ಉಡುಪಿ ಇಂದ್ರಾಳಿ ಸಮೀಪದ ಜಗನ್ನಾಥರಿಗೆ (ವೃತ್ತಿತಃ ಏನೋ ವರ್ಕ್ ಶಾಪ್ ಮಾಲಿಕ) ಮೂಡಬಿದ್ರೆಯ ಸೋನ್ಸರೊಂದಿಗೆ ಒಳ್ಳೆಯ ಸ್ನೇಹಾಚಾರವಿತ್ತು. ಅವರಂತೆ ಇವರೂ ಹವ್ಯಾಸೀ ಡೌಸರ್. ಜಗನ್ನಾಥರ ಇನ್ನೋರ್ವ ಗೆಳೆಯ ಕೃಷ್ಣ ಭಟ್. ಭಟ್ಟರು ಜಿಲ್ಲೆಗೆ ಬರುತ್ತಿದ್ದ ವಿದೇಶೀಯರೂ ಸೇರಿದಂತೆ ಜನಪದ ತಜ್ಞರಿಗೆ ಕ್ಷೇತ್ರಕಾರ್ಯದಲ್ಲಿ ಸಹಾಯಕನಾಗಿ, ದುಭಾಷಿಯಾಗಿ ಕೆಲಸ ಮಾಡುತ್ತ ಅಪಾರ ಅನುಭವ ಗಳಿಸಿದ್ದವರು. ಸಹಜವಾಗಿ ಅವರಿಗೂ ನನ್ನಲ್ಲಿ ಒಳ್ಳೆಯ ಸ್ನೇಹಾಚಾರವಿತ್ತು. ಜಗನ್ನಾಥರ ಆಸಕ್ತಿ ಸಹಸ್ರದಲ್ಲಿ ಧ್ಯಾನ, ಪಿರಮಿಡ್ ಶಕ್ತಿ, ಅಂಜನ, ಆರ, ಜೀವಚೈತನ್ಯ, ರೇಕಿ, ನಿಧಿಶೋಧ ಮುಂತಾದ ಅಲೌಕಿಕ, ಅಧ್ಯಾತ್ಮಿಕ ತಂತ್ರಗಳೂ ಇದ್ದವು. ಜಗನ್ನಾಥರಿಗೆ ಇವಕ್ಕೆ ಬೇಕಾದ ಪುಸ್ತಕಗಳಲ್ಲಿ ಹಲವು ಕಾಲಕಾಲಕ್ಕೆ ನನ್ನಲ್ಲೇನೋ ಖರೀದಿಗೆ ಸಿಗುತ್ತಿತ್ತು. ಆದರೆ ಅವನ್ನು ಗಟ್ಟಿಯಾಗಿ ಓದಿ ಹೇಳುವ ಮತ್ತು ಅರ್ಥೈಸಿಕೊಡುವ ಜವಾಬ್ದಾರಿ ಕೃಷ್ಣಭಟ್ಟರದ್ದಾಗಿತ್ತು.

ಬಾಲ್ಯದಲ್ಲಿ ವಿಮಾನ ಮಾದರಿಗಳ ತಯಾರಿಯಿಂದ ತೊಡಗಿ, ತಾರುಣ್ಯದಲ್ಲಿ ಸ್ವಶಿಕ್ಷಣ ಮತ್ತು ವಿನ್ಯಾಸದಲ್ಲಿ ಹ್ಯಾಂಗ್ ಗ್ಲೈಡರ್, ಪವರ್ ಗ್ಲೈಡರ್ಗಳನ್ನು ಕಟ್ಟಿ, ಪಳಗಿಸಿ, ಅದನ್ನೇ ಜೀವನವೃತ್ತಿಯಾಗಿಯೂ ಅನುಸರಿಸಲು ಇನ್ನಿಲ್ಲದಂತೆ ಹೆಣಗಿದ ಸಾಹಸಿ. ಆತನ ಮಂಗಳೂರು – ಮಣಿಪಾಲ ಪವರ್ ಗ್ಲೈಡರ್ ಹಾರಾಟವಂತೂ ಈ ವಲಯಕ್ಕೆ ನಿಸ್ಸಂದೇಹವಾಗಿ ಪ್ರಥಮ (ಸುಮಾರು ೧೯೯೦ರ ದಶಕದಲ್ಲಿರಬೇಕು) ಮತ್ತು ಈವರೆಗೆ ಮುರಿಯದ ದಾಖಲೆ! ಇನ್ನೊಂದು ಬೈಕ್ ಸವಾರ ಕೇದಗೆ ಅರವಿಂದ ರಾವ್ ಓದಿನ ಯೋಗ್ಯತೆಯಲ್ಲಿ (ಜೀವರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ) ಯಾವುದೋ ಶಿಕ್ಷಣ ಸಂಸ್ಥೆ/ ವಿವಿನಿಲಯ ಸೇರಿ ಅಧ್ಯಾಪನ, ಸಂಶೋಧನೆ ಎಂಬ ನಾಟಕಗಳನ್ನಾಡುತ್ತ ಸುಖಲೋಲುಪನಾಗುವುದು ಬಿಟ್ಟು, ಸ್ವೋದ್ಯೋಗದ ಮೂಲಕ ತಾಬೇದಾರಿಯನ್ನು ತಿರಸ್ಕರಿಸಿ ನಿಂತ ಸಾಹಸಿ. ಕಮಲಜಿತ್ ಲ್ಯಾಬೊರೇಟರಿಯಿಂದ ತೊಡಗಿ ಇಂದು ‘ನೋವಾ ಮೆಡಿ ಟೆಕ್’ ಹೆಸರಿನ, ಕೆಲವು ಶಾಖೆಗಳ ವೈದ್ಯಕೀಯ ಪರೀಕ್ಷಾ ಸಂಸ್ಥೆಯನ್ನು ಕಟ್ಟಿ ನಡೆಸುತ್ತಿದ್ದಾರೆ. ಆರೋಹಣದ ಮೊದಲ ವರ್ಷಗಳ ಸಾಹಸ ಯಾನಗಳೆಲ್ಲ ಅರವಿಂದ ಯಾನೆ ಜಂಕೂಸ್ ‘ಜಂಕೂಸ್’ ಇಲ್ಲದೇ ನಡೆದದ್ದೇ ಇಲ್ಲ ಎಂದರೆ ತಪ್ಪಾಗದು. ಪ್ರಸ್ತುತ ಗುಹಾನ್ವೇಷಣೆಯಲ್ಲಿ ಇವರು ನಮ್ಮ ಚಿತ್ರಗ್ರಾಹಿಯೂ ಹೌದು. (ಹೆಚ್ಚಿನ ವಿವರಗಳಿಗೆ ನನ್ನ ಜಾಲತಾಣ ನೋಡಿ, ಮುಖ್ಯವಾಗಿ ‘ದಕ್ಷಿಣ ಭಾರತದಲ್ಲಿ ಚಕ್ರವರ್ತಿಗಳು’) ಅವರ ಬೆನ್ನೇರಿ ಬಂದವ ಶಾಂತಾರಾಮ – ನನ್ನ ಅಂಗಡಿಯ ಉತ್ಸಾಹಿ ಸಹಾಯಕ.
ಕೃಷ್ಣಭಟ್ಟರ ಸ್ಕೂಟರ್ ಬೆನ್ನಿಗೇರಿ ಬಂದ ಜಗನ್ನಾಥರು ನೇರ ‘ಮಂಕೀವಾಸ’ಕ್ಕೆ (ಮಂಚಿಯ ವಾಸಯೋಗ್ಯವಾದ ಗುಹೆಗೆ) ಮಾರ್ಗದರ್ಶಿಸಿದರು. ಅಲ್ಲಿ ಮೊದಲಿಗೆ ನಾವು ಶೋಧಿಸುವಂತದ್ದು ಏನೂ ಕಾಣಲಿಲ್ಲ. ಜಗನ್ನಾಥ್ ಭಾವಿಸಿದಂತೆ ಸಣ್ಣ ಮರೆಯಾಚೆ ಇದ್ದಿರಬಹುದಾದ ಗುಹೆಯ ಶೋಧ ಮಾಡುವುದೆಂದರೆ, ಕೃತಕ ಗುಹೆ ಕೆತ್ತುವುದೇ ಆಗಬಹುದು ಎಂದೇ ಹೇಳಿದೆವು. ಅಷ್ಟಕ್ಕೆ ಅವರಿಬ್ಬರು ನಿರಾಶರಾಗಲಿಲ್ಲ. “ಬದಲಿಗೆ ಇನ್ನೂ ರೋಚಕವಾದದ್ದನ್ನೇ ತೋರಿಸುತ್ತೇವೆ” ಎಂದು ನಮ್ಮನ್ನು ಮಣಿಪಾಲ ಪದವಿನ ತಪ್ಪಲಿನಲ್ಲೇ ಮಂಕೀಗಿಂತ ತುಸು ಪೂರ್ವಕ್ಕೆ ಕರೆದೊಯ್ದರು. ಅದೇ ದುಗ್ಗುಳಮಾಟೆ ಎಂಬ ಗುಹಾಜಾಲ. (ಇಂದಿನ ಮಣಿಪಾಲದಲ್ಲಿ ‘ದಶರಥ ನಗರ’ದ ಅಂಚಿನ ‘ಅರ್ಬಿ’ ಇರಬೇಕು).
