[ಕಗ್ಗಾಡಿನ ನಡುವೆ ಬೆಚ್ಚನ್ನ ಮನೆ – ಕಂಟೇನರ್ ಹೌಸ್ ಅಥವಾ ‘ಕಪ್ಪೆಗೂಡು’ವಿನ ಹೆರಿಗೆಯ ಕಥೆಯೇನೋ ಓದಿದ್ದೀರಿ. (ಬಿಸಿಲೆಯಲ್ಲಿ ಹೊಸಬೆಳಕು) ಈಗ ಕಲ್ಪನೆಯು ರೂಪ ಪಡೆದು ‘ಮೊದಲ ಅಳು’ ಕೊಡುವವರೆಗಿನ ವಿಕಾಸದ ಕತೆ]

ಬಚ್ಚಲು, ಕಕ್ಕೂಸ್ ಅಲ್ಲದೆ ಯಾವುದಕ್ಕೂ ಹೊಂದುವಂತೆ ಸ್ವಲ್ಪ ಖಾಲೀ ಜಾಗವನ್ನೂ ರೂಪಿಸಿದೆ. ವರ್ಷಪೂರ್ತಿ ಹರಿಯುವ ಬೆಟ್ಟದ ನೀರು ಉಪಯೋಗಕ್ಕೆ. ಕೊಳಚೆನೀರು ಭೂಗತವಾಗುವಂತೆ ಗುಂಡಿ. ಬೆಳಕಿಗೆ ಸಾಕ್ಷಾತ್ ಸೂರ್ಯನಾರಾಯಣ – ಸೌರಶಕ್ತಿ! ಅಶೋಕವನದೊಳಗೆ ಹೊಸದಾಗಿ ದಾರಿ ಕಡಿಯುವುದು, ನೆಲ ತಟ್ಟು ಮಾಡುವುದು ನಮಗೆ ಬೇಕಿರಲಿಲ್ಲ. ಮೊದಲೇ ಇದ್ದ ಕಚ್ಚಾ ದಾರಿ ಮತ್ತು ನಾವು ಸದಾ ಬಳಸಿದ ಶಿಬಿರ ತಾಣವೇ ಕಪ್ಪೆಗೂಡಿಗೆ ನಿವೇಶನ. ಅಲ್ಲೂ ತೊರೆಯ ಮಳೆಗಾಲದ ಪ್ರವಾಹ ಅಂದಾಜಿಸಿ, ಸ್ವಲ್ಪ ಹಿಂದಣ ನಾಕೆಂಟು ಪ್ರಾಕೃತಿಕ ಬಂಡೆಗುಂಡುಗಳನ್ನೇ ಆಯ್ದುಕೊಂಡೆ. ಇಂದು ಹೊಸ ಕಟ್ಟಡಗಳ ನಿವೇಶನ-ಕಛೇರಿಯಾಗಿ ಕಂಟೇನರ್ ಮನೆಗಳು ಸಾಮಾನ್ಯವಾಗುತ್ತಿವೆ. ಮತ್ತೆ ಲಾರಿಗಳನ್ನೇರಿ ಊರೂರು ತಿರುಗುವ ಕಂಟೇನರ್ಗಳನ್ನೂ ಧಾರಾಳವಾಗಿ ಕಾಣಬಹುದು.

ಆದರೆ ಖರೀದಿಗೆ ಮುಂದಾದಾಗ ತಿಳಿಯಿತು – ಅವಕ್ಕೆ ಸಂಬಂಧಿಸಿದಂತೆ ಇಲ್ಲಿರುವವರೆಲ್ಲ ಕೇವಲ ಸಾಗಣಾ ಪ್ರತಿನಿಧಿಗಳು; ಮಾರುವ ಅಧಿಕಾರಿಗಳಲ್ಲ. ಸ್ಥಳೀಯವಾಗಿ ಹೊಸತನ್ನೇ ಮಾಡಿಕೊಡುವವರು ಸಿಕ್ಕಿದರು. ಆದರೆ ಅವುಗಳು ವಿಶ್ವಾಸಾರ್ಹವಾಗಲಿಲ್ಲ. ಮುಂಬೈ, ಚೆನ್ನೈ, ಕೊಲ್ಕೊತ್ತಾಗಳಂತ ಮಹಾ ಬಂದರು ನಗರಗಳಿಗೆ ಹೋಗಿ, ಭಾಷೆ – ಪರಿಚಯಗಳ ಕೊರತೆಯೊಡನೆ ವಿಚಾರಿಸಿ, ಖರೀದಿಸಿ, ಸಾಗಿಸಿ, ಪರಿವರ್ತಿಸಿ, ಕೂರಿಸುವ ಸಂಕಟಗಳನ್ನು ಯೋಚಿಸಿಯೇ ನಾನು ಬಹುತೇಕ ಯೋಜನೆ ಕೈಬಿಟ್ಟಿದ್ದೆ. ಕೊಯಂಬತ್ತೂರು ದಕ್ಷಿಣ ಭಾರತದಲ್ಲೇ ಔದ್ಯಮಿಕ ಸಾಮಗ್ರಿಗಳ ಬಹಳ ದೊಡ್ಡ ಕೇಂದ್ರ. ಎರಡು ವರ್ಷಗಳ ಹಿಂದೆ ನನ್ನ ತಮ್ಮನ ಮಗಳು ಅಕ್ಷರಿ ಮತ್ತವಳ ಗಂಡ ಮಹೇಶ ಕೊಯಂಬತ್ತೂರಿನಲ್ಲಿ ನೆಲೆಸಿದಾಗ, ನನ್ನ ಕಂಟೇನರ್ ಆಸೆಯ ಕೊರಡು ಕೊನರಿತು. ಧೈರ್ಯಕ್ಕೆ ಗೆಳೆಯ ಕಾವೂರಿನ ಪ್ರವೀಣ ಭಟ್‍ನ ಕೊಯಂಬತ್ತೂರು ಭಾವನೂ ಒದಗಿದರು. ನೆಂಟಸ್ತಿಕೆಯ ನೆಪದಲ್ಲಿ ಭೇಟಿ ಕೊಟ್ಟರೂ (ನೋಡಿ: ಕೊಯಂಬತ್ತೂರು ಟಿಪ್ಪಣಿಗಳು) ಮೊದಲ ಬೇಟೆ – ಶೇಖರ್, ಕಂಟೇನರ್ತಯಾರಕ, ಶ್ರದ್ಧಾ ಟ್ರಾನ್ಸ್‍ಪೋರ್ಟ್ ಕಂಪೆನಿಯ ಮಾಲಕ (ಚರವಾಣಿ: ೯೪೪೨೧೫೭೭೭೪). ಉದಕಮಂಡಲದ ಕೋತಗೇರಿ ಊರಿನ ಬಡಗ ಸಮುದಾಯದ ಶೇಖರ್ ನಿಜದಲ್ಲಿ ಕನ್ನಡಿಗರೂ ಇದ್ದದ್ದು ನನ್ನ ಅದೃಷ್ಟ!ಶೇಖರ್ ಮೊದಲು ಕೇಳಿದ್ದು ನನ್ನ ಅಗತ್ಯ, ಒಪ್ಪಿದ್ದು ನನ್ನ ಚಿತ್ರ. ಕೊನೆಯಲ್ಲಿ ಅವರ ಅನುಭವದ ಗಟ್ಟಿಯಾದ ಸಲಹೆಗಳನ್ನು ಕೊಟ್ಟರು, “ನಿಜ ಕಂಟೇನರುಗಳು ಹತ್ತೆಂಟು ತಿರುಗಾಟ, ಆಘಾತ ಕಂಡ ಮೇಲಷ್ಟೇಯೋಗ್ಯತೆಯಲ್ಲಿ) ಬರುತ್ತವೆ.ಸಹಜವಾಗಿ ಅವುಗಳ ಬಾಳಿಕೆ ಕಮ್ಮಿ ಮತ್ತು ನಿಮ್ಮ ವಾಸದ ಅಗತ್ಯಗಳಿಗೆ ಪರಿವರ್ತಿಸುವಲ್ಲಿ ವ್ಯರ್ಥವಾಗುವ ಅಂಶ ಜಾಸ್ತಿ. ಬದಲಿಗೆ ಅದೇ ಯೋಗ್ಯತೆಯ ಹೊಸ ಉಕ್ಕಿನ ತೊಲೆ, ಹಾಳೆಗಳಲ್ಲಿ, ನೇರ ಹೊಸ ಅಗತ್ಯಗಳಿಗೆ ತಕ್ಕಂತೆ ಕಂಟೇನರ್ ಮಾಡುವುದು ನಮ್ಮ ವೃತ್ತಿ. (ಕಾರ್ಖಾನೆಯೊಳಗೆ ಇದ್ದವೆಲ್ಲ ಅವೇ) ಆರ್ಥಿಕವಾಗಿಯೂ ಬಾಳ್ತನದ ದೃಷ್ಟಿಯಿಂದಲೂ ಇವು ಉತ್ತಮ.

ಬೇಡ ಎಂದು, ನೀವು ಗುಜರಿ ಕಂಟೇನರೇ ಕೊಡಿಸಿದರೆ ಪರಿವರ್ತಿಸಿ ಕೊಡಲೂ ನಾವು ತಯಾರು”. ನಾನು ಶೇಖರ್‍ಗೆ ಹೊಸತಕ್ಕೆ ಸಾಂಕೇತಿಕಮುಂಗಡ ಕೊಟ್ಟು ಮರಳಿದೆ. ವಾರದೊಳಗೇ ಕೊಯಂಬತ್ತೂರಿನಿಂದ ಮಿಂಚಂಚೆಯಲ್ಲಿ ಹೊಸ ಗೂಡಿನ ನಿಖರ ತಳ ರೇಖೆಯ ನಕ್ಷೆ ಬಂತು. ಮೂರಿಂಚು ಅಗಲದ ಐ ಬೀಮಿನ ೨೦ ಗುಣಿಸು ೯ ಅಡಿ ಅಳತೆಯ ಚೌಕಟ್ಟು, ಸಮತಳದಲ್ಲಿ ಕೂರುವಂತೆ ಮುಖ್ಯವಾಗಿ ನಾಲ್ಕು ಕುಂದಗಳನ್ನುರಚಿಸಿಡಲು ಸೂಚಿಸಿದ್ದರು. ಬಿಸಿಲೆ ಹಳ್ಳಿಯ ನನ್ನೊಬ್ಬ ಪರಿಚಯಸ್ಥ ಗಣೇಶ – ಕೃಷಿಕ ಮತ್ತು ಸಣ್ಣದಾಗಿ ಹಳ್ಳಿಯ ಹತ್ತು ಕೆಲಸಕ್ಕೊದಗುವ ಸಹಕಾರಿ.

ಆತ ನನ್ನ ಬೇಡಿಕೆಯ ಮೇರೆಗೆ ನಮ್ಮ ಕಚ್ಚಾದಾರಿ ಜೀರ್ಣೋದ್ಧಾರ ಮತ್ತು ಕುಂದ ಕಟ್ಟಲು ಯುಕ್ತ ಜನ, ಸಾಮಗ್ರಿ ಪೂರೈಸುವ ಜವಾಬ್ದಾರಿ ವಹಿಸಿಕೊಂಡರು. ಹಾಗೆ ನಾಲ್ಕೈದು ದಿನ ಕಳೆದು, ಗಣೇಶ್ ಕೊಟ್ಟ ಮುಹೂರ್ತಕ್ಕೆ ನಾನು ವೆಂಕಟ್ರಮಣ ಉಪಾದ್ಯ ಮತ್ತು ಸುಂದರರಾಯರನ್ನು ಸೇರಿಸಿಕೊಂಡು ಅಶೋಕವನಕ್ಕೆ ಹೋದೆ. ಅಗತ್ಯವಿದ್ದರೆಎರಡು ರಾತ್ರಿ ಶಿಬಿರ ವಾಸ ಮಾಡಲು ಸಿದ್ಧರಾಗಿಯೇ ಇದ್ದೆವು.

ಬಂಡೆಗುಂಡುಗಳ ನೆತ್ತಿಯಲ್ಲಿ ಯುಕ್ತ ಅಳತೆಯ ಆಯತಾಕಾರಕ್ಕೆ ಹಗ್ಗ ಕಟ್ಟಿ ನಿಲ್ಲಿಸಿದೆವು. ಸುಬ್ರಹ್ಮಣ್ಯದಿಂದ ಬಂದಿದ್ದ ಮೇಸ್ತ್ರಿ ಅದಕ್ಕೆ ಜಲಮಟ್ಟ ಹಿಡಿದು ಕುಂದಗಳ ಎತ್ತರವನ್ನು ಖಚಿತಗೊಳಿಸಿದ. ಮತ್ತೆ ರಚನೆಗೆ ಬೇಕಾದ ಸಿಮೆಂಟ್, ಕಲ್ಲು, ಮರಳು, ಜಲ್ಲಿ ಸೂಚಿಸಿದ. ಗಣೇಶ್ ಅವನ್ನು ಸಂಗ್ರಹಿಸಲು ವಾರ ಕಾಲವಾದರೂ ಬೇಕೆಂದಾಗ, ನಮಗೆ ನಿರಾಶೆಯಾಗಿತ್ತು.ನಾಲ್ಕೈದು ವರ್ಷಗಳ ಹಿಂದೆ ಈ ವಲಯದಲ್ಲಿ ‘ಆನೆ ಕಾಟ’ ಹೆಚ್ಚಾಗಿತ್ತು. ಅರಣ್ಯ ಇಲಾಖೆ ಕಾಡು ಕೃಷಿಭೂಮಿಗಳ ನಡುವೆ ವಿದ್ಯುತ್ ಬೇಲಿ ಎಳೆಯುವ ಯೋಜನೆ ಹಾಕಿತು. ನಾವು ವನ್ಯ ಆಸಕ್ತಿಯಿಂದಾಗಿ ಬೇಲಿಯನ್ನು ನಿರಾಕರಿಸಿದೆವು.

ಆದರೂ ನಮ್ಮ ಅನುಪಸ್ಥಿತಿಯಲ್ಲಿ ಇಲಾಖೆ ಬೇಲಿಯನ್ನು ‘ಉದಾರ’ವಾಗಿ ಕಟ್ಟಿತ್ತು. ಬೇಲಿ ಕೆಲವೇ ತಿಂಗಳಲ್ಲಿ ಸತ್ವ ಕಳೆದು, ಇಂದು ತೋರಿಕೆಗೆ ಗೂಟ ತಂತಿಯಾಗಿ ಮಾತ್ರ ಉಳಿದಿದೆ. ಇಷ್ಟು ಸಮಯ ನಾವೇನೋ ತಂತಿಯ ಸಂದಿನಲ್ಲಿ ತೂರಿ,ಓಡಾಡಿಕೊಂಡಿದ್ದೆವು. ಆದರೀಗ ಕಂಟೇನರ್ ಹೊತ್ತ ಲಾರಿಗೆ ದಾರಿ ಮುಕ್ತವಾಗಬೇಕಲ್ಲಾ ಎಂದು ಯೋಚಿಸುವುದಕ್ಕೆ ಸರಿಯಾಗಿ, ವಲಯದ ಅರಣ್ಯ ಅಧಿಕಾರಿ ಅತ್ತ ಬಂದಿದ್ದರು. ಅವರು ನನ್ನ ನೆಲದ ಯಜಮಾನಿಕೆ ಮತ್ತು ಇಚ್ಛೆಯನ್ನು ಮನ್ನಿಸಿ, ಸಹಾಯಕರಿಂದ ತಂತಿ ಕಡಿಸಿ, ದಾರಿ ಮುಕ್ತಗೊಳಿಸಿದರು. ಸಮಯಕ್ಕೆ ಸರಿಯಾಗಿ ಗಣೇಶ ಹೇಳಿದ್ದ ಜೇಸಿಬಿ ಕೊಡ್ಲಿಪೇಟೆಯಿಂದ ಬಂದಿತ್ತು.

