ಅತ್ರಿ ಬುಕ್ ಸೆಂಟರಿಗೆ ೩೫ ವರ್ಷಗಳಾಗಿದ್ದಾಗ, ಅಂದರೆ ೨೦೧೧ರಲ್ಲಿ ನಾನು ನನ್ನ ಪ್ರಕಾಶನ ವಿಭಾಗವನ್ನು ಮುಚ್ಚಿದ್ದನ್ನು ಜಾಲತಾಣದಲ್ಲಿ ಸಕಾರಣ ಘೋಷಿಸಿಕೊಂಡಿದ್ದೆ. (ನೋಡಿ: ಅತ್ರಿ, ಪುಸ್ತಕ ಪ್ರಕಾಶನವನ್ನು ಮುಚ್ಚಿದೆ) ಆ ಕಾಲಕ್ಕೆ ನಾನು ಫೇಸ್ ಬುಕ್ಕಿನಲ್ಲಿ ಹೆಚ್ಚು ಸಕ್ರಿಯನಾಗಿರಲಿಲ್ಲ. ಆದರೂ ಅನಿರೀಕ್ಷಿತವಾಗಿ ನೇರ ಜಾಲತಾಣಕ್ಕೇ ೫೩ ಪ್ರತಿಕ್ರಿಯೆಗಳು ಬಂದವು. ಅವುಗಳಲ್ಲಿ ಹಲವರು ಅಪಾರ್ಥ ಮಾಡಿಕೊಂಡು “ಪುಸ್ತಕ ಮಳಿಗೆಯನ್ನು ದಯವಿಟ್ಟು ಮುಚ್ಚಬೇಡಿ” ಎಂದೇ ಕೇಳಿಕೊಂಡು ನನ್ನನ್ನು ಸಂದಿಗ್ಧಕ್ಕೆ ಸಿಕ್ಕಿಸಿದ್ದರು. ವಾಸ್ತವದಲ್ಲಿ ಇದು ನನ್ನ ಒಂದು ವರ್ಷ ಕಳೆದ ಮೇಲೆ, ಅಂದರೆ ೨೦೧೨ರಲ್ಲಿ ನಿಜಕ್ಕೂ ಪುಸ್ತಕ ಮಳಿಗೆಯನ್ನೇ ಮುಚ್ಚುವ ನಿರ್ಧಾರವನ್ನು ಪುನರಾಲೋಚಿಸಲು ಪ್ರೇರಿಸಿತು. ಹಾಗೆ ವರ್ಷ ಕಳೆದ ಮೇಲೆ ನಿಜವಾಗಿಯೂ ಅತ್ರಿ ಮುಚ್ಚುವ ಘೋಷಣೆಯನ್ನು ಇನ್ನೊಂದೇ ಲೇಖನದೊಂದಿಗೆ ಜಾಲತಾಣದಲ್ಲಿ ಪ್ರಕಟಿಸಿದ್ದೆ. (ನೋಡಿ: ಅತ್ರಿಬುಕ್ ಸೆಂಟರ್ ಮುಚ್ಚಿ, ವಾನಪ್ರಸ್ಥ) ನಾನು ಊಹಿಸದಷ್ಟು ದೊಡ್ಡ ಅಭಿಮಾನಪೂರ ಎಲ್ಲ ದಿಕ್ಕುಗಳಿಂದಲೂ ಹರಿದು ಬಂತು. ಅವೆಲ್ಲವನ್ನೂ ನಾನು ನನಗೆ ಸಿಕ್ಕಿದ ಪ್ರಶಸ್ತಿ (ಕಾಂಡಕ್ಟ್ ಸರ್ಟಿಫಿಕೇಟ್) ಎಂದೇ ಭಾವಿಸಿದೆ. ನನ್ನ ತಂದೆಗೆ ಕೆಲವೊಮ್ಮೆ ಅವರ ಲೇಖನಕ್ಕೋ ಪುಸ್ತಕಕ್ಕೋ ಎಲ್ಲೆಲ್ಲಿಂದಲೋ ಓದುಗರಿಂದ ಭಾರೀ ಹೊಗಳಿಕೆಯ ಪತ್ರಗಳು ಬರುವುದಿತ್ತು. ಆ ಸಂದರ್ಭಗಳಲ್ಲಿ ತಂದೆ ಪೂರ್ಣ ಸಂಯಮದೊಡನೆ ಅವರಿಗೆ ಉತ್ತರಿಸಿದ್ದನ್ನೇ ನಾನಿಲ್ಲಿ ಜ್ಞಾಪಿಸಿಕೊಳ್ಳುತ್ತೇನೆ – ನಾನು ನಡೆದ ದಾರಿ ತಪ್ಪಲ್ಲ! ಆದರೆ….

ಈ ಬಾರಿ ಕೇವಲ ಫೇಸ್ ಬುಕ್ಕಿಗೆ ವಿದಾಯ ಹೇಳಿದ್ದು, ಇಷ್ಟೊಂದು ಮಹತ್ವ ಗಳಿಸಿದ್ದು, ನನಗೆ ನಿಜಕ್ಕೂ ಮುಜುಗರ ಉಂಟು ಮಾಡಿದೆ. (ನಾನು ಅಭಯನಲ್ಲಿ ತಮಾಷೆಯಾಗಿ ಹೇಳಿಕೊಂಡೆ – ನನ್ನ ಮರಣವಾರ್ತೆಗೆ ಬಂದ ಶೋಕ ಸಂದೇಶವನ್ನು (ಒಬಿಚುರಿ) ನಾನೇ ಓದುತ್ತಿರುವಂತನ್ನಿಸಿದೆ!) ಇದು ಪ್ರಕಟವಾದ ಕೂಡಲೇ ತೀರ್ಥಳ್ಳಿಯ ಎಲ್ಸಿ ಸುಮಿತ್ರಾ, ಮೈಸೂರ ಪ್ರವಾಸದಲ್ಲಿದ್ದವರು, ಫೋನ್ ಮಾಡಿ “ನಿರಾಶೆ ಸರಿ, ಆದರೆ ವಿದಾಯ ಬೇಡ” ಎಂದರು. ಮುಂದೆ ನೋಡುವ ಎಂದುಬಿಟ್ಟೆ. ಮಡಿಕೇರಿಯಿಂದ ಚಿಕ್ಕಪ್ಪ – ರಾಘವೇಂದ್ರ, ಫೋನ್ ಮಾಡಿದ. ಆತ ಹಿರಿತನಕ್ಕೆ ಸಹಜವಾಗಿ “ಫೇಸ್ ಬುಕ್ಕಿನಲ್ಲಿ ನೀನು ತುಂಬ ಅನುಭವಿ ಹಿರಿಯ. ಎಡ್ನಾಡು ಭಾವನೂ ಬರೆದಿದ್ದಾರೆ. ಓದುಗರಿಲ್ಲವೆಂದು ನಿರಾಶನಾಗಿ ಹಿಂದೆ ಸರಿಯುವುದು….” ಎನ್ನುತ್ತಿದ್ದಂತೆ ನಾನು “ಇದು ಹಾಗಲ್ಲ. ನಾನು ಲೋಕೋದ್ಧಾರ ಮಾಡಿದ್ದು ಸಾಕು ಎಂದೇ ವಿದಾಯ ಹೇಳಿದ್ದೇನೆ. ಸದ್ಯ ಹಿಂತೆಗೆದುಕೊಳ್ಳುವ ಅಗತ್ಯ ನನಗೆ ಕಾಣುತ್ತಿಲ್ಲ” ಎಂದು ಮುಗಿಸಿದೆ. ಉಳಿದಂತೆ, ಎರಡು ದಿನಗಳಲ್ಲಿ ಒಂದು ಮರುಹಂಚಿಕೆ (ಅರವಿಂದ ಚೊಕ್ಕಾಡಿ) ನೂರಾನಲ್ವತ್ತಕ್ಕೂ ಮಿಕ್ಕು ಭಾವ ಸಂಕೇತ (ಅನುಮೋದನೆ, ಬೆರಗು, ವಿಷಾದ, ಚಿಂತನೆಗಳೇ) ಮತ್ತೆ ನೂರಕ್ಕೂ ಮಿಕ್ಕು ವೈವಿಧ್ಯಮಯ ಪ್ರತಿಕ್ರಿಯೆಗಳು ಬಂದವು. ಅವುಗಳಲ್ಲಿ ಹೆಚ್ಚಿನವರು “ವಿದಾಯ ಹೇಳಬೇಡಿ” ಎಂದು ಬಗೆ ತರದ ವಿಶ್ವಾಸ ಪ್ರದರ್ಶಿಸಿದ್ದಾರೆ. ಅದರಲ್ಲಿ ಕೆಲವರು ನನ್ನ ಮುಖ್ಯ ಕಾರಣವನ್ನು ತಪ್ಪಿಸಿಕೊಂಡಿದ್ದರು. ಹಾಗಾಗಿ ಸಣ್ಣ ಸ್ಪಷ್ಟೀಕರಣ ಕೊಡುವುದಾದರೆ….

