(ತೀರ್ಥ ಯಾತ್ರೆ ಭಾಗ ೧)

ನಾನು ಗೆಳೆಯರೊಡನೆ ವನ್ಯ ರಕ್ಷಣೆ ಬಗ್ಗೆ ಭಯಂಗರ ಮಾತಾಡುತ್ತಾ ಚೂರುಪಾರು ಕೆಲಸ ಮಾಡುತ್ತಾ ಇದ್ದರೆ, ಮಗ – ಅಭಯ ತಣ್ಣಗೆ ಮಲೆನಾಡಿನಲ್ಲಿ (ತೀರ್ಥಳ್ಳಿ ಆಸುಪಾಸು) ಶಿಕಾರಿ ನಡೆಸಲು ಹೊರಟಿದ್ದ! ಅದೂ ನಮ್ಮ ಪೂರ್ಣ ಮಾನಸಿಕ ಸಹಮತದೊಡನೆ ಎಂದರೆ ಆಶ್ಚರ್ಯಚಿಹ್ನೆ!! ಇದಕ್ಕೆಲ್ಲಾ ನಾನು ಸ್ಪಷ್ಟೀಕರಣ ಕೊಡುವ ಬದಲು ನೀವೇ ಆತನ ಶಿಕಾರಿಗೆ ಈಡಾಗಲು ಇಲ್ಲಿ ಟ್ರಿಗರ್ ಒತ್ತಿರಿ.

ಮೊನ್ನೆ ಸೆಪ್ಟೆಂಬರ್, ಹತ್ತು ಹನ್ನೊಂದು ಸರಕಾರೀ ರಜೆ, ಹಿಂಬಾಲಿಸಿದಂತೆ ಆದಿತ್ಯವಾರ ಎಂದು ಕಂಡ ಕೂಡಲೇ ಶಿಕಾರಿ ತಂಡ ನೋಡುವ ಕುತೂಹಲದೊಡನೆ ಊರು ತಿರುಗುವ ಹುಚ್ಚು ತಳಕು ಹಾಕಿ ಕಾರು ಹೊರಡಿಸಿಬಿಟ್ಟೆ. ಮೂರು ದಿನ ಅಂಗಡಿಗೆ ಯಾಕೆ ರಜೇಂತ ಕೇಳಿದವರಿಗೆಲ್ಲಾ “ನಾನು ಖಾಯಂ ಮತಾಂತರಿ! ಶುಕ್ರವಾರ ನನಗೆ ರಂಜಾನ್ ಹಬ್ಬ, ಶನಿವಾರ ವಿನಾಯಕ ಚೌತಿ. ಮತ್ತುಳಿದ ಆದಿತ್ಯವಾರ, ಆರು ದಿನ ದುಡಿದ ದೇವನೇ ವಿಶ್ರಾಂತನಂತೆ, ನಾನು ಪಾಪಿ ಬಿಡಲುಂಟೇ?” ಗೆಳೆಯ ಗೋವಿಂದ ಬಹಳ ಹಿಂದೆಯೇ “ಮಕ್ಕೊಗೆ ಶೂಟಿಂಗ್ ತೋರಿಶೆಕ್ಕು” ಅಂತ ಭಾರೀ ಹಿಂದೆಯೇ ಹೇಳಿದ್ದರೂ ಈ ಸುತ್ತಿನಲ್ಲಿ ಅದು ಸಿಗುವುದಿಲ್ಲ ಎಂದು ನಮಗೆ ತಿಳಿದಿತ್ತು. ಹಾಗೇ ಸುತ್ತಾಡಲು “ಬರ್ತೀರಾ” ಅಂತ ಅವರಿವರನ್ನು ಕೇಳಿದೆ. ಉತ್ಸಾಹಿಗಳು ಸಿಗಲಿಲ್ಲ. ಮತ್ತೆ ಮೈಸೂರಿನಿಂದ ಅಭಿಜಿತ್ ಮತ್ತು ಮೂರ್ನಾಲ್ಕು ಎಳೆಯ ಗೆಳೆಯರು ಹಾಗೂ ಬೆಂಗಳೂರಿನಿಂದ ಸೊಸೆ ರಶ್ಮಿ ತೀರ್ಥಳ್ಳಿಯಲ್ಲೇ ನಮಗೆ ಸಿಗುತ್ತಾರೆಂದು ಅಂದಾಜಾದ ಮೇಲೆ ಹೆಚ್ಚು ಯಾರನ್ನೂ ಒತ್ತಾಯಿಸದೆ ನಾನು ಮತ್ತು ದೇವಕಿ ಬೆಳಿಗ್ಗೆ ಆರು ಗಂಟೆಗೇ ಮಂಗಳೂರು ಬಿಟ್ಟೆವು.

ಪಿರಿಪಿರಿ ಮಳೆ, ಅದೇ ಮೂಡಬಿದ್ರೆ – ಕಾರ್ಕಳ – ಆಗುಂಬೆಗಾಗಿ ಹೋಗುವ ದಾರಿ. ಅದೇ ಹೊಂಡ, ಅದದೇ ನಾಗರಿಕತೆಯ ಹಳಸಲು ವಿಸ್ತರಿಸಿದ ಕಥೆ ಏನು ಹೇಳುವುದೂಂತ ಒಮ್ಮೆ ಅನಿಸಿಬಿಡುತ್ತದೆ. ತ್ರಿಚಕ್ರ ವಾಹನವೇರಿ ಭಾರತ ಸುತ್ತಲು ಹೊರಟ ಗೋವಿಂದ ತನ್ನ ಬ್ಲಾಗಿನಲ್ಲಿ ಬರೆಯುತ್ತಾ ಸಮೀಕ್ಷೆಯೊಂದನ್ನು ಉದ್ಧರಿಸಿ ಹೇಳಿದ ಮಾತು – ನಮ್ಮಲ್ಲಿ ಸೌಲಭ್ಯಕ್ಕಿಂತ ದಾರಿಗಳು ಹೆಚ್ಚು, ನೂರಕ್ಕೆ ನೂರು ನಿಜ. ಸ್ವಾತಂತ್ರ್ಯ ಬಂದು ಸಂದ ಇಷ್ಟೂ ವರ್ಷಗಳುದ್ದಕ್ಕೆ ಸಾರ್ವಜನಿಕ ಸಂಪರ್ಕದ ಹೆಸರಿನಲ್ಲಿ ನೆಲ, ಸಾಮಗ್ರಿ ಮತ್ತು ಸೇವೆಗಳು ಪೋಲಾದಷ್ಟು ನಮ್ಮ ಯಾವುದೇ ಸೌಕರ್ಯಗಳು (ನೆಲ, ಜಲ ಮತ್ತು ವಾಯು ಮಾರ್ಗಗಳು ಎಂದೇ ಸೇರಿಸಿಕೊಳ್ಳಿ) ಸಮರ್ಥವಾಗಿಲ್ಲ! ರಮ್ಯ ಪ್ರವಾಸ ಕಥನದ ಮೊದಲಿಗೇ ಹೊಳೆಯುವ ಇಂಥ ಒಟ್ಟಾರೆ ವಿಷಾದದ ವಿವರಗಳಿಗಿಳಿಯದೆ ನಮ್ಮ ತೀರ್ಥಳ್ಳಿ ದಾರಿಗಷ್ಟೇ ಸೀಮಿತಗೊಳ್ಳುತ್ತೇನೆ.

