(ನೀನಾಸಂ ಕಲೆಗಳ ಸಂಗಡ ಮಾತುಕತೆ ಭಾಗ ೨)

ವಾಸ, ಊಟ
ಆಹ್ವಾನಿತ ಅತಿಥಿ’ಯಾಗಿ ನಮಗೆ ನೀನಾಸಂ ಸ್ವಾಗತ ಕಚೇರಿಯ ಒತ್ತಿನ ಕಟ್ಟಡದ ಕೋಣೆಯನ್ನು ಕೊಟ್ಟಿದ್ದರು. ವಠಾರದ ಹೆಚ್ಚಿನಕಟ್ಟಡಗಳಂತೆ ಇದೂ ಹಳತು. ಆದರೆ ಎರಡು ಮಂಚ, ಹಾಸಿ ಹೊದೆಯುವುದು, ಫ್ಯಾನ್, ಸ್ನಾನಕ್ಕೆ ಬಿಸಿನೀರು, ಸ್ವತಂತ್ರ ಶೌಚ ವ್ಯವಸ್ಥೆ, ‘ಆಹಾರ್ಯ’ದ ನೆರೆಮನೆ ಮಾತ್ರವಲ್ಲ, ನೀನಾಸಂನ ಕಚೇರಿ, ಗ್ರಂಥಾಲಯ, ಆಪ್ತ ಹಾಗೂ ಬಯಲು ರಂಗಭೂಮಿ ಮತ್ತು ಶಿವರಾಮ ಕಾರಂತ ರಂಗಮಂದಿರಗಳೆಲ್ಲಕ್ಕೂ ಕೇಂದ್ರವೇ ನಮ್ಮ ಕೋಣೆ! ಐದು ದಿನಗಳ ಶಿಬಿರವಾಸಕ್ಕೆ ಇದಕ್ಕಿಂತ ಪರ್ಯಾಪ್ತ ಇನ್ನೊಂದಿರಲಾರದು.

ನೀನಾಸಂ ಮೂರೂವರೆ ದಶಕಗಳಿಗೂ ಮಿಕ್ಕು ಹಿಂದಿನಿಂದ ತೊಡಗಿದಂತೆ, ಚಲನಚಿತ್ರ, ಸಾಹಿತ್ಯ, ಸಂಸ್ಕೃತಿ ಎಂದೊಂದು ಗಂಭೀರ ಯೋಜನೆಯೊಡನೆ ವರ್ಷಕ್ಕೊಂದು ಶಿಬಿರವನ್ನು ನಡೆಸುತ್ತಲೇ ಬಂದಿದೆ. ಆಗೆಲ್ಲಾ ಶಿಬಿರಾರ್ಥಿಗಳಿಗೆ ವಿಧಿಸುತ್ತಿದ್ದ ಒಂದು ಗಂಟಿನ ಶುಲ್ಕದಲ್ಲಿ, ಉದ್ದೇಶಿತ ಕಲಾಪಗಳೊಡನೆ ಆಹಾರ, ಸಮೂಹ ವಾಸ್ತವ್ಯದೊಡನೆ ಒಂದಷ್ಟು ಪುಸ್ತಕಗಳನ್ನೂ ಉಚಿತವಾಗಿಯೇ ಒದಗಿಸುತ್ತಿದ್ದರು. ಕೊರೋನಾ ಸಾತತ್ಯವನ್ನು ಕಡಿಯಿತು. ಬದಲಾದ ಪರಿಸ್ಥಿತಿಯಲ್ಲಿ ಈಗ, ಅಂದರೆ ಕೊರೋನೋತ್ತರದ ಪ್ರಥಮ ಶಿಬಿರದಲ್ಲಿ, ಶಿಬಿರಾರ್ಥಿಗಳ ವಾಸದ ಜವಾಬ್ದಾರಿಯನ್ನು ನೀನಾಸಂ ವಹಿಸಿಕೊಂಡಿಲ್ಲ. ಆಸುಪಾಸಿನ ಪರಿಚಿತರ ಮನೆಗಳನ್ನೋ ಸಾಗರದ ಹೋಟೆಲ್ಲುಗಳನ್ನೋ ಅವರವರೇ ಆಯ್ದುಕೊಳ್ಳಬೇಕಿತ್ತು. ನೀನಾಸಂ ಮನವಿಗೆ ಸ್ಪಂದಿಸಿ, ಸಾಗರದ ಕೆಲವು ಹೋಟೆಲಿಗರು ಕೊಠಡಿಗಳ ದರದಲ್ಲಿ ರಿಯಾಯ್ತಿಯನ್ನೂ ಓಡಾಡಿಸುವ (ಅಂತರ ಸುಮಾರು ಹತ್ತು ಕಿಮೀ) ಜವಾಬ್ದಾರಿಯನ್ನೂ ಘೋಷಿಸಿಕೊಂಡಿದ್ದರು.

‘ಆಹಾರ್ಯ’ ಎಂದಿನಿಂದಲೂ ನೀನಾಸಂನ ‘ಹೊಟ್ಟೆಪಾಡಿ’ನ ಕೇಂದ್ರ! ಅದಕ್ಕೆ ಈ ಬಾರಿ ಹೊಸ ವ್ಯವಸ್ಥಾಪಕರು (ನಾಗೇಶ್ ಮತ್ತು ಆತನ ಅಮ್ಮ ಶ್ರೀಮತಿ) ಬಂದು ರುಚಿ, ವೈವಿಧ್ಯ ಮತ್ತು ನೀಡಿಕೆಯಲ್ಲಿ ಹೊಸ ಕಳೆ ಬಂದಿತ್ತು. ಊಟಗಳಿಗೆ ನಿತ್ಯದ ಅನ್ನ, ಪಲ್ಯ, ಸಾರು, ಮೇಲೋಗರ, ಮೊಸರುಗಳ ಮೇಲೆ ಚಪಾತಿಯೋ ಪೂರಿಯೋ ಯುಕ್ತ ಕೂಟಕದೊಡನೆ ಬರುತ್ತಿತ್ತು. ಕೇಸರೀಭಾತ್, ಜಿಲೇಬಿ ವಿಶೇಷ ಭಕ್ಷ್ಯಗಳಾಗಿ ಬಂದಿದ್ದವು. ಬೆಳಿಗ್ಗೆ ಮತ್ತು ಸಂಜೆಗಳ ಉಪಾಹಾರಗಳಾಗಿ ಒದಗಿದ ಉಪ್ಪಿಟ್ಟು, ಶ್ಯಾವಿಗೆ ಭಾತ್, ರವಾ ಇಡ್ಲಿ, ಅವಲಕ್ಕಿಗಳೂ ಸ್ವಾದಿಷ್ಟವಾಗಿರುತ್ತಿದ್ದವು. ತಿಂಡಿಪೋತನಾದ ನಾನಂತೂ ಕೊನೇ ಮೂರು ದಿನ, ಸಂಜೆಯ ತಿಂಡಿಯಲ್ಲೇ ರಾತ್ರಿಯ ಊಟವನ್ನು ಮುಗಿಸಿಬಿಟ್ಟೆ. ಇವಲ್ಲದೇ ಶಿಬಿರ ಕಲಾಪದ ನಡುವಣ ಎರಡು ವಿರಾಮಗಳಲ್ಲಿ (ಹನ್ನೊಂದು ಹಾಗೂ ನಾಲ್ಕು ಗಂಟೆಗೆ) ನಾವಿದ್ದಲ್ಲಿಗೇ ಅವರು ಬಿಸ್ಕೆಟ್ ಸಹಿತ ಚಾ, ಕಾಫಿ, ಕಷಾಯಗಳನ್ನೂ ಬಟವಾಡೆ ಮಾಡಿದರು. ಶುಚಿ, ರುಚಿಯೊಡನೆ ಬಡಿಸುವವರ ಸೌಜನ್ಯ ಮತ್ತು ಧಾರಾಳತನ ಎಲ್ಲರ ಮೆಚ್ಚುಗೆಯನ್ನು ಗಳಿಸಿತು. ಸುಳ್ಳಲ್ಲ ‘ಶಿಬಿರದ ಯಶಸ್ಸು ಊಟದ ಮನೆಯಲ್ಲಿದೆ’!

