು ಹೆಸರು…” ಸುಂದರಬನ. ಅದರಲ್ಲಿ ಉಲ್ಲೇಖಿಸಿದ ಒರಿಸ್ಸಾದ ಕೊನೆಯೇ ಪ್ರಸ್ತುತ ನಾವೋಡುತ್ತಿದ್ದ ವನಧಾಮವಿರುವ ಕೇಂದ್ರಪಾರಾದ ಉತ್ತರ ಕೊನೆ. ಇಲ್ಲಿ ಸುವರ್ಣರೇಖಾ ಮತ್ತು ದಕ್ಷಿಣ ಕೊನೆಯಲ್ಲಿ ಮಹಾನದಿಗಳು, ಅತ್ತ ಗಂಗಾ ಬ್ರಹ್ಮಪುತ್ರಗಳಂತೇ ಜವುಗುಕಾರಕಗಳೂ ಕಾಂಡ್ಲಾ ಪೋಷಕಗಳೂ ಆಗಿವೆ. ಅಂದಿನ ಮಾಹಿತಿವಂತ ಅದನ್ನು ಅಸ್ಪಷ್ಟವಾಗಿ ನಮಗೆ ತಿಳಿಸಿದರು. ಖಾರಿ ಮತ್ತು ಕಾಂಡ್ಲಾ ಕಾಡುಗಳ ಜಾಲದಲ್ಲಿ ಕೆಲವೆಡೆ ಸಮುದ್ರದ ಇಳಿತದ ಸಮಯಗಳಲ್ಲಿ ಮಾತ್ರ ದಾರಿ, ಇನ್ನು ಕೆಲವೆಡೆಗಳಲ್ಲಿ ವಿರಳ ದೋಣಿ ಸರ್ವಿಸ್ ಸಿಕ್ಕಿದರೆ ಮಾತ್ರ ಪಾರುಗಾಣುವ ಅಪಾಯಗಳಿದ್ದವು. ಅಷ್ಟಾಗಿ ಆ ಕೊನೆಯಲ್ಲಿ ನಾವು ಕ್ಷಣ ಮಾತ್ರದಲ್ಲಿ ನೋಡುವಂತದ್ದು ಏನುಂಟೆಂದೂ ನಮಗರಿವಿರಲಿಲ್ಲ. ಹಾಗಾಗಿ ಅಲ್ಲಿಗೆ ನಮ್ಮ ಪ್ರಯತ್ನ ಬಿಟ್ಟು ಕಟಕ್ಕಿಗೆ ಮರಳಿದೆವು.

(ಮುಂದುವರಿಯಲಿದೆ)