ಯಾವುದೇ ದಾರಿ ನನಗಂತೂ ಎಂದೂ ಮುಗಿಯದ ಕಥಾನಕಗಳ ಸರಣಿ! ವನಪುನರುಜ್ಜೀವನದ ನಮ್ಮ ಬಯಕೆಗೆ ಮೊದಲು (ಈಗಿನ ಒಂದೆಕ್ರೆಯ ಅಭಯಾರಣ್ಯ ಕೊಳ್ಳುವ ಮೊದಲು) ಇನ್ನೇನು ದಕ್ಕಿಯೇಬಿಟ್ಟಿತು ಎನ್ನುವಂತೆ ಕಂಡು ಕಾಡಿದ ನೆಲ ಇದೇ ನೀರ್ಮಾರ್ಗದ ಆಚೆ ಕೊನೆಯಲ್ಲಿತ್ತು. ಮುಂದೆ, ಕುಡುಪು – ನಾಗರಪಂಚಮಿಗಳಂದು ಪ್ರಕೃತಿ ಮತ್ತು ದೈವೀಶಕ್ತಿಯ ಸಂಲಗ್ನದ ಸಂಕೇತ ಪೂರ್ಣ ಹದತಪ್ಪಿ ವಿಜೃಂಭಿಸುವ ಕ್ಷೇತ್ರ. ಇಲ್ಲಿ ಅಂದು ದೇವಳದ ವಿಸ್ತಾರ ಒಳ ವಠಾರಗಳಲ್ಲಿ ಸಿಮೆಂಟು ಕಟ್ಟೆಗಳಲ್ಲಿ ವಿಜೃಂಭಿಸುವ ಕಲ್ಲನಾಗರಕ್ಕೆ ಹಾಲೆರೆಯಲು ಸಂಭ್ರಮಿಸುವ ಭಕ್ತರ ಸರದಿಯ ಸಾಲು ನೂರು ಬಳುಕುಗಳಲ್ಲಿ ಹರಿದು ಕೆಲವೊಮ್ಮೆ ದಾರಿಗೂ ಚಾಚಿ ನಿಜದ ನಾಗರವನ್ನು ಜ್ಞಾಪಿಸುವುದುಂಟು. ಆದರೆ ಭೀತರಾಗಬೇಡಿ, ಇಲ್ಲಿ ನಿಜದ ನಾಗರ ಬಾರದಂತೆ ಸುಂದರ ವ್ಯವಸ್ಥೆಯಿದೆ!

ಕುಡುಪು ಘಾಟಿ ಏರುತ್ತಿದ್ದಂತೆ ಎಡಗುಡ್ಡೆಯ ಓರೆಯಲ್ಲೇ ಗಿರೀಶ ಕಾಸರವಳ್ಳಿಯವರು ಹಸೀನಾ ಸಿನಿಮಾಕ್ಕೆ ‘ರಿಕ್ಷಾ ಚಾಲಕನ’ ಜೋಪಡಿ ಹಾಕಿ ಚಿತ್ರೀಕರಣ ನಡೆಸುತ್ತಿದ್ದದ್ದು, ನಾನವರನ್ನು ಅಲ್ಲಿ ಭೇಟಿಯಾಗಿ ನಮ್ಮ ಮನೆಗೆ ಆಹ್ವಾನಿಸಿದ್ದು, ಅದಕ್ಕೊಪ್ಪಿ ಅವರು ಬರುವ ಸಂಜೆ ಮನೆಯೊಳಗೇ ಸಣ್ಣ ಮಿತ್ರ ವೃಂದ ನೆರೆಯಿಸಿ, ಎರಡು ಬಿಳಿಯ ಹೊದಿಕೆಗಳನ್ನು ಹೊಂದಿಸಿ ಮಾಡಿದ ‘ಬೆಳ್ಳಿಪರದೆಯ’ ಮೇಲಿನ ‘ದ್ವೀಪ’ದಲ್ಲಿ ಮುಳುಗಿ ಹೋದದ್ದು, ಮುಂದುವರಿದ ಸಂವಾದದಲ್ಲಿ ಗಿರೀಶ ದರ್ಶನದಲ್ಲಿ ಸುಖಿಸಿದ್ದು ನೆನಪಿನ ಪರದೆಯ ಮೇಲೆ ಹರಿಯುತ್ತಿತ್ತು. [ಬರೆಯುತ್ತಿರುವ ಇಂದು ನೆನಪಿನ ಪರದೆ ಹರಿದಿದೆ – ಗಿರೀಶ್ ಜೊತೆಗೇ ವೈಶಾಲಿ ಕೂಡಾ ಮಂಗಳೂರಿನಲ್ಲೇ ಇದ್ದಾರೆ, ನಮ್ಮನೆಗೆ ಬರ್ತಾರೆ ಅಂತ ಅಂದು ಕಾದಿದ್ದೆವು. ಇಲ್ಲ, ಅವರು ಕಡಲ ತರಕಾರಿಯ ರುಚಿ ನೋಡಲು ಚಂದ್ರಹಾಸ ಉಳ್ಳಾಲರ ಬೆನ್ನು ಹಿಡಿದು ಯಾವುದೋ ಹೋಟೆಲಿಗೆ ಹೋದವರು ಬರಲೇ ಇಲ್ಲ; ಇನ್ನು ಎಲ್ಲಿಗೂ ಬರಲಾರರು]

