ಹಾಮ ಭಟ್ಟ ಸ್ಮೃತಿ ಹಬ್ಬ – ೨೦೨೨

ಮೂರೂವರೆ ದಶಕಗಳ ಹಿಂದೆ ನಾನೊಂದು ಮೋಟಾರ್ ಸೈಕಲ್ ಸಾಹಸಯಾನದಲ್ಲಿ (ನೋಡಿ: ನೆಲ ನಿಲ್ಲಿಸುವುದು, ನೆಲ ಮುಳುಗಿಸುವುದು, ೧೯೮೮) ತುಮರಿ ಕಂಡದ್ದು ಬಹುತೇಕ ಮರವೆಗೆ ಸಂದಿತ್ತು. ದೀರ್ಘ ಬಿಡುವಿನ ಮೇಲೆ ಅಂದರೆ, ಕಳೆದ ಹತ್ತು ವರ್ಷಗಳಲ್ಲಿ, ನನಗೆ ಹೆಗ್ಗೋಡು ಒಡನಾಟ ಹೆಚ್ಚಾಗಿ, ಶರಾವತಿ ಸಾಗರದ ಪರಿಚಯ ಹೆಚ್ಚಿತು. ಜೋಗ, ಕೋಗಾರ ಘಾಟಿ, ಹಸಿರುಮಕ್ಕಿ, ಸಿಗಂದೂರು, ಹೊಸನಗರಗಳ ಭೇಟಿ ಮತ್ತು ಹೊನ್ನೇಮರಡಿನಲ್ಲಿ ಸಿಕ್ಕ ಆಪ್ತ ಸಾಹಸೀ ಅನುಭವದೊಡನೆ (ನೋಡಿ: ಶರಾವತಿ ಸಾಗರದ ಉದ್ದಕ್ಕೆ… ಒಟ್ಟಾರೆ ಶರಾವತಿ ನದಿಯ ಮುಳುಗಡೆ ವಲಯ ಹುಚ್ಚನ್ನೇ ಹತ್ತಿಸಿತ್ತು. ಇವಕ್ಕೆ ಗಜಾನನ ಶರ್ಮರ ‘ಪುನರ್ವಸು’ ಕಾದಂಬರಿಯ ಓದು (ನೋಡಿ: ಜೋಗದ ಗಜಾನನ ಶರ್ಮರಿಗೊಂದು ಪತ್ರ) ಮತ್ತು ಅಂತರ್ಜಾಲದ ಗೂಗಲ್ ನಕ್ಷೆಯ ವಿವರಗಳೂ ಬೆಸೆದುಕೊಂಡಾಗ ನಾನು ಕಾಣದ ಕನಸಿಲ್ಲ. ಇವಕ್ಕೆ ಕಲಶ ರೂಪವಾಗಿ ರಘು ಹಾಲ್ಕೆರೆಯಿಂದ ಕರೆ ಬಂತು “ಬನ್ನಿ ತುಮರಿಗೆ, ಬನ್ನಿ ಹಾಮ ಭಟ್ಟ ಸ್ಮೃತಿ ಹಬ್ಬಕೇ”.

ಮುಳುಗಡೆ, ನಾಟಕಗಳ ಹಾಸುಹೊಕ್ಕು  

ಶರಾವತಿ ಸಾಗರದ ಪೂರ್ವೋತ್ತರ ಮಗ್ಗುಲಿನಲ್ಲಿ ಹೆಗ್ಗೋಡು (ಅಕ್ಷರ ಪ್ರಕಾಶನ, ಶಿವರಾಮ ಕಾರಂತ ರಂಗಮಂದಿರ, ನೀನಾಸಂ ರಂಗಶಿಕ್ಷಣ ಶಾಲೆ, ತಿರುಗಾಟ…) ಸಾಹಿತ್ಯ ಸಂಸ್ಕೃತಿಗೆ ಹೆಸರಾಂತ ನೆಲೆ. ಅಂತದ್ದೇ ತುಡಿತ, ತುಸು ತಡವಾಗಿ ಮತ್ತು ದುರ್ಬಲವಾಗಿ ಶರಾವತಿ ಸಾಗರದ ಪಶ್ಚಿಮ-ದಕ್ಷಿಣ ಮಗ್ಗುಲಿನಲ್ಲೂ ಕಾಣಿಸಿದ್ದಿದ್ದರೆ, ಅದು ತುಮರಿಯಲ್ಲಿ. (ಕಿನ್ನರ ಮೇಳ, ಶಾಂತವೇರಿ ಗೋಪಾಲಗೌಡ ರಂಗಮಂದಿರ, ಅಭಿವ್ಯಕ್ತಿ ಬಳಗ…) ಕಿನ್ನರ ಮೇಳ ಅರ್ಥಾತ್ ಕೆಜಿ ಸೋದರರ (ನಾರಾಯಣ, ಕೃಷ್ಣಮೂರ್ತಿ…) ಬಳಗದ ನಾಟಕ, ಯಕ್ಷಗಾನ ನನಗೆ ಸಾಕಷ್ಟು ಹಳೆಯ ಪರಿಚಯದವೇ. ಅವನ್ನೂ ಸೇರಿಸಿಕೊಂಡಂತೆ ಎರಡು ಮೂರು ವರ್ಷಗಳ ಹಿಂದೆ ತುಮರಿಯಲ್ಲೇ ನಾಟಕೋತ್ಸವ ನಡೆಯುತ್ತದೆ ಎಂದು ಕೇಳಿದ್ದೇ ನನ್ನ ಕನಸುಗಳಿಗೆ ಹೆಚ್ಚಿನ ಬಲ ಬಂದಿತ್ತು. ಹಗಲು ಹಿನ್ನೀರು, ಕುದುರುಗಳ ಶೋಧ ನಡೆಸಿ, ಸಂಜೆ ನಾಟಕೋತ್ಸವದಲ್ಲಿ ಮಿಳಿತವಾಗುವ ಯೋಜನೆ ಹಾಕಿದೆ. ಅದರ ವ್ಯಸ್ಥಾಪಕ ಶಕ್ತಿ ಹುಡುಕಿದಾಗ…

ಪುತ್ತೂರಿನಲ್ಲಿರುವ ಹಾಲ್ಕೆರೆ ರಘು, ವೀಣಾ ದಂಪತಿಗಳ ಮನೆ – ಕಾಡುಮನೆಯಲ್ಲಿ, ರಂಗಾಯಣದ ಪ್ರದರ್ಶನವೊಂದನ್ನು ನೋಡಲು ಹೋಗಿದ್ದೆ. ಆ ವಠಾರದಲ್ಲಿ ರಘು ದಂಪತಿ ಸ್ವಂತ ವಾಸದೊಡನೆ, ಆದಾಯಕ್ಕಾಗಿ ವಿದ್ಯಾರ್ಥಿನಿಯರ ವಸತಿಗೃಹವನ್ನೂ ನಡೆಸುತ್ತಾರೆ. ಅದನ್ನು ಮೀರಿ ಲಲಿತ ಕಲೆಗಳ ಪ್ರೀತಿಗಾಗಿ ವಠಾರವನ್ನು ಬಯಲು ರಂಗ ಮಂದಿರವಾಗಿ ರೂಪಿಸಿ, ಉದಾತ್ತವಾಗಿ ನಿರ್ವಹಿಸುವ ಪರಿ ಬೆರಗು ಹುಟ್ಟಿಸುತ್ತದೆ. ಇವೆಲ್ಲವುಗಳ ಮೂಲದಲ್ಲಿ ರಘುವಿನ ಹುಟ್ಟೂರು ಹಾಲ್ಕೆರೆ, ತುಸು ದೊಡ್ಡದಾಗಿ ನೋಡುವುದಿದ್ದರೆ ಮೇಲೆ ಹೇಳಿದ ತುಮರಿಯೇ ಇದೆ. ತನ್ನ ಒಂದು ದೃಢವಾದ ಕಾಲನ್ನು ಅಲ್ಲೇ ಉಳಿಸಿಕೊಂಡಿರುವ ರಘುವೇ ತುಮರಿಯ ನಾಟಕೋತ್ಸವದ ಶಕ್ತಿ. ಅಂಥಾ ತುಮರಿಯಲ್ಲಿ ಈ ವರ್ಷಾ…

“ಸೆಪ್ಟೆಂಬರ್ ಮೂವತ್ತರಿಂದ (೨೦೨೨) ತೊಡಗಿದಂತೆ ಮೂರು ದಿನಗಳ ಹಾಮ ಭಟ್ ಸ್ಮೃತಿ ಹಬ್ಬ. ಹಗಲಿನುದ್ದಕ್ಕೆ ನಡೆಯುವ ಸಾಹಿತ್ಯ, ಸಂಗೀತವೇ ಮೊದಲಾದ ಗೋಷ್ಠಿಗಳ ಸಹಿತ ನಾಟಕೋತ್ಸವಕ್ಕೆ ನನ್ನ ಅತಿಥಿಯಾಗಿಯೇ ಬರಬೇಕು…” ಎಂದು ರಘು ಒತ್ತಾಯಿಸಿದ್ದರು. ನಾಟಕಗಳೇನೋ ನಾನು ಬಯಸಿದ್ದೇ ಆಗಿತ್ತು. ಉಳಿದ ಕಲಾಪಗಳ ದಾಕ್ಷಿಣ್ಯ ಕಾಡದಂತೆ ಮತ್ತು ನಮ್ಮ ಊಟವಾಸಗಳ ಹೊರೆ ರಘುವಿನ ಮೇಲೆ ಬೀಳದಂತೆ ಮಾಡಲು ನಾನು ಗೂಗಲ್ ನಕ್ಷೆ ಜಾಲಾಡಿದೆ. ಅದರಲ್ಲಿ ತುಮರಿಯಲ್ಲೇ ಹತ್ತಿಪ್ಪತ್ತು ಸುಸಜ್ಜಿತ ಕೋಣೆಗಳ ‘ಹಾಲ್ಕೆರೆ ಹೋಟೆಲ್ಸ್’ ಕಂಡಾಗ ಕುಶಿಯಾಗಿ ಕರೆ ಮಾಡಿದೆ.  “ನನ್ಹೆಸ್ರೂ ಅಶೋಕ…” ಎನ್ನುವುದರೊಳಗೆ, ನಾನಂದುಕೊಂಡ ಅಜ್ಞಾತ ಸಂಖ್ಯೆ ಉಲಿಯಿತು “ಗೊತ್ತು ಸಾರ್. ನಾನು ರಘು…”! ಹಾಲ್ಕೆರೆ ಹೋಟೆಲ್ಸಿನ ಯಜಮಾನನೂ ರಘುವೇ. ತುಮರಿ ಉತ್ಸವವನ್ನು ಸ್ವತಂತ್ರವಾಗಿ ಅನುಭವಿಸುವ ನನ್ನ ಯೋಚನೆಗೆ ಕಡಿವಾಣ ಹಾಕಿ, ಅವರ ಆತಿಥ್ಯದ ಬಾಹುಬಂಧನಕ್ಕೆ ಒಳಪಟ್ಟೆವು.

ಹಗಲಿಗೆ ನಾನು ಪ್ರತ್ಯೇಕ ಕಲಾಪ ಪಟ್ಟಿ ಅಂದಾಜಿಸಿದ್ದೆ. ಆ ಪ್ರಕಾರ ಕಾಡು, ಮುಳುಗಡೆ ಹಾಸುಹೊಕ್ಕಾದ ಸ್ಥಳದ ಓಡಾಟಗಳಿಗೆ ಮೋಟಾರ್ ಬೈಕೇ ಸರಿಯೆಂದೂ ನಿರ್ಧರಿಸಿದ್ದೆ. ಇನ್ನೇನು ಎರಡು ದಿನವಿದೆ ಎನ್ನುವಾಗಲೂ ಮಳೆಗಾಲಕ್ಕೆ ಮುಗಿಯುವ ದಿನ ಮರೆತು ಹೋಗಿರುವುದು ಕಂಡು, ಅನಿವಾರ್ಯವಾಗಿ ಕಾರು ಹೊರಡಿಸಿದೆ. ಆಗ ಖಾಲಿ ಬೀಳುವ ಮೂರು ಸೀಟಿಗೆ ಅವಸರದಲ್ಲೇ ಒಬ್ಬಿಬ್ಬ ಸಮಾನಾಸಕ್ತ ಆತ್ಮೀಯರನ್ನು ಕೇಳಿದೆ. ದಕ್ಕಿದ್ದು ಜೋಡು ಮಾರ್ಗದ ಎಳೆಯ ಗೆಳೆಯ ಅನಿಲ್ ಮಾತ್ರ. ಶಿಬಿರದ ಉದ್ಘಾಟನೆ ಸಂಜೆ ಮೂರೂವರೆಗಿತ್ತು. ಅದುವರೆಗಿನ ಹಗಲನ್ನು ಪ್ರಯಾಣ ಮತ್ತು ಕೆಲವು ಸ್ಥಳವೀಕ್ಷಣೆಯಲ್ಲಿ ಸದುಪಯೋಗಪಡಿಸುವಂತೆ, ಆರೂವರೆ ಗಂಟೆಗೇ ಮಂಗಳೂರು ಬಿಟ್ಟೆವು.

ಕೆರೆಮಣೆಯ ಉಪಾಧ್ಯ

ಮೊದಲ ಕಟ್ಟೆಪೂಜೆ ಸಾಲಿಗ್ರಾಮದ ಮಂಟಪ ಹೋಟೆಲ್. ಕಾಫಿಂಡಿ ಮುಗಿಸಿ, ಎಂದಿನಂತೇ ಪಕ್ಕದಲ್ಲೇ ತೋರಿಕೆಗೆ ಸರಿಯಾದ ಬೋರ್ಡಿಗೂ ಗತಿಯಿಲ್ಲದಂತಿರುವ, ಆದರೆ ನಿಜದಲ್ಲಿ ಹಳೆಗಾಲದ ಸರ್ವಸರಕಿನ ಮಳಿಗೆಯೇ ಆದ ‘ಉಪಾಧ್ಯ ಬ್ರದರ್ಸ್’ಗೆ ನುಗ್ಗಿದೆವು. ಮಳಿಗೆಯಲ್ಲಿದ್ದ ಅಣ್ಣ – ಮಂಜುನಾಥ ಉಪಾಧ್ಯರಿಗೆ ‘ಹ್ವಾಯ್’ ಹೇಳಿದ್ದಾಯ್ತು. ಮತ್ತೆ ಹಿತ್ತಲಿನ ಮನೆಯ ಭಾಗದಲ್ಲೀಗ ನಿವೃತ್ತಿಯ ವಾಸದೊಡನೆ, ಕೇವಲ ತನ್ನ ಹವ್ಯಾಸೀ ಉತ್ಪಾದನೆಗಳಲ್ಲೇ ಮುಳುಗಿದ ತಮ್ಮ ವೆಂಕಟ್ರಮಣ ಉಪಾಧ್ಯರ ಏಕಾಂತಕ್ಕೆ ದಾಳಿ ಮಾಡಿದೆವು. ಅವರ ‘ಕೆರೆಮಣೆ’ ಅಂದರೆ, ಮೇಜೋ ಅಡುಗೆ ಕಟ್ಟೆಯದೋ ಅಂಚಿನಲ್ಲಿ ಬೇಕಾದಾಗ ಮಾತ್ರ ಹಗುರಕ್ಕೆ ಇಟ್ಟು ತೆಂಗಿನ ಕಾಯಿಯನ್ನು ಸುಲಭವಾಗಿ ಹೆರೆದುಕೊಳ್ಳುವ ಸಲಕರಣೆ. ಸಂದ ಹಲವು ವರ್ಷಗಳ ನಿರಂತರ ಪ್ರಯೋಗ, ಉತ್ಪಾದನೆಗಳ ಫಲವಾಗಿ ಇದು ಇಪ್ಪತ್ತಕ್ಕೂ ಮಿಕ್ಕು ರೂಪಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿಶ್ವಾದ್ಯಂತ ಮನೆಗಳನ್ನು ಸೇರುತ್ತಲೇ ಬಂದಿದೆ. (ಹೆಚ್ಚಿನ ವಿವರಗಳಿಗೆ ನೋಡಿ: ಉಪಾಧ್ಯ ಹೆರೆಮಣೆ -೨೦೧೫ ) ದೇವಕಿ ಇವರ ಬಹುತೇಕ ಮಾದರಿಗಳ ಒಂದೊಂದು ಪ್ರತಿಯನ್ನು ಕೇವಲ ಸಂಗ್ರಹ ಸಂತೋಷಕ್ಕೇ ಕೊಂಡಿಟ್ಟುಕೊಂಡಿದ್ದಾಳೆ. ಮತ್ತು ನಮ್ಮ ಆಪ್ತ ಬಳಗದಲ್ಲಿ ಹೊಸದಾಗಿ ಮನೆ ಹೂಡುವವರ ಅಗತ್ಯ ವಿಚಾರಿಸಿಕೊಂಡು ಇದೇ ಕೆರೆಮಣೆಯನ್ನೇ ಉಡುಗೊರೆ ಮಾಡಿ, ಉಪಾಧ್ಯರಿಗೆ ಅಯಾಚಿತ ಪ್ರಚಾರಕಿಯೂ ಆಗಿದ್ದಾಳೆ. ಹಾಗೆ ಈಗಣ ರೂಪ – ಕಿರಿಮಣೆ ನೋಡಿ, ಒಂದನ್ನು ಕೊಂಡದ್ದೂ ಆಯ್ತು! ಇದು  ದೊಡ್ಡವನ್ನು ಮಾಡಿ ಉಳಿದ ನೂರಾರು ಸಣ್ಣ ಮರದ ತುಂಡುಗಳಿಗೆ ಗತಿ ಕಾಣಿಸಲೆಂದೇ ಅವತರಿಸಿದ್ದಂತೆ. ಆದರೆ ಕಾರ್ಯರಂಗದಲ್ಲಿ  ದೊಡ್ಡವುಗಳಷ್ಟೇ ಕ್ಷಮತೆಯುಳ್ಳ ಪರಿಷ್ಕೃತ ಪುಟಾಣಿ. ತನ್ನ ಬಾಲ್ಯದಿಂದಲೂ ಉಪಾಧ್ಯರನ್ನು ಬೆರಗುಗಣ್ಣುಗಳಲ್ಲೇ ಕಾಣುತ್ತ ಬಂದಿದ್ದ ಅನಿಲ್‍ಗೆ ಇಂದು ಸಿಂಹವನ್ನು ಗವಿಯಲ್ಲಿ ಕಂಡ ಹಾಗಾಗಿತ್ತು, ಅವರ ತೋರಿಕೆಯಿಲ್ಲದ ಸರಳತನ ಮತ್ತು ವೈಚಾರಿಕ ಸ್ಪಷ್ಟತೆಗೆ ಮಾರು ಹೋಗಿ, ಅನಿಲ್ ಅಲ್ಲೇ ಉಳಿದುಬಿಟ್ಟರೆ ಎಂಬ ಭಯದಲ್ಲಿ ನಾನು ಚಾಟಿ ಬೀಸಿದೆ “ಪೋಯ್ ಪೋಯೀ….”