ಆತಿಥೇಯರಾದ ಜಗನ್ನಾಥ ಮತ್ತು ಕೃಷ್ಣಭಟ್ಟರು ನಮ್ಮ ಅನಾವಶ್ಯಕ ಹೊರೆಗಳೊಡನೆ ಹೊರಗೆ ಉಳಿದಂತೆ ನಾವು ನಾಲ್ವರು ದುಗ್ಗುಳಮಾಟೆ ಪ್ರವೇಶಿಸಿದೆವು. ಎಂದಿನಂತೆ ಆದಷ್ಟು ಮೈಮುಚ್ಚುವ ಉಡುಗೆ, ಬೆಳಕಿಗೆ ಟಾರ್ಚ್, ಪರಸ್ಪರ ರಕ್ಷಾ-ಬಂಧಕ್ಕೂ ಅಳತೆಗೂ ಒದಗುವಂತೆ ಉದ್ದದ ಹಗ್ಗ, ಆತ್ಮ ರಕ್ಷಣೆಗೆ ಕತ್ತಿ, ಎಲ್ಲಕ್ಕೂ ಮಿಗಿಲಾಗಿ ಕಣ್ಣು, ಕಿವಿ, ಮೂಗುಗಳ ಮಹದೆಚ್ಚರದೊಡನೆ ನಿಧಾನಕ್ಕೆ ಒಳ ನಡೆದೆವು. ಹೊರವಲಯದಲ್ಲಿ ಬಾವಲಿ ಹಾರಾಟ ವಿರಳವಿದ್ದರೂ ಒಳಗೆ ಹೋದಂತೆ ಹೆಚ್ಚುವ ನಿರೀಕ್ಷೆ ಇತ್ತು, ಸಿಕ್ಕಿತ್ತು. ವರ್ಷಪೂರ್ತಿ ಕೆರೆಯಲ್ಲಿ ನೀರುಳಿಯುತ್ತದಂತೆ. ಸಹಜವಾಗಿ ಅಲ್ಲಿ ಇಂಚುದ್ದದಿಂದ ಗೇಣುದ್ದದವರೆಗೆ ಮೀನುಗಳಾಡುವುದೂ ಮನೋಹರವಾಗಿತ್ತು. ಕಣ್ಣನ್ನು ಕತ್ತಲೆಗೂ ಮೂಗನ್ನು ಅಧಿಕ ತೇವಾಂಶ ಹಾಗೂ ಬಾವಲಿ ಮೂರಿಗೆ ಹೊಂದಿಸಿಕೊಳ್ಳುತ್ತಿದ್ದೆವು. ಆದರೆ ಅವುಗಳ ಜತೆಗೇ ಹಿಂದೆ ಯಾವ ಗುಹೆಯಲ್ಲೂ ಸಿಗದ ಜಿರಳೆ ವಾಸನೆ ಬಂದಂತಾಯ್ತು! ಪೂರಕವಾಗಿ ಒಂದೆರಡು ಕಡೆ ಗುಹೆಯ ಮೂಲೆಯಲ್ಲಿ ಜಿರಳೆಗಳು ಕಾಣಿಸಿದ್ದನ್ನೂ ಅಂದು ಸಣ್ಣ ಆಶ್ಚರ್ಯದೊಡನೆ ಗ್ರಹಿಸಿದ್ದೆವು. ಆದರೆ ಇಂದು ಸಖೇದ ಯೋಚಿಸುವಂತಾಗಿದೆ. ಇಂದಂತೂ (ಮಣಿಪಾಲದ ವಿಸ್ತರಣೆ -) ದಶರಥ ನಗರ ಬಹುತೇಕ ಇದರ ನೆತ್ತಿಯವರೆಗೂ ವ್ಯಾಪಿಸಿದೆ. ಅಂದರೆ ನಲ್ವತ್ತು ವರ್ಷಗಳ ಹಿಂದೆಯೇ ನಾಗರಿಕ ಕೊಳಚೆ ನೀರು ದುಗ್ಗುಳ ತೀರ್ಥದ ಮೂಲವನ್ನು ಭೂಗರ್ಭದಲ್ಲಿ ಕಲುಷಿತಗೊಳಿಸಲು ಶುರು ಮಾಡಿತ್ತೇ? ಹಾಗಿದ್ದರೆ ಇಂದು, ದುಗ್ಗುಳ ಮಾಟೆ ಮತ್ತದರ ತೀರ್ಥದ ಪಾವಿತ್ರ್ಯ ಇನ್ನೆಷ್ಟು ಹಾಳಾಗಿರಬಹುದು?