ಮಳೆಗೆ ಕಿಟಕಿ ಹಾಕಿ, ಬಿಸಿಗೆ ಏಸಿ ಹಾಕಿದ್ದರೂ (fresh air ventನಿಂದ) ಹೊರಗಿನ ತಾಜಾ ಗಾಳಿ ನಮ್ಮನ್ನು ಬಿಟ್ಟಿರಲಿಲ್ಲ. ಕುಡುಪಿನ ಅಡಿಕೆ ತೋಟದ ನರುಗಂಪು, ಗುಡ್ಡದ ಹಸುರು ಮತ್ತು ಮಳೆಯ ತೇವ ನೇವರಿಸಿದ ಆಹ್ಲಾದಕ್ಕೆ ಒಮ್ಮೆಗೇ ನಾಗರಿಕ ಶಾಪ ತಟ್ಟಿದಂತೆ ಹಾದುಹೋಯ್ತು – ಪಚ್ಚನಾಡಿ. ಗೊತ್ತಲ್ಲಾ ಇಲ್ಲಿ ಹೆದ್ದಾರಿ ಬದಿಗೆ ಶುದ್ಧ ಮನೆ, ಅಚ್ಚುಕಟ್ಟಾದ ಕ್ರೈಸ್ತ ಸಂಸ್ಥೆಗಳು ಕಂಗೊಳಿಸಿದರೂ ಕಾಣದ ಎಡ ಹಿನ್ನೆಲೆಯಲ್ಲಿ ವರ್ಷಾನುಗಟ್ಟಳೆಯಿಂದ ಪೇರುತ್ತಲೇ ಇದೆ ಮಂಗಳೂರ ನಾಗರಿಕರ ಪಾಪರಾಶಿ; ನಗರದ ಕಸತೊಟ್ಟಿಗಳ ಮೊತ್ತ! ಪರಿಸರ ದಿನಾಚರಣೆಗಳ, ಕಮ್ಮಟದ ಮಾತುಗಳ ಹಂಗೇನೂ ಉಳಿಸಿಕೊಳ್ಳದೆ ಸುಂದರನಗರ ಕಸ ಉತ್ಪಾದಿಸುತ್ತಲೇ ಇದೆ. ಅಷ್ಟೂ ಕೊಳೆಯನ್ನು ಮತ್ತೆ ‘ನಾವೇ’ ಅಷ್ಟೇ ಕೊಳಕಾಗಿ ಉಳಿಸಿಟ್ಟ ಜನಗಳು ಗಲ್ಲಿ ಗಲ್ಲಿಯಿಂದ ಬರಿಗೈಯಲ್ಲಿ ಬುಟ್ಟಿ, ಗಾಡಿ ತುಂಬಿ, ಚಲ್ಲುವರಿಯುವಂತೆ ಲಾರಿಗಳಿಗೆ ಹೇರಿ ಇಲ್ಲಿ ತಂದು ಸುರಿಯುತ್ತಲೇ ಇದ್ದಾರೆ. ಮತ್ತೂ ಕೆಳಗಿನವರು ಇಲ್ಲಿ ಲೋಹಗಳನ್ನು ಹೆಕ್ಕುತ್ತ, ಮರುಬಳಕೆಗೊಡ್ದಿಕೊಳ್ಳುವ ಪ್ಲ್ಯಾಸ್ಟಿಕ್ ತೊಳೆಯುತ್ತ ನೆಲದ ಹೊರೆ ಕಡಿಮೆ ಮಾಡುತ್ತಿರುತ್ತಾರೆ. ಅಂಡಲೆಯುವ ಜಾನುವಾರು, ಪೋಲಿ ನಾಯಿಗಳು, ಹದ್ದು, ಕಾಗೆ, ಹೆಗ್ಗಣ, ನೊಣ ಅಷ್ಟಷ್ಟು ತಂತಮ್ಮ ಪಾಲೆಂಬಂತೆ ಗೊಣಗಿ, ಕಚ್ಚಿ ಜೀರ್ಣಿಸಿಕೊಳ್ಳುವುದೂ ನಡೆದೇ ಇದೆ. ಆದರೂ ಉಳಿದದ್ದು ಕೊಳೆಯಲೇ ಬೇಕಲ್ಲಾ! ತಪ್ಪಿಯೋ ಉದ್ದೇಶಪೂರ್ವಕವೋ ಅಗೀಗ ಹತ್ತಿಕೊಳ್ಳುವ ಬೆಂಕಿ ಕಮಟು ಹೊಗೆಯಾಗಿ ಸುಳಿಯಲೇಬೇಕಲ್ಲಾ.

ಮುಂದಿನ ಹಂತ ಪಿಲಿಕುಳಕ್ಕೆ ಕವಲು. ಆದರೆ ಬೇಡ, ಲಹರಿ ಅತ್ತ ತಿರುಗಿದರೆ ನಮ್ಮ ‘ಕತೆ’ ಮುಂದುವರಿಯುವುದು ಹೇಗೆ ಸ್ವಾಮೀ. ಕಣಿವೆಗಿಳಿವ ಈ ದಾರಿ ಬದಿಯ ಕಟ್ಟೆಯಂತೂ ನನ್ನ ನೆನಪಿನ ಕೋಶದ ಸುಪ್ಪತ್ತಿಗೆಗಳಲ್ಲಿ ಒಂದು! ಆಶ್ಚರ್ಯವಾಯ್ತೇ? ಹೌದು, ಸುಮಾರು ಮೂವತ್ತು ವರ್ಷಗಳ ಹಿಂದೆ ಇದೇ ದಾರಿಯಲ್ಲಿ ಹಿಂದೆ ಬರುತ್ತಿದ್ದೊಂದು ಸಂಜೆ ನಮ್ಮ ತಂಡ ಸ್ವಸ್ಥವಿರಲಿಲ್ಲ. ಬೆಳಿಗ್ಗೆ ವೀರಾವೇಶದಲ್ಲೇ ಏಳೆಂಟು ಬೈಕುಗಳೇರಿ ಕೊಡಂಜೆ ಕಲ್ಲಿಗೆ ಮುತ್ತಿಗೆ ಹಾಕಿದ್ದರೂ ಅಲ್ಲಿ ಹೆಜ್ಜೇನ ಮುತ್ತಿಗೆಗೆ ತೀವ್ರ ನೊಂದಿದ್ದೆವು. ಕಷ್ಟದಲ್ಲಿ ಜೀವವುಳಿಸಿಕೊಂಡು ಹಿಂದಿರುಗುವ ದಾರಿಯಲ್ಲಿ ಹಲವರನ್ನು ಸಿಕ್ಕ ಬಾಡಿಗೆ ಕಾರಿಗೆ ತುಂಬಿ ತುರ್ತು ಚಿಕಿತ್ಸೆಗೆ ಮಂಗಳೂರ ಆಸ್ಪತ್ರೆಗೆ ರವಾನಿಸಿದ್ದೆವು. ಮೂರೇ ಬೈಕಿನಲ್ಲಿ ನಾಲ್ಕೈದು ಮಂದಿಯಷ್ಟೇ ಹಠದಲ್ಲಿ ಮರಳುತ್ತಿದ್ದರೂ ನನಗಿಲ್ಲಿ ದಾರಿ ಮೀರಿ ಸುತ್ತಿದ ಅನುಭವ, ಹೊಟ್ಟೆಯೊಳಗೆ ಇನ್ನಿಲ್ಲದ ತಳಮಳ. ದಾರಿ ಅಂಚಿಗೆ ಬೈಕ್ ನಿಲ್ಲಿಸಿ, ಕಟ್ಟೆಯ ಮೇಲೆ ಮೈಚೆಲ್ಲಿದ್ದೆ. ಬಿಡಿ, ವಿವರಗಳನ್ನು ಇಲ್ಲೇ ಹೇಳಿದರೆ ಮುಂದೆಂದೋ ಸರದಿಯಲ್ಲಿ ಸ್ಥಾನ ಪಡೆಯುವ ‘ಮಧುಚುಂಬನ’ದ ಸ್ವಾರಸ್ಯ ಕೆಟ್ಟೀತು. ಜೊತೆಗೆ ದಾಟಿಹೋಗುತ್ತಿರುವ ‘ಕೆತ್ತಿಕಲ್ಲು’ ಗಮನಿಸದಿರುವುದು ಹೇಗೆ.