ಅನೌಪಚಾರಿಕ ಕಲಾಪಗಳು
ಕಲೆ, ಸಾಹಿತ್ಯ, ವಿಜ್ಞಾನವೇ ಮೊದಲಾಗಿ ಮೌಲಿಕ ವಿಚಾರಗಳನ್ನು ಉತ್ತಮ ರೂಪದಲ್ಲಿ ವಿಡಿಯೋ ದಾಖಲಿಸಿ, ಯೂ ಟ್ಯೂಬ್ ಮೂಲಕ ಸಾರ್ವಜನಿಕ ಬಳಕೆಗೆ ಉಚಿತವಾಗಿ ಬಿಡುಗಡೆ ಮಾಡುವ ಸೇವಾ ಸಂಸ್ಥೆ ಸಂಚಿ ಫೌಂಡೇಶನ್. ಇದು (ನಮ್ಮಗ) ಅಭಯ, ಗೆಳೆಯರಾದ ಇಸ್ಮಾಯಿಲ್ ಮತ್ತು ಓಂ ಶಿವಪ್ರಕಾಶ್ ಅವರ ಒಕ್ಕೂಟ. ಸಂಚಿಯ ಸೇವೆಯ ಉಪಯುಕ್ತತೆಯನ್ನು ಅರ್ಥ ಮಾಡಿಕೊಂಡ ನೀನಾಸಂ ಈಚಿನ ವರ್ಷಗಳಲ್ಲಿ ತನ್ನೆಲ್ಲ ರಂಗ ಕಲಾಪಗಳನ್ನು ಉದಾತ್ತವಾಗಿ ಸಂಚಿಗೆ ವಿಶೇಷವಾಗಿಯೇ ಒಡ್ಡಿಕೊಳ್ಳುತ್ತ ಬಂದಿರುವುದು ನಿಮಗೆ ತಿಳಿದೇ ಇದೆ. (ನೋಡಿ: ಕುಂಭಾಸಿ, ಕಮಲಶಿಲೆ, ನಗರ) ಆ ಪ್ರಕಾರ ನೀನಾಸಂ ತನ್ನೆಲ್ಲ ರಂಗ ಪ್ರಯೋಗಗಳನ್ನು ‘ಸಂಚಿ’ ತಂಡಕ್ಕಾಗಿ ಮಾತ್ರ ವಿಶೇಷ ಪ್ರದರ್ಶನವನ್ನೇ ಕೊಡುತ್ತಾ ಬಂದಿದೆ.  ಹಾಗೇ ಈ ವರ್ಷದ ನೀನಾಸಂ ತಿರುಗಾಟದ ಹೊಸ ಎರಡು ನಾಟಕ ಮತ್ತು ಹೆಗ್ಗೋಡು ಊರಿನವರು ಸುಬ್ಬಣ್ಣ ಸ್ಮೃತಿಗಾಗಿ (ಜುಲೈ ೧೬) ಮಾಡಿದ್ದ ಒಂದು  ನಾಟಕವನ್ನು ವಿಡಿಯೋ ದಾಖಲಿಸಲು ಅಭಯ, ಎರಡು ದಿನ ಮುಂಚಿತವಾಗಿಯೇ ಬಂದಿದ್ದ. ನಾವು ಹೆಗ್ಗೋಡು ಮುಟ್ಟಿದ ಸಂಜೆ ಆತ ಕೆಲಸ ಮುಗಿಸಿ, ಕ್ಯಾಮರಾ ತಂಡವನ್ನು ವಾಪಾಸು ಕಳಿಸಿ, ಎರಡು ದಿನದ ಶಿಬಿರಾನುಭವಕ್ಕೆ ಉಳಿದುಕೊಂಡಿದ್ದ. ಅಂದರೆ ನಮಗೂ ಜತೆಗೊಟ್ಟಿದ್ದ.