ಕಚ್ಚಾ ದಾರಿಯನ್ನು ಲಾರಿ ದಾಟುವಷ್ಟೇ ಹಸನುಗೊಳಿಸಲು ಸೂಚನೆ ಕೊಟ್ಟೆವು. ಯಂತ್ರದ ಸೊಕ್ಕು ಅನಾವಶ್ಯಕವಾಗಿ ಅಂಚು ಕಟ್ಟಿದ ಮರಗಳನ್ನು ಮಗುಚದಂತೆ, ಅನಗತ್ಯ ದಿಬ್ಬ ಸವರಿ ‘ಲೆವೇಲು, ಚಂದ’ ಮಾಡದಂತೆ ನಾವು ಮೂವರೂ ಹಿಂದೆ ಮುಂದೆ ಕಣ್ಗಾವಲು ನಡೆಸಿದೆವು. ಜೆಸಿಬಿ ಗೋಣಿಳಿಸಿ ತರಗು ಕಡ್ಡಿ ದಿಣ್ಣೆ ಕಲ್ಲುಗಳನ್ನು ಸಮರುತ್ತ ಚುರುಕಾಗಿಯೇ ಒಳ ನುಗ್ಗಿತು. ರಕ್ಕಸ ಕೈಯಲ್ಲಿ ಅಂಚನ್ನು ಸ್ಪಷ್ಟ ಮಾಡಿ, ತಗ್ಗುಗಳನ್ನು ತುಂಬಿ, ದಿಣ್ಣೆಗಳನ್ನು ಕೆತ್ತಿ, ಕುಂಬು ಮರ, ಬಂಡೆಗಳನ್ನು ಕರೆಗೆ ನೂಕಿ ಸಾಗಿತು. ಪೊದರು ಬಳ್ಳಿಗಳ ಸೆಳೆತದಲ್ಲಿ ಮಾರ್ಗಕ್ಕೆ ಕೈ ಚಾಚಿದ ಸಣ್ಣಪುಟ್ಟ ಕೊಂಬೆಗಳು ಕೆಲವು ಮುರಿದದ್ದು, ಕೆಲವು ಸಣ್ಣ ಬೇರಗಟ್ಟೆಗಳನ್ನು ಹರಿದದ್ದು, ಒಂದೆರಡು ಬಿಲಗಳನ್ನು ನಿಗಿದದ್ದೆಲ್ಲ ಅನಿವಾರ್ಯ ನಷ್ಟಗಳು. ಶಿಬಿರತಾಣ, ಕಂಟೇನರ್ ನಿಲ್ಲುವ ನಿವೇಶನದ ಸುತ್ತ ಮುತ್ತ ‘ಸ್ವಚ್ಛ’ ಮಾಡುವ ಉತ್ಸಾಹ ಗಣೇಶ್ ಮತ್ತು ಚಾಲಕನಿಗೂ ಇತ್ತು. ಆದರೆ ನಾವೊಪ್ಪಲಿಲ್ಲ. ನಮ್ಮ ಆವಶ್ಯಕತೆ ಎರಡೇ ಗಂಟೆಯಲ್ಲಿ ಮುಗಿದಿತ್ತು.

ಕನಿಷ್ಠ ನಾಲ್ಕು ಗಂಟೆ ಕೆಲಸ, ಇಲ್ಲವಾದರೆ ಅವಧಿಯ ಮೇಲೆ ಹೋಗಿಬರುವ ಖರ್ಚು ಕೊಡಬೇಕೆನ್ನುವುದು ಒಪ್ಪಂದ. ಅದನ್ನೇ ಕೊಟ್ಟು ಕಳಿಸಿದೆ. ಮತ್ತೆ ಗುಡಾರ ವಾಸ ರದ್ದಾದ ನಿರಾಶೆಯೊಡನೆ ನಾವೂ ಮಂಗಳೂರಿಸಿದೆವು. ಅನ್ಯ ಕಾರ್ಯಾರ್ಥ ಮಂಗಳೂರಿಸಿದ್ದ ಅಭಯನಿಗೆ ಕೊಯಂಬತ್ತೂರಿನಿಂದ ಕಂಟೇನರ್ ಕೆಲಸದ ಪ್ರಗತಿ ಕೇಳುತ್ತಿದ್ದಂತೆ, ಅದನ್ನು ನೋಡುವ ಕುತೂಹಲ ತಡೆಯದಾಯ್ತು. ನಾವಿಬ್ಬರೂ ರೈಲು ಹತ್ತಿದೆವು. (೨೬-೧೨-೧೯) ಕಾರ್ಯಾಗಾರದ ಅಸಂಖ್ಯ ಕಂಟೇನರುಗಳ ನಡುವೆ ನನ್ನ ‘ಕಬ್ಬಿಣದ ಗೂಡು’ ಅರೆಬರೆ ರೂಪುವಡೆದು ನಿಂತಿತ್ತು. ಅದರ ಒಳ ಹೊರ ಓಡಾಡಿ ನೋಡಿ, ತಿದ್ದುಪಡಿಗಳನ್ನೂ ಕೊಟ್ಟೆವು.

ಕಾರ್ಯಾಗಾರದ ಇತರ ಕುಶಲ ಕೆಲಸಗಳನ್ನು ಪರಿಚಯಿಸಿಕೊಂಡು ಅವರ ಸಾಮರ್ಥ್ಯದ ಬಗ್ಗೆ ಹೆಚ್ಚು ಧೈರ್ಯ ತಂದುಕೊಂಡೆವು. (ಉದಾ: ಅದೊಂದು ಶೀಥಲೀಕರಣ ಯಂತ್ರ ಸಜ್ಜಿತ ಹಾಗೂ ಒಳಮೈಯಲ್ಲಿ ದಪ್ಪಕ್ಕೆ ಹವಾನಿಯಂತ್ರಣದ ಹೊದಿಕೆ ಹೊತ್ತ ಭಾರೀ ಕಂಟೇನರ್. ದಕ್ಷಿಣದ ಈರೋಡ್ ತುದಿಯಿಂದ ಹಾಲಿನ ಕ್ಯಾನುಗಳನ್ನು ಹೇರಿಕೊಂಡು, ರಸ್ತೆಯಾನದಲ್ಲಿ – ಸುಮಾರು ೧೩೦೦ ಕಿಮೀ ಮುಂಬೈಗೆ ಓಡುವ ಲಕ್ಷ್ಯದ್ದು. ಆ ಅವಧಿಯಲ್ಲಿ ಹಾಲಿನ ತಾಪಮಾನದಲ್ಲಿ ಮೂರು ನಾಲ್ಕು ಡಿಗ್ರಿಗಿಂತ ಹೆಚ್ಚು ವ್ಯತ್ಯಾಸವಾಗಬಾರದಂತೆ!) ಉಳಿದವುಗಳಿಗೆ ಹೋಲಿಸಿದರೆ, ನನ್ನ ಗೂಡು ತುಂಬ ಸರಳ. ಬೆಂಗಾಡಿನ ಬೇಗೆಗೂ ಹಿಮಾಲಯದ ಚಳಿಗೂ ಇದು ಸಜ್ಜಾಗಬೇಕಿಲ್ಲ. ಕೇವಲ ಮಳೆ, ಗಾಳಿ ಹಾಗೂ ವನ್ಯ ಜಾನುವಾರುಗಳಿಂದ ನಮ್ಮನ್ನು ರಕ್ಷಿಸಿದರಾಯ್ತು. ಯಾವ ಅನ್ಯ ಆಚ್ಛಾದನೆಗಳೂ ಬೇಕಿಲ್ಲ.

ಕೊಯಂಬತ್ತೂರಿನಿಂದ ಉತ್ತೇಜಿತನಾಗಿ ಬಂದರೂ ಬಿಸಿಲೆಯಲ್ಲಿ ನಿರಾಶೆ ಕಾದಿತ್ತು. “ಮುರ ಕಲ್ಲ್ ಸಿಕ್ತಿಲ್ಲಾ ಸಾರ್!” – ಗಣೇಶ್ ಫೋನು. ಅವರಿವರ ಸಂಪರ್ಕ ಬೆಳೆಸಿದೆ. ಕಡಬ ದಾರಿಯಲ್ಲೊಬ್ಬ ‘ಗಣಿಮಾಲಿಕ’ನೆಂದೇ ಹೇಳಿಕೊಂಡವ ಕರೆದ. ನಾನು ಬೈಕೇರಿ, ಬೆಂಬಲಕ್ಕೆ ಸುಂದರರಾಯರನ್ನಿಟ್ಟುಕೊಂಡು ಧಾವಿಸಿದೆ. ಹೋದ ಮೇಲೆ ಆತನದು ಬಂಡವಾಳಿಲ್ಲದ ಬಡಾಯಿ! ಉರಿಬಿಸಿಲಿನಲ್ಲಿ ನಾವೇ ವಿಚಾರಣೆ ನಡೆಸುತ್ತ ಕಡಬ, ಮರ್ಧಾಳಗಳ ಕಲ್ಲಕೋರೆಗಳನ್ನು ಅಲೆದಾಡಿ, ನೈಲಾ ಕೋರೆಯಲ್ಲಿ ಯಶಸ್ಸು ಕಂಡೆವು.

ಸಂಜೆ ತುಸು ಹೆಚ್ಚುವರಿ ಕೆಲಸ ಮಾಡಿ, ನಮ್ಮ ಅಗತ್ಯದ ನೂರೈವತ್ತು ಕಲ್ಲನ್ನು ಮಾಡಿಕೊಟ್ಟ. ಅವಸರಕ್ಕೆ ದೊಡ್ಡ ಲಾರಿ ಸಿಗಲಿಲ್ಲವೆಂದು ಎರಡು ಪಿಕ್ಕಪ್ಪುಗಳಿಗೇರಿಸಿ, ದಾರಿ ಸೂಚನೆ ಕೊಟ್ಟು ಕಳಿಸಿಬಿಟ್ಟು, ನಾವು ಕುಳ್ಕುಂದದಿಂದಲೇ ವಾಪಾಸಾದೆವು. ಅಶೋಕವನದ ಕೊನೆಯಲ್ಲಿ ಗಣೇಶ್ ಕಾದಿದ್ದರು; ಅವರದು ತವರ್ನೆಲ. ಆದರೆ ಲಾರಿ ಚಾಲಕರು ಅಪರಿಚಿತ ಜನ, ದಾರಿ, ರಾತ್ರಿ, ಕಾಡು, ಎಂದೂ ಆನೆ ಎದುರಾಗಬಹುದಾದ ಭಯ, ಕೊನೆಗೆ ಕಚ್ಚಾ ದಾರಿಗಳನ್ನೆಲ್ಲ ಒಪ್ಪಿ ಲಾರಿಯೋಡಿಸಿ, ಸ್ವತಃ ಕಲ್ಲಿಳಿಸಿ ಬಂದದ್ದು ನಿಜ ಸಾಹಸ.

\

 

ಮೇಸ್ತ್ರಿ ಬಳಗ ಬರುವ ಸುದ್ದಿಯೊಡನೇ ನಾನು, ದೇವಕಿ ಮತ್ತು ಸುಂದರರಾವ್ ಮತ್ತೆ ‘ಸಕಲ ಸಾಧನ’ಗಳೊಡನೆ, ದಿನ ಮುಂಚಿತವಾಗಿಯೇ ನಿವೇಶನ ಮುಟ್ಟಿದ್ದೆವು. ಬಯಲಲ್ಲಿ ಒಲೆ ಹೂಡಿ ಗುಡಾರ ವಾಸ ಮಾಡಿ ಕಾದೆವು. ಗಣೇಶ ಮರಳು, ಜಲ್ಲಿ ಮತ್ತು ಸಿಮೆಂಟ್ ಸಕಾಲಕ್ಕೆ ಮುಟ್ಟಿಸಿದ್ದರು. ಆದರೆ ಮೇಸ್ತ್ರಿ ಬಳಗ ಬಂದು ಕೆಲಸಕ್ಕಿಳಿಯುವಾಗಲೇ ಅರ್ಧ ಹಗಲು ಕಳೆದಿತ್ತು. ಮತ್ತೆ ಒಂದು ದಿನದಲ್ಲಿ ಮುಗಿಸಬೇಕಿದ್ದ ಕೆಲಸವನ್ನು ಎರಡು ದಿನಕ್ಕೆಳೆದರು. (ರಾತ್ರಿಗೆ ಅವರನ್ನು ಬಿಸಿಲೆಯಲ್ಲಿ ಉಳಿಸಿಕೊಳ್ಳುವ ಹೆಚ್ಚಿನ ಖರ್ಚು ಬೇರೇ) ಅವರದೇ ಅಂದಾಜಿನಲ್ಲಿ, ನಾವು ತೋರಿದ ಪ್ರಾಕೃತಿಕ ಕಲ್ಲುಗಳ ಮೇಲೇ ವಿವಿಧ ಎತ್ತರಗಳ ಆರು ಕುಂದಗಳೇನೋ ನಿಂತವು. ಆದರೆ ಕೆಲಸದ ದಕ್ಷತೆ ನೋಡಿದ ನಮಗೆ ಕುಂದಗಳ ಸಾಮರ್ಥ್ಯದ ಬಗ್ಗೆ ಸಂಶಯ ಮೂಡಿತು.ಹಾಗಾಗಿ ಅವರೊಡನೆ ಮಾತಾಡಿದ್ದ ಇತರ ಕಾಮಗಾರಿಗಳನ್ನು ಅನಿರ್ದಿಷ್ಟ ಮುಂದೂಡಿ, ಲೆಕ್ಕಾಚಾರ ಮುಗಿಸಿ ಬೀಳ್ಕೊಂಡೆವು. ನಮ್ಮ ಹೆಚ್ಚಿನ ಶಿಬಿರ ವಾಸವನ್ನೂ ಮೊಟಕು ಮಾಡಿ ಮಂಗಳೂರಿಗೆ ಮರಳಿದೆವು. ಪುತ್ತೂರಿನ ಎಸ್.ಕೆ ಆನಂದ – ಕಟ್ಟಡ ಉದ್ಯಮದಲ್ಲಿ ಬಹುವಿಖ್ಯಾತ ಮಾಸ್ಟರ್ ಪ್ಲಾನರಿಯ ಯಜಮಾನರು, ನನಗೆ ಕನಿಷ್ಠ ನಾಲ್ಕು ದಶಕಗಳ ಆತ್ಮೀಯ ಪರಿಚಯಸ್ಥರು. ಅವರಿಗೆ ನನ್ನ ಚಿಲ್ಲರೆ ಕೆಲಸಗಳನ್ನು ಹೇಳಲು ಮೊದಲು ನಾನು ಸಂಕೋಚಿಸಿದ್ದೆ.

ಆದರೆ ಈಗ ಶರಣಾದೆ. ಆನಂದರು ಪ್ರೀತಿಯಿಂದಲೇ ಅವರ ಕೊನೆಯ ಮಗ ಆಕಾಶ್ ಮತ್ತು ಅನುಭವಿ ಮೇಸ್ತ್ರಿ ಆನಂದ ಗೌಡರಿಗೆ ನನ್ನ ಕೆಲಸ ವಹಿಸಿಕೊಟ್ಟರು. ಆರು ತಿಂಗಳ ಹಿಂದಷ್ಟೇ ಎಂಜಿನಿಯರಿಂಗಿನಲ್ಲಿ ಹೆಚ್ಚುವರಿ ವಿದೇಶೀ ತರಬೇತು ಮುಗಿಸಿ ಬಂದ ಚಿಗುರು ಮೀಸೆ ತರುಣ ಆಕಾಶ್‍. ಅವರಿಗೆ ಕಂಟೇನರ್ ಕಥನ ಹೊಸತು. ಆದರೆ ನಾನು, ಬಿಸಿಲೆ ಮತ್ತು ಅಶೋಕವನ ಹಳೆ ಪರಿಚಯ ಎಂದು ಕೇಳಿ ಆಶ್ಚರ್ಯವಾಯ್ತು. ನಾನು ಮರೆತಿದ್ದೆ – ಅವರು ಮೂರುನಾಲ್ಕು ವರ್ಷಗಳ ಹಿಂದೆ ನಮ್ಮ ಕಪ್ಪೆ ಶಿಬಿರದಲ್ಲಿ ಭಾಗವಹಿಸಿದ್ದರು.

