ಭಾಗ ಒಂದು – ಎಂ.ವಿ ಕವರಟ್ಟಿ
“ಅಶೋಕೆರೇ ಲಕ್ಷದ್ವೀಪಗ್ ಬರ್ಪರೇ” ಆ ಸಂಜೆ ಅಂಗಡಿಗೆ ಬಂದ ಪ್ರಸನ್ನ ಅರೆ-ಕುಶಾಲಿನಲ್ಲೇ ಕೇಳಿದ. ನಾನೂ ಅಷ್ಟೇ ಹಗುರವಾಗಿ “ಹಾಂ, ಪೋಯಿ” ಎಂದವನು ಎರೆಕಚ್ಚಿದ ಮೀನಿನಂತೆ ಇದೇ ೧೬ ರಿಂದ ೨೨ರವರೆಗೆ ಬಲಿಬಿದ್ದದ್ದು ಏಪ್ರಿಲ್ (೨೦೧೦) ಮಹಿಮೆಯಲ್ಲೂ ಇರಬಹುದು! ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಸರಕಾರವೇ ನಡೆಸುತ್ತಿರುವ ಪ್ರವಾಸೋದ್ಯಮ ಇಲಾಖೆಯ ಹೆಸರು SPORTS (= Society for Promotion Of natuRe Tourism & Sports) ಇವರ ‘ಸಮುದ್ರಂ’ ಎಂಬ ಪೂರ್ವಯೋಜಿತ (ಮತ್ತು ಪೂರ್ಣ ಯೋಜಿತವೂ ಹೌದು) ಪ್ರವಾಸಕ್ಕೆ ನಾವು Comforts Holiday Pvt. Ltd ಎಂಬ ದಳ್ಳಾಳಿ ಮೂಲಕ ದಾಖಲಾದೆವು. ಅತ್ಯುನ್ನತ ವಜ್ರ ವರ್ಗದಲ್ಲಿ ತಲಾ ರೂ. ೨೦,೮೫೦ ತುಂಬಿಯೇ ಬಿಟ್ಟೆವು. ವಿವಿಧೆಡೆಗಳಿಂದ ಸ್ವಂತ ವ್ಯವಸ್ಥೆಯಲ್ಲಿ (ಮತ್ತು ಖರ್ಚಿನಲ್ಲಿ) ಎರ್ನಾಕುಲಂ ಉರುಫ್ ಕೊಚ್ಚಿ ತಲಪಿದವರಿಗೆ ಹದಿನೇಳರ ಬೆಳಿಗ್ಗೆಯಿಂದ ಇಪ್ಪತ್ತೊಂದರ ಬೆಳಗ್ಗಿನವರೆಗೆ ಯಾನ, ದೃಶ್ಯ, ಉಣಿಸು ಮತ್ತು ವಾಸ ಇಲಾಖೆಯದೇ. ಮತ್ತು ಪ್ರವಾಸಿಗಳಿಗೆ ತೀರಾ ನಿಯಮಿತ ವಸತಿ ಮತ್ತು ಸಾರಿಗೆ ವ್ಯವಸ್ಥೆಯಿರುವ ಲಕ್ಷದ್ವೀಪ ದರ್ಶನಕ್ಕೆ ಈ ಕೆಲವೇ ಸಾವಿರ ರೂಪಾಯಿಗಳ ಯೋಜನೆ ನಿಜದಲ್ಲಿ ಅಪೇಕ್ಷಣೀಯವೂ ಹೌದು.
ಲಕ್ಷದ್ವೀಪ ನೈಜಾರ್ಥದಲ್ಲಿ ದ್ವೀಪಗಳಲ್ಲ (ಮಣ್ಣು ಕಲ್ಲಿನ ಭೂಭಾಗ ಎಂಬ ಅರ್ಥದಲ್ಲಿ), ಕೇವಲ ಹವಳದ ದಿಬ್ಬಗಳು (atolls). ಶುದ್ಧಾಶುದ್ಧಗಳನ್ನು ಎಣಿಸದಿದ್ದರೆ ಇಲ್ಲಿ ಸುಮಾರು ಮೂವತ್ತಾರು ದ್ವೀಪಗಳಿವೆ. ಬಿಡಿಬಿಡಿಸಿದರೆ ಹನ್ನೆರಡರಷ್ಟೇ ಮನುಷ್ಯ ವಾಸಯೋಗ್ಯ. ಅದರಲ್ಲೂ ಹತ್ತರಲ್ಲಿ ಮಾತ್ರ ಇಂದು ಜನವಸತಿ ಇದೆ. ಉಳಿದವುಗಳಲ್ಲಿ ಕೆಲವು ಕೇವಲ ಮರಳ ತೀರಗಳು ಮತ್ತುಳಿದವು ಸಮುದ್ರದ ಇಳಿತದ ಸಂದರ್ಭದಲ್ಲಷ್ಟೇ ಪ್ರಕಟವಾಗುವ ಗಟ್ಟಿನೆಲೆಗಳು. ಜನವಸತಿ ಇರುವಲ್ಲೂ ನಮ್ಮ ಯೋಜಕರು ತೋರಿಸಲಿದ್ದದ್ದು ಕೇವಲ ಮೂರು. ಕ್ರಮವಾಗಿ ಕಲ್ಪೆನಿ, ಮಿನಿಕಾಯ್ ಮತ್ತು ದ್ವೀಪ ಸಮೂಹದ ರಾಜಧಾನಿ – ಕವರೆಟ್ಟಿ. ಭಾರತದ ಮುಖ್ಯ ನೆಲದ ಪಶ್ಚಿಮ ಕರಾವಳಿಯ ಸುಮಾರು ಮಂಗಳೂರಿನಿಂದ ಕೊಚ್ಚಿವರೆಗಿನ ಹರಹಿನಲ್ಲಿ ನೇರ ಪಶ್ಚಿಮಕ್ಕೆ ಅರಬ್ಬೀ ಸಮುದ್ರದಲ್ಲಿ ಹರಡಿಕೊಂಡಿರುವ ಇವುಗಳಿಗೆ ಸ್ವತಂತ್ರ ಮಾರಿಷಸ್ ದ್ವೀಪರಾಜ್ಯ ನೆರೆಮನೆ. ಕೊಚ್ಚಿಯಿಂದ ಸುಮಾರು ಹನ್ನೆರಡು ಗಂಟೆಗಳ ಯಾನ ಸಮಯದ ದೂರದಲ್ಲಿದೆ ಕವರೆಟ್ಟಿ (ಇನ್ನೂರಕ್ಕೂ ಮಿಕ್ಕು ಕಿಮೀ). ಹಾಗೇ ಪರಸ್ಪರ ಅಂತರದಲ್ಲೂ ಈ ದ್ವೀಪಗಳು ಆರೆಂಟು ಗಂಟೆಯ ಯಾನ ಸಮಯ ಕೇಳುತ್ತವೆ. ತೀರಾ ಸಣ್ಣ ಜನಸಂಖ್ಯೆ ಮತ್ತು ಯಾವುದೇ ಮಹಾ ಆರ್ಥಿಕ ವಹಿವಾಟಿನ ಜಂಝಡಗಳಿಲ್ಲದ ಈ ನಾಡಿಗೆ ಸಹಜವಾಗಿ ಸಾರಿಗೆ ಮತ್ತು ಆತಿಥ್ಯ ವ್ಯವಸ್ಥೆ ತೀರಾ ಪ್ರಾಥಮಿಕ ಹಂತದಲ್ಲೇ ಇರುವುದರಿಂದ ನಮಗೆ ಹೆಚ್ಚಿನ ಆಯ್ಕಾ ಸ್ವಾತಂತ್ರ್ಯವಿಲ್ಲ ಎಂದು ಒಪ್ಪಿಕೊಂಡೇ ಹೊರಟಿದ್ದೆವು.