ದಾರಿ ಸುಂಕ ಎನ್ನುವ ಅನ್ಯಾಯ

ಹೆದ್ದಾರಿ ಸುಂಕ ವಸೂಲಾತಿಯ ಅನಾಚಾರದಲ್ಲಿ ಅನೇಕ ಹಂತಗಳಿವೆ. ಅನ್ಯತ್ರ ನಾವು ಕೊಡುವ ಪ್ರತಿಯೊಂದು ತೆರಿಗೆಯೂ (ಸಾಮಾನಿರಬಹುದು, ಸೇವೆ ಇರಬಹುದು) ಒಟ್ಟಾರೆ ನಾಗರಿಕ ವ್ಯವಸ್ಥೆಗಾಗಿರುತ್ತದೆ, ಅಂದರೆ ‘ಉತ್ತಮ ದಾರಿ’ ಅದರ ಒಂದು ಭಾಗವೇ ಇರುತ್ತದೆ. ಅದರ ಮೇಲೆ ನಾವು ಖರೀದಿಸುವ ಮೋಟಾರ್ಯುಕ್ತ ವಾಹನಗಳ ನೋಂದಣಿ (ಆರ್ಸೀ) ಮತ್ತು ಚಾಲನಾ (ಲೈಸೆನ್ಸ್) ಪತ್ರಗಳಲ್ಲಂತೂ ಸ್ಪಷ್ಟ ರಸ್ತೆ ತೆರಿಗೆಯನ್ನೂ ನಮೂದಿಸಿಯೇ ವಸೂಲು ಮಾಡುತ್ತಾರೆ. ಇವೆಲ್ಲವೂ ಇದ್ದಂತೇ ಅಂದಂದು ಓಡಿದ ದಾರಿ ಲೆಕ್ಕ ಹಿಡಿದು ಪ್ರತ್ಯೇಕ ದಾರಿ ಸುಂಕ ಎನ್ನುವುದು ಪರಮ ಅನ್ಯಾಯ. ಅದಕ್ಕೆ ಪ್ರತಿರೋಧ ಹೆಚ್ಚಿದಾಗ, ಕೇಂದ್ರದ ಸಾರಿಗೆ ಸಚಿವನೇ ಸ್ಪಷ್ಟ ಪಡಿಸಿದರು: “ಯಾವುದೇ ನಗರ ಮಿತಿಯಿಂದ ಅರವತ್ತು ಕಿಮೀ ಒಳಗೆ ಬರುವ ಸುಂಕದ ಕಟ್ಟೆಗಳು ಆಯಾ ಊರಿನ ವಾಹನಗಳಿಂದ ರಸ್ತೆ ಸುಂಕ ವಸೂಲು ಮಾಡಕೂಡದು. ಮತ್ತೂ ಯಾವುದೇ ಎರಡು ಸುಂಕದ ಕಟ್ಟೆಗಳು ತೀರಾ ನಿಕಟವೂ (೬೦ ಕಿಮೀ?) ಇರಬಾರದು….” ಆದರೆ ಇದು ಪರಿಣಾಮದಲ್ಲಿ ಇದುವರೆಗೆ ನನಗೆ ಸುರತ್ಕಲ್ ಕಟ್ಟೆಯಲ್ಲಿ ಮಾತ್ರ ದಕ್ಕಿದೆ. (ಅಲ್ಲೂ ಅರಿವಿಲ್ಲದೇ ಹೋದ ಮಂಗಳೂರಿಗರಿಗೆ, ಅಂದರೆ ನೋಂದಣಿ ಸಂಖ್ಯೆ KA-19 …ನವರಿಗೆ ಅದು ದಕ್ಕದಿರುವುದನ್ನೂ ನಾನು ಗಮನಿಸಿದ್ದೇನೆ.) ಅದನ್ನುಳಿದು ತುಂಬೆ (೧೯ ಕಿಮೀ) ಮತ್ತು ತಲಪಾಡಿಗಳು (ಹನ್ನೊಂದು ಕಿಮೀ) ಮಂಗಳೂರಿಗನೆಂದು ನನ್ನ ವಾಹನಕ್ಕೆ ಉಚಿತ ದಾರಿ ಕೊಟ್ಟದ್ದಿಲ್ಲ. ಇನ್ನೂ ದೊಡ್ಡ ಪೆಟ್ಟು, ನಾವು ಸುಂಕ ಕೊಡುವ ಕ್ರಮವನ್ನೂ ಇಲಾಖೆಯೇ ನಿರ್ಧರಿಸಿತು. ಫಾಸ್ಟ್ ಟ್ಯಾಗ್ ಪಾವತಿಗೆ ಒಂದು ದರ, ಇಲ್ಲದವರಿಗೆ ದುಪ್ಪಟ್ಟು! ನಾನು ಪಡುಬಿದ್ರೆಯಲ್ಲೂ ಸಾಸ್ತಾನದಲ್ಲೂ ನಲ್ವತ್ತಕ್ಕೆ ಎಂಬತ್ತು, ಐವತ್ತಕ್ಕೆ ನೂರು ಕೊಟ್ಟು ಶಾಪ ಹಾಕಿದ್ದೇ ಬಂತು, (ನ್ಯಾಯಿಕ ಹೋರಾಟದ ದಾರಿ ಇರಬಹುದು, ನನಗೆ ಸಮಯ ಮತ್ತು ತಾಳ್ಮೆ ಇಲ್ಲ) ಕೆಟ್ಟ ದಾರಿಗಳೊಡನೆ ಏಗಾಡುವಾಗ ಹಕ್ಕು ಮರೆತವರು ಒಳ್ಳೆ ದಾರಿಯನ್ನು ಬಹುಮಾನವೆಂದು ಭ್ರಮಿಸುವ ದೋಷವಿದು. ಅಲ್ಲಿ ಅನಾವಶ್ಯಕವಾಗಿ ಹೊಡೆಸಿಕೊಂಡವರು, ಇದು ಮದ್ದೆಂದು ತಿಳಿಯುವ ತಪ್ಪು ನಡೆದೇ ಇದೆ!

ದಾರಿ ಯಾವುದಯ್ಯಾ

ಕೊಲ್ಲೂರು ನಮ್ಮ ಮೊದಲ ಲಕ್ಷ್ಯ. ಕುಂದಾಪ್ರ ಕಳೆದ ಮೇಲೆ ಹೆದ್ದಾರಿ ಬಿಡಲು ಇರುವ ಮೂರು ಮುಖ್ಯ ಕವಲುಗಳಲ್ಲಿ (ತಲ್ಲೂರು – ೪೦ಕಿಮೀ, ನಾವುಂದ – ೫೦, ಬೈಂದೂರು – ೬೦) ಮೊದಲನೇದನ್ನೇ ಆರಿಸಿಕೊಂಡೆವು.  ಮುಂದೆ ನೇರಳಕಟ್ಟೆಯಲ್ಲಿ ಎಡ ಕವಲಾಗಿ ಸಾಗಿದೆವು. ಈ ದಾರಿಯಲ್ಲಿ ಸಿಗುವ ಸ್ವಲ್ಪ ದೊಡ್ಡ ಪೇಟೆ ವಂಡ್ಸೆ. ಮುಂದುವರಿದಂತೆ, ಹಿಂದೆ ಅನಾಮಧೇಯ ದಟ್ಟ ಕಾಡೇ ಆಗಿದ್ದ ಜಡ್ಕಲ್ ಕವಲು ಬಂತು, ಅಲ್ಲಿ ಸಾಕಷ್ಟು ದೊಡ್ಡ ಪೇಟೆಯೇ ಸಿಕ್ಕಾಗ ನನ್ನ ಆಶ್ಚರ್ಯಕ್ಕೆ ಪಾರವೇ ಇಲ್ಲ. ಮೂರೂವರೆ ದಶಕಗಳ ಹಿಂದೆ ನಮ್ಮ ತಂಡವೊಂದು ಬೆಳ್ಕಲ್ ತೀರ್ಥ ನೋಡುವ ಉತ್ಸಾಹದಲ್ಲಿ ಇದೇ ಜಡ್ಕಲ್ ಕವಲಿಗೆ ಬಂದಿತ್ತು. ಆಗ ಇಲ್ಲಿ ದಾರಿ ಖಾತ್ರಿ ಪಡಿಸಲು ಒಂದು ನರಪ್ರಾಣಿಯೂ ಸಿಗದಷ್ಟು ದಟ್ಟ ಕಾಡೇ ಕಾಡಿತ್ತು. ಆನಂತರದ ದಿನಗಳಲ್ಲಿ ಇದು ಮೂಕಾಂಬಿಕ ವನಧಾಮವೆಂದು ಘೋಷಿತವೂ ಆಗಿದೆ. ಹಿಂದಿನ ದಿನಗಳಲ್ಲೇ ಈ ವಲಯದಲ್ಲಿ ಅಕ್ರಮ ಸಕ್ರಮ ಪ್ರವೀಣರಾದ ಮಲಯಾಳಿಗಳ ಮತ್ತು ಕಳ್ಳ ಗಾಂಜಾ ಬೆಳೆಗಾರರ ಹಾವಳಿ ಬಗ್ಗೆ ಕೇಳಿದ್ದೆವು. ಅದು ಈ ಮಟ್ಟಕ್ಕೆ ಕಾಡನ್ನು ನಾಡಾಗಿಸಿತೆಂದು ಈಗ ನಂಬುವುದೂ ಕಷ್ಟವಾಗುತ್ತದೆ. (ನೋಡಿ: ಬೆಳ್ಳಿ ಬರೆಯಿಂದ ಕೊಡಚಾದ್ರಿ ಮುಡಿಗೆ )

ವನಕಂಟಕ ದೇವಿ

ಜಡ್ಕಲ್ ಕಳೆದ ಕೆಲವೇ ಅಂತರದ ಹಾಲ್ಕಲ್ಲಿನಲ್ಲಿ, ನಾವು ತಲ್ಲೂರಿನಲ್ಲಿ ಬಿಟ್ಟ ಹೆದ್ದಾರಿಯಿಂದ ಮುಂದೆ ಕವಲಾದ ಉಳಿದೆರಡು ದಾರಿಗಳೂ ಬಂದು ಸೇರಿಕೊಂಡವು. ಮುಂದಿನ ನಾಲ್ಕೈದು ಕಿಮೀ ಅಂತೂ ಹಸಿರುಗಪ್ಪಿನ ದಟ್ಟ ಕಾಡಿನ ನಡುವೆ, ಉಲ್ಲಾಸದಾಯಿ ಬಳುಕಾಟದ ಓಟ. ಇನ್ನೇನು ಕೊಲ್ಲೂರು ಬಂತೆನ್ನುವ ಹಂತದಲ್ಲಿ, ಫಕ್ಕನೆ ದಾರಿಯ ಎಡಮಗ್ಗುಲಿನಲ್ಲಿ ಮೂರು ನಾಲ್ಕು ಕಾರು, ಭಕ್ತರಂತಿದ್ದ ಕೆಲವು ಮಂದಿ ನಿಂತಿರುವುದು ನೋಡಿ ಕುತೂಹಲಕ್ಕೆ ನಾವೂ ಕಾರಿಳಿದೆವು. ಅಲ್ಲಿ ಸಾಕಷ್ಟು ವಿಸ್ತಾರ ನೆಲದಲ್ಲಿ ದೊಡ್ಡ ಮರ ಬಳ್ಳಿಗಳನ್ನುಳಿಸಿ, ಹಸಿರು ಕುರುಚಲನ್ನೆಲ್ಲ ಸವರಿ ಏನೋ ಆರಾಧನಾ ನೆಲೆ ರೂಪುಗೊಂಡಂತಿತ್ತು. ಮಾರ್ಗದಿಂದ ನೇರ ಸುಮಾರು ಐವತ್ತಡಿ ಒಳಗಿನವರೆಗೆ ನಾಲ್ಕೈದು ಅಡಿ ಅಗಲಕ್ಕೆ ಅಂತರ್ಲಾಕಿನ ನಡೆ ಮಡಿ, ಆ ಕೊನೆಯಲ್ಲಿ ನಾಲ್ಕೈದು ಕಂಬ ಅಡ್ಡಗಳಷ್ಟೇ ಹಾಕಿದ್ದರು. ಮೇಲಕ್ಕೆ ಸಹಜಾರಣ್ಯವೇ ಮುಚ್ಚಿಗೆ. ಅಲ್ಲಿನ ಕೇಂದ್ರ ಆರಾಧನಾ ಶಕ್ತಿ ‘ಮಾಸ್ತ್ಯಮ್ಮ ದೇವಿ’ಯಂತೆ. ಈಕೆ ಮಕ್ಕಳಾಗದವರ ಸಾಂಕೇತಿಕ ತೊಟ್ಟಿಲ ಹರಕೆಗೂ ಫಲಪ್ರದೆಯಾಗುತ್ತಾಳಂತೆ. ಸಹಜವಾಗಿ ಅಲ್ಲಿನ ಕಂಬ, ಮರ, ದಿಬ್ಬಗಳಲ್ಲೆಲ್ಲ ವಿವಿಧ ಗಾತ್ರದ ತೊಟ್ಟಿಲುಗಳು ನೇತೂ ರಾಶಿಯೂ ಬಿದ್ದಿದ್ದವು. ಅದರಲ್ಲೂ ದೃಢ ಕಾಲಿರುವ ಎರಡು ಕಬ್ಬಿಣದ ತೊಟ್ಟಿಲು ಗಮನಾರ್ಹವಾಗಿಯೇ ಕಾಣುತ್ತಿತ್ತು. ಆ ವಿಸ್ತಾರದಲ್ಲಿದ್ದ ಇನ್ನಷ್ಟು ಕಾಡ ಕಲ್ಲು, ಮರ ಪೊದರುಗಳನ್ನೆಲ್ಲ ಮಾಸ್ತ್ಯಮ್ಮನ ಗಣ ಪರಿವಾರವೆಂಬಂತೆ ‘ಪವಿತ್ರೀಕರಿಸಿ’ದ್ದೂ ಆಗಿತ್ತು. ಅರಣ್ಯ ಇಲಾಖೆ ಇದರ ಕುರಿತು ತುರ್ತು ಕ್ರಮ ಕೈಗೊಳ್ಳದಿದ್ದರೆ ಇದಿನ್ನೊಂದೇ ‘ಚಾರ್ಮಾಡಿಯ ಅಣ್ಣಪ್ಪ’ನೋ ಬಿಸಿಲೆಯ ‘ಚೌಡಿಯೋ’ ಆಗಿ ವನ್ಯಕ್ಕೆ ಬಹು ದೊಡ್ಡ ಕಂಟಕವಾಗುವ ಅಪಾಯವಿದೆ.

ಕೊಡಾಚಾದ್ರಿಯ ತಪ್ಪಲು

ಕೊಲ್ಲೂರಿನ ಗದ್ದಲ ಮತ್ತು ಅಕರಾಳ ವಿಕರಾಳ ರಚನೆಗಳನ್ನು ಮರೆಸಿ, ಮೂಕಾಂಬೆಯ ದೇವಳವನ್ನೂ ಕುಬ್ಜೀಕರಿಸಿ, ಹಿನ್ನೆಲೆಯಲ್ಲಿ ಕೊಡಚಾದ್ರಿ ಸೇರಿದ ಘನ ಪರ್ವತ ಶ್ರೇಣಿ ಶೋಭಿಸಿತ್ತು. ಅದರ ಮೋಡ ಮಂಜಿನಾಟವನ್ನು ಒಂದೆರಡು ಪಟಗಳಲ್ಲಿ ಹಿಡಿದುಕೊಂಡೆವು. ಉಳಿದಂತೆ ನಮಗೆ ಕೊಲ್ಲೂರು ಮಾರ್ಗಕ್ರಮಣದಲ್ಲಿ ಸಿಕ್ಕ ಒಂದು ಪೇಟೆ ಮಾತ್ರ.  ದೇವಳದ ಪಕ್ಕದ ಸಪುರ ದಾರಿಯಲ್ಲಿ ನುಗ್ಗಿ  ಮತ್ತೆ ಘನ ಕಾಡು, ಘಾಟಿ ಸೇರಿಕೊಂಡೆವು.

ಇಸ್ಕಾನ್ ಮತ್ತು ಮಲೆಯಾಳೀ

ಕೊಡಾಚಾದ್ರಿ ಶಿಖರಕ್ಕೆ ಚಾರಣಿಗರ (ಕೇವಲ ಸವಕಲು) ಜಾಡು ತೆರೆದುಕೊಳ್ಳುವುದು ನಾಗೋಡಿಯಲ್ಲಿ (ನೋಡಿ: ಕೊಡಚಾದ್ರಿಯ ಸುತ್ತ ಮುತ್ತ). ಅದು ಕಾಲಾಂತರದಲ್ಲಿ ಬೆಟ್ಟದ ನೇರ ಬುಡದ ವಳೂರಿನವರೆಗೆ ಕಚ್ಚಾದಾರಿಯಾದದ್ದು (ಸುಮಾರು ಐದು ಕಿಮೀ), ‘ಹರೇಕಿಷ್ಣಾ’ (ವಿದ್ಯುತ್ ಬೇಲಿಯ ಒಳಗೆ ಕಲ್ಪಿತ ವೃಂದಾವನ) ಅಕ್ರಮವಾಗಿ ನೆಲೆಸಿದ್ದು, ಕೊನೆಯಲ್ಲಿ ಕಲ್ಲು ಬಿಗಿದ ದೃಢ ದಾರಿಯಾಗಿಯೂ ರೂಪಾಂತರಗೊಂಡದ್ದೆಲ್ಲ ವನ್ಯಕ್ಕೆ ಅನಪೇಕ್ಷಣೀಯವೇ ಇತ್ತು. ಆ ರಸ್ತೆಯನ್ನಿಂದು ವನ್ಯ ಇಲಾಖೆ ಸುಪರ್ದಿಗೆ ತೆಗೆದುಕೊಂಡು, ಗೇಟಿಟ್ಟು, ಬೀಗ ಜಡಿದದ್ದು ಉತ್ತಮ ಕ್ರಮವೇ ಸರಿ. ಮುಂದೊಂದು ಅಂಗಡಿಯಾತ ಹೇಳಿದ “ಈಗ ಇಸ್ಕಾನ್ ಆಶ್ರಮಕ್ಕೆ ಅನ್ಯ ದಾರಿ ಕೊಟ್ಟಿದ್ದಾರೆ”. ಅಷ್ಟೇ ಸಾಲದು, ‘ಆಶ್ರಮ’ವನ್ನೂ ಅದರ ಪಕ್ಕಕ್ಕೆ ಸ್ವತಂತ್ರವಾಗಿ ನೆಲೆಸಿರುವ ಚಾ ದುಕಾನನ್ನೂ (ಇದರ ಸ್ಥಾಪಕಾಚಾರ್ಯ ಮಲೆಯಾಳಿ ತೀರಿಹೋಗಿದ್ದಾನಂತೆ. ‘ಪರಂಪರೆ’ ಮುಂದುವರಿದಿದೆಯಂತೆ!) ಬೇಗ ಎತ್ತಂಗಡಿ ಮಾಡುವುದು ವನ್ಯ ಸಂರಕ್ಷಣೆಗೆ ಇನ್ನೂ ಉತ್ತಮ ಕ್ರಮವಾಗುತ್ತದೆ ಎಂದಷ್ಟೇ ಹೇಳಬಲ್ಲೆ.

ನಮ್ಮ ಮೊದಲ ಸಾಹಸಯಾನದ ಕಾಲಕ್ಕೆ (೧೯೮೮ – ನೆಲ ನಿಲ್ಲಿಸುವುದು, ನೆಲ ಮುಳುಗಿಸುವುದು! ) ಇರದ ಅಂಗಡಿ ಕೃಷಿ ಚಟುವಟಿಕೆಗಳು ಇಂದು ನಾಗೋಡಿಯ ತುಮರಿ ಕವಲಿನ ಬಳಿ ಇದೆ. ಅಲ್ಲಿ ಕವಲಾಗುವುದನ್ನು ತತ್ಕಾಲೀನವಾಗಿ ಮುಂದೂಡಿ, ಅನ್ಯ ಎರಡು ವೀಕ್ಷಣೆಗಾಗಿ ನೇರ ನಿಟ್ಟೂರು ಸೇರಿಕೊಂಡೆವು. ಅಲ್ಲೊಂದು ಚಾ ನೆಪದಲ್ಲಿ, ನಮ್ಮ ಅನ್ವೇಷಣೆಯ ದಿಕ್ಕು ದೆಸೆ ಖಾತ್ರಿಪಡಿಸಿಕೊಂಡು ಮುಂದುವರಿದೆವು.