ಆಕಾಶ್ ಮತ್ತು ಆನಂದ ಗೌಡರ ಮೊದಲ ನೋಟಕ್ಕೇ ಮುರಕಲ್ಲ ಕುಂದಗಳು ನಪಾಸಾದವು. ಅದಕ್ಕೆ ಮದ್ದಿನೊಡನೆ ನಮ್ಮ ಇತರ ಅಗತ್ಯಗಳನ್ನು ತಿಳಿದು, ಸಮಗ್ರ ಚಿಕಿತ್ಸೆಯ ನಡೆಗಳನ್ನು ನಿಶ್ಚಯಿಸಿದರು. ಆ ಪ್ರಕಾರ ಇನ್ನೊಂದೇ ದಿನ (೧೭-೧-೨೦) ಪುಟ್ಟ ಲಾರಿಯಲ್ಲಿ ಜನ ಸಾಮಾನು ಹೇರಿಕೊಂಡು ಆನಂದ ಗೌಡರ ಬಳಗ ಅಶೋಕವನಕ್ಕೆ ಬಂತು. ಅವರನ್ನು ಕಲ್ಲು ಕೊರೆಯುವ ಯಂತ್ರ – ಕಲ್ಲುರ್ಟಿ, ಹೇರಿಕೊಂಡ ಟ್ರ್ಯಾಕ್ಟರ್ ಕಡಬದಿಂದ ಬಂದು ಸೇರಿಕೊಂಡಿತು. ನಾನೂ ದೇವಕಿಯೂ ಮೋಟಾರ್ ಬೈಕಿನಲ್ಲಿ ಹೋಗಿದ್ದೆವು. ನಾಲ್ಕು ಮೂಲೆಯ ಕುಂದಗಳನ್ನು ಸುಲಭದಲ್ಲಿ ಬೀಳಿಸಿ, ಒಂದೊಂದು ನೆಲೆಯಲ್ಲೂ ಬಂಡೆಯಲ್ಲಿ ನಾಲ್ನಾಲ್ಕು ಆಳದ ತೂತು ಕೊರೆದರು. ಅವಕ್ಕೆ ಹುರಿಗಟ್ಟಿದ ಉಕ್ಕಿನ ಸರಳುಗಳನ್ನು ವಿವಿಧ ಅಳತೆಗಳಲ್ಲಿ ಕತ್ತರಿಸಿ, ಯುಕ್ತ ಅಂಟಿನೊಡನೆ ತೂರಿ ಬಿಗಿ ಮಾಡಿದರು. ಅವಕ್ಕೆ ಸರಳಿನ ಬಳೆ ಹಾಕಿ, ಸಿಮೆಂಟ್ ಕೊಳವೆ ತೊಡಿಸಿ, ಜಲ್ಲಿ ಕಾಂಕ್ರೀಟ್ ಜಡಿದು, ಕುಂದಿಲ್ಲದ ಕುಂದ ನಿಲ್ಲಿಸಿದರು. ನಡುವಿನ ಎರಡು ಕಲ್ಲಿನ ಕುಂದಗಳು ಪರೋಕ್ಷ ಬಲಕ್ಕಷ್ಟೇ ಒದಗುವವುಗಳಾದ್ದರಿಂದ ಬದಲಿಸಲಿಲ್ಲ. ಕುಂದದ ಕೆಲಸ ನಡೆಯುತ್ತಿದ್ದಂತೆ ಅನ್ಯ ಕೂಲಿಕಾರರು…..

ಆನಂದ ಗೌಡರು ತೊರೆಯ ಕೆಳದಂಡೆಯಲ್ಲಿ ತೋರಿದ ಸ್ಥಳದಲ್ಲಿ ಕಕ್ಕೂಸ್ ಗುಂಡಿ ತೋಡಿದ್ದರು. ಜವುಗು ಭೂಮಿಯಾದ್ದರಿಂದ ಕೆಲಸ ಚುರುಕಾಯಿತು. ಸುಮಾರು ನಾಲ್ಕೂವರೆ ಅಡಿ ವ್ಯಾಸದ, ಐದು ಅಡಿ ಆಳದ ಹೊಂಡ ಮಾಡಿದರು. ಅನಂತರ ಅದರ ಗೋಡೆಗೆ ತಳದಿಂದ ಮೇಲಿನವರೆಗೂ ಪೂರ್ವಸಿದ್ಧಗೊಂಡ, ಅರ್ಧ ಸುತ್ತಿನ ಕಾಂಕ್-ಹಲಗೆಗಳನ್ನು ಬಿಗಿಯಾಗಿ ಜೋಡಿಸಿದರು. ಮೇಲಕ್ಕೆ ಕಾಂಕ್ರೀಟ್ ಹಲಗೆಯ ಮುಚ್ಚಳ. ಇಷ್ಟರಲ್ಲಿ ಸಂಜೆಯಾಗಿತ್ತು. ಉಳಿದ ಕೆಲಸಗಳನ್ನು ಕಬ್ಬಿಣದ ಗೂಡು ಕೂರಿಸುವ ದಿನಕ್ಕೇ ಮುಂದೂಡಿ, ಎಲ್ಲ ಬಂದಂತೆ ಚದುರಿದೆವು. ಈ ನಡುವೆ ನಾನು ಊಹಿಸದ ಒಂದು ವಿಚಿತ್ರ ನಡೆಯಿತು. ಕಲ್ಲುರ್ಟಿ ಕುಂದಕಟ್ಟಲು ತೂತು ಕೊರೆದಿದ್ದಂತೆ, ದಾರಿಯತ್ತಣಿಂದ ಓರ್ವ ಅಪರಿಚಿತ ಹಳ್ಳಿಗ (ಸುಮಾರು ಐವತ್ತರ ಹರಯ) ಬರಬರನೆ ನಡೆದು ಬಂದರು. ಅವರು ಹುಬ್ಬು ಗಂಟಿಕ್ಕಿ, ಕೆಲಸಗಳನ್ನು ದುರದುರನೆ ನೋಡಿ “ಏನು ನಡೆದಿದೆ ಇಲ್ಲಿ” ಎಂದು ಪ್ರಶ್ನಿಸಿದರು.

ನಾನು ಸಣ್ಣದಾಗಿ ಹೇಳಿ, ಅವರ ಪರಿಚಯ ಬಯಸಿದೆ. ಆತ ಪರಿಚಯ ಹೇಳದೇ “ನೀವಿಲ್ಲಿ ಕೆಲಸ ಮಾಡುವಂತಿಲ್ಲ, ಇದು ನನ್ನ ಜಾಗ” ಎಂದರು! ಆಗ ನನ್ನ ಮನಸ್ಸು ಸುಮಾರು ಹನ್ನೆರಡು ವರ್ಷಗಳ ಹಿಂದೋಡಿದ್ದರಿಂದ, ಥಟ್ಟನೆ ಕೇಳಿದೆ “ಓ ನೀವು ‘ಅಪ್ಪ’ನವರೇ?” ಆತ ಸಣ್ಣದಾಗಿ ಗೋಣು ಹಾಕಿದರೂ ಉತ್ತರಿಸುವುದು ಬಿಟ್ಟು, “ನನ್ನೀ ಜಾಗವನ್ನು ಈಚೆಗೆ ‘ಗೌಡ’ರಿಗೆ ಮಾರಿದ್ದೇನೆ. ಈ ಕೆಲಸ ನಿಲ್ಲಿಸಿ…” ಎಂದು ಹೇಳುತ್ತ ವಾಪಾಸು ಹೊರಟರು. ನಾನು ಅಗತ್ಯ ಇಲ್ಲದೆಯೂ ಅವರಿಗೆ ನನ್ನಲ್ಲಿ ಸಿದ್ಧವೇ ಇದ್ದ ದಾಖಲೆ, ನಕ್ಷೆ ತೋರಿಸುತ್ತ, ಅವರಿಂದ ವಿವರಗಳನ್ನು ಬಯಸುತ್ತ, ಡಾಮರ್ ದಾರಿಯವರೆಗೂ ಹಿಂಬಾಲಿಸಿದೆ. ಆತ ಕಿವಿಗೊಡದೆ, ಅಲ್ಲಿ ಕಾದಿದ್ದ ಕಾರೇರಿ ಹೋದರು. ನನಗೆ ಪೂರ್ವಪರಿಚಯದ ಬಿಸಿಲೆಯ ‘ಪ್ರಾಶ’ನೂ ಕಾರಿನಲ್ಲಿದ್ದ. ಬಹುಶಃ ಅವರಿಗೆ ನಮ್ಮ ಸುದ್ಧಿ ಮುಟ್ಟಿಸಿ (ಚಾಡಿ?) ಕರೆತಂದವನು ಅವನೇ ಇರಬೇಕು!

‘ಬಾರಾಸಾಲ್ ಪೀಛೇ’ (ಹನ್ನೆರಡು ವರ್ಷಗಳ ಹಿಂದೆ) ಅಂದರೆ, ಅಶೋಕವನ ಕೊಂಡ ತುಸು ಹಿಂದು ಮುಂದಿನ ಕಲಾಪಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳುತ್ತೇನೆ. ೨೦೦೬ರಲ್ಲಿ ಬಿಸಿಲೆಯ ನೆಲ ಹಾಗೂ ಅದರ ಅಂದಿನ ಯಜಮಾನ – ಸಣ್ಣೇಗೌಡರನ್ನು ನಮಗೆ (ನನಗೆ ಮತ್ತು ಕೃಷ್ಣಮೋಹನರಿಗೆ) ಪರಿಚಯಿಸಿದ್ದು ಗೊದ್ದು ಉಮೇಶಗೌಡರು. ನಾವು ಅಧಿಕೃತ ನಕ್ಷೆ ಹಿಡಿದು, ಸರ್ವೇಕ್ಷಣ ತಜ್ಞರೊಡನೆ ಸುತ್ತಾಡಿ, ನೆಲವನ್ನು ಖಾತ್ರಿಪಡಿಸಿಕೊಂಡೆವು. ಭೂ ದಾಖಲೆಗಳನ್ನು ಚಿಕ್ಕಮಗಳೂರಿನ ವಕೀಲ ಜಿ.ಆರ್ ಅನಂತಸ್ವಾಮಿಯವರು ತನಿಖೆ ಮಾಡಿ, ಸಿಂಧುವೆನ್ನಿಸಿಕೊಂಡ ಮೇಲೆ, ಸೂಕ್ತ ಕಲಾಪಗಳೊಡನೆ ಖರೀದಿ ಪೂರೈಸಿಕೊಟ್ಟಿದ್ದರು. ಈ ಓಡಾಟಗಳಿಂದ ಬಿಸಿಲೆ ಹಳ್ಳಿಯ ಜನಪದದಲ್ಲೂ ನಾವು ‘ಸಣ್ಣೇಗೌಡರ ಜಮೀನ್ ಖರೀದಿಸಿದವರು’ ಎಂದು ದಾಖಲಾಯ್ತು.

ಆ ಹೊಸತರಲ್ಲೇ ಮಳೆಗಾಲದಲ್ಲೊಂದು ದಿನ, ಬಿಸಿಲೆಯಿಂದ ನಮಗೊಂದು ಆಘಾತಕರ ಸುದ್ಧಿ ಬಂತು. ಜಡಿ ಮಳೆಯಲ್ಲಿ ನಾವು ನಾಲ್ಕೈದು ಮಿತ್ರರು ಅಲ್ಲಿಗೆ ಧಾವಿಸಿದ್ದೆವು. ಮೋಡ ಮುಚ್ಚಿದ ಕಾವಳ, ಭೋರೆಂದು ಗಾಳಿ, ಜಡಿ ಮಳೆ, ಸೊಕ್ಕಿ ಹರಿದಿದ್ದವು ತೊರೆಗಳು. ಅವು ಲೆಕ್ಕಕ್ಕಿಲ್ಲದಂತೆ, ನಮ್ಮ ಒತ್ತಿನ ಕಾಯ್ದಿರಿಸಿದ ಸರಕಾರೀ ಕಾಡಿನ ಭಾರೀ ಮರಗಳಿಗೆ ಕೊಡಲಿ ಏಟು ಬೀಳುತ್ತಲೇ ಇತ್ತು. ಕಳೆದ ಕೆಲವು ದಿನಗಳಲ್ಲಿ ಬೀಳಿಸಿದವುಗಳನ್ನು ಸಾಕಾನೆಗಳಿಂದ ಎಳೆಸಿ, ‘ಸ್ವಚ್ಛ ಮಾಡಿ’, ಯೋಗ್ಯತಾನುಸಾರ ಮೋಪು ಮತ್ತು ಸೌದೆ ಪ್ರತ್ಯೇಕಿಸಿದ್ದರು. ಅವುಗಳಲ್ಲಿ ಎಷ್ಟೋ ದೊಡ್ಡವನ್ನು ಲಾರಿಗೇರಿಸಿ ನಮ್ಮದೇ ಕಚ್ಚಾ ದಾರಿಯಲ್ಲಿ ಸಾಗಿಸಿದ್ದರು. ಸಣ್ಣವನ್ನು ತೊರೆಯ ಪ್ರವಾಹದಲ್ಲೇ ತೇಲಿಬಿಟ್ಟು, ಡಾಮರು ಮಾರ್ಗದ ಅಂಚಿನಲ್ಲಿ ಸಂಗ್ರಹಿಸಿ, ಲಾರಿಗೇರಿಸಿ ರವಾನಿಸಿರಬೇಕು. ಇಂದು ಪ್ರಶಾಂತವಾಗಿ ಕಾಣುವ ನಮ್ಮ ಶಿಬಿರತಾಣದಲ್ಲಿ, ಆ ದಿನಗಳಲ್ಲಿ ಅಸಂಖ್ಯ ಫಲ ಕೊಡುವ ಸೀಬೇ ಮರಗಳಿದ್ದವು. ಅವೆಲ್ಲ ಹುಡಿಯಾಗಿ, ಭೀಕರ ರಣಾಂಗಣದಂತೆ ಕೆಸರು, ಕೊಚ್ಚೆ ಹರಡಿತ್ತು. ಅಲ್ಲಿ ಕೇವಲ ಕಡಿ-ಗುತ್ತಿಗೆಯ ಮೇಲಿದ್ದವರಿಂದ ನಮಗೆ ಯಜಮಾನರ ಬಗ್ಗೆ ಏನೂ ತಿಳಿಯಲಿಲ್ಲ.