ಪ್ರಸನ್ನ ತನ್ನ ಹೆಂಡತಿ (ಗೀತಾ) ಎರಡು ಮಕ್ಕಳು (ವಿಭಾ ಮತ್ತು ಪ್ರಜ್ಞಾ), ತಂದೆ (ರಾಮಚಂದ್ರ ಭಟ್), ತಾಯಿ (ರಂಜಿನಿ), ತಂಗಿ (ಪ್ರತಿಭಾ), ಭಾವ (ವಾಸುದೇವ ರಾವ್) ಮತ್ತವರ ಎರಡು ಮಕ್ಕಳು (ಲಾವಣ್ಯ ಮತ್ತು ಚೈತನ್ಯ) ಸಜ್ಜುಗೊಳಿಸಿದ್ದ. (ಹತ್ತು ವರ್ಷದ ಕೆಳಗಿನವರಿಗೆಲ್ಲ ಅರ್ಧ ಟಿಕೆಟ್.) ಅವರ ಕುಟುಂಬದ ವ್ಯವಹಾರವನ್ನು ವಾರಕಾಲ ಸಮರ್ಥವಾಗಿ ನಿರ್ವಹಿಸಲು ತಮ್ಮ ಪ್ರವೀಣ ಇದ್ದುದರಿಂದ ಹೆಚ್ಚು ಯೋಚನೆ ಮಾಡಬೇಕಿರಲಿಲ್ಲ. ನಾನಂತೂ ವಾರ ಮುಂದೆಯೇ ‘ಅತ್ರಿಗೆ ಬೇಸಿಗೆ ರಜೆ’ ಘೋಷಣಾಪತ್ರ ಅಂಗಡಿಯಲ್ಲಿ ಪ್ರದರ್ಶಿಸಿ, ಹೊರಡುವ ದಿನ ಶಟರ್ ಮೇಲೆ ಅಂಟಿಸಲು ವ್ಯವಸ್ಥೆಮಾಡಿಬಿಟ್ಟೆ. ನನಗೆ ಯಾವುದೇ ಸ್ಥಳ, ಸನ್ನಿವೇಶವನ್ನು ಔಚಿತ್ಯವರಿತು ಸಾರ್ವಜನಿಕಗೊಳಿಸಲು ಎಲ್ಲಿಲ್ಲದ ಉತ್ಸಾಹ. ಸೂಚನೆ ಕೊಟ್ಟ ಪ್ರಸನ್ನನದ್ದು ಕುಟುಂಬ ಮಾತ್ರ ಹೊರಟಿದ್ದರೂ ವ್ಯವಸ್ಥೆಗಳೆಲ್ಲ ಸಾರ್ವಜನಿಕದ್ದೇ ಎಂದಾದ ಮೇಲೆ ನಾವೂ ಒಂದಷ್ಟು ಸಮಾನಮನಸ್ಕರು ಯಾಕೆ ಸೇರಬಾರದೆಂದು ಅಲ್ಲಿ ಇಲ್ಲಿ ಹೇಳಿದೆ. ಮೈಸೂರಿನಿಂದ ನನ್ನ ತಮ್ಮ (ಅನಂತವರ್ಧನ) – ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಆರ್ಥಿಕ ವರ್ಷದ ಬಿಸಿ ಮುಗಿದ (ಮಾರ್ಚ್ ಮೂವತ್ತೊಂದು) ಸಂತೋಷದಲ್ಲಿ ದ್ವೀಪಾವಳಿಯ ಬಿಸಿ ನಗಣ್ಯ ಮಾಡಿ ಹೆಂಡತಿಯೊಂದಿಗೆ (ರುಕ್ಮಿಣಿಮಾಲಾ) ತಂಡಕ್ಕೆ ಸೇರಿಕೊಂಡ. ಮೂಡಬಿದ್ರೆಯಿಂದ ಗೆಳೆಯ ಡಾ| ಕೃಷ್ಣಮೋಹನ್ ಪ್ರಭು (ಉರುಫ್ ಕೃಶಿ) ಮತ್ತು ಅವರ ಹೆಂಡತಿ (ಡಾ|ಸೀಮಾ), ತಮ್ಮ ಖಾಸಗಿ ಆಸ್ಪತ್ರೆಯನ್ನು ಎಂಟು ದಿನಕ್ಕೆ ಮುಚ್ಚಿಯೇ ಹೊರಡುವ ನಿರ್ಧಾರದಲ್ಲಿ ಮಗಳನ್ನೂ (ನೀತಿ) ಸೇರಿಸಿಕೊಂಡು ಹೆಸರು ಬರೆಸಿದರು. ಮಾರುತಿ ಕಾರಿನ ಸೇವಾಕೇಂದ್ರದ ವರಿಷ್ಠ ಪಾರ್ಶ್ವನಾಥರಿಗೆ ಕೃಶಿ ಪ್ರಾಕೃತಿಕ ಛಾಯಾ ಚಿತ್ರಗ್ರಹಣದ ಹುಚ್ಚು ಹಿಡಿಸಿದ್ದು ನನಗೆ ತಿಳಿದಿತ್ತು. ಹಾಗಾಗಿ ನನ್ನ ಕಾರಿನ ರಿಪೇರಿಗೆ ಹೋದವನು ಅವರ ತಲೆಗೆ ಲಕ್ಷದ್ವೀಪದ ಹುಳು ಹತ್ತಿಸಿದ್ದೆ. ಇವರು ಕೃಶಿಗುರುವನ್ನು ಕೇಳಿ ಮರುದಿನವೇ ತನ್ನ ಹೆಂಡತಿಯೊಡನೆ (ಸುಧಾ) ತಂಡದ ಭಾಗವಾದರು. ಯಾರಾದರು ನಿಮಗೆ “ಕರೇಗಾರ್ ಲಕ್ಷ್ಮೀನಾರಾಯಣ ರೆಡ್ಡಿ, ಹಿರಿಯ ಹಿಂದಿ ಪ್ರಾಧ್ಯಾಪಕ” ಎಂದು ಪರಿಚಯಿಸ ಹೊರಟರೆ, ನೀವು ಅತ್ತಿತ್ತ ಭಾರೀ ಗಾತ್ರದ ಮತ್ತು ತೂಕದ ಆಸಾಮಿಯನ್ನು ಹುಡುಕಿದರೆ ಅದು ನಿಮ್ಮ ತಪ್ಪು! ಸದಾ ಮುಗುಳು ನಗೆ ಹೊತ್ತು, ಮೂರ್ತಿ ಸಣ್ಣದಾದರೂ (ಪ್ರಾಯದಲ್ಲಿ ನಿವೃತ್ತ) ವೈವಿಧ್ಯಮಯ ಚಟುವಟಿಕೆಯಲ್ಲಿ ಸದಾ ತೊಡಗಿಕೊಳ್ಳುವ ಇವರು ನನಗೆ ಅಂಗಡಿ ತೆರೆದಂದಿನಿಂದಲೂ (ಮೂವತ್ತೈದು ವರ್ಷ) ಆತ್ಮೀಯ ಗೆಳೆಯ. ಇನ್ನೇನು ರೆಡ್ಡಿ ದಂಪತಿ (ಪತ್ನಿ – ಜಾನಕಿ, ಕನ್ನಡ ಅಧ್ಯಾಪಿಕೆ) ತಂಡಕ್ಕೆ ಸೇರಿದ ಹಾಗೇ ಎನ್ನುವಾಗ ಜಾನಕಿಗೆ ಉತ್ತರಪತ್ರಿಕೆಗಳ ಮೌಲ್ಯಮಾಪನದ ಅನಿವಾರ್ಯ ಕರ್ತವ್ಯ ಹಿಡಕೊಂಡಿತು. ರೆಡ್ಡಿ (ನನಗೂ) ಗೆಳೆಯರಾದ ಮೈಸೂರಿನ ಬಸವರಾಜು ದಂಪತಿಗೆ ಪ್ರವಾಸದ ಸುದ್ದಿ ಮುಟ್ಟಿಸಿದರು. ಅಲ್ಲೂ ಪತ್ನಿ ಶಾಂತಾರನ್ನು ಅನ್ಯ ಕರ್ತವ್ಯದ ಮೇಲೆ ಬಿಟ್ಟು ಹೊರಡಬೇಕಾದ ಸ್ಥಿತಿ. ಕೊನೆಯಲ್ಲಿ ರೆಡ್ಡಿ, ಬಸವರಾಜು ಸೇರಿ ನಮ್ಮ ತಂಡ ಇಪ್ಪತ್ತೊಂದರ ಗಾತ್ರಕ್ಕೆ ಬೆಳೆದು ನಿಂತಿತು.
ಹದಿನಾರರ ಸಂಜೆ ಮಲ್ಬಾರ್ ಎಕ್ಸ್ಪ್ರೆಸ್ (ಮಲಬಾರದ ರೈಲು?) ಏರಿ, ಅಪರಾತ್ರಿ ಮೂರೂವರೆಗೆ ಎರ್ನಾಕುಲಂ (ಅಥವಾ ಕೊಚ್ಚಿ) ತಲಪಿದೆವು. ಪ್ರಸನ್ನನ ವ್ಯವಸ್ಥೆಗಳೆಲ್ಲ ಪ್ರಶಸ್ತವಾಗಿದ್ದದ್ದಕ್ಕೆ ಕಾದಿದ್ದ ವ್ಯಾನೇರಿ, ಎಂಜಿ ರಸ್ತೆಯಲ್ಲಿ ಕಾಯ್ದಿರಿಸಿದ್ದ ಹೋಟೆಲ್ (ಅನಂತ ಲಾಜ್) ಜಟ್ಪಟ್ ಸೇರಿ ವಿಶ್ರಾಂತರಾದೆವು. ಆದರೆ ಸರ್ಕಾರಿ ವ್ಯವಸ್ಥೆಗಳು ಹಾಗಲ್ಲ, (ಸಾಮಾನ್ಯವಾಗಿ ಜನಸ್ನೇಹಿಯೂ ಅಲ್ಲ) ಎನ್ನುವುದಕ್ಕೆ ಹೊಸ ಸಾಕ್ಷಿ ಬೆಳಿಗ್ಗೆ ಒದಗಿತು. ಇಲಾಖೆ ಕೊಟ್ಟ ಕಾಲಪಟ್ಟಿಯಂತೆ ಸುಮಾರು ಒಂಬತ್ತು ಗಂಟೆಗೆ ನಾವು ಕೊಚ್ಚಿ ಬಂದರಿನಲ್ಲಿ ಹಾಜರಿರಬೇಕಿತ್ತು. ಪ್ರಸನ್ನ ಹಿಂದಿನ ದಿನದಿಂದಲೇ ಫೋನಿನ ಮೇಲೆ ಫೋನ್ ಹಚ್ಚಿ ಸೋತ ಎನ್ನುವಾಗ ತಿಳಿಯಿತು ಹಡಗು ಮೂರೂವರೆಗೆ ಮುನ್ನ ಹೊರಡುವುದಿಲ್ಲ. ನಮ್ಮನ್ನು ಹಡಗಿಗೇರಿಸಲು ಬಂದ ವ್ಯಾನನ್ನು ಅರ್ಧ ದಿನ ಕೊಚ್ಚಿ ದರ್ಶನಕ್ಕೆ ಬಳಸಿಕೊಂಡೆವು.