ಬೆನ್ನಟ್ಟಿ

ಲಿಂಗನಮಕ್ಕಿ ಅಣೆಕಟ್ಟು ನಿಂತ ಹೊಸತರಲ್ಲಿ, ಮುಳುಗಡೆ ವಲಯದ ಅಂಚಿನ ಮಂದಿ ಎಂದೂ ಕಾಣದ ನೀರು ಬೆನ್ನಟ್ಟುತ್ತಾ ಬಂದಾಗ ಇಟ್ಟ ಅನ್ವರ್ಥನಾಮ – ಬೆನ್ನಟ್ಟಿಯಂತೆ! ಅಲ್ಲಿನ ನೀರ ಹರಹು ನೋಡುವ ಉತ್ಸಾಹದಲ್ಲಿ ನಾವೇನೋ ಅತ್ತ ಹೋಗಿದ್ದೆವು. ಅಲ್ಲಿಂದು ದುರಂತದ ಕಾವು ಸಹಜ ಜೀವನದ ಭಾಗ ಆದಂತಿದೆ, ಅಣೆಕಟ್ಟು ಬಂದಲ್ಲಿಂದ ಕನಿಷ್ಠ ಮೂರು ತಲೆಮಾರುಗಳೇ ಕಳೆದುಹೋಗಿವೆ. ಬದಲಾದ ಆದ್ಯತೆಯ ಅನುಸಾರ ನುಣ್ಣನೆ ದಾರಿ, ಅಂಗನವಾಡಿಗಳು ಬಂದಿವೆ. ಹಿಂದೆ ತಗ್ಗಿನ ಪುಟ್ಟ ಗುಡಿಯಲ್ಲಿದ್ದ ಗುತ್ಯೆಮ್ಮ (ಆದಿ ಗುತ್ಯೆಮ್ಮ ಅಲ್ಲೇ ಇದ್ದಾಳೆ) ಗುಡ್ಡೆ ಎತ್ತರಕ್ಕೇರಿ ಕ್ಷೇತ್ರ ವಿಸ್ತರಿಸಿಕೊಂಡಿದ್ದಾಳೆ. ನಾವದನ್ನು ದೂರದಿಂದಲೇ ನಿವಾರಿಸಿ, ನೀರ ಹರಹಿನತ್ತ ಹರಕು ದಾರಿ ಹಿಡಿದೆವು. ಅಲ್ಲಿನ ಗುಡ್ಡೆಗಳಲ್ಲಿನ ಹಳೆಗಾಲದ ರಬ್ಬರ್ ಕೃಷಿ ಊರ್ಜಿತದಲ್ಲಿದ್ದಂತೆ ಕಾಣಲಿಲ್ಲ. ಆದರೂ ಯಜಮಾನರ ವಾಸ್ತವ್ಯ ಮುಂದುವರಿದಿದೆಯೆಂದೂ ಕೇಳಿದೆ. ಋತುಮಾನಕ್ಕೆ ಸಹಜವಾಗಿ ಶರಾವತಿ ತುಂಬಿದ್ದುದರಿಂದ ನೀರ ಹರಹು ಸಪುರ ಕಣಿವೆಯಲ್ಲಿ ಮರಗಳ ಬುಡದವರೆಗೆ ವ್ಯಾಪಿಸಿತ್ತು. ವಿಶೇಷ ನೋಟಗಳೇನೂ ಇರಲಿಲ್ಲವಾದ್ದರಿಂದ, ನಿಟ್ಟೂರಿಗೆ ಮರಳಿದೆವು.

ಹೆಬ್ಬಿಗೆಗೆ ತೂಗು ಸೇತುವೆ

ನಿಟ್ಟೂರಿನಿಂದ ಇನ್ನೊಂದೇ ಕವಲಿನಲ್ಲಿ ಹೆಬ್ಬಿಗೆ ದಾರಿ ಹಿಡಿದೆವು. ಅಲ್ಲೊಂದು ವಿಸ್ತಾರ ನೀರ ಸಾಗರದ ಕವಲಿನ ಎರಡೂ ದಂಡೆಗಳ ಬೃಹತ್ ಸ್ತಂಭ ಜೋಡಿಗಳು ಗಟ್ಟಿ ಕಾಲೂರಿದ್ದವು. ಅವುಗಳನ್ನು ಉಕ್ಕಿನ ಮಿಣಿ, ಸಲಾಕೆ, ಕಾಂಕ್ರೀಟ್ ಹಲಗೆಗಳಿಂದ ವ್ಯವಸ್ಥಿತವಾಗಿ ಜೋಡಿಸಿ ಜನೋಪಯೋಗಿ ತೂಗು ಸೇತುವೆ ಮಾಡಿದ್ದಾರೆ. ಇದು ಹಿಂದೆ ಅಲ್ಲಿ ಇದ್ದಿರಬಹುದಾದ ದೋಣಿ ಸೇವೆಗೆ ಪರ್ಯಾಯವಾಗಿ ಬಂದದ್ದಕ್ಕೋ ಏನೋ ಸ್ಥಳನಾಮ ದೋಣಿಗಾಲು ಎಂದೇ ಕೇಳಿದೆ. ಅತ್ತಣ ಭೂಖಂಡದಲ್ಲೆಲ್ಲೋ ಹೆಬ್ಬಿಗೆ ಹಳ್ಳಿಯಿತ್ತು. (ಮತ್ತೆ ತಿಳಿದಂತೆ, ಗೆಳೆಯ ಡಿ.ಎಸ್ ಶ್ರೀಧರರ ಮೂಲ ನೆಲೆ – ‘ದರೆಮನೆ’, ಕೂಡಾ ಅಲ್ಲೇ ಇದೆ) ದಂಡೆಯ ತೂಗು ಸೇತುವೆ ಪಾದಚಾರಿ ಹಾಗೂ ದ್ವಿಚಕ್ರ ವಾಹನಗಳಿಗಷ್ಟೇ ಸೀಮಿತ. ನಾವು ಕಾರಿಳಿದು, ಈ ದಂಡೆ ಆ ದಂಡೆ ನಡೆದು, ಹಳ್ಳಿಗರ ಬೈಕುಗಳು ದಾಟುವುದನ್ನೂ ಕ್ಯಾಮರಾದಲ್ಲಿ ಹಿಡಿದುಕೊಂಡು ಮತ್ತೆ ನಿಟ್ಟೂರಿಗೇ ಬಂದೆವು.

ಬೇಸಗೆಯ ದಿನಗಳು ಬಂದಾಗ, ಜಲಸಮೃದ್ಧಿ ಹಿಂದೆ ಸರಿದಿರುತ್ತದೆ. ಸಹಜವಾಗಿ ಎಲ್ಲಾ ಕಣಿವೆ ಸೀಳುಗಳಲ್ಲೂ ಹಸಿರು ಬಳಲಿ, ದೂಳು ಹಾರುವ ಕೆನ್ನೆಲದಲ್ಲಿ ಅಲ್ಲೊಂದು ಇಲ್ಲೊಂದು ಗತವೈಭವದ ಸಾಕ್ಷಿ ಹೇಳುವ ಭಾರೀ ಮರದ ಗುತ್ತಿಗಳು ತೋರುವಾಗ, ಮುಳುಗಡೆಯ ದಾರುಣತೆ ಹೆಚ್ಚು ಸ್ಪಷ್ಟವಾಗಬಹುದು. ಹಾಗಾಗಿ ಸದ್ಯಕ್ಕೆ ನಮ್ಮ ಅನ್ವೇಷಣೆಗಳನ್ನು ಬಿಟ್ಟು ತುಮರಿಮುಖಿಗಳಾದೆವು.

ತುಮರಿ, ಹಾಮ ಭಟ್ಟರು

ನಾಗೋಡಿಗೂ ಮೊದಲೇ ಸಿಗುವ ‘ಮರಕುಟುಕ’ ಕವಲಿನಲ್ಲಿ ಹೊರಳಿದೆವು. ಸೂರ್ಯ ನೆತ್ತಿಯಲ್ಲಿದ್ದರೂ ಹಿತವಾದ ವಾತಾವರಣ. ನಯವಾದ ದಾರಿಯಲ್ಲಿ ಬಳುಕಾಡುತ್ತ, ಸಣ್ಣ ಪುಟ್ಟ ಏರಿಳಿತಗಳ ವಿಹಾರದೋಟದಲ್ಲಿ ಸುಮಾರು ಮೂವತ್ತು ಕಿಮೀ ಕ್ರಮಿಸಿ ನಿಂತದ್ದೇ ಹಾಲಕೆರೆ ಹೋಟೆಲ್ಸ್,ತುಮರಿ. ನಮ್ಮ ಪುಟಕೋಸೀ ವಿಜಯಯಾತ್ರೆಯನ್ನು ಸಂಭ್ರಮಿಸುವಂತೆ ಸಣ್ಣದಾಗಿ ಮಳೆ ಹನಿಕಿತು. ಹೋಟೆಲಿನ ಮ್ಯಾನೇಜರ್ – ಗಣಪತಿ, ನಮಗೆ ಪೂರ್ವ ಪರಿಚಯದವರೇನೂ ಅಲ್ಲ. ಆದರೆ ನಮ್ಮನ್ನೇ ಕಾದವರಂತೆ, ಜೋಡಿಸಿದ ಕರಗಳೊಡನೆ ಕಾರಿಗೇ ಬಂದು ಸ್ವಾಗತಿಸಿದರು. ಯಾವುದೇ ಔಪಚಾರಿಕ ಸೆಡವುಗಳಿಲ್ಲದೇ ಸುಸಜ್ಜಿತ ಕೋಣೆ ತೋರಿ, “ಮೊದಲು ಊಟ ಮುಗಿಸಿಕೊಳ್ಳಿ, ರಘು ಇಷ್ಟೊತ್ತು ಇಲ್ಲೇ ಇದ್ದು, ಮನೆಗ್ ಹೋಗಿದ್ದಾರೆ. ಇನ್ನೇನು ಬರ್ತಾರೆ…” ಎನ್ನುತ್ತ, ಒತ್ತಿನ ಮಧುರ ಕ್ಯಾಂಟೀನಿಗೆ ಕೈ ತೋರಿದರು. ಆ ಸರಳ, ಆಪ್ತ ಉಪಚಾರ ಕಂಡು ನಮಗೆ, ಎಲ್ಲ ಸುತ್ತಾಟ ಬಿಟ್ಟು ಮೊದಲು ಇಲ್ಲಿಗೇ ಬರಬೇಕಿತ್ತೋ ಎಂಬ ಸಂದೇಹ ಕಾಡಿದ್ದು ಸುಳ್ಳಲ್ಲ!

ನಮ್ಮೂವರಿಗೇ ಸ್ವಾಗತಕೋಣೆಯ ಪಕ್ಕದ ಎರಡು ಜೋಡು ಹಾಸಿಗೆಗಳ ವಿಸ್ತಾರ ಕೋಣೆಯನ್ನೇ ಕೊಟ್ಟಿದ್ದರು. ನಾವು ಒಯ್ದ ಚೀಲಗಳನ್ನು ಅಲ್ಲೆಸೆದು, ಸರಳ ಊಟ (ಚಪಾತಿ, ಅನ್ನ, ಹಪ್ಪಳ, ಪಲ್ಯ, ತಂಬುಳಿ, ಸಾರು, ಸಾಂಬಾರ್, ಮೊಸರು ಹಾಗೂ ಪಾಯಸ) ಮುಗಿಸಿಕೊಂಡೆವು. ಅನಂತರ ಸ್ಥಳ ಪರಿಚಯದ ಕುತೂಹಲದಲ್ಲಿ ಹತ್ತಿಪ್ಪತ್ತು ಅಂಗಡಿಗಳ ತುಮರಿಯ ಸಣ್ಣ ಪೇಟೆಯುದ್ದಕ್ಕೆ ಪಾದ ಬೆಳೆಸಿದೆವು. T ಸಂಧಿ ಬಂದಲ್ಲಿ ಅತ್ತಿತ್ತ ನೋಡುವುದರೊಳಗೆ, ಬಲ ದಾರಿಯಿಂದ ಕಾರೇರಿ ಬರುತ್ತಿದ್ದ ರಘುವೇ ಸಿಕ್ಕಿದರು. ಉಪಚಾರದ ಮಾತಾದಮೇಲೆ, ಸಭಾಭವನದ ದಾರಿ ಕೇಳಿ ಮುಂದುವರಿದೆವು. ಒಟ್ಟಾರೆ ಅರ್ಧ ಕಿಮೀನಷ್ಟೂ ದೂರವಿಲ್ಲದ ಶಾಂತವೇರಿ ಗೋಪಾಲ ಗೌಡ ಸಭಾಭವನ, (ಸಿಗಂದೂರು, ಕಳಸವಳ್ಳಿಗೆ ಹೋಗುವ) ಮುಖ್ಯ ದಾರಿಯ ಬಲ ಮಗ್ಗುಲಿನ ಗುಡ್ಡದ ತಟ್ಟಿನಲ್ಲಿ ದಿಟ್ಟವಾಗಿಯೇ ನಿಂತಿತ್ತು.

ಪ್ರಜಾಸತ್ತೆಗೆ ಅರ್ಥ ಬರುವಂತೆ, ಮುಖ್ಯವಾಗಿ ಮಣ್ಣಿನ ಮಕ್ಕಳಿಗೆ ನ್ಯಾಯ ಸಿಗುವಂತೆ, ಪ್ರಾಮಾಣಿಕ ಸಮಾಜವಾದಿಯಾಗಿ ಬದುಕು ಸವೆಸಿದ ಶಾಂತವೇರಿ ಗೋಪಾಲಗೌಡರು (೧೯೨೩-೭೨), ಈ ವಲಯದಲ್ಲೂ ಬಹುಜನಪ್ರಿಯರು. ಇಲ್ಲಿ ಅವರೊಡನೆ ಜನಪರ ಕೆಲಸಗಳಲ್ಲಿ ಹೆಗಲು ಜೋಡಿಸಿದವರಲ್ಲಿ, ಹಾಲಕೆರೆ ಮನೆಯ ಹಿರಿಯರಾದ ಮಂಜುನಾಥ ಭಟ್ (ಹಾಮ ಭಟ್) ಮತ್ತು ಮಹಾಬಲೇಶ್ವರ ಭಟ್ ಸೋದರರು ಸ್ಮರಣೀಯರು. (ಎಂಬತ್ತರ ಹರಯದ ಮಹಾಬಲೇಶ್ವರ ಭಟ್ಟರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವುದರೊಡನೆ, ಮೂರೂ ದಿನಗಳ ಕಲಾಪಗಳಲ್ಲೂ ಸಕ್ರಿಯ ಭಾಗಿಯಾಗಿದ್ದರು) ದಿನ ಸಂದ ಗೋಪಾಲ ಗೌಡರಿಗೆ, ತುಮರಿಯ ಸಾರ್ಥಕ ಸ್ಮರಣಿಕೆಯಂತೆ ರಚಿಸಲಾದ ಈ ಸಭಾಭವನ, ೧೯೮೭ರಲ್ಲಿ ಲೋಕಾರ್ಪಣೆಗೊಂಡಿದೆ. ಭವನ ಸಾರ್ವಜನಿಕ ಉಪಯೋಗದಲ್ಲಿದ್ದರೂ ಆಶಿಸಿದ ಭವ್ಯತೆಗೆ ಮುಟ್ಟಲು ದಾರಿ ಇನ್ನೂ ದೀರ್ಘವಿದೆ. ಯೋಗ್ಯ ನಿವೇಶನ ಮತ್ತು ಸಣ್ಣಪುಟ್ಟ ಅನುದಾನಗಳು ವಿವಿಧ ಸರಕಾರಗಳಿಂದ ಒದಗಿವೆ. ಅದು ಸದುಪಯೋಗಗೊಳ್ಳುವಂತೆ ನೋಡಿಕೊಳ್ಳುವುದರೊಡನೆ, ಸ್ವಂತ ಹಣ, ಸಮಯ ಮತ್ತು ಪ್ರಾಮಾಣಿಕ ದುಡಿಮೆ ಸೇರಿಸಿದವರು ಹಾಮ ಭಟ್ಟರು. ಭವನವನ್ನು ಬಳಕೆಯಲ್ಲಿಡಲು ತುಮರಿಯದೇ ಸಾಂಸ್ಕೃತಿಕ ಸಂಘಟನೆಗಳು (ಅಭಿರುಚಿ ಬಳಗ, ಕಿನ್ನರ ಮೇಳ…) ದುಡಿದರೂ ಇಂದು ಕಟ್ಟಡದ ನಿರ್ವಹಣೆ ಹಾಗೂ ಉತ್ತಮೀಕರಣಕ್ಕೆ ಕಾಡುತ್ತಿರುವ ಆರ್ಥಿಕ ಕೊರತೆ ಎದ್ದು ಕಾಣುತ್ತದೆ.

ಹಾಮ ಭಟ್ಟರು ಜೀವಿತಾವಧಿಯಲ್ಲಿ ಮಗ – ರಘುವನ್ನು, ತನ್ನ ಸಾಮಾಜಿಕ ಒಲವುಗಳಲ್ಲಿ ಬಳಲದಂತೆ ದೂರವಿಟ್ಟಿದ್ದರಂತೆ. ಆದರೆ ಅವರ ಮರಣೋತ್ತರದಲ್ಲಿ, ಆ ಚಟುವಟಿಕೆಗಳನ್ನು ಇನ್ನಷ್ಟು ಲೋಕಮುಖಿಯಾಗಿಸುವುದೇ ತಂದೆಗೆ ಋಣಸಂದಾಯ ಎಂದು ರಘು ಭಾವಿಸಿದರು. ಹಾಗೆ ರೂಪುಗೊಂಡ ಕಲಾಪ ಹಾಮ ಭಟ್ ಸ್ಮೃತಿ ಹಬ್ಬ. ಕೊರೋನಾ ಗೊಂದಲದ ವರ್ಷಗಳನ್ನುಳಿದು ೨೦೧೨ರಿಂದ ನಡೆದು ಬಂದಿರುವ ಈ ಹಬ್ಬ ಬಹುತೇಕ ರಂಗ ಕಲೆಗಳ (ನಾನು ಗ್ರಹಿಸಿದ್ದಂತೆ ನಾಟಕಗಳದ್ದೇ) ಉತ್ಸವ ಆಗಿತ್ತಂತೆ. ಅಷ್ಟೇ ಸಾಲದು ಎಂದನ್ನಿಸಿದಾಗ, ಅವರ ಗೆಳೆಯ ಕೆಪಿ ಸುರೇಶ ಕಂಜರ್ಪಣೆ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ ಈ ಬಾರಿ ಅನ್ಯ ಸಾಮಾಜಿಕ ವಿಷಯಗಳನ್ನೂ ಚರ್ಚೆಗೆತ್ತಿಕೊಂಡು ಹಬ್ಬವನ್ನು ಆಯೋಜಿಸಿದ್ದರು. ಇದು ಸಣ್ಣ ಮಟ್ಟದಲ್ಲಿ ಹೆಗ್ಗೋಡಿನ ‘ನೀನಾಸಂ ಸಂಸ್ಕೃತಿ ಶಿಬಿರ’ಕ್ಕೆ ಸಂವಾದಿಯಾಗಿಯೇ ರೂಪುಗೊಂಡಿತ್ತು. ಕವಿಗೋಷ್ಠಿ, ಚರ್ಚೆ, ಕೊರೋನಾ ವಿಚಾರ ಮಂಥನ, ಸಂಗೀತಾದಿಗಳು ಹಗಲಿಗೂ ಏಕವ್ಯಕ್ತಿ ಪ್ರದರ್ಶನಗಳು, ನಾಟಕ, ಚಿತ್ರ ಪ್ರದರ್ಶನಗಳು ಸಂಜೆಗೂ ನಿಶ್ಚಯಗೊಂಡಿದ್ದವು.

ಪರ್ಯಾಯ ಭಾರತ

ಸಂಜೆ ನಾಲ್ಕರ ಸುಮಾರಿಗೆ ಕವಿ ಸುಬ್ರಾಯ ಚೊಕ್ಕಾಡಿಯವರು ‘ಹಾಮ ಭಟ್ ಸ್ಮೃತಿ ಹಬ್ಬ – ೨೦೨೨’ರ ನಾಂದಿ ದೀಪವನ್ನು ಹಚ್ಚಿದರು. ಅವರು ಮಾತಿನಲ್ಲಿ ದೀಪ ಹಚ್ಚಿದ್ದನ್ನು ವಿಸ್ತರಿಸಿ, ಬೆಳಕನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಸಭೆಗೇ ಒಪ್ಪಿಸಿದ್ದು ಅರ್ಥಪೂರ್ಣವಾಗಿತ್ತು.