ಗುಹೆ ಸುಮಾರು ಹತ್ತಡಿ ಅಗಲಕ್ಕಿತ್ತು, ನೆಲ – ತಗ್ಗು, ದಿಣ್ಣೆ ಕೊರಕಲು. ನಡುವೆ ಸುಮಾರು ಎರಡಡಿ ಅಗಲಕ್ಕೆ, ಹಾವಾಡುವ ಕಿರುತೊರೆ. ಅದರ ಪ್ರಭಾವದಲ್ಲಿ ನೆಲ, ಗೋಡೆ ಮುಟ್ಟಿದಲ್ಲೆಲ್ಲ ತಚಪಿಚ ಕೆಸರು. ಹೊರಗಿನ ಬಿಸಿಲ ಕಾವಿಗೆ ಒಳಗಿನ ತೇವಾಂಶ ಸೇರಿ ನಮ್ಮ ಮೈಯಲ್ಲಿ ಬೆವರ ತೊರೆಯೇ ಹರಿದಿತ್ತು. ನಾನು ಬೇಗನೇ ಕನ್ನಡಕವನ್ನು ಕಳಚಬೇಕಾಯ್ತು. ಗುಹೆಯ ಮಾಡು ಅತ್ಯುನ್ನತಿಯಲ್ಲಿ ಏಳೆಂಟಡಿ ಎತ್ತರಕ್ಕಿತ್ತು. ನೋಟಕ್ಕೆ ಒಣಗಿದ ಜೇನುಹುಟ್ಟಿನಂತೇ ಇದ್ದರೂ ವಿರಳವಾಗಿ ತಟಕಿಕ್ಕುವ ನೀರು ನೋಡುವಾಗ, ಎಂದೂ ನಮ್ಮನ್ನು ಕವಿದು ಬೀಳಬಹುದಾದ ಆಪತ್ತಿನಂತೆಯೂ ಇತ್ತು. ತೊರೆಯ ಬಲದಂಡೆಯಿಂದ ಹೊರಟವರು, ಅದರ ತಿರುವಿಗೆ ವಿರುದ್ಧವಾಗಿ ಎಡ ದಂಡೆಗೆ ಕುಪ್ಪಳಿಸಿ ಮುಂದುವರಿದೆವು.
ಈಗ ಅಲ್ಲಿ ಇಲ್ಲಿ ಮೇಲಿನ ಕಲ್ಲ ಮೊಳಕೆಗಳು ತಿವಿಯುವಾಗ ತೊರೆ ನೀರು ಬಾಯಿಗೇ ಬಂತು. ಆದರೇನು ಮುಂದಿನ ಇಣುಕು ನೋಟ ಆಶಾದಾಯಕವಾಗಿಯೇ ಇತ್ತು. ಮತ್ತು ನಮಗೆ ಅಂಬರೀಷ ಗುಹೆಯ ಅನುಭವದ ಬಲವೂ ಸುಲಭದಲ್ಲಿ ಬಿಟ್ಟು ಕೊಡದ ಹಠ ಬೆಳೆಸಿತ್ತು. ತಲೆಯನ್ನು ಅಡ್ಡ ಹಾಕಿ ತೆವಳಿದೆವು. ಒಂದು ಕಣ್ಣು, ಕಿವಿ, ಮೂಗು ನೀರಲ್ಲಿ ಮುಳುಗಿದ್ದಂತೆ, ಒಕ್ಕಣ್ಣ ನೋಟದಲ್ಲಿ ಪರಿಸ್ಥಿತಿ ಅಂದಾಜಿಸಿಕೊಳ್ಳುತ್ತ, ಒಂದು ಕಟವಾಯಿಯಲ್ಲೇ ಉಸಿರಾಡುತ್ತ ಮೂರು ನಾಲ್ಕಡಿ ಪ್ರಗತಿ ಸಾಧಿಸಿದೆವು. ಇದು ಹೇಳಿದಷ್ಟು ಸರಳವಲ್ಲ. ನಾವು ಕೈ ಕಾಲುಗಳನ್ನು ಆಡಿಸುವುದಾಗಲೀ ದೇಹ ತಳ್ಳುವುದಾಗಲೀ ಬಹಳ ಎಚ್ಚರದ ಮತ್ತು ನಿಧಾನದ ಕ್ರಿಯೆಗಳು. ಇಲ್ಲವಾದರೆ ಅಲ್ಲಿನ ಪ್ರಾಕೃತಿಕ ಸಮತೋಲನ ತಪ್ಪಿ ಏನೂ ಆಗಬಹುದಿತ್ತು.
ಅರೆ-ಜಲಂತರ್ಗಾಮಿತ್ವ ಸುಮಾರು ಮೂರು ನಾಲ್ಕಡಿ ಉದ್ದಕ್ಕೆ ಸೀಮಿತವಿತ್ತು. ಒಟ್ಟಾರೆ ಸುಮಾರು ಹದಿನೈದಡಿ ತೆವಳಿದ ಮೇಲೆ ಮೂರು ನಾಲ್ಕು ಮಂದಿ ಸರಿಯಾಗಿ ತಲೆ ಎತ್ತಿ ಕುಳಿತುಕೊಳ್ಳುವಷ್ಟು ಗುಹೆ ವಿಸ್ತರಿಸಿಕೊಂಡಿತು. ಅದರ ಕೊನೆಯಲ್ಲಿ ನಮ್ಮನ್ನು ಪುರಸ್ಕರಿಸುವಂತೆ ಸುಮಾರು ಎರಡಡಿ ಎತ್ತರದ ಪುಟ್ಟ ಜಲಪಾತವೇ ಕಾದಿತ್ತು. ಅದರ ಶಬ್ದ ಸೊಕ್ಕು ನಮ್ಮೆಲ್ಲ ಮಾತುಗಳನ್ನೇ ನುಂಗುವಂತಿತ್ತು. ಜಲಪಾತದಿಂದ ಮೇಲಕ್ಕೆ ಗುಹೆ ನಾವು ಬಂದ ಜಾಡಿಗಿಂತಲೂ ಸಪುರವಾಗಿತ್ತು. ಹಾಗೆಂದು ನಮ್ಮ ಪ್ರಯತ್ನದ ಕೊರತೆಯಾಗಬಾರದಲ್ಲ. ಎಚ್ಚರದಲ್ಲಿ ನಮ್ಮಲ್ಲೊಬ್ಬ ಅದಕ್ಕೂ ನುಗ್ಗಿದ್ದ. ಆಗ ನಾವು ನಿರೀಕ್ಷಿಸದ ಹೊಸದೇ ಸಮಸ್ಯೆ ಮೂಡಿತು. ನುಗ್ಗಿದವನ ದೇಹ ನೀರ ಹರಿವಿಗೆ ಅಣೆಕಟ್ಟು ಹಾಕಿದಂತಾಗಿ ಅತ್ತ ನೀರೇರತೊಡಗಿತು, ಇತ್ತ ಜಲಪಾತವೇ ಸ್ತಬ್ದವಾಯ್ತು. ಇದು ಅಲ್ಲಿನ ವಸ್ತುಸ್ಥಿತಿಗೆ ವಿರುದ್ಧವಾದ ಪ್ರಕ್ರಿಯೆ. ಮೊದಲೇ ತಚಪಿಚವಿರುವ ಗುಹೆಯ ಮಾಡು ಗೋಡೆ ಪ್ರವಾಹದ ತಟವಟಕ್ಕೆ ಕುಸಿಯಬಹುದಿತ್ತು. ಹಾಗಾಗಿ ಶೋಧ ನಿಲ್ಲಿಸಿದೆವು. ನುಗ್ಗಿದಷ್ಟೇ ತಾಳ್ಮೆಯಿಂದ ಹಿಂದೆ ಸರಿದು ಮತ್ತೆ ಗುಹಾಮುಖಕ್ಕೆ ಬಂದೆವು. ಈಗ ನಮ್ಮ ಕಣ್ಣುಗಳು ಕತ್ತಲೆಗೆ ಹೆಚ್ಚು ಹೊಂದಿದ್ದವು. ಹಾಗಾಗಿ ಪ್ರವೇಶಾಂಕಣದಲ್ಲೇ ಮೊದಲು ನಾವು ಕಾಣದ ಇನ್ನೊಂದೇ ನೀರ ಮಾಟೆ ಕಾಣಿಸಿತು. ಆದರೆ ಅದರ ದ್ವಾರದಲ್ಲೇ ಹೊಸದಾಗಿ ಮಣ್ಣು ಕುಸಿದ ಲಕ್ಷಣ ಕಂಡು ಬಂದದ್ದಕ್ಕೆ ಶೋಧ ಪ್ರಯತ್ನ ನಡೆಸಲಿಲ್ಲ.