ಟ್ರಾಲಿಗರ ಬಗ್ಗೆ (ಹೆಚ್ಚಾಗಿ ಅಪರಿಚಿತರು) ನನಗೆ ವಿಶೇಷ ಚಿಂತೆಯಿರಲಿಲ್ಲ, ಕನಿಕರ ಖಂಡಿತ ಇದೆ, ಬಹುತೇಕ ಅವರನ್ನು ನಿರ್ಲಕ್ಷಿಸುತ್ತೇನೆ. ಆದರೆ ಕುಟುಂಬ ಸಂಬಂಧಿಕರು – ನನ್ನ ಮನೋದೈಹಿಕ ಬೆಳವಣಿಗೆಯ ಭಾಗವೇ ಆದವರು, ಒಡನಾಟದಲ್ಲಿದ್ದು ನನ್ನನ್ನು ಕ್ರಿಯೆ ಬರವಣಿಗೆಗಳಲ್ಲಿ ಅನುಸರಿಸುತ್ತ ಬಂದವರನ್ನು ಹಾಗೆ ಮರೆಯುವುದು ಸಾಧ್ಯವಾಗುವುದಿಲ್ಲ. ಅತ್ರಿ ಬಳಗದ ಧರ್ಮ ನಿರಪೇಕ್ಷತೆ (ವೈಜ್ಞಾನಿಕ ಮನೋಧರ್ಮ), ಪ್ರಾಮಾಣಿಕತೆ, ಸರಳತೆ, ಪಾರದರ್ಶಕತೆ, ಸಾಮಾಜಿಕ ಪ್ರೀತಿ, ಶ್ರಮಸಹಿಷ್ಣುತೆ ಮುಂತಾದ ಗುಣಗಳನ್ನು ಕಂಡವರು ಮತ್ತು ಆದರ್ಶ ಎಂದೂ ಸಾರ್ವಜನಿಕದಲ್ಲಿ ಒಪ್ಪಿಕೊಳ್ಳುವವರ ಉದಾಸೀನ ನನಗೆ ಹಿಂಸೆಯಾಗುತ್ತಿದೆ. ಅದರಲ್ಲೂ ಪ್ರಾಯದಲ್ಲಿ ಹಿರಿಯರನ್ನು ಪ್ರಾಯದೋಷ ಎಂದು ನಿರ್ಲಕ್ಷಿಸಬಹುದು. ಕಿರಿಯರು, ಎಷ್ಟೋ ಸಂದರ್ಭಗಳಲ್ಲಿ ನನ್ನ ಮನೆ, ಅಂಗಡಿ, ಪ್ರಾಕೃತಿಕ ಓಡಾಟಗಳ ಭಾಗವೂ ಆದವರು, ಸಾಮಾಜಿಕ ಮಾಧ್ಯಮದಲ್ಲಿ ವಿನಾ ಕಾರಣ ಎರಡೆಳೆ ನಾಲಗೆ ತೋರಿಸುವುದು ನನಗೆ ಮಾನಸಿಕ ಹಿಂಸೆಯಾಗುತ್ತಿದೆ. ಈ ಮನೋಸ್ಥಿತಿಗೆ ಕಾಲದ ಗಡಿರೇಖೆ ಎಳೆದು ಹೇಳುವುದಿದ್ದರೆ, ರಾಮಚಂದ್ರಾಪುರ ಮಠದ ರಾಘವೇಶ್ವರ ತೀರ್ಥ ಮತ್ತು ನವಹಿಂದೂತ್ವದ (ಭಾಜಪ, ಮೋದಿ) ಜಾಗೃತಿಯನಂತರ ಹೆಚ್ಚಾಗಿದೆ ಎಂದೇ ಗುರುತಿಸಬಹುದು. ನಾನು ಅಂಥವರ ಔಪಚಾರಿಕ ಕಲಾಪಗಳ ಕರೆ ಬಂದಾಗ ಎಂದಿನಂತೇ ಭಾಗಿಯಾಗಿದ್ದೇನೆ. ಆದರೆ ಅಲ್ಲಿನ ತೋರಿಕೆಯ ಪ್ರೀತಿಯಲ್ಲಿ ಅವರ ಸಮೂಹ ಮಾಧ್ಯಮದ ಗೇಲಿಗಳು ಪ್ರತಿಫಲಿಸಿದಂತೇ ಕಾಣುವಾಗ ನನಗೆ ದಕ್ಷಬ್ರಹ್ಮನ ಯಜ್ಞಕ್ಕೆ ಬಂದ ದಾಕ್ಷಾಯಿಣಿಯ ನೋವು ಮೂಡುತ್ತದೆ. ಸಾರ್ವಜನಿಕ ಮಾಧ್ಯಮದಲ್ಲಿ ಅವರ ಎಲ್ಲ ಕಟಕಿಗಳನ್ನು ನಾನು ಸಾಮರ್ಥ್ಯವಿದ್ದೂ ಉತ್ತರಿಸದುಳಿದಿದ್ದೇನೆ. ಸಾರ್ವಜನಿಕದಲ್ಲಿ ಮನೆಯ ಕೊಳೆಯನ್ನು ನಾನು ಶುದ್ಧಪಡಿಸಲಾರೆ. ಇಂಥ ಹಿಂಸೆಗಳು ಅಧಿಕವಾದಾಗ ಒಮ್ಮೆ ನಾನು ಆರೇಳು ಪುಟದ ಪತ್ರವನ್ನು ಬರೆದು ಕುಟುಂಬದೊಳಗಿನ ಹಿರಿಯರಿಗೆ ಮಾತ್ರ ಕಳಿಸಿ, ಮುಕ್ತ ಚರ್ಚೆಗೆ ಆಹ್ವಾನ ಕೊಟ್ಟೆ. ಯಾರೂ ಚರ್ಚೆಗೆ ಬರಲೇ ಇಲ್ಲ.

ನಾನು ಸೊನ್ನೆ ಬಂಡವಾಳದಿಂದ ತೊಡಗಿ, ಮೂವತ್ತಾರು ವರ್ಷಗಳ ಕಾಲ ನಡೆಸಿದ ಪ್ರಾಮಾಣಿಕ ವ್ಯವಹಾರದ ಫಲವಾಗಿ (ಗಮನಿಸಿ, ನೇರ ತಂದೆಯಿಂದಲ್ಲದೆ, ಯಾವುದೇ ಕೌಟುಂಬಿಕ ಆರ್ಥಿಕ ಬಲವನ್ನು ಪಡೆಯದೇ) ಈ ಮಟ್ಟ ತಲಪಿದ್ದನ್ನು ಸಂಬಂಧಿಕರೆಲ್ಲ ಅರ್ಥ ಮಾಡಿಕೊಂಡಿಲ್ಲವೇ? ಕಾಡು, ಬೆಟ್ಟ ಸುತ್ತುವ ಹವ್ಯಾಸದಿಂದ ತೊಡಗಿ, ನಾಲ್ಕು ದಶಕಗಳನ್ನು ಕಳೆದ ನಾನು, ಇತರರ ಕೃಷಿಯಾದಿ ಎಲ್ಲ ವೈಯಕ್ತಿಕ ವೃತ್ತಿ, ನಂಬಿಕೆಗಳನ್ನು ಗೌರವದಿಂದಲೇ ಕಾಣುತ್ತ, ವನ್ಯಸಂರಕ್ಷಣೆಯ ಅನುಷ್ಠಾನ ಮಾಡುತ್ತಿರುವುದು ಅವರಿಗೆ ಅರ್ಥ ಆಗಲೇ ಇಲ್ಲವೇ? ನಾನು