ಹಿಂದೊಮ್ಮೆ ಸೇಡಿಯಾಪು ಕೃಷ್ಣ ಭಟ್ಟರ ಸ್ಮೃತಿ ಕಲಾಪದಲ್ಲಿ ಇದೇ ಸುಬ್ರಾಯರು ಸೇಡಿಯಾಪುರವರ “ಎಣ್ಣೆ ಹೊಯ್ಯಮ್ಮಾ ದೀಪಕೆ….” ಎಂಬ ಕವಿತೆಯನ್ನು ತಮ್ಮ ಅದ್ಭುತ ಕಂಠಸಿರಿಯೊಡನೆ ರಾಗಾಲಾಪಿಸಿ ನಮ್ಮಲ್ಲಿ ಉಂಟು ಮಾಡಿದ ರೋಮಾಂಚನವನ್ನು ಇಲ್ಲಿ ಗದ್ಯದಲ್ಲಿ ನೆನಪಿಸಿದ್ದರು. ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಿರಿಯ ಹಾಮಾ ಭಟ್ಟರಂತೂ “ಇಂದು ಗೋಪಾಲ ಗೌಡರು ಆಶಿಸಿದ್ದ ಸಮಾಜವಾದದ ಕನಸು, ಸಾರ್ವಜನಿಕದಲ್ಲಿ ಕುಸಿದು ಕೂತಿದೆ. ಆದರೆ ವೈಯಕ್ತಿಕವಾಗಿಯಾದರೂ ನಮ್ಮೊಳಗಿದೆ…” ಎನ್ನುತ್ತಾ ಕ್ಷಣಕಾಲ ಮೌನತಾಳಿದ್ದು ಸಭೆಯನ್ನೇ ಭಾವುಕವಾಗಿಸಿತು. ಉದ್ಘಾಟನೆಯನ್ನು ಹಿಂಬಾಲಿಸಿದಂತೆ ಬಂದ….

ಕವಿಗೋಷ್ಟಿ

ಕವಿಗೋಷ್ಠಿಯ ಪಟ್ಟಿ ದೊಡ್ಡದೇ ಇತ್ತು. ನನಗೆ ಕವಿತೆ ಬಹಳ ದೂರ. ಹಾಗಾಗಿ ಹೇಳುತ್ತೇನೆ, ಅದೃಷ್ಟಕ್ಕೆ ಹಲವು ಕವಿಗಳು ಬಂದಿರಲಿಲ್ಲ. ಮತ್ತೆ ಪಟ್ಟಿಯಲ್ಲಿಲ್ಲದ ಒಂದಿಬ್ಬರು ತತ್ಕಾಲೀನ ಸ್ಫೂರ್ತಿಯಲ್ಲಿ ಒಂದಿಷ್ಟು ಬರೆದು, ಓದಿದರೂ ಅಪಾಯಕಾರಿಗಳಾಗಲಿಲ್ಲ. ಕೊನೆಯಲ್ಲಿ ಕವಿಗೋಷ್ಠಿಯ ಅಧ್ಯಕ್ಷರೂ ಆಗಿದ್ದ ಸುಬ್ರಾಯ ಚೊಕ್ಕಾಡಿಯವರು ಮೊದಲು ತಮ್ಮ ಒಂದು ಹಳೆಯ ಕವನವನ್ನು ಓದಿದರು. ಮತ್ತೆ ಅಧ್ಯಕ್ಷೀಯ ನೆಲೆಯಲ್ಲಿ, ಒಟ್ಟಾರೆ ಗೋಷ್ಠಿಯ ಕುರಿತು ವ್ಯಕ್ತ ಪಡಿಸಿದ ಅಭಿಪ್ರಾಯ – “ಒಂದು ಕೇಳ್ಮೆಗೆ ಕವಿಯ ಭಾವವನ್ನು ಗ್ರಹಿಸಿದೆನೆಂಬ ನುಡಿ ತಪ್ಪಾಗುತ್ತದೆ.”  ಆ ಮಾತು ನನಗಾಗಿಯೇ ಹೇಳಿದ್ದೆಂದು ನಂಬುತ್ತೇನೆ. ಹಾಗಾಗಿಯೂ ಕವಿಗೋಷ್ಠಿಯ ಬಗ್ಗೆ ನನ್ನ ಅಭಿಪ್ರಾಯ ದಾಖಲಿಸುವ ಜವಾಬ್ದಾರಿಯನ್ನು ಕೈ ಬಿಟ್ಟಿದ್ದೇನೆ.

ಕಿರುಚಿತ್ರ – ಮುಕ್ತ

ಸಂಜೆಯ ಸಾಂಸ್ಕೃತಿಕ ಕಲಾಪದಲ್ಲಿ ಮೊದಲ ಪ್ರದರ್ಶನ – ಮೇದಿನಿ ಕೆಳಮನೆಯವರ ಕಿರು ಚಿತ್ರ – ಮುಕ್ತ. ಸ್ವತಃ ಹೆತ್ತ ತಾಯಿಯಿಂದಲೇ ಕುರೂಪಿ ಎಂದೇ ಬೈಸಿಕೊಳ್ಳುತ್ತಿದ್ದ ಹುಡುಗಿ, ಆತಂಕದಲ್ಲೇ ಸಾಂಪ್ರದಾಯಿಕ ‘ವಧೂ ಪರೀಕ್ಷೆ’ಗೆ ಒಡ್ಡಿಕೊಳ್ಳುತ್ತಾಳೆ. ಅದರ ‘ಫಲಿತಾಂಶ’ಕ್ಕಾಗುವಾಗ ಗಂಡು-ದರ್ಪ ನಿರಾಕರಣೆ ಮಾತ್ರವಲ್ಲ, ಹುಡುಗಿಗೆ ಕಾಲು ಸರಿಯಿಲ್ಲ ಎನ್ನುವ ಮಿಥ್ಯಾರೋಪವನ್ನೂ ಹೇರುತ್ತದೆ. ತೀರಾ ಅನಿರೀಕ್ಷಿತ ಸುಳ್ಳಿಗಾಗುವಾಗ ತಾಯಿಯೇ ಜಾಗೃತಳಾಗಿ, ವ್ಯಗ್ರಳಾಗಿ, ಮಗಳ ಸತ್ಯವನ್ನು ನೇರಾನೇರ ಪ್ರಮಾಣಿಸುತ್ತಾಳೆ. ಆ ಕೊನೆಯಲ್ಲಿ ಹುಡುಗಿ, ತತ್ಕಾಲೀನ ಅವಮಾನ ಮತ್ತು ಭವಿಷ್ಯದ ಆತಂಕಗಳನ್ನೆಲ್ಲ ಮೀರುವಂತೆ ಬೀರಿದ ಕಿರು ನಗೆಯೇ – ಮುಕ್ತಿ. ತಾಯಿ ಪ್ರಮಾಣಿಸಿದ ಕ್ರಮ ತೀರಾ ಒರಟಾಯ್ತು, ಹಾಗೆ ಮಾಡಬಹುದಿತ್ತು, ಹೀಗೆ ಮಾಡಬೇಕಿತ್ತು… ಇತ್ಯಾದಿ ಕೆಳಧ್ವನಿಯ ಮತ್ತು ಅಯಾಚಿತ ಮಾತುಗಳು ಪ್ರೇಕ್ಷಕರ ದೌರ್ಬಲ್ಯಗಳ ಅಭಿವ್ಯಕ್ತಿಯೂ ಆಗುವ ಅಪಾಯವಿದೆ. ವಿಮರ್ಶೆ, ಉತ್ತಮಿಕೆಗೆ ಸಲಹೆಗಳನ್ನು ಕೋರಿದ್ದಲ್ಲಿ ಹೇಳಬಹುದಾದ ಮಾತುಗಳಿದ್ದರೂ ಉತ್ತಮ ಪ್ರಯತ್ನ ಎನ್ನುವುದು ನಿಸ್ಸಂದೇಹ. ಕಿರುಚಿತ್ರವನ್ನು ಹಿಂಬಾಲಿಸಿದಂತೆ ಬಂತು….

ಏಕವ್ಯಕ್ತಿ – ಲೀಕ್ ಔಟ್

‘ಅಕ್ಷತಾ ಪಾಂಡವಪುರ’ ಇವರ ಏಕವ್ಯಕ್ತಿ ರಂಗಪ್ರಸ್ತುತಿ – ಲೀಕ್ ಔಟ್. ಇದು ಪ್ರಧಾನ ರಂಗದಲ್ಲಿ ಮೂಡಲಿಲ್ಲ, ಪ್ರೇಕ್ಷಾಂಗಣದ ಹಿಂಬದಿಯಲ್ಲಿ ನಡೆಯಿತು. ನಾವು ಕುರ್ಚಿಗಳನ್ನು ತಿರುಗಿಸಿಟ್ಟುಕೊಂಡೋ ಕತ್ತು ಓರೆ ಮಾಡಿಕೊಂಡೋ ನೋಡುವ ಸ್ಥಿತಿ. ರಂಗಪ್ರಸ್ತುತಿಯ ಹೆಸರೇ ಹೇಳುವಂತೆ ಇದು ಲೀಕ್ ಅರ್ಥಾತ್ ಮೊಗೆದು ಕೊಡುವಂತದ್ದಲ್ಲ, ನಾವಾದರೂ ಬಗೆದು ನೋಡುವಂತದ್ದು ಅಲ್ಲ ಎನ್ನುವುದೇ ಇದರ ಧ್ವನಿಯಿರಬಹುದು. ಪ್ರಸ್ತುತಿ ಚೌಕಟ್ಟು, ಕತೆ, ಅಭಿನಯ ಮುಂತಾದ ಸಾಮಾನ್ಯ ನಾಟಕ ಪ್ರೇಕ್ಷಕನ ನಿರೀಕ್ಷೆಗಳನ್ನು ಹುಸಿ ಮಾಡುತ್ತಲೇ ಯಶಸ್ವಿಯಾಯ್ತು. ಬಿವಿ ಕಾರಂತರು ಪುತ್ತೂರಿನ ಬಾಲವನದ ಬಯಲು ರಂಗಮಂದಿರದಲ್ಲಿ ಒಮ್ಮೆ ಪ್ರೇಕ್ಷಕರನ್ನು ವೇದಿಕೆಯ ಮೇಲೆ ಕೂರಿಸಿ, ಕಲಾಪ್ರಸ್ತುತಿಯನ್ನು ಪ್ರೇಕ್ಷಾಂಗಣದಲ್ಲಿ ಮಾಡಿದ್ದು ಕೇಳಿದ್ದೆ. ಲೀಕ್ ಔಟ್ ಇನ್ನೂ ಒಂದು ಹೆಜ್ಜೆ ಮುಂದುವರಿದು, (ಮೊದಲೇ ಕೇಳಿಕೊಂಡು,) ಅಪ್ಪಟ ಪ್ರೇಕ್ಷಕರಿಂದಲೇ ಪೂರಕ ಮಾತು ಮತ್ತು (ಸಹಜ) ಅಭಿನಯವನ್ನು ಪಡೆದುಕೊಂಡರೂ ಒಟ್ಟಾರೆ ಪ್ರಸ್ತುತಿಯ ಯೋಜಿತ ಲಕ್ಷ್ಯವನ್ನು ಸಾಧಿಸಿದ್ದು ಗಮನಾರ್ಹವಾಗಿತ್ತು.

ಇದು ಪವಾಡಪುರುಷ/ಷಿಯರು ಸಭೆಯಲ್ಲಿ ‘ತಮ್ಮದೇ ಜನ’ ಇಟ್ಟು ಪ್ರದರ್ಶನವನ್ನು ಯಶಸ್ವಿಗೊಳಿಸುವಂತ ಕಣ್ಕಟ್ಟಲ್ಲ. ಕಲಾವಿದೆ, ಒಂದು ತುಂಡು ಬಟ್ಟೆ, ಒಂದು ದೀಪ, ಒಂದೊಂದೇ ಕ್ರಿಯೆಗಳ ಮೂಲಕ ಮಿದುವಾಗಿ ಚುಚ್ಚಿ, ಪ್ರೇಕ್ಷಕನ ಅಂದರೆ ಸಮಾಜದ, ಅಸಂಖ್ಯ ಪೂರ್ವಾಗ್ರಹ, ಭಾವಾವೇಶಗಳನ್ನು (ಲೀಕೂ) ಹೊರತೆಗೆಯಿತು. ಇಲ್ಲಿ ನಮ್ಮನ್ನು ‘ನಿರ್ಲಿಪ್ತ ಪ್ರೇಕ್ಷಕ’ರಾಗಿ ಉಳಿಯದಂತೆ ನೋಡಿಕೊಳ್ಳುವುದೂ ಪ್ರಸ್ತುತಿಯ ಭಾಗ ಮತ್ತು ಯಶಸ್ಸಿನ ಗುಟ್ಟು. ಅಕ್ಷತಾ ಹೊಸ ಹೊಸಾ ಸವಾಲುಗಳನ್ನೆಸೆಯುತ್ತಾ ನಮ್ಮ ನಡುವೆ ಬರುವಾಗ, ವಿದ್ಯಾ ದಿನಗಳಲ್ಲಿ ಮೇಸ್ಟ್ರು ಬಾಯಿ ಲೆಕ್ಕ ಹೇಳಿದ ಮೇಲೆ, ಎಲ್ಲಿ ನನ್ನತ್ತ ಬೆರಳು ಮಾಡುತ್ತಾರೋ ಎಂದು ಆತಂಕಿಸಿದ ದಿನಗಳ ನೆನಪಾಯ್ತು. ನನ್ನಜ್ಜೀ ಪುಣ್ಯಕ್ಕೆ ನನ್ನನ್ನೇನೂ ಕೇಳಲಿಲ್ಲ! ಅಕ್ಷತಾ ಕೊನೆಯಲ್ಲಿ ಪಾತ್ರಧಾರಿಯ ನೆಲೆಯಲ್ಲೇ ನನ್ನನ್ನೂ ಸೇರಿಸಿದಂತೆ ಕೆಲವರಿಗೆ ಹಸ್ತಾಂದೋಲನ ಮಾಡಿ ನಿರ್ಗಮಿಸಿದಾಗಲೇ ನಾನು ನಿರುಮ್ಮಳನಾದೆ!! ಪ್ರಸ್ತುತಿಯ ಉದ್ದಕ್ಕೆ ಅಯಾಚಿತ ಸಹನಟರಾಗಿ ಒಲಿದವರನ್ನು ನಯದಲ್ಲೂ ದಿಟ್ಟತನದಲ್ಲೂ ದುಡಿಸಿಕೊಂಡು, ಉದ್ದೇಶಿತ ರಾಜಕೀಯ, ಭಾಷಾ, ಮತಧಾರ್ಮಿಕವೇ ಮುಂತಾದ ಜೀವ ವಿರೋಧೀ ಧೋರಣೆಗಳನ್ನು ವಿಶ್ಲೇಷಿಸಿದ ಅಕ್ಷತಾರ ಸಾಮರ್ಥ್ಯವಂತೂ ಅಪೂರ್ವ ಆನಂದವನ್ನೇ ಕೊಟ್ಟಿತು.

ಚರವಾಣಿ ನಿದ್ರೆಯಲ್ಲಿದೆ!

ರಂಗ ಪ್ರದರ್ಶನಗಳಲ್ಲಿ ಚರವಾಣಿಯನ್ನು ಮೂಕವಾಗಿಸಿ, ವಿಮಾನಕ್ಕೇರಿಸಿ, ಕಡ್ಡಾಯವಾಗಿ ನಿದ್ರೆ ಮಾಡಿಸಿ, ಚಿತ್ರಗ್ರಹಣ ಕೂಡದು ಎನ್ನುವುದೆಲ್ಲ ಸರಿಯೇ. ಅವು ಪಾತ್ರಧಾರಿಗಳ ಏಕಾಗ್ರತೆಗೆ ಭಂಗ, ಇತರ ಪ್ರೇಕ್ಷಕರಿಗೆ ಉಪದ್ರ, ಹಕ್ಕುಚ್ಯುತಿ, ಅಪಬಳಕೆ ಎಂದು ನೂರೆಂಟು ಗೋಟಾಳೆಗಳನ್ನು ತಪ್ಪಿಸುವುದೂ ಹೌದು. ಮತ್ತೂ ಮುಖ್ಯವಾಗಿ ಪ್ರೇಕ್ಷಕರು ‘ಸ್ಮರಣಿಕೆ’ ಸಂಗ್ರಹಿಸುವ ಹುಚ್ಚಿನಲ್ಲಿ ಪ್ರದರ್ಶನಾನುಭವವನ್ನು ಕಡಿಮೆ ಮಾಡಿಕೊಳ್ಳುತ್ತಾರೆ ಎಂಬ ಕಾಳಜಿಯೂ ಅಲ್ಲಿದೆ. ಆದರೂ ಕಲಾವಿದರ ಮತ್ತು ಪ್ರದರ್ಶಕರ ದಾಖಲೆಗಳಿಗೆ, ನನ್ನಂಥ ಕೆಲವು ಹವ್ಯಾಸೀ ಪ್ರಚಾರಕರ ಸಾಹಿತ್ಯಕ್ಕೆ ಸಾಕ್ಷಿ ಸಂಗ್ರಹದ ಅವಕಾಶವನ್ನೂ ಈ ನಿರ್ಬಂಧ ತಪ್ಪಿಸಿ ಬಿಡುತ್ತದೆ ಎನ್ನುವುದೂ ನಿಜ. ಆ ಲೆಕ್ಕದಲ್ಲಿ ನೀನಾಸಂ, ಚರವಾಣಿ ಬಂದ್ ಘೋಷಣೆಯೊಡನೇ “ಪ್ರದರ್ಶನದ ಒಳ್ಳೆಯ ಚಿತ್ರಗಳು ನಮ್ಮ ಜಾಲತಾಣದಲ್ಲಿ ಎಲ್ಲರಿಗೂ ಮುಕ್ತವಾಗಿವೆ” ಎಂದೂ ಘೋಷಿಸಿಕೊಳ್ಳುವುದು ಇತರರಿಗೆ ಅನುಕರಣೀಯವಾದರೂ ಆಗಬೇಕು. ತುಮರಿಯ ಎಲ್ಲ ರಂಗ ಪ್ರಸ್ತುತಿಗಳ ಕಾಲದಲ್ಲೂ ನನ್ನ ಚರವಾಣಿ ಕಡ್ಡಾಯ ನಿದ್ರೆಯಲ್ಲಿದ್ದುದರಿಂದ ಹೆಚ್ಚು ಚಿತ್ರಗಳಿಲ್ಲ, ಕ್ಷಮಿಸಿ.

ಊಟ, ವಾಸ

ಹೋಟೆಲ್ ಹಾಲ್ಕೆರೆ, ತುಮ್ರಿ (ಕವುಚಿ ಬಿದ್ದ U ಆಕಾರದ ಒಂದು ಮಹಡಿಯ ಕಟ್ಟಡ. ಎರಡು/ಮೂರು ಜೋಡಿ ಹಾಸಿಗೆಯ, ಹತ್ತಿಪ್ಪತ್ತು ಕೋಣೆಗಳ ಚೊಕ್ಕ, ಸುಸಜ್ಜಿತ ವಸತಿಗೃಹ), ರಘು ಅವರ ವಾಣಿಜ್ಯ ವಹಿವಾಟುಗಳಲ್ಲಿ ಒಂದು. ಹಾಮ ಭಟ್ಟ ಸ್ಮೃತಿ ಹಬ್ಬದ ಮೂರು ದಿನ ಅವೆಲ್ಲವೂ ಉಚಿತ ಅತಿಥಿಗೃಹವೇ ಆಗಿತ್ತು. ಅದರದೇ ಹೊರ ಮಗ್ಗುಲಿನಲ್ಲಿದ್ದ (ರಘು ಅವರ ತಾಯಿಯ ಹೆಸರಿನ) ಮಧುರಾ ಹೋಟೆಲ್ (ಉಚಿತವಾಗಿ) ನಮ್ಮ ಹಸಿವು ಬಾಯಾರಿಕೆಗಳಿಗೆ ಮಾತೃಸದೃಶವೇ ಆಗಿತ್ತು. ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ, ಒಡೆ, ದೋಸೆ, ಪಲಾವ್‍ಗಳೂ ಮಧ್ಯಾಹ್ನ ರಾತ್ರಿಗಳಿಗೆ ಮೊದಲೇ ಹೇಳಿದಂತೆ ಊಟಗಳೂ ಎಡೆ ಹೊತ್ತಿನಲ್ಲಿ ಸಭಾ ಮಂದಿರಕ್ಕೇ ಪೂರೈಸುತ್ತಿದ್ದ ಚಟ್ಟಂಬಡೆ, ಪೋಡಿ, ಬಿಸ್ಕೆಟ್ ಅಲ್ಲದೆ ಉದ್ದಕ್ಕೂ ಚಾ ಕಾಫಿ ಕಷಾಯಗಳು ಎಲ್ಲರನ್ನು ಸಂತುಷ್ಟಿಯಲ್ಲಿಟ್ಟಿದ್ದವು. ಆ ಸಮಯಗಳಲ್ಲಿ ರಘು ಇದ್ದರಂತೂ ‘ಮನೆಯ ಯಜಮಾನ’ನ ಆಪ್ತತೆಯಲ್ಲಿ ಒತ್ತಾಯ ಬೇರೆ ಹೇರಿ ದಾಕ್ಷಿಣ್ಯದಲ್ಲಿ ಬಳಲುತ್ತಿದ್ದೆವು.