ನಾವು ಹೆಗ್ಗೋಡಿನಲ್ಲಿದ್ದ ಐದೂ ಬೆಳಿಗ್ಗೆ, ನಿತ್ಯ ವಿಧಿಗಳೆಲ್ಲ ಮುಗಿಸಿಕೊಂಡು, ದಿನಕ್ಕೊಂದು ದಿಕ್ಕಿನಂತೆ ಸಣ್ಣ ‘ಪಥ ಸಂಚಲನ’ವನ್ನೇ ಮಾಡಿದೆವು.  ಅದು ಸಾಮಾನ್ಯರ ಮಾತಿನಂತೆ ‘ವಾಕ್’ ಅಲ್ಲ, ನಮಗೆ ಸ್ಥಳಪರಿಚಯಕ್ಕೊಂದು ನೆಪ. ಹೆಗ್ಗೋಡು, ಹತ್ತೂರುಗಳ ಹೃದಯ ಸ್ಥಾನದಲ್ಲಿದ್ದಂತಿದೆ. ಹೀಗೆ ಹೋದರೆ ಹೊಸನಗರ, ಹಾಗೆ ಹೋದರೆ ಸಾಗರ. ಮೂರನೇ ದಾರಿ ನಾವು ದೋಣಿಯೇರಿ ಹಸಿರುಮಕ್ಕಿಯಾದ್ದಾದರೆ, ಮಗುದೊಂದು ಹಿಂದಿನ ಸಲ ಕಂಡ ವರದಾಮೂಲ ಇಕ್ಕೇರಿ ಇತ್ಯಾದಿಗಳದ್ದು (ನೋಡಿ: ರಂಗಪುರುಷನ ಸಾಕ್ಷಾತ್ಕಾರ ನೋಡುವ ನೆಪದಲ್ಲಿ) ಇತ್ಯಾದಿ. ನಾವು ಭಾರೀ ಚಾರಣವೇನೂ ಮಾಡಲಿಲ್ಲ. ದಿನಕ್ಕೊಂದು ದಿಕ್ಕಿನಲ್ಲಿ ಕೈಮರ, ಕಿಲೋಕಲ್ಲುಗಳ ಸೂಚನೆಯನ್ನಷ್ಟೇ ಓದಿಕೊಳ್ಳುತ್ತ, ನಿಜದಲ್ಲಿ ಮೂರ್ನಾಲ್ಕು ಕಿಮೀನಷ್ಟೇ ನಡೆದು ಮರಳುತ್ತಿದ್ದೆವು.

ಊರ ನಾಯಿಗಳ ಸುಪ್ರಭಾತವನ್ನು ದೈನ್ಯದಲ್ಲಿ ಕೇಳಿಕೊಳ್ಳುತ್ತ (ಅವು ಕಚ್ಚಬಾರದಲ್ಲಾ), ನಸು ಚಳಿಗೆ ಮಾಮರಗಳು ಸೋಸಿ ಬಿಟ್ಟ ಬಿಸಿಲಕೋಲುಗಳನ್ನು ಆಯ್ದುಕೊಳ್ಳುತ್ತ, ಇನ್ನೂ ಆರಿಸದ ಬೀದಿ ದೀಪಗಳ ಸ್ವಿಚ್ ಪಟಕಾಯಿಸುತ್ತ, ಮಂಗಳೂರಿನಲ್ಲಿದ್ದಂತೆ ಕಾಡುವ ದೈನಂದಿನ ದಂದುಗಗಳ ಯೋಚನೆಯಿಲ್ಲದೇ (ಮುಖ್ಯವಾಗಿ ದೇವಕಿ – ಕೈತೋಟದ ಆರೈಕೆ, ಬೆಳಗ್ಗಿನ ಕಾಫಿಂಡಿ, ಬಚ್ಚಲ ಬೆಂಕಿ….) ನಡೆಯುವುದು ತುಂಬ ಉಲ್ಲಾಸದಾಯಿಯೇ ಸರಿ. ಮೊದಲೊಂದು ದಿನ ಅಭಯ, ಇಸ್ಮಾಯಿಲ್, ಎಂ.ಎಸ್. ಶ್ರೀರಾಮ್, ಅವರ ಮಗನೂ ನಮಗೆ ಜತೆಗೊಟ್ಟಿದ್ದರು. ಉಳಿದಂತೆ ನಾವು ಸ್ವತಂತ್ರವಾಗಿ ನಡೆದರೂ ‘ವಾಕ್’ ಹೊರಟ ಹಲವು ಅತಿಥಿ ಗಣ್ಯರು ಸಿಕ್ಕುವುದೂ ಇತ್ತು. ನೀನಾಸಂನ ನಿವೃತ್ತ ಪ್ರಾಂಶುಪಾಲ ಬಿಯಾರ್ ವೆಂಕಟ್ರಮಣ ಐತಾಳರನ್ನು ಹೀಗೇ ಅವರ ಮನೆಯಂಗಳದಲ್ಲೇ ಕಂಡಿದ್ದೆವು.

 

ಒಂದು ಬೆಳಿಗ್ಗೆ ಸಿಕ್ಕ ಓರ್ವ ಅರ್ಚಕರೊಡನೆ ಲೋಕಾಭಿರಾಮವಾಗಿ ಹರಟಿದಾಗ “…. ಅಯ್ಯೋ, ನೀವು ಭೀಮನಕಟ್ಟೆ ಕೆರೆಗೋಗಿದ್ರೆ ನೀರಲ್ಲಿ ಯೋಗಾಸ್ನಾ ಮಾಡೋರ್ನ ನೋಡ್ಬಹುದಿತ್ತೂ….” ಅಂತ ಕುತೂಹಲ ಕೆರಳಿಸಿದರು. ಅದರ ವಿವರಗಳನ್ನು ತಿಳಿದು ಮಾರಣೇ ದಿನ ಅಲ್ಲಿಗೇ ಪಾದ ಬೆಳೆಸಿದ್ದೆವು (ಕರಡಿಕೆರೆ).  ನಮ್ಮ ದುರದೃಷ್ಟಕ್ಕೆ ಅಂದು ಆ ಅನೌಪಚಾರಿಕ ತಂಡದ ಓರ್ವ ಸದಸ್ಯೆ ಮಾತ್ರ ಬಂದಳು. ಮತ್ತೆ “ಕಂಪೆನಿ ಇಲ್ಲಾ…” ಅಂದುಕೊಂಡು ಹಾಗೇ ಹೋಗಿಬಿಟ್ಟಳು. ಉಳಿದಂತೆ ಭೂತೇಶ್ವರನ ಕಟ್ಟೆ, ಶೆಡ್ತಿ ಕೆರೆ, ರಾಮಚಂದ್ರಾಪುರ ಮಠಕ್ಕೆ ಸೇರಿದ ಬಟ್ಟೇ ವಿನಾಯಕ ದೇವಳ, ಗಣಪನ ಗುಡಿ, ಸೋಮೇಶ್ವರ ದೇವಳ, ಭೀಮನಕೋಣೆಯ ಮಂದಿರ ಮತ್ತು ಕಲ್ಯಾಣ ಮಂಟಪ, ಶ್ರಮಜೀವಿ ಆಶ್ರಮ,  ‘ಚರಕ’ದ ವಿವಿಧ ಮಳಿಗೆಗಳು, ಹಲವು ಕಿರು ಉದ್ದಿಮೆಗಳನ್ನೆಲ್ಲ ಹೊರಗಿಂದಲೇ ಪರಿಚಯಿಸಿಕೊಂಡೆವು.