ಮಹಾ ಗೋಲ್ಡ್ ರೋಡ್ನ (=ಎಂಜಿ ರೋಡ್. ಅಲ್ಲಿನ ಮಹಾತ್ಮ ಗಾಂಧಿ ರಸ್ತೆಯುದ್ದಕ್ಕಿರುವ ಚಿನ್ನದ ಮಳಿಗೆಗಳ ವೈಭವ ನೋಡಿದವರ್ಯಾರೂ ನನ್ನ ಅಧಿಕಪ್ರಸಂಗವನ್ನು ಪ್ರಶ್ನಿಸರು!) ವಾಹನ ಸಮ್ಮರ್ದ ಪಾರುಗಾಣಿಸಿಕೊಂಡು ಕೊಚ್ಚಿಯ ಬಂದರಿನ ಬಳಿ ಹೋದೆವು. ಅಲ್ಲಿ ಮೀನು ಹಿಡಿಯಲು ಸ್ಥಾಪಿಸಿದ್ದ ಸರಣಿ ಚೀನೀ ಬಲೆಗಳನ್ನು ನೋಡಿ, ಸಣ್ಣದೊಂದು ದೋಣೀಯಾನಕ್ಕೆ ಸೇರಿಕೊಂಡೆವು. ಹಳೆ ದೋಣಿತಂಗುದಾಣಗಳು, ಮೀನುಗಾರಿಕಾ ಬಂದರಿನ ಗೊಂದಲ, ಕೊಚ್ಚೆ, ಹಾಯ್ದು ಅಳಿವೆ ಬಾಗಿಲಿಗೆ ಸೇರಿದೆವು. ಅಲ್ಲಿ ಬಂದರು ಆಡಳಿತ ಕಛೇರಿ ಕಟ್ಟಡ (ಆಧುನಿಕ ಬಹುಮಹಡಿ ಕಟ್ಟಡಕ್ಕೆ ಪ್ರಾದೇಶಿಕ ವಾಸ್ತು ವಿನ್ಯಾಸ ಸೇರಿಸಿದ್ದರು) ಮತ್ತು ಪಂಚತಾರಾ ತಾಜ್ ಹೋಟೆಲಿನ ಕಟ್ಟಡ ನಮ್ಮ ದೃಷ್ಟಿ ಸೆಳೆಯುತ್ತಿದ್ದವು. ಆದರೆ ಅವನ್ನೂ ಮೀರಿದ ಆಕರ್ಷಣೆಯಾಗಿ ಸಂಜೆ ನಮ್ಮನ್ನು ಹೊರಲಿದ್ದ ಹಡಗು – ಎಂ.ವಿ ಕವರಟ್ಟಿ, ತಂಗಿದ್ದು ಕಾಣಿಸಿತು.
ಶುಭ್ರ ಬಿಳಿಯ, ಐದಾರು ಮಾಳಿಗೆ ಎತ್ತರದ (ಜಲಮಟ್ಟದಿಂದ ಸುಮಾರು ಐವತ್ತು ಮೀಟರ್ ಎತ್ತರ) ಹಾಕಿ ಮೈದಾನದ ಉದ್ದದ (ಸುಮಾರು ನೂರಾ ಇಪ್ಪತ್ತು ಮೀಟರ್) ಅದರಲ್ಲಿ ನರಹುಳುಗಳು ಸಂಚರಿಸುತ್ತಿದ್ದದ್ದು ಕಾಣಿಸಿತು. ೨೦೦೮ರಲ್ಲಿ ಲಕ್ಷದ್ವೀಪಗಳಿಗೇ ಸಮರ್ಥ ಸಂಪರ್ಕ ಸಾಧನವಾಗಿ ಭಾರತ ಸರಕಾರ ನೀರಿಗಿಳಿಸಿದ ಅದ್ಭುತವಿದು. (ಹಳಗಾಲದವರಿಗೆ ಎಂವಿ ಟಿಪ್ಪುಸುಲ್ತಾನ ಮಾತ್ರ ಪರಿಚಿತ) ಅಂತರ್ಜಾಲದಲ್ಲಿ ಬೆದಕಿ ಅಂಕಿ ಸಂಕಿಗಳನ್ನು ನೋಡಿದರೆ ಇದು ಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ಸೌಕರ್ಯದೊಡನೆ ಮೂರು ವರ್ಗಗಳಲ್ಲಿ ಒಟ್ಟಾರೆ ಏಳ್ನೂರು ಜನರನ್ನೂ ಪ್ರತ್ಯೇಕ ಸರಕು ಸಾಗಣಿಕೆಯ ಲೆಕ್ಕದಲ್ಲಿ ಇನ್ನೂರು ಟನ್ನಿಗೂ ಮಿಕ್ಕ ಹೊರೆಯನ್ನೂ ನಿಶ್ಚಿಂತ ಹೊರಬಲ್ಲುದು. ಸಾಮಾನ್ಯ ಪರಿಸ್ಥಿತಿಗಳಲ್ಲಿ ಹದಿನೇಳು ನಾಟಿಕಲ್ ಮೈಲ್ ವೇಗದಲ್ಲಿ ಸಾಗಬಲ್ಲ ಈ ದೈತ್ಯ, ಮಳೆಗಾಲದ ಸಾಗರದಲ್ಲೂ ಸ್ಥಿರತೆಗೆ ಇನ್ನೊಂದು ಹೆಸರಂತೆ. ಇದರ ಮೈತುಂಬಾ ಮುನ್ನೂರು (ಬರಿಯ ಮೀಟರ್ ಅಲ್ಲ ಸ್ವಾಮೀ) ಕಿಲೋಮೀಟರ್ ಉದ್ದದ ವಯರು, ಐವತ್ತು ಕಿಮೀ ಉದ್ದದ ನೀರಕೊಳವೆಗಳು ಎಂದೆಲ್ಲಾ ಲೆಕ್ಕ ಬೆಳೆಯುತ್ತಿದ್ದಂತೆ ನಮ್ಮ ಬೋಟ್ ಏನೂ ಅಲ್ಲ ಎನಿಸಿತು; ಇಲ್ಲಿರುವುದು ಸುಮ್ಮನೆ, ಅಲ್ಲಿದೆ ನಮ್ಮ ಮನೆ!