ನಾನು ಮಂಗಳೂರಿಗೆ ಮರಳಿದ್ದೇ ಅರಣ್ಯ ಇಲಾಖೆಯ ತನಿಖಾ ದಳಕ್ಕೆ, ಇಲಾಖೆಯ ಜಿಲ್ಲಾ ಮುಖ್ಯಸ್ಥರಿಗೆ ಮತ್ತು ಹಾಸನ ಜಿಲ್ಲಾಧಿಕಾರಿಗೆ ಪ್ರತ್ಯೇಕ ಪ್ರತ್ಯೇಕವಾಗಿ ದೂರು ಪತ್ರಗಳನ್ನು ನೋಂದಾಯಿತ ಅಂಚೆಯಲ್ಲಿ ರವಾನಿಸಿದೆ. ಸಾರಾಂಶ – ‘ನಾವು ಇಂಥ ಸರ್ವೇ ನಂಬರಿನವರು. ನಮ್ಮ ಒತ್ತಿನದ್ದು ಸರಕಾರೀ ಕಾಯ್ದಿರಿಸಿದ ಅರಣ್ಯ. ಅಲ್ಲಿ ಮರ ಕಡಿತ ನಡೆದಿದೆ. ಕೂಡಲೇ ತಡೆದು, ತನಿಖೆ ಮಾಡಿ.’ ಯಾರಿಂದಲೂ ಉತ್ತರ ಬರಲಿಲ್ಲ. ಬದಲಿಗೆ, ವಾರ – ಹತ್ತು ದಿನ ಕಳೆದು, ನನಗೆ ಸಕಲೇಶಪುರದಿಂದ ‘ಗೌಡ’ ಎಂದೇ ಪರಿಚಯಿಸಿಕೊಂಡವರಿಂದ ದೂರವಾಣಿ ಕರೆ ಬಂತು. “ಬಿಸಿಲೆಯಲ್ಲಿ ಮರ ಕಡಿಸುತ್ತಿರುವವ ನಾನು. ಆ ಜಾಗ ಕಾಯ್ದಿರಿಸಿದ ಅರಣ್ಯವಲ್ಲ, ‘ಅಪ್ಪ’ ಎಂಬುವವರದ್ದು. ಅದರ ಮರ ಕಡಿದು ವಿಲೇವಾರಿ ಮಾಡಿಕೊಳ್ಳುವ ಅಧಿಕಾರ ಮತ್ತು ಅರಣ್ಯ ಇಲಾಖೆಯ ಅನುಮತಿ ನನ್ನ ಬಳಿ ಇದೆ. ನೀವು ದೂರು ಕೊಟ್ಟದ್ದು, ಪತ್ರಿಕೆಗಳಿಗೆ ತಿಳಿಸಿದ್ದು ಸರಿಯಲ್ಲ. ಬೇಕಿದ್ದರೆ ಮಾತಾಡೋಣ, ಬನ್ನಿ”. ನಾನು ಇಲಾಖೆಗಳಿಗೆ ಮಾತ್ರ ಕೊಟ್ಟ ದೂರು ಅವರಿಗೆ ಹೇಗೆ ಮುಟ್ಟಿರಬಹುದು ಎನ್ನುವುದನ್ನು ನಿಮ್ಮ ಊಹೆಗೆ ಬಿಡುತ್ತೇನೆ. ಪತ್ರಿಕೆಗಳಿಗೆ ನಾನು ಕೊಟ್ಟಿರಲಿಲ್ಲ. ಹೊಸ ಮರಸಾಗಣೆಯ ಕುರಿತು ಪತ್ರಿಕೆಗಳಿಗೆ ಹೇಳುವವರು ಎಷ್ಟೂ ಇದ್ದಾರು, ನನಗೆ ತಿಳಿದಿಲ್ಲ.

ವನ್ಯ ಸಂರಕ್ಷಣೆಯನ್ನು ಸಾಮಾಜಿಕ ಜವಾಬ್ದಾರಿಯಾಗಿ ತೆಗೆದುಕೊಂಡ ನಮಗೆ ವೈಯಕ್ತಿಕ ಜಿದ್ದುಗಳು ಏನೂ ಇರಲಿಲ್ಲ. ಹಾಗಾಗಿ ಪರಸ್ಪರ ಅನುಕೂಲದ ಒಂದು ಆದಿತ್ಯವಾರ ಮೂರ್ನಾಲ್ಕು ಮಿತ್ರರೊಡನೆ, ನಮ್ಮ ದಾಖಲೆಗಳೊಡನೆ ನಮ್ಮ ಕಾಡಿನೆದುರೇ ‘ಗೌಡ’ರನ್ನು ಭೇಟಿಯಾದೆವು. ನಮ್ಮ ಆಶ್ಚರ್ಯಕ್ಕೆ ‘ಗೌಡ’ರು ಎರಡೋ ಮೂರೋ ವಾಹನಗಳಲ್ಲಿ ಹದಿನೈದಿಪ್ಪತ್ತಕ್ಕು ಹೆಚ್ಚಿನ ‘ಆಜ್ಞಾಧಾರಕ’ರೊಡನೆ ಬಂದಿದ್ದರು. ನಾವು ವಿಚಲಿತರಾಗದೇ ಸಮಾಧಾನದಲ್ಲಿ ದಾಖಲೆ ಪತ್ರಗಳ ಪ್ರತಿ ತೋರಿಸಿ, ವಿವರಿಸಿದೆವು. ಅವರು ದಾಖಲೆಗಳನ್ನೇನೂ ತೋರದೆ ಜನಬಲದಲ್ಲಿ ನಮ್ಮನ್ನು ಒಪ್ಪಿಸಲು ಬಂದಂತಿತ್ತು.

ನನಗವರ ಪೂರ್ವಪರಿಚಯ ಇರಲಿಲ್ಲ, ನನ್ನ ದೂರಿನಲ್ಲಿ ಯಾರನ್ನೂ ನಾನು ಹೆಸರಿಸಿರಲಿಲ್ಲ ಮತ್ತು ಪತ್ರಿಕಾ ವರದಿಗೂ ನನಗೂ ಏನೂ ಸಂಬಂಧವಿಲ್ಲ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿದೆ. ಇಷ್ಟನ್ನೂ ನಾವು ಸಮಾಧಾನದಲ್ಲೇ ಹೇಳಿದ್ದರಿಂದ, ಅಂದು ಅವರು ನಿರುತ್ತರರಾಗಿ, ಎಲ್ಲ ಚದುರಿದ್ದೆವು. ಸಂದ ಹನ್ನೆರಡು ವರ್ಷಗಳಲ್ಲಿ ಮತ್ತೆ ಎಂದೂ ‘ಗೌಡ’ರ ಸಂಪರ್ಕವಾದದ್ದೇ ಇಲ್ಲ. ಹಾಗಾಗಿ ಈ ಬಾರಿ ‘ಅಪ್ಪ’ನ ನಿರಾಧಾರ ಮಾತಿಗೆ ಉದಾಸೀನವೇ ಮದ್ದು ಎಂದು ಸುಮ್ಮನಾದೆ.

ಕೊಯಂಬತ್ತೂರಿನಿಂದ ಗೂಡಿನ ಕೆಲಸ ಮುಗಿದ ಸುದ್ದಿ ಬಂತು. ನಾನು ರೈಲೇರಿ ಅವರ ಕಾರ್ಯಾಗಾರಕ್ಕೆ ಹೋಗಿದ್ದೆ. ಯಜಮಾನ ಶೇಖರ್ ಇನ್ನೂ ಬಂದಿರಲಿಲ್ಲ. ಕಾರ್ಯಾಗಾರದ ಹತ್ತೆಂಟು ಗೂಡುಗಳ ಸಂತೆಯಲ್ಲಿ, ರಣಗುಡುವ ಬಿಸಿಲಿನಲ್ಲಿ, ನಾಲ್ಕು ಹಳೇ ಞಕ್ ಡ್ರಂಗಳ ಮೇಲೆ ನಮ್ಮ ಗೂಡು ಮುಗುಮ್ಮಾಗಿ ಕುಳಿತಿತ್ತು. ಆಲಿವ್ ಹಸುರಿನ ಮಹಾಕಾಯಕ್ಕೆ ಒಂದು ಸುತ್ತು ಬಂದೆ. ತೂಕದ ಬಾಗಿಲನ್ನು ಹಗುರವಾಗಿ ಎಳೆದು ಒಳ ಹತ್ತಿದೆ. ಮಾಸಲು ಬಿಳಿಯ ಒಳಾಂಗಣ ಬೆಳಗಿತು. ಎಡ ಬಲಗಳಲ್ಲಿನ ಎರಡೆರಡು ಮಜಲು ಮಂಚ, ಮಿದು ಹಾಸುಗಳನ್ನು ತಡವಿದೆ. ಅಂತರಂಗದಲ್ಲೊಮ್ಮೆ ಇಣುಕಿದೆ. ಬಲ ಮಗ್ಗುಲ ಮಂಚದಂಚಿಗೆ ತಗುಲಿ ನಿಂತ ಕಪಾಟು, ಅಡುಗೆ ಕಟ್ಟೆ, ತೊಳೆತೊಟ್ಟಿಗಳೆಲ್ಲ ಕಾರ್ಯರಂಗಕ್ಕೆ ಧುಮುಕುವ ಕಾತರದಲ್ಲಿದ್ದವು. ಮುಚ್ಚಿಕೊಂಡಿದ್ದ ನಾಲ್ಕೂ ಕಂಡಿಗಳನ್ನು ದೊಡ್ಡದಾಗಿ ತೆರೆದೆ. ಹೊರಲೋಕ ರಮ್ಯವಾಯ್ತು. ಬಿಸಿಲು ಕಾವು ಕಳೆದು ಹಿತವಾಯ್ತು.

ನಿಟ್ಟುಸಿರಿನಂತಿದ್ದ ಗಾಳಿ ಶೀತಲವಾಗಿ ಸುಳಿದಾಡಿತು. ಕೆಂದೂಳು ಮಂಜಾಗಿ, ವಠಾರದ ವಾಸನೆಗಳೆಲ್ಲ ವನಸುಮವನ್ನೇ ಹೊತ್ತವು. ತಗಡುಗತ್ತರಿಯ ಕರ್ಕಶನಾದ – ತೊರೆಯ ಕುಶಲವಾರ್ತೆ, ಅರದುಜ್ಜಿಕೆ – ಹಕ್ಕಿಯಾಲಾಪ, ಆವರಿಸಿದ ಚಿತ್ರವಿಚಿತ್ರ ಉಕ್ಕಿನ ಹಂದರ ಗೂಡುಗಳೆಲ್ಲ ವೃಕ್ಷರಾಜಿಯಾಗಿ ನಾನು ಕಳೆದೇ ಹೋಗಿದ್ದೆ. ಶೇಖರ್ “ಗುಡ್ ಮಾರ್ನಿಂಗ್ ಸಾರ್, ಫಿನಿಶಿಂಗ್ ಹ್ಯಾಪಿನಾ” ಎಂದು ಕೇಳಿದಾಗಲೇ ವಾಸ್ತವಕ್ಕೆ ಮರಳಿದ್ದು. ಸಣ್ಣಪುಟ್ಟ ತಿದ್ದುಪಡಿಗಳನ್ನು ಸೂಚಿಸಿ, ಪೂರ್ಣ ಪಾವತಿ ಮಾಡಿ (ಒಟ್ಟು ರೂ ನಾಲ್ಕೂ ಕಾಲು ಲಕ್ಷ), ಸಾಗಣೆಗೂ (ಒಟ್ಟು ರೂ ೩೭,೦೦೦) ಮುಂಗಡ ಕೊಟ್ಟು, ಹೊರಡಿಸಲು ನನ್ನ ಸೂಚನೆ ಕಾಯುವಂತೆ ಹೇಳಿ ಮರಳಿದೆ.

ನಾಲ್ಕೈದು ದಿನಗಳಲ್ಲೇ ಕೊಯಂಬತ್ತೂರಿಗೆ ಹಸಿರು ಕಂದೀಲು ತೋರಿದೆ. ಅಭಯ ಬೆಂಗಳೂರಲ್ಲಿದ್ದುಕೊಂಡು ಲಾರಿ ಚಾಲಕನ ಚರವಾಣಿ ಸಂಪರ್ಕ ಸಾಧಿಸಿ ಮಾರ್ಗದರ್ಶಿಯಾದ. ಲಾರಿ ಮೈಸೂರು – ಕುಶಾಲನಗರಕ್ಕಾಗಿ ಓಡಿ, ರಾತ್ರಿಗೆ ಸೋಮವಾರಪೇಟೆಯಲ್ಲಿ ತಂಗಿತು. ಬೆಳಿಗ್ಗೆ ಪಾಟ್ಲಾಕ್ಕಾಗಿ ಬಿಸಿಲೆಗೇ ಬಂತು. ಗಣೇಶ ವ್ಯವಸ್ಥೆ ಮಾಡಿದ್ದ ಎತ್ತುಗ (ಹತ್ತು ಟನ್ ಸಾಮರ್ಥ್ಯದ ಕ್ರೇನ್) ಕೊಡ್ಲಿಪೇಟೆಯಿಂದ ಬಂದಿತ್ತು. ಸ್ಥಾಪನೆ ಮತ್ತು ಉತ್ತರೋತ್ತರ ಕೆಲಸಗಳಿಗೆ ಮಾಸ್ಟರ್ ಪ್ಲಾನರಿ ಬಳಗ ಪುತ್ತೂರಿನಿಂದ. ನಮಗೋ…

ಫೆಬ್ರುವರಿ ಮೂರು ೨೦೨೦ ಸೋಮವಾರ, ನೂತನ ಗೃಹಪ್ರವೇಶದ ಸಂಭ್ರಮ. ದೇವಕಿ ಒಂದೆರಡು ದಿನಗಳ ವಾಸ ವಸತಿಗೆ, ಅಲ್ಲಿನ ಖಾಯಂ ನಿಯೋಜನೆಗೆ ಬಟ್ಟೆ, ಪಾತ್ರೆ ಪರಡಿಗಳನ್ನು ನಾಕೆಂಟು ದಿನಗಳಿಂದ ಅಳೆದೂ ಸುರಿದೂ ಒಂದಷ್ಟು ಕಾರಿಗೆ ತುಂಬಿದ್ದಳು. ಎಲ್ಲರಿಗೆ ಹಂಚಲು ‘ಅಮೃತಫಲ’ದ ಕಡಿಗಳೂ (ಸಮಪ್ರಮಾಣದ ಕಾಯಿ ಹಾಲು, ಹಾಲು, ಸಕ್ಕರೆಗಳ ಪಾಕ) ಡಬ್ಬಿ ತುಂಬಿದ್ದವು. ಉಪಾಧ್ಯರು ಹಿಂದಿನ ಸಂಜೆಯೇ ಬಂದು ನಮ್ಮಲ್ಲುಳಿದಿದ್ದರು. ಸೂರ್ಯ ಮೈಮುರಿಯುವ ಮೊದಲೇ ನಾವು ಮಂಗಳೂರು ಬಿಟ್ಟು, ಮಾರ್ಗದಲ್ಲಿ ಸುಂದರರಾಯರನ್ನು ಸೇರಿಸಿಕೊಂಡು, ಉಪ್ಪಿನಂಗಡಿ ಸೇರಿದೆವು. ಎಂದಿನಂತೆ ಆದಿತ್ಯ ಹೋಟೆಲಿನಲ್ಲಿ ಉಪಾಹಾರ ಮಾಡಿದ್ದಲ್ಲದೆ ಮಧ್ಯಾಹ್ನಕ್ಕೆ ಸಾಕಷ್ಟು ಇಡ್ಲಿ, ಸಾಂಬಾರ್ ಕಟ್ಟಿಸಿಕೊಂಡು ಮುಂದುವರಿದೆವು. ಆತಿಥೇಯರ ಗತ್ತಿನಲ್ಲಿ ಎಲ್ಲರಿಗೂ ಮೊದಲು ನಾವು ಅಶೋಕವನದಲ್ಲಿದ್ದೆವು.