ನೀನಾಸಂ ಬಳಗ ‘ನಾಟಕ’ಕ್ಕೆ ಪ್ರಥಮ ಪ್ರಾಶಸ್ತ್ಯ ಕೊಡುವುದು ನಿಜ, ಹಾಗೆಂದು ಅದರ ರಂಗದಿಂದಾಚಿನ ವರ್ತನೆಗಳಲ್ಲಿ ಅದು ಎಷ್ಟೇ ವಿಶೇಷದ್ದಿದ್ದರೂ ನಾಟಕೀಯತೆ, ಗದ್ದಲ ಬಂದದ್ದಿಲ್ಲ. ಅಲ್ಲಿ ಮನೆಯವರು, ನೌಕರರು, ರಂಗಶಾಲೆಯ ವಿದ್ಯಾರ್ಥಿಗಳು, ಊರವರು, ಶಿಬಿರಾರ್ಥಿಗಳು, ಅತಿಥಿಗಳು ಎಂದಿತ್ಯಾದಿ ಪ್ರತ್ಯೇಕಿಸಿ ತೋರುವ ಸಮವಸ್ತ್ರ, ಕನಿಷ್ಠ ಎದೆ ಪದಕಗಳೂ ಇಲ್ಲ. ಆರೋಗ್ಯಪೂರ್ಣ ಅವಿಭಕ್ತ ಕುಟುಂಬವೊಂದರಂತೆ ಐದೂ ದಿನಗಳ ಕಲಾಪಗಳನ್ನು ಯಾರು ಮಾಡಿದರೆಂದು ಅರಿವಾಗದಂತೆ ದಕ್ಷವಾಗಿ ನಡೆದುಹೋಯ್ತು. ಅಲ್ಲಿನ ಸಮಯ ಪಾಲನೆಗೆ ಮಿಲಿಟರಿಯ ಖಡಕ್ಕಿಲ್ಲ, ಆದರೆ ನಮ್ಮದೇ ‘ಜನನಾಯಕ’ರುಗಳ ಉಡಾಫೆಯಂತೂ ಖಂಡಿತಾ ಇಲ್ಲ.

ಅತಿಥಿಗಳು ಬಂದಂತೆ ಮುಖತಃ ಗುರುತಿಸಿ, ಶಿಬಿರ ಸಾಹಿತ್ಯ ಮತ್ತು ಮಾಹಿತಿಗಳೆಲ್ಲವನ್ನೂ  ಒಳಗೊಂಡ ಚೀಲ ಕೊಟ್ಟು, ಎಲ್ಲ ಸೌಕರ್ಯಗಳೂ ಒದಗುವಂತೆ ನೋಡಿಕೊಳ್ಳುತ್ತಿದ್ದ  ಹಿರಿಯೆ – ಪ್ರಭಾ. ಹಾಗೇ ಶಿಬಿರಾರ್ಥಿಗಳಾಗಿ ಬಂದು, ಕಛೇರಿಯಲ್ಲಿ ಶುಲ್ಕ ಕೊಡುವವರನ್ನು ನೊಂದಾಯಿಸಿಕೊಂಡು, ನಿಭಾಯಿಸಿದವರು ಹಿರಿಯಣ್ಣಪ್ಪ ಮತ್ತು ರಂಗಶಾಲೆಯ ವಿದ್ಯಾರ್ಥಿ ಸ್ವಯಂಸೇವಕರು. ನೀನಾಸಂನ ವಠಾರದಲ್ಲಿ ಸಾರ್ವಜನಿಕ ಘೋಷಣೆಗಳನ್ನು ಸಾರುವ ಮೈಕುಗಳನ್ನು ನಾನು ನೋಡಿದ್ದೇ ಇಲ್ಲ. ಯೋಜಿತ ಕಲಾಪಗಳಿಗೆ ಯುಕ್ತ ಜೋಡಣೆಗಳು (ಧ್ವನಿ ಮತ್ತು ಬೆಳಕು) ಆಯಾ ವಲಯದ ಮಿತಿಯಿಂದ ಹೊರಗೆ, ಅಂದರೆ ಊರೆಲ್ಲಾ ಕಿವಿ ಮುಚ್ಚಿಕೊಳ್ಳುವಂತೆ ಗದ್ದಲವೆಬ್ಬಿಸಿದ್ದೂ ಇಲ್ಲ. ಶಿಬಿರದ ಎಲ್ಲರೂ ಸ್ವಂತ ಜವಾಬ್ದಾರಿಯಲ್ಲಿ, ತಿಂಡಿ ಊಟಗಳಿಗೆ, ಸಭೆ ನಾಟಕಗಳಿಗೆ ಮತ್ತು ವಿರಾಮಗಳಲ್ಲಿ ಎಲ್ಲಂದರಲ್ಲಿ ನಡೆಯುತ್ತಿದ್ದ ಅನೌಪಚಾರಿಕ ಕೂಟಗಳಿಗೆ ಸಹಜವಾಗಿ ಬಂದು, ಸೇರಿ, ಚದುರುವ ಚಂದ ಅನುಭವಿಸಿಯೇ ತಿಳಿಯಬೇಕು.

ಸಂಜೆಯ ಮಹಾನಾಟಕವೊಂದನ್ನುಳಿದು ಹಗಲಿನ ಎಲ್ಲ ಕಲಾಪಗಳೂ ಆಪ್ತರಂಗಭೂಮಿಯಲ್ಲೇ ನಡೆದವು. ಅಲ್ಲೂ ರಂಗ ಪ್ರದರ್ಶನಗಳಿಗಿದ್ದಂತೆ ನಿಗದಿತ ಕಾಲಕ್ಕೆ ಹೊಂದುವಂತೆ ಸಣ್ಣ ಸಣ್ಣ ಅಂತರದಲ್ಲಿ, ಎರಡು ಬಾರಿ ಗಂಟೆ ಹೊಡೆದು ಎಚ್ಚರಿಸುತ್ತಿದ್ದರು. ಅಷ್ಟರಲ್ಲೇ ಹೆಚ್ಚಿನವರೆಲ್ಲ ಒಳ ಸೇರಿಯಾಗುತ್ತಿತ್ತು. ಸಾಂದರ್ಭಿಕವಾಗಿ ನೀನಾಸಂ ಬಳಗದ ಯಾರೋ ಒಬ್ಬರು, ಇತರ ಯಾವ ಶ್ಯಾಳೆಗಳಿಲ್ಲದೆ (ನಿರೂಪಕ, ಪ್ರಾರ್ಥನೆ, ಸ್ವಾಗತ, ಪರಿಚಯ, ಹಾರ, ಸ್ಮರಣಿಕೆ, ಅಧ್ಯಕ್ಷ, ಮುಖ್ಯ ಅತಿಥಿ ಇತ್ಯಾದಿಗಳಿಲ್ಲದೆ) ಸಭೆಯನ್ನು ನೇರ ಕಲಾಪಕ್ಕೇ ತೊಡಗಿಸುತ್ತಿದ್ದರು. ಅಂದಿನ ಕಲಾಪಕ್ಕೆ ನೇರ ಸಂಬಂಧಪಟ್ಟ ವ್ಯಕ್ತಿ ಮತ್ತು ಮಾತು – ಅಷ್ಟೇ. ಆ ನಿರ್ವಾಹಕರಾದರೂ ಸಂಪನ್ಮೂಲರನ್ನು ಚುಟುಕಾಗಿ ಪರಿಚಯಿಸಿ, ಮತ್ತೆ ನಮ್ಮಲ್ಲೇ ಒಬ್ಬರಾಗಿ ಸೇರಿಕೊಳ್ಳುತ್ತಿದ್ದರು. ಅದೇ ಅನೌಪಚಾರಿಕತೆಯನ್ನು ನಿರೀಕ್ಷಿಸಿ ….