ಕೆತ್ತಿಕಲ್ಲು ಕೆಲವು ವರ್ಷಗಳ ಹಿಂದೆ ಒಮ್ಮೆಗೇ ಸುದ್ದಿಗೆ ಬಂತು. ದಾರಿಯ ಎಡಬದಿಯ ಗುಡ್ಡೆ ಭಾರೀ ಕುಸಿತಗೊಂಡು ದಾರಿಯನ್ನು ಮುಚ್ಚಿಯೇಬಿಟ್ಟಿತ್ತು. ದಾರಿಯೂ ನಾಲ್ಕಾರು ಅಡಿಗಳೆತ್ತರದ ಪಾವಟಿಗೆಯಂತೇ ಒಂದೆರಡು ಹಂತಗಳಲ್ಲಿ ಜಗ್ಗಿ ಹೋಯ್ತು. ಮೇಲಿದ್ದ ಮನೆಗಳ ಅಂಗಳದಲ್ಲೂ ಭೂದೇವಿಯ ಹಣೆಯ ಗೆರೆಗಳು ಆಳವಾಗಿ ಕಾಣಿಸಿದವು. ಜನ ಮರುಳು ಬಿಡಿ (ನಾನೂ ಮೀಸೆ ತೂರಿ ನೋಡಿ ಬಂದಿದ್ದೆ), ತಜ್ಞರ ದಂಡುಗಳೇ ಬಂದು ಹೋದವು. ಅವು ಕೊಟ್ಟಿರಬಹುದಾದ ವರದಿಗಳ ಗುಡ್ಡೆಯನ್ನೇ ಇತ್ತ ಸರಿಸಿದರೂ ಕಣಿವೆ ತುಂಬಿ ಗುಡ್ಡೇ ಸ್ಥಿರವಾಗುತ್ತಿತ್ತೋ ಏನೋ! ಪದವಿನಲ್ಲಿ ಅಂದರೆ ಪಿಲಿಕುಳದ ಕೆರೆಯಲ್ಲಿ ಅಸ್ವಾಭಾವಿಕವಾಗಿ ನೀರು ಹೆಚ್ಚಿಸಿದ್ದರ ಭಾರಕ್ಕೆ ಇಲ್ಲಿ ನೆಲ ಜಗ್ಗಿತು ಎಂದರು. ಕಣಿವೆಯಲ್ಲಿ ಮರಳು ಸೂರೆಹೋದದ್ದಕ್ಕೆ ಕುಸಿಯಿತು ಎಂದರು. ಸಾರ್ವಜನಿಕಕ್ಕೆ ದಾರಿಗೆ ಬಡಿದ ರೋಗ ಏನೆಂದು ಸ್ಪಷ್ಟವಾಗಲಿಲ್ಲ, ಮಾಡಿದ ಮದ್ದು ಪರ್ಯಾಪ್ತವಾಗಲೂ ಇಲ್ಲ. ದಾರಿಯನ್ನಷ್ಟು ಕೆತ್ತಿ, ಸವರಿ, ಕಲ್ಲು ಮಣ್ಣು ತುಂಬಿ ಒಮ್ಮೆಗೆ ‘ಮುಗಿಯಿತು’ ಎನ್ನಿಸಿದ್ದಾರೆ! ಆದರೆ ಪ್ರತಿ ಮಳೆಗಾಲದಲ್ಲೂ ಎಡದ ಗುಡ್ಡ ಸಣ್ಣ ಅಲೆಗಳಲ್ಲಾದರೂ ಕೆಳಗೆ ಜಾರುತ್ತಲೇ ಇದೆ. ಆ ಒಂದು ಇನ್ನೂರು ಮುನ್ನೂರಡಿ ಅಸ್ಥಿರ ದಾರಿಯಲ್ಲಿ ಮೇಲ್ಮೈ ತೇಪೆ ನಡೆಯುತ್ತಲೇ ಇದೆ. ಆದರೂ ವಾಹನಿಗರಿಗೆ ಪ್ರವಾಹದ ನೀರಿನ ದೋಣಿ ಸವಾರಿಯ ಅನುಭವವಂತೂ ಇಲ್ಲಿ ಗ್ಯಾರಂಟಿ.