ಕಬ್ಬಿಣದ ಗೂಡು ಹೊತ್ತ ಲಾರಿ ಸುಲಭವಾಗಿಯೇ ಶಿಬಿರ ತಾಣಕ್ಕಿಳಿದು ನಿಂತಿತು. ಮಹಾಗೂಡಿಗೆ ಬೆಲ್ಟ್ ಸುತ್ತಿ, ಎತ್ತುಗ ಲಾರಿ ಹಗುರ ಮಾಡಿತು. ಲಾರಿ ದೂರ ಸರಿದು ನಿಂತಿತು. ಎತ್ತುಗ ಕುಂದಗಳತ್ತ ಸರಿಯತೊಡಗಿತು. ಶಿಬಿರತಾಣದ ನೆಲ ಬಹಳ ಮಿದು, ಕೆಲವೆಡೆ ಶುದ್ಧ ಜವುಗು. ಎತ್ತುಗ ಪ್ರಗತಿ ಬಿಟ್ಟು ತೂರಾಡಿತು. ಅವರಿವರೆನ್ನದೆ ಎಲ್ಲರೂ ಚಕ್ರಗಳ ಅಡಿಗೆ ತುಂಡು ಕಲ್ಲು, ಜಲ್ಲಿ ಸುರಿದದ್ದೇ ಸುರಿದದ್ದು. ಆದರೂ ಅನಿಯಂತ್ರಿತ ಓಲಾಟದಲ್ಲಿ ಒಮ್ಮೆ ಗೂಡು ನಡುಕಲ ಒಂದು ಕಲ್ಲಕುಂದವನ್ನು ಸಣ್ಣದಾಗಿ ತಟ್ಟಿತು. ನಾವು ಹೆದರಿದ್ದಂತೇ ಕುಂದ ಬುಡದಿಂದ ಮುರಿದು ಒಂದಿಂಚು ವಾಲಿ, ಮೊದಲಿನಂತೇ ನಿಂತುಕೊಂಡಿತು. ಗೂಡಿನ ಸ್ಥಿರತೆಗಾಗಿ ಎರಡೂ ಪಕ್ಕಗಳಿಗೆ ಹಗ್ಗ ಬಿಗಿದು, ಎದುರಿನಿಂದ ಕೆಲವರು ಎಳೆದು ಹಿಡಿದರೆ, ಇನ್ನೊಂದಿಬ್ಬರು ತೋರ ಕಾಡ ಕೋಲುಗಳಲ್ಲಿ ನೂಕಿ ನಿಖರ ನೆಲೆ ನಿರ್ದೇಶನ ಮಾಡಿದರು.

ಬಹಳ ಕೊಸರಾಟದ ಕೊನೆಯಲ್ಲಿ, ತುಸು ಓರೆಯಾದರೂ ಗೂಡು ಆರೂ ಕಂಬಗಳ ಮೇಲೆ ಕುಳಿತಾಗಿತ್ತು. ಓರೆಕೋರೆಯಾದ ಬೆಲ್ಟು, ಹಗ್ಗಗಳನ್ನು ಸರಿಪಡಿಸಿ, ಇನ್ನೇನು ಎತ್ತುಗ ಚೂರೇ ಚೂರು ಎತ್ತಿದರೆ ಸಾಕು, ಎಲ್ಲ ಸರಿಯಾಗುತ್ತದೆ ಎನ್ನುವ ಹಂತದಲ್ಲಿ….. ಒಮ್ಮೆಗೇ ನಮ್ಮ ಕಚ್ಚಾ ದಾರಿಯಲ್ಲಿ ದಡಬಡಿಸುತ್ತ ತೆರೆದ ಜೀಪೊಂದು ಬಂದು ನಿಂತಿತು. ಅಷ್ಟೇ ಚುರುಕಾಗಿ ಕುದಿ ಮುಖದ ಮಧ್ಯವಯಸ್ಕರೊಬ್ಬರು ಇಳಿದು ನಿಂತರು. ಅಲ್ಲಿ ನಿಂತು ಕ್ಯಾಮರಾ ದಾಖಲೀಕರಣ ನಡೆಸಿದ್ದ ಉಪಾಧ್ಯರನ್ನು ಬಹಳ ಬಿರುಸಾಗಿಯೇ ಪ್ರಶ್ನಿಸಿದರು “ಏನು ನಡೆಸಿದ್ದೀರಿ”? ಇತ್ತ ಚಟುವಟಿಕೆಯ ಕೇಂದ್ರದಲ್ಲೇ ಇದ್ದ ಗಣೇಶ ಕೆಳ ಧ್ವನಿಯಲ್ಲಿ “ಗೌಡ್ರೂ…” ಎಂದು ಉದ್ಗರಿಸಿದ್ದೂ ಕೇಳಿತು. ಬೆಳಿಗ್ಗೆ ಎತ್ತುಗ ಬಿಸಿಲೆ ಗೇಟ್ ದಾಟುವುದನ್ನು ‘ಗೌಡ’ರ ಗುಪ್ತಚರ – ‘ಪ್ರಾಶ’ ನೋಡಿ, ಸಕಲೇಶಪುರಕ್ಕೆ ಸಂದೇಶ ಕಳಿಸಿದ್ದ.

ಈಗ ಆತನೂ ಜೀಪಿನ ಹಿಂದಿನಿಂದ ನಡೆದು ಬಂದ. ಗೌಡ್ರ ದೊಡ್ಡ ಧ್ವನಿಯ ಆದೇಶ “ಕೂಡಲೇ ಕೆಲಸ ನಿಲ್ಲಿಸಿ. ಇಲ್ಲವಾದರೆ…” ಬಂಡೆಯ ಹಿಂದಿದ್ದ ನಾನು ಕೆಲಸ ನಿಲ್ಲಿಸಲು ಸೂಚಿಸಿ, ಎದುರು ಬಂದೆ. ನನ್ನ ಪರಿಚಯದ ಮಾತು, ಕೆಲಸ ನಿಲ್ಲಿಸುವುದಕ್ಕೆ ಕಾರಣ ತಿಳಿಯುವ ಪ್ರಶ್ನೆಗಳೆಲ್ಲ ‘ಗೌಡ’ರಿಗೆ ಅಪ್ರಸ್ತುತ. ಆಕ್ರೋಶ ಒಂದೇ “ನನ್ನ ನೆಲದಲ್ಲಿ ಅಕ್ರಮ ನಡೆಸಿದ್ದೀರಿ…” ಮುಂದುವರಿದು, ವಿದ್ಯುತ್ ಬೇಲಿ ಕತ್ತರಿಸಿದ, ವಸತಿ ಹೂಡಲು ಪಂಚಾಯತ್ ಅನುಮತಿ ಪಡೆಯದ ಅಪರಾಧಗಳನ್ನೂ ಒದರಿದರು. ತಾನು ನ್ಯಾಯಕ್ಕೂ ‘ಕ್ರಿಮಿನಲ್ಲಿ’ಗೂ ಸಿದ್ಧ ಎಂದು ಘೋಷಿಸಿಕೊಂಡರು. ಐವತ್ತು ರೂಪಾಯಿ ಸಿಡಿಮದ್ದಿಟ್ಟು ಗೂಡು ಉಡಾಯಿಸುವ, ಪಿಸ್ತೂಲಿನಲ್ಲಿ ಎತ್ತುಗದ ಚಕ್ರ ಸ್ಫೋಟಿಸುವ ಬೆದರಿಕೆ ಹಾಕಿದರು. ಸಂಶೋಧನೆ ಹೆಸರಿನಲ್ಲಿ ಅನೈತಿಕತೆ ಪ್ರಸರಿಸುವ ಅಡ್ಡೇ ಎಂದೂ ತಾನು ಪ್ರಮಾಣಿಸಬಲ್ಲೆ ಎಂಬ ಸಂಚಿನ ಹೊಳಹೂ ಮೂಡಿಸಿದರು.

ಮಾತುಗಳ ಹೊಯ್ಯಲಿನಲ್ಲಿ ನಮಗೆ ಸಹಾಯ ಮಾಡಿದ ಗಣೇಶರನ್ನು ಕನಿಷ್ಠ ಮಾಡಿ, ಎತ್ತುಗದವನ ಜಾತಿಯನ್ನು ಬೆದಕಿದ್ದೂ ಆಯ್ತು. (ವಾಪಾಸು ಹೋಗುವ ದಾರಿಯಲ್ಲಿ, ಬಿಸಿಲೆ ಗೇಟಿನ ಬಳಿಯಿದ್ದ ತುಳಸಿ ಹೋಟೆಲಿನವರಿಗೂ ನಮಗೆ ತಿಂಡಿ ತೀರ್ಥ ಕೊಟ್ಟ ಅಪರಾಧಕ್ಕೆ ಆಶೀರ್ವಚನ ಮಾಡಿದ್ದರು ಎಂದು ತಡವಾಗಿ ತಿಳಿಯಿತು!) ನಾನು ಉದ್ವೇಗಕ್ಕೆ ಮನಸ್ಸು ಕೊಡಲಿಲ್ಲ. ನನ್ನ ದಾಖಲೆಗಳನ್ನು ನೋಡಿಯೇ ಅರಣ್ಯ ಇಲಾಖೆಯವರು ತಂತಿ ಕಳಚಿದ್ದನ್ನು ತಿಳಿಸಿದೆ. ಎತ್ತುಗದ ಚಾಲಕ, ಗಣೇಶಾದಿಗಳು (ಮಾಸ್ಟರ್ ಪ್ಲಾನರಿ ಮತ್ತು ತುಳಸಿ ಹೋಟೆಲ್ ಕೂಡಾ) ಕೇವಲ ವೃತ್ತಿಪರರು, ನನ್ನ ಕೆಲಸದ ಪಾಲುಗಾರರಲ್ಲ ಎಂದೇ ರಕ್ಷಿಸಿದೆ. ಗೂಡು ತತ್ಕಾಲೀನ ವಸತಿ, ಅಗತ್ಯ ಬಂದರೆ ನಿಧಾನಕ್ಕೂ
ಪಂಚಾಯತ್ತಿಗೆ ತಿಳಿಸುವ ಅವಕಾಶವಿದೆ ಎಂದೂ ಸೂಚಿಸಿದೆ. ನೆಲದ ಕುರಿತಂತೆ ನನ್ನ ದಾಖಲೆಗಳ ಪ್ರತಿಯನ್ನೇ ಮುಂದೊಡ್ಡಿದೆ.

ಗೌಡರಿಗೆ ಕೇಳುವ, ಪರಿಶೀಲಿಸುವ ತಾಳ್ಮೆ ಇರಲಿಲ್ಲ. ಹಾಗಾಗಿ ನಾನೇ ದಿನದ ಮಹತ್ವ ಕೆಡದಂತೆ, “ಬಂದವರೆಲ್ಲರು (ಲಾರಿ, ಎತ್ತುಗ, ಮಾಸ್ಟರ್ ಪ್ಲಾನರಿಯ ಇತರ ಕೆಲಸಗಾರರು) ಹಿಡಿದ ಕೆಲಸ ಮುಗಿಸಿ ಹೋಗಲಿ. ಹೆಚ್ಚಿನ ವಿವರಗಳಲ್ಲಿ ಮಾತಾಡಲು ನಾಳೆ ನಾನೇ ನಿಮ್ಮ ಭೇಟಿಗೆ ಬರುತ್ತೇನೆ” ಎಂದು ಒಪ್ಪಿಸಿದೆ. ಗೌಡರು ‘ಪ್ರಾಶ’ನನ್ನು ಹೇರಿಕೊಂಡು ಬಂದಷ್ಟೇ ವೇಗದಲ್ಲಿ ವಾಪಾಸು ಹೋದರು. ನಾವು ‘ಇದೇ ನೆಲ’ ಎಂಬ ಮೋಹಿಗಳಲ್ಲ. ತೊಡಗಿಸಿದ ಹಣ ಇನ್ನಷ್ಟನ್ನು ನಮಗಾಗಿ ‘ದುಡಿಯಬೇಕು’ ಎಂಬ ಹಪಹಪಿಯೂ ನಮಗಿಲ್ಲ. ಹಾಗಾಗಿ ಇದುವರೆಗೆ ನಾವು ಪ್ರಾಮಾಣಿಕವಾಗಿಯೇ ನಂಬಿದ್ದ ದಾಖಲೆಗಳು ಮತ್ತು ನೆಲ ತಪ್ಪಾಗಿದ್ದರೆ, ಇನ್ನೆಲ್ಲೋ ಒಂದು ನೆಲ ನಮ್ಮನ್ನು ಕಾದಿರಲೇಬೇಕಲ್ಲಾ. ಇದನ್ನೊಂದು ಅನುಭವದ ಪಾಠವಾಗಿ ಗ್ರಹಿಸಿ, ಆ ನೆಲಕ್ಕೆ ಗೂಡನ್ನು ಒಯ್ದು, ಕೆಲಸವನ್ನು ಮುಂದುವರಿಸುವ ಮನೋಸ್ಥಿತಿ ನಮ್ಮಲ್ಲಿ ಸ್ಪಷ್ಟವಿತ್ತು. ಹಾಗಾಗಿ ಸೋಲು, ಅವಮಾನಗಳ ಸೋಂಕೂ ಇಲ್ಲದೆ ದಿನದ ಕಲಾಪವನ್ನು ಪೂರ್ಣಗೊಳಿಸಿದೆವು.

ಲಾರಿಯವನಿಗೆ ಸಾಗಣೆಯ ಬಾಕಿ ಕೊಟ್ಟು ಕಳಿಸಿದೆ. ಎತ್ತುಗ ಗೂಡನ್ನು ಸರಿ ಸ್ಥಾನದಲ್ಲಿ ಕೂರಿಸಿ ಮರಳಿತು. ದೇವಕಿ ತಂದಿದ್ದ ಅಮೃತಫಲವನ್ನು ಎಲ್ಲರಿಗೂ ಹಂಚಿದಳು! (ಕಾರ್ಕೋಟಕ ಕಳೆದ ಮೇಲೆ ಅಮೃತ!) ನಾವು ಬುತ್ತಿಯೂಟವನ್ನು ಮುಗಿಸಿ, ಗೂಡಿಗೆ ಬೀಗ ಜಡಿದು, ತಂದಿದ್ದ ಸಾಮಾನುಗಳೆಲ್ಲ ಕಾರಿನಲ್ಲಿದ್ದಂತೆ ಮಂಗಳೂರಿಸಿದೆವು. ಮಾರಣೇ ದಿನ ಒಬ್ಬನೇ ಬಸ್ಸೇರಿ ಸಕಲೇಶಪುರಕ್ಕೆ ಹೋದೆ. ಗೌಡರಿಗೆ ಚರವಾಣಿಸಿ, ಮಾರ್ಗ ತಿಳಿದುಕೊಂಡು ಮನೆಯಲ್ಲೇ ಭೇಟಿಯಾದೆ. ಗೌಡರು ಸೌಮ್ಯವಾಗಿದ್ದರು. ಆದರೆ ನನ್ನ ವಾದದ ವಿವರಗಳನ್ನು ತಿಳಿಯುವ, ದಾಖಲೆಗಳನ್ನು ನೋಡುವ ಉತ್ಸಾಹ ತೋರಲಿಲ್ಲ. ಅವರ ನಿರ್ಧಾರಕ್ಕೆ ಪೂರಕವಾದ ದಾಖಲೆಗಳನ್ನೂ ತೋರಿಸಲಿಲ್ಲ. “ಬಿಟ್ಟು ಹೋಗಿ, ಇಲ್ಲಾ ನನ್ನನ್ನೂ ಸೇರಿಸಿದಂತೆ ಮರು ಸರ್ವೆ ಮಾಡಿಸಿ” ಎಂದೊಂದೇ ಪಟ್ಟು ಹಿಡಿದರು.