ಸ್ವಂತೀ ಚಟ ಕಾಡುವ ಪರಿ
ಮೊದಲ ದಿನ ಬಂದೆಲ್ಲರಿಗೂ ಎರಡೇ ವಾಕ್ಯಗಳಲ್ಲಿ ತಂತಮ್ಮ ಪರಿಚಯ ಹೇಳಿಕೊಳ್ಳಲು ಅವಕಾಶ ಕೊಟ್ಟರು. ಹಾಗೇ ಮುಂದಿನ ದಿನಗಳಲ್ಲಿ, ಮೊದಲ ಅವಧಿಯನ್ನು ಹಿಂದಿನ ರಾತ್ರಿ ಅಲ್ಲೇ ನೋಡಿದ ನಾಟಕ ಪ್ರದರ್ಶನದ ಕುರಿತು ಎಲ್ಲರಿಗೂ ಮಾತಾಡಲು ಮುಕ್ತ ಅವಕಾಶವನ್ನೂ ಕೊಡುತ್ತಿದ್ದರು. ಹೆಚ್ಚಿನ ಶಿಬಿರಾರ್ಥಿಗಳೂ ಬಹುತೇಕ ಅತಿಥಿಗಳೂ ಅವರವರ ಕ್ಷೇತ್ರಗಳಲ್ಲಿ ವ್ಯಾಪಕ ಕೆಲಸ ಮಾಡಿ, ಖ್ಯಾತಿ ಗಳಿಸಿದವರೇ ಇದ್ದರು. ಆದರೆ ಅವೆಲ್ಲ ಶಿಬಿರದ ‘ಮಾತುಕತೆ’ಯನ್ನು ಸಂಪನ್ನಗೊಳಿಸುವುದಕ್ಕಿಂತ ಹೆಚ್ಚಿಗೆ ಸ್ವಂತವನ್ನು ಮುನ್ನೂಕುವ ಪ್ರಯತ್ನವಾಗಿಯೇ ಕಾಣಿಸಿತು.

ವಿಮರ್ಶೆಗೀಡಾಗುವ ನಾಟಕದ ನಿರ್ದೇಶಕ, ಕಲಾವಿದರು ಮತ್ತು (ಇದ್ದರೆ) ಲೇಖಕನೂ ಸಭೆಗೆ ಮುಖ ಮಾಡಿಯೇ ಕೂತಿರುತ್ತಿದ್ದರು. ನಿರ್ವಾಹಕ ಮೊದಲಲ್ಲೇ ಎಲ್ಲರ ನಿರ್ಭಿಡೆಯ ಅಭಿಪ್ರಾಯವನ್ನು ಕೇಳುವುದರೊಡನೆ, ತಾವು ಅವನ್ನು ಗಂಭೀರವಾಗಿಯೇ ಸ್ವೀಕರಿಸುವ ಆಶ್ವಾಸನೆಯನ್ನೂ ನೀಡುತ್ತಿದ್ದರು. ಜತೆಗೇ ತೀರಾ ಅನಿವಾರ್ಯವಲ್ಲದಿದ್ದರೆ ಪ್ರಸ್ತುತ ತಂಡದ ಪ್ರತಿಕ್ರಿಯೆ ಅಥವಾ ಸಮಾಜಾಯಿಷಿಯನ್ನು ಬಯಸಬಾರದಾಗಿಯೂ ಸೂಚಿಸುತ್ತಿದ್ದರು. ಅಂದರೆ, ನಾಟಕ ಪ್ರಯೋಗವಾದ ಮೇಲೆ ಸಾರ್ವಜನಿಕ ಸೊತ್ತು ಎಂಬ ಉದಾತ್ತ ಭಾವ ಅಲ್ಲಿತ್ತು. ನಾಟಕ ತಂಡಗಳೇನೋ ಸಂಯಮವನ್ನು ಕಾಯ್ದುಕೊಂಡವು. ಉಳಿದಂತೆ ಸ್ವಪರಿಚಯದಲ್ಲೂ ನಾಟಕ ಪ್ರತಿಕ್ರಿಯೆಗಳ ಚರ್ಚೆಯಲ್ಲೂ ಸಂಘಟಕರ ಮನವಿಗಳು ದುರ್ಬಳಕೆಯಾದದ್ದೇ ಹೆಚ್ಚು. ಔಚಿತ್ಯ ಜ್ಞಾನದ ಕೊರತೆಯಲ್ಲಿ ಆತ್ಮಕಥಾನಕ ಹೆಚ್ಚುತ್ತಿತ್ತು. ನಾಟಕ ವಿಮರ್ಶೆಗಿಂತಲೂ ಹೆಚ್ಚಿಗೆ ‘ನನ್ನ ಸಾಧನೆ’ಯನ್ನು ಮುಂದೂಡುವ ಚಟ ಕಾಣುತ್ತಿತ್ತು. ಎಲ್ಲೋ ಕೆಲವು ಪ್ರತಿಕ್ರಿಯೆಗಳು ಮಾತ್ರ ನನ್ನ ನಾಟಕಗಳ ಅರ್ಥವಂತಿಕೆಗೆ ಹೆಚ್ಚಿನ ವಂತಿಗೆ ಕೊಟ್ಟವು. ಒಟ್ಟಾರೆ ನಾಟಕಗಳ ಕುರಿತ ನನ್ನ ಅಭಿಪ್ರಾಯಗಳನ್ನು ಮುಂದೆ ಹಂಚಿಕೊಳ್ಳುತ್ತೇನೆ.