ತೊರೆಯ ಇನ್ನೊಂದು ದಂಡೆಯಲ್ಲಿ ಕಣಿವೆಯ ಗೋಡೆ ಸ್ವಲ್ಪ ಜರಿದಿತ್ತು. ಅದರಿಂದ ಕಮರಿಯ ಮೇಲಿದ್ದ ಮಹಾ ಮರವೊಂದರ ತೋರದ ಬೇರೊಂದು ಪೂರ್ಣ ಬಯಲಾಗಿ, ಮರದ ಭವಿಷ್ಯವನ್ನೇ ಡೋಲಾಯಮಾನವಾಗಿಸಿತ್ತು. ಅದರ ಆಸುಪಾಸಿನಲ್ಲಿ ನೋಡುವಾಗ ಆ ಕುಸಿತಕ್ಕೆ ಕಾರಣವೆಂಬಂತೆ ಅಲ್ಲೂ ಇದ್ದ ಒಂದು ನೀರ ಮಾಟೆ ಕಾಣಿಸಿತು. ಕುಸಿತದಿಂದ ಅದರ ಪ್ರವೇಶದ ಸುತ್ತೆಲ್ಲ ಮೊಣಕಾಲಾಳದ ಗೊಸರಿದ್ದುದಕ್ಕೆ ನಾವು ಮುಂದುವರಿಯಲಿಲ್ಲ.
ನಾವು ಅಲ್ಲಿನೆಲ್ಲ ಸಾಧ್ಯತೆಗಳನ್ನು ಮುಗಿಸಿ, ನಿರಾಳವಾಗಿ ಹೊರಟು ನಿಂತಾಗ, ಅದುವರೆಗೆ ತಾಳ್ಮೆಯಿಂದ ಕಾದಿದ್ದ ನಮ್ಮಿಬ್ಬರು ಪ್ರೇರಕರೇ ಕಣ್ಣರಳಿಸಿ ನೋಡುವಂತಿದ್ದೆವು! ಕೆಸರು ಮೆತ್ತಿಕೊಂಡು, ನೀರು ಬಸಿಯುವ ಬಟ್ಟೆ. ಅದೂ ಮುಳ್ಳೋ ಕಲ್ಲೋ ಸಿಕ್ಕಿ ಕೆಲವೆಡೆ ಹರಿದಿತ್ತು. ಅದೃಷ್ಟಕ್ಕೆ ನಮ್ಮ ತರಚಲು ಗಾಯಗಳ ಜಿನುಗು ರಕ್ತ ಆ ಗೊಂದಲದಲ್ಲಿ ನೋಟಕರ ಕಣ್ಣು ತಪ್ಪಿಸಿತ್ತು. ನಾನು ತೊರೆಯಿಂದೆದ್ದವ ಅಂಗಿ ತೋಳಿನೊಳಗೇನೋ ಮುಲುಗುತ್ತಿದೆ ಎಂದು ಗುಂಡಿ ತೆರೆದಾಗಂತೂ ಪವಾಡಪುರುಷನೇ ಆಗಿಬಿಟ್ಟೆ; ದೊಡ್ಡ ಒಂದು ಮೀನು ಪುಳಕ್ಕೆಂದು ಮರಳಿ ತೊರೆ ಸೇರಿತ್ತು!ಹೊತ್ತು ಹೋಗುವುದಕ್ಕೆ ಎನ್ನುವಂತೆ, ಜಗನ್ನಾಥರು ಕೊಟ್ಟ ಪಿಕ್ಕಾಸಿ ಹಿಡಿದು, ಅವರೇ ಮುಚ್ಚಿಸಿದ್ದ ಒಂದು ಗುಹೆಯ ಬಾಯಿಯನ್ನು ಮೆಲ್ಲಗೆ ಬಿಡಿಸಿದೆವು. ಸ್ವಲ್ಪ ಮಣ್ಣು, ಪುಡಿ ಕಲ್ಲುಗಳನ್ನು ಹೊರಗೆಳೆದು ಹಾಕಿದಾಗ ನಾವು ನುಸುಳಬಹುದಾದ ಪ್ರಾಕೃತಿಕ ಅವಕಾಶ ಸ್ಪಷ್ಟವಾಯ್ತು. ಅದರ ಒಳಗೆ ‘ಅಪೂರ್ವ’ದ ದರ್ಶನವೇನಾದರೂ ಇದ್ದರೆ ತಾನು ಮೊದಲು ನೋಡುತ್ತೇನೆ ಎಂಬ ಉತ್ಸಾಹದಲ್ಲಿ ನೆವಿಲ್ ನುಗ್ಗಿದ.