ಮೊದಲ ದಿನ (ಮಂಗಳೂರಿನಲ್ಲಿ) ಬೆಳಿಗ್ಗೆ ಐದಕ್ಕೆ ಹಾಸಿಗೆ ಬಿಟ್ಟ ನಾವು, ಕಾರ ಪಯಣ, ನಡೆ, ನೋಡು, ಮಾತಾಡು, ಕೇಳು…. ಎಂದು ರಾತ್ರಿ ಒಂಬತ್ತೂ ಮುಕ್ಕಾಲರವರೆಗೂ ಅವಿರತ ಚಟುವಟಿಕೆಯಲ್ಲಿದ್ದದ್ದಕ್ಕೋ ಏನೋ ಊಟ ಮುಗಿಸಿದ್ದೇ ನಿದ್ರೆಗೆ ಜಾರಿದ್ದೆ. ಡಿ.ಎಸ್. ಶ್ರೀಧರ್ ಹಿಂದೆಂದೋ “ನಮ್ಮ ಮಲೆನಾಡ ವಲಯವನ್ನು ಮುಳುಗಡೆ ಇನ್ನಿಲ್ಲದಂತೆ ಕದಡಿತು. ಆಗ ಜನರ ಸಾಂತ್ವನಕ್ಕೆ ಒದಗಿದ್ದು ಯಕ್ಷಗಾನವೊಂದೇ” ಎಂದದ್ದನ್ನು ನೆನಪಿಸುವಂತೆ, ಹನಿ ಮಳೆಯ ಶ್ರುತಿ ಹಿಡಿದು ಯಕ್ಷಗಾಯನ ಅಲೆಯಲೆಯಾಗಿ ತೇಲಿ ಬಂದಂತಾಯ್ತು. ನಾನೊಮ್ಮೆ ಎದ್ದು ಕಣ್ಣುಜ್ಜಿಕೊಳ್ಳುವಂತಾಯ್ತು. ಗಂಟೆ ಹನ್ನೊಂದೋ ಹನ್ನೆರಡೋ ಇದ್ದಿರಬೇಕು. ಬಾಗಿಲು ತೆರೆದು ಇಣುಕಿದೆ. ಪಕ್ಕದಲ್ಲೇ ಇದ್ದ ತೆರೆಬಾಗಿಲಿನ ಸ್ವಾಗತ ಕಚೇರಿಯಲ್ಲಿ ಚಿಕ್ಕಮೇಳ ಒಂದರ ಸಿರಿ ಕಂಠದ ಯುವ ಭಾಗವತರೊಬ್ಬರು (ಕ್ಷಮಿಸಿ, ಹೆಸರು ಮರೆತಿದ್ದೇನೆ) ನಾಲ್ಕೇ ಶೋತೃಗಳಿಗೆ ಭಾಮಿನೀವಿಲಾಸ ಮೆರೆದಿದ್ದರು! ನಾನೂ ನಿಂತಿದ್ದಂತೇ ಪರವಶನಾದೆ. ಮತ್ತವರ ಮಂಗಳಗೀತೆಯೊಡನೆ ನನ್ನ ನಿದ್ದೆಯನ್ನು ಹೆಚ್ಚು ಮಧುರವಾಗಿ ಮುಂದುವರಿಸಿದೆ.

ಬಟ್ಟೆ ವಿನಾಯಕ

ಎರಡನೇ ದಿನ ಬೆಳಕು ಹರಿಯುವಾಗ ಮಳೆ ನಿಂತಿತ್ತು. ನಾವು ಮೂವರು ಪ್ರಾತರ್ವಿಧಿಗಳನ್ನು ಪೂರೈಸಿ ಸಣ್ಣ ಹೊರ ಸಂಚಾರಕ್ಕಿಳಿದೆವು. ಮ್ಯಾನೇಜರ್ ಗಣಪತಿ ಕೊಟ್ಟ ಸೂಚನೆಯಂತೆ, ಪೇಟೆ ಕೊನೆಯಲ್ಲಿ ಬಲ ಮಗ್ಗುಲಿಗೆ ಹೊರಳಿ, ಅರಬಳ್ಳಿಯ ದಾರಿ ತುಳಿದೆವು. ಹಾಗೆ ಸಿಕ್ಕ ಸಣ್ಣ ಮಳೆ (ನಾವು ಛತ್ರಪತಿಗಳಾಗಿಯೇ ಹೋಗಿದ್ದುದರಿಂದ) ನಮ್ಮ ನಡಿಗೆಗೆ ರಂಗು ತುಂಬಿತು. ಸುಮಾರು ಎರಡು ಕಿಮೀ ಅಂತರದ ಬಟ್ಟೆ ವಿನಾಯಕ ದೇವಳದವರೆಗೂ ಪಾದ ಬೆಳೆಸಿಯೇ ಬಿಟ್ಟೆವು. ಹಾಲ್ಕೆರೆಯ ಗ್ರಾಮದೇವರೂ ಆದ ವಿನಾಯಕನಿಗೆ ಶಾಸ್ತ್ರೋಕ್ತವಾಗಿ ಸುಪ್ರಭಾತ ಹೇಳುವವರು ಇನ್ನೂ ಬಂದಿರಲಿಲ್ಲ, ಬೀಗ ಹಾಕಿತ್ತು. ನಮ್ಮದಾದರೂ ಸ್ಥಳ ವಿಶೇಷ ತಿಳಿದುಕೊಳ್ಳುವ ಕುತೂಹಲ ಮಾತ್ರ. ನಿರ್ಯೋಚನೆಯಿಂದ ಮರಳಿದೆವು. ನಾವು ಪೇಟೆ ಹತ್ತಿರ ಬರುವಾಗ ಮತ್ತೆ ರಘು ಕಾರೇರಿ, ಮನೆಯಿಂದ ಬರುತ್ತಿದ್ದವರು ಸಿಕ್ಕಿದ್ದರು.

ಕೊರೋನಾ

ಎರಡನೇ ದಿನದ ಮೊದಲ ಗೋಷ್ಠಿಯ ವಿಷಯ ಕೊರೋನಾ ಮತ್ತು ನಂತರ. ಅದರಲ್ಲೂ ಘೋಷಿತ ಪಟ್ಟಿ ಹಾಗೂ ಭಾಗವಹಿಸಿದವರಲ್ಲಿ ಕೆಲವು ವ್ಯತ್ಯಾಸಗಳಿದ್ದವು. ಅವರಲ್ಲಿ ಕೊರೋನಾವನ್ನು ತಮ್ಮ ವೃತ್ತಿ ವೈಶಿಷ್ಟ್ಯದಿಂದ ಗ್ರಹಿಸಿ, ವಿಶ್ಲೇಷಣೆ ನಡೆಸಿದವರದು ಸ್ವಾರಸ್ಯಕರವಾಗಿತ್ತು. ಒಂದು ಉದಾಹರಣೆ ಹೇಳುವುದಿದ್ದರೆ – ಆನ್-ಲೈನ್ ತರಗತಿಗಳ ಕಟು ಸತ್ಯವನ್ನು, ಸ್ವತಃ ಕಾಲೇಜು ಅಧ್ಯಾಪಿಕೆಯಾಗಿ, ಆನ್ಲೈನ್ ಪಾಠ ಮಾಡಿದ ಅನುಭವವನ್ನು, ಭಾರತೀ ದೇವಿ ದಿಟ್ಟವಾಗಿ ಬಿಚ್ಚಿಟ್ಟರು. ಉಳಿದಂತೆ ನನಗೆ ಕಾಲಕಾಲಕ್ಕೆ ಸಿಕ್ಕ ವಿಶ್ವಾಸಾರ್ಹ ಸುದ್ದಿಗಳ ಚರ್ವಿತ ಚರ್ವಣದಂತನ್ನಿಸಿತು. ಕೊರೋನಾದ ಉತ್ತುಂಗದಲ್ಲಿ ಆಮ್ಲಜನಕದ ಕೊರತೆಯೊಡನೆ ಏಗಾಡಿದ (ಬಹುಶಃ ಇನ್ನೂ ಮುಗಿಯದ ಹೋರಾಟದಲ್ಲಿರುವ) ಮಂಡ್ಯದ ಗ್ಯಾಸ್ ಏಜನ್ಸೀಯ ಯಜಮಾನ (ಆಮಂತ್ರಣದಲ್ಲಿದ್ದ) ರಾಜೇಂದ್ರಪ್ರಸಾದ್, ಜವಾಬ್ದಾರಿಯುತ ಪತ್ರಕರ್ತನಾಗಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ನಿರಪೇಕ್ಷ (ಬಹುತೇಕ ತನಿಖಾ) ವರದಿ/ ಲೇಖನಗಳನ್ನೇ ಬರೆದದ್ದಲ್ಲದೆ, ಅದ್ಭುತವಾಗಿ ಅವುಗಳನ್ನು ‘ಕರಿ ಡೈರಿ’ ಎಂಬ ಮಹಾಗ್ರಂಥಕ್ಕೆ ಪರಿಷ್ಕರಿಸಿ ಪ್ರಕಟಿಸಿದ ರಾಜಾರಾಂ ತಲ್ಲೂರು ಅಂಥವರು ಬರಬೇಕಿತ್ತು ಎಂದನ್ನಿಸಿದ್ದು ಸುಳ್ಳಲ್ಲ.

ಮುಪ್ಪಾನೆ

ಉದ್ಘಾಟನಾ ಮಾತುಗಳಲ್ಲೇ ಸುಬ್ರಾಯ ಚೊಕ್ಕಾಡಿಯವರು ಮೂರೂ ದಿಕ್ಕಿಗೆ ಸಾಗರೋಪಾದಿಯ ನೀರಿನಿಂದ ಆವೃತವಾದ ತುಮರಿಯನ್ನು ಸಣ್ಣ ಭಾರತ ಎಂದೇ ಗುರುತಿಸಿದರು. ಅಂಥಲ್ಲಿ ಸಭಾಮಂದಿರದ ಒಳಗೆ, ಅದೂ ನನಗೆ ಒಲವು ಕಡಿಮೆಯಿರುವ ವಿಷಯಗಳಿಗೆ ಕೂರುವ ಮುಜುಗರ ತಪ್ಪಿಸಿ, ಎರಡನೇ ದಿನದ ಅಪರಾಹ್ನದ ಸೊಲ್ಲುಗಳನ್ನು ನಾವು ಮೂವರೂ ತಪ್ಪಿಸಿದೆವು, ಊಟ ಮುಗಿಸಿದ್ದೇ ನಾವು ಕಾರೇರಿದೆವು. ಮೊದಲ ಲಕ್ಷ್ಯ – ಮುಪ್ಪಾನೆ.

ತುಮರಿಯಿಂದ ಒಂದು ಕಿಮೀ ಮುಂದಣ ಎಡ ಕವಲಿನ ಮಾರ್ಗಸೂಚಕ ಫಲಕ ‘ಮುಪ್ಪಾನೇ ಲಾಂಚ್’ (೧೭ಕಿಮೀ) ಎಂದೇ ಕಾಣಿಸಿತು. ಆದರೂ ಅಲ್ಲಿದ್ದ ಇಬ್ಬರು ಶಾಲಾ ಬಾಲಕರಲ್ಲಿ ಖಾತ್ರಿಪಡಿಸಿಕೊಳ್ಳಲು ನಿಲ್ಲಿಸಿದೆವು. ಆ ಹುಡುಗರೋ (ಎಂಟು ಮತ್ತು ಒಂಬತ್ತನೇ ತರಗತಿ) ಮುಪ್ಪಾನೆ ದಾರಿಯವರೇ. ಶನಿವಾರದ ಅರ್ಧ ದಿನದ ಶಾಲೆ ಮುಗಿಸಿ, ಬಸ್ಸು ಕಾದಿದ್ದರು. ಸಹಜವಾಗಿ ನಾವವರನ್ನು ಕಾರಿಗೇರಿಸಿಕೊಂಡೇ ಮುಂದುವರಿದೆವು. ನಾನವರ ಹಿಂದು ಮುಂದು ವಿಚಾರಿಸುತ್ತಾ ದಾರಿಯ ಅಂಕುಡೊಂಕು, ಏರಿಳಿತವನ್ನು ಸಂತೋಷಿಸುತ್ತಾ “ಒಳ್ಳೇ ಡಾಮರ್ ಆದರೂ….” ಎನ್ನುತ್ತಿದ್ದಂತೇ ಎದುರಿನಿಂದೊಂದು ಸಣ್ಣ ಬಸ್ ಬಂತು. ಕಾರನ್ನು ನಿಧಾನಕ್ಕೆ ಎಡದ ಮಣ್ಣಿಗಿಳಿಸುತ್ತ “…ಸಪುರ ಮಾರ್ಗ” ಎಂದು ಮುಗಿಸುತ್ತಿದ್ದಂತೆ ಕಾರು ಹೂತುಕೊಂಡಿತ್ತು. ಬಸ್ಸು ಸಹಜವಾಗಿಯೇ ದಾಟಿ ಹೋಗಿತ್ತು. ಒಮ್ಮೆ ಇಳಿದು ನೋಡಿದೆ “ಏನಿಲ್ಲ, ಎಡ ಮುಂಚಕ್ರ ಸ್ವಲ್ಪ ಹೂತಿದೆ, ಏಳುತ್ತೆ ನೋಡಿ…” ಎಂದು ಸ್ವಲ್ಪ ಹೆಚ್ಚು ಶಕ್ತಿ ಹಾಕಿದೆ, ಮುಂಚಕ್ರದಲ್ಲೇ ಬಲವಿರುವ ಮಾರುತಿ (ವ್ಯಾಗನ್ ಆರ್) ಮತ್ತಷ್ಟು ಆಳಕ್ಕಿಳಿದು ಕುರುಕ್ಷೇತ್ರದ ಕರ್ಣ ರಥವೇ ಆಯ್ತು!

ಯಾರೋ ಹೊಸದಾಗಿ, ಉದ್ದಕ್ಕೆ ಎರಡಡಿ ಆಳದ ಚರಂಡಿ ಮಾಡಿ, ನೀರಾವರಿ ಪೈಪ್ ಹುಗಿದು ಹೋಗಿದ್ದರು. ವಿಶೇಷ ಪ್ರಯತ್ನದಲ್ಲಿ ಚಕ್ರವೇನು ಮುಂಬಾಗಿಲಿನ ಅಂಚಿನವರೆಗೂ ಕಾರು ಗೊಸರಿನಲ್ಲಿ ಸಿಕ್ಕಿಬಿದ್ದಿತ್ತು. ಸಿಕ್ಕ ಕಾಡುಕೋಲಿನಲ್ಲಿ ಚಕ್ರದ ಹಿಂದಿನ ಕೆಸರು ಎಳೆದೆಳೆದು ತೆಗೆದೆ. ಕಾರಿನ ಜ್ಯಾಕ್ ತೂರಿಸುವಷ್ಟಾದರೂ ಸಂದಿ ಸಿಕ್ಕಿದರೆ ಎತ್ತಿ, ಚಕ್ರದಡಿಗೆ ಪುಡಿ ಕಲ್ಲು ಜಡಿದು ಪಾರಾಗುವ ಅಂದಾಜು ಮಾಡಿದೆ. ಜ್ಯಾಕ್ ಕಾರನ್ನೆತ್ತುವುದು ಬಿಟ್ಟು ಸ್ವತಃ ಗೊಸರಿನಲ್ಲಿ ಕುಸಿದು ಸೋಲಿಸಿತು. ಅಷ್ಟರಲ್ಲಿ ಸ್ಥಳೀಯ ಮೊಪೆಡ್ ಸವಾರರೊಬ್ಬರು ಅಯಾಚಿತ ಸಹಾಯಕ್ಕೆ ಒದಗಿದರು. ಎಚ್ಚರಿಕೆಯಲ್ಲಿ ಹುಡುಗರನ್ನು ದೂರವಿಟ್ಟು, ಕೇವಲ ದೊಡ್ಡವರು ಮೂವರಿಗೆ ಕಾರನ್ನು ರಸ್ತೆಯ ನಡುವಿನತ್ತ ತಳ್ಳುವಂತೆ ಸೂಚನೆ ಕೊಟ್ಟು, ನಾನು ಮತ್ತೆ ಎಂಜಿನ್ ಚಲಾಯಿಸಿದೆ. ಚಕ್ರ ಅಂಚಿನ ಡಾಮರ್ ಕಚ್ಚಿ ಮೇಲೆದ್ದು, ಕಾರೇಂದ್ರ ಮೋಕ್ಷವಾಯ್ತು! ಆದರೆ ಎಲ್ಲರ ಕೈ, ಬಟ್ಟೆ, ಜ್ಯಾಕ್ ಎಂದು ಮುಟ್ಟಿದ್ದೆಲ್ಲ ಜಿಗುಟು ಮಣ್ಣಿನ ಗೆಳೆತನದಲ್ಲಿ ಕೆಂಪೋ ಕೆಂಪು! ಅಭಯನ ‘ಪಡ್ಡಾಯಿ’ ಸಿನಿಮಾದ ಸುಗಂಧಿಯಾದರೋ (ಮೂಲದಲ್ಲಿ ಲೇಡೀ ಮ್ಯಾಕ್ಬೆತ್) “ಏಳೇಳು ಸಮುದ್ರದ ನೀರೂ ಇದನ್ನು ತೊಳೆಯಲಾರದು…” ಎಂದು ಮನಸ್ಸಿನಲ್ಲೇ ಗಾಢ ಶೋಕಿಸಿರಬಹುದು. (ಪೂರ್ಣ ಸಿನಿಮಾ ಉಚಿತವಾಗಿ ನೋಡಿ- ಪಡ್ಡಾಯಿ  ) ಆದರೆ ನಮಗೋ ಮುಂದೆ ಸಿಗುವ ಶರಾವತಿ ಸಾಗರ ಎಷ್ಟಕ್ಕೂ ಸಾಕೆಂಬ ಭರವಸೆಯಿದ್ದುದರಿಂದ ನಿರಾಳ ಮುಂದುವರಿದೆವು.