ಕೊಚ್ಚಿಯ ವೆಲ್ಲಿಂಗ್ಟನ್ ಬಂದರು ಭಾರೀ ಹಡಗುಗಳಿಗೆ ಕಡಲ ಹಿನ್ನೀರಲ್ಲಿ ಮನುಷ್ಯಕೃತ ಸರೋವರ. ಈ ಹಿನ್ನೀರಿನ ಇನ್ನೊಂದೇ ಸಹಜ ದಂಡೆಯಲ್ಲಿ ನಮ್ಮ ವಿಹಾರ ಮುಗಿಯಿತು. ಜ್ಯೂ ಜನಾಂಗದವರು ಐತಿಹಾಸಿಕ ಕಾರಣಗಳಿಂದ ತಮ್ಮ ತಾಯ್ನೆಲವನ್ನು ಬಿಟ್ಟು ಭದ್ರ ನೆಲೆಗಾಗಿ ಜಗತ್ತಿನಾದ್ಯಂತ ವಲಸೆಹೋದ ಕಥೆ ಕೇಳಿದ್ದೇವೆ. ಆ ಕಾಲದಲ್ಲಿ ಹಾಗೆ ಬಂದವರು ಸ್ಥಳೀಯ ರಾಜರ ಕೃಪೆಯಿಂದ ನೆಲೆಸಿ, ವಹಿವಾಟು ನಡೆಸಿ, ನಾಗರಿಕಗೊಳಿಸಿದ ದ್ವೀಪ ಅದು. ಇಂದು ಅದಕ್ಕೆ ಮುಖ್ಯ ನೆಲದಿಂದ ಸಮರ್ಪಕ ಸೇತು-ಸಂಪರ್ಕ ಬೆಳೆದು ದ್ವೀಪ ಸ್ವರೂಪಕ್ಕೆ ಭಂಗ ಬಂದಿದೆಯಾದರೂ ನೆಲೆಗೊಂಡ ಜ್ಯೂಗಳ ಸಾಂಸ್ಕೃತಿಕ ರಚನೆಗಳಿಂದ ಜ್ಯೂಸ್ ಐಲ್ಯಾಂಡ್ ಪ್ರವಾಸಿ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಳಿಸಿದೆ. ಅಲ್ಲಿನ ಪ್ರಧಾನ ಆಕರ್ಷಣೆ ೧೫೬೮ರಲ್ಲೇ ರಚಿತವಾದ ಜ್ಯೂಯಿಷ್ ಪ್ರಾರ್ಥನಾಮಂದಿರ – ಸೆನೆಗೋಗ್. ನಾಲ್ಕು ಶತಮಾನಗಳನ್ನು ಕಳೆದೂ ದೃಢವಾಗಿದೆ ಮತ್ತು ಬಳಕೆಯಲ್ಲೂ ಇದೆ. ಇದಕ್ಕೆ ಬರುವ ಪ್ರವಾಸಿಗಳ ಪ್ರವಾಹ ನೋಡಿಕೊಂಡು ಆ ಪುಟ್ಟಪೇಟೆಯ ಕಿರಿದಾದ ಬೀದಿಗಳು ಸಾಂಪ್ರದಾಯಿಕ ಸ್ಮರಣಿಕೆಗಳ ಬಲುದೊಡ್ಡ ಬಜಾರಾಗಿಯೇ ಬೆಳೆದಿರುವುದು ಕುತೂಹಲಕಾರಿಯಾಗಿದೆ. ಪೂರ್ವಾಹ್ನದಲ್ಲಿ ಹನ್ನೆರಡೂವರೆಗೆ ಮುಚ್ಚುವ ಜ್ಯೂಸ್ ದೇವಾಲಯ ‘ತೆರೆದಿರಲಿ ದೇವೇರೇ’ ಎಂದು ಪ್ರಸನ್ನ ಹಾರೈಸಿ ಧಾವಿಸಿದ. (ನಾವೂ ಯಥಾನುಶಕ್ತಿ ಹಿಂಬಾಲಿಸಿದೆವು) ಹನ್ನೆರಡೂಕಾಲಕ್ಕೆ ದೋಣಿಯಿಳಿದು ಓಡುತ್ತಿದ್ದವನಿಗೆ ಇಚ್ಛಾಪೂರ್ತಿ ಮಾಡಲು ದೇವರು ಖಂಡಿತಾ ಪ್ರಯತ್ನಿಸುತ್ತಿದ್ದನೋ ಏನೋ. ಆದರೆ ಅಂದು ಶನಿವಾರ, ಅಂದರೆ ಸೆನೆಗೋಗಿನ ವಾರದ ರಜಾದಿನವೂ ಆಗಿದ್ದಕ್ಕೆ ಭಕ್ತವತ್ಸಲ ಕೈಚೆಲ್ಲಬೇಕಾಯ್ತು! ಈ ಎಲ್ಲಾ ಗೊಂದಲದ ಮಧ್ಯೆ ಅಲ್ಲಿವರೆಗೆ ನಾವು ಗಟ್ಟಿಯಾಗಿ ಹೇಳಲು ಹಿಂಜರಿದಿದ್ದ ‘ಜ್ಯೂಸ್’ ಶಬ್ದ ಲೀಕಾಗಿ, ಪ್ರಸನ್ನನ ಕಿರಿಮಗಳು – ಪ್ರಜ್ಞಾಳ (೩-೪ರ ಹರಯ) ಕಿವಿ ಸೇರಿ, ಆಕೆ ವರಾತ ಹಚ್ಚಿದ್ದು ತಮಾಷೆಯಿತ್ತು. ಅವಳು ಗಂಟಲು ನೋವು ಹಿಡಿಸಿಕೊಂಡಿದ್ದರೂ ಐಸ್ಕೋಲ್ಡ್ ಜ್ಯೂಸ್ (ಹಣ್ಣಿನರಸ) ದಕ್ಕುವವರೆಗೆ ಪುರಾಣ ಖ್ಯಾತಿಯ ಚಂಡಿಯೇ ಆದದ್ದು ಇತರ ಮಕ್ಕಳಿಗೂ ವರವಾಯ್ತು, ಉರಿಬಿಸಿಲಿನಲ್ಲಿ ಬಾಯ್ಕಟ್ಟಿದ್ದ ಕೆಲವರಾದರೂ ಹಿರಿಯ ಚಪಲಿಗರಿಗೂ ಒಳ್ಳೇ ನೆಪವಾಯ್ತು!