ಬುದ್ಧಿ ತಿಳಿದ ಮೇಲೆ (ಮುಖ್ಯವಾಗಿ ವೃತ್ತಿರಂಗಕ್ಕೆ ಇಳಿದ ಮೇಲೆ) ಸಮ್ಮಾನ, ಪದವಿ, ಅನುದಾನ, ಬಹುಮಾನಾದಿ ಕಾರಣವಿಲ್ಲದ ಲಾಭಗಳನ್ನು ಬಯಸುವುದು ಬಿಟ್ಟು, ಸ್ಪಷ್ಟ ಲೇಖನ ಟಿಪ್ಪಣಿಗಳಲ್ಲಿ ಸಾಮಾಜಿಕ ಹಿತವನ್ನಷ್ಟೇ ಬಯಸಿ ಕಟುವಾಗಿ ಉಳಿದೆ. ಲಾಠಿ ಪೆಟ್ಟು ತಿಂದಾದರೂ ಪತ್ರಿಕೆಯಲ್ಲಿ ಪಟ ಬರುವಂತಾಗಬೇಕು ಎಂಬ ಹಪಹಪಿ ನನ್ನದಲ್ಲ. ವೃತ್ತಿರಂಗದ ಬಲದಲ್ಲಿ ಗಳಿಸಿದ್ದ ವಿಸ್ತೃತ ಪರಿಚಯ, ನನ್ನದೇ ಪ್ರಕಾಶನರಂಗ, ಜಾಲತಾಣ ಮತ್ತು ಫೇಸ್ ಬುಕ್ ಅಂಕಣಗಳಿದ್ದರೂ ಅನಿವಾರ್ಯವಲ್ಲದೆ ಒಂದು ನನ್ನ ಪಟ, ಅನುಕಂಪ ಗಳಿಸುವ ವೈಯಕ್ತಿಕ ಕಥನ ಅಥವಾ ನನ್ನ ಹೆಗ್ಗಳಿಕೆಯ ಮಾತನ್ನು ಪ್ರಚುರಿಸಿದ್ದೂ ಇಲ್ಲ. ತಂದೆಯ ಮಾತನ್ನು ನನ್ನದಾಗಿಸಿಕೊಳ್ಳುತ್ತಾ ಪುಸ್ತಕ ವ್ಯಾಪಾರದ ಆದಾಯ ಬಿಟ್ಟು ಉಳಿದೆಲ್ಲವೂ ನನ್ನ ಸಾಮಾಜಿಕ ಬಾಧ್ಯತೆ ಎಂದು ಹೇಳಿ, ಪ್ರಕಟಣೆಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಕೊಟ್ಟೆ. ಅದನ್ನು ಮುಚ್ಚಿದ ಕಾಲದಲ್ಲೂ ವಿ-ಪುಸ್ತಕಗಳ ವಾಣಿಜ್ಯ ವಹಿವಾಟನ್ನು ನಿರಾಕರಿಸಿ, ಅಂತರ್ಜಾಲದಲ್ಲಿ ಎಲ್ಲವನ್ನೂ ಸಾರ್ವಜನಿಕಕ್ಕೆ ಮುಕ್ತವಾಗಿಟ್ಟೆ. ಅಂಥ ನಾನು ಫೇಸ್ ಬುಕ್ಕಿನ ಯಾಂತ್ರಿಕ ಅನುಮೋದನೆ (ಲೈಕ್) ಬೇಟೆಯಲ್ಲಿ ಇರಲೇ ಇಲ್ಲ ಎನ್ನುವುದು ಇವರಿಗೆ ಅರ್ಥ ಮಾಡಿಸುವುದು ಹೇಗೆ? ನಿಜದಲ್ಲಿ….