‘ಮುಪ್ಪಾನೇ ಲಾಂಚ್’ಗೆ ಐದು ಕಿಮೀ ಎಂಬ ಕವಲು ಬಂತು. ಹುಡುಗರಿಬ್ಬರ ಮನೆ ಅಲ್ಲೇ ಸಮೀಪದಲ್ಲಿದ್ದುದರಿಂದ ಅವರು ಇಳಿಯುತ್ತ “ಮುಂದಿನ ದಾರಿ ಮಣ್ಣಿದ್ದು, ಆದರೆ ಕಾರಿಗೇನೂ ತೊಂದ್ರೆಯಿಲ್ಲ” ಎಂದು ಧೈರ್ಯ ಕೊಟ್ಟರು. ನಾವು ಅವರಿಗೆ “ದೊಡ್ಡ ಥ್ಯಾಂಕ್ಸ್” ಕೊಡುವುದರೊಡನೆ, “ಕಾಲ ಬದಲಾಗಿದೆ ಮಕ್ಕಳೇ. ಮುಂದೆ ಹೀಗೆ ಬಿಟ್ಟೀ ಸವಾರಿ ಬಂತೆಂದು, ನಿರ್ಯೋಚನೆಯಿಂದ ಅಪರಿಚಿತರ ವಾಹನ ಏರಬೇಡಿ…” ಎಂದು ಎಚ್ಚರಿಸಿಯೇ ಬೀಳ್ಕೊಟ್ಟೆವು. ಶುದ್ಧ ಮಣ್ಣ ದಾರಿ ಬಹುತೇಕ ಸಮತಟ್ಟಿದ್ದದ್ದೊಂದೇ ನಮ್ಮ ಪುಣ್ಯ. ಹೊಂಡ, ದಿಣ್ಣೆ, ಕಿರುಕೊಳ, ಕೆಸರ ಓಣಿ ಉದ್ದಕ್ಕೂ ಇತ್ತು. ನಮ್ಮ ನಿಧಾನದೋಟಕ್ಕೆ ಕಿರುಕುಳ ಮಾಡಲಿಲ್ಲ. ಆ ಕೊನೆಯಲ್ಲಿ ದಾರಿ ಶರಾವತಿ ಸಾಗರದ ಒಂದು ಸೆರಗಿನ ದಂಡೆಗೆ ಮುಗಿದಿತ್ತು. ಅಲ್ಲಿ ದೋಣಿಗಟ್ಟೆ ಇರಲಿಲ್ಲ. ದಂಡೆಯಲ್ಲಿ ಸಹಜ ನಾಲ್ಕು ಮರಗಳನ್ನು ಮಧ್ಯ ಉಳಿಸಿ, ದಾರಿ ಒಂದು ಸುತ್ತು ಹಾಕಿತ್ತು, ಅಷ್ಟೆ. ಲಾಂಚ್ ಸುಮಾರು ಅರ್ಧ ಕಿಮೀ ದೂರದ ಎದುರು ದಂಡೆಯಲ್ಲಿ ಕಾಣುತ್ತಿತ್ತು. ನಾವು ಅವಸರವಸರವಾಗಿ ನಮ್ಮನ್ನೂ ಕಾರನ್ನೂ ಕೆಸರು ಮುಕ್ತ ಮಾಡಿಕೊಂಡೆವು. ಮಿನಿಟೆರಡರಲ್ಲಿ ಇನ್ನೊಂದೇ ಕಾರು ಬರುತ್ತಿದ್ದಂತೆ ಲಾಂಚ್ ನಮ್ಮ ದಂಡೆಗೆ ಬಂತು.

ಮೊದಮೊದಲು ಶರಾವತಿ ಸಾಗರಕ್ಕಿದ್ದ ಏಕೈಕ ಮತ್ತು ಅತಿ ಉದ್ದದ ಕಡವಿನ ತಾಣ ತುಮರಿ ಸಮೀಪದ ಕಳಸವಳ್ಳಿ – ಹೊಳೆಬಾಗಿಲು. ಸ್ವಲ್ಪ ತಡವಾಗಿ ಬಂತು ಹಸಿರುಮಕ್ಕಿಯ ಕಡವು. ಐದೇ ವರ್ಷಗಳ ಹಿಂದೆ ಬಂದದ್ದು ಈ ಮುಪ್ಪಾನೆ. ಇವುಗಳಂತೆ ವ್ಯಾಪಕವಲ್ಲದ ಹೆಬ್ಬಿಗೆಯ ತೂಗುಸೇತುವೆ ನಮಗೆ ಹಿಂದಿನವಷ್ಟೇ ನೋಡಿದ್ದಾಗಿತ್ತು. ಇನ್ನೆಲ್ಲೋ ಖಾಸಗಿ ಉದ್ದಿಮೆಯಂತೆ ಎರಡೂ ದಂಡೆಗಳಿಗೊಂದು ಬಲವಾದ ಹಗ್ಗ ಬಿಗಿದು ಕೇವಲ ಜನರನ್ನು ಹೊತ್ತ ತೆಪ್ಪ ಎಳೆಯುವುದೂ ಇದೆ ಎಂದು ಕೇಳಿದ್ದೇನೆ, ನೋಡಿಲ್ಲ. ಉಳಿದಂತೆ, ಶರಾವತಿ ಸಾಗರದ ಮೇಲಾಡುವವರು – ಹೊನ್ನೇಮರಡಿನ ಸಾಹಸೀ ದೋಣಿಗಳು ಮತ್ತು ಅರಣ್ಯ ಇಲಾಖೆಯ ತನಿಖಾ ದಳಗಳು. ಅರಣ್ಯ ಇಲಾಖೆಯಿಂದ ಮೀನುಗಾರಿಕಾ ಗುತ್ತಿಗೆ ಪಡೆದ ಬೆಸ್ತರು ಮತ್ತು ಸಣ್ಣ ಪುಟ್ಟ ವಲಯಗಳಲ್ಲಿ ತಮ್ಮ ಕೃಷಿ ಅಗತ್ಯದ ಭಾಗವಾಗಿ ಖಾಸಾ ಹರಿಗೋಲನ್ನು ಇಳಿಸುವುದೂ ಇದೆ. ಮುಪ್ಪಾನೆ ಲಾಂಚ್ ಉಳಿದೆರಡಕ್ಕಿಂತ ಸಣ್ಣದು, ಒಮ್ಮೆಗೆ ಎರಡು ಕಾರು, ಎಡೆಗಳಲ್ಲಿ ಬೈಕ್ ಮತ್ತು ಹತ್ತಿಪ್ಪತ್ತು ಜನವಷ್ಟೇ ಇದರ ಸಾಮರ್ಥ್ಯ. ಇದು ಜನ, ಸಮಯ ನೋಡಿಕೊಂಡು, ಆ ದಂಡೆ ಈ ದಂಡೆ ಓಡಾಡುತ್ತಲೇ ಇರುತ್ತದೆ. ಅದರ ನಿಯತ ಓಡಾಟದಲ್ಲಿ ಕಾರಿಗೆ ಐವತ್ತು, ಬೈಕ್ ಮತ್ತು ಜನಕ್ಕೆ ಹತ್ತು. ವಿಶೇಷ ಸೇವೆ ಬೇಕೆಂದಲ್ಲಿ ಮಾತ್ರ ಮುನ್ನೂರಂಟೆ. ನಾವು ಕಾರನ್ನು ಅಲ್ಲೇ ಬಿಟ್ಟು, ಕೇವಲ ಸವಾರಿಯ ಸಂತೋಷಕ್ಕೆ ರೂ ಅರವತ್ತು ಕೊಟ್ಟು, ಇತ್ತಿಂದತ್ತ ಹೋಗಿ ಬಂದೆವು. ಇನ್ಯಾವತ್ತಾದರೂ  ಮತ್ತೆ ಬಂದು. ಮುಪ್ಪಾನೆಯ ಅರಣ್ಯ ಅತಿಥಿಗೃಹದಲ್ಲಿ ಉಳಿದು, ಅಲ್ಲಿಂದ ಹದಿನೈದೇ ಕಿಮೀ ದೂರದ ಜೋಗಕ್ಕೂ ಹೋಗಬೇಕೆಂದು ಯೋಚಿಸುತ್ತಲೇ ತುಮರಿ-ಕಳಸವಳ್ಳಿ ದಾರಿ ಮುಟ್ಟಿದ್ದೆವು.

ಕಳಸವಳ್ಳಿ, ಸಿಗಂದೂರು

ಹಿಂದೊಮ್ಮೆ ಮಂಗಳೂರಿನಿಂದ (ಕೊಲ್ಲೂರು ಮಾರ್ಗ) ಹೆಗ್ಗೋಡಿಗೆ ಹೋಗುವ ದಾರಿಯಲ್ಲಿ ಹಸಿರುಮಕ್ಕಿ ಕಂಡದ್ದಿತ್ತು. ಆಗ ಅಲ್ಲಿ ಸೇತುವೆಯ ಕೆಲಸ ಅರ್ಧಂಬರ್ಧವಾಗಿ ನಡೆದು ಹಾಳು ಸುರಿದಿರುವುದು ಕಂಡಿದ್ದೆ. ಮುಂದೆ ಹೊನ್ನೆಮರಡಿನ ದೋಣಿ ಸಾಹಸಯಾನದ ಭಾಗವಾಗಿ ಹೋಗಿದ್ದಾಗಲೂ (ನೋಡಿ: ಶರಾವತಿ ಸಾಗರದ ಉದ್ದಕ್ಕೆ ) ಆ ಸೇತುವೆ ತ್ರಿಶಂಕು ಸ್ಥಿತಿಯಲ್ಲೇ ಮುಂದುವರಿದಿತ್ತು. ನಾನು ತಿಳಿದ ಮಟ್ಟಿಗೆ ಆಗ ಪ್ರಥಮ ಪ್ರಾಶಸ್ತ್ಯದ ಕಳಸವಳ್ಳಿ – ಹೊಳೆಬಾಗಿಲು ಸೇತುವೆ ಯೋಜನೆ ತೊಡಗಿಯೇ ಇರಲಿಲ್ಲವಂತೆ. ಆದರೆ ಇಂದು ಆ ದಾರಿಯ ಹೆಸರು ಹೇಳುತ್ತಿದ್ದಂತೆ “ಕಳಸವಳ್ಳಿಲಿ ಭಾರೀ ಸೇತುವೆ ಕೆಲಸ ನಡೆದಿದೆ” ಎಂದೇ ಕೇಳಿತ್ತು. ಅನಿಲ್ ಕಳಸವಳ್ಳಿ ಕಡವು ಮತ್ತೆ ಸಾಧ್ಯವಾದರೆ ಸಿಗಂದೂರನ್ನು ಹೊರಗಿನಿಂದಲೇ ನೋಡುವ ಕುತೂಹಲ ಇಟ್ಟುಕೊಂಡಿದ್ದ. ನಾನು ಕಾರನ್ನು ಅತ್ತ ಓಡಿಸಿದೆ. ಕ್ರಮ ತಪ್ಪಿಸಿ ಮೊದಲು ಕಳಸವಳ್ಳಿಗೆ ಹೋದೆವು.

ಕಳಸವಳ್ಳಿಯಲ್ಲಿ ಸರತಿ ಸಾಲು ಹಿಡಿದ ವಾಹನಗಳು, ಜನ ಜಾತ್ರೆ, ತಟ್ಟಿ ಹೋಟೆಲುಗಳ ವೈಭವ ಭರ್ಜರಿಯೇ ಇತ್ತು. ಆದರೆ ನೀರ ಹರಹಿನ ಮೇಲೆ ಎರಡೂ ದಿಕ್ಕುಗಳಿಂದ ಭಾರೀ ಪಾದ ಊರುತ್ತಿದ್ದ ಹೊಸ ಸೇತುವೆ ಕಾಣುವಾಗ ನನ್ನಲ್ಲಿ ಸಣ್ಣ ವಿಷಾದ ಮೂಡಿತು. ಒಮ್ಮೆ ಸೇತುವೆ ಪೂರ್ಣವಾಯ್ತೆಂದರೆ ಇಂದು ಭಾರೀ ಹೊರೆಗಳನ್ನು ಇತ್ತಿಂದತ್ತ ಮಾಡುವ ನಾಲ್ಕು ಲಾಂಚುಗಳು (ಸದ್ಯ ಎರಡನ್ನು ಪೂರ್ತಿ ಸೇತುಬಂಧಕ್ಕೆ ಬಳಸುತ್ತಿದ್ದರು) ಟಿಕೆಟ್ ಬೂತುಗಳು, ಭದ್ರತಾ ಸಿಬ್ಬಂದಿಗಳೆಲ್ಲ ಇಲಾಖಾ ನಿಯಮದಂತೆ ಇನ್ನೆಲ್ಲೋ ಬದಲಿ ವ್ಯವಸ್ಥೆಗೆ ಹೊಂದಿಕೊಳ್ಳುತ್ತಾರೆ. ಆದರೆ ಎಷ್ಟೋ ದಶಕಗಳಿಂದ ಈ ತತ್ಕಾಲೀನ ಜನಜಾತ್ರೆಯನ್ನು ನಂಬಿ ಪೂರ್ಣ ಸ್ವಂತ ಜವಾಬ್ದಾರಿಯಲ್ಲಿ ನೆಲೆಸಿದ ಅಂಗಡಿ ಮುಂಗಟ್ಟುಗಳು ಪೂರ್ಣ ಅನಾಥ ಆಗಲೇಬೇಕು. ಇಂಥಲ್ಲಿ ಒಂದೇ ಜಪ – ಕಾಲಾಯ ತಸ್ಮೈ ನಮಃ.

ತಟ್ಟಿಯಂಗಡಿಯಲ್ಲಿ ಒಂದು ಚಾ ಕುಡಿದು, ಸಿಗಂದೂರಿಗೆ ಬಂದೆವು. ನವರಾತ್ರಿ ಹಾಗೂ ವಾರಾಂತ್ಯದ ದಿನಗಳೆಂದು ನಾವು ಹೆದರಿದ್ದಷ್ಟು ಸಂದಣಿ ಅಲ್ಲಿರಲಿಲ್ಲ. ಹೊರಗಿನಿಂದಲೇ ಒಂದಷ್ಟು ಸುತ್ತಾಡಿದೆವು. ಅಲ್ಲಿ ಎರಡೆರಡು ಬೇಲಿ ಹಾಗೂ ಭದ್ರ ಸರಪಳಿಯ ಬಂಧನದಲ್ಲಿದ್ದ ಸುಂದರ ಬಸವ ಮಾತ್ರ ನಮ್ಮ ಕಣ್ತಣಿಸಿತು. ಇಲ್ಲಿಗೆ ಹಿಂದೊಮ್ಮೆ ನಾವಿಬ್ಬರು ರಶ್ಮಿಯೊಡನೆ ಬಂದದ್ದಿತ್ತು. ಆಗ ಒಳಗೂ ಹೋಗಿದ್ದೆವು. (ನೋಡಿ: ನೆಲ ನಿಲ್ಲಿಸುವುದು, ನೆಲ ಮುಳುಗಿಸುವುದು! ) ಅಂದು ಕಾಣದ ಚತುಷ್ಪಥ ರಸ್ತೆ ಮತ್ತು ಸುವಿಸ್ತಾರ ವಾಹನ ತಂಗುದಾಣ ನೋಡಿದ್ದು ನಮಗೆ ಸಾಕಾಯ್ತು.  ವಿರಾಮದಲ್ಲಿ ಎರಡು ಚರುಮುರಿ ಹಿಡಿದು ಕುರುಕುತ್ತಾ ಮತ್ತೆ ತುಮರಿಗೆ ಮರಳಿದೆವು. ಶಾಂತವೇರಿ ಗೋಪಾಲಗೌಡ ಸಭಾಭವನ ಅಂದಿನ ಸಾಹಿತ್ಯ ಕಲಾಪಗಳನ್ನು ಮುಗಿಸಿ, ಸಾಂಸ್ಕೃತಿಕ ಕಲಾಪಕ್ಕೆ ಸಜ್ಜಾಗಿತ್ತು.

ಸಾಕ್ಷ್ಯಚಿತ್ರ – ದಿಲ್ಲಿಯ ರೈತ ಚಳವಳಿ

ಮೊದಲ ಕಲಾಪ ಕೇಸರಿ ಹರವು ಅವರ ನಿರ್ದೇಶನದ ದಿಲ್ಲಿಯ ರೈತ ಚಳವಳಿಯ ಸಾಕ್ಷ್ಯ ಚಿತ್ರದ ಪ್ರದರ್ಶನ. ಪ್ರಸಾದ್ ರಕ್ಷಿದಿ ಕೇಸರಿ ಹರವು ಅವರನ್ನು ಪರಿಚಯಿಸಿದರು. ಕೇಸರಿಯವರು ತಮ್ಮ ಸಂಕಲ್ಪದೊಡನೆ, ಪ್ರಸಾದ್ ಸೇರಿದಂತೆ ಅಸಂಖ್ಯ ‘ರೈತ ಚಳವಳಿ ಪರ’ವಾದ ಮನಸ್ಸುಗಳ ಮತ್ತು ಆರ್ಥಿಕ ಬಲದಲ್ಲಿ ತಾವು ತಯಾರಿಸಿದ ‘ಕಿಸಾನ್ ಸತ್ಯಾಗ್ರಹ’ಕ್ಕೆ ಸಣ್ಣ ಪೀಠಿಕಾ ಮಾತನ್ನಷ್ಟೇ ಆಡಿ, ಚಿತ್ರ ಪ್ರದರ್ಶಿಸಿದರು.

ಐತಿಹಾಸಿಕ ಮತ್ತು ದಿನ ಸಂದ ಗಣ್ಯರ ಕಥನಾದಿಗಳನ್ನು ಸಾಕ್ಷ್ಯಚಿತ್ರಕ್ಕೆ ಪರಿವರ್ತಿಸುವಲ್ಲಿ ನಿರ್ದೇಶಕನಿಗೆ ತನ್ನದೇ ಕಥಾಹಂದರ ಸಿದ್ಧಪಡಿಸಿಕೊಂಡು, ಚಿತ್ರೀಕರಣಕ್ಕೆ ಇಳಿಯುವ ಸ್ವಾತಂತ್ರ್ಯವಿರುತ್ತದೆ. (ಮುಂದೆ ಪ್ರದರ್ಶಿತ ನಾಟಕ – ಸಾವಿತ್ರೀಬಾಯಿ ಪುಲೆಯಂತೆ). ಇಲ್ಲಾದರೋ ಮೋದಿ ಸರಕಾರ ಅಪ್ರಜಾಸತ್ತಾತ್ಮಕವಾಗಿ ರೈತರ ಮೇಲೆ ಹೊಸದೇ ಕೃಷಿ ಕಾನೂನು ಹೇರಿತ್ತು. ಅದನ್ನು (ಮುಖ್ಯವಾಗಿ) ಪಂಜಾಬ್, ಹರಿಯಾಣಾ ಮತ್ತು ಉತ್ತರಪ್ರದೇಶದ ರೈತರು ಭಾರೀ ಸಂಖ್ಯೆಯಲ್ಲಿ ವಿರೋಧಿಸಿ, ದಿಲ್ಲಿಗೆ ಲಗ್ಗೆ ಹಾಕಿದ್ದರು. ದಿಲ್ಲಿಯ ದೂರ, ಪರಿಸರ ಮತ್ತು ಸರಕಾರದ ವಿರೋಧಗಳು ಚಿತ್ರ ನಿರ್ಮಾಣಕ್ಕೂ ಸಹಜವಾಗಿಯೇ ಒದಗಿದ್ದವು. ಹೀಗೆ ತನ್ನ ನಿಯಂತ್ರಣದಲ್ಲಿ ಇಲ್ಲದ ವರ್ತಮಾನವನ್ನು, ಅದು ನಡೆದಷ್ಟೂ ಉದ್ದಕ್ಕೆ ಸಂಗ್ರಹಿಸಿ, ಸಾಕ್ಷ್ಯ ಚಿತ್ರವಾಗಿ ಸಂಸ್ಕರಿಸಿದ್ದು ಬಹಳ ದೊಡ್ಡ ಸಾಹಸವೇ ಸರಿ. ಅವೆಲ್ಲವುಗಳನ್ನು ಮೆಚ್ಚಿಕೊಂಡೇ ಚಿತ್ರದ ಕುರಿತ ನನ್ನ ಒಂದೆರಡು ಭಿನ್ನಾಭಿಪ್ರಾಯಗಳನ್ನು ತೀರಾ ಸಂಕೋಚದಲ್ಲೇ ಹೇಳುತ್ತೇನೆ.