ಪೂರ್ವ ಸೂಚನೆಯಂತೆ ಸುತ್ತು ಬಳಸಿನ ದಾರಿ ಮತ್ತು ಸೇತುವೆಯಲ್ಲಿ ಬಂದ ನಮ್ಮ ವ್ಯಾನ್ ಜ್ಯೂಸ್ ದ್ವೀಪದಲ್ಲಿ ಕಾದಿತ್ತು. ಮತ್ತೆ ಅದರ ಚಾಲಕನ ಸಲಹೆ ಮೇರೆಗೆ ಭಾರತ್ ಟೂರಿಸ್ಟ್ ಹೋಮಿನ ಖ್ಯಾತ ಊಟ ಮುಗಿಸಿಕೊಂಡು ನೇರ ಬಂದರಕ್ಕೇ ಹೋದೆವು. ಸರಳ ಕೆಲಸಗಳನ್ನು ಜಿಡುಕುಗೊಳಿಸುವುದೇ ಸರಕಾರೀ ಕ್ರಮ. ಪೂರ್ವ ಸೂಚನೆಯಂತೇ ಊಟಕ್ಕೂ ಮೊದಲೇ ಪ್ರಸನ್ನ ಒಮ್ಮೆ ಪ್ರವಾಸೀ ಏಜಂಟರ ಕಛೇರಿಗೆ ಧಾವಿಸಿ ಕಡೇ ಮಿನಿಟಿಗೆ ಲಭ್ಯವಾಗುವ ಬೋರ್ಡಿಂಗ್ ಪಾಸ್ (ತಿಂಗಳ ಮೊದಲೇ ಹಣ ಪಡೆದಾಗಲೇ ಟಿಕೇಟ್ ರೂಪದಲ್ಲಿ ಕೊಟ್ಟಿದ್ದರೆ ಇವರ ಗಂಟೇನು ಹೋಗುತ್ತಿತ್ತೋ ಗೊತ್ತಿಲ್ಲ) ಸಂಗ್ರಹಿಸಿಕೊಂಡು ಬಂದಿದ್ದ. ಈಗ ಬಂದರ್ ಗೇಟಿನ ಹೊರಗೇ ಒಂದು ಕಿಷ್ಕಿಂದೆಯಲ್ಲಿ ನೂರಾರು (ಹಡಗಿನ ಪೂರ್ಣ ತಾಕತ್ತಿನ ಮೇಲೆ ಅದು ಏಳ್ನೂರರವರೆಗೂ ಹೋಗಬಹುದು) ಜನ, ತಮ್ಮ ಚಿಳ್ಳೆಪಿಳ್ಳೆಗಳನ್ನು ಸಾವಿರಾರು ಗಂಟುಗದಡಿಗಳನ್ನು ಸುಧಾರಿಸಿಕೊಂಡು ಭದ್ರತಾ ತಪಾಸಣೆಗೆ ಒಳಪಡಬೇಕಾಯ್ತು. ಮತ್ತೆ ಪ್ಯಾಸೆಂಜರ್ರು ಲಗ್ಗೇಜುಗಳನ್ನು ಕೇರ್ಫುಲ್ಲಾಗಿ ಸೆಪರೇಟಿಸಿ, ಟ್ರಾನ್ಸ್ಪೋರ್ಟಿಸಿ, ಬೋರ್ಡಿಂಗ್ ಮಾಡಿಸುವುದು ನಿಯಮ. ಹಾಗೇ ಜನಕ್ಕೆ ಬಸ್ಸೂ, ಸಾಮಾನುಗಳಿಗೆ ಲಾರಿಯೂ ಅಲ್ಲಿತ್ತು. ಆದರೆ ತಪಾಸಣೆಗೊಳಗಾದವರೂ ಇತರರ ಸಂಪರ್ಕಕ್ಕೆ ಬಾರದ ಸ್ಥಿತಿ ಅಲ್ಲಿರಲಿಲ್ಲ. ಮತ್ತೆ ತನಿಖೆಯ ಶಾಸ್ತ್ರಕ್ಕೊಳಪಟ್ಟ ಗಂಟುಗದಡಿಗಳು (ವಿಮಾನ ನಿಲ್ದಾಣದಂತೆ) ನಮ್ಮ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳುವ ಸಿಬ್ಬಂದಿ ಬಲವೂ ಅಲ್ಲಿರಲಿಲ್ಲ. ಸಂತೆಯಲ್ಲಿ ನಮ್ಮ ಚೀಲಗಳನ್ನು ನಾವೇ ಲಾರಿಗೆ ಹಾಕಿ, ಗುದ್ದಾಡಿ ಬಸ್ಸೇರಿ, ಹಡಗಿನ ಬುಡದಲ್ಲಿ ಮತ್ತೆ ಚೀಲಗಳನ್ನು ಎಳೆದಾಡಿ, ಬೋರ್ಡಿಂಗ್ ಪಾಸಿನ ತಪಾಸಣೆ ಮುಗಿಸಿ ಅಂತೂ ಇಂತೂ ತಣ್ಣನೆಯ ಕವರಟ್ಟಿ ಗರ್ಭ ಸೇರುವಾಗ… ಸುಮಾರು ಮೂರು ಗಂಟೆಗಳ ಕಾಲ ಸೋರಿಹೋಗಿತ್ತಾ ಆಗ ಸಂಜಿಯಾಗಿತ್ತಾ!
ಅಶೋಕವರ್ಧನ್ ,ನೀವು ಹೋದದ್ದೇ ಗೊತ್ತಾಗಲಿಲ್ಲ.ಈಗ ತಾನೇ ಚಿಟಿಕೆ ಹೊಡೆದೆ.ಲಕ್ಷ ಲಕ್ಷ್ಯ ಸೆಳೆಯಿತು.ಓದಿ ನೋಡಿ ಆನಂದಿಸುತ್ತೇನೆ.ನಿಮ್ಮ ಬರಹದ ಚಂದಕ್ಕೆ ಮತ್ತು ನೋಡದ ದ್ವೀಪದ ಅಂದಕ್ಕೆ ಸೋಲದವರು ಯಾರು ?
ನಿಮ್ಮ ಲಕ್ಷದ್ವೀಪ ಪ್ರವಾಸಾನುಭವ ಚೆನ್ನಾಗಿದೆ. ನನಗೂ ಒಮ್ಮೆ ಸ೦ಸಾರ ಸಮೇತ ಹೋಗಿ ಬರಬೇಕೆನಿಸಿದೆ.
Nice Experience Sir! Please do update your ventures soon.
ಅಶೋಕ ವರ್ಧನರೇ!ಸುಂದರ ಚಿತ್ರ ಮತ್ತು ವಾಸ್ತವದ ಪ್ರವಾಸಕಥನ ಓದಿ ಸಂತಸ ಅಯಿತು. ಫೋಟೋ ಆಲ್ಬಂ ಮನಮೋಹಕ ಆಗಿದೆ. ತಮ್ಮ ಲೇಕನ ಓದಿದಾಗ ” ಕೈಲಾಲ್ ಗಟ್ಟಿ ಇದ್ದವಗೆ ಮಾತ್ರ ಕವರಟ್ಟಿ! ” ಎಂಬ ವಿಚಾರ ಮಾತ್ರ ನನಗೆ ಖಾತ್ರಿ ಆಯಿತು. ಡಾ. ಕೃಷಿ ಅವರ ಚಿತ್ರಗಳ ಆಲ್ಬಂ ಅನ್ನು ಕಾಯುತ್ತಾ ಇದ್ದೇನೆ. ಅಂದ ಹಾಗೆ, ತಮ್ಮಗಳ “ಅಶನ, ವಸತಿ ಮತ್ತು Bathroom Cleanliness etc..” ಮುಂತಾದ ಏರ್ಪಾಡುಗಳ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಿ. ಪ್ರವಾಸ ಏರ್ಪಡಿಸಿದ ಸರಕಾರೀ ಇಲಾಖೆಯು ತನ್ನ “ಸರಕಾರೀ ” ಸೌಜನ್ಯಕ್ಕೆ 'ಕೊರತೆ ' ತೋರಲಿಲ್ಲ ತಾನೇ?…ಮುಂದಿನ ಕಂತಿನಲ್ಲಿ ಈ ಹುಲು ಪ್ರಶ್ನೆಗಳಿಗೆ ಉತ್ತರ ಸಿಗುತ್ತೆ ಎಂಬುದಾಗಿ ಅಪಾರ ಭರವಸೆ ಇಟ್ಟುಕೊಂಡಿದ್ದೇನೆ.ವಂದನೆಗಳು.