ವಿದಾಯಕ್ಕೆ ನನ್ನ ಮುಖ್ಯ ಕಾರಣ – ಫೇಸ್ ಬುಕ್ ನಡೆಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ಅಷ್ಟಾಗಿಯೂ ಈ ನನ್ನ ಜಾಲತಾಣ ಮತ್ತು ಮಿಂಚಂಚೆಯ ಸ್ವಾತಂತ್ರ್ಯ ಯಾರೂ ಕಸಿದಿಲ್ಲ. ನನಗಿರುವ ಅನ್ಯ ಆಸಕ್ತಿಗಳಾದರೂ (ಓದು, ವನ್ಯ ಸಂರಕ್ಷಣೆ, ಕಪ್ಪೆಗೂಡು ಸಹಿತ ಅಶೋಕವನ, ಕಾಡ್ಮನೆ ಸಹಿತ ಅಭಯಾರಣ್ಯ, ಚಾರಣ, ಸೈಕಲ್, ದೋಣಿ, ಪ್ರವಾಸ, ಯಕ್ಷಗಾನ, ನಾಟಕ, ಸಿನಿಮಾ ವೀಕ್ಷಣೆ, ಮರಗೆತ್ತನೆ….) ನನ್ನನ್ನು ಜಡವಾಗಲು ಖಂಡಿತಕ್ಕೂ ಬಿಡಲಾರವು. ನಾನು ಕೇವಲ ಫೇಸ್ ಬುಕ್ಕಿನ ಸಾಮ್ರಾಜ್ಯಶಾಹಿಯ ವಿರುದ್ಧ, ಅಂದರೆ ನನ್ನ ಟಿಪ್ಪಣಿಗಳು ಹೆಚ್ಚು ಜನರಿಗೆ ಮುಟ್ಟದಂತೆ ಮಾಡುವುದರ ವಿರುದ್ಧವಷ್ಟೇ ನಿಂತಿದ್ದೇನೆ. ಇದು ಸದ್ಯದ ರಾಜ್ಯ ಚುನಾವಣೆಯಲ್ಲ, ಕೇಂದ್ರದ ಹುಚ್ಚು ಇಳಿಯುವವರೆಗೆ (೨೦೨೪) ಮುಂದುವರಿಯುವಂತೆ ನನಗೆ ಕಾಣುತ್ತದೆ. ಹಾಗಾಗಿ ನಾನು ಫೇಸ್ ಬುಕ್ಕಿನಲ್ಲಿ ಚಟುವಟಿಕೆಯನ್ನಷ್ಟೇ ನಿಲ್ಲಿಸಿದ್ದೇನೆ; ಖಾತೆಯನ್ನು ಮುಚ್ಚಿಲ್ಲ. ನನ್ನ ಒಳ್ಳೆಯದಕ್ಕಾಗಿ ಅದರಲ್ಲಿ ಬರುವ ಹಲವು ಬರಹಗಳನ್ನು ಓದುತ್ತಲೇ ಇದ್ದೇನೆ. ತೀರಾ ಅನಿವಾರ್ಯವಾದಲ್ಲಿ ಸಂಬಂಧಿಸಿದವರಿಗೆ ಖಾಸಾ ಸಂದೇಶದಲ್ಲಿ ಮೆಚ್ಚುಗೆ, ವಿಮರ್ಶೆ ಕೊಡುತ್ತಲೂ ಇರುತ್ತೇನೆ. ಒಟ್ಟಾರೆ ಒಳ್ಳೇ ದಿನಗಳು ಬಂದಿವೆ ಅನ್ನಿಸಿದರೆ ಖಂಡಿತವಾಗಿ ಹೊಸ ಚೈತನ್ಯದೊಡನೆ, ಸವಿನಯ ಪ್ರಕಟಗೊಳ್ಳುತ್ತೇನೆ. ಒಳ್ಳೆಯ ಭಾವನೆಗಳನ್ನು ಪ್ರಕಟಿಸಿದೆಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.