ಸರ್ವೆ ಮಾಡಲು ಅವರದೇ ಜನವನ್ನೂ ಭೇಟಿ ಮಾಡಿಸಿದರು. ನಾನು ಸಮಯ ಕಾಯುವಂತೆ ಮತ್ತು ಶಾಂತಿಯ ದಾರಿ ಮುಚ್ಚದಂತೆ ‘ಮರುಸರ್ವೆ’ಯನ್ನು ಒಪ್ಪಿದೆ. ಅವರ ಜನ ಕಛೇರಿಯಿಂದ ದಾಖಲೆಗಳ ಪ್ರತಿ ತೆಗೆಸಲು ಒಂದು ಸಾವಿರ ರೂಪಾಯಿ ಕೇಳಿದ, ಕೊಟ್ಟೆ. ಆತ ಒಂದು ವಾರದೊಳಗೇ ದಿನ ನಿಶ್ಚಯ ಮಾಡಿ ಫೋನಿಸುವುದಾಗಿ ಹೇಳಿದ. (೪-೨-೨೦೨೦ ರಿಂದ) ಆತ ಮಾಡುವುದಿರಲಿ, ಇಂದಿನವರೆಗೆ ನನ್ನ ಫೋನ್ ಕರೆಗಳಿಗೂ ಸ್ಪಂದಿಸಿದ್ದಿಲ್ಲ. ಅನ್ಯ ಕಾರ್ಯಾರ್ಥ ನಾನೇ ಸಕಲೇಶಪುರಕ್ಕೆ ಹೋಗಿದ್ದಾಗ ಭೇಟಿಯಾದಾಗಲೂ ನನಗೆ ದಿನ ನಿಶ್ಚಯದ ನೆಪಗಳನ್ನಷ್ಟೇ ಕೊಟ್ಟ. ಏತನ್ಮಧ್ಯೆ ನನ್ನ ಮೇಘಾಲಯ ಪ್ರವಾಸ, ಕೋವಿಡ್ ನಿರ್ಬಂಧಗಳು, ಸುದೀರ್ಘ ಮಳೆಗಾಲ ಕಟ್ಟಿ ಹಾಕಿದವು. ಉದ್ದಕ್ಕೂ ನಾನು ವಕೀಲ, ರಾಜಕಾರಣಿ, ‘ಗೌಡ’ರ ಪರಿಚಿತ ಗಣ್ಯರೊಡನೆ ಮಂತ್ರಾಲೋಚನೆಗಳನ್ನು ನಡೆಸುತ್ತಲೇ ಬಂದೆ.

ನನ್ನ ದಾಖಲೆಗಳು, ಕಬ್ಬಿಣದ ಗೂಡು ಸ್ಥಳದಲ್ಲಿ ಕೂರಿಸಲು ಬಂದಷ್ಟೂ ಜನರ ಸಾಕ್ಷಿ ಮತ್ತು ಅದನ್ನು ದಾಖಲೀಕರಣಗೊಳಿಸುತ್ತಿದ್ದ ಕ್ಯಾಮರಾದಲ್ಲಿ ಅಯಾಚಿತವಾಗಿ ಸಿಕ್ಕ ‘ಗೌಡರ ಗದ್ದಲ’ಗಳೆಲ್ಲ ನನ್ನನ್ನು ಕಾನೂನು ಸಮರಕ್ಕೇ ಪ್ರೇರಿಸುತ್ತಿದ್ದವು. ಆದರೆ ನ್ಯಾಯ ಇದ್ದಲ್ಲಿ ಪ್ರತಿ ಸೆಡ್ಡು ಹೊಡೆಯುವ ಆವಶ್ಯಕತೆ ನನಗೆ ಕಾಣಲಿಲ್ಲ. ಹಾಗಾಗಿ ತಾಲೂಕು ಕಚೇರಿಗೆ ಅಧಿಕೃತವಾಗಿ ನಮ್ಮ ಹಕ್ಕನ್ನು ಪುನಃಸ್ಥಾಪಿಸುವಂತೆ ಯುಕ್ತ ಹಣ ಕಟ್ಟಿದೆವು. ಅವರದೇ ಸಮಯದಲ್ಲಿ ಸರ್ವೇಯರ್ ಬಂದು, ಪರಿಶೀಲಿಸಿ, ನೆಲ-ದಾಖಲೆಯ ತಾಳೆಯನ್ನು ಶ್ರುತಪಡಿಸಿದರು. ಅದರ ಮೇಲೆ ವಿಶ್ವಾಸವಿಟ್ಟು ಮತ್ತೆ (೨೦೨೦) ಡಿಸೆಂಬರ್ ಹದಿನೇಳರಂದು…. ಜಿಲ್ಲಾಧಿಕಾರಿಯನ್ನು ಉದ್ದೇಶಿಸಿ ಮನವಿ (ದೂರಲ್ಲ) ಪತ್ರವೊಂದನ್ನು ಸಿದ್ಧಪಡಿಸಿದೆ. ಅದರಲ್ಲಿ ಮೊದಲಿಗೆ, ನಮ್ಮ ಉದ್ದೇಶ ಮತ್ತು ‘ಗೌಡ’ರ (ಪೂರ್ಣ ಹೆಸರು, ವಿಳಾಸ ಸಹಿತ)
ಅಡ್ಡಿಯನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದೆ. “ಈಗ ಮರು ಸರ್ವೆಯ ಬಲದಲ್ಲಿ ಮತ್ತೆ ಕೆಲಸಕ್ಕೆ ಇಳಿಯುತ್ತಿದ್ದೇನೆ.

ಈಗಲೂ ಗೌಡರಿಂದ ವಿಘ್ನ ಬಂದರೆ, ಪ್ರತ್ಯೇಕ ದೂರು ದಾಖಲಿಸುತ್ತೇನೆ” ಎಂದೇ ಬರೆದಿದ್ದೆ. ಪತ್ರದಲ್ಲಿ ಮುಂದುವರಿದು, “ಕೆಲಸಗಳು ಮುಗಿದದ್ದೇ ಗೂಡಿನ ಲೋಕಾರ್ಪಣವನ್ನು ಗಂಭೀರ ವಿಚಾರಗೋಷ್ಠಿಯನ್ನಾಗಿ ಮಾಡುತ್ತೇನೆ. ಅದಕ್ಕೆ ಪ್ರತ್ಯೇಕ ಆಮಂತ್ರಣ ಕಳಿಸುತ್ತೇನೆ. ‘ಖಾಸಗಿ ವನ್ಯ ಸಂರಕ್ಷಣೆ’ಯ ಈ ಪ್ರಯೋಗ ಸಾರ್ವಜನಿಕರನ್ನೇ ಉದ್ದೇಶಿಸಿದೆ. ಹಾಗಾಗಿ ಸಾರ್ವಜನಿಕ ಹಿತಾಸಕ್ತಿಯ ಪಾಲಕರಾದ ನಿಮ್ಮ ಉಪಸ್ಥಿತಿ ಅವಶ್ಯ” ಎಂದೂ ಸೇರಿಸಿದ್ದೆ ಪತ್ರದ ಕೆಲವು ಪ್ರತಿ ಹಾಗೂ ಅದನ್ನು ಬೆಂಬಲಿಸುವಂತೆ ಪೂರಕ ಭೂದಾಖಲೆಗಳ ನಕಲು ಹಿಡಿದುಕೊಂಡು ಆ ಬೆಳಗ್ಗೆ ಹಾಸನಕ್ಕೆ ಹೋದೆ. ನನ್ನ ಅದೃಷ್ಟಕ್ಕೆ ಒಂದೇ ಓಟದಲ್ಲಿ ಜಿಲ್ಲಾಧಿಕಾರಿ ಗಿರೀಶ್, ಪೋಲಿಸ್ ವರಿಷ್ಠ (ಎಸ್ಪಿ) ಶ್ರೀನಿವಾಸ ಗೌಡ, ಅರಣ್ಯಾಧಿಕಾರಿಗಳಾದ (ಸಿಸಿಎಫ್) ಶಂಕರ್ ಹಾಗೂ (ಡಿಎಫೋ) ಸಿವರಾಂ ಬಾಬುರವರನ್ನು ಕಂಡು, ಮಾತಾಡಿ, ಪತ್ರ ಒಪ್ಪಿಸುವುದು ಸಾಧ್ಯವಾಯ್ತು. ಎಸ್ಪಿಯವರ ಟಿಪ್ಪಣಿಯಂತೆ

ವಾಪಾಸಾಗುವ ದಾರಿಯಲ್ಲಿ ಸಕಲೇಶಪುರದಲ್ಲಿ ಡಿವೈಎಸ್ಪೀ ಗೋಪಿಯವರನ್ನೂ ಸಮಯಾನುಕೂಲ ಒದಗಿದ್ದರಿಂದ ತಹಶೀಲ್ದಾರ್ ಮಂಜುನಾಥ್ ಅವರನ್ನೂ ವೈಯಕ್ತಿಕ ಭೇಟಿಯಾಗಿ ಪತ್ರದ ಪ್ರತಿಗಳನ್ನು ಕೊಟ್ಟೆ. ಆಡಳಿತಾತ್ಮಕವಾಗಿ ಬಿಸಿಲೆ ವಲಯದ ಪ್ರಾಥಮಿಕ ಜವಾಬ್ದಾರಿ ಹೊತ್ತ ಪೋಲೀಸು ಹಾಗೂ ಅರಣ್ಯ ಠಾಣೆಗಳಿರುವುದು ಯಸಳೂರಿನಲ್ಲಿ. ಅಂದು ಆ ಸುಮಾರು ನಲ್ವತ್ತು ಕಿಮೀ ದೂರ ಹೋಗುವ ಅನುಕೂಲ ನನಗಿರಲಿಲ್ಲವಾದ್ದರಿಂದ ಅವರಿಗೆ ಮಾತ್ರ ಮನವಿ ಪತ್ರದ ಪ್ರತಿಗಳನ್ನು ಅಂಚೆಯಲ್ಲಿ ಕಳಿಸಿದೆ. ನನ್ನ ಹೊಸ ಸೂಚನೆ ಸಿಕ್ಕಿದ್ದೇ ಮಾಸ್ಟರ್ ಪ್ಲಾನರಿಯವರು ನವೋತ್ಸಾಹದಲ್ಲಿ ಡಿಸೆಂಬರ್ ಮೂವತ್ತರಂದು ಸಾಮಾನು ಸಿಬ್ಬಂದಿಯೊಡನೆ ಬಂದರು. ಕಾರೇರಿ ನಾನೂ ದೇವಕಿಯೂ ಹೋಗಿದ್ದೆವು. ಬಿರುಬೇಸಗೆ, ಜಡಿ ಮಳೆಗಾಲ ಸೇರಿದಂತೆ ಹತ್ತು ತಿಂಗಳ ವನವಾಸದಲ್ಲಿ ಗೂಡು ಏನೂ ಬದಲಾಗದೇ ನಿಂತಿತ್ತು. ಬಾಗಿಲು ತೆರೆದಾಗ ಒಳಗೆ ಸುಮ್ಮನೆ ಇಟ್ಟಿದ್ದ ಒಂದೆರಡು ಕಾಡುಕೋಲು ಹುಳ ಕೊರೆದು ಹುಡಿಯಾಗಿತ್ತು. ಕೆಲವು ಪಾತ್ರೆಗಳನ್ನು ತುಂಬಿಟ್ಟಿದ್ದ ರಟ್ಟಿನ ಡಬ್ಬಿಯ ಒಳಗೆ ವಿಶಿಷ್ಟ ದಪ್ಪ ಇರುವೆ ಕುಟುಂಬವೊಂದು ಮೊಟ್ಟೆ ಮರಿಗಳ ಸಹಿತ ಬೀಡುಬಿಟ್ಟಿತ್ತು. ಹೊರಗಿನ ಸಂಪರ್ಕ ಕೆಲಸಗಳು ಬಾಕಿಯಿದ್ದ ಕಕ್ಕೂಸಿನ ತೂತದಿಂದ ದೊಡ್ಡದೊಂದು ಪತಂಗ ಒಳ ಬಂದು ಪವಡಿಸಿತ್ತು. (ನಾವು ಚಿಟ್ಟೆಯ ಗುರುತು ಬಲ್ಲವರಲ್ಲ. ಮತ್ತೆ ಪಟ ತೆಗೆದಿಟ್ಟುಕೊಳ್ಳಲು ಬೆಳಕು, ತಾಳ್ಮೆ ಅಂದು ನನಗಿರಲಿಲ್ಲ.)

 

ಹತ್ತು ತಿಂಗಳ ಹಿಂದೆ ಬಹಳ ಗಡಿಬಿಡಿಯಲ್ಲಿ ಕೆಲಸಗಳನ್ನು ಬಿಟ್ಟು ಹೋದದ್ದಕ್ಕೋ ಏನೋ ಆನಂದ ಗೌಡರ ಬಳಗದ ಸಿದ್ಧತೆ ಸಾಕಾಗಲಿಲ್ಲ. ಬಾವಿಗೆ ಜಾಗ ಅಂದಾಜಿಸಿ, ಆರಡಿ ಆಳಕ್ಕೆ ತೋಡಿ, ಒಂದು ರಿಂಗ್ (ಮೂರಡಿ ವ್ಯಾಸ, ನಾಲ್ಕಡಿ ಎತ್ತರ) ಇಳಿಸುವಲ್ಲಿಗೆ ದಿನ ಮುಗಿದಿತ್ತು. ನಿರೀಕ್ಷೆಯಂತೆ ನೀರೇನೋ ಬಹಳ ಮೇಲೇ ಸಮೃದ್ಧವಿತ್ತು. ಆದರೆ ಬೇಸಿಗೆಯ ಕಠಿಣ ದಿನಗಳನ್ನೂ ಲೆಕ್ಕ ಹಿಡಿದು, ಇನ್ನೂ ಎರಡು ರಿಂಗ್ ಇಳಿಸುವ ಅಂದಾಜು ಉಳಿಸಿಕೊಂಡಿದ್ದೇವೆ. ಮಾಸ್ಟರ್ ಪ್ಲಾನರಿಯ ಸಂಪ್ರದಾಯದಂತೆ, ವರ್ಷಾಂತ್ಯ ಅಲ್ಲಿನ ನೌಕರ ಬಳಗಕ್ಕೆ ಭರ್ಜರಿ ಸಂತೋಷಕೂಟದ ದಿನ. ಹಾಗಾಗಿ ನನ್ನ ಬಾಕಿ ಕೆಲಸಗಳನ್ನು ಒಂದೆರಡು ದಿನ ಬಿಟ್ಟು ಪುನಃ ಬಂದು ಪೂರ್ಣಗೊಳಿಸುವುದಾಗಿ ತಿಳಿಸಿ, ಪುತ್ತೂರಿಸಿದರು. ನಾವೂ ಮರಳಿದೆವು. ವಾರ ಕಳೆಯುವುದರೊಳಗೆ ಇನ್ನೊಂದು ಕಂತಿನ ಕೆಲಸಕ್ಕೆ ದಿನ ನಿಗದಿ ಮಾಡಿದರು. ನಾವು ಮತ್ತೆ ಎರಡು ರಾತ್ರಿ ಅಲ್ಲಿ ಉಳಿಯುವ ಹೊಸ ಉತ್ಸಾಹದಲ್ಲಿ ಉಪಾಧ್ಯರನ್ನೂ ಸೇರಿಸಿಕೊಂಡೇ ಮಂಗಳೂರು ಬಿಟ್ಟಿದ್ದೆವು. ಆದರೆ ಕಲ್ಲಡ್ಕ ದಾಟುತ್ತಿದ್ದಂತೆ ಆನಂದ ಗೌಡರ ಕರೆ “ಸಾರಿ, ನಮ್ಮ ವೆಲ್ಡರ್ ಕೈಕೊಟ್ಟ. ಬಿಸಿಲೆಗೆ ನಾಳೆ ಖಂಡಿತ ಬರುತ್ತೇವೆ.” ನಾವು ಹಿಂದೆ ಹೋದೆವು. ಛಲಬಿಡದ ತ್ರಿವಿಕ್ರಮರಂತೆ ಮರುದಿನ ಹೋದೆವು. ನಿರ್ಮಾಣ ಬಳಗ ತಡವಾಗಿ ಬಂದರೂ ಕೆಲಸದಲ್ಲಿ ಚುರುಕಿದ್ದರು. ಪ್ಲಂಬರ್ ಕೊಳಚೆ ವಾಹಕಗಳ ಸಂಪರ್ಕ ಮುಗಿಸಿದ. ಬೆಸುಗೆಯಾತ ಸಣ್ಣಪುಟ್ಟ ಬೆಸುಗೆ ಕೆಲಸಗಳನ್ನು ನಡೆಸಿದ. ಬಾವಿಗೆ ಎರಡನೇ ರಿಂಗ್ ಇಳಿಸಿದರು. ಬಂಡೆಗೆ ಏರಲು ಮೆಟ್ಟಿಲು, ಗೂಡಿನ ದ್ವಾರದ ಬಳಿಯ ಕೊರಕಲು ನಿಗಿದು, ಅಲ್ಲಿಯೂ ಒಂದು ಮೆಟ್ಟಿಲು ಮಾಡುವಲ್ಲಿಗೆ ಸೂರ್ಯ ಕಂತಿದ್ದ. ಆದರೂ ಡಾಮರ್ ದಾರಿಯಂಚಿನಲ್ಲಿ ನಮ್ಮ ದಾರಿಗೆ ಸರಪಳಿ ಬಂದೋಬಸ್ತನ್ನು ಮುಗಿಸಿಯೇ ತಂಡ ಮರಳಿತು.