ಮುಖತಃ ತಿಳಿದುಕೊಳ್ಳುವ ಕುರಿತು
ಕೊರೋನಾ ಕಾರಣದಲ್ಲಿ ಸರಣಿ ತುಂಡಾಗಿ, ಎರಡು ವರ್ಷ ಇಲ್ಲವಾದ ನೀನಾಸಂ ವಾರ್ಷಿಕ ಹೆಚ್ಚುಕಟ್ಲೆಯನ್ನು ಈ ಬಾರಿ ಪರಿಷ್ಕರಿಸಿ – ನಿರ್ದಿಷ್ಟ ಪ್ರಸ್ತುತಿ (ಸಾಹಿತ್ಯ, ಕಲೆ, ಸಂಗೀತ….) ಮತ್ತು ಅದರ ಕುರಿತ ಚರ್ಚೆಯೇ ಮುಖ್ಯವಾಗುವಂತೆ ರೂಪಿಸಿದ್ದರು. ಎಲ್ಲರಿಗೂ ಕೊಟ್ಟ ಚೀಲದೊಳಗೆ, ಶಿಬಿರದ ಆಶಯ, ಪ್ರದರ್ಶನಗೊಳ್ಳಲಿದ್ದ ನಾಟಕಗಳ ಸವಿವರ ಕರಪತ್ರ, ಕಲಾ ಪ್ರಸ್ತುತಿಯ ವಿವರಗಳು ಮತ್ತು ಸಾಹಿತ್ಯ ಪ್ರಸ್ತುತಿಗೆ ಅಗತ್ಯವಾದ ಪಠ್ಯ ಭಾಗಗಳ ಪ್ರತಿಗಳನ್ನೂ ಇಟ್ಟಿದ್ದರು. ನಾಂದೀ ರೂಪಕದ ಬೆನ್ನಿಗೆ ಟಿಪಿ ಅಶೋಕರು ಚೀಲದ ಉಪಯುಕ್ತತೆಯನ್ನು ಪ್ರತ್ಯೇಕ ಹೇಳಿದರು ಕೂಡಾ. ಅಂಥದ್ದರಲ್ಲೂ ಹಲವರು ಮದುವೆ ಮನೆಗಳಲ್ಲಿ ಸಿಗುವ ‘ತೆಂಗಿನ ಕಾಯಿ’ಯಂತೆ (ಪ್ರತಿ ಕಾಣಿಕೆ) ಚೀಲವನ್ನು ವಾಸದ ಕೋಣೆಯಲ್ಲೇ ಬಿಟ್ಟು ಬರುವುದಿತ್ತು.

ಕೊರೋನಾ ನಿರ್ಬಂಧ ಕಾಲದಲ್ಲಿ ನಾವು ಸಹಜ ಮಾನವ ಮುಖಾಮುಖಿಗಳನ್ನು ಕಳೆದುಕೊಂಡದ್ದು ಒಂದು ನಷ್ಟ. ಅದಕ್ಕೂ ಮಿಗಿಲಾಗಿ, ಅದನ್ನು ಮರಳಿ ಪಡೆಯದಂತೆ ಹಚ್ಚಿಕೊಂಡ ವಿದ್ಯುನ್ಮಾನ ಮಾಧ್ಯಮದ ಚಟ! ಅದನ್ನು ದೂರ ತಳ್ಳುವ ಪ್ರಯಾಸದ ಕೆಲಸವನ್ನು ಶಿಬಿರ ವ್ಯವಸ್ಥಾಪಕರು ಬಹಳ ನಿಷ್ಠೆಯಿಂದಲೇ ಮಾಡಿದರು. ಮೊದಲಲ್ಲೇ ಅಶೋಕರು ಎಲ್ಲ ಕಲಾಪಗಳಲ್ಲೂ ಕೃತಕ ಬುದ್ಧಿಮತ್ತೆಯನ್ನು, ಸ್ಪಷ್ಟವಾಗಿ ಹೇಳುವುದಿದ್ದರೆ ಚರವಾಣಿಯಂಥವನ್ನು (ಕ್ಯಾಮರಾ, ಮಡಿಲ ಗಣಕ, ಟ್ಯಾಬ್ಲೆಟ್…) ಬಳಸದಂತೆ ಒತ್ತಿ ಹೇಳಿದರು. ಮತ್ತೆ ಪ್ರತಿ ಕಲಾಪದ ಪೀಠಿಕೆಯಲ್ಲೂ ಅದನ್ನು ನಿರ್ವಾಹಕರು ಬಗೆ ತರದಲ್ಲಿ ಹೇಳುತ್ತಲೇ ಇದ್ದರು. “ಸ್ವತಂತ್ರವಾಗಿ ಓದಿ, ಕಂಡು, ಕೇಳಿ, ಪರಸ್ಪರ ಸಂಭಾಷಿಸಿ, ಸಂಗತಿಗಳನ್ನು ಗ್ರಹಿಸಿ. ಅವೆಲ್ಲ ಒಂದರಲ್ಲೇ ನೇರ ದಕ್ಕುತ್ತದೆಂಬ ಭ್ರಮೆ ಉಂಟು ಮಾಡುವ ಮೊಬೈಲ್ ಸ್ವಿಚ್ ಆಫ್ ಮಾಡಿ. ಮೊಬೈಲಿನ ‘ಕತ್ತುಹಿಚುಕಿ’ ಸಾಯಿಸಿ. ಮ್ಯೂಟ್ ಮಾಡುವುದಲ್ಲ ಆರಿಸಿಬಿಡಿ. ಮೆಸೇಜ್ ಮಾಡುವುದು ಅಥವಾ ಚಿತ್ರಗ್ರಹಣಕ್ಕಿಳಿದು ತಾಂತ್ರಿಕ ಲೋಕದಲ್ಲಿ ಕಳೆದುಹೋಗಬೇಡಿ. ನಿಮಗೆ ಚಿತ್ರಗಳು ಬೇಕಿದ್ದರೆ ಯಾವತ್ತೂ ನೀನಾಸಂ ಜಾಲತಾಣಕ್ಕಿಳಿದು ಉಚಿತವಾಗಿಯೇ ಪಡೆದುಕೊಳ್ಳಿ…..” ಎಂದು ಬಹುತರದಲ್ಲಿ ಹೇಳುತ್ತಲೇ ಇದ್ದರು. ತತ್ವತಃ ಅದನ್ನು ನಾನೂ ಒಪ್ಪುವವನೇ. ಆದರೆ ನನ್ನ ಅಭ್ಯಾಸದಂತೆ, ಮುಂದೆ ಅನುಭವ ಕಥನಕ್ಕೆ ಕೆಲವಾದರೂ ಅನೌಪಚಾರಿಕ ಸಾಕ್ಷಿಗಳಿರಲೆಂದು ಶಿಸ್ತು ಸಂಹಿತೆ ಮೀರಿದ್ದೇನೆ. ಹಾಗೆ ಕೆಲವು ಕಲಾಪಗಳಲ್ಲಿ, ಇತರರ ಏಕಾಗ್ರತೆಗೆ ತೊಂದರೆಯಾಗದಂತೆ ಚಿತ್ರಗಳನ್ನು ಸಂಗ್ರಹಿಸಿದ್ದಕ್ಕೇ ನಿಮ್ಮ ಇಂದಿನ ಓದು ಸ್ವಲ್ಪವಾದರೂ ಸ್ವಾರಸ್ಯಕರವಾಗಿರಬೇಕೆಂದು ಭಾವಿಸುತ್ತೇನೆ.