ಅನುಬಂಧ
ಫೇಸ್ ಬುಕ್ಕಿನಲ್ಲಿ ೨೮-೪-೨೦೨೩ರಂದು ನಾನು ಪ್ರಕಟಿಸಿದ – ಫೇಸ್ ಬುಕ್ಕಿಗೆ ವಿದಾಯ

ಮುದ್ರಣ ಮಾಧ್ಯಮದಲ್ಲಿ ಕಳೆದುಕೊಂಡ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಸೀಮಿತವಾಗಿ ಮಿಂಚಂಚೆ – athreebook@gmail.com, ಅನಂತರ ಜಾಲತಾಣ (ಹಾಗೂ ಯೂ ಟ್ಯೂಬ್) – www.athreebook.com ಗಳಲ್ಲಿ, ನೇರ ನನ್ನ ಹೆಸರಿನಲ್ಲೇ ಫೇಸ್ ಬುಕ್ಕಿನಲ್ಲಿ ಕಂಡುಕೊಂಡಿದ್ದೆ. ಇವುಗಳಲ್ಲಿ ಮೊದಲ ಎರಡೂ ವರ್ಗ ನನ್ನ ಖಾಸಾ ನಿಯಂತ್ರಣದವಾದ್ದರಿಂದ, ಸೀಮಿತ ಸಂಪರ್ಕ ಮತ್ತು ಎಂದಾದರೂ ಯಾರಾದರೂ ಬಳಸಿದರೆ ಇಲ್ಲೊಂದು ದಾಖಲೆ ಇರುತ್ತದೆಂಬ ನಿರೀಕ್ಷೆ ಇನ್ನೂ ಕಳೆದುಕೊಂಡಿಲ್ಲ. ಆದರೆ….

ಫೇಸ್ ಬುಕ್ಕಿನ ಮೇಲಿನ ವಿಶ್ವಾಸ ಕಳೆದುಕೊಂಡಿದ್ದೇನೆ. ಇದು ದೈನಂದಿನ ಮಾರುಕಟ್ಟೆಯಲ್ಲಿ ನನ್ನದೊಂದು ವಿಚಾರವಿನಿಮಯದ ಕಟ್ಟೆ ಎಂದೇ ಭಾವಿಸಿದ್ದೆ. ಇದರಿಂದ ಕೆಲವರಿಗಾದರೂ ಪ್ರೇರಣೆ ಸಿಕ್ಕೀತು, ಸಮಾನಮನಸ್ಕರ ಬಳಗ ಬೆಳೆದೀತು ಎಂದು ನಂಬಿಯೇ ತೀವ್ರವಾಗಿಯೇ ತೊಡಗಿಕೊಂಡಿದ್ದೆ. ನನ್ನ ರುಚಿಗೆ ಒಗ್ಗಿದ ಅನೇಕರ ಬರಹಗಳನ್ನು ಓದುತ್ತಿದ್ದೆ ಮತ್ತು (ಚಿತ್ರಾದಿ ಕೃತಿಗಳನ್ನು) ನೋಡುತ್ತಿದ್ದೆ, ಸ್ವಪ್ರಚಾರ ರಹಿತವಾಗಿ ಪ್ರತಿಕ್ರಿಯಿಸುತ್ತಿದ್ದೆ. ಆದರೆ ಈಚೆಗೆ ಫೇಸ್ ಬುಕ್ ಕೂಡಾ ಮುದ್ರಣ ಮಾಧ್ಯಮದ್ದೇ ಅಪ-ಮಾರ್ಗವನ್ನು ಅನುಸರಿಸಿರುವುದು ನನಗೆ ಸ್ಪಷ್ಟವಾಯ್ತು. ಕೊನೆಯ ಉದಾಹರಣೆಯನ್ನಷ್ಟೇ ದಾಖಲಿಸುತ್ತೇನೆ.