ಪಾಣೆಮಂಗಳೂರು ಸೇತುವೆ (ಮುಖ್ಯ ಸೇವೆಯಿಂದ) ನಿವೃತ್ತವಾದ ಮೇಲೆ ಈ ಜಿಲ್ಲೆಯಲ್ಲಿ ಉಳಿದ ಎರಡೂ ಕಬ್ಬಿಣದ ಹಂದರ ಕಾಣಿಸುವ ಸೇತುವೆಗಳು (ಬ್ರಿಟಿಷರ ಕಾಲದ್ದು?) ಫಲ್ಗುಣಿ ಉರುಫ್ ಗುರುಪುರ ನದಿಯ ಮೇಲೇ ಉಳಿದಂತಾಗಿದೆ. ನಮ್ಮ ದಾರಿಯಲ್ಲಿ ಸಿಕ್ಕಿದ್ದು ‘ಗುರುಪುರ ಸೇತುವೆ’ಯಾದರೆ ಇನ್ನೊಂದು ಸ್ವಲ್ಪ ಕೆಳ ಪಾತ್ರೆಯಲ್ಲಿ, ಅಂದರೆ ಬಜ್ಪೆ ದಾರಿಯಲ್ಲಿದೆ. ಒಟ್ಟಾರೆ ಐತಿಹಾಸಿಕ ರಚನೆಗಳ ಬಗೆಗಿನ ನಮಗಿರುವ ಅವಜ್ಞೆ ಇಲ್ಲೂ ಕಾಣುತ್ತದೆ. ಪಿಲಿಕುಳದ ಎತ್ತರದಿಂದ ಈ ಸೇತು ಮತ್ತು ಈ ಕಣಿವೆಯ ವಿಹಂಗಮ ನೋಟ, ಮುಂದುವರಿದಂತೆ ಸಿಗುವ ಬಯಲಿನ ಗದ್ದೆಯ ಚಂದ, ಹೆಣೆದುಕೊಂಡ ಜನ-ಜಾನಪದಗಳ ಸಿರಿಯೆಲ್ಲ ಇನ್ನೆಷ್ಟು ದಿನವೋ ಏನೋ! ಒತ್ತಿ ಬರುತ್ತಿರುವ ಬೃಹತ್ ಉದ್ದಿಮೆಗಳ ಯಮ ಹಸಿವಿಗೆ ಈ ನೀರು ವ್ಯರ್ಥ ಸಮುದ್ರ ಸೇರುವ ಸಂಪತ್ತು, ಈ ಹಸುರು ಒಂದು ಅನುತ್ಪಾದಕ ನೆಲದ ತುಣುಕು ಮತ್ತು ಬದುಕು ‘ಅರ್ಥ’ಹೀನ ಕಾಲವ್ಯಯವಾಗಿ ಕಾಣುವ ದಿನಗಳು ದೂರವಿಲ್ಲ.

ಗುರುಪುರ ಪೇಟೆಯ ಮಾತು ನಾನು ಕೇಳಿದ್ದು ಒಂದೇ ಎರಡೇ. ಅದೊಂದು ಕಾಲವಿತ್ತು – ದಕ ಜಿಲ್ಲಾ ವಲಯದಲ್ಲಿ (ಮದುವೆ ಮುಂಜಿಯಂಥಾ) ಭಾರೀ ಜವುಳಿ ಖರೀದಿಗೆ ಎಲ್ಲ ದಾರಿ ಹರಿದಿತ್ತು ಗುರುಪುರಕ್ಕೆ! ಬಹುಶಃ ಇಂದಿನ sale, mallಗಳ ಥಳಕಿನಲ್ಲಿ ನಗರದಲ್ಲೇ ಬಿಡಿ ಮಳಿಗೆಗಳು ಅನಾಥ ಪ್ರಜ್ಞೆಯಲ್ಲಿ ಬಳಲುತ್ತಿರುವಾಗ ‘ಗುರುಪುರದ ಜವಳಿ’ ಹಳೇ ಜಮಾನಾದ ಮಾತಾಗಿದ್ದರೆ ಆಶ್ಚರ್ಯವಿಲ್ಲ. ಇಲ್ಲಿನ ಲಿಂಗಾಯತ ಮಠದ ರಣರಂಪ ಏನೇ ಇರಲಿ ಐತಿಹಾಸಿಕ ಮಹತ್ವ ಅವಗಣಿಸುವಂಥದ್ದಲ್ಲ. ಮತ್ತೆ ನಾಥಪಂಥದ (ಜೋಗಿ ಮಠ) ಪ್ರಭಾವ, ಮಂಗಳೂರು ಬಂದರಕ್ಕೆ ಕೃಷ್ಯುತ್ಪನ್ನಗಳ ಬಹುದೊಡ್ಡ ಪೂರೈಕೆ ಕೇಂದ್ರವಾಗಿ ಬೆಳೆದಿದ್ದ ಕಥೆಯೆಲ್ಲಕ್ಕೂ ನನಗೆ ತಿಳಿದಂತೆ ಅಲ್ಲೇ ಮೇಲಿನ ಊರು – ಕಿನ್ನಿಕಂಬಳದಲ್ಲಿ ಹುಟ್ಟಿ, ತ್ರಿವಿಕ್ರಮನಾಗಿ ಬೆಳೆದ ಕೆಪಿ ರಾಯರನ್ನೇ ನೀವು ಕೇಳುವುದು ಉತ್ತಮ. (ನೋಡಿ: www.panditaputa.com ನಲ್ಲಿ; ಮಹಾಲಿಂಗರು ಬರೆದ ಲೇಖನ -ಜೇನಿನಂತ ಜನ)

ಕ್ಷಮಿಸಿ, ಒಂದು ಪ್ರವಾಸ ಕಥನಕ್ಕಿಳಿದು ಹೀಗೆ ಉಪಕಥೆಗಳಲ್ಲಿ ಕಳೆದುಹೋದರೆ ಪ್ರಧಾನ ಪುರಾಣ ಎಲ್ಲಿ ಅಂತೀರಾ? ನಿಲ್ಲಿಸಿದೆ, ಮುಂದಿನ ಸೂಕ್ಷ್ಮಗಳನ್ನು ಇನ್ನೆಂದಾದರೂ ವಿಸ್ತರಿಸುತ್ತೇನೆ. ಸದ್ಯ ಮೂಡಬಿದ್ರೆಯನ್ನು ಹಾಯ್ದು, ಕಾರ್ಕಳ ತಲಪಿದಲ್ಲಿಗೆ ತಿಂಡಿ ವಿರಾಮವನ್ನು ಘೋಷಿಸಿಕೊಂಡೆವು. ನಮ್ಮ (ಆರೋಹಣ ತಂಡದ) ಈ ವಲಯದ ಓಡಾಟಗಳಲ್ಲಿ ನಾವು ಹೆಚ್ಚಿಗೆ ನೆಚ್ಚುತ್ತಿದ್ದ ಹೋಟೆಲ್ ಮೂಡಬಿದ್ರೆಯ ಪಡಿವಾಳ್. ಆದರೀಚಿನ ದಿನಗಳಲ್ಲಿ ಕಾರ್ಕಳದ ಹೋಟೆಲ್ ಪ್ರಕಾಶ್ ಶುಚಿ, ರುಚಿಗಳಲ್ಲಿ ಪಡಿವಾಳ್‌ಗೆ ಏನೂ ಕಡಿಮೆಯಿಲ್ಲದಂತೆ ತೊಡಗಿ, ವಿಕಸಿಸಿದ್ದನ್ನು ಹೇಳಲೇಬೇಕು. ನನ್ನ ಲೆಕ್ಕಕ್ಕೆ ಕಾರ್ಕಳ ಬರಿಯ ಊರಲ್ಲ – ಒಂದು ಆಪ್ತ ವ್ಯಕ್ತಿಯೂ ಹೌದು! ಭುವನೇಂದ್ರ ಕಾಲೇಜಿನ ಕನ್ನಡ ಅಧ್ಯಾಪಕ (ನಿವೃತ್ತ) ಎಂದರೆ ಸಣ್ಣದಾಯ್ತು, ಸಾಹಿತಿ ಎಂದರೆ ಸಾಲದಾಯ್ತು, ಈ ವಲಯದಲ್ಲಿ ಕನ್ನಡ ನುಡಿ ಸಾಹಿತ್ಯದ ಮಹಾನ್ ಸೇವಕ, ಸಂಘಟಕ ಎಂದೆಲ್ಲ ವಿಶೇಷಣ ಹೇರಿದರೂ ಹೆಚ್ಚಾಗದ ವ್ಯಕ್ತಿ ಪ್ರೊ| ಎಂ. ರಾಮಚಂದ್ರ. ಇವರು ದೂರವಾಣಿಸಿದಾಗೆಲ್ಲಾ ಅವರಿಂದ ಶಿಷ್ಟತೆಗೆ ಬರುವ ಮೊದಲ ನುಡಿ ‘ರಾಮಚಂದ್ರ’ ಅಲ್ಲ, “ಕಾರ್ಕಳ” ಮಾತ್ರ! ಅವರೇ ಪರಿಚಯಿಸಿದ ಪ್ರಕಾಶ್ ಹೋಟೆಲ್, ತನ್ನ ಮಾಳಿಗೆಯ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಉಣಬಡಿಸಿದ ಸಾಹಿತ್ಯ ಸಮಾರಾಧನೆಗೆ (ಅಧ್ವರ್ಯು – ಸ್ವತಃ ರಾಮಚಂದ್ರರೇ) ಸಾಟಿ ಇನ್ನೊಂದಿಲ್ಲ.