ರೂಪಕದಿಂದಲೇ ನಾಂದಿ…
ಮೊದಲ ದಿನ ಶಿಬಿರದ ನಾಂದಿ ಕಲಾಪಕ್ಕೆ ಆಪ್ತ ರಂಗಭೂಮಿಯ ಸಭಾಂಗಣ ಭರ್ತಿಯಾಗಿತ್ತು. ಸಕಾಲಕ್ಕೆ ಕೆವಿ ಅಕ್ಷರ, ಖಾಲಿ ರಂಗಮಂಚದ ಒಂದು ಮೂಲೆಯಲ್ಲಿಟ್ಟಿದ್ದ ಆಳೆತ್ತರದ ದೀಪದ ಬಳಿ ಹೋಗಿ, ಕಾರ್ಡ್ಲೆಸ್ ಮೈಕ್ ಹಿಡಿದು ಮೆಲುದನಿಯಲ್ಲಿ ಸಭೆಯಿಂದ ಇಬ್ಬರು ಗಣ್ಯ ಮಹಿಳೆಯರನ್ನು (ಸವಿತಾ ನಾಗಭೂಷಣ ಮತ್ತು ಎಸ್ತರ್ ಅನಂತಮೂರ್ತಿ) ಆಹ್ವಾನಿಸಿದರು. ಅವರು ಬಂದು ಜ್ಯೋತಿ ಬೆಳಗಿ, ಸ್ವಸ್ಥಾನ ಸೇರಿಕೊಂಡರು. ಮುಂದೆ ಅಷ್ಟೇ ಸರಳವಾಗಿ ಖಾಲಿ ವೇದಿಕೆಯಲ್ಲೇ ಎರಡೇ ಮಿನಿಟಿನ, ಸ್ಪಷ್ಟ ಸ್ವಾಗತದ ನುಡಿಗಳನ್ನು ಆಡಿದವರು ನೀನಾಸಂ ಬಳಗದ ಹೊಸ ಅಧ್ಯಕ್ಷ – ಸಿದ್ಧಾರ್ಥ ಭಟ್. ಅನಂತರ ರಂಗದ ಬೆನ್ನಿಗಿದ್ದ ಕರಿ ಪರದೆಯ ಎರಡೂ ಮಗ್ಗುಲುಗಳಿಂದ ರಂಗಶಾಲೆಯ ಹತ್ತೆಂಟು ವಿದ್ಯಾರ್ಥಿಗಳು ಸಹಜ ನಡೆಯಲ್ಲಿ, ಹೆಚ್ಚಿನವರು ಸಹಜ ಉಡುಗೆಗಳಲ್ಲೇ ಮುಂಬಂದು, ರಂಗದಲ್ಲಿ ಹರಡಿಕೊಂಡರು. ಮುಂದುವರಿದು ಸವಿತಾ ನಾಗಭೂಷಣರ ‘ಜಾತ್ರೆಯಲ್ಲಿ ಶಿವ’ದ ರಂಗ ರೂಪವನ್ನೇ ಸಭೆಯ ಎದುರಿಗಿಟ್ಟರು. ಅಲ್ಲಿ ಸಹಜರಿದ್ದರು, ವೃತ್ತಿಪರ ವೇಷವಿತ್ತು, ಔಪಚಾರಿಕ ವೇಷವೂ ಅಭಿನಯವೂ ಇತ್ತು, ಮಾತು, ಸರಳ ವಾದ್ಯ ಸಹಿತ ಗಾಯನಗಳು ಭಾವ ತುಂಬಿ ಹರಿದವು. ‘ಕಲೆಗಳೊಡನೆ ಸಂವಾದ’ ಶಿಬಿರಕ್ಕೆ ಪ್ರಾರ್ಥನೆಯ ಔಪಚಾರಿಕತೆಯೂ ಸರಿ, ಪ್ರಮುಖ ಆಶಯದ ಅಭಿವ್ಯಕ್ತಿಯೂ ಹೌದು ಎನ್ನುವ ಅದ್ಭುತವನ್ನೇ ಅದು ಸಾಧಿಸಿತು.

ಖಾಲಿಯುಳಿದ ಟಿಪ್ಪಣಿ ಪುಸ್ತಕ ಮತ್ತು ಮಸ್ತಕ

ನಾಂದೀ ಕಲಾಪದ ಬೆನ್ನಿಗೆ ಚಹಾ ವಿರಾಮ. ಮತ್ತೆ ಸಾಹಿತ್ಯ ಪ್ರಸ್ತುತಿಯ ಸರದಿ. ಆಪ್ತ ರಂಗಭೂಮಿಯ ವ್ಯವಸ್ಥೆಯೇನೋ ಆಪ್ತವೇ ಇದೆ. ಆದರೆ ಅಲ್ಲಿನ ವಾತಾಯನದ ವ್ಯವಸ್ಥೆ ಸಾಲದೆ, ಒಳಗೆ ತುಂಬಿದ ಜನರ ಬಿಸಿ, ದಿನದ ಬಿಸಿ ಮತ್ತು ವೈಯಕ್ತಿಕವಾಗಿ ನನ್ನ ಪ್ರಾಯ ಸಹಜವಾದ ತೂಕಡಿಕೆ ಸೇರಿ ಶುದ್ಧ ಸಾಹಿತ್ಯಿಕ ಕಲಾಪ ಹಾಗೂ ಚರ್ಚೆಗಳ ವಿವರಗಳು ನೆನಪಿನಿಂದ ಹಾರಿಹೋಗಿವೆ. ಅಂದಂದಿನ ಕುಶಿಯನ್ನಷ್ಟೇ ದಾಖಲಿಸುವುದಿದ್ದರೆ…