ಶುದ್ಧ ತೆವಳು ಜಾಡು. ಮೊದಲ ಮೂರ್ನಾಲ್ಕು ಅಡಿ ಸಣ್ಣ ಇಳಿಜಾರು. ಮತ್ತೆ ತದ್ವಿರುದ್ಧವಾಗಿ ನಾಲ್ಕಡಿ ಏರು. ನೆವಿಲ್ ಸಿಲುಕಿಕೊಂಡರೆ ಕಾಲು ಹಿಡಿದು ಹಿಂದಕ್ಕೆಳೆಯುವಂತೆ ಉಳಿದವರಲ್ಲಿ ಒಬ್ಬರು ಆಪ್ತವಾಗಿಯೇ ಅನುಸರಿಸಿದ್ದೆವು. ಎಷ್ಟು ಆಪ್ತತೆ ಎಂದರೆ, ಮುಂದಿನವ ಅನಿರೀಕ್ಷಿತವಾಗಿ ‘ಮುನ್ನೂಕಲು’ ಕಾಲು ಚಾಚಿದರೆ, ಹಿಂದಿನವನ ‘ಮುಸುಡಿಗೆ ಒತ್ತ’ ಖಾತ್ರಿ ಇತ್ತು! ಹಾಗೆ ಕೊನೆಯಲ್ಲಿ ಸಿಕ್ಕ ಸುಮಾರು ಎರಡಡಿ ಆಳದ ತೆಮರಿನಿಂದಾಚೆಗೆ ಕೊಸರಾಡುವುದೂ ಕಷ್ಟವೆನ್ನುವ ಸ್ಥಿತಿ ಬಂತು. ನೆವಿಲ್ ಹಿಂದೆ ಸರಿದ. ಆತನ ಟಾರ್ಚ್ ದುಗ್ಗುಳ ಮಾಟೆಯಲ್ಲೇ ಮುಕ್ಕಾಲು ಶಕ್ತಿ ಕಳೆದುಕೊಂಡಿತ್ತು. ಹಾಗೆ ಆತನ ಕಾಣ್ಕೆಯನ್ನು ಅರವಿಂದ ಕೆದಕಿ ಕೇಳಿದಾಗ “ಎಂಥದ್ದೂ ಕ್ಲಿಯರಿಲ್ಲ ಮಾರಾಯಾ. ಪೂರಾ ಪುಡಿ ಕಲ್ಲು ಮತ್ತೆ ಎಂಥದ್ದೋ ತೋರಕ್ಕೆ, ಮರದ ಬೇರಿರಬೇಕು….” ಎಂದು ಹಾರಿಕೆ ನುಡಿಯಾಡಿದ. ಅವನ ಹಿಂದೆಯೇ ಹೋಗಿ ಬಂದಿದ್ದ ಶಾಂತಾರಾಮ “…ಆದರೆ ಆ ಬೇರಿನಂತದ್ದು ಸಣ್ಣದಾಗಿ ಮಿಸುಕಾಡಿದಂತೆ ಕಾಣುತ್ತಿತ್ತು…” ಎಂದಾಗ ಅರವಿಂದರಿಗೆ ತಡೆಯಲಿಲ್ಲ. ಸ್ವತಃ ನುಗ್ಗಿ ಮತ್ತಷ್ಟೇ ಚುರುಕಾಗಿ ಹಿಂದೆ ಬಂದದ್ದೇ ಘೋಷಿಸಿದರು “ಒಬ್ಬರಿಗೂ ಮಂಡೆ ಶುದ್ಧಯಿಲ್ಲ, ಅದು ಹೆಬ್ಬಾವು.”