ಕಾರ್ಕಳದಿಂದ ಮುಂದೆ ನಮ್ಮ ದಾರಿ ಪಶ್ಚಿಮ ಘಟ್ಟದ ಮುಖ್ಯ ಸರಣಿಯ ದಟ್ಟ ನೆರಳಿನಲ್ಲೆ ಸಾಗುತ್ತದೆ. ಅಜೆಕಾರು ಪೇಟೆಯ ಇನ್ನೊಂದು ಕೊನೆಯಲ್ಲೇ ನಿಂತಂತಿರುವ ವಾಲಿಕುಂಜ ಅಥವಾ ಅಜಿಕುಂಜ (ಸ.ಮ.ದಿಂದ ೩೪೦೮ ಅಡಿ ಎತ್ತರ) ಬರಿಯ ನೋಟಕ್ಕೂ ದಿಟ್ಟ ನಡಿಗೆಗೂ ಸಾಧನೆಯ ಕೊನೆಯಲ್ಲೊದಗುವ ಶಿಬಿರವಾಸದಿಂದ ತೊಡಗಿ ದೃಶ್ಯಾವಳಿವರೆಗೂ ವಿವರಿಸಿ ಮುಗಿಯದ ವಿಸ್ಮಯ. ಯುರೇನಿಯಮ್ ನಿಕ್ಷೇಪಗಳನ್ನರಸಿ ಕೇಂದ್ರ ಸರಕಾರದ ಗಣಿ ಇಲಾಖೆ ಇದರ ನೆತ್ತಿ ಹಾಯ್ದು ಅತ್ತ ಮೇಲಿನೂರು ತಲಪುವವರೆಗೂ ದಾರಿ ಮಾಡಿದ್ದರು. ನಿರೀಕ್ಷೆಯ ಸಂಗ್ರಹ ಇಲ್ಲವೆಂದು ಯೋಜನೆ ಕೈಬಿಟ್ಟರು. ಮತ್ತೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಇದು ಸೇರಿ, ನಕ್ಸಲರ ಓಡಾಟಗಳೂ ಹೆಚ್ಚಿ ದಾರಿ ಅದೃಷ್ಟವಶಾತ್ ಅವಗಣನೆಗೀಡಾಗಿದೆ. (ಇಲ್ಲವಾದರೆ ಇಂದಿನ ಅಗಲೀಕರಣ, ಕಾಂಕ್ರಿಟೀಕರಣಗಳ ಹಾವಳಿಯಲ್ಲಿ ವನ್ಯದ ನಡುವೆ ಇನ್ನೊಂದೇ ಮಹಾಮಾರಿಯಾಗುತ್ತಿದ್ದುದರಲ್ಲಿ ಸಂಶಯವಿಲ್ಲ) ಮುಂದುವರಿದಂತೆ ದಾರಿಯ ಬಲಬದಿಗೇ ಸಿಗುವ ವರಂಗದ ಕೆರೆ-ದೇವಳ ಮತ್ತು ಅನುಸರಿಸುವ ಆಗುಂಬೆ ಘಟ್ಟದ ನೋಟಕ್ಕೊಂದಿಷ್ಟು‘ದಾರಿ ತಪ್ಪಿಸಿ’ ಕಥೆ ಹೇಳದೇ ಇರಲಾರೆ.