ಪ್ರೀಯರೆ,ಜಿ ಪಿ ಬಸವರಾಜು ಅವರು ತಂದಿದ್ದ ನಿಮ್ಮ ಲಕ್ಷದ್ವೀಪ ಪ್ರವಾಸದ ಚಿತ್ರಗಳನ್ನು ನೋಡಿ ಅರ್ಧ ಸಂತೋಪಟ್ಟಿದ್ದೆ. ನಿಮ್ಮ ಬರಹವನ್ನು ಓದಿ ಪೂರ್ತಿ ಸಂತೋಷವಾಯಿತು. ಮುಂದಿನ ಕಂತುಗಳನ್ನು ಕುತೂಹಲದಿಂದ ಎದುರು ನೋಡುವೆ. ಅದೇ ಸಮಯದಲ್ಲಿ ನಾನು ಇಲ್ಲಿ ರಂಗಾಯಣದಲ್ಲಿ ಮಲೆಗಳಲ್ಲಿ ಮದುಮಗಳು ನೋಡಿದೆ. ನೀವು ದೇವಕಿಯೊಟ್ಟಿಗೆ ಒಂದು ದಿನ ರಜೆ ಮಾಡಿ ಬಂದುಬಿಡಿ. ಲಕ್ಷದ್ವೀಪದ ಸಂತೋಷಕ್ಕೆ ಏನೂ ಕಡಿಮೆ ಇಲ್ಲವೆಂದು ಅನಿಸೀತು. ನಾಟಕ ನೋಡುವಾಗ ತಂದೆಯವರ(ಜಿಟಿನಾ) ನೆನಪಾಯಿತು. ಅವರಿದ್ದಿದ್ದರೆ ರಾತ್ರಿ ಇಡೀ ನೋಡಿ ಸಂತೋಷಪಡುತ್ತಿದ್ದರು.
Dear Ashok, Vandemataram.I have been reading all your mails. I have been on the move. I spend at least 15 nights in the train or bus. Hence I am unable to respond in time to you.I appreciate your adventure. I am, at random reading the Six volumes of Framing of India's Constitution, Edited by Benegal Siva Rao; a journalist, a trade unionist and himself a member of the Constituent Assembly. He represented Mangalore in the First Lok Sabha. He was so charitable, magnanimous and sportive that immediately after the announcement of the results he said “My opponent of Sri Ramakrishna Karantha deserves to be in the Parliament. Without him it is poorer”. I was a boy of 12 years and studying in the sixth class in the Board Highier Elementary School, Barkur. I was one of those regularly reading the only Navaabharath Paper that was being subscribed by the local post master, Sri N.Narasimha Bhatta, in Kurady. Some friends are appreciating my patience. If reading is patience, writing is? Reading makes half a man; Speaking a full man; Writing a perfect man! You belong to the perfect clan. Reverting to the Constitution of India it was framed by a team of 308 intellectuals of our country. Stalwarts like Ambedkar and Shyam Prasad Mukherjee, who opposed the Indian National Congress and called its leaders by name were nominated by INC. Siva Rao”s elder brother Sir Benegal Narasimha Rao was the Constitutional Advisor to the Constituent Assembly. The other two brothers Sanjeeva Rao was a Professor of English in Banaras Hindu University and B.Rama Rao of ICS retired as the Governor of the Reserve Bank of India. Narisingha Rao was offered to serve the Assembly without any salary and was provided a full furnished house and a conveyance allowance of Rs.250/= per month. His secretary H.V.R.Ayyangar drew a salary of Rs.4,000/- pm. Constitution drafted by Narasimha Rao was discussed and debated and adopted with alterations, deletions and additions in the Assembly and the Drafting Committee, consisting of 6 members and a Chairman was asked to set it in order. Dr. Alladi Krishna Swamy Ayer, Sir N.Gopalaswamy Ayyangar, Sadaullah, N.Madhava Rao, K.M.Munshi and T.T.Krishnamachari were the members adn Dr.B.R.Ambedkar was the Chairman of the Committee. From S.K. D ist. U.S.Mallya was also a member. Dr.Rajednra Prasad was the Chairman of the Assembly. Do we remember them! Let us tell our children that the Constitution was the brainchild of the intellectual cream of the contemporary India. Dr.Alladi was earning not less then Rs.1,000/- per day and he had the biggest Law Library in the contemporary world. He laboured in the Assembly for a mere Rs.50/ sitting allowance and T.A. from Madras to Delhi. By the by in 1890 Kudmal Ranga Rao started a Sarvajanika Viodyarhti Nilaya, admitting Dalith Students, in Mangalaore and it is still functioning near Navabharath Circle. Ambedkar was born in 1889. Do any one raises his name in the Harijan Movement. You must be knowing all this history. In google Searach I could find only one reference in The Hindu, Dt. Tuesday, 29th Dec. 2009, his 150 th birthday. He was a Sarswath. His daughter daughter Radhabai married Dr.Subbarayan. They had three children Gen.P.P.Kimaramangalam, Mohan KumraMangalam and Smt. Parvathi. Mohan's son Rangarajan was a member of the Vajpayee Government and died in office.It is 9.00 pm. Prabha is inviting me for the dinner. Subharathri.Jai Hind.
ಪ್ರಸನ್ನರ ಚಿತ್ರಗಳು ಸೊಗಸಾಗಿವೆ.ಕೊಚ್ಚಿಯ ಸಿನೆಗಾಗ್ ಕಾಗುಣಿತ ಸರಿಪಡಿಸಬೇಕು.(ಸ್ಪೆಲ್ಲಿಂಗ್).