ಮೊನ್ನೆ ಕಲಾಭಿ ಬಳಗ ಕೊಟ್ಟ ನಾಟಕ ಪ್ರದರ್ಶನದ ಕುರಿತ ನನ್ನ ಟಿಪ್ಪಣಿ. ಇದನ್ನು ನನ್ನ ನೇರ ಕುಟುಂಬಿಕ ಮತ್ತು ನಾಟಕಕ್ಕೆ ಸಂಬಂಧಿಸಿದ ಒಟ್ಟು ಹದಿನೆಂಟು ಮಂದಿಗೆ ಟ್ಯಾಗ್ ಮಾಡಿಯೇ ಪ್ರಕಟಿಸಿದೆ. ಆದರೆ ಫೇಸ್ ಬುಕ್ ಒಂದೋ ಅವರಿಗದನ್ನು ಮುಟ್ಟಿಸಿಯೇ ಇಲ್ಲ ಅಥವಾ ಅವರ ಪ್ರತಿಕ್ರಿಯೆಯನ್ನು ನನಗೆ ಕಾಣಿಸಿಲ್ಲ. ಒಟ್ಟಾರೆ ಹದಿನಾಲ್ಕು ಮಂದಿಯ ‘ಅನುಮೋದನೆ’ಗಷ್ಟೇ ದಕ್ಕಿದಂತಿದೆ. ಹೀಗೆ ಕತ್ತು ಹಿಚುಕುವ ಕೆಲಸವನ್ನೇ ಮುಖ್ಯವಾಗಿ @Dinesh kukkujadka ಒಬ್ಬರು ಮೇಲಿಂದ ಮೇಲೆ “ನನ್ನ ವ್ಯಂಗ್ಯ ಚಿತ್ರಗಳ ರೀಚನ್ನು ಫೇಸ್ ಬುಕ್ ಕುಂಠಿತಗೊಳಿಸುತ್ತಿದೆ” ಎಂದು ಇಲ್ಲಿ ಪ್ರಕಟಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆದರೂ ಇನ್ನೊಂದು ಪರೀಕ್ಷೆ ಎನ್ನುವಂತೆ ಅದೇ ನಾಟಕದ ಟಿಪ್ಪಣಿಯನ್ನು ಇಂದು ನಾನು ಯಾರಿಗೂ ಟ್ಯಾಗ್ ಮಾಡದೇ ಮರುಪ್ರಕಟಿಸಿದೆ. ಅದಂತೂ ಒಬ್ಬರನ್ನೂ ಮುಟ್ಟಿದಂತಿಲ್ಲ!

ನನ್ನ ಮೇಲೆ ವಿಶ್ವಾಸವಿಟ್ಟ ಕೆಲವೇ ಮಂದಿಯ ಅನುಮೋದನೆ – ಪ್ರತಿಕ್ರಿಯೆ ಅಥವಾ ಏನೋ ಒಂದು ಭಾವಸಂಕೇತ, ಉದಾರವಾಗಿಯೇ ಬರುತ್ತಿದೆ. ಆದರೆ ಕುತರ್ಕದಲ್ಲಿ ಕಾಲೆಳೆಯುವುದಕ್ಕಷ್ಟೇ ಸೀಮಿತರು (ಎರಡು ರೂಪಾಯಿ ಗಿರಾಕಿಗಳು) ಹಾಗೂ ಪರೋಕ್ಷವಾಗಿ ಫೇಸ್ ಬುಕ್ಕಿನ ದ್ರೋಹವನ್ನು ನಾನು ‘ಮೋದಿನೇ’ ಎಂದು ಭಾವಿಸುತ್ತೇನೆ. ಅವುಗಳ ಮೇಲಿನ ಜಿಗುಪ್ಸೆಯಿಂದ ನಾನು ಅನಿರ್ದಿಷ್ಟಕಾಲ ಫೇಸ್ ಬುಕ್ಕಿನಿಂದ ನಿವೃತ್ತನಾಗುತ್ತಿದ್ದೇನೆ.

ಆಸಕ್ತರು ಮೇಲೆ ಹೇಳಿದ ನನ್ನ ಮಿಂಚಂಚೆ ಅಥವಾ ಜಾಲತಾಣಕ್ಕೆ (ಅದರದೇ ಕ್ರಮದಲ್ಲಿ ಚಂದಾದಾರರಾಗಿ) ಓದಬಹುದು, ಪ್ರತಿಕ್ರಿಯಿಸಬಹುದು. ನಮಸ್ಕಾರ.