೧೯೯೦ರಲ್ಲಿ ನನ್ನ ಕೆಲವು ಮೋಟಾರ್ ಸೈಕಲ್ ಪ್ರವಾಸ ಕಥನಗಳನ್ನು ಸಂಕಲಿಸಿ ‘ಚಕ್ರವರ್ತಿಗಳು’ ಎಂಬ ಪುಸ್ತಕ ಪ್ರಕಟಿಸಿದ್ದೆ. ಅದರ ಮೊದಲ ಲೇಖನವೇ ವರಂಗದಿಂದ ವರಾಹಿಗೆ. ಅಲ್ಲಿ ನಮ್ಮ ಮೋಟಾರ್ ಸೈಕಲ್ ತಂಡ ಮೊದಲು ವರಂಗವನ್ನು ಸಂದರ್ಶಿಸಿ ಅನಂತರ ಆಗುಂಬೆ ಏರಿ ಸಾಗಿದ್ದರ ಸವಿವರ ಕಥನ ಬರುತ್ತದೆ. ಇದಾಗಿ ಕೆಲವು ತಿಂಗಳ ಅಂತರದಲ್ಲಿ ನಮ್ಮ ಕುಟುಂಬದ ಆತ್ಮೀಯ ಹಿರಿಯರಾದ ಡಾ| ಪಿ.ಎನ್ ಆರಿಗರು, ಕಜೆಕಾರು ನೇಮಿರಾಜ ಕೊಂಡೆ ಎನ್ನುವವರು ಬರೆದ ಒಂದು ಪ್ರವಾಸ ಕಥನ ಪುಸ್ತಕವನ್ನು ಅನಾವರಣ ಮಾಡಿದ ಪತ್ರಿಕಾ ವರದಿ ನೋಡಿದೆ. ಆರಿಗರು ಪುಸ್ತಕದಲ್ಲಿ ಬರುವ ವರಂಗದ ವಿವರಣೆಯನ್ನು ತುಂಬಾ ಮೆಚ್ಚಿಕೊಂಡಿದ್ದರು. ಆ ಕುರಿತ ನನ್ನ ಕುತೂಹಲವನ್ನು ತಣಿಸಿಕೊಳ್ಳಲು ಮತ್ತೂ ಕೆಲವು ದಿನ ಕಾಯಬೇಕಾಯ್ತು. ಮುಂದೊಂದು ದಿನ ನನಗೆ ಪೂರ್ಣ ಅಪರಿಚಿತರಾದ ಲೇಖಕ ಕೊಂಡೆಯವರು ನನ್ನಂಗಡಿಗೆ ಪುಸ್ತಕ ತಂದರು, ಐದೋ ಹತ್ತೋ ಪ್ರತಿಗಳನ್ನು ನಗದು ಕೊಟ್ಟು ಕೊಂಡೆ. ಅವರತ್ತ ಹೋದ ಮೇಲೆ ವಿರಾಮದಲ್ಲಿ ಪುಸ್ತಕದ ಪುಟಗಳನ್ನು ಮಗುಚಿ, ವರಂಗ ಓದುತ್ತೇನೆ – ಪರಮಾಶ್ಚರ್ಯ ಕಾದಿತ್ತು. ಕಾಮಾ, ಪೂರ್ಣ ವಿರಾಮ ಚಿಹ್ನೆಗಳವರೆಗೂ ಅದು ಪೂರ್ತಿ ನನ್ನದೇ ಬರವಣಿಗೆ! ಅದಕ್ಕೂ ಹಿಂದೆ ನೋಡಿದೆ, ‘ಲೇಖಕರು’ ಆಗುಂಬೆ ಘಾಟಿ ಇಳಿದು ಬರುವ ತಮ್ಮ ತೀರ್ಥ ಯಾತ್ರಾ ಕಥನದಲ್ಲಿದ್ದರು. ಆದರೆ ಅವರು ಮತ್ತೆ ನನ್ನ ಪುಸ್ತಕದ ಇಡೀ ಪ್ಯಾರಾವನ್ನು ಯಥಾವತ್ತು ನಕಲಿಸಿದ್ದರು. ತಮಾಷೆ ಎಂದರೆ ನಾನು ಘಾಟಿಯನ್ನು ಆರೋಹಣ ಕ್ರಮದಲ್ಲಿ ವಿವರಿಸಿದ್ದನ್ನು ಕದ್ದುಕೊಂಡೆಗೆ ಅವರೋಹಣ ಕ್ರಮಕ್ಕೆ ಪರಿವರ್ತಿಸುವಷ್ಟೂ ಸಾಮಾನ್ಯ ಜ್ಞಾನವಿರಲಿಲ್ಲ! ಮತ್ತೆ ಹೆಚ್ಚಿನ ವಿವರಗಳಲ್ಲಿ ನಾನು ನೋಡಿದಾಗ ಇಡಿಯ ಪುಸ್ತಕವೇ ಒಂದು ಚೋರ್ ಬಜಾರ್! ತುಷಾರದಲ್ಲಿ (ಪುಸ್ತಕ ವಿಭಾಗದಂತಲ್ಲಿ) ಕಮಲೇಶ್ ಪ್ರಕಟಿಸಿದ್ದ ಬದರೀನಾಥದ ದೀರ್ಘ ಲೇಖನ, ಉದಯವಾಣಿಯಲ್ಲಿ ರಾಧಾಕೃಷ್ಣ ಎನ್ನುವವರು ಬರೆದಿದ್ದ ಮುಂಬೈ ಲೇಖನ, ಹಿಂದೂ ಪತ್ರಿಕೆಯ ಅಸಂಖ್ಯ ಲೇಖನಗಳ ತಪ್ಪುತಪ್ಪು ಅನುವಾದಗಳೆಲ್ಲ ಸೇರಿ ಆ ಪುಸ್ತಕ ಅವತರಿಸಿತ್ತು. ಕೊಂಡೆಯನ್ನು ಕರೆಸಿ, ಅಪರಾಧ ಕ್ಷಮಾಪಣ ಸ್ತೋತ್ರ ಬರೆಸಿ, ಪ್ರಕಟಿಸಿದ ಎಲ್ಲ ಪ್ರತಿಗಳನ್ನು ಮಾರುಕಟ್ಟೆಯಿಂದ ಹಿಂದೆ ಪಡೆಯಲು ತಾಕೀತು ಮಾಡಿ ಕೈ ತೊಳೆದು-ಕೊಂಡೆ. ಡಾ| ಆರಿಗರು ಸಿಕ್ಕಾಗ, ಈ ಕಥೆ ಕೇಳಿದಾಗ ಅವರು ಸಖೇದಾಶ್ಚರ್ಯದಲ್ಲಿ ಉದ್ಗರಿಸಿದರು “ಹೀಗೂ ಉಂಟೇ?”