ಕೃಷಿ ಕಾನೂನಿನ (ಮಾರುಕಟ್ಟೆಯ) ವಾಸ್ತವ ಸ್ಥಿತಿ ಏನಿತ್ತು ಎನ್ನುವುದು – ಪೂರ್ವಪಕ್ಷ, ಚಿತ್ರದಲ್ಲಿ ಮೊದಲು ಸ್ಪಷ್ಟವಾಗಬೇಕಿತ್ತು. ಅಂದರೆ, ನಿತ್ಯ ವಿವಿಧ ಮಾಧ್ಯಮಗಳಲ್ಲಿ ಬರುತ್ತಿದ್ದ ವರದಿ ಮತ್ತು ವಿಶ್ಲೇಷಣೆಗಳ ಸಾರಾಂಷವನ್ನು ಸಿನಿಮಾ ಎಂಬ ಬಹುಶಕ್ತ ಮಾಧ್ಯಮಕ್ಕೆ ಹೊಂದುವಂತೆ ಸಂಗ್ರಹಿಸಿ ಕೊಡಬೇಕಿತ್ತು. ಆನಂತರದಲ್ಲಿ ಹೊಸ ಕಾನೂನುಗಳನ್ನು ತಿಳಿಸಿ, ಅಪಾಯಗಳನ್ನು ವಿಶ್ಲೇಷಿಸಿ, ಚಳವಳದ ಲಕ್ಷ್ಯವನ್ನು ಸ್ಪಷ್ಟಪಡಿಸಬೇಕಿತ್ತು. ಕೊನೆಯಲ್ಲಿ ಸರಕಾರ ವಾದದಿಂದ, ಅದಕ್ಕೂ ಹೆಚ್ಚಿಗೆ ತನ್ನ ಬಲದಿಂದ ಪ್ರದರ್ಶನವನ್ನು ಹತ್ತಿಕ್ಕಲು ಮಾಡಿದ ಪ್ರಯತ್ನಗಳು, ಚಳವಳಿ ಅದನ್ನು ಅಪಾರ ಸಂಯಮದಿಂದ ಎದುರಿಸಿದ ಪರಿ ಸಂಗ್ರಹರೂಪದಲ್ಲಿ ಬಂದು ವಿಜಯ ಧ್ವನಿಯೊಡನೆ ಮುಗಿಯಬೇಕಿತ್ತು. ಚಿತ್ರದ ಮೊದಲಲ್ಲೆಲ್ಲೋ ಹಳೆಗಾಲದ ಇಂಡಿಯನ್ ಫಿಲ್ಮ್ಸ್ ಡಿವಿಶನ್ನಿನ ಚಿತ್ರಗಳ ನಿರೂಪಣೆ ಬಂತು. ಅದಾದರೂ ಚಿತ್ರದ ಉದ್ದಕ್ಕೆ ಹರಿದಿದ್ದರೆ ದೊಡ್ಡ ಕೊರತೆ ಬಗೆಹರಿಯುತ್ತಿತ್ತೋ ಏನೋ. ಹಾಗಾಗದೇ ಚಳವಳದ ನಿರ್ಧಾರಾತ್ಮಕ ಸನ್ನಿವೇಶಗಳನ್ನೆಲ್ಲ ಬಹುತೇಕ ಚಳವಳಿಕಾರರ ಪತ್ರಿಕಾಗೋಷ್ಟಿಯಂತವುಗಳಿಂದ ನೇಯ್ದರು. ಅವು ಬಹುತೇಕ ಹಿಂದಿ ಅಥವಾ ಇಂಗ್ಲಿಷಿನಲ್ಲಿ ಇವೆ. ಸಾಲದ್ದಕ್ಕೆ ಅವು ‘ಯುದ್ಧ’ ನಡೆಯುತ್ತಿದ್ದಂತೆ, ಅದಕ್ಕೆ ಹೊಂದುವಂತೆ ಆಡುತ್ತಿದ್ದ ಮಾತುಗಳಾದ್ದರಿಂದ ಪುನರಾವರ್ತನೆಗಳು, ಸಮಯ ತುಂಬುವ ನುಡಿಗಳು ನಮ್ಮನ್ನು ಗೊಂದಲಕ್ಕೀಡು ಮಾಡಿದ್ದೇ ಹೆಚ್ಚು. ವಾಸ್ತವದಲ್ಲಿ ಅವನ್ನೆಲ್ಲ ಇಟ್ಟುಕೊಂಡು, ವಿರಾಮದಲ್ಲಿ (ಸಂಕಲನ) ದಕ್ಕಬೇಕಿದ್ದ ಸಮತೋಲನದ ಕೊರತೆಯೇ ಕಾಣಿಸಿತು. ಇವು ಒಟ್ಟಾರೆ ಚಿತ್ರವನ್ನು ಗ್ರಹಿಸುವಲ್ಲೂ ನನ್ನನ್ನು ಸೋಲಿಸಿತು. ನಡುವೆ ಸೇರಿದ ಒಂದೆರಡು ಪರಿಣತ ವಿಶ್ಲೇಷಣೆಗಳು (ಶ್ರೀರಾಮ್ ಮತ್ತು ಕೆಲವರದು) ಚಿತ್ರದ ಭಾಗವಾಗದೇ ಸುಂದರ ದ್ವೀಪಗಳಷ್ಟೇ ಆದಂತನ್ನಿಸಿತು.

ಏಕವ್ಯಕ್ತಿ – ಸಾವಿತ್ರೀಬಾಯಿ ಪುಲೆ

ಸಂಜೆಯ ಕೊನೆಯ ಕಲಾಪವೂ ಒಂದು ಲೆಕ್ಕದಲ್ಲಿ ಸಾಕ್ಷ್ಯಚಿತ್ರವೇ, ಬೆಳ್ಳಿ ತೆರೆಯ ಬದಲಿಗೆ, ರಂಗದ ಮೇಲೆ ಎ.ಎಸ್.ಶೈಲಜಾ ಅವರ ಅಭಿನಯದಲ್ಲಿ ಮೂಡಿ ಬಂದ ಏಕವ್ಯಕ್ತಿ ನಾಟಕ – ಸಾವಿತ್ರಿ ಬಾಯಿ ಪುಲೆ. ಇದು ಹಿಂದೆ (೧೮೩೧-೧೮೯೭) ಸಂದು ಹೋದ ಓರ್ವ ಮಹಾ ತಾಯಿಯ ಸ್ಪಷ್ಟ ಸಾಧನೆಗಳ ಆತ್ಮ ಕಥನ. ಕೆಲವು ಪ್ರಾತಿನಿಧಿಕ ಸಾಮಾನುಗಳೊಡನೆ ನಿರೂಪಣೆ ಪ್ರಥಮ ಪುರುಷದಲ್ಲೇ ನಡೆಯುತ್ತದೆ. ಅಪರೂಪಕ್ಕೆ ನಮ್ಮ ಆಡಳಿತಗಾರರು ಯಾವುದೋ ಅನುಕೂಲಕ್ಕಷ್ಟೇ (ತೀಟೆಗೆ?) ಸಾವಿತ್ರೀಬಾಯಿಯ ಹೆಸರು ಬಳಸಿದ್ದಿದೆ. ಹಾಗಲ್ಲದೆ ಅವರ ನಿಜ ಸಾಧನೆ ಈ ಕಾಲಕ್ಕೂ ಅನುಕರಣೀಯ ಎನ್ನುವುದನ್ನು ಪ್ರದರ್ಶನ ನೆನಪಿಸಿತು. ಏಕವ್ಯಕ್ತಿ ಎಂಬುದು ಭಾವತೀವ್ರತೆಗಳ ಹರಿವಿಗೆ ತುಸು ಮಿತಿ ಎನ್ನುವಂತಿತ್ತು. ಇಲ್ಲಿ ಮಾಹಿತಿ ಮತ್ತು ನಡೆಗಳು (ಕಿಸಾನ್ ಚಳವಳಿಯಂತಲ್ಲದೆ) ಖಚಿತವೇ ಇವೆ. ಅವನ್ನು ನಾಟಕಕಾರ ಡಿ.ಎಸ್. ಚೌಗಲೆಯವರು ಚೊಕ್ಕ ಆಯ್ಕೆ ಮಾಡಿ, ಸ್ಪಷ್ಟ ಭಾಷೆ ಕೊಟ್ಟಿದ್ದಾರೆ. ಒಟ್ಟಾರೆಯಲ್ಲಿ ಸಾವಿತ್ರೀಬಾಯಿ ಪಾತ್ರಧಾರಿ – ಶೈಲಜಾ ಪ್ರಭಾವೀ ಪ್ರದರ್ಶನವನ್ನೇ ಕೊಟ್ಟರು.

ಸ್ಮೃತಿ ಹಬ್ಬದಲ್ಲಿ ಕವಯಿತ್ರಿಯಾಗಿಯೂ ಭಾಗವಹಿಸಿದ ಹಾಮ ಕನಕ (ಹೆಸರೇ ಹೇಳುವಂತೆ) ನಿಜದಲ್ಲಿ ಹಾಮ ಭಟ್ಟರ ಮಗಳು, ಹಾಲಕೆರೆ ರಘುವಿನ ಸೋದರಿ, ಅಂದರೆ ಆತಿಥೇಯಳೂ ಹೌದು. ಆಕೆಯ ಪತಿ ಕೇರಳದ ಕಾಂಗ್ರೆಸ್ ಶಾಸಕ ವಿಷ್ಣು. ವಿಷ್ಣು ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಯ ಭಾಗವಾಗಿದ್ದರೂ (ನಾವೆಲ್ಲ ದೇವನೂರರ ಮಾತನ್ನು ನೆನೆಸಿಕೊಳ್ಳುವಂತೆ) ಸಂಬಂಧ ದೊಡ್ಡದು ಎನ್ನುವುದನ್ನು ಮರೆಯದೇ ಕೇರಳದ ದೂರದಿಂದ ತುಮರಿಯ ಮೂಲೆಗೆ, ಮಾವನ ಸ್ಮರಣೆಯ ಹಬ್ಬಕ್ಕೆ ಧಾವಿಸಿ ಬಂದವರಿದ್ದರು. ಅವರು ಶೈಲಜಾ ಮತ್ತು ಅವರ ನೇಪಥ್ಯದ ಸಂಗಾತಿಗಳಿಗೆ ಸ್ಮರಣಿಕೆ ಕೊಟ್ಟರು.

ಮರಳಿ ಮಂಗಳೂರ ದಾರಿಯಲ್ಲಿ

ಮೊದಲೇ ಆತಿಥೇಯ ರಘು ಅವರಲ್ಲಿ ಕೇಳಿಕೊಂಡಂತೆ ಮೂರನೇ ದಿನ ಬೆಳಿಗ್ಗೆ ಗಂಟು ಮೂಟೆ ಕಟ್ಟಿದೆವು. ಪ್ರತಿಯಾಗಿ ರಘು ಹೇರಿದ ಪ್ರೀತಿತ್ರಯಗಳನ್ನು (ತಾಪತ್ರಯಕ್ಕೆ ವಿರುದ್ಧ ಪದ!) ಪ್ರೀತಿಯಿಂದಲೇ ಒಪ್ಪಿಕೊಂಡೆವು. ೧. ಬೆಳಗ್ಗಿನ ತಿಂಡಿ ಅವರಲ್ಲೇ ೨. ನೆಂಟರ ಮನೆಯ ಜಂಬ್ರ ಕಳೆದು ಹೊರಟಾಗ ಸಿಕ್ಕುವಂತೇ ಹೋಳಿಗೆ ಕಟ್ಟು. ಮತ್ತು ಅಧಿಕ ಸಂತೋಷದ ಮೂರನೆಯದು – ಸುಳ್ಯದ ದೂರದಿಂದ ಮುಖ್ಯ ಅತಿಥಿ ಸುಬ್ರಾಯ ಚೊಕ್ಕಾಡಿಯವರನ್ನು ಕರೆತಂದಂತೇ ಮರಳಿಸುವ ಹೊಣೆಹೊತ್ತ ದಿನೇಶ ಕುಕ್ಕುಜಡ್ಕ ಅವರ ಕಾರೂ (ಸಾರಥ್ಯದಲ್ಲಿ ದಿನೇಶ್, ಉಳಿದಂತೆ ಹೆಂಡತಿ – ಶೈಲಜಾ, ಮಗಳು – ಸುಮೇಧಾ ಮತ್ತು ಭಾವ – ತನುಷ್) ನಮಗೆ ಜತೆಗೊಟ್ಟಿತು. ಶಿಬಿರಕ್ಕೆ ಸುರತ್ಕಲ್ಲಿನಿಂದ ಬಂದಿದ್ದ ಸ್ವರ್ಣಾ ಭಟ್, ಬರುವ ದಾರಿಯಲ್ಲಿ ಎರಡೆರಡು ಬಸ್ಸುಗಳ ಅನಿವಾರ್ಯ ವಿಳಂಬವನ್ನು ಸಹಿಸಿಕೊಂಡಿದ್ದರು. ಮರಳುವಲ್ಲಿ ಅವರ ಅನುಕೂಲ ನಮ್ಮ ಸಂತೋಷಗಳು ಸೇರಿದಂತೆ, ಅವರು ನಮ್ಮ ಕಾರಿಗೇ ಸೇರಿಕೊಂಡರು.

ಬಿದನೂರ ಕೋಟೆ

ನಮ್ಮ ಸವಾರಿ ಮರ ಕುಟುಕ, ನಿಟ್ಟೂರು ಹಾದು, ನಗರದಲ್ಲಿ ಮೊದಲ ಕಟ್ಟೆಪೂಜೆಗೆ ನಿಂತಿತು. ಅಲ್ಲಿ ಕಾರಿಳಿದು, ಸುವಿಸ್ತಾರ ಕೆರೆ ದಂಡೆಯ ಮೇಲಿನ ಪುಟ್ಟ ಗುಡ್ಡೆಯನ್ನಾವರಿಸಿರುವ ಬಿದನೂರು ಕೋಟೆಗೆ ದಾಳಿಯಿಟ್ಟೆವು. ಇದನ್ನು ನಾನೂ ದೇವಕಿಯೂ ಹಿಂದೆ ಒಂದೆರಡು ಬಾರಿ ನೋಡಿದ್ದೇವಾದರೂ (ನೋಡಿ: ಕುಂಭಾಸಿ, ಕಮಲಶಿಲೆ, ನಗರ ) ಹೊಸ ಬಳಗದೊಡನೆ ನೋಡುವ ಸಂತೋಷ ಹೊಸದೇ ಬಿಡಿ, ನಾನೂ ಸುಬ್ರಾಯರೂ ಕೋಟೆಯ ಮಹಾದ್ವಾರ ದಾಟಿ, ಪ್ರಕಟಿತ ಇತಿಹಾಸ ಓದಿ, ಕೆರೆಗೊಂದು ಇಣುಕುನೋಟ ಹಾಕಿ, ಒಳ ಸುತ್ತಿನ ಗೋಡೆಗೇ ಮುಗಿಸಿದೆವು. ಅಲ್ಲಿ ದಿನಕರನ ಉರಿನೋಟಕ್ಕೊಂದು ಮರೆ ಹುಡುಕಿ ನಿಂತು, ಕಲ್ಪನಾಲಹರಿಯನ್ನಷ್ಟೇ ಹರಿಬಿಟ್ಟೆವು. ಪಕ್ಕದ ಚೌಕ ದಿಬ್ಬದ ಮೇಲೆ ಮೋಟು ಗೋಡೆಯಷ್ಟಕ್ಕೇ ಜೀರ್ಣೋದ್ಧಾರ ಕಂಡ ಅವಶೇಷಗಳಲ್ಲಿ ರಾಣೀವಾಸದ ವೈಭವ ಕಂಡೆವು. ಇತ್ತ ಸುತ್ತುವರಿದ ಮಹಾಗೋಡೆಯಲ್ಲಿ ಇನ್ನೂ ಉಳಿದಿರುವ ಕೆಲವು ಮುಂಚಾಚಿಕೆಯ ಗೂಡುಗಳಲ್ಲಿ (ಬಾಲ್ಕನಿ ಎನ್ನಿ) ಶಸ್ತ್ರಧಾರೀ ಕಾವಲು ಭಟರನ್ನು ಕಂಡೆವು. ಇನ್ನೊಂದು ಮಗ್ಗುಲಿನ ಗೋಡೆಯ ಒಳ ನೆರಳಿನ ಉದ್ದಕ್ಕೂ ಇರುವ ಕೋಣೆಯಂತ ರಚನೆಗಳಲ್ಲಿ ಕಟ್ಟಿ ಹಾಕಿದ ಕುದುರೆಗಳ ಹೇಷಾರವ ಕೇಳಿಸಿತು, ವಿಶ್ರಾಂತ ಸೈನಿಕರ ಚಟುವಟಿಕೆಗಳೂ ಕಾಣಿಸಿದವು. ಹೀಗೇ ಕ್ರಿ.ಶ. ೧೬೪೦ರ ಸಮೃದ್ಧಿಗೆ ಜಾರುತ್ತಾ ಇದ್ದಂತೆ, ನಮ್ಮದೇ ದಿನೇಶ ಕುಕ್ಕುಜಡ್ಕರ ದಂಡು ಕೋಟೆಯ ಅತ್ಯುನ್ನತ ಬತೇರಿಯನ್ನು ವಶಪಡಿಸಿಕೊಂಡ ವಿಜಯ ಕೋಲಾಹಲವನ್ನೇ ಎಬ್ಬಿಸಿತು. ಜತೆಗೇ ಗಗನಮಂಡಲದಿಂದ ವಿಜಯೋತ್ಸವಕ್ಕೆ ‘ಪನ್ನೀರ ವೃಷ್ಟಿ’ ವ್ಯವಸ್ಥೆಯಾಗುತ್ತಿರುವುದು ಕಂಡು ನಾವಿಬ್ಬರು ಕಾರು ಸೇರಿಕೊಂಡೆವು. ನಮ್ಮ ದಂಡೂ ಸ್ವೇದ ಸ್ನಾನಕ್ಕೇ ತೃಪ್ತವಾಗಿ ಕ್ಲಪ್ತ ಕಾಲದಲ್ಲಿ ಮರಳಿದ್ದೇ ನಮ್ಮ ದಿಗ್ವಿಜಯ ಮುಂದಿನೂರಿಗೆ ಹೊರಟಿತು.

ಮಿತ್ರ ಭೇಟಿ – ಎಲ್.ಸಿ ಸುಮಿತ್ರಾ

ಕುವೆಂಪು ಕೊಟ್ಟ ಕುಪ್ಪಳ್ಳಿ ನಮ್ಮ ಲಕ್ಷ್ಯ. ಆದರೆ ಹನ್ನೊಂದು ಗಂಟೆಯ ಸುಮಾರಿಗೆ ತೀರ್ಥಳ್ಳಿ ಮುಟ್ಟಿದಾಗ, ತಂಡದೆದುರು ನಾನೊಂದು ದಾಳ ಹಾಕಿದೆ. ನಿವೃತ್ತ ಕನ್ನಡ ಪ್ರಾಧ್ಯಾಪಿಕೆ (ಪ್ರಾಂಶುಪಾಲೆ ಕೂಡಾ), ಸಾಹಿತಿ, ‘ಅಂಗೈ ಅಗಲದ (…ಆಕಾಶ’ ಅವರ ಒಂದು ಪ್ರಬಂಧ ಸಂಕಲನದ ಹೆಸರೂ ಹೌದು) ಮನೆಯಂಗಳದಲ್ಲೂ ಅಪಾರ ಸಸ್ಯಪೋಷಕಿ, ಎಲ್ಲಕ್ಕೂ ಮಿಗಿಲಾಗಿ ದೊಡ್ಡ ಸಹೃದಯಿ “ಎಲ್.ಸಿ. ಸುಮಿತ್ರಾ ಅವರ ಮನೆಯಲ್ಲೊಂದು ಚಾ ವಿರಾಮ… ಕೇವಲ ಮಿನಿಟುಗಳ ಲೆಕ್ಕದ ಚಾ ವಿರಾಮ ಮಾಡೋಣವೇ?” ಸುಮಿತ್ರಾರೊಡನೆ ನನಗಿಂತಲೂ ಹೆಚ್ಚಿನ ಒಡನಾಟವಿದ್ದ ಸುಬ್ರಾಯ ಚೊಕ್ಕಾಡಿಯವರಿಂದ ಹಿಡಿದು ಯಾರದೂ ಅಪಸ್ವರ ಬರಲಿಲ್ಲ. ನಾನೇ ಫೋನಾಯಿಸಿ (“ಛೆ ಬೆಳಿಗ್ಗೆಯೇ ಹೇಳಿ ಊಟಕ್ಕೇ ಬರಬೇಕಿತ್ತು” ಎಂದು ಸಣ್ಣದಾಗಿ ಬಯ್ಸಿಕೊಂಡು), ಮೊದಲು ಅವರ ಅನುಕೂಲ ಮತ್ತೆ ದಾರಿ ಕೇಳಿಕೊಂಡೇ ಹೋದೆವು. ಅವರ ಗಂಡ – ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ, ಅಷ್ಟೇ ಸಹೃದಯಿ ಆದರೆ ಜನಪ್ರಿಯ ಮಾಧ್ಯಮಕ್ಕೆ (ಫೇಸ್ ಬುಕ್ ಇತ್ಯಾದಿ) ಒಗ್ಗದಿಕೆ ರೂಢಿಸಿಕೊಂಡ ಶ್ರೀಕಂಠಮೂರ್ತಿಯವರ ಭೇಟಿಯೂ ಆಯ್ತು. ಉಪಚಾರ ಸ್ವೀಕರಿಸಿ, ಅವರ ಕೈತೋಟದ ಚಂದ ನೋಡಿ, ಒಂದೆರಡು ಸಸಿ ಹಾಗೂ ಅವರದೇ ಒಂದು ಪುಸ್ತಕದ ಉಡುಗೊರೆ ಸಹಿತ ಪಯಣ ಮುಂದುವರಿಸಿದೆವು.