ಮೊದಲು ಬಂದವರು, ನಿವೃತ್ತ ಸಂಸ್ಕೃತ ಪ್ರೊಫೆಸರ್ ಶ್ರೀರಾಮ ಭಟ್. ಇವರು ಕಾಳಿದಾಸನ ರಘುವಂಶ ಹಾಗೂ ಶಾಕುಂತಲದ ನಾಂದಿ ಪದ್ಯಗಳ ಓದು ಮತ್ತು ಅರ್ಥ ಸೂಕ್ಷ್ಮಗಳನ್ನು, ಕಗ್ಗಂಟಾಗಿಸದೇ ಎತ್ತಿ ತೋರಿಸಿದರು. ಇವರ ಸರಸ ವಚನ, ಲಘು ಹಾಸ್ಯ ಪ್ರವೃತ್ತಿ ಪ್ರಸ್ತುತಿಯನ್ನು ಆಕರ್ಷಕವಾಗಿಸಿತ್ತು.

ಎರಡನೇ ದಿನಕ್ಕೆ, ಒಂದು ಕಾಲದ ಇಂಗ್ಲಿಷ್ ಅಧ್ಯಾಪಕ, ಕನ್ನಡ ವಿಮರ್ಶಕ – ಎಸ್ ಆರ್ ವಿಜಯಶಂಕರ್, ಕುಮಾರ ವ್ಯಾಸನ ಉದ್ಯೋಗ ಪರ್ವದ ಆಯ್ದ ಪದ್ಯಗಳೊಡನೆ ಬಂದರು. ಆದರೆ ಈ ಪ್ರಸಂಗವನ್ನು ತಾಳ ಮದ್ದಳೆಯ ಹಲವು ಆವೃತ್ತಿಗಳಲ್ಲಿ ಇನ್ನೂ ಎಷ್ಟೆಷ್ಟೋ ಸೂಕ್ಷ್ಮಗಳಲ್ಲಿ ಅದೂ ಪ್ರಥಮ ಪುರುಷದಲ್ಲೇ ಅನುಭವಿಸಿದ ನನ್ನ ಕೇಳ್ಮೆಗೆ, ವಿಜಯಶಂಕರ್ ಸಪ್ಪೆಯೆನಿಸಿದರು.

ಮೂರನೇ ದಿನಕ್ಕೆ ಇನ್ನೋರ್ವ ಇಂಗ್ಲಿಷ್ ಅಧ್ಯಾಪಕ, ವಿಮರ್ಶಕ, ರಾಜೇಂದ್ರ ಚೆನ್ನಿ ನಮಗೆ ಬೇಂದ್ರೆ ಕವನಗಳ ಮುಖಾಮುಖಿ ಮಾಡಿಸಿದರು. ಬೇಂದ್ರೆ ಜೀವನದ ಕೆಲವು ಆಪ್ತ ಚಿತ್ರಗಳೊಡನೆ, ಆ ನೆಲದ ಸೊಗಡನ್ನು ಬೆಸೆದುಕೊಂಡೇ ಬಂದ ಚೆನ್ನಿಯವರ ಪ್ರಸ್ತುತಿ ಹಿಡಿಸಿತು.

ಕೊನೆಯ ಸಾಹಿತ್ಯ ಪ್ರಸ್ತುತಿ ಅತಿ ಸಣ್ಣ ಕತೆಗಳನ್ನು ಹಿಡಿದುಕೊಂಡು ಬಂದ ಎಸ್ ದಿವಾಕರರದು. ನೇರ ಹೇಳುವುದಿದ್ದರೆ ಇವರು ಮೊದಲ ಮೂವರಂತೆ ಅಧ್ಯಾಪನ ರಂಗದವರಲ್ಲ. ಆದರೆ ಇವರ ಅಪಾರ ಓದು, ಸಾಹಿತ್ಯ ಪರಿಚಾರಿಕೆ ಮತ್ತು ಜನಪ್ರಿಯತೆಯ ಬೆನ್ನು ಹತ್ತದ ಸರಳತನಗಳೇ ಪ್ರಸ್ತುತಿಯನ್ನು  ತುಂಬ ಸ್ವಾರಸ್ಯಕರವಾಗಿಸಿತ್ತು. ಈ ಸಾಹಿತ್ಯ ಪ್ರಸ್ತುತಿಗಳಿಗೆ ಸಂಬಂಧಿಸಿದಂತೆ….

ಎಲ್ಲಾ ಪಠ್ಯಗಳ ಪ್ರತಿಗಳೂ ನಮಗೆಲ್ಲ ಮುಂದಾಗಿಯೇ ಚೀಲದೊಡನೆ ಸಿಕ್ಕಿತ್ತು. ಮತ್ತೆ ಸಭೆಯಲ್ಲಿ ಕೇಳಿದ್ದನ್ನು ಟಿಪ್ಪಣಿ ಹಾಕಿಕೊಳ್ಳಲು ಪೆನ್ನು ಮಾತ್ತು ಖಾಲಿ ಪುಸ್ತಕವೂ  ಜತೆಗಿತ್ತು. ಮೊದಲ ದಿನದಂದು ನಾನು ಉತ್ಸಾಹದಲ್ಲಿ ಏನೋ ಕಡಿದು ಹಾಕುವವನ ತಯಾರಿಯಲ್ಲೇ ಇದ್ದೆ. ಆದರೆ ವಿದ್ಯಾರ್ಥಿ ದಿನಗಳಲ್ಲೇ ನಾನು ರೂಢಿಸಿಕೊಳ್ಳದ ಶಿಸ್ತು – ಟಿಪ್ಪಣಿ ಮಾಡುವುದು ಮತ್ತು ವಿರಾಮದಲ್ಲಿ ವಿಸ್ತರಿಸುವುದು, ಈಗ ಬರುವುದಾದರೂ ಹೇಗೆ? ಕ್ಷಮಿಸಿ, ಟಿಪ್ಪಣಿ ಪುಸ್ತಕ ಪೂರ್ಣ ಬಿಳಿಯಾಗಿಯೂ ನನ್ನ ನೆನಪು ಖಾಲಿಯಾಗಿಯೇ ಉಳಿದದ್ದಕ್ಕೆ ಸದ್ಯ ಇಷ್ಟೇ.

 

(ಮುಂದುವರಿಯಲಿದೆ)