ಆಗುಂಬೆ ಘಾಟಿಗೀಗ ಅಗಲೀಕರಣದ ಯೋಗ. ಸುದ್ದಿಯ ಬೆನ್ನಿಗೆ ದಾರಿಯಲ್ಲಿ ಸರ್ವೇಕ್ಷಣೆ ನಡೆಯುತ್ತಿದ್ದದ್ದನ್ನೂ ಕಂಡೆವು. ವೀಕ್ಷಣಾ ಕಟ್ಟೆಯಲ್ಲಿ ಕಾರು ವ್ಯಾನುಗಳು ಮತ್ತು ಪ್ರವಾಸಿಗಳು ಗಿಜಿಗುಟ್ಟುತ್ತಿದ್ದರು. ಆದರೆ ಬಹುತೇಕ ಮಂದಿ ಬುಟ್ಟಿ, ತಟ್ಟೆ, ಕೈಗಾಡಿ, ರಿಕ್ಷಾಟೆಂಪೋ ಏರಿ ಬಂದ ಅಸಂಖ್ಯ ವರ್ಣಮಯ ತಿನಿಸು ಪಾನೀಯಗಳ ಸಂತೆಯಲ್ಲೇ ಕಳೆದುಹೋಗಿದ್ದರು. ಸಹಜವಾಗಿ ಅಲ್ಲಿ ಸೇರಿದ್ದ ಕೊಚ್ಚೆ ಕೊಳಕು ಮೆಟ್ಟಿಕೊಂಡು ಕೊಳ್ಳದ ದೃಶ್ಯವೀಕ್ಷಣೆಯಾಗಲಿ, ಕಾರುಗಳ ಢಗ್ಗು ಢಗ್ಗು ಮ್ಯೂಜಿಕ್ಕಿನ ಧ್ವನಿ ಮೆಟ್ಟಿ ಜಲಧಾರೆಗಳ ಶ್ರುತಿಗೋ ಹಕ್ಕಿಗಳುಲಿಗೋ ಕಿವಿಯಾಗುವುದಾಗಲಿ ಅಸಾಧ್ಯವೆನ್ನಿಸಿ ನಾವು ಮುಂದುವರಿದೆವು. ಸುಮಾರು ನಲವತ್ತೈದು ವರ್ಷಗಳ ಹಿಂದೆ ನನ್ನ ಸೋದರಮಾವ – ಗೋವಿಂದ ಭಟ್ಟರ ಮದುವೆ ದಿಬ್ಬಣ ಪುತ್ತೂರಿನಿಂದ ಹೊನ್ನಾವರಕ್ಕೆ ಹೋಗುತ್ತಿತ್ತು. ಆಗ ಕರಾವಳಿಯ ಸಂಕವಿಲ್ಲದ ಅಸಂಖ್ಯ ಹೊಳೆಗಳನ್ನು ನಿವಾರಿಸಲು ನಮ್ಮ ವ್ಯಾನು ಅನಿವಾರ್ಯವಾಗಿ ಓಡಿದ ದಾರಿಯಿದು. ಅಜ್ಜನಿಂದ ಪುಳ್ಳಿಯವರೆಗೆ ಜನ, ನಿತ್ಯದಿಂದ ವಿಶೇಷದವರೆಗೆ ಸಾಮಾನು ಸರಂಜಾಮು ಹೇರಿಕೊಂಡು, ಅಕ್ಷರಶಃ ಬೆನ್ನು ಹರಿದುಕೊಂಡಿದ್ದ ವ್ಯಾನು ಇದೇ ಆಗುಂಬೆ ಹಾಯುವಾಗ ವನರಾಣಿಯೇ ಹುಲಿಯಾಗಿ, ತನ್ನೆರಡು ಮರಿಗಳೊಡನೆ ದಾರಿ ದಾಟಿದ್ದು ಬಹುಶಃ ಇನ್ನು ನೆನಪು ಮಾತ್ರ!

“ಟೊಂಯ್ಕ್” ಎಂದಿತು ದೇವಕಿಯ ಚರವಾಣಿ. ಘಟ್ಟವನ್ನುತ್ತರಿಸಿದ್ದೇ ಸಂದೇಶಗಳ ಕಂತೆಯೇ ಅದರ ಉಡಿ ತುಂಬಿತ್ತು. ಹಿಂದಿನ ಸಂಜೆಯೇ ಅಭಯ ಮತ್ತವನ ‘ಶಿಕಾರಿ’ ತಂಡದೊಡನೆ ಬೆಂಗಳೂರಿನಿಂದ ತೀರ್ಥಳ್ಳಿಗೆ ಬಂದು, ಬೀಡು ಬಿಟ್ಟ ‘ವಿಹಂಗಮ’ ವಿಹಾರಧಾಮದಿಂದ ರಶ್ಮಿ ಕೇಳಿದ್ದಳು ‘ಎಲ್ಲಿದ್ದೀರಿ?’ ಮಿತ್ರ ನಾಗರಾಜರಾವ್ ಜವಳಿ (ಕೆನರಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ಸ್ವಂತ ಊರು ತೀರ್ಥಳ್ಳಿಯಲ್ಲಿ ನೆಲೆಸಿದವರು) ಸ್ಪಷ್ಟ ಸೂಚನೆ ಕೊಟ್ಟಿದ್ದರು – ‘ತೀರ್ಥಳ್ಳಿ ಸಮೀಪಿಸುತ್ತಿದ್ದಂತೆ ನನಗೆ ಸಂದೇಶ ಕಳಿಸಲೇ ಬೇಕು. ದಾರಿ ಕಾಯುತ್ತೇನೆ!’ ಶಿವಮೊಗ್ಗದ ವೈದ್ಯಮಿತ್ರ, ಮಂಟಪ ರತ್ನಾಕರ ಉಪಾಧ್ಯ ‘ರಾತ್ರಿಗೆ ನಮ್ಮನೆ ಖಾತ್ರಿ’ ಎಂದೇ ಘೋಷಿಸಿದ್ದರು. ಮೈಸೂರಿನಿಂದ ರಾತ್ರಿ ಬಸ್ಸಿನಲ್ಲಿ ಕೊಪ್ಪಕ್ಕೆ ಬಂದಿಳಿದಿದ್ದ ಅಭಿಜಿತ್‌ನಿಂದ (ಸೋದರ ಮಾವ ಎ.ಪಿ. ತಿಮ್ಮಪ್ಪಯ್ಯನ ಮಗ ಚಂದ್ರಶೇಖರನ ಮಗ) ಪ್ರಶ್ನೆ ಪಟ್ಟಿ ‘ನಾನೆಲ್ಲಿಗೆ ಬರಲಿ?’ ‘ಶಿಕಾರಿ’ ಕ್ಯಾಮರಾಕ್ಕೆ ಬಲಿಬೀಳಲಿದ್ದ ಅಷ್ಟೂ ಮನೆ, ಹಳ್ಳಿ, ಜನ ನೋಡುವ ಸಂಭ್ರಮವಂತೂ ನಮಗಂತೂ ಅದಮ್ಯವಾಗಿತ್ತು.

ನನ್ನ ಸುತ್ತು ಬಳಸಿನ ದಾರಿಗುಂಟ ಬಂದ ನಿಮಗೂ ಕುತೂಹಲ ಕಡಿಮೆಯಿರಲಾರದು. ಆದರೆ ನಿಮ್ಮ ಮಾರ್ಗಪುರಾಣ ಪಾರಾಯಣದ ಪುಣ್ಯಫಲ ಕನಿಷ್ಠ ಒಂದು ವಾರಕಾಲವಾದರೂ ನನಗೆ ದಕ್ಕಲೀಂತ ವಿಶ್ರಾಂತನಾಗುತ್ತೇನೆ. ಅಂದರೆ ದಯವಿಟ್ಟು ಮುಂದಿನ ಕಂತಿನವರೆಗೆ ನೀವು ಕಾಯBREAKಊ!

(ಮುಂದುವರಿಯಲಿದೆ)