ಕೃಷಿ ಹಿನ್ನೆಲೆಯಿಂದ ಬಂದ ಮತ್ತು ಜೀವವಿಜ್ಞಾನದ ಕಲಿಕೆಯೂ ಇದ್ದ ಅರವಿಂದರಿಗೆ ಹೆಬ್ಬಾವನ್ನು ಗುರುತಿಸಿದಷ್ಟೇ ಧೈರ್ಯವಾಗಿ ನಿಭಾಯಿಸುವುದೂ ಗೊತ್ತಿತ್ತು. ಆದರೆ ಅವರ ಉದ್ದೇಶ ಕ್ಯಾಮರಾ ಹಿಡಿದು ಇನ್ನೊಮ್ಮೆ ನುಗ್ಗಿ ಚಿತ್ರ ಹಿಡಿಯುವುದಾಗಿತ್ತು. ಹಾಗೆಂದು ಕ್ಯಾಮರಾ ನೋಡಿದರೆ, ದುಗ್ಗುಳ ಮಾಟೆಯ ಪ್ರಯೋಗಗಳಲ್ಲೇ ಅದರ ಬ್ಯಾಟರಿ ವೀಕಾಗಿ ಹೋಗಿತ್ತು. ಆಗ ಜಗನ್ನಾಥರು ಜಾಗೃತರಾದರು. ತಮ್ಮ ನೆಲದ ಮೂಲವಾಸಿಯನ್ನು ಚಿತ್ರದಲ್ಲಾದರೂ ಹಿಡಿದಿಟ್ಟುಕೊಳ್ಳುವ ಬಯಕೆಗೆ ಕೃಷ್ಣ ಭಟ್ಟರನ್ನೆಬ್ಬಿಸಿದರು. ಅವರು ಕೂಡಲೇ ಮಣಿಪಾಲಕ್ಕೆ ತಮ್ಮ ಸ್ಕೂಟರ್ ಓಡಿಸಿ, ಹೊಸ ಬ್ಯಾಟರಿ ಕೊಂಡು ಬಂದರು. ಒಟ್ಟಾರೆ ಸುಮಾರು ಅರ್ಧ ಗಂಟೆಯೊಳಗೇ ಅರವಿಂದರು ಪುನಃ ತೆವಳಿದರು. ಆದರೆ ಅಷ್ಟು ಹೊತ್ತಿನಲ್ಲಿ, ನಮ್ಮ ಗದ್ದಲಗಳಿಂದ (ಅಗೆತ, ತೆವಳು, ದೀಪ) ಜಾಗೃತವಾದ ಹೆಬ್ಬಾವು ಇನ್ನಷ್ಟು ಒಳ ಸರಿದಿತ್ತು. ಹಾಗೆಂದು ಇವರ ಪ್ರಯತ್ನವನ್ನು ಪೂರ್ಣ ತೆಗೆದುಹಾಕದಂತೆ, ಕೇವಲ ಮುಖ ದರ್ಶನವನ್ನಷ್ಟೇ ಕೊಟ್ಟಿತು.

ಮಣಿಪಾಲದಿಂದ ಬಡಗುಬೆಟ್ಟಿನತ್ತ ಹೋಗುವ ದಾರಿ ಹೆಚ್ಚು ಕಡಿಮೆ ಕುರುಚಲೂ ಇಲ್ಲದ ಅಪ್ಪಟ ಮುರಕಲ್ಲ ಪದವು. ಆ ಎತ್ತರದಲ್ಲೇ ಒಂದಷ್ಟು ಅಗಲಕ್ಕೆ ನೆಲ ಸುಮಾರು ನಾಲ್ಕಡಿ ಆಳಕ್ಕೆ ತಗ್ಗಿದಂತೇ ಇರುವ ಭಾರೀ ಗುಹೆ. ಅಂದು ಅದರ ಪ್ರಾಥಮಿಕ ಪರಿಚಯ ಮಾಡಿಕೊಂಡೆವು. ಮುಂದೆ ಇನ್ನೊಂದು ಸಾಕಷ್ಟು ದೊಡ್ಡ ತಂಡವನ್ನೇ ಕಟ್ಟಿಕೊಂಡು ಬಂದಾಗ ಹೆಚ್ಚು ವಿವರಗಳಲ್ಲೇ ನೋಡಿದ್ದೆವು.


ನಿಜವಾದ ಹೊಟ್ಟೆ ಎಳೆಯುವವನ/ಳ ದರ್ಶನ ವಿವರದೊಂದಿಗೆ ಹೊಟ್ಟೆ ಎಳೆಯುವ ಸಾಹಸಕ್ಕೆ ಮಂಗಳ ಹಾಡಿದಿರಿ.ಸರಣಿಯ ಎಲ್ಲ ಬರಹಗಳನ್ನೂ ಒಟ್ಟಾಗಿ ಓದುವಂತೆ ಪುಸ್ತಕ ರೂಪದಲ್ಲಿ ಕೊಟ್ಟಿದ್ದರೆ……
My first thought was ” oh my god, why do they do this !” Getting into narrow underground passages is very eerie. Just as I thought aren't there creepy crawlies the next sentence was about a python and kandodi. Just like George Mallory you may exclaim– see a cave go and explore.