ಅದು ಲೆಕ್ಕಕ್ಕೆ ಗೋಧೂಳೀ ಮುಹೂರ್ತ. ಆದರೆ ಹಗಲ್ಲೆಲ್ಲ ಮಂಕುಗಟ್ಟಿದ್ದ ಆಗಸ ಸಂಜೆಯಾಗುತ್ತಿದ್ದಂತೆ ಚಿರಿಪಿರಿಗುಟ್ಟಿತ್ತು. ನಾವು ಹೊಸ ಸಿಮೆಂಟ್ ಕೆಲಸದ ಮೇಲೆಲ್ಲ ಸಿಲ್ಪಾಲಿನ್ ಹಾಳೆಗಳನ್ನು ಮುಚ್ಚಿ, ಅದೇ ಮೊದಲ ಬಾರಿಗೆ ರಾತ್ರಿಗೆ ಅದರೊಳಗೇ ಉಳಿದೆವು (ಗೃಹಪ್ರವೇಶ!!). ಉಪಾಧ್ಯರ ಮೂರು ಕೇಜೀ ಗ್ಯಾಸನ್ನು ಹೊಸ ಸ್ಟವ್ವಿಗೆ ಜೋಡಿಸಿ ಹಾಲು ಕಾಯಿಸಿ (ಉಕ್ಕಿಸಲಿಲ್ಲ!) ಚಾ, ರಾತ್ರಿಗೆ ಅನ್ನ, ಸಾರು ಮಾಡುವುದರೊಂದಿಗೆ ಗೂಡಿಗೆ ಮನೆಯ ಘಂ ತಂದೆವು. ರಾತ್ರಿ ತುಂಬಾ ಹೊತ್ತು ನಿಜ ಮಳೆ, ಮತ್ತೆ ಸುಮಾರು ಉದ್ದಕ್ಕೆ ಮರದ ಮಳೆ ಸೇರಿ ನಿದ್ರೆ ವಿಶಿಷ್ಟ ಅನುಭವವಾಗಿತ್ತು. ಪ್ರತಿ ಹನಿ, ಉದುರುವ ಕಡ್ಡಿಯೂ ಭೇರಿ ಡಮರುಗ ಬಾಜಣ; ರೂಢಿಯಾದ ಮೇಲೆ ಎಲ್ಲರೂ ಕುಂಭಕರ್ಣರೇ!

ಹೊಸ ಸಾಧನೆಯ ಸಂತಸದಲ್ಲಿ, ನಸು ಚಳಿಯ ಮುಂಜಾನೆ, ಎಲ್ಲ ಅವಸರಗಳನ್ನೂ ವಿಳಂಬ ಲಯಕ್ಕೆ ಹೊಂದಿಸಿದ್ದೆವು. ಕಾಫಿ ಕುಡಿದು ವೀಕ್ಷಣಾ ಕಟ್ಟೆಯವರೆಗೆ ಡಾಮರ್ ದಾರಿಯಲ್ಲಿ (ಮಾರ್ನಿಂಗ್ ವಾಕ್ – ಅಲ್ಲ) ವಿಹರಿಸಿದೆವು. ಸುಬ್ಬುರಾಯನ ದರ್ಶನಾರ್ಥಿಗಳ ಧಾವಂತ ಇನ್ನೂ ತೊಡಗಿರಲಿಲ್ಲ. ರಾತ್ರಿಯ ಮಳೆ ಮಂಜು ಮೋಡಗಳನ್ನೆಲ್ಲ ಕಳೆದು ಕುಮಾರಪರ್ವತವನ್ನು ಸ್ವಚ್ಛವಾಗಿ ತೋರಿಸಿತು. ಅದರ ನೆತ್ತಿಯಿಂದ ಕುಮಾರಧಾರೆಯ ತಳದವರೆಗೆ, ಏಣಿಕಾಲು ಏಣಿನಿಂದ ಸುಬ್ರಹ್ಮಣ್ಯ ಪೇಟೆಯವರೆಗೂ ಹಬ್ಬಿದ ಹಸಿರಿನ ಸಾಮ್ರಾಜ್ಯದಲ್ಲಿ ಧಾರಾಳ ಕಣ್ತಂಪು ಮಾಡಿಕೊಂಡು ಮರಳಿದೆವು. ಅವಲಕ್ಕಿ ವಗ್ಗರಣೆ ಸವಿದು, ಎರಡನೇ ಸುತ್ತಿನಲ್ಲಿ ಚಾ ಹೀರಿ, ಮಂಗಳೂರಿಗೆ ಮರಳಿದೆವು. ಕಪ್ಪೆಗೂಡಿಗೆ ಕನಿಷ್ಠ ವಾಸಯೋಗ್ಯತೆಯಷ್ಟೇ ಸಾಕೆಂದು, ಲೋಕಾರ್ಪಣಕ್ಕೆ ದಿನ ನಿಶ್ಚಯಿಸಿದೆವು. ಚರವಾಣಿ, ಮಿಂಚಂಚೆಗಳ ತೀರಾ ಅನೌಪಚಾರಿಕ ಕರೆಯೋಲೆ ನೀವು ಹಿಂದಿನ ಬರಹದಲ್ಲಿ ನೋಡಿದಂತೇ ಮಾಡಿದೆವು. ‘ಸುಮುಹೂರ್ತ’ಕ್ಕೆ ಎಂಟು ದಿನ ಇದ್ದಂತೆ ತೀರಾ ಅನಿರೀಕ್ಷಿತವಾಗಿ ಗೌಡರ ಫೋನು ಬಂತು, “ನೀವು ಮಾತು ಉಳಿಸಿಕೊಳ್ಳಲಿಲ್ಲ.

ನನಗೆ ತಿಳಿಸದೆ ಅಲ್ಲಿ ಬಾವಿ, ಕೆಲಸ….” ನಾನು ತಡವರಿಸದೆ, “ಇಲ್ಲ, ನಾನು ಅಧಿಕೃತ ತನಿಖೆ ನಡೆಸಿ, ಜಾಗ ನಮ್ಮದು ಎಂದು ಖಾತ್ರಿಪಡಿಸಿಕೊಂಡಿದ್ದೇನೆ. ಸುತ್ತಮುತ್ತ ಯಾವ ಖಾಸಗಿ ವ್ಯಕ್ತಿಯ ನೆಲವೂ ಇಲ್ಲದಿರುವುದರಿಂದ, ನಾನು ಕೆಲಸ ಮುಂದುವರಿಸಿದ್ದೇನೆ….” ಎಂದು ಹೇಳುತ್ತಿದ್ದಂತೆ ಗೌಡರು ಗಟ್ಟಿಯಾಗಿ ತಮ್ಮ ಮಾತು ಹೇರಿದರು. “ಅಂದರೆ ನಾನು ನನ್ನ ಕೆಲಸ ಮಾಡುತ್ತೇನೆ” ಎಂದವರೇ ಸಂಪರ್ಕ ಕಡಿದರು. ನಾನು ಮತ್ತೆ ಕರೆ ಮಾಡಿದ್ದನ್ನು ಅವರು ಸ್ವೀಕರಿಸಲಿಲ್ಲ. ಗೌಡರ ಹೊಸ ಸಂದೇಶವನ್ನು ಮಲೆನಾಡು ವಲಯದ ಪ್ರಭಾವೀ ವ್ಯಕ್ತಿಗಳೂ ಗೌಡರ ಪರಿಚಿತರೂ ಆದ ಹೆಮ್ಮಿಗೆ ಮೋಹನ್, ಮಂಜುನಾಥ ದತ್ತ, ಕಿಶೋರ್ ಕುಮಾರ್ ಮೊದಲಾದವರಿಗೆ ತಿಳಿಸಿದೆ. ಅವರೆಲ್ಲ “ಗೌಡರಿಗೂ ಲೋಕಾರ್ಪಣ ಸಭೆಯ ಆಮಂತ್ರಣ ಕಳಿಸಿ, ಬರಲಿ, ಮಾತಾಡುತ್ತೇವೆ” ಎಂದರು. ಹಾಗಾಗಿ ದೇವಕಿಯ ವಾಟ್ಸಪ್ ಮೂಲಕ (ನನ್ನಲ್ಲಿಲ್ಲ) ಗೌಡರಿಗೂ ಆಮಂತ್ರಣ ಕಳಿಸಿದೆ. ವೈಯಕ್ತಿಕವಾಗಿ ನನಗೆ ಪ್ರಚಾರದ ಆಸೆ ಇಲ್ಲ. ಹಾಗಾಗಿ ಲೋಕಾರ್ಪಣದ ವಿಚಾರ ಸುದ್ದಿಯಾಗುವ ಆಸೆ ಇಲ್ಲದೇ ಪತ್ರಕರ್ತರಲ್ಲಿ ಕೆಲವು ಆಪ್ತ ಗೆಳೆಯರನ್ನಷ್ಟೇ ಆಮಂತ್ರಿಸಿದ್ದೆ. ಆದರೆ ಅನಾವಶ್ಯಕವಾಗಿ ‘ಗೌಡ’ರೊಡನೆ ಮುಖಾಮುಖಿಯಾಗುವುದಿದ್ದರೆ ಸ್ಥಳೀಯರ ಸಮಕ್ಷಮದಲ್ಲೇ ಆಗಲಿ ಎಂದೇ ಯೋಚಿಸಿ…. ೧೮ರ ಬೆಳಿಗ್ಗೆ ಕರೆಯೋಲೆಯ ಕೆಲವು ಪ್ರಿಂಟೌಟ್ ಹಿಡಿದುಕೊಂಡು ಅಭಯನೊಡನೆ ನಾವಿಬ್ಬರೂ ಕಾರೇರಿ ಒಂದು ಸರ್ಕೀಟ್ ಹೋದೆವು.

ಮೊದಲು ಸುಬ್ರಹ್ಮಣ್ಯ. ಕಪ್ಪೆಗೂಡಿನ ಅಡುಗೆ ಅನುಕೂಲಕ್ಕೆ ಎರಡು ಪುಟ್ಟ ಅನಿಲದ (ವಾಣಿಜ್ಯ) ಜಾಡಿ ಕೊಂಡೆವು. ಅಲ್ಲೇ ಇದ್ದ ನಮ್ಮ ತಿಂಡಿ, ತೀರ್ಥ ವಿಲೇವಾರಿಯವರನ್ನು ಜಾಗೃತಗೊಳಿಸಿದೆವು. ಈ ವಲಯದಲ್ಲಿ ಮೂಲತಃ ಹವ್ಯಾಸದಿಂದಲೂ ಅದೇನೋ ಕೇಂದ್ರ ಇಲಾಖೆಯ ವಂತಿಯಿಂದಲೂ ವನ್ಯಸಂರಕ್ಷಕನ ಕೆಲಸ ಮಾಡುತ್ತಿರುವ ಗೆಳೆಯ ಭುವನೇಶ್ ಕೈಕಂಬರಿಗೂ ಕರೆಯೋಲೆ ಮುಟ್ಟಿಸಿದ್ದಾಯ್ತು. ಮುಂದುವರಿದು ಅಶೋಕವನಕ್ಕೆ ಹೋಗಿ ಅನಿಲ ಜಾಡಿಗಳನ್ನು ಬಿಟ್ಟು, ಹಳ್ಳಿ ಸೇರಿದೆವು. ಅಲ್ಲಿ ಗಣೇಶರಿಗೆ ಕಲಾಪದ ಎಚ್ಚರ ಹುಟ್ಟಿಸಿ, ಕೂಡ್ರಸ್ತೆಗೆ ಹೋದೆವು. ಬಿಸಿಲೆ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಅಧ್ಯಕ್ಷರು ಸಿಗಲಿಲ್ಲ. ಅವರಿಗೆ ಕರೆಯೋಲೆ ಬಿಟ್ಟು ಹೆತ್ತೂರಿಗೆ ಹೋದೆವು. ನಾಡ ಕಛೇರಿಯಲ್ಲಿ ಉಪ ತಹಶೀಲ್ದಾರ್ – ಗಂಗಾಧರ್ ಸಿಕ್ಕಿದರು. ಅವರಿಗೆ ಆಮಂತ್ರಣ ಕೊಟ್ಟೆವು. ಮತ್ತೆ ಯಸಳೂರು. ದುರದೃಷ್ಟಕ್ಕೆ ಅಲ್ಲಿ ಅರಣ್ಯಾಧಿಕಾರಿ ಹಾಗೂ ಪೋಲಿಸ್ ಅಧಿಕಾರಿಗಳು ಸಿಕ್ಕಲೇ ಇಲ್ಲ. ಅವರಿಗೂ ಕರೆಯೋಲೆಗಳನ್ನು ಕಚೇರಿಗಳಲ್ಲೆ ಬಿಟ್ಟು ಕತ್ತಲೆಗೆ ಮಂಗಳೂರಿಗೆ ಮರಳಿದೆವು. ಆ ಸಂಜೆ ದೇವಕಿಯ ವಾಟ್ಸಪ್ಪಿಗೆ ನಮ್ಮ ಆಮಂತ್ರಣಕ್ಕೆ ಪ್ರತಿಕ್ರಿಯೆ ಎಂಬಂತೆ ಗೌಡರ ಕೆಲವು ಬೆದರಿಕೆಯ ಸಂದೇಶಗಳು ಬಂದವು. ನಾನು ಒಮ್ಮೆ ಉತ್ತರಿಸಿದೆ. ಮತ್ತೆ ತರ್ಕವಿಲ್ಲದ ಗೇಲಿ ಮಾತುಗಳಿಗೆ ಮೌನಿಯಾದೆ. ಅವರು ನಿಗೂಢವಾಗಿಯೇ ಮುಗಿಸಿದ್ದನ್ನು ನೋಡಿ:

ಗೌಡ್ರು: ನನ್ನ ಜಾಗದಲ್ಲಿ ನೀವು ಮಾಡೋ ಪ್ರೋಗ್ರಾಮಿಗೆ ನನ್ನ ವಿರೋಧವಿದೆ. Anything may be happening on that day. I think you are mistaken my softness
ನನ್ನುತ್ತರ: ಸ್ವಾಮೀ ಜಾಗ ನಮ್ಮದು ಎನ್ನುವುದಕ್ಕೆ ದಾಖಲೆಗಳನ್ನು ನಿಮಗೆ ನಾನು ಬಿಸಿಲೆಯಲ್ಲೂ ನಿಮ್ಮ ಮನೆಗೆ ಬಂದಾಗಲೂ ತೋರಿಸಿದ್ದೇನೆ. ನೀವು ಯಾವಾಗಲೂ ಯಾವುದೇ ದಾಖಲೆಗಳನ್ನು ತೋರಿಸಿಲ್ಲ. ನೀವೇ ಸೂಚಿಸಿದಂತೆ ನನ್ನ ದಾಖಲೆಗಳನ್ನು ನಾನು ಸರ್ವೆ ಮಾಡಿಸಿ ಮತ್ತೊಮ್ಮೆ ಖಾತ್ರಿಪಡಿಸಿಕೊಂಡಿದ್ದೇನೆ. ಹೀಗಾಗಿ ಅನಗತ್ಯ ಮನಸ್ತಾಪ ಬೇಡ. ಕಾರ್ಯಕ್ರಮಕ್ಕೆ ಬನ್ನಿ, ನಮ್ಮ ನಡುವೆ ನಿಷ್ಠುರದ ಅಗತ್ಯವಿಲ್ಲ.
ಗೌಡ್ರು: ನೀವು ಮನೆಗೆ ಬಂದಾಗ ಹೇಳಿದಿರಿ – ಸರ್ವೆ ಮಾಡಿಸೋಣ ಅಂತ ಹಾಗೆ ಹೇಳಿದಿರಿ. ಸರ್ವೆ ದಿನ ನಮ್ಮ ಕರೀತೀವಿ ಅಂತ. ಸರ್ವೆ ಆಗಿಲ್ಲ ನಮ್ಮ ಕರಿಯಲೂ ಇಲ್ಲ ಯಾಕೆ. ನಾವೇನು ದನ ಕಾಯಲ್ಲ ಸ್ವಾಮೀ. ನಮಗೆ ನನ್ನ ಬಿಬಿ ಪ್ರಾಪರ್ಟಿ ಕಾಯ್ಕೊಳ್ಳೋದು ಗೊತ್ತು. ಹಾಗೆ ಈ ಮೆಸೇಜುಗಳನ್ನು ಎಲ್ಲ ಡಿಪಾರ್ಟ್ಮೆಂಟ್ ಅಫೀಶಿಯಲ್ಸ್ ಗೆ ಕಳಿಸ್ತೀನಿ. ಅವರುಗಳು ಹೇಗೆ ಬರ್ತಾರೆ ನೋಡೋಣ. ಹಾಗೆ ನೀವು ಯಾರ ಅನುಮತಿಯಿಂದ ಸೋಲಾರ್ ಫೆನ್ಸಿಂಗ್ ಕಟ್ ಮಾಡಿ ಒಳಕ್ಕೆ ಎಂಟ್ರಿ ಆದೀರಿ. Finally I will give shock treatement.