ಕುಪ್ಪಳಿ

ತೀರ್ಥಳ್ಳಿಯಲ್ಲೇ ಪುತ್ಥಳಿ ರೂಪದಲ್ಲಿ ಕುಳಿತ ಕುವೆಂಪು ನಮಗೆ ಓಟಕ್ಕೆ ಕೈಕಂಬವಾದರು. ಹದಿನೇಳು ಕಿಮೀ ಓಟ ನಮ್ಮನ್ನು ಕುಪ್ಳಿಯ ‘ಮಹಾಮನೆ’ಯ (ಕುವೆಂಪು ಅವರ ಮೂಲ ಮನೆ) ಅಂಗಳಕ್ಕೇ ಮುಟ್ಟಿಸಿತು. ಮನೆಯ ವಿಸ್ತಾರಕ್ಕೂ ಎರಡು ಮಾಳಿಗೆಯ ಎತ್ತರಕ್ಕೂ ವ್ಯವಸ್ಥಿತವಾಗಿ ಜೋಡಿಸಿದ ‘ಕುವೆಂಪು ಪ್ರದರ್ಶಿಕೆ’ಯನ್ನು ವಿರಾಮದಲ್ಲೇ ನೋಡಿದೆವು. ಹಿಂದುವರಿದು ಕುವೆಂಪು ಶತಮಾನೋತ್ಸವ ಭವನಕ್ಕೊಂದು ದೃಷ್ಟಿ ಹಾಕಿ ಹೊರಡುವುದರಲ್ಲಿದ್ದೆವು. ಅಷ್ಟರಲ್ಲಿ…

ಮಿತ್ರ ಭೇಟಿ – ಮುರೊಳ್ಳಿ, ಹಿರೇಗುತ್ತಿ

ದಿನೇಶರ ಚರವಾಣಿ ಪಿತೂರಿಯಲ್ಲಿ, ಅವರ ಗೆಳೆಯ, ದೊಡ್ಡ ಉದ್ಯಮಿ, ಸಾಹಿತ್ಯಪ್ರೇಮಿ, ಈ ವಲಯದ ಜನಪ್ರಿಯ (ಕಾಂಗ್ರೆಸ್) ಜನನಾಯಕ ಸುಧೀರ್ ಕುಮಾರ್ ಮುರೊಳ್ಳಿ ನಮ್ಮೆಲ್ಲರ ಭೇಟಿಗೆಂದು ಅಲ್ಲಿಗೇ ಬಂದರು. ಅವರು ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಯ ಸಂದೇಶವನ್ನು, (ಯಾತ್ರೆಗೆ ಮುಟ್ಟಲಾಗದ) ಈ ವಲಯದ ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ಪ್ರಯತ್ನದಲ್ಲಿದ್ದರು. ನಮಗೆಲ್ಲ ಅವರ ಉದ್ದಿಮೆಯ ಉತ್ಪನ್ನಗಳ ಮಾದರಿ ಉಡುಗೊರೆಯನ್ನು ಕೊಟ್ಟು, ನಮ್ಮ ಪ್ರಯಾಣದ ದಿಕ್ಕು ತಿಳಿದು, ಅವರೂರು ಕೊಪ್ಪದ, ಜನಪ್ರಿಯ ಹೋಟೆಲ್ ಒಂದರಲ್ಲಿ ನಮ್ಮೆಲ್ಲರ ಮಧ್ಯಾಹ್ನದ ಊಟವನ್ನೂ ನಿಷ್ಕರ್ಷಿಸಿಬಿಟ್ಟರು. ಮತ್ತೆ ನಾವು ಊಟದ ಹೊತ್ತು ಮೀರಿದ್ದರೂ ನಿಶ್ಚಿಂತೆಯಲ್ಲಿ,  ಸುಧೀರರೊಡನೇ ಕವಿಶೈಲಕ್ಕೂ ಏರಿಳಿದೆವು. ಕೊಪ್ಪದಲ್ಲಿ ಸುಧೀರರಿಂದ ನಮ್ಮ ಜವಾಬ್ದಾರಿಯನ್ನು ತೆಗೆದುಕೊಂಡು, ನಮ್ಮ ಊಟ ರಸಮಯವಾಗುವಂತೆ ನೋಡಿಕೊಳ್ಳಲು, ಸ್ವತಃ ಸುಧೀರರ ಪತ್ನಿ, ಸ್ಥಳೀಯ ಕಾಲೇಜಿನ ಅಧ್ಯಾಪಕಿ, ಸಾಹಿತಿ ದೀಪಾ ಹಿರೇಗುತ್ತಿ ಕಾದಿದ್ದರು. ಅವರು ಊಟಕ್ಕೇ ಮುಗಿಸದೆ, ಅವರ ಆಧುನಿಕ ಸುಂದರ ಮನೆಗೂ ಒಯ್ದು, ಅತ್ತೆ ಮಾವಂದಿರನ್ನೂ ಪರಿಚಯಿಸಿ, ಹೆಚ್ಚುವರಿ ಉಪಚಾರ ಮಾಡಿಯೇ ಬೀಳ್ಕೊಂಡರು.

ಭಗವತೀ ಘಾಟಿ…

ಕೊಪ್ಪದಿಂದ ಕರಾವಳಿಗಿಳಿಯಲು (ಕಾರ್ಕಳ ಸುಮಾರು ೮೫ ಕಿಮೀ) ನಮಗೆ ಎರಡು ಸಾಧ್ಯತೆಗಳಿದ್ದವು. ಅದರಲ್ಲಿ ನಾವು ಜನಪ್ರಿಯ ಆಗುಂಬೆ ಘಾಟಿಯನ್ನು ಬಿಟ್ಟು, ವನ್ಯಪ್ರಿಯ ಭಗವತಿ ಘಾಟಿಯನ್ನಾರಿಸಿಕೊಂಡೆವು. ಶೃಂಗೇರಿ ಕಳೆದು ಸಾಕಷ್ಟು ದೂರಕ್ಕೆ ದಾರಿ ತುಂಬಾ ಸಪುರ ಹಾಗೂ ಗುಂಡಾಗುಂಡಿಗಳ ಸರಪಣಿ. ನಮ್ಮ ಅದೃಷ್ಟಕ್ಕೆ ವಾಹನ ಸಂಚಾರ ಕಡಿಮೆ ಇದ್ದುದರಿಂದ ಸರಾಗ ಓಡಿ ಮಾಳ, ಕಾರ್ಕಳ, ಮೂಡಬಿದ್ರೆ ಮುಟ್ಟಿದೆವು. ಅಲ್ಲಿಂದ ದಿನೇಶರ ಕಾರು ಜೋಡು ಮಾರ್ಗಕ್ಕಾಗಿ ಸುಳ್ಯದತ್ತ, ನಾವು ಮಂಗಳೂರು ಮುಖಿಗಳಾದೆವು. ದಿನೇಶರು ಸಮಾನತಾವಾದಿ – ಭಾವ ತನುಷ್ ಜತೆ ವಾಹನ ಚಾಲನೆಯನ್ನು ಅಲ್ಲಲ್ಲಿ ಹಂಚಿಕೊಂಡದ್ದು ಕಂಡಿದ್ದೇನೆ. ಆದರೆ ನಾನು ಸರ್ವಾಧಿಕಾರಿ – ಅನಿಲ್ ಅಳಕುತ್ತಲೇ ಕೆಲವು ಸಲ “ಕಾರು ನಾ ಬಿಡ್ಲಾ” ಎಂದು ಕೇಳಿದ್ದನ್ನೆಲ್ಲ ತಳ್ಳಿ ಹಾಕಿದ್ದೆ. ಆದರೆ ಮೂಡಬಿದ್ರೆಯಿಂದಾಚೆಗೆ ಕತ್ತಾಲ ದಾರಿಯಲ್ಲಿ ಎದುರಿನ ವಾಹನಗಳ ದೀಪಗಳು ಕಣ್ಣಿರಿಯುವಾಗ ನಾನು ಸೋತು, ಚಾಲನೆಯನ್ನು ಅನಿಲ್ಲಿಗೆ ಒಪ್ಪಿಸಿದೆ. ರಾತ್ರಿ ಏಳೂವರೆಗೆ ಸುಖವಾಗಿ ಮಂಗಳೂರು ತಲಪಿದೆವು. ಸ್ವರ್ಣಾ ಸಿಟಿ ಬಸ್ ಹಿಡಿದು ಸುರತ್ಕಲ್ಲಿನತ್ತ ಹೋದರೆ, ಅನಿಲ ನಮ್ಮ ಮನೆಯಂಗಳದಲ್ಲೇ ಬಿಟ್ಟಿದ್ದ ಅವನ ಕಾರೇರಿ ಜೋಡುಮಾರ್ಗಕ್ಕೆ ಹೋದ.

ಸಹೃದಯ ಸ್ಪಂದನ, ಕೃತಜ್ಞತೆಗಳು.

ಹಾಮ ಭಟ್ಟ ಸ್ಮೃತಿ ಹಬ್ಬಕ್ಕೆ ಬಂದ ಮುಖ್ಯ ಅತಿಥಿಗಡಣ ಹಾಲಕೆರೆ ಹೋಟೆಲಿನಲ್ಲೇ ಇತ್ತು. ಮತ್ತೆ ಯೋಜಿತ ಕಲಾಪಗಳ ಅನೌಪಚಾರಿಕತೆ ಮತ್ತು ಎಡೆಯಲ್ಲೂ ಇದ್ದ ಸಾಕಷ್ಟು ಬಿಡುವಿನಲ್ಲಿ ಎಲ್ಲರಿಗೂ ಪರಸ್ಪರ ಸ್ನೇಹವರ್ಧನೆಗೆ ಒಳ್ಳೆಯ ಅವಕಾಶವೇ ಒದಗಿರಬೇಕು. ರಘು ಕೂಡಾ ಪ್ರಾಸಂಗಿಕವಾಗಿ “ಅಪ್ಪನ ನೆನಪಲ್ಲಿ ಒಂದಷ್ಟು ಒಳ್ಳೇ ಸಂಬಂಧಗಳು ಬೆಳೆಯುವಂತಾದರೆ ಸಾಕು” ಎಂಬ ಅರ್ಥ ಮಾತಾಡಿದ್ದು ಕೇಳಿದ್ದೆ. ಆದರೆ ನಾವು ಮೂವರು ಇದ್ದ ಎರಡು ದಿನಗಳಲ್ಲೂ ಹೊರಗೆ ಓಡಾಡಿದ್ದು ಜಾಸ್ತಿಯಾಗಿ, ಅವಕಾಶವನ್ನು ಕಡಿಮೆಮಾಡಿಕೊಂಡೆವು. ಆದರೂ ನನಗೆ ಎಷ್ಟೋ ಹೊಸ ಪರಿಚಯ ಲಾಭವಾದದ್ದನ್ನು ಧನ್ಯತೆಯಲ್ಲೇ ನೆನೆಯುತ್ತೇನೆ. ಮುಂದೆಂದೋ ನಾವು ಮತ್ತೆ ಭೇಟಿಯಾಗುವ ಅವಕಾಶ ಬಂದರೆ, ಆ ಮುಖಗಳು ಮರೆತು ಹೋದರೂ (ಇದು ನನ್ನ ದೌರ್ಬಲ್ಯ) ಒಡನಾಟದ ನೆನಪುಗಳು ಹೆಚ್ಚು ಕಾಲ ಖಂಡಿತಾ ಉಳಿಯುತ್ತವೆ. ಅಂಥಾ ಕೆಲವು ಪರಿಚಯಗಳ ಕುರಿತು….

ಪೇಚು (ಎಫ್ಬೀ) ಬುಕ್ಕಿನಲ್ಲಿ ಹವ್ಯಕದಲ್ಲಿ ಕುಶಾಲು ಮಾಡುವ ಸಿಪ್ರಿಯಾನರನ್ನು ನಾನು ಮೊದಲ ಬಾರಿಗೆ ಮುಖ ನೋಡಿದ ಸಂತೋಷದಲ್ಲಿ ಮಾತಾಡಿಸಿದ್ದೆ. ಆದರೆ ಅವರಿಗೆ ನನ್ನ ‘ಗೆಳೆತನ’ ಇದ್ದರೂ ನಿಜ ಪರಿಚಯವೇ ಇರಲಿಲ್ಲ, ನಾನು ಪೆಚ್ಚಾದೆ. ಆ ಅಳುಕು ಕಾಡಿದ್ದಕ್ಕೇ ಇನ್ನೋರ್ವ ಫೇಸ್ ಬುಕ್ ಗೆಳತಿ – ಶ್ರೀದೇವಿ ಕೆರೆಮನೆಯವರನ್ನು ನಾನು ಮೊದಲ ಬಾರಿಗೆ ಮುಖತಃ ಕಂಡರೂ ಮಾತಾಡಿಸಲೇ ಇಲ್ಲ. ಮುಂದೆ ಅವರು ಈ ತುಮರಿ ಅನುಭವ ಕಥನವನ್ನು ಫೇಸ್ ಬುಕ್ಕಿನಲ್ಲಿ ಕಂಡಾಗ ಮುಗ್ಧವಾಗಿ “ನೀವು ಬಂದಿದ್ರಾ” ಎಂದು ಕೇಳುವಂತಾಯ್ತು! ಹಾಗೇ ಅಲ್ಲಿಗೆ ಬಂದಿದ್ದ ರೇಣುಕಾ ರಮಾನಂದ್, ನನ್ನ ಫೇಸ್ ಬುಕ್ ಗೆಳತಿಯಾಗಿದ್ದರೂ ಆ ಗೆಳೆತನದ ಮತ್ತವರ ಮುಖದ ನೆನಪು ನನಗಿರಲೇ ಇಲ್ಲ. ಸಭೆಯ ಸ್ವಪರಿಚಯದ ಸಂತೆಯಲ್ಲಿ ನಾನು ಒಬ್ಬನಾಗಿ “ನಿವೃತ್ತ ಪುಸ್ತಕೋದ್ಯಮಿ, ಸದ್ಯ ಕಾಡು ಮನುಷ್ಯ” ಎಂದದ್ದನ್ನೇ ರೇಣುಕಾ ಪೂರ್ಣ ಆಯಾಮದಲ್ಲಿ ಗ್ರಹಿಸಿದ್ದರು. ಬಿಡುವಿನಲ್ಲಿ ಅದನ್ನು ಉಲ್ಲೇಖಿಸಿ ನನಗೆ ಮಾತಿನ ಗೌರವ ಕೊಟ್ಟಾಗ ತೀರಾ ಸಂಕೋಚವಾಯ್ತು. ಸ್ವರ್ಣಾ ಭಟ್, ಸುರೇಶ ಕಂಜರ್ಪಣೆಯವರ ತಂಗಿ, ವಿಚಾರವಂತೆ ಎಂದಷ್ಟೇ ಫೇಸ್ ಬುಕ್ಕಿನಿಂದ ತಿಳಿದುಕೊಂಡಿದ್ದೆ. ಶಿಬಿರದಲ್ಲೂ ಮರುಪಯಣದ ಸಾಂಗತ್ಯದಲ್ಲೂ ನಮಗಿಬ್ಬರಿಗೆ ಅವರ ಹೆಚ್ಚಿನ ಪರಿಚಯ ಲಾಭ ಆಯ್ತು. ಮಮತಾ ಸಾಗರ್ ನನಗೆ ಹೊಸ ಪರಿಚಯವೇ ಆದರೂ ಕುರಿತು ಮಾತಾಡಿಸಿದಾಗ ಹೆಚ್ಚಿನ ಸಂತೋಷವಾಯ್ತು. ಅವರು (ಸಮಾನ ಮನಸ್ಕರೊಡನೆ ಸೇರಿ) ಕೆಲ ಸಮಯದ ಹಿಂದೆ ತುಮರಿ ಶಾಲೆಯಲ್ಲಿ ನಡೆಸಿದ ಸಾಂಸ್ಕೃತಿಕ ಕಮ್ಮಟದ ಭಾಗವಾದ ಸಣ್ಣ ಪ್ರದರ್ಶಿಕೆ (ಮಕ್ಕಳೇ ರಚಿಸಿದ ಕವನ, ಚಿತ್ರ,,,) ಸಭಾಭವನದ ಜಗುಲಿಯಲ್ಲಿದ್ದದ್ದು ಚೇತೋಹಾರಿಯಾಗಿತ್ತು.

ರಘು ಅವರ ಉದ್ದೇಶಕ್ಕೆ ನಾನೆಷ್ಟು ಸಹಕಾರಿಯಾದೆನೋ ಗೊತ್ತಿಲ್ಲ. ಆದರೆ ಅವರ ಔದಾರ್ಯಕ್ಕಂತೂ ಎಣೆಯಿಲ್ಲ. ಈ ಸರಣಿಯ ಮೊದಲ ಕಂತಿನಲ್ಲೇ ಹೇಳಿದಂತೆ ಕನಿಷ್ಠ “ನಮ್ಮ ಊಟ ವಾಸಗಳ ಹೊರೆಯಾದರೂ ರಘುವಿನ ಮೇಲೆ ಬೀಳಬಾರದೆಂದೇ…” ನಾನು ಆಶಿಸಿದ್ದೆ. ಆದರೆ ಕೊನೆಯಲ್ಲಿ ಅಕ್ಷರಶಃ ‘ಉಂಡೂ ಹೋದ ಕೊಂಡೂ ಹೋದ’ ಆಗಿದ್ದೆವು. ದೊಡ್ಡ ತ್ಯಾಂಕ್ಸ್ ಅಲ್ಲದೇ ಇನ್ನೇನು ಹೇಳಲಿ.

ಕತೆಯ ಬೇತಾಳ ತ್ರಿವಿಕ್ರಮನಿಗೆ ಮಾರ್ಗಾಯಾಸ ಪರಿಹಾರಾರ್ಥ ಕತೆ ಹೇಳುತ್ತಿದ್ದದ್ದು ನಿಮಗೆ ತಿಳಿದೇ ಇದೆ. ಆದರೆ ಇಲ್ಲಿ ಹೋಗುವ ದಾರಿಯಲ್ಲಿ ನಾನು ಅನಿಲನಿಗೆ ಹಲವು ನಿಜ ಸ್ಥಳಪುರಾಣಗಳನ್ನು ಹೇಳುತ್ತ ಹೋಗಿದ್ದೆ. (ದೇವಕಿ ಬಹುತೇಕ ಆ ಎಲ್ಲ ಕತೆಗಳ ಭಾಗಿ.) ಹಾಗೆಂದು ಕೊನೆಯಲ್ಲಿ ಒಗಟಿನ ಪ್ರಶ್ನೆ ಕೇಳಿ ಕಾಟ ಕೊಡಲಿಲ್ಲ. ಬದಲಿಗೆ ಎದುರು ಸೀಟಿನಲ್ಲಿ ಕುಳಿತಷ್ಟೂ ಉದ್ದಕ್ಕೆ, ಅಲ್ಲಲ್ಲಿ ಕಿಮೀ, ಸ್ಥಳನಾಮ. ಸಮಯ ಮುಂತಾದವನ್ನು ಟಿಪ್ಪಣಿ ಮಾಡಿಕೊಡಲು ತಾಕೀತು ಮಾಡಿದ್ದೆ. ಆತ ಸಂಗ್ರಹಿಸಿದ ಮಾಹಿತಿಯನ್ನು, ಗೂಗಲ್ ಸಹಕಾರದಲ್ಲಿ ಪರಿಷ್ಕರಿಸಿ, ನನ್ನದೇ ನಕ್ಷೆ ಮಾಡಿದ್ದೇನೆ, ನೋಡಿ. ಮುಂದೆಲ್ಲಾದರೂ ಯಾರಿಗಾದರೂ ಇದು ಅನುಸರಣಾ ಯೋಗ್ಯವಾಗಿ ಕಾಣಿಸಿದರೆ ನಾ ಧನ್ಯ.