ಶ್ರೀ ಕಲ್ಕೂರ ಅವರಿಗೆ ನಮಸ್ಕಾರಗಳು.ನಿಮ್ಮ ನೆನಪುಗಳನ್ನು ಓದಿ ಸಂತೋಷವಾಯಿತು.ನೀವು ಅವುಗಳನ್ನು ಬರೆಯುವುದು ತುಂಬ ಅಗತ್ಯ.ಸಮಕಾಲೀನ ಚರಿತ್ರೆಯನ್ನು ಬಲ್ಲವರಿಂದ ತಿಳಿಯುವ ಅವಕಾಶವಿದ್ದಾಗ ಹಾಗೆ ಮಾಡದೆ ಅನಂತರ ಪರಿತಪಿಸುವಂತಾಗಿದೆ. ನಿಮಗೆ ಕನ್ನಡದಲ್ಲಿ ಬರೆಯಲು ಹೆಚ್ಚು ವಿಶ್ವಾಸವಿಲ್ಲದಿದ್ದಲ್ಲಿ ಯಾರಿಗಾದರೂ ಹೇಳಿ ಬರೆಯಿಸಬಹುದು.ನಮ್ಮ ಸಂವಿಧಾನವನ್ನು ಬರೆದ ಜಿಲ್ಲೆಯ ಹಿರಿಯರ ಬಗ್ಗೆ ನಿಮಗೆ ತಿಳಿದಿರುವ ನೆನಪುಗಳನ್ನು ದಯವಿಟ್ಟು ದಾಖಲಿಸಿ ಎಂದು ಕೋರುತ್ತೇನೆ.
lakshadweepa yatre kurithu odide. chennaagide. chitragalanthoo thumaba chennagive.munde endadaroo hogalebekemba ase ide, baravanigeya style swarasyakaravaagide.
ನನ್ನ ಬ್ಲಾಗಿನಲ್ಲಿ ಈ ಪ್ರಯಾಣ(ಸ)ದ ಮೊದಲನೆಯ ದಿನದ ಬಗ್ಗೆ ಬರೆದಿದ್ದೇನೆ. Nir-Laksha Dweepa-Day1-Kochiಕೃಷ್ಣಮೋಹನ
ನಿಮ್ಮ ಈವರೆಗಿನ ಕತೆ ಕೇಳಿ ಮುಂದಿನ ದಾರಿಯ ಬಗ್ಗೆ ಕುತೂಹಲ ಹುಟ್ಟಿದೆ. ಹಾಗೆಯೇ ನಿಮ್ಮ ಪ್ರಯಾಣಸುಖದ ಬಗ್ಗೆ ಮತ್ಸರವೂ ಆಗುತ್ತಿದೆ. ಮುಂದಿನ ಕಂತಿನ ನಿರೀಕ್ಷೆಯಲ್ಲಿ
I have enjoyed reading your article on Lakshadweep. The photos are fascinating. It reminded me of my trip to the Andamans!
ಪ್ರಿಯ ಲ.ನಾ ಭಟ್ಟರು ಕೃಪೆಯಿಟ್ಟು ತಮ್ಮ ಅಂಡಮಾನ್ ನೆನಪನ್ನು ನನ್ನ ಲಕ್ಷದ್ವೀಪದ ಬೆಳಕಿನಲ್ಲಿ ಇಲ್ಲಿ ಸ್ವಲ್ಪ ವಿಸ್ತರಿಸಿದ್ದರೆ ಬ್ಲಾಗ್ ಪ್ರೇಮಿಗಳಿಗೆ ಹೆಚ್ಚಿನ ಪ್ರೇರಣೆ ಒದಗುತ್ತಿತ್ತು ಎಂದು ನನ್ನನಿಸಿಕೆ. ಭಟ್ಟರ ಮತ್ತು ಇತರ ಆಸಕ್ತರಿಗೆ ಮರೆತು ಹೋಗಿದ್ದರೆ ನನ್ನ ಅಂಡಮಾನ್ ಕಥನವೂ ಇಲ್ಲೇ ಹಳೆಪುಟಗಳಲ್ಲಿ (೨೨-೨-೨೦೦೯ ಮೊದಲ ಕಂತು) ಅಷ್ಟೇ ಗರಿಗರಿಯಾಗಿ (ಪುಸ್ತಕದ ಹಾಗೆ ಮಾಸುವ, ಮುಕ್ಕಾಗುವ ಭಯವಿಲ್ಲವಲ್ಲಾ) ಕಾದಿದೆ ಎಂದೂ ನೆನಪಿಸಬಯಸುತ್ತೇನೆ.
ನಡು ರಾತ್ರಿಯಲ್ಲಿ ಒಂದು ಕಣ್ಣಿನಲ್ಲಿ ಇಪ್ಪತ್ತು ಇಪ್ಪತ್ತು ವಿಶ್ವಕಪ್ ಮತ್ತೊಂದು ಕಣ್ಣಲ್ಲಿ ನಿಮ್ಮ ಪ್ರವಾಸ ಕಥೆ ಓದಿ ಖುಷಿ ಪಡುತ್ತಿದ್ದೇನೆ.ಒಂದು ಕರೆಕ್ಶನ್-ಲಕ್ಷದ್ವೀಪಗಳಿಗೆ ಸಮೀಪದ ನೆರೆಮನೆ ಮಾರಿಶಸ್ ಅಲ್ಲ ,ಬದಲು ಮಾಲ್ದೀವ್ಸ್ ದ್ವೀಪ ದೇಶ.
ಅಶೋಕ ವಧ೯ನ್ ಅವರೇ ,ಪ್ರವಾಸ ಕಥನ ಚೆನ್ನಾಗಿ ಮೂಡಿ ಬರುತ್ತಿದೆ. ನನಗ೦ತೂ ನಮ್ಮ ಪ್ರವಾಸದ ನೆನಪು ಬ೦ತು. ನಾವು ಹೋದದ್ದು ಟಿಪ್ಪು ಸುಲ್ತಾನ್ ಹಡಗಿನಲ್ಲಿ. ಆಗ ಒಬ್ಬೊಬ್ಬರಿಗೆ ೩೦೦೦ ಕೊಟ್ಟಿರಬೇಕು. ಈಗ ೬ ಪಟ್ಟು ಹೆಚ್ಚಾಗಿದೆ. ನಮಗೆ ಲಕ್ಷದ್ವೀಪ ಪ್ರವಾಸ ತು೦ಬಾ ಖುಷಿ ಕೊಟ್ಟಿತ್ತು. ನನ್ನ ಮಗನಿಗೆ ಹೇಳುತ್ತಿದ್ದೆ ಮಗನನ್ನು ಕರೆದುಕೊ೦ಡು ಇನ್ನೊಮ್ಮೆ ಹೋಗು ಎ೦ದು. ನಾವು ಈಗ ಹೋಗುವ ಪರಿಸ್ಥಿತಿಯಲ್ಲಿ ಇಲ್ಲ. ಇಲ್ಲದಿದ್ದರೆ ಇನ್ನೊಮ್ಮೆ ಹೋಗ ಬಹುದಿತ್ತು! ಈಗಿನ ಹಡಗು ತು೦ಬಾ ಚೆನ್ನಾಗಿದೆ.
SIR,THIS IS VERY NICE….SEEING YOUR BLOG AFTER A LONG TIME….I LIKED IT A LOT….