ಅವರು ಆ ಎಲ್ಲ ಸಂದೇಶಗಳನ್ನು ಏನು ಮಾಡಿದರೋ ತಿಳಿದಿಲ್ಲ, ನಾನಂತೂ ಅವನ್ನು ಗುಟ್ಟಾಗಿ ಇಟ್ಟುಕೊಳ್ಳಲಿಲ್ಲ. ಆದರೆ ನಮ್ಮ ಸಭಾ ಕಲಾಪದಲ್ಲಿ ಅದರ ನಿಟ್ಟಿನಲ್ಲಿ ಅನಾವಶ್ಯಕ ಮಾತು ಬೆಳೆಯದಂತೆ ಎಚ್ಚರವನ್ನು ವಹಿಸಿದೆ. ಲೋಕಾರ್ಪಣೆ ಸಾಂಗವಾಗಿ ನೆರವೇರಿದ್ದು ನೀವೆಲ್ಲ ಓದಿದ್ದೀರಿ. ಆ ಸಂಜೆಗಾಗುವಾಗ ನಾಲ್ವರನ್ನುಳಿದು ಎಲ್ಲರೂ ಅವರವರ ಕೆಲಸದ ನೆಲೆಗಳತ್ತ ಹೋಗಿಯಾಗಿತ್ತು. ನಾನು, ದೇವಕಿ ಅಂದು ಅಲ್ಲೇ ಉಳಿಯುವುದೆಂದು ನಿರ್ಧರಿಸಿದ್ದೆವು. ಯೋಜನೆಯಂತೇ ನಮಗೆ ಜತೆಗೊಡಲು ಸಭೆಗೆ ಬಂದಿದ್ದ ಸುಂದರರಾಯರೂ ಉಳಿದುಕೊಂಡರು. ಡಾ| ಯಶಸ್ವಿ ನಮ್ಮ ಹೆಚ್ಚಿನ ಬಲಕ್ಕೆಂಬಂತೆ, ಸ್ವಯಂಪ್ರೇರಣೆಯಿಂದ ನಿಂತರು. ಸಣ್ಣದಾಗಿ ವಠಾರ ಶುದ್ಧಿ ನಡೆಸಿದೆವು.

ಮೂವರು ಬದಲಾವಣೆ ಮತ್ತು ಚರವಾಣಿ ಸಂಪರ್ಕಗಳಿಗಾಗಿ ರಸ್ತೆಯಲ್ಲೇ ವೀಕ್ಷಣ ಕಟ್ಟೆಯವರೆಗೆ ನಡೆದೇ ಹೋಗಿ ಬಂದೆವು. ಕತ್ತಲೊಡನೆ ಕವಿಯುತ್ತಿದ್ದ ಚಳಿಗೆ ಗ್ಯಾಸಿನಲ್ಲೇ ಕಾಯಿಸಿ ಮಾಡಿದ ಬಿಸಿನೀರ ಸ್ನಾನ ಚೇತೋಹಾರಿಯಾಯ್ತು. ಹಗಲಲ್ಲಿ ತರಿಸಿದ್ದ ತಿನಿಸುಗಳೆಲ್ಲ ಸಾಕಷ್ಟು ಉಳಿದಿದ್ದವು. ಅವುಗಳು ಸದುಪಯೋಗವಾಗುವಂತೆ ಮರಳಿಸುವಾಗ, ನಮ್ಮ ರಾತ್ರಿಯ ಅಗತ್ಯಕ್ಕೆ ಸ್ವಲ್ಪ ಉಳಿಸಿಕೊಂಡಿದ್ದೆವು. ಅವೇ ನಮ್ಮ ರಾತ್ರಿಯೂಟ. ಸಾಕಷ್ಟು ಬೇಗನೇ ನಿಶ್ಚಿಂತ ಸುಖನಿದ್ರೆಗೆ ಜಾರಿದೆವು. ಹದಿನೈದು ವರ್ಷದ ‘ಅಶೋಕವನ’ವೆಂಬ ‘ವನ್ಯ Some-ರಕ್ಷಣೆ’, ಏಳು ವರ್ಷದ ‘ಕಪ್ಪೆ ಜಾತ್ರೆ’, ಮೂರು ವರ್ಷದ ‘ಕಪ್ಪೆಗೂಡು’ ಎಂಬೆಲ್ಲ ರಮ್ಯ ಕನಸುಗಳು ವಾಸ್ತವದಲ್ಲಿ ಸಾಕಾರಗೊಂಡ ಸಂತೋಷ ನಮ್ಮದು. ಉದ್ದೇಶಿಸಿದ ಭವ್ಯ ಲಕ್ಷ್ಯ್ಯಗಳೆಲ್ಲ ಇನ್ನು ಸಾಧಕರ ಸೀಮೆಯವು ಮತ್ತೂ ಅನಂತವೂ ಹೌದು.

ಈಚೆಗೆ ಅಮೆರಿಕಾ ಪ್ರವಾಸದಲ್ಲಿದ್ದ ಗೆಳೆಯ ರಾಜೇಶ್ ನಾಯಕ್, ಅನುಭವಿಸಿದ `ಮ್ಯೂರ್ ವುಡ್ಸಿ’ನ ಕತೆಯನ್ನು ಫೇಸ್ ಬುಕ್ಕಿನಲ್ಲಿ ಓದಿದಾಗ ನನಗೆ ಹೆಚ್ಚಿನ ರೋಮಾಂಚನವೇ ಆಗಿದೆ. ಒಂದು ಶತಮಾನದ ಹಿಂದೆಯೇ (೧೯೦೫) ಮನುಕುಲದ ಉಳಿವಿಗೆ ವನ್ಯ ಸಂರಕ್ಷಣೆಯ ಆವಶ್ಯಕತೆಯನ್ನು ಮನಗಂಡವರು ಅಮೆರಿಕಾದ ನಿಜ ರಾಜಕಾರಣಿ ವಿಲ್ಯಂ ಕೆಂಟ್. ಅಲ್ಲಿ ಅದಾಗಲೇ ಲಕ್ಷಾಂತರ ಎಕ್ರೆಯ ರೆಡ್ ವುಡ್ಡ್ ಎಂಬ ಭಾರೀ ಮರಗಳ ಪ್ರಾಕೃತಿಕ ಕಾಡು ನಾಗರಿಕತೆಯ ದುರಾಶೆಗೆ ಬಲಿಯಾಗಿಹೋಗಿತ್ತು. ಈ ಕೆಂಟ್ ಮಹಾಶಯ ಉಳಿದಿದ್ದ ಸುಮಾರು ಆರ್ನೂರು ಎಕ್ರೆಗಳಷ್ಟು ಕಾಡನ್ನು ಕೇವಲ ಸಂರಕ್ಷಣೆಗಾಗಿ ಸ್ವಂತ ಹಣದಲ್ಲಿ ಖರೀದಿಸಿದ್ದ. ಇದು ವನ್ಯಸಂರಕ್ಷಣೆಯ ವಿಶ್ವ ಇತಿಹಾಸದಲ್ಲೇ ಪ್ರಥಮವಿರಬೇಕು. ನಮ್ಮದು ಜುಜುಬಿ ಹದಿನೈದು ಎಕ್ರೆಯಿರಬಹುದು.

ಆದರೆ ಅನ್ಯ ಆರೋಗ್ಯಪೂರ್ಣ ಮನಸ್ಸುಗಳು ಇದರಿಂದ ಪ್ರೇರಣೆ ಪಡೆದು, ಬೇಗನೆ ಇಂಥಾ ಅನೇಕ ತುಣುಕುಗಳನ್ನು ಸೇರಿಸುವುದಿದ್ದರೆ, ಆರ್ನೂರಲ್ಲ ಆರು ಸಾವಿರಕ್ಕೆ ವ್ಯಾಪಿಸುವುದು ದೊಡ್ಡ ಮಾತಾಗದು. ವನ್ಯ ಹಾಗೂ ಕೃಷಿ ಸಂಘರ್ಷದ ಕಥನಗಳು ಈಚೆಗೆ ಹೆಚ್ಚುತ್ತಲೇ ಇವೆ. ಇದಕ್ಕೆ ಪರಿಹಾರವಾಗಿ, ಈಚೆಗೆ ಆಫ್ರಿಕಾ ಕಂಡುಕೊಂಡ ಸತ್ಯವನ್ನು ಉಲ್ಲಾಸ ಕಾರಂತರು ಹೇಳುವುದನ್ನು ಕೇಳಿದ್ದೇನೆ. ಆ ಪ್ರಕಾರ, ವನಧಾಮಗಳು ಸರಕಾರೀ ಸೊತ್ತುಗಳಲ್ಲ, (ಖಾಸಗಿ ಕಂಪೆನಿಗಳದ್ದಂತು ಅಲ್ಲವೇ ಅಲ್ಲ!) ಆಯಾ ವಲಯದ ಜನ ಸಮುದಾಯದ್ದು. ಸಮುದಾಯಗಳು ವನ್ಯವಿರೋಧಿಯಾಗದಂತೆ ಉಸ್ತುವಾರಿಯನ್ನು ಮಾತ್ರ ಸರಕಾರ ಉಳಿಸಿಕೊಂಡಿದೆ. ಹಾಗಾಗಿ ಇದುವರೆಗೆ ವನ್ಯದಂಚಿನಲ್ಲಿ ನಡೆದಿದ್ದ ಸಾಂಪ್ರದಾಯಿಕ ಕೃಷಿಗಳೆಲ್ಲ ವನ್ಯಸ್ನೇಹೀಯಾಗಿ ರೂಪಾಂತರ ಕಾಣುತ್ತಿವೆ. ಕೃಷಿಕ್ಷೇತ್ರಗಳಿಗೆ ಅನಿವಾರ್ಯವಾಗಿದ್ದ ಬೇಲಿ, ಅಗಳು, ಪಾಗಾರಗಳಂಥ ದೊಡ್ಡ ರಕ್ಷಣಾ ಬಂಧಗಳೆಲ್ಲ ಕೇವಲ ವಸತಿ ವಠಾರಗಳಿಗೆ ಸಂಕೋಚಗೊಳ್ಳುತ್ತಿವೆ.

ಜನ ತಮ್ಮೆಲ್ಲ ಶ್ರಮ, ಸಲಕರಣೆಗಳನ್ನು ವನ್ಯಸ್ನೇಹೀ ಪ್ರವಾಸೋದ್ಯಮಕ್ಕೆ ಪರಿವರ್ತಿಸಿಕೊಂಡಿದ್ದಾರೆ. ವನ್ಯದ ದುಷ್ಪ್ರಭಾವ ಸಂತ್ರಸ್ತರು ಈಗ ಸುವಾರ್ತಾ ಪ್ರಚಾರಕರು. ಅದು ಅವರ ಹೂಡಿಕೆ ಇಲ್ಲದ ಆದಾಯ ಮೂಲವೂ ಹೌದು. ಸದ್ಯ ನಮ್ಮಲ್ಲಿನ ಸರಕಾರೀ ಧೋರಣೆ ಆಫ್ರಿಕಾದ ಆದರ್ಶಕ್ಕೆ ಹೊಂದದಿರಬಹುದು. ಆದರೆ ‘ಅಶೋಕವನ’ದಂತೆ ಖಾಸಗೀ ವನ್ಯ ಸಂರಕ್ಷಣಾ ನೆಲೆಗಳನ್ನು ಮಾಡುವುದು ಕಷ್ಟವಾಗದು. ನಾನು ಕಂಡಂತೆ, ಎಲ್ಲ ವನಧಾಮಗಳ ಅಂಚಿನಲ್ಲೂ ಅವಕಾಶಗಳು ಧಾರಾಳ ಇವೆ. ಕುದುರೆಮುಖ ಹತ್ತುವವರಿಗೆ ಮುಳ್ಳೋಡಿಯ ಕೃಷಿಕ ರಾಜಪ್ಪಗೌಡರು, ಕುಮಾರ ಪರ್ವತ ಏರುವವರಿಗೆ ಗಿರಿಗದ್ದೆಯ ಕೃಷಿಕ ಮಹಾಲಿಂಗೇಶ್ವರ ಭಟ್ಟರು, ಶರಾವತಿ ಹಿನ್ನೀರು ಅನುಭವಿಸಬೇಕೆಂಬವರಿಗೆ ‘ಅಡ್ವೆಂಚರರ್ಸ್’ನ ಹೊನ್ನೆಮರಡು ಸ್ವಾಮಿ ದಂಪತಿಗಳಂತೇ ನನ್ನರಿವಿಗೆ ಬಾರದ ಇನ್ನೂ ಎಷ್ಟೋ ಮಂದಿ ಹಲವು ವರ್ಷಗಳಿಂದ ನಮ್ಮೆಲ್ಲ ಸರಕಾರೀ ಅವ್ಯವಸ್ಥೆಗಳ ನಡುವೆಯೂ ಇದನ್ನು ನಡೆಸುತ್ತಲೂ ಇದ್ದಾರೆ. ಬ್ಯಾಂಕ್ ಠೇವಣಿ, ಸೈಟು, ಫ್ಲ್ಯಾಟುಗಳೆಂದು ಜೀವನ ಭದ್ರತೆಗಾಗಿ ಹೂಡಿಕೆ ಮಾಡುವವರಂತೂ ಇಲ್ಲಿ ಧಾರಾಳ ತೊಡಗಿಕೊಳ್ಳಬಹುದು. ಅರಿವಿಲ್ಲದೇ ‘ಖಾಸಗೀ ವನ್ಯ ಸಂರಕ್ಷಣೆ’ಯ ದೊಡ್ಡ ಆದರ್ಶಕ್ಕೆ ತಮ್ಮ ಕಿರಿ ಸೇವೆಯನ್ನು ಮಾಡಬಹುದು.